Friday, March 06, 2015

ನಾನು ಅಬು ಸಲೇಂ! (ಅಂಡರ್ವರ್ಲ್ಡ್ ಡಾನ್ ಒಬ್ಬನ ಕಥನ)

ಒಂದು ಕಾಲದ ಭೂಗತ ಡಾನ್ ಅಬು ಸಲೇಂಗೆ ಜೀವಾವಧಿ ಶಿಕ್ಷೆ ಕೊನೆಗೆ ಅಂತೂ ಆಗಿದೆ. ಇನ್ನು ಮುಂದೆ ಹೈಕೋರ್ಟ್, ಸುಪ್ರೀಂ ಕೋರ್ಟ್ ಅಂತೆಲ್ಲ ಹೋಗಿ, ಶಿಕ್ಷೆ ಬದಲಾಗಿ ಅಥವಾ ಪೂರ್ತಿ ರದ್ದೇ ಆಗಿಹೋದರೂ ಏನೂ ಆಶ್ಚರ್ಯವಿಲ್ಲ. ಸದ್ಯಕ್ಕಂತೂ ಮುಂಬೈ ಪೋಲೀಸರು ಡಾನ್ ಒಬ್ಬನನ್ನು ಹಣಿದ ಖುಷಿಯಲ್ಲಿದ್ದಾರೆ. ಈ ಹಿಂದೆ ಡಾನ್ ಅರುಣ್ ಗಾವ್ಳಿಯನ್ನು ಹಣಿದು ಜೈಲಿಗೆ ಅಟ್ಟಿತ್ತು ನ್ಯಾಯಾಲಯ. ಅದು ಬಿಟ್ಟರೆ ದೊಡ್ಡ ಮಟ್ಟದ ಡಾನ್ ಗಳನ್ನು, ಅದೂ ವಿದೇಶದಲ್ಲಿ ಕೂತು ದಂಧಾ ಸಂಬಾಳಿಸುತ್ತಿದ್ದ, ಒಂದು ಕಾಲದಲ್ಲಿ ದಾವೂದ ಇಬ್ರಾಹಿಮ್ಮನ ಬಂಟ, ಅದರಲ್ಲೂ ದಾವೂದನ ತಮ್ಮ, ಅತಿ ಖತರ್ನಾಕ್ ಅನೀಸ್ ಇಬ್ರಾಹಿಮ್ಮನ ಏಕ್ದಂ ಖಾಸ್ ಆಗಿದ್ದ ಅಬು ಸಲೇಂನನ್ನು ಹಣಿದಿದ್ದು ಸಣ್ಣ ಮಾತಲ್ಲ. ಅದೂ ಯಾವ ಜಮಾನಾದ ಕೇಸ್ ಅಂದರೆ ೧೯೯೫ ರಲ್ಲಿ ಆದ ಪ್ರದೀಪ್ ಜೈನ್ ಸುಪಾರಿ ಮರ್ಡರ್ ಕೇಸ್. ಮಾಡಿಸಿದ್ದು ೧೯೯೫ ರಲ್ಲಿ. ಮೊದಲು ದುಬೈ, ನಂತರ ಅಮೇರಿಕಾ, ಕೊನೆಗೆ ಪೋರ್ಚುಗಲ್ ನಲ್ಲಿ ಅಡಗಿ ಕುಳಿತಿದ್ದ ಅಬು ಸಲೇಂನನ್ನು ಅಮೇರಿಕಾದ FBI ಸಹಾಯದಿಂದ ಬಂಧಿಸಿ ಮುಂಬೈಗೆ ಎಳೆತಂದಿದ್ದು ೨೦೦೫ ರಲ್ಲಿ. ಹತ್ತು ವರ್ಷದ ಬಳಿಕ. ಈಗ ೨೦೧೫ ರಲ್ಲಿ ಮತ್ತೆ ಬರೋಬ್ಬರಿ ಹತ್ತು ವರ್ಷದ ನಂತರ ಅಪರಾಧಿ ಅಂತ ತೀರ್ಮಾನ ಆಗಿದೆ. ಇನ್ನು ಹತ್ತು ವರ್ಷಗಳ ನಂತರ ಏನು ಕಾದಿದೆಯೋ?

ಅಬು ಸಲೇಂ ಮಾಡಿಸಿದ್ದ ಪ್ರದೀಪ್ ಜೈನ್ ಮರ್ಡರ್ ಕೇಸಿನ ವಿವರ ತೆಗೆದುಕೊಂಡು ಕೂತರೆ ಅದೇ ದೊಡ್ಡ ಕಥೆ. ಅಬು ಸಲೇಂ ಮುಂಬೈಗೆ ಬಂದು ಅನೀಸ್ ಇಬ್ರಾಹಿಮ್ಮನ ಕಣ್ಣಿಗೆ ಬಿದ್ದು ಒಳ್ಳೆ ಕೆಲಸಗಾರ ಅಂತ ಅನ್ನಿಸಿಕೊಂಡಿದ್ದ. ದಾವೂದ್, ಅನೀಸ್ ಇತ್ಯಾದಿ ಇಬ್ರಾಹಿಮ್ಮುಗಳು ೧೯೮೫ ರ ಸುಮಾರಿಗೇ ದುಬೈಗೆ ಹೋಗಿ, ಮಸ್ತಾಗಿ ಕೂತು, ಕ್ರಿಕೆಟ್ ನೋಡುತ್ತ, ಬಾಲಿವುಡ್ ನಟಿಯರನ್ನು ಕರೆಕರೆಸಿಕೊಂಡು, ಮಸ್ತಾಗಿ ಬಾರಿಸುತ್ತ, ಮಜಾ ಮಾಡುತ್ತ ಆರಾಮ ಇದ್ದರು. ಇದೇ ಅಬು ಸಲೇಂ, ಇವನಂತವರೇ ಆದ ಛೋಟಾ ಶಕೀಲ್, ಶರದ್ ಅಣ್ಣಾ ಶೆಟ್ಟಿ, ಛೋಟಾ ರಾಜನ್ ಮುಂತಾದವರು ಮುಂಬೈನಲ್ಲಿದ್ದು ದಂಧೆ ನಡೆಸುತ್ತ, D - ಕಂಪನಿಯ ಝೇಂಡಾ ಊಂಚೆ ರಹೇ ಹಮಾರಾ ಅಂತ ಭಯಂಕರ ಬಿಸಿನೆಸ್ ಮಾಡಿಕೊಂಡಿದ್ದರು.

ಮುಂದೆ ಛೋಟಾ ರಾಜನ್, ಛೋಟಾ ಶಕೀಲ್, ಶರದ್ ಅಣ್ಣಾ ಶೆಟ್ಟಿಯನ್ನು ದಾವೂದ್ ಸುಮಾರು ೧೯೯೦ ರ ಹೊತ್ತಿಗೆ ದುಬೈಗೆ ಕರೆಸಿಕೊಂಡುಬಿಟ್ಟ. ಅಷ್ಟೊತ್ತಿಗೆ ದಾವೂದನ ಸಾಮ್ರಾಜ್ಯ ಸಿಕ್ಕಾಪಟ್ಟೆ ವಿಸ್ತರಿಸಿ, ದುಬೈ ಒಂದು ಕೇಂದ್ರ ಹಬ್ ಆಗಿ, ಅಲ್ಲೇ ಜನ ಜಾಸ್ತಿ ಬೇಕಾಗಿದ್ದರು. ಮತ್ತೆ ದಾವೂದನ ತಮ್ಮಂದಿರಲ್ಲಿ ಅನೀಸ್ ಒಬ್ಬನನ್ನು ಬಿಟ್ಟರೆ ಬಾಕಿ ಯಾರಿಗೂ ಅಂಡರ್ವರ್ಲ್ಡ್ ಗೆ ಬಂದು ಶೈನ್ ಆಗುವ ತಾಕತ್ತು, ತಲೆ ಎರಡೂ ಇರಲಿಲ್ಲ. ಇದ್ದ ತಮ್ಮಂದಿರಾದರೂ ಯಾರು? ಒಬ್ಬ ನೂರಾ. ಅವನಿಗೋ ಬಾಲಿವುಡ್ ಹುಚ್ಚು. ಅಣ್ಣನ ವಶೀಲಿ ಹಚ್ಚಿಕೊಂಡು ಹಿಂದಿ ಸಿನೆಮಾಗಳಿಗೆ ಹಾಡು ಬರೆದುಕೊಂಡಿದ್ದ. ಅದೇ ಅವನ ಹುಚ್ಚು. ಇನ್ನು ಮುಷ್ತಕೀಮ. ಅವನಿಗೆ ಫಿಟ್ಸ್ ಅದು ಇದು ಅಂತ ಕಾಯಿಲೆ. ತಲೆಯೂ ಸ್ವಲ್ಪ ಅಷ್ಟೇ. ದುಬೈನಲ್ಲಿ ಉಂಡಾಡಿ ಗುಂಡನ ಹಾಗೆ ಇದ್ದ. ಇನ್ನೊಬ್ಬವ ಹುಮಾಯುನ್. ಅವನು ಏನೋ ಬೇರೆ ಸಣ್ಣ, ಅಣ್ಣ ಹಾಕಿ ಕೊಟ್ಟಿದ್ದ ದಂಧೆ ಮಾಡಿಕೊಂಡಿದ್ದ. ಮತ್ತೊಬ್ಬವ ಇಕ್ಬಾಲ್. ಅವನು ಸಣ್ಣ ಪ್ರಮಾಣದಲ್ಲಿ ಅಂಡರ್ವರ್ಲ್ಡ್ ನಲ್ಲಿ ಇದ್ದ. ಟ್ರೈನಿ ತರಹ. ಎಲ್ಲರೂ ದುಬೈನಲ್ಲೇ ಇದ್ದರು. ಸಿಕ್ಕಾಪಟ್ಟೆ ಮೀಟರ್ ಇದ್ದ ಹಿರಿಯಣ್ಣ ಶಬ್ಬೀರ್ ಭಾಳ ಹಿಂದೆಯೇ ಗ್ಯಾಂಗ್ ವಾರ್ ನಲ್ಲಿ,  ಗುಂಡು ತಿಂದು ಸತ್ತುಹೋಗಿದ್ದ. ಇವರನ್ನು ಬಿಟ್ಟರೆ ಅಕ್ಕ ಹಸೀನಾ. ಆಕೆ ಮದುವೆಯಾಗಿ ಮುಂಬೈನಲ್ಲೇ ಇದ್ದಳು. ಭಾವ ಇಸ್ಮಾಯಿಲ್ ಪಾರ್ಕರ್ ಅನ್ನುವವನ್ನು indirect ಆಗಿ ದಂಧೆಗೆ ಕೂಡಿಸಿದ್ದ ದಾವೂದ್. ದಾವೂದ್ ವಿರೋಧಿ ಅರುಣ್ ಗೌಳಿ ಅವನನ್ನು ಕೊಂದೇ ಬಿಟ್ಟ. ಯಾಕೆಂದರೆ ದಾವೂದನ ಕಡೆ ಜನ ಅರುಣ್ ಗೌಳಿಯ ಪ್ರೀತಿಯ ತಮ್ಮನನ್ನು ಹುರಿದು ಮುಕ್ಕಿ, ಹಿಂಸಿಸಿ ಕೊಂದಿದ್ದರಲ್ಲ. ಅದಕ್ಕೆ. ಒಟ್ಟಿನಲ್ಲಿ ದಾವೂದನ ಬಿಸಿನೆಸ್ ಬೆಳೆಯುತ್ತಿದ್ದ ರೇಟ್ ಸಿಕ್ಕಾಪಟ್ಟೆ ಇತ್ತು. ಹೀಗಾಗಿ ಆದಷ್ಟೂ ಕುಟುಂಬದವರನ್ನೇ ಇಟ್ಟುಕೊಳ್ಳೋಣ ಅಂತಿದ್ದರೂ ಹೊರಗಿನ ಜನರನ್ನು ಕರೆಸಿಕೊಳ್ಳಲೇ ಬೇಕಾಯಿತು. ಇದೇ ಸ್ಕೀಮಿನಲ್ಲಿ ಮೊದಲ ಬ್ಯಾಚಿನಲ್ಲಿ ದುಬೈಗೆ ಹೋದವರು ಇವರೇ -  ಛೋಟಾ ರಾಜನ್, ಛೋಟಾ ಶಕೀಲ್, ಶರದ್ ಅಣ್ಣಾ ಶೆಟ್ಟಿ.

ಈ ಮೂವರು ದುಬೈಗೆ ಹಾರಿದ್ದೇ ಹಾರಿದ್ದು ಇಲ್ಲಿ ಮುಂಬೈ ಭೂಗತ ಲೋಕದಲ್ಲಿ ಅಬು ಸಲೇಂಗೆ ಪ್ರಮೋಷನ್ ಸಿಕ್ಕಿತು. seniority ಅಂತೂ ಇದ್ದೇ ಇತ್ತು. ಮತ್ತೆ ಅನೀಸ್ ಇಬ್ರಾಹಿಮ್ಮನ ಖಾಸ್ ಬೇರೆ. ಹೀಗಾಗಿ ಸುಮಾರು ೧೯೯೦ - ೧೯೯೩ ರ ವರೆಗೆ ಒಂದು ತರಹದ ಮುಂಬೈನ ಅನಭಿಷಿಕ್ತ ಮಾಫಿಯಾ ದೊರೆಯಂತೆ ಮೆರೆದುಬಿಟ್ಟ ಅಬು ಸಲೇಂ. ಆಗಿನ್ನೂ ಛೋಟಾ ರಾಜನ್ ದಾವೂದನಿಂದ ಬೇರೆಯಾಗಿರಲಿಲ್ಲ. ಇದ್ದ ಸಣ್ಣ ಪುಟ್ಟ ವಿರೋಧಿ ಗುಂಪುಗಳು ಅಂದರೆ ಅಮರ್ ನಾಯಕ್ ಗ್ಯಾಂಗ್, ಅರುಣ್ ಗೌಳಿ ಗ್ಯಾಂಗ್. ಅವರನ್ನೆಲ್ಲ ಭಾರಿ ಸಿಸ್ಟಮ್ಯಾಟಿಕ್ ಆಗಿ ಮಟ್ಟ ಹಾಕುತ್ತಿತ್ತು ದಾವೂದ್ ಗ್ಯಾಂಗ್. ಸರಕಾರ, ಪೊಲೀಸರು ಎಲ್ಲ ಅವರ ಕಿಸೆಯಲ್ಲೇ ಇದ್ದರಲ್ಲ? ಮತ್ತೇನು?

ಅಬು ಸಲೇಂ ಮುಂಬೈನಲ್ಲೇ ಇರುತ್ತಿದ್ದನೋ ಏನೋ. ಆದರೆ ೧೯೯೨ ಡಿಸೆಂಬರ್ ನಲ್ಲಿ ಬಾಬ್ರಿ ಮಸೀದಿ ನೆಲಸಮವಾಯಿತು. ನಂತರ ಮುಂಬೈನಲ್ಲಿ ಸಿಕ್ಕಾಪಟ್ಟೆ ಗಲಭೆಗಳೂ ಆದವು. ಆಗ ಸಂಜತ್ ದತ್ ಎಂಬ ಯಬಡ ಸಿನೆಮಾ ನಟ ತನ್ನ ಸ್ವರಕ್ಷಣೆಗೆ ಅಂತ ಅನೀಸ್ ಇಬ್ರಾಹಿಮ್ಮನಿಗೆ ದಮ್ಮಯ್ಯ ಗುಡ್ಡೆ ಹಾಕಿ, illegal ಆದ, ಮಹಾ ತುಪಾಕಿ AK - 56 ತರಿಸಿಕೊಂಡುಬಿಟ್ಟ. ಅವನ ಅಪ್ಪ ರಾಜಕಾರಣಿ ಸುನೀಲ್ ದತ್ತ ದಂಗೆಯಿಂದ ಸಂತ್ರಸ್ತರಾದ ಜನರ ಸೇವೆ ಅದು ಇದು ಮಾಡಿಕೊಂಡಿದ್ದ. ಅದು ಹಿಂದುಗಳನ್ನು ಕೆರಳಿಸಿತ್ತು. ದತ್ ಕುಟುಂಬಕ್ಕೆ ಸಿಕ್ಕಾಪಟ್ಟೆ ಬೆದರಿಕೆ ಬರುತ್ತಿದ್ದವು. ಸಂಜಯ್ ದತ್ತನ ಅಕ್ಕಂದಿರನ್ನು ರೇಪ್ ಮಾಡುವದಾಗಿ ಎಂದು ಕರೆ ಬಂತೋ, ಅವತ್ತೇ ಸಂಜಯ್ ದತ್ ಬರೋಬ್ಬರಿ ಪೋಲೀಸ್ ಪ್ರೊಟೆಕ್ಷನ್ ತೆಗೆದುಕೊಳ್ಳುವ ಬದಲು ಬೇರೆಯೇ ತರಹದ ಪ್ರೊಟೆಕ್ಷನ್ ಬಗ್ಗೆ ವಿಚಾರ ಮಾಡಿದವನೇ, ಸೀದಾ ಅನೀಸ್ ಇಬ್ರಾಹಿಮ್ಮನಿಗೆ ಫೋನ್ ಹಚ್ಚಿ ಅತ್ತುಬಿಟ್ಟ. ಮೊದಲೇ ಬಂದೂಕುಗಳ ಹುಚ್ಚು ಸಂಜಯ್ ದತ್ತನಿಗೆ. ಈ ಸಲ ದೊಡ್ಡದೇ ಇರಲೀ ಅಂತ 'ಭಾಯಿ, AK - 56 ಕಳಿಸಿಬಿಡು. ಬಾಭಿ ಜಾನ್ ಗೆ ಸಲಾಂ ಹೇಳು. ಮರಿಬೇಡ' ಅಂತ ಇಲ್ಲದ ಮಸ್ಕಾ ಹಚ್ಚೇ ಬಿಟ್ಟ. ಪುಣ್ಯಾತ್ಮನ ಕಾಟ ತಡೆಯಲಾಗದೇ ಅನೀಸ್ ಇಬ್ರಾಹಿಮ್ ಅಬು ಸಲೇಂನಿಗೆ ಫೋನಾಯಿಸಿ, 'ಯೋ! ಹೇಗೂ ದಾಸ್ತಾನು ಮಾಡಿಟ್ಟಿರುವ AK - 56 ಇವೆ. ಒಂದ್ನಾಲ್ಕು ಅವು, ಇನ್ನೊಂದ್ನಾಲ್ಕು ಪಿಸ್ತೂಲ್ ಎಲ್ಲ ತೆಗೆದುಕೊಂಡು ಹೋಗಿ ಕೊಟ್ಟು ಬಾ ಸಂಜಯ್ ದತ್ತನಿಗೆ' ಅಂದು ಬಿಟ್ಟ. ಇದೇ ಅಬು ಸಲೇಂನೇ ಖುದ್ದಾಗಿ ಹೋಗಿ ಸಂಜಯ್ ದತ್ತನಿಗೆ AK - 56 ಕೊಟ್ಟು ಬಂದಿದ್ದ. ಅಬು ಸಲೇಂನಿಗೆ ಸಂಜಯ್ ದತ್ತ್ ಎನ್ನುವ ಆಕಾಲದ ಸೂಪರ್ ಹೀರೋ ಬಗ್ಗೆ ಅದೆಷ್ಟು ಹುಚ್ಚು ಇತ್ತು ಅಂದರೆ ಬಂದೂಕು ಕೊಡಲು ಹೋದವ ಸಂಜಯ್ ದತ್ತನನ್ನು ಮುಟ್ಟಿ ಮುಟ್ಟಿ, ಕೈ ಒತ್ತಿ ಒತ್ತಿ, ಸಿಕ್ಕಾಪಟ್ಟೆ ಅಪ್ಪಿಕೊಂಡು, ತಬ್ಬಿಕೊಂಡು ತನ್ನ hero worship ತೀಟೆ ತೀರ್ಸಿಕೊಂಡು ಬಂದಿದ್ದ. ಅಷ್ಟೆಲ್ಲ ಆದ ಮೇಲೆಯೇ ಅವನು ಬ್ಯಾಗ್ ಬಿಚ್ಚಿ ಬಂದೂಕು ತೋರಿಸಿದ್ದು. ದತ್ತ ಒಂದೋ ಎರಡೋ ಬಂದೂಕು ಇಟ್ಟುಕೊಂಡು, ಉಳಿದವನ್ನು ವಾಪಸ್ ಕಳಿಸಿದ್ದ. ಅಂದು ಹಾಗೆ ಸಂಜಯ್ ದತ್ ನಿಂದ, ಅವನ ಭೇಟಿಯಿಂದ, ಮುಟ್ಟಿ ಮುಟ್ಟಿ ಮಾತಾಡಿಸಿ ಬಂದ ಸಂತೋಷದಿಂದ ಅಬು ಸಲೇಂ ಇಷ್ಟು ಖುಷ್ ಆಗಿದ್ದ ಅಂದರೆ ಮುಂದಿನ ಅದೆಷ್ಟೋ ದಿನ ಸ್ನಾನ ಮಾಡೋದು ದೂರ ಉಳಿಯಿತು, ಕೈ ಸಹ ತೊಳೆಯಲೇ ಇಲ್ಲವಂತೆ. ಇದ್ದಷ್ಟು ದಿವಸ ಇರಲಿ ಸಂಜಯ್ ದತ್ತನ ಟಚಿಂಗ್  ಟಚಿಂಗ್!

ಇದೇ ಅಬು ಸಲೇಂ ಮುಂದೆ ಕೇವಲ ನಾಲ್ಕೈದೇ ವರ್ಷದಲ್ಲಿ ಯಾವ ಪರಿ ಬೆಳೆದು ನಿಂತ ಅಂದರೆ ಬಾಲಿವುಡ್ಡಿನ ಪೂರ್ತಿ ಉಸ್ತುವಾರಿಯನ್ನು ದಾವೂದ್ ಮತ್ತು ಅನೀಸ್ ಅವನಿಗೇ ವಹಿಸಿ, ವಿಜಯೀ ಭವ ಅಂದುಬಿಟ್ಟರು. ಆವತ್ತು ಸಂಜಯ್ ದತ್ತನನ್ನು ಆ ಪರಿ ಆರಾಧಿಸಿ ಹೋಗಿದ್ದ ಅಬು ಸಲೇಂ ಮುಂದೊಂದು ದಿವಸ ದುಬೈನಲ್ಲಿ ಕುಳಿತು ದತ್ತನಿಗೇ ಒಂದು ಧಮಕಿ ಫೋನ್ ಮಾಡಿಬಿಟ್ಟ. ಯಾಕೆಂದರೆ ಸಂದರ್ಭ ಹಾಗಿತ್ತು. ಸೂಪರ್ ಸ್ಟಾರ್ ದತ್ ಒಬ್ಬ ನಟಿ ಜೊತೆ ನಟಿಸಲು ಒಪ್ಪಿರಲಿಲ್ಲ. ಅವನದೂ ಪಾಯಿಂಟ್ ಇತ್ತು. ತಾನು ಸೂಪರ್ ಸ್ಟಾರ್. ಪಕ್ಕ ಸೂಪರ್ ಸ್ಟಾರ್ ಮಟ್ಟದ ನಟಿಯೇ ಬೇಕು. ಈಕೆ ನೋಡಿದರೆ ಯಾರೋ ಅಬ್ಬೇಪಾರಿ. ಒಂದೋ ಎರಡೋ ತಗಡು ತೋಪಾದ ಚಿತ್ರಗಳಲ್ಲಿ, ಕನ್ನಡದಲ್ಲಿ ನಟಿಸಿದ್ದಾಳೆ. ಅಷ್ಟೇ. ಅಂತಾಕೆ ಜೊತೆ ಹೀರೋ ಆಗು ಅಂದ್ರೆ? ಸುಮ್ನೇನಾ? ಆವಾಗ ಬಂತು ನೋಡಿ ಅಬು ಸಲೇಂ ಭಾಯಿಯ ಫೋನ್. ಮುಚ್ಚಿಕೊಂಡು ಒಪ್ಪಿಕೊಂಡ ದತ್. ಯಾರು ಅಂದ್ರಾ  ಆ ನಟಿ? ಅವಳೇ ನಟೋರಿಯಸ್ ಮೋನಿಕಾ ಬೇಡಿ. ಆ ಹೊತ್ತಿಗಾಗಲೇ ಆಕೆ ಅಬು ಸಲೇಂ ಭಾಯಿ ಜೊತೆ ಜಮ್ಮ ಚಕ್ಕ ಎಲ್ಲಾ ಮಾಡಿ, ಡಾನ್ ಭಾಯಿಯ ಮಾಲು ಅಂತ ಚಲಾವಣೆಯಲ್ಲಿ ಇದ್ದಳು. ಅದು ಸಂಜಯ್ ದತ್ತನಿಗೆ ಗೊತ್ತಿತ್ತಾ? ನಮಗೆ ಗೊತ್ತಿಲ್ಲ. ಮೋನಿಕಾ ಬೇಡಿಗೆ ಭಾಬಿ ಭಾಬಿ (ಅತ್ತಿಗೆ) ಅನ್ನುತ್ತ ಸಂಜಯ್ ದತ್ತ್ ಸಿನೆಮಾ ಮಾಡಿಕೊಟ್ಟು ಆವತ್ತಿನ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದ.

ಮುಂದೆ ಬರೋಬ್ಬರಿ ಐದು ವರ್ಷಗಳ ನಂತರ ಇದೇ ಅಬು ಸಲೇಂ ನಟ ಸಂಜಯ್ ದತ್ತನನ್ನು ಉಡಾಯಿಸಿಬಿಡುವಂತೆ ಸುಪಾರಿ ಕೊಟ್ಟುಬಿಟ್ಟ. ಕಾರಣ - ಗದ್ದಾರಿ! ಮಿತ್ರದ್ರೋಹ!

ಆ ಹೊತ್ತಿಗೆ ಅಬು ಸಲೇಂ ದಾವೂದ್ ಕಂಪನಿ ಬಿಟ್ಟು, ತನ್ನದೇ ಸ್ವತಂತ್ರ ಗ್ಯಾಂಗ್ ಮಾಡಿಕೊಂಡು, ಎಲ್ಲಾ ವ್ಯವಹಾರ ಅಮೇರಿಕಾದ ಅಟ್ಲಾಂಟ ನಗರದಿಂದ ನಡೆಸುತ್ತಿದ್ದ. ವಿಚಿತ್ರವೆನಿಸಿದರೂ ಸತ್ಯ. ಪುಣ್ಯಾತ್ಮ ಅಬು ಸಲೇಂ ಅಮೇರಿಕಾಗೆ software ಇಂಜಿನಿಯರ್ ಜನ ಬರುವ H1-B ವೀಸಾದಲ್ಲಿ ಬಂದುಬಿಟ್ಟಿದ್ದ! ಅದೆಲ್ಲ ೨೦೦೦ ಸಮಯ. ಅಮೇರಿಕಾದಲ್ಲಿ ಡಾಟ್ ಕಾಂ ಬೂಮ್ ಅನ್ನುವ ಒಂದು ತರಹದ ಹುಚ್ಚ್ಮುಂಡೆ ಮದುವೆ. ಸಾಫ್ಟ್ವೇರ್ ಇಂಜಿನಿಯರ್ ಅಂತ ಬೋರ್ಡ್ ಹಾಕಿಕೊಂಡು ಎಂತೆಂತವರೋ ಬಂದು ಕೂತಿದ್ದರು. ಅದೇ ರೀತಿ ನಕಲಿ ಹೆಸರಲ್ಲಿ ಪಾಸ್ಪೋರ್ಟ್ ಮಾಡಿಸಿದ್ದ ಅಬು ಸಲೇಂ ಸಹ ಅವನದೇ ಬೇನಾಮಿ IT ಕಂಪನಿಯೊಂದಕ್ಕೆ ಸಾಫ್ಟ್ವೇರ್ ಇಂಜಿನಿಯರ್ ಅಂತ ಹೇಳಿ ಬಂದು ಕೂತಿದ್ದ. ಯಾರಿಗಿದೆ ಯಾರಿಗಿಲ್ಲ ಆ ಭಾಗ್ಯ?

ಸಂಜಯ್ ದತ್ತನಿಗೆ ಎಲ್ಲ ಮಾಫಿಯಾ ಮಂದಿ ಅಂದ್ರೆ ಸಂಬಂಧಿಗಳಿಗಿಂತ ಹೆಚ್ಚು. ೧೯೯೯ -೨೦೦೦ ರ ಮಾತು. ಪುಣ್ಯಾತ್ಮ ಒಮ್ಮೆ ಶಿರಡಿಗೆ, ಸಾಯಿಬಾಬಾನ ದರ್ಶನಕ್ಕೆ ಅಂತ ಹೊರಟವ ಮಧ್ಯೆ ನಾಸಿಕ್ ಪಟ್ಟಣದಲ್ಲಿ ತಂಗಿದ್ದ. ಜೊತೆಗೆ ನಿರ್ಮಾಪಕ ಸಂಜಯ್ ಗುಪ್ತಾ, ನಿರ್ದೇಶಕ ಸಂಜಯ್ ಮಂಜ್ರೇಕರ್ ಇದ್ದರು. ಎಲ್ಲರೂ ಸರಿಯಾಗಿ ಬಕಾರ್ಡಿ ರಮ್ ಸೇವನೆ ಮಾಡಿ ಕೂತಿದ್ದರು. ಏನು ಮೂಡು ಬಂತೋ ಏನೋ. ಸೀದಾ ಕರಾಚಿಯಲ್ಲಿದ್ದ ಛೋಟಾ ಶಕೀಲನಿಗೆ ಫೋನ್ ಮಾಡಿಬಿಟ್ಟ ಸಂಜಯ್ ದತ್. ಛೋಟಾ ಶಕೀಲನನ್ನು ಇಂಪ್ರೆಸ್ ಮಾಡಲೋ ಏನೋ ಗೊತ್ತಿಲ್ಲ. ಅಬು ಸಲೇಂನನ್ನು ಬೈದುಬಿಟ್ಟ. ಯಾಕೆಂದರೆ ಆ ಕಾಲದ ದೊಡ್ಡ ಹೀರೋಯಿನ್ ಒಬ್ಬಳಿಗೆ ಅಬು ಸಲೇಂ ತುಂಬ ತೊಂದರೆ ಕೊಡುತ್ತಿದ್ದಂತೆ. ಸಂಜಯ್ ದತ್ ಜೊತೆಗೆ ಏನೋ ಒಂದು ರೀತಿಯ ವಿಶೇಷ ಸಂಬಂಧ ಹೊಂದಿದ್ದ ಆಕೆ ಎಲ್ಲ ಹೇಳಿಕೊಂಡಿದ್ದಳು. ಗೆಳತಿ ಮುಂದೆ ರೋಪ್  ಜಮಾಯಿಸಲು ತಾನು ಛೋಟಾ ಶಕೀಲ್ ಭಾಯಿ ಜೊತೆ ಮಾತಾಡಿ, ಅಬು ಸಲೇಂನನ್ನೇ ಮುಗಿಸಿಬಿಡುವದಾಗಿ ಭೋಂಗು ಬಿಟ್ಟಿದ್ದ ದತ್. ಅದೇ ಪ್ರಕಾರ ಮಾತೂ ಆಡಿಬಿಟ್ಟ.

ಛೋಟಾ ಶಕೀಲ್ ಬಿಟ್ಟಾನೆಯೇ? ಸರಿಯಾಗಿ ಗಾಳ ಹಾಕಿ ಸಂಜಯ್ ದತ್ ಮೂಲಕ ಅಬು ಸಲೇಂ  ಬಗ್ಗೆ ಎಲ್ಲ ಮಾಹಿತಿ ತೆಗೆದ. ಸಂಜಯ್ ದತ್ ಮತ್ತೆ ಇತರೆ ನಟ ನಟಿಯರು ಪ್ರೊಗ್ರಾಮ್ ಮಾಡಲೆಂದು ಅಮೇರಿಕಾಗೆ ಬಂದಾಗ, ಅಬು ಸಲೇಂನನ್ನ ಮೋಸದಿಂದ ನ್ಯೂಜರ್ಸಿಗೆ ಕರೆಯಿಸಿ, ಕೊಂದು ಹಾಕುವ ಖತರ್ನಾಕ್ ಪ್ಲಾನ್ ಹಾಕಿದ್ದ ಛೋಟಾ ಶಕೀಲ್. ಅದರಲ್ಲಿ ದತ್ ಭಾಗಿಯಾಗಿದ್ದ. ಹಾಗಂತ ನಂಬಿಕೆ ಅಬು ಸಲೇಂನ ತಲೆಯಲ್ಲಿಯಂತೂ ಕೂತು ಬಿಟ್ಟಿತ್ತು. ಛೋಟಾ ಶಕೀಲ್ ಹಾಕಿದ ಸ್ಕೆಚ್ ಹೇಗೋ ಗೊತ್ತಾಗಿ ನ್ಯೂಜರ್ಸಿಗೆ ಬರದೇ ಪ್ರಾಣ ಉಳಿಸಿಕೊಂಡ ಅಬು ಸಲೇಂ. ಆದರೆ ಕೊತ ಕೊತ ಕುದಿಯುತ್ತಿದ್ದ ಡಾನ್ ಅಬು ಸಲೇಂ. ಫೋನ್ ಎತ್ತಿದವನೇ ಮುಂಬೈಗೆ ಫೋನ್ ಮಾಡಿ ಸಂಜಯ್ ದತ್ ಮತ್ತು ಸಂಜಯ್ ಗುಪ್ತಾರ ಸುಪಾರಿ ಕೊಟ್ಟೇ ಬಿಟ್ಟ. ಫಿನಿಶ್! ಖತಂ ಕರ್ ಡಾಲೋ ಸಾಲೊಂಕೋ!

ಅಬು ಸಲೇಂ ಕಳಿಸಿದ್ದ ಸುಪಾರಿ ಹಂತಕರು ಹೋಗಿ ಗೋವಾದಲ್ಲಿ ಹೊಂಚು ಹಾಕಿದ್ದರು. ಯಾಕೆಂದರೆ ಸಂಜಯ್ ದತ್ ಮತ್ತು ಸಂಜಯ್ ಗುಪ್ತಾ ಅಲ್ಲಿಗೆ  ಹೋಗಿದ್ದರು. ಭೂಗತ ಲೋಕ ಮತ್ತು ಬಾಲಿವುಡ್ ಮಧ್ಯೆ ಅದೇನೇನು ತರಹದ ಕಮ್ಯುನಿಕೇಷನ್ ಲಿಂಕುಗಳು ಇರುತ್ತವೋ ಗೊತ್ತಿಲ್ಲ. ಒಟ್ಟಿನಲ್ಲಿ ಸಂಜಯ್ ದತ್ ಗೆ ತನ್ನ ಮೇಲೆ ಜಾರಿ ಮಾಡಲಾಗಿರುವ ಸುಪಾರಿ ಬಗ್ಗೆ ಗೊತ್ತಾಗಿಯೇ ಹೋಯಿತು. ಹೋಟೆಲ್ ರೂಂ ಹೊಕ್ಕಿ, ಒಳಗಿಂದ ಬೋಲ್ಟ್ ಹಾಕಿಕೊಂಡವ ಹೊರಗೆ ಬಂದರೆ ಕೇಳಿ. ಹೇಗೋ ಮಾಡಿ ಅಬು ಸಲೇಂಗೆ ತುಂಬ ಆತ್ಮೀಯನಾದ ಮಿತ್ರನೊಬ್ಬನ ಕಾಂಟಾಕ್ಟ್ ದೊರೆಕಿಸಿಕೊಂಡ ದತ್, ಅವನಿಗೆ ಫೋನ್ ಹಚ್ಚಿ ಗೊಳೋ ಅಂದ. ಅವನು ಎಂತಹ ದೋಸ್ತ ಅಂದ್ರೆ ಅಬು ಸಲೇಂ ಅವನ ಮಾತಿಗೆ ದೂಸರಾ ಹೇಳುವ ಚಾನ್ಸೇ ಇರಲಿಲ್ಲ. ಅದೆಷ್ಟೋ ಕೋಟಿ ರೂಪಾಯಿಗಳಿಗೆ ಮಾಂಡವಳಿ ಸಂಧಾನವಾಯಿತು. ಗೆಳೆಯನ ಮಾತಿಗೆ ಒಪ್ಪಿದ ಅಬು ಸಲೇಂ ಸುಪಾರಿ ವಾಪಸ್ ತೆಗೆದುಕೊಂಡ. ಆದರೂ ದತ್ತನಿಗೆ ಗೋವಾ ಬಿಟ್ಟು ಬರಲು ಅಂಜಿಕೆ. ದೂರ ಅಮೇರಿಕಾದಲ್ಲಿ ಕೂತ ಡಾನ್ ಏನೋ ಸುಪಾರಿ ವಾಪಸ್ ತೆಗೆದುಕೊಂಡ. ಆದರೆ ಅವನ ಬಂಟರು ಅಲ್ಲೇ ಗೋವಾದಲ್ಲಿ ಹೋಟೆಲ್ ಮುಂದೆ ಘೋಡಾ (ಪಿಸ್ತೂಲ್) ಹಿಡಿದುಕೊಂಡು ಜಾಗಿಂಗ್ ಮಾಡುತ್ತಿದ್ದಾರಲ್ಲ? ಅವರಿಗೆ ಅಕಸ್ಮಾತ ಮೆಸೇಜ್ ಬರದೇ, ಮೊದಲಿನ ಅಣತಿಯಂತೆ ಗೇಮ್ ಬಾರಿಸಿಬಿಟ್ಟರೆ? ಖೇಲ್ ಖತಂ ಮಾಡಿಬಿಟ್ಟರೆ? ಅದೆಲ್ಲ ರಿಸ್ಕ್ ಬೇಡವೇ ಬೇಡ ಅಂತ ಮಾಂಡವಳಿ ಮಧ್ಯಸ್ಥಿಕೆ ವಹಿಸಿದ್ದ ಅಬು ಸಲೇಂನ ಗೆಳೆಯನನ್ನೇ ಗೋವಾಕ್ಕೆ ಬಂದು, ಅವನ ಕಾರಿನಲ್ಲೇ ಮುಂಬೈಗೆ ಕರೆದುಕೊಂಡು ಹೋಗುವಂತೆ ದುಂಬಾಲು ಬಿದ್ದು ಬಿಟ್ಟ ಸಂಜಯ ದತ್ತ. ಪಕ್ಕವಾದ್ಯ ನುಡಿಸುತ್ತ ನಡಗುತ್ತ ನಿಂತಿದ್ದವನು ನಿರ್ಮಾಪಕ ಸಂಜಯ್ ಗುಪ್ತಾ. ಇವರ ರಚ್ಚೆ ತಾಳಲಾಗದೇ, ಒಂದಿಷ್ಟು ಹೆಚ್ಚಿಗೆ ಪೇಮೆಂಟ್ ಡಿಮ್ಯಾಂಡ್ ಮಾಡಿದ ಅಬು ಸಲೇಂನ ಗೆಳಯ, ಖುದ್ದಾಗಿ ಬಂದು, ಗೋವಾದಿಂದ ಈ ಇಬ್ಬರನ್ನು ಕರೆದುಕೊಂಡು ಬಂದು, ಸುರಕ್ಷಿತವಾಗಿ ಮುಂಬೈ ಮನೆ ಮುಟ್ಟಿಸಿದ. ಮುಂದೆ ಬರೋಬ್ಬರಿ ರೊಕ್ಕ ಗುಂಜಿದ. ಹೀಗೆ ಒಂದು ಕಾಲದ ಬಾಲಿವುಡ್ಡಿನ ತನ್ನ ಆರಾಧ್ಯದೈವಕ್ಕೇ ಸುಪಾರಿ ಕೊಟ್ಟಿದ್ದ ಖತರ್ನಾಕ್ ಡಾನ್ ಅಬು ಸಲೇಂ.

ಸಂಜಯ್ ದತ್ತನಿಗೆ ಅಬು ಸಲೇಂ ಬಂದೂಕು ಕೊಟ್ಟಿದ್ದ ಅಂತ ಹೇಳುತ್ತ ಹೇಳುತ್ತ ಇದೆಲ್ಲ ನೆನಪಾಯಿತು. ಆವತ್ತು ದತ್ತನಿಗೆ ಗನ್ ಕೊಟ್ಟು ಬಂದಿದ್ದೇ ಬಂದಿದ್ದು. ಮುಂದೆ ಕೆಲವೇ ದಿವಸಗಳಲ್ಲಿ ಮುಂಬೈನಲ್ಲಿ ೧೯೯೩ ರ ಭೀಕರ ಸರಣಿ ಬಾಂಬ್ ಸ್ಪೋಟಗಳು ಆದವು. ಅಬು ಸಲೇಂನಿಗೆ ಸುಳಿವು ಹತ್ತಿತ್ತು. ಇನ್ನು ಮುಂಬೈನಲ್ಲೇ ಇದ್ದರೆ ಪೊಲೀಸರು ಹಿಡಿಯದೇ ಬಿಡುವದಿಲ್ಲ ಅಂದವನೇ ತನ್ನ ಮೂಲ ರಾಜ್ಯ ಉತ್ತರ ಪ್ರದೇಶಕ್ಕೆ ಗಾಡಿ ಹತ್ತಿಬಿಟ್ಟ. ಅಲ್ಲಿಂದ ಪಕ್ಕದ ಬಡಾವಣೆಯಂತೆ ಇರುವ ನೇಪಾಳ ಸೇರಿಕೊಂಡು ಸ್ವಲ್ಪ ರೆಸ್ಟ್ ಮಾಡಿದ. ದಾವೂದ್, ಅನೀಸ್ ತಮ್ಮ ಒಳ್ಳೆ ಕೆಲಸಗಾರನ ಕೈಬಿಡಲಿಲ್ಲ. ೧೯೯೩ ರ ಒಂದು ದಿನ ನೇಪಾಳದ ಖಾಟ್ಮಾಂಡುವಿನಿಂದ ದುಬೈಗೆ ಹಾರಿದ ಅಬು ಸಲೇಂ.

ವಿಮಾನದಲ್ಲಿ ಚಿಕ್ಕ ನಿದ್ದೆ ಮಾಡಿ ಮುಗಿಸಿ, ದುಬೈಲ್ಲಿ ಇಳಿದರೆ ಸ್ವಾಗತಿಸಲು ಬಂದು ನಿಂತವರು ಪುರಾತನ ಮಿತ್ರರು - ಛೋಟಾ ಶಕೀಲ್ ಮತ್ತು ಶರದ್ ಅಣ್ಣಾ ಶೆಟ್ಟಿ. ಏನೋ ಮಿಸ್ ಆದಂತೆ ಕಂಡಿತು ಅಬು ಸಲೇಂಗೆ. ಮತ್ತೊಬ್ಬ ಮಿತ್ರ ಛೋಟಾ ರಾಜನ್ ಯಾಕೆ ಬರಲಿಲ್ಲ  ಅಂತ ವಿಚಾರ ಬಂತೇ? ಗೊತ್ತಿಲ್ಲ. ಯಾಕೋ ಏನೋ ರಾಜನ್ ಇಲ್ಲ ಅಂದುಕೊಂಡ.

ಹೆಚ್ಚಾಗಿ ಅಬು ಸಲೇಂನಿಗೆ ಆವತ್ತು ಗೊತ್ತಿರಲಿಲ್ಲ. ಛೋಟಾ ರಾಜನ್ ದಾವೂದ್ ಗ್ಯಾಂಗಿನಿಂದ ಶೀಘ್ರವೇ ಬೇರೆಯಾಗಿ ಭಾರತದ ಬೇಹುಗಾರಿಕೆ ಸಂಸ್ಥೆಗಳಿಗಾಗಿ ಕೆಲಸ ಶುರುಮಾಡುವನಿದ್ದಾನೆ ಅಂತ. ಮುಂಬೈ ಸ್ಪೋಟದ ರೂವಾರಿ ದಾವೂದ್ ಎಂಬ ಬೆಂಕಿಯೊಂದಿಗೆ ಹೋರಾಡಲು ಮತ್ತೊಂದು ಜ್ವಾಲೆಯ ಜರೂರತ್ತಿತ್ತು. ಛೋಟಾ ಶಕೀಲ್ ತನ್ನ ವಿರುದ್ಧ ದಾವೂದನ ಕಿವಿಯೂದಿ ತಲೆ ಕೆಡಿಸುತ್ತಿದ್ದಾನೆ ಅಂತ ಬೇಸರಗೊಂಡಿದ್ದ ರಾಜನ್ ಅಂತಹದೇ ಒಂದು ಅವಕಾಶಕ್ಕೆ ಕಾಯುತ್ತಿದ್ದ. ಎಂದು ತನ್ನ ವಿರುದ್ಧವೇ ಸುಪಾರಿ ಇಶ್ಯೂ ಆಗಿದೆ ಅನ್ನುವದರ ಸುಳಿವು ಹತ್ತಿತೋ ಅಂದೇ ಅಬುಧಾಬಿಯ ಭಾರತ ದೂತಾವಾಸದ ಎದುರು ಹೋಗಿ ಅಂಬೋ ಅಂದುಬಿಟ್ಟ ರಾಜನ್! ಅಂದೇ D-ಕಂಪನಿ ಒಡೆದಿದ್ದು.

ದುಬೈ ವಿಮಾನ ನಿಲ್ದಾಣದಿಂದ ಸೀದಾ ದಾವೂದನ ಭಯಂಕರ ಲಕ್ಸುರಿ ಬಂಗಲೆ ವೈಟ್ ಹೌಸ್ ಗೆ ಕರೆದುಕೊಂಡು ಹೋದರು ಮಿತ್ರರು. ಆಹೊತ್ತಿಗಾಗಲೇ ದಾವೂದ್ ಮತ್ತು ಸಹೋದರರು ದುಬೈ ಬಿಟ್ಟು ಕರಾಚಿ ಸೇರಿಕೊಂಡಿದ್ದರು. ಮುಂಬೈ ಸ್ಪೋಟದ ನಂತರ ಅವರಿಗೆ ದುಬೈ ಸೇಫ್ ಆಗಿರಲೇ ಇಲ್ಲ.

ಮನೆಗೆ ಬಂದು, ಫ್ರೆಶ್ ಆಗಿ ಈಚೆ ಬಂದರೆ ಫೋನ್ ಮೊರೆಯುತ್ತಿತ್ತು. ಅಬು ಸಲೇಂ ಫೋನ್ ಎತ್ತಿದರೆ ಆ ಕಡೆಯಿಂದ 'ಬರ್ಕುರ್ದಾರ್ ಸಲಾಂ ವಾಲೆಕುಂ. ವೆಲ್ಕಮ್ ಟು ದುಬೈ' ಅಂತ ಅಬ್ಬರಿಸಿದವನು ಕರಾಚಿಯಿಂದ ಮಾತಾಡುತ್ತಿದ್ದ ದಾವೂದನ ತಮ್ಮ ಡಾನ್ ಅನೀಸ್ ಇಬ್ರಾಹಿಂ!

ಹೀಗೆ ದುಬೈಗೆ ಬಂದು ಸೆಟಲ್ ಆದ ಅಬು ಸಲೇಂ ಮಾಡಿದ ಹಾವಳಿಗಳು ಒಂದೇ ಎರಡೇ. ಅದರಲ್ಲಿ ಒಂದು ದೊಡ್ಡ ಪ್ರಕರಣವೇ ಪ್ರದೀಪ್ ಜೈನ್ ಸುಪಾರಿ ಮರ್ಡರ್ ಕೇಸ್. ಅದೇ ಇಂದು ಜೀವಾವಧಿ ಶಿಕ್ಷೆಗೆ ಕಾರಣವಾಗಿದೆ.

* ಎಲ್ಲ ಮಾಹಿತಿ - My Name Is Abu Salem by S. Hussain Zaidi - ಎಂಬ ಪುಸ್ತಕದಿಂದ ಎತ್ತಿದ್ದು.

* ಅಂತ್ಯದ ದುಬೈ ಏರ್ಪೋರ್ಟ್ ಸೀನ್ ಮತ್ತು ನಂತರದ್ದು ನನ್ನ ಊಹೆ.

* ಅಬು ಸಲೇಂ ಬಗ್ಗೆ ಮತ್ತೊಂದು ಬ್ಲಾಗ್ ಪೋಸ್ಟ್ - ಮಾಲು ಸಕತ್ತಾಗೈತೆ! ರಾತ್ರಿಗೆ ನನ್ನ ಬಳಿ ಕಳಿಸಿಬಿಡು...ಡಾನ್ ಅಬು ಸಲೇಂ ಕಥನ

No comments: