Thursday, May 04, 2017

ಖತರ್ನಾಕ್ ಉಪದೇಶ

ಅವನೊಬ್ಬ ಎಂಟತ್ತು ವರ್ಷದ ಚಿಕ್ಕ ಹುಡುಗ. ಸೈಕಲ್ ಸವಾರಿ ಮಾಡುವದೆಂದರೆ ಅವನಿಗೆ ತುಂಬಾ ಖುಷಿ. ಅವನ ಹತ್ತಿರ ಒಂದಲ್ಲ, ಎರಡಲ್ಲ, ಮೂರ್ಮೂರು ಸೈಕಲ್ಲುಗಳಿದ್ದವು. ಹೀಗಿರುವಾಗ ಪಕ್ಕದ ಮನೆಯ ಹುಡುಗನಿಗೂ ಅವನ ಪಾಲಕರು ಹೊಸ ಸೈಕಲ್ ಖರೀದಿ ಮಾಡಿ ಉಡುಗೊರೆ ಕೊಟ್ಟರು. ಪಕ್ಕದ ಮನೆಯ ಹುಡುಗನ ಹೊಸ ಸೈಕಲ್ ನೋಡಿದ್ದೇ ನೋಡಿದ್ದು ಈ ಪುಣ್ಯಾತ್ಮ ತನ್ನಲ್ಲಿ ಮೂರು ಸೈಕಲ್ಲುಗಳಿದ್ದರೂ ಪಕ್ಕದ ಮನೆಯ ಹುಡುಗನ ಸೈಕಲ್ ಹತ್ತಿಬಿಟ್ಟ. ಏನೋ ಪಕ್ಕದ ಮನೆಯ ಹುಡುಗನ ಹೊಸ ಸೈಕಲ್ಲಿನ ಸ್ಯಾಂಪಲ್ ನೋಡಲು ಅಂತ ಒಂದೆರೆಡು ರೌಂಡ್ ಹೊಡೆದು ವಾಪಸ್ ಕೊಟ್ಟನೇ ಎಂದು ನೋಡಿದರೆ ಇಲ್ಲ. ಇವನು ಪಕ್ಕದ ಮನೆಯ ಹುಡುಗನ ಹೊಸ ಸೈಕಲ್ ಬಿಟ್ಟು ಇಳಿಯಲು ಸುತಾರಾಂ ತಯಾರಿಲ್ಲ.

ಎಲ್ಲರಿಗೂ ಇದೊಳ್ಳೆ ತಲೆನೋವಾಯಿತು. ಪರಿಪರಿಯಾಗಿ ಹೇಳಿದರು. ಇವನು ಕೇಳಲಿಲ್ಲ. ಸೈಕಲ್ ಬಿಟ್ಟು ಇಳಿಯಲಿಲ್ಲ. ಪಕ್ಕದ ಮನೆಯ ಹುಡುಗ ಅವನಿಗಂತಲೇ ಹೊಸ ಸೈಕಲ್ ಕೊಡಿಸಿದ್ದರೂ ಅದನ್ನು ಹತ್ತಿ ಸವಾರಿ  ಮಾಡುವ ಭಾಗ್ಯವಿಲ್ಲವೆಂದು ಪರಿತಪಿಸುತ್ತ ರಗಳೆ ಮಾಡುತಿದ್ದ. ಒಂದು ಕಡೆ ಸೈಕಲ್ ಬಿಟ್ಟು ಇಳಿಯದವನ ರಗಳೆ. ಮತ್ತೊಂದು ಕಡೆ ಸೈಕಲ್ ಸವಾರಿ ಭಾಗ್ಯ ವಂಚಿತನ ರಗಳೆ. ದೊಡ್ಡ ತಲೆನೋವಾಯಿತು ಹಿರಿಯರಿಗೆ.

ಆಗ ಒಬ್ಬರು ಸ್ವಾಮೀಜಿ ಅಲ್ಲಿಗೆ ಬಂದರು. ಅವರಾದರೂ ಈ ಸಮಸ್ಯೆಯನ್ನು ಬಗೆಹರಿಸಿಯಾರು ಎನ್ನುವ ಆಸೆಯಲ್ಲಿ ಮನೆ ಜನ ತಮ್ಮ ಸಮಸ್ಯೆ ಹೇಳಿಕೊಂಡರು. ಹೀಗೀಗೆ....ಏನೇ ಹೇಳಿದರೂ ಹುಡುಗ ಸೈಕಲ್ ಬಿಟ್ಟು ಇಳಿಯಲು ತಯಾರಿಲ್ಲ. ಹೇಗಾದರೂ ಮಾಡಿ ಅವನನ್ನು ಸೈಕಲ್ಲಿನಿಂದ ಇಳಿಯುವಂತೆ ಮಾಡಿ ಎಂದು ಕೇಳಿಕೊಂಡರು. ಪ್ರಯತ್ನ ಮಾಡೋಣ ಎಂದರು ಸ್ವಾಮೀಜಿ.

ಸ್ವಾಮೀಜಿ ಹುಡುಗನನ್ನು ಕರೆದರು. ಸೈಕಲ್ ಸವಾರಿ ಮಾಡುತ್ತಲೇ ಬಂದ. ಸ್ವಾಮೀಜಿಗಳ ಪಕ್ಕಕ್ಕೆ ಬಂದವ ನೆಲಕ್ಕೆ ಕಾಲು ಕೊಟ್ಟು ಸೈಕಲ್ ನಿಲ್ಲಿಸಿದ. ಆಗಲೂ ಇಳಿಯಲಿಲ್ಲ. ಸ್ವಾಮೀಜಿ ಹುಡುಗನ ಬಳಿ ಹೋದರು. ಕಿವಿಯಲ್ಲಿ ಏನೋ ಹೇಳಿದರು. ಏನು ಹೇಳಿದರೋ ಏನೋ. ಅವರು ಹೇಳಿದ್ದನ್ನು ಕೇಳಿದ ಹುಡುಗ ಏಕ್ದಂ ಒಮ್ಮೆಲೆ ಸೈಕಲ್ ಬಿಟ್ಟು ಇಳಿದವನೇ, ಅದನ್ನು ಪಕ್ಕದ ಮನೆಯ ಹುಡುಗನಿಗೆ ವಾಪಸ್ ಕೊಟ್ಟವನೇ, ಸ್ವಾಮೀಜಿಗಳಿಗೆ ನಮಸ್ಕಾರ ಮಾಡಿ ಅಲ್ಲಿಂದ ಓಡಿಬಿಟ್ಟ!

ಅದ್ಭುತ! ಮಿರಾಕಲ್!

ನಿಮ್ಮ ಸಮಸ್ಯೆ ಪರಿಹಾರವಾಯಿತಲ್ಲ? ಎನ್ನುವವರಂತೆ ಸ್ವಾಮೀಜಿ  ಮುಗುಳ್ನಕ್ಕರು. ಯಬಡ  ಹುಡುಗನ ಸೈಕಲ್ ಸಮಸ್ಯೆ ಪರಿಹಾರವಾದ ಖುಷಿಯಲ್ಲಿ ಮನೆಯವರು ಪರಿಪರಿಯಾಗಿ ಸ್ವಾಮೀಜಿಗೆ ಕೃತಜ್ಞತೆ ಸಲ್ಲಿಸಿದರು. ಅಡ್ಡಡ್ಡ ಉದುದ್ದ ಎಲ್ಲಾ ನಮಸ್ಕಾರ ಹಾಕಿದರು.

ಎಲ್ಲರ ತಲೆಯಲ್ಲಿ ಗಿರ್ಕಿ ಹೊಡೆಯುತ್ತಿದ್ದ ಪ್ರಶ್ನೆ ಒಂದೇ. ಸ್ವಾಮೀಜಿ  ಹುಡುಗನ ಕಿವಿಯಲ್ಲಿ ಏನು ಹೇಳಿರಬಹದು? ಯಾರೇ ಏನೇ ಹೇಳಿದರೂ ಯಾರ ಮಾತೂ ಕೇಳದ ಆ ಹುಡುಗ ಅದು ಹೇಗೆ ಸ್ವಾಮೀಜಿ ಮಾತು ಕೇಳಿದವನೇ ಸೈಕಲ್ ಬಿಟ್ಟು ಇಳಿದ? ಅದೇನು ಕಮಾಲ್ ಮಾಡಿರಬಹದು ಸ್ವಾಮೀಜಿ? ಹೀಗೆ ಸಿಕ್ಕಾಪಟ್ಟೆ ಕೌತುಕಮಯ ಪ್ರಶ್ನೆಗಳು ಎಲ್ಲರ ಮನದಲ್ಲಿ.

ಸ್ವಾಮೀಜಿ ಯಾವದೋ ರಹಸ್ಯ ಮಂತ್ರವನ್ನು ಹುಡುಗನ ಕಿವಿಯಲ್ಲಿ ಹೇಳಿರಬಹುದು. ಆ ಮಂತ್ರದ ಪ್ರಭಾವದಿಂದಲೇ ಹುಡುಗನ ಮನಸ್ಸು ಪರಿವರ್ತನೆ ಆಗಿರಬಹುದು. ಅದಕ್ಕೇ ಸೈಕಲ್ ಬಿಟ್ಟು ಇಳಿದ. ವಾಪಸ್ ಕೊಟ್ಟು ಹೋದ, ಅಂದರು ಕೆಲವರು.

ಇಲ್ಲಿಲ್ಲ. ಮಂತ್ರ ಗಿಂತ್ರ  ಏನೂ ಹೇಳಿರಲಿಕ್ಕಿಲ್ಲ. ಶಬ್ದ ಸಮ್ಮೋಹಿನಿ ಮಾಡಿರಬಹುದು. ಅದರ ಪರಿಣಾಮದಿಂದ ಹುಡುಗ ಸೈಕಲ್ ಬಿಟ್ಟು ಇಳಿದ. ಇದು ಶಬ್ದ ಸಮ್ಮೋಹಿನಿಯೇ. ಸಂಶಯವೇ ಇಲ್ಲ, ಎಂದರು ಉಳಿದ ಒಂದಿಷ್ಟು ಜನ.

ಸ್ವಾಮೀಜಿಯ ಒಂದೇ ಒಂದು ಮಾತಿನಿಂದ ಹುಡುಗ ಸೈಕಲ್ ಬಿಟ್ಟು ಇಳಿದಿದ್ದಕ್ಕೆ ಜನ ಹೀಗೆ ತಲೆಗೊಂದರಂತೆ ಮಾತಾಡಿಕೊಂಡರು. ಆದರೆ ಯಾರಿಗೂ ಖಾತ್ರಿಯಿರಲಿಲ್ಲ. ನಿಜ ವಿಷಯ ತಿಳಿದ ಹೊರತೂ ಸಮಾಧಾನವಿಲ್ಲ. ಕೆಟ್ಟ ಕುತೂಹಲ.

ಹೀಗಾಗಿ ಸ್ವಾಮೀಜಿಯವರನ್ನೇ ಕೇಳಬೇಕು ಎಂದು ನಿರ್ಧರಿಸಿದರು.

ಸ್ವಾಮೀಜಿ, ಅದೇನು ಮೋಡಿ ಮಾಡಿದಿರಿ? ಅದೇನು ಹೇಳಿದಿರಿ? ನಿಮ್ಮ ಒಂದು ಮಾತು ಕೇಳಿದ ಹುಡುಗನ ವರ್ತನೆ ಬದಲಾಯಿತು. ಬೆಳಗಿಂದ ನಮ್ಮನ್ನೆಲ್ಲ ಅದೆಷ್ಟು ಸತಾಯಿಸಿದ್ದ. ನಾವು ಏನೆಲ್ಲಾ ಹೇಳಿದೆವು. ಏನೆಲ್ಲಾ ಆಮಿಷ ತೋರಿಸಿದೆವು. ನಮ್ಮ ಯಾವದೇ ಮಾತನ್ನೂ ಕೇಳಲಿಲ್ಲ. ಆದರೆ ನಿಮ್ಮ ಮಾತು ಕೇಳಿದ್ದೇ, ಒಂದೇ ಕ್ಷಣದಲ್ಲಿ ಸೈಕಲ್ಲಿನಿಂದ ಇಳಿದ. ನಿಜವಾದ ವಾರಸುದಾರನಿಗೆ ವಾಪಸ್ ಕೊಟ್ಟ. ಕೈಮುಗಿದು ಹೋದ. ಅದೇನು ಕಮಾಲ್ ಮಾಡಿದಿರಿ ಸ್ವಾಮೀಜಿ? ದಯವಿಟ್ಟು ಹೇಳಿ, ಎಂದು ಬಿನ್ನವಿಸಿಕೊಂಡರು.

ಅವರು ಹೇಳಿಕೇಳಿ ಧಾರವಾಡ ಕಡೆಯ ಜವಾರಿ ಸ್ವಾಮೀಜಿ. ಗಡ್ಡ ನೀವಿಕೊಳ್ಳುತ್ತ ದೇಶಾವರಿ ನಗೆ ನಕ್ಕರು.

ನಾ ಆ ಹುಡುಗನ ಕಿವಿಯಾಗ ಏನು ಹೇಳಿದೆ ಅಂದ್ರss..... ಅಂದವರೇ ಬ್ರೇಕ್ ತೆಗೆದುಕೊಂಡರು.

ಸ್ವಾಮೀಜಿ ಏನು ಹೇಳಿರಬಹದು?  ಈಗ ಕ್ಲೈಮಾಕ್ಸ್. ಎಲ್ಲರ ಕುತೂಹಲದ ಕಟ್ಟೆ ಒಡೆಯುತ್ತಿದೆ.

ಏ ತಮ್ಮಾ, ಒಳ್ಳೆ ಮಾತಿನಾಗ ಹೇಳಾಕತ್ತೇನಿ. ಸೈಕಲ್ ಬಿಟ್ಟು ಇಳಿಯಪ್ಪಾ. ಇಲ್ಲಾ ಅಂದ್ರ ನಿನ್ನ ಮು*ಳಿಗೆ ಹೀಂಗ ಒದಿತೇನಿ ಅಂದ್ರ ಈ ಹೊಸಾ ಸೈಕಲ್ ಒಂದೇ ಏನು ಬಂತು ಜಗತ್ತಿನ್ಯಾಗಿನ ಯಾವದೇ ಸೈಕಲ್ ಸೀಟ್ ಮ್ಯಾಲೆ ಒಂದು ತಿಂಗಳು ಕುಂಡಿ ಊರಿ ಕುಂದ್ರಾಕ ಆಗಿರಬಾರದು. ಹಾಂಗ ಒದಿತೇನಿ ಮಗನ! ಇಳಿತಿಯೋ ಇಲ್ಲಾ ಒದಿಲೋ!?? ಲಗೂನ ಇಳಿ ಮಂಗ್ಯಾನಮಗನ. ಇಲ್ಲಂದ್ರ ನಾನೇ ಇಳಿಸಿ ಝಾಡಿಸಿ ಝಾಡಿಸಿ ಮು*ಳಿ ಮ್ಯಾಗ ಒದಿತೇನಿ. ಆಟಾ ಹಚ್ಚಿ ಏನ?!

ನಾ ಹೇಳಿದ್ದು ಇಷ್ಟೇ. ಅಲಖ್ ನಿರಂಜನ್! ಅನ್ನುತ್ತ ಸ್ವಾಮೀಜಿ ಹೊರಟುಹೋದರು.

ಕೇಳಿದ ಮಂದಿ ಹ್ಯಾಂ! ಅಂತ ಬೆರಗಾದರು.

ನೀತಿ: ತುಂಬಾ ಕಠಿಣ ಅನ್ನಿಸುವಂತಹ ಸಮಸ್ಯೆಗಳಿಗೆ ಒಮ್ಮೊಮ್ಮೆ ತುಂಬಾ ಸರಳ ಅನ್ನಿಸುವಂತಹ ಪರಿಹಾರಗಳು ಇರುತ್ತವೆ. ಬೇರೆ ದೃಷ್ಟಿಕೋನಗಳಿಂದ ನೋಡುವ ಜ್ಞಾನ, ವ್ಯವಧಾನ ಇರಬೇಕಷ್ಟೆ!

ಮತ್ತೊಂದು ನೀತಿ: ಸಮಸ್ಯೆಗೆ ಪರಿಹಾರ ಹುಡುಕುವಾಗ ಯಾರಿಗೆ ಏನು ಮುಖ್ಯವೋ ಅದು ಗಮನದಲ್ಲಿರಲಿ. ಹುಡುಗನಿಗೆ ಸೈಕಲ್ ಸವಾರಿ ತುಂಬಾ ಇಷ್ಟ. ಯಾವಾಗ ಸ್ವಾಮೀಜಿ ಕೊಡಬಹುದಾದ ಶಿಕ್ಷೆಯಿಂದ ತನ್ನ ಪ್ರೀತಿಯ ಹವ್ಯಾಸಕ್ಕೆ ಭಂಗ ಬರಬಹುದು ಎಂಬ ಭಯ ಮನದಲ್ಲಿ ಮೂಡಿತೋ ಹುಡುಗ ತಾಪಡ್ತೋಪ್ ಸೈಕಲ್ ಬಿಟ್ಟು ಕೆಳಗಿಳಿದ. ಬೇರೆ ಯಾವ ತರಹದ ಶಿಕ್ಷೆಗೆ ಆತ ಬಗ್ಗುವ ಸಾಧ್ಯತೆಗಳು ಕಮ್ಮಿ. ಯಾಕೆಂದರೆ ಆ ಶಿಕ್ಷೆಗಳಿಂದ ಸೈಕಲ್ ಸವಾರಿಗೆ ಭಂಗ ಬರುವ ಸಾಧ್ಯತೆಗಳು ಕಮ್ಮಿ. WIIFM -What's in it for me - is very important and needs be addressed from each stakeholder's point of view.

ಇದು ಮಾತ್ರ ನೀತಿ ಅಲ್ಲ: ಯಾವದೇ ಸಮಸ್ಯೆ ಬಂದರೂ ಹಿಂದೆ ಮುಂದೆ ವಿಚಾರ ಮಾಡದೇ ಕಂಡವರ ಮು*ಳಿ ಮೇಲೆ ಒದೆಯವದು ಸಮಸ್ಯೆಯನ್ನು ಪರಿಹರಿಸುವದಿರಲಿ ನಿಮಗೇ ಬೂಮರಾಂಗ್ ಆಗಿ ರಿವರ್ಸ್ ಹೊಡೆದೀತು. ಎಚ್ಚರ! :)

2 comments:

sunaath said...

ಅಬ್ಬಾ, ಈ ಸ್ವಾಮೀಜಿಯವರಿಂದ ಯಾವುದೇ ಉಪದೇಶ ಪಡೆಯುವ ಹವ್ಯಾಸಕ್ಕೆ ಬೀಳಬಾರದು ಅಂತಾಯ್ತು. ಮು*ಳಿ ಮ್ಯಾಲ ಒದ್ದು ಉಪದೇಶ ಮಾಡ್ಯಾರು!

Mahesh Hegade said...

ಹಾ...ಹಾ...ಸರಿ ಇದೆ ಸುನಾಥ್ ಸರ್. ಥ್ಯಾಂಕ್ಸ್.