Friday, May 05, 2017

ಉಪದೇಶಾಮೃತ

'ಶಾಂತಿಯಿದ್ದರೆ ಮಾತ್ರ ಸಂತೋಷ ಎಂದು ಭಗವದ್ಗೀತೆಯಲ್ಲಿ ಹೇಳಿದೆ. ಹಾಗಾಗಿ ಅರ್ಜೆಂಟಾಗಿ ಶಾಂತಿ ಬೇಕಾಗಿದೆ. ಹೇಗೆ ಸಂಪಾದಿಸುವದು ಸ್ವಾಮೀಜಿ?'

'ಹಂ! ಅರ್ಜೆಂಟಾಗಿ ನಿನಗೆ ಶಾಂತಿ ಬೇಕಾಗಿದೆ. ಅಲ್ಲವೇ?'

'ಹೌದು ಸ್ವಾಮೀಜಿ.'

'ಒಂದು ವಿಷಯ ಹೇಳಿ.'

'ಏನು ಸ್ವಾಮೀಜಿ?'

'ನಿಮಗೆ ಮದುವೆಯಾಗಿದೆಯೇ?'

'ಹೌದು ಆಗಿದೆ ಸ್ವಾಮೀಜಿ.'

'ಪತ್ನಿ ಇದ್ದಾಳೋ ಅಥವಾ...... '

ಭಕ್ತ ದಂಗು ಹೊಡೆದ. ಅರ್ಥಮಾಡಿಕೊಂಡ ಸ್ವಾಮೀಜಿಯೇ ವಿವರಣೆ ಕೊಟ್ಟರು.

'ಮದುವೆಯಾದವರೆಲ್ಲರ ಜೊತೆ ಹೆಂಡತಿ ಇರಬೇಕಂತಿಲ್ಲ ನೋಡಿ. ಪತಿಯನ್ನು ಬಿಟ್ಟು ಪರದೇಶ, ಪರಲೋಕ ಸೇರಿರುವ ಚಾನ್ಸ್ ಇರುತ್ತದೆ ನೋಡಿ. ಅದಕ್ಕೇ  ಕೇಳಿದೆ. ನಿಮ್ಮ ಪತ್ನಿ ಜೊತೆಗಿದ್ದಾರೆ ಅಂತಾಯಿತು. ಒಳ್ಳೇದು. ಇನ್ನೊಂದು ಪ್ರಶ್ನೆ.... '

'ಏನು ಸ್ವಾಮೀಜಿ?'

'ನಿಮ್ಮ ಹೆಂಡತಿ ಹೆಸರೇನು?'

'ಭ್ರಾಂತಿ. ಬೆಂಗಾಲಿ ಪೈಕಿ. ಹಾಗಾಗಿ ಕೊಂಚ ವಿಚಿತ್ರ ಹೆಸರು.'

'ತೊಂದರೆಯಿಲ್ಲ. ಒಂದು ಕೆಲಸ ಮಾಡಿ.'

'ಏನು ಸ್ವಾಮೀಜಿ?'

'ನಿಮ್ಮ ಹೆಂಡತಿಯ ಹೆಸರನ್ನು ಶಾಂತಿ ಎಂದು ಬದಲಾಯಿಸಿಬಿಡಿ. ಶಾಂತಿ ಇದ್ದವರಿಗೆ ಮಾತ್ರ ಸಂತೋಷ ತಾನೇ? ಇನ್ನು ಮುಂದೆ ನಿಮ್ಮ ಪತ್ನಿ ಶಾಂತಿ. ಅವಳಿದ್ದಾಳೆ ಅಂದ ಮೇಲೆ ಇನ್ನು ಮುಂದೆ ನಿಮಗೆ ಸಂತೋಷವೋ ಸಂತೋಷ. ಹೋಗಿ ಬನ್ನಿ. ಒಳ್ಳೆದಾಗಲಿ!'

ಇದನ್ನು ಕೇಳಿ, ಒಂಬತ್ತು ಮಾರಿನ ರೇಷ್ಮೆ ಸೀರೆಯುಟ್ಟು ಬಂದ ಕ್ಯಾಬರೆ ನರ್ತಕಿ ಡಿಸ್ಕೋ ಶಾಂತಿಯನ್ನು ನೋಡಿ, ಬಿಚ್ಚಮ್ಮನನ್ನು ಫುಲ್ ಮುಚ್ಚಮ್ಮನ ಅವತಾರದಲ್ಲಿ ನೋಡಿದಷ್ಟು ಶಾಕ್ ಆಗಿ ಭಕ್ತ ಢಮಾರ್! ಜಿಂಗಾ ಚಿಂಕಾ ಡಿಸ್ಕೋ ಶಾಂತಿಯನ್ನು ಆ ರೂಪದಲ್ಲಿ ನೋಡುವದು ಅಸಾಧ್ಯ ಬಿಡಿ. ಭ್ರಾಂತಿ ಇರಬೇಕು.

ಆಕಸ್ಮಾತ ಯಾವದಾದರೂ ಮಹಿಳೆ ಹೀಗೇ ಹೇಳಿಕೊಂಡು ಬಂದಿದ್ದರೆ 'ಗಂಡನ ಹೆಸರನ್ನು ಶಾಂತಕುಮಾರನೋ, ಶಾಂತರಸನೋ, ಶಾಂತವೀರನೋ ಎಂದು ಬದಲಾಯಿಸು. ಶಾಂತಿಯಿದ್ದ ಮೇಲೆ ನಿನಗೂ ಸಂತೋಷ!' ಎಂದು ಹೇಳಿ ಕಳಿಸುತ್ತಿದ್ದರೇನೋ!

**

'ಸ್ವಾಮೀಜಿ, ಅರ್ಧ ಕಣ್ಣು ಮುಚ್ಚಿ ಧ್ಯಾನ ಮಾಡಬೇಕು ಅಂತಿದೆ. ಕಷ್ಟವಾಗುತ್ತಿದೆ. ಅರ್ಧ ಕಣ್ಣು ಮುಚ್ಚಲು ಸುಲಭವಾದ ಉಪಾಯವೇನಾದರೂ ಇದೆಯೇ ಸ್ವಾಮೀಜಿ??'

'ಹಂ! ಅರ್ಧ ಕಣ್ಣು ಮುಚ್ಚಬೇಕು. ಅಷ್ಟೇ ತಾನೇ?'

'ಹೌದು ಸ್ವಾಮೀಜಿ.'

'ನಿನಗೆ ಎಷ್ಟು ಕಣ್ಣುಗಳಿವೆ?'

ಇದೇನಪಾ ಸ್ವಾಮೀಜಿ ಹೀಂಗೆ ಕೇಳುತ್ತಾರೆ ಎಂದು ಭಕ್ತ ಫುಲ್ ಕನ್ಫ್ಯೂಸ್.

'ಎರಡು ಸ್ವಾಮೀಜಿ.'

'ಎರಡರ ಅರ್ಧ ಎಷ್ಟು?'

'ಒಂದು ಸ್ವಾಮೀಜಿ.'

'ಹಾಗಾದರೆ ಎರಡರಲ್ಲಿ ಒಂದು ಕಣ್ಣು ಮುಚ್ಚಿಬಿಡು. ಅರ್ಧ ಕಣ್ಣು ಮುಚ್ಚಿದಂತಾಯಿತು ತಾನೇ?? ನಡಿ  ಇನ್ನು.'

ಪ್ರಾಯದಲ್ಲಿ ಕಣ್ಣು ಹೊಡೆಯುವಾಗ ಒಂದು ಕಣ್ಣು ಮುಚ್ಚಿ, ವಾಕಡಾ ಮುಖ ಮಾಡಿ, ಹಲ್ಲುಕಿರಿದಿದ್ದು ನೆನಪಾಗಿ ಆವಾಗ ಮಾಡಿದ್ದೆಲ್ಲ ಹಾಗಾದರೆ ಧ್ಯಾನವೇ ಎಂಬ ಯೋಚನೆಯಲ್ಲಿ ಭಕ್ತ ಫುಲ್ ಢಮಾರ್!

**

ಸ್ವಾಮಿ ಅನುಭವಾನಂದ ಸರಸ್ವತಿಗಳ ಅಣಿಮುತ್ತುಗಳು. ಪ್ರವಚನ ಒಣ ಒಣ ಆಗದಿರಲು ಇಂತಹ ಹಾಸ್ಯ ರಸವತ್ತಾದ ಅಣಿಮುತ್ತುಗಳು ಅವಶ್ಯ.

**

ಅರ್ಧ ಕಣ್ಣು ತೆರೆದು ಧ್ಯಾನ ಮಾಡುವದಕ್ಕೆ 'ಅರ್ಧ ನಿಮಿಲೀತ ನೇತ್ರ / ನಯನ' ಅಂತೇನೋ ಇದೆ. ತಿಳಿದವರು ತಿಳಿಸಿ.

2 comments:

sunaath said...

ಪಾಟೀಲ ಪುಟ್ಟಪ್ಪನವರ ‘ಪ್ರಪಂಚ’ ವಾರಪತ್ರಿಕೆಯ ಮೊದಲ ಪುಟದ ಬಲ-ಮೇಲ್ಭಾಗದಲ್ಲಿ ಒಂದು ಉಪದೇಶಾಮೃತ ಇರುತ್ತಿತ್ತು:
‘ಅನುಭವ ಇದ್ದಲ್ಲಿ ಅಮೃತತ್ವ ಇರುತ್ತದೆ.’
ಅನುಭವಾನಂದ ಸ್ವಾಮಿಗಳ ಉಪದೇಶಗಳು ಅಮೃತದಷ್ಟೇ ಸಿಹಿಯಾಗಿವೆ!

Mahesh Hegade said...

Thanks, Sunaath Sir.