ಅವರು Nightingale of India ಅಂತೇನೋ ವಿಶ್ವದ ತುಂಬೆಲ್ಲಾ ಖ್ಯಾತರಾದರು. ಆದರೆ ಒಂದಿಷ್ಟು ಜನ ಅವರ ಆ ಬಿರುದನ್ನು ತಪ್ಪಾಗಿ ಕೇಳಿ, ಅಸಂಬದ್ಧವಾಗಿ ಗ್ರಹಿಸಿಬಿಟ್ಟರು.
ಒಮ್ಮೆ ಸರೋಜಿನಿ ನಾಯ್ಡು ದಕ್ಷಿಣ ಆಫ್ರಿಕಾಗೆ ಹೋಗಿದ್ದರು. ಅಲ್ಲೊಂದು ಸಾರ್ವಜನಿಕ ಸಮಾರಂಭ. ಸರೋಜಿನಿ ನಾಯ್ಡು ಅವರನ್ನು ಪರಿಚಯಿಸುತ್ತಿದ್ದ ಆಫ್ರಿಕಾದ ಮಹಾನುಭಾವ ಇವರನ್ನು ‘Naughty Girl of India’ ಅಂತ ಪರಿಚಯಿಸಿಬಿಟ್ಟ!
ಸರೋಜಿನಿ ನಾಯ್ಡು ಎನ್ನುವ ಅರವತ್ತೂ ಚಿಲ್ಲರೆ ವಯಸ್ಸಿನ ಮಹಿಳೆ 'ಭಾರತದ ಕೋಗಿಲೆ' ಬದಲಾಗಿ 'ಭಾರತದ ತುಂಟ ಹುಡುಗಿ' ಎಂದು ಕರೆಯಲ್ಪಟ್ಟಿದ್ದರು! ಶಿವನೇ ಶಂಭುಲಿಂಗ!
ಆ ಆಫ್ರಿಕಾದ ಮನುಷ್ಯನಿಗೆ ಹೆಚ್ಚಾಗಿ ಇಂಗ್ಲೀಷ್ ಬರುತ್ತಿರಲಿಲ್ಲ. ಯಾರೋ ಹೇಳಿದ್ದನ್ನು ಬರೆದುಕೊಂಡು ಮುಗ್ಧವಾಗಿ ಓದಿದ್ದಾನೆ. ಅವನಿಗೆ ಹೇಳಿದವರ ತಲೆಯಲ್ಲಿ ‘Naughty Girl of India’ ಅಂತಲೇ ಉಳಿದುಹೋಗಿತ್ತು ಅಂತ ಕಾಣುತ್ತದೆ. ಒಟ್ಟಿನಲ್ಲಿ ಟೋಟಲ್ ಅನರ್ಥ!
ಮುಂದೆ ಎಮ್. ಎಸ್. ಸುಬ್ಬುಲಕ್ಷ್ಮಿ ಎಂಬ ದೈವೀಕಂಠದ ಗಾಯಕಿಗೆ Nightingale of India ಎನ್ನುವ ಬಿರುದನ್ನು ವರ್ಗಾಯಿಸುತ್ತೇನೆ ಎಂದು ಹೊರಟಿದ್ದರು ಸರೋಜಿನಿ ನಾಯ್ಡು. ಕೋಗಿಲೆ ಹೋಗಿ ತುಂಟ ಹುಡುಗಿಯಾದ ಲಫಡಾದ ಬಗ್ಗೆ ಬರೋಬ್ಬರಿ ವಿವರ ಮಡಗಿದ್ದ ಸುಬ್ಬುಲಕ್ಷ್ಮಿಯ protective & possessive ಪತಿ ಸದಾಶಿವಮ್ ‘ಆ ಬಿರುದೊಂದು ಬ್ಯಾಡಪ್ಪೋ ಬ್ಯಾಡ!’ ಎಂದು ಕೈಯೆತ್ತಿ ನಮಸ್ಕಾರ ಹಾಕಿದ್ದರು. ಸುಬ್ಬುಲಕ್ಷ್ಮಿಯನ್ನು ತುಂಟ ಹುಡುಗಿ ಎಂದು ಅನ್ನಿಸಿಕೊಳ್ಳಬೇಕಾದ ಅಪಾಯದಿಂದ ತಪ್ಪಿಸಿದ್ದರು.
***
ಹೆನ್ರಿ ಕಿಸ್ಸಿಂಜರ್ - ಕಳೆದ ಶತಮಾನದ ದೊಡ್ಡ ರಾಜಕೀಯ ಮುತ್ಸದ್ದಿ ಎಂದೇ ಖ್ಯಾತ. ೧೯೭೦ ರ ಜಮಾನಾದ ಅಮೇರಿಕಾದ ಅಧ್ಯಕ್ಷರಾಗಿದ್ದ ನಿಕ್ಸನ್, ಫೋರ್ಡ್ ಇತ್ಯಾದಿಗಳಿಗೆ ಏಕ್ದಂ ಖಾಸಮ್ ಖಾಸ್. ಇಂದಿಗೂ ರಾಜಕೀಯದ ದೊಡ್ಡ ತಲೆಗಳು ಆತನ ಸಲಹೆ ಸೂಚನೆ ಪಡೆಯುತ್ತಾರೆ. ಪ್ರಖ್ಯಾತ ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಓದಿದ ಕಿಸ್ಸಿಂಜರ್ ಮಹಾನ್ ಪ್ರತಿಭಾವಂತ. ಈಗ ವಯಸ್ಸು ೯೩ ವರ್ಷವಾದರೂ ಇವತ್ತಿಗೂ ಆತನ ಮೆದುಳು ಮೊದಲಿನಷ್ಟೇ ಚುರುಕಾಗಿದೆ.
ಈ ಕಿಸ್ಸಿಂಜರ್ ಪ್ರೆಸಿಡೆಂಟ್ ನಿಕ್ಸನ್ ಅವರ ಭದ್ರತಾ ಸಲಹೆಗಾರನಾಗಿದ್ದ. ಬಹಳ ದೊಡ್ಡ ಹುದ್ದೆ ಅದು.
ಒಮ್ಮೆ ಈ ಕಿಸ್ಸಿಂಜರನ ಮೊಮ್ಮಗ ತನ್ನ ಓರಗೆಯ ಹುಡುಗರೊಂದಿಗೆ ಆಟವಾಡುತ್ತಿರುವಾಗ ತನ್ನ ಅಜ್ಜನ ಬಗ್ಗೆ ತುಂಬಾ ಗರ್ವದಿಂದ ಹೇಳಿಕೊಳ್ಳುತ್ತಿದ್ದ. ಆ ಚಿಕ್ಕಮಕ್ಕಳ ಸಂಭಾಷಣೆ ತಮಾಷೆಯಾಗಿತ್ತು.
My grandpa is a very important public serpent - ಎಂದು ಗರ್ವದಿಂದ ಹೇಳಿಕೊಳ್ಳುತ್ತಿದ್ದ ಕಿಸ್ಸಿಂಜರ್ ಮೊಮ್ಮಗ!
Public servant ಅನ್ನುವದನ್ನು ತಪ್ಪಾಗಿ public serpent ಎಂದು ಗ್ರಹಿಸಿದ್ದ ಮೊಮ್ಮಗ ಅಜ್ಜನನ್ನು 'ಅತಿ ಮುಖ್ಯ ಸಾರ್ವಜನಿಕ ಸೇವಕ'ನಿಂದ 'ಅತಿ ಮುಖ್ಯ ಸಾರ್ವಜನಿಕ ಘಟಸರ್ಪ'ವನ್ನಾಗಿ ಮಾಡಿದ್ದ!
ವಿಯೆಟ್ನಾಂ ಯುದ್ಧದ ರೂವಾರಿಯಾಗಿದ್ದ ಕಿಸ್ಸಿಂಜರ್ ಕೈಗೆ ಲಕ್ಷಾಂತರ ಜನರ ರಕ್ತ ಮೆತ್ತಿತ್ತು. ಕಟುಕ (butcher), ದಕ್ಷಿಣ ಏಷ್ಯಾದಲ್ಲಿ ಮಾರಣಹೋಮಕ್ಕೆ ಕಾರಣನಾದ ನರಹಂತಕ ಅಂತೆಲ್ಲ ಅನ್ವರ್ಥನಾಮಗಳು ಕಿಸ್ಸಿಂಜರನಿಗೆ ಆಗಲೇ ತಗಲಾಕಿಕೊಂಡಿದ್ದವು. ಅಂತಹ ರಕ್ತಪಿಪಾಸುವಿಗೆ ಆತನ ಮೊಮ್ಮಗ ಘಟಸರ್ಪ / ಕಾಳಸರ್ಪ ಅಂದಿದ್ದು ಸರಿಯಾಗಿಯೇ ಇದೆ ಅಂತ ಕಿಸ್ಸಿಂಜರ್ ವಿರೋಧಿಗಳು ಕುಹಕವಾಡಿಕೊಂಡರು.
ಕಿಸ್ಸಿಂಜರ್ ಕೂಡ ಎಷ್ಟೋ ಕಡೆ ಈ ಘಟನೆಯನ್ನು ಹೇಳಿಕೊಂಡು ನಗೆಯಾಡುತ್ತಾನೆ. ನರಹಂತಹ ನಕ್ಕಂತೆ ಕಾಣುತ್ತದೆ. ಅತಿ ಮುಖ್ಯ ಕಾಳಸರ್ಪವೊಂದು ಫೂತ್ಕರಿಸಿದಂತೆ ತೋರುತ್ತದೆ!
2 comments:
ಸರೋಜಿನಿ ನಾಯಡು ಅವರು ಒಂದು ರೀತಿಯಲ್ಲಿ naughty girl ಎನ್ನುವುದು ಸರಿಯೇ. ಮಹಾತ್ಮಾ ಗಾಂಧಿಯವರು ಪ್ರವಾಸದಲ್ಲಿದ್ದಾಗ, ಅವರು ಇಳಿದುಕೊಳ್ಳುವ ಕೋಣೆಯನ್ನು ತುಂಬಾ ಅಚ್ಚುಕಟ್ಟಾಗಿ ಶೃಂಗರಿಸಲಾಗಿತ್ತಂತೆ. ‘ಈ ಮುದುಕನಿಗೇಕೆ ಈ ಶೃಂಗಾರ, ಮದುಮಗಳೇ ಇಲ್ಲದಿದ್ದಾಗ?’ ಎಂದು ಗಾಂಧೀಜಿ ಚೇಷ್ಟೆ ಮಾಡಿದರಂತೆ. ಆಗ ಸರೋಜಿನಿ ನಾಯಡುರವರು, ‘ಈ ಒಂದು ವಿಷಯದಲ್ಲಿ ನಾನು ನಿಮಗೆ ಸಹಾಯ ಮಾಡಲಾರೆ!’ ಎಂದು ತಮಾಶೆ ಮಾಡಿದರಂತೆ. ಇಂತಹ ತುಂಟ ಹುಡುಗಿ ಈ ಮೇಡಮ್. (ನೆನಪಿನಿಂದ ಬರೆದ ಕಾರಣ, ನಿರೂಪಣೆಯಲ್ಲಿ ತಪ್ಪಾಗಿರಬಹುದು.)
ಈ ಹೊಸ 'naughty' ಮಾಹಿತಿಗೆ ಧನ್ಯವಾದಗಳು, ಸುನಾಥ್ ಸರ್!
Post a Comment