Thursday, March 12, 2015

BITS, Pilani & SHITS, Dharwad.

IIT ಬಂತು ಕರ್ನಾಟಕಕ್ಕೆ. ಹೊಡಿರಿ ಹಲಗಿ. ಆದ್ರ ನಮ್ಮ ಧಾರವಾಡಕ್ಕೆ ಬರ್ತದೋ ಇಲ್ಲೋ? ಅದೇ ದೊಡ್ಡ ಚಿಂತಿ.

'ನಿಮ್ಮೌನ್, ಬರಲಿಲ್ಲ ಅಂದ್ರ ಹೋಗ್ಲಿ ಬಿಡಲೇ. ಇಷ್ಟು ಮಂದಿ ದೊಡ್ಡ ಮಂದಿ ಇದ್ದಾರ. ಒಂದು ಅಂತರಾಷ್ಟ್ರೀಯ ಮಟ್ಟದ ಖಾಸಗಿ ಕಾಲೇಜ್ ಮಾಡಲಿ ನೋಡೋಣ,' ಅಂದೆ. ಚಾಲೆಂಜ್ ಒಗೆದೆ.

'ಹಾಂಗಂತೀ????' ಅಂತ ದೊಡ್ಡದಾಗಿ ಓಂ ಅಂತ ಬಾಯಿ ಬಿಟ್ಟವನು ನಮ್ಮ ಖಾಸ್ ದೋಸ್ತ.

'ಹೌದಲೇ, ಅವನೌನ್. ದೊಡ್ಡ ಉದ್ಯಮಿ ಬಿರ್ಲಾ ಇದ್ದಾನಲ್ಲಾ? ಆವಾ ರಾಜಸ್ಥಾನದ ಪಿಲಾನಿ, ಬಿಹಾರದ ರಾಂಚಿ ಅಂತಹ ಕುಗ್ರಾಮಗಳಲ್ಲಿ BITS, Pilani ಮತ್ತು BIT, Ranchi ಅಂತಹ ಜಾಗತಿಕ ಮಟ್ಟದ ಒಳ್ಳೆ ಖಾಸಗಿ ಯೂನಿವರ್ಸಿಟಿ ಸ್ಥಾಪನಾ ಮಾಡ್ತಾನ ಅಂದ್ರ ಧಾರವಾಡ ಮಂದಿಗೇನು ಧಾಡಿ? ಬೇಕಾದಷ್ಟು ಮಂದಿ ಟಾಟಾ, ಬಿರ್ಲಾ ಇದ್ದಾರ ಧಾರವಾಡ ಹುಬ್ಬಳ್ಳಿ ಒಳಗ. ಮಾಡಲಿಕ್ಕೆ ಏನು ಧಾಡಿ?????' ಅಂತ ಒಂದು ಚಾಲೆಂಜ್ ಒಗೆದೆ.

'ಅದೇನೋ ಖರೆ ನೋಡು. ನೀನೇ ಒಂದು ಅಂತಹ ಒಂದು ಕಾಲೇಜ್ ಮಾಡಬಹುದಲ್ಲ????? ಯಾಕ ಮಾಡಬಾರದು??? ಏನಂತೀ?' ಅಂತ ನಮಗೇ ಒಂದು ರಿವರ್ಸ್ ಬತ್ತಿ ಇಟ್ಟ ದೋಸ್ತ.

'ಮಾಡ್ತಿದ್ನೋ. ಮಾಡೇ ಬಿಡ್ತಿದ್ದೆ. ಒಂದೇ ಒಂದು ಒಂದು ಪ್ರಾಬ್ಲಮ್ ಅದ ನೋಡಪಾ,' ಅಂತ ಹೇಳಿದೆ.

'ಏನಪಾ? ಏನು ನಿನ್ನ ಪ್ರಾಬ್ಲಮ್? ನಿನ್ನ ಕಡೆ ಏನು ರೊಕ್ಕ ಇಲ್ಲೋ? ಅಥವಾ ಬಂದು ಮಾಸ್ತರಕಿ ಮಾಡೋ ತಾಕತ್ತಿಲ್ಲೋ???? ತಲಿ ಇಲ್ಲೋ? ಹಾಂ??' ಅಂದ ದೋಸ್ತ.

'ಅದು ನಾನು ಅಂತಹ ಕಾಲೇಜ್ ಧಾರವಾಡ ಒಳಗ ಓಪನ್ ಮಾಡಿದ್ರೆ ಹೆಸರಿನದೇ ಒಂದು ದೊಡ್ಡ ಪ್ರಾಬ್ಲಮ್ ನೋಡಪಾ' ಅಂತ ಹೇಳಿದೆ.

'ಯಾಕ? ನಿನ್ನ ಕಾಲೇಜಿಗೆ ಏನಂತ ಹೆಸರು ಇಡವಾ ನೀ???' ಅಂತ ಒಂದು ದೊಡ್ಡ ಕ್ವೆಶ್ಚನ್ ಮಾರ್ಕ್ ಒಗೆದ.

'ನಾ ಏನೆರೆ ಧಾರವಾಡ ಒಳಗ ಇಂಜಿನಿಯರಿಂಗ್ ಕಾಲೇಜ್ ಓಪನ್ ಮಾಡಿದರೆ ಅದರ ಹೆಸರು 'SHITS, Dharwad,' ಅಂತ ಇಡತೇನಿ ನೋಡಪಾ. ಈ ಹೆಸರು ಕೇಳಿದ ಮಂದಿ ನನ್ನ ಹಾಕ್ಕೊಂಡು ಒದಿತಾರ. ನನ್ನ ಕಾಲೇಜಿಗೆ ಯಾರೂ ಬರೋದೇ ಇಲ್ಲ. ಶಾಣ್ಯಾ ಹುಡುಗರು ಬರೋದು ದೂರ ಉಳಿತು. ನಾನೇ ಅವರಿಗೆ ಡೊನೇಷನ್ ಕೊಡತೇನಿ ಅಂದ್ರೂ ಬರೋದಿಲ್ಲ ನೋಡಪಾ,' ಅಂತ ನನ್ನ ದುಃಖ ತೋಡಿಕೊಂಡೆ.

'ಏನದು ಅಸಹ್ಯ SHITS, Dharwad ಅಂತ ಹೆಸರು ಇಡ್ತೀ????? ಬ್ಯಾರೆ ಹೆಸರಿಲ್ಲಾ????' ಅಂತ ಕೆಟ್ಟ ಮಾರಿ ಮಾಡಿ ಕೇಳಿದ ದೋಸ್ತ.

'ಅಲ್ಲಲೇ 'BITS, Pilani' ಮಾದರಿಯ ದೊಡ್ಡ ಮಟ್ಟದ, ಒಳ್ಳೆ ಪ್ರಸಿದ್ಧ ಸಂಸ್ಥೆ ಹಾಂಗೆನೇ 'SHITS, Dharwad' ಅಂತ ಹೆಸರು ಇಟ್ಟರೆ ಏನೇನೋ ಅಂತಿಯಲ್ಲಲೇ ಹಾಪಾ!' ಅಂತ ಬೈದೆ.

'ಏನದು ಕೆಟ್ಟ ಅಸಹ್ಯ SHITS, Dharwad????' ಅಂತ ಮತ್ತೆ ಕೇಳಿದ ದೋಸ್ತ.

'ಈಗ ನೀ ಹೇಳಪಾ BITS, Pilani ಅಂದ್ರೇನು????' ಅಂತ ಕೇಳಿದೆ.

'ಗೊತ್ತದ. ನಮಗ ಅಷ್ಟೂ ಗೊತ್ತಿಲ್ಲ ಅಂತ ತಿಳ್ಕೋಬ್ಯಾಡ. ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್. ಬಿರ್ಲಾ ಅವರ ಹುಟ್ಟೂರಾದ ರಾಜಸ್ಥಾನದ ಪಿಲಾನಿ ಒಳಗ ಅವರು ಸ್ಥಾಪಿಸಿದ್ದು. ಹೌದೋ ಅಲ್ಲೋ????' ಅಂತ ಕೇಳಿದ ದೋಸ್ತ.

ಅಲಲಲಾ! ಭಾರೀ ತಲಿ ಇಟ್ಟಾನ. ಕರೆಕ್ಟ್ ಹೇಳಿದ.

'SHITS, Dharwad ಅಂದ್ರ ನಂದೂ ಹಾಂಗ ಮಾರಾಯಾ. ಸೇಮ್ ಅದೇ. ಪಿಲಾನಿ ಒಳಗ ಬಿರ್ಲಾ. ಇಲ್ಲೆ ಧಾರವಾಡ ಒಳಗ ಹೆಗಡೆ ಅಂದ್ರ ನಾನು. ಮತ್ತ ನಮ್ಮ ಜಾತಿ ಬಾಂಧವರು,' ಅಂತ ಹೇಳಿದೆ.

'ಏನು????? ಏನರ್ಥ?????' ಅಂತ ಹೂಂಕರಿಸಿದ.

'SHITS, Dharwad ಅಂದ್ರ ಶ್ರೀ ಹೆಗಡೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್, ಧಾರವಾಡ (Shri Hegade Institute of Technology & Science, Dharwad urf SHITS, Dharwad) ಅಂತ. ಹ್ಯಾಂಗದ??????????' ಅಂತ ಕೇಳಿದೆ.

BITS, Pilani. SHITS, Dharwad!!!!!!!! ಏಕ್ದಂ ಮಸ್ತ ಅದ.

ನಮ್ಮ ದೋಸ್ತ ಮೂರ್ಚೆ ಹೋದವ ಇನ್ನೂ ಎದ್ದಿಲ್ಲ.

ನಿಮ್ಮ ಮಕ್ಕಳನ್ನು ನಮ್ಮ SHITS, Dharwad ಇಂಜಿನಿಯರಿಂಗ್ ಕಾಲೇಜಿಗೆ ಕಳಸ್ತೀರಿ?????? ನಾನೇ ಎಲ್ಲಾ ಅಲ್ಲಿ. ಬರೋಬ್ಬರಿ ಟ್ರೇನಿಂಗ್ ಕೊಡತೇನಿ. ಏಕ್ದಂ ನನ್ನ ಗತೆ ತಯಾರ್ ಆಗಿಬಿಡ್ತಾರ. ಪ್ಯೂರ್ ಮೆರಿಟ್ ಮ್ಯಾಲೆ. ಡೊನೇಷನ್, ಕ್ಯಾಪಿಟೇಶನ್ ಇಲ್ಲ. ;)

2 comments:

sunaath said...

Full shits!

Augustine Minnimani said...


Name is secondary. The setup appears to be far better than donation hankering private schools!