Sunday, January 15, 2017

'May I come in, Sir?' ಅಂತ ಕೇಳಿದರೆ ಬೈದುಬಿಡೋದೆ!?

ಹೊಸವರ್ಷ ೨೦೧೭ ಬಂದಿದೆ. ಅದು ವರ್ಷ. ಬಂದೇ ಬರುತ್ತದೆ. 'May I come in, Sir?' ಅಂತ ಅನುಮತಿ ಕೇಳುತ್ತ ಬಾಗಿಲಿನಲ್ಲಿ ನಿಲ್ಲುತ್ತದೆಯೇ? ಇಲ್ಲ. ಅದರ ಪಾಡಿಗೆ ಅದು ಬಂದು ಹೋಗುತ್ತಿರುತ್ತದೆ. ಅದಕ್ಕೆ ಅಲ್ಲವೇ ಬೇಂದ್ರೆ ಅಜ್ಜಾವರು 'ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ' ಎಂದು ಹಾಡು ಬರೆಯಲಿಲ್ಲವೇ?

ಬರುವದು, ಬರುವ ಮುನ್ನ ಅನುಮತಿ ಕೇಳುವದು ಅಂದ ಕೂಡಲೇ ನೆನಪಾಯಿತು. ನಾವು ೧೯೯೦ ರಲ್ಲಿ ಪಿಯೂಸಿ ಸೆಕೆಂಡ್ ಇಯರ್. ಸಂಸ್ಕೃತ non-detail ಪಾಠ ಮಾಡುತ್ತಿದ್ದವರು ನಾಯ್ಕರ್ ಸರ್. ನಾವು ಕ್ಲಾಸಿಗೆ ಹೋಗಿದ್ದೇ ಕಮ್ಮಿ. ಅದರಲ್ಲೂ ಭಾಷೆಗಳ ಕ್ಲಾಸಿಗೆ ಹೋಗಿದ್ದೇ ಇಲ್ಲ. ನಾಯ್ಕರ್ ಸರ್ ಹೇಗೆ 'ರಸವತ್ತಾಗಿ' ಪಾಠ ಮಾಡುತ್ತಾರೆ ಎನ್ನುವದರ ಬಗ್ಗೆ ಯಾರೋ ಮಿತ್ರರು colorful ಆಗಿ ವರ್ಣಿಸಿದ್ದರು. ರಸ ಸವಿಯೋಣ ಎಂದು ಹೋಗಿದ್ದೆನೋ ನೆನಪಿಲ್ಲ. ನಾನು ಹೋಗುವಷ್ಟರಲ್ಲಿ ನಾಯ್ಕರ್ ಸರ್ ಲೆಕ್ಚರ್ ಶುರುವಾಗಿತ್ತು. ಎಲ್ಲೋ ಬೆರಳಣಿಕೆಯಷ್ಟು ಜನ ಇದ್ದರು. ಧಾರವಾಡದ ಕರ್ನಾಟಕ ಕಾಲೇಜಿನ ಕ್ಯಾಂಪಸ್ಸಿನಲ್ಲಿ ಜನ ಹೆಚ್ಚು. ಕ್ಲಾಸಿನಲ್ಲಿ ಕಮ್ಮಿ. ಮಜಾ ಮಾಡಲು ಹೇಳಿ ಮಾಡಿಸಿದಂತಹ ಅದ್ಭುತ ಕ್ಯಾಂಪಸ್ ಇರುವಾಗ ಕ್ಲಾಸಿನಲ್ಲಿ ಯಾವನು ಹೋಗಿ ಕೂಡ್ತಾನ್ರೀ!?

ಮಾಸ್ತರ್ ಕ್ಲಾಸಿನಲ್ಲಿದ್ದಾಗ ಅನುಮತಿ ಕೇಳಿ ಒಳಗೆ ಹೋಗುವದು ಪದ್ಧತಿ. ಒಳಗೆ ಹೋಗಿರಿ ಅಥವಾ ಹೊರಗೆ ಬನ್ನಿರಿ. ಮಾಸ್ತರ್ ಅಥವಾ ಮಾಸ್ತರಿಣಿ ಕಂಡರು ಅಂದರೆ ಅನುಮತಿ ಪಡೆದುಕೊಂಡೇ ಹೆಜ್ಜೆ ಎತ್ತಿಡಬೇಕು. ಇಲ್ಲವಾದರೆ ಅಪಚಾರ! ಅವರಿಗೆ ಮಾಡಿದ ಅವಮಾನ!

ಅನುಮತಿ ಇಲ್ಲದೇ ಕ್ಲಾಸಿನಲ್ಲಿ ಹೋಗಿ ಬಂದು ಮಾಡಕೂಡದು ಅಂತ ಬರೋಬ್ಬರಿ ಪಾಠ ಕಲಿಸಿದ್ದವರು ರೇವಣಕರ್ ಮೇಡಂ. ಹೈಸ್ಕೂಲಿನಲ್ಲಿ ಗಣಿತ, ವಿಜ್ಞಾನ ಪಾಠ ಮಾಡಿದ್ದರು. ಅದ್ಭುತ ಶಿಕ್ಷಕಿ. ಸದಾ ಜಾಲಿಯಾಗಿ ತಮಾಷೆ ಮಾಡಿಕೊಂಡು ಪಾಠ ಮಾಡುತ್ತಿದ್ದರು. ಒಂದಿನ ನನಗೆ ಮಧ್ಯಾನ್ಹ ಸ್ವಲ್ಪ ಬೇಗನೆ ಮನೆಗೆ ಓಡುವ ಅವಶ್ಯಕತೆ ಇತ್ತು. ಕ್ಲಾಸ್ ಟೀಚರಿಗೋ ಅಥವಾ ಬೇರೆ ಯಾರೋ ಮಾಸ್ತರಿಗೋ ಹೇಳಿ ಅನುಮತಿಯನ್ನು ಪಟಾಯಿಸಿಟ್ಟುಕೊಂಡಿದ್ದೆ. ಮಧ್ಯಾನ್ಹ ರೇವಣಕರ್ ಟೀಚರ್ ಪಿರಿಯಡ್ ಮುಗಿದಿದ್ದೆ ತಡ, ಟೀಚರ್ ಇನ್ನೂ ಕ್ಲಾಸಿನಲ್ಲಿದ್ದಾರೆ ಎನ್ನುವದನ್ನೂ ನಿರ್ಲಕ್ಷಿಸಿ ಹೊರಗೆ ಓಡಿದ್ದೆ. ಮರುದಿನ ಟೀಚರ್ ಕರೆದು ಸಣ್ಣಗೆ ಬೈದಿದ್ದರು. ಬೇರೆ ಯಾರೋ ಟೀಚರ್, ಮಾಸ್ತರ್ ಬೈದಿದ್ದರೆ 'ಕುದುರೆ ಜುಟ್ಟು. ಕತ್ತೆ ಬಾಲ,' ಅಂತ ಕಾಲರ್ ಮೇಲಿನ ಧೂಳು ಕೊಡವಿಕೊಂಡು ಬರುತ್ತಿದ್ದೆನೇನೋ. ಆದರೆ ರೇವಣಕರ್ ಟೀಚರ್ ಅಂದರೆ ಸಿಕ್ಕಾಪಟ್ಟೆ ಗೌರವ ಮತ್ತು ಲೈಕಿಂಗ್. ಅಂತವರು ಬೈದುಬಿಟ್ಟರು. ಅದೂ ತಮಗೊಂದು ಮಾತೂ ಹೇಳದೆ ಕ್ಲಾಸ್ ಬಿಟ್ಟು ಹೋದೆ ಅಂತ ಅವಮಾನಿತರಾಗಿ ನೊಂದುಕೊಂಡು ಬೈದರು ಎಂದು ಬೇಜಾರಾಗಿತ್ತು. ಮಂಗ್ಯಾ ಆದರೂ ಪಾಠ ಬರೋಬ್ಬರಿ ಕಲಿತಿದ್ದೆ. ಕ್ಲಾಸಿನಲ್ಲಿ ಮಾಸ್ತರ್ ಅಥವಾ ಮಾಸ್ತರಿಣಿ ಇದ್ದರೆ ಅವರ ಅನುಮತಿ ತೆಗೆದುಕೊಂಡೆ ಒಳಗೆ ಹೊರಗೆ ಹೋಗಿ ಬಂದು ಮಾಡುವದು ಎಂಬುದೇ ಮರೆಯಲಾರದ ಪಾಠ. 

ಈಗ ಇಲ್ಲಿ ನಾಯ್ಕರ್ ಮಾಸ್ತರರ ಕ್ಲಾಸ್ ನಡೆದಿತ್ತು. ಹಾಗಾಗಿ, ಬಾಗಿಲಲ್ಲೇ ನಿಂತು, 'May I come in, Sir?' ಅಂದೆ. ಇದ್ದ ಒಂದೂವರೆ ಡಜನ್ ವಿದ್ಯಾರ್ಥಿಗಳಿಗೆ ಭರ್ಜರಿ ಪಾಠ ಮಾಡುವಲ್ಲಿ ನಾಯ್ಕರ್ ಮಾಸ್ತರ್ ಮಗ್ನರಾಗಿದ್ದರು. ನಾನು ಹೇಳಿದ್ದು ಅವರಿಗೆ ಕೇಳಲಿಲ್ಲ ಅಂತ ಕಾಣುತ್ತದೆ. 'Come in,' ಅನ್ನಲಿಲ್ಲ. ಮತ್ತೆ ಕೇಳಿದೆ. ಆಗಲೂ ಉತ್ತರವಿಲ್ಲ. ಮತ್ತೊಂದು ನಾಲ್ಕು ಬಾರಿ ಕೇಳಿ, ಕೇಳಿ ಸುಸ್ತಾಗಿಬಿಟ್ಟೆ. ಒಳಗೆ ಬರಲೇನು ಅಂತ ಅನುಮತಿ ಕೇಳುವಾಗ ಆವಾಜ್ ಜಾಸ್ತಿ ಎತ್ತರಿಸುವಂತಿಲ್ಲ. ಏರು ದನಿಯಲ್ಲಿ ಯಾಕೆ ಪರ್ಮಿಷನ್ ಕೇಳಿದೆ ಅಂತ ನಂತರ ಬೈದರೆ ಕಷ್ಟ. ನಾನು ಬಾಗಿಲಲ್ಲಿ ನಿಂತು ಪರ್ಮಿಷನ್ ಕೇಳಿದ್ದು ನಾಯ್ಕರ್ ಮಾಸ್ತರಿಗೆ ಕೇಳಲಿಲ್ಲ. ಅತ್ಲಾಗೆ ಕಾಣಲೂ ಇಲ್ಲ. ಯಾಕೆಂದರೆ ಬಾಗಿಲಿಗೆ ಬೆನ್ನು ಹಾಕಿ ಕೊರೆಯುತ್ತ ನಿಂತಿದ್ದರಲ್ಲ. ಆದರೆ ನಾನು ಬಾಗಿಲಲ್ಲಿ, 'ದೀನ ನಾ ಬಂದಿರುವೆ. ಬಾಗಿಲಲ್ಲಿ ನಿಂತಿರುವೆ.......' ಅಂತ ಬೆಗ್ಗರ್ ಲುಕ್ಕಿನಲ್ಲಿ ನಿಂತಿದ್ದು ಬೇರೆ ವಿದ್ಯಾರ್ಥಿಗಳಿಗೆ ಕಂಡು ಅವರು ಕಿಸಿಕಿಸಿ ನಕ್ಕರು. ಪ್ರಾಕ್ಟಿಕಲ್ಸ್ ಒಂದು ಬಿಟ್ಟು ಎಂದೂ ಕಾಲೇಜಿಗೆ ಬರದವ ನಾನು ಅಂದು ಎಲ್ಲಾ ಬಿಟ್ಟು ಸಂಸ್ಕೃತ ನಾನ್-ಡೀಟೇಲ್ ಕ್ಲಾಸಿಗೆ ಬಂದಿದ್ದೇನೆ. ಬಂದು ಬಾಗಿಲಲ್ಲಿ ಬೆಗ್ಗರ್ ತರಹ ನಿಂತು 'ಅಮ್ಮಾ! ತಾಯಿ!' ಅಂತ ಭಜನೆ ಮಾಡುತ್ತಿದ್ದೇನೆ ಅಂತ ಒಂದಿಷ್ಟು ಜನರಿಗೆ ನಗೆ ಬಂದಿದ್ದರೆ ತಪ್ಪು ಅವರದಲ್ಲ ಬಿಡಿ.

ಆ ಯಬಡ ಸಹಪಾಠಿಗಳು ನಕ್ಕಿದ್ದು ನಾಯ್ಕರ್ ಮಾಸ್ತರರನ್ನು ಕೆರಳಿಸಿರಬೇಕು. ಕಾಳಿದಾಸನ ಅಭಿಜ್ಞಾನ ಶಾಕುಂತಲದ ಶೃಂಗಾರ ರಸವನ್ನು ಅವರದ್ದೇ ರಸವತ್ತಾದ ಶೈಲಿಯಲ್ಲಿ ಪಾಠ ಮಾಡುತ್ತಿದ್ದರು ಸರ್. ಹುಡುಗಿಯರು ತಲೆ ತಗ್ಗಿಸಿ ಮುಸಿಮುಸಿ ನಗುತ್ತಿದ್ದರೆ, ಹುಡುಗುರು ಖುಲ್ಲಂ ಖುಲ್ಲಾ ತೊಡೆತಟ್ಟಿ ನಕ್ಕು ಮಾಸ್ತರರಿಗೆ ಮತ್ತೂ ಹುರುಪು ತಂದುಕೊಡುತ್ತಿದ್ದರು. ಒಳ್ಳೆ ಮಲೆಯಾಳಿ ವಯಸ್ಕ ಸಿನೆಮಾದ screenplay ಮಾದರಿಯಲ್ಲಿ ನಾಯ್ಕರ್ ಮಾಸ್ತರರ ಶೃಂಗಾರ ರಸದ ವರ್ಣನೆ.

ಹೀಗೆ ಕ್ಲಾಸ್ ನಡೆಯುತ್ತಿದ್ದಾಗ ನಾನು ಶಿವಪೂಜೆಯಲ್ಲಿ ಕರಡಿ ಬಂದಂತೆ ಬಂದು 'ಅಮ್ಮಾ! ತಾಯಿ!' ಅನ್ನುತ್ತಿದ್ದೇನೆ. ಸರಕ್ ಅಂತ ಬಾಗಿಲ ಕಡೆಗೆ ತಿರುಗಿದವರೇ, 'Don't make your entry or exit a big scene. Come in.....' ಎಂದು ಅಸಹನೆಯಿಂದ ಗುಡುಗಬೇಕೇ ಸರ್!? ಶಿವಾಯ ನಮಃ! ವಿಧೇಯತೆಯಿಂದ ಅನುಮತಿ ಕೇಳಿದರೆ, 'ಸುಮ್ಮನೆ ಒಳಗೆ ಬಂದು ಕೂಡು. ನಿನ್ನ ಬರೋದು ಮತ್ತು ಹೋಗೋದನ್ನು ದೊಡ್ಡ ಸೀನ್ ಮಾಡಬೇಡ,' ಅಂದರು. ಅನುಮತಿ ಕೇಳದೇ ಕ್ಲಾಸಿನ ಒಳಗೆ ಹೋಗುವದನ್ನು ಆ  ಕಾಲದಲ್ಲಿ ಊಹಿಸಲೂ ಸಾಧ್ಯವಿರಲಿಲ್ಲ. ಹಾಗಿದ್ದಾಗ ಇವರೊಬ್ಬರು radical ಮಾಸ್ತರರು!

ಮಂಗ್ಯಾ ಆಗಿ, ಮಳ್ಳ ಮುಖ ಹೊತ್ತು ಒಳಗೆ ಹೋಗಿ ಕೂತೆ. ನಾಯ್ಕರ್ ಸರ್ ಅಮೋಘ ಪಾಠ ಮುಂದುವರೆಸಿದರು. ಸಂಸ್ಕೃತ ಕಾವ್ಯಗಳಲ್ಲಿನ ಶೃಂಗಾರ ವರ್ಣಿಸುವಾಗ ದೇಹದ ಹಾರ್ಮೋನುಗಳ ಬಗ್ಗೆ ಹೇಳಿ, ಹಾರ್ಮೋನುಗಳು ಹೇಗೆ ಹುಡುಗ ಹುಡುಗಿಯರನ್ನು ಶೃಂಗಾರದತ್ತ ತಳ್ಳುತ್ತವೆ ಅಂತ ತಮ್ಮದೇ ರೀತಿಯಲ್ಲಿ ವಿಚಿತ್ರವಾಗಿ ಪಾಠ ಮಾಡಿದ ಸಂಸ್ಕೃತ ಪಂಡಿತರು ಯಾರಾದರೂ ಇದ್ದರೆ ಅವರು ನಮ್ಮ ನಾಯ್ಕರ್ ಸರ್ ಅವರೇ ಇರಬೇಕು!

ನಾಯ್ಕರ್ ಸರ್ ನೋಡಲಿಕ್ಕೆ ಟಿಪಿಕಲ್ ಕಮ್ಯುನಿಸ್ಟ್ ಕ್ರಾಂತಿಕಾರಿಯಂತೆ ಇದ್ದರು. ತೆಳ್ಳಗೆ ನೀಳವಾಗಿದ್ದರು. ಕುರುಚಲು ಗಡ್ಡ. ಪ್ಯಾಂಟ್ ಮೇಲೆ ಜುಬ್ಬಾ ಹಾಕುತ್ತಿರಲಿಲ್ಲ. ರೆಗ್ಯುಲರ್ ಶರ್ಟ್ ಪ್ಯಾಂಟ್ ಹಾಕುತ್ತಿದ್ದರು. ಜುಬ್ಬಾ ಹಾಕಿ ಪ್ಯಾಂಟ್ ಹಾಕಿದ್ದರೆ ಥೇಟ್ ಕಮ್ಯುನಿಸ್ಟ್ ಕ್ರಾಂತಿಕಾರಿಯೇ. ಪಿಯೂಸಿ ಹುಡುಗರಿಗೆ, ಅದೂ ಸೈನ್ಸ್ ಹುಡುಗರಿಗೆ, ಸಂಸ್ಕೃತ ಪಾಠ ಮಾಡುವದು, ಅದೂ ಊಟವಾದ ಮೇಲೆ ಮಸ್ತ ನಿದ್ದೆ ಬರುವ ಹೊತ್ತಿಗೆ ನಿದ್ದೆ ಬರದಂತೆ ಪಾಠ ಮಾಡುವದು ಒಂದು ತರಹದ ಮಹಾನ್ ಕ್ರಾಂತಿಯೇ. ಹಾಗಾಗಿ ನಾಯ್ಕರ್ ಸರ್ ಕೂಡ ಕ್ರಾಂತಿಕಾರಿಯೇ.

ಇದಾದ ನಂತರ ಮತ್ತೆ ನಾಯ್ಕರ್ ಸರ್ ಕ್ಲಾಸಿಗೆ ಹೋಗಲೇಯಿಲ್ಲ. ಅವರ ಪೋಲಿ ರಸ ತುಂಬಿರುತ್ತಿದ್ದ ಪಾಠ ಕೇಳಲು ಹೋಗುತ್ತಿದ್ದ ದೋಸ್ತರು ನಾಯ್ಕರ್ ಸರ್ ಹೇಗೆ ಪಾಠ ಮಾಡಿದರು, ಹೇಗೆ ಹುಡುಗಿಯರು ತಲೆ ಎತ್ತದೇ ಕೂತರೂ ಒಳಗಿಂದೊಳಗೇ ಹೇಗೆಲ್ಲ ಎಂಜಾಯ್ ಮಾಡುತಿದ್ದರು ಅಂತೆಲ್ಲ ಕಥೆ ಹೊಡೆಯುತ್ತಿದ್ದರು. ಅದೆಲ್ಲ ಸೆಕೆಂಡ್ ಹ್ಯಾಂಡ್ ಮಾಹಿತಿಯಾದರೂ ಸಂಜೆಯ ಹರಟೆಗೆ ಸಖತ್ತಾಗಿರುತ್ತಿತ್ತು.

ಮುಂದೆ ಹಲವಾರು ವರ್ಷಗಳ ನಂತರ ಅಮೇರಿಕಾದ ಯೂನಿವರ್ಸಿಟಿಗಳಲ್ಲಿ ಓದಲು ಶುರುಮಾಡಿದಾಗ ಮತ್ತೆ ನಾಯ್ಕರ್ ಸರ್ ನೆನಪಾಗಿದ್ದರು. ಯಾಕೆಂದರೆ ಇಲ್ಲಿ ಯಾವ ವಿದ್ಯಾರ್ಥಿಯೂ ಕ್ಲಾಸಿನ ಒಳಗೆ ಬರಲು ಅಥವಾ ಹೊರಗೆ ಹೋಗಲು ಅನುಮತಿ ಕೇಳುವದಿಲ್ಲ. ಅದನ್ನೆಲ್ಲ ಶಿಕ್ಷಕರು ನಿರೀಕ್ಷೆ ಮಾಡುವದೂ ಇಲ್ಲ. ಶಿಕ್ಷಕರಿಗೆ ಯಾರೂ ಸರ್ ಗೀರ್ ಅನ್ನುವದೂ ಇಲ್ಲ. ಕೇವಲ ಹೆಸರು ಹೇಳಲು ಸಂಕೋಚ ಎನ್ನಿಸಿದರೆ ಅವರ ಹೆಸರಿನ ಹಿಂಬದಿಗೆ ಪ್ರೊಫೆಸರ್ ಅಂತ ಹೇಳಿದರೆ ದೊಡ್ಡ ಮಾತು. ಮತ್ತೆ ಮಾಸ್ತರ್ ಮಂದಿ ಕೂಡ ತುಂಬಾ informal ಆಗಿರುತ್ತಾರೆ. ಹಾಗಾಗಿ ಮಾಸ್ತರ್ ಜೊತೆ ತುಂಬಾ casual ಅನ್ನಿಸುವಂತಹ ಸಂಬಂಧ ಇರುತ್ತದೆ. ಆದರೂ  'ಗುರುಭ್ಯೋ ನಮಃ' ಎಂಬ ಸಂಸ್ಕೃತಿಯಿಂದ ಬಂದ ನಮ್ಮಂತವರಿಗೆ ಅದೆಲ್ಲ ವಿಚಿತ್ರ ಅನ್ನಿಸುತ್ತದೆ. ಅಮೇರಿಕಾದಲ್ಲಿ ಅದನ್ನೆಲ್ಲ ನೋಡಿದಾಗ ಅಂತಹ ಒಂದು ತರಹದ ಸಂಸ್ಕೃತಿಯನ್ನು ಇಪ್ಪತ್ತು ವರ್ಷ ಮೊದಲೇ ಧಾರವಾಡದಲ್ಲಿ ನಾಯ್ಕರ್ ಸರ್ ಹುಟ್ಟುಹಾಕಲು ಹೊರಟಿದ್ದರೇನೋ ಅನ್ನಿಸಿತ್ತು. Maybe our Naikar sir was ahead of our times!

೧೯೯೦ ರಲ್ಲಿ ಪಿಯೂಸಿ ಮುಗಿದ ನಂತರ ಮಾಜಿ ಕಾಲೇಜಿನ ಕಡೆ ಮುಂದೊಂದೆರೆಡು ವರ್ಷ 'ಪಕ್ಷಿವೀಕ್ಷಣೆಗೆ' ಹೋದಾಗಲೂ ಎಲ್ಲೂ ನಾಯ್ಕರ್ ಸರ್ ಕಂಡ ನೆನಪಿಲ್ಲ. ಮುಂದೆ ನಮ್ಮ ಕಲ್ಯಾಣನಗರ ಬಡಾವಣೆಯಲ್ಲಿಯೇ ಮನೆ ಕಟ್ಟಿ ಅಲ್ಲಿಗೆ ಶಿಫ್ಟಾಗಿದ್ದರು ಅಂತ ಕೇಳಿದ್ದೆ.

ಇರಲಿ. ಹೊಸವರ್ಷ 'May I come in?' ಅಂತ ಕೇಳಿ ಬರುವದಿಲ್ಲ ಅಂತ ಹೇಳಲು ಹೊರಟರೆ ನಾಯ್ಕರ್ ಸರ್ ನೆನಪಾದರು. ರೇವಣಕರ್ ಟೀಚರ್ ನೆನಪಾದರು. ಕಲಿಸಿದ ಗುರುಗಳು ಬೇರೆಬೇರೆ ಕಾರಣಗಳಿಗೆ ನೆನಪಾಗುತ್ತಲೇ ಇರುತ್ತಾರೆ. ಇವರು ಈ ಕಾರಣಕ್ಕೆ ನೆನಪಾದರು. ನಾಯ್ಕರ್ ಸರ್ ಆರಾಮ್ ಇರಲಿ. ಅವರೂ ನಿವೃತ್ತರಾಗಿ ದಶಕವೇ ಆಗಿರಬೇಕು. ಅವರ ನಿವೃತ್ತ ಜೀವನ ಸುಖಕರವಾಗಿರಲಿ. ಅದೇ ಕಾಲೇಜಿನಲ್ಲಿ ಪಾಠ ಮಾಡಿಕೊಂಡಿದ್ದ ದಂಡಾವತಿಮಠ ಮೇಡಂ ನಾಯ್ಕರ್ ಸರ್ ಪತ್ನಿ ಅಂತ ನೆನಪು. ಅವರೇನೂ ನಮಗೆ ಪಾಠ ಮಾಡಲಿಲ್ಲ. ಅವರು ಸಿನೆಮಾತಾರೆ ನಂದಿತಾ ದಾಸ್ ಮಾದರಿಯ ಲಕ್ಷಣವಂತ ಕೃಷ್ಣಸುಂದರಿ. ಅವರೂ ಆರಾಮಿರಲಿ. ಇನ್ನು ರೇವಣಕರ್ ಟೀಚರ್ ಬಗ್ಗೆ ಬರೆಯಲಿಕ್ಕೆ ಕೂತರೆ ಒಂದು ಪುಸ್ತಕ ಬರೆಯಬಹುದು. ಮುಂದೆ ಬರೆಯೋಣ. ಅವರೂ ಆರಾಮಿರಲಿ.

ನಿಮಗೆಲ್ಲ ೨೦೧೭ ರ ಶುಭಾಶಯಗಳು. Keep in touch!

5 comments:

sunaath said...

ನಿಮ್ಮ ಬ್ಲಾ^ಗ್‍ಗೆ ಬರುವಾಗ, May I come in, Sir? ಅಂತ ನಾನಂತೂ ಕೇಳುವುದಿಲ್ಲ! ನೀವೂ ಸಹ ನಮ್ಮ ಅನುಮತಿಯನ್ನು ಪಡೆಯದೇ, ಬ್ಲಾ^ಗ್ ಬಾಗಿಲನ್ನು ತೆರದೇ ಇಡಿ!
ಹೊಸ ವರುಷದ ಶುಭಾಶಯಗಳು.

Mahesh Hegade said...

ಅದ್ಭುತ ಹಾಸ್ಯಪ್ರಜ್ಞೆಯ ನಿಮ್ಮ ಕಾಮೆಂಟಿಗೆ ಧನ್ಯವಾದಗಳು, ಸುನಾಥ್ ಸರ್!

ವಿ.ರಾ.ಹೆ. said...

ಇಂಜಿನಿಯರಿಂಗ್ ಮಾಡುವಾಗ ನಮ್ಮ ಮಾಸ್ತರರೊಬ್ಬರು ಹೀಗೇ ಹೇಳಿದ್ದರು. ಕ್ಲಾಸಿನ ನಡುವೆಯೇ ಹೋಗೋರು ಹೋಗಿ, ಬರೋರು ಬನ್ನಿ, ಪಾಠಕ್ಕೆ ಡಿಸ್ಟರ್ಬ್ ಮಾಡಬೇಡಿ ಅಂತ. ಅದನ್ನು ನಾವು ಹಲವುಬಾರಿ ಸದುಪಯೋಗ ಪಡಿಸಿಕೊಂಡಿದ್ದೆವು ;-) Happy New Year ನಿಂಗೂವ.

Mahesh Hegade said...

@ವಿಕಾಸ್, ಒಹೋ! ನಿನಗೂ ಒಬ್ಬರು ಅಂಥಾ ಮಾಸ್ತರ್ ಇದ್ದಿದ್ದ್ರು ಹೇಳಾತು! :)

Dick Dakshinamukhi said...


There was a news article about a teacher who made late-comers jump with his brother-in-law's pet kangaroo!