ಮೋರ್ಡೇಕೈ ವನುನು - ಇಸ್ರೇಲಿನ ಡಿಮೋನಾ ಅಣುಸ್ಥಾವರದಲ್ಲಿ ಒಬ್ಬ ತಂತ್ರಜ್ಞನಾಗಿದ್ದ. ಡಿಮೋನಾ ಅಣುಸ್ಥಾವರ ಇಸ್ರೇಲಿನ ಅತ್ಯಂತ ರಹಸ್ಯ ಮತ್ತು ನಿಗೂಢ ತಾಣಗಳಲ್ಲಿ ಒಂದಾಗಿತ್ತು. ಆ ಅಣುಸ್ಥಾವರದಲ್ಲಿ ಇಸ್ರೇಲ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿ ಪಡಿಸುತ್ತಿದೆ ಎಂದು ಅಂತರರಾಷ್ಟ್ರೀಯ ಸಮುದಾಯಕ್ಕೆ ಪಕ್ಕಾ ಗುಮಾನಿ. ಇಸ್ರೇಲ್ ಮಾತ್ರ ಅಂತಹ ಆಪಾದನೆಗಳನ್ನು ತಳ್ಳಿಹಾಕುತ್ತಲೇ ಬಂದಿತ್ತು.
ಈ ಮನುಷ್ಯ ಎಲ್ಲ ರೀತಿಯಿಂದ ಓಕೆ ಎಂದು ವರದಿ ಕೊಟ್ಟ ನಂತರವೇ ಡಿಮೋನಾ ಆಸುಪಾಸಿನೊಳಗೆ ಪ್ರವೇಶ. ಇಲ್ಲವಾದರೆ ಡಿಮೋನಾದ ಸುತ್ತಮುತ್ತಲಿನ ಅದೆಷ್ಟೋ ದೊಡ್ಡ ಜಾಗ ಸಂಪೂರ್ಣವಾಗಿ ನಿಷೇಧಿತ. ಮೇಲಿನ ವಾಯುಪ್ರದೇಶದ ಮೇಲೆ ಇಸ್ರೇಲಿನ ಜಾಗರೂಕ ಕಣ್ಣುಗಾವಲು. ಇಂತಹ ಸಂಸ್ಥೆಯಲ್ಲಿ ನೌಕರಿ ಗಿಟ್ಟಿಸಿದ ನಂತರವೂ ಆ ಮನುಷ್ಯ ಸದಾ ಸರ್ಕಾರದ ನಿಗರಾಣಿಯಲ್ಲಿ ಇರುತ್ತಿದ್ದ. ಖಾಸಗಿ ಜೀವನವನ್ನು ಆತ ಒಂದು ರೀತಿಯಲ್ಲಿ ಕಳೆದುಕೊಂಡ ಹಾಗೆಯೇ.
ಅಣುಸ್ಥಾವರದಲ್ಲಿ ನೌಕರಿ ಖಾಲಿ ಇದೆ ಎಂಬ ಜಾಹೀರಾತನ್ನು ದಿನಪತ್ರಿಕೆಯೊಂದರಲ್ಲಿ ನೋಡಿದ್ದ ವನುನು ಅರ್ಜಿ ಹಾಕಿದ್ದ. ಎಲ್ಲ ರೀತಿಯ ತನಿಖೆ ಆದ ನಂತರ ಅವನಿಗೆ ನೌಕರಿ ಸಿಕ್ಕಿತ್ತು.
ಅವನಿಗೆ ಅಂತಹ ನೌಕರಿ ಸಿಕ್ಕಿದ್ದಾದರೂ ಹೇಗೆ? ಅವನು ಖುದ್ದಾಗಿ ವಾಮಪಂಥೀಯನಾಗಿದ್ದ. ಅರಬ್ ಕಮ್ಯುನಿಸ್ಟ್ ಪಕ್ಷದಲ್ಲಿ ಅವನಿಗೆ ಸ್ನೇಹಿತರಿದ್ದರು. ಅವನು ಖುದ್ದು ಯಹೂದಿಯೇ ಆಗಿದ್ದರೂ ಇಸ್ರೇಲಿನ ಕಟ್ಟರ್ ಯಹೂದಿಗಳಾದ ಝಿಯೋನಿಸ್ಟಗಳನ್ನು (Zionist) ದ್ವೇಷಿಸುತ್ತಿದ್ದ 'ರಖಾ' ಪಕ್ಷದಲ್ಲೂ ಅವನಿಗೆ ಪರಿಚಿತರಿದ್ದರು. ಇಂತಹ ಮಿತ್ರರೊಂದಿಗೆ ವನುನು ಇಸ್ರೇಲಿ ಸರ್ಕಾರದ ವಿರುದ್ಧದ ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದ. ಪತ್ರಿಕೆಗಳಿಗೆ ತನ್ನ ಸಿದ್ಧಾಂತವನ್ನು ವಿವರಿಸಿ ಸಂದರ್ಶನ ಕೊಟ್ಟಿದ್ದ. ರಖಾ ಪಕ್ಷದ ಕ್ರಾಂತಿಕಾರಿಗಳು ಒಮ್ಮೊಮ್ಮೆ ಅವನ ಮನೆಯಲ್ಲೂ ಉಳಿದಿದ್ದುಂಟು. ಬೆನ್ ಗುರಿಯೋನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾಗಲೂ ಸಹ ಇಂತಹ ಎಡಬಿಡಂಗಿತನಗಳಿಂದ ವನುನು ಎದ್ದುಕಾಣುತ್ತಿದ್ದ.
ಸಿದ್ಧಾಂತಗಳ ಬಗ್ಗೆ ವನುನುಗೆ ಒಂದು ಬದ್ಧತೆ ಬಂದಿರಲಿಲ್ಲ. ಮೊದಲು ಬಲಪಂಥೀಯನಾಗಿದ್ದ. ಯಹೂದಿಗಳ ಜನಾಂಗೀಯ ಪ್ರಾಬಲ್ಯವನ್ನು ಪ್ರತಿಪಾದಿಸುತ್ತಿದ್ದ ಧರ್ಮಗುರು ರಾಬೈ ಕಹಾನೆಯ ಅನುಯಾಯಿಯಾಗಿದ್ದ. ಬಲಪಂಥೀಯ ಲಿಖುಡ್ ಪಕ್ಷಕ್ಕೆ ಮತ ಹಾಕಿದ್ದ. ಆದರೆ ೧೯೮೨ ರಲ್ಲಿ ನಡೆದ ಪಕ್ಕದ ದೇಶ ಲೆಬನಾನ್ ಜೊತೆಗಿನ ವಿವಾದಾತ್ಮಕ ಯುದ್ಧ ಅವನನ್ನು ಮತ್ತು ಅವನ ಸಿದ್ಧಾಂತಗಳನ್ನು ಬದಲಾಯಿಸಿಬಿಟ್ಟಿತು ಎಂದು ನಂಬಿದ್ದ.
ವನುನು ಒಂಟಿಜೀವಿ. ಅವನಿಗೆ ಯಾರೂ ಮಿತ್ರರಿರಲಿಲ್ಲ. ವನುನುವಿನ ಕುಟುಂಬದವರು ಮೂಲತಃ ಆಫ್ರಿಕಾದ ಮೊರಾಕೊ ದೇಶದಿಂದ ಇಸ್ರೇಲಿಗೆ ಬಂದು ನೆಲೆಸಿದ್ದರು. ೧೯೪೮ ರಲ್ಲಿ ಇಸ್ರೇಲ್ ಅಧಿಕೃತವಾಗಿ ಸ್ಥಾಪಿತವಾದ ಮೇಲೆ ಜಗತ್ತಿನಲ್ಲಿ ಎಲ್ಲೇ ನೆಲೆಸಿದ್ದ ಯಹೂದಿಗಳೂ ಸಹ ಇಸ್ರೇಲ್ ದೇಶವನ್ನು ತಮ್ಮ ತಾಯ್ನಾಡು ಎಂದು ನಂಬಿ ಬರಬಹುದಿತ್ತು. ಸರ್ಕಾರ ಅವರಿಗೆ ಎಲ್ಲ ರೀತಿಯ ಸಹಾಯ ಮಾಡುತ್ತಿತ್ತು. ಇಷ್ಟೆಲ್ಲಾ ಆದರೂ ಇಸ್ರೇಲಿನಲ್ಲೇ ಹುಟ್ಟಿ ಬೆಳೆದಿದ್ದ ಇಸ್ರೇಲಿಗಳು ಮತ್ತು ವಲಸಿಗರ ಮಧ್ಯೆ ಸ್ಪರ್ಧೆ, ಈರ್ಷ್ಯೆ ಎಲ್ಲ ಇತ್ತು.
ವನುನುವಿಗೆ ಒಂದು ಬೇಸರವಿತ್ತು. ತಾನು ಮೂಲತಃ ಮೊರಾಕೊ ದೇಶದವನು ಎಂದು ತನಗೆ ಭೇದಭಾವ ಮಾಡಲಾಗುತ್ತಿದೆ. ಅವಕಾಶಗಳನ್ನು ನಿರಾಕರಿಸಲಾಗುತ್ತಿದೆ. ಪ್ರತಿಷ್ಠಿತ ಏರ್ ಫೋರ್ಸ್ ಅಕಾಡೆಮಿಯಲ್ಲಿ ಪ್ರವೇಶ ಸಿಗದಿದ್ದಾಗ ಮನಸ್ಸು ಮತ್ತೂ ಕಹಿಯಾಯಿತು.
ಇಸ್ರೇಲಿ ನಾಗರಿಕರಿಗೆ ಸೇನೆಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ. ವನುನು ಕೂಡ ಸೇವೆ ಸಲ್ಲಿಸಿದ. ನಂತರ ಇಂಜಿನಿಯರಿಂಗ್ ವಿದ್ಯಾಭ್ಯಾಸ ಶುರುಮಾಡಿದ. ನಂತರ ಅರ್ಥಶಾಸ್ತ್ರಕ್ಕೆ ಬದಲಾಯಿಸಿಕೊಂಡ. ಅದನ್ನೂ ಬಿಟ್ಟು ತತ್ವಶಾಸ್ತ್ರಕ್ಕೆ ಸೇರಿಕೊಂಡ. ಸಸ್ಯಾಹಾರಿಯಾದ. ನಂತರ ಹೈನೋತ್ಪನ್ನಗಳನ್ನೂ ಬಿಟ್ಟು ಸಂಪೂರ್ಣ ಸಸ್ಯಾಹಾರಿಯಾದ (vegan).
ಅವನಿಗೆ ದುಡ್ಡಿನ ಬಗ್ಗೆ ಅಪಾರ ಮೋಹವಿತ್ತು. ಆದರೆ ಕೆಲಸ ಮಾಡಿ ದುಡ್ಡು ಗಳಿಸುವುದು ತುಂಬಾ ನಿಧಾನವಾದ ಮಾರ್ಗ ಎಂದಿದ್ದ. ಷೇರು ಬಜಾರಿನಲ್ಲಿ ರೊಕ್ಕ ಮಾಡುವುದು ತ್ವರಿತ ಎಂದು ತನ್ನ ಡೈರಿಯಲ್ಲಿ ಬರೆದುಕೊಂಡಿದ್ದ. ನಗ್ನ ರೂಪದರ್ಶಿಯಾಗಿ ಕೂಡ ಕೆಲಸ ಮಾಡಿದ. ಸ್ಪರ್ಧೆಯೊಂದರಲ್ಲಿ ಚಡ್ಡಿ ಬಿಚ್ಚಿಬಿಟ್ಟ. ಅದಕ್ಕಾಗಿ ವಿಶೇಷ ಬಹುಮಾನ ಪಡೆದುಕೊಂಡ. ಹೀಗೆಲ್ಲಾ ಬಹುಕೃತ ವೇಷ ಮಾಡಿ ಸಂಪಾದಿಸಿದ ರೊಕ್ಕದಲ್ಲಿ ಕೆಂಬಣ್ಣದ ದುಬಾರಿ ಆಡಿ ಕಾರ್ ಖರೀದಿಸಿದ. ಜುಮ್ ಅಂತ ಇಸ್ರೇಲ್ ತುಂಬಾ ಸುತ್ತಾಡಿಕೊಂಡಿದ್ದ.
ಅವರವರ ವೈಯಕ್ತಿಕ ಜೀವನ ಅವರವರದ್ದು ಬಿಡಿ. ಆದರೆ ಇವನು ರಖಾ ಪಕ್ಷದ ಕ್ರಾಂತಿಕಾರಿಗಳನ್ನು ಬಹಿರಂಗವಾಗಿ ಬೆಂಬಲಿಸುತ್ತಿದ್ದುದು ಕಾನೂನು ಬಾಹಿರವಾಗಿತ್ತು. ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ಹಾಗೆ ಮಾಡದ ಸರ್ಕಾರ ಅವನನ್ನು ವಿಚಾರಣೆಗೆ ಕರೆಸಿತು. ಆಂತರಿಕ ಭದ್ರತಾ ಸಂಸ್ಥೆ ಶಬಾಕನ ಪೊಲೀಸರು ಅವನಿಗೆ ಇಂತಹ ಚಟುವಟಿಕೆಗಳಿಂದ ದೂರವಿರುವಂತೆ ಹೇಳಿದರು. ಹಾಗಂತ ಮುಚ್ಚಳಿಕೆ ಬರೆದುಕೊಡುವಂತೆ ಕೇಳಿದರು. ಇವನು ಬರೆದುಕೊಡಲಿಲ್ಲ. ಅಸಡ್ಡೆಯಿಂದ ಎದ್ದು ಬಂದ. ತನ್ನ ಜೀವನಶೈಲಿಯನ್ನೂ ಬದಲಾಯಿಸಿಕೊಳ್ಳಲಿಲ್ಲ.
ಇವನ ವಿವರಗಳೆಲ್ಲ ಸರ್ಕಾರಿ ಕಡತಗಳಲ್ಲಿ ದಾಖಲಾದವು. ಹೆಚ್ಚಿನ ಮಾಹಿತಿ ಲಭ್ಯವಾದಂತೆ ಅವುಗಳನ್ನು ಕಡತಗಳಲ್ಲಿ ಸೇರಿಸಲಾಗುತ್ತಿತ್ತು. ವನುನು ಅಣುಸ್ಥಾವರದಲ್ಲಿ ನೌಕರಿಗೆ ಅರ್ಜಿ ಹಾಕಿದಾಗ ಇವೆಲ್ಲಾ ಮಾಹಿತಿಯನ್ನು ಪರಿಶೀಲಿಸಲಾಗಿತ್ತು. ಅದೇನು ಅಜಾಗರೂಕತೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ತುಂಬಾ ಮುಖ್ಯ ಮಾಹಿತಿ ಕಡೆಗಣಿಸಲ್ಪಟ್ಟಿತ್ತು.ಇಂತಹ ವಿವಾದಾತ್ಮಕ ಹಿನ್ನೆಲೆ ಹೊಂದಿದ್ದ ವ್ಯಕ್ತಿಗೆ ನೌಕರಿ ಕೊಟ್ಟು ಇಸ್ರೇಲಿ ರಕ್ಷಣಾ ವ್ಯವಸ್ಥೆ ಮತ್ತು ಡಿಮೋನಾ ಅಣುಸ್ಥಾವರದ ರಕ್ಷಣಾ ವ್ಯವಸ್ಥೆಯಿಂದ ದೊಡ್ಡ ಮಟ್ಟದ ಅಚಾತುರ್ಯವೊಂದು ನಡೆದುಹೋಗಿತ್ತು.
ಇನ್ಸ್ಟಿಟ್ಯೂಟ್ ೨ (Institute 2) ಎಂಬುದು ಅಣುಸ್ಥಾವರದ ಅತ್ಯಂತ ರಹಸ್ಯ ಘಟಕವಾಗಿತ್ತು. ಇಡೀ ಡಿಮೋನಾದಲ್ಲಿ ಸುಮಾರು ೨,೭೦೦ ಜನ ನೌಕರರಿದ್ದರೆ ಕೇವಲ ೧೫೦ ಜನರಿಗೆ ಮಾತ್ರ ಇನ್ಸ್ಟಿಟ್ಯೂಟ್ ೨ ನ್ನು ಪ್ರವೇಶಿಸುವ ಅನುಮತಿ ಮತ್ತು ಅರ್ಹತೆ ಇತ್ತು. ಅಂತವರಲ್ಲಿ ಈ ವನುನು ಕೂಡ ಒಬ್ಬವ. ಇದು ಮತ್ತೂ ದೊಡ್ಡ ಪ್ರಮಾದವಾಗಿತ್ತು.
ಡಿಮೋನಾ ಅಣುಸ್ಥಾವರವನ್ನು ಹೊರಗಿಂದ ನೋಡಿದರೆ ಒಂದು ಎರಡಂತಸ್ತಿನ ಸಾಮಾನ್ಯ ಕಟ್ಟಡದಂತಿತ್ತು. ಆದರೆ ಅಲ್ಲೊಂದು ಲಿಫ್ಟ್ ಕೂಡ ಇತ್ತು. ಕೇವಲ ಎರಡಂತಸ್ತಿನ ಕಟ್ಟಡಕ್ಕೆ ಲಿಫ್ಟ್ ಏಕೆ ಎಂದು ಯೋಚಿಸಿದರೆ...ಮೇಲೆ ಹೋಗಲು ಲಿಫ್ಟ್ ಬೇಕಾಗಿರಲಿಲ್ಲ. ಮೇಲೆ ಕಾಣುವ ಎರಡು ಅಂತಸ್ತುಗಳನ್ನು ಬಿಟ್ಟು ಮೇಲಿಂದ ಕಾಣದ ಆರು ಅಂತಸ್ತುಗಳು ಭೂಮಿಯ ಅಡಿಯಲ್ಲಿದ್ದವು. ಅವುಗಳಿಗೆ ಹೋಗಲು ಲಿಫ್ಟ್ ಬೇಕಾಗುತ್ತಿತ್ತು.
ಮೊದಲನೇ ಮಹಡಿಯಲ್ಲಿ ಕಚೇರಿಗಳಿದ್ದವು. ನೆಲದ ಮಟ್ಟದ ಅಂತಸ್ತಿನಲ್ಲಿ ಯುರೇನಿಯಂ ಸಂಸ್ಕರಿಸಲಾಗುತ್ತಿತ್ತು. ಭೂಮಿಯ ಕೆಳಗಿದ್ದ ಮೊದಲ ಅಂತಸ್ತಿನಲ್ಲಿ ಪೈಪುಗಳು ಮತ್ತು ವಾಲ್ವುಗಳು ಇದ್ದವು. ಎರಡನೇ ಅಂತಸ್ತನ್ನು 'ಗೋಲ್ಡಾಳ ಬಾಲ್ಕನಿ' ಎಂದು ಕರೆಯಲಾಗುತ್ತಿತ್ತು. ಮಾಜಿ ಪ್ರಧಾನಿ, ಉಕ್ಕಿನ ಮಹಿಳೆ, ಗೋಲ್ಡಾ ಮೇಯಿರ್ ಅವರ ಸ್ಮರಣಾರ್ಥ. ಅದು ಎಂತಹ ಮುಖ್ಯ ವ್ಯಕ್ತಿಗಳೇ ಇರಲಿ, ಅವರಿಗೆ ಹೆಚ್ಚೆಂದರೆ ಇಲ್ಲಿಯವರೆಗೆ ಮಾತ್ರ ಅವಕಾಶ. ಅದಕ್ಕೂ ಮುಂದಿಲ್ಲ. ಭೂಮಿಯ ಕೆಳಗಿನ ಮೂರನೇ ಅಂತಸ್ತಿನಲ್ಲಿ ತಂತ್ರಜ್ಞರು ಯುರೇನಿಯಂ ರಾಡುಗಳನ್ನು ಸಂಸ್ಕರಿಸುತ್ತಿದ್ದರು. ನಾಲ್ಕನೇಯ ಅಂತಸ್ತಿನಲ್ಲಿ ಪ್ಲುಟೋನಿಯಂ ಸಂಗ್ರಹ. ಐದನೇ ಅಂತಸ್ತಿನಲ್ಲಿ ಬಾಂಬುಗಳು ತಯಾರಾಗುತ್ತಿದ್ದವು. ಆರನೇ ಅಂತಸ್ತಿನಲ್ಲಿ ಪರಮಾಣು ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿಗಾಗಿ ಸಂಸ್ಕರಿಸಲಾಗುತ್ತಿತ್ತು.
ಒಂದು ದಿನ ವನುನು ತನ್ನ ಜೊತೆ ಕ್ಯಾಮರಾವೊಂದನ್ನು ತಂದ. 'ಏಕೆ ಕ್ಯಾಮರಾ ತಂದೆ?' ಎಂದು ಭದ್ರತಾ ಸಿಬ್ಬಂದಿ ಕೇಳಿದರೆ ಉತ್ತರ ತಯಾರಿತ್ತು. 'ಬೀಚಿಗೆ ಹೋಗಿದ್ದೆ. ಆವಾಗ ಒಯ್ದಿದ್ದೆ. ಇದೇ ಚೀಲದಲ್ಲಿ. ಈಗ ಅದನ್ನೇ ತಂದೆ. ಕ್ಯಾಮರಾ ಇದೆ ಎಂದು ಮರೆತಿದ್ದೆ,' ಎಂದು ಓಳು ಬಿಡಲು ಸಿದ್ಧನಾಗಿದ್ದ. ಆದರೆ ಆಗಲೇ ಕೆಲಸ ಮಾಡಲು ಆರಂಭಿಸಿ ಸುಮಾರು ಸಮಯವಾಗಿತ್ತು. ರಕ್ಷಣಾ ಸಿಬ್ಬಂದಿಗೆ ಇವನ ಪರಿಚಯವಿತ್ತು. ಒಟ್ಟಿನಲ್ಲಿ ಭದ್ರತಾ ವ್ಯವಸ್ಥೆ ನಿದ್ದೆಗೆ ಜಾರಿತ್ತು. ಯಾರೂ ಇವನ ಚೀಲ ತಪಾಸಣೆ ಮಾಡಲಿಲ್ಲ. ಕ್ಯಾಮರಾ ಒಳಗೆ ಹೋಗುವುದನ್ನು ತಡೆಯಲಿಲ್ಲ. ಏನೂ ಕೇಳಲೇ ಇಲ್ಲ.
ಮಧ್ಯಾಹ್ನದ ಊಟದ ಸಮಯದಲ್ಲಿ, ಸಂಜೆ ಎಲ್ಲರೂ ಮನೆಗೆ ಹೋದ ನಂತರ, ವನುನು ಕ್ಯಾಮರಾ ಹಿಡಿದು ಎಲ್ಲ ಕಡೆ ತಿರುಗಾಡುತ್ತಿದ್ದ. ಎಲ್ಲ ಕಡೆ ಓಡಾಡುವ ಪರವಾನಿಗೆಯಂತೂ ಇತ್ತು. ಎಲ್ಲದರ ಫೋಟೋ ತೆಗೆದ. ವಿವರವಾದ ರೇಖಾಚಿತ್ರಗಳನ್ನು(sketches) ಕೈಯಿಂದ ಬಿಡಿಸಿದ. ಖಾಲಿಯಿದ್ದ ಕಚೇರಿಗಳನ್ನು ಹೊಕ್ಕ. ಕೈಗೆ ಸಿಕ್ಕ ಕಡತಗಳನ್ನು ನೋಡಿದ. ಮಾಹಿತಿ ಸಂಗ್ರಹಿಸಿದ. ರಕ್ಷಣಾ ವ್ಯವಸ್ಥೆ ಮಾತ್ರ ಇನ್ನೂ ಗಾಢ ನಿದ್ರೆಯಲ್ಲಿತ್ತು.
ವನುನುನ ಮೇಲ್ವಿಚಾರಕರಿಗೆ ಇವನ ಖತರ್ನಾಕ್ ಹವ್ಯಾಸಗಳ ಬಗ್ಗೆ ಏನೂ ಗೊತ್ತಿರಲಿಲ್ಲ. ತನ್ನ ಪಾಡಿಗೆ ತಾನಿರುವ, ಗಂಭೀರ ಸ್ವಭಾವದ, ಪರಿಶ್ರಮದಿಂದ ಕೆಲಸ ಮಾಡುವ ತಂತ್ರಜ್ಞ ಎಂದೇ ಭಾವಿಸಿದ್ದರು.
ಇಸ್ವಿ ೧೯೮೫ ರ ಮುಕ್ತಾಯದ ಹೊತ್ತಿಗೆ ವನುನುವನ್ನು ನೌಕರಿಯಿಂದ್ ತೆಗೆಯಲಾಯಿತು. ಅವನ ಹಿಂದಿನ ಇತಿಹಾಸದ ಕಾರಣದಿಂದಲ್ಲ. ಹಣಕಾಸಿನ ಮುಗ್ಗಟ್ಟು ದೇಶವ್ಯಾಪಿಯಾಗಿತ್ತು. ಎಲ್ಲ ಇಲಾಖೆಗಳ ಬಜೆಟ್ ಕಡಿತವಾಗಿತ್ತು. ಡಿಮೋನಾ ಅಣುಸ್ಥಾವರವೂ ತನ್ನ ಆಯವ್ಯಯವನ್ನು ಸರಿತೂಗಿಸಬೇಕಾಗಿತ್ತು. ಹಾಗಾಗಿ ಒಂದಿಷ್ಟು ನೌಕರನ್ನು ತೆಗೆಯಬೇಕಾಗಿತ್ತು. ಅಂತವರಲ್ಲಿ ಒಬ್ಬ ವನುನು ಕೂಡ.
ನೌಕರಿಯಿಂದ ತೆಗೆದು ಬರಿಗೈಯಲ್ಲೇನೂ ಕಳಿಸಲಿಲ್ಲ. ೧೫೦% ಬೇರ್ಪಡಿಕೆ (severance) ಪ್ಯಾಕೇಜ್ ಕೊಡಲಾಯಿತು. ಎಂಟು ತಿಂಗಳುಗಳ ಸಂಬಳವನ್ನೂ ಕೊಡಲಾಯಿತು. ಇಷ್ಟೆಲ್ಲಾ ಕೊಟ್ಟು ಕೈ ಮುಗಿದ ಡಿಮೋನಾ ಅಣುಸ್ಥಾವರ ಶುಭ ಕೋರಿ ಮಾರ್ಡೇಕೈ ವನುನುವನ್ನು ಮನೆಗೆ ಕಳಿಸಿತು.
ವನುನುವಿನ ಮನಸ್ಸು ಮತ್ತೂ ಕಹಿಯಾಯಿತು. ತಾನು ಮೊರಾಕೊ ಮೂಲದವನು ಎಂದು ಭೇದಭಾವ ಮಾಡುತ್ತಾರೆ ಎನ್ನುವ ಕೊರಗು ಮೊದಲಿಂದಲೂ ಇತ್ತು. ಈಗ ಅದು ಇನ್ನೂ ಬಲವಾಯಿತು. ವ್ಯವಸ್ಥೆಯ ಮೇಲೆ ಕೋಪವೂ ಬಂತು.
ಒಂದು ಧೀರ್ಘ ಪ್ರವಾಸ ಹೋಗಿಬರೋಣ ಎಂದುಕೊಂಡ. ಇಸ್ರೇಲ್ ಬಿಟ್ಟು ಬೇರೆ ಯಾವುದಾದರೂ ದೇಶ ಸಿಕ್ಕು, ಅದು ಇಷ್ಟವಾಗಿ, ಅಲ್ಲಿ ಶಾಶ್ವತವಾಗಿ ಉಳಿಯುವಂತಾದರೆ ಇಸ್ರೇಲಿಗೆ ವಾಪಸ್ ಬರುವುದೇ ಬೇಡ ಎಂದುಕೊಂಡ. ಇಸ್ರೇಲ್ ಎಷ್ಟೇ ಯಹೂದಿಗಳ ನಾಡು ಎಂದುಕೊಂಡರೂ ಒಂದು ಕೋಟಿಗೂ ಮೀರಿ ಯಹೂದಿಗಳು ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ನೆಲೆಸಿದ್ದರು. ತಾನೂ ಕೂಡ ಅಂತವರಲ್ಲಿ ಒಬ್ಬವನಾಗಿಬಿಟ್ಟರೆ ಹೇಗೆ ಎನ್ನುವ ವಿಚಾರ ಕೂಡ ಬಂತು.
ವನುನು ತನ್ನ ಫ್ಲಾಟ್ ಮಾರಿದ. ಕಾರನ್ನು ವಿಲೇವಾರಿ ಮಾಡಿದ. ಎಲ್ಲ ಬ್ಯಾಂಕ್ ಖಾತೆಗಳಿಂದ ರೊಕ್ಕ ತೆಗೆದುಕೊಂಡ. ಬ್ಯಾಂಕ್ ಖಾತೆಗಳನ್ನು ಮುಚ್ಚಿದ.
ಬೆನ್ನ ಮೇಲೊಂದು ಚೀಲ ನೇತಾಡಿಸಿಕೊಂಡು ದೇಶಾಂತರ ಹೊರಟುಬಿಟ್ಟ. ಮೊದಲೂ ದೂರದ ದೇಶಗಳಿಗೆ ಪ್ರವಾಸ ಹೋಗಿದ್ದ. ಹಿಂದೊಮ್ಮೆ ಯೂರೋಪ್ ಮತ್ತು ಅಮೇರಿಕಾ ಎಲ್ಲ ಸುತ್ತಾಡಿ ಬಂದಿದ್ದ. ಈ ಸಲ ಪೂರ್ವದತ್ತ ಮುಖ ಮಾಡಿದ.
ಮೊದಲು ಗ್ರೀಸ್ ದೇಶಕ್ಕೆ ಹೋದ. ಅಲ್ಲಿ ಕೆಲ ಕಾಲ ತಂಗಿದ್ದ. ನಂತರ ಅಲ್ಲಿಂದ ರಶಿಯಾ, ಥೈಲ್ಯಾಂಡ್ ಮಾರ್ಗವಾಗಿ ನೇಪಾಳ ಸೇರಿಕೊಂಡ. ಕಾಠಮಂಡುವಿನಲ್ಲಿ ಇಸ್ರೇಲಿ ಯುವತಿಯೊಬ್ಬಳು ಸಿಕ್ಕಳು. ನಿರ್ಲಜ್ಜನಂತೆ ಅವಳಿಗೆ ಗಾಳ ಹಾಕಿದ. ಅವಳಿಗೆ ತನ್ನ ಕಹಾನಿ ಹೇಳಿಕೊಂಡ. ಬಲಪಂಥೀಯ ವಿಚಾರಧಾರೆಯನ್ನು ಖಂಡಿಸಿದ. ತನ್ನ ಎಡಪಂಥೀಯ ವಿಚಾರಧಾರೆಯನ್ನು ಸಮರ್ಥಿಸಿಕೊಂಡ. ಹೆಚ್ಚಾಗಿ ವಾಪಸ್ ಹೋಗುವುದಿಲ್ಲ ಎಂದ. ಅವಳೇನು ಹೇಳಿದಳೋ, ಇವನ ಗಾಳಕ್ಕೆ ಬಿದ್ದಳೋ ಇಲ್ಲವೋ ಗೊತ್ತಿಲ್ಲ. ಬೌದ್ಧರ ಮಂದಿರಕ್ಕೆ ಹೋದ. ಬೌದ್ಧನಾಗಿಬಿಡುವ ಖಯಾಲೂ ಕೂಡ ಬಂತು.
ಕಾಠಮಂಡುವಿನಲ್ಲಿ ಸ್ವಲ್ಪ ದಿನ ಕಳೆದ ನಂತರ ಸೀದಾ ಆಸ್ಟ್ರೇಲಿಯಾಗೆ ಹೋಗಿಬಿಟ್ಟ. ಸಿಡ್ನಿ ನಗರದಲ್ಲಿ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿದ. ಆದರೂ ಸಂತೋಷವಿರಲಿಲ್ಲ. ತುಂಬಾ ಏಕಾಂಗಿತನ ಮತ್ತು ಏಕತಾನತೆ ಕೊರೆಯತೊಡಗಿತು. ಬೇಸರವಾಗತೊಡಗಿತು.
ಒಂದು ದಿನ ಸಿಡ್ನಿ ನಗರದ ಕುಖ್ಯಾತ ಬಡಾವಣೆವೊಂದಕ್ಕೆ ಹೋದ. ಬೀದಿ ವೇಶ್ಯೆಯರ, ಕಳ್ಳರ, ಸುಳ್ಳರ, ಡ್ರಗ್ ಮಾರಾಟಗಾರರ ಕೊಂಪೆ ಅದು. ದೇವರು ಎಲ್ಲ ಕಡೆ ಇದ್ದಾನೋ ಇಲ್ಲವೋ ಗೊತ್ತಿಲ್ಲ. ಆದರೆ ದೇವಸ್ಥಾನಗಳಂತೂ ಇರುತ್ತವೆ. ಆ ಮಾದರಿಯಲ್ಲಿ ಆ ಕೊಂಪೆಯಲ್ಲೂ ಒಂದು ಚರ್ಚ್ ಇತ್ತು. ಮಾಡಲು ಏನೂ ಕೆಲಸವಿರಲಿಲ್ಲ. ಚರ್ಚಿನೊಳಕ್ಕೆ ಹೊಕ್ಕ. ಅಲ್ಲಿನ ಪಾದ್ರಿ ಪ್ರೀತಿಯಿಂದ ಬರಮಾಡಿಕೊಂಡ. ಈ ಇಸ್ರೇಲಿ ಅಬ್ಬೇಪಾರಿಗೆ ಊಟ ಮತ್ತು ಆಶ್ರಯದ ತುಂಬಾ ಜರೂರತ್ತಿದೆ ಎಂದು ನೋಡಿದ ಕೂಡಲೇ ಗೊತ್ತಾಗುವಂತಿತ್ತು. ಅದನ್ನು ದಯಪಾಲಿಸಿದ. ಸ್ನೇಹದ ಹಸ್ತ ಚಾಚಿದ. ಅಬ್ಬೇಪಾರಿಯಾಗಿದ್ದ ವನುನುವಿಗೆ ಆಶ್ರಯದಾತ ಮತ್ತು ಆಪಧ್ಬಾಂಧವನಾದ ಆ ಪಾದ್ರಿ. ಮುಂದಿನ ಎರಡು ವಾರಗಳ ಕಾಲ ಇಬ್ಬರೂ ತುಂಬಾ ಹತ್ತಿರವಾದರು. ತನ್ನ ಕಥೆಯೆನ್ನೆಲ್ಲಾ ಪೂರ್ತಿಯಾಗಿ ಬಿಚ್ಚಿ ಹೇಳಿಕೊಂಡ ವನುನು. ಪಾದ್ರಿ ತಲೆಯಾಡಿಸುತ್ತ ಎಲ್ಲವನ್ನೂ ಕೇಳಿದ. ಎರಡು ವಾರಗಳಾಗುವಷ್ಟರಲ್ಲಿ ವನುನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ. ಜಾನ್ ಕ್ರಾಸ್ಮನ್ ಎನ್ನುವ ಹೊಸ ಹೆಸರನ್ನು ಪಡೆದುಕೊಂಡ. ಅಂದು ತಾರೀಕು - ಆಗಸ್ಟ್ ೧೭, ೧೯೮೬.
ವನುನು ಅಷ್ಟೊಂದು ಕಟ್ಟರ್ ಯಹೂದಿಯಾಗಿರದಿದ್ದರೂ ಕ್ರೈಸ್ತ ಧರ್ಮಕ್ಕೆ ಸೇರಿದಾಗ ಒಂದು ತರಹದ ಕಸಿವಿಸಿಯಾಗಿದ್ದಂತೂ ನಿಜ. ಕ್ರೈಸ್ತನಾಗದೇ ಹೋಗಿದ್ದರೆ ಬೌದ್ಧ ಅಥವಾ ಬೇರೆ ಧರ್ಮಕ್ಕೆ ಸೇರುವುದು ಖಾತ್ರಿಯಿತ್ತು. ಧರ್ಮ ಬದಲಾಯಿತು. ಇಸ್ರೇಲ್ ಬಗ್ಗೆ ನಿಷ್ಠೆ ಮತ್ತೂ ಕಮ್ಮಿಯಾಯಿತು.
ಚರ್ಚಿನ ಒಂದು ಸಮಾರಂಭದಲ್ಲಿ, ವನುನು ತನ್ನ ಮಿತ್ರರಿಗೆ ತನ್ನ ಹಿನ್ನೆಲೆಯನ್ನು ವಿವರವಾಗಿ ಹೇಳಿಕೊಳ್ಳುತ್ತಿದ್ದ. ಇಸ್ರೇಲ್ ಬಗ್ಗೆ ಹೇಳಿದ. ಅಲ್ಲಿನ ಡಿಮೋನಾ ಅಣುಸ್ಥಾವರದ ಬಗ್ಗೆ ಕೊರೆದ. ತನ್ನ ಕೆಲಸದ ಬಗ್ಗೆ ಮಾತಾಡಿದ. ತನ್ನಲ್ಲಿರುವ ಫೋಟೋಗಳನ್ನು ಉಪಯೋಗಿಸಿ ಒಂದು ಸ್ಲೈಡ್ ಶೋ (Slide show) ಮಾಡಿ ತೋರಿಸಲೇ ಎಂದು ಕೇಳಿದ. ಇವನ ವಿಚಿತ್ರ ಕಥೆ ಕೇಳಿದ ಹೊಸ ಸ್ನೇಹಿತರಿಗೆ ತಲೆಬುಡ ಅರ್ಥವಾಗಲಿಲ್ಲ.
ಆದರೆ ಒಬ್ಬನಿಗೆ ಮಾತ್ರ ವನುನು ಹೇಳುತ್ತಿದ್ದ ವಿಷಯಗಳಲ್ಲಿ ಆಸಕ್ತಿ ಮೂಡಿತು. ಅವನ ಹೆಸರು ಆಸ್ಕರ್ ಗುರಿರೋ. ಅವನು ಮೂಲತಃ ಕೊಲಂಬಿಯಾ ದೇಶದವನು. ಅವನೂ ಸಹ ದೇಶವಿದೇಶ ಸುತ್ತಲು ಬಂದಿದ್ದ. ತಾತ್ಕಾಲಿಕವಾಗಿ ಸಿಡ್ನಿಯಲ್ಲಿ ನೆಲಸಿದ್ದ. ಅದೇ ಚರ್ಚಿನಲ್ಲಿ ಉಳಿದಿದ್ದ. ಅವನು ಪತ್ರಕರ್ತ ಎಂದೂ ಕೆಲಸ ಮಾಡಿದ್ದ. ಪರಮರಹಸ್ಯವಾದ ಅಣುಸ್ಥಾವರದ ಬಗ್ಗೆ ವನುನು ಅಷ್ಟು ವಿವರವಾಗಿ ಮಾತಾಡುವುದನ್ನು ಕೇಳಿ ಆಶ್ಚರ್ಯಚಕಿತನಾದ. ನಿನ್ನಲ್ಲಿರುವ ಮಾಹಿತಿ ತುಂಬಾ ಮಹತ್ವದ್ದು. ಅದನ್ನು ಪದ್ಧತಿ ಪ್ರಕಾರ ಪ್ರಕಟಿಸಿದರೆ ಸಿಕ್ಕಾಪಟ್ಟೆ ರೊಕ್ಕ, ಹೆಸರು ಎಲ್ಲ ಬರುತ್ತದೆ ಎಂದು ಪಂಪ್ ಹೊಡೆದ. ಕೊನೆಗಾದರೂ ಒಬ್ಬನಾದರೂ ಅರ್ಥಮಾಡಿಕೊಂಡನಲ್ಲ ಎಂದು ವನುನು ಉಬ್ಬಿಹೋದ.
ವನುನುವಿಗೆ ರೊಕ್ಕ ತ್ವರಿತವಾಗಿ ಬೇಕಾಗಿತ್ತು. ಜೊತೆಗೆ ಕೀರ್ತಿ, ಪ್ರಸಿದ್ಧಿ ಬಂದರೆ ಅದು ಬೋನಸ್. ಅದರಿಂದ ಅಂತರರಾಷ್ಟ್ರೀಯ ಮಟ್ಟದ ಮನ್ನಣೆ ಬಂದರೆ ಅದನ್ನು ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಮಧ್ಯೆ ಶಾಂತಿಯನ್ನು ತರಲು ಸಹಕಾರಿಯಾದೀತು ಅಂದುಕೊಂಡ. ಅದೇನೂ ಅವನ ಮೂಲ ಯೋಜನೆಯಾಗಿರಲಿಲ್ಲ. ಆದರೆ ಮನುಷ್ಯನಿಗೆ ಸಮಾಜದಲ್ಲಿ ಒಂದು ಉನ್ನತ ಸ್ಥಾನ ಮಾನ ಬರುತ್ತದೆಯೆಂದಾದರೆ ಇಂತಹ ಉನ್ನತ ಆಲೋಚನೆಗಳು ಬರುತ್ತವೆ. ವನುನುವಿಗೆ ಒಂದು ವಿಷಯ ಸ್ಪಷ್ಟವಾಗಿತ್ತು. ತಾನು ಕದ್ದು ತಂದಿರುವ ಫೋಟೋಗಳನ್ನು, ಮಾಹಿತಿಗಳನ್ನು ಪ್ರಕಟಿಸಿದರೆ ತಾನು ಶಾಶ್ವತವಾಗಿ ಇಸ್ರೇಲಿನ ವಿರೋಧಿಯಾಗುತ್ತೇನೆ. ಮತ್ತು ತನಗೆ ಯಾವ ರೀತಿಯ ಕ್ಷಮೆಯೂ ಲಭ್ಯವಾಗುವುದಿಲ್ಲ.
ವನುನು ಮತ್ತು ಅವನ ಹೊಸ ಮಿತ್ರ ಗುರಿರೋ ಕೂಡಿ ಸಿಡ್ನಿಯ ಫೋಟೋ ಸ್ಟುಡಿಯೋವೊಂದಕ್ಕೆ ಹೋದರು. ಅಣುಸ್ಥಾವರದ ಫೋಟೋಗಳ ಪ್ರತಿಗಳನ್ನು ಮಾಡಿಸಿಕೊಂಡರು. ಸಿಡ್ನಿಯಲ್ಲಿದ್ದ ಅಮೆರಿಕಾದ ಪತ್ರಿಕೆಗಳ ಕಚೇರಿಗಳನ್ನು ಮತ್ತು ಆಸ್ಟ್ರೇಲಿಯಾಯದ ಟೆಲಿವಿಷನ್ ಚಾನೆಲ್ಲುಗಳ ಕಚೇರಿಗಳನ್ನು ತಡಕಾಡಿದರು. ಹೆಚ್ಚಿನ ಕಡೆ ಪ್ರವೇಶ ಸಿಗಲಿಲ್ಲ. ಇವರ ಬೇವರ್ಸಿ ಅವತಾರವನ್ನು ನೋಡಿಯೇ ಇವರು ಯಾರೋ ಎಬಡೇಶಿಗಳು, ತರಲೆಗಳು ಎಂದು ಕಾವಲಿನವರೇ ಓಡಿಸಿಬಿಟ್ಟರು. ಎಲ್ಲೋ ಒಂದೆರೆಡು ಕಡೆ ಒಳಗೆ ಹೋಗುವ ಭಾಗ್ಯ ಸಿಕ್ಕರೂ ಇವರ ತಲೆಬುಡವಿಲ್ಲದ ಮಾತುಗಳು ಅರ್ಥವಾಗದೇ ವಾಪಸ್ ಕಳಿಸಿಬಿಟ್ಟರು. ಅಂದು ಮಾಧ್ಯಮದ ಮಂದಿಗೆ ಗೊತ್ತಿರಲಿಲ್ಲ ತಾವೆಂತಹ ಬ್ರೇಕಿಂಗ್ ನ್ಯೂಸ್ ಮಾದರಿಯ ಮೆಗಾ ಸ್ಕೂಪ್ ಒಂದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು.
ಆಸ್ಟ್ರೇಲಿಯಾದಲ್ಲಂತೂ ಏನೂ ಗಿಟ್ಟಲಿಲ್ಲ. ಬೇರೆ ಕಡೆ ನೋಡೋಣ ಎಂದುಕೊಂಡು ಗುರಿರೋ ಯೂರೋಪಿಗೆ ಹಾರಿದ. ಸ್ಪೇನ್ ಮತ್ತು ಇಂಗ್ಲೆಂಡ್ ದೇಶದಲ್ಲಿ ಅದೃಷ್ಟ ಖುಲಾಯಿಸುವ ಲಕ್ಷಣ ಕಂಡುಬಂತು. ಲಂಡನ್ನಿನ ಖ್ಯಾತ ಪತ್ರಿಕೆ 'ಸಂಡೆ ಟೈಮ್ಸ್' ಸಂಪಾದಕರು ಆಸಕ್ತಿ ತೋರಿಸಿದರು. ಪಕ್ಕಾ ಉದ್ಯಮಿಯಾಗಿದ್ದ ಅವರಿಗೆ ಈ ಸುದ್ದಿಯ ಮಹತ್ವ ಗೊತ್ತಾಗಲು ಹೆಚ್ಚಿನ ವೇಳೆ ಬೇಕಾಗಲಿಲ್ಲ. ಇಸ್ರೇಲಿ ಅಣುಸ್ಥಾವರದ ಸುದ್ದಿ ನಿಜವೇ ಆಗಿದ್ದರೆ ಅದು ಎಂತಹ ದೊಡ್ಡ ಸ್ಪೋಟಕ ಸುದ್ದಿಯಾಗಲಿದೆ ಎಂದು ಬರೋಬ್ಬರಿ ಅರ್ಥವಾಯಿತು. ಆದರೆ ಸುದ್ದಿಯನ್ನು ಸಾದ್ಯಂತವಾಗಿ ಕೂಲಂಕಷವಾಗಿ ಪರಿಶೀಲನೆ ಮಾಡಬೇಕಾಗಿತ್ತು. ಹಿಂದೊಮ್ಮೆ ಆದ ಘಟನೆಯಿಂದ ಪಾಠ ಕಲಿತಿದ್ದರು ಅವರು. ಹಿಟ್ಲರ್ ಬರೆದ ದಿನಚರಿಗಳು ಎಂದು ಅವರಿಗೆ ಉಂಡೆನಾಮ ತಿಕ್ಕಿ ಹೋಗಿದ್ದರು ಇಂತಹದೇ ಮಂದಿ. ರೊಕ್ಕ ಹೋದರೆ ದೊಡ್ಡ ಮಾತಲ್ಲ. ಆದರೆ ಪ್ರತಿಷ್ಠಿತ ಪತ್ರಿಕೆಯೊಂದರಲ್ಲಿ ಬೊಗಳೆ ಸುದ್ದಿ ಬಂದರೆ ಅಷ್ಟೇ ಮತ್ತೆ. ಹೋದ ಮಾನ ಮತ್ತು ವಿಶ್ವಾಸ ಮತ್ತೆ ಬರುವುದಿಲ್ಲ.
ಈಕಡೆ ಆಸ್ಟ್ರೇಲಿಯಾದಲ್ಲಿ ಟೆಲಿವಿಷನ್ ಚಾನೆಲ್ ಒಂದು ಖತರ್ನಾಕ್ ಕೆಲಸ ಮಾಡಿಬಿಟ್ಟಿತು. ಸೀದಾ ಇಸ್ರೇಲಿ ರಾಯಭಾರ ಕಚೇರಿಗೆ ಫೋನ್ ಮಾಡಿ, ಒಬ್ಬ ವಿಚಿತ್ರ ಮನುಷ್ಯ ಬಂದು ನಿಮ್ಮ ದೇಶದ ಅಣುಸ್ಥಾವರದ ಬಗ್ಗೆ ಮಾಹಿತಿ ಕೊಡುತ್ತೇನೆ ಎಂದು ಹೇಳಿದ. ಅವನು ನಿಮ್ಮ ನಾಗರಿಕನೇ? ಎಂದು ಕೇಳಿಬಿಟ್ಟಿತು. ಇದು ಇಸ್ರೇಲಿ ವರದಿಗಾರನೊಬ್ಬನಿಗೆ ಗೊತ್ತಾಯಿತು. ಅವನಿಗೆ ಅದು ದೊಡ್ಡ ಸ್ಕೂಪ್. ಇಸ್ರೇಲಿನ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಯಿತು.
ಇಸ್ರೇಲಿನಲ್ಲಿ ದೊಡ್ಡ ಮಟ್ಟದ ಸಂಚಲನ. ಬ್ರಹ್ಮನಿಗೂ ಗೊತ್ತಾಗದಂತೆ ಕಾಪಾಡಿಕೊಂಡುಬಂದಿದ್ದ ರಹಸ್ಯ ಬಯಲಾಗಿಹೋಗಿತ್ತು. ಅದೂ ತನ್ನದೇ ದೇಶದ ನಾಗರಿಕ, ಅಲ್ಲೇ ಕೆಲಸ ಮಾಡಿಕೊಂಡಿದ್ದ ತಂತ್ರಜ್ಞ ಲೀಕ್ ಮಾಡಿಬಿಟ್ಟಿದ್ದ. ದೊಡ್ಡ ಮಟ್ಟದ ಆತಂಕ ಮತ್ತು ಮುಜುಗರ. 'ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ,' ಎಂದು ತಲೆ ಮೇಲೆ ಕೈಹೊತ್ತು ಕೂತವರು ರಕ್ಷಣಾ ಇಲಾಖೆಯ ಭದ್ರತಾ ಕಾರ್ಯದರ್ಶಿ ಹೈಮ್ ಕಾರ್ಮನ್.
ಈ ಅನಾಹುತದ ಸುದ್ದಿಯನ್ನು ತ್ವರಿತವಾಗಿ ಹಾಲಿ ಮತ್ತು ಮಾಜಿ ಪ್ರಧಾನಿಗಳಿಗೆ ತಲುಪಿಸಲಾಯಿತು. ಅಂದಿನ ಪ್ರಧಾನಿ ಪೆರೇಸ್ ಮತ್ತು ಮಾಜಿ ಪ್ರಧಾನಿಗಳಾದ ರಾಬಿನ್ ಮತ್ತು ಶಮೀರ್ 'ರಾಷ್ಟ್ರೀಯ ಐಕ್ಯತೆ' ಎನ್ನುವ ಸಮ್ಮಿಶ್ರ ಸರ್ಕಾರದ ಪಾಲುದಾರರಾಗಿದ್ದರು. ಆದಷ್ಟು ಬೇಗ ವನುನುವನ್ನು ಕಂಡುಹಿಡಿಯಬೇಕು. ಎಲ್ಲೇ ಇದ್ದರೂ ಮುದ್ದಾಂ ಕಂಡುಹಿಡಿಯಬೇಕು. ಇಸ್ರೇಲಿಗೆ ಎತ್ತಾಕಿಕೊಂಡುಬರಬೇಕು. ವನುನುವನ್ನು ಸಿಕ್ಕಲ್ಲಿ 'ಮುಗಿಸಿ ಬಿಡುವ' ಸಲಹೆ ಕೂಡ ಬಂತು. ಅದನ್ನು ತಳ್ಳಿಹಾಕಲಾಯಿತು. ಪ್ರಧಾನಿ ಪೆರೇಸ್ ಫೋನೆತ್ತಿಕೊಂಡರು. ಅವರಿಗೆ ಗೊತ್ತಿತ್ತು ಯಾರಿಗೆ ಫೋನ್ ಮಾಡಬೇಕೆಂದು. ಮುಂದಿನ ಕ್ಷಣದಲ್ಲಿ ಅವರು ಇಸ್ರೇಲಿನ ಬಾಹ್ಯ ಬೇಹುಗಾರಿಕೆ ಸಂಸ್ಥೆ ಮೊಸ್ಸಾದ್ ಮುಖ್ಯಸ್ಥರೊಂದಿಗೆ ಜರೂರಿ ಮಾತುಕತೆ ಮಾಡುತ್ತಿದ್ದರು.
೧೯೮೨ ರಲ್ಲಿ ಮೊಸ್ಸಾದಿಗೆ ಹೊಸ ನಿರ್ದೇಶಕ ಬಂದಿದ್ದರು. ಅವರೇ ನಾಹುಮ್ ಅಡ್ಮೋನಿ. ಸರಿಸುಮಾರು ಇಪ್ಪತ್ತು ವರ್ಷಗಳ ನಂತರ ಮೂಲ ಮೊಸ್ಸಾದಿಗರೊಬ್ಬರು ಇಸ್ರೇಲಿನ ಬೇಹುಗಾರಿಕೆ ಸಂಸ್ಥೆಯ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ್ದರು. ಇದಕ್ಕೆ ಮೊದಲು ಹೆಚ್ಚಿನ ಮುಖ್ಯಸ್ಥರು ಸೇನೆಯಿಂದ ಬಂದಿರುತ್ತಿದ್ದರು. ಮೊಸ್ಸಾದಿನಲ್ಲೇ ಕೆಲಸ ಆರಂಭಿಸಿ, ಹಂತಹಂತವಾಗಿ ಬೆಳೆದುಬಂದ ಅಡ್ಮೋನಿ ಈಗ ನಿರ್ದೇಶಕರಾಗಿದ್ದರು.
ಹಿಂದಿನ ಮೊಸ್ಸಾದ್ ಡೈರೆಕ್ಟರ್ ಇತ್ಜಾಕ್ ಹೋಫೀ ಅವರ ಬಲಗೈಯಾಗಿದ್ದವರು ಅಡ್ಮೋನಿ. ಹೋಫೀ ಅವರ ನಿವೃತ್ತಿ ಬಳಿಕ ಡೈರೆಕ್ಟರ್ ಸ್ಥಾನಕ್ಕೆ ಬಂದಿದ್ದರು. ಏಳು ವರ್ಷಗಳ ಕಾಲ ನಿರ್ದೇಶಕರಾಗಿದ್ದರು ನಾಹುಮ್ ಅಡ್ಮೋನಿ. ಆ ಅವಧಿ ಅಷ್ಟೇನೂ ಚೆನ್ನಾಗಿರಲಿಲ್ಲ. ಆ ಏಳು ವರ್ಷಗಳಲ್ಲಿ ಇಸ್ರೇಲಿಗೆ ಮುಜುಗರ ತರುವಂತಹ ಹಲವಾರು ಘಟನೆಗಳಾಗಿಹೋಗಿದ್ದವು. ಜೊನಾಥನ್ ಪೊಲ್ಲಾರ್ಡ್ ಎನ್ನುವ ಅಮೇರಿಕನ್ ಮೂಲದ ಯಹೂದಿ ಅಮೇರಿಕಾ ಸೇನಾಪಡೆಗಳ ರಹಸ್ಯಗಳನ್ನು ಕದ್ದು ಸಿಕ್ಕಾಕಿಕೊಂಡು ಬಿದ್ದಿದ್ದ. ಬಂಧನವನ್ನು ತಪ್ಪಿಸಿಕೊಳ್ಳಲು ಅಮೆರಿಕಾದ ರಾಜಧಾನಿ ವಾಷಿಂಗ್ಟನ್ ನಲ್ಲಿದ್ದ ಇಸ್ರೇಲಿ ರಾಯಭಾರ ಕಚೇರಿಗೆ ಓಡಿಬಂದಿದ್ದ. ಅವನು ಬೇರೊಂದು ಬೇಹುಗಾರಿಕೆ ದಳಕ್ಕೆ ಕೆಲಸ ಮಾಡುತ್ತಿದ್ದ. ಆದರೆ ಮುಜುಗರ ಮಾತ್ರ ಇಡೀ ಇಸ್ರೇಲಿಗೆ ಮತ್ತು ಮೊಸ್ಸಾದಿಗೆ ಆಗಿತ್ತು. ಅಧ್ಯಕ್ಷ ರೇಗನ್ ಅವರ ನೌಕರಿಯನ್ನು ಕಳೆದೇಬಿಟ್ಟಿದ್ದ ಇರಾನ್ - ಕಾಂಟ್ರಾ ಹಗರಣದಲ್ಲಿ ಇಸ್ರೇಲಿಗಳ ಕೈವಾಡವಿದೆ ಎಂದು ಗುಲ್ಲೆದ್ದಿತ್ತು. ವಿಶ್ವದ ಬೇರೆ ಬೇರೆ ಕಡೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ಮೊಸ್ಸಾದಿನ ಏಜೆಂಟರು ಸಿಕ್ಕಿ ಬಿದ್ದಿದ್ದರು. ಅವರನ್ನು ಬಿಡಿಸಿಕೊಂಡು ಬರುವಷ್ಟರಲ್ಲಿ ತಲೆ ಹನ್ನೆರಡಾಣೆ ಆಗಿತ್ತು. ಎಷ್ಟೋ ದೊಡ್ಡ ತಲೆಗಳು ಮನೆಗೆ ಹೋಗಿದ್ದವು ಕೂಡ. ಅವಕ್ಕೆಲ್ಲ ತಿಲಕವಿಟ್ಟಂತೆ ಆಗಿತ್ತು ಈ ವನುನು ಎಂಬ ಮಾಜಿ ತಂತ್ರಜ್ಞ ಅಣುಸ್ಥಾವರದ ರಹಸ್ಯ ಮಾಹಿತಿಯನ್ನು ಕದ್ದು ಓಡಿಹೋಗಿದ್ದು.
ಪ್ರಧಾನಿ ಪೆರೇಸ್ ಜೊತೆ ಮಾತಾಡಿ ಮುಗಿಸಿದಾಕ್ಷಣ ಮೊಸ್ಸಾದ್ ಮುಖ್ಯಸ್ಥ ಕಾರ್ಯಪ್ರವೃತ್ತರಾದರು. ವನುನುವನ್ನು ಬಂಧಿಸಿ ಇಸ್ರೇಲಿಗೆ ಕರೆತರುವ ಕಾರ್ಯಾಚರಣೆ ಜಾರಿಗೆ ಬಂದಿತು. ಎಂದಿನಂತೆ ಅದಕ್ಕೊಂದು ಕೋಡ್ ನೇಮ್ (Code name) ಬೇಕಾಗಿತ್ತು. ಮೊಸ್ಸಾದಿನ ಕಂಪ್ಯೂಟರ್ ಒಂದು ಹೆಸರನ್ನು ಉಗುಳಿತು...ಆಪರೇಷನ್ ಕಾನಿಯುಕ್ (Operation Kaniuk).
ಗುರಿರೋನನ್ನು ಭೇಟಿಮಾಡಿದ ನಂತರ ಇಂಗ್ಲೆಂಡಿನ ಸಂಡೆ ಟೈಮ್ಸ್ ಪತ್ರಿಕೆಯ ಸಂಪಾದಕರು ಪೀಟರ್ ಹೌನಮ್ ಎಂಬ ಚತುರ ವರದಿಗಾರನನ್ನು ಮಾರ್ಡೇಕೈ ವನುನುವನ್ನು ಭೇಟಿಮಾಡಲು ಆಸ್ಟ್ರೇಲಿಯಾಗೆ ಕಳಿಸಿದರು. ಅಷ್ಟರಹೊತ್ತಿಗೆ ಬ್ರಿಟಿಷ್ ವಿಜ್ಞಾನಿಗಳು ಗುರಿರೋ ತಂದಿರುವ ಫೋಟೋಗಳ ಪರೀಕ್ಷೆ ಮಾಡಿದ್ದರು ಮತ್ತು ಅವುಗಳ ನೈಜತೆಯನ್ನು ಖಾತ್ರಿಪಡಿಸಿದ್ದರು. ಅಷ್ಟು ಖಾತ್ರಿಯಾಗಿದ್ದಕ್ಕೆ ಪೀಟರ್ ಹೌನಮ್ ಆಸ್ಟ್ರೇಲಿಯಾಕ್ಕೆ ಹೋಗುವ ನಿರ್ಧಾರ ಮಾಡಿದ್ದ. ಆಸ್ಟ್ರೇಲಿಯಾದ ಸಿಡ್ನಿ ತಲುಪಿ, ಮಾರ್ಡೇಕೈ ವನುನುವನ್ನು ಭೇಟಿಯಾದ ಮೇಲೆ ಪೀಟರ್ ಹೌನಮ್ ಗೆ ವನುನು ಹೇಳುತ್ತಿರುವುದು ನಿಜ ಎಂದು ಮನದಟ್ಟಾಯಿತು. ಗುರಿರೋ ಏನೇನೋ ಭೋಂಗು ಬಿಟ್ಟಿದ್ದ. ವನುನು ಒಬ್ಬ ದೊಡ್ಡ ಇಸ್ರೇಲಿ ವಿಜ್ಞಾನಿ ಎಂದೆಲ್ಲ ಅತಿಶಯ ವರ್ಣನೆ ಮಾಡಿದ್ದ. ಆದರೆ ವನುನು ಮಾತ್ರ ಸತ್ಯ ಹೇಳಿದ. ತಾನೊಬ್ಬ ಅಣುಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದ ಸಾಮಾನ್ಯ ತಾಂತ್ರಿಕ ಕೆಲಸಗಾರ ಎಂದಷ್ಟೇ ಹೇಳಿಕೊಂಡ.
ಇಷ್ಟಾದ ಮೇಲೆ ವರದಿಗಾರ ಹೌನಮ್ ಮತ್ತು ವನುನು ಲಂಡನ್ನಿಗೆ ಹಾರಿದರು. ಗುರಿರೋ ಆಸ್ಟ್ರೇಲಿಯಾದಲ್ಲೇ ಉಳಿದ.
ಲಂಡನ್ನಿನಲ್ಲಿ ಸಂಡೆ ಟೈಮ್ಸ್ ಪತ್ರಿಕೆಯ ಹಲವಾರು ತನಿಖಾ ವರದಿಗಾರರು ವನುನುವನ್ನು ಮಾತಾಡಿಸಿದರು. ತೀಕ್ಷ್ಣ ಪ್ರಶ್ನೆಗಳನ್ನು ಕೇಳಿದರು. ಆಳಕ್ಕೆ ಇಳಿದು ಒಂದಾದಮೇಲೊಂದು ಸವಾಲುಗಳನ್ನು ಹಾಕಿ ಮಾರ್ಡೇಕೈ ಒಬ್ಬ ವಿಶ್ವಾಸಾರ್ಹ ವ್ಯಕ್ತಿ ಎಂದು ಖಾತ್ರಿ ಮಾಡಿಕೊಂಡರು. ತನಗೆ ಗೊತ್ತಿದ್ದ ಎಲ್ಲಾ ಮಾಹಿತಿಯನ್ನೂ ಮಾರ್ಡೇಕೈ ಹಂಚಿಕೊಂಡ. ಅಲ್ಲಿಯವರೆಗೆ ಯಾರಿಗೂ ಗೊತ್ತಿಲ್ಲದಿದ್ದ ಸುದ್ದಿಯೊಂದನ್ನೂ ಹೇಳಿದ - ಇಸ್ರೇಲ್ ನ್ಯೂಟ್ರಾನ್ ಬಾಂಬ್ ಕೂಡ ತಯಾರು ಮಾಡುತ್ತಿದೆ. ನ್ಯೂಟ್ರಾನ್ ಬಾಂಬಿನ ವಿಶೇಷತೆ ಏನಂದರೆ ಅದು ಜೀವಿಗಳನ್ನು ಮಾತ್ರ ಕೊಲ್ಲುತ್ತದೆ. ಕಟ್ಟಡ, ವಾಹನ ಇತ್ಯಾದಿಗಳನ್ನು ಹಾಗೇ ಬಿಡುತ್ತದೆ. ಕೇವಲ ವೈರಿಗಳನ್ನು ಮಾತ್ರ ನಿಕಾಲಿ ಮಾಡಬೇಕು. ಅವರ ಸಂಪತ್ತನ್ನು ಕೊಳ್ಳೆಹೊಡೆಯಬೇಕು ಎಂದು ಸ್ಕೆಚ್ ಹಾಕಿದ್ದರೆ ನ್ಯೂಟ್ರಾನ್ ಬಾಂಬ್ ಹೇಳಿ ಮಾಡಿಸಿದ ಅಸ್ತ್ರ.
ಇಸ್ರೇಲಿನ ಅಣುಸ್ಥಾವರದಲ್ಲಿ ಹೇಗೆ ಅಣುಬಾಂಬುಗಳನ್ನು ತಯಾರಿಸುತ್ತಾರೆ ಎನ್ನುವುದನ್ನು ವಿವರವಾಗಿ ಹೇಳಿದ ವನುನು. ಈ ಸಮಯದಲ್ಲಿ ವನುನು ಆತಂಕಕ್ಕೆ ಒಳಗಾದಂತೆ ಕಾಣುತ್ತಿದ್ದ. ವಿಪರೀತವಾದ ಮಾನಸಿಕ ಒತ್ತಡದಲ್ಲಿ ಇದ್ದಂಗೆ ತೋರುತ್ತಿತ್ತು. ಇಸ್ರೇಲಿ ಬೇಹುಗಾರಿಕೆ ಸಂಸ್ಥೆ ಆತನನ್ನು ಅಪಹರಿಸಬಹುದು ಮತ್ತು ಕೊಲ್ಲಬಹುದು ಎಂದು ತುಂಬಾ ಚಿಂತಿತನಾಗಿದ್ದ.
ಸಂಡೆ ಟೈಮ್ಸ್ ಜನ ಆತನನ್ನು ಸಮಾಧಾನ ಮಾಡಲು ಪ್ರಯತ್ನಿಸಿದರು. ಅವನು ಲಂಡನ್ನಿನಲ್ಲಿ ಸುರಕ್ಷಿತ ಎಂದು ನಂಬಿಸಲು ಪ್ರಯತ್ನಿಸಿದರು. ಅವನನ್ನು ಬೇರೊಂದು ಹೋಟೆಲ್ಲಿಗೆ ವರ್ಗಾಯಿಸಿದರು. ಅವನನ್ನು ಒಬ್ಬನೇ ಇರಲು ಬಿಡಲಿಲ್ಲ. ಒಬ್ಬರಾದ ಮೇಲೆ ಒಬ್ಬರು ಪಾಳಿಯಲ್ಲಿ ಅವನ ಜೊತೆಗೆ ಇದ್ದರು. ಕಂಪನಿ ಕೊಟ್ಟರು. ಒಬ್ಬಂಟಿಯಾಗಿ ಲಂಡನ್ನಿನ ಬೀದಿಗಳನ್ನು ಸುತ್ತಬೇಡ ಎಂದು ಎಚ್ಚರಿಕೆ ಕೂಡ ಕೊಟ್ಟಿದ್ದರು. ವನುನು ಆ ಒಂದು ಮಾತನ್ನು ಕೇಳಲಿಲ್ಲ. ಬೇಸರವಾದಾಗ ಬೀದಿ ಸುತ್ತಲು ಹೋಗುತ್ತಿದ್ದ.
ಸಂಡೆ ಟೈಮ್ಸ್ ವಿವಿಧ ರೀತಿಗಳಿಂದ ಪರಿಶೀಲನೆ ಮಾಡಿ ವನುನು ಮತ್ತು ಆತನ ಬಳಿಯಿರುವ ಮಾಹಿತಿ ಎಲ್ಲ ನಿಜ ಎಂದು ಖಾತ್ರಿಮಾಡಿಕೊಂಡರು. ಅದನ್ನು ಅವನಿಂದ ಖರೀದಿ ಮಾಡಬೇಕಾಗಿತ್ತು. ಒಂದು ಅತ್ಯುತ್ತಮ ಡೀಲ್ ಕೊಟ್ಟರು. ಒಂದು ಲಕ್ಷ (೧೦೦,೦೦೦) ಡಾಲರ್. ತನಿಖಾ ವರದಿಗಳು ಬೇರೆ ಬೇರೆ ಕಡೆ ಹಂಚಿಕೆಯಾದರೆ ಅವುಗಳು ತರುವ ಮೊತ್ತದ ೪೦%. ಯಾರಾದರೂ ಪುಸ್ತಕ ಬರೆದು ಪ್ರಕಾಶಿಸಿದರೆ ಅದರ ೨೫% ಲಾಭ. ಮೀಡಿಯಾ ಮೊಗಲ್ ಎಂದೇ ಖ್ಯಾತರಾಗಿದ್ದ ರೂಪರ್ಟ್ ಮುರ್ಡೋಕ್ ಈ ಕಥೆಯನ್ನು ಸಿನೆಮಾ ಮಾಡಲು ಕೂಡ ಉತ್ಸುಕರಾಗಿದ್ದರು. ಅವರು ಸಂಡೆ ಟೈಮ್ಸ್, ಫಾಕ್ಸ್ ಸ್ಟುಡಿಯೋ ಇತ್ಯಾದಿಗಳ ಮಾಲೀಕರು. ಆ ಚಿತ್ರದಲ್ಲಿ ವನುನುವಿನ ಪಾತ್ರವನ್ನು ಖ್ಯಾತ ನಟ ರಾಬರ್ಟ್ ಡೇ ನಿರೋ ಮಾಡುವವರು ಇದ್ದರು. ಒಟ್ಟಿನಲ್ಲಿ ಅದ್ಭುತ ಎನ್ನಿಸುವಂತಹ ಆರ್ಥಿಕ ಡೀಲ್ ಕೊಟ್ಟಿದ್ದರು.
ಲಂಡನ್ನಿನಲ್ಲಿ ಮಾರ್ಡೇಕೈ ವನುನುವಿಗೆ ಎಲ್ಲ ಸೌಲಭ್ಯಗಳನ್ನೂ ಕೊಡಮಾಡಲಾಗಿತ್ತು. ಒಂದೇ ಸಿಕ್ಕಿರಲಿಲ್ಲ. ಅದೇ ಸ್ತ್ರೀಸೌಖ್ಯ. ಬಹಳ ದಿವಸಗಳಾಗಿ ಹೋಗಿದ್ದವು. ಸ್ತ್ರೀ ಸಾಮಿಪ್ಯ ಮತ್ತು ಮಿಲನ ಸುಖವಿಲ್ಲದೆ ವನುನು ಒಣಗಿಹೋಗಿದ್ದ. ಹೈರಾಣಾಗಿದ್ದ. ತುರ್ತಾಗಿ ಒಂದು 'ಮಾಲ್' ಬೇಕಾಗಿತ್ತು.
ರೋವೆನಾ ವೆಬ್ಸ್ಟರ್ ಎನ್ನುವ ಸಂಡೆ ಟೈಮ್ಸ್ ವರದಿಗಾರ್ತಿಗೂ ವನುನುವಿಗೆ ಹೋಟೆಲ್ಲಿನಲ್ಲಿ ಅವನಿಗೆ ಪಾಳಿ ಮೇಲೆ ಕಂಪನಿ ಕೊಡುವ ಜವಾಬ್ದಾರಿ ಬಂದಿತ್ತು. ಕೇವಲ ಸಮಯ ಕಳೆಯಲು ಕಂಪನಿ ಕೊಡಲು ಹೋದರೆ, 'ಬನ್ನಿ ಭಜನೆ ಮಾಡಬೇಕು ಅನ್ನಿಸುತ್ತಿದೆ. ತಡೆಯಲಾಗುತ್ತಿಲ್ಲ. ಕೂಡಿ ಮಲಗೋಣ. ಪ್ಲೀಸ್ ಬನ್ನಿ,' ಎಂದು ಆ ವರದಿಗಾರ್ತಿಯನ್ನು ಮಂಚ ಹತ್ತಿಸಲು ನೋಡಿದ್ದ. ನಿನ್ನ ಜೊತೆ ಮಲಗುವುದು ಅಸಾಧ್ಯ ಎಂದು ಆಕೆ ಮುಖದ ಮೇಲೆ ಹೊಡೆದಂತೆ ಹೇಳಿದ್ದಳು. ಎದ್ದು ಬಂದಿದ್ದಳು. ಆಕೆಯ ಪುಣ್ಯ. ಆಕೆಯನ್ನು ರೇಪ್ ಗೀಪ್ ಮಾಡುವ ದುಸ್ಸಾಹಸಕ್ಕೆ ಕೈಹಾಕಲಿಲ್ಲ ಈ ಕಾಮಪೀಡಿತ. ಕಾಮತೃಷೆ ವನುನುವಿನ ಬಲಹೀನತೆ ಎಂದು ಸಂಡೆ ಟೈಮ್ಸ್ ಮಂದಿಗೆ ಗೊತ್ತಾಗಲಿಲ್ಲ. ಅದೇ ದೊಡ್ಡ ಆಶ್ಚರ್ಯ.
ಮಾರ್ಡೇಕೈ ವನುನು ಇಸ್ರೇಲಿ ಬೇಹುಗಾರಿಕೆ ಸಂಸ್ಥೆಗಳ ಬಗ್ಗೆ ಮತ್ತು ಅವು ತನ್ನ ಮೇಲೆ ಮಾಡಬಹುದಾದ ಕಾರ್ಯಾಚರಣೆಗಳ ಬಗ್ಗೆ ಬಹಳ ಹೆದರಿದ್ದ. ಆದರೆ ಲಂಡನ್ನಿನ ಸಂಡೇ ಟೈಮ್ಸ್ ಜನ ಆ ಆತಂಕವನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಇಸ್ರೇಲಿನ ಹೊರಗೆ, ಲಂಡನ್ನಿನ ಯಾವುದೋ ಮೂಲೆಯಲ್ಲಿ, ತಮ್ಮ ಕಣ್ಣಂಕೆಯಲ್ಲಿ ಇರುವಾಗ ಯಾರೇನು ಮಾಡಿಯಾರು ಎನ್ನುವ ಉದಾಸೀನತೆ.
ಮಾರ್ಡೇಕೈ ವನುನುವಿನ ಜನ್ಮಜಾಲಾಡಿ ಬರಲು ಒಬ್ಬ ವರದಿಗಾರನನ್ನು ಸಂಡೆ ಟೈಮ್ಸ್ ಇಸ್ರೇಲಿಗೆ ಕಳಿಸಿತು. ಅವನು ಇಸ್ರೇಲಿನಲ್ಲಿ ತನಗೆ ಪರಿಚಯವಿದ್ದ ಇಸ್ರೇಲಿ ಪತ್ರಕರ್ತನೊಂದಿಗೆ ಹರಟೆ ಹೊಡೆದ. ಮಾರ್ಡೇಕೈ ವನುನು ಬಗ್ಗೆ ಮತ್ತು ಆತ ಹಂಚಿಕೊಂಡಿರುವ ಮಾಹಿತಿ ಬಗ್ಗೆ ಹೇಳಿದ. ಕೆಲವು ಸ್ಪಷ್ಟನೆಗಳನ್ನು ಪಡೆದುಕೊಂಡ.
ಇಸ್ರೇಲಿಗಳ ದೇಶಪ್ರೇಮ ದೊಡ್ಡದು. ಆ ಇಸ್ರೇಲಿ ಪತ್ರಕರ್ತ ಸುಮ್ಮನೆ ಕೂಡಲಿಲ್ಲ. ಹೋದವನೇ ಇಸ್ರೇಲಿನ ಆಂತರಿಕ ತನಿಖಾ ಸಂಸ್ಥೆ ಶಬಾಕ್ ಗೆ ಎಲ್ಲ ವರದಿ ಒಪ್ಪಿಸಿದ. ಶಬಾಕ್ ಗೆ ಗೊತ್ತಾದ ನಂತರ ಆ ವಿಷಯ ಮೊಸ್ಸಾದಿಗೆ ತಿಳಿಯಲು ಜಾಸ್ತಿ ಸಮಯ ಬೇಕಾಗಲಿಲ್ಲ.
ಮುಂದಿನ ಕೆಲವೇ ಘಂಟೆಗಳಲ್ಲಿ ಮೊಸ್ಸಾದಿನ ತಂಡವೊಂದು ಲಂಡನ್ನಿಗೆ ಹಾರಿತು. ಅದರ ನಾಯಕತ್ವ ವಹಿಸಿದ್ದವರು ಮೊಸ್ಸಾದಿನ ಉಪನಿರ್ದೇಶಕ ಶಾಬಟೈ ಶಾವಿತ್. ಈ ನಿರ್ದಿಷ್ಟ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದವರು ಬೆನಿ ಝೀವಿ. ಮೊಸ್ಸಾದಿನ ಖತರ್ನಾಕ್ ಕಸೇರಿಯಾ ವಿಭಾಗದ ಮುಖ್ಯಸ್ಥ ಅವರು.
ಲಂಡನ್ನಿನಲ್ಲಿ ಇಳಿಯುತ್ತಿದಂತೆ ಮೊಸ್ಸಾದಿನ ಇಬ್ಬರು ಬೇಹುಗಾರರು ಫೋಟೋಗ್ರಾಫರುಗಳ ಮಾರುವೇಷದಲ್ಲಿ ಸಂಡೆ ಟೈಮ್ಸ್ ಕಚೇರಿಗೆ ಹೋದರು. ಅಂದು ಅಲ್ಲಿ ಏನೋ ಹರತಾಳ ನಡೆಯುತ್ತಿತ್ತು. ಅದರ ಫೋಟೋ ತೆಗೆದರು.
ಮುಂದಿನ ಕೆಲದಿನಗಳಲ್ಲಿ ಲಂಡನ್ ತುಂಬಾ ಮೊಸ್ಸಾದ್ ವ್ಯಾಪಕ ಫೀಲ್ಡಿಂಗ್ ಹಾಕಿತು. ಅವರಿಗೇನು ಲಂಡನ್ ಹೊಸ ಜಾಗವೇ? ಅಲ್ಲಿ ಅವೆಷ್ಟು ರಹಸ್ಯ ಕಾರ್ಯಾಚರಣೆಗಳನ್ನು ಮಾಡಿದ್ದರೋ.
ಕೆಲವು ದಿನಗಳ ನಂತರ ಮಾರ್ಡೇಕೈ ವನುನು ಮೊಸ್ಸಾದ್ ಬೇಹುಗಾರರ ಕಣ್ಣಿಗೆ ಬಿದ್ದ. ಅವನ ಹಲವಾರು ಫೋಟೋಗಳನ್ನು ಅವನಿಗೆ ಗೊತ್ತಾಗದಂತೆ ತೆಗೆದರು. ಎಲ್ಲ ಕಡೆ ಅವನನ್ನು ರಹಸ್ಯವಾಗಿ ಹಿಂಬಾಲಿಸಿದರು. He was constantly under the surveillance. ಅವನ ಮತ್ತು ಅವನ ಆಚರಣೆಗಳ, ದಿನಚರಿಯ ಸಂಪೂರ್ಣ ಚಿತ್ರಣ (profile) ಅದೆಷ್ಟು ಚೆನ್ನಾಗಿ ತಯಾರು ಮಾಡಿಕೊಂಡಿದ್ದರು ಎಂದರೆ ಕೆಲವು ಬಾರಿ ವನುನು ಇಂಥಲ್ಲೇ ಹೋಗುತ್ತಾನೆ ಎಂದು ಕರಾರುವಕ್ಕಾಗಿ ಹೇಳಬಲ್ಲವರಾಗಿದ್ದರು ಮತ್ತು ಅಲ್ಲಿ ಅವನಿಗಿಂತ ಮೊದಲೇ ಪ್ರತ್ಯಕ್ಷರಾಗಿರುತ್ತಿದ್ದರು. Mossad agents were on the prowl.
ಆ ದಿನ ಸೆಪ್ಟೆಂಬರ್ ೨೪, ೧೯೮೬. ಸ್ಥಳ ಲಂಡನ್ನಿನ ಲೀಸ್ಟರ್ ಚೌಕ. ಅದು ಪ್ರವಾಸಿಗರ ನೆಚ್ಚಿನ ಸ್ಥಳ. ತಿರುಗಾಟದ ತಿಪ್ಪ ಮಾರ್ಡೇಕೈ ವನುನು ಕೂಡ ಸುತ್ತಾಡುತ್ತ ಸುತ್ತಾಡುತ್ತ ಅಲ್ಲೇ ಬಂದ. ಆ ಕಾಲಮಾನದಲ್ಲಿ ಟೀವಿ ಮೇಲೆ 'ಚಾರ್ಲೀಸ್ ಏಂಜೆಲ್ಸ್' ಎನ್ನುವ ಜನಪ್ರಿಯ ಕಾರ್ಯಕ್ರಮ ವಿಶ್ವದ ಎಲ್ಲಾ ಕಡೆ ತುಂಬಾ ಪ್ರಸಿದ್ಧವಾಗಿತ್ತು. ಫಾರಾ ಫಾಸೆಟ್ ಎನ್ನುವ ನಟಿ ಅದರ ನಾಯಕಿ. ಆಕೆ ಬಂಗಾರದ ಬಣ್ಣದ ಕೂದಲಿನ ಸುಂದರಿ. ನಟಿ ಫಾರಾ ಫಾಸೆಟ್ ಳನ್ನು ಹೋಲುವ ಸುಂದರಿಯೊಬ್ಬಳು ವನುನುವಿನ ಕಣ್ಣಿಗೆ ಅಲ್ಲಿ ಕಂಡುಬಂದಳು. ಅವನ ಕಣ್ಣಿಗೆ ಆಕೆ ಅಪ್ಸರೆಯ ಹಾಗೆ ಕಂಡಳು. ಹಸಿದಾಗ ಎಲ್ಲವೂ ರುಚಿಕರವಾಗಿ ಕಂಡಂತೆ...
ಆ ಸುಂದರಿ ಪತ್ರಿಕೆ ಮಾರುವ ಅಂಗಡಿಯೊಂದರ ಮುಂದೆ ಸಾಲಿನಲ್ಲಿ ನಿಂತಿದ್ದಳು. ಆಕೆಯನ್ನು ನೋಡಿ ಜೊಲ್ಲು ಸುರಿಸಿದ ವನುನು. ಕಾಕತಾಳೀಯವೋ ಎಂಬಂತೆ ಆಕೆ ತಿರುಗಿ ನೋಡಿದಳು. ಸಹಜವಾಗಿ ವನುನು ಕಡೆ ನೋಡಿದಳು. ಆಕೆ ಒಂದು 'ಅರ್ಥಪೂರ್ಣವಾದ' ದೀರ್ಘ ಲುಕ್ ಕೊಟ್ಟ ಹಾಗೆ ಅನ್ನಿಸಿತು. ಒಂದು ಕ್ಷಣ ಕಣ್ಣು ಕಣ್ಣು ಕಲೆತ ಮಧುರ ಅನುಭವ. ಅಷ್ಟರಲ್ಲಿ ಆಕೆಯ ಸರದಿ ಬಂತು. ಅಂಗಡಿಗೆ ಬಂದ ಕೆಲಸ ಮುಗಿಸಿದ ಸ್ವರ್ಣಕೇಶದ ಸುಂದರಿ ತನ್ನ ದಾರಿ ಹಿಡಿದು ಹೊರಟಳು.
ವನುನು ಕೂಡ ತಿರುಗಿ ಹೊರಟ. ಆಕ್ಷಣ ಅದ್ಯಾವ ದೆವ್ವ ಮೈಮೇಲೆ ಬಂದು ವಕ್ಕರಿಸಿಕೊಂಡಿತೋ ಗೊತ್ತಿಲ್ಲ. ಸರಕ್ ಅಂತ ತಿರುಗಿ ಸುಂದರಿಯ ಹಿಂದೆ ಬಿದ್ದ. ಲಗುಬಗೆಯಿಂದ ಹಿಂಬಾಲಿಸಿದ. ಅವಳನ್ನು ಮಾತಾಡಿಸಬೇಕು ಎನ್ನುವ ತೀವ್ರ ಇಚ್ಛೆ. ಧೈರ್ಯ ಸಾಕಾಗುತ್ತಿಲ್ಲ. ಹೃದಯ ಯದ್ವಾತದ್ವಾ ಬಡಿಯುತ್ತಿದೆ. ಕಿತ್ತು ಬಾಯಿಗೆ ಬರುತ್ತಿದೆ. ಮುಂದೆ ಬಳುಕುತ್ತಾ ನಡೆಯುತ್ತಿರುವ ಸುಂದರಿ.
ಅದೆಲ್ಲಿಂದಲೋ ಧೈರ್ಯ ಮಾಡಿದ. 'ಹಲೋ ಮಿಸ್!' ಅಂದೇಬಿಟ್ಟ. ಆಕೆ ತಿರುಗಿ ನೋಡಿದಳು. ಒಂದು ಚಂದನೆಯ ಮುಗುಳ್ನಗೆ ಬೀರಿದಳು. ಸುಂದರಿಯರ ಮುಗುಳ್ನಗೆಯ ಶಕ್ತಿಯೇ ಅದು. ಒಂದು ಕ್ಷಣಕ್ಕೆ ಎಲ್ಲ ತಿಳಿಯಾಯಿತು. ಕಾರ್ಮೋಡ ಕಳೆದು ನೀಲಾಕಾಶ ಕಂಡುಬಂದು ಎಲ್ಲ ಶುಭ್ರವಾದಂತೆ. ತನಗೆ ತಿಳಿಯದಂತೆಯೇ ವನುನು ದುರ್ಬಲನಾಗತೊಡಗಿದ್ದ. He had dropped his guard and become vulnerable...
ಆ ಸುಂದರಿ ತನ್ನನ್ನು ತಾನು ಸಿಂಡಿ (Cindy) ಎಂದು ಪರಿಚಯಿಸಿಕೊಂಡಳು. ಉದ್ಯೋಗ - ಬ್ಯೂಟಿ ಪಾರ್ಲರ್ ನಲ್ಲಿ ಸೌಂದರ್ಯತಜ್ಞೆ (Beautician). ಅಮೆರಿಕಾದ ಫಿಲಿಡೆಲ್ಫಿಯಾ ನಗರದ ನಿವಾಸಿಯೆಂದೂ, ಯೂರೋಪ್ ಪ್ರವಾಸ ಮಾಡುತ್ತಾ ಲಂಡನ್ನಿಗೆ ಬಂದಿದ್ದಾಳೆ ಎಂದು ಹೇಳಿಕೊಂಡಳು. ತಾನೊಬ್ಬ ಯಹೂದಿ (Jew) ಎಂಬುದನ್ನು ಸಹಜವೆಂಬಂತೆ ಹೇಳಿದಳು. ವನುನು ಜಾಗೃತನಾದ.
ಒಂದು ಕ್ಷಣ ವನುನುವಿನ ಮನದಲ್ಲಿ ಸಂಶಯ ಮೂಡಿತು. ಕಳೆದ ಕೆಲವು ದಿನಗಳು ಆತನ ಪಾಲಿಗೆ ತುಂಬಾ ಆತಂಕಕಾರಿಯಾಗಿದ್ದವು. ತುಂಬಾ ಉದ್ವೇಗಗೊಂಡಿದ್ದ. ಅವನ ಕಥೆ ಖರೀದಿ ಮಾಡಿದ್ದೇವೆ ಎಂದು ಹೇಳುತ್ತಿದ್ದ ಸಂಡೆ ಟೈಮ್ಸ್ ಪತ್ರಿಕೆಯವರು ಸುಖಾಸುಮ್ಮನೆ ಪ್ರಕಟಣೆಯನ್ನು ಮುಂದೂಡುತ್ತಿದರು. ಮತ್ತೆ ಮತ್ತೆ ಕೇಳಿದ್ದನ್ನೇ ಕೇಳುತ್ತಿದ್ದರು. ಇಸ್ರೇಲಿ ರಾಯಭಾರ ಕಚೇರಿಗೆ ಮಾಹಿತಿ ಕೊಟ್ಟು, ಪ್ರಕಟವಾಗಲಿರುವ ಬ್ರೇಕಿಂಗ್ ನ್ಯೂಸ್ ಬಗ್ಗೆ ಪ್ರತಿಕ್ರಿಯೆ ಪಡೆದುಕೊಳ್ಳುವುದಾಗಿ ಹೇಳುತ್ತಿದ್ದರು. ಅದೆಲ್ಲಾ ಏಕೆ? ಜಲ್ದಿ ಸುದ್ದಿ ಪ್ರಕಟಿಸಿ ಅಂದರೆ ತಮ್ಮದು ಖ್ಯಾತ ಪತ್ರಿಕೆ. ಹಾಗೆಲ್ಲಾ ಏಕಪಕ್ಷೀಯ ಸುದ್ದಿ ಪ್ರಕಟಿಸಿದರೆ ಪ್ರತಿಷ್ಠೆಗೆ ಧಕ್ಕೆ ಬರುತ್ತದೆ ಎಂದು ವಿವರಣೆ ಕೊಡುತ್ತಿದ್ದರು. ಇಸ್ರೇಲಿ ರಾಯಭಾರ ಕಚೇರಿಯನ್ನು ಸಂಪರ್ಕಿಸಲಿದ್ದಾರೆ ಎಂದು ಕೇಳಿದ ವನುನುವಿನ ಒತ್ತಡ, ಉದ್ವೇಗ ಮತ್ತೂ ಜಾಸ್ತಿಯಾಗುತ್ತಿತ್ತು. ಇಸ್ರೇಲಿ ರಾಯಭಾರ ಕಚೇರಿ ಮೊಸ್ಸಾದಿಗೆ ತಿಳಿಸಿ, ಅವರು ಲಂಡನ್ನಿಗೆ ಧಾವಿಸಿ ಬಂದು ಗೇಮ್ ಬಾರಿಸಿಬಿಟ್ಟರೆ ಏನು ಗತಿ? ಖುದ್ದು ಇಸ್ರೇಲಿಯಾಗಿದ್ದ ಆತನಿಗೆ ತಮ್ಮ ದೇಶದ ರಕ್ಷಣಾ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಅರಿವಿತ್ತು. ಹಾಗಾಗಿ ತುಂಬಾ ಆತಂಕಗೊಂಡಿದ್ದ.
ಅದರಲ್ಲೂ ಒಮ್ಮೆಲೇ ಹೊಸ ಜಾಗದಲ್ಲಿ ಅಪರಿಚಿತ ಸುಂದರಿಯೊಬ್ಬಳು ಭೇಟಿಯಾಗುತ್ತಾಳೆ. 'ಹಲೋ' ಎಂದರೆ ಆಶ್ಚರ್ಯ ಎಂಬಂತೆ ತಿರುಗಿ ಮುಗುಳ್ನಗೆ ಬೀರುತ್ತಾಳೆ. ಮಾತಾಡುತ್ತಾಳೆ. ಪರಿಚಯ ನೀಡುತ್ತಾಳೆ. ಜೊತೆಗೆ ಯಹೂದಿ ಎಂಬುದನ್ನು ಹೇಳುತ್ತಾಳೆ. ಏಕಿರಬಹುದು? ಎಂದು ತಲೆಕೆಡಿಸಿಕೊಂಡ.
ಮಳ್ಳು ನಗೆ ಬೀರುತ್ತಾ, 'ನೀನು ಮೊಸ್ಸಾದಿನವಳೇ?' ಎಂದು ಆಕೆಯನ್ನು ಕೇಳಿಬಿಟ್ಟ ವನುನು. ಜೋಕ್ ಮಾಡಿದಂತಿರಬೇಕು. ಪ್ರಶ್ನೆಯನ್ನೂ ಕೇಳಿದಂತಾಗಬೇಕು. ಹಾಗಿತ್ತು ಕೇಳಿದ ರೀತಿ.
'ಇಲ್ಲವಲ್ಲ. ಮೊಸ್ಸಾದ್ ಅಂದರೇನು? ಅದಿರಲಿ, ನಿನ್ನ ಹೆಸರೇನು?' ಎಂದು ಆಕೆ ತಿರುಗಿ ಕೇಳಿದಳು.
'ಜಾರ್ಜ್,' ಎಂದುಬಿಟ್ಟ. ದೊಡ್ಡ ತಪ್ಪೇನೂ ಇರಲಿಲ್ಲ. ಅದೇ ಸುಳ್ಳು ಹೆಸರಿನಲ್ಲಿ ಹೋಟೆಲ್ಲಿನಲ್ಲಿ ತಂಗಿದ್ದ.
ಆಕೆಯೋ flirt ಮಾಡುವುದರಲ್ಲಿ ಪ್ರಳಯಾಂತಕಿ. 'ಏ, ಬಿಡಪ್ಪಾ ಸಾಕು. ನಿನ್ನ ಹೆಸರು ಜಾರ್ಜ್ ಅಲ್ಲ,' ಅಂದಳು. ಅದೆಲ್ಲಾ ಮುಖ್ಯವಾದ ವಿಷಯವೇ ಅಲ್ಲ ಎಂಬಂತೆ ತಳ್ಳಿಹಾಕಿದಳು. ಕಾಫಿ, ಗೀಫಿ ಕುಡಿಯೋಣವೇ ಎನ್ನುವ ಹಾಗೆ ನೋಡಿದಳು.
ಅಲ್ಲೇ ಇದ್ದ ಕೆಫೆಯೊಂದರಲ್ಲಿ ಜಾಗ ಹಿಡಿದು ಕುಳಿತರು. ವನುನು ತುಂಬಾ ಏಕಾಂತ ಮತ್ತು ತಡೆಯಲಾಗದ ಏಕತಾನತೆ ಅನುಭವಿಸುತ್ತಿದ್ದನೇನೋ. ಯಾರಾದರೂ ಮಾತಾಡಲು ಸಿಕ್ಕರೆ ಸಾಕಾಗಿತ್ತೇನೋ. ವನುನು ಎಲ್ಲವನ್ನೂ ಬಿಚ್ಚಿ ಹೇಳಿಕೊಂಡುಬಿಟ್ಟ. ಎಬಡೇಶಿ!
ತನ್ನ ನಿಜವಾದ ಹೆಸರನ್ನು ಹೇಳಿಕೊಂಡ. ಸಂಡೆ ಟೈಮ್ಸ್ ಪತ್ರಿಕೆ ಜೊತೆ ನಡೆದಿರುವ ಜಂಜಾಟದ ಬಗ್ಗೆ ಹೇಳಿಕೊಂಡ. ತನ್ನ ಇತರೆ ಸಂಕಟಗಳನ್ನು ತೋಡಿಕೊಂಡ. ಜೊತೆಗೆ ತನ್ನ ಗೋರಿ ಕೂಡ ತೋಡಿಕೊಂಡನೇ?
ಎಲ್ಲವನ್ನೂ ಕೇಳಿಸಿಕೊಂಡ ಸಿಂಡಿ ಎಂಬ ಸುಂದರಿ ತನ್ನದೂ ಒಂದಿರಲಿ ಎಂಬ ಮಾದರಿಯಲ್ಲಿ, 'ನನ್ನ ಜೊತೆ ಅಮೇರಿಕಾಗೆ, ನ್ಯೂಯಾರ್ಕಿಗೆ ಬಂದುಬಿಡು. ಅಲ್ಲಿ ಇನ್ನೂ ದೊಡ್ಡ ದೊಡ್ಡ ಪತ್ರಿಕೆಗಳಿವೆ. ಹಿತಾಸಕ್ತಿ ಕಾಪಾಡಲು ವಕೀಲರು ಸಿಗುತ್ತಾರೆ. ಎಲ್ಲ ಸರಿಹೋಗುತ್ತದೆ,' ಎಂದು ಒಂದು ಸಲಹೆ ಕೊಟ್ಟಳು.
ಆ ಸಲಹೆಯನ್ನು ಆತ ಕೇಳಲಿಲ್ಲ. ಆದರೆ ಮೊದಲ ನೋಟದಲ್ಲೇ ತೀವ್ರ ವ್ಯಾಮೋಹಕ್ಕೆ ವನುನು ಒಳಗಾಗಿದ್ದ. ತುಂಬಾ ದಿನಗಳಿಂದ ಹೆಣ್ಣಿನ ಸಾಂಗತ್ಯ ಸಿಗದೇ ಮಂಗ್ಯಾ ಆಗಿದ್ದವ ಅಷ್ಟು ಬೇಗ ಫಿದಾ ಆಗಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ.
ಮುಂದಿನ ದಿನಗಳಲ್ಲಿ ಸಿಂಡಿ ಮತ್ತು ವನುನು ಅನೇಕ ಬಾರಿ ಭೇಟಿಯಾದರು. ಲಂಡನ್ನಿನ ಹಸಿರು ತುಂಬಿದ ಪಾರ್ಕುಗಳಲ್ಲಿ ಕೈ ಕೈ ಹಿಡಿದುಕೊಂಡು ಓಡಾಡಿದರು. ಸಿನೆಮಾ ನೋಡಿದರು. ಸಂಗೀತ ಕಚೇರಿಗೂ ಹೋಗಿ ಬಂದರು.
ಕೈ ಕೈ ಮಿಳಿತವಾದ ಮೇಲೆ ತುಟಿಗೆ ತುಟಿ ಸೇರಲು ಜಾಸ್ತಿ ಸಮಯ ಬೇಕಾಗಲಿಲ್ಲ. ಕಂಡಕಂಡಲ್ಲಿ ಮನಸೋಯಿಚ್ಛೆ ಕಿಸ್ ಗರಮ್ಮಾಗಿ ಹೊಡೆದರು ಈ ಇಬ್ಬರು ಕಿಸ್ಸಿಂಗ್ ಕಿಡಿಗೇಡಿಗಳು. ಹೊಸ ಪ್ರೇಮ ಅಂದರೆ ಹಾಗೆಯೇ. ಹೊಸ ಕಾರ್ ಇದ್ದಂತೆ. ಮೊದಲಿನ ಕೆಲ ದಿನಗಳಲ್ಲಿ ಕಾರ್ ಆಗಲಿ ಕಿಸ್ ಆಗಲಿ ಎಷ್ಟು ಹೊಡೆದರೂ ಸಾಕಾಗುವುದಿಲ್ಲ. ಕಮಾನ್ ಕಮಾನ್ ಕಾಮಣ್ಣ ಎನ್ನುವ ಹಾಡು ಕಿವಿಯಲ್ಲಿ ಗುಂಯ್ ಅನ್ನುತ್ತಿರುತ್ತದೆ.
ಸಿಂಡಿ ಕಿಸ್ ಕೊಟ್ಟಳು. ಅಷ್ಟೇ. ಮುಂದೆ ಹೋಗಲಿಲ್ಲ. 'ನಾನು ನಿನ್ನ ರೂಮಿಗೆ ಬರಲೇ? ತಬ್ಬಿಕೊಂಡು ಬೆಚ್ಚಗೆ ಮಲಗೋಣ. ಪ್ಲೀಸ್,' ಎಂದು ವನುನು ಗೋಗರೆದರೆ ಮಡಿವಂತಳಂತೆ 'ನೋ, ನೋ, ಸಾಧ್ಯವಿಲ್ಲ,' ಅಂದುಬಿಟ್ಟಳು. ತಾನು ರೂಮನ್ನು ಬೇರೊಬ್ಬಳ ಜೊತೆ ಶೇರ್ ಮಾಡಿರುವುದರಿಂದ ಅದು ಸಾಧ್ಯವಿಲ್ಲ ಎಂದಳು. 'ಹೋಗಲಿ ಬಿಡು. ನನ್ನ ರೂಮಿಗೆ ಬಂದುಬಿಡು,' ಅಂದರೆ ಅದಕ್ಕೂ ಆಕೆ ಒಪ್ಪಲಿಲ್ಲ. ಟಿಪಿಕಲ್ ನಖರಾಬಾಜಿ.
ಆಗ ಅವಳೇ 'ಒಂದು ಐಡಿಯಾ' ಕೊಟ್ಟಳು.
'ನಾವೇಕೆ ಇಟಲಿ ದೇಶದ ರೋಮ್ ನಗರಕ್ಕೆ ಹೋಗಬಾರದು? ಅಲ್ಲಿ ನನ್ನ ಸಹೋದರಿ ಇದ್ದಾಳೆ. ಅವಳದ್ದೇ ಆದ ಫ್ಲಾಟ್ ಇದೆ. ಅಲ್ಲಿ ನಾವು ಸಕತ್ 'ಮಜಾ' ಮಾಡಬಹುದು. ನಿನ್ನ ಎಲ್ಲ ತೊಂದರೆಗಳಿಗೆ ಅದೇ ಪರಿಹಾರ. ಏನಂತೀ ಡಾರ್ಲಿಂಗ್?' ಎಂದು ಫಿಟ್ಟಿಂಗ್ ಇಟ್ಟಳು.
ಮೊದಮೊದಲು ಆ ಯೋಜನೆಯನ್ನು ವನುನು ನಿರಾಕರಿಸಿದ. ಆದರೆ ಸಿಂಡಿ ರೋಮಿಗೆ ಹೋಗುವ ದೃಢಸಂಕಲ್ಪ ಮಾಡಿದವಳಂತೆ ಕಂಡುಬಂದಳು. ಹಾಗಾಗಿ ಆಕೆಯ ಮೋಹಪಾಶದಲ್ಲಿ ಬಿದ್ದಿದ್ದ ವನುನೂ ಕೂಡ ಒಪ್ಪಿದ. ಆತ ಒಪ್ಪಿದ ಮೇಲೆ ಆಕೆಯೇ ರೋಮಿಗೆ ಹೋಗುವ ಟಿಕೆಟ್ ಖರೀದಿಸಿದಳು. 'ಕಾಸು ಆಮೇಲೆ ಕೊಡುವೆಯಂತೆ. ಮೊದಲು ರೋಮಿನಲ್ಲಿ ರೋಮಾಂಚನ. ಏನಂತೀ?' ಎಂದು ಕಣ್ಣು ಮಿಟುಕಿಸಿದಳು ಮಿಟುಕಲಾಡಿ. ಆಸೆಬುರುಕ ಮಿಕ ಬಲೆಗೆ ಬಿತ್ತು.
ಸ್ವಲ್ಪವಾದರೂ ವಿವೇಕವಿದ್ದರೆ ಮಾರ್ಡೇಕೈ ವನುನುಗೆ ಗೊತ್ತಾಗಿಬಿಡಬೇಕಿತ್ತು - ಇದೊಂದು ಮಧುಜಾಲ. ಹನಿ ಟ್ರಾಪ್ (Honey trap). ಅಚಾನಕ್ಕಾಗಿ ಲಂಡನ್ನಿನ ರಸ್ತೆಯಲ್ಲಿ ಸುಂದರಿಯೊಬ್ಬಳು ಭೇಟಿಯಾಗುತ್ತಾಳೆ. ಭೇಟಿಯಾದ ಕೆಲವೇ ದಿವಸಗಳಲ್ಲಿ ಫುಲ್ ಫಿದಾ ಆಗುತ್ತಾಳೆ. ಪ್ರೇಮದಲ್ಲಿ ಅವಳೂ ಮಂಗ್ಯಾ ಆಗಿ ತನ್ನನ್ನು ಕೂಡ ಮಂಗ್ಯಾ ಮಾಡುತ್ತಾಳೆ. ಅವನಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಾಗುತ್ತಾಳೆ. ಅಮೇರಿಕಾಗೆ ಬಾ. ಕರೆದೊಯ್ಯುತ್ತೇನೆ ಅನ್ನುತ್ತಾಳೆ. ಅಕ್ಕ ರೋಮಿನಲ್ಲಿದ್ದಾಳೆ. ಅಲ್ಲಿಗೆ ಹೋಗೋಣ ಬಾ ಎಂದು ಕಣ್ಣು ಮಿಟುಕಿಸುತ್ತಾಳೆ. ಆಗಷ್ಟೇ ಪರಿಚಯವಾದ ವ್ಯಕ್ತಿಯ ಮೇಲೆ ಟಿಕೆಟ್ ಅದು ಇದು ಅಂತ ಸಾಕಷ್ಟು ರೊಕ್ಕ ಖರ್ಚು ಮಾಡುತ್ತಾಳೆ. ರೂಮಿಗೆ ಬಾ. ಜೊತೆಯಲ್ಲಿ ಮಲಗೋಣ. ಮಜಾ ಮಾಡೋಣ ಅಂದರೆ ಬೇಡ ಅನ್ನುತ್ತಾಳೆ. ರೋಮ್ ನಗರಕ್ಕೆ ಹೋಗಿ ಅಲ್ಲಿ ಜಮ್ಮಚಕ್ಕ ಮಾಡೋಣ ಅನ್ನುತ್ತಾಳೆ. ಹೀಗೆ ಸಾಕಷ್ಟು ಸಂಶಯಕ್ಕೆ ಕಾರಣವಾಗುವ ಹಾಗೆ ಆಕೆಯ ವರ್ತನೆ ಇತ್ತು. ಇಸ್ರೇಲಿನ ಬೇಹುಗಾರರ ಬಗ್ಗೆ ಸಾಕಷ್ಟು ಆತಂಕ ಹೊಂದಿದ್ದ ವನುನುಗೆ ಇದು ತಕ್ಷಣ ಹೊಳೆಯಬೇಕಾಗಿತ್ತು. ಅವರಿಬ್ಬರ ಸಂಭಾಷಣೆಯೇ 'ನೀನು ಮೊಸ್ಸಾದ್ ಏಜೆಂಟೇ?' ಎನ್ನುವ ಮಾತಿನೊಂದಿಗೆ ಶುರುವಾಗಿತ್ತು. ಅದೊಂದು ಹುರುಳಿಲ್ಲದ ಮಾತೆಂಬಂತೆ ತೇಲಿಸಿಬಿಟ್ಟಿದ್ದಳು ಸುಂದರಿ.
ಆದರೆ ಅದು ಮೊಸ್ಸಾದ್. ಯಾವಾಗಲೂ ಖಡಕ್ ಯೋಜನೆ ರೂಪಿಸುತ್ತದೆ. ವನುನುವನ್ನು ಎತ್ತಾಕಿಕೊಂಡು ಬರುವ ತಂಡದಲ್ಲಿ ಕೇವಲ ಬೇಹುಗಾರರು, ವಿಶಿಷ್ಟಪಡೆಗಳ ನುರಿತ ಪರಿಣಿತರು ಮಾತ್ರ ಇರಲಿಲ್ಲ. ಮನಃಶಾಸ್ತ್ರಜ್ಞರೂ (psychologists) ಕೂಡ ಇದ್ದರು. ಅವರು ವನುನುವಿನ ಮನಃಸ್ಥಿತಿಯ ಬಗ್ಗೆ ವಿವರವಾದ ಅಧ್ಯಯನ ಮಾಡಿದ್ದರು. ಬಹುಕಾಲದಿಂದ ಹೆಣ್ಣಿನ ಸಂಗ ಸಿಗದೇ ವನುನು ಮಂಗ್ಯಾ ಆಗಿಬಿಟ್ಟಿದ್ದಾನೆ. ಇಂತವನಿಗೆ ಅಲ್ಲಿಲ್ಲಿ ಕಿಸ್ ಹೊಡೆದು, ಕೈಗೆ ಸಿಕ್ಕರೂ ಸಿಕ್ಕದಂತೆ ನಖರಾ ಮಾಡುವ ಸುಂದರಿ ಸಿಕ್ಕರೆ ಮುಗಿದೇಹೋಯಿತು. ತಾನಾಗೇ ಬಂದು ಬಲೆಗೆ ಬೀಳುತ್ತಾನೆ. ಅವರ ಭವಿಷ್ಯವಾಣಿ ಸರಿಯಾಗಿತ್ತು.
ವನುನುವಿನ ಮೇಲ್ವಿಚಾರಕನಾಗಿದ್ದ ಸಂಡೆ ಟೈಮ್ಸ್ ಪತ್ರಿಕೆಯ ಪೀಟರ್ ಹೌನಂಗೆ ಏನೋ ವಾಸನೆ ಹೊಡೆಯಿತು. ಸಿಂಡಿ ಬಗ್ಗೆ ವಿಷಯ ತಿಳಿದಾಕ್ಷಣ ಆತ ಜಾಗರೂಕನಾದ. ಆಕೆಯ ಸಂಗ ಬೇಡವೋ ಮಂಗ ಎಂದು ವನುನುವನ್ನು ಎಚ್ಚರಿಸಿದ. ವನುನು ಕೇಳಬೇಕಲ್ಲ. ವನುನು ಆಕೆಯ ಗಾಳಕ್ಕೆ ಬಿದ್ದಾಗಿತ್ತು.
ಒಮ್ಮೆ ವನುನು ಪೀಟರ್ ಹೌನಂಗೆ ಕಾರಿನಲ್ಲಿ ಡ್ರಾಪ್ ಕೊಡುವಂತೆ ಕೇಳಿದ. ಆ ಸಂದರ್ಭದಲ್ಲಿ ಪೀಟರ್ ಕೂಡ ಸಿಂಡಿಯನ್ನು ನೋಡಿದ್ದ. ಸಿಂಡಿ ಕಂಡರೂ ಏನು ಮಾಡಲಿಕ್ಕೆ ಆಗುತ್ತದೆ? ಜೊತೆಗಿದ್ದ ಗಿಂಡಿಮಾಣಿ ವನುನುವನ್ನು ಸಿಂಡಿ ಜೊತೆ ಬಿಟ್ಟು ಬಂದಿದ್ದ.
'ಒಂದೆರಡೇ ದಿನಕ್ಕೆ ರೋಮ್ ನಗರಕ್ಕೆ ಹೋಗಿಬರುತ್ತೇನೆ,' ಎಂದು ವನುನು ಇಂಡೆಂಟ್ ಹಾಕಿದಾಗ ಕೂಡ ಪೀಟರ್ ಅವನನ್ನು ಎಚ್ಚರಿಸಿದ. 'ಇದು ನಿನ್ನನ್ನು ಅಪಹರಿಸುವ ಪ್ಲಾನ್ ಅಲ್ಲದೇ ಮತ್ತೇನೂ ಅಲ್ಲ. ಹೋಗಬೇಡ. ಖಬರ್ದಾರ್!' ಎಂದು ಖಡಕ್ಕಾಗಿ ಹೇಳಿದ. ಆದರೆ ಅದೇನೋ ಅನ್ನುತ್ತಾರಲ್ಲ ಕಾಮಕ್ಕೆ ಕಣ್ಣಿಲ್ಲ. ಸಹನೆಯೂ ಇಲ್ಲ. ಬುದ್ಧಿ ಹುಲ್ಲು ಮೇಯಲು ಹೋಗಿರುತ್ತದೆ. ತಪ್ಪು ಸರಿ ನಿರ್ಧಾರ ಮಾಡುವ ವಿವೇಚನೆ, ವಿವೇಕ ಕೈಕೊಟ್ಟಿರುತ್ತವೆ. ಹಾಗಾಗಿ ವನುನು ಎಚ್ಚರಿಕೆಯ ಮಾತುಗಳನ್ನು ಕೇಳಲಿಲ್ಲ. ರೋಮ್ ನಗರಕ್ಕೆ ಹೋಗಿಯೇ ಸಿದ್ಧ ಎಂದು ರಚ್ಛೆ ಹಿಡಿದು ಕೂತ.
ವನುನುವನ್ನು ರೋಮ್ ನಗರಕ್ಕೆ ಹೊರಡುವಂತೆ ಉತ್ತೇಜಿಸಲು ಇಸ್ರೇಲಿಗೆ ಬೇರೆ ಕಾರಣವೇ ಇತ್ತು. ಬ್ರಿಟಿಷ್ ನೆಲದಲ್ಲಿ ವನುನುವನ್ನು ಅಪಹರಣ ಮಾಡಲು ಇಸ್ರೇಲಿಗೆ ಮನಸ್ಸಿರಲಿಲ್ಲ. ಅಂದು ಮಾರ್ಗರೆಟ್ ಥ್ಯಾಚರ್ ಬ್ರಿಟಿಷ್ ಪ್ರಧಾನಿಯಾಗಿದ್ದರು. ಉಕ್ಕಿನ ಮಹಿಳೆ. ಹೆಸರಿಗೆ ತಕ್ಕಂತೆ ಖಡಕ್ ಆಗಿದ್ದ ಆಕೆಯನ್ನು, ಅಪಹರಣ ಮತ್ತೊಂದು ಮಾಡಿ, ರಾಜತಾಂತ್ರಿಕವಾಗಿ ತಡವಿಕೊಂಡು ಲಫಡಾ ಮಾಡಿಕೊಳ್ಳಲು ಇಸ್ರೇಲಿನ ಪ್ರಧಾನಿ ಶಿಮೋನ್ ಪೆರೇಸ್ ಸಿದ್ಧವಿರಲಿಲ್ಲ. ಮೊಸ್ಸಾದ್ ಕೂಡ ಇಂಗ್ಲೆಂಡನಲ್ಲಿ ಕಾರ್ಯಾಚರಣೆ ಮಾಡುವುದು ಸಮಂಜಸವಲ್ಲ ಎನ್ನುವ ಅಭಿಪ್ರಾಯ ಹೊಂದಿತ್ತು. ಕೆಲವೇ ತಿಂಗಳುಗಳ ಹಿಂದೆ ಜರ್ಮನಿಯಲ್ಲಿ ಅಧಿಕಾರಿಗಳಿಗೆ ಟೆಲಿಫೋನ್ ಬೂತೊಂದರಲ್ಲಿ ಒಂದು ಅನಾಥ briefcase ಸಿಕ್ಕಿತ್ತು. ತೆಗೆದು ನೋಡಿದರೆ ಅದರಲ್ಲಿ ಎಂಟು ಬ್ರಿಟಿಷ್ ಪಾಸಪೋರ್ಟುಗಳು. ಎಲ್ಲವೂ ನಕಲಿ. ಅನಾಥ briefcase ನ ಜಾಡು ಹಿಡಿದು ಹೋದರೆ ಅದು ಸ್ಥಳೀಯ ಇಸ್ರೇಲಿ ರಾಯಭಾರ ಕಚೇರಿಗೆ ತಂದು ನಿಲ್ಲಿಸಿತ್ತು. ಬ್ರಿಟಿಷ್ ಸರಕಾರ ವಿಪರೀತವಾಗಿ ಸಿಟ್ಟಿಗೆದ್ದಿತ್ತು. ಬಲವಾದ ರಾಜತಾಂತ್ರಿಕ ಪ್ರತಿಭಟನೆಯನ್ನು ದರ್ಜುಮಾಡಿತ್ತು. ಮೊಸ್ಸಾದ್ ಆ ಕ್ಷಣಕ್ಕೆ, 'ನಿಮ್ಮ ದಮ್ಮಯ್ಯ, ತಪ್ಪಾಯಿತು. ಇನ್ನು ಮುಂದೆ ಎಂದೂ ಬ್ರಿಟಿಷ್ ಪಾಸಪೋರ್ಟುಗಳನ್ನು ನಕಲು ಮಾಡುವುದಿಲ್ಲ. ಬ್ರಿಟಿಷ್ ಸಾರ್ವಭೌಮತೆಗೆ ಧಕ್ಕೆ ತರುವ ಯಾವ ಕೆಲಸಕ್ಕೂ ಕೈಹಾಕುವುದಿಲ್ಲ,' ಎಂದು ಆಣೆ ಪ್ರಮಾಣ ಮಾಡಿ ಪಾರಾಗಿದ್ದರು. ಹಾಗಾಗಿ ಬ್ರಿಟಿಷ್ ನೆಲದ ಮೇಲೆ ರಹಸ್ಯ ಕಾರ್ಯಾಚರಣೆಗೆ ಕೈಹಾಕುವ ದುಸ್ಸಾಹಸಕ್ಕೆ ಪ್ರಧಾನಿ ಪೆರೇಸ್ ಮತ್ತು ಮೊಸ್ಸಾದ್ ಸುತಾರಾಮ್ ಸಿದ್ಧವಿರಲಿಲ್ಲ.
ಇವೆಲ್ಲಾ ಕಾರಣಗಳಿಂದ ರೋಮ್ ನಗರ ರಹಸ್ಯ ಕಾರ್ಯಾಚರಣೆಗೆ ಸೂಕ್ತ ಎಂದು ನಿರ್ಧಾರ ಮಾಡಿದ್ದರು. ಮೊಸ್ಸಾದ್ ಮತ್ತು ಇಟಲಿಯ ಬೇಹುಗಾರಿಕೆ ಸಂಸ್ಥೆಯ ಮಧ್ಯೆ ಸಂಬಂಧಗಳು ಚೆನ್ನಾಗಿದ್ದವು. ಮೊಸ್ಸಾದಿನ ಮುಖ್ಯಸ್ಥ ನಾಹುಮ್ ಅಡಮೋನಿ ಮತ್ತು ಇಟಲಿಯ ಬೇಹುಗಾರಿಕೆ ಸಂಸ್ಥೆಯ ಮುಖ್ಯಸ್ಥ ಅಡ್ಮಿರಲ್ ಫುಲ್ವಿಯೋ ಮಾರ್ಟಿನಿ ಉತ್ತಮ ಮಿತ್ರರಾಗಿದ್ದರು. ಮೇಲಿಂದ ಆ ಸಮಯದಲ್ಲಿ ಇಟಲಿಯಲ್ಲಿ ದಿನನಿತ್ಯ ಒಂದಲ್ಲ ಒಂದು ಗಲಭೆ ಗಲಾಟೆ ನಡೆಯುತ್ತಲೇ ಇರುತ್ತಿತ್ತು. ಆ ಎಲ್ಲ ಗೊಂದಲಗಳ ಮಧ್ಯೆ ವನುನುವನ್ನು ಇಟಲಿಯಿಂದಲೇ ಎತ್ತಾಕಿಕೊಂಡು ಹೋಗಲಾಗಿದೆ ಎಂದು ಸಿದ್ಧಪಡಿಸುವುದು ಅಸಾಧ್ಯದ ಮಾತಾಗಿತ್ತು. ಗುಂಪಿನಲ್ಲಿ ಗೋವಿಂದನಾಗಿ ಸಂದಿಯಲ್ಲಿ ಸಮಾರಾಧನೆ ಮಾಡಲು ಇಟಲಿ ಹೇಳಿಮಾಡಿಸಿದ ಸ್ಥಳವಾಗಿತ್ತು.
ಅಂದು ಸೆಪ್ಟೆಂಬರ್ ೩೦, ೧೯೮೬. ಜೋಡಿ ಹಕ್ಕಿಗಳಾದ ಸಿಂಡಿ ಮತ್ತು ಮಾರ್ಡಿ (ಮಾರ್ಡೇಕೈ) ಕೈ ಕೈ ಹಿಡಿದುಕೊಂಡು ರೋಮ್ ನಗರಕ್ಕೆ ಹೊರಡಲಿದ್ದ ಬ್ರಿಟಿಷ್ ಏರ್ವೇಸ್ ನ ವಿಮಾನ ನಂಬರ್ ೫೦೪ ನ್ನು ಖುಷಿಖುಷಿಯಾಗಿ ಹತ್ತಿದರು. ರೋಮ್ ನಗರದಲ್ಲಿ ಇಳಿದಾಗ ರಾತ್ರಿ ಒಂಬತ್ತು ಘಂಟೆ. ಏರ್ಪೋರ್ಟ್ ಹೊರಗೆ ಬಂದಾಕ್ಷಣ ಹೂವಿನಗುಚ್ಛ ಹಿಡಿದು ನಿಂತಿದ್ದ ಮನುಷ್ಯನೊಬ್ಬ ಜೋಡಿಯನ್ನು ಸ್ವಾಗತಿಸಿದ. ಕಾರಿನಲ್ಲಿ ಕೂಡಿಸಿಕೊಂಡು ಸಿಂಡಿಯ 'ಅಕ್ಕನ ಮನೆ' ಎಂದು ಹೇಳಲಾದ ಪ್ಲಾಟಿಗೆ ಡ್ರಾಪ್ ಮಾಡಿದ. ಕಾರಿನ ಹಿಂದಿನ ಸೀಟಿನಲ್ಲಿ ಪವಡಿಸಿದ್ದ ಪ್ರೇಮಿಗಳು ಆಗಲೇ ದೈಹಿಕ ಕುಚೇಷ್ಟೆ ಆರಂಭಿಸಿಬಿಟ್ಟಿದ್ದರು. ಕಾಮಾತುರಾಣಾಂ ನ ಲಜ್ಜಾ ನ ಭಯಂ. ಮನೆ ಮುಟ್ಟುವವರೆಗೂ ಅಪ್ಪಿಕೊಂಡಿದ್ದೇ ಅಪ್ಪಿಕೊಂಡಿದ್ದು. ಕಿಸ್ ಹೊಡೆದಿದ್ದೇ ಹೊಡೆದಿದ್ದು.
ಒಂದು ಚಿಕ್ಕ ಮನೆಯೆದುರು ಕಾರ್ ನಿಂತಿತು. ಹುಡುಗಿಯೊಬ್ಬಳು ಬಾಗಿಲು ತೆಗೆದು ಸ್ವಾಗತಿಸಿದಳು. ವನುನು ಮೊದಲು ಒಳಗೆ ಪ್ರವೇಶಿಸಿದ. ಅವನು ಒಳಹೊಕ್ಕ ತಕ್ಷಣ ಹಿಂದಿನಿಂದ ಬಾಗಿಲು ಒಮ್ಮೆಲೇ ಹಾಕಲ್ಪಟ್ಟಿತು. ಇಬ್ಬರು ದಾಂಡಿಗರು ಮಾರ್ಡೇಕೈ ಮೇಲೆ ಮುಗಿಬಿದ್ದರು. ಬರೋಬ್ಬರಿ ಬಡಿದರು. ಎತ್ತಿ ನೆಲದ ಮೇಲೆ ಒಗೆದರು. ತ್ವರಿತವಾಗಿ ಆತನ ಕೈಗಳನ್ನು ಹಿಂದೆ ಕಟ್ಟಿದರು. ಅವರು ಕೈಗಳನ್ನು ಕಟ್ಟುತ್ತಿರುವಾಗಲೇ ಬಾಗಿಲು ತೆಗೆದಿದ್ದ ಹುಡುಗಿ ತಯಾರು ಮಾಡಿಟ್ಟುಕೊಂಡಿದ್ದ ಇಂಜೆಕ್ಷನ್ ಒಂದನ್ನು ವನುನುವಿನ ಕೈಗೆ ಚುಚ್ಚಿದಳು. ಕಣ್ಣುಗಳ ಮುಂದೆ ಎಲ್ಲವೂ ಮಸಕು ಮಸಕು. ಎಲ್ಲವೂ ಮಂಜುಮಂಜಾಗುತ್ತಿದ್ದಂತೆ ವನುನು ಪ್ರಜ್ಞೆ ಕಳೆದುಕೊಂಡ. ಆಳನಿದ್ರೆಗೆ ಜಾರಿದ.
ಪ್ರಜ್ಞೆ ಕಳೆದುಕೊಂಡಿದ್ದ ವನುನುವನ್ನು ಹೊತ್ತ ವ್ಯಾನೊಂದು ಇಟಲಿಯ ಉತ್ತರ ಭಾಗದತ್ತ ಹೊರಟಿತು. ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆ ವನುನುವಿನ ಜೊತೆಗಿದ್ದರು. ಮಧ್ಯದಲ್ಲಿ ಇನ್ನೊಂದು ಇಂಜೆಕ್ಷನ್ ಕೊಡಲಾಯಿತು. ಇವೆಲ್ಲದರ ಮಧ್ಯೆ ಸಿಂಡಿ ಮಾಯವಾಗಿದ್ದಳು. ಮಂಗ್ಯಾ ಮಾಡಿ, ಮಿಕವನ್ನು ತಂದು ಒಪ್ಪಿಸುವುದಷ್ಟೇ ಆಕೆಯ ಕೆಲಸವಾಗಿತ್ತು. ಮಂಗ್ಯಾ ಮಾಡಿದಾಕೆ ಖುದ್ದಾಗಿ ಮಂಗಮಾಯವಾಗಿದ್ದಳು.
ಹಲವಾರು ಘಂಟೆಗಳ ಪ್ರಯಾಣದ ಬಳಿಕ ಅವರು ಬಂದರು ಶಹರವಾದ ಲಾ ಸ್ಪೇಜಿಯಾವನ್ನು (La Spezia) ತಲುಪಿಕೊಂಡರು. ಸ್ಟ್ರೆಚರ್ ಮೇಲೆ ಮಲಗಿದ್ದ ವನುನುವನ್ನು ತರಾತುರಿಯಲ್ಲಿ ಸ್ಪೀಡ್ ಬೋಟೊಂದಕ್ಕೆ ವರ್ಗಾಯಿಸಲಾಯಿತು. ವೇಗವಾಗಿ ಪಯಣಿಸಿದ ಸ್ಪೀಡ್ ಬೋಟ್ ಹೋಗಿ ನಿಂತಿದ್ದು, ದೂರದಲ್ಲಿ, ಅಂತರರಾಷ್ಟ್ರೀಯ ಸಮುದ್ರದಲ್ಲಿ ಲಂಗರು ಹಾಕಿದ್ದ ಇಸ್ರೇಲಿ ಯುದ್ಧನೌಕೆ 'ಟಪೂಜ್' ಪಕ್ಕದಲ್ಲಿ. ಹಡಗಿನ ಅನವಶ್ಯಕ ಸಿಬ್ಬಂದಿಯನ್ನು ಒಳಗೆ ಹೋಗಿ ಎಂದು ಕಳಿಸಲಾಯಿತು. ಸ್ಪೀಡ್ ಬೋಟ್ ಬಂದು ಹಡಗಿನ ಪಕ್ಕ ನಿಂತ ಕೂಡಲೇ ಹಗ್ಗದ ಏಣಿಯನ್ನು ಕೆಳಗೆ ಬಿಡಲಾಯಿತು. ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆ ಏಣಿಯೇರಿ ಬಂದರು. ಜೊತೆಯಲ್ಲೇ ಒಬ್ಬ ಪ್ರಜ್ಞಾಹೀನ ವ್ಯಕ್ತಿಯನ್ನೂ ಹೊತ್ತು ತಂದಿದ್ದರು. ಹಡಗನ್ನು ಏರಿದ ತಕ್ಷಣ ಹೊಸದಾಗಿ ಬಂದವರು ಹಡಗಿನ ಕ್ಯಾಬಿನ್ ಒಂದನ್ನು ಸೇರಿಕೊಂಡು ಹಿಂದೆ ಬಾಗಿಲು ಹಾಕಿಕೊಂಡರು. ಇಷ್ಟಾದ ನಂತರ ಹಡಗು ಲಂಗರು ಎತ್ತಿತು. ಇಸ್ರೇಲಿನತ್ತ ಪಯಣ ಬೆಳೆಸಿತು.
ಇಸ್ರೇಲ್ ಮುಟ್ಟುವ ತನಕವೂ ಆ ಚಿಕ್ಕ ಕ್ಯಾಬಿನ್ನಿನಲ್ಲಿ ಬಂಧಿತನಾಗಿದ್ದ ವನುನು. ಪ್ರೇಯಸಿ ಸಿಂಡಿ ಎಲ್ಲೂ ಕಾಣಲಿಲ್ಲ. ಅವಳ ಬಗ್ಗೆ ಚಿಂತಿತನಾದ. ಅವಳಿಗೆ ಏನಾಗಿರಬಹುದು ಎಂದು ತಲೆಕೆಡಿಸಿಕೊಂಡ. ಅವಳು ಮೊಸ್ಸಾದ್ ತಂಡದ ಸದಸ್ಯಳಾಗಿದ್ದಳು ಎಂದು ಅವನಿಗೆ ಗೊತ್ತಾಗಲಿಲ್ಲ. ವನುನುವನ್ನು ಮೊದಲು ವ್ಯಾನಿನಲ್ಲಿ ನಂತರ ಸ್ಪೀಡ್ ಬೋಟಿನಲ್ಲಿ ಎತ್ತಾಕಿಕೊಂಡು ಬಂದ ತಂಡದಲ್ಲಿದ್ದ ಮಹಿಳೆ ನುರಿತ ಅರವಳಿಕೆ ತಜ್ಞೆಯಾಗಿದ್ದಳು. ಸಮಯಕ್ಕೆ ಸರಿಯಾಗಿ ವನುನುವಿಗೆ ತಕ್ಕ ಪ್ರಮಾಣದಲ್ಲಿ ಅರವಳಿಕೆ ಮದ್ದು ಕೊಡುತ್ತಿದ್ದಳು.
ಇಸ್ರೇಲಿ ಸಮುದ್ರ ತೀರವನ್ನು ತಲುಪಿದ ಹಡಗು ಅಲ್ಲೇ ಲಂಗರು ಹಾಕಿತು. ವನುನುವನ್ನು ಇಸ್ರೇಲಿ ನೌಕಾದಳದ ಮಿಸೈಲ್ ಬೋಟಿಗೆ ವರ್ಗಾಯಿಸಲಾಯಿತು. ಇಸ್ರೇಲಿ ಪೊಲೀಸ್ ಅಧಿಕಾರಿಗಳು ಮತ್ತು ಶಬಾಕ್ ತನಿಖಾ ಸಂಸ್ಥೆಯ ಅಧಿಕಾರಿಗಳ ಸುಪರ್ದಿಗೆ ಆತನನ್ನು ಒಪ್ಪಿಸಿದರು. ಅವರು ಅವನ ಮೇಲೆ ಮೊಕದ್ದಮೆಗಳನ್ನು ದಾಖಲು ಮಾಡಿಕೊಂಡರು. ಅಷ್ಕೆಲಾನ್ ಪಟ್ಟಣದಲ್ಲಿರುವ ಶಿಕ್ಮಾ ಬಂಧೀಖಾನೆಗೆ ಕಳಿಸಿದರು.
ಹೀಗೆ ಎತ್ತಾಕಿಕೊಂಡು ಬಂದ ವನುನುವನ್ನು ಇಸ್ರೇಲಿಗಳು ಪ್ರಶ್ನೆ ಮಾಡಲು ಶುರುವಿಟ್ಟುಕೊಂಡರೆ ಆಕಡೆ ಸಂಡೆ ಟೈಮ್ಸ್ ಪತ್ರಿಕೆ ಇಸ್ರೇಲಿ ಅಣುಸ್ಥಾವರದ ಬಗ್ಗೆ ಸರಣಿ ಸುದ್ದಿಗಳನ್ನು ಪ್ರಕಟಿಸಲು ಶುರುಮಾಡಿತು. ಆ ಸುದ್ದಿಗಳು ಜಗತ್ತಿನಾದ್ಯಂತ ಎಲ್ಲ ಪತ್ರಿಕೆಗಳಿಗೆ ಹಂಚಲ್ಪಟ್ಟು ಎಲ್ಲ ಕಡೆ ಅದೇ ಸುದ್ದಿ. ಅಲ್ಲಿಯವರೆಗೆ ಇಸ್ರೇಲಿಗಳು ತಮ್ಮ ಹತ್ತಿರ ಪರಮಾಣು ಅಸ್ತ್ರಗಳೇ ಇಲ್ಲ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ೧೯೬೦ ರ ಸಮಯದಲ್ಲೇ ಅಂದಿನ ಅಮೇರಿಕಾದ ಅಧ್ಯಕ್ಷ ಜಾನ್ ಕೆನಡಿ ಇಸ್ರೇಲಿಗೆ ಹೋಗಿ ಬರೋಬ್ಬರಿ ಚೆಕ್ ಮಾಡಿಕೊಂಡು ಬನ್ನಿ ಎಂದು ತಜ್ಞರ ತಂಡ ಕಳಿಸಿದ್ದರು. ಅವರನ್ನು ಅದೆಷ್ಟು ಚೆನ್ನಾಗಿ ಯಾಮಾರಿಸಿ ಕಳಿಸಿದ್ದರು ಅಂದರೆ ಅವರು ತಲೆಯಾಡಿಸುತ್ತ ಬಂದು ಇಸ್ರೇಲ್ ಬಳಿ ಪರಮಾಣು ಅಸ್ತ್ರಗಳು ಇಲ್ಲ ಎಂದು ವರದಿ ಕೊಟ್ಟಿದ್ದರು. ಆದರೂ ಇಸ್ರೇಲ್ ಮೇಲೆ ಒಂದು ನಜರ್ ಮಡಗಿದ್ದ ಮಂದಿಗೆ ಇಸ್ರೇಲ್ ಬಳಿ ಒಂದು ಹತ್ತಿಪ್ಪತ್ತು ಕಚ್ಚಾ (crude) ಬಾಂಬುಗಳು ಇರಬಹುದು ಅನ್ನುವ ಅಂದಾಜಿತ್ತು. ಆದರೆ ವನುನು ಕೊಟ್ಟ ಮಾಹಿತಿಯ ಆಧಾರದ ಮೇಲೆ ಸಂಡೆ ಟೈಮ್ಸ್ ಮಾಡಿದ್ದ ವರದಿ ಪ್ರಕಾರ ಇಸ್ರೇಲ್ ತುಂಬಾ ಮುಂದುವರೆದಿತ್ತು. ನೂರೈವತ್ತು ಇನ್ನೂರು ಅತ್ಯಾಧುನಿಕ ಬಾಂಬುಗಳನ್ನು ತಯಾರಿಸಿಟ್ಟುಕೊಂಡಿರಬಹುದು ಎಂದು ಅಂದಾಜಿಸಲಾಗಿತ್ತು. ಹೈಡ್ರೋಜನ್ ಮತ್ತು ನ್ಯೂಟ್ರಾನ್ ಬಾಂಬುಗಳನ್ನು ಸಹ ತಯಾರಿಸುವ ಸಾಮರ್ಥ್ಯವನ್ನು ಇಸ್ರೇಲ್ ಹೊಂದಿದೆ ಎಂದೂ ತಿಳಿದುಬಂದಿತು.
ಸೆರೆಯಲ್ಲಿದ್ದರೂ ವನುನುವಿಗೆ ಈ ವಿಷಯ ತಿಳಿಯಿತು. ಇಷ್ಟೆಲ್ಲಾ ಮಾಹಿತಿ ಹೊರಬಿದ್ದಿರುವ ಕಾರಣ ಇಸ್ರೇಲಿಗಳು ತನ್ನನ್ನು ಕೊಲ್ಲುತ್ತಾರೆ ಎಂದು ಭೀತನಾದ. ವನುನುವನ್ನು ಇಸ್ರೇಲಿಗಳು ಅಪಹರಿಸಿದ್ದಾರೆ ಎಂದು ಎಲ್ಲೂ ಅಧಿಕೃತವಾಗಿ ಪ್ರಕಟವಾಗಿರಲಿಲ್ಲ. ಹಾಗಾಗಿ ಇಷ್ಟೆಲ್ಲಾ ರಾಡಿಗೆ ಕಾರಣನಾಗಿ, ಇಸ್ರೇಲಿನ ಮುಖಭಂಗಕ್ಕೆ ಕಾರಣನಾಗಿದ್ದ ಈ ಕೊರಮನ ಕುರುಹೂ ಇಲ್ಲದಂತೆ ಮಾಡಿಬಿಟ್ಟರೆ ಎಲ್ಲಾ ತಲೆನೋವು ಮಾಯವಾಗುತ್ತದೆ ಎನ್ನುವ ಐಡಿಯಾ ಇಸ್ರೇಲಿ ಅಧಿಕಾರಶಾಹಿಗೆ ಬಂದಿದ್ದರೆ ಆಶ್ಚರ್ಯವಿಲ್ಲ. ಪರಮಾಣು ರಹಸ್ಯಗಳನ್ನು ಕಾಪಾಡಿಕೊಳ್ಳದ ಅವರ ಅದಕ್ಷತೆ, ಅಸಮರ್ಥತೆ ಕೂಡ ಬಯಲಾಗಿ ಅವರಿಗೂ ಮಂಗಳಾರತಿ ಆಗುವುದಿತ್ತು ತಾನೇ?
ತನ್ನೊಬ್ಬನನ್ನೇ ಅಲ್ಲ, ತಾತ್ಕಾಲಿಕ ಪ್ರೇಯಸಿಯಾಗಿದ್ದ ಸಿಂಡಿಯನ್ನೂ ಕೂಡ ಇಸ್ರೇಲಿಗಳು 'ದಾರಿಯಿಂದ ಅಡ್ಡ ಸರಿಸಿಬಿಟ್ಟಾರು' ಎಂದು ಚಿಂತಾಕ್ರಾಂತನಾದ. ಸಿಂಡಿ ಕೂಡ ಅದೇ ಜಾಲದ ಭಾಗವಾಗಿದ್ದಳು ಎಂದು ನಂಬಲು ಆವಾಗಲೂ ಆತ ಸಿದ್ಧನಿರಲಿಲ್ಲ. ಆಕೆಯೂ ಕಿಲಾಡಿಯೆಂದು ಮನಸ್ಸು ಸಾರಿಸಾರಿ ಹೇಳಿದರೂ ಹೃದಯ ಮಾತ್ರ ಕೇಳುತ್ತಿರಲಿಲ್ಲ. ಆಕೆ ನೆನಪಾದಾಗೊಮ್ಮೆ ಹೃದಯ ಗುಟುರ್ ಗುಟುರ್ ಎಂದು ತಾಳತಪ್ಪಿ ಬಡಿದು ನಿಟ್ಟುಸಿರಾಗುತ್ತಿತ್ತು.
ಸುಮಾರು ನಲವತ್ತು ದಿನಗಳ ಕಾಲ ವನುನುವಿಗೆ ಏನಾಯಿತು ಎಂದು ಯಾರಿಗೂ ಗೊತ್ತಿರಲಿಲ್ಲ. ಪತ್ರಿಕೆಗಳು ರೋಚಕ ಊಹಾಪೋಹದ ಸುದ್ದಿಗಳನ್ನು ನಿರಂತರವಾಗಿ ಪ್ರಕಟಿಸಿದವು. ವನುನುವನ್ನು ಅಪಹರಿಸಿ, ಇಸ್ರೇಲಿ ರಾಜತಾಂತ್ರಿಕ ಚೀಲದಲ್ಲಿ (diplomatic pouch) ರಹಸ್ಯವಾಗಿ ಇಸ್ರೇಲಿಗೆ ರವಾನೆ ಮಾಡಲಾಗಿದೆ ಎಂದು ಕೆಲವು ಪತ್ರಿಕೆಗಳು ಕಾಗೆ ಹಾರಿಸಿದವು. ಒಬ್ಬ ತರುಣಿಯೊಂದಿಗೆ ವನುನು ಹಡಗನ್ನು 'ಏರುತ್ತಿದ್ದ' ಎಂದು 'ಖುದ್ದಾಗಿ ನೋಡಿದ್ದ' ವ್ಯಕ್ತಿಯೊಬ್ಬ ಹೇಳಿದ್ದಾನೆ ಎಂದು ಮತ್ತೆ ಕೆಲವು ಪತ್ರಿಕೆಗಳು ವರದಿ ಮಾಡಿದವು. ಬ್ರಿಟಿಷ್ ಸಂಸದರು ತನಿಖೆಗೆ ಆಗ್ರಹಿಸಿದರು. ಇಸ್ರೇಲ್ ವಿರುದ್ಧ ಕಠಿಣ ಕ್ರಮಕ್ಕಾಗಿ ಪಟ್ಟು ಹಿಡಿದರು.
ನವೆಂಬರ್ ೧೯೮೬ ರಲ್ಲಿ ವನುನುವಿನ ಮೇಲೆ ಅಧಿಕೃತವಾಗಿ ಕೋರ್ಟಿನಲ್ಲಿ ಆರೋಪಪಟ್ಟಿಯನ್ನು ಸಲ್ಲಿಸಲಾಯಿತು. ಈ ಸಂಬಂಧ ಹಲವಾರು ಬಾರಿ ಆತನನ್ನು ಕೋರ್ಟಿನಲ್ಲಿ ಹಾಜರು ಪಡಿಸಿದರು.
ವನುನು
ಎಷ್ಟು ಶಾಣ್ಯಾ ಅಂದರೆ ಹಲವಾರು ವರದಿಗಾರರು ಕೋರ್ಟಿನಲ್ಲಿ ತನಗಾಗಿ ಕಾಯುತ್ತಿದ್ದನ್ನು
ಗಮನಿಸಿದ್ದ. ಮುಂದೊಂದು ಸಲ ಕೋರ್ಟಿಗೆ ಬಂದಾಗ, ಪೊಲೀಸ್ ವ್ಯಾನ್ ಇಳಿದವನೇ ಅವರ ಮುಂದೆ
ತನ್ನ ಹಸ್ತವನ್ನು ತೋರಿಸಿಬಿಟ್ಟ. ಅದರ ಮೇಲೆ ನೀಟಾಗಿ ಬರೆದಿದ್ದ. ಪತ್ರಕರ್ತರು ಓದಿದರು.
ಚಿತ್ರಗ್ರಾಹಕರು ಚಿತ್ರ ತೆಗೆದರು. ಹಸ್ತದ ಮೇಲೆ ಏನು ಬರೆದುಕೊಂಡಿದ್ದ ಅಂದರೆ...
'ವನುನುವನ್ನು ರೋಮ್ ನಗರದಿಂದ ಅಪಹರಿಸಲಾಗಿದೆ. 30/09/86, ರಾತ್ರಿ 9 ಕ್ಕೆ BA 504
ವಿಮಾನದಲ್ಲಿ ರೋಮ್ ತಲುಪಿದ್ದೆ.'
ತಡವಾಗಿ ಬಹಿರಂಗವಾದ ಈ ವಿಷಯ ಇಸ್ರೇಲ್ ಮತ್ತು ಬ್ರಿಟನ್ ನಡುವಿನ ಸಂಬಂಧಗಳ ಮೇಲೆ ಅಷ್ಟೇನೂ ಪ್ರಭಾವ ಬೀರಲಿಲ್ಲ. ವನುನು ಸ್ವಇಚ್ಛೆಯಿಂದ ಸಾಮಾನ್ಯ ವಿಮಾನದಲ್ಲಿ ಎಲ್ಲರಂತೆ ಬ್ರಿಟನ್ ತೊರೆದಿದ್ದಾನೆ ಎಂದು ಅಭಿಪ್ರಾಯ ಮೂಡಿ ಒಂದು ತರಹ ಅನುಕೂಲವೇ ಆಯಿತು. ಆದರೆ ಇಟಲಿಯಲ್ಲಿ ಕೊಂಚ ಲಫಡಾ ಆಯಿತು. ಕೋಪಗೊಂಡಿದ್ದ ಇಟಾಲಿಯನ್ನರ ತಲೆಗೆ ತೈಲ ತಿಕ್ಕಿ ಸಮಾಧಾನ ಮಾಡಿದರು ಇಸ್ರೇಲಿಗಳು. ಮಾಲಿಶ್ ಮಾಡಿ ಸಮಾಧಾನ ಮಾಡುವ ವಿಷಯದಲ್ಲಿ ಇಸ್ರೇಲಿಗಳು ನಿಪುಣರು. ಹಾಗಿರಲೇಬೇಕು ಏಕೆಂದರೆ ಒಂದಲ್ಲ ಒಂದು ಮಿತ್ರ ದೇಶದಲ್ಲಿ ಇಸ್ರೇಲಿಗಳು ತಮ್ಮ ದೇಶದ ಹಿತರಕ್ಷಣೆಗಾಗಿ ರಹಸ್ಯ ಕಾರ್ಯಾಚರಣೆ ಮಾಡುತ್ತಲೇ ಇರುತ್ತಾರೆ. ಅದು ಅವರಿಗೆ ಅನಿವಾರ್ಯ. ಹಾಗಾಗಿ ಇಂತಹ ಲಫಡಾಗಳು ಆಗಿ ಮಿತ್ರದೇಶಗಳು ಕಿರಿಕಿರಿ ಅನುಭವಿಸುತ್ತವೆ. ಆಗ ಸಮಾಧಾನ ಮಾಡಬೇಕಾಗುತ್ತದೆ.
ವನುನುವಿನ ಮೇಲೆ ದೇಶದ್ರೋಹ (Treason) ಮತ್ತು ಗೂಢಚರ್ಯೆಯ (Espionage) ಆರೋಪಗಳನ್ನು ಹೊರಿಸಲಾಯಿತು. ವಿಚಾರಣೆಯ ಬಳಿಕ ಅವನಿಗೆ ಹದಿನೆಂಟು ವರ್ಷಗಳ ಕಾರಾಗ್ರಹವಾಸದ ಶಿಕ್ಷೆಯನ್ನು ವಿಧಿಸಲಾಯಿತು.
ಆದರೆ ವಿದೇಶಗಳಲ್ಲಿ ವನುನು ದೊಡ್ಡ ಹೀರೋನಂತೆ ಬಿಂಬಿಸಲ್ಪಟ್ಟ. ಅವನೊಬ್ಬ ಶಾಂತಿದೂತ ಮತ್ತು ಅಣ್ವಸ್ತ್ರಗಳ ಪೈಪೋಟಿಯನ್ನು ತಡೆಗಟ್ಟಲು ತನ್ನ ಜೀವ(ನ)ವನ್ನೇ ಪಣಕ್ಕಿಟ್ಟ ಹುತಾತ್ಮ ಎಂದು ಕೆಲ ಸಂಘಟನೆಗಳು ಕೊಂಡಾಡಿದವು.
ವನುನು ಅದು ಯಾವುದೂ ಆಗಿರಲಿಲ್ಲ. ಅವನೊಬ್ಬ ಹತಾಶನಾಗಿದ್ದ ತಂತ್ರಜ್ಞ ಅಷ್ಟೇ. A frustrated man. ಕೆಲಸ ಮಾಡಿಕೊಂಡಿದ್ದಾಗಲೇ ಇಸ್ರೇಲಿನ ಅಣ್ವಸ್ತ್ರಗಳ ತಯಾರಿಕೆ ಬಗ್ಗೆ ಆಕ್ಷೇಪ ಎತ್ತಿದ್ದರೆ ಅದೊಂದು ಮಾತಾಗಿತ್ತು. ಕೆಲಸದಿಂದ ತೆಗೆದುಹಾಕಿದ ಮೇಲೆಯೇ ಆತನ ಮನಸ್ಸು ಕಹಿಯಾಗಿದ್ದು. ದೇಶ ಬಿಟ್ಟ ಕೂಡಲೇ ರಹಸ್ಯಗಳನ್ನು ಬಯಲು ಮಾಡಲಿಲ್ಲ. ಮಾಡುವ ಇರಾದೆಯೂ ಇದ್ದಂತಿರಲಿಲ್ಲ. ತುಂಬಾ ಪ್ರಪಂಚ ತಿರುಗಿದ. ಆಸ್ಟ್ರೇಲಿಯಾದಲ್ಲಿ ಇದ್ದಾಗ ಗುರಿರೋ ಎನ್ನುವ ಆಸಾಮಿ ಪರಿಚಿತನಾಗಿ, ರಹಸ್ಯಗಳನ್ನು ಪತ್ರಿಕೆಗಳಿಗೆ ಕೊಟ್ಟರೆ ಕೋಟಿ ಕೋಟಿ ಸಂಪಾದಿಸಬಹುದು ಎಂದು ತಲೆಯಲ್ಲಿ ಹುಳ ಬಿಟ್ಟಾಗಲೇ ಅಂತಹ ಯೋಚನೆ ವನುನು ತಲೆಗೆ ಬಂದಿದ್ದು. ಇಲ್ಲವಾದರೆ ಆತ ರಹಸ್ಯಗಳನ್ನು ಬರೆದುಕೊಂಡಿದ್ದ ನೋಟ್ ಪುಸ್ತಕ ಆತನ ಚೀಲದ ಮೂಲೆಯಲ್ಲಿ ಎಲ್ಲೋ ಮುದುಡಿಹೋಗಿ ಕಸದಬುಟ್ಟಿ ಸೇರುತ್ತಿತ್ತು.
ಆದರೆ ಪ್ರಪಂಚದ ಭೋಳೆ ಜನ ಆತನನ್ನು ಹೀರೋ ಮಾಡಿದರು. ಅಮೇರಿಕಾದ ದಂಪತಿಯೊಂದು ವನುನುವನ್ನು 'ತಮ್ಮ ಮಗ' ಎಂದು ಸಾಂಕೇತಿಕವಾಗಿ 'ದತ್ತಕ್ಕೆ' ತೆಗೆದುಕೊಂಡು ಒಂದಿಷ್ಟು ಸ್ಕೋಪ್ ತೆಗೆದುಕೊಂಡರು. ಕೆಲವು ಕ್ರೈಸ್ತ್ ಗುಂಪುಗಳು ಅವನನ್ನು ನೊಬೆಲ್ ಶಾಂತಿ ಪುರಸ್ಕಾರಕ್ಕೆ ಕೂಡ ಶಿಫಾರಸು ಮಾಡಿಬಿಟ್ಟವು.
ಬರೋಬ್ಬರಿ ಹದಿನೆಂಟು ವರ್ಷಗಳನ್ನು ಜೈಲಿನಲ್ಲಿ ಕಳೆದ ಬಳಿಕ ವನುನು ಬಿಡುಗಡೆಯಾದ. ಇಂದಿಗೂ ಜೆರುಸಲೇಮ್ ಪಟ್ಟಣದ ಚರ್ಚ್ ಒಂದರಲ್ಲಿ ಆತನ ವಾಸ. ಇಸ್ರೇಲನ್ನು ನಖಶಿಖಾಂತ ದ್ವೇಷಿಸುತ್ತಾನೆ. ಮಾತೃಭಾಷೆ, ರಾಷ್ಟ್ರೀಯಭಾಷೆಯಾದ ಹಿಬ್ರೂ ಭಾಷೆಯಲ್ಲಿ ಹರ್ಗೀಸ್ ಮಾತಾಡುವುದಿಲ್ಲ. ಜಾನ್ ಕ್ರಾಸ್ಮನ್ ಎಂದು ಹೊಸ ಹೆಸರು ಇಟ್ಟುಕೊಂಡಿದ್ದಾನೆ. ಅರಬ್ ಪ್ಯಾಲೆಸ್ಟೈನ್ ಸಂಪ್ರದಾಯದ, ಯಹೂದಿಯಲ್ಲದ, ವಧು (ಮದುವೆಗೆ) ಬೇಕಾಗಿದೆ ಎಂದು ಸ್ಥಳೀಯ ಪತ್ರಿಕೆಗಳಲ್ಲಿ ಜಾಹೀರಾತು ಹಾಕುತ್ತಾನೆ. ಒಟ್ಟಿನಲ್ಲಿ ಇನ್ನೂ ಎಡಬಿಡಂಗಿಯಾಗಿಯೇ ಇದ್ದಾನೆ.
ಅವಳೆಲ್ಲಿ ಹೋದಳು ಮಾಯಾಂಗನೆ ಸಿಂಡಿ? ತುಂಬಾ ಗಡಿಬಿಡಿಯಲ್ಲಿ ಈ ಕಾರ್ಯಾಚರಣೆಯನ್ನು ಮಾಡಬೇಕಾದ ಅನಿವಾರ್ಯತೆ ಇದ್ದ ಕಾರಣ ಸಿಂಡಿ ಬಗ್ಗೆ ಒಂದು ವಿಸ್ತೃತವಾದ ಸುಳ್ಳು ವ್ಯಕ್ತಿತ್ವವನ್ನು (false identity & cover story) ಸೃಷ್ಟಿಸಲು ಮೊಸ್ಸಾದಿಗೆ ವೇಳೆ ಇರಲಿಲ್ಲ. ಸಿಂಡಿ ತನ್ನ ಅಕ್ಕನ ಹೆಸರನ್ನು ಬಳಸಿದ್ದಳು. ಆಕೆಯ ಹೆಸರು ಸಿಂಡಿ ಹಾನಿನ್. ಪ್ರಳಯಾಂತಹ ಪತ್ರಕರ್ತರು ಆ ಹೆಸರಿನ ಜಾಡು ಹಿಡಿದು ತನಿಖೆಗೆ ಇಳಿದರು. ಆಕೆಯ ಜನ್ಮ ಜಾಲಾಡಿಬಿಟ್ಟರು. ಸಿಂಡಿಯ ಬಗ್ಗೆ ಮಾಹಿತಿ ಕಲೆ ಹಾಕಿದರು.
ಆಕೆಯ ನಿಜವಾದ ಹೆಸರು ಶೆರಿಲ್ ಬೆನ್-ಟೊವ್. ಅಮೇರಿಕಾದ ಮಿಲಿಯನಿಯರ್ ಶ್ರೀಮಂತನ ಮಗಳು. ಅತ್ಯಂತ ಭಕ್ತಿಯುಳ್ಳ ಯಹೂದಿ. ಇಸ್ರೇಲ್ ಪ್ರೇಮಿ. ಹದಿನೇಳು ವರ್ಷಗಳಾದಾಗ ಇಸ್ರೇಲಿಗೆ ವಲಸೆ ಬಂದಿದ್ದಳು. ಅಲ್ಲಿನ ಪೌರತ್ವ ಪಡೆದ ನಂತರ ಕಡ್ಡಾಯವಾದ ಸೈನ್ಯದಲ್ಲಿ ಸೇವೆ ಮಾಡಿದ್ದಳು. ನಂತರ ಮಿಲಿಟರಿ ಬೇಹುಗಾರಿಕೆ ಸಂಸ್ಥೆ ಅಮಾನ್ ನಲ್ಲಿ ಕೆಲಸಮಾಡಿಕೊಂಡಿದ್ದ ಅಧಿಕಾರಿಯನ್ನು ವರಿಸಿದ್ದಳು.
ಆವಾಗ ಆಕೆ ಮೊಸ್ಸಾದ್ ಕಣ್ಣಿಗೆ ಬಿದ್ದಿದ್ದಳು. ಆಕೆಯ ಬುದ್ಧಿಮತ್ತೆ (IQ) ತುಂಬಾ ಜಾಸ್ತಿಯಿತ್ತು. ಕೆಲಸದ ಬಗ್ಗೆ ತುಂಬಾ ಆಸಕ್ತಿ ಮತ್ತು ಶ್ರದ್ಧೆ. ಮೇಲಿಂದ ಅಮೇರಿಕನ್ ಕೂಡ ಆಗಿರುವುದು ಹೆಚ್ಚಿನ ಅನುಕೂಲ. ಮೊಸ್ಸಾದ್ ಬೇಹುಗಾರಿಕೆ ಕೆಲಸಕ್ಕೆ ಹೇಳಿಮಾಡಿಸಿದ ಅಭ್ಯರ್ಥಿ.
ಎರಡು ವರ್ಷಗಳ ಕಠಿಣ ತರಬೇತಿಗೆ ಹಾಕಲಾಯಿತು. ಅದು ಮುಗಿಯುವ ಹಂತದಲ್ಲಿದ್ದಾಗ ಈ ಮಹತ್ವದ ಕಾರ್ಯಾಚರಣೆಗೆ ಆಜ್ಞೆ ಬಂದಿತ್ತು. ಮಧುಜಾಲ (honey trap) ಬೀಸಲು ಇವಳಗಿಂತ ಒಳ್ಳೆಯ ಬೇಹುಗಾರಿಣಿ ಇರಲಿಲ್ಲ. ಹಾಗಾಗಿ ತರಾತುರಿಯಲ್ಲಿ ಲಂಡನ್ ಕಾರ್ಯಾಚರಣೆಗೆ ನಿಯೋಜಿಸಲ್ಪಟ್ಟಿದ್ದಳು.
ವನುನುವಿನ ಅಪಹರಣ ಪ್ರಕರಣದ ನಂತರ ಆಕೆ ಯಾರು ಎಂಬುದು ಬಹಿರಂಗವಾಯಿತು. Her cover was blown. ಒಮ್ಮೆ ಮುಖವಾಡ ಬಯಲಾದ ಮೇಲೆ ಸಕ್ರಿಯ ಬೇಹುಗಾರಿಕೆಗೆ ನಮಸ್ಕಾರ ಹೇಳಲೇಬೇಕು. ಬೇರೆ ಗತಿಯಿಲ್ಲ.
ಇಂದು ಸಿಂಡಿ ಉರ್ಫ್ ಶೆರಿಲ್ ಹಾನಿನ್ ಬೆನ್-ಟೊವ್ ಅಮೇರಿಕಾದ ಫ್ಲೋರಿಡಾ ರಾಜ್ಯದ ಓರ್ಲಾಂಡೋ ಶಹರದಲ್ಲಿ ನೆಲೆಸಿದ್ದಾಳೆ ಎಂದು ಸುದ್ದಿ. ಆಕೆ ಮತ್ತು ಆಕೆಯ ಪತಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಾರಂತೆ. ಅವರದ್ದು ಮಾದರಿ ಯಹೂದಿ ಅಮೇರಿಕನ್ ಕುಟುಂಬವಂತೆ.
ಮೊಸ್ಸಾದಿನ ಆಕೆಯ ಹಳೆಯ ಸಹೋದ್ಯೋಗಿಗಳು ಇಂದಿಗೂ ಆಕೆಯನ್ನು ನೆನಪು ಮಾಡಿಕೊಳ್ಳುತ್ತಾರೆ. ವನುನು ಪ್ರಕರಣದಲ್ಲಿ ಆಕೆಯ ಹೆಸರು, ವೈಯಕ್ತಿಕ ಮಾಹಿತಿ ಬಯಲಾಗದಿದ್ದರೆ ಇಂದಿಗೂ ಆಕೆ ತಮ್ಮೊಂದಿಗೆ ಇರುತ್ತಿದ್ದಳು. ಮಹತ್ತರ ಕೊಡುಗೆಗಳನ್ನು ತನ್ನ ಕೆಲಸದ ಮೂಲಕ ಕೊಡುತ್ತಿದ್ದಳು ಎಂದು ಭಾವಿಸುತ್ತಾರೆ. ಬ್ರಿಟನ್ ದೇಶದ ಯಾವುದೇ ಕಾಯಿದೆಗಳನ್ನೂ ಮುರಿಯದೆ, ತುಂಬಾ ಚಾಣಾಕ್ಷತನದಿಂದ ವನುನುವನ್ನು ದೇಶದಿಂದ ಹೊರಗೆ ಕರೆದೊಯ್ದಿದ್ದಳು. ಅದಕ್ಕೊಂದು ದೊಡ್ಡ hats off ಅನ್ನುತ್ತಾರೆ.
ಬ್ರಿಟನ್ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಪ್ರಕರಣದ ಸಂಪೂರ್ಣ ವರದಿ ತರಿಸಿಕೊಂಡರು. ತಮ್ಮ ದೇಶದ ಕಾನೂನನ್ನು ಇಸ್ರೇಲಿಗಳು ಮೀರಿ ನಡೆದಿಲ್ಲ ಎಂದು ಖಾತ್ರಿಯಾದ ಮೇಲೆ ತಮ್ಮದೇ ರೀತಿಯಲ್ಲಿ ಸಂಸತ್ತಿನಲ್ಲಿ ವಿರೋಧಿಗಳ ಪ್ರತಿಭಟನೆಯನ್ನು ಸಂಬಾಳಿಸಿದರು. ಹೇಳಿಕೇಳಿ 'ಉಕ್ಕಿನ ಮಹಿಳೆ' ಎಂಬ ಖ್ಯಾತಿ ಆಕೆಯದ್ದು.
ಇಸ್ರೇಲ್ ತನ್ನ ಹಳೆ ಚಾಳಿ ಬಿಟ್ಟರೆ ತಾನೇ? ಎರಡು ವರ್ಷಗಳ ನಂತರ ಮೊಸ್ಸಾದ್ ಅಧಿಕಾರಿಗಳಾದ ಏರಿ ರೇಗೆವ್ ಮತ್ತು ಯಾಕೋವ್ ಬಾರಾಡ್ ಒಬ್ಬ ಪ್ಯಾಲೆಸ್ಟೈನ್ ನಾಗರಿಕನನ್ನು ಲಂಡನ್ನಿನಲ್ಲಿ ಡಬಲ್ ಏಜೆಂಟ್ ಆಗಿ ನೇಮಕ ಮಾಡಿಕೊಂಡರು. ಅವನ ಮೂಲಕ ನಿಷಿದ್ಧ ಬೇಹುಗಾರಿಕೆ ಮಾಡಲು ಯತ್ನಿಸಿದರು. ಅವನು ಸಿಕ್ಕಿಬಿದ್ದ. ಆಗ ಮಾತ್ರ ಸಿಟ್ಟಿಗೆದ್ದ ಪ್ರಧಾನಿ ಥ್ಯಾಚರ್ ಕೆಲಕಾಲ ಮೊಸ್ಸಾದ್ ಕಚೇರಿಗೆ ಬೀಗ ಹಾಕಿಸಿದ್ದರು. ಕೆಲ ಮೊಸ್ಸಾದ್ ಅಧಿಕಾರಿಗಳನ್ನು ದೇಶ ಬಿಟ್ಟು ಓಡಿಸಿದ್ದರು. ರಾಜತಾಂತ್ರಿಕ ಭಾಷೆಯಲ್ಲಿ persona non grata.
'ತಪ್ಪಾಯಿತು. ತಿದ್ದಿಕೊಳ್ಳುತ್ತೇವೆ,' ಎಂದು ದಮ್ಮಯ್ಯ ಗುಡ್ಡೆ ಹಾಕಿ ಇಸ್ರೇಲ್ ತನ್ನ ರಾಜತಾಂತ್ರಿಕ ಕಚೇರಿ ಮೇಲಿನ, ಮುಖ್ಯವಾಗಿ ಮೊಸ್ಸಾದ್ ವಿಭಾಗದ ಮೇಲಿನ, ನಿರ್ಬಂಧವನ್ನು ತೆರವು ಮಾಡಿಸಿಕೊಂಡಿತ್ತು. ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಹೇಳಿದಂತೆ ನಡೆದುಕೊಂಡರೂ ಕೂಡ. ಆದರೆ ೨೦೧೦ ರಲ್ಲಿ ಮೊಸ್ಸಾದ್ ತಂಡವೊಂದು ಪ್ಯಾಲೆಸ್ಟೈನ್ ಹಮಾಸ್ ಉಗ್ರರ ದೊಡ್ಡ ಕುಳ ಮಹಮೂದ್ ಅಲ್-ಮಾಭೌನನ್ನು ದುಬೈನಲ್ಲಿ ಅವನ ಹೋಟೆಲ್ ರೂಮಿನಲ್ಲಿ ಕೊಂದು ಪರಾರಿಯಾಯಿತು. ಆ ತಂಡದಲ್ಲಿನ ಕೆಲವರು ನಕಲಿ ಬ್ರಿಟಿಷ್ ಪಾಸಪೋರ್ಟ್ ಹೊಂದಿದ್ದರು ಎಂದು ಗುಲ್ಲಾಗಿ ಮತ್ತೆ ಬ್ರಿಟನ್ ದೇಶದ ಕಣ್ಣು ಕೆಂಪಗಾಗಿತ್ತು. ಆಗ ಪ್ರಧಾನಿಯಾಗಿ ಥ್ಯಾಚರ್ ಇರಲಿಲ್ಲ. ಅಷ್ಟರಲ್ಲಾಗಲೇ ಥೇಮ್ಸ್ ನದಿಯಲ್ಲಿ ಸಾಕಷ್ಟು ನೀರು ಹರಿದುಹೋಗಿತ್ತು. ಹಾಗಾಗಿ ದೊಡ್ಡ ಸುದ್ದಿಯಾಗಲಿಲ್ಲ. ಚಿರತೆ ಎಂದಿಗೂ ಮೈಮೇಲಿನ ಪಟ್ಟೆಗಳನ್ನು ಬದಲಾಯಿಸುವುದಿಲ್ಲವಂತೆ. ಮೊಸ್ಸಾದ್ ಕೂಡ ಹಾಗೆಯೇ...ಖತರ್ನಾಕ್ ತುಂಟ ಸಂಸ್ಥೆ :)
ಮಾಹಿತಿ ಮೂಲ: Mossad: The Greatest Missions of the Israeli Secret Service by Michael Bar-Zohar,
Nissim Mishal