Monday, February 25, 2013

ಅಲೋಪತಿ ವಯಾಗ್ರಾ, ನ್ಯಾಚುರೋಪತಿ ನೈಯಾಗ್ರಾ.

ದಿನಾ ಸಂಜಿ ನಮ್ಮ ರುಟೀನ್ ಸೇಮ್. ಭೀಮ್ಯಾನ್ ಚುಟ್ಟಾ ಅಂಗಡಿ ಮುಂದ ನಿಂತಿದ್ದೆ. ಗುರುವಾರ ಅವತ್ತು. ರಾಯರ ವಾರ. ನಮಗೇನ ಫರಕ್ಕ್ ಇಲ್ಲ. ಸಂಜಿ ಮುಂದ ಮಾವಾ ಬೇಕ ಬೇಕ.

ಸಂಜಿ ಮುಂದ ಅಲ್ಲೆ ನಿಂತ್ರ ಭಾಳ ಮಂದಿ ಭೆಟ್ಟಿ ಆಗ್ತಾರ. ಎಲ್ಲರಿಗೂ ನಮಸ್ಕಾರ, ಹಾಪ್ ನಮಸ್ಕಾರ ಹಾಕ್ಕೋತ್ತ, ಮಾವಾ ರಾಡಿ ಪಿಚಕ್ ಪಿಚಕ್ ಅಂತ ಪಿಚಕಾರಿ ಹಾರಿಸ್ಕೋತ್ತ ನಿಲ್ಲೋದ್ರಾಗ ಇರೊ ಸುಖಾನ ಬ್ಯಾರೆ.

ನಾರ್ಮಲೀ ಗುರುವಾರ ಸಂಜಿ ಮುಂದ ರೂಪಾ ವೈನಿ ಸಿಗ್ತಾರ. ರಾಯರ ಮಠಕ್ಕ ಹೊಂಟಿರ್ತಾರ. ಜೊತಿಗೆ ನಮ್ಮ ದೋಸ್ತ ಅವರ ಗಂಡ ಚೀಪ್ಯಾ ಇರಂಗಿಲ್ಲ. ಅದಕ್ಕ ಅವರೂ ಒಂದು ಮೌನ ನಮಸ್ಕಾರ ಗೋಣು ಬಗ್ಗಿಸಿ ಹಾಕಿದಂಗ ಮಾಡಿ ಮಠಕ್ಕ ಹೋಗ್ತಿರ್ತಾರ.

ಇವತ್ತು ಮಾತ್ರ ದೊಡ್ಡ ಆಶ್ಚರ್ಯ. ವೈನಿ ಜೊತಿಗೆ ಚೀಪ್ಯಾ ಸಹಿತ ಇದ್ದ. ಇವತ್ತೇನು ಇವಂಗ ರಜಾ ಅದನೋ ಏನೋ? ಅಂತ ಡೌಟ್ ಬಂತು. ಯಾವದೂ ರಜಾ ನೆನಪಾಗಲಿಲ್ಲ. ಮತ್ತೇನರ ಮನಿ ಕೆಲಸದ ಸಲುವಾಗಿ ಹೆಂಡ್ತಿ ಕಡೆ ಬೈಸ್ಕೊಂಡು ಕ್ಯಾಶುವಲ್ ಲೀವ್ ಹಾಕಿರಬೇಕು. ಲಗೂನ ಕೆಲಸ ಮುಗಿಸಿರಬೇಕು ಅಥವಾ ಸರಿ ಪ್ಲಾನ್ ಮಾಡಿಕೊಳ್ಳದ  ಕೆಲಸ ಅರ್ಧಕ್ಕ ಗೋಕರ್ಣ ಹಜಾಮತಿ ಮಾಡಿ ಮುಗಿಸಿರಬೇಕು. ಅದಕ್ಕ ವೈನಿ ಅವನ್ನೂ ಕಟ್ಟಿಕೊಂಡು ರಾಯರ ಮಠಕ್ಕ ಹೊಂಟಾರ. ನಮ್ಮ ಚೀಪ್ಯಾ ಗುಡಿ ಗುಂಡಾರ ಜಾಸ್ತಿ ಹೋಗಂಗಿಲ್ಲ ಅಂತ ರೂಪಾ ವೈನಿ ಕಂಪ್ಲೇಂಟ್. ಅವಾ ಬರೆ 'ತೀರ್ಥ'ಯಾತ್ರಾ ಮಾಡ್ತಾನ ಅಂತ ವೈನಿ ಒಮ್ಮೊಮ್ಮೆ 'ದಂಡ'ಯಾತ್ರಾ ಮಾಡ್ತಾರ ಅವನ ಮ್ಯಾಲೆ.

ನಮಸ್ಕಾರ,  ವೈನಿ, ಚೀಪ್ಯಾ. ಏನು? ದಂಪತಿ ಇಬ್ಬರೂ ಕೂಡಿ ರಾಯರ ಮಠಕ್ಕ ಹೊಂಟಾಂಗ ಅದ. ಯಾಕ ಚೀಪ್ಯಾ ಇವತ್ತು ಡ್ಯೂಟಿ ಇಲ್ಲ ನಿನಗ? ಡ್ಯೂಟಿ ಇದ್ದರ ನೀ ಸಂಜಿ ಏಳರ ಮೊದಲು ಬರೋದಿಲ್ಲ. ಏನಿವತ್ತು? - ಅಂತ ಕೇಳಿದೆ.

ಏ ಮಂಗೇಶಿ. ಅಲ್ಲಲ್ಲ ನನ್ನ ಪ್ರೀತಿ ಮೈದುನ ಮಹೇಶಿ. ನಿಮ್ಮ ಗೆಳಯ ಉರ್ಫ್ ಚೀಪ್ಯಾ ಮಹಾರಾಜರು ಯಾವದೋ ನ್ಯಾಚುರೋಪತಿ ಡಾಕ್ಟರ್ ಕಡೆ ಹೋಗವರು ಇದ್ದರಂತ. ಇವತ್ತ ಅಪಾಯಿಂಟ್ಮೆಂಟ್ ಕೊಟ್ಟಿದ್ದ ಆ ನ್ಯಾಚುರೋಪತಿ ಡಾಕ್ಟರ್. ಅದಕ್ಕ ರಜಾ ಹಾಕಿದರು ನೋಡಪಾ, ಅಂದ ವೈನಿ ಒಂದು ಸಣ್ಣ ಬ್ರೇಕ್ ತೊಗೊಂಡ್ರು.

ಮುಂದ ನೀವ ಹೇಳ್ರೀ ಅನ್ನೋ ಲುಕ್ ಬ್ಯಾರೆ ಕೊಟ್ಟರು ರೂಪಾ ವೈನಿ  ನಮ್ಮ ಚೀಪ್ಯಾಗ. ಆವಾ ಅಡಗತ್ತರಿ ಒಳಗ ಸಿಕ್ಕ ಅಡಕಿ ಹೋಳ ಆದಂಗ ಅಗಿದ್ದ.

ಏನಾತೋ ಚೀಪ್ಯಾ? ಅಲೋಪತಿ ಬಿಟ್ಟು ನ್ಯಾಚುರೋಪತಿ ಚಾಲೂ ಮಾಡಿದಿ ಏನು? ಯಾಕ? ಅಲೋಪತಿ ವೈಯಾಗ್ರಾ ಉಪಯೋಗ ಆಗಲಿಲ್ಲ ಏನು? ಏನಲೇ ನಿನ್ನ ಕಥಿ? ನ್ಯಾಚುರಲ್ ಇದ್ದ ಪತಿಗೇ ನ್ಯಾಚುರೋಪತಿ. ಶಬಾಶ್! ತಥ್ ನಿನ್ನ. ಎಲ್ಲೆ ಹೊಂಟಿ ನ್ಯಾಚುರೋಪತಿ ಟ್ರೀಟ್ಮೆಂಟ್ ಗೆ? ಎಲ್ಲೆ ನಮ್ಮ ಖತರ್ನಾಕ್ ಡಾ. ಎಸ್.ಎಸ್. ಉಳ್ಳಾಗಡ್ಡಿ ಕಡೆ ಏನು ಮತ್ತ?, ಅಂತ ಸ್ವಲ್ಪ ಕಾಡಿಸೋ ಸ್ಟೈಲಿನ್ಯಾಗ ಅಂದೆ.

ಸುಮ್ಮನಿರೋ ಸುಮ್ಮನಿರೋ ಅನ್ನೋ ಸಿಗ್ನಲ್ ಕೊಟ್ಟಂಗ ಚೀಪ್ಯಾ ಕಣ್ಣ ಸನ್ನಿ ಮಾಡಿದ.

ನಾ ಏನೋ ಸುಮ್ಮನಾದೆ. ಆದ್ರ ನಮ್ಮ ರೂಪಾ ವೈನಿ ಭಾಳ ಶಾಣ್ಯಾ. ಕಿವಿ ಭಾಳ ಸೂಕ್ಷ್ಮ. ಏನು ನಾವು ಅಕಿ ಕೇಳಬಾರದು ಅಂತ ಅಂದ್ಕೊತ್ತೇವಿ ಅದನ್ನ ಮುದ್ದಾಂ ಕೇಳೇ ಬಿಡ್ತಾಳ. ಕೇಳೇ ಬಿಟ್ಟಳು. ಸಣ್ಣ ಅನಾಹುತ ಮಾಡೇ ಬಿಟ್ಟಳು.

ಏನ್ರೀ ಶ್ರೀಪಾದ್ ರಾವ್? ಏನು ಅದು ವೈಯಾಗ್ರಾ? ಯಾಕ ಅದನ್ನ ತೊಗೊಳ್ಳಿಕತ್ತೀರಿ?- ಅಂತ ಚೀಪ್ಯಾನ್ನ ಸ್ವಲ್ಪ ಜಬರಿಸಿ ಕೇಳಿದಳು.

ನೋಡ ಇಕಿನ................... ವೈಯಾಗ್ರ ಅಂದ್ರ ಅಂದ್ರ, ಅಂತ ಚೀಪ್ಯಾ ತೊದಲಿದ. ಗಂಡ ಪ್ರಾಣಿಯಾಗಿ ಹ್ಯಾಂಗ ಹೇಳ್ಯಾನು? ಪಾಪ ಅವ.

ನನಗೋ ಸಿಕ್ಕಾಪಟ್ಟೆ ನಗಿ.

ನನ್ನ ಕಡೆ ನೋಡಿ, ಬಚಾವ್ ಮಾಡಲೇ ಮಗನ, ಅನ್ನೋ ಲುಕ್ ಕೊಟ್ಟ ಚೀಪ್ಯಾ.

ಚೀಪ್ಯಾ ಬ್ಬೆ ಬ್ಬೆ ಅಂತ ತೊದಲೋದು ನೋಡಿ ರೂಪಾ ವೈನಿಗೆ ಮತ್ತೂ ಸಂಶಯ ಜಾಸ್ತಿ ಆತು.

ಏನ್ರೀ ಅದು? ಹೇಳಲಿಕ್ಕೆ ಏನು ಧಾಡಿ ನಿಮಗ? ಏನದು ವೈಯಾಗ್ರಾ? ನನಗ ಗೊತ್ತಿಲ್ಲದಾಂಗ ಅದೇನು ಔಷಧ ತೊಗೋಳಲಿಕ್ಕೆ ಶುರು ಮಾಡಿರಿ? ಹಾಂ? ಹಾಂ?, ಅಂತ ಸರೀತ್ನಾಗಿ ದಬಾಯಿಸೇ ಬಿಟ್ಟಳು ರೂಪಾ ವೈನಿ.

ಚೀಪ್ಯಾ ಮಂಗ್ಯಾನ್ ಮಾರಿ ಮಾಡಿಕೊಂಡು ನನ್ನ ಕಡೆ ನೋಡಿದ.

ರೀ ವೈನಿ! ಅದು ನೈಯಾಗ್ರಾ ಅಂತ್ರೀ. ನೀವೆಲ್ಲೋ ತಪ್ಪಾಗಿ ವೈಯಾಗ್ರಾ ಅಂತ ಕೇಳಿಸಿಕೊಂಡ್ರೀ ಅಂತ ಅನ್ನಸ್ತದ. ಅದು ನಮ್ಮ ಚವ್ಯನಪ್ರಾಶ ಶಕ್ತಿವರ್ಧಕ ಟಾನಿಕ್ ಇದ್ದಂಗ ನೋಡ್ರೀ. ಅಲ್ಲೆಲ್ಲೋ ಅಮೇರಿಕಾದ ನೈಯಾಗ್ರಾ ಜಲಪಾತದ ಸುತ್ತಾ ಮುತ್ತಾ ಇರೋ ಗಿಡಮೂಲಿಕೆಗಳಿಂದ ಮಾಡಿದ ಒಂದು ರೀತಿ ಔಷಧ. ಅಶಕ್ತತಾ, ನಿಶ್ಶಕ್ತಿ ಮತ್ತೊಂದು ಅಂತ ಕೆಲೊ ಮಂದಿ ಏಳಲಾಗದಾಂಗ ಮಲ್ಕೊಂಡು ಬಿಟ್ಟಿರ್ತಾರ ನೋಡ್ರೀ, ಅವರನ್ನ ಬಡಿದೆಬ್ಬಿಸುವ ನವತಾರುಣ್ಯದ ಔಷಧ. ಒಮ್ಮೆ ಎದ್ದರು ಅಂದ್ರ ಅವರು ಬಾರಿಸು ಕನ್ನಡ ಡಿಂಡಿಮ ಅನ್ನೋ ಹಾಂಗ ಏನರ ಒಂದನ್ನ ಡಿಂಡಿಮ ಬಾರಿಸಿದ ಹಾಂಗ ಬಾರಿಸಿದ ಹೊರತು ಮತ್ತ ಮಲಕೊಳ್ಳೋದೇ ಇಲ್ಲ. ಅಂತಹ ಔಷಧ, ಅಂತ ಉದ್ದಾಗಿ ಓಳು ಬಿಟ್ಟೆ. ಚೌಕ್ ಉಳ್ಳಿಸಿದೆ. ಮುಂದಿನದು ದೇವರಿಗೆ ಬಿಟ್ಟೆ. 

ಆದ್ರ ವೈನಿ ನಂಬಿದ್ರೋ ಇಲ್ಲೋ ಅಂತ ಡೌಟ್ ಇತ್ತು. ಯಾಕಂದ್ರ ಅವರನ್ನ ಫುಲ್ ಹಾದಿ ತಪ್ಪಿಸಬೇಕಿತ್ತು. ಇಲ್ಲಂದ್ರ ಎಲ್ಲೆರೆ ವಯಾಗ್ರಾ ಅಂತ ಗೂಗಲ್ ಮಾಡಿ, ಅದು ಏನಂತ ತಿಳ್ಕೊಂಡು, ನಂತರ ನಮ್ಮ ಚೀಪ್ಯಾನ್ನ ಹಾಕ್ಕೊಂಡು ಕಟಿಯೋದು ಬ್ಯಾಡ. 

ವೈನಿ ನಂಬಿದರು ಅಂತ ಕಾಣಸ್ತದ. ದೇವರ ದಯೆ. 

ಹಾಂಗ? ಇಷ್ಟ ಹೇಳಲಿಕ್ಕೆ ಏನು ಧಾಡಿ ಆಗಿತ್ತರಿ ನಿಮಗ ಶ್ರೀಪಾದ್ ರಾವ್? ಎಲ್ಲಾ ಕೆಲಸಕ್ಕೂ ನಿಮ್ಮ ಗೆಳ್ಯಾನ ಮಸಡಿ ನೋಡ್ತೀರಿ. ಲಗ್ನದಾಗೂ ಹೀಂಗ ಮಾಡಿದ್ರು ಅಲ್ಲೇನೋ ಮಂಗೇಶ್? ಅಲ್ಲಲ್ಲ ಮಹೇಶ್? ಕರಿಮಣಿ ಕಟ್ಟುವಾಗ ಹೆದರಿ ಕೆಳಗ ಒಗದಿದ್ದರು. ನೀನ ಎತ್ತಿ ಕೊಟ್ಟಿದ್ದಿ. ಅಲ್ಲ? - ಅಂತ ಚೀಪ್ಯಾಗ ವೈನಿ ಬೈದರು.

ಹೌದೋ ಇವರಿಗೆ ಭಾಳ ನಿಶ್ಶಕ್ತಿ ಆಗಿ ಬಿಟ್ಟದ. ಆ ನೈಯಾಗ್ರಾ ಔಶಧ ತೊಗೊಂಡ ಮ್ಯಾಲ್ಯಾರ ಅದು ಕಮ್ಮಿ ಆಗಿ ಇವರು  ಎದ್ದು ನಿಂತ್ರ ಸಾಕ ನೋಡಪಾ. ಆದ್ರ ಬಾರ್ಸೋದು ಮಾತ್ರ ಬ್ಯಾಡ ನೋಡು, ಅಂದ್ರು ವೈನಿ.

ಅಬ್ಬಾ!!!!ವೈನಿಗೆ ನಾವು ಬಿಟ್ಟ ಓಳು ತಿಳಿದಿಲ್ಲ. ಫುಲ್ ನಂಬಿ ಬಿಟ್ಟಾರ ಅಂತ ಒಂದು ತರಹದ ರಿಲೀಫ್ ಆತು.

ವೈನಿ ಏನು ಬಾರ್ಸೋದು ಬ್ಯಾಡ ಅಂದ್ರೀ? ಯಾಕ ನಿಮ್ಮದು ಏನರ ಧಾರ್ಮಿಕ ವ್ರತ ನೆಡದದ ಏನು? ಈಗೇನ ಶ್ರಾವಣ ಮಾಸ ಅಲ್ಲಲಾ. ಹಾಂ? ಹಾಂ? - ಅಂತ ಕೇಳಿದೆ.

ಹ್ಯಾಂಗೂ ವೈನಿ ತಲಿಗೆ ನಮ್ಮ ಮಾತಿನ ಧಾಟಿ  ಹೋಗಿಲ್ಲ. ಒಂದಿಷ್ಟು ಕಿತಬಿ ಉಲ್ಟಾ ಸೀದಾ ಮಾತಾಡಿ ಮಜಾ ತೊಗೊಳ್ಳೋಣ ಅಂತ ನಮ್ಮ ಕೆಟ್ಟ ಬುದ್ಧಿ.

ನನ್ನ ವ್ರತಕ್ಕೂ ಅವರು ನೈಯಾಗ್ರಾ ತೊಗೊಂಡು ಬಾರ್ಸೋದಕ್ಕೂ ಏನು ಸಂಬಂಧ? ಈಗ ನೀನೂ ಅವರ ಗತೆ ಹಾಪ್ ಆದಿ ಏನೋ ಮಹೇಶ್? ಏನೇನೋ ತಲಿ ಬುಡ ಇಲ್ಲದ ಮಾತಾಡ್ಲಿಕತ್ತಿ. ಬಾಯಾಗ ಜಡಕೊಂಡ ಆ ದರಿದ್ರ ಮಾವಾ ಜಾಸ್ತಿ ಕಿಕ್ ಕೊಡ್ತೋ ಹ್ಯಾಂಗ? - ಅಂದ್ರು ವೈನಿ. ಬೈದರು ಸ್ವಲ್ಪ.

ಅಲ್ಲ ವೈನಿ, ನೀವು ಬಾರ್ಸೋದು ಬ್ಯಾಡ ಅಂದ್ರೀ ಅದಕ್ಕ ಕೇಳಿದೆ. ನಿಮ್ಮದು ಏನರ ವ್ರತಾ ಗಿತಾ ನೆಡದದೋ ಹ್ಯಾಂಗ ಅಂತ? ಅಷ್ಟರೀ. ಮತ್ತೇನಿಲ್ಲ, ಅಂತ ಹೇಳಿ ಸಮಾಧಾನ ಮಾಡಿದೆ.

ಅಯ್ಯೋ ನಮ್ಮಪ್ಪ. ಏನೂ ವ್ರತಾ ಗಿತಾ ಇಲ್ಲಪಾ. ಈಗ ಸ್ವಲ್ಪ ವರ್ಷದ ಹಿಂದ ರಾತ್ರಿ ನಿದ್ದಿ ಬರಲಿಲ್ಲ ಅಂದ್ರ ಎದ್ದು ತಬಲಾ ಬಾರ್ಸಿಕೋತ್ತ ಕೂತು ಬಿಡ್ತಿದ್ದರು ನಮ್ಮನಿಯವರು. ಈಗ ಮತ್ತೆಲ್ಲರ ಆ ಸುಡುಗಾಡು ನೈಯಾಗ್ರಾ ಗುಳುಗಿ ತೊಗೊಂಡ ಮ್ಯಾಲೆ, ಮತ್ತ ಎಲ್ಲರ ಆ ಹಳೆ ತಬಲಾ ಬಾರ್ಸೋ ತಲಬು ಎದ್ದು, ಮತ್ತ ಅಪರಾತ್ರ್ಯಾಗ ಬಾರಿಸಿಕೋತ್ತ ಕೂತರ ಅಂತ ಚಿಂತಿ ನನಗ. ನನ್ನ ನಿದ್ದಿ, ಮಂದಿ ನಿದ್ದಿ ಕೆಡಸೋದು ಅಂದ್ರ ಮಹಾ ಪ್ರೀತಿ ಇವರಿಗೆ, ಅಂದ್ರು ವೈನಿ.

ಏ....ಈ ಸರೆ ಬಾರ್ಸೋದು ಬ್ಯಾರೇನ ಅದ ಬಿಡ್ರೀ ವೈನಿ. ಏನಂತಿಲೇ ಚೀಪ್ಯಾ? - ಅಂತ ಚೀಪ್ಯಾಗ ಅವನ ಹೆಂಡ್ತೀಗೆ ಕಾಣದ ಹಾಂಗ ಕಣ್ಣು ಹೊಡದ ಕೇಳಿದೆ. 

ಹೀರೋ ಸೂಳೆಮಗ ಚೀಪ್ಯಾ ಖುಷ್ ಆಗಿ ಹೀ.... ಹೀ.... ಅಂತ ನಾಚಿಕೋತ್ತ ನಕ್ಕ.

ನಿಮಗ ಈಗ ಹೇಳೇನಿ ನೋಡ್ರೀ ಶ್ರೀಪಾದ ರಾವ್!!! ಆ ಸುಡುಗಾಡ್ ನೈಯಾಗ್ರಾ ತೊಗೊಂಡು, ರಾತ್ರಿ ಅಪರಾತ್ರಿ ಎದ್ದು ಮತ್ತ ಬಾರಸ್ತೇನಿ ಅದು ಇದು ಅಂತ ಶುರು ಮಾಡಿದ್ರ ನೋಡ್ಕೊರೀ ಮತ್ತ. ನಾನ ಎದ್ದು ನಿಮಗ ಸರೀತ್ನಾಗಿ ಬಾರ್ಸ ಬಾರದ ಕಡೆ ಎಲ್ಲಾ ಬಾರ್ಸೀ ಬಿಡ್ತೇನಿ. ಬಾಸುಂಡಿ ಬರೋ ಹಾಂಗ ಬಾರ್ಸಿ ಬಿಡ್ತೇನಿ. ಹುಷಾರ್! ನಿಮಗ ಎಚ್ಚರಾಗಿ ಏನ ಎದ್ದರೂ ಸುಮ್ಮನ ಕೂಡ್ರಿ. ಕೂತು ಜಪಾ ಮಾಡ್ರೀ. ಅದು ಬಿಟ್ಟು  ಬಾರ್ಸೋಣ ಬಾರಾ ಬಾರ್ಸೋಣ ಬಾರಾ ಅಂತ ಕುಣಿಯೋಣ ಬಾರಾ ಕುಣಿಯೋಣ ಬಾರಾ ಧಾಟಿಯೊಳಗ ಹಾಡು ಗೀಡು ಶುರು ಮಾಡಿದ್ರ,  ನಿಮ್ಮನ್ನ ಬಾರ್ಸಿ ಬಾರ್ಸಿ ಬಾರ್ಸಿಲೋನಾಕ್ಕ ಕಳಿಸಿ ಬಿಡ್ತೇನಿ. ತಿಳಿತ? - ಅಂತ ಫುಲ್ ಪವರ್ಫುಲ್ ಧಮಕಿ ಕೊಟ್ಟೇ ಬಿಟ್ಟರು ರೂಪಾ ವೈನಿ.

ಏನ ಬಿಡ್ರೀ ವೈನಿ ನೀವರೆ? ಪಾಪ ಹೀಂಗ ಧಮಕಿ ಹಾಕೋದ ನಮ್ಮ ಚೀಪ್ಯಾಗ? ಪದ್ಧತಿ ಅಲ್ಲ ಬಿಡ್ರೀ. ಅದೂ ರಾಯರ ಮಠಕ್ಕ ಕರ್ಕೊಂಡು ಹೋಗೋ ಮುಂದ, ಅಂತ ಅಂದು ನಾ ಧಮಕಿ ಎಫೆಕ್ಟ್ ಸ್ವಲ್ಪ ಕಡಿಮಿ ಮಾಡಲಿಕ್ಕೆ ನೋಡಿದೆ.

ನೈಯಾಗ್ರಾ ತೊಗೊಂಡ ಮ್ಯಾಲೆ ಏನೇನು ಆಗಬಹುದು ಅನ್ನೋದನ್ನ ಮನಸ್ಸಿನ್ಯಾಗ ಕಲ್ಪನಾ ಮಾಡಿಕೊಂಡ ಚೀಪ್ಯಾ ಮೂಡಿನ್ಯಾಗ ಬಂದು ಬಿಟ್ಟಿದ್ದ.

ನಾ ಬಾರ್ಸವನಾ.... ನಾ ಬಾರಿಸಿ ಬಿಡವನಾ.... ನಾ ಬಗ್ಗಿಸಿ ಬಗ್ಗಿಸಿ ಬಾರಿಸಿ ಬಿಡವನ, ಅಂತ ರಾಗವಾಗಿ ಹಾಡ್ಲಿಕತ್ತಿಬಿಟ್ಟ ಹಾಪ್ಸೂಳೆಮಗ ಚೀಪ್ಯಾ. ಅದೂ ಸ್ಟೇಶನ್ ರೋಡಿನ್ಯಾಗ. ಭೀಮ್ಯಾನ್ ಅಂಗಡಿ ಮುಂದ ಸೇರಿದ್ದ ಪಡ್ಡೆ ಹುಡುಗರೆಲ್ಲ ಪುಗಸಟ್ಟೆ ಮಜಾ ತೊಗೊಂಡ್ರು. ರೂಪಾ ವೈನಿಗೆ ಸ್ವಲ್ಪ ಇರುಸು ಮುರುಸಾತು.

ಅಯ್ಯೋ ಶ್ರೀಪಾದ್ ರಾವ್!!!! ಏ ಸುಮ್ನರ್ರೀ!!!! ಸಂತಿಯೊಳಗ ಸೀರಿ ಬಿಚ್ಚು ಕೆಲಸ ಮಾಡ್ಲಿಕತ್ತೀರಿ ನೋಡ್ರೀ. ನಿಮಗಂತೂ ನಾಚಿಗಿ, ಮಾನ, ಮರ್ಯಾದಿ ಇಲ್ಲ. ಮನಿತನದ ಮಾನ ಮರ್ಯಾದಿ ಕಳೀಲಿಕತ್ತೀರಿ. ಸುಮ್ಮಾಗ್ರೀ. ರಾತ್ರಿ ಎದ್ದರ ಕೂಡ್ರೀ ನೋಡ್ತೇನಿ. ನಾನ ಮೊದಲು ನಿಮಗ ಬಾರಿಸಿ ಬಾರಿಸಿ ಬಾರ್ಸಿಲೋನಾಕ್ಕ ಹೋಗಿ ಬೀಳು ಹಾಂಗ ಮಾಡ್ತೇನಿ, ಅಂತ ಸಿಟ್ಟಿನಿಂದ ಫೈನಲ್ ವಾರ್ನಿಂಗ್ ಕೊಟ್ಟರು ವೈನಿ.

ರೀ ವೈನಿ!!!ನನ್ನ ನಿಮ್ಮ ಪ್ರೀತಿ ಮೈದುನ ಅಂತ ಮ್ಯಾಲಿಂದ ಮ್ಯಾಲೆ ಅಂತೀರಿ. ನಾ ಒಂದು ಮಾತು ಹೇಳಲಿ  ಏನು? ನೀವು ತಪ್ಪು ತಿಳ್ಕೊಳೋದಿಲ್ಲ ಅಂದ್ರ ಮಾತ್ರ. ಹೇಳಲಿ ಏನು? - ಅಂತ ಹೇಳಿದೆ.

ಹ್ಞೂ.... ಹೇಳೋ ಮಂಗ್ಯಾನ್ ಮಸಡಿ ಮಂಗೇಶಿ. ನಿಮ್ಮ ಗೆಳಯ ಹಾಪ್ ಚೀಪ್ಯಾ ಏನ ಮಾಡಿದರೂ ಅವರನ್ನ ವಹಿಸಿಕೊಂಡು ಬಂದ ಬಿಡ್ತೀ. ಒತಿಕಾಟಕ್ಕ ಬೇಲಿ ಸಾಕ್ಷಿ. ಲಗೂನ ಹೇಳು. ಇಲ್ಲೆ ಹುಚ್ಚರ ಗತೆ ನಿನ್ನಂತ ಬೇಕಾರ್ ಆದ್ಮಿ ಜೊತಿ ಮಾತಾಡಿಕೋತ್ತ ನಿಂತೇವಿ. ಇಲ್ಲಂದ್ರ ಇಷ್ಟು ಹೊತ್ತಿಗೆ ಮಠಕ್ಕ ಹೋಗಿ ವಾಪಸ್ ಮನಿ ಸೇರಿಕೋತ್ತಿದ್ದಿವಿ. ಹ್ಞೂ ..... ಹೇಳು... ಹೇಳು, ಅಂತ ವೈನಿ ಅರ್ಜೆಂಟ್ ಮಾಡಿದರು.

ನೋಡ್ರೀ ವೈನಿ, ಈ ಸರೆ ಏನರೆ ನೈಯಾಗ್ರಾ ಗುಳುಗಿ ತೊಗೊಂಡು ಚೀಪ್ಯಾ ರಾತ್ರಿ ಏಳಬಾರದ ಟೈಮ್ ನ್ಯಾಗ್ ಎದ್ದು, ಬಾರ್ಸೋಣ ಬಾರಾ ಬಾರ್ಸೋಣ ಬಾರಾ ಅಂತ ನಿಮ್ಮನ್ನ ಕರಿಲೀಕತ್ತರ ನೀವು ಸ್ವಲ್ಪ ಸಹಕರಿಸಿರಿ. ನಂತರ ನೀವ ಅವನ್ನ ಎಬ್ಬಿಸಿ, ರೀ ಶ್ರೀಪಾದ್ ರಾವ್ ಪ್ಲೀಸ್ ಬಾರಿಸಿರಿ. ಪ್ಲೀಸ್ ರೀ ಅಂತ ನೀವ ಅವನ್ನ ಕಾಡ್ತೀರಿ. ಹಾಂಗ ಇರ್ತದ ಆ ನೈಯಾಗ್ರ ಜಲಪಾತದ ಸುತ್ತಾ ಮುತ್ತಾ ಇರೋ ಗಿಡ ಮೂಲಿಕೆಗಳಿಂದ ಮಾಡಿದ ನೈಯಾಗ್ರ ಔಷದ. ಒಂದು ಅವಕಾಶ ಕೊಟ್ಟು ನೋಡ್ರೀ ನಮ್ಮ ಚೀಪ್ಯಾಗ. ಪ್ಲೀಸ್ ರೀ ವೈನಿ, ಅಂತ ಹೇಳಿದೆ.

ಏನು ಸಹಕರಿಸಬೇಕೋ ಬೇವಕೂಫಾ? ರಾತ್ರಿ ಎದ್ದು ನಿಮ್ಮ ಚೀಪ್ಯಾ ಬಾರಿಸ್ತಾರಂತ ಅದಕ್ಕ ನಾ ಸಹಕರಿಸಬೇಕಂತ. ಅವರು ಹಿಂದಿನ ಹಾಂಗ ತಲಬು ಎದ್ದು ತಬಲಾ ಬಾರ್ಸಲಿಕತ್ತರ, ನಾ  ಏನು ತಾಳ  ಹಾಕ್ಕೋತ್ತ ಕೂಡ್ಲಿ ಏನು? ಆದರೂ ನೀ ನನ್ನ ಪ್ರೀತಿಯ ಮೈದುನ ಇಷ್ಟು ಜುಲ್ಮೀ ಮಾಡಿ ಹೇಳಿ ಅಂದ ಮ್ಯಾಲೆ ನೋಡೋಣ ಏನ ಇವರು ಕಿಸಿಯವರು ಇದ್ದಾರ ನಿಮ್ಮ ದೋಸ್ತ ಚೀಪ್ಯಾ ಉರ್ಫ್ ನಮ್ಮ ಸ್ವಾಮಿ ಶ್ರೀಪಾದ್ ರಾವ್, ಅಂದ್ರು ವೈನಿ tentatively ಓಕೆ ಅಂದ್ರು. 

ಚೀಪ್ಯಾ..... ನೋಡಲೇ ಎಲ್ಲಾ ಸೆಟ್ ಮಾಡಿ ಕೊಟ್ಟೇನಿ. ಜಾ ಕೆ ಮೈದಾನ್ ಮಾರೋ ಜೀ.  ವಿಜಯೀ ಭವ, ಅಂತ ಕಣ್ಣ ಹೊಡೆದು ಬೆಸ್ಟ್ ವಿಷಸ್ ಹೇಳಿದೆ.

ಬಾರಿಸು ಕನ್ನಡ ಡಿಂಡಿಮವ.... ಓ ಕರ್ನಾಟಕ ಹೃದಯ ಶಿವ.... ಬಾರಿಸೋಣ ಬಾರಾ ಬಾರಿಸೋಣ ಬಾರಾ ಅಂತ ಅಲ್ಲೇ ಮತ್ತ ಡಾನ್ಸ್ ಮಾಡಿಕೋತ್ತ ಖುಷಿಂದ ಕುಣಿಲಿಕತ್ತ ಚೀಪ್ಯಾ.

ಹತ್ತ ಸರೆ ಥ್ಯಾಂಕ್ಸ್ ಪಾ ದೋಸ್ತ ಥ್ಯಾಂಕ್ಸ್ ಪಾ ದೋಸ್ತ ಅಂದ ಚೀಪ್ಯಾ

ಚೀಪ್ಯಾನ ಹತ್ತರ ಕರದೆ. ಬಂದ.

ಲೇ....ಮಂಗ್ಯಾನ್ ಕೆ.... ಭಾಳ ಖುಷ್ ಆಗಬ್ಯಾಡ. ಹೋಗಿ ಹೋಗಿ ಡಾ. ಎಸ್. ಎಸ್. ಉಳ್ಳಾಗಡ್ಡಿ ಕಡೆ ಔಷಧ ತೊಗೊಂಡು ಬಂದಿ. ಅದು ವರ್ಕ ಆಗೋದು ಖರೆ ಇಲ್ಲ. ಸುಮ್ಮನ ರಾತ್ರಿ ವೈನಿ ಎಬ್ಬಿಸಿ ಬೈಸ್ಕೊಬ್ಯಾಡ. ಅವರ ಕಡೆ ಕಟಿಸಿಕೊಂಡು ನಾದಿಸ್ಕೋಬ್ಯಾಡ. ಅವರಿಗೆ ಸಿಟ್ಟು ಬಂದು ಬಾರ್ಸಿ ಒತ್ತಾ ಒದ್ದರ ಸೀದಾ ಟಿಕೆಟ್ ಇಲ್ಲದ ಬಾರ್ಸಿಲೋನಾಕ್ಕ ಹೋಗಿ ಬಿದ್ದು ಎದ್ದು  ಬರ್ತೀ. ನೋಡ್ಕೋ ಮತ್ತ. ಜ್ವಾಕಿಪಾ  ಜ್ವಾಕಿ, ಅಂತ ವಾರ್ನಿಂಗ್ ಕೊಟ್ಟೆ.

ದೋಸ್ತ ನೀ ಚಿಂತಿ ಮಾಡಬ್ಯಾಡ. ಉಳ್ಳಾಗಡ್ಡಿ ಡಾಕ್ಟರ್ ಫುಲ್ ಗ್ಯಾರಂಟೀ ಕೊಟ್ಟಾನೋ, ಅಂದ ಚೀಪ್ಯಾ.

ಹಾಂಗಿದ್ರಾ ಹೋಗಿ ಬಾ. ಒಳ್ಳೆದಾಗಲಿ, ಅಂದೆ. 

ಏ ಭೀಮು, ಅಂತ ನಮ್ಮ ಪಾನವಾಲಾ ಭೀಮುಗ ಕರದೆ.

ಭೀಮು ಅವನ ಅಂಗಡಿ ಮುಂದ ತೂಗು ಹಾಕಿದ್ದ ಮ್ಯಾಗಜೀನ್ಸ್ ಸ್ವಲ್ಪ ಆ ಕಡೆ ಈ ಕಡೆ ಸರಿಸ್ಕೊಂಡು ಮಾರಿ ಹೊರಗ ಹಾಕಿದ.

ಏನ್ರೀ ಸರ್ರ? ಮತ್ತೇನು ಬೇಕು? ಪಾನೋ? ಮತ್ತೊಂದು ಮಾವಾನೋ? - ಅಂತ ಕೇಳಿದ.

ಭೀಮು ಇಲ್ನೋಡು. ನಮ್ಮ ಚೀಪ್ಯಾ ಸಾಹೇಬ್ರೀಗೆ ಒಂದು 'ಸ್ಪೆಶಲ್' ಅಂದ್ರ ಅದ ಸ್ಪೆಶಲ್ ಪಾನ್ ಮಾಡಪಾ. ಸ್ಪೆಶಲ್ ಅಂದ್ರ ತಿಳಿತೋ ಇಲ್ಲೋ? ಮಹಾ ಸ್ಪೆಶಲ್, ಅಂತ ಕಣ್ಣ ಹೊಡದೆ.

ಓಹೋ ..... ಅದು ಅದು... ಗೊತ್ತಾತ ಬಿಡ್ರೀ. ಫೇಮಸ್ 'ಪಲ್ಲಂಗ್ ತೋಡ್' ಪಾನ್, ಅಂತ ಮೀಸಿ ಕೆಳಗ ನಕ್ಕೋತ್ತ ಭೀಮು ಪಾನ್ ಮಾಡ್ಲಿಕತ್ತಿದ. ಪಾನ್ ಮಾಡಿ ಪುಡಿಕಿ ಕಟ್ಟಿ ಕೊಟ್ಟ.

ಚೀಪ್ಯಾ.... ನಿನ್ನ ಉಳ್ಳಾಗಡ್ಡಿ ಡಾಕ್ಟರ್ ಕೊಟ್ಟ ನೈಯಾಗ್ರಾ ಗುಳಗಿ ಕೆಲಸಾ ಮಾಡ್ತದೋ ಇಲ್ಲೋ ಗೊತ್ತಿಲ್ಲ.  ಆದ್ರ ಈ ಪಾನ್ ಮಾತ್ರ ಗ್ಯಾರಂಟೀ ಮಾಡ್ತದ ನೋಡಪಾ, ಅಂದು ಅವಂಗ ಪಾನ್ ಕೊಟ್ಟೆ.

ಮಸ್ತಾತೋ ದೋಸ್ತಾ!!!ಡಬಲ್ ಎಫೆಕ್ಟ್. ಗುಳಗಿದು ಮತ್ತ ಪಾನಿಂದು. ಥ್ಯಾಂಕ್ಸ್ ಮಾರಾಯ. ಥ್ಯಾಂಕ್ಸ್ ಮಾರಾಯ, ಅಂತ ಭಾಳ ಥಾಂಕ್ಸ್ ಹೇಳಿದ ಚೀಪ್ಯಾ.

ಹ್ಮಂ... ನಡಿ ನಡಿ. ಹೋಗುವಾಗ ಎಲ್ಲರ ಬಡಗ್ಯಾ (ಕಾರ್ಪೆಂಟರ್) ಸಿಕ್ಕರ ಹೇಳಿಯೇ ಹೋಗಿಬಿಡು. ನಾಳೆ ಮಂಚಾ ರಿಪೇರ್ ಮಾಡಲಿಕ್ಕೆ ಬೇಕಾದೀತು, ಅಂತ ಕಣ್ಣ ಹೊಡದ ಹೇಳಿದೆ.

ಯಾಕ? - ಅಂತ ಪಕ್ಕಾ ಯಬಡೇಶಿ  ಹಾಂಗ ಕೇಳಿದ ಚೀಪ್ಯಾ. 

ನನಗೂ ಉರೀತು. ಗುಳಗಿ  ತೊಗೊಂಡವನ್ನ ವೈನಿಗೆ ಓಳು ಬಿಟ್ಟು ಏನೇನೋ ಹೇಳಿ ಬಚಾವ ಮಾಡಿದೆ. ಬಾರಿಸಲಿಕ್ಕೆ ಮಧ್ಯರಾತ್ರಿ ಎದ್ದರ ರಿವರ್ಸ್ ಇವಂಗ ಎಕ್ಕಾ ಮಕ್ಕಾ ಬಾರಿಸಿ ಬಾರ್ಸಿಲೋನಾಕ್ಕ ಒದ್ದು ಓಡಸ್ತೇನಿ ಅಂದ ರೂಪಾ ವೈನಿಗೆ ಹ್ಯಾಂಗೋ ಮಾಡಿ ಸಮಾಧಾನ ಮಾಡಿ, ನಮ್ಮ ಚೀಪ್ಯಾ ಎದ್ದು ಬಾರಿಸೋಣ ಬಾರಾ ಅಂದ್ರ ಸಹಕರಿಸಿ ಅಂತ ಹೇಳಿ ಫುಲ್ ಸ್ಟೇಜ್ ಸೆಟ್ ಮಾಡಿ ಕೊಟ್ಟೆ. ಮ್ಯಾಲೆ ಸ್ಪೆಶಲ್ ಪಲ್ಲಂಗ್ ತೋಡ್ ಪಾನ್, ನೂರೈವತ್ತು ರುಪೆ ಕೊಟ್ಟು ಮಾಡಿಸಿಕೊಟ್ಟು, ಇದನ್ನೂ ಹಾಕಪಾ ಅಂತ ಸಲಹೆ ಕೂಡ ಕೊಟ್ಟೆ. ಯಾವದಕ್ಕೂ ಇರಲಿ ಅಂತ ಹೇಳಿ  ಕಾರ್ಪೆಂಟರ್ ಗೂ ಮಾತಾಡ್ಸಿ ಹೋಗಿ ಬಿಡೋ ಅಂತ ಗೈಡೆನ್ಸ್ ಕೂಡ ಕೊಟ್ಟೆ.

ಇಷ್ಟೆಲ್ಲಾ ಸ್ಟೆಪ್ ಬೈ ಸ್ಟೆಪ್ ಹೇಳಿಕೊಟ್ಟರೂ ಕೊನಿಗೆ ಇಷ್ಟ ದೊಡ್ಡ ಬಾಯಿ ಬಿಟ್ಟುಗೊಂಡು, ಯಾಕ?, ಅಂದ ನೋಡ್ರೀ.... ಯಾರಿಗೆ ಉರಿಯಂಗಿಲ್ಲ. ಎಷ್ಟಂತ ಸ್ಟುಪಿಡ್ ಮಂದಿ ಸಹಿಸಿಕೊಳ್ಳೋದು?

ಲೇ ಚೀಪ್ಯಾ..... ಹುಸ್ಸೂಳೆಮಗನ.... ಬಡಗ್ಯಾನ ಯಾಕ ಮೊದಲ ಬುಕ್ ಮಾಡಿಕೋ ಅಂದೇ ಅಂದ್ರ ಆ ಬಡಿಗ್ಯಾಗ ಬ್ಯಾರೆ ಉದ್ಯೋಗ ಇಲ್ಲ ನೋಡು. ಉದ್ಯೋಗಿಲ್ಲದ ಬಡಿಗ್ಯಾ ಏನೋ ಕೆತ್ತಿದನಂತ. ನಿಂದೂ ಕೆತ್ತತಾನ ತೊಗೋ. ಹೋಗಲೇ. ಹೇಳಿದ್ದು ಒಂದರ ಅರ್ಥ ಆದ್ರ? ಸಾಧ್ಯನ ಇಲ್ಲ. ಏನ್ ಬಡ್ಡಿ ತಲಿ ಇಟ್ಟಿಯೋ?- ಅಂತ ಬೈದು ನಾ ಹೊಂಟೆ.

ಏ, ದೋಸ್ತ, ಶಟಗೋಬ್ಯಾಡೋ. ಆತಪಾ ಪಾನ್ ಹಾಕೋ ಮೊದಲು ಕಾರ್ಪೆಂಟರ್ ಗೂ ಹೇಳೇ ಬಿಡ್ತೇನಿ. ಆತೇನಪಾ? - ಅಂದ ಚೀಪ್ಯಾ.

ಆದ್ರ ಇದಕ್ಕ 'ಪಲ್ಲಂಗ ತೋಡ್ ಪಾನ್' ಅಂತ ಯಾಕಂತಾರ?, ಅಂತ ಕೇಳಿದ.

ಏನ್ ಹೇಳೋದು? ಇಂತಾ ಮಂದಿಗೆ. ತಲಿನ ಇಲ್ಲ. ಮಂಗ್ಯಾ ಮಾಡೋಣ ತಡಿ ಅಂತ ಏನೋ ಹೇಳಿದೆ. ಹಾಪಾ ಕೇಳಿದ. ಭಕ್ತಿಯಿಂದ ಭಕ್ತ ಕುಂಬಾರ  ಕೇಳಿದಂಗ ಬಾಯಿ ಬಿಟ್ಟುಗೊಂಡು ಕೇಳಿದ. 

ಪಲ್ಲಂಗ ಅಂದ್ರ ಲವಂಗ ಇದ್ದಂಗ. ಸಾದಾ ಪಾನಿಗೆ ಮ್ಯಾಲೆ ಲವಂಗ ಚುಚ್ಚಿರ್ತಾರ ನೋಡು. ಇದಕ್ಕ ಲವಂಗದ ಅಣ್ಣ ಹಾಂಗ ಇರೋ ಪಲ್ಲಂಗ ಅನ್ನೋದನ್ನ ಚುಚ್ಚಿರ್ತಾರ. ಅದಕ್ಕ ಪಲ್ಲಂಗ. ಮತ್ತ ಪಾನ್ ಹಾಕಿ ಅದನ್ನ ಕಚಾ ಪಚಾ ತಿನ್ನುವಾಗ ಪಲ್ಲಂಗ  ಮುರೀತದ ನೋಡು ಅದಕ್ಕ ಪಲ್ಲಂಗ ತೋಡ್ ಅಂತ. ಸಾಕ್ ಹೋಗು. ಅಷ್ಟ ನೆನಪಿಡು. ಪಾನ್ ಮಾತ್ರ ನೀನ ತಿನ್ನು.  ವೈನಿ ಏನರ ಪಾನ್ ತಿಂದ್ರ ನಿನ್ನ ಗತಿ ಅಷ್ಟ ಮತ್ತ, ಅಂತ ಹೇಳಿ ಈ ಸಲೆ ನಾ ಖರೇನ ಅಲ್ಲಿಂದ ಜಾಗಾ ಖಾಲಿ ಮಾಡಿದೆ.

ಚೀಪ್ಯಾ ಮಾತ್ರ ಪಾನ್ ಮ್ಯಾಲಿಂದ ಕೆಳಗ ನೋಡಿಕೋತ್ತ ನಿಂತಿದ್ದ.

ಹಿಂದ ಇದ್ದ ರೂಪ ವೈನಿ ಒಂದು ಗುಟುರು ಹಾಕಿದರು.

ಹೊಂಡ್ರೀ ಇನ್ನು.  ಎಷ್ಟೊತ್ತು?, ಅಂದ್ರು ವೈನಿ.

ಚೀಪ್ಯಾ ಹೊಂಟ. ಮುಂದೇನೋ? 

ದಿ ಎಂಡ್!

** ಚೀಪ್ಯಾ, ರೂಪಾ ವೈನಿ ಅವರ ಪಾತ್ರ ಪರಿಚಯಕ್ಕಾಗಿ ಓದಿ - ಟಗರ್ಮಂಗೋಲಿ!

No comments: