೧೯೭೦, ೮೦ ರ ದಶಕದಲ್ಲಾದ ಘಟನೆ. ಖ್ಯಾತ ಸಾಹಿತಿ ಶಿವರಾಮ ಕಾರಂತರಿಗೆ ಎಲ್ಲೋ ಸನ್ಮಾನ
ಸಮಾರಂಭ. ಸಂಜೆಯ ಸಮಯ. ಸಭಾಂಗಣ ಕಿಕ್ಕಿರಿದು ತುಂಬಿತ್ತು. ಕುಳಿತುಕೊಳ್ಳಲು
ಜಾಗವಿಲ್ಲದೆ ಜನ ನಿಂತಿದ್ದರೂ ಕೂಡ. ಹಾಗಿರುವಾಗ ಒಬ್ಬ ತಡವಾಗಿ ಬಂದ. ಸಮಾರಂಭ ಆಗಲೇ
ಶುರುವಾಗಿತ್ತು. ಬಂದವನಿಗೆ ಸಮಾರಂಭದ ಬಗ್ಗೆ ಸರಿಯಾದ ಪ್ರಾಥಮಿಕ ಮಾಹಿತಿಯೂ ಇರಲಿಲ್ಲ.
ಟೈಮ್ ಪಾಸ್ ಮಾಡಲು ಬಂದಿದ್ದ ಅಂತ ಕಾಣುತ್ತದೆ. ಪಕ್ಕದಲ್ಲಿದ್ದವನ ತಲೆತಿನ್ನತೊಡಗಿದ.
'ಇದು ಎಂತ ಸಮಾರಂಭ ಮಾರಾಯಾ?' ಅಂದ.
'ಗೊತ್ತಿಲ್ಲವಾ? ಕಾರಂತರರಿಗೆ ಸನ್ಮಾನ ಮಾಡುತ್ತಿದ್ದಾರೆ?' ಎಂದು ಉತ್ತರಿಸಿದ ಪಕ್ಕದಲ್ಲಿದ್ದವ.
ಒಹೋ! ವೇದಿಕೆ ಮೇಲಿದ್ದವರಲ್ಲಿ ಒಬ್ಬರು ಕಾರಂತರು ಅಂತ ಗೊತ್ತಾಯಿತು ಅವನಿಗೆ. ಹೆಸರು ಗೊತ್ತಾದ ಮೇಲೆ ದೂರದ ವೇದಿಕೆ ಮೇಲೆ ಅಸ್ಪಷ್ಟವಾಗಿ ಕಾಣುತ್ತಿದ್ದ ವ್ಯಕ್ತಿಗಳಲ್ಲಿ ಕಾರಂತರ ರೂಪರೇಷೆ ಕಂಡುಬಂತು. ಶುದ್ಧ ಬಿಳಿಯ ಬಟ್ಟೆ ತೊಟ್ಟು, ಬಿಳಿಯ ಉದ್ದನೆ ಕೂದಲು ಬಿಟ್ಟುಕೊಂಡಿದ್ದವರು ಕಾರಂತರಲ್ಲದೇ ಮತ್ತ್ಯಾರು ಆಗಿರಲು ಸಾಧ್ಯ?
ಕಾರಂತರ ಪಕ್ಕದಲ್ಲಿ ಯಾರೋ ಕೂತಿದ್ದರು. ಇವನಿಗೆ ಅವರ ಪರಿಚಯವನ್ನೂ ತಿಳಿಯುವ ಹುಕಿ. ಮತ್ತೆ ಜೊತೆಗೆ ತನ್ನ ಊಹೆ ಕಮ್ ಸಾಮಾನ್ಯಜ್ಞಾನವನ್ನೂ ಪ್ರದರ್ಶಿಸಿಸುವ ತಲುಬು.
ಕೇಳಿಯೇಬಿಟ್ಟ.
'ಕಾರಂತರ ಪಕ್ಕದಲ್ಲಿ ಇರುವವರು ಯಾರು? ಅವರ ಮಿಸೆಸ್ಸಾ?'
'ಅಲ್ಲ. ಅವರು ಹಾ.ಮಾ.ನಾಯಕರು!' ಅಂತ ಉತ್ತರ ಬರಬೇಕೆ!?
ಪಕ್ಕದಲ್ಲಿದ್ದವರು ಕಾರಂತರ ಪತ್ನಿಯೇ ಎಂದು ಕೇಳಿದ್ದು ಅವನ ತಪ್ಪಲ್ಲ ಬಿಡಿ. ಹಾ.ಮಾ.ನಾಯಕರು ನೋಡಲು ಹಾಗೇ ಇದ್ದರು. ಅವರೂ ಬಿಳಿಯ ಕೂದಲನ್ನು ಭುಜದ ವರೆಗೆ ಉದ್ದವಾಗಿ ಬಿಟ್ಟವರೇ. ಅಂತವರು ಕಾರಂತರ ಪಕ್ಕ ಕೂತಿದ್ದಾರೆ. ದೂರದಿಂದ ಸರಿಯಾಗಿ ಕಂಡಿಲ್ಲ. ಸಮಾರಂಭದ ಬಗ್ಗೆ, ಅದರಲ್ಲಿ ಪಾಲ್ಗೊಂಡಿರುವ ವ್ಯಕ್ತಿಗಳ ಬಗ್ಗೆ ಇವನಿಗೆ ಗೊತ್ತಿಲ್ಲ. ಕಾರಂತರ ಪಕ್ಕದಲ್ಲಿರುವವರು ಕಾರಂತರ ಪತ್ನಿ ಇರಬಹುದು ಅಂತ ಖತರ್ನಾಕ್ ಊಹೆ ಮಾಡಿದ್ದಾನೆ.
ಹಾ.ಮಾ.ನಾಯಕರ ಬಗ್ಗೆ ಈಗಿನ ಮಂದಿಗೆ ಜಾಸ್ತಿ ಗೊತ್ತಿರಲಿಕ್ಕೆ ಇಲ್ಲ. ೧೯೮೦-೯೦ ರ ದಶಕದಲ್ಲಿ ಅವರು ಖ್ಯಾತ ಅಂಕಣಕಾರರು (columnist) ಅಂತ ಹೆಸರು ಮಾಡಿದ್ದರು. ಕನ್ನಡದಲ್ಲಿದ್ದ ೯೦% ಪತ್ರಿಕೆಗಳಲ್ಲಿ ಅವರ ಒಂದಲ್ಲ ಒಂದು ಅಂಕಣ / ಲೇಖನ ಇದ್ದೇ ಇರುತ್ತಿತ್ತು. ತರಂಗ, ಸುಧಾ, ಪ್ರಜಾಮತ, ಕರ್ಮವೀರ ಹೀಗೆ ಯಾವದೇ ವಾರಪತ್ರಿಕೆ ಎತ್ತಿಕೊಳ್ಳಿ. ಪ್ರತಿವಾರ ಹಾ.ಮಾ.ನಾಯಕರ ಅಂಕಣ ಇರಲೇಬೇಕು. ಸಂಯುಕ್ತ ಕರ್ನಾಟಕ, ಪ್ರಜಾವಾಣಿ, ಕನ್ನಡಪ್ರಭ ದಿನಪತ್ರಿಕೆಯಲ್ಲೂ ವಾರಕ್ಕೆ ಒಂದೋ ಎರಡೋ ಅಂಕಣ ಇದ್ದೇ ಇರುತ್ತಿತ್ತು. ಜೊತೆಗೆ ಅವರ ಉದ್ದ ಕೂದಲಿನ ಹಸನ್ಮುಖ ಸ್ಟ್ಯಾಂಡರ್ಡ್ ಭಾವಚಿತ್ರ. ಒಟ್ಟಿನಲ್ಲಿ ಹಾ.ಮಾ.ನಾಯಕರು ಮತ್ತವರ ಅಂಕಣ ಗೋಡೆ ಮೇಲಿರುವ ಕ್ಯಾಲೆಂಡರಿನಲ್ಲಿ ಇರುವ ಗಣೇಶ ಇದ್ದಂತೆ. ತಿಂಗಳು, ವರ್ಷ ಬದಲಾದರೂ ಗಣೇಶನ ಚಿತ್ರ ಚಂದವಾಗಿದ್ದು, ಭಯಭಕ್ತಿ ತರಿಸುವಂತಿದ್ದರೆ ಬದಲಾಯಿಸುವದಿಲ್ಲ ನೋಡಿ. ಹಾಗೆ. ಗೋಡೆ ಗಣೇಶ ಈ ನಮ್ಮ ಗಣ(ಹಾ.ಮಾ)ನಾಯಕ.
ಇಂತಹ ಪ್ರಖ್ಯಾತ ಅಂಕಣಕಾರರನ್ನು ಲಂಕೇಶ್ 'ಅಂಕಣಕೋರ' ಅಂತ ಕಿಚಾಯಿಸಿದರು. ಲಂಕೇಶರೇ ಹಾಗೆ. ಒಮ್ಮೆಲೇ ಪ್ರವರ್ಧಮಾನಕ್ಕೆ ಬಂದು ಸಿಕ್ಕಾಪಟ್ಟೆ ಪ್ರೊಡಕ್ಷನ್ ಚಾಲೂ ಮಾಡಿದವರನ್ನು ಕಂಡರೆ ಅವರಿಗೆ ಆಗಿಬರುತ್ತಿರಲಿಲ್ಲ. ಸುಮಾರು ಅದೇ ಸಮಯದಲ್ಲಿ ಕವಿ ಲಕ್ಷ್ಮೀನಾರಾಯಣ ಭಟ್ಟರು ಸಿಕ್ಕಾಪಟ್ಟೆ ಫೇಮಸ್ ಆದರು. ಆಗ ಭಾವಗೀತೆಗಳು ಕ್ಯಾಸೆಟ್ ರೂಪದಲ್ಲಿ ಬಹಳ ಜನಪ್ರಿಯವಾಗಿದ್ದವು. ಸುಗಮಸಂಗೀತದ ಪರ್ವಕಾಲ. ಲಕ್ಷ್ಮೀನಾರಾಯಣ ಭಟ್ಟರು ಅಂತಹ ಕ್ಯಾಸೆಟ್ಟುಗಳಿಗೆ ದೊಡ್ಡ ಪ್ರಮಾಣದಲ್ಲಿ ಸಾಹಿತ್ಯ ಒದಗಿಸಿದ್ದರು. ಹಾಗಾಗಿ ಅವರೊಬ್ಬ 'ಕ್ಯಾ... ಕ್ಯಾ....ಕ್ಯಾಸೆಟ್ ಕವಿ' ಎಂದು ಝಾಡಿಸಿದ್ದರು ಲಂಕೇಶ್.
ಹಾ.ಮಾ.ನಾಯಕರ ಅಂಕಣ ಪ್ರತಿಯೊಂದು ಪತ್ರಿಕೆಯಲ್ಲಿ ಕಂಡರೂ ಓದಿದ ನೆನಪಿಲ್ಲ. ಅವರು ಬರೆಯುತ್ತಿದ್ದ ವಿಷಯಗಳು ನಮಗೆ ಏನೂ ಆಸಕ್ತಿ ತರಿಸುತ್ತಿರಲಿಲ್ಲ. ತಾವು ಓದಿದ ಹೊಸ ಪುಸ್ತಕಗಳ ಬಗ್ಗೆಯೋ, ನಿಧನರಾದ ಗಣ್ಯವ್ಯಕ್ತಿಗಳ ಬಗ್ಗೆಯೋ ಅಥವಾ ಮತ್ತ್ಯಾವದೋ ಸಮಕಾಲೀನ ವಿಷಯದ ಬಗ್ಗೆಯೋ ಬರೆದಿರುತ್ತಿದ್ದರು. ಆಗ ಇನ್ನೂ ೧೦-೧೨ ವರ್ಷ ವಯಸ್ಸಿನ ನಮಗೆ ಅವು ಯಾವವೂ ಇಂಟೆರೆಸ್ಟಿಂಗ್ ಇರಲಿಲ್ಲ.
'ಕಾರಂತರ ಪಕ್ಕದಲ್ಲಿ ಇರುವವರು ಯಾರು? ಅವರ ಮಿಸೆಸ್ಸಾ?' ಘಟನೆ ಬಗ್ಗೆ ಬರೆದವರು ಪತ್ರಕರ್ತ, 'ಹಾಯ್ ಬೆಂಗಳೂರ್' ಪತ್ರಿಕೆಯ ಸಂಪಾದಕ ರವಿ ಬೆಳಗೆರೆ. ಅವರು ಒಂದು ಕಾಲದಲ್ಲಿ 'ಕರ್ಮವೀರ' ಪತ್ರಿಕೆಯ ಸಂಪಾದಕರಾಗಿದ್ದರು. ಅದಕ್ಕೂ ಅಂಕಣ ಬರೆಯುತ್ತಿದ್ದರಂತೆ ಹಾ.ಮಾ. ನಾಯಕರು. ಖ್ಯಾತ ಅಂಕಣಕಾರ ಅಂದ ಮೇಲೆ ಬರೆಯದೇ ಹೇಗಿದ್ದಾರು? ಮತ್ತೆ ಪತ್ರಿಕೆಯೊಂದು ಖ್ಯಾತ ಅಂಕಣಕಾರ ನಾಯಕರ ಅಂಕಣವನ್ನು ಹೇಗೆ ಬಿಟ್ಟೀತು?
ಸಂಪಾದಕ ರವಿ ಬೆಳಗೆರೆ ಹಾ.ಮಾ.ನಾಯಕರ ಬರವಣಿಗೆಯ ಶಿಸ್ತಿನ ಬಗ್ಗೆ ಒಂದೆರೆಡು ಮಾತು ಬರೆದಿದ್ದರು. ಒಮ್ಮೆ ಒಪ್ಪಂದ ಮಾಡಿಕೊಂಡು, ಸಂಭಾವನೆ ಇಷ್ಟು ಅಂತ ತೀರ್ಮಾನವಾದ ಮೇಲೆ ಮುಗಿಯಿತು. ಹಾ.ಮಾ.ನಾಯಕರ ಬಗ್ಗೆ, ಅವರು ಸಮಯಕ್ಕೆ ಸರಿಯಾಗಿ ಅಂಕಣ ಕಳಿಸುತ್ತಾರೋ ಇಲ್ಲವೋ, ಅಂಕಣ ಸರಿಯಾಗಿ ಇರುತ್ತದೋ ಇಲ್ಲವೋ, ಇತ್ಯಾದಿಗಳ ಬಗ್ಗೆ ಚಿಂತೆ ಮಾಡುವ ಅವಶ್ಯಕತೆಯೇ ಇರುತ್ತಿದ್ದಿಲ್ಲ. ನಾಯಕರು ಒಮ್ಮೆ ಒಪ್ಪಿಕೊಂಡರು ಅಂದರೆ ಮುಗಿಯಿತು. ಸಮಯಕ್ಕೆ ಸರಿಯಾಗಿ, ಅಂಕಣದ ಅಳತೆಗೆ ತಕ್ಕಂತೆ, ಸೀದಾ ಕಂಪೋಸ್ ಮಾಡಬಹುದಾದಂತಹ ಲೇಖನ ನಾಯಕರ ಮುದ್ದಾದ ಕೈಬರಹದಲ್ಲಿ ಸಂಪಾದಕರ ಮೇಜಿನ ಮೇಲೆ ಬಂದು ಕೂತಿರುತ್ತಿತ್ತು. ಅಷ್ಟು ಶಿಸ್ತುಬದ್ಧವಾಗಿ, ಕರಾರುವಕ್ಕಾಗಿ ಬರೆದು ಬರೆದು ಒಗಾಯಿಸುತ್ತಿದ್ದರು ಆ ಖ್ಯಾತ ಅಂಕಣಕಾರರು.
ಆರೆಂಟು ಪತ್ರಿಕೆಗಳಿಗೆ ನಿಯಮಿತವಾಗಿ ಅಂಕಣ ಬರೆಯುವದು ಅಂದರೆ ಸುಲಭದ ಮಾತಲ್ಲ. ಪ್ರಥಮವಾಗಿ ವೇಳೆ. Time management. ನಂತರ ವಿಷಯಗಳ ಸಂಗ್ರಹ ಮತ್ತು ಸಂಶೋಧನೆ. ಆಮೇಲೆ ಒಂದು ಖಡಕ್ ಪ್ಲಾನಿಂಗ್. ಏಕೆಂದರೆ ಆಗೆಲ್ಲ ಎಲ್ಲ ಅಂಚೆಯಲ್ಲಿಯೇ ವಿಲೇವಾರಿ ಆಗುತ್ತಿದ್ದವು. ಬೆಂಗಳೂರಿನಲ್ಲೋ, ಹುಬ್ಬಳ್ಳಿಯಲ್ಲೋ ಪತ್ರಿಕೆಯ ಕಾರ್ಯಾಲಯವಿರುತ್ತಿತ್ತು. ಅಲ್ಲಿಗೆ ಹೋಗಿ ಮುಟ್ಟಲು ಸರಾಸರಿ ಎಷ್ಟು ದಿವಸ ಬೇಕಾಗುತ್ತದೆ, ಹೆಚ್ಚುಕಮ್ಮಿಯಾಗಬಹುದು ಅಂತ ಮೇಲಿಂದ ಒಂದೆರೆಡು ದಿನಗಳನ್ನು ಜಾಸ್ತಿ ಸೇರಿಕೊಂಡು, ಎಲ್ಲ ಲೆಕ್ಕಕ್ಕೆ ತೆಗೆದುಕೊಂಡು, ಇಂತಹ ದಿನ ಈ ಅಂಕಣ ಈ ಪತ್ರಿಕೆಗೆ ಹೋಗಿ ಮುಟ್ಟಬೇಕು ಅನ್ನುವ ಬರೋಬ್ಬರಿ ಪ್ಲಾನಿಂಗ್ ಮಾಡಿಕೊಂಡು ಬರೆಯಬೇಕು. ಬರೆದು ಮುಗಿಸಿ, ತಿದ್ದಿ, ಪಕ್ಕಾ ಪ್ರತಿ ತಯಾರು ಮಾಡಿ, ಲಕೋಟೆಗೆ ಹಾಕಿ, ಸರಿಯಾದ ಲೇಖನ ಸರಿಯಾದ ಪತ್ರಿಕೆಗೇ ಹೋಗುತ್ತಿದೆ ಅಂತ ಖಾತ್ರಿ ಮಾಡಿಕೊಂಡು, ಲಕೋಟೆ ಮೇಲೆ ತಪ್ಪಿಲ್ಲದಂತೆ ವಿಳಾಸ ಬರೆದು, ಪೋಸ್ಟಾಫೀಸಿಗೆ ಹೋಗಿ, ಸರಿಯಾದ ಬೆಲೆಯ ಅಂಚೆಚೀಟಿ ಖರೀದಿ ಮಾಡಿ, ಅಂಟಿಸಿ, ಸರಿಯಾದ ಸಮಯಕ್ಕೆ ಟಪಾಲಿಗೆ ಕಳಿಸಬೇಕು. ಈಗಿನ ಕಾಲದ ಹಾಗೆ ಕಂಪ್ಯೂಟರ್ ಮೇಲೆ ಬರೆದು ಇಮೇಲ್ ಮಾಡಿದ ಹಾಗಲ್ಲ. There were many possible points of failure. ಅವನ್ನೆಲ್ಲ ಸರಿಯಾಗಿ ನಿಭಾಯಿಸುತ್ತಿದ್ದ ನಾಯಕರು ಗ್ರೇಟ್. ಹೀಗೆ ಪಕ್ಕಾ ವೃತ್ತಿಪರರಂತೆ ಬರೆದು ಕೊಡುತ್ತಿದ್ದರು ಅನ್ನುವ ಕಾರಣಕ್ಕೇ ಹಾ.ಮಾ.ನಾಯಕರು ಸಂಪಾದಕರೆಲ್ಲರ ಡಾರ್ಲಿಂಗ್! ಕಣ್ಮಣಿ.
ಕೆಲಕಾಲ ಕರ್ಮವೀರದ ಸಂಪಾದಕರಾಗಿದ್ದ ರವಿ ಬೆಳಗೆರೆ ಹಾ.ಮಾ.ನಾಯಕರ 'ಅಂಕಣ ಕಾರ್ಖಾನೆ'ಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತ ಲೈಟಾಗಿ ಕಿಚಾಯಿಸುತ್ತಾರೆ ಕೂಡ. ಅವರ ಪ್ರಕಾರ ನಾಯಕರ ಅಂಕಣಗಳು ಪರಮ ಬೋರಿಂಗ್! ಶಿಸ್ತುಬದ್ಧ ಸರಿ. ಆದರೆ ಸೈನ್ಯ ಕವಾಯಿತು ಮಾಡಿದ ಹಾಗೆ ಬರೆದರೆ ಹೇಗೆ? ಓದದೇ ಸೀದಾ ಕಂಪೋಸಿಂಗಿಗೆ ಕಳಿಸುತ್ತಿದ್ದರಂತೆ. ಕಂಪೋಸಿಂಗ್ ಮಾಡಬೇಕಾದವರು ಅಂಕಣವನ್ನು ಓದಬೇಕಾಗುತ್ತಿತ್ತು. ನಾಯಕರ ಬೋರಿಂಗ್ ಅಂಕಣ ಓದುವದು ಕರ್ಮವೀರದಲ್ಲಿ ಕಂಪೋಸಿಂಗ್ ಮಾಡುವವರ 'ಕರ್ಮ'. ಹಾಗಂತ ಅವರ ಜೋಕ್. ಆದರೆ ನಾಯಕರ ಶಿಸ್ತಿನ ಬಗ್ಗೆ, ವೃತ್ತಿಪರತೆಯ ಬಗ್ಗೆ ದೂಸರಾ ಮಾತೇ ಇಲ್ಲ.
ತಮ್ಮ ಪತ್ರಿಕೆಯಲ್ಲಿ ಹಾ.ಮಾ.ನಾಯಕರನ್ನು ನೆನೆದಿದ್ದ ರವಿ ಮತ್ತೊಂದು ವಿಷಯ ಬರೆದಿದ್ದರು. ಹಾ.ಮಾ.ನಾಯಕರ ಬಗ್ಗೆ ಬಹಳ ಚಾಲ್ತಿಯಲ್ಲಿರುವ ಜೋಕ್ ಒಂದಿತ್ತಂತೆ. ಅವರ ಅಂಕಣಕ್ಕೆ ಸಂಬಂಧಪಟ್ಟಿದ್ದೇ. ಮಹಾರಾಷ್ಟ್ರದಲ್ಲಿ ದರೋಡೆ, ಡಕಾಯಿತಿ ಮಾಡಿಕೊಂಡೇ ಜೀವನ ಮಾಡುತ್ತಿದ್ದ ಹರಣಶಿಕಾರಿ ಜನಾಂಗಕ್ಕೆ ಸೇರಿದ ಮುಗ್ಧ, ಅಶಿಕ್ಷಿತ ವ್ಯಕ್ತಿಯೊಬ್ಬ ತನ್ನ ಜೀವನಚರಿತ್ರೆಯನ್ನು ತನ್ನದೇ ಆದ ಶೈಲಿಯಲ್ಲಿ ಮರಾಠಿಯಲ್ಲಿ ಬರೆದುಕೊಂಡಿದ್ದ. ಆ ಪುಸ್ತಕದ ಹೆಸರು 'ಉಚಲ್ಯಾ' ಅಂತ ನೆನಪು. ಆ ಹೊಸ ಪುಸ್ತಕ ತನ್ನದೇ ಕಾರಣಗಳಿಂದ ಸಂಚಲನ ಮೂಡಿಸಿತ್ತು. ಹಾ.ಮಾ.ನಾಯಕರ ಅಂಕಣಕ್ಕೆ ವಿಷಯ ಸಿಕ್ಕಿತು. ತಮ್ಮ ಮುಂದಿನ ಅಂಕಣದಲ್ಲಿ ಅದರ ಬಗ್ಗೆ ಬರೆದರು. ಕೊಟ್ಟ ಶೀರ್ಷಿಕೆ ಮಾತ್ರ ತುಂಬಾ ಮಜವಾಗಿತ್ತು. ನಾಯಕರು ಕೊಟ್ಟ ಶೀರ್ಷಿಕೆ - 'ಗಂಟುಕಳ್ಳರ ಆತ್ಮಕಥೆ'. ಶೀರ್ಷಿಕೆ ಮಜವಾಗಿದ್ದರೂ ತುಂಬಾ ಆಭಾಸವನ್ನು ಉಂಟುಮಾಡುವಂತಿತ್ತು ಅಂದರು ಮರಾಠಿ ಪುಸ್ತಕದ ಬಗ್ಗೆ ಸರಿಯಾಗಿ ತಿಳಿದುಕೊಂಡವರು. ದರೋಡೆ, ಕಳ್ಳತನ ಅವರ ಕುಲಕಸುಬಾಗಿದ್ದರೂ ಅಶಿಕ್ಷಿತ ಮುಗ್ಧನೊಬ್ಬ ಸಾಹಸಪಟ್ಟು ತನ್ನದೇ ಬಾಲಿಶ ಶೈಲಿಯಲ್ಲಿ ಕಷ್ಟಪಟ್ಟು ಬರೆದುಕೊಂಡ ಆತ್ಮಚರಿತೆಗೆ ಹೀಗೆ ತೀರ 'ಗಂಟುಕಳ್ಳರ ಆತ್ಮಕಥೆ' ಅಂದರೆ ಹೇಗೆ!? ಅಂತ ಕೆಲವರ ತಮಾಷೆಭರಿತ ತಕರಾರು. ಉಳಿದವರು ಶೀರ್ಷಿಕೆಯನ್ನು ನೆನಪಿಸಿಕೊಂಡು ಬಿದ್ದು ಬಿದ್ದು ನಕ್ಕರು.
'ಗಂಟುಕಳ್ಳರ ಆತ್ಮಕಥೆ' ಅಂಕಣ 'ತರಂಗ' ವಾರಪತ್ರಿಕೆಯಲ್ಲಿ ಬಂದಿತ್ತು ಅಂತ ನೆನಪು. ಪ್ರತಿ ವಾರ ಹಾ.ಮಾ.ನಾಯಕರ ಅಂಕಣದ ಮೇಲೆ ಕಣ್ಣಾಡಿಸುತ್ತಿದ್ದೆ. ಎರಡು ಲೈನ್ ಓದುವದರಲ್ಲಿ ಬೋರ್ ಹೊಡೆಸುತ್ತಿತ್ತು. ಮುಂದಿನ ಪುಟ ತಿರುವುತ್ತಿದ್ದೆ. ಆದರೆ ಆವತ್ತು ಹಾಗಾಗಲಿಲ್ಲ. ಅಂಕಣ ಓದಿಸಿಕೊಂಡು ಹೋಯಿತು. ನಿಜವಾಗಿಯೂ ಮನಮುಟ್ಟುವಂತೆ ಇತ್ತು. 'ಉಚಲ್ಯಾ' ಅಂತ ಆತ್ಮಕಥೆ ಬರೆದುಕೊಂಡ ಆ ಮನುಷ್ಯ ತನ್ನ ಬಾಲ್ಯದಲ್ಲಿ ಹೇಗೆ ತಿನ್ನಲು ಏನೂ ಇಲ್ಲದ ಕಾರಣ ಹಂದಿಗಳನ್ನು ಕೊಂದು, ಅವುಗಳ ಮಾಂಸ ಸುಟ್ಟುಕೊಂಡು ತಿನ್ನುತ್ತಿದ್ದೆವು ಅಂತ ಬರೆದುಕೊಂಡಿದ್ದನ್ನು ಓದಿದರೆ ಯಾರಿಗಾದರೂ ಒಂದು ತರಹದ ಹೃದಯ ಹಿಂಡುವ ದುಃಖದ ಭಾವನೆ ಬರುವಂತಿತ್ತು.
ರಾಷ್ಟ್ರೀಯ ಮಟ್ಟದಲ್ಲಿ ಖುಷ್ವಂತ್ ಸಿಂಗ್ ಇದ್ದರು. ದೊಡ್ಡ ಅಂಕಣಕಾರ ಅಂತ ಹೆಸರು ಮಾಡಿದ್ದರು. ಅವರೂ ಅಷ್ಟೇ. ಬಿಟ್ಟೂಬಿಡದೇ ಸುಮಾರು ಆರೆಂಟು ಪತ್ರಿಕೆಗಳಿಗೆ, ನಾಲ್ಕಾರು ದಿನಪತ್ರಿಕೆಗಳಿಗೆ ಅಂಕಣ ಬರೆಯುತ್ತಿದ್ದರು. ಅವರ ವ್ಯಾಪ್ತಿ ಬಹಳ ದೊಡ್ಡ ಮಟ್ಟದ್ದು. ಏಕೆಂದರೆ ಅವರ ಇಂಗ್ಲೀಷ್ ಅಂಕಣಗಳು ಬೇರೆ ಬೇರೆ ಭಾಷೆಗಳಿಗೆ ತರ್ಜುಮೆಗೊಂಡು ಪ್ರಾದೇಶಿಕ ಪತ್ರಿಕೆಗಳಲ್ಲೂ ಪ್ರಕಟವಾಗುತ್ತಿದ್ದವು. ಹಿಂದೊಮ್ಮೆ ಖುಷ್ವಂತ್ ಸಿಂಗ್ ಬಗ್ಗೆ ಬರೆದಿದ್ದೆ.
ಹಾ.ಮಾ. ನಾಯಕರ ಓತಪ್ರೋತ ಅಂಕಣ ಬರವಣಿಗೆ ನೋಡಿದರೆ ಅವರನ್ನು 'ಕನ್ನಡದ ಖುಷ್ವಂತ್ ಸಿಂಗ್' ಅನ್ನಬಹುದೇನೋ! ಈಗ ಇಬ್ಬರೂ ಇಲ್ಲ ಬಿಡಿ.
ನಮ್ಮ ಹವ್ಯಾಸಿ ಬರವಣಿಗೆಗೆ ಬರ ಬಂದು ಪ್ರೋತ್ಸಾಹ, ಸ್ಪೂರ್ತಿ ಬೇಕಾದಾಗ ಇಂತಹ prolific ಲೇಖಕರನ್ನು ನೆನಪು ಮಾಡಿಕೊಳ್ಳುತ್ತೇನೆ. ಇಂತಹ ಮಹನೀಯರನ್ನು ನೆನಪು ಮಾಡಿಕೊಂಡು ನಮ್ಮ ಹವ್ಯಾಸಿ ಬರವಣಿಗೆಗೆ ಕೊಂಚ ಬಿಸಿ ಕಮ್ ಚುರುಕು ಮುಟ್ಟಿಸಿಕೊಳ್ಳುವ ಪ್ರಯತ್ನ. ಓತಪ್ರೋತವಾಗಿ ಪ್ರವಾಹೋಪಾದಿಯಲ್ಲಿ ಬರೆಯುವ prolific ಲೇಖಕರ ಪಟ್ಟಿಯಲ್ಲಿ ಇನ್ನೂ ಹಲವು ಮಹನೀಯರಿದ್ದಾರೆ. ಮಾರ್ಕ್ ಟ್ವೈನ್, ಅರ್ನೆಸ್ಟ್ ಹೆಮಿಂಗ್ವೇ, ನಮ್ಮ ಭೈರಪ್ಪನವರು, ಆಂಗ್ಲ ರೋಚಕ ಕಾದಂಬರಿಗಳ ಕಾರ್ಖಾನೆ ಎಂದೇ ಬಿರುದಾಂಕಿಂತ ಜಿಮ್ ಪ್ಯಾಟ್ಟೆರ್ಸನ್, ರವಿ ಬೆಳಗೆರೆ, ಮುಂತಾದವರು.
ಹೆಮಿಂಗ್ವೇ ಅಂತೂ, 'Write when drunk. Edit when sober! (ಕುಡಿದು ಚಿತ್ತಾದಾಗ ಬರೆಯಿರಿ. ನಶೆ ಇಳಿದ ಮೇಲೆ ತಿದ್ದಿರಿ!),' ಅಂದುಬಿಟ್ಟ. ಹಾಗಾಗಿ ಹೆಮಿಂಗ್ವೇ ಅಂತಹ ಲೇಖಕನನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳುವದಾದರೆ ಕೊಂಚ ಎಚ್ಚರ ಅವಶ್ಯ :)

ಹಾ.ಮಾ.ನಾಯಕ್ |

2 comments:
ಹ್ಹಾಹ್ಹಾ!ಮಾ!!ನಾಯಕರ ಅಂಕಣದ ಬಗೆಗೆ ಸರಿಯಾಗಿಯೇ ಹೇಳಿದ್ದೀರಿ. ಅವರ ಅಂಕಣಗಳನ್ನು ಕಂಪೋಜ ಮಾಡುವವರು ‘ಕರ್ಮವೀರ’ರಿರಲೇ ಬೇಕಲ್ಲವೆ? ಇನ್ನು ಮಂಕೇಶರು ‘ಚಂಪಾ’ ಎನ್ನುವ ಕಪಿಯನ್ನು ಹೆಣ್ಗಂಡು ಅಥವಾ ಗಂಡ್ಹೆಣ್ಣು ಅಂತ ಕಿಚಾಯಿಸುತ್ತಿದ್ದರು! ಅಂಕಣಗಳು ಹೋಗಲಿ, ಈಗಿನ ಅನೇಕ ಸಂಪಾದಕೀಯಗಳು ಸಹ ಕೇವಲ space-filler ಆಗಿವೆ!
ಹ್ಹಾಹ್ಹಾ!ಮಾ!!ನಾಯಕ - ನಿಮ್ಮ ಹಾಸ್ಯಪ್ರಜ್ಞೆಗೆ ನಮೋ ನಮಃ! :) ಧನ್ಯವಾದಗಳು!
Post a Comment