1965-70 ಇಸವೀ ಆಸುಪಾಸಿನ ಮಾತು.
ಆಗೆಲ್ಲ ವಿದೇಶಕ್ಕೆ ಹೋಗುವದು, ಅಲ್ಲಿರುವದು, ಎಲ್ಲ ದೊಡ್ಡ ಮಾತು.
ನಾವು ಧಾರವಾಡ ಮಂದಿ. ಕರ್ನಾಟಕ ವಿಶ್ವವಿದ್ಯಾಲಯ ನಮ್ಮ ಹೆಮ್ಮೆ. ಅದು ಕವಿವಿ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲ. ಸುಮಾರು ಜನ ಪ್ರೊಫೆಸರ್ ಮಂದಿ ಬೇರೆ ಬೇರೆ ದೇಶಕ್ಕೆ ಹೋಗಿ ರಿಸರ್ಚ್, ಅದು, ಇದು, ಮಾಡಿಕೊಂಡು ಬರುತ್ತಿದ್ದರು.
ಇದೇ ಸ್ಕೀಂನಲ್ಲಿ ಅಮೇರಿಕಕ್ಕೆ ಹೋದವರು ಒಬ್ಬ ಪ್ರೊಫೆಸರ್. ಆ ಕಾಲದಲ್ಲಿ ಇಷ್ಟೆಲ್ಲಾ ಮಾಹಿತಿ ಇರಲಿಲ್ಲ ನೋಡಿ. ಯಾರೋ ಹೇಳಿದ್ದು, ಎಲ್ಲೋ ಸಿಕ್ಕ ಪ್ರವಾಸ ಪುಸ್ತಕ ಓದಿದ್ದು, ಅಮೇರಿಕನ್ ಕಾನ್ಸುಲೇಟ್ ಕೊಟ್ಟ ಮಾಹಿತಿ, ಇತ್ಯಾದಿಗಳ ಮೇಲೆ ಹೋಗುವ, ಅಮೇರಿಕಕ್ಕೆ ಹೊಂದಿಕೊಳ್ಳುವ ತಯಾರಿ ಮಾಡಿಕೊಳ್ಳಬೇಕಾಗಿತ್ತು. ಕಷ್ಟ ಕಷ್ಟ.
ಅಂತೂ ಇಂತೂ ತಯಾರ್ ಆಗಿ ಹೊರಟರು ಈ ಕವಿವಿ ಪ್ರೊಫೆಸರ್. ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ , "ವಿದೇಶ ಪ್ರಯಾಣ" ಎಂಬ ಶೀರ್ಷಿಕೆ ಅಡಿಯಲ್ಲಿ, ಸೂಟು ಬೂಟು ಹಾಕಿಕೊಂಡು, ಕಳ್ಳ ಗುಮ್ಮನಂತೆ ಕಾಣುವ ಫೋಟೋ ಇರುವ ಪ್ರಕಟಣೆಯೂ ಬಂತು. ಅದು ಬಂದಿಲ್ಲ ಅಂದರೆ ಬಾಕಿ ಎಲ್ಲ ಇದ್ದರೂ ನೀವು ವಿದೇಶಕ್ಕೆ ಹೋಗೊ ಹಾಗೆ ಇಲ್ಲ. ಹೊರಡೋ ದಿನ ರೇಲ್ವೆ ಸ್ಟೇಶನ್ ನಲ್ಲಿ ಹಾರ, ತುರಾಯಿ, ಎಲ್ಲ ಹಾಕಿ ಪ್ರೊಫೆಸರ್ ಮತ್ತು ಅವರ ಕುಟುಂಬವನ್ನು ಬಾಂಬೆಗೆ ಕಳಿಸಲಾಯಿತು. ಅಲ್ಲಿಂದ ವಿಮಾನದಲ್ಲಿ ಅವರ ಪಯಣ ಅಮೇರಿಕಾಗೆ.
ಪ್ರೊಫೆಸರ್ ಬಂದರು. ಅಮೇರಿಕಾದ ಯಾವದೋ ಒಂದು ಮೂಲೆಯಲ್ಲಿನ ವಿಶ್ವವಿದ್ಯಾಲಯವೊಂದರಲ್ಲಿ ಅವರ ನೇಮಕ ಆಗಿತ್ತು. ಆ ಊರಿನ ಜನ ನೋಡಿದ ಮೊದಲನೇ ಭಾರತೀಯರು ಇವರು ಇರಬೇಕು. ಎರಡೂ ಕಡೆಯಿಂದ ಸಿಕ್ಕಾಪಟ್ಟೆ ಕುತೂಹಲವೋ ಕುತೂಹಲ.
ತಿಂಗಳ ಆ ಟೈಮ್ ಬಂತು. ಅಯ್ಯೋ...ತಪ್ಪು ತಿಳಿಬೇಡಿ. ಹೇರ್ ಕಟಿಂಗ್ ಟೈಮ್. ಅಷ್ಟೇ.
ಒಂದು ತಿಂಗಳ ನಂತರ ಪ್ರೊಫೆಸರ್ ಗೆ ಹೇರಕಟಿಂಗ್ ಮಾಡಿಸಬೇಕಾಯಿತು.ಶುದ್ಧ ಧಾರವಾಡ ಕನ್ನಡದದಲ್ಲಿ ಹಜಾಮತಿ ಅಥವಾ ಕಷ್ಟಾ. ಹಜಾಮತಿ ಅನ್ನೋದು ಹಿಂದಿಯ ಹಜಾಮತ್ ಅನ್ನೊ ಪದದ ಕನ್ನಡ ತತ್ಸಮ. ಈ ಹಜಾ'ಮತಿ' ಯಾವದೇ ತರಹದ ಇತರೆ ಮತಿಯರಿಗೆ ಸೇರಿದ್ದಲ್ಲ. ಭಾನುಮತಿ, ಮಧುಮತಿ, ಚಾರುಮತಿ ಎಲ್ಲ ಮತಿಗಳೇ ಬೇರೆ. ಹಜಾಮತಿಯೇ ಬೇರೆ.
ಒಂದು ತಿಂಗಳ ನಂತರ ಪ್ರೊಫೆಸರ್ ಗೆ ಹೇರಕಟಿಂಗ್ ಮಾಡಿಸಬೇಕಾಯಿತು.ಶುದ್ಧ ಧಾರವಾಡ ಕನ್ನಡದದಲ್ಲಿ ಹಜಾಮತಿ ಅಥವಾ ಕಷ್ಟಾ. ಹಜಾಮತಿ ಅನ್ನೋದು ಹಿಂದಿಯ ಹಜಾಮತ್ ಅನ್ನೊ ಪದದ ಕನ್ನಡ ತತ್ಸಮ. ಈ ಹಜಾ'ಮತಿ' ಯಾವದೇ ತರಹದ ಇತರೆ ಮತಿಯರಿಗೆ ಸೇರಿದ್ದಲ್ಲ. ಭಾನುಮತಿ, ಮಧುಮತಿ, ಚಾರುಮತಿ ಎಲ್ಲ ಮತಿಗಳೇ ಬೇರೆ. ಹಜಾಮತಿಯೇ ಬೇರೆ.
ಗೋಕರ್ಣ ಹಜಾಮತಿಗೆ ಮೊದಲನೇ ಸಲ ಇರುವಂತೆ ಅಮೇರಿಕನ್ ಹಜಾಮತಿಗೂ ಮೊದಲನೇಯ ಸಲ ಅಂತ ಇರುತ್ತದೆ ನೋಡಿ. ಇದು ಮಾಸ್ತರರ ಮೊದಲ ಅಮೇರಿಕನ್ ಹಜಾಮತಿ. ಸಲೂನ್ ಹುಡುಕಿಕೊಂಡು ಹೊರಟರು. ಸಿಕ್ಕಿತು. ಒಳಹೊಕ್ಕರು. ನೋಡಿದರೆ ಕೇವಲ ಲಲನಾಮಣಿಗಳೇ ಅಲ್ಲಿ ಕತ್ತರಿ ಆಡಿಸುತ್ತಿದ್ದರು. ಅವರ ಮುಂದೆ ತಲೆ ಬಗ್ಗಿಸಿ ಕೂತವರಲ್ಲಿ ಗಂಡಸರೂ ಹೆಂಗಸರೂ ಇಬ್ಬರೂ ಇದ್ದರು.
ಮಾಸ್ತರರಿಗೆ ಒಂದು ಕ್ಷಣ ಘಾಬರಿ ಆಯಿತು. ಎಲ್ಲಿ ಬೇರೆಯೇ ತರಹದ ಜಾಗಕ್ಕೆ ಬಂದೆನೋ ಹೇಗೆ? ಇಲ್ಲಿ ಹಜಾಮತಿಯ ಹೆಸರಿನಲ್ಲಿ ಅದು, ಮಸಾಜು, ಮತ್ತೊಂದು ಅನ್ನುವ ಇತರೆ(?) ತರಹದ ಸರ್ವೀಸ್ ಸಹಿತ ಮಾಡಲಾಗುತ್ತದೆಯೇ ಹೇಗೆ?
ಭಾರತದ ಕುಖ್ಯಾತ ಮಸಾಜು ಪಾರ್ಲರ್ ಬಗ್ಗೆ ಸ್ವಲ್ಪ ಸ್ವಲ್ಪ ತಿಳಿದಿದ್ದ ಅವರು ಒಂದು ಕ್ಷಣ ಅಲ್ಲಿ ಕಟಿಂಗ್ ಮಾಡಿಸಲು ಹಿಂದೆ ಮುಂದೆ ನೋಡಿದರು. ಮಾಸ್ತರ್ ಹೋಗಿ ಕೂಡುವದಕ್ಕೂ, ಪೋಲಿಸ್ ರೇಡ್ ಆಗುವದಕ್ಕೂ, ನಂತರ ಪೋಲಿಸ್ ಸ್ಟೇಶನ್ ನಲ್ಲಿ ಪಾಟಿ ಹಿಡಿದುಕೊಂಡು ನಿಂತು ಫೋಟೋ ತೆಗೆಸಿಕೊಂಡು, ಅಮೇರಿಕಾದ ಮಸಾಜ್ ಪಾರ್ಲರನಲ್ಲಿ "ಸಮಾಜ ಸೇವೆ" ಮಾಡಿಸಿಕೊಳ್ಳುತ್ತಿದ್ದ ಭಾರತೀಯ ಪ್ರೊಫೆಸರ್ ಬಂಧನ ಅಂತ ಸುದ್ದಿ ಬಂದು, ಹಲ್ಲಾ ಗುಲ್ಲಾ ಎದ್ದು..........ಯಾರಿಗೆ ಬೇಕ್ರೀ.....ಅಂತ ಒಂದು ಕ್ಷಣ ಮುಂದಾಲೋಚನೆ ಮಾಡಿದರು. ಆದರೆ ಆ ತರಹದ ಮಸಾಜ್ ಅಡ್ಡೆ ತರಹ ಕಾಣಲಿಲ್ಲ. ಹಜಾಮತಿ ಮಾಡುತ್ತಿರುವ ಹೆಂಗಸರೂ, ಮಾಡಿಸಿಕೊಳ್ಳುತ್ತಿರುವ ಗಂಡಸರೂ ಕೇವಲ ಅದರಲ್ಲೇ ಮಗ್ನರಾಗಿದ್ದರೇ ವಿನಹಾ ಮತ್ತೇನು ಅಂತಹ ವಿಶೇಷ ಕಂಡು ಬರಲಿಲ್ಲ. ಸೇಫ್ ಅಂತ ಒಳಗೆ ಬಂದು ಕೂತರು ಮಾಸ್ತರರು.
ಸ್ವಲ್ಪ ಹೊತ್ತಿನ ನಂತರ ಅವರ ಪಾಳಿ ಬಂತು. ಹೋಗಿ ಹಜಾಮತಿ ಕುರ್ಚಿ ಮೇಲೆ ವಿರಾಜಮಾನರಾದರು.
ಎಷ್ಟು ನಂಬರ್ ಹಚ್ಚಲಿ? - ಅಂದು ನಗು ನಗುತ್ತ ಕೇಳಿದಾಕೆ ಬಾರ್ಬರಿಣಿ.
ಅಂದ್ರೆ? ನಂಬರ್ರ? ಏನು? ಫೋನ್ ನಂಬರ್ರ್ ಏನು?- ಅಂತ ಮಾಸ್ತರ್ ಕನ್ಫ್ಯೂಸ್ ಆಗಿ ಕೇಳಿದ್ರು.
ಅಯ್ಯೋ...ಅಲ್ಲ....ಹೇರ್ ಕ್ಲಿಪ್ಪರ್ ಸೆಟ್ಟಿಂಗ್ ನಂಬರ.....- ಅಂತ ಬಾರ್ಬರಿಣಿ (ಲೇಡಿ ಬಾರ್ಬರ್) ವಿವರಿಸಿದಳು.
ಓಹೋ....ಇದು ಮಶೀನ್ ಕಟ್ಟಿಂಗ್. ಚಿಕ್ಕಂದಿನಲ್ಲಿ ಇಲಿ ತಿಂದ ಹಾಗೆ ಮಷಿನ್ ಕಟ್ ಮಾಡಿಸಿ ಗೊತ್ತಿದ್ದ ಮಾಸ್ತರರು ಅದು ಬೇಡ, ಕೇವಲ ಕತ್ತರಿ ಸಾಕು ಅಂದರು.
ಬರೇ ಕತ್ರೀನಾ? - ಅಂತ ರಾಗ ಎಳೆದಳು ಆಕೆ. ಕತ್ತರಿ ಕಟ್ಟಿಂಗ್ ಸ್ವಲ್ಪ ಜಾಸ್ತಿ ಟೈಮ್ ತೋಗೋತ್ತದೆ ನೋಡಿ. ಮಶೀನ್ ಹಚ್ಚಿ ಒಂದು ದೊಡ್ಡ ಮಟ್ಟದ್ದನ್ನು ಮಾಡಿಬಿಟ್ಟಿದ್ದರೆ, ನಂತರ ಕತ್ರಿ ಆಡಿಸಿದ ನೆವ ಮಾಡಿ, ಕಾಸ್ ಕಿತ್ತುಗೊಂಡು, ಹ್ಯಾವ ಎ ನೈಸ್ ಡೇ, ಅಂತ ಸಾಗಹಾಕಬಹುದಿತ್ತು. ಫುಲ್ ಸೀಸರ್ ಕಟ್ ಮಾಡಿ ಅಂತಾನೆ ಕೊರಮ - ಅಂತ ಗೊಣಗುತ್ತ ಕತ್ತರಿ, ಹಣಿಗೆ ಮತ್ತೊಂದು ತೆಗೆದುಕೊಂಡು ಶುರು ಮಾಡಿದಳು.
ನಮ್ಮಲ್ಲಿ ನಾಪಿತರು ಚಕಚಕ ಮಾಡಿ ಮುಗಿಸುವ ಸೀಸರ್ ಕಟಿಂಗ್ ಅಂದ್ರೆ ಇಲ್ಲಿಯವರಿಗೆ ತುಂಬಾ ಕಷ್ಟ. ಏನೇನೋ ಯೋಗಾಸನ ಹಾಕಿದಂತೆ ತಲೆ ಸುತ್ತಾ ಮುತ್ತಾ ಬಗ್ಗಿ, ಒಂದೊಂದೇ ಕೂದಲನ್ನ ಎಣಿಸಿ, ಎಣಿಸಿ ಕಟ್ ಮಾಡುತ್ತಾರೆ. ಹಾಗೆಯೇ ಮಾಡಿ ಮುಗಿಸಿದಳು.
ಸಾರ್,ಆಯಿತು - ಅಂದಳು ಬಾರ್ಬರಿಣಿ.
ಮಾಸ್ತರಿಗೆ ಆಶ್ಚರ್ಯ. ನಮ್ಮೂರಲ್ಲಿ ಕತ್ತರಿ ಮುಗಿದ ನಂತರ ಕತ್ತಿ (ರೇಸರ್, ಕೂಪು) ಹಚ್ಚಿ ನುಣುಪಾಗಿ ಕುತ್ತಿಗೆ ಮೇಲೆ, ಕಿವಿ ಸುತ್ತ ಒಂದು ಸಾರೆ ರೇಸರ್ ನಲ್ಲಿ ಎಳಿಸಿಕೊಳ್ಳದಿದ್ದರೆ ಕಟಿಂಗ್ ಪೂರ್ತಿ ಆದ ಅನುಭೂತಿಯೇ ಭಾಳ ಜನರಿಗೆ ಬರುವದಿಲ್ಲ. ಕೇಳಿದರೆ - ರೇಸರ್ ಯ್ಯೂಸ್ ಮಾಡೋಕೆ ಸ್ಪೆಷಲ್ ಪರ್ಮಿಶನ್ ಬೇಕು. ಸಾಮಾನ್ಯ ಹೇರ್ಕಟಿಂಗ್ ಮಂದಿ ಹತ್ರ ಅದು ಇರೋದಿಲ್ಲ. ನಮ್ಮ ಹತ್ರಾನೂ ಇಲ್ಲ. ಅದಕ್ಕೇ ಚಿಕ್ಕ ಮಶೀನ್ ನಿಂದ ಹಿಂದೆ, ಕಿವಿ ಮೇಲೆ ಸಾಪ್ ಮಾಡಿದ್ದೇನೆ. ಇಲ್ಲೆಲ್ಲಾ ಅಷ್ಟೇ - ಅಂದಳು.
ಮಾಸ್ತರಿಗೋ ಸಿಕ್ಕಾಪಟ್ಟೆ ಆಶ್ಚರ್ಯ. ನಾಪಿತರ ಹತ್ರ ರೇಸರ್ ಇಲ್ಲಾ ಅಂದ್ರೆ ಏನು ಸರ್ಜನ್ ಕತ್ತಿ ಇರೋತ್ತಾ ಮತ್ತೆ? ಥತ್ ಇವರ ಅಂತ ಕತ್ತು ಸವರಿಕೊಂಡರು. ಸರಿ ಸ್ಮೂತ್ ಆದ ಫೀಲಿಂಗ್ ಅಂತೂ ಬರಲಿಲ್ಲ. ಹಾಳಾಗಿ ಹೋಗಲಿ ಅಂತ ಬಿಟ್ಟರು.
ಹೇರ್ ಡ್ರೈಯರ್ ನಲ್ಲಿ ಡರ್ರ್ ಬರ್ರ್ ಅಂತ ವ್ಯಾಕ್ಯೂಮ್ ಕ್ಲೀನರ್ ಹಾಗೆ ಕತ್ತರಿಸಿಕೊಂಡು ಬಿದ್ದಿದ್ದ ಇದ್ದ ಬದ್ದ ಕೂದಲೆಲ್ಲ ಹಾರಿಸಿ, ಮೇಲೆ ಹೊದಿಸಿದ್ದ ಹೊದಿಕೆ ತೆಗೆದು.......ಡನ್....ಡನಾ...ಡನ್....ಮುಗೀತು....ಏಳಿ....ಅನ್ನೊ ಲುಕ್ ಕೊಟ್ಟಳು.
ಮಾಸ್ತರಿಗೆ ಆಶ್ಚರ್ಯ. ನಮ್ಮೂರಲ್ಲಿ ಕತ್ತರಿ ಮುಗಿದ ನಂತರ ಕತ್ತಿ (ರೇಸರ್, ಕೂಪು) ಹಚ್ಚಿ ನುಣುಪಾಗಿ ಕುತ್ತಿಗೆ ಮೇಲೆ, ಕಿವಿ ಸುತ್ತ ಒಂದು ಸಾರೆ ರೇಸರ್ ನಲ್ಲಿ ಎಳಿಸಿಕೊಳ್ಳದಿದ್ದರೆ ಕಟಿಂಗ್ ಪೂರ್ತಿ ಆದ ಅನುಭೂತಿಯೇ ಭಾಳ ಜನರಿಗೆ ಬರುವದಿಲ್ಲ. ಕೇಳಿದರೆ - ರೇಸರ್ ಯ್ಯೂಸ್ ಮಾಡೋಕೆ ಸ್ಪೆಷಲ್ ಪರ್ಮಿಶನ್ ಬೇಕು. ಸಾಮಾನ್ಯ ಹೇರ್ಕಟಿಂಗ್ ಮಂದಿ ಹತ್ರ ಅದು ಇರೋದಿಲ್ಲ. ನಮ್ಮ ಹತ್ರಾನೂ ಇಲ್ಲ. ಅದಕ್ಕೇ ಚಿಕ್ಕ ಮಶೀನ್ ನಿಂದ ಹಿಂದೆ, ಕಿವಿ ಮೇಲೆ ಸಾಪ್ ಮಾಡಿದ್ದೇನೆ. ಇಲ್ಲೆಲ್ಲಾ ಅಷ್ಟೇ - ಅಂದಳು.
ಮಾಸ್ತರಿಗೋ ಸಿಕ್ಕಾಪಟ್ಟೆ ಆಶ್ಚರ್ಯ. ನಾಪಿತರ ಹತ್ರ ರೇಸರ್ ಇಲ್ಲಾ ಅಂದ್ರೆ ಏನು ಸರ್ಜನ್ ಕತ್ತಿ ಇರೋತ್ತಾ ಮತ್ತೆ? ಥತ್ ಇವರ ಅಂತ ಕತ್ತು ಸವರಿಕೊಂಡರು. ಸರಿ ಸ್ಮೂತ್ ಆದ ಫೀಲಿಂಗ್ ಅಂತೂ ಬರಲಿಲ್ಲ. ಹಾಳಾಗಿ ಹೋಗಲಿ ಅಂತ ಬಿಟ್ಟರು.
ಹೇರ್ ಡ್ರೈಯರ್ ನಲ್ಲಿ ಡರ್ರ್ ಬರ್ರ್ ಅಂತ ವ್ಯಾಕ್ಯೂಮ್ ಕ್ಲೀನರ್ ಹಾಗೆ ಕತ್ತರಿಸಿಕೊಂಡು ಬಿದ್ದಿದ್ದ ಇದ್ದ ಬದ್ದ ಕೂದಲೆಲ್ಲ ಹಾರಿಸಿ, ಮೇಲೆ ಹೊದಿಸಿದ್ದ ಹೊದಿಕೆ ತೆಗೆದು.......ಡನ್....ಡನಾ...ಡನ್....ಮುಗೀತು....ಏಳಿ....ಅನ್ನೊ ಲುಕ್ ಕೊಟ್ಟಳು.
ಪ್ರೊಫೆಸರ್ ಕೂತೇ ಇದ್ದರು. ಬಾರ್ಬರಣಿಗೂ ತಿಳಿಯಲಿಲ್ಲ. ಯಾಕೆ ಕಸ್ಟಮರ್ ಕಟಿಂಗ್ ಆದ ನಂತರವೂ ಇನ್ನೂ ಕೂತೇ ಇದ್ದಾನೆ ಅಂತ.
ಮತ್ತೇನಾದರು ಮಾಡಬೇಕೆ, ಸಾರ್? - ಅಂತ ಕೇಳಿದಳು.
ಇದಕ್ಕಾಗಿಯೇ ಕಾಯುತ್ತಿದ್ದೆ ಅಂತ ಲುಕ್ ಕೊಡುತ್ತ ಕೂತಿದ್ದ ಪ್ರೊಫೆಸರ್ ಸಾಹೇಬರು ರೆಗುಲರ್ ಆಗಿ ಮಾಡುತ್ತಿದ್ದ ಒಂದು ಕೆಲಸ ಮಾಡಿಯೇ ಬಿಟ್ಟರು. ಅನಾಹುತ.
ಎರಡೂ ಕೈ ಕೆಳಗೆ ತೆಗೆದುಕೊಂಡು ಹೋದವರೇ ಇನ್ ಶರ್ಟ್ ಮಾಡಿದ್ದ ಶರ್ಟು, ಬನಿಯನ್ ಕಿತ್ತು ಔಟ್ ಶರ್ಟ್ ಮಾಡಿಕೊಂಡರು. ಮರುಕ್ಷಣದಲ್ಲಿ ಎರಡನ್ನೂ ಮೇಲೆ ಎತ್ತಿ ಬಿಟ್ಟರು. ಎತ್ತಿ ಬಿಟ್ಟು, ನಂತರದ ಕೆಲಸ ಆಕೆಯದು ಅನ್ನೋ ಹಾಗೆ ಮುಖದ ಮೇಲೆ ಬುರ್ಕಾ ತರಹ ಬನಿಯನ್, ಶರ್ಟ್ ಎಳ್ಕೊಂಡು, ತಲೆ ಮೇಲೆ ಕೈ ಇಟ್ಟುಗೊಂಡು ಕೂತುಬಿಟ್ಟರು. ಅವರ ಕುತ್ತಿಗೆಯಿಂದ ಸೊಂಟದವರೆಗಿನ ಬರೀಮೈ ನೋಡುವ ಭಾಗ್ಯ(?) ಸುತ್ತಲಿನ ಜನರದ್ದು ಆಗಿತ್ತು.
ಬಾರ್ಬರಣಿಗೆ ಇಂತಹ ಸನ್ನಿವೇಶ ಎದುರಾಗಿದ್ದು ಇದೇ ಮೊದಲ ಸಲ ಅನ್ನಿಸುತ್ತದೆ. ದಿಗ್ಭ್ರಾಂತಳಾಗಿಬಿಟ್ಟಳು. ಏನು ಮಾಡಬೇಕು ಅಂತ ತಿಳಿಯಲಿಲ್ಲ ಆಕೆಗೆ.
ಆದರೂ ಹತ್ತಾರು ಧೀರ್ಘ ಉಸಿರೆಳೆದುಕೊಂಡು, ಸಾವರಿಸಿಕೊಂಡು ಕೇಳಿದಳು.
ಏನು ಮಾಡಬೇಕು ಸಾರ್? ಹೀಗೆ ಅಂಗಿ ಮುಖದ ಮೇಲೆ ಏರಿಸ್ಕೊಂಡು ಕೂತ್ರಿ. ತಿಳಿಲಿಲ್ಲ - ಅಂತ ಅಳಕುತ್ತ ಹೇಳಿದಳು.
ಪ್ರೊಫೆಸರ್ ಸಾಹೇಬರಿಗೆ ಈಗ ಅಸಹನೆ. ನಮ್ಮ ಧಾರವಾಡದಲ್ಲಿ ಆಗಿದ್ದರೆ ಮಸ್ತ ಕಟಿಂಗ್ ಮಾಡಿ, ಒಂದು ಹತ್ತು ನಿಮಿಷ ತಲೆಗೆ ಎಣ್ಣೆ ತಪತಪ ಬಡಿದು ಮಸಾಜ್ (ತಲೆಗೆ ಮಾತ್ರ ಮತ್ತೆ!) ಮಾಡಿ, ಬೇಕಾದ್ರೆ ಉಗರೂ ತೆಗೆದು, ಅಂಗಿ ಎತ್ತಿದ ತಕ್ಷಣ ಮಿಂಚಿನಂತೆ ಎರಡೂ ಕಂಕುಳ (ಬಗಲ) ಸಂದಿಗಳಲ್ಲಿ ಕರ್ರ್, ಕರ್ರ್ ಅಂತ ರೇಸರ್ ಆಡಿಸಿ, ಅಲ್ಲೂ ಕ್ಲೀನ್ ಶೇವ್ ಮಾಡಿ - ಆತ ನೋಡ್ರೀ, ಸರ್ರಾ - ಅನ್ನುತ್ತಾರೆ. ಇಲ್ಲಿ ಈ ಹಾಪ್ ಬಾರ್ಬರಿಣಿ ಏನು ಮಾಡಲಿ ಅನ್ನುತ್ತಾಳೆ. ಮೂಸಿ ನೋಡು ಮಂಗ್ಯಾನ್ ಮಗಳಾ!!!! - ಅನ್ನುವಷ್ಟು ಸಿಟ್ಟು ಬಂದಿತ್ತು. ಹಾಗೇನಾದರು ಹೇಳಿದರೆ, ಅದನ್ನೂ ಸೀದಾ ಮಾಡಿ, ಎಚ್ಚರ ತಪ್ಪಿ ಬಿದ್ದಾಳು ಅಂದುಕೊಂಡು ತಮ್ಮ ಕೋಪ ಸ್ವಲ್ಪ ಕಂಟ್ರೋಲ್ ಮಾಡಿಕೊಂಡರು.
ಏನು ಹೇಳಬೇಕು ಅಂತನೇ ಅವರಿಗೆ ತಿಳಿಯಲಿಲ್ಲ. ಇದೆಲ್ಲ ಹೇಳುವ ಮಾತೆ? ಕನ್ನಡದಲ್ಲೇ ಹೇಳಿ ಗೊತ್ತಿಲ್ಲ ಯಾಕೆಂದರೆ ಪ್ರಾಯ ಬಂದ ಮೇಲೆ ಬಗಲಲ್ಲಿ 'ಅವು' ಬಂದವು. ಚಿಕ್ಕ ಹುಡುಗನಾಗಿದ್ದಾಗ ಅಂಗಿ ಎತ್ತು ಅನ್ನದ ಹಜಾಮರು, ಆಮೇಲೆ ಎತ್ತಪ್ಪ ಅಂತ ಅಂಗಿ ಎತ್ತಿಸಿ, ಅದನ್ನೂ ಬೋಳಿಸಿ, ಸಾಪ್ ಮಾಡಿ ಕಳಿಸುತ್ತಿದ್ದರು. ಈಗ ಅದನ್ನು ಇಂಗ್ಲಿಷ್ನಲ್ಲಿ, ಈ ತಿಳಿಯದ ಬಿಳಿ ಬಾರ್ಬರಿಣಿಗೆ ಹೇಳಬೇಕಾಗಿದೆ. ಕರ್ಮ. ಕರ್ಮ. ತಲೆ ಚಚ್ಚಿಕೊಳ್ಳುವದೊಂದೇ ಬಾಕಿ.
ಪ್ರೊಫೆಸರ್ ಮುಖದ ಮೇಲೆ ಹಾಕಿಕೊಂಡಿದ್ದ ಬುರ್ಕಾ ಸ್ವಲ್ಪ ಕೆಳಗೆ ಇಳಿಸಿದರು. ಒಂದು ತರಹದ ಸಂಕೋಚ ಅವರಿಗೆ. ಅದೂ ಹೆಂಗಸಿಗೆ ಹೇಳಬೇಕಲ್ಲ ಅಂತ. ತಲೆ ಕಟಿಂಗ್ ಹೆಂಗಸರು ಮಾಡಿದರೇ ಏನೋ ಒಂದು ತರಹ. ಇನ್ನು ಅಲ್ಲಿ, ಇಲ್ಲಿ ಅದು ಮಾಡು, ಇದು ಮಾಡು ಅನ್ನೋಕೆ ಹೋಗಿ, ಅವಳು ಏನೇನೋ ಅರ್ಥ/ಅನರ್ಥ ಮಾಡಿಕೊಂಡು, ಒಂದಕ್ಕೆರಡು ಆಗಿ.....ಶಿವ....ಶಿವ...
ಆದರೂ ಇಂಗ್ಲಿಷ್ನಲ್ಲಿ ಹೇಳಲಿಕ್ಕೆ ಪ್ರಯತ್ನ ಮಾಡತೊಡಗಿದರು.
ಧಾರವಾಡ ಭಾಷೆಯಲ್ಲಿ ನಾವು ಅದಕ್ಕೆ ಬೇರೆಯವರಿಗೆ ಪರಮ ಕೊಳಕು ಅನ್ನಿಸಬಹುದಾದಂತಹ ಶಬ್ದ - ಬಗಲ ಶೆಂ* - ಅಂದು ಬಿಡುತ್ತೀವಿ. ನಮ್ಮ ಭಾಷೆ. ನಮಗೆ ಓಕೆ. ಇಂಗ್ಲೀಷ್ನಲ್ಲಿ ಏನು ಅನ್ನಬೇಕು?
ಪ್ಲೀಜ್ ಅಲ್ಸೋ ಶೇವ್ ಅಂಡರ್ ಆರ್ಮ್ ಪ್ಯುಬಿಕ್ ಹೇರ್.....ಪ್ಲೀಜ್...ಥಾಂಕ್ಯೂ....ಓಕೆ...ಹಾಂ....ಓಕೆ? ಓಕೆ?....ಅಂತ ಉಗುಳು ನುಂಗುತ್ತ, ಮತ್ತೆ ತಮ್ಮ ಬನಿಯನ್ ಮತ್ತು ಅಂಗಿ ತಲೆ ಮೇಲೆ ಎತ್ತಿ, ಮುಖದ ಮೇಲೆ ಬುರ್ಕಾ ಬರೋ ಹಾಗೆ ಮಾಡಿಕೊಂಡು, ಅಂಬೋ ಅನ್ನುವಂತೆ ಬಗಲಸಂದಿ ತೋರಿಸುತ್ತ ಮುಕ್ತಿಗಾಗಿ ಕಾದು ಕೂತ ಶಬರಿಯಂತೆ ಕೂತು ಬಿಟ್ಟರು.
ನಾವು ಧಾರವಾಡ ಮಂದಿಯೋ.....ಕಟಿಂಗ ಮಾಡಿಸಲಿಕ್ಕೆ ಹೋಗುವಾಗ ಎಂದೂ ಸ್ನಾನ ಮಾಡಿ, ಪೌಡರ್ ಹಾಕಿಕೊಂಡು, ಸುವಾಸನೆ ಸೂಸುತ್ತ ಏನೂ ಹೋಗುವದಿಲ್ಲ. ಅಲ್ಲರೀ....ಕಟಿಂಗ್ ಮಾಡ್ಸಿಕೊಂಡು ಬಂದ ಮೇಲೆ ಮುದ್ದಾಂ ಸ್ನಾನ ಆಗ್ಬೇಕು. ಹಾಕ್ಕೊಂಡ ಹೋದ ವಸ್ತ್ರ ಎಲ್ಲ ವಗಿಬೇಕು. ಹಾಂಗಾಗಿ ನಾವು ಮುಂಜಾನೆ ಎದ್ದ ಕೂಡಲೇ, ಕೆಟ್ಟಾ ಕೊಳಕ್ ವಸ್ತ್ರ ಹಾಕಿಕೊಂಡು ಹಜಾಮತಿ ಅಂಗಡಿಗೆ ಓಡತೇವಿ.
ಕೆಲವು ಜನ ಹೇಗೆ ಅಂದರೆ ಸ್ನಾನ ಮಾಡ್ಲಿಕ್ಕೆಂದೇ ಕಟಿಂಗ್ ಮಾಡಿಸಲು ಹೋಗುತ್ತಾರೆ. ವಾರಕ್ಕೊಮ್ಮೆ, ತಿಂಗಳಿಗೆ ಒಮ್ಮೆ ಸ್ನಾನ ಮಾಡುವವರಿಗೆ, ಅವರಿಗೆ ಸ್ನಾನ ಮಾಡಲು ಪ್ರೇರೇಪಿಸಲು - ಏ ಹೋಗಿ ಕಟಿಂಗ್ ಮಾಡ್ಸಿಕೊಂಡು ಬಾರೋ..ಅಪ್ಪಾ....ಅಣ್ಣಾ.... - ಅಂದು ಅಂಗಾಲಾಚುವ ರೂಢಿ ಇದೆ. ಕಟಿಂಗ್ ಮಾಡಿಸಿಕೊಂಡಮೇಲಾದರೂ ಸ್ನಾನ ಮಾಡಿ ಶುಧ್ಧನಾಗಿ ಸುವಾಸನೆ ಹೊಡೆದಾನು ಎಂಬ ಆಸೆಯಲ್ಲಿ.
ಪ್ರೋಫೆಸರೂ ಹಾಗೆ. ಅಮೆರಿಕಾಕ್ಕೆ ಹೋದರೇನಾಯಿತು? 35 ವರ್ಷದ ಹ್ಯಾಬಿಟ್ಸ್ ಹೋದಾವೆ? ಸ್ನಾನ ಮಾಡದೇ, ವಾರಾಂತ್ಯದಲ್ಲಿ ಒಗೆಯಬೇಕಾದ ಬಟ್ಟೆ ಹಾಕ್ಕೊಂಡು ಹೋಗಿದ್ದರು ಅಂತ ಕಾಣುತ್ತದೆ.
ಅಂಗಿ ಮೇಲೆತ್ತಿ, ಬಗಲಸಂದಿ ತೋರಿಸುತ್ತ ಕುಳಿತ ಪ್ರೊಫೆಸರ್ ಅವರ "ವೈಯಕ್ತಿಕ (ಸು)ವಾಸನೆ" (personal scent) ಘಮ್ಮೆಂದು ಗಪ್ಪಂತ್ ಮೂಗಿಗೆ ಅಡರಿರಬೇಕು. ಜೊತೆಗೆ ತೊಳೆಯಬೇಕಾದ ವಸ್ತ್ರಗಳ ಘಮ ಬೇರೆ. ತನ್ನ ಚೂಯಿಂಗಮ್ಮ ಸುವಾಸನೆ ಹರಡುತ್ತಾ, ನಗು ನಗುತ್ತ ಮಾತಾಡುತ್ತಿದ್ದ ಬಿಳಿ ಬಾರ್ಬರಿಣಿ ಎರಡು ಮಾರು ದೂರ ಹಾರಿದಳು. ಆಕೆಗೆ ತಿಳಿಯದಂತೆಯೇ ಅಂಗೈ ಮೂಗು ಮುಚ್ಚಿತು.
ಸಾರ್, ಅದೆಲ್ಲ ಇಲ್ಲಿ ಮಾಡೋದಿಲ್ಲ. ಇಲ್ಲಿ ಯಾರೂ ಅದೆಲ್ಲ ಸಲೂನ್ ನಲ್ಲಿ ಮಾಡಿಸೋದಿಲ್ಲ. ಸಾರಿ...ಸಾರಿ....ಸಾರಿ ಸಾರ್- ಅಂತ ನುಲಿದಳು. ಆಮೇಲೆ ಅಂಡು ಬಡಿದುಕೊಂಡು ನಕ್ಕಿರಬೇಕು ಬಿಡಿ.
ಪ್ರೊಫೆಸರ್ ಸಾಹೇಬರಿಗೆ ಒಂದು ರೀತಿ ಮುಜುಗರವಾಯಿತು. ಭರೆ ತುಂಬಿದ್ದ ಸಲೂನಿನಲ್ಲಿ ಅಂಗಿ ತಲೆ ಮೇಲೆ ಎತ್ತಿ, ಕುತ್ತಿಗೆ ಕೆಳಗೆ ನಗ್ನರಾಗಿ ಕೂತಿದ್ದು, ಸುತ್ತ ಮುತ್ತ ಕಟಿಂಗ ಮಾಡಿಸಿಕೊಳ್ಳುತ್ತ ಕೂತಿದ್ದ ಬಾಕಿ ಕಸ್ಟಮರುಗಳಿಗೆ, ಬಾಕಿ ಹಜಾಮಿಣಿಯರಿಗೆ ಬಿಟ್ಟಿ ಮನೋರಂಜನೆ ಕೊಟ್ಟೆನೋ ಅಂತ ಒಂದು ರೀತಿಯ ಫೀಲಿಂಗ್ ಬಂದು ಒಂದು ತರಹ ಆಯಿತು.
ಗಡಬಡಾಯಿಸಿ ಎದ್ದು ಓಡಿ ಕೌಂಟರ್ ಹತ್ತರ ಬಂದರು.
ಎಷ್ಟು? - ಅಂತ ಕೇಳಿದರು ಪ್ರೊಫೆಸರ್.
ಕೇವಲ ಎಂಟು ಡಾಲರ್ ಸಾರ್ - ಅಂತ ಉಲಿದಳು ಕೌಂಟರ್ ಹಜಾಮಿಣಿ.
ಹಾಂ!!!!....ಎಂಟು ಡಾಲರ್...ಅಂದ್ರೆ ಎಂಟು ಗುಣಾ ಒಂಬತ್ತು ರುಪಾಯೀ. ಎಪ್ಪತ್ತೆರಡು ರುಪಾಯೀ!!!! ಇಡೀ ವರ್ಷ, ತಿಂಗಳಿಗೆ ನಾಕು ನಾಕು ಸಾರೆ ಕಟಿಂಗ್ ಮಾಡಿಸಿದರೂ, ಇಷ್ಟು ದುಡ್ಡು ಕರ್ಚಾಗಲಿಕ್ಕಿಲ್ಲ.....ಶಿವ....ಶಿವ....ತುಟ್ಟಿ.....ತುಟ್ಟಿ.....ಅಂತ ಹಣೆ ಹಣೆ ಚಚ್ಚಿಕೊಳ್ಳುತ್ತಾ ಎಂಟು ಡಾಲರ್, ಮೇಲೊಂದು ಡಾಲರ್ ಟಿಪ್ ಇಟ್ಟು, ತಲೆ ಸವರಿಕೊಳ್ಳುತ್ತಾ ಹೊರಟು ಬಂದರು.
ಆ ಪ್ರೊಫೆಸರ್ ಸ್ವಲ್ಪ ವರ್ಷ ಆದ ನಂತರ ವಾಪಸ್ ಬಂದರು. ಬರೋವಾಗ ಒಂದೋ, ಎರಡೋ ಮಕ್ಕಳನ್ನು ಅಮೇರಿಕಾದಲ್ಲೇ ಮಾಡಿಕೊಂಡು, ಅವರಿಗೆ US ಸಿಟಿಜೆನಶಿಪ್ ಕೊಡಿಸಿಕೊಂಡು, ಧನ್ಯನಾದೆ ಎಂಬ ಲುಕ್ ಕೊಡುತ್ತಾ ಬಂದರು.
ಆಮೇಲೆ ಅವರು ಕಂಡವರಿಗೆಲ್ಲ, ಸಿಕ್ಕಾಗೆಲ್ಲಾ ಹೇಳುತ್ತಿದ್ದುದು ಒಂದೇ ಮಾತು.
ಎಲ್ಲೀದು ಬಿಡ್ರೀ....ಅಮೇರಿಕಾದಲ್ಲಿ ಕಟಿಂಗ ಸರಿ ಮಾಡೋದಿಲ್ಲ. ಕತ್ತಿ (ರೇಸರ್) ಇಲ್ಲ. ಬಗಲ ಶೆಂ* ಬೋಳಿಸೋದೆ ಇಲ್ಲ. ನೀವು ಮಾತ್ರ ಅಲ್ಲೆ ಹೋಗುವಾಗ ಒಂದು ಕತ್ತಿ (ರೇಸರ್), ಮತ್ತ ಅದನ್ನ ಆಗಾಗ ಚೂಪ್ ಮಾಡ್ಕೊಳ್ಳಿಕ್ಕೆ ಒಂದು ಸಾಣಿ ಕಲ್ಲು ತೆಗೆದುಕೊಂಡು ಹೋಗುದ್ ಮಾತ್ರ ಮರಿಬ್ಯಾಡ್ರಿ....ಹಾಂ....ಹಾಂ.... - ಅಂತ ಪ್ರೊಫೆಸರ್ ಉವಾಚ.
ಹೀಗೆ ಸ್ವಂತ ಊರಿನಲ್ಲಿ ರಂಗ, ಪರಊರಿನಲ್ಲಿ ಮಂಗ ಅನ್ನುವ ಘಟನೆ ಆಗ್ತಾನೆ ಇರ್ತಾವೆ.
ಅದಕ್ಕೇ ಇರಬೇಕು ಹೇಳಿದ್ದು - ಕೋಶ ಓದಿ ಕಲಿ. ದೇಶ ತಿರುಗಿ ಕಲಿ. ಕೇಶ ಬೋಳಿಸಿ(ಕೊಂಡು) ಕಲಿ - ಅಂತ.
ಹೀಗೆ ಸ್ವಂತ ಊರಿನಲ್ಲಿ ರಂಗ, ಪರಊರಿನಲ್ಲಿ ಮಂಗ ಅನ್ನುವ ಘಟನೆ ಆಗ್ತಾನೆ ಇರ್ತಾವೆ.
ಅದಕ್ಕೇ ಇರಬೇಕು ಹೇಳಿದ್ದು - ಕೋಶ ಓದಿ ಕಲಿ. ದೇಶ ತಿರುಗಿ ಕಲಿ. ಕೇಶ ಬೋಳಿಸಿ(ಕೊಂಡು) ಕಲಿ - ಅಂತ.
** ಇದು ಧಾರವಾಡದಲ್ಲಿ, ಅದೂ ಕವಿವಿ ಗೊತ್ತಿರುವ ಹಲವಾರು ಮಂದಿ ಕೇಳಿರಬಹುದಾದಂತಹ ಜೋಕ್. ಸತ್ಯಕಥೆ ಮೇಲೆ ಆಧಾರಿತ. ಯಾವ ಪ್ರೊಫೆಸರ್ ಅಂತ ನಿಜವಾಗಿಯೂ ನನಗೆ ಗೊತ್ತಿಲ್ಲ. ಒಬ್ಬರ ಕಥೆ ಇದಾಗಿದ್ದರೂ , ಹಲವರ ಅನುಭವ ಇದೇ ಇರುವ ಸಾಧ್ಯತೆಗಳಿವೆ.
** ರೇಸರ್ ಉಪಯೋಗಿಸಲು ಸ್ಪೆಷಲ್ ಪರ್ಮಿಶನ್ ಬೇಕು, ಸುಮಾರು ಕಡೆ ಇಲ್ಲಿ. ಮೊನ್ನೆ ಮೊನ್ನೆ ಒಬ್ಬ ಪರಿಚಿತ ಹೇಳುತ್ತಿದ್ದ - ತಲೆ ಬೋಳಿಸಿ ಅಂದರೂ.....ಜೀರೋ ನಂಬರ್ ಇಟ್ಟು ಕ್ಲಿಪ್ಪರ್ ಹೊಡಿತೀವಿ. ಓಕೆನಾ? - ಅಂದರಂತೆ. ಅವನು ಬೇಡ. ಕತ್ತಿ (ರೇಸರ್) ಹಚ್ಚಿಯೇ ಬೋಳಿಸಿ ಅಂದರೆ ಅದಕ್ಕೆ ಬೇರೆ ಕಡೆ ಇರೋ ಬಾರ್ಬರ್ ಶಾಪ್ ಅಡ್ರೆಸ್ಸ್ ಕೊಟ್ಟರಂತೆ. ಯಾಕೆ? ಅಂದ್ರೆ, ರೇಸರ್ ಒಂದು ಆಯುಧದ ತರಹ. ಹಾಗಾಗಿ ಬೇರೆ ಪರ್ಮಿಶನ್ ಬೇಕು ಅಂತೆ. ಇದು ಇಲ್ಲಿ ಕ್ಯಾಲಿಫೋರ್ನಿಯಾ ಕಥೆ. ಬೇರೆ ಕಡೇನೂ ಎಲ್ಲಿಯೂ ಆರ್ಡಿನರಿ ಕಟಿಂಗ್ ಅಂಗಡಿಯವರ ಕಡೆ ರೇಸರ್ ಇರುವದನ್ನು ನನ್ನಾಣೆ ಕಂಡಿಲ್ಲ. ಹಾಗಾಗಿ ದಾಡಿ ಮತ್ತೊಂದು ಶೇವ್ ಇಲ್ಲಿ ಹೇರ್ಕಟಿಂಗ್ ಅಂಗಡಿನಲ್ಲಿ ಮಾಡೋದಿಲ್ಲ.
(ಚಿತ್ರ ಕೃಪೆ: ಉಡಾಳ ಬಸ್ಯಾ ಎಂಬ ಫೇಸ್ಬುಕ್ ಗುಂಪು) |
3 comments:
ಚೆನ್ನಾಗಿದ್ದು ನಿಮ್ಮ ಹಜಾಮತಿ ಪುರಾಣ ಕಥನ ,
Thank you, Bhagwat avare!
ha ha .. Hilarious ,
Post a Comment