Saturday, October 14, 2017

ಇರುವ ಸಂಬಂಧಗಳನ್ನು ಹೇಳಿಕೊಳ್ಳಲೇನು ಧಾಡಿ!?

'ನಾನು ಚಿಕ್ಕವಳಿದ್ದಾಗ ಹನುಮಂತಪ್ಪ ನನ್ನನ್ನು ದಿನಾ ಸೈಕಲ್ ಮೇಲೆ ಕೂಡಿಸಿಕೊಂಡು ಹೋಗಿ ಸ್ಕೂಲಿಗೆ ಬಿಟ್ಟುಬರುತ್ತಿದ್ದ.'

'ನಾನು ಚಿಕ್ಕವನಿದ್ದಾಗ ಶಾಂತಮ್ಮ ದಿನಾ ರುಚಿರುಚಿ ಅಡಿಗೆ ಮಾಡಿ, ನನ್ನ ಟಿಫನ್ ಬಾಕ್ಸ್ ತುಂಬಿಸಿ, ಸ್ಕೂಲಿಗೆ ಕಳಿಸುತ್ತಿದ್ದಳು.'

ಯಾರಾದರೂ ಹೀಗೆ ಹೇಳಿದರೆ ಏನೆಂದುಕೊಳ್ಳುತ್ತೀರಿ? ಮೇಲೆ ಹೇಳಿದ ಹನುಮಂತಪ್ಪ, ಶಾಂತಮ್ಮ ಯಾರಾಗಿರಬಹುದು ಎಂದು ನಿಮ್ಮ ಊಹೆ?

ಹನುಮಂತಪ್ಪ ಮನೆಯ ನಂಬಿಕಸ್ಥ ಕೆಲಸದಾಳಿರಬಹುದು. ಶಾಂತಮ್ಮ ಮನೆಯ ಅಕ್ಕರೆಯ ಅಡಿಗೆ ಮಾಡುವ ಮಹಿಳೆಯಾಗಿರಬಹುದು ಎಂದುಕೊಂಡರೆ ಅದು ಸಹಜ.

ಆದರೆ...ಹನುಮಂತಪ್ಪ ಅವರ ತಂದೆಯೆಂದೂ, ಶಾಂತಮ್ಮ ಅವರ ತಾಯಿಯೆಂದು ಯಾರಾದರೂ ಸ್ಪಷ್ಟೀಕರಣ ನೀಡಿದರೆ ನಂಬಲು ಕಷ್ಟವಾಗುತ್ತದೆ ತಾನೇ? ತಂದೆಯನ್ನು, ತಾಯಿಯನ್ನು ಇಷ್ಟು casual ಆಗಿ ಹೆಸರನ್ನು ಉಪಯೋಗಿಸಿ ಕರೆಯುವವರೂ ಇರುತ್ತಾರೆಯೇ ಎಂದು ಮೂಗಿನ ಮೇಲೆ ಬೆರಳಿಡಬೇಕಾದೀತು.

ಇಂತಹ ಸನ್ನಿವೇಶ ತುಂಬಾ ವಿರಳ ಬಿಡಿ. ವಿರಳವೇನು ಅಸಾಧ್ಯ ಅಂತಲೇ ಹೇಳಿ. ಯಾರೂ ತಮ್ಮ ತಂದೆಯನ್ನು, ತಾಯಿಯನ್ನು ಹೆಸರಿಡಿದು ಮಾತಾಡುವದಿಲ್ಲ. ಒಂದು ವೇಳೆ ಹಾಗೆ ಮಾತಾಡಿದರೆ ಸ್ಕ್ರೂ ಲೂಸಾದ ಕೇಸ್ ಎಂದುಕೊಂಡು ಅವರ ಮನಃಸ್ಥಿತಿಯ ಮೇಲೆ ಕನಿಕರ ತೋರಬಹುದು ಬಿಡಿ.

'ಈ ಸಂಜೀವ ನನ್ನ ಒಂದು ಮಾತೂ ಕೇಳಲ್ಲ. ವೀಕೆಂಡ್ ಬಂತು ಅಂದರೆ ಗೆಳೆಯರು ಅಂತ ಹೊರಟುಬಿಡುತ್ತಾನೆ,' ಅನ್ನುತ್ತಾಳೆ ಒಬ್ಬ ಮಹಿಳೆ.

'ಅಯ್ಯೋ! ರಂಜನಾ ಕೂಡ ಹಾಗೇ. ವೀಕೆಂಡ್ ಬಂತು ಅಂದರೆ ಆಕೆಯ ಫ್ರೆಂಡ್ಸ್ ಜೊತೆನೇ ಇರುತ್ತಾಳೆ,' ಅನ್ನುವವ ಒಬ್ಬ ಗಂಡಸು.

ಈಗ ಇವರ ಮಾತು ಕೇಳುತ್ತಿರುವ ನಮ್ಮಂತವರು ಇವರ ಮಾತಿನಲ್ಲಿ ಬಂದ ಸಂಜೀವ ಯಾರು, ರಂಜನಾ ಯಾರು ಎಂದು ತಲೆಕೆಡಿಸಿಕೊಳ್ಳಬೇಕು.

'ಸಂಜೀವ ಯಾರು? ನಿನ್ನ ಮಗನೇ?'

'ಅಲ್ಲ!'

'ಮತ್ತೇ? ನಿನ್ನ ಅಣ್ಣ ತಮ್ಮಂದಿರೋ ಹೇಗೆ?'

'ಅಯ್ಯೋ! ಅಲ್ಲ!'

'ಮತ್ತೆ!!? ನಿನ್ನ ಅಪ್ಪನೇ? ಪಿತಾಶ್ರೀ?!!'

'ಅಯ್ಯೋ! ನಿಮಗೇನಾಗಿದೆ? ತಲೆ ಸರಿಯಿದೆಯೇ?'

'ಯಾಕೆ?'

'ಸಂಜೀವ ನನ್ನ ಗಂಡ!'

ಈ ಪುಣ್ಯಾತ್ಗಿತ್ತಿಯ ಕಥಾನಾಯಕ, ವೀಕೆಂಡ್ ವೀರ ಸಂಜೀವ ಈಕೆಯ ಗಂಡ. ಹಾಗಂತ ಈಕೆ ಹೇಳಲಿಲ್ಲ. ಯಾರೋ ಕ್ಯಾಶುಯಲ್ ವ್ಯಕ್ತಿ ಎನ್ನುವಂತೆ ಕೇವಲ ಹೆಸರಿಡಿದು ಮಾತಾಡಿದಳು. ಹೆಸರಿಡಿದು ಕರೆಯುತ್ತಿದ್ದಾರೆ ಅಂದ ಮೇಲೆ ಮಗನೋ, ಅಣ್ಣನೋ, ತಮ್ಮನೋ ಅಂದುಕೊಂಡರೆ ಅಲ್ಲವಂತೆ. ನೋಡಿದರೆ ಹೋಗಿ ಹೋಗಿ ಪತಿಶ್ರೀ ಉರ್ಫ್ ಪತಿ ಪರಮೇಶ್ವರ.

ರಂಜನಾ, ರಂಜನಾ ಅಂತ ಬೊಬ್ಬೆ ಹೊಡೆದ ಗಂಡಸಿನ ಕೇಸ್ ಕೂಡ ಏನೂ ಭಿನ್ನವಾಗಿರುವದಿಲ್ಲ. ಆಕೆ ಅವನ ಮಗಳೋ, ಅಕ್ಕನೋ, ತಂಗಿಯೋ ಎಂದು ನೋಡಿದರೆ ಪತ್ನಿಶ್ರೀ ಉರ್ಫ್ ಹೆಂಡತಿಯಾಗಿರುತ್ತಾಳೆ.

ಹೆಸರು ಹಿಡಿದು ಸಂಬಂಧಗಳನ್ನು ಕರೆಯುವದು ಮಹಾನ್ ದರಿದ್ರ ಪದ್ಧತಿ. ಇಲ್ಲಿನ ಅಮೇರಿಕನ್ ಜನರು ಹಾಗೇ ಮಾಡುತ್ತಾರೆ. ಗಂಡ, ಹೆಂಡತಿಯ ಹೆಸರಿಡಿದು ಕರೆಯುತ್ತಾರೆ. ಬೇರೆಯವರ ಜೊತೆ ಮಾತಾಡುವಾಗ ಕೂಡ ಹಾಗೇ ಹೇಳುತ್ತಾರೆ. ಸಂದರ್ಭಾನುಸಾರವಾಗಿ ನಾವೇ ಅರ್ಥ ಮಾಡಿಕೊಳ್ಳಬೇಕು ಯಾರ ಬಗ್ಗೆ ಮಾತಾಡುತ್ತಿದ್ದಾರೆಂದು. ಇವರಿಗೆ ಗಂಡನ್ಯಾರೋ ಮಿಂಡನ್ಯಾರೋ. ಹೆಂಡತಿ ಯಾರೋ ಮಿಂಡತಿ ಯಾರೋ. ಇವತ್ತಿದ್ದ ಗಂಡ ನಾಳೆ ಇರುವದಿಲ್ಲ. ಹಿತ್ತಲಿನಲ್ಲಿ ಕೂತ ಹೆಂಡತಿ ಹೆಂಡ ಇಳಿಸುತಿದ್ದರೆ ಮುಂಬಾಗಿಲಿನಲ್ಲಿ ಮಿಂಡತಿ ಮದವೇರಿ ಕುಣಿಯುತ್ತಿರುತ್ತಾಳೆ. ಇಬ್ಬರ ನಡುವೆ ಒಬ್ಬಳಿಗೆ ಗಂಡನಾಗಿ ಇನ್ನೊಬ್ಬಳಿಗೆ ಬಾಯ್ ಫ್ರೆಂಡ್ ಆಗಿ ಡಬಲ್ ಡ್ಯೂಟಿಯನ್ನು ಖುಷಿಯಿಂದಲೇ ಮಾಡುತ್ತಿರುತ್ತಾನೆ ಒಬ್ಬ ಗಂಡು ಪ್ರಾಣಿ. ಹೀಗಿರುತ್ತವೆ ಇಲ್ಲಿನ ಜನರ ಸಂಬಂಧಗಳು!

ಇಂತಹ ಹಡಪೇಶಿ ಸಂಸ್ಕೃತಿಯ ಇಲ್ಲಿನ ಸ್ವೇಚ್ಛಾಚಾರಿ ಜನ ತಂದೆ, ತಾಯಿಗೆ ಒಮ್ಮೊಮ್ಮೆ My old man, My old lady ಅಂತ ಕೂಡ ಅನ್ನುತ್ತಾರೆ. ಆದರೂ ಕಮ್ಮಿ. ತಂದೆ ತಾಯಿಗೆ ಇವರೂ ಕೂಡ dad, mom ಅನ್ನುವ ಸಂಪ್ರದಾಯ ಇಟ್ಟುಕೊಂಡಿದ್ದಾರೆ. ತಂದೆತಾಯಿಯನ್ನೂ ಹೆಸರಿಡಿದು ಕರೆಯುವ ಕೆಟ್ಟ ಆಚಾರವನ್ನು ಶುರುಮಾಡಿಕೊಂಡಿಲ್ಲ. ಇನ್ನೂ ಕಾಲ ಅಷ್ಟು ಕೆಟ್ಟಿಲ್ಲ.

ಇಲ್ಲಿನ ಜನ ಹಾಗೆನ್ನುತ್ತಾರೆ. ಇಲ್ಲಿ ಹೀಗೇ ಅನ್ನುವ ಕಾರಣಕ್ಕೆ ನಮ್ಮ ಜನ ಕೂಡ ಹಾಗೇ ಮಾಡಿದರೆ ವಿಚಿತ್ರವಾಗಿ ಕಾಣುತ್ತದೆ. ಸಿಕ್ಕಾಪಟ್ಟೆ ಕಿರಿಕಿರಿಯಾಗುತ್ತದೆ.

ಕಾಲ ಬದಲಾಗಿದೆ. ಅದು ನಮಗೂ ಗೊತ್ತಿದೆ. ಮೊದಲಿನಂತೆ ಮಹಿಳೆಯರು ಗಂಡನಿಗೆ ಬಹುವಚನ ಉಪಯೋಗಿಸಿ 'ನಮ್ಮ ಮನೆಯವರು,' 'ನಮ್ಮ ಯಜಮಾನರು,' ಎಂದೆಲ್ಲ ಹೇಳಬೇಕು ಅಂತ ಯಾರೂ ನಿರೀಕ್ಷೆ ಮಾಡುವದಿಲ್ಲ. ಹಾಗೆಯೇ ಗಂಡ ಹೆಂಡತಿಯನ್ನು 'ಆಕೆ', 'ಮನೆಯಾಕೆ,' ಅಂತ ಕಿಮ್ಮತ್ತಿಲ್ಲದೆ ಕರೆದರೂ ಓಕೆ ಅಂತ ಯಾರೂ ಹೇಳುತ್ತಿಲ್ಲ. ಆದರೆ ಇರುವ ಶಾಸ್ತ್ರೋಕ್ತ ಸಂಬಂಧಗಳನ್ನು ಬಾಯ್ತುಂಬ ಹೇಳಲು ಏನು ಧಾಡಿ? ನನ್ನ ಪತಿ, ನನ್ನ ಪತ್ನಿ, ನಮ್ಮ ಮಕ್ಕಳು ಎಂದು ಹೇಳದೇ ಕೇವಲ ಹೆಸರಿಡಿದು ಕೂಗಿ, ಅದು ಉಳಿದವರಿಗೂ ಅರ್ಥವಾಗಬೇಕು ಅಂತ ನಿರೀಕ್ಷೆ ಮಾಡಿದಾಗ ಅಂತವರನ್ನು ಹಿಡಿದು ಬುರುಡೆಗೆ ಸಮಾ ಎರಡು ಚಡಾಬಡಾ ಅಂತ ಬಾರಿಸಿಬಿಡಬೇಕು ಅನ್ನಿಸುತ್ತದೆ. ಅಲ್ಲರೀ.... ನನ್ನ ಗಂಡ ಸಂಜೀವ. ನನ್ನ ಪತ್ನಿ ರಂಜನಾ ಅಂತ ಒಂದು ಬಾರಿ, ಕೇವಲ ಒಂದು ಬಾರಿ, ಹೇಳಿ ನಂತರ ಮಾತಿಗೊಮ್ಮೆ ಕೇವಲ ಹೆಸರಿಡಿದೇ ಕೂಗಿ. ಹಾಗೇ ಕೂಗಿಕೊಂಡು ಸಾಯಿರಿ. ಅಭ್ಯಂತರವಿಲ್ಲ. ಅಷ್ಟೂ ಮಾಡಲಿಲ್ಲ ಅಂದರೆ ಹೇಗೆ?

ಕೆಲಸದ ಜಾಗದಲ್ಲಿ ತುಂಬಾ ಜನ ಭಾರತೀಯರಿದ್ದಾರೆ. ಎಲ್ಲರೂ ಈ ಕೆಟ್ಟ ಅಭ್ಯಾಸ ಕಲಿತವರೇ. ನಾನಂತೂ ಮುದ್ದಾಂ ಕೊಕ್ಕೆ ಹಾಕುತ್ತೇನೆ. ಗಂಡನ ಹೆಸರು ಹೇಳಿದರೆ 'ಯಾರು ನಿಮ್ಮಪ್ಪನೇ?' ಎಂದು ಕೇಳಿ ಅವರು ಕೆಟ್ಟ ಮುಖ ಮಾಡಿಕೊಂಡು, 'ಅಲ್ಲ ನನ್ನ ಗಂಡ' ಎಂದು ಹೇಳುವಂತೆ ಮಾಡಿದಾಗಲೇ ನನಗೆ ಸಂತೃಪ್ತಿ. ಹಾಗೆಯೇ ಹೆಂಡತಿಯ ಹೆಸರು ಹೇಳಿದವರಿಗೆ 'ಯಾರು ನಿನ್ನ ಗರ್ಲ್ ಫ್ರೆಂಡೇ?' ಎಂದು ಕಿಚಾಯಿಸಿ ಮುಜಗರಕ್ಕೀಡು ಮಾಡಲಿಲ್ಲ ಅಂದರೆ ಉಂಡನ್ನ ಅರಗುವದಿಲ್ಲ. ಒಬ್ಬರಿಗೆ ಒಮ್ಮೆ ಮಾತ್ರ ಹಾಗೆ ಮಾಡುತ್ತೇನೆ. ಅಷ್ಟೇ! :)

ಸಂಬಂಧಗಳೇ ಕಮ್ಮಿಯಾಗುತ್ತಿವೆ. ಇರುವ ಸಂಬಂಧಗಳು ಮೌಲ್ಯ ಕಳೆದುಕೊಳ್ಳುತ್ತಿವೆ. ಮತ್ತೆ ಸಂಬಂಧಗಳಲ್ಲೇ ಸಕಲ ಐಶ್ವರ್ಯವನ್ನೂ, ಸರ್ವಸ್ವವನ್ನೂ ಕಂಡುಕೊಳ್ಳುವದು ನಮ್ಮ ಸಂಸ್ಕೃತಿ. ದೂರದೂರದ ಸಂಬಂಧಗಳನ್ನೂ ಕೂಡ ನೆನಪಿಟ್ಟುಕೊಂಡು ಅವನ್ನು celebrate ಮಾಡುವ ದೊಡ್ಡ ಮನಸ್ಸು, ಶ್ರೀಮಂತ ಸಂಸ್ಕೃತಿ ನಮ್ಮದು. ಹೀಗಿರುವಾಗ ಸಂಬಂಧಗಳ ಮನೆ ಹಾಳಾಗಲಿ, ಎದುರಿಗೆ ಕುಳಿತವರಿಗೆ ತಿಳಿಯಲಿ ಅಂತಾದರೂ ಬಾಯ್ಬಿಟ್ಟು ಒಮ್ಮೆ, ನಿಮ್ಮ ಲಡಕಾಸಿ ಇಂಗ್ಲೀಷಿನಲ್ಲೇ ಬೇಕಾದರೆ, My husband so and so or My wife so and so ಎಂದು ಹೇಳಲಿಕ್ಕೆ ಈ ಜನರಿಗೆ ಏನು ಧಾಡಿರೀ?

ವಿ.ಸೂ: ಮೊದಲು ತಲೆಗೆ ಬಂದ ಹೆಸರುಗಳನ್ನು ಉಪಯೋಗಿಸಿದ್ದೇನೆ. ತಮ್ಮ ಕುರಿತಾಗಿ ಬರೆದಿದ್ದು ಎಂದು ಯಾರೂ ತಿಳಿಯಬೇಕಾಗಿಲ್ಲ. ತಿಳಿದುಕೊಂಡರೆ ಅವರ ಕರ್ಮ ಅಷ್ಟೇ.

4 comments:

ವಿ.ರಾ.ಹೆ. said...

true true true..

Mahesh Hegade said...

Thanks, Vikas! :)

sunaath said...

ಭಾರತದಲ್ಲಿರುವ ನಗರಜೀವಿಗಳೂ ಸಹ ಹೆಸರಿಡಿದು ಕರೆಯುವ ಪದ್ಧತಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ, ನಮ್ಮಯ ಹಳ್ಳಿಗಳಲ್ಲಿ ಮಾತ್ರ ಸಂಬಂಧಸೂಚೀ ಪದಗಳ ಬಳಕೆ ಇನ್ನೂ ಇದೆ. ದೊಡ್ಡಪ್ಪ, ದೊಡ್ಡವ್ವ, ಚಿಕ್ಕಪ್ಪ, ಚಿಕ್ಕವ್ವ, ಕಾಕಾ, ಕಾಕೂ, ಮಾಮಾ, ಮಾಮೀ, ಅತ್ಯಾ, ಅತ್ತಿಗೆ, ವೈನಿ, ವೈನ್ಸ, ಅಬಚಿ, ಆಯೀ, ಅವ್ವ, ಅಪ್ಪ ಮೊದಲಾದ ಪದಗಳು ಇನ್ನೂ ಕೇಳಸಿಗುತ್ತಿವೆ.

Mahesh Hegade said...

ನೀವು ಹೇಳಿದ್ದು ಸರಿಯಿದೆ, ಸರ್. ಥ್ಯಾಂಕ್ಸ್.