Thursday, March 12, 2015

ತೊಗೊಂಡಿದಿರಾ ಸಾರ್??????

ಅದೊಂದು ದಿವಸ ರಾತ್ರಿ ಬೆಂಗಳೂರಲ್ಲಿ ವಾಹನ ಚಾಲಕರ ತಪಾಸಣೆ ನಡೆಯುತ್ತಿತ್ತು. ಕುಡಿದು ವಾಹನ ಚಾಲನೆ ಮಾಡುತ್ತಿದ್ದವರನ್ನು ಹಿಡಿಯಲು.

ನಮ್ಮ ಸಾಹೇಬರೂ ಬರುತ್ತಿದ್ದರು. ಅವರ ಕಾರಲ್ಲಿ. ಪಕ್ಕದಲ್ಲಿ ಸ್ನೇಹಿತ ಒಬ್ಬನಿದ್ದ. ಪೋಲೀಸ್ ತಡೆದು ನಿಲ್ಲಿಸಿದ. ಕಿಡಕಿ ಗ್ಲಾಸ್ ಇಳಿಸಿದ.

'ಸಾರ್, ತಗೊಂಡಿದಿರಾ??????' ಅಂತ ಕೇಳಿದ ಪೋಲೀಸ್.

'ಏನು?' ಅಂದರು ಇವರು.

'ಡ್ರಿಂಕ್ಸ್ ಸಾರ್. ಎಣ್ಣೆ. ತಗೊಂಡಿದಿರಾ?' ಅಂತ ಹೇಳಿದ ಪೋಲೀಸ್.

'ಹೌದು. ತಗೊಂಡಿದಿನಿ. ಏನು ಈವಾಗ?' ಖಡಕ್ ಹೇಳಿದರು ಇವರು.

ಪೋಲೀಸ್ ಒಂದು ಕ್ಷಣ ಫುಲ್ ಥಂಡಾ. 'ಏನಪ್ಪಾ ಇವರು???! 'ಡ್ರಿಂಕ್ಸ್ ತೊಗೊಂಡಿದಿರಾ?' ಅಂತ ಕೇಳಿದ್ರೆ, ರಾಜಾರೋಷವಾಗಿ, 'ಹೌದು,' ಅಂತಾರೆ. ಎಂತಾ ಗಿರಾಕಿ ಸಿಕ್ಕಿದರಪ್ಪಾ ಇವತ್ತು!' ಅಂತ ಅಂದುಕೊಂಡ ಪೋಲೀಸ್.

'ಸರ್, ಒಂದು ಕ್ಷಣ ಬಾಯಿ ಓಪನ್ ಮಾಡ್ಬಿಟ್ಟು ಓಂ ಅನ್ನಿ' ಅಂದ ಪೋಲೀಸ್.

'ಯಾಕೆ?' ಅಂತ ಕೇಳಿದರು ಇವರು.

ಅದು breath analyzer ಇತ್ಯಾದಿ ಸಲಕರಣೆಗಳು ಇಲ್ಲದ ಕಾಲ. ಭಾಳ ಹಿಂದಲ್ಲ. ೨೦೦೦ ಹೊತ್ತಿಗೆ. ಸಂಶಯ ಬಂದವರ ಬಾಯಿ ತೆಗೆಯಿಸಿ, ಮೂಸಿ ನೋಡಿ, ಕುಡಿದಿದ್ದಾರೋ ಇಲ್ಲವೋ ಅಂತ ಕಂಡು ಹಿಡಿಯುವ ಕರ್ಮ ಪೊಲೀಸರಿಗೆ. ಯಪ್ಪಾ! ತಾವು ಹಿಡಿದು ಬಾಯಿ ತೆಗೆಸಿದೆವ ಮಾಣಿಕ್ ಚಂದನ್ನೋ, ರಜನಿ ಗಂಧಾವನ್ನೋ, ಫೈರ್ ಗುಟ್ಕಾವನ್ನೋ ಹಾಕಿ ಸ್ವಲ್ಪ ಸುವಾಸನೆ ಹೊಡೆಯುತ್ತಿರಲಪ್ಪಾ ದೇವರೇ ಅಂತ ಬೇಡಿಕೊಳ್ಳುತ್ತಿದ್ದರು ಪೊಲೀಸರು. ಹಾಗಿತ್ತು ಪರಿಸ್ಥಿತಿ.

ಪೋಲೀಸ್ ಹೇಳಿದಂತೆ ಈ ವಯ್ಯಾ, ಕಾರಿನ ಕಿಡಕಿಯ ಪೂರ್ತಿ ಗಾಜು ಇಳಿಸಿ, ಮುಖ ಹೊರಗೆ ಹಾಕಿ, ಬಾಯಿ ಇಷ್ಟು ದೊಡ್ಡದಾಗಿ ತೆಗೆದು, ಓಂ ಅಂದರು. ಹತ್ತಿರ ಬಂದ ಪೋಲೀಸ್ ಮೂಸಿ ನೋಡಿ ಮುಖ ಒಂದು ತರಹ 'ಹೀಂಗೆ' ಮಾಡಿದ. ಹೀಂಗೆ ಅಂದರೆ ಹಾಂಗೆ. ಯಾಕೆ? ನೀವೇ ಊಹಿಸಿ. ಕಾಲ್ಗೇಟ ಇಸ್ತೇಮಾಲ್ ಮಾಡಿ. ಹಲ್ಲು ತಿಕ್ಕಲು.

'ಸಾರ್, ಏನು ಜೋಕ್ ಮಾಡ್ತಿದ್ದಿರಾ???? ಕೇಳಿದ್ರೆ ತೊಗೊಂಡೆ ಅಂತೀರಿ. ಏನೂ 'ಆ' ವಾಸನೆನೇ ಇಲ್ಲ. ನಿಜ ಹೇಳಿ ಸಾರ್' ಅಂದ ಪೋಲೀಸ್. He was exasperated!

'ಅಯ್ಯೋ ನಿಮ್ಮ! ನಿಜವಾಗಲೂ ತೊಗೊಂಡಿದಿನಿ ಕಣ್ರೀ! ನಮ್ಮಪ್ಪನಾಣೆ' ಅಂತ ಹೇಳಿದರು ಇವರು.

ಪೊಲೀಸನ ತಲೆ ಕೆಟ್ಟು ಹೋಯಿತು. ಇನ್ನೂ ಹೆಚ್ಚಿಗೆ ತನಿಖೆ ಮಾಡುತ್ತ ಇದ್ದರೆ ತಲೆ ಒಡೆದೇ ಹೋದಿತು ಅಂದುಕೊಂಡು, 'ಹೋಗಿ ಸಾರ್! ಸುಮ್ಮನೆ ಹೋಗಿ! ಸುಮ್ಮನೆ ಇಲ್ಲದ ಗಾಂಚಾಲಿ ಮಾಡ್ಬೇಡಿ!' ಅಂದು, ಬಿಟ್ಟು ಕಳಿಸಿದ. ಇವರು ಮ್ಯಾಲೆ ಒತ್ತಿ, ಕೆಳಗೆ ಹಾಕಿ, ಎತ್ತಿದರು. ಆಯ್ಯೋ ಮ್ಯಾಲೆ ಗ್ಲಾಸ್ ಏರಿಸೋ ಬಟನ್ ಒತ್ತಿ, ಕೆಳಗೆ ಗೇರ್ ಹಾಕಿ, ಗಾಡಿ ಎತ್ತಿದರು ಅಂತ. ಅಷ್ಟೇ. ಅಲ್ಲಿಂದ ಜಾಗ ಖಾಲಿ ಮಾಡಿದರು.

ಪಕ್ಕದಲ್ಲಿದ್ದ ದೋಸ್ತನಿಗೆ ಸಿಕ್ಕಾಪಟ್ಟೆ ಆಶ್ಚರ್ಯ. ಕೇಳೇ ಬಿಟ್ಟ.

'ಏನಯ್ಯಾ ಅದು? ಪೋಲೀಸ್ ಕೇಳಿದರೆ ತೊಗೊಂಡೆ ಅಂದೆ. ಎಲ್ಲಿ ತೊಗೊಂಡೆ? ಏನು ತೊಗೊಂಡೆ?' ಅಂತ ಕೇಳಿದ ದೋಸ್ತ.

'ಪೋಲೀಸ್ ಕೇಳಿದ್ದು ಏನು? 'ಡ್ರಿಂಕ್ಸ್ ತೊಂಗೊಡಿದಿರಾ?' ಅಂತ. ನಾನು ನಿಜಾನೇ ಹೇಳಿದೆ' ಅಂದ್ರು ಇವರು.

'ಏನು ನಿಜಾ ಹೇಳಿದೆ??????????' ಅಂತ ಕೇಳಿದ ದೋಸ್ತ.

ಇವರು ಮರು ಮಾತಾಡಲಿಲ್ಲ. ಸೀಟಿನ ಕೆಳಗಿಂದ ಏನೋ ತೆಗೆದು ತೋರಿಸಿದರು.

ಏನು ತೋರಿಸಿದರು ಅಂದ್ರೆ ದೊಡ್ಡ ಕಂಭಾ. ದೊಡ್ಡ ಬಾಟಲಿ. ದೊಡ್ಡ ಎಣ್ಣೆ ಬಾಟಲಿ.

ಮನೆಗೆ ಹೋಗಿ ಹಾಕೋಣ ಅಂತ ಎಣ್ಣೆ ಬಾಟಲಿ 'ತೆಗೆದುಕೊಂಡು' ಹೊರಟಿದ್ದರು. ನಡುವೆ ಪೋಲೀಸ್ ಹಿಡಿದು, 'ತೊಗೊಂಡ್ರಾ???' ಅಂತ ಕೇಳಿದ. ಎಣ್ಣೆ ಬಾಟಲಿ 'ತೊಗೊಂಡಿದ್ದು' ನಿಜವಾಗಿತ್ತು. ಅದನ್ನೇ ಹೇಳಿದ್ದರು. ಹೇಳಿ ಕೇಳಿ ಹಾಸ್ಯ ನಟ. ಎಲ್ಲ ಕಡೆ ಕಾಮಿಡಿಯೋ ಕಾಮಿಡಿ.

ಈ ಜೋಕ್ ಹೇಳಿದ್ದು ಸಾಧು ಕೋಕಿಲ. ಅವರದ್ದೇ ಕಿತಾಪತಿಯಂತೆ ಅದು. ;)

ನೀತಿ: ಎಣ್ಣೆ 'ತೊಗೊಂಡ' ನಂತರವೂ ಗಾಡಿ ಚಲಾಯಿಸಬಹುದು. ಎಣ್ಣೆ ಹಾಕಿದ ನಂತರ ಚಲಾಯಿಸಬಾರದು. ಅಷ್ಟೇ! :)

ಮೂಲ: ಹಲವಾರು ವರ್ಷಗಳ ಹಿಂದಿನ 'ಹಾಯ್ ಬೆಂಗಳೂರು'.

ಸಾಧು ಕೋಕಿಲಾ

No comments: