Wednesday, May 14, 2025

ಕದನ ವಿ'ರಾಮ'

ಹಲೋ , ಹಲೋ, ದೋಲಾಂಡ್ ಟ್ರಂಪ್. ಹಲೋ, ಹಲೋ. ನಮಸ್ತೆ ಟ್ರಂಪ್. ಕೇಳಿಸುತ್ತಿದೆಯೇ?? ಎಂದು ಮೋದಿಜೀ ಫೋನ್ ಹಚ್ಚಿದರು.

ಹೌಡಿ ಮೋದಿ? ಹೌಡಿ? ಹೌಡಿ? ಎಂದು ಟ್ರಂಪ್ ಆಪ್ತಮಿತ್ರ ಚಿತ್ರದ ವಿಷ್ಣುವರ್ಧನ್ ಹೌಲಾ ಹೌಲಾ ಎಂದು ಅಬ್ಬರಿಸಿದಂತೆ ಅಬ್ಬರಿಸಿದರು.

ಇದು. ಇದು. ಕದನ ವಿರಾಮ ಪಾಲನೆಯಾಗುತ್ತಿಲ್ಲ. ಪಾಕಿಸ್ತಾನ ಕದನ ವಿರಾಮವನ್ನು ಉಲ್ಲಂಘನೆ ಮಾಡುತ್ತಿದೆ, ಎಂದು ತಮ್ಮ ಆಕ್ಷೇಪ ವ್ಯಕ್ತಪಡಿಸಿದರು ಮೋದಿ.

ನೌನ್ ! ಇವರೌನ್! ಎಂದು ಟ್ರಂಪ್ ಉರಿದುಕೊಂಡರು. ಇಲ್ಲಿ ಪಲ್ಲಂಗ ಹತ್ತಲು ಹೊರಟಿದ್ದ ಅವರಿಗೆ ಈ ಕದನ ವಿರಾಮದ ಉಲ್ಲಂಘನೆಯಿಂದ ಅವರ ಪಲ್ಲಂಗನೆ ಆಗಿ, ಕಿರಿಕಿರಿಯಾಗಿ ಕೋಪ ಬಂದಿತ್ತು.

ಸ್ವಲ್ಪ ಹೋಲ್ಡ್ ಮಾಡಿ ಮೋದಿಜೀ. ಈಗಲೇ ಆ ಬೋಳಿಮಗನಿಗೆ ಫೋನ್ ಹಚ್ಚಿ ಮಾತಾಡುತ್ತೇನೆ. ಲೈನ್ ಮೇಲೆ ಇರಿ, ಎಂದು ಹೇಳಿದ ಟ್ರಂಪ್ ಪಾಕಿಸ್ತಾನದ ಅಸೀಮ್ ಮುನೀರನಿಗೆ ಫೋನ್ ಹಚ್ಚಿದರು.

ಹಾಂ ಜನಾಬ್. ಜನಾಬೇ ಆಲಿ. ಸಲಾಂ. ಸಲಾಂ. ಹೇಳಿ ಸರ್, ಎಂದ ಪಾಕಿ ಪಾಪಿ ಮುನೀರ್.

ಯಾಕೆ ಮೈಯ್ಯಾಗ ಸೊಕ್ಕೇನು? ಎಲ್ಲಿ ಕಡಿಯಾಕತ್ತಾವ? ಬೇಕೇನು ಕಡ್ತಾ? ಎಂದು ದಬಾಯಿಸಿದರು ಟ್ರಂಪ್.

ಗೊತ್ತಾಯಿತು ಅವನಿಗೆ ಇದು ಕದನ ವಿರಾಮದ ಬಗ್ಗೆ ಎಂದು.

ಟ್ರಂಪ್ ಸಾಬ್ ಏಕ್ ಪ್ರಾಬ್ಲಮ್ ಹೈ ಸಾಬ್? ಎಂದ ಮುನೀರ್.

ಕ್ಯಾ? ಕ್ಯಾ? ಜಲ್ದಿ ಬೋಲೋ ಬಾ. ಜಲ್ದಿ ಬೋಲೋ ಬಾ, ಎಂದು ಅವಸರಿಸಿದರು ಟ್ರಂಪ್.

ವೋ ಕ್ಯಾ ಹಾಯ್ ಕೀ. ಕದನ ವಿರಾಮ್ ಮೇ ವಿರಾಮ್ ಹೈ!

ತೋ? ತೋ ಕ್ಯಾ ಬಾ?

ವಿರಾಮ್ ಮೇ ರಾಮ್ ಹೈ. ರಾಮ್ ಹಮ್ ಕೋ ಹರಾಮ್ ಹೈ ಸಾಬ್. ಇಸ್ ಲಿಯೇ ಕದನ ವಿರಾಮ್ ಪಾಕಿಸ್ತಾನ ಕೋ ಪಸಂದ್ ನಹಿ ಹೈ, ಎಂದು ಬಿಟ್ಟ ಮುನೀರ್.

ರಾಮಾ, ರಾಮಾ, ಯಾ ಅಲ್ಲಾ! ಅವನ ರಾಮ ಇವನಿಗೆ ಹರಾಮ. ಇಬ್ರೂ ಎಲ್ಲಿಂದ ಬಂದ್ರೋ ಮಾರಾಯಾ? ಈಗ ಏನು ಮಾಡಬೇಕೋ? ಅಲ್ಲಿ ಮೋದಿಜೀ ಬ್ಯಾರೆ ಲೈನ್ ಮ್ಯಾಲೆ ಇದ್ದಾರ, ಎಂದು ಟ್ರಂಪ್ ಪೇಚಾಡಿದರು.

ಸಾಬ್, ಕದನ ವಿರಾಮ್ ಕೋ ಕದನ ವಿಬಾಬರ್ ಚೇಂಜ್ ಕರೋ ಜೀ. ರಾಮ್ ಕೇ ಜಾಗಾ ಮೇ ಬಾಬರ್ ಲಗಾವೋ. ವಿರಾಮ್ ವಿಬಾಬರ್ ಬನೇಗಾ. ಬಾಬರ್ ಹಮ್ಕೋ ಫುಲ್ ಮಂಜೂರ್. ಏಕ್ ಬಾರ್ ಕದನ ವಿರಾಮ್ ಕದನ ಬಾಬರ್ ಹೋಗಯಾ, ಸಮಜೋ ಗೋಲಿಬಾರಿ ಸಬ್ ಬಂದ್, ಎಂದ ಮುನೀರ್.

ಓಕೆ. ತಡೀಪಾ. ನೀನೂ ಲೈನ್ ಮ್ಯಾಲೆ ಇರು. ಮೋದಿಜೀ ಜೋಡಿ ಮಾತಾಡಿ ಹೇಳ್ತೇನಿ, ಎಂದರು ಟ್ರಂಪ್.

ಹೌಡಿ, ಹೌಡಿ, ಮೋದಿ? ಇನ್ನೂ ಲೈನ್ ಮೇಲೆ ಇದ್ದೀರೇನ್ರೀ ?? ಎಂದು ಕೇಳಿದರು ಟ್ರಂಪ್.

ಹಲೋ, ದೋಲಾಂಡ್. ನಮಸ್ತೆ ಟ್ರಂಪ್. ಇದ್ದೇನೆ. ಹೇಳಿ, ಎಂದರು ಮೋದಿ.

ಸಮಸ್ಯೆ. ಇಲ್ಲೊಂದು ಸಮಸ್ಯೆ ಖಂಡಿತಾ ಇದೆ, ಎಂದು ಆಪ್ತಮಿತ್ರದ ಮಂತ್ರವಾದಿಯ ಶೈಲಿಯಲ್ಲಿ ಟ್ರಂಪ್ ಹೇಳಿದರು.

ಏನು?? ಏನು ?? ನಮಸ್ತೆ ಟ್ರಂಪ್ ಏನು ಸಮಸ್ಯೆ?? ಎಂದು ಕೇಳಿದರು ಮೋದಿ. ಮಾತಿಗೊಮ್ಮೆ ನಮಸ್ತೆ ಟ್ರಂಪ್ ಅನ್ನುತ್ತಾರೆ. ಏಕೋ ಏನೋ??

ನೋಡಿ. ಕದನ ವಿರಾಮದಲ್ಲಿ ರಾಮ ಇದೆ. ರಾಮ ಅವರಿಗೆ ಹರಾಮ. ಹಾಗಾಗಿ ಅವರು ಕದನ ವಿರಾಮ ಗೌರವಿಸದೇ ಅದರ ಅಮ್ಮ, ಅಕ್ಕ ಮಾಡಿ ಅದನ್ನು ಕದನ ಹರಾಮ ಮಾಡಿದ್ದಾರೆ. ಅದೇ ಸಮಸ್ಯೆ, ಎಂದರು ಟ್ರಂಪ್.

ಈಗ ಮುಂದೆ ? ಏನು ಸಮಾಧಾನ ಇದಕ್ಕೆ ನಮಸ್ತೆ ಟ್ರಂಪ್?? ಎಂದರು ಮೋದಿ.

ಕದನ ವಿರಾಮವನ್ನು ಕದನ ವಿಬಾಬರ ಎಂದು ಬದಲಾವಣೆ ಮಾಡಿದರೆ ಅವರಿಗೆ ಓಕೆ ಅಂತೆ. ವಿರಾಮದ ರಾಮ ಹರಾಮ. ವಿಬಾಬರದ ಬಾಬರ ಹಲಾಲ್ ಅಂತೆ. ಏನಂತೀರಿ? ಕದನ ವಿರಾಮ ಟು ಕದನ ವಿಬಾಬರ್ ಎಂದು ಬದಲಾವಣೆ ಮಾಡೋಣವೇ? ಎಂದು ಪ್ರಸ್ತಾವ ಇಟ್ಟರು ಟ್ರಂಪ್.

ಕದನ ವಿಬಾಬರ್. ಡಾಬರ್ ಇದ್ದ ಹಾಗೆ ಇದೆ. ಇದನ್ನು ಹೇಗೆ ಒಪ್ಪುವುದು? ರಾಮನ ಹೆಸರಿನಲ್ಲೇ ಬೆಳೆದು ಬಂದು, ಅವನ ಹೆಸರಲ್ಲೇ ರಾಜ್ಯ ಮಾಡಿ, ಬಾಬರ್ ನಿರ್ಮಿಸಿದ್ದ ಬಾಬ್ರಿ ಮಸೀದಿಗೆ ಒಂದು ಗತಿ ಕಾಣಿಸಿ, ಅಲ್ಲೇ ರಾಮ ಮಂದಿರ ಕಟ್ಟಿ, ಬಾಲ ರಾಮನನ್ನು ಅದರಲ್ಲಿ ಕೂಡಿಸಿ, ಜನರನ್ನು ಖುಷಿಪಡಿಸಿದ ಆಧಾರದ ಮೇಲೆ ಅಧಿಕಾರಕ್ಕೆ ಬಂದಿದ್ದು ಮೋದಿಜೀ ಸರಕಾರ. ಈಗ ಕದನ ವಿರಾಮದ ಬದಲು ಕದನ ವಿಬಾಬರ್ ಎಂದು ಬದಲಾವಣೆ ಮಾಡಿದರೆ ಜನ ಒಪ್ಪುತ್ತಾರೆಯೇ??? ದಂಗೆ ದಂಗೆ ಎದ್ದು ಬಿಡುತ್ತಾರೆ ಎನ್ನುವ ಕಳವಳ ಮೋದೀಜಿ ಅವರಿಗೆ.

ಹಲೋ, ದೋಲಾಂಡ್. ನಮಸ್ತೆ ಟ್ರಂಪ್. ಇದು ಕಷ್ಟ. ನಮ್ಮ ಜನರಿಗೆ ಬಾಬರ್ ಎಂದು ಕೇಳಿದರೆ ಮೈಯೆಲ್ಲಾ ಉರಿಯುತ್ತದೆ. ಕರಾಪರಾ ಪರಚಿಕೊಂಡಂತೆ ಅನಿಸುತ್ತದೆ. ಅವರು ಕದನ ವಿರಾಮದ ಬದಲಿಗೆ ಕದನ ವಿಬಾಬರ್ ಒಪ್ಪಲು ಸಾಧ್ಯವೇ ಇಲ್ಲ. ಏನು ಮಾಡೋದು ನಮಸ್ತೆ ಟ್ರಂಪ್? ಎಂದು ಗೊಂದಲ ವ್ಯಕ್ತ ಪಡಿಸಿದರು ಮೋದೀಜಿ.

ನೋಡಿ ಮೋದಿಜೀ. ಬೀಸೋ ದೊಣ್ಣೆ ಏಟು ತಪ್ಪಿಸಿಕೊಂಡರೆ ಸಾವಿರ ವರ್ಷ ಆಯುಷ್ಯ. ಈಗ ಕದನ ವಿಬಾಬರ್ ಒಪ್ಪಿಕೊಳ್ಳಿ. ಪಾಕಿಗಳು ಗೋಲಿ ಬಾರಿ ನಿಲ್ಲಿಸುತ್ತಾರೆ. ನಿಮ್ಮವರು ಕೋಪಗೊಂಡು ಗೋಲಿ ಬಾರಿ ಶುರು ಮಾಡಿದರೆ ಮಾಡಿಕೊಳ್ಳಲಿ ಬಿಡಿ. ಆವಾಗ ಆ ಬೋಳಿಮಗ ಮುನೀರ್ ನನಗೇ ಫೋನ್ ಮಾಡಿ ನಿಮ್ಮ ವಿರುದ್ಧ ಕಂಪ್ಲೇಂಟ್ ಮಾಡುತ್ತಾನೆ. ನಾನು ಅವನಿಗೆ ಮತ್ತೆ ಇದೇ ಪಟ್ಟಿ ಓದಿ, ನಿನ್ನ ಕದನ ವಿಬಾಬರ್ ಹಿಂದೂಸ್ತಾನಕ್ಕೆ ಒಪ್ಪಿಗೆಯಿಲ್ಲ. ವಾಪಸ್ ಕದನ ವಿರಾಮಕ್ಕೆ ಬದಲಾಯಿದರೆ ಮಾತ್ರ ಅವರು ಗೋಲಿಬಾರಿ ನಿಲ್ಲಿಸುತ್ತಾರೆ ಎಂದು ಹೇಳುತ್ತೇನೆ. ಹೀಗೆ ಮುಂದುವರೆಯುತ್ತಿರಲಿ. ಏನಂತೀರಿ ಮೋದಿಜೀ? ಪ್ರಾಬ್ಲಮ್ ಸಾಲ್ವ್ ಆಗುವುದು ಯಾರಿಗೆ ಬೇಕು ಹೇಳಿ? ಇಂತಹ ವ್ಯಾಜ್ಯ, ವಿವಾದ , ಗೌಜು, ಗದ್ದಲ, ಲಫಡಾ ಇದ್ದರೆ ಮಾತ್ರ ನಾವು ರಾಜಕಾರಣಿಗಳು ಬದುಕಬಹುದು ಅಲ್ಲವೇ? ಡೀಲ್ ಮಾಮಾ ಡೀಲ್ ಮೋದಿಜೀ. ಓಕೆ ? ಕದನ ವಿಬಾಬರ್ ಓಕೆ ? ಎಂದು ಗಹಗಹಿಸಿದರು ಟ್ರಂಪ್.

ಎಲಾ ಬೆರಕಿ ಡೀಲ್ ಮಾಮಾ ಟ್ರಂಪ್! ಹೀಗೇ ಸಮಸ್ಯೆ ಮುಂದುವರೆಸಿ ಅತ್ಲಾಗೆ ಅವರಿಗೂ ಶಸ್ತ್ರಾಸ್ತ್ರ ಮಾರಿ, ನಮಗೂ ಮಾರಿ ರೊಕ್ಕ ಮಾಡಿಕೊಳ್ಳುವುದೇ ನಮಸ್ತೆ ಟ್ರಂಪ್ ಮಾಡೆಲ್ ಎಂದು ಗೊತ್ತಾಗದೇ ಇರಲಿಲ್ಲ. 

ಸರಿ. ನಮಸ್ತೆ ಟ್ರಂಪ್. ಸದ್ಯಕ್ಕೆ ಒಪ್ಪೋಣ. ಆದರೆ ನಮ್ಮ ಜನ ಒಪ್ಪುವುದಿಲ್ಲ. ನೀವು ಕದನ ವಿರಾಮ ಕದನ ವಿಬಾಬರ್ ಗೆ ಬದಲಾವಣೆ ಮಾಡಲಾಗಿದೆ ಎಂದು ಟ್ವೀಟ್ ಮಾಡಿದ ಕೂಡಲೇ ನಮ್ಮ ಗೋಲಿ ಬಾರಿ ಆರಂಭವಾದರೆ ಕದನ ವಿರಾಮ ಅಲ್ಲ ಕದನ ವಿಬಾಬರ್ ಉಲ್ಲಂಘನೆ ಆಗುತ್ತದೆ ನೋಡಿ. ಈಗಲೇ ವಾರ್ನಿಂಗ್ ಕೊಟ್ಟಿದ್ದೇನೆ, ಎಂದು ಖಡಕ್ ಆಗಿ ಹೇಳಿದರು ಮೋದಿಜೀ.

ಓಕೆ. ಓಕೆ. ತೊಂದರೆ ಇಲ್ಲ. ನನಗೇನು? ಮತ್ತೊಂದು ಟ್ವೀಟ್ ಮಾಡಿದರಾಯಿತು. ಎತ್ತರಪತ್ತರ ಟ್ವೀಟ್ ಮಾಡಿ ವಿಶ್ವವನ್ನೇ ಗೊಂದಲಕ್ಕೆ ದೂಡುವುದು ನನ್ನ ವಿಶೇಷ ಹವ್ಯಾಸ. ಮೋದಿಜೀ ನಿಮಗೆ ಒಂದು ವಿಷಯ ಗೊತ್ತೇ? ಎಂದರು ಟ್ರಂಪ್.

ಏನು ನಮಸ್ತೆ ಟ್ರಂಪ್? ಎಂದರು ಆಸಕ್ತಿಯಿಂದ ಕೇಳಿದರು ಮೋದಿಜೀ.

ನನ್ನ ಹಿಂದೂ ಹೆಸರಲ್ಲೂ ರಾಮ ಇದ್ದಾನೆ ಮಾರಾಯರೇ. ಇದ್ದಾನೆ. ರಾಮ ಇದ್ದಾನೆ. ನಾನೂ ರಾಮಭಕ್ತ. ನಾನು ಸದಾ ನಿಮ್ಮೊಂದಿಗೆ, ನಿಮ್ಮೊಂದಿಗೇ ಇರುತ್ತೇನೆ, ಎಂದರು ಟ್ರಂಪ್. ಬಾಂಬ್ ಹಾಕಿದರು.

ನಿಮ್ಮ ಹೆಸರಲ್ಲಿ ರಾಮ ಇದ್ದಾನೆಯೇ? ನಿಮ್ಮ ಹೆಸರು ದೋಲಾಂಡ್ ಟ್ರಂಪ್ ಅಂತ ಇದೆ ಮತ್ತೆ... ಎಂದು ಮೋದಿಜೀಗೆ ಫುಲ್ ಗೊಂದಲ.

ನನ್ನ ಹಿಂದೂ ಹೆಸರು ಹರಾಮಕೋರ್ ಟ್ರಂಪ್. ಹರಾಮಕೋರನಲ್ಲಿ ಕೂಡ ರಾಮ ಇದೆಯೆಲ್ಲ ಮೋದಿಜೀ. ಅಂದ ಹಾಗೆ ಹರಾಮಕೋರ ಅಂದರೆ ಯಾರು??? ರಾಮನ ಕಜಿನ್ ಬ್ರದರ್ ಏನು? ಯಾರೋ ಹೇಳಿದರು ಭಾರತಕ್ಕೆ ಇಂಪ್ರೆಸ್ ಮಾಡಲು ರಾಮ ಸಹಕಾರಿ. ಅದಕ್ಕೆ ರಾಮನಿಗೆ ಸಂಬಂಧಿಸಿದ ಒಂದು ಹೆಸರು ಕೊಡಿ ಅಂದೆ. ಹರಾಮಕೋರ ಎಂದು ಕೊಟ್ಟಿದ್ದಾರೆ. ಹೇಗಿದೆ ಮೋದಿಜೀ??? ಎಂದುಬಿಟ್ಟ ಟ್ರಂಪ್.

ಅಲ್ಲಿಗೆ ಮೋದಿಜೀಗೆ ಏನು ಹೇಳಬೇಕೋ ತಿಳಿಯಲಿಲ್ಲ. ಡೀಲ್ ಮಾಮಾ ಡೀಲ್ ಮಾಡುತ್ತಾ, ಇಡೀ ವಿಶ್ವಕ್ಕೇ ಶಸ್ತ್ರಾಸ್ತ್ರ ಮಾರಿ, ಯುದ್ಧ ಮಾಡಿಸುವ ಎಲ್ಲರಿಗೂ ಹರಾಮಕೋರ ಎನ್ನುವ ಹೆಸರೇ ಸರಿ ಇದೆ ಎಂದುಕೊಂಡರು.

ಹಾಂ. ಹರಾಮಕೋರ ಎನ್ನುವ ಹೆಸರು ನಿಮಗೆ ಒಪ್ಪುತ್ತದೆ. ಅವನು ರಾಮನ ದೂರದ ಕಜಿನ್ ಬ್ರದರ್. ಒಳ್ಳೇ ಹೆಸರೇ. ನಿಮಗೆ ಆ ಹೆಸರು ಕೊಟ್ಟ ಪುಣ್ಯಾತ್ಮನ ಪಾದದ ಜೆರಾಕ್ಸ್ ಕಳಿಸಿ. ನೆಹರೂ ಮ್ಯೂಸಿಯಮನಲ್ಲಿ ಇಡಿಸಿ ಪೂಜೆ ಮಾಡುತ್ತೇವೆ, ಎಂದು ಮನಸ್ಸಿನಲ್ಲೇ ಅಂದುಕೊಂಡರು.

ಹಾಗಾದರೆ ಪಾಕಿಗಳು ಗೋಲಿಬಾರಿ ನಿಲ್ಲಿಸುತ್ತಾರೆ. ನೀವು ಕದನ ವಿರಾಮ ಈಗ ಕದನ ವಿಬಾಬರ್ ಆಗಿದೆ ಎಂದು ಟ್ವೀಟ್ ಮಾಡುತ್ತೀರಿ. ನಾವು ಗೋಲಿಬಾರಿ ಶುರು ಮಾಡಿ ಉಲ್ಲಂಘನೆ ಮಾಡುತ್ತೇವೆ. ಸರಿ ತಾನೇ? ಎಂದು ಖಾತ್ರಿ ಮಾಡಿಕೊಂಡರು ಮೋದಿಜೀ.

Confirmed. Full confirmed. ಸರಿ. ಅತ್ಲಾಗೆ ಆ ಬೋಳಿಮಗ ಅಸೀಮ್ ಮುನೀರ್ ಇನ್ನೂ ಲೈನ್ ಮೇಲಿದ್ದಾನೆ. ಅವನಿಗೂ ಹೇಳುತ್ತೇನೆ. ಮತ್ತೆ ಮಾತಾಡೋಣ, ಎಂದು ಟ್ರಂಪ್ ಮೋದೀಜೀ ಲೈನ್ ಕಟ್ ಮಾಡಿದರು. ಮುನೀರನ ಲೈನಿಗೆ ಬಂದರು.

ಹಲೋ, ಮುನೀರ್ ಮಿಯ್ಯಾ, ವೋ ಕಾಮ್ ಹೋಗಯಾ. ಕದನ ವಿರಾಮ್ ಕೋ ಕದನ ವಿಬಾಬರ್ ಚೇಂಜ್ ಕರೇಗಾ ಮೈ. ಅಬ್ಬಿ ಟ್ವೀಟ್ ಡಾಲ್ತಾ ಮೈ. ತುಮ್ ಹರಾಮ್ ಜಾದೆ ಪಾಕಿಸ್ತಾನಿ ಗೋಲಿ ಬಾರಿ ಬಂದ್ ಕರ್ನೇಕಾ. ಸಮಜಾ ನಾ?? ಎಂದು ಮುನೀರನಿಗೆ ಧಮ್ಕಿ ಹಾಕಿದರು.

ಕದನ ವಿರಾಮದ ರಾಮ ಹೋದ ಅಂದುಕೊಂಡರೆ ಈ ಬೋಳಿಮಗ ಹರಾಮ್ ಜಾದೆ ಅಂದುಬಿಟ್ಟ. ಇಲ್ಲೂ ಮತ್ತೆ ರಾಮ. ಹಾಳಾಗಲಿ. ರೊಕ್ಕ ಅವರೇ ಕೊಡಬೇಕು. ಹಾಗಾಗಿ ಏನೇ ಅಂದರೂ ಅನ್ನಿಸಿಕೊಳ್ಳಬೇಕು, ಎಂದುಕೊಂಡ ಮುನೀರ್.

ಓಕೆ ಜನಾಬ್. ಓಕೆ ಜನಾಬ್. ಗೋಲಿ ಬಾರ್ ಅಬ್ ಬಂದ್. ಬಿಲ್ಕುಲ್ ಹೋಗಾ ನಹಿ ಸಾಬ್. ಖುದಾ ಹಾಫೀಜ್ ಎಂದು ಫೋನಿಟ್ಟ.

ಅಂತೂ ಕದನ ವಿರಾಮದ ಉಲ್ಲಂಘನೆಯಿಂದ ಟ್ರಂಪ್ ಅವರಿಗೆ ಪಲ್ಲಂಗ ಹತ್ತಲಾಗದೇ ಪಲ್ಲಂಗನೆ ಆಗಿಹೋಗಿತ್ತು. ಬಾಯಲ್ಲಿ ಒಂದು ಪಲ್ಲಂಗ ತೋಡ್ ಪಾನಪಟ್ಟಿ ವಿತ್ ಎಕಸ್ಟ್ರಾ ಲವಂಗ ಹೆಟ್ಟಿಕೊಂಡ ಟ್ರಂಪ್ ಪ್ಲವಂಗದಂತೆ (ಮಂಗ್ಯಾನಂತೆ) ಪಣಂಗನೆ ಪಲ್ಲಂಗಕ್ಕೆ ಹಾರಿದವರೇ ಟ್ವೀಟ್ ಮಾಡಿಯೇಬಿಟ್ಟರು. ಟ್ವೀಟ್ ಮಾಡಿದವರೇ ಪಲ್ಲಂಗ ತೋಡ್ ಪ್ರೋಗ್ರಾಮಿನಲ್ಲಿ ತೊಡಗಿಬಿಟ್ಟರು. ಈಕಡೆಯ ಖಬರೇ ಇಲ್ಲ. ಅಷ್ಟು ಮಗ್ನ ಅವರು ಪಲ್ಲಂಗ ತೋಡ್ ಕಾರ್ಯಕ್ರಮದಲ್ಲಿ. ಪಲ್ಲಂಗ ತೋಡ್ ಪಾನಪಟ್ಟಿ ಅದೂ ವಿತ್ ಎಕಸ್ಟ್ರಾ ಲವಂಗ ಫ್ರಾಮ್ ಮಾಳಮಡ್ಡಿ ಶಶಿ ಪಾನ್ ಶಾಪ್ ಅಂದರೆ ಸುಮ್ಮನೇನೇ!?

ಹೊರಬಂತು ಟ್ವೀಟ್.

ಕದನ ವಿ'ರಾಮ'ವನ್ನು ಕದನ ವಿ'ಬಾಬರ್' ಎಂದು ಬದಲಾವಣೆ ಮಾಡಲಾಗಿದೆ. ಪಾಕಿಸ್ತಾನ ಭಾರತ ಇಬ್ಬರೂ ಕಟ್ಟುನಿಟ್ಟಿನಿಂದ ಪಾಲಿಸಬೇಕು. 

ಟ್ವೀಟ್ ಬಂದಿದ್ದೇ ಬಂದಿದ್ದು. ಮಾಶಾ ಅಲ್ಲಾ. ಸುಬಾನಲ್ಲಾ. ಅಮ್ಮೀನ್. ಸುಮ್ಮಾಮೀನ್, ಎನ್ನುತ್ತಾ ಪಾಕಿಗಳು ಗೋಲಿ ಬಾರಿ ನಿಲ್ಲಿಸಿದರು. ವಿರಾಮದ ರಾಮ ಹೋಗಿ ವಿಬಾಬರದ ಬಾಬರ್ ಬಂದನಲ್ಲ. ಅಷ್ಟು ಸಾಕು ಎಂದರು.

ಏನೂ ಕದನ ವಿರಾಮದ ಬದಲೀ ಕದನ ವಿಬಾಬರ್!!?? ಅಸಾಧ್ಯ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಜೈ ಶ್ರೀರಾಮ್. ಜೈ ಬಜರಂಗ ಬಲಿ. ಡಿಜೆ ಡಿಜೆ ಡಿಜೆ ಡಿಜೆ ಹಿಂದೂ ಹಿಂದೂ ಹಿಂದೂ ಎನ್ನುತ್ತಾ ಡಿಜೆ ಹಾಕಿಕೊಂಡು ಹರ ಹರ ಮಹಾದೇವ ಅನ್ನುತ್ತಾ ಇತ್ತಕಡೆಯಿಂದ ಭಾರತದ ಸೈನಿಕರು, ನಾಗರಿಕರು ಗೋಲಿಬಾರಿ ಶುರು ಮಾಡಿಬಿಟ್ಟರು.

ಕದನ ವಿಬಾಬರ್ ಗೆ ಅಲ್ಲಿಗೆ ಎಳ್ಳು ನೀರು. ಕೃಷ್ಣಾರ್ಪಣಮಸ್ತು ! 

ಅಲ್ಲಿಗೆ ಅವರ ಗೋಲಿಯೂ ಖರ್ಚು. ಇವರ ಗೋಲಿಯೂ ಖರ್ಚು. 

ಮರುದಿನ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳ ಆರ್ಡರ್ ಎರಡೂ ಕಡೆಯಿಂದ ಬರಲಿದೆ ಎಂದು ಹರಾಮಕೋರ ಎಂದು ಹೆಸರಿಟ್ಟುಕೊಂಡು ರಾಮನ ಕಜಿನ್ ಬ್ರದರ್ ಎಂದು ತಿಳಿದುಕೊಂಡಿರುವ ಟ್ರಂಪ್ ಮಾತ್ರ ಸವಿನಿದ್ದೆಯಲ್ಲಿ ಗೊರಕೆ ಹೊಡೆಯುತ್ತಾ ಡೀಲ್ ಮಾಮಾ ಡೀಲ್ , ಬಿಲಿಯನ್ ಮೇಲೆ ಬಿಲಿಯನ್ ಡಾಲರ್ ರೊಕ್ಕದ ಕನಸಲ್ಲಿ ಫುಲ್ ಖುಷ್ ! 

🐒🐒🐒🐒😂😂😂😂

(ಹಾಸ್ಯಕ್ಕಾಗಿ ಬರೆದಿದ್ದು. ಯುದ್ಧವನ್ನು ಲಘುವಾಗಿ ತೆಗೆದುಕೊಂಡು ಲೇವಡಿ ಮಾಡುವ ಉದ್ದೇಶವಿಲ್ಲ. ಯುದ್ಧ ನಿಂತು ಶಾಂತಿ ನೆಲೆಸಲಿ.)

No comments: