ಜಾನ್ ಬೆನೆ ರಾಮ್ಸೆ ಕೊಲೆಯಾಗಿ ೨೭ ವರ್ಷವಾಯಿತು. ಇನ್ನೂ ಕೊಲೆಗಾರ ಪತ್ತೆಯಾಗಿಲ್ಲ. ಕೊಲೊರಾಡೊ ರಾಜ್ಯದ ತನ್ನ ಮನೆಯ ನೆಲಮಾಳಿಗೆಯಲ್ಲೇ (basement) ಆಗ ಆರು ವರ್ಷದ ಮಗುವಾಗಿದ್ದ ಜಾನ್ ಬೆನೆಯ ಶವ ಪತ್ತೆಯಾಗಿತ್ತು. ತುಂಬಾ ಸದ್ದು ಮಾಡಿದ, ಇಂದಿಗೂ ಜನರ ಕುತೂಹಲವನ್ನು ಹಿಡಿದಿಟ್ಟುಕೊಂಡಿರುವ ಕೊಲೆ ಪ್ರಕರಣ ಅದು.
ಜಾನ್ ಬೆನೆ ಕೇವಲ ಆರು ವರ್ಷದ ಹೆಣ್ಣುಮಗು. ೧೯೯೬ ರ ಕ್ರಿಸ್ಮಸ್ ಮರುದಿನ ಆಕೆಯ ಮೃತದೇಹ ಆಕೆಯ ಮನೆಯ ನೆಲಮಾಳಿಗೆಯಲ್ಲಿ ಪತ್ತೆಯಾಗಿತ್ತು. ಆಕೆಯನ್ನು ಲೈಂಗಿಕ ದೌರ್ಜನ್ಯಕ್ಕೆ ಗುರಿಪಡಿಸಲಾಗಿತ್ತು. ಹೊಡೆಯಲಾಗಿತ್ತು. ಹಗ್ಗದಿಂದ ಕತ್ತು ಬಿಗಿದು ಕೊಲ್ಲಲಾಗಿತ್ತು. ಆಕೆ ಚಿಕ್ಕಮಕ್ಕಳ ಸೌಂದರ್ಯಸ್ಪರ್ಧೆಗಳಲ್ಲಿ ವಿಜೇತೆಯಾಗಿದ್ದಳು. ಅನೇಕ ತನಿಖೆಗಳು ನಡೆದರೂ (ಇವತ್ತಿಗೂ ನಡೆಯುತ್ತಿದ್ದರೂ), ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಆಕೆಯ ಹಂತಕ ಯಾರಿರಬಹುದು ಎಂಬುದರ ಬಗ್ಗೆ ಅನೇಕ ಊಹಾಪೋಹಗಳು ಇವೆ. ಹೊಸ ಹೊಸ ಸಂದೇಹಗಳು ಮತ್ತು ಶಂಕಿತರು ಚಾಲ್ತಿಗೆ ಬರುತ್ತಿರುತ್ತವೆ. ತಂದೆ, ತಾಯಿ ಮತ್ತು ಸಹೋದರ ಕೂಡ ಈ ಶಂಕೆಗಳಿಂದ ಪಾರಾಗಿಲ್ಲ.
ಜಾನ್ ಬೆನೆ ಕೊಲೆಯಾದ ರಾತ್ರಿ ಮನೆಯಲ್ಲಿ ಇದ್ದವರು ಆಕೆಯ ತಂದೆ ಜಾನ್, ತಾಯಿ ಪ್ಯಾಟ್ರಿಸಿಯಾ ಮತ್ತು ಒಂಬತ್ತು ವರ್ಷದ ಆಕೆಯ ಹಿರಿಯ ಸಹೋದರ ಬರ್ಕ್ ಮಾತ್ರ.
೧೯೯೬, ಡಿಸೆಂಬರ್ ೨೬ ರ ಬೆಳಿಗ್ಗೆ ತಾಯಿ ಪ್ಯಾಟ್ರಿಸಿಯಾಗೆ ಗೀಚಿದ್ದ ಒಂದು ಪತ್ರ ಸಿಕ್ಕಿತ್ತು. ಅವರ ಮನೆಯ ಟೇಬಲ್ ಮೇಲಿದ್ದ ನೋಟ್ ಪ್ಯಾಡಿನ ಹಾಳೆಯೊಂದರ ಮೇಲೆ, ಅಲ್ಲೇ ಇದ್ದ ಕಪ್ಪು ಬಣ್ಣದ ದಪ್ಪ ಅಕ್ಷರ ಬರೆಯುವ ಪೆನ್ನಿನಲ್ಲಿ(black marker) ಗೀಚಿದ ಒಂದು ಹಣದ ಬೇಡಿಕೆಯ ಪತ್ರ ಅದಾಗಿತ್ತು. '೧೧೮, ೦೦೦ ಡಾಲರ್ ಹಣ ಕೊಡಿ. ಹಣ ದೊರೆತ ಕೂಡಲೇ ನಿಮ್ಮ ಮಗಳನ್ನು ಬಿಡುಗಡೆ ಮಾಡಲಾಗುತ್ತದೆ!'
ಕೆಲವೇ ದಿನಗಳ ಹಿಂದೆ ತಂದೆ ಜಾನನಿಗೆ ಕೆಲಸದಲ್ಲಿ ವಾರ್ಷಿಕ ಬೋನಸ್ ದೊರೆತಿತ್ತು. ಆ ಬೋನಸ್ಸಿನ ಮೊತ್ತ ಕೂಡ ಕರಾರುವಕ್ಕಾಗಿ ೧೧೮,೦೦೦ ಡಾಲರೇ ಆಗಿತ್ತು! ಇತ್ತಕಡೆ ತಾಯಿಗೆ ಈ ಬೇಡಿಕೆ ಪತ್ರ ದೊರೆಯುತ್ತಿದ್ದರೆ ಅತ್ತಕಡೆ ಮಗುವೆಲ್ಲಿ ಎಂದು ಮನೆಯಲ್ಲಿ ಹುಡುಕಾಡುತ್ತಿದ್ದ ತಂದೆಗೆ ಅವಳ ಶವ ನೆಲಮಾಳಿಗೆಯಲ್ಲಿ ದೊರೆತಿತ್ತು.
ತನಿಖೆ ಆರಂಭವಾದ ಕೂಡಲೇ ಪಾಲಕರು ಕ್ರಿಮಿನಲ್ ವಕೀಲರನ್ನು ನೇಮಕ ಮಾಡಿಕೊಂಡರು. ಪಾಲಕರು ತಾವಾಗಿಯೇ ಪೊಲೀಸರ ತನಿಖೆಗೆ ಅಷ್ಟೇನೂ ಸಹಕರಿಸಲಿಲ್ಲ. ಅದು ಅವರಿಗಿರುವ ಹಕ್ಕು. ಶಂಕಿತರು ಎಂದು ಅಧಿಕೃತವಾಗಿ ಹೆಸರಿಸದೇ ಯಾರನ್ನೂ ತನಿಖೆಗೆ ಸಹಕರಿಸಿ, ನಿಮ್ಮ ಅಧಿಕೃತ ಹೇಳಿಕೆ ದಾಖಲಿಸಿ ಎಂದು ಬಲವಂತ ಮಾಡುವಂತಿಲ್ಲ. ಆದರೆ ತಮ್ಮ ಮಗುವಿನ ಕೊಲೆಗಾರನ(ರ)ನ್ನು ಪತ್ತೆ ಮಾಡಲು ಪಾಲಕರೇಕೆ ಸಹಕರಿಸಲಿಲ್ಲ ಎನ್ನುವ ಸಂಶಯ ಮಾತ್ರ ಮೂಡುತ್ತದೆ. ಪಾಲಕರ ಅಸಹಕಾರದ ಮಧ್ಯೆಯೂ ತನಿಖೆ ನಡೆದಿತ್ತು.
೨೦೦೬ ರಲ್ಲಿ ತಾಯಿ ಪ್ಯಾಟ್ರಿಸಿಯಾ ಕ್ಯಾನ್ಸರ್ ರೋಗಕ್ಕೆ ಬಲಿಯಾಗಿ ಮೃತಳಾದಳು. ಅದಾದ ಎರಡು ವರ್ಷಗಳ ಬಳಿಕ, ೨೦೦೮ ರಲ್ಲಿ, ತನಿಖೆಯ ಉಸ್ತುವಾರಿ ವಹಿಸಿದ್ದ ಅಧಿಕಾರಿ, ಕುಟುಂಬಕ್ಕೆ ಪತ್ರ ಬರೆದು, ಡಿಎನ್ಎ ಪರೀಕ್ಷೆ ಮತ್ತು ಇತರೆ ಕಾರಣಗಳಿಂದ ಇಡೀ ಕುಟುಂಬಕ್ಕೆ ಕ್ಲೀನ್ ಚಿಟ್ ಕೊಡಲಾಗಿದೆ ಎಂದರು. ಆಶ್ಚರ್ಯವೆಂದರೆ, ಆ ಅಧಿಕಾರಿ ಬದಲಾದ ನಂತರ ತನಿಖೆಯ ಜವಾಬ್ದಾರಿ ವಹಿಸಿಕೊಂಡ ಹೊಸ ಅಧಿಕಾರಿ ಮಾತ್ರ ಕ್ಲೀನ್ ಚಿಟ್ ಕೊಟ್ಟಿದ್ದಕ್ಕೆ ಅತೃಪ್ತಿ ವ್ಯಕ್ತಪಡಿಸುತ್ತಾ, 'ಅವರಿಗೆ ಕ್ಲೀನ್ ಚಿಟ್ ಕೊಡಬಾರದಿತ್ತು. ಈ ಪ್ರಕರಣದ ತನಿಖೆಯ ಸದ್ಯದ ಸ್ಥಿತಿಗತಿ, ಲಭ್ಯವಾಗಿರುವ ಸಾಕ್ಷ್ಯಗಳು ಮತ್ತು ಪ್ರಕರಣದ ಸಂಕೀರ್ಣತೆ (complexity) ನೋಡಿದರೆ ಕ್ಲೀನ್ ಚಿಟ್ ಕೊಟ್ಟಿದ್ದು ಸರಿಯಾಗಿದೆ ಎಂದು ಅನ್ನಿಸುವುದಿಲ್ಲ,' ಎಂದುಬಿಟ್ಟರು.
ಜಾನ್ ಬೆನೆಯ ಹಿರಿಯ ಸಹೋದರ ಬರ್ಕ್ ಅಧಿಕೃತವಾಗಿ ಶಂಕಿತ ಎಂದು ತನಿಖೆಯ ವ್ಯಾಪ್ತಿಯಲ್ಲಿ ಬಂದಿರಲಿಲ್ಲ. ಟೀವಿ ವಾಹಿನಿಯೊಂದು ಆತನೇ ಕೊಲೆಗಾರ ಎಂಬಂತೆ ಬಿಂಬಿಸಿತ್ತು. ಬ್ಯಾಟರಿಯಿಂದ ತಂಗಿಯ ತಲೆಗೆ ಹೊಡೆದ. ಆಕೆ ಸತ್ತಳು. ಮುಂದಾಗಿದ್ದೆಲ್ಲ ಸತ್ಯವನ್ನು ಮುಚ್ಚಿಡುವ ಕೆಲಸ ಅಷ್ಟೇ ಅಂದಿತ್ತು ಆ ಕಾರ್ಯಕ್ರಮ. ಜಾನ್ ಬೆನೆ ಕುಟುಂಬ ಆ ವಾಹಿನಿಯ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇವೆ ಎಂದಿತ್ತು. ಏನಾಯಿತೋ ಗೊತ್ತಿಲ್ಲ.
ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪತ್ರವನ್ನು ಗಮನಿಸಿದರೆ ಹೊರಗಿನಿಂದ ಯಾರೋ ಒಳಗೆ ಬಂದು ಆಕೆಯನ್ನು ಕೊಲೆ ಮಾಡಿರಬಹುದು ಎಂದು ಸಹಜವಾಗಿ ಅನ್ನಿಸುತ್ತದೆ. ಆ ನಿಟ್ಟಿನಲ್ಲಿ ಅನೇಕ ಹೆಸರುಗಳು ಚರ್ಚೆಗೆ ಬಂದಿವೆ.
ಆ ಪೈಕಿ ಮೈಕಲ್ ಹೆಲ್ಗೋಟ್ ಎಂಬಾತ ಒಬ್ಬ. ಆತ ಧರಿಸುತ್ತಿದ್ದ ಬೂಟುಗಳ ಮಾದರಿಯ ಹೆಜ್ಜೆ ಗುರುತುಗಳು ಅಪರಾಧದ ಸ್ಥಳದಲ್ಲಿ ಕಂಡುಬಂದಿದ್ದವು. ಹಾಗಾಗಿ ಶಂಕಿತರ ಪಟ್ಟಿಯಲ್ಲಿ ಆತ ಮುಂದಿದ್ದ. ಏಕೋ ಏನೋ ಗೊತ್ತಿಲ್ಲ, ೧೯೯೭ ರಲ್ಲಿ ಆತ ಆತ್ಮಹತ್ಯೆ ಮಾಡಿಕೊಂಡು ಸತ್ತ. ಸತ್ತ ಮೇಲೆ ಆತನ ಬಗ್ಗೆ ತನಿಖೆಯನ್ನು ಕೈಬಿಡಲಾಯಿತು.
ಪಾಲಕರು ಒಬ್ಬ ಖಾಸಗಿ ಪತ್ತೇದಾರನನ್ನು ತನಿಖೆಗಾಗಿ ನೇಮಕ ಮಾಡಿಕೊಂಡಿದ್ದರು. ಆತ ಹೇಳುವ ಪ್ರಕಾರ: ಮೈಕಲ್ ಹೆಲ್ಗೋಟ್ ತನ್ನ ಕುಟುಂಬದೆದುರು ತಾನೇ ಕೊಲೆಗಾರ ಎಂದು ತಪ್ಪೊಪ್ಪಿಕೊಂಡಿದ್ದ. ಆತನ ತಪ್ಪೊಪ್ಪಿಕೊಂಡಿದ್ದರ ಧ್ವನಿಮುದ್ರಿಕೆ ಆತನ ಕುಟುಂಬದವರ ಬಳಿ ಇದೆ.
೨೦೦೬ ರಲ್ಲಿ ಅಲೆಕ್ಸ್ ರಿಚ್ ಎಂಬ ಹೊಸ ಶಂಕಿತ ತನ್ನ ಹೇಳಿಕೆ ಮೂಲಕ ಬಿರುಗಾಳಿಯನ್ನೇ ಸೃಷ್ಟಿಸಿದ. ಆತ ಹೇಳಿದ್ದು: ಜಾನ್ ಬೆನೆ ಸಾಯುವ ದಿನ ನಾನು ಅವಳ ಜೊತೆ ಇದ್ದೆ. ಅವಳ ಸಾವು ಒಂದು ಅಪಘಾತ.
ಮೊದಲು ಆತನ ಹೇಳಿಕೆ ಕಡೆ ಗಮನ ಕೊಡಲಾಯಿತಾದರೂ ನಂತರ ಆತ ಸುಳ್ಳು ಹೇಳುತ್ತಿದ್ದಾನೆ ಎಂದು ಭಾವಿಸಲಾಯಿತು. ಆತನ ಪತ್ನಿಯೇ ಆತನ ಹೇಳಿಕೆಗೆ ವಿರೋಧಾತ್ಮಕ ಹೇಳಿಕೆ ಕೊಟ್ಟು, ಆತ ಎಲ್ಲೂ ಹೋಗಿರಲಿಲ್ಲ. ಜಾನ್ ಬೆನೆ ಸತ್ತ ಸ್ಥಳದಿಂದ ಸಾವಿರಾರು ಮೈಲು ದೂರದಲ್ಲಿರುವ ಅಲಬಾಮಾದ ಮನೆಯಲ್ಲಿದ್ದ ಎಂದು ಹೇಳಿದಳು. ಆತನ ಡಿಎನ್ಎ ಕೂಡ ಹೊಂದಾಣಿಕೆ ಆಗಲಿಲ್ಲ. ಹಾಗಾಗಿ ಅವನ ಹೇಳಿಕೆಯನ್ನು ತನಿಖಾ ತಂಡ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ.
ಕ್ರಿಸ್ಮಸ್ ಸಮಯದಲ್ಲಿ ಸಾಂತಾ ಕ್ಲಾಸ್ ವೇಷ ಧರಿಸಿ ಮಕ್ಕಳನ್ನು ರಂಜಿಸುತ್ತಿದ್ದ ಸ್ಥಳೀಯ ವ್ಯಕ್ತಿಯೊಬ್ಬ ಜಾನ್ ಬೆನೆಯನ್ನು ಕೊಂದಿರಬಹುದೇ ಎನ್ನುವ ಸಂಶಯ ಕೂಡ ವ್ಯಕ್ತವಾಗಿತ್ತು. ದಶಕಗಳ ಹಿಂದೆ ಆ ವ್ಯಕ್ತಿಯ ಮಗು ಕೂಡ ನಿಗೂಢವಾಗಿ ಅಪಹರಿಸಲ್ಪಟ್ಟಿತ್ತು. ಆದರೆ ಆ ವ್ಯಕ್ತಿಯನ್ನು ಶಂಕಿತರ ಪಟ್ಟಿಗೆ ಸೇರಿಸಲು ಸಾಂದರ್ಭಿಕ ಸಾಕ್ಷ್ಯಗಳು ಸಿಗಲಿಲ್ಲ.
ಆರು ವರ್ಷದ ಈ ಬಾಲ ಸುಂದರಿಯ ನಿಗೂಢ ಕೊಲೆ ಪ್ರಕರಣ ಎಂದಾದರೂ ಬಗೆ ಹರಿದೀತೇ ಎಂದು ಕೇಳಿದರೆ ಗೊತ್ತಿಲ್ಲ ಎಂಬುದೇ ಉತ್ತರ.
ಜಾನ್ ಬೆನೆಯ ತಾಯಿ ಪ್ಯಾಟ್ರಿಸಿಯಾ ತೀರಿಹೋಗಿದ್ದಾಳೆ. ತಂದೆ ಜಾನನಿಗೆ ಈಗ ೮೦ ವರ್ಷ ವಯಸ್ಸು.
'ಡಿಎನ್ಎ ತಂತ್ರಜ್ಞಾನ ಈಗ ತುಂಬಾ ಮುಂದುವರೆದಿದೆ. ನ್ಯಾಯ ಸಿಗಬಹುದು ಎಂಬ ನಿರೀಕ್ಷೆ ಇದೆ,' ಎಂದು ನಿಡುಸುಯ್ಯುತ್ತಾನೆ ತಂದೆ ಜಾನ್.
ಇವತ್ತಿಗೂ ತುಂಬಾ ಚರ್ಚೆಯಲ್ಲಿರುವ ಪ್ರಕರಣ ಇದು. ಈ ಪ್ರಕರಣದ ಬಗ್ಗೆ ಅಸಂಖ್ಯಾತ ಪುಸ್ತಕಗಳು, ಸಾಕ್ಷ್ಯಚಿತ್ರಗಳು, ಲೇಖನಗಳು, ಕೊಲೆ ಹೇಗಾಗಿರಬಹುದು ಎಂಬುದರ ಬಗ್ಗೆ ತಜ್ಞರಿಂದ ಬೇರೆ ಬೇರೆ ತರಹದ ಸಿದ್ಧಾಂತಗಳು ಎಲ್ಲ ಬಂದಿವೆ. ಈಗಲೂ ಬರುತ್ತಿರುತ್ತವೆ. ಆದರೆ ಕೊಲೆಗಾರ ಮಾತ್ರ ಇನ್ನೂ ಸಿಕ್ಕಿಲ್ಲ.
ಕೊಲೊರಾಡೊ ರಾಜ್ಯದ ಬೌಲ್ಡರ್ ನಗರದ ಪೊಲೀಸ್ ಇಲಾಖೆ ಮಾತ್ರ ಪ್ರಕರಣವನ್ನು ಥಂಡಿಬೊಗಸಕ್ಕೆ (cold storage) ಹಾಕದೇ ಸಕ್ರಿಯವಾಗಿ ತನಿಖೆ ಮಾಡುತ್ತಲೇ ಇದೆ. ಆಗಾಗ ಹೊಸ ಮಾಹಿತಿ ಕೊಡುತ್ತದೆ.
ಈ ಕೊಂಡಿಯಲ್ಲಿ ಪ್ರಕರಣದ ಇತ್ತೀಚಿನ ಮಾಹಿತಿ ಸಿಗುತ್ತದೆ.
ಒಟ್ಟಿನಲ್ಲಿ ಒಂದು ಅತಿ ನಿಗೂಢ ಕೊಲೆ ಪ್ರಕರಣ. ಮನೆಯಲ್ಲಿ ಇದ್ದವರೇ ನಾಲ್ಕು ಜನ. ಅದರಲ್ಲಿ ಒಬ್ಬರು ಕೊಲೆಯಾಗುತ್ತಾರೆ. ಮನೆಯವರ ಮೇಲೆ ಸಂಶಯ ಬಂದರೂ ಆಧಾರವಿಲ್ಲ. ಹೊರಗಿಂದ ಯಾರು, ಏಕೆ, ಹೇಗೆ ಬಂದು ಕೊಲೆಯನ್ನು ಮಾಡಿದರು? ಅಪಹರಣ ಮೂಲ ಉದ್ದೇಶವಾಗಿತ್ತೇ?? ಅಪಹರಣದ ಸಂಚು ಹಡಾಲೆದ್ದು ಹೋಗಿ ಕೊಲೆಯಲ್ಲಿ ಪರ್ಯವಸಾನವಾಯಿತೇ? ಲೈಂಗಿಕ ದೌರ್ಜನ್ಯ ಏಕೆ ಮಾಡಲಾಯಿತು? ಕರಾರುವಕ್ಕಾಗಿ ೧೧೮, ೦೦೦ ಡಾಲರುಗಳಿಗೇ ಏಕೆ ಬೇಡಿಕೆ ಇಡಲಾಗಿತ್ತು?? ಆಕಸ್ಮಿಕವೊಂದರಲ್ಲಿ ಮನೆಯ ಜನರಿಂದಲೇ ಆಕೆ ಉದ್ದೇಶವಿಲ್ಲದೇ ಕೊಲೆಯಾಗಿಬಿಟ್ಟಳೇ?? ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮನೆಯವರೇ ಈ ಕಥೆ ಹೆಣೆದರೆ?? ಹೀಗೆ ಪ್ರಶ್ನೆಗಳು ಅನೇಕ. ಉತ್ತರ ಸದ್ಯಕ್ಕೆ ಇಲ್ಲ. ಎಲ್ಲ ಅಯೋಮಯ.
ಮಾಹಿತಿ ಆಧಾರ: Who Killed Child Beauty Queen JonBenét Ramsey in Her Colorado Home 27 Years Ago Today?
2 comments:
ತುಂಬ ವಿಷಾದದ ಸಂಗತಿ. ಮುದ್ದು ಮುಖದ ಆ ಪುಟ್ಟ ಹುಡುಗಿಯ ಫೋಟೋ ನೋಡಿದಾಗಲಂತೂ ಕರುಳು ಕಿವಿಚಿದಂತಾಯಿತು. ಈ ಸಂದರ್ಭದಲ್ಲಿ ನಾನು ಅನೇಕ ವರ್ಷಗಳ ಹಿಂದೆ ಓದಿದ ಒಂದು ಘಟನೆ ನೆನಪಿಗೆ ಬರುತ್ತಿದೆ. ಅಮೇರಿಕಾದಲ್ಲಿಯೇ ಒಬ್ಬ ಹುಡುಗಿ (ಬಹುಶಃ ೧೦ ವರ್ಷದವಳಿರಬಹುದು?) ತಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ನಡೆಯುತ್ತ ಹೋಗುತ್ತಿದ್ದಾಳೆ. ಆ ಮೇಲೆ ಅವಳು ಕಾಣಸಿಕ್ಕಿಲ್ಲ. ಅವಳ ತಂದೆ, ತಾಯಿ ಅವಳನ್ನು ಹುಡುಕಿ ಹೈರಾಣಾಗಿದ್ದಾರೆ. ಪೋಲೀಸರೂ ಸಹ ಕೈಚೆಲ್ಲಿದ್ದಾರೆ. ಸುಮಾರು ೧೫-೨೦ ವರ್ಷಗಳ ಬಳಿಕ ಈ ಹುಡುಗಿಗೆ, ತನ್ನನ್ನು ಕೂಡಿ ಹಾಕಿದ ಮನೆಯಿಂದ ತಪ್ಪಿಸಿಕೊಂಡು ಬರಲು ಸಾಧ್ಯವಾಗುತ್ತದೆ. ಈ ಮಧ್ಯದಲ್ಲಿ ಅವಳಿಗೆ ಇಬ್ಬರು ಮಕ್ಕಳೂ ಹುಟ್ಟಿದ್ದಾರೆ. ಅವಳ ತಂದೆತಾಯಿಗಳ ಜೊತೆ ಅವಳ ಪುನರ್ಮಿಲನವಾಗುತ್ತದೆ. ಆದರೆ ಅವಳು ಮಾತನಾಡಲು ಸಾಕಷ್ಟು ಮರೆತು ಬಿಟ್ಟಿದ್ದಳು. ಅವಳ ತಂದೆತಾಯಿ ಅವಳನ್ನು ಹಾಗು ಅವಳ ಇಬ್ಬರು ಮಕ್ಕಳನ್ನು ಕಣ್ಣೀರು ಸುರಿಸುತ್ತ ಸಾಕಿಕೊಂಡರು. ೨೦ ವರ್ಷದ ಹಿಂದೆ ಪುಟ್ಟ ಹುಡುಗಿಯಾಗಿದ್ದ ಅವಳನ್ನು ಅಪಹರಿಸಿ, ಇಷ್ಟು ವರ್ಷ ಅವಳ ಮೇಲೆ, ಸತತವಾಗಿ ದೌರ್ಜನ್ಯವೆಸುಗುತ್ತಿದ್ದ ಆ ಅಪಹರಣಕಾರನಿಗೆ ಏನು ಶಿಕ್ಷೆಯಾಯಿತೊ ಗೊತ್ತಿಲ್ಲ! ಈ ಸಂಗತಿಯನ್ನು ನಾನು ಬಹುಶಃ Readers' Digestನಲ್ಲಿ ಓದಿರಬಹುದು.
ತಮ್ಮ ಕಾಮೆಂಟಿಗೆ ಧನ್ಯವಾದಗಳು ಸುನಾಥ್ ಸರ್.
ತಾವು ಹೇಳಿದ ಘಟನೆ ಬಗ್ಗೆ ನನಗೂ ಓದಿದ ನೆನಪಿದೆ. ಮತ್ತೆ ಹುಡುಕಬೇಕು...
Post a Comment