Tuesday, February 04, 2014

ದುಬೈ ಅನಸಕ್ಕನ ಜೋಡಿ ಆಖರೀ ಪತ್ರ ಮಿತ್ರತ್ವ (ಪತ್ರ ಮಿತ್ರರ ಪ್ರಪಂಚದಲ್ಲಿ. ಭಾಗ - ೪)

(ಮೊದಲಿನ ಭಾಗ - , , ಇಲ್ಲಿವೆ. ಓದಿ)

ಮುಂದೆ ಪತ್ರ ಮಿತ್ರ (ಮಿತ್ರೆ) ಆಗಿದ್ದು ಬರೋಬ್ಬರಿ ಏಳು ವರ್ಷಗಳ ನಂತರ. ಅಂದರೆ ೧೯೯೭ ನಲ್ಲಿ. ಅದೂ ಅಮೇರಿಕಾಕ್ಕೆ ಬಂದ ಮೇಲೆ. ಆವಾಗ ಪತ್ರ ಮಿತ್ರತ್ವದ ಹೊಸ ಆಯಾಮವೊಂದು ಹೊರಹೊಮ್ಮುತ್ತಿತ್ತು. ಶುದ್ಧ ಅಂಚೆಯಲ್ಲಿ ಪತ್ರ ಬರೆಯುವದು ಹೋಗಿ ಮಿಂಚಂಚೆ (e-mail) ಮೂಲಕ ಪತ್ರ ವ್ಯವಹಾರ ಮಾಡಿ ಪತ್ರ ಮಿತ್ರತ್ವ ಮಾಡುವದು.

ಅಮೇರಿಕಾಕ್ಕೆ ಬಂದಿದ್ದು ೧೯೯೭ ರ ಜುಲೈ ತಿಂಗಳಲ್ಲಿ. ಮೊದಲ ಪ್ರಾಜೆಕ್ಟ್ ಸಿಕ್ಕಿದ್ದು ಬಾಸ್ಟನ್ ನಗರದ ಆಸು ಪಾಸು. ಆತಪಾ ನಡಿ ಅಂತ ಟೆಂಪೊರರಿ ಆಗಿ ಎರಡು ವಾರ ಉಳಿದಿದ್ದ ವಾಷಿಂಗ್ಟನ್ ಡಿ.ಸಿ ನಗರ ಬಿಟ್ಟು ಬಾಸ್ಟನ್ನಿಗೆ ಬಂದರೆ ಕೆಟ್ಟ ಗವ್ವ್ ಅನ್ನೋ ಬೋರ್ (boredom). ನಮ್ಮ ಕಡೆ ಕಾರಿಲ್ಲ. ಕಾರಿಲ್ಲ ಅಂದ್ರ ಅಮೇರಿಕಾದಲ್ಲಿ ಕಾಲೇ ಇಲ್ಲ. ಲೈಫೇ ಇಲ್ಲ. ನಾಸ್ತಿ ಲೈಫ್. ಒಂದು apartment ಭಾಡಿಗಿ ಹಿಡಿದು, ಮನಿ ಅಂತ ಮಾಡಿದರ ಮನಿಯೊಳಗ ಟೀವಿ ಇಲ್ಲವೇ ಇಲ್ಲ. ಯಾಕಿಲ್ಲ ಅಂದ್ರ ರೊಕ್ಕನೇ ಇಲ್ಲ. ಇದ್ದ ಬಿದ್ದ ಇಂಡಿಯಾದಿಂದ ತಂದಿದ್ದ ರೊಕ್ಕ, ಪಗಾರ ಅಡ್ವಾನ್ಸ್ ಇತ್ಯಾದಿ ಮನಿ ಡೆಪಾಸಿಟ್ ಅದಕ್ಕ ಇದಕ್ಕ ಖರ್ಚ ಆಗಿ, ರೊಕ್ಕಕ್ಕ ಹಪಾಹಪಿ. ಪುಣ್ಯಕ್ಕೆ ತಿಂಗಳಿಗೆ ಎರಡು ಸರೆ ಪಗಾರ ಇಲ್ಲೆ. ಇನ್ನು ಪಗಾರ ಬಂದು, ಪ್ರತಿ ಪಗಾರ ಒಳಗ ಉಳಿದ ರೊಕ್ಕದಾಗ ಟೀವಿ, ಕಾರು, ಮತ್ತೊಂದು, ಇತ್ಯಾದಿ ತೊಗೋಬೇಕು. ಮೊದಲು ಡ್ರೈವಿಂಗ್ ಲೈಸೆನ್ಸ್ ಮಾಡಿಸಬೇಕು. ಅದಕ್ಕ ಮೊದಲು ಡ್ರೈವಿಂಗ್ ಕ್ಲಾಸಿಗೆ ಹೋಗಿ ಡ್ರೈವಿಂಗ್ ಕಲಿಬೇಕು. ಇದೆಲ್ಲದರ ನಡುವೆ ಕೆಲಸಾ ಬ್ಯಾರೆ ಮಾಡಬೇಕು. Welcome to the land of opportunities. Welcome to the land of milk and honey. ಅಲ್ಲಿ ತನಕ ಲೈಫ್ ಒಳಗ ಎಲ್ಲ ಆರಾಮ ಸಿಕ್ಕವರಿಗೆ ಮೊದಲು ಸಲ ಕಷ್ಟ ಪಡಬೇಕು ಅಂದ್ರ ಕೆಟ್ಟ ಬೋರ್! ಮತ್ತ ಬೋರ್!

ಹೀಂಗಾಗಿ ಮನಿಗೆ ಬಂದ್ರ ಕೆಟ್ಟ ಬೋರ್. ಒಂದು ವಾಕ್ಮನ್ ಇತ್ತು ಮತ್ತು ತಂದಿದ್ದ ಒಂದಿಪ್ಪತ್ತು ಕ್ಯಾಸೆಟ್ಟು ಇದ್ದವು. ಅವನ್ನೇ ಕೇಳಿ ಕೇಳಿ ಬೋರ್. ಜೊತೆಗೆ ತಂದಂತಹ ಒಂದೆರಡು ಪುಸ್ತಕ ಇತ್ತು. ಅವನ್ನೇ ಓದಿ ಓದಿ ಬಾಯಿಪಾಠ ಆಗಿಹೋತು. ರೂಂ ಮೇಟ್ ಆಗೋ ಬೆಂಗಳೂರು ಮಾಣಿಯೊಬ್ಬ, ಮನಿಯೊಳಗ ಸಾಮಾನು ಇಟ್ಟು, ಒಂದು ತಿಂಗಳ ಸೂಟಿ ಮ್ಯಾಲೆ ಇಂಡಿಯಾಕ್ಕೆ ಹೋಗಿಬಿಟ್ಟಿದ್ದ. ಆವಾ ಮತ್ತ ವಾಪಸ್ ಬಂದು ಬ್ಯಾರೆ ಕಡೆ ಓಡವ ಇದ್ದ. ಹಾಂಗಾಗಿ ನಾವೇ ನಾವು. ಕಾರಿಲ್ಲದ ಲೈಫೊಂದು ಲೈಫೇ ಕೃಷ್ಣಾ? ಅಂತ 'ನೀ ಸಿಗದ ಬಾಳೊಂದು ಬಾಳೇ ಕೃಷ್ಣಾ?' ಧಾಟಿಯೊಳಗ ಹಾಡಿಕೋತ್ತ ತಲಿ ಮ್ಯಾಲೆ ಕೈ ಹೊತ್ತುಕೊಂಡು ಕೂಡಬೇಕ? ಇಲ್ಲ. ಏನರೆ ಜುಗಾಡ್ ಮಾಡಬೇಕು ಟೈಮ್ ಪಾಸ್ ಮಾಡಲಿಕ್ಕೆ. ಬೋರ್ವೆಲ್ ಭಾಳ ಹೊಡೆದರ ಎಲ್ಲಾ ಕಡೆ ಬೋರೇ ಬೋರು.

ಆವಾಗ ಇದ್ದ ದೊಡ್ಡ ಆಫೀಸ್ benefit ಅಂದ್ರ ಬಿಟ್ಟಿ high speed ಇಂಟರ್ನೆಟ್. ಮನಿಯೊಳಗ ಕಂಪ್ಯೂಟರ್, ಇಂಟರ್ನೆಟ್ ಇತ್ಯಾದಿ ಅಷ್ಟು ಬಂದಿದ್ದಿಲ್ಲ. ಕಂಪ್ಯೂಟರ್ ಇನ್ನೂ ಭಾಳ ತುಟ್ಟಿನೇ ಇತ್ತು ಆವಾಗ. ಮತ್ತ ನಮ್ಮ priority ಒಳಗ ಕಂಪ್ಯೂಟರ್, ಇಂಟರ್ನೆಟ್ ಎಲ್ಲ ಭಾಳ ಕೆಳಗ ಇದ್ದವು. ಹಾಂಗಾಗಿ ಕೆಲಸ ಇರಲಿ ಬಿಡಲಿ, ಪ್ರತಿ ದಿನ ಮ್ಯಾಕ್ಸಿಮಮ್ ಟೈಮ್ ಆಫೀಸ್ ಒಳಗ ಇರೋದು. ವೀಕ್ ಎಂಡ್ ಸಹಿತ ಆಫೀಸ್ ಗೆ ಹೋಗಿ ಕೂತು ಬಿಡೋದು. ಹ್ಯಾಂಗೂ ಹೋಗೋದು ಬರೋದು ಟ್ಯಾಕ್ಸಿ. ದಿನಕ್ಕ ಅದೊಂದು ಇಪ್ಪತ್ತು ಡಾಲರ್. ವೀಕೆಂಡ್ ಮನಿಯೊಳಗ ಕೂತರೆ ನಲವತ್ತು ಡಾಲರ್ ಉಳಿದೀತು. ಏನು ಮಾಡೋದು? ಡಾಲರ್ ತಿನ್ನಬೇಕ? ಡಾಲರ್ ನೋಟ್ ನಮ್ಮ ತಲಿ ಮ್ಯಾಲೆ ನಾವೇ ಸುರುವಿಕೊಂಡು ಮುಜರಾ ಡಾನ್ಸ್ ಮಾಡಬೇಕ? ಅಂತ ಹೇಳಿ ವೀಕೆಂಡ್ ಸಹಿತ ಆಫೀಸ್ ಗೆ ಹೋಗಿ ಕೂಡೋದು. ಇಂಟರ್ನೆಟ್ ಬ್ರೌಸ್ ಮಾಡಿದ್ದೆ ಮಾಡಿದ್ದು. ಕೇವಲ ಸೇಫ್ ಸೈಟ್ ಮಾತ್ರ. ಆಫೀಸ್ ಕಂಪ್ಯೂಟರ್ ಮ್ಯಾಲೆ ಎಲ್ಲೆಲ್ಲರೆ ಹೋಗಿ, ಸಿಕ್ಕೊಂಡು ಬಿದ್ದು, ನೌಕರಿ ಢಂ ಅಂದ್ರ ಅಂತ ಅದೊಂದು ಚಿಂತಿ. ಹಾಂಗಾಗಿ ಎಲ್ಲ ನ್ಯೂಸ್ ಪೇಪರ್, ಎಲ್ಲ ಮ್ಯಾಗಜಿನ್, ಎಲ್ಲ ಯೂನಿವರ್ಸಿಟಿ ವೆಬ್ ಸೈಟ್, ಎಲ್ಲ ದೊಡ್ಡ ದೊಡ್ಡ ಕಂಪನಿಗಳ ವೆಬ್ ಸೈಟ್, ಇತ್ಯಾದಿ ಇತ್ಯಾದಿ. ಮತ್ತ ಆಫೀಸ್ ಒಳಗ ಚಹಾ, ಕಾಫಿ ಎಲ್ಲ ಫ್ರೀ. ನಾವೇ ಮಾಡಿಕೊಂಡು ಎಷ್ಟು ಬೇಕೋ ಅಷ್ಟು ಕುಡಿಬಹುದು. ಬಾಜೂಕೆ subway sandwich ಅಂಗಡಿ. ಲೈಫ್ ಆರಾಮ. ಒಂದು ರೀತಿಯಲ್ಲಿ.

ಬಿಟ್ಟಿ ಇಂಟರ್ನೆಟ್ ಇದ್ದರೂ ಎಷ್ಟಂತ browse ಮಾಡೋದು? ಏನು ಮಾಡೋದು? ಅಂತ ವಿಚಾರ ಮಾಡಿದಾಗ ಮತ್ತ ನೆನಪಾದದ್ದು ಅದೇ. ಪತ್ರ ಮಿತ್ರರು.

ಆವಾಗ ಇನ್ನೂ ಗೂಗಲ್ ಇರಲಿಲ್ಲ. ಏಳೆಂಟು ಲಡಕಾಸಿ ಸರ್ಚ್ ಇಂಜಿನ್ ಇದ್ದವು. ನಾವು lycos ಅನ್ನೋದನ್ನ ಉಪಯೋಗಿಸುತ್ತಿದ್ದಿವಿ ಅಂತ ನೆನಪು. ಅದರಾಗ pen friend ಅಂತ ಹೇಳಿ ಒಂದು ಸರ್ಚ್ ಕೊಟ್ಟೆ. ವಾಹ್! ಸುಮಾರು ಲಿಂಕಗಳು ಬಂದವು.

pen friendship ಸಹಿತ ಈಗ ಬದಲಾಗಿತ್ತು. ಈಗ cyber pen friendship ಶುರು ಆಗಿತ್ತು. ಕಾಗದದ ಮೇಲೆ ಪತ್ರ ಬರಿಯೋ ಯುಗ ಹೋಗಿ email, chatting ಮೇಲೆ ಪತ್ರ ಮಿತ್ರರು.

ಯಾವದೋ ಒಂದು cyber pen friendship ವೆಬ್ ಸೈಟಿಗೆ ಹೋಗಿ, ರಿಜಿಸ್ಟರ್ ಮಾಡಿ, ಹುಡುಕಿದೆ. ಜಗ್ಗಿ ಮಂದಿದು ವಿವರ ಬಂತು. ಎಲ್ಲಾ ಫ್ರೀ. ಏನೂ ರೊಕಿಲ್ಲ ಪಕ್ಕಿಲ್ಲ. ಆದ್ರ ಎಲ್ಲ ಪತ್ರ ವ್ಯವಹಾರ ಆ website ಮೂಲಕವೇ. ನಿಮ್ಮ email address ಅವರಿಗೆ ತಿಳಿಸಂಗಿಲ್ಲ. ಅವರದ್ದು ನಿಮಗಿಲ್ಲ. ಪತ್ರ ಮಿತ್ರ ಆದ ಮ್ಯಾಲೆ ನೀವು ಏನರೆ ಮಾಡಿಕೊಳ್ಳಿರಿ. ಅಲ್ಲಿ ತನಕ ನಿಮ್ಮ ವಯಕ್ತಿಕ ವಿವರ ಕಾಪಾಡೋದು ಅವರ ಕೆಲಸ.

ಎಲ್ಲಿಂದ ಪತ್ರ ಮಿತ್ರರನ್ನ ಹುಡುಕೋಣ? ಮಾರಿಷಸ್ ಆಗಿತ್ತು. ಅದು ಬ್ಯಾಡ. ದುಬೈದಾಗ ಹುಡುಕಿಬಿಡೋಣ ಅಂತ ಹೇಳಿ ನೋಡಿದಾಗ ಕಂಡಾಕಿ ಆನ್ಸೆಟ್ಟ (Annsette, Anisette) ಅನ್ನಾಕಿ. ಆ website ಪೂರ್ತಿ ಹೆಸರು ಕೊಡ್ತಿದ್ದಿಲ್ಲ. ಫೋಟೋ ಇಲ್ಲ. ಅವೆಲ್ಲ ಆ ಮ್ಯಾಲೆ ಬಂದಿದ್ದು. ಇಕಿ ಮತ್ತೆಲ್ಲರ ದುಬೈದಾಗ ಇರೊ ಅನುಸೂಯಾ ಅನ್ನಾಕಿ ಆನ್ಸೆಟ್ಟ ಅಂತ ಹೆಸರು ಇಟ್ಟುಕೊಂಡು ಬಿಟ್ಟಾಳೋ ಹ್ಯಾಂಗ ಅಂತ ಸಂಶಯ. ಏನರೆ ಇರಲಿ ಅಂತ ಬಿಟ್ಟೆ.

ಎಲ್ಲ ದೇಶ ಬಿಟ್ಟು ದುಬೈದಾಗ ಯಾಕ ಪತ್ರ ಮಿತ್ರಳನ್ನ ಹುಡುಕಿದೆ? ಅಯ್ಯೋ! ಈ ಅಮೇರಿಕಾ ವರ್ಕ್ ಔಟ್ ಆಗಲಿಲ್ಲ ಅಂದ್ರ ಮುಂದ ದುಬೈದಾಗ ನೌಕರಿ ಮಾಡೋಣ ಅಂತ ಒಂದು ಪ್ಲಾನಿತ್ತು. ಅಮೇರಿಕಾಕ್ಕ ಬಂದು ಕೇವಲ ಒಂದು ತಿಂಗಳಾಗಿತ್ತು. ಇಲ್ಲಿ ಆಫೀಸಿನಲ್ಲಿ ಇದ್ದ ದೇಸಿ ಮಂದಿಯ ದೈನೇಸಿ ಮಸಡಿ ನೋಡಿದ್ರ ಎಲ್ಲರೂ ಯಾವಾಗಲೂ ಏನೋ ಒಂದು tension ಒಳಗ ಇದ್ದಂಗ ಕಾಣ್ತಿತ್ತು. ಮಾರಿ ನೋಡಿಯೂ ಮಾತಾಡಿಸದೇ, ಮಾತಾಡಿಸೋದು ದೂರ ಹೋಗ್ಲಿ, ಇಲ್ಲಿ ಮಂದಿ ಗತೆ at least ಹಾಯ್, ಹಲೋ ಸಹಿತ ಇಲ್ಲದೆ ಗಂಟ ಮಾರಿ ಹಾಕಿ welcome(?) ಮಾಡಿದವರು ನಮ್ಮದೇ ದೇಶದ ಮಂದಿ. ಒಬ್ಬವ ಹೊಸಾ ಕಂಪ್ಯೂಟರ್ ಕೂಲಿ ಬಂದಾ ಅಂದ್ರ ಎಲ್ಲೆ ತಮ್ಮ ಅನ್ನಾನೇ ಕದಿಲಿಕ್ಕೆ ಬಂದನೋ ಅನ್ನೋ ರೀತಿಯಲ್ಲಿ ನೋಡೋದು. ಆವಾಗ ಪರಿಸ್ಥಿತಿ ಹಾಂಗೆ ಇತ್ತು. ಆವಾಗ ಅಮೇರಿಕಾದಲ್ಲಿ ನಡೆದಿದ್ದ IT boom ಅನ್ನುವ ಹುಚ್ಚ ಮುಂಡೆ ಮದುವೆಯಲ್ಲಿ ಉಂಡು, ೨೦೦೧ ರಲ್ಲಿ ಡಾಟ್ ಕಾಮ್ ಬಬಲ್ ಎಂಬ ತಿರುಕನ ಕನಸಿನ ಗುಳ್ಳೆ ಒಡೆದು ಬರ್ಸ್ಟ್ ಆಗಿ, ಕಂಪ್ಯೂಟರ್ ಕೂಲಿ ಹೆಸರಲ್ಲಿ ಬಂದಿದ್ದ ಕಾಂಜಿ ಪೀಂಜಿಗಳೆಲ್ಲ ಖಾಲಿ ಆದ ಮ್ಯಾಲೆ, ಅಂತಹ ದೇಸಿಗಳಿಂದ ಮುಕ್ತಿ. ಹೈದರಾಬಾದಿನ ಪಾನ್ ಅಂಗಡಿಯವರೆಲ್ಲ H1-B ವೀಸಾ ಮ್ಯಾಲೆ ಕಂಪ್ಯೂಟರ್ ಕೂಲಿಗಳು ಅಂತ ಹೇಳಿಕೋತ್ತ ಬಂದು, ಎಲ್ಲೆಲ್ಲೊ ಏನೇನೋ ರಾಡಿ ಎಬ್ಬಿಸಿ, ಇಲ್ಲಿ ಮಂದಿ ಎಲ್ಲ ಕಂಪ್ಯೂಟರ್ ಕೂಲಿ ನಾಲಿ ಮಾಡವರನ್ನು ಒಂದು ತರಹ ನೋಡುವ ಹಾಂಗ ಆಗಿತ್ತು. ಮಾತೆತ್ತಿದರೆ ಅಷ್ಟು ರೊಕ್ಕಾ, ಈ ವೀಸಾ, ಆ ಗ್ರೀನಕಾರ್ಡ್, ಆ ಬಾಡಿ ಶಾಪ್ಪರ್, ಈ consultant, ಅದು ಇದು ಅಂತ ಮಾತು. ಇಂತವರ ನಡುವೆ ಈ ದೇಶದಾಗ ಎಷ್ಟು ದಿವಸ ಇರ್ತೇವೋ ಅಂತ ಅನ್ನಿಸಿತ್ತು. ಆ ಮೇಲೆ ಒಳ್ಳೆವರೂ ಭಾಳ ಜನ ಸಿಕ್ಕಿ, ದೇಸಿಗಳ ಬಗ್ಗೆ ನಮ್ಮ stereotyped ಇಮೇಜ್ ತಪ್ಪು ಅಂತ ಗೊತ್ತಾಗಿ, ಎಲ್ಲ workout ಆಗಿದ್ದಕ್ಕೇ, ಹದಿನಾರು ವರ್ಷದಿಂದ ಇಲ್ಲೇ ಗೂಟಾ ಹೊಡಕೊಂಡು ಕೂತಿದ್ದು. ಇಲ್ಲಂದ್ರ ಸೇರದಿದ್ದನ್ನ ಝಾಡಿಸಿ ಒದ್ದು, ಎದ್ದು ಬರೋದು ದೊಡ್ಡ ಮಾತೇ? ಹಾಂಗಾಗಿ ಇಲ್ಲಿಂದ ತಂಬು ಕಿತ್ತಿಕೊಂಡು, ಝೇಂಡಾ ಎತ್ತಿಕೊಂಡು ಹೋಗೋದು ಬಂತು ಅಂದ್ರ ಅಂತ ಹೇಳಿ ದುಬೈ ಪ್ಲಾನ್. ಅದಕ್ಕ ಅಲ್ಲೊಂದು ಪತ್ರ ಮಿತ್ರ ಇದ್ದರ ಚೊಲೊ ಅಂತ ದೂರಾಲೋಚನೆ.

ಅಕಿ ಹೆಸರು ಆನ್ಸೆಟ್ಟ. ನಮ್ಮ ಬಳಗದಾಗ ಒಬ್ಬ ಹಿರಿಯ ಮಹಿಳೆಯ ಹೆಸರು ಅನಸೂಯಾ. ಅವರು ಎಲ್ಲರಿಗೆ ಅನಸಕ್ಕ, ಅನಸತ್ತೆ ಎಲ್ಲ. ಮನಸ್ಸಿನ್ಯಾಗ ಇಕಿಗೆ ದುಬೈ ಅನಸಕ್ಕ, ಅನಸತ್ತೆ ಅಂತ ಜೋಕ್ ಮಾಡಿಕೋತ್ತ ಒಂದು intro ಪತ್ರಾ email ಬರೆದು ಒಗದೆ. ಆಗೇನು ಎಲ್ಲರೂ ಎಲ್ಲಾ ಟೈಮ್ ಇಂಟರ್ನೆಟ್ ಮ್ಯಾಲೆ ಇರ್ತಿರಲಿಲ್ಲ. ಎಲ್ಲೋ ದಿವಸಕ್ಕ ಒಂದು ಬಾರಿಯೋ, ವಾರಕ್ಕ ಎರಡು ಬಾರಿಯೋ, ಕಂಪ್ಯೂಟರ್ ಹಚ್ಚಿ, ಇಂಟರ್ನೆಟ್ ಹತ್ತಿ, ತಮ್ಮ ಈಮೇಲ್ ಆಮೇಲ್ ಎಲ್ಲ ಡೌನ್ಲೋಡ್ ಮಾಡಿಕೊಳ್ಳತಿದ್ದರು ಅಷ್ಟೇ. ಹಾಂಗಾಗಿ ಈ ಅನಸಕ್ಕ ಅನ್ನಾಕಿ ಉತ್ತರ ಬರಲಿಕ್ಕೆ ಟೈಮ್ ಅದ ತೊಗೊ ಅಂತ ಹೇಳಿ, ಸೈಬರ್ ಪತ್ರ ಮಿತ್ರತ್ವದ ಇನ್ನೊಂದು ರೂಪವಾದ ಚಾಟಿಂಗ್ ನೋಡೋಣ ಅಂತ ಹೋದೆ. ಸಿಕ್ಕಾಪಟ್ಟೆ ಚಾಟ್ ರೂಮುಗಳು ಇದ್ದವು ಇಂಟರ್ನೆಟ್ ಮ್ಯಾಲೆ. ಬ್ಯಾರೆ ಬ್ಯಾರೆ ಟಾಪಿಕ್ ಮೇಲೆ ಚಾಟ್ ರೂಂ. ಎಲ್ಲೋ ಒಂದೋ ಎರಡೋ ಚಾಟ್ ರೂಂ ಎಂಟ್ರಿ ಮಾಡಿ ನೋಡಿದೆ. ಎಲ್ಲ ಕಡೆ ಒಂದು already existing cabal ಇತ್ತು. ಮೊದಲಿಂದ ಆ ಚಾಟ್ ರೂಂಗಳಲ್ಲಿ ಹರಟೆ ಮತ್ತೊಂದು ಹೊಡ್ಕೋತ್ತ ಇದ್ದ ಜನ. ಅಂತವರ ಗುಂಪಿನಲ್ಲಿ ಸೇರೋದು ಕಷ್ಟ. ಸೇರಿದರೂ ಗುಂಪಿನಲ್ಲಿ ಗೋವಿಂದನಾಗೋದರಲ್ಲಿ ಸಂಶಯ ಇಲ್ಲ. ಯಾರಿಗೆ ಬೇಕು ಅದು ಅಂತ ಹೇಳಿ ಚಾಟಿಂಗಿಗೆ ಒಂದು ದೊಡ್ಡ ನಮಸ್ಕಾರ ಹಾಕಿದೆ. ಮುಂದೆಂದೂ ಆ ಚಾಟ್ ರೂಂ ಒಳಗ ಕೂತು ಚಾಟ್ ಮಾಡಿದ್ದು ಇಲ್ಲೇ ಇಲ್ಲ. ಅದರ ಇವತ್ತಿನ ರೂಪವಾದ ಫೇಸಬುಕ್ಕಿನ ಕೆಲವು ಗ್ರುಪ್ಪುಗಳಲ್ಲಿ ಹರಟೆ ಹೊಡೆದು ಬಿಟ್ಟಿದ್ದಾಯಿತು.

ದುಬೈ ಅನಸಕ್ಕನ ಉತ್ತರ ಬರಲಿಕ್ಕೆ ಸುಮಾರು ದಿವಸ ಆತು. ಅಲ್ಲಿಯ ತನಕಾ ಇಂಟರ್ನೆಟ್ ಮ್ಯಾಲೆ ಎಲ್ಲಾ ಕಡೆ ಬ್ರೌಸ್ ಮಾಡಿ ಜನರಲ್ ನಾಲೇಜ್ ಭಾಳ ಜಾಸ್ತಿ ಮಾಡಿಕೊಂಡು, ಉಪಯೋಗಿಲ್ಲದ ಎಲ್ಲ ಮಾಹಿತಿ ಎಲ್ಲ ಸಂಗ್ರಹಿಸಿ ಆತು. ಅಷ್ಟರಾಗ ದುಬೈ ಅನಸಕ್ಕ ಪತ್ರ ಬರೆದಳು. ಅಂದ್ರ ಒಂದು ರಿಪ್ಲೈ ಕೊಟ್ಟಳು via ಆ ಪೆನ್ ಫ್ರೆಂಡ್ ವೆಬ್ ಸೈಟ್ ಮೂಲಕ.

ಅಕಿ ಅನಸಕ್ಕನ ನೋಡಿದರ ಅಕಿ ದುಬೈದಾಗ ಹೆಂಗಸೂರ ಹೇರ್ ಕಟಿಂಗ್ ಮಾಡುವ ಹೇರ್ ಡ್ರೆಸ್ಸರ್! ಅದೂ ಮೇರಾ ಭಾರತ ಮಹಾನ್ ದೇಶದ ಕೇರಳದಿಂದ ಹೋದ ಮಲೆಯಾಳಿ ಕ್ರಿಶ್ಚಿಯನ್ ಹುಡುಗಿ. ಹೋಗ್ಗೋ!!! ಬೆಂಗಳೂರಿನ ಇಂದಿರಾ ನಗರದ ಮಲೆಯಾಳಿ ನರಸಮ್ಮಗಳು ನೆನಪಾದರು. ECG ಮಾಡೋವಾಗ ಮಲೆಯಾಳಿಗಳು ಮನೆಹಾಳಿಯರ ತರಹ man handle ಮಾಡಿದ್ದು ನೆನಪಾತು. ಈಗ ದುಬೈ ಮಲೆಯಾಳಿ ಕಟಿಂಗ್ ಕುಂಬಾರಿ ಜೋಡಿ ಪತ್ರ ಮಿತ್ರತ್ವ. ಶಂಭೋ ಶಂಕರ!!! ಏನೇನು ಡಿಸೈನರ್ ಡಿಸೈನರ್ ಪತ್ರ ಮಿತ್ರರನ್ನ ನಮಗ ಗಂಟ ಹಾಕ್ತೀಪಾ ದೇವರಾ! ಹಾಂ? ಸರ್ದಾರ್ಜೀ ಅಲ್ಲದ ಬಳ್ಳಾರಿ ಸಿಂಗಾ, ಅಡ್ರೆಸ್ಸಿಗೇ ಇಲ್ಲದ ರತಿ ಅಗ್ನಿಹೋತ್ರಿ, ಬೋರ್ ಹೊಡೆದ ನರೇಂದ್ರ, ಮಕ್ಕಳ ಕಳ್ಳನ ಲುಕ್ಕಿದ್ದ ಆಸ್ಸಾಮಿನ ಸಪನ್ ಕುಮಾರ, ಕಳೆದು ಹೋದ ಮಾರಿಷಸ್ ಲಲಿತಾ, ಈಗ ಈ ಮಲೆಯಾಳಿ ಹುಡುಗಿ. 'ರಾತ್ರಿ ಮಲಗಿದಾಗ ಒಂದು ಗಂಡಾ, ಬೆಳಿಗ್ಗೆ ಎದ್ದಾಗ ನಾಕು ಗಂಡಾ' ಅನ್ನೋ ಮಲೆಯಾಳಿ ಜೋಕ್ ನೆನಪು ಆತು ಈ ದುಬೈ ಅನಸಕ್ಕ ಸಿಕ್ಕ ಕೂಡಲೇ. ಅದು ಮಲೆಯಾಳಿಗಳು ಕನ್ನಡ ಮಾತಾಡೋ ರೀತಿ. ಗಂಟಾ ಅನ್ನಲಿಕ್ಕೆ ಗಂಡಾ ಅಂದು ಆದ ಆವಾಂತರ.

ಆದರೂ ಇರಲಿ ಅಂತ ಒಂದೆರಡು ಪತ್ರಾ ಬರದೆ ನಮ್ಮ ದುಬೈ ಅನಸಕ್ಕ ಎಂಬ ಮಲೆಯಾಳಿ ಹುಡುಗಿಗೆ. ಏನೋ ಅಷ್ಟೋ ಇಷ್ಟೋ ಮಾಹಿತಿ ಕೊಟ್ಟಳು. ಇಲ್ಲದ ಸಲ್ಲದ ಜೋಕ್ ಎಲ್ಲೋ ಇಂಟರ್ನೆಟ್ ಮ್ಯಾಲಿಂದ ಎತ್ತೆತ್ತಿ ಒಗಿತಿದ್ದಳು. ಅದು ಅಕಿಗೆ ಚಟ. ಅದು ನಮಗ ಬರಂಗಿಲ್ಲೇನು? ಅಂತ ಹೇಳಿ ನಾನೂ ಇಂಟರ್ನೆಟ್ ಮ್ಯಾಲೆ ಸಿಕ್ಕ ಎಲ್ಲಾ ಜೋಕ್ಸ್ wholesale ಒಳಗ ಅಕಿಗೆ ಕಳಸ್ತಿದ್ದೆ. ಆ ಮ್ಯಾಲೆ ನನಗೇ ಬೋರ್ ಬಂತು. ಬರೋದು ಸಹಜ ಇತ್ತು. ಆವಾಗ ಈ 'ಬೋರ್' ಅನ್ನೋದರ ಮೂಲ ನಮ್ಮಲ್ಲೇ ಇರ್ತದ ಅಂತ ಗೊತ್ತು ಇರಲಿಲ್ಲ. ಹಾಂಗಾಗಿ ಎಲ್ಲ ಕಡೆ ಬೋರ್ವೆಲ್ ಹೊಡೆದು, ಹೊಡೆದ ಕಡೆಯೆಲ್ಲ ಬೋರಿನ ಬುಗ್ಗೆ ಉಕ್ಕಿ ಉಕ್ಕಿ ಭೋರ್ಗರೆದು ಸಿಕ್ಕಾಪಟ್ಟೆ ಬೋರ್. ಭಂ ಭಂ ಬೋರೆ ಶಂಕರ್!

ಯಾರರ ಆವಾಗ ಅಮೇರಿಕಾದ ಲೈಬ್ರರಿ ತೋರಿಸಿ ಬಿಟ್ಟಿದ್ದರೆ ಇದೆಲ್ಲ ಫಜೀತಿ ಇರ್ತಿದ್ದೇ ಇಲ್ಲ. ಓದಲಿಕ್ಕೆ ಪುಸ್ತಕ, ಅಡೆತಡೆ ಇಲ್ಲದ ಚಾ ಕಾಫೀ ಸರಬರಾಜು, ದವಡೆಯಲ್ಲಿ ಜಡಿದಿಟ್ಟುಕೊಳ್ಳಲಿಕ್ಕೆ ಗುಟಕಾ, ಕವಳ ಇಷ್ಟು ಇದ್ದು ಬಿಟ್ಟರೆ ನಮಗೆ ಏನೂ ಬೇಕಾಗಿರಲಿಲ್ಲ, ಯಾರೂ ಬೇಕಾಗಿಯೇ ಇರಲಿಲ್ಲ. ಚಾ, ಕಾಫಿ, ಗುಟಕಾ ಹ್ಯಾಂಗೋ ವ್ಯವಸ್ಥೆ ಮಾಡಿಕೊಂಡಿದ್ದೆ. ಆದ್ರ ಅಮೇರಿಕಾದ ಲೈಬ್ರರಿಗಳ ಪರಿಚಯ ಆಗಿ, ಹೋಗಿ ಬಂದು ಮಾಡಲಿಕ್ಕೆ, ಮತ್ತೆ ಅದೇ ತೊಂದ್ರಿ, ಕಾರ್ ಕಾರ್, ಇರಲೇ ಇಲ್ಲ. ಕಾರಿಲ್ಲ ಅಂದ್ರ ಕಾರುಬಾರೇ ಬಂದ್. ಫುಲ್ ಬಂದ್.

ಈ ದುಬೈ ಅನಸಕ್ಕನ ಜೋಡಿ ಕಾಟಾಚಾರಕ್ಕ ಪತ್ರ ಮಿತ್ರತ್ವ ನಡೀತಾ ಇದ್ದಾಗೆ ಡ್ರೈವರ್ ಲೈಸೆನ್ಸ್ ಬಂತು. ಎರಡು ತಿಂಗಳ ಪಗಾರ್ ಒಳಗ 'ಸಾಕಷ್ಟು' ರೊಕ್ಕ ಉಳಿದು ಮನಿಗೆ ಒಂದು ಹೊಸಾ ತೋಶಿಬಾ ಟೀವಿ, ಒಂದು ಹೊಸಾ ಸಾಮ್ಸಂಗ್  VCR ಬಂತು, ಕೇಬಲ್ ಬಂತು. ಇಂಡಿಯನ್ ಅಂಗಡಿ ಒಳಗ ಸಿಗುತ್ತಿದ್ದ ಹಿಂದಿ ಸಿನಿಮಾ ವೀಡಿಯೊ ಕ್ಯಾಸೆಟ್ಟು ತಂದು, ಒಂದಾದ ಮೇಲೊಂದು ಸಿನಿಮಾ ನಿರಂತರ ನೋಡೋದ್ರಿಂದ ಬೋರ್ ಹೊಡೆಯೋದು ಹೋತು. ನಂತರ ಕಾರಿಗೆ deposit ಕೊಡೋವಷ್ಟು ರೊಕ್ಕ ಉಳಿದು, ಉಳಿದ ರೊಕ್ಕ ಫೈನಾನ್ಸ್ ಮಾಡಿಸಿ, ಒಂದು ಹೊಸಾ ಸೆಕೆಂಡ್ ಹ್ಯಾಂಡ್ ಕಾರ್ ತೊಗೊಳ್ಳೋ ಹೊತ್ತಿಗೆ ದುಬೈ ಅನಸಕ್ಕನಿಗೆ ನಾನು, ನನಗ ಅಕಿ ಫುಲ್ ಬೋರ್ ಆಗಿ ಅದೂ ಒಂದು ಪತ್ರ ಮಿತ್ರತ್ವ ಮುಗೀತು. ಕಾರ್ ತೊಗೊಂಡ ಒಂದೇ ವರ್ಷದಲ್ಲಿ ಹದಿನೆಂಟು ಸಾವಿರ ಮೈಲ್ ಹೊಡೆದು, ಅರ್ಧಾ ಅಮೇರಿಕಾ ಎಲ್ಲಾ ಕಡೆ ಅಡ್ಯಾಡಿ ಬರೋದ್ರಾಗ ಪತ್ರ ಮಿತ್ರ? ಹಾಂ? ಏನು ಹಾಂಗಂದ್ರ? ಅಂತ ಕೇಳೋ ಹಾಂಗ ಆಗಿತ್ತು. ಒಳ್ಳೆ ಕ್ವಾಲಿಟಿ ಕಾರು, ಎಂಬತ್ತೊಂಬತ್ತು ಸೆಂಟಿಗೆ ಒಂದು ಗ್ಯಾಲನ್ ಪೆಟ್ರೋಲ್. ಕೂತು ಗಾಡಿ ಹೊಡಿಲಿಕ್ಕೆ ಬೆನ್ನು ಒಂದು ಘಟ್ಟೆ ಇದ್ದರೆ ಎಷ್ಟು ಬೇಕಾದಷ್ಟು ತಿರುಗಿರಿ!

ಅದೇ ಕೊನೆ. ಆ ಮೇಲೆ ಪತ್ರ ಮಿತ್ರರು ಅಂತ ಸ್ಪೆಷಲ್ಲಾಗಿ ಮಾಡಿಕೊಳ್ಳಲಿಕ್ಕೆ ಹೋಗಿಲ್ಲ. ಎಲ್ಲೋ ಭೆಟ್ಟಿ ಆದವರು, ಹ್ಯಾಂಗೋ ಗುರ್ತು ಆದವರು ಆಗಾಗ email ಅದು ಇದು ಮಾಡ್ತಾ ಇರ್ತಾರ. ನಾವೂ ಮಾಡ್ತಾ ಇರ್ತೇವಿ. ಈಗಿನ ಪತ್ರ ಮಿತ್ರತ್ವ ಅಂದ್ರೆ ಅಷ್ಟೇ.

(ಮುಗಿಯಿತು)

ದುಬೈ

1 comment:

Vimarshak Jaaldimmi said...


Very good!

What programs did you watch on the new Torsba TV? Z-news?!