Saturday, February 03, 2018

'ಭಜಿ' ಗೋವಿಂದಂ

ಮೊನ್ನೆ ಮೋದಿ ಸಾಹೇಬರು casual ಆಗಿ ಹೇಳಿದ ಮಾತೊಂದು ದೊಡ್ಡ ವಿವಾದಕ್ಕೆ ಕಾರಣವಾಯಿತು.

'ನಿಮ್ಮ ಆಫೀಸಿನ ಎದುರಲ್ಲಿ ಪಕೋಡಾ ಕರಿದು ಮಾರುವವ ಕೂಡ ದಿನಕ್ಕೆ ೨೦೦ ರೂಪಾಯಿ ಗಳಿಸುತ್ತಾನೆ. ಅದು ಉದ್ಯೋಗವಲ್ಲವೇ?' ಅಂತ ಟೀವಿ ಸಂದರ್ಶನದಲ್ಲಿ ಕೇಳಿದರು. ಸಂದರ್ಶಕ ಉದ್ಯೋಗಸೃಷ್ಟಿಯ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಕೊಟ್ಟ ಉತ್ತರ.

ಪಕೋಡಾ ಅಥವಾ ಭಜಿ (ಬಜೆ) ಕರಿದು ಮಾರುವದೇ ಬೆಸ್ಟ್ ಉದ್ಯೋಗ ಅಂತ ಹೇಳಿದವರಲ್ಲಿ ಮೋದಿ ಸಾಹೇಬರು ಮೊದಲನೆಯವರಲ್ಲ.

ನಮ್ಮ ಆದಿ ಶಂಕರಾಚಾರ್ಯರು ಅದನ್ನೇ ಅಲ್ಲವೇನ್ರಿ ಹೇಳಿದ್ದು? 'ಮೋಹ ಮುದ್ಗರಂ'ನಲ್ಲಿ ಏನಂತ ಹೇಳಿದರು?

ಭಜ ಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೆ
ಸಂಪ್ರಾಪ್ತೆ ಸನ್ನಿಹಿತೆ ಕಾಲೇ ನಹಿ ನಹಿ ರಕ್ಷತಿ ಡುಕೃಮ್ಕರಣೆ
ಭಜ ಗೋವಿಂದಂ ಭಜ ಗೋವಿಂದಂ

ಅರ್ಥ ಏನಪ್ಪಾ ಅಂದರೆ... ನಮ್ಮ ಹೈಸ್ಕೂಲ್ ಸಂಸ್ಕೃತ ಮಾಸ್ತರ್ ಎಸ್.ಎಸ್. ಹೆಗಡೆ ಸರ್ ಹೇಗೆ ಸಂಸ್ಕೃತ ಹೇಳಿ ಕೊಡುತ್ತಿದ್ದರೋ ಅದೇ ಮಾದರಿಯಲ್ಲಿ ವಿವರಿಸುತ್ತೇನೆ.
 
ಭಜ ಗೋವಿಂದಂ ಭಜ ಗೋವಿಂದಂ = ಗೋವಿಂದನೆಂಬ ಭಜಿ ಗೋವಿಂದನೆಂಬ ಭಜಿ

**ಭಜ ಇದರ ತತ್ಸಮ ತದ್ಭವ ಭಜಿ ಅಂದ್ರೆ ಪಕೋಡಾ, ಬಜೆ, ಬುರ್ಬುರಿ, ವಡೆ, ಗೋಳಿಬಜೆ ಇತ್ಯಾದಿ. 

ಮೂಢಮತೆ = ದಡ್ಡ ಮಂಗ್ಯಾನ್ಮಗ

ಸಂಪ್ರಾಪ್ತೆ ಸನ್ನಿಹಿತೆ ಕಾಲೇ = ಪ್ರಾಯ ಬಂದು, ಪ್ರಾಯ ಮುಗಿಯುವ ಕಾಲ ಬಂದರೂ ನೌಕರಿ ಸಿಗಲಿಲ್ಲ ಅಂದರೆ. ನೌಕರಿ ಸಿಗದೇ ಹಿತವಲ್ಲದ ಸನ್ನಿ ಹಿಡಿದರೆ.

ನಹಿ ನಹಿ ರಕ್ಷತಿ ಡುಕೃಮ್ಕರಣೆ = ನೀ ಕಲಿತ ವ್ಯಾಕರಣ (ಡುಕೃಮ್ಕರಣೆ) ನಿನ್ನನ್ನು ರಕ್ಷಿಸುವದಿಲ್ಲ. ಅರ್ಥಾತ್ ಪುಸ್ತಕದ ವಿದ್ಯೆ ವೇಸ್ಟ್.

ಹಾಂಗಾಗಿ.....

ಗೋವಿಂದನೆಂಬ ಭಜಿ ಕರಿದು ಜೀವನೋಪಾಯ ಹುಡುಕಿಕೋ....

ವಾಕ್ಯಾರ್ಥ ನೋಡಿಯಾಯಿತು. ಈಗ ಭಾವಾರ್ಥ.

ಪುಸ್ತಕದ ವಿದ್ಯೆ, ಗಳಿಸಿದ ಡಿಗ್ರಿ ಯಾವದೂ ಉಪಯೋಗಕ್ಕೆ ಬರುವದಿಲ್ಲ.
ಗೋವಿಂದ ಭಜಿ (ಪಕೋಡಾ) ಕರಿದು ಜೀವನ ಸಾಗಿಸು!

ಆದಿ ಶಂಕರರ ಪರಮೋನ್ನತ ಕೃತಿ 'ಮೋಹ ಮುದ್ಗರಂ' ಶ್ಲೋಕವನ್ನು ಹೀಗೂ ಅರ್ಥೈಸಲು ಕೇವಲ ನಮ್ಮಂತ ಯಬಡ ಹಾದಿ ಶಂಕರನಿಗೆ ಮಾತ್ರ ಸಾಧ್ಯ!

ಆದಿ ಶಂಕರಾ! ಹಾದಿ ಶಂಕರಾ! ಬೀದಿ ಶಂಕರಾ! ಗಲ್ಲಿ ಶಂಕರಾ!

***

ಜಗತ್ತಿನಲ್ಲಿ ಎಲ್ಲೂ ಮೊದಲಿನ ಅನುಪಾತದಲ್ಲಿ ಉದ್ಯೋಗಸೃಷ್ಟಿ ಆಗುವದಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲೂ automation ಬಂದು ಬೇಕಾಗುವ ಕೆಲಸಗಾರರ ಸಂಖ್ಯೆ ಕಮ್ಮಿಯಾಗುತ್ತಲೇ ಹೋಗುತ್ತದೆ. ಬೇರೆ ಬೇರೆ ಸ್ಕಿಲ್ ಇರುವ ಕೆಲಸಗಾರರು ಬೇಕಾಗುತ್ತಾರೆ. ಅದೂ ಕಮ್ಮಿ ಸಂಖ್ಯೆಯಲ್ಲಿ. ಹಾಗಾಗಿ ೧೦೦ ಕೋಟಿಯ ಪ್ರಾಜೆಕ್ಟಿಗೆ ಮೊದಲು ೧೦೦೦ ಜನ ಬೇಕಾಗಿದ್ದರೆ ಈಗ ೭೦೦ ಜನ ಸಾಕು.

ಮತ್ತೆ ಸರ್ಕಾರದ ಕೆಲಸ ಉದ್ಯೋಗಸೃಷ್ಟಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿ ಮಾಡಿಕೊಡುವದೇ ವಿನಃ ತಾವೇ ಉದ್ದಿಮೆಗಳನ್ನು ಸ್ಥಾಪಿಸಿ ಕೆಲಸ ಕೊಡುವದಲ್ಲ. ಆ ಮಾಡೆಲ್ ವಿಫಲವಾಗಿದ್ದನ್ನು ಭಾರತವೂ ಸೇರಿ ಎಲ್ಲ ಕಡೆ ನೋಡಿದ್ದೇವೆ. ಈಗ disinvestment ಅಂತ ಸರ್ಕಾರಿ ಸ್ವಾಮ್ಯದ ನಷ್ಟದ ಕಂಪನಿಗಳನ್ನು ಖಾಸಗೀಕರಣ ಮಾಡುತ್ತಿರುವದು ಯಾವ ಕಾರಣಕ್ಕೆ? ಮೊದಲು ಸೋಪಿನಿಂದ ಹಿಡಿದು ಬಿಸ್ಕೀಟಿನವರೆಗೆ ಎಲ್ಲವನ್ನೂ ಸರ್ಕಾರಿ ಕಂಪನಿಗಳೇ ಉತ್ಪಾದಿಸಿ ಸಿಕ್ಕಾಪಟ್ಟೆ 'ಲಾಭ' ಗಳಿಸಿದ್ದನ್ನು ನೋಡಿದ್ದೇವೆ! ಸಾಕು. :)

ಪಕೋಡಾ ಮಾರಿ ದಿನಕ್ಕೆ ೨೦೦ ರೂಪಾಯಿ ಗಳಿಸುವದು ಅಂದರೆ ತಿಂಗಳಿಗೆ ಕೇವಲ ೬,೦೦೦ ರೂಪಾಯಿ ಮಾತ್ರ. ಅಷ್ಟರಲ್ಲಿ ಜೀವನ ಹೇಗೆ ಸಾಧ್ಯ ಅಂತ ಕೇಳಿದರೆ ಅದಕ್ಕೆ ಉತ್ತರ - ಸ್ವಾಮೀ, ಒಬ್ಬನ ಸಂಪಾದನೆಯಲ್ಲಿ ನಾಲ್ಕು ಜನರ ಸಂಸಾರ ನಡೆಯುವ ಕಾಲ ಎಂದೋ ಹೋಗಿದೆ. ಈಗ ಎಲ್ಲರೂ ದುಡಿಯಬೇಕು. ಇದು ಹೊಸದೇನೂ ಅಲ್ಲ. ವಿಶ್ವದ ಎಲ್ಲ ಕಡೆ ಹಾಗೇ ಇದೆ. ಇಲ್ಲಿ ಅಮೇರಿಕಾದಲ್ಲಿ ಶಾಲಾ ಮಕ್ಕಳೂ ಸಹ ಪೇಪರ್ ಹಾಕಿ, ಅಂಗಡಿಯಲ್ಲಿ ಸಾಮಾನು ಕಟ್ಟಿ ಕಾಸು ಸಂಪಾದಿಸುತ್ತಾರೆ. ರಜೆಯಲ್ಲಿ ಕಂಪೆನಿಗಳಲ್ಲಿ internship ಮಾಡಿ ಅಮೂಲ್ಯ ಅನುಭವದ ಜೊತೆ ಕಾಸು ಸಂಪಾದಿಸುತ್ತಾರೆ. ಪಕೋಡಾ ಮಾರಲಿ ಅಥವಾ ಮತ್ತೇನೋ ಮಾಡಲಿ, ವೃತ್ತಿಗೆ ಮಾರ್ಯಾದೆ ಸಿಗಬೇಕು. Dignity of labor. Dignity for any productive work.

ಕೃಷಿ ಪ್ರಾಧಾನ್ಯ ದೇಶಗಳಲ್ಲಿ ಸಹ ಮೊದಲೆಲ್ಲ (ಈಗಲೂ ಸಹ) ಮನೆಯ ಎಲ್ಲ ಸದಸ್ಯರೂ ಅವರವರ ತಾಕತ್ತಿಗೆ ತಕ್ಕಂತೆ ಕೃಷಿ ಚಟುವಟಿಕೆಗಳಲ್ಲಿ  ತೊಡಗಿಸಿಕೊಳ್ಳುತ್ತಿದ್ದರು. ಮನೆಯಲ್ಲಿ ಅಡುಗೆ ಕೆಲಸ ಮುಗಿಸಿದ ಮಹಿಳೆಯರು ತೋಟ ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರು. ಮಕ್ಕಳೂ ಅಷ್ಟೇ. ಸಣ್ಣ ಪುಟ್ಟ ಕೆಲಸ ಮಾಡಿ ಪಾಲಕರಿಗೆ ಸಹಾಯ ಮಾಡುತ್ತಿದ್ದರು. ಅಷ್ಟೂ ಜನ ಕೂಡಿ ದುಡಿದಾಗ ಮಾತ್ರ ಜೀವನರಥ ಸಾಗುತ್ತಿತ್ತು.

ಎಲ್ಲರೂ ಪಕೋಡಾ ಮಾರಿಯೇ ಜೀವನ ಸಾಗಿಸಬೇಕು ಅಂತಲ್ಲ. ಸಾಗಿಸಿದರೂ ತಪ್ಪೇನಿಲ್ಲ. ನಮ್ಮ ಧಾರವಾಡದಲ್ಲಿ ದೊಡ್ಡ ದೊಡ್ಡ ಹೋಟೆಲ್, ಬಾರ್ ಇತ್ಯಾದಿಗಳನ್ನು ನಡೆಸುವ ಶೆಟ್ಟಿ ಸಮುದಾಯದವರಲ್ಲಿ ನಮ್ಮ ವಯಸ್ಸಿನ ಸುಮಾರು ಜನ ಇಂಜಿನಿಯರಿಂಗ್, MBA, ಹೀಗೆ ಬೇರೆ ಬೇರೆ ಡಿಗ್ರಿ ಮಾಡಿಕೊಂಡಿದ್ದಾರೆ. ಬೇಕೆಂದಿದ್ದರೆ ಅವರಿಗೆ ನೌಕರಿ ಜರೂರ್ ಸಿಗುತ್ತಿತ್ತು. ಆದರೂ ಅವರು ನೌಕರಿ ಹುಡುಕಿಕೊಂಡು ಹೋಗಿಲ್ಲ. ತಲೆತಲಾಂತರಗಳಿಂದ ಹೋಟೆಲ್ ಉದ್ಯಮ ಅವರ ಕೈ ಹಿಡಿದಿದೆ. ಅದರಲ್ಲೇ ಉನ್ನತಿ ಸಾಧಿಸುತ್ತ ಸಾಗಿದ್ದಾರೆ.

ತಪ್ಪೇನಿದೆ?

2 comments:

sunaath said...

ಖರೇ ಮಾತಿಗೆ, ‘ಹೌದು’ ಎಂದು ಅನ್ನಲೇ ಬೇಕು, ಮಹೇಶರೆ. ‘ಎರಡುನೂರು ರೂಪಾಯಿ ಹ್ಯಾಂಗ ಸಾಲತದ?’ ಅಂತೋ ಕೇಳೋ ಮಂದಿಯ ಸರಕಾರದ ಸಮಿತಿಯೇ ‘ಹದಿನಾರು ರೂಪಾಯಿ/ಪ್ರತಿ ದಿನ ಗಳಿಸುವವನು ಬಡತನದ ರೇಖೆಯ ಮೇಲಿರುವ ಭಡವನು’ ಎಂದು ವ್ಯಾಖ್ಯಾನಿಸಿತ್ತು ಎನ್ನುವುದನ್ನು ಮರೆತಂತೆ ಕಾಣುತ್ತದೆ. ನಮ್ಮ ಪ್ರಧಾನ ಮಂತ್ರಿಗಳು ರೇಲವೇ ಸ್ಟೇಶನ್ನಿನಲ್ಲಿ ಚಾ ಮಾರುತ್ತಿದ್ದರು. ಅಷ್ಟೇಕೆ, ನಮ್ಮ ಪೂರ್ವಪ್ರಧಾನಿ ರಾಜೀವ ಗಾಂಧಿಯವರ ಧರ್ಮಪತ್ನಿ ಶ್ರೀಮತಿ ಸೋನಿಯಾ ಮೈನೋ ಸಹ ಲಂಡನ್ನಿನ ಪಬ್ ಒಂದರಲ್ಲಿ ಪಾನೀಯಗಳನ್ನು ಸರ್ವ್ ಮಾಡುತ್ತಿದ್ದರು ಎಂದು ಕೇಳಿದ್ದೇನೆ. ಅಂದ ಮೇಲೆ ಭಜಿ ಮಾರುವವನು ಹೇಗೆ ಸಣ್ಣವನಾದಾನು?

ನಿಮ್ಮ ಲೇಖನದ ಮೇಲ್-ಹೊದಿಕೆಯು ತೆಳುಹಾಸ್ಯದ್ದಾದರೂ ಒಳಗಿಟ್ಟಂತಹ ವ್ಯಂಗ್ಯದ ಚೂರಿ ಹರಿತಾಗಿದೆ. ಜೈ ಭಜಿಗೋವಿಂದಮ್!

Mahesh Hegade said...

ಬಡತನದ ರೇಖೆಯ ಮೇಲಿರುವ 'ಭಡವ'ನು - ಮೊನಚಾದ ಮಾತು! ಯಾರಿಗೆ ಎಲ್ಲಿ ತಟ್ಟಬೇಕೋ ಮುಟ್ಟಬೇಕೋ ಅಲ್ಲಿ ಹೋಗಿ ಮುಟ್ಟುವಂತಹ ಮಾತು!

ಧನ್ಯವಾದಗಳು ಸುನಾಥ್ ಸರ್!