Sunday, June 24, 2018

ಕರ್ಮ ಕರ್ಮ ಕರ್ಮ

ಕರ್ಮದಲ್ಲಿ ಮೂರು ಬಗೆ. ಸಂಚಿತ, ಆಗಾಮಿ ಮತ್ತು ಪ್ರಾರಬ್ಧ. ಸಂಚಿತ ಮತ್ತು ಆಗಾಮಿ ಕರ್ಮಗಳ ಫಲ ಮುಂದಿನ ಜನ್ಮಗಳಲ್ಲಿ ಬರುತ್ತದೆ. ಪ್ರಾರಬ್ಧ ಕರ್ಮದ ಫಲದಿಂದಲೇ ಈ ಜನ್ಮ ಮತ್ತು ಈ ಜನ್ಮದ ಆಗುಹೋಗುಗಳು. ಇದು ಕರ್ಮ ಸಿದ್ಧಾಂತ.

ಸಂಚಿತ ಮತ್ತು ಆಗಾಮಿ ಕರ್ಮಗಳು ಬತ್ತಳಿಕೆಯಲ್ಲಿರುವ ಬಾಣಗಳಿದ್ದಂತೆ. ಪ್ರಾರಬ್ಧವೆಂಬುವದು ಬಿಲ್ಲಿನಿಂದ ಹೊರಬಿದ್ದ ಬಾಣದಂತೆ. ಬಾಣವನ್ನು ಒಮ್ಮೆ ಬಿಟ್ಟ ಮೇಲೆ ಮುಗಿಯಿತು. ವಾಪಸ್ ಕರೆಯಲಾಗುವದಿಲ್ಲ. ಆದರೆ ಬತ್ತಳಿಕೆಯಲ್ಲಿರುವ ಬಾಣಗಳ ಬಗ್ಗೆ ವಿಚಾರ ಮಾಡಬಹುದು.

ಒಮ್ಮೆ ಜ್ಞಾನೋದಯವಾದ ಮೇಲೆ ಸಂಚಿತ ಮತ್ತು ಆಗಾಮಿ ಕರ್ಮಗಳು ನಶಿಸಿ ಹೋಗುತ್ತವೆ. ಜ್ಞಾನದ ಜ್ವಾಲೆಯಲ್ಲಿ ಹುರಿದುಹೋಗುತ್ತವೆ. ಹುರಿದ ಬೀಜದಿಂದ ಹೇಗೆ ಮೊಳಕೆಯೊಡೆಯುವದಿಲ್ಲವೋ ಹಾಗೆಯೇ ನಶಿಸಿದ ಕರ್ಮದ ಬೀಜಗಳಿಂದ ಕರ್ಮಫಲ ದೊರೆಯುವದಿಲ್ಲ. ಹಾಗಾಗಿ ಜ್ಞಾನಿಗಳಿಗೆ ಮರುಜನ್ಮವಿಲ್ಲ. ಆದರೆ ಜ್ಞಾನಿಗಳೂ ಸಹ ಪ್ರಾರಬ್ಧವನ್ನು ಅನುಭವಿಸಲೇಬೇಕು. ಹಾಗಾಗಿ ಜ್ಞಾನೋದಯದ ನಂತರವೂ ಜ್ಞಾನಿಗಳೂ ಸಹ ಇದ್ದ ದೇಹದಲ್ಲೇ ಮುಂದುವರೆಯುತ್ತಾರೆ. ಏನೇನು ಅನುಭವಿಸಬೇಕೋ ಅದನ್ನೆಲ್ಲ ಅನುಭವಿಸುತ್ತಾರೆ. ಪ್ರಾರಬ್ಧ ಮುಗಿದ ನಂತರ ದೇಹ ತಂತಾನೇ ಬೀಳುತ್ತದೆ. ಕುಂಬಾರ ಮಡಿಕೆ ಮಾಡುವದನ್ನು ನಿಲ್ಲಿಸಿದ ಬಳಿಕವೂ ಕುಂಬಾರನ ಚಕ್ರ ಕೆಲಕಾಲ ತಿರುಗುತ್ತಲೇ ಇರುತ್ತದೆ. ಹಾಗೇ ಜ್ಞಾನಿಗಳ ದೈಹಿಕ ಜೀವನ ಕೂಡ. ಪ್ರಾರಬ್ಧ ಕರ್ಮಕ್ಕೆ ಮತ್ತೊಂದು ಉಪಮೆ ಇದು.

ಭಕ್ತನೊಬ್ಬ ರಮಣ ಮಹರ್ಷಿಗಳ ಬಳಿ ಕೇಳಿದನಂತೆ. 'ಜ್ಞಾನೋದಯದ ನಂತರ ಆಗಾಮಿ, ಸಂಚಿತ ಕರ್ಮಗಳನ್ನು ಗೆದ್ದರೂ ಪ್ರಾರಬ್ಧವನ್ನೇಕೆ ಗೆಲ್ಲಲಾಗುವದಿಲ್ಲ?'

ರಮಣರು ಒಂದು ಸಣ್ಣ ಕಥೆ ಹೇಳಿದರು.

'ಒಬ್ಬನಿಗೆ ಮೂವರು ಪತ್ನಿಯರಿದ್ದರು. ಆ ಮನುಷ್ಯ ಸತ್ತುಹೋದ. ಆ ಮನುಷ್ಯ ಸತ್ತುಹೋದ ಮೇಲೆ ಅವನ ಪತ್ನಿಯರೇನಾಗುತ್ತಾರೆ?'

'ವಿಧವೆಯರಾಗುತ್ತಾರೆ,' ಅಂದ ಭಕ್ತ.

'ಮೂವರೂ ಪತ್ನಿಯರು ವಿಧವೆಯರಾಗುತ್ತಾರೋ ಅಥವಾ ಕೇವಲ ಒಬ್ಬಳು ಅಥವಾ ಇಬ್ಬರು ಪತ್ನಿಯರು ಮಾತ್ರ ವಿಧವೆಯರಾಗುತ್ತಾರೋ?' ಎಂದು ಕೇಳಿದರು ರಮಣರು.

'ಮೂವರೂ ಪತ್ನಿಯರು ವಿಧವೆಯರಾಗುತ್ತಾರೆ ಸ್ವಾಮೀ,' ಅಂದ ಭಕ್ತ.

'ಆಗಾಮಿ, ಸಂಚಿತ, ಪ್ರಾರಬ್ಧ ಈ ಮೂರೂ ಬಗೆಯ ಕರ್ಮಗಳು ಮೂವರು ಪತ್ನಿಯರಿದ್ದಂತೆ. ಸತ್ತ ಮೇಲೆ ಮೂವರೂ ವಿಧವೆಯರೇ,' ಎಂದು ಕ್ಲುಪ್ತವಾಗಿ ಹೇಳಿದ ರಮಣರು ಎದ್ದು ನಡೆದರು. ಅವರು ಇಷ್ಟು ಮಾತಾಡಿದ್ದೇ ಜಾಸ್ತಿ. ಅವರ ಬಳಿ ಮಾತೇ ಇಲ್ಲ. ಎಲ್ಲ ಮೌನ. ಉತ್ತರ ಕೇಳಿ ಬಂದವರ ಪ್ರಶ್ನೆಗಳೇ ಅನಾವಶ್ಯಕವಾಗಿಬಿಡುತ್ತಿದ್ದವು ಅವರ ಮುಂದೆ ಕುಳಿತಾಗ. ಅಂತಹ ತೇಜಸ್ಸು ಮತ್ತು ಮಹಿಮೆ ಅವರದ್ದು. ಆದರೆ ಕರ್ಮ ಸಿದ್ಧಾಂತದ ಬಗ್ಗೆ ಕೇಳಿದ ಪ್ರಶ್ನೆ ಗಹನವಾಗಿತ್ತು ಮತ್ತು ಪ್ರಸ್ತುತವಾಗಿತ್ತು ಎಂಬ ಕಾರಣಕ್ಕೆ ಕೊಂಚ ಮಾತಾಡಿದ್ದರು ರಮಣರು.

ಈ ಎರಡು ವಿರೋಧಾತ್ಮಕ (contradictory) ತತ್ವಗಳನ್ನು ಸಮನ್ವಯ (reconcile) ಮಾಡುವದು ಹೇಗೆ?

ಜ್ಞಾನೋದಯದ ನಂತರ ಆಗಾಮಿ ಮತ್ತು ಸಂಚಿತ ಕರ್ಮಗಳು ಮಾತ್ರ ನಾಶವಾಗುತ್ತವೆ. ಪ್ರಾರಬ್ಧ ಕರ್ಮದ ಫಲ, ಜ್ಞಾನಿಯಾದರೂ ಸರಿ, ಅನುಭವಿಸಲೇಬೇಕು ಎನ್ನುತ್ತದೆ ಕರ್ಮ ಸಿದ್ಧಾಂತ. ಗಂಡ ಸತ್ತ ನಂತರ ಎಲ್ಲ ಪತ್ನಿಯರೂ ವಿಧವೆಯರೇ ಅರ್ಥಾತ್ ಜ್ಞಾನೋದಯದ ನಂತರ ಯಾವ ಕರ್ಮವೂ ಉಳಿಯುವದಿಲ್ಲ ಅನ್ನುತ್ತಾರೆ ರಮಣರು.

ಸಮನ್ವಯ ಮಾಡುವ ಜರೂರತ್ತೇ ಇಲ್ಲ. ಭಕ್ತ ಅವನ frame of  reference ನಿಂದ ಕೇಳಿದ್ದ. ಭಕ್ತನ ಲೌಕಿಕ frame of reference ಅಂದರೆ ಈ ಜೀವನ, ಜಗತ್ತು. ಅದೆಲ್ಲ ಮಾಯೆ. ಮಾಯೆಯೊಳಗೆ ಇದ್ದಾಗ ಮಾತ್ರ ಕರ್ಮ ಸಿದ್ಧಾಂತಕ್ಕೆ ಅರ್ಥ. ರಮಣರು ಹೇಳಿದ್ದು ಅವರ ಉನ್ನತವಾದ frame of reference ನಿಂದ. ಅವರದ್ದು ಪಾರಮಾರ್ಥಿಕ ಸತ್ಯದ reference point. ಅವರ ದೃಷ್ಟಿಯಿಂದ ನೋಡಿದಾಗ ಎಲ್ಲವೂ ಪರಬ್ರಹ್ಮ.

ಎಲ್ಲವೂ ನೋಡುವ ದೃಷ್ಟಿ ಮೇಲೆ ಅವಲಂಬಿತ. ನೋಡುವ ದೃಷ್ಟಿ ಬದಲಾದರೆ ಸೃಷ್ಟಿ ಬದಲಾಗುತ್ತದಂತೆ.

ಇದು ಮೊನ್ನಿತ್ತಲಾಗೆ ಏನೋ ಓದುತ್ತಿದ್ದಾಗ ಅಚಾನಕ್ಕಾಗಿ ಸಿಕ್ಕು ಸಣ್ಣ ಮಟ್ಟದ ಜ್ಞಾನೋದಯಕ್ಕೆ (epiphany) ಕಾರಣವಾದ golden nugget! :)

5 comments:

sunaath said...

ಮಹೇಶರೆ, ಜ್ಞಾನದರ್ಶನಕ್ಕಾಗಿ ಧನ್ಯವಾದಗಳು. ನನಗೊಂದು ಪುಟ್ಟ ಸಂಶಯವಿದೆ, ಕೇವಲ ಪದಗಳ ಅರ್ಥಗಳ ದೃಷ್ಟಿಯಿಂದ. ಸಂಚಿತ ಅಂದರೆ accumulated. ಈ ಸಂಚಿತ ಕರ್ಮದ ಫಲವನ್ನೂ ನಾವು (ಒಂದಿಲ್ಲೊಂದು ಜನ್ಮದಲ್ಲಿ) ಪಡೆಯಲೇ ಬೇಕಲ್ಲವೆ? ಇನ್ನು ಪ್ರಾರಬ್ಧ ಕರ್ಮಫಲವೆಂದರೆ, ಈ ಜನ್ಮದಲ್ಲಿ ನಾವು ಪಡೆಯಲೇ ಬೇಕಾದ ಕರ್ಮಫಲವಲ್ಲವೆ? ಆಗಾಮಿ ಕರ್ಮವೆಂದರೆ ಏನು? ನಮ್ಮಿಂದ ಇನ್ನು ಮುಂದೆ ಘಟಿಸಬಹುದಾದ ಕರ್ಮವೆ? ಇದು ನನಗಂತೂ ತಿಳಿಯದು. ಇದು ಹೀಗಿದ್ದರೆ, ಇದು ನಮ್ಮ destined ಕರ್ಮವಾಗುತ್ತದೆ! ಒಟ್ಟಿನಲ್ಲಿ ‘ನಾ ಮಾಡಿದ ಕರ್ಮ ಬಲವಂತವಾಗಿರಲು, ನೀ ಮಾಡುವುದೇನೊ ಹರಿಯೆ!’ ಎನ್ನುವುದು ನಮ್ಮ ಪ್ರಾರಬ್ಧ ಕರ್ಮ!ಏನೆ ಇರಲಿ, ನೀವು ಹೇಳುತ್ತಿರುವ ವಿಷಯಗಳು ಚೆನ್ನಾಗಿವೆ ಹಾಗು ಸ್ವಾರಸ್ಯಕರವಾಗಿವೆ. ಮತ್ತೊಮ್ಮೆ ಧನ್ಯವಾದಗಳು.

Mahesh Hegade said...

ಧನ್ಯವಾದಗಳು ಸುನಾಥ್ ಸರ್.

ನೀವು ಹೇಳಿದ್ದು ನಿಜ. ಸಂಚಿತ = accumulated. ಪ್ರಾರಬ್ಧ = in-flight ಆಗಾಮಿ = being generated from present actions.(ಸಂಚಿತದೊಳಗೆ ಹೋಗುತ್ತದೆ. ಕ್ರೆಡಿಟ್ ಎಂಟ್ರಿ).

ನಮ್ಮದೆಲ್ಲ ಸದ್ಯಕ್ಕೆ ಪುಸ್ತಕ (ಅ)ಜ್ಞಾನವಷ್ಟೇ. ಆದರೂ ಬರೆದು ತೆಗೆದರೆ ಸ್ವಲ್ಪ ನೆನಪಿರುತ್ತದೆ ಎಂದು ಬರೆಯುವದು ಅಷ್ಟೇ.

Unknown said...

ಭಾರತದ ಕರ್ಮ ಸಿಧ್ಧಾಂತದ ಹಿನ್ನೆಲೆಯಲ್ಲಿ ಸಾಮಾಜಿಕ ವಿಂಗಡಣೆಯನ್ನು ತಿಳಿಸಿ

ದೀಪಾ ಜೋಶಿ said...

ಮನುಷ್ಯನ ಕರ್ಮಗಳ ಫಲವೇ ಆತನ ಜೀವನ ಎನ್ನುವುದಾದರೆ ನಮ್ಮ ಕೈಯಲ್ಲಿ ಏನೂ ಬದಲಾಯಿಸಲು ಆಗುವುದಿಲ್ಲ ಅಲ್ಲವೇ

Unknown said...

ಡಾ.ಭಾಸ್ಕರನ್ ಪಿಳ್ಳೈ ಅವರ ಕರ್ಮ ಸಿದ್ದಾಂತದ ಕುರಿತಾದ ಯೂ ಟ್ಯೂಬ್ ವಿಡಿಯೋಗಳು ತಮ್ಮ ಸಂದೇಹದ ಕುರಿತು ಉತ್ತರಿಸಬಲ್ಲವು. ಅವರು ತಮಿಳುನಾಡಿನ ಸಂಬುದ್ಧ ಯೋಗಿ ಮಹಿಮರು.