Sunday, July 01, 2012

ಕೊಳಲು ಬಾರಿಸಹೋದ ಸಾಬರಿಗೆ ಅವರತ್ತಿ ಕಸಬರಿಗೆಯಿಂದೇಕೆ ಬಾರಿಸಿದಳು?

ನಮ್ಮ ಖಾಸ್ ದೋಸ್ತ ಕರೀಂ ಸಾಬರು ಹಾಸ್ಪಿಟಲ್ ನ್ಯಾಗ ಅಡ್ಮಿಟ್ ಆಗ್ಯಾರ್ ಅಂತ ಸುದ್ದಿ ಬಂದಿದ್ದ ತಡ, ಎದ್ದು ಬಿದ್ದು ಓಡಿದೆ.

ಸಾಬ್ರ ಹಾಲತ್ ಖರಾಬ್ ಇತ್ತ. ಮೈಕೈಗೆಲ್ಲಾ ಬ್ಯಾಂಡೇಜ್ ಸುತ್ತಿ ಒಳ್ಳೆ ಇಜಿಪ್ಟ್ ಮಮ್ಮಿ ಮಾಡಿದಾಂಗ ಮಾಡಿ, ಒಂದ ಕಾಲ್ಗೆ ಟ್ರಾಕ್ಶನ್ ಬ್ಯಾರೆ ಹಾಕಿ, ಸಾಬರು ವಿಶಾಲ ಕೋನದ ಶೇಪ್ ನ್ಯಾಗ ವಿಷ್ಣು ಗತೆ ಪೋಸ್ ಕೊಟ್ಟ ಮಲ್ಕೊಂಡಿದ್ರು.

ಸಾಬ್ರಾ....ಏನಾತ್ರಿ ? ಯಾಕೋ ಯಾರೋ ಮಸ್ತ ನಾದಿ ಬಿಟ್ಟಂಗ ಅದ? ಯಾರಿಗೆ ಏನ ಮಾಡಲಿಕ್ಕೆ ಹೋಗಿದ್ರಿ?....ಅಂದೆ.

ನಮ್ಮ ಅತ್ತಿ ಜಾನ್....ಅಂದು ನೋವಿನಿಂದ ಮುಲುಗಿದ ಕರೀಂ.

ಅತ್ತಿ ಅಂದ್ರ? ನಿಮ್ಮ ಹೆಂಡ್ತಿ ಅವ್ವ ಏನು? ಅವರ್ಯಾಕ್ ನಿಮಗ ಜಜ್ಜಿದ್ರು?....ಅಂತ ಕೇಳಿದೆ.

ನೀವು ಹೇಳಿದ ರಾಧಾ ಕೃಷ್ಣ ಸರಸ ಸಲ್ಲಾಪದ ಕಥಿ ಹೇಳಿದೆ ನೋಡ್ರಿ ಸಾಬ್.....ಹಾಕ್ಕೊಂಡ ಅಕಿ, ಅಕಿ ತಮ್ಮಾ ಕಲ್ಲೂ ಮಾಮಾ, ಕಲ್ಲೂ ಮಾಮಿ ಎಲ್ಲ ಕೂಡಿ....ಬೇಶರಂ ಕಹೀಂಕೆ....ಬೇರೆ  ಹೆಂಗಸು ಮಂದಿ ಜೊತೆ ಹಿಂಗೆ ಮಾತಾಡ್ತಿ ಅಂತ ಬೈದು, ಚೀರಿ......ಕೊಡಬಾರದ ಜಾಗದಲ್ಲಿ ಎಲ್ಲ, ಕೊಡಬಾರದ ರೀತಿಯಲ್ಲಿ ಕೊಟ್ಟು ಕೊಟ್ಟು, ನಮ್ಮ ಹಾಲತ್ ಹಿಂಗೆ ಆಗಿ ಹೋಯ್ತು ಸಾಬ್....ಅಂತ ಕಣ್ಣೀರ್ ಹಾಕಿದ ನಮ್ಮ ದೋಸ್ತ ಕರೀಂ ಭಾಯಿ.

ರಾಧಾ ಕೃಷ್ಣ ಸರಸ ಸಲ್ಲಾಪ...ನಾ ಹೇಳಿದ ಕಥಿ..ಅದನ್ನ ಇವ ಹೋಗಿ ಹೇಳ್ಯಾನ್...ಅದಕ್ಕ ಇವಂಗ ಈ ರೀತಿ ಯಾಕ್ ಬಾರ್ಸಿದರು.....ಭಾಳ ಏನೋ involved ಇದೆ ಅಂತ ಅನ್ನಿಸ್ತು.

ಫ್ಲಾಶ್ ಬ್ಯಾಕ್ ಗೆ ಹೋದೆ.

ಅವತ್ತ....ಸ್ವಲ್ಪ ದಿವಸದ ಹಿಂದೆ...ಕರೀಂ ಸಿಕ್ಕಾಗ....

ಸಾಬ್....ನಮ್ಮದು ಸರಗಂ ದು ಭಾಳ್ ಪ್ರಾಬ್ಲಮ್ ಆಗಿದೆ ಸಾಬ್....ಅಂದಿದ್ದು ನೆನಪಿಗೆ ಬಂತು.

ಯಾರು ಸರಗಮ್?...ಅಂತ ಕೇಳಿದೆ.

ಅವಳೇ ಸಾಬ್....ನಮ್ಮದು ಬೇಗಂ ಇಲ್ಲಾ....ಅಕಿದು ಛೋಟಿ ಬೆಹೆನ್....ನಮದೂಕಿ ಸಾಲಿ ಸಾಹಿಬಾ....ಅಂತ ಅವನ ನಾದಿನಿ ಬಗ್ಗೆ ಹೇಳಿದ.

ನಾದಿನಿ......ಸಾಬ್ರು ನಾದಿಸಿಕೊಳ್ಳುವದಕ್ಕೆ  ಕಾರಣೀಭೂತಳಾದಲೇ ....ಹೇಗೆ?...ಅಂತ ಡೌಟ್ ಬಂತು.

ಹಾಂ....ಅಕಿ....ಮೈತುಂಬಾ ಸೊಕ್ಕು ತುಂಬಿಕೊಂಡು ಸದಾ ತಾನು, ತನಗೆ, ತನ್ನದು ಅನ್ನೋ ರೀತಿ ಬಿಹೇವ್ ಮಾಡಿ ನಿಮ್ಮ ಮನಸ್ಸಿಗೆ ನೋವ ಮಾಡ್ತಾ ಇದ್ದಾಕಿ.....ಅಕಿ ಏನು ಮಾಡಿದಳು?.....ಅಂತ ಕೇಳಿದೆ.

ಸಾಬ್ರು ಸ್ವಲ್ಪ ದಿವಸದ ಹಿಂದೆ ಸಿಕ್ಕಾಗ್ ಎಲ್ಲ ಹೇಳಿದ್ರು.

ನೋಡ್ರಿ...ಸಾಬ್...ನಮ್ಮ ಸಾಲಿ ಇಲ್ಲಾ ಕ್ಯಾ....?ಭಾಳ್ ಬೇಶರಂ ಮತ್ತು ಬಕ್ತಮೀಜ್ ಅದೇ ಸಾಬ್....ಯಾವಾಗಲೂ ಹೇಳ್ತದೆ....ನೀವು ಓನ್ಲಿ ಅಕ್ಕಾ ಜಾನ್ ಗೆ attention ಕೊಡ್ತೀರಿ....ನಾವು ನಿಮ್ಮ ಸಾಲಿ....ನಮಗೆ ಏನೂ attention ಕೊಡುದೇ ಇಲ್ಲಾ....ಜೀಜಾಜಿ ನಾವು ಕ್ಯಾ ಚಂದಾ ಇಲ್ಲ ಕ್ಯಾ....? ಸಾಲಿ ಆಧಿ ಗರವಾಲಿ ಹೋತಿ ...ಅಂತಾ ತಪ್ಪು ತಪ್ಪು ಸಿಗ್ನಲ್ ಕೊಟ್ಟು ನಮಗೆ ಕನಫೂಸ್ ಮಾಡ್ತಿತ್ತು ಸಾಬ್......ಅಂತ ಮಾತ್ ನಿಲ್ಲಿಸಿದ ಕರೀಂ.

ನೋಡಿ ಸಾಬ್....ನಾವ್ ಸ್ವಲ್ಪ ನಿಮ್ದೂಕಿ ರಾಮಚಂದ್ರಾ ಇದ್ದಂಗೆ?..ಅಂದ ಕರೀಂ.

ಯಾವ್ ರಾಮಚಂದ್ರರಿ ಸಾಬರ....? ಕಾಯಿಪಲ್ಲೆ ಅಂಗಡಿ ಅವ ಏನು? ಅವ ಯಾಕ್ ಬಂದನರಿ ಇಲ್ಲೇ?....ಅಂತ ಅಡ್ಡ ಬಾಯಿ ಹಾಕಿದೆ.

ಕಾಯಿಪಲ್ಲೆ ಅಂಗಡಿ ಅಲ್ಲ ರಾಮಚಂದ್ರನೂ ಅಲ್ಲ....ಮುಟ್ಟನ್ ಅಂಗಡಿ ಮೆಹಬೂಬ್ ನೂ ಅಲ್ಲ....ಮುಚಗೊಂಡು ಪೂರ್ತಿ ಕೇಳ್ತೀರಿ ಕ್ಯಾ?...ಅಂತ ಮೈಲ್ಡ್ ಆಗಿ ಡೋಸ್ ಕೊಟ್ಟ.

ನೋಡಿ...ಸಾಬ್...ನಾವು ಶಾದಿ ಆಗಿದ್ದು ಬೇಗಂ ಜೊತಿ...ಸಾಲಿ ಜೊತಿ ನಮಗೆ ಏನು ಲೇನಾ ದೇನಾ ಸಾಬ್....? ಅಕ್ಕನ್ನ ಮದ್ವಿ ಆದ್ರೆ ತಂಗಿ ಫ್ರೀ ಅಂತ ಸ್ಕೀಮ್ ಐತೆ ಕ್ಯಾ? ಇದ್ದರೂ ಅದು ಗಲತ್ ನೋಡಿ...ಅಂತಾದ್ರಲ್ಲಿ ಈ selfish ಸಾಲಿ ಸಾಹಿಬಾ ನಮಗೆ ತ್ರಾಸ್ ಕೊಟ್ಟು ಕೊಟ್ಟು ಪರೆಷಾನ್ ಮಾಡ್ತಿತ್ತು ಸಾಬ್.....ಅಂದ ಕರೀಂ

ಏನಂತ ನಿಮ್ಮ ಹೆಂಡ್ತಿ ತಂಗಿ ಪ್ರಾಬ್ಲೆಮ್ ಸಾಬ್ರಾ?....ಯಾಕೋ ಇವ ಗಿರಕಿ ಹೊಡಿಲಿಕತ್ತಾನ್ ಅನ್ನಿಸ್ತು.

ನೋಡಿ ಸಾಬ್...ನಾನು ಏನೋ ಅಕಿಗೆ ವಟ್ಟೆ attention ಕೊಡೂದೇ ಇಲ್ಲ ಅಂತೆ...ಯಾವಾಗಲೂ ಅಕಿನ್ನ ignore ಮಾಡ್ತೀನಿ ಅಂತೆ....ಅಕೀದು ಕಂಪ್ಲೇಂಟ್ ಸಾಬ್....ಸಾಲೀಗೆ ಹೆಚ್ಚು  attention ಕೊಟ್ಟರೆ ಬೀವಿ ನಾರಾಜ್ ಆಗೋದಿಲ್ಲ ಕ್ಯಾ ಸಾಬ್?....ಅಂತ ಹೇಳಿಕೊಂಡ ಕರೀಂ.

ಓಹೋ....ಹಿಂಗ ಅದ ನಿಮ ಪ್ರಾಬ್ಲೆಮ್....? ಅಂತ ಟೈಮ್ ಪ್ಲೀಜ್ ತೊಗೊಂಡು ವಿಚಾರಕ್ಕೆ ನಿಂತೆ.

ಸಾಬ್ರಾ...ನಿಮ್ಮ ನಾದಿನಿ ಸರಗಂ selfish ಇದ್ದಾಳ ಅಂತೀರಿ...ಅಕಿಗೆ ನೀವು ನಮ್ಮ ಕೃಷ್ಣ ರಾಧಾಂಗಾ ಹೇಳಿದಂಗಾ ಯಾಕ್ ತಿಳಿಸಿ ಹೇಳಬಾರದು.....? ಅಂತ ಎಲ್ಲೊ ಓದಿದ ಒಂದು ಒಳ್ಳೆ ನೀತಿ ಕಥೆ  ಹೇಳೋಣ ಅಂತ ಮಾಡಿದೆ.

ಸಾಬ್....ಕೃಷ್ಣ ಅಂತೀರಿ....ನಿಮ್ಮ ಕೃಷ್ಣ ಅವರಿಗೆ 16,000 ಮಂದಿ ಬೇಗಂ....ನೀವು ನಮ್ಮ ಸಾಲೀನೂ ಶಾದಿ ಮಾಡ್ಕೋ ಅಂತ ಇಲ್ಲಾ ತಾನೇ?....ಅಂತ concern express ಮಾಡಿದ.

ಇಲ್ಲಪಾ....ಒಂದ ನೀತಿ ಕಥಿ...ಇದನ್ನ ಬೇಕಾದ್ರ ನೀ ನಿಮ್ಮ ಸಾಲಿ ಸರಗಂ ಗಾ ಹೇಳಿ ನೋಡು...ಆವಗಾ ಅಕಿಗೆ ತಿಳದೀತು ನೀ ಯಾಕ್ ಅಕಿನ್ನಾ ಇಗ್ನೋರ್ ಮಾಡ್ತಿ ಅಂತ.....ಹೇಳಲಿ ಏನು ಕಥಿ?....ಅಂತಾ ಆಫರ್ ಕೊಟ್ಟೆ.

ಹೇಳ್ರಿ ಸಾಬ್....ಕೃಷ್ಣ ಭಗವಾನ್ ಅಷ್ಟು ಬೇಗಂಗೆ  ಮಂದಿಗೆ ಮ್ಯಾನೆಜ್ ಮಾಡಿದಾರೆ...ಅವರ ಕಡೆ ಏನೋ ಟೆಕ್ನಿಕ್ ಇರ್ಬೇಕು.

ನೋಡ್ರೀ....ನಮ್ಮ ಕೃಷ್ಣ ಭಗವಾನ್ ಅವರಾ ರಾಧಾನೂ ಹಿಂಗ ನೋಡ್ರಿ...ಏನೋ ಸ್ವಲ್ಪ ಚಂದ ಇದ್ದಳಂತ...ಅಷ್ಟಕ್ಕ ಸೊಕ್ಕ ಹಾರಿಸೋದೇನು....? ಅಕಿಗೆ ನಮ್ಮ ಕೃಷ್ಣ ದೇವರ 100% attention ಬೇಕಾಗಿತ್ತಂತ....ಅಲ್ಲರೀ...ವಿಚಾರ ಮಾಡ್ರಿ....ಪಾಪ ಅವರಿಗೆ 16,000 ಮಂದಿ ಹೆಂಡ್ರು, ಡವ್ etc.....ಮ್ಯಾಲೆ ದೇವರು ಬ್ಯಾರೆ....ಹಂತಾದ್ರಾಗ ಇಕಿ ಹುಚ್ಚ್ ಖೋಡಿ ರಾಧಿಗೆ ಒಬ್ಬಾಕಿಗೆ ಹ್ಯಾಂಗ 100% ಗಮನಾ ಹ್ಯಾಂಗ  ಕೊಟ್ಟಾರು ಅವರು....? ಅದರ ಮ್ಯಾಲೆ....ಈ ರಾಧಿನಾ....ಮೈತುಂಬಾ ತಾನು, ತನಗೆ, ತಂದು (I, Me, Mine) ಅನ್ನೋ ಬಿಸಿ ಗಾಳಿ (ಹಾಟ್ ಏರ್) ತುಂಬಿಕೊಂಡು ಯಾವಗ್ ನೋಡಿದರೂ ಸಿಡಿ ಮಿಡಿ ಮಾಡ್ಕೋತ್ತ ಇದ್ದರ, ದೇವರಲ್ಲ ರಾಕ್ಷಸರೂ ಅಕಿಗೆ 100% ಗಮನ ಕೊಡತಿರಲಿಲ್ಲ ....ಅಂತ ಹೇಳಿ ಉಸರ್ ಎಳಕೊಂಡ ಮುಂದವರ್ಸೀದೆ.

ಒಮ್ಮೆ...ಕೃಷ್ಣ ಭಗವಾನ್ ಮಸ್ತ ಕೊಳಲ್  ಬಾರಿಸಿಕೋತ್ತ ನಿಂತಿದ್ರು ಅಂತ ಆತು...ಆಗ ರಾಧಾ ಬಂದು ಒಂದು ತರಹ ಹೊಟ್ಟಿಕಿಚ್ಚಿಲೆ ಅಂದಳಂತ.....

ಕ್ಯಾ ಸಾಬ್.....ಏನು ಅಂದ್ರು ರಾಧಾ ಬೇಗಂ ಕೃಷ್ಣ ಅವರಿಗೆ..ಅಂತ ಕೇಳಿದ ಕರೀಂ.

ನನ್ನ ಪ್ರೀತಿಯ ಕೃಷ್ಣ.....ನೀ ಬಾರಿಸೋ ಕೊಳಲು ಕಂಡ್ರೆ ನನಗೆ ಅಸೂಯೆ....ಒಂದು ತರಹ.....ಅಂದಳಂತೆ ರಾಧಾ.

ಯಾಕೆ ಪ್ರಿಯ ಸಖಿ?....ಅಂತ ಕೇಳಿದರಂತೆ ಕೃಷ್ಣ.

ಮತ್ತೇನು ಪ್ರಿಯನೇ? ಆ ಕೊಳಲಿನ ಭಾಗ್ಯ ನೋಡು? ನನಗಿಲ್ಲದ ಭಾಗ್ಯ ಆ ಮೂರ್ಕಾಸಿನ ಕೊಳಲಿಗೆ ಇದೆ....ಅಂತ ಹೇಳಿ ರಾಧಾ ನಿಟ್ಟುರಿಸಿನ ಸಂಗಡ ಬೇಕಾದಷ್ಟು J (ಜಲಸಿ) express ಮಾಡಿದಳಂತೆ.

ಏನು ಪ್ರಿಯೇ ...ಈ ಕೊಳಲಿನ ಭಾಗ್ಯ?....ಅಂತ ಮುಗ್ಧತೆಯಿಂದ ಕೇಳಿದರಂತೆ ಕೃಷ್ಣ.

ಮತ್ತೇನು....ನಿನ್ನ ಆ ಕೆಂದುಟಿಗಳು ಸದಾ ಆ ಕೊಳಲ ಮೇಲೆ  ಯಾವಾಗಲು ಇರುತ್ತವೆ....ಆ ಭಾಗ್ಯ ನನಗಿಲ್ಲವೇ...ಹಾಯ್....ಹಾಯ್....ಅಂತ ಫೀಲ್ ಮಾಡಿಕೊಂಡಳು ರಾಧಾ.

ಕೃಷ್ಣ ಅವರು ತಮ್ಮದೇ ಶೈಲಿಯಲ್ಲಿ ನಕ್ಕು ಕೇಳಿದರಂತೆ.

ಪ್ರಿಯೇ ...ಈ ಕೊಳಲ ನೋಡು....ಫುಲ್ ಖಾಲಿ ಖಾಲಿ ಆಗಿದೆ...ಇದರಲ್ಲಿ ಏನೂ ಇಲ್ಲ...ಖಾಲಿ ಇರುವದಿಂದಲೇ ನಾನು ಇದರ ಮೇಲೆ ನನ್ನ ತುಟಿಯಿಟ್ಟು, ಇದರಲ್ಲಿ ನನ್ನ ದಿವ್ಯ ಮಧುರ ಸಂಗೀತ ತುಂಬಬಲ್ಲೆ....ಆದರೆ ನೀನು....ಅಂತ ಮಾತು ನಿಲ್ಲಿಸಿದರು ಕೃಷ್ಣ ಭಗವಾನ್.

ತಲಿಯಲ್ಲೂ ರೂಪದಲ್ಲೂ ರಾಪಚಿಕ್  ಇದ್ದ ರಾಧೆಗೆ ಹೆಚ್ಚಿಗೆ ಹೇಳೂದು ಬೇಕಾಗಿರಲಿಲ್ಲ. ಆಕಿಗೆ ತಿಳೀತು. ಅಕಿಯಲ್ಲಿ ಕೇವಲ ತಾನು, ತನಗೆ, ತನ್ನದು ಎಂಬ ಮಾಯೆಯ ಬಿಸಿ ಗಾಳಿ (ಹಾಟ್ ಏರ್) ತುಂಬಿ ಬಿಟ್ಟಿದೆ...ಅದನ್ನ ಖಾಲಿ ಮಾಡೋ ತನಕ ಕೃಷ್ಣ ತನ್ನಲ್ಲಿ ದಿವ್ಯ ಮಧುರ ಸಂಗೀತ ತುಂಬಲಾರ ಅಂತ. ಅವತ್ತಿಂದ ಆಕೆ ಪೂರ್ತಿ  ಬದಲಾಗಿ ಕೃಷ್ಣನ ಪ್ರೀತಿಗೆ ಒಳಗಾದಳು.

ಸಾಬ್ರಾ....ತಿಳೀತು ಏನ್ರಿ ಕಥಿ? ಹ್ಯಾಂಗದ?....ಅಂದೆ.

ಏನು ಸುಪರ್ ಕಥಿ ಸಾಬ್? ನಾವು ನಮ್ಮನ್ನ ಖಾಲಿ ಖಾಲಿ ಮಾಡ್ಕೊಂಡ್ರೆ ಕೃಷ್ಣ ಅವರು ನಮ್ಮನ್ನ ಬಾರ್ಸಿ ಬಾರ್ಸಿ ಬಿಟ್ಟು ಬಿಡ್ತಾರೆ....ಕರೆಕ್ಟ್ ಸಾಬ್?....ಅಂತ ಕೇಳಿದ.

ಯಾಕೋ...ಸ್ವಲ್ಪ refine ಮಾಡಿ ಹೇಳಿದ್ರ ಚೊಲೋ ಇತ್ತು....ಅಲ್ಲೆ  ಕೃಷ್ಣ ಹೇಳಿದ್ದು ಕೊಳಲು ಬಾರ್ಸಿ ಅಂತ...ನೀವು ಸರಿಯಾಗಿ ಹೇಳದಿದ್ದರಾ, ಬಾರ್ಸೋದು ಬ್ಯಾರೆ ಮೀನಿಂಗ್ ಕೊಡ್ತದ ನೋಡ್ರೀ ಮತ್ತಾ...ಅಂತ ವಾರ್ನಿಂಗ್ ಕೊಟ್ಟಿದ್ದೆ.

ಈಗ ಸಾಬ್ರು  ಹಾಸ್ಪಿಟಲ್ ಬೆಡ್ಡಿನ ಮ್ಯಾಲೆ ಮಲಕೊಂಡು ಮುಲಗಿ ಹೇಳಿದ್ರು.

ಹಾಂ ಸಾಬ್ ಇದೇ  ಕಥಿ ಶಾರ್ಟ್ ಆಗಿ ನಮ್ಮ ಸಾಲಿ ಸಾಹಿಬಾ ಸರಗಂ ಗೆ  ಹೇಳೋಕೆ ಹೋಗಿ ಗಲತ್ ಫೈಮಿ ಆಗಿ ನನಗೆ ಗಜ್ಜು ಬಿದ್ದು ಈ ಹಾಲತ್ ಸಾಬ್....ಅಂತ ನಿಲ್ಲಿಸಿದ ಕರೀಂ.

ಸಾಬ್ರಾ.....ಏನ ಹೇಳಿದ್ರಿ ನಿಮ್ಮ ನಾದಿನಿಗೆ?....ಅಂತ ಕೇಳಿದೆ.

ಸಾಬ್....ನಿಮಗೆ ಗೊತ್ತು...ಅಕೀಗೆ ಪೇಷನ್ಸ್ ಇಲ್ಲ....ಇಷ್ಟು ಉದ್ದಾ ರಾಧಾ ಕೃಷ್ಣ ಸರಸ ಸಲ್ಲಾಪ ಕೇಳೋಕೆ ಅಕಿಗೆ ಆಗೋದಿಲ್ಲಾ....ಅದಕ್ಕೆ ಸೀದಾ ಮೇನ್ ಪಾಯಿಂಟ ಗೆ ಬಂದು ಹೇಳಿಬಿಟ್ಟೆ ಸಾಬ್....ಅಂತ ಮಾತ್ ನಿಲ್ಲಿಸಿದ ಕರೀಂ.

ಏನು ಹೇಳಿದ್ಯೋ ಪುಣ್ಯಾತ್ಮಾ?......ಅಂದೆ.

ಸಾಬ್....ನಾನು ಹೇಳಿದೆ....ಏ ಸಾಲೀ ಸರಗಂ....ಸುನ್...ತು ಅಭಿ ಅಭಿ ಖಾಲಿ ಹೋಜಾ...ಮೇ ತುಮಕೋ ಬಾಸೂರಿ ಕಿ ತರಾ ಬಜಾವೂಂಗಾ...ಸಮಜೀ ಕ್ಯಾ? ಬಹುತ್ ಭರೇಲಿ ರೆ ತು...ಐಸೆ ರಹೀ ತೋ ಕೈಸೆ ಬಜಾವೂ ತೆರೆ ಕೋ....ಅಂತ ಅಂದೇ ಸಾಬ್ ಅಂತ ಹೇಳಿ ಮಗ್ಗುಲಾ ಬದಲಾಯಿಸದ ಕರೀಂ.

ಸಾಬ್ರಾ...ಘಾತಾ ಮಾಡಿಕೊಂಡ್ರಿ ನೋಡ್ರಿ....ನಾ ನಿಮಗ ಮೊದಲೇ ಹೇಳಿದ್ದೆ...ಅಲ್ಲೇ ಬಾರ್ಸೋದು ಕೊಳಲಾ ಹೊರತು ಮತ್ತೇನೂ ಅಲ್ಲಾ ಅಂತ...ಹನ್ತಾದ್ರಾಗ ನೀವು ನಿಮ್ಮ ನಾದನಿಗೆ ನೀ ಖಾಲಿ ಆಗು, ನಾ ಬಾರಸ್ತೇನಿ  ಅಂದ್ರ ಅಕಿ ಲಬೋ ಲಬೋ ಹೊಯ್ಯಕೊಂಡು ಅಕಿ ಅವ್ವ ಅಂದ್ರಾ ನಿಮ್ಮ ಅತ್ತಿ, ಕಲ್ಲೂ ಮಾಮಾ, ಮಾಮಿ ಎಲ್ಲರನ್ನಾ ಕೂಡ್ಸಿ...ದೇಖೋ...ಜಿಜಾಜಿ ಬೋಲ್ಯಾ ಕಿ ವೊಹ್ ಮೆರೆಕೋ ಬಜಾನಾ ಬೋಲ್ತೆ....ಅಂತ ಹೇಳಿ ನಿಮ್ಮನ್ನ ವಿಲ್ಲನ್ ಅಂತ ಪೇಂಟ್ ಮಾಡಿ....ಮುಂದ ನಿಮ್ಮದು ಈ ಹಾಲತ್....

ಸಾಬ್ ಟೀಖ್ ಬೋಲಾ  ಸಾಬ...ಐಸಾ ಹೀ ಹುವಾ....ಅಂದಾ ಕರೀಂ.

ಹೋಗ್ಲಿ ಬಿಡ್ರಿ ಸಾಬರ....ಲೆಸನ್ ಕಲತ್ರಿ ....ಆರಾಮಾಗಿ ಬರ್ರಿ....ಭಾಗವತದಿಂದ ಇಂತಾ ಕಥಿ ಬೇಕಾದಷ್ಟು ಹೇಳ್ತೀನಿ.

ಸಾಕು....ಸಾಬ್....ಒಂದು ಕಥಿ ಕೇಳಿ ಇಷ್ಟು ಆಗಿದ್ದು ಸಾಕಾಗಿಲ್ಲಾ ಕ್ಯಾ? ದೋಸ್ತ ಯಾ ದುಶ್ಮನ್ ಸಾಬ್?....

ತೊಗೊಂಡ ಹೋಗಿದ್ದ ಹಣ್ಣು ಮತ್ತೊಂದು ಇಟ್ಟು , ಸಾಬ್ರಿಗೆ ಶುಭರಾತ್ರಿ ಕೋರಿ ಹೊರಗ ಬಂದ್ರ ಕೃಷ್ಣ ರುಕ್ಮಿಣಿ ಸರಸ ಸಲ್ಲಾಪ ನೆನೆಪ್ ಆತ. ಕೃಷ್ಣ ರಾಧಾ ಸರಸ ಸಲ್ಲಾಪ ಹೇಳಿ ತಪ್ಪು ಮಾಡಿದೆ ಏನು?

** http://maheshuh.blogspot.com/2010/12/emptiness.html



No comments: