Friday, August 30, 2013

'ಮುದಕ'ರಿ ನಾಯಕರು ಮಲ್ಲಿಕಾರ್ಜುನ unisex ಬ್ಯೂಟಿ ಪಾರ್ಲರ್ ಗೆ ಹೋದಾಗ!

ಶ್ರಾವಣ ಮಾಸ ಮುಗೀತು. ಮಳಿನೂ ಕಮ್ಮಿ ಆತು. ಹಾಂಗs ಚೀಪ್ಯಾನ ಮನಿ ಕಡೆ ಹೋದೆ.

ಚೀಪ್ಯಾ ಪೇಪರ್ ಓದಿಕೋತ್ತ ಕೂತಿದ್ದ. ಮುಂಜಾನೆಯಿಂದ ಅದೇ 'ಸಂಯುಕ್ತ ಕರ್ನಾಟಕ' ಪೇಪರ್ ಎಷ್ಟು ಸರೆ ಓತ್ತಾನೋ ಈ ಪುಣ್ಯಾತ್ಮ!! ಚೀಪ್ಯಾ ಒಂದು 'ಎಕ್ಸಟ್ರಾ ಫಿಟ್ಟಿಂಗ್' ಬ್ಯಾರೆ ತಲಿ ಮ್ಯಾಲೆ ಫಿಟ್ ಮಾಡಿಕೊಂಡು ಕೂತಿದ್ದ.

ಏನಲೇ ಚೀಪ್ಯಾ ಇದು ಅವತಾರ? ಮನಿಯೊಳಗೂ ಟೊಪ್ಪಿಗಿ ಹಾಕ್ಕೊಂಡು ಕೂತಿ? ಅದೂ ಮುಂಜಿವಿ ಮಾಡಿಕೊಂಡ ಸಣ್ಣ ಹುಡುಗುರು ಹಾಕಿಕೊಳ್ಳುವಂತಹ ಟೊಪ್ಪಿಗಿ? ಎರಡನೇ ಸಲಾ ಮುಂಜಿವಿ ಮಾಡಿಕೊಂಡಿ? ಎಲ್ಲರೆ ಬಿಟ್ಟಿ ಒಳಗ ಸಾಮೂಹಿಕ ಮುಂಜಿವಿ ಕಾರ್ಯಕ್ರಮ ನೆಡದಿತ್ತು ಏನು? ಹಾಂ? ಹಾಂ? - ಅಂತ ಕೇಳಿದೆ.

ನಾ ಹೀಂಗ ಮುಂಜಿವಿ ಮಾಡಿಕೊಂಡು ಬಂದಿ ಏನು ಅಂತ ಕೇಳೋದ ನೋಡಿ ಚೀಪ್ಯಾ ಸ್ವಲ್ಪ ಘಾಬರಿ ಆದ. ಎಲ್ಲರೆ ನಾನು ಕಿಡಿಗೇಡಿ ಇವನ ಟೊಪ್ಪಿಗಿ ಹಾರಿಸಿಬಿಟ್ಟೇನಿ ಅಂತ ಹೆದರಿ, ಗಲ್ಲದ ಕೆಳಗೆ ಬಂದಿದ್ದ ಟೊಪ್ಪಿಗಿ ಸ್ಟ್ರಾಪ್ ಮತ್ತೂ ಘಟ್ಟೆ ಮಾಡಿಕೊಂಡು ಹಿಡಕೊಂಡ. ಹೇಳಿ ಕೇಳಿ ನಾವೆಲ್ಲಾ ಧಾರವಾಡ ಮಾಳಮಡ್ಡಿ ಭಟ್ಟರ ಸಾಲಿ ಹುಡಗೂರು. ಮುಂಜವಿ ಮಾಡಿಕೊಂಡು ಬಂದು ಟೊಪ್ಪಿಗಿ ಹಾರಿಸೊಂಡು, ಬೇರೆಯವರ ಟೊಪ್ಪಿಗಿ ಹಾರಿಸಿ ಎಲ್ಲಾ ನಮಗ ಭಾಳ ಅನುಭವ ಅದ.

ಅವನೌನ್! ವರ್ಷಕ್ಕ ಒಂದೋ ಎರಡೋ ಸಲ ಮುಂಜವಿ ಸೀಸನ್ ಬರ್ತದ ಅಂತ ಅನ್ನಸ್ತದ.  ಆವಾಗ ಸಾಲಿಯೊಳಗ ಹೀಂಗ ಕ್ಯಾಪ್ ಹಾಕಿಕೊಂಡು ಬರವರ ಸಂಖ್ಯೆ ಜಾಸ್ತಿ. ಯಾವಾಗ ಬೇಕು ಆವಾಗ ಅವರ ಟೊಪ್ಪಿಗಿ ಹಾರಿಸಿ ಮಜಾ ತೊಗೊಳ್ಳಿಕ್ಕೆ ಆಗ್ತಿದ್ದಿಲ್ಲ. ಯಾಕಂದ್ರ ಯಾರ ಟೊಪ್ಪಿಗಿಗೆ ಕೈ ಹಾಕ್ತೇವಿ ಆವಾ ಸುಮ್ಮನೆ ಏನೂ ಕೂಡಂಗಿಲ್ಲ. fight to death ಅನ್ನೋ ಹಾಂಗ ಅವನೂ ಕೈ ಕಾಲು ಎತ್ತರ ಪತ್ತರ ಆಡಿಸಿ, ಅವನೂ ಹೊಡೆತ ತಿಂದು, ನಮಗೂ ಹೊಡೆತ ತಿನ್ನಿಸೋ ರಿಸ್ಕ್ ಭಾಳ ಇರ್ತದ. ಟೊಪ್ಪಿಗಿ ಹಾರಿಸಲಿಕ್ಕೆ ಬೆಸ್ಟ್ ಟೈಮ್ ಅಂದ್ರ ದಿವಸಾ ಪ್ರೇಯರ್ ಅಂದ್ರ ಪ್ರಾರ್ಥನಾ ನೆಡದಾಗ. ಆವಾಗ ಒಂದು ಸ್ವಲ್ಪ ಹೊತ್ತು ಯಾರೂ ಏನೂ ಮಾಡದ ಸುಮ್ಮನೆ ನಿಂತಿರ್ತಾರ. ಯಾಕಂದ್ರ ಆವಾಗ ಕಮಕ್ಕ ಕಿಮಕ್ಕ ಅಂದ್ರ ಮಾಸ್ತರಗಳು ಹೀಂಗ ಹಾಕ್ಕೊಂಡು ಕಟಿತಾರ ಅಂದ್ರ ಅದರ ನೋವಿನ ಮುಂದ ಟೊಪ್ಪಿಗಿ ಹಾರಿಸಿಕೊಳ್ಳೋದರ ಸಂಕಟ ಏನೂ ಅಲ್ಲ. ಟೊಪ್ಪಿಗಿ ನಿರ್ಲಕ್ಷ ಮಾಡಿ, ಅದನ್ನ ತಲಿ ಬಿಟ್ಟು ಹಾರಲಿಕ್ಕೆ ಬಿಟ್ಟು, ನಂತರ ಟೊಪ್ಪಿಗಿ ಹಾರಿಸಿದವನ ಮ್ಯಾಲೆ ಸೇಡು ತೀರಿಸಿಕೊಳ್ಳೋದು ಬೆಹತರ್. ಹಾಂಗ ದಿನಾ ಸಾಲಿ ಪ್ರಾರ್ಥನಾ ನಡದಾಗೇ ಮ್ಯಾಕ್ಸಿಮಮ್ ಟೊಪ್ಪಿಗಿ ಹಾರ್ತಿದ್ದವು. ಅದರೊಳಗೂ ಯಾರರ ದೊಡ್ಡ ಮಂದಿ ಸತ್ತಾರ ಅಂತ ಮೌನ ಆಚರಿಸುವಾಗ ಟೊಪ್ಪಿಗಿ ಹಾರಿಸಿ, ಕಿಸಿಕಿಸಿ ನಕ್ಕು ಮೌನ ಭಂಗ ಮಾಡಲಿಲ್ಲ ಅಂದ್ರ  ಭಾಳ ಕಿಡಿಗೇಡಿ ಮಂದಿಗೆ ಊಟ ಕರಗತಿದ್ದಿಲ್ಲ, ನಿದ್ದಿ ಬರ್ತಿರಲಿಲ್ಲ.  ನಂತರ ಜಗಳಾ, ಹೊಡೆದಾಟ ಎಲ್ಲಾ ಟೊಪ್ಪಿಗಿ ಹಾರಿಸಿದವರಿಗೆ, ಹಾರಿಸಿಕೊಂಡವನಿಗೆ ಹಾಕ್ಕೊಂಡು ಹತ್ತತಿತ್ತು. ಯುನಿಫಾರ್ಮ್ ಎಲ್ಲಾ ಹರಕೊಂಡು, ಹೊಡೆದು, ಬಡಿದು, ಮಾರಿ ಚೀರಿ, ಅತ್ತು, ಕರೆದು, ಲಬೋ ಲಬೋ ಹೊಯ್ಕೊಂಡು, ಮಾಸ್ತರ್ ಬಂದು, ಸಿಕ್ಕಾಪಟ್ಟೆ ದನಾ ಬಡದಂಗ ಬಡಿದು, ಮಾಸ್ತರಿಗೆ ಅನ್ನಿಸಿರಬೇಕು - ಯಾಕರೆ ಈ ಮಂಗ್ಯಾನಿಕೆಗಳು ಮುಂಜ್ವೀ ಮತ್ತೊಂದು ಮಾಡಿಕೊಂಡು ಬರತಾರಪಾ? - ಅಂತ.

ಇದೆಲ್ಲಾ ಚೀಪ್ಯಾಗ ನೆನಪಾತೋ ಏನೋ ಗೊತ್ತಿಲ್ಲ. ಟೊಪ್ಪಿಗಿ ಘಟ್ಟೆ ಹಿಡಕೊಂಡು ಕೂತ. ಅಷ್ಟರಾಗ ಚೀಪ್ಯಾನ ಹೆಂಡತಿ ರೂಪಾ ವೈನಿ ಎಂಟ್ರೀ ಕೊಟ್ಟರು.

ಏನ್ರೀ ವೈನಿ? ಏನು ಇದು ಅವತಾರ ನಿಮ್ಮ ಪತಿದೇವರದ್ದು? ಮನಿಯೊಳಗೂ ಟೊಪ್ಪಿಗಿ ಹಾಕೊಂಡು ಕೂತಾರ? ಎಲ್ಲೆ ಮತ್ತ ನೀವು ಲಟ್ಟಣಿಗೆ ತೊಗೊಂಡು ತಲಿಗೆ ನಾಕು ಕೊಟ್ಟು ಗುಮ್ಮಟಿ ಎಬ್ಬಿಸಿ ಬಿಟ್ಟೀರೀ ಏನು? ಏನ್ರೀ ವೈನಿ? - ಅಂತ ಕೇಳಿದೆ.

ಸಾಕು ಬಿಡೋ ಮಂಗೇಶ. ಎಲ್ಲಾದಕ್ಕೂ ನನ್ನs ಕೆಟ್ಟಾಕಿ ಮಾಡ್ತೀ ನೀನು. ನೋಡು ನಿಮ್ಮ ಚೀಪ್ಯಾ ಸಾಹೇಬರು ಏನು ವೇಷ ಮಾಡಿಸ್ಕೊಂಡು ಬಂದಾರ ಅಂದವರೇ ವೈನಿ ಭಯಂಕರ ಕುಶಲತೆಯಿಂದ ಮಿಂಚಿನ ವೇಗದಲ್ಲಿ ಚೀಪ್ಯಾನ ಟೊಪ್ಪಿಗಿ ಸ್ಟ್ರಾಪ್ ಸಮೇತ ಹಾರಿಸಿ ಬಿಟ್ಟರು. ಅವರು ಹೇಳಿ ಕೇಳಿ ಎಮ್ಮಿಕೇರಿ ಸಾಲಿ ಸ್ಟೂಡೆಂಟ್. ಅಲ್ಲಿಯವರ ಟೊಪ್ಪಿಗಿ ಹಾರಿಸೋ ಸ್ಕಿಲ್ ಮುಂದ ನಮ್ಮ ಭಟ್ಟರ ಸಾಲಿ ಹುಡಗೂರ ಟೊಪ್ಪಿಗಿ ಕಾಪಾಡಿಕೊಳ್ಳುವ ಸ್ಕಿಲ್ ಎಲ್ಲೆ! ನೋ ಮ್ಯಾಚ್!

ಫುಲ್ ಬೋಳ ತಲಿ ಚೀಪ್ಯಾ!!!!! ಫುಲ್ ಬೋಳಂ ಭಟ್ಟಾ!!!

ಚೀಪ್ಯಾ!!!! ಏನಲೇ ಇದು ಲುಕ್? ಫುಲ್ ಗುಂಡ ಹೊಡಿಸಿ ಬಿಟ್ಟಿ? ಎಲ್ಲರೆ ತಿರುಪತಿಗೆ ಹೋಗಿದ್ದಿ ಏನು? ಮತ್ತ ಪ್ರಸಾದ ಅಂದ್ರ ದೊಡ್ಡ ಉಂಡಿ ತಂದಿಯೋ ಇಲ್ಲಪಾ? ನಮಗ ಪ್ರಸಾದ ಇಲ್ಲಾ? - ಅಂತ ಕೇಳಿದೆ.

ಯಾವ ಹುಚ್ಚ ಸೂಳೆಮಗ ತಲಿ ಹ್ಯಾಂಗರ ಬೋಳಿಸಿಕೊಂಡು ಹೋಗಲಿ ನಮಗೇನು? ತಿರುಪತಿಗೆ ಹೋದವರು ಮರೀದೇ ದೊಡ್ಡ ಉಂಡಿ ಪ್ರಸಾದ ತಂದು ಕೊಟ್ಟರೆ ಸಾಕು.

ತಿರುಪತಿನೂ ಇಲ್ಲ ಪುಟಪರ್ತಿನೂ ಇಲ್ಲ. ಮಾಳಮಡ್ಡಿ ಒಳಗs ತಿಂಗಳಾ ಖಾಯಂ ಎಲ್ಲೆ ಮುಡಿ ಕೊಡ್ತಾರ ಅಲ್ಲೇ ಹೋಗಿ, ಈ ಸರೆ ಏನೋ ಜಾಸ್ತಿ ಭಕ್ತಿ ಬಂದು, ಎಕ್ಸಟ್ರಾ ಫೀಲಿಂಗ್ ಒಳಗ ಫುಲ್ ಮುಡಿ ಕೊಟ್ಟು ಬಂದು ಬಿಟ್ಟಾರ ನಮ್ಮ ಮನಿಯವರು. ಬೋಳ ತಲಿ ಅನಿಷ್ಟ ಲುಕ್. ಬೋಳ ತಲಿಯವರ ಮಾರಿ ನೋಡಿದ್ರ ಅರಿಷ್ಟ ಅಂತ ಹೇಳಿ ನಾನೇ ಟೊಪ್ಪಿಗಿ ಹಾಕ್ಕೋಳ್ಳರಿ ಅಂತ ಹೇಳಿ ಹಾಕಿಸೇನಿ, ಅಂತ ವೈನಿ ತಲಿ ತಲಿ ಚಚ್ಚಿಕೊಂಡರು.

ಅಲ್ಲಲೇ ಚೀಪ್ಯಾ..... ಮನ್ನಿ ಮನ್ನೇ ಈ ಸಲ ಶ್ರಾವಣ ಮುಗದ ಮ್ಯಾಲೂ ಹಜಾಮತಿ ಮಾಡಿಸದೇ ಹಿಪ್ಪಿ ಮಂದಿ ಗತೆ ಗಡ್ಡಾ ಬಾವಾಜಿ ಆಗೇ ಇರ್ತೆನಿ ಅಂದಿದ್ದಿ. ರೂಪಾ ವೈನಿ ಹಾಕಿ ಝಾಡಿಸಿದ ಮೇಲೆ ಮತ್ತ ನಾ ಎಲ್ಲಾ ಸಮಾಧಾನ ಮಾಡಿದ ಮ್ಯಾಲೆ ಅಂತೂ ಇಂತೂ ಒಪ್ಪಿ ರಾಯಲ್ ಹೇರ್ ಕಟಿಂಗ್ ಸಲೂನ್ ಒಳಗ ಕಟಿಂಗ್ ಮಾಡಿಸಿಕೊಂಡು ಬರ್ತೇನಿ ಅಂದಿದ್ದಿ. ಈಗ ಪೂರ್ತಿ ಉಲ್ಟಾ ಹೊಡದು ತಲಿ ಪೂರ್ತಿ ಬೋಳಿಸಿಕೊಂಡು ಬಂದು ಬಿಟ್ಟಿಯಲ್ಲೋ ಮಾರಾಯಾ. ಮುಂದಿನ ಶ್ರಾವಣದ ತನಕಾ ಕಟಿಂಗ್ ಬ್ಯಾಡ ನೋಡು. ಆದರೂ ಗಂಡಸೂರು ಮಡಿ ಅಮ್ಮಗೂಳ ಹಾಂಗ ತಲಿ ಬೋಳಿಸಿಕೊಂಡು ಕೂಡೋದು ಚೊಲೋ ಕಾಣಸಂಗಿಲ್ಲ ನೋಡಪಾ, ಅಂತ ಹೇಳಿದೆ.

ಹೋಗ್ಲಿ ಬಿಡಪಾ....ಎಲ್ಲಾ ಆಮೇಲೆ ಹೇಳತೇನಿ. ನಡಿ ಒಂದು ರೌಂಡ್ ಹೊರಗ ಹೋಗಿ ಬರೋಣ. ಹ್ಯಾಂಗೂ ನನಗೂ ಮನಿ ಒಳಗ ಕೂತು ಸಾಕಾಗ್ಯದ, ಅಂತ ಚೀಪ್ಯಾ ಗಡಿಬಿಡಿ ಮಾಡಿ ಎಳಕೊಂಡು ಹೊಂಟ. ಇನ್ನೂ ಚಹಾ ಬ್ಯಾರೆ ಬಂದಿದ್ದಿಲ್ಲ. ಇವರ ಮನಿಗೆ ಬಂದಾಗ ಏನಿಲ್ಲಂದ್ರೂ ಮಿನಿಮಂ ಚಹಾ ಸಿಕ್ಕೇ ಸಿಗ್ತದ. ಇವತ್ತು ಅದಕ್ಕೂ ಖೋತಾ ಮಾಡಿಸಿ ಲಗೂನ ಮನಿ ಬಿಟ್ಟು ಓಡಿಸಿಕೊಂಡು ಹೊಂಟು ಬಿಟ್ಟಾನ ಚೀಪ್ಯಾ.

ಚೀಪ್ಯಾನ ಮನಿ ಬಿಟ್ಟು ಬಂದ್ವಿ. ದಾರಿಯೊಳಗ ಸಾವಿರ ಮಂದಿ ಚೀಪ್ಯಾಗ ನಮಸ್ಕಾರ! ನಮಸ್ಕಾರ! ಅಂದು ಯಾಕ್ರೀ ಟೊಪ್ಪಿಗಿ ಹಾಕಿರಿ? ಮನ್ಯಾಗ ಯಾರು ಸತ್ರು? ಕ್ರಿಯಾಕರ್ಮ ಮುಗಿಸಿ ಬಂದು ಟೊಪ್ಪಿಗಿ ಹಾಕ್ಕೊಂಡಿರೀ ಏನು? - ಅಂತ ಕೇಳಿದರು. ಚೀಪ್ಯಾ ಎಲ್ಲರಿಗೂ ದೇಶಾವರಿ ನಗಿ ಕೊಟ್ಟಗೋತ್ತ ಬಂದ.

ಏನಾತಲೇ ಚೀಪ್ಯಾ? ಹೀಂಗ ಸಡನ್ ಆಗಿ ತಲಿ ಬೋಳಿಸಿಕೊಳ್ಳುವಂತಹ ಬಂಡಾಯಕಾರಿ ನಿರ್ಣಯ ತೊಗೊಂಡುಬಿಟ್ಟಿ? ಹಾಂ? ಹಾಂ? - ಅಂತ ಕೇಳಿದೆ.

ಏ ಇವನs..... ಅದು ಒಂದು ಧೋಖಾ ಆತೋ. ಆ ಧೋಖಾದಾಗ ಒಂದು ಕಡೆ ಅರ್ಧಾ ತಲಿ ಬೋಳಿಸಿಕೊಂಡು ಇನ್ನೊಂದು ಕಡೆ ಉಳಿದ ಅರ್ಧಾ ಬೋಳಿಸಿಕೊಳ್ಳೋ ಹಾಂಗ  ಆತು, ಅಂತ ಮುಗುಮ್ಮಾಗಿ ಹೇಳಿದ.

ಹಾಂ!!!! ಡ್ರಿಂಕ್ಸ್ ಒಂದು ಹೋಟೆಲ್ಲಿನ್ಯಾಗ, ಊಟ ಮತ್ತೊಂದು ಹೋಟೆಲ್ಲಿನ್ಯಾಗ, ಊಟದ ನಂತರ ಡಸ್ಸರ್ಟ್ ಇನ್ನೊಂದು ಕಡೆ, ನಂತರದ ಚುಟ್ಟಾ ಪಾನು ಗುಟಕಾ ಚೀಟಿ ಮತ್ತೊಂದು ಕಡೆ ಮಾಡವರು ಇದ್ದಾರ ಬಿಡ್ರೀ. ಆದ್ರ ಒಂದು ಅರ್ಧಾ ಹಜಾಮತಿ ಒಂದು ಕಡೆ ಮತ್ತ ಉಳಿದ ಇನ್ನೊಂದು ಅರ್ಧಾ ಮತ್ತೊಂದು ಕಡೆ ಮಾಡಿಸಿಕೊಳ್ಳೋ ಮಂದಿಯ ಬಗ್ಗೆ ಇನ್ನೂ ಕೇಳಿದ್ದಿಲ್ಲ ಬಿಡ್ರೀ.

ಯಾಕಲೇ ಚೀಪ್ಯಾ...ನಿನಗ ಕಟಿಂಗ್ ಮಾಡೋವಾಗ  ನಡುವೆಯೇ ಹಜಾಮ ಗೊಟಕ್ಕ್ ಅಂದ ಏನು? ಏನು ಹಾರ್ಟ್ ಫೇಲ್ ಆತ? ಆವಾ ಅರ್ಧ ಮಾಡಿ ಹೋಗಿದ್ದ ಕಟಿಂಗ್ ಬೇರೆ ಯಾರೋ ಕಡೆ ಹೋಗಿ ಪೂರ್ತಿ ಮಾಡಿಸಿಕೊಂಡು ಬಂದಿ ಏನಪಾ? - ಅಂತ ಕೇಳಿದೆ.

ಹಾಂಗೇನು ಇಲ್ಲ. ಸ್ವಲ್ಪ misunderstanding ಒಳಗೆ ಧೋಖಾ ಆಗಿಬಿಡ್ತು, ಅಂತ ಹೇಳಿ ಮಸ್ತ ಸುಮ್ಮನಾದ ಚೀಪ್ಯಾ.

ಏನಾತು ಹೇಳಲೇ? - ಅಂತ ಕೇಳಿದೆ.

ಅದು ನೋಡ....ಆವತ್ತು ಹಜಾಮತಿಗೆ ಪಾಳೆ ಹಚ್ಚಿದ ದಿವಸ ನಮ್ಮ ಪಾಂಡುನ ಹಜಾಮತಿ ಅಂಗಡಿ ಅಂದ್ರ 'ರಾಯರ' ಹೇರ್ ಕಟಿಂಗ್ ಸಲೂನಿಗೆ ಹೊಂಟಿದ್ದೆ ಏನಪಾ......ಅಂತ ಚೀಪ್ಯಾ ಕಥಿ ಶುರು ಮಾಡಿದ.

ಲೇ ಅದು ರಾಯಲ್ ಹೇರ್ ಕಟಿಂಗ್ ಸಲೂನ್ ಅಂತ. ಅದಕ್ಕೂ ಯಾಕ ರಾಯರನ್ನ ತಂದು ಹಚ್ಚತಿಯೋ ಮಾರಾಯಾ? - ಅಂತ ಕೇಳಿದೆ.

ಅದು ರಾಯಲ್ ಅಂತನೇ. ಗೊತ್ತಪಾ. ನಮ್ಮ ಮಾಳಮಡ್ಡಿ ಮಂದಿ ಖಾಯಂ ಆಗಿ ಹೋಗೋದು ಅಂದ್ರ ಒಂದು ರಾಯರ ಮಠಕ್ಕ, ಇನ್ನೊಂದು ರಾಯಲ್ ಹೇರ್ ಕಟಿಂಗ್ ಸಲೂನಿಗೆ. ಎಷ್ಟೋ ಮಂದಿ ಬ್ರಾಹ್ಮರು ಅದೇ ಸಲೂನಿಗೆ ಹೋಗಿ ತಾಸುಗಟ್ಟಲೆ ಕೂತು ಕಟಿಂಗ್ ಮಾಡಿಸ್ಕೊಂಡು ಬರೋದು ಯಾಕ ಅಂದ್ರ ಅವರಿಗೆ ಆ ರಾಯಲ್ ಅನ್ನೋದು ರಾಯರ ಅಂತ ಕೇಳಿ ರಾಯರ ಮಠದಾಗ ಕೂತಾಗಿನ ಫೀಲಿಂಗೇ ಬರ್ತದ ಅಂತ. ಅದಕ್ಕ ರಾಯರ ಹೇರ್ ಕಟಿಂಗ್ ಸಲೂನ್ ಅಂದೆ. ಸುಮ್ಮನೆ ಕೇಳೋ....ಅಂತ ಚೀಪ್ಯಾ ಮುಂದುವರಿಸಿದ.

ಹ್ಞೂ....ಹ್ಞೂ....ನೀ ಹೇಳಪಾ ಬೋಳ್ಯಾ.....ಅಂತ ಹೇಳಿದೆ.

ಏನಂದೀ? - ಅಂತ ಕಣ್ಣು ಕೆಕ್ಕರಿಸಿ ಕೇಳಿದ ಚೀಪ್ಯಾ.

ಏನಿಲ್ಲ. ಮುಂದ ಹೇಳು....ಅಂತ ಹೇಳಿದೆ.

ನಾನು ನಡಕೊಂಡು ಹೋಗ್ತ ಇರೋವಾಗ ಯಾರೋ ಒಬ್ಬವ ರಿಕ್ಷಾ ಒಳಗ ಏನೋ ಒದರಿಕೋತ್ತ ಹೊಂಟಿದ್ದ ಏನಪಾ. ಲೌಡ್ ಸ್ಪೀಕರ್ ಕೆಟ್ಟಿತ್ತು. ಆದ್ರ ಆವಾ ಒಗಿಲಿಕತ್ತಿದ್ದ ಒಂದು ಹ್ಯಾಂಡ್ ಬಿಲ್ ಸಿಕ್ಕಿತು, ಅಂತ ಏನೋ ಹೇಳಿದ.

ಏನಿತ್ತು ಆ ಪಾಂಪ್ಲೆಟ್ ಒಳಗ? ಹೋಗಿ ಸ್ವಚ್ಚ ಬೋಳಿಸ್ಕೋ, ಡಿಸ್ಕೌಂಟ್ ಒಳಗ ಮಾಡಿ ಕೊಡ್ತಾರ ಅಂತ ಇತ್ತು ಏನು? - ಅಂತ ಕೇಳಿದೆ.

ಇಲ್ಲಪಾ.....ಮಲ್ಲಿಕಾರ್ಜುನ ಯುನಿಸೆಕ್ಸ್ ಬ್ಯೂಟಿ ಪಾರ್ಲರ್ & ಸ್ಪಾ ಅಂತ ಇತ್ತಪಾ. ಗಂಡಸರು ಹೆಂಗಸರು ಇಬ್ಬರಿಗೂ ಎಲ್ಲಾ ತರಹದ ಹಜಾಮತಿ, ಎಲ್ಲ ತರಹದ ಮಸಾಜ್ ಹಾಗು ಇತರೆ ಸೇವೆಗಳನ್ನು ನುರಿತ ಹುಡುಗ ಹುಡುಗಿಯರು ಮಾಡುತ್ತಾರೆ. ಮಲ್ಲಿಕಾ ಶೆರಾವತ್ ಮತ್ತ ಅರ್ಜುನ್ ರಾಮಪಾಲ ಇಬ್ಬರೂ ಕೆಟ್ಟ naughty ಆಗಿ ಕಣ್ಣು ಹೊಡೆದ ಚಿತ್ರ ಇತ್ತು. ಬರೇ ನೂರ ಐವತ್ತು ರೂಪಾಯಿ ಫಾರ್ ಜೆಂಟ್ಸ್ ಹಜಾಮತಿ, ಹತ್ತು ನಿಮಿಷ ಮಸಾಜ್ ಉಚಿತ. ಇತರೆ ಅನೇಕ ಸೇವೆಗಳು ಲಭ್ಯ. ಒಮ್ಮೆ ಬನ್ನಿ. ಒಮ್ಮೆ ಬಂದು ಹೋದವರು ಮತ್ತೆ ಮತ್ತೆ ಬರುತ್ತಲೇ ಇರುತ್ತೀರಿ ಅಂತ ಇತ್ತಪಾ, ಅಂತ ಹೇಳಿದ ಚೀಪ್ಯಾ.

ಹಾಂ!!! ಮಲ್ಲಿಕಾರ್ಜುನ ಸೆಕ್ಸ್ ಪಾರ್ಲರಾ? ಹೆಸರು ಕೇಳಿದರೇ ಅಂಜಿಕಿ ಬರ್ತದಲ್ಲೋ ಮಾರಾಯ. ನೀ ಈ ಸರೆ ಕಟಿಂಗ್ ಮಾಡಿಸಲಿಕ್ಕೆ ಅಲ್ಲೆ ಹೋದಿ ಏನು? ನೂರಾ ಐವತ್ತು ರುಪಾಯಿ ತೊಗೊಂಡು ತಲಿ ಬೋಳಿಸಿ ಕಳಿಸಿದರ? ಸಾರ್ಥಕ ಆತು. ನಮ್ಮ ಪಾಂಡು ಕಡೆ ಹೋಗಿದ್ರ ಇಪ್ಪತ್ತು ರೂಪಾಯಿ ಒಳಗ ಮಸ್ತ ಕಟಿಂಗ್ ಮಾಡಿ, ಬನಿಯನ್ ಎತ್ತಿದ ಕೂಡಲೇ ಬಗಲಾಗೂ ಸಾಫ್ ಮಾಡಿ, ಉಗರು ಸಹ ತೆಗೆದು, ಹತ್ತು ನಿಮಿಶಲ್ಲ ನೀ ಸಾಕು ಅನ್ನೋ ತನಕಾ ಮಸಾಜ್ ಮಾಡಿ ಕಳಸ್ತಿದ್ದ. ಅದ್ಯಾಕ ಅದು ಆ ಹೊಸಾ ಮಲ್ಲಿಕಾರ್ಜುನ ಸೆಕ್ಸ್ ಸಲೂನಿಗೆ ಹೋದ್ಯೋ ಮಾರಾಯಾ? ಅಂತ ಕೇಳಿದೆ.

ಭಾಳ ಮುದಕರಿ ನಾಯಕ ಆಗಿ ಬಿಟ್ಟೇನಿ, ಅದಕ್ಕ ಅಲ್ಲೆ ಹೋಗಿ ಚಂದ ಆಗಿ ಬರೋಣ ಅಂತ ಹೇಳಿ ನೋಡಪಾ, ಅಂದ ಚೀಪ್ಯಾ.

ಹಾಂ!! ಹಾಂ!!! ಮುದಕರಿ ನಾಯಕ!!! ಚಿತ್ರದುರ್ಗದ ಮಹಾ ಗಂಡುಗಲಿ ರಾಜಾ ಮದಕರಿ ನಾಯಕ ಗೊತ್ತಿದ್ದ. ಇವಾ ಏನೋ ಮುದಕರಿ ನಾಯಕ ಅನ್ನಲಿಕತ್ತಾನ. ಮದಕರಿ ಮುದಕಾ ಆದ ಕೂಡಲೇ ಮುದಕರಿ ನಾಯಕ ಆಗಿಬಿಟ್ಟನೋ ಹೇಗೆ? ಹಾಂ?!!

ಏನಲೇ ಅದು ನೀ ಮುದಕರಿ ನಾಯಕ ಆಗೋದು? - ಅಂತ ಕೇಳಿದೆ.

ಮನ್ನೆ ನಮ್ಮ ಕ್ಲಾಸಿನ ಒಬ್ಬಾಕಿ ಪುರಾನೀ ದೋಸ್ತ ಸಿಕ್ಕಿದ್ದಳು. ಅಕಿಗೆ ನನ್ನ ಗುರ್ತ ಸಿಗಲಿಲ್ಲ. ನಾನೇ ಹೋಗಿ ಮಾತಾಡಿಸಿ, ನನ್ನ ಗುರ್ತ ಸಿಕ್ಕತೇನವಾ? ಅಂತ ಕೇಳಿದೆ. ನನ್ನ ಗತೇನs ಇನ್ನೊಬ್ಬವ 'ತರುಣ್ ನಾಯಕ್' ಅಂತ ಇದ್ದ ನೋಡು, ಆವಾ ಅಕಿಗೆ ನೆನಪ ಆಗಿರಬೇಕು. ಅದಕ್ಕ ಅಕಿ ನನಗ, ನೀವು ತರುಣ್ ನಾಯಕ್ ಅವರೇನು? ಅಂತ ಕೇಳಿದಳು. ನನಗ ನಗು ಬಂತು. ಎಲ್ಲಿ ತರುಣರಿ? ವಯಸ್ಸಾಗಿ ಮುದಕ ಆಗಿ ಬಿಟ್ಟೇನಿ. ನೀ ಮಾತ್ರ ಇನ್ನೂ ಸ್ವೀಟ್ ಸಿಕ್ಸ್ಟೀನ್, ಸೆಕ್ಸಿ ಸೆವೆಂಟೀನ ಇದ್ದಂಗ ಇದ್ದಿ ನೋಡು ಅಂದೆ. ಅವನೌನ್ ಅಕಿ ಜೋಡಿ ಅಕಿ ಕಿಡಿಗೇಡಿ ಮಗಳು ಸಹಿತ ಇದ್ದಳು. ಅಕಿ ಕಿಡಿಗೇಡಿ ಮಗಳು, ಮಾಮಾ ನೀವು ತರುಣ್ ನಾಯಕ್ ಅಲ್ಲಾ ಅಂದ್ರ 'ಮುದಕ ನಾಯಕ್' ಏನು? ಮದಕರಿ ನಾಯಕ್ ಅಂತ ಇದ್ದ. ನಮ್ಮ ಟೆಕ್ಸ್ಟ್ ಬುಕ್ ಒಳಗ ಅದ. ಆವಾ ಮದಕರಿ ನಾಯಕ. ನೀವು ಮುದಕರಿ ನಾಯಕ ನೋಡ್ರೀ ಅಂದು ಖೀ ಖೀ ಅಂತ ನಕ್ಕು ಬಿಟ್ಟಳು. ಅದನ್ನ ಕೇಳಿ ಅವರ ಅವ್ವ ಸಹ ನಕ್ಕಳು. ಮಾಜಿ ಸುಂದರಿ ನಮ್ಮ ಕ್ಲಾಸ್ ಮೇಟ್ ಮತ್ತ ಅಕಿ ಮಗಳು ಹಾಲಿ ಸುಂದರಿ ಇಬ್ಬರೂ ನನ್ನ ಮುದಕರಿ ನಾಯಕ, ಮುದಕರಿ ನಾಯಕ ಅಂತ ಜೋಕ್ ಮಾಡಿ ಮಾಡಿ ನನಗ ಭಾಳ ಮುದಕ ಆಗಿರೋ ಫೀಲಿಂಗ್ ಮತ್ತೂ ಜೋರ್ ಬರೋ ಹಾಂಗ ಮಾಡಿ ಬಿಟ್ಟರು, ಅಂತ ಹೇಳಿದ ಚೀಪ್ಯಾ.

ಏ.....ಹೋಗಲೇ....ಎಲ್ಲೋ ಒಂದು ನಾಲ್ವತ್ತು ವರ್ಷ ಆತು ಅಂದ್ರ ಮುದಕಾ ಮುದಕರಿ ಅದು ಇದು ಅನ್ನೋದಾ? ಹಾಂ? ಹಾಂ? 'ಹುಣಸೆ ಮುಪ್ಪಾದರೆ ಹುಳಿ ಮುಪ್ಪೇ' ಅಂತ ಗಾದಿ ಮಾತೇ ಅದ ಅಲ್ಲೋ. ಮತ್ತ? ಜೈಲಿನ್ಯಾಗ ಕೂತ ಸಂಜಯ್ ದತ್ತನ್ನ ನೋಡು. ಐವತ್ತ ಆದ ಮ್ಯಾಲೆ ಟ್ವಿನ್ ಮಕ್ಕಳಾ ಮಾಡಿ ಬಿಟ್ಟ. ಹಾಂಗಪಾ. ನಮ್ಮ ಕ್ಲಾಸಿನ ಅಕಿ ಮಾಜಿ ಸುಂದರಿಗೂ ಏನರೆ ಹೇಳಿ ಅಣಗಿಸಿ ಕಳಿಸಬೇಕಾಗಿತ್ತು. ನನಗ ಎಲ್ಲರೆ ಸಿಕ್ಕು ಮುದಕರಿ ಅನ್ನಲಿ ತಡಿ ಅಕಿ, ಅಂತ ಹೇಳಿದೆ.

ಹ್ಞೂ.....ಹೀಂಗ ಮುದಕರಿ ಅಂತ ಅನ್ನಿಸಿಕೊಂಡು ಮುದಕ ಆದ ಫೀಲಿಂಗ್ ಒಳಗ ಮಲ್ಲಿಕಾರ್ಜುನ ಹಜಾಮತಿ ಅಂಗಡಿಗೆ ಹೋದಿ ಅಂತ ಆತು. ಮುಂದ? - ಅಂತ ಕೇಳಿದೆ.
ಮಲ್ಲಿಕಾರ್ಜುನ ಹೋಗಿ ಕರೀನಾ ಬಂದದ. ಯುನಿಸೆಕ್ಸ್ ಮಾತ್ರ ಹೋಗಿಲ್ಲ!

ಹೋದೆ ಮಾರಾಯಾ. ಏನು ಲುಕ್ಸ್ ಅಂತಿ? ನಮ್ಮ ರಾಯಲ್ ಹೇರ್ ಕಟಿಂಗ್ ಸಲೂನ್ ಗೆ ಮತ್ತ ಮಲ್ಲಿಕಾರ್ಜುನ ಪಾರ್ಲರ್ ಗೆ
ಭಾರೀ ವ್ಯತ್ಯಾಸ. ಎಲ್ಲಾ ಕಡೆ ಘಮ ಘಮ ವಾಸಿನಿ. ಅವನೌನ್ ರಾಯಲ್ ಹೇರ್ ಕಟಿಂಗ್ ಸಲೂನ್ ಹೊಕ್ಕಿ ಅಂದ್ರ ಸ್ನಾನಾ ಮಾಡದೆ ಬಂದ ಇಡೀ ಮಾಳಮಡ್ಡಿ ಗಂಡಸೂರ ವಾಸನಿ. ಇಲ್ಲೆ ಹಾಂಗಲ್ಲ ಮಸ್ತ ಮಸ್ತ. ಅವನೌನ್ ಒಂದು ದೊಡ್ಡ ಮದವೀ ಹಾಲ್ ಸೈಜ್, ಮಸ್ತ ಮಸ್ತ ಮೆತ್ತನೆ ಕುರ್ಚಿಗಳು, ಚಂದ ಚಂದ ಹಜಾಮ ಹಜಾಮಿಯರು, ಹೋದ ಕೂಡಲೇ ಗುಡ್ ಮಾರ್ನಿಂಗ್ ಅಂದು ಮಸ್ತ ಸ್ಮೈಲ್ ಕೊಟ್ಟು ನಕ್ಕು ರೊಕ್ಕಾ ಬೋಳಿಸಾಕಿ, ಹೀಂಗ ಒಂದು ಟೈಪ್ ಇಂದ್ರನಗರಿ ಇದ್ದಂಗ ಇತ್ತು ನೋಡಪಾ, ಅಂತ ಚೀಪ್ಯಾ ಹೊಸಾ ಸಲೂನ್ ಬಗ್ಗೆ ಹೇಳಿಕೊತ್ತ ಹೋದ. ಇಷ್ಟೆಲ್ಲಾ ಮಾಡ್ಯಾರ ಅಂದಾ ಮ್ಯಾಲೆ ಒಂದು ನೂರಾ ಐವತ್ತು ರುಪಾಯಿ ಚಾರ್ಜ್ ಮಾಡಲಿಕ್ಕೆ ಬೇಕು ಬಿಡ್ರೀ.

ನನ್ನ ಪಾಳಿ ಬಂತಪಾ. ಹೋಗಿ ಕೂತರ ಯಾರೋ ಒಬ್ಬವ ಗಂಡಸೇ ಕತ್ತರಿ ಕಿಚ್ ಕಿಚ್ ಅಂತ ಮಾಡಿಕೋತ್ತ ಬಂದು ಬಿಟ್ಟ. ಕೇಳಿದರೆ, ನಾವು ಇನ್ನೂ ಅಷ್ಟು ಫಾರಿನ್ ಆಗಿಲ್ಲ. ಗಂಡಸೂರಿಗೆ ಗಂಡಸೂರೆ ಎಲ್ಲಾ ಮಾಡೋದು. ಹೆಂಗಸೂರಿಗೆ ಹೆಂಗಸೂರೆ ಎಲ್ಲಾ ಮಾಡೋದು ಅಂದು ಬಿಟ್ಟ. ಹೋಗ್ಗೋ!!! ಏನೋ ತಿಳಕೊಂಡು ಬಂದ ನಮಗ ಸ್ವಲ್ಪ ನಿರಾಶಾ ಆತು. ಇರ್ಲಿ ಇವಾ ಹಜಾಮ್ ಸೂಳೆಮಗ ಕಟಿಂಗ್ ಮಾಡಿ ಹಾಳಾಗಿ ಹೋಗ್ಲಿ. ನಂತರ ಮಸಾಜ್ ಮಾಡಲಿಕ್ಕೆ ಯಾರರ ಹುಡುಗಿ ಬಂದರೂ ಬರಬಹುದು ಅಂತ ಆಶಾ ಇಟ್ಟಕೊಂಡು ಅವನೌನ್ ತಲಿ ಬಗ್ಗಿಸಿ ಕೂತೆ ಏನಪಾ, ಅಂತ ಹೇಳಿದ ಚೀಪ್ಯಾ ಬ್ರೇಕ್ ತೊಗೊಂಡ.

ಮುಂದ?

ಮುಂದೇನು? ಈ ಹಾಪ್ ಸೂಳೆಮಗ ಒಂದು ತಾಸು ತೊಂಗೊಂಡು ಇಲಿ ತಿಂದಂಗ ಏನೋ ಒಂದು ಕಟಿಂಗ್ ಮಾಡಿ ಮುಗಿಸಿದ. ನೋಡಿದ್ರ ನಮ್ಮ ಪಾಂಡುನೇ ಇನ್ನೂ ಮಸ್ತ ಮಾಡ್ತಿದ್ದ ಅಂತ ಅನ್ನಿಸ್ತು. ಇರ್ಲಿ ತೊಗೋ ಅಂತ ಬಿಟ್ಟೆ. 150 ರೂಪಾಯಿ ಒಳಗ included ಇದ್ದ ಒಂದು ಹತ್ತು ನಿಮಿಷದ ಮಸಾಜ್ ಬ್ಯಾರೆ ಕಾಟಾಚಾರಕ್ಕ ಅಂತ ಅವನೇ ಮಾಡಿ ಮುಗಿಸಿದ. ಅದೂ ಏನ ಅಷ್ಟು ಮಜಾ ಬರಲಿಲ್ಲ. ಆವಾಗ ಗೊತ್ತಾತು ಈ ಹಲ್ಕಟ್ ಸೂಳೆಮಕ್ಕಳ ಸ್ಕೀಮ್. ಏನೇನೋ ಹಾಕ್ಕೊಂಡು ಸುಳ್ಳ ಸುಳ್ಳ advertisement ಕೊಟ್ಟು ಮಂದಿನ ಮಂಗ್ಯಾ ಮಾಡ್ತಾರ ಇವರು. ಸಾದಾ ಹಜಾಮತಿ ಅಂಗಡಿನೇ. ಅದು ಇದು ಅಂತ ಹೇಳಿ ಏನೇನೋ ವಿಚಾರಗಳು ತಲಿ ಒಳಗ ಬರೋ ಹಾಂಗ ಮಾಡಿ ಮಂದೀನ ಮಂಗ್ಯಾ ಮಾಡ್ತಾರ, ಅಂತ ಹೇಳಿದ ಚೀಪ್ಯಾ.

ನೀ ಎಂತೆಂತಾ ಮನಿಹಾಳ ವಿಚಾರ ತಲಿಯೊಳಗ ಇಟ್ಟುಕೊಂಡು ಹೋಗಿದ್ದಿ ಚೀಪ್ಯಾ? - ಅಂತ ಕೇಳಿದೆ.

ಚೀಪ್ಯಾ ನಾಚಿಕೊಂಡ. ಯಾಕೋ ಏನೋ?

ಅಲ್ಲೋ.....ಅವೆಲ್ಲಾ ಬೆಂಗಳೂರು, ಬಾಂಬೆ, ಬ್ಯಾಂಕಾಕ್, ಮನಿಲಾ ಅಲ್ಲೆಲ್ಲಾ ಇರೋ ಮಸಾಜ್ ಪಾರ್ಲರ್ ಇದ್ದಂಗ ಇರಬಹುದು ಈ ಹೊಸಾ ಮಲ್ಲಿಕಾರ್ಜುನ ಯುನಿಸೆಕ್ಸ್ ಪಾರ್ಲರ್ ಅಂತ ತಿಳಕೊಂಡಿದ್ದೆ. ನೋಡಿದರ ಆರ್ಡಿನರಿ ಹಜಾಮತಿ ಅಂಗಡಿ. ಆರ್ಡಿನರಿ ಹಜಾಮತಿ ಆದ್ರ  ಇಪ್ಪತ್ತೈದು ರುಪಾಯಿ ಒಳಗ ಆಗೋ ಕೆಲಸಕ್ಕ ಇಲ್ಲೆ ನೂರಾ ಐವತ್ತು ರೂಪಾಯಿ. ಹೊಟ್ಟಿ ಉರೀತು ನನಗ, ಅಂತ ಹೇಳಿದ ಚೀಪ್ಯಾ.

ಹೋಗ್ಗೋ ಚೀಪ್ಯಾ! ಏನ ತಲಿ ಮಾರಾಯಾ ನಿಂದು? ಕೆಟ್ಟು ಕೊಳತು ಹೋಗ್ಯದ. ಈ ವಯಸ್ಸಿನ್ಯಾಗೂ ಅಂತಾ ವಿಚಾರ!? ಹಾಂ? ಮಸಾಜ್ ಪಾರ್ಲರ್ ಅಂದ್ರ 'ಆ ಟೈಪ್' ಮಸಾಜ್ ಪಾರ್ಲರ್ ನಿನಗ ನೆನಪಾತ? ಅವೆಲ್ಲಾ  ಥೈಲ್ಯಾಂಡ್ ಅಂತಾ ಕೆಲವೊಂದು ದೇಶ ಬಿಟ್ಟರೆ ಬೇರೆ ಎಲ್ಲಾ ಕಡೆ ನಿಷಿದ್ಧ ಮಾರಾಯ. ಎಲ್ಲರೆ illegal ನೆಡದಿರಬಹುದು. ಮತ್ತ ಅಲ್ಲೆಲ್ಲಾ ಹೋಗಬಾರದು. ನಿನ್ನಂತಾ ರಿಗ್ವೇದಿ ಬ್ರಾಹ್ಮಣ ಅಂತೂ ಮೊದಲೇ ಹೋಗಬಾರದು. ಧಾರವಾಡ ಒಳಗ ಅವೆಲ್ಲಾ ಸಾಧ್ಯ ಇಲ್ಲ ಬಿಡು, ಅಂತ ಹೇಳಿದೆ.

ಆದರೂ ಅವರು ಹಾಕ್ಕೊಂಡ advertisement ನೋಡಿದರ ನನಗ ಅದೇ ತರಹದ ಮಸಾಜ್ ಪಾರ್ಲರ್ ಇರಬೇಕು ಅಂತ ಅನ್ನಿಸಿತ್ತು ನೋಡು, ಅಂತ ಹೇಳಿದ ಚೀಪ್ಯಾ.

ಏನು ಹಾಕ್ಕೊಂಡಿದ್ದರು? - ಅಂತ ಕೇಳಿದೆ.

ಯುನಿಸೆಕ್ಸ್! ಅವನೌನ್ ಹಜಾಮತಿ ಅಂಗಡಿ ಹೆಸರು ಒಳಗೇ ಸೆಕ್ಸ್ ಮಸಾಜ್ ಪಾರ್ಲರ್ ಅಂತ ಹಾಕಿಕೊಂಡ ಮ್ಯಾಲೆ ಏನೇನೋ ತರಹದ ಮಸಾಜ್ ಮಾಡಬಹುದು ಅಂತ. ನೋಡಿದರ ನಾಸ್ತಿ. ಆದರೂ ನಾ ಬಿಡಲಿಲ್ಲ, ಅಂದ ಚೀಪ್ಯಾ.

ಯುನಿಸೆಕ್ಸ್ ಅಂದ್ರ ಈ ಹಾಪ್ ಸೂಳೆಮಗ ಸರಿಯಾಗಿ ಅರ್ಥ ಮಾಡಿಕೊಳ್ಳದೇ 'ಆ ತರಹದ' ಮಸಾಜ್ ಎಲ್ಲಾ ಮಾಡ್ತಾರ ಅಂತ ತಿಳಕೊಂಡು ಬಿಟ್ಟಾನ. ಯಪ್ಪಾ!!! ಏನು ಇದ್ದಾನ ಇವಾ!!!!

ನೀ ಬಿಡಲಿಲ್ಲ ಅನ್ನಲಿಕ್ಕೆ ಏನು ರೊಕ್ಕಾ ವಾಪಸ್ ಕೇಳಿದಿ ಏನು? ಅಥವಾ ಕಟಿಂಗ್ ಮಾಡಿದ ಕೂದಲಾ ತಲಿಗೆ ವಾಪಸ್ ಹಚ್ಚಿ ಕೊಡ್ರೀ ಅಂದ್ಯೋ? ಅಥವಾ ಮತ್ತೇನರ ಕೇಳಿದ್ಯೋ? ಹಾಂ? ಹಾಂ? - ಅಂತ ಕೇಳಿದೆ.

ನಾ ಮತ್ತ ಬಾಗಿಲದಾಗ ಕೂತ ಸುಂದರಿ ಕಡೆ ಹೋದೆ. ಅಕಿ ನನ್ನ ನೋಡಿ ಮತ್ತ ಕೋಲ್ಗೆಟ್ ಸ್ಮೈಲ್ ಕೊಟ್ಟು, ಮತ್ತೇನ್ರೀ? ಅಂತ ಕೇಳಿದಳು. ನಾ ಅಂದೇ, ಮೇಡಂ ನಿಮ್ಮ ಅಂಗಡಿ ಪಾಂಪ್ಲೆಟ್ ಒಳಗ ಇತರೆ ಸೇವೆಗಳು ಲಭ್ಯ ಅಂತ ಹಾಕ್ಕೊಂಡೀರಿ. ಮತ್ತ ಏನೇನು ಸೇವಾ ಅವ ನಿಮ್ಮ ಮೆನು ಮ್ಯಾಲೆ ಅಂತ ಕೇಳಿದೆ, ಅಂತ ಹೇಳಿದ ಚೀಪ್ಯಾ.

ಏನು ಹೇಳಿದಳು ಅಕಿ receptionist ಸುಂದರಿ? - ಅಂತ ಕೇಳಿದೆ.

ಅಕಿ ಒಂದು ದೊಡ್ಡ ಮೆನು ಕೊಟ್ಟಳು. ಬ್ಯಾರೆ ಬ್ಯಾರೆ ತರಹದ ಮಸಾಜ್ ಗಳು, ಕೂದಲಿಗೆ ಏನೇನೋ ಬಣ್ಣ ಮತ್ತೊಂದು ಹಚ್ಚೋದು, ಮೀಸಿ ಕಿತ್ತೋದು (ಹೆಂಗಸೂರಿಗೆ ಮಾತ್ರ), ಹುಬ್ಬು ಕಿತ್ತೋದು (ಯುನಿ ಸೆಕ್ಸ್, ಅಂದ್ರ ಗಂಡ/ಹೆಂಗ/ಸರಿಗೆ), ಉಗುರು ತೆಗೆಯೋದು ಅದು ಇದು ಅಂತ, ಅಂತ ಹೇಳಿದ ಚೀಪ್ಯಾ.

ನೀನು ಮೆನು ನೋಡಿ ಏನು ಆರ್ಡರ್ ಮಾಡಿದಿ ಕಾಮಣ್ಣ? - ಅಂತ ಕೇಳಿದೆ.

ಏನೂ ಆರ್ಡರ್ ಮಾಡಲಿಲ್ಲ. ಹೆಚ್ಚಿಗಿ ಮಾಹಿತಿ ಕೇಳಿದೆ - ಅಂದ ಚೀಪ್ಯಾ.

ಚೀಪ್ಯಾ ಬಗ್ಗಿ, ಅಕಿ receptionist ಕಿವಿ ಹತ್ತಿರ ಮಾರಿ ಒಯ್ದಾನ. ಅಕಿ ಕಿವಿಯೊಳಗ, ಈ ಎಕ್ಸಟ್ರಾ ಮಸಾಜ್ ಖರೀದಿ ಮಾಡಿದ್ರ ಯಾರ ಕಡೆ ಮಾಡಸ್ತೀರಿ? ಹೆಂಗಸೂರ ಕಡೆ ಮಾಡಸ್ತೀರಿ ಏನು? - ಅಂತ ಕೇಳಿ ಬಿಟ್ಟಾನ.

ಅನಾಹುತ!!!! ಘನಘೋರ ಅನಾಹುತ!!!!

ಈವಾ ಇದನ್ನ ಕೇಳಿದ್ದ ಕೇಳಿದ್ದು, ಅಕಿ receptionist ಹಾವು ಕಂಡಂಗ ಆಗಿ ದೂರ ಹಾರ್ಯಾಳ. ಚಿಟ್ಟ ಅಂತ ಬ್ಯಾರೆ ಚೀರಿಕೊಂಡಾಳ. ಚೀಪ್ಯಾ ಹಾಕಿದ ಬಾಂಬಿನ ಅಬ್ಬರಕ್ಕ ಅಕಿ ಕುರ್ಚಿಂದ ಉರುಳಿ ಬಿದ್ದಾಳ. ಹಾಂಗ ಆಗಿದ್ದು ನೋಡಿ ಎಲ್ಲಾರೂ ಓಡಿ ಬಂದಾರ. ಏನಾತು ಏನಾತು ಅಂತ ಬಿದ್ದಾಕಿನ ಎಬ್ಬಿಸಿ ಕೇಳ್ಯಾರ. ಅಕಿ ಫುಲ್ ಹೇಳಿ ಬಿಟ್ಟಾಳ. ಇದ್ದಿದ್ದು ಇಲ್ಲದಿದ್ದು ಎಲ್ಲಾ ಸೇರಿಸಿ ಮಸಾಲಿನೂ ಹಾಕಿ ಹೇಳಿ ಬಿಟ್ಟಾಳ. ಎಲ್ಲಾರ ಮುಂದ ಚೀಪ್ಯಾನ್ನ ವಿಲನ್ ಮಾಡಿ ಬಿಟ್ಟಾಳ.

ಈಗ ನೋಡ್ರೀ.....ಆ ಮಲ್ಲಿಕಾರ್ಜುನ ಯುನಿಸೆಕ್ಸ್ ಹಜಾಮತಿ ಅಂಗಡಿ ಒಳಗಿನ ಎಲ್ಲಾ ಮಲ್ಲಿಕಾಗಳು ಮತ್ತ ಅರ್ಜುನಗಳು ಸೇರಿಕೊಂಡು ಆಳಿಗೊಂದು ಏಟು ಅನ್ನೋ ಹಾಂಗ ಚೀಪ್ಯಾನ ಫ್ರೆಶ್ ಆಗಿ ಹಜಾಮತಿ ಆಗಿದ್ದ ತಲೆಬುರುಡೆಗೆ ಮನಗಂಡ ಮನಸೋ ಇಚ್ಛೆ ಪಟ್ ಪಟ್ ಅಂತ ಏಟು ಕೊಟ್ಟು ಬಿಟ್ಟಾರ. ಕೆಲೊ ಮಂದಿ ಜಾಡಿಸಿ ಜಾಡಿಸಿ ಒದ್ದು ಸಹಿತ ಬಿಟ್ಟಾರ. ಚೀಪ್ಯಾ ಫುಲ್ scrap ಆಗಿ ಬಿಟ್ಟ ಕಡತಾ ತಿಂದು. ಮಸಾಜ್ ಸೇವಾ ಕೇಳಿದವಂಗ ಎಲ್ಲರೂ ಹಿಡದು ಸಮಾಜ ಸೇವಾ ಮಾಡಿ ಬಿಟ್ಟಾರ! ಧರ್ಮದೇಟು ಹಾಕಿಬಿಟ್ಟಾರ!!! ಹೋಗ್ಗೋ!!! ಹೋಗ್ಗೋ!!!

ಬರೆ ಹೊಡೆದು, ಬಡಿದು, ಒದ್ದು ಬಿಟ್ಟಿದ್ದರ ಮಾತು ಬ್ಯಾರೆ. ಇಲ್ಲೆ ಹೆಂಗಸೂರು ಮಸಾಜ್ ಮಾಡಂಗಿಲ್ಲೇನು ಅಂತ ಕೇಳಿದ್ದು ಒಬ್ಬಾಕಿ ಫೈರ್ ಬ್ರಾಂಡ್ ಫೆಮಿನಿಸ್ಟ್ ಮಹಿಳಾ ಹಜಾಮಿಗೆ ಸಿಕ್ಕಾಪಟ್ಟೆ ಸಿಟ್ಟು ಬಂದದ. ಹಿಂಗೆಲ್ಲಾ ಹೊಲಸ್ ಹೊಲಸ್ ಕೇಳಿದ ಚೀಪ್ಯಾನ್ನ ಸುಮ್ಮನ ಬಿಡಬಾರದು, ಇವಂಗ ಎಂದೂ ಮರೆಯದಂತಹ ಒಂದು ಪಾಠ ಕಲಿಸೇ ಓಡಿಸಬೇಕು ಅಂತ ಹೇಳಿ, ಹಜಾಮರ ಉಸ್ತರಾ ಅಂದ್ರ ಕತ್ತಿ ತೊಗೊಂಡು, ಚೀಪ್ಯಾನ ತಲಿ ಮ್ಯಾಲೆ ಪಟ್ಟಿ ಪಟ್ಟಿ ಕೆತ್ತಿ ಬಿಟ್ಟಾಳ. ಹೋಗ್ಗೋ!!! ಪಾಪ ಚೀಪ್ಯಾ!!! ಜವಳದಾಗ ಕೆತ್ತಿದಾಂಗ ತಲಿ ಮ್ಯಾಲೆ ಪಟ್ಟಿ ಕೆತ್ತೋದು ಅಂದ್ರ ಏನ್ರೀ!!!? ನಾ ಪಾಪ ಅವನ್ನ ಮುಂಜವೀ ಮಾಡಿಕೊಂಡು ಬಂದಿ ಏನಪಾ ಅಂತ ಕೇಳಲಿಕತ್ತರ ಈ ಮಲ್ಲಿಕಾರ್ಜುನ ಸಲೂನ್ ಮಂದಿ ತಲಿ ಮ್ಯಾಲೆ ಪಟ್ಟಿ ಪಟ್ಟಿ ಕೆತ್ತಿ ಮುಂಜಿಕಿಂತ ಮೊದಲಿನ ಕರ್ಮ ಅಂದ್ರ ಜವಳಾನೇ ಮಾಡಿ ಓಡಿಸಿಬಿಟ್ಟಾರ.

ತಲಿ ಮ್ಯಾಲೆ ಪಟ್ಟಿ ಎಳಿಸಿಕೊಂಡ ನಮ್ಮ ದೋಸ್ತ ಚೀಪ್ಯಾ
ಭಾಳ ಕೆಟ್ಟಾತಲೇ ಚೀಪ್ಯಾ ಇದು. ತಲಿ ಮ್ಯಾಲೆ ಉದ್ದನೆ ಪಟ್ಟಿ ಎಳಿಸಿಕೊಂಡಿ ಅಂತ ಆತು. ಮುಂದ? - ಅಂತ ಕೇಳಿದೆ.
 
ಮುಂದೇನೋ? ಅಲ್ಲಿಂದ ಹೊರಗ ಬಂದು, ಅಲ್ಲೇ ಬಾಜೂ ಚುಟ್ಟಾ ಅಂಗಡಿಯೊಳಗ ಒಂದು ಪೇಪರ್ ಖರೀದಿ ಮಾಡಿದೆ, ಅದೇ ಪೇಪರ್ ತಲಿ ಮ್ಯಾಲೆ ಹೊದಕೊಂಡು ಸೀದಾ ಪಾಂಡುನ ರಾಯರ(ಲ್) ಹೇರ್ ಕಟಿಂಗ್ ಸಲೂನಿಗೆ ಓಡಿಕೋತ್ತ ಬಂದೆ. ಬಂದವನೇ ಖಾಲಿ ಇದ್ದ ಕುರ್ಚಿ ಒಳಗ ಕೂತೆ ಬಿಟ್ಟೆ. ಅಲ್ಲಿ ಪಾಳಿ ಹಚ್ಚಿದದವ ಜಗಳಕ್ಕ ಬಂದ. ತಲಿ ಮ್ಯಾಲಿನ ಪೇಪರ್ ತೆಗದೆ. ನನ್ನ ತಲಿ ಮ್ಯಾಲಿನ ಪಟ್ಟಿ ನೋಡಿದ್ದ ನೋಡಿದ್ದು ಆವಾ ಅಲ್ಲೇ ತಲಿಗೆ ಚಕ್ಕರಾ ಬಂದು ತಲಿ ಹಿಡಕೊಂಡು ಕೂತಾ. ಮೊದಲೆಂದೂ ಈ ಪರಿ ಪಟ್ಟಿ ಎಳದ ನನ್ನ ತಲಿ ನೋಡಿರದ ಹಜಾಮ್ ಪಾಂಡು ಸಹಿತ ಏಕದಂ ಘಾಬರಿ ಆಗಿ, ಏನ್ರೀ ಇದು? ಅಂತ ದೊಡ್ಡ ಉದ್ಗಾರವಾಚಕ ಚಿನ್ಹೆ ಹಾಕಿ ನಿಂತ. ಲಗೂನ ಸಾಫ್ ಮಾಡೋ ಪಾಂಡು, ಅಂತ ಹೇಳಿದೆ. ಫುಲ್ ಸಾಫ್ ರೀ? ಅಂತ ಕೇಳಿದ. ಮಾರಾಯಾ ಮಾರಾಯಾ! ಅಲ್ಲೆ ಮಲ್ಲಿಕಾರ್ಜುನದವರು ಆಗಲೇ ಹಾಪ್ ಸಾಫ್ ಮಾಡಿ ಒದ್ದು ಕಳಿಸ್ಯಾರ. ಬಾಕಿ ಅರ್ಧಾ ನೀ ಮಾಡಿ ಮುಗಿಸು. ಕೈ ಮುಗಿತೇನಿ  ನಿನಗ ಅಂದೆ. ಪಾಂಡು ಫ್ರೆಶ್ ಆಗಿ ಅವನ ಚರ್ಮದ ಪಟ್ಟಿ ಮ್ಯಾಲೆ ಉಸ್ತರಾ ಮಸ್ತ ಹರಿತ ಮಾಡಿದವನೇ ಕರ್ರ ಕರ್ರ ಅಂತ ಹೇಳಿ ನೀರು ಸಹ ಗೊಜ್ಜದೆ ಒಣಾ ಒಣಾ ಆಗಿಯೇ ಕೆರದು ಹೆರದು ಬೋಳಿಸಿಬಿಟ್ಟ, ಅಂತ ಹೇಳಿ ಚೀಪ್ಯಾ ಕಥಿ ಮುಗಿಸಿದ.

ಇದು ಏನಲೇ ನಿಂದು ಕಥಿ? ಮನಿ ಪಾಯಾ ಹಾಕಿದ ಗೌಂಡಿನೇ ಬ್ಯಾರೆ, ಮ್ಯಾಲೆ ಸ್ಲಾಬ್ ಹಾಕಿದ ಗೌಂಡಿನೇ ಬ್ಯಾರೆ ಅಂದಂಗೆ ಆತು ಇದು. ಅಂತೂ ಎರಡು ಕಡೆ ಹೋಗಿ ಒಂದು ಫುಲ್ ತಲಿ ಬೋಳಿಸಿಕೊಂಡು ಬಂದಿ ಅಂತ ಆತು, ಅಂತ ಹೇಳಿದೆ.

ಮತ್ತ ಇನ್ನ ಮ್ಯಾಲೆ ಎಲ್ಲೂ 'ಆ ತರಹದ' ಮಸಾಜ್ ಪಾರ್ಲರ್ ಹುಡುಕಿಕೊಂಡು ಹೋಗಬ್ಯಾಡ. ಏನು? ಈಗ ಗೊತ್ತಾತಲ್ಲ? ಕೆಲವೊಂದು legal ಇರ್ತಾವ. ಅದರಾಗ ನೀನು ಊಹಾ ಮಾಡಿದಂತಹ ಸೇವಾ ಏನೂ ಮಾಡಂಗಿಲ್ಲ. ಇನ್ನು ಕೆಲವು illegal ಇರ್ತಾವ. ಅಲ್ಲೆಲ್ಲಾ ಹೋಗಬಾರದು. ತಿಳೀತಾ? - ಅಂತ ಖಾತ್ರಿ ಮಾಡಿಕೊಂಡೆ. ಮತ್ತ ನಾಳೆ ಇನ್ಯಾರೋ 'ಸೆಕ್ಸಿ ಸಿಲ್ಕ್ ಸ್ಮಿತಾ ಓನ್ಲಿ ಜೆಂಟ್ಸ್ ಪಾರ್ಲರ್ ಬೈ ಓನ್ಲಿ ಲೇಡೀಸ್' ಅಂತ ಬೋರ್ಡ್ ಹಾಕಿಕೊಂಡರ ಇವಾ ಮತ್ತ ಹೋದಾನು ಅಂತ ಕಾಳಜಿ ನಮಗ.

ಏ ಎಲ್ಲಿದ ಹಚ್ಚಿ? ಪಾಸಪೋರ್ಟ್ ವೀಸಾ ಮಾಡಿಸವ ಇದ್ದೇನಿ, ಅಂದ ನಿಗೂಢವಾಗಿ.

ಹಾಂ!!! ಎಲ್ಲೆ ಹೊಂಟಿ? ಹಜಾಮತಿಗೆ ಫಾರಿನ್ ಟ್ರಿಪ್ಪಾ? ಹಾಂ? - ಅಂತ ಕೇಳಿದೆ. ಚಾಚಾ ನೆಹರು ಫ್ರಾನ್ಸ್ ಗೆ ಹೋಗ್ತಿದ್ದರಂತ ಕಟಿಂಗ ಮಾಡಿಸಲಿಕ್ಕೆ. ಮತ್ತ ಇವನೂ ಎಲ್ಲರೆ ಹೊಂಟು ಬಿಟ್ಟನೋ ಅಂತ ಡೌಟ್ ಬಂತು.

ಇಲ್ಲೋ ಮಾರಾಯ!!! ಬ್ಯಾಂಕಾಕ್!!! ಫೂಕೆಟ್ !!!ಥೈಲಾಂಡ್!!! ಥೈಲಾಂಡ್!!! ಥಕ ಥೈ ಥಕ ಥೈ ಥೈಲಾಂಡ್!!! ಎಲ್ಲೆ ಖರೇ ಮಸಾಜ್ ಪಾರ್ಲರ್ ಇರ್ತಾವ ಅಲ್ಲೇ ಹೋಗಿ ಬಿಡೋದು ಅಂತ ಮಾಡಿ ಬಿಟ್ಟೇನಿ!! ಅಂತ ಹೇಳಬೇಕಾ ಈ ಹಾಪಾ! ನಾ ಫುಲ್ ದಂಗ ಹೊಡದೆ!! ಕೆಲೊ ಮಂದಿ ಸುಧಾರಿಸೋ ಪೈಕಿ ಅಲ್ಲ ಬಿಡ್ರೀ.

ನೋಡಿಕೊಂಡು ಹೋಗಿ ಬಾರಪಾ. ಜ್ವಾಕಿ, ಅಂತ ಹೇಳಿ ನಾ ಹೊರಟು ಬಂದೆ.

ಚೀಪ್ಯಾ ತಲಿ ಮ್ಯಾಲಿನ ಟೊಪ್ಪಿಗಿ ಸರಿ ಮಾಡಿಕೋತ್ತ ಥೈಲಾಂಡ್ ಗೆ ಹೋಗೋ excitement ಫೀಲ್ ಮಾಡಿಕೋತ್ತ ಹೋದಾ!!!