ಅದರಲ್ಲಿನ ಒಂದು ಆಸಕ್ತಿದಾಯಕ ಅಧ್ಯಾಯದ ಸಾರಾಂಶ ಕೆಳಗಿದೆ. ಓದಿ. ಕೊನೆಗೆ ಇನ್ನೊಂದಿಷ್ಟು ರೋಚಕ ಮಾಹಿತಿಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿ ಕೊಟ್ಟಿದ್ದೇನೆ.
***
ನಾವು ವಿಚಿತ್ರವಾದ ಕಥೆಗಳನ್ನು ಹೇಳದಿದ್ದರೆ, ಮುಂದೊಂದು ದಿನ ವಿಚಿತ್ರವೇನಾದರೂ ಸಂಭವಿಸಿದರೂ ಜನ ನಂಬುವುದಿಲ್ಲ.
-- ಶಾನನ್ ಹಾಲೆ
ಮುಂಬೈ ಭೂಗತಲೋಕದ ಪಾತಕಿಗಳ ಚಲನವಲನ, ಚಟುವಟಿಕೆ, ಕಾರ್ಯತಂತ್ರಗಳ ಮೇಲೆ ಕಣ್ಣಿಡುವ ಪ್ರಾಜೆಕ್ಟ್ - X ವಿಭಾಗದ ಸಿಬ್ಬಂದಿಗಳು ಮುಂಬೈನಲ್ಲಿ ಸುಲಿಗೆ ಬೆದರಿಕೆ ಕರೆಗಳು (extortion calls) ತುಂಬಾ ಹೆಚ್ಚಾಗುತ್ತಿವೆ ಎಂದು ವರದಿ ಮಾಡಿದ್ದರು. ಮುಂಬೈ ಪೊಲೀಸ್ ಇಲಾಖೆಯ ಅಪರಾಧ ವಿಭಾಗದ ಪ್ರಮುಖರೆಲ್ಲರೂ ಸಭೆ ಸೇರಿದರು. ಸಂಗ್ರಹಿಸಿದ್ದ ಮಾಹಿತಿಗಳನ್ನು ಅಭ್ಯಸಿಸಿದರು. ಹೆಚ್ಚಿನ ಕರೆಗಳು ಕಲ್ಕತ್ತಾ ನಗರದಿಂದ ಬರುತ್ತಿವೆ ಮತ್ತು ಛೋಟಾ ರಾಜನ್ ಗ್ಯಾಂಗ್ ಇದರ ಹಿಂದಿರಬಹುದು ಎಂದು ವಿಶ್ಲೇಷಿಸಿದರು.
ಅನುಭವಿ ಪೊಲೀಸ್ ಅಧಿಕಾರಿಗಳ ತಂಡವೊಂದು ಕಲ್ಕತ್ತಾ ನಗರಕ್ಕೆ ತೆರಳಿತು. ಬೆದರಿಕೆ ಕರೆಗಳನ್ನು ಮಾಡುತ್ತಿದ್ದವನು ಛೋಟಾ ರಾಜನ್ ಬಂಟ ವಿಕ್ಕಿ ಮಲ್ಹೋತ್ರಾ ಎನ್ನುವ ಸಂದೇಹವಿತ್ತು. ವಿಕ್ಕಿ ಮಲ್ಹೋತ್ರಾ ಗಡುಸಾದ ಖತರ್ನಾಕ್ ಧ್ವನಿ ಹೊಂದಿದ್ದ. ಅವನ ಧ್ವನಿ ಕೇಳಿದರೆ ದಾವೂದ್ ಇಬ್ರಾಹಿಮ್ ಗ್ಯಾಂಗಿನ ಅಬು ಸಲೇಂ ಮಾತಾಡಿದಂತೆ ಕೇಳಿಸುತ್ತಿತ್ತು. ವಸೂಲಿ ಕರೆಗಳನ್ನು ಮಾಡಿ ಶ್ರೀಮಂತರನ್ನು ಬೆದರಿಸುವಲ್ಲಿ ನಿಷ್ಣಾತನಾಗಿದ್ದ ವಿಕ್ಕಿ. ಹೆಚ್ಚಿನ ಶ್ರೀಮಂತರು ಮತ್ತು ಉದ್ಯಮಿಗಳು ಸುಲಿಗೆ ಕರೆಗಳು ಬಂದಾಗ ಸಾಮಾನ್ಯವಾಗಿ ಪೊಲೀಸರ ಬಳಿ ಬರುವುದಿಲ್ಲ. ರೊಕ್ಕ ಕೊಟ್ಟು ಕೈಮುಗಿಯುತ್ತಾರೆ. ಇವರ ಪೀಡೆ ತಪ್ಪಿದರೆ ಸಾಕು ಎಂದುಕೊಂಡು ತಮ್ಮ ಕೆಲಸ ಮುಂದುವರೆಸುತ್ತಾರೆ. ಈ ವರ್ತನೆಯಿಂದ ಕ್ರಿಮಿನಲ್ ಗ್ಯಾಂಗುಗಳಿಗೆ ತಮ್ಮ ವಸೂಲಿ ದಂಧೆ ಮುಂದುವರೆಸಲು ಪ್ರೋತ್ಸಾಹ ಸಿಕ್ಕಂತಾಗುತ್ತದೆ.
ಯಾರಿಗೆ ಇಂತಹ ಸುಲಿಗೆ ಕರೆಗಳು ಬರುತ್ತಿದ್ದವೋ ಅವರಂತೂ ನಮ್ಮ ಬಳಿ ಬರುತ್ತಿರಲಿಲ್ಲ. ನಾವೇ ಅವರನ್ನು ಸಂಪರ್ಕಿಸಿ, ಅವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದೆವು. ಪೊಲೀಸ್ ಇಲಾಖೆ ಕರೆಗಳ ತಪಾಸಣೆ ಮಾಡುತ್ತಿರುವುದಾಗಿಯೂ ಮತ್ತು ಪಾತಕಿಗಳನ್ನು ಕಂಡುಹಿಡಿಯುವ ಕೆಲಸ ಮಾಡುತ್ತಿರುವುದಾಗಿಯೂ ಅವರಿಗೆ ಹೇಳಿ ಅವರಿಗೆ ಪೊಲೀಸರ ಬಗ್ಗೆ ವಿಶ್ವಾಸ ಮೂಡಿಸುವ ಪ್ರಯತ್ನ ಮಾಡುತ್ತಿದ್ದೆವು.
ಕಾನೂನಿನ ಪ್ರಕಾರವೇ ವಿಕ್ಕಿ ಮಲ್ಹೋತ್ರಾನ ಫೋನನ್ನು ಟ್ಯಾಪ್ ಮಾಡಲಾಗಿತ್ತು. ಅವನ ಕರೆಗಳನ್ನು ಕೇಳಿದಾಗ ಒಂದು ವಿಚಿತ್ರ ಸಂಗತಿ ಹೊರಬಿತ್ತು. ಕೆಲವೊಂದು ಕರೆಗಳಲ್ಲಿ ವಿಕ್ಕಿ ವ್ಯಕ್ತಿಯೊಬ್ಬರ ಜೊತೆ ತುಂಬಾ ಗೌರವದಿಂದ ಮಾತಾಡುತ್ತಿದ್ದ. ಮಾತಿಗೊಮ್ಮೆ ಸರ್ ಸರ್ ಎನ್ನುತ್ತಿದ್ದ. ಅಪರಾಧ ವಿಭಾಗದ ಅನುಭವಿ ಪರಿಣಿತ ಅಧಿಕಾರಿಗಳಿಗೆ ಎಲ್ಲ ಮಾಫಿಯಾ ಮುಖಂಡರ ಧ್ವನಿಯ ಪರಿಚಯವಿತ್ತು. ಆದರೆ ವಿಕ್ಕಿಯಿಂದ ಸರ್ ಎಂದು ಗೌರವದಿಂದ ಕರೆಸಿಕೊಳ್ಳುತ್ತಿದ್ದ ಆ ವ್ಯಕ್ತಿ ಯಾರು ಎಂಬುದನ್ನು ಯಾರೂ ಕಂಡುಹಿಡಿಯದಾದರು. ಅದೊಂದು ಅಜ್ಞಾತ ಹೊಸ ಧ್ವನಿಯಾಗಿತ್ತು. ನಮಗೆ ಹೊಸ ಸವಾಲಾಗಿತ್ತು.
ಕಲ್ಕತ್ತಾಗೆ ಹೋಗಿದ್ದ ತಂಡ ಒಂದು ವಾರದ ಬಳಿಕ ಮರಳಿತು. ವಿಕ್ಕಿ ಕಲ್ಕತ್ತಾದಿಂದ ಪರಾರಿಯಾಗಿದ್ದ ಎಂದು ಕಾಣುತ್ತದೆ. ಪ್ರಾಜೆಕ್ಟ್ - X ತಂಡ ಹೊಸ ಮಾಹಿತಿಯನ್ನು, ಮಾಹಿತಿ ಲಭ್ಯವಾದ ಕೂಡಲೇ, ಕಲ್ಕತ್ತಾದಲ್ಲಿದ್ದ ತಂಡಕ್ಕೆ ತ್ವರಿತವಾಗಿ ಮುಟ್ಟಿಸುತ್ತಿದ್ದರೂ ವಿಕ್ಕಿ ಪರಾರಿಯಾದ. ಪಾತಕಿಗಳನ್ನು ಪತ್ತೆ ಹಚ್ಚಲು ನೆರವಾಗುತ್ತಿದ್ದ ಮೊಬೈಲ್ ಟಾವರ್ ಮಾಹಿತಿ ಕೂಡ ಈ ಸಲ ಸಹಕಾರಿಯಾಗಲಿಲ್ಲ.
ಕೆಲ ದಿನಗಳ ನಂತರ ವಿಕ್ಕಿಯ ಫೋನ್ ದೆಹಲಿಯಿಂದ ಮಾತಾಡತೊಡಗಿತ್ತು. ವಸೂಲಿ ಕರೆಗಳು ಮತ್ತೂ ಜೋರಾದವು. ವಿಕ್ಕಿಯ ಜೊತೆ ಮತ್ತೊಬ್ಬ ಮಾಫಿಯಾ ಸಹಚರ ಸೇರಿಕೊಂಡಿದ್ದ. ಅವನು ಯಾರೆಂದು ಅವನ ಧ್ವನಿಯ ಮೂಲಕ ನಮ್ಮ ಅಧಿಕಾರಿಗಳು ಪತ್ತೆ ಹಚ್ಚಿದರು. ಅವನು ಮತ್ತೊಬ್ಬ ಛೋಟಾ ರಾಜನ್ ಬಂಟ, ಖತರ್ನಾಕ್ ಪಾತಕಿ, ಫರೀದ್ ತನಾಶಾ ಆಗಿದ್ದ. ಅವರಿಬ್ಬರ ಜೋಡಿ ಆಗ ನಮಗಿದ್ದ ಅತಿ ದೊಡ್ಡ ತಲೆನೋವು. ನಾನು ನನ್ನ ಕೆಳಗಿನ ಡಿಸಿಪಿಗೆ ಸೂಚನೆ ಕೊಟ್ಟೆ. ತಂಡದ ಜೊತೆ ದೆಹಲಿಗೆ ಹೋಗಿ. ಅವರನ್ನು ಹುಡುಕಿ ಬಂಧಿಸಿ ಕರೆತನ್ನಿ. ಇದೊಂದು ಬಹುಮುಖ್ಯ ಕಾರ್ಯಾಚರಣೆಯಾಗಿದ್ದರಿಂದ ವಿಸ್ತೃತ ಪ್ಲಾನ್ ಮಾಡಲಾಯಿತು.
ಹೊರಡುವ ದಿನ ಡಿಸಿಪಿ ವಿಮಾನ ತಪ್ಪಿಸಿಕೊಂಡರು. ಇನ್ಸಪೆಕ್ಟರ್ ಪಾಟೀಲ್ ಮತ್ತು ತಂಡ ಮಾತ್ರ ವಿಮಾನದಲ್ಲಿ ಪ್ರಯಾಣಿಸಿ ದೆಹಲಿ ತಲುಪಿಕೊಂಡಿತು. ನಂತರ ಇನ್ಸಪೆಕ್ಟರ್ ಪಾಟೀಲ್ ನನಗೆ ಫೋನ್ ಮಾಡಿದರು. ಮಹತ್ವದ ಕಾರ್ಯಾಚರಣೆಗಳನ್ನು ಮಾಡುವಾಗ ಹಿರಿಯ ಅಧಿಕಾರಿಗಳಿಗೆ ಎಲ್ಲ ಮಾಹಿತಿಯನ್ನು ನಿಯಮಿತವಾಗಿ ಕೊಡುವುದು ಪೊಲೀಸ್ ಪದ್ಧತಿ. ಡಿಸಿಪಿ ವಿಮಾನ ತಪ್ಪಿಸಿಕೊಂಡಿದ್ದರಿಂದ ಇನ್ಸಪೆಕ್ಟರ್ ಪಾಟೀಲ್ ನೇರವಾಗಿ ನನ್ನ ಸಂಪರ್ಕದಲ್ಲಿ ಇದ್ದರು. ದೆಹಲಿ ತಲುಪಿಕೊಂಡ ಕೆಲವೇ ಘಂಟೆಗಳಲ್ಲಿ ಇನ್ಸಪೆಕ್ಟರ್ ಪಾಟೀಲ್ ಮತ್ತು ಅವರ ತಂಡ ದೆಹಲಿಯ ಪ್ರಸಿದ್ಧ ಲೂಟಿಯೆನ್ಸ್ ಬಡಾವಣೆಯ ಐಷಾರಾಮಿ ಹೋಟೆಲೊಂದರಲ್ಲಿ ವಿಕ್ಕಿ ಮಲ್ಹೋತ್ರಾನನ್ನು ಪತ್ತೆ ಹಚ್ಚಿತು. ಆದರೆ ಆಗಿದಾಂಗಲೇ ಆತನನ್ನು ಅಟಕಾಯಿಸಿಕೊಂಡು ಬಂಧಿಸುವುದು ಅವರಿಗೆ ಸಮಂಜಸ ಅನ್ನಿಸಲಿಲ್ಲ. ಮುಂಬೈನ ತಂಡಕ್ಕೆ ದೆಹಲಿ ಅಷ್ಟು ಚೆನ್ನಾಗಿ ಪರಿಚಯವಿರಲಿಲ್ಲ. ಅವರ ತೊಂದರೆ ನನಗೆ ಅರ್ಥವಾಯಿತು.
ವಿಕ್ಕಿ ಮಲ್ಹೋತ್ರಾ ಹೋಟೆಲ್ಲಿನ ಲಾಂಜಿನಲ್ಲಿ ಇದ್ದಾನೆ. ಅವನ ಜೊತೆ ಮತ್ತೊಬ್ಬ ವ್ಯಕ್ತಿ ಕೂಡ ಇದ್ದಾನೆ. ಇಬ್ಬರೂ ಆರಾಮಾಗಿ ಏನೋ ಮಾತಾಡಿಕೊಂಡು ಕುಳಿತ್ತಿದ್ದಾರೆ ಎಂದು ಇನ್ಸಪೆಕ್ಟರ್ ಪಾಟೀಲ್ ಮೊಬೈಲ್ ಮೂಲಕ ನನಗೆ ತಿಳಿಸಿದರು. ದೂರದಲ್ಲಿ ಕುಳಿತ ಪೊಲೀಸ್ ತಂಡ ತಾವೂ ಕೂಡ ತಂಪು ಪಾನೀಯ ಸೇವಿಸುತ್ತಾ ಅವರ ಮೇಲೆ ಒಂದು ಕಣ್ಣಿಟ್ಟು ಕುಳಿತರು. ಎಲ್ಲ ರೀತಿಯಿಂದ ವಿಚಾರ ಮಾಡಿದ ಮುಂಬೈ ಪೊಲೀಸ್ ತಂಡ, ವಿಕ್ಕಿ ಹೊಟೇಲಿಂದ ಹೊರಬಿದ್ದ ತಕ್ಷಣ ಆತನನ್ನು ಬಂಧಿಸುವುದು ಎಂಬ ಪ್ಲಾನ್ ಹಾಕಿತು. ವಿಮಾನ ತಪ್ಪಿಸಿಕೊಂಡಿದ್ದ ಡಿಸಿಪಿ ಮುಂದಿನ ವಿಮಾನ ಏರಿದ್ದಾರೆಂಬ ಮಾಹಿತಿ ಕೂಡ ಇಷ್ಟೊತ್ತಿಗೆ ಬಂದು ತಲುಪಿತು.
ಸ್ವಲ್ಪ ಸಮಯದ ನಂತರ ಇನ್ಸಪೆಕ್ಟರ್ ಪಾಟೀಲ್ ಮತ್ತೊಂದು ಕರೆ ಮಾಡಿದರು. ವಿಕ್ಕಿ ಮತ್ತು ಆತನ ಜೊತೆಗಿದ್ದ ವ್ಯಕ್ತಿ ಹೋಟೆಲಿನಿಂದ ಹೊರಬಿದ್ದು ಕಾರಿನಲ್ಲಿ ಹೊರಟಿದ್ದಾರೆಂದೂ ಮತ್ತು ಪೊಲೀಸರು ಅವರನ್ನು ಹಿಂಬಾಲಿಸುತ್ತಿದ್ದಾರೆ ಎಂದರು.
ಮುಂದಿನ ಕೆಲವು ಕ್ಷಣಗಳಲ್ಲಿ ಮುಂಬೈ ಪೊಲೀಸರಿದ್ದ ವಾಹನ ವಿಕ್ಕಿಯಿದ್ದ ಕಾರನನ್ನು ವೇಗವಾಗಿ ಹಿಂಬಾಲಿಸಿ, ಮುಂದೆ ಹೋಗಿ ಅಡ್ಡಹಾಕಿತು. ಗಕ್ಕನೆ ನಿಂತಿತು ವಿಕ್ಕಿಯಿದ್ದ ಕಾರ್. ವಾಹನದಿಂದ ಇಳಿದವರೇ ಇನ್ಸಪೆಕ್ಟರ್ ಪಾಟೀಲ್ ವಿಕ್ಕಿಯ ಕಾರಿನ ಬಳಿ ಹೋದರು. ತಮ್ಮ ಪರಿಚಯ ತಿಳಿಸಿದರು. ಕಾರಿನಲ್ಲಿದ್ದ ಇಬ್ಬರನ್ನೂ ಬಂಧಿಸಲಾಗುತ್ತಿದೆ ಎಂದು ಕೂಡ ಹೇಳಿದರು. ಇದೆಲ್ಲಾ ಪೊಲೀಸ್ ಪದ್ಧತಿ.
ಮತ್ತೆ ಇನ್ಸಪೆಕ್ಟರ್ ಪಾಟೀಲ್ ಫೋನ್ ಮಾಡಿದರು. ಈ ಬಾರಿ ಅವರ ಧ್ವನಿಯಲ್ಲಿ ಗಾಬರಿ ಮತ್ತು ಗೊಂದಲವಿತ್ತು. ಇನ್ಸಪೆಕ್ಟರ್ ಪಾಟೀಲ್ ಹೇಳಿದರು: ವಿಕ್ಕಿಯ ಜೊತೆಗಿದ್ದ ವ್ಯಕ್ತಿ ಅವರನ್ನು ಬಿಟ್ಟು ಕಳಿಸುವಂತೆ ಆವಾಜ್ ಹಾಕುತ್ತಿದ್ದಾನೆ. ಆತ ತನ್ನನ್ನು ಇಂಟೆಲಿಜೆನ್ಸ್ ಬ್ಯೂರೋದ (ಐಬಿ) ಮಾಜಿ ಡೈರೆಕ್ಟರ್ ಎಂದು ಬೇರೆ ಪರಿಚಯಿಸಿಕೊಳ್ಳುತ್ತಿದ್ದಾನೆ. ಏನು ಮಾಡಲಿ ಮೇಡಂ???
ಈಗ ಆಶ್ಚರ್ಯಗೊಳ್ಳುವ ಬಾರಿ ನನ್ನದು. ನಾನು ಆಗಿಂದಾಗಲೇ ಮುಂಬೈನ ಸ್ಥಳೀಯ ಇಂಟೆಲಿಜೆನ್ಸ್ ಬ್ಯೂರೋದ ಹಿರಿಯ ಅಧಿಕಾರಿಗೆ ಫೋನ್ ಮಾಡಿದೆ. ನಿವೃತ್ತ ಐಬಿ ಅಧಿಕಾರಿ ಯಾರಾದರೂ, ಏನಾದರೂ, ರಹಸ್ಯ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆಯೇ? ಎಂದು ಕೇಳಿದೆ. ಅಂತಹ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದರು ಸ್ಥಳೀಯ ಐಬಿ ಅಧಿಕಾರಿ. ಆದರೆ ಅಲ್ಲಿ ದೆಹಲಿಯಲ್ಲಿ ಆ ವ್ಯಕ್ತಿ ಮಾತ್ರ ತಾನು ಐಬಿಯ ಮಾಜಿ ಡೈರೆಕ್ಟರ್ ಎಂದೂ, ತಮ್ಮನ್ನು ಬಿಟ್ಟು ಕಳಿಸಬೇಕೆಂದು ಆಗ್ರಹ ಮಾಡುತ್ತಲೇ ಇದ್ದರು.
ಮತ್ತೆ ಇನ್ಸಪೆಕ್ಟರ್ ಪಾಟೀಲ್ ಫೋನ್ ಮಾಡಿದರು. ಈ ಬಾರಿ ಆ ವ್ಯಕ್ತಿಯೇ ನನ್ನ ಜೊತೆ ಮಾತಾಡಿಸುವಂತೆ ಇನ್ಸಪೆಕ್ಟರ್ ಪಾಟೀಲರಿಗೆ ಒತ್ತಾಯ ಮಾಡುತ್ತಿದ್ದರು. ಆ ವ್ಯಕ್ತಿ ಹೇಳಿದ್ದ ಪರಿಚಯವನ್ನು ಖಾತ್ರಿ ಪಡಿಸಿಕೊಳ್ಳಬೇಕಾಗಿತ್ತು. ಆ ವ್ಯಕ್ತಿ ನನ್ನ ಜೊತೆ ಮಾತಾಡತೊಡಗಿದಾಗ, ನಿಮ್ಮ ಬ್ಯಾಚಿನ ಮಹಾರಾಷ್ಟ್ರಕ್ಕೆ ನಿಯೋಜಿತರಾದ ಐಪಿಎಸ್ ಅಧಿಕಾರಿಗಳ ಹೆಸರುಗಳನ್ನು ಮತ್ತು ಅವರು ಸೇವೆ ಸಲ್ಲಿಸಿದ ಕೊನೆಯ ಹುದ್ದೆಯನ್ನು ಹೇಳಿ ಎಂದೆ. ಆ ವ್ಯಕ್ತಿ ಪಟಪಟನೆ ಎಲ್ಲ ವಿವರಗಳನ್ನು ಸರಿಯಾಗಿಯೇ ಕೊಟ್ಟರು. ಆ ವ್ಯಕ್ತಿ ಒಬ್ಬ ಐಪಿಎಸ್ ಅಧಿಕಾರಿ ಮತ್ತು ಮಾಜಿ ಐಬಿ ಡೈರೆಕ್ಟರ್ ಇದ್ದರೂ ಇರಬಹುದು ಎಂದು ನನಗೆ ಅನ್ನಿಸಿತು.
"ನೀನೇ ಸುಳ್ಳು ಹೇಳುತ್ತಿದ್ದೀಯಾ. ಯಾವ ಮಹಿಳಾ ಅಧಿಕಾರಿಯೂ ಕ್ರೈಂ ಬ್ರಾಂಚಿನ ಮುಖ್ಯಸ್ಥರ ಹುದ್ದೆಯಲ್ಲಿಲ್ಲ," ಎಂದು ಆತ ಅಬ್ಬರಿಸಿದಾಗ ನಾನು ಅಪ್ರತಿಭಳಾದೆ.
ಆತನ ಮಾತಿನಲ್ಲಿಯ ಅಸಹನೆ ಮತ್ತು ಅವಹೇಳನಕಾರಿ ಮಾತಿನ ಧಾಟಿ ನನಗೆ ಹಿಡಿಸಲಿಲ್ಲ. ಕೋಪವೂ ಬಂತು. ನಾನು ಮತ್ತೊಮ್ಮೆ ಆತನಿಗೆ ನನ್ನ ಪರಿಚಯ ಮಾಡಿಕೊಡಲು ಪ್ರಯತ್ನಿಸಿದೆ. ಅವರು ನಾನು ಹೇಳಿದ್ದನ್ನು ಕೇಳಿಸಿಕೊಂಡಂತೆ ಕಾಣಲಿಲ್ಲ. ಇನ್ಸಪೆಕ್ಟರ್ ಪಾಟೀಲರಿಗೆ ಎಲ್ಲರನ್ನೂ ಬಿಟ್ಟು ಕಳಿಸುವಂತೆ ಆಜ್ಞೆ ಮಾಡಲು ನನಗೇ ಆಜ್ಞೆ ಮಾಡುವ ಧಾಟಿಯಲ್ಲಿ ಮಾತಾಡಿದರು. ನಾನು ಅದನ್ನು ಖಡಾಖಂಡಿತವಾಗಿ ನಿರಾಕರಿಸಿದೆ. ಈ ಕಾರ್ಯಾಚರಣೆಗೆ ತುಂಬಾ ಕಷ್ಟಪಟ್ಟಿದ್ದೆವು. ಈಗ ಕಾರ್ಯಾಚರಣೆ ಬಹುತೇಕ ಯಶಸ್ವಿಯಾಯಿತು ಅಂದುಕೊಳ್ಳುತ್ತಿರುವಾಗ ಯಾರೋ ಅಪರಿಚಿತ ವ್ಯಕ್ತಿ ತನ್ನನ್ನು ತಾನು ಮಾಜಿ ಐಬಿ ನಿರ್ದೇಶಕ ಅಂದ ಮಾತ್ರಕ್ಕೆ ಖತರ್ನಾಕ್ ಗ್ಯಾಂಗಸ್ಟರಗಳನ್ನು ಬಿಟ್ಟು ಕಳಿಸಿ, ಅವರಿಗೆ ಕೈಮುಗಿದು ಬರಲು ಸಾಧ್ಯವೇ?? ಅದನ್ನು ಊಹಿಸಲೂ ಸಾಧ್ಯವಿಲ್ಲ. ಅದನ್ನೇ ಖಚಿತವಾಗಿ ಹೇಳಿದ್ದೆ. ಆಕ್ರೋಶಗೊಂಡ ಆ ವ್ಯಕ್ತಿ 'ನಿನಗೆ ಪಾಠ ಕಲಿಸುತ್ತೇನೆ. ಬಿಡುವುದಿಲ್ಲ,' ಎಂದು ಅಬ್ಬರಿಸಿದ. ಅದಕ್ಕುತ್ತರವಾಗಿ ನಾನೂ ಅಷ್ಟೇ ಕಠಿಣವಾಗಿ ಹೇಳಿದೆ , 'ನಾನು ನಿನಗೆ ಪಾಠ ಕಲಿಸುತ್ತೇನೆ.' ಅಲ್ಲಿಯವರೆಗೆ ನನಗೆ ಯಾರೂ ಹಾಗೆ ಮಾತಾಡಿರಲಿಲ್ಲ.
ನಮ್ಮ ಮುಂದಿನ ನಡೆಯ ಬಗ್ಗೆ ಇನ್ಸಪೆಕ್ಟರ್ ಪಾಟೀಲ್ ಜೊತೆ ಚರ್ಚಿಸುತ್ತಿದ್ದೆ. ಅಷ್ಟರಲ್ಲಿ ನನ್ನ ಮುಂದಿದ್ದ ಟೀವಿಯಲ್ಲಿ ಬ್ರೇಕಿಂಗ್ ನ್ಯೂಸ್ ಬರತೊಡಗಿತು. 'ದೆಹಲಿಯಲ್ಲಿ ಮಾಜಿ ಐಬಿ ಡೈರೆಕ್ಟರ್ ಜೊತೆ ಗ್ಯಾಂಗಸ್ಟರ್ ಬಂಧನ...!!!' ಆ ವ್ಯಕ್ತಿ ಸ್ಥಳೀಯ ಪೊಲೀಸರಿಗೆ ಫೋನ್ ಮಾಡಿ ದೆಹಲಿ ಪೊಲೀಸ್ ಮೊಬೈಲ್ ವ್ಯಾನ್ ಕಳಿಸುವಂತೆ ಕೋರಿದ್ದ ಎಂದು ತಿಳಿಯಿತು. ಫೋನ್ ಮಾಡಿದಾಗ ತನ್ನನ್ನು ತಾನು ಮಾಜಿ ಐಬಿ ಡೈರೆಕ್ಟರ್ ಎಂದು ಆ ವ್ಯಕ್ತಿ ಪರಿಚಯಿಸಿಕೊಂಡಿದ್ದ. ದೆಹಲಿಯ ಕಂಟ್ರೋಲ್ ರೂಮ್ ಆ ಮಾಹಿತಿಯನ್ನೇ ಮೊಬೈಲ್ ವ್ಯಾನಿಗೆ ಸಂದೇಶ ರವಾನಿಸಿತ್ತು. ಕಂಟ್ರೋಲ್ ರೂಮ್ ಸಂದೇಶಗಳ ಮೇಲೆ ಸದಾ ಕಿವಿಯಿಟ್ಟಿರುವ ಮಾಧ್ಯಮಗಳು ಅದನ್ನು ಪಿಕ್ ಮಾಡಿದ್ದವು. ಪೈಪೋಟಿಗೆ ಬಿದ್ದಂತೆ ಬ್ರೇಕಿಂಗ್ ನ್ಯೂಸ್ ಕೊಡುತ್ತಿದ್ದವು.
ಸ್ಥಳಕ್ಕೆ ಧಾವಿಸಿ ಬಂದ ದೆಹಲಿ ಪೊಲೀಸರು ಇನ್ಸಪೆಕ್ಟರ್ ಪಾಟೀಲ್, ನಮ್ಮ ಸಿಬ್ಬಂದಿ, ವಿಕ್ಕಿ ಮಲ್ಹೋತ್ರಾ, ಐಬಿಯ ಮಾಜಿ ಡೈರೆಕ್ಟರ್ ಎಂದು ಹೇಳಿಕೊಂಡಿದ್ದ ಆ ವ್ಯಕ್ತಿ ಎಲ್ಲರನ್ನೂ ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದರು. ಅದೇ ಸಮಯಕ್ಕೆ, ವಿಮಾನ ತಪ್ಪಿಸಿಕೊಂಡಿದ್ದ, ನಮ್ಮ ಡಿಸಿಪಿ ಕೂಡ, ತಡವಾಗಿಯಾದರೂ, ದೆಹಲಿ ತಲುಪಿದ್ದರು. ಅವರೂ ಅಲ್ಲಿನ ಪೊಲೀಸ್ ಠಾಣೆಗೆ ಹೋದರು. ಅವರು ಅಲ್ಲಿ ಎಲ್ಲವನ್ನೂ ಸಂಬಾಳಿಸಿ, ಕಾನೂನಿನ ಔಪಚಾರಿಕತೆಗಳನ್ನು ಪೂರೈಸುತ್ತಿದ್ದಾಗ ನಾನು ಇನ್ಸಪೆಕ್ಟರ್ ಪಾಟೀಲರಿಗೆ ಕಟ್ಟುನಿಟ್ಟಾದ ಆಜ್ಞೆ ಮಾಡಿದೆ. 'ಮತ್ತೊಬ್ಬ ಗ್ಯಾಂಗಸ್ಟರ್ ಫರೀದ್ ತನಾಶಾನನ್ನೂ ಹಿಡಿದು ತರಬೇಕು. ಅಷ್ಟು ದೂರ ಹೋಗಿ ಅವನನ್ನು ತಪ್ಪಿಸಿಕೊಳ್ಳಲು ಬಿಡುವಂತಿಲ್ಲ. ಕ್ವಿಕ್. ಅವನನ್ನು ಬಂಧಿಸಲು ಹೊರಡಿ!'
ಮುಂಬೈನಲ್ಲಿ ರಿಂಗಣಿಸುತ್ತಿದ್ದ ಸುಲಿಗೆ ಬೆದರಿಕೆ ಕರೆಗಳ ಹಿಂದೆ ಫರೀದ್ ತನಾಶಾ ಇರುವುದು ಖಚಿತವಾಗಿತ್ತು. ಆತ ಕೂಡ ದೆಹಲಿಯಲ್ಲೇ ಇದ್ದ. ಬೇರೆ ಸ್ಥಳದಲ್ಲಿ ಇದ್ದ. ಈಗ ಬ್ರೇಕಿಂಗ್ ನ್ಯೂಸ್ ನೋಡಿ ಆತ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಬಹುದು ಎಂಬುದು ನಮ್ಮ ಆತಂಕವಾಗಿತ್ತು. ಹಾಗಾಗಲು ಬಿಡುವಂತಿರಲಿಲ್ಲ.
ಡಿಸಿಪಿ ಅವರನ್ನು ದೆಹಲಿಯ ಠಾಣೆಯಲ್ಲಿಯೇ ಬಿಟ್ಟು ಇನ್ಸಪೆಕ್ಟರ್ ಪಾಟೀಲ್ ಮುಂದಿನ ಪಾತಕಿಯನ್ನು ಬಂಧಿಸಲು ತಮ್ಮ ತಂಡದೊಂದಿಗೆ ಹೋದರು. ದೆಹಲಿಯ ಅಪರಿಚಿತ ರಸ್ತೆಗಳ ಮೇಲೆ ಡ್ರೈವ್ ಮಾಡುತ್ತಾ ಫರೀದನನ್ನು ಹುಡುಕುವುದು ದೊಡ್ಡ ಸವಾಲಾಗಿತ್ತು. ಸಮಯದ ವಿರುದ್ಧ ಸೆಣೆಸುತ್ತಿದ್ದರು. ಫರೀದ್ ನುರಿತ ಅಂಡರ್ವರ್ಲ್ಡ್ ಕಿಲಾಡಿಯಾಗಿದ್ದ. ಆದರೆ ಇವರೂ ಸಹಿತ ನುರಿತ ಕ್ರೈಂ ಬ್ರಾಂಚ್ ತಂಡದವರಾಗಿದ್ದರು.
ಫರೀದ್ ಇದ್ದ ಪ್ರದೇಶ ತಲುಪಿಕೊಂಡ ತಂಡ ಎಲ್ಲವನ್ನೂ ಒಂದು ಬಾರಿ ಸೂಕ್ಷ್ಮವಾಗಿ ಗಮನಿಸಿತು. ಎಲ್ಲರೂ ಮಫ್ತಿಯಲ್ಲಿ ಇದ್ದುದರಿಂದ ಯಾರಿಗೂ ಸಂಶಯ ಬರಲಿಲ್ಲ. ಅತ್ಯಂತ ಸಾಮಾನ್ಯನಂತೆ ಕಾಣುವ ಪೊಲೀಸ್ ಒಬ್ಬನನ್ನು ಇನ್ಸಪೆಕ್ಟರ್ ಪಾಟೀಲ್ ಫರೀದ್ ಇದ್ದ ಫ್ಲಾಟಿನ್ ಬಾಗಿಲು ತಟ್ಟುವಂತೆ ಕಳಿಸಿದರು. ಫರೀದ್ ಬಾಗಿಲು ತೆಗೆದಾಕ್ಷಣ ಒಳನುಗ್ಗಿದ ಪೊಲೀಸರ ತಂಡ ಫರೀದನನ್ನು ಹೆಚ್ಚಿನ ತೊಂದರೆಯಿಲ್ಲದೆ ಬಂಧಿಸಲು ಸಫಲವಾಯಿತು. ಫರೀದ್ ಟೀವಿಯಲ್ಲಿನ ಬ್ರೇಕಿಂಗ್ ನ್ಯೂಸ್ ನೋಡಿರಲಿಲ್ಲ. ಆತ ತನ್ನ ಎರಡನೇ ಹೆಂಡತಿಯೊಂದಿಗೆ ಕೌಟುಂಬಿಕ ಸಮಯ ಕಳೆಯುತ್ತಿದ್ದ. ಕಾರ್ಯಾಚರಣೆಯ ಈ ಭಾಗ ಸುಖಾಂತವಾಗಿದ್ದನ್ನು ಕೇಳಿದ ನನಗೆ ದೊಡ್ಡ ನೆಮ್ಮದಿ.
ಇಷ್ಟಾಗುವ ಹೊತ್ತಿಗೆ ಕೇಂದ್ರದ ಮತ್ತು ಮಹಾರಾಷ್ಟ ಸರ್ಕಾರದ ಹಿರಿಯ ಅಧಿಕಾರಿಗಳ, ರಾಜಕೀಯ ನಾಯಕರ ಮಧ್ಯೆ ಚರ್ಚೆಗಳು ಆರಂಭವಾಗಿದ್ದವು. ದೆಹಲಿಯಲ್ಲಿ ನಡೆದ ಆ ಕಾರ್ಯಾಚರಣೆಯಲ್ಲಿ ಮಾಜಿ ಐಬಿ ಡೈರೆಕ್ಟರ್ ಇರಲೇ ಇಲ್ಲವೆಂಬ ಅಧಿಕೃತ ಹೇಳಿಕೆ ಹೊರಬಿತ್ತು. ಅದು ನಿರೀಕ್ಷಿತವೇ ಆಗಿತ್ತು. ಕೆಲವು ಮಾಧ್ಯಮಗಳು ಮಾಜಿ ಐಬಿ ಡೈರೆಕ್ಟರ್ ಅವರನ್ನು ಸ್ಪಷ್ಟೀಕರಣ ಕೇಳಿದಾಗ, ಕಾರ್ಯಾಚರಣೆಯ ಸಮಯದಲ್ಲಿ ಅವರು ಮನೆಯಲ್ಲಿ ಟೀವಿ ನೋಡುತ್ತಿದ್ದೆ ಎಂದು ಹೇಳಿದರು. ಅದೆಲ್ಲ ಏನೇ ಇರಲಿ, ವಿಕ್ಕಿ ಮಲ್ಹೋತ್ರಾ ಮತ್ತು ಫರೀದ್ ತನಾಶಾ ಅವರುಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ನಮಗೆಲ್ಲ ಹೆಮ್ಮೆಯ ಮತ್ತು ಸಂತಸದ ವಿಷಯವಾಗಿತ್ತು. ಅವರೇನು ಕಮ್ಮಿ ಹಾವಳಿ ಎಬ್ಬಿಸಿದ್ದರೇ!? ಅವರ ನಿರಂತರ ಬೆದರಿಕೆ ಕರೆಗಳಿಂದ ಮುಂಬೈನ ವಾಣಿಜ್ಯಲೋಕ ತತ್ತರಿಸಿಹೋಗಿತ್ತು.
ಕೆಲ ಸಮಯದ ನಂತರ ಬೇರೊಬ್ಬ ಹಿರಿಯ ಅಧಿಕಾರಿ ನನಗೆ ಹೆಚ್ಚಿನ ವಿವರಣೆ ಕೊಟ್ಟಿದ್ದರು. ಮುಂಬೈ ಪೊಲೀಸರ ತಂಡ ವಿಕ್ಕಿ ಮಲ್ಹೋತ್ರಾನನ್ನು ಅಡ್ಡಹಾಕಿದಾಗ, ಜೊತೆಗಿದ್ದ ಮಾಜಿ ಐಬಿ ಡೈರೆಕ್ಟರ್ ಎಂದು ಹೇಳಿಕೊಂಡಿದ್ದ ಮನುಷ್ಯ ಮೊದಲು ಅಂದುಕೊಂಡಿದ್ದು, ವಿರೋಧಿ ಗ್ಯಾಂಗ್ ದಾಳಿ ಮಾಡಿದೆ ಎಂದು. ಇನ್ಸಪೆಕ್ಟರ್ ಪಾಟೀಲ್ ತಮ್ಮ ಪರಿಚಯ ಮಾಡಿಕೊಂಡಾಗ ಅವರು ದೆಹಲಿ ಪೊಲೀಸ್ ಇನ್ಸಪೆಕ್ಟರ್ ಅಂದುಕೊಂಡರು. ನಂತರ ನಾನು, ಮಹಿಳೆಯೊಬ್ಬಳು, ಕ್ರೈಂ ಬ್ರಾಂಚಿನ ಜಾಯಿಂಟ್ ಕಮಿಷನರ್ ಎಂದು ಪರಿಚಯ ಮಾಡಿಕೊಂಡಾಗ ಅವರು ನನ್ನ ಮಾತನ್ನು ನಂಬಲಿಲ್ಲ ಏಕೆಂದರೆ ದೆಹಲಿ ಪೊಲೀಸ್ ಇಲಾಖೆಯಲ್ಲಿ ಆಗ ಯಾವುದೇ ಮಹಿಳಾ ಅಧಿಕಾರಿ ಮುಖ್ಯ ಸ್ಥಾನದಲ್ಲಿ ಇರಲಿಲ್ಲ. ಎಲ್ಲರೂ ಉದ್ವಿಗ್ನ (tense) ಸ್ಥಿತಿಯಲ್ಲಿದ್ದ ಸಮಯದಲ್ಲಿ ಉಂಟಾಗಿದ್ದ ಗೊಂದಲ ಅಷ್ಟೇ. ನಮಗೂ ಈಗ ಗೊತ್ತಾಗಿತ್ತು, ವಿಕ್ಕಿ ಮಲ್ಹೋತ್ರಾ ಏಕೆ ಅವರನ್ನು 'ಸರ್' ಎಂದು ಸಂಬೋಧಿಸುತ್ತಿದ್ದ ಎಂದು. It was a big misunderstanding.
ಮಾಜಿ ಐಬಿ ಡೈರೆಕ್ಟರ್ ಎಂದು ಹೇಳಿಕೊಂಡ ಆ ವ್ಯಕ್ತಿ ದೆಹಲಿ ಪೊಲೀಸ್ ಕಂಟ್ರೋಲ್ ರೂಮಿಗೆ ಫೋನ್ ಮಾಡದಿದ್ದರೆ ಬ್ರೇಕಿಂಗ್ ನ್ಯೂಸ್ ಸೃಷ್ಟಿಯಾಗುತ್ತಿರಲಿಲ್ಲ. ಬೇರೆ ಬೇರೆ ರಕ್ಷಣಾ ಇಲಾಖೆಗಳ ಕಾರ್ಯಾಚರಣೆಗಳು, ಕೌಂಟರ್ ಕಾರ್ಯಾಚರಣೆಗಳು ಸದಾ ನಡೆಯುತ್ತಿರುತ್ತವೆ. ಸಮನ್ವಯತೆಯನ್ನು (coordination) ಸಾಧಿಸಲು ಪ್ರಯತ್ನಿಸಿದರೂ ಒಮ್ಮೊಮ್ಮೆ ಹೀಗೆ ಸಂಘರ್ಷ ಉಂಟಾಗುತ್ತದೆ. ಆದರೆ ಈ ಸಂಘರ್ಷ ತುಂಬಾ ವಿವಾದಾತ್ಮಕ ಸ್ವರೂಪ ಪಡೆದುಕೊಂಡಿತು. ಮಾಧ್ಯಮಗಳು ತುಂಬಾ ದಿನಗಳ ಕಾಲ ಇದರ ಬಗ್ಗೆ ಊಹಾಪೋಹದ ವರ್ಣರಂಜಿತ ವರದಿಗಳನ್ನು ಪ್ರಕಟಿಸಿದವು. ಅವುಗಳಿಗೆ ಹಬ್ಬ.
ಅನೇಕ ವರ್ಷಗಳ ನಂತರ, ಕೇಂದ್ರ ಗೃಹ ಇಲಾಖೆಯ ಮಾಜಿ ಕಾರ್ಯದರ್ಶಿ ಒಬ್ಬರು ಹೇಳಿದರು: ಮಾಜಿ ಐಬಿ ಡೈರೆಕ್ಟರ್ ಅವರು ಛೋಟಾ ರಾಜನ್ ಗ್ಯಾಂಗಿನ ಸದಸ್ಯರಾದ ವಿಕ್ಕಿ ಮಲ್ಹೋತ್ರಾ, ಫರೀದ್ ತನಾಶಾ ಮುಂತಾದವರನ್ನು ದಾವೂದ್ ಇಬ್ರಾಹಿಂನನ್ನು ಅರಬ್ ಕೊಲ್ಲಿಯ ದೇಶವೊಂದರಲ್ಲಿ ರಹಸ್ಯವಾಗಿ ಹತ್ಯೆ ಮಾಡುವ ಮಹತ್ವದ ಕಾರ್ಯಾಚರಣೆಯೊಂದಕ್ಕೆ ಸಿದ್ಧಗೊಳಿಸುತ್ತಿದ್ದರು. ದಾಳಿ ಮಾಡಿ ಬಂಧಿಸುವ ಮೂಲಕ ಮುಂಬೈ ಪೊಲೀಸರು ಉದ್ದೇಶಪೂರ್ವಕವಾಗಿ ಆ ಕಾರ್ಯಾಚರಣೆಯನ್ನು ವಿಫಲಗೊಳಿಸಿದ್ದರು.
ಆದರೆ ಇದೊಂದು ಶುದ್ಧ ಸುಳ್ಳು. ಮುಂಬೈ ಪೊಲೀಸರು ತಮಗೆ ಬೇಕಾಗಿದ್ದ ಪಾತಕಿಗಳನ್ನು ಹುಡುಕಿಕೊಂಡು ಹೋಗಿ ಯಶಸ್ವಿ ಕಾರ್ಯಾಚರಣೆ ಮಾಡಿದ್ದರು. ಅಷ್ಟೇ ವಿಷಯ. ದಾವೂದ್ ಇಬ್ರಾಹಿಂನ ಋಣದಲ್ಲಿದ್ದ ಮುಂಬೈ ಪೊಲೀಸರು ಅವನನ್ನು ಬಚಾವು ಮಾಡಲು ಹೀಗೆ ಮಾಡಿದರು ಎನ್ನುವ ಕಲ್ಪಿತ ಸುದ್ದಿ ನಿಷ್ಠಾವಂತಹ ಅಧಿಕಾರಿಗಳಿಗೆ ತುಂಬಾ ಬೇಸರವನ್ನು ಉಂಟುಮಾಡಿತ್ತು. ಆದರೆ ನಮ್ಮ ಆತ್ಮಸಾಕ್ಷಿ ಸ್ವಚ್ಛವಾಗಿತ್ತು. Our conscience was clear. ಅಷ್ಟು ಸಾಕು.
ಹಿಂದೊಮ್ಮೆ ನಾನು ಸಿಬಿಐನಲ್ಲಿ ಕೆಲಸ ಮಾಡುತ್ತಿದ್ದಾಗ ನೀರಜ್ ಕುಮಾರ್ ನನ್ನ ಮೇಲಧಿಕಾರಿಯಾಗಿದ್ದರು. ಅವರನ್ನು ನಾನು ತುಂಬಾ ಗೌರವಿಸುತ್ತೇನೆ. ಅವರು ಸಿಬಿಐನಲ್ಲಿ ಕೆಲಸ ಮಾಡಿದ ನಂತರ ದೆಹಲಿ ಮತ್ತು ಸುತ್ತುಮುತ್ತಲಿನ ಜಾಗಗಳಲ್ಲಿ ಅನೇಕ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿದ್ದರು. ಈ ಕಾರ್ಯಾಚರಣೆಯ ಪ್ಲಾನಿಂಗ್ ಮಾಡುವಾಗ ನೀರಜ್ ಕುಮಾರ್ ಅವರಿಗೆ ಈ ವಿಷಯ ತಿಳಿಸಿ, ಅವರ ಮೂಲಕ ದೆಹಲಿಯಲ್ಲಿ ಸ್ಥಳೀಯ ಬೆಂಬಲ ಪಡೆಯಲೇ ಎಂದು ಒಮ್ಮೆ ಯೋಚಿಸಿದ್ದೆ. ದೆಹಲಿ ಕ್ರೈಂ ಬ್ರಾಂಚಿನ ಖ್ಯಾತ ಅಧಿಕಾರಿ ಎನ್ಕೌಂಟರ್ ಸ್ಪೆಷಲಿಸ್ಟ್ ರಾಜಬೀರ್ ಸಿಂಗ್ ನೀರಜ್ ಕುಮಾರರ ಖಾಸ್ ಅಧಿಕಾರಿಯಾಗಿದ್ದರು. ರಾಜಬೀರ್ ಸಿಂಗ್ ದೆಹಲಿ ಭೂಗತಲೋಕದ ಬಗ್ಗೆ ಅದ್ಭುತ ಮಾಹಿತಿ ಮತ್ತು ಹಿಡಿತ ಹೊಂದಿದ್ದರು. ಆದರೆ ಈ ಕಾರ್ಯಾಚರಣೆ ತುಂಬಾ ಮಹತ್ವದ್ದಾಗಿತ್ತು ಮತ್ತು ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕಾಗಿತ್ತು. ಹಾಗಾಗಿ ದೆಹಲಿ ಪೊಲೀಸರನ್ನು ಸಂಪರ್ಕಿಸಿ ಸಹಕಾರ ಕೋರುವ ಆಲೋಚನೆಯನ್ನು ಕೈಬಿಟ್ಟೆ. ನಂತರ ತಿಳಿದಿದ್ದೇನೆಂದರೆ ದೆಹಲಿಯಲ್ಲಿ ವಿಕ್ಕಿ ಮಲ್ಹೋತ್ರಾ ಮತ್ತು ಫರೀದ್ ತನಾಶಾ ಬಹುಶಃ ರಾಜಬೀರ್ ಸಿಂಗರ ಮಾಹಿತಿದಾರರಾಗಿ (informants) ಕೆಲಸ ಮಾಡುತ್ತಿದ್ದರು. ಹಾಗೆ ಸಹಕರಿಸದ ಹೊರತೂ ಅವರಿಗೆ ದೆಹಲಿಯಲ್ಲಿದ್ದುಕೊಂಡು ತಮ್ಮ ಪಾತಕವೃತ್ತಿಯನ್ನು ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಭೂಗತಲೋಕದ ಪಾತಕಿಗಳು ಕೆಲಸ ಮಾಡುವುದೇ ಹಾಗೆ. ಒಂದು ಸಂಸ್ಥೆಗೆ ಮಾಹಿತಿದಾರರಾಗಿ ಕೆಲಸ ಮಾಡುತ್ತಾ, ಅವರಿಗೆ ಬೇಕಾದ ಮಾಹಿತಿ ಕೊಡುತ್ತಾ, ಅವರು ಹೇಳಿದ ಕೆಲಸಗಳನ್ನು ಮಾಡಿಕೊಡುತ್ತಾ, ಅವರಿಂದ ಒಂದು ತರಹದ ಛತ್ರಛಾಯೆಯನ್ನು (protection) ಪಡೆದುಕೊಂಡು, ಬೇರೆ ಕಡೆ ಹಾವಳಿ ಮಾಡುವುದು.
ಕೊನೆಯಲ್ಲಿ ವಿಕ್ಕಿ ಮಲ್ಹೋತ್ರಾನಿಗೆ ಬೆದರಿಕೆ ಹಾಕಿ ಸುಲಿಗೆ ಮಾಡಿದ ಕೇಸಿನಲ್ಲಿ ಶಿಕ್ಷೆಯಾಯಿತು. ಫರೀದ್ ತನಾಶಾ ಜಾಮೀನಿನ ಮೇಲೆ ಹೊರಗಿದ್ದ. ಒಂದು ದಿನ ಮುಂಬೈನ ಅವನ ಮನೆಯ ಬೆಡ್ರೂಮಿನಲ್ಲಿದ್ದ. ಅಲ್ಲಿಗೆ ಬಂದ ಭೂಗತಲೋಕದ ಹಂತಕರು ಗುಂಡಿನ ಸುರಿಮಳೆಗೈದು ಅವನನ್ನು ಕೊಂದು ಹಾಕಿದರು.
ಕಾರ್ಯಾಚರಣೆಯ ಸಮಯದಲ್ಲಿ ನಮ್ಮ ಡಿಸಿಪಿಯವರು ವಿಮಾನವನ್ನು ತಪ್ಪಿಸಿಕೊಂಡಿದ್ದರಿಂದ ವೇದ್ಯವಾಗಿದ್ದೇನೆಂದರೆ ಕ್ರೈಂ ಬ್ರಾಂಚಿನ ನಿರ್ವಹಣೆಗೆ ಇನ್ನೊಬ್ಬ ಡಿಸಿಪಿ ಬೇಕು. ಒಬ್ಬರಿಗೇ ಕೆಲಸ ಜಾಸ್ತಿಯಾಗುತ್ತದೆ. ಹಾಗಾಗಿ ಮತ್ತೊಂದು ಡಿಸಿಪಿ ಹುದ್ದೆಯನ್ನು ಸೃಷ್ಟಿಸಲಾಯಿತು.
ಇನ್ಸಪೆಕ್ಟರ್ ಪಾಟೀಲ್ ಎಸಿಪಿ ಹುದ್ದೆಗೆ ಬಡ್ತಿ ಪಡೆದರು. ಈಗ ನಿವೃತ್ತರಾಗಿದ್ದಾರೆ. ತಮ್ಮ ಹಳ್ಳಿಯಲ್ಲಿ ಕೃಷಿ ಮಾಡಿಕೊಂಡು ಖುಷಿಯಾಗಿದ್ದಾರೆ.
ಅಂದ ಹಾಗೆ ಆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ನಿವೃತ್ತ ಐಬಿ ಡೈರೆಕ್ಟರ್ - ಅಜಿತ್ ದೋವಾಲ್. ಅವರು ಮುಂದೆ ೨೦೧೪ ರಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂದು ನಿಯೋಜಿಸಲ್ಪಟ್ಟರು.
ಸತ್ಯ ಯಾವಾಗಲೂ ವಿಚಿತ್ರವಾಗಿರುತ್ತದೆ. ಕಲ್ಪನೆಗಿಂತಲೂ ಸತ್ಯ ವಿಚಿತ್ರವಾಗಿರುತ್ತದೆ ಎಂದು ಲಾರ್ಡ್ ಬೈರನ್ ಸುಮ್ಮನೇ ಹೇಳಿಲ್ಲ ತಾನೇ!?
***
ಭಾರತದ ಇಂದಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ತುಂಬಾ ಪ್ರಸಿದ್ಧ ಬೇಹುಗಾರ. ಅವರ ವೃತ್ತಿಜೀವನದ 'ದಂತಕಥೆಗಳು' (legends) ಅವರಿಗಿಂತ ಖ್ಯಾತವಾಗಿದ್ದವು. His reputation preceded him. ೨೦೧೪ ರಲ್ಲಿ ಮೋದಿ ಮೊದಲ ಬಾರಿಗೆ ಗೆದ್ದು ಬಂದಾಗ ಎಲ್ಲಕ್ಕಿಂತ ಎದ್ದು ಕಂಡಿದ್ದು ಅಜಿತ್ ದೋವಲ್ ಅವರ ನೇಮಕಾತಿ. ಹತ್ತು ವರ್ಷಗಳ ಹಿಂದೆಯೇ ಅವರ ಬಗ್ಗೆ ಆಗಲೇ ಸಂಗ್ರಹಿಸಿದ್ದ ಮಾಹಿತಿ ಆಧಾರದ ಮೇಲೆ 'ಅಜಿತ್ ಕುಮಾರ್ ದೋವಲ್' ಎಂಬ ಖತರ್ನಾಕ್ ಮಾಜಿ ಗೂಢಚಾರ ಈಗ ಹೊಸ 'ರಾಷ್ಟ್ರೀಯ ಭದ್ರತಾ ಸಲಹೆಗಾರ' ಎಂಬ ಬ್ಲಾಗ್ ಲೇಖನ ಬರೆದಿದ್ದೆ.
ಆ ಲೇಖನದಲ್ಲಿ ಈ ವಿಕ್ಕಿ ಮಲ್ಹೋತ್ರಾ ಘಟನೆ ಬಗ್ಗೆ ಕೂಡ ಬರೆದಿದ್ದೆ. ಆಗಲೇ ಅದೆಲ್ಲ ವಿಷಯ ಸಾರ್ವಜನಿಕವಾಗಿ ಲಭ್ಯವಿತ್ತು. ವಿಕ್ಕಿ ಮಲ್ಹೋತ್ರಾ ಮತ್ತು ಇತರೆ ಛೋಟಾ ರಾಜನ್ ಬಂಟರನ್ನು ಉಪಯೋಗಿಸಿಕೊಂಡು ದಾವೂದ್ ಇಬ್ರಾಹಿಂನನ್ನು ಹತ್ಯೆ ಮಾಡುವ ಯೋಜನೆಯನ್ನು ಮುಂಬೈ ಪೊಲೀಸರು ಉದ್ದೇಶಪೂರ್ವಕವಾಗಿ ಹಾಳುಗೆಡವಿದರೇ ಎನ್ನುವ ಪಿಸುಮಾತು ಕೂಡ ಅಂತರ್ಜಾಲದಲ್ಲಿ ಕಂಡಿತ್ತು. ಆದರೆ ಆಗಿನ್ನೂ ಯಾರೂ ಅಧಿಕೃತವಾಗಿ ಹೇಳಿರಲಿಲ್ಲ.
ಆರ್ ಕೆ ಸಿಂಗ್ ಮೊದಲು ಗೃಹ ಕಾರ್ಯದರ್ಶಿಯಾಗಿದ್ದರು. ಅವರು ನಿವೃತ್ತಿ ಬಳಿಕ ರಾಜಕೀಯಕ್ಕೆ ಬಂದರು. ಬಿಜೆಪಿ ಸೇರಿ ಮಂತ್ರಿಯೂ ಆದರು. ಅವರು ಈ ಘಟನೆಯ ಬಗ್ಗೆ ಪ್ರಸ್ತಾಪಿಸುತ್ತಾ, ಮುಂಬೈ ಪೊಲೀಸರು ದಾವೂದನ ಋಣದಲ್ಲಿದ್ದರು. ಹಾಗಾಗಿ ವಿಕ್ಕಿ ಮಲ್ಹೋತ್ರಾ ಮತ್ತಿತರರನ್ನು ಬಂಧಿಸಿ, ದಾವೂದ್ ಹತ್ಯೆಯ ಪ್ರಯತ್ನವನ್ನು ವಿಫಲಗೊಳಿಸಿದ್ದರು, ಎಂದು ಹೇಳಿದ್ದು ದೊಡ್ಡ ಸಂಚಲನ ಮೂಡಿಸಿತ್ತು.
"Former Home Secretary RK Singh alleges that Mumbai police officials deliberately sabotaged Operation Dawood because of their close ties with the underworld gangster."
ಆ ಸಮಯದಲ್ಲಿ ಮುಂಬೈನ ಕ್ರೈಂ ಬ್ರಾಂಚಿನ ಮುಖ್ಯಸ್ಥ ಯಾರಾಗಿದ್ದರು ಎಂದು ಹುಡುಕಿದರೆ ಸಿಕ್ಕ ಹೆಸರು ಈ ಮೇಡಂ ಅವರದ್ದೇ. ಶ್ರೀಮತಿ ಮೀರನ್ ಛಡ್ಡಾ ಬೋರ್ವನಕರ್. ಶುದ್ಧಹಸ್ತದ ಕಟ್ಟುನಿಟ್ಟಿನ ನಿಷ್ಠಾವಂತ ಅಧಿಕಾರಿ ಎಂದು ಹೆಸರು ಮಾಡಿದ್ದ ಅವರ ಆಡಳಿತ ಕಾಲದಲ್ಲಿ ಈ ವಿವಾದಾತ್ಮಕ ಕಾರ್ಯಾಚರಣೆಯಾಗಿತ್ತೇ ಎಂದು ಆಶ್ಚರ್ಯವಾಗಿತ್ತು. ಆಗ ಮೇಡಂ ಏನು ಪ್ರತಿಕ್ರಿಯೆ ಕೊಟ್ಟರು ಎಂದು ಹುಡುಕಿದರೆ ಏನೂ ಸಿಕ್ಕಿರಲಿಲ್ಲ. ಪ್ರತಿಕ್ರಿಯೆಯನ್ನು ಅವರ ಪುಸ್ತಕದಲ್ಲಿ ಈಗ ಕೊಟ್ಟಿದ್ದಾರೆ. ಪುಸ್ತಕದ ಬಿಡುಗಡೆಯ ನಂತರ ಪುಸ್ತಕದ ಪ್ರಚಾರಕ್ಕಾಗಿ ಆಯೋಜಿಸಿದ್ದ ಸಂವಾದ ಗೋಷ್ಠಿಗಳಲ್ಲಿಈ ಘಟನೆಯ ಬಗ್ಗೆ ಮತ್ತಿಷ್ಟು ಮಾತಾಡಿದ್ದಾರೆ ಪೊಲೀಸ್ ಮೇಡಂ. ಯೂಟ್ಯೂಬ್ ಮೇಲೆ ಹುಡುಕಿದರೆ ನಿಮಗೆ ಸಿಗುತ್ತವೆ.
ಮುಂಬೈ ಪೋಲೀಸ್ ಇಲಾಖೆಯ ಒಂದು ದೊಡ್ಡ ಬಣ ದಾವೂದನಿಗಾಗಿ ಕೆಲಸ ಮಾಡುತ್ತಿದ್ದುದು ಏನೂ ರಹಸ್ಯವಾಗಿರಲಿಲ್ಲ. ಅನಾದಿ ಕಾಲದಿಂದಲೂ ಅದು ನಡೆದುಕೊಂಡೇ ಬಂದಿದೆ. ಖುದ್ದು ಪೊಲೀಸ್ ಪೇದೆಯ ಮಗನಾದ ದಾವೂದ್ ಎಲ್ಲ ರಂಗಗಳ ಪ್ರಮುಖರ ಜೊತೆ ಸಂಬಂಧಗಳನ್ನು ತುಂಬಾ ಚೆನ್ನಾಗಿ ಬೆಳೆಸಿಕೊಂಡು, ಕಾಪಾಡಿಕೊಂಡು ಬಂದಿದ್ದಾನೆ.
ದಾವೂದನನ್ನು ಇವತ್ತಿಗೂ ಜೀವಂತವಾಗಿ ಇಟ್ಟಿರುವುದೇ ಅವನು ದೇಶ, ವಿದೇಶಗಳ ಬೇಹುಗಾರಿಕೆ ಸಂಸ್ಥೆಗಳ ಜೊತೆ ಹೊಂದಿರುವ ತುಂಬಾ ಚೆನ್ನಾಗಿರುವ ಮತ್ತು ಪರಸ್ಪರರಿಗೆ ಸಹಕಾರಿಯಾಗಿರುವ (mutually beneficial) ಸಂಬಂಧಗಳು. ೧೯೮೦ ರ ದಶಕದಲ್ಲೇ ಸಿಐಎ ದಾವೂದ್ ಇಬ್ರಾಹಿಂನನ್ನು 'ಉಪಯುಕ್ತ ವ್ಯಕ್ತಿ' ಎಂದು ತನ್ನ ಛತ್ರಛಾಯೆಯಡಿ ಎಳೆದುಕೊಂಡಿತ್ತು ಎಂದು ಲ್ಯಾರಿ ಕೋಲ್ಬ್ ಎಂಬ ಸಿಐಎ ಮಾಜಿ ಬೇಹುಗಾರ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. (ಅದನ್ನು ಆಧಾರಿಸಿ ಹಿಂದೊಮ್ಮೆ ಬರೆದ ಲೇಖನ - ದಾವೂದ್ ಇಬ್ರಾಹಿಂ ಬರೆದುಕೊಟ್ಟಿದ್ದ ಮಿಲಿಯನ್ ಡಾಲರ್ ಚೆಕ್!)
ಹೀಗಾಗಿ ಮುಂಬೈ ಪೊಲೀಸರ ಒಂದು ಬಣ ಮೇಲಧಿಕಾರಿಗಳಿಗೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ, ನೇರವಾಗಿಯೋ ಅಥವಾ ಪರೋಕ್ಷವಾಗಿಯೋ ದಾವೂದನಿಗೆ ಸಹಾಯ ಮಾಡಿರಬಹುದು. ಅಂತಹ ಸಾಧ್ಯತೆಗಳು ಅನೇಕ. ದಾವೂದನಿಗೆ ಮುಂಬೈ ಪೊಲೀಸರಲ್ಲಿ ಒಂದೇ ಅಲ್ಲ ಎಲ್ಲ ಕಡೆ ವ್ಯಾಪಕವಾದ ಮತ್ತು ಆಳವಾದ ಸಂಪರ್ಕಗಳು ಇವೆ. ೧೯೯೩ ರ ಬಾಂಬ್ ಸ್ಪೋಟದ ನಂತರ, ದೇಶ ತೊರೆಯಲು, ದಾವೂದ್ ಕುಟುಂಬಕ್ಕೆ ತುರ್ತಾಗಿ ಪಾಸ್ಪೋರ್ಟ್ ಮಾಡಿಸಿಕೊಡಲು ಅಂದಿನ ಕೇಂದ್ರ ಸರ್ಕಾರದ ಮಂತ್ರಿಗಳು, ಅಧಿಕಾರಿಗಳು ಸಹಾಯ ಮಾಡಿದ್ದರು. ಕಲ್ಪನಾಥ್ ರಾಯ್ ಎಂಬ ಮಾಜಿ ಕೇಂದ್ರ ಮಂತ್ರಿ ದಾವೂದ್ ಬಣಕ್ಕೆ ಸೇರಿದ ಹಂತಕರಿಗೆ ಆಶ್ರಯ ಕೊಟ್ಟಿದ್ದಕ್ಕೆ ಶಿಕ್ಷೆಗೆ ಗುರಿಯಾಗಿದ್ದರು. ಹಾಗಾಗಿ ಯಾವ ಮೂಲಗಳಿಂದ ಮಾಜಿ ಐಬಿ ಡೈರೆಕ್ಟರ್ ಛೋಟಾ ರಾಜನ್ ಬಂಟರನ್ನು ಉಪಯೋಗಿಸಿಕೊಂಡು ಮಾಡುತ್ತಿದ್ದರು ಎಂದು ಹೇಳಲಾದ ಕಾರ್ಯಾಚರಣೆಯ ರಹಸ್ಯ ಬಯಲಾಯಿತು ಎಂದು ಹೇಳಲು ಸಾಧ್ಯವಿಲ್ಲ.
ಅಸ್ಲಮ್ ಮೊಮಿನ್, ಮಿಲನ್ ಕೋಯಲ್ ಎಂಬ ಮುಂಬೈ ಪೊಲೀಸ್ ಇಲಾಖೆಯ ಇಬ್ಬರು ಅಧಿಕಾರಿಗಳು ದಾವೂದ್ ಬಣದ ಜೊತೆ ನೇರ ಸಂಪರ್ಕ ಹೊಂದಿದ್ದಾರೆ ಎಂದು ನೌಕರಿಯಿಂದ ಡಿಸ್ಮಿಸ್ ಮಾಡಲಾಗಿತ್ತು. ಅಂತವರನ್ನು ಬಿಟ್ಟು ಇನ್ನೆಷ್ಟು ಜನರು ಶಾಮೀಲಾಗಿದ್ದರೋ ದೇವರಿಗೇ ಗೊತ್ತು. (ಕು)ಖ್ಯಾತ ಎನ್ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ಕೂಡ ಇದೇ ಕಾರಣಕ್ಕೆ ಡಿಸ್ಮಿಸ್ ಆಗಿದ್ದರು. ಮುಂದೆ ಅವರು ಮಹಾರಾಷ್ಟ್ರ ಆಡಳಿತ ಟ್ರಿಬ್ಯೂನಲ್ಲಿಗೆ ಹೋಗಿ ನೌಕರಿ ವಾಪಸ್ ಪಡೆದುಕೊಂಡು ಬಂದರು. ಆ ಮಾತು ಬೇರೆ.
ಮುಂಬೈನ ಕರಾಳ ರೂಪದ ಬಗ್ಗೆ 'ಮ್ಯಾಕ್ಸಿಮಮ್ ಸಿಟಿ' ಎನ್ನುವ ಅದ್ಭುತ ಪುಸ್ತಕ ಬರೆದಿರುವ ಸುಕೇತು ಮೆಹತಾ ತಮಗೆ ಖುದ್ದಾಗಿ ಗೊತ್ತಿರುವ ಒಂದು ಘಟನೆಯ ಬಗ್ಗೆ ಬರೆಯುತ್ತಾರೆ. ಕ್ರೈಂ ಬ್ರಾಂಚಿನ ಪೊಲೀಸರು ಛೋಟಾ ಶಕೀಲನ ಬಂಟನೊಬ್ಬನನ್ನು ಎತ್ತಾಕಿಕೊಳ್ಳುತ್ತಾರೆ. ಎನ್ಕೌಂಟರ್ ಮಾಡಿ ಎಸೆಯೋಣ ಎಂದುಕೊಳ್ಳುತ್ತಾರೆ. ಆದರೂ ಇರಲಿ ಎಂದು ಸೀದಾ ಛೋಟಾ ಶಕೀಲನಿಗೇ ಫೋನ್ ಮಾಡುತ್ತಾರೆ. ನಿನ್ನ ಬಂಟನ ಜೀವಕ್ಕೆ ಬೆಲೆ ಕಟ್ಟುತ್ತೀಯಾ ಎಂದು ವ್ಯವಹಾರಕ್ಕೆ ಇಳಿಯುತ್ತಾರೆ. ಛೋಟಾ ಶಕೀಲ್ ಅದೆಷ್ಟೋ ಲಕ್ಷ ರೂಪಾಯಿಗಳನ್ನು ಎಸೆದು ನಕಲಿ ಎನ್ಕೌಂಟರಿಗೆ ಬಲಿಯಾಗಲಿದ್ದ ತನ್ನ ಬಂಟನನ್ನು ಉಳಿಸಿಕೊಳ್ಳುತ್ತಾನೆ. ಹೇಗಿದೆ ವ್ಯವಹಾರ!?
ಪೊಲೀಸರನ್ನು ಕೇಳಿದರೆ, ಭೂಗತಲೋಕದ ಬಗೆಗಿನ ಮಾಹಿತಿಗಳು ಭೂಗತಲೋಕದವರಿಂದಲೇ ಬರುತ್ತವೆ. ಹಾಗಾಗಿ ಅವರ ಸಂಪರ್ಕದಲ್ಲಿರಬೇಕಾಗುತ್ತದೆ. ಇದೆಲ್ಲ ಮೇಲಧಿಕಾರಿಗಳಿಗೂ ಗೊತ್ತಿರುತ್ತದೆ. ನಮ್ಮ ಮೇಲೆ ಸೇಡು ತೀರಿಸಿಕೊಳ್ಳಲು, ಮೇಲಧಿಕಾರಿಗಳು ಬದಲಾದಾಗ ಅಥವಾ ನಮ್ಮ ಉಪಯುಕ್ತತೆ ಮುಗಿದಾಗ ನಮ್ಮನ್ನು ತಿಂದು ಮುಗಿಸಿದ ಹಣ್ಣಿನ ಸಿಪ್ಪೆಯ ಹಾಗೆ ಎಸೆಯುತ್ತಾರೆ. ಡಿಸ್ಮಿಸ್, ಸಸ್ಪೆಂಡ್ ಮಾಡುತ್ತಾರೆ ಎಂದು ಅವರ ಗೋಳು.ಒಟ್ಟಿನಲ್ಲಿ ಪೊಲೀಸರಿಗೆ ಭೂಗತಲೋಕದೊಂದಿಗೆ ವಿವಿಧ ರೀತಿಯ ಗಳಸ್ಯ ಕಂಠಸ್ಯ ಸಂಬಂಧ ಇರುವುದು ಮಾತ್ರ ಸತ್ಯ. ಕೆಲವರು ಅದನ್ನು ಸ್ವಾಮಿ ಕಾರ್ಯಕ್ಕೆ ಮಾತ್ರ ಬಳಸಿಕೊಂಡರೆ ಕೆಲವರು ಅದನ್ನು ಕೇವಲ ಸ್ವಕಾರ್ಯಗಳಿಗೂ ಬಳಸಿಕೊಳ್ಳುತ್ತಾರೆ.
ಸಂಜಯ್ ಶಿಂಧೆ ಎಂಬ ಕುಖ್ಯಾತ ಇನ್ಸಪೆಕ್ಟರ್ ಒಬ್ಬರು ದುಬೈನಲ್ಲಿದ್ದ ಭೂಗತ ಪಾತಕಿ ಅಬು ಸಲೇಮ್ ಪರವಾಗಿ ಖುದ್ದು ಅಪಹರಣದ ಸಮನ್ವಯಕಾರ (kidnap coordinator) ಆಗಿ ನಿಂತಿದ್ದರು. ಆಗ ಅಮಾನತ್ತಾಗಿದ್ದರೂ ಪಾಠ ಕಲಿಯದೇ ಮುಂದೆ ಮತ್ತೊಬ್ಬ ಪಾತಕಿ ವಿಜಯ ಪಾಲಿಂಡೆಗೆ ಪೊಲೀಸ್ ಕಸ್ಟಡಿಯಿಂದ ಪಾರಾಗಿ ಹೋಗಲು ನೆರವಾಗಿದ್ದರು. ಹೀಗೆ ಖಾಕಿಯೊಳಗಿರಬಹುದಾದ ಖದೀಮರು ಅನೇಕರು.
ಹಾಗಾಗಿ ಮಾಜಿ ಐಬಿ ಡೈರೆಕ್ಟರ್ ರೂಪಿಸುತ್ತಿದ್ದ ರಹಸ್ಯ ಕಾರ್ಯಾಚರಣೆ ವಿಫಲವಾಗಿದ್ದು ಕಾಕತಾಳೀಯವಂತೂ ಆಗಿರಲಿಕ್ಕಿಲ್ಲ. ಆದರೆ ಗಟ್ಟಿ ಸಾಕ್ಷ್ಯ ಸಿಗದ ಹೊರತೂ ಅದನ್ನು ಮುಂಬೈ ಪೋಲೀಸರ ತಲೆಗೆ ಕಟ್ಟುವಂತೆಯೂ ಇಲ್ಲ.
***
ಶ್ರೀಮತಿ ಮೀರನ್ ಛಡ್ಡಾ ಬೋರ್ವನಕರ್ ಒಬ್ಬ ಅದ್ಭುತ ಪೊಲೀಸ್ ಅಧಿಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ೧೯೮೧ ರ ಬ್ಯಾಚಿನ ಏಕೈಕ ಮಹಿಳಾ ಐಪಿಎಸ್ ಅಧಿಕಾರಿ. ಭಾರತದ ಸ್ಕಾಟ್ಲೆಂಡ್ ಯಾರ್ಡ್ ಎಂದೇ ಬಣ್ಣಿಸಲ್ಪಡುವ ಮುಂಬೈ ಕ್ರೈಮ್ ಬ್ರಾಂಚಿನ ಪ್ರಪ್ರಥಮ ಮಹಿಳಾ ಮುಖ್ಯಸ್ಥೆ. ೨೬/೧೧ ಮುಂಬೈ ದಾಳಿಯಲ್ಲಿ ಸಿಕ್ಕಿ ಬಿದ್ದಿದ್ದ ಪಾಕಿಸ್ತಾನಿ ಉಗ್ರ ಕಸಬ್ ನನ್ನು ಗಲ್ಲಿಗೆ ಹಾಕಿದ ಜೈಲಿನ ಉಸ್ತುವಾರಿ ಅಧಿಕಾರಿ ಕೂಡ.
ತುಂಬಾ ಕಷ್ಟದ ವೇಳೆಯಲ್ಲಿ ಮುಂಬೈ ಕ್ರೈಂ ಬ್ರಾಂಚಿನ ಉಸ್ತುವಾರಿ ವಹಿಸಿಕೊಂಡರು. ೨೦೦೩ ರಲ್ಲಿ ಮುಂಬೈ ಪೊಲೀಸ್ ಇಲಾಖೆಯ ಮಾನ ಮೂರಾಬಟ್ಟೆಯಾಗಿತ್ತು. ಅಬ್ದುಲ್ ಕರೀಂ ತೆಲಗಿ ಎಂಬಾತ ಅನೇಕ ಹಿರಿಯ ಅಧಿಕಾರಿಗಳ ಸಮವಸ್ತ್ರ ಕಳಚಿ ಪೂರ್ತಿ ಪೊಲೀಸ ವ್ಯವಸ್ಥೆಯನ್ನೇ ನಗ್ನಗೊಳಿಸಿ ಎಲ್ಲರೂ ನಗುವಂತೆ ಮಾಡಿದ್ದ. ೨೦೦೩ ರಲ್ಲಿ ಮುಂಬೈನ ಪೊಲೀಸ್ ಕಮಿಷನರ್ ರಂಜಿತ್ ಶರ್ಮಾ, ಕ್ರೈಂ ಬ್ರಾಂಚಿನ ಚೀಫ್ ಶ್ರೀಧರ್ ವಾಗಲ್, ಎನ್ಕೌಂಟರ್ ಸ್ಪೆಷಲಿಸ್ಟುಗಳ ರಾಜ ಪ್ರದೀಪ್ ಸಾವಂತ, ಮತ್ತೂ ಅನೇಕ ಅಧಿಕಾರಿಗಳು ನಕಲಿ ಛಾಪಾ ಕಾಗದ ಹಗರಣದಲ್ಲಿ ಕೇವಲ ನೌಕರಿಯಿಂದ ಸಸ್ಪೆಂಡ್ ಆಗಿದ್ದೊಂದೇ ಅಲ್ಲ ಜೈಲಿಗೆ ಸಹ ಕಳಿಸಲ್ಪಟ್ಟಿದ್ದರು. ನಂತರ, ನಿರೀಕ್ಷಿಸಿದಂತೆ, ಯಾರ ಮೇಲೂ ಆರೋಪ ಸಾಬೀತಾಗಲಿಲ್ಲ. ಆ ಮಾತು ಬೇರೆ. ಆದರೆ ಮುಂಬೈ ಪೊಲೀಸ್ ವ್ಯವಸ್ಥೆಯ ಪ್ರತಿಷ್ಠೆ ಮಾತ್ರ ಆಗ ಪಾತಾಳಕ್ಕೆ ಕುಸಿದಿದ್ದು ಮುಂದೆಂದೂ ವಾಪಸ್ ಬರಲೇ ಇಲ್ಲ.
ಅಂತಹ ಕಠಿಣ ಪರಿಸ್ಥಿತಿಯಲ್ಲಿ, ಹೊಸದಾಗಿ ಅಧಿಕಾರ ವಹಿಸಿಕೊಂಡಿದ್ದ ಗೃಹಮಂತ್ರಿ ಆರ್ ಆರ್ ಪಾಟೀಲರು ಖುದ್ದಾಗಿ, ಅನೇಕ ವಿರೋಧಗಳ ನಡುವೆಯೂ, ಶ್ರೀಮತಿ ಮೀರನ್ ಅವರನ್ನು ಕ್ರೈಂ ಬ್ರಾಂಚ್ ಮುಖ್ಯಸ್ಥೆ ಎನ್ನುವ ಅತಿ ಮುಖ್ಯ ಹುದ್ದೆಗೆ ನೇಮಕ ಮಾಡಿದ್ದರು. ಮಂತ್ರಿ ಪಾಟೀಲರ ಪ್ರಕಾರ ಆ ಸಮಯದಲ್ಲಿ ಕ್ರೈಂ ಬ್ರಾಂಚ್ ಸಂಬಾಳಿಸಲು ಒಬ್ಬ ತಣ್ಣನೆಯ ಮನಸ್ಥಿತಿಯ, ತೀಕ್ಷ್ಣ ಬುದ್ಧಿಯ, ನೇರ, ಖಡಕ್, ಪ್ರಚಾರಪ್ರಿಯರಲ್ಲದ ಅಧಿಕಾರಿಯ ಜರೂರತ್ತಿತ್ತು. ಮಾತಾಡದೇ ಕೆಲಸ ಮಾಡಿ ತೋರಿಸುವ ಅಧಿಕಾರಿ ಬೇಕಾಗಿತ್ತು. ಅದಕ್ಕೆ ಮೀರನ್ ಅವರಿಗಿಂತ ಒಳ್ಳೆ ಅಧಿಕಾರಿ ಸಿಗುತ್ತಿರಲಿಲ್ಲ ಎಂದರಂತೆ ಪಾಟೀಲ್.
ಹುದ್ದೆಯನ್ನು ಒಪ್ಪಿಕೊಳ್ಳುವ ಮುನ್ನ ಮೀರನ್ ಮೇಡಂ ಹೊಸ ಹುದ್ದೆಯ ಪ್ರಮುಖ ಆದ್ಯತೆಗಳ ಬಗ್ಗೆ ಕೇಳಿದರಂತೆ. 'ತಲೆನೋವಾಗಿರುವ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳನ್ನು ಸಂಬಾಳಿಸು ತಾಯೇ,' ಎಂದು ಉಧೋ ಎನ್ನುತ್ತಾ ಎದ್ದು ಹೋಗಿದ್ದರಂತೆ ಪಾಟೀಲ್. ಕೆಲವು ವರ್ಷಗಳ ಹಿಂದೆ, ನಿಯಂತ್ರಿಸಲು ಸಾಧ್ಯವೇ ಇಲ್ಲದ ಪರಿಸ್ಥಿತಿ ತಲುಪಿದ್ದ ಭೂಗತಜಗತ್ತನ್ನು ಮಟ್ಟ ಹಾಕಲು ಎನ್ಕೌಂಟರ್ ಒಂದೇ ಮಾರ್ಗ ಎಂದು, ಸರಿಯಾಗೇ, ನಿರ್ಧರಿಸಿದ್ದ ಅಂದಿನ ಸರ್ಕಾರ, ಖಡಕ್ ಅಧಿಕಾರಿಗಳಿಗೆ ಕುಖ್ಯಾತ ಪಾತಕಿಗಳ ಎನ್ಕೌಂಟರ್ ಮಾಡಲು ಮೌಖಿಕ ಅನುಮತಿ ನೀಡಿತ್ತು. ೧೯೯೫ ರಿಂದ ಶುರುವಾದ ಎನ್ಕೌಂಟರ್ ಯುಗ ಸುಮಾರು ೨೦೦೫ ರ ವರೆಗೂ ನಡೆಯಿತು. ಈ ಕ್ರಮ ಭೂಗತಲೋಕವನ್ನು ಮಟ್ಟ ಹಾಕಲು ಸಹಕಾರಿಯಾದರೂ ಸರ್ಕಾರ ಮತ್ತು ಪೊಲೀಸ್ ಇಲಾಖೆ ಅನೇಕ ವಿವಾದಗಳಿಗೆ ಒಳಗಾದವು. ಮಾನವ ಹಕ್ಕುಗಳ ಸಂಘಟನೆಗಳು ದೊಡ್ಡ ಮಟ್ಟದ ಪ್ರತಿಭಟನೆ ಮಾಡಿದವು. ಮೊದಮೊದಲು ನಿಯತ್ತಾಗಿ ಎನ್ಕೌಂಟರ್ ಮಾಡಿದ ಅಧಿಕಾರಿಗಳು ತದನಂತರ ವ್ಯವಸ್ಥೆಯನ್ನೇ ಮೀರಿ ಬೆಳೆದುಬಿಟ್ಟರು. ಅವರ ಪರಿವರ್ತನೆಯನ್ನು ಗಮನಿಸಿದ ನಿವೃತ್ತ ಅಧಿಕಾರಿಯೊಬ್ಬರು, 'ರಾಕ್ಷಸ ಸಂಹಾರಕ್ಕೆ ಹೋದವರೇ ರಾಕ್ಷಸರಾಗಿದ್ದು ದೊಡ್ಡ ವಿಪರ್ಯಾಸ ಮತ್ತು ದುರಂತ,' ಎಂದು ರಕ್ಷಕರಿಂದ ಭಕ್ಷಕರಾಗಿ ಪರಿವರ್ತಿತರಾಗಿದ್ದ ಹೆಚ್ಚಿನ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳ ಬಗ್ಗೆ ವಿಷಾದದ ಮಾತಾಡಿದ್ದರು. 'ಸಂಬಾಳಿಸಲು ಅಸಾಧ್ಯವಾದ ಹಂತ ಮುಟ್ಟಿರುವ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳುವುದು. ಆದರೆ ಅವರಿಂದ ಉತ್ತಮ ಕೆಲಸವನ್ನೂ ತೆಗೆಯುವುದು ಮುಖ್ಯ ಆದ್ಯತೆ,' ಎಂದು ಗೃಹ ಸಚಿವ ಪಾಟೀಲ್ ಹೇಳಿದ್ದರು. ಎಲ್ಲ ಎಲ್ಲೆ ಮೀರಿದ್ದ ಎನ್ಕೌಂಟರ್ ಅಧಿಕಾರಿಗಳನ್ನು ಹೇಗೆ ಸಂಬಾಳಿಸಿದೆ ಎನ್ನುವ ಬಗ್ಗೆ ಕೂಡ ಮೀರನ್ ಮೇಡಂ ವಿವರವಾಗಿ ಬರೆದಿದ್ದಾರೆ.
ಸಿಐಡಿ ಅಧಿಕಾರಿಯಾಗಿ ಮೀರನ್ ಮೇಡಂ ತನಿಖೆ ಮಾಡಿದ ಅತಿ ಮುಖ್ಯ ಪ್ರಕರಣ ಜಲಗಾವ್ ಸೆಕ್ಸ್ ಸ್ಕ್ಯಾಂಡಲ್ ಇರಬೇಕು. ೧೯೯೦ ರ ದಶಕದಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ್ದ ಹಗರಣ ಅದು. ಮಹಾರಾಷ್ಟ್ರದ ಜಲಗಾವ್ ಶಹರದಲ್ಲಿ ಕೆಲವು ವಿಕೃತ ಮನಸ್ಥಿತಿಯ ಪುಂಡರು ತಯಾರಾಗಿದ್ದರು. ಅವರಲ್ಲಿ ಕೆಲವರು ಯುವತಿಯರನ್ನು ಚುಡಾಯಿಸುವ ನೆಪದಲ್ಲಿ ಅವರನ್ನು ತಬ್ಬಿಕೊಳ್ಳುವುದು, ಚುಂಬಿಸುವುದು, ಅಲ್ಲಿಲ್ಲಿ ಕೈಬಿಡುವುದು ಇತ್ಯಾದಿ ಮಾಡುತ್ತಿದ್ದರು. ಜೊತೆಗೇ ಮತ್ತೊಂದು ಖತರ್ನಾಕ್ ಕೆಲಸ ಏನು ಮಾಡುತ್ತಿದ್ದರು ಅಂದರೆ ಫೋಟೋಗ್ರಾಫರ್ ಒಬ್ಬ ಆ ದುಷ್ಕೃತ್ಯಗಳ ಫೋಟೋ ತೆಗೆದುಬಿಡುತ್ತಿದ್ದ. ಆ ಫೋಟೋಗಳನ್ನು ತೋರಿಸಿ, ಯುವತಿಯರನ್ನು ಬ್ಲಾಕಮೇಲ್ ಮಾಡಿ, ಬಲವಂತದ ಲೈಂಗಿಕ ಸಂಬಂಧಗಳಿಗೆ ಉಪಯೋಗಿಸಿಕೊಳ್ಳಲಾಗುತ್ತಿತ್ತು. ಕೆಲವು ಸ್ಥಳೀಯ ರಾಜಕೀಯ ಪುಢಾರಿಗಳು ಇದನ್ನೇ ದಂಧೆ ಮಾಡಿಕೊಂಡು ದೊಡ್ಡ ರಾಜಕಾರಣಿಗಳಿಗೆ ಅನೇಕ ಯುವತಿಯರನ್ನು ಆಹುತಿ ಕೊಟ್ಟರು. ಸುದ್ದಿ ಹೊರಗೆ ಬಂದಾಗ ದೇಶದ ಅತಿ ದೊಡ್ಡ ಲೈಂಗಿಕ ಹಗರಣವಾಗಿ ಇದು ಹೊರಹೊಮ್ಮಿತು. ಈ ಪ್ರಕರಣದ ಸಂಪೂರ್ಣ ತನಿಖೆ ಮಾಡಿ, ಸಾಕ್ಷ್ಯ ಹೇಳಲು ಹಿಂದೇಟು ಹಾಕುತ್ತಿದ್ದ ಯುವತಿಯರಿಗೆ ಮತ್ತು ಕುಟುಂಬಗಳಿಗೆ ಧೈರ್ಯ ತುಂಬಿ, ಕೆಳಗಿನ ನ್ಯಾಯಾಲಯದಲ್ಲಾದರೂ ಕಠಿಣ ಶಿಕ್ಷೆಯಾಗುವಂತೆ ಮಾಡಿದ್ದು ಮೀರನ್ ಮೇಡಂ. ಮುಂದೆ ಹೈಕೋರ್ಟಿನಲ್ಲಿ ತಾಂತ್ರಿಕ ಕಾರಣಗಳಿಂದ ಕೆಲವರು ಖುಲಾಸೆಯಾದರು ಮತ್ತು ಕೆಲವರ ಶಿಕ್ಷೆ ಕಮ್ಮಿಯಾಯಿತು.
ಮುಂಬೈ ಕ್ರೈಂ ಬ್ರಾಂಚಿನ ಮುಖ್ಯಸ್ಥೆಯಾದಾಗ ಅವರಿಗೆ ಸುತ್ತಿಕೊಂಡ ಮತ್ತೊಂದು ವಿವಾದವೆಂದರೆ ಮುಂಬೈನಲ್ಲಿ ತನ್ನದೇ ಹವಾ ಮಡಗಿದ್ದ ದಾವೂದ್ ಇಬ್ರಾಹಿಂನ ಸಹೋದರಿ ಹಸೀನಾ ಪಾರ್ಕರ್ ವಿರುದ್ಧ ಪೊಲೀಸರು ಮೃದು ಧೋರಣೆ ತೋರಿದ್ದಾರೆ ಮತ್ತು ಅವಳಿಗೆ ಅವಳ ಕಪ್ಪು ಕಾರ್ನಾಮೆಗಳನ್ನು ಮುಂದುವರೆಸಿಕೊಂಡು ಹೋಗಲು ಬಿಟ್ಟಿದ್ದಾರೆ. ಇಬ್ಬರು ವರದಿಗಾರರು ಇದನ್ನು ಮುಖಪುಟದಲ್ಲಿ ಹೆಚ್ಚಿನ ಮಸಾಲೆ ಹಾಕಿ ಬರೆದುಬಿಟ್ಟರು. ಇದನ್ನು ವೈಯಕ್ತಿಕ ಸಂಗ್ರಾಮದಂತೆ ಸ್ವೀಕರಿಸಿದ ಮೀರನ್ ಮೇಡಂ ಸುಪ್ರೀಂ ಕೋರ್ಟ್ ವರೆಗೆ ಹೋಗಿ ಆ ಪತ್ರಿಕೆ ಮತ್ತು ವರದಿಗಾರರು ಮುಖಪುಟದಲ್ಲೇ ಕ್ಷಮೆಯಾಚಿಸುವಂತೆ ಮಾಡಿದ್ದು ಅವರ ನಿಯತ್ತಿಗೆ ಮತ್ತು ಪ್ರಾಮಾಣಿಕತೆಗೆ ಸಂದ ವಿಜಯ ಎಂದು ಅವರು ಭಾವಿಸುತ್ತಾರೆ. ಅವರ ಮೇಲಿನ ಅಭಿಮಾನದಿಂದ ಶುಲ್ಕ ಪಡೆಯದೇ ಕೇಸ್ ನಡೆಸಿಕೊಟ್ಟ ಖ್ಯಾತ ನ್ಯಾಯವಾದಿಗಳಿಗೆ ಕೃತಜ್ಞತೆ ಕೂಡ ಅರ್ಪಿಸುತ್ತಾರೆ. ಪತ್ರಿಕೆಯಲ್ಲಿ ಹೀಗೆ ಸುಳ್ಸುದ್ದಿ ಬಂದಿದ್ದರೆ ಇತ್ತಕಡೆ ಹಸೀನಾ ಪಾರ್ಕರ್, ಈ ಖಡಕ್ ಅಧಿಕಾರಿ ಎತ್ತಂಗಡಿ ಆಗಿಹೋದರೆ ಸಾಕು ಅಲ್ಲಾಹ್ ಎಂದು ಮಸೀದಿಯಲ್ಲಿ ವಿಶೇಷ ಪೂಜೆ ಪುನಸ್ಕಾರ ಮಾಡಿಸುತ್ತಿದ್ದಳಂತೆ. ಅದು ಆಕೆಯ ಫೋನ್ ಟ್ಯಾಪ್ ಮಾಡಿದಾಗ ತಿಳಿದುಬಂದ ವಿಷಯವಾಗಿತ್ತು, ಎಂದು ಮೇಡಂ ಬರೆಯುತ್ತಾರೆ. ವಿಪರ್ಯಾಸ ನೋಡಿ.
ಪುಸ್ತಕದಲ್ಲಿ ಬರುವ ಮತ್ತೊಂದು ರೋಚಕ ಆದರೆ ಅಷ್ಟೇ ಮೈಜುಮ್ಮೆನ್ನಿಸುವ ಮತ್ತು ಮನಸ್ಸನ್ನು ಅಸ್ಥಿರಗೊಳಿಸುವ ಘಟನೆ ಎಂದರೆ ಮಾನಸಿಕ ಅಸ್ವಸ್ಥೆಯೊಬ್ಬಳು ಮೇಡಂ ಅವರನ್ನು ಇನ್ನಿಲ್ಲದಂತೆ ಕಾಡಿದ್ದು. ಆಕೆ ಕೇವಲ ಮಾನಸಿಕ ಅಸ್ವಸ್ಥೆ ಅಷ್ಟೇ ಆಗಿದ್ದರೆ ಆ ಮಾತು ಬೇರೆ. ಇವಳು ವಿದ್ಯಾವಂತಳು, ಶ್ರೀಮಂತಳು ಕೂಡ. ಮೀರನ್ ಮೇಡಂ ಅವರ ಒಳ್ಳೆ ಕೆಲಸಗಳ ಅಭಿಮಾನಿಯಾಗಿ ಪರಿಚಿತಳಾದ ಆಕೆ ಮುಂದೊಂದು ದಿನ ಹುಚ್ಚಿಯಂತೆ ಪ್ರೇಮ ಪತ್ರ ಬರೆಯುತ್ತಾ, ಇವರ ಕುಟುಂಬದ ಸದಸ್ಯರಿಗೆ ಕಿರಿಕಿರಿ ಮಾಡುತ್ತಾ ಉಪಟಳ ಕೊಡತೊಡಗಿದಾಗ ಕಾನೂನಿನ ಚೌಕಟ್ಟಿನಲ್ಲೇ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ಕೊಟ್ಟಿದ್ದರು ಮೇಡಂ ಮೀರನ್. ಆ ಹುಚ್ಚಿಯೇನು ಕಡಿಮೆ ಘಾಟಿಯೇ?? ಕೋರ್ಟಿಗೇ ಹೋಗಿ, ಕೆಳಗಿನ ನ್ಯಾಯಾಲಯ ಮೇಡಂ ಮೇಲೆಯೇ ಆಕ್ಷೇಪಣೆ (Stricture) ಎತ್ತುವಂತೆ ಮಾಡಿಬಿಟ್ಟಳು. ಮುಂದೆ ಉನ್ನತ ನ್ಯಾಯಾಲಯಕ್ಕೆ ಹೋಗಿ ಅವಳ ಕಾಟದಿಂದ ಪಾರಾಗಬೇಕಾದರೆ ಎಷ್ಟು ಕಷ್ಟ ಅನುಭವಿಸಬೇಕಾಯಿತು ಎಂದು ವಿವರಿಸಿದ್ದಾರೆ. ಅದೇನೋ ಅನ್ನುತ್ತಾರಲ್ಲ...ನಸೀಬ ಮತ್ತು ವೇಳೆ ಸರಿಯಿಲ್ಲದಾಗ ಎತೆಂತಹ ಕಷ್ಟಗಳು ಬರುತ್ತವೆ ಎಂದು.
ಹೀಗೆ ಅದ್ಭುತವಾಗಿದೆ ಪುಸ್ತಕ. ತಮ್ಮ ವೃತ್ತಿಜೀವನದ ಅನೇಕ ಸವಾಲುಗಳ ಬಗ್ಗೆ ಮತ್ತು ಮಹಿಳಾ ಅಧಿಕಾರಿಯೊಬ್ಬರು ಎದುರಿಸಬೇಕಾದ ಕೆಲವು ವಿಶಿಷ್ಟ ಸವಾಲುಗಳ ಬಗ್ಗೆ ವಿವರಿಸಿದ್ದಾರೆ. ಅವುಗಳನ್ನು ನಿಭಾಯಿಸಿದ ರೀತಿ ಅನುಕರಣೀಯ. ಹೊಸ ಮಹಿಳಾ ಅಧಿಕಾರಿಗಳಿಗೆ ಅತ್ಯುತ್ತಮ ಮಾರ್ಗದರ್ಶಿ.
ಅತ್ಯಂತ ಸರಳ ಭಾಷೆಯಲ್ಲಿ ಬರೆದಿರುವ ಪುಸ್ತಕ. ಅದರಲ್ಲಿರುವ ಸರಳ ಇಂಗ್ಲಿಷ್ ಮುಂದೆ ನಮ್ಮ ಮಾತೃಭಾಷೆಯಲ್ಲಿ ಬರೆಯುವ ಬರಹ ಸಂಕೀರ್ಣವೆನಿಸುತ್ತದೆ. ಪುಸ್ತಕ ಬರೆದರೆ ಹಾಗೆ ಬರೆಯಬೇಕು ಎನ್ನುವಷ್ಟು ಸರಳವಾಗಿದೆ ಮತ್ತು ಓದಿಸಿಕೊಂಡು ಹೋಗುತ್ತದೆ. ಮೀರನ್ ಅವರು ಹಿಂದೆ ಬರೆದ ಒಂದೆರೆಡು ಪುಸ್ತಕಗಳಲ್ಲಿ ಕೂಡ ಅವರ ಸರಳ ಭಾಷಾಶೈಲಿ ಎದ್ದು ಕಂಡಿತ್ತು.
ಪುಸ್ತಕದಲ್ಲಿ ಬರೆಯದ ಒಂದು ವಿಷಯವನ್ನು ಮೇಡಂ ಪುಸ್ತಕ ಪ್ರಚಾರದ ಸಂವಾದ ಗೋಷ್ಠಿಯಲ್ಲಿ ಹೇಳುತ್ತಿದ್ದರು. ಕಾರ್ಯಾಚರಣೆಯ ಸಮಯದಲ್ಲಿ ಅಜಿತ್ ದೋವಾಲರೊಂದಿಗೆ ಆದ ತಪ್ಪು ತಿಳುವಳಿಕೆಯನ್ನು (misunderstanding) ಸರಿಪಡಿಸಿಕೊಳ್ಳೋಣ, ಸಂಬಂಧವನ್ನು ತಿಳಿಗೊಳಿಸಿಕೊಳ್ಳೋಣ ಎಂಬ ಉದ್ದೇಶದಿಂದ ಅವರಲ್ಲಿ ಭೇಟಿಗೆ ಸಮಯ ಕೇಳಿದರೆ ಸಿಗಲೇ ಇಲ್ಲವಂತೆ. ಹೋಗಲಿ ಬಿಡಿ, ಎನ್ನುತ್ತಾ ಮುಗುಳ್ನಗುತ್ತಾರೆ ಮೇಡಂ.
ಎರಡೂ"ವರೆ" ಜನರ ಬಂಧನ ಎಂಬ ಶೀರ್ಷಿಕೆಯನ್ನು ಅಧ್ಯಾಯಕ್ಕೆ ಏಕೆ ಕೊಟ್ಟರು ಎಂದು ನಿಮಗೆ ತಿಳಿಯಿತು ಎಂದುಕೊಳ್ಳುತ್ತೇನೆ.