Tuesday, January 28, 2014

Address ಗೇ ಇಲ್ಲದ 'ರತಿ ಅಗ್ನಿಹೋತ್ರಿ'ಯನ್ನು ಪತ್ರ ಮಿತ್ರಳನ್ನಾಗಿ ಪಟಾಯಿಸಲಿಕ್ಕೆ ಹೋಗಿದ್ದು! (ಪತ್ರ ಮಿತ್ರರ ಪ್ರಪಂಚದಲ್ಲಿ. ಭಾಗ - ೨)

(ಭಾಗ - ೧ ಇಲ್ಲಿದೆ)

ಮುಂದಿನ ಪತ್ರ ಮಿತ್ರನ್ನ 'ಪುಟಾಣಿ' ಮಾಸಪತ್ರಿಕೆಯಲ್ಲಿ ಹುಡುಕೋದು ಅಂತ ಆತು.  ಈಗ ಪುಟಾಣಿ ಹುಡಕಬೇಕಾತು. ಸುಧಾ, ಪ್ರಜಾಮತ, ತುಷಾರ, ಕಸ್ತೂರಿ, ಚಂದಮಾಮ, ಇಂದ್ರಜಾಲ ಕಾಮಿಕ್ಸ್ ಎಲ್ಲ ಸುಮಾರು ಎಲ್ಲ ದೊಡ್ಡ ಪಾನ್ ಬೀಡಿ ದುಕಾನಗಳಲ್ಲಿ ಸಿಗತಿದ್ದವು. ಅವರ ಕಡೆ ಹೋಗಿ, ಪುಟಾಣಿ ಅದ ಏನ್ರೀ? ಅಂತ ಕೇಳಿದರ, ಏನ ಹಾಪ್ ಇದ್ದಿಯೋ, ಮಂಗ್ಯಾನಿಕೆ? ಪುಟಾಣಿ ಬೇಕಾದ್ರ ಕಿರಾಣಿ ಅಂಗಡಿಗೆ ಹೋಗಿ ಕೇಳಲೇ, ಅನ್ನೋ ಲುಕ್ ಕೊಟ್ಟು ಓಡಿಸಿಬಿಟ್ಟರು. ಅವರು ಅವರ ಜನ್ಮದಲ್ಲೂ ಪುಟಾಣಿ ಅನ್ನೋ ಮಕ್ಕಳ ಮಾಸಪತ್ರಿಕೆಯ ಹೆಸರು ಕೇಳಿದಂಗ ಇಲ್ಲ ಅಂತ ಇದರಿಂದ ಗೊತ್ತಾತು. ಧಾರವಾಡದಲ್ಲಿ ಪುಟಾಣಿ ಪತ್ರಿಕೆಯ ಹವಾ ಇಲ್ಲೇ ಇಲ್ಲ ಅಂತ ತಿಳೀತು. ಪುಟಾಣಿ ತಿಂದವರ ಹವಾ? ಅದು ಬ್ಯಾರೆನೇ ಬಿಡ್ರೀ. ಹವಾ ಹವಾ ಏ ಹವಾ, ಖುಷಬೂ ಮಿಟಾದೇ! ಬದಬೂ ಪೆಹಲಾದೇ! ಪುಟಾಣಿ ಖಿಲಾದೆ! ಶೇಂಗಾ ಮಿಲಾದೆ! ಯಾರ್ ಖಿಲಾದೆ!ದಿಲದಾರ್ ಮಿಲಾದೆ! ಹಸನ್ ಜಹಾಂಗೀರನ ಹಾಡಿನ ಮಾದರಿಯಲ್ಲಿಯ ಹವಾ, ಹವಾ!

ಮತ್ತ ಸಚಿನ್ ಕೊಟ್ಟೂರನ ಕೇಳಿದೆ.

ನೀ ಹೇಳಿದ ಪುಟಾಣಿ ಅನ್ನೋ ಮ್ಯಾಗಜಿನ್ ಎಲ್ಲೆ ಸಿಗ್ತದೋ ಮಾರಾಯಾ? ನನಗ ಸಿಗವಲ್ಲತು. ನಿನ್ನ ಕಡೆ ಇದ್ದರ ತೊಗೊಂಡು ಬಾ, ಅಂದೆ.

ಪುಟಾಣಿ ಪತ್ರಿಕೆ ದೊಡ್ಡ ಬಸ್ ಸ್ಟ್ಯಾಂಡ್, ರೈಲ್ವೆ ಸ್ಟೇಷನ್ ಒಳಗ ಇರೋ ಬುಕ್ ಶಾಪ್ ಒಳಗ ಸಿಗ್ತದ, ಅಂತ ಒಂದು ದಾರಿ ತೋರ್ಸಿದ ಕೊಟ್ಟೂರ. ಶಾಣ್ಯಾ! ಸ್ಟ್ರೀಟ್ ಸ್ಮಾರ್ಟ್ ಹುಡುಗ.

ದೊಡ್ಡ ಬಸ್ ಸ್ಟ್ಯಾಂಡ್ ಅಂದ್ರ ಬ್ಯಾರೆ ಊರಿಗೆ ಹೋಗೋ ಬಸ್ ಬರೋ ಬಸ್ ಸ್ಟ್ಯಾಂಡ್. ಅದು ಪ್ಯಾಟಿ ಒಳಗ ಇತ್ತು. ದೂರ. ರೈಲ್ವೆ ಸ್ಟೇಷನ್ ನಮಗ ಸಾಲಿಗೆ, ಮನಿಗೆ ಎಲ್ಲ ಹತ್ರ. ಮೊದಲು ರೈಲ್ವೆ ಸ್ಟೇಷನ್ ಬುಕ್ ಸ್ಟಾಲ್ ನೋಡೋಣ ಅಂತ ವಿಚಾರ ಮಾಡಿದೆ.

ಸುಮಾರು ಸರೆ ರೈಲ್ವೆ ಸ್ಟೇಷನ್ ಗೆ ಅಡ್ಯಾಡಿದೆ. ಯಾವಾಗ ನೋಡಿದರೂ ಆ ಬುಕ್ ಸ್ಟಾಲ್ ಮುಚ್ಚಿಕ್ಕೊಂಡೇ ಇರ್ತಿತ್ತು. ಬ್ಯಾಸರ ಬಂತು. ಒಂದು ಸರೆ ಹೋದಾಗ ಯಾರೋ ಹೇಳಿದರು, ಅದು ಯಾವದೋ ಒಂದೆರೆಡು ದೊಡ್ಡ ಟ್ರೈನ್ ಬರೊ ಟೈಮ್ ಒಳಗ ಮಾತ್ರ ಆವಾ ಬುಕ್ ಸ್ಟಾಲ್ ತೆಗಿತಾಂತ, ಅಂತ ಹೇಳಿ. ಅವೆರೆಡು ಟ್ರೈನ್ ಬರೊ ಟೈಮಿಗೆ ಹೋಗಬೇಕು ಅಂದ್ರ ಒಂದೋ ರವಿವಾರ ಸೂಟಿ ಇದ್ದ ದಿನ ಹೋಗಬೇಕು. ಇಲ್ಲಂದ್ರ ಸಾಲಿಗೆ ಚಕ್ಕರ್ ಹೊಡೆದು ಹೋಗಬೇಕು. ಚಕ್ಕರ್ ಆಗಲೇ ಸಾವಿರ ಸರೆ ಹೊಡೆದು ಬಿಟ್ಟೇನಿ. ಬ್ಯಾಡ ಅಂತ ಹೇಳಿ, ಒಂದು ರವಿವಾರ ಕರೆಕ್ಟ್ ಟೈಮಿಗೆ ರೈಲ್ವೆ ಸ್ಟೇಷನ್ ಗೆ ಭೆಟ್ಟಿ ಕೊಟ್ಟೆ. ಬುಕ್ ಸ್ಟಾಲ್ ಓಪನ್ ಇತ್ತು. ವೀಲ್ ಚೇರ್ ಮ್ಯಾಲೆ ಕೂತು ವ್ಯಾಪಾರ ಮಾಡ್ತಿದ್ದ ಮಾಲೀಕ ಇದ್ದ.

ಪುಟಾಣಿ ಅದರೀ? ಅಂತ ಕೇಳಿದೆ.

ನನ್ನ ಕೆಟ್ಟ ವಿಚಿತ್ರ ರೀತಿಯಲ್ಲಿ ನೋಡಿದ.

ಹ್ಞೂ....ಅದ. ಆದ್ರ ಹೊಸಾದು ಇಲ್ಲ. ನಾಕು ತಿಂಗಳ ಹಿಂದಿನದು ಅದ. ಬೇಕೇನು? ಅಂತ ಕೇಳಿದ.

ಏನು ಮಾಡ್ಲೀ? ಅಂತ ವಿಚಾರ ಮಾಡಿದೆ.

ಪುಟಾಣಿ ಅನ್ನೋ ಪತ್ರಿಕೆಯನ್ನ ಜೀವಮಾನದಲ್ಲಿ ಓದಿಲ್ಲ. ಹೊಸದಿರಲಿ, ಹಳೆಯದಿರಲಿ ಒಂದು ಸಲ ನೋಡಲಿಕ್ಕೆ ಏನು ಮಹಾ? ಅಂತ ಹೇಳಿ ಹಳೆಯದನ್ನೇ ತೊಗೊಂಡೆ.

ಮೂರು ರೂಪಾಯಿ, ಅಂದ ಆವಾ ಮಾಲೀಕ.

ಮೂರು ರೂಪಾಯಿ ಕೊಟ್ಟೆ. ಎರಡು ಮ್ಯಾಲೆ ಇನ್ನೊಂದು. ರುಪಾಯಿ ನೋಟುಗಳು ಅಂತ. ಮತ್ತೇನೂ ಅಲ್ಲ.

ಒಂದು ಕಸ್ತೂರಿ ಪತ್ರಿಕೆ ಸೈಜಿನ ಪುಸ್ತಕಾ ಕೊಟ್ಟು, ಆ ಬುಕ್ ಸ್ಟಾಲ್ ಮಾಲೀಕ ಅಂಗಡಿ ಶಟರ್ ಎಳಿಲಿಕ್ಕೆ ತಯಾರ ಆದ. ಟ್ರೈನ್ ಬಂದು ಹೋತಲ್ಲ? ಇನ್ನು ಆವಾ ಮತ್ತ ಅಂಗಡಿ ತೆಗೆಯೋದು ಮುಂದಿನ ದೊಡ್ಡ ಟ್ರೈನ್ ಬರೋ ಟೈಮಿಗೆ ಮಾತ್ರ.

ಮೂರು ರೂಪಾಯಿ ಇಸಕೊಂಡು, ನಾಕು ತಿಂಗಳ ಹಳೆಯದಾದ ಪುಟಾಣಿ ಕೊಟ್ಟು, ನನಗ ಮೂರು ನಾಮ ಹಾಕಿ ಹೋದ. ಅವನೌನ್! ಮಾರಾಟ ಆಗದೇ ಉಳಿದಿದ್ದ ಆ ಪುಟಾಣಿ ರದ್ದಿಗೆ ಹತ್ತಿಪ್ಪತ್ತು ಪೈಸಾಕ್ಕೂ ಹೋಗತಿದ್ದಿಲ್ಲ. ಚೌಕಾಶಿ ಮಾಡಿ ಎಂಟಾಣೆಕ್ಕೋ, ಹೆಚ್ಚಂದ್ರ ಒಂದು, ಅದಕೂ ಹೆಚ್ಚ ಅಂದ್ರ ದೀಡ ರುಪಾಯಿಗೆ ತರಬೇಕಾಗಿತ್ತು ನಾನು. ಅಷ್ಟೆಲ್ಲಾ ವ್ಯವಹಾರ ಜ್ಞಾನ ಆವತ್ತಿಗೂ ಇರಲಿಲ್ಲ. ಇವತ್ತಿಗೂ ಇದ್ದಂಗ ಇಲ್ಲ.

ಅಂತೂ ಹಳೆ ಪುಟಾಣಿ ತೊಗೊಂಡು ಮನಿಗೆ ಬಂದೆ. ಪತ್ರ ಮಿತ್ರರ ವಿಭಾಗಕ್ಕ ಹೋದೆ. ಇದ್ದರು ಒಂದು ಹತ್ತು ಮಂದಿ. ಕರ್ನಾಟಕದ ಬೇರೆ ಬೇರೆ ಕಡೆಯವರು. ನೋಡಕೋತ್ತ ಬಂದೆ. ಯಾರೋ ಬೆಂಗಳೂರಿನ ನರೇಂದ್ರ ಅನ್ನವ ಹಿಡಿಸಿಬಿಟ್ಟ. ಯಾಕ? ಕಾರಣ  ಇವತ್ತು ನೆನಪಿಲ್ಲ. ಸರದಾರ್ಜೀ ಹುಚ್ಚು ಬಿಟ್ಟು, ಸ್ವಾಮೀ ವಿವೇಕಾನಂದರ ಹುಚ್ಚು ಹತ್ತಿತ್ತೇನು? ನೆನಪಿಲ್ಲ. ಸ್ವಾಮೀ ವಿವೇಕಾನಂದರ ಹೆಸರೂ ಸಹ ನರೇನ್, ನರೇಂದ್ರ ಅಂತಿತ್ತು ನೋಡ್ರೀ.

ಬೆಂಗಳೂರಿನ ನರೇಂದ್ರನಿಗೆ ಒಂದು ಒಲವಿನ ಓಲೆ ಬರದೆ. ವಸಂತ ಬರೆದನು ಒಲವಿನ ಓಲೆ, ಚಿಗುರಿದ ಎಲೆ ಎಲೆ ಮೇಲೆ, ಅಂತ ಏನೂ ಸೆಂಟಿ ಪಿಂಟಿ ಹಚ್ಚಲಿಲ್ಲ.

ಸುಮಾರು ದಿನ, ವಾರ ಆಗಿ, ಒಂದು ತಿಂಗಳ ಮ್ಯಾಲೆ ಆಗಿ ಹೋಗಿರಬೇಕು. ನರೇಂದ್ರನಿಂದ ಉತ್ತರ ಬರಲಿಲ್ಲ. ಒಂದು ವಾರ, ಎರಡು ವಾರ ಆದ ಮ್ಯಾಲೆ ನಮಗೂ ಮರ್ತು ಹೋತು. ಮತ್ತ ಯಾರಿಗೆ ಪತ್ರ ಬರಿಲಿಕ್ಕೆ ಹೋಗಲಿಲ್ಲ. ಆ ಮಟ್ಟಿಗೆ ಪತ್ರ ಮಿತ್ರತ್ವದ ಹುಚ್ಚು ಕಮ್ಮಿ ಆತು ಅಂತ ಅನ್ನಿಸ್ತದ. ಆದ್ರ ಪುಟಾಣಿ ಹುಚ್ಚ ಹತ್ತಿಬಿಡ್ತು. ಪುಟಾಣಿ ಪತ್ರಿಕೆ ಹುಚ್ಚು.

ಆ ಪುಟಾಣಿ ಪತ್ರಿಕೆ ಒಂದು ತರಹ ಮಜಾ ಇತ್ತು. ಕೇವಲ ಚಂದಮಾಮ, ಬಾಲಮಿತ್ರ, ಇಂದ್ರಜಾಲ ಕಾಮಿಕ್ಸ್ ಓದಿದ್ದ ನಮಗೆ ಇಂಗ್ಲಿಷ್ನಲ್ಲಿ ಇರುವ Hardy Boys ತರಹದ ಮಕ್ಕಳ ಸಾಹಸಗಳ ಕಥೆಗಳಿರುತ್ತಿದ್ದ ಪುಟಾಣಿ ಸ್ವಲ್ಪ ಮಜಾನೇ ಅನ್ನಿಸುತ್ತಿತ್ತು. ಮುಂದೆ Hardy Boys, Nancy Drew ತರಹದ ಪುಸ್ತಕಗಳನ್ನ ಓದಿದಾಗ ತಿಳಿಯಿತು ಈ ಪುಟಾಣಿ ಮಂದಿ ಕಥೆಗಳ ಮೂಲವನ್ನ ಅಲ್ಲಿಂದ ಎತ್ತಿ, ಕನ್ನಡಕ್ಕೆ ಹೊಂದುವಂತೆ ರೂಪಾಂತರ ಮಾಡಿ ಬರೆದುಬಿಡ್ತಾರ ಅಂತ. ಅಲ್ಲೆಲ್ಲೋ ಅಮೇರಿಕಾದ ಕಂದರಗಳಲ್ಲಿ ನ್ಯಾನ್ಸಿ ಡ್ರೂ ಸಾಹಸ ಮಾಡಿದರೆ, ಪುಟಾಣಿಯಲ್ಲಿಯ ಹುಡುಗಿ ಚಿತ್ರದುರ್ಗದ ಕೋಟೆಯೊಳಗೆ ಯಾರನ್ನೋ ಹಿಡದು ಬಡಿತಿದ್ದಳು. ಎಲ್ಲಾ ಮುಚ್ಚಿಕೊಂಡು, ಎಲ್ಲಾ ಲಾಜಿಕ್ ಗಾಳಿಗೆ ತೂರಿ, ಓದಿದರೆ ಒಂದೆರಡು ತಾಸು ಮಜಾ. ಹೀಂಗಾಗಿ ತಿಂಗಳ ಪುಸ್ತಕದ ಸಂಗ್ರಹಕ್ಕೆ ಪುಟಾಣಿ ಸೇರಿತು. ದೊಡ್ಡ ಬಸ್ ಸ್ಟ್ಯಾಂಡಿನ ಉತ್ತರಕರ ಬುಕ್ ಸ್ಟಾಲ್ ನಲ್ಲಿ ಸುಮಾರು ರೆಗ್ಯುಲರ್ ಆಗಿ ಪುಟಾಣಿ ಸಿಗುತ್ತಿತ್ತು ಅಂತ ನೆನಪು. ಒಂದೆರಡು ವರ್ಷ ಓದಿ ಅದನ್ನೂ ಬಿಟ್ಟೆ. ಯಾಕಂದ್ರ ಆವಾಗ ಸೀದಾ ಇಂಗ್ಲೀಷ್ thriller, mystery ಕಾದಂಬರಿ ಹುಚ್ಚು ಹತ್ತಿತ್ತು.

ಸುಮಾರು ಎರಡು ತಿಂಗಳ ಮ್ಯಾಲೆ ನರೇಂದ್ರ ಅನ್ನೋ ಪತ್ರ ಮಿತ್ರ ವಾಪಸ್ ಪತ್ರ ಬರೆದ. ಬೆಂಗಳೂರಿಂದ. ಅದು ಏನಾಗಿತ್ತು ಅಂದ್ರ, ಅವರು ಮನಿ ಬದಲು ಮಾಡಿಕೊಂಡು ಬ್ಯಾರೆ ಕಡೆ ಎಲ್ಲೋ ಹೋಗಿ ಬಿಟ್ಟಿದ್ದರಂತ. ನನ್ನ ಪತ್ರ ಹಳೆ ವಿಳಾಸಕ್ಕ ಹೋಗಿ ಬಿದ್ದಿತ್ತಂತ. ಅವರ ಹಳೆ ಮನಿ ಕಡೆ ಇದ್ದವರು ಯಾರೋ ಈಗಿತ್ತಲಾಗ ನನ್ನ ಪತ್ರ ತಂದು ಕೊಟ್ಟರಂತ. ಹಾಂಗಾಗಿ ಪತ್ರ ವಾಪಸ್ ಬರಿಲಿಕ್ಕೆ ಲೇಟ್ ಆತಂತ ಬರೆದಿದ್ದ ನರೇಂದ್ರ.

ಭಾಳ ಲೇಟ್ ಆತಲ್ಲೋ ದೋಸ್ತ? ಈಗ ನನಗ ಪತ್ರ ಮಿತ್ರತ್ವದ ಮೂಡು ಹೋಗೇ ಬಿಟ್ಟದ. ನಡಿ ನಡಿ, ಅಂತ ಬರೆದು ಬಿಡಲೋ ಅಂತ ಅನ್ನಿಸಿತ್ತು. ಏ, ಹಾಂಗ ಬರದ್ರ ಚೊಲೊ ಅಲ್ಲ, ಅಂತ ತಲಿಯೊಳಗ ಬರೋ ವಿಚಾರಕ್ಕೂ ಮಾಡೋ ಕೆಲಸಗಳಿಗೂ ನಡು ಒಂದು ಫಿಲ್ಟರ್ ಹಾಕೇ ಬಿಟ್ಟೆ.

ನರೇಂದ್ರನಿಗೆ ಒಂದು ಪತ್ರ ಬರೆದು ಹಾಕಿದೆ. ಬರಿಯಲಿಕ್ಕೆ ನನಗೇ ಮಜಾ ಬರಲಿಲ್ಲ ಅಂದ ಮ್ಯಾಲೆ ಅವನಿಗೆ ಓದಲಿಕ್ಕೆ ಎಷ್ಟು ಮಜಾ ಬಂತೋ ಇಲ್ಲೋ ಗೊತ್ತಿಲ್ಲ. ನರೇಂದ್ರನ ಬಗ್ಗೆ ಏನೂ ಜಾಸ್ತಿ ನೆನಪಿಲ್ಲ. ಅವನ ಜೋಡಿ ಏನೂ ಸರ್ದಾರ್ಜೀ ಲಫಡಾ ಆಗಿರಲಿಲ್ಲ. ಅದಕ್ಕೇ ನೆನಪಿಲ್ಲ. ಒಂದು ಮೂರ್ನಾಕು ರಸಹೀನ ಪತ್ರಗಳ ಬಳಿಕ ಆ ಪತ್ರ ಮಿತ್ರತ್ವಕ್ಕೂ ಒಂದು ಗತಿ ಕಂಡು ಹೋಗಿ ಎಲ್ಲ ಮುಗೀತು. ಅಷ್ಟರಾಗ ನಮಗೂ ಪತ್ರ ಮಿತ್ರತ್ವದ ಹುಚ್ಚು ಆ ಹೊತ್ತಿನ ಮಟ್ಟಿಗೆ ಬಿಟ್ಟಿತ್ತು.

ಮುಂದ ಒಂದು ವರ್ಷ ಮತ್ತ ಪತ್ರ ಮಿತ್ರ, ಆಪ್ತ ಮಿತ್ರ ಮಾಡಿಕೊಳ್ಳೋ ಉಸಾಬರಿಗೆ ಕೈ ಹಾಕಲಿಲ್ಲ. ಪತ್ರ ಮಿತ್ರತ್ವದ ಮುಂದಿನ ಅಲೆ ಅಪ್ಪಳಿಸಿದ್ದು ಒಂಬತ್ತನೇ ಕ್ಲಾಸಿನಲ್ಲಿ ಇದ್ದಾಗ. ೧೯೮೬ ನಲ್ಲಿ.

ನಾವೆಲ್ಲಾ ಎಂಟನೇ ಕ್ಲಾಸಿನಿಂದ ಇಂಗ್ಲೀಷ್ ಮೀಡಿಯಂ. ಹಾಂಗಾಗಿ ಒಂಬತ್ತನೇ ಕ್ಲಾಸಿಗೆ ಬರೋ ತನಕಾ ಇಂಗ್ಲೀಷ್ ಒಳಗ ಸುಮಾರು ಬರಿಲಿಕ್ಕೆ ಬಂತು. ಸಿಂಪಲ್ ಇಂಗ್ಲೀಷ್.

ಮತ್ತ ಪತ್ರ ಮಿತ್ರರ ಹುಚ್ಚು ವಾಪಾಸ್ ಬಂತು. ಕನ್ನಡ ಪತ್ರ ಮಿತ್ರರು ಸಾಕು. ಇನ್ನು ಏನಿದ್ದರೂ ಇಂಗ್ಲೀಷ್ ಒಳಗ ಪತ್ರ ಬರೆಯಬಹುದಾದದಂತಹ ಜನರೇ ಬೇಕು ಅಂತ ನಿರ್ಧಾರ ಮಾಡಿ ಆತು.

ಇಂಗ್ಲೀಷ್ ಪತ್ರ ಮಿತ್ರರನ್ನ ಎಲ್ಲೆ ಹುಡಕಬೇಕು?

Junior Science Digest, Electronics For You ಅನ್ನೋ ಎರಡು ಇಂಗ್ಲೀಷ್ ಪತ್ರಿಕೆಗಳು ನಮ್ಮ ಅಣ್ಣನ ಕಾಲದಿಂದಲೂ ಬರ್ತಿದ್ದಿವು. ಆವಾ ಮನಿ ಬಿಟ್ಟು ಹೋದ ಮ್ಯಾಲೂ, ನಾನೂ ಓದಬಹುದು ಅಂತ ಹೇಳಿ ಚಂದಾ ತುಂಬಿ ಹಾಂಗೆ ಇಟ್ಟಿದ್ದರು. ಓದ್ತಿದ್ದನೋ ಇಲ್ಲೋ ಗೊತ್ತಿಲ್ಲ ಆದ್ರ ತಿರುವಿ ಅಂತೂ ಹಾಕ್ತಿದ್ದೆ. ಸುಮಾರಷ್ಟು ಹಳೇ ಸಂಚಿಕೆಗಳೂ ಇದ್ದವು. ಅವೆಲ್ಲಾ ರದ್ದಿಗೆ ಹಾಕೋವಂತಹವೇ ಅಲ್ಲ. ಮತ್ತ ಆವಾಗೆಲ್ಲಾ ಇಂಟರ್ನೆಟ್ ಇಲ್ಲದ ಕಾಲ. ಮತ್ತ ತಿರುಗಿ ರೆಫರ್ ಮಾಡಲಿಕ್ಕೆ ಬೇಕು ಅಂತ ಎಲ್ಲಾ ತುಂಬಿ ತುಂಬಿ ಇಡೋದು.

ಇಂತಹ ಯಾವದೋ ಒಂದು ಇಂಗ್ಲೀಷ ಪತ್ರಿಕೆಯಲ್ಲಿ ಸಹ ಪತ್ರ ಮಿತ್ರರ ಅಂಕಣ ಇರೋದನ್ನ ನೋಡಿದ್ದೆ. ಆ ಪತ್ರಿಕೆಗಳಲ್ಲಿ ಬಾಕಿ ಏನೂ ನೆನಪಿಲ್ಲದಿದ್ದರೂ, ಪತ್ರ ಮಿತ್ರರ ವಿಳಾಸ ಸಿಗ್ತದ ಅಂತ ಗೊತ್ತಿತ್ತು. ಮತ್ತ ತೆಗೆದು ಹರವಿಕೊಂಡು ಕೂತೆ. ಒಂಬತ್ತನೇತ್ತಾ ಅಕ್ಟೋಬರ್ ಸೂಟಿ ಟೈಮ್. ೧೯೮೬. ಮತ್ತ ಒಂದಿಷ್ಟು ಮಂದಿ potential pen friends ಲಿಸ್ಟ್ ಮಾಡಿದೆ.

ಈ ಸರೆ ಪತ್ರ ಮಿತ್ರರನ್ನ ಆರಿಸೋ criteria ಬದಲಾಗಿತ್ತು. ದೂರ ಇದ್ದಷ್ಟೂ ಚೊಲೋ. ಇಲ್ಲೆ ನಮ್ಮ ಧಾರವಾಡ ಹತ್ತಿರ ಇದ್ದರ ಏನೂ ಮಜಾ ಬರಂಗಿಲ್ಲ. ಎಲ್ಲೋ ದೂರ ದೂರ ಊರು, ಹೊರ ರಾಜ್ಯದವರು ಇದ್ದರ ಚೊಲೊ ಅಂತ ಹೇಳಿ ಅಂತವರನ್ನೇ ಹುಡಕಲಿಕ್ಕೆ ಶುರು ಮಾಡಿದೆ.

ಈ ರೀತಿಯಾಗಿ ಪತ್ರ ಮಿತ್ರರನ್ನ ಹುಡುಕೋವಾಗ 'ರತಿ ಅಗ್ನಿಹೋತ್ರಿ' ಅನ್ನಾಕಿ ಕಣ್ಣಿಗೆ ಬಿದ್ದಳು. ಹಾಂ! ಸಿನಿಮಾ ನಟಿ ರತಿ ಅಗ್ನಿಹೋತ್ರಿ Junior Science Digest ಓದ್ತಾಳ? ಅಕಿ ಆಂಧ್ರದ ಹಿಂದುಪುರ್ ಊರಾಗ ಇರ್ತಾಳ? ಅಂತ ತಲಿಯಾಗ ಬಂತು. ಏ! ಇದು ಯಾರೋ ಬ್ಯಾರೆ ರತಿ ಅಗ್ನಿಹೋತ್ರಿ ಅನ್ನೋ ಹುಡುಗಿ, ಅಂತ ತಿಳ್ಕೊಳ್ಳೋವಷ್ಟು ಬುದ್ಧಿ ಬಂದಿತ್ತು. ಅದೂ ಗೋಪಾಲ್ ಸಿಂಗನ episode ಆದ ಮ್ಯಾಲೆ ಅಂತೂ ನಾ ಹೆಸರಿನ ಮ್ಯಾಲೆ ಏನೇನರೆ ವಿಚಾರ ಮಾಡಿ, ಏನೇನೋ ಕಲ್ಪನಾ ಮಾಡಿಕೊಂಡು, ಮುಂದ ಅದರಿಂದ KLPD ಆಗೋದು ಬ್ಯಾಡ ಅಂತ ಬಿಟ್ಟಿದ್ದೆ.

ಈ ರತಿ ಅಗ್ನಿಹೋತ್ರಿ ಏನರೆ ನಮ್ಮ ಮಾಳಮಡ್ಡಿ ಅಗ್ನಿಹೋತ್ರಿ ಆಚಾರ್ರ ಪೈಕಿ ಇರಬಹುದಾ ಅಂತ ಒಂದು ಸಣ್ಣ ಸಂಶಯ ಬಂತು. ಕೇಳೋಣ ಏನು ಅಂತ ಅನ್ನಿಸಿದರೂ ಆ ಹೊತ್ತಿಗೆ ನಮ್ಮ ಮಾಳಮಡ್ಡಿ ಸಂಪರ್ಕ ಕಮ್ಮಿ ಆಗಿ ಅಗ್ನಿಹೋತ್ರಿ ಆಚಾರ್ರು ಎಲ್ಲಿದ್ದಾರೋ ಅದು ಸಹಿತ ಗೊತ್ತಿರಲಿಲ್ಲ. ಮತ್ತೆಲ್ಲರ ಅಗ್ನಿಹೋತ್ರಿ ಆಚಾರ್ರ ಪೈಕಿ ಹುಡುಗಿ ಹಿಂದೂಪುರದಾಗ ಕೂತಿದ್ದರ ಕೆಟ್ಟ ಬ್ಯಾಸರಾ, ಬೋರು. ಏನೂ ಜಾಸ್ತಿ ಎನ್ಕ್ವೈರಿ ಮಾಡಲಿಲ್ಲ.

ಸಿನೆಮಾ ನಟಿ ರತಿ ಅಗ್ನಿಹೋತ್ರಿ Junior Science Digest ಓದಿದ್ದರೆ ಅಕಿ ಎಲ್ಲೆ ಸಿನಿಮಾ ನಟಿ ಆಗತಿದ್ದಳು? ಎಲ್ಲೋ ಹೇಳಹೆಸರಿಲ್ಲದ ಎಂಜಿನೀಯರೋ, ಡಾಕ್ಟರೋ ಆಗಿ ನಾಮ ಹಾಕಿಸಿಕೊಂಡು ಅನಾಮಧೇಯ ಜಿಂದಗಿ ನೆಡಸ್ತಿದ್ದಳು. ಅಂತಾದೆಲ್ಲ ಸುಡಗಾಡು ಪುಸ್ತಕ ಓದೋದು ಬಿಟ್ಟು ಕುಣಿದಳು ನೋಡ್ರೀ ಮಸ್ತ ಹೀರೋಯಿನ್ ಆಗಿಬಿಟ್ಟಳು.

ರತಿ ಅಗ್ನಿಹೋತ್ರಿ
ಏನೇ ಇರಲಿ, ಈ Junior Science Digest ರತಿ ಅಗ್ನಿಹೋತ್ರಿ ಅನ್ನೋ ಹುಡುಗಿ ಜೋಡಿ ಪತ್ರ ಮಿತ್ರತ್ವ ಮಾಡಬೇಕು ಅನ್ನಿಸಿಬಿಡ್ತು. ಹೆಸರಂತೂ ಭಾಳ ಚಂದ ಅದ. ನೋಡಲಿಕ್ಕೆ ಹ್ಯಾಂಗ ಇದ್ದಾಳೋ ಏನೋ? ದೇವರಿಗೆ ಗೊತ್ತು. Junior Science Digest ಓದ್ತಾಳ ಅಂದ್ರ ಸುಮಾರು ತಲಿ ಇದ್ದಾಕಿನೇ ಇರಬೇಕು. ತಲಿ ಇದ್ದ ಮ್ಯಾಲೆ ಸುಮಾರು ಬುದ್ಧಿನೂ ಇರಬಹದು. ಇಲ್ಲಂದ್ರ Junior Science Digest ಯಾಕ ಓದ್ತಾಳ? ಓದೋದೊಂದೇ ಅಲ್ಲ ಪತ್ರ ಮಿತ್ರ ಬೇಕು ಅಂತ ಯಾಕ ಹಾಕ್ಕೊತ್ತಾಳ? ದೋಸ್ತಿ ಮಾಡೋಣ ಅಂತ ಹೇಳಿ ಅಕಿಗೊಂದು ಪತ್ರ ಬರದೆ. ನನ್ನ ವಯಸ್ಸಿನಾಕಿನೇ ಇದ್ದಳು ಅಂತ ನೆನಪು. Junior Science Digest ಓದುತ್ತಿದ್ದ ಜೂನಿಯರ್ ರತಿ ಅಗ್ನಿಹೋತ್ರಿ. ಸೀನಿಯರ್ ರತಿ ಅಗ್ನಿಹೋತ್ರಿ ಆ ಕಾಲದಗಾಗ ಆಕೆಯ ಸಿನಿಮಾ ವೃತ್ತಿಯ ಉತ್ತುಂಗದಲ್ಲಿ ಇದ್ದಳು. ೧೯೮೧ ರಲ್ಲಿ ಏನು ಆ ಮೆಗಾ ಹಿಟ್ 'ಏಕ್ ದುಜೆ ಕೆ ಲಿಯೇ' ಬಂದು ಪ್ರಸಿದ್ಧಿ ಆತೋ ನೋಡ್ರೀ, ರತಿ ಅಗ್ನಿಹೋತ್ರಿ ಭಾಳ ಫೇಮಸ್ ಆಗಿ ಮುಂದ ೧೯೮೭ ರಲ್ಲಿ ಮಾಧುರಿ ದೀಕ್ಷಿತ್ ಅನ್ನೋ ಡಿಕ್ಸಿ ಬೇಬ್ ಬರೋ ತನಕಾ ರತಿದೇ ಕಾರುಬಾರು. ಒಂದಾದ ಮೇಲೊಂದು ಹಿಟ್ ಮೂವಿ. ಇದೆಲ್ಲ factors ರತಿ ಅಗ್ನಿಹೋತ್ರಿ ಅನ್ನೋ ಚಿಣ್ಣ ಹುಡುಗಿಯನ್ನ ಪತ್ರ ಮಿತ್ರ ಮಾಡಿಕೊಳ್ಳಬೇಕು ಅಂತ ಪ್ರೇರೇಪಿಸಿರಬೇಕು.

ಒಬ್ಬರಿಗೆ ಮಾತ್ರ ಪತ್ರ ಬರಕೋತ್ತ ಇದ್ದರ ಅದೆಲ್ಲ ಬರೇ hit and miss ಆಗೋ ಚಾನ್ಸಸ್ ಭಾಳ ಅಂತ ಹೇಳಿ ಅದಕ್ಕೇ ಈ ಸಲ ಹಾಕ್ಕೊಂಡು ಒಂದು ಐದಾರ್ ಮಂದಿಗೆ ಒಂದೇ ಸಲ ಬರೆದು ಬಿಡಬೇಕು ಅಂತ ವಿಚಾರ ಮಾಡಿದೆ. ನಮ್ಮ ತಲಿ ತಿರುಗೋದನ್ನ ನೋಡಿದ್ರ, ಯಾವ ಪತ್ರ ಮಿತ್ರನೂ ನಮಗ ಮೂರ್ನಾಕು ತಿಂಗಳ ಮ್ಯಾಲೆ ತಾಳಿಕೆ ಬರೋ ಹಾಂಗ ಕಾಣೋದಿಲ್ಲ. ಹಾಂಗಾಗಿ ನಾವು ಬರೆದ ಎಲ್ಲ ಐದಾರ ಮಂದಿನೂ ಆಕಸ್ಮಾತ ಉತ್ತರ ಬರೆದು ಬಿಟ್ಟರೆ ಬ್ಯಾಡಾದವರನ್ನ ಡಂಪ್ ಮಾಡಿದ್ರಾತು ಅಥವಾ ಅವರೇ ನಮ್ಮನ್ನ ಡಂಪ್ ಮಾಡಬಹುದು ಅಂತ ಹೇಳಿ ಒಂದೇ ಸಲಕ್ಕ ಒಂದು ಆರು ಜನರಿಗೆ ಪತ್ರ ಬರೆದು ಬಿಟ್ಟೆ. ಎಲ್ಲಾದರಾಗ ಬರೆದಿದ್ದು ಒಂದೇ. introductory ಪತ್ರ ಬ್ಯಾರೆ ಬ್ಯಾರೆ ಏನು ಬರಿಯೋದು? ಆವಾಗ ಕಂಪ್ಯೂಟರ್, ಜೆರಾಕ್ಸ್ ಅಷ್ಟೆಲ್ಲ ಇರಲಿಲ್ಲ. ಇದ್ದಿದ್ದರ ಒಂದು ಬರೆದು, ಹೆಸರ ಚೇಂಜ್ ಮಾಡಿ, ಕಾಪಿ ಮಾಡಿ, ಪ್ರಿಂಟ್ ಔಟ್ ತೆಗೆದು, ಪೋಸ್ಟ್ ಮಾಡಿ, ಟೈಮ್ ಸೇವ್ ಮಾಡಬಹುದಿತ್ತು.

ನೆನಪಿದ್ದ ಪ್ರಕಾರ ಹಿಂದುಪುರ್, ಅಸ್ಸಾಮಿನ ಯಾವದೋ ಒಂದು ಮೂಲೆ (ಅದೂ ಚೀನಾ ಬಾರ್ಡರ್ ಹತ್ತಿರದ್ದು), ಮತ್ತ  ಉತ್ತರ ಪ್ರದೇಶದಾಗ ಒಂದೆರಡು ಕಡೆ, ಹೀಂಗ ದೂರ ದೂರ ಇರೋ ಐದಾರು ಮಂದಿಗೆ  ಪತ್ರ ಬರೆದಿದ್ದೆ. ಬಳ್ಳಾರಿ, ಬೆಂಗಳೂರು ಸಾಕಾಗಿತ್ತು.

ಬರೆದು ಮರ್ತು ಬಿಟ್ಟೆ. ಅಕ್ಟೋಬರ್ ಸೂಟಿ ಮುಗದ ಸಾಲಿ ಶುರು ಆಗಿ ಫುಲ್ ಬಿಸಿ.

ಮೊದಲು ಉತ್ತರ ಬಂದಿದ್ದು ಸಪನ್ ಕುಮಾರ್ ದಾಸ್ ಅನ್ನವನಿಂದ. ಆಸ್ಸಾಮಿನ ಮೂಲೆಯಿಂದ ಬರೆದಿದ್ದ. ಆವಾ ಆಗಲೇ ಅಲ್ಲಿನ ಕಲೆಕ್ಟರ್ ಆಫೀಸ್ ನಲ್ಲಿ ಏನೋ ಕೆಲಸ ಮಾಡ್ತಿದ್ದ. ಎಲೆಕ್ಟ್ರಾನಿಕ್ಸ್ ಅವನ ಹವ್ಯಾಸ. ಹಾಂಗಾಗೇ ಅವನ ಅಡ್ರೆಸ್ Electronics For You ಪತ್ರಿಕೆಯಲ್ಲಿ ಸಿಕ್ಕಿತ್ತು ಅಂತ ಅನ್ನಿಸ್ತದ. ಮಸ್ತ ಬರದಿದ್ದ ಪತ್ರ. ಅವನ ಒಂದೆರಡು ಹಾಬಿ ಎಲೆಕ್ಟ್ರಾನಿಕ್ಸ್ ಪ್ರಾಜೆಕ್ಟ್ ಬಗ್ಗೆ ಸಹಿತ ಬರದಿದ್ದ. ಅದು ಮುಂದ ನಮಗ ಒಂದೆರೆಡು ಎಲೆಕ್ಟ್ರಾನಿಕ್ಸ್ ಪ್ರಾಜೆಕ್ಟ್ ಬೇಸಿಗೆ ಸೂಟಿ ಒಳಗ ಮಾಡಲಿಕ್ಕೆ ಪ್ರೋತ್ಸಾಹ ಕೊಟ್ಟಿದ್ದು ಅಂತು ಹೌದು. ಅದಕ್ಕೆ ಸಪನ್ ಕುಮಾರ್ ದಾಸನಿಗೆ ಒಂದು ಥ್ಯಾಂಕ್ಸ್.

ಸಪನ್ ಕುಮಾರ್ ದಾಸ್ ಅವನ ಫೋಟೋ ಸಹಿತ ಕಳಿಸಿದ್ದ. ಸಿಂಪಲ್ ಬ್ಲಾಕ್ & ವೈಟ್ passport ಸೈಜಿನ ಫೋಟೋ. ಹುಡುಗನ ಫೋಟೋ ಆದ್ದರಿಂದ ನಾವೇನೂ ಜಾಸ್ತಿ ಗಮನ ಕೊಡಲಿಲ್ಲ. ನಮ್ಮ ಕಡೆ ಸಹಿತ ಒಂದು ಹೊಸಾ passport ಫೋಟೋ ಇತ್ತು. ಅದನ್ನ ಅವನಿಗೆ ಕಳಿಸಿ ಪತ್ರ ಮಿತ್ರತ್ವ ಸ್ವಲ್ಪ ಮುಂದುವರ್ಸಿದ್ದೆ.

ಹೀಂಗಿದ್ದಾಗ ನಮ್ಮ ಮೌಶಿ ಬಂದಿದ್ದರು. ನನ್ನ ಇತ್ತೀಚಿನ ಕಿತಾಪತಿಗಳನ್ನ ಅವರಿಗೆ ಹೇಳಲಿಲ್ಲ ಅಂದ್ರ ಹ್ಯಾಂಗ? ಹೇಳಿದೆ. ನನ್ನ ಅಸ್ಸಾಮದ ಪತ್ರ ಮಿತ್ರ ನೋಡು ಇವ, ಅಂತ ಅವರಿಗೆ ಸಪನ್ ಕುಮಾರನ ಫೋಟೋ ತೋರ್ಸಿದೆ. ನೋಡಿ ಏನು ಅನ್ನಬೇಕು ಅವರು? ಏ....ಹುಡುಗುರನ್ನ ಕದಿಯೋ 'ಮಕ್ಕಳ ಕಳ್ಳ' ಇದ್ದಂಗ ಇದ್ದಾನಲ್ಲೋ ನಿನ್ನ ಪತ್ರ ಮಿತ್ರ!!!! ಅಂತ ಅಂದು ಬಿಟ್ಟರು. ಹೋಗ್ಗೋ!!! ಮೌಶಿ ಹಾಂಗೆ. ಅವರಿಗೆ ಎಲ್ಲೆಲ್ಲೋ ಏನೇನೋ ಕಾಣ್ತಿದ್ದವು. ಯಾರ್ಯಾರೋ ಹ್ಯಾಂಗ್ಯಾಂಗೊ ಕಾಣಸ್ತಿದ್ದರು. ಮತ್ತ ಹೀಂಗ ಚ್ಯಾಸ್ಟಿ ಮಾಡಿ ಮಾತಾಡೋದು ಅವರ ಸ್ವಭಾವ. ಚುಪುರು ಗಡ್ಡ ಬಿಟ್ಟುಕೊಂಡು, ಪೋಲಿಸ್ ಸ್ಟೇಷನ್ ಒಳಗಿರುವ ಬೋರ್ಡಿನ ಮೇಲಿರುವಂತಹ  ಫೋಟೋ ಕಳಿಸಿದ್ದ ಸಪನ್ ಕುಮಾರ್ ಅವರ ಕಣ್ಣಿಗೆ ಮಕ್ಕಳ ಕಳ್ಳನ ಹಾಂಗ ಕಂಡ್ರ ಅದು ಅವರ ತಪ್ಪಲ್ಲ. ಎಲ್ಲೋ ಆ ತರಹದ ಮಕ್ಕಳ ಕಳ್ಳನ ಫೋಟೋ ಅವರು ನೋಡಿರಬೇಕು ಬಿಡ್ರೀ. ಭಾಳ ನಕ್ಕೆ. ಮೌಶಿನೂ ನಕ್ಕರು. ಅವರು spontaneous ಆಗಿ ಹಾಂಗ ಹೇಳಿದ್ದು ಬಹಳ ಮಜಾ ಅನ್ನಿಸಿತ್ತು. ನಾ ಏನ್ ಅವನ್ನ ಮಕ್ಕಳ ಕಳ್ಳ ಅಂತ ಹೇಳಿ ಬ್ರಾಂಡ್ ಮಾಡಲಿಲ್ಲ. ಜೋಕ್ ಬ್ಯಾರೆ ಪವಿತ್ರ ಪತ್ರ ಮಿತ್ರತ್ವ ಬ್ಯಾರೆ.

ಯೋಗಾಯೋಗ ಇರಲಿಲ್ಲ ಅಂತ ಅನ್ನಸ್ತದ. ಸಪನ್ ಕುಮಾರ್ ದಾಸನ ಜೋಡಿ ಸಹಿತ ಪತ್ರ ಮಿತ್ರತ್ವ ಮುಗೀತು. ಆ ಆಸ್ಸಾಮದ ಮೂಲಿಗೆ ಹೋಗಲಿಕ್ಕೆ ಪತ್ರ ಒಂದು ತಿಂಗಳ ತೊಗೋತ್ತಿತ್ತು. ಬರಲಿಕ್ಕೆ ಮತ್ತೊಂದು ತಿಂಗಳ. ನಡು ಹೆಚ್ಚಾಗಿ ನಂದೋ ಅವನದೋ ಪತ್ರ ಕಳೆದಿರಬೇಕು. ಹಾಂಗಾಗಿ ಅವನೂ ಬರೆಯದೆ ನಾನೂ ಬರೆಯದೆ ಪತ್ರ ವ್ಯವಹಾರ ನಿಂತು ಹೋತು.

ರತಿ ಅಗ್ನಿಹೋತ್ರಿ ಮರತೇ ಬಿಟ್ಟಿದ್ದೆ. ಸುಮಾರು ಒಂದುವರಿ ತಿಂಗಳ ಮ್ಯಾಲೆ ಒಂದು ಪತ್ರ ಮನಿಗೆ ಬಂತು. ಸಾಲಿಂದ ಮನಿಗೆ ಬಂದ ಕೂಡಲೇ, ತಂದೆಯವರು, ನಿನಗೊಂದು ಪತ್ರ ಬಂದದ ನೋಡು, ಅಂತ ಹೇಳಿದರು. ಯಾರದ್ದೂ ಪತ್ರ expect ಮಾಡ್ತಾ ಇರಲಿಲ್ಲ. ಆದ್ದರಿಂದ excite ಏನೂ ಆಗಲಿಲ್ಲ. ತಂದೆಯವರ ಮಾರಿ ಮ್ಯಾಲಿನ ನಗಿ ನಾ ಗ್ರಹಿಸಲಿಲ್ಲ. ಅಂತಾ ಇಂತಾ ಪತ್ರ ಅಲ್ಲೋ!ಮಸ್ತ ಮಜಾ ಪತ್ರ ಬಂದದ ನೋಡು! ಅಂತ ಅಮ್ಮ ಜುಗಲ್ ಬಂದಿ ಹಾಡಿ, ಪೆಕಾ ಪೆಕಾ ಅಂತ ನಕ್ಕಾಗ ಮಾತ್ರ ಏನೋ ಲಫಡಾ ಆಗಿರಬೇಕು ಅಂತ ಅನ್ನಿಸ್ತು. ಪತ್ರ ನೋಡಲಿಕ್ಕೆ ಹೋದೆ.

ಆಘಾತ ಆತು!

ರತಿ ಅಗ್ನಿಹೋತ್ರಿಗೆ ನಾ ಬರೆದ ಪತ್ರ ಹಾಂಗೇ ವಾಪಾಸ್ ಬಂದಿತ್ತು. Addressee Not Found. Sending back to the sender - ಅಂತ ಏನೋ ಪೋಸ್ಟ್ ಮೊಹರು ಸಹ ಇತ್ತು. ಹಾಂ! ಇದೆಂಗ ಆತು? ನಾ ಯಾವಾಗಲೂ ಅಡ್ರೆಸ್ ಡಬಲ್ ಚೆಕ್ ಮಾಡಿದ ಮ್ಯಾಲೇ ಪತ್ರ ಹಾಕ್ತಿದ್ದೆ. ಹಾಂ? ಅಕಿ ರತಿ ಅಗ್ನಿಹೋತ್ರಿ ಎಲ್ಲೋ ಮನಿ ಖಾಲಿ ಮಾಡಿಕೊಂಡು, ಝೇಂಡಾ ಎತ್ತಿಕೊಂಡು ಎಲ್ಲೋ ಹೋಗಿಬಿಟ್ಟಿರಬೇಕು. ಅದಕ್ಕೇ ಪತ್ರ ವಾಪಸ್ ಬಂದು ಬಿಟ್ಟದ. ಅಕಿ ರತಿ ಅಗ್ನಿಹೋತ್ರಿ 'ಹಿಂದು'ಪುರದಾಗ ಇದ್ದಾಕಿ ಈಗ 'ಮುಂದು'ಪುರಕ್ಕ ಬಂದು ಕೂತಾಳೋ? ಅಥವಾ 'ಹಿಂದೂ'ಪುರ ಬ್ಯಾಸರ ಆತು ಅಂತ ಹೇಳಿ 'ಮುಸ್ಲಿಂ'ಪುರಕ್ಕ ಹೋಗ್ಯಾಳೋ? ಅಂತ ನಾನೇ ಜೋಕ್ ಮಾಡಿದೆ. ಮತ್ತ ಎಲ್ಲರೂ ನಕ್ಕರು. ಏನು ಮಾಡಲಿಕ್ಕೆ ಬರ್ತದ?

ಸಿನಿಮಾ ನಟಿ ರತಿ ಅಗ್ನಿಹೋತ್ರಿಯಂತೂ ಸಿಗ್ತಿದ್ದಿಲ್ಲ. ಇದು ಯಾವದೋ ಅದೇ ಹೆಸರಿನ ಚಿಣ್ಣ ಹುಡುಗಿ ಜೋಡಿ ಪತ್ರ ಮಿತ್ರತ್ವ ಮಾಡೋಣ ಅಂದ್ರ ಅಕಿ ಅಡ್ಡ್ರೆಸ್ಸಿಗೇ ಇರಲಿಲ್ಲ. 'ಅಡ್ಡ್ರೆಸ್ಸಿಗೇ ಇಲ್ಲ' ಅನ್ನೋದು ಏನು ಅಂತ ಆವತ್ತಿಂದನೇ ಗೊತ್ತಾತು.

ಉಳಿದ ಮೂರ್ನಾಕು ಜನ ಯಾರೂ ಉತ್ತರ ಬರಿಲಿಲ್ಲ. ಯಾಕೋ ಏನೋ?

ಈ ರೀತಿಯಲ್ಲಿ ಪತ್ರ ಮಿತ್ರತ್ವದ ಎರಡನೇ phase ಮುಗಿದಿತ್ತು. ಮುಂದಿನ phase ಶುರುವಾಗಿ, ಒಂದು ಒಳ್ಳೆ ಪತ್ರ ಮಿತ್ರತ್ವ ಬರಕತ್ತಾಗಲಿಕ್ಕೆ ಮೂರು ವರ್ಷ ಅಂದರೆ ೧೯೯೦ ರ ವರೆಗೆ ಕಾಯಬೇಕಾಯಿತು. ಅದರ ಬಗ್ಗೆ ಮುಂದಿನ ಕಂತಿನಲ್ಲಿ.

(ಸಶೇಷ. ಮುಂದುವರಿಯಲಿದೆ)(ಭಾಗ - ೩ ಇಲ್ಲಿದೆ)

1 comment:

Vimarshak Jaaldimmi said...


Very good historical perspective!

How about sending a pen-pal request to S.T. bhava down under?