Saturday, February 01, 2014

ಇಂಟರ್ನ್ಯಾಷನಲ್ ಪತ್ರ ಮಿತ್ರೆ (ಪತ್ರ ಮಿತ್ರರ ಪ್ರಪಂಚದಲ್ಲಿ. ಭಾಗ - ೩)

(ಭಾಗ - ೧, ಭಾಗ -೨ ಇಲ್ಲಿವೆ) 

ಪತ್ರ ಮಿತ್ರತ್ವದ ಮುಂದಿನ ಭಾಗ ಶುರು ಆಗೋದು ರಾಜಸ್ಥಾನದ ಪಿಲಾನಿಯಲ್ಲಿ. fast forward to 1990 October. BITS, Pilani ನಮ್ಮ ಇಂಜಿನಿಯರಿಂಗ್ ಕಾಲೇಜು.

ಮೊಟ್ಟ ಮೊದಲನೇ ಸೆಮೆಸ್ಟರಿನ ಒಂದು ದಿವಸ ಹಾಸ್ಟೆಲ್ ಮೆಸ್ಸಿನಲ್ಲಿ ಮಧ್ಯಾನ ಊಟಕ್ಕೆ ಕೂತಿದ್ದೆ. ಮುಂದೆ ಬಂದು ಕೂತವ ಒಬ್ಬ ಸೀನಿಯರ್ ಹುಡುಗ. ಗೊತ್ತು ಇದ್ದವನೇ. ಗೊತ್ತು ಇರಲಿಲ್ಲ ಅಂದ್ರ ಹೆಂಗ? ಎರಡು ತಿಂಗಳು ರಾಗ್ಗಿಂಗ್ (Ragging) ಏನು ಪುಗಸಟ್ಟೆ ಮಾಡಿಸಿಕೊಂಡೇವೇನು? ಎಲ್ಲ ಸೀನಿಯರ್ ಹುಡುಗರದು ಅಷ್ಟಿಷ್ಟರೆ ಗೊತ್ತಾಗಲಿ ಅಂತ ಹೇಳಿ ಮಾಡೋದೇ ರಾಗ್ಗಿಂಗ್. ಮತ್ತ ಪಿಲಾನಿ ಒಳಗ ಆಗಸ್ಟ್ ಮೊದಲ ವಾರದಲ್ಲಿ ಶುರು ಆದ ರಾಗ್ಗಿಂಗ್ ಸೆಪ್ಟೆಂಬರ್ ಕೊನೆ ವಾರಕ್ಕ ಮುಗಿದು, ಅಕ್ಟೋಬರ್ ಮೊದಲ ವಾರದಲ್ಲಿ freshers' welcome ಆತು ಅಂದ್ರ, ರಾಗ್ಗಿಂಗ್ ಎಲ್ಲ ಮುಗಿದು, ಸೀನಿಯರ್ ಮಂದಿ ಜೋಡಿ ಫುಲ್ ಭಾಯಿ, ಭಾಯಿ. ಖರೆ ದೋಸ್ತರು ಅಲ್ಲಿಂದ. ಎಲ್ಲಾ ಶಿಸ್ತುಬದ್ಧ ಪಿಲಾನಿಯೊಳಗ.

ಮುಂದ ಕೂತಿದ್ದ ಸೀನಿಯರ್ ಒಂದು ಮೂರ್ನಾಕು ಪತ್ರಾ ಹರಡಿಕೊಂಡು, ಅವನ್ನ ಓದಿಕೋತ್ತ, ಹುಚ್ಚರ ಗತೆ ನಕ್ಕೋತ್ತ, ಊಟ ಶುರು ಮಾಡಿದ. ಪತ್ರದ ಮೇಲಿನ ಸ್ಟ್ಯಾಂಪುಗಳನ್ನ ನೋಡಿದರ ಗೊತ್ತಾತು ಇವೆಲ್ಲ ಎಲ್ಲೋ ಬೇರೆ ಬೇರೆ ದೇಶದಿಂದ ಬಂದ ಪತ್ರಗಳು ಅಂತ. ಎಲ್ಲೋ ಅವನ ಫ್ಯಾಮಿಲಿ ವಿದೇಶದಾಗ ಇರಬಹುದು ಅಂತ ಮಾಡಿದೆ. ಸುಮಾರು ಮಂದಿ NRI ವಿದ್ಯಾರ್ಥಿಗಳು ಇದ್ದರು ಪಿಲಾನಿಯೊಳಗ.

ಏನ್ ಹೀರೋ, ಭಾಳ ಪತ್ರ, ಅದೂ ಎಲ್ಲಾ ಇಂಪೋರ್ಟೆಡ್ ಪತ್ರ, ಬಂದಂಗ ಅವಲ್ಲಾ? ಅಂತ ಕೇಳಿದೆ.

ಹೌದೋ ಮಾರಾಯಾ, ಎಲ್ಲಾ ನನ್ನ ಪೆನ್ ಫ್ರೆಂಡ್ಸ್ ನೋಡು. ಒಂದು ಹತ್ತು ಮಂದಿ ಇದ್ದಾರ. ಬೇರೆ ಬೇರೆ ದೇಶದೊಳಗ, ಅಂದು ಬಿಟ್ಟ.

ಕ್ಯಾಂಪಸ್ಸಿನಲ್ಲಿದ್ದ ಹನ್ನೆರಡು ಹಾಸ್ಟೆಲುಗಳಲ್ಲಿ ಸುಮಾರು ನಾಲ್ಕು ಸಾವಿರ ವಿದ್ಯಾರ್ಥಿಗಳು ಇದ್ದ ಪಿಲಾನಿ ಕ್ಯಾಂಪಸ್ ಒಳಗ ಪ್ರತಿ ರೂಂ ರೂಂ ಅಡ್ಯಾಡಿ, ಪತ್ರ ಡೆಲಿವರಿ ಮಾಡೋದು ಅಂದ್ರ ಅಂಚೆ ಮಂದಿಗೆ ಭಾಳ ಬೇಜಾರ ಕೆಲಸ. ಮ್ಯಾಲೆ ಹತ್ತು, ಕೆಳಗ ಇಳಿ, ರೂಂ ಬಾಗಲದ ಕೆಳಗ ಪತ್ರಾ ದುಗಿಸು, ಮನಿ ಆರ್ಡರ್ ಬಂದಿಲ್ಲೋ ಮಾರಾಯಾ ನಿಂದು, ಅಂತ ಸಾವಿರ ಮಂದಿಗೆ ಉತ್ತರ ಕೊಡು, ಇದೆಲ್ಲ ಎಲ್ಲಿ ಉಸಾಬರಿ ಅಂತ ಹೇಳಿ ಅಂಚೆ ಮಂದಿ ಸುಮ್ಮನ ಮಧ್ಯಾನ ಊಟದ ಟೈಮಿಗೆ ಹಾಸ್ಟೆಲ್ ಮೆಸ್ಸ್ ಮುಂದ ಬಂದು ಕೂತು ಬಿಡ್ತಿದ್ದರು. ಸುಮಾರು ೮೦% ಪತ್ರ ಎಲ್ಲ ಅಲ್ಲೇ ಬಟವಡೆ  ಆಗಿ ಅವರ ಕೆಲಸ ಕಮ್ಮಿ ಆಗ್ತಿತ್ತು. ಈ ಸೀನಿಯರ್ ಸಹಿತ ಮೆಸ್ಸಿನ ಮುಂದ ಕೂತಿದ್ದ ಅಂಚೆಯವನ  ಕಡೆ ಪತ್ರಗಳ ಬಂಪರ್ ಬೆಳೆ ಹೊಡಕೊಂಡು ಬಂದು ಕೂತಿದ್ದ.

ಹೋಗ್ಗೋ!! ಇವನೂ ಮತ್ತ ಪೆನ್ ಫ್ರೆಂಡ್ಸ್ ಅಂದು ಮೂರು ವರ್ಷದಿಂದ dormant ಆಗಿ ಕೂತಿದ್ದ ಪತ್ರ ಮಿತ್ರ ಎಂಬ ಭೂತ ಮತ್ತ ಜೀವಂತ ಆತು. ಮತ್ತ ತಲಿ ಒಳಗ ಅದೇ ಗುಂಗಿ ಹುಳ.

ಕರ್ನಾಟಕದಲ್ಲಿ ಲೋಕಲ್ ಬಳ್ಳಾರಿ, ಬೆಂಗಳೂರಿನ ಪತ್ರ ಮಿತ್ರರನ್ನ ಮಾಡಿಕೊಂಡು ಅವರಿಗೆ ಎಳ್ಳು ನೀರು ಬಿಟ್ಟಿದ್ದೆ. ಮುಂದೆ ದೂರದ ಆಸ್ಸಾಮಿನ ಮನುಷ್ಯಾನ ಒಬ್ಬವನ ಜೋಡಿ ಪತ್ರ ಮಿತ್ರತ್ವ ಕೂಡ ಮಾಡಿ ಅದೂ ಢಂ ಅಂದು ಹೋಗಿತ್ತು. ಇನ್ನೂ ಮಾಡದೇ ಇದ್ದಿದ್ದು ಅಂದ್ರ ವಿದೇಶದ international ಪತ್ರ ಮಿತ್ರರನ್ನ ಮಾಡಿಕೊಂಡಿರಲಿಲ್ಲ. ಈಗ ಅದನ್ನ ಮಾಡಬೇಕು. ಅರ್ಜೆಂಟಾಗಿ ಒಂದು ವಿದೇಶೀ ಪತ್ರ ಮಿತ್ರ ಬೇಕೇ ಬೇಕು. ಈಗೇ ಬೇಕು.

ದೋಸ್ತಾ, ಈ international ಪೆನ್ ಫ್ರೆಂಡ್ಸ್ ಹ್ಯಾಂಗೋ ಮಾಡಿಕೊಳ್ಳೋದು? ಅಂತ ಕೇಳಿದೆ. ಆ ಸೀನಿಯರ್ ಹೆಸರು ಮನೀಶ್ ಅಂತ ನೆನಪು.

ಉತ್ತರ ಹೇಳಲಿಕ್ಕೆ ಆವಾ ಗಡಿಬಿಡಿ ಒಳಗ ಇದ್ದ. ಪತ್ರ ಓದಬೇಕೋ, ಊಟ ಮಾಡಬೇಕೋ, ಲಗೂನ ಊಟ ಮುಗಿಸಿ ಮಧ್ಯಾನದ ಒಂದು ಘಂಟೆ ಕ್ಲಾಸಿಗೆ ಓಡಬೇಕೋ ಅನ್ನೋದರಲ್ಲಿ ಬಿಜಿ ಇದ್ದ ಸೀನಿಯರ್ ಮನೀಶ್ ನನ್ನ ಮೂಲಭೂತ ಪ್ರಶ್ನೆಗೆ ಉತ್ತರ ಹ್ಯಾಂಗ ಗಡಿಬಿಡಿಯೊಳಗ ಹೇಳಿಯಾನು?

ಯಾರ್ ಮಹೇಶ್, ಒಂದು ಕೆಲಸ ಮಾಡು. ರಾತ್ರಿ ನನ್ನ ರೂಮಿಗೆ ಬಂದು ಬಿಡು. ನಿನಗ international ಪತ್ರ ಮಿತ್ರ ಹ್ಯಾಂಗ ಹುಡಕಬೇಕು ಅನ್ನೋದರ ಬಗ್ಗೆ ಫುಲ್ ಮಾಹಿತಿ ಕೊಡ್ತೇನ್ತಿ. ರೂಂ ನಂಬರ್ ಗೊತ್ತದಲ್ಲಾ? ಗಾಂಧಿ, T-wing, facing Insti?  ರಾತ್ರಿ ಒಂಬತ್ತರ ಮ್ಯಾಲೆ ಬಂದುಬಿಡು. ಈಗ ನಾ ಕ್ಲಾಸಿಗೆ ಹೋಗಬೇಕು, ಅಂದ. ಹೂನಪಾ, ಹೋಗು. ರಾತ್ರಿ ಭೆಟ್ಟಿ ಆಗ್ತೇನಿ, ಅಂದೆ. ಗಾಂಧಿ ಭವನ ಅವನ ಹಾಸ್ಟೆಲ್. ನಮ್ಮ ಹಾಸ್ಟೆಲ್ ಕೃಷ್ಣಾ ಭವನದ ಬಾಜೂ. T-wing ಅಂದ್ರ ನಡುವಿನ ವಿಂಗ್. facing Insti ಅಂದ್ರ ಇನ್ಸ್ಟಿಟ್ಯೂಟಿನ ಮೇನ್ ಬಿಲ್ಡಿಂಗ್ ಕಡೆ ಮುಖ ಮಾಡಿದ್ದು ಅಂತ. ಎಲ್ಲ ಪಿಲಾನಿ ಭಾಷಾ. Pilani lingo.

ರಾತ್ರಿ ಹೇಳಿದ ಟೈಮಿಗೆ ಹೋದೆ. ಫುಲ್ ಹಾಸ್ಟೆಲ್ ಖಾಲಿ ಹೊಡಿತಿತ್ತು. ಮರುದಿವಸ ಯಾರಿಗೂ ಯಾವದೂ ಟೆಸ್ಟ್ ಇರಲಿಲ್ಲ ಅಂತ ಕಾಣಿಸ್ತದ. ಎಲ್ಲಾ ಚೈನಿ ಹೊಡಿಲಿಕ್ಕೆ ಹೋಗಿದ್ದರು. ಭೂತ ಬಂಗಲೆ ಗತೆ ಗವ್ವ ಅಂತಿತ್ತು ಹಾಸ್ಟೆಲ್. ಮೆಟ್ಟಿಲ ಹತ್ತಿ, ಮ್ಯಾಲೆ ಹೋಗಿ, ಅಂತೂ ಇಂತೂ T-wing ಮುಟ್ಟಿ, ಈ ಮನೀಶನ ರೂಂ ಬಾಗಿಲಾ ಬಡದೆ.

Yes, Come in, ಅಂದಾ.

ಒಳಗ ರಾಕ್ ಮ್ಯೂಸಿಕ್ ಹೊಯ್ಕೊತ್ತಿತ್ತು. ಇವಾ ಗಾಳಿಯೊಳಗ ಗಿಟಾರ್ ಬಾರ್ಸಿಕೋತ್ತ ಕೂತಿದ್ದ. The bugger was jamming! ಅದೇನು ಗಾಳಿಯೊಳಗ ಗಿಟಾರ್ ಬಾರಿಸ್ತಾರಪಾ ಈ ಮಂದಿ? ಅಂತ ಅನ್ನಿಸ್ತು. ಈ ವೇಷ ಧಾರವಾಡದಲ್ಲಿ ನೋಡಿರಲಿಲ್ಲ.

ಓ! ನೀನಾ? ಪೆನ್ ಫ್ರೆಂಡ್ ಬೇಕಾಗಿರೋ ಜೂನಿಯರ್. ಬಾರಪಾ ಬಾ. ರಾಗಿಂಗ್ ಮುಗಿದ ಮ್ಯಾಲೆ ಫಸ್ಟ್ ಟೈಮ್ ಬರ್ಲೀಕತ್ತಿ. ಬಲಗಾಲು ಮುಂದಿಟ್ಟು ಒಳಗ ಬಾ, ಅಂತ ಹೇಳಿ, ಜೋಕ್ ಹೊಡದು, ಡುಬ್ಬದ ಮ್ಯಾಲೆ ಕುಟ್ಟಿ ಸೀನಿಯರ್ ಸ್ವಾಗತ ಮಾಡಿದ.

ಅವನ ರೂಮೇನೂ ಹೊಸದಿರಲಿಲ್ಲ. ಮೊದಲಿನ ಎರಡು ತಿಂಗಳು ಬೇಕಾದಷ್ಟು ಸರೆ ಆ ರೂಮಿನ್ಯಾಗ ಕೂತು ಎಲ್ಲ ಸೀನಿಯರ್ ಮಂದಿಗೆ ಬೇಕಾದಷ್ಟು ನೋಟ್ಸ್ ಕಾಪಿ ಮಾಡಿಕೊಟ್ಟು, ಅವರ ಕಡೆ ಕಾಡಿಸಿಕೊಂಡು, ಅವರಿಗೆ ಚಹಾ, ಸಿಗರೇಟು ಇತ್ಯಾದಿ ತಂದು ಕೊಟ್ಟು ಚಾಕರಿ ಮಾಡಿ ಎಲ್ಲ ಗೊತ್ತಿತ್ತು. ಆ ಸಮಯ ರಾಗಿಂಗ್ ಮಯ. ಆದರ ಈಗ ಅದೆಲ್ಲಾ ಮುಗಿದು ಫ್ರೆಂಡ್ಸ್ ಅಷ್ಟೇ.

international ಪತ್ರ ಮಿತ್ರ ಬೇಕು ಅಂದ್ರ ಇಪ್ಪತ್ತೈದು ರುಪಾಯಿ ಆಗ್ತದ ನೋಡಪಾ, ಅಂದು ಬಿಟ್ಟ ಮನೀಶ್. 'ಅನಂತನ ಆವಾಂತರ' ಸಿನೆಮಾದಾಗ ಡಾ. ಎಸ್.ಎಸ್. ಉಳ್ಳಾಗಡ್ಡಿ ಗುಳಿಗಿ ಪುಡಿ ಕೊಟ್ಟು, ಒಂದು ನೂರು ರೂಪಾಯಿ, ಅಂದಂಗ ಕೇಳಿಸ್ತು.

ಹಾಂ! ಇಪ್ಪತ್ತೈದು ರುಪಾಯಿ! ಅದೂ ೧೯೯೦ ರಲ್ಲಿ. ದೊಡ್ಡ ಮೊತ್ತ. ಎರಡು T-Series ಕ್ಯಾಸೆಟ್ ಬರ್ತಿತ್ತು. ಸುಮಾರು ಹತ್ತು ಜರ್ದಾ ಪಾನ್ ಅದೂ ನವರತ್ನ ಕಿಮಾಮ್ ಹಾಕಿದ್ದು ಬರ್ತಿದ್ದವು. ಇನ್ನೂ ಏನೇನೋ ಬರ್ತಿದ್ದವು. ಅಂತಾದ್ರಲ್ಲಿ ಪತ್ರ ಮಿತ್ರರ ಬಗ್ಗೆ ನಮ್ಮದು ತಗಡು ಹಿಸ್ಟರಿ. ಇನ್ನೂ ತನಕ ಒಂದೂ ಬರಕತ್ತಾಗಿಲ್ಲ. ಅದರ ಸಲುವಾಗಿ ಇಪ್ಪತ್ತೈದು ರುಪಾಯಿ ಬಡಿಬೇಕಾ? ಅಂತ ವಿಚಾರ ಬಂತು.

ಏ....ಮಾರಾಯಾ! ಇದು ನನ್ನ ಕಮಿಷನ್ ಅಲ್ಲ ಮಾರಾಯ. ಇದರಾಗ ಒಂದು ಪೈಸಾ ಸಹಿತ ನನಗ ಅಲ್ಲ, ಅಂತ ಹೇಳಿ ಮನೀಶ್ ಅಲ್ಲೆಲ್ಲೋ ದೂರದ ದೇಶ ನೆದರ್ಲ್ಯಾಂಡ್ ಒಳಗ ಇರೋ 'ಇಂಟರ್ನ್ಯಾಷನಲ್ ಸೊಸೈಟಿ ಆಫ್ ಪೆನ್ ಫ್ರೆಂಡ್ಸ್' ಅಂತ ಏನೋ ಹೆಸರಿರುವ ಸಂಸ್ಥೆ ಬಗ್ಗೆ ವಿವರ ನೀಡಲಿಕ್ಕೆ ಶುರು ಮಾಡಿದ.

ನೋಡು, ಈ ಫಾರ್ಮ್ ತೊಗೊ. ಸರಿ ಮಾಡಿ ತುಂಬು. ನಿನಗ ಯಾವ ತರಹದ ಪೆನ್ ಫ್ರೆಂಡ್ ಬೇಕು ಅನ್ನೋದಕ್ಕ ಸುಮಾರು ಹದಿನೈದು ಇಪ್ಪತ್ತು criteria ಅವ. ಸರಿ ಮಾಡಿ ತುಂಬಿ, ಇಪ್ಪತ್ತೈದು ರುಪಾಯಿಗೆ international postal coupons ಇಟ್ಟು, ಏರ್ ಮೇಲ್ ಒಳಗ ಕಳಿಸಿಬಿಡು. ಅವರ ಕಡೆ ದೊಡ್ಡ database ಇರ್ತದ. ನಿನಗೆ ತಕ್ಕ ಪೆನ್ ಫ್ರೆಂಡ್ ಸೆಲೆಕ್ಟ್ ಮಾಡಿ ಕಳಸ್ತಾರ. ಆಕಸ್ಮಾತ workout ಆಗಲಿಲ್ಲ ಅಂದ್ರ ಮುಂದ ಐದು ಮಂದಿ ತನಕಾ ಕಳಿಸ್ತಾರ. ಎಲ್ಲಾ ಇಪ್ಪತ್ತೈದು ರುಪಾಯಿ ಒಳಗ ಬಂತು, ಅಂತ ಹೇಳಿ ಆ ಇಂಟರ್ನ್ಯಾಷನಲ್ ಸಂಸ್ಥೆಯನ್ನ ಫುಲ್ ಸೆಲ್ ಮಾಡಿ ಬಿಟ್ಟ.

ವರ್ಕ್ ಔಟ್ ಆಗಲಿಲ್ಲ ಅಂದ್ರ ಏನು ಮಾಡೋದು? ಮುಂದಿನ ಪೆನ್ ಫ್ರೆಂಡ್ ಕಳಿಸಿರಿ ಅಂತ ಹೇಳಲಿಕ್ಕೆ ಏನು procedure? ಅದು ಇದು ಕೇಳಲಿಕ್ಕೆ ಶುರು ಮಾಡಿದೆ.

ಥಾಂಬಾ! ಅಂದ ಮನೀಶ್.

ವರ್ಕ್ ಔಟ್ ಆಗಲಿಲ್ಲ ಅಂದ್ರ ಬಂದ ಹೇಳಪಾ! ಆವಾಗ ನೋಡೋಣ. ನಾ ಇನ್ನೂ ಮೂರು ವರ್ಷ ಈ ಸುಡುಗಾಡಿನ್ಯಾಗ ಮಣ್ಣು ಹೊರವ ಇದ್ದೇನಿ. ಎಲ್ಲೂ ಓಡಿ ಹೊಂಟಿಲ್ಲ. ಇದು customized ಮಾರಾಯಾ. ನೀ ಎಲ್ಲೋ, ಯಾವದೋ ಮ್ಯಾಗಜಿನ್ ಒಳಗ, ಯಾರನ್ನೋ ನೋಡಿ, ಅವರಿಗೆ ಪತ್ರ ಬರದಂಗ ಅಲ್ಲ. ಮ್ಯಾಚ್ ಮಾಡೋದು ಕಂಪ್ಯೂಟರ್. ತಾಯಿಗೆ ತಕ್ಕ ಮಗಾ ಇದ್ದಂಗ, ದೇವರಿಗೆ ತಕ್ಕ ಪೂಜಾರಿ ಇದ್ದಂಗ, ಒಬ್ಬ ಯಬಡಂಗೆ ಬರೋಬ್ಬರಿ ಇನ್ನೊಬ್ಬ ಯಬಡನನ್ನ (ಅಥವಾ ಯಬಡಳನ್ನ) ಪತ್ರ ಮಿತ್ರ ಅಂತ ಹುಡುಕಿ ಕೊಡ್ತದ. ಹಾಂಗಾಗೆ ಅವರು guarantee ಕೊಡೋದು. ಈ ಪತ್ರ ಮಿತ್ರತ್ವ ಬರಕತ್ತ ಆಗ್ತದ ಮಾರಾಯ, ಅಂತ ಹೇಳಿದ. ಆಶ್ವಾಸನೆ ಕೊಟ್ಟ.

ಆವಾ ಕೊಟ್ಟ ಫಾರ್ಮ್ ತೊಗೊಂಡು ಬಂದು ತುಂಬಿದೆ. ಅಮೇರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಅಲ್ಲೆಲ್ಲ ಪೆನ್ ಫ್ರೆಂಡ್ ಮಾಡಿಕೊಂಡರ ಏನು ಮಜಾ? ಅಲ್ಲೆಲ್ಲ ಬೇಕಾದಷ್ಟು ಮಂದಿ ಬಳಗದವರು, ಗೊತ್ತಿದ್ದವರು ಇದ್ದೇ ಇದ್ದಾರ. ಅವರಿಂದ ಪತ್ರ ಅದು ಇದು ಬಂದಕೋತ್ತೇ ಇರ್ತದ. ಈ ಇಂಟರ್ನ್ಯಾಷನಲ್ ಪೆನ್ ಫ್ರೆಂಡ್ ಎಲ್ಲರೆ ಯಾರೂ ಕೇಳರಿಯದ ದೇಶಗಳಿಂದ ಹುಡಕಬೇಕು ಅಂತ ಹೇಳಿ, ಜಗತ್ತಿನ ಅಟ್ಲಾಸ್ ಹರವಿಕೊಂಡು, exotic ಜಗಗಳಾದ ಮಾರಿಷಸ್, ಸೀಷೆಲ್ಸ್, ಬರ್ಮುಡಾ, ಗಯಾನಾ, ಫಿಜಿ, ಸುರಿನಾಮ್, ಘಾನಾ, ಐವರಿ ಕೋಸ್ಟ್, ಅದು ಇದು ಅಂತ ಒಂದಿಷ್ಟು ದೇಶಗಳನ್ನ ಒಂದು ಆರ್ಡರ್ ಒಳಗ ಲಿಸ್ಟ್ ಮಾಡಿದೆ. ಮತ್ತ ವಯಸ್ಸಿನ ರೇಂಜ್ ಕೊಟ್ಟೆ. ಇಂಗ್ಲೀಷ್ ಕಡ್ಡಾಯವಾಗಿ ಬರಬೇಕು ಅಂತ ಹೇಳಿದೆ. ಅದಿಲ್ಲ ಅಂದ್ರ ಎಲ್ಲರೆ ಮೂಲ್ಯಾಗಿನ ಆಫ್ರಿಕಾದ ದೇಶದಿಂದ ಸ್ವಾಹಿಲಿ, ಕಿನ್ಯಾರವಾಂಡಾ ಭಾಷಾ ಮಾತಾಡಿಕೋತ್ತ ಯಾರರೆ ಬಂದ್ರ ನನ್ನ ಇಪ್ಪತ್ತೈದು ರೂಪಾಯಿ ಢಂ ಅಂತಿತ್ತು.

ಎಲ್ಲಾ ಫಾರಂ ತುಂಬಿ, ಇಪತ್ತೈದು ರೂಪಾಯಿಗೆ ಇಂಟರ್ನ್ಯಾಷನಲ್ ಪೋಸ್ಟಲ್ ಕೂಪನ್ ತೊಗೊಂಡು, ಎಲ್ಲಾ ಒಂದು ಪ್ಯಾಕೆಟ್ ಮಾಡಿ, ನೆದೆರ್ಲ್ಯಾಂಡಿಗೆ ಏರಮೇಲ್ ಒಳಗ ಕಳಿಸಿದೆ. ಪೋಸ್ಟೇಜ್ ಅಂತ ಹೇಳಿ ಮತ್ತೂ ಒಂದು ಹತ್ತು ಹನ್ನೆರೆಡು ರೂಪಾಯಿ. ಹೋಗ್ಗೋ! ಭಾಳ ತುಟ್ಟಿ ಆತು ಇದು. ಆದ್ರ ಒಳ್ಳೆ ಕ್ವಾಲಿಟಿಯ, ನಮ್ಮ ಅಭಿರುಚಿಗೆ ಹೊಂದುವಂತಹ ಪತ್ರ ಮಿತ್ರ ಬೇಕು ಅಂದ್ರ ಖರ್ಚ ಮಾಡಲಿಕ್ಕೇ ಬೇಕು. ಹಿಂದ ಬಿಟ್ಟಿ ಪತ್ರಿಕೆಗಳಲ್ಲಿ ಸಿಕ್ಕವರು ಬರಕತ್ತಾಗಲೇ ಇಲ್ಲ. ನೋಡೋಣ ಅಂತ ಹೇಳಿ, ಹೊಟ್ಟಿ ಬಟ್ಟಿ ಕಟ್ಟಿ, ಎಲ್ಲಾ ಕೂಡಿ ಒಂದು ನಲವತ್ತು ರೂಪಾಯಿ ಢಂ ಅನ್ನಿಸಿಬಿಟ್ಟೆ. ಆ ತಿಂಗಳ ಪಾಕೆಟ್ ಮನಿಯಿಂದ ಅಷ್ಟಕ್ಕ ಖೋತಾ ಆತು. ನಾವೇ ಹಾಕಿಕೊಂಡ ಬಜೆಟ್. ಒಂದೆರಡು ಬೇಕಾಗಿದ್ದ ಮ್ಯೂಸಿಕ್ ಕ್ಯಾಸೆಟ್ ತೊಗೊಳ್ಳೋದು ತಡಾ ಆತು. ಒಂದು ನಾಕು ಶನಿವಾರ ಸಂಜಿ ಮುಂದ ಹಾಕುತ್ತಿದ್ದ ವಾರದ 'ಒಂದೇ' ಜರ್ದಾ ಪಾನ್ ಹಾಕೋದನ್ನ ಬಿಡಬೇಕಾತು. ನಲವತ್ತು ರೂಪಾಯಿ ದೊಡ್ಡ ಬಲಿಯನ್ನೇ ತೊಗೊಂಡು ಬಿಡ್ತು. (ಪಿಯೂಸಿ ಕಾಲದಿಂದ ಇದ್ದ ವಾರದ ಒಂದೇ ಜರ್ದಾ ಪಾನ್  ಡಿಗ್ರಿ ಮುಗಿಯೋ ಹೊತ್ತಿಗೆ ದಿನಕ್ಕ ಎರಡೋ ಮೂರೋ ನಾಕೋ ಐದೋ ಆರೋ ಆಗಿ, ಲೆಕ್ಕ ತಪ್ಪಿ ಹೋಗಿ, ತಾಸಿಗೊಮ್ಮೆ ಹಾಸ್ಟೇಲಿಂದ ಮೈಲು ದೂರವಿದ್ದ ಪಾನ್ ಶಾಪಿಗೆ ಓಡಲಾಗದೆ, ಸದಾ ಜೊತೆಗಿಟ್ಟುಕೊಳ್ಳಬಹುದಾದ ಗುಟ್ಕಾ ಚೀಟಿನೇ ಸರಿಯೆಂದು, ಗುಟಕಾಕ್ಕ ಶಿಫ್ಟ್ ಆಗಿ, ಪೂರ್ಣ ಪ್ರಮಾಣದ ಗುಟಕಾ ಗಿರಾಕಿ ಆಗಿ ಪಿಲಾನಿಯಿಂದ ಹೊರಬಿದ್ದದ್ದು ಡಿಗ್ರಿ ಜೊತೆಗೆ ಬಂದ ಬೋನಸ್. ನಂತರ ಎಲ್ಲಾ ಬಿಟ್ಟಾತು. ಆ ಮಾತ ಬ್ಯಾರೆ:))

ಸುಮಾರು ಒಂದು ತಿಂಗಳಾದ ಮೇಲೆ ಆ ನೆದೆರ್ಲ್ಯಾಂಡ್ ಸಂಸ್ಥೆಯಿಂದ ಒಂದು ಪ್ಯಾಕೆಟ್ ಬಂತು. ಲಗೂ ಲಗೂ ಓಪನ್ ಮಾಡಿದೆ.

'ಲಲಿತಾ ಡೂಲಾರ್' ಎಂಬ ಮಾರಿಷಸ್ ಹುಡುಗಿಯನ್ನ ನಿಮಗೆ ಕೊಡಲಾಗಿದೆ ಅಂತ ಬರದಿತ್ತು. ಅಯ್ಯೋ! ಪತ್ರ ಮಿತ್ರೆ ಅಂತ ಕೊಡಲಾಗಿದೆ ಅಂತ ಅಷ್ಟೇ!

ಲಲಿತಾ - ನಮ್ಮಮ್ಮನ ಹೆಸರಿನ ಹುಡುಗಿ. ಅಯ್ಯೋ ಇಕಿ ಜೋಡಿನೂ ನಮ್ಮ ಅಮ್ಮನ ಜೋಡಿ ಆದಂಗ ದಿನಾ ಜಗಳಾ ಶುರು ಆದ್ರ ಕಷ್ಟ ಅಂತ ಅನ್ನಿಸ್ತು. ಏ ಹೆಸರು ಅಷ್ಟೇ ಒಂದೇ ಅಂದ ಮಾತ್ರಕ್ಕ ಇಡೀ ಕುಂಡಲಿ ಒಂದೇ ಇರ್ತದೇನು? ಹಾಂಗೆಲ್ಲಾ ವಿಚಾರ ಮಾಡೋದು ತಪ್ಪು ಅಂತ ಹೇಳಿ ಬಿಟ್ಟೆ.

ಆ ನೆದರ್ಲ್ಯಾಂಡ ಸಂಸ್ಥೆಯವರು ಎಲ್ಲಾ ವಿವರ ಇಟ್ಟಿದ್ದರು. ಮತ್ತ ಪತ್ರ ಮಿತ್ರತ್ವವನ್ನ ಹ್ಯಾಂಗ ಶುರು ಮಾಡಬೇಕು, ಹ್ಯಾಂಗ ಬೆಳಸಬೇಕು ಅದು ಇದು ಎಲ್ಲ ಮಸ್ತ ವಿವರಿಸಿ ಒಂದು ಸಣ್ಣ ಪುಸ್ತಕ ಸಹಿತ ಇಟ್ಟಿದ್ದರು.

ಮಾರಿಷಸ್ ದೇಶದ ಪತ್ರ ಮಿತ್ರೆ ಸಿಕ್ಕಿದ್ದು ಒಂದು ತರಹ ಖುಷಿನೇ ಆತು. ಮೊದಲಿಂದ ಒಂದು ತರಹದ ಕುತೂಹಲ ಹುಟ್ಟಿಸಿದ ದೇಶ ಅದು. ಮೊದಲೇ ದ್ವೀಪ ದೇಶಗಳು ಅಂದ್ರ ಸಿಕ್ಕಾಪಟ್ಟೆ attraction. ಅದರಲ್ಲೂ ಮಾರಿಷಸ್ ಒಳಗ ಭಾರತೀಯ ಮೂಲದವರದೇ ಕಾರೋಬಾರು. ಎಲ್ಲ ಬ್ರಿಟಿಷರ ಕಾಲದಲ್ಲಿ ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡಲು ಹೋದ ಜನ. ಬಿಹಾರಿಗಳು, ಉತ್ತರ ಪ್ರದೇಶದವರು, ತಮಿಳರು ಎಲ್ಲ ಸುಮಾರು ನೂರು ವರ್ಷದ ಮೇಲಿಂದ ಅಲ್ಲೇ ಸೆಟಲ್ ಆಗಿ, ಅಲ್ಲಿಯವರೇ ಆಗಿ ಏನೋ ಒಂದು ತರಹದ ಮಜಾ ಸಂಸ್ಕೃತಿ ಮಾಡಿಕೊಂಡಾರ, ಅದು, ಇದು ಅಂತ ಓದಿದ್ದೆ. ಅಲ್ಲಿರುವ ಡೋಡೋ ಪಕ್ಷಿ ಅತ್ಯಂತ ಕಡಿಮೆ ಕಾಲದಲ್ಲಿ extinct ಆದ ಪಕ್ಷಿ ಅಂತ ಪ್ರಸಿದ್ಧ ಆಗಿತ್ತು. ಪಾಪ ಅದು ಹಾರಲಿಕ್ಕೆ ಬರದ ಬಾತುಕೋಳಿಯಂತಹ ಪಕ್ಷಿ. ಪೋರ್ಚುಗೀಸರು, ಡಚ್ಚರು, ಫ್ರೆಂಚರು ಬಂದಿದ್ದೇ ಬಂದಿದ್ದು, ಎಲ್ಲಾ ಹೊಡೆದು ತಿಂದು ಮುಗಿಸಿಬಿಟ್ಟಿದ್ದರು. ಬ್ರಿಟೀಷರು ಅವರನ್ನ ಓಡಿಸಿ ಮಾರಿಷಸ್ ತಮ್ಮ ಕೈಯಾಗ ತೊಗೊಳ್ಳೋ ಹೊತ್ತಿಗೆ ಡೋಡೋ ಪಕ್ಷಿ ಹೋಗ್ಲಿ ಅದರ ರೆಕ್ಕಿ ಪುಕ್ಕಾ ಸಹಿತ ನಿರ್ನಾಮ ಆಗಿ ಹೋಗಿತ್ತು. ಪಾಪ ಡೋಡೋ!

ಲಲಿತಾ ಡೂಲಾರ್ ಅನ್ನೋ ಹೆಸರಿಂದನೇ ಗೊತ್ತಾತು, ಇದೂ ಸಹಿತ ಯಾವದೋ ಇಂಡಿಯನ್ ಮೂಲದ ಹುಡುಗಿ ಅಂತ. ಅಕಿ ಅಜ್ಜನೋ, ಮುತ್ತಜ್ಜನೋ, ಗುಡು ಗುಡು ತಾತಾನೋ, ಗಡ ಗಡ ಮುತ್ಯಾನೋ ಹೆಚ್ಚಾಗಿ ಬಿಹಾರೋ ಎಲ್ಲಿಂದನೋ ಬಂದು, ಮಾರಿಷಸ್ ಒಳಗ ಕೂಲಿ ನಾಲಿ ಮಾಡಿ ಉದ್ಧಾರ ಆಗಿರಬೇಕು ಅಂತ ಅನ್ನಿಸ್ತು.

ಮತ್ತೇನು? ಲಲಿತಾ ಡೂಲಾರ್ಗೆ ಒಂದು introductory ಲೆಟರ್ ಬರದೆ. ಬರೆದು airmail ಒಳಗ ಹಾಕಿದೆ. ಅಕಿ ಏನೋ ಕಂಪ್ಯೂಟರ ಡಿಪ್ಲೋಮಾ ಮಾಡಿಕೋತ್ತ ಇದ್ದಳು ಅಂತ ನೆನಪು. ಸುಮಾರು ಕಲ್ತಾಕಿ ಇದ್ದಂಗ ಇದ್ದಾಳ. ದೇವರಾ ಇಕಿಗೆ ಸ್ವಲ್ಪ  ಜನರಲ್ ನಾಲೆಜ್ (GK) ಇದ್ದು, ಜಗತ್ತಿನ ಆಗುಹೋಗುಗಳ ಬಗ್ಗೆ ಇಂಟರೆಸ್ಟಿಂಗ್ ಆಗಿ ಪತ್ರದೊಳಗ ಚರ್ಚೆ ಮಾಡಲಿಕ್ಕೆ ಬರೋವಷ್ಟು ಬುದ್ಧಿ ಇರುವಂಗ ಮಾಡಪಾ. ಇಲ್ಲಂದ್ರ ನನಗ ಮೊದಲೇ ಮಂದಿ ಲಗೂ ಬೋರ್ ಹೊಡಿತಾರ. ಅದರಾಗೂ GK ಇಲ್ಲದವರು, ಕೂಪ ಮಂಡೂಕಗಳು ಭಾಳ ಅಂದ್ರ ಭಾಳ ಬೋರ್. ಹಾಂಗೆನರ ಆದ್ರ ನನ್ನ ನಾಲ್ವತ್ತು ರೂಪಾಯಿ ಢಂ ಅಂದು ಹೋಗ್ತದ ಅಂತ ಕೇಳಿಕೊಂಡೆ. ಶಕ್ತಿ ಕಪೂರ್ ಗತೆ, ಆವ್! ಲಲೀತಾ..... ಅಂತ ಮಾತ್ರ ಅನ್ನಲಿಲ್ಲ. ಮಾರಿಷಸ್ ಮಂದಿ ಎಲ್ಲ ಸಿಕ್ಕಾಪಟ್ಟೆ ಬಾಲಿವುಡ್ ಫ್ಯಾನ್ಸ್. ಅಯ್ಯೋ ಎಲ್ಲೆ ಶಕ್ತಿ ಕಪೂರ್ ಮಾದರಿಯ ವಿಲನ್ ಗಂಟು ಬಿದ್ದ ಅಂತ ಅಕಿ ವಾಪಸ್ ಬರಿದಿದ್ದರ? ನಾಲ್ವತ್ತು ರೂಪಾಯಿ ಢಂ.

ಸುಮಾರು ಒಂದು ತಿಂಗಳು ಆದ ಮ್ಯಾಲೆ ಲಲಿತಾ ತಿರುಗಿ ಉತ್ತರಾ ಬರೆದಳು. ಪತ್ರದ ಜೋಡಿ ಮಾರಿಷಸ್ ನನಗ ಭಾಳ ಸೇರ್ತದ ಅಂತ ಹೇಳಿ ಒಂದು ಐದಾರು ಪಿಕ್ಚರ್ ಪೋಸ್ಟ್ ಕಾರ್ಡ್ ಇಟ್ಟಿದ್ದಳು. ಭಾಳ ಅಂದ್ರ ಭಾಳ ಚಂದ ಇದ್ದವು. ಮುಂದ ಅವನ್ನ ದೀಪಾವಳಿ ಗ್ರೀಟಿಂಗ್ ಅಂತ ಹೇಳಿ ಕೆಲೊ ಮಂದಿಗೆ ಕಳಿಸಿದ್ದೆ. ನೋಡಿದವರು ಒಬ್ಬರು, ಇದು ಗೋಕರ್ಣ ಬೀಚ್ ಏನು? ಅಂತ ಕೇಳಿ ಆ ಪುಣ್ಯಾತ್ಮರಿಗೆ ಇನ್ನು ಎಂದೂ ಇಂತಹ ಹೊರದೇಶದ ಗ್ರೀಟಿಂಗ್ ಕಾರ್ಡ್ ಕಳಿಸಿ ವೇಸ್ಟ್ ಮಾಡಬಾರದು ಅಂತ ನಿರ್ಧಾರ ಮಾಡಿದೆ. ಮಾರಿಷಸನ ಯಾವದೋ ಒಂದು ಬೀಚ್ ಅಂತ ಬರಕೊಂಡು ಅದ. ಹಂತಾದ್ರಾಗ ಗೋಕರ್ಣ ಬೀಚ್ ಅಂತ ಗೋಕರ್ಣ ನೋಡಿದ ಕ್ವಾಣನ ಹಾಂಗ ಕೇಳ್ತಾರ ಅಂದ್ರ ಏನ್ರೀ?!

ಅಕಿಗೆ ಇಂಡಿಯಾ ಬಗ್ಗೆ ಸಿಕ್ಕಾಪಟ್ಟೆ ಕುತೂಹಲ ಇತ್ತು. ಹೇಳಿ ಕೇಳಿ ಅವರ ಮೂಲ ಎಲ್ಲ ಇಲ್ಲೇ. ಮನಿ ಮಂದಿಯಿಂದ ಇಂಡಿಯಾ ಬಗ್ಗೆ ಕೇಳಿ ಕೇಳಿ, ಆದರ ಪ್ರತ್ಯಕ್ಷ ಎಂದೂ ನೋಡದೆ, ಏನೇನೋ ತಲಿ ಕೆಡಿಸಿಕೊಂಡು, ಹಾಂಗಾಗಿ ಸುಮಾರು ಪ್ರಶ್ನೆ ಕೇಳಿದ್ದಳು. ಎಲ್ಲ ಪ್ರಶ್ನೆಗಳಿಗೆ ಫುಲ್ ಉತ್ತರಾ ಬರಕೋತ್ತ ಹೋದರ ಒಂದು ದೊಡ್ಡ ಪುಸ್ತಕ ಆಗಿ ಬಿಡ್ತದ ಅಂತ ಹೇಳಿ ಅಕಿಗೆ installment ಒಳಗ ಹೇಳತೇನಿ ಅಂದೆ.

ನಿಮ್ಮ ದೇಶದ ಕಾಶ್ಮೀರ ದೇವರೇ ಮಾಡ್ಯಾನಂತ. ಹೌದೇನು? ಭಾಳ ಚಂದ ಅದ ಅಂತ. ಹೌದಾ? ನೀ ನೋಡೀ? ಅಲ್ಲೋ ಉತ್ತರ ಭಾರತದಾಗ ಇರ್ತೀ ಅಂತೀ ಮತ್ತಾ ಕಾಶ್ಮೀರ ನೋಡಿಲ್ಲ? ಪಿಲಾನಿಂದ ಕಾಶ್ಮೀರ ಎಷ್ಟು ದೂರ? ಅಂತ ಏನೇನೋ ಪ್ರಶ್ನೆ ಅಕಿದು. ಮಾರಿಷಸ್ ಅನ್ನೋ ಸಣ್ಣ ದೇಶದಾಗ ಇದ್ದವರಿಗೆ ಭಾರತದ ಉದ್ದ ಅಗಲ ಎಲ್ಲೆ ಅರಿವಿಗೆ ಬರಬೇಕು. ಮಾರಿಷಸ್ ಉತ್ತರದಿಂದ ದಕ್ಷಿಣಕ್ಕೆ ಹೆಚ್ಚ ಅಂದ್ರ ಒಂದು ಎಂಬತ್ತು ಕಿಲೋಮೀಟರ್. ಅಗಲ ಇನ್ನೊಂದು ಐವತ್ತು ಕಿಲೋಮೀಟರು. ಒಂದು ದಿವಸದಾಗ ಇಡೀ ದೇಶ ಸುತ್ತಿ ಬರಬಹುದು. ಹಾಂಗಾಗಿ ಅಕಿ ಕೇಳಿದ್ದು ಮಜಾ ಅನ್ನಿಸ್ತೇ ಹೊರತು ಸಾಕಪಾ ಇಕಿ ಸಹವಾಸ ಅನ್ನಿಸಲಿಲ್ಲ.

ನನ್ನ ಉತ್ತರದೊಳಗ ಕಾಶ್ಮೀರ ಬಗ್ಗೆ ಒಂದು aerogram ಒಳಗ ಎಷ್ಟು ಹಿಡಿಸಲಿಕ್ಕೆ ಸಾಧ್ಯವೋ ಅಷ್ಟು ಬರೆದು ಒಂದು ರಿಪ್ಲೈ ಝಾಡಿಸಿದೆ. ಅಕಿ ಪಾಪ ಮಾರಿಷಸ್ ಪಿಕ್ಚರ್ ಪೋಸ್ಟ್ ಕಾರ್ಡ್ ಕಳಿಸಿದ್ದಳು. ನಾ ಎಲ್ಲಿಂದ ಕಾಶ್ಮೀರದ ಫೋಟೋ ಕಳಿಸಲಿ? ಪಿಲಾನಿ ಒಳಗ ಹುಡುಕಿದರ ಪಿಲಾನಿ ಕ್ಯಾಂಪಸ್ಸಿನ ಚಂದ ಚಂದ ಪಿಕ್ಚರ್ ಪೋಸ್ಟ್ ಕಾರ್ಡ್ ಸಿಗ್ತಿತ್ತೇ ವಿನಹ ಕಾಶ್ಮೀರ ಅದು ಇದು ಸಿಗ್ತಿದ್ದಿಲ್ಲ.

ಅಕಿ ಲಲಿತಾ ಏನೋ ಖಟಿ ಪಿಟಿ ಮಾಡಿ, ಪಿಲಾನಿ ಅನ್ನೋದು ರಾಜಸ್ಥಾನ ಒಳಗ ಅದ, ಅಲ್ಲೆ ಜೈಪುರ್, ಜೈಸಲ್ಮೇರ್, ಉದಯ್ ಪುರ ಇತ್ಯಾದಿ ಅವ ಅನ್ನೋದನ್ನ ಹ್ಯಾಂಗೋ ಪತ್ತೆ ಮಾಡಿ, ಮುಂದಿನ ಪತ್ರದೊಳಗ ಅವುಗಳ ಬಗ್ಗೆ ಕೇಳಿ, ಅವೆಲ್ಲಾ ನಿನಗ ಹತ್ತಿರ ಇರಬಹುದಲ್ಲಾ? ನೋಡಿ ಏನು? ಅಂತ ಕೇಳಿ ಬಿಟ್ಟಳು. ಯವ್ವಾ ಬೇ! ನಿನಗ ಪೆನ್ ಫ್ರೆಂಡ್ ಅಲ್ಲ ಟೂರಿಸ್ಟ್ ಗೈಡ್ ಬೇಕಾಗಿತ್ತು ನೋಡು. ನಾ ಸಿಕ್ಕೊಂಡೆ. ನಾ ಪಿಲಾನಿಗೆ ಬಂದು ಇನ್ನೂ ಒಂದು ಸೆಮೆಸ್ಟರ್ ಸಹಿತ ಆಗಿಲ್ಲ. ಬಂದಾಗಿಂದ ಬರೇ ಕ್ಲಾಸು, ಟೆಸ್ಟು, ಅದು, ಇದು ಅಂತ ಬರೇ ಅದ ಆಗ್ಯದ. ಎಲ್ಲಿ ಜೈಪುರ್ ಹಚ್ಚಿ? ಎಲ್ಲಿ ಉದಯಪುರ್ ಹಚ್ಚಿ? ಸೆಮೆಸ್ಟರ್ ಮುಗಿಸಿ ಧಾರವಾಡಕ್ಕ ಹೋಗಿ, ಮೂರು ವಾರ ಆರಾಮ್ ಇದ್ದು ಬಂದರ ಸಾಕಾಗ್ಯದ. ಎಲ್ಲಿ ಜೈಪುರ್ ಹಚ್ಚಿ ಬೇ? ಅಂತ ಬರೆಯೋಹಾಂಗ ಆಗಿತ್ತು. ಹಾಂಗ ಬರಿಲಿಲ್ಲ. ತಿಳಿದ ಮಟ್ಟಿಗೆ ಬರೆದು, ಬರೆ ಜೈಪುರ ಇತ್ಯಾದಿ ಮಾತ್ರ ಅಲ್ಲ, ರಾಜಸ್ಥಾನ ಒಳಗ ರಣಥಂಬೋರ್ ಅಂತ ಸಹಿತ ಅದ. ಅಲ್ಲೆ ಹುಲಿ ಸಹಿತ ಅವ. ಗರ್ರ್! ಅನ್ನೋ ಖರೆ ಹುಲಿ ಅಂತ ಹೇಳಿದೆ. ಹುಲಿ ಕೇಳಿದ ಮ್ಯಾಲೆ ಎಲ್ಲರ ಹುಡುಗಿ distract ಆಗಿ ನನ್ನ ಟೂರಿಸ್ಟ್ ಗೈಡ್ ತರಹ ಪ್ರಶ್ನೆ ಮಾಡೋದು ಬಿಡ್ತಾಳೋ ಏನೋ ಅಂತ ವಿಚಾರ.

ಪಿಲಾನಿ ಒಳಗ ಇದ್ದಾಗ ಪತ್ರ ಮಿತ್ರತ್ವಕ್ಕ ಇನ್ನೊಂದು complication ಅಂದ್ರ ವರ್ಷಕ್ಕ ಎರಡು ಸರೆ ಬರೋ ಸೆಮೆಸ್ಟರ್ ರಜಾ. ರಜಾ ಟೈಮ್ ಒಳಗ ಬಂದ ಪತ್ರಗಳು ಎಷ್ಟೋ ಕಳೆದು ಹೋಗ್ತಿದ್ದವು ಅಂತ ಪ್ರತೀತಿ ಇತ್ತು. ಹುಡುಗುರು ಊರಿಗೆ ಹೋಗ್ಯಾರ ಅಂದ್ರೇನಾತು? ಪೋಸ್ಟ್ ಮ್ಯಾನ್ ಮಂದಿ ರೂಮಿಗೆ ಬಂದು ಪತ್ರಾ ಒಗೆದು ಹೋಗಬೇಕು. ಒಂದು ಸೆಮೆಸ್ಟರ್ ರಜಾ ಕೆಟ್ಟ ಥಂಡಿ ಟೈಮ್ ಒಳಗ ಬಂದ್ರ ಇನ್ನೊಂದು ಕೆಟ್ಟ ಬ್ಯಾಸಿಗಿ ಟೈಮ್ ಒಳಗ. ಆ ಕೆಟ್ಟ ಥಂಡಿ, ಬಿಸಿಲಿನ್ಯಾಗ ಎಲ್ಲಿ ಇಲ್ಲದ ಸ್ಟೂಡೆಂಟಗಳ ಪತ್ರ ಬಟವಾಡೆ ಮಾಡಿಕೋತ್ತ ಇರೋದು ಅಂತ ರಜಾ ಟೈಮ್ ನಲ್ಲಿ ಬಂದ ಭಾಳ ಪತ್ರಗಳಿಗೆ ಅಂಚೆ ಮಂದಿ ಏನೋ ಒಂದು ಗತಿ ಕಾಣಿಸಿಬಿಡ್ತಿದ್ದರು ಅಂತ ಪತ್ರ ಕಳೆದುಕೊಂಡವರ complaint. ಹಾಂಗಾಗಿ ನಮ್ಮ ಪತ್ರ ಮಿತ್ರಳಿಗೆ ಬರೋಬ್ಬರಿ ಒಂದು ಟೈಮ್ ಟೇಬಲ್ ಮಾಡಿಕೊಟ್ಟು, ಈ ಟೈಮ್ ಒಳಗ ಪತ್ರಾ ಬರಿ ಬ್ಯಾಡಾ, ಬರದ್ರ ಮುಟ್ಟೋದಿಲ್ಲ ಅಂತ ಹೇಳಿದೆ. ಎಷ್ಟು ತಿಳೀತೋ ಬಿಡ್ತೋ? ಸೂಟಿಯೊಳಗ ಪತ್ರ ಯಾವದೂ ಮಿಸ್ ಆದಂಗ ಇಲ್ಲ.

ಮುಂದಿನ complication ಅಂದ್ರ ಬ್ಯಾಸಿಗಿ ದೊಡ್ಡ ಸೂಟಿ. ಮೇ ತಿಂಗಳ ಕೊನೇ ವಾರದಿಂದ ಜುಲೈ ತಿಂಗಳ  ಕೊನೇ ವಾರದ ವರೆಗೆ. ಆವಾಗ ನಮ್ಮ ಮುಕ್ಕಾಂ ಧಾರವಾಡ. ಅದಕ್ಕ ಆ ಟೈಮ್ ಒಳಗ ಪತ್ರ ಬರಿಬೇಕು ಅಂದ್ರ ಧಾರವಾಡ ಪತಾ ಕೊಟ್ಟೆ. ಅಕಿ ಹಾಪ್ ಆಗಿ ಬಿಟ್ಟಿರಬೇಕು. ಏನಪಾ ಇವಂದು? ಎಷ್ಟು ಅಡ್ರೆಸ್ ಅವ? ಆ ಸೂಟಿಯೊಳಗ ನಾ ಮೂರು ನಾಕು ವಾರ ಚೈನಿ ಹೊಡಿಲಿಕ್ಕೆ ಮೈಸೂರಿಗೆ ಬ್ಯಾರೆ ಹೋಗಿ ಕೂತಿದ್ದೆ. ಮೈಸೂರಿನ ಅಡ್ರೆಸ್ ಸಹಿತ  ಕೊಟ್ಟು ಬಿಟ್ಟಿದ್ದರ ಅಕಿ ಹಾಪ್ ಆಗೋದು ಗ್ಯಾರಂಟೀ ಇತ್ತು. ಬ್ಯಾಡ ಬಿಡು, ಪತ್ರ ಬಂದಿದ್ದರ ಧಾರವಾಡ ಒಳಗ ಬಂದು ಬಿದ್ದಿರ್ತದ, ಹೋಗಿ ಓದಿದರರ ಆತು ಅಂತ ಹೇಳಿ ಮತ್ತೂ complicated ಮಾಡಲಿಲ್ಲ.

ಪಿಲಾನಿ ಒಳಗೇ ಇದ್ದರೂ, ಎರಡನೇ ವರ್ಷ ಹಾಸ್ಟೆಲ್ ಅದೇ ಉಳಿದರೂ ರೂಂ ನಂಬರ್ ಚೇಂಜ್ ಆಗ್ತಿತ್ತು. ಅದೊಂದು ಮತ್ತೊಂದು complication. ಅದಕ್ಕ ಬ್ಯಾಸಿಗೆ ಸೂಟಿ ಕೊನೇ ಪತ್ರದಾಗ ಅಕಿಗೆ ಬರದೆ, ಮುಂದಿನ ಪತ್ರದಾಗ ಒಂದು ಸಣ್ಣ ಚೇಂಜ್ ಮಾಡು. ರೂಮ ನಂಬರ್ ೨೪೫ ರ ಬದಲೀ ೨೦೩ ಬರಿ ಅಂತ ಹೇಳಿದೆ. ಇಲ್ಲಂದ್ರ ಪತ್ರ ಎಲ್ಲೋ ಹೋಗಿ, ಫಾರಿನ್ ಸ್ಟ್ಯಾಂಪ್ ಅದ ಅಂತ ಹೇಳಿ, ಯಾರರೆ ಸ್ಟ್ಯಾಂಪ್ ಕಲೆಕ್ಟ್ ಮಾಡೋ ಹಾಪನಿಗೆ ಸಿಕ್ಕು, ಆವಾ ನನಗ ಪತ್ರಾ ಕೊಡಲೇ ಇಲ್ಲ ಅಂದ್ರ ಗೋವಿಂದಾ ಗೋವಿಂದ!

ಇದೆಲ್ಲ ಒಂದು ಪತ್ರದಾಗ ಬರದ ಮ್ಯಾಲೆ ಅಕಿ ಧಾರವಾಡದ ಬಗ್ಗೆ ಕೇಳಿದಳು. ಧಾರವಾಡ ಎಲ್ಲದ? ಹೋಗಲಿಕ್ಕೆ ಎಷ್ಟು ಹೊತ್ತು ಹಿಡಿತದ? ಅದು ಇದು ಅಂತ. ನಾ ಹೇಳಿದೆ, ನೋಡವಾ, ಪಿಲಾನಿ ರಾತ್ರಿ ಬಿಟ್ಟು, ಕೆಟ್ಟ ಗತಿಗೆಟ್ಟು ಹೋದ ರಾಜಸ್ಥಾನ ಅಥವಾ ಹರಿಯಾಣಾ ರೋಡವೇಸ್ ಬಸ್ಸಿನ್ಯಾಗ ಬೆನ್ನು ಮುರಕೊಂಡು, ಎಲ್ಲಾ ನಟ್ಟು ಬೋಲ್ಟು ಲೂಸ್ ಮಾಡಿಕೊಂಡು ಮುಂಜಾನೆ ದೆಲ್ಲಿಗೆ ಬಂದು ಮುಟ್ಟತೇವಿ. ಅಲ್ಲೆ ಇಳಿದು ಹಜರತ್ ನಿಜಾಮುದ್ದೀನ ರೈಲ್ವೆ ಸ್ಟೇಷನ್ ಗೆ ಬಂದು ಒಂದು ಎಂಟು ತಾಸು ನೊಣ ಹೊಡಿತೇವಿ. ಅಲ್ಲಿಂದ ಮಧ್ಯಾನ ಸುಮಾರು ಎರಡು ಘಂಟೇಕ್ಕ ನಿಜಾಮುದ್ದೀನ-ಗೋವಾ express ಟ್ರೈನ್ ಹಿಡಿತೇವಿ. ಮರುದಿವಸ ರಾತ್ರಿ ಹತ್ತು ಘಂಟೇಕ್ಕ ಮೀರಜ್ ಮುಟ್ಟತೇವಿ. ಅಲ್ಲೆ ಮತ್ತ ಟ್ರೈನ್ ಚೇಂಜ್ ಮಾಡಿ, ಎಲ್ಲ ಸರಿ ಹೋದ್ರ, ಮುಂಜಾನೆ ಸುಮಾರು ಆರೂವರಿಗೆ ಧಾರವಾಡ. ಅಂದ್ರ ಪಿಲಾನಿ ಬಿಟ್ಟು ಸುಮಾರು ಐವತ್ತೈದು ತಾಸಿನ ನಂತರ ಮನಿ ಮುಟ್ಟತೇನಿ. ಎರಡು ದಿವಸದ ಮ್ಯಾಲೆ, ಅಂತ ಬರದೆ. ಅಷ್ಟೊತ್ತು ಬೇಕಾ!? ಅಂತ ಅಕಿ ಕೇಳಿದ ಸ್ಟೈಲ್ ನೋಡಿದರ ಐವತ್ತೈದು ತಾಸಿನ್ಯಾಗ ಇಡೀ ಮಾರಿಷಸ್ ದೇಶವನ್ನೇ ಐದು ಸರೆ ರೌಂಡ್ ಹಾಕಿ ಬರಬಹದು ಅನ್ನೋ ರೀತಿಯೊಳಗ ಹೇಳಿದಳು. ಅಷ್ಟು ಸಣ್ಣ ದೇಶದಾಗ ಇದ್ದು, ಗುಂಯ್ ಅಂತ ಕಾರು ಹತ್ತಿಕೊಂಡು ಹೋಗವರಿಗೆ ನಮ್ಮ ಮಲ್ಟಿಪಲ್ ದಿನಗಳ ಟ್ರೈನ್ ಜರ್ನೀ ಎಲ್ಲಿಂದ ಗೊತ್ತಾಗಬೇಕು? ಏನೋಪ್ಪಾ? ನೀವೆಲ್ಲಾ ಭಾಳ ದೂರ ದೂರ ಅಡ್ಯಾಡತೀರಿ ಅಂತ ಹೇಳಿ ಸುಮ್ಮನಾದಳು ಲಲಿತಾ.

೧೯೯೧ ಬ್ಯಾಸಿಗಿ ಸೂಟಿಗೆ ಮೊದಲ ವರ್ಷ ಮುಗಿಸಿ ಬಂದ್ರ ಇಲ್ಲೆ ಧಾರವಾಡ ಒಳಗ ಇದ್ದ ಫ್ರೆಂಡ್ಸ್ ಅವರ ಪರೀಕ್ಷಾ ಅದು ಇದು ಅಂತ ಬಿಜಿ ಇದ್ದರು. ಅದೇ ಟೈಮ್ ಒಳಗ ರಾಜೀವ್ ಗಾಂಧಿ ಒಬ್ಬವ ಮ್ಯಾಲೆ ಹೋಗಿ, ಎಲೆಕ್ಷನ್ ಎಲ್ಲ ಮುಂದ ಹೋಗಿ, ಕವಿವಿ ಹುಡುಗರ ಪರೀಕ್ಷಾ ಎಲ್ಲ ಎತ್ತರ ಪತ್ತರ ಆಗಿ, ನಾ ಮಸ್ತ ರಜಾ ಎಂಜಾಯ್ ಮಾಡೋ ಮೂಡಿನ್ಯಾಗ ಇದ್ದರ ಇವರ ಪರೀಕ್ಷಾ ತಯಾರಿ. ಧಾರವಾಡ ಬೋರ್ ಬಂತು. ನಡಿ ಮೈಸೂರಿಗೆ ಹೋಗಿ ಬರೋಣ, ಹ್ಯಾಂಗೂ ಅಲ್ಲೆ ಒಬ್ಬ ಬ್ಯಾಚುಲರ್ ಕಸಿನ್ ಮಾತ್ರ ನೌಕರಿ ಹಿಡದು, ಮನಿ ಮಾಡಿ, ಮಸ್ತ ಮಸ್ತಿ ಮಾಡಿಕೋತ್ತ ಇದ್ದಾನ. ಬಿಟ್ಟಿ ಲಾಡ್ಜಿಂಗ್ ಸಿಗ್ತದ ಸಾಕು. ಒಂದೆರಡು ವಾರ ದಿನ ಪೂರ್ತಿ ಮೈಸೂರ ಅಡ್ಯಾಡೋಣ. ಸಂಜಿ, ವೀಕೆಂಡ್ ಎಲ್ಲ ಕಸಿನ್ ಜೋಡಿ ಮಸ್ತ ಚೈನಿ ಮಾಡೋಣ ಅಂತ ಹೇಳಿ, ಮೈಸೂರಿಗೆ ಹೋಗಿಬಿಟ್ಟೆ.

ಅಲ್ಲೆ ಮೈಸೂರಿಗೆ ಹೋದ ಮ್ಯಾಲೆ ವಿಶ್ವ ಪ್ರಸಿದ್ಧ ಪ್ರಾಣಿ ಸಂಗ್ರಹಾಲಯ (zoo) ಹೋಗಲಿಲ್ಲ ಅಂದ್ರ ಹ್ಯಾಂಗ? ಒಂದು ದಿವಸ ಝೂದಿಂದ ಹೊರಗ ಬರೋವಾಗ, ಪಿಕ್ಚರ್ ಪೋಸ್ಟ್ ಕಾರ್ಡ್ ಮಾರವರು ಕಂಡರು. ನನ್ನ ಮಾರಿಷಸ್ ಪತ್ರ ಮಿತ್ರೆ ಲಲಿತಾ ಪ್ರತಿ ಪತ್ರದಾಗ ಮಾರಿಷಸ್ ದೇಶದ ಚಂದ ಚಂದ ಪಿಕ್ಚರ್ ಕಾರ್ಡ್ ಇಟ್ಟಿರ್ತಾಳ, ನಾವೂ ನಮ್ಮ ದೇಶದ ಝೂ ಪಿಕ್ಚರ್ ಕಾರ್ಡ್ ಇಟ್ಟು ಕಳಿಸೋಣ ಅಂತ ಹೇಳಿ ಒಂದು ಸೆಟ್ ಖರೀದಿ ಮಾಡಿದೆ. ಎಂಟೋ ಹತ್ತೋ ಕಾರ್ಡಿನ ಒಂದು ಸೆಟ್. ಒಂದು ಐದಾರ ರೂಪಾಯಿ. ತುಟ್ಟಿನೇ ಆತು. ಆದ್ರ ನಾ ಅಕಿಗೆ ಒಂದೂ ಪಿಕ್ಚರ್ ಪೋಸ್ಟ್ ಕಾರ್ಡ್ ಕಳಿಸೇ ಇಲ್ಲ ಅಂತ ಹೇಳಿ ತೊಗೊಂಡೆ.

ಎಲ್ಲಾ ಪಿಕ್ಚರ್ ಪೋಸ್ಟ್ ಕಾರ್ಡ್ ನೋಡಿದೆ. ಚೊಲೊ ಇದ್ದವು. ಮೈಸೂರ ಝೂನ್ಯಾಗಿನ ಬ್ಯಾರೆ ಬ್ಯಾರೆ ಪ್ರಾಣಿಗಳವು. ಗೋರಿಲ್ಲಾದ ಕಾರ್ಡ್ ಮಾತ್ರ ಭಾಳ ಅಸಡ್ಡಾಳ ಇತ್ತು. ಆ ಗೋರಿಲ್ಲಾ 'ಏನೋ ಖಾಸಗೀ ಸಂತೋಷದ ಕೆಲಸ' (?) ಅಕೇಲಾ ಮಾಡಿಕೋತ್ತ ಇದ್ದಿದ್ದನ್ನ ಕಿಡಿಗೇಡಿ ಫೋಟೋಗ್ರಾಫರ್ ಮಸ್ತ ಫೋಟೋ ಹೊಡೆದು ಬಿಟ್ಟಿದ್ದ. ಛೀ! ಅದೊಂದನ್ನ ಮಾತ್ರ ತೆಗೆದು ಬ್ಯಾರೆ ಕಾರ್ಡ್ ನಮ್ಮ ಪತ್ರ ಮಿತ್ರಳಿಗೆ ಕಳಿಸಬೇಕು. ಆ ಹೊಲಸ್ ಗೋರಿಲ್ಲಾ ಕಾರ್ಡ್ ಕಳಿಸಿದರ ಅಕಿ ಪತ್ರ ಮಿತ್ರತ್ವಕ್ಕ ಒಂದು ದೊಡ್ಡ ನಮಸ್ಕಾರ ಗ್ಯಾರಂಟೀ ಹೊಡಿತಾಳ ಅಂತ ತಿಳದು, ಮನಿಸ್ಸಿನ್ಯಾಗೇ ನೋಟ್ ಮಾಡಿಕೊಂಡೆ - ಈ ಕಾರ್ಡ್ ಮಾತ್ರ ತೆಗದೇ, ಉಳಿದ ಕಾರ್ಡ್ ಮಾತ್ರ ಕಳಿಸಬೇಕು ಅಂತ. ಮನಸ್ಸಿನ್ಯಾಗ ಮಾಡಿಕೊಂಡ ನೋಟ್ಸ್ ಮತ್ತ ನೀರಿನ ಮ್ಯಾಲೆ ಬರೆದ ಬರಹ ಎರಡೂ ಒಂದೇ ಅಂತ ಆವತ್ತಿಗೆ ಗೊತ್ತಿರಲಿಲ್ಲ. ಗೊತ್ತಾಗಲಿಕ್ಕೆ ಒಂದು ಸಣ್ಣ ಲಫಡಾ ಆಗಬೇಕಾತು.

ಎರಡು ಮೂರು ವಾರ ಮೈಸೂರ ಒಳಗ ಮಸ್ತಿ ಮಾಡಿ ವಾಪಸ್ ಬಂದ್ರ ಧಾರವಾಡ ಒಳಗ ಮಾರಿಷಸ್ ನಿಂದ ಲಲಿತಾ ಬರೆದ ಪತ್ರ ಬಂದು ಕೂತಿತ್ತು. ಶಬಾಶ್! ಹುಡುಗಿಗೆ ತಲಿ ಅದ. ಯಾವ ಟೈಮ್ ಒಳಗ ಎಲ್ಲೆ ಪತ್ರ ಬರಿ ಬೇಕು ಅಂತ ನಾ ಹ್ಯಾಂಗೆಂಗ ಹೇಳೇನಿ ಅದರ ಪ್ರಕಾರ ಬರಿತಾಳ. ವೆರಿ ಗುಡ್.

ಈ ಸರೆ ತನ್ನ ಪತ್ರದಾಗ ಅಕಿ ತನ್ನ ಒಂದು ಫೋಟೋ ಇಟ್ಟಿದ್ದಳು. ಘಾಗ್ರಾ ಚೋಲಿ ಹಾಕಿಕೊಂಡು, ಕೈಯಾಗ ಕೋಲು ಹಿಡಕೊಂಡು ಹೊಂಟಿದ್ದ ಫೋಟೋ. ನವರಾತ್ರಿ ದಾಂಡಿಯಾಕ್ಕ ಹೊಂಟಿರಬೇಕು. ಮುಂದಿನ ಪತ್ರದಾಗ ಕೇಳಬೇಕು. ನನಗೂ ಫೋಟೋ ಕಳಿಸಲು ಹೇಳಿದಳು. ಇದ್ದರ ಮಾತ್ರ. ಯಾಕಿಲ್ಲ? ಪಿಯೂಸಿ ಸೆಕೆಂಡ್ ಇಯರ್ ಒಳಗ ಒಂದು passport ಸೈಜಿನ ಫೋಟೋ ತೆಗೆಸಿದ್ದೆ. ಸಾಲಿ ಸ್ಟುಡಿಯೋ ಒಳಗ. ಅದು ಇದು ಅಪ್ಲಿಕೇಶನ್ ಗೆ ಹಚ್ಚಲಿಕ್ಕೆ ಅಂತ. ನಂತರ ಐದು ವರ್ಷ ಎಲ್ಲಾ ಕಡೆ ಅದೇ ಫೋಟೋ. ಬ್ಯಾರೆ ಫೋಟೋ ತೆಗಿಸೇ ಇಲ್ಲ. ಬೇಕಾದಾಗ  ಸಾಲಿ ಫೋಟೋ ಸ್ಟುಡಿಯೋಕ್ಕ ಹೋಗೋದು, ಅವಂಗ  ನಂಬರ್ ಕೊಡೋದು, ಹತ್ತೋ ಇಪ್ಪತ್ತೋ ಕಾಪಿ ಅಂತ ಹೇಳಿ ತರೋದು. ಅದೇ ಒಂದು ಮಗ್ ಶಾಟ್ ಫೋಟೋ ಕಳಿಸಿದರಾತು ಅಂತ ಬಿಟ್ಟೆ.

ಪತ್ರ ಬರದೆ. ಸ್ವಲ್ಪ ಮೈಸೂರ ಬಗ್ಗೆ ಬರೆದೆ. ಅಕಿಗೆ ಹ್ಯಾಂಗೂ ಎಲ್ಲ ಸ್ಥಳಗಳ ಬಗ್ಗೆ ಸಿಕ್ಕಾಪಟ್ಟೆ ಆಸಕ್ತಿ. ಹಾಂಗಾಗಿ ಮೈಸೂರು, ಮಹಾರಾಜರು, ಅರಮನೆ, ಅದು, ಇದು ಅಂತ ಎಲ್ಲ ಕೊರೆದು, ಮೈಸೂರ್ ಝೂ ಪಿಕ್ಚರ್ ಪೋಸ್ಟ್ ಕಾರ್ಡ್ ಎಲ್ಲ ಇಟ್ಟು, ನಂದು ಒಂದು ಕರಿ ಬಿಳಿ passport ಫೋಟೋ ಇಟ್ಟು, ಪತ್ರಾ ಹಾಕಿಬಿಟ್ಟೆ. ಈ ಸರೆ postage ಸುಮಾರ್ ಆತು. ವಜ್ಜಾ ಆಗಿತ್ತು ಪತ್ರ.

1989 ರಲ್ಲಿ ತೆಗೆಸಿದ್ದ passport ಫೋಟೋ. ಮುಂದೆ ಐದು ವರ್ಷ ಬ್ಯಾರೆ ಫೋಟೋ ಇಲ್ಲ.

ಹೋಗ್ಗೋ!!!! ಪತ್ರಾ ಹಾಕಿ ಒಂದೆರಡು ದಿವಸ ಆದ ಮ್ಯಾಲೆ ನೆನಪ ಆತು. ಆ ಮೈಸೂರ್ ಝೂ ಫೋಟೋಗಳಲ್ಲಿ ಹೊಲಸ್ ಗೋರಿಲ್ಲಾ ಫೋಟೋ ತೆಗೆದು ಉಳಿದ ಫೋಟೋ ಮಾತ್ರ ಕಳಿಸಬೇಕಾಗಿತ್ತು. ಮರೆತು ಬಿಟ್ಟಿದ್ದೆ. ಆತು ಇನ್ನು. ಇಕಿ ಒಂದೋ ಪತ್ರ ಮಿತ್ರತ್ವ ಬಿಟ್ಟು ಓಡಿ ಹೋಗ್ತಾಳ. ಇಲ್ಲ ಹಾಕ್ಕೊಂಡು ಬೈದು ಪತ್ರಾ ಬರಿತಾಳ. ಅಷ್ಟೇ. ಛೆ! ಅಷ್ಟು ನೆನಪು ಮಾಡಿ ಇಟ್ಟಿದ್ದೆ. ಆ ಫೋಟೋ ತೆಗೆದು ಬಾಕಿದನ್ನ ಮಾತ್ರ ಕಳಿಸಬೇಕು ಅಂತ. ಈಗ ನೋಡಿದರ ಅದನ್ನ ಮರೆತು ಫುಲ್ ಎಲ್ಲಾ ಕಳಿಸಿಬಿಟ್ಟೆ ಅಂತ.

ಅಷ್ಟರಾಗ ೧೯೯೧ ಜುಲೈ ತಿಂಗಳ ಕೊನೇ ವಾರ ಬಂತು. ವಾಪಸ್ ಹೋಗೋ ಟೈಮ್. ಧಾರವಾಡದಾಗ ಮಸ್ತ ಮಳಿಗಾಲ. ತಂಪು ತಂಪು ಹವಾ. ಎರಡು ತಿಂಗಳು ಚೈನಿ ಹೊಡೆದ ಮ್ಯಾಲೆ ಈಗ ವಾಪಾಸ್ ಹೋಗೋದು ಅಂದ್ರ ಕೆಟ್ಟ ಬ್ಯಾಸರಾ. ಅದೂ ಪಿಲಾನಿ ಕೆಟ್ಟ ಬಿಸಿಲು ನೆನಿಸಿಕೊಂಡರ, ರಾಮಾ ರಾಮಾ! ಗತಿ ಇಲ್ಲ. ಇನ್ನು ಮೂರು ವರ್ಷ ಅಷ್ಟೇ, ಅಂತ ಹೇಳಿ ಮತ್ತ ನಿಜಾಮುದ್ದೀನ್ express ಹಿಡಿದು, ಧಾರವಾಡದಿಂದ ಇದ್ದ ಇನ್ನು ಇಬ್ಬರು ಸೀನಿಯರ್ಸ್, ದಾಂಡೇಲಿಯಿಂದ ಒಬ್ಬವ ಸೀನಿಯರ್ ಎಲ್ಲ ಕೂಡಿ ಹೊಂಟಿವಿ. ಪುಣೆ, ಮನ್ಮಾಡ ಊರಾಗೂ ಒಂದಿಷ್ಟು ಜನ ಅದೇ ಟ್ರೇನ್ ಹತ್ತಿ ಪಿಲಾನಿ ತನಕಾ ಮಸ್ತ ಕಂಪನಿ ಸಿಗಿತ್ತು. ಯಾವತ್ತೂ ಮಿಸ್ ಆಗಿಲ್ಲ ಇದು.

ಪಿಲಾನಿಗೆ ಹೋಗಿ, ಬ್ಯಾರೆ ರೂಮಿಗೆ ಶಿಫ್ಟ್ ಆಗಿ, ಸೆಟಲ್ ಆಗಿ, ಸೆಕೆಂಡ್ ಇಯರ್ ಶುರು ಮಾಡಿ ಆತು. ಈಗ ನಾವೇ ಸೀನಿಯರ್ ಮಂದಿ. ರಾಗ್ಗಿಂಗ್ ಮಾಡಲಿಲ್ಲ ಅಂದ್ರ ಹ್ಯಾಂಗ? ಹಾಂಗಾಗಿ ಅದರೊಳಗ ಬಿಜಿ ಆಗಿ ಎಲ್ಲಾ ಮರೆತು ಬಿಟ್ಟೆ.

ಸುಮಾರು ದಿವಸ ಆದ ಮ್ಯಾಲೆ ಒಬ್ಬ ಜೂನಿಯರ್ ರೂಮಿಗೆ ಬಂದ. ಒಂದು ಪತ್ರಾ ಕೊಟ್ಟು, ಆಶಬುರಕ ಮಾರಿ ಮಾಡಿಕೊಂಡು ನಿಂತ. ಏನಲೇ ಮಂಗ್ಯಾನಿಕೆ? ಅನ್ನೋ ಲುಕ್ ಕೊಟ್ಟೆ. ಸರ್, ಪತ್ರ ನಿಮ್ಮದೇ. ಪೋಸ್ಟ್ ಮನ್ ಮೆಸ್ಸ್ ಮುಂದ ಇದ್ದ. ನಾ ಕೊಡತೇನಿ ಅಂತ ಹೇಳಿ ಇಸಕೊಂಡು ಬಂದೆ. ನನಗ ಸ್ಟ್ಯಾಂಪ್ ಬೇಕ್ರೀ. ಕೊಡ್ರೀ ಸರ್ರಾ, ಅಂತ ಹೇಳಿ ಭಿಕ್ಷುಕರ ಲುಕ್ ಕೊಟ್ಟಾ. ರಾಗ್ಗಿಂಗ್ ಟೈಮ್ ಒಳಗ ಸೀನಿಯರ್ ಮಂದಿಗೆ ಸರ್ ಅನ್ನಬೇಕು. ಅದು ನಿಯಮ. ಅದಕ್ಕ ಅಂದಿದ್ದ. ಹೋಗ್ಗೋ!!! ಮಂಗ್ಯಾನಿಕೆ!!! ಸ್ಟ್ಯಾಂಪ್ ಬೇಕ? ತೊಗೋ. ಹೋಗು. ಚೈನಿ ಮಾಡು ಹೋಗು, ಅಂತ ಹೇಳಿ, ಕತ್ತರಿಯಿಂದ ಮಾರಿಷಸ್ ಸ್ಟ್ಯಾಂಪ್ ಕತ್ತರಿಸಿ ಕೊಟ್ಟೆ. ಹುಡುಗ ಫುಲ್ ಖುಷ್. ಏನರೆ ಕೆಲಸ ಅದ ಏನ್ರೀ ಸರ್ರಾ? ಅಂತ ಕೇಳಿ ಬಿಟ್ಟ. ಇನ್ನೂ ರಾಗ್ಗಿಂಗ್ ಪಿರಿಯಡ್ ಮುಗಿದಿದ್ದಿಲ್ಲ. ಏನಿಲ್ಲ ಹೋಗಲೇ, ಅಂತ ಹೇಳಿ, ಇನ್ನೂ ಒಂದಿಷ್ಟು ಸ್ಟ್ಯಾಂಪ್ ಹಳೆ ಪತ್ರಗಳಿಂದ ಕತ್ತರಿಸಿ ಕೊಟ್ಟು ಕಳಿಸಿದೆ. ಆವಾ ಭಾಳ ದೂರ ಹೋಗಲಿಲ್ಲ. ನನ್ನ ಬಾಜು ರೂಮಿನವ ಅವನ್ನ ಹಿಡದು, ಡಾನ್ಸ್ ಮಾಡಲೇ ಮಂಗ್ಯಾನಿಕೆ, ಅಂತ ರಾಗ್ಗಿಂಗ್ ಶುರು ಮಾಡಿದ. ಡಾನ್ಸ್ ನೋಡಲಿಕ್ಕೆ ನನ್ನೂ ಕರೆದ. ನನಗ ಪತ್ರ ಓದಬೇಕಾಗಿತ್ತು ಅಂತ ಹೇಳಿ ನೀವು ರಾಗ್ಗಿಂಗ್ ಮಾಡ್ರಿಪಾ. ನನಗ ಬ್ಯಾರೆ ಕೆಲಸ ಅದ ಅಂತ ಹೇಳಿ ಲಲಿತಾನ ಪತ್ರ ಓದಲಿಕ್ಕೆ ಶುರು ಮಾಡಿದೆ. ಸ್ಟ್ಯಾಂಪ್ ಆಶಬುರಕ ಹುಡುಗ ಪುಣ್ಯಕ್ಕ ಪತ್ರಾ ತಂದಾರೆ ಕೊಟ್ಟ. ಪತ್ರಾ ಹರಿದು ಒಗೆದು, ಸ್ಟ್ಯಾಂಪ್ ಇಟ್ಟುಕೊಂಡಿದ್ದ ಅಂದ್ರಾ? ಏ! ಜೂನಿಯರ್ ಹುಡುಗುರು, ಅದೂ ರಾಗ್ಗಿಂಗ್ ಟೈಮ್ ಒಳಗ ಹಂಗೆಲ್ಲಾ ಮಾಡೋದಿಲ್ಲ. ಯಾಕಂದ್ರ ಆ ಮ್ಯಾಲೆ ಸಿಕ್ಕೊಂಡು ಬಿದ್ದರು ಅಂದ್ರ ಜಾತಿಯಿಂದ ಹೊರಗ ಹಾಕಿಸಿಕೊಂಡಷ್ಟು ಕಷ್ಟ ಪಡ್ತಾರ. ಅದಕ್ಕೇ ಎಲ್ಲರೂ ಎಲ್ಲಾ ಮುಚ್ಚಿಕೊಂಡು ರಾಗ್ಗಿಂಗ್ ಇತ್ಯಾದಿ ಮಾಡಿಸಿಕೊಳ್ಳೋದು.

ಪುಣ್ಯಕ್ಕ ಅಕಿ ಲಲಿತಾ ಆ ಗೋರಿಲ್ಲಾ ಫೋಟೋ ನೋಡಿ offend ಆಗಿರಲಿಲ್ಲ. ಅದರ ಬಗ್ಗೆ ಏನೂ ಬರಿದಿರಲಿಲ್ಲ. ಎಲ್ಲಾ ಫೋಟೋ ಮಸ್ತ ಅವ ಅಂತ ಹೇಳಿದ್ದಳು. ಏನು ಬರೆ ಕರಿ ಬಿಳಿ ಸಣ್ಣ ಫೋಟೋ ಕಳಿಸಿ? ಕಲರ್ ಫೋಟೋ ಇಲ್ಲ ನಿಂದು? ಅಂತ ಕೇಳಿದ್ದಳು. ಮತ್ತ ಅಕಿ ಫೋಟೋ ನೋಡಿ ನಾನು, ಏನವಾ ಎಲ್ಲೇ ದಾಂಡಿಯಾ ಆಡಲಿಕ್ಕೆ ಹೊಂಟಿದ್ದಿ ಏನು? ಅಂತ ಕೇಳಿದ್ದೆ ನೋಡ್ರೀ, ಅದಕ್ಕ ಅಕಿ, ಇಲ್ಲೋ ಮಾರಾಯಾ, ನಮ್ಮ ಕಾಂಪೌಂಡ್ ಒಳಗ ಹಿಂದ ಒಂದು ನಮ್ಮದೇ ಗುಡಿ ಅದ. ಅಲ್ಲೆ ಕೃಷ್ಣನ ಪೂಜಾ ಮಾಡಲಿಕ್ಕೆ ಹೊಂಟಾಗ ತೆಗೆದ ಫೋಟೋ ಅಂದಳು. ಏನಪಾ ವಿಚಿತ್ರ ಇದು? ಮಾರಿಷಸ್ ಒಳಗ ಕೃಷ್ಣನ ಪೂಜಾ ಮಾಡಲಿಕ್ಕೆ ಹೋಗವರು ಕೋಲಾಟದ ಕೋಲು ಯಾಕ ತೊಗೊಂಡು ಹೋಗ್ತಾರ? ಅಂತ ತಿಳಿಲಿಲ್ಲ. ಕೃಷನಿಗೆ ಪೂಜಾ ಮಾಡಲಿಕ್ಕೆ ಹೋಗಿದ್ದಳೋ ಅಥವಾ ಕೃಷ್ಣ ಅನ್ನೋ ಹುಡುಗನಿಗೆ ಬಾರಿಸಲಿಕ್ಕೆ ಹೋಗಿದ್ದಳೋ? ಅಂತ ಸಂಶಯ ಬಂತು. ಕೇಳಲಿಲ್ಲ.

ಏನು ಲಕ್ಕಿ ಮಂದಿ ಇವರು ಲಲಿತಾ ಪಿಲಿತಾ ಅನ್ನೋ ಮಾರಿಷಸ್ ಮಂದಿ? ಹಾಂ? ಮನಿ ಮುಂದ ಸಮುದ್ರ. ರೌಂಡ್ ಹೊಡಿಲಿಕ್ಕೆ ಒಂದು ಮೋಟಾರ್ ಬೋಟ್. ಅಡ್ಯಾಡಲಿಕ್ಕೆ ಇಕಿ ಫ್ಯಾಮಿಲಿ ಒಳಗ ಮೂರೋ ನಾಕೋ ಟೊಯೋಟಾ ಕಾರ್ ಅವ ಅಂತ. ಇಕಿ ಕಡೆ ಒಂದು ಮೊಪೆಡ್. ಮನಿ ಹಿಂದ ದೊಡ್ಡ ಕಾಂಪೌಂಡ್ ಒಳಗ ಸ್ವಂತ ಗುಡಿ. ಸರ್ಕಾರನೇ ಅಕಿಗೆ ಪುಕ್ಕಟ್ಟೆ ಏನೋ ಡಿಪ್ಲೊಮಾ ಮಾಡಸ್ಲಿಕತ್ತದ ಅಂತ. ಮ್ಯಾಲೆ ಏನೋ stipend ಸಹಿತ ಕೊಡ್ತದ ಅಂತ. ಏನು ಅದೃಷ್ಟಶಾಲಿಗಳು ಅಂತೇನಿ? ಹಾಂ? ಲಕ್ಕಿ ಮಂದಿ ಬಿಡ್ರೀಪಾ ಈ ಮಾರಿಷಸ್ ಮಂದಿ. ಆರಾಮ ಇದ್ದಾರ. ಯಾವದೇ ಚಿಂತಿ ಇಲ್ಲ ಗಿಂತಿ ಇಲ್ಲ. ಅಷ್ಟು ಚಂದ ದೇಶದಾಗ ಆರಾಮ ಇದ್ದಾರ. ಪುಣ್ಯಾ ಮಾಡಿ ಪಡಕೊಂಡು ಬಂದಿರಬೇಕು ಬಿಡ್ರೀ ಅಂತ ಉಸ್ಸ್ ಅಂತ ನಿಟ್ಟುಸಿರು ಬಿಟ್ಟು, ಇನ್ನು ಮೂರ್ನಾಕ ವಾರ ಆದ ಮ್ಯಾಲೆ ಇಕಿಗೊಂದು ರಿಪ್ಲೈ ಬರಿಬೇಕು ಅಂತ ನನ್ನ ಡೈರಿ ಒಳಗ ನೋಟ್ ಮಾಡಿಕೊಂಡು ಇಟ್ಟೆ.

ಹೀಂಗ  ಮಾರಿಷಸ್ ಕೋಲಾಟದ ಕೋಲು ಹಿಡಿದಿದ್ದ ಹುಡುಗಿ ಜೋಡಿ ಪತ್ರ ವ್ಯವಹಾರ ಸೀದಾ ಸರಳ ನೆಡದಿತ್ತು. ನಮ್ಮ ದೋಸ್ತಿಗೆ ಒಂದು ವರ್ಷ ಆತು ಹೇಳಿ ಒಂದು ಫೋಟೋ ಬುಕ್ ಕಳಿಸಿದ್ದಳು ಅಕಿ. ಮತ್ತ ಮಾರಿಷಸ್ ಬಗ್ಗೆನೇ. ಮಸ್ತ ಇತ್ತು. ಒಂದು ವರ್ಷ ಆಗಿ ಹೋತಾ? ನಂಬಿಕಿ ಬರಲಿಲ್ಲ. ಯಾಕಂದ್ರ ನಂದು ಯಾವದೇ ಪತ್ರ ಮಿತ್ರತ್ವ ನಾಕು ತಿಂಗಳ ಮ್ಯಾಲೆ ಮುಂದ ಹೋಗಿರಲೇ ಇಲ್ಲ. ಇಕಿ ಜೋಡಿ ಒಂದು ವರ್ಷ ಯಾಕಾತು ಅಂತ ನೋಡಿದರ ಪತ್ರ ಬರೆದಿದ್ದು ಕಮ್ಮಿ. ಎಲ್ಲೋ ಎರಡು ಮೂರು ತಿಂಗಳಿಗೆ ಒಂದು. ಹಾಂಗಾಗಿ ಏನೋ ನೆಡದದ. ಇನ್ನೂ ಬೋರ್ ಬಂದಿಲ್ಲ. ಓಕೆ ಅಂತ ಹೇಳಿ ಆವಾಗ ಈವಾಗ ಪತ್ರ ಬರಕೋತ್ತ ಇದ್ದೆ.

ನಮ್ಮ ಪತ್ರ ಮಿತ್ರತ್ವಕ್ಕ almost ಎರಡು ವರ್ಷ ಆಗಲಿಕ್ಕೆ ಬಂದಾಗ ಲಲಿತಾ ಪತ್ರ ಬರೆದು ಅಕಿ ಲಗ್ನ ಗೊತ್ತಾಗ್ಯದ ಅಂದಳು. ಮತ್ತ ಅಕಿ ಮುಂದ ಹ್ಯಾಂಗ ಅಂತ ನೋಡಿ, ಪತ್ರ ವ್ಯವಹಾರ ಮಾಡಬೇಕೋ ಬ್ಯಾಡೋ ಅಂತ ವಿಚಾರ ಮಾಡಾಕಿ ಅಂತ ಹೇಳಿದಳು. ನನಗ, ನೀ ಪತ್ರ ಬರಿಬ್ಯಾಡ ಸದ್ಯಕ್ಕ ಯಾಕಂದ್ರ ನನ್ನ ಅಡ್ರೆಸ್, ಅಡ್ಡಹೆಸರು ಎಲ್ಲಾ ಚೇಂಜ್ ಆಗೋದು ಅದ, ಈ ಮದವಿ ಅದೂ ಇದರ ಗದ್ದಲ ಮುಗಿದ ಮ್ಯಾಲೆ ನಾನೇ ನಿನಗ ಬರೆದರೂ ಬರೆದೆ. ಬರಿಲಿಲ್ಲ ಅಂದ್ರ ಮುಗೀತು ಅಂತ ತಿಳಕೋ ಅಂತ ಹೇಳಿದ್ದಳು. ಓಕೆ ಅಂತ ಸುಮ್ಮನಾದೆ. ಪಾಪ ಹುಡುಗಿ. ಗಂಡ ಎಂಬ ಗಂಡು ಪ್ರಾಣಿ ಬೋನಿಗೆ ಹೊಂಟದ ಚಿಗರಿ. ಬದುಕಿ ಬಂದ್ರ ಪತ್ರಾ ಬರಿತದ ತೊಗೊ ಅಂತ ಹೇಳಿ ಸುಮ್ಮನಾದೆ. ಅಷ್ಟರಾಗ ನಮ್ಮ ಸೆಕೆಂಡ್ ಇಯರ್ ಮುಗೀತು. ಮತ್ತ ಬ್ಯಾಸಿಗಿ ಸೂಟಿ. ೧೯೯೨ ಮೇ. ಎರಡೆನೇ ವರ್ಷ ಆದ ಮ್ಯಾಲೆ ಒಂದು industrial internship ಇರ್ತಿತ್ತು. ನನಗ ತಮಿಳುನಾಡಿನ ಟ್ರಿಚಿಗೆ (ತಿರುಚಿರನಾಪಳ್ಳಿ) ಹಾಕಿದ್ದರು. ಧಾರವಾಡ ಒಳಗ ಇರಲಿಕ್ಕೆ ಸಿಕ್ಕಿದ್ದು ಮೊದಲು ಒಂದು ವಾರ, ಕೊನೆಗೆ ಒಂದು ವಾರ. ಬಾಕಿ ಬ್ಯಾಸಿಗಿ ಸೂಟಿ ಎಲ್ಲ ಟ್ರಿಚಿ ಒಳಗ. ಪಿಲಾನಿ ಅಂದ್ರ ಕತ್ತಿ ದುಡಿತ. ಪೂರ್ತಿ ರಜಾ ಸಹಿತ ಇಲ್ಲ. ಹೋಗ್ಗೋ!

ಬ್ಯಾಸಿಗಿ ಸೂಟಿ ಮುಗಿಸಿ ಬಂದ್ರ ಮೂರನೇ ವರ್ಷಕ್ಕ ಹಾಸ್ಟೆಲ್ ಸಹಿತ ಬ್ಯಾರೆ. ಇಕಿ ಎಲ್ಲರೆ ಹಾಪ್ ಲಲಿತಾ ಹಳೆ ಪತಾಕ್ಕ ಪತ್ರ ಬರೆದಿದ್ದರ ಅದು ಹಳೆ ರೂಮಿಗೆ ಹೋಗಿರ್ತದ ಅಂತ ಹೇಳಿ ನನ್ನ ಹಳೆ ರೂಮಿಗೆ ಹೋಗಿ, ಅಲ್ಲಿದ್ದ ಜೂನಿಯರ್ ಒಬ್ಬವಂಗ ಹೇಳಿ ಬಂದಿದ್ದೆ. ಹೀಂಗ ಮಾರಾಯಾ, ನನಗ ಯಾವದರೆ ಪತ್ರ ಬಂದ್ರ ತಂದು ಕೊಡು ಅಂತ ಹೇಳಿ. ಆವಾ ಒಳ್ಳೆ ಫ್ರೆಂಡೇ ಇದ್ದ.  ಬಂದರ ತಂದು ಕೊಡೋದ್ರಾಗ ಏನ ಸಂಶಯ ಇರಲಿಲ್ಲ. ಸಂಶಯ ಏನಿದ್ರೂ ಕುಮಾರಿಯಿಂದ ಶ್ರೀಮತಿ ಆದ ಲಲಿತಾ ಅನ್ನಾಕಿ ಪತ್ರಾ ಬರಿತಾಳೋ ಇಲ್ಲೋ ಅನ್ನೋದರ ಬಗ್ಗೆನೇ.

ಮೂರನೇ ವರ್ಷ ಅದು ಇದು ಹೆಚ್ಚಿನ ಅಭ್ಯಾಸ ಅಂತ ಹೇಳಿ ನಾವೂ ಬಿಜಿ ಆಗಿ ಬಿಟ್ಟಿವಿ. ಸುಮಾರು ಮೂರ್ನಾಕು ತಿಂಗಳಾದ್ರೂ ಇಕಿ ಪತ್ರ ಬರದಿದ್ದು ನೋಡಿ, ಓಹೋ ಬಾಯಾರು ಗೃಹ ಗೃಹಸ್ಥಿ ಒಳಗ ಮುಳುಗಿ ಹೋಗ್ಯಾರ, ಇರ್ಲಿ ಬಿಡು ಅಂತ ಬಿಟ್ಟಿವಿ. ಹೀಂಗ ಒಂದು ಒಳ್ಳೆ ಪತ್ರ ಮಿತ್ರತ್ವ ಮುಗಿದಿತ್ತು. ಮುಂದ ಎಷ್ಟು ದಿವಸ ನೆಡಿತಿತ್ತೋ ಗೊತ್ತಿಲ್ಲ. ಆದ್ರ ಸುಮಾರು ಬರಕತ್ತಾಗಿತ್ತು ಬಿಡ್ರೀ. ಮುಗಿತು ಅಂತ ಏನೂ ಬ್ಯಾಸರ ಇರಲಿಲ್ಲ. ಆತು ಅಂತ ಖುಶಿ ಇತ್ತು.

ಮತ್ತ ಇನ್ನೊಬ್ಬ ಪತ್ರ ಮಿತ್ರನ್ನ ಹುಡಕಲಿಕ್ಕೆ ಅಷ್ಟು ಆಸಕ್ತಿ ಇರಲಿಲ್ಲ. ಮೂರನೇ ವರ್ಷ ಅಂದ್ರ almost ಡಿಗ್ರಿ ಮುಗದಂಗ. ಆದರೂ international ಪೆನ್ ಫ್ರೆಂಡ್ ಕೊಡಿಸಿದ್ದ ಮನೀಶ್ ಮತ್ತ ನೆನಪಾದ. ಆವಾ ಹೇಳಿದ್ದ, ಆಕಸ್ಮಾತ ಒಂದು ವರ್ಕ್ ಔಟ್ ಆಗಲಿಲ್ಲ ಅಂದ್ರ ಇನ್ನೊಂದು ಕೊಡ್ತಾರ ಅಂತ. ಮುಂದಿನ ಸರೆ ಆವಾ ಕಂಡ್ರ ಕೇಳಬೇಕು ಅಂತ. ಮನೀಶ್ ಸಿಕ್ಕಾಗ ಕೇಳಿದರ ಅದು ಕೇವಲ ಒಂದು ವರ್ಷದೊಳಗ ಮಾತ್ರ ಲಾಗೂ ಆಗ್ತದ ಅಂದು ಬಿಟ್ಟ. ಬೇಕಾದ್ರ ಮತ್ತ ಇಪ್ಪತ್ತೈದು ರೂಪಾಯಿ ಬಡದು ಹೊಸಾ ಪೆನ್ ಫ್ರೆಂಡ್ ಮಾಡಿಕೊ ಅಂದ. ಸಾಕಪಾ ಸಾಕು. ಈ international ಪತ್ರ ಮಿತ್ರರು ಭಾಳ ತುಟ್ಟಿ ಅಂತ ಹೇಳಿ ಅಷ್ಟಕ್ಕೇ ಬಿಟ್ಟೆ.

ಇನ್ನು ಮುಂದಿನ ಮತ್ತು ಕೊನೆಯ formal ಪತ್ರ ಮಿತ್ರ(ತ್ರೆ) ಆಗಿದ್ದು ಬರೋಬ್ಬರಿ ಐದು ವರ್ಷದ ನಂತರ. ೧೯೯೭ ರಲ್ಲಿ. ಅದರದ್ದೇ ಒಂದು ಕಥೆ. ಮುಂದಿನ ಭಾಗದಲ್ಲಿ.

(ಸಶೇಷ. ಮುಂದುವರಿಯಲಿದೆ) (ಮುಂದಿನ ಭಾಗ ಇಲ್ಲಿದೆ)

* ಇವತ್ತಿನ ಪ್ರಜಾವಾಣಿಯಲ್ಲಿ, ಲೇಖಕ ನಾಗತಿಹಳ್ಳಿ ಮಾರಿಷಸ್ ಮೇಲೆ ಬರೆದಿದ್ದಾರೆ ಓದಿಕೊಳ್ಳಿ.

ಮಾರಿಷಸ್

1 comment:

Vimarshak Jaaldimmi said...


Very good international exposure!

How is this Pilanilinga different from Pullinga, Streelinga & Napumsakalinga?