Tuesday, July 27, 2021

ಸಿಂಹಕಟಿ ಸುಂದರಿಯ ಜೀವನದ ಸಿಂಹಾವಲೋಕನ...

ಸಿಂಹಕಟಿ ಅಂದರೆ ಸಿಂಹಕ್ಕೆ ಕಟಿ ಅಂತ ಅರ್ಥವಲ್ಲ. ನಮ್ಮ ಧಾರವಾಡ ಕಡೆ ಕಟಿ ಎಂದರೆ ಬಡಿ, ಹೊಡಿ, ಬಾರಿಸು ಎಂದೂ ಅರ್ಥವಿದೆ. ನಮ್ಮ ಕಡೆ (ಉಡಾಳ) ಹುಡುಗರು ಮೃಗಾಲಯಕ್ಕೆ ಹೋದಾಗ ಸುಮ್ಮನೆ ನೋಡಿ ಬರುವುದಿಲ್ಲ. ಅವಕಾಶ ಸಿಕ್ಕಾಗೊಮ್ಮೆ ಅಲ್ಲಿರುವ ಮೃಗಗಳನ್ನು ಕಾಡಿಸಿ, ಪೀಡಿಸಿ ಬರುತ್ತಾರೆ. ಪೀಡೆ ಮುಂಡೇವು! ಆ ದೃಷ್ಟಿಯಲ್ಲಿ ನೋಡಿದರೆ ಪಂಜರದಿಂದ ಹೊರಗೆ ನಿಂತು ಒಳಗಿರುವ ಪ್ರಾಣಿಗಳನ್ನು ಕಾಡುತ್ತಿರುವವರೇ ಕಾಡು ಪ್ರಾಣಿಗಳು. 'ಕಾಡು ಪ್ರಾಣಿಗಳು ಕಾಡಲ್ಲಿವೆ. ಕಾಡುವ ಪ್ರಾಣಿಗಳು ನಾಡಲ್ಲಿವೆ,' ಎನ್ನುವ ಮಾತು ಅಷ್ಟರ ಮಟ್ಟಿಗೆ ಸತ್ಯ.

ಮೃಗಾಲಯದಲ್ಲಿ ಸಿಂಹ ಕಂಡರೆ, 'ಏ, ಅಲ್ಲಿ ನೋಡಲೇ. ಸಿಂಹ ಐತಿ. ಆದ್ರ ಮಕ್ಕೊಂಡೈತಿ. ಎಬ್ಬಿಸಲೇ ಅದನ್ನ. ತೊಗೋ ಕಲ್ಲು. ಒಗಿ ಅದಕ್ಕ. ರೊಕ್ಕಾ ಕೊಟ್ಟು ನೋಡಾಕ ಬಂದೇವಿ. ಸಿಂಹಕ್ಕ ಕಲ್ಲು ಒಗೆದು, ಅದನ್ನು ಎಬ್ಬಿಸಿ, ಗುರ್ ಅನ್ನಿಸಿಯೇ ಹೋಗೋದು,' ಎಂದು ಕಲ್ಲೆಸೆದರೆ ಅದು ಸಿಂಹಕ್ಕೆ ಕಟಿದಂತೆ. 'ಸಿಂಹಕ್ಕ ಚೂಪ ಕಲ್ಲಿಂದ ಒಂದು ಕಟಿದೆ ನೋಡು. ಗಜ್ಜ ಬಿದ್ದ ಕೂಡಲೇ ಕುಂಡಿ ತಿರುಗಿಸಿ ಎದ್ದು ಗುರ್ ಅಂತು,' ಎಂದು ಹೇಳಿಕೊಂಡು ತಿರುಗಲು ಅಡ್ಡಿಯಿಲ್ಲ.

ಈ ಕಿತಾಪತಿಯನ್ನು ನೋಡಿದ ಹಿರಿಯರಾರೋ ಇವರ ಬುರುಡೆಗೆ ಸಮಾ ಕಟಿದಿರುತ್ತಾರೆ. ಆ ಮಾತು ಬೇರೆ. ಬಿಟ್ಟಿಯಲ್ಲಿ ಬುರುಡೆ ತಟ್ಟುವುದು ಹಿರಿಯರಿಗೆ ಇರುವ ಒಂದು ಸೌಲಭ್ಯ. ತಾವು ಜೀವಮಾನವಿಡೀ ತಮ್ಮ ಬುರುಡೆ ಮತ್ತೊಂದು ಕಡೆ ಕಟಿಸಿಕೊಂಡಿದ್ದನ್ನು ಬಾಲವಿಲ್ಲದ ಇಂತಹ ಬಾಲಕರ ಬುರುಡೆಗೆ ತಟ್ಟುವ ಮೂಲಕ ತೀರಿಸಿಕೊಂಡು ವಿಕೃತಾನಂದ ಅನುಭವಿಸುತ್ತಾರೆ. ೧೯೮೩ ರಲ್ಲಿ, ಐದನೇ ಕ್ಲಾಸಿನಲ್ಲಿ ಇದ್ದಾಗ, ಮೈಸೂರಿಗೆ ಪ್ರವಾಸ ಹೋದಾಗ, ಅಲ್ಲಿನ ವಿಶ್ವವಿಖ್ಯಾತ ಮೃಗಾಲಯಕ್ಕೆ ಹೋದಾಗ ಸಿಂಹಕ್ಕೆ ಕಟಿದ ನೆನಪಿಲ್ಲ. ಆದರೆ ಬ್ರೌನ್ ಬಣ್ಣದ ಗೊರಿಲ್ಲಾಕ್ಕೆ ಕಟಿದು ಅದನ್ನು ಮರಳಿ ಮರಕ್ಕೆ ಹತ್ತಿಸಿದ್ದು ನಮ್ಮ ಜೊತೆಗಾರರ ಅನನ್ಯ ಸಾಧನೆ ಎಂದು ಇವತ್ತಿಗೂ ನೆನಪಿದೆ. ಮನಗಂಡ ಕಟಿಸಿಕೊಂಡ ಗೊರಿಲ್ಲಾ ನಾವು ಅಲ್ಲಿರುವ ತನಕ ಮರ ಬಿಟ್ಟು ಕೆಳಗೆ ಬಂದರೆ ಕೇಳಿ. 'ಮಂಗ್ಯಾ ಅಂದ್ರ ಗಿಡದಾಗ ಇರಬೇಕು. ಅಲ್ಲೆನಲೇ?'  ಎಂದು ಸಮರ್ಥನೆ ಬೇರೆ!

ಇರಲಿ. ಸಿಂಹಕಟಿ ವಿಷಯಕ್ಕೆ ಬರೋಣ. ಸಿಂಹಕಟಿ ಅಂದರೆ ಸಿಂಹದ ಸೊಂಟ. ಸೊಂಟ? 'ಸೊಂಟದ ವಿಷಯ ಬೇಡವೋ ಶಿಷ್ಯ' ಅಂತೇನೋ ಪಡ್ಡೆ ಹುಡುಗರ ಸಿನೆಮಾ ಹಾಡೂ ಇತ್ತು ಅಂತ ನೆನಪು. ಸಿಂಹದ ಸೊಂಟ ತುಂಬಾ ಚಿಕ್ಕದಾಗಿ, ನೀಟಾಗಿ, ಮಾಟಾಗಿ ಇರುತ್ತದೆ. ಸಿಂಹದ ಬೇರೆ ಅಂಗಾಂಗಗಳಿಗೆ ಹೋಲಿಸಿದರೆ ಸಿಂಹದ ಸೊಂಟ ತುಂಬಾ ಚಿಕ್ಕದು ಅನ್ನಿಸುತ್ತದೆ. ಹಾಗೆ ಚಿಕ್ಕ ಸೊಂಟ ಉಳ್ಳವರಿಗೆ ಸಿಂಹಕಟಿ ಹೊಂದಿದ ಮಹಿಳೆ ಅಥವಾ ಪುರುಷ ಎಂದು ಪ್ರಶಂಸೆ ಮಾಡುವ ರೂಢಿ ಇದೆ. ವಯಸ್ಸಾದಂತೆ ಸಿಂಹಕಟಿ ಹೋಗಿ ಗಜಕಟಿ (ಆನೆ ಸೊಂಟ), ಎಮ್ಮೆನಿತಂಬ (ಎಮ್ಮೆ ಕುಂಡಿ) ಇತ್ಯಾದಿ ಆಗುತ್ತವೆ. ಆ ಮಾತು ಬೇರೆ.

ಬಾಲಿವುಡ್ ಮಾಜಿ ನಟಿ, ಚೆಂದುಳ್ಳಿ ಚೆಲುವೆ ಶಿಲ್ಪಾ ಶೆಟ್ಟಿಗೆ ಸಿಂಹಕಟಿ ಸುಂದರಿ ಎನ್ನುವ ಬಿರುದು (ಬಾವಲಿಯ ಜೊತೆ) ಕೊಟ್ಟು ಹೊಗಳಿದ್ದು ಇದೆ. ಯೋಗಾಸನ ಹಾಕಿ ಹಾಕಿ ನಲವತ್ತೈದರ ಹರೆಯದಲ್ಲೂ ತುಂಬಾ ಸುಂದರವಾಗಿ ಆರೋಗ್ಯದ ಚಿಲುಮೆಯಾಗಿ ಕಾಣುತ್ತಾರೆ ಶಿಲ್ಪಾ ಶೆಟ್ಟಿ. ಬಾಬಾ ರಾಮದೇವರ ಜೊತೆ ಸವಾಲ್ ಹಾಕಿ ಜಿದ್ದಿಗೆ ಬಿದ್ದಂತೆ ಸಾರ್ವಜನಿಕವಾಗಿ ಯೋಗ ಮಾಡುತ್ತಾರೆ. ಅದ್ಭುತವಾದ ಮೈಕಟ್ಟನ್ನು ಕಾದುಕೊಂಡು ಬಂದಿದ್ದಾರೆ. ೧೯೯೦ ರ ದಶಕದಲ್ಲಿ 'ಬಾಝಿಗರ್' ಎನ್ನುವ ಸೂಪರ್ ಹಿಟ್ ಸಿನೆಮಾದ ಮೂಲಕ ಗಮನ ಸೆಳೆದ ಶಿಲ್ಪಾ ಮುಂದೆ ಸಾಕಷ್ಟು ಯಶಸ್ವಿ ನಟಿಯಾದರು. ಅಂದಿನ ಎಳಸಲು ಶಿಲ್ಪಾಳ ಮುಗ್ಧ ಸೌಂದರ್ಯ ಬೇರೆಯೇ ಇದ್ದರೆ ಇವತ್ತಿನ ಪ್ರಬುದ್ಧ ಶಿಲ್ಪಾಳ ಸೌಂದರ್ಯವೇ ಬೇರೆ. ಮರ್ಯಾದೆಯಿಂದ ಮಾಗುವ (graceful ageing) ಪ್ರಕ್ರಿಯೆಗೆ ಅತ್ಯುತ್ತಮ ಉದಾಹರಣೆ ಆಕೆ.

ಈಗ ಸಿಂಹಕಟಿಯ ಮನುಷ್ಯರನ್ನು ಬ್ಯಾಟರಿ ಹಾಕಿ ಹುಡುಕಿಕೊಂಡು ಹೋಗಬೇಕಾಗಿದೆ. ಮೊದಲಾಗಿದ್ದರೆ ಪುರುಷರು ಮಹಿಳೆಯರು ಇಬ್ಬರೂ ಸಹಜವಾಗಿ ಸಿಂಹಕಟಿಯನ್ನೇ ಹೊಂದಿರುತ್ತಿದ್ದರು. ಮಹಿಳೆಯರಿಗೆ ಸಿಂಹಕಟಿ ಸೌಂದರ್ಯದ ಸಂಕೇತವಾದರೆ, ಪುರುಷಸಿಂಹರಿಗೆ ಅದು ಪುರುಷತ್ವದ ಸಂಕೇತ.

ಸೊಂಟ, ಅದರಲ್ಲೂ ಮಹಿಳೆಯರ ಸೊಂಟ, ಏಕೆ ಸಣ್ಣಗಿರುತ್ತಿತ್ತು ಅಂದರೆ ಮಕ್ಕಳು ಅದರಲ್ಲಿ ವರಚ್ಚಾಗಿ (Snugly) ಫಿಟ್ ಆಗಿ ಕುಳಿತುಕೊಂಡು, ಮಹಿಳೆಗೆ ಹೆಚ್ಚಿನ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಲು ಅನುಕೂಲವಾಗಲಿ ಎಂದು. ಸೊಂಟದ ಒಂದು ಕಡೆ ನೀರಿನ ಕೊಡಪಾನ. ಸೊಂಟದ ಇನ್ನೊಂದು ಕಡೆ ಕೈಗೂಸು. ತಲೆ ಮೇಲೆ ಒಗೆಯಬೇಕಾದ ವಸ್ತ್ರಗಳ ಗಂಟು. ಇದು ಗ್ರಾಮೀಣ ಭಾಗದಲ್ಲಿ ಇವತ್ತಿಗೂ ಕಂಡುಬರುವ stereotypical ದೃಶ್ಯ. ಹೀಗೆ ಮಹಿಳೆ ನದಿಯತ್ತ ನಡೆಯುತ್ತಿದ್ದಾಗಲೇ ವಿಲನ್ ಪ್ರತ್ಯಕ್ಷವಾಗಬೇಕು. ಅಲ್ಲೊಂದು ಹೊಡೆದಾಟವಾಗಬೇಕು. ಅದು ಟಿಪಿಕಲ್ ಮೂವಿ ಸೀನ್.

ಇಸ್ರೇಲ್ ದೇಶ ಪಾಲೆನ್ಸ್ಟಿನ್ ಜಾಗಗಳಲ್ಲಿ ಮಾಡಿಕೊಳ್ಳುವ ಅಕ್ರಮ settlement ಜಾಗಗಳ ಹಳೆಯ ಫೋಟೋಗಳನ್ನು ನೋಡಿ. ಅಲ್ಲಿಯೂ ಮಹಿಳೆಯರು ಸಾರ್ವಜನಿಕ ಕೊಳಾಯಿಗೆ ಹೋಗಿ ನೀರು ತರುತ್ತಾರೆ. ಸೊಂಟದ ಒಂದು ಕಡೆ ಹಸುಗೂಸು. ಇನ್ನೊಂದು ಕಡೆ ನೀರಿನ ಕೊಡ. ಗಮನ ಸೆಳೆಯುವ extra fitting ಅಂದರೆ ಎದೆಗೆ ಅಡ್ಡಡ್ಡ ತೂಗಾಕಿಕೊಂಡಿರುವ ಉಝಿ(Uzi) ಆಟೋಮ್ಯಾಟಿಕ್ ರೈಫಲ್. Uzi ಇಸ್ರೇಲಿನ ಹೆಮ್ಮೆಯ ಆಯುಧ. ಯಾವಾಗ ದುಷ್ಟ ಉಗ್ರರು ಎಲ್ಲಿ ದಾಳಿ ಮಾಡುತ್ತಾರೋ ಗೊತ್ತಿಲ್ಲ. ಹಾಗೆಂದು ಅವರಿಗೆ ಹೆದರಿ ಮನೆಯಲ್ಲಿ ಕೂಡಲಾಗುವುದಿಲ್ಲ. ಎಲ್ಲರೂ ಸೈನ್ಯದ ತರಬೇತಿ ಪಡೆದಿರುತ್ತಾರೆ. ಸೈನ್ಯದಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸಿರುತ್ತಾರೆ. ಹಾಗಾಗಿ ಉಝಿ ಬಂದೂಕು ನೇತಾಕಿಕೊಂಡು ಮನೆಗೆಲಸ ಮಾಡಿಕೊಳ್ಳುವುದು ಅವರಿಗೆ ಉಸಿರಾಡಿದಷ್ಟೇ ಸಹಜ. ಹಾಗೆ ಉಝಿ ಬಂದೂಕು ನೇತಾಕಿಕೊಂಡು ಜೊತೆಗೆ ಮಗುವನ್ನೂ ಸೊಂಟದ ಮೇಲೆ ಏರಿಸಿಕೊಂಡು ತಮ್ಮ ಕೆಲಸ ಮಾಡಿಕೊಳ್ಳುವ ಇಸ್ರೇಲಿ ಮಹಿಳೆಯರು ನಿಜವಾದ ಸಿಂಹಕಟಿಯ ಮಹಿಳೆಯರು. ಕಟಿಯೊಂದೇ ಅಲ್ಲ ಇಡೀ ಸಿಂಹದ ಪ್ರತಿರೂಪ. ನರಸಿಂಹ ಮತ್ತು ನಾರಿಸಿಂಹಿಣಿಯರು.

ಮಹಿಳೆಯರು ಈಗ ತಹತಹಿಸುವ hourglass ಫಿಗರ್ ಮೊದಲು ಸಹಜವಾಗಿತ್ತು. ಈಗ ವಿರಳವಾಗಿದೆ. ಹಾಗಾಗಿ ಅಪರೂಪಕ್ಕೆ ಮಕ್ಕಳನ್ನು ಸೊಂಟದ ಮೇಲೆ ಇಟ್ಟುಕೊಂಡರೂ ಅವು ಸರಕ್ ಅಂತ ಜಾರಿ ಕೆಳಗೆ ಬಂದುಬಿಡುತ್ತವೆ. ಪ್ರತ್ಯೇಕ ಜಾರುಬಂಡೆ ಬೇಕಾಗಿಲ್ಲ. ಅಮ್ಮನ ಸೊಂಟದ ಮೇಲೆ ಕುಳಿತರೆ ಸಾಕು. ಅಲ್ಲೇ ಜಾರುಬಂಡೆ. 'ಅಮ್ಮಾ, ನೀನು ನಕ್ಕರೆ, ನಮ್ಮ ಬಾಳು ಸಕ್ಕರೆ. ನಿನ್ನ ಕಾಲಲ್ಲಿ ಸ್ವರ್ಗವಿದೆ. ಸೊಂಟದಲ್ಲಿ ಜಾರುಬಂಡೆಯಿದೆ. ಧನ್ಯ ನಾನು ತಾಯೀ!'

ಹೊಟ್ಟೆ ಬಂದ (ನಮ್ಮಂತಹ) ಗಂಡಸರ ಸೊಂಟದ ಮೇಲೆ ಪ್ಯಾಂಟ್ ನಿಲ್ಲುವುದಿಲ್ಲ. ಸೊಂಟ ದಪ್ಪಗಾದ ಹೆಂಗಸರ ಸೊಂಟದ ಮೇಲೆ ಕೂಸುಗಳು ನಿಲ್ಲುವುದಿಲ್ಲ. ಮಕ್ಕಳಿಗೆ ಸೊಂಟಾಸನದ ಮೇಲೆ ಕುಳಿತುಕೊಳ್ಳುವ ಭಾಗ್ಯಕ್ಕಾದರೂ ಸಿಂಹಕಟಿ ಇದ್ದರೆ ಅನುಕೂಲ ಅನ್ನಿಸುತ್ತದೆ.

ಸಿಂಹಕಟಿ ಎಂದಾಗ ಇಷ್ಟೆಲ್ಲಾ ವಿಷಯ ನೆನಪಿಗೆ ಬಂತು. ಇನ್ನು ಸಿಂಹಾವಲೋಕನ. ಸಿಂಹ ನಡೆಯುತ್ತಿರುವಾಗ ಆಗಾಗ ನಿಂತು ವಿವರವಾಗಿ ತನ್ನ ಹಿಂದೆ ಮತ್ತು ಸುತ್ತಮುತ್ತ ನೋಡಿ, ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿ ನಂತರ ಮುಂದೆ ನಡೆಯುತ್ತದೆ. ಒಂದು ಅಮೂಲಾಗ್ರ ಪುನರಾವಲೋಕನಕ್ಕೆ ಸಿಂಹಾವಲೋಕನ ಅನ್ನುತ್ತಾರೆ. Comprehensive review ಅನ್ನಬಹುದೇನೋ.

ಈಗ ಸಿಂಹಕಟಿಯ ನಟಿ ಶಿಲ್ಪಾ ಶೆಟ್ಟಿಯ ಜೀವನದ  ಸಿಂಹಾವಲೋಕನಕ್ಕೆ ಬಂದರೆ...ಅವರ ಪತಿ ಅದು ಯಾರೋ ರಾಜ್ ಕುಂದ್ರಾ ಅಂತೆ. ದೊಡ್ಡ ಶ್ರೀಮಂತ. ಅಡ್ನಾಡಿ ಸುದ್ದಿಗಳಲ್ಲೇ ಹೆಚ್ಚು ರಾರಾಜಿಸಿದವ. ಸ್ವಲ್ಪ ವರ್ಷಗಳ ಹಿಂದೆ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಅದು ಇದು ಅಂತ ಲಫಡಾ ಆದಾಗ ಕೂಡ ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ಆತನಿಗೆ ವಿಚಾರಣೆಗೆ ಆಮಂತ್ರಣ ಕೊಟ್ಟಿತ್ತು. ವಿಚಾರಣೆ ಎದುರಿಸಿ ಬಂದಿದ್ದ ಅಂತ ಸುದ್ದಿಯಾಗಿತ್ತು. ಈಗ ಆತನನ್ನು ವಿಚಾರಣೆಗೆ ಕರೆಸಿದ್ದು ಮಾತ್ರವಲ್ಲ ಬಂಧಿಸಿಯೂ ಬಿಟ್ಟಿದ್ದಾರೆ. ವಿಚಾರಣೆ ಬಳಿಕ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ. ಈ ಸಲ ಅಶ್ಲೀಲಚಿತ್ರಗಳ ನಿರ್ಮಾಣದ ಆರೋಪದಲ್ಲಿ. ಅವನ ಸಮರ್ಥಕರು 'ಏ, ಅವು ಅಶ್ಲೀಲಚಿತ್ರಗಳು ಅಲ್ಲ. ಅವು ಶೃಂಗಾರಚಿತ್ರಗಳು. Pornography ಮತ್ತು Erotica ಮಧ್ಯೆ ವ್ಯತ್ಯಾಸವಿದೆ. ರಾಜ್ ಕುಂದ್ರಾ ನಿರ್ದೋಷಿಯಾಗಿ ಹೊರ ಬರುತ್ತಾರೆ,' ಎಂದು ಹೇಳುತ್ತಾರೆ. ಇದರಲ್ಲಿ ನಿಜವಿರಬಹುದು. ಶೃಂಗಾರ ಚಿತ್ರಗಳ ಹೆಸರಲ್ಲಿ ಏನೇನೋ ನಡೆದು ಹೋಗುತ್ತದೆ. ಅಶ್ಲೀಲ ಮತ್ತು ಶೃಂಗಾರದ ನಡುವೆ ಇರುವ separating line ತುಂಬಾ ಮಸುಕುಮಸುಕಾಗಿದೆ. ಕಾನೂನಿನಲ್ಲಿ ಕೂಡ. It is very blurry.

ಹೀಗೆ ಗುಂಡಾಂತರ ಮಾಡಿಕೊಂಡ ಗಂಡ ಕಂಬಿ ಹಿಂದೆ ಹೋದ ಅಂದರೆ ಅದೊಂದು ಮಾತು. ಪೊಲೀಸರು ಶಿಲ್ಪಾರನ್ನು ಕೂಡ ವಿಚಾರಣೆಗೆ ಕರೆದು, ಐದಾರು ತಾಸು ವಿಚಾರಣೆ ಮಾಡಿ ಬಿಟ್ಟು ಕಳಿಸಿದ್ದಾರೆ. ಶಿಲ್ಪಾರಿಗೆ ಇದೇನೂ ಹೊಸದಲ್ಲ. ಸಿಂಹಾವಲೋಕನ ಮಾಡಿದರೆ ಈಗ ಸುಮಾರು ೧೮-೨೦ ವರ್ಷಗಳ ಹಿಂದೆ ಅವರ ಮೇಲೆ ಬೇರೊಂದು ಗುರುತರ ಆರೋಪ ಬಂದಿತ್ತು. ಆಗ ಇನ್ನೂ ಅವರ ವಿವಾಹವಾಗಿರಲಿಲ್ಲ. ಬಾಲಿವುಡ್ಡಿನಲ್ಲಿ ಸಾಕಷ್ಟು ಬೇಡಿಕೆಯ ಹೊಂದಿದ್ದ ಯಶಸ್ವಿ ತಾರೆಯೆನಿಸಿಕೊಂಡಿದ್ದರು. ಆಗ ಒಂದು ಲಫಡಾದಲ್ಲಿ ಶಿಲ್ಪಾ ಶೆಟ್ಟಿ ಕುಟುಂಬ ಸಿಕ್ಕಿಕೊಂಡಿತ್ತು.

ಏನಾಗಿತ್ತು ಅಂದರೆ....ಆಗ ಶಿಲ್ಪಾ ಶೆಟ್ಟಿ ಗುಜರಾತ್ ಮೂಲದ ಉದ್ಯಮಿಯೊಬ್ಬರ ಸೀರೆಗಳ ಜಾಹೀರಾತುಗಳಿಗೆ ರೂಪದರ್ಶಿಯಾಗಿ ಕೆಲಸ ಮಾಡುತ್ತಿದ್ದರು. ಕೋಟ್ಯಂತರ ರೂಪಾಯಿಗಳ ಒಪ್ಪಂದ ಮಾಡಿಕೊಂಡಿದ್ದರು. ಇವರೇನೋ ರೂಪದರ್ಶಿಯಾಗಿ ಕೆಲಸ ಮಾಡಿಕೊಟ್ಟರು. ಆ ಉದ್ಯಮಿ ರೊಕ್ಕ ಬಿಚ್ಚಲಿಲ್ಲ. ಬಿಚ್ಚಿದರೂ ದೊಡ್ಡ ಮೊತ್ತವನ್ನು ಉಳಿಸಿಕೊಂಡ. ಉಳಿಸಿಕೊಂಡ ಮೊತ್ತವನ್ನು ವಸೂಲಿ ಮಾಡುವುದೇ ದೊಡ್ಡ ತಲೆಬಿಸಿಯಾಯಿತು. ಆಗ ಎಂಟ್ರಿ ಕೊಟ್ಟಿದ್ದೇ ಮುಂಬೈ ಭೂಗತಲೋಕ. Mumbai Underworld.

ಆರೋಪವೇನೆಂದರೆ...ಶಿಲ್ಪಾರ ಪಾಲಕರು ಉದಯ್ ಶೆಟ್ಟಿಎಂಬ ಮುಂಬೈನ ಹೋಟೆಲ್ ಉದ್ಯಮಿಯ ಮೂಲಕ ವಿದೇಶದಲ್ಲಿ ನೆಲೆಸಿದ್ದ ಅಂಡರ್ವರ್ಲ್ಡ್ ಡಾನ್ ಫಝಲ್-ಉಲ್- ರಹಮಾನ್ ನನ್ನು ಸಂಪರ್ಕಿಸಿದರು. ಆತ ವಸೂಲಿಯ ಡೀಲ್ ತೆಗೆದುಕೊಂಡ. ಗುಜರಾತ್ ಮೂಲದ ಸೀರೆ ಉದ್ಯಮಿಯನ್ನು ಬೆದರಿಸಿದ. ಉದ್ಯಮಿ ಮಾಂಡವಳಿಗೆ (ಸಂಧಾನಕ್ಕೆ) ಮುಂದಾದ. ಎಲ್ಲರೂ ಒಪ್ಪುವಂತಹ ಡೀಲ್ ಕುದುರಲಿಲ್ಲ. ಭೂಗತರ ಧಮ್ಕಿಗೆ ಬೆದರಿದ ಉದ್ಯಮಿ ಪೊಲೀಸರಿಗೆ ದೂರು ಕೊಟ್ಟು ಅಂಬೋ ಅಂದ.

ಆಗ ಶಿಲ್ಪಾ ಶೆಟ್ಟಿಯ ಪಾಲಕರ ಮೇಲೆ ಮೊಕದ್ದಮೆ ದರ್ಜಾಗಿತ್ತು. ಪಾಲಕರು, ಡೀಲ್ ಕುದುರಿಸಿದ್ದ ಹೊಟೇಲಿಗ ಉದಯ್ ಶೆಟ್ಟಿ ಅಂದರ್ ಆಗಿದ್ದರು. ನಂತರ ಜಾಮೀನ್ ಮೇಲೆ ಹೊರಗೆ ಬಂದರು. ಸುಮಾರು ಬೇಗನೆಯೇ ಜಾಮೀನು ಸಿಕ್ಕಿದ್ದು ವಿಶೇಷ. ಆಗ ಕೂಡ ಗುಜರಾತಿನ ಪೊಲೀಸರು ಶಿಲ್ಪಾ ಶೆಟ್ಟಿ ಕುಟುಂಬದ ಸದಸ್ಯರನ್ನು ತೀವ್ರವಾದ ವಿಚಾರಣೆಗೆ ಗುರಿಪಡಿಸಿದ್ದರು ಎಂದು ಪತ್ರಿಕೆಗಳಲ್ಲಿ ಓದಿದ ನೆನಪು.

ಮುಂದೆ ಏನಾಯಿತು? ಮುಖ್ಯ ಆರೋಪಿ ಭೂಗತ ಪಾತಕಿ ಫಝಲ್-ಉಲ್-ರಹಮಾನ್ ಆಗ ವಿದೇಶದಲ್ಲಿ ಸುತ್ತಾಡಿಕೊಂಡಿದ್ದ. ನಂತರ ಮುಂದೆ ಹಲವಾರು ವರ್ಷಗಳ ನಂತರ ಯಾವುದೋ ದೇಶದಲ್ಲಿ ಬಂಧಿತನಾದ ಅವನನ್ನು ಭಾರತಕ್ಕೆ ಕಳಿಸಲಾಯಿತು. ಬಂದು ಗುಜರಾತಿನ ಯಾವುದೋ ಜೈಲಿನಲ್ಲಿ ಮುದ್ದೆ ಮುರಿಯುತ್ತಿದ್ದಾನೆ. ಕೇಸ್ ಇನ್ನೂ ನಡೆದಿದೆ ಅಂತ ಕಾಣುತ್ತಿದೆ. ಶಿಲ್ಪಾ ಶೆಟ್ಟಿಯ ತಂದೆ ನಿಧನರಾಗಿದ್ದಾರೆ. 

ಶಿಲ್ಪಾ ಶೆಟ್ಟಿಯ ಗಂಡ ರಾಜ್ ಕುಂದ್ರಾ ಮತ್ತೆ ಲಫಡಾದಲ್ಲಿ ಸಿಕ್ಕಾಕಿಕೊಂಡಾಗ ಶಿಲ್ಪಾ ಶೆಟ್ಟಿ ನೆನಪಾದಳು. ಸಿಂಹಕಟಿ ಸುಂದರಿ ಎಂದು ಆಕೆಗೆ ಮೆಚ್ಚುಗೆಯಿಂದ ಕೊಟ್ಟಿದ್ದ ಬಿರುದು ನೆನಪಾಯಿತು. ಹಾಗಾಗಿ ಒಂದು ಸಿಂಹಾವಲೋಕನ ಮಾಡಿದ್ದಾಯಿತು.

2 comments:

sunaath said...

ಪಂಜರದಲ್ಲಿ ಸಿಂಹಕಟಿ!

Mahesh Hegade said...

ಪಂಜರದಲ್ಲಿ ಸಿಂಹಕಟಿ! - ತುಂಬಾ creative ಆಗಿದೆ!

ಸಿಂಹಕಟಿ ಸದ್ಯ ಪಂಜರದ ಹೊರಗೆ ಇದೆ. ಸಿಂಹಪತಿ ಒಳಗಿದೆ. ಸಿಂಹಕಟಿ ಪಂಜರದ ಸುತ್ತಮುತ್ತ ಠಳಾಯಿಸುತ್ತಿದೇನೆಯೋ!??