Showing posts with label ಇಸ್ರೇಲ್. Show all posts
Showing posts with label ಇಸ್ರೇಲ್. Show all posts

Saturday, August 07, 2021

ಮಧುಜಾಲದಲ್ಲಿ ಸಿಕ್ಕಿಬಿದ್ದ ಪರಮಾಣು ಕಳ್ಳ...ಮೊಸ್ಸಾದ್ ಕಾರ್ಯಾಚರಣೆ

ಮೋರ್ಡೇಕೈ ವನುನು - ಇಸ್ರೇಲಿನ ಡಿಮೋನಾ ಅಣುಸ್ಥಾವರದಲ್ಲಿ ಒಬ್ಬ ತಂತ್ರಜ್ಞನಾಗಿದ್ದ. ಡಿಮೋನಾ ಅಣುಸ್ಥಾವರ ಇಸ್ರೇಲಿನ ಅತ್ಯಂತ ರಹಸ್ಯ ಮತ್ತು ನಿಗೂಢ ತಾಣಗಳಲ್ಲಿ ಒಂದಾಗಿತ್ತು. ಆ ಅಣುಸ್ಥಾವರದಲ್ಲಿ ಇಸ್ರೇಲ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿ ಪಡಿಸುತ್ತಿದೆ ಎಂದು ಅಂತರರಾಷ್ಟ್ರೀಯ ಸಮುದಾಯಕ್ಕೆ ಪಕ್ಕಾ ಗುಮಾನಿ. ಇಸ್ರೇಲ್ ಮಾತ್ರ ಅಂತಹ ಆಪಾದನೆಗಳನ್ನು ತಳ್ಳಿಹಾಕುತ್ತಲೇ ಬಂದಿತ್ತು. 

ಡಿಮೋನಾ ಅಣುಸ್ಥಾವರದಲ್ಲಿ ನೌಕರಿಗೆ ಅರ್ಜಿ ಹಾಕಿದವರನ್ನು ತುಂಬಾ ಕಠಿಣ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತಿತ್ತು. ಅವರ ವ್ಯಕ್ತಿತ್ವವನ್ನು ಎಲ್ಲ ದೃಷ್ಟಿಯಿಂದ ಅಳೆಯಲಾಗುತ್ತಿತ್ತು. ಅವರ ಹಿನ್ನೆಲೆಗಳನ್ನು ಸೂಕ್ಷ್ಮವಾಗಿ ಎಳೆಎಳೆಯಾಗಿ ಬಿಡಿಸಿ ನೋಡಲಾಗುತ್ತಿತ್ತು. ಅನೇಕ ಮನೋವೈಜ್ಞಾನಿಕ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತಿತ್ತು. ಶಬಾಕ್ ಮುಂತಾದ ಭದ್ರತಾ ಸಂಸ್ಥೆಗಳು ಅರ್ಜಿದಾರನ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಟುವಟಿಕೆಗಳನ್ನು ಪೂರ್ತಿಯಾಗಿ ಛಾನ್ ಬೀನ್ ಮಾಡಿ,
ಈ ಮನುಷ್ಯ ಎಲ್ಲ ರೀತಿಯಿಂದ ಓಕೆ ಎಂದು ವರದಿ ಕೊಟ್ಟ ನಂತರವೇ ಡಿಮೋನಾ ಆಸುಪಾಸಿನೊಳಗೆ ಪ್ರವೇಶ. ಇಲ್ಲವಾದರೆ ಡಿಮೋನಾದ ಸುತ್ತಮುತ್ತಲಿನ ಅದೆಷ್ಟೋ ದೊಡ್ಡ ಜಾಗ ಸಂಪೂರ್ಣವಾಗಿ ನಿಷೇಧಿತ. ಮೇಲಿನ ವಾಯುಪ್ರದೇಶದ ಮೇಲೆ ಇಸ್ರೇಲಿನ ಜಾಗರೂಕ ಕಣ್ಣುಗಾವಲು. ಇಂತಹ ಸಂಸ್ಥೆಯಲ್ಲಿ ನೌಕರಿ ಗಿಟ್ಟಿಸಿದ ನಂತರವೂ ಆ ಮನುಷ್ಯ ಸದಾ ಸರ್ಕಾರದ ನಿಗರಾಣಿಯಲ್ಲಿ ಇರುತ್ತಿದ್ದ.  ಖಾಸಗಿ ಜೀವನವನ್ನು ಆತ ಒಂದು ರೀತಿಯಲ್ಲಿ ಕಳೆದುಕೊಂಡ ಹಾಗೆಯೇ.

ಅಣುಸ್ಥಾವರದಲ್ಲಿ ನೌಕರಿ ಖಾಲಿ ಇದೆ ಎಂಬ ಜಾಹೀರಾತನ್ನು ದಿನಪತ್ರಿಕೆಯೊಂದರಲ್ಲಿ ನೋಡಿದ್ದ ವನುನು ಅರ್ಜಿ ಹಾಕಿದ್ದ. ಎಲ್ಲ ರೀತಿಯ ತನಿಖೆ ಆದ ನಂತರ ಅವನಿಗೆ ನೌಕರಿ ಸಿಕ್ಕಿತ್ತು.

ಅವನಿಗೆ ಅಂತಹ ನೌಕರಿ ಸಿಕ್ಕಿದ್ದಾದರೂ ಹೇಗೆ? ಅವನು ಖುದ್ದಾಗಿ ವಾಮಪಂಥೀಯನಾಗಿದ್ದ. ಅರಬ್ ಕಮ್ಯುನಿಸ್ಟ್ ಪಕ್ಷದಲ್ಲಿ ಅವನಿಗೆ ಸ್ನೇಹಿತರಿದ್ದರು. ಅವನು ಖುದ್ದು ಯಹೂದಿಯೇ ಆಗಿದ್ದರೂ ಇಸ್ರೇಲಿನ ಕಟ್ಟರ್ ಯಹೂದಿಗಳಾದ ಝಿಯೋನಿಸ್ಟಗಳನ್ನು (Zionist) ದ್ವೇಷಿಸುತ್ತಿದ್ದ 'ರಖಾ' ಪಕ್ಷದಲ್ಲೂ ಅವನಿಗೆ ಪರಿಚಿತರಿದ್ದರು. ಇಂತಹ ಮಿತ್ರರೊಂದಿಗೆ ವನುನು ಇಸ್ರೇಲಿ ಸರ್ಕಾರದ ವಿರುದ್ಧದ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದ. ಪತ್ರಿಕೆಗಳಿಗೆ ತನ್ನ ಸಿದ್ಧಾಂತವನ್ನು ವಿವರಿಸಿ ಸಂದರ್ಶನ ಕೊಟ್ಟಿದ್ದ. ರಖಾ ಪಕ್ಷದ ಕ್ರಾಂತಿಕಾರಿಗಳು ಒಮ್ಮೊಮ್ಮೆ ಅವನ ಮನೆಯಲ್ಲೂ ಉಳಿದಿದ್ದುಂಟು. ಬೆನ್ ಗುರಿಯೋನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗಲೂ ಸಹ ಇಂತಹ ಎಡಬಿಡಂಗಿತನಗಳಿಂದ ವನುನು ಎದ್ದುಕಾಣುತ್ತಿದ್ದ.

ಸಿದ್ಧಾಂತಗಳ ಬಗ್ಗೆ ವನುನುಗೆ ಒಂದು ಬದ್ಧತೆ ಬಂದಿರಲಿಲ್ಲ. ಮೊದಲು ಬಲಪಂಥೀಯನಾಗಿದ್ದ. ಯಹೂದಿಗಳ ಜನಾಂಗೀಯ ಪ್ರಾಬಲ್ಯವನ್ನು ಪ್ರತಿಪಾದಿಸುತ್ತಿದ್ದ ಧರ್ಮಗುರು ರಾಬೈ ಕಹಾನೆಯ ಅನುಯಾಯಿಯಾಗಿದ್ದ. ಬಲಪಂಥೀಯ ಲಿಖುಡ್ ಪಕ್ಷಕ್ಕೆ ಮತ ಹಾಕಿದ್ದ. ಆದರೆ ೧೯೮೨ ರಲ್ಲಿ ನಡೆದ ಪಕ್ಕದ ದೇಶ ಲೆಬನಾನ್ ಜೊತೆಗಿನ ವಿವಾದಾತ್ಮಕ ಯುದ್ಧ ಅವನನ್ನು ಮತ್ತು ಅವನ ಸಿದ್ಧಾಂತಗಳನ್ನು ಬದಲಾಯಿಸಿಬಿಟ್ಟಿತು ಎಂದು ನಂಬಿದ್ದ.

ವನುನು ಒಂಟಿಜೀವಿ. ಅವನಿಗೆ ಯಾರೂ ಮಿತ್ರರಿರಲಿಲ್ಲ. ವನುನುವಿನ ಕುಟುಂಬದವರು ಮೂಲತಃ ಆಫ್ರಿಕಾದ ಮೊರಾಕೊ ದೇಶದಿಂದ ಇಸ್ರೇಲಿಗೆ ಬಂದು ನೆಲೆಸಿದ್ದರು. ೧೯೪೮ ರಲ್ಲಿ ಇಸ್ರೇಲ್ ಅಧಿಕೃತವಾಗಿ ಸ್ಥಾಪಿತವಾದ ಮೇಲೆ ಜಗತ್ತಿನಲ್ಲಿ ಎಲ್ಲೇ ನೆಲೆಸಿದ್ದ ಯಹೂದಿಗಳೂ ಸಹ ಇಸ್ರೇಲ್ ದೇಶವನ್ನು ತಮ್ಮ ತಾಯ್ನಾಡು ಎಂದು ನಂಬಿ ಬರಬಹುದಿತ್ತು. ಸರ್ಕಾರ ಅವರಿಗೆ ಎಲ್ಲ ರೀತಿಯ ಸಹಾಯ ಮಾಡುತ್ತಿತ್ತು. ಇಷ್ಟೆಲ್ಲಾ ಆದರೂ ಇಸ್ರೇಲಿನಲ್ಲೇ ಹುಟ್ಟಿ ಬೆಳೆದಿದ್ದ ಇಸ್ರೇಲಿಗಳು ಮತ್ತು ವಲಸಿಗರ ಮಧ್ಯೆ ಸ್ಪರ್ಧೆ, ಈರ್ಷ್ಯೆ ಎಲ್ಲ ಇತ್ತು.

ವನುನುವಿಗೆ ಒಂದು ಬೇಸರವಿತ್ತು. ತಾನು ಮೂಲತಃ ಮೊರಾಕೊ ದೇಶದವನು ಎಂದು ತನಗೆ ಭೇದಭಾವ ಮಾಡಲಾಗುತ್ತಿದೆ. ಅವಕಾಶಗಳನ್ನು ನಿರಾಕರಿಸಲಾಗುತ್ತಿದೆ. ಪ್ರತಿಷ್ಠಿತ ಏರ್ ಫೋರ್ಸ್ ಅಕಾಡೆಮಿಯಲ್ಲಿ ಪ್ರವೇಶ ಸಿಗದಿದ್ದಾಗ ಮನಸ್ಸು ಮತ್ತೂ ಕಹಿಯಾಯಿತು.

ಇಸ್ರೇಲಿ ನಾಗರಿಕರಿಗೆ ಸೇನೆಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ. ವನುನು ಕೂಡ ಸೇವೆ ಸಲ್ಲಿಸಿದ. ನಂತರ ಇಂಜಿನಿಯರಿಂಗ್ ವಿದ್ಯಾಭ್ಯಾಸ ಶುರುಮಾಡಿದ. ನಂತರ ಅರ್ಥಶಾಸ್ತ್ರಕ್ಕೆ ಬದಲಾಯಿಸಿಕೊಂಡ. ಅದನ್ನೂ ಬಿಟ್ಟು ತತ್ವಶಾಸ್ತ್ರಕ್ಕೆ ಸೇರಿಕೊಂಡ. ಸಸ್ಯಾಹಾರಿಯಾದ. ನಂತರ ಹೈನೋತ್ಪನ್ನಗಳನ್ನೂ ಬಿಟ್ಟು ಸಂಪೂರ್ಣ ಸಸ್ಯಾಹಾರಿಯಾದ (vegan).

ಅವನಿಗೆ ದುಡ್ಡಿನ ಬಗ್ಗೆ ಅಪಾರ ಮೋಹವಿತ್ತು. ಆದರೆ ಕೆಲಸ ಮಾಡಿ ದುಡ್ಡು ಗಳಿಸುವುದು ತುಂಬಾ ನಿಧಾನವಾದ ಮಾರ್ಗ ಎಂದಿದ್ದ. ಷೇರು ಬಜಾರಿನಲ್ಲಿ ರೊಕ್ಕ ಮಾಡುವುದು ತ್ವರಿತ ಎಂದು ತನ್ನ ಡೈರಿಯಲ್ಲಿ ಬರೆದುಕೊಂಡಿದ್ದ. ನಗ್ನ ರೂಪದರ್ಶಿಯಾಗಿ ಕೂಡ ಕೆಲಸ ಮಾಡಿದ. ಸ್ಪರ್ಧೆಯೊಂದರಲ್ಲಿ ಚಡ್ಡಿ ಬಿಚ್ಚಿಬಿಟ್ಟ. ಅದಕ್ಕಾಗಿ ವಿಶೇಷ ಬಹುಮಾನ ಪಡೆದುಕೊಂಡ. ಹೀಗೆಲ್ಲಾ ಬಹುಕೃತ ವೇಷ ಮಾಡಿ ಸಂಪಾದಿಸಿದ ರೊಕ್ಕದಲ್ಲಿ ಕೆಂಬಣ್ಣದ ದುಬಾರಿ ಆಡಿ ಕಾರ್ ಖರೀದಿಸಿದ. ಜುಮ್ ಅಂತ ಇಸ್ರೇಲ್ ತುಂಬಾ ಸುತ್ತಾಡಿಕೊಂಡಿದ್ದ.

ಅವರವರ ವೈಯಕ್ತಿಕ ಜೀವನ ಅವರವರದ್ದು ಬಿಡಿ. ಆದರೆ ಇವನು ರಖಾ ಪಕ್ಷದ ಕ್ರಾಂತಿಕಾರಿಗಳನ್ನು ಬಹಿರಂಗವಾಗಿ ಬೆಂಬಲಿಸುತ್ತಿದ್ದುದು ಕಾನೂನು ಬಾಹಿರವಾಗಿತ್ತು. ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ಹಾಗೆ ಮಾಡದ ಸರ್ಕಾರ ಅವನನ್ನು ವಿಚಾರಣೆಗೆ ಕರೆಸಿತು. ಆಂತರಿಕ ಭದ್ರತಾ ಸಂಸ್ಥೆ ಶಬಾಕನ ಪೊಲೀಸರು ಅವನಿಗೆ ಇಂತಹ ಚಟುವಟಿಕೆಗಳಿಂದ ದೂರವಿರುವಂತೆ ಹೇಳಿದರು. ಹಾಗಂತ ಮುಚ್ಚಳಿಕೆ ಬರೆದುಕೊಡುವಂತೆ ಕೇಳಿದರು. ಇವನು ಬರೆದುಕೊಡಲಿಲ್ಲ. ಅಸಡ್ಡೆಯಿಂದ ಎದ್ದು ಬಂದ. ತನ್ನ ಜೀವನಶೈಲಿಯನ್ನೂ ಬದಲಾಯಿಸಿಕೊಳ್ಳಲಿಲ್ಲ.

ಇವನ ವಿವರಗಳೆಲ್ಲ ಸರ್ಕಾರಿ ಕಡತಗಳಲ್ಲಿ ದಾಖಲಾದವು. ಹೆಚ್ಚಿನ ಮಾಹಿತಿ ಲಭ್ಯವಾದಂತೆ ಅವುಗಳನ್ನು ಕಡತಗಳಲ್ಲಿ ಸೇರಿಸಲಾಗುತ್ತಿತ್ತು. ವನುನು ಅಣುಸ್ಥಾವರದಲ್ಲಿ ನೌಕರಿಗೆ ಅರ್ಜಿ ಹಾಕಿದಾಗ ಇವೆಲ್ಲಾ ಮಾಹಿತಿಯನ್ನು ಪರಿಶೀಲಿಸಲಾಗಿತ್ತು. ಅದೇನು ಅಜಾಗರೂಕತೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ತುಂಬಾ ಮುಖ್ಯ ಮಾಹಿತಿ ಕಡೆಗಣಿಸಲ್ಪಟ್ಟಿತ್ತು.ಇಂತಹ ವಿವಾದಾತ್ಮಕ ಹಿನ್ನೆಲೆ ಹೊಂದಿದ್ದ ವ್ಯಕ್ತಿಗೆ ನೌಕರಿ ಕೊಟ್ಟು ಇಸ್ರೇಲಿ ರಕ್ಷಣಾ ವ್ಯವಸ್ಥೆ ಮತ್ತು ಡಿಮೋನಾ ಅಣುಸ್ಥಾವರದ ರಕ್ಷಣಾ ವ್ಯವಸ್ಥೆಯಿಂದ ದೊಡ್ಡ ಮಟ್ಟದ ಅಚಾತುರ್ಯವೊಂದು ನಡೆದುಹೋಗಿತ್ತು.

ಇನ್ಸ್ಟಿಟ್ಯೂಟ್ ೨ (Institute 2)  ಎಂಬುದು ಅಣುಸ್ಥಾವರದ ಅತ್ಯಂತ ರಹಸ್ಯ ಘಟಕವಾಗಿತ್ತು. ಇಡೀ ಡಿಮೋನಾದಲ್ಲಿ ಸುಮಾರು ೨,೭೦೦ ಜನ ನೌಕರರಿದ್ದರೆ ಕೇವಲ ೧೫೦ ಜನರಿಗೆ ಮಾತ್ರ ಇನ್ಸ್ಟಿಟ್ಯೂಟ್ ೨ ನ್ನು ಪ್ರವೇಶಿಸುವ ಅನುಮತಿ ಮತ್ತು ಅರ್ಹತೆ ಇತ್ತು. ಅಂತವರಲ್ಲಿ ಈ ವನುನು ಕೂಡ ಒಬ್ಬವ. ಇದು ಮತ್ತೂ ದೊಡ್ಡ ಪ್ರಮಾದವಾಗಿತ್ತು.

ಡಿಮೋನಾ ಅಣುಸ್ಥಾವರವನ್ನು ಹೊರಗಿಂದ ನೋಡಿದರೆ ಒಂದು ಎರಡಂತಸ್ತಿನ ಸಾಮಾನ್ಯ ಕಟ್ಟಡದಂತಿತ್ತು. ಆದರೆ ಅಲ್ಲೊಂದು ಲಿಫ್ಟ್ ಕೂಡ ಇತ್ತು. ಕೇವಲ ಎರಡಂತಸ್ತಿನ ಕಟ್ಟಡಕ್ಕೆ ಲಿಫ್ಟ್ ಏಕೆ ಎಂದು ಯೋಚಿಸಿದರೆ...ಮೇಲೆ ಹೋಗಲು ಲಿಫ್ಟ್ ಬೇಕಾಗಿರಲಿಲ್ಲ. ಮೇಲೆ ಕಾಣುವ ಎರಡು ಅಂತಸ್ತುಗಳನ್ನು ಬಿಟ್ಟು ಮೇಲಿಂದ ಕಾಣದ ಆರು ಅಂತಸ್ತುಗಳು ಭೂಮಿಯ ಅಡಿಯಲ್ಲಿದ್ದವು. ಅವುಗಳಿಗೆ ಹೋಗಲು ಲಿಫ್ಟ್ ಬೇಕಾಗುತ್ತಿತ್ತು.

ಮೊದಲನೇ ಮಹಡಿಯಲ್ಲಿ ಕಚೇರಿಗಳಿದ್ದವು. ನೆಲದ ಮಟ್ಟದ ಅಂತಸ್ತಿನಲ್ಲಿ ಯುರೇನಿಯಂ ಸಂಸ್ಕರಿಸಲಾಗುತ್ತಿತ್ತು. ಭೂಮಿಯ ಕೆಳಗಿದ್ದ ಮೊದಲ ಅಂತಸ್ತಿನಲ್ಲಿ ಪೈಪುಗಳು ಮತ್ತು ವಾಲ್ವುಗಳು ಇದ್ದವು. ಎರಡನೇ ಅಂತಸ್ತನ್ನು 'ಗೋಲ್ಡಾಳ ಬಾಲ್ಕನಿ' ಎಂದು ಕರೆಯಲಾಗುತ್ತಿತ್ತು. ಮಾಜಿ ಪ್ರಧಾನಿ, ಉಕ್ಕಿನ ಮಹಿಳೆ, ಗೋಲ್ಡಾ ಮೇಯಿರ್ ಅವರ ಸ್ಮರಣಾರ್ಥ. ಅದು ಎಂತಹ ಮುಖ್ಯ ವ್ಯಕ್ತಿಗಳೇ ಇರಲಿ, ಅವರಿಗೆ ಹೆಚ್ಚೆಂದರೆ ಇಲ್ಲಿಯವರೆಗೆ ಮಾತ್ರ ಅವಕಾಶ. ಅದಕ್ಕೂ ಮುಂದಿಲ್ಲ. ಭೂಮಿಯ ಕೆಳಗಿನ ಮೂರನೇ ಅಂತಸ್ತಿನಲ್ಲಿ ತಂತ್ರಜ್ಞರು ಯುರೇನಿಯಂ ರಾಡುಗಳನ್ನು ಸಂಸ್ಕರಿಸುತ್ತಿದ್ದರು. ನಾಲ್ಕನೇಯ ಅಂತಸ್ತಿನಲ್ಲಿ ಪ್ಲುಟೋನಿಯಂ ಸಂಗ್ರಹ. ಐದನೇ ಅಂತಸ್ತಿನಲ್ಲಿ ಬಾಂಬುಗಳು ತಯಾರಾಗುತ್ತಿದ್ದವು. ಆರನೇ ಅಂತಸ್ತಿನಲ್ಲಿ ಪರಮಾಣು ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿಗಾಗಿ ಸಂಸ್ಕರಿಸಲಾಗುತ್ತಿತ್ತು.

ಒಂದು ದಿನ ವನುನು ತನ್ನ ಜೊತೆ ಕ್ಯಾಮರಾವೊಂದನ್ನು ತಂದ. 'ಏಕೆ ಕ್ಯಾಮರಾ ತಂದೆ?' ಎಂದು ಭದ್ರತಾ ಸಿಬ್ಬಂದಿ ಕೇಳಿದರೆ ಉತ್ತರ ತಯಾರಿತ್ತು. 'ಬೀಚಿಗೆ ಹೋಗಿದ್ದೆ. ಆವಾಗ ಒಯ್ದಿದ್ದೆ. ಇದೇ ಚೀಲದಲ್ಲಿ. ಈಗ ಅದನ್ನೇ ತಂದೆ. ಕ್ಯಾಮರಾ ಇದೆ ಎಂದು ಮರೆತಿದ್ದೆ,' ಎಂದು ಓಳು ಬಿಡಲು ಸಿದ್ಧನಾಗಿದ್ದ. ಆದರೆ ಆಗಲೇ ಕೆಲಸ ಮಾಡಲು ಆರಂಭಿಸಿ ಸುಮಾರು ಸಮಯವಾಗಿತ್ತು. ರಕ್ಷಣಾ ಸಿಬ್ಬಂದಿಗೆ ಇವನ ಪರಿಚಯವಿತ್ತು. ಒಟ್ಟಿನಲ್ಲಿ ಭದ್ರತಾ ವ್ಯವಸ್ಥೆ ನಿದ್ದೆಗೆ ಜಾರಿತ್ತು. ಯಾರೂ ಇವನ ಚೀಲ ತಪಾಸಣೆ ಮಾಡಲಿಲ್ಲ. ಕ್ಯಾಮರಾ ಒಳಗೆ ಹೋಗುವುದನ್ನು ತಡೆಯಲಿಲ್ಲ. ಏನೂ ಕೇಳಲೇ ಇಲ್ಲ.

ಮಧ್ಯಾಹ್ನದ ಊಟದ ಸಮಯದಲ್ಲಿ, ಸಂಜೆ ಎಲ್ಲರೂ ಮನೆಗೆ ಹೋದ ನಂತರ, ವನುನು ಕ್ಯಾಮರಾ ಹಿಡಿದು ಎಲ್ಲ ಕಡೆ ತಿರುಗಾಡುತ್ತಿದ್ದ. ಎಲ್ಲ ಕಡೆ ಓಡಾಡುವ ಪರವಾನಿಗೆಯಂತೂ ಇತ್ತು. ಎಲ್ಲದರ ಫೋಟೋ ತೆಗೆದ. ವಿವರವಾದ ರೇಖಾಚಿತ್ರಗಳನ್ನು(sketches) ಕೈಯಿಂದ ಬಿಡಿಸಿದ. ಖಾಲಿಯಿದ್ದ ಕಚೇರಿಗಳನ್ನು ಹೊಕ್ಕ. ಕೈಗೆ ಸಿಕ್ಕ ಕಡತಗಳನ್ನು ನೋಡಿದ. ಮಾಹಿತಿ ಸಂಗ್ರಹಿಸಿದ. ರಕ್ಷಣಾ ವ್ಯವಸ್ಥೆ ಮಾತ್ರ ಇನ್ನೂ ಗಾಢ ನಿದ್ರೆಯಲ್ಲಿತ್ತು.

ವನುನುನ ಮೇಲ್ವಿಚಾರಕರಿಗೆ ಇವನ ಖತರ್ನಾಕ್ ಹವ್ಯಾಸಗಳ ಬಗ್ಗೆ ಏನೂ ಗೊತ್ತಿರಲಿಲ್ಲ. ತನ್ನ ಪಾಡಿಗೆ ತಾನಿರುವ, ಗಂಭೀರ ಸ್ವಭಾವದ, ಪರಿಶ್ರಮದಿಂದ ಕೆಲಸ ಮಾಡುವ ತಂತ್ರಜ್ಞ ಎಂದೇ ಭಾವಿಸಿದ್ದರು.

ಇಸ್ವಿ ೧೯೮೫ ರ ಮುಕ್ತಾಯದ ಹೊತ್ತಿಗೆ ವನುನುವನ್ನು ನೌಕರಿಯಿಂದ್ ತೆಗೆಯಲಾಯಿತು. ಅವನ ಹಿಂದಿನ ಇತಿಹಾಸದ ಕಾರಣದಿಂದಲ್ಲ. ಹಣಕಾಸಿನ ಮುಗ್ಗಟ್ಟು ದೇಶವ್ಯಾಪಿಯಾಗಿತ್ತು. ಎಲ್ಲ ಇಲಾಖೆಗಳ ಬಜೆಟ್ ಕಡಿತವಾಗಿತ್ತು. ಡಿಮೋನಾ ಅಣುಸ್ಥಾವರವೂ ತನ್ನ ಆಯವ್ಯಯವನ್ನು ಸರಿತೂಗಿಸಬೇಕಾಗಿತ್ತು. ಹಾಗಾಗಿ ಒಂದಿಷ್ಟು ನೌಕರನ್ನು ತೆಗೆಯಬೇಕಾಗಿತ್ತು. ಅಂತವರಲ್ಲಿ ಒಬ್ಬ ವನುನು ಕೂಡ.

ನೌಕರಿಯಿಂದ ತೆಗೆದು ಬರಿಗೈಯಲ್ಲೇನೂ ಕಳಿಸಲಿಲ್ಲ. ೧೫೦%  ಬೇರ್ಪಡಿಕೆ (severance) ಪ್ಯಾಕೇಜ್ ಕೊಡಲಾಯಿತು. ಎಂಟು ತಿಂಗಳುಗಳ ಸಂಬಳವನ್ನೂ ಕೊಡಲಾಯಿತು. ಇಷ್ಟೆಲ್ಲಾ ಕೊಟ್ಟು ಕೈ ಮುಗಿದ ಡಿಮೋನಾ ಅಣುಸ್ಥಾವರ ಶುಭ ಕೋರಿ ಮಾರ್ಡೇಕೈ ವನುನುವನ್ನು ಮನೆಗೆ ಕಳಿಸಿತು.

ವನುನುವಿನ ಮನಸ್ಸು ಮತ್ತೂ ಕಹಿಯಾಯಿತು. ತಾನು ಮೊರಾಕೊ ಮೂಲದವನು ಎಂದು ಭೇದಭಾವ ಮಾಡುತ್ತಾರೆ ಎನ್ನುವ ಕೊರಗು ಮೊದಲಿಂದಲೂ ಇತ್ತು. ಈಗ ಅದು ಇನ್ನೂ ಬಲವಾಯಿತು. ವ್ಯವಸ್ಥೆಯ ಮೇಲೆ ಕೋಪವೂ ಬಂತು.

ಒಂದು ಧೀರ್ಘ ಪ್ರವಾಸ ಹೋಗಿಬರೋಣ ಎಂದುಕೊಂಡ. ಇಸ್ರೇಲ್ ಬಿಟ್ಟು ಬೇರೆ ಯಾವುದಾದರೂ ದೇಶ ಸಿಕ್ಕು, ಅದು ಇಷ್ಟವಾಗಿ, ಅಲ್ಲಿ ಶಾಶ್ವತವಾಗಿ ಉಳಿಯುವಂತಾದರೆ ಇಸ್ರೇಲಿಗೆ ವಾಪಸ್ ಬರುವುದೇ ಬೇಡ ಎಂದುಕೊಂಡ.  ಇಸ್ರೇಲ್ ಎಷ್ಟೇ ಯಹೂದಿಗಳ ನಾಡು ಎಂದುಕೊಂಡರೂ ಒಂದು ಕೋಟಿಗೂ  ಮೀರಿ ಯಹೂದಿಗಳು ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ನೆಲೆಸಿದ್ದರು. ತಾನೂ ಕೂಡ ಅಂತವರಲ್ಲಿ ಒಬ್ಬವನಾಗಿಬಿಟ್ಟರೆ ಹೇಗೆ ಎನ್ನುವ ವಿಚಾರ ಕೂಡ ಬಂತು.

ವನುನು ತನ್ನ ಫ್ಲಾಟ್ ಮಾರಿದ. ಕಾರನ್ನು ವಿಲೇವಾರಿ ಮಾಡಿದ. ಎಲ್ಲ ಬ್ಯಾಂಕ್ ಖಾತೆಗಳಿಂದ ರೊಕ್ಕ ತೆಗೆದುಕೊಂಡ. ಬ್ಯಾಂಕ್ ಖಾತೆಗಳನ್ನು ಮುಚ್ಚಿದ.

ಬೆನ್ನ ಮೇಲೊಂದು ಚೀಲ ನೇತಾಡಿಸಿಕೊಂಡು ದೇಶಾಂತರ ಹೊರಟುಬಿಟ್ಟ. ಮೊದಲೂ ದೂರದ ದೇಶಗಳಿಗೆ ಪ್ರವಾಸ ಹೋಗಿದ್ದ. ಹಿಂದೊಮ್ಮೆ ಯೂರೋಪ್ ಮತ್ತು ಅಮೇರಿಕಾ ಎಲ್ಲ ಸುತ್ತಾಡಿ ಬಂದಿದ್ದ. ಈ ಸಲ ಪೂರ್ವದತ್ತ ಮುಖ ಮಾಡಿದ.

ಮೊದಲು ಗ್ರೀಸ್ ದೇಶಕ್ಕೆ ಹೋದ. ಅಲ್ಲಿ ಕೆಲ ಕಾಲ ತಂಗಿದ್ದ. ನಂತರ ಅಲ್ಲಿಂದ ರಶಿಯಾ, ಥೈಲ್ಯಾಂಡ್ ಮಾರ್ಗವಾಗಿ ನೇಪಾಳ ಸೇರಿಕೊಂಡ. ಕಾಠಮಂಡುವಿನಲ್ಲಿ ಇಸ್ರೇಲಿ ಯುವತಿಯೊಬ್ಬಳು ಸಿಕ್ಕಳು. ನಿರ್ಲಜ್ಜನಂತೆ ಅವಳಿಗೆ ಗಾಳ ಹಾಕಿದ. ಅವಳಿಗೆ ತನ್ನ ಕಹಾನಿ ಹೇಳಿಕೊಂಡ. ಬಲಪಂಥೀಯ ವಿಚಾರಧಾರೆಯನ್ನು ಖಂಡಿಸಿದ. ತನ್ನ ಎಡಪಂಥೀಯ ವಿಚಾರಧಾರೆಯನ್ನು ಸಮರ್ಥಿಸಿಕೊಂಡ. ಹೆಚ್ಚಾಗಿ ವಾಪಸ್ ಹೋಗುವುದಿಲ್ಲ ಎಂದ. ಅವಳೇನು ಹೇಳಿದಳೋ, ಇವನ ಗಾಳಕ್ಕೆ ಬಿದ್ದಳೋ ಇಲ್ಲವೋ ಗೊತ್ತಿಲ್ಲ. ಬೌದ್ಧರ ಮಂದಿರಕ್ಕೆ ಹೋದ. ಬೌದ್ಧನಾಗಿಬಿಡುವ ಖಯಾಲೂ ಕೂಡ ಬಂತು.

ಕಾಠಮಂಡುವಿನಲ್ಲಿ ಸ್ವಲ್ಪ ದಿನ ಕಳೆದ ನಂತರ ಸೀದಾ ಆಸ್ಟ್ರೇಲಿಯಾಗೆ ಹೋಗಿಬಿಟ್ಟ. ಸಿಡ್ನಿ ನಗರದಲ್ಲಿ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿದ. ಆದರೂ ಸಂತೋಷವಿರಲಿಲ್ಲ. ತುಂಬಾ ಏಕಾಂಗಿತನ ಮತ್ತು ಏಕತಾನತೆ ಕೊರೆಯತೊಡಗಿತು. ಬೇಸರವಾಗತೊಡಗಿತು.

ಒಂದು ದಿನ ಸಿಡ್ನಿ ನಗರದ ಕುಖ್ಯಾತ ಬಡಾವಣೆವೊಂದಕ್ಕೆ ಹೋದ. ಬೀದಿ ವೇಶ್ಯೆಯರ, ಕಳ್ಳರ, ಸುಳ್ಳರ, ಡ್ರಗ್ ಮಾರಾಟಗಾರರ ಕೊಂಪೆ ಅದು. ದೇವರು ಎಲ್ಲ ಕಡೆ ಇದ್ದಾನೋ ಇಲ್ಲವೋ ಗೊತ್ತಿಲ್ಲ. ಆದರೆ ದೇವಸ್ಥಾನಗಳಂತೂ ಇರುತ್ತವೆ. ಆ ಮಾದರಿಯಲ್ಲಿ ಆ ಕೊಂಪೆಯಲ್ಲೂ ಒಂದು ಚರ್ಚ್ ಇತ್ತು. ಮಾಡಲು ಏನೂ ಕೆಲಸವಿರಲಿಲ್ಲ. ಚರ್ಚಿನೊಳಕ್ಕೆ ಹೊಕ್ಕ. ಅಲ್ಲಿನ ಪಾದ್ರಿ ಪ್ರೀತಿಯಿಂದ ಬರಮಾಡಿಕೊಂಡ. ಈ ಇಸ್ರೇಲಿ ಅಬ್ಬೇಪಾರಿಗೆ ಊಟ ಮತ್ತು ಆಶ್ರಯದ ತುಂಬಾ ಜರೂರತ್ತಿದೆ ಎಂದು ನೋಡಿದ ಕೂಡಲೇ ಗೊತ್ತಾಗುವಂತಿತ್ತು. ಅದನ್ನು ದಯಪಾಲಿಸಿದ. ಸ್ನೇಹದ ಹಸ್ತ ಚಾಚಿದ. ಅಬ್ಬೇಪಾರಿಯಾಗಿದ್ದ ವನುನುವಿಗೆ ಆಶ್ರಯದಾತ ಮತ್ತು ಆಪಧ್ಬಾಂಧವನಾದ ಆ ಪಾದ್ರಿ. ಮುಂದಿನ ಎರಡು ವಾರಗಳ ಕಾಲ ಇಬ್ಬರೂ ತುಂಬಾ ಹತ್ತಿರವಾದರು. ತನ್ನ ಕಥೆಯೆನ್ನೆಲ್ಲಾ ಪೂರ್ತಿಯಾಗಿ ಬಿಚ್ಚಿ ಹೇಳಿಕೊಂಡ ವನುನು. ಪಾದ್ರಿ ತಲೆಯಾಡಿಸುತ್ತ ಎಲ್ಲವನ್ನೂ ಕೇಳಿದ. ಎರಡು ವಾರಗಳಾಗುವಷ್ಟರಲ್ಲಿ ವನುನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ. ಜಾನ್ ಕ್ರಾಸ್ಮನ್ ಎನ್ನುವ ಹೊಸ ಹೆಸರನ್ನು ಪಡೆದುಕೊಂಡ. ಅಂದು ತಾರೀಕು - ಆಗಸ್ಟ್ ೧೭, ೧೯೮೬.

ವನುನು ಅಷ್ಟೊಂದು ಕಟ್ಟರ್ ಯಹೂದಿಯಾಗಿರದಿದ್ದರೂ ಕ್ರೈಸ್ತ ಧರ್ಮಕ್ಕೆ ಸೇರಿದಾಗ ಒಂದು ತರಹದ ಕಸಿವಿಸಿಯಾಗಿದ್ದಂತೂ ನಿಜ. ಕ್ರೈಸ್ತನಾಗದೇ ಹೋಗಿದ್ದರೆ ಬೌದ್ಧ ಅಥವಾ ಬೇರೆ ಧರ್ಮಕ್ಕೆ ಸೇರುವುದು ಖಾತ್ರಿಯಿತ್ತು. ಧರ್ಮ ಬದಲಾಯಿತು. ಇಸ್ರೇಲ್ ಬಗ್ಗೆ ನಿಷ್ಠೆ ಮತ್ತೂ ಕಮ್ಮಿಯಾಯಿತು.

ಚರ್ಚಿನ ಒಂದು ಸಮಾರಂಭದಲ್ಲಿ, ವನುನು ತನ್ನ ಮಿತ್ರರಿಗೆ ತನ್ನ ಹಿನ್ನೆಲೆಯನ್ನು ವಿವರವಾಗಿ ಹೇಳಿಕೊಳ್ಳುತ್ತಿದ್ದ. ಇಸ್ರೇಲ್ ಬಗ್ಗೆ ಹೇಳಿದ. ಅಲ್ಲಿನ ಡಿಮೋನಾ ಅಣುಸ್ಥಾವರದ ಬಗ್ಗೆ ಕೊರೆದ. ತನ್ನ ಕೆಲಸದ ಬಗ್ಗೆ ಮಾತಾಡಿದ. ತನ್ನಲ್ಲಿರುವ ಫೋಟೋಗಳನ್ನು ಉಪಯೋಗಿಸಿ ಒಂದು ಸ್ಲೈಡ್ ಶೋ (Slide show) ಮಾಡಿ ತೋರಿಸಲೇ ಎಂದು ಕೇಳಿದ. ಇವನ ವಿಚಿತ್ರ ಕಥೆ ಕೇಳಿದ ಹೊಸ ಸ್ನೇಹಿತರಿಗೆ ತಲೆಬುಡ ಅರ್ಥವಾಗಲಿಲ್ಲ.

ಆದರೆ ಒಬ್ಬನಿಗೆ ಮಾತ್ರ ವನುನು ಹೇಳುತ್ತಿದ್ದ ವಿಷಯಗಳಲ್ಲಿ ಆಸಕ್ತಿ ಮೂಡಿತು. ಅವನ ಹೆಸರು ಆಸ್ಕರ್ ಗುರಿರೋ. ಅವನು ಮೂಲತಃ ಕೊಲಂಬಿಯಾ ದೇಶದವನು. ಅವನೂ ಸಹ ದೇಶವಿದೇಶ ಸುತ್ತಲು ಬಂದಿದ್ದ. ತಾತ್ಕಾಲಿಕವಾಗಿ ಸಿಡ್ನಿಯಲ್ಲಿ ನೆಲಸಿದ್ದ. ಅದೇ ಚರ್ಚಿನಲ್ಲಿ ಉಳಿದಿದ್ದ. ಅವನು ಪತ್ರಕರ್ತ ಎಂದೂ ಕೆಲಸ ಮಾಡಿದ್ದ. ಪರಮರಹಸ್ಯವಾದ ಅಣುಸ್ಥಾವರದ ಬಗ್ಗೆ ವನುನು ಅಷ್ಟು ವಿವರವಾಗಿ ಮಾತಾಡುವುದನ್ನು ಕೇಳಿ ಆಶ್ಚರ್ಯಚಕಿತನಾದ. ನಿನ್ನಲ್ಲಿರುವ ಮಾಹಿತಿ ತುಂಬಾ ಮಹತ್ವದ್ದು. ಅದನ್ನು ಪದ್ಧತಿ ಪ್ರಕಾರ ಪ್ರಕಟಿಸಿದರೆ ಸಿಕ್ಕಾಪಟ್ಟೆ ರೊಕ್ಕ, ಹೆಸರು ಎಲ್ಲ ಬರುತ್ತದೆ ಎಂದು ಪಂಪ್ ಹೊಡೆದ. ಕೊನೆಗಾದರೂ ಒಬ್ಬನಾದರೂ ಅರ್ಥಮಾಡಿಕೊಂಡನಲ್ಲ ಎಂದು ವನುನು ಉಬ್ಬಿಹೋದ.

ವನುನುವಿಗೆ ರೊಕ್ಕ ತ್ವರಿತವಾಗಿ ಬೇಕಾಗಿತ್ತು. ಜೊತೆಗೆ ಕೀರ್ತಿ, ಪ್ರಸಿದ್ಧಿ ಬಂದರೆ ಅದು ಬೋನಸ್. ಅದರಿಂದ ಅಂತರರಾಷ್ಟ್ರೀಯ ಮಟ್ಟದ ಮನ್ನಣೆ ಬಂದರೆ ಅದನ್ನು ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಮಧ್ಯೆ ಶಾಂತಿಯನ್ನು ತರಲು ಸಹಕಾರಿಯಾದೀತು ಅಂದುಕೊಂಡ. ಅದೇನೂ ಅವನ ಮೂಲ ಯೋಜನೆಯಾಗಿರಲಿಲ್ಲ. ಆದರೆ ಮನುಷ್ಯನಿಗೆ ಸಮಾಜದಲ್ಲಿ ಒಂದು ಉನ್ನತ ಸ್ಥಾನ ಮಾನ ಬರುತ್ತದೆಯೆಂದಾದರೆ ಇಂತಹ ಉನ್ನತ ಆಲೋಚನೆಗಳು ಬರುತ್ತವೆ. ವನುನುವಿಗೆ ಒಂದು ವಿಷಯ ಸ್ಪಷ್ಟವಾಗಿತ್ತು. ತಾನು ಕದ್ದು ತಂದಿರುವ ಫೋಟೋಗಳನ್ನು, ಮಾಹಿತಿಗಳನ್ನು ಪ್ರಕಟಿಸಿದರೆ ತಾನು ಶಾಶ್ವತವಾಗಿ ಇಸ್ರೇಲಿನ ವಿರೋಧಿಯಾಗುತ್ತೇನೆ. ಮತ್ತು ತನಗೆ ಯಾವ ರೀತಿಯ ಕ್ಷಮೆಯೂ ಲಭ್ಯವಾಗುವುದಿಲ್ಲ.

ವನುನು ಮತ್ತು ಅವನ ಹೊಸ ಮಿತ್ರ ಗುರಿರೋ ಕೂಡಿ  ಸಿಡ್ನಿಯ ಫೋಟೋ ಸ್ಟುಡಿಯೋವೊಂದಕ್ಕೆ ಹೋದರು. ಅಣುಸ್ಥಾವರದ ಫೋಟೋಗಳ ಪ್ರತಿಗಳನ್ನು ಮಾಡಿಸಿಕೊಂಡರು. ಸಿಡ್ನಿಯಲ್ಲಿದ್ದ ಅಮೆರಿಕಾದ ಪತ್ರಿಕೆಗಳ ಕಚೇರಿಗಳನ್ನು ಮತ್ತು ಆಸ್ಟ್ರೇಲಿಯಾಯದ ಟೆಲಿವಿಷನ್ ಚಾನೆಲ್ಲುಗಳ ಕಚೇರಿಗಳನ್ನು ತಡಕಾಡಿದರು. ಹೆಚ್ಚಿನ ಕಡೆ ಪ್ರವೇಶ ಸಿಗಲಿಲ್ಲ. ಇವರ ಬೇವರ್ಸಿ ಅವತಾರವನ್ನು ನೋಡಿಯೇ ಇವರು ಯಾರೋ ಎಬಡೇಶಿಗಳು, ತರಲೆಗಳು ಎಂದು ಕಾವಲಿನವರೇ ಓಡಿಸಿಬಿಟ್ಟರು. ಎಲ್ಲೋ ಒಂದೆರೆಡು ಕಡೆ ಒಳಗೆ ಹೋಗುವ ಭಾಗ್ಯ ಸಿಕ್ಕರೂ ಇವರ ತಲೆಬುಡವಿಲ್ಲದ ಮಾತುಗಳು ಅರ್ಥವಾಗದೇ ವಾಪಸ್ ಕಳಿಸಿಬಿಟ್ಟರು. ಅಂದು ಮಾಧ್ಯಮದ ಮಂದಿಗೆ ಗೊತ್ತಿರಲಿಲ್ಲ ತಾವೆಂತಹ ಬ್ರೇಕಿಂಗ್ ನ್ಯೂಸ್ ಮಾದರಿಯ ಮೆಗಾ ಸ್ಕೂಪ್ ಒಂದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು.

ಆಸ್ಟ್ರೇಲಿಯಾದಲ್ಲಂತೂ ಏನೂ ಗಿಟ್ಟಲಿಲ್ಲ. ಬೇರೆ ಕಡೆ ನೋಡೋಣ ಎಂದುಕೊಂಡು ಗುರಿರೋ ಯೂರೋಪಿಗೆ ಹಾರಿದ. ಸ್ಪೇನ್ ಮತ್ತು ಇಂಗ್ಲೆಂಡ್ ದೇಶದಲ್ಲಿ ಅದೃಷ್ಟ ಖುಲಾಯಿಸುವ ಲಕ್ಷಣ ಕಂಡುಬಂತು. ಲಂಡನ್ನಿನ ಖ್ಯಾತ ಪತ್ರಿಕೆ 'ಸಂಡೆ ಟೈಮ್ಸ್' ಸಂಪಾದಕರು ಆಸಕ್ತಿ ತೋರಿಸಿದರು. ಪಕ್ಕಾ ಉದ್ಯಮಿಯಾಗಿದ್ದ ಅವರಿಗೆ ಈ ಸುದ್ದಿಯ ಮಹತ್ವ ಗೊತ್ತಾಗಲು ಹೆಚ್ಚಿನ ವೇಳೆ ಬೇಕಾಗಲಿಲ್ಲ. ಇಸ್ರೇಲಿ ಅಣುಸ್ಥಾವರದ ಸುದ್ದಿ ನಿಜವೇ ಆಗಿದ್ದರೆ ಅದು ಎಂತಹ ದೊಡ್ಡ ಸ್ಪೋಟಕ ಸುದ್ದಿಯಾಗಲಿದೆ ಎಂದು ಬರೋಬ್ಬರಿ ಅರ್ಥವಾಯಿತು. ಆದರೆ ಸುದ್ದಿಯನ್ನು ಸಾದ್ಯಂತವಾಗಿ ಕೂಲಂಕಷವಾಗಿ ಪರಿಶೀಲನೆ  ಮಾಡಬೇಕಾಗಿತ್ತು. ಹಿಂದೊಮ್ಮೆ ಆದ ಘಟನೆಯಿಂದ ಪಾಠ ಕಲಿತಿದ್ದರು ಅವರು. ಹಿಟ್ಲರ್ ಬರೆದ ದಿನಚರಿಗಳು ಎಂದು ಅವರಿಗೆ ಉಂಡೆನಾಮ ತಿಕ್ಕಿ ಹೋಗಿದ್ದರು ಇಂತಹದೇ ಮಂದಿ. ರೊಕ್ಕ ಹೋದರೆ ದೊಡ್ಡ ಮಾತಲ್ಲ. ಆದರೆ ಪ್ರತಿಷ್ಠಿತ ಪತ್ರಿಕೆಯೊಂದರಲ್ಲಿ ಬೊಗಳೆ ಸುದ್ದಿ ಬಂದರೆ ಅಷ್ಟೇ ಮತ್ತೆ. ಹೋದ ಮಾನ ಮತ್ತು ವಿಶ್ವಾಸ ಮತ್ತೆ ಬರುವುದಿಲ್ಲ.

ಈಕಡೆ ಆಸ್ಟ್ರೇಲಿಯಾದಲ್ಲಿ ಟೆಲಿವಿಷನ್ ಚಾನೆಲ್ ಒಂದು ಖತರ್ನಾಕ್ ಕೆಲಸ ಮಾಡಿಬಿಟ್ಟಿತು. ಸೀದಾ ಇಸ್ರೇಲಿ ರಾಯಭಾರ ಕಚೇರಿಗೆ ಫೋನ್ ಮಾಡಿ, ಒಬ್ಬ ವಿಚಿತ್ರ ಮನುಷ್ಯ ಬಂದು ನಿಮ್ಮ ದೇಶದ ಅಣುಸ್ಥಾವರದ ಬಗ್ಗೆ ಮಾಹಿತಿ ಕೊಡುತ್ತೇನೆ ಎಂದು ಹೇಳಿದ. ಅವನು ನಿಮ್ಮ ನಾಗರಿಕನೇ? ಎಂದು ಕೇಳಿಬಿಟ್ಟಿತು. ಇದು ಇಸ್ರೇಲಿ ವರದಿಗಾರನೊಬ್ಬನಿಗೆ ಗೊತ್ತಾಯಿತು. ಅವನಿಗೆ ಅದು ದೊಡ್ಡ ಸ್ಕೂಪ್. ಇಸ್ರೇಲಿನ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಯಿತು.

ಇಸ್ರೇಲಿನಲ್ಲಿ ದೊಡ್ಡ ಮಟ್ಟದ ಸಂಚಲನ. ಬ್ರಹ್ಮನಿಗೂ ಗೊತ್ತಾಗದಂತೆ ಕಾಪಾಡಿಕೊಂಡುಬಂದಿದ್ದ  ರಹಸ್ಯ ಬಯಲಾಗಿಹೋಗಿತ್ತು. ಅದೂ ತನ್ನದೇ ದೇಶದ ನಾಗರಿಕ, ಅಲ್ಲೇ ಕೆಲಸ ಮಾಡಿಕೊಂಡಿದ್ದ ತಂತ್ರಜ್ಞ ಲೀಕ್ ಮಾಡಿಬಿಟ್ಟಿದ್ದ. ದೊಡ್ಡ ಮಟ್ಟದ ಆತಂಕ ಮತ್ತು ಮುಜುಗರ. 'ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ,' ಎಂದು ತಲೆ ಮೇಲೆ ಕೈಹೊತ್ತು ಕೂತವರು ರಕ್ಷಣಾ ಇಲಾಖೆಯ ಭದ್ರತಾ ಕಾರ್ಯದರ್ಶಿ ಹೈಮ್ ಕಾರ್ಮನ್.

ಈ ಅನಾಹುತದ ಸುದ್ದಿಯನ್ನು ತ್ವರಿತವಾಗಿ ಹಾಲಿ ಮತ್ತು ಮಾಜಿ ಪ್ರಧಾನಿಗಳಿಗೆ ತಲುಪಿಸಲಾಯಿತು. ಅಂದಿನ ಪ್ರಧಾನಿ ಪೆರೇಸ್ ಮತ್ತು ಮಾಜಿ ಪ್ರಧಾನಿಗಳಾದ ರಾಬಿನ್ ಮತ್ತು ಶಮೀರ್ 'ರಾಷ್ಟ್ರೀಯ ಐಕ್ಯತೆ' ಎನ್ನುವ ಸಮ್ಮಿಶ್ರ ಸರ್ಕಾರದ ಪಾಲುದಾರರಾಗಿದ್ದರು. ಆದಷ್ಟು ಬೇಗ ವನುನುವನ್ನು ಕಂಡುಹಿಡಿಯಬೇಕು. ಎಲ್ಲೇ ಇದ್ದರೂ ಮುದ್ದಾಂ ಕಂಡುಹಿಡಿಯಬೇಕು. ಇಸ್ರೇಲಿಗೆ ಎತ್ತಾಕಿಕೊಂಡುಬರಬೇಕು. ವನುನುವನ್ನು ಸಿಕ್ಕಲ್ಲಿ 'ಮುಗಿಸಿ ಬಿಡುವ' ಸಲಹೆ ಕೂಡ ಬಂತು. ಅದನ್ನು ತಳ್ಳಿಹಾಕಲಾಯಿತು. ಪ್ರಧಾನಿ ಪೆರೇಸ್ ಫೋನೆತ್ತಿಕೊಂಡರು. ಅವರಿಗೆ ಗೊತ್ತಿತ್ತು ಯಾರಿಗೆ ಫೋನ್ ಮಾಡಬೇಕೆಂದು. ಮುಂದಿನ ಕ್ಷಣದಲ್ಲಿ ಅವರು ಇಸ್ರೇಲಿನ ಬಾಹ್ಯ ಬೇಹುಗಾರಿಕೆ ಸಂಸ್ಥೆ ಮೊಸ್ಸಾದ್ ಮುಖ್ಯಸ್ಥರೊಂದಿಗೆ ಜರೂರಿ ಮಾತುಕತೆ ಮಾಡುತ್ತಿದ್ದರು.

೧೯೮೨ ರಲ್ಲಿ ಮೊಸ್ಸಾದಿಗೆ ಹೊಸ ನಿರ್ದೇಶಕ ಬಂದಿದ್ದರು. ಅವರೇ ನಾಹುಮ್ ಅಡ್ಮೋನಿ. ಸರಿಸುಮಾರು ಇಪ್ಪತ್ತು ವರ್ಷಗಳ ನಂತರ ಮೂಲ ಮೊಸ್ಸಾದಿಗರೊಬ್ಬರು ಇಸ್ರೇಲಿನ ಬೇಹುಗಾರಿಕೆ ಸಂಸ್ಥೆಯ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ್ದರು. ಇದಕ್ಕೆ ಮೊದಲು ಹೆಚ್ಚಿನ ಮುಖ್ಯಸ್ಥರು ಸೇನೆಯಿಂದ ಬಂದಿರುತ್ತಿದ್ದರು. ಮೊಸ್ಸಾದಿನಲ್ಲೇ ಕೆಲಸ ಆರಂಭಿಸಿ, ಹಂತಹಂತವಾಗಿ ಬೆಳೆದುಬಂದ ಅಡ್ಮೋನಿ ಈಗ ನಿರ್ದೇಶಕರಾಗಿದ್ದರು.

ಹಿಂದಿನ ಮೊಸ್ಸಾದ್ ಡೈರೆಕ್ಟರ್  ಇತ್ಜಾಕ್ ಹೋಫೀ ಅವರ ಬಲಗೈಯಾಗಿದ್ದವರು ಅಡ್ಮೋನಿ. ಹೋಫೀ ಅವರ ನಿವೃತ್ತಿ ಬಳಿಕ ಡೈರೆಕ್ಟರ್ ಸ್ಥಾನಕ್ಕೆ ಬಂದಿದ್ದರು. ಏಳು ವರ್ಷಗಳ ಕಾಲ ನಿರ್ದೇಶಕರಾಗಿದ್ದರು ನಾಹುಮ್ ಅಡ್ಮೋನಿ. ಆ ಅವಧಿ ಅಷ್ಟೇನೂ ಚೆನ್ನಾಗಿರಲಿಲ್ಲ. ಆ ಏಳು ವರ್ಷಗಳಲ್ಲಿ ಇಸ್ರೇಲಿಗೆ ಮುಜುಗರ ತರುವಂತಹ ಹಲವಾರು ಘಟನೆಗಳಾಗಿಹೋಗಿದ್ದವು. ಜೊನಾಥನ್ ಪೊಲ್ಲಾರ್ಡ್ ಎನ್ನುವ ಅಮೇರಿಕನ್  ಮೂಲದ ಯಹೂದಿ ಅಮೇರಿಕಾ ಸೇನಾಪಡೆಗಳ ರಹಸ್ಯಗಳನ್ನು ಕದ್ದು ಸಿಕ್ಕಾಕಿಕೊಂಡು ಬಿದ್ದಿದ್ದ. ಬಂಧನವನ್ನು ತಪ್ಪಿಸಿಕೊಳ್ಳಲು ಅಮೆರಿಕಾದ ರಾಜಧಾನಿ ವಾಷಿಂಗ್ಟನ್ ನಲ್ಲಿದ್ದ ಇಸ್ರೇಲಿ ರಾಯಭಾರ ಕಚೇರಿಗೆ ಓಡಿಬಂದಿದ್ದ. ಅವನು ಬೇರೊಂದು ಬೇಹುಗಾರಿಕೆ ದಳಕ್ಕೆ ಕೆಲಸ ಮಾಡುತ್ತಿದ್ದ. ಆದರೆ ಮುಜುಗರ ಮಾತ್ರ ಇಡೀ ಇಸ್ರೇಲಿಗೆ ಮತ್ತು ಮೊಸ್ಸಾದಿಗೆ ಆಗಿತ್ತು. ಅಧ್ಯಕ್ಷ ರೇಗನ್ ಅವರ ನೌಕರಿಯನ್ನು ಕಳೆದೇಬಿಟ್ಟಿದ್ದ ಇರಾನ್ - ಕಾಂಟ್ರಾ ಹಗರಣದಲ್ಲಿ ಇಸ್ರೇಲಿಗಳ ಕೈವಾಡವಿದೆ ಎಂದು ಗುಲ್ಲೆದ್ದಿತ್ತು. ವಿಶ್ವದ ಬೇರೆ ಬೇರೆ ಕಡೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ಮೊಸ್ಸಾದಿನ ಏಜೆಂಟರು ಸಿಕ್ಕಿ ಬಿದ್ದಿದ್ದರು. ಅವರನ್ನು ಬಿಡಿಸಿಕೊಂಡು ಬರುವಷ್ಟರಲ್ಲಿ ತಲೆ ಹನ್ನೆರಡಾಣೆ ಆಗಿತ್ತು. ಎಷ್ಟೋ ದೊಡ್ಡ ತಲೆಗಳು ಮನೆಗೆ ಹೋಗಿದ್ದವು ಕೂಡ. ಅವಕ್ಕೆಲ್ಲ ತಿಲಕವಿಟ್ಟಂತೆ ಆಗಿತ್ತು ಈ ವನುನು ಎಂಬ ಮಾಜಿ ತಂತ್ರಜ್ಞ ಅಣುಸ್ಥಾವರದ ರಹಸ್ಯ ಮಾಹಿತಿಯನ್ನು ಕದ್ದು ಓಡಿಹೋಗಿದ್ದು.

ಪ್ರಧಾನಿ ಪೆರೇಸ್ ಜೊತೆ ಮಾತಾಡಿ ಮುಗಿಸಿದಾಕ್ಷಣ ಮೊಸ್ಸಾದ್ ಮುಖ್ಯಸ್ಥ ಕಾರ್ಯಪ್ರವೃತ್ತರಾದರು. ವನುನುವನ್ನು ಬಂಧಿಸಿ ಇಸ್ರೇಲಿಗೆ ಕರೆತರುವ ಕಾರ್ಯಾಚರಣೆ ಜಾರಿಗೆ ಬಂದಿತು. ಎಂದಿನಂತೆ ಅದಕ್ಕೊಂದು ಕೋಡ್ ನೇಮ್ (Code name) ಬೇಕಾಗಿತ್ತು. ಮೊಸ್ಸಾದಿನ ಕಂಪ್ಯೂಟರ್ ಒಂದು ಹೆಸರನ್ನು ಉಗುಳಿತು...ಆಪರೇಷನ್ ಕಾನಿಯುಕ್ (Operation Kaniuk).
 
ವಿಶಿಷ್ಟ ಕಾರ್ಯಾಚರಣೆಗಳನ್ನು ಮಾಡುವ ಮೊಸ್ಸಾದಿನ ತಂಡವೊಂದನ್ನು ತ್ವರಿತವಾಗಿ ಆಸ್ಟ್ರೇಲಿಯಾಗೆ ರವಾನೆ ಮಾಡಲಾಯಿತು. ತಲುಪಿದ್ದು ಕೊಂಚ ತಡವಾಗಿತ್ತು. ಖದೀಮ ಮಾರ್ಡೇಕೈ ವನುನು ಆಸ್ಟ್ರೇಲಿಯಾ ಬಿಟ್ಟು ಪರಾರಿಯಾಗಿದ್ದ. ಇಂಗ್ಲೆಂಡ್ ತಲುಪಿಕೊಂಡಿದ್ದ. 

ಗುರಿರೋನನ್ನು ಭೇಟಿಮಾಡಿದ ನಂತರ ಇಂಗ್ಲೆಂಡಿನ ಸಂಡೆ ಟೈಮ್ಸ್ ಪತ್ರಿಕೆಯ ಸಂಪಾದಕರು  ಪೀಟರ್ ಹೌನಮ್ ಎಂಬ ಚತುರ ವರದಿಗಾರನನ್ನು ಮಾರ್ಡೇಕೈ ವನುನುವನ್ನು ಭೇಟಿಮಾಡಲು ಆಸ್ಟ್ರೇಲಿಯಾಗೆ ಕಳಿಸಿದರು. ಅಷ್ಟರಹೊತ್ತಿಗೆ ಬ್ರಿಟಿಷ್ ವಿಜ್ಞಾನಿಗಳು ಗುರಿರೋ ತಂದಿರುವ ಫೋಟೋಗಳ ಪರೀಕ್ಷೆ ಮಾಡಿದ್ದರು ಮತ್ತು ಅವುಗಳ ನೈಜತೆಯನ್ನು ಖಾತ್ರಿಪಡಿಸಿದ್ದರು. ಅಷ್ಟು ಖಾತ್ರಿಯಾಗಿದ್ದಕ್ಕೆ ಪೀಟರ್ ಹೌನಮ್ ಆಸ್ಟ್ರೇಲಿಯಾಕ್ಕೆ ಹೋಗುವ ನಿರ್ಧಾರ ಮಾಡಿದ್ದ. ಆಸ್ಟ್ರೇಲಿಯಾದ ಸಿಡ್ನಿ ತಲುಪಿ, ಮಾರ್ಡೇಕೈ ವನುನುವನ್ನು ಭೇಟಿಯಾದ ಮೇಲೆ ಪೀಟರ್ ಹೌನಮ್ ಗೆ ವನುನು ಹೇಳುತ್ತಿರುವುದು ನಿಜ ಎಂದು ಮನದಟ್ಟಾಯಿತು. ಗುರಿರೋ ಏನೇನೋ ಭೋಂಗು ಬಿಟ್ಟಿದ್ದ. ವನುನು ಒಬ್ಬ ದೊಡ್ಡ ಇಸ್ರೇಲಿ ವಿಜ್ಞಾನಿ ಎಂದೆಲ್ಲ ಅತಿಶಯ ವರ್ಣನೆ ಮಾಡಿದ್ದ. ಆದರೆ ವನುನು ಮಾತ್ರ ಸತ್ಯ ಹೇಳಿದ. ತಾನೊಬ್ಬ ಅಣುಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ ಸಾಮಾನ್ಯ ತಾಂತ್ರಿಕ ಕೆಲಸಗಾರ ಎಂದಷ್ಟೇ ಹೇಳಿಕೊಂಡ. 

ಇಷ್ಟಾದ ಮೇಲೆ ವರದಿಗಾರ ಹೌನಮ್ ಮತ್ತು ವನುನು ಲಂಡನ್ನಿಗೆ ಹಾರಿದರು. ಗುರಿರೋ ಆಸ್ಟ್ರೇಲಿಯಾದಲ್ಲೇ ಉಳಿದ. 

ಲಂಡನ್ನಿನಲ್ಲಿ ಸಂಡೆ ಟೈಮ್ಸ್ ಪತ್ರಿಕೆಯ ಹಲವಾರು ತನಿಖಾ ವರದಿಗಾರರು ವನುನುವನ್ನು ಮಾತಾಡಿಸಿದರು. ತೀಕ್ಷ್ಣ ಪ್ರಶ್ನೆಗಳನ್ನು ಕೇಳಿದರು. ಆಳಕ್ಕೆ ಇಳಿದು ಒಂದಾದಮೇಲೊಂದು ಸವಾಲುಗಳನ್ನು ಹಾಕಿ ಮಾರ್ಡೇಕೈ ಒಬ್ಬ ವಿಶ್ವಾಸಾರ್ಹ ವ್ಯಕ್ತಿ ಎಂದು ಖಾತ್ರಿ ಮಾಡಿಕೊಂಡರು. ತನಗೆ ಗೊತ್ತಿದ್ದ ಎಲ್ಲಾ ಮಾಹಿತಿಯನ್ನೂ ಮಾರ್ಡೇಕೈ ಹಂಚಿಕೊಂಡ. ಅಲ್ಲಿಯವರೆಗೆ ಯಾರಿಗೂ ಗೊತ್ತಿಲ್ಲದಿದ್ದ ಸುದ್ದಿಯೊಂದನ್ನೂ ಹೇಳಿದ - ಇಸ್ರೇಲ್ ನ್ಯೂಟ್ರಾನ್ ಬಾಂಬ್ ಕೂಡ ತಯಾರು ಮಾಡುತ್ತಿದೆ. ನ್ಯೂಟ್ರಾನ್ ಬಾಂಬಿನ ವಿಶೇಷತೆ ಏನಂದರೆ ಅದು ಜೀವಿಗಳನ್ನು ಮಾತ್ರ ಕೊಲ್ಲುತ್ತದೆ. ಕಟ್ಟಡ, ವಾಹನ ಇತ್ಯಾದಿಗಳನ್ನು ಹಾಗೇ ಬಿಡುತ್ತದೆ. ಕೇವಲ ವೈರಿಗಳನ್ನು ಮಾತ್ರ ನಿಕಾಲಿ ಮಾಡಬೇಕು. ಅವರ ಸಂಪತ್ತನ್ನು ಕೊಳ್ಳೆಹೊಡೆಯಬೇಕು ಎಂದು ಸ್ಕೆಚ್ ಹಾಕಿದ್ದರೆ ನ್ಯೂಟ್ರಾನ್ ಬಾಂಬ್ ಹೇಳಿ ಮಾಡಿಸಿದ ಅಸ್ತ್ರ. 

ಇಸ್ರೇಲಿನ ಅಣುಸ್ಥಾವರದಲ್ಲಿ ಹೇಗೆ ಅಣುಬಾಂಬುಗಳನ್ನು ತಯಾರಿಸುತ್ತಾರೆ ಎನ್ನುವುದನ್ನು ವಿವರವಾಗಿ ಹೇಳಿದ ವನುನು. ಈ ಸಮಯದಲ್ಲಿ ವನುನು ಆತಂಕಕ್ಕೆ ಒಳಗಾದಂತೆ ಕಾಣುತ್ತಿದ್ದ. ವಿಪರೀತವಾದ ಮಾನಸಿಕ ಒತ್ತಡದಲ್ಲಿ ಇದ್ದಂಗೆ ತೋರುತ್ತಿತ್ತು. ಇಸ್ರೇಲಿ ಬೇಹುಗಾರಿಕೆ ಸಂಸ್ಥೆ ಆತನನ್ನು ಅಪಹರಿಸಬಹುದು ಮತ್ತು ಕೊಲ್ಲಬಹುದು ಎಂದು ತುಂಬಾ ಚಿಂತಿತನಾಗಿದ್ದ. 

ಸಂಡೆ ಟೈಮ್ಸ್ ಜನ ಆತನನ್ನು ಸಮಾಧಾನ ಮಾಡಲು ಪ್ರಯತ್ನಿಸಿದರು. ಅವನು ಲಂಡನ್ನಿನಲ್ಲಿ ಸುರಕ್ಷಿತ ಎಂದು ನಂಬಿಸಲು ಪ್ರಯತ್ನಿಸಿದರು. ಅವನನ್ನು ಬೇರೊಂದು ಹೋಟೆಲ್ಲಿಗೆ ವರ್ಗಾಯಿಸಿದರು. ಅವನನ್ನು ಒಬ್ಬನೇ ಇರಲು ಬಿಡಲಿಲ್ಲ. ಒಬ್ಬರಾದ ಮೇಲೆ ಒಬ್ಬರು ಪಾಳಿಯಲ್ಲಿ ಅವನ ಜೊತೆಗೆ ಇದ್ದರು. ಕಂಪನಿ ಕೊಟ್ಟರು. ಒಬ್ಬಂಟಿಯಾಗಿ ಲಂಡನ್ನಿನ ಬೀದಿಗಳನ್ನು ಸುತ್ತಬೇಡ ಎಂದು ಎಚ್ಚರಿಕೆ ಕೂಡ ಕೊಟ್ಟಿದ್ದರು. ವನುನು ಆ ಒಂದು ಮಾತನ್ನು ಕೇಳಲಿಲ್ಲ. ಬೇಸರವಾದಾಗ ಬೀದಿ ಸುತ್ತಲು ಹೋಗುತ್ತಿದ್ದ. 

ಸಂಡೆ ಟೈಮ್ಸ್ ವಿವಿಧ ರೀತಿಗಳಿಂದ ಪರಿಶೀಲನೆ ಮಾಡಿ ವನುನು ಮತ್ತು ಆತನ ಬಳಿಯಿರುವ ಮಾಹಿತಿ ಎಲ್ಲ ನಿಜ ಎಂದು ಖಾತ್ರಿಮಾಡಿಕೊಂಡರು. ಅದನ್ನು ಅವನಿಂದ ಖರೀದಿ ಮಾಡಬೇಕಾಗಿತ್ತು. ಒಂದು ಅತ್ಯುತ್ತಮ ಡೀಲ್ ಕೊಟ್ಟರು. ಒಂದು ಲಕ್ಷ (೧೦೦,೦೦೦) ಡಾಲರ್. ತನಿಖಾ ವರದಿಗಳು ಬೇರೆ ಬೇರೆ ಕಡೆ ಹಂಚಿಕೆಯಾದರೆ ಅವುಗಳು ತರುವ ಮೊತ್ತದ ೪೦%. ಯಾರಾದರೂ ಪುಸ್ತಕ ಬರೆದು ಪ್ರಕಾಶಿಸಿದರೆ ಅದರ ೨೫% ಲಾಭ. ಮೀಡಿಯಾ ಮೊಗಲ್ ಎಂದೇ ಖ್ಯಾತರಾಗಿದ್ದ ರೂಪರ್ಟ್ ಮುರ್ಡೋಕ್ ಈ ಕಥೆಯನ್ನು ಸಿನೆಮಾ ಮಾಡಲು ಕೂಡ ಉತ್ಸುಕರಾಗಿದ್ದರು. ಅವರು ಸಂಡೆ ಟೈಮ್ಸ್, ಫಾಕ್ಸ್ ಸ್ಟುಡಿಯೋ ಇತ್ಯಾದಿಗಳ ಮಾಲೀಕರು. ಆ ಚಿತ್ರದಲ್ಲಿ ವನುನುವಿನ ಪಾತ್ರವನ್ನು ಖ್ಯಾತ ನಟ ರಾಬರ್ಟ್ ಡೇ ನಿರೋ ಮಾಡುವವರು ಇದ್ದರು. ಒಟ್ಟಿನಲ್ಲಿ ಅದ್ಭುತ ಎನ್ನಿಸುವಂತಹ ಆರ್ಥಿಕ ಡೀಲ್ ಕೊಟ್ಟಿದ್ದರು. 

ಲಂಡನ್ನಿನಲ್ಲಿ ಮಾರ್ಡೇಕೈ ವನುನುವಿಗೆ ಎಲ್ಲ ಸೌಲಭ್ಯಗಳನ್ನೂ ಕೊಡಮಾಡಲಾಗಿತ್ತು. ಒಂದೇ ಸಿಕ್ಕಿರಲಿಲ್ಲ. ಅದೇ ಸ್ತ್ರೀಸೌಖ್ಯ. ಬಹಳ ದಿವಸಗಳಾಗಿ ಹೋಗಿದ್ದವು. ಸ್ತ್ರೀ ಸಾಮಿಪ್ಯ ಮತ್ತು ಮಿಲನ ಸುಖವಿಲ್ಲದೆ ವನುನು ಒಣಗಿಹೋಗಿದ್ದ. ಹೈರಾಣಾಗಿದ್ದ. ತುರ್ತಾಗಿ ಒಂದು 'ಮಾಲ್' ಬೇಕಾಗಿತ್ತು. 

ರೋವೆನಾ ವೆಬ್ಸ್ಟರ್ ಎನ್ನುವ ಸಂಡೆ ಟೈಮ್ಸ್ ವರದಿಗಾರ್ತಿಗೂ ವನುನುವಿಗೆ ಹೋಟೆಲ್ಲಿನಲ್ಲಿ ಅವನಿಗೆ ಪಾಳಿ ಮೇಲೆ ಕಂಪನಿ ಕೊಡುವ ಜವಾಬ್ದಾರಿ ಬಂದಿತ್ತು. ಕೇವಲ ಸಮಯ ಕಳೆಯಲು ಕಂಪನಿ ಕೊಡಲು ಹೋದರೆ, 'ಬನ್ನಿ ಭಜನೆ ಮಾಡಬೇಕು ಅನ್ನಿಸುತ್ತಿದೆ. ತಡೆಯಲಾಗುತ್ತಿಲ್ಲ. ಕೂಡಿ ಮಲಗೋಣ. ಪ್ಲೀಸ್ ಬನ್ನಿ,' ಎಂದು ಆ ವರದಿಗಾರ್ತಿಯನ್ನು ಮಂಚ ಹತ್ತಿಸಲು ನೋಡಿದ್ದ. ನಿನ್ನ ಜೊತೆ ಮಲಗುವುದು ಅಸಾಧ್ಯ ಎಂದು ಆಕೆ ಮುಖದ ಮೇಲೆ ಹೊಡೆದಂತೆ ಹೇಳಿದ್ದಳು. ಎದ್ದು ಬಂದಿದ್ದಳು. ಆಕೆಯ ಪುಣ್ಯ. ಆಕೆಯನ್ನು ರೇಪ್ ಗೀಪ್ ಮಾಡುವ ದುಸ್ಸಾಹಸಕ್ಕೆ ಕೈಹಾಕಲಿಲ್ಲ ಈ ಕಾಮಪೀಡಿತ. ಕಾಮತೃಷೆ ವನುನುವಿನ ಬಲಹೀನತೆ ಎಂದು ಸಂಡೆ ಟೈಮ್ಸ್ ಮಂದಿಗೆ ಗೊತ್ತಾಗಲಿಲ್ಲ. ಅದೇ ದೊಡ್ಡ ಆಶ್ಚರ್ಯ. 

ಮಾರ್ಡೇಕೈ ವನುನು ಇಸ್ರೇಲಿ ಬೇಹುಗಾರಿಕೆ ಸಂಸ್ಥೆಗಳ ಬಗ್ಗೆ ಮತ್ತು ಅವು ತನ್ನ ಮೇಲೆ ಮಾಡಬಹುದಾದ ಕಾರ್ಯಾಚರಣೆಗಳ ಬಗ್ಗೆ ಬಹಳ ಹೆದರಿದ್ದ. ಆದರೆ ಲಂಡನ್ನಿನ ಸಂಡೇ ಟೈಮ್ಸ್ ಜನ ಆ ಆತಂಕವನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಇಸ್ರೇಲಿನ ಹೊರಗೆ, ಲಂಡನ್ನಿನ ಯಾವುದೋ ಮೂಲೆಯಲ್ಲಿ, ತಮ್ಮ ಕಣ್ಣಂಕೆಯಲ್ಲಿ ಇರುವಾಗ ಯಾರೇನು ಮಾಡಿಯಾರು ಎನ್ನುವ ಉದಾಸೀನತೆ. 

ಮಾರ್ಡೇಕೈ ವನುನುವಿನ ಜನ್ಮಜಾಲಾಡಿ ಬರಲು ಒಬ್ಬ ವರದಿಗಾರನನ್ನು ಸಂಡೆ ಟೈಮ್ಸ್ ಇಸ್ರೇಲಿಗೆ ಕಳಿಸಿತು. ಅವನು ಇಸ್ರೇಲಿನಲ್ಲಿ ತನಗೆ ಪರಿಚಯವಿದ್ದ ಇಸ್ರೇಲಿ ಪತ್ರಕರ್ತನೊಂದಿಗೆ ಹರಟೆ ಹೊಡೆದ. ಮಾರ್ಡೇಕೈ ವನುನು ಬಗ್ಗೆ ಮತ್ತು ಆತ ಹಂಚಿಕೊಂಡಿರುವ ಮಾಹಿತಿ ಬಗ್ಗೆ ಹೇಳಿದ. ಕೆಲವು ಸ್ಪಷ್ಟನೆಗಳನ್ನು ಪಡೆದುಕೊಂಡ. 

ಇಸ್ರೇಲಿಗಳ ದೇಶಪ್ರೇಮ ದೊಡ್ಡದು. ಆ ಇಸ್ರೇಲಿ ಪತ್ರಕರ್ತ ಸುಮ್ಮನೆ ಕೂಡಲಿಲ್ಲ. ಹೋದವನೇ ಇಸ್ರೇಲಿನ ಆಂತರಿಕ ತನಿಖಾ ಸಂಸ್ಥೆ ಶಬಾಕ್ ಗೆ ಎಲ್ಲ ವರದಿ ಒಪ್ಪಿಸಿದ. ಶಬಾಕ್ ಗೆ ಗೊತ್ತಾದ ನಂತರ ಆ ವಿಷಯ ಮೊಸ್ಸಾದಿಗೆ ತಿಳಿಯಲು ಜಾಸ್ತಿ ಸಮಯ ಬೇಕಾಗಲಿಲ್ಲ. 

ಮುಂದಿನ ಕೆಲವೇ ಘಂಟೆಗಳಲ್ಲಿ ಮೊಸ್ಸಾದಿನ ತಂಡವೊಂದು ಲಂಡನ್ನಿಗೆ ಹಾರಿತು. ಅದರ ನಾಯಕತ್ವ ವಹಿಸಿದ್ದವರು ಮೊಸ್ಸಾದಿನ ಉಪನಿರ್ದೇಶಕ  ಶಾಬಟೈ ಶಾವಿತ್. ಈ ನಿರ್ದಿಷ್ಟ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದವರು ಬೆನಿ ಝೀವಿ. ಮೊಸ್ಸಾದಿನ ಖತರ್ನಾಕ್ ಕಸೇರಿಯಾ ವಿಭಾಗದ ಮುಖ್ಯಸ್ಥ ಅವರು. 

ಲಂಡನ್ನಿನಲ್ಲಿ ಇಳಿಯುತ್ತಿದಂತೆ ಮೊಸ್ಸಾದಿನ ಇಬ್ಬರು ಬೇಹುಗಾರರು ಫೋಟೋಗ್ರಾಫರುಗಳ ಮಾರುವೇಷದಲ್ಲಿ ಸಂಡೆ ಟೈಮ್ಸ್ ಕಚೇರಿಗೆ ಹೋದರು. ಅಂದು ಅಲ್ಲಿ ಏನೋ ಹರತಾಳ ನಡೆಯುತ್ತಿತ್ತು. ಅದರ ಫೋಟೋ ತೆಗೆದರು. 

ಮುಂದಿನ ಕೆಲದಿನಗಳಲ್ಲಿ ಲಂಡನ್ ತುಂಬಾ ಮೊಸ್ಸಾದ್ ವ್ಯಾಪಕ ಫೀಲ್ಡಿಂಗ್ ಹಾಕಿತು. ಅವರಿಗೇನು ಲಂಡನ್ ಹೊಸ ಜಾಗವೇ? ಅಲ್ಲಿ ಅವೆಷ್ಟು ರಹಸ್ಯ ಕಾರ್ಯಾಚರಣೆಗಳನ್ನು ಮಾಡಿದ್ದರೋ. 

ಕೆಲವು ದಿನಗಳ ನಂತರ ಮಾರ್ಡೇಕೈ ವನುನು ಮೊಸ್ಸಾದ್ ಬೇಹುಗಾರರ ಕಣ್ಣಿಗೆ ಬಿದ್ದ. ಅವನ ಹಲವಾರು ಫೋಟೋಗಳನ್ನು ಅವನಿಗೆ ಗೊತ್ತಾಗದಂತೆ ತೆಗೆದರು. ಎಲ್ಲ ಕಡೆ ಅವನನ್ನು ರಹಸ್ಯವಾಗಿ ಹಿಂಬಾಲಿಸಿದರು. He was constantly under the surveillance. ಅವನ ಮತ್ತು ಅವನ ಆಚರಣೆಗಳ, ದಿನಚರಿಯ ಸಂಪೂರ್ಣ ಚಿತ್ರಣ (profile) ಅದೆಷ್ಟು ಚೆನ್ನಾಗಿ ತಯಾರು ಮಾಡಿಕೊಂಡಿದ್ದರು ಎಂದರೆ ಕೆಲವು ಬಾರಿ ವನುನು ಇಂಥಲ್ಲೇ ಹೋಗುತ್ತಾನೆ ಎಂದು ಕರಾರುವಕ್ಕಾಗಿ ಹೇಳಬಲ್ಲವರಾಗಿದ್ದರು ಮತ್ತು ಅಲ್ಲಿ ಅವನಿಗಿಂತ ಮೊದಲೇ ಪ್ರತ್ಯಕ್ಷರಾಗಿರುತ್ತಿದ್ದರು. Mossad agents were on the prowl. 

ಆ ದಿನ ಸೆಪ್ಟೆಂಬರ್ ೨೪,  ೧೯೮೬. ಸ್ಥಳ ಲಂಡನ್ನಿನ ಲೀಸ್ಟರ್ ಚೌಕ. ಅದು ಪ್ರವಾಸಿಗರ ನೆಚ್ಚಿನ ಸ್ಥಳ. ತಿರುಗಾಟದ ತಿಪ್ಪ ಮಾರ್ಡೇಕೈ ವನುನು ಕೂಡ ಸುತ್ತಾಡುತ್ತ ಸುತ್ತಾಡುತ್ತ ಅಲ್ಲೇ ಬಂದ. ಆ ಕಾಲಮಾನದಲ್ಲಿ ಟೀವಿ ಮೇಲೆ 'ಚಾರ್ಲೀಸ್ ಏಂಜೆಲ್ಸ್' ಎನ್ನುವ ಜನಪ್ರಿಯ ಕಾರ್ಯಕ್ರಮ ವಿಶ್ವದ ಎಲ್ಲಾ ಕಡೆ ತುಂಬಾ ಪ್ರಸಿದ್ಧವಾಗಿತ್ತು. ಫಾರಾ ಫಾಸೆಟ್ ಎನ್ನುವ ನಟಿ ಅದರ ನಾಯಕಿ. ಆಕೆ ಬಂಗಾರದ ಬಣ್ಣದ ಕೂದಲಿನ ಸುಂದರಿ. ನಟಿ ಫಾರಾ ಫಾಸೆಟ್ ಳನ್ನು ಹೋಲುವ ಸುಂದರಿಯೊಬ್ಬಳು ವನುನುವಿನ ಕಣ್ಣಿಗೆ ಅಲ್ಲಿ ಕಂಡುಬಂದಳು. ಅವನ ಕಣ್ಣಿಗೆ ಆಕೆ ಅಪ್ಸರೆಯ ಹಾಗೆ ಕಂಡಳು. ಹಸಿದಾಗ ಎಲ್ಲವೂ ರುಚಿಕರವಾಗಿ ಕಂಡಂತೆ... 

ಆ ಸುಂದರಿ ಪತ್ರಿಕೆ ಮಾರುವ ಅಂಗಡಿಯೊಂದರ ಮುಂದೆ ಸಾಲಿನಲ್ಲಿ ನಿಂತಿದ್ದಳು. ಆಕೆಯನ್ನು ನೋಡಿ ಜೊಲ್ಲು ಸುರಿಸಿದ ವನುನು. ಕಾಕತಾಳೀಯವೋ ಎಂಬಂತೆ ಆಕೆ ತಿರುಗಿ ನೋಡಿದಳು. ಸಹಜವಾಗಿ ವನುನು ಕಡೆ ನೋಡಿದಳು. ಆಕೆ ಒಂದು 'ಅರ್ಥಪೂರ್ಣವಾದ'  ದೀರ್ಘ ಲುಕ್ ಕೊಟ್ಟ ಹಾಗೆ ಅನ್ನಿಸಿತು. ಒಂದು ಕ್ಷಣ ಕಣ್ಣು ಕಣ್ಣು ಕಲೆತ ಮಧುರ ಅನುಭವ. ಅಷ್ಟರಲ್ಲಿ ಆಕೆಯ ಸರದಿ ಬಂತು. ಅಂಗಡಿಗೆ ಬಂದ ಕೆಲಸ ಮುಗಿಸಿದ ಸ್ವರ್ಣಕೇಶದ ಸುಂದರಿ ತನ್ನ ದಾರಿ ಹಿಡಿದು ಹೊರಟಳು. 

ವನುನು ಕೂಡ ತಿರುಗಿ ಹೊರಟ.  ಆಕ್ಷಣ ಅದ್ಯಾವ ದೆವ್ವ ಮೈಮೇಲೆ ಬಂದು ವಕ್ಕರಿಸಿಕೊಂಡಿತೋ ಗೊತ್ತಿಲ್ಲ. ಸರಕ್ ಅಂತ ತಿರುಗಿ ಸುಂದರಿಯ ಹಿಂದೆ ಬಿದ್ದ. ಲಗುಬಗೆಯಿಂದ ಹಿಂಬಾಲಿಸಿದ. ಅವಳನ್ನು ಮಾತಾಡಿಸಬೇಕು ಎನ್ನುವ ತೀವ್ರ ಇಚ್ಛೆ. ಧೈರ್ಯ ಸಾಕಾಗುತ್ತಿಲ್ಲ. ಹೃದಯ ಯದ್ವಾತದ್ವಾ ಬಡಿಯುತ್ತಿದೆ. ಕಿತ್ತು ಬಾಯಿಗೆ ಬರುತ್ತಿದೆ. ಮುಂದೆ ಬಳುಕುತ್ತಾ ನಡೆಯುತ್ತಿರುವ ಸುಂದರಿ. 

ಅದೆಲ್ಲಿಂದಲೋ ಧೈರ್ಯ ಮಾಡಿದ. 'ಹಲೋ ಮಿಸ್!' ಅಂದೇಬಿಟ್ಟ. ಆಕೆ ತಿರುಗಿ ನೋಡಿದಳು. ಒಂದು ಚಂದನೆಯ ಮುಗುಳ್ನಗೆ ಬೀರಿದಳು. ಸುಂದರಿಯರ ಮುಗುಳ್ನಗೆಯ ಶಕ್ತಿಯೇ ಅದು. ಒಂದು ಕ್ಷಣಕ್ಕೆ ಎಲ್ಲ ತಿಳಿಯಾಯಿತು. ಕಾರ್ಮೋಡ ಕಳೆದು ನೀಲಾಕಾಶ ಕಂಡುಬಂದು ಎಲ್ಲ ಶುಭ್ರವಾದಂತೆ. ತನಗೆ ತಿಳಿಯದಂತೆಯೇ ವನುನು ದುರ್ಬಲನಾಗತೊಡಗಿದ್ದ. He had dropped his guard and become vulnerable...

ಆ ಸುಂದರಿ ತನ್ನನ್ನು ತಾನು ಸಿಂಡಿ (Cindy) ಎಂದು ಪರಿಚಯಿಸಿಕೊಂಡಳು. ಉದ್ಯೋಗ - ಬ್ಯೂಟಿ ಪಾರ್ಲರ್ ನಲ್ಲಿ ಸೌಂದರ್ಯತಜ್ಞೆ (Beautician). ಅಮೆರಿಕಾದ ಫಿಲಿಡೆಲ್ಫಿಯಾ ನಗರದ ನಿವಾಸಿಯೆಂದೂ, ಯೂರೋಪ್ ಪ್ರವಾಸ ಮಾಡುತ್ತಾ ಲಂಡನ್ನಿಗೆ ಬಂದಿದ್ದಾಳೆ ಎಂದು ಹೇಳಿಕೊಂಡಳು. ತಾನೊಬ್ಬ ಯಹೂದಿ (Jew) ಎಂಬುದನ್ನು ಸಹಜವೆಂಬಂತೆ ಹೇಳಿದಳು. ವನುನು ಜಾಗೃತನಾದ. 

ಒಂದು ಕ್ಷಣ ವನುನುವಿನ ಮನದಲ್ಲಿ ಸಂಶಯ ಮೂಡಿತು. ಕಳೆದ ಕೆಲವು ದಿನಗಳು ಆತನ ಪಾಲಿಗೆ ತುಂಬಾ ಆತಂಕಕಾರಿಯಾಗಿದ್ದವು. ತುಂಬಾ ಉದ್ವೇಗಗೊಂಡಿದ್ದ. ಅವನ ಕಥೆ ಖರೀದಿ ಮಾಡಿದ್ದೇವೆ ಎಂದು ಹೇಳುತ್ತಿದ್ದ ಸಂಡೆ ಟೈಮ್ಸ್ ಪತ್ರಿಕೆಯವರು ಸುಖಾಸುಮ್ಮನೆ ಪ್ರಕಟಣೆಯನ್ನು ಮುಂದೂಡುತ್ತಿದರು. ಮತ್ತೆ ಮತ್ತೆ ಕೇಳಿದ್ದನ್ನೇ ಕೇಳುತ್ತಿದ್ದರು. ಇಸ್ರೇಲಿ ರಾಯಭಾರ ಕಚೇರಿಗೆ ಮಾಹಿತಿ ಕೊಟ್ಟು, ಪ್ರಕಟವಾಗಲಿರುವ ಬ್ರೇಕಿಂಗ್ ನ್ಯೂಸ್ ಬಗ್ಗೆ ಪ್ರತಿಕ್ರಿಯೆ ಪಡೆದುಕೊಳ್ಳುವುದಾಗಿ ಹೇಳುತ್ತಿದ್ದರು. ಅದೆಲ್ಲಾ ಏಕೆ? ಜಲ್ದಿ ಸುದ್ದಿ ಪ್ರಕಟಿಸಿ ಅಂದರೆ ತಮ್ಮದು ಖ್ಯಾತ ಪತ್ರಿಕೆ. ಹಾಗೆಲ್ಲಾ ಏಕಪಕ್ಷೀಯ ಸುದ್ದಿ ಪ್ರಕಟಿಸಿದರೆ ಪ್ರತಿಷ್ಠೆಗೆ ಧಕ್ಕೆ ಬರುತ್ತದೆ ಎಂದು ವಿವರಣೆ ಕೊಡುತ್ತಿದ್ದರು. ಇಸ್ರೇಲಿ ರಾಯಭಾರ ಕಚೇರಿಯನ್ನು ಸಂಪರ್ಕಿಸಲಿದ್ದಾರೆ ಎಂದು ಕೇಳಿದ ವನುನುವಿನ ಒತ್ತಡ, ಉದ್ವೇಗ ಮತ್ತೂ ಜಾಸ್ತಿಯಾಗುತ್ತಿತ್ತು. ಇಸ್ರೇಲಿ ರಾಯಭಾರ ಕಚೇರಿ ಮೊಸ್ಸಾದಿಗೆ ತಿಳಿಸಿ, ಅವರು ಲಂಡನ್ನಿಗೆ ಧಾವಿಸಿ ಬಂದು ಗೇಮ್ ಬಾರಿಸಿಬಿಟ್ಟರೆ ಏನು ಗತಿ?  ಖುದ್ದು ಇಸ್ರೇಲಿಯಾಗಿದ್ದ ಆತನಿಗೆ ತಮ್ಮ ದೇಶದ ರಕ್ಷಣಾ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಅರಿವಿತ್ತು. ಹಾಗಾಗಿ ತುಂಬಾ ಆತಂಕಗೊಂಡಿದ್ದ. 

ಅದರಲ್ಲೂ ಒಮ್ಮೆಲೇ ಹೊಸ ಜಾಗದಲ್ಲಿ ಅಪರಿಚಿತ ಸುಂದರಿಯೊಬ್ಬಳು ಭೇಟಿಯಾಗುತ್ತಾಳೆ. 'ಹಲೋ' ಎಂದರೆ ಆಶ್ಚರ್ಯ ಎಂಬಂತೆ ತಿರುಗಿ ಮುಗುಳ್ನಗೆ ಬೀರುತ್ತಾಳೆ. ಮಾತಾಡುತ್ತಾಳೆ. ಪರಿಚಯ ನೀಡುತ್ತಾಳೆ. ಜೊತೆಗೆ ಯಹೂದಿ ಎಂಬುದನ್ನು ಹೇಳುತ್ತಾಳೆ. ಏಕಿರಬಹುದು? ಎಂದು ತಲೆಕೆಡಿಸಿಕೊಂಡ. 

ಮಳ್ಳು ನಗೆ ಬೀರುತ್ತಾ, 'ನೀನು ಮೊಸ್ಸಾದಿನವಳೇ?' ಎಂದು ಆಕೆಯನ್ನು ಕೇಳಿಬಿಟ್ಟ ವನುನು. ಜೋಕ್ ಮಾಡಿದಂತಿರಬೇಕು. ಪ್ರಶ್ನೆಯನ್ನೂ ಕೇಳಿದಂತಾಗಬೇಕು. ಹಾಗಿತ್ತು ಕೇಳಿದ ರೀತಿ.

'ಇಲ್ಲವಲ್ಲ. ಮೊಸ್ಸಾದ್ ಅಂದರೇನು? ಅದಿರಲಿ, ನಿನ್ನ ಹೆಸರೇನು?' ಎಂದು ಆಕೆ ತಿರುಗಿ ಕೇಳಿದಳು. 

'ಜಾರ್ಜ್,' ಎಂದುಬಿಟ್ಟ. ದೊಡ್ಡ ತಪ್ಪೇನೂ ಇರಲಿಲ್ಲ. ಅದೇ ಸುಳ್ಳು ಹೆಸರಿನಲ್ಲಿ ಹೋಟೆಲ್ಲಿನಲ್ಲಿ ತಂಗಿದ್ದ. 

ಆಕೆಯೋ flirt ಮಾಡುವುದರಲ್ಲಿ ಪ್ರಳಯಾಂತಕಿ. 'ಏ, ಬಿಡಪ್ಪಾ ಸಾಕು. ನಿನ್ನ ಹೆಸರು ಜಾರ್ಜ್ ಅಲ್ಲ,' ಅಂದಳು. ಅದೆಲ್ಲಾ ಮುಖ್ಯವಾದ ವಿಷಯವೇ ಅಲ್ಲ ಎಂಬಂತೆ ತಳ್ಳಿಹಾಕಿದಳು. ಕಾಫಿ, ಗೀಫಿ ಕುಡಿಯೋಣವೇ ಎನ್ನುವ ಹಾಗೆ ನೋಡಿದಳು. 

ಅಲ್ಲೇ ಇದ್ದ ಕೆಫೆಯೊಂದರಲ್ಲಿ ಜಾಗ ಹಿಡಿದು ಕುಳಿತರು. ವನುನು ತುಂಬಾ ಏಕಾಂತ ಮತ್ತು ತಡೆಯಲಾಗದ ಏಕತಾನತೆ ಅನುಭವಿಸುತ್ತಿದ್ದನೇನೋ. ಯಾರಾದರೂ ಮಾತಾಡಲು ಸಿಕ್ಕರೆ ಸಾಕಾಗಿತ್ತೇನೋ. ವನುನು ಎಲ್ಲವನ್ನೂ ಬಿಚ್ಚಿ ಹೇಳಿಕೊಂಡುಬಿಟ್ಟ. ಎಬಡೇಶಿ! 

ತನ್ನ ನಿಜವಾದ ಹೆಸರನ್ನು ಹೇಳಿಕೊಂಡ. ಸಂಡೆ ಟೈಮ್ಸ್ ಪತ್ರಿಕೆ ಜೊತೆ ನಡೆದಿರುವ ಜಂಜಾಟದ ಬಗ್ಗೆ ಹೇಳಿಕೊಂಡ. ತನ್ನ ಇತರೆ ಸಂಕಟಗಳನ್ನು ತೋಡಿಕೊಂಡ. ಜೊತೆಗೆ ತನ್ನ ಗೋರಿ ಕೂಡ ತೋಡಿಕೊಂಡನೇ?

ಎಲ್ಲವನ್ನೂ ಕೇಳಿಸಿಕೊಂಡ ಸಿಂಡಿ ಎಂಬ ಸುಂದರಿ ತನ್ನದೂ ಒಂದಿರಲಿ ಎಂಬ ಮಾದರಿಯಲ್ಲಿ, 'ನನ್ನ ಜೊತೆ ಅಮೇರಿಕಾಗೆ, ನ್ಯೂಯಾರ್ಕಿಗೆ ಬಂದುಬಿಡು. ಅಲ್ಲಿ ಇನ್ನೂ ದೊಡ್ಡ ದೊಡ್ಡ ಪತ್ರಿಕೆಗಳಿವೆ. ಹಿತಾಸಕ್ತಿ ಕಾಪಾಡಲು ವಕೀಲರು ಸಿಗುತ್ತಾರೆ. ಎಲ್ಲ ಸರಿಹೋಗುತ್ತದೆ,' ಎಂದು ಒಂದು ಸಲಹೆ ಕೊಟ್ಟಳು. 

ಆ ಸಲಹೆಯನ್ನು ಆತ ಕೇಳಲಿಲ್ಲ. ಆದರೆ ಮೊದಲ ನೋಟದಲ್ಲೇ ತೀವ್ರ ವ್ಯಾಮೋಹಕ್ಕೆ ವನುನು ಒಳಗಾಗಿದ್ದ. ತುಂಬಾ ದಿನಗಳಿಂದ ಹೆಣ್ಣಿನ ಸಾಂಗತ್ಯ ಸಿಗದೇ ಮಂಗ್ಯಾ ಆಗಿದ್ದವ ಅಷ್ಟು ಬೇಗ ಫಿದಾ ಆಗಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. 

ಮುಂದಿನ ದಿನಗಳಲ್ಲಿ ಸಿಂಡಿ ಮತ್ತು ವನುನು ಅನೇಕ ಬಾರಿ ಭೇಟಿಯಾದರು. ಲಂಡನ್ನಿನ ಹಸಿರು ತುಂಬಿದ ಪಾರ್ಕುಗಳಲ್ಲಿ ಕೈ ಕೈ ಹಿಡಿದುಕೊಂಡು ಓಡಾಡಿದರು. ಸಿನೆಮಾ ನೋಡಿದರು. ಸಂಗೀತ ಕಚೇರಿಗೂ ಹೋಗಿ ಬಂದರು. 

ಕೈ ಕೈ ಮಿಳಿತವಾದ ಮೇಲೆ ತುಟಿಗೆ ತುಟಿ ಸೇರಲು ಜಾಸ್ತಿ ಸಮಯ ಬೇಕಾಗಲಿಲ್ಲ. ಕಂಡಕಂಡಲ್ಲಿ ಮನಸೋಯಿಚ್ಛೆ ಕಿಸ್ ಗರಮ್ಮಾಗಿ ಹೊಡೆದರು ಈ ಇಬ್ಬರು ಕಿಸ್ಸಿಂಗ್ ಕಿಡಿಗೇಡಿಗಳು. ಹೊಸ ಪ್ರೇಮ ಅಂದರೆ ಹಾಗೆಯೇ. ಹೊಸ ಕಾರ್ ಇದ್ದಂತೆ. ಮೊದಲಿನ ಕೆಲ ದಿನಗಳಲ್ಲಿ ಕಾರ್ ಆಗಲಿ ಕಿಸ್ ಆಗಲಿ ಎಷ್ಟು ಹೊಡೆದರೂ ಸಾಕಾಗುವುದಿಲ್ಲ. ಕಮಾನ್ ಕಮಾನ್ ಕಾಮಣ್ಣ ಎನ್ನುವ ಹಾಡು ಕಿವಿಯಲ್ಲಿ ಗುಂಯ್ ಅನ್ನುತ್ತಿರುತ್ತದೆ. 

ಸಿಂಡಿ ಕಿಸ್ ಕೊಟ್ಟಳು. ಅಷ್ಟೇ. ಮುಂದೆ ಹೋಗಲಿಲ್ಲ. 'ನಾನು ನಿನ್ನ ರೂಮಿಗೆ ಬರಲೇ? ತಬ್ಬಿಕೊಂಡು ಬೆಚ್ಚಗೆ ಮಲಗೋಣ. ಪ್ಲೀಸ್,'  ಎಂದು ವನುನು ಗೋಗರೆದರೆ ಮಡಿವಂತಳಂತೆ 'ನೋ, ನೋ, ಸಾಧ್ಯವಿಲ್ಲ,' ಅಂದುಬಿಟ್ಟಳು. ತಾನು ರೂಮನ್ನು ಬೇರೊಬ್ಬಳ ಜೊತೆ ಶೇರ್ ಮಾಡಿರುವುದರಿಂದ ಅದು ಸಾಧ್ಯವಿಲ್ಲ ಎಂದಳು. 'ಹೋಗಲಿ ಬಿಡು. ನನ್ನ ರೂಮಿಗೆ ಬಂದುಬಿಡು,' ಅಂದರೆ ಅದಕ್ಕೂ ಆಕೆ ಒಪ್ಪಲಿಲ್ಲ. ಟಿಪಿಕಲ್ ನಖರಾಬಾಜಿ. 

ಆಗ ಅವಳೇ 'ಒಂದು ಐಡಿಯಾ' ಕೊಟ್ಟಳು. 

'ನಾವೇಕೆ ಇಟಲಿ ದೇಶದ ರೋಮ್ ನಗರಕ್ಕೆ ಹೋಗಬಾರದು? ಅಲ್ಲಿ ನನ್ನ ಸಹೋದರಿ ಇದ್ದಾಳೆ. ಅವಳದ್ದೇ ಆದ ಫ್ಲಾಟ್ ಇದೆ. ಅಲ್ಲಿ ನಾವು ಸಕತ್ 'ಮಜಾ' ಮಾಡಬಹುದು. ನಿನ್ನ ಎಲ್ಲ ತೊಂದರೆಗಳಿಗೆ ಅದೇ ಪರಿಹಾರ. ಏನಂತೀ ಡಾರ್ಲಿಂಗ್?' ಎಂದು ಫಿಟ್ಟಿಂಗ್ ಇಟ್ಟಳು. 

ಮೊದಮೊದಲು ಆ ಯೋಜನೆಯನ್ನು ವನುನು ನಿರಾಕರಿಸಿದ. ಆದರೆ ಸಿಂಡಿ ರೋಮಿಗೆ ಹೋಗುವ ದೃಢಸಂಕಲ್ಪ ಮಾಡಿದವಳಂತೆ ಕಂಡುಬಂದಳು. ಹಾಗಾಗಿ ಆಕೆಯ ಮೋಹಪಾಶದಲ್ಲಿ ಬಿದ್ದಿದ್ದ ವನುನೂ ಕೂಡ ಒಪ್ಪಿದ. ಆತ ಒಪ್ಪಿದ ಮೇಲೆ ಆಕೆಯೇ ರೋಮಿಗೆ ಹೋಗುವ ಟಿಕೆಟ್ ಖರೀದಿಸಿದಳು. 'ಕಾಸು ಆಮೇಲೆ ಕೊಡುವೆಯಂತೆ. ಮೊದಲು ರೋಮಿನಲ್ಲಿ ರೋಮಾಂಚನ. ಏನಂತೀ?' ಎಂದು ಕಣ್ಣು ಮಿಟುಕಿಸಿದಳು ಮಿಟುಕಲಾಡಿ. ಆಸೆಬುರುಕ ಮಿಕ ಬಲೆಗೆ ಬಿತ್ತು. 

ಸ್ವಲ್ಪವಾದರೂ ವಿವೇಕವಿದ್ದರೆ ಮಾರ್ಡೇಕೈ ವನುನುಗೆ ಗೊತ್ತಾಗಿಬಿಡಬೇಕಿತ್ತು - ಇದೊಂದು ಮಧುಜಾಲ. ಹನಿ ಟ್ರಾಪ್ (Honey trap). ಅಚಾನಕ್ಕಾಗಿ ಲಂಡನ್ನಿನ ರಸ್ತೆಯಲ್ಲಿ ಸುಂದರಿಯೊಬ್ಬಳು ಭೇಟಿಯಾಗುತ್ತಾಳೆ. ಭೇಟಿಯಾದ ಕೆಲವೇ ದಿವಸಗಳಲ್ಲಿ ಫುಲ್ ಫಿದಾ ಆಗುತ್ತಾಳೆ. ಪ್ರೇಮದಲ್ಲಿ ಅವಳೂ  ಮಂಗ್ಯಾ ಆಗಿ ತನ್ನನ್ನು ಕೂಡ ಮಂಗ್ಯಾ ಮಾಡುತ್ತಾಳೆ. ಅವನಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಾಗುತ್ತಾಳೆ. ಅಮೇರಿಕಾಗೆ ಬಾ. ಕರೆದೊಯ್ಯುತ್ತೇನೆ ಅನ್ನುತ್ತಾಳೆ. ಅಕ್ಕ ರೋಮಿನಲ್ಲಿದ್ದಾಳೆ. ಅಲ್ಲಿಗೆ ಹೋಗೋಣ ಬಾ ಎಂದು ಕಣ್ಣು ಮಿಟುಕಿಸುತ್ತಾಳೆ. ಆಗಷ್ಟೇ ಪರಿಚಯವಾದ ವ್ಯಕ್ತಿಯ ಮೇಲೆ ಟಿಕೆಟ್ ಅದು ಇದು ಅಂತ ಸಾಕಷ್ಟು ರೊಕ್ಕ ಖರ್ಚು ಮಾಡುತ್ತಾಳೆ. ರೂಮಿಗೆ ಬಾ. ಜೊತೆಯಲ್ಲಿ ಮಲಗೋಣ. ಮಜಾ ಮಾಡೋಣ ಅಂದರೆ ಬೇಡ ಅನ್ನುತ್ತಾಳೆ. ರೋಮ್ ನಗರಕ್ಕೆ ಹೋಗಿ ಅಲ್ಲಿ ಜಮ್ಮಚಕ್ಕ ಮಾಡೋಣ ಅನ್ನುತ್ತಾಳೆ. ಹೀಗೆ ಸಾಕಷ್ಟು ಸಂಶಯಕ್ಕೆ ಕಾರಣವಾಗುವ ಹಾಗೆ ಆಕೆಯ ವರ್ತನೆ ಇತ್ತು. ಇಸ್ರೇಲಿನ ಬೇಹುಗಾರರ ಬಗ್ಗೆ ಸಾಕಷ್ಟು ಆತಂಕ ಹೊಂದಿದ್ದ ವನುನುಗೆ ಇದು ತಕ್ಷಣ ಹೊಳೆಯಬೇಕಾಗಿತ್ತು. ಅವರಿಬ್ಬರ ಸಂಭಾಷಣೆಯೇ 'ನೀನು ಮೊಸ್ಸಾದ್ ಏಜೆಂಟೇ?' ಎನ್ನುವ ಮಾತಿನೊಂದಿಗೆ ಶುರುವಾಗಿತ್ತು. ಅದೊಂದು ಹುರುಳಿಲ್ಲದ ಮಾತೆಂಬಂತೆ ತೇಲಿಸಿಬಿಟ್ಟಿದ್ದಳು ಸುಂದರಿ. 

ಆದರೆ ಅದು ಮೊಸ್ಸಾದ್. ಯಾವಾಗಲೂ ಖಡಕ್ ಯೋಜನೆ ರೂಪಿಸುತ್ತದೆ. ವನುನುವನ್ನು ಎತ್ತಾಕಿಕೊಂಡು ಬರುವ ತಂಡದಲ್ಲಿ ಕೇವಲ ಬೇಹುಗಾರರು, ವಿಶಿಷ್ಟಪಡೆಗಳ ನುರಿತ ಪರಿಣಿತರು ಮಾತ್ರ ಇರಲಿಲ್ಲ. ಮನಃಶಾಸ್ತ್ರಜ್ಞರೂ (psychologists) ಕೂಡ ಇದ್ದರು. ಅವರು ವನುನುವಿನ ಮನಃಸ್ಥಿತಿಯ ಬಗ್ಗೆ ವಿವರವಾದ ಅಧ್ಯಯನ ಮಾಡಿದ್ದರು. ಬಹುಕಾಲದಿಂದ ಹೆಣ್ಣಿನ ಸಂಗ ಸಿಗದೇ ವನುನು ಮಂಗ್ಯಾ ಆಗಿಬಿಟ್ಟಿದ್ದಾನೆ. ಇಂತವನಿಗೆ ಅಲ್ಲಿಲ್ಲಿ ಕಿಸ್ ಹೊಡೆದು, ಕೈಗೆ ಸಿಕ್ಕರೂ ಸಿಕ್ಕದಂತೆ ನಖರಾ ಮಾಡುವ ಸುಂದರಿ ಸಿಕ್ಕರೆ ಮುಗಿದೇಹೋಯಿತು. ತಾನಾಗೇ ಬಂದು ಬಲೆಗೆ ಬೀಳುತ್ತಾನೆ. ಅವರ ಭವಿಷ್ಯವಾಣಿ ಸರಿಯಾಗಿತ್ತು. 

ವನುನುವಿನ ಮೇಲ್ವಿಚಾರಕನಾಗಿದ್ದ ಸಂಡೆ ಟೈಮ್ಸ್ ಪತ್ರಿಕೆಯ ಪೀಟರ್ ಹೌನಂಗೆ ಏನೋ ವಾಸನೆ ಹೊಡೆಯಿತು. ಸಿಂಡಿ ಬಗ್ಗೆ ವಿಷಯ ತಿಳಿದಾಕ್ಷಣ ಆತ ಜಾಗರೂಕನಾದ. ಆಕೆಯ ಸಂಗ ಬೇಡವೋ ಮಂಗ ಎಂದು ವನುನುವನ್ನು ಎಚ್ಚರಿಸಿದ. ವನುನು ಕೇಳಬೇಕಲ್ಲ. ವನುನು ಆಕೆಯ ಗಾಳಕ್ಕೆ ಬಿದ್ದಾಗಿತ್ತು. 

ಒಮ್ಮೆ ವನುನು ಪೀಟರ್ ಹೌನಂಗೆ ಕಾರಿನಲ್ಲಿ ಡ್ರಾಪ್ ಕೊಡುವಂತೆ ಕೇಳಿದ. ಆ ಸಂದರ್ಭದಲ್ಲಿ ಪೀಟರ್ ಕೂಡ ಸಿಂಡಿಯನ್ನು ನೋಡಿದ್ದ. ಸಿಂಡಿ ಕಂಡರೂ ಏನು ಮಾಡಲಿಕ್ಕೆ ಆಗುತ್ತದೆ? ಜೊತೆಗಿದ್ದ ಗಿಂಡಿಮಾಣಿ ವನುನುವನ್ನು ಸಿಂಡಿ ಜೊತೆ ಬಿಟ್ಟು ಬಂದಿದ್ದ. 

'ಒಂದೆರಡೇ ದಿನಕ್ಕೆ ರೋಮ್ ನಗರಕ್ಕೆ ಹೋಗಿಬರುತ್ತೇನೆ,' ಎಂದು ವನುನು ಇಂಡೆಂಟ್ ಹಾಕಿದಾಗ ಕೂಡ ಪೀಟರ್ ಅವನನ್ನು ಎಚ್ಚರಿಸಿದ. 'ಇದು ನಿನ್ನನ್ನು ಅಪಹರಿಸುವ ಪ್ಲಾನ್ ಅಲ್ಲದೇ ಮತ್ತೇನೂ ಅಲ್ಲ. ಹೋಗಬೇಡ. ಖಬರ್ದಾರ್!' ಎಂದು ಖಡಕ್ಕಾಗಿ ಹೇಳಿದ. ಆದರೆ ಅದೇನೋ ಅನ್ನುತ್ತಾರಲ್ಲ ಕಾಮಕ್ಕೆ  ಕಣ್ಣಿಲ್ಲ. ಸಹನೆಯೂ ಇಲ್ಲ. ಬುದ್ಧಿ ಹುಲ್ಲು ಮೇಯಲು ಹೋಗಿರುತ್ತದೆ. ತಪ್ಪು ಸರಿ ನಿರ್ಧಾರ ಮಾಡುವ ವಿವೇಚನೆ, ವಿವೇಕ ಕೈಕೊಟ್ಟಿರುತ್ತವೆ. ಹಾಗಾಗಿ ವನುನು ಎಚ್ಚರಿಕೆಯ ಮಾತುಗಳನ್ನು ಕೇಳಲಿಲ್ಲ. ರೋಮ್ ನಗರಕ್ಕೆ ಹೋಗಿಯೇ ಸಿದ್ಧ ಎಂದು ರಚ್ಛೆ ಹಿಡಿದು ಕೂತ. 

ವನುನುವನ್ನು ರೋಮ್ ನಗರಕ್ಕೆ ಹೊರಡುವಂತೆ ಉತ್ತೇಜಿಸಲು ಇಸ್ರೇಲಿಗೆ ಬೇರೆ ಕಾರಣವೇ ಇತ್ತು. ಬ್ರಿಟಿಷ್ ನೆಲದಲ್ಲಿ ವನುನುವನ್ನು ಅಪಹರಣ ಮಾಡಲು ಇಸ್ರೇಲಿಗೆ ಮನಸ್ಸಿರಲಿಲ್ಲ. ಅಂದು ಮಾರ್ಗರೆಟ್ ಥ್ಯಾಚರ್ ಬ್ರಿಟಿಷ್ ಪ್ರಧಾನಿಯಾಗಿದ್ದರು. ಉಕ್ಕಿನ ಮಹಿಳೆ. ಹೆಸರಿಗೆ ತಕ್ಕಂತೆ ಖಡಕ್ ಆಗಿದ್ದ ಆಕೆಯನ್ನು, ಅಪಹರಣ ಮತ್ತೊಂದು ಮಾಡಿ, ರಾಜತಾಂತ್ರಿಕವಾಗಿ ತಡವಿಕೊಂಡು ಲಫಡಾ ಮಾಡಿಕೊಳ್ಳಲು ಇಸ್ರೇಲಿನ ಪ್ರಧಾನಿ ಶಿಮೋನ್ ಪೆರೇಸ್ ಸಿದ್ಧವಿರಲಿಲ್ಲ. ಮೊಸ್ಸಾದ್ ಕೂಡ ಇಂಗ್ಲೆಂಡನಲ್ಲಿ ಕಾರ್ಯಾಚರಣೆ ಮಾಡುವುದು ಸಮಂಜಸವಲ್ಲ ಎನ್ನುವ ಅಭಿಪ್ರಾಯ ಹೊಂದಿತ್ತು. ಕೆಲವೇ ತಿಂಗಳುಗಳ ಹಿಂದೆ ಜರ್ಮನಿಯಲ್ಲಿ ಅಧಿಕಾರಿಗಳಿಗೆ ಟೆಲಿಫೋನ್ ಬೂತೊಂದರಲ್ಲಿ ಒಂದು ಅನಾಥ briefcase ಸಿಕ್ಕಿತ್ತು. ತೆಗೆದು ನೋಡಿದರೆ ಅದರಲ್ಲಿ ಎಂಟು ಬ್ರಿಟಿಷ್ ಪಾಸಪೋರ್ಟುಗಳು. ಎಲ್ಲವೂ ನಕಲಿ. ಅನಾಥ briefcase ನ ಜಾಡು ಹಿಡಿದು ಹೋದರೆ ಅದು ಸ್ಥಳೀಯ ಇಸ್ರೇಲಿ ರಾಯಭಾರ ಕಚೇರಿಗೆ ತಂದು ನಿಲ್ಲಿಸಿತ್ತು. ಬ್ರಿಟಿಷ್ ಸರಕಾರ ವಿಪರೀತವಾಗಿ ಸಿಟ್ಟಿಗೆದ್ದಿತ್ತು. ಬಲವಾದ ರಾಜತಾಂತ್ರಿಕ ಪ್ರತಿಭಟನೆಯನ್ನು ದರ್ಜುಮಾಡಿತ್ತು. ಮೊಸ್ಸಾದ್ ಆ ಕ್ಷಣಕ್ಕೆ, 'ನಿಮ್ಮ ದಮ್ಮಯ್ಯ, ತಪ್ಪಾಯಿತು. ಇನ್ನು ಮುಂದೆ ಎಂದೂ ಬ್ರಿಟಿಷ್ ಪಾಸಪೋರ್ಟುಗಳನ್ನು ನಕಲು ಮಾಡುವುದಿಲ್ಲ. ಬ್ರಿಟಿಷ್ ಸಾರ್ವಭೌಮತೆಗೆ ಧಕ್ಕೆ ತರುವ ಯಾವ ಕೆಲಸಕ್ಕೂ ಕೈಹಾಕುವುದಿಲ್ಲ,'  ಎಂದು ಆಣೆ ಪ್ರಮಾಣ ಮಾಡಿ ಪಾರಾಗಿದ್ದರು. ಹಾಗಾಗಿ ಬ್ರಿಟಿಷ್ ನೆಲದ ಮೇಲೆ ರಹಸ್ಯ ಕಾರ್ಯಾಚರಣೆಗೆ ಕೈಹಾಕುವ ದುಸ್ಸಾಹಸಕ್ಕೆ ಪ್ರಧಾನಿ ಪೆರೇಸ್ ಮತ್ತು ಮೊಸ್ಸಾದ್ ಸುತಾರಾಮ್ ಸಿದ್ಧವಿರಲಿಲ್ಲ. 

ಇವೆಲ್ಲಾ ಕಾರಣಗಳಿಂದ ರೋಮ್ ನಗರ ರಹಸ್ಯ ಕಾರ್ಯಾಚರಣೆಗೆ ಸೂಕ್ತ ಎಂದು ನಿರ್ಧಾರ ಮಾಡಿದ್ದರು. ಮೊಸ್ಸಾದ್ ಮತ್ತು ಇಟಲಿಯ ಬೇಹುಗಾರಿಕೆ ಸಂಸ್ಥೆಯ ಮಧ್ಯೆ ಸಂಬಂಧಗಳು ಚೆನ್ನಾಗಿದ್ದವು. ಮೊಸ್ಸಾದಿನ ಮುಖ್ಯಸ್ಥ ನಾಹುಮ್ ಅಡಮೋನಿ ಮತ್ತು ಇಟಲಿಯ ಬೇಹುಗಾರಿಕೆ ಸಂಸ್ಥೆಯ ಮುಖ್ಯಸ್ಥ ಅಡ್ಮಿರಲ್ ಫುಲ್ವಿಯೋ ಮಾರ್ಟಿನಿ ಉತ್ತಮ ಮಿತ್ರರಾಗಿದ್ದರು. ಮೇಲಿಂದ ಆ ಸಮಯದಲ್ಲಿ ಇಟಲಿಯಲ್ಲಿ ದಿನನಿತ್ಯ ಒಂದಲ್ಲ ಒಂದು ಗಲಭೆ ಗಲಾಟೆ ನಡೆಯುತ್ತಲೇ ಇರುತ್ತಿತ್ತು. ಆ ಎಲ್ಲ ಗೊಂದಲಗಳ ಮಧ್ಯೆ ವನುನುವನ್ನು ಇಟಲಿಯಿಂದಲೇ ಎತ್ತಾಕಿಕೊಂಡು ಹೋಗಲಾಗಿದೆ ಎಂದು ಸಿದ್ಧಪಡಿಸುವುದು ಅಸಾಧ್ಯದ ಮಾತಾಗಿತ್ತು. ಗುಂಪಿನಲ್ಲಿ ಗೋವಿಂದನಾಗಿ ಸಂದಿಯಲ್ಲಿ ಸಮಾರಾಧನೆ ಮಾಡಲು ಇಟಲಿ ಹೇಳಿಮಾಡಿಸಿದ ಸ್ಥಳವಾಗಿತ್ತು.

ಅಂದು ಸೆಪ್ಟೆಂಬರ್ ೩೦, ೧೯೮೬. ಜೋಡಿ ಹಕ್ಕಿಗಳಾದ ಸಿಂಡಿ ಮತ್ತು ಮಾರ್ಡಿ (ಮಾರ್ಡೇಕೈ) ಕೈ ಕೈ ಹಿಡಿದುಕೊಂಡು ರೋಮ್ ನಗರಕ್ಕೆ ಹೊರಡಲಿದ್ದ ಬ್ರಿಟಿಷ್ ಏರ್ವೇಸ್ ನ ವಿಮಾನ ನಂಬರ್ ೫೦೪ ನ್ನು ಖುಷಿಖುಷಿಯಾಗಿ ಹತ್ತಿದರು. ರೋಮ್ ನಗರದಲ್ಲಿ ಇಳಿದಾಗ ರಾತ್ರಿ ಒಂಬತ್ತು ಘಂಟೆ. ಏರ್ಪೋರ್ಟ್ ಹೊರಗೆ ಬಂದಾಕ್ಷಣ ಹೂವಿನಗುಚ್ಛ ಹಿಡಿದು ನಿಂತಿದ್ದ ಮನುಷ್ಯನೊಬ್ಬ ಜೋಡಿಯನ್ನು ಸ್ವಾಗತಿಸಿದ. ಕಾರಿನಲ್ಲಿ ಕೂಡಿಸಿಕೊಂಡು ಸಿಂಡಿಯ 'ಅಕ್ಕನ ಮನೆ' ಎಂದು ಹೇಳಲಾದ ಪ್ಲಾಟಿಗೆ ಡ್ರಾಪ್ ಮಾಡಿದ. ಕಾರಿನ ಹಿಂದಿನ ಸೀಟಿನಲ್ಲಿ ಪವಡಿಸಿದ್ದ ಪ್ರೇಮಿಗಳು ಆಗಲೇ ದೈಹಿಕ ಕುಚೇಷ್ಟೆ ಆರಂಭಿಸಿಬಿಟ್ಟಿದ್ದರು. ಕಾಮಾತುರಾಣಾಂ ನ ಲಜ್ಜಾ ನ ಭಯಂ. ಮನೆ ಮುಟ್ಟುವವರೆಗೂ ಅಪ್ಪಿಕೊಂಡಿದ್ದೇ ಅಪ್ಪಿಕೊಂಡಿದ್ದು. ಕಿಸ್ ಹೊಡೆದಿದ್ದೇ ಹೊಡೆದಿದ್ದು.

ಒಂದು ಚಿಕ್ಕ ಮನೆಯೆದುರು ಕಾರ್ ನಿಂತಿತು. ಹುಡುಗಿಯೊಬ್ಬಳು ಬಾಗಿಲು ತೆಗೆದು ಸ್ವಾಗತಿಸಿದಳು. ವನುನು ಮೊದಲು ಒಳಗೆ ಪ್ರವೇಶಿಸಿದ. ಅವನು ಒಳಹೊಕ್ಕ ತಕ್ಷಣ ಹಿಂದಿನಿಂದ ಬಾಗಿಲು ಒಮ್ಮೆಲೇ ಹಾಕಲ್ಪಟ್ಟಿತು. ಇಬ್ಬರು ದಾಂಡಿಗರು ಮಾರ್ಡೇಕೈ ಮೇಲೆ ಮುಗಿಬಿದ್ದರು. ಬರೋಬ್ಬರಿ ಬಡಿದರು. ಎತ್ತಿ ನೆಲದ ಮೇಲೆ ಒಗೆದರು. ತ್ವರಿತವಾಗಿ ಆತನ ಕೈಗಳನ್ನು ಹಿಂದೆ ಕಟ್ಟಿದರು. ಅವರು ಕೈಗಳನ್ನು ಕಟ್ಟುತ್ತಿರುವಾಗಲೇ ಬಾಗಿಲು ತೆಗೆದಿದ್ದ ಹುಡುಗಿ ತಯಾರು ಮಾಡಿಟ್ಟುಕೊಂಡಿದ್ದ ಇಂಜೆಕ್ಷನ್ ಒಂದನ್ನು ವನುನುವಿನ ಕೈಗೆ ಚುಚ್ಚಿದಳು. ಕಣ್ಣುಗಳ ಮುಂದೆ ಎಲ್ಲವೂ ಮಸಕು ಮಸಕು. ಎಲ್ಲವೂ ಮಂಜುಮಂಜಾಗುತ್ತಿದ್ದಂತೆ ವನುನು ಪ್ರಜ್ಞೆ ಕಳೆದುಕೊಂಡ. ಆಳನಿದ್ರೆಗೆ ಜಾರಿದ. 

ಪ್ರಜ್ಞೆ ಕಳೆದುಕೊಂಡಿದ್ದ ವನುನುವನ್ನು ಹೊತ್ತ ವ್ಯಾನೊಂದು ಇಟಲಿಯ ಉತ್ತರ ಭಾಗದತ್ತ ಹೊರಟಿತು. ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆ ವನುನುವಿನ ಜೊತೆಗಿದ್ದರು. ಮಧ್ಯದಲ್ಲಿ ಇನ್ನೊಂದು ಇಂಜೆಕ್ಷನ್ ಕೊಡಲಾಯಿತು. ಇವೆಲ್ಲದರ ಮಧ್ಯೆ ಸಿಂಡಿ ಮಾಯವಾಗಿದ್ದಳು. ಮಂಗ್ಯಾ ಮಾಡಿ, ಮಿಕವನ್ನು ತಂದು ಒಪ್ಪಿಸುವುದಷ್ಟೇ ಆಕೆಯ ಕೆಲಸವಾಗಿತ್ತು. ಮಂಗ್ಯಾ ಮಾಡಿದಾಕೆ ಖುದ್ದಾಗಿ ಮಂಗಮಾಯವಾಗಿದ್ದಳು. 

ಹಲವಾರು ಘಂಟೆಗಳ ಪ್ರಯಾಣದ ಬಳಿಕ ಅವರು ಬಂದರು ಶಹರವಾದ ಲಾ ಸ್ಪೇಜಿಯಾವನ್ನು (La Spezia) ತಲುಪಿಕೊಂಡರು. ಸ್ಟ್ರೆಚರ್ ಮೇಲೆ ಮಲಗಿದ್ದ ವನುನುವನ್ನು ತರಾತುರಿಯಲ್ಲಿ ಸ್ಪೀಡ್ ಬೋಟೊಂದಕ್ಕೆ ವರ್ಗಾಯಿಸಲಾಯಿತು. ವೇಗವಾಗಿ ಪಯಣಿಸಿದ ಸ್ಪೀಡ್ ಬೋಟ್ ಹೋಗಿ ನಿಂತಿದ್ದು, ದೂರದಲ್ಲಿ, ಅಂತರರಾಷ್ಟ್ರೀಯ ಸಮುದ್ರದಲ್ಲಿ ಲಂಗರು ಹಾಕಿದ್ದ ಇಸ್ರೇಲಿ ಯುದ್ಧನೌಕೆ 'ಟಪೂಜ್' ಪಕ್ಕದಲ್ಲಿ. ಹಡಗಿನ ಅನವಶ್ಯಕ ಸಿಬ್ಬಂದಿಯನ್ನು ಒಳಗೆ ಹೋಗಿ ಎಂದು ಕಳಿಸಲಾಯಿತು. ಸ್ಪೀಡ್ ಬೋಟ್ ಬಂದು ಹಡಗಿನ ಪಕ್ಕ ನಿಂತ ಕೂಡಲೇ ಹಗ್ಗದ ಏಣಿಯನ್ನು ಕೆಳಗೆ ಬಿಡಲಾಯಿತು. ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆ ಏಣಿಯೇರಿ ಬಂದರು. ಜೊತೆಯಲ್ಲೇ ಒಬ್ಬ ಪ್ರಜ್ಞಾಹೀನ ವ್ಯಕ್ತಿಯನ್ನೂ ಹೊತ್ತು ತಂದಿದ್ದರು. ಹಡಗನ್ನು ಏರಿದ ತಕ್ಷಣ ಹೊಸದಾಗಿ ಬಂದವರು ಹಡಗಿನ ಕ್ಯಾಬಿನ್ ಒಂದನ್ನು ಸೇರಿಕೊಂಡು ಹಿಂದೆ ಬಾಗಿಲು ಹಾಕಿಕೊಂಡರು. ಇಷ್ಟಾದ ನಂತರ ಹಡಗು ಲಂಗರು ಎತ್ತಿತು. ಇಸ್ರೇಲಿನತ್ತ ಪಯಣ ಬೆಳೆಸಿತು. 

ಇಸ್ರೇಲ್ ಮುಟ್ಟುವ ತನಕವೂ ಆ ಚಿಕ್ಕ ಕ್ಯಾಬಿನ್ನಿನಲ್ಲಿ ಬಂಧಿತನಾಗಿದ್ದ ವನುನು. ಪ್ರೇಯಸಿ ಸಿಂಡಿ ಎಲ್ಲೂ ಕಾಣಲಿಲ್ಲ. ಅವಳ ಬಗ್ಗೆ ಚಿಂತಿತನಾದ. ಅವಳಿಗೆ ಏನಾಗಿರಬಹುದು ಎಂದು ತಲೆಕೆಡಿಸಿಕೊಂಡ. ಅವಳು ಮೊಸ್ಸಾದ್ ತಂಡದ ಸದಸ್ಯಳಾಗಿದ್ದಳು ಎಂದು ಅವನಿಗೆ ಗೊತ್ತಾಗಲಿಲ್ಲ. ವನುನುವನ್ನು ಮೊದಲು ವ್ಯಾನಿನಲ್ಲಿ ನಂತರ ಸ್ಪೀಡ್ ಬೋಟಿನಲ್ಲಿ ಎತ್ತಾಕಿಕೊಂಡು ಬಂದ ತಂಡದಲ್ಲಿದ್ದ ಮಹಿಳೆ ನುರಿತ ಅರವಳಿಕೆ ತಜ್ಞೆಯಾಗಿದ್ದಳು. ಸಮಯಕ್ಕೆ ಸರಿಯಾಗಿ ವನುನುವಿಗೆ ತಕ್ಕ ಪ್ರಮಾಣದಲ್ಲಿ ಅರವಳಿಕೆ ಮದ್ದು ಕೊಡುತ್ತಿದ್ದಳು. 

ಇಸ್ರೇಲಿ ಸಮುದ್ರ ತೀರವನ್ನು ತಲುಪಿದ ಹಡಗು ಅಲ್ಲೇ ಲಂಗರು ಹಾಕಿತು. ವನುನುವನ್ನು ಇಸ್ರೇಲಿ ನೌಕಾದಳದ ಮಿಸೈಲ್ ಬೋಟಿಗೆ ವರ್ಗಾಯಿಸಲಾಯಿತು. ಇಸ್ರೇಲಿ ಪೊಲೀಸ್ ಅಧಿಕಾರಿಗಳು ಮತ್ತು ಶಬಾಕ್ ತನಿಖಾ ಸಂಸ್ಥೆಯ ಅಧಿಕಾರಿಗಳ ಸುಪರ್ದಿಗೆ ಆತನನ್ನು ಒಪ್ಪಿಸಿದರು. ಅವರು ಅವನ ಮೇಲೆ ಮೊಕದ್ದಮೆಗಳನ್ನು ದಾಖಲು ಮಾಡಿಕೊಂಡರು. ಅಷ್ಕೆಲಾನ್ ಪಟ್ಟಣದಲ್ಲಿರುವ ಶಿಕ್ಮಾ ಬಂಧೀಖಾನೆಗೆ ಕಳಿಸಿದರು. 

ಹೀಗೆ ಎತ್ತಾಕಿಕೊಂಡು ಬಂದ ವನುನುವನ್ನು ಇಸ್ರೇಲಿಗಳು ಪ್ರಶ್ನೆ ಮಾಡಲು ಶುರುವಿಟ್ಟುಕೊಂಡರೆ ಆಕಡೆ ಸಂಡೆ ಟೈಮ್ಸ್ ಪತ್ರಿಕೆ ಇಸ್ರೇಲಿ ಅಣುಸ್ಥಾವರದ ಬಗ್ಗೆ ಸರಣಿ ಸುದ್ದಿಗಳನ್ನು ಪ್ರಕಟಿಸಲು ಶುರುಮಾಡಿತು. ಆ ಸುದ್ದಿಗಳು ಜಗತ್ತಿನಾದ್ಯಂತ ಎಲ್ಲ ಪತ್ರಿಕೆಗಳಿಗೆ ಹಂಚಲ್ಪಟ್ಟು  ಎಲ್ಲ ಕಡೆ ಅದೇ ಸುದ್ದಿ. ಅಲ್ಲಿಯವರೆಗೆ ಇಸ್ರೇಲಿಗಳು ತಮ್ಮ ಹತ್ತಿರ ಪರಮಾಣು ಅಸ್ತ್ರಗಳೇ ಇಲ್ಲ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ೧೯೬೦ ರ ಸಮಯದಲ್ಲೇ ಅಂದಿನ ಅಮೇರಿಕಾದ ಅಧ್ಯಕ್ಷ ಜಾನ್ ಕೆನಡಿ ಇಸ್ರೇಲಿಗೆ ಹೋಗಿ ಬರೋಬ್ಬರಿ ಚೆಕ್ ಮಾಡಿಕೊಂಡು ಬನ್ನಿ ಎಂದು ತಜ್ಞರ ತಂಡ ಕಳಿಸಿದ್ದರು. ಅವರನ್ನು ಅದೆಷ್ಟು ಚೆನ್ನಾಗಿ ಯಾಮಾರಿಸಿ ಕಳಿಸಿದ್ದರು ಅಂದರೆ ಅವರು ತಲೆಯಾಡಿಸುತ್ತ ಬಂದು ಇಸ್ರೇಲ್ ಬಳಿ ಪರಮಾಣು ಅಸ್ತ್ರಗಳು ಇಲ್ಲ ಎಂದು ವರದಿ ಕೊಟ್ಟಿದ್ದರು. ಆದರೂ ಇಸ್ರೇಲ್ ಮೇಲೆ ಒಂದು ನಜರ್ ಮಡಗಿದ್ದ ಮಂದಿಗೆ ಇಸ್ರೇಲ್ ಬಳಿ ಒಂದು ಹತ್ತಿಪ್ಪತ್ತು ಕಚ್ಚಾ (crude) ಬಾಂಬುಗಳು ಇರಬಹುದು ಅನ್ನುವ ಅಂದಾಜಿತ್ತು. ಆದರೆ ವನುನು ಕೊಟ್ಟ ಮಾಹಿತಿಯ ಆಧಾರದ ಮೇಲೆ ಸಂಡೆ ಟೈಮ್ಸ್ ಮಾಡಿದ್ದ ವರದಿ ಪ್ರಕಾರ ಇಸ್ರೇಲ್ ತುಂಬಾ ಮುಂದುವರೆದಿತ್ತು. ನೂರೈವತ್ತು ಇನ್ನೂರು ಅತ್ಯಾಧುನಿಕ ಬಾಂಬುಗಳನ್ನು ತಯಾರಿಸಿಟ್ಟುಕೊಂಡಿರಬಹುದು ಎಂದು ಅಂದಾಜಿಸಲಾಗಿತ್ತು. ಹೈಡ್ರೋಜನ್ ಮತ್ತು ನ್ಯೂಟ್ರಾನ್ ಬಾಂಬುಗಳನ್ನು ಸಹ ತಯಾರಿಸುವ ಸಾಮರ್ಥ್ಯವನ್ನು ಇಸ್ರೇಲ್ ಹೊಂದಿದೆ ಎಂದೂ ತಿಳಿದುಬಂದಿತು. 

ಸೆರೆಯಲ್ಲಿದ್ದರೂ ವನುನುವಿಗೆ ಈ ವಿಷಯ ತಿಳಿಯಿತು. ಇಷ್ಟೆಲ್ಲಾ ಮಾಹಿತಿ ಹೊರಬಿದ್ದಿರುವ ಕಾರಣ ಇಸ್ರೇಲಿಗಳು ತನ್ನನ್ನು ಕೊಲ್ಲುತ್ತಾರೆ ಎಂದು ಭೀತನಾದ. ವನುನುವನ್ನು ಇಸ್ರೇಲಿಗಳು ಅಪಹರಿಸಿದ್ದಾರೆ ಎಂದು ಎಲ್ಲೂ ಅಧಿಕೃತವಾಗಿ ಪ್ರಕಟವಾಗಿರಲಿಲ್ಲ. ಹಾಗಾಗಿ ಇಷ್ಟೆಲ್ಲಾ ರಾಡಿಗೆ ಕಾರಣನಾಗಿ, ಇಸ್ರೇಲಿನ ಮುಖಭಂಗಕ್ಕೆ ಕಾರಣನಾಗಿದ್ದ ಈ ಕೊರಮನ ಕುರುಹೂ ಇಲ್ಲದಂತೆ ಮಾಡಿಬಿಟ್ಟರೆ ಎಲ್ಲಾ ತಲೆನೋವು ಮಾಯವಾಗುತ್ತದೆ ಎನ್ನುವ ಐಡಿಯಾ ಇಸ್ರೇಲಿ ಅಧಿಕಾರಶಾಹಿಗೆ ಬಂದಿದ್ದರೆ ಆಶ್ಚರ್ಯವಿಲ್ಲ. ಪರಮಾಣು ರಹಸ್ಯಗಳನ್ನು ಕಾಪಾಡಿಕೊಳ್ಳದ ಅವರ ಅದಕ್ಷತೆ, ಅಸಮರ್ಥತೆ ಕೂಡ ಬಯಲಾಗಿ ಅವರಿಗೂ ಮಂಗಳಾರತಿ ಆಗುವುದಿತ್ತು ತಾನೇ?

ತನ್ನೊಬ್ಬನನ್ನೇ ಅಲ್ಲ, ತಾತ್ಕಾಲಿಕ ಪ್ರೇಯಸಿಯಾಗಿದ್ದ ಸಿಂಡಿಯನ್ನೂ ಕೂಡ ಇಸ್ರೇಲಿಗಳು 'ದಾರಿಯಿಂದ ಅಡ್ಡ ಸರಿಸಿಬಿಟ್ಟಾರು' ಎಂದು ಚಿಂತಾಕ್ರಾಂತನಾದ. ಸಿಂಡಿ ಕೂಡ ಅದೇ ಜಾಲದ ಭಾಗವಾಗಿದ್ದಳು ಎಂದು ನಂಬಲು ಆವಾಗಲೂ ಆತ ಸಿದ್ಧನಿರಲಿಲ್ಲ. ಆಕೆಯೂ ಕಿಲಾಡಿಯೆಂದು ಮನಸ್ಸು ಸಾರಿಸಾರಿ ಹೇಳಿದರೂ ಹೃದಯ ಮಾತ್ರ ಕೇಳುತ್ತಿರಲಿಲ್ಲ. ಆಕೆ ನೆನಪಾದಾಗೊಮ್ಮೆ ಹೃದಯ ಗುಟುರ್ ಗುಟುರ್ ಎಂದು ತಾಳತಪ್ಪಿ ಬಡಿದು ನಿಟ್ಟುಸಿರಾಗುತ್ತಿತ್ತು. 

ಸುಮಾರು ನಲವತ್ತು ದಿನಗಳ ಕಾಲ ವನುನುವಿಗೆ ಏನಾಯಿತು ಎಂದು ಯಾರಿಗೂ ಗೊತ್ತಿರಲಿಲ್ಲ. ಪತ್ರಿಕೆಗಳು ರೋಚಕ ಊಹಾಪೋಹದ ಸುದ್ದಿಗಳನ್ನು ನಿರಂತರವಾಗಿ ಪ್ರಕಟಿಸಿದವು. ವನುನುವನ್ನು ಅಪಹರಿಸಿ, ಇಸ್ರೇಲಿ ರಾಜತಾಂತ್ರಿಕ ಚೀಲದಲ್ಲಿ (diplomatic pouch) ರಹಸ್ಯವಾಗಿ ಇಸ್ರೇಲಿಗೆ ರವಾನೆ ಮಾಡಲಾಗಿದೆ ಎಂದು ಕೆಲವು ಪತ್ರಿಕೆಗಳು ಕಾಗೆ ಹಾರಿಸಿದವು. ಒಬ್ಬ ತರುಣಿಯೊಂದಿಗೆ ವನುನು ಹಡಗನ್ನು 'ಏರುತ್ತಿದ್ದ' ಎಂದು 'ಖುದ್ದಾಗಿ ನೋಡಿದ್ದ' ವ್ಯಕ್ತಿಯೊಬ್ಬ ಹೇಳಿದ್ದಾನೆ ಎಂದು ಮತ್ತೆ ಕೆಲವು ಪತ್ರಿಕೆಗಳು ವರದಿ ಮಾಡಿದವು. ಬ್ರಿಟಿಷ್ ಸಂಸದರು ತನಿಖೆಗೆ ಆಗ್ರಹಿಸಿದರು. ಇಸ್ರೇಲ್ ವಿರುದ್ಧ ಕಠಿಣ ಕ್ರಮಕ್ಕಾಗಿ ಪಟ್ಟು ಹಿಡಿದರು. 

ನವೆಂಬರ್ ೧೯೮೬ ರಲ್ಲಿ ವನುನುವಿನ ಮೇಲೆ ಅಧಿಕೃತವಾಗಿ ಕೋರ್ಟಿನಲ್ಲಿ ಆರೋಪಪಟ್ಟಿಯನ್ನು ಸಲ್ಲಿಸಲಾಯಿತು. ಈ ಸಂಬಂಧ ಹಲವಾರು ಬಾರಿ ಆತನನ್ನು ಕೋರ್ಟಿನಲ್ಲಿ ಹಾಜರು ಪಡಿಸಿದರು. 

ವನುನು ಎಷ್ಟು ಶಾಣ್ಯಾ ಅಂದರೆ ಹಲವಾರು ವರದಿಗಾರರು ಕೋರ್ಟಿನಲ್ಲಿ ತನಗಾಗಿ ಕಾಯುತ್ತಿದ್ದನ್ನು ಗಮನಿಸಿದ್ದ. ಮುಂದೊಂದು ಸಲ ಕೋರ್ಟಿಗೆ ಬಂದಾಗ, ಪೊಲೀಸ್ ವ್ಯಾನ್ ಇಳಿದವನೇ ಅವರ ಮುಂದೆ ತನ್ನ ಹಸ್ತವನ್ನು ತೋರಿಸಿಬಿಟ್ಟ. ಅದರ ಮೇಲೆ ನೀಟಾಗಿ ಬರೆದಿದ್ದ. ಪತ್ರಕರ್ತರು ಓದಿದರು. ಚಿತ್ರಗ್ರಾಹಕರು ಚಿತ್ರ ತೆಗೆದರು. ಹಸ್ತದ ಮೇಲೆ ಏನು ಬರೆದುಕೊಂಡಿದ್ದ ಅಂದರೆ... 'ವನುನುವನ್ನು ರೋಮ್ ನಗರದಿಂದ ಅಪಹರಿಸಲಾಗಿದೆ. 30/09/86, ರಾತ್ರಿ 9 ಕ್ಕೆ BA 504 ವಿಮಾನದಲ್ಲಿ ರೋಮ್ ತಲುಪಿದ್ದೆ.'

ತಡವಾಗಿ ಬಹಿರಂಗವಾದ ಈ ವಿಷಯ ಇಸ್ರೇಲ್ ಮತ್ತು ಬ್ರಿಟನ್ ನಡುವಿನ ಸಂಬಂಧಗಳ ಮೇಲೆ ಅಷ್ಟೇನೂ ಪ್ರಭಾವ ಬೀರಲಿಲ್ಲ. ವನುನು ಸ್ವಇಚ್ಛೆಯಿಂದ ಸಾಮಾನ್ಯ ವಿಮಾನದಲ್ಲಿ ಎಲ್ಲರಂತೆ ಬ್ರಿಟನ್ ತೊರೆದಿದ್ದಾನೆ ಎಂದು ಅಭಿಪ್ರಾಯ ಮೂಡಿ ಒಂದು ತರಹ ಅನುಕೂಲವೇ ಆಯಿತು. ಆದರೆ ಇಟಲಿಯಲ್ಲಿ ಕೊಂಚ ಲಫಡಾ ಆಯಿತು. ಕೋಪಗೊಂಡಿದ್ದ ಇಟಾಲಿಯನ್ನರ ತಲೆಗೆ ತೈಲ ತಿಕ್ಕಿ ಸಮಾಧಾನ ಮಾಡಿದರು ಇಸ್ರೇಲಿಗಳು. ಮಾಲಿಶ್ ಮಾಡಿ ಸಮಾಧಾನ ಮಾಡುವ ವಿಷಯದಲ್ಲಿ ಇಸ್ರೇಲಿಗಳು ನಿಪುಣರು. ಹಾಗಿರಲೇಬೇಕು ಏಕೆಂದರೆ ಒಂದಲ್ಲ ಒಂದು ಮಿತ್ರ ದೇಶದಲ್ಲಿ ಇಸ್ರೇಲಿಗಳು ತಮ್ಮ ದೇಶದ ಹಿತರಕ್ಷಣೆಗಾಗಿ ರಹಸ್ಯ ಕಾರ್ಯಾಚರಣೆ ಮಾಡುತ್ತಲೇ ಇರುತ್ತಾರೆ. ಅದು ಅವರಿಗೆ ಅನಿವಾರ್ಯ. ಹಾಗಾಗಿ ಇಂತಹ ಲಫಡಾಗಳು ಆಗಿ ಮಿತ್ರದೇಶಗಳು ಕಿರಿಕಿರಿ ಅನುಭವಿಸುತ್ತವೆ. ಆಗ ಸಮಾಧಾನ ಮಾಡಬೇಕಾಗುತ್ತದೆ. 

ವನುನುವಿನ ಮೇಲೆ ದೇಶದ್ರೋಹ (Treason) ಮತ್ತು ಗೂಢಚರ್ಯೆಯ (Espionage) ಆರೋಪಗಳನ್ನು ಹೊರಿಸಲಾಯಿತು. ವಿಚಾರಣೆಯ ಬಳಿಕ ಅವನಿಗೆ ಹದಿನೆಂಟು ವರ್ಷಗಳ ಕಾರಾಗ್ರಹವಾಸದ ಶಿಕ್ಷೆಯನ್ನು ವಿಧಿಸಲಾಯಿತು. 

ಆದರೆ ವಿದೇಶಗಳಲ್ಲಿ ವನುನು ದೊಡ್ಡ ಹೀರೋನಂತೆ ಬಿಂಬಿಸಲ್ಪಟ್ಟ. ಅವನೊಬ್ಬ ಶಾಂತಿದೂತ ಮತ್ತು ಅಣ್ವಸ್ತ್ರಗಳ  ಪೈಪೋಟಿಯನ್ನು ತಡೆಗಟ್ಟಲು ತನ್ನ ಜೀವ(ನ)ವನ್ನೇ ಪಣಕ್ಕಿಟ್ಟ ಹುತಾತ್ಮ ಎಂದು ಕೆಲ ಸಂಘಟನೆಗಳು ಕೊಂಡಾಡಿದವು. 

ವನುನು ಅದು ಯಾವುದೂ ಆಗಿರಲಿಲ್ಲ. ಅವನೊಬ್ಬ ಹತಾಶನಾಗಿದ್ದ ತಂತ್ರಜ್ಞ ಅಷ್ಟೇ. A frustrated man. ಕೆಲಸ ಮಾಡಿಕೊಂಡಿದ್ದಾಗಲೇ ಇಸ್ರೇಲಿನ ಅಣ್ವಸ್ತ್ರಗಳ ತಯಾರಿಕೆ ಬಗ್ಗೆ ಆಕ್ಷೇಪ ಎತ್ತಿದ್ದರೆ ಅದೊಂದು ಮಾತಾಗಿತ್ತು. ಕೆಲಸದಿಂದ ತೆಗೆದುಹಾಕಿದ ಮೇಲೆಯೇ ಆತನ ಮನಸ್ಸು ಕಹಿಯಾಗಿದ್ದು. ದೇಶ ಬಿಟ್ಟ ಕೂಡಲೇ ರಹಸ್ಯಗಳನ್ನು ಬಯಲು ಮಾಡಲಿಲ್ಲ. ಮಾಡುವ ಇರಾದೆಯೂ ಇದ್ದಂತಿರಲಿಲ್ಲ. ತುಂಬಾ ಪ್ರಪಂಚ ತಿರುಗಿದ. ಆಸ್ಟ್ರೇಲಿಯಾದಲ್ಲಿ ಇದ್ದಾಗ ಗುರಿರೋ ಎನ್ನುವ ಆಸಾಮಿ ಪರಿಚಿತನಾಗಿ, ರಹಸ್ಯಗಳನ್ನು ಪತ್ರಿಕೆಗಳಿಗೆ ಕೊಟ್ಟರೆ ಕೋಟಿ ಕೋಟಿ ಸಂಪಾದಿಸಬಹುದು ಎಂದು ತಲೆಯಲ್ಲಿ ಹುಳ ಬಿಟ್ಟಾಗಲೇ ಅಂತಹ ಯೋಚನೆ ವನುನು ತಲೆಗೆ ಬಂದಿದ್ದು. ಇಲ್ಲವಾದರೆ ಆತ ರಹಸ್ಯಗಳನ್ನು ಬರೆದುಕೊಂಡಿದ್ದ ನೋಟ್ ಪುಸ್ತಕ ಆತನ ಚೀಲದ ಮೂಲೆಯಲ್ಲಿ ಎಲ್ಲೋ ಮುದುಡಿಹೋಗಿ ಕಸದಬುಟ್ಟಿ ಸೇರುತ್ತಿತ್ತು. 

ಆದರೆ ಪ್ರಪಂಚದ ಭೋಳೆ ಜನ ಆತನನ್ನು ಹೀರೋ ಮಾಡಿದರು. ಅಮೇರಿಕಾದ ದಂಪತಿಯೊಂದು ವನುನುವನ್ನು 'ತಮ್ಮ ಮಗ' ಎಂದು ಸಾಂಕೇತಿಕವಾಗಿ 'ದತ್ತಕ್ಕೆ' ತೆಗೆದುಕೊಂಡು ಒಂದಿಷ್ಟು ಸ್ಕೋಪ್ ತೆಗೆದುಕೊಂಡರು. ಕೆಲವು ಕ್ರೈಸ್ತ್ ಗುಂಪುಗಳು ಅವನನ್ನು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಕೂಡ ಶಿಫಾರಸು ಮಾಡಿಬಿಟ್ಟವು. 

ಬರೋಬ್ಬರಿ ಹದಿನೆಂಟು ವರ್ಷಗಳನ್ನು ಜೈಲಿನಲ್ಲಿ ಕಳೆದ ಬಳಿಕ ವನುನು ಬಿಡುಗಡೆಯಾದ. ಇಂದಿಗೂ ಜೆರುಸಲೇಮ್ ಪಟ್ಟಣದ ಚರ್ಚ್ ಒಂದರಲ್ಲಿ ಆತನ ವಾಸ. ಇಸ್ರೇಲನ್ನು ನಖಶಿಖಾಂತ ದ್ವೇಷಿಸುತ್ತಾನೆ. ಮಾತೃಭಾಷೆ, ರಾಷ್ಟ್ರೀಯಭಾಷೆಯಾದ ಹಿಬ್ರೂ ಭಾಷೆಯಲ್ಲಿ ಹರ್ಗೀಸ್ ಮಾತಾಡುವುದಿಲ್ಲ. ಜಾನ್ ಕ್ರಾಸ್ಮನ್ ಎಂದು ಹೊಸ ಹೆಸರು ಇಟ್ಟುಕೊಂಡಿದ್ದಾನೆ. ಅರಬ್ ಪ್ಯಾಲೆಸ್ಟೈನ್ ಸಂಪ್ರದಾಯದ, ಯಹೂದಿಯಲ್ಲದ, ವಧು (ಮದುವೆಗೆ) ಬೇಕಾಗಿದೆ ಎಂದು ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ಹಾಕುತ್ತಾನೆ. ಒಟ್ಟಿನಲ್ಲಿ ಇನ್ನೂ ಎಡಬಿಡಂಗಿಯಾಗಿಯೇ ಇದ್ದಾನೆ. 

ಅವಳೆಲ್ಲಿ ಹೋದಳು ಮಾಯಾಂಗನೆ ಸಿಂಡಿ? ತುಂಬಾ ಗಡಿಬಿಡಿಯಲ್ಲಿ ಈ ಕಾರ್ಯಾಚರಣೆಯನ್ನು ಮಾಡಬೇಕಾದ ಅನಿವಾರ್ಯತೆ ಇದ್ದ ಕಾರಣ ಸಿಂಡಿ ಬಗ್ಗೆ ಒಂದು ವಿಸ್ತೃತವಾದ ಸುಳ್ಳು ವ್ಯಕ್ತಿತ್ವವನ್ನು  (false identity & cover story) ಸೃಷ್ಟಿಸಲು ಮೊಸ್ಸಾದಿಗೆ ವೇಳೆ ಇರಲಿಲ್ಲ. ಸಿಂಡಿ ತನ್ನ ಅಕ್ಕನ ಹೆಸರನ್ನು ಬಳಸಿದ್ದಳು. ಆಕೆಯ ಹೆಸರು ಸಿಂಡಿ ಹಾನಿನ್. ಪ್ರಳಯಾಂತಹ ಪತ್ರಕರ್ತರು ಆ ಹೆಸರಿನ ಜಾಡು ಹಿಡಿದು ತನಿಖೆಗೆ ಇಳಿದರು. ಆಕೆಯ ಜನ್ಮ ಜಾಲಾಡಿಬಿಟ್ಟರು. ಸಿಂಡಿಯ ಬಗ್ಗೆ ಮಾಹಿತಿ ಕಲೆ ಹಾಕಿದರು. 

ಆಕೆಯ ನಿಜವಾದ ಹೆಸರು ಶೆರಿಲ್ ಬೆನ್-ಟೊವ್. ಅಮೇರಿಕಾದ ಮಿಲಿಯನಿಯರ್ ಶ್ರೀಮಂತನ ಮಗಳು. ಅತ್ಯಂತ ಭಕ್ತಿಯುಳ್ಳ ಯಹೂದಿ. ಇಸ್ರೇಲ್ ಪ್ರೇಮಿ. ಹದಿನೇಳು ವರ್ಷಗಳಾದಾಗ ಇಸ್ರೇಲಿಗೆ ವಲಸೆ ಬಂದಿದ್ದಳು. ಅಲ್ಲಿನ ಪೌರತ್ವ ಪಡೆದ ನಂತರ ಕಡ್ಡಾಯವಾದ ಸೈನ್ಯದಲ್ಲಿ ಸೇವೆ ಮಾಡಿದ್ದಳು. ನಂತರ ಮಿಲಿಟರಿ ಬೇಹುಗಾರಿಕೆ ಸಂಸ್ಥೆ ಅಮಾನ್ ನಲ್ಲಿ ಕೆಲಸಮಾಡಿಕೊಂಡಿದ್ದ ಅಧಿಕಾರಿಯನ್ನು ವರಿಸಿದ್ದಳು. 

ಆವಾಗ ಆಕೆ ಮೊಸ್ಸಾದ್ ಕಣ್ಣಿಗೆ ಬಿದ್ದಿದ್ದಳು. ಆಕೆಯ ಬುದ್ಧಿಮತ್ತೆ (IQ) ತುಂಬಾ ಜಾಸ್ತಿಯಿತ್ತು. ಕೆಲಸದ ಬಗ್ಗೆ ತುಂಬಾ ಆಸಕ್ತಿ ಮತ್ತು ಶ್ರದ್ಧೆ. ಮೇಲಿಂದ ಅಮೇರಿಕನ್ ಕೂಡ ಆಗಿರುವುದು ಹೆಚ್ಚಿನ ಅನುಕೂಲ. ಮೊಸ್ಸಾದ್ ಬೇಹುಗಾರಿಕೆ ಕೆಲಸಕ್ಕೆ ಹೇಳಿಮಾಡಿಸಿದ ಅಭ್ಯರ್ಥಿ. 

ಎರಡು ವರ್ಷಗಳ ಕಠಿಣ ತರಬೇತಿಗೆ ಹಾಕಲಾಯಿತು. ಅದು ಮುಗಿಯುವ ಹಂತದಲ್ಲಿದ್ದಾಗ ಈ ಮಹತ್ವದ ಕಾರ್ಯಾಚರಣೆಗೆ ಆಜ್ಞೆ ಬಂದಿತ್ತು. ಮಧುಜಾಲ (honey trap) ಬೀಸಲು ಇವಳಗಿಂತ ಒಳ್ಳೆಯ ಬೇಹುಗಾರಿಣಿ ಇರಲಿಲ್ಲ. ಹಾಗಾಗಿ ತರಾತುರಿಯಲ್ಲಿ ಲಂಡನ್ ಕಾರ್ಯಾಚರಣೆಗೆ ನಿಯೋಜಿಸಲ್ಪಟ್ಟಿದ್ದಳು. 

ವನುನುವಿನ ಅಪಹರಣ ಪ್ರಕರಣದ ನಂತರ ಆಕೆ ಯಾರು ಎಂಬುದು ಬಹಿರಂಗವಾಯಿತು. Her cover was blown. ಒಮ್ಮೆ ಮುಖವಾಡ ಬಯಲಾದ ಮೇಲೆ ಸಕ್ರಿಯ ಬೇಹುಗಾರಿಕೆಗೆ ನಮಸ್ಕಾರ ಹೇಳಲೇಬೇಕು. ಬೇರೆ ಗತಿಯಿಲ್ಲ. 

ಇಂದು ಸಿಂಡಿ ಉರ್ಫ್ ಶೆರಿಲ್ ಹಾನಿನ್ ಬೆನ್-ಟೊವ್ ಅಮೇರಿಕಾದ ಫ್ಲೋರಿಡಾ ರಾಜ್ಯದ ಓರ್ಲಾಂಡೋ ಶಹರದಲ್ಲಿ ನೆಲೆಸಿದ್ದಾಳೆ ಎಂದು ಸುದ್ದಿ. ಆಕೆ ಮತ್ತು ಆಕೆಯ ಪತಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಾರಂತೆ. ಅವರದ್ದು ಮಾದರಿ ಯಹೂದಿ ಅಮೇರಿಕನ್ ಕುಟುಂಬವಂತೆ. 

ಮೊಸ್ಸಾದಿನ ಆಕೆಯ ಹಳೆಯ ಸಹೋದ್ಯೋಗಿಗಳು ಇಂದಿಗೂ ಆಕೆಯನ್ನು ನೆನಪು ಮಾಡಿಕೊಳ್ಳುತ್ತಾರೆ. ವನುನು ಪ್ರಕರಣದಲ್ಲಿ ಆಕೆಯ ಹೆಸರು, ವೈಯಕ್ತಿಕ ಮಾಹಿತಿ ಬಯಲಾಗದಿದ್ದರೆ ಇಂದಿಗೂ ಆಕೆ ತಮ್ಮೊಂದಿಗೆ ಇರುತ್ತಿದ್ದಳು. ಮಹತ್ತರ ಕೊಡುಗೆಗಳನ್ನು ತನ್ನ ಕೆಲಸದ ಮೂಲಕ ಕೊಡುತ್ತಿದ್ದಳು ಎಂದು ಭಾವಿಸುತ್ತಾರೆ. ಬ್ರಿಟನ್ ದೇಶದ ಯಾವುದೇ ಕಾಯಿದೆಗಳನ್ನೂ ಮುರಿಯದೆ, ತುಂಬಾ ಚಾಣಾಕ್ಷತನದಿಂದ ವನುನುವನ್ನು ದೇಶದಿಂದ ಹೊರಗೆ ಕರೆದೊಯ್ದಿದ್ದಳು. ಅದಕ್ಕೊಂದು ದೊಡ್ಡ hats off ಅನ್ನುತ್ತಾರೆ. 

ಬ್ರಿಟನ್ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಪ್ರಕರಣದ ಸಂಪೂರ್ಣ ವರದಿ ತರಿಸಿಕೊಂಡರು. ತಮ್ಮ ದೇಶದ ಕಾನೂನನ್ನು ಇಸ್ರೇಲಿಗಳು ಮೀರಿ ನಡೆದಿಲ್ಲ ಎಂದು ಖಾತ್ರಿಯಾದ ಮೇಲೆ ತಮ್ಮದೇ ರೀತಿಯಲ್ಲಿ ಸಂಸತ್ತಿನಲ್ಲಿ ವಿರೋಧಿಗಳ ಪ್ರತಿಭಟನೆಯನ್ನು ಸಂಬಾಳಿಸಿದರು. ಹೇಳಿಕೇಳಿ 'ಉಕ್ಕಿನ ಮಹಿಳೆ' ಎಂಬ ಖ್ಯಾತಿ ಆಕೆಯದ್ದು. 

ಇಸ್ರೇಲ್ ತನ್ನ ಹಳೆ ಚಾಳಿ ಬಿಟ್ಟರೆ ತಾನೇ? ಎರಡು ವರ್ಷಗಳ ನಂತರ ಮೊಸ್ಸಾದ್ ಅಧಿಕಾರಿಗಳಾದ ಏರಿ ರೇಗೆವ್ ಮತ್ತು ಯಾಕೋವ್ ಬಾರಾಡ್ ಒಬ್ಬ ಪ್ಯಾಲೆಸ್ಟೈನ್ ನಾಗರಿಕನನ್ನು ಲಂಡನ್ನಿನಲ್ಲಿ ಡಬಲ್ ಏಜೆಂಟ್ ಆಗಿ ನೇಮಕ ಮಾಡಿಕೊಂಡರು. ಅವನ ಮೂಲಕ ನಿಷಿದ್ಧ ಬೇಹುಗಾರಿಕೆ ಮಾಡಲು ಯತ್ನಿಸಿದರು. ಅವನು ಸಿಕ್ಕಿಬಿದ್ದ. ಆಗ ಮಾತ್ರ ಸಿಟ್ಟಿಗೆದ್ದ ಪ್ರಧಾನಿ ಥ್ಯಾಚರ್ ಕೆಲಕಾಲ ಮೊಸ್ಸಾದ್ ಕಚೇರಿಗೆ ಬೀಗ ಹಾಕಿಸಿದ್ದರು. ಕೆಲ ಮೊಸ್ಸಾದ್ ಅಧಿಕಾರಿಗಳನ್ನು ದೇಶ ಬಿಟ್ಟು ಓಡಿಸಿದ್ದರು. ರಾಜತಾಂತ್ರಿಕ ಭಾಷೆಯಲ್ಲಿ persona non grata. 

'ತಪ್ಪಾಯಿತು. ತಿದ್ದಿಕೊಳ್ಳುತ್ತೇವೆ,' ಎಂದು ದಮ್ಮಯ್ಯ ಗುಡ್ಡೆ ಹಾಕಿ ಇಸ್ರೇಲ್ ತನ್ನ ರಾಜತಾಂತ್ರಿಕ ಕಚೇರಿ ಮೇಲಿನ, ಮುಖ್ಯವಾಗಿ ಮೊಸ್ಸಾದ್ ವಿಭಾಗದ ಮೇಲಿನ, ನಿರ್ಬಂಧವನ್ನು ತೆರವು ಮಾಡಿಸಿಕೊಂಡಿತ್ತು. ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಹೇಳಿದಂತೆ ನಡೆದುಕೊಂಡರೂ ಕೂಡ. ಆದರೆ ೨೦೧೦ ರಲ್ಲಿ ಮೊಸ್ಸಾದ್ ತಂಡವೊಂದು ಪ್ಯಾಲೆಸ್ಟೈನ್ ಹಮಾಸ್ ಉಗ್ರರ ದೊಡ್ಡ ಕುಳ ಮಹಮೂದ್ ಅಲ್-ಮಾಭೌನನ್ನು ದುಬೈನಲ್ಲಿ ಅವನ ಹೋಟೆಲ್ ರೂಮಿನಲ್ಲಿ ಕೊಂದು ಪರಾರಿಯಾಯಿತು. ಆ ತಂಡದಲ್ಲಿನ ಕೆಲವರು ನಕಲಿ ಬ್ರಿಟಿಷ್ ಪಾಸಪೋರ್ಟ್ ಹೊಂದಿದ್ದರು ಎಂದು ಗುಲ್ಲಾಗಿ ಮತ್ತೆ ಬ್ರಿಟನ್ ದೇಶದ ಕಣ್ಣು ಕೆಂಪಗಾಗಿತ್ತು. ಆಗ ಪ್ರಧಾನಿಯಾಗಿ ಥ್ಯಾಚರ್ ಇರಲಿಲ್ಲ. ಅಷ್ಟರಲ್ಲಾಗಲೇ ಥೇಮ್ಸ್ ನದಿಯಲ್ಲಿ ಸಾಕಷ್ಟು ನೀರು ಹರಿದುಹೋಗಿತ್ತು. ಹಾಗಾಗಿ ದೊಡ್ಡ ಸುದ್ದಿಯಾಗಲಿಲ್ಲ. ಚಿರತೆ ಎಂದಿಗೂ ಮೈಮೇಲಿನ ಪಟ್ಟೆಗಳನ್ನು ಬದಲಾಯಿಸುವುದಿಲ್ಲವಂತೆ. ಮೊಸ್ಸಾದ್ ಕೂಡ ಹಾಗೆಯೇ...ಖತರ್ನಾಕ್ ತುಂಟ ಸಂಸ್ಥೆ :)

ಮಾಹಿತಿ ಮೂಲ: Mossad: The Greatest Missions of the Israeli Secret Service by Michael Bar-Zohar,
Nissim Mishal

Wednesday, July 22, 2020

ಆಪರೇಷನ್ ಒಪೇರಾ...ಇರಾಕಿನ ಅಣುಸ್ಥಾವರದ ಮೇಲೆ ಇಸ್ರೇಲಿನ ರೋಚಕ ಕಾರ್ಯಾಚರಣೆ

ಆ ದಿನ ಶುಕ್ರವಾರ, ಜೂನ್ ೭, ೧೯೮೧.  ಅಂದು ಯಹೂದಿಗಳಿಗೆ ಹಬ್ಬದ ದಿನ. ಗತಕಾಲದಲ್ಲಿ ಆ ದಿನವೇ ದೇವರು ಯಹೂದಿಗಳಿಗೆ ಸೈನೈ ಪರ್ವತದ ಮೇಲೆ ಅವರ ಧರ್ಮಗ್ರಂಥವಾದ 'ತೋರಾ'ವನ್ನು ದಯಪಾಲಿಸಿದ ಎಂದು ಯಹೂದಿಗಳು ನಂಬುತ್ತಾರೆ. ಆ ದಿನವನ್ನು ಹಬ್ಬದಂತೆ ಆಚರಿಸುತ್ತಾರೆ. ಹಲವಾರು ಇಸ್ರೇಲಿಗಳು ಅಂದು ತಮ್ಮ ದೇವಾಲಯಗಳಲ್ಲಿ ನೆರೆದಿದ್ದರು. ಮತ್ತೆ ಅನೇಕರು ಇಸ್ರೇಲಿನ ಬಂಗಾರದಂತಹ ಮರಳುಳ್ಳ ಸಮುದ್ರತಟದ ಬೀಚುಗಳಲ್ಲಿ ಬೋರಲು ಬಿದ್ದು ಮಜಾ  ಮಾಡುತ್ತಿದ್ದರು.

ಮಧ್ಯಾಹ್ನ ಸುಮಾರು ೪ ಘಂಟೆ ಹೊತ್ತಿಗೆ ನೆತ್ತಿ ಮೇಲೆ ಒಮ್ಮೆಲೇ ಹಾರಿಹೋದವು ಇಸ್ರೇಲಿ ವಾಯುಪಡೆಯ ಅಮೇರಿಕಿ ನಿರ್ಮಿತ ಅತ್ಯಾಧುನಿಕ ಎಂಟು F-16 ಯುದ್ಧವಿಮಾನಗಳು. ಇಸ್ರೇಲಿನ ಎಲಿಯಾಟ್ ಕೊಲ್ಲಿಯನ್ನು ದಾಟಿ ಸೌದಿ ಅರೇಬಿಯಾದತ್ತ ವಿಮಾನಗಳು ಹಾರಿದ್ದನ್ನು ಬೀಚುಗಳ ಮೇಲಿದ್ದವರು ಗಮನಿಸದೇ ಇರಲು ಸಾಧ್ಯವಿರಲಿಲ್ಲ.

ಆ F-16 ವಿಮಾನಗಳು ಇಸ್ರೇಲಿನ ಸೈನೈ ಪ್ರದೇಶದಲ್ಲಿರುವ ಎಟ್ಜಿಯಾನ್ ವಾಯುನೆಲೆಯಿಂದ ಹಾರಿದ್ದವು. ಅವುಗಳ ಹಿಂದೆಯೇ ಅವುಗಳ ಅಂಗರಕ್ಷರೋ ಎಂಬಂತೆ ಭಯಂಕರ sonic boom ಮಾಡುತ್ತ ಮುಗಿಲಿಗೆ ಲಗ್ಗೆ ಹಾಕಿದವು ಹೆಚ್ಚಿನ ಎಂಟು F-15 ಫೈಟರ್ ವಿಮಾನಗಳು. ಒಟ್ಟಿನಲ್ಲಿ ಹದಿನಾರು ಡೆಡ್ಲಿ ಯುದ್ಧವಿಮಾನಗಳ ಮೆರವಣಿಗೆ ಎಲ್ಲೋ ಹೊರಟಿತ್ತು. ಎಲ್ಲೇನು ಮಟಾಷ್ ಆಗಲಿತ್ತೋ ಆವತ್ತು!?

ಜೋರ್ಡಾನ್ ಇಸ್ರೇಲಿನ ಪಕ್ಕದ ದೇಶ. ಅಂದು ಅದೇನು ಕಾಕತಾಳಿಯವೋ ಗೊತ್ತಿಲ್ಲ. ಜೋರ್ಡಾನ್ ದೇಶದ ರಾಜ ಕಿಂಗ್ ಹುಸೇನ್ ಅದೇ ಹೊತ್ತಿಗೆ ತಮ್ಮ ಐಷಾರಾಮಿ ರಾಯಲ್ ಹಡಗಿನಲ್ಲಿ ಸಮುದ್ರವಿಹಾರ ಮಾಡಿಕೊಂಡಿದ್ದರು. ಹೇಳಿಕೇಳಿ ಮಹಾರಾಜರು. ಅವರ ಬಳಿ ಹತ್ತಾರು ರಾಯಲ್ ಹಡಗುಗಳು, ದೋಣಿಗಳು ಇದ್ದವು. ಎಲ್ಲ ವ್ಯವಸ್ಥೆ ಹೊಂದಿರುವಂತಹವು. ದೇಶವಿದೇಶದ ಸಖಿಯರನ್ನು ಒಟ್ಟಾಕಿಕೊಂಡು ಕೆಂಪು ಸಮುದ್ರದ ಎಲಿಯಾಟ್ ಕೊಲ್ಲಿಯಲ್ಲಿ ಮೀನು ಹಿಡಿಯುವದೆಂದರೆ ಮಹಾರಾಜರಿಗೆ ಖುಷಿಯೋ ಖುಷಿ. ಅಂತಹ ಖುಷಿಯಲ್ಲಿದ್ದರೂ ಅವರೂ ಸಹ ತಲೆ ಮೇಲೆ ಹತ್ತಾರು ಇಸ್ರೇಲಿ ಯುದ್ಧವಿಮಾನಗಳು ಹಾರಿಹೋಗಿದ್ದನ್ನು ಗಮನಿಸದಿರಲಿಲ್ಲ.

ಬೇರೆ ಅರಬ್ ದೇಶಗಳಿಗೆ ಹೋಲಿಸಿದರೆ ಇಸ್ರೇಲ್ ಮತ್ತು ಜೋರ್ಡನ್ ನಡುವೆ ಸಂಬಂಧ ತಕ್ಕ ಮಟ್ಟಿಗೆ ಚೆನ್ನಾಗಿಯೇ ಇತ್ತು. ಆದರೂ ಮೊದಲು ಬೇಕಾದಷ್ಟು ಸಲ ಯುದ್ಧವಾಗಿತ್ತು ಕೂಡ. ಯಾವುದಕ್ಕೂ ಸೇಫ್ಟಿಗೆ ಇರಲಿ ಎಂದು ವಿಚಾರ ಮಾಡಿದ ಕಿಂಗ್ ಹುಸೇನ್ ಮಾಡಿದ ಮೊದಲ ಕೆಲಸವೆಂದರೆ ಸೀದಾ ತಮ್ಮ ಐಷಾರಾಮಿ ಹಡಗಿನ ರೇಡಿಯೋ ರೂಮಿಗೆ ಹೋಗಿದ್ದು. ಅಲ್ಲಿ ವಯರ್ಲೆಸ್ ಸೆಟ್ ಎತ್ತಿಕೊಂಡವರೇ ತಮ್ಮ ಸೇನೆಗೆ ಸುದ್ದಿ ಮುಟ್ಟಿಸಿದರು...'ಇಸ್ರೇಲಿ ಯುದ್ಧವಿಮಾನಗಳು ಆಕಾಶಕ್ಕೇರಿವೆ. ಯಾವುದಕ್ಕೂ ಎಚ್ಚರ ವಹಿಸಿ. ಈ ಮಾಹಿತಿಯನ್ನು ಸುತ್ತಮುತ್ತಲಿನ ನಮ್ಮ ಇತರೇ ಅರಬ್ ಮಿತ್ರ ದೇಶಗಳೊಂದಿಗೆ ಹಂಚಿಕೊಳ್ಳಿ!'

ಯಾಕೋ ಏನೋ ಗೊತ್ತಿಲ್ಲ. ಈ ಮಾಹಿತಿಯನ್ನು ಸ್ವೀಕರಿಸಿದ ಜೋರ್ಡನ್ ಸೇನೆಯ ಕಂಟ್ರೋಲ್ ರೂಮ್ ಸಿಬ್ಬಂದಿ ಇದನ್ನು ಯಾರೊಂದಿಗೂ ಹಂಚಿಕೊಳ್ಳಲೇ ಇಲ್ಲ.  ದಿನನಿತ್ಯ ಬರುವಂತಹ ಅನೇಕ ರೂಟೀನ್ ಮಾಹಿತಿಗಳಲ್ಲಿ ಇದೂ ಒಂದಿರಬಹುದು ಎಂದುಕೊಂಡರೋ ಏನೋ. ಒಟ್ಟಿನಲ್ಲಿ ಇಸ್ರೇಲಿ ಯುದ್ಧವಿಮಾನಗಳು ತರಾತುರಿಯಲ್ಲಿ ಕೆಂಪು ಸಮುದ್ರದ ಮೇಲೆ ಹಾರಿಹೋಗಿದ್ದು ಸುದ್ದಿಯಾಗಲೇ ಇಲ್ಲ. ಮಾಹಿತಿಯನ್ನು ಅಕ್ಕಪಕ್ಕದ ದೇಶಗಳೊಡನೆ ಹಂಚಿಕೊಳ್ಳಲೇ ಇಲ್ಲ.

ಅದು ಒಳ್ಳೆಯದೇ ಆಯಿತು. ಅಂದು ಅದೃಷ್ಟಲಕ್ಷ್ಮಿ ಇಸ್ರೇಲಿಗಳ ಪಕ್ಷದಲ್ಲಿ ಇದ್ದಳು ಅಂತ ಕಾಣುತ್ತದೆ. ಏಕೆಂದರೆ ಆ ಹದಿನಾರು ಇಸ್ರೇಲಿ ಯುದ್ಧವಿಮಾನಗಳು ಸುಖಾಸುಮ್ಮನೆ ಗಗನಕ್ಕೆ ಚಿಮ್ಮಿರಲಿಲ್ಲ. ಆವತ್ತಿನ ಕಾರ್ಯಾಚರಣೆ ಬಹು ಮುಖ್ಯವಾದ ಕಾರ್ಯಾಚರಣೆಯಾಗಿತ್ತು. ಅದರ ಕೋಡ್ ನೇಮ್ ಆಪರೇಷನ್ ಒಪೇರಾ. ಉದ್ದೇಶ ಸ್ಪಷ್ಟವಾಗಿತ್ತು. ಇರಾಕಿನಲ್ಲಿ ಸದ್ದಾಮ ಹುಸೇನ್ ನಿರ್ಮಿಸುತ್ತಿದ್ದ ಅಣುಸ್ಥಾವರವನ್ನು ನೆಲಸಮ ಮಾಡುವುದು ಮತ್ತು ಯಾವುದೇ ಹಾನಿಯಿಲ್ಲದಂತೆ ವಾಪಸ್ ಇಸ್ರೇಲ್ ತಲುಪಿಕೊಳ್ಳುವುದು.

ಇಂತಹದೊಂದು ರಹಸ್ಯ ಮತ್ತು ಖತರ್ನಾಕ್ ವೈಮಾನಿಕ ಕಾರ್ಯಾಚರಣೆಗೆ ತಯಾರಿ ಕೆಲವು ವರ್ಷಗಳ ಹಿಂದೆಯೇ ಆರಂಭವಾಗಿತ್ತು. ೧೯೭೬ ರಲ್ಲಿ ಇರಾಕ್ ದೇಶ ಫ್ರಾನ್ಸ್ ದೇಶದೊಂದಿಗೆ ಅಣುಸ್ಥಾವರದ ನಿರ್ಮಾಣಕ್ಕಾಗಿ ಒಪ್ಪಂದವೊಂದಕ್ಕೆ ಸಹಿ ಹಾಕಿತ್ತು. ಫ್ರೆಂಚರು ಆ ಅಣುಸ್ಥಾವರಕ್ಕೆ ಒಸಿರಾಕ್ ಎಂದು ಕರೆದರೆ ಇರಾಕಿಗಳು ತಾಮೂಜ್ ಎಂದು ನಾಮಕರಣ ಮಾಡಿಕೊಂಡಿದ್ದರು. ಇರಾಕಿನ ಅಪಾರ ಪೆಟ್ರೋಲ್ ಸಂಪತ್ತಿನ ಮೇಲೆ ಕಣ್ಣಿಟ್ಟಿದ್ದ ಆಸೆಬುರುಕ ಫ್ರೆಂಚರು ಇರಾಕಿಗಳಿಗೆ ಆಟಂ ಬಾಂಬ್ ಮಾಡಲು ಬೇಕಾಗುವಷ್ಟು ಯುರೇನಿಯಂ ಕೂಡ ಕೊಡುವದಾಗಿ ಹೇಳಿದ್ದರು.

ಈ ವಿಷಯವನ್ನು ಇರಾಕ್ ಮತ್ತು ಫ್ರಾನ್ಸ್ ಅದೆಷ್ಟೇ ಗುಪ್ತವಾಗಿ ಇಡಲು ಯತ್ನಿಸಿದರೂ ಇಸ್ರೇಲಿನ ಖಡಕ್ ಬೇಹುಗಾರಿಕೆ ಸಂಸ್ಥೆ ಮೊಸ್ಸಾದ್ ಇದರ ಮಾಹಿತಿಯನ್ನು ಬಹುಬೇಗನೆ ಸಂಪಾದಿಸಿ ಸರ್ಕಾರಕ್ಕೆ ಮುಟ್ಟಿಸಿತ್ತು. ಇಸ್ರೇಲ್ ರಾಜತಾಂತ್ರಿಕ ಮಾರ್ಗಗಳ ಮೂಲಕ ಇರಾಕಿಗೆ ಅಣುಸ್ಥಾವರ ಸಿಗುವುದನ್ನು ತಪ್ಪಿಸಲು ನೋಡಿತು. ತಲೆಕೆಟ್ಟ ಸರ್ವಾಧಿಕಾರಿ ಸದ್ದಾಮ್ ಹುಸೇನ್ ಅಣುಶಕ್ತಿಯನ್ನು ಗಳಿಸುತ್ತಾನೆ ಎಂದರೆ ಅದು ಇಸ್ರೇಲಿನ ಅಸ್ತಿತ್ವದ ಬುಡಕ್ಕೇ ಬಾಂಬಿಟ್ಟಂತೆ. ಅದನ್ನು ತಡೆಗಟ್ಟಿ ಎಂದು ಅಂತರರಾಷ್ಟ್ರೀಯ ಸಮುದಾಯದ ಮುಂದೆ ಜಾಗಟೆ ಬಾರಿಸಿತು ಇಸ್ರೇಲ್. ರೊಕ್ಕ ಮಾಡುವ ತರಾತುರಿಯಲ್ಲಿದ್ದ ಫ್ರೆಂಚರು ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಅವರು ಸದ್ದಾಮ್ ಹುಸೇನನ್ನು ನುಣ್ಣಗೆ ಬೋಳಿಸುವಲ್ಲೇ ಮಗ್ನರು. ಅವನಿಗೋ ರೊಕ್ಕವೆಂಬುವುದು ಕರಡಿ ಮೈಮೇಲಿನ ಕೂದಲಿದ್ದಂತೆ. ಫ್ರೆಂಚರು ಬೋಳಿಸಿದಷ್ಟೂ ಬೆಳೆಯುತ್ತಿತ್ತು. ಒಟ್ಟಿನಲ್ಲಿ ಇಸ್ರೇಲಿಗಳ ಆಕ್ಷೇಪಣೆ  ಅರಣ್ಯರೋದನವಾಯಿತೇ ವಿನಃ ಮತ್ತೇನೂ ಉಪಯೋಗವಾಗಲಿಲ್ಲ.

ಆಗ ಮೊಸ್ಸಾದ್ ಕಾರ್ಯಾಚರಣೆಗೆ ಇಳಿಯಿತು. ನುರಿತ ಗೂಢಚಾರರನ್ನು ಉಪಯೋಗಿಸಿಕೊಂಡು ಫ್ರೆಂಚ್ ದೇಶದಿಂದ ಇರಾಕಿಗೆ ಹೋಗಬೇಕಾಗಿದ್ದ ಅಣುಸ್ಥಾವರದ ಉಪಕರಣಗಳನ್ನು ರಹಸ್ಯವಾಗಿ ಹಾಳುಮಾಡಿತು. ಸದ್ದಾಮ ಹುಸೇನ್ ಹೆಚ್ಚಿನ ರೊಕ್ಕ ಕೊಟ್ಟು ಅವುಗಳ ದುರಸ್ತಿ ಮಾಡಿಸಿಕೊಂಡ. ಹೆಚ್ಚಿನ ರಕ್ಷಣಾವ್ಯವಸ್ಥೆ ಮಾಡಿಸಿಕೊಂಡು ಇರಾಕಿಗೆ ತರಿಸಿಕೊಂಡ. ಸಣ್ಣ ಸಣ್ಣ ಕಾರ್ಯಾಚರಣೆಗಳ ಮೂಲಕ ಸದ್ದಾಮ ಹುಸೇನನ ಯೋಜನೆಗೆ ಭಂಗ ತರುವುದು ಎಂದರೆ ಆನೆಯನ್ನು ಸೂಜಿಯಿಂದ ಚುಚ್ಚಿ ಚುಚ್ಚಿ ಕೊಲ್ಲಲು ಪ್ರಯತ್ನಿಸಿದಂತೆ ಎಂದು ಇಸ್ರೇಲಿಗೆ ಮನವರಿಕೆ ಆಯಿತು. ಆನೆಯನ್ನು ನೆಲಕ್ಕೆ ಉರುಳಿಸಬೇಕು ಅಂದರೆ ನಡುನೆತ್ತಿಗೆ ಬರೋಬ್ಬರಿ ಗುರಿಯಿಟ್ಟು ದೊಡ್ಡ ಕಾಡತೂಸನ್ನೇ ಹೊಡೆಯಬೇಕು. ಬಾಕಿ ಎಲ್ಲ ವ್ಯರ್ಥ ಪ್ರಯತ್ನ ಎಂದು ಮನದಟ್ಟಾಯಿತು ಇಸ್ರೇಲಿಗೆ.

೧೯೭೭ ರಲ್ಲಿ ಮೇನಾಕೇಮ್ ಬೆಗಿನ್ ಇಸ್ರೇಲಿನ ಪ್ರಧಾನಿ. ಭಯಂಕರ ಖಡಕ್ ಮನುಷ್ಯ. ರಕ್ಷಣಾ ಸಚಿವ ಯೇಜರ್ ವೈಸಮನ್ ಮತ್ತು ಸೇನಾಪಡೆಗಳ ಮುಖ್ಯಸ್ಥ ರಾಫುಲ್ ಏಟಾನ್ ಕೂಡ ಅಷ್ಟೇ ಗಟ್ಟಿಗರು. ಆದರೆ ಫ್ರಾನ್ಸ್ ದೇಶಕ್ಕೆ ಏನೂ ಮಾಡುವಂತಿಲ್ಲ. ಒಂದು ತರಹದ ಮಿತ್ರ ದೇಶವದು. ಏನೇ ಮಾಡಿದರೂ ಇರಾಕಿಗೇ ಮಾಡಬೇಕು. ಇರಾಕಿಗೆ ಮಾಡುವುದೇನೂ ಬಾಕಿ ಉಳಿದಿಲ್ಲ. ದೊಡ್ಡ ಮಟ್ಟದ ಕಾರ್ಯಾಚರಣೆಯೇ ತಕ್ಕ ಮದ್ದು ಎಂದುಕೊಂಡರು. ಯೋಜನೆ ಹಾಕಲು ಕುಳಿತರು.

ಈ ಕಾರ್ಯಾಚರಣೆಗೆ ಸ್ಕೆಚ್ ಹಾಕುವ ಪೂರ್ಣ ಜವಾಬ್ದಾರಿಯನ್ನು ಇಸ್ರೇಲಿ ವಾಯುಸೇನೆಯ ಡೇವಿಡ್ ಐವರಿ ಅವರಿಗೆ ವಹಿಸಲಾಯಿತು. ಅವರಿಗೆ ಸಹಾಯಕರಾಗಿ ಕರ್ನಲ್ ಅವಿಯಮ್ ಸೆಲ್ಲಾ ನಿಯೋಜಿತರಾದರು. ಬೇಕಾದ ಮಾಹಿತಿಯನ್ನು ಒದಗಿಸಲು ಮೊಸ್ಸಾದ್ ಸದಾ ಸಿದ್ಧವಿತ್ತು.

೧೯೮೧ ರ ಸೆಪ್ಟೆಂಬರ್ ಹೊತ್ತಿಗೆ ಅಣುಸ್ಥಾವವರ ಪೂರ್ಣಗೊಳ್ಳುತ್ತದೆ ಅನ್ನುವ ಪಕ್ಕಾ ಮಾಹಿತಿ ಬಂದಿದ್ದು ದೊಡ್ಡ ಆತಂಕಕ್ಕೆ ಎಡೆಮಾಡಿಕೊಟ್ಟಿತು. ಅದಕ್ಕಿಂತ ಮೊದಲೇ ಸದ್ದಾಮನ ಹೆಮ್ಮೆಯ ಅಣುಸ್ಥಾವರಕ್ಕೆ ಒಂದು ಶಾಶ್ವತ ಗತಿ ಕಾಣಿಸಲೇಬೇಕು ಎನ್ನುವ ಧೃಡ ನಿರ್ಧಾರಕ್ಕೆ ಬಂದರು ಪ್ರಧಾನಿ ಬೆಗಿನ್.

ತುಂಬಾ ಅನಿರೀಕ್ಷಿತವೆಂಬಂತೆ ಈ ಯೋಜನೆಗೆ ಪರೋಕ್ಷ  ಸಹಾಯ ಒಂದು ವಿಚಿತ್ರ ದೇಶದಿಂದ ಬಂತು. ಅದು ಇರಾಕಿನ ಪಕ್ಕದ ದೇಶ ಇರಾನಿನಿಂದ. ೧೯೭೯ ರಲ್ಲಿ ಇರಾನಿನಲ್ಲಿ ಧಾರ್ಮಿಕ ಕ್ರಾಂತಿಯಾಗಿತ್ತು. ಅಲ್ಲಿನ ಮಹಾರಾಜ ರೇಝಾ ಪೆಹ್ಲವಿಯನ್ನು ಖೊಮೇನಿ ಎಂಬ ಶಿಯಾ ಧರ್ಮಗುರುವಿನ ಹಿಂಬಾಲಕರು ಓಡಿಸಿದ್ದರು. ರೇಝಾ ಪೆಹ್ಲವಿ ತುಂಬಾ ದುಷ್ಟನಾಗಿದ್ದ. ಜನರಿಗೂ ಸಾಕಾಗಿತ್ತು. ಒಟ್ಟಿನಲ್ಲಿ ಇರಾನಿನಲ್ಲಿ ಮಹಾರಾಜ ರೇಝಾ ಪೆಹ್ಲವಿಯ ಅಮೇರಿಕನ್ ಸ್ನೇಹಿ ಸರ್ಕಾರ ಹೋಗಿ ಅಮೇರಿಕಾ, ಇಸ್ರೇಲ್ ಮುಂತಾದ ಪಶ್ಚಿಮದ ದೇಶಗಳನ್ನು ನಖಶಿಖಾಂತ ದ್ವೇಷಿಸುವ ಖೊಮೇನಿ ಸರ್ಕಾರ ಇರಾನ್ ದೇಶದಲ್ಲಿ ಸ್ಥಾಪಿತವಾಗಿತ್ತು.

ಮಹಾರಾಜ ರೇಝಾ ಪೆಹ್ಲವಿಯ ಸರ್ಕಾರವಿದ್ದಾಗ ಅವನು ಎಲ್ಲಾ ರಕ್ಷಣಾ ಸಾಮಗ್ರಿಗಳನ್ನು ಅಮೇರಿಕಾದಿಂದ ಕೊಳ್ಳುತ್ತಿದ್ದ. ಹಾರ್ಡ್ ಕ್ಯಾಶ್ ಕೊಡುತ್ತಿದ್ದ ಕಾರಣ ಅವನ ಬೇಡಿಕೆಗಳನ್ನು ತ್ವರಿತ ಆದ್ಯತೆ ಮೇಲೆ ಪೂರೈಸುತ್ತಿತ್ತು ಅಮೇರಿಕಾ. ಅವನು ದೇಶ ಬಿಟ್ಟು ಹೋಗುವ ಮೊದಲಷ್ಟೇ ದೊಡ್ಡ ಪ್ರಮಾಣದ F - 16 ಯುದ್ಧವಿಮಾನಗಳಿಗೆ ಆರ್ಡರ್ ಕೊಟ್ಟಿದ್ದ. ಇಸ್ರೇಲ್ ಕೂಡ ನಮಗೂ ಬೇಗ F - 16 ಕೊಡಿ ಎಂದು ಕೇಳಿತ್ತು. ಇಸ್ರೇಲ್ ಎಷ್ಟೆಂದರೂ ಉದ್ದರಿ ಗಿರಾಕಿ. ಒಮ್ಮೊಮ್ಮೆ ಬಿಟ್ಟಿಯಾಗೂ ಕೇಳುತ್ತಿತ್ತು. ಇರಾನ್ ಹಾರ್ಡ್ ಕ್ಯಾಶ್ ಕೊಡುತ್ತಿದ್ದ ಗ್ರಾಹಕ. ಹಾಗಾಗಿ ಇಸ್ರೇಲಿಗೆ ಅತ್ಯಾಧುನಿಕ F - 16 ಯುದ್ಧ ವಿಮಾನಗಳ ಪೂರೈಕೆ ತಡವಾಗಿತ್ತು. ಇರಾನಿನಲ್ಲಿ ಸರ್ಕಾರ ಬದಲಾಗಿ ಯಾವಾಗ ಅಮೇರಿಕಾವನ್ನು ದ್ವೇಷಿಸುವ ಸರ್ಕಾರ ಬಂತೋ ಅಂದೇ ಅಮೇರಿಕಾ ಇರಾನಿಗೆ ರಕ್ಷಣಾ ಸಾಮಗ್ರಿಗಳ ಪೂರೈಕೆ ನಿಲ್ಲಿಸಿತು. ಇರಾನಿಗೆ ಹೋಗಬೇಕಾಗಿದ್ದ F - 16 ವಿಮಾನಗಳನ್ನು ಇಸ್ರೇಲಿಗೆ ಕೊಡುವದಾಗಿ ಹೇಳಿತು.

ಇರಾಕ್ ವಿರುದ್ಧ ಇಸ್ರೇಲ್ ಮಾಡಲು ಕುಳಿತಿದ್ದ ರಹಸ್ಯ ಕಾರ್ಯಾಚರಣೆಗೆ F - 16 ಯುದ್ಧವಿಮಾನಗಳು ತುಂಬಾ ಮುಖ್ಯವಾಗಿದ್ದವು. ಹಿಂದೆಂದೂ ಯಾರೂ ಮಾಡಿರದಂತಹ ವೈಮಾನಿಕ ಕಾರ್ಯಾಚರಣೆ. ಹಾಗಾಗಿ ಅತ್ಯಾಧುನಿಕ ತಂತ್ರಜ್ಞಾನವಿದ್ದ ವಿಮಾನ ಜರೂರ್ ಬೇಕಾಗಿತ್ತು.

ಎಂಟು F - 16 ಯುದ್ಧವಿಮಾನಗಳು ಮುಖ್ಯ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವುದೆಂದು ಮತ್ತು ಎಂಟು F - 15 ಫೈಟರ್ ವಿಮಾನಗಳು ಅವುಗಳಿಗೆ ಬೆಂಬಲ ನೀಡುವದೆಂದು ಕಾರ್ಯಾಚರಣೆಯ ದೊಡ್ಡಮಟ್ಟದ ರೂಪುರೇಷೆ ತಯಾರಾಯಿತು.

ವಿಮಾನದ ಪೈಲಟ್ಟುಗಳು ಮತ್ತು ಅವರ ಸಂಗಡಿಗರು ಅಭ್ಯಾಸ ಆರಂಭಿಸಿದರು. ಇಸ್ರೇಲಿನ ನೆಗೆವ್ ಮರಭೂಮಿಯಲ್ಲಿ ಇರಾಕಿನ ಅಣುಸ್ಥಾವರವನ್ನು ಹೋಲುವ ಒಂದು ಮಾದರಿಯನ್ನು ನಿರ್ಮಿಸಲಾಯಿತು. ಅದರ ಮೇಲೆ ಇಸ್ರೇಲಿನ ಸೇನೆ ಕಾರ್ಯಾಚರಣೆಯ ತಯಾರಿಯನ್ನು ಶುರು ಮಾಡಿತು.

ಸೇನಾ ಮುಖ್ಯಸ್ಥ ರಾಫುಲ್ ಏಟಾನ್ ಖುದ್ದಾಗಿ ಸಮರಾಭ್ಯಾಸದಲ್ಲಿ ಭಾಗಿಯಾದರು. ಪೈಲಟ್ ಪಕ್ಕ ಕುಳಿತು, ಅಭ್ಯಾಸದ ಬಾಂಬಿಂಗ್ (mock bombing raid) ದಾಳಿಯಲ್ಲಿ ಪಾಲ್ಗೊಂಡು, ಎಲ್ಲವೂ ಸರಿಯಾಗಿದೆ ಎಂದು ಅವರಿಗೆ ಖುದ್ದಾಗಿ ಮನದಟ್ಟಾಗಬೇಕಿತ್ತು. ಅಲ್ಲಿಯವರೆಗೆ ಅವರಿಗೆ ಸಮಾಧಾನವಿಲ್ಲ. ಮತ್ತು ದೇಶದ ಪ್ರಧಾನಿಯೆದುರು ಹೋಗಿ ೧೦೦% ಖಾತ್ರಿ ಕೊಡುವ ಬಗ್ಗೆ ವಿಶ್ವಾಸವಿರಲಿಲ್ಲ.

ತಾವು ಖುದ್ದಾಗಿ ಪಾಲ್ಗೊಂಡಿದ್ದ ಸಮರಾಭ್ಯಾಸದ ದಾಳಿಯ ನಂತರ ಸೇನಾ ಮುಖ್ಯಸ್ಥ ಏಟಾನ್ ಮನೆಯೆತ್ತ ನಡೆದರು. ಪಕ್ಕದಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಅವಿರಾಮ್ ಸೆಲ್ಲಾ ಹಿಂಬಾಲಿಸಿದರು. ಬಾಸ್ ಏನು ಹೇಳುತ್ತಾರೋ ಎಂಬ ಬಗ್ಗೆ ಸೆಲ್ಲಾ ಅವರಿಗೆ ಕುತೂಹಲ ಮತ್ತು ಆತಂಕ. ರಾಫುಲ್ ಏಟಾನ್ ಒಪ್ಪಿದರೆ ಮಾತ್ರ ಯೋಜನೆ ಮುಂದುವರೆಯುತ್ತದೆ. ಇಲ್ಲವಾದರೆ ಮತ್ತೆ ಶುರುವಿಂದ ಯೋಜನೆ ಮಾಡಲು ಕೂಡಬೇಕು. ಸಮಯ ಕಮ್ಮಿಯಿತ್ತು. ಒತ್ತಡ ತುಂಬಾ ಇತ್ತು.

ರಾಫುಲ್ ಏಟಾನ್ ಅಂದರೆ ಅವರೊಂದು ಬಗೆಯ ನಿಗೂಢ ರಹಸ್ಯ...Enigma. ಸದಾ ಮೌನಿ. ಎಲ್ಲವನ್ನೂ ಬಾಯಿಬಿಟ್ಟು ಹೇಳುವವರಲ್ಲ. ತಲೆ ಮಾತ್ರ ಹನ್ನೆರೆಡೂ ಘಂಟೆ ಓಡುತ್ತಲೇ ಇರುತ್ತಿತ್ತು. ರಷಿಯನ್ ನಿರಾಶ್ರಿತರಾಗಿ ಇಸ್ರೇಲಿಗೆ ಬಂದಿದ್ದರು ಅವರ ಪೂರ್ವಜರು. ಸೇನೆ ಸೇರುವ ಮೊದಲು ಏಟಾನ್ ಕೃಷಿಕರಾಗಿದ್ದರು. ಒಳ್ಳೆಯ ಬಡಗಿ ಕೂಡ.

ಸೇನೆ ಸೇರಿದ ಏಟಾನ್ ಇಸ್ರೇಲ್ ಕಂಡ ಮಹಾ ಸೇನಾನಿ ಏರಿಯಲ್ ಶರೋನ್ ಕೆಳಗೆ ಪಳಗಿದರು. ಅವರ ನೆರಳಿನಂತೆ ಕೆಲಸ ಮಾಡಿದರು. ೧೯೬೦, ೧೯೭೦ ರ ದಶಕಗಳ ಪ್ರಮುಖ ಯುದ್ಧಗಳಲ್ಲಿ ಭಾಗವಹಿಸಿದ್ದರು. ಪ್ರಾಣವನ್ನು ಪಣಕ್ಕಿಟ್ಟು ಹೋರಾಡಿದ್ದರು. ಇಸ್ರೇಲಿನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ದೊಡ್ಡ ಮಟ್ಟದ ಕಾಣಿಕೆ ಸಲ್ಲಿಸಿದ್ದರು. ೧೯೭೮ ರಲ್ಲಿ ಇಸ್ರೇಲಿ ಸೇನಾಪಡೆಗಳ ಮುಖ್ಯಸ್ಥರಾಗಿ ನೇಮಕವಾಗಿದ್ದರು.

ಇಂತಹ ರಾಫುಲ್ ಏಟಾನ್ ದಾರಿಯುದ್ದಕ್ಕೂ ಒಂದೇ ಒಂದು ಮಾತಾಡಲಿಲ್ಲ. ಪಕ್ಕದಲ್ಲಿ ಕುಳಿತ ಅವಿರಾಮ್ ಸೆಲ್ಲಾಗೆ ಇನ್ನಿಲ್ಲದ ಚಡಪಡಿಕೆ. ಅರ್ಧ ಘಂಟೆಯ ಪ್ರಯಾಣದ ಬಳಿಕ ಏಟಾನ್ ಕ್ಲುಪ್ತವಾಗಿ ಹೇಳಿದ್ದು ಒಂದೇ ಮಾತು... 'ಚಿಂತೆ ಬೇಡ. ಸರ್ಕಾರ ನಿಮ್ಮ ಯೋಜನೆಯನ್ನು ಅನುಮೋದಿಸುತ್ತದೆ.' ಈ ಮಾತನ್ನು ಕೇಳಿದ ಸೆಲ್ಲಾ ಸಮಾಧಾನದ ನಿಟ್ಟುಸಿರನ್ನು ಬಿಟ್ಟರು. ಮನದಲ್ಲಿ ಸಾರ್ಥಕ ಭಾವನೆ. ತಮ್ಮ ಸೇನಾನಾಯಕನ ಬಗೆಗೊಂದು ದೊಡ್ಡ ಮಟ್ಟದ ಗೌರವ.

ಸೇನೆಯ ಮಹಾದಂಡನಾಯಕರು ಖುದ್ದಾಗಿ ಎಲ್ಲ ಪರಿಶೀಲನೆ ಮಾಡಿ ಓಕೆ ಕೊಟ್ಟರೂ ಇತರ ಅನೇಕರಿಗೆ ಈ ಖತರ್ನಾಕ್ ಕಾರ್ಯಾಚರಣೆಯ ಯಶಸ್ಸಿನ ಬಗ್ಗೆ ಸಂಪೂರ್ಣ ವಿಶ್ವಾಸವಿರಲಿಲ್ಲ. ಅದರಲ್ಲೂ ನಾಯಕ ಸಮೂಹದಲ್ಲಿ ಅತಿ ಪ್ರಮುಖರಾಗಿದ್ದ ಸೇನಾ ಬೇಹುಗಾರಿಕೆ ಮುಖ್ಯಸ್ಥ ಯೇಷುವಾ ಸಾಗಿ, ಅಂದಿನ ಮೊಸ್ಸಾದ್ ಮುಖ್ಯಸ್ಥ ಇಜ್ಜಾಕ್ ಹೋಫೀ, ಸಚಿವ ಎಝೆರ್ ವೆಯಿಸ್ಮನ್, ಉಪಪ್ರಧಾನಿ ಯಿಗೇಲ್ ಯಾಡಿನ್ ಯೋಜನೆಯನ್ನು ಅನುಮೋದಿಸಲಿಲ್ಲ. ಕಾರ್ಯಾಚರಣೆ ವಿಫಲವಾದರೆ ಇಸ್ರೇಲಿನ ಬುಡಕ್ಕೇ ಬರುತ್ತದೆ. ದೊಡ್ಡಮಟ್ಟದ ಅವಮಾನ ಮುಜುಗರವಾಗುತ್ತದೆ. ಇಂತಹ ಅಪಾಯಕಾರಿ ಕಾರ್ಯಾಚರಣೆ ಬೇಡ ಎಂದರು. ಉಪಪ್ರಧಾನಿ ಯಾಡಿನ್ ಅಂತೂ ರಾಜೀನಾಮೆ ಬಿಸಾಡಿ ಎದ್ದು ಹೊರಟಿದ್ದರು. ಮುತ್ಸದ್ದಿ ಪ್ರಧಾನಿ ಬೆಗಿನ್ ಅವರನ್ನು ತಡೆದರು. ಇತರರಿಗೆ ಮನವರಿಕೆ ಮಾಡಿಕೊಡಲು ಕುಳಿತರು. ತಮ್ಮ ಸಹವರ್ತಿಗೆಗಳಿಗೆ ಮನವರಿಕೆ ಮಾಡಿಕೊಟ್ಟು, ಕಾರ್ಯಾಚರಣೆಯ ಯೋಜನೆಗೆ ಅವರ ಒಪ್ಪಿಗೆಯನ್ನು ತ್ವರಿತವಾಗಿ ಪಡೆಯಬೇಕಾಗಿದ್ದುದು ಅವರ ಅಂದಿನ ಬಹುಮುಖ್ಯ ಆದ್ಯತೆಯಾಗಿತ್ತು.

ಅಂತೂ ಇಂತೂ ಎಲ್ಲಾ ಪ್ರಮುಖರ ಒಪ್ಪಿಗೆ ಸಿಕ್ಕಿತು. ಮೇ ೮, ೧೯೮೧ ಕ್ಕೆ ಮುಹೂರ್ತ ನಿಗದಿಯಾಯಿತು. ಎಲ್ಲವೂ ಸಂಪೂರ್ಣವಾಗಿ ತಯಾರಾಗಿತ್ತು. ಎಲ್ಲಿಯವರೆಗೆ ಅಂದರೆ ಪೈಲಟ್ಟುಗಳು ವಿಮಾನಗಳನ್ನೇರಿ ಕುಳಿತಿದ್ದರು. ವಿಮಾನಗಳು ಇನ್ನೇನು ಟೇಕ್ ಆಫ್ ಆಗಬೇಕು ಅನ್ನುವಷ್ಟರಲ್ಲಿ ಮತ್ತೊಂದು ವಿಘ್ನ. ಪ್ರತಿಪಕ್ಷದ ನಾಯಕ ಶಿಮೋನ್ ಪೆರೇಸ್ 'ಪ್ರೇಮ ಪತ್ರ' ಕಳಿಸಿದ್ದರು. 'ಈ ಅಪಾಯಕಾರಿ ಕಾರ್ಯಾಚರಣೆ ಬೇಡ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಸ್ರೇಲಿಗೆ ದೊಡ್ಡ ಮುಜುಗರವಾಗುತ್ತದೆ. ಇನ್ನೂ ತಡವಾಗಿಲ್ಲ. ಕಾರ್ಯಾಚರಣೆಯನ್ನು ರದ್ದು ಮಾಡಿ,' ಎಂಬುದು ಅವರ ಪ್ರೇಮ ಪತ್ರದ ಸಾರಾಂಶ.

ಇದು ಪ್ರಧಾನಿ ಬೆಗಿನ್ ಅವರಿಗೆ ದೊಡ್ಡ ಕಿರಿಕಿರಿಯಾಯಿತು. ಇದು ಅತ್ಯಂತ ರಹಸ್ಯವಾದ ಕಾರ್ಯಾಚರಣೆಯಾಗಿತ್ತು. ಅಧಿಕಾರದಲ್ಲಿದ್ದ ಪಕ್ಷದ ಕೆಲವೇ ಕೆಲವು ಜನರಿಗೆ, ಅದೂ ಅವಶ್ಯವಿದ್ದರೆ ಮಾತ್ರ, ಬೇಕಾದಷ್ಟೇ ಮಾಹಿತಿಯನ್ನು ಕೊಡಲಾಗಿತ್ತು. ಹೀಗಿದ್ದಾಗ ಪ್ರತಿಪಕ್ಷದ ನಾಯಕ ಶಿಮೋನ್ ಪೆರೇಸ್ ಅವರಿಗೂ ಮಾಹಿತಿ ದೊರಕಿದೆ ಅಂದರೆ ಏನರ್ಥ? ಎಲ್ಲಿ ಮಾಹಿತಿ ಸೋರಿಕೆಯಾಗಿದೆ? ಇದರ ಪರಿಣಾಮಗಳೇನು? ಎಂದು ಪ್ರಧಾನಿ ಬೆಗಿನ್ ತಲೆಕೆಡಿಸಿಕೊಂಡರು.

ರಾಜಕೀಯದ ರಾಡಿಯನ್ನು ತುರ್ತಾಗಿ ಸಂಬಾಳಿಸಬೇಕಿತ್ತು. ಕಾರ್ಯಾಚರಣೆಯನ್ನು ಸ್ವಲ್ಪ ಮಟ್ಟಿಗಾದರೂ ಮುಂದಕ್ಕೆ ಹಾಕಲೇಬೇಕಾದ ಅನಿವಾರ್ಯತೆ ಅವರಿಗೆ. ಸೇನೆಯಲ್ಲಿ ದೊಡ್ಡ ಮಟ್ಟದ ನಿರಾಶೆ. ಏನೂ ಮಾಡಲಿಕ್ಕೆ ಆಗುವುದಿಲ್ಲ. ಒಮ್ಮೊಮ್ಮೆ ಹೀಗಾಗಿಬಿಡುತ್ತದೆ.

ಪ್ರಧಾನಿ ಬೆಗಿನ್ ಪೂರ್ತಿಯಾಗಿ ಹಿಮ್ಮೆಟ್ಟಲಿಲ್ಲ. ಒಂದು ತಿಂಗಳು ಮುಂದಕ್ಕೆ ಹಾಕಿದರು. ಜೂನ್ ೭ ಕ್ಕೆ ಹೊಸ ಮುಹೂರ್ತ ನಿಗದಿ ಮಾಡಿದರು.

ಅಣುಸ್ಥಾವರದ ಮೇಲೆ ದಾಳಿ ಮಾಡಲಿದ್ದ ಎಂಟು F - 16 ವಿಮಾನಗಳ ಮುಂಭಾಗದಲ್ಲಿ ಸ್ಥಾಪಿತರಾಗಿ ನಾಯಕತ್ವ ವಹಿಸಿಕೊಂಡಿದ್ದವರು ಪೈಲಟ್ ಝೀವ್ ರಾಝ್. ಬೆಂಗಾವಲಿನ ಮತ್ತೊಂದು ಎಂಟು F-15 ವಿಮಾನಗಳ ಗುಂಪಿನ ನಾಯಕರಾಗಿದ್ದವರು ಸ್ಕ್ವಾಡ್ನರ್ನ್ ಕಮ್ಯಾಂಡರ್ ಆಮಿರ್ ನಾಚುಮಿ. ಅಮೋಸ್ ಯಾಡ್ಲಿನ್ ಮತ್ತಿತರ ಪೈಲಟ್ಟುಗಳಲ್ಲಿ ಮುಖ್ಯರು. ಅವರು ಮುಂದೊಂದು ದಿನ ಸೇನಾ ಬೇಹುಗಾರಿಕೆ ಸಂಸ್ಥೆಯ ಮುಖ್ಯಸ್ಥರಾದರು.

ಪೈಲಟ್ ಇಲಾನ್ ರಾಮೋನ್ ಎಲ್ಲರಿಗಿಂತ ಚಿಕ್ಕವರು. ಅನನುಭವಿ. ಆದರೆ ತುಂಬಾ ಚೆನ್ನಾಗಿ ಓದಿಕೊಂಡಿದ್ದರು.  ಎಲ್ಲ ಪುಸ್ತಕಗಳನ್ನು ಬರೋಬ್ಬರಿ ತಿರುವಿಹಾಕಿ, ತಪ್ಪಿಲ್ಲದಂತೆ ಲೆಕ್ಕಾಚಾರ ಹಾಕಿ, ಒಂದು ಪ್ರಮುಖ ನಿರ್ಧಾರಕ್ಕೆ ಬರಲು ಸಹಾಯಕರಾಗಿದ್ದರು. ಅದೇನೆಂದರೆ... ಇಸ್ರೇಲಿ ಯುದ್ಧವಿಮಾನಗಳು ಯಾವುದೇ ತೊಂದರೆಯಿಲ್ಲದೆ, ಹೊರಗಿನಿಂದ ಇಂಧನದ ಮರುಭರ್ತಿಯ ಅವಶ್ಯಕತೆ ಇಲ್ಲದೆ ೯೬೦ ಕಿಲೋಮೀಟರುಗಳ ಪ್ರಯಾಣವನ್ನು ಮಾಡಬಲ್ಲವು. ಈ ಪಕ್ಕಾ ಲೆಕ್ಕಾಚಾರ ಯೋಜನೆ ಹಾಕಲು ಕುಳಿತವರಿಗೆ ತುಂಬಾ ಸಹಾಯಕಾರಿಯಾಗಿತ್ತು. ಅನನುಭವಿಯಾದರೂ ತಮ್ಮ ಬುದ್ಧಿಮತ್ತೆಯಿಂದ ಇಲಾನ್ ರಾಮೋನ್ ಕಾರ್ಯಾಚರಣೆಯ ತಂಡದಲ್ಲಿ ತಮ್ಮ ಜಾಗ ಗಿಟ್ಟಿಸಿಕೊಂಡಿದ್ದರು.

ಹಿಂದೆಂದೂ ಮಾಡದ ಕಾರ್ಯಾಚರಣೆಯಾಗಿದ್ದ ಕಾರಣ ಯೋಜನಾ ಮುಖ್ಯಸ್ಥ ಡೇವಿಡ್ ಇವ್ರಿ ಸಾಮಾನ್ಯವಾಗಿ ರೂಡಿಯಲ್ಲಿ ಇಲ್ಲದ (unusual) ತೀರ್ಮಾನಗಳನ್ನು ತೆಗೆದುಕೊಂಡಿದ್ದರು. ವಿಮಾನದ ಎಂಜಿನುಗಳು ಚಾಲನೆಯಲ್ಲಿ ಇರುವಾಗಲೇ ಇಂಧನ ತುಂಬುವುದು. ಇಂಧನದ ಟ್ಯಾಂಕುಗಳು ಖಾಲಿಯಾದಂತೆ ಅವುಗಳನ್ನು ಅಲ್ಲಲ್ಲಿಯೇ ಬಿಸಾಕಿಬಿಡಿ ಎಂಬುದು ಇನ್ನೊಂದು ನಿರ್ಧಾರ. ಕಾರ್ಯಾಚರಣೆಯ ಬೇರೆ ಬೇರೆ ಅಪಾಯಗಳನ್ನು ಎದುರಿಸಲು ಈ ಅಪಾಯಗಳನ್ನು ತೆಗೆದುಕೊಳ್ಳಲೇಬೇಕಾಗಿತ್ತು. ಅದಕ್ಕೆ ತಕ್ಕ ಅಭ್ಯಾಸಗಳನ್ನು ತಂಡ ಪದೇ ಪದೇ ಮಾಡಿ ಎಷ್ಟೋ ಪ್ರಮಾಣದ ಅಪಾಯದ ಸಾಧ್ಯತೆಗಳನ್ನು ಸಾಕಷ್ಟು ಕಮ್ಮಿ ಮಾಡಿತ್ತು. There is a saying in risk management. You manage certain risks so that you can take those risks which you can't manage. ಆ ಮಾದರಿಯಲ್ಲಿ.

ಅದೇ ಸಮಯದಲ್ಲಿ ಇರಾನ್ ಮತ್ತು ಇರಾಕ್ ನಡುವೆ ಭೀಕರ ಯುದ್ಧ ನಡೆದಿತ್ತು. ಇರಾಕ್ ತನ್ನ ಅಣುಸ್ಥಾವರವರದ ರಕ್ಷಣೆಗಾಗಿ ಮಿಸೈಲ್ ಬ್ಯಾಟರಿ ಮತ್ತು ಫೈಟರ್ ವಿಮಾನಗಳನ್ನು ನಿಯೋಜಿಸಿರುವ ಸಾಧ್ಯತೆಗಳು ಬಹಳವಿದ್ದವು. ಹೀಗಾಗಿ ಬೆಂಗಾವಲಿಗೆ ಹೋಗಲಿದ್ದ ಇಸ್ರೇಲಿ F-15 ಫೈಟರ್ ವಿಮಾನಗಳ ಮುಖಾಮುಖಿ ಇರಾಕಿನ ಬಳಿಯಿದ್ದ ಸೋವಿಯೆಟ್ ಪೂರೈಸಿದ್ದ ಮಿಗ್ ವಿಮಾನಗಳ ಜೊತೆ ಆಗುವುದು ಖಾತ್ರಿಯಿತ್ತು. ಅದಕ್ಕೂ ತಯಾರಿ ಮಾಡಿಕೊಳ್ಳಬೇಕಾಗಿತ್ತು. ಇರಾಕಿ ಮಿಗ್ ವಿಮಾನಗಳು ಗಗನಕ್ಕೇರಿ ಇಸ್ರೇಲಿ ಯುದ್ಧವಿಮಾನಗಳ ಜೊತೆ 'ಶ್ವಾನ ಯುದ್ಧ' (Dog Fight) ಗೆ ನಿಂತುಬಿಟ್ಟವು ಅಂದರೆ ಅಷ್ಟೇ ಮತ್ತೆ. ಗೋವಿಂದಾ ಗೋವಿಂದ! ಒಂದು ರಹಸ್ಯ ಕಾರ್ಯಾಚರಣೆ ಹಾಳಾಗಿಹೋಗಿ ಅದು ಮೂರನೇ ವಿಶ್ವಯುದ್ಧಕ್ಕೆ ಕಾರಣವಾದರೂ ಅಚ್ಚರಿಯಿರಲಿಲ್ಲ. ಹಾಗಾಗದಂತೆ ನೋಡಿಕೊಳ್ಳಬೇಕಿತ್ತು.

ಎಂತಹ ದೊಡ್ಡ ಮಟ್ಟದ ಅಪಾಯಕಾರಿ ಕಾರ್ಯಾಚರಣೆಯಲ್ಲಿ ಭಾಗಿಯಾಗುತ್ತಿದ್ದೇವೆ ಎಂದು ಎಲ್ಲರಿಗೂ ಗೊತ್ತಿತ್ತು. ಒಂದು ವೇಳೆ ಇರಾಕಿಗಳು ಎಚ್ಚೆತ್ತುಕೊಂಡು ಮರುದಾಳಿ ಮಾಡಿದರೆ ಬಚಾವಾಗುವ ಸಾಧ್ಯತೆಗಳು ಬಹಳ ಕಮ್ಮಿಯಿದ್ದವು. ವಿಮಾನಗಳ ನಡುವಿನ 'ಶ್ವಾನ ಯುದ್ಧದಲ್ಲಿ' ಬಡಿಸಿಕೊಂಡು, ಹೊತ್ತಿ ಉರಿಯುತ್ತಿರುವ ವಿಮಾನ ಬಿಟ್ಟು, ಪ್ಯಾರಾಚೂಟ್ ಮೂಲಕ ಹಾರಿಕೊಂಡರೂ ಇರಾಕಿನಲ್ಲಿ ಬೀಳುತ್ತಿದ್ದರು ಇಸ್ರೇಲಿಗಳು. ಒಮ್ಮೆ ಇರಾಕಿಗಳ ಕೈಯಲ್ಲಿ ಸಿಕ್ಕರೆ ಮುಂದೆ ಭೀಕರ. ಕೊಡಬಾರದ ಹಿಂಸೆ ಕೊಟ್ಟು ಕೊಲ್ಲುತ್ತಿದ್ದರು. ಊಹಿಸಿಕೊಳ್ಳಲೂ ಸಾಧ್ಯವಿಲ್ಲದಂತಹ ಕ್ರೂರಿಗಳು ಸದ್ದಾಮನ ಬಂಟರು. ಇದನ್ನೆಲ್ಲಾ ಎಲ್ಲರಿಗೂ ಎಳೆಎಳೆಯಾಗಿ ಬಿಡಿಸಿ ಹೇಳಲಾಗಿತ್ತು. ಎಲ್ಲವನ್ನೂ ಮೀರಿದ್ದು ಇಸ್ರೇಲಿಗಳ ದೇಶಪ್ರೇಮ. ಮಾಡು ಇಲ್ಲವೇ ಮಡಿ ಎನ್ನುವಂತಹ ಅನಿವಾರ್ಯತೆ. ಹಾಗಾಗಿ ಕಾರ್ಯಾಚರಣೆಗೆ ಅರ್ಪಿಸಿಕೊಂಡಿದ್ದರು.

ಜೂನ್ ೭, ೧೯೮೧. ಕಾರ್ಯಾಚರಣೆಯ ದಿನ ಬಂದೇಬಿಟ್ಟಿತು. ಇಸ್ರೇಲಿನಿಂದ ಹಾರಿದ ಹದಿನಾರು ವಿಮಾನಗಳು ಕೆಂಪು ಸಮುದ್ರದ ಅಕಾಬಾ ಕೊಲ್ಲಿಯ ಮೇಲಿಂದ ಉತ್ತರ ಸೌದಿ ಅರೇಬಿಯಾದ ಮರಭೂಮಿಯತ್ತ ಹಾರಿದವು. ಯೂಫ್ರೆಟೀಸ್ ನದಿಯನ್ನು ದಾಟಿ ಇರಾಕಿನ ಗಡಿಯನ್ನು ಪ್ರವೇಶಿಸಿದವು.

ಇಸ್ರೇಲಿಗಳು ಹಾಕಿಕೊಂಡಿದ್ದ ಅಸಾಂಪ್ರದಾಯಿಕ ವಾಯುಮಾರ್ಗದಲ್ಲಿ  (flight path) ಒಂದು ಖಚಿತ ಹೆಗ್ಗುರುತು (landmark) ಇತ್ತು. ಅದೊಂದು ದೊಡ್ಡ ಸರೋವರ ಮತ್ತು ಸರೋವರದ ಮಧ್ಯದಲ್ಲಿರುವ ಒಂದು ನಡುಗಡ್ಡೆ. F-16 ವಿಮಾನಗಳನ್ನು ಮುನ್ನೆಡಿಸುತ್ತಿದ್ದ ನಾಯಕ ಝೀವ್ ರಾಝ್ ಆ ಹೆಗ್ಗುರಿತಿಗಾಗಿ ಹುಡುಕಿಯೇ ಹುಡುಕಿದರು. ಸರೋವರ ಕಂಡರೂ ಅದರೊಳಗೆ ಇದ್ದ ನಡುಗಡ್ಡೆ ಮಾತ್ರ ಕಾಣಲಿಲ್ಲ. ಒಂದು ಕ್ಷಣ ಗಾಬರಿಗೊಂಡರು ಅವರು. ದಾರಿ ತಪ್ಪಿ ಎಲ್ಲೋ ಬಂದುಬಿಟ್ಟಿದ್ದೆವೋ ಏನೋ ಎನ್ನುವ ಆತಂಕ ಕಾಡಿತು. ಬೇಗನೇ ಸಮಸ್ಯೆ ಪರಿಹಾರವಾಯಿತು. ಆ ದಿನಗಳಲ್ಲಿ ತುಂಬಾ ಮಳೆಯಾಗಿತ್ತು. ಸರೋವರ ಬಹಳ ತುಂಬಿತ್ತು. ನಡುಗಡ್ಡೆ ಸ್ವಲ್ಪ ಮುಳುಗಿತ್ತು. ಹಾಗಾಗಿ ಮೇಲ್ನೋಟಕ್ಕೆ ಕಂಡಿರಲಿಲ್ಲ. ಸೂಕ್ಷ್ಮವಾಗಿ ಗಮನಿಸಿದಾಗ ಕಂಡಿತು. ಅಬ್ಬಾ! ಎಂದು ನಿಟ್ಟುಸಿರಿಟ್ಟ ನಾಯಕ  ಝೀವ್ ರಾಝ್ ಆ ಕ್ಷಣಕ್ಕೆ, ತಾತ್ಕಾಲಿಕವಾದರೂ, ನಿರುಮ್ಮಳರಾದರು. Such moments of solace were absolute luxuries even if temporary!

ಅಂತೂ ಕೊನೆಗೆ ಇರಾಕಿನ ಅಣುಸ್ಥಾವರ ಅವರ ಕಣ್ಣಳತೆಯಲ್ಲಿ ಬಂದಿತು. ಸದ್ದಾಮ್ ಹುಸೇನನ ಹೆಮ್ಮೆಯ ಪ್ರತೀಕದಂತೆ ಎದ್ದು ನಿಂತಿತ್ತು. ಸುತ್ತಲೂ ಎತ್ತರವಾದ ಮತ್ತು ಸಾಕಷ್ಟು ಧೃಡವಾದ ರಕ್ಷಣಾಗೋಡೆಗಳು ಇದ್ದವು.

ಅಲ್ಲಿಯ ತನಕ ಗೌಪ್ಯತೆಯನ್ನು ಕಾಯ್ದುಕೊಳ್ಳಲು ವಿಮಾನಗಳ ಮಧ್ಯೆ ಸಂಪೂರ್ಣ ರೇಡಿಯೋ ನಿಶ್ಶಬ್ದವಿತ್ತು. Complete radio silence. ಈಗ ಅನಿವಾರ್ಯವಾಗಿ ಪೈಲಟ್ ಝೀವ್ ರಾಝ್ ತಮ್ಮ ರೇಡಿಯೋ ಎತ್ತಿಕೊಂಡರು. ತಮ್ಮ ಸಹವರ್ತಿಗಳಿಗೆ ಕ್ಲುಪ್ತ ಸಂದೇಶವನ್ನು ರವಾನಿಸಿದರು. ಅಣುಸ್ಥಾವರವನ್ನು ಸಮೀಪಿಸಿದ್ದೇವೆ. ಎಲ್ಲರೂ ಎತ್ತರವನ್ನು ಹೆಚ್ಚಿಸಿಕೊಳ್ಳಿ. ಶತ್ರುದೇಶಗಳ ರೇಡಾರುಗಳಿಂದ ತಪ್ಪಿಸಿಕೊಳ್ಳಲೆಂದು ಅತಿ ಕಮ್ಮಿ ಎತ್ತರದಲ್ಲಿ ಹಾರಿ ಬಂದಿದ್ದರು. ಈಗ ವಿದ್ಯುತ್ಕಂಬ ಮುಂತಾದವುಗಳಿಂದ ಬಚಾವಾಗಲು ಎತ್ತರ ಹೆಚ್ಚು ಮಾಡಿಕೊಳ್ಳಬೇಕಾಗಿತ್ತು.

ಒಂದು ವಿಷಯ ಮಾತ್ರ ಎಲ್ಲರನ್ನೂ ಅಚ್ಚರಿಗೀಡುಮಾಡಿತು. ತುಂಬಾ ಸೋಜಿಗವೆನ್ನಿಸುವಂತೆ ಅಲ್ಲೆಲ್ಲೂ ವೈಮಾನಿಕ ರಕ್ಷಣಾ ವ್ಯವಸ್ಥೆ ಇರಲೇ ಇಲ್ಲ! ಇಸ್ರೇಲಿನ ಹದಿನಾರು ವಿಮಾನಗಳು ಅಣುಸ್ಥಾವರವನ್ನು ಸಮೀಪಿಸಿದರೂ ಒಂದೇ ಒಂದು ಇರಾಕಿ ಮಿಗ್ ವಿಮಾನ ಗಗನಕ್ಕೇರಿರಲಿಲ್ಲ. ಮಿಸೈಲ್ ಬ್ಯಾಟರಿ ಕಾಣಲಿಲ್ಲ. ಸಣ್ಣ ಪ್ರಮಾಣದ anti artillery ತೋಪುಗಳು ಹಾರಿಸಲ್ಪಟ್ಟರೂ ಅವು ಯಾವುದೂ ಗುರಿ ಮುಟ್ಟಲಿಲ್ಲ. ಇಸ್ರೇಲಿ ಯುದ್ಧವಿಮಾನಗಳಿಗೆ ಯಾವುದೇ ತರಹದ ಹಾನಿಯಾಗಲಿಲ್ಲ.

ಎತ್ತೆರಕ್ಕೇರಿದ್ದ ಯುದ್ಧ ವಿಮಾನಗಳು ಒಮ್ಮೆಲೇ ಡೈವ್ ಹೊಡೆದವು. ಒಂದಾದಮೇಲೊಂದರಂತೆ ಬರೋಬ್ಬರಿ ೩೫ ಡಿಗ್ರಿ ಕೋನದಲ್ಲಿ ಬಾಂಬಿಂಗ್ ಮಾಡಿದವು. ನೋಡನೋಡುತ್ತಿದ್ದಂತೆ ಸದ್ದಾಮ ಹುಸೇನನ ಅಣುಸ್ಥಾವರದ ಬಕ್ಕ ತಲೆಯಂತಹ ಗುಮ್ಮಟ ಢಮಾರ್ ಎಂದುಬಿಟ್ಟಿತು. ಬುರುಡೆ ಬಿಚ್ಚಿಕೊಂಡ ಅಬ್ಬರಕ್ಕೆ ಎಲ್ಲೆಡೆ ಧೂಳು ಅಂದರೆ ಅಷ್ಟು ಧೂಳು!

ಉಳಿದ ಬಂಕರ್ ಬಸ್ಟರ್ ಮಾದರಿಯ ಬಾಂಬುಗಳು ತಳತನಕ ಇಳಿದು ನಂತರ ಸ್ಪೋಟವಾಗಿ ಎಲ್ಲವನ್ನೂ ಗುಡಿಸಿ ಗುಂಡಾಂತರ ಮಾಡಿಬಿಟ್ಟವು. ಇಸ್ರೇಲಿ ಪೈಲಟ್ ಒಬ್ಬ ಪೊರಪಾಟಿನಲ್ಲಿ ಪಕ್ಕದ ಕಟ್ಟಡದ ಮೇಲೂ ಬಾಬಿಂಗ್ ಮಾಡಿಬಿಟ್ಟ. ಅದೂ ಕೂಡ ಟೋಟಲ್ ಉಡೀಸ್!

ಇಷ್ಟೆಲ್ಲಾ ಆಗಲು ತೆಗೆದುಕೊಂಡಿದ್ದು ಕೇವಲ ಎಂಬತ್ತು ಸೆಕೆಂಡುಗಳು ಅಂದರೆ ನೀವು ನಂಬಲಿಕ್ಕಿಲ್ಲ. ಆದರೆ ಅದೇ ವಾಸ್ತವ. Simply unbelievable!

ಶತ್ರು ದೇಶದಿಂದ ಹೊರಬೀಳುವ ಮೊದಲು ಎಲ್ಲ ಇಸ್ರೇಲಿ ಪೈಲೆಟ್ಟುಗಳು ಸುರಕ್ಷಿತರಾಗಿದ್ದಾರೆ ಎಂದು ಖಾತ್ರಿ ಮಾಡಿಕೊಳ್ಳಬೇಕಾಗಿತ್ತು. ಅದು ಯೋಜನೆಯ ಒಂದು ಪ್ರಮುಖ ಹೆಜ್ಜೆ. ದಾಳಿ ಮಾಡಿದ F-16 ವಿಮಾನತಂಡದ ಕ್ಯಾಪ್ಟನ್ ಮತ್ತು ಬೆಂಗಾವಲಿಗಿದ್ದ F-15 ವಿಮಾನತಂಡದ ಕ್ಯಾಪ್ಟನ್ ರೇಡಿಯೋ ಜಾಲಕ್ಕೆ ದಾಖಲಾದರು. ಎಲ್ಲರಿಗೂ ತಾವು ಸುರಕ್ಷಿತರಾಗಿದ್ದೇವೆ ಎಂದು ಖಾತ್ರಿ ಪಡಿಸಲು ಕೋರಿದರು. ಒಬ್ಬರಾದ ಮೇಲೆ ಒಬ್ಬರಂತೆ ಹದಿನೈದು ಜನ ಪೈಲೆಟ್ಟುಗಳು 'ಚಾರ್ಲಿ' ಎನ್ನುವ ಕೋಡೆಡ್ ಸಂದೇಶ ರವಾನಿಸುವ ಮೂಲಕ ತಮ್ಮ ತಮ್ಮ ಇರುವಿಕೆಯನ್ನು ಖಾತ್ರಿ ಪಡಿಸಿದರು.

ಆದರೆ ಹದಿನಾರನೇ ಸಂದೇಶ ಬರಲೇ ಇಲ್ಲ. ಯಾರು ಕಳೆದುಹೋಗಿದ್ದಾರೆ ಎಂದು ಎಲ್ಲರೂ ತಲೆಕೆಡಿಸಿಕೊಂಡರು.ಆತಂಕಗೊಂಡರು.

ತಾಳೆ ಹಾಕಿದರೆ ತಂಡದ ಅತ್ಯಂತ ಕಿರಿಯ ಸದಸ್ಯನಾಗಿದ್ದ ರಾಮೋನ್ ಗಾಯಬ್! ಅವನಿಗೆ ಏನಾಯಿತು!? ಎಂದು ಎಲ್ಲರೂ ಗಾಬರಿಗೊಂಡರು. ನಂತರ ಬಿದ್ದು ಬಿದ್ದು ನಕ್ಕರು. ರಾಮೋನ್ ಅನನುಭವಿ. ಹಾಗಾಗಿ ಎಲ್ಲರಿಗಿಂತ ಕೊನೆಯಲ್ಲಿದ್ದ. ಒಂದು ಕ್ಷಣ ಅವನಿಗೆ ಅದೇನು ಮಂಕು ಕವಿಯಿತೋ ಗೊತ್ತಿಲ್ಲ. ಇರಾಕಿ ಮಿಗ್ ವಿಮಾನವೊಂದು ದಾಳಿ ಮಾಡಲು ಬೆನ್ನೆಟ್ಟಿಬರುತ್ತಿದೆ ಎಂದು ಭ್ರಮಿಸಿಬಿಟ್ಟ. ಒಮ್ಮೊಮ್ಮೆ ಯುದ್ಧದ adrenaline rush ಹೇಗಿರುತ್ತದೆ ಅಂದರೆ ಇಲ್ಲದ ಕಡೆಯೂ ಶತ್ರುಗಳು ಕಾಣುತ್ತಾರೆ. ಇಲ್ಲದ ಮಿಗ್ ವಿಮಾನವನ್ನು ಕಲ್ಪಿಸಿಕೊಂಡು, ಅದು ತನ್ನನ್ನು ಮತ್ತು ಇತರ ಇಸ್ರೇಲಿಗಳನ್ನು ಹೊಡೆದುರುಳಿಸುವ ಮುನ್ನ ಅದನ್ನು ನಾಶಪಡಿಸುವುದು ಹೇಗೆ ಎಂದು ಸ್ಕೆಚ್ ಹಾಕುತ್ತಿದ್ದ ರಾಮೋನ್ 'ಚಾರ್ಲಿ' ಸಂದೇಶ ಕಳಿಸದೇ ಇತರರನ್ನು ಚಿಂತೆಗೆ ದೂಡಿದ್ದ. ಪುಣ್ಯಕ್ಕೆ ಬಹುಬೇಗನೆ ತಪ್ಪಿನ ಅರಿವಾಗಿ ಕಟ್ಟಕಡೆಯ 'ಚಾರ್ಲಿ' ಸಂದೇಶ ರವಾನಿಸಿದ್ದ. ನಾಯಕರು ನಿಟ್ಟುಸಿರು ಬಿಟ್ಟು ವಿಮಾನಗಳನ್ನು ಶರವೇಗದಲ್ಲಿ ಇಸ್ರೇಲಿನತ್ತ ತಿರುಗಿಸಿದರು. ಮುಂದೊಂದು ದಿನ ಮಹಾನ್ ಪ್ರತಿಭಾವಂತ ರಾಮೋನ್ ಇಸ್ರೇಲಿನ ಪ್ರಪಥಮ ಬಾಹ್ಯಾಕಾಶಯಾನಿ ಎಂದು ಪ್ರಸಿದ್ಧನಾದ. ಆದರೆ ೨೦೦೩ ರಲ್ಲಿ ಆದ ಕೊಲಂಬಿಯಾ ಬಾಹ್ಯಾಕಾಶ ನೌಕೆಯ ಸ್ಪೋಟದ ದುರಂತದಲ್ಲಿ ಪ್ರಾಣ ಕಳೆದುಕೊಂಡ. ಭಾರತೀಯ ಮೂಲದ ಅಮೇರಿಕಾದ ಬಾಹ್ಯಾಕಾಶಯಾನಿ ಕಲ್ಪನಾ ಚಾವ್ಲಾ ಕೂಡ ಅದೇ ದುರಂತದಲ್ಲಿ ಅಸುನೀಗಿದ್ದರು.

ವಾಪಸ್ ಇಸ್ರೇಲಿನತ್ತ ಹೊರಟರೂ ಇರಾಕಿನ ಗಡಿ ದಾಟುವ ಮೊದಲು ಇರಾಕಿ ಮಿಗ್ ವಿಮಾನಗಳು ದಾಳಿ ಮಾಡಿಯೇ ಮಾಡುತ್ತವೆ ಎಂದುಕೊಂಡೇ ಹೊರಟಿದ್ದರು ಇಸ್ರೇಲಿಗಳು. ಆದರೆ ಹಾಗೇನೂ ಆಗಲೇ ಇಲ್ಲ. ಎಲ್ಲ ಹದಿನಾರೂ ವಿಮಾನಗಳು ಸುರಕ್ಷಿತವಾಗಿ ಇಸ್ರೇಲ್ ತಲುಪಿಕೊಂಡವು.

ಅಂದು ಅದು ಇಸ್ರೇಲಿಗಳ ಸುದೈವವೋ ಅಥವಾ ಆ ಇರಾಕಿ ಅಧಿಕಾರಿಯ ದುರ್ದೈವವೋ ಗೊತ್ತಿಲ್ಲ. ಅಣುಸ್ಥಾವರದ ರಕ್ಷಣಾ ಅಧಿಕಾರಿ ರಾಜಧಾನಿ ಬಾಗ್ದಾದಿನ ಕೆಫೆಯೊಂದರಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದ. ಈ ಕಡೆ ಅಣುಸ್ಥಾವರ ಧೂಳೆದ್ದು ಹೋಗುತ್ತಿದ್ದರೆ ಈ ಪುಣ್ಯಾತ್ಮ ಮಾತ್ರ 'ಯಾ ಹಬೀಬಿ! ಯಾ ಹಬೀಬಿ!' ಎಂದು ಪಲಕುತ್ತ ಒಂದಾದ ಮೇಲೊಂದು ಏಲಕ್ಕಿ ಪರಿಮಳದ ಕಾಫೀ ಹೀರುತ್ತಾ ಕುಳಿತಿದ್ದ. ಅದು ಅರಬರ ಪದ್ಧತಿ ಬಿಡಿ. ಅವನ ಕೆಳಗಿನ ಜನರಿಗೆ ಅವನ ಆಜ್ಞೆ ಬರದ ಹೊರತೂ ಮಿಸೈಲ್ ಹಾರಿಸುವಂತಿಲ್ಲ ಮತ್ತು ಮಿಗ್ ವಿಮಾನಗಳನ್ನು ಇಸ್ರೇಲಿಗಳ ಬೇಟೆಗೆ ಕಳಿಸುವಂತಿಲ್ಲ. ಕಾಫೀ ಮೇಲೆ ಕಾಫೀ ಕುಡಿಯುತ್ತ ಕುಳಿತಿದ್ದ ಈ ಪುಣ್ಯಾತ್ಮ ಸಂಪರ್ಕಕ್ಕೆ ಸಿಗಲಿಲ್ಲ. ಮುಂದೆ ಆತ ಯಾರಿಗೂ ಎಲ್ಲಿಗೂ ಸಿಗಲಿಲ್ಲ. ತನ್ನ ಹೆಮ್ಮೆಯ ಅಣುಸ್ಥಾವರ ಮಟಾಷ್ ಆಯಿತೆಂದು ಕೊತಕೊತ ಕುದಿಯುತ್ತಿದ್ದ ಸದ್ದಾಮ ಹುಸೇನ್ ಬಲಿಗಾಗಿ ಹಾತೊರೆಯುತ್ತಿದ್ದ. ಸರಿಯಾಗಿ ಕೆಲಸ ಮಾಡದ ಈ ಗಿರಾಕಿ ಸಿಕ್ಕ. ಸಿಕ್ಕ ಮೇಲೆ ಮತ್ತೇನು? ಇತರರಿಗೆ ಒಂದು ಪಾಠವೆಂಬಂತೆ ಆ ರಕ್ಷಣಾ ಅಧಿಕಾರಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿಬಿಟ್ಟ ಸದ್ದಾಮ್ ಹುಸೇನ್. ಹಾಗೆ ಗಲ್ಲಿಗೆ ಹಾಕುವುದು ತುಂಬಾ ಸಾಮಾನ್ಯವಾಗಿತ್ತು ಬಿಡಿ. ಇಂದಿಗೂ ಕೂಡ ಅರಬ್ ದೇಶಗಳಲ್ಲಿ ಶಿಕ್ಷೆಗಳನ್ನು ಬಹಿರಂಗವಾಗಿ ಕೊಡಲಾಗುತ್ತದೆ. ಕೆಲವೊಮ್ಮೆ ಚಿತ್ರಹಿಂಸೆಗಳನ್ನೂ ಕೂಡ!

ಇಸ್ರೇಲ್ ಮಾಡಿದ ದಾಳಿಯಲ್ಲಿ ಹತ್ತು ಇರಾಕಿ ಸೈನಿಕರು ಮತ್ತು ಒಬ್ಬ ಫ್ರೆಂಚ್ ಇಂಜಿನಿಯರ್ ಹತನಾದ ಎಂದು ವರದಿಯಾಯಿತು.

ಇಸ್ರೇಲಿನ ಈ ಜಾಬಾದ್ ಕಾರ್ಯಾಚರಣೆ ಇಸ್ರೇಲಿನ ನಾಗರಿಕರಿಗೆ ಒಂದು ತರಹದ ನೆಮ್ಮದಿಯನ್ನು ತಂದುಕೊಟ್ಟಿತು. ಆ ನೆಮ್ಮದಿ ಸಂಭ್ರಮಕ್ಕೆ ಅನುವು ಮಾಡಿಕೊಟ್ಟಿತು. ಎಲ್ಲರೂ ಸಂಭ್ರಮಿಸಿದರು. ಈ ಕಾರ್ಯಾಚರಣೆ ಅಸಾಧ್ಯ ಎಂದು ಹೇಳಿದವರೂ ಸಹ ತಾವು ಇಸ್ರೇಲಿ ವಾಯುಪಡೆಯ ಕ್ಷಮತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಕ್ಕೆ ವಿಷಾದ ಹೇಳಿದರು. ಸಂಭ್ರಮದಲ್ಲಿ ಪಾಲ್ಗೊಂಡರು. ಒಂದು ತರಹದ ವಿಚಿತ್ರ ಶಾಂತಿಯ ಮಂತ್ರ ಪಠಿಸುತ್ತ ಕುಳಿತಿರುತ್ತಿದ್ದ ಪ್ರತಿಪಕ್ಷದ ನಾಯಕ ಶಿಮೋನ್ ಪೆರೇಸ್ ಅವರನ್ನು ಹೊರತುಪಡಿಸಿ ಎಲ್ಲರೂ ಇಸ್ರೇಲಿ ಸೇನೆಯ daredevil ಕಾರ್ಯಾಚರಣೆಯನ್ನು ಕೊಂಡಾಡಿದರು. ಏನು ಅವರ ಶಾಂತಿ ಮಂತ್ರವೋ ಏನು ಅವರ ಭ್ರಾಂತಿ ಮಂತ್ರವೋ ಕೊನೆವರೆಗೂ ಇಸ್ರೇಲಿಗಳಿಗೆ ತಿಳಿಯಲಿಲ್ಲ ಅನ್ನಿ.

ಬೇರೆ ಬೇರೆ ದೇಶಗಳು ಇಸ್ರೇಲನ್ನು ಕಟುವಾಗಿ ಖಂಡಿಸಿದವು. ಅದು ಅವುಗಳ ಅನಿವಾರ್ಯತೆ. ಅಂತರರಾಷ್ಟ್ರೀಯ ಸಮುದಾಯ, ಅದು ಇದು, ಮಣ್ಣು ಮಸಿ ಅಂತೆಲ್ಲ ಕಟ್ಟುಪಾಡು ನೀತಿನಿಯಮ ಇರುತ್ತವೆ ನೋಡಿ. ಹಾಗಾಗಿ ಹೆಚ್ಚಿನ ದೇಶಗಳು ಇಸ್ರೇಲನ್ನು ಖಂಡಿಸಿ ಠರಾವು ಪಾಸ್ ಮಾಡಿದವು. ಇಸ್ರೇಲಿನ ಪರಮಾಪ್ತ ಅಮೇರಿಕಾ ಕೂಡ ಕಾಟಾಚಾರಕ್ಕೆ ಎಂದು ಇಸ್ರೇಲನ್ನು ಖಂಡಿಸಿತು. ಸಣ್ಣಪುಟ್ಟ ಆರ್ಥಿಕ ನಿರ್ಬಂಧಗಳನ್ನು ವಿಧಿಸಿತು. ಅಂದು ಅಮೇರಿಕಾದ ಅಧ್ಯಕ್ಷರಾಗಿದ್ದವರು ರೊನಾಲ್ಡ್ ರೀಗನ್ ಸಾಹೇಬರು. ಮೊದಲು ಹಾಲಿವುಡ್ಡಿನಲ್ಲಿ ಸಿನಿಮಾ ನಟನಾಗಿದ್ದರು. ಅವರಿಗೆ ನಟನೆ ಹೇಳಿಕೊಡಬೇಕೇ? ಬಹಿರಂಗವಾಗಿ ಇಸ್ರೇಲನ್ನು ಟೀಕಿಸುತ್ತ ಅಂತರಂಗದಲ್ಲಿ ಇಸ್ರೇಲಿನ ಬೆನ್ನುತಟ್ಟಿದರು. ಅಮೇರಿಕಾ ಮಾಡಲಾಗದ ಆದರೆ ಮಾಡಲೇಬೇಕಾದ ಇನ್ನಿತರ ಕಪ್ಪು ಕಾರ್ಯಾಚರಣೆಗಳ ಸುಪಾರಿಯನ್ನು ಇಸ್ರೇಲಿಗೆ ಕೊಟ್ಟರು. ರೇಗನ್ ಸಾಹೇಬರಿಗೆ ಸದ್ದಾಮನ ನಂತರ ಲಿಬಿಯಾದ ಸರ್ವಾಧಿಕಾರಿ ಗಡ್ಡಾಫಿಯನ್ನು ಹಣಿಯಬೇಕಾಗಿತ್ತು. ಅದಕ್ಕಾಗಿ ರಂಗಸ್ಥಳ ಸಜ್ಜಾಗಬೇಕಿತ್ತು. ಅದನ್ನು ಇಸ್ರೇಲ್ ಅದರಲ್ಲೂ ಇಸ್ರೇಲಿನ ಮೊಸ್ಸಾದ್ ಬಿಟ್ಟು ಬೇರೆ ಯಾರೂ ಮಾಡಿಕೊಡಲು ಸಾಧ್ಯವಿಲ್ಲ ಎಂದು ಅವರಿಗೆ ಗೊತ್ತಿತ್ತು. ಇಸ್ರೇಲನ್ನು ಖಂಡಿಸಿದ ಹಾಗೆ ನಟಿಸಿದ ರೇಗನ್ ಸಾಹೇಬರು ಮುಂದೆ ಹೇಗೆ ಅದೇ ಇಸ್ರೇಲನ್ನು ಉಪಯೋಗಿಸಿಕೊಂಡು ಗಡಾಫಿಯನ್ನು ಹಣಿದರು ಎಂದು ನೋಡಿದರೆ ಅದೊಂದು ರೋಚಕ ಕಥೆ.

ಮುಂದೆ ಬರೋಬ್ಬರಿ ಹತ್ತು ವರ್ಷಗಳ ನಂತರ ಅಂದರೆ ೧೯೯೧ ರಲ್ಲಿ ಮೊದಲ ಗಲ್ಫ್ ಯುದ್ಧ ಶುರುವಾಯಿತು. ಕುವೈತ್ ದೇಶವನ್ನು ಆಕ್ರಮಿಸಿ ಕೂತಿದ್ದ ಸದ್ದಾಮ್ ಹುಸೇನನನ್ನು ಓಡಿಸಲು ಎಂದು ಶುರುವಾದ ಯುದ್ಧವದು. ಹಾಗಂತ ಅಮೇರಿಕಾ ಜಗತ್ತಿಗೆ ಪುಂಗಿತ್ತು. ನಿಜವಾದ ವಿಷಯ ಎಲ್ಲರಿಗೂ ನಂತರ ಗೊತ್ತಾಯಿತು. ಒಂದು ಕಾಲದಲ್ಲಿ ಸದ್ದಾಮ ಹುಸೇನ್ ಅಮೇರಿಕಾದ ಬಂಟ. ಅಮೇರಿಕಾದ ಮಾತು ಕೇಳಿ ಮಳ್ಳನಂತೆ ಇರಾನ್ ವಿರುದ್ಧ ಸೆಣೆಸಿದ. ಉಪಯೋಗವಿಲ್ಲದ ಯುದ್ಧ ಮಾಡಿದ. ನಂತರ ತಪ್ಪಿನ ಅರಿವಾಯಿತೇನೋ ಗೊತ್ತಿಲ್ಲ. ಅಮೇರಿಕಾದ ಸಂಗ ತೊರೆದು ಹೊರಟ. ಬಿಟ್ಟಿಯಾಗಿ ಪೆಟ್ರೋಲ್ ಕೊಡಲು ಒಪ್ಪಲಿಲ್ಲ. ಸದ್ದಾಮನಿಗೆ ನಾಲ್ಕು ಪೆಟ್ಟು ಕೊಟ್ಟು ಬುದ್ಧಿ ಹೇಳಬೇಕು ಎನ್ನುವ ಗ್ರಾಂಡ್ ಸ್ಕೀಮಿನಡಿಯಲ್ಲಿ ಮೊದಲ ಗಲ್ಫ್ ಯುದ್ಧ ಶುರುವಾಯಿತು. ಅದಕ್ಕೆ ತಾತ್ಕಾಲಿಕವಾಗಿ ಬಲಿಯಾಗಿದ್ದು ಕುವೈತ್. ಅದೇನೇ ಇರಲಿ. ೧೯೯೧ ರ ಮೊದಲ ಗಲ್ಫ್ ಯುದ್ಧದ ಸಂದರ್ಭದಲ್ಲಿ ಮಾತ್ರ ಅಂದಿನ ಅಮೇರಿಕಾದ ಅಧ್ಯಕ್ಷ ಜಾರ್ಜ್ ಬುಷ್ (ಸೀನಿಯರ್) ಮತ್ತು ರಕ್ಷಣಾ ಕಾರ್ಯದರ್ಶಿ ಡಿಕ್ ಚೀನಿ ಇಸ್ರೇಲ್ ಹತ್ತು ವರ್ಷದ ಹಿಂದೆ, ಇಡೀ ಅಂತರರಾಷ್ಟ್ರೀಯ ಸಮುದಾಯವನ್ನು ಎದುರಾಕಿಕೊಂಡು, ಮಾಡಿದ ಕಾರ್ಯಾಚರಣೆಯನ್ನು ಹೊಗಳಿದ್ದರು. ಅಂದು ಇಸ್ರೇಲ್ ಸದ್ದಾಮ್ ಹುಸೇನನ ಅಣುಸ್ಥಾವರವನ್ನು ನಿರ್ನಾಮ ಮಾಡಿರದಿದ್ದರೆ ನಮಗೆ ಇವತ್ತು ಅದೊಂದು ದೊಡ್ಡ ತಲೆನೋವಾಗುತ್ತಿತ್ತು. ಕುವೈತಿನ ವಿಮೋಚನೆ ಅಷ್ಟು ಸುಲಭವಾಗಿ ಆಗುತ್ತಿರಲಿಲ್ಲ ಎಂದು ಪುಂಗಿದರು. ಹೆಚ್ಚಿನವರು ಅಹುದಹುದು ಎಂಬಂತೆ ತಲೆದೂಗಿದರು. ಒಳಗಿನ ಹೂರಣ ಗೊತ್ತಿದ್ದವರು ಪೆಕಪೆಕನೆ ನಕ್ಕರು. It was again all about cheap oil.

ಈ perfect ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಪೈಲಟ್ ಝೀವ್ ರಾಝ್ ಅವರಿಗೆ ಇಸ್ರೇಲಿನ ಪ್ರತಿಷ್ಠಿತ ಸೇವಾ ಪದಕವನ್ನು ನೀಡಲಾಯಿತು. 'ನನಗೊಬ್ಬನಿಗೇ ಪದಕ ಕೊಟ್ಟರೆ ಹೇಗೆ? ಉಳಿದ ಹದಿನೈದು ಜನರಿಗೂ ಕೊಡಬೇಕು' ಎಂದು  ಝೀವ್ ರಾಝ್ ನಮ್ರತೆಯಿಂದಲೇ ಆಕ್ಷೇಪಣೆ ವ್ಯಕ್ತಪಡಿಸಿದರೆ ಸೇನಾ ಮುಖ್ಯಸ್ಥ ರಾಫುಲ್ ಏಟಾನ್ ಏನೆಂದರು ಗೊತ್ತೇ? 'ಬಡಿದಾಟವಿಲ್ಲ. ಕಾದಾಟವಿಲ್ಲ. ಹೋದಿರಿ. ಬಾಂಬ್ ಹಾಕಿದಿರಿ. ವಾಪಸ್ ಬಂದಿರಿ. ಆಕಾಶದಲ್ಲಿ ಯುದ್ಧ ಗಿದ್ಧ ಏನೂ ಆಗಲಿಲ್ಲವಲ್ಲ. ಹಾಗಾಗಿ ಉಳಿದವರಿಗೆಲ್ಲ ಪದಕ ಯಾಕೆ? ಮುಂದೆ ನಿಜವಾದ ಕಾದಾಟವಾದಾಗ ನೋಡೋಣ,' ಎಂದು ಬೂಟು ಕುಟ್ಟುತ್ತ ಹೊರಟುಬಿಟ್ಟರು. ಆ ಮನುಷ್ಯ ಎಷ್ಟು insensitive ಎಂದು ಅನ್ನಿಸಬಹುದು. ಆದರೆ ಇಸ್ರೇಲಿಗಳೇ ಹಾಗೆ. ಕೊಂಚ ಕಟು ಸ್ವಭಾವದವರು. ಸೇನೆಯಲ್ಲಂತೂ ಕೊಂಚ ಜಾಸ್ತಿಯೇ ಅನ್ನಿ. Everybody is a winner ಎಂದು ಎಲ್ಲರ ತಲೆಗೆ ಎಣ್ಣೆ ತಿಕ್ಕಿ, ಎಲ್ಲರನ್ನೂ ಒಂದು ತರಹದ mediocrity ಗೆ ತಳ್ಳುವ ಸಂಪ್ರದಾಯವಿಲ್ಲ. Bar of excellence is very high.

ಇದಾದ ನಂತರ ಇಸ್ರೇಲ್ ಬಹಿರಂಗವಾಗಿ ತನ್ನ ವಿದೇಶಾಂಗ ನೀತಿಯನ್ನು ಪ್ರಕಟಿಸಿತು. ಅದರ ತಿರುಳು ತುಂಬಾ ಸರಳವಾಗಿತ್ತು ಮತ್ತು ಅಷ್ಟೇ ಸ್ಪಷ್ಟವಾಗಿತ್ತು. ಮಧ್ಯಪ್ರಾಚ್ಯದ ಯಾವುದೇ ದೇಶ ಪರಮಾಣು ತಂತ್ರಜ್ಞಾನವನ್ನು ಹೊಂದುವುದನ್ನು ಅಥವಾ ಅಭಿವೃದ್ಧಿ ಪಡಿಸುವುದನ್ನು ಇಸ್ರೇಲ್ ಸಹಿಸುವುದಿಲ್ಲ. ಸಹಿಸುವುದಿಲ್ಲ ಅಷ್ಟೇ ಅಲ್ಲ. ಇಸ್ರೇಲ್ ಅಂತಹ ಪ್ರಯತ್ನಗಳನ್ನು ಶತಾಯಗತಾಯ ವಿರೋಧಿಸುತ್ತದೆ ಮತ್ತು ತಡೆಯುತ್ತದೆ.

ಮುಂದೆ ಇದು Begin Doctrine ಎಂದೇ ಖ್ಯಾತವಾಯಿತು. ಇಸ್ರೇಲ್ ಅದನ್ನು ಕರಾರುವಕ್ಕಾಗಿ ಪಾಲಿಸಿಕೊಂಡು ಬಂದಿದೆ ಕೂಡ. ಇರಾಕಿನ ನಂತರ ಅಣುಸ್ಥಾವರ ಕಟ್ಟಲು ಹೋದ ಸಿರಿಯಾಕ್ಕೆ ಅದೇ ಗತಿಯಾಯಿತು. ಸದ್ಯಕ್ಕೆ ಇರಾನಿಗೂ ಅದೇ ಗತಿಯಾಗುತ್ತಿದೆ. ಆದರೆ ಚಿಕ್ಕ ಚಿಕ್ಕ ಡೋಸುಗಳಲ್ಲಿ ಇರಾನಿಗೆ ಕಂಪ್ಯೂಟರ್ ವೈರಸ್ ಮೂಲಕ, ಕಂಡಕಂಡಲ್ಲಿ ಇರಾನಿ ಅಣುವಿಜ್ಞಾನಿಗಳನ್ನು ನಿಗೂಢವಾಗಿ ಕೊಲ್ಲುವ ಮೂಲಕ, ಸೇನಾ ಮುಖ್ಯಸ್ಥ ಸುಲೇಮಾನಿ ಅಂತವರನ್ನು ಅಮೇರಿಕಾವನ್ನು ಮುಂದಿಟ್ಟುಕೊಂಡು ಡ್ರೋನ್ ಮುಖಾಂತರ ಉಡಾಯಿಸಿಬಿಡುವ ಮೂಲಕ ಇರಾನಿಗೆ ಬಿಸಿ ಮುಟ್ಟಿಸುತ್ತಿದೆ ಇಸ್ರೇಲ್. ಮುದೊಂದು ದಿನ ಇರಾನಿನ ಅಣುಸ್ಥಾವರವೂ ಭೂಮಿಯಲ್ಲಿ ಲೀನವಾದರೆ ಯಾವ ಆಶ್ಚರ್ಯವೂ ಇಲ್ಲ. ಏಕೆಂದರೆ Begin Doctrine ಚಾಲ್ತಿಯಲ್ಲಿದೆ. ಮುಂದೂ ಇರುತ್ತದೆ.

ಮುಖ್ಯ ಮಾಹಿತಿ ಮೂಲ: No Mission Is Impossible: The Death-Defying Missions of the Israeli Special Forces by Michael Bar-Zohar, Nissim Mishal

Thursday, January 24, 2019

ಶೇಖ್ ಸಾಹೇಬರ ರಹಸ್ಯ ಡವ್ವು!

ಅವನೊಬ್ಬ ಇಸ್ರೇಲಿಗಳಿಗೆ ದೊಡ್ಡ ತಲೆನೋವಾಗಿಹೋಗಿದ್ದ.ಅವನೇ ಶೇಖ್ ಯಾಸಿನ್. ಹಮಾಸ್ ಎನ್ನುವ ಪ್ಯಾಲೆಸ್ತೇನಿ ಉಗ್ರಗಾಮಿ ಸಂಘಟನೆಯೊಂದರ ಸಂಸ್ಥಾಪಕರಲ್ಲಿ ಒಬ್ಬ. ಮುಖ್ಯ ಸಂಸ್ಥಾಪಕ ಅಂದರೂ ಅಡ್ಡಿಯಿಲ್ಲ.

ಹಮಾಸ್ - ಮೊದಲಿಂದಲೂ ಹಿಂಸಾಚಾರವನ್ನೇ ಮುಂದಿಟ್ಟುಕೊಂಡು ಇಸ್ರೇಲಿಗೆ ತೊಂದರೆ ಕೊಟ್ಟ ಉಗ್ರಗಾಮಿ ಸಂಘಟನೆ. ಅದೂ ಎಂತಹ ಹಿಂಸಾಚಾರ ಅಂತೀರಿ? ಭೀಕರ ಆತ್ಮಹತ್ಯಾ ದಾಳಿಗಳು. ಹಿಂದೆಂದೂ ಆಗಿರದಂತಹ ಆತ್ಮಹತ್ಯಾ ದಾಳಿಗಳಿಗೆ ಇಸ್ರೇಲಿಗಳು ತತ್ತರಿಸಿಹೋಗಿದ್ದರು. ಸರ್ಕಸ್ ಟೆಂಟಿನಂತಹ ದಿರುಸು ಧರಿಸಿ, ಫುಲ್ ಬುರ್ಖಾ ಹಾಕಿಕೊಂಡು ಬಸ್ ಹತ್ತಿದವರು ಗಂಡಸರೋ ಹೆಂಗಸರೋ ಗೊತ್ತಿಲ್ಲ. ತೀರಾ ಬಟ್ಟೆ ಬಿಚ್ಚಿಸಿ ಚೆಕ್ ಮಾಡುವ ಪದ್ಧತಿ ಇನ್ನೂ ಬಂದಿರಲಿಲ್ಲ. ಅಷ್ಟರ ಮಟ್ಟಿಗೆ ಎಲ್ಲ ಹಿಂಸಾಚಾರಗಳ ಮಧ್ಯೆಯೂ ಇಸ್ರೇಲಿಗಳು ಸಭ್ಯತೆ ಕಾದುಕೊಂಡಿದ್ದರು. ತೊಂದರೆ ಬಂದಿದ್ದು ಯಾವಾಗ ಈ ಟೆಂಟ್ ಬಟ್ಟೆ ಮತ್ತು ಬುರ್ಖಾ ಮಂದಿ ಢಮ್! ಎಂದು ಸ್ಪೋಟಿಸಿಕೊಂಡು, ಇಡೀ ಬಸ್ಸಿಗೆ ಬಸ್ಸನ್ನೇ ಆಹುತಿ ತೆಗೆದುಕೊಂಡು, ನಾಲ್ಕಾರು ಡಜನ್ ಜನರನ್ನು ಸಾರಾಸಗಟಾಗಿ ಕೊಂದಾಗ. ಅತೀ ಕಮ್ಮಿ ಬಂಡವಾಳ ಆದರೆ ಅತೀ ಹೆಚ್ಚಿನ ಧಮಾಕಾ ಅಂದರೆ ಆತ್ಮಹತ್ಯಾ ದಾಳಿ. ಗಾಜಾ ಪಟ್ಟಿಯಲ್ಲಿನ ಪಾನ್ ಬೀಡಿ ದುಕಾನುಗಳಲ್ಲೆಲ್ಲ ಸುಯಿಸೈಡ್ ಬೆಲ್ಟ್ ಬಾಂಬುಗಳು ಬಿಟ್ಟಿಯಾಗಿ ಸಿಕ್ಕು, ಕಂಡಕಂಡ ಅಂಡೆಪಿರ್ಕಿಗಳೆಲ್ಲ ಅವನ್ನು ಸೊಂಟಕ್ಕೆ ಸುತ್ತಿಕೊಂಡು ಇಸ್ರೇಲ್ ಬಸ್ ಹತ್ತುತ್ತಿದ್ದರು. ಮಾರ್ಗ ಮಧ್ಯೆ ಬಸ್ ಫುಲ್ ರಶ್ ಆಗಿದ್ದಾಗ ಅಲ್ಲಾ ಹೋ ಅಕ್ಬರ್ ಅಂದವರೇ.....ಮುಂದೆ ಫುಲ್ ಮಟಾಷ್!

ಯಾವಾಗ ಪರಿಸ್ಥಿತಿ ಹದ್ದು ಮೀರತೊಡಗಿತೋ ಇಸ್ರೇಲಿನ ಆಂತರಿಕ ಭದ್ರತಾ ಸಂಸ್ಥೆ 'ಶಬಾಕ್' ಬೇರೆ ವಿಧಿಯಿಲ್ಲದೇ ಸೀದಾ ಹೋಗಿ ಶೇಖ್ ಯಾಸೀನನನ್ನೇ ಎತ್ತಾಕಿಕೊಂಡು ಬಂದಿತು. ಅಕ್ಷರಷ 'ಎತ್ತಾಕಿಕೊಂಡೇ' ಬಂತು. ಯಾಕೆಂದರೆ ಅವನು 'ಚಕ್ರಪೀಠಾಧಿಪತಿ'. ಚಕ್ರವಿರುವ ತಳ್ಳುಗಾಡಿ ಖುರ್ಚಿಯಲ್ಲಿಯೇ ಅವನ ಫುಲ್ ಜೀವನ. ವಿಕಲಾಂಗ. Quadriplegic. ಆದರೆ ಬಾಯಿ ಮಾತ್ರ ಬೊಂಬಾಯಿ. ಅದ್ಯಾವ ರೀತಿಯಲ್ಲಿ ಪ್ರವಚನ ಮಾಡುತ್ತಿದ್ದ ಅಂದರೆ ತಕ್ಕಮಟ್ಟಿನ ವಿದ್ಯಾವಂತರೂ ಸಹ ಫುಲ್ brainwash ಆಗಿ, ಸುಯಿಸೈಡ್ ಬೆಲ್ಟ್ ಬಾಂಬ್ ಖರೀದಿಗೆ ಹೊರಟುಬಿಡುತ್ತಿದ್ದರು. ಅಷ್ಟು effective ಆಗಿ ಮಸೀದಿಗಳಲ್ಲಿ firebrand ಪ್ರವಚನ ನೀಡುತ್ತಿದ್ದ. ಕುಳಿತಲ್ಲಿಂದಲೇ ಬೆಂಕಿಯುಗುಳುತ್ತಿದ್ದ. ಮಹಾ ಡೇಂಜರ್ ಮನುಷ್ಯ.

https://upload.wikimedia.org/wikipedia/en/e/ee/Ahmed_Yassin.JPG
ಶೇಖ್ ಯಾಸಿನ್
ಖತರ್ನಾಕ್ ಶಬಾಕ್ ಪೊಲೀಸರು ಈ  ವಯ್ಯನನ್ನು ಎತ್ತಾಕಿಕೊಂಡು ಬಂದರು ಸರಿ. ಆದರೆ ಇವನನ್ನು ಹಾಕ್ಕೊಂಡು ರುಬ್ಬೋಣ, ಬರೋಬ್ಬರಿ ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ಕೊಟ್ಟು ಬಾಯಿಬಿಡಿಸೋಣ ಅಂದರೆ ಇವನೋ ವಿಕಲಾಂಗ. ಥರ್ಡ್ ಡಿಗ್ರಿ ಕೊಡೋದು ದೂರದ ಮಾತು. ಶಬಾಕ್ ಎನ್ನುವ ಖತರ್ನಾಕ್ ಪೊಲೀಸ್ ಘಟಕದ ಸಾಮಾನ್ಯ ಪೇದೆಯೊಬ್ಬ ಒಂದೇ ಒಂದು ಏಟು ಬರೋಬ್ಬರಿ ಕೊಟ್ಟರೂ ಸಾಕು. ಈ ಚಕ್ರಪೀಠಾಧಿಪತಿ ವಿಕಲಾಂಗ ಅಲ್ಲಾ ಕೋ ಪ್ಯಾರೇ ಆಗಿಬಿಡುತ್ತಿದ್ದ. ಅಷ್ಟು ಅಶಕ್ತ ಮತ್ತು ಬಲಹೀನ. ಮತ್ತೆ ಆ firebrand ಇಮಾಮ್ ಶೇಖ್ ಯಾಸೀನ್ ಏನಾದರೂ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಲಾಕಪ್ ಡೆತ್ ಆಗಿ ಸತ್ತ ಅಂದರೆ ಮುಗಿಯಿತು. ಇಡೀ ಪ್ಯಾಲೆಸ್ಟೈನ್ ಹೊತ್ತಿ ಉರಿದು, ಇಸ್ರೇಲಿನ ಸೆರಗಿನ ಕೆಂಡ ದಾವಾಗ್ನಿಯಾಗಿ, ಇಸ್ರೇಲಿನ ಸುಡಬಾರದ ಜಾಗವೆಲ್ಲ ಸುಟ್ಟು, ದೊಡ್ಡ ರಾಜಕಾರಣಿಗಳ ಖುರ್ಚಿಗೆ ಆಪತ್ತು ಬರುತ್ತಿತ್ತು. ಹಾಗಾಗಿ ಎತ್ತಾಕಿಕೊಂಡು ಬಂದರೂ ಈ prize catch ಅನ್ನುವಂತಹ ಶೇಖ್ ಯಾಸೀನ್ ಎಂಬ ಗಿರಾಕಿಯನ್ನು ಅತ್ಯಮೂಲ್ಯ ವಸ್ತುವಿನಂತೆ ಕಾಪಾಡಿಕೊಳ್ಳಬೇಕಿತ್ತು. ಆದರೆ ಬಾಯಿ ಕೂಡ ಬಿಡಿಸಬೇಕಿತ್ತು. ಅವನಿಗೇ ಗೊತ್ತು ಮುಂದೆ ಎಷ್ಟು ಆತ್ಮಹತ್ಯಾ ದಾಳಿಗಳು ಆಗಲಿವೆ, ಯಾವಾಗ ಆಗಲಿವೆ, ಎಲ್ಲಿ ಆಗಲಿವೆ, ಯಾರು ಮಾಡಲಿದ್ದಾರೆ ಎಲ್ಲ. ಎಲ್ಲವನ್ನೂ ತನ್ನ ಭಯಂಕರ ಬುರುಡೆಯಲ್ಲಿ ಅದುಮಿಟ್ಟುಕೊಂಡು ಕುಳಿತಿದ್ದ ಭಡವ. ಅವನಿಗೂ ಗೊತ್ತು ತನಗೆ ಯಾರೂ ಏನೂ ಮಾಡುವಂತಿಲ್ಲ ಎಂದು. ಸತ್ತು ಹುತಾತ್ಮನಾಗಿ ಜನರನ್ನು ಮತ್ತಿಷ್ಟು ಮತಾಂಧರನ್ನಾಗಿ ಮಾಡುವ ಉಮೇದಿ ಬೇರೆ.

ಶಬಾಕ್ ಪೊಲೀಸರು ಹೇಗೆ ಇವನ ಬಾಯಿಬಿಡಿಸಬೇಕು ಎಂದು ತಲೆ ಮೇಲೆ ಕೈಹೊತ್ತು ಕುಳಿತಾಗ ಒಬ್ಬ ಹಿರಿಯ ಅಧಿಕಾರಿಗೆ ಏನೋ ನೆನಪಾಯಿತು. 'Yes! That should do it!' ಅಂದವರೇ ತಮ್ಮ ಸಹಾಯಕನನ್ನು ಕರೆದರು. ಏನೋ ಸೂಚನೆ ಕೊಟ್ಟರು. ಅವರ ಸೂಚನೆ ಪ್ರಕಾರ ಸಹಾಯಕ ಹೋಗಿ ಏನೋ ವಸ್ತುವನ್ನು ತಂದು ಕೊಟ್ಟ. ಮುಂದಿನ ಸುತ್ತಿನ ವಿಚಾರಣೆಗೆ ತಯಾರಾದರು.

ಕುಳಿತಿದ್ದ ಚಕ್ರಪೀಠದ ಸಮೇತ ಶೇಖ್ ಸಾಬ್ರನ್ನು ಒರಟಾಗಿ ಎತ್ತಿದ ಯಮಕಿಂಕರರಂತಹ ಪೊಲೀಸರು ಅವನನ್ನು interrogation ಕೋಣೆಯಲ್ಲಿ ಒಗೆದು ಬಂದರು. ಹಿಂದೆಯೇ ಹೋದರು ಆ ಹಿರಿಯ ಅಧಿಕಾರಿ. ಅವರ ಹಿಂದೆಯೇ ಹೋಗಿದ್ದು ಒಂದು ಟೀವಿ ಮತ್ತು ಒಂದು ವಿಡಿಯೋ ಪ್ಲೇಯರ್.  ಅವರ ಕೈಯಲ್ಲಿ 'ಏನೋ' ಇತ್ತು.

ಶೇಖ್ ಸಾಬನ ಮುಂದೆಯೇ ಒಂದು ಖುರ್ಚಿ ಹಾಕಿಕೊಂಡು ಕುಳಿತರು ಆ ಹಿರಿಯ ಅಧಿಕಾರಿ.

'ಶೇಖ್ ಸಾಬ್ರೇ, ನೀವಂತೂ ಕೇಳಿದ ಪ್ರಶ್ನೆಗಳಿಗೆ ಒಂದಕ್ಕೂ ಉತ್ತರ ಕೊಡುತ್ತಿಲ್ಲ. ನಮ್ಮ 'ಭಾಷೆ'ಯಲ್ಲಿ ನಿಮ್ಮನ್ನು ಮಾತಾಡಿಸೋಣ ಅಂದ್ರೆ ಒಂದೇ ಏಟಿಗೆ ಹುತಾತ್ಮರಾಗಿಬಿಡುತ್ತೀರಿ. ಹಾಗಾಗಿ ಬೇರೆ ವಿಧಿಯಿಲ್ಲ...' ಎಂದು ಪೀಠಿಕೆ ಇಟ್ಟವರೇ ತಮ್ಮ ಕೈಯಲ್ಲಿದ್ದ ಸಾಮಾನನ್ನು ತೆಗೆದು ವಿಡಿಯೋ ಪ್ಲೇಯರ್ ಒಳಗೆ ತುರುಕಿದರು. ಅದೊಂದು ವಿಡಿಯೋ ಕ್ಯಾಸೆಟ್ಟಾಗಿತ್ತು. ಪ್ಲೇ ಒತ್ತಿ ಕೂತರು.

'ಶೇಖ್ ಸಾಬ್ರೇ, ಲಾಕಪ್ಪಿನಲ್ಲಿ ಕೂತು ನಿಮಗೆ ಬೋರಾಗಿರಬಹುದು. ನೋಡಿ ಎಂಜಾಯ್ ಮಾಡಿ. ನೀವು ಒಪ್ಪಿದರೆ ಇದನ್ನು ನಿಮ್ಮ ಏರಿಯಾದ ಕೇಬಲ್ ಆಪರೇಟರ್ ಗೆ ಕೊಡೋಣ ಅಂದುಕೊಂಡಿದ್ದೇನೆ. ನಿಮ್ಮ ಹಿಂಬಾಲಕರೂ ನೋಡಿದರೆ ಚೆನ್ನ. ಯಾವುದಕ್ಕೂ ನೀವು ಮೊದಲು ನೋಡಿ,' ಅಂದರು.

ವಿಡಿಯೋ ಮೂಲಕ ಟೀವಿ ಮೇಲೆ ಮೂಡಿಬಂದ ದೃಶ್ಯ ನೋಡಿದ ವಿಕಲಾಂಗ ಶೇಖ್ ಯಾಸಿನ್ ತಳ್ಳುಗಾಡಿ ಖುರ್ಚಿಯಿಂದ ಫಣಂಗನೇ ಮಂಗ್ಯಾನ ಮಾದರಿಯಲ್ಲಿ ಹಾರಿಯೇ ಬಿಡುತ್ತಿದ್ದನೇನೋ. ಆದರೆ ಫುಲ್ ಲ್ಯಾಪ್ಸ್ ಕೇಸ್. ಕುಳಿತಲ್ಲೇ ಕನಲಿದ. ಭಯಂಕರ ಮುಜುಗರ ಅನುಭವಿಸುತ್ತ ಮಿಡುಕಿದ. ನಸುಗುನ್ನಿಯಂತೆ ಮುಲುಗಿದ. ಅವಮಾನದಲ್ಲಿ ತಲೆತಗ್ಗಿಸಿ, 'ಸಾಕು ನಿಲ್ಲಿಸಿ. ಏನು ಕೇಳಬೇಕೋ ಕೇಳಿ. ಪ್ಲೀಸ್ ವಿಡಿಯೋ ಬಂದ್ ಮಾಡಿ!' ಎಂದು ಅಂಬೋ ಅಂದ.

ಅರೇ ಇಸ್ಕಿ! ಏನೇ ಒತ್ತಡ ಹಾಕಿ ಏನೇ ಕೇಳಿದರೂ ಅಸಡ್ಡೆಯಿಂದ ನಗುತ್ತ ಕುಳಿತವ ಯಾವುದೋ ಒಂದು ವಿಡಿಯೋ ನೋಡಿದ ಕೂಡಲೇ ಪೂರ್ತಿ ಕರಗಿಹೋಗಿ ಬೇಕಾಗಿದ್ದನ್ನು ಕೇಳಿ ಎಲ್ಲ ಹೇಳುತ್ತೇನೆ ಎನ್ನುವ ಲೆವೆಲ್ಲಿಗೆ ಬಂದದ್ದು ಹೇಗೆ!?

ಆ ವೀಡಿಯೋದಲ್ಲಿ ಶೇಖ್ ಸಾಬನ ರಾಸಲೀಲೆ ದಾಖಲಾಗಿತ್ತು. ಮಸೀದಿಗಳಲ್ಲಿ ಯದ್ವಾತದ್ವಾ ಆಚಾರ ಹೇಳುತ್ತಿದ್ದ ಇದೇ ಪುಣ್ಯಾತ್ಮ ತನ್ನ ವೈಯಕ್ತಿಕ ಜೀವನದಲ್ಲಿ ಮಾತ್ರ ಯಥೇಚ್ಛವಾಗಿ ಬದ್ನೇಕಾಯಿ ತಿನ್ನುತ್ತಾನೆ ಮತ್ತು ತಿನ್ನಿಸುತ್ತಾನೆ ಎಂದು ಇವನ ಪ್ರವಚನ ಕೇಳುವ ಮಂದಿಗೆ ಗೊತ್ತಾಗಿಬಿಟ್ಟರೆ ಅಷ್ಟೇ ಮತ್ತೆ. ಮುಗಿಯಿತು ಇವನ ಕಥೆ. ಗಾಜಾ ಪಟ್ಟಿ ಉದ್ದಕ್ಕೂ ನಾಯಿಯಂತೆ ಅಟ್ಟಾಡಿಸಿಕೊಂಡು ಓಡ್ಯಾಡಿಸಿ ಕಲ್ಲಿಂದ ಹೊಡೆದು ಸಾಯಿಸುತ್ತಿದ್ದರು. ಅಥವಾ ಮತ್ತೂ ತಲೆ ಕೆಟ್ಟರೆ ಸುಯಿಸೈಡ್ ಬೆಲ್ಟ್ ಬಾಂಬ್ ಕಟ್ಟಿಕೊಂಡು ಇವನನ್ನೇ ಅಪ್ಪಿಕೊಂಡು ಸ್ಪೋಟಿಸಿಕೊಂಡುಬಿಡುತ್ತಿದ್ದರು. ಅಷ್ಟು ಖರಾಬಾಗಿತ್ತು ಶೇಖ್ ಸಾಬನ ರಾಸಲೀಲೆ.

ಶೇಖ್ ಯಾಸೀನ್ ಸಾಬ್ರು ವಿಕಲಾಂಗರೇನೋ ನಿಜ. ಆದರೆ ನಪುಂಸಕರಲ್ಲ ನೋಡಿ. ಮೇಲಿಂದ ಭಿಕ್ಷೆಯ ಫುಡ್ಡು. ಹಾಗಾಗಿ ಉಪ್ಪು ಹುಳಿ ಖಾರ ವಸಿ ಜಾಸ್ತಿನೇ ತಿನ್ನುತ್ತಿದ್ದರು. ಇವರ ಮೇಲಿನ ಭಕ್ತಿಯಿಂದ ಜನ ತರೇವಾರಿ ತಿಂಡಿ ತಿನ್ನಿಸಿ, ಊಟ ಉಣ್ಣಿಸಿ ಸಾಹೇಬರು ಕೊಂಚ ಜಾಸ್ತಿಯೇ 'ಉಛಲ್ ಕೂದ್' ಮಾಡುತ್ತಿದ್ದರು. ಆದರೇನು ಮಾಡುವುದು ಹೆಂಡತಿ / ಗೆಳತಿ ಯಾರೂ ಇರಲಿಲ್ಲ. ಆದರೆ ಜಾಸ್ತಿ ದಿವಸ ಸುಖದ ವ್ಯತ್ಯಯ ಆಗಲೇ ಇಲ್ಲ ಸಾಬರಿಗೆ.

ಅವಳು ಯಾರೋ ಗಾಜಾ ಪಟ್ಟಿಯ ಸುಂದರಿ. ಶೇಖ್ ಸಾಬರ ಬೆಂಕಿಯುಗುಳುವ ಪ್ರವಚನಗಳಿಂದ ಅವಳೂ ಪ್ರಭಾವಿತಳೇ. ತನ್ನದೇ ರೀತಿಯಲ್ಲಿ ಪ್ಯಾಲೆಸ್ಟೈನ್ ಸಂಗ್ರಾಮಕ್ಕೆ ತನ್ನ 'ಸೇವೆ' ಸಲ್ಲಿಸುತ್ತಿದ್ದಳು. ಅವರವರ ಭಾವಕ್ಕೆ, ಅವರವರ ಭಕ್ತಿಗೆ ತಕ್ಕಂತೆ ಸೇವೆ ನೋಡಿ.

'ಪಾಪ ಶೇಖ್ ಸಾಬ್ರು! ಅದೆಷ್ಟು ಕಷ್ಟ ಪಟ್ಟು ಪ್ರವಚನ ಮಾಡುತ್ತಾರೆ. ಎಲ್ಲವನ್ನೂ ಹಮಾಸ್ ಸಂಘಟನೆಗೆ ಅರ್ಪಿಸಿಕೊಂಡುಬಿಟ್ಟಿದ್ದಾರೆ. ಮನೆಯಲ್ಲೊಂದು ಹೆಣ್ಣು ಜೀವಕ್ಕೆ ಗತಿಯಿಲ್ಲ. ಪಾಪ ಶೇಖ್ ಸಾಬ್ರು...' ಎಂದುಕೊಂಡಳೋ ಏನೋ. ಶೇಖ್ ಸಾಬ್ರ ಮನೆಕೆಲಸ ಮಾಡುವ ನೆಪದಲ್ಲಿ ವಾರದಲ್ಲಿ ಒಂದೆರೆಡು ದಿನ ಮಧ್ಯಾಹ್ನ ಬರುತ್ತಿದ್ದಳು. ಜಾಡೂ ಪೋಛಾ ಮಾಡಿ, ಭಾಂಡಿ ಗಿಂಡಿ ತಿಕ್ಕಿ, ಬಟ್ಟೆ ಗಿಟ್ಟೆ ಒಗೆದುಕೊಟ್ಟು, ಶೇಖ್ ಸಾಬ್ರ ಬಿಸ್ತರ್ ಗಿಸ್ತರ್ ಬರೋಬ್ಬರಿ ಮಾಡಿ ಹೋಗುತ್ತಿದ್ದಳು. ಆಪ್ತ ಸಹಾಯಕಿ ಮಾದರಿಯಲ್ಲಿ.

ಅದೇನು ಶೇಖ್ ಸಾಬ್ರ ಮೇಲೆ ಅವಳಿಗೇ ಅನುರಾಗ ಹುಟ್ಟಿತೋ ಅಥವಾ ಚಕ್ರಪೀಠದ ಮೇಲೆ ಕುಳಿತೇ ಶೇಖ್ ಸಾಹೇಬ್ರು ಅವಳಿಗೆ 'ಆವ್,ಆವ್' ಎಂದು 'ಆವ್ ರೇ' ಕಾಳು ಹಾಕಿದರೋ ಗೊತ್ತಿಲ್ಲ. ಆದರೆ ಸಂಬಂಧ ಮಾತ್ರ ಮುಂದಿನ ಹಂತಕ್ಕೆ ಹೋಗಿಬಿಟ್ಟಿತು.

ಶೇಖ್ ಸಾಬರಂತೂ ವಿಕಲಾಂಗರು. ಸುಂದರಿಯೇ ಮೈಮೇಲೆ ಬಿದ್ದು ಬರಬೇಕೇ ವಿನಃ ಇವರು ಅದೆಷ್ಟೇ ಇಷ್ಟಪಟ್ಟರೂ ಅದೆಷ್ಟೇ ಕಷ್ಟಪಟ್ಟರೂ ಹಾರಲಾರರು, ಜಿಗಿಯಲಾರರು, ಬಾರಿಸಲಾರರು. ಎಲ್ಲ ಸುಂದರಿಯ ಕೈಯಲ್ಲಿ. ಆಕೆ ಅಳಿಲುಸೇವೆ ಮಾಡುತ್ತೇನೆ ಎಂದಿರಬೇಕು. ಇವರು ಏನೆಂದುಕೊಂಡರೋ. ಇವರ ಅಳಿಲು. ಆಕೆಯ ಸೇವೆ. ಯಾ ಅಲ್ಲಾ!

ಮನೆ ಕೆಲಸ ಮುಗಿಸಿದ ಸುಂದರಿ ತಾನೂ ವಿವಸ್ತ್ರಳಾಗಿ, ಶೇಖ್ ಸಾಬ್ರನ್ನೂ ವಿವಸ್ತ್ರಗೊಳಿಸಿ, ಮಲಗಿಸಿ, ಲಾಲಿ ಜೋಗುಳ ಹಾಡಿ, 'ಸೇವೆ' ಎಲ್ಲ ಮಾಡಿ, ತಾನೂ ಪವಿತ್ರಳಾಗಿ ಸಾಬ್ರನ್ನೂ ಖುಷ್ ಮಾಡುತ್ತಿದ್ದಳು. ಅವರಿಗೆ ಗೊತ್ತಿಲ್ಲದ ವಿಷಯವೆಂದರೆ ಆಗಲೇ ಎಲ್ಲವನ್ನೂ under surveillance ಇಟ್ಟಿದ್ದ ಇಸ್ರೇಲಿನ ಶಬಾಕ್ ಎಲ್ಲವನ್ನೂ ರಹಸ್ಯವಾಗಿ ವಿಡಿಯೋ ಮಾಡುತ್ತಿತ್ತು. ಮತ್ತೆ ಅವೆಲ್ಲ ಅತ್ಯಂತ ಕ್ರಮಬದ್ಧವಾಗಿ ಶೇಕ್ ಸಾಬ್ರ ಮೇಲೆ ಮಡಗಿದ್ದ ಮಾಸ್ಟರ್ ಫೈಲ್ ನಲ್ಲಿ ದಾಖಲಾಗುತ್ತಿದ್ದವು.

ಈಗ ಅದೇ ರಾಸಲೀಲೆಯ ಒಂದು ಝಳಕ್ ತೋರಿಸಿದ್ದರು. ಅದನ್ನು ನೋಡಿದ ಶೇಖ್ ಸಾಬ್ರು ಬೆಚ್ಚಿಬಿದ್ದು, ಮೆತ್ತಗಾಗಿ, ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ತಯಾರಾಗಿದ್ದರು. ಇಲ್ಲವಾದರೆ ವೀಡಿಯೊ ಪಬ್ಲಿಕ್ ಆಗಿಬಿಟ್ಟರೆ ಅಷ್ಟೇ ಮತ್ತೆ. ಹುಚ್ಚು ನಾಯಿಯಂತೆ ಹೊಡೆದು ಕೊಲ್ಲುತ್ತಾರೆ. ಬೇರೆ ಯಾರೋ ಏನೇನೋ ಸೇವೆ ಮಾಡಿಸಿಕೊಂಡಿದ್ದರೆ 'ಹೋಗಲಿ ಬಿಡಿ. ವಿಕಲಾಂಗನಾದರೆ ಏನಂತೆ, ಹಡಬಿಟ್ಟಿ ಮನಸ್ಸು ಕೇಳಬೇಕಲ್ಲ. ಹೋಗಲಿ ಬಿಡಿ,' ಎಂದು ನಗಣ್ಯ ಮಾಡುತ್ತಿದ್ದರೋ ಏನೋ. ಆದರೆ ಇವನೋ ದೊಡ್ಡ ಇಮಾಮ್ ಸಾಬ್. ಊರಿಗೆಲ್ಲ ಪಾವಿತ್ರ್ಯತೆಯ ಉಪದೇಶ ಮಾಡಿಕೊಂಡು ತಿರುಗಿ, ಆದರ ಮೇಲೆಯೇ ದಾನ ಎತ್ತಿ ತನ್ನ ಚಾಯ್ ಪಾನಿಗೆ ವ್ಯವಸ್ಥೆ ಮಾಡಿಕೊಂಡ ಗಡವ. ಇಂತವ ವೇದಾಂತ ಹೇಳಿ ಬದನೆಕಾಯಿ ತಿನ್ನುತ್ತಾನೆ ಅಂದರೆ ಮಂದಿ ಸಿಟ್ಟಿಗೆದ್ದು ಸಿಗಿದಾಕುತ್ತಿದ್ದರು ಅಷ್ಟೇ.

ಹೀಗೆ ಯುಕ್ತಿಯಿಂದ ಶೇಕ್ ಸಾಬ್ರ ಬಾಯಿ ಬಿಡಿಸಿತ್ತು ಇಸ್ರೇಲಿನ ತನಿಖಾ ಸಂಸ್ಥೆ ಶಬಾಕ್. ಎಂದೋ ಮಾಡಿದ್ದ ವಿಡಿಯೋ ಅಂದು ಆಯ್ತ ವೇಳೆಗೆ ನೆನಪಾಗಿ ಬರೋಬ್ಬರಿ ಉಪಯೋಗಕ್ಕೆ ಬಂದಿತ್ತು.

ಶೇಖ್ ಸಾಬ್ರನ್ನು ಬರೋಬ್ಬರಿ ವಿಚಾರಣೆ ಮಾಡಿ, ಎಲ್ಲ ಮಾಹಿತಿಯನ್ನು ಬರೋಬ್ಬರಿ ಗುಂಜಿ, ಸಾಬ್ರನ್ನು ಬರೋಬ್ಬರಿ ಹಿಂಡಿ ಹಿಪ್ಪೆ ಮಾಡಿ ಜೈಲಿಗೆ ಅಟ್ಟಿತು ಇಸ್ರೇಲ್. ಜೈಲಿನಲ್ಲಿ ಕೊಳೆಯುತ್ತಲೇ ಹಮಾಸ್ ಉಗ್ರರಿಗೆ ರಹಸ್ಯ ಸಂದೇಶಗಳನ್ನು ರವಾನಿಸುತ್ತ ಉಗ್ರಗ್ರಾಮಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಲೇ ಇದ್ದ ಶೇಖ್ ಯಾಸೀನ್. ಆದರೆ ಸುಂದರಿಯ 'ಸೇವೆ' ಮಾತ್ರ ತಪ್ಪಿಹೋಗಿತ್ತು. ಪಾಪ ಸಾಬ್ರು! ಅದಿದ್ದರೆ ಇನ್ನೂ ಜಬರ್ದಾಸ್ತಾಗಿ ಅಗ್ನಿಯುಗುಳುತ್ತಿದ್ದರೇನೋ!

ಜೀವನ ಪರ್ಯಂತ ಜೇಲಿಗೆ ಹಾಕಿತ್ತು ಇಸ್ರೇಲ್. ಆದರೆ ಶೇಖ್ ಸಾಬ್ರ ಲಕ್ ಅಂದರೆ ಲಕ್. ಭಯಂಕರ ಅದೃಷ್ಟ. ಜೇಲಿನಿಂದ ಬಿಡುಗಡೆಯಾಗುವಂತಹ ಒಂದು ಸನ್ನಿವೇಶ ಅಚಾನಕ್ ಆಗಿ ಸೃಷ್ಟಿಯಾಗಿಬಿಡಬೇಕೇ!? ಅದೂ ಇಸ್ರೇಲ್ ಮಾಡಿಕೊಂಡ ಸ್ವಯಂಕೃತ ಅಪರಾಧದಿಂದಾಗಿ. ಅದರಲ್ಲೂ ಮಹಾನ್ ಖತರ್ನಾಕ್ ಬೇಹುಗಾರಿಕೆ ಸಂಸ್ಥೆ ಮೊಸ್ಸಾದ್ ಮಾಡಿಕೊಂಡ ಒಂದು ಲಫಡಾ ಶೇಖ್ ಯಾಸೀನ್ ಬಿಡುಗಡೆಯಾಗುವಂತೆ ಮಾಡಿದ್ದು ಒಂದು ವಿಚಿತ್ರ. Total irony.

೧೯೯೭ ರಲ್ಲಿ ಹಮಾಸ್ ಉಗ್ರರಿಗೆ ಒಂದು ಖಡಕ್ ಸಂದೇಶ ಮುಟ್ಟಿಸಬೇಕೆಂದುಕೊಂಡ ಇಸ್ರೇಲ್ ಹಮಾಸ್ ಮುಖಂಡ ಖಾಲಿದ್ ಮೇಷಾಲ್ ಮೇಲೆ ಮರಣಶಾಸನ ಜಾರಿ ಮಾಡಿತು. ಎಂದಿನಂತೆ ಅದರ ಜವಾಬ್ದಾರಿ ಹೋಗಿದ್ದು ಮೊಸ್ಸಾದ್ ಎಂಬ ಖತರ್ನಾಕ್ ಬೇಹುಗಾರಿಕೆ ಸಂಸ್ಥೆಗೆ. ಅಂದಿನ ಮೊಸ್ಸಾದ್ ಮುಖ್ಯಸ್ಥ ಡ್ಯಾನಿ ಯಟೋಮ್ ಆ ಕಾರ್ಯಾಚರಣೆ ತುಂಬಾ ಕಷ್ಟಕರವಾಗಿದೆ ಮತ್ತು ತುಂಬಾ ರಿಸ್ಕಿ ಎಂದು ಪ್ರಧಾನಿ ನೇತನ್ಯಾಹು ಅವರಿಗೆ ಪರಿಪರಿಯಾಗಿ ಹೇಳಿದರು. ಸದ್ಯಕ್ಕೆ ಖಾಲಿದ್ ಮೇಶಾಲನ ಗೇಮ್ ಬಾರಿಸುವುದು ಬೇಡ, ಮುಂದೆ ನೋಡೋಣ ಎಂದು ಹೇಳಿದರು. ಖಡಕ್ ಪ್ರಧಾನಿ ನೆತಾನ್ಯಾಹೂಗೆ ಸಹನೆ ಕಮ್ಮಿ. ಖುದ್ ಟಾಪ್ ಕಮಾಂಡೋ ಆಗಿದ್ದ ಅವರು ಅಂತಹ ಹಲವಾರು ಕಾರ್ಯಾಚರಣೆ ಮಾಡಿದ್ದರು. ವಿಮಾನ ಅಪಹರಣಕಾರರ ಗೇಮ್ ಖುದ್ದಾಗಿ ಬಾರಿಸಿದ್ದರು. ಹಮಾಸ್ ಮಾಡುತ್ತಿದ್ದ ಆತ್ಮಹತ್ಯಾ ದಾಳಿಗಳಲ್ಲಿ ತುಂಬಾ ಜನ ಇಸ್ರೇಲಿಗಳು ಭಸ್ಮವಾಗುತ್ತಿದ್ದರು. ಪ್ರಧಾನಿ ಮೇಲೆ ಇನ್ನಿಲ್ಲದ ಒತ್ತಡ. ಏನಾದರೂ ಮಾಡಲೇಬೇಕಿತ್ತು. ಇಸ್ರೇಲ್ ನೋಡಿಕೊಂಡು ಸುಮ್ಮನಿರಲ್ಲ ಎನ್ನುವ ಖಡಕ್ ಸಂದೇಶ ಉಗ್ರರಿಗೆ ರವಾನೆಯಾಗಲೇಬೇಕಿತ್ತು. ಒಂದು ದೊಡ್ಡ ಬಲಿ ಕೇಳುತ್ತಿತ್ತು ಇಸ್ರೇಲ್ ಜನತೆ. ಹಾಗಾಗಿ ತಮ್ಮ ಮೊಸ್ಸಾದ್ ಮುಖ್ಯಸ್ಥನ ಮಾತು ಕೇಳಲಿಲ್ಲ ಅವರು.

ಖಾಲೆದ್ ಮೇಷಾಲನನ್ನು ಕೊಲ್ಲಲು ಹಾಕಿದ್ದ ಸ್ಕೆಚ್ ಗಬ್ಬೆದ್ದುಹೋಯಿತು. ಪಕ್ಕದ ಜೋರ್ಡಾನ್ ದೇಶದ ರಾಜಧಾನಿ ಅಮ್ಮಾನ್ ನಗರದಲ್ಲಿ ಆಫೀಸ್ ಮಾಡಿಕೊಂಡಿದ್ದ ಖಾಲೆದ್ ಮೇಷಾಲ್ ಮೊಸ್ಸಾದ್ ಹಂತಕರಿಂದ ಬಚಾವಾಗಿಬಿಟ್ಟ. ಅದಕ್ಕಿಂತ ಹೆಚ್ಚಾಗಿ ಮೊಸ್ಸಾದ್ ಹಂತಕರು ಸಿಕ್ಕಾಕಿಕೊಂಡುಬಿಟ್ಟರು. ಇಸ್ರೇಲಿಗೆ ದೊಡ್ಡ ಮಟ್ಟದ ಮುಜುಗರ. Big embarrassment. ಪಕ್ಕದಲ್ಲಿದ್ದ ಎಲ್ಲ ಅರಬ್ ರಾಷ್ಟ್ರಗಳು ವೈರಿ ದೇಶಗಳು. ಇದ್ದುದರಲ್ಲಿಯೇ ಜೋರ್ಡಾನ್ ಸ್ನೇಹದ ಹಸ್ತ ಚಾಚಿತ್ತು. ಏನೇನೋ ಒಪ್ಪಂದ ಮಾಡಿಕೊಂಡಿತ್ತು. ತನ್ನ ದೇಶದಲ್ಲಿ ಹತ್ಯೆ ಮಾಡುವಂತಿಲ್ಲ, ಗೇಮ್ ಬಾರಿಸುವಂತಿಲ್ಲ ಅಂತೆಲ್ಲ ಒಪ್ಪಂದ ಇತ್ತು. ಹೀಗೆಲ್ಲ ಇರುವಾಗ ಇಸ್ರೇಲ್ ತನ್ನ ದೇಶದಲ್ಲಿ ಗೇಮ್ ಬಾರಿಸಲು ನೋಡಿದ್ದು ದೊಡ್ಡ ಪ್ರಮಾಣದ ಮಿತ್ರದ್ರೋಹ ಅಂತ ಅಲ್ಲಿನ ಅಧ್ಯಕ್ಷ / ರಾಜ ಬೋಡು ತಲೆಯ ಕಿಂಗ್ ಹುಸೇನ್ ದೊಡ್ಡ ಪ್ರಮಾಣದಲ್ಲಿ ರಚ್ಛೆ ಹಿಡಿದು ಕೂತರು. ಸೀದಾ ಶ್ವೇತಭವನಕ್ಕೇ ಫೋನ್ ಹಚ್ಚಿ ಅಧ್ಯಕ್ಷ ಬಿಲ್ ಕ್ಲಿಂಟನ್ ಸಾಹೇಬರ ಮುಂದೆ ಗೊಳೋ ಎಂದರು. ಆಗ ಅದು ಕೇವಲ ಇಸ್ರೇಲಿನ ಸಮಸ್ಯೆಯಾಗಿ ಉಳಿಯಲಿಲ್ಲ.

ಬಿಲ್ ಕ್ಲಿಂಟನ್ ಸಾಹೇಬರಿಗೆ ಇದೆಲ್ಲ ಮಂಡೆಬಿಸಿ ಬೇಕಾಗಿಯೇ ಇರಲಿಲ್ಲ. ಎರಡನೇ ಅವಧಿಯಲ್ಲಿ ಸಕತ್ ಮಜಾ ಮಾಡಿಕೊಂಡು ಸಿಕ್ಕಸಿಕ್ಕ ಸುಂದರಿಯರ ಬ್ಯಾಂಡ್ ಬಾರಿಸಿಕೊಂಡು ಆರಾಮಾಗಿ ಇರೋಣ ಅಂದರೆ ಇಸ್ರೇಲ್ ಮತ್ತು ಜೋರ್ಡಾನ್ ಮಧ್ಯೆ ರಾಮರಾಡಿ. 'ಸಂಧಾನ ಮಾಡಿಕೊಂಡು ಎಲ್ಲ ಬಗೆಹರಿಸಿಕೊಳ್ಳಿ!' ಎಂದು ಇಸ್ರೇಲಿನ ಪ್ರಧಾನಿ ನೆತನ್ಯಾಹು ಅವರಿಗೆ ಕಟ್ಟಾಜ್ಞೆ ಮಾಡಿದ ಬಿಲ್ ಕ್ಲಿಂಟನ್ ತಮ್ಮ ಅಂದಿನ ಸಖಿ ಮೋನಿಕಾ ಲೆವಿನ್ಸ್ಕಿಯನ್ನು ಹುಡುಕುತ್ತ ಕಳೆದುಹೋದರು. ನೆತನ್ಯಾಹು ಅವರ ವಿವರಣೆ ಕೇಳಲು ಅವರಿಗೆ ಟೈಮ್ ಇರಲಿಲ್ಲ. ಮೂಡ್ ಕೂಡ ಇರಲಿಲ್ಲ.

(ಖಾಲೆದ್ ಮೇಷಾಲ್ ಹತ್ಯಾಪ್ರಯತ್ನದ ಬಗ್ಗೆ, ಅದರ ವೈಫಲ್ಯದ ಬಗ್ಗೆ ಮೊದಲೊಮ್ಮೆ ವಿವರವಾಗಿ ಬರೆದಿದ್ದೆ. ಇಲ್ಲಿದೆ. ಆಸಕ್ತರು ಓದಬಹುದು.)

ಬರೋಬ್ಬರಿ ವಸೂಲಿ ಮಾಡುವಂತೆ ಬಾಕಿ ಎಲ್ಲ ಅರಬ್ ದೇಶಗಳು ಜೋರ್ಡಾನ್ ದೊರೆ ಹುಸೇನರ ಬೋಳು ತಲೆಯನ್ನು ಬರೋಬ್ಬರಿ ತಿಕ್ಕಿದವು. ದೊಡ್ಡ ಮಟ್ಟದ ಡಿಮ್ಯಾಂಡ್ ಇಟ್ಟುಕೊಂಡು ಕೂತಿದ್ದರು ಅವರು. He wanted his pound of flesh and more!

ಮೊತ್ತ ಮೊದಲ ಡಿಮ್ಯಾಂಡ್ - ಖಾಲೆದ್ ಮೇಷಾಲ್ ಮೇಲೆ ಪ್ರಯೋಗಿಸಲಾದ ರಹಸ್ಯ ವಿಷಕ್ಕೆ ಪ್ರತಿಮದ್ದನ್ನು (antidote) ತುರ್ತಾಗಿ ಕಳಿಸಬೇಕು. ಜೊತೆಗೆ ನುರಿತ ಇಸ್ರೇಲಿ ವೈದ್ಯರೂ ಸಹ. At any cost, ಖಾಲೆದ್ ಮೇಷಾಲ್ ಉಳಿಯಲೇಬೇಕು. ಸೆಕೆಂಡ್ ಡಿಮ್ಯಾಂಡ್ - ಜೇಲಿನಲ್ಲಿರುವ ಹಮಾಸ್ ಸಂಸ್ಥಾಪಕ ಶೇಖ್ ಯಾಸೀನರನ್ನು ಬಿಡುಗಡೆ ಮಾಡಬೇಕು ಮತ್ತು ಸುರಕ್ಷಿತವಾಗಿ ಜೋರ್ಡಾನ್ ದೇಶಕ್ಕೆ ತಲುಪಿಸಬೇಕು. ಮೂರನೇ ಡಿಮ್ಯಾಂಡ್ - ನೂರಾರು ಜನ ಹಮಾಸ್ ಉಗ್ರರನ್ನು ಜೇಲಿನಿಂದ ಬಿಡುಗಡೆ ಮಾಡಬೇಕು.

ಇಸ್ರೇಲಿಗೆ ಬೇರೆ ಗತಿ ಇರಲಿಲ್ಲ. ಎಲ್ಲ ಡಿಮ್ಯಾಂಡ್ ಒಪ್ಪಿಕೊಂಡಿತು. ಖದೀಮ ಶೇಖ್ ಯಾಸೀನನನ್ನು ಆತನ ಚಕ್ರಪೀಠದ ಸಮೇತ ಹೆಲಿಕಾಪ್ಟರಿನಲ್ಲಿ ಕುಳ್ಳಿರಿಸಿ ಜೋರ್ಡನ್ ದೇಶಕ್ಕೆ ಕಳುಹಿಸಿಕೊಟ್ಟರು. ಬಿಟ್ಟಿ ಹೆಲಿಕಾಪ್ಟರಿನಲ್ಲಿ ಗಾಜಾ ಪಟ್ಟಿಯ ತನ್ನ ಜನರಿಗೆ ಕೈಬೀಸುತ್ತ ಶೇಖ್ ಯಾಸೀನ್ ಹಾರಿಹೋಗುತ್ತಿದ್ದರೆ ಇತ್ತ ಕಡೆ ಪ್ರಧಾನಿ ನೆತನ್ಯಾಹು ಹಣೆ ಹಣೆ ಚಚ್ಚಿಕೊಂಡರು. ಹಾಕಿದ್ದ ಸ್ಕೆಚ್ ತಪ್ಪಿತ್ತು. ಗೇಮ್ ಬಾರಿಸಲಾಗಿರಲಿಲ್ಲ. ಆದರೆ ಮೊಸ್ಸಾದ್ ಡೈರೆಕ್ಟರ್ ಡ್ಯಾನಿ ಯಟೋಮ್ ನೌಕರಿಗೆ ಮಾತ್ರ ಬ್ಯಾಂಡ್ ಬಾರಿಸಿದ್ದರು ನೆತನ್ಯಾಹು. ಹೊಸ ಮೊಸ್ಸಾದ್ ಡೈರೆಕ್ಟರ್ ಎಫ್ರೆಮ್ ಹಾಲಿವೀ ಬಂದು ಕುಳಿತರು. ಖುರ್ಚಿ ಮೇಲೆ ಕೂಡುವ ಮೊದಲೇ ವಿಷಕ್ಕೆ ತಕ್ಕ ಪ್ರತಿಮದ್ದನ್ನು ಹಿಡಿದುಕೊಂಡು ಜೋರ್ಡನ್ ದೇಶಕ್ಕೆ ಓಡುವ ಕರ್ಮ ಅವರದ್ದು. ಪಾಪ. ಮೊಸ್ಸಾದ್ ಎಂಬ ಖತರ್ನಾಕ್ ಸಂಸ್ಥೆಯ ಡೈರೆಕ್ಟರ್ ಒಳ್ಳೆ ಜವಾನನಾಗಿ ಹೋಗಿದ್ದ. ಟೈಮ್ ಖರಾಬ್ ಇದ್ದರೆ ನೋಡಿ ಹೀಗೆಲ್ಲ ಆಗುತ್ತದೆ.

ಇಸ್ರೇಲಿಗಳಿಗೆ ಠೇoಗಾ ತೋರಿಸಿ, ಅವರನ್ನು ಅಣಗಿಸುತ್ತ,ಅವರದ್ದೇ ಹೆಲಿಕಾಪ್ಟರಿನಲ್ಲಿ ಹಾರಿಹೋಗಿದ್ದ ಶೇಖ್ ಯಾಸೀನ್ ಪಕ್ಕದ ಜೋರ್ಡಾನ್ ದೇಶದಲ್ಲಿ ಸಿಕ್ಕಾಪಟ್ಟೆ ಚಮಕಾಯಿಸಿದ. ಅಲ್ಲವನಿಗೆ ಫುಲ್ ರಾಜೋಪಚಾರ. ಖುದ್ದು ಸಿಕ್ಕಾಪಟ್ಟೆ ರಸಿಕರಾಗಿದ್ದ ಜೋರ್ಡನ್ ದೇಶದ ರಾಜ ಕಿಂಗ್ ಹುಸೇನ್ ಶೇಖ್ ಸಾಬ್ರ 'ಸೇವೆ'ಗಾಗಿ ಗೆಳತಿಯರನ್ನೂ ಸರಬರಾಜು ಮಾಡಿದ್ದರೆ? ಗೊತ್ತಿಲ್ಲ. ಜೋರ್ಡಾನಿನ ರಾಜ ಕಿಂಗ್ ಹುಸೇನರ ರಸಿಕತೆ legendary. ಅದನ್ನೇ ದಾಳವಾಗಿ ಬಳಸಿಕೊಂಡಿದ್ದ ಅಮೇರಿಕಾದ ಬೇಹುಗಾರಿಕೆ ಸಂಸ್ಥೆ ಸಿಐಎ ಕಿಂಗ್ ಹುಸೇನರಿಗೆ ಹಾಲಿವುಡ್ ನಟಿಯರನ್ನು ತಲೆಹಿಡಿಹಿಡಿದೇ ಅವರನ್ನು ಫುಲ್ compromise ಮಾಡಿತ್ತು. ಒಳ್ಳೆ ಅಮೇರಿಕನ್ ಏಜೆಂಟರಂತೆ ಕಿಂಗ್ ಹುಸೇನ್ ಆಗಲು ಕಾರಣ ಅದೇ. ಅವರ ರಾಸಲೀಲೆಗಳ ಗುಟ್ಟುಗಳೆಲ್ಲ ಸಿಐಎಗೆ  ಗೊತ್ತಿದ್ದವು. ಹಾಲಿವುಡ್ ನಟಿಯೊಬ್ಬಳಿಗೆ ಕಿಂಗ್ ಹುಸೇನ್ ಕರುಣಿಸಿದ ನಾಜಾಯಿಸ್(illegitimate) ಮಗನೊಬ್ಬ ಮುಂದೊಂದು ದಿನ ಹುಚ್ಚು ನೆತ್ತಿಗೇರಿ ಅಮ್ಮನನ್ನೇ ಕೊಂದುಬಿಟ್ಟ. ಅದೆಲ್ಲ ದೊಡ್ಡ ಕಥೆ. ಮುಂದೊಮ್ಮೆ ಬರೆಯೋಣ.

ಎಲ್ಲ ತರಹದ ರಾಜೋಪಚಾರದಿಂದ ಸಿಕ್ಕಾಪಟ್ಟೆ excite ಆದ ಶೇಖ್ ಯಾಸೀನ್ ಜೋರ್ಡಾನಿನಲ್ಲಿ ಕುಳಿತೇ ಸಿಕ್ಕಾಪಟ್ಟೆ ಪ್ರವಚನ ಕೊಟ್ಟ. ಅವನ ಪ್ರವಚನದ ಕ್ಯಾಸೆಟ್ಟುಗಳು ಅರಬ್ ದೇಶಗಳ ತುಂಬೆಲ್ಲ ಸಿಕ್ಕಾಪಟ್ಟೆ ಬಿಕರಿಯಾದವು. ಹಮಾಸ್ ಕೊಪ್ಪರಿಗೆ ತುಂಬಿತು. ಗಾಜಾ ಪಟ್ಟಿಯ ಅರಬ್ ಜನ ಇಸ್ರೇಲಿನ ವಿರುದ್ಧದ ದ್ವೇಷದ ಅಫೀಮಿನ ಅಮಲಲ್ಲಿ ಮತ್ತಿಷ್ಟು ಸುಯಿಸೈಡ್ ಬಾಂಬಿಂಗ್ ಮಾಡತೊಡಗಿದರು. ಶೇಖ್ ಯಾಸೀನ್ ಎಂಬ ಪೀಡೆ ಪಕ್ಕದ ದೇಶದಲ್ಲಿ ಕುಳಿತು ಇಸ್ರೇಲಿಗೆ ಮತ್ತೆ ಕಾಟ ಕೊಡತೊಡಗಿತು.

ಮುಂದೆ ಸ್ವಲ್ಪ ವರ್ಷಗಳ ನಂತರ ಜೋರ್ಡನ್ ಮತ್ತು ಹಮಾಸ್ ಮಧ್ಯೆ ಸಂಬಂಧ ಹಳಸಿತು. ಕಿಂಗ್ ಹುಸೇನ್ ಸಾಹೇಬರ ಖಾಲಿ ಬುರುಡೆಗೆ ಅಮೇರಿಕಾ ಬಿಸಿನೀರು ಕಾಯಿಸಿತು. 'ನಿಮ್ಮ ದೇಶದಿಂದ ಹಮಾಸ್ ಉಗ್ರರನ್ನು ಮುಲಾಜಿಲ್ಲದೆ ಹೊರಗಟ್ಟಿ,' ಎನ್ನುವ ಕಟ್ಟಾಜ್ಞೆ ಮಾಡಿತು. ಅಮೇರಿಕಾದ ಮಾತು ಕೇಳದಿದ್ದರೆ ಬುಡಕ್ಕೇ ಬಂದೀತು ಎಂದು ಥಂಡಾ ಹೊಡೆದ ಹುಸೇನ್ ಸಾಹೇಬರು ಹೇಳಿದಷ್ಟು ಮಾಡಿ ಸಲ್ಯೂಟ್ ಹೊಡೆದರು.  ಜೋರ್ಡಾನ್ ಬಿಟ್ಟ ಹಮಾಸ್ ಉಗ್ರರು ಮೊದಲು ಈಜಿಪ್ಟ್, ನಂತರ ಸಿರಿಯಾ, ನಂತರ ಕತಾರ್ ದೇಶಕ್ಕೆ ಹೋಗಿ ಕುಳಿತರು. ಎಲ್ಲಿ ಕುಳಿತರೇನು? ಇಸ್ರೇಲ್ ಪಕ್ಕದ ಪ್ಯಾಲೆಸ್ಟೈನ್ ಗಾಜಾ ಪಟ್ಟಿಯಲ್ಲಿ ತಮ್ಮ ಶಿಷ್ಯರ ಮೂಲಕ ಭಯೋತ್ಪಾದನೆಯನ್ನು ಮುಂದುವರೆಸಿದ್ದರು.

ಗಾಜಾ ಪಟ್ಟಿ....ಮಾತೃಭೂಮಿ. ಸ್ವರ್ಗಾದಪೀ ಗರೀಯಸೀ... ಸ್ವರ್ಗಕ್ಕಿಂತ ಹೆಚ್ಚು. ದೂರ ಕುಳಿತ ಶೇಖ್ ಯಾಸೀನ್ ಸಾಬ್ರಿಗೂ ಹಾಗೇ ಅನ್ನಿಸಿರಲೂ ಸಾಕು. ಗಾಜಾ ಪಟ್ಟಿಗೆ ಹಿಂತಿರುಗಬೇಕು ಎಂದು ಹಪಹಪಿಸತೊಡಗಿದರು. ಮೊದಲಿನ ಗೆಳತಿ, ಆಕೆಯ ಸೇವೆ ನೆನಪಾಗಿರಲೂ ಸಾಕು. ಯಾರಿಗೆ ಗೊತ್ತು? ಒಟ್ಟಿನಲ್ಲಿ ೨೦೦೧-೨೦೦೨ ರ ಆಸುಪಾಸಿನಲ್ಲಿ ಮತ್ತೆ ಗಾಜಾ ಪಟ್ಟಿಯಲ್ಲಿ ಪ್ರತ್ಯಕ್ಷನಾದ ಶೇಖ್ ಯಾಸೀನ್. ಮತ್ತದೇ ಚಕ್ರಪೀಠಾಧಿಪತಿ, ಕಾಲಿನಲ್ಲಿ ತೋರಿಸಿದ್ದನ್ನು ಪ್ರಸಾದಂತೆ ಸ್ವೀಕರಿಸಿ ಕೆಲಸ ಮಾಡುವ ಶಿಷ್ಯವೃಂದ, ಮಾತೃಭೂಮಿಯ ಘಮಲು! ದ್ವೇಷದ ಅಮಲು! ಒಟ್ಟಿನಲ್ಲಿ ಹಾಯಾಗಿದ್ದರು ಶೇಖ್ ಯಾಸೀನ್ ಸಾಬ್ರು. ಪ್ರವಚನಗಳ ಮೂಲಕ ಇಸ್ರೇಲ್ ವಿರುದ್ಧ ಬೆಂಕಿಯುಗುಳುವ ಕೆಲಸ ಮಾತ್ರ ನಿರಂತರ.

'ಮತ್ತೆ ಬಂದು ವಕ್ಕರಿಸಿಕೊಂಡಿತೇ ಈ ಪಿಶಾಚಿ!' ಎಂದು ಅಂದುಕೊಂಡರು ಇಸ್ರೇಲಿಗಳು. ಆದರೆ ಆಗ ಮಾತ್ರ ಅಮೇರಿಕಾದಲ್ಲಿ ೯/೧೧ ಅನಾಹುತ ಆಗಿಹೋಗಿತ್ತು. ಅಮೇರಿಕಾ ಅಫ್ಘಾನಿಸ್ತಾನ್ ಮೇಲೆ ಮೊದಲು ನಂತರ ಇರಾಕ್ ಮೇಲೆ ಮುರಿದುಕೊಂಡು ಬಿತ್ತು. ಪಕ್ಕವಾದ್ಯ ನುಡಿಸಿದ್ದು ಇಸ್ರೇಲ್. ಇರಾಕಿನ ನಿರ್ನಾಮ, ಅದರಲ್ಲೂ ಸದ್ದಾಮ್ ಹುಸೇನ್ ಎಂಬ ಬದ್ಧ ವೈರಿಯ ನಿರ್ನಾಮ, ಇಸ್ರೇಲಿನ ಅಂದಿನ ಮುಖ್ಯ ಆದ್ಯತೆಯಾಗಿತ್ತು. ಪಕ್ಕದ ಗಾಜಾ ಪಟ್ಟಿಯಲ್ಲಿ ಶೇಖ್ ಯಾಸೀನ್ ಮತ್ತು ಆತನ ಶಿಷ್ಯರು ಹಾವಳಿ ಮಾಡಿಕೊಂಡಿದ್ದರೂ ಕೊಂಚ ನಿರ್ಲಕ್ಷ್ಯ ಮಾಡಿತ್ತು ಇಸ್ರೇಲ್.

೨೦೦೩-೨೦೦೪ ರಲ್ಲಿ ಹಮಾಸ್ ಹಾವಳಿ ತುಂಬಾ ಜಾಸ್ತಿಯಾಯಿತು. ಡಿಸೆಂಬರ್ ೨೦೦೩ ರಲ್ಲಿ ಸದ್ದಾಮ್ ಹುಸೇನ್ ಕೂಡ ಸಿಕ್ಕಿಬಿದ್ದ. ಅಲ್ಲಿಗೆ ಇಸ್ರೇಲಿನ ಆ ಸಮಸ್ಯೆ ಮುಗಿಯಿತು. ಆಗ ಹಮಾಸ್ ಕಡೆ ಗಮನ ತಿರುಗಿಸಿತು ನೋಡಿ ಇಸ್ರೇಲ್! ಪರಶಿವ ತನ್ನ ಮೂರನೇ ಕಣ್ಣು ಬಿಟ್ಟ! ಎದುರಿಗೆ ಬಂದ ಕಾಮಣ್ಣಗಳೆಲ್ಲ ಭಸ್ಮವಾಗಿಹೋದರು! ಹಮಾಸ್ ಮುಖಂಡರ ವಿರುದ್ಧ ಮರಣಶಾಸನ wholesale ಆಗಿ ಜಾರಿಯಾಯಿತು. ಇಸ್ರೇಲ್ ರಕ್ಷಣಾವ್ಯವಸ್ಥೆಗೆ ಒಂದೇ ವಾಕ್ಯದ ಖಡಕ್ ಆಜ್ಞೆ - wipe out the entire leadership of Hamas in the Gaza strip! ಹಮಾಸ್ ಸಂಘಟನೆಯ ನಾಯಕವೃಂದವನ್ನು 'ತೆಗೆದುಬಿಡಿ' ಎನ್ನುವ blanket authorization!

ಇದಕ್ಕೇ ಕಾದು ಕುಳಿತಿತ್ತು ಇಸ್ರೇಲಿನ ಸೈನ್ಯ. ಮೊದಲು ಹೋದವ ಸಾಲಾ ಶೆಹಾದೆ ಎಂಬ ಕಿರಾತಕ. ಹಮಾಸ್ ಸಂಸ್ಥಾಪಕರಲ್ಲಿ ಒಬ್ಬ. ಗಾಜಾ ಪಟ್ಟಿ ಎಂಬ ಕೊಳೆಗೇರಿಯಲ್ಲಿ ಮೂರಂತಸ್ತಿನ ಭವ್ಯ ಮನೆ ಕಟ್ಟಿಕೊಂಡು, ಎರಡು ಮೂರು ಹೆಂಡತಿ ಮಕ್ಕಳ ಜೊತೆ ಹಾಯಾಗಿದ್ದ. ಆತ ಶೇಖ್ ಯಾಸೀನನ ಬಲಗೈ ಬಂಟ. ವಾರಕ್ಕೊಂದು ಆತ್ಮಹತ್ಯಾ ದಾಳಿ ಮಾಡಿಸಲಿಲ್ಲ ಅಂದರೆ ಅವನಿಗೆ ಉಂಡನ್ನ ಅರಗುತ್ತಿರಲಿಲ್ಲ.

ಇಸ್ರೇಲಿ ವಾಯುಸೇನೆಯ ವಿಮಾನವೊಂದು precision ಬಾಂಬಿಂಗ್ ಮಾಡಿತು ನೋಡಿ. JDAM ಎನ್ನುವ ಮಹಾಶಕ್ತಿಶಾಲಿ ಬಾಂಬೊಂದು ಬಿದ್ದ ಅಬ್ಬರಕ್ಕೆ ಕುಟುಂಬ ಸಮೇತ ಸಾಲಾ ಶೆಹಾದೆ ಪಾತಾಳ ಸೇರಿಕೊಂಡ. ಅಲ್ಲೊಂದು ಮೂರಂತಸ್ತಿನ ಆಲೀಶಾನ್ ಮಹಲಿತ್ತು ಎನ್ನುವುದಕ್ಕೆ ಯಾವುದೇ ಕುರುಹು ಪುರಾವೆ ಉಳಿದಿರಲಿಲ್ಲ. ಕೊಳೆಗೇರಿ ನಡುವೆ ಎಲ್ಲ ಸೇರಿಹೋಗಿತ್ತು. ಸಾಲಾ ಶೆಹಾದೆ ಎನ್ನುವ ಘಟಸರ್ಪದ ಪೂರ್ತಿ ವಂಶ ನಿರ್ನಾಮವಾಗಿತ್ತು. ಹಾವೊಂದನ್ನೇ ಕೊಲ್ಲಬಾರದು. ಹುತ್ತವನ್ನು ನೆಲಸಮ ಮಾಡಿ ಹುತ್ತದಲ್ಲಿರುವ ಮೊಟ್ಟೆ , ಮರಿ ಎಲ್ಲವನ್ನೂ ನಾಶಮಾಡಬೇಕಂತೆ. ಅದನ್ನೇ ಮಾಡಿತ್ತು ಇಸ್ರೇಲ್.

ನಂತರದ ಬಾರಿಯೇ ಶೇಖ್ ಯಾಸೀನನದ್ದು. ಅವನಿಗೆ ಗೊತ್ತಾಗಿಯೇ ಹೋಗಿತ್ತು ತನ್ನ ಆಯುಷ್ಯ ಕೂಡ ಮುಗಿದಿದೆ ಎಂದು. ಆದರೆ ಹುಂಬ. ಅವರೆಲ್ಲರೂ ಹುಂಬರೇ. ಇಲ್ಲವಾದರೆ ಉಗ್ರರಾಗುತ್ತಾರೆಯೇ??

ತನ್ನ ಮೇಲೆಯೂ ಇಸ್ರೇಲ್ ವಿಮಾನದ ಮೂಲಕ ಬಾಂಬ್ ಹಾಕಲಿದೆ ಎಂದು ಅಂದಾಜಿಸಿದ. ತಕ್ಕಮಟ್ಟಿಗಿನ precaution ತೆಗೆದುಕೊಂಡ. ಮನೆ ಪಕ್ಕದ ಮಸೀದಿಗೆ ಹೋಗುವದಿದ್ದರೂ ಎರಡು ಮೂರು ವಾಹನ ಬದಲಾಯಿಸುತ್ತಿದ್ದ. ಹೋಗುವಾಗ ವಾಹನದಲ್ಲಿ ಹೋಗುತ್ತಿದ್ದ. ಬರುವಾಗ ವಾಹನ ಖಾಲಿ ಇರುತ್ತಿತ್ತು. ವಿಕಲಾಂಗನನ್ನು ಕಂಬಳಿಯಲ್ಲಿ ಮುಚ್ಚಿ ಎತ್ತಿಕೊಂಡು ಬಂದು ಮನೆ ಸೇರಿಸುತ್ತಿದ್ದರು ಶಿಷ್ಯರು. ಖಾಲಿ ವಾಹನದ ಮೇಲೆ ಬೇಕಾದರೆ ಇಸ್ರೇಲ್ ಬಾಂಬ್ ಹಾಕಿಕೊಳ್ಳಲಿ ಎನ್ನುವ ಸ್ಕೀಮ್.

ಇಸ್ರೇಲ್ ರಹಸ್ಯವಾಗಿ ಎಲ್ಲವನ್ನೂ ಗಮನಿಸುತ್ತಿತ್ತು. ಶೇಖ್ ಯಾಸೀನನ್ನು ಯಾಮಾರಿಸಲು ಎಂದೇ ತಲೆಮೇಲೆ ನಾಲ್ಕಾರು F-೧೫ ವಿಮಾನಗಳು ಹಾರಾಡಿಕೊಂಡಿರುವಂತೆ ಮಾಡಿತ್ತು. ಅವಕ್ಕೆ ಬೇರೆ ಕೆಲಸವಿಲ್ಲ. ಇಸ್ರೇಲಿನಿಂದ ಗಾಜಾ ಪಟ್ಟಿಗೆ ತಿರುಗಾ ಮುರುಗಾ ಟ್ರಿಪ್ ಹೊಡೆಯುವುದೇ ಕೆಲಸ. ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಬಾಂಬ್ ಹಾಕಬಹುದು.

ಶೇಖ್ ಯಾಸೀನ್ ಮತ್ತು ಸಂಗಡಿಗರು ಗಮನಿಸದ ಸಂಗತಿಯೊಂದಿತ್ತು. ಆಗಾಗ ಗಾಜಾ ಪಟ್ಟಿಯೊಳಗೆ ಪುಸಕ್ಕನೆ ನುಸುಳಿ ವಾಪಸ್ ಹೋಗಿಬಿಡುತ್ತಿದ್ದ ಅಪಾಚೆ ಹೆಲಿಕ್ಯಾಪ್ಟರಗಳು. ಈಕಡೆ ಶೇಖ್ ಯಾಸೀನ್ ತಂಡದ ಗಮನ ಪೂರ್ತಿ ತಲೆ ಮೇಲೆ ಹಾರಾಡುವ ವಿಮಾನಗಳ ಮೇಲಿದ್ದರೆ ಗಡಿಯಾಚೆಯಿಂದಲೇ ಮಾನಿಟರ್ ಮಾಡುತ್ತಿದ್ದ ಅಪಾಚೆ ಹೆಲಿಕ್ಯಾಪ್ಟರಗಳ ಬಗ್ಗೆ ಉಗ್ರರ ಗಮನ ಹೋಗಿರಲಿಲ್ಲ.

ಒಂದು ದಿವಸ ಬೆಳಗಿನ ಜಾವದಲ್ಲಿ ಶೇಖ್ ಯಾಸೀನ್ ಮಸೀದಿಯಲ್ಲಿ ಪ್ರಾರ್ಥನೆ ಮತ್ತು ಪ್ರವಚನ ಮುಗಿಸಿದ. ಆಕಾಶದಲ್ಲಿ ಇಸ್ರೇಲಿ ಯುದ್ಧವಿಮಾನ ಎಂದಿನಂತೆ buzz ಮಾಡಿಕೊಂಡು ಹಾರಿಕೊಂಡಿತ್ತು. ವ್ಯಾನಿನೊಳಗೆ ತಳ್ಳುಗಾಳಿಯ ಖುರ್ಚಿಯೊಂದಿಗೆ ಶೇಖ್ ಸಾಬ್ರನ್ನು ಹತ್ತಿಸಲಾಯಿತು. ಅಷ್ಟೇ ಪಕ್ಕದ ಬಾಗಿಲಿಂದ ಶೇಖ್ ಸಾಬ್ರನ್ನು ಇಳಿಸಿಕೊಂಡು ಕಂಬಳಿಯಲ್ಲಿ ಸುತ್ತಲಾಯಿತು. ವ್ಯಾನ್ ಶೇಖ್ ಸಾಹೇಬರ ಮನೆ ಕಡೆ ಹೊರಟಿತು. ಬಾಂಬ್ ಬಿದ್ದರೆ ವ್ಯಾನ್ ಭಸ್ಮವಾಗಬೇಕು. ಜೊತೆಗೆ ಶೇಖ್ ಯಾಸೀನ್ ಕೂಡ ಹೋದ ಎಂದು ಇಸ್ರೇಲಿಗಳು ಅಂದುಕೊಳ್ಳಬೇಕು. ಆದರೆ ಕಂಬಳಿಯ ಹೊದಿಕೆಯಲ್ಲಿ ಶಿಷ್ಯರ ಭುಜದ ಮೇಲೆ ರಹಸ್ಯವಾಗಿ ಹೋಗುತ್ತಿದ್ದ ಶೇಖ್ ಯಾಸೀನ್ ಮಾತ್ರ ಸುರಕ್ಷಿತವಾಗಿರಬೇಕು. ಹಾಗಂತ ಹಮಾಸ್ ಉಗ್ರರ ಪ್ಲಾನ್. ತಮ್ಮನ್ನು ತಾವು ಬಹಳ ಶಾಣ್ಯಾ ಅಂತ ತಿಳಿದಿರಬೇಕು.

ವ್ಯಾನ್ ಮುಂದೆ ಹೋಯಿತು. ನಸುಗತ್ತಲಲ್ಲಿ ಕಂಬಳಿಯಲ್ಲಿ ಸುತ್ತಿದ್ದ ವಿಕಲಾಂಗ ಶೇಖ್ ಸಾಬನನ್ನು ನಾಲ್ಕಾರು ಜನ ಹಮಾಸ್ ಉಗ್ರರು ಹೊತ್ತು ಚಕಚಕನೆ ಅವನ ಮನೆಯತ್ತ ಸಾಗುತ್ತಿದ್ದರು. ಮನೆ ಮುಟ್ಟಿಕೊಂಡರೆ ಅಷ್ಟರಮಟ್ಟಿಗೆ ಬಚಾವು.

ಗಡಿ ಪಕ್ಕದಲ್ಲಿ ಇದೆಲ್ಲವನ್ನೂ ಗಮನಿಸುತ್ತಿದ್ದ ಅಪಾಚೆ ಹೆಲಿಕ್ಯಾಪ್ಟರ್ ಬೇಟೆಗೆ ತಯಾರಾದವು. ಗಾಜಾ ಪಟ್ಟಿಯೊಳಗೆ ಬರುವ ಜರೂರತ್ತೇ ಬರಲಿಲ್ಲ. ಕೋಳಿಯಂತೆ ನೆಲದಿಂದ ಕೆಲವೇ ಅಡಿ ಮೇಲೆ ಹಾರಿದವು. ಅಷ್ಟೇ elevation ಬೇಕಾಗಿದ್ದು. ಶೇಖ್ ಸಾಬ್ರನ್ನು ಕಂಬಳಿಯಲ್ಲಿ ಸುತ್ತಿ ಹೊತ್ತುಕೊಂಡು ಓಡುತ್ತಿದ್ದ ಹಮಾಸ್ ಉಗ್ರರನ್ನು ತಮ್ಮ ತೋಪಿನ ಗುರಿಯ ಸ್ಕೋಪಿನಲ್ಲಿ ತೆಗೆದುಕೊಂಡು ಬಟನ್ ಒತ್ತಿದ್ದೆ ಕೊನೆ. ನಾಲ್ಕಾರು hellfire ಎಂಬ ನರಕಸದೃಶ ಮಿಸೈಲುಗಳು ಕ್ಷಣಾರ್ಧದಲ್ಲಿ ಹಮಾಸ್ ಉಗ್ರರನ್ನು ಭಸ್ಮ ಮಾಡಿದ್ದವು. ಸದಾ ಬೆಂಕಿಯುಗುಳುವ ಪ್ರವಚನ ಮಾಡಿಕೊಂಡಿದ್ದ ವಿಕಲಾಂಗ ಉಗ್ರ ಶೇಕ್ ಯಾಸೀನ್ ಭಸ್ಮವಾಗಿದ್ದ. ಹೀಗೆ ಅವನ ಕಥೆ ಮುಗಿದಿತ್ತು.

ನಂತರ ಹಮಾಸ್ ಅಧ್ಯಕ್ಷ ಸ್ಥಾನಕ್ಕೆ ಬಂದವ ಡಾ. ರಂಟೀಸಿ. ವೃತ್ತಿಯಿಂದ ದೊಡ್ಡ ಡಾಕ್ಟರ್. ವಿದೇಶದಲ್ಲಿದ್ದು ಓದಿದ್ದ. ಸಾಕಷ್ಟು ರೊಕ್ಕ ಮಾಡಿಕೊಂಡು ಬಂದು ಗಾಜಾ ಪಟ್ಟಿಯಲ್ಲಿ ದೊಡ್ಡ ಉಗ್ರನಾಗಿದ್ದ. ಶೇಕ್ ಯಾಸೀನ್ ಸತ್ತ ನಂತರ ತೆರವಾದ ಸ್ಥಾನಕ್ಕೆ ಬಂದು ಕೂತ. ಸಾಯುತ್ತೇನೆ ಅಂತ ಗೊತ್ತಿತ್ತು. ಆದರೆ ಅಷ್ಟು ಬೇಗ ಸಾಯುತ್ತೇನೆ ಅಂತ ಗೊತ್ತಿರಲಿಲ್ಲ. ಶೇಖ್ ಯಾಸೀನ್ ಹತ್ಯೆಯ ಸೂತಕ ಇನ್ನೂ ಮುಗಿದಿರಲಿಲ್ಲ. ರಂಟೀಸಿ ಕೂಡ ಬೇಗ ಹೋಗಲಿ ಎಂದುಕೊಂಡ ಇಸ್ರೇಲ್ ಮತ್ತೆ ಹೆಲಿಕ್ಯಾಪ್ಟರ್ ದಾಳಿ ಮಾಡಿತು. ಈ ಸಲ ಗಾಜಾ ಪಟ್ಟಿಯೊಳಗೇ ನುಗ್ಗಿಬಂದ ಅಪಾಚೆ ಹೆಲಿಕಾಪ್ಟರುಗಳು ಗಲ್ಲಿ ಗಲ್ಲಿಗಳಲ್ಲಿ ಡಾ. ರಂಟೀಸಿಯ ಕಾರವಾನನ್ನು ಅಟ್ಟಿಸಿಕೊಂಡು ಹೋದವು. ಎಷ್ಟಂತ ಓಡಿಯಾರು ಉಗ್ರರು? ರಂಟೀಸಿ ಮತ್ತು ಅವನ ಜೊತೆಗಾರರು ಇದ್ದ ಕಾರವಾನ್ ಸ್ಕೋಪಿನಲ್ಲಿ ಬಂದಿದ್ದೆ ಕೊನೆ. ಮುಂದೆ ಮತ್ತೆ ಹೆಸರಿಗೆ ತಕ್ಕಂತೆ ನರಕದರ್ಶನ ಮಾಡಿಸುವ hellfire ಮಿಸೈಲ್ ಮಾತಾಡಿದವು. ನಾಲ್ಕಾರು ವಾಹನಗಳಿದ್ದ ಡಾ. ರಂಟೀಸಿಯ ಪೂರಾ ಕ್ಯಾರವಾನ್ ಭಸ್ಮ! ಫುಲ್ ರಾಖ್!

ಹೀಗೆ ಹಮಾಸ್ ಸಂಘಟನೆಯ ಗಾಜಾಪಟ್ಟಿಯಲ್ಲಿದ್ದ ಉಗ್ರರ ಹಿರಿತಲೆಗಳೆಲ್ಲ ೨೦೦೪ ಇಸ್ವಿಯ ಮಧ್ಯಭಾಗದ ಒಂದೆರೆಡು ತಿಂಗಳಲ್ಲಿ ಪೂರ್ತಿಯಾಗಿ ನಿರ್ನಾಮವಾಗಿ ಹೋದರು. Entire local leadership was wiped out!

ಪರಿಸ್ಥಿತಿ ತಕ್ಕಮಟ್ಟಿಗೆ ಹತೋಟಿಗೆ ಬಂತು. ಆತ್ಮಹತ್ಯಾ ದಾಳಿಗಳು ಅದೆಷ್ಟೋ ಕಮ್ಮಿಯಾದವು. ಜೋರ್ಡನ್ ದೇಶದಲ್ಲಿ ಮೊಸ್ಸಾದ್ ಹತ್ಯಾ ಪ್ರಯತ್ನ ವಿಫಲವಾಗಿ ಪವಾಡಸದೃಶವೆಂಬಂತೆ ಬಚಾವಾಗಿದ್ದ ಖಾಲೆದ್ ಮಿಶಾಲನಿಗೆ ಹಮಾಸ್ ಮುಖ್ಯಸ್ಥನ ಪಟ್ಟ ಕಟ್ಟಲಾಯಿತು. ಕತಾರ್ ದೇಶದಲ್ಲಿದ್ದ ಮೇಷಾಲ್ ಭದ್ರತೆ ಹೆಚ್ಚಿಸಿಕೊಂಡ. ಇಸ್ರೇಲಿಗಳು ಅಲ್ಲೂ ಬಂದು ಗೇಮ್ ಬಾರಿಸಿಯಾರು ಎನ್ನುವ ಭಯ ಅವನಿಗೆ.

ಮುಖ್ಯ ಮಾಹಿತಿ ಆಧಾರ: Rise and Kill First: The Secret History of Israel's Targeted Assassinations by Ronen Bergman

https://images-na.ssl-images-amazon.com/images/I/51JR8YeLk7L._SX327_BO1,204,203,200_.jpg


೮೦೦ ಪುಟಗಳ ಸಮೃದ್ಧ ಓದು. ಶುರುವಾತಿನಿಂದ ಇಸ್ರೇಲ್ ಮಾಡಿದ ಎಲ್ಲ ರಹಸ್ಯ ಕಾರ್ಯಾಚರಣೆಗಳ ಬಗ್ಗೆ ಸಮಗ್ರ ಮಾಹಿತಿ ಒಂದೇ ಪುಸ್ತಕದಲ್ಲಿ ಬೇಕೆಂದೆರೆ ಈ ಪುಸ್ತಕ ಓದಿ. Good starting point. Of course, there are many other books describing individual covert operation in greater detail.

Tuesday, April 17, 2018

ಮತ್ತೊಬ್ಬ ಪ್ಯಾಲೆಸ್ಟೈನಿ ಉಗ್ರನ ಗೇಮ್ ಬಾರಿಸಿತೇ ಇಸ್ರೇಲಿನ ಮೊಸ್ಸಾದ್!?

ಅರಬ್ ದೇಶಗಳ ಉಗ್ರಗಾಮಿಗಳ ವಲಯದಲ್ಲಿ ಒಂದೇ ಗುಸುಗುಸು. ಅದೇನೆಂದರೆ - ಇಸ್ರೇಲಿನ ಖತರ್ನಾಕ್ ಬೇಹುಗಾರಿಕೆ ಸಂಸ್ಥೆ ಮೊಸ್ಸಾದ್ ಮತ್ತೊಂದು ಗೇಮ್ ಬಾರಿಸಿದೆ. ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಎಂಬ ಪ್ಯಾಲೆಸ್ಟೈನ್ ಉಗ್ರಗಾಮಿ ಸಂಘಟನೆಯ ಮುಖ್ಯಸ್ಥ ರಮದಾನ್ ಶಾಲ್ಲಾ ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾದವ ಸೀದಾ ಕೋಮಾಗೆ ಹೋಗಿಬಿಟ್ಟಿದ್ದಾನೆ. ಇನ್ನೂ ಕೋಮಾದಲ್ಲೇ ಇದ್ದಾನೋ ಅಥವಾ ಅಲ್ಲಾನಿಗೆ ಪ್ಯಾರೇ ಆಗಿಬಿಟ್ಟಿದ್ದಾನೋ ಗೊತ್ತಿಲ್ಲ. ಹೇಗಾದರೂ ಮಾಡಿ ಮುಖ ಉಳಿಸಿಕೊಳ್ಳಬೇಕಾಗಿರುವದು ಅವನ ಸಂಘಟನೆಯಾದ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಗೆ.  'ನಮ್ಮ ಬಾಸ್ ವಯೋಸಹಜ ಕಾರಣಗಳಿಂದ ಕೊಂಚ ಅಸ್ವಸ್ಥರಾಗಿದ್ದಾರೆ. ಅದು ಬಿಟ್ಟರೆ ಎಲ್ಲ ಓಕೆ,' ಎಂದು ಅದು ಪತ್ರಿಕಾ ಹೇಳಿಕೆಗಳಲ್ಲಿ ಪುಂಗುತ್ತಿದೆ. ಆದರೆ ಬೇಹುಗಾರಿಕೆ ವಲಯದಲ್ಲಿ ಮಾತ್ರ  - for all practical purposes he is finished. ಇದ್ದರೂ ಅಷ್ಟೇ ಬಿಟ್ಟರೂ ಅಷ್ಟೇ. ಕೋಮಾದಲ್ಲಿದ್ದರೆ ಸುಮ್ಮನೆ ಖರ್ಚು. ಮೊದಲೇ ಕಾಸಿಲ್ಲದ ಚಿಕ್ಕ ಸಂಘಟನೆ ಇಸ್ಲಾಮಿಕ್ ಜಿಹಾದ್.

ರಮದಾನ್ ಶಾಲ್ಲಾ 
ಈ ರಮದಾನ್ ಶಾಲ್ಲಾ ಯಾರು ಅಂತ ನೋಡುತ್ತಾ ಹೋದರೆ ಅದೇ ಒಂದು ಅಚ್ಚರಿಯ ಕತೆ. ಇವನು ಆಕ್ರಮಿತ ಪ್ಯಾಲೆಸ್ಟೈನ್ ದೇಶದಲ್ಲಿ ಜನಿಸಿದರೂ ಇಂಗ್ಲೆಂಡಿಗೆ ಹೋಗಿ ಅರ್ಥಶಾಸ್ತ್ರ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ PhD ಮಾಡಿಕೊಂಡಿದ್ದ ಪ್ರತಿಭಾವಂತ. ಅಮೇರಿಕಾದ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿದ್ದ ಮತ್ತೊಬ್ಬ ಅಂಡೆಪಿರ್ಕಿ ಪ್ಯಾಲೆಸ್ಟೈನ್ ವಲಸಿಗ ಪ್ರೊಫೆಸರ್ ಸಾಮಿ ಅಲ್-ಅರಿಯನ್ ಎಂಬಾತ ಇವನನ್ನು ಅಮೇರಿಕಾಗೆ ಕರೆದುಕೊಂಡು ಬಂದ. ತಾನು ಪಾಠ ಮಾಡಿಕೊಂಡಿದ್ದ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲೇ ಪಾರ್ಟ್-ಟೈಮ್ ಉಪನ್ಯಾಸಕನ ಕೆಲಸ ಹಚ್ಚಿಕೊಟ್ಟ.

ಪ್ಯಾಲೆಸ್ಟೈನ್ ಉಗ್ರರನ್ನು ಖುಲ್ಲಂ ಖುಲ್ಲಾ ಬೆಂಬಲಿಸುತ್ತಿದ್ದ ಸಾಮಿ ಅಲ್-ಅರಿಯನ್ ಮೇಲೆ ಅಮೇರಿಕಾದ ತನಿಖಾ ಸಂಸ್ಥೆ FBI  ಒಂದು ಖಡಕ್ ನಜರ್ ಮಡಗಿತ್ತು. ಯಾವಾಗ ಈ ಸಾಮಿ ಅಲ್-ಅರಿಯನ್ ಇಲ್ಲಿನ ಮಸೀದಿಗಳಲ್ಲಿ ಜೋಳಿಗೆ ಹಿಡಿದು ಸಂಗ್ರಹಿಸುತ್ತಿದ್ದ ದೇಣಿಗೆ ಸೀದಾ ಮಾನವಬಾಂಬುಗಳನ್ನು ತಯಾರು ಮಾಡಿ, ದೂರದ ಇಸ್ರೇಲಿನಲ್ಲಿ ಸ್ಫೋಟಗಳಿಗೆ ಕಾರಣವಾಗಿ, ನೂರಾರು ನಿಷ್ಪಾಪಿ ಇಸ್ರೇಲಿಗಳ ಪ್ರಾಣ ತೆಗೆಯುತ್ತಿದೆ ಅಂತಾದಾಗ ಅಮೇರಿಕಾ ಅಲ್-ಅರಿಯನ್ ಎಂಬ ಅಂಡೆಪಿರ್ಕಿ ಪ್ರೊಫೆಸರನ ಅಂಡಿನ ಮೇಲೆ ಒದ್ದು ಗಡಿಪಾರು ಮಾಡಿತು. ಹಾಗೇ ಸುಮ್ಮನೆ ಹೋದಾನೆಯೇ ಪ್ರೊಫೆಸರ್? ಅವನೂ ಸಕತ್ ಕಾನೂನು ಕಾಳಗ ಮಾಡಿದ. ಮೊದಲಿನ ಕೆಲ ಸುತ್ತುಗಳಲ್ಲಿ FBI  ಗೇ ನೀರು ಕುಡಿಸಿದ. ತನ್ನ ಪರವಾಗಿ ತೀರ್ಪುಗಳು ಬಂದಾಗ 'ಹೆಂಗೆ??!!' ಎಂಬಂತೆ ಗರ್ವದಿಂದ ಗಡ್ಡ ನೀವಿಕೊಂಡಿದ್ದ.

೨೦೦೧ ರಲ್ಲಿ ಬಿಲ್ ಕ್ಲಿಂಟನ್  ಸಾಹೇಬರು ಹೋಗಿ ಜಾರ್ಜ್ ಬುಷ್ ಸಾಹೇಬರು ಬಂದು ಕುಂತರು ನೋಡಿ. ಗಾಳಿ ಬೇರೆ ದಿಕ್ಕಿನಲ್ಲಿ ಬೀಸತೊಡಗಿತು. ಮೇಲಿಂದ ೯/೧೧ ದುರಂತ ಕೂಡ ಆಗಿಹೋಯಿತು. ಆವಾಗ ಇಂತಹ ಬುದ್ಧಿಜೀವಿ ಪ್ರೊಫೆಸರ್ ಮುಖವಾಡ ಧರಿಸಿ ಉಗ್ರರನ್ನು ಬೆಂಬಲಿಸುತ್ತಿದ್ದ ಮಂದಿಯ ಮೇಲಿನ ಮೃದು ಧೋರಣೆ ಬದಲಾಯಿತು. ಅಂತೂ ಸಾಮಿ ಅಲ್-ಅರಿಯನ್ನನ್ನು ಯಾವುದೋ ಕೊಲ್ಲಿ ದೇಶಕ್ಕೆ ಗಡಿಪಾರು ಮಾಡಲಾಯಿತು. ಅಲ್ಲಿಗೆ ಒಂದು ಪೀಡೆ ತೊಲಗಿತು.

ಅವನು ಹೋದರೇನಾಯಿತು ಆದರೆ ಇವನಿದ್ದನಲ್ಲ ಶಿಷ್ಯ - ರಮದಾನ್ ಶಾಲ್ಲಾ. ಬಹುಬೇಗನೆ ತಯಾರಾಗಿಬಿಟ್ಟಿದ್ದ. ಗುರುವಿಗಿಂತ ಜೋರಾಗಿ ದೇಣಿಗೆ ಸಂಗ್ರಹ ಮಾಡಿ ಮಾಡಿ ದೂರದ ಗಾಜಾ ಪಟ್ಟಿಯಲ್ಲಿ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಎಂಬ ಉಗ್ರಗಾಮಿ ಸಂಘಟನೆಯನ್ನು ಹುಟ್ಟುಹಾಕಿದ್ದ ಫಾತಿ ಶಕಾಕಿ ಎಂಬ ದುರುಳನಿಗೆ ಮಿಲಿಯನ್ ಗಟ್ಟಲೆ ಡಾಲರುಗಳನ್ನು ನೀಟಾಗಿ ಬ್ಯಾಂಕ್ ವೈರ್ ಮಾಡುತ್ತಿದ್ದ. ಕಲಿತಿದ್ದ ಮತ್ತು ಕಲಿಸುತ್ತಿದ್ದ ಬ್ಯಾಂಕಿಂಗ್ ವಿದ್ಯೆ ಅಲ್ಲಿಗೆ ಸಾರ್ಥಕವಾಯಿತು.

ಆಗಲೇ ಸಾಕಷ್ಟು ಪ್ಯಾಲೆಸ್ಟೈನ್ ಉಗ್ರಗಾಮಿ ಸಂಘಟನೆಗಳು ಇದ್ದವು. ಪ್ರತ್ಯೇಕವಾಗಿ ತನ್ನದೂ ಒಂದು ಇರಲಿ ಅಂತ ಫಾತಿ ಶಾಕಾಕಿ ಕೂಡ ಹೊಸ ಸಂಘಟನೆ ಶುರು ಮಾಡಿದ್ದ. ಎಲ್ಲರಿಗೂ ಕೈಬಿಚ್ಚಿ ಕಾಸು ಕೊಡುತ್ತಿದ್ದ ಲಿಬಿಯಾದ ಸರ್ವಾಧಿಕಾರಿ ಮೊಹಮದ್ ಗಡಾಫಿಯ ಉತ್ತುಂಗದ ದಿನಗಳು ಅವು. ಅವನ ಅಬ್ಬರ ಜೋರಾಗಿತ್ತು. ಅದರಲ್ಲೂ ೧೯೯೧ ರ ಗಲ್ಫ್ ಯುದ್ಧದಲ್ಲಿ ತಾರಾಮಾರಾ ಬಡಿಸಿಕೊಂಡ ಸದ್ದಾಮ್ ಹುಸೇನ್ ಮುದಿಯೆತ್ತಿನಂತಾಗಿ ಹೋದ ಮೇಲಂತೂ ಇಡೀ ಕೊಲ್ಲಿ ಪ್ರದೇಶಕ್ಕೆ ಗಡಾಫಿಯೇ ದಾದಾ! ಅವನದೇ ಫುಲ್ ಹವಾ! ಫುಲ್ ದಾದಾಗಿರಿ.

ಫಾತಿ ಶಾಕಾಕಿ 
ಹೀಗಿರುವಾಗ ಫಾತಿ ಶಕಾಕಿ ಎಂಬ ಗಾಜಾ ಪಟ್ಟಿಯ ಗಿರಾಕಿ ಬಂದು, 'ಸಾರ್, ಇಸ್ರೇಲ್ ವಿರುದ್ಧ ಸಂಗ್ರಾಮ ಶುರುಮಾಡುತ್ತೇನೆ. ಹೊಸ ಸಂಘಟನೆ ಆರಂಭಿಸುತ್ತೇನೆ. ಕೊಂಚ ಫಂಡಿಂಗ್ ಕೊಡಿ' ಎಂದು ಸಲಾಂ ಮಾಡಿದರೆ ಗಡಾಫಿ ಇಲ್ಲ ಅಂದಾನೆಯೇ? ಚಾನ್ಸೇ ಇಲ್ಲ. ಮತ್ತೆ ಗಡಾಫಿಗೆ ಹಳೆ ಉಗ್ರರಾಗಿದ್ದ ಯಾಸೀರ್ ಅರಾಫತ್, ಅಬು ನಿದಾಲ್ ಮುಂತಾದವರ ಮೇಲೆ ಒಂದು ತರಹದ ಭ್ರಮನಿರಸನವಾಗಿತ್ತು. ಅಮೇರಿಕಾದ ಅಧ್ಯಕ್ಷ ಜಿಮ್ಮಿ ಕಾರ್ಟರ್, ಬಿಲ್ ಕ್ಲಿಂಟನ್ ಮುಂತಾದವರ ಪ್ರಭಾವದಲ್ಲಿ  ಬಂದಿದ್ದ ಅರಾಫತ್ ಉಗ್ರವಾದವನ್ನು ಕಮ್ಮಿ ಮಾಡಿದ್ದರು. ಶಾಂತಿ ವಾಂತಿ ಅಂತ ಏನೇನೋ ಬಡಬಡಿಸುತ್ತಿದ್ದರು. ಕರೆದಲ್ಲಿ ಹೋಗಿ ಇಸ್ರೇಲ್ ಜೊತೆ ಮಾತುಕತೆಗೆ ಕೂಡುತ್ತಿದ್ದರು. ಕೂತಲ್ಲೇ ತೂಕಡಿಸುತ್ತಿದ್ದರು. ನಂತರ ಎಲ್ಲವೂ ಸರಿಹೊಂದಿ ಪ್ಯಾಲೆಸ್ಟೈನ್ ಸಮಸ್ಯೆ once for all ಪರಿಹಾರವಾಗಿಯೇ ಬಿಟ್ಟಿತು ಅನ್ನುವಷ್ಟರಲ್ಲಿ ರಚ್ಛೆ ಹಿಡಿದ ಮಗುವಿನಂತೆ ಏನೋ ಒಂದು ರಗಳೆ ತೆಗೆದು ಮಾತುಕತೆಯನ್ನು ಬರಕಾಸ್ತು ಮಾಡಿ ಎದ್ದು ಹೊರಟುಬಿಡುತ್ತಿದ್ದರು. ಅರಾಫತ್ ಅವರ unpredictable ವರ್ತನೆಯಿಂದ ಎಲ್ಲರಿಗೂ ಪೂರ್ತಿ frustration.

ಅರಾಫತ್ ಬಣದವರಿಗೆ ಪ್ಯಾಲೆಸ್ಟೈನ್ ಸಂಗ್ರಾಮ ರೊಕ್ಕ ಮಾಡಿಕೊಳ್ಳುವ ದಂಧೆಯಾಗಿ ಹೋಗಿತ್ತು. ಲೆಬನಾನಿನಲ್ಲಿ ಝೇಂಡಾ ಹೊಡೆದುಕೊಂಡು ಗೂಂಡಾಗಿರಿ ಮಾಡುತ್ತಾ ಕುಳಿತಿದ್ದರು ಅರಾಫತ್ ಮತ್ತು ಅವರ ಫತಾ ಸಂಘಟನೆ. ರೋಸಿಹೋದ ಇಸ್ರೇಲ್ ಅರಾಫತ್ ಅವರನ್ನು ಲೆಬನಾನಿಂದ ಒದ್ದು ಓಡಿಸಿತ್ತು. ಮತ್ತೊಮ್ಮೆ ನಿರಾಶ್ರಿತರಾದ ಅರಾಫತ್ ಬಣಕ್ಕೆ ಅಂತಾರಾಷ್ಟ್ರೀಯ ಸಮುದಾಯ ಆಫ್ರಿಕಾದ ಚಿಕ್ಕ ದೇಶ ಟ್ಯುನೀಸಿಯಾದ ರಾಜಧಾನಿ ಟ್ಯೂನಿಸ್ಸಿನಲ್ಲಿ ಒಂದು ರೆಸಾರ್ಟ್ ಮಾದರಿಯ ಶಿಬಿರ ಮಾಡಿಕೊಟ್ಟಿತ್ತು. ಅಲ್ಲಿಂದ ಅರಾಫತ್ ಸಾಹೇಬರ ರೊಕ್ಕ ಮಾಡುವ ನಾಮ್ಕೆವಾಸ್ತೆ ಸಂಗ್ರಾಮ ನಡೆಯುತ್ತಿತ್ತು. ಇಂತಹ ಲಂಪಟ ಸ್ವಾತಂತ್ರ್ಯ ಹೋರಾಟಗಾರನಿಗೆ ಮಿಲಿಯನ್ ಗಟ್ಟಲೆ ರೊಕ್ಕ ಕೊಟ್ಟು ಮಂಗ್ಯಾ ಆದೆನಲ್ಲ ಎನ್ನುವ ವಿಷಾದ ಗಡಾಫಿಗೆ. ಕೊಟ್ಟ ರೊಕ್ಕಕ್ಕೆ ಬರೋಬ್ಬರಿ ಪಟಾಕಿ ಹಾರಿದರೆ ಮಾತ್ರ ಗಡಾಫಿಗೆ ವಿಕೃತ ಸಂತೋಷ. ಒಂದಿಷ್ಟು ವಿಮಾನಗಳು ಆಕಾಶದಲ್ಲೇ ಸಿಡಿದುಹೋಗಬೇಕು. ಮತ್ತೊಂದಿಷ್ಟು ವಿಮಾನಗಳ ಅಪಹರಣವಾಗಿ, ಪಶ್ಚಿಮ ದೇಶಗಳು ಮಂಡಿಯೂರಿ, ಜೈಲಲ್ಲಿರುವ ಪ್ಯಾಲೆಸ್ಟೈನ್ ಉಗ್ರರನ್ನು ಬಿಡುಗಡೆ ಮಾಡಿ, ತಮ್ಮ ತಮ್ಮ ವಿಮಾನಗಳನ್ನು ಮತ್ತು ನಾಗರೀಕರನ್ನು ಬಚಾವ್ ಮಾಡಿಕೊಳ್ಳಬೇಕು. ಆಗ ಗಡಾಫಿ ಗಹಗಹಿಸಿ ರಕ್ಕಸ ನಗೆ ನಗುತ್ತಿದ್ದ. ಹಾಗಾದಾಗ ಮಾತ್ರ ಉಗ್ರರ ಮೇಲೆ ಸುರಿದ ರೊಕ್ಕಕ್ಕೆ ತಕ್ಕ ಪ್ರತಿಫಲ ಬಂತು ಅಂತ ಅವನ ಭಾವನೆ.

ಅರಾಫತ್ ಸಾಹೇಬರು ಶಾಂತಿಯ ಹಿಂದೆ ಹೋದರೆ ಮತ್ತೊಬ್ಬ ಹಳೆ ಕಿರಾತಕ ಅಬು ನಿದಾಲ್ ಫುಲ್ ಸೈಕೋ ಆಗಿಹೋಗಿದ್ದ. ಅವನ ANO ಸಂಘಟನೆಯನ್ನು ತುಂಬಾ ಡೀಪಾಗಿ penetrate ಮಾಡಿದ್ದ ಮೊಸ್ಸಾದ್ ಅವನ ಅನೇಕ ಹಿರಿತಲೆಗಳನ್ನು compromise ಮಾಡಿತ್ತು. ಅವರಿಗೆ ಮೊಸ್ಸಾದ್ ಹೇಳಿದಂತೆ ಕೇಳುವುದನ್ನು ಬಿಟ್ಟರೆ ಬೇರೆ ಗತಿಯಿರಲಿಲ್ಲ. ಪರಿಸ್ಥಿತಿ ಕೊನೆಗೆ ಎಲ್ಲಿಗೆ ಬಂದುಮುಟ್ಟಿತು ಅಂದರೆ ಪೂರ್ತಿ ಮತಿಭ್ರಾಂತನಾದ ಅಬು ನಿದಾ ಪ್ಯಾಲೆಸ್ಟೈನ್ ಸಂಗ್ರಾಮ ಮಾಡುವುದು ದೂರವಿರಲಿ ತನ್ನದೇ ಬಣದ ಉಗ್ರಗಾಮಿಗಳನ್ನು wholesale ರೇಟಿನಲ್ಲಿ ಕೊಲ್ಲತೊಡಗಿದ. ಎಲ್ಲರ ಮೇಲೂ ಅವನಿಗೆ ಸಂಶಯ. ಎಲ್ಲಿಯಾದರೂ ಶತ್ರುವಾದ ಇಸ್ರೇಲಿ ಮೊಸ್ಸಾದ್ ಜೊತೆ ಹೊಂದಾಣಿಕೆ ಮಾಡಿಕೊಂಡ ಈ ಮುಂಡೇಮಕ್ಕಳು ತನ್ನ ಬುಡಕ್ಕೆ ಬಾಂಬಿಟ್ಟುಬಿಟ್ಟರೆ ಏನು ಗತಿ ಎಂದು ತನ್ನದೇ ಜನರನ್ನು ಸಿಕ್ಕಾಪಟ್ಟೆ ಕೊಂದುಬಿಟ್ಟ. ಕ್ರಮಬದ್ಧವಾಗಿ disinformation campaign ಮಾಡಿ, ಸುಳ್ಳು ಸುದ್ದಿ ಹರಿಬಿಟ್ಟು, ಅಬು ನಿದಾಲನನ್ನು ಸೈಕೋ ಮಂಗ್ಯಾ ಮಾಡಿದ್ದ ಅಮೇರಿಕಾದ ಬೇಹುಗಾರಿಕೆ ಸಂಸ್ಥೆ ಸಿಐಎ ಪೆಕಪೆಕಾ ಎಂದು ನಕ್ಕಿತು. ಕಮ್ಮಿ ಖರ್ಚಿನಲ್ಲಿ ಅವರ ಕೆಲಸವಾಗಿತ್ತು.

ಒಮ್ಮೆಯಂತೂ ಫಂಡ್ ಎತ್ತಲು ಗಡಾಫಿಯ ಲಿಬಿಯಾಕ್ಕೆ ಹೋಗಿದ್ದ ಅಬು ನಿದಾಲ್ ಖತರ್ನಾಕ್ ಕೆಲಸ ಮಾಡಿಬಿಟ್ಟ. ಅಲ್ಲಿ ಅವನ ಉಗ್ರಗಾಮಿಗಳ ಶಿಬಿರ ಇತ್ತು. ಗಡಾಫಿಯ ಸೇನೆಯ ಜನ ಅರಬ್ ಯುವಕರಿಗೆ ಉಗ್ರಗ್ರಾಮಿಗಳ ತರಬೇತಿ ಕೊಡುತ್ತಿದ್ದರು. ಅಷ್ಟೊತ್ತಿಗೆ ಅಬು ನಿದಾಲ್ ಪೂರ್ತಿ ಸಂಶಯಪಿಶಾಚಿಯಾಗಿ ತಲೆ ಹನ್ನೆರೆಡಾಣೆ ಮಾಡಿಕೊಂಡಿದ್ದ. ಅಲ್ಲಿನ ಶಿಬಿರದಲ್ಲಿ ತರಬೇತಿ ಪಡೆಯುತ್ತಿದ್ದ ಉಗ್ರರೆಲ್ಲ ಮೊಸ್ಸಾದಿಗೆ, ಸಿಐಎಗೆ compromise ಆಗಿಬಿಟ್ಟಿದ್ದಾರೆ ಎಂದು ತಲೆಯಲ್ಲಿ ಬಂದುಬಿಟ್ಟಿತು. ತರಬೇತಿ ಪಡೆಯುತ್ತಿದ್ದ ಆ ಜನರಿಂದಲೇ ಅಲ್ಲೇ ಒಂದು ದೊಡ್ಡ ಸಾಮೂಹಿಕ ಗೋರಿ ತೋಡಿಸಿದ. ಗೋರಿ ತೋಡಿದವರು ಗೋರಿಯಲ್ಲಿ ಹೋಗಿ ನಿಂತರು. ನೂರಾರು ಜನ. ಅವರೆಲ್ಲರನ್ನೂ ಮಷೀನ್ ಗನ್ ಹಚ್ಚಿ ನುಣ್ಣಗೆ ಬೀಸಿದಂತೆ ರುಬ್ಬಿಬಿಟ್ಟ ಕಿರಾತಕ ಅಬು ನಿದಾಲ್. ಒಂದೇ ಕ್ಷಣದಲ್ಲಿ ನೂರಾರು ಜನ ಮಟಾಷ್! ಸಂತೃಪ್ತ ವಿಕೃತ ನಗೆ ಗಹಗಹಿಸಿ ನಕ್ಕ ಅಬು ನಿದಾಲ್ ಆ ಸಾಮೂಹಿಕ ಗೋರಿ ಮುಚ್ಚಿಸಿದವನೇ ಅದರ ಮೇಲೆ ಡೇರೆ ಹಾಕಿಸಿಕೊಂಡು ಬೋರಲಾಗಿ ಮಲಗಿಬಿಟ್ಟ. ನೂರಾರು ಜನ so-called ಗದ್ದಾರರನ್ನು ಕೊಂದ ಮೇಲೆ ಏನೋ ಒಂದು ತರಹದ ನೆಮ್ಮದಿ, ಶಾಂತಿ! ಅಪರೂಪಕ್ಕೆ ನಿದ್ದೆ ಸೊಗಸಾಗಿ ಬಂತು.

ಅಬು ನಿದಾಲನ ಈ ಯಬಡತನದ ಕಾರ್ನಾಮೆಯ ಬಗ್ಗೆ ಕೇಳಿದ ಗಡಾಫಿ ತಲೆ ತಲೆ ಚಚ್ಚಿಕೊಂಡ. ತನ್ನ ದೇಶದಲ್ಲಿ ಉಗ್ರಗಾಮಿ ಶಿಬಿರ ಮಾಡಿಕೊಟ್ಟ, ಸಾವಿರಾರು ಜನ ನಿರುದ್ಯೋಗಿ ಅರಬ್ ಯುವಕರನ್ನು ಹಿಡಿದು ತರಿಸಿಕೊಟ್ಟ, ಅವರಿಗೆ ತನ್ನದೇ ಸೈನ್ಯದ ಮೂಲಕ ಉಗ್ರಗಾಮಿ ತರಬೇತಿ ಕೊಡಿಸಿದ, ಹಲವಾರು ಮಿಲಿಯನ್ ಡಾಲರುಗಳ ಫಂಡಿಂಗ್ ಕೊಟ್ಟ. ಇಷ್ಟೆಲ್ಲಾ ಕೊಟ್ಟ ಮೇಲೂ ಈ ಮತಿಭ್ರಾಂತ, ಒಂದು ಕಾಲದ ಟಾಪ್ ಉಗ್ರಗಾಮಿ, ಅಬು ನಿದಾಲ್ ಅವರೆಲ್ಲರ ಮೇಲೆ ಸಂಶಯಪಟ್ಟು ಎಲ್ಲರನ್ನೂ ಮಷೀನ್ ಗನ್ ಹಚ್ಚಿ ಉಡಾಯಿಸಿ ಉದ್ದಕ್ಕೆ ಲಂಬಾ ಲಂಬಾ ಮಲಗಿಬಿಟ್ಟ. ಅಲ್ಲಿಗೆ ಅಬು ನಿದಾಲನನ್ನೂ ತನ್ನ ಫೇವರಿಟ್ ಉಗ್ರರ ಪಟ್ಟಿಯಿಂದ ತೆಗೆದುಹಾಕಿದ ಗಡಾಫಿ.

ಹೀಗೆ ಪ್ಯಾಲೆಸ್ಟೈನ್ ಉಗ್ರರ ಹಳೆ ತಲೆಗಳಿಂದ ಭ್ರಮನಿರಸನಕ್ಕೆ ಒಳಗಾಗಿದ್ದ ಗಡಾಫಿ ಹೊಸ ತಲೆಮಾರಿನ ಉಗ್ರರಾಗಿ ಕಾದುಕುಳಿತಿದ್ದ. ಆಗಲೇ ಫಾತಿ ಶಾಕಾಕಿ ಪ್ರತ್ಯಕ್ಷನಾಗಿ ಹೊಸ ಸಂಘಟನೆ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದಿನ ಪ್ರಪೋಸಲ್ ಇಟ್ಟಿದ್ದ. ಸಿಕ್ಕಾಪಟ್ಟೆ excite ಆದ ಗಡಾಫಿ ನೀಟಾಗಿ ಒಂದಿಷ್ಟು ಮಿಲಿಯನ್ ಡಾಲರ್ ಕಾಣಿಕೆ ಕೊಟ್ಟಿದ್ದ.

ಗಡಾಫಿಯ ಕಾಣಿಕೆ, ದೂರದ ಅಮೇರಿಕಾದಿಂದ ಇಬ್ಬರು ಪ್ರೊಫೆಸರ್ ಜನರಾದ ಸಾಮಿ ಅಲ್-ಅರಿಯನ್ ಮತ್ತು ರಮದಾನ್ ಶಾಲ್ಲಾ ಕಳಿಸಿಕೊಡುತ್ತಿದ್ದ ಕಾಣಿಕೆ ಸಾಕಷ್ಟಾಗಿತ್ತು. ಆ ಫಂಡ್ ಎತ್ತಿಕೊಂಡ ಫಾತಿ ಶಾಕಾಕಿ ಸೀದಾ ಹೋಗಿ ಗಾಜಾ ಪಟ್ಟಿಯಲ್ಲಿ ಕುಳಿತ. ಮೊದಲೇ ನರಕಸದೃಶ ಜಾಗ ಗಾಜಾ ಪಟ್ಟಿ. ಜನರಿಗೆ ಊಟಕ್ಕೆ ಗತಿಯಿಲ್ಲ. ಗಳಿಸಿದ ಅಷ್ಟೂ ರೊಕ್ಕವನ್ನು ಪ್ಯಾಲೆಸ್ಟೈನ್ ಸ್ವಾತಂತ್ರ ಸಂಗ್ರಾಮದ ಹೆಸರಿನಲ್ಲಿ ಬೇರೆ ಬೇರೆ ದಾದಾಗಳು ಕಿತ್ತುಕೊಳ್ಳುತಿದ್ದರು. ಇವರ ರೊಕ್ಕ ಕಿತ್ತುಕೊಂಡ 'ಓರಾಟಗಾರರು' ದುಂಡಗಾಗಿ ದುಬೈ, ಶಾರ್ಜಾ ಇತ್ಯಾದಿ ಕೊಲ್ಲಿ ದೇಶಗಳಲ್ಲಿ ವ್ಯಾಪಾರ ಅದು ಇದು ಮಾಡಿಕೊಂಡು ಹಾಯಾಗಿರುತ್ತಿದ್ದರು. ಅಲ್ಲಿಗೆ ಪ್ಯಾಲೆಸ್ಟೈನ್ ಸ್ವಾತಂತ್ರ್ಯ ಸಂಗ್ರಾಮ ಹಳ್ಳ ಹಿಡಿದಿತ್ತು. ಗಾಜಾ ಪಟ್ಟಿಯ ಜನ ಭ್ರಮನಿರಸನಗೊಂಡಿದ್ದರು. ಹೊಸ ನಾಯಕತ್ವಕ್ಕೆ ಹಾತೊರೆಯುತ್ತಿದ್ದರು. ಆಗ ಎಂಟ್ರಿ ಕೊಟ್ಟ ಫಾತಿ ಶಾಕಾಕಿ! ಕೈಯಲ್ಲಿ ಗಡಾಫಿ ಕೊಟ್ಟಿದ್ದ ರೊಕ್ಕದ ಥೈಲಿ! 'ಬನ್ನಿ, ಹೊಸ ಸ್ವಾತಂತ್ರ್ಯ ಸಂಗ್ರಾಮ ಶುರುಮಾಡೋಣ!' ಎಂದು ಛೋಡಿದ. ಅನಕ್ಷರಸ್ಥ ಮುಗ್ಧ ಜನ. ಅವರಿಗೆ ಧರ್ಮದ ಅಫೀಮು, ದ್ವೇಷದ ಅಫೀಮುಗಳನ್ನು ಬರೋಬ್ಬರಿ ಕೊಟ್ಟ ಫಾತಿ ಶಾಕಾಕಿ, ಮಾನವ ಬಾಂಬುಗಳ ತಯಾರಿಕೆಗೆ ಕುಳಿತುಬಿಟ್ಟ.

ಗಾಜಾ ಪಟ್ಟಿಯಲ್ಲೇನು ಅಬ್ಬೇಪಾರಿಗಳಿಗೆ ಕೊರತೆಯೇ? ಸತ್ತ ಮೇಲೆ ಮನೆ ಕಡೆ, ಉಳಿಯುವ ಕುಟುಂಬದ ಕಡೆ ಗಮನಿಸಿಕೊಂಡರೆ ಸಾಕು. ಬಾಕಿ ಏನೂ ಕೇಳುವದಿಲ್ಲ ಅವರು. ಸೊಂಟಕ್ಕೆ ಬಾಂಬಿನ ಬೆಲ್ಟ್ ಕಟ್ಟಿಕೊಂಡು, 'ಅಲ್ಲಾ ಹೋ ಅಕ್ಬರ್!' ಎಂದು ಕೂಗುತ್ತ ಇಸ್ರೇಲಿಗಳ ಗುಂಪಿನ ಮೇಲೆ ಬಿದ್ದು ಸ್ಪೋಟಿಸಿಕೊಂಡುಬಿಡುತ್ತಾರೆ. ಕಮ್ಮಿ ಕಮ್ಮಿ ೧೦-೧೫ ಇಸ್ರೇಲಿ ಯಹೂದಿಗಳು ಮಟಾಷ್. ಕೆಲವೇ ಕೆಲವು ನೂರು ಡಾಲರುಗಳನ್ನು ಖರ್ಚು ಮಾಡಿದರೆ ಸಾಕು. ದೊಡ್ಡ ಪ್ರಮಾಣದ ಧಮಾಕಾ ಆಗಿಹೋಗುತ್ತದೆ. ಜಿಹಾದಿನ ಕುರ್ಬಾನಿಯ ಬಳಿಕ ೭೨ ವರ್ಜಿನ್ ಕನ್ಯೆಯರ ಸುಖ ಹುಡುಕುತ್ತ ಬಾಂಬಿನ ಬೆಂಕಿಯ ಜ್ವಾಲೆಗಳಲ್ಲಿ ಕಳೆದುಹೋಗುವ ಉಗ್ರರ ಕುರುಹು ಕೂಡ ಸಿಗುವದಿಲ್ಲ.

ಹೊಸದಾಗಿ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಸ್ಥಾಪಿಸಿದ ಫಾತಿ ಶಾಕಾಕಿ ಕೆಲವು spectacular ಅನ್ನಿಸುವಂತಹ ಸುಯಿಸೈಡ್ ಬಾಂಬಿಂಗ್ ಕಾರ್ಯಾಚರಣೆಗಳನ್ನು ಮಾಡಿಸಿದ. ಹಲವಾರು ಬಲಿ ತೆಗೆದುಕೊಂಡ. ಲಿಬಿಯಾದ ದುರುಳ ಗಡಾಫಿ 'ಮೊಗ್ಯಾಂಬೋ ಖುಷ್ ಹುವಾ !' ಮಾದರಿಯಲ್ಲಿ ತೊಡೆ ತಟ್ಟಿಕೊಂಡು ತಟ್ಟಿಕೊಂಡು ಸಂಭ್ರಮಿಸಿದ. ವಿಕೃತ ಮನಸ್ಸು ಅವನದು. ಕೆಲವೇ ವರ್ಷಗಳ ಹಿಂದೆ ಅವನ ಉಗ್ರಗಾಮಿ ಉಪಟಳಗಳಿಂದ ಸಾಕಾಗಿ ಹೋಗಿದ್ದ ಅಂದಿನ ಅಮೇರಿಕಾದ ಅಧ್ಯಕ್ಷ ರೊನಾಲ್ಡ್ ರೇಗನ್ ಸಾಹೇಬರು ಅವನ ಅರಮನೆ ಮೇಲೆ ಬಾಂಬಿನ ಮಳೆಗರೆದು ಬಂದಿದ್ದರು. ಆ ಬಾಂಬ್ ದಾಳಿಯಲ್ಲಿ ಮಗನನ್ನು ಕಳೆದುಕೊಂಡರೂ ಗಡಾಫಿ ಅದೆಲ್ಲೋ ನೆಲಮಾಳಿಗೆಯ ಪಾಯಖಾನೆಯಲಲ್ಲಿ ಬಚ್ಚಿಟ್ಟುಕೊಂಡು ಬಚಾವಾಗಿದ್ದ.

'ಇದ್ಯಾವ ಹೊಸ ಪೀಡೆ ಗಾಜಾ ಪಟ್ಟಿಗೆ ಬಂದು ವಕ್ಕರಿಸಿಕೊಂಡಿದೆ?' ಎಂದು ತಲೆಕೆಡಿಸಿಕೊಂಡವರು ಇಸ್ರೇಲಿನ ಶಿನ್-ಬೆಟ್ ಅನ್ನುವ ಆಂತರಿಕ ರಕ್ಷಣಾಸಂಸ್ಥೆಯವರು. ಮೊಸ್ಸಾದ್ ಏನಿದ್ದರೂ ಬಾಹ್ಯ ಬೇಹುಗಾರಿಕೆ ಮತ್ತು ಕಪ್ಪು ಕಾರ್ಯಾಚರಣೆಗಳ ಉಸ್ತುವಾರಿ ಮಾತ್ರ. ಆಂತರಿಕ ವಿಷಯವೆಲ್ಲವನ್ನೂ ಶಿನ್-ಬೆಟ್ ಸಂಬಾಳಿಸುತ್ತದೆ.

ಗಾಜಾ ಪಟ್ಟಿಯ ತಮ್ಮ ಮಾಹಿತಿದಾರರನ್ನು activate ಮಾಡಿದ ಶಿನ್-ಬೆಟ್ ತನಿಖಾಧಿಕಾರಿಗಳಿಗೆ ಫಾತಿ ಶಾಕಾಕಿ ಬಗ್ಗೆ ಮಾಹಿತಿ ಹನಿಹನಿಯಾಗಿ ದೊರೆಯತೊಡಗಿತು. ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಸಂಘಟನೆಗೆ ಪರೋಕ್ಷವಾಗಿ ಅಥವಾ ನೇರವಾಗಿ ಸಂಬಂಧವಿರುವ ಜನರನ್ನು ಜೊತೆಯಲ್ಲಿ ಅವರ ಗೆಳತಿಯರನ್ನು, ಹೆಂಡತಿಯರನ್ನು ಜೆರುಸಲೇಮಿನ ನೆಲಮಾಳಿಗೆ ಕಾರಾಗೃಹಗಳಿಗೆ ಎತ್ತಾಕಿಕೊಂಡು ಬಂದರು ಶಿನ್ - ಬೆಟ್ ಅಧಿಕಾರಿಗಳು. ಶಿನ್-ಬೆಟ್ ಸಂಸ್ಥೆಯ ನುರಿತ ಚಿತ್ರಹಿಂಸೆ ಸ್ಪೆಷಲಿಸ್ಟ್ ಜನ ತಮ್ಮದೇ ರೀತಿಯಲ್ಲಿ ಮಾತಾಡಿಸತೊಡಗಿದಾಗ ಮೊದಲು ಏನೂ ಗೊತ್ತಿಲ್ಲ ಸಾರ್! ಎಂದು ಮೊಂಡು ಹಿಡಿದವರು ನಂತರ ಗಿಣಿಗಳಂತೆ ಹಾಡಿದ್ದರು. ಇಸ್ರೇಲಿಗಳ ತರಹತರಹದ ಚಿತ್ರಹಿಂಸೆಗಳನ್ನು ಅನುಭವಿಸುವದು ದೂರದ ಮಾತು. ಅವುಗಳ ವರ್ಣನೆ ಕೇಳಿದರೂ ಚಡ್ಡಿ ಒದ್ದೆಯಾಗಿಬಿಡುತ್ತದೆ. ಹಾಗಿರುತ್ತವೆ ಅವರ ಬಾಯಿಬಿಡಿಸುವ ವಿಧಾನಗಳು.

ಹೀಗೆ ಜೆರುಸಲೇಮ್ ಜೈಲಿನ ಕಗ್ಗತ್ತಲ ನೆಲಮಾಳಿಗೆಯಲ್ಲಿ ಶಿನ್-ಬೆಟ್ ಚಿತ್ರಹಿಂಸೆ ಸ್ಪೆಷಲಿಸ್ಟ್ ಜನರಿಂದ ನುಣ್ಣಗೆ ರುಬ್ಬಿಸಿಕೊಂಡಿದ್ದ ಗಾಜಾ ಪಟ್ಟಿಯ ಅರಬರು ಫಾತಿ ಶಾಕಾಕಿ ಬಗ್ಗೆ ತಮಗೆ ಗೊತ್ತಿದ್ದ ಎಲ್ಲ ವಿವರಗಳನ್ನು ಹಂಚಿಕೊಂಡಿದ್ದರು. ಈ ಫಾತಿ ಶಾಕಾಕಿ ಆಸಾಮಿ ಲಿಬಿಯಾದ ಗಡಾಫಿ ಜೊತೆ ಮತ್ತು ಮತ್ತೊಬ್ಬ ಖದೀಮ ಸಿರಿಯಾದ ಹಫೀಜ್ ಅಲ್-ಅಸಾದ್ ಜೊತೆ ಜಕ್ಕಣಕ್ಕ ಶುರುಮಾಡಿಕೊಂಡಿದ್ದಾನೆ ಮತ್ತು ಅಂತರರಾಷ್ಟ್ರೀಯ ಮಟ್ಟದ ಖಿಲಾಡಿಯಾಗಿದ್ದಾನೆ ಎಂದು ಗೊತ್ತಾದ ಕೂಡಲೇ ಶಿನ್-ಬೆಟ್ ಮತ್ತೂ ತಡ ಮಾಡಲಿಲ್ಲ. ಇಸ್ರೇಲಿನ ಬಾಹ್ಯ ಬೇಹುಗಾರಿಕೆ ಸಂಸ್ಥೆ ಮೊಸ್ಸಾದ್ ಜೊತೆ ವಿವರ ಹಂಚಿಕೊಂಡರು. ಮೊಸ್ಸಾದ್ ತನ್ನ ಇತರೆ ಸಂಪರ್ಕಗಳನ್ನು ಉಪಯೋಗಿಸಿಕೊಂಡು ಫಾತಿ ಶಾಕಾಕಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿತು. ಶಿನ್-ಬೆಟ್ ಸಂಗ್ರಹಿಸಿದ್ದ ಮಾಹಿತಿ, ಮೊಸ್ಸಾದ್ ಕಲೆಹಾಕಿದ್ದ ಮಾಹಿತಿ, ಸಿಐಎ ಮತ್ತಿತರ ಫ್ರೆಂಡ್ಲಿ ಬೇಹುಗಾರಿಕೆ ಸಂಸ್ಥೆಗಳು ಕೊಟ್ಟ ಮಾಹಿತಿಯೆಲ್ಲವನ್ನೂ ಕ್ರೋಢಿಕರಿಸಿದಾಗ ಫಾತಿ ಶಾಕಾಕಿ ಬಗ್ಗೆ ಒಂದು ಫುಲ್ ಪಿಕ್ಚರ್ ಬಂತು. ಚಿತ್ರಣ ತುಂಬಾ ಖರಾಬಾಗಿತ್ತು. ಇವನನ್ನು ಹೀಗೇ ಬಿಟ್ಟರೆ ಮುಂದೆ ಕೆಲವೇ ವರ್ಷಗಳಲ್ಲಿ ಇವನು ಇಸ್ರೇಲಿಗೆ ದೊಡ್ಡ ತಲೆನೋವಾಗುತ್ತಾನೆ ಎನ್ನುವದರಲ್ಲಿ ಇಸ್ರೇಲಿನ ಹಿರಿತಲೆಗಳಿಗೆ ಯಾವುದೇ ಸಂದೇಹವಿರಲಿಲ್ಲ. ಇಂಥವನ್ನೆಲ್ಲ ಮೊಳಕೆಯಲ್ಲಿರುವಾಗಲೇ ಚಿವುಟಿಹಾಕಬೇಕು. ಅಲ್ಲಿಗೆ ಫಾತಿ ಶಾಕಾಕಿಯ ಮರಣಶಾಸನಕ್ಕೆ ಇಸ್ರೇಲಿ ಕ್ಯಾಬಿನೆಟ್ಟಿನ ಮುದ್ರೆ ಬಿದ್ದಿತ್ತು. ಇನ್ನು ಫಾತಿ ಶಾಕಾಕಿಯನ್ನು ಮೇಲೆ ಅಲ್ಲಾಹುವಿನ ಬಳಿಗೆ ಕಳಿಸುವ ಸಮಾರಂಭಕ್ಕೆ ಮುಹೂರ್ತವಿಡುವದು ಬಾಕಿ ಇತ್ತು.

ಎಂದಿನಂತೆ ಇಸ್ರೇಲಿ ಪ್ರಧಾನಿ ಸಹಿ ಹಾಕಿದ ಫಾತಿ ಶಾಕಾಕಿಯ ಮರಣಶಾಸನ ಅಂದಿನ ಮೊಸ್ಸಾದಿನ ಅರಿಭಯಂಕರ ಡೈರೆಕ್ಟರ್ ಶಾಬ್ಟೈ ಶಾವಿತ್ ಅವರ ಟೇಬಲ್ ಮೇಲೆ ಬಂದು ಬಿತ್ತು. ಅವರಿಗೆ ಅದೊಂದು ಔಪಚಾರಿಕತೆ (formality) ಅಷ್ಟೇ. ಅವರ ಏಳು ವರ್ಷದ ಅವಧಿಯಲ್ಲಿ ಅದೆಷ್ಟು ಮಂದಿ ಅರಬ್ ಉಗ್ರರಿಗೆ ಮೋಕ್ಷ ತೋರಿಸಿದ್ದರೋ ಅವರು. ಅತಿಫ್ ಬೀಸೋ ಎಂಬ ದುರುಳನನ್ನು ಪ್ಯಾರಿಸ್ ನಗರದಲ್ಲಿ ಮೊಸ್ಸಾದ್ ಗುಂಡಿಕ್ಕಿ ಕೊಂದಿತ್ತು. ಅತಿ ಮುಖ್ಯ ಉಗ್ರನಾಗಿದ್ದ ಅವನಿಗೆ ಮುಹೂರ್ತವಿಡಲು ಖುದ್ದಾಗಿ ಡೈರೆಕ್ಟರ್ ಶಾವಿತ್ ಅವರೇ ಬಾಕಿ ಹಂತಕರಂತೆ ಮಾರುವೇಷದಲ್ಲಿ ಪ್ಯಾರಿಸ್ಸಿಗೆ ಹೋಗಿ ಇಡೀ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಪ್ಯಾರಿಸ್ ನಗರದ ಹೃದಯಭಾಗದಲ್ಲಿ ಒಂದು ಸುಳಿವೂ ಸಿಗದಂತೆ ಅತಿಫ್ ಬೀಸೋನ ಗೇಮ್ ಬಾರಿಸಿತ್ತು ಮೊಸ್ಸಾದ್. ಫ್ರೆಂಚ್ ಸರ್ಕಾರಕ್ಕೆ ಅವನ ಹೆಣ ಎತ್ತುವದನ್ನು ಬಿಟ್ಟರೆ ಬೇರೆ ಕೆಲಸವಿರಲಿಲ್ಲ.

ಎಂದಿನಂತೆ ಫಾತಿ ಶಾಕಾಕಿಗೆ ಒಂದು ಗತಿ ಕಾಣಿಸುವ ಜವಾಬ್ದಾರಿ ವಹಿಸಿಕೊಂಡಿದ್ದು ಮೊಸ್ಸಾದಿನ ಅತಿ ಖತರ್ನಾಕ್ ಹಂತಕರ ಕಿಡೋನ್ ತಂಡ. ಅವರಿಗೆ ಬೇಕಾಗುವ ಎಲ್ಲ ಮಟ್ಟದ ಸಹಕಾರ ಬೇರೆಲ್ಲ ಸಂಸ್ಥೆಗಳಿಂದ ಸಿಗುತ್ತಿತ್ತು.

ಫಾತಿ ಶಾಕಾಕಿಗೆ ಮೊಸ್ಸಾದ್ ಮುಹೂರ್ತವಿಟ್ಟಿದ್ದು ಮಾಲ್ಟಾ ಎಂಬ ಚಿಕ್ಕ ದ್ವೀಪದಲ್ಲಿ. ಇಟಲಿ ದೇಶದ ಕೆಳಗೇ ಇದೆ ಸುಂದರ ಮಾಲ್ಟಾ ದ್ವೀಪ. ಎದುರಿನ ಕಡಲನ್ನು ದಾಟಿದರೆ ಸಿಗುತ್ತದೆ ಲಿಬಿಯಾ ದೇಶದ ಟ್ರಿಪೋಲಿ ಶಹರ. ಟ್ರಿಪೋಲಿ ಮತ್ತು ಮಾಲ್ಟಾ ನಡುವೆ ಫೆರ್ರಿ (ಹಡಗು) ಸಂಚಾರ ವ್ಯಾಪಕವಾಗಿದೆ. ಮಾಲ್ಟಾ ಒಂದು ಕೇಂದ್ರ ಹಬ್ ಇದ್ದಂತೆ. ಮಾಲ್ಟಾದಿಂದ ಎಲ್ಲಿ ಬೇಕಾದರೂ ಹೋಗಬಹುದು.

ಗಾಜಾ ಪಟ್ಟಿಯಲ್ಲಿ ಹೀಟ್ ಕೊಂಚ ಹೆಚ್ಚಾದ ಕಾರಣ ಫಾತಿ ಶಾಕಾಕಿ ಸಿರಿಯಾದ ಡಮಾಸ್ಕಸ್ಸಿಗೆ ಹಾರಿದ್ದ. ಆಗ ಅಲ್ಲಿ ಹಫೀಜ್ ಅಲ್-ಅಸಾದ್ ಇದ್ದ. ಈಗಿರುವ ಬಶೀರ್ ಅಲ್-ಅಸ್ಸಾದನ ಪಿತಾಜಿ. ಸಿರಿಯಾ ಅಂದರೆ ಸಮಸ್ತ ಅರಬ್ ಉಗ್ರರಿಗೆ ತೋಟದಪ್ಪನ ಛತ್ರ ಇದ್ದಂತೆ. ಸಿರಿಯಾದ ಅಸಾದ್ ಬಳಿ ಅವರಿಗೆ ಲಿಬಿಯಾದ ಗಡಾಫಿ, ಇರಾಕಿನ ಸದ್ದಾಮ್ ಹುಸೇನ್ ಕೊಟ್ಟಷ್ಟು ಕಾಸು ಕೊಡುವ ಹೈಸಿಯತ್ತು ಇರಲಿಲ್ಲ. ಆದರೆ ಯಾವುದೇ ಉಗ್ರರಿಗೂ ಜಾಗವಿಲ್ಲ ಎಂದು ಅವರು ಬಾಗಿಲು ಹಾಕಿರಲಿಲ್ಲ. ಬಂದ ಉಗ್ರರೆಲ್ಲರಿಗೂ ಊಟ, ವಸತಿ, ಸೂಳೆಯರನ್ನು ಒದಗಿಸುವಷ್ಟು ಕಾಸು ಮತ್ತು ಒಳ್ಳೆ ಬುದ್ಧಿಯನ್ನು ದೇವರು ಹಫೀಜ್ ಅಲ್-ಅಸಾದನಿಗೆ ಕೊಟ್ಟಿದ್ದ. ಹಾಗಾಗಿ ಅಬು ಮೂಸಾನಂತಹ ರಿಟೈರ್ಡ್ ಉಗ್ರಗಾಮಿಗಳಿಂದ ಹಿಡಿದು ಫಾತಿ ಶಕಾಕಿಯಂತಹ ಹೊಸಬರೂ ಸಹ ಸಿರಿಯಾ ದೇಶದ ರಾಜಧಾನಿ ಡಮಾಸ್ಕಸ್ ಗೆ ಹೋಗಿ, ಅಸಾದ್ ನ ಛತ್ರಛಾಯೆಯಲ್ಲಿ ಆತನ ತೋಟದಪ್ಪನ ಛತ್ರದಲ್ಲಿ ಝೇಂಡಾ  ಹೊಡೆದು ಕೂತಿದ್ದರು. ಸಿರಿಯಾದ  ಮುಖ್ಬಾರಾತ್ ಎಂಬ ಪರಮ ಕ್ರೂರಿ ರಕ್ಷಣಾ ಸಂಸ್ಥೆ ಅಲ್ಲಿ ನೆಲೆಸಿದ್ದ ಅರಬ್ ಉಗ್ರರಿಗೆ ತಕ್ಕ ಮಟ್ಟಿನ ರಕ್ಷಣೆ ಕೊಡುತ್ತಿತ್ತು. ಇಲ್ಲವಾದರೆ ಇಸ್ರೇಲಿಗಳು ಅಲ್ಲೂ ಬಂದು ಗೇಮ್ ಬಾರಿಸಿಬಿಟ್ಟರೆ ಎನ್ನುವ ಆತಂಕ. ಇಷ್ಟೆಲ್ಲಾ ಇದ್ದರೂ ಹಫೀಜ್ ಅಲ್-ಅಸಾದ್ ನ ಹಿರಿಯ ಮಗನನ್ನು ಕಾರ್ ಆಕ್ಸಿಡೆಂಟ್ ಒಂದರಲ್ಲಿ ಮುಗಿಸಿದ್ದು, ಮತ್ತದೇ, ಮೊಸ್ಸಾದ್ ಎಂದು ಊಹಾಪೋಹಗಳಿವೆ. ಮಗನನ್ನು ಕಳೆದುಕೊಂಡ ಅಸಾದ್ ಇಸ್ರೇಲ್ ಬಗ್ಗೆ ಮತ್ತೂ ಕ್ರುದ್ಧನಾಗಿದ್ದ. ಇದ್ದ ಬಿದ್ದ ಎಲ್ಲ ಉಗ್ರಗಾಮಿಗಳಿಗೆ ಕೆಂಪುಗಂಬಳಿಯ ಸ್ವಾಗತ ಕೋರಿದ್ದ.

ಫಾತಿ ಶಾಕಾಕಿ ಸಿರಿಯಾಗೆ ಹೋದ ಆದರೆ ಈ ಮೊದಲು ಹೇಳಿದಂತೆ ಸಿರಿಯಾದ ಕಡೆ ರೊಕ್ಕವಿರಲಿಲ್ಲ. ರೊಕ್ಕವಿಲ್ಲ ಅಂದರೆ ಇಸ್ರೇಲಿನಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಿಂತು ಬಿಡುತ್ತವೆ. ರೊಕ್ಕ ಬೇಕು ಅಂದರೆ ಗಡಾಫಿಯೇ ಬೇಕು. ಹಾಗಾಗಿ ಒಂದಿಷ್ಟು ಫಂಡ್ ಎತ್ತಿಕೊಂಡು ಬರೋಣ ಎಂದು ಶಾಕಾಕಿ ಲಿಬಿಯಾಗೆ ಹೊರಟ. ಆಗಲೇ ಮೊಸ್ಸಾದ್  ಅವನನ್ನು ಟ್ರ್ಯಾಕ್ ಮಾಡಲು ಶುರುಮಾಡಿತ್ತು. ಶಾಕಾಕಿಯ ಅಂತಿಮ ಗೇಮ್ ಬಾರಿಸಲು ಕ್ಷಣಗಣನೆ ಶುರುವಾಗಿತ್ತು. ಅಷ್ಟೇ ಅದು ಶಾಕಾಕಿಗೆ ಗೊತ್ತಿರಲಿಲ್ಲ.

ಶಾಕಾಕಿ ಲಿಬಿಯಾಗೆ ಬಂದ. ಫಾತಿ ಶಾಕಾಕಿ ಹುಟ್ಟುಹಾಕಿದ್ದ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಸಂಘಟನೆಯ ಕಾರ್ನಾಮೆಗಳಿಂದ ಗಡಾಫಿ ಬಹಳ ಸಂತುಷ್ಟನಾಗಿದ್ದ. ಕೊಟ್ಟ ರೊಕ್ಕಕ್ಕೆ ನಿಯತ್ತಾಗಿ ಕೆಲಸ ಮಾಡಿಕೊಟ್ಟಿದ್ದ ಶಾಕಾಕಿ. ಹತ್ತಾರು ಆತ್ಮಹತ್ಯಾ ದಾಳಿಗಳಲ್ಲಿ ಹಲವಾರು ಇಸ್ರೇಲಿಗಳನ್ನು ಬರ್ಬರವಾಗಿ ಕೊಂದಿದ್ದರು ಶಾಕಾಕಿಯ ಶಿಷ್ಯರು. ಹಾಗಾಗಿ ಶಾಕಾಕಿಗೆ ಮತ್ತೊಂದಿಷ್ಟು ರೊಕ್ಕ ಕೊಡಲು ಗಡಾಫಿ ಹಿಂದೆ ಮುಂದೆ ನೋಡಲಿಲ್ಲ. ದೊಡ್ಡ ಮೊತ್ತದ ಕಾಣಿಕೆ ಕೊಟ್ಟು ಖುದಾ ಹಫೀಜ್ ಹೇಳಿ ಕಳಿಸಿದ್ದ.

ದೊಡ್ಡ ಮೊತ್ತದ ರೊಕ್ಕ ಸಿಕ್ಕಿದ್ದಕ್ಕೆ ಸಂತುಷ್ಟನಾದ ಫಾತಿ ಶಾಕಾಕಿ ತಡ ಮಾಡಲಿಲ್ಲ. ಟ್ರಿಪೋಲಿ ಶಹರಕ್ಕೆ ಬಂದವನೇ ಮಾಲ್ಟಾಗೆ ಹೋಗುವ ಫೆರ್ರಿ (ಹಡಗು) ಹತ್ತಿಬಿಟ್ಟ. ಸಮುದ್ರ ಶಾಂತವಾಗಿತ್ತು. ಅದರ ಮೌನ ಕರಾಳವಾಗಿತ್ತು. ಮುಂಬರುವ ಅನಾಹುತದ ಯಾವ ಸುಳಿವೂ ಇರಲಿಲ್ಲ ಶಾಕಾಕಿಗೆ.

ಮಾಲ್ಟಾಗೆ ಬಂದಿಳಿದ ಶಾಕಾಕಿ ಎಂದಿನಂತೆ ತನ್ನ ರೆಗ್ಯುಲರ್ ಹೋಟೆಲ್ಲಿಗೆ ಹೋದ. ಕೋಣೆಯಲ್ಲಿ ಸ್ವಲ್ಪ ಫ್ರೆಶ್ ಆದ ನಂತರ ಮಾಲ್ಟಾ ಶಹರವನ್ನು ಕೊಂಚ ಸುತ್ತಾಡಿ, ಮಕ್ಕಳಿಗೆ ಅಂಗಿ ಚಡ್ಡಿ ಶಾಪಿಂಗ್ ಮಾಡೋಣ ಅಂತ ಮಾಲ್ಟಾದ ರಸ್ತೆ ಗುಂಟ ನಡೆಯತೊಡಗಿದ. ಅವನು ಅದೆಷ್ಟು ಬಾರಿ ಆ ರಸ್ತೆಗಳ ಮೇಲೆ ಓಡಾಡಿದ್ದನೋ.

ಮೊಸ್ಸಾದಿನ ಕಿಡೋನ್ ಹಂತಕರು ಮೋಟಾರ್ ಸೈಕಲ್ ಮೇಲೆ ಕಾದಿದ್ದರು. ಬೇರೊಂದಿಷ್ಟು ಜನ ಮೊಸ್ಸಾದಿನ ಬೇಹುಗಾರರು ಫಾತಿ ಶಾಕಾಕಿಯ ಪ್ರತಿ ಹೆಜ್ಜೆಯನ್ನೂ ಗಮನಿಸುತ್ತಿದ್ದರು. ಮಾಲ್ಟಾದಲ್ಲಿ ನೆರೆದಿದ್ದ ಹತ್ತಾರು ಮೊಸ್ಸಾದ್ ವೃತ್ತಿಪರರ ಖಾಸಗಿ ರೇಡಿಯೋ ಜಾಲದಲ್ಲಿ ಮಾಹಿತಿಗಳು ಸರಸರನೆ ವಿನಿಮಯವಾಗಿ ಮೋಟಾರ್ ಸೈಕಲ್ ಮೇಲೆ ರೊಂಯ್ ರೊಂಯ್ ಅಂತ ಆಕ್ಸಿಲರೇಟರ್ ತಿರುವುತ್ತ ಕುಳಿತಿದ್ದ ಕಿಡೊನ್ ಹಂತಕರಿಗೆ ಫಾತಿ ಶಾಕಾಕಿಯ ಪ್ರತಿ ಹೆಜ್ಜೆಯ ಮಾಹಿತಿ ತಕ್ಷಣ ತಲುಪುತ್ತಿತ್ತು.

ಫಾತಿ ಶಾಕಾಕಿ ಆಯಕಟ್ಟಿನ ಜಾಗಕ್ಕೆ ಬಂದು ತಲುಪಿದ ಅನ್ನುವ ಮಾಹಿತಿ ಕಿಡೊನ್ ಹಂತಕರ ಕಿವಿಗಳಲ್ಲಿ ಅಡಗಿದ್ದ ear piece ಗಳಲ್ಲಿ ಕೇಳಿಬಂದಿದ್ದೇ ಕೊನೆ. ಮುಂದೆ ಕೆಲ ನಿಮಿಷ ಏನೂ ಕೇಳಲಿಲ್ಲ. ಸುತ್ತುಮುತ್ತಲಿನ ಜನರು ಗಾಭರಿಗೊಳ್ಳಲಿ, distract ಆಗಲಿ ಅಂತಲೇ ಸೈಲೆನ್ಸರ್ ಮಾರ್ಪಾಡು ಮಾಡಿದ್ದ ಮೋಟಾರ್ ಸೈಕಲ್ ಮೇಲಿದ್ದ ಹಂತಕರು ಅತಿ ವೇಗದಿಂದ ನುಗ್ಗಿ ಬಂದರು. ಮೋಟಾರ್ ಸೈಕಲ್ ಶಬ್ದ ವಿಪರೀತ ಕರ್ಕಶವಾಗಿತ್ತು. ಜನರು ಗಲಿಬಿಲಿಗೊಂಡರು. ಇದ್ಯಾರು ಇಂತಹ ಶಾಂತ ವಾತಾವರಣದಲ್ಲಿ ಇಂತಹ ಕರ್ಕಶ ಮೋಟಾರ್ ಸೈಕಲ್ ಮೇಲೆ ಬಂದು ರಸಭಂಗ ಮಾಡುತ್ತಿದ್ದಾರೆ ಅಂದುಕೊಂಡನೇನೋ ಫಾತಿ ಶಾಕಾಕಿ. ಯಾವನಿಗೆ ಗೊತ್ತು?

ಶಾಕಾಕಿಯನ್ನು ಕ್ಷಣಮಾತ್ರದಲ್ಲಿ ಸಮೀಪಿಸಿದರು ಹಂತಕರು. ಏನಾಗುತ್ತಿದೆ ಎಂದು ಗೊತ್ತಾಗುವ ಮೊದಲೇ ಮೋಟಾರ್ ಸೈಕಲ್ ಮೇಲೆ ಕುಳಿತಿದ್ದ ಹಿಂಬದಿಯ ಸವಾರ, ನುರಿತ ಹಂತಕ, ಮೋಟಾರ್ ಸೈಕಲ್ ಆಪಾಟಿ ವೇಗದಲ್ಲಿ ಹೋಗುತ್ತಿದ್ದರೂ, ಅರ್ಧಚಂದ್ರಾಕೃತಿಯಲ್ಲಿ ಸರ್ರ್ ಅಂತ ತಿರುಗಿದವನೇ ಒಂದು ಇಡೀ ಮ್ಯಾಗಜಿನ್ ಗುಂಡುಗಳನ್ನು ಫಾತಿ ಶಾಕಾಕಿಯ ಶರೀರದೊಳಗೆ ನುಗ್ಗಿಸಿದ್ದ. ಮೊದಲೇ ಸೈಲೆನ್ಸರ್ ಮಾರ್ಪಡಿಸಿದ್ದ ಮೋಟಾರ್ ಸೈಕಲ್. ಕಿವಿ ತಮ್ಮಟೆ ಹರಿದುಹೋಗುವಂತಹ ಅದರ ಶಬ್ದ. ಅಂತದ್ದರಲ್ಲಿ ಸೈಲೆನ್ಸರ್ ಹಾಕಿದ್ದ 'ಚಿಕ್ಕ ಆಯುಧಗಳ ವೈಢೂರ್ಯ' (jewel of small arms) ಅನ್ನಿಸಿಕೊಂಡಿರುವ ಬೆರೆಟ್ಟಾ ಇಟಾಲಿಯನ್ ಮೇಡ್ ಪಿಸ್ತೂಲಿನಿಂದ ಹಾರಿದ ಗುಂಡುಗಳು ಫಾತಿ ಶಾಕಾಕಿಯ ದೇಹವನ್ನು ಛಲ್ಲಿ ಛಲ್ಲಿ ಮಾಡಿಹಾಕಿದ್ದವು. ಶಾಕಾಕಿಯ ದೇಹ ಮಾಲ್ಟಾದ ರಸ್ತೆಯ ಫುಟ್ ಪಾತ್ ಮೇಲೆ ಬೀಳುವಷ್ಟರಲ್ಲಿ ಮೊಸ್ಸಾದಿನ ಹಂತಕರು ಚಲಾಯಿಸುತ್ತಿದ್ದ ಬೈಕ್ ಅಲ್ಲಿಂದ ಮಾಯವಾಗಿತ್ತು.

ಹೀಗೆ ಕ್ಷಣಾರ್ಧದಲ್ಲಿ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಎಂಬಉಗ್ರಗಾಮಿ ಸಂಘಟನೆಯ ಸಂಸ್ಥಾಪಕ ಮತ್ತು ಪ್ರಥಮ ಹಿರಿತಲೆ  ಫಾತಿ ಶಾಕಾಕಿ ಖಲಾಸ್! ಹಿಮ್ಮಡದಲ್ಲಿ ಚುಚ್ಚಿ ಇನ್ನಿಲ್ಲದ ಉಪದ್ರವ ಕೊಡುತ್ತಿದ್ದ ಮುಳ್ಳನ್ನು ಮುಳ್ಳಿನಿಂದಲೇ ತೆಗೆದೆಸೆದಾಗ ಆಗುವ ನಿರುಮ್ಮಳ ನೆಮ್ಮದಿ ಇಸ್ರೇಲಿಗೆ.

ಹೀಗೆ ಮಾಲ್ಟಾ ಎಂಬ ಪರದೇಶದಲ್ಲಿ ಫಾತಿ ಶಾಕಾಕಿ ಇಸ್ರೇಲಿಗಳ ಗುಂಡು ತಿಂದು ರಸ್ತೆ ಬದಿಯಲ್ಲಿ ನಾಯಿಯಂತೆ ಸತ್ತಿದ್ದೇ ಸತ್ತಿದ್ದು ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಎಂಬ ಸಂಘಟನೆ ಬೇವರ್ಸಿಯಾಗಿಬಿಟ್ಟಿತು. ಹೊಸ ನಾಯಕನೇ ಇಲ್ಲ. ಕಾರಣವೇನೋ ಗೊತ್ತಿಲ್ಲ. ಒಳಮುಚ್ಚುಗ ಶಾಕಾಕಿ ಎರಡನೇ ಹಂತದ ನಾಯಕರನ್ನೂ ತಯಾರು ಮಾಡಿರಲಿಲ್ಲ. ಎಲ್ಲವನ್ನೂ ತನ್ನ ಹತೋಟಿಯಲ್ಲೇ ಇಟ್ಟುಕೊಂಡು ರಿಮೋಟ್ ಕಂಟ್ರೋಲ್ ಮೂಲಕ ಸಂಬಾಳಿಸುತ್ತಿದ್ದ. ಈಗ ಅವನಿಲ್ಲದೆ ಅವನ ಸಂಘಟನೆ ಅನಾಥವಾಗಿತ್ತು.

ಸಂಘಟನೆಯ ನಾಯಕತ್ವವನ್ನು ವಹಿಸಿಕೊಳ್ಳುವ ಕಾಬೀಲಿಯತ್ತು ಇರುವ ಜನರು ಯಾರೂ ಗಾಜಾ ಪಟ್ಟಿಯಲ್ಲಿ ಇರಲಿಲ್ಲ. ಇಡೀ ಮಧ್ಯಪ್ರಾಚ್ಯದಲ್ಲೇ ಇರಲಿಲ್ಲ. ಆಗಲೇ ಎಂಟ್ರಿ ಕೊಟ್ಟ ನಮ್ಮ ಕಥಾ ನಾಯಕ ರಮದಾನ್ ಶಾಲ್ಲಾ.

ಇಸ್ರೇಲ್ ಫಾತಿ ಶಾಕಾಕಿಯನ್ನು ಮಾಲ್ಟಾದಲ್ಲಿ ಉಡಾಯಿಸಿದ್ದು ೧೯೯೫ ರಲ್ಲಿ. ಆಗ ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿ ರಮದಾನ್ ಶಾಲ್ಲಾ ಪಾರ್ಟ್ ಟೈಮ್ ಮಾಸ್ತರಿಕೆ ಮಾಡಿಕೊಂಡಿದ್ದ. ಪೂರ್ತಿ ಪ್ರಮಾಣದ ಪ್ರೊಫೆಸರ್ ಆಗಿದ್ದ ಸಾಮಿ ಆಲ್-ಅರಿಯನ್ ಅವನಿಗೆ ಗುರುವಿದ್ದಂತೆ.

ದೂರದ ಅಮೆರಿಕಾದಲ್ಲಿದ್ದರೂ ಪ್ಯಾಲೆಸ್ಟೈನ್ ಇಸ್ಲಾಮಿಕ್ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಈ ಇಬ್ಬರು ಪ್ರೊಫೆಸರ್ ಮಹಾಶಯರು ತಕ್ಷಣ ಫೀಲ್ಡಿಗೆ ಇಳಿದರು. ಆಗಲೇ ಅಮೇರಿಕಾದ FBI ಜೊತೆ ತಿಕ್ಕಾಟಕ್ಕೆ ಇಳಿದಿದ್ದ ಸಾಮಿ ಅಲ್ - ಅರಿಯನ್ ರಮದಾನ್ ಶಾಲ್ಲಾನನ್ನು ಸಿರಿಯಾದ ಡಮಾಸ್ಕಸ್ ನಗರಕ್ಕೆ ಕಳಿಸಿಬಿಟ್ಟ. ಪ್ಯಾಲೆಸ್ಟೈನ್ ಉಗ್ರರ ಸಮುದಾಯದಲ್ಲಿ ಏನೇನು ಮಾತುಕತೆಗಳು ಆದವೋ, ಏನೇನು ಸಮೀಕರಣಗಳು ವರ್ಕೌಟ್ ಆದವೋ, ಗಡಾಫಿಯಂತಹ ಯಾವ್ಯಾವ ತಲೆತಿರುಕರು ತಮ್ಮ ತಮ್ಮ ಆಶೀರ್ವಾದ ಮಾಡಿದರೋ, ಒಟ್ಟಿನಲ್ಲಿ ಫ್ಲೋರಿಡಾ ಬಿಟ್ಟು ಉಟ್ಟ ಬಟ್ಟೆಯಲ್ಲಿ ಸಿರಿಯಾಕ್ಕೆ ಬಂದಿಳಿದಿದ್ದ ರಮದಾನ್ ಶಾಲ್ಲಾನಿಗೆ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಸಂಘಟನೆಯ ನಾಯಕ ಅಂತ ಪಟ್ಟಾಭಿಷೇಕ ಮಾಡಲಾಯಿತು.

ಪಟ್ಟಾಭಿಷೇಕ ಮಾಡಿಸಿಕೊಂಡ ರಮದಾನ್ ಶಾಲ್ಲಾ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಎಂಬ ಅನಾಥ ಸಂಘಟನೆಯ ನಾಯಕತ್ವವನ್ನೇನೋ ವಹಿಸಿಕೊಂಡ. ಆದರೆ ರೊಕ್ಕವಿದ್ದ ತಿಜೋರಿಯ ಚಾವಿ ಫಾತಿ ಶಾಕಾಕಿಯ ಜೊತೆಗೇ ಅಲ್ಲಾಹುವಿನ ಪಾದ ಸೇರಿಕೊಂಡಿದೆ ಎಂದು ತಡವಾಗಿ ಗೊತ್ತಾಯಿತು.

ಯಾರನ್ನೂ ನಂಬದ ಹಿಂದಿನ ನಾಯಕ ಫಾತಿ ಶಾಕಾಕಿ ಅಷ್ಟೆಲ್ಲ ರೊಕ್ಕವಿದ್ದರೂ ಅದರ ವಿವರಗಳನ್ನು ಎಲ್ಲೂ ಕ್ರಮಬದ್ಧವಾಗಿ ರೆಕಾರ್ಡ್ ಮಾಡಿಟ್ಟಿರಲಿಲ್ಲ. ಅಲ್ಲಿಗೆ ಗಡಾಫಿ ಕೊಟ್ಟಿದ್ದ ಹಲವಾರು ಮಿಲಿಯನ್ ಡಾಲರುಗಳಿಗೆ, ಅಮೇರಿಕಾದ ಮಸೀದಿಗಳಲ್ಲಿ ಜೋಳಿಗೆ ಹಿಡಿದು ಬೇಡಿದ್ದ ರೊಕ್ಕಕ್ಕೆ, ಇತರೆ ಅರಬ್ ಸೇಠು ಜನ ಕೊಟ್ಟಿದ್ದ ರೊಕ್ಕಕ್ಕೆ ಎಲ್ಲ ಶಿವಾಯ ನಮಃ! ರಮದಾನ್ ಶಾಲ್ಲಾ ಹುಚ್ಚನಂತಾಗಿ ತಲೆ ತಲೆ ಚಚ್ಚಿಕೊಂಡ. ಅದರಲ್ಲೂ ಅವನು ಬ್ಯಾಂಕಿಂಗ್ ಪಾಠ ಮಾಡುವ ಮಾಸ್ತರ್ ಬೇರೆ. ಇಲ್ಲಿ ನೋಡಿದರೆ ಸಂಘಟನೆಯ ಬ್ಯಾಂಕಿಂಗ್ ವಿವರಗಳೇ ಇಲ್ಲ. ಅವೆಲ್ಲ ಫಾತಿ ಶಾಕಾಕಿಯೊಂದಿಗೇ ಶಹೀದ್ ಆಗಿಬಿಟ್ಟಿವೆ. ಹೊಸ ಸಂಘಟನೆಗೆ ದೊಡ್ಡ ಮಟ್ಟದ ಬಾಲಗ್ರಹದ ಪೀಡೆ.

ಫಾತಿ ಶಾಕಾಕಿ ಸತ್ತ. ಸಾಯುವಾಗ ರೊಕ್ಕದ ಮೂಲಗಳನ್ನೆಲ್ಲ ಒಣಗಿಸಿಯೇ ಸತ್ತಿದ್ದ. ಆರ್ಥಿಕ ಮುಗ್ಗಟ್ಟಿನ ಆ ಹೊಡೆತದಿಂದ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಮುಂದೆ ಚೇತರಿಸಿಕೊಳ್ಳಲೇ ಇಲ್ಲ. ಇತ್ತಕಡೆ ಅಮೇರಿಕಾದಲ್ಲಿ ಸಾಮಿ ಅಲ್-ಅರಿಯನ್ ಅಬ್ಬೇಪಾರಿಯಾಗಿ ಕುವೈತ್ ದೇಶಕ್ಕೋ, ಕತಾರ್ ದೇಶಕ್ಕೋ ಗಡಿಪಾರು ಮಾಡಲ್ಪಟ್ಟ. ಅಲ್ಲಿಗೆ ಅಮೇರಿಕಾದ ಮಸೀದಿಗಳಿಂದ ಬರುತ್ತಿದ್ದ ಅಷ್ಟಿಟ್ಟು ಕಾಸು ಕೂಡ ಒಣಗಿತು.

ಆದರೂ ಏನೇನೋ ಮಾಡಿ ರಮದಾನ್ ಶಾಲ್ಲಾ ಸಂಘಟನೆಯನ್ನು ನಡೆಸಿಕೊಂಡು ಬಂದಿದ್ದ. ವರ್ಷಕ್ಕೆ ಒಂದೆರೆಡು ಬಾರಿ ಗಾಜಾ ಪಟ್ಟಿಯಿಂದ ಇಸ್ರೇಲ್ ಒಳಗೆ ಕತ್ಯುಷಾ ರಾಕೆಟ್ ಹಾರಿಸಿ ಉಪಟಳ ಕೊಟ್ಟು, ಕೊಂಚ ಪ್ರೆಸ್ ಕವರೇಜ್ ಗಳಿಸಿ ಸುದ್ದಿಯಲ್ಲಿರುತ್ತಿದ್ದ. ಆದರೆ ತಾನು ಮಾತ್ರ ತೋಟದಪ್ಪನ ಛತ್ರ ಅಂದರೆ ಸಿರಿಯಾದಲ್ಲಿ ಇರುತ್ತಿದ್ದ. ಅಸಾದ್ ತಕ್ಕಮಟ್ಟಿನ ರಕ್ಷಣೆ ಕೊಟ್ಟು ಇಟ್ಟುಕೊಂಡಿದ್ದ. ಮತ್ತೆ ಇಸ್ರೇಲ್ ಕೂಡ priority ಮೇಲೆ ಉಗ್ರರ ಗೇಮ್ ಬಾರಿಸುತ್ತದೆ. ಎಲ್ಲ ಚಿಳ್ಳೆ ಪಿಳ್ಳೆ ಜನರ ಗೇಮ್ ಬಾರಿಸುತ್ತ ಹೋಗಲು ಮೊಸ್ಸಾದ್ ತನ್ನ ಲಿಮಿಟೆಡ್ ಸಂಪನ್ಮೂಲಗಳ ಬಗ್ಗೆ ಬಹಳ ಕಾಳಜಿ ವಹಿಸುತ್ತದೆ. ಹಾಗಾಗಿ ರಮದಾನ್ ಶಾಲ್ಲಾನ ಗೇಮ್ ಬಾರಿಸಿರಲಿಲ್ಲ. ಆ ಮಟ್ಟದ ಕುಖ್ಯಾತಿಗೆ ಅವನೂ ಏರಿರಲಿಲ್ಲ.

ಮೊನ್ನಿತ್ತಲಾಗೆ ಏನೋ ಆರೋಗ್ಯ ಸಮಸ್ಯೆಯಾಗಿ ಚಿಕಿತ್ಸೆಗೆಂದು ಪಕ್ಕದ ದೇಶ ಲೆಬನಾನಿನ ರಾಜಧಾನಿ ಬಿರೂಟಿನ ಆಸ್ಪತ್ರೆಗೆ ರಹಸ್ಯವಾಗಿ ದಾಖಲಾಗಿದ್ದಾನೆ. ಇಷ್ಟಕ್ಕೂ ಈ ಹೆದರುಪುಕ್ಕ ಪುಣ್ಯಾತ್ಮ ಸಿರಿಯಾದ ತೋಟದಪ್ಪನ ಛತ್ರ ಬಿಟ್ಟು ಬಿರೂಟಿಗೆ ಯಾಕೆ ಬಂದ !!?? ಈಗ ಏಳೆಂಟು ವರ್ಷಗಳಿಂದ ಸಿರಿಯಾದಲ್ಲಿ ಅಂತರ್ಯುದ್ಧ ಶುರುವಾದಾಗಿನಿಂದ ಪರಿಸ್ಥಿತಿ ತುಂಬಾ ಹದೆಗೆಟ್ಟು ಹೋಗಿದೆ. ಬಷೀರ್ ಅಲ್-ಅಸಾದನಿಗೆ ತನ್ನನ್ನು ತಾನು ಕಾಪಾಡಿಕೊಂಡರೆ ಸಾಕಾಗಿದೆ. ಪೌರಾಡಳಿತ ಮತ್ತು ನಗರ ವ್ಯವಸ್ಥೆ ಪೂರ್ತಿ ಹಳ್ಳಹಿಡಿದು ಇಡೀ ಸಿರಿಯಾ ಒಂದು ದೊಡ್ಡ ಕೊಳಗೇರಿ ಆಗಿದೆ. ಹಾಗಾಗಿ ಅಲ್ಲಿನ ಆಸ್ಪತ್ರೆಗಳಲ್ಲಿ ಒಳ್ಳೆ ಚಿಕಿತ್ಸೆ ಸಿಗುವುದು ಅಷ್ಟರಲ್ಲೇ ಇದೆ. ರೊಕ್ಕ ಕೊಟ್ಟರೂ ಅಲ್ಲಿನ ಆಸ್ಪತ್ರೆಗಳಲ್ಲಿ ವೈದ್ಯರೂ ಇಲ್ಲ, ಔಷಧಗಳೂ ಇಲ್ಲ. ಹೀಗಿರುವಾಗಲೇ ರಮದಾನ್ ಶಾಲ್ಲಾನ ಆರೋಗ್ಯ ಬಿಗಡಾಯಿಸಿದೆ. ರಿಸ್ಕ್ ತೆಗೆದುಕೊಂಡು ಹೇಗೋ ಮಾಡಿ ಪಕ್ಕದ ಬಿರೂಟಿಗೆ ಬಂದಿದ್ದಾನೆ. ಆಪರೇಷನ್ ಥೀಯೇಟರ್ ಒಳಗೆ ಹೋಗುವಾಗ ಇದ್ದ ಪ್ರಜ್ಞೆ ನಂತರ ವಾಪಸ್ ಬಂದಿಲ್ಲ. ಕೋಮಾಗೆ ಜಾರಿದ್ದಾನೆ. ವಿಷಪ್ರಾಶನದಿಂದ ವಾಪಸ್ ತಿರುಗಿ ಬರಲಾರದಂತಹ ಕೋಮಾಕ್ಕೆ ಕಳಿಸಲಾಗಿದೆ ಅಂತ ಗುಸುಗುಸು.

ರಮದಾನ್ ಶಾಲ್ಲಾನಂತಹ ಚಿಲ್ಟು (insignificant) ಉಗ್ರಗಾಮಿಯ ಗೇಮನ್ನು ಮೊಸ್ಸಾದ್ ಖುದ್ದಾಗಿ ಬಾರಿಸಿರಲಿಕ್ಕಿಲ್ಲ. ಬಿರೂಟಿನಲ್ಲಿ ಕಾಸು ಕೊಟ್ಟರೆ ಎಂತಹ ಕೆಲಸವನ್ನು ಬೇಕಾದರೂ ಮಾಡಿಕೊಡಬಲ್ಲ ಭೂಗತಲೋಕದ ಭಾಡಿಗೆ ಜನರನ್ನು  (mercenary) ಬಿಟ್ಟು ರಮದಾನ್ ಶಾಲ್ಲಾನ ಕೇಸ್ ಖತಂ ಮಾಡಿದೆ ಅಂತಲೂ ಒಂದು ಸುದ್ದಿ ಮಧ್ಯಪ್ರಾಚ್ಯದ ಪತ್ರಿಕೆಗಳಲ್ಲಿ ಹರಿದಾಡುತ್ತಿದೆ. ಇಸ್ಲಾಮಿಕ್ ಜಿಹಾದ್ ಮಾತ್ರ 'ನಮ್ಮ ಸಾಹೇಬರು ಗುಣಮುಖರಾಗುತ್ತಿದ್ದಾರೆ. ಚಿಂತಿಸುವ ಕಾರಣವಿಲ್ಲ,' ಎಂದು ಒಣ ಒಣ ಪತ್ರಿಕಾಹೇಳಿಕೆಗಳನ್ನು ಬಿಡುಗಡೆ ಮಾಡಿ ರಮದಾನ್ ಶಾಲ್ಲಾನ ನಿಜ ಸ್ಥಿತಿಯನ್ನು obfuscate ಮಾಡಿ, ರಮದಾನ್ ಶಾಲ್ಲಾನ ಖೇಲ್ ಖತಂ ಆಗಿರಬಹುದೇ ಎನ್ನುವ ಸಂದೇಹವನ್ನು deflect ಮಾಡುತ್ತಿದೆ.

ಒಟ್ಟಿನಲ್ಲಿ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಸಂಘಟನೆ ಮತ್ತೊಮ್ಮೆ ಹೊಸ ನಾಯಕನನ್ನು ಹುಡುಕಿಕೊಳ್ಳಬೇಕಾಗಿದೆ. ಅಮೇರಿಕಾದಿಂದ ಗಡಿಪಾರಾಗಿ ಅಲ್ಲೆಲ್ಲೋ ಕುವೈತಿನಲ್ಲೋ ಕತಾರಿನಲ್ಲೋ ಕುಳಿತಿರುವ ಮಾಜಿ ಪ್ರೊಫೆಸರ್ ಸಾಮಿ ಅಲ್-ಅರಿಯನ್ ಬಂದು ಜುಗಾಡ್ ಮಾಡುವನಿದ್ದಾನೋ ಅಥವಾ ಇತರೆ ಅನೇಕ  ಚುಲ್ಟು ಪುಲ್ಟು ಸಂಘಟನೆಗಳಂತೆ ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ಕೂಡ 'ಯಾ ಅಲ್ಲಾ!' ಎಂದು ಒಂದು ಆಖ್ರಿ ಚೀಕ್ ಹೊಡೆದು ಗೋಣು ಚಲ್ಲಿ ಶಿವಾಯ ನಮಃ ಆಗಲಿದೆಯೋ? ಕಾದು ನೋಡಬೇಕು!

ಇಸ್ರೇಲೇ ರಹಸ್ಯ ಕಾರ್ಯಾಚರಣೆ ಮಾಡಿ ರಮದಾನ್ ಶಾಲ್ಲಾನನ್ನು ಕೋಮಾಕ್ಕೆ ತಳ್ಳಿದ್ದೇ ಹೌದಾದರೆ ಅದನ್ನು ಹೇಗೆ ಸಾಧಿಸಿತು? ಈ ಪ್ರಶ್ನೆಗೆ ಉತ್ತರ ಈಗಂತೂ ಇಲ್ಲ. ಚರಿತ್ರೆ ಏನಾದರೂ ಪಾಠವಾದರೆ (If history is any lesson), ಇಸ್ರೇಲ್ ಈ ಹಿಂದೆ ೧೯೭೦ ರ  ದಶಕದಲ್ಲಿ ವಾಡಿ ಹದ್ದಾದ್ ಎಂಬ ಖತರ್ನಾಕ್ ಉಗ್ರಗಾಮಿಯನ್ನು ಕಂಡುಹಿಡಿಯಲಾಗದ ವಿಷಬೆರೆತ ಪರಮ ದುಬಾರಿ ಬೆಲ್ಜಿಯನ್ ಚಾಕಲೇಟ್ ಮೂಲಕ ವಿಷಪ್ರಾಶನ ಮಾಡಿಸಿ, ಆ ದುರುಳ ಪ್ಯಾರಿಸ್ಸಿನ ದವಾಖಾನೆಯೊಂದರಲ್ಲಿ ಬಹುಅಂಗಾಂಗ ವೈಫಲ್ಯದಿಂದ ಸಾಯುವಂತೆ ಮಾಡಿತ್ತು. ಚಾಕಲೇಟ್ ಪ್ರಿಯನಾಗಿದ್ದ ತಿಂಡಿಪೋತ ವಾಡಿ ಹದ್ದಾದ್ ತನ್ನ ಪ್ರೀತಿಯ ಬೆಲ್ಜಿಯನ್ ಚಾಕ್ಲೆಟ್ ಮೆದ್ದು ಗೊಟಕ್ ಅಂದಿದ್ದ. ೨೦೦೪ ರಲ್ಲಿ ಯಾಸಿರ್ ಅರಾಫತ್ ಕೂಡ ನಿಗೂಢವಾಗಿ ಕಂಡುಹಿಡಿಯಲಾಗದ ಬೇನೆ ಬಂದು ಸತ್ತರು. ಅವರನ್ನೂ ಸಹ ವಿಷ ಹಾಕಿ ಕೊಲ್ಲಲಾಯಿತು ಅನ್ನುವ ಗುಸುಗುಸು ಸುದ್ದಿ ಇಂಟರ್ನೆಟ್ ಮೇಲೆ ಹರಿದಾಡುತ್ತಿದೆ.