Thursday, February 13, 2020

ತೆಪ್ಪದ ಮೇಲೆ ಕೆಪ್ಪನ ಮಾಡಿ ಬೆಪ್ಪನಂತೆ ತೆಪ್ಪಗೆ ಕೂಡಿಸಯ್ಯ ತಂದೆ...

ಭಾಗವತ ಪುರಾಣದಲ್ಲಿ ಒಂದು ಕಥೆ ಓದಿದ ನೆನಪು. ಎಲ್ಲ ವಿವರಗಳೂ ನೆನಪಿಲ್ಲ. ಆದರೆ ಕಥೆಯ ಸಾರಾಂಶ ಇಷ್ಟು.

ಒಬ್ಬ ಋಷಿ ತನ್ನ ದೈನಂದಿನ ಧಾರ್ಮಿಕ ಕ್ರಿಯಾವಿಧಿಗಳಲ್ಲಿ ತೊಡಗಿರುತ್ತಾನೆ. ಅದೇ ಸಮಯಕ್ಕೆ ಅವನ ಪತ್ನಿ ಅಲ್ಲಿಗೆ ಬರುತ್ತಾಳೆ. ಆಕೆ ಸರಸದ ಮೂಡಿನಲ್ಲಿ ಇರುತ್ತಾಳೆ. ಪತಿ ನೋಡಿದರೆ ಇಲ್ಲಿ ದೇವರ ಪೂಜೆಯಲ್ಲಿ ಮಗ್ನ.

ರಾ ರಾ ಸರಸಕು ರಾ ರಾ... 'ಆಪ್ತಮಿತ್ರ' ಚಿತ್ರದ ನಾಗವಲ್ಲಿಯ ಮಾದರಿಯಲ್ಲಿ ತನ್ನ ಪತಿಯನ್ನು ಸರಸಕ್ಕೆ ಆಹ್ವಾನಿಸುತ್ತಾಳೆ. ಪೂಜೆಯಲ್ಲಿ ಮುಳುಗಿದ್ದ ಪತಿ ಅದನ್ನು ನಯವಾಗಿಯೇ ನಿರಾಕರಿಸುತ್ತಾನೆ. ಪೂಜಾ ಕಾರ್ಯಗಳಲ್ಲಿ ಪುನಃ ಮಗ್ನನಾಗುತ್ತಾನೆ.

ತಾನು ಅಷ್ಟು ಪ್ರೀತಿಯಿಂದ ಸರಸಕ್ಕೆ ಕರೆದರೂ ಪತಿ ನಿರಾಕರಿಸಿಬಿಟ್ಟ ಎಂದು ಋಷಿಯ ಪತ್ನಿ ಬೇಸರಗೊಳ್ಳುತ್ತಾಳೆ. ಅಲ್ಲಿಂದ ಹೋಗುತ್ತಾಳೆ. ಪತ್ನಿ ಬೇಸರಗೊಂಡು ಹೋಗಿದ್ದನ್ನು ಋಷಿ ಗಮನಿಸುತ್ತಾನೆ.

ಸುಮಾರು ಹೊತ್ತಿನ ನಂತರ ಋಷಿಯ ಪೂಜಾಕಾರ್ಯಗಳು ಮುಗಿಯುತ್ತವೆ. ಈಗ ತುರ್ತಾಗಿ ಪತ್ನಿಯನ್ನು ಗಮನಿಸಿಕೊಳ್ಳಬೇಕು. ಆಗ ಕರೆದಾಗ ಸರಸಕ್ಕೆ ಬರಲಿಲ್ಲ ಎಂದು ಬೇಸರಗೊಂಡಿದ್ದಳು. ಈಗ ಹೋಗಿ ಮಸ್ಕಾ ಹೊಡೆದು ರಮಿಸಬೇಕು. ಅದು ತನ್ನ ಕರ್ತವ್ಯ ಎಂದುಕೊಳ್ಳುತ್ತಾನೆ ಋಷಿ.

ಪತ್ನಿಯ ಹತ್ತಿರ ಹೋಗಿ ಮಸ್ಕಾ ಹೊಡೆಯುತ್ತಾನೆ. ಆದರೂ ಆಕೆ ಅಷ್ಟು ಬೇಗ ಸಮಾಧಾನಗೊಳ್ಳುವುದಿಲ್ಲ.

ಈಗ ಋಷಿ heavy duty ಫಿಟ್ಟಿಂಗ್ ಇಡುತ್ತಾನೆ.

'ಪ್ರಿಯೆ, ಒಂದು ವಿಷಯ ಗೊತ್ತೇ?' ಎಂದು ಕೇಳಿದ ಋಷಿ.

'ಏನು??' ಎಂದು ಮುಖ ಊದಿಸಿಕೊಂಡೇ ಕೇಳಿದಳು ಪತ್ನಿ.

'ನಮ್ಮ ಧಾರ್ಮಿಕ ಗ್ರಂಥಗಳು ಏನು ಹೇಳುತ್ತವೆ ಗೊತ್ತೇ?' ಎಂದು ಕೇಳಿದ ಋಷಿ.

'ಅದೆಲ್ಲ ನಿಮಗೇ ಗೊತ್ತು. ನೀವೇ ಹೇಳಿ,' ಎಂದು ಉತ್ತರಿಸಿದಳು ಪತ್ನಿ.

'ಈ ಸಂಸಾರವೆಂಬ ಸಾಗರವನ್ನು ದಾಟಲು ಇರುವ ಅತ್ಯುತ್ತಮ ಸಾಧನವೆಂದರೆ ಪತ್ನಿ ಎಂಬ ತೆಪ್ಪ. ಪತ್ನಿಯೆಂಬ ತೆಪ್ಪವನ್ನು ಉಪಯೋಗಿಸಿಕೊಂಡು ಸಂಸಾರವೆಂಬ ಮಹಾಸಾಗರವನ್ನು ಸುಲಭವಾಗಿ ದಾಟಬಹುದು. ಪತ್ನಿಯಾದ ನಿನ್ನ ಮಹತ್ವ ಅಷ್ಟಿದೆ. ಗೊತ್ತೇ??' ಎಂದು ಫುಲ್ ಫಿಟ್ಟಿಂಗ್ ಇಡುತ್ತಾನೆ.

ಪತ್ನಿ ಫುಲ್ ಖುಷಿಯಾಗಿಬಿಡುತ್ತಾಳೆ. ಪತ್ನಿಯಾಗಿರುವ ತನಗೆ ಇರುವ ಮಹತ್ವ ತಿಳಿದು ಸಂತೋಷದಿಂದ ಉಬ್ಬಿಹೋಗುತ್ತಾಳೆ. ಮೊದಲಿನ ವಿರಸವನ್ನು ಮರೆಯುತ್ತಾಳೆ. ಋಷಿ ಮತ್ತು ಪತ್ನಿ ಸರಸದಲ್ಲಿ ತೊಡಗುತ್ತಾರೆ.

ಈ ಕಥೆಯ ಪ್ರಭಾವವೋ ಏನೋ... ತಲೆತಲಾಂತರಗಳಿಂದ ಪುರುಷರು ಸಂಸಾರವೆಂಬ ಸಾಗರವನ್ನು ದಾಟಲು ಪತ್ನಿಯೆಂಬ ತೆಪ್ಪವನ್ನು ನಂಬಿಕೊಂಡಿದ್ದಾರೆ. ಆದರೆ ಎಷ್ಟು ಜನ ಯಶಸ್ವಿಯಾಗಿ ದಾಟಿದ್ದಾರೆ? ಎಷ್ಟು ಜನ ತೆಪ್ಪವನ್ನೇರಿ ನಡುನೀರಿನಲ್ಲೇ ಮುಳುಗಿಹೋಗಿ ಗೊಟಕ್ ಅಂದಿದ್ದಾರೆ?

ಸಂಸಾರವೆಂಬ ಸಾಗರವನ್ನು ದಾಟಲು ಪತ್ನಿ ಉತ್ತಮ ತೆಪ್ಪ ಎನ್ನುವ ಮಾತು ನಿಜವಿರಬಹುದು. ಆದರೆ ಪೂರ್ತಿ ವಿವರ ಅದಲ್ಲ ಅನ್ನಿಸುತ್ತದೆ. ಪೂರ್ತಿ ವಿವರಗಳು ಮಿಸ್ ಆಗಿರುವ ಸಂಶಯ. ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಎಲ್ಲವನ್ನೂ ಪೂರ್ತಿಯಾಗಿ ಬಿಡಿಸಿ ಹೇಳುವ ರೂಢಿ ಇರಲಿಲ್ಲ. ಏನು ಹೇಳಬೇಕೋ ಅದನ್ನು ಕ್ಲುಪ್ತವಾಗಿ ಸೂಚ್ಯವಾಗಿ ಹೇಳುತ್ತಿದ್ದರು. ನಂತರ ಬೇಕೆಂದರೆ ದಡ್ಡ ಶಿಷ್ಯರಿಗೆ ಗುರುಗಳು ಮಿಸ್ಸಿಂಗ್ ಡೀಟೇಲ್ಸ್ ಕೊಡುತ್ತಿದ್ದರು.

ಈಗ ಅಂತಹ ಗುರುಗಳೂ ಇಲ್ಲ. ಜನರು ಕೂಡ ಪೂರ್ತಿ ವಿವರಗಳನ್ನು ತಿಳಿಯದೇ, ತಿಳಿಯುವ ವ್ಯವಧಾನವೂ ಇಲ್ಲದೆ ಗಡಬಿಡಿ ಮಾಡಿ ಗುಂಡಾಂತರ ಮಾಡಿಕೊಂಡು ಗಂಡಾತರಕ್ಕೆ ಒಳಗಾಗುತ್ತಾರೆ.

ನೀವು ಎಂದಾದರೂ ತೆಪ್ಪದ ಮೇಲೆ ಹೋಗಿದ್ದರೋ ಇಲ್ಲವೋ ಗೊತ್ತಿಲ್ಲ. ಬಿದಿರು ಅಥವಾ ಮರದ ದಿಮ್ಮಿಗಳಿಂದ ಮಾಡಿರುವ ತೆಪ್ಪ ಎಂದೂ ನೀರಲ್ಲಿ ಮುಳುಗುವುದಿಲ್ಲ. ಆದರೆ ಬುಡಮೇಲಾಗುವುದು ಜಾಸ್ತಿ. ತೆಪ್ಪದ ಮೇಲೆ ಪ್ರಯಾಣ ಮಾಡುವುದೂ ಸಹ ಒಂದು ಕಲೆ. ತೆಪ್ಪ ನಡೆಸುವ ನಾವಿಕ ನುರಿತ ವೃತ್ತಿಪರನೇ ಆಗಿದ್ದರೆ ಕಾಳಜಿ ವಹಿಸುತ್ತಾನೆ.

ದೋಣಿ ಹತ್ತಿದಂತೆ  ದುಡುಂ ಅಂತ ತೆಪ್ಪದ ಮೇಲೆ ಕುಪ್ಪಳಿಸಿ ಹತ್ತುವಂತಿಲ್ಲ. ತೆಪ್ಪದ center of gravity ಯ ಸುತ್ತಲಿಂದ ತೆಪ್ಪದ ಮೇಲೆ ಜನರು ಹತ್ತುತ್ತಾರೆ. ಬರೋಬ್ಬರಿ ಬ್ಯಾಲೆನ್ಸ್ ಇರಬೇಕು. ಒಮ್ಮೆ ತೆಪ್ಪ ಹತ್ತಿದ ಮೇಲೆ ನಿಂತ ಜಾಗದಲ್ಲೇ ತೆಪ್ಪಗೆ ನಿಂತಿರಬೇಕು. ಅಥವಾ ಕೂರುವಂತಹ ಜಾಗದಲ್ಲಿದ್ದರೆ ಕೂರಬಹುದು. ತೆಪ್ಪ ನಡುನೀರಿನಲ್ಲಿರುವಾಗ ಕುಣಿದು ಕುಪ್ಪಳಿಸುವಂತಿಲ್ಲ. ಇಳಿಯುವಾಗಲೂ ಅಷ್ಟೇ. ಸಾವಕಾಶವಾಗಿ ಇಳಿಯಬೇಕು. ಯಾವಾಗಲೂ ತೆಪ್ಪದ center of gravity ಬರೋಬ್ಬರಿ ಇರಬೇಕು. ತಪ್ಪಿದರೆ ತೆಪ್ಪ ಬುಡಮೇಲಾಗುತ್ತದೆ. ಆದರೂ ತೇಲುತ್ತಲೇ ಇರುತ್ತದೆ. ಮೇಲಿದ್ದವರು ಮಾತ್ರ ಜಲಸಮಾಧಿ ಹೊಂದುತ್ತಾರೆ.

ಸಂಸಾರವೆಂಬ ಸಾಗರವನ್ನು ದಾಟಲು ಪತ್ನಿಯೆಂಬ ತೆಪ್ಪವನ್ನು ಅವಲಂಬಿಸುವವರೂ ಕೂಡ ಇಂತಹ ತಪ್ಪುಗಳನ್ನು ಮಾಡುತ್ತಾರೆ. ತೆಪ್ಪದ ಮೇಲೆಯೇ ಅಂದರೆ ಪತ್ನಿಯ ಜಾಸ್ತಿ ಅವಲಂಬನೆ. ತೆಪ್ಪ ನಡೆಸುವ ನಾವಿಕ  ಅಂದರೆ ದೇವರನ್ನು ಕಡೆಗಣಿಸಿಬಿಡುತ್ತಾರೆ. ಪತ್ನಿಯೆಂಬ ತೆಪ್ಪ ನಿಮ್ಮದೇ ಆದರೂ ಸಂಸಾರ ಸಾಗರದಲ್ಲಿ ಅದನ್ನು ನಡೆಸುವ ನಾವಿಕ ದೇವರು.

ತೆಪ್ಪದ ಮೇಲೆ ಸರಿಯಾಗಿ ತೆಪ್ಪಗೆ ಕುಳಿತುಕೊಳ್ಳಿ. ಕಿವಿಗಳನ್ನು ಕೆಪ್ಪನಂತೆ ಮಾಡಿಕೊಳ್ಳಿ. ಏನೂ ಮಾಡದೆ ಸುಮ್ಮನೆ ಬೆಪ್ಪನ ತರಹ ಕುಳಿತುಕೊಳ್ಳಿ. ಇಲ್ಲವಾದರೆ ತೆಪ್ಪಅಂದರೆ ನಿಮ್ಮ ಪತ್ನಿ ಬುಡಮೇಲಾಗುತ್ತಾಳೆ. ತೆಪ್ಪಕ್ಕೆ ಉರ್ಫ್ ಅವಳಿಗೆ ಏನೂ ಆಗಲಿಕ್ಕಿಲ್ಲ. ತೆಪ್ಪದ ಮೇಲೆ ಕುಳಿತಿರುವ ನೀವು ಮಾತ್ರ ಮಟಾಷ್! ತೆಪ್ಪ ಮತ್ತೆ ತೇಲುತ್ತದೆ. ನಾವಿಕನಿಗೆ ಈಜು ಬರುವ ಕಾರಣ ಆತ ಮತ್ತೆ ತೆಪ್ಪ ವಾಪಸ್ ಹತ್ತುತ್ತಾನೆ. ತೆಪ್ಪದ ಮೇಲೆ ಪ್ರಯಾಣಿಸಬಹುದಾದ ಹೊಸ ಪ್ರಯಾಣಿಕನಿಗಾಗಿ  ಕಾಯುತ್ತಾನೆ. ಪತ್ನಿಯೆಂಬ ತೆಪ್ಪವೂ ಕಾಯುತ್ತದೆ. ಹೊಸ ಪತಿಗಾಗಿ. ತೆಪ್ಪ ಬುಡಮೇಲಾಗುವುದು ಅಂದರೆ ಸೋಡಾಚೀಟಿ ಡೈವೋರ್ಸ್ ಕೇಸ್. ತೆಪ್ಪದ ಮೇಲೆ ಹೊಸ ಪ್ರಯಾಣಿಕ ಬಂದ ಎಂದರೆ ಮೊದಲಿನ ಪತ್ನಿ ಮರುವಿವಾಹ ಮಾಡಿಕೊಂಡಳು ಎಂದು ಅರ್ಥ.

ಹೀಗಾಗಿ ಸಂಸಾರ ಸಾಗರವನ್ನು ದಾಟಲು ಪತ್ನಿಯೆಂಬ ತೆಪ್ಪವನ್ನು ಹತ್ತುವ ವಿಚಾರವಿರುವವರು ತೆಪ್ಪದ ಮೇಲೆ ಕೆಪ್ಪನಾಗಿ ತೆಪ್ಪಗೆ ಬೆಪ್ಪನ ಹಾಗೆ ಕುಳಿತುಕೊಳ್ಳಬೇಕು. ಹಾಗೆ ಮಾಡಿದರೆ ಸಂಸಾರ ಸಾಗರವನ್ನು ಯಶಸ್ವಿಯಾಗಿ ದಾಟುವ ಸಾಧ್ಯತೆಗಳು ಇವೆ. ಖಾತ್ರಿ ಇಲ್ಲ ಮತ್ತೆ.

ಅದಕ್ಕೇ ಅಲ್ಲವೇ ಹೇಳೋದು 'ಪತ್ನಿ ಮಾತಾಡುವಾಗ ಪತಿ ಸುಮ್ಮನಿರಬೇಕು. ಪತ್ನಿ ಸುಮ್ಮನಿದ್ದಾಗ ಪತಿ ಮಾತಾಡಬಾರದು.' ಕೆಪ್ಪನಾಗಿ ಬೆಪ್ಪನಂತೆ ಇರಬೇಕು. ಪತಿ ಜಾಸ್ತಿ ಬೆಪ್ಪನಾದಾಗ ಅಪ್ಪನಾಗುತ್ತಾನೆ. ಬೆಪ್ಪ ಅಪ್ಪ. ಅಮ್ಮನಿಗೆ ತಲೆಕೆಟ್ಟಾಗ ಗುಮ್ಮನಾಗುತ್ತಾಳೆ. ಅಮ್ಮ ಗುಮ್ಮ.

ಸಂಸಾರ ಸಾಗರವನ್ನು ದಾಟಲು ಪತ್ನಿಗಿಂತ ಉತ್ತಮವಾದ ತೆಪ್ಪವಿಲ್ಲವೇ ಎಂದು ಕೇಳಿದರೆ. ಇಲ್ಲ ಎಂದು ಹೇಳಬೇಕಾಗುತ್ತದೆ. ತೆಪ್ಪ ಇಲ್ಲ. ಆದರೆ ತೆಪ್ಪಕ್ಕಿಂತ ಉತ್ತಮವಾದ ಬೇರೆ ಸಾಧನ ಇದೆ. ಅದು ಅಧ್ಯಾತ್ಮ. ಇದು ರಾಮಕೃಷ್ಣ ಪರಮಹಂಸರು ಹೇಳಿದ್ದು.

ಒಮ್ಮೆ ರಾಮಕೃಷ್ಣರು ಶಿಷ್ಯರ ಜೊತೆ ಚಿಕ್ಕದೋಣಿಯಲ್ಲಿ ಪ್ರಯಾಣಿಸುತ್ತಿದ್ದರು. ರಭಸದ ಗಾಳಿಗೆ ದೋಣಿ ವಿಪರೀತವಾಗಿ ಹೊಯ್ದಾಡುತ್ತಿತ್ತು. ಪಕ್ಕದಲ್ಲೇ ಬೃಹದಾಕಾರದ ಹಡಗೊಂದು ಲಂಗರು ಹಾಕಿ ನಿಂತಿತ್ತು. ಅದನ್ನು ತೋರಿಸುತ್ತ ರಾಮಕೃಷ್ಣರು ಹೇಳಿದರು, 'ಆ ದೊಡ್ಡ ಹಡಗನ್ನು ನೋಡಿ. ಸಪ್ತಸಾಗರಗಳನ್ನೂ ಸಹ ಲೀಲಾಜಾಲವಾಗಿ ಯಾವುದೇ ಅಡೆತಡೆಗಳಿಲ್ಲದೆ ದಾಟಬಲ್ಲದು. ಗುರುಗಳು, ಪುಣ್ಯಪುರುಷರು, ದೇವರು, ಅಧ್ಯಾತ್ಮ  ಅಂದರೆ ಅಂತಹ ದೊಡ್ಡ ಹಡಗು ಇದ್ದಂತೆ. ಸಾಗರ ದಾಟಲು ಜನರು ಅಂತಹವುಗಳನ್ನು ಅವಲಂಬಿಸಬೇಕೇ ವಿನಃ ತಾತ್ಕಾಲಿಕವಾದ ಸಾಧನಗಳಾದ ಚಿಕ್ಕದೋಣಿಗಳನ್ನಲ್ಲ.' Gem of wisdom!

ತೆಪ್ಪ ಹತ್ತಿ ಸಾಗರ ದಾಟಲಿಕ್ಕೆ ಆಗಲಿಕ್ಕಿಲ್ಲ. ಆದರೆ ದೊಡ್ಡ ಹಡಗುಗಳು ದೂರದ ಸಮುದ್ರದಲ್ಲಿ ಲಂಗರು ಹಾಕಿರುವ ಕಾರಣ ಅವುಗಳ ಹತ್ತಿರ ಹೋಗಿ ಮುಟ್ಟಿಕೊಳ್ಳಲಿಕ್ಕಾದರೂ ತೆಪ್ಪ, ಚಿಕ್ಕದೋಣಿ ಮುಂತಾದ ತಾತ್ಕಾಲಿಕ ಸಾಧನಗಳ ಅವಶ್ಯಕತೆ ಇರುತ್ತದೆ. ಅವನ್ನು ಅಷ್ಟರಮಟ್ಟಿಗೆ ಉಪಯೋಗಿಸಿಕೊಂಡು, ತಕ್ಕ ಸಮಯದಲ್ಲಿ ಅವನ್ನು ತ್ಯಜಿಸಿ, ದೊಡ್ಡ ಹಡಗನ್ನು ಹತ್ತಿದವನು ಜಾಣ. ಅದು ಬಿಟ್ಟು ತೆಪ್ಪದಲ್ಲೇ ಸಾಗರ ದಾಟುತ್ತೇನೆ ಅಂತ ಹೊರಟವ ನಡುನೀರಿನಲ್ಲೇ ಮಟಾಷ್ ಆಗುವ ಸಾಧ್ಯತೆಗಳು ಹೆಚ್ಚು.

ತೆಪ್ಪ ಬಿಟ್ಟು ಹಡಗು ಹತ್ತಿ ಅಂದರೆ ಹೆಂಡತಿ ಮಕ್ಕಳನ್ನು ಎಲ್ಲ ಬಿಟ್ಟು ಸನ್ಯಾಸಿಯಾಗಿ ಗಡ್ಡ ಬಿಟ್ಟು ಗುಡ್ಡ ಹತ್ತಿ ಅಥವಾ ಹಡಗು ಹತ್ತಿ ಎಂದು ಅರ್ಥವೇ? ಆ ಅರ್ಥವೂ ಇದೆ. ಕೆಲವು ಸಂಪ್ರದಾಯಗಳಲ್ಲಿ ಕುಟುಂಬಸ್ಥರು ತಕ್ಕ ಸಮಯದಲ್ಲಿ ಕುಟುಂಬದ ಸದಸ್ಯರ ಅನುಮತಿ ಪಡೆದುಕೊಂಡು ಸನ್ಯಾಸಿಯಾಗಬಹುದು.  ಸಂಸಾರ ಸಾಗರವನ್ನು ದಾಟಲು ಅಧ್ಯಾತ್ಮವೆಂಬ ದೊಡ್ಡ ಹಡಗು ಅವಶ್ಯವಾದರೂ ಮೊದಲು ಉಪಯೋಗಿಸಿದ ತೆಪ್ಪ, ಚಿಕ್ಕದೋಣಿಗಳನ್ನು (ಕುಟುಂಬ) ಸಂಪೂರ್ಣವಾಗಿ ತ್ಯಜಿಸಬೇಕೆಂದೇನೂ ಇಲ್ಲ. ದೊಡ್ಡ ಹಡಗು ಎಲ್ಲವನ್ನೂ ಹೊತ್ತೊಯ್ಯಬಲ್ಲದು. ನಿಮ್ಮ ತೆಪ್ಪವೊಂದು ಅದಕ್ಕೆ ದೊಡ್ಡ ಮಾತಲ್ಲ. ನೀವು ಹಡಗು ಹತ್ತಿ. ನಿಮ್ಮ ತೆಪ್ಪವನ್ನೂ ತೆಪ್ಪಗೆ ಹಡಗು ಹತ್ತಿಸಿ. ಜೊತೆಯಲ್ಲಿ ಜೊತೆಜೊತೆಯಾಗಿ ಸಂಸಾರವೆಂಬ ಸಾಗರವನ್ನು ಅಧ್ಯಾತ್ಮವೆಂಬ ಹಡಗಿನಲ್ಲಿ ಯಶಸ್ವಿಯಾಗಿ ದಾಟಿ. ತೆಪ್ಪವಿಲ್ಲದವರು ಈಜಿ ಹಡಗನ್ನು ಮುಟ್ಟಿಕೊಳ್ಳಬಹುದು. ನಂತರ ಹತ್ತಬಹುದು. ಕೊಂಚ ಕಷ್ಟದ ಕೆಲಸ. ಈಜಿನಲ್ಲಿ ಪರಿಣಿತಿ ಬೇಕಾಗುತ್ತದೆ. ಸಾಕಷ್ಟು ಸಮಯ, ಶ್ರಮ, ಸಾಧನೆ ಬೇಡುತ್ತದೆ. ಹಾಗಾಗಿ ಹೆಚ್ಚಿನವರಿಗೆ ಪ್ರಾರಂಭದಲ್ಲಿ ತೆಪ್ಪವೇ ಒಳ್ಳೆಯದು. ತೆಪ್ಪದ ಸಹಾಯವಿಲ್ಲದೆ ಈಜಿ ಹಡಗನ್ನು ಮುಟ್ಟಿಕೊಳ್ಳುವುದು ಅಂದರೆ ಖಡಕ್ ಬ್ರಹ್ಮಚರ್ಯದ ಸಾಧನೆಯಿಂದ ಅಧ್ಯಾತ್ಮದತ್ತ ಸಾಗುವುದು ಎಂದರ್ಥ. ಆ ಮಾರ್ಗ ಎಲ್ಲರಿಗೂ ಹೇಳಿದ್ದಲ್ಲ. ಎಲ್ಲರಿಗೂ ಸಾಧ್ಯವಿಲ್ಲ.

ಹೊಸದಾಗಿ ತೆಪ್ಪ ಹತ್ತುವವರು ವಿಚಾರ ಮಾಡಿ ಹತ್ತಿ. ತೆಪ್ಪ ಗಮ್ಯಕ್ಕೊಂದು ಸಾಧನವೇ ವಿನಃ ಗಮ್ಯವೇ ಅಲ್ಲ.

ಪತಿಗೆ ಪತ್ನಿ ತೆಪ್ಪ. ಪತ್ನಿಗೆ ಪತಿ ತೆಪ್ಪ. ಮಕ್ಕಳಿಗೆ ಅಪ್ಪ ಅಮ್ಮ ತೆಪ್ಪ.

ತೆಪ್ಪ ಎಂದ ಕೂಡಲೇ ಬೆಪ್ಪನಾಗಿ, ಕೆಪ್ಪನಂತೆ ಮತ್ತು ತೆಪ್ಪಗೆ ಎನ್ನುವ ಶಬ್ದಗಳು ಕಿವಿಯಲ್ಲಿ ಮೊಳಗಬೇಕು. ಹಾಗಾದಾಗ ಮಾತ್ರ ತೆಪ್ಪದ ಮೇಲಿನ ಪಯಣ ಸುರಕ್ಷಿತವಾಗಿರುತ್ತದೆ.

2 comments:

sunaath said...

ತೆಪ್ಪದ ಮೇಲೆ ತಪ್ಪದಂತೆಯೇ
ಕೂಡುವ ಕಷ್ಟವದೇಕೆ?
ದಂಡೆಯಲ್ಲಿಯೇ ಮಂಡನ ಹಾಗೆ
ಕೂತರಾಗದೇ OK?

Your honest reply is requested.

Mahesh Hegade said...

ದಂಡೆಯ ಮೇಲೆ ಮಂಡನಂತೆಯೋ ಅಥವಾ ಭಂಡನಂತೆಯೋ ಜೀವನಪೂರ್ತಿ ಕೂತುಬಿಡುವ ಆಲೋಚನೆ ನಿಜಕ್ಕೂ tantalizing prospect. ಸಂಸಾರಸಾಗರದ ಆಳಗಲಗಳ ಬಗ್ಗೆ ಚಿಂತಿಸುತ್ತ, PhD ಮಾಡುತ್ತಾ ಕೂತುಬಿಡೋದು!

ಆದರೆ ವಿಧಿ ಬಿಡಬೇಕಲ್ಲ ಸ್ವಾಮೀ? ಕರ್ಮ ಬಿಡಬೇಕಲ್ಲ? ಗೀತೆಯಲ್ಲಿ ಕೃಷ್ಣ ಹೇಳಿದಂತೆ "ನೀನು ಏನನ್ನೂ ಮಾಡುವುದಿಲ್ಲ ಅಂತ ಕೂತರೂ ನಿನ್ನ ಪೂರ್ವದ ಕರ್ಮಗಳೇ ನಿನ್ನನ್ನು ವಿಧಿಯ ಪ್ರಕಾರ ನಡೆಯುವಂತೆ ಮಾಡುತ್ತವೆ!"

ಹಾಗಾಗಿ ದಂಡೆ ಮೇಲೆ ಮಂಡನ ಹಾಗೆ ಮಂಡೆ ಬಿಸಿ ಮಾಡಿಕೊಂಡು ಕೂತರೂ ವಿಧಿಯು ಕುಂಡೆ ಮೇಲೆ ಒದ್ದು ಸಮುದ್ರಕ್ಕೆ ತಳ್ಳುತ್ತದೆಯೋ ಏನೋ?

ಒಮ್ಮೆ ಸಾಗರದಲ್ಲಿ ಇಳಿದ ಮೇಲೆ ತೆಪ್ಪವೋ, ದೋಣಿಯೋ, ಹಡಗೋ ಸಿಕ್ಕೀತು. ಇಲ್ಲವಾದರೆ ಈಜು. ಅಥವಾ ಜೀಸಸ್ ಕ್ರೈಸ್ಟ್ ಹಾಗೆ ನೀರ ಮೇಲೆ ನಡೆದುಬಿಡುವ ಪವಾಡ. ಅಥವಾ ಸಮುದ್ರವೇ ವಿಭಜಿಸಿ ಮೊಸೆಸ್ಸನಿಗೆ ದಾರಿ ಮಾಡಿಕೊಟ್ಟಂತಹ ಅನುಗ್ರಹ.

ಒಟ್ಟಿನಲ್ಲಿ ಕರ್ಮಾನುಸಾರ ಸಂಸಾರದ ಸಾಗರ ದಾಟುವ ಒದ್ದಾಟ. ದಾಟಿದರೆ ಒಳ್ಳೇದು. ಮುಳುಗಿದರೆ ಮುಂದಿನ ಜನ್ಮ ಇದ್ದೇ ಇದೆ. ಮತ್ತೆ ಕರ್ಮಾನುಸಾರ.

ಇಹ ಸಂಸಾರೇ ಬಲು ದುಸ್ತಾರೆ
ಕೃಪಯಾ ಪಾರೇ ಪಾಹಿ ಮುರಾರೇ

ಎಂದು ಭಜಗೋವಿಂದಮ್ ನಲ್ಲಿ ಶಂಕರರು ಹೇಳಿಲ್ಲವೇ?

ಕೊನೆಗೆ ಮುರಾರಿಯ ಪಾದವೇ ಗತಿ.

ಪುಣ್ಯಕ್ಕೆ ಮುರಾರ್ಜಿ ದೇಸಾಯಿ ಇಲ್ಲ. ಇಲ್ಲವಾದರೆ ಮುರಾರಿ ಎಂದು ಕೇಳಿದಾಕ್ಷಣ ಎಲ್ಲಕ್ಕೂ ಸ್ವಮೂತ್ರ ಚಿಕೆತ್ಸೆಯೇ ಮದ್ದು ಅನ್ನುತ್ತಿದ್ದರೇನೋ! :)