Showing posts with label ವಿದೇಶ. Show all posts
Showing posts with label ವಿದೇಶ. Show all posts

Wednesday, August 05, 2020

ವಿದೇಶದಲ್ಲಿ ಸ್ವದೇಶಿ ಉಗ್ರರ ಉದ್ದೇಶಿತ ಹತ್ಯೆಗಳು...ಡ್ರೋನ್ ಕಾರ್ಯಾಚರಣೆಗಳು

ಜನರಲ್ ಡೇವಿಡ್ ಪೆಟ್ರೆಯಸ್ - ಅಮೇರಿಕಾ ಕಂಡ ಒಬ್ಬ ಮಹಾ ಸೇನಾನಾಯಕ. ಕೈಮೀರಿ ಹೋಗುತ್ತಿದ್ದ ಅಫ್ಘಾನಿಸ್ತಾನ್ ಮತ್ತು ಇರಾಕ್ ಯುದ್ಧಗಳನ್ನು ನಿಯಂತ್ರಿಸಿ, ಪರಿಸ್ಥಿತಿ ಅಮೇರಿಕಾಗೆ ಅನುಕೂಲಕರವಾಗುವಂತೆ ಮಾಡುವಲ್ಲಿ ಅವರದ್ದು ದೊಡ್ಡ ಪಾತ್ರವಿತ್ತು. ಅಧ್ಯಕ್ಷ ಬುಷ್ ಸಾಹೇಬರು ಶುರು ಮಾಡಿ, ರಾಡಿ ಎಬ್ಬಿಸಿದ್ದ ಯುದ್ಧಗಳನ್ನು ಒಂದು ರೀತಿಯಲ್ಲಿ ಮುಗಿಸಿ, ೨೦೦೮ ರ ಆರ್ಥಿಕ ಸಂಕಷ್ಟದಿಂದ ದಿವಾಳಿಯ ತುದಿಯಲ್ಲಿದ್ದ ಅಮೇರಿಕಾವನ್ನು ದುರಸ್ತಿ ಮಾಡುತ್ತೇನೆ ಎಂದು ಹೇಳಿಕೊಂಡೇ ಅಧ್ಯಕ್ಷ ಸ್ಥಾನಕ್ಕೆ ಬಂದಿದ್ದರು ಪ್ರೆಸಿಡೆಂಟ್ ಒಬಾಮಾ. ಅವರು ಜನರಲ್ ಡೇವಿಡ್ ಪೆಟ್ರೆಯಸ್ ಅವರು ಸೇನೆಯಲ್ಲಿ ಮಾಡಿದ ಕೆಲಸದಿಂದ ಬಹಳ ಸಂತುಷ್ಟರಾಗಿದ್ದರು. ಒಳ್ಳೆ ಕೆಲಸಕ್ಕೆ ಬಹುಮಾನವೆಂಬಂತೆ ಅಮೇರಿಕಾದ ಬೇಹುಗಾರಿಕೆ ಸಂಸ್ಥೆಯಾದ ಸಿಐಎ (ಸೆಂಟ್ರಲ್ ಇಂಟೆಲಿಜೆನ್ಸ್ ಏಜನ್ಸಿ) ಡೈರೆಕ್ಟರ್ ಪದವಿಗೆ ಪೆಟ್ರೆಯಸ್ ಅವರನ್ನು ೨೦೧೧ ರಲ್ಲಿ ನೇಮಕ ಮಾಡಿದರು.

ಹೊಸ ಹುದ್ದೆಯನ್ನು ವಹಿಸಿಕೊಳ್ಳುವ ಮೊದಲು ಪೆಟ್ರೆಯಸ್ ಮಾಜಿ ಸಿಐಎ ಮುಖ್ಯಸ್ಥ ಮೈಕಲ್ ಹೈಡೆನ್ ಅವರನ್ನು ಭೇಟಿಯಾಗಲು ಬಯಸಿದರು. ಮೈಕಲ್ ಹೈಡೆನ್ ಕೂಡ ಸೇನಾಧಿಕಾರಿಯೇ.  ನೌಕಾದಳದಲ್ಲಿದ್ದರು. ನಂತರ ಹಲವಾರು ಉನ್ನತ ಹುದ್ದೆಗಳ ಬಳಿಕ ಜಾರ್ಜ್ ಬುಷ್ ಕಾಲದಲ್ಲಿ ಸಿಐಎ ಸಂಸ್ಥೆಯ ನಿರ್ದೇಶಕರಾಗಿದ್ದರು. ಒಬಾಮಾ ಸರ್ಕಾರ ಬಂದಾಗ ಸಂಪ್ರದಾಯದಂತೆ ಸರ್ಕಾರದ ಹಿರಿತಲೆಗಳೆಲ್ಲ ಬದಲಾಗಿದ್ದವು. ಮೈಕಲ್ ಹೈಡೆನ್ ಸಹ ತಮ್ಮ ಪದವಿ ಬಿಟ್ಟು ಹೋಗಿದ್ದರು. ಅಂತಹ ಮಾಜಿ ಸಿಐಎ ಮುಖ್ಯಸ್ಥನನ್ನು ಅಧಿಕಾರ ವಹಿಸಿಕೊಳ್ಳಲಿರುವ ಡೇವಿಡ್ ಪೆಟ್ರೆಯಸ್ ಭೇಟಿಯಾಗಲು ಉತ್ಸುಕರಾಗಿದ್ದರು. ಇಬ್ಬರೂ ಮೊದಲಿಂದಲೂ ಪರಿಚಿತರು ಮತ್ತು ಸ್ನೇಹಿತರು ಕೂಡ ಆಗಿದ್ದರು.

ಮೈಕಲ್ ಹೈಡೆನ್ ಅವರ ಮನೆಯಲ್ಲಿ ಬೆಳಗಿನ ಉಪಹಾರಕ್ಕೆಂದು ಇಬ್ಬರೂ ಸೇರಿದ್ದರು. ಅಲ್ಲಿಯವರೆಗೆ ಕೇವಲ ಸೈನ್ಯದಲ್ಲಿ ಮಾತ್ರ ಕೆಲಸ ಮಾಡಿದ್ದ ಡೇವಿಡ್ ಪೆಟ್ರೆಯಸ್ ಅವರಿಗೆ ಸಿಐಎ ಎಂಬ ಸಂಕೀರ್ಣ ಸಂಸ್ಥೆಯ ಒಳಸುಳಿಗಳ ಬಗೆಗಿನ ಸೂಕ್ಷ್ಮ ಮಾಹಿತಿಗಳನ್ನು ಹೈಡನ್ ನೀಡಿದರು. ಸಿಐಎ ಅಂದರೆ ಸೈನ್ಯವಲ್ಲ. ಸೈನ್ಯದಲ್ಲಾದರೆ ಸ್ಪಷ್ಟವಾದ ಶ್ರೇಣಿ ವ್ಯವಸ್ಥೆ ಇರುತ್ತದೆ. ಬೂಟು ಕುಟ್ಟಿ ಸಲ್ಯೂಟ್ ಹೊಡೆಯುತ್ತಾರೆ. ಮಾಡಿದ ಆಜ್ಞೆ ಪಾಲಿಸುತ್ತಾರೆ. ಆದರೆ ಸಿಐಎ ಅಂದರೆ ಅದೊಂದು ದೊಡ್ಡ ಕಾರ್ಪೊರೇಟ್ ಕಂಪನಿಯನ್ನು ಸಂಬಾಳಿಸಿದ ಹಾಗೆ. ಬೇರೆ ಬೇರೆ ತಲೆಗಳಿಗೆ ಬೇರೆ ಬೇರೆ ಎಣ್ಣೆ ತಿಕ್ಕಿ ಕೆಲಸ ತೆಗೆಯಬೇಕು. ಸಿಐಎ ವಿಶ್ಲೇಷಕರಲ್ಲಿ ಅನೇಕರು ದೊಡ್ಡ ಬುದ್ಧಿವಂತರು. ಹಾಗಾಗಿ ಕೊಂಚ ವಿಭಿನ್ನ ಸ್ವಭಾವದವರೂ ಸಹ. ತುಂಬಾ ಕಾಳಜಿಯಿಂದ ಸಂಬಾಳಿಸಿಕೊಂಡು ಹೋಗಿ ಎನ್ನುವ ಕಿವಿಮಾತುಗಳನ್ನು ಮಾಜಿ ಸಿಐಎ ಮುಖ್ಯಸ್ಥ ಹೈಡೆನ್ ಹೊಸ ಸಿಐಎ ಮುಖ್ಯಸ್ಥ ಪೆಟ್ರೆಯಸ್ ಅವರಿಗೆ ತಿಳಿಸಿದ್ದರು.

ಸಿಐಎ ಎಂಬ ಸಂಸ್ಥೆ ಮತ್ತೊಂದು ಸೈನ್ಯವಾಗುತ್ತಿದೆ. ಆದರೆ ಅದು ಸಿಐಎ ಕೆಲಸವಲ್ಲ. ಉದ್ದೇಶಿತ ಹತ್ಯೆಗಳು (targeted killings) ಮತ್ತು ರಹಸ್ಯ ಕಪ್ಪು ಕಾರ್ಯಾಚರಣೆಗಳು (black covert operations) ಸಿಐಎ ಸಂಸ್ಥೆಯ ಹೆಚ್ಚಿನ ವೇಳೆ ಮತ್ತು ಸಂಪನ್ಮೂಲಗಳನ್ನು ಖಾಲಿ ಮಾಡುತ್ತಿವೆ. ಎರಡನೇ ಮಹಾಯುದ್ಧದ ಸಮಯದಲ್ಲಾದರೂ ಸಿಐಎ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೇನೆಯ ತರಹ ವರ್ತಿಸಿತ್ತೋ ಇಲ್ಲವೋ ಗೊತ್ತಿಲ್ಲ. ಸಿಐಎ ಇದೇ ತರಹ ಉದ್ದೇಶಿತ ಹತ್ಯೆಗಳು ಮತ್ತು ಕಪ್ಪು ಕಾರ್ಯಾಚರಣೆಗಳಲ್ಲಿಯೇ ತೊಡಗಿಸಿಕೊಂಡರೆ ಮುಂದೊಂದು ದಿನ ಸಿಐಎ ತನ್ನ ಮೂಲಭೂತ ಧ್ಯೇಯವಾದ ಬೇಹುಗಾರಿಕೆಯನ್ನೇ ಮರೆತುಬಿಟ್ಟೀತು. ಎಚ್ಚರ! ಎಂದು ಎಚ್ಚರಿಸಿದ್ದರು ಹೈಡೆನ್.

ದೂರ ಕುಳಿತು ಹಾರಿಸಬಹುದಾದಂತಹ ಡ್ರೋನುಗಳು ಸಿಐಎ ತಂತ್ರಜ್ಞರ ಕೈಗೆ ಬಂದಿದ್ದೇ ಬಂದಿದ್ದು ಮಕ್ಕಳ ಕೈಯಲ್ಲಿ ಹೊಸ ಆಟಿಕೆ ಬಂದಂತಾಗಿತ್ತು. ದೂರದ ದೇಶಗಳಲ್ಲಿ ಎಲ್ಲೆಲ್ಲೋ ಓಡಾಡಿಕೊಂಡಿದ್ದ ಉಗ್ರರನ್ನು ಜಿಪಿಎಸ್ ಬಳಸಿ ಟ್ರ್ಯಾಕ್ ಮಾಡುವುದು, ಕಂಪ್ಯೂಟರ್ ಪರದೆ ಮೇಲೆ ಅವರನ್ನು ಅಟ್ಟಿಸಿಕೊಂಡು ಹೋಗುವುದು, ಬರೋಬ್ಬರಿ ನಿಶಾನೆಯಲ್ಲಿ ಬಂದಾಗ ಸಾವಿರಾರು ಮೈಲು ದೂರದಿಂದ ಬಟನ್ ಒತ್ತುವದು. ಡ್ರೋನಿನಿಂದ ಒಂದು hellfire ಮಿಸೈಲ್ ಚಿಮ್ಮುತ್ತದೆ. ಉಗ್ರ ಮತ್ತು ಸಹಚರರ ಕಾರವಾನಿಗೆ ಕಾರ್ವಾನನ್ನೇ ನಾಶಮಾಡಿಬಿಡುತ್ತದೆ. ಅದನ್ನು ನೋಡಿ ವಿಡಿಯೋ ಗೇಮ್ ಗೆದ್ದ ಸಂತಸದಲ್ಲಿ ಮಕ್ಕಳು ಚಪ್ಪಾಳೆ ತಟ್ಟಿದಂತೆ ಸಂಭ್ರಮಿಸುತ್ತಾರೆ ಗೇಮ್ ಬಾರಿಸಿದ್ದ ತಂತ್ರಜ್ಞರು. ಹೀಗೇ ಮುಂದುವರೆದರೆ ಸಿಐಎ ಎಂಬುದು ಕೊಲ್ಲುವ ಯಂತ್ರವಾಗಿಬಿಟ್ಟೀತು (killing machine) ಎಂದು ಎಚ್ಚರಿಸಿದ್ದರು ಮಾಜಿ ಮುಖ್ಯಸ್ಥ ಹೈಡೆನ್.

ಎಲ್ಲಾ ಕೇಳಿಸಿಕೊಂಡ ಪೆಟ್ರೆಯಸ್ ಧನ್ಯವಾದ ಅರ್ಪಿಸಿ ನಿರ್ಗಮಿಸಿದರು. ಹೊಸ ಹುದ್ದೆಯನ್ನು ಹೇಗೆ ಯಶಸ್ವಿಯಾಗಿ ನಿಭಾಯಿಸಬೇಕು? ಅಂತರಾಳದಲ್ಲಿ ಸಿಐಎ ಅಷ್ಟೊಂದು ಬದಲಾಗಿದೆಯೇ? ಮೂಲ ಉದ್ದೇಶವಾದ ಬೇಹುಗಾರಿಕೆ ಪಕ್ಕಕ್ಕೆ ಹೋಗಿ ಉದ್ದೇಶಿತ ಹತ್ಯೆಗಳು ಅವುಗಳ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆಯೇ? ಎನ್ನುವ ವಿಚಾರಗಳು ಅವರ ತಲೆಯಲ್ಲಿ.

ಅಂದು ಪೆಟ್ರೆಯಸ್ ಅವರಿಗೇ ಗೊತ್ತಿರಕ್ಕಿಲ್ಲ, ಕೆಲವೇ ದಿವಸಗಳಲ್ಲಿ ಅವರೊಂದು ಐತಿಹಾಸಿಕ ನಿರ್ಧಾರ ಕೈಗೊಳ್ಳಲಿದ್ದರು. ಅದನ್ನು ಅಧ್ಯಕ್ಷ ಒಬಾಮಾ ತುಂಬು ಹೃದಯದಿಂದ ಅನುಮೋದಿಸಲಿದ್ದರು. ಇಡೀ ಅಮೇರಿಕಾದ ಅಧಿಕಾರಶಾಹಿಗೇ ಅದೊಂದು ಅಭೂತಪೂರ್ವ ನಿರ್ಧಾರವಾಗಲಿತ್ತು. ಇಡೀ ದೇಶಕ್ಕೆ ಸಾಕಷ್ಟು ವಿವರಣೆ ಕೊಡುವ ಪ್ರಸಂಗ ಬರಬಹುದಿತ್ತು. ಎಲ್ಲ ಕಪ್ಪು ಕಾರ್ಯಾಚರಣೆಗಳ ಹಾಗೆ ಅದನ್ನು ಗೌಪ್ಯವಾಗಿ ಇಡಲು ಸಾಧ್ಯವಿರಲಿಲ್ಲ. ಇಷ್ಟೆಲ್ಲಾ ತಲೆಬಿಸಿ ಏಕೆಂದರೆ....ಮೊಟ್ಟ ಮೊದಲ ಬಾರಿಗೆ ಅಮೇರಿಕಾ ತನ್ನ ದೇಶದ ನಾಗರಿಕನೊಬ್ಬನನ್ನು ಉದ್ದೇಶಿತ ಹತ್ಯೆಯ ಮೂಲಕ ಕೊಲ್ಲಲಿತ್ತು. ಸ್ವಂತ ದೇಶದ ನಾಗರಿಕನಾದರೂ ಅವನನ್ನು ಕೊಲ್ಲಲೇಬೇಕಾಗಿತ್ತು. ಏಕೆಂದರೆ ಅವನೊಬ್ಬ ಅಲ್-ಕೈದಾ ಉಗ್ರನಾಗಿದ್ದ. ತುಂಬಾ ಖತರ್ನಾಕ್ ಉಗ್ರನಾಗಿದ್ದ.

ಶ್ವೇತಭವನದ ನೆಲಮಾಳಿಗೆಯಲ್ಲಿ ಕಚೇರಿ ಹೊಂದಿದ್ದ counter terrorism ಮುಖ್ಯಸ್ಥ ಜಾನ್ ಬ್ರೆನ್ನನ್ ಹತ್ಯಾಪಟ್ಟಿಯನ್ನು (kill list) ಸಂಬಾಳಿಸುತ್ತಿದ್ದರು. ಯಾರನ್ನು ಆ ಪಟ್ಟಿಗೆ ಸೇರಿಸಬೇಕು, ಯಾರನ್ನು ತೆಗೆಯಬೇಕು, ಯಾರನ್ನು ಪಟ್ಟಿಯಲ್ಲಿ ಮೇಲೆ ಕೆಳಗೆ ಮಾಡಬೇಕು ಅನ್ನುವ ಮಾಹಿತಿಯನ್ನು ಬರೋಬ್ಬರಿ ಸಂಗ್ರಹಿಸಿಟ್ಟುಕೊಳ್ಳುವುದೇ ಅವರ ಕೆಲಸ. ಮುಂದೆ ಅವರೂ ಕೂಡ ಸಿಐಎ ಮುಖ್ಯಸ್ಥರಾದರು. ಅದು ಬೇರೆ ಮಾತು ಬಿಡಿ.

ಡೇವಿಡ್ ಪೆಟ್ರೆಯಸ್ ಸಿಐಎ ಮುಖ್ಯಸ್ಥರಾಗಿ ಬರುವ ಹೊತ್ತಿಗೆ ಹತ್ಯಾಪಟ್ಟಿಯ ಮೊದಲನೇ ಸ್ಥಾನದಲ್ಲಿದ್ದವನು ಉದ್ದವಾಗಿ ಗಡ್ಡ ಬಿಟ್ಟುಕೊಂಡಿದ್ದ ಒಬ್ಬ ಇಸ್ಲಾಮಿಕ್ ಪ್ರವಚನಕಾರ. ಅಷ್ಟೊತ್ತಿಗಾಗಲೇ  ಒಸಾಮಾ ಬಿನ್ ಲಾಡೆನ್ನಿಗೆ ಒಂದು ಗತಿ ಕಾಣಿಸಿಯಾಗಿತ್ತು. ಒಸಾಮಾ ಬಿನ್ ಲಾಡೆನ್ ಕಾರ್ಯಾಚರಣೆಯ ನಂತರ ಪಾಕಿಸ್ತಾನದಲ್ಲಿ ಅಲ್ಲಲ್ಲಿ ಕಂಡ ಅಲ್-ಖೈದಾ ಉಗ್ರರನ್ನು ಡ್ರೋನ್ ಮೂಲಕ ಸಂಹಾರ ಮಾಡಿಯಾಗಿತ್ತು. ಒಂದು ಅರ್ಥದಲ್ಲಿ ಪಾಕಿಸ್ತಾನವನ್ನು ಸ್ವಚ್ಛ ಮಾಡಿಯಾಗಿತ್ತು. ಒಂದು ಅರ್ಥದಲ್ಲಿ ಅದು 'ಸ್ವಚ್ಛ ಪಾಕಿಸ್ತಾನ' ಅಭಿಯಾನ, ಅಮೇರಿಕಾದ ದೃಷ್ಟಿಯಲ್ಲಿ.

ಅಮೇರಿಕಾದ ಗಮನ ನಂತರ ತಿರುಗಿದ್ದು ಅರೇಬಿಯನ್ ದ್ವೀಪಕಲ್ಪದಲ್ಲಿರುವ (Arabian Peninsula) ಯೆಮೆನ್ ದೇಶದತ್ತ. ಮೊದಲೇ ಅರಾಜಕತೆ ಮತ್ತು ಅಂತರ್ಯುದ್ಧದಲ್ಲಿ ಮುಳುಗಿಹೋಗಿರುವ ದೇಶ ಯೆಮೆನ್. ಉಗ್ರರ ಬೀಡು. ಅಂತಹ ದೇಶದಲ್ಲಿದ್ದ ಅಮೇರಿಕಾದ ಹತ್ಯಾಪಟ್ಟಿಯ ಅಗ್ರಸ್ಥಾನ ಅಲಂಕರಿಸಿದ್ದ ಉಗ್ರ, ಪ್ರವಚನಕಾರ - ಅನ್ವರ್ ಅಲ್-ಅವಲಾಕಿ. ಅವನಿಗೆ ಒಂದು ಬರೋಬ್ಬರಿ ಮುಹೂರ್ತವಿಡಬೇಕಾಗಿತ್ತು.

ಈ ಅನ್ವರ್ ಅಲ್-ಅವಲಾಕಿಯದು ವಿಚಿತ್ರ ಪಯಣ. ಅಮೇರಿಕಾದಲ್ಲೇ ಹುಟ್ಟಿದ್ದ ನಾಗರಿಕ ಇವನು. ಬೇರೆ ದೇಶದಲ್ಲಿ ಹುಟ್ಟಿ, ನಂತರ ವಲಸೆ ಬಂದು, ಎಷ್ಟೋ ವರ್ಷಗಳ ನಂತರ ಅಮೇರಿಕಾದ ಪೌರತ್ವ ಪಡೆದವರಲ್ಲಿ ಕೆಲವರು ಉಗ್ರರಾಗಿರುವುದು ಉಂಟು. ಆದರೆ ಅಮೇರಿಕಾದಲ್ಲೇ ಹುಟ್ಟಿ, ಇಲ್ಲೇ ಬೆಳೆದು ದೊಡ್ಡವನಾದ ಮನುಷ್ಯನೊಬ್ಬ ಉಗ್ರನಾಗುತ್ತಾನೆ ಮತ್ತು ದೂರದ ಯೆಮೆನ್ ದೇಶಕ್ಕೆ ಹೋಗಿ ದಾಂಗುಡಿಯಿಟ್ಟು ಹುಟ್ಟಿದ ನಾಡಿಗೇ ಕಂಟಕವಾಗಿದ್ದವರಲ್ಲಿ ಇವನೇ ಮೊದಲನೆಯವನು ಇರಬೇಕು.

ಅನ್ವರ್ ಅಲ್-ಅವಲಾಕಿ ೧೯೭೧ ರಲ್ಲಿ ಅಮೇರಿಕಾದ ನ್ಯೂ ಮೆಕ್ಸಿಯೋ ರಾಜ್ಯದಲ್ಲಿ ಜನಿಸಿದ. ಅವನ ತಂದೆ ನಾಸೀರ್ ಅಲ್-ಅವಲಾಕಿ ನ್ಯೂ ಮೆಕ್ಸಿಕೋ ವಿಶ್ವವಿದ್ಯಾಲಯದಲ್ಲಿ ಕೃಷಿ ಅರ್ಥಶಾಸ್ತ್ರವನ್ನು ಓದಿಕೊಂಡಿದ್ದ. ಓದು ಮುಗಿಸಿದ ತಂದೆ ತನ್ನ ದೇಶವಾದ ಯೆಮನ್ ದೇಶಕ್ಕೆ ಹಿಂತಿರುಗಿದ. ದೊಡ್ಡ ದೊಡ್ಡ ಹುದ್ದೆಗಳಲ್ಲಿ ಕೆಲಸ ಮಾಡಿದ. ಯೆಮೆನ್ ದೇಶದ ಅಧ್ಯಕ್ಷ ಸಾಲೇಹ್ ಅವರ ಅವಧಿಯಲ್ಲಿ ಕೃಷಿ ಮಂತ್ರಿ ಕೂಡ ಆಗಿದ್ದ.

ಅಮೇರಿಕಾದಲ್ಲಿ ಹುಟ್ಟಿದ್ದರಿಂದ ಅಮೇರಿಕನ್ ಪೌರತ್ವ ಸಹಜವಾಗಿ ಅನ್ವರ್ ಅಲ್-ಅವಲಾಕಿಗೆ ದೊರಕಿತ್ತು. ೧೯೯೦ ರ ಸಮಯದಲ್ಲಿ ಅನ್ವರ್  ಅಲ್-ಅವಲಾಕಿ ಮಾತೃಭೂಮಿ ಅಮೇರಿಕಾಗೆ ವಾಪಸ್ ಬಂದ. ಕೊಲೊರಾಡೊ ವಿಶ್ವವಿದ್ಯಾಲಯದಲ್ಲಿ ಪದವಿಗೆ ಸೇರಿಕೊಂಡ. ಅಲ್ಲಿನ ಮುಸ್ಲಿಂ ಸಮುದಾಯದ ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾದ. ಆದರೆ ಅದು ಬೇಡವೆಂದು ಬಿಟ್ಟುಬಿಟ್ಟ. ಅವನಿಗೆ ಅವರ ಕಟ್ಟಲೆಗಳು ಅಂದು ತುಂಬಾ ಕಟ್ಟರ್ ಎನಿಸಿದ್ದವು. ಒಂದು ಹೆಂಡವಿಲ್ಲ, ಹುಡುಗಿಯಿಲ್ಲ...ಹೀಗೆ ಮಜಾ ಇಲ್ಲ ಅಂದ ಮೇಲೆ ಯಾವನಿಗೆ ಬೇಕ್ರೀ ಈ ಮುಸ್ಲಿಂ ವಿದ್ಯಾರ್ಥಿವೃಂದದ ನಾಯಕತ್ವ ಎಂದು ಅದನ್ನು ತಿರಸ್ಕರಿಸಿದ್ದ. ಇಂತಹ so called ಆಧುನಿಕ ಮನಸ್ಥಿತಿಯ ಮುಸ್ಲಿಂ ಯುವಕ ಮುಂದೊಂದು ದಿನ ಕಟ್ಟರ್ ಉಗ್ರನಾಗುತ್ತಾನೆ ಮತ್ತು ಹತ್ಯಾಪಟ್ಟಿಯ ಅಗ್ರಸ್ಥಾನ ಅಲಂಕರಿಸುತ್ತಾನೆ ಎಂದು ಯಾರೂ ಊಹಿಸಿರಲಿಕ್ಕಿಲ್ಲ.

ಡಿಗ್ರಿ ಮುಗಿಯುವ ಹೊತ್ತಿಗೆ ಬದಲಾಗಿದ್ದ ಅವಲಾಕಿ. ಡಿಗ್ರಿ ಮುಗಿಸಿದ ಬಳಿಕ ಸರಿಯಾದ ನೌಕರಿ ಹಿಡಿಯುವ ಬದಲು ಕೊಲೊರಾಡೊ ರಾಜ್ಯದ ಫೋರ್ಟ್ ಕಾಲಿನ್ಸ್ ನಗರದ ಮಸೀದಿಯಲ್ಲಿ ಪ್ರವಚನಕಾರನಾಗಿ ಕೆಲಸ ಶುರು ಮಾಡಿದ. ಯೆಮೆನ್ ದೇಶದಲ್ಲಿದ್ದ ತಂದೆ ಉರಿದುಕೊಂಡ. ಸರಿಯಾದ ನೌಕರಿ ಮಾಡು ಎಂದು ಉಪದೇಶ ಮಾಡಿದ. ಮಗ ಕೇಳಲಿಲ್ಲ. ಪ್ರವಚನಕಾರನಾಗಿ ತಕ್ಕ ಮಟ್ಟಿನ ಅನುಭವ ಪಡೆದುಕೊಂಡ ಅನ್ವರ್ ಅಲ್-ಅವಲಾಕಿಗೆ ಪ್ರಮೋಷನ್ ದೊರೆಯಿತು. ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯೇಗೋ ನಗರಕ್ಕೆ ಹೊರಟುಬಿಟ್ಟ. ಅಲ್ಲಿನ ಮಸೀದಿಯೊಂದರಲ್ಲಿ ಇಮಾಮ್ ಎಂದು ನೇಮಕಗೊಂಡಿದ್ದ.

ನಿಧಾನವಾಗಿ ಆತನ ವಿಚಾರಗಳು ಕಟ್ಟರ್ ಇಸ್ಲಾಮಿನತ್ತ ತಿರುಗಲಾರಂಭಿಸಿದ್ದವು. ಇಸ್ಲಾಂ ಹೇಳುವಂತೆ ಎಲ್ಲರೂ ಪರಿಶುದ್ಧವಾದ ಜೀವನವನ್ನು ನಡೆಸಬೇಕು ಎಂದು ಭಯಂಕರವಾಗಿ ಉಪದೇಶ ಕುಟ್ಟುತ್ತಿದ್ದ. ಅವನ ಖುದ್ದು ಜೀವನ ನೋಡಿದರೆ ಮಾತ್ರ...ವೇದಾಂತ ಹೇಳಲು ಆದರೆ ತಿನ್ನುವುದು ಮಾತ್ರ ಬದನೇಕಾಯಿ ಎನ್ನುವಂತಾಗಿತ್ತು. ನಾಲ್ಕಾರು ಸಲ ಪೊಲೀಸರು ಎತ್ತಾಕಿಕೊಂಡು ಹೋಗಿದ್ದರು. ಏಕೆಂದರೆ ಅಂತಹ ಪವಿತ್ರ ಇಮಾಮ್ ಸಾಹೇಬರು ರಸ್ತೆ ಮೇಲೆ ಬೀದಿ ವೇಶ್ಯೆಯರೊಂದಿಗೆ ಚೌಕಾಸಿ ಮಾಡುತ್ತಾ ಕೂತುಬಿಟ್ಟಿದ್ದರು. ಪೊಲೀಸರು ರೂಟೀನಾಗಿ ದಂಡ ಹಾಕಿ ಎಚ್ಚರಿಕೆ ಕೊಟ್ಟು ಕಳಿಸಿದ್ದರು.

ಆದರೆ ೧೯೯೯ ರಲ್ಲಿ ಕೇಂದ್ರ ತನಿಖಾ ಸಂಸ್ಥೆ FBI ಅನ್ವರ್ ಅಲ್-ಅವಲಾಕಿಯ ಮೇಲೆ ಒಂದು ನಜರ್ ಮಡಗಿತು. ಈ ಇಮಾಮ್ ಯಾಕೋ ಖತರ್ನಾಕ್ ಆಗುತ್ತಿದ್ದಾನೆ ಮತ್ತು ಉಗ್ರರ ಸಂಪರ್ಕಕ್ಕೆ ಬರುತ್ತಿದ್ದಾನೆ ಎನ್ನುವ ಸುಳಿವು ಹತ್ತಿತ್ತು. ಏಕೆಂದರೆ ೯/೧೧ ರ ದಾಳಿಯಲ್ಲಿ ಪಾಲ್ಗೊಂಡ್ದಿದ್ದ ಇಬ್ಬರು ಉಗ್ರರಾದ ಖಾಲಿದ್ ಅಲ್-ಮಿಧಾರ್ ಮತ್ತು ನವಾಫ್ ಅಲ್ - ಹಜ್ಮಿ ಈ ಇಮಾಮನ ಮಸೀದಿಗೇ ಪ್ರಾರ್ಥನೆಗೆ ಬರುತ್ತಿದ್ದರು. ೯/೧೧ ರ ಉಗ್ರರಿಗೇ ಪ್ರವಚನ ಮಾಡಿದ್ದ ಕಿಲಾಡಿ ಈತ. ಅವನಿಗೆ ಅಂದು ಅದು ಗೊತ್ತಿರಲಿಕ್ಕಿಲ್ಲ ಬಿಡಿ.

FBI ತನಿಖೆ ಮಾಡಿದರೂ ಇವನ ಮೇಲೆ ಕ್ರಮ ಕೈಗೊಳ್ಳಬೇಕಾಗುವಂತಹ ಯಾವುದೇ ಪುರಾವೆ ಸಿಗಲಿಲ್ಲ. ೯/೧೧ ರ ದಾಳಿಯಾಗುವ ಹೊತ್ತಿಗೆ ಈತ ಅಮೇರಿಕಾದ ಪೂರ್ವತೀರಕ್ಕೆ ಹೋಗಿದ್ದ. ಉತ್ತರ ವರ್ಜೀನಿಯಾ ಭಾಗದ ಮಸೀದಿಯೊಂದರಲ್ಲಿ ಇಮಾಮ್ ಆಗಿ ಕೆಲಸಮಾಡಿಕೊಂಡಿದ್ದ.

ಅಷ್ಟೊತ್ತಿಗೆ ಪ್ರವಚನದ ಕಲೆ ಸಿದ್ಧಿಸಿತ್ತು. ಸ್ವಾರಸ್ಯಕರವಾಗಿ ವಿನೋದಭರಿತವಾಗಿ ಪ್ರವಚನ ಮಾಡುತ್ತಿದ್ದ. ಪ್ರಸಿದ್ಧನೂ ಆದ. ೯/೧೧ ರ ನಂತರ ಅಮೇರಿಕಾದಲ್ಲಿ ಇಸ್ಲಾಮ್ ಬಗ್ಗೆ ಒಂದು ತರಹದ ಭಯಮಿಶ್ರಿತ ಕುತೂಹಲ. ಇಸ್ಲಾಮ್ ಧರ್ಮವನ್ನು ಸ್ವಾರಸ್ಯಕರವಾಗಿ ವಿಶ್ಲೇಷಣೆ ಮಾಡಬಲ್ಲ ಜನರಿಗೆ ಸಾಕಷ್ಟು ಬೇಡಿಕೆ. ಇವನಿಗೂ ಬೇಡಿಕೆ ಬಂತು. ಆಗಾಗ ದೊಡ್ಡ ದೊಡ್ಡ ಪತ್ರಿಕೆಗಳ ವರದಿಗಾರು, ಟೀವಿ ಸುದ್ದಿಗಾರರು ಇವನಿಗೆ ಫೋನ್ ಮಾಡಿ ಬೈಟ್ಸ್ ಕೇಳುತ್ತಿದ್ದರು.

ನಾವು ಅಮೇರಿಕಾಗೆ ಬಂದಿದ್ದು 'ಬೆಳೆಸಲಿಕ್ಕೆ ಹೊರತೂ ಬೀಳಿಸಲಿಕ್ಕಲ್ಲ' ಎಂದು ದೊಡ್ಡದಾಗಿ ಪುಂಗಿದ. ವಿಶ್ವದ ಒಂದು ಬಿಲಿಯನ್ ಮುಸ್ಲಿಮರ ಮತ್ತು ಅಮೇರಿಕನ್ನರ ನಡುವೆ ಸೇತುವೆಯಾಗೋಣ ಎಂದ.

೯/೧೧ ರ ನಂತರ ಅಮೇರಿಕಾದ ಅಧಿಕಾರಶಾಹಿ ಸಂಶಯ ಬಂದ ಎಲ್ಲ ಸಂಘ ಸಂಸ್ಥೆಗಳ ಮೇಲೆ ಮುರ್ಕೊಂಡು ಬಿತ್ತು. ಸಮಗ್ರವಾಗಿ ತನಿಖೆ ಮಾಡಲು ಹೊರಟಿತು. ಹಾಗೆ ಮಾಡಿದ್ದು ಇಲಿಗಳ ಬಿಲಗಳ ಬುಡದಲ್ಲಿ ಮೆಣಸಿನ ಹೊಗೆ ಹಾಕಿದಂತಾಯಿತು. ಆ ಘಾಟಿಗೆ ಇಲಿಗಳೂ, ಹೆಗ್ಗಣಗಳೂ ಎಲ್ಲ ಪುತಪುತನೆ ಹೊರಬೀಳತೊಡಗಿದವು.

ತನ್ನ ಸಂಸ್ಥೆಗಳ ಬುಡಕ್ಕೆ ಬಂದಾಗ ಅನ್ವರ್ ಅಲ್-ಅವಲಾಕಿ ಕೂಡ ಕ್ರುದ್ಧನಾದ. ಮಾಡುತ್ತಿದ್ದ ಪ್ರವಚನಗಳ ಧಾಟಿ ಮತ್ತು ವಿಷಯ ಬದಲಾಯಿತು. ಸರ್ಕಾರದ ವಿರುದ್ಧ ಕೂಗಾಡಲು ಆರಂಭಿಸಿದ. ಅಮೇರಿಕಾ ಮುಸ್ಲಿಮರ ವಿರುದ್ಧ ಯುದ್ಧಕ್ಕೆ ನಿಂತಿದೆ ಎಂದುಬಿಟ್ಟ. ಅದು ಅವನ ಹತಾಶೆಯ ಉತ್ತುಂಗವಾಗಿತ್ತು ಎಂದು ಕಾಣುತ್ತದೆ.

ಅಮೇರಿಕಾದ ಸಹವಾಸ ಸಾಕಾಯಿತು ಎಂದೆನಿಸಿರಬೇಕು. ಸೀದಾ ಲಂಡನ್ನಿಗೆ ಹಾರಿಬಿಟ್ಟ. ಅಲ್ಲಿನ ಮಸೀದಿಯೊಂದರಲ್ಲಿ ಶುರುಮಾಡಿದ. ಮತ್ತದನ್ನೇ - ಬೆಂಕಿಯುಗುಳುವ ಪ್ರವಚನಗಳನ್ನು. ಲಂಡನ್ನಿನ ಪಡ್ಡೆ ಪೊರ್ಕಿಗಳೆಲ್ಲ ಇವನ ಭಾಷಣಗಳಿಂದ ಸಿಕ್ಕಾಪಟ್ಟೆ ಪ್ರಭಾವಿತರಾದರು. ಇವನ ಭಾಷಣಗಳ ಸೀಡಿ ಡಿಸ್ಕುಗಳ ಕಟ್ಟು ಬಿಸಿದೋಸೆಯಂತೆ ಮಾರಾಟವಾಯಿತು. ಆದರೂ ಇವನ ಊಟ ಬಟ್ಟೆಗೆ ಮಾತ್ರ ರೊಕ್ಕ ಕಮ್ಮಿಯೇ ಆಯಿತು.

ರೊಕ್ಕ ಕಮ್ಮಿಯಾಯಿತು, ೯/೧೧ ರ ನಂತರ ಎಲ್ಲ ದೇಶಗಳೂ ಕಟ್ಟರ್ ಇಸ್ಲಾಮಿಸ್ಟುಗಳನ್ನು ಟೈಟ್ ಮಾಡುತ್ತಿದ್ದರಿಂದ ಎಲ್ಲ ಕಡೆ ಬಹಳ ಹೀಟ್. ಹಾಗಾಗಿ ಹಳೆ ಗಂಡನ ಪಾದವೇ ಸರಿ ಎನ್ನುವ ಮಾದರಿಯಲ್ಲಿ ಮತ್ತೆ ಯೆಮೆನ್ ದೇಶಕ್ಕೇ ವಾಪಸ್ ಬಂದ. ಬಂದವನೇ ಒಂದು ಕಂಪ್ಯೂಟರ್ ತೆಗೆದುಕೊಂಡ. ಇಂಟರ್ನೆಟ್ ಸಂಪರ್ಕ ಹಾಕಿಸಿದ. ಕಂಪ್ಯೂಟರ್ ಮುಂದೆ ಕುಳಿತವ ಇಂಟರ್ನೆಟ್ ಮೇಲೆ ಸಿಗುವ ಅಸಂಖ್ಯಾತ ಚಾಟ್ ರೂಮುಗಳಲ್ಲಿ ಮತ್ತು ಯೂಟ್ಯೂಬ್ ಮೇಲೆ ವರ್ಚುಯಲ್ ಪ್ರವಚನ ಶುರುಮಾಡಿಬಿಟ್ಟ.

ಅನ್ವರ್ ಅಲ್-ಅವಲಾಕಿಯ ಪ್ರವಚನಗಳು ಇಂಗ್ಲಿಷ್ ಭಾಷೆಯಲ್ಲಿ ಇರುತ್ತಿದ್ದವು. ಬೇರೆ ಯಾವ ಭಾಷೆ ಮೇಲೂ ಅವನಿಗೆ ಪ್ರಭುತ್ವ ಇರಲಿಲ್ಲ. ಈ ಕಾರಣದಿಂದ, ಅವೆಷ್ಟೇ ಖಡಕ್ ಆಗಿದ್ದರೂ, ಬಹಳ ಜನರನ್ನು ತಲುಪಲಿಲ್ಲ. ಆದರೆ ಯಾರನ್ನು ತಲುಪಿದವೋ ಅವರಲ್ಲಿ ಕೆಲವರು ಸಿಕ್ಕಾಪಟ್ಟೆ ಡೇಂಜರ್ ಉಗ್ರರಾಗಿಬಿಟ್ಟರು. ಚಡ್ಡಿ ಬಾಂಬರ್ (underwear bomber) ಎಂದೇ ಖ್ಯಾತನಾದ ನೈಜೀರಿಯಾದ ಉಮರ್ ಫಾರೂಕ್ ಅಬ್ದುಲ್ಮುತಲ್ಲಬ್ ಕೂಡ ಅಂತವರಲ್ಲಿ ಒಬ್ಬ.

ಈ ಪುಣ್ಯಾತ್ಮ ಚಡ್ಡಿಯಲ್ಲಿ ಬಾಂಬ್ ಅಡಗಿಸಿಟ್ಟುಕೊಂಡು ೨೦೦೯ ಕ್ರಿಸ್ಮಸ್ ದಿನದಂದು ನೈಜೀರಿಯಾದಿಂದ ಅಮೇರಿಕಾದ ಡೆಟ್ರಾಯಿಟ್ ನಗರಕ್ಕೆ ಬರಲಿದ್ದ ವಿಮಾನ ಹತ್ತಿಬಿಟ್ಟ. ಅದು ಅದೃಷ್ಟವಶಾತ್ ವಿಫಲವಾಯಿತು. ಅವನ ಚಡ್ಡಿಯಲ್ಲಿ ಸಣ್ಣ ಸ್ಪೋಟವಾಯಿತೇ ವಿನಃ ಇಡೀ ವಿಮಾನವೇ ಢಮ್ ಎಂದು ಎಲ್ಲರೂ ಆಕಾಶದಲ್ಲೇ ಲೀನರಾಗಿ ದೊಡ್ಡ ಅನಾಹುತವಾಗಲಿಲ್ಲ. ಅಷ್ಟರಮಟ್ಟಿಗೆ ದೇವರು ದಯೆತೋರಿದ್ದ.

ಈ ಅನಾಹುತಕ್ಕೆ ಕೈಹಾಕುವ ಕೆಲವು ದಿನಗಳ ಮೊದಲು ಇದೇ ಚಡ್ಡಿ ಬಾಂಬರ್ ಪ್ರವಚನಕಾರ ಅನ್ವರ್ ಅಲ್-ಅವಲಾಕಿಗೆ ಇಂಟರ್ನೆಟ್ ಸಂದೇಶ ಕಳಿಸಿದ್ದ. ಇತರ ಧರ್ಮಗಳ ಬಗ್ಗೆ ಮತ್ತು ಅಮೇರಿಕಾದ ಬಗ್ಗೆ ದ್ವೇಷ ಕಾರಿಕೊಂಡಿದ್ದ. ಜಿಹಾದ್ ಮಾಡುವುದಾಗಿ ಡಂಗುರ ಸಾರಿದ್ದ. ಅದೇ ಜಿಹಾದಿನ ಮೊದಲ ಭಾಗವಾಗಿ ಚಡ್ಡಿ ಬಾಂಬ್ ಸಿದ್ಧಪಡಿಸಿದ್ದ.

ಈ ಚಡ್ಡಿ ಬಾಂಬರ್ ಮಾಡಿದ ಕಾರ್ಯಾಚರಣೆ ವಿಫಲವಾದರೂ ಅಧಿಕಾರಿಗಳು ತನಿಖೆಗೆ ಕುಳಿತರು. ಒಂದನ್ನೊಂದು ಜೋಡಿಸುತ್ತ ಹೋದಂತೆ ಇದು ಅನ್ವರ್ ಅಲ್-ಅವಲಾಕಿಯ ಪಾದದ ಬುಡಕ್ಕೇ ಬಂದು ಸೇರಿತು. ಆಗಲೇ ಈ ಅಲ್-ಅವಲಾಕಿ ಅಮೇರಿಕನ್ನರ ಕಟ್ಟುನಿಟ್ಟಿನ ನಿಗರಾಣಿಯಲ್ಲಿ ಬಂದುಬಿಟ್ಟ. ಈ ಅಲ್-ಅವಲಾಕಿ ಅರೇಬಿಯನ್ ದ್ವೀಪಕಲ್ಪ ದೇಶವಾದ ಯೆಮೆನ್ನಿನಲ್ಲಿ ಕುಳಿತು ಏನೇನು ಸ್ಕೀಮ್ ಹಾಕುತ್ತಿದ್ದಾನೆ ಎನ್ನುವ ಒಂದು ಸಂಪೂರ್ಣ ಚಿತ್ರಣ ಸಿಗಲಾರಂಭಿಸಿತು. ಇವನು ಕೇವಲ ಎಲ್ಲರಂತೆ ಬಂಡಲ್ ಬಿಡುವ ಪ್ರವಚನಕಾರನಲ್ಲ. ತಾನು ಕಾರುವ ದ್ವೇಷಕ್ಕೆ ಒಂದು ನಿಖರವಾದ ರೂಪುರೇಷೆಗಳನ್ನು ಕೊಟ್ಟು, ಹಲವಾರು ಹಿಂಸಾತ್ಮಕ ಘಟನೆಗಳಿಗೆ ಮಾಸ್ಟರ್ ಪ್ಲಾನ್ ಹಾಕುತ್ತಿದ್ದಾನೆ ಎಂದು ಖಚಿತವಾಯಿತು.

ಅನ್ವರ್ ಅಲ್-ಅವಲಾಕಿ ಯೆಮೆನ್ ದೇಶದಲ್ಲಿ ಅಲ್-ಖೈದಾ ಸಂಘಟನೆಯನ್ನು ಶಿಸ್ತುಬದ್ಧವಾಗಿ ಬೆಳೆಸುತ್ತಿದ್ದಾನೆ ಎಂದು ಖಚಿತವಾಯಿತು. counter terrorism ಬಾಸ್ ಜಾನ್ ಬ್ರೆನ್ನನ್ ಶ್ವೇತಭವನದ ತಮ್ಮ ಕಚೇರಿಯಿಂದಲೇ ಸೌದಿ ಅರೇಬಿಯಾಕ್ಕೆ ಫೋನ್ ಮಾಡಿದರು. ತಮ್ಮ ಸಂಪರ್ಕಗಳ ಜೊತೆ ಮಾತಾಡಿದರು. ಅನ್ವರ್ ಅಲ್-ಅವಲಾಕಿಯ ಕಾರ್ನಾಮೆಗಳ ಬಗ್ಗೆ ಹೆಚ್ಚಿನ ಮಾಹಿತಿ ತರಿಸಿಕೊಂಡರು. ತಮ್ಮ ಮುಂದಿದ್ದ ಹತ್ಯಾಪಟ್ಟಿಯತ್ತ ಒಮ್ಮೆ ಗಂಭೀರವಾಗಿ ನೋಡಿದರು.

ಯೆಮೆನ್ ದ್ವೀಪಕಲ್ಪದಲ್ಲಿ ಅನ್ವರ್ ಅಲ್-ಅವಲಾಕಿಯ ಕಿತಾಪತಿಗಳು ಅಲ್-ಖೈದಾ ಸಂಘಟನೆಯನ್ನು ಅಲ್ಲಿ ಬೆಳೆಸಲು ಎಷ್ಟು ನೆರವಾಯಿತೋ ಬಿಟ್ಟಿತೋ. ಆದರೆ ಪಾಕಿಸ್ತಾನ, ಅಫ್ಘಾನಿಸ್ತಾನಗಳಿಂದ ಓಡಿಸಲ್ಪಟ್ಟಿದ್ದ ಉಗ್ರರಿಗೆ ಒಂದು ತಂಗುದಾಣವಂತೂ ಆಗತೊಡಗಿತು. ಅಲ್ಲಿಂದ ಒಂದು ಚಿಕ್ಕ ಕೊಲ್ಲಿ ದಾಟಿಬಿಟ್ಟರೆ ಎದುರಿಗೇ ಸೋಮಾಲಿಯಾ. ಅಲ್ಲಿಗೆ ತಲುಪಿಕೊಂಡರೆ ಸ್ವರ್ಗ. ಏಕೆಂದರೆ ಅಲ್ಲಿ ಯಾವಾಗಲೂ ಅರಾಜಕತೆ. ಹಾಗಾಗಿ ಅಲ್-ಖೈದಾ ಉಗ್ರರಿಗೆ ಅಲ್ಲಿ ರಾಜಾಶ್ರಯ. ಹಾಗಾಗಿ ಯೆಮೆನ್ ದೇಶದಲ್ಲಿ ಅಲ್-ಖೈದಾ ಬೆಳೆಯುವುದು ತುಂಬಾ ಚಿಂತೆಯ ವಿಷಯವಾಗಿತ್ತು.

ಈ ಅನ್ವರ್ ಅಲ್-ಅವಲಾಕಿಯನ್ನು ಹತ್ಯಾಪಟ್ಟಿಗೆ ಸೇರಿಸಬೇಕೋ ಹೇಗೆ ಎನ್ನುವುದರ ಬಗ್ಗೆ ರಾಷ್ಟ್ರೀಯ ರಕ್ಷಣಾ ವ್ಯವಸ್ಥೆಯ ಸಭೆಗಳಲ್ಲಿ ವ್ಯಾಪಕವಾಗಿ ಚರ್ಚೆ ಆರಂಭವಾಯಿತು. ಇಷ್ಟೆಲ್ಲಾ ಚರ್ಚೆಗೆ ಕಾರಣವಿತ್ತು. ಯಾಕೆಂದರೆ ಈ ಅಲ್-ಅವಲಾಕಿ ಅಮೇರಿಕನ್ ನಾಗರಿಕ. ದೇಶದ ಶತ್ರು ಎಂದು ಯಾವುದೋ ದೇಶದ ಅಬ್ಬೇಪಾರಿಯನ್ನು ಉಡಾಯಿಸಿಬಿಡುವುದು ಬೇರೆ ಮಾತು. ಆದರೆ ತನ್ನದೇ ದೇಶದ ಪ್ರಜೆಯನ್ನು ಉಗ್ರ ಎಂದು ಆಪಾದಿಸಿ ಕೊಲ್ಲುವುದಿದೆಯಲ್ಲ ಅದು ದೊಡ್ಡ ಕಿರಿಕಿರಿಯ ಸಮಸ್ಯೆ. ಅಮೇರಿಕಾದಲ್ಲಿ ಪೊಲೀಸರು ಯಾರೋ ಒಬ್ಬನನ್ನು ಕೊಂಚ ತದುಕಿದರೂ ಸಾಕು ಜನ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುತ್ತಾರೆ ಮತ್ತು ಪೊಲೀಸರ ಸಮವಸ್ತ್ರ ಬಿಚ್ಚಿಸುವ ಲೆವೆಲ್ಲಿಗೆ ಕೇಸ್ ಜಡಿಯುತ್ತಾರೆ. ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲ, ಆದರೆ ಮಾನವಹಕ್ಕುಗಳ ಬಗ್ಗೆ ಸಿಕ್ಕಾಪಟ್ಟೆ ಪ್ರಜ್ಞೆ ಇದೆ. of course, ತಮ್ಮ ಅನುಕೂಲಕ್ಕೆ ತಕ್ಕಂತೆ. ಆದರೆ ಅಮೇರಿಕನ್ ನಾಗರಿಕನಿಗೆ ಶಾರೀರಿಕ ಹಾನಿ ಮಾಡುವ ಮೊದಲು ಸಾವಿರಾರು ಬಾರಿ ಯೋಚನೆ ಮಾಡಬೇಕಾಗುತ್ತದೆ.

ಅಮೇರಿಕಾದ ನ್ಯಾಯಾಂಗ ವ್ಯವಸ್ಥೆಯ ವಕೀಲರ ದೊಡ್ಡ ತಂಡವೊಂದು ಅನ್ವರ್ ಅಲ್-ಅವಲಾಕಿಯ ಕೇಸ್ ಫೈಲುಗಳನ್ನು ತೆಗೆದುಕೊಂಡು ಹಗಲೂ ರಾತ್ರಿ ಅಭ್ಯಾಸ ಮಾಡಲು ಆರಂಭಿಸಿತು. ಭೂತಗನ್ನಡಿ ಹಿಡಿದು ನೋಡಿದರು. ಚಡ್ಡಿ ಬಾಂಬರ್ ಪ್ರಕರಣಕ್ಕೆ ತಾಳೆ ಹಾಕಿದರು. ಅಲ್-ಅವಲಾಕಿಯನ್ನು ಉಡಾಯಿಸಿಬಿಟ್ಟರೆ ಸಂವಿಧಾನದ ಉಲ್ಲಂಘನೆ ಆಗುತ್ತದೆಯೋ ಎನ್ನುವುದರ ಬಗ್ಗೆ ದೊಡ್ಡ ದೊಡ್ಡ ಕಾನೂನು ಪಂಡಿತರು ಸಾಕಷ್ಟು ಸಮಯ ವ್ಯಯಿಸಿ ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಎಲ್ಲರ ಅಭಿಪ್ರಾಯ ಒಂದೇ ಆಗಿತ್ತು. ಅಲ್-ಅವಲಾಕಿ ಅತ್ಯಂತ ಅಪಾಯಕಾರಿ ಉಗ್ರನಾಗಿ ಹೊರಹೊಮ್ಮಲಿದ್ದಾನೆ. ಅವನನ್ನು ಬೇಗನೆ 'ತಟಸ್ಥ'ಗೊಳಿಸಿದಷ್ಟು ಒಳ್ಳೆಯದು. He had to be neutralized fast!

ಅಲ್-ಅವಲಾಕಿಯ ಮರಣಶಾಸನ ಹೊರಬಿದ್ದು ಅದಕ್ಕೆ ಒಬಾಮಾ ಸಾಹೇಬರ ಅನುಮತಿಯ ಮುದ್ರೆ ಬೀಳುವ ಹೊತ್ತಿಗೆ ಈ ಮನುಷ್ಯ ಎಲ್ಲೋ ನಾಪತ್ತೆ. ಯೆಮೆನ್ ದೇಶದಲ್ಲಿ ಅಮೇರಿಕಾದ ಬೇಹುಗಾರಿಕೆ ಜಾಲ ಅಷ್ಟಾಗಿ ಇರಲಿಲ್ಲ. ಬೇಹುಗಾರಿಕೆ ಮಾಹಿತಿಗೆ ಅಮೇರಿಕಾ ಯೆಮೆನ್ ದೇಶದ ಅಧ್ಯಕ್ಷ ಸಾಲೇಹ್ ಮೇಲೆ ಅವಲಂಬಿತ. ಸೌದಿ ಅರೇಬಿಯಾದ ಬೇಹುಗಾರಿಕೆ ಸಂಸ್ಥೆ ತಕ್ಕ ಮಟ್ಟಿನ ಮಾಹಿತಿ ಕೊಡುತ್ತಿತ್ತು.

೨೦೧೦ ರಲ್ಲಿ ಒಂದು ದೊಡ್ಡ ಲಫಡಾ ಆಗಿತ್ತು. ಅಂದು ಬಂದಿದ್ದ ಮಾಹಿತಿ ತಪ್ಪಿತ್ತು. ಆ ಮಾಹಿತಿ ಪ್ರಕಾರ ಅಲ್ -ಖೈದಾ ಉಗ್ರರಿದ್ದಾರೆ ಎಂದು ಅಮೇರಿಕಾ ಬಾಂಬ್ ಹಾಕಿದರೆ ಯಾರು ಉಡೀಸ್ ಆಗಿರಬೇಕು ಊಹಿಸಿ. ಯೆಮೆನ್ ದೇಶದ ಡೆಪ್ಯುಟಿ ಗವರ್ನರ್ ಸಾಹೇಬರು ಶಿವಾಯ ನಮಃ ಆಗಿದ್ದರು. ಅಮೇರಿಕಾದವರು ಅದೇನೇ ವಿಷಾದ ವ್ಯಕ್ತಪಡಿಸಿದರೂ ಅಧ್ಯಕ್ಷ ಸಾಲೇಹ್ ಸಿಟ್ಟಿಗೆದ್ದಿದರು. ತಮ್ಮ ದೇಶದಲ್ಲಿ ಅಲ್ - ಖೈದಾ ವಿರುದ್ಧ ಕಾರ್ಯಾಚರಣೆ ಮಾಡುತ್ತೇನೆ ಎಂದು ಬಂದ ಅಮೇರಿಕಾದವರಿಗೆ ಅನುಮತಿ ಕೊಟ್ಟು, ಬೇಹುಗಾರಿಕೆ ಮಾಹಿತಿ ಕೊಟ್ಟರೆ ಹೀಗಾ ಮಾಡೋದು? ಹೋಗಿ ಹೋಗಿ ತನ್ನ ಡೆಪ್ಯುಟಿ ಗವರ್ನರ್ ಮನುಷ್ಯನನ್ನೇ ಉಡಾಯಿಸಿಬಿಡೋದೇ? ಸಿಟ್ಟಿಗೆದ್ದಿದ್ದ ಯೆಮೆನ್ ಅಧ್ಯಕ್ಷರು ಅಮೇರಿಕಾದ ರಹಸ್ಯ ಕಾರ್ಯಾಚರಣೆಗಳ ಮೇಲೆ ನಿರ್ಬಂಧ ವಿಧಿಸಿದ್ದರು.

ಮುಂದೆ ಯೆಮೆನ್ ದೇಶದಲ್ಲಿ ಪರಿಸ್ಥಿತಿ ಬಿಗಡಾಯಿಸತೊಡಗಿತ್ತು. ಅಂತರ್ಯುದ್ಧ ಜೋರಾಗತೊಡಗಿತ್ತು. ಅಧ್ಯಕ್ಷ ಸಾಲೇಹ್ ದೇಶದ ಮೇಲಿನ ಹತೋಟಿ ಕಳೆದುಕೊಳ್ಳಲಾರಂಭಿಸಿದರು. ಬಂಡುಕೋರರು ದೇಶವನ್ನು ಆಕ್ರಮಿಸಿಕೊಂಡರು. ಅಧ್ಯಕ್ಷ ಸಾಲೇಹ್ ಅವರ ಹಿಡಿತ ರಾಜಧಾನಿ ಸಾನಾ ಶಹರಕ್ಕೆ ಮಾತ್ರ ಎನ್ನುವಂತಾಯಿತು. ಒಮ್ಮೆಯಂತೂ ಅಧ್ಯಕ್ಷರ ಅರಮನೆ ಮೇಲೆಯೇ ಬಂಡುಕೋರರು ರಾಕೆಟ್ ದಾಳಿ ಮಾಡಿದರು. ಅಂದು ಅಧ್ಯಕ್ಷರು ಢಮ್ ಎಂದು ಮಟಾಷ್ ಆಗಬೇಕಿತ್ತು. ಅದೃಷ್ಟ ಚೆನ್ನಾಗಿತ್ತು. ಅವರ ತಲೆಗೆ ರಾಕೆಟ್ ಬಡಿದು ಬುರುಡೆ ಬಿಚ್ಚಿಕೊಂಡರೂ ಸಮಯಕ್ಕೆ ಸರಿಯಾಗಿ ಅವರನ್ನು ಪಕ್ಕದ ಸೌದಿಗೆ ಒಯ್ಯಲಾಯಿತು. ಅಲ್ಲಿ ಏಳು ಘಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಪ್ರೆಸಿಡೆಂಟ್ ಸಾಲೇಹ್ ಬಚಾವಾದರು. ಆದರೆ ಯೆಮನ್ ಅವರ ಹತೋಟಿಯಿಂದ ತಪ್ಪಿಹೋಗಿತ್ತು. ಇದರ ಜೊತೆಗೆ ಅವರು ಅಮೇರಿಕಾದ ಸೇನಾಪಡೆಗಳ ಮೇಲೆ ವಿಧಿಸಿದ್ದ ನಿರ್ಬಂಧನೆಗಳು ಕೂಡ ಗಾಳಿಗೆ ತೂರಿಹೋಗಿದ್ದವು.

ಮಾಹಿತಿ ತಪ್ಪಿನಿಂದ ಡೆಪ್ಯುಟಿ ಗವರ್ನರ್ ಕೊಲ್ಲಲ್ಪಟ್ಟ ಮೇಲೆ ಸಿಐಎ ಮತ್ತು ಸೇನಾಪಡೆಗಳಿಗೆ ಬರೋಬ್ಬರಿ ಒಂದು ವರ್ಷ ಕೆಲಸ ಮಾಡಲು ಆಗಿರಲಿಲ್ಲ. ಈಗ ಯೆಮೆನ್ ದೇಶದ ಮೇಲೆ ಹೆಚ್ಚಿನ ಸಂಪನ್ಮೂಲಗಳನ್ನು ಹಾಕಲಾಯಿತು. ಅಮೇರಿಕಾದ ಮೇರಿಲ್ಯಾಂಡ್ ರಾಜ್ಯದ ಫೋರ್ಟ್ ಮೀಡ್ ಪ್ರದೇಶದಲ್ಲಿರುವ ಫೋನ್ ಟ್ಯಾಪಿಂಗ್ ಕೇಂದ್ರದಲ್ಲಿ ಯೆಮೆನ್ ದೇಶದ ಮೊಬೈಲ್ ಫೋನುಗಳ ಮೇಲೆ ನಿಗಾಯಿಡಲು ಹೆಚ್ಚಿನ ವಿಶ್ಲೇಷಕರು ನೇಮಕಗೊಂಡರು. ಕಿವಿಗೆ ಹೆಡ್-ಫೋನ್ ಸಿಕ್ಕಿಸಿಕೊಂಡು ಕಂಪ್ಯೂಟರ್ ಮೇಲೆ ಇಮೇಲ್ ಸ್ಕ್ಯಾನ್ ಮಾಡುವುದೇ ಅವರ ಕೆಲಸ. ದೊಡ್ಡ ಹುಲ್ಲಿನ ಬಣಿವೆಯಲ್ಲಿ ಅಲ್-ಅವಲಾಕಿ ಎನ್ನುವ ಸೂಜಿಯನ್ನು ಹುಡುಕಿದ ಹಾಗೆ. ಹುಡುಕಲೇ ಬೇಕಾಗಿತ್ತು. ಒಮ್ಮೆ ಲ್ಯಾಚ್ ಆದ ಮೇಲೆ ತಾನೇ ಕ್ಯಾಚ್ ಮಾಡುವುದು!?

ಇತ್ತ ಕಡೆ ಸಿಐಎ ದಕ್ಷಿಣ ಸೌದಿ ಅರೇಬಿಯಾದ ಮರಭೂಮಿ ಪ್ರದೇಶದಲ್ಲಿ ಒಂದು ರಹಸ್ಯ ಡ್ರೋನ್ ನೆಲೆಯನ್ನು ಕಟ್ಟಲಾರಂಭಿಸಿತು. ಈ ಡ್ರೋನ್ ನೆಲೆ ಪಕ್ಕದ ಯೆಮೆನ್ ದೇಶದಲ್ಲಿ ಮಾಡಬೇಕಾದ ಅಲ್ - ಖೈದಾ ಉಗ್ರರ ಬೇಟೆಯ ಕೇಂದ್ರವಾಗಲಿತ್ತು. 'ಏನಾದರೂ ಮಾಡಿಕೊಳ್ಳಿ. ಆದರೆ ನಮ್ಮ ದೇಶದಲ್ಲಿ ನಿಮ್ಮ ಡ್ರೋನ್ ನೆಲೆಯಿದೆ ಎಂದು ಯಾರಿಗೂ ಗೊತ್ತಾಗಬಾರದು,' ಎಂದು ಸೌದಿಗಳ ಕಟ್ಟಾಜ್ಞೆ. ಪಾಪ ಅವರ ಅನಿವಾರ್ಯತೆಗಳು ಒಂದೇ ಎರಡೇ. ಈಕಡೆ ಅಮೇರಿಕಾಗೆ ಎದುರಾಡುವಂತಿಲ್ಲ. ಆಕಡೆ ಇತರ ಮುಸ್ಲಿಮರನ್ನು ಎದುರಾಕಿಕೊಳ್ಳುವಂತಿಲ್ಲ. ಅಕ್ಕಿ ಮೇಲೆ ಆಸೆ. ನೆಂಟರ ಮೇಲೆ ಪ್ರೀತಿ. ನೆಂಟರನ್ನು ಕೊಲ್ಲುತ್ತೇವೆ ಎನ್ನುವ ಮಿತ್ರರು ಎಂದು ಹೇಳಿಕೊಳ್ಳುವ ಅಮೇರಿಕನ್ನರು. ಒಟ್ಟಿನಲ್ಲಿ ಸೌದಿ ಅರೇಬಿಯಾಗೆ ಕಷ್ಟ ಕಷ್ಟ ಇವರನ್ನೆಲ್ಲ ನಿಭಾಯಿಸುವುದು.

ಸೌದಿ ಅರೇಬಿಯಾದ ಡ್ರೋನ್ ನೆಲೆ ಸ್ಥಾಪಿತವಾಗುವವರೆಗೆ ಕಾಯುವಂತಿರಲಿಲ್ಲ. ಅಭ್ಯಾಸ ಶುರುವಾಗಲೇಬೇಕಿತ್ತು. ಅದಕ್ಕಾಗಿ ಇಥಿಯೋಪಿಯಾ ಮತ್ತು ಜಿಬೌಟಿ ದೇಶಗಳ ನೆಲೆಗಳಿಂದ ಡ್ರೋನುಗಳನ್ನು ಹಾರಿಸಲಾಯಿತು. ಅವು ಯೆಮೆನ್ ಮೇಲೆ ಹಾರಿ ತಕ್ಕ ಮಟ್ಟಿನ ಮಾಹಿತಿಗಳನ್ನು ಸಂಗ್ರಹಿಸಿ ತಂದವು. ಡ್ರೋನ್ ಮತ್ತು ಜಿಹಾದಿಗಳ ನಡುವೆ ಬೆಕ್ಕು ಇಲಿ ನಡುವಿನ ಬೇಟೆಯಂತಹ ಕಾಳಗ ಶುರುವಾಗಿತ್ತು.

ಜಿಹಾದಿಗಳೇನೂ ಕೈಕಟ್ಟಿ ಕುಳಿತಿರಲಿಲ್ಲ. ದಾಳಿಗಳಿಂದ ಬಚಾವಾಗುವ ಉಪಾಯಗಳನ್ನು ರೂಪಿಸಿಕೊಂಡಿದ್ದರು. ತಲೆ ಮೇಲೆ ಯೆಮೆನ್ ವಾಯುಪಡೆಯ ವಿಮಾನಗಳು ಹಾರಿದರೆ ನಿಂತಲ್ಲೇ ನಿಂತಿರುತ್ತಿದ್ದರು. ಯೆಮೆನ್ ಯುದ್ಧವಿಮಾನಗಳು ಸಾಮಾನ್ಯವಾಗಿ ತಮ್ಮ ಗುರಿ ಮೇಲೆ ಬಾಂಬ್ ಹಾಕಿದ್ದೇ ಕಮ್ಮಿ. ಯಾವಾಗಲೂ ಗುರಿ ತಪ್ಪಿ ಎಲ್ಲೋ ಹಾಕುತ್ತಿದ್ದವು. ಹಾಗಾಗಿ ಅವುಗಳಿಂದ ತಪ್ಪಿಸಿಕೊಳ್ಳುವ ಉತ್ತಮ ವಿಧಾನ ಎಂದರೆ ನಿಂತಲ್ಲೇ ನಿಂತಿರುವುದು. ಅದೇ ತಲೆ ಮೇಲೆ ಡ್ರೋನುಗಳು ಹಾರಲು ಶುರುವಾದಾಗ ಇದರ ಉಲ್ಟಾ ಉಪಾಯ. ತಮ್ಮ ತಮ್ಮ ವಾಹನ ಹತ್ತಿ ಮರಭೂಮಿಯಲ್ಲಿ ಅಡ್ಡಾದಿಡ್ಡಿ ಗಾಡಿ ಓಡಿಸುತ್ತಿದ್ದರು. ಅವರಿಗೆ ಡ್ರೋನುಗಳ ಒಂದು ಮುಖ್ಯ ನ್ಯೂನ್ಯತೆ ಗೊತ್ತಿತ್ತು. ಡ್ರೋನುಗಳಲ್ಲಿನ ಕ್ಯಾಮೆರಾಗಳಲ್ಲಿ ಚಿತ್ರ ದಾಖಲಾಗಿ, ಅದು ಸಂಸ್ಕರಿಸಲ್ಪಟ್ಟು, ಆಕಾಶದಲ್ಲಿನ ಉಪಗ್ರಹಕ್ಕೆ ಸೇರಿ, ಅಲ್ಲಿಂದ ಅಮೇರಿಕಾದ ಯಾವುದೋ ಮೂಲೆಯಲ್ಲಿನ ಡ್ರೋನ್ ಕೇಂದ್ರಕ್ಕೆ ರವಾನೆಯಾಗಿ, ಅಲ್ಲಿನ ಕಂಪ್ಯೂಟರ್ ಮೂಲಕ ಅದರ ಮುಂದೆ ಕೂತಿದ್ದ ಡ್ರೋನಾಚಾರ್ಯನ (Drone Operator) ಪರದೆ ಮೇಲೆ ಉಗ್ರರ ಚಿತ್ರ ಮೂಡಿ ಬರುವ ವರಗೆ ನಾಲ್ಕಾರು ಸೆಕೆಂಡುಗಳ ವಿಳಂಬ (latency) ಇರುತ್ತಿತ್ತು. ಹಾಗಾಗಿ ದೂರದಲ್ಲಿ ಕುಳಿತು ಡ್ರೋನ್ ಮೂಲಕ ಮಿಸೈಲ್ ಹಾರಿಸುತ್ತಿದ್ದ ಡ್ರೋನಾಚಾರ್ಯನ ಗುರಿ ತಪ್ಪುವ ಸಾಧ್ಯತೆಗಳು ಇರುತ್ತಿದ್ದವು. ಹಾಗಾಗಿ ಡ್ರೋನ್ ಕಂಡ ಕೂಡಲೇ ಶರವೇಗದಲ್ಲಿ ಗಾಡಿ ಓಡಿಸುವ ತಂತ್ರ ಅವುಗಳಿಂದ ಬಚಾವಾಗಲು ಉಪಯುಕ್ತವಾಗಿತ್ತು.

ಇದೇ ಕಾರಣದಿಂದ ಮೊದಲೊಮ್ಮೆ ಅನ್ವರ್ ಅಲ್-ಅವಲಾಕಿ ಅಮೇರಿಕನ್ ದಾಳಿಯಿಂದ ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದ. ಅವನನ್ನು ಅಂದು ಬಿಡಬಾರದು ಎಂದು ಡ್ರೋನ್ ಮತ್ತು ಯುದ್ಧ ವಿಮಾನ ಎರಡನ್ನೂ ಒಮ್ಮೆಲೇ ಕಳಿಸಲಾಗಿತ್ತು. ಡ್ರೋನ್ ಕಂಡಕೂಡಲೇ ತನ್ನ ವಾಹನ ಹತ್ತಿ ಮರಭೂಮಿಯಲ್ಲಿ ಪರಾರಿಯಾಗಿಬಿಟ್ಟ ಖದೀಮ ಅಲ್-ಅವಲಾಕಿ. ಮೇಲೆ ಹೇಳಿದ ತಾಂತ್ರಿಕ ವಿಳಂಬದ ಕಾರಣದಿಂದ ಡ್ರೋನ್ ಹಾರಿಸಿದ ಮಿಸೈಲ್ ಗುರಿತಪ್ಪಿತ್ತು. ಯುದ್ಧವಿಮಾನ ಟಾರ್ಗೆಟ್ ಲಾಕ್ ಮಾಡಿ ಇನ್ನೇನು ಮಿಸೈಲ್ ಹಾರಿಸೋಣ ಅನ್ನುವಷ್ಟರಲ್ಲಿ ಕಾರ್ಮೋಡ ಕವಿದುಬಿಟ್ಟಿತು. ಟಾರ್ಗೆಟ್ ಲಾಕ್ ಆಗಲೇ ಇಲ್ಲ.ಕಾರ್ಮೋಡ ಸರಿಯುವಷ್ಟರಲ್ಲಿ ಅಲ್-ಅವಲಾಕಿ ಬೇರೆ ಗಾಡಿಯನ್ನು ಹತ್ತಿ ವಿರುದ್ಧ ದಿಕ್ಕಿನಲ್ಲಿ ಓಡಿಬಿಟ್ಟ. ಮೇಲೆ ಹಾರುತ್ತಿದ್ದ ಯುದ್ಧವಿಮಾನ ಮೊದಲಿನ ಗಾಡಿಯನ್ನು ಅಟ್ಟಿಸಿಕೊಂಡು ಹೋಗಿ ಟಾರ್ಗೆಟ್ ಲಾಕ್ ಆದ ತಕ್ಷಣ ಅದರ ಮೇಲೆ ಬಾಂಬ್ ಹಾಕಿ ಅದನ್ನು ಉಡೀಸ್ ಮಾಡಿತು. ಅದರಲ್ಲಿದ್ದ ಇತರೆ ಉಗ್ರರು ಮಟಾಷ್ ಆದರು. ಆದರೆ ಅಲ್-ಅವಲಾಕಿ ಬಚಾವಾಗಿದ್ದ. ಅವನಿಗೆ ಅದೃಷ್ಟದ ಬಗ್ಗೆ ಮತ್ತು ವಿಧಿಯಾಟದ ಬಗ್ಗೆ ಹೆಚ್ಚಿನ ನಂಬುಗೆ ಬಂದಿತ್ತು. ಹುಂಬ ಧೈರ್ಯ ಮತ್ತೂ ಜಾಸ್ತಿಯಾಗಿತ್ತು.

ಅಲ್-ಅವಲಾಕಿ ಮತ್ತು ಪ್ರಮುಖ ಉಗ್ರರು ಪದೇ ಪದೇ ತಪ್ಪಿಸಿಕೊಳ್ಳುತ್ತಿದ್ದ ಕಾರಣ ಶ್ವೇತಭವನದಲ್ಲಿ ಅಧ್ಯಕ್ಷ ಒಬಾಮಾ ಮತ್ತು counter terrorism ಚೀಫ್ ಜಾನ್ ಬ್ರೆನ್ನನ್ ಕಳವಳಗೊಂಡಿದ್ದರು. ಉಸ್ತುವಾರಿ ವಹಿಸಿದ್ದ ಸಿಐಎ ಮತ್ತು ಸೇನಾಪಡೆಗಳ ನಾಯಕತ್ವದ ಮೇಲೆ ಅಸಮಾಧಾನಗೊಂಡಿದ್ದರು. ಯೆಮೆನ್ ದೇಶದಲ್ಲಿ ರಹಸ್ಯ ಕಾರ್ಯಾಚರಣೆಗಳಿಗೆ ಪೂರ್ತಿ ಅನುಮತಿಯನ್ನು ನೀಡಿ ಒಂದು ವರ್ಷದ ಮೇಲಾಗಿಹೋಗಿತ್ತು. ಆದರೂ ಒಂದೇ ಒಂದು ದೊಡ್ಡ ಉಗ್ರನ ಸಂಹಾರ ಆಗಿರಲಿಲ್ಲ. ಒಂದಲ್ಲ ಒಂದು ಕಾರಣದಿಂದ ಕಾರ್ಯಾಚರಣೆಗಳು ವಿಫಲವಾಗಿದ್ದವು. ಕೆಲವೊಂದರಲ್ಲಿ, ತಪ್ಪಿನಿಂದಾಗಿ, ನಾಗರಿಕರು ಬಲಿಯಾಗಿದ್ದು ದೊಡ್ಡ ಮುಜುಗರಕ್ಕೆ ಕಾರಣವಾಗಿತ್ತು. ಅದರಲ್ಲೂ ಜಿಬೌಟಿ ದೇಶ ಪ್ರತಿಯೊಂದು ಡ್ರೋನ್ ಕಾರ್ಯಾಚರಣೆಗೆ ಮುಂಗಡ ಅನುಮತಿ ಪಡೆಯಬೇಕೆಂದು ಹೇಳಿತ್ತು. ಇದೊಂದು ದೊಡ್ಡ ಕಿರಿಕಿರಿ ಸೇನಾಪಡೆಗಳಿಗೆ.

ಈ ಹೊತ್ತಿಗೆ ದಕ್ಷಿಣ ಸೌದಿ ಅರೇಬಿಯಾದಲ್ಲಿ ಸಿಐಎ ರಹಸ್ಯವಾಗಿ ಕಟ್ಟುತ್ತಿದ್ದ ಡ್ರೋನ್ ನೆಲೆ ತಯಾರಾಗಿತ್ತು. ಸಿಐಎ ಸಂಸ್ಥೆಯ ಹೊಸ ಡೈರೆಕ್ಟರ್ ಆಗಿ ಬಂದಿದ್ದ ಡೇವಿಡ್ ಪೆಟ್ರೆಯಸ್ ಪಾಕಿಸ್ತಾನದಲ್ಲಿದ್ದ ರೀಪರ್ ಡ್ರೋನುಗಳನ್ನು ಹೊಸ ನೆಲೆಗೆ ವರ್ಗಾಯಿಸಿದರು. ಡ್ರೋನ್ ಮತ್ತು ಆಕಾಶದಲ್ಲಿರುವ ಉಪಗ್ರಹಗಳ ನಡುವಿನ ಸಂಪರ್ಕ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲಾಯಿತು. ಡ್ರೋನ್ ಮತ್ತು ಅವುಗಳನ್ನು ಚಲಾಯಿಸುತ್ತಿದ್ದ ದೂರದಲ್ಲಿನ ತಂತ್ರಜ್ಞರ ನಡುವಿನ ವಿಳಂಬ ಸಾಕಷ್ಟು ಕಡಿಮೆಯಾಯಿತು. Drones were almost ready for real-time operations!

ಹೊಸ ಡ್ರೋನ್ ನೆಲೆಯನ್ನು ಸ್ಥಾಪಿಸುವುದರ ಜೊತೆಗೆ ಸಿಐಎ ಅದ್ಭುತವೆನ್ನಿಸುವಂತಹ ಸಾಧನೆಯನ್ನು ಮಾಡಿತ್ತು. ಅನ್ವರ್ ಅಲ್-ಅವಲಾಕಿಯ ಅತಿ ಹತ್ತಿರದ ವಲಯದಲ್ಲಿ ಒಬ್ಬ ಗೂಢಚಾರನನ್ನು ಬೆಳೆಸಿತ್ತು. ಡ್ರೋನ್ ಇರಲಿ, ಯುದ್ಧವಿಮಾನವಿರಲಿ, ಅವೆಲ್ಲ ಒಂದು ಕಡೆಯಾದರೆ ವೈರಿಯ ಪಕ್ಕದಲ್ಲೇ ಇದ್ದುಕೊಂಡು ಮಾಹಿತಿ ಕೊಡುವ ಗೂಢಚಾರ ಎಲ್ಲವನ್ನೂ ಮೀರಿದವ. Nothing beats hum-int (human intelligence).

ಅಲ್-ಅವಲಾಕಿಯ ಬೇಟೆಗೆ ವೇದಿಕೆ ಸಜ್ಜಾಗಿತ್ತು. ಅಂದು ಸೆಪ್ಟೆಂಬರ್ ೩೦, ೨೦೧೧. ಸೌದಿ ಅರೇಬಿಯಾದ ದಕ್ಷಿಣ ಮರಭೂಮಿಯ ಡ್ರೋನ್ ನೆಲೆಯಿಂದ ಹಾರಿದ ಡ್ರೋನುಗಳು ಯೆಮೆನ್ ಪ್ರವೇಶಿಸಿದವು. ವಿಶಾಲವಾದ ಮರಭೂಮಿಯಲ್ಲಿ ಉಗ್ರರ ಹಲವಾರು ವಾಹನಗಳು ಗುಂಪಾಗಿ ಕ್ಯಾರವಾನ್ ಮಾದರಿಯಲ್ಲಿ ಹೊರಟಿದ್ದವು. ಡ್ರೋನ್ ಪಡೆ ಅವನ್ನು ಹಿಂಬಾಲಿಸುತ್ತಿತ್ತು. ಸೂಕ್ಷ್ಮವಾಗಿ ಗಮನಿಸುತ್ತಿತ್ತು.

ಬೆಳಗಿನ ತಿಂಡಿಗೆಂದು ಕಾರವಾನ್ ನಿಂತಿತು. ತಮ್ಮ ತಮ್ಮ ವಾಹನಗಳಿಂದ ಹೊರಗಿಳಿದು ಬಂದು ನೋಡಿದರೆ... ತಲೆ ಮೇಲೆ ರುದ್ರವೀಣೆಯ ಝೇಂಕಾರ. Killer drones had arrived! ಎದ್ದೆವೋ ಬಿದ್ದೆವೋ ಸತ್ತೇವೋ ಎಂಬಂತೆ ಮತ್ತೆ ತಮ್ಮ ತಮ್ಮ ವಾಹನಗಳಲ್ಲಿ ತೂರಿಕೊಂಡರು. ಬದುಕಿದರೆ ಸಾವಿರ ಬಾರಿ ಬೆಳಗಿನ ತಿಂಡಿ ಎಂದು ತಿಂಡಿಗೆ ದೊಡ್ಡದೊಂದು ನಮಸ್ಕಾರ ಹಾಕಿದರು. ಆದರೆ ಅಷ್ಟೊತ್ತಿಗೆ ಡ್ರೋನುಗಳು ಟಾರ್ಗೆಟ್ ಲಾಕ್ ಮಾಡಿಯಾಗಿತ್ತು. ಮುಂದೆ ನಡೆದದ್ದು ಮಾರಣಹೋಮ...ಅದೂ ಸಾಂಗೋಪಾಂಗವಾಗಿ. Carefully orchestrated symphony of destruction.

ಎರಡು ಪ್ರಿಡೇಟರ್ ಡ್ರೋನುಗಳು ಲೇಸರ್ ಕಿರಣಗಳನ್ನು ಕಾರುಗಳ ಮೇಲೆ ಸೂಸಿದವು. ಅದನ್ನು ಟಾರ್ಗೆಟ್ ಪೇಂಟಿಂಗ್ ಎನ್ನುತ್ತಾರೆ. ಈ ತರಹ ಲೇಸರ್ ಕಿರಣಗಳನ್ನು ಉಪಯೋಗಿಸುವುದರಿಂದ ಮುಂದೆ ಕ್ಷಿಪಣಿ ಹಾರಿಸಿದಾಗ ಗುರಿ ಮುಟ್ಟುವ ಸಾಧ್ಯತೆಗಳು ತುಂಬಾ ಹೆಚ್ಚು. ಈ ಎರಡು ಪ್ರಿಡೇಟರ್ ಡ್ರೋನುಗಳು ಲೇಸರ್ ಉಪಯೋಗಿಸಿ ಟಾರ್ಗೆಟ್ ಲಾಕ್ ಮಾಡಿಕೊಟ್ಟರೆ ಬೇರೊಂದು ರೀಪರ್ ಡ್ರೋನ್ ತನ್ನಲ್ಲಿನ ಕ್ಷಿಪಣಿಗಳನ್ನು ಹಾರಿಸಿತು. Direct hit!

ಕಾರವಾನಿನಲ್ಲಿದ್ದ ಎಲ್ಲ ವಾಹನಗಳೂ ಉಡೀಸ್. ಎಲ್ಲ ಪ್ರಯಾಣಿಕರೂ ಮಟಾಷ್. ಅನ್ವರ್ ಅಲ್-ಅವಲಾಕಿ ಕೂಡ ಎಲ್ಲರೊಂದಿಗೆ ಭಸ್ಮವಾಗಿದ್ದ. ಜೊತೆಗೆ 'Inspire' ಎನ್ನುವ ಧಾರ್ಮಿಕ ಪತ್ರಿಕೆಯೊಂದರ ಸಂಪಾದಕ ಸಮೀರ್ ಖಾನ್ ಕೂಡ. ನಂತರ ನೋಡಿದರೆ ಅವನೂ ಅಮೇರಿಕನ್ ಪೌರನಾಗಿದ್ದ. ಹೀಗೆ ಪ್ರಪಥಮ ಬಾರಿಗೆ ಅಮೇರಿಕಾ ತನ್ನದ್ದೇ ದೇಶದ ಇಬ್ಬರು ನಾಗರಿಕರನ್ನು ಉದ್ದೇಶಿತ ಹತ್ಯಾ ಕಾರ್ಯಾಚರಣೆಯೊಂದರಲ್ಲಿ ಕೊಂದಿತ್ತು.

ಅನ್ವರ್ ಅಲ್ - ಅವಲಾಕಿ ಸತ್ತರೇನಾಯಿತು ಅವನಿಗೊಬ್ಬ ಕುಲದೀಪಕನಂತಿದ್ದ ಮಗನಿದ್ದ. ಅವನೇ ಅಬ್ದುಲ್ ರಹಮಾನ್ ಅಲ್ - ಅವಲಾಕಿ. ಅಪ್ಪ ಸತ್ತಾಗ ಅವನಿಗೆ ಹದಿನಾರು ವರ್ಷ. ಅವನೂ ಅಮೇರಿಕನ್ ಪೌರನೇ. ಅಪ್ಪ ಅವಲಾಕಿ ವಿದ್ಯಾಭ್ಯಾಸ ಮುಗಿದ ಮೇಲೆ ನೌಕರಿ ಮಾಡದಿದ್ದರೂ ಅದೆಲ್ಲೋ ಚೋಕರಿ (ಹುಡುಗಿ) ಸಂಪಾದಿಸಿ ಕುಲದೀಪಕನೊಬ್ಬನಿಗೆ ಜನ್ಮ ಕೊಟ್ಟಿದ್ದ. ತನ್ನ ಜನ್ಮ ಸಾರ್ಥಕ ಮಾಡಿಕೊಂಡಿದ್ದ.

ಅಪ್ಪ ಅವಲಾಕಿ ಅಮೇರಿಕಾ, ಇಂಗ್ಲೆಂಡ್ ಎಲ್ಲ ಸುತ್ತಾಡಿ ವಾಪಸ್ ಯೆಮನ್ ದೇಶಕ್ಕೇ ಬಂದಿದ್ದ. ಮಗ ಕೂಡ ಬಂದಿದ್ದ. ಅವನಿಗೆ ಯೆಮೆನ್ ಬಿಟ್ಟರೆ ಬೇರೆ ಯಾವ ದೇಶವೂ ಗೊತ್ತಿಲ್ಲ.

ಮಗ ಅಬ್ದುಲ್ ರಹಮಾನನಿಗೆ ಅಪ್ಪನ ಖತರ್ನಾಕ್ ಕಾರ್ನಾಮೆಗಳ ಬಗ್ಗೆ ಅದೆಷ್ಟು ಗೊತ್ತಿತ್ತೋ ಇಲ್ಲವೋ. ಅವನು ಎಲ್ಲ ಹದಿಹರೆಯದ ಹುಡುಗರ ಹಾಗೆ ಆಟೋಟಗಳು, ಸಂಗೀತ, ಸಾಮಾಜಿಕ ಜಾಲತಾಣಗಳು ಎಂದು ತನ್ನ ಪಾಡಿಗೆ ತಾನಿದ್ದ.

ತಂದೆ ಎದುರಿಗಿದ್ದಾಗ ತಂದೆಯನ್ನು ಅಷ್ಟಾಗಿ ಮಿಸ್ ಮಾಡಿಕೊಂಡಿರಲಿಕ್ಕಿಲ್ಲ. ಆದರೆ ಸೆಪ್ಟೆಂಬರ್ ೨೦೧೧ ಹೊತ್ತಿಗೆ ತಂದೆಯ ನೆನಪು ಜಾಸ್ತಿಯಾಗತೊಡಗಿತು. ತಂದೆಯನ್ನು ಹುಡುಕಲು ಮನೆ ಬಿಟ್ಟು ಹೊರಟ. ಚೀಟಿಯೊಂದನ್ನು ಬರೆದಿಟ್ಟು ಪರಾರಿ.

ತಂದೆ ಯೆಮೆನ್ ದೇಶದ ಶಾಬ್ವಾ ಪ್ರಾಂತದಲ್ಲಿ ಎಲ್ಲೋ ಅಡಗಿದ್ದಾನೆ ಅನ್ನುವ ಮಾಹಿತಿ ಇತ್ತು. ಅಲ್ಲಿಗೇ ಹೋದ. ಆದರೆ ಅಲ್ಲಿ ಆಗಿದ್ದ ಮೊದಲಿನ ಡ್ರೋನ್ / ವಿಮಾನ ದಾಳಿಯಲ್ಲಿ ಪವಾಡದ ರೀತಿಯಲ್ಲಿ ಪಾರಾಗಿದ್ದ ಅನ್ವರ್ ಅಲ್ -ಅವಲಾಕಿ ಅಲ್ಲಿಂದ ಬೇರೆ ಕಡೆ ಹೋಗಿದ್ದ.

ತಂದೆಯನ್ನು ಹುಡುಕಿಕೊಂಡು ಯೆಮೆನ್ ದೇಶದ ತುಂಬಾ ಅಲೆದ. ಎಷ್ಟೋ ದಿವಸಗಳ ನಂತರ ಸುದ್ದಿ ತಿಳಿಯಿತು. ಜಿಹಾದಿ ಪಿತಾಜಿ ಇನ್ನಿಲ್ಲ. ಡ್ರೋನ್ ದಾಳಿಯಲ್ಲಿ ಪಿತಾಜಿ ಫಿನಿಷ್ ಆಗಿದ್ದಾನೆ ಎಂದು. ಮನೆಗೆ ಫೋನ್ ಮಾಡಿ ತಿಳಿಸಿದ. ವಾಪಸ್ ಬರುತ್ತಿದ್ದೇನೆ ಎಂದು ಕೂಡ ಹೇಳಿದ.

ಆದರೆ ಅವನು ಮನೆಗೆ ಮರಳಲಿಲ್ಲ. ಅಂದು ಅಕ್ಟೋಬರ್ ೧೪, ೨೦೧೧. ತಂದೆ ಅವಲಾಕಿ ತೀರಿಹೋಗಿ ಎರಡು ವಾರಗಳಾಗಿತ್ತು. ಮನೆಗೆ ಮರಳುತ್ತಿದ್ದ ಮಗ ಅಬ್ದುಲ್ ರಹಮಾನ್ ಅವಲಾಕಿ ದಾರಿಯಲ್ಲಿ ಹೋಟೆಲೊಂದರ ಹೊರಾಂಗಣದಲ್ಲಿ ಕೂತಿದ್ದ. ಲೋಕಲ್ ಸ್ನೇಹಿತರೊಂದಿಗೆ ತಿಂಡಿ ತೀರ್ಥ ಮಾಡಿಕೊಂಡಿದ್ದ. ದೂರದಲ್ಲಿ ಮತ್ತದೇ ಆವಾಜ್ ಕೇಳಿ ಬಂತು. ಕ್ರಮೇಣ ಜೋರಾಗತೊಡಗಿತು. ಮತ್ತೆ ರುದ್ರವೀಣೆಯ ಝೇಂಕಾರ. ಆಗಸದಲ್ಲಿ ಮತ್ತೆ ಮೂಡಿಬಂದಿದ್ದವು ರಾಕ್ಷಸ ಡ್ರೋನುಗಳು.

ಏನಾಗುತ್ತಿದೆ ಎಂದು ಅರಿವಾಗುವ ಮುನ್ನವೇ ಡ್ರೋನುಗಳಿಂದ ಹಾರಿದ್ದ ಕ್ಷಿಪಣಿಗಳು ಅವಲಾಕಿ ಕುಳಿತಿದ್ದ ಹೋಟೆಲನ್ನು ಚಿಂದಿ ಚಿಂದಿ ಮಾಡಿದ್ದವು. ಫುಲ್ ಫ್ಲಾಟ್. ಹತ್ತಾರು ಜನ ಮಟಾಷ್. ಮಗ ಕೂಡ ಅಪ್ಪನಂತೆ ಡ್ರೋನ್ ದಾಳಿಯಲ್ಲಿ ಫಿನಿಷ್!

ಸುದ್ದಿ ತಿಳಿದ ಹತ್ತಾರು ಘಂಟೆಗಳ ನಂತರ ಸ್ನೇಹಿತರಾರೋ ಆತನ ಫೇಸ್ಬುಕ್ ಖಾತೆಯನ್ನು ಮರಣೋತ್ತರ ಖಾತೆಯನ್ನಾಗಿ ಬದಲಾಯಿಸಿದ್ದರು. ಅಲ್ಲಿ ಶ್ರದ್ಧಾಂಜಲಿಗಳು ಹರಿದುಬರುತ್ತಿದ್ದವು.

ಅವನ ದುರ್ದೈವ ನೋಡಿ. ಅಮೇರಿಕಾದವರಿಗೆ ಅವನನ್ನು ಕೊಲ್ಲುವ ಯಾವ ಇರಾದೆಯೂ ಇರಲಿಲ್ಲ. ಅಪ್ಪ ದೊಡ್ಡ ಉಗ್ರನಿದ್ದಾನೆ ಅಂದಾಕ್ಷಣ ಮಗ ಕೂಡ ಉಗ್ರ, ಅವನನ್ನೂ ಕೊಲ್ಲಬೇಕು ಅಂತೇನೂ ಇಲ್ಲವಲ್ಲ. ಮಗ ಅವಲಾಕಿ ಹತ್ಯಾ ಪಟ್ಟಿಯಲ್ಲಿ ಇರಲಿಲ್ಲ. ಅಂದು ನಿಜವಾಗಿ ಮುಹೂರ್ತವಿಟ್ಟಿದ್ದು ಇಬ್ರಾಹಿಂ ಅಲ್ - ಬನ್ನಾ ಎನ್ನುವ, ಈಜಿಪ್ಟ್ ಮೂಲದ, ಅಲ್ - ಖೈದಾ ಉಗ್ರನಿಗಾಗಿ. ಅವನೂ ಅವತ್ತು ಅದೇ ಹೋಟೆಲಿನಲ್ಲಿದ್ದಾನೆ ಎನ್ನುವ ಮಾಹಿತಿ ಬಂದಿತ್ತು. ಆದರೆ ಕಾರ್ಯಾಚರಣೆ ಮುಗಿದ ಎಷ್ಟೋ ದಿನಗಳ ನಂತರ ಗೊತ್ತಾಯಿತು, ಆ ಈಜಿಪ್ಟ್ ಮೂಲದ ಉಗ್ರ ಅಂದು ಅಲ್ಲಿ ಇರಲೇ ಇಲ್ಲ ಎಂದು. ಮಾಹಿತಿ ತಪ್ಪಾಗಿತ್ತು. ಅದೇನೋ ಅಂತಾರಲ್ಲ...wrong place and wrong time...ಆ ಮಾದರಿಯಲ್ಲಿ ಯಾವುದಕ್ಕೂ ಸಂಬಂಧವಿರದ ಅವಲಾಕಿ ಜೂನಿಯರ್ ಬಲಿಯಾಗಿದ್ದ. ಅಪ್ಪ ಮಾಡಿದ ಪಾಪಗಳು ಮಗನಿಗೆ ಸುತ್ತಿಗೊಂಡಿದ್ದವೇನೋ? ಯಾರಿಗೆ ಗೊತ್ತು.

ಅವನೊಬ್ಬ ಇನ್ನೂ ಇದ್ದನಲ್ಲ. ಡಾ. ನಾಸಿರ್ ಅಲ್ - ಅವಲಾಕಿ. ಯೆಮೆನ್ ದೇಶದ ರಾಜಕಾರಣಿ. ಕುಟುಂಬದ ಪಿತಾಮಹ. ಮಗ ಮತ್ತು ಮೊಮ್ಮಗ ಇಬ್ಬರನ್ನೂ ಡ್ರೋನ್ ದಾಳಿಯಲ್ಲಿ ಕಳೆದುಕೊಂಡ ಅದೃಷ್ಟಹೀನ. ಅವನು ಕಂಪ್ಯೂಟರ್ ಮುಂದೆ ಕುಳಿತು ಒಂದು ಶ್ರದ್ಧಾಂಜಲಿ ವಿಡಿಯೋ ಮಾಡಿ ಯುಟ್ಯೂಬ್ ಮೇಲೆ ಹರಿಬಿಟ್ಟ. ತನ್ನ ಮಗನ ಜೀವನ ಮತ್ತು ಆತನ ಉಪದೇಶಗಳು ವ್ಯರ್ಥವಾಗಿಹೋಗದಂತೆ ನೋಡಿಕೊಳ್ಳುವುದು ಸಮುದಾಯದ ಜವಾಬ್ದಾರಿಯೆಂದು ಹೇಳಿದ. ಅಮೇರಿಕಾವನ್ನು ಒಂದಿಷ್ಟು ಬೈದ. ಒಟ್ಟಿನಲ್ಲಿ ವೈಕುಂಠ ಸಮಾರಾಧನೆ ಮಾಡಿ ಮುಗಿಸಿದ ಮಾದರಿಯಲ್ಲಿ ಕೆಲಸ ಮುಗಿಸಿದ. 

ಇವೆಲ್ಲಾ ರಹಸ್ಯ ಕಾರ್ಯಾಚರಣೆಗಳು. ಸರ್ಕಾರ ಬಹಿರಂಗವಾಗಿ ಮಾತಾಡುವುದಿಲ್ಲ. ಆದರೂ ಮಾನವಹಕ್ಕುಗಳ ಹೋರಾಟಗಾರರು ಸಿಐಎ, ಸೈನ್ಯವನ್ನು ಕೋರ್ಟಿಗೆ ಎಳೆದಿದ್ದರು. ರಾಷ್ಟೀಯ ಭದ್ರತೆ ಮತ್ತು ರಹಸ್ಯ ಕಾಪಾಡಿಕೊಳ್ಳುವ ಕಾನೂನುಗಳ ಸಹಾಯದಿಂದ ಏನೂ ದೊಡ್ಡ ಭಾನಗಡಿಯಾಗಿಲ್ಲ.

ಮಾಹಿತಿಯನ್ನು ಕೊಡದೇ ಸತಾಯಿಸುತ್ತಿದ್ದ ಸಿಐಎ ವಕೀಲರನ್ನು ಹಿಡಿದು ತೀಡಿದ ನ್ಯಾಯಾಧೀಶರು ಹೇಳಿದರಂತೆ, 'ರೀ ಸ್ವಾಮಿ, ಸಿಐಎ ಏನೂ ಮಾಡಿಲ್ಲ. ಡ್ರೋನ್ ಹಾರಿಸಿಲ್ಲ. ಉಗ್ರರನ್ನು ಕೊಂದಿಲ್ಲ ಎಂದು ಹೇಳುತ್ತೀರಿ. ಇದೊಳ್ಳೆ ರಾಜ ಮೈಮೇಲೆ ಬಟ್ಟೆಯಿದ್ದಾಗಲೂ ಬಟ್ಟೆಯಿಲ್ಲ ಅನ್ನುವಂತೆ ಇದೆಯೆಲ್ಲ!' ಎಂದು ಹತಾಶೆಯಲ್ಲಿ ತಮ್ಮ ಸುತ್ತಿಗೆ ಕುಟ್ಟಿ ಎದ್ದು ಹೋದರಂತೆ. ಅವರಾದರೂ ಎಷ್ಟಂತ ತಲೆ ಚಚ್ಚಿಕೊಂಡಾರು. ಮೊಂಡ ಸಿಐಎ ಹಾಗೆಲ್ಲ ತನ್ನ ಗುಟ್ಟುಗಳನ್ನು ಅಧಿಕೃತವಾಗಿ ಬಿಟ್ಟುಕೊಡುವುದಿಲ್ಲ. ಆದರೆ ಅನಧಿಕೃತವಾಗಿ ಮಾತ್ರ ತನಗೆ ಬೇಕಾದ ವರದಿಗಾರರಿಗೆ ಬೇಕಾದಷ್ಟೇ ಮಾಹಿತಿಯನ್ನು ಕೊಡುತ್ತದೆ. ಅವರು ಅದನ್ನು ಬರೆದು, ಅದು ಜಗತ್ತಿನಲ್ಲಿ ಎಲ್ಲ ಕಡೆ ಕಡೆಗೆ ಹರಡಿ, ಉಗ್ರರಲ್ಲಿ ಒಂದು ತರಹದ ಹೆದರಿಕೆಯನ್ನು ಹುಟ್ಟಿಸಿರುತ್ತದೆ. ಹೆದರಿದ ಉಗ್ರ ಎಷ್ಟೋ ಉತ್ತಮ. ಸದಾ ತನ್ನ ಬೆನ್ನ ಹಿಂದೆ ಅಪಾಯಗಳನ್ನು ಹುಡುಕುತ್ತಾ ಇರುತ್ತಾನಾದ್ದರಿಂದ ಅವನಿಗೆ ಪೂರ್ತಿ ವೇಳೆ ಸ್ಕೀಮ್ ಹಾಕಲಾಗುವುದಿಲ್ಲ.

ಜನರಲ್ ಡೇವಿಡ್ ಪೆಟ್ರೆಯಸ್ ಸಿಐಎ ಮುಖ್ಯಸ್ಥರಾಗುವವರೆಗೂ ಡ್ರೋನ್ ಕಾರ್ಯಾಚರಣೆಗಳಿಗೆ ಒಂದು ಶಿಸ್ತು ಬಂದಿರಲಿಲ್ಲ. ಸೇನೆ ಮತ್ತು ಸಿಐಎ ನಲ್ಲಿ ಇದ್ದ tech savvy ಜನರು ಒಳ್ಳೆ ವಿಡಿಯೋ ಗೇಮ್ ಆಡಿದಂತೆ ಡ್ರೋನ್ ಹಾರಿಸಿಕೊಂಡಿದ್ದರು. ಡ್ರೋನ್ ತಂತ್ರಜ್ಞಾನ ಕೂಡ ಪೂರ್ತಿಯಾಗಿ ಪ್ರಬುದ್ಧವಾಗಿರಲಿಲ್ಲ. latency (ವಿಳಂಬ) ಮುಂತಾದ ಅಡೆತಡೆಗಳು ಇದ್ದವು. ಹತ್ಯಾದರ (kill rate) ತೃಪ್ತಿದಾಯಕವಾಗಿರಲಿಲ್ಲ. ದೂರ ಕುಳಿತು, ಲಕ್ಷಾಂತರ ಡಾಲರ್ ಬೆಲೆಬಾಳುವ ಡ್ರೋನ್  ಕ್ಷಿಪಣಿಗಳನ್ನು ಬೇಕಾಬಿಟ್ಟಿ ಹಾರಿಸಲು ಅವು ದೀಪಾವಳಿ ಪಟಾಕಿಗಳಲ್ಲ ನೋಡಿ.

ಸೇನೆಯ ಶಿಸ್ತನ್ನು ಸಿಐಎ ಗೆ ತರಲು ಪೆಟ್ರೆಯಸ್ ಶ್ರಮಪ್ರಟ್ಟರು. ತಕ್ಕ ಮಟ್ಟಿಗೆ ಯಶಸ್ವಿ ಕೂಡ ಆದರು. ಆದರೆ ಸಿಐಎ ಮುಖ್ಯಸ್ಥರಾಗಿ ಒಂದು ವರ್ಷ ಚಿಲ್ಲರೆ ದಿನ ಇದ್ದರು ಅಷ್ಟೇ. ತಾವೇ ಮಾಡಿಕೊಂಡ ಲಫಡಾ ಅವರಿಗೆ ಮುಳುವಾಯಿತು. ಒಬಾಮಾ ಸರ್ಕಾರಕ್ಕೆ ಹೆಚ್ಚಿನ ಮುಜುಗರ ತರುವ ಮೊದಲೇ ರಾಜೀನಾಮೆ ಕೊಟ್ಟು ಮನೆಗೆ ಹೋದರು. ಅಥವಾ ರಾಜೀನಾಮೆ ಕೇಳಿ ಪಡೆದುಕೊಂಡು ಮನೆಗೆ ಕಳಿಸಲಾಯಿತು.

ತಮ್ಮ ಆತ್ಮಕಥೆಯನ್ನು ಬರೆಯಬೇಕೆಂಬ ಹುಕಿ ಅವರಿಗೂ ಇತ್ತು. ಆದರೆ ವೇಳೆ ಕಮ್ಮಿ. ಅದಕ್ಕಾಗಿ ಪೌಲಾ ಬ್ರಾಡವೆಲ್ ಎಂಬ ಲೇಖಕಿಯನ್ನು ನೇಮಕಮಾಡಿಕೊಂಡರು. ಆಕೆ ಇವರ ಕಚೇರಿಯಲ್ಲೇ ಕೂತು ಇವರ ಆತ್ಮಕಥೆ ಬರೆಯತೊಡಗಿದಳು. ಆತ್ಮಕಥೆ ಹೇಳುತ್ತಾ ಹೇಳುತ್ತಾ ಬರೆಯುತ್ತಾ ಬರೆಯುತ್ತಾ ಇಬ್ಬರ ಆತ್ಮಗಳ ಸಮ್ಮಿಲನ ಆಗಿಬಿಟ್ಟಿತು ಎಂದು ಕಾಣುತ್ತದೆ. ಅಲ್ಲೊಂದು 'ಪರಮೇಶಿ ಪ್ರೇಮಪ್ರಸಂಗ' ಶುರುವಾಗಿಬಿಟ್ಟಿತು. ಬೇಹುಗಾರಿಕೆಯಂತಹ ಅತಿಸೂಕ್ಷ್ಮ ಹುದ್ದೆಗಳಲ್ಲಿರುವ ವ್ಯಕ್ತಿಗಳಿಗೆ ಅಂತಹ ಲಫಡಾಗಳು ಸಂಪೂರ್ಣವಾಗಿ ವರ್ಜ್ಯ. ಮಧುಬಲೆ (honey trap) ಮೂಲಕವೇ ತಾನೇ ದೊಡ್ಡ ದೊಡ್ಡ ಮನುಷ್ಯರನ್ನು ಹಳ್ಳಕ್ಕೆ ಕೆಡವಿ, ಬ್ಲಾಕ್ಮೇಲ್ ಮಾಡಿ, ಮಾಹಿತಿ ಗುಂಜುವುದು? ಇಲ್ಲಿ ಆ ಅಪಾಯ ಇತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಸಂಸಾರವೊಂದಿಗ ಸಿಐಎ ಮುಖ್ಯಸ್ಥ ತನ್ನ ಆತ್ಮಕಥೆ ಬರೆಯಲು ಬಂದ ಲೇಖಕಿಯ ಆತ್ಮದಲ್ಲಿ ಲೀನನಾಗಿ ಪಡ್ಡೆ ಹುಡುಗನಂತೆ ಆಡುತ್ತಾನೆ ಅನ್ನುವುದು ಸಹಿಸಲು ಅಸಾಧ್ಯವಾದ ವಿಷಯವಾಗಿತ್ತು.

ಈ ಆತ್ಮಕಥೆಯ ಲೇಖಕಿಯಾದರೂ ಸುಮ್ಮನೆ ಜಮ್ಮಚಕ್ಕ ಮಾಡಿ ಎದ್ದು ಹೋದಳೇ? ಇಲ್ಲ. ಸಿಐಎ ಮುಖ್ಯಸ್ಥನಂತಹ ದೊಡ್ಡ ಶಕ್ತಿಶಾಲಿ ಮನುಷ್ಯನ ಸಾಂಗತ್ಯ ಸಿಕ್ಕಿದ್ದೇ ಚಾನ್ಸ್ ಎಂದು ಹೇಳಿ ಸ್ವಾಮಿಕಾರ್ಯದೊಂದಿಗೆ ಸ್ವಕಾರ್ಯವನ್ನೂ ಮಾಡಿಕೊಳ್ಳತೊಡಗಿದಳು. ಪೆಟ್ರೆಯಸ್ ಸಾಹೇಬರ ಹೆಸರನ್ನು ಹೇಳಿಕೊಂಡು ಧಮಿಕಿ ಹಾಕುವ ಮಟ್ಟಕ್ಕೆ ಬಂದಳು. ಆವಾಗ ಇದೆಲ್ಲದರ ಮೇಲೆ ಬರೋಬ್ಬರಿ ನಜರ್ ಮಡಗಿದ್ದ FBI ಎಚ್ಚರಿಕೆಯ ಗಂಟೆ ಬಾರಿಸಿತು. ಒಬಾಮಾ ಸಾಹೇಬರು ಭ್ರಮನಿರಸನಗೊಂಡಿದ್ದರು. ಪೆಟ್ರೆಯಸ್ ಅವರ ಬಾಸ್ ಆಗಿದ್ದ ಅಂದಿನ ರಾಷ್ಟ್ರೀಯ ಬೇಹುಗಾರಿಕೆ ನಿರ್ದೇಶಕ (Director Of National Intelligence) ಜಿಮ್ ಕ್ಲಾಪರ್ ಅವರನ್ನು ಕರೆದು - 'ಅವರ ರಾಜೀನಾಮೆ ಪಡೆದುಕೊಳ್ಳಿ. ಇಲ್ಲವಾದರೆ ನಾನೇ ಅವರನ್ನು ಓಡಿಸಬೇಕಾಗುತ್ತದೆ. ಇದನ್ನು ತ್ವರಿತವಾಗಿ ಮಾಡಿ, ಪ್ಲೀಸ್' ಅಂದು ತಮ್ಮ ತಲೆ ಮೇಲೆ ಕೈಯಾಡಿಸಿಕೊಂಡರು. ಆದರೆ ಒಂದು ತೊಂದರೆಯೂ ಇತ್ತು. ಮುಂದಿನ ಕೆಲವೇ ತಿಂಗಳಲ್ಲಿ ಅಧ್ಯಕ್ಷರ ಚುನಾವಣೆ ಬರಲಿತ್ತು. ಒಬಾಮಾ ಎರಡನೇ ಅವಧಿಗೆ ಸಿದ್ಧರಾಗುತ್ತಿದ್ದರು. ಗೆಲ್ಲುವ ಸಾಧ್ಯತೆಗಳು ಚೆನ್ನಾಗಿದ್ದವು. ಅವು ಹಾಗೇ ಇರಲಿ ಎಂದುಕೊಂಡು ಈ ಲಫಡಾವನ್ನು ಅಲ್ಲಿಯವರೆಗೆ ಹೇಗೋ ಸಂಬಾಳಿಸಿದರು ಎಂದು ಕಾಣುತ್ತದೆ. ನವೆಂಬರ್ ೯ ರಂದು ಒಬಾಮಾ ಮತ್ತೊಮ್ಮೆ ಅಧ್ಯಕ್ಷರಾಗಿ ಚುನಾಯಿತರಾದರು. ಈಕಡೆ ಅಂದೇ ಪೆಟ್ರೆಯಸ್ ಸಾಹೇಬರು ತಮ್ಮ ಕಚೇರಿ ಖಾಲಿ ಮಾಡಿದರು. ಆತ್ಮಕಥೆ ಬರೆಯಲು ಬಂದು ಇವರ ನೌಕರಿಗೆ ಕುತ್ತು ತಂದಾಕೆ ಆಕೆ ಎಲ್ಲಿ ಹೋದಳು? ಆಕೆಯನ್ನು ಪೆಟ್ರೆಯಸ್ ಸಾಹೇಬರೇ ಮೊದಲು ಓಡಿಸಿದ್ದರು. ತಮ್ಮ ಹೆಸರಿನಲ್ಲಿ ಧಮಿಕಿ ಹಾಕುವಷ್ಟು ಮುಂದುವರೆದಿದ್ದಾಳೆ ಎಂದು ತಿಳಿದುಬಂದಾಗಲೇ ಆಕೆಗೆ ಗೇಟ್ ಪಾಸ್ ಕೊಟ್ಟು ಕಳಿಸಿದ್ದರು.

ಹೀಗೆ ಡ್ರೋನ್ ಕಾರ್ಯಾಚರಣೆಯ ಸ್ವರೂಪವನ್ನೇ ಬದಲಾಯಿಸಿದ್ದ ಪೆಟ್ರೆಯಸ್ ತಮ್ಮ ವೃತ್ತಿ ಜೀವನವನ್ನು ಮಾತ್ರ ವಿರೂಪಗೊಳಿಸಿಗೊಂಡು ಮನೆ ಸೇರಿದ್ದರು.

ಏನೇ ಇರಲಿ, ರಾಷ್ಟ್ರದ ಹಿತರಕ್ಷಣೆಗಾಗಿ ತನ್ನದೇ ದೇಶದ ನಾಗರಿಕನೊಬ್ಬನನ್ನು ಕೊಲ್ಲುವುದಿದೆಯೆಲ್ಲ ಅದು ತುಂಬಾ ಕಷ್ಟಕರ ಸಂಗತಿ. ತನ್ನ ವಿರೋಧಿಗಳನ್ನು ಮುಲಾಜಿಲ್ಲದೆ ಕೊಲ್ಲುವ ಇಸ್ರೇಲ್ ಸಹ ತನ್ನ ನಾಗರಿಕರನ್ನು ಕೊಲ್ಲುವಾಗ ಬಹಳ ಯೋಚನೆ ಮಾಡುತ್ತದೆ. ಹಾಗಾಗಿ ತಾನೇ ಮಾರ್ಡೇಚಾಯ್ ವನುನುವನ್ನು ಜಗತ್ತಿನ ತುಂಬೆಲ್ಲಾ ಹುಡುಕಿ, ಇಂಗ್ಲೆಂಡಿನಲ್ಲಿ ಪತ್ತೆ ಹಚ್ಚಿ, honey trap ಮಾಡಿ ಪುಸಲಾಯಿಸಿ ಇಟಲಿ ದೇಶಕ್ಕೆ ಒಯ್ದು, ಅಲ್ಲಿಂದ ಕಿಡ್ನಾಪ್ ಮಾಡಿ, ಇಸ್ರೇಲಿಗೆ ಕರೆತಂದು, ಕೇಸ್ ಹಾಕಿ, ಇಪ್ಪತ್ತು ಚಿಲ್ಲರೆ ವರ್ಷಗಳ ಕಾಲ ಸೆರೆಮನೆಗೆ ತಳ್ಳಿತ್ತು. ಪರಮಾಣು ವಿಜ್ಞಾನದ ರಹಸ್ಯಗಳನ್ನು ಕದ್ದು ಇಸ್ರೇಲಿನಿಂದ ಓಡಿದ್ದ ತನ್ನದೇ ದೇಶದ ನಾಗರಿಕನನ್ನು, ಮನಸ್ಸು ಮಾಡಿದ್ದರೆ, ಇಸ್ರೇಲ್ ಜಗತ್ತಿನ ಯಾವ ದೇಶದಲ್ಲಾದಾರೂ ಕೊಂದು ಬರಬಹುದಿತ್ತು. ಅವನ ಹೆಣ ಕೂಡ ಸಿಗುತ್ತಿರಲಿಲ್ಲ. ಆದರೆ  ಇಸ್ರೇಲ್ ಹಾಗೆ ಮಾಡಲಿಲ್ಲ. ತನ್ನದೇ ದೇಶದ ನಾಗರಿಕನನ್ನು ಕೊಂದರೆ ಅದನ್ನು ದೇಶದಲ್ಲಿ ಜನತೆಗೆ ಸಮಜಾಯಿಸಿಕೊಟ್ಟು ವಿವರಿಸುವುದು ಕಷ್ಟ. ಸರಕಾರ ಬದಲಾಗಿಹೋದೀತು. ರಾಜಕಾರಣಿಗಳ ಭವಿಷ್ಯವೇ ಖತಂ ಆಗಿಹೋದೀತು ಎಂದೆಲ್ಲ ವಿಚಾರ ಮಾಡಿ, ಎಲ್ಲೆಲ್ಲೋ ಅಲೆದುಕೊಂಡಿದ್ದ ಕಳ್ಳನನ್ನು ಇಲ್ಲದ ತೊಂದರೆ ತೆಗೆದುಕೊಂಡು ಬಂಧಿಸಿ ವಾಪಸ್ ಕರೆತಂದಿತೇ ವಿನಃ ಎನ್ಕೌಂಟರ್ ಮಾಡಲಿಲ್ಲ.

ಮೊತ್ತಮೊದಲ ಬಾರಿಗೆ ವಿದೇಶದಲ್ಲಿ ಡ್ರೋನ್ ಉಪಯೋಗಿಸಿ ತನ್ನದೇ ದೇಶದ ನಾಗರಿಕನನ್ನು ಕೊಲ್ಲುವ ಸಂದರ್ಭ ಬಂದಾಗ ಇಂತಹದೇ ದ್ವಂದ್ವಗಳನ್ನು ಅಮೇರಿಕಾ ಕೂಡ ಎದುರಿಸಿತ್ತು. ಇದಕ್ಕಾಗಿಯೇ ಖ್ಯಾತ ವಕೀಲರ ಒಂದು ತಂಡ ಹಲವಾರು ತಿಂಗಳುಗಳ ಕಾಲ ಸಂವಿಧಾನವನ್ನು ಅಭ್ಯಾಸ ಮಾಡಿ ಒಂದು ಸಮಗ್ರ ಕಾನೂನು ಅಭಿಪ್ರಾಯವನ್ನು ಒಬಾಮಾ ಸಾಹೇಬರಿಗೆ ಕೊಟ್ಟಿತ್ತು. ಅವರೇ ಹಾರ್ವರ್ಡ್ ವಿಶ್ವವಿದ್ಯಾಲಯದ ಖ್ಯಾತ ಕಾನೂನು ಕಾಲೇಜಿನಲ್ಲಿ ಓದಿದ ಪ್ರತಿಭಾವಂತ ವಕೀಲರು. ಅದನ್ನು ಕಿಸೆಯಲ್ಲಿ ಸರಿಯಾಗಿ ಇಟ್ಟುಕೊಂಡೇ ವಿದೇಶದಲ್ಲಿ ಬಲಿಯುತ್ತಿದ್ದ ಸ್ವದೇಶಿ ಉಗ್ರರ ಮೇಲೆ ಡ್ರೋನ್ ದಾಳಿಯ ಅನುಮತಿ ಕೊಟ್ಟಿದ್ದರು.

ಮುಂದೆ ಡ್ರೋನ್ ದಾಳಿ ಎಂಬುದು ಸರ್ವೇಸಾಮಾನ್ಯವಾಗಿಹೋಯಿತು. ನೆವಡಾ ರಾಜ್ಯದ ವಿಶಾಲ ಮರಭೂಮಿಯಲ್ಲಿ ಡ್ರೋನ್ ಕಾರ್ಯಾಚರಣೆಗಳ ಕೇಂದ್ರಸ್ಥಾನವಿದೆಯೆಂದು ಸುದ್ದಿ. ಅಲ್ಲಿ ಕುಳಿತ ಡ್ರೋನಾಚಾರ್ಯರು ವಿಶ್ವಾದ್ಯಂತ ಉಗ್ರರ ಬೇಟೆಯನ್ನು ಇಂದಿಗೂ ಮುಂದುವರೆಸಿದ್ದಾರೆ. ಇತ್ತೀಚೆಗೆ ಬಲಿಯಾದ ಇರಾನಿನ ಮಹಾದಂಡನಾಯಕ ಸುಲೇಮಾನಿ ಇದಕ್ಕೆ ಲೇಟೆಸ್ಟ್ ಉದಾಹರಣೆ. ಕಳ್ಳನಂತೆ ಬಾಗ್ದಾದಿಗೆ ಬಂದು ಇಳಿದವನಿಗೆ ಏನು ಬಂದು ಬಡಿಯಿತು ಎಂದು ಅರ್ಥವಾಗುವುದರ ಮುನ್ನವೇ ಭಸ್ಮವಾಗಿದ್ದ. ಸುತ್ತಮುತ್ತಲಿನ ಜನ ತಲೆಯೆತ್ತಿ ನೋಡಿದರೆ...ಮತ್ತೆ ಅದೇ...ಡ್ರೋನುಗಳ ರುದ್ರವೀಣೆಯ ಝೇಂಕಾರ.

ಮುಖ್ಯ ಮಾಹಿತಿ ಮೂಲ: The Way of the Knife: The CIA, a Secret Army, and a War at the Ends of the Earth by Mark Mazzetti

ಪುಸ್ತಕದ ಲೇಖಕರು ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿ ವಿಜೇತರು.

Friday, September 13, 2019

ಡ್ರಗ್ ಮಾಫಿಯಾಕ್ಕೆ ಮರ್ಮಾಘಾತ ಕೊಟ್ಟ ಅಮೇರಿಕಾದ DEA

ಅಮೇರಿಕಾದ ಮಾದಕ ವಸ್ತು ನಿಗ್ರಹ ದಳ (DEA - Drug Enforcement Agency) ಖುಷಿಯಲ್ಲಿದೆ. ಕೀನ್ಯಾ ಮೂಲದ ಮಾದಕ ದ್ರವ್ಯಗಳ ಕುಖ್ಯಾತ ಖದೀಮರಿಗೆ ದೊಡ್ಡ ಪ್ರಮಾಣದ ಶಿಕ್ಷೆಯಾಗಿದೆ. ಖತರ್ನಾಕ್ ಆಕಾಶಾ ಸಹೋದರರು ಮೂವತ್ತಕ್ಕೂ ಹೆಚ್ಚು ವರ್ಷಗಳ ಶಿಕ್ಷೆಗೆ ಗುರಿಯಾಗಿ ಜೈಲು ಪಾಲಾಗಿದ್ದಾರೆ.

ಈಗ ಸುಮಾರು ನಾಲ್ಕೈದು ವರ್ಷಗಳ ಹಿಂದೆಯೇ ಕೀನ್ಯಾದಲ್ಲಿ ದೊಡ್ಡ ಮಟ್ಟದ ಸಂಘಟಿತ ದಾಳಿ ಮಾಡಿತ್ತು ಅಮೇರಿಕಾದ DEA ತಂಡ. ಆಗ ಆಕಾಶಾ ಸಹೋದರರ ಜೊತೆ ಒಂದು ಮಹಾ ಇಂಟೆರೆಸ್ಟಿಂಗ್ ಸ್ಟಾರ್ ಜೋಡಿ ಕೂಡ ಸಿಕ್ಕಿಬಿದ್ದಿತ್ತು. ಅದೇ ಬಾಲಿವುಡ್ಡಿನ 'ಮಾದಕ ನಟಿ' ಖ್ಯಾತಿಯ ಮಮತಾ ಕುಲಕರ್ಣಿ ಮತ್ತು ಆಕೆಯ ಪತಿ ವಿಕಿ ಗೋಸ್ವಾಮಿ. ಹೆಸರಿಗೆ ತಕ್ಕಂತೆ 'ಮಾದಕ ನಟಿ' ಮಾದಕ ವಸ್ತುಗಳ ಲಫಡಾದಲ್ಲಿ ಸಿಕ್ಕಾಕಿಕೊಂಡುಬಿದ್ದಿದ್ದು ಕಾಕತಾಳೀಯವಂತೂ ಆಗಿರಲಿಕ್ಕಿಲ್ಲ.

ಮಮತಾ ಕುಲಕರ್ಣಿಯನ್ನು ಏನು ಮಾಡಿದರೋ ಗೊತ್ತಿಲ್ಲ. ಆದರೆ ಆಕೆಯ ಪತಿ ಗೋಸ್ವಾಮಿಯನ್ನು ಮಾತ್ರ ಉಳಿದ ಆರೋಪಿಗಳೊಂದಿಗೆ ಅಮೇರಿಕಾಕ್ಕೆ ಎಳೆದುಕೊಂಡು ಹೋದರು.

ಮುಂದೆ ಸುಮಾರು ವರ್ಷ ಕೇಸ್ ನಡೆದಿದೆ. ಒಂದು ಕಾಲದಲ್ಲಿ ಆಕಾಶಾ ಸಹೋದರರ ನಿಕಟವರ್ತಿಯಾಗಿದ್ದ ಗೋಸ್ವಾಮಿ ತನ್ನ ಹಳೆಯ ದೋಸ್ತುಗಳಿಗೆ Go ಎಂದು ಕೈಯೆತ್ತಿ ಸಂಪೂರ್ಣವಾಗಿ ಸರ್ಕಾರಿ ಸ್ವಾಮಿಯಾಗಿಬಿಟ್ಟಿದ್ದಾನೆ. ಮಾಫಿ ಸಾಕ್ಷಿದಾರನಾಗಿ ಆಕಾಶಾ ಸಹೋದರರ ಪೂರ್ತಿ ಭಾಂಡಾ ಬಿಚ್ಚಿಟ್ಟುಬಿಟ್ಟಿದ್ದಾನೆ. ಪುಣ್ಯಾತ್ಮನ ಹೇಳಿಕೆಗಳಿಂದಾಗಿ ಅರಿಭಯಂಕರ ಆಕಾಶಾ ಸಹೋದರರು ಅಮೇರಿಕಾದ ಜೈಲಿನಲ್ಲಿ ರಾಗಿ ಬೀಸುವಂತಾಗಿದ್ದಾರೆ.

ಮಾಫಿ ಸಾಕ್ಷಿದಾರ ವಿಕಿ ಗೋಸ್ವಾಮಿಯ ಗತಿಯೇನಾಗುತ್ತದೋ? ಅವನಿಗೆ ಯಾವ ತರಹದ ಶಿಕ್ಷೆ ವಿಧಿಸುತ್ತಾರೋ? ಗೊತ್ತಿಲ್ಲ. ಆ ಮನುಷ್ಯ ಹಿಂದೊಮ್ಮೆ ಐದಾರು ವರ್ಷಗಳ ಕಾಲ ದುಬೈ ಜೈಲಿನಲ್ಲಿ ಸರ್ವಿಸ್ ಮಾಡಿ ಬಂದಿದ್ದಾನೆ. ಮತ್ತದೇ ಮಾದಕ ವಸ್ತುಗಳ ಕೇಸಿನಲ್ಲೇ. ದಾವೂದ್ ಇಬ್ರಾಹಿಂನ ಅವಕೃಪೆಗೆ ತುತ್ತಾದ. ಅದಕ್ಕಾಗಿ ಕಾರಸ್ಥಾನ ಮಾಡಿ ಅವನನ್ನು ಜೈಲಿಗೆ ಕಳಿಸಲಾಯಿತು ಎಂದು ಒಂದು ಸಿದ್ಧಾಂತ ಇದೆ. ಡ್ರಗ್ ಕಳ್ಳಸಾಗಾಣಿಕೆದಾರರ ಮೇಲೆ ಹೆಸರಿಗಾದರೂ (ನಾಮ್ ಕೆ ವಾಸ್ತೆ) ಕ್ರಮ ಕೈಗೊಳ್ಳಬೇಕಾಗಿತ್ತು. ಹಿಂದೂ ಧರ್ಮೀಯನನ್ನು ಬಕ್ರಾ ಮಾಡಿ ಕೊಲ್ಲಿ ರಾಷ್ಟ್ರಗಳಲ್ಲಿ ಹಣಿಯುವುದು ಸುಲಭ ಎಂದು ಇವನಿಗಿಂತ ನೂರು ಪಟ್ಟು ದೊಡ್ಡ ಖದೀಮರೆಲ್ಲರನ್ನೂ ಬಿಟ್ಟು ಈ 'ಬಡಪಾಯಿ'ಯನ್ನು ಜೈಲಿಗೆ ಅಟ್ಟಿತು ದುಬೈ ಸರ್ಕಾರ ಅನ್ನುವವರೂ ಇದ್ದಾರೆ.

ದುಬೈನಲ್ಲಿ ಜೈಲಿಗೆ ಹೋದ ಗೋಸ್ವಾಮಿ. ಅದೇ ಸಮಯದಲ್ಲಿ ಮಮತಾ ಕುಲಕರ್ಣಿ ಹಿಮಾಲಯಕ್ಕೆ ಹೋದಳಂತೆ. ಆಕೆಯೇ ಹೇಳಿಕೊಂಡಂತೆ, ಅಲ್ಲಿ ಭಯಂಕರ ತಪಸ್ಸು ಮಾಡಿ, ಆತ್ಮದ ಸಾಕ್ಷಾತ್ಕಾರ ಮಾಡಿಕೊಂಡು ವಾಪಸ್ ಬರುವ ತನಕ ಈ ಕಡೆ ದುಬೈನಲ್ಲಿ ವಿಕಿ ಗೋಸ್ವಾಮಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ. ಮುಸ್ಲಿಂ ಆದರೆ ದುಬೈನಲ್ಲಿ ಜೈಲು ಶಿಕ್ಷೆ ಕಮ್ಮಿಯಾಗುತ್ತದೆ ಎಂದು ತಿಳಿದಿದ್ದ ಆತ ಹಾಗೆ ಮಾಡಿದ್ದರಲ್ಲಿ ದೊಡ್ಡ ಆಶ್ಚರ್ಯವೇನಿಲ್ಲ.

ಜೈಲಿನಿಂದ ಬಿಡುಗಡೆ ಹೊಂದಿದ ಗೋಸ್ವಾಮಿ ಮತ್ತು ಇತ್ತಕಡೆ ಹಿಮಾಲಯದಿಂದ ಏಕ್ದಂ ಸಾಧ್ವಿಯ ರೂಪದಲ್ಲಿ ಹಿಂತಿರುಗಿದ ಮಮತಾ ಕುಲಕರ್ಣಿ ಏನೋ ಒಂದು ತರಹದ ಶಾದಿ ಭಾಗ್ಯ ಮಾಡಿಕೊಂಡು ಆಫ್ರಿಕಾದ ಕೀನ್ಯಾ ದೇಶಕ್ಕೆ ಬಂದು ನೆಲೆಸಿದರು.

ಅಲ್ಲಿ ಆಗಲೇ ಆಕಾಶಾ ಸಹೋದರರು ದೊಡ್ಡ ಮಟ್ಟದ ಕುಖ್ಯಾತಿ ಗಳಿಸಿದ್ದರು. ಅವರ ವಿರೋಧ ಕಟ್ಟಿಕೊಂಡರೆ ಕಷ್ಟ ಎಂದು ತಿಳಿದು ಅವರೊಂದಿಗೆ ಮಾಂಡವಳಿ ಸಂಧಾನ ಮಾಡಿಕೊಂಡ ಗೋಸ್ವಾಮಿ ಡ್ರಗ್ ದಂಧೆಯನ್ನು ಮುಂದುವರೆಸಿದ. ಅವರಿಗೆ ಹೊಸ ಹೊಸ ಸಂಪರ್ಕಗಳನ್ನು ಮಾಡಿಸಿಕೊಟ್ಟ. ಭಾರತದ ಔಷಧಿ ಕಂಪನಿಯಿಂದ ದೊಡ್ಡ ಪ್ರಮಾಣದಲ್ಲಿ ವಸ್ತುಗಳನ್ನು ಆಮದು ಮಾಡಿಕೊಂಡ. ಪಕ್ಕದ ಉಗಾಂಡಾ ದೇಶದ ಅಧ್ಯಕ್ಷನ ತಂಗಿಗೆ ದೊಡ್ಡ ಪ್ರಮಾಣದ ತಾಂಬೂಲ ಬಾಗಿನ ಕೊಟ್ಟು ಆಕೆಯನ್ನೂ ಒಳಗೆ ಹಾಕಿಕೊಂಡ. ಭಾರತದ ದೇಶದಿಂದ ದೊಡ್ಡ ಪ್ರಮಾಣದ ಎಪಿಡ್ರಿನ್ ಎಂಬ ರಾಸಾಯನಿಕ ಟನ್ನುಗಟ್ಟಲೆ ಬಂದು ಉಗಾಂಡಾದಲ್ಲಿ ಇಳಿಯಿತು. ರಾಷ್ಟ್ರಾಧ್ಯಕ್ಷನ ತಂಗಿ ತಾಂಬೂಲ ಉಗುಳಿ, ಪಿಚಕಾರಿ ಹಾರಿಸಿ ಪೆಕಪೆಕನೆ ನಕ್ಕಳು. ಏನಾದರೂ ಮಾಡಿಕೊಳ್ಳಿ. ಟೈಮಿಗೆ ಸರಿಯಾಗಿ ನನ್ನ ಪಾಲಿನ ತಾಂಬೂಲ ತಪ್ಪಿಸಬೇಡಿ ಎಂದು ಹೇಳಿದ ಮೇಡಂ ತನ್ನ ಅಭಯಹಸ್ತ ತೋರಿಸಿದಳು. ಡ್ರಗ್ ಉತ್ಪಾದನೆಗೆ ಗ್ರೀನ್ ಸಿಗ್ನಲ್ ಕೊಟ್ಟಳು. ಖತರ್ನಾಕ್ ಡ್ರಗ್ ಆಗಿರುವ ಮ್ಯಾನ್ಡ್ರಾಕ್ಸ್ ಉತ್ಪಾದನೆ ದೊಡ್ಡ ಪ್ರಮಾಣದಲ್ಲಿ ನಡೆಯಿತು. ವಿಶ್ವದ ತುಂಬೆಲ್ಲಾ ಗೋಸ್ವಾಮಿ ಮತ್ತು ಆಕಾಶಾ ಸಹೋದರರು ಎಬ್ಬಿಸಿದ ಮಾದಕ ದ್ರವ್ಯಗಳ ಘಾಟೋ ಘಾಟು.

ಆಗ ಮುರಿದುಕೊಂಡು ಬಿತ್ತು ನೋಡಿ ಅಮೇರಿಕಾದ DEA. ಸೀದಾ ಹೋದವರೇ ಕೀನ್ಯಾದ ಆಧಿಕಾರಶಾಹಿಯ ತಲೆಗೆ ಬಂದೂಕಿಟ್ಟರು. 'ನಿಮ್ಮ ದೇಶದಲ್ಲಿ ಇಂತಿಂತಹ ಕೇಡಿಗಳಿದ್ದಾರೆ. ಅವರು ನಮಗೆ ಬೇಕು. ಬೇಕೇಬೇಕು. ಸಹಕರಿಸಿದರೆ ಒಳ್ಳೆಯದು. ಇಲ್ಲವಾದರೆ ಗೊತ್ತಲ್ಲ? ನಾವು ಯಾರೆಂದು?? ನಾವು DEA. ಎಲ್ಲಿ ಹೇಗೆ ತಟ್ಟಿದರೆ ಏನು ಹೇಗೆ ಉದುರುತ್ತದೆ ಎಂದು ನಮಗೆ ಬರೋಬ್ಬರಿ ಗೊತ್ತಿದೆ!' ಎಂದು ಧಮ್ಕಿ ಹಾಕಿದರು. ಡ್ರಗ್ ಮಾಫಿಯಾದಿಂದ ಸಾಕಷ್ಟು ಸತ್ಯನಾರಾಯಣ ಪ್ರಸಾದ ಸ್ವೀಕರಿಸಿದ್ದರೂ ಕೀನ್ಯಾದ ಪೊಲೀಸರಿಗೆ ಸಹಕರಿಸುವುದನ್ನು ಬಿಟ್ಟು ಬೇರೆ ಗತಿಯಿರಲಿಲ್ಲ.

೨೦೧೫ ರಲ್ಲಿ ಆದ ದೊಡ್ಡ ಪ್ರಮಾಣದ ದಾಳಿಯಲ್ಲಿ ಆಕಾಶಾ ಸಹೋದರರನ್ನು ಮತ್ತು ಗೋಸ್ವಾಮಿಯನ್ನು ಎತ್ತಾಕಿಕೊಂಡ DEA, ಸ್ಪೆಷಲ್ ವಿಮಾನದಲ್ಲಿ, ಎಲ್ಲ ಖದೀಮರನ್ನು ಅಮೇರಿಕಾಗೆ ಸಾಗಿಸಿತ್ತು. ಈಗ ಕೇಸ್ ಮುಗಿದಿದೆ. ಬಕ್ತಾಶ್ ಮತ್ತು ಇಬ್ರಾಹಿಂ ಎನ್ನುವ ಆಕಾಶಾ ಸಹೋದರರು ಖಾಯಮ್ಮಾಗಿ ಅಮೇರಿಕಾದ ಜೈಲು ಸೇರಿದ್ದಾರೆ. ಗೋಸ್ವಾಮಿ ತನ್ನ ಗತಿಯೇನೋ ಎಂದು ಎದುರು ನೋಡುತ್ತಿದ್ದಾನೆ. ಮಾಫಿ ಸಾಕ್ಷಿದಾರನಾದ ಕಾರಣ ಕಮ್ಮಿ ಶಿಕ್ಷೆ ಕೊಡಬಹುದು. ಯಾರಿಗೆ ಗೊತ್ತು, ನಸೀಬ್ ಛಲೋ ಇದ್ದರೆ ಏನೂ ಶಿಕ್ಷೆ ಕೊಡದೆ ಬಿಟ್ಟು ಕಳಿಸಿದರೂ ಆಶ್ಚರ್ಯವಿಲ್ಲ.

ಈ ಮಧ್ಯೆ ಮಮತಾ ಕುಲಕರ್ಣಿ ಎಲ್ಲಿ? ಆಕೆಯ ಸುದ್ದಿಯೇ ಇಲ್ಲ. ಆಕೆ ಮುಂಬೈಗೆ ಬರುವಂತಿಲ್ಲ. ಅಲ್ಲಿ ಆಕೆಯ ಮೇಲೆ ವಾರಂಟ್ ಇದೆ. DEA ಕೊಟ್ಟ ಮಾಹಿತಿ ಪ್ರಕಾರ ಮಹಾರಾಷ್ಟ್ರ ದ ಸೊಲ್ಲಾಪುರ ಸಮೀಪದ ಔಷಧಿ ಫ್ಯಾಕ್ಟರಿ ಮೇಲೆ ದಾಳಿ ಮಾಡಿದ ಮಹಾರಾಷ್ಟ್ರ ಪೊಲೀಸರು ಟನ್ನುಗಟ್ಟಲೆ ಅಪಾಯಕಾರಿ ರಾಸಾಯನಿಕಗಳನ್ನು ವಶಪಡಿಸಿಕೊಂಡು ಆ ಫ್ಯಾಕ್ಟರಿಗೆ ಬೀಗ ಜಡಿದರಲ್ಲ. ಆ ಕೇಸಿನಲ್ಲಿ ಗೋಸ್ವಾಮಿ ದಂಪತಿಯನ್ನೂ ಆರೋಪಿಗಳು ಎಂದು ತೋರಿಸಲಾಗಿತ್ತು. ಆಗ ಮಾಧ್ಯಮಕ್ಕೆ ಬಂದಿದ್ದ ಮಮತಾ ಕುಲಕರ್ಣಿ ಅದೆಲ್ಲ ತನ್ನ ವಿರುದ್ಧ ಮಾಡಿರುವ ಕಾರಸ್ಥಾನ, ಷಡ್ಯಂತ್ರ ಎಂದು ಹೇಳಿ ಬೊಬ್ಬೆ ಹೊಡೆದು ಹೋದಾಕೆ ನಂತರ ನಾಪತ್ತೆ. ಈಗ ಕೀನ್ಯಾದಲ್ಲಿದ್ದಾಳೋ, ಪೀಣ್ಯಾದಲ್ಲಿದ್ದಾಳೋ? ಯಾರಿಗೆ ಗೊತ್ತು!?

ಇದೇ ಕೇಸಿನಲ್ಲಿ DEA ಮತ್ತು ಕೀನ್ಯಾ ಪೊಲೀಸರಿಂದ ಬಚಾವಾಗಿ ಭಾರತಕ್ಕೆ ಓಡಿ ಬಂದು ಸದ್ಯಕ್ಕೆ ಮುಂಬೈ ಆಸ್ಫತ್ರೆಯಲ್ಲಿ ಮಲಗಿಬಿಟ್ಟಿರುವವನು ಅಲಿ ಪಂಜಾನಿ (ಪುಂಜಾನಿ). ಇವನೂ ಕೀನ್ಯಾ ದೇಶದವನೇ. ಭಾರತೀಯ ಮೂಲದವನು ಎಂದು ಕಾಣಿಸುತ್ತದೆ. ಆಕಾಶಾ ಸೋದರರ ಪಕ್ಕಾ ಪ್ರತಿಸ್ಪರ್ಧಿಯಾಗಿದ್ದವನು ಈ ಪಂಜಾನಿ. ಡ್ರಗ್ ಸಾಮ್ರಾಜ್ಯದ ಮೇಲೆ ಹತೋಟಿ ಸಾಧಿಸುವ ಪೈಪೋಟಿಯಲ್ಲಿ ಈ ಪಂಜಾನಿ ಮತ್ತು ಆಕಾಶಾ ಸಹೋದರರ ಮಧ್ಯೆ ಜಗಳಗಳಾಗಿದ್ದವು. ಒಮ್ಮೆಯಂತೂ ನೈಟ್ ಕ್ಲಬ್ ಒಂದರಲ್ಲಿ ಒಬ್ಬರಿಗೊಬ್ಬರು ಎದುರಾದಾಗ ಬಂದೂಕುಗಳು ಘರ್ಜಿಸಿದ್ದವು. ಗುಂಡುಗಳು ಹಾರಿದ್ದವು. ಪಂಜಾನಿಯ ಅಂಗರಕ್ಷಕ ಗಂಭೀರವಾಗಿ ಗಾಯಗೊಂಡಿದ್ದ.

ಹೀಗಾಗಿ DEA ಆಕಾಶಾ ಸಹೋದರರನ್ನು ಎತ್ತಾಕಿಕೊಂಡು ಹೋದಾಗ ಪಂಜಾನಿ ಸಕತ್ ಖುಷಿ ಪಟ್ಟಿರಬೇಕು. ತನಗಿನ್ನು ಪ್ರತಿಸ್ಪರ್ಧಿಗಳೇ ಇಲ್ಲ ಎಂದು ಮೆರೆಯಲು ಆರಂಭಿಸಿದ್ದಾನೆ. ಎರಡನೇ ಸುತ್ತಿನಲ್ಲಿ DEA ಪಂಜಾನಿಯ ಮೇಲೆಯೇ ಮುರ್ಕೊಂಡು ಬಿದ್ದಿದೆ. ಕೀನ್ಯಾದ ಆಡಳಿತ ವ್ಯವಸ್ಥೆಗೆ ಬರೋಬ್ಬರಿ ಬಿಸ್ಕೀಟ್ ಹಾಕಿದ್ದ ಕಾರಣಕ್ಕೆ ಈ ಮಾಹಿತಿ ಸರಿಯಾದ ಸಮಯಕ್ಕೆ ಪಂಜಾನಿಗೆ ಸಿಕ್ಕಿದೆ. ಪಂಜಾನಿ ಪಂಚೆ ಎತ್ತಿಕೊಂಡು ಕೀನ್ಯಾ ಬಿಟ್ಟು ಓಡಿಬಂದಿದ್ದಾನೆ. ಭಾರತದಲ್ಲಿ ಬಂದು ಮುಂಬೈನ  ಬಾಂದ್ರಾ ಪ್ರದೇಶದ ಆಸ್ಪತ್ರೆಯಲ್ಲಿ ಶಿವನೇ ಶಂಭುಲಿಂಗ ಮಾದರಿಯಲ್ಲಿ ಮಲಗಿಬಿಟ್ಟಿದ್ದಾನೆ. DEA ಮಾತ್ರ ಇಂಟರ್ಪೋಲ್ ನೋಟೀಸ್ ಹೊರಡಿಸಿದೆ. ಅದರ ಬಗ್ಗೆ ಮುಂಬೈ ಪೊಲೀಸರು ಹೆಚ್ಚಿನ ಗಮನ ಹರಿಸಿಲ್ಲವಂತೆ. ಕೇಳಿದರೆ ಪಂಜಾನಿ ಮೇಲೆ ಮುಂಬೈನಲ್ಲಿ ಏನೂ ಕೇಸುಗಳು ಇಲ್ಲ. ಹಾಗಾಗಿ ಏನೂ ಮಾಡುವಂತಿಲ್ಲ ಅಂದರಂತೆ. ಇನ್ನು ಯಾವತ್ತು ತಲೆಕೆಟ್ಟ DEA ಮುಂಬೈ ಪೊಲೀಸರಿಗೆ ತಪರಾಕಿ ಕೊಡುತ್ತದೋ ಗೊತ್ತಿಲ್ಲ. ದೊಡ್ಡ ಮಟ್ಟದಲ್ಲಿ ತಪರಾಕಿ ಬಿದ್ದ ದಿನ ಪಂಜಾನಿಯನ್ನು ಬಂಧಿಸಿ ಅಮೇರಿಕಾಕ್ಕೆ ಕಳಿಸಬಹುದು. ಯಾರಿಗೆ ಗೊತ್ತು, ಅಷ್ಟರಲ್ಲಿ ಈ ಕಳ್ಳ ಪರಮಾತ್ಮ ಭಾರತ ಬಿಟ್ಟು ಮತ್ತೆಲ್ಲಾದರೂ ಗಾಯಬ್ ಆದರೂ ಆದನೇ. ಆದರೆ ಒಮ್ಮೆ DEA ಹಿಂದೆ ಬಿತ್ತು ಅಂದರೆ ಬಚಾವಾಗುವುದು ಕಷ್ಟ.

ಈ ಮಾಫಿಯಾ ಮಂದಿಗೂ ಬಾಲಿವುಡ್ ನಟಿಯರಿಗೂ ಅದೇನು ಸಂಬಂಧವೋ, ಅದೇನು ಆಕರ್ಷಣೆಯೋ ದೇವರೇ ಬಲ್ಲ. ವಿಕಿ ಗೋಸ್ವಾಮಿ ಆಕಾಲದ ಹಾಟ್ ನಟಿ ಮಮತಾ ಕುಲಕರ್ಣಿಯನ್ನು ಮದುವೆಯಾದ. ತಾನೇನು ಕಮ್ಮಿ ಎಂಬಂತೆ ಈ ಅಲಿ ಪಂಜಾನಿ ಸಾಹೇಬರು ಕಿಮ್ ಶರ್ಮಾ ಎಂಬ ನಟಿಯನ್ನು ೨೦೧೦ ಮದುವೆಯಾಗಿ ಕೀನ್ಯಾಕ್ಕೆ ಕರೆದುಕೊಂಡು ಹೋಗಿದ್ದರಂತೆ. ಕಿಮ್ ಶರ್ಮಾ ೨೦೦೦ ರ ಕಾಲದಲ್ಲಿ ಸಾಕಷ್ಟು ದೊಡ್ಡ ನಟಿ. ಕ್ರಿಕೆಟಿಗ ಯುವರಾಜ್ ಸಿಂಗನ ಗೆಳತಿ ಎಂದು ಖ್ಯಾತಳಾಗಿದ್ದವಳು. ಅಲ್ಲಿ ವರ್ಕೌಟ್ ಆಗಲಿಲ್ಲ ಅಂತ ಕಾಣುತ್ತದೆ. ಸಿಕ್ಕ ಪಂಜಾನಿ ಸಾಹೇಬ್ರನ್ನು ವಿವಾಹವಾಗಿ ಕೀನ್ಯಾ ಸೇರಿಕೊಂಡಿದ್ದಳು.

ಆರು ವರ್ಷಗಳ  ಕಾಲ ಸಂಸಾರ ಮಾಡಿದ ನಂತರ ಪಂಜಾನಿ ಬೇರೆ ಯಾರನ್ನೋ ಹುಡುಕಿಕೊಂಡು ಹೋಗಿ ಹೊಸ ಹಕ್ಕಿಯ ಜೊತೆ ಸೆಟಲ್ ಆಗಿಬಿಟ್ಟನಂತೆ. ಹಾಗಾಗಿ ವಿವಾಹ ಸೋಡಾಚೀಟಿಯಲ್ಲಿ ಅಂತ್ಯವಾಗಿದೆ.

ಬರಿಗೈಯಲ್ಲಿ ಠಣ್ ಠಣ್ ಗೋಪಾಲ್ ಆಗಿ, ಕಾಸು ಆಸ್ತಿ ಏನೂ ಇಲ್ಲದೆ ಭಾರತಕ್ಕೆ ಮರಳಿರುವ ಕಿಮ್ ಶರ್ಮಾ ಮುಂಬೈನಲ್ಲಿ ಹೊಸ ಬಾಳನ್ನು ಹುಡುಕಿಕೊಳ್ಳುತ್ತಿದ್ದಾಳೆ. ಬಾಲಿವುಡ್ಡಿನಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಲು ಉಚಿತವಾಗಿ ನಟಿಸಲೂ ರೆಡಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾಳೆ. ಯಾರೂ ಉದ್ಯೋಗ ಕೊಟ್ಟ ಹಾಗೆ ಕಾಣುವುದಿಲ್ಲ. ಜೊತೆಗೊಬ್ಬ ಗೆಣೆಕಾರ ಇರಲಿ ಎಂದು ಯಾರೋ ಹರ್ಷವರ್ಧನ್ ರಾಣೆ ಎನ್ನುವ, ತನಗಿಂತ ಐದು ವರ್ಷ ಚಿಕ್ಕವನಾದ, ಮಾಡೆಲ್ ಜೊತೆ ಡೇಟಿಂಗ್ ಶುರುವಿಟ್ಟುಕೊಂಡಿದ್ದಳು. ಅದೂ ಕೂಡ ಮೊನ್ನೆ ಮಕಾಡೆ ಮಲಗಿ ಅಂತ್ಯಗೊಂಡಿದೆ.

ಕಿಮ್ ಶರ್ಮಾ ಈಗ ಕಿಮಿ ಶರ್ಮಾ ಎನ್ನುವ ಹೆಸರಿನಲ್ಲಿ ಬಾಲಿವುಡ್ಡಿನಲ್ಲಿ ಚಲಾವಣೆಗೊಳ್ಳಲು ಪ್ರಯತ್ನಿಸುತ್ತಿದ್ದಾಳೆ. ಹೆಸರು ಬದಲಾಯಿಸಿಕೊಂಡ ತಕ್ಷಣ ಅದೃಷ್ಟ ಬದಲಾಯಿಸುತ್ತದೆಯೇ? ಕಾದು ನೋಡಬೇಕು.

ಪಂಜಾನಿ DEA ಮಂದಿಯ ಹದ್ದಿನ ದೃಷ್ಟಿಯಲ್ಲಿ ಬರುವ ಮೊದಲೇ ಆತನಿಂದ ದೂರವಾದ ಕಿಮ್ ಶರ್ಮಾ ಒಂದು ರೀತಿಯಲ್ಲಿ ಅದೃಷ್ಟವಂತಳೇ. ಪಂಜಾನಿಯಂತೂ ಅಮೇರಿಕಾದ ಜೈಲಿನಲ್ಲಿ ರಾಗಿ ಬೀಸುವುದು ಗ್ಯಾರಂಟಿ. ಆತನಿಂದ ಮೊದಲೇ ದೂರವಾಗಿ ಆ ಕರ್ಮದಿಂದ ತಪ್ಪಿಸಿಕೊಂಡಿದ್ದಾಳೆ ಕಿಮ್ ಶರ್ಮಾ. ಅಷ್ಟರಮಟ್ಟಿಗೆ ಆಕೆ ಅದೃಷ್ಟವಂತೆ.

ಹೆಚ್ಚಿನ ಮಾಹಿತಿಗೆ:

ಅಲಿ ಪಂಜಾನಿ

ಕಿಮ್ ಶರ್ಮಾ

Mamta Kulkarni, Vicky Goswami complete saga summarized for the uninitiated

ಮಮತಾ ಕುಲಕರ್ಣಿಯ ಸಂದರ್ಶನ (ಪೋಸ್ಟಿನ ಕೊನೆಯಲ್ಲಿದೆ)

'ಕುಲಕರ್ಣಿ ಮಮ್ಮಿ' ಸನ್ಯಾಸ ತೊಗೋಂಡಳಾ?!.....ಅಕಟಕಟಾ!

Saturday, March 18, 2017

ಟೈವಾನಿನ ಕವಳದ ಕನ್ನಿಕೆಯರು ಉರ್ಫ್ ತಾಂಬೂಲದ ತರುಣಿಯರು ಉರ್ಫ್ ಎಲೆಯಡಿಕೆ ಅಪ್ಸರೆಯರು

೨೦೦೧ ರಲ್ಲಿ ಕೆಲಸದ ಮೇಲೆ ಟೈವಾನ್ ದೇಶಕ್ಕೆ ಹೋಗುವ ಅವಕಾಶ ಬಂದಿತ್ತು. ಆಗ ಟೈವಾನ್ ದೇಶ, ಅದರಲ್ಲೂ ಕೌಶಾಂಗ್ ಅನ್ನುವ ನಗರ ಪ್ರದೇಶ, ವಿಶ್ವದ ಸೆಮಿಕಂಡಕ್ಟರ್ ಚಿಪ್ ಉತ್ಪಾದಿಸುವ ರಾಜಧಾನಿ (semiconductor capital of the world) ಎಂದು ಪ್ರಸಿದ್ಧವಾಗುತ್ತಿತ್ತು. ಸಾವಿರಾರು ಎಕರೆಗಟ್ಟಲೆ ಜಾಗದಲ್ಲಿ ಬಿಲಿಯನ್ ಡಾಲರಿಗಿಂತಲೂ ಹೆಚ್ಚು ವೆಚ್ಚದ ಚಿಪ್ ತಯಾರಿಕಾ ಕೇಂದ್ರಗಳು ತಲೆಯತ್ತುತ್ತಿದ್ದವು. ಅಂತಹ ಕಾರ್ಖಾನೆಗಳನ್ನು ನಡೆಸಲು ಸಾಫ್ಟ್ವೇರ್ ತಂತ್ರಜ್ಞಾನ ಬೇಕಲ್ಲ. ನಾನು ಆಗಿದ್ದ ನಮ್ಮ ಕಂಪನಿ ಅಂತಹ ಸಾಫ್ಟ್ವೇರ್ ತಯಾರಿಸುತ್ತಿತ್ತು. ಟೈವಾನಿನ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಅಳವಡಿಸುವ ಕಾರ್ಯ ನಡೆಯುತ್ತಿತ್ತು. ಸಾಫ್ಟ್ವೇರ್ ಕರ್ಮಿಗಳಾಗಿ ನಮ್ಮಂತವರು ಹೋಗಿ ಬಂದು ಮಾಡುತ್ತಿದ್ದೆವು.

ಟೈವಾನ್ ಅಂದರೆ ಚೀನಾ ತರಹ ಇರಬಹುದು ಅಂದುಕೊಂಡರೆ ಫುಲ್ ಬೇರೆಯೇ. ಚೀನಾದೊಂದಿಗೆ ಜಗಳ ಮಾಡಿಕೊಂಡು ಹುಟ್ಟಿದ ದೇಶ ಟೈವಾನ. ಮಾವೋ ಎಂಬ ಕ್ರಾಂತಿಕಾರಿ ಬಂದನಲ್ಲ. ಆಗ ಅವನ ವಿರುದ್ಧ ಸಿಡಿದೆದ್ದು ನಿಂತ ಜನ ಅವನ ಏಟುಗಳನ್ನು ತಡೆದುಕೊಳ್ಳಲಾಗದೇ ಸಮುದ್ರ ದಾಟಿ ಬಂದು ಪಕ್ಕದ ಫಾರ್ಮೋಸಾ ದ್ವೀಪದಲ್ಲಿ ನೆಲೆಸಿದರು. ಅಂದಿನ ಫಾರ್ಮೋಸಾ ಇಂದಿನ ಟೈವಾನ್. ಇವತ್ತಿಗೂ ಚೀನಾ ದೇಶ ಟೈವಾನ್ ತನ್ನ ದೇಶದ ಭಾಗವೆಂದೇ ಪರಿಗಣಿಸುತ್ತದೆ. ಅದೇನೋ ಅಂತರರಾಷ್ಟ್ರೀಯ ಸಮುದಾಯದ ಮಾತಿಗೆ ಕೊಂಚ ಬೆಲೆ ಕೊಟ್ಟಿದೆ ಅನ್ನುವ ಕಾರಣಕ್ಕೆ ಟೈವಾನ್ ಮೇಲೆ ದಾಳಿ ಮಾಡಿ ಆಪೋಶನ ತೆಗೆದುಕೊಂಡಿಲ್ಲ, ಸ್ವಾಹಾ ಮಾಡಿಲ್ಲ ಅಷ್ಟೇ.

ಮೊದಲು ಬಾಸ್ಟನ್ನಿನಿಂದ ಚಿಕಾಗೊ ನಗರಕ್ಕೆ ಪಯಣ. ಚಿಕಾಗೋ ನಗರದಿಂದ ಹದಿನೈದು ತಾಸುಗಳ ದೀರ್ಘ ವಿಮಾನಯಾನದ ನಂತರ ಹಾಂಗ್ ಕಾಂಗ್ ತಲುಪಿಕೊಂಡೆ. ಅಲ್ಲಿಂದ ಒಂದು ಚಿಕ್ಕ ವಿಮಾನದಲ್ಲಿ ಟೈವಾನ್ ಜಲಸಂಧಿ (Strait of Taiwan) ದಾಟಿದರೆ ಬರೋಬ್ಬರಿ ಎದುರಿಗೇ ಇದೆ ಟೈನಾನ್ ಶಹರ. ರಾಜಧಾನಿ ತೈಪೆ ನಂತರದ ದೊಡ್ಡ ಶಹರಗಳಲ್ಲೊಂದು ಈ ಟೈನಾನ್. ಹಾಂಗಕಾಂಗಿನಿಂದ ಎರಡು ತಾಸಿನ ಪಯಣ ಅಷ್ಟೇ.

ಟೈನಾನಿಗೆ ಬಂದು ಇಳಿದದ್ದಾಯಿತು. ಅಲ್ಲಿಂದ ನಮ್ಮ ಕಂಪನಿಯ ಪ್ರಾಜೆಕ್ಟ್ ನಡೆಯುತ್ತಿದ್ದ ಕೌಶಾಂಗ್ ಪಟ್ಟಣಕ್ಕೆ ಒಂದು ಐವತ್ತು ಮೈಲಿ ದೂರ. ಕರೆದೊಯ್ಯಲು ಒಬ್ಬ ಸ್ಥಳೀಯ ಟೈವಾನಿ ಮನುಷ್ಯ ಬಂದಿದ್ದ. ದೊಡ್ಡ ವ್ಯಾನ್ ಕೂಡ ತಂದಿದ್ದ.

ರಾತ್ರಿ ಸುಮಾರು ಹತ್ತು ಘಂಟೆ ಸಮಯ. ಟೈನಾನ್ ವಿಮಾನ ನಿಲ್ದಾಣದಿಂದ ಹೊರಬಿದ್ದರೆ ರಾಷ್ಟ್ರೀಯ ಹೆದ್ದಾರಿ.

ಹೆದ್ದಾರಿಗೆ ಇಳಿದಾಗ ಕಂಡಿದ್ದು ಒಂದು ವಿಶಿಷ್ಟ ದೃಶ್ಯ. ಒಂದು ಕಡೆ ಅಂತಲ್ಲ. ಹೆದ್ದಾರಿಗುಂಟ ಕಾಣುತ್ತಲೇ ಇತ್ತು. ಅದೇನು ಅಂದರೆ….ಹೆದ್ದಾರಿ ಪಕ್ಕದಲ್ಲಿ ಚಿಕ್ಕಚಿಕ್ಕ ಗಾಜಿನ ಕುಟೀರಗಳು. ಬಣ್ಣಬಣ್ಣದ ಪ್ರಖರ ನಿಯಾನ್ ದೀಪಗಳಿಂದ ಅಲಂಕೃತ. ಎಲ್ಲ ಕಡೆ ಜಗಮಗ. ನಮ್ಮ ಕಡೆ ರಸ್ತೆ ಮೇಲೆ ಕಾಣುವ ಪಾನ್ ಬೀಡಾ ಗೂಡಂಗಡಿಗಳಂತೆಯೇ ಇದ್ದವು. ಪೂರ್ತಿ ಗಾಜಿನವು ಇದ್ದವು ಮತ್ತು ಕೊಂಚ sophisticated ಅನ್ನಿಸುವಂತೆ ಇದ್ದವು ಅನ್ನುವದನ್ನು ಬಿಟ್ಟರೆ ಥೇಟ್ ನಮ್ಮ ರಸ್ತೆ ಪಕ್ಕದ ಚುಟ್ಟಾ ಬೀಡಿ ಅಂಗಡಿಗಳಂತೆಯೇ ಇದ್ದವು.

ಅಂತಹ ಗಾಜಿನ ಗೂಡಂಗಡಿಗಳಲ್ಲಿ ರಪ್ಪಂತೆ ಕಣ್ಣಿಗೆ ರಾಚುವಂತೆ ಇದ್ದವರು ಒಳಗಿದ್ದ ತುಂಡುಡುಗೆ ತೊಟ್ಟ ಲಲನೆಯರು. ಶಿವನೇ, ಟೈವಾನ್ ದೇಶ ಕೂಡ ಥೈಲಾಂಡ್ ದೇಶದಂತಾಗಿಹೋಯಿತೇ!? ಅನ್ನುವ ಯೋಚನೆ ಬಂತು. ಇಲ್ಲೂ ಕಂಡಕಂಡಲ್ಲಿ ಕಾಮದಾಟದ ಕೇಂದ್ರಗಳೇ? ಈ ಜಗಮಗ ದೀಪದ ಗಾಜಿನ ಗೂಡುಗಳು, ಅವುಗಳಲ್ಲಿರುವ ತುಂಡುಡುಗೆ ತೊಟ್ಟು ಮುಗುಳ್ನಗೆ ಬೀರುತ್ತಿರುವ ಲಲನೆಯರು….ಮತ್ತೇನಾಗಿರಲು ಸಾಧ್ಯ? ಹೆದ್ದಾರಿ ಪಕ್ಕದಲ್ಲಿ ಅಂತಹ ದಂಧೆಗಳು ನಡೆಯುತ್ತವೆ. ಬೇರೆ ಕಡೆ ಕದ್ದುಮುಚ್ಚಿ ನಡೆಯುತ್ತವೆ. ಇಲ್ಲಿ ನೋಡಿದರೆ ಖುಲ್ಲಂಖುಲ್ಲಾ ನಡೆಯವ ಹಾಗೆ ಕಾಣುತ್ತದೆ. ಆದರೂ ಏನೋ ವಿಚಿತ್ರವಾಗಿದೆ ಅಂದುಕೊಂಡೆ.

ಮರುದಿನ ಆಫೀಸಿಗೆ ಹೋದಾಗ ಕೇಳಿದ್ದೇ ಆ ಗಾಜಿನ ಗೂಡುಗಳ ಬಗ್ಗೆ ಮತ್ತೆ ಅಲ್ಲಿ ನಡೆಯುವ ವ್ಯವಹಾರದ ಬಗ್ಗೆ. ಕೇವಲ ಜನರಲ್ ನಾಲೆಜ್ ಸಲುವಾಗಷ್ಟೇ. ದೊರೆತ ಉತ್ತರ ಭಯಂಕರ ಆಶ್ಚರ್ಯಕರವಾಗಿತ್ತು.

ಆ ಗಾಜಿನ ಗೂಡುಗಳಲ್ಲಿ ಎಲೆಯಡಿಕೆ (ಪಾನ್, ತಾಂಬೂಲ, ಕವಳ) ಮಾರುತ್ತಾರೆ. ಅವುಗಳ ಮಾರಾಟ ಹೆಚ್ಚಲಿ ಅಂತ ತುಂಡುಡುಗೆ ತೊಟ್ಟ ಆಕರ್ಷಕ ಕನ್ನಿಕೆಯರನ್ನು ನಿಯಮಿಸಿರುತ್ತಾರೆ. ಅಲ್ಲೇನೂ ವೇಶ್ಯಾವೃತ್ತಿ ದಂಧೆ ನಡೆಯುವದಿಲ್ಲ. Those girls are the famous betel nut beauties of Taiwan!



Betel nut beauties of Taiwan - ಅಂದರೆ ಕವಳದ ಕನ್ನಿಕೆಯರು ಅನ್ನಿ. ಅಥವಾ ಎಲೆಯಡಿಕೆ ಅಪ್ಸರೆಯರು ಅನ್ನಿ. ಪಾನ್ ಪಟಾಕಿಗಳು ಅನ್ನಿ. ವಿಚಿತ್ರವಾಗಿದೆ. ಟೈವಾನ್ ದೇಶದಲ್ಲಿ ಎಲೆಯಡಿಕೆ ತಿನ್ನುತ್ತಾರೆ ಅನ್ನುವದೇ ದೊಡ್ಡ ಸುದ್ದಿ ನಮಗೆ. ಆಮೇಲೆ ನೆನಪಾಯಿತು. ಅಂದು ವಿಮಾನನಿಲ್ದಾಣಕ್ಕೆ ಬಂದಿದ್ದ ವ್ಯಾನ್ ಡ್ರೈವರ್ ಸಹ ದವಡೆಯಲ್ಲಿ ಏನನ್ನೋ ತುಂಬಿಟ್ಟುಕೊಂಡಿದ್ದ. ಭಾಷೆ ಬರದ ಕಾರಣ ಮಾತಿರಲಿಲ್ಲ. ಅವನಿಗೆ ಒಳ್ಳೆಯದೇ ಆಯಿತು. ಬಾಯಲ್ಲಿದ್ದ ಕವಳವನ್ನು ಉಗುಳಿ ಮಾತಾಡುವ ಜರೂರತ್ ಬರಲಿಲ್ಲ. ವ್ಯಾನ್ ಹೊರಟ ನಂತರ ಮಧ್ಯೆ ಕಿಡಕಿಯ ಗ್ಲಾಸ್ ಇಳಿಸಿ ಪಚಕ್ ಅಂತ ಪಿಚಕಾರಿ ಹಾರಿಸಿದ್ದ. ಎಲ್ಲೋ ಎಂಜಲನ್ನು ಉಗುಳಿರಬೇಕು ಅಂದುಕೊಂಡಿದ್ದೆ. ಈಗ ಒಂದಕ್ಕೊಂದು ಪಾಯಿಂಟುಗಳನ್ನು ಜೋಡಿಸಿದರೆ ಒಂದು ವಿಷಯ ಖಾತ್ರಿಯಾಯಿತು. ಆ ವ್ಯಾನ್ ಡ್ರೈವರ್ ಸಹಿತ ಬಾಯಲ್ಲಿ ತಾಂಬೂಲ ತುಂಬಿಕೊಂಡೇ ಕೂತಿದ್ದ. ನಡುವೆ ಅದರ ಪಿಚಕಾರಿಯನ್ನೇ ಹಾರಿಸಿದ್ದ. ಎಲ್ಲ ಕಡೆಯೂ ಕವಳ, ತಾಂಬೂಲ. Universal stimulant!

ಟೈವಾನಿನಲ್ಲಿ ಸಹ ತಾಂಬೂಲ ಬಹಳ ಪಾಪ್ಯುಲರ್. ತಾಂಬೂಲ ಮಾಡುವ ಪದ್ಧತಿ ಸ್ವಲ್ಪ ಬೇರೆ. ಆದರೆ ಎಲೆಗೆ ಸುಣ್ಣ ಹಚ್ಚಿ, ಅಡಿಕೆ ಹಾಕಿ, ಬೇಕಾದರೆ ಜೊತೆಗೆ ತಂಬಾಕು, ದಾಲ್ಚಿನ್ನಿ, ಲವಂಗ, ಇತ್ಯಾದಿ ಹಾಕಿಯೇ ಮೆಲ್ಲುತ್ತಾರೆ. ಯಾವದೇ ಮುಲಾಜಿಲ್ಲದೆ ಕಂಡಲ್ಲಿ ಪಿಚಕಾರಿ ಹಾರಿಸುತ್ತಾರೆ. ರಸ್ತೆ ಮೇಲೆ ರಕ್ತದೋಕುಳಿಯಾಡಿದಂತೆ ಕೆಂಪು ಚಿತ್ತಾರಗಳು ಅಲ್ಲೂ ಕಾಣುತ್ತವೆ. ಅಷ್ಟರಮಟ್ಟಿಗೆ ನಮ್ಮ ದೇಶದ ಫೀಲಿಂಗ್ ತಂದುಕೊಡುವಲ್ಲಿ ಟೈವಾನ್ ದೇಶ ಯಶಸ್ವಿಯಾಗುತ್ತದೆ. ಜೈ ಟೈವಾನ್! ಆದರೆ ಪಿಚಕಾರಿ ಹಾರಿಸಿ ಗೋಡೆಗೆ ಕೆಂಪು ಪೇಂಟ್ ಹೊಡೆಯುವದು ಕಮ್ಮಿ. ಮತ್ತೆ ಸ್ವಚ್ಛತೆ ನಮ್ಮಲ್ಲಿಗಿಂತ ಸ್ವಲ್ಪ ಜಾಸ್ತಿಯಿರುವದರಿಂದ ಬೇಗನೆ ಕ್ಲೀನ್ ಆಗುತ್ತದೆ ಅಂತ ಕಾಣುತ್ತದೆ.

ಟೈವಾನಿನಲ್ಲಿ ಮಧ್ಯಮವರ್ಗ, ಬಡವರು, ಕಾರ್ಮಿಕರು ಎಲ್ಲ ಬಾಯಲ್ಲಿ ತಾಂಬೂಲ ಜಡಿದುಕೊಂಡು ಓಡಾಡುವರೇ. ಏನಾದರೂ ಮಾತಾಡಿಸಿದರೆ ಪಿಚಕಾರಿ ಹಾರಿಸಿಯೇ ಮುಂದಿನ ಮಾತು. ಪಿಚಕಾರಿ ಹಾರಿಸದಿದ್ದರೆ ಮಾತೆಲ್ಲಿಂದ ಬರಬೇಕು? ದಿನಾ ಬೆಳಿಗ್ಗೆ ಕೆಲಸದ ಜಾಗಕ್ಕೆ ಕರೆದೊಯ್ಯಲು ಬರುತ್ತಿದ್ದ ಟ್ಯಾಕ್ಸಿ ಡ್ರೈವರ್ ನಾವು ಹೋಟೆಲ್ ಬಾಗಿಲಿಗೆ ಬರುವ ಹೊತ್ತಿಗೆ ಬಾಯಲ್ಲಿದ್ದ ತಾಂಬೂಲ ಉಗುಳಿ ನಗುತ್ತ ನಿಂತಿರುತ್ತಿದ್ದ. ಕಸ್ಟಮರ್ ಮುಂದೆ ಪಿಚಕಾರಿ ಹಾರಿಸಬಾರದು ಅಂತ ಅವನಿಗೆ ಯಾರು ಸೂಚನೆ ಕೊಟ್ಟಿದ್ದರೋ ಗೊತ್ತಿಲ್ಲ. ನಮ್ಮನ್ನು ಆಫೀಸಿಗೆ ಡ್ರಾಪ್ ಮಾಡಿದವನೇ, ತಲುಬು ತಡೆಯಲಾಗದೇ ಅಲ್ಲೇ ಒಂದು ಟೈವಾನಿ ತಾಂಬೂಲವನ್ನು ದವಡೆಯಲ್ಲಿ ಜಡಿದ ನಂತರವೇ ಗಾಡಿ ಎತ್ತುತ್ತಿದ್ದ. ಎಲೆಯಡಿಕೆ ಚಟ ಹತ್ತಿದರೆ ಎಲ್ಲಾದರೂ ಅಷ್ಟೇ. ಬೇಕೆಂದರೆ ಬೇಕೇಬೇಕು.

ಆದರೂ ಈ ರೀತಿಯಲ್ಲಿ ಹೆದ್ದಾರಿಗುಂಟ ಟೈವಾನೀ ಪಾನ್ ಮಾರಾಟ ಮಾಡುವ ವಿಶಿಷ್ಟ ಪದ್ಧತಿ ಮಜಾ ಅನ್ನಿಸಿತು. ಜಗಮಗ ನಿಯಾನ್ ದೀಪಗಳಿಂದ ಅಲಂಕೃತವಾದ ಗಾಜಿನ ಗೂಡುಗಳಲ್ಲಿ ತುಂಡುಡುಗೆ ಉಟ್ಟು ಮುಗುಳ್ನಗೆ ಬೀರುವ ಲಲನೆಯರು ಅದೇನು value add ಮಾಡುತ್ತಾರೋ ಗೊತ್ತಾಗಲಿಲ್ಲ. ಎಲೆಯಡಿಕೆ, ತಂಬಾಕಿನ ಪಾನ್ ಒಂದು stimulant ಅಂತೂ ಹೌದು. ಹೆದ್ದಾರಿ ಮೇಲೆ ತಾಸುಗಟ್ಟಲೆ ವಿರಾಮವಿಲ್ಲದೆ ಗಾಡಿ ಚಲಾಯಿಸುವ ಜನ ಕಾಫಿ, ಟೀ, ತಂಬಾಕು, ತಾಂಬೂಲದಂತಹ stimulants ಮೇಲೆ ಅವಲಂಬಿತರು. ಅವರಿಗೆ ಅವೆಲ್ಲ ಬೇಕೇಬೇಕು. ಇಲ್ಲವಾದರೆ ಹೆದ್ದಾರಿಗುಂಟ ಗಾಡಿ ಹೊಡೆಯುವ ಏಕತಾನತೆ ಹುಚ್ಚು ಹಿಡಿಸುತ್ತದೆ. Highway hypnosis ಆಗಿ ತಾತ್ಕಾಲಿಕ ಮತಿಭ್ರಮಣೆ ಆದಂತಾಗಿ ಅಪಘಾತಗಳು ಸಹ ಆಗುವದುಂಟು. ಬುರ್ಕಾ ಹಾಕಿಕೊಂಡವಳಾದರೂ ಸರಿ, ತುಂಡುಡುಗೆ ತೊಟ್ಟವಳಾದರೂ ಸರಿ, ಚಾಲಕರು ತಾಂಬೂಲ ಕೊಳ್ಳುತ್ತಾರೆ. ಕಣ್ಣಿಗೆ ಹಿತವಾಗಿ ಕಂಡು, ಮಾದಕ ಮುಗುಳ್ನಗೆ ಬೀರಿ ಮಾರಿದರೆ premium ದರಕ್ಕೆ ಮಾರಾಟವಾಗಿ ಲಾಭ ಹೆಚ್ಚು ಸಿಗಬಹುದೇನೋ.

ಒಟ್ಟಿನಲ್ಲಿ ಈ ತಾಂಬೂಲದ ತರುಣಿಯರ concept ನಮ್ಮ ದೇಶದಲ್ಲಿ ಕೆಲವು ಕಡೆ ಲೇಡೀಸ್ ಬಿಯರ್ ಬಾರುಗಳಿರುವ ಹಾಗೆ ಅನ್ನಿಸುತ್ತದೆ. ಬಿಯರ್ ಬಾರುಗಳಲ್ಲಿ ಹೆಂಗಳೆಯರು ಡ್ರಿಂಕ್ ಸರಬರಾಜು ಮಾಡುತ್ತಾರೆ ಅನ್ನುವದೇ ಥ್ರಿಲ್ಲು ಕೆಲವರಿಗೆ. ಅಲ್ಲಿ ಒಂದಕ್ಕೆರೆಡು ರೇಟ್ ಹಾಕಿದರೂ ಅಲ್ಲೇ ಹೋಗುತ್ತಾರೆ. ಅಲ್ಲಿ live-band ಕೂಡ ಇದ್ದರೆ ಮುಗಿದೇ ಹೋಯಿತು. ತಗಡು ಸಾರಾಯಿಗೆ ಒಂದಕ್ಕೆರೆಡು ರೇಟ್ ಹಾಕಿದರೂ ಸರಿ. ಕಂಪನಿ ಕೊಡುವ ನೆಪದಲ್ಲಿ ಮಾನಿನಿಯರು ಬಂದು ಕೂತು ಮನ್ಮಾನಿ  ಮಾಡಿ ರೊಕ್ಕವನ್ನೆಲ್ಲ ಬೋಳಿಸಿ ಕಳಿಸಿದರೂ ಸರಿ. ಆದರೂ ಅಲ್ಲೇ ಹೋಗಿ ಎಣ್ಣೆ ಹೊಡೆಯುವದರಲ್ಲಿ ಕೆಲವರಿಗೆ ಮಜಾ ಬರುತ್ತದೆ. ಈ ಎಲೆಯಡಿಕೆ ಅಪ್ಸರೆಯರ ಕಾನ್ಸೆಪ್ಟ್ ಕೂಡ ಹಾಗೇಯೇ ಏನೋ. ಯಾರಿಗೆ ಗೊತ್ತು.

ಆದರೂ ಈ ಕವಳದ ಕನ್ನಿಕೆಯರು ಗಾಜಿನ ಗೂಡುಗಳಲ್ಲಿ ತಾಂಬೂಲ ಮಾರುವದು ವೇಶ್ಯಾವೃತ್ತಿ ದಂಧೆಗೆ front ಇರಬಹುದೇನೋ ಅನ್ನುವ ಅನುಮಾನವಂತೂ ಇತ್ತು. ಟೈವಾನಿನ ಜನರನ್ನು ಕೇಳಿದರೆ ಅಲ್ಲಿ ವೇಶ್ಯಾವೃತ್ತಿ ಬಿಲ್ಕುಲ್ ನಡೆಯುವದಿಲ್ಲವೆಂದರು. ಅದರೂ ಸದಾ ಒಬ್ಬಳಲ್ಲೇ ಕವಳ ತೆಗೆದುಕೊಳ್ಳುವ ಗಿರಾಕಿಗಳು ಒಮ್ಮೊಮ್ಮೆ ಸಲುಗೆಯಿಂದ ಅಲ್ಲಿಲ್ಲಿ ಕೈಬಿಟ್ಟು ಮಷ್ಕಿರಿ ಮಾಡುತ್ತಾರೆ ಅಂದರು. ಅದೂ ಕವಳದ ಕನ್ನಿಕೆ ಸ್ವಂತ ಇಚ್ಛೆಯಿಂದ ಅನುಮತಿ ಕೊಟ್ಟರೆ ಮಾತ್ರ. ಅಷ್ಟು ಬಿಟ್ಟರೆ ಹೆಚ್ಚಿನ ಲಫಡಾ ಏನೂ ಅಲ್ಲಿ ನಡೆಯುವದಿಲ್ಲ. ಮೇಲಿಂದ ಚಿಕ್ಕ ಗೂಡುಗಳಲ್ಲಿ ಜಾಗವೂ ಇರುವದಿಲ್ಲ. ಮತ್ತೆ ಪೂರ್ತಿ ಗಾಜಿನ ಮನೆಗಳಾಗಿರುವದರಿಂದ ಅಲ್ಲಿ ಏನು ನಡೆದರೂ ಎಲ್ಲರಿಗೂ ಎಲ್ಲವೂ ಕಾಣುತ್ತದೆ. ಏನೂ privacy ಇರುವದಿಲ್ಲ. ಹಾಗಾಗಿ ಅವರ ವಿವರಣೆಯನ್ನು ನಂಬಬೇಕಾಯಿತು. ಆದರೂ ಕವಳದ ಕನ್ನಿಕೆಯರು ಅಲ್ಲಿ ದಂಧೆ ಮಾಡದಿದ್ದರೂ ದಂಧೆ ಕುದುರಿಸಿಕೊಂಡು, ಬಕರಾಗಳನ್ನು ಹುಡುಕಿಕೊಂಡು ಬೇರೆಲ್ಲೋ ದಂಧೆ ನಡೆಸಿದರೆ ಆಶ್ಚರ್ಯವಿಲ್ಲ. ನಮ್ಮಲ್ಲಿನ ಲೇಡೀಸ್ ಬಿಯರ್ ಬಾರು, live-band ಅಂದರೆ ವೇಶ್ಯಾವೃತ್ತಿ ದಂಧೆಗೆ front ಗಳು. ಮತ್ತೇನೂ ಅಲ್ಲ. ಎಲ್ಲ ಸ್ಥಳೀಯ ಸಮಾಜ ಮತ್ತು ಸಾಮಾಜಿಕ ಮೌಲ್ಯಗಳ ಮೇಲೆ ಅವಲಂಬಿತ.

ಅಂತೂ ಸೀದಾಸಾದಾ ತಾಂಬೂಲವನ್ನು ಹೀಗೂ ಮಾರುತ್ತಾರೆ ಅಂತ ತಿಳಿಯಿತು. ಹೆದ್ದಾರಿ ಮೇಲೆ ಹೋಗುವ ಚಾಲಕರು ಸಿಕ್ಕಾಪಟ್ಟೆ ಹೈರಾಣಾಗಿರುತ್ತಾರೋ ಏನೋ ಪಾಪ. ತುಂಡುಡುಗೆ ತೊಟ್ಟ ಸುಂದರಿಯನ್ನು ನೋಡಿ, ಕಣ್ಣು ತಂಪು ಮಾಡಿಕೊಂಡು, ತಾಂಬೂಲಕ್ಕೆ ಒಂದಕ್ಕೆರೆಡು ರೇಟ್ ಕೊಟ್ಟು ಕೊಂಡುಹೋಗುತ್ತಾರೋ ಏನೋ. ಯಾರಿಗೆ ಗೊತ್ತು.

ಮೊನ್ನಿತ್ತಲಾಗೆ ಟೈವಾನ್ ಬಗ್ಗೆ ಏನೋ ಮಾಹಿತಿಯನ್ನು ಇಂಟರ್ನೆಟ್ ಮೇಲೆ ಹುಡುಕುತ್ತಿದ್ದೆ. ಆವಾಗ ಈ ಕವಳದ ಕನ್ನಿಕೆಯರು ನೆನಪಾದರು. ಅವರಿಗೆ ಏನೆನ್ನುತ್ತಾರೆ ಅಂತಲೂ ಗೊತ್ತಿರಲಿಲ್ಲ. ಗೂಗಲ್ ಮೇಲೆ ಏನೋ ಸರ್ಚ್ ಹಾಕಿದೆ. ಆಗ ತಿಳಿಯಿತು ಅವರಿಗೆ betel girl  ಎಂದು ಕರೆಯುತ್ತಾರೆ ಅಂತ.

ತಾಂಬೂಲದ ತರುಣಿಯರ ಬಗ್ಗೆ ಒಂದು ಡಾಕ್ಯುಮೆಂಟರಿ.

 

Saturday, March 11, 2017

ಕೋರಂಟಿ.....The Qurantine

'ನಮ್ಮ ವಿಮಾನ ಈಗ ಟಾಂಜಾನಿಯಾದ ದಾರ್-ಏ-ಸಲಾಮ್ ವಿಮಾನನಿಲ್ದಾಣದಲ್ಲಿ ಇಳಿಯಲು ಸಜ್ಜಾಗುತ್ತಿದೆ. ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಿ, ಮುಂದಿರುವ ಟ್ರೇ ಟೇಬಲ್ ಮಡಚಿಟ್ಟು, ಸೀಟನ್ನು ಸೀದಾ ಮಾಡಿಕೊಂಡು ಕುಳಿತು ಸಹಕರಿಸಬೇಕಾಗಿ ವಿನಂತಿ' - ಗಗನಸಖಿಯ ಇಂಪಾದ ದನಿ ತಂಪಾಗಿ ತೇಲಿಬಂತು.

ಅಕ್ಟೋಬರ್ ೧೧, ೧೯೯೫. ಮುಂಬೈನಿಂದ ಎಂಟು ತಾಸುಗಳ ಪಯಣದ ಬಳಿಕ ಟಾಂಜಾನಿಯಾ ತಲುಪಲಿದ್ದೆ. ಸಿಕ್ಕಾಪಟ್ಟೆ excitement. ಹೇಳಿಕೇಳಿ ಆಫ್ರಿಕಾ. ಕಪ್ಪುಖಂಡ ಆಫ್ರಿಕಾ ಬಗ್ಗೆ ಕೇಳಿದ್ದು, ಓದಿದ್ದು ಎಲ್ಲ ಬಹಳವಿತ್ತು. ಇನ್ನು ಕೆಲವೇ ನಿಮಿಷಗಳಲ್ಲಿ ಪ್ರತ್ಯಕ್ಷ ದರ್ಶನವಾಗಲಿದೆ. ಹೇಗಿರುತ್ತದೆಯೋ ಏನೋ? ವಿಮಾನ ಕೆಳಗಿಳಿಯುತ್ತಿದ್ದಂತೆಯೇ ಎಲ್ಲಿ ಕಾಡುಜನರು ಬಂದು 'ಜಿಂಗಾಚಿಕ್ಕಾ ಜಿಂಗಾಲೆ. ಜಿಂಗಾಚಿಕ್ಕಾ ಜಿಂಗಾಲೆ,' ಎಂದು ಕಾಡು ನೃತ್ಯ ಶುರು ಮಾಡುತ್ತಾರೇನೋ! ಎಲ್ಲಿ runway ಮೇಲೆಯೇ ಕಾಡುಪ್ರಾಣಿಗಳು ಓಡಾಡಿಕೊಂಡಿರುತ್ತವೆಯೋ ಏನೋ! ಯಾರಿಗೆ ಗೊತ್ತು? ಆಫ್ರಿಕಾದಲ್ಲಿ  ಏನೂ ಆಗಬಹುದು. totally unpredictable ಅಂತ ಕೇಳಿದ್ದೆ. ಮತ್ತೆ ಆಫ್ರಿಕಾದ ಬಗ್ಗೆ ಸಿಕ್ಕಾಪಟ್ಟೆ impression ಮಾಡಿದ ಚಿತ್ರ Gods must be crazy (ಭಾಗ ೧ & ೨). ಅದರ ಗಾಢವಾದ ಪ್ರಭಾವ ಇತ್ತು ನೋಡಿ.

ಆಗೆಲ್ಲ ವಿಮಾನದಲ್ಲಿ ವಿಂಡೋ ಸೀಟ್ ಹಿಡಿದು ಪ್ರಯಾಣಿಸುವ ಚಟ ಇತ್ತು. ಅಜ್ಜನಮನೆ ಸಿರ್ಸಿಗೆ ಹೋಗುವಾಗ ಬಸ್ಸಿನಲ್ಲಿ ಕಿಡಕಿ ಪಕ್ಕದ ಸೀಟಿಗಾಗಿ ಯುದ್ಧ, ರಕ್ತಪಾತ ಮಾಡಿ ಬಂದ ನಮಗೆ ವಿಮಾನದಲ್ಲಿ ಕೇಳಿದರೆ ಕಿಡಕಿ ಪಕ್ಕದ ಸೀಟನ್ನು ನಗುತ್ತ ಕೊಡುತ್ತಾರೆ ಅನ್ನುವದೇ ದೊಡ್ಡ ಮಾತಾಗಿತ್ತು. ಮುಂಬೈನಲ್ಲಿ ಕೇಳಿ ಕಿಡಕಿ ಸೀಟು ಪಡೆದುಕೊಂಡಿದ್ದೆ. ಅಂತಹ ಕಿಡಕಿ ಸೀಟಿನಿಂದ ಕೆಳಗೆ ಬಗ್ಗಿ ನೋಡಿದರೆ  ರಮಣೀಯ ಅರಬ್ಬೀ ಸಮುದ್ರ. ಕೊಲ್ಲಿಯಂತೆ ಕೊರೆದು ಒಳಗೆ ಬಂದಿತ್ತು. ನಮ್ಮ ದೇಶದಲ್ಲಿ ಅರಬ್ಬೀ ಸಮುದ್ರವನ್ನು ಕುಮಟಾ, ಗೋವಾ, ಕಾರವಾರದಲ್ಲಿ ನೋಡಿದ್ದೆ. ಆದರೆ ಆಫ್ರಿಕಾದಲ್ಲಿ ಅರಬ್ಬೀ ಸಮುದ್ರಕ್ಕಿರುವ ಲುಕ್ಕೇ ಬೇರೆ. ಒಂದು ತರಹದ mesmerizing effect.

ಕೊಲ್ಲಿ ಸುತ್ತ ಒಂದು ರೌಂಡ್ ಹೊಡೆದ ಏರ್ ಇಂಡಿಯಾದ ವಿಮಾನ  ಇಳಿಯಲು ಆರಂಭಿಸಿತು. ದಾರ್-ಏ-ಸಲಾಮ್ ನಗರ ಸ್ಪಷ್ಟವಾಗಿ ಕಾಣತೊಡಗಿತು. ಎಲ್ಲೂ ಕಾಡು, ಕಾಡು ಪ್ರಾಣಿಗಳು ಕಾಣಿಸಲಿಲ್ಲ. ನಾಡು ಮತ್ತು ನಾಡು ಪ್ರಾಣಿಗಳೇ ಕಂಡವು. ಎಲ್ಲ ದೊಡ್ಡ ನಗರಗಳಲ್ಲಿ ಇರುವಂತೆ ಸ್ಲಮ್ಮು, ಟ್ರಾಫಿಕ್ ಎಲ್ಲ ಕಂಡಿತು. ಒಳ್ಳೇದು. ನಮ್ಮ ದೇಶ ಇದ್ದಂತೆಯೇ ಇದೆ. ಅಲ್ಲಿ ನಮ್ಮ ಭಾರತ ಮೂಲದ ಜನರಂತೂ ಭರಪೂರ ಇದ್ದಾರೆ ಅಂತ ಗೊತ್ತಿತ್ತು. ಬಾಕಿ ಎಲ್ಲ ಸಹಿತ ನಮ್ಮ ದೇಶ ಇದ್ದಂತೆಯೇ ಇದೆ. ಒಳ್ಳೆಯದೇ ಆಯಿತು.

ವಿಮಾನ ಯಾವದೇ ತೊಂದರೆಯಿಲ್ಲದೆ ಲ್ಯಾಂಡ್ ಆಯಿತು. Jetway ಇರಲಿಲ್ಲ. ಮೆಟ್ಟಿಲುಗಳಿರುವ ಸಾದಾ ಏಣಿಯನ್ನು ಹಾಕಿದ್ದರು. ಇಳಿದು ಬಂದರೆ ಮೈಗೆ ರಾಚಿದ್ದು ರಣ ರಣ ಬಿಸಿಲು. ಭೂಮಧ್ಯರೇಖೆಯಿಂದ (equator) ಕೊಂಚ ಮಾತ್ರ ಕೆಳಗಿರುವ ಪ್ರದೇಶ. ಹಾಗಾಗಿ ಬಿಸಿಲು ಜಾಸ್ತಿ. ಆವಾಗ ಇನ್ನೂ ಬೆಳಿಗ್ಗೆ ಒಂಬತ್ತು ಘಂಟೆ ಸಮಯ. ಆವಾಗಲೇ ಅಷ್ಟು ಬಿಸಿಲು. ಇನ್ನು ಮಧ್ಯಾಹ್ನವಾದಂತೆ ಹೇಗಿರುತ್ತದೋ ಏನೋ.

ವಿಮಾನ ನಿಲ್ದಾಣ ಸಾಕಷ್ಟು ದೊಡ್ಡದಾಗಿತ್ತು. ಬೇರೆ ಬೇರೆ ದೇಶಗಳ ಸುಮಾರು ವಿಮಾನಗಳು ಕಂಡುಬಂದವು. Runway ಮೇಲೆ ಯಾವ ಕಾಡುಪ್ರಾಣಿಗಳೂ ಕಂಡುಬರಲಿಲ್ಲ. ಕಾಡುಜನರೂ ಕಂಡುಬರಲಿಲ್ಲ. ಅಷ್ಟರಮಟ್ಟಿಗೆ ನೆಮ್ಮದಿ. ನಿರಾಳ.

ಮೆಟ್ಟಿಲಿರುವ ಏಣಿ ಇಳಿದು ಒಂದು ನೂರು ಹೆಜ್ಜೆ ದೂರದಲ್ಲಿ arrival lounge ಇತ್ತು. ಒಳಗೆ ಬಂದರೆ ಅಲ್ಲೂ ಸಿಕ್ಕಾಪಟ್ಟೆ ಸೆಕೆ. ಮೂಲೆಯಲ್ಲಿದ್ದ AC ಗೊಳೋ ಎಂದು ತಿಣುಕಾಡುತ್ತಿತ್ತು.

ಎಲ್ಲಿ ನೋಡಿದರೂ ಕಪ್ಪು ಜನರು. ಕಪ್ಪುಖಂಡದಲ್ಲಿ ಕಪ್ಪು ಜನರಲ್ಲದೇ ಮತ್ಯಾರು ಇರುತ್ತಾರೆ? ಆದರೂ ಕಪ್ಪು ಜನರು ಅಂದರೆ ಏನೋ ಒಂದು ತರಹದ uneasiness. ಅದು ನಮ್ಮ ಪೂರ್ವಗ್ರಹ (prejudice). ದರಿದ್ರ ಅಮೇರಿಕನ್ ಹಾಲಿವುಡ್ ಮೂವಿಗಳ ಪ್ರಭಾವ. ಅವುಗಳಲ್ಲಿ ಕಪ್ಪು ಜನರನ್ನು ಸಿಕ್ಕಾಪಟ್ಟೆ ಖರಾಬ್ ಬೆಳಕಿನಲ್ಲಿ ತೋರಿಸಿ ಕಪ್ಪು ಜನರ ಬಗ್ಗೆ ಒಂದು ತರಹದ  ಭಯ ಹುಟ್ಟಿಸಿಬಿಟ್ಟಿರುತ್ತಾರೆ. ಆದರೆ ಆಫ್ರಿಕಾದ ಕಪ್ಪು ಜನ ಎಷ್ಟು  ಒಳ್ಳೆಯವರು, ಎಷ್ಟು ಮುಗ್ಧರು, ಎಷ್ಟು ಸರಳ ಜನ ಅಂತೆಲ್ಲ ಆಮೇಲೆ ಗೊತ್ತಾಯಿತು. ಅದರಲ್ಲೂ ಮಿಲಿಟರಿ ಸಮವಸ್ತ್ರ ಧರಿಸಿ, ಏಕೆ-೪೭ ಬಂದೂಕು ಹಿಡಿದು ಓಡಾಡುತ್ತಿದ್ದ ಪೋಲಿಸ್ ಮಂದಿಯಂತೂ ಪುರಾಣದ ರಾಕ್ಷಸರನ್ನು ನೆನಪಿಸುವಂತಿದ್ದರು. ಏರ್ಪೋರ್ಟ್ ಬಿಟ್ಟು ಹೊರಗೆ ಹೋಗಿ ತಣ್ಣನೆ ಸ್ಟಾಫ್ ಕ್ವಾರ್ಟರ್ಸ್ ಸೇರಿಕೊಂಡರೆ ಸಾಕು ಅನ್ನಿಸಿತ್ತು.

ಪಾಸ್ಪೋರ್ಟ್, ವೀಸಾ ತಪಾಸಣೆ ಎಲ್ಲ ಆಯಿತು. ಎಲ್ಲ ಸರಿಯಾಗಿತ್ತು. ಇನ್ನೇನು ಲಗೇಜ್ ಸಂಗ್ರಹಿಸಿಕೊಂಡು ಹೊರಗೆ ಹೋಗೋಣ ಅನ್ನುವಷ್ಟರಲ್ಲಿ ಮತ್ತೊಂದು formality ಬಗ್ಗೆ ಒಬ್ಬ ಕಪ್ಪು ಮನುಷ್ಯ ಬಂದು ಹೇಳಿದ.

ಹಳದಿ ಜ್ವರದ ಲಸಿಕೆ (yellow fever vaccination) ಹಾಕಿಸಿಕೊಂಡಿದ್ದರ ಪ್ರಮಾಣಪತ್ರ. ನೆನಪಾಯಿತು. ಆಫ್ರಿಕಾಗೆ ಹೋಗಬೇಕು ಅಥವಾ ಆಫ್ರಿಕಾದಿಂದ ಬರಬೇಕು ಅಂದರೆ ಈ ಲಸಿಕೆಯ ಅಗತ್ಯವಿತ್ತು. ಅದೇ ಪ್ರಕಾರ ಮುಂಬೈನಲ್ಲಿ ಲಸಿಕೆ ಹಾಕಿಸಿ, ಸರಿಯಾದ ಪ್ರಮಾಣಪತ್ರ ತೆಗೆದುಕೊಂಡಿದ್ದೆ. ಅದನ್ನು ಭಯ ಭಕ್ತಿಯಿಂದ ತೋರಿಸಿದೆ.

ನೋಡಿದ ಕಪ್ಪು ಮನುಷ್ಯ ತನ್ನ ಕಪ್ಪು ಮೊಗದಲ್ಲಿ ಅಷ್ಟೂ ಬಿಳಿ ಹಲ್ಲುಗಳನ್ನು ತೋರಿಸುತ್ತ ವಿಚಿತ್ರವಾಗಿ ನಕ್ಕ. ಅವನ  ಪಕ್ಕದಲ್ಲಿ, ಒಂದು ಕಡೆ, ಆಗಲೇ ಒಂದಿಷ್ಟು ಪ್ರಯಾಣಿಕರ ಗುಂಪು ಸೇರತೊಡಗಿತ್ತು. ನನಗೂ ಅಲ್ಲೇ ಹೋಗಿ ನಿಲ್ಲು ಅಂದ. ನಾನು ಕೇಳುವ ಮೊದಲೇ, 'ನಿನ್ನ ಹಳದಿ ಜ್ವರದ ಲಸಿಕೆ ಸರ್ಟಿಫಿಕೇಟ್ ಸರಿ ಇಲ್ಲ!' ಅಂದುಬಿಟ್ಟ. ಅರೇ ಇಸ್ಕಿ! ಲಸಿಕೆ ಹಾಕಿಸಿಕೊಂಡು, ಸರ್ಟಿಫಿಕೇಟ್ ತೆಗೆದುಕೊಂಡು ಹೋಗಬೇಕು ಅಂತ ಹೇಳಿದ್ದರು. ಅದೇ ಪ್ರಕಾರ ಮಾಡಿದ್ದೆ. ಇಲ್ಲಿ ನೋಡಿದರೆ ಲಸಿಕೆ ಸರ್ಟಿಫಿಕೇಟ್ ಸರಿಯಿಲ್ಲ ಅನ್ನುತ್ತಿದ್ದಾನೆ. ಏನಿದರರ್ಥ!? ತಿಳಿಯಲಿಲ್ಲ.

ಸ್ವಲ್ಪ ಹೊತ್ತಿನ ನಂತರ ಎಲ್ಲ ಪ್ರಯಾಣಿಕರ ಲಸಿಕೆ ಪ್ರಮಾಣಪತ್ರದ ಪರಿಶೀಲನೆ ಮುಗಿಯಿತು. ಒಂದು ಹತ್ತು ಹದಿನೈದು ಜನ ನನ್ನಂತವರಿದ್ದರು. ಲಸಿಕೆ ಪ್ರಮಾಣಪತ್ರದ ಪ್ರಾಬ್ಲಮ್ ಜನ. ನಮ್ಮನ್ನೆಲ್ಲ ಅಲ್ಲೇ ಪಕ್ಕದಲ್ಲಿದ್ದ ಒಂದು ಕೋಣೆಗೆ ಹೋಗುವಂತೆ ಹೇಳಿದ. ಹಿಂದೆ ಅವನೂ ಬಂದ. ದನದ ದೊಡ್ಡಿಯೊಳಗೆ ದೂಡಿಸಿಕೊಂಡಂತಾಯಿತು.

'ನಿಮ್ಮ ಲಸಿಕೆ ಪ್ರಮಾಣ ಪತ್ರಗಳು ಸರಿಯಿಲ್ಲ. ನಿಮ್ಮಗಳನ್ನು quarantine ನಲ್ಲಿ ಹೆಚ್ಚಿನ ವೀಕ್ಷಣೆಗೆ ಇಡಲಾಗುತ್ತದೆ. ಅದು ಇಲ್ಲಿನ ನಿಯಮ. ನಿಮ್ಮ ಆರೋಗ್ಯದಲ್ಲಿ ಯಾವದೇ ತೊಂದರೆಯಿಲ್ಲ ಅಂತ ಸರ್ಕಾರಿ ವೈದ್ಯರು ಖಾತ್ರಿ ಮಾಡಿದ ಮೇಲೆಯೇ ನಿಮ್ಮನ್ನು ಹೊರಗೆ ಬಿಡಲಾಗುತ್ತದೆ. ಏನೂ ಭಯಪಡುವ ಕಾರಣವಿಲ್ಲ. ಆರಾಮಾಗಿರಿ,' ಅಂದವನೇ ಹೀ ಹೀ ಅಂತ ಮೈಯನ್ನೆಲ್ಲ ಕುಲುಕಿಸಿ ನಕ್ಕ. ಅದೇನೋ ಗೊತ್ತಿಲ್ಲ. ಆಫ್ರಿಕಾದ ಕಪ್ಪು ಜನ ಸುಖಜೀವಿಗಳು. ಮಾತಿಗೊಮ್ಮೆ ಎದೆಯಾಳದಿಂದ ಡೀಪಾಗಿ ನಗುತ್ತಾರೆ. ಅವರು ನಗುವದನ್ನು ನೋಡಿದರೆ ನಮಗೆ ನಗು ಬರುತ್ತದೆ. ಅಥವಾ ನಮ್ಮ ಪರಿಸ್ಥಿತಿ ಖರಾಬ್ ಇದ್ದರೆ irritate ಆಗಿ ಸಿಟ್ಟು ಬರುತ್ತದೆ. ನುಣ್ಣಗೆ ಬೋಳಿಸಿಕೊಂಡಿದ್ದ ಆ ಕರಿಯನ ತಲೆಬುರುಡೆಗೆ ಚಡಾಪಡಾ ತಟ್ಟುವಷ್ಟು ಸಿಟ್ಟು ಬಂತು. ಎಂಟು ತಾಸುಗಳ ಪಯಣದ ನಂತರ ನಮ್ಮ ತಲೆ ಮೊದಲೇ ಹನ್ನೆರಡಾಣೆ ಆಗಿದೆ. ಮನೆಗೆ ಹೋಗಿ ಏನಾದರೂ ತಿಂದು ಕುಡಿದು, ಮುಚ್ಚಾಕಿಕೊಂಡು ಮಲಗೋಣ ಅಂದರೆ ಇವನದ್ದೊಂದು ಕಿರ್ಕಿರಿ. ಮೇಲಿಂದ ನಗುತ್ತಿದ್ದಾನೆ ಬೇರೆ. ಅಧಿಕಪ್ರಸಂಗಿ!

'ಸರ್, ನಮ್ಮ ಹತ್ತಿರ ಲಸಿಕೆ ಪ್ರಮಾಣ ಪತ್ರ ಇದೆ. ಇದರಲ್ಲೇನು ತಪ್ಪಿದೆ!?' ಅಂತ ಒಂದಿಬ್ಬರು ಕೇಳಿದರು. ಉಳಿದ ನಾವೆಲ್ಲಾ ಅವರ ಧ್ವನಿಗೆ ಕೋರಸ್ ಧ್ವನಿ ಕೂಡಿಸಿದೆವು.

'ಹಾಂಗೆ ಕೇಳಿ. ಎಲ್ಲ ಹೇಳ್ತೇನಿ!' ಅನ್ನುವವನಂತೆ ತೊಡೆ ತಟ್ಟಿ ಮತ್ತೆ ನಕ್ಕ ಕರಿಯ 'ನನಗೆ ಗೊತ್ತಿತ್ತು. ನೀವು ಶಾಣ್ಯಾ ಮಂದಿ ಇದನ್ನು ಕೇಳೇ ಕೇಳುತ್ತೀರಿ ಎಂದು,' ಅನ್ನುವ ಲುಕ್ ಕೊಟ್ಟ. ಮತ್ತೆ ಅದೇ ಪ್ಯಾಲಿ ನಗು. ಗಹಗಹಿಸಿ ನಗು. ಅದೊಂದನ್ನು ಅವರಿಂದ ಕಲಿಯಬಹುದು. 'ಆಕಾಶವೇ ಬೀಳಲಿ ಮೇಲೆ, ನಾನಂತೂ ನಗುವವನೇ,' ಅನ್ನುವ ಅವರ carefree ಮನೋಭಾವ.

'ನೋಡಿ, ನಿಮ್ಮಲ್ಲಿ ಕೆಲವು ಜನರ ಹತ್ತಿರ ಲಸಿಕೆ ಸರ್ಟಿಫಿಕೇಟ್ ಇಲ್ಲವೇ ಇಲ್ಲ. ಇನ್ನು ಕೆಲವರ ಹತ್ತಿರ ಇದ್ದವು expire ಆಗಿವೆ,' ಅಂದು suspenseful ಆಗಿ ಮಾತು ನಿಲ್ಲಿಸಿದ.

'ನಾವು  ಅವೆರೆಡೂ ವಿಭಾಗಕ್ಕೆ ಸೇರಿಲ್ಲ. ನಾವು ಹೊಸದಾಗಿ ಲಸಿಕೆ ಹಾಕಿಸಿಕೊಂಡು, ಫ್ರೆಶ್ ಆದ ಗರಿಗರಿ ಸರ್ಟಿಫಿಕೇಟ್  ತಂದಿದ್ದೇವೆ,' ಅಂತ ನಾವುಗಳು ಹೇಳುವ ಮುಂಚೆ ಅವನೇ ಹೇಳಿದ, 'ನಿಮ್ಮ ಸರ್ಟಿಫಿಕೇಟನ್ನು ಸರಿಯಾಗಿ ಓದಿ. ಚಿಕ್ಕ ಅಕ್ಷರಗಳಲ್ಲಿ ಬರೆದಿದ್ದಾರೆ. ಪ್ರಯಾಣಕ್ಕಿಂತ ಕನಿಷ್ಠ ಮೂರು ದಿನ ಮೊದಲು ತೆಗೆದುಕೊಂಡ ಲಸಿಕೆಗಳು ಮಾತ್ರ valid. ಉಳಿದವು invalid!'

ಅಲ್ಲಿಗೆ ಶಿವಾಯ ನಮಃ!

ನಾನಂತೂ ಹೊರಡುವ ದಿನವಷ್ಟೇ ಲಸಿಕೆ ತೆಗೆದುಕೊಂಡಿದ್ದೆ. ಹೊರಡಲು ಮೂರು ದಿನವಿದ್ದಾಗಷ್ಟೇ ಇದೊಂದು ಹೊಸ ಕಂಡೀಶನ್ ಬಗ್ಗೆ ಗೊತ್ತಾಗಿತ್ತು. ಗುಜರಾತಿನ ಅಹಮದಾಬಾದಿನಲ್ಲಿ ಕುಳಿತಿದ್ದ ನೌಕರಿ ಕೊಡಿಸಿದ್ದ ಏಜೆಂಟ್ ಫೋನ್ ಮಾಡಿ, 'ಅದೇನೋ ಹಳದಿ ಜ್ವರದ ಲಸಿಕೆಯಂತೆ. ತೆಗೆದುಕೊಂಡು ಹೋಗಬೇಕಂತೆ,' ಅಂದಿದ್ದ. ಅವನಿಗೂ ಸರಿಯಾದ ಮಾಹಿತಿ ಇರಲಿಲ್ಲ. ಆಗ ನಾನಿದ್ದದ್ದು ಬೆಂಗಳೂರಿನಲ್ಲಿ. 'ಅಲ್ಲೇ ವಿಚಾರಿಸು. ಸಿಗಬಹುದು. ಒಟ್ಟಿನಲ್ಲಿ ಆ ಲಸಿಕೆ ಹಾಕಿಸಿಕೊಂಡೇ ದೇಶ ಬಿಡು,' ಅಂದಿದ್ದ. ಹೊರಡುವ ಮುನ್ನ ಮತ್ತೊಂದು ತಲೆಬಿಸಿ.

ಯಾರ ಹತ್ತಿರ ಕೇಳೋಣ? ಆಗ ನಮ್ಮ ಮನೆಯಿದ್ದ ದೊಮ್ಮಲೂರಿನ ಅಥವಾ ಪಕ್ಕದ ಇಂದಿರಾ ನಗರದಲ್ಲಿದ್ದ ಖಾಸಗಿ ಚಿಕಿತ್ಸಾಲಯಗಳಲ್ಲಿ ಹೋಗಿ ಕೇಳಿದರೆ ಅವರಿಗೆ ಏನೂ ಗೊತ್ತಿರಲಿಲ್ಲ. ಹಳದಿ ಜ್ವರ ಅಂದರೆ ಅವರಿಗೆ ಹಳದಿರಾಮ ಮತ್ತು ಅವನ ಚೂಡಾ, ಸ್ವೀಟ್ಸ್ ನೆನಪಾಗಿರಬೇಕು. ಆ ಯಬಡ ಲುಕ್ ಕೊಟ್ಟರು. ಉಪಯೋಗಿಲ್ಲದವರು ಅಂತ ವಾಪಸ್ ಬಂದೆ.

ಮನೆಯಲ್ಲಿದ್ದ ದೈತ್ಯ ಫೋನ್ ಡೈರೆಕ್ಟರಿ ತೆಗೆದು ಕೂತೆ. ಬೆಂಗಳೂರಿನಲ್ಲಿದ್ದ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಫೋನ್ ಮಾಡಿದೆ. ಅಲ್ಲೂ ಅಷ್ಟೇ. ಮೊದಲೇ ಸರ್ಕಾರಿ ಆಸ್ಪತ್ರೆಗಳು. ಕೆಲವೊಂದು ಕಡೆ ಫೋನ್ ಎತ್ತುವವರಿಗೂ ಗತಿ ಇರಲಿಲ್ಲ. ಉಳಿದ ಕಡೆ ಫೋನೆತ್ತಿ, ತಾಸುಗಟ್ಟಲೇ ಕಾಯಿಸಿದ ನಂತರ 'ನಮಗೆ ಗೊತ್ತಿಲ್ಲ' ಅಂತ ಫೋನಿಟ್ಟರು. ಕೆಲವು ಕಡೆ ಮಾಹಿತಿ ಕೇಳಿ ಫೋನ್ ಮಾಡಿದ್ದೇ ತಪ್ಪೇನೋ ಎಂಬಂತೆ ಬೈದರು. 'ಜನಸೇವೆಯೇ ಜನಾರ್ಧನ ಸೇವೆ,' ಅಂತ ಸರ್ಕಾರ ಲಬೋ ಲಬೋ ಹೊಯ್ಕೊಳ್ಳೋದೇ ಆಯಿತು. ಜನಸೇವೆ ಹೋಗಲಿ ದನಸೇವೆ ಅಂದರೆ ದನಕ್ಕೆ ಬಡಿದಂತೆ ಬಡಿಯಲಿಲ್ಲ ಅನ್ನುವದೇ ದೊಡ್ಡ ಪುಣ್ಯ.

ಒಟ್ಟಿನಲ್ಲಿ ಪ್ರಯಾಣಕ್ಕೆ ಕೇವಲ ಎರಡೇ ದಿನ ಇತ್ತು. ಈ ಹಳದಿ ಜ್ವರದ ಲಸಿಕೆಯ ವಿಷಯ ಇತ್ಯರ್ಥವಾಗದೇ ತಲೆ ಹನ್ನೆರಡಾಣೆಯಾಯಿತು.

ರಾತ್ರಿ ಮಲಗಿದರೆ ಹಳದಿ ಜ್ವರದ ಲಸಿಕೆಯೊಂದೇ ಏನು ಕಾಮನಬಿಲ್ಲಿನಲ್ಲಿರುವ ಏಳೂ ಬಣ್ಣಗಳ ಜ್ವರದ ಲಸಿಕೆ ಹಾಕಿಸಿಕೊಂಡ ಭಯಾನಕ ಕನಸು ಬಿತ್ತು. ಬೆಚ್ಚಿ ಬಿದ್ದೆ. ಎದ್ದೆ. ಬೆಳಗಿನ ಜಾವದಲ್ಲಿ ಒಳ್ಳೆ ನಿದ್ದೆ ಬಂತು. ಎದ್ದಾಗ ಒಂದು ಮಸ್ತ್ ಐಡಿಯಾ ಬಂತು. ಮತ್ತೆ 'ಓಂ ನಮೋ ಬೆಳಗಾಂವಕರಾಯ ನಮಃ!'. ಮಿಸ್ಟರ್ ಬೆಳಗಾಂವಕರ್ ಅವರಿಗೇ ಫೋನ್ ಹಚ್ಚುವದು. ಅದೇ ಒಂದು ಉಳಿದ ದಾರಿ.

ಶ್ರೀ ಬೆಳಗಾಂವಕರ್ - ಧಾರವಾಡ ಮೂಲದ ಖ್ಯಾತ ಕನ್ನಡ ಲೇಖಕಿ / ಕಾದಂಬರಿಗಾರ್ತಿ ಶ್ರೀಮತಿ ಸುನಂದಾ ಮಹಿಷಿ ಬೆಳಗಾಂವಕರ್ ಅವರ ಪತಿ. ಬೆಳಗಾಂವಕರ್ ಕುಟುಂಬ ಸರಿಸುಮಾರು ಮೂವತ್ತು ವರ್ಷ ಆಫ್ರಿಕಾದ ವಿವಿಧ ದೇಶಗಳಲ್ಲಿ ಇದ್ದು ಬಂದಿತ್ತು. ಶ್ರೀ ಬೆಳಗಾಂವಕರ್ ಆಫ್ರಿಕಾದ ವಿವಿಧೆಡೆ ಚಾರ್ಟರ್ಡ್ ಅಕೌಂಟೆಟ್ ಅಂತ ಕೆಲಸ ಮಾಡಿ ನಿವೃತ್ತರಾಗಿದ್ದರು.

೧೯೯೫ ರಲ್ಲಿ ಒಂದು ವರ್ಷದ ಮಟ್ಟಿಗೆ ಆಫ್ರಿಕಾದ ಟಾಂಜಾನಿಯಾಕ್ಕೆ ಹೋಗುವ ಅವಕಾಶ ಬಂದಾಗ ಮೊದಲು ನೆನಪಾದವರೇ ಸುನಂದಾ ಬೆಳಗಾಂವಕರ್. ಅವರು ಅಮ್ಮನ ಖಾಸ್ ಗೆಳತಿ ಸುಜಾತಾ ಮಹಿಷಿಯ ಅಕ್ಕ. ಅಮ್ಮನಿಗೂ ಒಳ್ಳೆಯ ಪರಿಚಯವಿದ್ದವರೇ. ಆಫ್ರಿಕಾದಿಂದ ಮರಳಿದ ನಂತರ ಬೆಂಗಳೂರಿಗೇ ಬಂದು ನೆಲೆಸಿದ್ದರು. ಅಮ್ಮ ಅವರ ಫೋನ್ ನಂಬರ್ ಕೊಟ್ಟಿದ್ದಳು. ಕೆಲವೇ ದಿವಸಗಳ ಹಿಂದೆ ಫೋನ್ ಮಾಡಿದ್ದೆ. ಅವರ ಮನೆಗೆ ಹೋಗಿ, ಅವರನ್ನೆಲ್ಲ ಭೇಟಿಯಾಗಿ, ಆಫ್ರಿಕಾ ಬಗ್ಗೆ ಸಾಕಷ್ಟು ಮಾಹಿತಿ ತೆಗೆದುಕೊಂಡು ಬಂದಿದ್ದೆ. ಆವಾಗ ಇಂಟರ್ನೆಟ್ ಇತ್ಯಾದಿ ಇರಲಿಲ್ಲ. ಮಾಹಿತಿಯನ್ನು ಇದೇ ರೀತಿಯಲ್ಲಿ  ಸಂಗ್ರಹಿಸಬೇಕಾಗುತ್ತಿತ್ತು. ಅವರ ಮನೆಗೆ ಹೋದಾಗ ಸುನಂದಾ, ಅವರ ಪತಿ, ಪುತ್ರ ಎಲ್ಲ ಬಹಳ ಆದರದಿಂದ ಉಪಚರಿಸಿ ಸಾಕಷ್ಟು ಮಾಹಿತಿ ಕೊಟ್ಟಿದ್ದರು. ಆವಾಗ ಈ ಹಳದಿ ಜ್ವರದ ಲಸಿಕೆ ಬಗ್ಗೆ ನನಗೆ ಗೊತ್ತೂ ಇರಲಿಲ್ಲ. ಹಾಗಾಗಿ ಅದರ ಬಗ್ಗೆ ಕೇಳುವ ಪ್ರಶ್ನೆಯೇ ಬರಲಿಲ್ಲ. ಅವರಾದರೂ ಹೇಗೆ ನೆನಪುಮಾಡಿಕೊಂಡು ಅದರ ಬಗ್ಗೆಯೇ ಹೇಳಿಯಾರು? ಒಟ್ಟಿನಲ್ಲಿ ಒಂದು ಮಹತ್ವದ ಮಾಹಿತಿ ಬೇಕಾಗುವದರ ಬಗ್ಗೆ ಗೊತ್ತಿರಲಿಲ್ಲ. ಹಾಗಾಗಿ ಸಿಕ್ಕಿರಲಿಲ್ಲ.

ಈಗ ಮತ್ತೆ ಫೋನ್ ಹಚ್ಚಿದೆ. ಬೆಳಗಾಂವಕರ್ ಸಿಕ್ಕರು. ಹಳದಿ ಜ್ವರದ ಲಸಿಕೆಯ ವಿಷಯ ಹೇಳಿದೆ. ಎಲ್ಲಿ ಸಿಗಬಹುದು ಅಂತ ಕೇಳಿದೆ. ಬೆಂಗಳೂರಿನಲ್ಲಿ ಎಲ್ಲಿ ಸಿಗಬಹುದು ಅಂತ ಅವರಿಗೆ ಗೊತ್ತಿರಲಿಲ್ಲ. ಆದರೆ ಮುಂಬೈನಲ್ಲಿ ಎಲ್ಲಿ ಸಿಗಬಹುದು ಅಂತ ಗೊತ್ತಿತ್ತು. ಅದರ ವಿವರ ಕೊಟ್ಟರು. ನಾನು ಹೇಗೂ ಮುಂಬೈನಿಂದಲೇ ಟಾಂಜಾನಿಯಾಕ್ಕೆ ಹೊರಟಿದ್ದೆ. ಸಾಕಷ್ಟು ಸಮಯವೂ ಇತ್ತು. ಮುಂಬೈನಲ್ಲೇ ಲಸಿಕೆ ಹಾಕಿಸಿದರಾಯಿತು ಅಂದುಕೊಂಡೆ.

ಮುಂಬೈನಲ್ಲಿ ಅದೆಲ್ಲೋ ಕೊಲಾಬಾ ಪ್ರದೇಶದಲ್ಲಿ ನೌಕಾನೆಲೆ ಇದೆ. ಅಲ್ಲಿ ನೌಕಾದಳದವರ ಆಸ್ಪತ್ರೆ ಇದೆ. ಅಲ್ಲಿ ಆಫ್ರಿಕಾಗೆ ಹೋಗುವ ಪ್ರಯಾಣಿಕರಿಗೆ ಹಳದಿ ಜ್ವರದ ಲಸಿಕೆ ಹಾಕುತ್ತಾರೆ. ಪಾಸ್ಪೋರ್ಟ್, ವೀಸಾ ತೆಗೆದುಕೊಂಡು ಹೋಗಬೇಕು. ಇಷ್ಟು ಮಾಹಿತಿ ಕೊಟ್ಟರು ಶ್ರೀ ಬೆಳಗಾಂವಕರ್. ಅನಂತಾನಂತ ಧನ್ಯವಾದ ಹೇಳಿ ಫೋನ್ ಇಟ್ಟೆ. ಇಷ್ಟು ಮಾಹಿತಿ ಸಿಕ್ಕ ಬಳಿಕ ಎಷ್ಟೋ ನಿರಾಳ.

ಹೇಗೂ ಬೆಂಗಳೂರಿನಿಂದ ಬೆಳಿಗ್ಗೆ ಹೊರಟ ವಿಮಾನ ಮಧ್ಯಾನ್ಹ ಮುಂಬೈ ಮುಟ್ಟುತ್ತದೆ. ಹೋಟೆಲ್ ಕೊಟ್ಟಿದ್ದಾರೆ. ಟಾಂಜಾನಿಯಾಕ್ಕೆ ಹೋಗುವ ವಿಮಾನವಿರುವದು ಮರುದಿನ ಬೆಳಗಿನ ಜಾವ. ಹೀಗಾಗಿ ಮಧ್ಯೆ ಬೇಕಾದಷ್ಟು ಟೈಮ್ ಇತ್ತು.

ಮುಂಬೈ ಮುಟ್ಟಿದೆ. ಏರ್ ಇಂಡಿಯಾ ಅಲ್ಲೇ ಹತ್ತಿರದಲ್ಲಿದ್ದ ಸೆಂಟಾರ್ ಹೋಟೆಲ್ಲಿನಲ್ಲಿ ರೂಮ್ ಕೊಟ್ಟಿತ್ತು. ಮೊದಲ ಬಾರಿಗೆ ಫೈವ್ ಸ್ಟಾರ್ ಹೋಟೆಲ್ಲಿನಲ್ಲಿ ತಂಗುವ ಭಾಗ್ಯ. ಮೇಲಿಂದ ಊಟಕ್ಕೆ ಬೇರೆ ಕೂಪನ್ ಕೊಟ್ಟಿದ್ದರು. ಫೈವ್ ಸ್ಟಾರ್ ಬಫೆ ಊಟ.

ಮತ್ತೆ ಯಾವಾಗ ಫೈವ್ ಸ್ಟಾರ್ ಹೋಟೆಲ್ಲಿನಲ್ಲಿ ಊಟ ಮಾಡುವ ಭಾಗ್ಯ ಸಿಗುತ್ತದೋ ಇಲ್ಲೋ ಅಂತ ಆಲೋಚಿಸಿ ಪಾಂಗಿತವಾಗಿ ಕಂಠಪೂರ್ತಿ ಊಟ ಮಾಡಿ ತಂಪಾದ ಕೋಣೆಗೆ ಬಂದರೆ ಮುಚ್ಚಾಕಿಕೊಂಡು ಮಲಗಿಬಿಡೋಣ ಅನ್ನಿಸಿತು. ಆದರೆ ಲಸಿಕೆ ಕೆಲಸ ಬಾಕಿಯಿತ್ತು. ಆದರೂ ಕಣ್ಣು ಮುಚ್ಚಿಯೇಬಿಟ್ಟೆ. ಒಂದು ಅರ್ಧ ಮುಕ್ಕಾಲು ಘಂಟೆ ನಿದ್ದೆ ಮಾಡಿ ಎದ್ದೆ.

ಸೆಂಟಾರ್ ಹೋಟೆಲಿನಿಂದ ಹೊರಬಂದರೆ 'ಬಕ್ರಾ ಸಿಕ್ಕಿತು!' ಅಂತ ಟ್ಯಾಕ್ಸಿ ಮಂದಿ ಸುತ್ತುವರೆದರು. ಒಂದು ಟ್ಯಾಕ್ಸಿ ಮಾಡಿಕೊಂಡು, ಹರ್ಕು ಮುರ್ಕು ಹಿಂದಿಯಲ್ಲಿ ನನ್ನ ಉದ್ದೇಶ ಹೇಳಿದೆ. ಟ್ಯಾಕ್ಸಿ ಮಂದಿಗೆ ಗೊತ್ತಿಲ್ಲದ ವಿಷಯವಿರುತ್ತದೆಯೇ? ಅವನಿಗೆ ಎಲ್ಲ ಬರೋಬ್ಬರಿ ಗೊತ್ತಿತ್ತು. ನೌಕಾದಳದ ಆಸ್ಪತ್ರೆಗೆ ಕರೆದೊಯ್ಯುವದಾಗಿ, ನನ್ನ ಕೆಲಸ ಮುಗಿಯುವವರೆಗೆ ಕಾದು ವಾಪಸ್ ಕರೆತರುವದಾಗಿ ಹೇಳಿದ. ಅವನು quote ಮಾಡಿದ ರೇಟ್ ಕೇಳಿ ನನಗೆ ಸಣ್ಣ ಪ್ರಮಾಣದ ಟೋಪಿ ಬಿದ್ದ ಬಗ್ಗೆ ಸಂಶಯವಿರಲಿಲ್ಲ. ಆದರೆ ತುರ್ತಾಗಿ ಹೋಗಿ ಲಸಿಕೆ ಹಾಕಿಸಿಕೊಂಡು ಬರಬೇಕಿತ್ತು. ಸರಿಯೆಂದು ಟ್ಯಾಕ್ಸಿ ಹತ್ತಿದೆ.

ಮುಂಬೈ ಟ್ರಾಫಿಕ್ಕಿನಲ್ಲಿ ಸುಮಾರು ಹೊತ್ತು ಪಯಣಿಸಿದ ನಂತರ ನೌಕಾದಳದ ಆಸ್ಪತ್ರೆ ಬಂತು. ಅಲ್ಲಿ ಎಲ್ಲ ಶಿಸ್ತುಬದ್ಧ. ರಕ್ಷಣಾಸಂಸ್ಥೆಗಳು ಏನು ಮಾಡಿದರೂ ಚೆನ್ನಾಗಿ ಮಾಡುತ್ತವೆ. ಅದರ ಬಗ್ಗೆ ದೂಸರಾ ಮಾತಿಲ್ಲ.

ಅಲ್ಲಿ ಲಸಿಕೆ ಹಾಕಿಸಿಕೊಳ್ಳಲು ಹತ್ತು ಹದಿನೈದು ಜನರಿದ್ದರೂ ಸಿಕ್ಕಾಪಟ್ಟೆ efficient ವ್ಯವಸ್ಥೆ ಹೊಂದಿದ್ದರಿಂದ ಹತ್ತು ನಿಮಿಷದಲ್ಲಿ ಲಸಿಕೆ ಹಾಕಿ, ಒಂದು ಸರ್ಟಿಫಿಕೇಟ್ ಕೊಟ್ಟು ಕಳಿಸಿದರು. ಐದು ಘಂಟೆಗೆ ಆಸ್ಪತ್ರೆ ಮುಚ್ಚಲಿತ್ತು. ನನಗೆ ಅದೂ ಗೊತ್ತಿರಲಿಲ್ಲ. ಎಲ್ಲ ಪ್ರಕ್ರಿಯೆ ಮುಗಿದು, ಕೈಯಲ್ಲಿ ಲಸಿಕೆ ಸರ್ಟಿಫಿಕೇಟ್ ಬಂದಾಗ ಘಂಟೆ ನಾಲ್ಕೂ ಮುಕ್ಕಾಲು. ಅದೃಷ್ಟ ಚೆನ್ನಾಗಿತ್ತು. ಇನ್ನೂ ತಡವಾಗಿದ್ದರೆ ಅಷ್ಟೇ ಮತ್ತೆ.

ಹೀಗೆ ಹೊರಡುವ ದಿನ, ಅದೂ ಕೊನೇ ಕ್ಷಣದಲ್ಲಿ, ಹಳದಿ ಜ್ವರದ ಲಸಿಕೆ ಹಾಕಿಸಿಕೊಂಡಾಗಿತ್ತು. ಈಗ ಇಲ್ಲಿ ಟಾಂಜಾನಿಯಾದಲ್ಲಿ ನೋಡಿದರೆ ಇಷ್ಟೆಲ್ಲಾ ಸಾಹಸ ಮಾಡಿ ಲಸಿಕೆ ಹಾಕಿಸಿಕೊಂಡು ಬಂದ ಲಸಿಕೆ valid ಇಲ್ಲ ಅನ್ನುತ್ತಿದ್ದಾನೆ. ಏನಿದರ ಅರ್ಥ? ಪರದೇಶಕ್ಕೆ ಬಂದಾಗ ಹೀಗಾಗಿಬಿಟ್ಟರೆ ಹೇಗೆ? What to do now?

ಅಷ್ಟರಲ್ಲಿ, 'ಮಿಸ್ಟರ್ ಮ್ಯಾಹೇಶ್!' ಅನ್ನುತ್ತ ಯಾರೋ ಒಬ್ಬ ಕರಿಯ ಬಂದ. 'ನಾನೇ ಮಹೇಶ್,' ಅಂತ ಹೇಳಿದೆ. 'ಜಾಂಬೋ! ಜಾಂಬೋ! ಹಬಾರಿ ಗಾನಿ?' ಅಂದ. ಪೆಕರು ನಗೆ ನಕ್ಕ. ಅದು ಯಾವ ಭಾಷೆಯಂತಲೇ ಗೊತ್ತಾಗಲಿಲ್ಲ. ಹಾಗಿದ್ದ ಮೇಲೆ ಏನಂದ ಅಂತ ಹೇಗೆ ಗೊತ್ತಾಗಬೇಕು? ಆಮೇಲೆ ಅಲ್ಲಿನ ಸ್ವಾಹಿಲಿ ಭಾಷೆ ಸ್ವಲ್ಪ ತಿಳಿದ ಮೇಲೆ ಗೊತ್ತಾಗಿದ್ದು ಏನೆಂದರೆ ಜಾಂಬೋ ಅಂದರೆ ಹಲೋ. ಹಬಾರಿ ಗಾನಿ ಅಂದರೆ how are you. ಶಿವನೇ ಶಂಭುಲಿಂಗ!

ಆ ಕರಿಯ ಹರಕು ಮುರುಕು ಇಂಗ್ಲೀಷಿನಲ್ಲಿ ಹೇಳಿದ ಮೇಲೆ ಗೊತ್ತಾಗಿದ್ದು ಅವನು ನಾನು ಕೆಲಸ ಮಾಡಲು ಬಂದಿದ್ದ ಕಂಪನಿಯವನು. ನನ್ನನ್ನು ವಿಮಾನನಿಲ್ದಾಣದಲ್ಲಿ receive ಮಾಡಿ, ಕರೆದುಕೊಂಡು ಹೋಗಲು ಬಂದಿದ್ದ. ಸುಮಾರು ಹೊತ್ತಾದರೂ ನಾನು ಹೊರಗೆ ಬರದ ಕಾರಣ ನನ್ನನ್ನು ಹುಡುಕಿಕೊಂಡು ಅವನೇ ಒಳಗೆ ಬಂದಿದ್ದಾನೆ.

ನಮ್ಮ ಕಂಪನಿಯ ಮನುಷ್ಯ ಮತ್ತು ನನ್ನನ್ನು ಹಿಡಿದಿಟ್ಟುಕೊಂಡಿದ್ದ ಏರ್ಪೋರ್ಟ್ ಅಧಿಕಾರಿ ಮನುಷ್ಯ ಇಬ್ಬರೂ ಸ್ವಲ್ಪ ಪಕ್ಕಕ್ಕೆ ಇನ್ನೊಂದು ರೂಮಿಗೆ ಹೋದರು. ಏನೇನೋ ಗುಸುಪುಸು ಮಾತಾಡಿಕೊಂಡರು. ಏನೋ ವ್ಯವಹಾರ ಕುದುರಿತು ಅಂತ ಕಾಣುತ್ತದೆ. ಇಬ್ಬರೂ ಸಂತುಷ್ಟರಾಗಿ, ಒಬ್ಬರ ಬೆನ್ನನ್ನು ಇನ್ನೊಬ್ಬರು ತಟ್ಟುತ್ತ, ಭಯಂಕರವಾಗಿ ನಗುತ್ತ ಬಂದರು.

ಅಲ್ಲಿಯವರೆಗೆ ಲಸಿಕೆ ಸರ್ಟಿಫಿಕೇಟ್ ಸರಿಯಿಲ್ಲ ಅಂತ ನನ್ನನ್ನು ಹಿಡಿದಿಟ್ಟುಕೊಂಡಿದ್ದ ಅಧಿಕಾರಿ, 'ನೀವು ಹೋಗಬಹುದು,' ಅಂದ. ನಮ್ಮ ಕಂಪನಿಯ ಮನುಷ್ಯನನ್ನು ತೋರಿಸುತ್ತ, 'ಇವರು ಎಲ್ಲ ಬಗೆಹರಿಸಿದ್ದಾರೆ,' ಅಂತ ನಗುತ್ತ ಹೇಳಿದ. ನಮ್ಮ ಕಂಪನಿಯ ಮನುಷ್ಯನಿಗೆ ಧನ್ಯವಾದ ಹೇಳಿದ. ಮತ್ತೆ ಮತ್ತೆ ಹೇಳಿದ. ಸಿಕ್ಕಾಕಿಕೊಂಡು ಬಿದ್ದವನು ನಾನು. ನನ್ನನ್ನು ಬಿಡಿಸಿಕೊಂಡ ನಮ್ಮ ಕಂಪನಿಯ ಮನುಷ್ಯ ಆ ಅಧಿಕಾರಿಗೆ ಥ್ಯಾಂಕ್ಸ್ ಹೇಳಬೇಕು. ಇಲ್ಲಿ ನೋಡಿದರೆ ಉಲ್ಟಾ. ಎಲ್ಲ ವಿಚಿತ್ರ. ಏನು ವಿಷಯವೋ ಏನೋ!

'ಯಪ್ಪಾ! ಅಂತೂ ಕೋರಂಟಿಯಲ್ಲಿ (quarantine) ಕೊಳೆಯುವ ಕರ್ಮದಿಂದ ಬಚಾವಾದೆ,' ಅನ್ನುವ ನೆಮ್ಮದಿಯಲ್ಲಿ ಹೊರಗೆ ಬಂದು ಲಗೇಜ್ ಹುಡುಕಿದೆ. ಪುಣ್ಯಕ್ಕೆ ಎಲ್ಲ ಲಗೇಜ್ ಸರಿಯಾಗಿ ಬಂದಿತ್ತು. ಮತ್ತೆ ನಾನು ತುಂಬಾ ತಡವಾಗಿ ಬಂದರೂ ಲಗೇಜ್ ಅಲ್ಲೇ ಇತ್ತು. ಆಫ್ರಿಕಾದ ವಿಮಾನನಿಲ್ದಾಣಗಳಲ್ಲಿ ಪ್ರಯಾಣಿಕರೇ ನಾಪತ್ತೆಯಾಗಿಬಿಡುತ್ತಾರೆ. ಹಾಗಿರುವಾಗ ಲಗೇಜ್ ನಾಪತ್ತೆಯಾಗುವದೇನೂ ದೊಡ್ಡ ಮಾತಲ್ಲ ಬಿಡಿ. ಹಾಗಾಗಿರಲಿಲ್ಲ. ಅದೇ ಪುಣ್ಯ.

ಕಂಪನಿ ಮನುಷ್ಯನ ಜೊತೆ ಹೊರಗೆ ಬಂದೆ. ನಿಲ್ಲಿಸಿದ್ದ ಕಾರಿನತ್ತ ಕರೆದೊಯ್ದ. ಅದಕ್ಕೊಬ್ಬ ಕರಿಯ ಡ್ರೈವರ್. ನಮ್ಮ ಕಂಪನಿ ಮನುಷ್ಯನೇ ದಡಿಯ ಅಂದುಕೊಂಡರೆ ಡ್ರೈವರ್ ಮತ್ತೂ ದಡಿಯ. ಇಂತಹ ಎರಡು ದೈತ್ಯಾಕೃತಿಗಳ ಜೊತೆ ನಾನು ಹೋಗಬೇಕು. ಮುಂದೆ ಏನು ಕಾದಿದೆಯೋ ಅಂತ ಚಿಂತೆಯಾಯಿತು. ಹೇಳಿಕೇಳಿ ಆಫ್ರಿಕಾ ನೋಡಿ.

ಸುಖಾಸುಮ್ಮನೆ ಬಡಪಾಯಿ ಕರಿಯರ ಮೇಲೆ ಸಂಶಯಪಟ್ಟೆ. ಸುರಕ್ಷಿತವಾಗಿ ಮನೆ ಮುಟ್ಟಿಸಿದರು. ಟಿಪ್ ಕೊಡೋಣ ಅಂದರೆ ನನ್ನ ಹತ್ತಿರ ಲೋಕಲ್ ಕರೆನ್ಸಿಯಲ್ಲಿ ಕಾಸೂ ಇರಲಿಲ್ಲ. 'ಹೇ!ಹೇ!' ಅಂತ ಹಾಪನ ಹಾಗೆ ನಕ್ಕು ಅವರನ್ನು ಕಳಿಸಿದೆ. ಅವರೂ ನಗುತ್ತ ಹೋದರು. ನಮಗೆ ಅಲ್ಲಿನ ಸ್ವಾಹಿಲಿ ಭಾಷೆ ಗೊತ್ತಿರಲಿಲ್ಲ. ಅವರಿಗೆ ಬರುವ ಇಂಗ್ಲಿಷ್ ಅಷ್ಟಕಷ್ಟೇ.

ಮರುದಿನ ಆಫೀಸಿಗೆ ಹೋದಾಗ ಹಿಂದಿನ ದಿನದ ಲಫಡಾ ಬಗ್ಗೆ ಹೇಳಿಕೊಂಡೆ. ಭಾರತೀಯ ಮೂಲದ ಬಾಸ್ ಪೆಕಪೆಕಾ ಅಂತ ನಕ್ಕ. 'ನೂರಕ್ಕೆ ತೊಂಬತ್ತು ಜನರ ಜೊತೆ ಹೀಗೇ ಆಗುತ್ತದೆ. ಎಷ್ಟೋ ಜನ ಹಳದಿ ಜ್ವರದ ಲಸಿಕೆಯನ್ನೇ ಹಾಕಿಸಿರುವದಿಲ್ಲ. ಏಕೆಂದರೆ ಅವರಿಗೆ ಗೊತ್ತೇ ಇರುವದಿಲ್ಲ. ಇನ್ನು ಕೆಲವರು, ನಿನ್ನಂತವರು, ಲಸಿಕೆ ಹಾಕಿಸಿರುತ್ತಾರೆ ಆದರೆ ಮೂರು ದಿವಸಗಳಾಗುವ ಮೊದಲೇ ಪ್ರಯಾಣ ಮಾಡಿರುತ್ತಾರೆ. ಒಟ್ಟಿನಲ್ಲಿ ಪ್ರತಿ ಸಲ ಇದು ಇದ್ದಿದ್ದೇ,' ಅಂದ.

'ಹಾಗಾದರೆ ನನ್ನನ್ನು ಹೇಗೆ ಬಿಡಿಸಿಕೊಂಡು ಬಂದರು? ನಿಯಮಗಳ ಪ್ರಕಾರ ಕೋರಂಟಿಗೆ ಹಾಕಬೇಕಿತ್ತು ತಾನೇ? ಕೋರಂಟಿಯಲ್ಲಿ ವೈದ್ಯರ ದೇಖರೇಖಿಯಲ್ಲಿಟ್ಟು, ಆರೋಗ್ಯದಲ್ಲಿ ಏನೂ ತೊಂದರೆಯಿಲ್ಲ, ಇವರಿಂದ ಹಳದಿ ಜ್ವರ ಹರಡುವದಿಲ್ಲ ಎಂದು ಖಾತ್ರಿಯಾದ ಮೇಲೆಯೇ ಹೊರಗೆ ಬಿಡಬೇಕು ತಾನೇ?' ಅಂತ ಮುಗ್ಧನಾಗಿ ಕೇಳಿದೆ.

ಬಾಸ್ ತಟ್ಟಿಕೊಂಡು ನಕ್ಕ.

'ಕೋರಂಟಿಯೂ ಇಲ್ಲ, ಮಣ್ಣೂ ಇಲ್ಲ. ಒಂದಿಷ್ಟು ರೊಕ್ಕ ಬಿಸಾಕಿ ಬಿಡಿಸಿಕೊಂಡು ಬರುತ್ತೇವೆ. ಅದಕ್ಕೆಲ್ಲ ಅವರ ರೇಟ್ ಕಾರ್ಡ್ ಇದೆ. ಕಂಪನಿ ಮನುಷ್ಯನಿಗೆ ಇದೆಲ್ಲ ಕಾಮನ್. ಬರಬೇಕಾದವರು ಟೈಮಿಗೆ ಸರಿಯಾಗಿ ಹೊರಗೆ ಬರಲಿಲ್ಲ ಅಂದರೆ ಇವನು ಒಳಗೆ ಹೋಗುತ್ತಾನೆ. ಸೀದಾ ಕೋರಂಟಿಗೆ. ಅಲ್ಲಿ ನಿನ್ನಂತವರು ನಿಂತಿರುತ್ತೀರಿ. ನಮ್ಮ ಜನ ಅಂತ ಖಾತ್ರಿಯಾದ ಕೂಡಲೇ ರೇಟ್ ಕಾರ್ಡ್ ಪ್ರಕಾರ ವ್ಯವಹಾರ ಕುದುರಿಸುತ್ತಾನೆ. ಅಲ್ಲಿಗೆ ಎಲ್ಲ ಸಾಫ್. ಎಲ್ಲ ಕಡೆ ಇದೇ ಮಾರಾಯ. ದುಡ್ಡೇ ದೊಡ್ಡಪ್ಪ,' ಅಂದ. ಶಿವಾಯ ನಮಃ!

ಒಹೋ! ಇಲ್ಲೂ ಎಲ್ಲ ಲಂಚಮಯ ಅಂತ ಆವಾಗ ಗೊತ್ತಾಯಿತು. ಅದೇನು ದೇವಲೋಕವೇ. ಹೇಳಿಕೇಳಿ ಆಫ್ರಿಕಾ. ಅಭಿವೃದ್ಧಿ ಹೊಂದುತ್ತಿರುವ ದೇಶವೂ ಅಲ್ಲ. ಹಿಂದುಳಿದ ದೇಶ. ಟಾಂಜಾನಿಯಾ ಎಷ್ಟೋ ಪಾಲು ಬೇಕು. ಸಾಕಷ್ಟು ಮುಂದುವರೆದಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಬೇರೆ ಕೆಲವು ದೇಶಗಳೂ ಇವೆ. ಶುದ್ಧ ಕೊಂಪೆಗಳು.

ಹೀಗೆ ಹಳದಿ ಜ್ವರದ ಲಸಿಕೆ ಪ್ರಮಾಣಪತ್ರದ ಲಫಡಾದಿಂದ ಪಾರಾಗಿ ಬಂದಾಯಿತು. ಗರಿಗರಿ ನೋಟು ಎಲ್ಲವನ್ನೂ ನಿಭಾಯಿಸಿತ್ತು.

ಒಂದು ವಿಷಯ ಅರ್ಥವಾಗಲಿಲ್ಲ. ಲಸಿಕೆ ಹಾಕಿದ ಮೇಲೆ ಮೂರು ದಿವಸ ಕಾಯಬೇಕು ಅಂತ ನಿಯಮವಿದೆ ಅಂತ ಏರ್ ಇಂಡಿಯಾದವರು ಮೊದಲೇ ತಿಳಿಸಬಹುದಿತ್ತು. ಎರಡು ವಾರಗಳಿಂದ ಬೆಂಗಳೂರಿನಲ್ಲಿ ಅವರ ಆಫೀಸಿಗೆ ತಡಕಾಡುತ್ತಿದ್ದೆ. ಅದು ಬಿಡಿ ಹೋಗಲಿ. ಹೋಗುವ ದಿನ ಬೋರ್ಡಿಂಗ್ ಕಾರ್ಡ್ ಕೊಡುವ ಸಮಯದಲ್ಲಾದರೂ ಹೇಳಬಹುದಿತ್ತು. ಪ್ರಯಾಣವನ್ನು ಮುಂದೂಡಲು ಹೇಳಬಹುದಿತ್ತು. ಅದೇನನ್ನೂ ಮಾಡದೇ ಸೀದಾ ವಿಮಾನ ಹತ್ತಿಸಿ ಕಳುಹಿಸಿ, ಗೊತ್ತಿಲ್ಲದ ದೇಶದಲ್ಲಿ ಫಜೀತಿಗೆ ಸಿಗಿಸುವದ್ಯಾಕೆ ಎಂದು ವಿಚಾರ ಬಂತು.

ಕೇಳಿದರೆ ಯಾರಿಗೂ ಉತ್ತರ ಗೊತ್ತಿರಲಿಲ್ಲ. ಮತ್ತೆ ಏರ್ ಇಂಡಿಯಾ ಅಥವಾ ಬೇರೆ ಏರ್ಲೈನ್ಸ್ ಜನ ಅಥವಾ ವಲಸೆ ಅಧಿಕಾರಿಗಳು ಅಷ್ಟೆಲ್ಲಾ ಮುತುವರ್ಜಿ ವಹಿಸಿ, ಲಸಿಕೆ ಸರ್ಟಿಫಿಕೇಟ್ ಎಲ್ಲ ಚೆಕ್ ಮಾಡಿದರೆ ಆಕಡೆ ಆಫ್ರಿಕಾದ ಮಂದಿ ರೊಕ್ಕ ಮಾಡಿಕೊಳ್ಳುವದು ಹೇಗೆ? ಹೆಚ್ಚಾಗಿ ಏನೋ ಕನೆಕ್ಷನ್ ಇರಬೇಕು. 'ನೀವು ಏನೂ ಚೆಕ್ ಮಾಡದೇ ವಿಮಾನದಲ್ಲಿ ಬಕರಾಗಳನ್ನು ಕಳಿಸಿ. ನಾವು ಇಲ್ಲಿ ಸರಿಯಾಗಿ ಬೋಳಿಸುತ್ತೇವೆ. ನಾವೂ ಈಕಡೆಯಿಂದ ಹಾಗೇ ಮಾಡುತ್ತೇವೆ. ನೀವು ನಿಮ್ಮ ಕಡೆ ಇಳಿದ ಬಕರಾಗಳನ್ನು ಬೋಳಿಸಿಕೊಳ್ಳಿ!' ಹೀಗಂತ ಡೀಲ್ ಇರಬೇಕು.

ಒಂದು ವರ್ಷದ ನಂತರ ವಾಪಸ್ ಬಂದೆ. ಮುಂಬೈನಲ್ಲಿ ಮತ್ತೆ ಲಸಿಕೆ ಸರ್ಟಿಫಿಕೇಟ್ ಕಾರಣವಾಗಿ ಕ್ಯಾತೆ ತೆಗೆದು ತೊಂದರೆ ಕೊಟ್ಟರೆ ಅಂತ ಒಂದು ದೊಡ್ಡ ಮೊತ್ತವನ್ನು ಡಾಲರ್ ರೂಪದಲ್ಲಿ ಬೇರೆಯೇ ತೆಗೆದಿಟ್ಟುಕೊಂಡಿದ್ದೆ. ಮುಂಬೈನಲ್ಲಿ ಹಿಡಿದು ನಿಲ್ಲಿಸಿ,'ಲಸಿಕೆ ಸರ್ಟಿಫಿಕೇಟ್ ಸರಿಯಿಲ್ಲ. ಕೋರಂಟಿಗೆ ಕಳಿಸುತ್ತೇವೆ,' ಅಂತೆಲ್ಲ ರಗಳೆ ಶುರು ಮಾಡಿದರೆ ಅಷ್ಟು ರೊಕ್ಕ ಕೊಟ್ಟು, ಕೃಷ್ಣಾರ್ಪಣಮಸ್ತು ಅಂದು ಕೈಮುಗಿಯಲಿಕ್ಕೆ. ದೇವರ ದಯೆ. ನನ್ನ ಪುಣ್ಯ. ಮುಂಬೈನಲ್ಲಿ ಲಸಿಕೆ ಸರ್ಟಿಫಿಕೇಟ್ ನೋಡಿದರೇ ವಿನಃ ಏನೂ ಕಿರಿಕ್ ಮಾಡಲಿಲ್ಲ. ಬದುಕಿದೆಯಾ ಬಡ ಜೀವವೇ ಎಂಬಂತೆ ಬೇರೆ ಪ್ಲೇನ್ ಹಿಡಿದು ಬೆಂಗಳೂರು ತಲುಪಿಕೊಂಡೆ.

ಮುಂದೆ ಯಾವದೋ ಕನ್ನಡ ಪತ್ರಿಕೆಯೊಂದರಲ್ಲಿ ಲೇಖಕರೊಬ್ಬರು ತಮ್ಮ ಕೋರಂಟಿ ಅನುಭವ ಬರೆದುಕೊಂಡಿದ್ದರು. ಲೇಖಕರ ಹೆಸರು ಮರೆತುಹೋಗಿದೆ. ಆ ಲೇಖಕ ಆಫ್ರಿಕಾ ಪ್ರಯಾಣ ಮುಗಿಸಿ ಮುಂಬೈಗೆ ಬಂದು ಇಳಿದಿದ್ದಾರೆ. ಮತ್ತೆ ಹಳದಿ ಜ್ವರದ ಲಸಿಕೆ ಪ್ರಾಬ್ಲಮ್. ಕೋರಂಟಿಗೆ ಹಾಕುತ್ತೇವೆ ಅಂತ ಅಧಿಕಾರಿಗಳು ರಂಪ ಮಾಡಿದ್ದಾರೆ. ಬಿಟ್ಟು ಕಳಿಸಲು ಯಥಾಪ್ರಕಾರ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ಇವರು ಲಂಚ ಕೊಡಲು ಒಪ್ಪಿಲ್ಲ. ಆಗಿದ್ದಾಗಲಿ, ಕೋರಂಟಿ ಅಂದರೇನು ಅಂತ ನೋಡಿಯೇಬಿಡೋಣ ಅಂತ ನಿಶ್ಚಯಿಸಿದ್ದಾರೆ. ಅಧಿಕಾರಿಗಳು, 'ಕೋರಂಟಿ ಅಂದರೆ ಹಾಗಿರುತ್ತದೆ. ಹೀಗಿರುತ್ತದೆ. ಸುಮ್ಮನೆ ಯಾಕೆ ತೊಂದರೆ ತೆಗೆದುಕೊಳ್ಳುತ್ತೀರಿ? ರೊಕ್ಕ ಕೊಟ್ಟು ಹೋಗಿರಿ,' ಅಂತೆಲ್ಲ ಬ್ರೈನ್ ವಾಶ್ ಮಾಡಲು ನೋಡಿದ್ದಾರೆ. ಇವರು ಒಪ್ಪಿಲ್ಲ. ಬೇರೆ ವಿಧಿಯಿಲ್ಲದೆ ಇವರನ್ನು ಕೋರಂಟಿಗೆ ಕಳಿಸಿದ್ದಾರೆ.

ಅಲ್ಲಿ ಹೋದ ಲೇಖಕರು ಥಂಡಾ ಹೊಡೆದಿದ್ದಾರೆ. ಥೇಟ್ ನರಕ. 'ಹಳದಿ ಜ್ವರ ಬಂದರೆ ಏನಾಗುತ್ತದೋ ಗೊತ್ತಿಲ್ಲ. ಆದರೆ ಭಾರತದ ಸರ್ಕಾರಿ ಕೋರಂಟಿಯಲ್ಲಿದ್ದರೆ ಮಾತ್ರ ಏನಾದರೂ ಸೋಂಕು ಹತ್ತಿ ಸಾಯುವದು ಗ್ಯಾರಂಟಿ. ಬರಬಾರದ ರೋಗ ಬರುವದು ಖಚಿತ. ಕೊಲೆ ಯತ್ನವಾದರೂ ಆಶ್ಚರ್ಯವಿಲ್ಲ..... ' ಇದು ಅವರ ಸ್ವಂತ ಅನುಭವ. ಅದನ್ನೆಲ್ಲ ವಿವರವಾಗಿ ಬರೆದುಕೊಂಡಿದ್ದರು. ಭಯಾನಕವಾಗಿತ್ತು.

ಮುಂಬೈನ ಕೋರಂಟಿ (quarantine) ಮಹಾ ಕೊಳಕು ಜಾಗವಾಗಿತ್ತಂತೆ. ಮತ್ತೆ ಅದರಲ್ಲಿ ಆಫ್ರಿಕಾದಿಂದ ಬಂದಿದ್ದ ನೀಗ್ರೋ ಜನ ತುಂಬಿದ್ದರಂತೆ. ಯಾರೂ ಸುಬಗರಲ್ಲ. ಡ್ರಗ್ ಮಾರಾಟಗಾರರು, ಕಳ್ಳರು, ಕೊರಮರು ಇತ್ಯಾದಿ. ಕೋರಂಟಿಯೊಂದಿಗೆ ಮತ್ತು ಅದನ್ನು ನಡೆಸುತ್ತಿದ್ದ ಲಂಚಕೋರ ಅಧಿಕಾರಿಗಳೊಂದಿಗೆ ಡೀಲ್ ಹೊಂದಿದವರು. ಕೋರಂಟಿಯನ್ನು ಕಮ್ಮಿ ದರದ ವಸತಿಗೃಹವನ್ನಾಗಿ ಮಾಡಿಕೊಂಡು ಮಜಾ ಮಾಡುತ್ತಿರುವವರು. ಹಲವರಿಗೆ ಏಡ್ಸ್ ಮತ್ತಿತರ ಕಾಯಿಲೆಗಳು ಇದ್ದಿರಬಹುದು ಅಂತಲೂ ಇವರ ಊಹೆ. ಒಟ್ಟಿನಲ್ಲಿ ನರಕಸದೃಶ ಜಾಗ. Hellhole!

ಅದನ್ನು ನೋಡಿ, ಅಲ್ಲಿರುವ ಖತರ್ನಾಕ್ ನಿವಾಸಿಗಳಿಂದ ಒಂದು ತರಹದ hostility ಅನುಭವಿಸಿದ ಇವರ resolve ಕರಗಿದೆ. ಕೋರಂಟಿ ಸಹವಾಸ ಸಾಕೋ ಸಾಕು ಅಂತ ಕೊನೆಗೆ ಅಲ್ಲಿಯ ಲಂಚಗುಳಿ ಮಂದಿಗೆ ಕಾಣಿಕೆ ಕೊಟ್ಟು ಓಡಿ ಬಂದಿದ್ದಾರೆ. ತಮ್ಮ ಅನುಭವ ಬರೆದುಕೊಂಡಿದ್ದಾರೆ. quarantine ಗೆ ಕೋರಂಟಿ ಅನ್ನುವ ಶಬ್ದವನ್ನು ಮೊದಲ ಸಲ ಓದಿದ್ದೇ ಅವರ ಲೇಖನದಲ್ಲಿ. ಅವರ ಕೆಟ್ಟ ಅನುಭವ ಓದಿ ಅನ್ನಿಸಿದ್ದು - ಪುಣ್ಯಕ್ಕೆ ನಾನು ಬಚಾವಾದೆ!

ಸ್ವಲ್ಪ ದಿವಸಗಳ ಹಿಂದೆ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಜೀವನಚರಿತ್ರೆ ಓದುತ್ತಿದ್ದೆ. ಅವರಿಗೂ ಇದೇ ಅನುಭವವಾಗಿತ್ತಂತೆ. ನೈಜೀರಿಯಾದಲ್ಲಿ ಟೂರ್ನಮೆಂಟ್ ಮುಗಿಸಿ ಬಂದಿದ್ದಾರೆ. ಮುಂಬೈನಲ್ಲಿ ಇಳಿದರೆ ಮತ್ತೆ ಹಳದಿ ಜ್ವರದ ಲಸಿಕೆ ಪ್ರಾಬ್ಲಮ್. ಸಾನಿಯಾ ಮತ್ತು ಅವರ ತಾಯಿಯನ್ನು ಕೋರಂಟಿಗೆ ಕಳಿಸಿದ್ದರಂತೆ. ಅವರ ಅನುಭವವನ್ನು ಅವರ ಮಾತುಗಳಲ್ಲೇ ಕೇಳಿ. 'Ace against odds' by Sania Mirza ಪುಸ್ತಕದಿಂದ ಎತ್ತಿದ್ದು.

I traveled to Benin City, Nigeria in February 2003 and the trip proved to be a rewarding one as I won both the $10,000 singles titles on African soil to add to my growing confidence. I was in a very positive frame of mind when I caught the flight for Mumbai. However, I was in for a rude shock when I landed at the Sahar International Airport. My mother and I were stopped at the exit point by an official who claimed to be from the Health Department for Control of Yellow Fever. I believed that the dreadful disease was long eradicated and had no idea that I needed to be vaccinated before leaving for the African country. This was infuriating. If this killer disease was still a danger, the Nigerian Embassy could surely have warned us before stamping my visa!

Since we did not have the required papers to show that we had been immunized for yellow fever, we were quarantined in a remote place in the outskirts of the city of Mumbai for five days. We could hardly believe what was happening as my mom and I were whisked away by unknown men in a special car to a huge, depressingly old and ancient looking monument. The irony was dreadful. This bungalow that was to be our quarantine for yellow fever had yellow doors, windows, walls and beds! I remember praying for the doctors to come soon and declare us free of the disease.

Mom called up Dad, who was in Hyderabad, to inform him of the situation and he immediately flew down to Mumbai. To be fair, the officials tried to make us as comfortable as they could, given the limited budget they seemed to have. But my mother was livid. ‘Why are passengers not checked before they board the flight to Nigeria? Why should you even allow people to travel to that country without confirming that they have the immunization certificate if there is a risk of infection?’ she questioned the doctor who was in charge of looking after us.

‘Our department has been in existence for decades now and we need to go according to the rules since we have been employed specially for this purpose,’ was his dubious, unconvincing answer. ‘Madam, you will be glad to know that we have quarantined several famous people and celebrities as we want to protect everyone from this terrible disease.’ We didn’t even know what to say!

We spent the next five days lazing about. News had leaked to the media and our phones rang continuously as the press tried monitoring my health. We spent time playing cards or carrom in the ‘yellow house’ and I read books and magazines for most of the day. There was no television and the days seemed like weeks. It was a huge relief when we were finally cleared of any risk of having contracted yellow fever and were allowed to go back to the comforts of home and civilization.

ಜೀವನದಲ್ಲಿ ಪ್ರಪ್ರಥಮ ಬಾರಿಗೆ ನಾನೂ ಕೋರಂಟಿಗೆ almost ಹೋಗಿದ್ದೆ. ಅದೂ ಪರದೇಶದ ಕೋರಂಟಿಗೆ. ಸ್ವಲ್ಪದರಲ್ಲಿ ಬಚಾವ್. ಮತ್ತೆ ಆಫ್ರಿಕಾಗೆ ಹೋಗುವ ಸಂದರ್ಭ ಬಂದಿಲ್ಲ. ಈಗ ಬಿಡಿ. ಎಲ್ಲ ಮಾಹಿತಿ ಇಂಟರ್ನೆಟ್ ಮೇಲೆ ಸಿಗುತ್ತದೆ.

ಇಲ್ಲಿ ಅಮೇರಿಕಾದಲ್ಲಿ ನಿಮ್ಮ ಡಾಕ್ಟರ್ ಹತ್ತಿರ ಇಂತಹ ದೇಶಕ್ಕೆ ಹೋಗುತ್ತಿದ್ದೇನೆ ಅಂತ ಹೇಳಿದರೆ ಬೇಕಾದ ಎಲ್ಲ ಲಸಿಕೆ ಹಾಕಿ, ಸರ್ಟಿಫಿಕೇಟ್ ಕೊಡುತ್ತಾರೆ. ಸುಮ್ಮನೆ ಟೆಸ್ಟ್ ಮಾಡೋಣ ಅಂತ ನಮ್ಮ ಡಾಕ್ಟರ್ ಹತ್ತಿರ ಕೇಳಿದೆ. 'ಎಲ್ಲಿಗೆ?' ಅಂದರು. 'ಭಾರತಕ್ಕೆ' ಅಂದೆ. ಕಂಪ್ಯೂಟರಿನಲ್ಲಿ ಡಾಟಾ ಹಾಕಿ ಚೆಕ್ ಮಾಡಿದರು. 'ಯಾವದೇ ಲಸಿಕೆಗಳ ಅಗತ್ಯವಿಲ್ಲ. ಟೈಫಾಯಿಡ್, ಕಾಲರಾ, ಮಲೇರಿಯಾ ಲಸಿಕೆಗಳನ್ನು ಹಾಕಿಸಿಕೊಳ್ಳಲು ಸಲಹೆ ನೀಡುತ್ತೇವೆ. ಬೇಕಾದರೆ ಹಾಕಿಸಿಕೊಳ್ಳಿ,' ಅಂದರು. 'ಎಷ್ಟು ರೊಕ್ಕ?' ಅಂತ ಕೇಳಿದೆ. 'ಟೈಫಾಯಿಡ್, ಕಾಲರಾ ಲಸಿಕೆ ಉಚಿತ. ಮಲೇರಿಯಾದ್ದು ದೀರ್ಘ ಕೋರ್ಸ್ ಇದೆ. ಅದಕ್ಕೆ ನೂರು ಡಾಲರ್,' ಅಂದರು. 'ನಮ್ಮ ಧಾರವಾಡ ಗುಂಗಾಡ (ಸೊಳ್ಳೆ) ಕಡಿದರೆ ಮಲೇರಿಯಾ ಬರಲಿಕ್ಕಿಲ್ಲ. ಟೈಫಾಯಿಡ್, ಕಾಲರಾ ಹಾಕಿ,' ಅಂದು ಇಂಜೆಕ್ಷನ್ ತೆಗೆದುಕೊಳ್ಳಲು ರೆಡಿ ಆದೆ. ನೋಡಿದರೆ ಮಾತ್ರೆ ಮೂಲಕ ಲಸಿಕೆ. ಅದೂ ಐದು ವರ್ಷ ಬಾಳಿಕೆ ಬರುವಂತಹದ್ದು. ಸೂಪರ್! 'ನಮ್ಮ ಕಡೆ ಚಿಕನ್ ಗುನ್ಯಾ, ಡೆಂಗ್ಯೂ ಇದೆ. ಅದಕ್ಕೆ ಲಸಿಕೆ ಇಲ್ಲವೇ ಡಾಕ್ಟರ್?' ಅಂತ ಕೇಳಿದರೆ 'ಸದ್ಯಕ್ಕೆ ಇಲ್ಲ ಮಾರಾಯ,' ಅಂದು, 'ತಲೆ ತಿನ್ನಬೇಡ. ಜಾಗ ಖಾಲಿ ಮಾಡು,' ಅನ್ನುವ ಲುಕ್ ಕೊಟ್ಟ. ಇಪ್ಪತ್ತು ಡಾಲರ್ ಫೀ ಏನು ಪುಕ್ಕಟೆ ಕೊಟ್ಟಿರುತ್ತೇವೆಯೇ!? ಹಾಗಾಗಿ ಕೊಂಚ ತಲೆ ತಿಂದು, ಕಿಚಾಯಿಸಿಯೇ ಬರಬೇಕು. ನಮ್ಮ ಇಪ್ಪತ್ತು ಡಾಲರ್, ವಿಮೆ ಕಂಪನಿ ಮತ್ತೂ ನೂರು ಡಾಲರ್ ನಮ್ಮ ಪರವಾಗಿ ಕೊಡುತ್ತದೆ. ಪುಗಸಟ್ಟೆನೇ!?

ಆಫ್ರಿಕಾದಲ್ಲಿ ಹಳದಿ ಜ್ವರದ ಲಸಿಕೆ ಲಫಡಾವನ್ನೆಲ್ಲ ಮುಗಿಸಿಕೊಂಡು ೧೯೯೬ ಅಕ್ಟೋಬರಿನಲ್ಲಿ ಒಂದು ವರ್ಷದ ಬಳಿಕ ಬೆಂಗಳೂರಿಗೆ ವಾಪಸ್ ಬಂದೆ. ನಂತರ ಇಲ್ಲಿನ ನೌಕರಿ ಸಿಕ್ಕಿತು. ಅಮೇರಿಕಾಗೆ ಬರುವ ವೀಸಾ ಇತ್ಯಾದಿಗಳ processing ನಡೆಯುತಿತ್ತು. ಮೂರ್ನಾಲ್ಕು ತಿಂಗಳ ಟೈಮ್ ಇತ್ತು. ಆಗ ಮನೆಗೆ ಬಂದವನು ಒಬ್ಬ ಖತರ್ನಾಕ್ ನೆಂಟ! ಬಂದವನೇ ಪ್ಯಾಂಟ್ ಕಳಚಿಟ್ಟವನೇ ಪೈಜಾಮಾ ಹಾಕಿದ. ಅದೂ ಹಳದಿ ಬಣ್ಣದ ಪೈಜಾಮಾ. ಹಳದಿ ಬಣ್ಣದ ಪೈಜಾಮಾ ಹಾಕಿದ್ದು ಅವನು. ಆದರೆ ಹಳದಿ ಜ್ವರ ಬಂದಿದ್ದು ಮಾತ್ರ ನಮಗೆ ಮತ್ತು ನಮ್ಮ ಮನೆ ಜನರಿಗೆ. ಅಲ್ಲಿಯವರೆಗೆ 'ಉಂಡೂ ಹೋದ. ಕೊಂಡೂ ಹೋದ' ಮಾದರಿಯ ನೆಂಟರನ್ನು ಮಾತ್ರ ನೋಡಿದ್ದೆವು. ಇವನು ಉಂಡು, ಕೊಂಡು ಹೋಗಿದ್ದೊಂದೇ ಅಲ್ಲ ತಲೆ ಕೂಡ ಪೂರ್ತಿಯಾಗಿ ತಿಂದೂ ಹೋದ. ಅವನೇ the one and the only one ಹಳದಿ ಹಾಪಾ. ಹಳದಿ ಪೈಜಾಮ ಹಾಕಿ ನಮ್ಮನ್ನೆಲ್ಲ ಅವನ ತರಲೆ ಕಾರ್ನಾಮೆಗಳಿಂದ ಹಾಪರನ್ನಾಗಿ ಮಾಡಿದವ. ಅವನ ಪೀಡೆಯಿಂದ ಮುಕ್ತಿ ದೊರೆಯಬೇಕಾದರೆ ಇಡಗುಂಜಿ ಮಹಾಗಣಪತಿಯ ಕೃಪೆಯಾಗಬೇಕಾಯಿತು. ಮುಂದೆ ಅವನು ಹಳದಿ ಹಾಪನಿಂದ ಹಳದಿ ರಾಮನೂ ಆದ. ಅದೆಲ್ಲ ಕಥೆಯನ್ನು ಹಳದಿರಾಮಾಯಣದ ಹಾಪಖಾಂಡದಲ್ಲಿ ಓದಬಹುದು. ಆ ತಮಾಷೆಗಳನ್ನೆಲ್ಲ ಮತ್ತೆ ಯಾವಾಗಲಾದರೂ ಬರೆಯೋಣ. ಇಪ್ಪತ್ತು ವರ್ಷಗಳ ಹಿಂದೆ ಆಗಿದ್ದು. ಆದರೆ ಹಳದಿ ಹಾಪನಿಂದ ಬಂದ ಹಳದಿ ಜ್ವರ ಇನ್ನೂ ಬಿಟ್ಟಿಲ್ಲ. ಹಳದಿ ಹಾಪನಿಂದ ಬರುವ ಜ್ವರಕ್ಕೆ ಮಾತ್ರ ಯಾವ ಲಸಿಕೆ ಇದ್ದ ಹಾಗಿಲ್ಲ. ಆ ಪುಣ್ಯಾತ್ಮನ ಸಹವಾಸದಿಂದ ಸಾಕಾಗಿಹೋಗಿತ್ತು. ಇವತ್ತಿಗೂ ಹಳದಿ ರಾಮ ಅಂದರೆ ಬೆಚ್ಚಿ ಬೀಳುತ್ತೇವೆ.

ನೀವು ಮಾತ್ರ ಹುಷಾರಾಗಿರಿ. ಅಫ್ರಿಕಾ ಇರಲಿ ಅಥವಾ ಬೇರೆ ಎಲ್ಲಿ ಹೋಗುತ್ತಿದ್ದರೂ ಸರಿ. ಯಾವ್ಯಾವ ಲಸಿಕೆ ಇತ್ಯಾದಿಗಳು ಕಡ್ಡಾಯವಾಗಿ ಹಾಕಿಸ್ಕೊಳ್ಳಬೇಕು ಅನ್ನುವ ಮಾಹಿತಿಯನ್ನು ಬರೋಬ್ಬರಿ ಸಂಗ್ರಹಿಸಿ, ಅವನ್ನೆಲ್ಲ ಹಾಕಿಸಿಕೊಂಡು, ಡಬಲ್ ಚೆಕ್ ಮಾಡಿಕೊಂಡೇ ವಿಮಾನ ಹತ್ತಿ. ಇಲ್ಲವಾದರೆ ಕೋರಂಟಿ ದರ್ಶನವಾದೀತು! ಜೋಕೆ!

* ಶ್ರೀಮತಿ ಸುನಂದಾ ಬೆಳಗಾಂವಕರ್ ಅವರ ಕಿರಿಯ ಸಹೋದರ ವಿಠಲ್ ಮಹಿಷಿ, ಇಪ್ಪತ್ತು ವರ್ಷಕ್ಕೆ ಹಿರಿಯನಾದರೂ, ನನ್ನ ಆತ್ಮೀಯ ಸ್ನೇಹಿತ. ಎರಡು ವರ್ಷಗಳ ಹಿಂದೆ ತೀರಿಹೋದ. ಆಗ ಬರೆದ ಲೇಖನ - ಧಾರವಾಡದ ಮಹಿಷಿ ರೋಡಿನ 'ವಿಠಲ ಮಹಿಷಿ' ಎಂಬ ಹಿರಿಯ ಮಿತ್ರನ ನೆನಪಲ್ಲಿ.... 

* ಟಾಂಜಾನಿಯಾದ ಮತ್ತೊಂದು ಅನುಭವ - ಕ್ಯಾಬರೆ, ಲೈವ್ ಬ್ಯಾಂಡ್, ಕೈಕುಲುಕಿದ್ದ ದೇಶದ ಅಧ್ಯಕ್ಷನ ಮಗ! 

Monday, January 12, 2015

ಕ್ಯಾಬರೆ, ಲೈವ್ ಬ್ಯಾಂಡ್, ಕೈಕುಲುಕಿದ್ದ ದೇಶದ ಅಧ್ಯಕ್ಷನ ಮಗ!

ಈ ಕ್ಯಾಬರೆ (Cabaret) ಅನ್ನುವದು ಮಹಾ ಡೇಂಜರ್ ಶಬ್ದ. ಅದರ ಮೂಲ ಅರ್ಥವೇ ಬದಲಾಗಿ ಹೋಗಿದೆ, at least ನಮ್ಮ ದೇಶದ ಮಟ್ಟಿಗೆ. ಪಶ್ಚಿಮದ ದೇಶಗಳಲ್ಲಿ  ಒಂದು ತರಹದ ಮನರಂಜನೆ ನೃತ್ಯ, ಸಂಗೀತ ಅಂತ ಹೇಳಿ ಹುಟ್ಟಿಕೊಂಡ ಕ್ಯಾಬರೆ ಅದು ಹೇಗೋ ಆಗಿ ನಮ್ಮಲ್ಲಿ ನಂಗಾ ನಾಚ್, ಅರ್ಧ ನಂಗಾ ನಾಚ್ ಆಗಿ ಒಂದು ತರಹ 'ನಿಷೇಧಿತ ಐಟಂ' ಆಗಿ ಬಿಟ್ಟಿದೆ. ಅದಕ್ಕೇ ಏನೋ ಗೊತ್ತಿಲ್ಲ ಈಗ ಅದಕ್ಕೆ ಐಟಂ ಸಾಂಗ್ ಅಂದು ಬಿಡುತ್ತಾರೆ.

ಕ್ಯಾಬರೆ ಅನ್ನುವದನ್ನು ಮೊದಲು ಕೇಳಿದ್ದು ಹೀಗೆ. ೧೯೭೫-೭೬ ರ ಸಮಯ. ಅದೆಲ್ಲೋ ಮಂಗಳೂರು ಬದಿಗಿನ ಸುದ್ದಿಯಂತೆ. ಯಾರೋ ಒಂದಿಷ್ಟು ಜನ ಹಿಂದುಳಿದ ವಿದ್ಯಾರ್ಥಿಗಳಿಗೆ, ಏನೋ ಮೀಸಲಾತಿ ಅಂತ ಒಂದಿಷ್ಟು ಕಾಸು, ಅದು ಯಾವದೋ ಕೋಟಾದಲ್ಲಿ, ಕೊಟ್ಟರೆ ಹೋಗಿ ಕ್ಯಾಬರೆ ನೋಡಿ ಬಂದಿದ್ದರಂತೆ. ಅದು ದೊಡ್ಡ ಸುದ್ದಿಯಾಗಿ, ಹಿರಿಯರು ಮಾತಾಡಿದ್ದು ಕೇಳಿದ್ದೇ ಕ್ಯಾಬರೆ ಅಂದರೆ  ತುಂಬಾ ಕೆಟ್ಟದ್ದು (bad very bad) ಅಂತ ಅನಿಸಿಬಿಟ್ಟಿತ್ತು.

ಆಮ್ಯಾಲೆ ಕೆಲವು ಸಿನೆಮಾಗಳಲ್ಲಿ ಬಾಲಿವುಡ್ ಹಿಂದಿ, ಸ್ಯಾಂಡಲ್ ವುಡ್ ಕನ್ನಡ ಕ್ಯಾಬರೆ ಡಾನ್ಸ್ ಎಲ್ಲ ನೋಡಿದ್ದೂ ಆಯಿತು ಬಿಡಿ. ಬಾರಿನಲ್ಲಿ, ಕ್ಲಬ್ಬಿನಲ್ಲಿ ಸಿನೆಮಾದ ಕೆಟ್ಟವರು ಅಂದ್ರೆ ವಿಲನ್ನುಗಳು ಎಣ್ಣೆ ಹೊಡೆಯುತ್ತ ಕೂತಿರುತ್ತಾರೆ. ಯಾವದೋ ಒಂದು ಹುಡುಗಿ ತುಂಡುಡುಗೆ ತೊಟ್ಟು ಬಂದು ಝಮ್ಮ ಚಕ್ಕ ಅಂತ ಕುಣಿದು, ತೊಡೆ ಹತ್ತಿ, ಪಪ್ಪಿ ಕೊಟ್ಟು, ಕೈಗೆ ಸಿಕ್ಕಂತೆ ಮಾಡಿ, ಪಸಕ್ ಅಂತ ತಪ್ಪಿಸಿಕೊಂಡು, ಏನೇನೋ ಕೆರಳಿಸಿ ಹೋದರೆ ಅದೇ ಕ್ಯಾಬರೆ. at least ಬಾಲಿವುಡ್ ಕ್ಯಾಬರೆ. ಪ್ರತಿ ಸಿನೆಮಾದಲ್ಲೂ ಒಂದು ಅಂತಹ ಹಾಡು, ನೃತ್ಯ ಇರಲೇಬೇಕು. ಅದಕ್ಕೇ ಅಂತಲೇ ಬೇರೆಯೇ ತರಹದ ನಟಿಯರು ತಯಾರಾದರು. ಕ್ಯಾಬರೆ ಡಾನ್ಸರುಗಳು. ಹೆಲೆನ್, ಬಿಂದು, ಜಯಮಾಲಿನಿ, ಜ್ಯೋತಿಲಕ್ಷ್ಮಿ, ಡಿಸ್ಕೋ ಶಾಂತಿ, ಸಿಲ್ಕ್ ಸ್ಮಿತಾ - ಎಲ್ಲ ಈ ಗುಂಪಿಗೆ ಸೇರಿದವರು. ಯಾಕೆಂದ್ರೆ ಹೀರೋಯಿನ್ನುಗಳು ಅದನ್ನೆಲ್ಲ ಆವಾಗ ಮಾಡುತ್ತಿರಲಿಲ್ಲ. ನಂತರ ಹೀರೋಯಿನ್ನುಗಳೇ ಪೈಪೋಟಿ ಮೇಲೆ ಬಿದ್ದು ಝಕ್ಕ ನಕ್ಕ ಮಾಡತೊಡಗಿದಾಗಿನಿಂದ ಕ್ಯಾಬರೆ ನರ್ತಕಿಯರು, ಹೀರೋಯಿನ್ನುಗಳ ನಡುವೆ ವ್ಯತ್ಯಾಸ ಕಡಿಮೆಯಾಗುತ್ತ ಹೋಗಿ ಈಗ ಇಲ್ಲವೇ ಇಲ್ಲ ಅನ್ನುವ ಹಾಗಾಗಿಬಿಟ್ಟಿದೆ.

ಇಷ್ಟೆಲ್ಲಾ ಆದರೂ ನಿಜವಾದ ಕ್ಯಾಬರೆ ಅನ್ನುವದರ ಸುತ್ತ ಮುತ್ತ ಸುಳಿದಿರಲಿಲ್ಲ ಬಿಡಿ. ನಮ್ಮ ಧಾರವಾಡದಲ್ಲಂತೂ ಇರಲಿಲ್ಲ. ಈಗೂ ಇಲ್ಲ. ಆ ಟೈಪಿನ ರೌಡಿ ಮನೋರಂಜನೆ ಸಭ್ಯ ಊರಾದ ಧಾರವಾಡಕ್ಕೆ ಬರಲು ಸಾಧ್ಯವೂ ಇಲ್ಲ. ಅಂತಹ ತೆವಲಿದ್ದವರು ಮುಂಬೈಗೋ, ಗೋವಾಕ್ಕೋ, ಮತ್ತೆಲ್ಲೋ ಹೋಗಿ ನೋಡಿ ಬರುತ್ತಿದ್ದರಂತೆ. ಹಾಗಂತ ಕೇಳಿದ್ದು.

೧೯೯೩ ರಲ್ಲಿ ಆರು ತಿಂಗಳು ದಿಲ್ಲಿಯಲ್ಲಿ ಇದ್ದೆ. ಫೈನಲ್ ಇಯರ್ ಇಂಜಿನಿಯರಿಂಗ್ ನಲ್ಲಿ ಒಂದು ಸೆಮಿಸ್ಟರ್ industry internship ಮಾಡಬೇಕಾಗಿತ್ತು. ನನಗೆ ದೆಹಲಿಯ ಒಂದು ಕಂಪನಿಗೆ ಹಾಕಿದ್ದರು. ದೆಹಲಿಯ posh ಏರಿಯಾ South Extension - II  ನಲ್ಲಿ ನಮ್ಮ ಒಬ್ಬ ದೋಸ್ತನ ಮನೆಯಿತ್ತು. ಅವನ ಮನೆ ಮಹಡಿ ಮೇಲೆ ಒಂದು ದೊಡ್ಡ ಹಾಲಿನ ಟೈಪ್ ರೂಮಿತ್ತು. ಅದನ್ನು ನಾವು ನಾಕು ಜನ ಭಾಡಿಗಿಗೆ ಹಿಡಿದು, ಏನೋ ಒಂದು ಬ್ಯಾಚುಲರ್ ಮನೆ ಸೆಟಪ್ ಮಾಡಿಕೊಂಡು ಇದ್ದೆವು.

ಇರಲು ರೂಮೇನೋ ಸಿಕ್ಕಿತು. ಆದರೆ ಊಟ? ಹಾಸ್ಟೆಲ್ಲಿನಲ್ಲಿ ಮೂರು ವರ್ಷ ಯಾವದೇ ತಲೆಬಿಸಿಯಿಲ್ಲದೆ ದಿನಕ್ಕೆ ನಾಕು ಬಾರಿ ಪುಷ್ಕಳ ಊಟ ತಿಂಡಿ ಮಾಡಿ ಬಂದವರಿಗೆ ಈಗ ದೆಹಲಿಯಲ್ಲಿ ನಮ್ಮ ಬಜೆಟ್ಟಿಗೆ ಹೊಂದೋ ಊಟ ಹುಡುಕಿಕೊಂಡು ಅಲೆಯೋ ಪರಿಸ್ಥಿತಿ. ರಾತ್ರಿ ಊಟ ಒಂದೇ ಅನ್ನಿ. ಬೆಳಿಗ್ಗೆ ತಿಂಡಿ, ಮಧ್ಯಾನ ಊಟ ಎಲ್ಲ ಕಂಪನಿಯಲ್ಲೇ ಮಾಡಿ ಮುಗಿಸುತ್ತಿದ್ದೆವು.

ಊಟ ಹುಡುಕಿಕೊಂಡು ಒಂದು ದಾಭಾ ಟೈಪಿನ ರೆಸ್ಟುರಾಂಟಿಗೆ ಹೋದೆವು. ಮಸ್ತ ಪಂಜಾಬಿ ದಾಭಾ ಊಟ. ಹೋಟೆಲಿನ ನೆಲಮಹಡಿಯಿಂದ ಕಿವಿಗಡಚಿಕ್ಕುವ ಅಬ್ಬರದ ಸಂಗೀತ ಕೇಳಿ ಬರುತ್ತಿತ್ತು. ಏನು ಅಂತ ಗೊತ್ತಾಗಲಿಲ್ಲ. ವೇಟರ್ ಹುಡುಗನನ್ನು  ಕರೆದು ಕೇಳಿದರೆ, 'ನಂಗಾ ನಾಚ್ ಸಾಬ್! ಕ್ಯಾಬರೆ ಸಾಬ್' ಅಂದು ಬಿಟ್ಟ. 'ದೇಖೋಗೆ ಕ್ಯಾ? ಸಿರ್ಫ್ ಸೌ ರುಪೆ. ತೀನ್ ಘಂಟಾ ಫುಲ್ ಐಶ್ ಕರೋ!' ಅಂತ ಫುಲ್ ಮಾರ್ಕೆಟಿಂಗ್ ಬೇರೆ ಮಾಡಿಬಿಟ್ಟ. ಗೊತ್ತಾಯಿತು. ಕ್ಯಾಬರೆ ನಡೆಯುತ್ತಿದೆ. ನೂರು ರೂಪಾಯಿ ಎಂಟ್ರಿ ಫೀ. ಮೂರು ಘಂಟೆ ನಾಚ್ ಗಾನಾ, ಅಂತ. 'ಏ! ಮಾರಾಯಾ! ಅದೆಲ್ಲ ಬೇಡಪ್ಪ! ಇನ್ನೂ ನಾಕು ತಂದೂರಿ ರೊಟ್ಟಿ ತಂದುಬಿಡು ರಾಜಾ' ಅಂತ ಅವನನ್ನು ಸಾಗಹಾಕೋಣ ಅನ್ನುವಷ್ಟರಲ್ಲಿ ವೇಟರ್ ಒಂದು ಸಕತ್ ಫೈನಲ್ ಮಾರ್ಕೆಟಿಂಗ್ ಬಾಂಬ್ ಹಾಕಿಬಿಟ್ಟ, 'ಸಾಬ್! ಆಖಿರ್ ಲಾಸ್ಟ್ ಮೇ ಏಕ್ ಫುಲ್ ನಂಗಾ ನಾಚ್ ಹೋತಾ ಹೈ. ಹಾಂ!' ಅಂದು ಬಿಟ್ಟ. ಈಗ ಹ್ಯಾಂ!! ಅಂತ ಬಾಯಿಬಿಟ್ಟವರು ನಾವು. ಹಲ್ಕಟ್ ವೇಟರ್ ಹ್ಯಾಗೆ ಪ್ರಚೋದಿಸಿ ಸೆಲ್ಲಿಂಗ್ ಮಾಡುತ್ತಿದ್ದ ನೋಡಿ. ಅಲ್ಲಿ ನಡೆಯುತ್ತಿದ್ದ ಕ್ಯಾಬರೆಯಲ್ಲಿ ಕಟ್ಟ ಕಡೆಗೆ ಒಂದು ಪೂರ್ಣ ನಗ್ನ ನೃತ್ಯ ನಡೆಯುತ್ತಿಂತೆ. ಅವೆಲ್ಲ ಬೇಡ ಅಂತ ಹೇಳಿ, ಊಟ ಮುಗಿಸಿ ಬಂದಾಯಿತು. ನಾವಾಗಲಿ, ಆಗ ನಮ್ಮ ಜೊತೆಯಲ್ಲಿದ್ದ ದೋಸ್ತುಗಳಾಗಲಿ ಆ ಟೈಪಿನ ಮಂದಿಯೇ ಅಲ್ಲ. ಕೆಲವರು ಚಹಾ, ಕಾಫಿ ಸಹ ಕುಡಿಯದೇ, ಬಾಲವೊಂದು ಮಾತ್ರ ಇಲ್ಲದ ಇನ್ನೂ ಪುಟ್ಟ 'ಬಾಲ'ಕರು. innocent ಹುಡುಗರು. ಅಂತವರಲ್ಲಿ ಆಗಾಗ ಜರ್ದಾ ಕವಳ, ದಿನಕ್ಕೆ ನಾಕು ಗುಟ್ಕಾ ಹಾಕಿ, ತಾಸಿಗೊಮ್ಮೆ ಚಹಾ ಕುಡಿದು, ಆರು ತಿಂಗಳಿಗೊಮ್ಮೆ ಯಾರಾದರೂ ಬಾಸು, ಸಾಹೇಬ ಎಲ್ಲೋ ಪಾರ್ಟಿಯಲ್ಲಿ ಎಣ್ಣೆ ಹೊಡೆಸಿದರೆ ಒಂದೇ ಒಂದು ಗ್ಲಾಸು ಬಿಯರ್ ಕುಡಿದು ಬರುತ್ತಿದ್ದ ನಾವೇ ದೊಡ್ಡ 'ಚಟ' ಸಾರ್ವಭೌಮರು (ನಟ ಸಾರ್ವಭೌಮ ಇದ್ದಂಗೆ). ನಾವೆಲ್ಲ ಹಾಗೆ ಭಕ್ತ ಪ್ರಲ್ಹಾದನಂತಹ ಒಳ್ಳೆ ಹುಡುಗರು ಇದ್ದಾಗ ಅಲ್ಲೆಲ್ಲೋ ತಗಡು ನೆಲಮಹಡಿಯಲ್ಲಿ ನಡೆಯುತ್ತಿದ್ದ ಕ್ಯಾಬರೆ ಗೀಬರೆ ನೋಡುವ ಪ್ರಶ್ನೆಯೇ ಇರಲಿಲ್ಲ. ಮತ್ತೆ ಮೊದಲಿಂದ ಅವೆಲ್ಲ ಕೆಟ್ಟದ್ದು, ಸಂಸ್ಕಾರವಂತರು ಹೋಗುವ ಜಾಗಗಳಲ್ಲ, ಅಲ್ಲಿ ಹೋಗುವರೆಲ್ಲ ರೌಡಿ ಮಾದರಿಯ ಜನ, ಗಲಾಟೆಗಳಾಗುತ್ತವೆ, ಲಫಡಾಗಳು ಆಗುತ್ತವೆ, ಪೊಲೀಸರು ಬರುತ್ತಾರೆ, ಅದು ಇದು ಅಂತ ಒಂದು ಟೈಪ್ ತಲೆಯಲ್ಲಿ ಕೂತು ಬಿಟ್ಟಿತ್ತಲ್ಲ? ಹಾಗಾಗಿ ಕೇವಲ ದೂರದಿಂದಲೇ ಅಬ್ಬರದ ಸಂಗೀತ ಅಷ್ಟೇ ಕೇಳಿ ಬಂದಾಯಿತು ಬಿಡಿ. ಭಾರತದಲ್ಲಿ ಕ್ಯಾಬರೆ ಹತ್ತಿರ ಹೋಗಿದ್ದು ಅಂದರೆ ಅಷ್ಟೇ.

ಮತ್ತೆ ಒಂದು ದಿವಸ ಅದೇ ಜಾಗಕ್ಕೆ ಊಟಕ್ಕೆ ಹೋದಾಗ ಪಕ್ಕದ ಟೇಬಲ್ಲಿನಲ್ಲಿ ಕೂತವ ದೊಡ್ಡ ಮೀಸೆಯ ಪೋಲೀಸ್ ಸಾಹೇಬ. ಕೆಳಗಿನ ಕ್ಯಾಬರೆಯಿಂದ ಎದ್ದು ಆಗ ಮಾತ್ರ ಮೇಲೆ ಬಂದಿದ್ದ. ಅಲ್ಲಿ ಗರ್ಮಿ ಜಾಸ್ತಿಯಾಗಿತ್ತು ಅಂತ ಕಾಣುತ್ತದೆ. ಅವನ ಟೇಬಲ್ಲಿಗೆ ಆನಿಕೊಂಡು ನಿಂತಿತ್ತು ಒಂದು ದೊಡ್ಡ ಪೋಲೀಸ್ ದಂಡಾ! ಅದರಲ್ಲಿ ಏನಾದರೂ ಬಾರಿಸಿದ ಅಂದರೆ ಅಷ್ಟೇ ಮತ್ತೆ. ಕ್ಯಾಬರೆನಲ್ಲಿ ಏನಾದರೂ ಲಫಡಾ ಆಗಿತ್ತು ಅಂತ ಬಂದಿದ್ದನೋ, ಮಾಮೂಲು ವಸೂಲಿ ಮಾಡಲು ಬಂದಿದ್ದನೋ ಗೊತ್ತಿಲ್ಲ. ಆ ಪುಣ್ಯಾತ್ಮನನ್ನು ನೋಡಿದಾಗಿಂದ ಕ್ಯಾಬರೆಗೆ ಹೋಗೋದು ದೂರ ಉಳಿಯಿತು, ನಾವು ಆ ದಾಭಾ ಕಡೆಗೂ ತಲೆ ಹಾಕಲಿಲ್ಲ. ಅದೇನೋ ಅಂತಾರಲ್ಲ, at wrong place at wrong time ಅಂತ ಇಲ್ಲದ ಲಫಡಾದಲ್ಲಿ ಸಿಕ್ಕಿ ಹಾಕ್ಕೊಳ್ಳೋ ದರ್ದು, ಅಗತ್ಯ ಯಾರಿಗೂ ಇರಲಿಲ್ಲ. ಹಾಗಾಗಿ ಕ್ಯಾಬರೆ ಮತ್ತೊಂದು ಲಫಡಾ ಇಲ್ಲದ, ಪೋಲೀಸ್ ಗೀಲೀಸ್ ಬರದ, ಫುಲ್ ಸೇಫ್ ಆದ ಬೇರೆ ದಾಭಾ ಒಂದನ್ನು ಹುಡುಕಿಕೊಂಡು ಹೋದೆವು. ಹೋಗಿದ್ದೇ ಒಳ್ಳೇದಾಯಿತು. ಸ್ವಲ್ಪ ಹಿಂದೆ ಇದ್ದ ಮಸ್ಜೀದ್ ಮೋಥ್ ಏರಿಯಾದಲ್ಲಿ ಸಾಲಾಗಿ ಸರ್ದಾರ್ಜೀ ದಾಭಾಗಳಿದ್ದವು. ಇನ್ನೂ ಒಳ್ಳೆಯ ಪಕ್ಕಾ ಪಂಜಾಬೀ ಊಟ ಮತ್ತೂ ಕಮ್ಮಿ ಬೆಲೆಯಲ್ಲಿ ಸಿಕ್ಕಿತು. ಉಳಿದ ದುಡ್ಡಲ್ಲಿ ಒಂದು ಮಲಾಯಿ, ಗುಲಾಬಿ ಹಾಕಿದ ದೊಡ್ಡ ಲಸ್ಸಿ ಕುಡಿದು, ಒಂದು ಜರ್ದಾ ಕವಳ ಹಾಕುವಷ್ಟು ಕಾಸು ಮಿಕ್ಕುತ್ತಿತ್ತು. ಇದಕ್ಕೆಲ್ಲ ಕಾರಣನಾದ ದುರುಳನಂತೆ ಕಾಣುತ್ತಿದ್ದ ದೊಡ್ಡ ಮೀಸೆ ದೆಹಲಿ ಪೊಲೀಸನಿಗೆ ಒಂದು ಸಲಾಂ! ಅವನನ್ನು ನೋಡಿ ತಾನೇ ನಾವು ಬೇರೆ ದಾಭಾ ಹುಡುಕಿದ್ದು!?

ಕ್ಯಾಬರೆಯ ಮತ್ತೊಂದು ರೂಪ ಲೈವ್ ಬ್ಯಾಂಡ್. ಲೈವ್ ಬ್ಯಾಂಡ್  ಅಂದರೆ ಏನು ಅಂತ ಕೇಳಿದ್ದೆ. ಒಳ ಹೋಗಿ ನೋಡಿರಲಿಲ್ಲ. ೧೯೯೪ -೯೫ ರ ಟೈಮಿನಲ್ಲಿ ಬೆಂಗಳೂರಿನಲ್ಲಿ ಲೈವ್ ಬ್ಯಾಂಡ್ ಹಾವಳಿಯೋ ಹಾವಳಿ. ಎಲ್ಲ ಏರಿಯಾದಲ್ಲೂ ಇರಲಿಲ್ಲ ಅಂತ ನೆನಪು. ಮೆಜೆಸ್ಟಿಕ್, ಬ್ರಿಗೇಡ್ ರೋಡ್, ಮತ್ತೆ ಕೆಲವು ಕಡೆ ಬಹಳ ಇದ್ದವು. ಒಳಗೆ ನಾಚ್, ಗಾನಾ ಎಲ್ಲ ನಡೆಯುತ್ತದೆ ಅಂತೆ. ಸಂಕ್ಷಿಪ್ತವಾಗಿ ಹೇಳಬೇಕು ಅಂದರೆ ಆಧುನಿಕ 'ಮುಜರಾ ಡಾನ್ಸ್.' ನೋಡುವವರು ನೋಡುತ್ತ, ಹಾಡುವವರ ಮೇಲೆ, ಕುಣಿಯುವವರ ಮೇಲೆ ಕಾಸು ಎಸೆಯುತ್ತ, ಒಟ್ಟಿನಲ್ಲಿ ಮಸ್ತ ಮಜಾ ಮಾಡುವ ತಾಣ ಅಂತ ಕೇಳಿಯಾಗಿತ್ತು. ಆದರೆ ಅವೆಲ್ಲ ಒಳ್ಳೆ ಸಂಸ್ಕಾರವಿದ್ದ ಮಂದಿ ಹೋಗುವಂತಹ ಜಾಗ ಅಲ್ಲವೇ ಅಲ್ಲ ಅಂತ ಬೇರೆ ತಲೆಯಲ್ಲಿ ಇತ್ತಲ್ಲ? ಮತ್ತೆ ಆಗಾಗ್ಗೆ ಲೈವ್ ಬ್ಯಾಂಡ್ ಎಂಬ ತಾಣಗಳು ಸುದ್ದಿಯಲ್ಲಿ ಬರುತ್ತಿದ್ದವು - for wrong reasons. ರೌಡಿಗಳ ಕಾಳಗ, ಪೋಲೀಸ್ ರೈಡ್, ಹೊಡೆದಾಟ, ಬಡಿದಾಟ ಇತ್ಯಾದಿ ಸಹ ಅಲ್ಲೇ ಆಗುತ್ತಿದ್ದವು. ಆಗಿನ್ನೂ ರವಿ ಬೆಳಗೆರೆಯವರ 'ಹಾಯ್ ಬೆಂಗಳೂರ್' ಪತ್ರಿಕೆ ಬಂದಿರಲಿಲ್ಲ. ಅವರು ಆಗ 'ಕರ್ಮವೀರ' ಪತ್ರಿಕೆ ಸಂಪಾದಕರಾಗಿದ್ದರು. 'ಪಾಪಿಗಳ ಲೋಕದಲ್ಲಿ' ಅಂತ ಬೆಂಗಳೂರು ಅಂಡರ್ವರ್ಲ್ಡ್ ಬಗ್ಗೆ ಒಂದು ರೋಚಕ ಅಂಕಣ ಬರೆಯುತ್ತಿದ್ದರು. ನಿಜವಾದ ರೌಡಿಗಳನ್ನು ಮತ್ತು ಇನ್ನಿತರೇ ಕ್ರಿಮಿನಲ್ಲುಗಳನ್ನು ಸಂದರ್ಶಿಸಿ  ಭೂಗತ ಜಗತ್ತಿನ ನೈಜ ಚಿತ್ರಣ ಕಟ್ಟಿಕೊಡುತ್ತಿದ್ದರು. ಅದನ್ನು ಓದಿಯೇ ಬೆಂಗಳೂರು ಅಂಡರ್ವರ್ಲ್ಡ್ ಪರಿಚಯ ಆಗತೊಡಗಿದ್ದು. ಅದರಲ್ಲೆಲ್ಲೋ ಒಂದು ಸಲ ಲೈವ್ ಬ್ಯಾಂಡ್ ಬಗ್ಗೆ ಬರೆದು, ಅಲ್ಲಿನ ಅಂಡರ್ವರ್ಲ್ಡ್ ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದರು ರವಿ ಬೆಳಗೆರೆ. ಎಲ್ಲ ಓದಿದ ಮೇಲೆ ಅನಿಸಿದ್ದು, 'ಇದರ ಸಹವಾಸ ಬ್ಯಾಡಪ್ಪೋ ಬ್ಯಾಡ! ದೊಡ್ಡ ನಮಸ್ಕಾರ' ಅಂತ. ಹಲವಾರು ಬಗೆಯ ಕುತೂಹಲಗಳು ಇರುತ್ತವೆ. ಹಾಗಂತ ಎಲ್ಲವನ್ನೂ ಟ್ರೈ ಮಾಡುತ್ತ ಹೋಗಲು ಆಗುತ್ತದೆಯೇ?

ಮತ್ತೆ ಆ ಕಾಲದಲ್ಲಿ ಬೆಂಗಳೂರಲ್ಲಿ ಇದ್ದ ನಾಕಾರು ಮಿತ್ರರೂ ಸಹ ಎಲ್ಲ 'ಶಾಂತಿ ಸಾಗರ್' ಟೈಪಿನ ವೆಜಿಟೇರಿಯನ್ ಗಿರಾಕಿಗಳೇ. ಯಾರಿಗೂ  ಲೈವ್ ಬ್ಯಾಂಡ್ ಇತ್ಯಾದಿ ಮಳ್ಳು ಇರಲಿಲ್ಲ. ವಾರಕ್ಕೆ ಐದು ದಿವಸ ಕೆಲಸ. ವಾರಾಂತ್ಯದಲ್ಲಿ ಎಲ್ಲೋ ಹೊರಗೆ ಊಟ, ಸಿನಿಮಾ, ಹೆಚ್ಚೆಂದರೆ ಸ್ಯಾಂಕಿ ಟ್ಯಾಂಕ್, ಬೋಟಿಂಗ್ ಅಂತ ಸಣ್ಣ ಪಿಕಿನಿಕ್. ಅಷ್ಟೇ ವೀಕ್ ಎಂಡ್ ಉಸಾಬರಿ.

ಲೈವ್ ಬ್ಯಾಂಡ್ ಅಂದರೆ ಏನು ಅಂತ ನೋಡುವ 'ಸೌಭಾಗ್ಯ' ಒದಗಿ ಬಂದಿದ್ದು ೧೯೯೫ ಅಕ್ಟೋಬರ್ ನಲ್ಲಿ ಒಂದು ವರ್ಷ ಪೂರ್ವ ಆಫ್ರಿಕಾದ ಟಾಂಜಾನಿಯಾಕ್ಕೆ ಹೋಗಿ, ರಾಜಧಾನಿ ದಾರ್-ಏ-ಸಲಾಂ ನಲ್ಲಿ ಝೇಂಡಾ ಹೊಡೆದು ಕೂತಾಗ. ಅಲ್ಲೂ ನಮ್ಮದು ಸರಳ ಲೈಫೇ ಆಗಿತ್ತು. ಆಫೀಸ್ ಮೇಲೆಯೇ ಮನೆ. ಊಟ ತಿಂಡಿಗೆ ಮನೆ ಹತ್ತಿರದ ಹೋಟೆಲ್ಲುಗಳು. ಕಾರ್ ಗೀರ್ ನಮ್ಮ ನೌಕರಿ ಗ್ರೇಡಿಗೆ ಇರಲಿಲ್ಲ. ಕೆಲವೊಂದು ಸಾಯಂಕಾಲ, ವಾರಾಂತ್ಯದಲ್ಲಿ ಸೀನಿಯರ್ ಜನ ಹೊರಗೆ ಹೋಗುವಾಗ ನಮ್ಮನ್ನೂ ಕರೆದೊಯ್ಯುತ್ತಿದ್ದರು. ಇನ್ನೂ ಬೇಕು ಅಂದರೆ ಕಂಪನಿ ಕಾರು, ಡ್ರೈವರ್ ಮೊದಲೇ ಬುಕ್ ಮಾಡಿಕೊಂಡು ಅಡ್ಯಾಡಿ ಬರಬಹುದಿತ್ತು. ಮತ್ತೆ ಸಿಟಿ ಮಧ್ಯೆ ಇದ್ದು, ಸುತ್ತ ಮುತ್ತ ಸೇಫ್ ಇದ್ದಿದ್ದರಿಂದ ಎಲ್ಲ ಕಡೆ ನಟರಾಜಾ ಸರ್ವೀಸ್ ನಲ್ಲೇ ನಮ್ಮ ಸವಾರಿ. ಅಂದರೆ ಕಾಲ್ನಡಿಗೆಯಲ್ಲಿಯೇ ಸುತ್ತಾಟ.

ಅದೆಂದೋ ಒಂದು ದಿವಸ ಒಬ್ಬರಿಗೆ ಬಿಳ್ಕೊಡುಗೆ (farewell party) ಸಮಾರಂಭವಿತ್ತು. ಬಹಳ ವರ್ಷ ಆಫ್ರಿಕಾದಲ್ಲಿದ್ದ ಅವರು ಪರ್ಮನೆಂಟ್ ಆಗಿ ಭಾರತಕ್ಕೆ ವಾಪಸ್ ಹೋಗುತ್ತಿದ್ದರು. ಒಂದು ಇಪ್ಪತ್ತು ಜನ ಕೂಡಿ ಅವರನ್ನು ರಾತ್ರಿ ಡಿನ್ನರ್ ಗೆ ಕರೆದುಕೊಂಡು ಹೋಗಿದ್ದು ಟಾಂಜಾನಿಯಾದ ರಾಜಧಾನಿ ದಾರ್-ಏ-ಸಲಾಂ ನಲ್ಲಿದ್ದ 'Son Afrique' ಅನ್ನುವ ಲೈವ್ ಬ್ಯಾಂಡ್ ಒಂದಕ್ಕೆ. ಗುಂಪಿನಲ್ಲಿ ಗೋವಿಂದ ಅಂತ ನಾವೂ ಹೋಗಿದ್ದೆವು. ಅದೇ ಲೈವ್ ಬ್ಯಾಂಡಿಗೆ ಮೊದಲ ಭೇಟಿ. ಹೋದ ಮೇಲೆ ಅದು ಲೈವ್ ಬ್ಯಾಂಡ್ ಅಂತ ಗೊತ್ತಾಯಿತು. ಖರೆ ಅಂದರೆ ಒಳಗೆ ನಾಚ್ ಗಾನಾ ಶುರು ಆದ ಮೇಲೆ ಗೊತ್ತಾಯಿತು, 'ಓಹೋ! ಇದು ಲೈವ್ ಬ್ಯಾಂಡ್' ಅಂತ. ಇಂಡಿಯಾದ ಲೈವ್ ಬ್ಯಾಂಡ್ ಗಳ ಕುಖ್ಯಾತಿ ನೆನಪಾಗಿ ಒಮ್ಮೆ ಅಳುಕುಂಟಾಯಿತು. ಎದೆ ಢವ ಢವ ಅಂತು. ಆದರೇನು ನಮ್ಮ ಕಂಪನಿಯ ಘಟಾನುಘಟಿಗಳೇ ಎಲ್ಲ ಅಲ್ಲೇ ಇದ್ದರು. ದೊಡ್ಡ ದೊಡ್ಡ ಬಾಸುಗಳೇ ಇದ್ದರು. ಏನಾದರೂ ಹೆಚ್ಚು ಕಮ್ಮಿ ಆದರೆ ಅವರೆಲ್ಲ ಇದ್ದಾರೆ ಅಂತ ಧೈರ್ಯ ತಂದುಕೊಂಡಿದ್ದು ಆಯಿತು ಅನ್ನಿ. ಮತ್ತೆ ನಾವು ಸ್ವಲ್ಪ ಹೆಚ್ಚಿನ ಕಾಳಜಿಯಲ್ಲೇ ಇದ್ದೆವು. ಮತ್ತೆ ಅಲ್ಲಿದ್ದ ಜನರೆಲ್ಲ ತುಂಬ ಡೀಸೆಂಟ್ ಅನ್ನಿಸುವಂತವರೇ ಇದ್ದರು. ಯಾರೂ ರೌಡಿಗಳ ಹಾಗೆ ಕಾಣಲಿಲ್ಲ. ಯಾರ ಬೆನ್ನ ಹಿಂದೆಯೂ ಲಾಂಗು, ಮಚ್ಚು ಕಾಣಲಿಲ್ಲ. ಮುಖ್ಯವಾಗಿ ಎಲ್ಲರೂ ಭಾರತ, ಪಾಕಿಸ್ತಾನ ಮೂಲದವರೇ ಇದ್ದರು. ಪೂರ್ವ ಆಫ್ರಿಕಾದ ವಾಣಿಜ್ಯ ವ್ಯವಹಾರ ಎಲ್ಲ ಇರುವದು ನಮ್ಮವರ ಕೈಯಲ್ಲೇ ನೋಡಿ.

ರಾತ್ರಿ ಒಂಬತ್ತರ ಮೇಲೆ ನಾಚ್ ಗಾನಾ ಶುರು ಆಯಿತು. ಮೊದಲು ಒಂದಿಷ್ಟು ಗಾನಾ ಅಷ್ಟೇ. ಒಳ್ಳೊಳ್ಳೆ ಗಾಯಕಿಯರಿದ್ದರು. ಇದ್ದ ಸಣ್ಣ ಸೆಟಪ್ ಉಪಯೋಗಿಸಿಕೊಂಡೇ ಒಳ್ಳೊಳ್ಳೆ ಹಿಂದಿ ಹಾಡು ಹಾಡಿದರು. ಕೆಲ ಗಿರಾಕಿಗಳು ಸರ್ವ ಮಾಡುತ್ತಿದ್ದ ವೇಟರುಗಳ ಕೈಯಲ್ಲಿ ತಮ್ಮ ತಮ್ಮ ಫೇವರಿಟ್ ಹಾಡುಗಳನ್ನು ಚೀಟಿಯಲ್ಲಿ ಬರೆದು ಕಳಿಸುತ್ತಿದ್ದರು. ಗಾಯಕಿಯರು ಸಂದರ್ಭಾನುಸಾರ ಅವನ್ನು ಹಾಡುತ್ತಿದ್ದರು. ನಮಗೂ ಇಲ್ಲದ ತಿಮಿರು ನೋಡಿ. ನಾನೂ ಒಂದು ಚೀಟಿ ಬರೆದು, ವೈಟರ್ ಕೈಯಲ್ಲಿ ಇಟ್ಟೆ. ವೈಟರ್ ಹಿಂದೆ ಮುಂದೆ ಮಕಮಕ ನೋಡಿದ. ನನ್ನ ಬಾಸ್ ಅವನ ಕೈಯಲ್ಲಿ ಒಂದಿಷ್ಟು ಕಾಸು ತುರುಕಿದ. ಅದು ಪದ್ಧತಿಯಂತೆ. 'ಅಯ್ಯೋ, ನಮ್ಮ ಬಡ್ಡು ತಲೆಯೇ!' ಅಂದುಕೊಂಡೆ.ಎಲ್ಲ ಕಡೆ ಹಾಗೆಯೇ. 'ಕಾಸಿದ್ದವನೇ ಬಾಸು'. ಕಾಸು ಕೊಟ್ಟು ಕಳಿಸಿದ್ದಕ್ಕೆ ನಮ್ಮ ಗಾನಾ ಕೂಡ ಹಾಡಿದರು. ನಮಗೂ ಸಿಕ್ಕಾಪಟ್ಟೆ ಖುಶಿ. ಬಾಸ್ ನೋಡಿ, 'ಹ್ಯಾಂಗೆ??' ಅನ್ನೋ ಲುಕ್ ಕೊಟ್ಟ. 'ಸೂಪರ್ ಬಾಸು,' ಅನ್ನೋ ಲುಕ್ ಕೊಟ್ಟೆ.

ಸುಮಾರು ರಾತ್ರಿ ಒಂಬತ್ತೂವರೆ ಹತ್ತು ಘಂಟೆ ನಂತರ ವಾತಾವರಣ ರಂಗೇರತೊಡಗಿತು. ನೋಡಿದರೇ ದೊಡ್ಡ ದೊಡ್ಡ ಬಿಸಿನೆಸ್ ಕುಳಗಳು ಅಂತ ಗೊತ್ತಾಗುವಂತಿದ್ದ ಮಣಗಟ್ಟಲೆ ಬಂಗಾರ ಧರಿಸಿದ್ದ ಜನರು ಬರತೊಡಗಿದರು. ಅವರಿಗೇನು ವಿಶೇಷ ಸ್ವಾಗತವೋ ಸ್ವಾಗತ! ಯಾಕೆ ಅಂತ ನಂತರ ಗೊತ್ತಾಯಿತು. ಯಾಕೆಂದರೆ ಅವರು ರೊಕ್ಕದ ಮಳೆ ಸುರಿಸುವಂತಹ ಗಿರಾಕಿಗಳು. ನಮ್ಮಂತಹ ಅಬ್ಬೆಪಾರಿಗಳಲ್ಲ.

ಈಗ ಲೈವ್ ಬ್ಯಾಂಡ್ ಮಾಹೋಲೇ ಪೂರ್ತಿ ಬದಲಾಗಿ ಹೋಯಿತು. ನಾನು ಅಷ್ಟಾಗಿ ಗಮನಿಸಿರಲಿಲ್ಲ. ಹಿಂದೆ ಊಟದ ಬಫೆ ಹತ್ತಿರ ಒಂದಿಬ್ಬರು ಸ್ವಲ್ಪ ಜಾಸ್ತಿಯೇ ಅನ್ನುವಷ್ಟು ಮೇಕ್ಅಪ್ ಮಾಡಿಕೊಂಡಿದ್ದ ಹುಡುಗಿಯರು ಓಡಾಡಿಕೊಂಡಿದ್ದರು. ಅವರೇ ನರ್ತಕಿಯರು ಅಂತ ಆಮೇಲೆ ಗೊತ್ತಾಯಿತು.

ಈಗ ಎಲ್ಲ ದೊಡ್ಡ ಜನ ಬಂದು ಕೂತರಲ್ಲ? ಬೇರೆ ತರಹದ ಮ್ಯೂಸಿಕ್ ಅಂದರೆ ಡಾನ್ಸ್ ಮಾಡಲು ಬರೋಬ್ಬರಿ ಆಗುವಂತಹ ಮ್ಯೂಸಿಕ್ ಶುರುವಾಯಿತು. ಕೆಲವೊಂದು ಲೈವ್ ಹಾಡಿದರೆ, ಕೆಲವೊಂದು ರೆಕಾರ್ಡೆಡ್. ನಮ್ಮಂತ ಆರ್ಡಿನರಿ ಕಸ್ಟಮರ್ ಹಾಡು ಬರೆದು, ಚೀಟಿ ಕೊಟ್ಟರೆ, ವೇಟರ್ ನಕ್ಕು ನಮ್ಮ ಬಾಸ್ ಮುಖ ನೋಡಿದ. ಬಾಸ್, 'ಈಗ ನಿನ್ನಂತವರ ಆಪ್ ಕಿ ಫರ್ಮಾಯಿಶ್ (ಬೇಡಿಕೆ ಹಾಡು) ಮುಗಿಯಿತು. ಈಗ ಏನಿದ್ದರೂ ನೋಟುಗಳ ಮಾಲೆ ಹಾಕುವವರಿಗೆ ಯಾವದು ಬೇಕು ಅದು. ನೋಡ್ತಾ ಇರು,' ಅಂದು ಮುಗುಳ್ನಕ್ಕ. ಮುಂದೆ ಅರ್ಥವಾಯಿತು.

ಇದ್ದ ಸಣ್ಣ ಸ್ಟೇಜ್ ಮೇಲೇ ಇಬ್ಬರು ನರ್ತಕಿಯರು ಬಂದು ಢಂ ಢಂ ಅಂತ ಕುಣಿಯಲು ಶುರು ಮಾಡೇ ಬಿಟ್ಟರು. ಮುಂದಿನ ಟೇಬಲ್ ನಲ್ಲಿ ಕುಳಿತಿದ್ದ ಒಬ್ಬ ಗಿರಾಕಿ ಸಹ ಎದ್ದು ಕುಣಿಯಲು ಶುರು ಮಾಡಿಬಿಟ್ಟ. ಉಳಿದವರು ಅವನನ್ನು ಬಲವಂತ ಮಾಡಿ ಕೂಡಿಸಿದರು. ಆದರೂ ಕೂತಲ್ಲೇ ಕುಣಿಯುತ್ತಿದ್ದ. 'ಅವನಿಗೆ ಸ್ವಲ್ಪ ಜಾಸ್ತಿಯಾಗಿದೆ,' ಅಂದರು. ಏನು ಜಾಸ್ತಿಯಾಗಿತ್ತೋ? ದೇವರಿಗೇ ಗೊತ್ತು.

ಢಂ ಢಂ ಡಾನ್ಸ್ ಮುಗಿದು ಒಂದು semi classical ಅನ್ನುವಂತಹ ಹಾಡು ಶುರುವಾಯಿತು. ಪುರಾತನ ನರ್ತಕಿಯರ ತರಹ ವೇಷ ಹಾಕಿಕೊಂಡಿದ್ದ ಇನ್ನೊಬ್ಬಾಕೆ ಬಂದಳು. ಈಗ ಈಕೆಯ ಶಾಸ್ತ್ರೀಯ ನೃತ್ಯ. ಏನೋ ಒಂದು ತರಹ ಮಾಡಿದಳು. ನಡುವೆ ಊಟದ ತಟ್ಟೆ ಅಂತದ್ದು ಏನೋ ತಂದಿಟ್ಟುಕೊಂಡು ಅದರಲ್ಲೂ ಏನೋ ಕಸರತ್ತು ಮಾಡಿದಳು. ಆಕೆ ತಲೆ ಮೇಲೆ ಒಂದರ ಮೇಲೆ ಒಂದರ ಹಾಗೆ ಕೊಡಗಳನ್ನು ಇಟ್ಟುಕೊಂಡು ಮಾಡುವ ನೃತ್ಯ, ದೀಪ ನೃತ್ಯ ಇತ್ಯಾದಿ ಎಲ್ಲ ಮಾಡುತ್ತಾಳಂತೆ. ಹಾಗಂತ ಆಕೆಯ ಮೊದಲಿನ performance ನೋಡಿದವರು ಹೇಳಿದರು. ನಮಗೇನು ಗೊತ್ತು? ಹೂಂ! ಅಂತ ಗೋಣಾಡಿಸಿ ಸುಮ್ಮನಾದೆವು.

ಮತ್ತೆ ಫಾಸ್ಟ್ ಮ್ಯೂಸಿಕ್. ಈ ಸಲ ಒಬ್ಬಳು ಪಟಾಕಾ ಫಿಗರ್ ಬಂದು 'ಮೆಹಬೂಬಾ, ಮೆಹಬೂಬಾ' ಎಂಬ 'ಶೋಲೆ' ಸಿನೆಮಾದ ತುಂಬಾ ಪ್ರಖ್ಯಾತ ಹಾಡಿಗೆ ಥೇಟ್ ಹೆಲೆನ್ ತರಹ ಡಾನ್ಸ್ ಮಾಡಿದಳು. ವ್ಯತ್ಯಾಸ ಅಂದರೆ ಈಕೆ ಸ್ವಲ್ಪ ಜಾಸ್ತಿ ಬಟ್ಟೆ ಹಾಕಿಕೊಂಡಿದ್ದಳು. ಈಗ ನೋಟಿನ ಸುರಿಮಳೆ ಆಯಿತು. ಒಂದಿಬ್ಬರು ಎದ್ದು ಬಂದು ನೋಟಿನ ಮಾಲೆ ಹಾಕಿದರು. ಮತ್ತೊಬ್ಬ ಪರ್!ಪರ್! ಅಂತ ನೋಟ್ ಉದುರಿಸಿದ. ಕೆಲವರು ಸಿಳ್ಳೆ ಹೊಡೆದರು. ಕೆಲವರು ಚಪ್ಪಾಳೆ ಹೊಡೆದರು. ನಮ್ಮಂತವರು ಡಾನ್ಸ್ ನೋಡುತ್ತ ಊಟ ಹೊಡೆದರು. ಇನ್ನೂ ನಮ್ಮ ಊಟ ಮುಗಿದಿರಲಿಲ್ಲ. ಬಫೆ ಅಂದ ಮೇಲೆ ಹಾಗೆ ಅಷ್ಟು ಬೇಗ ಊಟ ಮುಗಿಸಿಬಿಟ್ಟರೆ ಕೊಟ್ಟ ರೊಕ್ಕಕ್ಕೆ ತುಂಬಾ ಲಾಸು. ಅಲ್ಲವೇ????

ಸುಮಾರು ರಾತ್ರಿ ಒಂದು ಘಂಟೆಗೆ ಮುಗಿಯಿತು. ಎದ್ದು ಮನೆಗೆ ಬಂದು ಮಲಗಿದರೆ ಈಗ ಮಾತ್ರ ನೋಡಿಬಂದ ಲೈವ್ ಬ್ಯಾಂಡಿನದೇ ಗುಂಗು. ರಂಗು ರಂಗಾದ ಗುಂಗು!

'ಅರ್ರೇ! ನಮ್ಮ ದೇಶದಲ್ಲಿ ಲೈವ್ ಬ್ಯಾಂಡ್ ಅಂದರೆ ಏನೋ ಭಾಳ ದೊಡ್ಡ ಡೇಂಜರ್ ಅಂತ ತಿಳಿದಿದ್ದರೆ ಇಲ್ಲಿ ಎಲ್ಲ ಸೇಫಾಗಿ ಇರೋ ಹಾಗಿದೆ. ನಿನ್ನೆ ಅಲ್ಲಿ ಬಂದ ಜನರೆಲ್ಲ ತುಂಬಾ decent ಆಗಿದ್ದರು. ಕೆಲವರ ಜೊತೆಗೆ ಅವರ ಪತ್ನಿಯರೋ ಯಾರೋ ಹೆಂಗಸರೂ ಸಹ ಇದ್ದರು. ನಾಚ್ ಗಾನಾ ಬಿಟ್ಟರೆ ಏನೂ ಆಗಲಿಲ್ಲ. ಡಾನ್ಸ್ ಇದ್ದರೂ ಅಶ್ಲೀಲ ಅನ್ನುವ ಹಾಗೆ ಏನೂ ಇರಲಿಲ್ಲ. ಹೀಗಿದ್ದಾಗ ಆಗಾಗ ಹೋಗಲಿಕ್ಕೆ ಅಡ್ಡಿಯಿಲ್ಲ. ಎಷ್ಟೋ ಶಿಲ್ಲಿಂಗ್ ಅಂತ ಒಂದು ಎಂಟ್ರಿ ಫೀ ಕೊಟ್ಟರೆ ಆಯಿತು. ಫ್ರೀ ಊಟ ಅದರಲ್ಲೇ ಸೇರಿದೆ. ಎಣ್ಣೆ ಬೇಕಾದರೆ ಎಕ್ಸಟ್ರಾ. ಎಣ್ಣೆ ಏನೂ ಬೇಡ. ಬೇಕಾದರೆ ಮೊದಲೇ ಒಂಚೂರು, ಹೊರಗೆ ರೆಗ್ಯುಲರ್  ರೇಟಿನಲ್ಲೇ ಸಿಗುವ ಎಣ್ಣೆ ಹಾಕ್ಕೊಂಡು ಹೋದರಾಯಿತು. ಒಳಗೆ ಬೇಕಾದ ಹಾಡು ಕೇಳಬೇಕು ಅಂದರೆ ಕಾಸು ಬಿಚ್ಚಬೇಕು. ಹೋಗುವ ನಾಲ್ಕಾರು ಗೆಳೆಯರು ಶೇರ್ ಮಾಡಿಕೊಂಡರೆ ಒಂದು ಹತ್ತು ಹಾಡಾದರೂ ಕೇಳಬಹದು. ನಂತರ ರಾತ್ರಿ ರಂಗೇರಿದಂತೆ ದೊಡ್ಡ ಕುಳಗಳು ಬರುತ್ತಾರೆ. ನಂತರ ಅವರು ದುಡ್ಡು ಸುರಿದು ತಮಗೆ ಬೇಕಾದ ಹಾಡು, ಡಾನ್ಸ್ ಮಾಡಿಸುತ್ತಾರೆ. ನಾವೂ ನೋಡಿ ಎದ್ದು ಬಂದರಾಯಿತು,' ಅಂತೆಲ್ಲ ಸ್ಕೀಮ್ ಹಾಕಿದ್ದಾಯಿತು.

ಇಷ್ಟೆಲ್ಲಾ ಸ್ಕೀಮ್ ಹಾಕಿದ ಮೇಲೆ ಮುಂದಿನ ಶನಿವಾರ ಬರುವದನ್ನ ಕಾಯುವದೇ ದೊಡ್ಡ ಕೆಲಸವಾಯಿತು. ಲೈವ್ ಬ್ಯಾಂಡ್ ಏನೋ ದಿನ ರಾತ್ರಿಯೂ ಇರುತ್ತದೆ. ಆದರೆ ನಮಗೆ ಬೆಳಿಗ್ಗೆ ಬೇಗ ಏಳಲು ಮೊದಲೇ ಆಗುವದಿಲ್ಲ. ಒಂಬತ್ತಕ್ಕೆ ಆಫೀಸ್ ನಲ್ಲಿ ಇರಬೇಕು. ಹೀಗಾಗಿ ವಾರದ ದಿನದ ರಾತ್ರೆ ಲೈವ್ ಬ್ಯಾಂಡ್ ನಲ್ಲಿ ಹೋಗಿ ಕೂಡುವದು ಅಸಾಧ್ಯ. ಮತ್ತೆ ನಮ್ಮದೇ ಆದ ರೀತಿ ರಿವಾಜು ಸಹಿತ ಇದ್ದವಲ್ಲ? ಏನೇ ಪಾರ್ಟಿ ಮಾಡಿದರೂ ಅವೆಲ್ಲ ಕೇವಲ್ ವೀಕ್ ಎಂಡ್ ನಲ್ಲಿ ಮಾತ್ರ, ಇತ್ಯಾದಿ. ಮತ್ತೆ ಕೆಲಸ ವಾರಕ್ಕೆ ಆರು ದಿವಸ. ಶನಿವಾರ ಹಾಫ್ ಡೇ. ಹಾಗಾಗಿ ಹೋದರೆ ಶನಿವಾರ ಸಂಜೆ ಹೋಗಬಹುದು. ಅಷ್ಟೇ. ಬೇರೆ ದಿನ ರಾತ್ರಿ ಮನೆಯಲ್ಲೇ ಟೀವಿ!

ಶನಿವಾರ ಬಂದಂತೆ ನಮಗೆ ಹುರುಪು ಹೆಚ್ಚಾದರೆ ಉಳಿದ ಕೆಲವರಿಗೆ ಅಷ್ಟೇನೂ ಆಸಕ್ತಿಯಿರಲಿಲ್ಲ. ಕೆಲವರು ಮನೆಯಲ್ಲಿದ್ದು ಟೀವಿ ನೋಡೋಣ ಅಂದುಕೊಂಡರು. ಇನ್ನು ಕೆಲವರು 'ಸುಸ್ತು, ಬೇಗ ಮಲಗತೀವಿ' ಅಂದರು. ಇನ್ನು ಕೆಲವರು, 'ನಮಗೆ ಎಣ್ಣೆ ಪಾರ್ಟಿ ಮಾಡಬೇಕಿದೆ. ದಬಾಯಿಸಿ ಎಣ್ಣೆ ಹಾಕೋದಿದೆ. ಹಾಗಾಗಿ ಅದಕ್ಕೆ ಮನೆಯೇ ಬೆಸ್ಟ್,' ಅಂದು ಬಿಟ್ಟರು. ಕಡೆಗೆ ಲೈವ್ ಬ್ಯಾಂಡ್ ಹೋಗಲಿಕ್ಕೆ ರೆಡಿ ಆದವರು ಇಬ್ಬರೋ ಮೂವರೋ ಅಷ್ಟೇ.

ಹೀಗೆ ಆಗಾಗ ಲೈವ್ ಬ್ಯಾಂಡಿಗೆ ಹೋಗಿ ಬಂದದ್ದಾಯಿತು. ಎಷ್ಟೇ ಮಾಡಿದರೂ ನಮಗೆ ಅತೀ ಮುಂದಿನ ಟೇಬಲ್ ಮಾತ್ರ ಎಂದೂ ಕೊಡಲಿಲ್ಲ. ಅದು always reserved for big rollers. ಮೊದಲೇ ಫೋನ್ ಮಾಡಿದರೆ ಬೇರೆ ಹತ್ತಿರದ ಟೇಬಲ್ ಸಿಗುತ್ತಿತ್ತೆ ವಿನಾ ಫಸ್ಟ್ ಟೇಬಲ್ ಎಂದೂ ಸಿಗುತ್ತಿರಲಿಲ್ಲ. ಯಾಕೆಂದರೆ ನಾವು ರೊಕ್ಕದ ಮಳೆ ಎಂದೂ ಸುರಿಸಲಿಲ್ಲ. ಅಲ್ಲರೀ, ಅಷ್ಟು ದೂರದ ದೇಶಕ್ಕೆ ಹೋಗಿದ್ದೇ ಆದಷ್ಟು ರೊಕ್ಕಾ ಮಾಡಿಕೊಂಡು ಬರಲಿಕ್ಕೆ ಅಂತ. ಅಂತಾದ್ರಲ್ಲಿ ಉಳಿಸಿದ ರೊಕ್ಕಾ ಲೈವ್ ಬ್ಯಾಂಡ್ ಡ್ಯಾನ್ಸರ್ ತಲೆ ಮೇಲೆ ಸುರಿಯಲು ನಮಗೇನು ಹುಚ್ಚೆ? ಲೆಕ್ಕ ಇಟ್ಟು, ಒಂದೋ ಎರಡೋ ಹಾಡಿನ ಬೇಡಿಕೆ ಜೊತೆಗೆ ಟಿಪ್ ತರಹ ಇರಲಿ ಅಂತ ಮಿನಿಮಂ ರೊಕ್ಕಾ ಇಟ್ಟು ಕಳಿಸಬೇಕಾದರೇ ನಮಗೆ ಸಿಕ್ಕಾಪಟ್ಟೆ ಹಿಂಸೆಯಾಗುತ್ತಿತ್ತು. ಇನ್ನು ರೊಕ್ಕಾ ಉಡಾಯಿಸುವ ಮಾತೆಲ್ಲ ದೂರ ಉಳಿತು ಬಿಡಿ. ಲೈವ್ ಬ್ಯಾಂಡ್ ನಲ್ಲಿ ಎಣ್ಣೆ ರೇಟ್ ಜಾಸ್ತಿ ಅಂತ ಅಲ್ಲಿ ಎಣ್ಣೆನೇ ಹಾಕದವರು ನಾವು. ಇಂತಾ ಕೆಲವು ಉಪಯೋಗವಿಲ್ಲದ ವಿಷಯಗಳಲ್ಲಿ ಶೆಟ್ಟಿ ಮಂದಿಗಿಂತ ದೊಡ್ಡ ಜಿಪುಣ ಶೆಟ್ಟಿ ನಾವು.

ಒಂದು ತಿಂಗಳು ಆಕಡೆ ಹೋಗಿರಲಿಲ್ಲ. ಮತ್ತೊಮ್ಮೆ ಹೋದಾಗ ಪೂರ್ತಿ ಬೇರೆ ಗುಂಪು ಇತ್ತು. ಹಾಡುವವರು, ಕುಣಿಯುವವರು ಎಲ್ಲ ಬೇರೆ. ಅದೇನೋ ಎರಡೋ ಮೂರೋ ತಿಂಗಳ ವೀಸಾ ಮೇಲೆ ಇಂಡಿಯಾದಿಂದ ಬಂದಿರುತ್ತಾರಂತೆ. ಅವರ ವೀಸಾ ಮುಗಿದು ಪಕ್ಕದ ದೇಶ ಕೀನ್ಯಾಕ್ಕೋ, ಉಗಾಂಡಕ್ಕೋ ಹೋದರಂತೆ. ಹಾಗಾಗಿ ಹೊಸ ಟೀಮ್ ಬಂದಿತ್ತು.

ಹೊಸ ಟೀಮ್. ಹೊಸ ಜನ. ಬಹಳ ಏನೂ ವ್ಯತ್ಯಾಸ ಇರಲಿಲ್ಲ. ಎಲ್ಲ ಸೇಮ್ ಸೇಮ್. 'ಈಗ ಡಾನ್ಸ್ ಮಾಡುವವರ ನಖರಾ ಜಾಸ್ತಿ' ಹಾಗಂತ ದೊಡ್ಡ ರೊಕ್ಕದ ಕುಳಗಳು ಮಾತಾಡುವದನ್ನು ಕೇಳಿದೆ. ನಮಗೇನು ಗೊತ್ತು? ದೊಡ್ದವರದ್ದು, ನರ್ತಕಿಯರದ್ದು ಅದೇನು ಡೀಲುಗಳೋ, ಏನು ನಖರಾಗಳೋ ಏನೋ? ದೊಡ್ಡವರ ವಿಷಯ.

ಒಂದು ಶನಿವಾರ ರಾತ್ರಿ ಹೋಗಿದ್ದೆ. ಆವತ್ತು ಏನೋ ಅಪರೂಪಕ್ಕೆ ಸುಮಾರು ನಮ್ಮ ಕಂಪನಿ ಜನ ಜೊತೆ ಬಂದಿದ್ದರು. ಒಳಗೆ ಹೋಗಿ ಕೂತು ಸ್ವಲ್ಪ ಹೊತ್ತಾದ ಮೇಲೆ ನಮ್ಮ ಕಂಪನಿ ಮಾಲೀಕರು, ಅವರ ಸೋದರ, ಅವರ ಇತರೆ ಕೆಲವು ರಿಷ್ತೆದಾರರು ಎಲ್ಲ ಬಂದರು. ಬಂದು ನಮ್ಮ ಜೊತೆಗೇ ಜಾಯಿನ್ ಆದರು. ಈಗ ನಮ್ಮ ಟೇಬಲ್ಲಿಗೂ ವಿಶೇಷ ಮರ್ಯಾದೆ. ದೊಡ್ಡ ಶ್ರೀಮಂತರು ಬಂದು ಕೂತಿದ್ದಾರೆ ನೋಡಿ. ಅದಕ್ಕೇ ರಾಯಲ್ ಟ್ರೀಟ್ಮೆಂಟ್. ನಮ್ಮ ಮಾಲೀಕರು ಭಾಳ decent. ಆಗಾಗ ಲೈವ್ ಬ್ಯಾಂಡ್ ಗೆ ಬಂದರೂ ನರ್ತಕಿಯರ ಮೇಲೆ ಖುದ್ದು ಹೋಗಿ ರೊಕ್ಕ ತೂರುವದಾಗಲಿ, ಎಸೆಯುವದಾಗಲಿ  ಮಾಡುತ್ತಿರಲಿಲ್ಲ. ನೋಟಿನ ಮಾಲೆ ಖರೀದಿಸುತ್ತಿದ್ದರು. ವೇಟರ್ ಕೈಗೆ ಕೊಡುತ್ತಿದ್ದರು. ವೇಟರ್ ಹೋಗಿ ನರ್ತಕಿಗೆ, ಗಾಯಕಿಗೆ ಅರ್ಪಿಸುತ್ತಿದ್ದ. ದೂರಿಂದಲೇ ನರ್ತಕಿ, ಗಾಯಕಿ ದುವಾ, ಸಲಾಂ ಮಾಡುತ್ತಿದ್ದರು. ನಮ್ಮ ಸಾಹೇಬರು, 'It's OK. It's OK. You are welcome,' ಅನ್ನೋ ರೀತಿಯಲ್ಲಿ ಗಂಭೀರವಾಗಿಯೇ ವರ್ತಿಸುತ್ತಿದ್ದರು. ದುಬಾರಿ ಎಣ್ಣೆ ಹೀರುತ್ತ, ಟೇಬಲ್ ಮೇಲೆ ಇದ್ದ ಎಲ್ಲ ಪರಿಚಿತರಿಗೆ ಏನು ಬೇಕೋ ಅದನ್ನು ಕೇಳಿ ಕೇಳಿ, ಕೊಡಿಸಿ ಕೊಡಿಸಿ, ಒಂದೆರೆಡು ಪೆಗ್ ಜಾಸ್ತಿಯೇ ಹಾಕಿಸಿ, ಟೋಟಲ್ ಬಿಲ್ಲ ಎಲ್ಲ ಅವರ ಖಾತೆಗೇ  ಹಾಕಿಸಿಕೊಂಡು, ಮೊದಲೇ ಎದ್ದು ಹೋಗುತ್ತಿದ್ದರೆ ಬಾರ್ ಟ್ಯಾಬ್ ಓಪನ್ ಇಟ್ಟು,'ಬೇಕಾದ್ದು ಕೇಳಿ ತೊಗೊಳ್ಳಿ. ಭಿಡೆ ಬೇಡ,' ಅಂತ ನಮಗೆಲ್ಲ ಹೇಳಿ, 'ಬಿಲ್ ಕಳಿಸಿಬಿಡಿ' ಅಂತ ಹೋಟೆಲ್ಲಿನವರಿಗೆ ಹೇಳಿ ಹೋಗಿ ಬಿಡುತ್ತಿದ್ದ ಒಳ್ಳೆ ದಿಲ್ದಾರ್ ಮನುಷ್ಯ ಅವರು.

ಲೈವ್ ಬ್ಯಾಂಡ್ ನಲ್ಲಿ ಸದಾ ಕಾಣುತ್ತಿದ್ದ ಜನ ಅಂದರೆ ಎಲ್ಲ ನಮ್ಮವರೇ ಅಂದರೆ ಭಾರತೀಯ ಮೂಲದವರು. ಪೂರ್ವ ಆಫ್ರಿಕಾದ ವಾಣಿಜ್ಯ ವ್ಯವಹಾರ ಇರುವದೇ ಭಾರತದಿಂದ ಬಹಳ ವರ್ಷ ಮೊದಲೇ ಅಲ್ಲಿ ಹೋಗಿ ಸೆಟಲ್ ಆದ ಗುಜರಾತಿ ಮೂಲದ ಜನರ ಕೈಯಲ್ಲಿ. ಅವರಲ್ಲಿ ಹಿಂದುಗಳೂ, ದಾವೂದಿ ಬೋಹ್ರಾ ಮುಸ್ಲೀಮರೂ ಇದ್ದಾರೆ. ಹಾಗೆ ಸ್ವಲ್ಪ ಪಾಕಿಸ್ತಾನದ ಜನರೂ ಇದ್ದಾರೆ. ಅವರೆಲ್ಲ ಅಲ್ಲಿಯವರೇ ಆಗಿಬಿಟ್ಟಿದ್ದಾರೆ. ನಮ್ಮ ಮಾಲೀಕರೂ ಅಷ್ಟೇ. ಅಲ್ಲೇ ಹುಟ್ಟಿ, ಬೆಳೆದ ಮೂರನೆಯದೋ ನಾಲ್ಕನೆಯದೋ ತಲೆಮಾರಿನ ಗುಜರಾತಿ. ಆಗರ್ಭ ಶ್ರೀಮಂತ. ಇಸ್ಪೀಟ್ ಆಡಲು ಕುಳಿತರೆ ಸಾವಿರಾರು ಡಾಲರ್ ಲೆಕ್ಕದಲ್ಲಿ ಅಂತ ನೋಡಿದವರು ಹೇಳುತ್ತಿದ್ದರು. ಲೈವ್ ಬ್ಯಾಂಡಿಗೆ ಬಂದಾಗೊಮ್ಮೆ ಎಲ್ಲರ ಬಿಲ್ ಕೊಟ್ಟು, unlimited ಎಣ್ಣೆ ಹೊಡೆಸಿ, ರೊಕ್ಕಾ ಉಡಾಯಿಸುವದನ್ನು ನೋಡಿದರೆ ಇರಬಹುದು ಬಿಡಿ ಅನ್ನಿಸುತ್ತಿತ್ತು.

ಲೈವ್ ಬ್ಯಾಂಡಿನಲ್ಲಿ ಎಲ್ಲೋ ಅಪರೂಪಕ್ಕೆ ಬಿಳಿ ಜನ ಕಂಡು ಬರುತ್ತಿದ್ದರು. ಹೇಳಿ ಕೇಳಿ ಮೊದಲು ಬ್ರಿಟಿಷರು ಟಾಂಜಾನಿಯ ಆಳಿದ್ದರು. ಅವರಿಗೆ ಅಲ್ಲಿ ಇನ್ನೂ ಸಾಕಷ್ಟು ಸಂಪರ್ಕ, ದಂಧೆ ಎಲ್ಲ ಇದೆ. ಎಷ್ಟೋ ಬಿಳಿ ಜನ ನಮ್ಮ ಗುಜರಾತಿ ಮೂಲದ ಜನರ ಜೊತೆ partnership ನಲ್ಲಿ ಬಿಸಿನೆಸ್ ಮಾಡುತ್ತಾರೆ. ಹಾಗಾಗಿ ಆಗಾಗ ಟಾಂಜಾನಿಯಾಗೆ ಬಂದು ಹೋಗಿ ಮಾಡುತ್ತಿರುತ್ತಾರೆ. ಒಮ್ಮೊಮ್ಮೆ ಅಂತಹ ಬಿಳಿ ಜನರನ್ನು ದೊಡ್ಡ ದೊಡ್ಡ ಕುಳಗಳು ಲೈವ್ ಬ್ಯಾಂಡಿಗೆ ಕರೆದುಕೊಂಡು ಬಂದಿದ್ದು ಇತ್ತು. ಆದರೆ ಬಹಳ ಕಮ್ಮಿ.

ಇನ್ನು ಕರಿಯರು??? ಅವರನ್ನೂ ಎಂದೂ ಅಲ್ಲಿ ನೋಡಿರಲಿಲ್ಲ. ಕೆಲವು ಜನ ವೇಟರುಗಳು ಇದ್ದರು. ಆದರೆ ಗಿರಾಕಿಗಳಲ್ಲಿ ಅವರನ್ನು ನೋಡಿದ್ದು ಎಂದೂ ಇಲ್ಲ. ಒಬ್ಬ ದೇಶಿ ಗಾಯಕ ಸಕತ್ತಾಗಿದ್ದ. ಒಮ್ಮೆ ಶಾಲಿಮಾರ್ ಚಿತ್ರದ ಫೇಮಸ್ ಹಾಡು ಹಾಡುತ್ತಿದ್ದ. ಅದರಲ್ಲಿ ಕೋರಸ್ ನಲ್ಲಿ 'ಜಿಂಗಾ ಲಾ ಲಾ. ಹೂಂ ಹೂಂ' ಅಂತ ಆದಿವಾಸಿಗಳು ಅರಚುವ, ಕೂಗುವ ಸನ್ನಿವೇಶ ಇದೆ. ಅದಕ್ಕೆ ಈ ಪುಣ್ಯಾತ್ಮ ಗಾಯಕ ಅಲ್ಲೇ ಇದ್ದ ನಾಲ್ಕಾರು ನಿಗ್ರೋ ವೇಟರ್ ಜನರಿಗೆ ಬರೋಬ್ಬರಿ ತರಬೇತಿ ಕೊಟ್ಟು ಕೋರಸ್ ಹಾಡಿಸಿದ್ದ. ನಕ್ಕೂ ನಕ್ಕೂ ಸಾಕಾಗಿತ್ತು. ಹಿಂದಿ ಹಾಡಿಗೆ ಕರಿಯರ ಕೋರಸ್. ಹುಚ್ಚೆದ್ದು ಹೋಗಿದ್ದ ಮಹನೀಯನೊಬ್ಬ ಅಂದು ಕರಿಯರ ಮೇಲೂ ನೋಟಿನ ಮಳೆಗರೆದುಬಿಟ್ಟಿದ್ದ. ಕರಿಯ ವೇಟರುಗಳಿಗೆ ದೊಡ್ಡ ಮಟ್ಟದ ಟಿಪ್ಪು!

ಹೀಗೆಲ್ಲ ಇದ್ದಾಗ ಆವತ್ತು ಒಬ್ಬ ಕರಿಯ ಬಂದಿದ್ದನ್ನು ಗಮನಿಸಿದೆ. ಕರಿಯ, ಅದೂ ಗಿರಾಕಿಯಾಗಿ ಬಂದಿದ್ದ ಅಂದ ಮೇಲೆ ಅದು ದೊಡ್ಡ ಮಾತೇ. ಅಷ್ಟೇ ಅಲ್ಲ. ಬಂದ ಕರಿಯ ಮೊತ್ತ ಮೊದಲ ಸಾಲಿನಲ್ಲಿದ್ದ  reserved for high rollers ಟೇಬಲ್ ಮೇಲೆ ಹೋಗಿ ಕೂತ. ದೊಡ್ಡವರ ಜೊತೆಗೇ ಬಂದಿದ್ದ. ಸಾಮಾನ್ಯವಾಗಿ ಯಾರು ಬಂದರೂ ಎದ್ದೋಗಿ ಮಾತಾಡಿಸದ ನಮ್ಮ ಮಾಲೀಕರೂ ಸಹ ಎದ್ದು, ಹಾಕಿದ್ದ ಎಣ್ಣೆ ಜಾಸ್ತಿಯಾಗಿದ್ದಕ್ಕೆ ಸ್ವಲ್ಪ ಆಚೆ ಈಚೆ ಒಲಿದು, ಸುಧಾರಿಕೊಂಡು, ಅವನಿದ್ದ ಟೇಬಲ್ಲಿಗೆ ಹೋಗಿ, ಕೈಕುಲುಕಿ, ಭಾರಿ ಆತ್ಮೀಯತೆಯಿಂದ 'ಜಾಂಬೋ! ಹಬಾರಿ ಗಾನಿ?' ಅಂತ ಸ್ವಾಹಿಲಿಯಲ್ಲಿ ಮಾತಾಡಿಸಿ ಬಂದಿದ್ದರು. 'ಜಾಂಬೋ! ಹಬಾರಿ ಗಾನಿ?' ಅಂದರೆ Hello, How are you? ಅಂತ ಅರ್ಥ. ಅಷ್ಟು ಸ್ವಾಹಿಲಿ ಭಾಷೆ ನಾವೂ ಕಲಿತಿದ್ದೆವು. ಅಲ್ಲಿದ್ದಾಗ ಇನ್ನೂ ಜಾಸ್ತಿಯೇ ಬರುತ್ತಿತ್ತು ಬಿಡಿ. ಯಾಕೆಂದರೆ ಅಲ್ಲಿನ ಕರುಪರಿಗೆ ಬೇರೆ ಭಾಷೆ ಬಂದರೆ ತಾನೇ?

ಬಂದಿದ್ದ ನಿಗ್ರೋ ಸ್ಪೆಷಲ್ ಆಗಿದ್ದ. ದುಬಾರಿ ಸೂಟ್ ಧರಿಸಿದ್ದ. ದುಬಾರಿ ಫೆಲ್ಟ್ ಹ್ಯಾಟ್ ಹಾಕಿದ್ದ. ರಾತ್ರಿಯಾದರೂ ಕೂಲಿಂಗ್ ಗ್ಲಾಸ್ ಹಾಕಿದ್ದ. ಗಿಡ್ಡನಾಗಿ, ಧಪ್ಪ ಇದ್ದ. ತಲೆ ನುಣ್ಣಗೆ ಬೋಳಿಸಿಕೊಂಡಿದ್ದ. ನೋಡಿದರೆ ನಮ್ಮ ಕನ್ನಡ ನಟ ಬುಲೆಟ್ ಪ್ರಕಾಶರ ಅಣ್ಣ ಇದ್ದಂಗೆ ಇದ್ದ. ಒಳ್ಳೆ ಕಪ್ಪು ನೀರಾನೆ ತರಹ.

ಕನ್ನಡ ಹಾಸ್ಯ ನಟ ಬುಲೆಟ್ ಪ್ರಕಾಶ್. ಇಂತಹ ನೀಗ್ರೋ ಮನುಷ್ಯನನ್ನು ಊಹೆ ಮಾಡಿಕೊಳ್ಳಿ. ಹಾಗಿದ್ದ ಆವತ್ತು ಬಂದವ.

ಬಂದ ಕರಿಯನಿಗೆ ಅಂತ ದುಬಾರಿ ಎಣ್ಣೆ, ಸ್ಪೆಷಲ್ ಖಾನಾ ಎಲ್ಲ ಬಂದೂ ಬಂದೂ ಟೇಬಲ್ ತುಂಬತೊಡಗಿತು. ಹಾಡುತ್ತಿದ್ದವರಿಗೆ, ಕುಣಿಯುತ್ತಿರುವವರಿಗೆ ಏನೋ ಸ್ಪೆಷಲ್ ಮೆಸೇಜ್ ಹೋಯಿತು. ಅವರು ಮತ್ತೂ ದಬಾಯಿಸಿ ಕುಣಿಯತೊಡಗಿದರು. ರೊಕ್ಕದ ಮಳೆ ಸುರಿಯಿತು. ಗುಜರಾತಿಯೊಬ್ಬ ನೀರಾನೆಯಂತಹ ಕರಿಯನ ತಲೆ ಮೇಲೆ ನೋಟುಗಳನ್ನು ನಿವಾಳಿಸಿ ನಿವಾಳಿಸಿ, ನರ್ತಕಿ ಮೇಲೆ ತೂರಿದ. ಕರಿಯ ಫುಲ್ ಖುಷ್ ಆಗಿ, ಹೆ! ಹೆ! ಅಂತ ದೊಡ್ಡ ನಿಗ್ರೋ ನಗೆ ನಕ್ಕ. ಕರಿಯನ ಬಿಳಿಯ ಹಲ್ಲು ಕಣ್ಣು ಕೋರೈಸುವಂತೆ ಫ್ಲಾಶ್ ಆಯಿತು. ಕರಿಯ ಗುಜರಾತಿಯ ಕೈಗೆ ಕೈ ಅಪ್ಪಳಿಸಿ, ಖುಷಿ ವ್ಯಕ್ತಪಡಿಸಿದ.

ಒಬ್ಬ ಕರಿಯನಿಗೆ ಇಷ್ಟೆಲ್ಲ ಮೆಹಮಾನ್ ನವಾಜಿ, ಸತ್ಕಾರ ಮಾಡುತ್ತಿದ್ದಾರೆ ಅಂದ ಮೇಲೆ ಈ ನಿಗ್ರೋ ಯಾರೋ ದೊಡ್ಡ ಕುಳವೇ ಇರಬೇಕು. ಯಾರೋ ಏನೋ?

ಸುಮಾರು ಮುಕ್ಕಾಲು ಘಂಟೆ ಆದ ಮೇಲೆ ಕರಿಯ ಮತ್ತು ಅವನನ್ನು ಕರೆದುಕೊಂಡು ಬಂದವರು ಎದ್ದು ಹೊರಟರು. ಅವರೇನು ನಮ್ಮ ಹಾಗೆ ದರಿದ್ರ ನೌಕರಿ ಮಾಡುವವರೇ ಒಂದೇ ಕಡೆ ಗೂಟ ಹೊಡೆದುಕೊಂಡು ಕೂಡಲಿಕ್ಕೆ? ಹತ್ತಾರು ಪಬ್ಬು, ಕ್ಲಬ್ಬು ಅಂತೆಲ್ಲ ಹೋಗಿ ರೊಕ್ಕಾ ಉಡಾಯಿಸುತ್ತಾರೆ. ನಮಗೆ ರೊಕ್ಕ ಉಳಿಸುವದು ಹೇಗೆ ಅಂತ ಚಿಂತೆ. ಅವರಿಗೆ ರೊಕ್ಕ  ಉಡಾಯಿಸುವದು ಹೇಗೆ ಅಂತ ಚಿಂತೆ. ಅಜ್ಜಿಗೆ ಅರಿವೆ ಚಿಂತೆ. ಮಮ್ಮಗಳಿಗೆ ಮಿಂಡನ ಚಿಂತೆ. ಸೇಮ್ ಹಾಗೆ.

ಈ ಕಡೆ ನಮ್ಮ ಸಾಹೇಬರೂ ಕೂತಿದ್ದರಲ್ಲ. ಕರಿಯ ಮತ್ತು ಇತರರು ಎದ್ದು ಹೊರಟಾಗ ನಮ್ಮ ಟೇಬಲ್ ಮುಂದೆ ಸಹ ಒಂದು ಕ್ಷಣ ನಿಂತರು. ನಮ್ಮ ಟೇಬಲ್ ಮೇಲಿದ್ದ ಸಾಹೇಬರು, ಅವರ ಸೋದರ ಇತ್ಯಾದಿಗಳ ಕೈಕುಲುಕಿದರು. ಮತ್ತೆ ನಾವೂ ಒಂದು ನಾಕು ಜನ ಆಫ್ರಿಕಾದಲ್ಲಿ ಕೆಲಸ ಮಾಡಲು ಬಂದ ಕೂಲಿ ಜನರ ಮಾದರಿಯ ಜನ ಸಹಿತ ಇದ್ದೆವು ನೋಡಿ. ನಮ್ಮ  ಕೈಕುಲುಕದೇ ಹೋದರೆ ಅದು ಸರಿಯಾಗೋದಿಲ್ಲ ಅಂತ ಹೇಳಿ ನಮ್ಮದೂ ಕೈ ಎಲ್ಲರೂ ಕುಲುಕಿದರು. ಕೊನೆಗೆ ಕೈಕುಲುಕಿದವನೇ ಆ ನೀರಾನೆ ಮಾದರಿಯ ಕರಿಯ ದಡಿಯ. ಅದ್ಯಾವ ನಮ್ನಿ ಕೈಕುಲುಕಿದ ಅಂತೀನಿ! ಉಕ್ಕಿನ ಇಕ್ಕುಳದಲ್ಲಿ ಕೈ ಇಟ್ಟು ಅಡಚಿ ಅದುಮಿದಂತಾಯಿತು. ಸೈಜಿಗೆ ತಕ್ಕ ಶಕ್ತಿ ಆ ದಡಿಯಾ ಕರಿಯಾ ನನ್ಮಗಂದು. ಹೊಟ್ಟೆಗೆ ಏನು ತಿಂತಾರೋ? ದನಾ ಅದು ಇದು ಅಂತ ಸಿಕ್ಕಿದ್ದೆಲ್ಲ ಪ್ರಾಣಿ ತಿಂದೂ ತಿಂದೂ ದೈತ್ಯ ಶಕ್ತಿ ಕಪ್ಪು ಸೂಳೆಮಕ್ಕಳಿಗೆ, ಅಂತ ಅಂದುಕೊಂಡೆ.

ಅವರೆಲ್ಲ ಹೋದ ಮೇಲೆ ನಮ್ಮ ಮಾಲೀಕರು ಮತ್ತೊಂದು ರೌಂಡ್ ಎಣ್ಣೆಗೆ ಆರ್ಡರ್ ಮಾಡಿದರು. ಕರಿಯ ಕೈಕುಲುಕಿದ ಶಾಕಿನಿಂದ, ನೋವಿನಿಂದ ಮಳ್ಳ ಮುಖ ಮಾಡಿ ಕೂತಿದ್ದ ನಮ್ಮನ್ನು ನೋಡಿ, 'ಯಾರು ಗೊತ್ತಾ ಅವನು?' ಅಂತ ಕೇಳಿದರು. ಅವರು ಕಂಪನಿ ಮಾಲೀಕರೇ ಆದರೂ ತುಂಬ ಸಿಂಪಲ್ ಮತ್ತು easy going. ಹಾಗಾಗಿ ನಮಗೂ ಸಲಿಗೆ. 'ರೀ ಬಾಸು, ಯಾರ್ರೀ ಆ ಪುಣ್ಯಾತ್ಮಾ? ಯಪ್ಪಾ! ಶೇಕ್ ಹ್ಯಾಂಡ್ ಮಾಡೋ ಅಬ್ಬರದಲ್ಲಿ ಕೈ ಮುರಿದು ಹೋಗೋ ಹಾಗೆ ಕೈ ಅದುಮಿಬಿಟ್ಟ!' ಅಂದೆ. ಮಾಲೀಕರು ತಟ್ಟಿ ತಟ್ಟಿ ನಕ್ಕರು. 'ಅವನು ಯಾರು ಗೊತ್ತಾ? ಮಕಪ್ಪನ ಮಗ,' ಅಂದು ಬಿಟ್ಟರು. 'ಯಾವ ಅಪ್ಪನ ಮಗ ಆದ್ರೆ ನಮಗೇನ್ರೀ? ಅವನೇನು ಮನುಷ್ಯಾ ಏನ್ರೀ?' ಅನ್ನೋ ಲುಕ್ ಕೊಟ್ಟೆ. ನನಗೆ ತಿಳಿಯಲಿಲ್ಲ ಅಂತ ಅವರಿಗೆ ತಿಳಿಯಿತು. 'ಏ! ಅವನು ಮಕಪ್ಪನ ಮಗ ಅಂದರೆ ಬೆಂಜಾಮಿನ್ ಮಕಪ್ಪನ ಮಗ. ಬೆಂಜಾಮಿನ್ ಮಕಪ್ಪ ಗೊತ್ತಲ್ಲ? ಟಾಂಜಾನಿಯಾದ ಅಧ್ಯಕ್ಷ. ಮೊನ್ನೆ ಮಾತ್ರ ಹೊಸದಾಗಿ ಆರಿಸಿಬಂದವನು. ಈಗ ಗೊತ್ತಾಯಿತಾ ಯಾರು ಅಂತ???' ಅಂತ ದೊಡ್ಡ ಬಾಂಬನ್ನೇ ಹಾಕಿ ಬಿಟ್ಟರು.

ಅಂದಿನ ಟಾಂಜಾನಿಯಾದ ಅಧ್ಯಕ್ಷ ಬೆಂಜಾಮಿನ್ ಮಕಾಪಾ. ಮಗನೂ ಸುಮಾರು ಹೀಗೆ ಇದ್ದ.

ಹ್ಯಾಂ???!!! ಅಂತ ಬಾಯಿ ಮತ್ತೊಂದು ಬಿಟ್ಟುಕೊಂಡು ಕೂಡೋ ಬಾರಿ ಈಗ ನಮ್ಮದು ಮತ್ತು ಅಲ್ಲಿದ್ದ ಇತರೇ ಕೂಲಿಗಳದ್ದು. ನಾವಿದ್ದ ಲೈವ್ ಬ್ಯಾಂಡಿಗೇ ಬಂದು, ಎಲ್ಲ್ಲ ಮೇಜವಾನಿ ಸ್ವೀಕರಿಸಿ, ಹೋಗೋವಾಗ ಕೈಕುಲುಕಿ ಹೋದವನು ದೇಶದ ಅಧ್ಯಕ್ಷನ ಮಗನೇ??? ಅಲಲಲಲಾ!!! ಇದು ಭಾರೀ ಆಯಿತು. ಭಾರತದಲ್ಲಿದ್ದಾಗ ನಮಗೆ ಕೆಲವೊಂದು MLA, MP ಗಳು, ಅದೂ ತಂದೆಯವರಿಗೆ ಗೊತ್ತಿತ್ತು, ಅಂತ ನಮಗೂ ಗೊತ್ತಿತ್ತು ಅಷ್ಟೇ. ಅದೂ ನಮಸ್ಕಾರ ಹೊಡೆಯೋ ಪರಿಚಯ ಅಷ್ಟೇ. ಯಾರೂ ದೊಡ್ಡ ಮಂದಿ  ಹೀಗೆ ಕೈಕುಲುಕಿ ಹೋಗಿದ್ದು ಎಲ್ಲ ಇಲ್ಲವೇ ಇಲ್ಲ. ಇದೇ ಮೊದಲ ಸಲ. ಊಟ ಗೀಟ ಮುಗಿಸಿ, ಕೈ ಪೈ ತೊಳೆದುಕೊಂಡು ಕೂತಿದ್ದೇ ಒಳ್ಳೆಯದಾಯಿತು. ಇಲ್ಲದಿದ್ದರೆ ದೇಶದ ಅಧ್ಯಕ್ಷನ ಮಗನಿಂದ ಕೈ ಕುಲುಕಿಸಿಕೊಳ್ಳುವ, ಕೈ crush ಮಾಡಿಸಿಕೊಳ್ಳುವ ಮಹಾ ಸೌಭಾಗ್ಯದಿಂದ ವಂಚಿತರಾಗಿಬಿಡುತ್ತಿದ್ದೆವು.

ಆಮೇಲೆ ಗೊತ್ತಾಯಿತು ಅದೆಲ್ಲ ಅಲ್ಲಿನ ಬಿಸಿನೆಸ್ ಮಾಡೋ ಜನ ಮಾಡುವ ಖಾಯಂ ಕೆಲಸ ಅಂತ. ಅಲ್ಲಿನ ಕರಿಯರು ಪೂರ್ತಿ ಕರಪ್ಟ್ ಆಗಲು ನಮ್ಮವರೇ ಕಾರಣವಂತೆ. ಅದಕ್ಕೇ ಉಗಾಂಡದ ಮಾಜಿ ಸರ್ವಾಧಿಕಾರಿ ತಲೆ ಕೆಟ್ಟ ಹುಚ್ಚ ಇದಿ ಅಮೀನ್ ಎಲ್ಲ ಭಾರತೀಯ ಮೂಲದ ಜನರನ್ನು ಓಡಿಸಿದ್ದ. ಎರಡೂ ಕೈ ಕೂಡಿದರೆ ಮಾತ್ರ ಚಪ್ಪಾಳೆ. ಕರಿಯರಿಗೆ ಬಿಟ್ಟಿ ದುಡ್ಡು ಬೇಕು. ಗುಜರಾತಿ ಮಂದಿಗೆ ಒಟ್ಟಿನಲ್ಲಿ ದೊಡ್ಡ ಮಟ್ಟದ ದಂಧೆ, ಅದಕ್ಕೂ ದೊಡ್ಡ ಮಟ್ಟದ ಫಾಯಿದೆ ಆದರೆ ಆಯಿತು. ಅದರ ಸಲುವಾಗಿ ಅವರು ಅಧ್ಯಕ್ಷನ ಮಗನ ತಲೆ ಹಿಡಿದು, ಅಮೃತಾಂಜನ ತಿಕ್ಕಲೂ ರೆಡಿ. ಅದೆಲ್ಲ ಕಾರ್ನಾಮೆಗಳ ರೋಚಕ ವಿವರಗಳನ್ನು ಬರೆಯುತ್ತ ಕುಳಿತರೆ ಪುಸ್ತಕ ತುಂಬಿಸಬಹುದು. ಹಾಗಿವೆ ಪೂರ್ವ ಆಫ್ರಿಕಾದ corruption ಕಾರ್ನಾಮೆಗಳು.

ಅದೇ ಕೊನೆ. ನಂತರ ಮೂರ್ನಾಕು ಬಾರಿ ಅಲ್ಲೇ ಹೋದರೂ ಅಂತಹ ದೊಡ್ಡ ವ್ಯಕ್ತಿಯಾರೂ ಕಂಡು ಬರಲಿಲ್ಲ. ಸದಾ ಲೈವ್ ಬ್ಯಾಂಡ್ ನಲ್ಲಿ ಕಂಡು, ಅಲ್ಲೇ ಪರಿಚಯವಾಗಿ, 'ಕೇಮ್ ಛೋ? ಬದ್ದೂ ಬರಾಬರ್?' (ಹೇಗಿದ್ದೀರಿ? ಎಲ್ಲ ಆರಾಮ್?) ಅಂತ ಸಹಜವಾಗಿ ಕೇಳುತ್ತಿದ್ದ ಗುಜರಾತಿಗಳನ್ನು ಬಿಟ್ಟರೆ ಮತ್ತೆ ಯಾರೂ ದೊಡ್ಡ ಕರಿ ಮನುಷ್ಯ, ಬಿಳಿ ಮನುಷ್ಯ ಇತ್ಯಾದಿ ಸಿಗಲಿಲ್ಲ.

ನೋಡ ನೋಡುತ್ತಿದ್ದಂತೆ ಒಂದು ವರ್ಷ ಮುಗಿದೇ ಹೋಯಿತು. ಅಲ್ಲಿ ಲೈಫು ಮಸ್ತಾಗಿದ್ದರೂ ಅಷ್ಟು ಕೆಲಸದ ತೃಪ್ತಿ ಇರಲಿಲ್ಲ. ಮತ್ತೆ ಅದು ೧೯೯೬ ಟೈಮ್. ಅಮೇರಿಕಾದಲ್ಲಿ IT boom ಎಂಬ ಹುಚ್ಚು ಮುಂಡೆ ಮದುವೆ ಶುರುವಾಗಿತ್ತು. ಆ ಹುಚ್ಚು ಮುಂಡೆ ಮದುವೆಯಲ್ಲಿ ದಂಡಿಯಾಗಿ ಉಂಡವರೇ ಜಾಣರು. 'ಜಾವಾ ಬರ್ತದೆ ಏನು?' ಅಂತ ಕೇಳಿದರೆ, 'ಜಾವಾ ಇಲ್ಲ ಸಾರ್. ಆದ್ರೆ ಯೆಜಡೀ ಬೈಕ್ ಹೊಡೆದ ಅನುಭವ ಇದೆ' ಅಂತ ಅಸಂಬದ್ಧ ಉತ್ತರ ಕೊಡುತ್ತಿದ್ದ, ಹಶಿ ದಡ್ಡ, ಕಾಂಜಿ ಪೀಂಜಿ IT ಕೂಲಿಗಳೆಲ್ಲ ಅಮೇರಿಕಾಗೆ ಹಾರಿ, ಝಣ ಝಣ ಅಂತ ಡಾಲರ್ ಎಣಿಸುತ್ತಿದ್ದರೆ ನಾವು ಇಲ್ಲಿ ಪೂರ್ವ ಆಫ್ರಿಕಾದಲ್ಲಿ ಕೂತು ಏನು ಮಾಡೋಣ? ಅಷ್ಟರವರೆಗೆ at least ಮೂರು ವರ್ಷದ ಅನುಭವ ಇರಲಿಲ್ಲ. ಅಮೇರಿಕಾಗೆ ಹೋಗಲು ಅಷ್ಟು ಮಿನಿಮಂ ಬೇಕು ಅಂತ ಗೊತ್ತಾಗಿದ್ದಕ್ಕೆ ಆಫ್ರಿಕಾಗೆ ಬಂದಿದ್ದಾಗಿತ್ತು. ಅಮೇರಿಕಾದಷ್ಟು ಅಲ್ಲದಿದ್ದರೂ ಸುಮಾರು ರೊಕ್ಕ ಅಂತೂ ಮಾಡಬಹದು ಅಂತ ಬಂದಿದ್ದು ಸರಿಯೇ ಇತ್ತು. ಆದರೆ ಅಲ್ಲೇ ಉಳಿಯುವದು ಅಷ್ಟು ಲೈಕ್ ಆಗಲಿಲ್ಲ. ಅತಿ ಉತ್ತಮ ಅಲ್ಲಿನ ಗುಜರಾತಿ ಗೆಳೆಯರಿದ್ದರು. tension ಇಲ್ಲದ ಲೈಫ್ ಆರಾಮಾಗಿತ್ತು. ಆದ್ರೆ ಅದು ಏನೋ ಅಂತಾರಲ್ಲ, ಇದ್ದುದೆಲ್ಲವ ಬಿಟ್ಟು, ಅನ್ನೋ ಹಾಗೆ ಟಾಂಜಾನಿಯಾ ಬಿಟ್ಟು ಬಂದಾಯಿತು. ನಂತರ ಇಲ್ಲಿಗೆ ಬಂದಿದ್ದು. ಆದರೆ ಅಲ್ಲಿ ಕಳೆದ ಒಂದು ವರ್ಷ ನೆನಪಿಸಿಕೊಂಡರೆ ಇವತ್ತಿಗೂ ಹ್ಯಾಪಿ, ಹ್ಯಾಪಿ! ಅಷ್ಟೊಂದು ಮಸ್ತ ಇತ್ತು. ಒಂದೇ ವರ್ಷ ಇದ್ದಿದ್ದು. ಆದರೆ ನೂರು ಬ್ಲಾಗ್ ಪೋಸ್ಟ್ ಬರೆಯಬಹುದು. ಅಷ್ಟೊಂದು ಹೊಸ ಹೊಸ, ಚಿತ್ರ ವಿಚಿತ್ರ ಅನುಭವಗಳು.

ಲೈವ್ ಬ್ಯಾಂಡ್ ನರ್ತಕಿ ಒಬ್ಬಳ ಕುರಿತ ಬಂದ ಒಂದು ಮನೋಜ್ಞ ಚಿತ್ರ 'ಚಾಂದಿನಿ ಬಾರ್'. ಸೂಪರ್ ನಿರ್ದೇಶಕ ಮಧುರ ಭಂಡಾರ್ಕರ್ ಮಾಡಿದ ಚಿತ್ರಗಳಲ್ಲೇ ಅತ್ಯುತ್ತಮ ಚಿತ್ರ. ಅದನ್ನು ನೋಡಿ ಬಿಟ್ಟರೆ ಲೈವ್ ಬ್ಯಾಂಡ್ ಕರ್ಮಚಾರಿಗಳ ಬಗ್ಗೆ ಸಿಕ್ಕಾಪಟ್ಟೆ ಮರುಕ, ಕರುಣೆ ಎಲ್ಲ ಮೂಡಿ, ಕೊನೆಯ ದೃಶ್ಯದಲ್ಲಂತೂ ಕಣ್ಣಲ್ಲಿ ನೀರೇ ಬಂದು ಬಿಡುವಷ್ಟು ಮನ ಕಲಕುವ ಚಿತ್ರ. ಅದನ್ನು ನೋಡಿದಾಗೆಲ್ಲ ಟಾಂಜಾನಿಯಾದ ಲೈವ್ ಬ್ಯಾಂಡ್ ನೆನಪಾಗುತ್ತದೆ. ಅಲ್ಲಿ ಹಾಡಿದ್ದ, ಕುಣಿದಿದ್ದ ಕಲಾವಿದರ ಹಿಂದೆ ಕೂಡ ಏನೇನು ಕಥೆಗಳಿದ್ದವೋ ಏನೋ? ಆದರೂ ಅವನ್ನೆಲ್ಲ ಬಚ್ಚಿಟ್ಟುಕೊಂಡು, ಪ್ರತಿ ರಾತ್ರಿ ಮೇಕ್ಅಪ್ ಮಾಡಿಕೊಂಡು, ಬಂದು ಕಾಸು ತೂರುವ ಮಂದಿಗೆ ಖುಷಿ ಕೊಡಲು ಅವರೆಲ್ಲ ಭರ್ಜರಿ ಹಾಡಿದ್ದೇ ಹಾಡಿದ್ದು, ದಬಾಯಿಸಿ ಕುಣಿದಿದ್ದೇ ಕುಣಿದಿದ್ದು. ಅವರೆಲ್ಲ ಎಲ್ಲೇ ಇರಲಿ ತಣ್ಣಗಿರಲಿ.

* ಅನೇಕ ಹಿಂದಿ ಚಿತ್ರಗಳಲ್ಲಿ ಲೈವ್ ಬ್ಯಾಂಡ್ ಹಾಡುಗಳು ಬಂದು ಹೋಗಿವೆ. ಅದ್ಭುತ ಅನ್ನಿಸುವಂತಹದ್ದು ಅಂದರೆ ೨೦೦೦ ರಲ್ಲಿ ರಿಲೀಸ್ ಆಗಿದ್ದ 'ಕುರುಕ್ಷೇತ್ರ' ಮೂವಿಯದು. ಕೆಳಗಿದೆ ನೋಡಿ. ರೌಡಿಗಳು, ರೊಕ್ಕದ ಮಳೆ ಎಲ್ಲ ಬರೋಬ್ಬರಿ ತೋರಿಸಿದ್ದಾರೆ.




* ಅದೇ ಮಾದರಿಯ ಇನ್ನೊಂದು ಹಾಡು 'ಆನ್' ಚಿತ್ರದ್ದು.