೧೯೮೦. ಆಗಿನ್ನೂ ಮೂರನೇ ಕ್ಲಾಸ್. ಹೊಸದಾಗಿ ಸ್ವಂತ ಮನೆ ಕಟ್ಟಿಕೊಂಡು ಆ ಏರಿಯಾಗೆ ಬಂದು
ಒಂದೆರೆಡು ತಿಂಗಳಾಗಿತ್ತು ಅಷ್ಟೇ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕೆಳಗಿನ
ಕೊಳ್ಳಪ್ರದೇಶಕ್ಕೆ ನಿರ್ಮಲ ನಗರ ಅಂತ ಹೆಸರು. ಅದರ ಕೊಂಚ ಮೇಲಿದ್ದದ್ದು relatively
ಹಳೆಯ ಬಡಾವಣೆಯಾದ ಕಲ್ಯಾಣ ನಗರ. ಅದರ ಹೆಸರು ಸುಮಾರು ಜನರಿಗೆ ಗೊತ್ತಿತ್ತು. ಆದರೆ ಜನವಸತಿ
ತುಂಬಾ ವಿರಳವಾಗಿದ್ದ ನಮ್ಮ ಏರಿಯಾ ನಿರ್ಮಲ ನಗರದ ಹೆಸರು ಜಾಸ್ತಿ ಜನರಿಗೆ
ಗೊತ್ತಿರಲಿಲ್ಲ.
ಅಂದು ನಮ್ಮ 10th A ಕ್ರಾಸಿನಲ್ಲಿ ಇದ್ದವೇ ಎರಡು ಮನೆಗಳು. ನಮ್ಮ ಮನೆ. ನಮ್ಮ ಪಕ್ಕದವರ ಮನೆ. ಬಾಕಿ ಎಲ್ಲಾ ಬಟಾಬಯಲು. ಫರ್ಲಾಂಗು ದೂರದಲ್ಲಿ ರೈಲ್ವೆ ಹಳಿ. ಅದರ ಸುತ್ತಮುತ್ತಲೆಲ್ಲ ದಟ್ಟ ಮಾವಿನ ತೋಪು. ಜನ ಸಂಚಾರವೂ ಬಹಳ ಕಮ್ಮಿ. ಇಳಿಸಂಜೆ ಆರು ಆರೂವರೆಯ ನಂತರ ಗವ್ವೆನ್ನುವ ಮೌನ. ರಸ್ತೆಗಳೇ ಕಮ್ಮಿ. ಹಾಗಾಗಿ ರಸ್ತೆ ದೀಪಗಳು ಇನ್ನೂ ಕಮ್ಮಿ. ಹೊತ್ತಲ್ಲದ ಹೊತ್ತಲ್ಲಿ ಭೋಂ ಅನ್ನುತ್ತ ಹೋಗುವ ರೈಲುಗಳಂತೂ ಎದೆಯ ಮೇಲೆಯೇ ಹರಿದುಹೋದ ಅನುಭವ. ಒಟ್ಟಿನಲ್ಲಿ ಒಂದು ತರಹದ ಗಾಬರಿಯಾಗುವಂತಹ haunting ವಾತಾವರಣ.
ನಾವೋ ಕರ್ಮಠ ಬ್ರಾಹ್ಮಣರ ಅಪ್ಪಟ ಅಗ್ರಹಾರದಂತಿದ್ದ ಮಾಳಮಡ್ಡಿ ಬಡಾವಣೆ ಬಿಟ್ಟು ಈ ಏರಿಯಾಗೆ ಬಂದಿದ್ದೆವು. ಅದು ಪಕ್ಕಾ ಕಿಷ್ಕಿಂಧೆ. ಜನಸಂದಣಿ ಬಹಳ ಜಾಸ್ತಿ ಅಲ್ಲಿ. ಖಾಲಿ ಜಾಗವೇ ಇಲ್ಲ. ಇಕ್ಕಟ್ಟಾದ ರಸ್ತೆಗಳು. ಅಂತಹ ಏರಿಯಾದಿಂದ ಇಂತಹ ಬಟಾಬಯಲಿಗೆ ಬಂದಿದ್ದು ನಮಗೆಲ್ಲ ಒಂದು ತರಹದ ಶಾಕ್. ತಂದೆಯವರು ಕಾಡಿನ ಮಧ್ಯದ ಒಂಟಿ ಮನೆಗಳಿರುವ ಹಳ್ಳಿಯಿಂದ ಬಂದವರಾಗಿದ್ದರಿಂದ ಅವರಿಗೊಬ್ಬರಿಗೆ ಮಾತ್ರ ಮೂಲಸ್ಥಳಕ್ಕೆ ಬಂದಂತಾಗಿತ್ತು. ಅಮ್ಮ ಮೊದಲಿಂದಲೂ ಮಾಳಮಡ್ಡಿಯಲ್ಲೇ ಇದ್ದು ಅಲ್ಲಿನ ಮೂಲನಿವಾಸಿಗಳಿಗಿಂತ hardcore ಆಗಿದ್ದರು. ಹೊಸಮನೆಯಿದ್ದ ನಿರ್ಜನ ಪ್ರದೇಶಕ್ಕೆ ಹೊಂದಿಕೊಳ್ಳಲು ನಮಗೆಲ್ಲ ಕೊಂಚ ವೇಳೆ ಹಿಡಿಯಿತು.
ಇಂತಿಪ್ಪ ಹೊಸದಾದ ಮನೆಗೆ ಬಂದ ಹೊಸತರಲ್ಲಿಯೇ ಒಂದು ದಿನ ರಾತ್ರಿ ಮೂರು ಘಂಟೆ ಹೊತ್ತಿಗೆ ವ್ಯಕ್ತಿಯೊಬ್ಬನ ಭೀಕರ ಚೀತ್ಕಾರ ರಾತ್ರಿಯ ನೀರವತೆಯನ್ನು ಸೀಳಿಕೊಂಡು ಬಂದಿತ್ತು. ಯಾರಿಗೆ ಏನಾಯಿತೋ ಅಂತ ಘಾಬರಿಯಾಗಿದ್ದೆವು. ತಂದೆಯವರು ನೋಡಿಬರುತ್ತೇನೆ ಅಂತ ಹೊರಟಿದ್ದರು. ‘ಸುಮ್ಮ ಮಲಕೊಳ್ಳರೀ. ಯಾರಿಗೆ ಏನಾತೋ ಏನೋ! ಮೊದಲೇ ಅಂಜಿಕಿ ಬರುವಂತಾ ಸುಡುಗಾಡ್ ಜಾಗಾ ಇದು. ಅದರ ಮ್ಯಾಲೆ ಈ ಅಪರಾತ್ರ್ಯಾಗ ಎದ್ದು ಹೋಗಿ ನೋಡಿ ಬರ್ತೇನಿ ಅಂತ ಹೊಂಟಿರಲ್ಲಾ?!’ ಎನ್ನುವ ಅಮ್ಮನ ‘ಪ್ರೋತ್ಸಾಹದ’ ಮಾತು ಕೇಳಿ ಹೋಗಿರಲಿಲ್ಲ. ದಟ್ಟ ಕಾಡಿನ ಮಧ್ಯದ ಹಳ್ಳಿಯ ಒಂಟಿ ಮನೆಯಲ್ಲಿ ಬೆಳೆದ ಅವರಿಗೆ ಹೆದರಿಕೆ ಗೊತ್ತಿಲ್ಲ. ಅಲ್ಲೆಲ್ಲ ರಾತ್ರಿ ಹೊರಗೆ ಹೋಗಿ ಬರುವದು ಅಸಹಜವೂ ಅಲ್ಲ. ಹಾಗಾಗಿ ಹೊರಟಿದ್ದರು. ಹೋಗಿಯೇ ಬಿಡುತ್ತಿದ್ದರೇನೋ. ಮಳೆಗಾಳವಾಗಿತ್ತು. ಥಂಡಿ ಬೇರೆ ಜಾಸ್ತಿಯಿದ್ದರಿಂದ ಬಿಟ್ಟಿರಬೇಕು. ಇಂದಿಗೂ ನಮ್ಮ ಮೂಲ ಊರಿನಲ್ಲಿ ರಾತ್ರಿ ಹುಲಿ ಘರ್ಜಿಸುತ್ತದೆ. ಹಳೆಕಾಲದಲ್ಲಿ ತಂದೆಯವರ ಅಣ್ಣ ಬಂದೂಕು ರೆಡಿ ಮಾಡಿಕೊಂಡು ಹೊರಟರೆ ತಂದೆಯವರು ಬೆಳಕು ತೋರಲು ಪಂಜಿನೊಂದಿಗೆ ರೆಡಿಯಾಗಿರುತ್ತಿದ್ದರು. ಕಬ್ಬಿನ ಗದ್ದೆಯ ಕಡೆ ಆನೆಗಳು ಘೀಳಿಟ್ಟರೆ ಅವನ್ನು ಓಡಿಸಲು ದೊಡ್ಡಪ್ಪ ಗರ್ನಾಲ್ (ದೊಡ್ಡ ಸೈಜಿನ ಪಟಾಕಿ) ಹೊಡೆಯಲು ಹೊರಟರೆ ಮತ್ತೆ ಪಂಜು ಹಿಡಿದು ಬೆಳಕು ತೋರಲು ತಂದೆಯವರೇ ಹೋಗುತ್ತಿದ್ದರು. ಅಂತಹ ಖತರ್ನಾಕ್ ವಾತಾವರಣದಲ್ಲಿದ್ದು ಜೀವನ ಜೈಸಿ ಬಂದವರಿಗೆ ರೈಲ್ವೆ ಹಳಿಯ ಪಕ್ಕ ಅಪರಾತ್ರಿಯಲ್ಲಿ ಆ ರೀತಿಯಲ್ಲಿ ಅದ್ಯಾವ ಪುಣ್ಯಾತ್ಮ ಅದ್ಯಾಕೆ ಸಾಯುವಂತೆ ಹೊಯ್ಕೊಂಡ ಅಂತ ನೋಡಿ ಬರುವದೇನೂ ದೊಡ್ಡ ಮಾತಾಗಿರಲಿಲ್ಲ ಬಿಡಿ.
ಮರುದಿನ ಬೆಳಿಗ್ಗೆ ನೋಡಿದರೆ ಯಾವದೋ ವ್ಯಕ್ತಿ ರೈಲಿಗೆ ತಲೆ ಕೊಟ್ಟು ಶಿವಾಯ ನಮಃ ಅಂತ ಆತ್ಮಹತ್ಯೆ ಮಾಡಿಕೊಂಡಿದ್ದ. ದೇಹ ತುಂಡುತುಂಡಾಗಿ ಬಿದ್ದಿದೆ ಅಂತ ನೋಡಿ ಬಂದವರು ಹೇಳಿದರು. ಹೋಗಿ ನೋಡಲು ಭಯ. ಆದರೆ ಕೆಟ್ಟ ಕುತೂಹಲ. ಮನೆಯಲ್ಲಿ ತುಂಬಾ ಕಟ್ಟಳೆಗಳಂತೂ ಇರಲಿಲ್ಲ. 'ನೀವು ಹೆದರುವದಿಲ್ಲ ಅಂದರೆ ಹೋಗಿ ನೋಡಿ ಬನ್ನಿ,' ಅಂದರು. ಸಿಂಪಲ್. ಎಲ್ಲ ಜವಾಬ್ದಾರಿ ನಮ್ಮ ಮೇಲೆಯೇ. ಧೈರ್ಯ ಮಾಡಿ ಹೋಗಿ ನೋಡಿದ್ದೆ. ಇತರೇ ಹುಡುಗರೂ ಬಂದಿದ್ದರು. ದೃಶ್ಯ ಅಷ್ಟೇನೂ ಖರಾಬಾಗಿರಲಿಲ್ಲ. ಅಥವಾ ಸಾಕಷ್ಟು ದೂರದಿಂದ ನೋಡಿದ್ದರಿಂದ ಅಷ್ಟು ಭೀಕರ ಅನ್ನಿಸಿರಲಿಲ್ಲ. ಆಗಲೇ ಪೊಲೀಸರು ಬಂದಿದ್ದರು. ಹಾಗಾಗಿ ಜಾಸ್ತಿ ಹತ್ತಿರ ಹೋಗಲು ಧೈರ್ಯವಿರಲಿಲ್ಲ. ಲಾಠಿಯಿಂದ ಎಲ್ಲಾದರೂ ಬಾರಿಸಿದರೆ ಬೆನ್ನು ಮುರಿದುಹೋದೀತು ಎಂಬ ಸಣ್ಣ ವಯಸ್ಸಿನ ದೊಡ್ಡ ಭಯ!
ನಮಗಿಂತ ಮೊದಲೇ ಆ ಬಡಾವಣೆಗೆ ಬಂದಿದ್ದ ಮಂದಿ ಹೇಳಿದರು - ‘ಇಲ್ಲಿ ಇದೆಲ್ಲಾ ಮಾಮೂಲು. ಎರಡು ಮೂರು ತಿಂಗಳಿಗೊಮ್ಮೆ ಯಾರಾದರೂ ಹೀಗೆ ರೈಲಿಗೆ ಬಿದ್ದು ಸಾಯುತ್ತಿರುತ್ತಾರೆ. ಬೇಗ ಹೆಣ ಎತ್ತಿಕೊಂಡು ಹೋದರೆ ಅದೇ ನಮ್ಮ ಪುಣ್ಯ!’ ಆದರೆ ನಮಗೆ ಅದು ಮೊದಲ ಅನುಭವ. ಎಷ್ಟೋ ಸಲ ದಿನಗಟ್ಟಲೆ ಹೆಣಗಳನ್ನು ಎತ್ತುತ್ತಲೇ ಇರಲಿಲ್ಲವಂತೆ. ರೈಲ್ವೆ ಪೊಲೀಸರು ಬಂದು ಹಳಿಗಳ ಮೇಲೆ ಬಿದ್ದ ಹೆಣವನ್ನು ಹಳಿಯಿಂದ ಆಚೆ ಸರಿಸಿ ಹೋಗುತ್ತಿದ್ದರಂತೆ. ಒಮ್ಮೆ ಹೆಣ ಹಳಿಯಿಂದ ಆಚೀಚೆ ಇದೆ ಅಂತಾದರೆ ಅದು ನಗರ ಪೋಲೀಸರ ಜವಾಬ್ದಾರಿ. ಅವರು ಬರಬೇಕು. ಅವರು ಉರಿದುಕೊಂಡೇ ಬರುತ್ತಿದ್ದರು. ರೈಲ್ವೆ ಪೋಲೀಸರ ಮೇಲೆ ಕೆಂಡ ಕಾರುತ್ತಲೇ ಹೆಣವನ್ನು ಮತ್ತೆ ಹಳಿಗಳ ಪಕ್ಕ ಹಾಕಿ ಹೋಗುತ್ತಿದ್ದರು. ಈಗ ಇದು ಮತ್ತೆ ರೈಲ್ವೆ ಪೋಲೀಸರ ತಲೆಬಿಸಿ. ಹಳಿ ಮೇಲೆ ತುಂಡಾಗಿ ಬಿದ್ದ ಹೆಣ ಮಾತ್ರ ಬೇವರ್ಸಿಯಾಗಿ ಪಿಂಗ್ ಪಾಂಗ್ ಚೆಂಡಿನಂತೆ ಆಕಡೆ ಈಕಡೆ ಸ್ಥಾನಪಲ್ಲಟವಾಗುತ್ತಿತ್ತು. ಇಷ್ಟೆಲ್ಲಾ ಆಗುವ ಹೊತ್ತಿಗೆ ಯಾರೋ ಹಿರಿಯ ಅಧಿಕಾರಿಗೆ ಕೊಂಚ ವಿವೇಕ ಮೂಡಿ ಹೆಣ ಎತ್ತಿಸುತ್ತಿದ್ದ. ಇದೆಲ್ಲ ಸುದ್ದಿಯನ್ನು ಹಳಬರು ಹೇಳಿದರು. ‘ಹೀಗೂ ಉಂಟೆ!?’ ಅಂತ ಚಕಿತನಾಗಿ ವಾಪಸ್ ಮನೆಗೆ ಬಂದಿದ್ದೆ. ಎಲ್ಲವನ್ನೂ ವಿವರವಾಗಿ ವರದಿ ಮಾಡಿದ್ದೆ.
ಈ ಸಲ ಕೂಡ ಹಾಗೇ ಆಯಿತು. ಆವತ್ತು ಸಂಜೆ ಶಾಲೆ ಮುಗಿಸಿಕೊಂಡು ಬಂದಾಗಲೂ ಹೆಣ ಹಳಿಯ ಪಕ್ಕವೇ ಇತ್ತು. ಮತ್ತೊಮ್ಮೆ ದಿವ್ಯದರ್ಶನ. ಅಂತೂ ರಾತ್ರೆಗೂಡಿ ಹೆಣ ಸಾಗಿಸಿದರು. ಬರೋಬ್ಬರಿ ಹದಿನಾರು-ಹದಿನೆಂಟು ಘಂಟೆಗಳ ನಂತರ. ಮತ್ತೆ ರೈಲ್ವೆ ಪೊಲೀಸರು ಮತ್ತು ನಗರ ಪೋಲೀಸರ ಮಧ್ಯೆ ‘ತು ತು ಮೈ ಮೈ’ ಆಗಿರಬೇಕು.
ವರ್ಷಕ್ಕೆ ಕಮ್ಮಿಕಮ್ಮಿಯೆಂದರೂ ಮೂರ್ನಾಲ್ಕು ಅಂತಹ ಕೇಸುಗಳು ಆಗುತ್ತಿದ್ದವು. ಕೊಲೆ ಮಾಡಿ ರೈಲ್ವೆ ಹಳಿಗಳ ಮೇಲೆ ಒಗೆದು ಹೋಗಿದ್ದ ಸಂದರ್ಭಗಳೂ ಇದ್ದವು. ಹಾಗಂತ ಜನ ಮಾತಾಡಿದ್ದು ಕೇಳಿದ್ದೆ.
ಅದೇ ಪ್ರದೇಶದಲ್ಲಿ ಮೊನ್ನಿತ್ತಲಾಗೆ ಯಾರೋ ಮಹಿಳೆ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿ ಕಾಲು ಕಳೆದುಕೊಂಡಳಂತೆ. ಸಾವು ಬರಲಿಲ್ಲ. ಕಾಲೊಂದನ್ನು ಕಳೆದುಕೊಂಡು ಅಂಗಹೀನಳಾದಳು. ಛೇ! ಪಾಪ. ಸುದ್ದಿ ಓದಿ ಬೇಜಾರಾಯಿತು. ಆಗ ನೆನಪಾಗಿದ್ದೇ ಈ ಮೊದಲ ಅನುಭವ. ಅದೇ ರೈಲ್ವೆ ಹಳಿ ಮೇಲೆ ಹೆಣ ನೋಡಿದ ಮೊದಲ ಅನುಭವ.
ಇದಾದ ಎರಡೇ ತಿಂಗಳಲ್ಲಿ ಮನೆ ಮೇಲಿನ ಕ್ರಾಸಿನಲ್ಲಿ ಮರ್ಡರ್! ಅದೂ ಡಬಲ್ ಮರ್ಡರ್!! ಅದಕ್ಕಿಂತ ವಿಶೇಷವಾಗಿದ್ದು ಡಬಲ್ ಮರ್ಡರ್ ಆದ ಮನೆಗೆ ಬಂದು ನೆಲಸಿದವರಿಗೆ ದೆವ್ವದ ಕಾಟ! ಅದರ ಬಗ್ಗೆ ಹಿಂದೊಮ್ಮೆ ಬರೆದಿದ್ದು ಇಲ್ಲಿದೆ ನೋಡಿ - ಜೋಡಿ ಕೊಲೆ ಪ್ರೇತಾತ್ಮಗಳು ಹೊಟ್ಟೆ ಹುಳಗಳಾಗಿ ಕಾಡಿದ್ದವೇ?

No comments:
Post a Comment