Monday, April 29, 2024

ಜೋನ್ಸಟೌನ್ ದುರಂತ...ಸಾಮೂಹಿಕ ಆತ್ಮಹತ್ಯೆಯೋ ಅಥವಾ ಪೂರ್ವನಿಯೋಜಿತ ಹತ್ಯಾಕಾಂಡವೋ??

ಸೆಪ್ಟೆಂಬರ್ ೧೧, ೨೦೦೧ ರ ಅಲ್ ಖೈದಾ ಉಗ್ರರ ದಾಳಿಯ ಮೊದಲು ಅಮೇರಿಕಾದ ನಾಗರಿಕರು ಅತಿ ಹೆಚ್ಚು ಸಂಖ್ಯೆಯಲ್ಲಿ ಸತ್ತಿದ್ದೇನಾದರೂ ಇದ್ದರೆ ಅದು ಜೋನ್ಸಟೌನ್ ಹತ್ಯಾಕಾಂಡದಲ್ಲಿ. ಸುಮಾರು ೯೦೦ ಜನ ಅಮೆರಿಕನ್ ನಾಗರಿಕರು ಒಂದೇಟಿಗೆ, ಅತಿ ವಿಚಿತ್ರವಾಗಿ, ವಿಲಕ್ಷಣ ಸನ್ನಿವೇಶದಲ್ಲಿ ಸತ್ತುಹೋಗಿದ್ದರು. ಅದಾಗಿದ್ದು ಸುಮಾರು ನಲವತ್ತು ವರ್ಷಗಳ ಹಿಂದೆ. 

ಅಂದು ನವೆಂಬರ್ ೧೮, ೧೯೭೮. ಸ್ಥಳ ಜೋನ್ಸಟೌನ್, ಗಯಾನಾ. ದಕ್ಷಿಣ ಅಮೆರಿಕಾದಲ್ಲಿರುವ ಗಯಾನಾ ದೇಶದ ದುರ್ಗಮ ಕಾಡಿನ ಮೂಲೆಯಲ್ಲಿರುವ ಒಂದು ಊರು ಜೋನ್ಸಟೌನ್. ಅಮೆರಿಕದಿಂದ ಬಂದು ಅಲ್ಲಿ ನೆಲೆಸಿತ್ತು ಒಂದು ವಿಲಕ್ಷಣ ಧಾರ್ಮಿಕ ಸಮುದಾಯ. ಆ ಸಮುದಾಯದ ಹೆಸರು 'ಜನರ ದೇವಾಲಯ' (Peoples' Temple). ಮೂಲತಃ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸ್ಥಾಪಿತವಾದ ಸಮುದಾಯ. ಅದರ ಮುಖ್ಯಸ್ಥ ಪಾದ್ರಿ ಜಿಮ್ ಜೋನ್ಸ್. ಅವನ ಆಜ್ಞೆಯಂತೆ ೯೦೦ ಜನ ಅವನ ಅನುಯಾಯಿಗಳು ವಿಷಮಿಶ್ರಿತ ತಂಪುಪಾನೀಯ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇವತ್ತಿಗೂ ಸರಿಯಾಗಿ ಅರ್ಥವಾಗದ ದುರ್ಘಟನೆ ಜೋನ್ಸಟೌನ್ ದುರಂತ.

ಪಾದ್ರಿ ಜಿಮ್ ಜೋನ್ಸ್ ಶ್ವೇತವರ್ಣೀಯ. ಅವನ ಅನುಯಾಯಿಗಳಲ್ಲಿ ಹೆಚ್ಚಿನವರು ಕಪ್ಪುವರ್ಣೀಯರು. ಜಿಮ್ ಜೋನ್ಸ್ ಅಸಾಂಪ್ರದಾಯಿಕ ಮತ್ತು ಪ್ರಗತಿಪರ ವಿಚಾರಧಾರೆಯನ್ನು ತನ್ನ ಧಾರ್ಮಿಕ ಪ್ರವಚನಗಳಲ್ಲಿ ಬೋಧಿಸುತ್ತಿದ್ದ. ೧೯೭೦ ರ ದಶಕದಲ್ಲಿ 'ಜನರ ದೇವಾಲಯ' ಎಂಬ ವಿಚಿತ್ರ ಹೆಸರು ಹೊಂದಿದ್ದ ಧಾರ್ಮಿಕ ಸಮೂಹ ತುಂಬಾ ಜನಪ್ರಿಯವಾಗಿತ್ತು. ಎಷ್ಟರ ಮಟ್ಟಿಗೆ ಅಂದರೆ ಸ್ಯಾನ್ ಫ್ರಾನ್ಸಿಸ್ಕೋ ಸುತ್ತಮುತ್ತಲಿನ ದೊಡ್ಡ ದೊಡ್ಡ ರಾಜಕಾರಣಿಗಳು ಪಾದ್ರಿ ಜಿಮ್ ಜೋನ್ಸ್ ಮತ್ತು ಅವನ ಸಮುದಾಯಕ್ಕೆ ಹತ್ತಿರವಾಗಲು ಹಾತೊರೆಯುತ್ತಿದ್ದರು. 

ಜನಪ್ರಿಯತೆ ಹೆಚ್ಚುತ್ತಾ ಹೋದಂತೆ ಆ ಧಾರ್ಮಿಕ ಸಮುದಾಯದ ಬಗ್ಗೆ ಮಾಧ್ಯಮಗಳು ಜಾಸ್ತಿ ತಲೆಕೆಡಿಸಿಕೊಂಡವು. ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಹೆಸರಿನಲ್ಲಿ ಕಾನೂನುಬಾಹಿರ ಮತ್ತು ಸಂಶಯಾಸ್ಪದ ಚಟುವಟಿಕೆಗಳು ನಡೆಯುತ್ತಿರಬಹುದೇ ಎಂಬ ಅರ್ಥದಲ್ಲಿ ವರದಿಗಳು ಪ್ರಕಟವಾದವು. ಹೆಚ್ಚುತ್ತಿದ್ದ ಮಾಧ್ಯಮಗಳ ಆಸಕ್ತಿ ಮತ್ತು ಪರಿಶೀಲನೆಯಿಂದ ಪಾದ್ರಿ ಜಿಮ್ ಜೋನ್ಸ್ ತೀವ್ರ ಚಿಂತೆಗೊಳಗಾದ. ಸ್ಯಾನ್ ಫ್ರಾನ್ಸಿಸ್ಕೋದಂತಹ ದೊಡ್ಡ ಶಹರದಲ್ಲಿದ್ದರೆ ಮಾಧ್ಯಮಗಳ ಮೂಗುತೂರಿಸುವಿಕೆ ತಪ್ಪಿದ್ದಲ್ಲ. ಇಲ್ಲಿಂದ ಎಲ್ಲಾದರೂ ದೂರ ಹೋಗಿಬಿಡಬೇಕು ಎಂದು ನಿರ್ಧಾರ ಮಾಡಿದ. ಆಗ ಕಂಡಿದ್ದೇ ಗಯಾನಾ ದೇಶದ ಮೂಲೆಯಲ್ಲಿದ್ದ ಒಂದು ಕೃಷಿಪ್ರದೇಶ. ತನ್ನ ಕಟ್ಟರ್ ಅನುಯಾಯಿಗಳೊಂದಿಗೆ ಅಲ್ಲಿಗೆ ಶಿಫ್ಟ್ ಆದ. ಅಲ್ಲಿನ ಅವನ ಆಶ್ರಮ ಜೋನ್ಸಟೌನ್ ಎಂದೇ ಖ್ಯಾತವಾಯಿತು.

ನೂರಾರು ಜನ ಅಮೇರಿಕಾದ ನಾಗರಿಕರು ಸಹ ಅಲ್ಲಿಗೆ ಶಿಫ್ಟ್ ಆಗಿದ್ದರು. ಅವರ ಸಂಬಂಧಿಕರು ಅಲ್ಲಿದ್ದ ತಮ್ಮ ಬಂಧುಗಳ  ಯೋಗಕ್ಷೇಮದ ಬಗ್ಗೆ ಚಿಂತಿತರಾದರು. ಅಮೇರಿಕಾದ ಸಂಸತ್ತಿನಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದ ಜನಪ್ರತಿನಿಧಿ ಲಿಯೋ ರಾಯನ್ ಅವರ ಬಳಿ ಹೋಗಿ ತಮ್ಮ ದುಗುಡ ತೋಡಿಕೊಂಡರು. ಪಾದ್ರಿ ಜಿಮ್ ಜೋನ್ಸ್ ಜೊತೆಗೆ ಹೋಗಿ ಗಯಾನಾದ ದುರ್ಗಮ ಕಾಡಿನಲ್ಲಿ ನೆಲೆಸಿದ್ದ ತಮ್ಮ ಸಂಬಂಧಿಗಳ ಯೋಗಕ್ಷೇಮದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ತನ್ನ ಕ್ಷೇತ್ರದ ತುಂಬಾ ಜನ ಹೀಗೆ ಕಾಳಜಿ ವ್ಯಕ್ತಪಡಿಸಿದಾಗ ಜನಪ್ರತಿನಿಧಿ ಲಿಯೋ ರಾಯನ್ ಕಾರ್ಯಪ್ರವೃತ್ತನಾದ. ಖುದ್ದಾಗಿ ಗಯಾನಾದ ಜೋನ್ಸಟೌನಿಗೆ ಹೋಗಿ ಮಾಹಿತಿ ಪಡೆದು ಬರಲು ನಿರ್ಧರಿಸಿದ. ನವೆಂಬರ್ ೧೯೭೮ ರಲ್ಲಿ ಜೋನ್ಸಟೌನಿಗೆ ಹೋದ ಲಿಯೋ ರಾಯನ್ ಹಿಂತಿರುಗಲೇ ಇಲ್ಲ. ಅವನನ್ನು ಹುಡುಕಿಕೊಂಡು ಹೋದರೆ ಘನಘೋರ ದುರಂತವೊಂದು ನಡೆದುಹೋಗಿದ್ದು ಮೊದಲಬಾರಿಗೆ ತಿಳಿಯಿತು. ಜನಪ್ರತಿನಿಧಿ ಲಿಯೋ ರಾಯನ್ ಮತ್ತು ಅವನೊಂದಿಗಿದ್ದ ನಾಲ್ಕು ಜನರನ್ನು ಜೋನ್ಸಟೌನಿನ ತಾತ್ಕಾಲಿಕ ವಿಮಾನಅಡ್ಡೆಯಲ್ಲಿಯೇ ಗುಂಡಿಟ್ಟು ಕೊಲ್ಲಲಾಗಿತ್ತು. ಇದಾದ ನಂತರ ಪಾದ್ರಿ ಜಿಮ್ ಜೋನ್ಸ್ ತನ್ನ ಅನುಯಾಯಿಗಳಿಗೆ ವಿಷಮಿಶ್ರಿತ ಹಣ್ಣಿನರಸವನ್ನು ಕುಡಿಯುವಂತೆ ಆಜ್ಞಾಪಿಸಿದ. ಅದನ್ನು ಕುಡಿದ ಸುಮಾರು ೯೦೦ ಜನ ಸತ್ತುಬಿದ್ದರು. ತಲೆಗೆ ಗುಂಡೇಟು ಬಿದ್ದು ಮೃತನಾಗಿದ್ದ ಪಾದ್ರಿ ಜಿಮ್ ಜೋನ್ಸನ ಶವ ಕೂಡ ಅಲ್ಲೇ ಇತ್ತು. ಜಿಮ್ ಜೋನ್ಸ್ ತಾನೇ ಗುಂಡು ಹೊಡೆದುಕೊಂಡು ಸತ್ತಿದ್ದ ಅಥವಾ ಅವನ ಆಪ್ತ ಸಹಾಯಕಿ ಆನಿ ಮೂರ್ ಅವನಿಗೆ ಗುಂಡಿಟ್ಟು ಕೊಂದು ನಂತರ ತಾನೂ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಆ ದುರಂತದಲ್ಲಿ ಬದುಕುಳಿದ ಜನರು ನೆನೆಪಿಸಿಕೊಳ್ಳುವುದೇನೆಂದರೆ: 'ಜನರ ದೇವಾಲಯ'ದಲ್ಲಿದ್ದ ಜನರು ತುಂಬಾ ಒಳ್ಳೆಯವರಾಗಿದ್ದರು. ತಮ್ಮ ಸ್ವಹಿತಾಸಕ್ತಿ ಮತ್ತು ಸ್ವಾರ್ಥವನ್ನು ಮೀರಿದ ಉನ್ನತ ಧ್ಯೇಯಗಳ ಬಗ್ಗೆ ಅಚಲ ನಂಬಿಕೆ ಹೊಂದಿದ್ದರು. ಅದನ್ನು ಸಾಧಿಸಲು ತನುಮನಧನಗಳನ್ನು ಸಮರ್ಪಿಸಿ ಆ ದುರ್ಗಮ ಪ್ರದೇಶದಲ್ಲಿ ಕಷ್ಟಪಟ್ಟು ದುಡಿದು ಬಾಳುತ್ತಿದ್ದರು. "ನಾವೆಲ್ಲಾ ಸರಿಯಾದ ದಾರಿಯಲ್ಲೇ ಸಾಗುತ್ತಿದ್ದೆವು. ಅಷ್ಟೇ ಆಗಿನ ಸಮಯ ಸರಿಯಾಗಿರಲಿಲ್ಲ. ನಾವು ದೇವರಂತೆ ನಂಬಿದ್ದ ನಮ್ಮ ನಾಯಕ ಪಾದ್ರಿ ಜಿಮ್ ಜೋನ್ಸ್ ಸರಿಯಾಗಿರಲಿಲ್ಲ," ಎಂದು ಅವರಿಗೆ ನಂತರ ಅನ್ನಿಸಿತು. 

ಇವತ್ತು ಜೋನ್ಸಟೌನ್ ದುರಂತವೆಂಬುದು “drinking the Kool-Aid” ಎಂಬ ಹಾಸ್ಯೋಕ್ತಿ /  ನಾಣ್ಣುಡಿಯಾಗಿಹೋಗಿದ್ದನ್ನು ನೋಡಿ ನಗಬೇಕೋ ಅಳಬೇಕೋ ಗೊತ್ತಾಗುವುದಿಲ್ಲ. ಯಾರ ಮಾತನ್ನಾದರೂ ಮರುಪ್ರಶ್ನೆ ಮಾಡದೇ, ಅಂಧಶ್ರದ್ಧೆಯಿಂದ ಪಾಲಿಸುವುದನ್ನು ನೋಡಿದಾಗ 'ನೀನು ಕೂಲ್ ಏಡ್ ಕುಡಿದೆಯಾ??' ಎಂದು ತಮಾಷೆಯಾಗಿ ಕೇಳುವುದು ಸಮಾಜದಲ್ಲಿ ಸಾಮಾನ್ಯವಾಗಿದೆ. 

ಅಂತರ್ಜನಾಂಗೀಯ ಮತ್ತು ಸಾಮಾಜಿಕ ಸಾಮರಸ್ಯ ಮತ್ತು ಸಮಾನತೆ ಬೋಧಿಸುತ್ತಿದ್ದ ಪಾದ್ರಿ ಜಿಮ್ ಜೋನ್ಸ್ ಅದು ಹೇಗೆ ಅಷ್ಟು ದುಷ್ಟನಾಗಿ ಪರಿವರ್ತಿತನಾದ? ಜನರನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಪಾದ್ರಿ ಜಿಮ್ ಜೋನ್ಸನಿಗೆ ಮುಖ್ಯವಾಗಿತ್ತು. ಆತನ ನಯವಂಚನೆಯ ಸ್ವಭಾವ ಅವನ ಪಾದ್ರಿಯ ಮುಖವಾಡದಲ್ಲಿ ಅವಿತುಹೋಗಿತ್ತು. ತನ್ನನ್ನು ಧಿಕ್ಕರಿಸಿ ಹೋದ ಅಥವಾ ಹೋಗಬಹುದು ಎಂದುಕೊಂಡ ಜನರ ಮೇಲೆ ತುಂಬಾ  ಕೋಪವಿತ್ತು. ಪಾದ್ರಿಯ ಬಾಲ್ಯವನ್ನು ಅಭ್ಯಸಿಸಿದ ಇತಿಹಾಸಕಾರರು ಆತ ಬಾಲ್ಯದಲ್ಲಿ ಒಂಟಿಯಾಗಿರುವುದನ್ನು ಇಷ್ಟಪಡುತ್ತಿದ್ದ ಎಂಬುದನ್ನು ಗಮನಿಸಿದ್ದಾರೆ. ಆತ ಬಾಲ್ಯದಲ್ಲಿ ಸ್ನೇಹಿತರನ್ನು ಅಟಕ್ಕೆ ಕರೆದಾಗ ಒಬ್ಬೊಬ್ಬರನ್ನೇ ಆಯ್ಕೆ ಮಾಡಿಕೊಂಡು ಅವರೊಟ್ಟಿಗೆ ಆಟವಾಡುತ್ತಿದ್ದ. ಉಳಿದ ಸ್ನೇಹಿತರನ್ನು ಬೇರೊಂದು ಕೋಣೆಯಲ್ಲಿ ಕೂಡಿಡುತ್ತಿದ್ದ. ಸಾಕುಪ್ರಾಣಿಗಳ ಮೇಲೆ ಚಿತ್ರವಿಚಿತ್ರ ಪ್ರಯೋಗ ಮಾಡುತ್ತಿದ್ದ. ಅವು ಸತ್ತಾಗ ಅವುಗಳ ಅಂತ್ಯಕ್ರಿಯೆ ಕೂಡ ಮಾಡುತ್ತಿದ್ದ. ಬಾಲ್ಯದಿಂದಲೇ ಆತನದು ವಿಚಿತ್ರ ಮತ್ತು ವಿಲಕ್ಷಣ ಪ್ರವೃತ್ತಿ. 

ಪಾದ್ರಿ ಜಿಮ್ ಜೋನ್ಸನ ಬಾಲ್ಯ ಸ್ನೇಹಿತನೊಬ್ಬನ ಪ್ರಕಾರ: ಜಿಮ್ ವಿಚಿತ್ರ ಸ್ವಭಾವದವನಾಗಿದ್ದ. ಧರ್ಮದ ಬಗ್ಗೆ, ಸಾವಿನ ಬಗ್ಗೆ ಆಗಲೇ ತುಂಬಾ ಆಸಕ್ತಿ ಹೊಂದಿದ್ದ. ಬೆಕ್ಕೊಂದನ್ನು ಚಾಕು ಹಾಕಿ ಕೊಂದಿದ್ದ. ಎರಡನೇ ವಿಶ್ವಯುದ್ಧದ ಕೊನೆಯಲ್ಲಿ, ೧೯೪೫ ರಲ್ಲಿ, ಎದುರಾಳಿಗಳಿಂದ ಬಂಧನಕ್ಕೆ ಒಳಗಾಗುವುದರಿಂದ ತಪ್ಪಿಸಿಕೊಳ್ಳಲು ಹಿಟ್ಲರ್ ಆತ್ಮಹತ್ಯೆ ಮಾಡಿಕೊಂಡಾಗ ಅದನ್ನು ಜಿಮ್ ತುಂಬಾ ಮೆಚ್ಚಿಕೊಂಡಿದ್ದ.

೧೯೫೫ ರಲ್ಲಿ ಜಿಮ್ ಜೋನ್ಸ್ 'ಜನರ ದೇವಾಲಯ' ಎಂಬ ಕ್ರೈಸ್ತ ಧಾರ್ಮಿಕ ಸಂಸ್ಥೆಯನ್ನು ಇಂಡಿಯಾನಾ ರಾಜ್ಯದಲ್ಲಿ ಸ್ಥಾಪಿಸಿದ. ಎಲ್ಲ ಜನಾಂಗಗಳ ಜನರಿಗೂ ಮುಕ್ತ ಸ್ವಾಗತವಿತ್ತು. ವರ್ಣಭೇದ ನೀತಿ ಆಗ ಇನ್ನೂ ಸಕ್ರಿಯವಾಗಿತ್ತು. ಅಂತಹ ಸಮಯದಲ್ಲಿ ಎಲ್ಲ ಜನಾಂಗಗಳನ್ನೂ ಒಂದೆಡೆ ಸೇರಿಸುವಂತಹ ಧಾರ್ಮಿಕ ಸಂಸ್ಥೆ ಅಪರೂಪದ್ದಾಗಿತ್ತು. ಆ ಸಮಯದಲ್ಲಿ ಅಮೇರಿಕ ಮತ್ತು ಅಂದಿನ ಸೋವಿಯೆಟ್ ಯೂನಿಯನ್ ಮಧ್ಯೆ ಶೀತಲ ಸಮರ ತುಂಬಾ ಜೋರಾಗಿತ್ತು. ಅಣ್ವಸ್ತ್ರ ದಾಳಿಯಿಂದ ಇಡೀ ಅಮೇರಿಕ ನಾಶವಾಗಿ ಹೋಗಬಹುದು ಎಂಬ ಭಯ ಎಲ್ಲರನ್ನೂ ಕಾಡಿತ್ತು. ಅದೇನೂ ಅರ್ಥರಹಿತ ಭಯವಾಗಿರಲಿಲ್ಲ. ಹಾಗಿರುವಾಗ ಕ್ಯಾಲಿಫೋರ್ನಿಯಾ ರಾಜ್ಯದ ಯುರೇಕಾ ಎಂಬ ಪಟ್ಟಣ ಅಣ್ವಸ್ತ್ರ ದಾಳಿಯಿಂದ ತಕ್ಕಮಟ್ಟಿಗೆ ಸುರಕ್ಷಿತವಾಗಿದೆ ಎಂದು ಪತ್ರಿಕೆಯಲ್ಲಿ ಬಂದಿತ್ತು. ಸಿಯೇರಾ ಪರ್ವತಗಳ ನೈಸರ್ಗಿಕ  ಛತ್ರಛಾಯೆಯಲ್ಲಿದ್ದ ಯುರೇಕಾ ಪಟ್ಟಣಕ್ಕೆ ತಕ್ಕಮಟ್ಟಿನ ರಕ್ಷಣೆ ಇದೆ ಎಂದು ಭಾವಿಸಲಾಗಿತ್ತು. ಸುರಕ್ಷತೆಯ ದೃಷ್ಟಿಯಿಂದ ಎಲ್ಲರೂ ಕ್ಯಾಲಿಫೋರ್ನಿಯಾಗೆ ಹೊರಡಲೇಬೇಕಾಗಿದೆ ಎಂದು ಪಾದ್ರಿ ಜಿಮ್ ಜೋನ್ಸ್ ತನ್ನ ಅನುಯಾಯಿಗಳ ಮೇಲೆ ಪ್ರಭಾವ ಬೀರುವಂತೆ ಉಪದೇಶ ಮಾಡಿದ. ಜೂಲೈ ೧೫, ೧೯೬೭ ರಂದು ಅಣ್ವಸ್ತ್ರಗಳ ಯುದ್ಧದ ಕಾರಣ ಪ್ರಳಯವಾಗಲಿದೆ ಎಂದು ಭವಿಷ್ಯ ಹೇಳಿ ಅನುಯಾಯಿಗಳಿಗೆ ನಂಬಿಕೆ ಬರುವಂತೆ ಮಾಡಿದ. 

ಶೀಘ್ರದಲ್ಲೇ ಪ್ರಳಯವಾಗುವುದು ಎನ್ನುವ ಖಚಿತ ನಂಬಿಕೆ (ಭ್ರಮೆ) ಹೊಂದಿದ್ದ ಜೋನ್ಸ್, ತನ್ನ ಅನುಯಾಯಿಗಳೆಲ್ಲ ಅದನ್ನು ನಂಬಬೇಕು ಎಂದು ಬಯಸಿದ್ದ. ಇಂತಹ ಭ್ರಮೆ ಹೊಂದಿದ್ದ ಜೋನ್ಸ್, ತನ್ನ ಕುಟುಂಬ ಮತ್ತು ೭೦ ಜನ ಅನುಯಾಯಿಗಳೊಂದಿಗೆ ಉತ್ತರ ಕ್ಯಾಲಿಫೋರ್ನಿಯಾಗೆ ಬಂದ. ೧೯೭೫ ರ ಹೊತ್ತಿಗೆ ಅವನ ಧಾರ್ಮಿಕ ಸಮುದಾಯ ಸ್ಯಾನ್ ಫ್ರಾನ್ಸಿಸ್ಕೋ, ಲಾಸ್ ಏಂಜೆಲ್ಸ್ ಮುಂತಾದ ಪ್ರದೇಶಗಳಿಗೆ ಹರಡಿತ್ತು.

'ಜನರ ದೇವಾಲಯ' ಸಮುದಾಯ ತಮ್ಮ ಗುರು ಜಿಮ್ ಜೋನ್ಸ್ ಕಡೆಗೆ ಅಂಧವಿಶ್ವಾಸ ಹೊಂದಿತ್ತು. ಅವರಿಗೆ ತಮ್ಮ ಬಗ್ಗೆ, ತಮ್ಮ ಕುಟುಂಬಗಳ ಯೋಗಕ್ಷೇಮದ ಬಗ್ಗೆ ಕೂಡ ಕಾಳಜಿ ಇರಲಿಲ್ಲ. ಹಾಗಂತ ಕೆಲವರ ಅಭಿಪ್ರಾಯವಾಗಿತ್ತು. ಆದರೆ ಅನೇಕರು ಲೋಕಕಲ್ಯಾಣಕ್ಕಾಗಿ ಸ್ವಂತ ಹಿತಾಸಕ್ತಿಗಳನ್ನು ಬದಿಗಿಟ್ಟು ದುಡಿಯುತ್ತಿದ್ದರು. ಅಥವಾ ಹಾಗೆಂದು ಭಾವಿಸಿದ್ದರು. ಅನೇಕರು ಡ್ರಗ್ ಸೇವನೆಯಿಂದ ಹೊರಬರಲು ಪ್ರಯತ್ನಿಸುತ್ತಿದ್ದರೆ ಮತ್ತೂ ಹಲವರು ಅಪರಾಧಲೋಕದಿಂದ ಹೊರಬಂದು ಹೊಸ ಜೀವನ ಆರಂಭಿಸಲು ಪ್ರಯತ್ನಿಸುತ್ತಿದ್ದರು. ಅವರಿಗೆ ಜನಾಂಗೀಯ ಭೇದವಿಲ್ಲದೇ, ಎಲ್ಲರನ್ನೂ ಒಪ್ಪಿಕೊಂಡು ಅಪ್ಪಿಕೊಳ್ಳುತ್ತಿದ್ದ ಈ ಅಪರೂಪದ ಧಾರ್ಮಿಕ ಸಮುದಾಯ ಭರವಸೆಯ ಆಶಾಕಿರಣದಂತೆ ಕಂಡಿತ್ತು. 

ಪಾದ್ರಿ ಜಿಮ್ ಜೋನ್ಸ್ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರೂ ಹೊಸಬರನ್ನು ಸಂಘಟನೆಯತ್ತ ಸೆಳೆದವರು ಸಮುದಾಯದಲ್ಲಿ ಆಗಲೇ ಸಕ್ರಿಯರಾಗಿದ್ದ ಸದಸ್ಯರು. ಸಮುದಾಯದ ಪ್ರಾರ್ಥನಾ ಸಭೆಗಳಿಗೆ ಬಂದಾಗ ಕುಟುಂಬದ ಸಮಾರಂಭದಲ್ಲಿ ಪಾಲ್ಗೊಂಡ ಮಧುರ ಅನುಭವವಾಗುತ್ತಿತ್ತು ಎಂದು ಅನೇಕರು ಹೇಳುತ್ತಿದ್ದರು. ಹೆಚ್ಚಿನವರು ಸಮಾಜದಿಂದ ಬೇರೆ ಬೇರೆ ಕಾರಣಗಳಿಗೆ ತಿರಸ್ಕೃತರಾಗಿದ್ದವರು. ಅವರ ಮುಳುಗುತ್ತಿದ್ದ ಬಾಳಿಗೊಂದು ಆಸರೆಯ ಹುಲ್ಲುಕಡ್ಡಿಯಾಗಿತ್ತು ಈ ಸಮುದಾಯ. ಲೋಕಕಲ್ಯಾಣದ ಉದ್ದೇಶ ಜೀವನಕ್ಕೊಂದು ಗುರಿ ತಂದುಕೊಡುತ್ತಿತ್ತು. 

ತನ್ನ ಸಮುದಾಯದ ವ್ಯಾಪ್ತಿಯನ್ನು ಹೇಗೆ ಹೆಚ್ಚಿಸಬೇಕು ಎಂದು ಜಿಮ್ ಜೋನ್ಸ್ ವಿಚಾರ ಮಾಡಿದಾಗ ಅವನಿಗೆ ಮಾದರಿಯಾಗಿ ಕಂಡವನು ಮತ್ತೊಬ್ಬ ಧಾರ್ಮಿಕ ಗುರು ವಿವಾದಾತ್ಮಕ ಕಪ್ಪುವರ್ಣೀಯ ಪಾದ್ರಿ ಡಿವೈನ್. ಪಾದ್ರಿ ಡಿವೈನ್ ನನ್ನು ಆತನ ಅನುಯಾಯಿಗಳು ದೇವರು ಎಂದೇ ಪೂಜಿಸುತ್ತಿದ್ದರು. ಎಲ್ಲಿಯವರೆಗೆ ಅಂದರೆ  ಪಾದ್ರಿ ಡಿವೈನ್ ವಿರುದ್ಧ ತೀರ್ಪು ಕೊಟ್ಟ ನ್ಯಾಯಾಧೀಶನೊಬ್ಬ ಅಚಾನಕ್ಕಾಗಿ ಸತ್ತುಹೋದ. 'ವಿಷಾದದಿಂದ ಆ ಕೆಲಸಕ್ಕೆ ಆಜ್ಞೆ ಮಾಡಬೇಕಾಯಿತು,' ಎಂದು ಮುಗುಮ್ಮಾಗಿ ಹೇಳಿದ್ದ ಪಾದ್ರಿ ಡಿವೈನ್.

ಪಾದ್ರಿ ಡಿವೈನ್ ತನ್ನ ಪತ್ನಿ ಮಾತೆ ಡಿವೈನ್ ಳೊಂದಿಗೆ ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ತನ್ನ ಸಮುದಾಯದೊಂದಿಗೆ ನೆಲೆಸಿದ್ದ. ಆತ ಬೋಧಿಸುತ್ತಿದ್ದ ಮುಖ್ಯ ವಿಷಯಗಳಾದ ಜನಾಂಗೀಯ ಸಮಾನತೆ, ಎಲ್ಲ ಜನಾಂಗದವರು ಕೂಡಿ ಮಾಡುವ ಪ್ರಾರ್ಥನೆ, ಲೈಂಗಿಕ ಸಂಬಂಧಗಳ ನಿಷೇಧ, ಇವುಗಳನ್ನು ಜಿಮ್ ಜೋನ್ಸ್ ಸಹ ತನ್ನ ಧಾರ್ಮಿಕ ಚೌಕಟ್ಟಿನಲ್ಲಿ ಅಳವಡಿಸಿಕೊಂಡ. ೧೯೬೫ ರಲ್ಲಿ ಪಾದ್ರಿ ಡಿವೈನ್ ಮೃತನಾದ. ಆತನ ಸಮುದಾಯದ ಮೇಲೆ ಹತೋಟಿ ಪಡೆಯಲು ಜಿಮ್ ಜೋನ್ಸ್ ಪ್ರಯತ್ನಿಸಿದ. ಪಾದ್ರಿ ಡಿವೈನ್ ನ ಮುಂದುವರೆದ ಅವತಾರವೇ ತಾನು ಎಂದು ಪುಂಗಿದ. ಮಾತೆ ಡಿವೈನ್ ತನ್ನ ಗಂಡ ಸ್ಥಾಪಿಸಿದ್ದ ಧಾರ್ಮಿಕ ಸಮುದಾಯ ಮತ್ತು ಪರಂಪರೆಯನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡಲು ಸುತಾರಾಂ ಒಪ್ಪಲಿಲ್ಲ. ಅಲ್ಲಿ ಬಂದು ತಳವೂರಿದ್ದ ಜಿಮ್ ಜೇಮ್ಸ್ ಮತ್ತು ಅವನ ಭಕ್ತರನ್ನು ಒದ್ದೋಡಿಸಿದಳು. ಜಿಮ್ ಜೋನ್ಸ್ ವಾಪಸ್ ಮರಳಿದ. ಬರುವಾಗ ಪಾದ್ರಿ ಡಿವೈನ್ ನ ಹಲವು ಭಕ್ತರನ್ನು ಸೆಳೆದುಕೊಂಡು ಬರುವಲ್ಲಿ ತಕ್ಕ ಮಟ್ಟಿನ ಯಶಸ್ಸು ಕಂಡ. 

ಪಾದ್ರಿ ಜಿಮ್ ಜೋನ್ಸ್ ತಾನು ಮಾಡುತ್ತಿದ್ದ ಉಪದೇಶಗಳನ್ನೆಲ್ಲ ಖುದ್ದಾಗಿ ಪಾಲಿಸುತ್ತಿರಲಿಲ್ಲ. ೧೯೭೩ ಡಿಸೆಂಬರ್ ನಲ್ಲಿ ಲಾಸ್ ಏಂಜೆಲ್ಸ್ ನ ಥೇಟರ್ ಮುಂದೆ ಅಸಭ್ಯ ವರ್ತನೆ ತೋರಿದ್ದಕ್ಕೆ ಬಂಧನಕ್ಕೆ ಗುರಿಯಾಗಿದ್ದ. ತನ್ನ ಕೊನೆಯ ದಿನಗಳಲ್ಲಿ ಆತ ಕೆಲವು ನಿಷೇಧಿತ ಔಷಧಗಳಿಗೆ ದಾಸನಾಗಿದ್ದ. ವಿವಾಹಿತನಾಗಿದ್ದ ಆತ ಬೇರೆ ಬೇರೆ ಜನಾಂಗಗಳಿಗೆ ಸೇರಿದ ಮಕ್ಕಳನ್ನು ದತ್ತು ಪಡೆದಿದ್ದ. ತನ್ನ ಆಶ್ರಮದ ಕೆಲವು ಸ್ತ್ರೀ ಮತ್ತು ಪುರುಷ ಅನುಯಾಯಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ.

ಜಗತ್ತಿನಲ್ಲಿ ಎಲ್ಲರೂ ಸಲಿಂಗಿಗಳು ಎಂದು ವಿಚಿತ್ರವಾಗಿ ಘೋಷಿಸಿದ್ದ ಪಾದ್ರಿ ಜೇಮ್ಸ್ ತಾನೊಬ್ಬನೇ ಸಲಿಂಗಿ ಅಲ್ಲ ಎಂದುಬಿಟ್ಟಿದ್ದ. ಲೈಂಗಿಕಾಸಕ್ತಿ ಅಸಹಜ ಎಂದೂ ಕೂಡ ಹೇಳಿದ್ದ. 

ಪ್ರಣಯ ಸಂಬಂಧಗಳನ್ನು ಪಾದ್ರಿ ಜೋನ್ಸ್ ದ್ವೇಷಿಸುತ್ತಿದ್ದ. ಅಂತಹ ಸಂಬಂಧಗಳು 'ಜನರ ದೇವಾಲಯ' ಸಂಘಟನೆಯ ಉನ್ನತ ಗುರಿಗಳನ್ನು ತಲುಪುವಲ್ಲಿ ಅಡೆತಡೆ ಉಂಟುಮಾಡುತ್ತವೆ. ಹಾಗಾಗಿ ಸಂಘಟನೆಯ ಸದಸ್ಯರು ಪ್ರಣಯ ಸಂಬಂಧಗಳನ್ನು ಬಿಟ್ಟು ಕಾರ್ಯತತ್ಪರರಾಗಬೇಕು ಎಂದು ಹೇಳುತ್ತಿದ್ದ. 

ಪಾದ್ರಿ ಜೋನ್ಸ್ ಬಳಿ ಸಾಕಿದ (pet) ಚಿಂಪಾಂಜಿಯೊಂದಿತ್ತು. ಪ್ರಯೋಗಶಾಲೆಯಲ್ಲಿ ಚಿತ್ರವಿಚಿತ್ರ ಪ್ರಯೋಗಗಳಿಗೆ ಗುರಿಯಾಗಲಿದ್ದ ಚಿಂಪಾಂಜಿಯನ್ನು ಅವನು ರಕ್ಷಿಸಿ ತಂದಿದ್ದ ಎಂದು ಹೇಳಿಕೊಳ್ಳುತ್ತಿದ್ದನಾದರೂ ಎಲ್ಲಿ ಆ ಪಾಪದ ಚಿಂಪಾಂಜಿಯನ್ನು ಸಾಕುಪ್ರಾಣಿಗಳ ಅಂಗಡಿಯಿಂದ ಖರೀದಿ ಮಾಡಿ ತಂದಿದ್ದನೋ ಎಂಬ ಬಗ್ಗೆ ಸಂದೇಹಗಳಿದ್ದವು. ತನ್ನ ಮೂಲ ರಾಜ್ಯವಾದ ಇಂಡಿಯಾನಾದಲ್ಲಿ ಜಿಮ್ ಜೋನ್ಸನೇ ಕೋತಿಗಳನ್ನು ಸಾಕುಪ್ರಾಣಿಗಳಂತೆ ಮಾರುತ್ತಿದ್ದ ಎನ್ನುವ ಬಗ್ಗೆಯೂ ಮಾಹಿತಿಯಿತ್ತು. ಬೇರೆಯವರಿಗೆ ಕೋತಿಗಳನ್ನು ಮಾರುತ್ತಿದ್ದವ ತಾನೇ ಒಂದು ಚಿಂಪಾಂಜಿಯನ್ನು ಖರೀದಿ ಮಾಡಿ ತಂದಿಟ್ಟುಕೊಂಡಿದ್ದರೆ ಆಶ್ಚರ್ಯವೇನೂ ಇರಲಿಲ್ಲ. ಮಿಸ್ಟರ್  ಮಗ್ಸ್ ಎಂದು ಕರೆಯಲ್ಪಡುತ್ತಿದ್ದ ಆ ಚಿಂಪಾಂಜಿ ಸಂಘಟನೆಯ ಅಧಿಕೃತ ಲಾಂಛನವಾಗಿತ್ತು. ಹಾಗಾಗಿ  ರಾಜೋಪಚಾರ ಅನುಭವಿಸುತ್ತಿತ್ತು. 

ಆ ಚಿಂಪಾಂಜಿಗೆ ಕೇವಲ ಹದಿನೆಂಟು ತಿಂಗಳು ಮಾತ್ರವಾಗಿತ್ತು. ಅದರ ಬುದ್ಧಿಮತ್ತೆ ಮಾತ್ರ ಆಶ್ಚರ್ಯವೆನಿಸುವಂತೆ ಸುಮಾರು ನಾಲ್ಕು ವರ್ಷದ ಮಕ್ಕಳಷ್ಟಿತ್ತು. ಪಾದ್ರಿ ಜೋನ್ಸ್ ಕೊಡುತ್ತಿದ್ದ ಎಲ್ಲ ಆಜ್ಞೆಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿತ್ತು ಆ ಚಿಂಪಾಂಜಿ. ಅದು ತನ್ನ ಒಡೆಯ ಜೋನ್ಸ್ ಬಗ್ಗೆ ತುಂಬಾ possessive ವರ್ತನೆ ಹೊಂದಿತ್ತು. ಆದರೆ ಕೊನೆಯಲ್ಲಿ ಆ ಚಿಂಪಾಂಜಿಯ ಅಂತ್ಯ ಕೂಡ ದುರಂತದಲ್ಲಿ ಕೊನೆಯಾಗಿತ್ತು. ಜೋನ್ಸಟೌನಿನಲ್ಲಿ ನಡೆದುಹೋದ ಹತ್ಯಾಕಾಂಡದಲ್ಲಿ ಅದನ್ನು ಕೂಡ ಗುಂಡಿಟ್ಟು ಕೊಲ್ಲಲಾಗಿತ್ತು. 

ಟಿಮ್ ಮತ್ತು ಗ್ರೇಸ್ ಎಂಬ ದಂಪತಿ ಪಾದ್ರಿ ಜಿಮ್ ಜೋನ್ಸನ ಅನುಯಾಯಿಗಳಾಗಿದ್ದರು. ಟಿಮ್ ಸಂಘಟನೆಯಲ್ಲಿ ವಕೀಲನ ಕೆಲಸ ಮಾಡುತ್ತಿದ್ದ. ಪತ್ನಿ ಗ್ರೇಸ್ ಪಾದ್ರಿ ಜಿಮ್ ಜೋನ್ಸನ  ಖಾಸ್   
ಅಂತರ್ವೃತ್ತದ (inner circle) ಸದಸ್ಯೆಯಾಗಿದ್ದಳು. ೧೯೭೨ ರಲ್ಲಿ ಗ್ರೇಸ್ ಳಿಗೆ ಜಾನ್ ವಿಕ್ಟರ್ ಎನ್ನುವ ಗಂಡು ಮಗುವೊಂದು ಜನಿಸಿತು. ಪಾದ್ರಿ ಜೋನ್ಸ್ ತಾನೇ ಆ ಮಗುವಿನ ತಂದೆ ಎಂದು ಹಕ್ಕು ಚಲಾಯಿಸಿದ. ಗ್ರೇಸಳ ಪತಿ ವಕೀಲ ಟಿಮ್ ಪಾದ್ರಿ ಜಿಮ್ ಜೋನ್ಸನೇ ಮಗುವಿನ ತಂದೆ ಎಂದು ಸಾರುವ ಪ್ರಮಾಣಪತ್ರವೊಂದನ್ನು ತಯಾರಿಸಿ ಸಹಿ ಹಾಕಿ ಕೊಟ್ಟುಬಿಟ್ಟ. ಹೀಗೆ ಮಾಡಿ ಮಗುವಿನ ಪಿತೃತ್ವದ (paternity) ವಿಷಯವನ್ನು ಮತ್ತೂ ಬಗ್ಗಡಗೊಳಿಸಿಟ್ಟ. 

1976 ರ ಸುಮಾರಿಗೆ ಗ್ರೇಸ್ ಆ ಧಾರ್ಮಿಕ ಸಂಘಟನೆಯನ್ನು ಬಿಟ್ಟು ಪತಿಯೊಂದಿಗೆ  ವಾಪಸ್ ಅಮೆರಿಕಕ್ಕೆ ಮರಳಿದಳು. ಮಗ ಜಾನ್ ನನ್ನು ಪಾದ್ರಿ ಜಿಮ್ ಜೋನ್ಸ್ ಜೊತೆಗೇ ಬಿಟ್ಟು ಬಂದಿದ್ದರು. ತಮ್ಮ ಪುತ್ರ ಪಾದ್ರಿ ಬಳಿಯಲ್ಲಿ ಸುರಕ್ಷಿತವಾಗಿರುವುದಿಲ್ಲ ಎಂದು ವಿಚಾರ ಮಾಡಿ ಮಗನನ್ನು ವಾಪಸ್ ತರಿಸಿಕೊಡಿ ಎಂದು ಅಮೆರಿಕಾದ ನ್ಯಾಯಾಲಯದ ಮೊರೆ ಹೋದರು. ಪಾದ್ರಿ ಜೋನ್ಸ್ ನ್ಯಾಯಾಲಯದ ಆದೇಶವನ್ನು ಸಾರಾಸಗಟಾಗಿ ತಿರಸ್ಕರಿಸಿಬಿಟ್ಟ. ಪುಟ್ಟಮಗು ಜಾನನನ್ನು ವಾಪಸ್ ಕಳಿಸಲು ನಿರಾಕರಿಸಿದ. ಮಗುವಿನ ಪಿತೃತ್ವದ ಬಗೆಗಿನ ತಗಾದೆಯು ಸಂಘಟನೆ ಮತ್ತು ಅದರ ವಿರೋಧಿಗಳ ಮಧ್ಯೆ ದೊಡ್ಡದಾಗುತ್ತ ಹೋಯಿತು. ಗ್ರೇಸ್ ಮತ್ತು ಟಿಮ್ ದಂಪತಿ ತಮ್ಮ ಮಗುವನ್ನು ಪಾದ್ರಿ ಜೋನ್ಸನ ಸುಪರ್ದಿಯಿಂದ ಹೊರತರಲು ಯಶಸ್ವಿಯಾಗಿದ್ದರೆ ಪಾದ್ರಿ ತನ್ನ ಅನುಯಾಯಿಗಳ ಮೇಲೆ ಹೊಂದಿದ್ದ ಉಕ್ಕಿನ ಹಿಡಿತ ಬಲಹೀನವಾಗುತ್ತಿತ್ತು. ಇನ್ನೂ ಅನೇಕರ ಸಂಬಂಧಿಗಳು ಪಾದ್ರಿಯ ಜೊತೆ ಗಯಾನಾದ ಅರಣ್ಯದಲ್ಲಿ ನೆಲೆಸಿದ್ದ ತಮ್ಮ ತಮ್ಮ ಬಂಧುಗಳ ಬಗ್ಗೆ ಆತಂಕಗೊಂಡಿದ್ದರು. ದಂಪತಿ ತಮ್ಮ ಮಗುವನ್ನು ವಾಪಸ್ ಕರೆತಂದರೆ ಇತರರೂ ಕೂಡ ನ್ಯಾಯಾಲಯದ ಮೊರೆ ಹೋಗಿ ತಮ್ಮ ತಮ್ಮ ಬಂಧುಗಳನ್ನು ವಾಪಸ್ ಕರೆಯಿಸಿಕೊಳ್ಳುವ ಸಾಧ್ಯತೆ ಇತ್ತು. ಹಾಗಾಗಲು ಹರ್ಗಿಸ್ ಬಿಡಬಾರದು ಎಂದು ಪಾದ್ರಿ ಪಣತೊಟ್ಟಿದ್ದ. ಹಾಗಾಗಿ ಮಗುವನ್ನು ವಾಪಸ್ ಕಳಿಸಿಕೊಡಲು ನಿರಾಕರಿಸಿದ. ಜಾನ್ ವಿಕ್ಟರ್ ಜೋನ್ಸ್ ಎಂಬ ಮಗು ಕೂಡ ಆ ದುರಂತದಲ್ಲಿ ಮೃತರಾದ ೩೦೪ ಜನ ಅಪ್ರಾಪ್ತವಯಸ್ಕರಲ್ಲಿ ಒಂದಾಗಿಹೋಗಿದ್ದು ಮಾತ್ರ ಕೇವಲ ಒಂದು ಸಂಖ್ಯೆಯಾಗಿ ಉಳಿಯಿತು. 

ಜೋನ್ಸಟೌನ್ ದುರಂತದಲ್ಲಿ ಹೆಚ್ಚಿನವರು ಮರೆತಿರುವುದು ಕ್ಯಾಲಿಫೋರ್ನಿಯಾ ರಾಜ್ಯವನ್ನು ಪ್ರತಿನಿಧಿಸುತ್ತಿದ್ದ ಸಂಸತ್ಸದಸ್ಯರಲ್ಲಿ ಒಬ್ಬರಾಗಿದ್ದ ಲಿಯೋ ರಾಯನ್ ಅವರನ್ನು. ಡೆಮೋಕ್ರಾಟ್ ಪಕ್ಷಕ್ಕೆ ಸೇರಿದ್ದ ಲಿಯೋ ರಾಯನ್ ಅಸಾಂಪ್ರದಾಯಿಕ ರಾಜಕಾರಣಿಯಾಗಿದ್ದರು. ಜೈಲಿನ ಒಳಗಿನ ಸ್ಥಿತಿಗತಿಗಳನ್ನು ಖುದ್ದಾಗಿ ಅರಿಯಬೇಕು ಎನ್ನುವ ಕಾರಣಕ್ಕೆ ಬಂಧನಕ್ಕೆ ಒಳಗಾಗಿ ಎರಡು ವಾರ ಜೈಲಿನಲ್ಲಿ ಇದ್ದು ಬಂದಿದ್ದರು. ಸೀಲ್ ಪ್ರಾಣಿಗಳ ಮರಿಗಳ ಬೇಟೆಯ ಬಗ್ಗೆ ತನಿಖೆ ಮಾಡಲು ಕೆನಡಾಕ್ಕೆ ಭೇಟಿ ಕೊಟ್ಟಿದ್ದರು. ಯಾವಾಗ ಅವರ ಕ್ಷೇತ್ರದ ಮತದಾರರು ಜಿಮ್ ಜೋನ್ಸ್ ಎಂಬ ಪಾದ್ರಿ ನಡೆಸುತ್ತಿರುವ ವಿಚಿತ್ರ ಧಾರ್ಮಿಕ ಸಂಘಟನೆಯ ಬಗ್ಗೆ,  ಅದರಲ್ಲಿ ನಡೆಯುತ್ತಿರಬಹುದಾದ ಸಂದೇಹಾಸ್ಪದ ಚಟುವಟಿಕೆಗಳ ಬಗ್ಗೆ ಮತ್ತು ಅವನ ಜೊತೆ ಹೋಗಿರುವ ತಮ್ಮ ತಮ್ಮ ಬಂಧುಗಳ ಬಗ್ಗೆ ಆತಂಕ ವ್ಯಕ್ತಪಡಿಸಿದಾಗ ಲಿಯೋ ರಾಯನ್ ಈ ಸಂಘಟನೆ ಬಗ್ಗೆ ತಲೆಕೆಡಿಸಿಕೊಂಡರು. ಪಾದ್ರಿ ಜೋನ್ಸಗೆ ಪತ್ರವೊಂದನ್ನು ಬರೆದರು ರಾಯನ್. ಗಯಾನಾದಲ್ಲಿರುವ ಆಶ್ರಮಕ್ಕೆ ಭೇಟಿಕೊಡುವ ಇಂಗಿತ ವ್ಯಕ್ತಪಡಿಸಿದರು. ಅನುಮತಿ ಕೋರಿದರು. ಇದರ ಬಗ್ಗೆ ಪಾದ್ರಿಯ ಆಶ್ರಮದಲ್ಲಿ ಬಹಳ ಚರ್ಚೆಗಳಾದವು. ಮೊದಲು ತುಂಬಾ ವಿರೋಧ ವ್ಯಕ್ತವಾಯಿತು. ಕೊನೆಗೆ ಅಂತೂ 'ಆಯಿತು ಬಂದು ಹೋಗಿ,' ಎನ್ನುವ ಧಾಟಿಯ ನೀರಸ ಆಹ್ವಾನವನ್ನು ಕಳಿಸಿದರು. ಹಲವಾರು ಪತ್ರಕರ್ತರು ಮತ್ತು ಆಶ್ರಮದಲ್ಲಿದ್ದ ಜನರ ಬಂಧುಗಳನ್ನು ಕೂಡಿಸಿಕೊಂಡು ಲಿಯೋ ರಾಯನ್ ಗಯಾನಾಕ್ಕೆ ಪ್ರಯಾಣ ಮಾಡಿದರು. 

ಸಂಸತ್ಸದಸ್ಯ ಲಿಯೋ ರಾಯನ್ ಅವರು ಗಯಾನಾದಲ್ಲಿರುವ ಆಶ್ರಮಕ್ಕೆ ಭೇಟಿ ಕೊಟ್ಟಾಗ ಅಲ್ಲಿದ್ದ ಕೆಲವು ನಿವಾಸಿಗಳು ವಾಪಸ್ ಮರಳುವ ಇಚ್ಛೆ ವ್ಯಕ್ತಪಡಿಸಿದರು. ಪಾದ್ರಿ ಜಿಮ್ ಜೋನ್ಸ್ ಅಂತಹ ವರ್ತನೆಯನ್ನು ತನ್ನ ವಿರುದ್ಧದ ವಿಶ್ವಾಸದ್ರೋಹ ಎಂದು ಭಾವಿಸಿ ವ್ಯಗ್ರನಾದ. ಲಿಯೋ ರಾಯನ್, ವಾಪಸ್ ಬರಲು ನಿರ್ಧರಿಸಿದ್ದ ಆಶ್ರಮದ ನಿವಾಸಿಗಳು, ಜೊತೆಗೆ ಹೋಗಿದ್ದ ಪತ್ರಕರ್ತರು ವಾಪಸ್ ಅಮೆರಿಕಕ್ಕೆ ಬರಲು ಆಶ್ರಮದ ಸಮೀಪದಲ್ಲಿ, ಕಾಡಿನ ಮಧ್ಯೆ ಇದ್ದ, ತಾತ್ಕಾಲಿಕ ವಿಮಾನನಿಲ್ದಾಣದಲ್ಲಿ ವಿಮಾನಗಳಿಗೆ ಕಾಯುತ್ತಿದ್ದರು. ಆದರೆ ಮೊದಲು ಬಂದವರು ಆಶ್ರಮದ ಶಸ್ತ್ರಧಾರಿಗಳು. ಟ್ರಕ್ ತುಂಬಾ ಬಂದ ಶಸ್ತ್ರಧಾರಿಗಳು ವಿಮಾನಕ್ಕೆ ಕಾಯುತ್ತಿದ್ದ ಜನರ ಮೇಲೆ ಯದ್ವಾತದ್ವಾ ಗುಂಡು ಹಾರಿಸಿದರು. ಅವರ ಗುಂಡಿನ ಸುರಿಮಳೆ ನಿಂತಾಗ ಜನಪ್ರತಿನಿಧಿ ಲಿಯೋ ರಾಯನ್ ಸೇರಿ ನಾಲ್ವರು ಸತ್ತಿದ್ದರು. ಇನ್ನೂ ಅನೇಕರು ತೀವ್ರವಾಗಿ ಗಾಯಗೊಂಡಿದ್ದರು.

ಸಂಸತ್ಸದಸ್ಯ ಲಿಯೋ ರಾಯನ್ ಮತ್ತು ಅವರ ಗುಂಪಿನ ಮೇಲೆ ಗುಂಡಿನ ದಾಳಿ ಮುಗಿದ ನಂತರ ಪಾದ್ರಿ ಜೋನ್ಸ್  ತನ್ನ ೯೦೦ ಕ್ಕೂ ಹೆಚ್ಚಿನ ಅನುಯಾಯಿಗಳನ್ನು ಉದ್ದೇಶಿಸಿ ಮಾತಾಡಿದ. ಸದ್ಯದಲ್ಲೇ ಗಯಾನಾದ ಸೈನ್ಯ ಆಶ್ರಮದ ಮೇಲೆ ದಾಳಿ ಮಾಡಲಿದೆ. ನಮ್ಮ ಎಲ್ಲ ಮಕ್ಕಳನ್ನೂ ಬಲವಂತದಿಂದ ತೆಗೆದುಕೊಂಡು ಹೋಗಲಿದ್ದಾರೆ. ಅಂತಿಮ ನಿರ್ಧಾರದ ಸಮಯ ಬಂದಿದೆ. ಎಲ್ಲರೂ ಆತ್ಮಹತ್ಯೆ ಮಾಡಿಕೊಳ್ಳಿ ಎಂದು ಫರ್ಮಾನು ಹೊರಡಿಸಿಬಿಟ್ಟ. ದೊಡ್ಡ ಬಾಣಲೆಯಲ್ಲಿ ಸೈನೈಡ್ ವಿಷಮಿಶ್ರಿತ ಹಣ್ಣಿನ ರಸದ ತಂಪು ಪಾನೀಯ ತಯಾರಿತ್ತು. ಅದೆಂತಹ ಸಮೂಹ ಸನ್ನಿ (mass hysteria) ಕಾಡಿತ್ತೋ. ಒಬ್ಬೊಬ್ಬರಾಗಿ ಸರತಿ ಮೇಲೆ ಬಂದು ತಂಪು ಪಾನೀಯ ಕುಡಿದರು ಮತ್ತು ಮರುಕ್ಷಣದಲ್ಲೇ ಇದ್ದಲ್ಲೇ ಬಿದ್ದು ಅಸುನೀಗಿದರು. ಒಬ್ಬರಲ್ಲ ಇಬ್ಬರಲ್ಲ. ಸರಿಸುಮಾರು ೯೦೦ ಜನ.

ನೂರಾರು ಸಾವುಗಳ ಮಧ್ಯೆ ಅಲ್ಲೇ ಇದ್ದ ಕೆಲವರು ಬದುಕುಳಿದಿದ್ದರು. ನವೆಂಬರ್ ೧೮, ೧೯೭೮ ರಂದು, ಈ ದುರ್ಘಟನೆ ನಡೆಯುವ ಕೆಲವೇ ಘಂಟೆಗಳ ಮೊದಲು, ಹನ್ನೊಂದು ಜನ ಆಶ್ರಮವಾಸಿಗಳು ಪಿಕ್ನಿಕ್ ಗೆ ಹೋಗಿಬರುತ್ತೇವೆ ಎನ್ನುವ ನೆವ ಹೇಳಿ ಆಶ್ರಮದಿಂದ ಹೊರಬಂದಿದ್ದರು. ಅವರಿಗೇನು ಸುಳಿವು ಸಿಕ್ಕಿತ್ತೋ ಗೊತ್ತಿಲ್ಲ. ೩೫ ಮೈಲಿ ನಿರಂತರವಾಗಿ ನಡೆದು ಪಾದ್ರಿ ಜೋನ್ಸನ ಕಬಂಧಬಾಹುಗಳಿಂದ ಬಚಾವಾಗಿದ್ದರು. ಮತ್ತಿಬ್ಬರು ಆಶ್ರಮದ ಭದ್ರತಾ ಸಿಬ್ಬಂದಿಯ ಕಣ್ಣಿಗೆ ಹೇಗೋ ಮಣ್ಣೆರಚಿ ಪರಾರಿಯಾಗಿ ಹೊರಗೆ ಬಂದಿದ್ದರು. ಗಯಾನಾದಲ್ಲಿರುವ ಸೋವಿಯೆಟ್ ದೂತಾವಾಸಕ್ಕೆ ಡಾಲರ್ ನೋಟುಗಳು ತುಂಬಿದ್ದ ಸೂಟಕೇಸ್ ಒಂದನ್ನು ಕೊಟ್ಟು ಬರುವಂತೆ ಪಾದ್ರಿ ಜೋನ್ಸನೇ ಮೂವರು ಶಿಷ್ಯರನ್ನು ಕಳಿಸಿದ್ದ. ಅವರೂ ಬಚಾವಾದರು. ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಿ ಎನ್ನುವ ಆದೇಶ ಗಯಾನಾದ ರಾಜಧಾನಿ ಜಾರ್ಜಟೌನಿನಲ್ಲಿದ್ದ ಬ್ರಾಂಚ್ ಕಚೇರಿಗೆ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿದ್ದ ಕಚೇರಿಗೆ ರವಾನೆಯಾಗಿತ್ತಾದರೂ ಅಲ್ಲಿದ್ದ ಅನುಯಾಯಿಗಳು ಅದನ್ನು ಪಾಲಿಸಲಿಲ್ಲ. ಯಾರೂ ಸಾಯಲಿಲ್ಲ.

ಹ್ಯಾಸಿಂತ್ ಥಿರಾಶ್ ಎನ್ನುವ ಕಪ್ಪುವರ್ಣೀಯ ಹಿರಿಯ ಮಹಿಳೆಯೊಬ್ಬಳ ಕಥೆಯನ್ನು ನಂಬಲೇ ಸಾಧ್ಯವಿಲ್ಲ. ತನ್ನ ಕುಟೀರದಲ್ಲಿ ಮಲಗಿ ಗಾಢ ನಿದ್ದೆಯಲ್ಲಿದ್ದ ಅವಳಿಗೆ ಏನೂ ಗೊತ್ತೇ ಆಗಲಿಲ್ಲ. ಅವಳ ಬಗ್ಗೆ ಇತರರ ಗಮನ ಹೋಗಿರಲೂ ಇಲ್ಲ. ಹೊರಗಡೆ ನೂರಾರು ಜನರು ಒಬ್ಬರಾದ ಮೇಲೆ ಒಬ್ಬರಂತೆ ವಿಷಮಿಶ್ರಿತ ಪಾನಕ ಕುಡಿದು ಸತ್ತು ಬೀಳುತ್ತಿದ್ದರೆ ಇವಳು ಮಾತ್ರ ಸುಖನಿದ್ರೆಯಲ್ಲಿದ್ದಳಂತೆ. ಮರುದಿನ ಬೆಳಿಗ್ಗೆ ಎದ್ದು ಎಂದಿನಂತೆ ಹಿರಿಯರ ಕಟ್ಟಡದತ್ತ ಹೋಗುತ್ತಿದ್ದಾಗ ಹೆಣಗಳನ್ನು ಚೀಲದಲ್ಲಿ ತುಂಬುತ್ತಿರುವುದನ್ನು ನೋಡಿದಳು. ಅವುಗಳಲ್ಲಿ ಆಕೆಯ ಸೋದರಿ ಕೂಡ ಇದ್ದಳು. 

ದುರಂತದ ಸ್ಥಳದಲ್ಲಿ ವಿದಾಯದ ಸಂದೇಶವುಳ್ಳ ಎರಡು ಪತ್ರಗಳೂ ಸಿಕ್ಕವು. ಒಂದು ಪತ್ರವನ್ನು ಬರೆದವ ರಿಚರ್ಡ್ ಟ್ರಾಪ್ ಎಂದು ಭಾವಿಸಲಾಗಿದೆ. ರಿಚರ್ಡ್ ವೃತ್ತಿಯಿಂದ ಶಿಕ್ಷಕ. ಆಶ್ರಮದಲ್ಲಿ ಬರವಣಿಗೆ ಕೆಲಸ ಕೂಡ ಮಾಡುತ್ತಿದ್ದ. ಸಾಮೂಹಿಕ ಆತ್ಮಹತ್ಯೆಗೆ ಕಾರಣಗಳನ್ನು ವಿವರವಾಗಿ ಬರೆದಿದ್ದಾನೆ. ಸಂಸತ್ಸದಸ್ಯ ಲಿಯೋ ರಾಯನ್ ಮೇಲಿನ ಗುಂಡಿನ ದಾಳಿಗೆ ಪಾದ್ರಿ ಜೋನ್ಸ್ ಕಾರಣನಲ್ಲ ಎಂದು ಬರೆದು ಗೊಂದಲ ಸೃಷ್ಟಿಸಿದ್ದಾನೆ. ''ಇತರರಿಗೆ ಅರ್ಥವಾಗದಿದ್ದರೂ ಪರವಾಗಿಲ್ಲ. ನಾನು ಸಾಯಲು ತಯಾರಾಗಿದ್ದೇನೆ. ಜೋನ್ಸಟೌನಿನ ಮೇಲೆ ಕೊನೆಯ ಬಾರಿಗೆ ಕತ್ತಲು ಆವರಿಸಲಿದೆ. ಶಾಶ್ವತವಾಗಿ," ಎನ್ನುವ ಕಾಡುವ (haunting) ಸಾಲುಗಳೊಂದಿಗೆ ಪತ್ರ ಮುಗಿಸುತ್ತಾನೆ.

ಆದರೆ ಬದುಕುಳಿದವರಲ್ಲಿ ಕೆಲವರು ಆ ಪತ್ರದ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಾರೆ. ಅವರ ಪ್ರಕಾರ ರಿಚರ್ಡ್ ಟ್ರಾಪ್ ಆ ಪತ್ರ ಬರೆದಿರಲಿಕ್ಕಿಲ್ಲ. ಏಕೆಂದರೆ ದುರಂತದ ದಿನ ಆತ ಪಾದ್ರಿ ಜೋನ್ಸನೊಂದಿಗೆ ಸಾಮೂಹಿಕ ಆತ್ಮಹತ್ಯೆಯನ್ನು ವಿರೋಧಿಸಿ ವಾಗ್ವಾದ ಮಾಡುತ್ತಿದ್ದ. 

ಜೋನ್ಸಟೌನ್ ಹತ್ಯಾಕಾಂಡ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಪಡೆಯಿತು. ಕೆಲವರು ಬದುಕುಳಿದಿದ್ದರು. ಮೃತರಲ್ಲಿ ಅನೇಕರಿಗೆ ಹತ್ತಿರದ ಸಂಬಂಧಿಗಳಿದ್ದರು. ಹಿಂದಿನದೆಲ್ಲವನ್ನೂ ಮರೆತು ಹೊಸಜೀವನವನ್ನು ಆರಂಭ ಮಾಡುವುದು ಅವರಿಗೆ ತುಂಬಾ ಕಷ್ಟದ ಕೆಲಸವಾಗಿತ್ತು. ಕೆಲವರಿಗೆ ಅದು ಸಾಧ್ಯವೇ ಆಗಲಿಲ್ಲ. ಉದಾಹರಣೆಗೆ ಮೈಕ್ ಪ್ರೋಕ್ಸ್. ಆತ ಸಂಘಟನೆಯ ಮಾಧ್ಯಮ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ. ದುರಂತದಲ್ಲಿ ಬದುಕುಳಿದಿದ್ದ. ದುರಂತ ನಡೆದು ಒಂದು ವರ್ಷದ ಬಳಿಕ ೧೯೭೯ ರಲ್ಲಿ ಒಂದು ದಿನ ಪತ್ರಿಕಾಗೋಷ್ಠಿಯನ್ನು ಕರೆದ. ತನ್ನ ಸಂಘಟನೆ, ಗುರು ಜೋನ್ಸ್, ಆಚರಣೆಗಳನ್ನು ಪತ್ರಕರ್ತರ ಎದುರು ಬಲವಾಗಿ ಸಮರ್ಥಿಸಿಕೊಂಡ. ಪತ್ರಿಕಾಗೋಷ್ಠಿ ಮುಗಿಸಿದವನೇ ಬಾತ್ರೂಮ್ ಹೊಕ್ಕಿದವನು ಏಕಾಏಕೀ ತಲೆಗೆ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡ.

ಅಲ್ ಮತ್ತು ಜೀನಿ ಮಿಲ್ಸ್ ಎಂಬ ದಂಪತಿ ಒಂದು ಕಾಲದಲ್ಲಿ ಪಾದ್ರಿ ಜೋನ್ಸನ ನಿಕಟವರ್ತಿಗಳಾಗಿದ್ದರು. ನಂತರ ಅವನ ವಿರೋಧಿಗಳಾದರು. ದುರಂತ ನಡೆಯುವ ಮೊದಲೇ ಜೋನ್ಸಟೌನ್ ಆಶ್ರಮ ಬಿಟ್ಟು ಬಂದಿದ್ದರು. ದುರಂತ ನಡೆದು ಎರಡು ವರ್ಷಗಳ ಬಳಿಕ, ೧೯೮೦ ರಲ್ಲಿ, ಅಲ್ ಮತ್ತು ಜೀನಿ ಮಿಲ್ಸ್ ದಂಪತಿ ತಮ್ಮ ಮನೆಯಲ್ಲಿಯೇ ನಿಗೂಢವಾಗಿ ಕೊಲೆಯಾಗಿದ್ದರು. ಆ ಪ್ರಕರಣ ಇಂದಿಗೂ ಬಗೆಹರಿದಿಲ್ಲ. 

ಪೌಲಾ ಆಡಮ್ಸ್ ಎಂಬಾಕೆ ಕೂಡ ಪಾದ್ರಿಯ ಅನುಯಾಯಿ. ಆಕೆ ಮತ್ತು ಆಕೆಯ ಮಗುವನ್ನು ೧೯೮೩ ರಲ್ಲಿ ಆಕೆಯ ಮಾಜಿ ಪ್ರಿಯಕರ ಗುಂಡಿಟ್ಟು ಕೊಂದ. ಆಕೆಯ ಮಾಜಿ ಪ್ರಿಯಕರ ಯಾರಾಗಿದ್ದ ಗೊತ್ತೇ? ಆತ ಅಮೆರಿಕಕ್ಕೆ ನಿಯೋಜಿತನಾಗಿದ್ದ ಗಯಾನಾ ದೇಶದ ಮಾಜಿ ರಾಯಭಾರಿ ಲಾರೆನ್ಸ್ ಮನ್. ಮಾಜಿ ಪ್ರಿಯತಮೆ ಮತ್ತು ಆಕೆಯ ಮಗುವನ್ನು ಗುಂಡಿಟ್ಟು ಕೊಂದ ಮಾಜಿ ರಾಯಭಾರಿ ತಾನೂ ಗುಂಡು ಹೊಡೆದುಕೊಂಡು ಸತ್ತುಹೋದ. 

ಟೈರೋನ್ ಮಿಚೆಲ್ ಎಂಬಾತನ ಪಾಲಕರು ಮತ್ತು ಸಹೋದರ ಜೋನ್ಸಟೌನ್ ದುರಂತದಲ್ಲಿ ಸತ್ತಿದ್ದರು. ಅದೇನಾಯಿತೋ ಗೊತ್ತಿಲ್ಲ. ೧೯೮೧ ರಲ್ಲಿ ಒಂದು ದಿನ ರೈಫಲ್ ಎತ್ತಿಕೊಂಡ ಟೈರೋನ್ ಮಿಚೆಲ್ ಲಾಸ್ ಏಂಜೆಲ್ಸನ ಶಾಲೆಯೊಂದರ ಆವರಣದೊಳಗೆ ಬಂದವನೇ ಯದ್ವಾತದ್ವಾ ಗುಂಡು ಹಾರಿಸಿದ. ಒಬ್ಬನು ಸತ್ತ. ಹನ್ನೊಂದು ಜನ ಗಾಯಗೊಂಡರು. ಟೈರೋನ್ ಮಿಚೆಲ್ ಕೂಡ ತನಗೆ ತಾನೇ ಗುಂಡು ಹಾರಿಸಿಕೊಂಡು ಅಲ್ಲೇ ಸತ್ತ. 

ಚಾಡ್ ರೋಡ್ಸ್ ಎಂಬಾತ ಜೋನ್ಸಟೌನ್ ದುರಂತದ ಸಮಯದಲ್ಲಿ ಇನ್ನೂ ತಾಯಿಯ ಗರ್ಭದಲ್ಲಿ ಇದ್ದ. ತಾಯಿ ಬಚಾವಾಗಿದ್ದಳು ಎಂದು ಇವನು ಭೂಮಿ ಮೇಲೆ ಬಂದಿದ್ದ. ೧೯೯೯ ರಲ್ಲಿ, ಅಂದರೆ ದುರಂತ ನಡೆದು ಇಪ್ಪತ್ತಕ್ಕೂ ಹೆಚ್ಚು ವರ್ಷಗಳ ಬಳಿಕ, ಪೊಲೀಸ್ ಅಧಿಕಾರಿಯೊಬ್ಬನನ್ನು ಗುಂಡಿಟ್ಟು ಕೊಂದ. ಸದ್ಯಕ್ಕೆ ಅಜೀವ ಕಾರಾಗೃಹವಾಸ ಅನುಭವಿಸುತ್ತಿದ್ದಾನೆ. 

ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡು ಸತ್ತವರಂತೂ ಹೋದರು. ಉಳಿದವರು, ಅವರ ಬಂಧುಗಳು ಕೂಡ ನೆಮ್ಮದಿಯಿಂದ ಇರಲಿಲ್ಲ. ಮೇಲಿನ ವಿಚಿತ್ರ ಘಟನೆಗಳು ವಿಶದಗೊಳಿಸುವಂತೆ ಅವರಿಗೆ ಅದೇನೇನು ಒಳಗಿನ ತುಮುಲಗಳಿದ್ದವೋ, ಒತ್ತಡಗಳಿದ್ದವೋ, ದುಗುಡಗಳಿದ್ದವೋ ಗೊತ್ತಿಲ್ಲ. ಅನೇಕರು ಮೇಲೆ ಹೇಳಿದ ಚಿತ್ರವಿಚಿತ್ರ ಹತ್ಯಾಕಾಂಡಗಳನ್ನು ಮಾಡಿದರು. ತಾವೂ ಸತ್ತರು. 

ಅದೊಂದು ನಿರ್ದೇಶಿತ ಸಾಮೂಹಿಕ ಆತ್ಮಹತ್ಯೆಯಾಗಿತ್ತು ಎಂದು ಹೆಚ್ಚಿನವರು ನಂಬಿದರೂ ಕೆಲವು ಸಾಕ್ಷಿಗಳು ಮತ್ತು ಬದುಕುಳಿದವರು ಅದೊಂದು ಸಾಮೂಹಿಕ ಹತ್ಯೆಯಾಗಿತ್ತು (ಕೊಲೆ) ಎಂದು ವಾದಿಸುತ್ತಾರೆ. ನಿಜವಾದ ಘಟನೆ ನಡೆಯುವ ಮೊದಲೂ ಕೂಡ ತಾನು ಹೇಳಿದ ಹಾಗೆ ಹಣ್ಣಿನ ರಸ ಕುಡಿಯುವ ಆಜ್ಞೆಯನ್ನು ಪಾದ್ರಿ ಜೋನ್ಸ್ ಮಾಡಿದ್ದ ಮತ್ತು ಅನುಯಾಯಿಗಳು ತನ್ನ ಆಜ್ಞೆಯನ್ನು ಪಾಲಿಸುತ್ತಾರೋ ಇಲ್ಲವೋ ಎಂಬುದನ್ನು ಸಹ ಆತ ಪರೀಕ್ಷಿಸಿದ್ದ. ಹೀಗೆ ವ್ಯವಸ್ಥಿತ ಪೂರ್ವಾಭ್ಯಾಸ (rehearsal) ನಡೆದಿತ್ತು. 

ಕೊನೆಗೊಂದು ದಿನ ಪಾದ್ರಿ ಜೋನ್ಸ್ ನಿಜವಾದ ವಿಷಮಿಶ್ರಿತ ಹಣ್ಣಿನ ರಸ ತಯಾರಿಸಿ ಅದನ್ನು ಕುಡಿದು ಆತ್ಮಹತ್ಯೆ ಮಾಡಿಕೊಳ್ಳಿ ಎಂದು ಪ್ರಚೋದಿಸಿದಾಗ ಅಲ್ಲಿಂದ ಯಾರೂ ತಪ್ಪಿಸಿಕೊಂಡು ಹೋಗದಂತೆ ನೋಡಿಕೊಳ್ಳಲು ಬಂದೂಕುಧಾರಿಗಳು ಮತ್ತು ಸಾಂಪ್ರದಾಯಿಕ ಬಿಲ್ಲು ಬಾಣ ಹಿಡಿದಿದ್ದ ಸಶಸ್ತ್ರ ಆದಿವಾಸಿ ಜನರು ಕಾವಲಿಗೆ ನಿಂತಿದ್ದರು. ವಿಷ ಕುಡಿಯಲು ನಖರಾ ಮಾಡಿದವರನ್ನು ಕೊಂದುಬಿಡಿ ಎಂದು ಅವರಿಗೆ ಆಜ್ಞೆಯಾಗಿತ್ತೇ? ಕೆಲವರ ಮೈಮೇಲೆ ಚುಚ್ಚುಮದ್ದಿನ ಗುರುತುಗಳಿದ್ದವು. ಅವರಿಗೆ ವಿಷವನ್ನು ಚುಚ್ಚುಮದ್ದಿನ ಮೂಲಕ ಚುಚ್ಚಿ ಕೊಲ್ಲಲಾಯಿತೇ? ಸತ್ತವರಲ್ಲಿ ನೂರಾರು ಜನ ಮಕ್ಕಳಿದ್ದರು. ಅವರಲ್ಲಿ ಅನೇಕರು ಸ್ವಇಚ್ಛೆಯಿಂದ ವಿಷಮಿಶ್ರಿತ ಪಾನಕ ಕುಡಿದು ಸತ್ತಂತೆ ಕಾಣಲಿಲ್ಲ. 

ಸಂಸತ್ಸದಸ್ಯ ಲಿಯೋ ರಾಯನ್ ಅವರ ಜೊತೆಗೆ ಹೋಗಿದ್ದ ಪತ್ರಕರ್ತನೊಬ್ಬ ಗಾಯಗೊಂಡರೂ ಬದುಕುಳಿದಿದ್ದ. ಅವನ ಪ್ರಕಾರ: ಪಾದ್ರಿ ಜೋನ್ಸ್ ಎಲ್ಲವನ್ನೂ ವ್ಯವಸ್ಥಿತವಾಗಿ ಪ್ಲಾನ್ ಮಾಡಿದ್ದ. ಜನರು ತನ್ನ ಮಾತನ್ನು ಪಾಲಿಸುತ್ತಾರೋ ಇಲ್ಲವೋ ಎಂಬುದನ್ನು ನೋಡಲು ಮೊದಲೊಂದು ಬಾರಿ ಸಾದಾ ಪಾನಕ ಕುಡಿಸಿ ಟ್ರಯಲ್ ನೋಡಿದ್ದ. ಆದರೂ ಇರಲಿ ಎಂದು ಸಶಸ್ತ್ರ ಜನರನ್ನೂ ಕಾವಲಿಗೆ ಹಾಕಿದ್ದ. ಅಂತಿಮ ಸರ್ವ(ರ)ನಾಶಕ್ಕೆ ಎಲ್ಲ ತಯಾರಿ ಮಾಡಿಕೊಂಡು, ಖಚಿತ ಪಡಿಸಿಕೊಂಡ ನಂತರವೇ ಕೊನೆಯ ಆಜ್ಞೆ ಕೊಟ್ಟಿದ್ದ. 

ಟಾಮ್ ಕಾರ್ಟರ್ ಎಂಬಾತ ಆ ದುರಂತದಲ್ಲಿ ಪತ್ನಿ ಮತ್ತು ಚಿಕ್ಕಮಗುವನ್ನು ಕಳೆದುಕೊಂಡವನು. ಅವನ ಪ್ರಕಾರ: ಏನೇ ಬರಲಿ ಎಲ್ಲರನ್ನೂ ಕೊಂದೇ ತೀರುವೆ ಎಂದು ಪಾದ್ರಿ ಜೋನ್ಸ್ ನಿರ್ಧರಿಸಿದ್ದ. ಪಾದ್ರಿ ಜೋನ್ಸ್ ತನ್ನ ಅನುಯಾಯಿಗಳಲ್ಲಿ ಒಂದು ತರಹದ ಮುತ್ತಿಗೆ ಮನಸ್ಥಿತಿಯನ್ನು  (siege mentality)  ಮೊದಲಿಂದಲೂ ಪ್ರೋತ್ಸಾಹಿಸಿ ಬೆಳೆಸಿದ್ದ. ಕೊನೆಗೆ ತಾವು ಮಾಡಿಕೊಳ್ಳುತ್ತಿರುವುದು ಒಂದು ತರಹದ ಕ್ರಾಂತಿಕಾರಿ ಆತ್ಮಸಮರ್ಪಣೆ ಎಂದು ನಂಬಿದ್ದವರೂ ಕೂಡ ಪಾದ್ರಿ ಜೋನ್ಸನ ಅನೇಕ ಸುಳ್ಳುಗಳಿಂದ ಪ್ರಭಾವಿತರಾಗಿದ್ದರು. 

ಜೋನ್ಸಟೌನ್ ದುರಂತ ರಹಸ್ಯ ಪ್ರಯೋಗವೊಂದರ ಭಾಗವಾಗಿತ್ತೇ ಎನ್ನುವ ಸಂಶಯವನ್ನು ಕೂಡ ಕೆಲವರು ವ್ಯಕ್ತಪಡಿಸುತ್ತಾರೆ. ರಕ್ಷಣಾ ಇಲಾಖೆಗೆ, ಬೇಹುಗಾರಿಕೆ ಇಲಾಖೆಗೆ ಸೇರಿದ್ದ ರಹಸ್ಯ ಪ್ರಯೋಗಶಾಲೆಗಳಲ್ಲಿ ಚಿತ್ರವಿಚಿತ್ರ ಮನೋವೈಜ್ಞಾನಿಕ ಪ್ರಯೋಗಗಳು ನಡೆಯುತ್ತಿದ್ದವು ಎಂದು ಆಗಾಗ ವರದಿಯಾಗುತ್ತಿತ್ತು. ಕೆಲವೊಂದು ಪ್ರಯೋಗಗಳನ್ನು ರಹಸ್ಯವಾಗಿ, ಕಾನೂನುಬಾಹಿರವಾಗಿ ದೇಶದ ನಾಗರಿಕರ ಮೇಲೆಯೇ ಮಾಡಿದ್ದಾರೆ ಎನ್ನುವ ಆಪಾದನೆಗಳಿದ್ದವು. ಅವುಗಳ ಬಗ್ಗೆ ತನಿಖೆ ಮಾಡಲು ಸರ್ಕಾರಿ ಆಯೋಗಗಳು ನಿಯೋಜಿತವಾಗಿದ್ದವು. 

ಜನರ ಮನಸ್ಸನ್ನು ಹತೋಟಿಯಲ್ಲಿಡುವುದು, ಸಂಶ್ಲೇಷಿತ (synthetic) ಮಾದಕ ವಸ್ತುಗಳಾದ lsd ಮುಂತಾದವು ಗುಂಪಿನ ಮನೋಸ್ಥಿತಿಯ (group psychology) ಮೇಲೆ ಹೇಗೆ ಪ್ರಭಾವ ಬೀರುತ್ತವೆ, ಸಮ್ಮೋಹಿನಿ ಆಜ್ಞೆಗಳ (hypnotic suggestions) ಮೂಲಕ ನಿಯಂತ್ರಿಸಬಲ್ಲ ಹಂತಕರನ್ನು ಸೃಷ್ಟಿಸಿ ಅವರನ್ನು ಬೇಕಾದ ಸಮಯದಲ್ಲಿ ಪ್ರಚೋದಿಸಿ, ಪ್ರಮುಖರ ಹತ್ಯೆಗೆ ಅವರನ್ನು ಅಜ್ಞಾತ ಹಂತಕರಂತೆ ಬಳಸಿಕೊಳ್ಳಬಹುದೇ, ಮುಂತಾದ ಮೇಲ್ನೋಟಕ್ಕೆ scientific fiction ಎಂದು ಅನ್ನಿಸಬಹುದಾದಂತಹ ವಿಷಯಗಳ ಬಗ್ಗೆ ಎಂದಿನಿಂದಲೂ ಸಂಶೋಧನೆ ಆಗುತ್ತಲೇ ಇದೆ. ಒಮ್ಮೆ ಸಿಐಎಗೆ ಸರ್ಕಾರದ ಆಯೋಗ ತರಾಟೆಗೆ ತೆಗೆದುಕೊಂಡಾಗ ಮುಂದೆ ಅಂತಹ ಪ್ರಯೋಗ ಮಾಡುವುದಿಲ್ಲ ಎಂದು ಹೇಳಿತ್ತಾದರೂ ಅದಕ್ಕೊಂದು ಪರ್ಯಾಯ ಮಾರ್ಗ ಕಂಡುಕೊಂಡು ಅಂತಹ ಪ್ರಯೋಗ ಮುಂದುವರೆಸಿರಲು ಸಾಕು. ದೂರದ ಗಯಾನಾ ದೇಶದ ದುರ್ಗಮ ಕಾಡಿನಲ್ಲಾದ ಜೋನ್ಸಟೌನ್ ದುರಂತ ಅಂತಹ ಪ್ರಯೋಗದ ಭಾಗವಾಗಿತ್ತೇ? ಅಥವಾ ಬೇರೇನೋ ಪ್ರಯೋಗ ಮಾಡಲು ಹೋಗಿ, ಮತ್ತೇನೋ ಆಗಿ, ಅದು ಎಕ್ಕುಟ್ಟಿಹೋಗಿ ದುರಂತದಲ್ಲಿ ಅಂತ್ಯವಾಯಿತೇ?? ಹೀಗೆ ಏಳುವ ಪ್ರಶ್ನೆಗಳಿಗೆ ಕೊನೆಯಿಲ್ಲ. ಆದರೆ ಖಚಿತ ಉತ್ತರ ಮಾತ್ರ ಸಿಗುವುದಿಲ್ಲ. 

ಸೆಪ್ಟೆಂಬರ್ ೧೧, ೨೦೦೧ ರಂದು ನಡೆದ ಅಲ್ ಖೈದಾ ಉಗ್ರರ ದಾಳಿಗಿಂತ ಮೊದಲು ಅತ್ಯಂತ ಹೆಚ್ಚು ಅಮೇರಿಕನ್ ನಾಗರಿಕರನ್ನು ಬಲಿ ತೆಗೆದುಕೊಂಡ ಅನೈಸರ್ಗಿಕ ದುರಂತ ಈ ಜೋನ್ಸಟೌನ್ ಹತ್ಯಾಕಾಂಡವಾಗಿತ್ತು. 

***

ಮಾಹಿತಿಯ ಮೂಲ ಮತ್ತು ಚಿತ್ರಗಳನ್ನು ನೋಡಲು ಇಲ್ಲಿ ಹೋಗಿ. 

ಸಮ್ಮೋಹಿನಿ ಆಜ್ಞೆಗಳ (hypnotic suggestions) ಮೂಲಕ ನಿಯಂತ್ರಿಸಬಲ್ಲ ಹಂತಕನೊಬ್ಬನನ್ನು ಜಾನ್ ಕೆನಡಿ ಅವರ ಸಹೋದರ ರಾಬರ್ಟ್ ಕೆನಡಿ ಅವರ ಹತ್ಯೆಯಲ್ಲಿ ಡಮ್ಮಿ ಹಂತಕನಂತೆ ಬಳಸಲಾಗಿತ್ತೇ? ಹಿಂದೊಮ್ಮೆ ಅದರ ಬಗ್ಗೆ ರಾಬರ್ಟ್ ಕೆನಡಿ ಬಗ್ಗೆ ನಾಲ್ಕು ಭಾಗಗಳ ವಿವರವಾದ ಬ್ಲಾಗ್ ಬರೆದಾಗ ಬರೆದಿದ್ದೆ. ಆಸಕ್ತರು ಇಲ್ಲಿ ನೋಡಬಹುದು

2 comments:

sunaath said...

ಜೋನ್ಸಟೌನ್ ದುರಂತದ ಬಗೆಗೆ ಸಮಾಚಾರಪತ್ರಿಕೆಗಳಲ್ಲಿ ಓದಿದ ನೆನಪು ಮಸಕು ಮಸುಕಾಗಿ ಉಳಿದುಕೊಂಡಿದೆ. ನಿಮ್ಮ ಲೇಖನದಿಂದಾಗಿ ಈ ಘಟನೆಯ ಎಲ್ಲ ಆಯಾಮಗಳನ್ನು ತಿಳಿದುಕೊಂಡಂತಾಯಿತು. ಈ ಘಟನೆಯಲ್ಲಿ ದುರಂತಕ್ಕೀಡಾದ ವ್ಯಕ್ತಿಗಳ possible ಮನೋವಿಶ್ಲೇಷಣೆಯು ಆಗಿರುವದೆ, ಆಗಿದ್ದರೆ, ಅದು ಸಿಗಬಹುದೆ?

Anonymous said...

@ಸುನಾಥ್ ಸರ್,

ಮನೋವಿಶ್ಲೇಷಣೆ ಬಗ್ಗೆ ಕೇಳಿದ್ದೀರಿ. ಆಸಕ್ತಿದಾಯಕ ವಿಷಯ. ಹುಡುಕಬೇಕು.