Friday, March 02, 2018

ಶ್ರೀದೇವಿ ...ನೆನಪುಗಳು

ಬಾಲಿವುಡ್ ತಾರೆ, ನಮ್ಮ ತಲೆಮಾರಿನ ಅಪ್ಸರೆ, ನಟಿ ಶ್ರೀದೇವಿ ನಿಧನಳಾಗಿದ್ದಾಳೆ. ಆತ್ಮಕ್ಕೆ ಶಾಂತಿ ಸಿಗಲಿ.

ಶ್ರೀದೇವಿ ನಿಧನಳಾದಳು ಎಂದು ತಿಳಿದಾಗ ಒಂದಿಷ್ಟು ಹಳೆಯ ನೆನಪುಗಳು ಮರುಕಳಿಸಿದವು.

'Some people's reputation precedes them' ಅಂತ ಇಂಗ್ಲೀಷಿನಲ್ಲಿ ಒಂದು ಮಾತಿದೆ. ಅಂದರೆ ಒಬ್ಬರ ಬಗ್ಗೆ ಸಿಕ್ಕಾಪಟ್ಟೆ ಸುದ್ದಿಯನ್ನು ಓದಿರುತ್ತೇವೆ, ಮಾಹಿತಿಯನ್ನು ಕಲೆಹಾಕಿರುತ್ತೇವೆ, ತಿಳಿದುಕೊಂಡಿರುತ್ತೇವೆ. ಆದರೆ ಅವರನ್ನು ನೋಡಿರುವದಿಲ್ಲ. ನಿಜಜೀವನದಲ್ಲಿ ಹೋಗಲಿ. ಸಿನೆಮಾದಲ್ಲೂ ನೋಡಿರುವದಿಲ್ಲ. ಶ್ರೀದೇವಿಯ ವಿಷಯದಲ್ಲಿ ನಮ್ಮ ಜೊತೆ ಆಗಿದ್ದೂ ಅದೇ.

೧೯೮೨ ರ ಸಮಯದಿಂದಲೇ ಶ್ರೀದೇವಿ ಪತ್ರಿಕೆಗಳ ಸಿನೆಮಾ ಪುರವಣಿ ಪುಟಗಳಲ್ಲಿ ರಾರಾಜಿಸುತ್ತಿದಳು. ಆಕೆಗೆ ಸಿನಿಮಾ ಪತ್ರಕರ್ತರು ಕೊಟ್ಟ ಬಿರುದು - 'ಸಿಡಿಲು ತೊಡೆಗಳ ರಾಣಿ'. ಏನಪ್ಪಾ ಇದು ಹೀಗೆ ವಿಚಿತ್ರವಾಗಿ ಬಿರುದು ಕೊಟ್ಟಿದ್ದಾರೆ ಅಂತ ಅನ್ನಿಸುತ್ತಿತ್ತು. ಶ್ರೀದೇವಿ ಬಗ್ಗೆ ಆರ್ಟಿಕಲ್ ಬಂತು ಅಂದರೆ ಆಕೆಯ ಸಿಡಿಲ ತೊಡೆಗಳ ಒಂದು ಖತರ್ನಾಕ್ ಫೋಟೋ ಇರಲೇಬೇಕು. ಒತ್ತಾಯಕ್ಕೆ ಹಾಕಿಕೊಂಡಿದ್ದಾಳೋ ಎಂದೆನಿಸುವ ರಬ್ಬಾರಬ್ಬು ಬಣ್ಣದ ಬಿಟ್ಟಬಿಗಿ ಹಾಫ್-ಪ್ಯಾಂಟ್ ಅಥವಾ ಬಿಟ್ಟಬಿಗಿಯ ಈಜುಡಿಗೆ ಆಕೆಯ ಸ್ಟ್ಯಾಂಡರ್ಡ್ ದಿರುಸು. ಒಟ್ಟಿನಲ್ಲಿ ಸಿಡಿಲು ತೊಡೆಗಳ ರಾಣಿ ಎಂದರೇನು ಅಂತ ಯಾರಿಗಾದರೂ ಡೌಟ್ ಬಂದರೆ ನೋಡಿಕೊಂಡು ಸಂಶಯ ಬಗೆಹರಿಸಿಕೊಳ್ಳಲಿ ಎಂಬಂತೆ ಆ ಫೋಟೋ ಇರುತ್ತಿತ್ತು.

ನಾವಿನ್ನೂ ಆಗ ಚಿಣ್ಣ ಬಾಲಕರು. ಹತ್ತೇ ವರ್ಷದ ಹಾಪರು. ಹಾಗಾಗಿ ಸಿಡಿಲು ತೊಡೆ, ಕಣ್ಣಿನ ಕೋಲ್ಮಿಂಚು ಮುಂತಾದ ವಿಚಿತ್ರ ಬಿರುದುಗಳ ಬಗ್ಗೆ ತಲೆಕೆಡಿಸಿಕೊಳ್ಳುವ ವಯಸ್ಸು ಅದಾಗಿರಲಿಲ್ಲ. ಆದರೂ 'ಸಂಯುಕ್ತ ಕರ್ನಾಟಕ' ದಿನಪತ್ರಿಕೆಯನ್ನು ಸಾದ್ಯಂತ ಓದಬೇಕು. ಹಾಗಾಗಿ ಅಂತಹ non-veg ಮಾಹಿತಿ ಕಣ್ಣಿಗೆ ಬೀಳುತ್ತಿತ್ತು. ಉಪಾಯವಿರಲಿಲ್ಲ.

ಶ್ರೀದೇವಿಯ ನೋಡಿದ ಮೊದಲ ಸಿನಿಮಾ - ಜಾನ್ಬಾಜ್. ೧೯೮೬. ಅದರಲ್ಲಿ ಶ್ರೀದೇವಿಯದು ಅತಿಥಿ ಪಾತ್ರ. ಆ ಸಿನೆಮಾದಲ್ಲಿ ಬೇಗನೆ ಆಕೆಯ ತಿಥಿಯಾಗಿಬಿಡುತ್ತದೆ. ಬೇಗನೆ ಚತ್ತು ಪೋಯಾಳ್. ನಿರ್ಮಾಪಕ, ನಿರ್ದೇಶಕ, ನಟ ಫಿರೋಜ್ ಖಾನನ ಅದ್ಭುತ ಸಿನಿಮಾ. ಶ್ರೀದೇವಿ, ರೇಖಾ, ಡಿಂಪಲ್ ಕಣ್ಮನ ತಣಿಸುತ್ತಾರೆ. ಒಂದಕ್ಕಿಂತ ಒಂದು ಉತ್ತಮ ಹಾಡುಗಳಿವೆ. Feroz Khan was a trendsetter.

ಮುಂದೆ ಕೆಲ ತಿಂಗಳ ನಂತರ ನೋಡಿದ್ದು - ಕರ್ಮಾ. ಖರೆ ಹೇಳಬೇಕೆಂದರೆ, ಸೋದರನಂತಿರುವ ಭಟ್ಕಳದ ಪ್ರಕಾಶ ಹೆಗಡೆಯೊಂದಿಗೆ ಜೇಮ್ಸ್ ಬಾಂಡ್ ಸಿನಿಮಾ ನೋಡೋಣ ಅಂತ ಹುಬ್ಬಳ್ಳಿಗೆ ಹೋದರೆ ಬಾಂಡ್ ಸಿನಿಮಾ  ಹೌಸ್ ಫುಲ್. ಬೇರೆ ಯಾವುದಾದರೂ ಮೂವಿ ನೋಡೋಣ ಅಂತ ಉದ್ದಕ್ಕೆ ಕೊಪ್ಪಿಕರ್ ರೋಡ್ ಅಲೆದಾಗ ಕಣ್ಣಿಗೆ ಬಿದಿದ್ದು, ಅದಕ್ಕಿಂತ ಹೆಚ್ಚಾಗಿ ಟಿಕೆಟ್ ಸಿಕ್ಕ ಮೂವಿ - ಕರ್ಮಾ. ನಮ್ಮ ಕರ್ಮ ಚೆನ್ನಾಗಿತ್ತು.  ಹಾಗಾಗಿ ಮೂವಿ ಕೂಡ ಚೆನ್ನಾಗಿತ್ತು. ಹಿರಿಯನಟ ದಿಲೀಪ್ ಕುಮಾರ್, ಅನುಪಮ್ ಖೇರ್ ನಟಿಸಿದ ಮೂವಿ. ಏನೋ ಒಂದು ರೀತಿಯಲ್ಲಿ ಚೆನ್ನಾಗಿತ್ತು.

'ಕರ್ಮಾ' ಸಿನೆಮಾದಲ್ಲಿ ಶ್ರೀದೇವಿಯನ್ನು ಈಜುಕೊಳದಲ್ಲಿ ಈಜು ಹೊಡೆಸಿ ಹೊರಗೆ ತಂದರಲ್ಲ. ನೋಡಿ ಧನ್ಯವಾಯಿತು ಜನ್ಮ! ಸಿಡಿಲು ತೊಡೆಗಳ ರಾಣಿಯ ದರ್ಶನ ಭಾಗ್ಯ. ಆಗತಾನೇ ಮೊಳಕೆಯೊಡಿಯುತ್ತಿದ್ದ ಹದಿನಾಲ್ಕರ ಹದಿಹರಿಯಕ್ಕೆ ಸರಿಯಾದ ಗೊಬ್ಬರ ಹಾಕಿದಂತಾಗಿ ಮುಂದೊಂದಿಷ್ಟು ದಿನ ತಲೆ ಫುಲ್ ಗೊಬ್ಬರ ಗೊಬ್ಬರ. ಹತ್ತು ಗಾಯತ್ರಿ ಮಂತ್ರ ಜಾಸ್ತಿ ಹೇಳಬೇಕಾಯಿತು. ಗಾಯತ್ರಿ ಹೇಳಿದರೆ ಮನಸ್ಸು ಶಾಂತವಾಗುತ್ತದೆ ಅಂತ ಮುಂಜಿಯಾದಾಗ ಮೊಳೆ ಹೊಡೆದಿಟ್ಟಿದ್ದರು. ಅದು ನಿಜ ಅಂತ ಈಗ ಗೊತ್ತಾಗಿದೆ ಬಿಡಿ. ಮೊಳೆಯಲ್ಲ ನಿಜ. ಗಾಯತ್ರಿ ಹೇಳಿದರೆ ಮನಸ್ಸು ಶಾಂತವಾಗುತ್ತದೆ ಎಂಬುದು ನಿಜ. ಇದಾಗುವ ಒಂದು ವರ್ಷದ ಹಿಂದೆ 'ಕಾಡಿನ ರಾಜ' ಎನ್ನುವ ಟಾರ್ಜಾನ್ ಮಾದರಿಯ, ಕೊಂಚ soft-porn ದೃಶ್ಯಗಳಿದ್ದ,  ಕನ್ನಡ ಸಿನಿಮಾ ನೋಡಿದ ನಮ್ಮ ಕ್ಲಾಸಿನ ಅನೇಕರೂ (ನನ್ನನ್ನೂ ಹಿಡಿದು) ವಾರಗಟ್ಟಲೇ ಪೂರ್ತಿ ಸುನ್ನಾಗಿ, ಸೈಲೆಂಟ್ ಆಗಿ, ಸುಮಡಿಯಲ್ಲಿ trans ಗೆ ಹೋದಂತೆ zombie ಆಗಿಹೋಗಿದ್ದೆವು. ಖತರ್ನಾಕ್ ಮಿತ್ರನೊಬ್ಬ ಕಾಡಿನ ರಾಜ ನೋಡಿಬಂದವನೇ ' ಮಸ್ತ ಐತಿ. ಹೋಗಿ ನೋಡಿ ಬರ್ರಿಲೇ,' ಅಂದಿದ್ದ. ಹೋಗಿ ನೋಡಿದರೆ ಅಷ್ಟೇ ಮತ್ತೆ! ಅದಕ್ಕಿಂತ ಅಚ್ಚರಿಯಾಗಿದ್ದು ಅಂದರೆ ಸಿನಿಮಾ ನೋಡುತ್ತಾ ನೋಡುತ್ತಾ ಅಕ್ಕ ಪಕ್ಕ ಕೂತ ಅಂಕಲ್ಲುಗಳು ದೀಪಾ ಎಂಬ ಮಲಯಾಳಿ ಕುಟ್ಟಿ ಮತ್ತು ಟೈಗರ್ ಪ್ರಭಾಕರ್ ಒತ್ತಿ ಒತ್ತಿ ರೋಮ್ಯಾನ್ಸ್ ಮಾಡುತ್ತಿದ್ದರೆ ಇವರು ಕಾಳಿಂಗ ಸರ್ಪದಂತೆ ಭುಸುಗುಟ್ಟಿದ್ದು! ಅಂತಹ soft-porn ದೃಶ್ಯಗಳನ್ನು ನೋಡಿದಾಗ ಗಂಡುಮುಂಡೆವು ಯಾಕೆ ಹಾಗೆ ಕಾಳಿಂಗಸರ್ಪದಂತೆ ಭುಸುಗುಡುತ್ತವೆ ಅಂತ ಅರಿವಾಗಲು ಮತ್ತೂ ಕೆಲವು ವರ್ಷ ಬೇಕಾಯಿತು ಅನ್ನಿ. ಕಾಡಿನ ರಾಜ ಹೇಳಿಕೇಳಿ ಕಾಡಿನ ಸಿನಿಮಾ. ನಿರ್ದೇಶಕರ ಬದೌಲತ್ ಆನೆಗೂ ದೀಪಾ ಕುಟ್ಟಿ ಜೊತೆ ರೋಮ್ಯಾನ್ಸ್ ಮಾಡುವ ಅದೃಷ್ಟ. ಹೊಡೀರಿ ಹಲಗಿ!

ಸಿಡಿಲು ತೊಡೆಗಳ ರಾಣಿ ಅನ್ನುವ ಬಿರುದು ಶ್ರೀದೇವಿಗೆ exclusive ಆಗಿ ಉಳಿಯಲೇ ಇಲ್ಲ. ೧೯೮೭-೮೮ ರ ಹೊತ್ತಿಗೆ ಜೂಹಿ ಚಾವ್ಲಾ ಅನ್ನುವ ಮಾಜಿ ಮಿಸ್ ಇಂಡಿಯಾಗೆ ಕೂಡ ಅದೇ ಬಿರುದು ದಯಪಾಲಿಸಿಬಿಟ್ಟರು ನಮ್ಮ ಕನ್ನಡದ ಸಿನಿ ಪತ್ರಕರ್ತರು. ಯಾಕಪ್ಪಾ ಅಂತ ನೋಡಿದರೆ ನಮ್ಮ ರವಿ ಮಾಮಾ (ನಟ ನಿರ್ದೇಶಕ ರವಿಚಂದ್ರನ್ ) ತಮ್ಮ 'ಪ್ರೇಮಲೋಕ' ಸಿನಿಮಾದಲ್ಲಿ ಜೂಹಿ ಎಂಬ ಭಾರತ ಸುಂದರಿಯನ್ನು ಈಜುಡಿಗೆಯಲ್ಲಿ ಲೆಫ್ಟ್ ರೈಟ್ ಕವಾಯಿತು ಮಾಡಿಸಿಬಿಟ್ಟಿದ್ದರು. ನಡೀರಿ ಸಿವಾ! ಬಿರುದು ಒಂದು ಬಿರುದಾಂಕಿತೆಯರು ಇಬ್ಬರು. ಶ್ರೀದೇವಿ ಮತ್ತು ಜೂಹಿ. 'ಪ್ರೇಮಲೋಕ' ೧೯೮೭ ರಲ್ಲೇ ಬಂದರೂ ನಾನು ನೋಡಿದ್ದು ೧೯೯೨. ಸಹಪಾಠಿ ಮಿತ್ರ ೧೦th B ಕ್ಲಾಸಿನ ಬಸು ಪಾಟೀಲ ಆ ಸಿನೆಮಾವನ್ನು ಇಪ್ಪತ್ತಕ್ಕೂ ಹೆಚ್ಚು ಬಾರಿ ನೋಡಿದ್ದ ಅಂತ ಸುದ್ದಿ ಇತ್ತು. ಧನ್ಯ ಬಸು ಪಾಟೀಲ ನೀನೇ ಧನ್ಯ!

ಇಷ್ಟಾದರೂ ಸಿಡಿಲು ತೊಡೆಗಳ ರಾಣಿ ಎನ್ನುವ ವಿಚಿತ್ರ ಬಿರುದಿನ ಹಿಂದಿನ ಸತ್ಯ ಏನು ಅಂತ ಗೊತ್ತಾಗಿರಲಿಲ್ಲ. ಆಮೇಲೆ ಗೊತ್ತಾಗಿದ್ದು ಅದು Thunder Thighs Beauty ಅನ್ನುವ ಇಂಗ್ಲೀಷ್ ಬಿರುದಿನ ಕನ್ನಡೀಕರಣ ಎಂದು. ಶಿವಾ! ಹೀಗೂ ಉಂಟೆ!? ಅನ್ನಿಸಿದ್ದು ಮಾತ್ರ ನಿಜ. ಇಂಗ್ಲೀಷ್ ಪುಸ್ತಕಗಳಲ್ಲಿ Thunder thighs beauty, buxom beauty, voluptuous  ಅಂತೆಲ್ಲ ವಿಶೇಷಣಗಳನ್ನು ಉಪಯೋಗಿಸಿದಾಗ ಅಸಹಜ ಅನ್ನಿಸುವದಿಲ್ಲ. ಅದನ್ನೇ ಕನ್ನಡದಲ್ಲಿ ಯಥಾವತ್ತಾಗಿ ಬರೆದರೆ ಯಾಕೋ ನಮ್ಮ ಸಂಸ್ಕೃತಿಗೆ ಒಗ್ಗುವದಿಲ್ಲ ಅಂತ ಅನ್ನಿಸಿತು. ಇರಲಿ.

ನಗೀನಾ - ಶ್ರೀದೇವಿಯ ಬೆಸ್ಟ್ ಮೂವಿ. ಇಚ್ಛಾಧಾರಿ ಹೆಣ್ಣು ನಾಗರಹಾವಿನ ಕಥೆಯುಳ್ಳ ಅದ್ಭುತ ಸಿನಿಮಾ. ಇವತ್ತಿಗೂ ನೋಡಿ ಸಂತೋಷಪಡಬಹುದು. simply outstanding ಸಿನಿಮಾ.

ಇನ್ನೂ ಅನೇಕ ಮೂವಿಗಳು ಚೆನ್ನಾಗಿವೆ. ಚಾಂದಿನಿ, ಚಾಲ್ಬಾಜ್, ಖುದಾ ಗವಾ, ಮಿಸ್ಟರ್ ಇಂಡಿಯಾ, ಇತ್ಯಾದಿ. ಕೆಲವು ತೆಲುಗು, ತಮಿಳು ಮೂವಿಗಳೂ ಸೂಪರ್.

***

ನಮ್ಮ ಸಹಪಾಠಿ ಹುಡುಗಿಯೊಬ್ಬಳ ಅಕ್ಕನಿಗೆ ಕಾಲೇಜಿನಲ್ಲಿ ಶ್ರೀದೇವಿ ಎಂದು ರೇಗಿಸುತ್ತಿದ್ದರಂತೆ. ಹಾಗಂತ ಮಾಹಿತಿ ಎಷ್ಟೋ ವರ್ಷಗಳ ನಂತರ ನನ್ನ ಕಿವಿಗೆ ಮೊನ್ನಿತ್ತಲಾಗೆ ಬಿದ್ದಿತ್ತು.

ಹ್ಯಾಂ!!?? ಅದ್ಯಾವ ಕೋನದಿಂದ, ಎಂತಹ ಭೂತಗನ್ನಡಿ ಹಿಡಿದು ನೋಡಿದರೂ ಆಕೆ ಶ್ರೀದೇವಿ ತರಹ ಕಾಣುವದಿಲ್ಲ. ಹಾಗಿದ್ದಾಗ ಆಕೆಗ್ಯಾಕೆ ಶ್ರೀದೇವಿ ಎನ್ನುವ ಬಿರುದು?

ತನಿಖೆ ಮಾಡಿನೋಡಿದರೆ ಮತ್ತದೇ ಕೇಸು.

TTB. Thunder Thighs Beauty.

ಒಟ್ಟಿನಲ್ಲಿ ಕಂಡಕಂಡ, ಸಿಕ್ಕಸಿಕ್ಕ, ಟುಮ್ ಟುಮ್ ಇರುವ, ಸದೃಢ ಮೈಕಟ್ಟಿನ ಭಾಗ್ಯ ಪಡೆದುಕೊಂಡುಬಂದ  ಕನ್ಯೆಯರಿಗೆಲ್ಲ ಶ್ರೀದೇವಿ ಅನ್ನಿಸಿಕೊಳ್ಳುವ ಭಾಗ್ಯ! ಯಾರಿಗುಂಟು ಯಾರಿಗಿಲ್ಲ.

ನಮ್ಮ ಧಾರವಾಡದ, ಅದರಲ್ಲೂ ಭಟ್ಟರ ಶಾಲೆಯ, 'ಬಾಲ'ಕರು ಬಾಲಿಕೆಯರಿಗೆ ನಾಮಕರಣ ಮಾಡುವದರಲ್ಲಿ ನಿಸ್ಸೀಮರು. ಒಂದು ಚೂರು ಹೋಲಿಕೆಯಿದ್ದರೂ ಸಾಕು ಏನೋ ಒಂದು ಹೆಸರು ಇಟ್ಟುಬಿಡುತ್ತಾರೆ. ಉದಾ: ನಮ್ಮ ಕ್ಲಾಸಿನ ಇಂದಿರಾ ಗಾಂಧಿ! ಬಿ ಕ್ಲಾಸಿನ ಅನಿತಾ ರಾಜ್!

***

ಶ್ರೀದೇವಿ ಮೃತಳಾದ ನಂತರ, ಅದರಲ್ಲೂ ಸಾವು ಮೊದಲು ವರದಿಯಾದಂತೆ ಹೃದಯಸ್ಥಂಭನದಿಂದ ಆಗಿಲ್ಲ, ಬಾತ್ರೂಮಿನ ಸ್ನಾನದ ಟಬ್ಬಿನಲ್ಲಿ ಬಿದ್ದು ಮುಳುಗಿ ಸತ್ತಿದ್ದಾಳೆ ಎಂದು ಸುದ್ದಿ ಬಂದಾಗ ಹಲವಾರು ಸಂಶಯದ ಸುಳಿಗಳು ಎದ್ದವು. ಥರೇವಾರಿ conspiracy theories ಜನಿಸಿದವು.

ರಾಜಕಾರಣಿ ಸುಬ್ರಮಣಿಯನ್ ಸ್ವಾಮಿ ಒಂದು ಮಾತು ಹೇಳಿದ್ದು ದೊಡ್ಡ ವಿವಾದಕ್ಕೆ ಎಡೆಯಾಯಿತು. 'ಶ್ರೀದೇವಿ ಸಾವಿನಲ್ಲಿ ಭೂಗತಲೋಕದ ಡಾನ್ ದಾವೂದ್ ಇಬ್ರಾಹಿಮ್ಮನ ಕೈವಾಡವಿದೆಯೋ ಎಂದು ತನಿಖೆ ಮಾಡಬೇಕು' ಅಂದರು ಸ್ವಾಮಿ.

ಎಲ್ಲರೂ ಸ್ವಾಮಿಯವರ ಮೇಲೆ ಮುರಿದುಕೊಂಡು ಬಿದ್ದರು. ಈ ಸ್ವಾಮಿಗೆ ಬೇರೆ ಕೆಲಸವಿಲ್ಲ. ಕೇವಲ ಇಲ್ಲಸಲ್ಲದ conspiracy theory ಗಳನ್ನು ಹರಿಬಿಡುತ್ತಾರೆ ಎಂದೆಲ್ಲ ಅವರನ್ನು ಟೀಕೆ ಮಾಡಲಾಯಿತು. ಟೀಕೆ ಮುಂದುವರೆದು ವೈಯಕ್ತಿಕ ದಾಳಿಯಾಯಿತು. ಅದು ಇತ್ತೀಚಿನ ಸಂಪ್ರದಾಯ. Trolling ಅನ್ನುವ ಅನಿಷ್ಟ ಪದ್ಧತಿ.

ಶ್ರೀದೇವಿಯ ಸಾವಿಗೂ, ಭೂಗತ ಲೋಕಕ್ಕೂ (underworld), ದಾವೂದ್ ಇಬ್ರಾಹಿಮ್ಮನಿಗೂ ಸಂಬಂಧವಿದೆಯೋ ಇಲ್ಲವೋ ದೇವರಿಗೇ ಗೊತ್ತು.

ಆದರೆ ಶ್ರೀದೇವಿಯ ಬಗ್ಗೆ ಸಿಕ್ಕಾಪಟ್ಟೆ ಆಕರ್ಷಣೆ ಹೊಂದಿದ್ದ ಡಾನ್ ದಾವೂದ್ ಇಬ್ರಾಹಿಂ ೧೯೯೨ ರಲ್ಲಿ ಶ್ರೀದೇವಿಯನ್ನು ದುಬೈನಲ್ಲಿ ಸಿಕ್ಕಾಪಟ್ಟೆ ಖಾತಿರ್ದಾರಿ ಮಾಡಿದ್ದನಂತೆ. ದುಬೈಗೆ ಬಂದಿದ್ದ ಶ್ರೀದೇವಿಯನ್ನು ಸ್ವಾಗತಿಸಲು ಬಿಚ್ಚಬಿಳುಪಿನ ಪರಮದುಬಾರಿ ರೋಲ್ಸ್ರಾಯ್ ಕಾರನ್ನು ಕಳುಹಿಸಿ ತನ್ನ ಅಭಿಮಾನ ಮೆರೆದಿದ್ದನಂತೆ. ಬೇಹುಗಾರಿಕೆ ಸಂಸ್ಥೆಗಳು ಸಂಗ್ರಹಿಸಿದ ಮಾಹಿತಿಯನ್ನು ಉಲ್ಲೇಖಿಸಿ ಪ್ರಸಿದ್ಧ ಪತ್ರಕರ್ತೆ ಚಾರುಲತಾ ಜೋಶಿ ೧೯೯೭ ರಲ್ಲಿ Outlook ಪತ್ರಿಕೆಯಲ್ಲಿ ಬರೆದಿದ್ದರು.

ಸುಬ್ರಮಣಿಯನ್ ಸ್ವಾಮಿಯವರ ಹೇಳಿಕೆ ನೋಡಿದಾಗ ಹಿಂದೆಲ್ಲೋ ಏನೋ ಓದಿದ ನೆನಪಾಯಿತು. ಗೂಗಲ್ ಮೊರೆಹೋದೆ. ಇಪ್ಪತ್ತು ವರ್ಷಗಳ ಹಿಂದಿನ Outlook ಪತ್ರಿಕೆಯ ವರದಿ ಸಿಕ್ಕಿತು.

ಒಂದು ಸಣ್ಣ ಮಾಹಿತಿ ಇದೆ.

>>
But for the star-struck Dawood—who intelligence records say arranged a white Rolls Royce for actress Sridevi when she visited Dubai for a week in 1992
<<

ಪೂರ್ತಿ ಆರ್ಟಿಕಲ್: Rolls Royces In Dawoodland (೨೫ ಆಗಸ್ಟ್ ೧೯೯೭ ರ Outlook ಪತ್ರಿಕೆ)

೨೬ ವರ್ಷಗಳ ಹಿಂದೆ ೧೯೯೨ ರಲ್ಲಿ ಆಗಿರಬಹುದಾದ ಘಟನೆ. ವರದಿಯಾಗಿದ್ದು ೨೧ ವರ್ಷಗಳ ಹಿಂದೆ ೧೯೯೭ ರಲ್ಲಿ.

ಈಬಗ್ಗೆ ನಾನು ಜಾಸ್ತಿಯೇನೂ ಬರೆಯುವದಿಲ್ಲ. ಬರೆದರೆ ಅದೆಲ್ಲ ಊಹೆ, conjecture, speculation ಆಗುತ್ತದೆ.

celebrity ಗಳಿಗೆ, ಸುಪ್ರಸಿದ್ಧ ವ್ಯಕ್ತಿಗಳಿಗೆ ಸಮಾಜದ ಎಲ್ಲ ಸ್ಥರಗಳಲ್ಲೂ ಆರಾಧಕರು (Admirers) ಇರುತ್ತಾರೆ. ಆರಾಧಕರು ಅವರ ಮೆಚ್ಚುಗೆ, ಆಕರ್ಷಣೆ ಇತ್ಯಾದಿಗಳನ್ನು ಬೇರೆ ಬೇರೆ ರೀತಿಯಲ್ಲಿ ತೋರಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಪ್ರಸಿದ್ಧ ವ್ಯಕ್ತಿಗಳು ಮತ್ತು ಅವರ ಆರಾಧಕರ ಮಧ್ಯೆ ಸಂಬಂಧ, ಅದೂ ಇರಬಾರದಂತಹ ಸಂಬಂಧ, ಇತ್ತು ಎಂದು ಹೇಳಲಿಕ್ಕೆ ಆಗುವದಿಲ್ಲ.

ಬಾಲಿವುಡ್ಡಿನ ಬೇರೆಬೇರೆ ವೃತ್ತಿಪರರಿಗೂ ಮತ್ತು ಭೂಗತಜಗತ್ತಿಗೂ ಇರುವ ಸಂಬಂಧ ಕೂಡ ಜಗಜ್ಜಾಹೀರಾಗಿದೆ. ಸಾಮಾನ್ಯಜ್ಞಾನವಾಗಿರುವ ಆ ವಿಷಯವನ್ನು ಇದೊಂದೇ ವರದಿಯ ಆಧಾರದ ಮೇಲೆ ಶ್ರೀದೇವಿಗೆ ತಳಕುಹಾಕಲು ಬರುವದಿಲ್ಲ.

ಒಂದು ಮಾತ್ರ ನಿಜ. ದಾವೂದನ ಖಡಕ್ ಹಿಡಿತ ದುಬೈ ಒಂದೇ ಅಲ್ಲ ಎಲ್ಲ ಕಡೆ ಇದೆ. ತನ್ನ ಪ್ರಭಾವವನ್ನು ಉಪಯೋಗಿಸಿ ಆತ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಯಾವ ಕೆಲಸ ಬೇಕಾದರೂ ಮಾಡಿಸಬಲ್ಲ. ಕುಕೃತ್ಯಗಳನ್ನು ಸಂಘಟಿಸಬಲ್ಲ ಮತ್ತು ಮಾಡಿಸಬಲ್ಲ. ಮಾಡಿದ್ದನ್ನು ಮುಚ್ಚಿಹಾಕಿಸಲೂಬಲ್ಲ. ಭಾರತಕ್ಕೆ ಬೇಕಾಗಿದ್ದ, ಇಂಟರ್ಪೋಲ್ ರೆಡ್ ಅಲರ್ಟ್ ಇದ್ದ, ಕುಖ್ಯಾತ ಅಪರಾಧಿಗಳು (ಅನೀಸ್ ಇಬ್ರಾಹಿಂ, ಅಬು ಸಲೇಂ ಇತ್ಯಾದಿಗಳು) ಕೊಲ್ಲಿ ದೇಶಗಳಲ್ಲಿ ಬಂಧಿತರಾದಾಗಲೂ ದಾವೂದನ ಕೃಪೆಯಿಂದ ಬಚಾವಾಗಿ ಸೇಫಾಗಿ ಪಾಕಿಸ್ತಾನ ಸೇರಿದ ನಿದರ್ಶನಗಳು ಇವೆ. ಅಂತವನಿಗೆ ಇದು ಕೊಲೆಯೇ ಆಗಿದ್ದರೆ ಅದನ್ನು ಮುಚ್ಚಿಹಾಕುವದೊಂದು ದೊಡ್ಡ ಮಾತೇ? ಆದರೆ ಆ ನಿಟ್ಟಿನಲ್ಲಿ ತನಿಖೆ ಮಾಡಬೇಕು ಅಂದರೆ ಕೊಲೆಯ ಉದ್ದೇಶ (motive) ಏನು ಅಂತ ಹುಡುಕಬೇಕಾಗುತ್ತದೆ. ಅದೆಲ್ಲ ಹೆಚ್ಚಿನ ತನಿಖೆಯಾದಾಗ ಮಾತ್ರ ಗೊತ್ತಾಗುತ್ತದೆ.

ದುಬೈ ಸರ್ಕಾರವಂತೂ ಕ್ಲೀನ್ ಚಿಟ್ ಕೊಟ್ಟಿದೆ.

ಪುರಾತನ ನಟಿ ಪ್ರಿಯಾ ರಾಜವಂಶ ಕೂಡ ೨೦೦೦ ರಲ್ಲಿ ಬಾತ್ರೂಮಿನಲ್ಲಿ ಕಾಲು ಜಾರಿ ಬಿದ್ದು ಸತ್ತಳು ಅಂತ ವರದಿಯಾಗಿತ್ತು. ಮುಂಬೈ ಕ್ರೈಂ ಬ್ರಾಂಚ್ ಬರೋಬ್ಬರಿ ತನಿಖೆ ಮಾಡಿದಾಗ ತಿಳಿದಿದ್ದು ಅದು ಆಸ್ತಿಗಾಗಿ ಒಂದು ವ್ಯವಸ್ಥಿತವಾಗಿ ರೂಪಿಸಿ ಮಾಡಿದ ಕೊಲೆ. ಆಪಾದನೆ ಅಷ್ಟೇ ಅಲ್ಲ. ಆಪಾದಿತರಿಗೆ ಶಿಕ್ಷೆ ಕೂಡ ಆಗಿದೆ. ನೆನಪಿಗೆ ಬರುವ ಮತ್ತೊಂದು ಕುಖ್ಯಾತ ಕೇಸ್ ಅಂದರೆ ಸುನಂದಾ ಪುಷ್ಕರ್ ತರೂರ್ ಸಾವು. ಅದು ಹೇಗೆಲ್ಲ ಚಿತ್ರವಿಚಿತ್ರ ತಿರುವುಗಳನ್ನು ಪಡೆದುಕೊಂಡಿತೆಂಬುದು ಎಲ್ಲರಿಗೂ ಗೊತ್ತು.

ದಾವೂದ್ ಇಬ್ರಾಹಿಂನ ಕಬಂಧಬಾಹುಗಳು ವಿಶ್ವಾದ್ಯಂತ ಹೇಗೆ ಚಾಚಿವೆ ಎನ್ನುವುದರ ಬಗ್ಗೆ ಝಳಕ್ ಕೊಡುವ ಎರಡು ಬ್ಲಾಗ್ ಪೋಸ್ಟುಗಳು:

ದಾವೂದ್ ಇಬ್ರಾಹಿಂ ಬರೆದುಕೊಟ್ಟಿದ್ದ ಮಿಲಿಯನ್ ಡಾಲರ್ ಚೆಕ್!

ಫೋನ್ ಮಾಡಿದ್ದ ದಾವೂದ್ ಇಬ್ರಾಹಿಂ ಏನು ಹೇಳಿದ್ದ? 

***

ಖ್ಯಾತ ಸಿನಿಮಾ ನಿರ್ದೇಶಕ ರಾಮಗೋಪಾಲ ವರ್ಮಾ ಕೂಡ ಶ್ರೀದೇವಿಯಿಂದ ಸಿಕ್ಕಾಪಟ್ಟೆ ಪ್ರಭಾವಿತರಾದವರು. ಒಂದು ಪುಸ್ತಕ ಕೂಡ ಬರೆದಿದ್ದಾರೆ - Guns & Thighs: The Story of My Life

ಪುಸ್ತಕದ ಶೀರ್ಷಿಕೆಯಲ್ಲಿರುವ Thighs (ತೊಡೆಗಳು) - ಮತ್ತೆ ಶ್ರೀದೇವಿಯ ಸಿಡಿಲು ತೊಡೆಗಳಿಗೆ ಸಂಬಂಧಪಟ್ಟಿದ್ದು. ತೆಲುಗು ಸಿನೆಮಾವೊಂದರಲ್ಲಿ ಶ್ರೀದೇವಿ bathtub ನಿಂದ ಎದ್ದು ಬರುವ ದೃಶ್ಯ, ಆಗಿನ್ನೂ ವಿದ್ಯಾರ್ಥಿಯಾಗಿದ್ದ, ರಾಮಗೋಪಾಲ ವರ್ಮಾ ಅವರನ್ನು ಅದೆಷ್ಟು ಕಾಡಿತ್ತು ಅಂದರೆ ಅದನ್ನು ಅವರ ಮಾತುಗಳಲ್ಲೇ ಕೇಳಬೇಕು. ಅದಕ್ಕಾಗಿ ನೀವು ಆ ಪುಸ್ತಕ ಓದಬೇಕು. ವಿಭಿನ್ನ ರೀತಿಯ ಪುಸ್ತಕ. ವಿಭಿನ್ನ ರೀತಿಯ ಮನುಷ್ಯನಿಂದ.

ಶ್ರೀದೇವಿಯನ್ನು ಹಾಕಿಕೊಂಡು ರಾಮಗೋಪಾಲ ವರ್ಮಾ ಮಾಡಿದ 'ಕ್ಷಣಂ ಕ್ಷಣಂ' ಅನ್ನುವ ತೆಲುಗು ಚಿತ್ರ ಒಂದು ಅತ್ಯುತ್ತಮ ಥ್ರಿಲ್ಲರ್ ಚಿತ್ರ. ಮುದ್ದಾಂ ನೋಡಿ.

2 comments:

sunaath said...

ರಾಮಾ!ರಾಮಾ!
(ಶ್ರೀದೇವಿ ಬದುಕಿದ್ದಾಗ, ಶಾಂತಿಯಿಂದ ಇದ್ದಳೋ ಇಲ್ಲವೋ ಗೊತ್ತಿಲ್ಲ. ಸತ್ತ ಮೇಲಾದರೂ ಆಕಿ ಶಾಂತಿಯಿಂದಿರಲಿ, ಬಿಡಿ. RIP)

Mahesh Hegade said...

ಕಾಮೆಂಟಿಗೆ ಧನ್ಯವಾದ, ಸುನಾಥ್ ಸರ್.

RIP, Sridevi.