Friday, August 23, 2013

ಇವರನ್ನ ಕರಕೊಂಡು ಹೋಗಿ ಮಾಡಿಸ್ಕೊಂಡು ಬಂದು ಬಿಡಪಾ!!

ಮೊನ್ನೆ ನಮ್ಮ ದೋಸ್ತ ಚೀಪ್ಯಾನ ಮನಿಗೆ ಹೋಗಿದ್ದೆ.

ಶ್ರಾವಣ ಮಾಸಾ ಜೋರ್ ನೆಡದದ. ರೂಪಾ ವೈನಿ ಭಾಳ ಗಡಿಬಿಡಿ ಒಳಗ ಇದ್ದರು. ಶುಕ್ರವಾರದ ಮುತ್ತೈದಿ ಊಟದ ತಯಾರಿ ಒಳಗ ಭಾಳ busy ಇದ್ದರು ಅಂತ ಅನ್ನಸ್ತದ. ಒಂದು ಕಪ್ ಹಾಪ್ ಛಾ ಕೊಟ್ಟು ಹೋಗಿ ಬಿಟ್ಟರು.

ಚೀಪ್ಯಾ ಬಂದು ಕುಕ್ಕರಿಸಿದ. ಮತ್ತ ಅದೇ ಸೇತುಕುಳಿ ಗೋವಿಂದನ ಗೆಟ್ ಅಪ್ ಒಳಗೇ ಇದ್ದ. ಹಜಾಮತಿ ಇಲ್ಲದ ತಲಿ, ದಾಡಿ ಇಲ್ಲದ ಬಾವಾಜಿ ಗಡ್ಡ. ಸ್ನಾನ ಒಂದು ಆಗಿತ್ತು. ಪುಣ್ಯಕ್ಕ.

ನಾನು ಚೀಪ್ಯಾ ಹರಟಿಗೆ ಕೂತ್ವಿ ಅಂದ್ರ ರೂಪಾ ವೈನಿಗೆ ಏನೋ ಕೆಟ್ಟ ಕುತೂಹಲ. ಆಗಾಗ ಅಡಿಗಿಮನಿ ಬಿಟ್ಟು ಪಡಸಾಲಿಗೆ ಬಂದು, ಹಣಿಕಿ ಹಾಕಿ, ಮಾತಾಡೋದನ್ನ ಕೇಳಿ, ಏನರೆ ಹೇಳಿ ಹೋಗಲಿಲ್ಲ ಅಂದ್ರ ಅವರ ಜೀವಕ್ಕ ಸಮಾಧಾನ ಇಲ್ಲ.

ವೈನಿ ಅವರ ಕೆಟ್ಟಾ ಕೊಳಕಾದ ನೈಟೀಗೆ ಕರಾ ಪರ ಅಂತ ಕೈ ಒರಸಿಕೋತ್ತ ಬಂದು ಪಡಸಾಲಿ ಬಾಗಿಲಾದಾಗ ನಿಲ್ಲೋದ ತಡಾ, ಅವರ ಕನ್ಯಾರತ್ನಗಳಾದ ಕುಂತಿ ನಿಂತಿಯರಲ್ಲಿ ಒಬ್ಬಾಕಿ ಹೊಯ್ಕೊಂಡಳು. ಅವ್ವಾ!! ನನ್ನ ಚಡ್ಡಿ ಕಾಣ್ವಲ್ತು. ಹುಡುಕಿ ಕೊಡ. ಲಗೂನ ಹುಡುಕಿ ಕೊಡ. ಹುಡುಕಿ ಕೊಡು ಬಾರ.....ಬಾರ, ಅಂತ ಒಂದೇ ಸವನೆ ಹಚ್ಚಿಬಿಟ್ಟಳು.

ರೂಪಾ ವೈನಿಗೋ ನಮ್ಮ ಜೋಡಿ ಹರಟಿ ಹೊಡಿಬೇಕು. ಪಡಸಾಲಿ ಒಳಗೇ ಕೂತು ಒದರಿದರು, ಹುಚ್ಚ ಖೋಡಿ ನಿಂತಿ! ಅಲ್ಲೇ ಇರಬೇಕು ನೋಡು. ಇಲ್ಲಂದ್ರ ಕುಂತಿ ಕಡೆ ಕೇಳು. ಕುಂತಿ ನಿನ್ನ ಚಡ್ಡಿಯಾರ ಹುಡುಕಿ ಕೊಡ್ತಾಳ ಇಲ್ಲಾ ಅಕಿ ಚಡ್ಡಿಯಾರ ಕೊಡ್ತಾಳ. ನಾಕ್ನಾಕ್ ಐದೈದ್ ವರ್ಷದ ಕ್ವಾಣಗೋಳು ಆಗೀರಿ. ಚಡ್ಡಿ ಹುಡಕಲಿಕ್ಕೆ ಮತ್ತೊಂದಕ್ಕ ಇನ್ನೂ ಅವ್ವನ್ನ ಕರೀತಿರಿ. ನಿಮ್ಮ ನಿಮ್ಮ ಕೆಲಸಾ ಎಲ್ಲಾ ಚಂದ ಆಗಿ ಮಾಡಿಕೊಂಡು, ನಿಮ್ಮ ನಿಮ್ಮ ಸಾಮಾನು ಸರಿ ಮಾಡಿ ಜೋಡಿಸಿ ಇಟ್ಟಗೋಬೇಕು ಅಂತ ಬುದ್ಧಿ ಇಲ್ಲ?? ಅಂತ ಇಡೀ ಓಣಿಗೆ ಕೇಳೋ ಹಾಂಗ ಕೂಗಿದರು.

ಚಡ್ಡಿ ಕಾಣದಾಗಿದೆ ರಾಘವೇಂದ್ರನೆ
ಹುಡುಕಿ ಕೊಟ್ಟು ಹಾಕು ಬಾ ಯೋಗಿವರ್ಯನೆ
ಚಡ್ಡಿ ಕಾಣದಾಗಿದೆ ರಾಘವೇಂದ್ರನೆ

ಅಂತ ಕೆಟ್ಟ ದನಿ ಒಳಗ ಹಾಡಿಕೋತ್ತ ಕುಂತಿ ಬಂದಳು. ಇಕಿ ದೊಡ್ದಾಕಿ. ಇಕಿಗೇ ತಂಗಿಯಾದ ನಿಂತಿಯ ಚಡ್ಡಿ ಸಿಕ್ಕಿಲ್ಲ ಅಂದ್ರ ಇನ್ನು ತಾಯಿ ಸಾಹೇಬ್ ಆದ ರೂಪಾ ವೈನಿ ಹೋಗಲಿಕ್ಕೆ ಬೇಕು.

ಕುಂತಿ!!!! ಏನು ಅದು ದರಿದ್ರ ಹಾಡು!? ಅದೂ ಇವತ್ತು ಗುರುವಾರ ಬ್ಯಾರೆ. ರಾಘವೇಂದ್ರ ಸ್ವಾಮಿಗಳ ವಾರ. ದಾರಿ ಕಾಣದಾಗಿದೆ ರಾಘವೇಂದ್ರನೆ, ಬೆಳಕ ತೋರಿ ನೆಡಸು ಬಾ ಯೋಗಿವರ್ಯನೆ ಅಂತ ಇರುವ ಚಂದ ಹಾಡನ್ನ ಕುಲಗೆಡೆಸಿ ಹಾಡ್ತಿಯಲ್ಲ ಖೋಡೀ!!! ಯಾರು ಹೇಳಿ ಕೊಟ್ಟರು ಹೀಂಗ ಹಾಡೋದನ್ನ? ಸಾಲ್ಯಾಗ ಹೋಗಿ ಇದನ್ನೇ ಕಲಿ. ಕತ್ತಿ ತಂದು, ಅಂತ ಹಾಕ್ಕೊಂಡು ಹುಡುಗಿಯನ್ನ ಬೈದರು ರೂಪಾ ವೈನಿ.

ಕುಂತಿ ಕಿಸಿ ಕಿಸಿ ನಕ್ಕಳು. ಕಿಡಿಗೇಡಿ ಕುಂತಿ.

ಏನ್ ನಗ್ತೀ? ಹುಚ್ಚ ಖೋಡಿ ತಂದು. ಯಾರು ಹೇಳಿಕೊಟ್ಟರು ಈ ಹಾಡು? ಹೇಳ್ತಿಯೋ ನಾಕು ಹಾಕಲೋ ನಿನಗ ಕುಂತಿ? - ಅಂತ ಮತ್ತ ಮತ್ತ ಕೇಳಿದರು ರೂಪಾ ವೈನಿ. ಅಷ್ಟರಾಗ ಬಾಗಲದಾಗ ಕುಂತಿ ತಂಗಿ ನಿಂತಿ ಪ್ರತ್ಯಕ್ಷ ಆದಳು. ಅನಾಹುತ ಮಾಡೇ ಬಿಟ್ಟಳು ನಿಂತಿ.

ಅವ್ವಾ, ಈ ಹಾಡು ನಮಗ ಮಂಗೇಶ ಮಾಮಾ ಹೇಳಿಕೊಟ್ಟಾನ. ಅಲ್ಲೇನೋ ಮಾಮಾ? - ಅಂತ ನಿಂತಿ ನನ್ನ ನೋಡಿಕೋತ್ತ ಹೇಳೇ ಬಿಟ್ಟಳು.

ಇಟ್ಯಲ್ಲವಾ ಬತ್ತಿ!!!! ನಿಂತಿ ಎಂಬ ಛೋಟಾ ಮಂಗ್ಯಾನಿಕೆ!! ಇಟ್ಯಲ್ಲವಾ ಬತ್ತಿ!!!! ಅದೂ ನಿಮ್ಮ ಅವ್ವನ ಮುಂದೇ ಇಟ್ಯಲ್ಲವಾ ಬತ್ತಿ!!!! - ಅಂತ ಮನಸ್ಸಿನ್ಯಾಗೆ ಹೇಳಿಕೊಂಡು ಎಸ್ಕೇಪ್ ಸ್ಕೀಮ್ ಹಾಕಲಿಕ್ಕೆ ಶುರು ಮಾಡಿದೆ.

ಹೌದೇನೋ ಮಂಗೇಶ!? ನೀ ಹೇಳಿ ಕೊಟ್ಟಿ!? ಹಾಂ!? ಹಾಂ!? ನಿನ್ನಂತವರ ಜೋಡಿ ಬಿಟ್ಟರ ನಮ್ಮ ಹುಡುಗ್ಯಾರು ಕೆಟ್ಟಾ ಕೆರಾ ಹಿಡದು ಹೋಗ್ತಾರ. ದೇವರ ನಾಮಾ ಕಲಸ್ತೇನಿ ಅಂತ ಹೇಳಿದಿ ಅಂತ ನಿನ್ನ ಕಡೆ ವಾರಕ್ಕ ಒಂದು ದಿವಸ ಸಣ್ಣು ಸಣ್ಣು ನಮ್ಮ ಕೂಸುಗಳನ್ನ ಕಳಿಸಿದರ ಏನು ಮಸ್ತ ದೇವರ ನಾಮಾ ಕಲಿಸಿಕೊಟ್ಟಿ ಮಾರಾಯಾ!!! ಧನ್ಯ ಧನ್ಯ!! - ಅಂತ ಹೇಳಿ ನನಗ ಮಂಗಳಾರತಿ ಮಾಡಿ ವೈನಿ ಮಕ್ಕಳ ಚಾಕ್ರೀ ಮಾಡಲಿಕ್ಕೆ ಒಳಗ ಹೋದರು. ಅದೇನು ಅವ್ವನ ಮ್ಯಾಜಿಕ್ಕೋ! ಒಂದು ಕ್ಷಣದಾಗ ವಾಪಸ್ ಬಂದ ಕೂತೇ ಬಿಟ್ಟರು. ಸ್ವಾಮಿಗಳಿಗೇ ಸಿಕ್ಕದ್ದು ತಾಯಿಗೆ ಸಿಕ್ಕಿತು. ಅದಕ್ಕೇ ಹೇಳೋದು ತಾಯಿಗಿಂತ ದೊಡ್ಡ ದೇವರಿಲ್ಲ ಅಂತ!

ಮತ್ತ ವಾಪಸ್ ಬಂದ ರೂಪಾ ವೈನಿ ಸೇತುಕುಳಿ ಗೋವಿಂದನ ಪ್ರತಿರೂಪ ಅನ್ನೋ ಹಾಂಗೆ ಇರುವ ಅವರ ಪತಿದೇವರನ್ನು ನೋಡಿಕೋತ್ತ, ನನಗ ಹೇಳಿದ್ರು, ಮಂಗೇಶ, ಮುಂದಿನ ವಾರ ಇವರನ್ನ ಕರಕೊಂಡು ಹೋಗಿ ಮಾಡಿಸ್ಕೊಂಡು ಬಂದು ಬಿಡಪಾ, ಅಂತ ಹೇಳಿ, ಪೂರ್ತಿ ಮಾತು ಮುಗಿಸದೆ, ಕುಕ್ಕರ್ ಸೀಟಿ ಹೊಡೀತು ಅಂತ ಅಡಿಗಿಮನಿ ಕಡೆ ಓಡಿದರು ರೂಪಾ ವೈನಿ. ಕುಕ್ಕರ್ ಸೀಟಿ ಹೊಡೆದಿದ್ದಕ್ಕ ಅವರು ಓಡಿದ ಪರಿ ನೋಡಿದ್ರ ಎಲ್ಲೆ ರೂಪಾ ವೈನಿಗೆ ಪ್ರಾಯದಾಗ ಅವರಿಗೆ ಸೀಟಿ ಹೊಡೆದ ಯಾರೋ 'ಲೈನ್'ಮನ್ ನೆನಪ ಆದನೋ ಅಂತ ಅನ್ನಿಸ್ತು. ನಮಗೇನು ಗೊತ್ತು ಕುಕ್ಕರ್ ಸೀಟಿಯ ಮಹತ್ವ? ನಾವೇನು ಅಡಿಗಿ ಮಾಡ್ತೇವಾ?

ಮುಂದಿನ ವಾರ ಇವರನ್ನ ಕರಕೊಂಡು ಹೋಗಿ ಮಾಡಿಸ್ಕೊಂಡು ಬಂದು ಬಿಡಪಾ!!!!?????????????????

ಹಾಂ!!!!

ಏನು ಹೇಳಲಿಕತ್ತಾರ ರೂಪಾ ವೈನಿ? ಹಾಂ? ಹಾಂ? - ಅಂತ ತಲಿ ಕೆರಕೊಂಡೆ. ಏನೂ ತಿಳಿಲಿಲ್ಲ. ಚೀಪ್ಯಾನ ಕಡೆ ನೋಡಿದೆ. ಆವಾ ಸಂಯುಕ್ತ ಕರ್ನಾಟಕ ಪೇಪರ್ ಒಳಗ ಮಗ್ನ ಆಗಿದ್ದ. ಟ್ರಾವೆಲಿಂಗ್ ಡಾಕ್ಟರ ಡಾ. S. S. ಉಳ್ಳಾಗಡ್ಡಿ ಹುಬ್ಬಳ್ಳಿಗೆ ನೆಕ್ಸ್ಟ್ ಟೈಮ್ ಯಾವಾಗ ಬರೋರು ಇದ್ದಾರ ಅಂತ ನೋಡ್ಲಿಕತ್ತಿದ್ದ ಅಂತ ಕಾಣಸ್ತದ. ಅವರ 'ನವತಾರುಣ್ಯ ಡಿಸ್ಪೆನ್ಸರಿ' ಖಾಯಂ ಪೇಷಂಟ್ ನಮ್ಮ ಚೀಪ್ಯಾ. ಅವರು ಕೊಡೊ ನಯಾಗ್ರಾ ಗುಳಗಿ ಖಾಯಂ ಗಿರಾಕಿ ಚೀಪ್ಯಾ.

ಚೀಪ್ಯಾ! ವೈನಿ ಏನೋ ನಿನ್ನ ಕರ್ಕೊಂಡು ಹೋಗಿ ಏನೋ ಮಾಡಿಸಿಕೊಂಡು ಬಾ ಅಂದ್ರಲ್ಲೋ? ಏನೋ? ಏನು ಮಾಡಿಸಿಕೊಂಡು ಬರಬೇಕು? ಎಲ್ಲೆ ಹೋಗಿ ಏನು ಮಾಡಿಸಿಕೊಂಡು ಬರಬೇಕೋ? - ಅಂತ ಕೇಳಿದೆ

ಚೀಪ್ಯಾ ಪೇಪರ್ ಒಳಗ busy ಇದ್ದ. ನನ್ನ ಕಡೆ ನೋಡದೆ, ನಿಮ್ಮ ರೂಪಾ ವೈನೀನ ಕೇಳಲೇ. ನನ್ನೇನ ಕೇಳ್ತೀ. ಅಕಿಗೆ ತಲಿ ಇಲ್ಲ ನಿನಗ ಬುದ್ಧಿ ಇಲ್ಲ, ಅಂತ ಹೇಳಿಬಿಟ್ಟ ಚೀಪ್ಯಾ.

ಇದು ದೊಡ್ಡ ಕಾಂಪ್ಲಿಕೇಟೆಡ್ ಆತಲ್ಲರೀ. ರೂಪಾ ವೈನಿ ನೋಡಿದರ, ಕರಕೊಂಡು ಹೋಗಿ ಮಾಡಿಸಿಕೊಂಡು ಬಾರಪಾ, ಅಂತಾರ. ಈವಾ ಚೀಪ್ಯಾನ ಕೇಳಿದರ ಏನೋ ಅಂತಾನ.

ಕುಕ್ಕರ್ ಕೆಲಸ ಮುಗಿಸಿದ ವೈನಿ ಮತ್ತ ಬಂದು ಇನ್ನೇನು ತಳಾ ಊರಬೇಕು ಅಂತ ಮಾಡಿದ್ದರು. ಆದ್ರ ಅಷ್ಟರಾಗ ಅವರ ಮನಿ ಕೆಲಸಾ ಮಾಡೋ ಬೂಬು, ಬಾಯಾರಾ! ಬಾಯಾರಾ! ಅಂತ ಬಾಯಿ ಬಡಕೊಂಡು ಬಾಯಾರಾದ ರೂಪಾ ಬಾಯಾರನ್ನು ಕರೆದಳು.

ಏನ ಬೂಬು? ಭಾಂಡೆ ಅಲ್ಲೇ ಬಿದ್ದಾವ ನೋಡ. ಸ್ವಲ್ಪ ತಿಕ್ಕಿ ತಿಕ್ಕಿ ಭಾಂಡೆ ತೊಳಿ. ಇಲ್ಲಂದ್ರ ತುಪ್ಪದ ನೈಕ್ಲಾ ಹೋಗಂಗಿಲ್ಲ.......ಏನು? ಸಬಕಾರ ಪುಡಿ ಇಲ್ಲಾ? ಸೂಡ್ಲಿ. ಒಂದು ನಿಮಿಷ ಕೂಡಲಿಕ್ಕೆ ಬಿಡವಲ್ಲರು. ಮೊದಲು ಅವರ ಚಡ್ಡಿ ಗದ್ದಲಾ. ಈಗ ಇಕಿ ಸಬಕಾರ ಪುಡಿ ಗದ್ದಲಾ, ಅಂತ ಸಿಡಿಮಿಡಿ ಮಾಡಿಕೋತ್ತ ರೂಪಾ ವೈನಿ ಎದ್ದು ಹೋದರು. ಹೋಗೋಕಿಂತ ಮೊದಲು ಮತ್ತ ಹೇಳಿದರು, ಮಂಗೇಶ, ಮುಂದಿನ ವಾರ ಇವರನ್ನ ಕರಕೊಂಡು ಹೋಗಿ ಮಾಡಿಸ್ಕೊಂಡು ಬಂದು ಬಿಡಪಾ.....!!!

ಹೋಗ್ಗೋ!!!! ಈ ವೈನಿ ಮಾತಿಗೊಮ್ಮೆ - ಕರ್ಕೊಂಡು ಹೋಗಿ ಮಾಡಿಸಿಕೊಂಡು ಬಾ - ಅಂತಾರ. ಈವಾ ಚೀಪ್ಯಾ ನೋಡಿದರ ಏನಂತ ಹೇಳವಲ್ಲಾ. ಏನು ಮಾಡಬೇಕು? ಹಾಂ!! ನಾವೇ ಬೇರೆ ಬೇರೆ ಪ್ರಶ್ನೆ ಕೇಳಿ ಉತ್ತರಾ ತಿಳ್ಕೋಬೇಕು. ಶಂಕರಾಚಾರ್ಯರ ನೇತಿ ನೇತಿ ಅಂದ್ರ ಇದಲ್ಲ ಇದಲ್ಲ ಅನ್ನೋ ಟೆಕ್ನೀಕ್ ಉಪಯೋಗ ಮಾಡಬೇಕು. ಅದಲ್ಲ, ಇದಲ್ಲ, ಮತ್ತೊಂದಲ್ಲ, ಮಗದೊಂದಲ್ಲ ಅಂತ ಎಲ್ಲಾ options ಒಂದಾದ ಮೇಲೆ ಒಂದು eliminate ಮಾಡಿ ಮುಗಿದ ಮ್ಯಾಲೆ ಏನು ಉಳಿತದ ಅದೇ ಉತ್ತರ. ಚೀಪ್ಯಾನ ಕರಕೊಂಡು ಹೋಗಿ ಅದನ್ನೇ ಮಾಡಿಸಿಕೊಂಡು ಬಂದು ಬಿಡಬೇಕು.

ಚೀಪ್ಯಾ! ಏನಪಾ ಕಿಡ್ನಿ ಬರ್ಬಾದ ಆಗ್ಯಾವ ಏನೋ? ಡಯಾಲಿಸಿಸ್ ಮಾಡಿಸ್ಕೋಬೇಕಾ? ನಿನ್ನ ಕರಕೊಂಡು ಹೋಗಿ ಅದನ್ನ ಮಾಡಿಸ್ಕೊಂಡು ಬಾ ಅಂತ ವೈನಿ ಅನ್ನಲಿಕತ್ತಾರ  ಏನು? - ಅಂತ ಕೇಳಿದೆ.

ಲೇ!!!! ಅನಿಷ್ಟ ಮಂಗ್ಯಾ ಸೂಳೆಮಗನ!!! ನನ್ನ ಕಿಡ್ನಿ ಮತ್ತೊಂದು ಎಲ್ಲಾ ಮಸ್ತ ಅವ ಮಾರಾಯಾ. ಏನ್ ಬೇಕಾಗಿಲ್ಲ, ಅಂತ ಅಂದು ಚೀಪ್ಯಾ ಪೇಪರ್ ಓದೋದನ್ನ ಕಂಟಿನ್ಯೂ ಮಾಡಿದ.

ಅಂದ್ರ ಡಯಾಲಿಸಿಸ್ ನೇತಿ ನೇತಿ ಅಂದ್ರ ಅಲ್ಲ ಅಂತ ಆತು. ಮುಂದಿನ ಪ್ರಶ್ನೆ ಕೇಳಬೇಕು.

ಮತ್ತ ಎಲ್ಲರೆ ಏನರೆ ಮುರಕೊಂಡಿ ಏನು? ಎಲಬು ಗಿಲಬು ಸೊಂಟಾ ಗಿಂಟಾ? ಲೇ ಮಗನಾ.....ನಮಗೆಲ್ಲಾ ನಲವತ್ತರ ಮ್ಯಾಲೆ ಆತು. ನೋಡ್ಕೊಂಡು ಮಾಡು. ಎಲ್ಲರೆ ಡಾಕ್ಟರ ಕಡೆ ಕರಕೊಂಡು ಹೋಗಿ ಎಕ್ಸರೇ ಮತ್ತೊಂದು ಮಾಡಿಸಿಕೊಂಡು ಬರಬೇಕು ಏನು? ಹಾಂ? ಹಾಂ? ಹೇಳಲೇ ಹೋಗೋಣ. ನನಗ ಎಲ್ಲಾ ಡಾಕ್ಟರ ಮಂದಿ ಗೊತ್ತು ಇದ್ದಾರ. ಲೇಡಿ ಡಾಕ್ಟರ ಕಡೆ ಹೋಗಬೇಕೇನು? ನಮ್ಮ ಬ್ಯಾಚಿಂದ ಕಮ್ಮಿ ಕಮ್ಮಿ ಅಂದ್ರೂ ಒಂದು ಹತ್ತು ಮಂದಿ ಹುಡುಗ್ಯಾರು ಡಾಕ್ಟರ ಆಗಿ ಬಿಟ್ಟಾರ. ಬೇಕಾದ್ರ ಅವರ ಕಡೆ ಕರಕೊಂಡು ಹೋಗಿ ಬರಲೇನು? ಹಾಂ? ಹಾಂ? - ಅಂತ ಕೇಳಿದೆ.

ಸುಮ್ಮನ ಬಾಯಿ ಮತ್ತೊಂದು ಮುಚ್ಚಗೊಂಡು ಕೂಡಲಿಕ್ಕೆ ಏನು ತೊಗೋತ್ತಿ?! - ಅನ್ನೋ ಲುಕ್ ಮೌನವಾಗಿ ಚೀಪ್ಯಾ ಕೊಟ್ಟ.

ನಾನೇ ತಿಳಕೊಂಡೆ. ಇದು ಡಾಕ್ಟರ ಕಡೆ ಕರಕೊಂಡು ಹೋಗೋ ಕೇಸ್ ಅಲ್ಲ. ನೇತಿ ನೇತಿ. ಅಲ್ಲ ಅಲ್ಲ.

ಮುಂದಿನದು ಏನು? ಈ ರೂಪಾ ವೈನಿ ಒಬ್ಬರು. ಕುಂಡಿ ಮ್ಯಾಲೆ ಕಿಡಿ ಬಿದ್ದವರಂಗ ಬರ್ತಾರ, ಬಂದು ಅರ್ಧಂಬರ್ಧಾ ಏನೋ ಹೇಳಿ ಹೋಗಿ ಬಿಡ್ತಾರ. ಇವರನ್ನ ಕರಕೊಂಡು ಹೋಗಿ ಮಾಡಿಸ್ಕೊಂಡು ಬಂದು ಬಿಡಪಾ - ಅಂದ್ರ ಏನ್ರೀ ಅರ್ಥ???? ಹಾಂ?? ಹಾಂ????

ಚೀಪ್ಯಾ ಮತ್ತ ನಿನ್ನ ಟೇಲರ್ ಕಡೆ ಏನರೆ ಕರಕೊಂಡು ಹೋಗಿ ಪ್ಯಾಂಟು, ಶರ್ಟು, ಜುಬ್ಬಾ, ಪೈಜಾಮಾ, ಪಟ್ಟಾ ಪಟ್ಟಿ ಚಡ್ಡಿ
ಇತ್ಯಾದಿಗಳಿಗೆ ವಸ್ತ್ರ ಖರೀದಿ ಮಾಡಿ ಹೊಲಿಸಲಿಕ್ಕೆ ಹಾಕಿ ಬರಬೇಕು ಏನು? ಬಾರಲೇ ಹೋಗೋಣ. ನನಗ ಲೈನ್ ಬಜಾರ ಒಳಗ ಇರೋ ಮಸ್ತ ಮಸ್ತ ಟೇಲರ್ ಮಂದಿ ಎಲ್ಲಾ ಗುರ್ತು ಇದ್ದಾರ. ಪುಟಾಣೆ & ಸನ್ಸ್.....ಏಕ್ದಂ ಮಸ್ತ ಟೇಲರ್ ನೋಡು. ಸೂಟ್ ಗೀಟ್ ಮಸ್ತ ಅಂದ್ರ ಮಸ್ತ ಹೊಲಿತಾನ. ಇಷ್ಟು ಘಟ್ಟೆ ಸ್ಟಿಚಿಂಗ್ ಮಾಡ್ತಾನ ಅಂದ್ರ ನೀ ಶೇಂಗಾ, ಪುಟಾಣಿ, ಕಡ್ಲಿ ಘುಗ್ರೀ ಏನೇ ತಿಂದು ಅಪರೂಪಕ್ಕ ಎಲ್ಲರೆ ತೋಪು ಬಾಂಬು ಹಾರಿಸಿದರೂ ಕುಂಡಿ ಕೆಳಗಿನ ಹೊಲಿಗಿ ಮಾತ್ರ ಚರ್ರ ಪರ್ರ ಅಂತ ಹರಿಯೋದಿಲ್ಲ ನೋಡು. ಅವರ ಮನಿತನದ ಹೆಸರೇ ಪುಟಾಣೆ. ಪುಟಾಣಿ ಹೆಸರು ಇಟಗೋಂಡು ಪುಟಾಣಿ ಬೋಂಗಾಕ್ಕ ಹರಿಯುವಂತಹ ಪ್ಯಾಂಟ್ ಆವಾ ಮಾತ್ರ ಹೊಲಿಯಂಗಿಲ್ಲ. ಗ್ಯಾರಂಟಿ ಕೊಡ್ತಾನಪಾ. ಇನ್ನು ಪಟ್ಟಾಪಟ್ಟಿ ಚಡ್ಡಿ ಹೊಲಿಸಬೆಕು ಅಂದ್ರ ಬೊಂಗಾಳೆ ಟೇಲರ್ ಕಡೆ ಹೋಗೋಣ. ಯಾಕಂದ್ರ ಪುಟಾಣೆ ಟೇಲರ್ ಅಂಡರ್ವೇರ್ ಚಡ್ಡಿ ಇತ್ಯಾದಿ ಹೊಲಿಯೋದಿಲ್ಲ. ಅವರ ಸ್ಟೇಟಸ್ ಗೆ ಅದು ಕಮ್ಮಿ. ಕೆನರಾ ಶೆಟ್ಟಿ ಅಂಗಡಿ ಮುಂದ ಕೂತ ಸಿಂಗಲ್ ಸಿಂಗರ್ ಹೊಲಿಗಿ ಮಷೀನ್ ಬೊಂಗಾಳೆ ಮಾತ್ರ ಭಕ್ತಿಯಿಂದ ನಿನ್ನಾ ಪಟ್ಟಾ ಪಟ್ಟಿ ಅಂಡರ್ವೇರ್ ಯಾವದೇ ಬರ್ಮುಡಾ ಚೋಣ್ಣಕ್ಕೂ ಕಮ್ಮಿ ಇಲ್ಲದಾಂಗ ಹೊಲಿದು, ಕಲರ್ ಕಲರ್ ವಾಟ್ ಕಲರ್ ಅನ್ನೋ ಹಾಂಗ ಬಣ್ಣ ಬಣ್ಣದ ಕಸಿ ಲಾಡಿ ಸಹಿತ ಹಾಕಿ, ಲಾಡಿ ಹೊರಗ ಬಂದ್ರ ಸೇಫ್ಟಿ ಪಿನ್ ಹಾಕಿ ಹ್ಯಾಂಗ ಅದನ್ನ ಮತ್ತ ಒಳಗ ಹಾಕಬೇಕು ಅನ್ನೋದರ ಒಂದು demonstration ಸಹಿತ ಕೊಟ್ಟು, ಒಂದು ಹಳೆ 'ಲಂಕೇಶ್ ಪತ್ರಿಕೆ' ಒಳಗ ನಿನ್ನ ಪಟ್ಟಾ ಪಟ್ಟಿ ಸುತ್ತಿ ಕೊಟ್ಟು ಬಿಡ್ತಾನ ನೋಡು. ಅದು ಸುತ್ತಿ ಕೊಡೋದು ಯಾಕ ಅಂದ್ರ ಬರೆ ಕೈಯಾಗ ಪಟ್ಟಾ ಪಟ್ಟಿ ಚಡ್ಡಿ ಹಿಡಕೊಂಡು ಹೊಂಟಾಗ ಎದುರಿಗೆ ಹೆಂಗಸೂರು ಅವರು ಇವರು ಬಂದ್ರ ಅಸಹ್ಯ ನಾಚಿಗಿ ನೋಡು. ಅದಕ್ಕ. ಆದ್ರ ಲಂಕೇಶ್ ಪತ್ರಿಕೆ ಒಳಗ ಸುತ್ತಿದ್ದು ನೋಡಿದ ಕೂಡಲೇ ಹೆಂಗಸೂರಿಗೆ ಅದೂ ಜಾಬಾದ್ ಇರೋ ಬೆರ್ಕೀ ಹೆಂಗಸೂರಿಗೆ ಗೊತ್ತ ಆಗೇ ಬಿಡ್ತದ ಇದು ಕಾಂಟ್ರಾ ಬ್ಯಾಂಡ್ ಮಾಲು ಅಂತ. ತೊಂದ್ರೀ ಇಲ್ಲ. ನಾವು ಬೊಂಗಾಳೆ ಕೊಟ್ಟದ್ದನ್ನ ಇನ್ನೊಂದು ಚೀಲದಾಗ ಹಾಕಿಕೊಂಡು ಬರೋಣ. ಓಕೆ? ಇವರನ್ನ ಕರಕೊಂಡು ಹೋಗಿ ಮಾಡಿಸ್ಕೊಂಡು ಬಂದು ಬಿಡಪಾ - ಅಂತ ವೈನಿ ಹೇಳಿದ್ದು ಇದ ಏನೋ? - ಅಂತ ಕೇಳಿದೆ.

ಚೀಪ್ಯಾ ಸಿಕ್ಕಾಪಟ್ಟೆ ಕೆಟ್ಟ ಲುಕ್ ಕೊಟ್ಟ. ನಾನು, ಹಾಂ? ಏನು?, ಇದೂ ಅಲ್ಲ? ಹಾಂ? ಅಂತ ಬಾಯಿ ಬಿಟಗೊಂಡು ಕೂತೆ.

ಸುಮ್ಮ ಕೂಡಲೇ ಮಂಗ್ಯಾನ ಮಗನ. ಎಷ್ಟಂತ ಕಾಡ್ತಿಯೋ? ನಾ ಹೇಳ್ತೆನಿ ಕೇಳಿಲ್ಲೆ. ನನ್ನ ಎಲ್ಲೂ ಕರಕೊಂಡು ಹೋಗಿ ಏನೂ ಮಾಡಿಸಿಕೊಂಡು ಬರೋದು ಬೇಕಾಗಿಲ್ಲ. ನಿಮ್ಮ ರೂಪಾ ವೈನಿನ ಹ್ಯಾಂಗಾರ ಮಾಡಿ ಬೆಳಗಾಂ ರೋಡ ಮೆಂಟಲ್ ಹಾಸ್ಪಿಟಲ್ ಗೆ ಹಾಕಿ ಬಾ. ಬೇಕಾದ್ರ ನೀನೂ ಅಲ್ಲೇ ಅಡ್ಮಿಟ್ ಆಗಿ ಬಿಡು. ನನ್ನ ಜೀವಾ ತಿಂತೀರಿ ಇಬ್ಬರೂ, ಅಂತ ಚೀಪ್ಯಾ ಸೀರಿಯಸ್ ಆಗಿ ಹೇಳಿದ.

ಹಾಕ್ಕ! ಇದೂ ನೇತಿ ನೇತಿ ಅಂದ್ರ ಅಲ್ಲ ಅಲ್ಲ ಆಗಿ ಬಿಡ್ತಲ್ಲರೀ. ಸೂಡ್ಲಿ. ಏನು ಇರಬಹುದು, ರೂಪಾ ವೈನಿ ಮಾತಿಗೊಮ್ಮೆ, ಇವರನ್ನ ಕರಕೊಂಡು ಹೋಗಿ ಮಾಡಿಸ್ಕೊಂಡು ಬಂದು ಬಿಡಪಾ, ಅನ್ನುವದರ ಹಿಂದಿನ ಅರ್ಥ.

ಅಷ್ಟರಾಗ ಮತ್ತ ರೂಪಾ ವೈನಿ ಬಂದ್ರು. ಒಂದು ರೌಂಡ್ ಅಡಿಗಿಮನಿ ಕೆಲಸ ಮುಗೀತು ಅಂತ ಅನ್ನಸ್ತದ.

ಮತ್ತೆ ಅದೇ ಹಾಡು. ಮುಂದಿನ ವಾರ ಇವರನ್ನ ಕರಕೊಂಡು ಹೋಗಿ ಮಾಡಿಸ್ಕೊಂಡು ಬಂದು ಬಿಡಪಾ!!! - ಅಂತ ಮತ್ತ ಅಂದ್ರು ರೂಪಾ ವೈನಿ. ನಮ್ಮ ನೇತಿ ನೇತಿ ಟೆಕ್ನಿಕ್ ವರ್ಕ್ ಆಗದೇ ಹೇತಿ ಹೇತಿ ಆಗಿ ನಮಗ ಏನೂ ಹೊಳಿವಲ್ಲತು. ಈ ಸರೆ ಕೇಳಲೇ ಬೇಕು. ಇಲ್ಲಂದ್ರ - ಇವರನ್ನ ಕರಕೊಂಡು ಹೋಗಿ ಮಾಡಿಸ್ಕೊಂಡು ಬಂದು ಬಿಡಪಾ! ಇವರನ್ನ ಕರಕೊಂಡು ಹೋಗಿ ಮಾಡಿಸ್ಕೊಂಡು ಬಂದು ಬಿಡಪಾ! - ಅಂತ ಕೇಳಿ ಕೇಳಿ ತಲಿ ಕೆಟ್ಟು, ಹಾಪ್ ಆಗಿ,  ಕ್ವಾರ್ಟರ್ ಆಗಿ, ಅದು ಹಾಪ್ ಆಗಿ ಹಾಪ್ ಕ್ವಾರ್ಟರ್ ಆಗಿ ಹುಚ್ಚ ಆಗಿಬಿಡ್ತೇನಿ ನಾನು.

ಅಲ್ರೀ ವೈನಿ! ಮುಂದಿನ ವಾರ ಇವರನ್ನ ಕರಕೊಂಡು ಮಾಡಿಸ್ಕೊಂಡು ಬಂದು ಬಿಡಪಾ ಅಂತ ನಾಕ ಸರೆ ಹೇಳಿದ್ರೀ. ಪೂರ್ತಿ ಹೇಳದೆ ಅಲ್ಲಿ ಇಲ್ಲಿ ಆ ಕೆಲಸಾ ಈ ಕೆಲಸಾ ಅಂತ ಓಡಿ ಓಡಿ ಹೋಗ್ತೀರಿ. ನಿಮ್ಮ ಪತಿದೇವರಾದ ಶ್ರೀಪಾದ ರಾವ್ ಅವರನ್ನು ಎಲ್ಲೆ ಕರಕೊಂಡು ಹೋಗಿ ಏನು ಮಾಡಿಸಿಕೊಂಡು ಬರಬೇಕು? ಅದನ್ನ ಕ್ಲಿಯರ್ ಆಗಿ ಹೇಳ್ರೀ ವೈನಿ!!!! - ಅಂತ ದೀನದಯಾಳ ಲುಕ್ ಕೊಟಗೋತ್ತ ಕೇಳಿದೆ.

ಮುಂದಿನವಾರ ಶ್ರಾವಣ ಮುಗಿತದ. ಇವರನ್ನು ಕರಕೊಂಡು ಹೋಗಿ, ಚಂದಾಗಿ ಹಜಾಮತಿ ಮಾಡಿಸಿ, ಗಡ್ಡಾನೂ ಬೋಳಿಸಿ, ಚಕಾ ಚಕ್ ಚಿಕಣಾ ಮಾಡಿಸಿಕೊಂಡು ಬಾ. ಈಗ ಶ್ರಾವಣ ನೆಡದದ. ಅದಕ್ಕ ಹಜಾಮತಿ ಕಷ್ಟಾ ಎಲ್ಲಾ ವರ್ಜ್ಯ. ಅದಕ್ಕ ಅದು ನೀ ಏನೋ ಅಂತೀ ಅಲ್ಲಾ.....ಹಾಂ....ಸತ್ತ ಕೋಳಿ ವೀರಪ್ಪನ್ ಲುಕ್ ಮಾಡಿಕೊಂಡು ಕೂತಾರ ನಮ್ಮ ಮನಿಯವರು. ನಾ ಹೇಳಿದರ ಹಜಾಮತಿ ಮಾಡ್ಸಂಗಿಲ್ಲ ಅಂತ ಹೇಳಿ ಹಟಾ ಹಿಡದು ಕೂತಾರ, ಅಂತ ಹೇಳಿ ಬಿಟ್ಟರು ರೂಪಾ ವೈನಿ.

ಹೋಗ್ಗೋ ಇವರ!!!!!!

ನಾನು ಸೇತುಕುಳಿ ಗೋವಿಂದ, ವೀರಪ್ಪನ್ ಅನ್ನೋದನ್ನ ತಮ್ಮದೇ ರೀತಿಯಲ್ಲಿ ಮಿಕ್ಸ್ ಮಾಡಿ ಗಂಡಗ ಸತ್ತ ಕೋಳಿ ವೀರಪ್ಪನ್ ಅಂದು ಬಿಟ್ಟರು ರೂಪಾ ವೈನಿ. ಹಾಕ್ಕ!!!!

ಏನ್ರೀ ವೈನಿ!!! ಹೋಗ್ಗೋ ನಿಮ್ಮ!!!! ನಿಮ್ಮ ಚೀಪ್ಯಾ ಏನು ಸಣ್ಣ ಹುಡುಗ ಏನು? ನನ್ನ  ಕಡೆ ಅವನ್ನ ಕರಕೊಂಡು ಹೋಗಿ ಹಜಾಮತಿ ಮಾಡಿಸಿಕೊಂಡು ಬಾ ಅನ್ನಲೀಕತ್ತೀರಿ. ಚೀಪ್ಯಾ ಏನು ಹೋಗೋದಿಲ್ಲ ಅಂದಾನೇನು? ಈಗ ಶ್ರಾವಣ ಮಾಸ ನೆಡದದ. ನೀವೇ ನಿಮ್ಮ ರೀತಿ ರಿವಾಜು ಅಂತ ಹೇಳಿ ಅವಂಗ ಕಟಿಂಗ್ ಬ್ಯಾಡ, ದಾಡಿ ಮಾಡಿಕೊಳ್ಳೋದು ಬ್ಯಾಡ ಅಂತ ಕೂಡಿಸಿಕೊಂಡೀರಿ. ಯಾಕಲೇ ಚೀಪ್ಯಾ? ಮುಂದಿನ ವಾರ ಹೋಗಿ ಎಲ್ಲಾ ಸಾಫ್ ಮಾಡಿಸಿಕೊಂಡು ಬರ್ತಿ ಹೌದಿಲ್ಲೋ? ಹಾಂ? ಹಾಂ? - ಅಂತ ಕೇಳಿದೆ.

ಹೋಗಲೇ....ಎಲ್ಲಿದ ಹಚ್ಚಿ?! ಎರಡು ತಿಂಗಳು ಹಜಾಮತಿ ಇಲ್ಲದ ಮತ್ತ ಒಂದು ಐದು ವಾರ ದಾಡಿ ಮಾಡದೆ ಇದ್ದು ಈಗ ಇದಾ ರೂಢಿ ಆಗಿ ಬಿಟ್ಟದ. ಇಕಿ ನಿಮ್ಮ ರೂಪಾ ವೈನಿ ಹೇಳಿದಾಗ ಕೂದಲಾ, ದಾಡಿ ಬೆಳಸಬೇಕು. ಇಕಿ ಬೋಳಿಸು ಅಂದ್ರ ಬೋಳಿಸಬೇಕು. ಆಟಾ ಹಚ್ಚೀರಿ ಏನು? - ಅಂತ ಕೇಳಿದ ಚೀಪ್ಯಾ.

ರೂಪಾ!!! ನೋಡ್ಕೋ..... ನಿನಗೂ ಹೇಳೇ ಬಿಡ್ತೇನಿ. ನಾ ಹಜಾಮತಿ ಮತ್ತೊಂದು ಮಾಡಿಸೋದು ಇನ್ನು ಮುಂದಿನ ಶ್ರಾವಣ ಮುಗಿದ ಮ್ಯಾಲೆ. ಸುಮ್ಮನ ತಲಿ ತಿನ್ನಬ್ಯಾಡ. ತಿಳೀತ? ಹಾಂ? ಹಾಂ? - ಅಂತ ಹೇಳಿ ಚೀಪ್ಯಾ ಅಪರೂಪಕ್ಕ ಆವಾಜ್ ಹಾಕಿ ಬಿಟ್ಟ.

ಇದು ಎಲ್ಲಿಂದ ರೂಪಾ ವೈನಿಗೆ ಜಬರಿಸುವಷ್ಟು ಧೈರ್ಯಾ ಇವಂಗ ಬಂತು ಅಂತ ಆಶ್ಚರ್ಯ ಆತು. ಆದರೂ ಖುಷಿ ಆತು.

ಅಪರೂಪಕ್ಕ ಗಂಡ ಜಬರಿಸಿದ್ದು ನೋಡಿ ರೂಪಾ ವೈನಿ ಸ್ವಲ ದಂಗು ಹೊಡೆದರು. ಒಮ್ಮೆನೂ ಜಬರಸಿಕೊಂಡು ಅವರಿಗೆ ಗೊತ್ತೇ ಇಲ್ಲ. ಚೀಪ್ಯಾನ ಹಿಡದು ಜಬರಿಸೋದು, ಹಣಿಯೋದು ಎಲ್ಲಾ ಅವರೇ ಮಾಡೋದು. ಅದು one way ಟ್ರಾಫಿಕ್ ಇದ್ದಂಗ.

ಸ್ವಲ್ಪ ದಂಗು ಹೊಡೆದರೂ ಏಕ್ದಂ ಸುಧಾರಿಸಿಗೊಂಡ ವೈನಿ ಚೀಪ್ಯಾಗ ಜೋರು ಮಾಡಿದರು.

ರೀ.....ಶ್ರಾವಣ ಮಾಸದಾಗ ಗಡ್ಡಾ ಬಾವಾಜಿ ಆಗಿದ್ದು ಸಾಕು. ಎಲ್ಲ ಸ್ವಚ್ಚ ಮಾಡಿಕೊಂಡು ಬರ್ರಿ. ನೀವು ಹತ್ತರ ಬಂದ್ರ ಕರಡಿ ಬಂದಂಗ ಆಗ್ತದ. ಈಗ ಹ್ಯಾಂಗ ಇದ್ದೀರೋ ಅದೇ ಛೊಲೊ ಅದ ಅಂತ ಅಂತೀರಲ್ಲಾ ಶ್ರೀಪಾದ ರಾವ್, ನೀವು ಸಹಿತ ಕರಡಿ ಆಗೀರಿ ಏನು? ಕರಡಿಗೆ ಹೀಂಗ ನೋಡ್ರೀ. ತಲಿಗೂದಲಾದ್ರ ಏನು ಮೈಗೂದಲಾದ್ರಾ ಏನು ಮತ್ತೆಲ್ಲಿದೋ ಕೂದಲಾ ಆದ್ರ ಏನು!? ಕರಡಿಗೆ ಎಲ್ಲಾ ಒಂದೇ. ಮುಂದಿನವಾರ ಹೋಗಿ, ನಿಮ್ಮ ಕೆ ಬೋರ್ಡ್ ಸಾಲಿ ಗಾಂಧೀ ಕಟಿಂಗ್ ಮತ್ತ ದಾಡಿ ಬೋಳಿಸಿಕೊಂಡು ನಿಮ್ಮ ಜೊಂಡಗ್ಯಾ ಮೀಸಿ ಇಟ್ಟುಗೊಂಡು ಬಂದ್ರ ಸರಿ. ಇಲ್ಲಂದ್ರ ನೋಡ್ಕೊರೀ ಮತ್ತ. ಮುಂದ ಏನಾಗ್ತದ ಅದಕ್ಕ ನಾ ಜವಾಬ್ದಾರ್ ಅಲ್ಲ. ನೋಡ್ಕೊರೀ ಮತ್ತ. ಇದು ಆಖರೀ ಮಾತು, ಅಂತ ವೈನಿ ಆಖರೀ ಫೈಸಲಾ ಮಾಡಿ ಬಿಟ್ಟರು.

ಶ್ರಾವಣದ ಕರಡಿ ಚೀಪ್ಯಾ ಹೀಂಗ ಕಾಣಬಹುದು (ಚಿತ್ರ: ನಟ ಮಕರಂದ ದೇಶಪಾಂಡೆ ಅವರದ್ದು)

ಅಲ್ಲರೀ ವೈನಿ....ಚೀಪ್ಯಾ ಹಜಾಮತಿ ಮಾಡಿಸದೇ ಗಡ್ಡಾ ಬಿಟ್ಟಗೊಂಡು ಇದ್ದರ ಏನ್ರೀ ತೊಂದ್ರೀ? ಏಕದಂ ಬುದ್ಧಿಜೀವಿ ಕಂಡಂಗ ಕಾಣ್ತಾನ ನಮ್ಮ ದೋಸ್ತ, ಅಂತ ಈ intellectual ಅನ್ನೋ ಮಂದಿ ಯಾವಾಗಲೂ ಗಡ್ಡ, ಉದ್ದ ಕೂದಲ ಎಲ್ಲಾ ಬಿಟಗೊಂಡು ಇರೋದನ್ನ ಹೇಳಿದೆ.

ಏನು ಲದ್ದಿಜೀವಿಯಾ? ಬರೋಬ್ಬರಿ ಹೇಳಿದಿ ನೋಡು. ಈ ಅವತಾರದಾಗ ಏಕದಂ ಲದ್ದಿಜೀವಿ ಕಂಡಂಗ ಕಾಣ್ತಾರ ನೋಡು. ಧಾರವಾಡ ಒಳಗ ಕುದರಿ ಟಾಂಗಾ ಹೋದ ಮ್ಯಾಲೆ ಲದ್ದಿ ನೋಡಬೇಕು ಅಂದ್ರ ಸ್ಯಾಂಪಲ್ಲಿಗೂ ಸಿಗ್ತಿದ್ದಿಲ್ಲ. ನಿಮ್ಮ ಗೆಳೆಯಾ ಲದ್ದಿಜೀವಿ ಆಗಿ ಬಿಟ್ಟರ ಬೆಷ್ಟ ಆತು, ಅಂತ ಹೇಳಿದರು. ನಾ ಹೇಳಿದ್ದು ಬುದ್ಧಿಜೀವಿ. ಬೇಕಂತನೇ ಚೀಪ್ಯಾನ ಹಣಿಲಿಕ್ಕೆ ಲದ್ದಿಜೀವಿ ಅಂದಾರ.

ವೈನಿ ಕೊಟ್ಟ ಆಖರೀ ವಾರ್ನಿಂಗ್ ಇಂದ ಚೀಪ್ಯಾ ಸ್ವಲ್ಪ ಥಂಡಾ ಹೊಡೆದ.

ನಾ ಕಟಿಂಗ್ ಮಾಡಸ್ತೇನಿ. ದಾಡಿ ಮಾತ್ರ ಮನಿಯೊಳಗೇ ಮಾಡ್ಕೋತ್ತೇನಿ. ನನಗ ಆ ಹಜಾಮ ಪಾಂಡು ಉಸ್ತ್ರಾ ತೊಗೊಂಡು ಕುತ್ತಿಗಿ ಹತ್ರ ತರೋದು ನೋಡಿದಾಗೆಲ್ಲ ಎಲ್ಲೆ ಇವ ನನ್ನ ಕುತ್ತಿಗಿ ಸೀಳಿ ಕೊಂದೇ ಬಿಡ್ತಾನೋ ಅಂತ ಘಾಬರಿ ಆಗಿ, ಕಣ್ಣಿಗೆ ಕತ್ತಲಿ ಬಂದು, ತಲಿ ಜೋಲಿ ಹೊಡೆದು, ಮಾರಿ ಉಸ್ತ್ರಕ್ಕ ತಿಕ್ಕಿ, ಮಾರಿ ಕೆತ್ತಿ, ರಕ್ತ ಬಂದು, ಪಾಂಡು ಉರಿ ಉರಿ ಪಟ್ಟಕಾ ಅದರ ಮ್ಯಾಲೆ ಇಟ್ಟು, ಡೆಟಾಲ್ ಹಚ್ಚಿ, ನಾ ಜಾಸ್ತಿ ಉರಿಗೆ ಮತ್ತ ಚೀರಿಕೊಂಡು, ರಾಮ ರಾಡಿ ಆಗ್ತದ. ಅದಕ್ಕ ಹಜಾಮತಿ ಒಂದೇ ಅಲ್ಲೆ ಮಾಡಿಸೋದು. ಶೇವಿಂಗ್ ಮನಿ ಒಳಗೇ, ಅಂತ ಕರಾರು ಹಾಕಿದ ಚೀಪ್ಯಾ.

ಉಸ್ತರಾ, ಕತ್ತಿ
ಶ್ರೀಪಾದ ರಾವ್!!! ದಾಡಿ ಮಾಡದೆ ಐದು ವಾರ ಆತು. ನಿಮ್ಮ ಆ ನಾಜೂಕ ಗಿಲಿಗಿಟ್ಟಿ ಮಚ್ಚಿ ಮೂರು ಬ್ಲೇಡ್ ಒಳಗ ಇಷ್ಟು ದೊಡ್ಡ ದಾಡಿ ಮಾಡಿಕೊಳ್ಳಲಿಕ್ಕೆ ಆಗೋದಿಲ್ಲ. ಬ್ಲೇಡ್ ಮುರಿದು ಹೋಗ್ತದ. ಮತ್ತ ಆಕಸ್ಮಾತ ಏನರೆ ಒಂದು ಹತ್ತು ಗಿಲಿಗಿಟ್ಟಿ ಮಚ್ಚಿ 3 ಬ್ಲೇಡ್ ಹಾಕಿ ಕೆರಕೊಂಡರೂ, ಏನೇ ಹೆರಕೊಂಡರೂ ನುಣುಪ ಅಂತೂ ಆಗೋದಿಲ್ಲ. ಹಾಂಗ ಮಾಡಿಕೊಂಡರ ನಿಮ್ಮ ಗಲ್ಲ ಹ್ಯಾಂಗ ಆಗ್ತದ ಅಂದ್ರ ವನವಾಸಿ ರಾಮದೇವರ ಗುಡಿ ಒಳಗ ಸಾಮೂಹಿಕ ಮುಂಜವಿ ಆದಾಗ ಗಡಿಬಿಡಿ ಒಳಗ ಕೆತ್ತಿದ ಬಡ ಬ್ರಾಹ್ಮಣ ವಟುಗಳ ಬೋಳುತಲಿ ಆದಂಗ ಆಗ್ತದ. ಹರಕು ಬರ್ಕು. ಪೂರ್ತಿ ಗಿಲಾಯ್ ಇಲ್ಲದ ಸಿಮೆಂಟ್ ಗ್ವಾಡಿ ಆದಂಗ ಆಗ್ತದ. ಮೂರು ತಿಂಗಳು ಕಾಶಿಗೆ ಹೋಗಿ ಬಂದ ಮಡಿ ಅಮ್ಮ ಪಣಿಯಮ್ಮನ ತಲಿ ಆದಂಗ ಆಗ್ತದ. ನೀವು ಆ ಪರಿ ಹರಕಾ ಬರಕಾ ರಫ್ ರಫ್ ಗಲ್ಲಾ ಇಟಗೊಂಡು ನನ್ನ ಬಾಜು ಮಲಕೊಂಡ್ರೀ ಅಂದ್ರ ಮುಂಜಾನೆ ಏಳೋ ತನಕ ನನ್ನ ಮಾರಿ ಪೂರ್ತಿ ಗೀರು ಗೀರು, ಅಂತ ಹೇಳಿದ ವೈನಿ ತುಟಿ ಕಚ್ಚಿಕೊಂಡರು. ಲಾಸ್ಟ್ ಲೈನ್ ಹೇಳಬಾರದಿತ್ತು ಅಂತ ಅಂದುಕೊಂಡರು. ಸ್ವಲ್ಪ ನಾಚಿಕೊಂಡರು.

ಗಿಲಿಗಿಟ್ಟಿ ಮಚ್ಚಿ  ಬ್ಲೇಡ್ ಮೂರು!!!! ಏನಪಾ ಇದು?

ಚೀಪ್ಯಾ ಮಂದಿ ಮಚ್ಚಿ ಅಂದ್ರ ಚಪ್ಪಲ್ ಕಾಲಿಗೆ ಹಾಕ್ಕೋಳ್ಳೋದು ಗೊತ್ತಿತ್ತು. ನೀ ಏನಲೇ ಮಚ್ಚಿ ಅಂದ್ರ ಚಪ್ಪಲ್ ಒಳಗ ದಾಡಿ ಹ್ಯಾಂಗ ಮಾಡ್ಕೋತ್ತಿಯೋ ಮಾರಾಯಾ? ಹಾಂ!!ಹಾಂ? - ಅಂತ ಕೇಳಿದೆ.

ಮಾರಾಯಾ ಮಾರಾಯಾ!!! ಅದು Gillette Mach 3 ಬ್ಲೇಡ್ ಅಂತ ಮಾರಾಯ. ಇಕಿ ರೂಪಿ ತನ್ನ ರೀತಿ ಒಳಗ ಓದಿಕೊಂಡು, ತನಗ ತಿಳಿದಾಂಗ ಗಿಲಿಗಿಟ್ಟಿ ಮಚ್ಚಿ ಮೂರು ಬ್ಲೇಡ್ ಅಂದು ಬಿಟ್ಟಳು. ನೀ ಅದಕ್ಕ ಮಚ್ಚಿ ಅಂದ್ರ ಚಪ್ಪಲ್ ಬೂಟು ಅದು ಇದು ಅಂತ ಹೇಳ್ತೀ. ಇಬ್ಬರೂ ಕೂಡಿ ಜೀವಾ ತಿಂತೀರಿ ನೋಡ್ರೀ, ಅಂತ ತಲಿ ಹಿಡಕೊಂಡ ಚೀಪ್ಯಾ.


ರೂಪಾ ವೈನಿ....ರೂಪಾ ವೈನಿ.....ನೀವು ಎಮ್ಮಿಕೇರಿ ಸಾಲಿ ಹೌದಲ್ಲರೀ? ನಾವು ನಿಮ್ಮ ಎಮ್ಮಿಕೇರಿ ಸಾಲಿಗೆ, ಎಮ್ಮಿಕೇರಿ ಕತ್ತಿಕೇರಿ, ಮಚ್ಚಿಲೆ ಹೊಡದ್ರ ಇಪ್ಪತ್ತು ಕೇರಿ ಅಂತ ಹೇಳಿ ಅಣಗಸ್ತಿದ್ದಿವಿ. ಹೀ!!! ಹೀ!!! - ಅಂತ ಹೇಳಿ ನಕ್ಕೆ.

ಸಾಕು ಸುಮ್ಮನ ಕೂಡು. ಕೆ ಬೋರ್ಡ್, ಕತ್ತಿ ಬೋರ್ಡ್, ಮಚ್ಚಿಲೆ ಹೊಡದ್ರ ಇಪ್ಪತ್ತು ಬೋರ್ಡ್ ಅಂತ ನಾವೂ ನಿಮ್ಮ ಕೆ ಬೋರ್ಡ್ ಸಾಲಿ ಅಣಗಿಸ್ತಿದ್ದಿವಿ, ಅಂತ ರೂಪಾ ವೈನಿ ರಿವರ್ಸ್ ಬಾರಿಸಿ ಬಿಟ್ಟರು. ಮಸ್ತ ಜೋರ ಇದ್ದಾರ ವೈನಿ. ಎಮ್ಮಿಕೇರಿ ಸಾಲಿ ಬಿಟ್ಟು ಕಮ್ಮಿ ಕಮ್ಮಿ ಅಂದ್ರೂ ಇಪ್ಪತ್ತು ವರ್ಷದ ಮ್ಯಾಲೆ ಆಗಿ ಹೋತು. ಆದರೂ ಕೆ ಬೋರ್ಡ್ ಸಾಲಿಗೆ ಮಚ್ಚಿಲೆ ಹೊಡೆಯೋ ಹಾಡು ಮಾತ್ರ ಮರ್ತಿಲ್ಲ.

ಚೀಪ್ಯಾ.....ಹೌದಲೇ....ವೈನಿ ಹೇಳೋ ಮಾತಿನ್ಯಾಗ ಒಂದು ಖರೆ ಅದ. ಆ ನಾಜೂಕ Gillette Mach 3 ಬ್ಲೇಡ್ ಒಳಗ ಒಂದು ಎರಡು ದಿವಸ ಶೇವ್ ಮಾಡಿಲ್ಲ ಅಂದ್ರ ಗಡ್ಡಾ ಕೆರಕೊಳ್ಳಲಿಕ್ಕೆ ಆಗೋದಿಲ್ಲ. ಇನ್ನು ನೀನು ಐದು ವಾರದಿಂದ ದಾಡಿ ಮಾಡಿಲ್ಲ ಅಂದ ಮ್ಯಾಲೆ ಹಜಾಮರ ಉಸ್ತ್ರಾ ಇಲ್ಲದೇ ದಾಡಿ ಆಗೋದಿಲ್ಲ ನೋಡಪಾ. ಹಜಾಮರ ಉಸ್ತ್ರಾ ಅಂದ್ರ ಕತ್ತಿಗೆ ಅಷ್ಟ್ಯಾಕ ಹೆದರ್ತಿಲೇ? ಪಾಪ ಪಾಂಡು ಉಸ್ತ್ರಾದಿಂದ ನಿನ್ನ ಕುತ್ತಿಗಿ ಸೀಳತಾನ? ಏನ ವಿಚಾರಲೇ ನಿನ್ನುವು? ಕಣ್ಣು ಮುಚ್ಚಿಗೊಂಡು ಕೂಡು. ಫುಲ್ ಕೆತ್ತಿ ಸಾಪ್ ಮಾಡಿ ಕೊಡ್ತಾನ. ಚಿಕಣಾ ಆಗಿ ಬಂದಿ ಅಂತ, ಅಂತ ಹೇಳಿದೆ.

ಆದರೂ..... ಅಂತ ರಾಗಾ ತೆಗೆದ ಚೀಪ್ಯಾ.

ಏನ್ರೀ ಮತ್ತ ಆದರೂ ಗಿದರೂ ಅಂತ ರಾಗಾ ತೆಗಿತೀರಿ? ಮಂಗೇಶ ಹೇಳಿದಾಂಗ ಸುಮ್ಮನ ಕಣ್ಣು ಮುಚ್ಚಿಗೊಂಡು ಕೂಡ್ರಿ. ಆ ಕೆಟ್ಟ ಉಸ್ತ್ರಾ ಒಟ್ಟ ನೋಡೇ ಬ್ಯಾಡ್ರೀ ನೀವು. ನಾ ಕಣ್ಣು ಮುಚ್ಚಿದ ಮ್ಯಾಲೆ ನಿನ್ನ ಕತ್ತಿ ತೆಗೆದು ನಿನ್ನ ಕೆಲಸಾ ಶುರು ಮಾಡಪಾ ಅಂತ ಪಾಂಡುಗ ಹೇಳೇ ಕಣ್ಣು ಮುಚ್ಚ್ರೀ. ತಿಳೀತ? - ಅಂತ ಹೇಳಿ ವೈನಿ ಮತ್ತ ಧೈರ್ಯಾ ತುಂಬೊ ರೀತಿ ಒಳಗ ಚೀಪ್ಯಾನ ಝಾಡಿಸಿದರು.

ಚೀಪ್ಯಾ.....ರಾಯಲ್ ಹೇರ್ ಕಟಿಂಗ್ ಸಲೂನಿಗೆ ಹೋಗಿ ಪಾಳಿ ಹಚ್ಚಿ ಬಂದು ಬಿಡಪಾ. ಇಲ್ಲಂದ್ರ ಮಾಳಮಡ್ಡಿ ಒಳಗ ಶ್ರಾವಣ ಮಾಸದಾಗ ಹಜಾಮತಿ, ದಾಡಿ ಮಾಡಿಸದೇ ವೀರಪ್ಪನ್, ಗಬ್ಬರ್ ಸಿಂಗ್ ಆದವರು  ಭಾಳ ಮಂದಿ ಇದ್ದಾರ. ಅವರದ್ದೆಲ್ಲಾ ಮಾಡಿ ಮುಗಿಸಿ ನಿನ್ನ ಪಾಳಿ ಬರೋ ತನಕಾ ಮುಂದಿನ ಶ್ರಾವಣ ಬರೋ ಟೈಮ್ ಆಗ್ತದ, ಅಂತ ಹೇಳಿದೆ.

ನೀವೇನೂ ಪಾಳಿ ಹಚ್ಚೋದು ಬ್ಯಾಡ್ರೀ ಶ್ರೀಪಾದ ರಾವ್. ನೀವು ಬೇಕಂತಲೇ ಮರ್ತು ಬಿಡ್ತೀರಿ. ನಾ ನಾಳೆ ಮುಂಜಾನೆ ಹಾಲು ತರಲಿಕ್ಕೆ ಹೋದಾಗ ಅಲ್ಲೆ ಹ್ಯಾಂಗೂ ಪಾಂಡು ಮಾತ್ರ ಮುಂಜಾನೆ ಮುಂಜಾನೆ ಹಜಾಮತಿ ಅಂಗಡಿ ಬಾಗಲಾ ತೆಗಿಲಿಕ್ಕೆ ಶುರು ಮಾಡಿರ್ತಾನ. ನಾನೇ ನಿಮ್ಮ ಪಾಳಿ ಹಚ್ಚಿ ಬಂದು ಬಿಡ್ತೇನಿ, ಅಂತ ರೂಪಾ ವೈನಿ ಮಹತ್ತರ ಜವಾಬ್ದಾರಿ ತೊಗೊಂಡ್ರು.

ಗಂಡನ ಸಲುವಾಗಿ ಯಮಧರ್ಮನ ಕಡೆ ಹೋಗಿ ಗಂಡನ ಪ್ರಾಣಾ ವಾಪಸ್ ಪಡಕೊಂಡು ಬಂದಾಕಿ ಸಾವಿತ್ರಿ. ಆದ್ರ ಹಜಾಮ್ ಪಾಂಡು ಕಡೆ ಹೋಗಿ, ಗಂಡನ ಹಜಾಮತಿಗೆ ಅಡ್ವಾನ್ಸ್ ಬುಕಿಂಗ್ ಅಂದ್ರ ಪಾಳಿ ಹಚ್ಚಿ ಬಂದ ಸ್ತ್ರೀಯರಲ್ಲಿ ನಮ್ಮ ರೂಪಾ ವೈನಿಯೇ ಮೊದಲನೇ ಅವರು ಇರಬೇಕು. ನ ಭೂತೋ ನ ಭವಿಷ್ಯತಿ!!! ಹಿಂದ ಆಗಿಲ್ಲ. ಮುಂದ ಆಗೋದೂ ಇಲ್ಲ!! ಆಹಾ!!! ಆಹಾ!!! ಚೀಪ್ಯಾ ನೀನು ಧನ್ಯ!!!!

ಇವರನ್ನ ಕರಕೊಂಡು ಹೋಗಿ ಮಾಡಿಸ್ಕೊಂಡು ಬಂದು ಬಿಡಪಾ - ಅಂತ ಚೀರ್ಕೊಂಡು ಚೀರ್ಕೊಂಡು ಹೇಳಿದರೂ ನಾ ಮಾತ್ರ ಚೀಪ್ಯಾನ ಹಜಾಮತಿ ಮಹೋತ್ಸವ ಕಾರ್ಯಕ್ರಮಕ್ಕ ಹೋಗೋದ್ರಿಂದ ತಪ್ಪಿಸಿಕೊಂಡೆ. ಅಲ್ಲಾ....ಹಜಾಮತಿ ಅಂಗಡಿಗೆ ಹೋಗಿ ಬಂದ ಮ್ಯಾಲೆ ಮತ್ತ ಸ್ನಾನಾ ಬ್ಯಾರೆ ಮಾಡಬೇಕು ನೋಡ್ರೀ. ಖಾಲಿ ಪೀಲಿ ವಾಟರ್ ವೇಸ್ಟ್!!! save water!!! save earth!!


No comments: