Monday, July 16, 2018

ನಮ್ಮ ಜೀವನವೇ ಬೆಸ್ಟ್... ನಮಗೆ ನಮ್ಮ ಜೀವನವೇ ಬೆಸ್ಟ್

ಎಲ್ಲೋ ಓದಿದ ನೆನಪು. ಅದರ ತಿರುಳೇನೆಂದರೆ -  ನಾವು ನಮ್ಮ ನಮ್ಮ ಸಮಸ್ಯೆಗಳ ಬಗ್ಗೆ ಎಷ್ಟೇ ತಲೆಬಿಸಿ ಮಾಡಿಕೊಂಡರೂ ಇನ್ನೊಬ್ಬರ ಸಮಸ್ಯೆಯ ಆಳ ತಿಳಿದರೆ, 'ಅವರ ಸಮಸ್ಯೆಗೆ ಹೋಲಿಸಿಕೊಂಡರೆ ನಮ್ಮದೇ ಎಷ್ಟೋ ಮೇಲು,' ಅಂದುಕೊಳ್ಳುತ್ತೇವೆ.

ನಾವೆಲ್ಲಾ ನಮ್ಮ ನಮ್ಮ ಸಮಸ್ಯೆಗಳನ್ನು ಒಂದೊಂದಾಗಿ ಕಾಗದದ ಚೀಟಿಗಳ ಮೇಲೆ ಬರೆದು ಒಂದು ಪಾತ್ರೆಯಲ್ಲಿ ಹಾಕಿದೆವು ಎಂದಿಟ್ಟುಕೊಳ್ಳಿ. ನಂತರ random ಆಗಿ ಕೈಗೆ ಬಂದ ಚೀಟಿ ಎತ್ತಿಕೊಳ್ಳಿ. ಅದರಲ್ಲಿ ಬರೆದಿರುವ ಸಮಸ್ಯೆ ಓದಿ. ನಂತರ ನಿರ್ಧರಿಸಿ - ಸದ್ಯಕ್ಕೆ ನಿಮಗಿರುವ ಸಮಸ್ಯೆ 'ಒಳ್ಳೆಯದೋ' ಅಥವಾ ಬೇರೊಬ್ಬರ ಸಮಸ್ಯೆ ಒಳ್ಳೆಯದೋ? ಶತಪ್ರತಿಶತ ಖಾತ್ರಿ, ನೀವು ಕೈಗೆ ಬಂದ ಚೀಟಿಯನ್ನು ಮರಳಿಸುತ್ತೀರಿ. ನಿಮ್ಮದೇ ಸಮಸ್ಯೆ ಬರೆದ ಚೀಟಿ ಸಿಗುವವರೆಗೂ ಒಂದಾದಮೇಲೊಂದು ಚೀಟಿಯನ್ನು ತೆಗೆದು, ಓದಿ, ಮತ್ತೆ ವಾಪಸ್ ಮಾಡುತ್ತಲೇ ಇರುತ್ತೀರಿ. ಬೇರೋಬ್ಬರ ಸಮಸ್ಯೆಗಳನ್ನು ತಿಳಿದಾಗ ನಮ್ಮ ಸಮಸ್ಯೆಗಳೇ ಎಷ್ಟೋ ಮೇಲು ಎಂದೆನಿಸಿಬಿಡುತ್ತವೆ.

ಬೇರೆಯವರ ಬದುಕನ್ನು ನೋಡಿ ಒಮ್ಮೊಮ್ಮೆ ಅಂದುಕೊಂಡಿರುತ್ತೇವೆ, 'ಆಹಾ! ಎಷ್ಟು ಅದೃಷ್ಟಶಾಲಿಗಳು!' ಎಂದು. ಅವರ ಬಾಹ್ಯ ಜೀವನವೊಂದೇ ನಮಗೆ ಕಂಡಿರುತ್ತದೆ. ಅವರ ಜೀವನ ನಮ್ಮದಾಗಿದ್ದರೆ ಎಷ್ಟು ಚೆನ್ನಾಗಿತ್ತಲ್ಲವೇ ಎಂದು ಅನ್ನಿಸುತ್ತದೆ.

ಆದರೆ...

ಕೆಳಗಿನ ಕಥೆ ಓದಿ.

ಸತ್ಯ ನಾಡೆಲ್ಲಾ. ಹೆಚ್ಚಾಗಿ ಎಲ್ಲರೂ ಇವರ ಹೆಸರು ಕೇಳಿರುತ್ತಾರೆ. ಕೊಂಚ ತಿಳಿದಿರುತ್ತಾರೆ ಕೂಡ. ಜಗತ್ತಿನ ಅತಿ ದೊಡ್ಡ ಸಾಫ್ಟ್ವೇರ್ ಕಂಪನಿಯಾದ ಮೈಕ್ರೋಸಾಫ್ಟ್ ಕಂಪನಿಯ ಮುಖ್ಯಸ್ಥ (CEO). ವಯಸ್ಸು ಐವತ್ತು ವರ್ಷಗಳು ಮಾತ್ರ. ವಾರ್ಷಿಕ ವೇತನ ಇಪ್ಪತ್ತು ಮಿಲಿಯನ್ ಡಾಲರ್. ಅಂದರೆ ಸುಮಾರು ೧೪೦ ಕೋಟಿ ರೂಪಾಯಿಗಳು. ಒಟ್ಟು ಆಸ್ತಿ ಸಾವಿರಾರು ಕೋಟಿ. ತುಂಬಾ ಯಶಸ್ವಿಯಾಗಿರುವ  ಮುಖ್ಯ ನಿರ್ವಾಹಣಾಧಿಕಾರಿ ಎಂದೆನಿಸಿಕೊಂಡಿದ್ದಾರೆ. ಮಣಿಪಾಲ ಮತ್ತು ವಿಸ್ಕಾನ್ಸಿಸ್ ವಿಶ್ವವಿದ್ಯಾಲಯಗಳಲ್ಲಿ ಓದಿ, ಮೈಕ್ರೋಸಾಫ್ಟ್ ಕಂಪನಿಯಲ್ಲಿ ಹಂತಹಂತವಾಗಿ ಮೇಲೆ ಬಂದು, ವಿಪರೀತ ಸ್ಪರ್ಧೆಯ ನಡುವೆಯೂ CEO ಎಂದು ಆಯ್ಕೆಯಾದ ಮಹಾನ್ ಪ್ರತಿಭಾವಂತ. ಭಾರತೀಯ ಸಂಜಾತರಾದ್ದರಿಂದ, ಎಲ್ಲ ರೀತಿಯ ಪಕ್ಷಪಾತಗಳ ನಡುವೆಯೂ, ಈ ಮಟ್ಟದ ಯಶಸ್ಸನ್ನು ಗಳಿಸಲು ಪಟ್ಟಿರಬಹುದಾದ ಪರಿಶ್ರಮ ಅಗಾಧ.

ಇವರದು ಸುಖೀ ಸಂಸಾರ. ಕುಟುಂಬಸ್ನೇಹಿತರ ಪುತ್ರಿ, ಬಾಲ್ಯಸ್ನೇಹಿತೆ ಅನುಪಮಾ ಇವರ ಪತ್ನಿ. ಮೂರು ಮಕ್ಕಳು. ಅಮೇರಿಕಾದ ಸಿಯಾಟಲ್ ನಗರದಲ್ಲಿ ಅರಮನೆಯಂತಹ ಬಂಗಲೆಯಲ್ಲಿ ವಾಸವಾಗಿದ್ದಾರೆ.

ಇಷ್ಟೇ ಮಾಹಿತಿ ತಿಳಿದರೆ 'ಲೈಫ್ ಅಂದರೆ ಹೀಗಿರಬೇಕು. ಅವರ ಲೈಫ್ ನಮಗಿರಬಾರದಿತ್ತೇ?' ಎಂದು ಜನ ಅಂದುಕೊಳ್ಳಬಹುದು.

'ಸತ್ಯ ನಾಡೆಲ್ಲಾ ತರಹದ ಜನರಿಗೆ ಎಂತಹ ಸಮಸ್ಯೆಗಳು ಮಾರಾಯ್ರೇ? ಸಮಸ್ಯೆಗಳೆಲ್ಲ ನಮ್ಮಂತವರಿಗೇ ನೋಡಿ. ಎಲ್ಲಾ ಪಡೆದುಕೊಂಡು ಬಂದಿರಬೇಕು,' ಎಂದು ನಿಡುಸುಯ್ಯಬಹುದು.

ಈಗ ಕೇಳಿ...

ಸತ್ಯರ ಹಿರಿಯ ಮಗನಿಗೆ ಈಗ ೨೧ ವರ್ಷ. ಅವನು ವಿಕಲಾಂಗ. ಗಾಲಿಚಕ್ರದ ಖುರ್ಚಿಯಲ್ಲೇ ಅವನ ಜೀವನ. ಅವನು ಎಲ್ಲ ಅಂಗಾಂಗಳ ಸ್ವಾಧೀನ ಕಳೆದುಕೊಂಡಿರುವ Quadriplegic.

ಸತ್ಯರ ಪುತ್ರಿಯೊಬ್ಬಳಿಗೆ ಏನೋ ಬೌದ್ಧಿಕ ಸಮಸ್ಯೆ. Learning disability.

ಈಗ ವಿಚಾರ ಮಾಡಿ. ವರ್ಷಕ್ಕೆ ೧೪೦ ಕೋಟಿ ಸಂಬಳದ ದೊಡ್ಡ ಹುದ್ದೆ, ಸಾವಿರಾರು ಕೋಟಿಯ ಅಸ್ತಿ ಎಲ್ಲ ಸಿಗುತ್ತದೆ. ಆದರೆ ಪ್ಯಾಕೇಜ್ ಡೀಲ್ ಎಂಬಂತೆ ಇವೆಲ್ಲಾ ಸಮಸ್ಯೆಗಳೂ ಜೊತೆಗೆ ಬರುತ್ತವೆ ಎಂತಾದರೆ ನಿಮ್ಮ ಸದ್ಯದ ಜೀವನವನ್ನು ಬದಲಾಯಿಸಿಕೊಳ್ಳುವಿರೇ???

ಸತ್ಯರ ಜೀವನದ ಬಗ್ಗೆ ನನಗೂ ಜಾಸ್ತಿ ಗೊತ್ತಿರಲಿಲ್ಲ. ಸತ್ಯ ನಾಡೆಲ್ಲಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹಂಚಿಕೊಂಡಿದ್ದು ಕಮ್ಮಿ. ಅವರು ತಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸುತ್ತಾರೆ. ಉಳಿದವರೂ ಗೌರವಿಸಬೇಕು. ಆದರೆ ತಮ್ಮ ಜೀವನದ ಸವಾಲುಗಳ ಬಗ್ಗೆ ಮತ್ತು ಅವುಗಳನ್ನು ಎದುರಿಸಿ ಗೆದ್ದ ಹಾದಿಯ ಬಗ್ಗೆ ಮಾಹಿತಿ ಹಂಚಿಕೊಂಡರೆ ಬೇರೆಯವರಿಗೂ ಕೂಡ ಜೀವನವನ್ನು ಎದುರಿಸಲು ಬೇಕಾಗುವ ಧೈರ್ಯ, ಸ್ಥೈರ್ಯ ಸಿಗಬಹುದು ಎನ್ನುವ ಸದುದ್ದೇಶದಿಂದ ಸತ್ಯ ಮತ್ತು ಅವರ ಪತ್ನಿ ಅನು ಎಲ್ಲವನ್ನೂ ಬಿಚ್ಚಿ ಹೇಳಿಕೊಂಡಿದ್ದಾರೆ. ಅದಕ್ಕೊಂದು ಸಲಾಂ! ಪೂರ್ತಿ ಲೇಖನ ಕೆಳಗಿನ ಲಿಂಕಿನಲ್ಲಿದೆ. ತುಂಬಾ ಸ್ಪೂರ್ತಿದಾಯಕವಾಗಿದೆ. ಜೀವನ್ಮುಖಿಯಾಗಿದೆ. ಓದಿ.

Satya and Anu Nadella Open Up About Their Family Life 

For the first time ever, the Microsoft CEO and his wife share honest truths about raising three kids with unexpected challenges and lots of joy.

ಸತ್ಯರಂತಹ ಜನ ಯಾವುದನ್ನೂ ಸಮಸ್ಯೆ ಎಂದು ಭಾವಿಸುವದೇ ಇಲ್ಲ. ಎಲ್ಲವನ್ನೂ ಅವಕಾಶ ಅಥವಾ ಸವಾಲು ಎಂದು ಸ್ವೀಕರಿಸಿ ಯಶಸ್ವಿಯಾಗುತ್ತಾರೆ. ಅದೇ ಅವರ ಖಾಸಿಯತ್ತು.

ಸತ್ಯ ನಾಡೆಲ್ಲಾ  'Hit Refresh' ಎನ್ನುವ ತಮ್ಮ ಜೀವನಾನುಭವಗಳ ಪುಸ್ತಕವನ್ನು ಬರೆದುಕೊಂಡಿದ್ದಾರೆ. ಇನ್ನೂ ಓದಿಲ್ಲ. ಮುಂದೆ ಓದಬೇಕು.

ಒಟ್ಟಿನಲ್ಲಿ ನಮ್ಮ ನಮ್ಮ ಲೈಫ್ ನಮಗೇ ಹೇಳಿಮಾಡಿಸಿದ್ದು ನೋಡಿ.

Nobody's burden is even one gram more than they can carry but not one gram less either.

Tuesday, July 03, 2018

ಕಾಮಧೇನು

ಭಕ್ತನೊಬ್ಬ ದೇವರಿಗೆ ಅದನ್ನು ಕರುಣಿಸು, ಇದನ್ನು ಕರುಣಿಸು ಎಂದು ತುಂಬಾ ಕಾಡುತ್ತಿದ್ದ. ಭಕ್ತನ ಕಿರಿಕಿರಿ ತಾಳಲಾಗದ ಭಗವಂತ ಸಕಲ ಇಷ್ಟಾರ್ಥಗಳನ್ನೂ ಪೂರೈಸಬಲ್ಲ ಪೂಜ್ಯ ಕಾಮಧೇನುವನ್ನೇ ಭಕ್ತನಿಗೆ ಕರುಣಿಸಿಬಿಟ್ಟ. ಕಾಮಧೇನು ದೊರಕಿದ ಮೇಲಾದರೂ ಭಕ್ತನ ಕಿರಿಕಿರಿ ತಪ್ಪಬಹುದು ಎಂದು ದೇವರ ನಿರೀಕ್ಷೆ.

ಭಕ್ತನಿಗೆ ಆ ಪೂಜ್ಯ ಗೋವು ಕಾಮಧೇನು ಎಂದಾದರೂ ತಿಳಿಯಿತೋ ಇಲ್ಲವೋ ಗೊತ್ತಿಲ್ಲ. ದೇವರು ಕೊಟ್ಟ 'ದನ' ಎಂದು ಭೂಮಿಗೆ ಕರೆತಂದ. ಮನೆಗೆ ಬಂದರೆ ಒಂದು ಕೊರತೆ ತುರ್ತಾಗಿ ಕಾಡುತ್ತಿತ್ತು. ಅದೇನೆಂದರೆ ಗದ್ದೆ ಊಳಲು (ಸಾಗುವಳಿ ಮಾಡಲು) ಎತ್ತು ಇರಲಿಲ್ಲ. ಅರ್ಜೆಂಟಾಗಿ ಗದ್ದೆ ಊಳಿ, ಬೀಜ ಬಿತ್ತಬೇಕಿತ್ತು.

ಎತ್ತಿಗಾಗಿ ಏನು ಮಾಡಲಿ? ಎಂದು ಯೋಚಿಸಿದ ಭಕ್ತ. ಎದುರಲ್ಲೇ ಕಂಡಿತು ಭವ್ಯ ಕಾಮಧೇನು. ಮತ್ತೇನೂ ವಿಚಾರ ಮಾಡಲಿಲ್ಲ. ಕಾಮಧೇನುವನ್ನು ಎಳೆದೊಯ್ದವನೇ ನೇಗಿಲಿಗೆ ಕಟ್ಟಿಬಿಟ್ಟ. ತಬ್ಬಿಬ್ಬಾದ ಪುಣ್ಯಕೋಟಿ ಕಾಮಧೇನುವಿಗೆ ಬಾರಕೋಲಿನಲ್ಲಿ ಚಟಾರ್ ಎಂದು ಎರಡು ಬಿಟ್ಟವನೇ ಹೊಲಕ್ಕೆ ಕರೆದೊಯ್ದ.

ಅದು ಹೇಳಿಕೇಳಿ ಕಾಮಧೇನು. ಆಕಳು. ಹಸು. ಎತ್ತಂತೂ ಅಲ್ಲವೇ ಅಲ್ಲ. ಅದರಲ್ಲೂ ದೇವಲೋಕದ ಆಕಳು. ಇಂತಹ ಆಕಳಿಗೆ ಗದ್ದೆ ಊಳುವ ಕರ್ಮ.

ಕಾಮಧೇನುವನ್ನು ಗದ್ದೆ ಊಳಲು ಬಳಸುವದೇ? ಎಲ್ಲಾದರೂ ಉಂಟೇ? ಗದ್ದೆ ಊಳಲು ತುರ್ತಾಗಿ ಎತ್ತು ಬೇಕಾಗಿತ್ತು ಅಂತಲೇ ಅಂದುಕೊಳ್ಳೋಣ. ಕಾಮಧೇನುವನ್ನು ಕೇಳಿದ್ದರೆ ಸಕಲವನ್ನೂ ಕರುಣಿಸುವ ಶಕ್ತಿಯುಳ್ಳ ಅದು ಒಂದು ಎತ್ತಲ್ಲ ಬದಲಿಗೆ ಒಂದು ಜೋಡಿ ಎತ್ತುಗಳನ್ನೇ ಕರುಣಿಸುತ್ತಿತ್ತು. ಅವನ್ನು ಉಪಯೋಗಿಸಿ ಉಳುಮೆ ಮಾಡಬಹುದಿತ್ತು. ಅದರ ಬದಲಿಗೆ ಕಾಮಧೇನುವನ್ನೇ ಬಳಸಿ, ಅದನ್ನು ಹಿಂಸಿಸಿ ಉಳುಮೆ ಮಾಡಿಬಿಟ್ಟಿದ್ದ ಭಕ್ತ ಭೂಪ.

ಕಥೆ ಬಾಲಿಶ ಅನಿಸಿದರೂ ಯೋಚಿಸಿ ನೋಡಿ. ಅಜ್ಞಾನದಲ್ಲಿ ನಾವು ಹೆಚ್ಚಿನವರು ಮಾಡುತ್ತಿರುವದು ಇದೇ ಅಲ್ಲವೇ? ಮಾನವಜನ್ಮವೆಂಬ ಅಮೂಲ್ಯ ಕಾಮಧೇನುವನ್ನು ಜೀವನವೆಂಬ ಹೊಲವನ್ನು ಊಳಿ, ಲೌಕಿಕ ಸುಖವೆಂಬ ಬೆಳೆ (ಕಳೆ) ತೆಗೆಯಲು ಉಪಯೋಗಿಸುತ್ತಿದ್ದೇವೆ. ಮೇಲಿಂದ ಕಾಮಧೇನುವಿಗೆ ಬಾರಕೋಲಿನ 'ಪೂಜೆ' ಬೇರೆ! ಆಹಾ ನಮ್ಮ (ಅ)ಜ್ಞಾನವೇ!

ತುಂಬಾ ಯೋಚಿಸಲು ಹಚ್ಚಿದ ಚಿಕ್ಕ  ಕಥೆ.

ವಿ.ಸೂ: ಓದಿದ್ದು ಚೆನ್ನಾಗಿ ನೆನಪಿರಬೇಕು ಅಂದರೆ ಓದಿದ್ದನ್ನು ಬರೆದು ತೆಗೆಯಬೇಕು ಎಂದು ಗುರುಗಳು ಹೇಳುತ್ತಿದ್ದರು. ಅದನ್ನೇ ಮಾಡುತ್ತಿರುವದು. ಅಷ್ಟೇ ವಿನಃ ಬೇರೆ ಏನೂ ಇಲ್ಲ. 

Thursday, June 28, 2018

ಬಂಧ & ಸಂಬಂಧ

ಜಗತ್ತನ್ನು ಸೃಷ್ಟಿಸಿದ ಬ್ರಹ್ಮ ಸಕಲ ಜೀವಿಗಳಿಗೆ ಎಲ್ಲವನ್ನೂ ಕರುಣಿಸಿದ.

ಒಂದು ಜೀವಿಗೆ ಸ್ವಲ್ಪ ತೊಂದರೆಯಾಯಿತು. ಆ ಜೀವಿಯ ಹೆಸರು 'ಬಂಧ' (bond).

ಬಂಧನಿಗೆ ಎಲ್ಲೂ ಆಶ್ರಯ ಸಿಗಲಿಲ್ಲ. ಯಾರೂ ಅವನನ್ನು ಹತ್ತಿರ ಸೇರಿಸುತ್ತಲೇ ಇರಲಿಲ್ಲ. ಅವನ ಹೆಸರೇ ಬಂಧ. ಸಕಲ ಬಂಧನಗಳು (bondage) ಇವನಿಂದಲೇ ಉಂಟಾಗುತ್ತವೆ ಎಂದು ತಿಳಿದು ಅವನಿಗೆ ಯಾರೂ ಆಶ್ರಯ ಕೊಡುತ್ತಿರಲಿಲ್ಲ.

ಬಂಧ ವಾಪಸ್ ಬ್ರಹ್ಮದೇವನ ಬಳಿಗೆ ಬಂದು ತನ್ನ ಕಷ್ಟ ಹೇಳಿಕೊಂಡ.

ಸ್ವಲ್ಪ ವಿಚಾರ ಮಾಡಿದ ಬ್ರಹ್ಮ ಹೇಳಿದ, 'ವೇಷ ಬದಲಾಯಿಸಿಕೊಂಡು, ರೂಪಾಂತರ ಮಾಡಿಕೊಂಡು, ಬೇರೆ ಹೆಸರಿನಲ್ಲಿ ಹೋಗಿ ಆಶ್ರಯ ಕೇಳು.'

'ಏನಂತ ರೂಪಾಂತರ ಮಾಡಿಕೊಳ್ಳಲಿ? ಯಾವ ಹೊಸ ಹೆಸರಲ್ಲಿ ಹೋಗಲಿ?' ಎಂದು ಕೇಳಿದ ಬಂಧ.

'ಬಂಧ ಎಂದು ಪರಿಚಯ ಮಾಡಿಕೊಳ್ಳಬೇಡ. ಸಂಬಂಧ ಅಂತ ಹೇಳಿಕೊಂಡು ಹೋಗು. ಆಗ ನೋಡು ನಿನ್ನ ಅದೃಷ್ಟ ಹೇಗೆ ಖುಲಾಯಿಸುತ್ತದೆ ಎಂದು. ಹೋಗಿ ಬಾ. ಶುಭವಾಗಲಿ,' ಎಂದು ಹೇಳಿ ಕಳಿಸಿಕೊಟ್ಟ ಬ್ರಹ್ಮದೇವ.

ಸಂಪೂರ್ಣವಾಗಿ ಗೆಟಪ್ ಬದಲಾಯಿಸಿಕೊಂಡ ಬಂಧ ಮತ್ತೆ ಭೂಮಿಗೆ ಎಂಟ್ರಿ ಕೊಟ್ಟ. ಮನೆಯೊಂದರ ಬಾಗಿಲು ತಟ್ಟಿದ.

'ಯಾರು ನೀವು?' ಎಂದು ಕೇಳಿದ ಮನೆಯಾತ.

'ನಾನು ಸಂಬಂಧ,' ಎಂದು ನೈಸಾಗಿ ಉಲಿದ ಬಂಧ.

ಸಂಬಂಧ ಅಂತ ಕೇಳಿದ್ದೇ ತಡ ಉಪಚಾರ ಆರಂಭವಾಯಿತು.

'ಒಳಗೆ ಬನ್ನಿ. ಕುಳಿತುಕೊಳ್ಳಿ. ನೀವು ಹೇಗೆ ಸಂಬಂಧ ಎಂದು ಕೇಳಬಹುದೇ?' ಎಂದು ವಿನಯ ಗೌರವದಿಂದ ಕೇಳಿದ ಮನೆಯಾತ.

ಸಂಬಂಧಗಳೇನು ಒಂದೇ ಎರಡೇ? ಒಬ್ಬನಿಗೆ ಅಪ್ಪನೆಂದ, ಇನ್ನೊಬ್ಬನಿಗೆ ಚಿಕ್ಕಪ್ಪನೆಂದ. ವೇಷದೊಂದಿಗೆ ಲಿಂಗವೂ ಬದಲಾದಾಗ ಅಮ್ಮ, ಚಿಕ್ಕಮ್ಮ, ಹೆಂಡತಿ, ಉಪಹೆಂಡತಿ....ಹೀಗೆ ಬಂಧನೊಬ್ಬ ನಾಮ ಹಲವು ಮಾದರಿಯಲ್ಲಿ ಎಲ್ಲರನ್ನೂ ಬೇರೆ ಬೇರೆ ಸಂಬಂಧಗಳ ಪಾಶದಲ್ಲಿ ಆವರಿಸಿಕೊಂಡುಬಿಟ್ಟ.

ಮೊದಲು ಬಂದಿದ್ದ ಬಂಧನೆಂಬ ಖತರ್ನಾಕ್ ಜೀವಿಯೇ ಸಂಬಂಧದ ರೂಪದಲ್ಲಿ ಬಂದು ವಕ್ಕರಿಸಿಕೊಂಡಿದೆ ಎಂದು ಮನುಷ್ಯರಿಗೆ ತಿಳಿಯಲೇ ಇಲ್ಲ. ತಮಗೆ ಗೊತ್ತಿಲ್ಲದಂತೆಯೇ ಸಂಬಂಧಗಳ ರೂಪದಲ್ಲಿ ಬಂದ ಬಂಧನಿಂದ ಬೇರೆ ಬೇರೆ ಬಂಧನಗಳಲ್ಲಿ (bondage) ಸಿಲುಕಿಕೊಂಡರು. ವಿವಾಹಬಂಧನ, ವಾತ್ಸಲ್ಯಬಂಧನ, ಪ್ರೇಮಬಂಧನ, ಪುತ್ರಪಾಶ, ಪುತ್ರಿ ಪ್ರೀತಿ, ನಾಯಿ ಪ್ರೀತಿ, ಕೋತಿ ಪ್ರೀತಿ, ಗೋಪ್ರೀತಿ...ಬಂಧನಗಳು ಒಂದೇ ಎರಡೇ?

ಸಂಬಂಧ ಎಂದರೇ Some ಬಂಧ ಅಂತರ್ಥ.

ಸಂಬಂಧಗಳಿಂದ ಬಂಧನಗಳು (bondage) ಮತ್ತು ಆ ಬಂಧನಗಳಿಂದ ತರಹತರಹದ ಸುಖ(!) ಮತ್ತು  ದುಃಖಗಳು ಉಂಟಾಗುತ್ತವೆ ಅಂದ ಮಾತ್ರಕ್ಕೆ ಎಲ್ಲ ಸಂಬಂಧಗಳನ್ನು ಕಡಿದುಕೊಂಡು ಜೀವಿಸಲು ಸಾಧ್ಯವೇ? ಅದರ ಅವಶ್ಯಕತೆ ಇಲ್ಲ. ಸಂಬಂಧಗಳು ಬಂಧಗಳು ಎಂದು ಅರಿವಿಗೆ ಬಂದರೆ ಸಾಕು. ಅವುಗಳ ಮೇಲಿನ selfish attachment ಮತ್ತು ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಂಡರೆ ಬಂಧನಗಳು ಮತ್ತು ಅವುಗಳ ಪರಿಣಾಮಗಳು ಅಷ್ಟರಮಟ್ಟಿಗೆ ಕಮ್ಮಿಯಾದಂತೆಯೇ. ಆ ವಿವೇಕ ನಮಗೆ ಬರಬೇಕು ಅಷ್ಟೇ.

ಸ್ಪೂರ್ತಿ: ಯೋಗ ವಾಸಿಷ್ಠದ ಮೇಲೆ ಸ್ವಾಮಿ ತೇಜೋಮಯಾನಂದರು ಬರೆದ ಪುಸ್ತಕದಲ್ಲಿ ಸಿಕ್ಕ ಮಾಹಿತಿ. A Glimpse into Yogavasistha

Sunday, June 24, 2018

ಕರ್ಮ ಕರ್ಮ ಕರ್ಮ

ಕರ್ಮದಲ್ಲಿ ಮೂರು ಬಗೆ. ಸಂಚಿತ, ಆಗಾಮಿ ಮತ್ತು ಪ್ರಾರಬ್ಧ. ಸಂಚಿತ ಮತ್ತು ಆಗಾಮಿ ಕರ್ಮಗಳ ಫಲ ಮುಂದಿನ ಜನ್ಮಗಳಲ್ಲಿ ಬರುತ್ತದೆ. ಪ್ರಾರಬ್ಧ ಕರ್ಮದ ಫಲದಿಂದಲೇ ಈ ಜನ್ಮ ಮತ್ತು ಈ ಜನ್ಮದ ಆಗುಹೋಗುಗಳು. ಇದು ಕರ್ಮ ಸಿದ್ಧಾಂತ.

ಸಂಚಿತ ಮತ್ತು ಆಗಾಮಿ ಕರ್ಮಗಳು ಬತ್ತಳಿಕೆಯಲ್ಲಿರುವ ಬಾಣಗಳಿದ್ದಂತೆ. ಪ್ರಾರಬ್ಧವೆಂಬುವದು ಬಿಲ್ಲಿನಿಂದ ಹೊರಬಿದ್ದ ಬಾಣದಂತೆ. ಬಾಣವನ್ನು ಒಮ್ಮೆ ಬಿಟ್ಟ ಮೇಲೆ ಮುಗಿಯಿತು. ವಾಪಸ್ ಕರೆಯಲಾಗುವದಿಲ್ಲ. ಆದರೆ ಬತ್ತಳಿಕೆಯಲ್ಲಿರುವ ಬಾಣಗಳ ಬಗ್ಗೆ ವಿಚಾರ ಮಾಡಬಹುದು.

ಒಮ್ಮೆ ಜ್ಞಾನೋದಯವಾದ ಮೇಲೆ ಸಂಚಿತ ಮತ್ತು ಆಗಾಮಿ ಕರ್ಮಗಳು ನಶಿಸಿ ಹೋಗುತ್ತವೆ. ಜ್ಞಾನದ ಜ್ವಾಲೆಯಲ್ಲಿ ಹುರಿದುಹೋಗುತ್ತವೆ. ಹುರಿದ ಬೀಜದಿಂದ ಹೇಗೆ ಮೊಳಕೆಯೊಡೆಯುವದಿಲ್ಲವೋ ಹಾಗೆಯೇ ನಶಿಸಿದ ಕರ್ಮದ ಬೀಜಗಳಿಂದ ಕರ್ಮಫಲ ದೊರೆಯುವದಿಲ್ಲ. ಹಾಗಾಗಿ ಜ್ಞಾನಿಗಳಿಗೆ ಮರುಜನ್ಮವಿಲ್ಲ. ಆದರೆ ಜ್ಞಾನಿಗಳೂ ಸಹ ಪ್ರಾರಬ್ಧವನ್ನು ಅನುಭವಿಸಲೇಬೇಕು. ಹಾಗಾಗಿ ಜ್ಞಾನೋದಯದ ನಂತರವೂ ಜ್ಞಾನಿಗಳೂ ಸಹ ಇದ್ದ ದೇಹದಲ್ಲೇ ಮುಂದುವರೆಯುತ್ತಾರೆ. ಏನೇನು ಅನುಭವಿಸಬೇಕೋ ಅದನ್ನೆಲ್ಲ ಅನುಭವಿಸುತ್ತಾರೆ. ಪ್ರಾರಬ್ಧ ಮುಗಿದ ನಂತರ ದೇಹ ತಂತಾನೇ ಬೀಳುತ್ತದೆ. ಕುಂಬಾರ ಮಡಿಕೆ ಮಾಡುವದನ್ನು ನಿಲ್ಲಿಸಿದ ಬಳಿಕವೂ ಕುಂಬಾರನ ಚಕ್ರ ಕೆಲಕಾಲ ತಿರುಗುತ್ತಲೇ ಇರುತ್ತದೆ. ಹಾಗೇ ಜ್ಞಾನಿಗಳ ದೈಹಿಕ ಜೀವನ ಕೂಡ. ಪ್ರಾರಬ್ಧ ಕರ್ಮಕ್ಕೆ ಮತ್ತೊಂದು ಉಪಮೆ ಇದು.

ಭಕ್ತನೊಬ್ಬ ರಮಣ ಮಹರ್ಷಿಗಳ ಬಳಿ ಕೇಳಿದನಂತೆ. 'ಜ್ಞಾನೋದಯದ ನಂತರ ಆಗಾಮಿ, ಸಂಚಿತ ಕರ್ಮಗಳನ್ನು ಗೆದ್ದರೂ ಪ್ರಾರಬ್ಧವನ್ನೇಕೆ ಗೆಲ್ಲಲಾಗುವದಿಲ್ಲ?'

ರಮಣರು ಒಂದು ಸಣ್ಣ ಕಥೆ ಹೇಳಿದರು.

'ಒಬ್ಬನಿಗೆ ಮೂವರು ಪತ್ನಿಯರಿದ್ದರು. ಆ ಮನುಷ್ಯ ಸತ್ತುಹೋದ. ಆ ಮನುಷ್ಯ ಸತ್ತುಹೋದ ಮೇಲೆ ಅವನ ಪತ್ನಿಯರೇನಾಗುತ್ತಾರೆ?'

'ವಿಧವೆಯರಾಗುತ್ತಾರೆ,' ಅಂದ ಭಕ್ತ.

'ಮೂವರೂ ಪತ್ನಿಯರು ವಿಧವೆಯರಾಗುತ್ತಾರೋ ಅಥವಾ ಕೇವಲ ಒಬ್ಬಳು ಅಥವಾ ಇಬ್ಬರು ಪತ್ನಿಯರು ಮಾತ್ರ ವಿಧವೆಯರಾಗುತ್ತಾರೋ?' ಎಂದು ಕೇಳಿದರು ರಮಣರು.

'ಮೂವರೂ ಪತ್ನಿಯರು ವಿಧವೆಯರಾಗುತ್ತಾರೆ ಸ್ವಾಮೀ,' ಅಂದ ಭಕ್ತ.

'ಆಗಾಮಿ, ಸಂಚಿತ, ಪ್ರಾರಬ್ಧ ಈ ಮೂರೂ ಬಗೆಯ ಕರ್ಮಗಳು ಮೂವರು ಪತ್ನಿಯರಿದ್ದಂತೆ. ಸತ್ತ ಮೇಲೆ ಮೂವರೂ ವಿಧವೆಯರೇ,' ಎಂದು ಕ್ಲುಪ್ತವಾಗಿ ಹೇಳಿದ ರಮಣರು ಎದ್ದು ನಡೆದರು. ಅವರು ಇಷ್ಟು ಮಾತಾಡಿದ್ದೇ ಜಾಸ್ತಿ. ಅವರ ಬಳಿ ಮಾತೇ ಇಲ್ಲ. ಎಲ್ಲ ಮೌನ. ಉತ್ತರ ಕೇಳಿ ಬಂದವರ ಪ್ರಶ್ನೆಗಳೇ ಅನಾವಶ್ಯಕವಾಗಿಬಿಡುತ್ತಿದ್ದವು ಅವರ ಮುಂದೆ ಕುಳಿತಾಗ. ಅಂತಹ ತೇಜಸ್ಸು ಮತ್ತು ಮಹಿಮೆ ಅವರದ್ದು. ಆದರೆ ಕರ್ಮ ಸಿದ್ಧಾಂತದ ಬಗ್ಗೆ ಕೇಳಿದ ಪ್ರಶ್ನೆ ಗಹನವಾಗಿತ್ತು ಮತ್ತು ಪ್ರಸ್ತುತವಾಗಿತ್ತು ಎಂಬ ಕಾರಣಕ್ಕೆ ಕೊಂಚ ಮಾತಾಡಿದ್ದರು ರಮಣರು.

ಈ ಎರಡು ವಿರೋಧಾತ್ಮಕ (contradictory) ತತ್ವಗಳನ್ನು ಸಮನ್ವಯ (reconcile) ಮಾಡುವದು ಹೇಗೆ?

ಜ್ಞಾನೋದಯದ ನಂತರ ಆಗಾಮಿ ಮತ್ತು ಸಂಚಿತ ಕರ್ಮಗಳು ಮಾತ್ರ ನಾಶವಾಗುತ್ತವೆ. ಪ್ರಾರಬ್ಧ ಕರ್ಮದ ಫಲ, ಜ್ಞಾನಿಯಾದರೂ ಸರಿ, ಅನುಭವಿಸಲೇಬೇಕು ಎನ್ನುತ್ತದೆ ಕರ್ಮ ಸಿದ್ಧಾಂತ. ಗಂಡ ಸತ್ತ ನಂತರ ಎಲ್ಲ ಪತ್ನಿಯರೂ ವಿಧವೆಯರೇ ಅರ್ಥಾತ್ ಜ್ಞಾನೋದಯದ ನಂತರ ಯಾವ ಕರ್ಮವೂ ಉಳಿಯುವದಿಲ್ಲ ಅನ್ನುತ್ತಾರೆ ರಮಣರು.

ಸಮನ್ವಯ ಮಾಡುವ ಜರೂರತ್ತೇ ಇಲ್ಲ. ಭಕ್ತ ಅವನ frame of  reference ನಿಂದ ಕೇಳಿದ್ದ. ಭಕ್ತನ ಲೌಕಿಕ frame of reference ಅಂದರೆ ಈ ಜೀವನ, ಜಗತ್ತು. ಅದೆಲ್ಲ ಮಾಯೆ. ಮಾಯೆಯೊಳಗೆ ಇದ್ದಾಗ ಮಾತ್ರ ಕರ್ಮ ಸಿದ್ಧಾಂತಕ್ಕೆ ಅರ್ಥ. ರಮಣರು ಹೇಳಿದ್ದು ಅವರ ಉನ್ನತವಾದ frame of reference ನಿಂದ. ಅವರದ್ದು ಪಾರಮಾರ್ಥಿಕ ಸತ್ಯದ reference point. ಅವರ ದೃಷ್ಟಿಯಿಂದ ನೋಡಿದಾಗ ಎಲ್ಲವೂ ಪರಬ್ರಹ್ಮ.

ಎಲ್ಲವೂ ನೋಡುವ ದೃಷ್ಟಿ ಮೇಲೆ ಅವಲಂಬಿತ. ನೋಡುವ ದೃಷ್ಟಿ ಬದಲಾದರೆ ಸೃಷ್ಟಿ ಬದಲಾಗುತ್ತದಂತೆ.

ಇದು ಮೊನ್ನಿತ್ತಲಾಗೆ ಏನೋ ಓದುತ್ತಿದ್ದಾಗ ಅಚಾನಕ್ಕಾಗಿ ಸಿಕ್ಕು ಸಣ್ಣ ಮಟ್ಟದ ಜ್ಞಾನೋದಯಕ್ಕೆ (epiphany) ಕಾರಣವಾದ golden nugget! :)

Tuesday, May 29, 2018

ನೆರಳು

ಒಮ್ಮೆ ಒಬ್ಬ ಮನುಷ್ಯ ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದ. ಒಮ್ಮೆಲೇ ಸಿಂಹದ ಗರ್ಜನೆ ಕೇಳಿಸಿತು. ಭೀತನಾದ ಮನುಷ್ಯ ಅತ್ತಿತ್ತ ನೋಡುವಷ್ಟರಲ್ಲಿ ಭೀಕರ ಸಿಂಹವೊಂದು ಅಟ್ಟಿಸಿಕೊಂಡು ಬಂದಿತು. ಜೀವ ರಕ್ಷಿಸಿಕೊಳ್ಳಲು ಓಡಿದ. ಇನ್ನೇನು ಸಿಂಹ ಮೈಮೇಲೆ ಎರಗುತ್ತದೆ ಅನ್ನುವಷ್ಟರಲ್ಲಿ ಸಿಕ್ಕ ಮರವೊಂದನ್ನೇರಿ ಬಚಾವಾದ. ಸಿಂಹ ಮರದ ಕೆಳಗೇ ನಿಂತು ರೋಷದಿಂದ ಗರ್ಜಿಸುತ್ತಿತ್ತು.

ಅದೇ ಮರದ ಮೇಲೆ ಕೋತಿಯೊಂದು ಸಹ ಇತ್ತು. ಅದು ಕೂಡ ಸಿಂಹ ಬಂದಿದ್ದರಿಂದ ತುಂಬಾ ಹೆದರಿತ್ತು. ಸಿಂಹ ಕೋತಿಯನ್ನು ಗಮನಿಸಿತು. ಮೊದಲು ಒಂದೇ ಬೇಟೆ ಎಂದುಕೊಂಡರೆ ಈಗ ಎರಡು ಬೇಟೆ ಇವೆ ಮರದ ಮೇಲೆ. ಒಂದನ್ನಾದರೂ ಬೇಟೆಯಾಡಲೇಬೇಕು. ಆದರೇನು ಮಾಡುವದು? ಎರಡೂ ಮರದ ಮೇಲೆ ಕೂತಿವೆ. ಕೆರಳಿದ ಸಿಂಹ ಮತ್ತೂ ಜೋರಾಗಿ ಗರ್ಜಿಸತೊಡಗಿತು. ಸಿಂಹಕ್ಕೆ ಅದೇನೆನ್ನಿಸಿತೋ ಏನೋ. ನೆಲದ ಮೇಲೆ ಮೂಡಿದ್ದ ಕೋತಿಯ ನೆರಳಿನ ಮೇಲೆ ಪಂಜಾದಿಂದ ಆಕ್ರಮಣ ಮಾಡುತ್ತ ಮತ್ತೂ ಭೀಕರವಾಗಿ ಗರ್ಜಿಸತೊಡಗಿತು.

ಕೋತಿ ಮತ್ತೂ ಭೀತಗೊಂಡಿತು. ಸಿಂಹ ಭೀಕರವಾಗಿ ಗರ್ಜಿಸಿ, ಕೋತಿಯ ನೆರಳಿನ ಮೇಲೆ ಪಂಜಾದಿಂದ ಹೊಡೆದಾಗೊಮ್ಮೆ ಕೋತಿ ಎಲ್ಲಿ ತನ್ನ ಮೇಲೆಯೇ ಸಿಂಹ ಆಕ್ರಮಣ ಮಾಡಿತೋ ಎಂಬಂತೆ ಪ್ರಾಣಭಯದಿಂದ ಸಿಕ್ಕಾಪಟ್ಟೆ ಕಿರುಚಾಡುತ್ತ, ಒಂದು ಕೊಂಬೆಯಿಂದ ಮತ್ತೊಂದು ಕೊಂಬೆಗೆ ಹಾರುತ್ತಿತ್ತು. ಕೂತ ಕಡೆ ಕೂಡಲಿಲ್ಲ. ಅಷ್ಟು ಭಯ, ಗಾಬರಿ ಕೋತಿಗೆ.

ಸುಮಾರು ಹೊತ್ತು ಹೀಗೇ ನಡೆಯಿತು. ಕೋತಿಯ ನೆರಳಿನ ಮೇಲೆ ಸಿಂಹ ಆಕ್ರಮಣ ಮಾಡುವದು. ಅದಕ್ಕೆ ಪ್ರತಿಯಾಗಿ ಕೋತಿ ಕಿರುಚಾಡುತ್ತ ಭೀತಿಯಿಂದ ಆಕಡೆಯಿಂದ ಈಕಡೆಗೆ ನೆಗೆದಾಡುವದು. ಕೋತಿಯ ನಸೀಬ್ ಕೆಟ್ಟಿತ್ತು. ಒಮ್ಮೆ ಕೊಂಬೆಯಿಂದ ಕೊಂಬೆಗೆ ಹಾರುವಾಗ ಪೊರಪಾಟಿನಲ್ಲಿ ಆಯತಪ್ಪಿ ಕೆಳಗೆ ಬಿತ್ತು. ಮುಂದೇನು? ಅದಕ್ಕೇ ಕಾದಿದ್ದ ಸಿಂಹ ಒಂದೇ ಏಟಿನಲ್ಲಿ ಕೋತಿಯನ್ನು ಮುಗಿಸಿ ಸ್ವಾಹಾ ಮಾಡಿತು. ಪೆದ್ದು ಕೋತಿ! ಮರದ ಮೇಲೆ ಸುಮ್ಮನೆ ಕೂತಿದ್ದರೆ ಬದುಕುಳಿಯುತ್ತಿತ್ತು. ಸಿಂಹದ ಗರ್ಜನೆಗೆ ಹೆದರಿ, ಗಾಬರಿಗೊಂಡು, ತನ್ನ ನೆರಳಿನ ಮೇಲೆ ಸಿಂಹ ಆಕ್ರಮಣ ಮಾಡಿದಾಗೊಮ್ಮೆ ಅತ್ತಿಂದಿತ್ತ ಹಾರಾಡಿ, ಆಯತಪ್ಪಿ ಬಿದ್ದು, ಸಿಂಹಕ್ಕೆ ಆಹಾರವಾಗಿತ್ತು.

ಕೋತಿಯನ್ನು ಹೀಗೆ ಬೇಟೆಯಾಡಿದ ಸಿಂಹ ಏನೋ ಪಾಠ ಕಲಿತಿತು. ಕೋತಿಯ ನೆರಳಿನ ಮೇಲೆ ಆಕ್ರಮಣ ಮಾಡಿದರೆ ಮರದ ಮೇಲಿಂದ ಕೋತಿ ಉದುರಿ ಬಿತ್ತು. ಹಾಗಾದರೆ ಮನುಷ್ಯನ ನೆರಳಿನ ಮೇಲೆ ದಾಳಿ ಮಾಡಿದರೆ ಮೇಲಿರುವ ಮನುಷ್ಯನೂ ಕೆಳಗೆ ಉರುಳಿ ಬಿದ್ದರೂ ಬೀಳಬಹುದು. ಹೊಟ್ಟೆ ಇನ್ನೂ ತುಂಬಿಲ್ಲ. ಮನುಷ್ಯನನ್ನೂ ಬೇಟೆಯಾಡಿಬಿಡಬೇಕು ಎಂದುಕೊಂಡಿತು.

ಕೋತಿಯ ನೆರಳಿನ ಮೇಲೆ ಆಕ್ರಮಣ ಮಾಡಿದಂತೆಯೇ ಮನುಷ್ಯನ ನೆರಳಿನ ಮೇಲೂ ಆಕ್ರಮಣ ಮಾಡಿ ಭೀಕರವಾಗಿ ಗರ್ಜನೆ ಮಾಡಿತು. ಅದೆಷ್ಟೇ ಬಾರಿ ಮನುಷ್ಯನ ನೆರಳಿನ ಮೇಲೆ ಆಕ್ರಮಣ ಮಾಡಿದರೂ ಮನುಷ್ಯ ಕೆಳಗೆ ಬೀಳಲಿಲ್ಲ. ತಲೆಯೆತ್ತಿ ನೋಡಿದರೆ ಕೂತಲ್ಲೇ ಕೂತಿದ್ದಾನೆ. ಕೋತಿಯಂತೆ ಅತ್ತಿತ್ತ ಹಾರಾಡುತ್ತಿಲ್ಲ. ಭೀತನಾಗುತ್ತಿಲ್ಲ. ಪ್ರತಿಕ್ರಿಯೆ ತೋರುತ್ತಿಲ್ಲ.

ಸುಮಾರು ಹೊತ್ತು ಮನುಷ್ಯನ ನೆರಳಿನ ಮೇಲೆ ದಾಳಿ ಮಾಡಿದ ಸಿಂಹ ಆ ಮನುಷ್ಯ ಕೆಳಗೆ ಬೀಳುವದಿಲ್ಲ ಎಂದು ಖಾತ್ರಿಯಾದ ಮೇಲೆ ಅಲ್ಲಿಂದ ಹೊರಟುಹೋಯಿತು. ಸಿಂಹ ಹೋಯಿತು ಎಂದು ಖಾತ್ರಿಯಾದ ಮೇಲೆ ಮರದ ಮೇಲಿಂದ ಕೆಳಗಿಳಿದು ಬಂದ ಮನುಷ್ಯ ತನ್ನ ಮನೆ ಸೇರಿಕೊಂಡ.

ನೀತಿ: ನಮ್ಮ ಜೀವನದಲ್ಲಿ ಆಗುತ್ತಿರುವ ಎಲ್ಲ ಘಟನೆಗಳು, ಅನುಭವಗಳು ಎಲ್ಲ ನಮ್ಮ ನೆರಳಿನ ಮೇಲೆ ಆಗುತ್ತಿವೆ ಎಂದು ತಿಳಿಯಬೇಕು. ಸುಖವಿರಲಿ, ದುಃಖವಿರಲಿ, ನಲಿವಿರಲಿ, ನೋವಿರಲಿ, ಲಾಭವಿರಲಿ, ನಷ್ಟವಿರಲಿ, ಆರೋಗ್ಯವಿರಲಿ, ರೋಗವಿರಲಿ  - ಇದ್ಯಾವುದೂ "ನಮಗೆ" ಆಗುತ್ತಿಲ್ಲ. ನಮ್ಮ ನೆರಳಿಗೆ ಆಗುತ್ತಿವೆ ಎಂದು ತಿಳಿಯಬೇಕು. ಹಾಗೆ ತಿಳಿದಾಗ ಮಾತ್ರ ನಿರ್ಲಿಪ್ತತೆಯಿಂದ ಸಂಸಾರದ ಸಾಗರವನ್ನು ದಾಟಬಹುದು. ಅದನ್ನು ಬಿಟ್ಟು ಮೂಢ ಕೋತಿಯಂತೆ ಸಿಂಹ ನೆರಳಿನ ಮೇಲೆ ದಾಳಿ ಮಾಡಿದಾಗ ವಿನಾಕಾರಣ ಗಾಬರಿಗೊಂಡು ಅತ್ತಿಂದಿತ್ತ ಹಾರಾಡಿ ಪೊರಪಾಟಿನಲ್ಲಿ ಕೆಳಗೆ ಬಿದ್ದು ಸಿಂಹದ ಪಾಲಾಗಬಾರದು. ಮರದ ಮೇಲಿರುವ ಕೋತಿ ಅಜ್ಞಾನದಿಂದ ಕೂಡಿರುವ ಜೀವಾತ್ಮ. ಸಿಂಹ ವಿಧಿ. ಸಿಂಹದ ಆಕ್ರಮಣ ಕರ್ಮಫಲ. ಸಿಂಹ ಅದೆಷ್ಟೇ ರೋಷದಿಂದ ಗರ್ಜಿಸಿ ನೆರಳಿನ ಮೇಲೆ ಆಕ್ರಮಣ ಮಾಡಿದರೂ ವಿಚಲಿತನಾಗದೇ ಸ್ಥಿತಪ್ರಜ್ಞನಾಗಿ ಕುಳಿತ ಮನುಷ್ಯನೂ ಜೀವಾತ್ಮನೇ. ಅಷ್ಟೇ ಅವನಿಗೆ ಜ್ಞಾನೋದಯವಾಗಿದೆ. ತಾನು ಪರಬ್ರಹ್ಮ (ಅಹಂ ಬ್ರಹ್ಮಾಸ್ಮಿ) ಎಂದು ಮನವರಿಕೆಯಾಗಿದೆ. ಸಂಸಾರದ ಪ್ರಕ್ರಿಯೆಗಳೆಲ್ಲ ತನ್ನದೇ ನೆರಳಾದ ಜೀವಾತ್ಮದ ಮೇಲೆ ಎಂದು ತಿಳಿದಿರುವ ಕಾರಣ ಆತ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳುವದಿಲ್ಲ. ಬಂದದ್ದನ್ನೆಲ್ಲಾ ಎದುರಿಸುತ್ತಾನೆ. ಫಲಾಫಲಗಳನ್ನು ನಿರ್ಲಿಪ್ತತೆಯಿಂದ ಸ್ವೀಕರಿಸುತ್ತಾನೆ. ಸ್ಥಿತಪ್ರಜ್ಞನಾಗಿ ಇರುತ್ತಾನೆ.

ಮಹಾರಾಷ್ಟ್ರದಲ್ಲಿ ಆಗಿಹೋದ ಶ್ರೇಷ್ಠ ಸಂತರಾದ ಸಂತ ಜ್ಞಾನೇಶ್ವರರು ಬರೆದ 'ಜ್ಞಾನೇಶ್ವರಿ' ಎಂಬ ಪುಸ್ತಕದಲ್ಲಿ ಬರುವ ನೀತಿಕಥೆ.

ಇಂತಹ ನೀತಿಕಥೆಗಳಿಂದ ಏನುಪಯೋಗ?  ಬದುಕಿನ ಬಾಣಲೆಯಲ್ಲಿ ವಿಧಿ ಹೊತ್ತಿಸಿದ ಬೆಂಕಿಯಲ್ಲಿ ಬರೋಬ್ಬರಿ ಹುರಿದು / ಉರಿದು ಹೋಗುತ್ತಿರುವಾಗ ಇವೆಲ್ಲ ನೆನಪಾಗುತ್ತವೆಯೇ? ಉಪಯೋಗವಾಗುತ್ತವೆಯೇ? ಎಂದು ಕೇಳಿದರೆ ಅಂತಹ ಸಂದರ್ಭಗಳಲ್ಲೇ ಇಂತಹ ನೀತಿಕಥೆಗಳ ಗರಿಷ್ಠ ಮೌಲ್ಯ ಮತ್ತು ಉಪಯೋಗ. ಇಲ್ಲವಾದರೆ ಕ್ರೂರ ವಿಧಿ ಬಹು ಬೇಗ ಹಣಿದುಬಿಟ್ಟೀತು.