ಆ ದಿನ ಶುಕ್ರವಾರ, ಜೂನ್ ೭, ೧೯೮೧. ಅಂದು ಯಹೂದಿಗಳಿಗೆ ಹಬ್ಬದ ದಿನ. ಗತಕಾಲದಲ್ಲಿ ಆ ದಿನವೇ ದೇವರು ಯಹೂದಿಗಳಿಗೆ ಸೈನೈ ಪರ್ವತದ ಮೇಲೆ ಅವರ ಧರ್ಮಗ್ರಂಥವಾದ 'ತೋರಾ'ವನ್ನು ದಯಪಾಲಿಸಿದ ಎಂದು ಯಹೂದಿಗಳು ನಂಬುತ್ತಾರೆ. ಆ ದಿನವನ್ನು ಹಬ್ಬದಂತೆ ಆಚರಿಸುತ್ತಾರೆ. ಹಲವಾರು ಇಸ್ರೇಲಿಗಳು ಅಂದು ತಮ್ಮ ದೇವಾಲಯಗಳಲ್ಲಿ ನೆರೆದಿದ್ದರು. ಮತ್ತೆ ಅನೇಕರು ಇಸ್ರೇಲಿನ ಬಂಗಾರದಂತಹ ಮರಳುಳ್ಳ ಸಮುದ್ರತಟದ ಬೀಚುಗಳಲ್ಲಿ ಬೋರಲು ಬಿದ್ದು ಮಜಾ ಮಾಡುತ್ತಿದ್ದರು.
ಮಧ್ಯಾಹ್ನ ಸುಮಾರು ೪ ಘಂಟೆ ಹೊತ್ತಿಗೆ ನೆತ್ತಿ ಮೇಲೆ ಒಮ್ಮೆಲೇ ಹಾರಿಹೋದವು ಇಸ್ರೇಲಿ ವಾಯುಪಡೆಯ ಅಮೇರಿಕಿ ನಿರ್ಮಿತ ಅತ್ಯಾಧುನಿಕ ಎಂಟು F-16 ಯುದ್ಧವಿಮಾನಗಳು. ಇಸ್ರೇಲಿನ ಎಲಿಯಾಟ್ ಕೊಲ್ಲಿಯನ್ನು ದಾಟಿ ಸೌದಿ ಅರೇಬಿಯಾದತ್ತ ವಿಮಾನಗಳು ಹಾರಿದ್ದನ್ನು ಬೀಚುಗಳ ಮೇಲಿದ್ದವರು ಗಮನಿಸದೇ ಇರಲು ಸಾಧ್ಯವಿರಲಿಲ್ಲ.
ಆ F-16 ವಿಮಾನಗಳು ಇಸ್ರೇಲಿನ ಸೈನೈ ಪ್ರದೇಶದಲ್ಲಿರುವ ಎಟ್ಜಿಯಾನ್ ವಾಯುನೆಲೆಯಿಂದ ಹಾರಿದ್ದವು. ಅವುಗಳ ಹಿಂದೆಯೇ ಅವುಗಳ ಅಂಗರಕ್ಷರೋ ಎಂಬಂತೆ ಭಯಂಕರ sonic boom ಮಾಡುತ್ತ ಮುಗಿಲಿಗೆ ಲಗ್ಗೆ ಹಾಕಿದವು ಹೆಚ್ಚಿನ ಎಂಟು F-15 ಫೈಟರ್ ವಿಮಾನಗಳು. ಒಟ್ಟಿನಲ್ಲಿ ಹದಿನಾರು ಡೆಡ್ಲಿ ಯುದ್ಧವಿಮಾನಗಳ ಮೆರವಣಿಗೆ ಎಲ್ಲೋ ಹೊರಟಿತ್ತು. ಎಲ್ಲೇನು ಮಟಾಷ್ ಆಗಲಿತ್ತೋ ಆವತ್ತು!?
ಜೋರ್ಡಾನ್ ಇಸ್ರೇಲಿನ ಪಕ್ಕದ ದೇಶ. ಅಂದು ಅದೇನು ಕಾಕತಾಳಿಯವೋ ಗೊತ್ತಿಲ್ಲ. ಜೋರ್ಡಾನ್ ದೇಶದ ರಾಜ ಕಿಂಗ್ ಹುಸೇನ್ ಅದೇ ಹೊತ್ತಿಗೆ ತಮ್ಮ ಐಷಾರಾಮಿ ರಾಯಲ್ ಹಡಗಿನಲ್ಲಿ ಸಮುದ್ರವಿಹಾರ ಮಾಡಿಕೊಂಡಿದ್ದರು. ಹೇಳಿಕೇಳಿ ಮಹಾರಾಜರು. ಅವರ ಬಳಿ ಹತ್ತಾರು ರಾಯಲ್ ಹಡಗುಗಳು, ದೋಣಿಗಳು ಇದ್ದವು. ಎಲ್ಲ ವ್ಯವಸ್ಥೆ ಹೊಂದಿರುವಂತಹವು. ದೇಶವಿದೇಶದ ಸಖಿಯರನ್ನು ಒಟ್ಟಾಕಿಕೊಂಡು ಕೆಂಪು ಸಮುದ್ರದ ಎಲಿಯಾಟ್ ಕೊಲ್ಲಿಯಲ್ಲಿ ಮೀನು ಹಿಡಿಯುವದೆಂದರೆ ಮಹಾರಾಜರಿಗೆ ಖುಷಿಯೋ ಖುಷಿ. ಅಂತಹ ಖುಷಿಯಲ್ಲಿದ್ದರೂ ಅವರೂ ಸಹ ತಲೆ ಮೇಲೆ ಹತ್ತಾರು ಇಸ್ರೇಲಿ ಯುದ್ಧವಿಮಾನಗಳು ಹಾರಿಹೋಗಿದ್ದನ್ನು ಗಮನಿಸದಿರಲಿಲ್ಲ.
ಬೇರೆ ಅರಬ್ ದೇಶಗಳಿಗೆ ಹೋಲಿಸಿದರೆ ಇಸ್ರೇಲ್ ಮತ್ತು ಜೋರ್ಡನ್ ನಡುವೆ ಸಂಬಂಧ ತಕ್ಕ ಮಟ್ಟಿಗೆ ಚೆನ್ನಾಗಿಯೇ ಇತ್ತು. ಆದರೂ ಮೊದಲು ಬೇಕಾದಷ್ಟು ಸಲ ಯುದ್ಧವಾಗಿತ್ತು ಕೂಡ. ಯಾವುದಕ್ಕೂ ಸೇಫ್ಟಿಗೆ ಇರಲಿ ಎಂದು ವಿಚಾರ ಮಾಡಿದ ಕಿಂಗ್ ಹುಸೇನ್ ಮಾಡಿದ ಮೊದಲ ಕೆಲಸವೆಂದರೆ ಸೀದಾ ತಮ್ಮ ಐಷಾರಾಮಿ ಹಡಗಿನ ರೇಡಿಯೋ ರೂಮಿಗೆ ಹೋಗಿದ್ದು. ಅಲ್ಲಿ ವಯರ್ಲೆಸ್ ಸೆಟ್ ಎತ್ತಿಕೊಂಡವರೇ ತಮ್ಮ ಸೇನೆಗೆ ಸುದ್ದಿ ಮುಟ್ಟಿಸಿದರು...'ಇಸ್ರೇಲಿ ಯುದ್ಧವಿಮಾನಗಳು ಆಕಾಶಕ್ಕೇರಿವೆ. ಯಾವುದಕ್ಕೂ ಎಚ್ಚರ ವಹಿಸಿ. ಈ ಮಾಹಿತಿಯನ್ನು ಸುತ್ತಮುತ್ತಲಿನ ನಮ್ಮ ಇತರೇ ಅರಬ್ ಮಿತ್ರ ದೇಶಗಳೊಂದಿಗೆ ಹಂಚಿಕೊಳ್ಳಿ!'
ಯಾಕೋ ಏನೋ ಗೊತ್ತಿಲ್ಲ. ಈ ಮಾಹಿತಿಯನ್ನು ಸ್ವೀಕರಿಸಿದ ಜೋರ್ಡನ್ ಸೇನೆಯ ಕಂಟ್ರೋಲ್ ರೂಮ್ ಸಿಬ್ಬಂದಿ ಇದನ್ನು ಯಾರೊಂದಿಗೂ ಹಂಚಿಕೊಳ್ಳಲೇ ಇಲ್ಲ. ದಿನನಿತ್ಯ ಬರುವಂತಹ ಅನೇಕ ರೂಟೀನ್ ಮಾಹಿತಿಗಳಲ್ಲಿ ಇದೂ ಒಂದಿರಬಹುದು ಎಂದುಕೊಂಡರೋ ಏನೋ. ಒಟ್ಟಿನಲ್ಲಿ ಇಸ್ರೇಲಿ ಯುದ್ಧವಿಮಾನಗಳು ತರಾತುರಿಯಲ್ಲಿ ಕೆಂಪು ಸಮುದ್ರದ ಮೇಲೆ ಹಾರಿಹೋಗಿದ್ದು ಸುದ್ದಿಯಾಗಲೇ ಇಲ್ಲ. ಮಾಹಿತಿಯನ್ನು ಅಕ್ಕಪಕ್ಕದ ದೇಶಗಳೊಡನೆ ಹಂಚಿಕೊಳ್ಳಲೇ ಇಲ್ಲ.
ಅದು ಒಳ್ಳೆಯದೇ ಆಯಿತು. ಅಂದು ಅದೃಷ್ಟಲಕ್ಷ್ಮಿ ಇಸ್ರೇಲಿಗಳ ಪಕ್ಷದಲ್ಲಿ ಇದ್ದಳು ಅಂತ ಕಾಣುತ್ತದೆ. ಏಕೆಂದರೆ ಆ ಹದಿನಾರು ಇಸ್ರೇಲಿ ಯುದ್ಧವಿಮಾನಗಳು ಸುಖಾಸುಮ್ಮನೆ ಗಗನಕ್ಕೆ ಚಿಮ್ಮಿರಲಿಲ್ಲ. ಆವತ್ತಿನ ಕಾರ್ಯಾಚರಣೆ ಬಹು ಮುಖ್ಯವಾದ ಕಾರ್ಯಾಚರಣೆಯಾಗಿತ್ತು. ಅದರ ಕೋಡ್ ನೇಮ್ ಆಪರೇಷನ್ ಒಪೇರಾ. ಉದ್ದೇಶ ಸ್ಪಷ್ಟವಾಗಿತ್ತು. ಇರಾಕಿನಲ್ಲಿ ಸದ್ದಾಮ ಹುಸೇನ್ ನಿರ್ಮಿಸುತ್ತಿದ್ದ ಅಣುಸ್ಥಾವರವನ್ನು ನೆಲಸಮ ಮಾಡುವುದು ಮತ್ತು ಯಾವುದೇ ಹಾನಿಯಿಲ್ಲದಂತೆ ವಾಪಸ್ ಇಸ್ರೇಲ್ ತಲುಪಿಕೊಳ್ಳುವುದು.
ಇಂತಹದೊಂದು ರಹಸ್ಯ ಮತ್ತು ಖತರ್ನಾಕ್ ವೈಮಾನಿಕ ಕಾರ್ಯಾಚರಣೆಗೆ ತಯಾರಿ ಕೆಲವು ವರ್ಷಗಳ ಹಿಂದೆಯೇ ಆರಂಭವಾಗಿತ್ತು. ೧೯೭೬ ರಲ್ಲಿ ಇರಾಕ್ ದೇಶ ಫ್ರಾನ್ಸ್ ದೇಶದೊಂದಿಗೆ ಅಣುಸ್ಥಾವರದ ನಿರ್ಮಾಣಕ್ಕಾಗಿ ಒಪ್ಪಂದವೊಂದಕ್ಕೆ ಸಹಿ ಹಾಕಿತ್ತು. ಫ್ರೆಂಚರು ಆ ಅಣುಸ್ಥಾವರಕ್ಕೆ ಒಸಿರಾಕ್ ಎಂದು ಕರೆದರೆ ಇರಾಕಿಗಳು ತಾಮೂಜ್ ಎಂದು ನಾಮಕರಣ ಮಾಡಿಕೊಂಡಿದ್ದರು. ಇರಾಕಿನ ಅಪಾರ ಪೆಟ್ರೋಲ್ ಸಂಪತ್ತಿನ ಮೇಲೆ ಕಣ್ಣಿಟ್ಟಿದ್ದ ಆಸೆಬುರುಕ ಫ್ರೆಂಚರು ಇರಾಕಿಗಳಿಗೆ ಆಟಂ ಬಾಂಬ್ ಮಾಡಲು ಬೇಕಾಗುವಷ್ಟು ಯುರೇನಿಯಂ ಕೂಡ ಕೊಡುವದಾಗಿ ಹೇಳಿದ್ದರು.
ಈ ವಿಷಯವನ್ನು ಇರಾಕ್ ಮತ್ತು ಫ್ರಾನ್ಸ್ ಅದೆಷ್ಟೇ ಗುಪ್ತವಾಗಿ ಇಡಲು ಯತ್ನಿಸಿದರೂ ಇಸ್ರೇಲಿನ ಖಡಕ್ ಬೇಹುಗಾರಿಕೆ ಸಂಸ್ಥೆ ಮೊಸ್ಸಾದ್ ಇದರ ಮಾಹಿತಿಯನ್ನು ಬಹುಬೇಗನೆ ಸಂಪಾದಿಸಿ ಸರ್ಕಾರಕ್ಕೆ ಮುಟ್ಟಿಸಿತ್ತು. ಇಸ್ರೇಲ್ ರಾಜತಾಂತ್ರಿಕ ಮಾರ್ಗಗಳ ಮೂಲಕ ಇರಾಕಿಗೆ ಅಣುಸ್ಥಾವರ ಸಿಗುವುದನ್ನು ತಪ್ಪಿಸಲು ನೋಡಿತು. ತಲೆಕೆಟ್ಟ ಸರ್ವಾಧಿಕಾರಿ ಸದ್ದಾಮ್ ಹುಸೇನ್ ಅಣುಶಕ್ತಿಯನ್ನು ಗಳಿಸುತ್ತಾನೆ ಎಂದರೆ ಅದು ಇಸ್ರೇಲಿನ ಅಸ್ತಿತ್ವದ ಬುಡಕ್ಕೇ ಬಾಂಬಿಟ್ಟಂತೆ. ಅದನ್ನು ತಡೆಗಟ್ಟಿ ಎಂದು ಅಂತರರಾಷ್ಟ್ರೀಯ ಸಮುದಾಯದ ಮುಂದೆ ಜಾಗಟೆ ಬಾರಿಸಿತು ಇಸ್ರೇಲ್. ರೊಕ್ಕ ಮಾಡುವ ತರಾತುರಿಯಲ್ಲಿದ್ದ ಫ್ರೆಂಚರು ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಅವರು ಸದ್ದಾಮ್ ಹುಸೇನನ್ನು ನುಣ್ಣಗೆ ಬೋಳಿಸುವಲ್ಲೇ ಮಗ್ನರು. ಅವನಿಗೋ ರೊಕ್ಕವೆಂಬುವುದು ಕರಡಿ ಮೈಮೇಲಿನ ಕೂದಲಿದ್ದಂತೆ. ಫ್ರೆಂಚರು ಬೋಳಿಸಿದಷ್ಟೂ ಬೆಳೆಯುತ್ತಿತ್ತು. ಒಟ್ಟಿನಲ್ಲಿ ಇಸ್ರೇಲಿಗಳ ಆಕ್ಷೇಪಣೆ ಅರಣ್ಯರೋದನವಾಯಿತೇ ವಿನಃ ಮತ್ತೇನೂ ಉಪಯೋಗವಾಗಲಿಲ್ಲ.
ಆಗ ಮೊಸ್ಸಾದ್ ಕಾರ್ಯಾಚರಣೆಗೆ ಇಳಿಯಿತು. ನುರಿತ ಗೂಢಚಾರರನ್ನು ಉಪಯೋಗಿಸಿಕೊಂಡು ಫ್ರೆಂಚ್ ದೇಶದಿಂದ ಇರಾಕಿಗೆ ಹೋಗಬೇಕಾಗಿದ್ದ ಅಣುಸ್ಥಾವರದ ಉಪಕರಣಗಳನ್ನು ರಹಸ್ಯವಾಗಿ ಹಾಳುಮಾಡಿತು. ಸದ್ದಾಮ ಹುಸೇನ್ ಹೆಚ್ಚಿನ ರೊಕ್ಕ ಕೊಟ್ಟು ಅವುಗಳ ದುರಸ್ತಿ ಮಾಡಿಸಿಕೊಂಡ. ಹೆಚ್ಚಿನ ರಕ್ಷಣಾವ್ಯವಸ್ಥೆ ಮಾಡಿಸಿಕೊಂಡು ಇರಾಕಿಗೆ ತರಿಸಿಕೊಂಡ. ಸಣ್ಣ ಸಣ್ಣ ಕಾರ್ಯಾಚರಣೆಗಳ ಮೂಲಕ ಸದ್ದಾಮ ಹುಸೇನನ ಯೋಜನೆಗೆ ಭಂಗ ತರುವುದು ಎಂದರೆ ಆನೆಯನ್ನು ಸೂಜಿಯಿಂದ ಚುಚ್ಚಿ ಚುಚ್ಚಿ ಕೊಲ್ಲಲು ಪ್ರಯತ್ನಿಸಿದಂತೆ ಎಂದು ಇಸ್ರೇಲಿಗೆ ಮನವರಿಕೆ ಆಯಿತು. ಆನೆಯನ್ನು ನೆಲಕ್ಕೆ ಉರುಳಿಸಬೇಕು ಅಂದರೆ ನಡುನೆತ್ತಿಗೆ ಬರೋಬ್ಬರಿ ಗುರಿಯಿಟ್ಟು ದೊಡ್ಡ ಕಾಡತೂಸನ್ನೇ ಹೊಡೆಯಬೇಕು. ಬಾಕಿ ಎಲ್ಲ ವ್ಯರ್ಥ ಪ್ರಯತ್ನ ಎಂದು ಮನದಟ್ಟಾಯಿತು ಇಸ್ರೇಲಿಗೆ.
೧೯೭೭ ರಲ್ಲಿ ಮೇನಾಕೇಮ್ ಬೆಗಿನ್ ಇಸ್ರೇಲಿನ ಪ್ರಧಾನಿ. ಭಯಂಕರ ಖಡಕ್ ಮನುಷ್ಯ. ರಕ್ಷಣಾ ಸಚಿವ ಯೇಜರ್ ವೈಸಮನ್ ಮತ್ತು ಸೇನಾಪಡೆಗಳ ಮುಖ್ಯಸ್ಥ ರಾಫುಲ್ ಏಟಾನ್ ಕೂಡ ಅಷ್ಟೇ ಗಟ್ಟಿಗರು. ಆದರೆ ಫ್ರಾನ್ಸ್ ದೇಶಕ್ಕೆ ಏನೂ ಮಾಡುವಂತಿಲ್ಲ. ಒಂದು ತರಹದ ಮಿತ್ರ ದೇಶವದು. ಏನೇ ಮಾಡಿದರೂ ಇರಾಕಿಗೇ ಮಾಡಬೇಕು. ಇರಾಕಿಗೆ ಮಾಡುವುದೇನೂ ಬಾಕಿ ಉಳಿದಿಲ್ಲ. ದೊಡ್ಡ ಮಟ್ಟದ ಕಾರ್ಯಾಚರಣೆಯೇ ತಕ್ಕ ಮದ್ದು ಎಂದುಕೊಂಡರು. ಯೋಜನೆ ಹಾಕಲು ಕುಳಿತರು.
ಈ ಕಾರ್ಯಾಚರಣೆಗೆ ಸ್ಕೆಚ್ ಹಾಕುವ ಪೂರ್ಣ ಜವಾಬ್ದಾರಿಯನ್ನು ಇಸ್ರೇಲಿ ವಾಯುಸೇನೆಯ ಡೇವಿಡ್ ಐವರಿ ಅವರಿಗೆ ವಹಿಸಲಾಯಿತು. ಅವರಿಗೆ ಸಹಾಯಕರಾಗಿ ಕರ್ನಲ್ ಅವಿಯಮ್ ಸೆಲ್ಲಾ ನಿಯೋಜಿತರಾದರು. ಬೇಕಾದ ಮಾಹಿತಿಯನ್ನು ಒದಗಿಸಲು ಮೊಸ್ಸಾದ್ ಸದಾ ಸಿದ್ಧವಿತ್ತು.
೧೯೮೧ ರ ಸೆಪ್ಟೆಂಬರ್ ಹೊತ್ತಿಗೆ ಅಣುಸ್ಥಾವವರ ಪೂರ್ಣಗೊಳ್ಳುತ್ತದೆ ಅನ್ನುವ ಪಕ್ಕಾ ಮಾಹಿತಿ ಬಂದಿದ್ದು ದೊಡ್ಡ ಆತಂಕಕ್ಕೆ ಎಡೆಮಾಡಿಕೊಟ್ಟಿತು. ಅದಕ್ಕಿಂತ ಮೊದಲೇ ಸದ್ದಾಮನ ಹೆಮ್ಮೆಯ ಅಣುಸ್ಥಾವರಕ್ಕೆ ಒಂದು ಶಾಶ್ವತ ಗತಿ ಕಾಣಿಸಲೇಬೇಕು ಎನ್ನುವ ಧೃಡ ನಿರ್ಧಾರಕ್ಕೆ ಬಂದರು ಪ್ರಧಾನಿ ಬೆಗಿನ್.
ತುಂಬಾ ಅನಿರೀಕ್ಷಿತವೆಂಬಂತೆ ಈ ಯೋಜನೆಗೆ ಪರೋಕ್ಷ ಸಹಾಯ ಒಂದು ವಿಚಿತ್ರ ದೇಶದಿಂದ ಬಂತು. ಅದು ಇರಾಕಿನ ಪಕ್ಕದ ದೇಶ ಇರಾನಿನಿಂದ. ೧೯೭೯ ರಲ್ಲಿ ಇರಾನಿನಲ್ಲಿ ಧಾರ್ಮಿಕ ಕ್ರಾಂತಿಯಾಗಿತ್ತು. ಅಲ್ಲಿನ ಮಹಾರಾಜ ರೇಝಾ ಪೆಹ್ಲವಿಯನ್ನು ಖೊಮೇನಿ ಎಂಬ ಶಿಯಾ ಧರ್ಮಗುರುವಿನ ಹಿಂಬಾಲಕರು ಓಡಿಸಿದ್ದರು. ರೇಝಾ ಪೆಹ್ಲವಿ ತುಂಬಾ ದುಷ್ಟನಾಗಿದ್ದ. ಜನರಿಗೂ ಸಾಕಾಗಿತ್ತು. ಒಟ್ಟಿನಲ್ಲಿ ಇರಾನಿನಲ್ಲಿ ಮಹಾರಾಜ ರೇಝಾ ಪೆಹ್ಲವಿಯ ಅಮೇರಿಕನ್ ಸ್ನೇಹಿ ಸರ್ಕಾರ ಹೋಗಿ ಅಮೇರಿಕಾ, ಇಸ್ರೇಲ್ ಮುಂತಾದ ಪಶ್ಚಿಮದ ದೇಶಗಳನ್ನು ನಖಶಿಖಾಂತ ದ್ವೇಷಿಸುವ ಖೊಮೇನಿ ಸರ್ಕಾರ ಇರಾನ್ ದೇಶದಲ್ಲಿ ಸ್ಥಾಪಿತವಾಗಿತ್ತು.
ಮಹಾರಾಜ ರೇಝಾ ಪೆಹ್ಲವಿಯ ಸರ್ಕಾರವಿದ್ದಾಗ ಅವನು ಎಲ್ಲಾ ರಕ್ಷಣಾ ಸಾಮಗ್ರಿಗಳನ್ನು ಅಮೇರಿಕಾದಿಂದ ಕೊಳ್ಳುತ್ತಿದ್ದ. ಹಾರ್ಡ್ ಕ್ಯಾಶ್ ಕೊಡುತ್ತಿದ್ದ ಕಾರಣ ಅವನ ಬೇಡಿಕೆಗಳನ್ನು ತ್ವರಿತ ಆದ್ಯತೆ ಮೇಲೆ ಪೂರೈಸುತ್ತಿತ್ತು ಅಮೇರಿಕಾ. ಅವನು ದೇಶ ಬಿಟ್ಟು ಹೋಗುವ ಮೊದಲಷ್ಟೇ ದೊಡ್ಡ ಪ್ರಮಾಣದ F - 16 ಯುದ್ಧವಿಮಾನಗಳಿಗೆ ಆರ್ಡರ್ ಕೊಟ್ಟಿದ್ದ. ಇಸ್ರೇಲ್ ಕೂಡ ನಮಗೂ ಬೇಗ F - 16 ಕೊಡಿ ಎಂದು ಕೇಳಿತ್ತು. ಇಸ್ರೇಲ್ ಎಷ್ಟೆಂದರೂ ಉದ್ದರಿ ಗಿರಾಕಿ. ಒಮ್ಮೊಮ್ಮೆ ಬಿಟ್ಟಿಯಾಗೂ ಕೇಳುತ್ತಿತ್ತು. ಇರಾನ್ ಹಾರ್ಡ್ ಕ್ಯಾಶ್ ಕೊಡುತ್ತಿದ್ದ ಗ್ರಾಹಕ. ಹಾಗಾಗಿ ಇಸ್ರೇಲಿಗೆ ಅತ್ಯಾಧುನಿಕ F - 16 ಯುದ್ಧ ವಿಮಾನಗಳ ಪೂರೈಕೆ ತಡವಾಗಿತ್ತು. ಇರಾನಿನಲ್ಲಿ ಸರ್ಕಾರ ಬದಲಾಗಿ ಯಾವಾಗ ಅಮೇರಿಕಾವನ್ನು ದ್ವೇಷಿಸುವ ಸರ್ಕಾರ ಬಂತೋ ಅಂದೇ ಅಮೇರಿಕಾ ಇರಾನಿಗೆ ರಕ್ಷಣಾ ಸಾಮಗ್ರಿಗಳ ಪೂರೈಕೆ ನಿಲ್ಲಿಸಿತು. ಇರಾನಿಗೆ ಹೋಗಬೇಕಾಗಿದ್ದ F - 16 ವಿಮಾನಗಳನ್ನು ಇಸ್ರೇಲಿಗೆ ಕೊಡುವದಾಗಿ ಹೇಳಿತು.
ಇರಾಕ್ ವಿರುದ್ಧ ಇಸ್ರೇಲ್ ಮಾಡಲು ಕುಳಿತಿದ್ದ ರಹಸ್ಯ ಕಾರ್ಯಾಚರಣೆಗೆ F - 16 ಯುದ್ಧವಿಮಾನಗಳು ತುಂಬಾ ಮುಖ್ಯವಾಗಿದ್ದವು. ಹಿಂದೆಂದೂ ಯಾರೂ ಮಾಡಿರದಂತಹ ವೈಮಾನಿಕ ಕಾರ್ಯಾಚರಣೆ. ಹಾಗಾಗಿ ಅತ್ಯಾಧುನಿಕ ತಂತ್ರಜ್ಞಾನವಿದ್ದ ವಿಮಾನ ಜರೂರ್ ಬೇಕಾಗಿತ್ತು.
ಎಂಟು F - 16 ಯುದ್ಧವಿಮಾನಗಳು ಮುಖ್ಯ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವುದೆಂದು ಮತ್ತು ಎಂಟು F - 15 ಫೈಟರ್ ವಿಮಾನಗಳು ಅವುಗಳಿಗೆ ಬೆಂಬಲ ನೀಡುವದೆಂದು ಕಾರ್ಯಾಚರಣೆಯ ದೊಡ್ಡಮಟ್ಟದ ರೂಪುರೇಷೆ ತಯಾರಾಯಿತು.
ವಿಮಾನದ ಪೈಲಟ್ಟುಗಳು ಮತ್ತು ಅವರ ಸಂಗಡಿಗರು ಅಭ್ಯಾಸ ಆರಂಭಿಸಿದರು. ಇಸ್ರೇಲಿನ ನೆಗೆವ್ ಮರಭೂಮಿಯಲ್ಲಿ ಇರಾಕಿನ ಅಣುಸ್ಥಾವರವನ್ನು ಹೋಲುವ ಒಂದು ಮಾದರಿಯನ್ನು ನಿರ್ಮಿಸಲಾಯಿತು. ಅದರ ಮೇಲೆ ಇಸ್ರೇಲಿನ ಸೇನೆ ಕಾರ್ಯಾಚರಣೆಯ ತಯಾರಿಯನ್ನು ಶುರು ಮಾಡಿತು.
ಸೇನಾ ಮುಖ್ಯಸ್ಥ ರಾಫುಲ್ ಏಟಾನ್ ಖುದ್ದಾಗಿ ಸಮರಾಭ್ಯಾಸದಲ್ಲಿ ಭಾಗಿಯಾದರು. ಪೈಲಟ್ ಪಕ್ಕ ಕುಳಿತು, ಅಭ್ಯಾಸದ ಬಾಂಬಿಂಗ್ (mock bombing raid) ದಾಳಿಯಲ್ಲಿ ಪಾಲ್ಗೊಂಡು, ಎಲ್ಲವೂ ಸರಿಯಾಗಿದೆ ಎಂದು ಅವರಿಗೆ ಖುದ್ದಾಗಿ ಮನದಟ್ಟಾಗಬೇಕಿತ್ತು. ಅಲ್ಲಿಯವರೆಗೆ ಅವರಿಗೆ ಸಮಾಧಾನವಿಲ್ಲ. ಮತ್ತು ದೇಶದ ಪ್ರಧಾನಿಯೆದುರು ಹೋಗಿ ೧೦೦% ಖಾತ್ರಿ ಕೊಡುವ ಬಗ್ಗೆ ವಿಶ್ವಾಸವಿರಲಿಲ್ಲ.
ತಾವು ಖುದ್ದಾಗಿ ಪಾಲ್ಗೊಂಡಿದ್ದ ಸಮರಾಭ್ಯಾಸದ ದಾಳಿಯ ನಂತರ ಸೇನಾ ಮುಖ್ಯಸ್ಥ ಏಟಾನ್ ಮನೆಯೆತ್ತ ನಡೆದರು. ಪಕ್ಕದಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಅವಿರಾಮ್ ಸೆಲ್ಲಾ ಹಿಂಬಾಲಿಸಿದರು. ಬಾಸ್ ಏನು ಹೇಳುತ್ತಾರೋ ಎಂಬ ಬಗ್ಗೆ ಸೆಲ್ಲಾ ಅವರಿಗೆ ಕುತೂಹಲ ಮತ್ತು ಆತಂಕ. ರಾಫುಲ್ ಏಟಾನ್ ಒಪ್ಪಿದರೆ ಮಾತ್ರ ಯೋಜನೆ ಮುಂದುವರೆಯುತ್ತದೆ. ಇಲ್ಲವಾದರೆ ಮತ್ತೆ ಶುರುವಿಂದ ಯೋಜನೆ ಮಾಡಲು ಕೂಡಬೇಕು. ಸಮಯ ಕಮ್ಮಿಯಿತ್ತು. ಒತ್ತಡ ತುಂಬಾ ಇತ್ತು.
ರಾಫುಲ್ ಏಟಾನ್ ಅಂದರೆ ಅವರೊಂದು ಬಗೆಯ ನಿಗೂಢ ರಹಸ್ಯ...Enigma. ಸದಾ ಮೌನಿ. ಎಲ್ಲವನ್ನೂ ಬಾಯಿಬಿಟ್ಟು ಹೇಳುವವರಲ್ಲ. ತಲೆ ಮಾತ್ರ ಹನ್ನೆರೆಡೂ ಘಂಟೆ ಓಡುತ್ತಲೇ ಇರುತ್ತಿತ್ತು. ರಷಿಯನ್ ನಿರಾಶ್ರಿತರಾಗಿ ಇಸ್ರೇಲಿಗೆ ಬಂದಿದ್ದರು ಅವರ ಪೂರ್ವಜರು. ಸೇನೆ ಸೇರುವ ಮೊದಲು ಏಟಾನ್ ಕೃಷಿಕರಾಗಿದ್ದರು. ಒಳ್ಳೆಯ ಬಡಗಿ ಕೂಡ.
ಸೇನೆ ಸೇರಿದ ಏಟಾನ್ ಇಸ್ರೇಲ್ ಕಂಡ ಮಹಾ ಸೇನಾನಿ ಏರಿಯಲ್ ಶರೋನ್ ಕೆಳಗೆ ಪಳಗಿದರು. ಅವರ ನೆರಳಿನಂತೆ ಕೆಲಸ ಮಾಡಿದರು. ೧೯೬೦, ೧೯೭೦ ರ ದಶಕಗಳ ಪ್ರಮುಖ ಯುದ್ಧಗಳಲ್ಲಿ ಭಾಗವಹಿಸಿದ್ದರು. ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ್ದರು. ಇಸ್ರೇಲಿನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ದೊಡ್ಡ ಮಟ್ಟದ ಕಾಣಿಕೆ ಸಲ್ಲಿಸಿದ್ದರು. ೧೯೭೮ ರಲ್ಲಿ ಇಸ್ರೇಲಿ ಸೇನಾಪಡೆಗಳ ಮುಖ್ಯಸ್ಥರಾಗಿ ನೇಮಕವಾಗಿದ್ದರು.
ಇಂತಹ ರಾಫುಲ್ ಏಟಾನ್ ದಾರಿಯುದ್ದಕ್ಕೂ ಒಂದೇ ಒಂದು ಮಾತಾಡಲಿಲ್ಲ. ಪಕ್ಕದಲ್ಲಿ ಕುಳಿತ ಅವಿರಾಮ್ ಸೆಲ್ಲಾಗೆ ಇನ್ನಿಲ್ಲದ ಚಡಪಡಿಕೆ. ಅರ್ಧ ಘಂಟೆಯ ಪ್ರಯಾಣದ ಬಳಿಕ ಏಟಾನ್ ಕ್ಲುಪ್ತವಾಗಿ ಹೇಳಿದ್ದು ಒಂದೇ ಮಾತು... 'ಚಿಂತೆ ಬೇಡ. ಸರ್ಕಾರ ನಿಮ್ಮ ಯೋಜನೆಯನ್ನು ಅನುಮೋದಿಸುತ್ತದೆ.' ಈ ಮಾತನ್ನು ಕೇಳಿದ ಸೆಲ್ಲಾ ಸಮಾಧಾನದ ನಿಟ್ಟುಸಿರನ್ನು ಬಿಟ್ಟರು. ಮನದಲ್ಲಿ ಸಾರ್ಥಕ ಭಾವನೆ. ತಮ್ಮ ಸೇನಾನಾಯಕನ ಬಗೆಗೊಂದು ದೊಡ್ಡ ಮಟ್ಟದ ಗೌರವ.
ಸೇನೆಯ ಮಹಾದಂಡನಾಯಕರು ಖುದ್ದಾಗಿ ಎಲ್ಲ ಪರಿಶೀಲನೆ ಮಾಡಿ ಓಕೆ ಕೊಟ್ಟರೂ ಇತರ ಅನೇಕರಿಗೆ ಈ ಖತರ್ನಾಕ್ ಕಾರ್ಯಾಚರಣೆಯ ಯಶಸ್ಸಿನ ಬಗ್ಗೆ ಸಂಪೂರ್ಣ ವಿಶ್ವಾಸವಿರಲಿಲ್ಲ. ಅದರಲ್ಲೂ ನಾಯಕ ಸಮೂಹದಲ್ಲಿ ಅತಿ ಪ್ರಮುಖರಾಗಿದ್ದ ಸೇನಾ ಬೇಹುಗಾರಿಕೆ ಮುಖ್ಯಸ್ಥ ಯೇಷುವಾ ಸಾಗಿ, ಅಂದಿನ ಮೊಸ್ಸಾದ್ ಮುಖ್ಯಸ್ಥ ಇಜ್ಜಾಕ್ ಹೋಫೀ, ಸಚಿವ ಎಝೆರ್ ವೆಯಿಸ್ಮನ್, ಉಪಪ್ರಧಾನಿ ಯಿಗೇಲ್ ಯಾಡಿನ್ ಯೋಜನೆಯನ್ನು ಅನುಮೋದಿಸಲಿಲ್ಲ. ಕಾರ್ಯಾಚರಣೆ ವಿಫಲವಾದರೆ ಇಸ್ರೇಲಿನ ಬುಡಕ್ಕೇ ಬರುತ್ತದೆ. ದೊಡ್ಡಮಟ್ಟದ ಅವಮಾನ ಮುಜುಗರವಾಗುತ್ತದೆ. ಇಂತಹ ಅಪಾಯಕಾರಿ ಕಾರ್ಯಾಚರಣೆ ಬೇಡ ಎಂದರು. ಉಪಪ್ರಧಾನಿ ಯಾಡಿನ್ ಅಂತೂ ರಾಜೀನಾಮೆ ಬಿಸಾಡಿ ಎದ್ದು ಹೊರಟಿದ್ದರು. ಮುತ್ಸದ್ದಿ ಪ್ರಧಾನಿ ಬೆಗಿನ್ ಅವರನ್ನು ತಡೆದರು. ಇತರರಿಗೆ ಮನವರಿಕೆ ಮಾಡಿಕೊಡಲು ಕುಳಿತರು. ತಮ್ಮ ಸಹವರ್ತಿಗೆಗಳಿಗೆ ಮನವರಿಕೆ ಮಾಡಿಕೊಟ್ಟು, ಕಾರ್ಯಾಚರಣೆಯ ಯೋಜನೆಗೆ ಅವರ ಒಪ್ಪಿಗೆಯನ್ನು ತ್ವರಿತವಾಗಿ ಪಡೆಯಬೇಕಾಗಿದ್ದುದು ಅವರ ಅಂದಿನ ಬಹುಮುಖ್ಯ ಆದ್ಯತೆಯಾಗಿತ್ತು.
ಅಂತೂ ಇಂತೂ ಎಲ್ಲಾ ಪ್ರಮುಖರ ಒಪ್ಪಿಗೆ ಸಿಕ್ಕಿತು. ಮೇ ೮, ೧೯೮೧ ಕ್ಕೆ ಮುಹೂರ್ತ ನಿಗದಿಯಾಯಿತು. ಎಲ್ಲವೂ ಸಂಪೂರ್ಣವಾಗಿ ತಯಾರಾಗಿತ್ತು. ಎಲ್ಲಿಯವರೆಗೆ ಅಂದರೆ ಪೈಲಟ್ಟುಗಳು ವಿಮಾನಗಳನ್ನೇರಿ ಕುಳಿತಿದ್ದರು. ವಿಮಾನಗಳು ಇನ್ನೇನು ಟೇಕ್ ಆಫ್ ಆಗಬೇಕು ಅನ್ನುವಷ್ಟರಲ್ಲಿ ಮತ್ತೊಂದು ವಿಘ್ನ. ಪ್ರತಿಪಕ್ಷದ ನಾಯಕ ಶಿಮೋನ್ ಪೆರೇಸ್ 'ಪ್ರೇಮ ಪತ್ರ' ಕಳಿಸಿದ್ದರು. 'ಈ ಅಪಾಯಕಾರಿ ಕಾರ್ಯಾಚರಣೆ ಬೇಡ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲಿಗೆ ದೊಡ್ಡ ಮುಜುಗರವಾಗುತ್ತದೆ. ಇನ್ನೂ ತಡವಾಗಿಲ್ಲ. ಕಾರ್ಯಾಚರಣೆಯನ್ನು ರದ್ದು ಮಾಡಿ,' ಎಂಬುದು ಅವರ ಪ್ರೇಮ ಪತ್ರದ ಸಾರಾಂಶ.
ಇದು ಪ್ರಧಾನಿ ಬೆಗಿನ್ ಅವರಿಗೆ ದೊಡ್ಡ ಕಿರಿಕಿರಿಯಾಯಿತು. ಇದು ಅತ್ಯಂತ ರಹಸ್ಯವಾದ ಕಾರ್ಯಾಚರಣೆಯಾಗಿತ್ತು. ಅಧಿಕಾರದಲ್ಲಿದ್ದ ಪಕ್ಷದ ಕೆಲವೇ ಕೆಲವು ಜನರಿಗೆ, ಅದೂ ಅವಶ್ಯವಿದ್ದರೆ ಮಾತ್ರ, ಬೇಕಾದಷ್ಟೇ ಮಾಹಿತಿಯನ್ನು ಕೊಡಲಾಗಿತ್ತು. ಹೀಗಿದ್ದಾಗ ಪ್ರತಿಪಕ್ಷದ ನಾಯಕ ಶಿಮೋನ್ ಪೆರೇಸ್ ಅವರಿಗೂ ಮಾಹಿತಿ ದೊರಕಿದೆ ಅಂದರೆ ಏನರ್ಥ? ಎಲ್ಲಿ ಮಾಹಿತಿ ಸೋರಿಕೆಯಾಗಿದೆ? ಇದರ ಪರಿಣಾಮಗಳೇನು? ಎಂದು ಪ್ರಧಾನಿ ಬೆಗಿನ್ ತಲೆಕೆಡಿಸಿಕೊಂಡರು.
ರಾಜಕೀಯದ ರಾಡಿಯನ್ನು ತುರ್ತಾಗಿ ಸಂಬಾಳಿಸಬೇಕಿತ್ತು. ಕಾರ್ಯಾಚರಣೆಯನ್ನು ಸ್ವಲ್ಪ ಮಟ್ಟಿಗಾದರೂ ಮುಂದಕ್ಕೆ ಹಾಕಲೇಬೇಕಾದ ಅನಿವಾರ್ಯತೆ ಅವರಿಗೆ. ಸೇನೆಯಲ್ಲಿ ದೊಡ್ಡ ಮಟ್ಟದ ನಿರಾಶೆ. ಏನೂ ಮಾಡಲಿಕ್ಕೆ ಆಗುವುದಿಲ್ಲ. ಒಮ್ಮೊಮ್ಮೆ ಹೀಗಾಗಿಬಿಡುತ್ತದೆ.
ಪ್ರಧಾನಿ ಬೆಗಿನ್ ಪೂರ್ತಿಯಾಗಿ ಹಿಮ್ಮೆಟ್ಟಲಿಲ್ಲ. ಒಂದು ತಿಂಗಳು ಮುಂದಕ್ಕೆ ಹಾಕಿದರು. ಜೂನ್ ೭ ಕ್ಕೆ ಹೊಸ ಮುಹೂರ್ತ ನಿಗದಿ ಮಾಡಿದರು.
ಅಣುಸ್ಥಾವರದ ಮೇಲೆ ದಾಳಿ ಮಾಡಲಿದ್ದ ಎಂಟು F - 16 ವಿಮಾನಗಳ ಮುಂಭಾಗದಲ್ಲಿ ಸ್ಥಾಪಿತರಾಗಿ ನಾಯಕತ್ವ ವಹಿಸಿಕೊಂಡಿದ್ದವರು ಪೈಲಟ್ ಝೀವ್ ರಾಝ್. ಬೆಂಗಾವಲಿನ ಮತ್ತೊಂದು ಎಂಟು F-15 ವಿಮಾನಗಳ ಗುಂಪಿನ ನಾಯಕರಾಗಿದ್ದವರು ಸ್ಕ್ವಾಡ್ನರ್ನ್ ಕಮ್ಯಾಂಡರ್ ಆಮಿರ್ ನಾಚುಮಿ. ಅಮೋಸ್ ಯಾಡ್ಲಿನ್ ಮತ್ತಿತರ ಪೈಲಟ್ಟುಗಳಲ್ಲಿ ಮುಖ್ಯರು. ಅವರು ಮುಂದೊಂದು ದಿನ ಸೇನಾ ಬೇಹುಗಾರಿಕೆ ಸಂಸ್ಥೆಯ ಮುಖ್ಯಸ್ಥರಾದರು.
ಪೈಲಟ್ ಇಲಾನ್ ರಾಮೋನ್ ಎಲ್ಲರಿಗಿಂತ ಚಿಕ್ಕವರು. ಅನನುಭವಿ. ಆದರೆ ತುಂಬಾ ಚೆನ್ನಾಗಿ ಓದಿಕೊಂಡಿದ್ದರು. ಎಲ್ಲ ಪುಸ್ತಕಗಳನ್ನು ಬರೋಬ್ಬರಿ ತಿರುವಿಹಾಕಿ, ತಪ್ಪಿಲ್ಲದಂತೆ ಲೆಕ್ಕಾಚಾರ ಹಾಕಿ, ಒಂದು ಪ್ರಮುಖ ನಿರ್ಧಾರಕ್ಕೆ ಬರಲು ಸಹಾಯಕರಾಗಿದ್ದರು. ಅದೇನೆಂದರೆ... ಇಸ್ರೇಲಿ ಯುದ್ಧವಿಮಾನಗಳು ಯಾವುದೇ ತೊಂದರೆಯಿಲ್ಲದೆ, ಹೊರಗಿನಿಂದ ಇಂಧನದ ಮರುಭರ್ತಿಯ ಅವಶ್ಯಕತೆ ಇಲ್ಲದೆ ೯೬೦ ಕಿಲೋಮೀಟರುಗಳ ಪ್ರಯಾಣವನ್ನು ಮಾಡಬಲ್ಲವು. ಈ ಪಕ್ಕಾ ಲೆಕ್ಕಾಚಾರ ಯೋಜನೆ ಹಾಕಲು ಕುಳಿತವರಿಗೆ ತುಂಬಾ ಸಹಾಯಕಾರಿಯಾಗಿತ್ತು. ಅನನುಭವಿಯಾದರೂ ತಮ್ಮ ಬುದ್ಧಿಮತ್ತೆಯಿಂದ ಇಲಾನ್ ರಾಮೋನ್ ಕಾರ್ಯಾಚರಣೆಯ ತಂಡದಲ್ಲಿ ತಮ್ಮ ಜಾಗ ಗಿಟ್ಟಿಸಿಕೊಂಡಿದ್ದರು.
ಹಿಂದೆಂದೂ ಮಾಡದ ಕಾರ್ಯಾಚರಣೆಯಾಗಿದ್ದ ಕಾರಣ ಯೋಜನಾ ಮುಖ್ಯಸ್ಥ ಡೇವಿಡ್ ಇವ್ರಿ ಸಾಮಾನ್ಯವಾಗಿ ರೂಡಿಯಲ್ಲಿ ಇಲ್ಲದ (unusual) ತೀರ್ಮಾನಗಳನ್ನು ತೆಗೆದುಕೊಂಡಿದ್ದರು. ವಿಮಾನದ ಎಂಜಿನುಗಳು ಚಾಲನೆಯಲ್ಲಿ ಇರುವಾಗಲೇ ಇಂಧನ ತುಂಬುವುದು. ಇಂಧನದ ಟ್ಯಾಂಕುಗಳು ಖಾಲಿಯಾದಂತೆ ಅವುಗಳನ್ನು ಅಲ್ಲಲ್ಲಿಯೇ ಬಿಸಾಕಿಬಿಡಿ ಎಂಬುದು ಇನ್ನೊಂದು ನಿರ್ಧಾರ. ಕಾರ್ಯಾಚರಣೆಯ ಬೇರೆ ಬೇರೆ ಅಪಾಯಗಳನ್ನು ಎದುರಿಸಲು ಈ ಅಪಾಯಗಳನ್ನು ತೆಗೆದುಕೊಳ್ಳಲೇಬೇಕಾಗಿತ್ತು. ಅದಕ್ಕೆ ತಕ್ಕ ಅಭ್ಯಾಸಗಳನ್ನು ತಂಡ ಪದೇ ಪದೇ ಮಾಡಿ ಎಷ್ಟೋ ಪ್ರಮಾಣದ ಅಪಾಯದ ಸಾಧ್ಯತೆಗಳನ್ನು ಸಾಕಷ್ಟು ಕಮ್ಮಿ ಮಾಡಿತ್ತು. There is a saying in risk management. You manage certain risks so that you can take those risks which you can't manage. ಆ ಮಾದರಿಯಲ್ಲಿ.
ಅದೇ ಸಮಯದಲ್ಲಿ ಇರಾನ್ ಮತ್ತು ಇರಾಕ್ ನಡುವೆ ಭೀಕರ ಯುದ್ಧ ನಡೆದಿತ್ತು. ಇರಾಕ್ ತನ್ನ ಅಣುಸ್ಥಾವರವರದ ರಕ್ಷಣೆಗಾಗಿ ಮಿಸೈಲ್ ಬ್ಯಾಟರಿ ಮತ್ತು ಫೈಟರ್ ವಿಮಾನಗಳನ್ನು ನಿಯೋಜಿಸಿರುವ ಸಾಧ್ಯತೆಗಳು ಬಹಳವಿದ್ದವು. ಹೀಗಾಗಿ ಬೆಂಗಾವಲಿಗೆ ಹೋಗಲಿದ್ದ ಇಸ್ರೇಲಿ F-15 ಫೈಟರ್ ವಿಮಾನಗಳ ಮುಖಾಮುಖಿ ಇರಾಕಿನ ಬಳಿಯಿದ್ದ ಸೋವಿಯೆಟ್ ಪೂರೈಸಿದ್ದ ಮಿಗ್ ವಿಮಾನಗಳ ಜೊತೆ ಆಗುವುದು ಖಾತ್ರಿಯಿತ್ತು. ಅದಕ್ಕೂ ತಯಾರಿ ಮಾಡಿಕೊಳ್ಳಬೇಕಾಗಿತ್ತು. ಇರಾಕಿ ಮಿಗ್ ವಿಮಾನಗಳು ಗಗನಕ್ಕೇರಿ ಇಸ್ರೇಲಿ ಯುದ್ಧವಿಮಾನಗಳ ಜೊತೆ 'ಶ್ವಾನ ಯುದ್ಧ' (Dog Fight) ಗೆ ನಿಂತುಬಿಟ್ಟವು ಅಂದರೆ ಅಷ್ಟೇ ಮತ್ತೆ. ಗೋವಿಂದಾ ಗೋವಿಂದ! ಒಂದು ರಹಸ್ಯ ಕಾರ್ಯಾಚರಣೆ ಹಾಳಾಗಿಹೋಗಿ ಅದು ಮೂರನೇ ವಿಶ್ವಯುದ್ಧಕ್ಕೆ ಕಾರಣವಾದರೂ ಅಚ್ಚರಿಯಿರಲಿಲ್ಲ. ಹಾಗಾಗದಂತೆ ನೋಡಿಕೊಳ್ಳಬೇಕಿತ್ತು.
ಎಂತಹ ದೊಡ್ಡ ಮಟ್ಟದ ಅಪಾಯಕಾರಿ ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತಿದ್ದೇವೆ ಎಂದು ಎಲ್ಲರಿಗೂ ಗೊತ್ತಿತ್ತು. ಒಂದು ವೇಳೆ ಇರಾಕಿಗಳು ಎಚ್ಚೆತ್ತುಕೊಂಡು ಮರುದಾಳಿ ಮಾಡಿದರೆ ಬಚಾವಾಗುವ ಸಾಧ್ಯತೆಗಳು ಬಹಳ ಕಮ್ಮಿಯಿದ್ದವು. ವಿಮಾನಗಳ ನಡುವಿನ 'ಶ್ವಾನ ಯುದ್ಧದಲ್ಲಿ' ಬಡಿಸಿಕೊಂಡು, ಹೊತ್ತಿ ಉರಿಯುತ್ತಿರುವ ವಿಮಾನ ಬಿಟ್ಟು, ಪ್ಯಾರಾಚೂಟ್ ಮೂಲಕ ಹಾರಿಕೊಂಡರೂ ಇರಾಕಿನಲ್ಲಿ ಬೀಳುತ್ತಿದ್ದರು ಇಸ್ರೇಲಿಗಳು. ಒಮ್ಮೆ ಇರಾಕಿಗಳ ಕೈಯಲ್ಲಿ ಸಿಕ್ಕರೆ ಮುಂದೆ ಭೀಕರ. ಕೊಡಬಾರದ ಹಿಂಸೆ ಕೊಟ್ಟು ಕೊಲ್ಲುತ್ತಿದ್ದರು. ಊಹಿಸಿಕೊಳ್ಳಲೂ ಸಾಧ್ಯವಿಲ್ಲದಂತಹ ಕ್ರೂರಿಗಳು ಸದ್ದಾಮನ ಬಂಟರು. ಇದನ್ನೆಲ್ಲಾ ಎಲ್ಲರಿಗೂ ಎಳೆಎಳೆಯಾಗಿ ಬಿಡಿಸಿ ಹೇಳಲಾಗಿತ್ತು. ಎಲ್ಲವನ್ನೂ ಮೀರಿದ್ದು ಇಸ್ರೇಲಿಗಳ ದೇಶಪ್ರೇಮ. ಮಾಡು ಇಲ್ಲವೇ ಮಡಿ ಎನ್ನುವಂತಹ ಅನಿವಾರ್ಯತೆ. ಹಾಗಾಗಿ ಕಾರ್ಯಾಚರಣೆಗೆ ಅರ್ಪಿಸಿಕೊಂಡಿದ್ದರು.
ಜೂನ್ ೭, ೧೯೮೧. ಕಾರ್ಯಾಚರಣೆಯ ದಿನ ಬಂದೇಬಿಟ್ಟಿತು. ಇಸ್ರೇಲಿನಿಂದ ಹಾರಿದ ಹದಿನಾರು ವಿಮಾನಗಳು ಕೆಂಪು ಸಮುದ್ರದ ಅಕಾಬಾ ಕೊಲ್ಲಿಯ ಮೇಲಿಂದ ಉತ್ತರ ಸೌದಿ ಅರೇಬಿಯಾದ ಮರಭೂಮಿಯತ್ತ ಹಾರಿದವು. ಯೂಫ್ರೆಟೀಸ್ ನದಿಯನ್ನು ದಾಟಿ ಇರಾಕಿನ ಗಡಿಯನ್ನು ಪ್ರವೇಶಿಸಿದವು.
ಇಸ್ರೇಲಿಗಳು ಹಾಕಿಕೊಂಡಿದ್ದ ಅಸಾಂಪ್ರದಾಯಿಕ ವಾಯುಮಾರ್ಗದಲ್ಲಿ (flight path) ಒಂದು ಖಚಿತ ಹೆಗ್ಗುರುತು (landmark) ಇತ್ತು. ಅದೊಂದು ದೊಡ್ಡ ಸರೋವರ ಮತ್ತು ಸರೋವರದ ಮಧ್ಯದಲ್ಲಿರುವ ಒಂದು ನಡುಗಡ್ಡೆ. F-16 ವಿಮಾನಗಳನ್ನು ಮುನ್ನೆಡಿಸುತ್ತಿದ್ದ ನಾಯಕ ಝೀವ್ ರಾಝ್ ಆ ಹೆಗ್ಗುರಿತಿಗಾಗಿ ಹುಡುಕಿಯೇ ಹುಡುಕಿದರು. ಸರೋವರ ಕಂಡರೂ ಅದರೊಳಗೆ ಇದ್ದ ನಡುಗಡ್ಡೆ ಮಾತ್ರ ಕಾಣಲಿಲ್ಲ. ಒಂದು ಕ್ಷಣ ಗಾಬರಿಗೊಂಡರು ಅವರು. ದಾರಿ ತಪ್ಪಿ ಎಲ್ಲೋ ಬಂದುಬಿಟ್ಟಿದ್ದೆವೋ ಏನೋ ಎನ್ನುವ ಆತಂಕ ಕಾಡಿತು. ಬೇಗನೇ ಸಮಸ್ಯೆ ಪರಿಹಾರವಾಯಿತು. ಆ ದಿನಗಳಲ್ಲಿ ತುಂಬಾ ಮಳೆಯಾಗಿತ್ತು. ಸರೋವರ ಬಹಳ ತುಂಬಿತ್ತು. ನಡುಗಡ್ಡೆ ಸ್ವಲ್ಪ ಮುಳುಗಿತ್ತು. ಹಾಗಾಗಿ ಮೇಲ್ನೋಟಕ್ಕೆ ಕಂಡಿರಲಿಲ್ಲ. ಸೂಕ್ಷ್ಮವಾಗಿ ಗಮನಿಸಿದಾಗ ಕಂಡಿತು. ಅಬ್ಬಾ! ಎಂದು ನಿಟ್ಟುಸಿರಿಟ್ಟ ನಾಯಕ ಝೀವ್ ರಾಝ್ ಆ ಕ್ಷಣಕ್ಕೆ, ತಾತ್ಕಾಲಿಕವಾದರೂ, ನಿರುಮ್ಮಳರಾದರು. Such moments of solace were absolute luxuries even if temporary!
ಅಂತೂ ಕೊನೆಗೆ ಇರಾಕಿನ ಅಣುಸ್ಥಾವರ ಅವರ ಕಣ್ಣಳತೆಯಲ್ಲಿ ಬಂದಿತು. ಸದ್ದಾಮ್ ಹುಸೇನನ ಹೆಮ್ಮೆಯ ಪ್ರತೀಕದಂತೆ ಎದ್ದು ನಿಂತಿತ್ತು. ಸುತ್ತಲೂ ಎತ್ತರವಾದ ಮತ್ತು ಸಾಕಷ್ಟು ಧೃಡವಾದ ರಕ್ಷಣಾಗೋಡೆಗಳು ಇದ್ದವು.
ಅಲ್ಲಿಯ ತನಕ ಗೌಪ್ಯತೆಯನ್ನು ಕಾಯ್ದುಕೊಳ್ಳಲು ವಿಮಾನಗಳ ಮಧ್ಯೆ ಸಂಪೂರ್ಣ ರೇಡಿಯೋ ನಿಶ್ಶಬ್ದವಿತ್ತು. Complete radio silence. ಈಗ ಅನಿವಾರ್ಯವಾಗಿ ಪೈಲಟ್ ಝೀವ್ ರಾಝ್ ತಮ್ಮ ರೇಡಿಯೋ ಎತ್ತಿಕೊಂಡರು. ತಮ್ಮ ಸಹವರ್ತಿಗಳಿಗೆ ಕ್ಲುಪ್ತ ಸಂದೇಶವನ್ನು ರವಾನಿಸಿದರು. ಅಣುಸ್ಥಾವರವನ್ನು ಸಮೀಪಿಸಿದ್ದೇವೆ. ಎಲ್ಲರೂ ಎತ್ತರವನ್ನು ಹೆಚ್ಚಿಸಿಕೊಳ್ಳಿ. ಶತ್ರುದೇಶಗಳ ರೇಡಾರುಗಳಿಂದ ತಪ್ಪಿಸಿಕೊಳ್ಳಲೆಂದು ಅತಿ ಕಮ್ಮಿ ಎತ್ತರದಲ್ಲಿ ಹಾರಿ ಬಂದಿದ್ದರು. ಈಗ ವಿದ್ಯುತ್ಕಂಬ ಮುಂತಾದವುಗಳಿಂದ ಬಚಾವಾಗಲು ಎತ್ತರ ಹೆಚ್ಚು ಮಾಡಿಕೊಳ್ಳಬೇಕಾಗಿತ್ತು.
ಒಂದು ವಿಷಯ ಮಾತ್ರ ಎಲ್ಲರನ್ನೂ ಅಚ್ಚರಿಗೀಡುಮಾಡಿತು. ತುಂಬಾ ಸೋಜಿಗವೆನ್ನಿಸುವಂತೆ ಅಲ್ಲೆಲ್ಲೂ ವೈಮಾನಿಕ ರಕ್ಷಣಾ ವ್ಯವಸ್ಥೆ ಇರಲೇ ಇಲ್ಲ! ಇಸ್ರೇಲಿನ ಹದಿನಾರು ವಿಮಾನಗಳು ಅಣುಸ್ಥಾವರವನ್ನು ಸಮೀಪಿಸಿದರೂ ಒಂದೇ ಒಂದು ಇರಾಕಿ ಮಿಗ್ ವಿಮಾನ ಗಗನಕ್ಕೇರಿರಲಿಲ್ಲ. ಮಿಸೈಲ್ ಬ್ಯಾಟರಿ ಕಾಣಲಿಲ್ಲ. ಸಣ್ಣ ಪ್ರಮಾಣದ anti artillery ತೋಪುಗಳು ಹಾರಿಸಲ್ಪಟ್ಟರೂ ಅವು ಯಾವುದೂ ಗುರಿ ಮುಟ್ಟಲಿಲ್ಲ. ಇಸ್ರೇಲಿ ಯುದ್ಧವಿಮಾನಗಳಿಗೆ ಯಾವುದೇ ತರಹದ ಹಾನಿಯಾಗಲಿಲ್ಲ.
ಎತ್ತೆರಕ್ಕೇರಿದ್ದ ಯುದ್ಧ ವಿಮಾನಗಳು ಒಮ್ಮೆಲೇ ಡೈವ್ ಹೊಡೆದವು. ಒಂದಾದಮೇಲೊಂದರಂತೆ ಬರೋಬ್ಬರಿ ೩೫ ಡಿಗ್ರಿ ಕೋನದಲ್ಲಿ ಬಾಂಬಿಂಗ್ ಮಾಡಿದವು. ನೋಡನೋಡುತ್ತಿದ್ದಂತೆ ಸದ್ದಾಮ ಹುಸೇನನ ಅಣುಸ್ಥಾವರದ ಬಕ್ಕ ತಲೆಯಂತಹ ಗುಮ್ಮಟ ಢಮಾರ್ ಎಂದುಬಿಟ್ಟಿತು. ಬುರುಡೆ ಬಿಚ್ಚಿಕೊಂಡ ಅಬ್ಬರಕ್ಕೆ ಎಲ್ಲೆಡೆ ಧೂಳು ಅಂದರೆ ಅಷ್ಟು ಧೂಳು!
ಉಳಿದ ಬಂಕರ್ ಬಸ್ಟರ್ ಮಾದರಿಯ ಬಾಂಬುಗಳು ತಳತನಕ ಇಳಿದು ನಂತರ ಸ್ಪೋಟವಾಗಿ ಎಲ್ಲವನ್ನೂ ಗುಡಿಸಿ ಗುಂಡಾಂತರ ಮಾಡಿಬಿಟ್ಟವು. ಇಸ್ರೇಲಿ ಪೈಲಟ್ ಒಬ್ಬ ಪೊರಪಾಟಿನಲ್ಲಿ ಪಕ್ಕದ ಕಟ್ಟಡದ ಮೇಲೂ ಬಾಬಿಂಗ್ ಮಾಡಿಬಿಟ್ಟ. ಅದೂ ಕೂಡ ಟೋಟಲ್ ಉಡೀಸ್!
ಇಷ್ಟೆಲ್ಲಾ ಆಗಲು ತೆಗೆದುಕೊಂಡಿದ್ದು ಕೇವಲ ಎಂಬತ್ತು ಸೆಕೆಂಡುಗಳು ಅಂದರೆ ನೀವು ನಂಬಲಿಕ್ಕಿಲ್ಲ. ಆದರೆ ಅದೇ ವಾಸ್ತವ. Simply unbelievable!
ಶತ್ರು ದೇಶದಿಂದ ಹೊರಬೀಳುವ ಮೊದಲು ಎಲ್ಲ ಇಸ್ರೇಲಿ ಪೈಲೆಟ್ಟುಗಳು ಸುರಕ್ಷಿತರಾಗಿದ್ದಾರೆ ಎಂದು ಖಾತ್ರಿ ಮಾಡಿಕೊಳ್ಳಬೇಕಾಗಿತ್ತು. ಅದು ಯೋಜನೆಯ ಒಂದು ಪ್ರಮುಖ ಹೆಜ್ಜೆ. ದಾಳಿ ಮಾಡಿದ F-16 ವಿಮಾನತಂಡದ ಕ್ಯಾಪ್ಟನ್ ಮತ್ತು ಬೆಂಗಾವಲಿಗಿದ್ದ F-15 ವಿಮಾನತಂಡದ ಕ್ಯಾಪ್ಟನ್ ರೇಡಿಯೋ ಜಾಲಕ್ಕೆ ದಾಖಲಾದರು. ಎಲ್ಲರಿಗೂ ತಾವು ಸುರಕ್ಷಿತರಾಗಿದ್ದೇವೆ ಎಂದು ಖಾತ್ರಿ ಪಡಿಸಲು ಕೋರಿದರು. ಒಬ್ಬರಾದ ಮೇಲೆ ಒಬ್ಬರಂತೆ ಹದಿನೈದು ಜನ ಪೈಲೆಟ್ಟುಗಳು 'ಚಾರ್ಲಿ' ಎನ್ನುವ ಕೋಡೆಡ್ ಸಂದೇಶ ರವಾನಿಸುವ ಮೂಲಕ ತಮ್ಮ ತಮ್ಮ ಇರುವಿಕೆಯನ್ನು ಖಾತ್ರಿ ಪಡಿಸಿದರು.
ಆದರೆ ಹದಿನಾರನೇ ಸಂದೇಶ ಬರಲೇ ಇಲ್ಲ. ಯಾರು ಕಳೆದುಹೋಗಿದ್ದಾರೆ ಎಂದು ಎಲ್ಲರೂ ತಲೆಕೆಡಿಸಿಕೊಂಡರು.ಆತಂಕಗೊಂಡರು.
ತಾಳೆ ಹಾಕಿದರೆ ತಂಡದ ಅತ್ಯಂತ ಕಿರಿಯ ಸದಸ್ಯನಾಗಿದ್ದ ರಾಮೋನ್ ಗಾಯಬ್! ಅವನಿಗೆ ಏನಾಯಿತು!? ಎಂದು ಎಲ್ಲರೂ ಗಾಬರಿಗೊಂಡರು. ನಂತರ ಬಿದ್ದು ಬಿದ್ದು ನಕ್ಕರು. ರಾಮೋನ್ ಅನನುಭವಿ. ಹಾಗಾಗಿ ಎಲ್ಲರಿಗಿಂತ ಕೊನೆಯಲ್ಲಿದ್ದ. ಒಂದು ಕ್ಷಣ ಅವನಿಗೆ ಅದೇನು ಮಂಕು ಕವಿಯಿತೋ ಗೊತ್ತಿಲ್ಲ. ಇರಾಕಿ ಮಿಗ್ ವಿಮಾನವೊಂದು ದಾಳಿ ಮಾಡಲು ಬೆನ್ನೆಟ್ಟಿಬರುತ್ತಿದೆ ಎಂದು ಭ್ರಮಿಸಿಬಿಟ್ಟ. ಒಮ್ಮೊಮ್ಮೆ ಯುದ್ಧದ adrenaline rush ಹೇಗಿರುತ್ತದೆ ಅಂದರೆ ಇಲ್ಲದ ಕಡೆಯೂ ಶತ್ರುಗಳು ಕಾಣುತ್ತಾರೆ. ಇಲ್ಲದ ಮಿಗ್ ವಿಮಾನವನ್ನು ಕಲ್ಪಿಸಿಕೊಂಡು, ಅದು ತನ್ನನ್ನು ಮತ್ತು ಇತರ ಇಸ್ರೇಲಿಗಳನ್ನು ಹೊಡೆದುರುಳಿಸುವ ಮುನ್ನ ಅದನ್ನು ನಾಶಪಡಿಸುವುದು ಹೇಗೆ ಎಂದು ಸ್ಕೆಚ್ ಹಾಕುತ್ತಿದ್ದ ರಾಮೋನ್ 'ಚಾರ್ಲಿ' ಸಂದೇಶ ಕಳಿಸದೇ ಇತರರನ್ನು ಚಿಂತೆಗೆ ದೂಡಿದ್ದ. ಪುಣ್ಯಕ್ಕೆ ಬಹುಬೇಗನೆ ತಪ್ಪಿನ ಅರಿವಾಗಿ ಕಟ್ಟಕಡೆಯ 'ಚಾರ್ಲಿ' ಸಂದೇಶ ರವಾನಿಸಿದ್ದ. ನಾಯಕರು ನಿಟ್ಟುಸಿರು ಬಿಟ್ಟು ವಿಮಾನಗಳನ್ನು ಶರವೇಗದಲ್ಲಿ ಇಸ್ರೇಲಿನತ್ತ ತಿರುಗಿಸಿದರು. ಮುಂದೊಂದು ದಿನ ಮಹಾನ್ ಪ್ರತಿಭಾವಂತ ರಾಮೋನ್ ಇಸ್ರೇಲಿನ ಪ್ರಪಥಮ ಬಾಹ್ಯಾಕಾಶಯಾನಿ ಎಂದು ಪ್ರಸಿದ್ಧನಾದ. ಆದರೆ ೨೦೦೩ ರಲ್ಲಿ ಆದ ಕೊಲಂಬಿಯಾ ಬಾಹ್ಯಾಕಾಶ ನೌಕೆಯ ಸ್ಪೋಟದ ದುರಂತದಲ್ಲಿ ಪ್ರಾಣ ಕಳೆದುಕೊಂಡ. ಭಾರತೀಯ ಮೂಲದ ಅಮೇರಿಕಾದ ಬಾಹ್ಯಾಕಾಶಯಾನಿ ಕಲ್ಪನಾ ಚಾವ್ಲಾ ಕೂಡ ಅದೇ ದುರಂತದಲ್ಲಿ ಅಸುನೀಗಿದ್ದರು.
ವಾಪಸ್ ಇಸ್ರೇಲಿನತ್ತ ಹೊರಟರೂ ಇರಾಕಿನ ಗಡಿ ದಾಟುವ ಮೊದಲು ಇರಾಕಿ ಮಿಗ್ ವಿಮಾನಗಳು ದಾಳಿ ಮಾಡಿಯೇ ಮಾಡುತ್ತವೆ ಎಂದುಕೊಂಡೇ ಹೊರಟಿದ್ದರು ಇಸ್ರೇಲಿಗಳು. ಆದರೆ ಹಾಗೇನೂ ಆಗಲೇ ಇಲ್ಲ. ಎಲ್ಲ ಹದಿನಾರೂ ವಿಮಾನಗಳು ಸುರಕ್ಷಿತವಾಗಿ ಇಸ್ರೇಲ್ ತಲುಪಿಕೊಂಡವು.
ಅಂದು ಅದು ಇಸ್ರೇಲಿಗಳ ಸುದೈವವೋ ಅಥವಾ ಆ ಇರಾಕಿ ಅಧಿಕಾರಿಯ ದುರ್ದೈವವೋ ಗೊತ್ತಿಲ್ಲ. ಅಣುಸ್ಥಾವರದ ರಕ್ಷಣಾ ಅಧಿಕಾರಿ ರಾಜಧಾನಿ ಬಾಗ್ದಾದಿನ ಕೆಫೆಯೊಂದರಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದ. ಈ ಕಡೆ ಅಣುಸ್ಥಾವರ ಧೂಳೆದ್ದು ಹೋಗುತ್ತಿದ್ದರೆ ಈ ಪುಣ್ಯಾತ್ಮ ಮಾತ್ರ 'ಯಾ ಹಬೀಬಿ! ಯಾ ಹಬೀಬಿ!' ಎಂದು ಪಲಕುತ್ತ ಒಂದಾದ ಮೇಲೊಂದು ಏಲಕ್ಕಿ ಪರಿಮಳದ ಕಾಫೀ ಹೀರುತ್ತಾ ಕುಳಿತಿದ್ದ. ಅದು ಅರಬರ ಪದ್ಧತಿ ಬಿಡಿ. ಅವನ ಕೆಳಗಿನ ಜನರಿಗೆ ಅವನ ಆಜ್ಞೆ ಬರದ ಹೊರತೂ ಮಿಸೈಲ್ ಹಾರಿಸುವಂತಿಲ್ಲ ಮತ್ತು ಮಿಗ್ ವಿಮಾನಗಳನ್ನು ಇಸ್ರೇಲಿಗಳ ಬೇಟೆಗೆ ಕಳಿಸುವಂತಿಲ್ಲ. ಕಾಫೀ ಮೇಲೆ ಕಾಫೀ ಕುಡಿಯುತ್ತ ಕುಳಿತಿದ್ದ ಈ ಪುಣ್ಯಾತ್ಮ ಸಂಪರ್ಕಕ್ಕೆ ಸಿಗಲಿಲ್ಲ. ಮುಂದೆ ಆತ ಯಾರಿಗೂ ಎಲ್ಲಿಗೂ ಸಿಗಲಿಲ್ಲ. ತನ್ನ ಹೆಮ್ಮೆಯ ಅಣುಸ್ಥಾವರ ಮಟಾಷ್ ಆಯಿತೆಂದು ಕೊತಕೊತ ಕುದಿಯುತ್ತಿದ್ದ ಸದ್ದಾಮ ಹುಸೇನ್ ಬಲಿಗಾಗಿ ಹಾತೊರೆಯುತ್ತಿದ್ದ. ಸರಿಯಾಗಿ ಕೆಲಸ ಮಾಡದ ಈ ಗಿರಾಕಿ ಸಿಕ್ಕ. ಸಿಕ್ಕ ಮೇಲೆ ಮತ್ತೇನು? ಇತರರಿಗೆ ಒಂದು ಪಾಠವೆಂಬಂತೆ ಆ ರಕ್ಷಣಾ ಅಧಿಕಾರಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿಬಿಟ್ಟ ಸದ್ದಾಮ್ ಹುಸೇನ್. ಹಾಗೆ ಗಲ್ಲಿಗೆ ಹಾಕುವುದು ತುಂಬಾ ಸಾಮಾನ್ಯವಾಗಿತ್ತು ಬಿಡಿ. ಇಂದಿಗೂ ಕೂಡ ಅರಬ್ ದೇಶಗಳಲ್ಲಿ ಶಿಕ್ಷೆಗಳನ್ನು ಬಹಿರಂಗವಾಗಿ ಕೊಡಲಾಗುತ್ತದೆ. ಕೆಲವೊಮ್ಮೆ ಚಿತ್ರಹಿಂಸೆಗಳನ್ನೂ ಕೂಡ!
ಇಸ್ರೇಲ್ ಮಾಡಿದ ದಾಳಿಯಲ್ಲಿ ಹತ್ತು ಇರಾಕಿ ಸೈನಿಕರು ಮತ್ತು ಒಬ್ಬ ಫ್ರೆಂಚ್ ಇಂಜಿನಿಯರ್ ಹತನಾದ ಎಂದು ವರದಿಯಾಯಿತು.
ಇಸ್ರೇಲಿನ ಈ ಜಾಬಾದ್ ಕಾರ್ಯಾಚರಣೆ ಇಸ್ರೇಲಿನ ನಾಗರಿಕರಿಗೆ ಒಂದು ತರಹದ ನೆಮ್ಮದಿಯನ್ನು ತಂದುಕೊಟ್ಟಿತು. ಆ ನೆಮ್ಮದಿ ಸಂಭ್ರಮಕ್ಕೆ ಅನುವು ಮಾಡಿಕೊಟ್ಟಿತು. ಎಲ್ಲರೂ ಸಂಭ್ರಮಿಸಿದರು. ಈ ಕಾರ್ಯಾಚರಣೆ ಅಸಾಧ್ಯ ಎಂದು ಹೇಳಿದವರೂ ಸಹ ತಾವು ಇಸ್ರೇಲಿ ವಾಯುಪಡೆಯ ಕ್ಷಮತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಕ್ಕೆ ವಿಷಾದ ಹೇಳಿದರು. ಸಂಭ್ರಮದಲ್ಲಿ ಪಾಲ್ಗೊಂಡರು. ಒಂದು ತರಹದ ವಿಚಿತ್ರ ಶಾಂತಿಯ ಮಂತ್ರ ಪಠಿಸುತ್ತ ಕುಳಿತಿರುತ್ತಿದ್ದ ಪ್ರತಿಪಕ್ಷದ ನಾಯಕ ಶಿಮೋನ್ ಪೆರೇಸ್ ಅವರನ್ನು ಹೊರತುಪಡಿಸಿ ಎಲ್ಲರೂ ಇಸ್ರೇಲಿ ಸೇನೆಯ daredevil ಕಾರ್ಯಾಚರಣೆಯನ್ನು ಕೊಂಡಾಡಿದರು. ಏನು ಅವರ ಶಾಂತಿ ಮಂತ್ರವೋ ಏನು ಅವರ ಭ್ರಾಂತಿ ಮಂತ್ರವೋ ಕೊನೆವರೆಗೂ ಇಸ್ರೇಲಿಗಳಿಗೆ ತಿಳಿಯಲಿಲ್ಲ ಅನ್ನಿ.
ಬೇರೆ ಬೇರೆ ದೇಶಗಳು ಇಸ್ರೇಲನ್ನು ಕಟುವಾಗಿ ಖಂಡಿಸಿದವು. ಅದು ಅವುಗಳ ಅನಿವಾರ್ಯತೆ. ಅಂತರರಾಷ್ಟ್ರೀಯ ಸಮುದಾಯ, ಅದು ಇದು, ಮಣ್ಣು ಮಸಿ ಅಂತೆಲ್ಲ ಕಟ್ಟುಪಾಡು ನೀತಿನಿಯಮ ಇರುತ್ತವೆ ನೋಡಿ. ಹಾಗಾಗಿ ಹೆಚ್ಚಿನ ದೇಶಗಳು ಇಸ್ರೇಲನ್ನು ಖಂಡಿಸಿ ಠರಾವು ಪಾಸ್ ಮಾಡಿದವು. ಇಸ್ರೇಲಿನ ಪರಮಾಪ್ತ ಅಮೇರಿಕಾ ಕೂಡ ಕಾಟಾಚಾರಕ್ಕೆ ಎಂದು ಇಸ್ರೇಲನ್ನು ಖಂಡಿಸಿತು. ಸಣ್ಣಪುಟ್ಟ ಆರ್ಥಿಕ ನಿರ್ಬಂಧಗಳನ್ನು ವಿಧಿಸಿತು. ಅಂದು ಅಮೇರಿಕಾದ ಅಧ್ಯಕ್ಷರಾಗಿದ್ದವರು ರೊನಾಲ್ಡ್ ರೀಗನ್ ಸಾಹೇಬರು. ಮೊದಲು ಹಾಲಿವುಡ್ಡಿನಲ್ಲಿ ಸಿನಿಮಾ ನಟನಾಗಿದ್ದರು. ಅವರಿಗೆ ನಟನೆ ಹೇಳಿಕೊಡಬೇಕೇ? ಬಹಿರಂಗವಾಗಿ ಇಸ್ರೇಲನ್ನು ಟೀಕಿಸುತ್ತ ಅಂತರಂಗದಲ್ಲಿ ಇಸ್ರೇಲಿನ ಬೆನ್ನುತಟ್ಟಿದರು. ಅಮೇರಿಕಾ ಮಾಡಲಾಗದ ಆದರೆ ಮಾಡಲೇಬೇಕಾದ ಇನ್ನಿತರ ಕಪ್ಪು ಕಾರ್ಯಾಚರಣೆಗಳ ಸುಪಾರಿಯನ್ನು ಇಸ್ರೇಲಿಗೆ ಕೊಟ್ಟರು. ರೇಗನ್ ಸಾಹೇಬರಿಗೆ ಸದ್ದಾಮನ ನಂತರ ಲಿಬಿಯಾದ ಸರ್ವಾಧಿಕಾರಿ ಗಡ್ಡಾಫಿಯನ್ನು ಹಣಿಯಬೇಕಾಗಿತ್ತು. ಅದಕ್ಕಾಗಿ ರಂಗಸ್ಥಳ ಸಜ್ಜಾಗಬೇಕಿತ್ತು. ಅದನ್ನು ಇಸ್ರೇಲ್ ಅದರಲ್ಲೂ ಇಸ್ರೇಲಿನ ಮೊಸ್ಸಾದ್ ಬಿಟ್ಟು ಬೇರೆ ಯಾರೂ ಮಾಡಿಕೊಡಲು ಸಾಧ್ಯವಿಲ್ಲ ಎಂದು ಅವರಿಗೆ ಗೊತ್ತಿತ್ತು. ಇಸ್ರೇಲನ್ನು ಖಂಡಿಸಿದ ಹಾಗೆ ನಟಿಸಿದ ರೇಗನ್ ಸಾಹೇಬರು ಮುಂದೆ ಹೇಗೆ ಅದೇ ಇಸ್ರೇಲನ್ನು ಉಪಯೋಗಿಸಿಕೊಂಡು ಗಡಾಫಿಯನ್ನು ಹಣಿದರು ಎಂದು ನೋಡಿದರೆ ಅದೊಂದು ರೋಚಕ ಕಥೆ.
ಮುಂದೆ ಬರೋಬ್ಬರಿ ಹತ್ತು ವರ್ಷಗಳ ನಂತರ ಅಂದರೆ ೧೯೯೧ ರಲ್ಲಿ ಮೊದಲ ಗಲ್ಫ್ ಯುದ್ಧ ಶುರುವಾಯಿತು. ಕುವೈತ್ ದೇಶವನ್ನು ಆಕ್ರಮಿಸಿ ಕೂತಿದ್ದ ಸದ್ದಾಮ್ ಹುಸೇನನನ್ನು ಓಡಿಸಲು ಎಂದು ಶುರುವಾದ ಯುದ್ಧವದು. ಹಾಗಂತ ಅಮೇರಿಕಾ ಜಗತ್ತಿಗೆ ಪುಂಗಿತ್ತು. ನಿಜವಾದ ವಿಷಯ ಎಲ್ಲರಿಗೂ ನಂತರ ಗೊತ್ತಾಯಿತು. ಒಂದು ಕಾಲದಲ್ಲಿ ಸದ್ದಾಮ ಹುಸೇನ್ ಅಮೇರಿಕಾದ ಬಂಟ. ಅಮೇರಿಕಾದ ಮಾತು ಕೇಳಿ ಮಳ್ಳನಂತೆ ಇರಾನ್ ವಿರುದ್ಧ ಸೆಣೆಸಿದ. ಉಪಯೋಗವಿಲ್ಲದ ಯುದ್ಧ ಮಾಡಿದ. ನಂತರ ತಪ್ಪಿನ ಅರಿವಾಯಿತೇನೋ ಗೊತ್ತಿಲ್ಲ. ಅಮೇರಿಕಾದ ಸಂಗ ತೊರೆದು ಹೊರಟ. ಬಿಟ್ಟಿಯಾಗಿ ಪೆಟ್ರೋಲ್ ಕೊಡಲು ಒಪ್ಪಲಿಲ್ಲ. ಸದ್ದಾಮನಿಗೆ ನಾಲ್ಕು ಪೆಟ್ಟು ಕೊಟ್ಟು ಬುದ್ಧಿ ಹೇಳಬೇಕು ಎನ್ನುವ ಗ್ರಾಂಡ್ ಸ್ಕೀಮಿನಡಿಯಲ್ಲಿ ಮೊದಲ ಗಲ್ಫ್ ಯುದ್ಧ ಶುರುವಾಯಿತು. ಅದಕ್ಕೆ ತಾತ್ಕಾಲಿಕವಾಗಿ ಬಲಿಯಾಗಿದ್ದು ಕುವೈತ್. ಅದೇನೇ ಇರಲಿ. ೧೯೯೧ ರ ಮೊದಲ ಗಲ್ಫ್ ಯುದ್ಧದ ಸಂದರ್ಭದಲ್ಲಿ ಮಾತ್ರ ಅಂದಿನ ಅಮೇರಿಕಾದ ಅಧ್ಯಕ್ಷ ಜಾರ್ಜ್ ಬುಷ್ (ಸೀನಿಯರ್) ಮತ್ತು ರಕ್ಷಣಾ ಕಾರ್ಯದರ್ಶಿ ಡಿಕ್ ಚೀನಿ ಇಸ್ರೇಲ್ ಹತ್ತು ವರ್ಷದ ಹಿಂದೆ, ಇಡೀ ಅಂತರರಾಷ್ಟ್ರೀಯ ಸಮುದಾಯವನ್ನು ಎದುರಾಕಿಕೊಂಡು, ಮಾಡಿದ ಕಾರ್ಯಾಚರಣೆಯನ್ನು ಹೊಗಳಿದ್ದರು. ಅಂದು ಇಸ್ರೇಲ್ ಸದ್ದಾಮ್ ಹುಸೇನನ ಅಣುಸ್ಥಾವರವನ್ನು ನಿರ್ನಾಮ ಮಾಡಿರದಿದ್ದರೆ ನಮಗೆ ಇವತ್ತು ಅದೊಂದು ದೊಡ್ಡ ತಲೆನೋವಾಗುತ್ತಿತ್ತು. ಕುವೈತಿನ ವಿಮೋಚನೆ ಅಷ್ಟು ಸುಲಭವಾಗಿ ಆಗುತ್ತಿರಲಿಲ್ಲ ಎಂದು ಪುಂಗಿದರು. ಹೆಚ್ಚಿನವರು ಅಹುದಹುದು ಎಂಬಂತೆ ತಲೆದೂಗಿದರು. ಒಳಗಿನ ಹೂರಣ ಗೊತ್ತಿದ್ದವರು ಪೆಕಪೆಕನೆ ನಕ್ಕರು. It was again all about cheap oil.
ಈ perfect ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಪೈಲಟ್ ಝೀವ್ ರಾಝ್ ಅವರಿಗೆ ಇಸ್ರೇಲಿನ ಪ್ರತಿಷ್ಠಿತ ಸೇವಾ ಪದಕವನ್ನು ನೀಡಲಾಯಿತು. 'ನನಗೊಬ್ಬನಿಗೇ ಪದಕ ಕೊಟ್ಟರೆ ಹೇಗೆ? ಉಳಿದ ಹದಿನೈದು ಜನರಿಗೂ ಕೊಡಬೇಕು' ಎಂದು ಝೀವ್ ರಾಝ್ ನಮ್ರತೆಯಿಂದಲೇ ಆಕ್ಷೇಪಣೆ ವ್ಯಕ್ತಪಡಿಸಿದರೆ ಸೇನಾ ಮುಖ್ಯಸ್ಥ ರಾಫುಲ್ ಏಟಾನ್ ಏನೆಂದರು ಗೊತ್ತೇ? 'ಬಡಿದಾಟವಿಲ್ಲ. ಕಾದಾಟವಿಲ್ಲ. ಹೋದಿರಿ. ಬಾಂಬ್ ಹಾಕಿದಿರಿ. ವಾಪಸ್ ಬಂದಿರಿ. ಆಕಾಶದಲ್ಲಿ ಯುದ್ಧ ಗಿದ್ಧ ಏನೂ ಆಗಲಿಲ್ಲವಲ್ಲ. ಹಾಗಾಗಿ ಉಳಿದವರಿಗೆಲ್ಲ ಪದಕ ಯಾಕೆ? ಮುಂದೆ ನಿಜವಾದ ಕಾದಾಟವಾದಾಗ ನೋಡೋಣ,' ಎಂದು ಬೂಟು ಕುಟ್ಟುತ್ತ ಹೊರಟುಬಿಟ್ಟರು. ಆ ಮನುಷ್ಯ ಎಷ್ಟು insensitive ಎಂದು ಅನ್ನಿಸಬಹುದು. ಆದರೆ ಇಸ್ರೇಲಿಗಳೇ ಹಾಗೆ. ಕೊಂಚ ಕಟು ಸ್ವಭಾವದವರು. ಸೇನೆಯಲ್ಲಂತೂ ಕೊಂಚ ಜಾಸ್ತಿಯೇ ಅನ್ನಿ. Everybody is a winner ಎಂದು ಎಲ್ಲರ ತಲೆಗೆ ಎಣ್ಣೆ ತಿಕ್ಕಿ, ಎಲ್ಲರನ್ನೂ ಒಂದು ತರಹದ mediocrity ಗೆ ತಳ್ಳುವ ಸಂಪ್ರದಾಯವಿಲ್ಲ. Bar of excellence is very high.
ಇದಾದ ನಂತರ ಇಸ್ರೇಲ್ ಬಹಿರಂಗವಾಗಿ ತನ್ನ ವಿದೇಶಾಂಗ ನೀತಿಯನ್ನು ಪ್ರಕಟಿಸಿತು. ಅದರ ತಿರುಳು ತುಂಬಾ ಸರಳವಾಗಿತ್ತು ಮತ್ತು ಅಷ್ಟೇ ಸ್ಪಷ್ಟವಾಗಿತ್ತು. ಮಧ್ಯಪ್ರಾಚ್ಯದ ಯಾವುದೇ ದೇಶ ಪರಮಾಣು ತಂತ್ರಜ್ಞಾನವನ್ನು ಹೊಂದುವುದನ್ನು ಅಥವಾ ಅಭಿವೃದ್ಧಿ ಪಡಿಸುವುದನ್ನು ಇಸ್ರೇಲ್ ಸಹಿಸುವುದಿಲ್ಲ. ಸಹಿಸುವುದಿಲ್ಲ ಅಷ್ಟೇ ಅಲ್ಲ. ಇಸ್ರೇಲ್ ಅಂತಹ ಪ್ರಯತ್ನಗಳನ್ನು ಶತಾಯಗತಾಯ ವಿರೋಧಿಸುತ್ತದೆ ಮತ್ತು ತಡೆಯುತ್ತದೆ.
ಮುಂದೆ ಇದು Begin Doctrine ಎಂದೇ ಖ್ಯಾತವಾಯಿತು. ಇಸ್ರೇಲ್ ಅದನ್ನು ಕರಾರುವಕ್ಕಾಗಿ ಪಾಲಿಸಿಕೊಂಡು ಬಂದಿದೆ ಕೂಡ. ಇರಾಕಿನ ನಂತರ ಅಣುಸ್ಥಾವರ ಕಟ್ಟಲು ಹೋದ ಸಿರಿಯಾಕ್ಕೆ ಅದೇ ಗತಿಯಾಯಿತು. ಸದ್ಯಕ್ಕೆ ಇರಾನಿಗೂ ಅದೇ ಗತಿಯಾಗುತ್ತಿದೆ. ಆದರೆ ಚಿಕ್ಕ ಚಿಕ್ಕ ಡೋಸುಗಳಲ್ಲಿ ಇರಾನಿಗೆ ಕಂಪ್ಯೂಟರ್ ವೈರಸ್ ಮೂಲಕ, ಕಂಡಕಂಡಲ್ಲಿ ಇರಾನಿ ಅಣುವಿಜ್ಞಾನಿಗಳನ್ನು ನಿಗೂಢವಾಗಿ ಕೊಲ್ಲುವ ಮೂಲಕ, ಸೇನಾ ಮುಖ್ಯಸ್ಥ ಸುಲೇಮಾನಿ ಅಂತವರನ್ನು ಅಮೇರಿಕಾವನ್ನು ಮುಂದಿಟ್ಟುಕೊಂಡು ಡ್ರೋನ್ ಮುಖಾಂತರ ಉಡಾಯಿಸಿಬಿಡುವ ಮೂಲಕ ಇರಾನಿಗೆ ಬಿಸಿ ಮುಟ್ಟಿಸುತ್ತಿದೆ ಇಸ್ರೇಲ್. ಮುದೊಂದು ದಿನ ಇರಾನಿನ ಅಣುಸ್ಥಾವರವೂ ಭೂಮಿಯಲ್ಲಿ ಲೀನವಾದರೆ ಯಾವ ಆಶ್ಚರ್ಯವೂ ಇಲ್ಲ. ಏಕೆಂದರೆ Begin Doctrine ಚಾಲ್ತಿಯಲ್ಲಿದೆ. ಮುಂದೂ ಇರುತ್ತದೆ.
ಮುಖ್ಯ ಮಾಹಿತಿ ಮೂಲ: No Mission Is Impossible: The Death-Defying Missions of the Israeli Special Forces by Michael Bar-Zohar, Nissim Mishal

5 comments:
ಮಹೇಶರೆ, ತುಂಬ ಕಾಲವಾಗಿತ್ತು ನಿಮ್ಮ ಲೇಖನವನ್ನೋದಿ, ಹಪಾಪಿಸುತ್ತ ಕುಳಿತಿದ್ದೆ. ಇದೀಗ, Operation Opera ಓದಿ, ಖುಶಿಯೋ ಖುಶಿ! ರೋಮಾಂಚನವಾಗುವಂತೆ ನಿರೂಪಿಸಿದ್ದೀರಿ. How is the josh? High Sir! ನಿಮ್ಮ ನಿರೂಪಣೆಯ ವಿವಿಧ ಅಂಶಗಳನ್ನು ಎತ್ತಿ ತೋರಿಸಿ, ಕೊಂಡಾಡಲು ಮನಸ್ಸಾಗುತ್ತದೆ. ಆದರೆ ಮನಸ್ಸು ತುಂಬಿದೆ. ಇಷ್ಟೇ ಸಾಕು.
ಪ್ರೋತ್ಸಾಹಭರಿತ ತಮ್ಮ ಕಾಮೆಂಟಿಗೆ ಧನ್ಯವಾದಗಳು, ಸುನಾಥ್ ಸರ್!
ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ತುಂಬಾ ರಸವತ್ತಾಗಿ ಬರೆದಿದ್ದೀರ. ನಿಜಾಂಶಗಳನ್ನು ಹೇಳುವುದರ ಜೊತೆಗೆ ಕುತೂಹಲ ಹೆಚ್ಚುವಂತೆ ಮಾಡುವ ನಿಮ್ಮ ಕಥಾ ಶೈಲಿ ಚೆನ್ನಾಗಿದೆ. ಧನ್ಯವಾದಗಳು
Thank you very much for your comment, Manjunath.
Super sir
Post a Comment