ನಮ್ಮ ಅಜ್ಜಿ ಕೋಳಿ ಕೂಗುವ ಕಾಲಕ್ಕೆ ಸರಿಯಾಗಿ ಏಳುತ್ತಿದ್ದಳು. ಆದರೆ ಎದ್ದಾಕ್ಷಣ ಕೋಳಿಗಳ ಖಾತಿರದಾರಿಕೆಗೆ ತೊಡಗುತ್ತಿರಲಿಲ್ಲ.
ಹಾಗಾದ್ರೆ ಅಜ್ಜಿ ಬೆಳಗಿನ ಆ ಕೆಲ ದಿವ್ಯ ಘಂಟೆಗಳನ್ನು ಹೇಗೆ ಕಳೆಯುತ್ತಿದ್ದಳು?
ಅಜ್ಜಿಯ ದಿನಚರಿ ಏಕದಂ ಕರಾರುವಾಕ್. ಬೆಳಿಗ್ಗೆ ಎದ್ದು, ಹೊರಗಡೆ ಬಂದು, ವರಾಂಡಲ್ಲಿರುವ ಆರಾಮ್ ಕುರ್ಚಿ ಮೇಲೆ ಕೂತು, ಸುಮಾರು 15 ನಿಮಿಷ ತನ್ಮಯತೆಯಿಂದ ಬೈಬಲ್ ಓದುತ್ತಿದ್ದಳು.
ನಂತರ ಮೊದಲನೆ ಕಪ್ ಕಾಫಿಯೊಂದಿಗೆ ಯಾವದಾದರು ಅಧ್ಯಾತ್ಮಿಕ ಪುಸ್ತಕವನ್ನೋ ಅಥವಾ ಯಾವದಾದರು ಮಹಾನುಭಾವರ ಕಥೆ ಓದುತ್ತಿದ್ದಳು. ನ್ಯೂಸ್ ಪೇಪರ್ ಎತ್ತಿಟ್ಟು ಕೊಂಡರೂ ಅದನ್ನ ಓದುವದು ತುಂಬಾ ಹೊತ್ತಿನ ನಂತರ.
ಹೀಗೆ ಯಾವದೋ ಒಳ್ಳೆ ಪುಸ್ತಕದ ಕೆಲ ಪುಟ ಓದಿದ ಮೇಲೆ, ತನ್ನ ಡೈರಿಯಲ್ಲಿ ಆ ಕೆಲವಾರು ಪುಟ ಓದಿ ಗ್ರಹಿಸಿದ ವಿವೇಕ, ಪಡೆದ ಜ್ಞಾನದ ಬಗ್ಗೆ ಸಂಕ್ಷಿಪ್ತವಾಗಿ ನೋಟ್ಸ್ ಮಾಡುತ್ತಿದ್ದಳು.
ಕೆಲವು ದಿವಸ, ನೋಟ್ಸ್ ಮಾಡಿಟ್ಟ ತಕ್ಷಣ, ತನ್ನ ಯಾವದಾದರು ಸಹೃದಯಿ, ಸಮಾನಮನಸ್ಕ ಗೆಳತಿಗೆ ಫೋನ್ ಮಾಡಿ ತನ್ನ ಓದಿನ ಬಗ್ಗೆ, ಮಾಡಿಟ್ಟು ಕೊಂಡ ನೋಟ್ಸ್ ಬಗ್ಗೆ ಮಾತಾಡುತ್ತಿದ್ದಳು. ಚರ್ಚೆ ಹಾಗೆ ಅಲ್ಲ. ಮಿತ್ರರಿಬ್ಬರ ನಡುವೆ ಆತ್ಮೀಯ ಮಾತುಕತೆಯಂತಹದು.
ಇಷ್ಟೆಲ್ಲಾ ತಯಾರಿ ಮಾಡಿಕೊಂಡ ಮೇಲೆ 15-20 ನಿಮಿಷ ಮೊಣಕಾಲೂರಿ ನಮ್ಮ ಪದ್ಧತಿಯ ಪ್ರಕಾರ ಪ್ರಾರ್ಥನೆ. ಪ್ರಾರ್ಥನೆಯ ಬಳಿಕ ಹಿತ, ಮಿತ ಬೆಳಗ್ಗಿನ ಉಪಹಾರ.
ಈ ತರಹ ಒಂದು ಶಿಸ್ತಿನ ಜೀವನಶೈಲಿ ಆಕೆಯದು. ಇಷ್ಟಾದ ಬಳಿಕ ಆಕೆಯ ಫಾರಂನಲ್ಲಿ ಇಡೀ ದಿವಸದ ಮೈಮುರಿ ಕೆಲಸಕ್ಕೆ ಆಕೆ ರೆಡಿ.
ಟಿವಿ ಇದ್ದರೂ ಸಹಿತ ಆಕೆ ದಿನದಲ್ಲಿ ಎಂದೂ ಟಿವಿ ನೋಡುತ್ತಿರಲಿಲ್ಲ. ಸಂಜೆ ಯಾವಾಗಲೋ ನ್ಯೂಸ್ ನೋಡಲು ಟಿವಿ ಹಚ್ಚಿದರೂ ಕೇವಲ ಒಳ್ಳೆ ಹೆಸರಿದ್ದ ನ್ಯೂಸ್ ರೀಡರಗಳ ನ್ಯೂಸಿನ ಹೆಡ್ ಲೈನ್ಸ್ ಮಾತ್ರ ಕೇಳಿ ಮುಗಿಸುತ್ತಿದ್ದಳು.
ಬಾಕಿ ಕೇವಲ ಸುದ್ದಿ ಮಾಡುವ, ಅತಿರೇಕ ಮಾಡುವ ನ್ಯೂಸ್ ರೀಡರ್ಸ್ ಎಲ್ಲ ಆಕೆಯ ಪಾಲಿಗೆ 'ಭಯದ ವ್ಯಾಪಾರಿಗಳು'. ಅಕೆಗೆ ಉಪಯೋಗವಿಲ್ಲದ್ದು ಆ ತರಹದ ಸೇನಷೆಶನಲ್ ನ್ಯೂಸ್. ಎಲ್ಲರೂ ಕೂತು ನೋಡುವಂತ ಮೂವಿ ಮಾತ್ರ ನೋಡುತ್ತಿದ್ದಳು. R ರೇಟೆಡ್ ಮೂವೀಸ್ ಅಂದ್ರೆ ಅವು ರಬಿಶ್ ಅಂತ ತೆಗೆದು ಹಾಕಿಬಿಡುವ ಹಾಸ್ಯಭರಿತ ವಿವೇಕ ಆಕೆಯಲ್ಲಿತ್ತು.
ಹೀಗೆ ಮೀಡಿಯಾ ಬಗ್ಗೆ ಅತಿ ಜಾಗರೂಕಳಾಗಿದ್ದ ನಮ್ಮ ಅಜ್ಜಿ, ಬೇರೆಯವರು ಆಕೆಯ ತಲೆಯಲ್ಲಿ ಏನು ತುಂಬುತ್ತಾರೆ ಅನ್ನೋದರ ಬಗ್ಗೆ ಇನ್ನೂ ಕಾಳಜಿ ವಹಿಸುತ್ತಿದಳು. ಬೇರೆಯವರ ಬಗ್ಗೆ ಗಾಸಿಪ್ ಮಾಡೋ ಜನರಿಗೆ ಒಂದೇ ಸಲ ವಾರ್ನಿಂಗ್. ಮುಂದಿನ ಸಲ ಮುಲಾಜಿಲ್ಲದೆ ಔಟ್ ಅಂದು ಬಿಡುತ್ತಿದ್ದಳು ಅಜ್ಜಿ.
ಆಕೆಯ ಚರ್ಚಿನ ಗೆಳತಿಯರು - ಏನು ಇಷ್ಟು ಮುಖ ಮುರಿದುಕೊಂಡು ಮಂದಿಗೆ ಔಟ್ ಅಂದು ಬಿಡುತ್ತೀರಿ? - ಅಂತ ಕೇಳಿದ್ರೆ ಅಜ್ಜಿಯ ಖಡಕ್ ಉತ್ತರ ರೆಡಿ.
ಡಾ. ನಾರ್ಮನ್ ವಿನ್ಸೆಂಟ್ ಪೀಲ್ ಅವರ ಪುಸ್ತಕಗಳಿಂದ ತುಂಬಾ ಪ್ರಭಾವಿತಳಾಗಿದ್ದ ಅಜ್ಜಿ ಸೀದಾ ಅವರನ್ನೇ ಕೋಟ್ ಮಾಡಿ - - ನಿಮ್ಮ ಮನಸ್ಸಿನ ಒಳಗೆ ಏನು ಹೋಗುತ್ತದೆಯೋ ಅದೇ ಹೊರಗೆ ಬರುತ್ತದೆ. ನಿಮ್ಮ ಮನಸ್ಸಿಗೆ ನಿಮ್ಮ ದೇಹಕ್ಕೆ ತಿನ್ನಿಸುವದರಕಿಂತ ಹೆಚ್ಚಿನ ಕಾಳಜಿ ವಹಿಸಿ ತಿನ್ನಿಸಿ. ಅದು ಬಹಳ ಮುಖ್ಯ - ಅಂತ ಹೇಳುತ್ತಿದ್ದಳು. ಕೇಳಿದವರು ಅಹುದು ಅಹುದು ಅನ್ನಬೇಕು.
ಅಜ್ಜಿಗೇನು ಯಾರ ಮನಸ್ಸನ್ನು ನೋಯಿಸುವ ಇರಾದೆ ಇರಲಿಲ್ಲ. ಆದ್ರೆ ಆಕೆಗೆ 'ಸಕಾರಾತ್ಮಕವಾಗಿ ಯೋಚಿಸುವದು' (positive thinking) ತುಂಬಾ ಮುಖ್ಯ. ಆಕೆಯ ಜೀವನ, ಅನುಭವಿಸಿದ ಕಷ್ಟಗಳು, ಆ ದುರ್ಭರ ದಿನಗಳು ಹೇಗಿದ್ದವೆಂದರೆ 'ನಕಾರಾತ್ಮಕವಾಗಿ ಯೋಚಿಸಿದವರಿಗೆ' (negative thinking) ಬದುಕುವ ಚಾನ್ಸೇ ಇರಲಿಲ್ಲ.
ಆಕೆಗೆ - 'ಸಕಾರಾತ್ಮಕವಾಗಿ ಯೋಚಿಸುವದು' (positive thinking) - ಇದರ ರಹಸ್ಯ ತಿಳಿದಿತ್ತು. ಆ ರಹಸ್ಯ ಇಷ್ಟೇ. ಆಕೆ ಬೆಳಿಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೆ ಕೇವಲ ಒಳ್ಳೆಯ ವಿಚಾರಗಳನ್ನು, ಒಳ್ಳೆಯ ಯೋಚನೆಗಳನ್ನು ಮತ್ತು ಉಪಯೋಗ್ಯ ಮಾಹಿತಿಗಳನ್ನು ಮಾತ್ರ ತಲೆಯಲ್ಲಿ ತುಂಬಿಕೊಳ್ಳುತ್ತಿದ್ದಳು. ಯಾವದೇ ತರಹದ 'ನಕಾರಾತ್ಮಕ' ಮಾಹಿತಿಗೆ ಆಕೆಯ ಮನಸ್ಸಿನ ಒಳಗೆ ಹೋಗುವ ಅನುಮತಿ ಆಕೆ ಕೊಡುತ್ತಿರಲಿಲ್ಲ.
ರಿಕ್ ಎಂಬವ ನನ್ನ ಯಾಹೂ ದಿನಗಳ ಮಿತ್ರ.
ರಿಕ್ ನ ದಿನಚರಿ ನೋಡೋಣ. ನಮ್ಮದರ ಹಾಗೆ ಇರುತ್ತೆ. ಮತ್ತೆ ಹೇಗೆ ಇರೋಕೆ ಸಾದ್ಯ?
ಅಲಾರ್ಮ್ ಆದ ಕೂಡಲೇ ನಿದ್ರೆ ಮುಗಿದಿಲ್ಲ ಆದರೂ ಏಳಬೇಕು. ಎದ್ದ. ಎದ್ದ ಕೂಡಲೇ ಕಾಫಿ ಮಾಡಲಿಟ್ಟು, ಕಂಪ್ಯೂಟರ್ ಮುಂದೋ, ಸ್ಮಾರ್ಟ್ ಫೋನ್ ಮುಂದೋ ಕೂತ. ಎಲ್ಲ ಇಮೇಲ್ ಇಳಿಸಿಕೊಂಡ. ಕಾಫಿ ಕುಡಿಯುತ್ತ ಇಮೇಲ್ ಓದತೊಡಗಿದ. ಕೆಲವೊಂದಕ್ಕೆ ರಿಪ್ಲೈ ಮಾಡಿ ಕೆಲವೊಂದನ್ನ ನಂತರ ಅಂತ ಬಿಟ್ಟ. ಮತ್ತೊಂದು ಕಪ್ ಕಾಫಿ ತಂದವನೇ ಇಂಟರ್ನೆಟ್ ಹತ್ತಿ ಯಾಹೂ ಸೈಟ್ ಗೆ ಹೋಗಿ ಅಲ್ಲಿ ನ್ಯೂಸ್ ಅದು ಇದು ಓದಿದ. ನಂತರ ರೋಚಕ ಸುದ್ದಿ ಕೊಡುವ ಸೈಟಗಳಿಗೆ ಹೋಗಿ ಬೇಕಾಗಿದ್ದು ಬ್ಯಾಡಾಗಿದ್ದು ಸುದ್ದಿ ಓದಿ ಮಂಡೆ ಬಿಸಿ ಮಾಡಿಕೊಂಡ. ನಂತರ ಫೇಸಬುಕ್, ಟ್ವಿಟ್ಟರ ಗೆ ಹೋಗಿ ಒಂದಿಷ್ಟು ಸಮಯ ಕಳೆದ.
ನಂತರ ಸ್ನಾನ ಗೀನ ಮುಗಿಸಿ ಆಫೀಸ್ ಗೆ ಹೊರಟ. ರಸ್ತೆಯಲ್ಲಿ ಪೂರ ಯಾವದೋ ಹಾಳು ಮೂಳು ಟಾಕ್ ಶೋ ರೇಡಿಯೋ ಮೇಲೆ ಕೇಳುತ್ತ ಆಫೀಸ್ ಮುಟ್ಟಿದ. ನಡು ನಡುವೆ ಟ್ರಾಫಿಕ್ ಲೈಟ್ ನಲ್ಲಿ ಬ್ಲಾಕಬೆರ್ರಿ ಮೇಲೆ ಇಮೇಲ್ ಮಾಡಿದ. ಫೋನ್ ಬಂದರೆ ಅದನ್ನೂ ಎತ್ತಿ ಡ್ರೈವ್ ಮಾಡುತ್ತಲೇ ಮಾತಾಡಿದ.
ಮಧ್ಯಾನದ ಊಟದ ಸಮಯದಲ್ಲಿ ವ್ಯಾಯಾಮ ಮಾಡಲು ಜಿಮ್ ಗೆ ಹೋದ. ಟೀವಿ ಮೇಲೆ ಸ್ಟಾಕ್ ಮಾರ್ಕೆಟ್ ಕವರೇಜ್ ನೋಡುತ್ತಾ ಏನು ವ್ಯಾಯಾಮ ಮಾಡಿದನೋ? ನಂತರ ಪೇಪರ್ ಓದುತ್ತ ಊಟ ಮಾಡಿದ ಶಾಸ್ತ್ರ ಮುಗಿಸಿದ.
ಸಂಜೆ ಮನೆಗೆ ಬಂದು ಒಂದಿಷ್ಟು ಹೊತ್ತು ಹಾಳುವರಿ ಸೀರಿಯಲ್ ಅದು ಇದು ನೋಡಿದ. ನೋಡುತ್ತಲೇ ಊಟ ಮಾಡಿದ. ನಂತರ ಮತ್ತೆ ಒಂದಿಷ್ಟು ಹೊತ್ತು ಗೊತ್ತು ಗುರಿಯಿಲ್ಲದ ವೆಬ್ ಸರ್ಫಿಂಗ್. ಮತ್ತೆ ಆಫೀಸ್ ಇಮೇಲ್. ಮತ್ತೆ ಮಂಡೆ ಬಿಸಿ. ಅದು ಹೆಚ್ಚಾಗಿ ನಿದ್ದೆಗೆ ಯತ್ನ. ಹಾಸಿಗೆಯಲ್ಲಿ ಹೊರಳಾಟ. ಎಷ್ಟೋ ಸಮಯದ ನಂತರ ನಿದ್ದೆ. ನಿದ್ದೆ ಮುಗಿಯುವದರ ಮೊದಲೇ ಅಲಾರ್ಮ್. ಅಲರಾಂ ತಲೆ ಮೊಟಕಿ ಮತ್ತೆ ಇನ್ನೊಂದು ಸೇಮ್ ದಿನ ಸುರು.
ರಿಕ್ ನನ್ನು ಭೇಟಿಯಾದೆ ಒಂದು ಸಾರೆ. ಸುಮಾರ ದಿನವಾಗಿತ್ತು.
ರಿಕ್ ತನ್ನ ಚಿಂತೆ ಹೇಳಿಕೊಂಡ.
ಟಿಮ್, ಯಾಕೋ ಗೊತ್ತಿಲ್ಲ. ಇತ್ತಿತ್ತಲಾಗಿ ಸುಖಾ ಸುಮ್ಮನೆ ಖಿನ್ನತೆ (depression) ಆಗುತ್ತಿದೆ ಮಾರಾಯ - ಅಂದ ರಿಕ್.
ನಮ್ಮ ಅಜ್ಜಿಯ "ಮಾಹಿತಿ ಡೈಟ್ " (information diet) ಪರಿಚಯವಿದ್ದ ನಾನು, ರಿಕ್ ಗೆ - ನಿನ್ನ 'information intake' ಬಗ್ಗೆ ಸ್ವಲ್ಪ ಹೇಳಪ್ಪ - ಅಂದೆ.
ಆವಾಗ ರಿಕ್ ಮೇಲೆ ಅವನೇ ಹೇಳಿದಂತೆ ತನ್ನ ಇಡೀ ದಿವಸದ ಅಡ್ಡಾದಿಡ್ಡಿ ರೀತಿಯಲ್ಲಿ ಮಾಹಿತಿ ಸೇವನೆ (information consumption) ಮಾಡುವ ಶಿಸ್ತಿಲ್ಲದ ಜೀವನಶೈಲಿಯ ಬಗ್ಗೆ ಹೇಳಿದ.
ರಿಕ್ ನ ಖಿನ್ನತೆ ಗೆ ಕಾರಣ ಅವನ "ಮನಸ್ಸಿನ ಆಹಾರ ಕ್ರಮ" (mental diet). ಹಾಗಂತ ಅವನು ಬುದ್ಧಿಗೇಡಿ ಅಲ್ಲ. ನೀವು ರಿಕ್ ದೇಹಕ್ಕೆ ಕೊಡುವ ಆಹಾರ, ಅದರ ಬಗ್ಗೆ ಅವನು ವಹಿಸುವ ಕಾಳಜಿ ನೋಡಿದರೆ ನಿಮಗೇ ಆಶ್ಚರ್ಯ ಆದೀತು. ಅಷ್ಟು ಕೇರಫುಲ್ ಅವನು. ಅದೇನೋ ಭಾಳ ಜನರಂತೆ "ಮನಸ್ಸಿನ ಆಹಾರ ಕ್ರಮದಲ್ಲಿ" ಅವನೂ ಎಡವಿದ್ದ. ಪರಿಣಾಮ ಕಾಣುತ್ತ ಇತ್ತು. ಯಾವಾಗಲೂ ಏನೋ ಒಂದು ತರಹದ ಖಿನ್ನತೆ ಮತ್ತು ಅಪೂರ್ಣಭಾವ.
ಸರಿ. ಅಜ್ಜಿಯ "ಮೆಂಟಲ್ ನ್ಯುಟ್ರೀಶನ್" ಪಾಠ ನೆನಪಿತ್ತಲ್ಲ. ರಿಕ್ ಗೆ ಒಂದು ಸರಿಯಾದ "ಮನಸ್ಸಿನ ಆಹಾರ ಕ್ರಮ" (mental diet) ತಯಾರ್ ಮಾಡಿ ಕೊಡೋಣ ಅಂತ ಸಿದ್ದನಾದೆ.
ನಮ್ಮ ಅಜ್ಜಿ ಕಾಲ ಬೇರೆ. ಈಗಿನ ಕಾಲ ಬೇರೆ. ಏನು ಮೆಂಟಲ್ ಡೈಟ್ ತಯಾರ್ ಮಾಡಿ ಕೊಡ್ತೀರೋ....ಅಂದಿರಾ? ಮುಂದಿನ ಪೋಸ್ಟ್ ನಲ್ಲಿ ಓದೀರಂತೆ.
ಹೀಗಂತ ಬರೆಯುತ್ತ ಹೋಗುವವರು ಯಾರೋ ಹಿಮಾಲಯದ ತಪ್ಪಲಿನಲ್ಲಿ ಯಾವದೇ ಚಿಂತೆ ಇಲ್ಲದೆ ಕುಳಿತು ಆಧುನಿಕ ಜೀವನ ಶೈಲಿಯ ಮೇಲೆ ಬಿಟ್ಟಿ ಉಪದೇಶ ಕೊಡುವ ಯಾರೋ ಉದ್ರಿ ಸ್ವಾಮಿ ಅಲ್ಲ. ಇದನ್ನು ಬರೆದವರು ಯಾಹೂ ಕಂಪನಿಯ ex-CSO (Chief Solutions Officer) ಟಿಮ್ ಸಾಂಡರ್ಸ್ ಅವರು. ಅವರು ಬರೆದ - Today We Are Rich - ಪುಸ್ತಕ ಇಂದಿನ "ಓಡು, ಇನ್ನೂ ಜೋರಾಗಿ ಓಡು, ಓಡುತ್ತಲೇ ಬಿದ್ದು ಸಾಯಿ" ಜೀವನಶೈಲಿಯ ಜನರಿಗೆ ಒಂದು ತಣ್ಣನೆಯ ಸಂಗಾತಿ.
ಟಿಮ್ ಸಾಂಡರ್ಸ್ ಹೇಳುವ ಸರಿಯಾದ ರೀತಿಯ "ಮಾಹಿತಿ ಜೀವನಶೈಲಿಯ" (information lifestyle) ಬಗ್ಗೆ ಮುಂದಿನ ಪೋಸ್ಟಿನಲ್ಲಿ. ಇಲ್ಲಾಂದ್ರೆ ಇದೇ ತುಂಬಾ ಉದ್ದ ಆಗಿ ಆ ಮುಖ್ಯ ಭಾಗವನ್ನೇ ಜನ ಓದುವದ ಮರತಾರು.
No comments:
Post a Comment