Sunday, January 27, 2019

ಅಜ್ಞಾನದ ಆಳ

ಒಬ್ಬ ಮನುಷ್ಯನಿಗೆ 'ಅವನೊಂದು ಇಲಿ' ಎನ್ನುವ ಭಾವನೆ ಮನಸ್ಸಿನಲ್ಲಿ ಮೂಡಿತು. ಅದೇ ಭಾವನೆ ಬೆಳೆಯುತ್ತ ಹೋಗಿ ಭ್ರಾಂತಿಯಾಗಿ, ಭ್ರಮೆಯಾಗಿಹೋಯಿತು. ಮನುಷ್ಯ ಫುಲ್ ಮಾನಸಿಕ ರೋಗಿಯಾಗಿಹೋದ. 'ನಾನೊಂದು ಇಲಿ' ಎನ್ನುವ (ತಪ್ಪು)ನಂಬಿಕೆಯಲ್ಲೇ ಕೊರಗತೊಡಗಿದ.

ಯಾರ್ಯಾರೋ ವೈದ್ಯರಿಗೆ ತೋರಿಸಿದರು. ಏನೇನೋ ಚಿಕಿತ್ಸೆ ಮಾಡಿಸಿದರು. ಏನೂ ಪ್ರಯೋಜನವಾಗಲಿಲ್ಲ. 'ನಾನೊಂದು ಇಲಿ. ನಾನೊಂದು ಇಲಿ,' ಎನ್ನುತ್ತಲೇ ಇರುತ್ತಿದ್ದ. ಎಲ್ಲರಿಗೂ ಇವನ ಈ ವರ್ತನೆಯಿಂದ ಮಹಾ ಕಿರಿಕಿರಿ.

ಕೊನೆಗೊಮ್ಮೆ ದೇವರಂತೆ ಹೊಸ ವೈದ್ಯರೊಬ್ಬರು ಸಿಕ್ಕರು. ಅವರು ಏನೇನೋ ಹೊಸ ಹೊಸ ಚಿಕಿತ್ಸೆ ಮಾಡಿದರು. ಅಂತೂ ಇಂತೂ ಸರಿಹೋದ. 'ನಾನೊಂದು ಇಲಿ' ಎನ್ನುವ ಭಾವನೆ ಮನಸ್ಸಿನಿಂದ ದೂರವಾಯಿತು. ಎಲ್ಲರೂ ನಿರಾಳರಾಗಿ ದೊಡ್ಡ ನಿಟ್ಟುಸಿರೊಂದನ್ನು ಬಿಟ್ಟರು. ವೈದ್ಯರನ್ನೂ ಹಿಡಿದು.

ಈ 'ಇಲಿ ಗಿರಾಕಿ' ತಲೆ ರಿಪೇರಿಯಾದ ಮೇಲೆ ಆಸ್ಪತ್ರೆಯಿಂದ ಬಿಡುಗಡೆಗೊಂಡ. ಮನೆ ಕಡೆ ನಡೆದ.

ಸ್ವಲ್ಪೇ ಹೊತ್ತಿನಲ್ಲಿ ವಾಪಸ್ ಓಡಿಬಂದ. ತುರ್ತಾಗಿ ವೈದ್ಯರನ್ನು ನೋಡಬೇಕು ಅಂದ. ಅವನಿಗೋ ಫುಲ್ ಧಾವಂತ. ಡಿಸ್ಚಾರ್ಜ್ ಆಗಿದ್ದ ಪೇಷಂಟ್ ಮತ್ತೆ ಬಂದಿದ್ದಾನೆ ಎಂದು ತಿಳಿದ ವೈದ್ಯರೂ ಬೇಗ ಓಡಿ ಓಡಿ ಬಂದರು.

'ಏನ್ರೀ?? ಮತ್ತೆ ಬಂದ್ರಿ? ಏನು ಸಮಸ್ಯೆ?' ಎಂದು ಕೇಳಿದರು ವೈದ್ಯರು.

'ಡಾಕ್ಟರ್, ಅದು... ' ಎಂದು ಎಳೆದ.

'ನೀವು ಇಲಿ ಅಲ್ಲ! ನೀವು ಇಲಿ ಅಲ್ಲವೇ ಅಲ್ಲ! ನೀವು ಮನುಷ್ಯರು. ಶುದ್ಧ ಮನುಷ್ಯರು. ಅದರ ಬಗ್ಗೆ ಸಂಶಯ ಬೇಡ. ಹೋಗಿ ಬನ್ನಿ,' ಎಂದು ಸಾಗಹಾಕಲು ನೋಡಿದರು ವೈದ್ಯರು.

'ಅದು ಸರಿ ಡಾಕ್ಟರ್. ನಾನು ಇಲಿ ಅಲ್ಲ ಅಂತ ಪೂರ್ತಿಯಾಗಿ ಮನವರಿಕೆಯಾಗಿದೆ. ಆದರೆ...' ಎಂದು ನಿಲ್ಲಿಸಿದ.

'ನೀವು ಇಲಿಯಲ್ಲ ಅಂತ ಮನವರಿಕೆಯಾಗಿದೆ ಅಂದ ಮೇಲೆ ಮತ್ತೇನ್ರೀ ನಿಮ್ಮ ಪ್ರಾಬ್ಲೆಮ್ಮು??' ಎಂದು ಕೊಂಚ ಅಸಹನೆಯಿಂದ ಪ್ರಶ್ನಿಸಿದರು ಡಾಕ್ಟರ್. ಇಂತಹ ರೋಗಿಗಳಿಂದ ಡಾಕ್ಟರ್ ಮಂದಿ ಮಾನಸಿಕ ರೋಗಿಗಳಾಗಿಬಿಡುತ್ತಾರೆ.

'ನಾನು ಇಲಿಯಲ್ಲ ಎಂದು ನನಗೆ ಗೊತ್ತಾಗಿದೆ. ಆದರೆ ಆ ವಿಷಯ ಪಕ್ಕದ ಮನೆ ಬೆಕ್ಕಿಗೆ ಗೊತ್ತಾಗಬೇಕಲ್ಲ? ಅದು ಅಲ್ಲೇ ನಿಂತಿತ್ತು. ನಾನು ಇನ್ನೂ ಇಲಿಯಂದೇ ಭಾವಿಸಿ ಮೈಮೇಲೆ ಎರಗೀತು ಅನ್ನೋ ಭಯ ಡಾಕ್ಟರ್!' ಎಂದು ಗೊಳೋ ಎಂದು ಅತ್ತ.

'ಸಿಸ್ಟರ್! ಬಾಯ್ಸ್! ಯಾರಿದ್ದೀರಿ ಅಲ್ಲಿ?? ಇವನನ್ನು ಮತ್ತೊಮ್ಮೆ ಅಡ್ಮಿಟ್ ಮಾಡಿಕೊಳ್ಳಿ! ಅರ್ಜೆಂಟ್' ಎಂದು ಚೀರುತ್ತಾ ಡಾಕ್ಟರ್ ಬೇಹೋಶ್ ಆದರು.

ನೀತಿ: ನಮ್ಮ ಅಜ್ಞಾನದ ಆಳ ಅಂದರೆ ಹೀಗಿರುತ್ತದೆ. ಅಷ್ಟು ಸುಲಭವಾಗಿ ದೂರವಾಗುವುದಿಲ್ಲ. ಅಜ್ಞಾನ ಪದರುಗಳಲ್ಲಿ(layers) ಇರುತ್ತದೆ. ಒಂದು ಪದರು ಕಳೆದ ಎಷ್ಟೋ ಕಾಲದ ನಂತರ ಮತ್ತೊಂದು ಪದರು ಬರುತ್ತದೆ. ಭಾವಿ ಅಗೆಯುವಾಗ ಎಷ್ಟೋ ಅಡಿಗಳ ನಂತರ ಒಂದು ಬಂಡೆ ಬರುತ್ತದೆ. ಅದನ್ನು ಅಗೆದು ತೆಗೆದೋ ಅಥವಾ ಸ್ಪೋಟಿಸಿ ತೆಗೆದೋ ಅಗೆಯುವುದನ್ನು ಮುಂದುವರೆಸುತ್ತೀರಿ. ಮತ್ತೆ ಎಷ್ಟೋ ಅಡಿಗಳ ನಂತರ ಮತ್ತೊಂದು ಬಂಡೆ ಬರುತ್ತದೆ. ಅದನ್ನೂ ತೆಗೆದು ಮುಂದುವರೆದು, ಅಂತಹ ಎಷ್ಟೋ ಬಂಡೆಗಳನ್ನು ತೆಗೆದು ಹಾಕಿದ ಮೇಲೆ ನೀರು ಸಿಗುತ್ತದೆ. ಅಜ್ಞಾನದ ನಿವಾರಣೆಯೂ ಹಾಗೆಯೇ. ಅದಕ್ಕಾಗಿಯೇ ಲೆಕ್ಕವಿಲ್ಲದಷ್ಟು ಜನ್ಮಗಳಿರುವುದು. Take your own time! ಅಷ್ಟೇ ಅಜ್ಞಾನದ ಮೊದಲ ಪದರು ನಿವಾರಣೆಯಾದ ತಕ್ಷಣ ಸಂಪೂರ್ಣ ಜ್ಞಾನ ಬಂತು ಅಂತ ಭಾವಿಸದಿದ್ದರೆ ಬಚಾವು. ಇಲ್ಲವಾದರೆ 'ಇಲಿ ಅಲ್ಲ' ಅನ್ನುವ ಭಾವನೆ ಹೋದರೂ ಪಕ್ಕದ ಮನೆ ಬೆಕ್ಕಿಗೆ 'ನಾನು ಇಲಿಯಲ್ಲ' ಎಂದು ಗೊತ್ತಿದಿದೆಯೋ ಇಲ್ಲವೋ ಅನ್ನುವ (ತಪ್ಪು) ಭಾವನೆ ಬರುತ್ತದೆ. ಅದೂ ನಿವಾರಣೆ ಆಯಿತು ಅಂದಿಟ್ಟುಕೊಳ್ಳಿ. ಮನೆಯಲ್ಲಿರುವ ಇಲಿ ಹಿಡಿಯಲು ಇಟ್ಟಿರುವ ಬೋನಿಗೆ 'ನಾನೊಂದು ಇಲಿ' ಆನ್ನಿಸಿಬಿಟ್ಟರೆ ಏನು ಗತಿ? ಇಲಿ ಪಾಷಾಣಕ್ಕೆ ಗೊತ್ತಾಗುತ್ತದೆಯೇ ನಾನು ಮನುಷ್ಯ ಎಂದು??? ಹೀಗೇ ಒಂದಾದ ಮೇಲೊಂದು ಅಜ್ಞಾನದ ಪದರುಗಳು ಅನಾವರಣಗೊಳ್ಳುತ್ತಲೇ ಹೋಗುತ್ತವೆ. ಅವಕ್ಕೆ ಬೇರೆ ಬೇರೆ ತರಹದ 'ಜ್ಞಾನ' ಚಿಕಿತ್ಸೆ ಬೇಕಾಗುತ್ತದೆ.

ಆದಿ ಶಂಕರರು 'ವಿವೇಕ ಚೂಡಾಮಣಿ' ಎನ್ನುವ ಗ್ರಂಥ ಬರೆದಿದ್ದಾರೆ. ಸ್ವಾಮಿ ಚಿನ್ಮಯಾನಂದರು ಅದರ ಮೇಲೆ ಇಂಗ್ಲೀಷಿನಲ್ಲಿ ಭಾಷ್ಯ ಬರೆದಿದ್ದಾರೆ. ಅದರಲ್ಲಿ ಈ ಉದಾಹರಣೆ ಸಿಕ್ಕಿತು.

ಏನೋ ಓದಿದಾಗ, ಏನೋ ಕೇಳಿದಾಗ, ಏನೋ ಹೊಳೆದಾಗ, 'ಆಹಾ! ಈಗ ಪರಿಹಾರ ಸಿಕ್ಕಿತು' ಅನ್ನಿಸಿದಾಗ 'ಇದು ಎಷ್ಟನೇ ಪದರಿನ ಅಜ್ಞಾನ ಇರಬಹುದು? ಸಂಪೂರ್ಣ ಜ್ಞಾನಕ್ಕೆ ಇನ್ನೆಷ್ಟು ಮೆಟ್ಟಿಲು?' ಎಂದು ಆಲೋಚಿಸುವ ವಿವೇಕ ಬಂದರೆ ಅದೇ ದೊಡ್ಡ ಭಾಗ್ಯ. ಅದರ ಬದಲಾಗಿ ಮೊದಲನೇ ಸಲ ವಿವೇಕ ಉದಯವಾದಾಗಲೇ ಸಂಪೂರ್ಣ ಜ್ಞಾನ ಬಂತು ಅಂತ ತಿಳಿದರೆ ಮತ್ತೊಮ್ಮೆ ಆಸ್ಪತ್ರೆಗೆ ಅಡ್ಮಿಟ್ ಆಗಿ ಚಿಕಿತ್ಸೆ ತೆಗೆದುಕೊಳ್ಳಬೇಕಾದೀತು! :)

ಈ ಸಂಸ್ಕಾರಗಳು ಅನ್ನುವವು ಅಜ್ಞಾನದ ಅಭಿವ್ಯಕ್ತಿಗಳು (manifestations). ಹಾಗಾಗಿಯೇ ಆಳವಾಗಿ ಬೇರೂರಿರುವ ಸಂಸ್ಕಾರಗಳು ಅಷ್ಟು ಬೇಗವಾಗಿ ನಿವಾರಣೆಯಾಗುವದಿಲ್ಲ. ಆಗಿವೆ ಅನ್ನಿಸಿದರೂ ಮುಂದೆ ಎಷ್ಟೋ ವರ್ಷಗಳ ನಂತರ ಮತ್ತೆ ಅಭಿವ್ಯಕ್ತವಾಗಿ ಮತ್ತೆ ಕಿರಿಕಿರಿ ಕೊಡಲಾರಂಭಿಸುತ್ತವೆ. ಮತ್ತೊಂದು ಬಂಡೆ ಬಂತು ಎಂದರ್ಥ.

ಎಷ್ಟೋ ಸಂಸ್ಕಾರಗಳು ವ್ಯಸನಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಒಂದು ವ್ಯಸನ ಬಿಟ್ಟರೂ ಅದೇ ಮತ್ತೆ ಎಷ್ಟೋ ವರ್ಷಗಳ ಮತ್ತೆ ಕಾಣಿಸಿಕೊಳ್ಳುತ್ತದೆ. ಕಾರಣ ಮತ್ತೆ ಇದೇ. ಕೆಲವರು ಅದೆಷ್ಟು ಬಾರಿ ಸಿಗರೇಟ್ ಸೇದುವುದನ್ನು ಬಿಟ್ಟು ಮತ್ತೆ ಹಿಡಿದುಕೊಂಡಿರುತ್ತಾರೋ!

https://www.amazon.in/Vivekachudamani-Swami-Chinmayananda/dp/B077PS778F/ref=sr_1_1?ie=UTF8&qid=1548611986&sr=8-1&keywords=vivekachoodamani+swami+chinmayananda

No comments: