Tuesday, November 20, 2012

ಸಿಟ್ಟಿಗೆದ್ದ (ಮಾಜಿ) ಗಂಡ, ಸತ್ತುಬಿದ್ದ ಮಿಂಡ...ಕೆನಡಿ ಹತ್ಯೆಯ ಬಗ್ಗೆ ಹೊಸ ಮಾಹಿತಿ

ಆತ ಜಗದೇಕ ವೀರ. ಆಕೆ ಅತಿಲೋಕ ಸುಂದರಿ. ಇಬ್ಬರೂ ಕೂಡಿ ಕೇಕೆ ಹೊಡೆಯುತ್ತಿದ್ದರೆ, ಅಮೇರಿಕಾದ ಶ್ವೇತಭವನದ ತುಂಬಾ ಅದೇ ಮಾರ್ದನಿಸುತ್ತಿತ್ತು.

ಅವರಿಬ್ಬರೂ ಆಗಾಗ ಭೆಟ್ಟಿಯಾಗಿ, ಸಾಹಿತ್ಯ, ಕಲೆ ಅದು ಇದು ಎಲ್ಲಾ ಚರ್ಚೆ ಮತ್ತೊಂದು ಮಾಡಿ, ನಂತರ ಒಂದು ಫೈನಲ್ ಅನ್ನುವ ಹಾಗೆ ಕಾಮಕೇಳಿಯ ಒಂದು ಸೆಷನ್ ಕೂಡ ಮಾಡಿ ಮುಗಿಸುತ್ತಿದ್ದುದು ಹಳೆ ಮಾತಾಗಿತ್ತು. ಆದರೆ ಆವತ್ತಿನ ಸೆಷನ್ನಿಗೆ ಬೇರೆಯ ಮಹತ್ವವೇ ಇತ್ತು.

ಆಕೆ ಅವನಿಗಾಗಿಯೇ ಸ್ಪೆಷಲ್ LSD ಎಂಬ ಮಾದಕ ದ್ರವ್ಯ ದೂರದ ಬಾಸ್ಟನ್ ನಗರದಿಂದ, LSD ಪಿತಾಮಹ ಎಂದೇ ಖ್ಯಾತರಾಗಿದ್ದ ಹಾರ್ವಡ್ ಯುನಿವರ್ಸಿಟಿಯ ಡಾ. ಟಿಮೊತಿ ಲೀರಿ ಅವರಿಂದಲೇ ಇಬ್ಬರಿಗೆ ಸಾಕಾಗುವಷ್ಟು ತಂದು ಬಿಟ್ಟಿದ್ದಳು!!!!! ಅದರ ಉಪಯೋಗ ಮಾಡುವದು ಹೇಗೆ, ನಂತರ ಏನು, ಎಲ್ಲ ಸರಿಯಾಗಿ ಕೇಳಿಯೇ ಬಂದಿದ್ದಳು. ಈಗ ಇಬ್ಬರೂ ಮಸ್ತಾಗಿ LSD ಏರಿಸಿ, ಚಿತ್ತಾಗಿ,  ಮೈಗೆ ಮೈ ಹೊಸೆಯುತ್ತಿದ್ದರೆ,  ಈ ಸರಿಯ ಸುಖವೇ ಬೇರೆ ಇತ್ತು. ಎಲ್ಲೋ ಬೇರೆ ಲೋಕಕ್ಕೆ ತೇಲಿ ಹೋದ ಅನುಭವ.

ಹೀಗೆ ಸಾಹೇಬರು ಮತ್ತು ಅವರ ಡವ್ವು ಶ್ವೇತ ಭವನದಲ್ಲಿ ಜಂಗಿ ಚಕ್ಕ ಜಂಗಿ ಚಿಕ್ಕ ಮಾಡುತ್ತಿದ್ದರೆ, ಅಲ್ಲೇ ಪಕ್ಕದಲ್ಲಿ ಅನತಿ ದೂರದಲ್ಲಿ ಇದ್ದ CIA ಹೆಡ್ ಕ್ವಾರ್ಟರ್ ನಲ್ಲಿ ಕೂತಿದ್ದ ಒಬ್ಬ ಆದ್ಮಿ ನಖಶಿಕಾಂತ ಉರಿಯುತ್ತಿದ್ದ. ಯಾಕಂದ್ರೆ ಆಕೆ ಆತನ ಮಾಜಿ ಪತ್ನಿ. ಡೈವೋರ್ಸ್ ಆಗಿತ್ತು. ಆದರೂ ಹಳೆ ಮಾಲು. ಒಂದು ಕಾಲದಲ್ಲಿ ತಾನು ಸಹಸ್ರಾರು ಮಂದಿಯನ್ನು ಸೋಲಿಸಿ ಗೆದ್ದಿದ್ದು. ಆಕೆ ಈಗ ಮಾಜಿ ಪತ್ನಿಯೇ ಆದರೂ ತನ್ನ ಒಂದು ಕಾಲದ ಹಳೆ ಪ್ರತಿಸ್ಪರ್ಧಿ ಆಕೆಯನ್ನು ಈಗ ಪಟಾಯಿಸಿಕೊಂಡು, ಶ್ವೇತಭವನದಲ್ಲಿ ಕೇಕೆ ಹೊಡೆಯುತ್ತ, ಬಗ್ಗಿಸಿ ಬಾರಿಸುತ್ತಿರುವದು ಸಹಿಸುವ ಮಾತಾಗಿರಲಿಲ್ಲ. ಕುದ್ದು ಹೋದ ಮಾಜಿ ಪತಿ. ಸಿಕ್ಕರೆ ಆಕೆಯ ಹೊಸ ಆಶಿಕ್ ಗೆ ಮುಹೂರ್ತ ಇಡುವ ನಿರ್ಧಾರ ಮನಸ್ಸಿನಲ್ಲೇ ಮಾಡಿದ. ಅವನಿಗೇನು ಗೊತ್ತಿತ್ತು ಅಂತಹದೊಂದು ಅವಕಾಶ ಬೇಗನೆ ಸಿಗಲಿದೆ ಅಂತ.

LSD ಮಸ್ತಾಗಿ ಹೊಡೆದು ಜಮ್ಮ ಚಕ್ಕ ಮಾಡುತ್ತಿದ್ದವರು ಆ ಕಾಲದ ಅಧ್ಯಕ್ಷ ಜಾನ್ ಕೆನಡಿ. ಅವರ ಅವತ್ತಿನ ಆ ಟೈಮ್ ನ ಕರ್ಮಪತ್ನಿ ಮೇರಿ ಪಿಂಚೊಟ ಮೇಯರ್ ಎಂಬ ಅತಿಲೋಕ ಸುಂದರಿ. ಆಕೆಯ ಮಾಜಿ ಪತಿ CIA ಬೇಹುಗಾರಿಕೆ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದು, ಸಾಕಷ್ಟು ಪ್ರಳಯಾಂತಕ ಎಂದು ಹೆಸರು ಗಳಿಸಿದ್ದ ಕಾರ್ಡ್ ಮೆಯೇರ್ ಎಂಬಾತ. ಸ್ವಲ್ಪ ವರ್ಷಗಳ ಹಿಂದೆ ಇರಾನಿನಲ್ಲಿ ಸರಕಾರ ಬದಲಾವಣೆ ಟೈಮ್ನಲ್ಲಿ ಆತ ಮಾಡಿದ್ದ ಕರಾಮತ್ತಿಗೆ ಎಲ್ಲರೂ ತಲೆದೂಗಿದ್ದರು.

JFK ಮತ್ತು ಮೇರಿ ಪಿನ್ಚೋಟ್ 
ಮೇರಿ  ಪಿಂಚೊಟ ಸಿಕ್ಕಾಪಟ್ಟೆ ಪ್ರತಿಭಾಶಾಲಿ. ದೊಡ್ಡ ಶ್ರೀಮಂತ ಮನೆತನದದ ಹುಡುಗಿ. ಆ ಕಾಲದಲ್ಲೇ ಖ್ಯಾತ ವಸ್ಸಾರ್ ಕಾಲೇಜಿನಿಂದ ಬಿಎ ಮಾಡಿಕೊಂಡಿದ್ದಳು. ಸಾಕಷ್ಟು ಕವನ ಬರೆದು ಎಲ್ಲರಿಂದ ವಾಹ್ ವಾಹ್ ಅನ್ನಿಸಿಕೊಂಡಿದ್ದಳು. ಕೆನಡಿ ಅವರ ಪತ್ನಿ ಜಾಕಿ ಕೆನಡಿ ಸಹ ವಸ್ಸಾರ್ ಕಾಲೇಜಿನಲ್ಲೇ ಓದುತ್ತಿದ್ದಳು. ಮೇರಿಗಿಂತ 1-2 ವರ್ಷ ಸೀನಿಯರ್.

ಮೇರಿ ವಸ್ಸಾರ್ ನಲ್ಲಿ ಓದುತ್ತಿದ್ದಾಗಲೇ ವಾರಾಂತ್ಯಗಳಲ್ಲಿ ಎಲ್ಲ ಹುಡುಗಿಯರಂತೆ ಬಾಸ್ಟನ್ ನಗರಕ್ಕೆ ಓಡುತ್ತಿದ್ದಳು. ಅಥವಾ ಹುಡುಗರ ದಂಡಿಗೆ ದಂಡೇ ಬಂದು, ನಮ್ಮ ಕಾರಲ್ಲಿ ಬಾರಮ್ಮ, ಅಂತ ಒಬ್ಬರ ಮೇಲೆ ಒಬ್ಬರು ಪೈಪೋಟಿಯಿಂದ ಡೇಟಿಂಗ್ ಗೆ ಕರೆಯುತ್ತಿದ್ದರು. ಸುಂದರಿಯ ನಸೀಬ್ ಮಸ್ತ ಇತ್ತು. ಬಾಸ್ಟನ್ ನಗರ ಅಂದ್ರೆ ಸುಮಾರು 65-70 ಯುನಿವರ್ಸಿಟಿ, ಕಾಲೇಜುಗಳಿಂದ ತುಂಬಿದ ಸ್ಥಳ. ಜಗತ್ತಿನಲ್ಲಿಯೇ ಸೆಕಂಡ್ ಬಿಗ್ಗೆಸ್ಟ್ ಸ್ಟೂಡೆಂಟ್ ಪಾಪ್ಯುಲೇಶನ್ ಇರೋದು ಅಂದ್ರೆ ಬಾಸ್ಟನ್ ನಗರದ ಸುತ್ತ ಮುತ್ತ. ಮೊದಲನೇ ಸ್ಥಾನ ಜಪಾನಿನ ಟೋಕಿಯೋ ಅಂತೆ. ಅಲ್ಲೆಷ್ಟು ಕಾಲೇಜುಗಳಿವೆಯೋ?!

ಕೆನಡಿ ಸಾಹೇಬರೂ ಅಲ್ಲೇ ಹಾರ್ವರ್ಡ್ ನಲ್ಲಿ ಓದುತ್ತಿದ್ದರಲ್ಲ. ಅಲ್ಲೇ ಆವಾಗಲೇ ಕಾಳು ಹಾಕಿದ್ದರು ಅಂತ ಅನ್ನಿಸುತ್ತದೆ. ಆಗಲೇ ಪರಿಚಯವಂತೂ ಇತ್ತು. ಆದ್ರೆ ಇಂದೊಬ್ಬಾಕೆ, ನಾಳೆ ಇನ್ನೊಬ್ಬಾಕೆ, ಹಾಲಿವುಡ್ ಮಾಲು ಬೆಟರ್ ಅಂತ ಅನ್ನುತ್ತಿದ್ದ ಸ್ವಲ್ಪ ರಫ್ ಅಂಡ್ ಟಫ್ ಕೆನಡಿಗಳ  ಪಾಲಿಗೆ ಮೇರಿ ಸ್ವಲ್ಪ ಡೆಲಿಕೇಟ ಕಂಡಿರಬೇಕು. ಅದಕ್ಕೇ ವರ್ಕ್ ಔಟ್ ಆಗಿರಲಿಲ್ಲ ಅಂತ ಅನ್ನಿಸುತ್ತದೆ.

ಇನ್ನು ಕಾರ್ಡ್ ಮೇಯರ್. ಮಹಾನ್ ಪ್ರತಿಭಾವಂತ. ಯೇಲ್, ಹಾರ್ವರ್ಡ್ ಗಳಲ್ಲಿ ಓದಿದ್ದ. ಎಲ್ಲರೂ ಹೋದಂತೆ ಎರಡನೇ ಮಹಾ ಯುದ್ಧದಲ್ಲಿ ಹೋರಾಡಿ, ಸತ್ತು ಸತ್ತು ಬದುಕಿ ಬಂದಿದ್ದ. ಒಂದು ಕಣ್ಣು ಹೋಗಿತ್ತು. ಗಾಜಿನ ಕಣ್ಣು ಹಾಕಿಕೊಂಡಿದ್ದ. ಆದರೂ ಭಾಳ ಸ್ಮಾರ್ಟ್ ಇದ್ದ. ಆ ಪರಿ ಯುದ್ಧ ಮಾಡಿ ಸಾವನ್ನು ಗೆದ್ದು ಬಂದವನಿಗೆ ಮೇರಿ ಬಿದ್ದಿದ್ದಳು. ಪ್ಯಾರ್ ಗೆ ಆಗಿ ಬಿಟ್ಟೈತೆ ಆಗಿ, ಮನೆಯವರೂ ಒಪ್ಪಿ, ಶಾದಿ ಮಾಡಿ ಆಗಿತ್ತು. ಮಸ್ತ ಖುಷಿಯಿಂದಲೇ ಇದ್ದರು ಕಪಲ್ಸ್. ಮೊದಲಿನ ಸ್ವಲ್ಪ ದಿವಸ.

ಮುಂದೆ ಕಾರ್ಡ್ ಮೇಯರ್ CIA ಸೇರಿದ. ಫ್ರಾಂಕ್ ವೈಸ್ನರ ಎಂಬ ಹಿರಿ ತಲೆಯೊಬ್ಬ ಇವನನ್ನು ತನ್ನ ಶಿಷ್ಯನನ್ನಾಗಿ ತೆಗೆದುಕೊಂಡು ಮಸ್ತ ಮೇಲೆ ತಂದು ಬಿಟ್ಟ. ಖತರ್ನಾಕ ಕೆಲಸಗಳನ್ನು ನೀಟಾಗಿ ಮಾಡಿ, ಬಂಡವಾಳಶಾಹಿಗಳಿಗೆ ದೇಶಗಳಿಗೆ ದೇಶಗಳನ್ನೇ ಬೋಳಿಸಿ ಕಾಸು ಮಾಡಿ ಕೊಟ್ಟ ಸಿಐಎ ಮಂದಿಗಳಲ್ಲಿ ಇವನೂ ಫೇಮಸ್ ಆಗಿ, ಕೆಲಸ ಆಗ ಬೇಕು ಅಂದ್ರೆ ಕಾರ್ಡ್ ಮೇಯರ್ ಗೆ ಹೇಳಬೇಕು, ಅನ್ನುವಷ್ಟು ಪ್ರಖ್ಯಾತಿ ಬಂತು.

ಮನೆ ಕಡೆ ಪರಿಸ್ಥಿತಿ ಹಳ್ಳ ಹಿಡಿಯುತ್ತಿತ್ತು. ರಹಸ್ಯ ಕಾರ್ಯಾಚರಣೆಗಳು, ಅದಕ್ಕೇ ಇರುವ ಪಾರ್ಟಿಗಳು, ಅಲ್ಲಿ ಚಿತ್ರ ವಿಚಿತ್ರ ಜನರೊಂದಿಗೆ ಬೆರೆಯುವದು, ವಿಪರೀತ ಕುಡಿತ ಎಲ್ಲ ಶುರುವಾಗತೊಡಗಿತು. ಪತ್ನಿ ಮೇರಿಯ ತಲೆ ಕೆಡತೊಡಗಿತು. ಚಿಕ್ಕ ಮಗನೊಬ್ಬ ಕಾರಿಗೆ ಸಿಕ್ಕು ಸತ್ತು ಹೋದ. ಪಾಪ! ಮತ್ತೆ 1960 ಟೈಮ್. ಎಲ್ಲ ಕಡೆ ಫೆಮಿನಿಸಂ. ಸ್ತ್ರೀಯರಿಗೆ ಫುಲ್ ಲಿಬರಲಿಸಂ ಬೇಕು. ತಿಂದು, ಕುಡಿದು, ಸೇದಿ, ಮಲಗಿ ಎಂಜಾಯ್ ಮಾಡಿ ಅಂತ ಉಪದೇಶ ಎಲ್ಲ ಮಹಿಳೆಯರಿಗೆ. ಮೇರಿಯ ತಲೆ ಕೆಟ್ಟು ನಪರ ಏಳಲು ಇನ್ನೇನು ಬೇಕು?

ಕಾರ್ಡ್ ಮೇಯರ್ ಗೆ ಡೈವೋರ್ಸ್ ಕೊಟ್ಟೇ ಬಿಟ್ಟಳು. ಇವನೂ ಬಿಟ್ಟೇ ಬಿಟ್ಟ. ದೊಡ್ಡ ಖತರ್ನಾಕ್ ಅಧಿಕಾರಿಯಾಗಿದ್ದ ಅವನಿಗೆ ದಿನದ ಮಟ್ಟಿಗೆ ಗುಂಡು, ತುಂಡಿನ ಚಿಂತೆ ಇರಲಿಲ್ಲ. ಶ್ರೀಮಂತರು ಸಪ್ಲೈ ಮಾಡುತ್ತಿದ್ದರು.

ಹೀಗೆ ಕಾರ್ಡ್ ಮೇಯರ್ ನನ್ನು ಬಿಟ್ಟ ಮೇರಿಗೆ ವಯಸ್ಸಾದರೂ ಎಷ್ಟು ಮಹಾ? 33-34 ವರ್ಷ. ಅಲ್ಲೇ ವಾಷಿಂಗಟನ್  ಸಮೀಪ ಒಂದು ಚಿಕ್ಕ ಮನೆ ತೆಗೆದುಕೊಂಡು ಮೇರಿ ತಾನು, ತನ್ನ ಚಿತ್ರಕಲೆ, ಸಾಹಿತ್ಯ, ದೊಡ್ಡ ಜನರ ಪಾರ್ಟಿಗಳು, ದೊಡ್ಡ ದೊಡ್ಡ ಚಿಂತಕರ ಸಂಗಡ ಚಿಂತನೆ ಮಾಡುತ್ತ ಒಂದು ಲೆವೆಲ್ ನಲ್ಲಿ ಆರಾಮ್ ಇದ್ದಳು.

ಅಂತಹದೇ ಯಾವದೋ ಪಾರ್ಟಿಯಲ್ಲಿಯೇ ಕೆನಡಿ ಸಾಹೇಬರು ಸಿಕ್ಕಿದ್ದರು. ಮತ್ತೆ ಗಾಳ ಹಾಕಿ ಕಾಳು ಹಾಕಿದರು. ಈ ಸಲ ಬಿತ್ತು ಮೀನು. ಸುಂದರ ಮೀನು. ಅಫೇರ್ ಶುರು ಆಗಿಯೇ ಹೋಯಿತು.

ಕೆನಡಿ ಅವರ ಬಿಸ್ತರ್ ಗರಂ ಮಾಡಿ ಹೋದ ಮಹಿಳೆಯರ ಲೆಕ್ಕವಿಲ್ಲ. ಮರ್ಲಿನ್ ಮುನ್ರೋ ಎಂಬ ಮಹಾನ್ ನಟಿಯಿಂದ ಹಿಡಿದು ಸಾಮ್ ಜಿಯಾಂಕಾನ ಎಂಬಾ ಖತರ್ನಾಕ್ ಮಾಫಿಯಾ ದೊರೆಯ ಸಖಿ ಜೂಡೀ ಏಕ್ಸಿನರ್ ಕೂಡ ಕೆನಡಿಯವರ ಮೋಹಕ್ಕೆ ಒಳಗಾಗಿ, ಎಲ್ಲ ಸೇವೆ ಮಾಡಿ, ಧನ್ಯಾತಾ ಭಾವ ಫೀಲ್ ಮಾಡಿಕೊಳ್ಳುತ್ತ ಹೋಗಿದ್ದರು. ಅದು ಕೆನಡಿ ಕೆಪಾಸಿಟಿ. ಬನ್ನಿ ಇವರೇ, ಅನ್ನುತ್ತಲೇ ಮಂಚ ಹತ್ತಿಸುವ ಕಲೆ ಅವರಿಂದ ನೋಡಿ ಕಲಿಯಬೇಕು.

ಆದ್ರೆ ಕೆನಡಿ ಮತ್ತು ಮೇರಿ ಪಿಂಚೊಟ ಮಧ್ಯೆ ಇದ್ದ ಅಫೇರ್ ಗೆ ಒಂದು ಸ್ಟೇಟಸ್ ಇತ್ತು. ಕೇವಲ ತೀಟೆ ಹೆಚ್ಚಿದಾಗೊಮ್ಮೆ ಮಂಚದಲ್ಲಿ ಗುದುಮುರುಗಿ ಹಾಕಿ ಹುಸ್ ಹುಸ್ ಅನ್ನೋದಲ್ಲ ಅದು. ಸಿಕ್ಕಾಪಟ್ಟೆ ಓದಿಕೊಂಡಿದ್ದರು ಇಬ್ಬರೂ. ಇಬ್ಬರೂ ಏನೇನೋ ಬರೆದಿದ್ದರು. ಸಾಹಿತ್ಯ, ಚಿತ್ರಕಲೆ, ಸಂಗೀತದಲ್ಲಿ ಆಸಕ್ತಿ ಅಪಾರ. ಕೆನಡಿ ಅವರನ್ನು ಒಂದು ತರಹದಲ್ಲಿ ಅರ್ಥ ಮಾಡಿಕೊಂಡ ಗೆಳತಿ ಇದ್ದರೆ ಅದು ಮೇರಿ ಪಿನ್ಚೋಟ್ ಅನ್ನುವ ಹಾಗಿತ್ತು. ಒಂದು ತರಹದ ವಾರ್ಮ್ತ್ ಇತ್ತು.

ಹೀಗೇ ನಡೆದಿದ್ದರೆ ಚೆನ್ನಾಗಿತ್ತು. ಆದ್ರೆ ಗ್ರಹಚಾರ.

ಕೆನಡಿ ಏನೇ ಇರಲಿ ಒಂದು ರೀತಿಯಿಂದ ಶಾಂತಿ ಪ್ರಿಯ. ವಿಶ್ವಶಾಂತಿ, ಎಲ್ಲರಿಗೆ ಸರಿಯಾದ ಸ್ಥಾನ ಮಾನ, ಅಸಮಾನತೆ ದೂರ ಮಾಡುವದು, ಆ ಪರಿ ದುಡ್ಡು ಸೈನ್ಯದ ಮೇಲೆ ಹಾಕಿ, ಯಾವ್ಯಾವದೋ ದೇಶದ ಮೇಲೆ ಸುಮ್ಮ ಸುಮ್ಮನೆ ಯುದ್ಧ ಮಾಡಿ, ವಿನಾಕಾರಣ ಜನರನ್ನು ಕೊಂದು ಪಾಪ ಕಟ್ಟಿಕೊಳ್ಳುವದು  ಅವರಿಗೆ ಬೇಕಿರಲಿಲ್ಲ. ಈ ನೀತಿಯೇ ಅವರಿಗೆ ಮುಳುವಾಯಿತಾ? ಹೌದೆನ್ನುತ್ತಾರೆ ಕೆನಡಿ ಬಗ್ಗೆ ಗೊತ್ತು ಇರುವವರು.

ಕ್ಯೂಬಾದಲ್ಲಿ ಬಂದು ಕೂತಿದ್ದ ಕ್ಯಾಸ್ಟ್ರೋ ಎಂಬ ಕಮ್ಯುನಿಸ್ಟನನ್ನು ಓಡಿಸುವದು ಹೂವು ಎತ್ತಿಟ್ಟಂತೆ ಅಮೆರಿಕಾದ ಸೈನ್ಯಕ್ಕೆ. ಅಷ್ಟು ಸುಲಭ. ಅವನನ್ನ ಓಡಿಸಿ, ನಮ್ಮ ಹಡಬೆ ದಂಧೆ ನಡೆಸಲು ಮೊದಲಿನಂತೆ ಅವಕಾಶ ಮಾಡಿ ಕೊಡಿ ಅಂದ್ರೆ, ಬ್ಯಾಡ್ರೋ, ಅಲ್ಲಿ ರಶಿಯಾದ ಕ್ರುಸ್ಚೇವ್ ಮೂರನೇ ಮಹಾ ಯುದ್ಧ ಶುರು ಮಾಡುತ್ತಾನೆ, ಅಂತ ಸುಮ್ಮನಾಗಿಸಿದರು ಕೆನಡಿ. ಹಡಬೆ ದಂಧೆ ಜನ, ಮುಖ್ಯವಾಗಿ ಮಾಫಿಯಾ ಜನ, ಕೊತ ಕೊತ ಕುದ್ದರು.

ರೀ, ಪ್ರೆಸಿಡೆಂಟ್ ಸಾಹೇಬ್ರೆ, ವಿಯೆಟ್ನಾಂ ಮೇಲೆ ಯುದ್ಧ ಶುರು ಮಾಡ್ರಿ. ಅದಕ್ಕೆ ಬೇಕಾದ ಅಸ್ತ್ರ ಶಸ್ತ್ರ ಒದಗಿಸಿ, ಒಂದಕ್ಕೆ ಎರಡು ರೇಟ್ ಹಾಕಿ, ಜನ ಸಾಮಾನ್ಯರ ಮುಂಡಾಯಿಸಿ, ಕಾಸು ಮಾಡಿಕೊಳ್ಳೋಣ, ಅಂದ್ರೆ ಅದಕ್ಕೂ ಬೇಡ ಅಂದ್ರು. ದೊಡ್ಡ ದೊಡ್ಡ ಕಂಪನಿಯ ಮಾಲೀಕರು ಕುದ್ದು ಹೋದರು.

ರೀ, ಸ್ವಾಮೀ, ನಮ್ಮ ಮಾಫಿಯಾ ರೊಕ್ಕಾ, ಸಹಾಯ ತೊಗೊಂಡ ಆರಿಸಿ ಬಂದೀರಿ. ಈಗ ನಿಮ್ಮ ತಮ್ಮ ಬಾಬಿ ಕೆನಡಿನ ಅಟಾರ್ನೀ ಜನರಲ್ ಮಾಡೀರಿ. ಅವಾ ಹುಸ್ಸೂಳೆಮಗ ನಮ್ಮ ಬುಡದಾಗ ಬಗಣಿ ಗೂಟ ಬಡಿದು, ನಮ್ಮ ಬಾಸ್ ಕಾರ್ಲೋಸ್ ಮಾರ್ಸೆಲ್ಲೋ ಅವರನ್ನ ದೇಶಾ ಬಿಟ್ಟು ಗಡಿಪಾರ್ ಮಾಡಿ ಬಿಟ್ಟಾನ್. ಇದು ಸರಿ ಅಲ್ಲ ನೋಡ್ರೀ. ಹಿಂಗಾ ಆದ್ರಾ ಮುಂದ ಏನಾರಾ ಆತ ಅಂದ್ರಾ ನೋಡ್ಕೊರೀ ಮತ್ತ, ಅಂತ ಮಾಫಿಯಾ ಮಂದಿ ಗುಟುರು ಹಾಕಿದರೆ, ಹುಳ್ಳನೆ ಮಳ್ಳ ನಗೆ ನಕ್ಕು, ಮಾಫಿಯಾ ಡಾನ್ ಒಬ್ಬಾತನ ಡವ್ವನ್ನೇ ಪಟಾಯಿಸಿ, ಆಕೆಗೆ ಹೊಟ್ಟೆ ಮುಂದೆ ಬರಿಸಿ, ಅದರಪ್ಪ ನೀನಾಗಪ್ಪ ಸ್ಯಾಮ್, ಅಂತ ಅನ್ನೋ ಛಾತಿ ಅವರಲ್ಲಿತ್ತು. ಸ್ಯಾಮ್ ಜಿಯಾಂಕಾನ ಉರಿದು ಹೋಗಿದ್ದ. ಬಗರ್ ಹುಕುಂ ಜಮೀನಿನಲ್ಲಿ ಮನೆ ಕಟ್ಟೋಕೆ ಬಿಟ್ಟರೆ, ಮನೆ ಕಟ್ಟಿ ಇನ್ನೊಬ್ಬರ ಹತ್ರ ಗೃಹಪ್ರವೇಶ ಮಾಡಿ, ಅಂದ್ರೆ ಹೇಗೆ ಆಗುತ್ತೆ ನೋಡಿ ಆ ಫೀಲಿಂಗ್ ಬಂದಿರಬೇಕು ಚಿಕ್ಯಾಗೋದ ಆ ಮಾಫಿಯಾ ದೊರೆಗೆ.

ಇನ್ನು ಕ್ಯೂಬಾದ ಹಂದಿ ಕೊಲ್ಲಿ ಕಾರ್ಯಾಚರಣೆ ಹೊಲಗೇರಿ ಎಬ್ಬಿಸಿದ ಅಂತ ಸಿಟ್ಟಿಗೆದ್ದು ಆ ಕಾಲದ ಸಿಐಎ ಮುಖ್ಯಸ್ಥ ಅಲೆನ್ ಡಲ್ಲೆಸ್ ಮತ್ತು ಅವನ ಖಾಸಮ್ ಖಾಸ್ ದೊಡ್ಡ ತಲೆಗಳನ್ನು ಮುಲಾಜಿಲ್ಲದೆ ಮನೆಗೆ ಕಳಿಸಿ ಬಿಟ್ಟಿದ್ದರು. ಸಿಐಎ ಒಳಗೆ ದೊಡ್ಡ ಪ್ರಮಾಣದ ಅಸಮಾಧಾನ, ಸಿಟ್ಟು, ದ್ವೇಷ ಶುರುವಾಗಿತ್ತು. ಜನರಾರಿಸಿದ ಪ್ರೆಸಿಡೆಂಟ್ ಗಳನ್ನು ಗೊಂಬೆಯಂತೆ ಆಡಿಸಿದ್ದು ಸಿಐಎ ಮತ್ತು ಸೈನ್ಯ. ಈಗ ಇವರು ಬಂದು ಎಲ್ಲ ಸ್ಕ್ರೂ ಟೈಟ್ ಮಾಡುತ್ತಿದ್ದಾರೆ. ಉರಿದಿತ್ತು ಅಲ್ಲಿಯ ಮಂದಿಗೆ.

ಹೀಗೆ ಎಲ್ಲ ತರಹದ ಪಾವರಫುಲ್ ಜನರನ್ನು ಎದುರು ಹಾಕಿಕೊಂಡ ಕೆನಡಿ ಹತ್ಯೆಗೆ ಮುಹೂರ್ತ ಇಡಲು ಇದೇ ಜನಗಳು ಶುರು ಮಾಡಿದ್ದರಲ್ಲಿ ಏನು ವಿಶೇಷವಿದೆ?

ಮಾಫಿಯಾ ಕಾಸು ಕೊಡುತ್ತೇನೆ ಅಂದಿತು. ದೊಡ್ಡ ದೊಡ್ಡ ಬಂಡವಾಳಶಾಹಿಗಳು ಏನೇನೋ ಲೆಕ್ಕಾಚಾರ ಮಾಡಿ, ಈ ಯಪ್ಪಾ ಹೋದರೇ ಒಳ್ಳೇದು, ಅಂತ ಏನೇನೋ ಡೀಲ್ ಮಾಡಿ, ಓಕೆ ಕೊಟ್ಟರು. ಮುಂದೆ ಬರಬಹುದಾದ ಆಡಳಿತ ವ್ಯವಸ್ಥೆ, ಕೆನಡಿ ಹೋಗಿ ನಾವು ಬಂದ್ರೆ, ವಿಯೆಟ್ನಾಂ ಮೇಲೆ ಯುದ್ಧ ಫುಲ್ ಶುರು, ಬೇಕಾದಷ್ಟು ಕಾಸ್ ಮಾಡ್ಕೊಳ್ಳಿ ಅಂದು ಬಿಟ್ಟಿತು. ಎಲ್ಲಾ ವರ್ಕ್ ಔಟ್ ಆಯಿತು. ಕಾನೂನು, ಪೋಲಿಸ್, ತನಿಕೆ ಎಲ್ಲ ಒಂದು ಲೆವೆಲ್ ನಲ್ಲಿ ಒಳಗೆ ಹಾಕಿಕೊಂಡ ಷಡ್ಯಂತ್ರದ ಗುಂಪು ಡೀಟೇಲ್ ಪ್ಲಾನಿಂಗ್ ಶುರು ಮಾಡಿಯೇ ಬಿಟ್ಟಿತು. ಕೆನಡಿ ಹತ್ಯೆಗೆ ಕ್ಷಣಗಣನೆ ಶುರು ಆಗಿಯೇ ಬಿಟ್ಟಿತು.

ಕೆನಡಿ ಹತ್ಯೆಯ ಬಗ್ಗೆ ಸ್ವಲ್ಪ ಗೊತ್ತಿದ್ದವರಿಗೂ ಸಹ ಗೊತ್ತಿರುವ ಸಂಗತಿ ಅಂದ್ರೆ ಓಸ್ವಾಲ್ಡ್ ಅನ್ನುವ ಆದ್ಮಿಯನ್ನು ಹಂತಕ ಅಂತ ತೋರಿಸಿದ್ದು ಬರಿ ಓಳು ಅಂತ. ಯಾವದೋ ಒಂದು ತಗಡು ಬಂದೂಕು ಇಟ್ಟುಗೊಂಡು, ಅಷ್ಟು ಸಣ್ಣ ಸಮಯದಲ್ಲಿ 3-4 ಗುಂಡು ಅಷ್ಟು ಕರಾರುವಕ್ಕಾಗಿ ಹಾರಿಸಿ ಕೆನಡಿ ಬುರುಡೆ ಬಿಚ್ಚಲು ಸಾಧ್ಯವೇ ಇರಲಿಲ್ಲ ಎಂಬುದು ತುಂಬ ಹಿಂದೆಯೇ ಜನಜನಿತವಾದ ಸಂಗತಿ.

ಹಾಗಾದರೆ ಅಷ್ಟು ಕರಾರುವಕ್ಕಾಗಿ ಗುರಿಯಿಟ್ಟು ಚಲಿಸುತ್ತಿರುವ ವಾಹನದಲ್ಲಿರುವ ಮನುಷ್ಯನ ಬುರುಡೆ ಬಿಚ್ಚಲು ಸಿಕ್ಕಾಪಟ್ಟೆ ಸ್ಕಿಲ್ ಇರುವ ಗುರಿಕಾರ ಬೇಕು. ಎಲ್ಲಿಂದ ತರುವದು? ಯಾರು ತಂದು ಕೊಟ್ಟಾರು?

ಕಿತಾಪತಿಗಳು ಬೇಕು ಅಂದ್ರೆ ಪೋಲೀಸರ ಹತ್ತಿರವೇ ಹೋಗಬೇಕು. ಅವರಿಗೇ ಗೊತ್ತು ಇದೆಲ್ಲ. ಫ್ರೆಂಚ್ ಮಾಫಿಯಾದ ಸೇವೆಯಲ್ಲಿ ಅಂತಹ ನುರಿತ ಗುರಿಕಾರರು ಇದ್ದರು. ಕಾಸು ಕೊಟ್ಟರೆ ಏನೂ ಕೇಳದೆ ಕೆಲಸ ಮಾಡಿ ಕೊಟ್ಟು ಹೋಗುವ ಜನ. ಸಿಐಎ ಮಂದಿ ಕಾಂಗೋದ ನಾಯಕ ಲುಮುಂಬಾ ಎನ್ನುವನಿಗೆ ಸ್ವರ್ಗದ ದಾರಿ ತೋರಿಸಿತ್ತು ನೋಡಿ, ಅದಕ್ಕೆ ಕೆಲೊ ಜನ ಇದೇ ಭಾಡಿಗೆ ಗುರಿಕಾರರನ್ನು ಕಳಿಸಿತ್ತು. ಈಗ ಕೆನಡಿ ಸಾಹೇಬರ ಅವಸಾನಕ್ಕೂ ಅವರನ್ನೇ ಕರೆಯಿಸಿದರೆ ಹೇಗೆ? ಎಂಬ ಯೋಚನೆ ಬಂತು ಪ್ಲಾನಿಂಗ ಮಾಡುತ್ತಾ ಕುಳಿತಿದ್ದವರಿಗೆ.

ಅಂತಹ ಫ್ರೆಂಚ್ ಹಂತಕರು ಗೊತ್ತಿದ್ದದ್ದು ಯಾರಿಗೆ?

ಆವಾಗ ನೆನಪು ಆದವನೇ - ಕಾರ್ಡ್ ಮೇಯರ್. ತನ್ನ ಮಾಜಿ ಹೆಂಡತಿಯನ್ನು ಪಟಾಯಿಸಿದ್ದಾನೆ ಅಂತ ಕೆನಡಿ ಮೇಲೆ ಮೊದಲೇ ಕುದಿಯುತ್ತಿದ್ದ. ಮಸ್ತ ಅವಕಾಶ ಸಿಕ್ಕಿ ಬಿಟ್ಟಿತು. ಕಾರ್ಡ್ ಮೇಯರ್ ಪದ್ಮಾಸನ ಹಾಕಿ ಕಾರ್ಯಾಚರಣೆಗೆ ಕುಳಿತು ಬಿಟ್ಟ. ಅವನಿಗೆ ಅದನ್ನು ವಹಿಸಿದ ದೊಡ್ಡ ಮಂದಿ ಬೇರೆ ಬೇರೆ ವಿಷಯಗಳ ಬಗ್ಗೆ ಪ್ಲಾನಿಂಗ ಮುಂದು ವರಿಸಿದರು.

ಹೀಗೆ ಕ್ರುದ್ಧ ಮಾಜಿ ಪತಿಯೊಬ್ಬ ತನ್ನ ಮಾಜಿ ಪತ್ನಿಯ ಪ್ರಿಯಕರನಿಗೆ ಸ್ಕೀಮ್ ಹಾಕಿ ಬಿಟ್ಟನಾ?

ಹೌದು ಅನ್ನುತ್ತದೆ ಈಗ ತಾನೇ ಬಂದಿರುವ ಒಂದು ಹೊಸ ಪುಸ್ತಕ.  ಪುಸ್ತಕದ ಹೆಸರು - Bond of Secrecy: My Life with CIA Spy and Watergate Conspirator E. Howard Hunt.

ಹೊವರ್ಡ್ ಹಂಟ್ ಎಂಬ ಮಾಜಿ ಸಿಐಎ ಅಧಿಕಾರಿ ಸಾಯುವ ಮೊದಲು ತನ್ನ ಮಗನಿಗೆ ಹೇಳಿದ ಮಾತುಗಳ ಮೇಲೆ ಬರೆದಿರುವ ಪುಸ್ತಕ. ಬರೆದಿರುವನು ಅವನ ಮಗ ಸೇಂಟ್ ಜಾನ್ ಹಂಟ್.

ಹೊವರ್ಡ್ ಹಂಟ್ - ಜಾನ್ ಕೆನಡಿ ಹತ್ಯೆ, ಅವರ ತಮ್ಮ ರಾಬರ್ಟ್ ಕೆನಡಿ ಹತ್ಯೆ, ಪ್ರೆಸಿಡೆಂಟ್ ರಿಚರ್ಡ್ ನಿಕ್ಸನ್ ಅವರ ಪದವಿ ಕಳೆದ ವಾಟರ್ ಗೇಟ್ ಹಗರಣಗಳಲ್ಲಿ ಎದ್ದು ಕಾಣುವ ಸಿಐಎ ಅಧಿಕಾರಿ. ಕೆಲವು ಕಡೆ ಅವನೇ ಮುಖ್ಯ ರೂವಾರಿ ಅನ್ನುವ ಹಾಗೆ ಬಿಂಬಿತವಾಗಿದೆ. ಇದ್ದರೂ ಇರಬಹುದು.

ಒಟ್ಟಿನಲ್ಲಿ 1963 ನವೆಂಬರ್ 22 ರಂದು ಕೆನಡಿ ಹತರಾದರು. ಓಸ್ವಾಲ್ಡ್ ಕೊಂದ ಅಂತ ತಿಪ್ಪೆ ಸಾರಿಸಲಾಯಿತು. ಅವನನ್ನೇ ಇನ್ನೊಬ್ಬವ ಜ್ಯಾಕ್ ರೂಬಿ ಅನ್ನುವವ ಕೊಂದು ಬಿಟ್ಟ. ಒಟ್ಟಿನಲ್ಲಿ ಜನರ ಕಿವಿಯಲ್ಲಿ ಹೂವು ಇಟ್ಟ ದೊಡ್ಡ ಮಂದಿ, ಪೆಕಪಕನೆ ನಕ್ಕು, ಬಕ್ರಾ ಮಂದಿ, ಮಂಗ್ಯಾ ಮಾಡೋದು ಎಷ್ಟು ಸುಲಭ ಸಿವಾ, ಅಂತ ತಮ್ಮ ರೊಕ್ಕಾ ಮಾಡುವ ಕಾರಭಾರ್ ಮುಂದುವರಿಸಿದರು.

ಮುಂದಿನ ವರ್ಷ 1964 ರಲ್ಲಿ ಕೆನಡಿ ಪ್ರೇಯಸಿ ಮೇರಿಯನ್ನು ಒಬ್ಬ ಕರಿಯ ಕೊಂದುಬಿಟ್ಟ. ಮಟ ಮಟ ಮಧ್ಯಾನ್ಹ ವಾಕಿಂಗ್ ಹೋಗುತ್ತಿದ್ದಳು. ಒಬ್ಬ ಬಂದವನೇ ನಾಕಾರು ಗುಂಡು ಹಾಕಿ ಹೋಗಿ ಬಿಟ್ಟ. ಸ್ಥಳದಲ್ಲೇ ಸುಂದರಿ ಆಂಟಿ ಖಲಾಸ್.

ಈ ಕಡೆ ಯಾರೋ ಒಬ್ಬ ಬಡಪಾಯಿ ಕೇಸಿನಲ್ಲಿ ಫಿಟ್ ಆಗುತ್ತಿದ್ದರೆ ಸಿಐಎ ಕೌಂಟರ್ ಎಸ್ಪಿಯೋನೆಜ್ ಉನ್ನತ ಅಧಿಕಾರಿ, ಮಹಾ ವಿಕ್ಷಿಪ್ತ, ಜಿಮ್ ಅಂಗಲಟನ್ ಅನ್ನುವವ ಮೇರಿಯ ಮನೆಯ ಬೀಗ ಮುರಿದು ಆಕೆಯ ರಹಸ್ಯ ಡೈರಿಯೊಂದನ್ನು ಹುಡುಕುತ್ತಿದ್ದ. ಅಷ್ಟರಲ್ಲಿ ಮೇರಿಯ ತಂಗಿ ಗಂಡ "ವಾಷಿಂಗಟನ್ ಪೋಸ್ಟ್" ಸಂಪಾದಕ ಬೆನ್ ಬ್ರಾಡ್ಲೀ ಕೂಡ ಅಲ್ಲಿ ಬಂದು ಬಿಟ್ಟ. ಇಬ್ಬರೂ ಮಳ್ಳ ನಗೆ ನಕ್ಕರು. ಇಬ್ಬರಿಗೂ ಗೊತ್ತಿತ್ತು ಮೇರಿ ಹತ್ಯೆಯ ಹಿಂದಿನ ಸಂಚು. ಇದನ್ನು ಬಯಲು ಮಾಡಿದವ ಮತ್ತೊಬ್ಬ ಸಿಐಎ ಅಧಿಕಾರಿ ವಿಸ್ತಾರ್ ಜಾನಿ ಅನ್ನುವನ ಮಗ ಪೀಟರ್ ಜಾನಿ. ಅವನೂ ಒಂದು ಪುಸ್ತಕ ಬರೆದಿದ್ದಾನೆ. ಲಿಂಕ್ ಕೆಳಗಿದೆ. ಓದಿ ನೋಡಿ.

ಅಬ್ಬಾ!!! ಕೆನಡಿ ಸಹೋದರರ ಹತ್ಯೆಗಳು, ಅವನ್ನು ಮುಚ್ಚಲು ಮಾಡಿದ ಅಸಂಖ್ಯಾತ ಹತ್ಯೆಗಳು ಲೆಕ್ಕವಿಲ್ಲದಷ್ಟು.

ಮುಂದೆ ವಿಚಿತ್ರ ನೋಡಿ. ಕಾರ್ಡ್ ಮೇಯರ್ ಅನ್ನುವ ಮೇರಿ ಪಿಂಚೊಟಳ ಮಾಜಿ ಗಂಡ ಸಾಯುವ ಮೊದಲು, ಮೇರಿಯನ್ನು ಕೊಂದವರು ಯಾರು?, ಅಂತ ಕೇಳಿದರೆ, ಅವರೇ ಸಿಐಎ ಮಂದಿ, ಕೆನಡಿಯನ್ನು ಕೊಂದವರು. ಅವರೇ ಮೇರಿಯನ್ನು ಕೊಂದರು, ಅಂದುಬಿಟ್ಟ.

ದೇವರೇ!!!! ಯಾವ ಯಾವ ಯಾವ ಹುತ್ತದಲ್ಲಿ ಯಾವ ಯಾವ ಹಾವುಗಳಿವಿಯೋ?????

ಇದ್ರಲ್ಲಿ ಎಷ್ಟು ನಿಜ? ಎಷ್ಟು ನಿಜದಿಂದ ಸ್ವಲ್ಪ ದೂರ, ತುಂಬಾ ದೂರ? ಯಾರಿಗೆ ಗೊತ್ತು.

ಮುಂದಿನ ವರ್ಷ ಕೆನಡಿ ಹತ್ಯೆಯಾಗಿ ಬರೋಬ್ಬರಿ 50 ವರ್ಷ. ನೀರು ಮತ್ತಷ್ಟು ಬಗ್ಗಡವಾಗುತ್ತಿದೆಯೇ ವಿನಹ ಪೂರ್ಣ ಸತ್ಯ ಹೊರ ಬರುತ್ತಿಲ್ಲ.


ಹೆಚ್ಚಿನ ಮಾಹಿತಿಗೆ:

- JFK ಹತ್ಯೆ

- ಮೇರಿ ಪಿನ್ಚೋಟ್ ಮೇಯರ್  

- Mary's Mosaic: The CIA Conspiracy to Murder John F. Kennedy, Mary Pinchot Meyer, and Their Vision for World Peace

- A Very Private Woman: The Life and Unsolved Murder of Presidential Mistress Mary Meyer

- LSD ಎಂಬ ಮಾದಕ ದ್ರವ್ಯ 

No comments: