Thursday, July 22, 2021

ವೇಳೆ ಎಲ್ಲಾ ಎಲ್ಲಿ ಹೋಯಿತು ಶಿವಾ?

ಓದಿದ್ದು ಕಮ್ಮಿ. ಬರೆದಿದ್ದು ಮತ್ತೂ ಕಮ್ಮಿ. ಹಾಗಾದರೆ ವೇಳೆ ಎಲ್ಲಾ ಎಲ್ಲಿ ಹೋಯಿತು ಶಿವಾ? ಒಳ್ಳೆ ಪ್ರಶ್ನೆ. ಇದನ್ನು ಎಷ್ಟೋ ಬಾರಿ ನನ್ನನ್ನೇ ನಾನು ಕೇಳಿಕೊಂಡಿದ್ದೇನೆ. ಮತ್ತೊಮ್ಮೆ ೨೦೧೫ ಬರಬಾರದೇ? ಎಂದುಕೊಂಡಿದ್ದೇನೆ. ಆ ವರ್ಷ ಅದೆಷ್ಟು ಓದಿದೆ. ೧೫೦+ ಪುಸ್ತಕಗಳು. ಬರೆದಿದ್ದೂ ಸಾಕಷ್ಟಿತ್ತು. ಅದರಲ್ಲಿ ಕಾಳೆಷ್ಟೋ ಜೊಳ್ಳೆಷ್ಟೋ. ಆ ಮಾತು ಬೇರೆ. ಅದು ಒತ್ತಟ್ಟಿಗಿರಲಿ. ಆದರೆ ಎಲ್ಲ ದೃಷ್ಟಿಯಿಂದಲೂ ೨೦೧೫ was one of the best years ಅಂದರೆ ಶಂಬರ್ ಟಕಾ ಸತ್ಯ. 

YouTube ನೋಡುವುದು ಕೊಂಚ ಜಾಸ್ತಿಯಾಯಿತು. ಕಳೆದ ಕೆಲವು ವರ್ಷಗಳಲ್ಲಿ YouTube ಮೇಲೆ ಅದ್ಭುತ  ಅನ್ನುವಂತಹ ಮಾಹಿತಿ ಸಿಗುತ್ತಿದೆ. ಅದೂ ಫುಲ್ ಬಿಟ್ಟಿ. ಫ್ರೀ. ಯಾವುದೇ ವಿಷಯವನ್ನು ಅಧ್ಯಯನ ಮಾಡಬೇಕು ಅಂದರೆ YouTube ತುಂಬಾ ಸಹಾಯಕಾರಿಯಾಗಿದೆ. ಜಗತ್ತಿನ ಸರ್ವಶ್ರೇಷ್ಠ ವಿಶ್ವವಿದ್ಯಾಲಯಗಳು, ಅವುಗಳಲ್ಲಿನ ಪ್ರಾಧ್ಯಾಪಕರು ಬೋಧನೆ ಮಾಡಿರುವ ಪಾಠಗಳ, ವಿಡಿಯೋಗಳನ್ನು ಅಲ್ಲಿ ಹಾಕಿರುತ್ತಾರೆ. ನಿಮಗೆ ಬೇಕಾದ ವಿಷಯಗಳನ್ನು, ನಿಮಗೆ ಅನುಕೂಲವಾಗುವ ರೀತಿಯಲ್ಲಿ ಅಧ್ಯಯನ ಮಾಡಬಹುದು. ವೇಳೆಯ ಒತ್ತಡವಿಲ್ಲ. ಹಾಜರಾತಿಯ ಕಿರಿಕಿರಿಯಿಲ್ಲ. ಮಾಸ್ತರ್ ಮಂದಿಗೆ ಬಕೆಟ್ ಹಿಡಿಯಬೇಕಾಗಿಲ್ಲ. ಪರೀಕ್ಷೆಯ ತಲೆಬಿಸಿಯಿಲ್ಲ. ಹಾಗೆ ಮುಕ್ತ ಅಧ್ಯಯನ ಮಾಡುತ್ತಿರುವಾಗಲೂ ಅಲ್ಲಲ್ಲಿ ಒಂದೆರೆಡು ಸಮಸ್ಯೆಗಳನ್ನು ಬಿಡಿಸುವುದರಲ್ಲಿ ಮಜಾ ಇರುತ್ತದೆ ಅನ್ನಿ. Knowledge is not power. Knowledge properly applied is power. ಇದನ್ನು ಅರ್ಥ ಮಾಡಿಕೊಳ್ಳುವದರಲ್ಲಿ ಅರ್ಧ ಜೀವನ ಮುಗಿದಿದ್ದು ಹೆಚ್ಚಿನ ಜ್ಞಾನಿಗಳ (ಮಾಹಿತಿವಂತರ ಅಂದರೆ ಸರಿ) ಕರ್ಮ. ವಿಪರ್ಯಾಸ. 

YouTube ಮೇಲೆ ವಿಶ್ವವಿದ್ಯಾಲಯಗಳ ಪಾಠಗಳನ್ನೇ ಕೇಳಿ ಕೇಳಿ ಮತ್ತೂ ಪುಸ್ತಕದ ಬದನೆಕಾಯಿಯೇ ಆಗಬೇಕು ಅಂತೇನೂ ಇಲ್ಲ. ಸಾಕಷ್ಟು ಬೇರೆ ರೀತಿಯ ಉಪಯುಕ್ತ ವಿಡಿಯೋಗಳೂ ಇವೆ. 

ಉದಾಹರಣೆಗೆ, ನಿಮಗೆ ತರಕಾರಿ ಕತ್ತರಿಸುವ ಚಾಕುವನ್ನು ಸಾಣೆ ಹಿಡಿದು ಚೂಪಾಗಿ ಮಾಡುವುದು ಹೇಗೆ ಎಂದು ಗೊತ್ತೇ? ಭಾರತದಲ್ಲಿ ಬಿಡಿ. ಸಾಣೆ ಹಿಡಿಯುವ ಮಂದಿ ಅಲ್ಲಲ್ಲಿ ಕಂಡುಬರುತ್ತಿದ್ದರು. ಅವರು reasonable ರೊಕ್ಕ ತೆಗೆದುಕೊಂಡು ಚಾಕು ಬಾಕು ಇತ್ಯಾದಿಗಳನ್ನು ಹರಿತ ಮಾಡಿ ಕೊಡುತ್ತಿದ್ದರು. ಇಲ್ಲೂ ಸೂಪರ್ ಮಾರ್ಕೆಟ್ ಮುಂದೆ ಅಂತಹ ಮಂದಿ ಬಿಡಾರ ಹೂಡಿದ್ದನ್ನು ನೋಡಿದ್ದೇನೆ. ಆದರೆ ಹೋಗಿ ವಿಚಾರಿಸಿರಲಿಲ್ಲ. ನೋಡಿದರೆ ಅವರು ಇಂಚಿನ ಲೆಕ್ಕದಲ್ಲಿ ಚಾರ್ಜ್ ಮಾಡುತ್ತಾರಂತೆ. ಇಷ್ಟು ಉದ್ದದ ಚಾಕು ಇದ್ದರೆ ಇಷ್ಟು ಡಾಲರ್. ಹಾಗಾಗಿ ಆ ಲೆಕ್ಕದಲ್ಲಿ ಸಾಣೆ ಹಿಡಿಸುವ ವೆಚ್ಚದಲ್ಲಿ ನಾಲ್ಕಾರು ಚಾಕುಗಳನ್ನು ಕೊಳ್ಳಬಹುದು. ಚೀನಾ ಮಾಲಿನ ಚಾಕು ೨-೩ ಡಾಲರಿಗೆ ಸಿಕ್ಕೀತು. ಅದಕ್ಕೆ ಸಾಣೆ ಹಿಡಿಸಲು ೬-೮ ಡಾಲರ್ ಆದೀತು. ಈ ಕಾರಣದಿಂದ ನನ್ನ ಹತ್ತಿರ ಕೂಡ ನಾಲ್ಕಾರು ತರಕಾರಿ ಕತ್ತರಿಸುವ ಚಾಕು ಬಿದ್ದಿವೆ. ಬೇಕೆಂದಾಗ ಒಂದೂ ಸರಿಯಾಗಿ ಕೆಲಸ ಮಾಡುವುದಿಲ್ಲ. 

ಈ ಸಮಸ್ಯೆಯ ಪರಿಹಾರಕ್ಕಾಗಿ ಮತ್ತೆ YouTube ನಮಃ. ಅದೆಷ್ಟು ರೀತಿಯಲ್ಲಿ ಚಾಕುವನ್ನು ಸಾಣೆ ಹಿಡಿಯುವ ರೀತಿಗಳಿವೆ. ಅದೆಷ್ಟು ವಿಡಿಯೋಗಳು ಇವೆ. ಸರಿಯಾಗಿ ಸಾಣೆ ಹಿಡಿಯುವ ಪದ್ಧತಿ ಅಂದರೆ ಸಾಣೆಕಲ್ಲು whetstone ತಂದುಕೊಂಡು ಸಾಣೆ ಹಿಡಿದು, ಚರ್ಮದ ಪಟ್ಟಾ (Strop) ಮೇಲೆ ಹೊಸೆಯುವುದು. ಒಹೋ! ಇದು ನಾಪಿತರ ಸ್ಟೈಲ್. ಸಂಸ್ಕೃತದ ಹೆಗಡೆ ಸರ್ ಇದಕ್ಕೆ 'ಶಸ್ತ್ರಾಭ್ಯಾಸ' ಎಂದು ಹಾಸ್ಯ ಮಾಡುತ್ತಿದ್ದರು. ಸಲೂನುಗಳಲ್ಲಿ ಗ್ರಾಹಕ ಇಲ್ಲದಿದ್ದಾಗ ನಾಪಿತರು ಇದನ್ನೇ ಮಾಡುತ್ತಿರುತ್ತಾರೆ. ಗ್ರಾಹಕ ಬಂದಾಕ್ಷಣ ನುಣ್ಣಗೆ ಬೋಳಿಸುತ್ತಾರೆ. ತಲೆಯನ್ನು. ತರಕಾರಿ ಕತ್ತರಿಸುವ ಚಾಕುವೇ ಇರಲಿ ತಲೆ ಹೆರೆಯುವ ಕತ್ತಿಯೇ ಇರಲಿ ಹರಿತಗೊಳಿಸುವ ಪದ್ಧತಿ ಒಂದೇ. 

ಹೋಗ್ರೀ! ಸಾಣೆಕಲ್ಲು, ಚರ್ಮದ ಪಟ್ಟಾ ಅಂತೆಲ್ಲಾ ಹೋದರೆ ಮತ್ತೂ ೨೦-೩೦ ಡಾಲರಿಗೆ ಗುನ್ನ ಬೀಳುತ್ತದೆ. ಅದರಲ್ಲಿ ೮-೧೦ ಚೀನಾ ಮಾಲು ಚಾಕು ಬರುತ್ತದೆ. ಇನ್ನೂ ಏನಾದರೂ ಸರಳ ಪದ್ಧತಿ ಇರಬಹುದೇ ಎಂದು ಹುಡುಕಿದರೆ YouTube ಅಕ್ಷಯಪಾತ್ರೆ ಇದ್ದಂತೆ. ಯಾರೋ ಒಬ್ಬರು ಸಿರಾಮಿಕ್ ಕಾಫಿ ಕಪ್ ಹಿಂಭಾಗ ಉಪಯೋಗಿಸಿ ಚಾಕುವನ್ನು ಹೇಗೆ ಹರಿತಗೊಳಿಸಬಹುದು ಎಂದು ತೋರಿಸಿಕೊಟ್ಟರು. ನಂಬಿಕೆ ಬರಲಿಲ್ಲ. ಪ್ರಯತ್ನ ಮಾಡಿ ನೋಡಿದೆ. ಅದ್ಭುತ ಪರಿಣಾಮ ಬಂತು. ಈಗ ನನ್ನ ಎಲ್ಲಾ ಚಾಕುಗಳೂ ಹರಿತ ಹರಿತ! ಟಚ್ ಮಾಡಿದರೆ ಕಚಕ್ ಆಗುವಷ್ಟು ಹರಿತ. ಚಾಕು ಹರಿತವಾದ ಖುಷಿಯಲ್ಲಿ ಕತ್ತರಿಸಿದ್ದೇ ಕತ್ತರಿಸಿದ್ದು. ಕೇವಲ ತರಕಾರಿಗಳನ್ನು ಮಾತ್ರ. ಹಾಗಾಗಿ ಒಂದು ವಾರದಲ್ಲಿ ಒಂದು ವರ್ಷದ ಸಲಾಡ್ ತಿನ್ನುವ ಭಾಗ್ಯ!

ಕಾರುಗಳಲ್ಲಿ ಎರಡು ಫಿಲ್ಟರ್ ಇರುತ್ತವೆ. ಒಂದು ಕಾರೊಳಗಿನ ಗಾಳಿ ಶುದ್ಧಗೊಳಿಸುವ ಕ್ಯಾಬಿನ್ ಏರ್ ಫಿಲ್ಟರ್. ಮತ್ತೊಂದು ಎಂಜಿನ್ ಏರ್ ಫಿಲ್ಟರ್. ಎರಡನ್ನೂ ೩ ವರ್ಷ ಅಥವಾ ೩೦,೦೦೦ ಮೈಲುಗಳಿಗೆ ಬದಲಾಯಿಸಿ ಎಂದು ಕಾರ್ ತಯಾರಕರ ಸಲಹೆ. ಇವನ್ನೂ ಸುಲಭವಾಗಿ ನೀವೇ ಮಾಡಿಕೊಳ್ಳಬಹುದು. ಹೊಸ ಮಾಡೆಲ್ಲಿನ ಕಾರುಗಳಲ್ಲಿ ತುಂಬಾ ಸುಲಭ. ನಟ್ ಬೋಲ್ಟ್ ಕೂಡ ಇರುವುದಿಲ್ಲ. ಒಂದೆರೆಡು ಕ್ಲಿಪ್ ತರಹದ್ದು ಇರುತ್ತದೆ. ತೆಗೆಯಿರಿ. ಹಳೆ ಫಿಲ್ಟರ್ ತೆಗೆದು ಹೊಸದು ಹಾಕಿರಿ. ಕ್ಲಿಪ್ ಹಾಕಿ ಮುಚ್ಚಿದರೆ ಕೆಲಸ ಮುಗಿಯಿತು. ನಮ್ಮದು ಸಾಕಷ್ಟು ಹಳೆಯ ಕಾರ್. ಜಾಸ್ತಿ ಓಡಿಲ್ಲ. ತೊಂದರೆ ಕೊಟ್ಟಿಲ್ಲ ಅಂತ ಅದನ್ನೇ ಓಡಿಸುತ್ತೇವೆ. ನಮ್ಮ ಕಾರಿನ ಫಿಲ್ಟರ್ ಚೇಂಜ್ ಮಾಡುವುದು ಕೊಂಚ ಕೆಲಸ ಇರುತ್ತದೆ. ನಟ್ ಬೋಲ್ಟ್ ಬಿಚ್ಚಿ ಕೆಲಸ ಮಾಡಬೇಕು. ಅದಕ್ಕೂ YouTube  ಮೇಲೆ ವಿಡಿಯೋ ಸಿಕ್ಕವು. ಅವನ್ನು ಅನುಸರಿಸಿ ಆ ಕೆಲಸಗಳನ್ನೂ ಮಾಡಿಕೊಂಡೆ. ಸುಮಾರು ೧೫೦-೨೦೦ ಡಾಲರ್ ಉಳಿಯಿತು. 

ಡ್ರೈವರ್ ತಲೆ ಮೇಲಿರುವ ಕನ್ನಡಿಯುಳ್ಳ  ವೈಸರ್ ಹೋಗಿತ್ತು. ಅದನ್ನೂ YouTube ನೋಡಿಯೇ ಬದಲಾಯಿಸಿದೆ. ಅಲ್ಲೂ ಒಂದಿಷ್ಟು ಉಳಿಯಿತು. ಅದೇ ರೀತಿ ಡಿಕ್ಕಿ ಓಪನ್ ಮಾಡುವ ಲ್ಯಾಚಿನ ಮೇಲಿನ ರಬ್ಬರ್ ಬದಲಾಯಿಸಲು ಮಾಡಲು ಹೋಗಿ ರಾಡಿ ಎಬ್ಬಿಸಿದೆ. ಅದು ಕೊಂಚ ಸಹನೆ ಕೇಳುವ ಕೆಲಸವಾಗಿತ್ತು. ನನಗೋ ಸಹನೆ ಅಂದರೆ ಏನು ಎನ್ನುವ ರೀತಿ. Screw ಜಾರಿತು. ಅದರ ತಲೆ (ಹೆಡ್) Strip ಆಯಿತು. ಈಗ ಹೊರಗೆ ಬರುತ್ತಿಲ್ಲ. ಅದೇನೂ ಅಷ್ಟು ಅವಶ್ಯದ ಭಾಗವಲ್ಲ ಬಿಡಿ. ಕಾಣುವುದೂ ಇಲ್ಲ. ಇದರಿಂದ ಕಲಿತ ಪಾಠ. ಸರಿಯಾಗಿ ಓದಿ, ಮನನ ಮಾಡಿಕೊಂಡು, ವಿಚಾರ ಮಾಡಿದ ಮೇಲೆ screw ಮತ್ತು unscrew ಮಾಡಬೇಕು. ಇಲ್ಲವಾದರೆ ಕೆಲಸ ಕೆಡುತ್ತದೆ. ಇದರಲ್ಲಿ ಡಬಲ್ ಮೀನಿಂಗ್ ಏನೂ ಇಲ್ಲ ಮಾರಾಯರೆ! ಶಿವಾಯ ನಮಃ!

YouTube  ನೋಡಿ. ಕೆಲಸ ಕಲಿತುಕೊಳ್ಳಿ. ಮಾಡಿಕೊಳ್ಳಿ. ಕೆಲಸ ಕಲಿತಂತೆಯೂ ಆಯಿತು. ರೊಕ್ಕ ಉಳಿಸಿದಂತೆಯೂ ಆಯಿತು. ಅದೆಷ್ಟು ಚಿಕ್ಕ ಕೆಲಸವೇ ಇರಲಿ. ಕಲಿತು ಅದರಲ್ಲಿ ತಕ್ಕಮಟ್ಟಿನ ಪ್ರಾವೀಣ್ಯತೆ ಸಾಧಿಸಿದರೆ ಏನೋ ಒಂದು ರೀತಿಯ ಸಂತೃಪ್ತಿ. ಅಂತಹ ಚಿಕ್ಕ ಚಿಕ್ಕ ಸಂತೃಪ್ತಿಗಳಲ್ಲೇ ಜೀವನದ ಸಾರ್ಥಕತೆ ಇದೆ ಅನ್ನಿಸುತ್ತದೆ. ಅಲ್ಲವೇ?

4 comments:

ವಿ.ರಾ.ಹೆ. said...

ವೆರಿ ಮಚ್ ಟ್ರೂ. ಈಗಂತೂ ನಮಗೆ ಹಲವಾರು ವಿಷಯಗಳಿಗೆ ಯೂಟ್ಯೂಬೇ ತಂದೆ ತಾಯಿ ಗುರು ದೈವ ಎಲ್ಲವೂ ಆಗಿದೆ. ನೋಡಿದ್ದು ಮಾಡಿದ್ದು ಕಲಿತಿದ್ದು ಬಹಳ ಇದೆ. ಅಂಡರ್ವೇರ್ ಒಣಗಿಸುವ ವಿಷಯದಿಂದ ಹಿಡಿದು ಮನೆಕಟ್ಟಿಸುವ ಮಾಹಿತಿ ವರೆಗೆ ಎಲ್ಲವೂ ಸಿಗುತ್ತಿವೆ. ಶ್ರಮವಹಿಸಿ ಸಮಯ ವ್ಯಯಿಸಿ ವೀಡಿಯೋಗಳನ್ನು ಮಾಡಿ ಹಾಕುವ ಎಲ್ಲರಿಗೂ ದೊಡ್ಡ ನಮಸ್ಕಾರಗಳು.

Mahesh Hegade said...

ವಿರಾಹೆ, ನೀನು ಹೇಳಿದ್ದು ಸರಿಯಾಗಿದೆ. YouTube ಮೇಲೆ ಉಪಯುಕ್ತ ವಿಡಿಯೋ ಪೋಸ್ಟ್ ಮಾಡುವ ಎಲ್ಲರಿಗೂ ಒಂದು ದೊಡ್ಡ ನಮಸ್ಕಾರ ಮತ್ತು ಧನ್ಯವಾದ. ಹೆಚ್ಚಿನ ಜನರಿಗೆ ಅದರಿಂದ ಯಾವ ರೀತಿಯ ಆರ್ಥಿಕ ಪ್ರಯೋಜನವೂ ಆಗುವುದಿಲ್ಲ. ತಾವು ಕಲಿತಿದ್ದವು ಇನ್ನೊಬ್ಬರಿಗೆ ಸಹಾಯವಾಗಲಿ ಎನ್ನುವ ಸೇವಾಮನೋಭಾವವೋ ಮತ್ತೇನೋ ಗೊತ್ತಿಲ್ಲ. ಒಟ್ಟಿನಲ್ಲಿ ಸಾಕಷ್ಟು ಶ್ರಮ ತೆಗೆದುಕೊಂಡು ವಿಡಿಯೋ ಹಾಕುತ್ತಾರೆ. ಒಂದು ಸಿಂಪಲ್ ವಿಡಿಯೋ ಮಾಡಿ ಹಾಕುವುದೂ ಸಹ ಸಾಕಷ್ಟು ಶ್ರಮ ಮತ್ತು ವೇಳೆ ಕೇಳುತ್ತದೆ. ಒಟ್ಟಿನಲ್ಲಿ ಜನರಲ್ಲಿ ಹಂಚಿಕೊಳ್ಳುವ instinct ಇರುತ್ತದೆ ಮತ್ತು ಅದು ಸಾಕಷ್ಟು strong ಇರುತ್ತದೆ ಅನ್ನುವುದಕ್ಕೆ ಒಂದು ಉದಾಹರಣೆ. ಅದು ಮತ್ತೂ ಹೆಚ್ಚಾಗಲಿ.

sunaath said...

Reader's Digestನಲ್ಲಿ Do it yourself ಅನ್ನುವ ಲೇಖನಗಳು ಬರುತ್ತಿದ್ದವು. ನಾನು ಅವುಗಳನ್ನು ಅನುಸರಿಸಲಿಲ್ಲ!
ನಿಮ್ಮ Come back ಸಂತೋಷ ತಂದಿದೆ. Keep writing. ನಿಮ್ಮ fan ನಾನು.

Mahesh Hegade said...

ತಮ್ಮ ಕಾಮೆಂಟಿಗೆ ಧನ್ಯವಾದಗಳು ಸುನಾಥ್ ಸರ್!

ರೀಡರ್ಸ್ ಡೈಜೆಸ್ಟ್ ಮಾಸಿಕದ ಸದುಪಯೋಗ ಮಾಡಿಕೊಳ್ಳಲಿಲ್ಲ ಅನ್ನುವ ವಿಷಾದ ನನ್ನಲ್ಲೂ ಇದೆ. ಅದು ನಮ್ಮ ತಂದೆಯವರ ಫೇವರಿಟ್ ಮ್ಯಾಗಜಿನ್ ಆಗಿತ್ತು. ಆಗಲೇ ಸಾಕಷ್ಟು ದುಬಾರಿಯಿತ್ತು. ಮನೆಗೆ ಬರುತ್ತಿತ್ತು. ಅದನ್ನು ಸರಿಯಾಗಿ ಓದಬೇಕಾಗಿತ್ತು ಅಂತ ಆಗಾಗ ಅನ್ನಿಸಿದ್ದು ಇದೆ.