Saturday, March 12, 2016

ಶೆರೆದಂಗಡಿ ಬಾಜೂಕನೇ ಮನಿ ಮಾಡಿದ ದೋಸ್ತನ ಕಥಿ...

ಮೊನ್ನೆ ಇಲ್ಲೇ ಇರುವಂತಹ ದೋಸ್ತ ಒಬ್ಬವಂಗ ಫೋನ್ ಮಾಡಿದ್ದೆ. ರಾತ್ರಿ ಸುಮಾರು ಒಂಬತ್ತರ ಸುಮಾರಿಗೆ. ಅವನೂ ಊಟ ಗೀಟ ಮುಗಿಸಿ ಕೂತಿರಬಹುದು ಅಂದ್ಕೊಂಡೆ. ನಂದೂ ಊಟ ಮುಗಿದಿತ್ತು. ಮಾತಾಡಿ, ಹರಟಿ ಹೊಡದು ನಂತರ ಮಕ್ಕೊಂಡರಾತು ಅಂತ ವಿಚಾರ ಮಾಡಿ ಫೋನ್ ಹಚ್ಚಿದೆ.

ಸುಮಾರು ಹೊತ್ತು ರಿಂಗ್ ಆದ ಮ್ಯಾಲೆ ಫೋನ್ ಎತ್ತಿ, ಗೊಗ್ಗರು ಧ್ವನಿಯಾಗ 'ಹಲೋ' ಅಂದ. ಆ ತೇಲ್ಯಾಡೋ ಧ್ವನಿ ಕೇಳೇ ಗೊತ್ತಾತು ಸಾಹೇಬರು ಫುಲ್ ತೀರ್ಥ ತೊಗೊಂಡು ಕೂತುಬಿಟ್ಟಾರ ಅಂತ. ನಾನು ಹಳೆ ದೋಸ್ತ ಫೋನ್ ಮಾಡೇನಿ  ಅನ್ನುವ ಪ್ರೀತಿಯಿಂದ ನಶಾ ತಲಿಗೇರಿ ಫುಲ್ ಚಿತ್ತ ಆಗಿದ್ದರೂ ಫೋನ್ ಎತ್ತಿ ಹಲೋ ಅಂದಿದ್ದಾ ಅಂತ ಕಾಣಿಸ್ತದ. ಒಳ್ಳೆ ದೋಸ್ತ.

'ಏನಪಾ? weekday ದಿನ ಸಹಿತ ತೀರ್ಥ ತೊಗೊಂಡು ಕೂತಂಗದ?' ಅಂತ ಅಂದೆ.

'ಹೂಂನಪಾ. ಸ್ವಲ್ಪ ತೊಗೊಂಡೆ. ಕೆಟ್ಟ ಹಡಬಿಟ್ಟಿ ಕೆಲಸ ನೋಡು. ಸಾಕಾಗಿ ಹೋಗ್ಯದ,' ಅಂತ ಹುಸ್ ಅಂದ. ನಮ್ಮ ವಯಸ್ಸಿನ ಮಂದಿದು ಇದೇ ಕರ್ಮ. retired ಆಗೋವಷ್ಟು ಭಾಳ tired ಆಗಿಬಿಟ್ಟಿರ್ತದ. ಆದರೆ ರಿಟೈರ್ ಆಗಲಿಕ್ಕೆ ಬೇಕಾಗಿರುವ ದೊಡ್ಡ ಸೈಜಿನ ರೊಕ್ಕದ ಗಂಟು ಕೂಡಿರೋದಿಲ್ಲ. ಹಾಂಗಾಗಿ ಇನ್ನೊಂದು ಇಪ್ಪತ್ತು ವರ್ಷ ಗಧಾ ಮಜದೂರಿ ಮಾಡಲಿಕ್ಕೇಬೇಕು.

'ಹೂಂ. ಮತ್ತೇನು ವಿಶೇಷಾ?' ಅಂದೆ.

'ಮನಿ ಬದಲು ಮಾಡಿದೆ ನೋಡಪಾ. ಬಾ ಅಲ್ಲಾ ಯಾವಾಗರ ಈಕಡೆ. ಹೊಸಾ ಮನಿ ನೋಡಿ ಹೋಗು. ಹಾಂಗ ನೀ ಬಂದಾಗ ಗಿಚ್ಚಾಗಿ ಪಾರ್ಟಿ ಮಾಡೋಣ,' ಅಂದ. ದೊಡ್ಡ ಮನಸ್ಸಿನ ಹಳೆ ಗೆಳೆಯ.

'ಥ್ಯಾಂಕ್ಸ್ ದೋಸ್ತ. ಏನು ವಿಶೇಷ? ಯಾಕ ಮನಿ ಬದಲು ಮಾಡಿದಿ? ಮೊದಲಿಂದು ಮಸ್ತ ಇತ್ತಲಾ? ಯಾಕ ಚೇಂಜ್ ಮಾಡಿದಿ?' ಅಂತ ಕೇಳಿದೆ.

'ಅದು ಏನಾತು ಅಂದ್ರ ಆ ಮನಿಯಿಂದ ಶೆರೆದಂಗಡಿ (liquor shop) ಭಾಳ ದೂರ ಇತ್ತು ನೋಡಪಾ. ಶೆರೆದಂಗಡಿ ಹತ್ತಿರ ಇರೋ ಮನಿ ಬೇಕು ಆನ್ನಿಸ್ತು. ಈ ಮನಿ ಬಾಜೂಕss ಶೆರೆದಂಗಡಿ ಅದ,' ಅಂದುಬಿಟ್ಟ. ಶಿವಾಯ ನಮಃ!

'ಏನಂತ ಮಾತಲೇ ನಿಂದು? ಶೆರೆದಂಗಡಿ ಬಾಜೂಕಿನ ಮನೀನಾ? ಯಾಕ? ಅಂತಾದ್ದೇ ಮನಿ ಯಾಕ ಬೇಕಾಗಿತ್ತು?' ಅಂತ ಕೇಳಿದೆ.

'ಈ ಶೆರೆ (ಮದ್ಯ) ಕುಡಿಯೋದು ಕಮ್ಮಿ ಮಾಡಬೇಕಾಗ್ಯದೋ ಮಾರಾಯಾ. ಅದಕ್ಕೇ ಶೆರೆದಂಗಡಿ ಬಾಜೂಕ ಮನಿ ಮಾಡಿದೆ ನೋಡಪಾ,' ಅಂದ. ಸೊರ್ರ ಅಂತ ಏನೋ ಸಿಪ್ ತೊಗೊಂಡ ಸಣ್ಣ ಸೌಂಡ್ ಬಂತು. ಇಷ್ಟೊತ್ತು ಮಾತಾಡಿ ಗಂಟಲು ಆರಿರಬೇಕು. ತೀರ್ಥ ತೊಗೊಂಡ.

ಇವಂದೇನೋ ವಿಚಿತ್ರ ಕೇಸ್ ಇದ್ದಂಗ ಕಾಣಿಸ್ತದ. ಅಲ್ಲಾ, ಶೆರೆ ಕುಡಿಯೋದನ್ನ ಕಮ್ಮಿ ಮಾಡಬೇಕು ಅಂತನೂ ಹೇಳ್ತಾನ. ಅದಕ್ಕಾಗಿಯೇ ಶೆರೆದಂಗಡಿ ಬಾಜೂಕೇ ಮನಿ ಮಾಡಿದೆ ಅಂತಾನ. ಅಲ್ಲಾ, ಕುಡಿಯೋದನ್ನ ಕಮ್ಮಿ ಮಾಡಬೇಕು ಅನ್ನವರು ಶೆರೆದಂಗಡಿಯಿಂದ ದೂರ ಇದ್ದಷ್ಟು ಒಳ್ಳೆಯದು. ಅಲ್ಲೇನ್ರೀ?

'ಏನಲೇ ಇದು ವಿಚಿತ್ರಾ? ತಿಳಿವಲ್ತು. ನಿನಗ ಭಾಳ ನಶಾ ಏರಿದ್ರ ನಾ ಮತ್ತ ಯಾವಗರೆ ಫೋನ್ ಮಾಡ್ತೇನಿ. ಈಗ ಫೋನ್ ಇಡ್ಲೇನು?' ಅಂತ ಕೇಳಿದೆ. ಚಿತ್ತಾದ ಕುಡಕ ದೋಸ್ತ ಏನು ಹೇಳಲಿಕತ್ತದೋ ಏನೋ. ಒಟ್ಟ ತಿಳಿವಲ್ತು.

'ಏ, ಹಾಂಗೇನ ಇಲ್ಲಾ. ಮಾತಾಡು,' ಅಂದ. ಧ್ವನಿ ಮಾತ್ರ ಮತ್ತೂ ಜೋಲಿ ಹೊಡಿಲಿಕತ್ತಿತ್ತು.

'ವಿವರಿಸಿ ಹೇಳಪಾ. ಶೆರೆ ಕುಡಿಯೋದನ್ನ ಕಮ್ಮಿ ಮಾಡಬೇಕು ಅನ್ನವಾ ಶೆರೆದಂಗಡಿ ಬಾಜೂಕೇ ಯಾಕ ಮನಿ ಮಾಡಿದಿ?' ಅಂತ clarification ಕೇಳಿದೆ.

'ಶೆರೆ ಕಮ್ಮಿ ಮಾಡಬೇಕು ಅಂತ ವಿಚಾರ ಮಾಡಿದೆ. ಶೆರೆ ಕಮ್ಮಿ ಮಾಡಬೇಕು ಅಂದ್ರ ಮನಿಯೊಳಗ ಜಾಸ್ತಿ ಶೆರೆ ಇಟ್ಟುಕೋಬಾರದು. ಹೌದಿಲ್ಲೋ?' ಅಂತ ಪೀಠಿಕೆ ಇಟ್ಟ.

'ಬರೋಬ್ಬರಿ ಅದ. ಸ್ವಲ್ಪೇ ಶೆರೆ ತಂದಿಟ್ಟುಕೊಂಡು, ಅದನ್ನಷ್ಟೇ ಕುಡಿದು, ಲಗೂನೇ ಊಟ ಮಾಡಿ, ಮಕ್ಕೊಂಡುಬಿಡಬೇಕು. ಅದು ಬರೋಬ್ಬರಿ ಅದ. ಮುಂದ?' ಅಂತ ಕೇಳಿದೆ.

'ನಾನೂ ಹಾಂಗೇ ವಿಚಾರ ಮಾಡಿಯೇ, ಸ್ವಲ್ಪ ಸ್ವಲ್ಪ ಶೆರೆ ತೊಗೊಂಡು ಬಂದು ಕುಡಿಲಿಕ್ಕೆ ಕೂಡ್ತೇನಿ ನೋಡಪಾ. ಆದ್ರ ನಂತರ ಲಫಡಾ ಆಗಿಬಿಡ್ತದ,' ಅಂದ.

'ಏನು ಲಫಡಾ ಆಗ್ತದಪಾ?' ಅಂತ ಕೇಳಿದೆ. ಕುಡಿದ ಮ್ಯಾಲೆ ಆಗೋದೆಲ್ಲ ಲಫಡಾಗಳೇ. ಆದರೂ ಆ ಲಫಡಾಗಳಲ್ಲೇ ಯಾವ ಲಫಡಾ ಅಂತ ಕೆಟ್ಟ ಕುತೂಹಲ.

'ಏನು ಲಫಡಾ ಆಗ್ತದ ಅಂದ್ರ ತಂದ ಸ್ವಲ್ಪೇ ಶೆರೆ ಗಂಟಲದಾಗ ಬಿಟ್ಟುಕೊಳ್ಳೋ ತನಕಾ ಸ್ವಲ್ಪ ನಶಾ ಏರಿ ಇನ್ನೂ ಶೆರೆ ಬೇಕು ಅನ್ನಸ್ತದನೋ. ಬೇಕೇಬೇಕು ಅನ್ನಿಸ್ತದ. ಸ್ವಲ್ಪೇ ಶೆರೆ ಕುಡಿದು ಮಲಗೋಣ ಅಂತ ಮೊದಲು ಡಿಸೈಡ್ ಮಾಡಿದ್ದು ಎಲ್ಲಾ ಗಾಳಿಗೆ ಹಾರಿಹೋಗ್ತದ. ಮರ್ತೇಹೋಗ್ತದ. ಆವಾಗ ಮನಸ್ಸಿನ್ಯಾಗ ಇರೋದು ಅಂದ್ರ ಇನ್ನೂ ಶೆರೆ ಬೇಕು. ಭಾಳ ಬೇಕು. ಈಗೇ ಬೇಕು. ಶೆರೆ ಶೆರೆ. ಬೇಕೇಬೇಕು. ಇದೇ ಒಂದು ತಲಿಯಾಗ ಬರ್ತದ ನೋಡಪಾ,' ಅಂತ ಹೇಳಿ ಸಿಪ್ ತೆಗೆದುಕೊಳ್ಳಲು ಮಾತು ನಿಲ್ಲಿಸಿದ. 

ವಿಚಿತ್ರ ಕೇಸು. ಶೆರೆ ಬಿಡಬೇಕು ಅಂತ ಹೇಳಿ ಸ್ವಲ್ಪೇ ಶೆರೆ ತರ್ತಾನಂತ. ಆದ್ರ ಅಷ್ಟು ಕುಡಿದ ಮ್ಯಾಲೆ ಮತ್ತೂ ಶೆರೆ ಬೇಕೇಬೇಕು ಅಂತ ಭಾಳ ಅನ್ನಿಸ್ತದ ಅಂತ. ವಿಚಿತ್ರ ದೋಸ್ತ.

'ಸರಿ. ತಂದ ಸ್ವಲ್ಪೇ ಸ್ವಲ್ಪ ಶೆರೆ ಕುಡಿದಾದ ಮೇಲೆ ಮತ್ತೂ ಬೇಕು ಅಂತ ಅನ್ನಿಸ್ತದ. ಮುಂದ? ಏನು ಮಾಡ್ತೀ ಆವಾಗ?' ಅಂತ ಕೇಳಿದೆ.

'ಮೊದಲಿನ ಮನ್ಯಾಗ ಇದ್ದಾಗ ಶೆರೆದಂಗಡಿ ಸ್ವಲ್ಪ ದೂರ ಇತ್ತು. ಎಂತಾ ನಶಾ ಇದ್ದರೂ ಅದೇ ನಶಾದಾಗ ಡ್ರೈವ್ ಮಾಡಿಕೊಂಡು ಹೋಗಿ ಶೆರೆ ತೊಗೊಂಡು ಬರ್ತಿದ್ದೆ. ನಮ್ಮ ಕ್ಯಾಲಿಫೋರ್ನಿಯಾ ರಾಜ್ಯ ಅಂದ್ರ ಮಸ್ತ ನೋಡು. ರಾತ್ರಿ ಎರಡರಿಂದ ಮುಂಜಾನೆ ಆರರ ತನಕ, ಒಂದು ನಾಲ್ಕು ತಾಸು ಶೆರೆ ಮಾರಂಗಿಲ್ಲ. ದಿನದಾಗ ಬಾಕಿ ಇಪ್ಪತ್ತೂ ತಾಸೂ ಶೆರೆ ಸಿಗ್ತಾವ ನೋಡಪಾ. ಬೆಸ್ಟ್. ರಾತ್ರಿ ಎರಡು ಹೊಡೆಯೋಕಿಂತ ಮೊದಲು ಹೋಗಿ ತಂದುಬಿಟ್ಟರಾತು. ನಂತರ ಮತ್ತ ಮುಂಜಾನೆ ಆರರಿಂದ ಸಿಗ್ತದ. ನಡು ನಾಲ್ಕು ತಾಸು ಇಲ್ಲ ಅಷ್ಟೇ,' ಅಂದ.

'ಶಿವ ಶಿವಾ! ಏನಲೇ ಇದು? ನಶಾದಾಗ ಗಾಡಿ ಹೊಡಕೊಂಡು ಹೋಗಿ ಶೆರೆ ತರೋದರ ಬದಲಿ ಸ್ವಲ್ಪ ಹೆಚ್ಚೇ ಶೆರೆ ತಂದು ಇಟ್ಟುಕೊಳ್ಳಲಿಕ್ಕೆ ಏನು ಧಾಡಿಲೇ ನಿನಗ?' ಅಂತ ಕೇಳಿದೆ.

'ಹೇಳಿದನಲ್ಲೋ! ಶೆರೆ ಕಮ್ಮಿ ಮಾಡಬೇಕು ಅಂತ ವಿಚಾರ ಮಾಡೇನಿ ಅಂತ. ಹಾಂಗಿದ್ದಾಗ ತರೋವಾಗೇ ಸ್ವಲ್ಪ ಹೆಚ್ಚಿಗೆ ತೊಗೊಂಡು ಬಾ ಅಂತೀಯಲ್ಲಾ? ಹಾಂ?' ಅಂದ.

'ಮತ್ತೇನಲೇ? ಶೆರೆ ಕಮ್ಮಿ ಮಾಡಬೇಕು ಅಂತ ವಿಚಾರ ಮಾಡಿ ಕಮ್ಮಿ ತರ್ತಿ. ಅಷ್ಟು ಕುಡಿದ ಮ್ಯಾಲೆ ಮತ್ತೂ ಬೇಕು ಅನ್ನಿಸ್ತದ. ಆವಾಗ ಡ್ರೈವ್ ಮಾಡಿಕೊಂಡು ಹೋಗಿ ಮತ್ತ ತರ್ತಿ ಅಂತಿ. ಏನಲೇ?' ಅಂತ ಝಾಡಿಸಿದೆ.

'ಹಾಂ! ಅದಕ್ಕೇ ನೋಡು ಶೆರೆದಂಗಡಿ ಬಾಜೂಕನೇ ಮನಿ ಮಾಡಿದೆ! ಡ್ರೈವ್ ಮಾಡಿಕೊಂಡು ಹೋಗೋ ಪ್ರಾಬ್ಲಮ್ ಇಲ್ಲ ನೋಡು. ಅವನೌನ್, ಲುಂಗಿ ಎತ್ತಿ ಕಟ್ಟಿಕೊಂಡು, ಮನಿ ಬಿಟ್ಟು, ಕಾಂಪೌಂಡ್ ಹೊರಗ ಬಂದು ನಾಲ್ಕು ಹೆಜ್ಜೆ ಹಾಕಿಬಿಟ್ಟರ ಆತು. ಬಂತು ಶೆರೆದಂಗಡಿ. ಅಷ್ಟೇ ರಾತ್ರಿ ಎರಡು ಹೊಡೆಯೋದ್ರೊಳಗೇ ಹೋಗಬೇಕು. ಹೋದಾ, ತಂದಾ, ಮತ್ತ ಗಿಚ್ಚಾಗಿ ಕುಡದು ಮಕ್ಕೊಂಡಾ ನೋಡಪಾ. ಹ್ಯಾಂಗದ ಐಡಿಯಾ? ಕುಡಿದ ನಶಾದಾಗ ಕಾರ್ ಡ್ರೈವ್ ಮಾಡೋ ಕೆಲಸಿಲ್ಲ,' ಅಂದ.

ಹೇಳಿದ್ದು ಬರೋಬ್ಬರಿನೇ ಅದ. ಕ್ಯಾಲಿಫೋರ್ನಿಯಾ ಕುಡುಕರಿಗೆ ಸ್ವರ್ಗ ಇರಬಹದು. ವರ್ಷದ ಅಷ್ಟೂ ದಿವಸವೂ ದಿನದ ಇಪ್ಪತ್ನಾಲ್ಕು ತಾಸಿನಲ್ಲಿ ಇಪ್ಪತ್ತು ತಾಸು ಎಲ್ಲಾ ತರಹದ ಶೆರೆ ಫುಲ್ ಸಿಗ್ತಾವ. ಸಣ್ಣ ಸಣ್ಣ ಅಂಗಡಿಗಳಲ್ಲೂ ಲಭ್ಯ. ಪೆಟ್ರೋಲ್ ಬಂಕ್, ಔಷಧಿ ಅಂಗಡಿ, ಸೂಪರ್ ಮಾರ್ಕೆಟ್ ಹೀಗೆ ಎಲ್ಲ ಕಡೆ ಶೆರೆ ಲಭ್ಯ. ಕುಡಿದು ಮಜಾ ಮಾಡಿ. ಅಷ್ಟೇ ಕುಡಿದು ಡ್ರೈವ್ ಮಾಡುವವರಿಗೆ ಮಾತ್ರ ನರಕ. ಸಿಕ್ಕಿಬಿದ್ದರೆ ಬಾಕಿ ರಾಜ್ಯಗಳಿಗಿಂತ ಸಿಕ್ಕಾಪಟ್ಟೆ ಸ್ಟ್ರಿಕ್ಟ್. ಶಿಕ್ಷೆಯೂ ಜಾಸ್ತಿ. ಲೈಸೆನ್ಸ್ ರದ್ದು ಮಾಡಿಯೇಬಿಡುತ್ತಾರೆ.

'ಹೂಂ! ಕುಡಿದು ಡ್ರೈವ್ ಮಾಡಿ ಸಿಕ್ಕೊಂಡುಬಿದ್ದು ಮಂಗ್ಯಾ ಆಗೋದು ಬ್ಯಾಡಾ ಅಂತ ವಿಚಾರ ಮಾಡಿ ಸರಳ ನಡಕೊಂಡು ಹೋಗಿ ತರಬಹುದಾದಷ್ಟು ದೂರ ಇರುವ ಹಾಂಗ ಮನಿ ಮಾಡಿದಿ ಅಂತಾತು. ಈ ಸಿಸ್ಟಮ್ ಹ್ಯಾಂಗ ನಡದದ?' ಅಂತ ಕೇಳಿದೆ.

'ಇದು ಛಲೋನೇ ನಡದದ. ಏನು ತೊಂದ್ರಿ ಇಲ್ಲ. ಆದ್ರ ಒಂದು ಸಣ್ಣ ಪ್ರಾಬ್ಲಮ್ ನೋಡಪಾ,' ಅಂದ.

'ಏನಲೇ ಪ್ರಾಬ್ಲಮ್? ನೀ ರಾತ್ರಿ ಎರಡಾದ ಮೇಲೂ ಹೋಗಿ ಶೆರೆ ಕೊಡ್ರಿ ಅಂತ ಕೇಳಿದರ ಯಾರೂ ನಿನಗ ಶೆರೆ ಕೊಡಂಗಿಲ್ಲ. ಅವರ ಅಂಗಡಿ ಲೈಸೆನ್ಸ್ ಹೋಗ್ತದ ಹಾಂಗೇನರ ಮಾಡಿದ್ರ,' ಅಂತ ಹೇಳಿದೆ.

'ಅದಲ್ಲಪಾ ಪ್ರಾಬ್ಲಮ್. ಪ್ರಾಬ್ಲಮ್ ಏನಂದ್ರ ಈ ಹೊಸಾ ಮನಿ ಸುತ್ತ್ಮುತ್ತ ಭಾಳ ಮಂದಿ ಕುಡುಕರು ಭೆಟ್ಟಿ ಆಗ್ತಾರ ನೋಡಪಾ. ಅದೇ ದೊಡ್ಡ ಪ್ರಾಬ್ಲಮ್' ಅಂದುಬಿಟ್ಟ.

ಇವನೇ ದೊಡ್ಡ ಬೆವಡಾ ಆದ್ಮಿ. ಬ್ಯಾರೆ ಮಂದಿಗೆ ಕುಡುಕರು ಅನಕೋತ್ತ!

'ಅಲ್ಲಲೇ, 'ಶೆರೆದಂಗಡಿ ಬಾಜೂಕೆ ಮನೆಯ ಮಾಡಿ ಕುಡುಕರಿಗೆ ಅಂಜಿದೊಡೆ ಎಂತಯ್ಯಾ?' ಅಂತ ಹೇಳಿಕೋಬೇಕು. ಹೊಯ್ಕೋಬೇಕು. ಅಂದ್ರ ಕುಡುಕರ ಬಗ್ಗೆ ಅಷ್ಟು ಲಕ್ಷ್ಯ ಹೋಗೋದಿಲ್ಲ. ನಿನ್ನ ಮನಿನೇ ಶೆರೆದಂಗಡಿ ಬಾಜೂ. ಹಾಂಗಿದ್ದಾಗ ಅಲ್ಲೆ ಮತ್ತ ಕುಡುಕರು ಸಿಗದೇ ಇನ್ನೇನು ಸ್ನಾನ ಮಾಡಿ ಗುಡಿಗೆ ಹೋಗೋ ಭಕ್ತರ ಟೈಪಿನ ಮಂದಿ ಸಿಗ್ತಾರೇನು? ಇಲ್ಲ. ಸ್ವಲ್ಪ ಅಡ್ಜಸ್ಟ್ ಮಾಡಿ,' ಅಂದೆ.

'ನೀ ಹೇಳೋದೂ ಬರೋಬ್ಬರಿ ಅದ ಬಿಡು. ಕುಡುಕರು ಸಿಕ್ಕರೂ, ಕುಡುಕರು ಕಂಡರೂ ಯಾರೂ ಏನೂ ಮಾಡೋದಿಲ್ಲ. ಅವರೂ ಸಹ ಅಷ್ಟು ಕುಡಿದಿದ್ದರೂ, 'Hi, How you doing?' ಅಂತ ಪ್ರೀತಿಯಿಂದನೇ ಮಾತಾಡಸ್ತಾವ ನೋಡಪಾ ಇಲ್ಲಿ ಮಂದಿ. ವಿಚಿತ್ರ ತಲಿ,' ಅಂದ. ನಂತರ ಕೆಲವು ಕ್ಷಣ ಮಾತುಕತೆ ಇರಲಿಲ್ಲ. ಖಾಲಿಯಾದ ತೀರ್ಥದ ಬಟ್ಟಲನ್ನು ತುಂಬಿಸಿಕೊಂಡು ಬರಲು ಹೋಗಿರಬೇಕು.

'ಅಲ್ಲಲೇ, ಒಂದು ಮಾತು ಹೇಳು. ಸ್ವಲ್ಪೇ ಕುಡಿದಾದ ಮ್ಯಾಲೆ ಮತ್ತೂ ಶೆರೆ ಬೇಕು ಅಂತ ಯಾಕ ಅನ್ನಿಸ್ತದ? ಅಷ್ಟೇ ಕುಡಿದದ್ದು ಸಾಕು, ಎದ್ದು ಹೋಗಿ ಊಟ ಮಾಡಿ ಮಲಗಿಬಿಡೋಣ ಅಂತ ಯಾಕ ಅನ್ನಿಸಂಗಿಲ್ಲ?' ಅಂತ ಕೇಳಿಬಿಟ್ಟೆ. ಕೇಳಿ ದೊಡ್ಡ ತಪ್ಪು ಮಾಡಿಬಿಟ್ಟೆ.

ಮುಂದೆ ಐದು ನಿಮಿಷ ಆಂವಾ ಮಾತಾಡಲಿಲ್ಲ. ಗೊಳೋ ಅಂತ ಅತ್ತ. ಅಳುವ ಮಂದಿನ ಅಳಲಿಕ್ಕೆ ಬಿಡಬೇಕು. ಡಿಸ್ಟರ್ಬ್ ಮಾಡಬಾರದು.

ಅತ್ತು ಮುಗೀತು. ಮೂಗಿನ್ಯಾಗ ಗೊಸ್ ಗೊಸ್ ಮಾಡಿಕೋತ್ತನೇ ಮಾತಾಡ್ಲಿಕತ್ತಿತು ನಮ್ಮ ದೋಸ್ತ, 'ಮಕ್ಕಳು ಭಾಳ ನೆನಪಾಗ್ತಾರೋ. ಮಕ್ಕಳು..... ಮಕ್ಕಳು..... ನನ್ನ ಮಕ್ಕಳು. ಸಣ್ಣದಂತೂ ಇನ್ನೂ ಕೂಸೋ...... ಅಯ್ಯೋ! ನನ್ನ ಮಕ್ಕಳು. I miss them a lot!' ಅಂತ ಅಂದವನೇ ಮತ್ತ ಸ್ವಲ್ಪ ಅತ್ತ.

ಪಾಪ! ಡೈವೋರ್ಸ್ ಗಿರಾಕಿ. ಅದೂ ಕ್ಯಾಲಿಫೋರ್ನಿಯಾದ ಡೈವೋರ್ಸ್ ಕಾನೂನು ಅಂದರೆ ಗಂಡಸು ಫುಲ್ ಬೋಳಿಸಿಕೊಂಡು ಶಿವಾಯ ನಮಃ. ಮಕ್ಕಳಿದ್ದರಂತೂ ಮುಗಿದೇ ಹೋಯಿತು. ಮೈಮೇಲಿನ ಲಂಗೋಟಿಯೊಂದು ಉಳಿದರೆ ಅದೇ ದೊಡ್ಡ ಮಾತು. ಬಾಕಿ ಅಷ್ಟೂ ಆಸ್ತಿಯನ್ನು ಕಿತ್ತಿಕೊಂಡು ಹೆಂಡತಿ ಮಕ್ಕಳಿಗೆ ಕೊಟ್ಟುಬಿಡುತ್ತದೆ ಕೋರ್ಟ್. ಮಹಿಳಾಪರ, ಮಕ್ಕಳಪರ ಕಾನೂನು. ಹಾಗಾಗಿ ಈ ಪುಣ್ಯಾತ್ಮ ಡೈವೋರ್ಸ್ ಆಗಿ, ಫುಲ್ ಬೋಳಿಸಿಕೊಂಡ ಕ್ಲೀನ್ ಕಿಟ್ಟಪ್ಪನಾಗಿ, ಮನೆ ಮಠ ಎಲ್ಲ ಹೆಂಡತಿಗೆ ಒಪ್ಪಿಸಿ, ಬೇರೆ ಒಂದು ಅಪಾರ್ಟ್ಮೆಂಟ್ ಮಾಡಿಕೊಂಡು ಇದ್ದಾನೆ.

'ಏನು ಮಾಡಲಿಕ್ಕೆ ಬರ್ತದಪಾ? ಆಗಿದ್ದು ಆಗಿಹೋತು. ವಾರಕ್ಕೋ ಹದಿನೈದು ದಿವಸಕ್ಕೋ ಮಕ್ಕಳನ್ನು ಭೆಟ್ಟಿ ಮಾಡಲಿಕ್ಕೆ ಅವಕಾಶ ಮಾಡಿಕೊಟ್ಟಾರಲ್ಲಾ ಅದೇ ದೊಡ್ಡ ನಸೀಬಾ ಅಂತ ತಿಳ್ಕೋ ಮಾರಾಯಾ. 'ಅದನ್ನೂ ಸಹ ಕೊಡಬಾರದು. ನನ್ನ ಗಂಡ ಭಾಳ ಲಪುಟ ಇದ್ದಾನ. ಆಂವಾ ಪದೇ ಪದೇ ಮಕ್ಕಳನ್ನು ಭೆಟ್ಟಿಯಾದ ಅಂದ್ರ ಮಕ್ಕಳ ಮ್ಯಾಲೆ ಕೆಟ್ಟ ಪರಿಣಾಮ ಬೀರ್ತದ,' ಅಂತ ನಿನ್ನ ಮಾಜಿ ಹೆಂಡತಿ ಕೊರ್ಟಿನ್ಯಾಗ ಹೊಯ್ಕೊಂಡಿದ್ದಳು. ನಿನ್ನ ಸ್ವಚ್ಛ ಆಗಿ ಬೋಳಿಸಿ judgement ಕೊಟ್ಟರೂ judge ಸಾಹೇಬರು ದೊಡ್ಡ ಮನಸ್ಸು ಮಾಡಿ ಮಕ್ಕಳನ್ನ ನೋಡೋ ಅವಕಾಶ ಮಾಡಿಕೊಟ್ಟರು. ಅದನ್ನೇ ಉಪಯೋಗ ಮಾಡಿಕೋಪಾ,' ಅಂತ ಏನೋ ಸ್ವಾಂತನ ಹೇಳಿದೆ.

'ಮಕ್ಕಳು ನೆನಪಾಗ್ತಾವ ಅಂತೀ. ಹೆಂಡ್ತಿ ನೆನಪಾಗಂಗಿಲ್ಲಾ?' ಅಂತ ಸಣ್ಣ ಫಿಟ್ಟಿಂಗ್ ಇಟ್ಟೆ.

'ಅಕಿನೌನ್! ಅಕಿನ್ನ ಹ್ಯಾಂಗ ಮರೀಲೋ. ಡ್ರಾಕುಲಾ ಅದು. ನನ್ನ ರಕ್ತ ಹೀರಿದ ಡ್ರಾಕುಲಾ. ದೆವ್ವ, ಡಾಕಿಣಿ, ಶಾಕಿಣಿ, ಪಿಶಾಚಿ ಅಕಿ. ನನ್ನ ಮಕ್ಕಳು ನನಗ ಪಿತಾಜಿ ಅಂತಾವ. ಸಣ್ಣ ಕೂಸಿಗೆ ಇನ್ನೂ ಸರಿ ಮಾತು ಬರೋದಿಲ್ಲ. ಅದು ಪಿತಾಜಿ ಅನ್ನಲಿಕ್ಕೆ ಹೋಗಿ ಪಿಶಾಚಿ ಅಂತದ. ನಾ ಹೇಳಿಕೊಟ್ಟೆ, 'ನನ್ನ ಮುದ್ದು ಕೂಸ, ನಾ ಪಿತಾಜಿ ನಿಮ್ಮವ್ವಾ ಪಿಶಾಚಿ' ಅಂತ. ಅದು ಬೊಚ್ಚು ಬಾಯಿ ತೆಗೆದು ನಕ್ಕಿತು. ಕೇಳಿ ಅವರ ಅವ್ವಾ ಪಿಶಾಚಿ ಹೀಂಗ ಉರಕೊಂಡಳು ಅಂದ್ರ. ಮಸ್ತ ಇತ್ತು ಸೀನು,' ಅಂದ.

'ಅಲ್ಲಲೇ, ನಿಮ್ಮದು ಲವ್ ಮ್ಯಾರೇಜ್ ಬ್ಯಾರೆ. ಅದೂ love at first sight ಅಂತ ಬ್ಯಾರೆ ಹೇಳ್ತಿದ್ದಿ. ಅಂದೆಂಗ ಅಂತಾ ಲವ್ ಇಷ್ಟು ಲಗೂ ಖಲಾಸ್ ಆಗಿಬಿಡ್ತು?' ಅಂತ ಕೇಳಿದೆ. ಕ್ಲೋಸ್ ದೋಸ್ತ. ನನ್ನ ಜೋಡಿ ಫ್ರೀ ಇದ್ದಾನ.

'ನೋಡಪಾ ದೋಸ್ತ ನಿನಗ ಒಂದು ಮಾತು ಹೇಳತೇನಿ..... ಅದು ಅದು..... ' ಅಂತ ತೊದಲಿದ. ಮಸ್ತ ನಶಾ ಏರಿರಬೇಕು.

'love at first sight ಇಲ್ಲಾ. ಏನ್ ಸುಡುಗಾಡೂ ಇಲ್ಲ. love at first sight ಅಂತ. love at first sight. My foot. ಈ love at first sight ಎಲ್ಲಾ ಫುಲ್ ಬೋಗಸ್ ನೋಡಪಾ. ಅವನೌನ್! love at first sight ಹಾಳಾಗಿ ಹೋಗಲಿ love at first night ಸುದಾ ಆಗೋದಿಲ್ಲ ನೋಡಪಾ. ಎಲ್ಲಾ ಬೇಕಾರ್ ಬೋಗಸ್!' ಅಂದು ಮತ್ತೊಮ್ಮೆ ಸೊರ್ರ್ ಅಂತ ದೀರ್ಘವಾಗಿ ತೀರ್ಥದ ಸಿಪ್ ತೊಗೊಂಡ. ತೀರ್ಥ ಮುಗಿದಿತ್ತು ಅಂತ ಕಾಣಿಸ್ತದ. ಐಸ್ ಕ್ಯೂಬುಗಳು ಗ್ಲಾಸಿನಲ್ಲಿ ಕಿಣಿಕಿಣಿ ಆವಾಜ್ ಮಾಡಿದವು.

'ಹಾಂಗಂತೀಯಾ?' ಅಂದೆ.

'ಅನ್ನೋದೇನು ಬಂತೋ? ಬರೆದು ಕೊಡಲೇನು? ನನಗೇನೂ ಹೆದರಿಕೆ ಇಲ್ಲ. love at first sight is full bullshit ಅಂತ ಬರೆದುಕೊಡಲಿಕ್ಕೆ ನಾಯೇನೂ ಅಂಜಂಗಿಲ್ಲ. ತಿಳೀತಾ?' ಅಂತ ಹೇಳಿ ಸ್ವಲ್ಪ ರೌದ್ರ ಸೌಂಡ್ ಕೊಟ್ಟ.

'ಮತ್ತ? ಊಟ ಆತ?' ಅಂತ ಕೇಳಿದೆ.

'ಇಲ್ಲೋ. ಇನ್ನೂ ಕುಡಿದೇ ಮುಗಿದಿಲ್ಲ. ಎಲ್ಲಿ ಊಟ? ಇನ್ನೂ ಭಾಳ ಕುಡಿಯೋದು ಅದ. ನಂತರ ಹೋಶ್ ಇದ್ದರ ಊಟ. ಒಮ್ಮೊಮ್ಮೆ ಕುಡಕೋತ್ತ ಕುಡಕೋತ್ತ, ನಶಾ ಹತ್ತಿ, ಹಾಂಗೆ ಮಕ್ಕೊಂಡು ಬಿಟ್ಟಿರತೇನಿ ನೋಡಪಾ,' ಅಂದುಬಿಟ್ಟ. ಕೇಳಿ ಪಾಪ ಅನ್ನಿಸ್ತು.

'ಅಲ್ಲಾ, ಬಾಜೂಕಿನ ಶೆರೆದಂಗಡಿಗೆ ಹೋಗಿ ಬರುವ ಇವತ್ತಿನ ಕಾರ್ಯಕ್ರಮ ಮುಗಿತೋ ಅಥವಾ ಇನ್ನು ಮ್ಯಾಲೆ ಲುಂಗಿ ಎತ್ತಿ ಕಟ್ಟಿಕೊಂಡು, ಲುಂಗಿ ಡಾನ್ಸ್ ಮಾಡಿಕೋತ್ತ ಶೆರೆ ತರಲಿಕ್ಕೆ ಹೋಗಬೇಕೋ? ಏನದ ಪ್ಲಾನ್?' ಅಂತ ಕೇಳಿದೆ.

'ಶೆರೆ ಕಮ್ಮಿ ಮಾಡೇಬಿಡಬೇಕು ಅಂತ ಭಾಳ ಕಮ್ಮಿ ತಂದಿದ್ದೆ ಇವತ್ತು. ಹಾಂಗಾಗಿ ಬಾಜೂಕಿನ ಶೆರೆ ಅಂಗಡಿಗೆ ಭಾಳ ಲಗೂನೆ ಹೋಗಿ ಬರಬೇಕಾತು. ಮತ್ತ ಮತ್ತ ಎಲ್ಲಿ ಹೋಗಿ ಬಂದು ಮಾಡಿಕೋತ್ತ ಇರೋದು ಅಂತ ಹೇಳಿ ಹೋದವ ಜಗ್ಗೆ ಶೆರೆ ತಂದುಕೊಂಡುಬಿಟ್ಟೆ. ಹಾಂಗಾಗಿ ಮತ್ತ ಹೋಗೋ ಜರೂರತ್ತು ಬರಲಿಕ್ಕಿಲ್ಲ. ಬಂದ್ರ ಹೋಗಿ ತರ್ತೇನಿ ತೊಗೋ. ಎಷ್ಟು ದೂರ ಅದ? ಕುಡಿದು ಜೋಲಿ ಹೊಡೆಯೋದಂತೂ ಇದ್ದೇ ಅದ. ಹಾಂಗ ಜೋಲಿ ಹೊಡೆದು ಬಿದ್ದರ ಶೆರೆದಂಗಡಿ ಬಾಗಿಲದಾಗ ಬಿದ್ದಿರಬೇಕು. ಅಷ್ಟು ಹತ್ತಿರದ. No worries!' ಅಂದುಬಿಟ್ಟ.

'ಹೂಂ. ಹೊತ್ತು ಭಾಳಾತು. ನಾ ಫೋನ್ ಇಡ್ತೇನಿ. ಮತ್ತ ಸಿಗೋಣ. ಮತ್ತ ಮಾತಾಡೋಣ. ಓಕೆ?' ಅಂತ ಕೇಳಿ ಫೋನ್ ಇಡಲಿಕ್ಕೆ ರೆಡಿ ಆದೆ.

'sure, sure. ಮನಿಗೆ ಬಂದರೇ ಬಾರಪಾ. ಹಗಲು ಹೊತ್ತಿನ್ಯಾಗೇ ಪಾರ್ಟಿ ಮಾಡಿಬಿಡೋಣ. ಗಿಚ್ಚಾಗಿ ಪಾರ್ಟಿ ಮಾಡೋಣ,' ಅಂದುಬಿಟ್ಟ.

ಇದು ಸುಧಾರಿಸುವ ಕೇಸಲ್ಲ ಅಂತ ಹೇಳಿ ಫೋನಿಟ್ಟೆ.

ಯಾಕೋ ಮನಸ್ಸಿಗೆ ಭಾಳ ಕೆಟ್ಟ ಅನ್ನಿಸ್ತು.

ವಿ. ಸೂ: ಇದೊಂದು ಕಾಲ್ಪನಿಕ ಕಥೆ.

ಮದ್ಯ ಮತ್ತು ಮಧ್ಯ

ಮದ್ಯವಯಸ್ಕ = ಮದ್ಯಪಾನ ಮಾಡಲು ಕಾನೂನು ನಿರ್ಧರಿಸಿದ ವಯಸ್ಸನ್ನು ತಲುಪಿದವ / ತಲುಪಿದವಳು. (ಸಾಮಾನ್ಯವಾಗಿ ೨೧ ವರ್ಷ )

ಮಧ್ಯವಯಸ್ಕ = ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ಮದ್ಯವಯಸ್ಕರಾಗಿದ್ದವರು ಈಗ ಮಧ್ಯವಯಸ್ಕರು. (೪೫ ವರ್ಷದ ಮೇಲಿನವರು)

ಮದ್ಯರಾತ್ರಿ = ಕುಡಿಯುವ ರಾತ್ರಿಗಳು. ಕೆಲವರಿಗೆ ದಿನವೂ ಮದ್ಯರಾತ್ರಿ. ಕುಡಿಕುಡಿಯುತ್ತ ಜೊತೆಗೆ ಕುಣಿಕುಣಿಯುತ್ತ ವೇಳೆ ಮಧ್ಯರಾತ್ರಿಯಾಗಿದ್ದೂ ಖಬರು ಇರುವದಿಲ್ಲ.

ಮದ್ಯಸ್ತಿಕೆ = ಮದ್ಯ ಕುಡಿದ ನಂತರ ಜಗಳ ಬಗೆಹರಿಸಲು ಹೋಗುವದು. ಆದರೆ ಮದ್ಯ ಸೇವಿಸಿದಾಗ ಮಧ್ಯಸ್ತಿಕೆ ಮಾತ್ರ ಮಾಡಲಿಕ್ಕೆ ಹೋಗಬಾರದು. 'ಕುಡಕ ಸೂಳಿಮಗನss' ಅಂತ ಬೈಸಿಕೊಂಡು, ಧರ್ಮದೇಟು ತಿನ್ನುವ ಅಪಾಯವಿರುತ್ತದೆ. ಆದರೆ ಕುಡಿದಾಗಲೇ ಮಧ್ಯಸ್ತಿಕೆ ಮಾಡಲಿಕ್ಕೆ ಏಳುವವರೇ ಜಾಸ್ತಿ. ಸಿಕ್ಕಾಪಟ್ಟೆ ಧೈರ್ಯ ಬರುವದು ಆವಾಗಲೇ ನೋಡಿ. ಒಳಗೆ ಸೇರಿದರೆ ಗುಂಡು, ಎಲ್ಲರೂ ಆಗುವರು ಗಂಡು!

ಮದ್ಯಸ್ತ = ಕುಡಿಕುಡಿದೇ ಅಸ್ತನಾಗಿ (ಮುಳುಗಿ) ಹೋದವ.

ಮತ್ಯಾವದಾದರೂ ಗೊತ್ತಿದ್ದರೆ ತಿಳಿಸಿ. :)

Work life balance or life work balance?


Work life balance. Or is it other way round, life work balance? Lifestyle where work dominates and determines what kind of life you can have is work life balance. That's the typical corporate treadmill. More and more work is dumped on you and you skimp on life's priorities to keep up with ever increasing workload.

Life work balance is what we mean when we say work life balance but we do not make conscious choices. Life work balance means your life and what you want out of life determine your work and the amount of work you want to do.

So remember that it is life work balance and not work life balance. This nugget of wisdom came from a very senior exec that I work for (two levels below him). He was talking to some of us in an informal setting and was sharing what his priorities are as an individual and as an exec. He kept saying life work balance again and again. I thought he meant work life balance. Looks like he read my mind and explained the above mentioned twist to a much thrown around term - work life balance. It is is indeed life work balance. Choose the kind of work that supports your life and life's goals and not the other way around. He practices it and still a reasonably senior exec. One of the very few that I have met who say they are able to practice life work balance. Most of the senior execs give up life for work because that's just the way things are. You can't be running a large corporation and then say you want to work only certain number of hours, that too in a way you want. That does not fly. You might get compensated well for sacrificing your life for work but part-time workers, people wanting a laid back lifestyle are not going to make a cut.

Got to give up something to get something else. But if your life work balance is out of whack just to make a basic living (food, shelter and clothes) then you better look for something else or get better skills. Meeting basic needs should not require one to make big sacrifices. That is meeting basic needs only and not wants. Big difference between needs and wants. If you want to own houses, multiple cars, big bank balance, bigger inheritance for kids, flashy lifestyle etc. then only thing possible is work life balance because you need to work like anything to support your desired lifestyle. If you have chosen that route then do not complain about not being able to achieve life work balance. Make peace with it and work like crazy and hope that at least some of your wants and desires are fulfilled (even if you die in the process). Tired of people complaining about the amount of work they have to do. Self inflicted injury is what that is.

I admire what Jack Welch, ex-CEO of GE, said. He said very honestly but very bluntly. "There is no work life balance. Get used to it." Agreed. But you can create a semblance of life work balance by making right choices and then being happy with those choices.

Have a great weekend. May you be happy with your choice whether it is Work life balance or life work balance :)
 
(Copied from my Facebook status)

Thursday, February 25, 2016

ಹೊಡೆಹೊಡೆಯುತಾ ನಲಿ ನಲಿ ಏನೇ ಆಗಲಿ...

ನಮ್ಮ ಧಾರವಾಡ ಕನ್ನಡ ಭಾಷೆಯಲ್ಲಿ 'ಹೊಡೆಯುವದು' ಜಾಸ್ತಿ. ಅಂದರೆ ಬಾಕಿ ಯಾರೂ ಹೊಡೆಯದಿದ್ದನ್ನೂ ಸಹ ನಮ್ಮ ಕಡೆ ಮಂದಿ ಹೊಡೆದೇಬಿಡುತ್ತಾರೆ.

ನಮ್ಮ ಧಾರವಾಡ ಕಡೆ ಕಾರ್, ಸ್ಕೂಟರ್, ಬೈಕ್, ಇತ್ಯಾದಿ ವಾಹನಗಳನ್ನು ಯಾರೂ ಚಲಾಯಿಸುವದಿಲ್ಲ. ಬದಲಾಗಿ ಹೊಡೆಯುತ್ತಾರೆ. 'ಗಾಡಿ ಹೊಡಿತಿರೇನು?' ಅಂತ ಕೇಳಿದರೆ ಗಾಡಿಗೆ ಕಟ್ಟಿದ ಎತ್ತು, ಕುದುರೆಯನ್ನು ಹೊಡೆಯುತ್ತೀರೋ ಅಂತಲ್ಲ. ಗಾಡಿಯನ್ನು ಚಲಾಯಿಸಬಲ್ಲಿರೇನು ಅಂತ ಕೇಳಿದಂತೆ.

ನಿದ್ದೆ? ನಿದ್ದೆ ಮಾಡುವದಿಲ್ಲ. ಭರ್ಜರಿ ಊಟ ಹೊಡೆದ ನಂತರ ಗಡದ್ ನಿದ್ದೆ ಹೊಡೆಯುತ್ತೇವೆ. ನಿದ್ದೆಯಲ್ಲಿ ಗೊರಕೆ? ಅದನ್ನೂ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಹೊಡೆಯುತ್ತಾರೆ.

ಲಂಚ? ತಿನ್ನುವದಿಲ್ಲ. ಲಂಚ ಕೂಡ ಹೊಡೆಯುತ್ತಾರೆ. ಊಟ ತಿನ್ನುವದನ್ನು ಬಿಟ್ಟು ಹೊಡೆಯುತ್ತಾರೆ ಅಂದ ಮೇಲೆ ಲಂಚ ಹೇಗೆ ತಿಂದಾರು? ಅದನ್ನೂ ಹೊಡೆದೇ ಹಾಕುತ್ತಾರೆ.

ಪರೀಕ್ಷೆಯಲ್ಲಿ ಕಾಪಿ ಮಾಡುತ್ತಾರೆಯೇ? ಎಲ್ಲಿಯದು ಬಿಡ್ರೀ. ಕಾಪಿ ಹೊಡೆಯುತ್ತಾರೆ. ಕೆಲವು ಕಡೆ ಕಾಪಿ ಹೊಡೆಸುತ್ತಾರೆ ಕೂಡ. ಹೊಡೆಯುವವರು, ಹೊಡೆಸುವವರು ಒಂದೇ ಕಡೆ ಸಂಗಮವಾಗುವದು ಕಾಪಿ ಹೊಡೆಯುವ ಸಂದರ್ಭದಲ್ಲೇ ಇರಬೇಕು.

ಕ್ರಿಕೆಟ್ ಆಡುವಾಗ ರನ್ ಬಾರಿಸುವದಿಲ್ಲ. ಗಳಿಸುವದೂ ಇಲ್ಲ. ರನ್ ಕೂಡ, once again, ಹೊಡೆಯುತ್ತಾರೆ. ಯಾರಾದರೂ ರನ್ ಮಾಡದೇ ಬಾಲುಗಳನ್ನು ವೇಸ್ಟ್ ಮಾಡಿದರೆ, ಪೆವಿಲಿಯನ್ನಿಂದ ಆಜ್ಞೆ ಬರುತ್ತದೆ - 'ಲಗೂ ಲಗೂ ರನ್ ಹೊಡಿ. ಇಲ್ಲಾ ಔಟ್ ಆಗಿ ಬಾ. ಟೈಮ್ ಖೋಟಿ ಮಾಡಿದ್ದು ಸಾಕು.' ಒಮ್ಮೆ ಹಾಗೆ ಆಜ್ಞೆ ಬಂತು ಅಂದರೆ ಮುಗಿಯಿತು. ಬ್ಯಾಟುಗಾರ 'ಹಿಟ್ಟರ್ಗೆಟ್' ಅವತಾರ ತಾಳಿ, ದಾಂಡಿಗನಂತೆ ಎತ್ತರಪತ್ತರ ಬ್ಯಾಟ್ ತಿರುಗಿಸುತ್ತಾನೆ. ತಾಕಿದರೆ ರನ್. ಇಲ್ಲವಾದರೆ ವಿಕೆಟ್ ಶಿವಾಯ ನಮಃ! Hit or get out ಅನ್ನುವ ಇಂಗ್ಲಿಷ್ ವಾಣಿ ನಮ್ಮ ಧಾರವಾಡ ಮಂದಿಯ ಬಾಯಿಯಲ್ಲಿ ಹಿಟ್ಟರ್ಗೆಟ್ ಆಗಿಬಿಟ್ಟಿದೆ. ಹೋಗ್ಗೋ ಇದರ!

ಇನ್ನು ಹಾಕ್ಯಾಟದಲ್ಲಿ ಮತ್ಲಬ್ ಹಾಕಿ ಆಟದಲ್ಲಿ ಕೂಡ ಗೋಲ್ ಹೊಡೆದು ಗೋಲ್ಮಾಲ್ ಮಾಡುತ್ತಾರೆಯೇ ವಿನಃ ಗೋಲ್ ಗಳಿಸುವದಿಲ್ಲ. ಹಾಕ್ಯಾಟದಲ್ಲೂ ಹೊಡೆದಾಟ, ಗೋಲಿಗಾಗಿ.

ಹೊಡೆಯುವ ಹುಚ್ಚು ಎಲ್ಲಿ ತನಕ ಹೋಗುತ್ತದೆ ಅಂದರೆ ನಮ್ಮ ಕಡೆ ಯಾರೂ ಕಿಸ್ ಕೂಡ ಕೊಡುವದಿಲ್ಲ, ಕಿಸ್ ಮಾಡುವದಿಲ್ಲ. ಚುಂಬಿಸುವದು? ಅದನ್ನು ಕೇಳೇ ಇಲ್ಲ. ನಮ್ಮ ಕಡೆ ಮಂದಿಗೆ ಮುಂಜಾನೆದ್ದು ಚಂಬಿಸುವದು ಅಂದರೆ ಚಂಬು ಹಿಡಕೊಂಡು ಓಡುವದು ಗೊತ್ತೇ ಹೊರತು ಚುಂಬಿಸುವದು ಗೊತ್ತಿಲ್ಲ. ಚಂಬು ಮಾತ್ರ ಎಲ್ಲೆಲ್ಲೋ ಚುಂಬಿಸುತ್ತಿರುತ್ತದೆ. ಇವರಿಗೆ ಗೊತ್ತಿಲ್ಲ. ಆದರೆ ಕಿಸ್ ಗೊತ್ತು. ಕಿಸ್ ಕೂಡ ಹೊಡೆಯುತ್ತಾರೆ. ಅದೂ ಕದ್ದು ಮುಚ್ಚಿ ಪಚ್ ಪಚಾ ಅಂತ ಒದೊದ್ದೆಯಾಗಿ ಮನಗಂಡ (ಭರ್ಜರಿ) ಹೊಡೆಯುತ್ತಾರೆ. ಒಮೊಮ್ಮೆ ಕಿಸ್ಸಾಯಣದ ನಂತರ ಪೊದೆ ಹಿಂದಿನಿಂದ ಎದ್ದು ಬಂದ ಯುವ ಜೋಡಿಗಳನ್ನು ನೋಡಿದರೆ ಸಾಕು ಇವರು ಎಲ್ಲಿ ಕಿಸ್ ಹೊಡೆದುಕೊಂಡು, ಚುಮ್ಮಾ ಚುಮ್ಮಿ ಮಾಡಿ ಎದ್ದು ಬಂದರೋ ಅಥವಾ ಕಪ್ಕಪಾಳಕ್ಕೆ ಹೊಡೆದುಕೊಂಡು ಬಂದರೋ ಅನ್ನುವ ಮಾದರಿಯಲ್ಲಿ ಕೆಂಪಕೆಂಪಾಗಿಬಿಟ್ಟಿರುತ್ತಾರೆ. ಮುಖದ ಮೇಲೆ ರಾಗರತಿಯ ನಂಜ ಮೂಡಿತ್ತ ಮಾದರಿಯ ಲುಕ್ ಇರುತ್ತದಾದ್ದರಿಂದ ಕಿಸ್ ಹೊಡೆದು ಬಂದಿದ್ದಾರೆಯೇ ವಿನಃ ಕಪಾಳಕ್ಕೆ ಬಾರಿಸಿಕೊಂಡು ಬಂದಿಲ್ಲ ಅಂತ ನಿರ್ಧರಿಸಬಹುದು.

ಕಿಸ್ ಕೂಡ ಹೊಡೆಯುತ್ತಾರೆ ಅಂದ ಮೇಲೆ ಫ್ಲೈಯಿಂಗ್ ಕಿಸ್ ಕೂಡ ಹೊಡೆದೇ ತೀರುತ್ತಾರೆ.

ಒಮ್ಮೆ ಒಬ್ಬ ಹುಚ್ಚ ಒಬ್ಬ ಅರೆಹುಚ್ಚಿಗೆ ಕಿಸ್ ಹೊಡೆದು ಬಿಟ್ಟಿದ್ದ. ಅದೇನಾಗಿತ್ತು ಅಂದರೆ ಆಕೆಯ ಹಾಸ್ಟೆಲ್ ಮುಂದೆ ಬಂದು ನಿಂತು ಪಿಸ್ ಹೊಡೆಯುತ್ತಿದ್ದನಂತೆ. ಆಹಾ! ನೋಡ್ರೀ. ಮತ್ತೊಂದು ಹೊಡೆಯೋ ಪ್ರಕ್ರಿಯೆ ನೆನಪಾಯಿತು. ಪಿಸ್ ಅಂದರೆ ಮೂತ್ರ ಕೂಡ ಹೊಡೆದೇ ಬಿಡುತ್ತಾರೆ. ಎಲ್ಲಿ ಮೂತ್ರ ವಿಸರ್ಜನೆ ಅದು ಇದು ಅಂತ ಹೇಳುತ್ತ ಕೂಡೋಣ? ವಿಸರ್ಜನೆ ಮಾಡುವದು ಗಣಪತಿಯನ್ನು ನೀರಿನಲ್ಲಿ ಮಾತ್ರ. ಕಿಸ್, ಪಿಸ್ ಎಲ್ಲ ಹೊಡೆದೇ ರೂಢಿ ನಮ್ಮ ಕಡೆ.

ಹಾಂ, ಏನು ಹೇಳುತ್ತಿದ್ದೆ? ಹುಚ್ಚನೊಬ್ಬ ಅರೆಹುಚ್ಚಿಗೆ ಕಿಸ್ ಹೊಡೆದದ್ದು. ಆಕೆಯ ಹಾಸ್ಟೆಲ್ ಮುಂದೆ ಬಂದು ನಿಂತು ಹುಡುಗಿಯರ ರೂಂ ಕಡೆ ನೋಡುತ್ತ ನಿಂತಿದ್ದಾನೆ. ಪಿಸ್ ಹೊಡೆಯಲು ವತ್ರವಾಗಿದೆ ಮತ್ಲಬ್ ಅವಸರವಾಗಿದೆ. ಜಿಪ್ಪರ್ ಇಳಿಸಿದವನೇ ಶಿವಾಯ ನಮಃ ಅಂತ ಪಿಸ್ ಹೊಡೆಯುತ್ತ, ಹಲ್ಕಾ ಆಗುತ್ತ, ಹಲ್ಕಟ್ ನಗೆ ನಗುತ್ತ ನಿಂತಿದ್ದಾನೆ. ಆಗ ಕಂಡಿದ್ದಾಳೆ ಕಿಡಕಿಯಲ್ಲಿ ಅರೆಹುಚ್ಚಿ. ಆಕೆಯೂ ಪಿಸ್ ಹೊಡೆಯುತ್ತಿದ್ದ ಹುಚ್ಚನನ್ನು ನೋಡಿ ಉದ್ರೇಕಗೊಂಡಿದ್ದಾಳೆ. 'ಏ, ಏ, ಅಲ್ಯಾಕ ನಿಂತು ಪಿಸ್ ಹೊಡಿತೀಯೋ?? ಹೋಗ್ ಹೋಗ್. ಇಲ್ಲಂದ್ರ ವಾರ್ಡನ್ ಬಂದು ಬೈತಾರ್ ನೋಡು!' ಅಂತ ಆವಾಜ್ ಹಾಕಿದ್ದಾಳೆ. ಪಾಪ ಅವನೇನು ಮಾಡಬೇಕು? ಮರ್ದ್ ಆದ್ಮೀಯಾಗಿ ರಸ್ತೆಯಲ್ಲಿ ನಿಂತು ಪಿಸ್ ಹೊಡೆಯದೇ ಲೇಡೀಸ್ ಹಾಸ್ಟೆಲ್ ಟಾಯ್ಲೆಟ್ ಒಳಗೆ ಬಂದು ನಿರುಮ್ಮಳವಾಗಿ, ಊಸ್ ಅನ್ನುತ್ತ ಸೂಸು ಮಾಡಲು ಇವರು ಕೊಡುತ್ತಾರೆಯೇ??

ಪಾಪ ಹುಚ್ಚ. ಅದೂ ಪಿಸ್ ಹೊಡೆಯುತ್ತಿದ್ದ ಹುಚ್ಚ. ಅರೆಹುಚ್ಚಿಯನ್ನು ಕಂಡಿದ್ದೇ ಕಂಡಿದ್ದು ಕೈಯಲ್ಲಿದ್ದ ಆಯುಧ ಬಿಟ್ಟವನೇ ಅದೇ ಕೈಯಿಂದ ಕಿಸ್ ಹೊಡೆದುಬಿಟ್ಟಿದ್ದಾನೆ. ಪಿಸ್ ಹೊಡೆಯುತ್ತಿದ್ದ ಹುಚ್ಚ (ಅದೇ) ಕೈಯಿಂದ ಕಿಸ್ ಹೊಡೆದನೇ? ಅಯ್ಯೋ, ಫ್ಲೈಯಿಂಗ್ ಕಿಸ್ ರೀ. ಫ್ಲೈಯಿಂಗ್ ಕಿಸ್ ಮತ್ತೆ ಕೈಯಿಂದ ಅಲ್ಲದೇ ಕಾಲಿಂದ ಹೊಡೆಯುತ್ತಾರೆಯೇ?

ಹಾಗೆ ಹುಚ್ಚನಿಂದ ಕಿಸ್, ಫ್ಲೈಯಿಂಗ್ ಕಿಸ್, ಹೊಡೆಸಿಕೊಂಡ ಅರೆಹುಚ್ಚಿ ಒಂದು ಪದ್ಯವನ್ನೇ ಬರೆದುಬಿಟ್ಟಳು.

ಕಿಸ್ಸು ಹೊಡೆದನೇ ಹುಚ್ಚ ಕಿಸ್ಸು ಹೊಡೆದನೇ
ಮ್ಯಾಲೂ ಹೊಡೆದನೇ ಹುಚ್ಚ ಕೆಳಗೂ ಜಡಿದನೇ
ಹಿಂದೂ ಹೊಡೆದನೇ ಹುಚ್ಚ ಮುಂದೂ ಬಡಿದನೇ
ಕಿಸ್ಸು ಹೊಡೆದನೇ ಹುಚ್ಚ ಕಿಸ್ಸು ಹೊಡೆದನೇ

ಪಿಸ್ಸು ಹೊಡೆಯುತ್ತಿದ್ದ ಹುಚ್ಚ ಅದೇ ಕೈಯಿಂದ ಕಿಸ್ಸು ಹೊಡೆದ
ಕಿಸ್ಸು ಹೊಡೆದನೇ ಹುಚ್ಚ ಕಿಸ್ಸು ಹೊಡೆದನೇ
ಧಾರವಾಡದಿಂದ ಬಂದ ಹುಚ್ಚ ಹಾಸ್ಟೆಲ್ಲಿನೆದುರು ನಿಂತ ಹುಚ್ಚ
ಕಿಸ್ಸು ಹೊಡೆದನೇ ಹುಚ್ಚ ಕಿಸ್ಸು ಹೊಡೆದನೇ

ಫ್ರೆಂಚ್ ಸ್ಟೈಲಿನಲ್ಲಿ ಹೊಡೆದ ಹುಚ್ಚ ಆಸ್ಟ್ರೇಲಿಯನ್ ಸ್ಟೈಲಿನಲ್ಲಿ ಹೊಡೆದ ಕಿಸ್ಸಾ
ಕಿಸ್ಸು ಹೊಡೆದನೇ ಹುಚ್ಚ ಕಿಸ್ಸು ಹೊಡೆದನೇ
ಪಾಪಿ ಮುಂಡೆಗಂಡ! (ಕೋರಸ್)
ಕಿಸ್ಸು ಹೊಡೆದನೇ ಹುಚ್ಚ ಕಿಸ್ಸು ಹೊಡೆದನೇ

ಪದ್ಯ ಬರೆದಾದ ಮೇಲೆ ಅದಕ್ಕೊಂದು ಧಾಟಿ ಬೇಕಲ್ಲ? ಧಾಟಿ ಗೊತ್ತಿದ್ದು ಪದ್ಯ ಬರೆದಳೋ ಅಥವಾ ಪದ್ಯ ಬರೆದಾದ ಮೇಲೆ ಧಾಟಿ ಹಚ್ಚಿದಳೋ ಗೊತ್ತಿಲ್ಲ. ಅದನ್ನು ಹಾಡಿದರೆ, ಶಿಶುನಾಳ ಶರೀಫ ಸಾಹೇಬರ, 'ಹಾವು ತುಳಿದೇನೆ ಮಾನಿನಿ ಹಾವು ತುಳಿದೇನೆ' ಹಾಡನ್ನು ಕೇಳಿದ ಹಾಗೆ ಅನ್ನಿಸಬೇಕು. ಎಲ್ಲಿಯ ಶಿಶುನಾಳ ಶರೀಫ್ ಸಾಹೇಬರು, ಎಲ್ಲಿಯ ಹಾವು, ಎಲ್ಲಿಯ ಅಂತಹ ತತ್ವಪದ, ಎಲ್ಲಿಯ ಹುಬ್ಬಳ್ಳಿ ಲೇಡೀಸ್ ಹಾಸ್ಟೆಲ್, ಎಲ್ಲಿಯ ಹುಚ್ಚ, ಎಲ್ಲಿಯ ಅರೆಹುಚ್ಚಿ, ಎಲ್ಲಿಯ ಪಿಸ್ಸು, ಎಲ್ಲಿಯ ಕಿಸ್ಸು. ಒಂದಕ್ಕೊಂದಕ್ಕೆ ಎಂತೆಂತಾ ಕನೆಕ್ಷನ್ ಹರಿಯೇ.





ಮನುಷ್ಯರನ್ನು ಮಾತ್ರ ಹೊಡೆಯುವದಿಲ್ಲ. ಬದಲಾಗಿ ಬಡಿಯುತ್ತಾರೆ, ರುಬ್ಬುತ್ತಾರೆ, ನಾದುತ್ತಾರೆ, ಕಟಿಯುತ್ತಾರೆ.

ಲೈನ್ ಮಾತ್ರ ಎಲ್ಲ ಕಡೆಯೂ, ಎಲ್ಲ ಭಾಷೆಗಳಲ್ಲಿಯೂ ಹೊಡೆಯುತ್ತಾರೆ. ಲೈನ್ ಹೊಡೆಯೋದು, ಸೈಟ್ ಹೊಡೆಯೋದು ಲೈನ್ ಮಾರ್ನಾ ಅಂತಲೇ ಎಲ್ಲರೂ ಹೇಳೋದು. ಕೆಲವರಿಗೆ ಭಾಳ ಜನ ತಮಗೆ ಲೈನ್ ಹೊಡೆಯುತ್ತಾರೆ ಅಂತ ಒಳೊಳಗೇ ಖುಷಿ. ಆದರೆ ಮೇಲಿಂದ ಮಾತ್ರ ಇಲ್ಲದ ನಖರಾ. ಇನ್ನು ಪ್ರಾಯದಲ್ಲಿ ಬರೋಬ್ಬರಿ ಲೈನ್ ಹೊಡೆಯಿಸಿಕೊಳ್ಳಲಿಲ್ಲ ಅಂದರೆ ಕೆಲವರು ಮುಂದೆ ಮಾನಸಿಕ್ ಆಗಿ, ತುಂಬಾ innocent ಆಗಿ, 'ಲೈನ್ ಹೊಡೆಯೋದು, ಲೈನ್ ಹೊಡೆಯಿಸಿಕೊಳ್ಳೋದು ಅಂದ್ರ ಏನ್ರೀ?' ಅಂತ ಕೇಳಿ ಎಲ್ಲರ ಮುಂದೆ ಮಂಗ್ಯಾ ಆಗುತ್ತಾರೆ. 'ಆಗಂತೂ ಯಾರೂ ಲೈನ್ ಹೊಡಿಲಿಲ್ಲ. ಈಗಾದರೂ ಗಿಚ್ಚಾಗಿ ಹೊಡೆಯಲಿ,' ಅಂತ ಫೇಸ್ಬುಕ್ ಮೇಲೆ ಸಿಕ್ಕಾಪಟ್ಟೆ ಫೋಟೋ ಹಾಕಿಕೊಳ್ಳುತ್ತಾರೆ. ಬಗಲಿಲ್ಲದ ಬನಿಯನ್ ಹಾಕಿಕೊಂಡು ಬೃಂದಾವನ ಸುತ್ತುತ್ತಿರುವ ಫೋಟೋ, ಇಷ್ಟುದ್ದ ಎದೆ ಸೀಳು ತೋರಿಸುತ್ತ ದೇವಸ್ಥಾನಕ್ಕೆ ಹೋಗುವ ಫೋಟೋ ಎಲ್ಲ ಹಾಕಿಕೊಂಡು ಸಂಭ್ರಮಿಸುತ್ತಿರುತ್ತಾರೆ. commonsense ಖಾಯಂ ಆಗಿ ಹೊಡೆಸಿಕೊಳ್ಳಬಾರದ ರೀತಿಯಲ್ಲಿ ಹೊಡೆಸಿಕೊಂಡು ಹೊಗೆ ಹಾಕಿಸಿಕೊಂಡಿರುತ್ತದೆ. ಜನರು ಫೇಸ್ಬುಕ್ ಮುಖಾಂತರವಾದರೂ ಲೈನ್ ಹೊಡೆಯಲಿ ಅಂತ 'ಆಸೆ, ನೂರಾಸೆ, ತಾಳಲಾರೆ ನಾ ತಾಳಲಾರೆ, ಆ ಆಸೆ' ಮಾದರಿಯಲ್ಲಿ ತನಹಾ ತನಹಾ ಲುಕ್ ಕೊಡುತ್ತ ಕಳೆದು ಹೋದ ಜವಾನಿಯನ್ನೂ, ಅಂತಹ ಜವಾನಿಯ ದರ್ಧ ಭರೀ (ದುಃಖಭರಿತ) ಕಹಾನಿಯನ್ನೂ ನೆನಪು ಮಾಡಿಕೊಳ್ಳುತ್ತ ಹುಸ್ ಹುಸ್ ಅನ್ನುತ್ತಾರೆ. ಉದ್ಯೋಗಿಲ್ಲದ ಜನ ಹೋಗಿ ಒತ್ತಬಾರದ ಜಾಗದಲ್ಲಿ (ಲೈಕ್) ಒತ್ತಿ ಬರುತ್ತಾರೆ. ಕಾಮೆಂಟ್ ಹಾಕಿ ರೇಗಿಸುತ್ತಾರೆ. ಅದೇ virtual ಲೈನ್ ಹೊಡೆಯೋದು. reality ಯೇ virtual reality ಆಗಿಹೋದ ಮೇಲೆ ಲೈನ್ ಹೊಡೆಯುವದು, ಹೊಡೆಯಿಸಿಕೊಳ್ಳುವದು ಕೂಡ virtual ಆಗುವದರಲ್ಲಿ ಏನು ಮಹಾ ಸಿವನೇ? ಶಿವನೇ ಶಂಭುಲಿಂಗ

ಹೀಗಿದೆ ನಮ್ಮ ಧಾರವಾಡ ಕಡೆ ಹೊಡೆಯೋ ಪುರಾಣ. ಬಾಕಿ ಯಾವದನ್ನಾದರೂ 'ಹೊಡೆಯುವದು' ನೆನಪಾದರೆ ತಿಳಿಸಿ. ನನಗೆ ಸದ್ಯಕ್ಕೆ ನೆನಪಾಗಿದ್ದಿಷ್ಟು.

* ಓದುಗರು ತಿಳಿಸಿದ್ದು : ಹಲಗಿ ಹೊಡೆಯುವದು. ಚೈನಿ (ಮಜಾ) ಹೊಡೆಯುವದು. ಹವ್ಯಕರಲ್ಲಿನ ಪೊಕಳೆ (boastful useless talk) ಹೊಡೆಯುವದು. ಟೈಮ್ ಕೂಡ ಹೊಡೆಯುತ್ತದೆ. ಎಜ್ಜಾಂಪಲ್ - 'ಐದು ಹೊಡೀತು. ಸಾಲಿ ಬಿಡೋ ಘಂಟಿ ಯಾಕ ಹೊಡೆದಿಲ್ಲಾ?'

* ನಂತರ ನೆನಪಾಗಿದ್ದು: ಹರಟೆ ಹೊಡೆಯುವದು.  

Tuesday, February 23, 2016

ಖುಷ್ವಂತ್ ಸಿಂಗ್ ಅದು ಹೇಗೆ ಅಷ್ಟೆಲ್ಲ ಬರೆದರು?

ಖುಷ್ವಂತ್ ಸಿಂಗ್ ನೆನಪಿರಬೇಕಲ್ಲ? ದೊಡ್ಡ ಲೇಖಕರು, ಪತ್ರಕರ್ತರು, ಸಂಪಾದಕರು, ಅಂಕಣಕಾರರು ಎಲ್ಲ ಆಗಿದ್ದವರು. ಒಂದೆರೆಡು ವರ್ಷಗಳ ಹಿಂದೆ ಮಾತ್ರ ತಮ್ಮ ತೊಂಬತ್ತು ಚಿಲ್ಲರೆ ವಯಸ್ಸಿನಲ್ಲಿ ನಿಧನರಾದರು.

ಖುಷ್ವಂತ್ ಸಿಂಗ್ ಮೊದಲು ಭಾರತೀಯ ವಿದೇಶಾಂಗ ಸೇವೆಯಲ್ಲಿದ್ದರು. ನಿವೃತ್ತಿಯ ಅಂಚಿಗೆ ಬಂದಾಗ ಲೇಖಕರಾದರು, ಪತ್ರಕರ್ತರಾದರು. ಅವರು ಬರವಣಿಗೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು ಅವರಿಗೆ ಸುಮಾರು ಐವತ್ತೈದು ವರ್ಷಗಳಾದ ನಂತರವೇ. ಆ ವಯಸ್ಸಿನಲ್ಲಿ ಒಮ್ಮೆ ಲೇಖನಿ ಕೈಗೆತ್ತಿಕೊಂಡರು ನೋಡಿ! ನಂತರ ಅದನ್ನು ಕೆಳಗಿಳಿಸಿದ್ದು ಈಗ ಒಂದೆರೆಡು ವರ್ಷಗಳ ಹಿಂದೆ ನಿಧನರಾದಾಗೆಯೇ. ಸುಮಾರು ನಲವತ್ತು ವರ್ಷಗಳ ಕಾಲ ನಿರಂತರ ಬರವಣಿಗೆ. ಸುಮಾರು ನಲವತ್ತು ಕಾದಂಬರಿ, ಒಂದು ಹದಿನೈದು ಕಥಾ ಸಂಕಲನ, ಮತ್ತೊಂದಿಷ್ಟು ಬೇರೆ ಬೇರೆ ತರಹದ ಪುಸ್ತಕಗಳು, ಸರ್ದಾರ್ಜೀ ಜೋಕುಗಳ ಸಂಗ್ರಹ, ಇತ್ಯಾದಿ. ಇನ್ನು ಪತ್ರಿಕೆಗಳಿಗೆ ಬರೆದ ಅಂಕಣಗಳು ಲೆಕ್ಕವಿಲ್ಲದಷ್ಟು. ತಮ್ಮ ಅಂತಿಮ ದಿನಗಳಲ್ಲಿಯೂ ಪ್ರತಿ ವಾರ ಕಮ್ಮಿ ಕಮ್ಮಿಯೆಂದರೂ ಐದಾರು ರಾಷ್ಟ್ರೀಯ ಪತ್ರಿಕೆಗಳಿಗೆ, ನಿಯತಕಾಲಿಕಗಳಿಗೆ ಅಂಕಣ ಬರೆಯುತ್ತಿದ್ದರು. ಅವೆಲ್ಲವೂ ಬೇರೆ ಬೇರೆ ಭಾಷೆಗಳಿಗೆ ತರ್ಜುಮೆಯಾಗಿ ಪ್ರಾದೇಶಿಕ ಭಾಷೆಗಳ ಪತ್ರಿಕೆಗಳಲ್ಲಿಯೂ ಮೂಡಿಬರುತ್ತಿದ್ದವು. ಹೀಗಾಗಿ ಎಲ್ಲ ಪತ್ರಿಕೆಗಳಲ್ಲಿಯೂ ಖುಷ್ವಂತ್ ಸಿಂಗರ ಅಂಕಣವೊಂದು ಇದ್ದೇ ಇರುತ್ತಿತ್ತು.

'ಸಿಂಗ್ ಸಾಹೇಬರೇ, ಇದೆಂಗೆ ಮಾರಾಯರೇ, ಈ ಪರಿ ನಿರಂತರವಾಗಿ, ಧಾರಾಕಾರವಾಗಿ ಬರೆಯುತ್ತೀರಿ?' ಅಂತ ಯಾರಾದರೂ ಕೇಳಿದರೆ ಪೋಲಿ ಅಜ್ಜನ ತುಂಟ ಉತ್ತರ ರೆಡಿ ಇರುತ್ತಿತ್ತು.

'ನನ್ನ ಪೆನ್ನಿಗೆ ಇನ್ನೂ ತನಕ ಯಾರೂ ನಿರೋಧ ತಯಾರಿಸಿಲ್ಲ!'

ಅಷ್ಟು ಹೇಳಿ ಪೆಕಪೆಕಾ ಅಂತ ನಕ್ಕು ಬಿಡುತ್ತಿದ್ದರು. ಪಕ್ಕಾ ಸರ್ದಾರ್ಜೀ!



ಖುಷ್ವಂತ್ ಸಿಂಗ್ ಅದು ಹೇಗೆ ಅಷ್ಟೆಲ್ಲ ಬರೆದರು ಅಂತ ನೋಡುತ್ತಾ ಹೋದರೆ ಗೋಚರಿಸುತ್ತದೆ ಅವರ ಶಿಸ್ತುಬದ್ಧ ಜೀವನಶೈಲಿ. ಅದೊಂದರ ಜೊತೆಗೆ ಮಾತ್ರ ಅವರು ಎಂದೂ compromise ಮಾಡಿಕೊಳ್ಳಲಿಲ್ಲ. ಹಾಗಾಗಿಯೇ ಅಷ್ಟೊಂದು ಬರೆದು ಬರೆದು ಬಿಸಾಡಿಬಿಟ್ಟರು.

ದಿನಾ ಬೆಳಿಗ್ಗೆ ನಾಲ್ಕು ಘಂಟೆಗೆ ಎದ್ದು ಬರೆಯಲು ಕೂತರು ಅಂದರೆ ಬರವಣಿಗೆ ಬಿಟ್ಟು ಏಳುವದು ಎಂಟು ಘಂಟೆ ಹೊತ್ತಿಗೆ. ನಾಲ್ಕು ಘಂಟೆಗಳ ನಿರಾತಂಕ ಬರವಣಿಗೆ. ಆ ಅವಧಿಯಲ್ಲಿಯೇ ಸುಮಾರು ಎಲ್ಲ ಅಂಕಣಗಳೂ ತಯಾರಾಗಿಬಿಡುತ್ತಿದ್ದವು. ನಂತರ ಬೆಳಗಿನ ಉಪಹಾರ ಮುಗಿಸಿ ಒಂದೆರೆಡು ಘಂಟೆ ಟೆನಿಸ್, ಗಾಲ್ಫ್ ಇತ್ಯಾದಿ. ವ್ಯಾಯಾಮವೂ ಆಯಿತು ಜೊತೆಗೆ ಸ್ನೇಹಿತರು, ಅವರು ಇವರು ಸಿಗುತ್ತಿದ್ದರು. ಅಂಕಣಗಳಿಗೆ ಬೇಕಾದ ವಸ್ತುಗಳೂ ಸಿಗುತ್ತಿದ್ದವು.

ಆಟ ಮುಗಿಸಿ ಮನೆಗೆ ಬಂದ ನಂತರ ಓದು. ಅಷ್ಟೆಲ್ಲ ಬರೆಯಬೇಕು ಅಂದರೆ ಸುಮ್ಮನೇ ಆಗುತ್ತದೆಯೇ? ಅದಕ್ಕೆಲ್ಲ ಎಷ್ಟೊಂದು ಮಾಹಿತಿ ಸಂಗ್ರಹಿಸಬೇಕು. ಮನೆಯಲ್ಲೇ ಕುಳಿತು ಓದಿದರು, ನೋಟ್ಸ್ ಮಾಡಿಕೊಂಡರು. ಸಂಜೆಯವರೆಗೆ ಓದಿದ್ದು ಬರೆದಿದ್ದು.

ಸಿಂಗ್ ಸಾಹೇಬರಿಗೆ ಸ್ಕಾಚ್ ವಿಸ್ಕಿ ಅದರಲ್ಲೂ ದುಬಾರಿ ಸಿಂಗಲ್ ಮಾಲ್ಟ್ ಸ್ಕಾಚ್ ವಿಸ್ಕಿಯೆಂದರೆ ತುಂಬಾ ಇಷ್ಟ. ದಿನಾ ಸಂಜೆ ಬೇಕೇಬೇಕು. ಘಂಟೆ ಏಳಾಯಿತು ಅಂದರೆ ಮುಗಿಯಿತು. ಎಲ್ಲೇ ಇದ್ದರೂ, ಏನೇ ಮಾಡುತ್ತಿದ್ದರೂ ಸಿಂಗ್ ಸಾಹೇಬರು 'ತೀರ್ಥ'ಯಾತ್ರೆಗೆ ಹೊರಟುಬಿಡುತ್ತಿದ್ದರು. ತೀರ್ಥ ಸೇವಿಸುವದರಲ್ಲೂ ಸಿಕ್ಕಾಪಟ್ಟೆ ಶಿಸ್ತು ಅವರದು. ಒಮ್ಮೆ ವಿಮಾನದಲ್ಲಿ ಎಲ್ಲೋ ಹೊರಟಿದ್ದರು. ಭಾರತದಲ್ಲಿ ಡೊಮೆಸ್ಟಿಕ್ ವಿಮಾನಗಳಲ್ಲಿ ಡ್ರಿಂಕ್ಸ್ ಕೊಡುವದಿಲ್ಲ. ಮದ್ಯ ಸೇವನೆ ನಿಷೇಧಿತ ಕೂಡ. ಸಿಂಗ್ ಸಾಹೇಬರು ಎಲ್ಲ ತಯಾರಿ ಮಾಡಿಕೊಂಡೇ ವಿಮಾನ ಹತ್ತಿದ್ದರು. ಕಿಸೆಯಲ್ಲಿದ್ದ ಚಿಕ್ಕ ಫ್ಲಾಸ್ಕಿನಲ್ಲಿ ಇತ್ತು ಅವರ ಪ್ರೀತಿಯ ಸ್ಕಾಚ್. ಸಂಜೆ ಏಳು ಘಂಟೆಯಾಯಿತು. ವಿಮಾನ ಎಲ್ಲೋ ಹಾರುತ್ತಿತ್ತು. ಸಿಂಗ್ ಸಾಹೇಬರು ತಮ್ಮ ಫ್ಲಾಸ್ಕ್ ತೆಗೆದವರೇ ಗುಟುಕು ಗುಟುಕಾಗಿ ಎಣ್ಣೆ ಹೀರುತ್ತ ಕುಳಿತು ವಿಮಾನ ಪ್ರಯಾಣವನ್ನು ಎಂಜಾಯ್ ಮಾಡಿದರು. 'ಏನು ಸರ್ ಇದು? ಇದನ್ನೆಲ್ಲ ಮಾಡಬಾರದು,' ಅಂದ ಗಗನಸಖಿಗೆ, 'ನಿನ್ನ ಕೆಲಸ ನೀನು ಮಾಡಮ್ಮಾ. ಯಾಕೆ ತಲೆ ತಿಂತೀಯಾ?' ಅನ್ನುವ ಲುಕ್ ಕೊಟ್ಟು ತಮ್ಮ ಪಾನ ಸೇವನೆ ಮುಂದುವರೆಸಿದರು. ಅದು ಖುಷ್ವಂತ್ ಸಿಂಗ್ ಅವರ ಹಿಮ್ಮತ್ತು!

ಸಂಜೆ ಏಳರಿಂದ ರಾತ್ರಿ ಒಂಬತ್ತರವೆರೆಗೆ ನಿಯಮಿತ ಪಾನ ಸೇವನೆ. ಯಾರಾದರೂ ಸಹೃದಯಿಗಳು ಸೇರಿದರೆ ಪಾನ ಗೋಷ್ಠಿ. ಒಂಬತ್ತಕ್ಕೆ ಬಂದ್. ಬಾಟಲಿ ಮುಚ್ಚಿದವರೇ ಊಟಕ್ಕೆ ಎದ್ದೇ ಬಿಡುತ್ತಿದ್ದರು ಲೇಖಕರು.

ನಂತರ ಒಂದು ಚಿಕ್ಕ ಊಟ ಮಾಡಿ ಬಂದರು ಅಂದರೆ ಆ ದಿನ ಮುಗಿದ ಹಾಗೆಯೇ. ಒಂದು ಹಾಟ್ ಐಟಂ ತಬ್ಬಿಕೊಂಡು ನಿದ್ರಾದೇವಿ ಮಡಿಲಿಗೆ ಜಾರುತ್ತಿದ್ದರು. ತಬ್ಬಿಕೊಂಡು ಮಲಗುತ್ತಿದ್ದ ಹಾಟ್ ಐಟಂ ಮತ್ತೇನೂ ಅಲ್ಲ ಮಾರಾಯರೇ ಹಾಟ್ ವಾಟರ್ ಬ್ಯಾಗ್!

ಮರುದಿನ ನಾಲ್ಕು ಘಂಟೆಗೆ ಮತ್ತೆ ಮೊದಲಿನ ದಿನಚರಿ ಶುರು! ಮತ್ತೆ ಬರವಣಿಗೆ. ಅದರ ಮೆರವಣಿಗೆ. ನಿರಂತರ. ಧಾರಾಕಾರ.