ಬ್ರೋಕರ್ ಭೀಷ್ಮಾಚಾರಿ |
ನಾವೀಗ ಪಾರ್ಟ್ ಟೈಮ್ ಶೇರ್ ಬ್ರೋಕರ್ ಆಗೇವಿ. ಅಂದ್ರ ಸ್ಟಾಕು, ಶೇರು ಅದು ಇದು ಅಂತ ಮಾರೋದು, ತೊಗೊಳ್ಳೋದು ಕೆಲಸ ಸಹಿತ ಸುರು ಮಾಡಿ ಬಿಟ್ಟೇವಿ. ಆಗಾಗ ಹೊಸಾ ಹೊಸಾ ರಾಡಿ ಎಬ್ಬಿಸಲಿಲ್ಲ ಅಂದ್ರ ನಮಗ ಸಮಾಧಾನ ಇರಂಗಿಲ್ಲ. ಅದಕ್ಕ ಈ ಹೊಸ ಕಾರ್ನಾಮಾ.
ನಮ್ಮ ದೋಸ್ತ ಚೀಪ್ಯಾನ ನನ್ನ ಮೊದಲ ಗಿರಾಕಿ. ಯಾವದೋ ಕಂಪನಿ ಶೇರ್ ತೊಗೊ ಅಂತ ಹೇಳಿ ರೊಕ್ಕಾ ಕೊಟ್ಟು ಹೋಗಿದ್ದ. ತೊಗೊಂಡಿದ್ದೆ. ಶೇರ್ ಸರ್ಟಿಫಿಕೆಟ್ ಬಂದವು. ಮನಿಗೆ ಹೋಗಿ ಕೊಟ್ಟು ಬರೋಣ ಅಂತ ಚೀಪ್ಯಾನ ಮನಿ ಕಡೆ ಹೊಂಟೆ.
ಅವತ್ತು ಮತ್ತ ಶನಿವಾರ. ನಮ್ಮ ಧೋತ್ರದ ದಿನ. ಅಂದ್ರ ನಾವು ಶನಿವಾರ ಕೇವಲ ಧೋತ್ರಾ ಮಾತ್ರ ಉಡತೇವಿ. ಬಾಕಿ ಎಲ್ಲಾ ಇರ್ತದ. ಪ್ಯಾಂಟ್ ಬದಲಿ ಧೋತ್ರ. ಬುಶರ್ಟ್ ಬದಲೀ ಜುಬ್ಬಾ. ಕ್ಯಾಪ್ ಬದಲೀ ಕರಿ ಟೊಪ್ಪಿಗಿ. ಏನೋ ಮನಿತನದ ಪದ್ಧತಿ. ನಾವೂ ಮುಂದು ವರಿಸ್ಕೊಂಡು ಹೋಗಬೇಕಲ್ಲ?
ಚೀಪ್ಯಾನ ಮನಿಗೆ ಹೋದೆ. ಬಾಗಿಲಾ ಹಾಕಿತ್ತು. ಬಡದೆ. ಮತ್ತ ಮತ್ತ ಬಡದೆ.
ಭಾಳ ಹೊತ್ತು ಆದ ಮ್ಯಾಲೆ ಒಳಗಿಂದ, ಯಾರು? ಅನ್ನೋ ದನಿ ಕೇಳಿ ಬಂತು. ಯಾವದೋ ಪ್ರಾಣಿ ಗೊಗ್ಗರ ದನಿ ಇದ್ದಂಗ ಇತ್ತು. ಚೀಪ್ಯಾ, ಅವನ ಹೆಂಡ್ತಿ ರೂಪಾ ವೈನಿ, ಅವನ ಇಬ್ಬರು ಕನ್ಯಾ ರತ್ನಗಳ ದನಿ ನನಗ ಗೊತ್ತದ. ಯಾರೋ ಬ್ಯಾರೆದವರದ್ದ ದನಿ. ಮತ್ತ ಚೀಪ್ಯಾನ ಮನಿಗೆ ಎಲ್ಲೆರೆ ಕಳ್ಳರು ಗಿಳ್ಳರು ಹೊಕ್ಕಾರೇನೋ ಅಂತ ಸಂಶಯ ಬಂತು.
ಅಷ್ಟರಾಗ ಒಬ್ಬರು ಸುಮಾರು ಎಪ್ಪತ್ತು ವರ್ಷ ಆಗಿರಬಹುದಾದ ಅಜ್ಜಿ ಅಂತಹವರು ಬಾಗಿಲಾ ತೆಗೆದರು. ನೋಡಿದ ಕೂಡಲೇ ಗೊತ್ತಾಗುವಂತಹ ಸಕೇಶಿ ಫಣಿಯಮ್ಮ. ಅಂದ್ರ ಮಾಡರ್ನ್ ವಿಡೋ.
ಯಾರು ನೀನು? ಏನು ಬೇಕಾಗಿತ್ತು? - ಅಂತ ಕೇಳಿದರು.
ನಾನು ಹೀಂಗ, ಶೇರ್ ಬ್ರೋಕರ್, ಶ್ರೀಪಾದ್ ರಾವ್ ಅವರ ಶೇರ್ ಸರ್ಟಿಫಿಕೆಟ್ ಕೊಟ್ಟು ಹೋಗೋಣ ಅಂತ ಬಂದಿದ್ದೆ, ಅಂತ ಹೇಳಿದೆ.
ಅವರು ಯಾರೂ ಮನ್ಯಾಗ ಇಲ್ಲ. ಪೂರ್ತಿ ಕುಟುಂಬ ಹರಕಿ ತೀರಿಸಲಿಕ್ಕೆ ಪಂಡರಾಪುರಕ್ಕ ಹೋಗ್ಯದ. ನನಗ ಕೊಟ್ಟು ಹೋಗಪಾ ಅದೇನಿದ್ದರೂ, ಅಂತ ಹೇಳಿದ್ರು ಅಜ್ಜಿ.
ನೀವು ಯಾರು? - ಅಂತ ಕೇಳಿದೆ.
ನಾನ? ನಾನು ರಾಧಾ ಬಾಯಿ. ನಿಮ್ಮ ರೂಪಾ ವೈನಿ ಅಜ್ಜಿ. ಮನಿ ನೋಡಿಕೊಳ್ಳಲಿಕ್ಕೆ ಹೊಸಾ ಎಲ್ಲಾಪುರದಿಂದ ಬಂದು ಇದ್ದೇನಿ ನೋಡಪಾ. ನೀ ಯಾರಂದಿ? ಏನು ಮಾಡ್ತೀ ಅಂದಿ? - ಅಂತ ಕೇಳಿದರು ಅಜ್ಜಿ.
ಓಹೋ ..... ಹೋ ... ಹೋ .... ರಾಧಜ್ಜಿ ಅಂದ್ರ ನೀವ ಏನು? ಕೇಳಿದ್ದೆ ನಿಮ್ಮ ಬಗ್ಗೆ. ನೋಡೋ ಸೌಭಾಗ್ಯ ಇವತ್ತು ಸಿಗ್ತು. ನಾನು ಶೇರ್ ಬ್ರೋಕರ್ ಕೆಲಸ ಮಾಡ್ತೆನ್ರೀ, ಅಂತ ಹೇಳಿ ನಮಸ್ಕಾರ ಮಾಡಿದೆ.
ಚೊಲೋ ಇರಪಾ, ಅಂತ ಆಶೀರ್ವಾದ ಮಾಡಿದರು ಅಜ್ಜಿ.
ಅಂದ್ರ ನೀನು ಮದುವೀ ಮಾಡಿಸೋ ಬ್ರೋಕರ್ ಏನು? ಇವರ ಮನಿಯಾಗ ಯಾರಿಗೆ ಲಗ್ನಾ ಮಾಡಿಸಲಿಕ್ಕೆ ಬಂದಿ? ಕುಂಡಲಿ ಕೊಟ್ಟು ಹೋಗಲಿಕ್ಕೆ ಬಂದಿಯಾ? ಯಾರಿಗೆ ಏನು ನೋಡಬೇಕು? ಕನ್ಯಾನೋ? ವರಾನೋ?- ಅಂತ ಕೇಳಿಯೇ ಬಿಟ್ಟರು ಅಜ್ಜಿ.
ರೀ ಅಜ್ಜಿ, ನಾ ಮದುವೀ ಮಾಡಿಸೋ ಬ್ರೋಕರ್ ಅಲ್ಲರೀ. ಶೇರ್ ಸ್ಟಾಕು ಬ್ರೋಕರ್. ಕುಂಡಲಿ ಅಲ್ಲ, ಶೇರ್ ಸರ್ಟಿಫಿಕೇಟ್ ಕೊಟ್ಟು ಹೋಗಲಿಕ್ಕೆ ಬಂದಿದ್ದೆ, ಅಂತ ಮತ್ತ ಫುಲ್ ವಿವರಣೆ ಕೊಟ್ಟೆ. ಅಜ್ಜಿ ಕಿವಿ ವಯಸ್ಸಿಗೆ ಅನುಗುಣವಾಗಿ ಸ್ವಲ್ಪ ಕೆಪ್ಪ ಆಗಿರಬೇಕು. ಮತ್ತ ಫುಲ್ ಕ್ಯಾಶ್ ಒಳಗ ಡೀಲ್ ಮಾಡೋ ಮಂದಿಗೆ ಶೇರು ಸ್ಟಾಕು ಗೊತ್ತಿರಲಿಕ್ಕೆ ಇಲ್ಲ.
ಏನು!!!!!?????? ಮನುಷಾರಿಗೆ ಒಂದ ಅಲ್ಲ, ಶೇರ್ ಅಂದ್ರ ಸಿಂಹ ಹುಲಿಗೆ ಸಹಿತ ಮದುವೀ ಮಾಡಸ್ತೀಯ ನೀನು? ಏನು ಸರ್ಟಿಫಿಕೇಟ್? ಲಗ್ನಾನೂ ಮಾಡಿಸಿ, ಲಗ್ನದ ಸರ್ಟಿಫಿಕೇಟ್ ಸಹಿತ ಕೊಡಸ್ತೀಯ? ಬಾರೋ ಬಾ. ಕೂಡೋ ಕೂಡು. ನಿನ್ನಂತವನನ್ನ ಹುಡಕಲಿಕ್ಕತ್ತಿದ್ದೆ, ಅಂತ ಹೇಳಿಕೋತ್ತ ರಾಧಜ್ಜಿ ಜುಲ್ಮೀ ಮಾಡಿ ಕೂಡಿಸಿಕೊಂಡೇ ಬಿಟ್ಟರು.
ಮತ್ತ ಮತ್ತ ನಾ ಸ್ಟಾಕ್ ಬ್ರೋಕರ್, ಮ್ಯಾರೇಜ್ ಬ್ರೋಕರ್ ಅಲ್ಲ ಅಂತ ಹೇಳೋ ಪ್ರಯತ್ನ ಮಾಡಿದೆ. ಆದ್ರ ಕಿವಿ ಶೆಡ್ಡು ಆಗಿದ್ದ ಅವರ ಮ್ಯಾಲೆ ಏನೂ ಪ್ರಭಾವ ಬೀರಲಿಲ್ಲ. ನಮ್ಮ ಧೋತ್ರ, ಕರಿ ಟೊಪ್ಪಿಗಿ ಗೆಟಪ್ ಸಹಿತ ನಾ ಖರೇನಾ ಮ್ಯಾರೇಜ್ ಬ್ರೋಕರ್ ಅಂತ ಅಜ್ಜಿನ ಕನ್ವಿನ್ಸ್ ಮಾಡಿ ಬಿಡ್ತು. ಸೂಡ್ಲಿ. ಅಜ್ಜಿ ಉಂಡಿ, ಅವಲಕ್ಕಿ, ಚಾ ಬ್ಯಾರೆ ಕೊಡತೇನಿ ಅಂತ ಆಶಾ ಬ್ಯಾರೆ ತೋರಿಸಿ ಬಿಟ್ಟರು. ಅಜ್ಜಿ ಕಥಿ ಕೇಳಕೊತ್ತ ಮಜಾ ತೊಗೊಳ್ಳೋಣ ಅಂತ ಕೂತ ಬಿಟ್ಟೆ.
ನನಗ ಮೂರು ಮಂದಿ ಗಂಡು ಮಮ್ಮಕ್ಕಳಿದ್ದಾರೋ.... ಅವರಿಗೆ ಒಂದೊಂದು ಕನ್ಯಾ ಹುಡುಕಿ ಕೊಡುವಂತಹ ಬ್ರೋಕರ್ ಭೀಷ್ಮಾಚಾರಿ ನೀನ ಆಗಿ ಬಿಡೋ. ನಿನಗ ಪುಣ್ಯಾ ಬರ್ತದ, ಅಂತ ಹೇಳಿಕೋತ್ತ ಚಾ ನಾಷ್ಟಾ ತರಲಿಕ್ಕೆ ಒಳಗ ಹೋದರು ಅಜ್ಜಿ.
ಏನಿದು? ನನಗ ಬ್ರೋಕರ್ ಭೀಷ್ಮಾಚಾರಿ ಅನ್ನಲಿಕತ್ತಾರ? ಯಾಕ? ಬರೆ ಕಿವಿ ಅಷ್ಟ ಅಲ್ಲ, ತಲಿನೂ ಕೆಟ್ಟದ ಹ್ಯಾಂಗ ಅಜ್ಜಿದು?
ಅಂತ ಸಂಶಯ ಬಂತು.
ದೊಡ್ಡ ಮೊಮ್ಮಗ ಭೀಮಸೇನ. ಒಳ್ಳೆ ಕೆಲಸದಾಗ ಇದ್ದಾನ. ಮೊದಲು ಸಣ್ಣ ಕೆಲಸದಾಗ ಇದ್ದ. ಈಗ ಎರಡು ಮೂರು ಪ್ರಮೋಷನ್ ಬಂದು, ಕೆಲಸನೂ ಪಕ್ಕಾ ಆಗಿ, ಮಸ್ತ ಸೆಟಲ್ ಆಗಿ ಬಿಟ್ಟಾನ, ಅಂದ್ರು ಅಜ್ಜಿ.
ನಾವು ಮದ್ವಿ ಬ್ರೋಕರ್ ಇಲ್ಲದಿದ್ದರ ಏನಾತು? ಒಳ್ಳೆ ಸೆಟಲ್ ಇದ್ದ ಹುಡುಗ ಇದ್ದರ ಪ್ರಯತ್ನ ಮಾಡೋಣಂತ. ಮುಂದ ನಾವೂ ಅದ ಧಂಧಾ ಮಾಡಬೇಕಾದೀತು ಅಂತ ವಿಚಾರ ಮಾಡಿದೆ. ಅಜ್ಜಿ ಕಥಿ ಕೇಳೋಣ ಅಂತ ನಿರ್ಧಾರ ಮಾಡಿದೆ.
ಎಲ್ಲೆ ಕೆಲಸ ಅಜ್ಜಿ, ಭೀಮಸೇನ್ ರಾವ್ ಅನ್ನೋ ನಿಮ್ಮ ದೊಡ್ಡ ಮೊಮ್ಮಗಂದು? ಅಂತ ಕೇಳಿದೆ.
ಆವ ಅಲ್ಲೇ ಸಿರ್ಸಿ ಹತ್ರ ನಮ್ಮ ಸ್ವಾಧಿ ಮಠ ಅದ ನೋಡು, ಅಲ್ಲೆ ದೊಡ್ಡ ಪೋಸ್ಟ್ ಒಳಗ ಇದ್ದಾನ, ಅಂದ್ರು ಅಜ್ಜಿ.
ಓಹೋ.... ಏನು ಮಠದ ಮ್ಯಾನೇಜರ್ ಅಂದ್ರ ಇವರ ಏನು? ಚೊಲೊ ಪಗಾರ್ ಇರಬೇಕಲ್ಲ? - ಅಂತ ಕೇಳಿದೆ.
ಏ.... ಮ್ಯಾನೇಜರ್ ಗೀನೆಜರ್ ಎಲ್ಲಾ ಸಣ್ಣು ಸಣ್ಣು ಕೆಲಸ. ಮತ್ತ ಮಠಕ್ಕ ದೂರದ ಕೆಲಸ. ಇವಾ ಇನ್ನೂ ಭಾಳ ಹತ್ರದ ದೊಡ್ಡ ಕೆಲಸಾ ಮಾಡ್ತಾನ, ಅಂತ ಅಜ್ಜಿ ಏನೋ ದೊಡ್ಡ ಸುದ್ದಿ ಅದ ಅನ್ನೋ ಲುಕ್ ಕೊಟ್ಟರು.
ಏನು ಕೆಲಸ ರೀ ಹಾಂಗಿದ್ರಾ? ಸ್ವಾಮಿಗಳ ಕಾರ್ ಡ್ರೈವರ್ ಏನು ಮತ್ತ? - ಅಂತ ಕೇಳಿದೆ.
ಇಲ್ಲೋ.... ಅದು ದೊಡ್ಡ ಕಥಿ. ನಿನಗ ಹಯಗ್ರೀವ ಆಚಾರ್ ಗೊತ್ತೇನು? ಸಿರ್ಸಿ ಕಡೆ ಯಾರೋ ಒಬ್ಬಾಕಿ ಸ್ಮಾರ್ತರಾಕಿ ಭಾಳ ಸ್ಮಾರ್ಟ್ ಆಗಿ ಖರೆ ಆಕಳ ತುಪ್ಪಾ, ಗೋಡಂಬಿ ಹಾಕಿ ರುಚಿ ರುಚಿ ಹಯಗ್ರೀವ ಮಾಡಿ ಕೊಟ್ಟಳು ಅಂತ ಅಕಿನ್ನ ಇಟ್ಟಗೊಂಡು, ಅಲ್ಲೇ ಸ್ವಾಧಿ ಮಠದ ಕಡೆ ಸೆಟಲ್ ಆಗ್ಯಾರ ನೋಡು. ಅವರ ಏಕ್ದಂ ಖಾಸ್ ಶಿಷ್ಯಾ ನನ್ನ ಮೊಮ್ಮಗ, ಅಂದ್ರು ಅಜ್ಜಿ.
ಓಹೋ.... ಹಯಗ್ರೀವಾಚಾರ್!!! ಅವರದ್ದು ಯಾರಿಗೆ ಗೊತ್ತಿಲ್ಲ ಬಿಡ್ರೀ. ದೊಡ್ಡ ಬಿಂದಿಗಿ ಆಚಾರ ಮನಿತನ ಅವರದ್ದು. ಅವರು ಒಂದು ತರಹಾ ಧೀರೇಂದ್ರ ಬ್ರಹ್ಮಚಾರಿ ಇದ್ದಂಗ. ಎಲ್ಲಾ ದೊಡ್ಡ ದೊಡ್ಡ ಮಂದಿ ಸಹವಾಸ. ಮೋಜು ಮಸ್ತಿ. ಭಾರಿ ದಿಲ್ದಾರ್ ಮನುಷ್ಯಾ ಅವರು. ಅವರ ಕೆಳಗ ಏನು ಕೆಲಸ ನಿಮ್ಮ ಮಮ್ಮಗಂದು? - ಅಂತ ಕೇಳಿದೆ.
ಹಾಂ....ಕರೆಕ್ಟ್ ಹೇಳಿದಿ. ಮೊದಲು ಬಿಂದಿಗಿ ಆಚಾರ್ರಿಗೆ ಸ್ನಾನಕ್ಕ ನೂರಾರು ಬಿಂದಿಗಿ ನೀರು ಸಪ್ಲೈ ಮಾಡೋ ಸಣ್ಣ ಕೆಲಸಕ್ಕ ಸೇರಿಕೊಂಡಿದ್ದ. ನೀರ ಜೊತಿ ಆಚಾರ್ರಿಗೆ ಬೀರ ಸಹಿತ ಬಿಂದಿಗಿ ಬಿಂದಿಗಿ ಕೊಟ್ಟನಂತ. ಆಚಾರ್ರು ಭಾಳ ಖುಷ್ ಆಗಿ ಪ್ರಮೋಷನ್ ಕೊಟ್ಟರು. ಅದು ಮೊದಲನೇ ಪ್ರಮೋಷನ್. ಒಂದಾ ವರ್ಷದಾಗ ಪ್ರಮೋಷನ್ ಸಿಕ್ಕ್ಯದ ಅವಂಗ, ಅಂದ್ರು ಅಜ್ಜಿ.
ಮತ್ತ, ಖತರ್ನಾಕ್ ಆಚಾರ್ರಿಗೆ ತಿಂಡಿ ತೀರ್ಥ ಮಸ್ತ ಸಪ್ಲೈ ಮಾಡ್ಯಾನ ಅಂದ್ರ ಪ್ರಮೋಷನ್ ಒಂದ ಏನು, ಏನೇನೋ ಸಿಕ್ಕಿಬಿಡ್ತದ.
ಪ್ರಮೋಷನ್ ಆದ ಮ್ಯಾಲೆ ಸ್ವಾಧಿ ಮಠದ ಕಟ್ಟಿ ಮ್ಯಾಲೆ ಆಚಾರ್ರು ಕೂತರು ಅಂದ್ರ ತಲಿ ಮ್ಯಾಲೆ ಭರ್ರ್ ಭರ್ರ್ ಅಂತ ನೂರಾರು ಬಿಂದಿಗಿ ನೀರು ಹೊಯ್ಯೋ ಕೆಲಸಕ್ಕ ಪ್ರಮೋಷನ್ ಸಿಕ್ಕಿತು. ಮೊದಲು ಬರೆ ನೀರು ತುಂಬಿ ತುಂಬಿ ಕೊಡ್ತಿದ್ದ. ಈಗ ಬ್ಯಾರೆ ಮಂದಿ ತುಂಬಿ ತುಂಬಿ ಕೊಡ್ತಾರ. ನಮ್ಮ ಭೀಮಸೇನ ಆಚಾರ್ರ ತಲಿ ಮ್ಯಾಲೆ ಹೊಯ್ಯತಾನ. ಆ ಕೆಲಸ ಒಂದ ವರ್ಷಾ ಮಾಡಿದ. ಹಯಗ್ರೀವ ಆಚಾರ್ರು ಮತ್ತ ಪ್ರಮೋಷನ್ ಕೊಟ್ಟರು. ಈಗಂತೂ ಆಚಾರ್ರಿಗೆ ಏಕ್ದಂ ಖಾಸಮ್ ಖಾಸ್, ಅಂತ ನಿಲ್ಲಿಸಿದರು ರಾಧಜ್ಜಿ.
ವಾರೇ.... ವಾಹ್ .. ಭಾರಿ ಪದೋನ್ನತಿ ಬಿಡ್ರೀ. ಭಾಳ ಶಾಣ್ಯಾ(???) ಇರಬೇಕು ನಿಮ್ಮ ಮೊಮ್ಮಗ. ಈಗ ಏನು ಕೆಲಸ? ಲಾಸ್ಟ್ ಪ್ರಮೋಷನ್ ಆದ ಮ್ಯಾಲೆ? - ಅಂತ ಕೇಳಿದೆ.
ಹಯಗ್ರೀವ ಆಚಾರ್ರು ಇಲ್ಲೇ ಧಾರವಾಡ ಒಳಗ ಹೊಸ ಎಲ್ಲಾಪುರ ಒಳಗ ಇದ್ದಾಗ ಅವರಿಗೆ ತಿಂಡಿ ತೀರ್ಥ ಎಲ್ಲಾ ಸರಿ ಆಗ್ತಿದ್ದಿಲ್ಲ. ತುಪ್ಪ ಅಂತು ಪ್ಯೂರ್ ಸಿಗ್ತಿದ್ದೇ ಇಲ್ಲ. ಮತ್ತ ಸುತ್ತ ಮುತ್ತ ಎಲ್ಲ ಕಟ್ಟರ್ ಆಚಾರ್ ಮಂದಿ. ಹಾಂಗಾಗಿ ಆಚಾರು ತೆಳ್ಳಗ ಇದ್ದರು. ಸಿರ್ಸಿ ಕಡೆ ಹೋದರು ನೋಡು. ಅವರ ದೇಹ ಭಾಳ ಬದಲಾಗಿ ಹೋತು. ಆ ಸ್ಮಾರ್ತರಾಕಿ ಗೊಂಬಿ ಅಂತ ಹುಡುಗಿ ಗೋಡಂಬಿ, ಮಸ್ತ ಆಕಳ ತುಪ್ಪಾ ಹಾಕಿ ಹಾಕಿ, ಹಯಗ್ರೀವಾ ಮಾಡಿ ಮಾಡಿ, ತಿನ್ನಿಸಿ ತಿನ್ನಿಸಿ, ನಮ್ಮ ಭೀಮಸೇನ ಸಪ್ಲೈ ಮಾಡಿದ ಬಿಯರ್ ಕುಡಿದು ಕುಡಿದು ಆಚಾರ್ರು ಅಸಾಧ್ಯ ಮೈ ಬಿಟ್ಟು ಬಿಟ್ಟರು. ಹೊಟ್ಟಿ ಅಂತೂ ಕೇಳ ಬ್ಯಾಡ. ಅಂತಾ ದೊಡ್ಡ ಹೊಟ್ಟಿ ಬಂದು ಬಿಟ್ಟದ. ಹಾಂಗಾಗಿ ನಮ್ಮ ಭೀಮಸೇನಗ ತಮ್ಮ ಪರ್ಸನಲ್ ಅಸಿಸ್ಟೆಂಟ್ ಅಂತ ಅಪಾಯಿಂಟ್ ಮಾಡಿಕೊಂಡು ಬಿಟ್ಟರು, ಅಂದ್ರು ಅಜ್ಜಿ.
ಭಾರಿ ಆತ ಬಿಡ್ರೀ. ಹಯಗ್ರೀವ ಆಚಾರ್ರ ಪರ್ಸನಲ್ ಅಸಿಸ್ಟೆಂಟ್ ಅಂದ್ರ ಸ್ವಾಮಿಗಳಿಗೆ ಎರಡ ಹೆಜ್ಜಿ ದೂರ. ಈಗೇನು ಕೆಲಸ ನಿಮ್ಮ ಭೀಮಸೇನ್ ರಾವ್ ಅವರದ್ದು? ಅಂತ ಕೇಳಿದೆ.
ಹೇಳಿದೆ ನೋಡು, ಹಯಗ್ರೀವ ಆಚಾರ್ರ್ರಿಗೆ ಭಾಳ ಮೈ ಮತ್ತ ಹೊಟ್ಟಿ ಬಂದು ಬಿಟ್ಟದ ಅಂತ. ಅವರಿಗೆ ಈಗ ಬೆನ್ನು ತುರಿಸಿದರ ಹಿಂದ ಕೈ ಹಾಕಿ ಕೆರಕೊಳ್ಳಿಕ್ಕೆ ತುರಿಸಿಕೊಳ್ಳಲಿಕ್ಕೆ ಆಗೋದಿಲ್ಲ. ಆ ಪರಿಸ್ಥಿತಿ ಬಂದು ಬಿಟ್ಟದ. ನಮ್ಮ ಮೊಮ್ಮಗ ಈಗ ಫುಲ್ ಟೈಮ್ ಅವರ ಬೆನ್ನು ತುರಿಸಿಕೊಡೋ ತುರ್ಕೀ ಆಫಿಸರ್ ಆಗಿ ಬಿಟ್ಟಾನ, ಅಂದ್ರು ರಾಧಜ್ಜಿ.
ಯಾವಾಗಲೂ ಆಚಾರ್ರ ಬೆನ್ನ ಹಿಂದ ಇರ್ತಾನ. ಬೆನ್ನು ತುರಿಸಿದ ಕೂಡಲೇ ಆಚಾರ್ರು ಹೊಟ್ಟಿ ಗಲಗಲ ಅಂತ ಅಲುಗಾಡಿಸಿ, ಸ್ಮೈಲಿಂಗ್ ಬುದ್ಧನ ಹಾಂಗ ಡಾನ್ಸ್ ಮಾಡ್ತಾರ. ನಮ್ಮ ಭೀಮಸೇನ ಭಕ್ತಿಯಿಂದ ಬೆನ್ನು ತುರಿಸಿ ಕೊಡ್ತಾನ. ಮಸ್ತ ಪಗಾರ್ ಅದ. ಊಟ ತಿಂಡಿ ಎಲ್ಲಾ ಅಂತೂ ಮಠದಾಗ ಫ್ರೀ. ಮ್ಯಾಲಿಂದ ದಕ್ಷಿಣಿ ಅದು ಇದು ಬರ್ತದ, ಅಂತ ಅಜ್ಜಿ ಮಾತು ನಿಲ್ಲಿಸಿ ತಮ್ಮ ಬೆನ್ನು ತುರಿಸೋ ತುರ್ಕೀ ಆಫಿಸರ್ ಮೊಮ್ಮಗನ ಬಗ್ಗೆ ಭಾಳ ಹೆಮ್ಮೆ ಪಟ್ಟುಕೊಂಡರು.
ಸ್ಮೈಲಿಂಗ್ ಬುದ್ಧನ ಗಲಗಲ ಹೊಟ್ಟಿ ಡಾನ್ಸ್ |
ನಮ್ಮ ಭೀಮಸೇನಂಗ ಒಂದು ಕನ್ಯಾ ಹುಡುಕಿ ಕೊಡೋ ಬ್ರೋಕರ್ ಭೀಷ್ಮಾಚಾರಿ. ಪುಣ್ಯಾ ಬರ್ತದ, ಅಂದ್ರು ರಾಧಜ್ಜಿ.
ನೋಡು ಬೇಕಾದ್ರ, ನೀನು ಕನ್ಯಾ ಮನಿಯವರಿಗೆ ಹೇಳಲಿಕ್ಕೂ ಅಡ್ಡಿಲ್ಲ. ಹುಡುಗಿಗೆ ಅಣ್ಣ ತಮ್ಮ ಯಾರರ ಇದ್ದು, ಅವರಿಗೆ ನೌಕರಿ ಇಲ್ಲದ ಇದ್ದರ, ನಮ್ಮ ಭೀಮಸೇನ ನೌಕರೀ ಸಹಿತ ಕೊಡಸ್ತಾನಂತ. ಚೊಲೊ ನೌಕರೀ ಅಲ್ಲೇ ಮಠದಾಗ ಕೊಡಿಸಿ ಬಿಡ್ತಾನ. ನೋಡು ಯಾವದರ ಬಡವರ ಮನಿ ಹುಡುಗಿ ಸಿಕ್ಕರ. ಇಡೀ ಕುಟುಂಬ ಉದ್ಧಾರ ಆಗಿ ಹೋಗ್ತದ ನಮ್ಮ ಭೀಮಸೇನನ ಲಗ್ನಾ ಮಾಡಿಕೊಂಡ್ರಾ. ಯಾರರ ಕನ್ಯಾ ಅದ ಏನೋ ನಿನ್ನ ನಜರಿನ್ಯಾಗ? - ಅಂತ ಕೇಳಿದ್ರು ರಾಧಜ್ಜಿ.
ಇದು ಏನೋ ಇಂಟೆರೆಸ್ಟಿಂಗ್ ಕೇಸ್ ಇದ್ದಂಗ ಅನ್ನಿಸ್ತು. ಹುಡುಗಿ ಸಿಕ್ಕರ ಹುಡುಗಿ ಅಣ್ಣ ತಮ್ಮಗ ನೌಕರಿ ಬ್ಯಾರೆ ಕೊಡಸ್ತಾನಂತ ವರ ಮಹಾಶಯ. ಏನ ನೌಕರೀ ಇರಬಹುದು????!!!!!
ಏನ ನೌಕರೀ? ಚೊಲೊ ಐಡಿಯಾ ಅದ ಬಿಡ್ರೀ. ಇಂತಾ ಹುಡುಗ್ಗ ಕನ್ಯಾ ಹುಡುಕೋದೇನು ದೊಡ್ಡ ಮಾತು? ಹೇಳ್ರೀ ಏನ ನೌಕರಿ ಅಂತ, ಅಂದು ಕಾದು ಕೂತೆ.
ನಮ್ಮ ಭೀಮಸೇನ ಸಹಿತ ಸಿರ್ಸಿ ಸ್ವಾಧಿ ಮಠದ ಕಡೆ ಹೋಗಿ ಕಡಿಮಿ ಕಡಿಮಿ ಅಂದ್ರೂ ಇಪ್ಪತ್ತೈದು ವರ್ಷದ ಮ್ಯಾಲೆ ಆಗಿ ಹೋತು. ಹಯಗ್ರೀವ ಆಚಾರ್ರರ ಸೇವಾ ಮಾಡಿಕೋತ್ತ ಮಾಡಿಕೋತ್ತ, ಅಲ್ಲೇ ಸುತ್ತಾ ಮುತ್ತಾ ಸ್ಮಾರ್ತ ಹುಡುಗ್ಯಾರು ಖರೆ ಆಕಳ ತುಪ್ಪಾ, ಗೋಡಂಬಿ ಹಾಕಿ ಮಾಡಿಕೊಟ್ಟ ಹಯಗ್ರೀವ ದಿನಕ್ಕ ನಾಕ್ನಾಕ ಸಾರೆ ಗುಳುಂ ಗುಳುಂ ಮಾಡಿಕೋತ್ತ, ಬಿಯರ್ ಅದು ಇದು ಕುಡಿದು ನಮ್ಮ ಮೊಮ್ಮಗ ಸಹಿತ ಮಸ್ತ ಮೈ ಬಿಟ್ಟು ಬಿಟ್ಟಾನ. ಹೊಟ್ಟಿ ಅಂತೂ ಬಿಡು. ಸುಮಾರ್ರು ಆಚಾರ್ರ ಸೈಜಿಗೇ ಬಂದು ಬಿಟ್ಟದ. ಪರಿಸ್ಥಿತಿ ಹೀಂಗ ಆಗಿ ಬಿಟ್ಟದ ಅಂದ್ರ, ಇವಂಗೂ ಬೆನ್ನು ತುರಿಸಿಕೊಳ್ಳಲಿಕ್ಕೆ ಆಗವಲ್ಲದು. ಅದಕ್ಕ ಅವನೂ ಸಹಿತ ತನ್ನ ಬೆನ್ನು ತುರಿಸಿಕೊಡಬಲ್ಲ ಒಬ್ಬ ಕೆಲಸದವನ್ನ ಹುಡಕಲಿಕತ್ತೇನಿ ಅಂತ ಹೇಳ್ಯಾನ. ಕನ್ಯಾ ಸಿಕ್ಕತು ಅಂದ್ರ ಹುಡುಗಿ ಅಣ್ಣ ತಮ್ಮ ಯಾರಿಗಾರ ಆ ನೌಕರಿ ಬೇಕಂದ್ರ ಕೊಟ್ಟ ಬಿಡ್ತಾನ. ಏನಂತಿ? ಯಾರರ ಕನ್ಯಾ ಇದ್ದಾರೇನೋ ಬ್ರೋಕರ್? - ಅಂದ್ರು ಅಜ್ಜಿ.
ನೋಡೋಣ ತೋಗೊಳ್ಳರೀ ಅಜ್ಜಿ. ಇಂತಾ ಒಳ್ಳೆ ಕೆಲಸ, ಹಯಗ್ರೀವ ಆಚಾರ್ರ ಅವರಂತ ರೆಫರೆನ್ಸ್, ಮತ್ತ ತನ್ನ ಹೆಂಡ್ತಿ ಅಣ್ಣಾ ತಮ್ಮಗ ಕೆಲಸ ಸಹಿತ ಕೊಡಿಸಬಲ್ಲೆ ಅನ್ನೋ ದಿಲ್ದಾರ ವರಾ ಎಲ್ಲೇ ಸಿಗ್ತಾವ್ರೀ? ಕಪಿಗಳು ಕ್ಯೂ ಹಚ್ಚಿ ನಿಲ್ತಾರ. ನೋಡ್ರೀ ಬೇಕಾದ್ರ. ನಾ ಹೊಂದೋ ಹಂತಾ ಕನ್ಯಾ ಸಿಕ್ಕ ಕೂಡಲೇ ತಿಳಿಸೇ ಬಿಡ್ತೇನಿ. ಓಕೆ? - ಅಂತ ಕಳಚಿಕೊಳ್ಳೋ ಪ್ರಯತ್ನ ಮಾಡಿದೆ. ಅಜ್ಜಿ ಭಾಳ ತಲಿ ತಿನ್ನಲಿಕತ್ತಿದ್ದರು.
ಏ.... ಹಲ್ಕಟ್ ಬ್ರೋಕರ್!!!ನಿಲ್ಲೋ!!! ಏನಂದಿ ನಮ್ಮ ಭಿಮಸೇನಗ ಕಪಿ ಅಂದ್ರ ಮಂಗ್ಯಾನ್ನ ತಂದು ಕಟ್ಟತೀಯ? ಹಾಕ್ತೇನಿ ನೋಡು ಒಂದು!!! ನೀನು ಶೇರ್ ಬ್ರೋಕರ್ ಇರಬಹುದು. ಸಿಂಹ ಹುಲಿ ಕಾಡಹಂದಿ ಮುಳ್ಳುಹಂದಿ ಮಂಗ್ಯಾ ಸಿಂಗಳೀಕ ಎಲ್ಲಾದಕ್ಕೂ ಲಗ್ನ, ಕೂಡುವಳಿ ಮತ್ತೊಂದು ಮಗದೊಂದು ರಿಷ್ತಾ ಮಾಡಿಸಿ ಕಮಿಷನ್ ಸ್ವಾಹಾ ಮಾಡತಿರಬಹುದು. ಆದ್ರ ನಮ್ಮ ಮಮ್ಮಗಂಗ ಮಾತ್ರ ಶುದ್ಧ ಬ್ರಾಹ್ಮ್ರ ಅದೂ ನಮ್ಮ ಆಚಾರ್ರ ಹುಡುಗಿನ ಬೇಕು. ತಿಳಿತೋ ಇಲ್ಲೋ? ಹಾಕ್ತೇನಿ ನೋಡು. ಕಪಿ ಅಂತ ಕಪಿ, ಅಂದು ಅಜ್ಜಿ ಚಿಟಿ ಚಿಟಿ ಚೀರಿಕೋತ್ತ ನನಗ ಮೈಲ್ಡ್ ಆಗಿ ಝಾಡಿಸಿದರು.
ರೀ..... ಅಜ್ಜಿ.... ಕಪಿ ಅಂದ್ರ ಶಾರ್ಟ್ ಆಗಿ ಕನ್ಯಾ ಪಿತೃಗಳು ಅಂತ. ಅಂದ್ರ ಹುಡುಗಿ ಮನಿ ಮಂದಿ ಅಂತ. ನಿಮ್ಮ ಮಮ್ಮಗಂಗ ಕಪಿ ಲೈನ್ ಹಚ್ಚತಾವು ಅಂದ್ರ ಭಾಳ ಮಂದಿ ಕನ್ಯಾ ಪಿತೃಗಳು ಲೈನ್ ಹಚ್ಚಿ ನಮ್ಮ ಹುಡುಗಿಗೆ ನೋಡ್ರೀ, ನಮ್ಮ ಹುಡುಗಿಗೆ ನೋಡ್ರೀ ಅಂತ ದುಂಬಾಲು ಬೀಳ್ತಾವ ಅಂತ. ಅಷ್ಟ ಮಂದಿ ಬಂದು ಮನಿ ಮುಂದ ಲೈನ್ ಹಚ್ಚಿದರ, ಸಸಾರ ಆಗಿ ಕಪಿ ನಂಬರ್ ಒಂದು ಬರ್ರಿ. ನಿಮ್ಮ ಮಂಗ್ಯಾ ಅಲ್ಲಲ್ಲ ಕನ್ಯಾ ತೋರಸ್ರೀ. ನೆಕ್ಸ್ಟ್ ಕಪಿ ನಂಬರ್ ಎರಡು ಬರ್ರೀ. ಲಗೂ. ಹಾಂ ಹಾಂ .... ಲಗೂನ ತೋರಿಸಿ ಮುಂದ ಹೋಗ್ತ ಇರಬೇಕು, ಅಂತ ಅನ್ನಲಿಕ್ಕೆ, ಮ್ಯಾನೇಜ್ ಮಾಡಲಿಕ್ಕೆ ಈಜಿ ಆಗ್ತದ ನೋಡ್ರೀ. ಅದಕ್ಕ ಕಪಿ ಅಂತ ಶಾರ್ಟ್ ಮಾಡಿ ಅಂದೆ. ಏ..... ನಿಮ್ಮ ಮಮ್ಮಗ ಭೀಮಸೇನ ಆಚಾರ್ರಿಗೆ ದ್ರೌಪದಿ ಅಂತಾ ಕನ್ಯಾ ಹುಡಿಕೇ ಬಿಡೋದು ಬಿಡ್ರೀ, ಅಂತ ಫುಲ್ ಆಶ್ವಾಸನೆ ಕೊಟ್ಟೆ.
ಅಯ್ಯೋ.... ದ್ರೌಪದಿ ಹಂತಾಕಿ ಮಾತ್ರ ಬ್ಯಾಡಪ್ಪೋ ಬ್ಯಾಡ, ಅಂತ ರಾಧಜ್ಜಿ ಜೋರಾಗಿ ಶಂಖಾ ಹೊಡೆದರು.
ಯಾಕ್ರೀ ಅಜ್ಜಿ? ದ್ರೌಪದಿ ಹಂತ್ರಾಕಿ ಯಾಕ ಬ್ಯಾಡ? ಭಾಳ ಚಂದ ಇದ್ದಳು. ಮಹಾಭಾರತ್ ಸೀರಿಯಲ್ ನೋಡಿಲ್ಲ? ರೂಪಾ ಗಂಗೂಲಿ? ನೀವು ರೂಪಾ ಅನ್ನೋ ಹೆಸರಿಂದ ಹೆದರಿದರಿ ಏನು? ನಿಮ್ಮ ಮೊಮ್ಮಗಳು ರೂಪಾ ವೈನಿ ಏನೂ ಅಷ್ಟ ಚಂದ ಇಲ್ಲ. ಸರಕಾರೀ ಸ್ತ್ರೀಲಿಂಗ ಇದ್ದಂಗ ಇದ್ದಾಳ. ಇನ್ನೆಲ್ಯಾರ ಮತ್ತೊಬ್ಬಾಕಿ ರೂಪಾ ಉರ್ಫ್ ದ್ರೌಪದಿ ಅನ್ನೋ ಇನ್ನೊಂದು ಸರಕಾರೀ ಸ್ತ್ರೀಲಿಂಗ ತಂದು ನಮ್ಮ ಹುಡ್ಗಂಗ ಕಟ್ಟಿ ಬಿಟ್ಟಾರು ಅಂತ ಏನು ನಿಮ್ಮ ಚಿಂತಿ? - ಅಂತ ಕೇಳಿದೆ.
ಇಲ್ಲಪಾ.... ದ್ರೌಪದಿ ಅಂದ್ರ ಪಾಂಚಾಲಿ. ಎಲ್ಲೆರೆ ಲಗ್ನ ಆದ ಮ್ಯಾಲೆ ನಮ್ಮ ಭೀಮಸೇನ್ ಒಬ್ಬವ ಸಾಕಾಗಿಲ್ಲ ಅಂತ ಇನ್ನೊಂದು ನಾಕ ಮಂದಿ ಹುಡುಕಿಕೊಂಡು ಹೊಂಟು ಬಿಟ್ಟಳು ಅಂದ್ರ, ನಮ್ಮ ಭೀಮಸೇನ ಲಬೋ ಲಬೋ ಅಂತ ಶಂಖಾ ಹೊಡಕೋತ್ತ ಸ್ವಾಧಿ ಸುತ್ತ ಮುತ್ತಾ ಇರೋ ಅಡಿವಿಯೊಳಗ ವನವಾಸ ಮಾಡಬೇಕಾದೀತು. ಅವೆಲ್ಲಾ ಬ್ಯಾಡ. ಭೀಮಸೇನಗ ಸಿಂಗಲ್ ಗಂಡ ಇರೋ ಹಂತಾ ಹೆಂಡ್ತೀ ಯಾರ ಇರಲಿಲ್ಲ ಏನೋ? ಮಹಾಭಾರತ ಸ್ವಲ್ಪ ನೆನಪ ಮಾಡಿ ಹೇಳು, ಅಂದ್ರು ಅಜ್ಜಿ.
ಹಾಂ.... ಒಬ್ಬಾಕಿ ಇದ್ದಳು ನೋಡ್ರೀ. ಅಕಿನ ಹಿಡಿಂಬಿ. ಅಕಿ ಹಂತವರು ನೆಡಿತದ ಏನು? ಅಕಿ ಮಾತ್ರ ಬರೆ ಭಿಮಸೇನನ್ನ ಮಾತ್ರ ಕಡೀ ತನಕ ಲವ್ ಮಾಡಿದಳು. ಒಂದ ಅಂದ್ರ ಅಕಿ ಭಾಳ ಕರ್ರಗ ಸಿಕ್ಕಾಪಟ್ಟೇ ಧಪ್ಪ ಲಠ್ಠ ಇದ್ದಳು. ರಾಕ್ಷಸರ ಪೈಕಿ ನೋಡ್ರೀ. ಅದಕ್ಕ. ನೆಡಿತದ ಏನು ನಿಮಗ ಆ ಟೈಪ್ ಕನ್ಯಾ? - ಅಂತ ಕೇಳಿದೆ.
ನೆಡಿತದ.... ಒಟ್ಟಿನ್ಯಾಗ ಒಳ್ಳೆ ಮನಿತನ ಇರಬೇಕು. ರಾಕ್ಷಸ ಕನ್ಯಾ ಇದ್ದರೂ ಓಕೆ. ಆದ್ರ ಒಟ್ಟ ಮನುಷ್ಯಾ ಇರಬೇಕು. ಲಗೂನ ಹುಡುಕೋ ಬ್ರೋಕರ್, ಅಂದ್ರು ಅಜ್ಜಿ.
ಇನ್ನೂ ಇಬ್ಬರು ಮಮ್ಮಕ್ಕಳು ತಯಾರ್ ಇದ್ದಾರ. ಅವರದ್ದೂ ಎಲ್ಲ ಹೇಳಿ ಬಿಡಲಿ ಏನು? ಮೂರು ಮಂದಿದೂ ಕೂಡೆ ನೋಡಿಬಿಡು ಕನ್ಯಾ. ಕನ್ಯಾಕ್ಕೂ ಸಸಾರ. ಅಣ್ಣ ಸೇರಲಿಲ್ಲ ಅಂದ್ರ ತಮ್ಮ. ನಮ್ಮ ಹುಡುಗುರಿಗೂ ಈಸಿ. ಅಕ್ಕ ಅಲ್ಲದಿದ್ದರ ತಂಗಿ. ಏನಂತಿ? - ಅಂದ್ರು ಅಜ್ಜಿ.
ಇವತ್ತು ಅಜ್ಜಿ ಬಿಡು ಹಾಂಗ ಕಾಣೋದಿಲ್ಲ.
ಇವತ್ತು ಅಜ್ಜಿ ಬಿಡು ಹಾಂಗ ಕಾಣೋದಿಲ್ಲ.
ಭೀಮಸೇನನ ಬೆನ್ನಿಗೆ ಹುಟ್ಟಿದವನ ರಾಮಕೃಷ್ಣ. ಆವಾ ಇಲ್ಲೇ ಧಾರವಾಡ ಒಳಗ ಮಸ್ತ ಸೆಟಲ್ ಇದ್ದಾನ. ಒಳ್ಳೆ ನೌಕರಿ ಒಳಗ ಇದ್ದಾನ. ರಾಮಕೃಷ್ಣನ ಬೆನ್ನಿಗೆ ಹುಟ್ಟಿದವನ ಸುಧನ್ವ. ಅವಾ ಪುಣೆದಾಗಾ ರೀಸೆಸ್(!) ಮಾಡ್ತಾನ. ರೀಸೆಸ್ ಮಾಡ್ಲಿಕತ್ತು ಸುಮಾರು ವರ್ಷ ಆತು. ಆದರೂ ಮುಗಿವಲ್ಲತು. ಕೈಯಾಗ ತೊಗೊಂಡು ಬಿಟ್ಟೇನಿ, ರೀಸೆಸ್ ಮಾಡಿ ಮುಗಿಸೇ ಬರವಾ ಅಂತ ಕೂತು ಬಿಟ್ಟಾನ. ಮೊನ್ನೆ ಬಂದಿದ್ದ ಸುಧನ್ವ ಪುಣೆಯಿಂದ. ಐದು ವರ್ಷದ ಮ್ಯಾಲೆ ಬಂದಿದ್ದ. ಅದೇನು ರೀಸೆಸ್ಸೋ ಏನೋ? ಅದಕ್ಕ ಈ ಸರೆ ತಾನು ಐದು ವರ್ಷದಿಂದ ಮಾಡಿದ ರೀಸೆಸ್ ಒಂದು ಚೀಲದಾಗ ತುಂಬಿಕೊಂಡು ತಂದಿದ್ದ. ತೆಗೆದು ನೋಡಿದ್ರ ಒಂದು ಪುಸ್ತಕ. ಇವನ ಬರೆದಾನಂತ. ಲಗೂನ ಡಿಗ್ರಿ ಸಿಕ್ಕ ಬಿಡ್ತದ ಅಂತ. ರೀಸೆಸ್ ಮಾಡಿ ಮುಗಿಸದ ಕೂಡಲೇ ಅವಂದು ಲಗ್ನ, ಅಂದ್ರು ಅಜ್ಜಿ.
ಏನ್ರೀ ಅಜ್ಜಿ? ಅದೆಂತಾ ರೀಸೆಸ್ ರೀ? ಅದೂ ಐದು ವರ್ಷದಿಂದ ರೀಸೆಸ್ ಮಾಡ್ಲಿಕತ್ತಾರ ಮತ್ತ ಅದರ ಮ್ಯಾಲೆ ಪುಸ್ತಕ ಬ್ಯಾರೆ ಬರದಾನ ನಿಮ್ಮ ಮಮ್ಮಗ ಅಂದ್ರ, ಯಾಕ ಅವರಿಗೆ ಕಿಡ್ನೀ ಫೇಲ್ ಆಗಿ ಡಯಾಲಿಸಿಸ್ ಮ್ಯಾಲೆ ಪುಣೇದಾಗ ದವಾಖಾನಿಯೋಳಗ ಇಟ್ಟಿರಿ ಏನು? ಅದಕ್ಕ ಅಷ್ಟು ರೀಸೆಸ್ಸ್ ಮಾಡ್ಲಿಕತ್ತಾನ ಅನ್ನಸ್ತದ. ಕಿಡ್ನಿ ಫೇಲ್ ಆದ ಮಂದಿಗೆ ಯಾರು ಕನ್ಯಾ ಕೊಡ್ತಾರ್ರೀ? ಆದರೂ ಏನರ ಭಾನಗಡಿ ಮಾಡಿ ಒಂದು ಕನ್ಯಾ ಹಿಡದು ತಂದು ಕಟ್ಟೇ ಬಿಡೋಣ ತಡೀರಿ. ಚಿಂತಿ ಬ್ಯಾಡ, ಅಂದೆ ನಾನು.
ಏ!!!!!!! ಅಪಶಕುನ ಮುಂಡೆ ಗಂಡ ಬ್ರೋಕರ್!! ಸೂಡ್ಲಿ !!! ನಮ್ಮ ಸಣ್ಣ ಮೊಮ್ಮಗ ಸುಧನ್ವಾಚಾರಿ ಪುಣೆ ಯೂನಿವರ್ಸಿಟಿ ಒಳಗ ರೀಸೆಸ್ಸ್ ಮಾಡ್ಲಿಕತ್ತಾನ ಅಂದ್ರ ಕಿಡ್ನಿ ಫೇಲ್ ಅನ್ತಿಯಲ್ಲೋ. ಅನಿಷ್ಟ ರಂಡ ಮುಂಡೆ ಗಂಡ. ರೀಸೆಸ್ಸ್ ಅಂದ್ರ ಸಂಶೋಧನೆ. ತಿಳೀತ? ಮ್ಯಾಟ್ರಿಕ್ ಪಾಸು ಆಗಿಯೋ ಇಲ್ಲೋ? ಇಲ್ಲ ಅನ್ನಸ್ತದ. ಅದಕ್ಕ ನೀ ಜನಕ್ಕ ದನಕ್ಕ ಮದ್ವಿ ಮಾಡ್ಸೋ ಬ್ರೋಕರ್ ಆಗಿ. ಹಾಳಾದವನ. ದನಾ ಕಾಯಿ, ಅಂತ ಅಜ್ಜಿ ಬೈದರು.
ಈಗ ಗೊತ್ತಾತು. ಅಜ್ಜಿ ರಿಸರ್ಚ್ ಗೆ ರೀಸೆಸ್ಸ್ ಅಂದು ಎಲ್ಲಾ ಗೊಂದಲಾ ಎಬ್ಬಿಸಿದ್ದರು. ಇರಲಿ ಇದೇನೋ ಒಳ್ಳೆ ಕ್ಯಾಂಡಿಡೇಟ್ ಇದ್ದಂಗ ಅದ. ನಡುವಿನ ಮಮ್ಮಗ ರಾಮಕೃಷ್ಣ ಆಚಾರಿ ಬಗ್ಗೆ ಕೇಳೋಣ. ಇಲ್ಲೇ ಸೆಟಲ್ ಆಗ್ಯಾನ ಅಂತಾರ. ಏನ ಮಾಡ್ತಾನೋ ಏನೋ?
ರೀ ಅಜ್ಜಿ.... ಈಗ ಗೊತ್ತಾತು. ನಾ ಬರೇ ಮ್ಯಾಟ್ರಿಕ್ ಅಲ್ಲಾ ಎಂಎ ಸಹಿತ ಮಾಡಿಕೊಂಡೇನಿ. ಉಲ್ಟಾ ಸೀದಾ ಏನರ ಅನ್ನಬ್ಯಾಡ್ರೀ. ಏನೋ ಪಾಪ ಹಿರೇ ಮಂದಿ ಅಂತ ಬಿಟ್ಟರ ಏನೇನೋ ಬೈತಿರಲ್ಲಾ? ಹಾಂ? ಈಗ ನಿಮ್ಮ ರಾಮಕೃಷ್ಣ ಬಗ್ಗೆ ಹೇಳ್ರೀ ಸ್ವಲ್ಪ, ಅಂತ ಸ್ವಲ್ಪ ಸಿಟ್ಟಿಲೆ ಹೇಳಿದೆ.
ಅಯ್ಯೋ.... ಬ್ರೋಕರ್ ಭೀಷ್ಮಾಚಾರ್ರ, ಶಟಗೊಂಡ್ರೀ? ಎಮ್ಮಿ ಕಟ್ಟಿಗೊಂಡೀರಿ ಏನು? ಏನು ಮಾಡಲಿಕ್ಕೆ ಬರ್ತದ? ಭಾಳ ತುಟ್ಟಿಯ ದಿನಗಳು. ನಿಮಗಂತೂ ನಮ್ಮ ಮಮ್ಮಕ್ಕಳ ಹಾಂಗ ನೌಕರೀ ಚಾಕ್ರೀ ಇದ್ದಂಗ ಇಲ್ಲ. ಮ್ಯಾಲಿಂದ ಸಂಸಾರ. ಅದಕ್ಕ ಈ ಲಗ್ನದ ಬ್ರೋಕರ್ಕೀ, ಎಮ್ಮಿ ಸಾಕೋದು, ಹಾಲ ಮಾರೋದು ಏನೇನೋ ಮಾಡಿಕೊಂಡು ಜೀವನಾ ಮಾಡ್ಲೀಕತ್ತೀರಿ ಅನ್ನಸ್ತದ. ನಂಬಿದವರನ್ನ ದೇವರು ಕೈ ಬಿಡಂಗಿಲ್ಲ. ಹಾಂ.... ಏನ್ ಕೇಳಿದ್ರೀ? ನಮ್ಮ ರಾಮಕೃಷ್ಣನ ಬಗ್ಗೆ.... ಹೇಳ್ತೀನಿ ತಡೀರಿ. ಸ್ವಲ್ಪ ಬಚ್ಚಲಕ್ಕ ಹೋಗಿ ಬಂದು ಬಿಡ್ತೇನಿ. ಭಾಳ ಹೊತ್ತಾತು ಮಾತಾಡಿಕೋತ್ತ ಕೂತು. ಸ್ವಲ್ಪ ಪ್ರೆಸರ್ ಬಂದು ಬಿಟ್ಟದ. ವತ್ರಾ.... ಅನ್ನಕೋತ್ತ ಹುಚ್ಚ ಹಾಪ್, ಕಿವಿ ತಗಡ ಆದ ಅಜ್ಜಿ ಎದ್ದು ಹೋತು.
ಎಂಎ ಡಿಗ್ರಿ ಮಾಡ್ಕೊಂಡೇನಿ ಅಂದ್ರ ಎಮ್ಮಿ ಕಟ್ಟಿಯೇನು? ಅಂತ ಹಾಪರ ಗತೆ ಕೇಳತದ ಸೂಡ್ಲಿ ಮುದುಕಿ. ಲಗೂನ ಇನ್ನೊಬ್ಬವನ ಕಥಿ ಕೇಳಿಕೊಂಡು, ಅಂಡು ತಟ್ಟಿ ಪೆಕಪೆಕಾ ಅಂತ ನಕ್ಕೊತ್ತ, ಲಗೂನ ಜಾಗ ಖಾಲಿ ಮಾಡಬೇಕು.
ವಾಪಸ್ ಬಂತು ಅಜ್ಜಿ. ಹಲ್ಕಾ ಆಗಿ.
ರಾಮಕೃಷ್ಣ ಇಲ್ಲೇ ಸಿನೆಮಾ ಥೀಯೇಟರ್ ಒಳಗ ಕೆಲಸ ಮಾಡ್ತಾನ. ಮನಿಯೊಳಗ ಇರತಾನ. ಅಪ್ಪ ಅವ್ವನ ಜೊತಿ. ಬಾಕಿ ಇಬ್ಬರೂ ದೂರ ಇದ್ದಾರ ನೋಡು. ಅದಕ್ಕ ಇವ ಮನಿಯೊಳಗ ಇರ್ತಾನ. ಒಳ್ಳೆ ಕೆಲಸ ಅದ ಅವಂಗ ಸಿನಿಮಾ ಥೇಟರ್ ಒಳಗ. ಅದ ಮಂಗ...ಲಾ ಥೇಟರ್ ಒಳಗ. ಮಾಲಕರಿಗೆ ಇವ ಅಂದ್ರ ಅಷ್ಟು ಕೇವಲ, ಅಂದ್ರು ಅಜ್ಜಿ.
ಏನು ಮಂಗಳಾ ಥೇಟರ್ ಒಳಗ ಟಿಕೆಟ್ ಮಾರೋ ಕೆಲಸನೋ? ಅಥವಾ ಬಾಗಲದಾಗ ಟಿಕೆಟ್ ಹರಿಯೋ ಕೆಲಸನೋ? ಅಂತ ಸ್ವಲ್ಪ ಕುಹಕದಿಂದ ಕೇಳಿದೆ.
ಒಬ್ಬ ಅಣ್ಣ ಸ್ವಾಧಿ ಮಠದದಾಗ ದೊಡ್ಡ ಆಚಾರ್ರ ಬೆನ್ನು ಕೆರೆಯವ. ಇನ್ನೊಬ್ಬ ತಮ್ಮ ರೀಸೆಸ್ ಮಾಡವ. ಅಂತವರ ನಡುವಿನವ ಸಿನಿಮಾ ಥೇಟರ್ ಒಳಗ ಇನ್ನೆಂತಾ ಕೆಲಸಾ ಮಾಡಿಯಾನು ಅಂತ ಅಸಡ್ಡೆ.
ಏ..... ಮಳ್ಳ ಮುಂಡೆ ಗಂಡ ಬ್ರೋಕರ್. ಏನಂತ ತಿಳದೀ ನಮ್ಮ ರಾಮಕ್ರಿಷ್ಣಂಗ? ಹಾಂ? ಚಾಸ್ಟಿ ಏನು? ನಮ್ಮ ಹುಡುಗ್ಗ ಮಂಗಳಾ ಥೇಟರ್ ಒಳಗಾ ಬ್ಯಾಟರಿ ತೋರ್ಸೀ ತೋರ್ಸೀ ಮಂದಿ ಸೀಟ್ ಮ್ಯಾಲೆ ಕೂಡಸ್ತಾನ. ಅದ ಅವಂದು ಕೆಲಸ. ಮಾಲಕರಿಗೆ ಭಾಳ ರೊಕ್ಕಾ ಸೇವ್ ಮಾಡಿ ಕೊಟ್ಟಾನ. ಅದಕ್ಕ ಅವರೂ ಸಹ ಖುಷ್ ಆಗಿ ಮಸ್ತ ಬೋನಸ್ ಅದು ಇದು ಕೊಟ್ಟಾರ. ಎಲ್ಲಾ ಮೂವಿ ಪುಕ್ಕಟ ನೋಡಿ ಬಿಡ್ತಾನ. ಮುಂದ ಲಗ್ನ ಆದ ಮ್ಯಾಲೆ ಹೆಂಡ್ತೀ ಕಂಪ್ಲೇಂಟ್ ಮಾಡೋ ಹಾಂಗ ಇಲ್ಲ. ರಿಲೀಸ್ ಆಗದೇ ಇರೋ ಸಿನಿಮಾ ಸಹಿತ ತೋರಿಸಿ ಬಿಡ್ತಾನ. ಹಾಂಗ ಇದ್ದಾನ. ಬ್ಯಾಟರಿ ಅಂತೂ ಇಷ್ಟ ಚಂದ ಬಿಡ್ತಾನ ಅಂದ್ರ ಮನ್ನೆ ನಮ್ಮ ಬಾಜೂ ಮನಿ ಪದ್ದಕ್ಕಾ ಸಿನಿಮಾ ನೋಡಿ ಬಂದವರು ಎರಡು ದಿವಸ ಕಣ್ಣು ಬಿಡಲಿಲ್ಲ. ಅಷ್ಟ ಮಸ್ತ ಬ್ಯಾಟರಿ ಬಿಡ್ತಾನ, ಅಂತ ಹೇಳಿ ರಾಧಜ್ಜಿ ತಮ್ಮ ಮಮ್ಮಗನ್ನ ಎರ್ರಾ ಬಿರ್ರಿ ಹೊಗಳಿ ಬಿಟ್ಟರು.
ಬ್ಯಾಟರಿ ಬ್ರಹ್ಮಚಾರಿ ರಾಮಕೃಷ್ಣ ಆಚಾರಿ.
ಹಾಂಗ? ಹ್ಯಾಂಗ ಬ್ಯಾಟರಿ ಬಿಡ್ತಾನ ಅಂತ ಹೇಳಿದ್ರು ನಿಮ್ಮ ಬಾಜೂ ಮನಿ ಪದ್ದಕ್ಕ? - ಅಂತ ಕೇಳಿದೆ ಅಜ್ಜಿನ್ನ.
ನಿಮ್ಮ ರಾಮಕೃಷ್ಣ ಏನು ಪ್ರಖರವಾಗಿ ಬ್ಯಾಟರಿ ಬಿಡ್ತಾನ್ರೀ ರಾಧಾಬಾಯಾರ? ನನ್ನ ನೋಡಿದವನ ಪದ್ದಾ ಮಾಮಿ ಪದ್ದಾ ಮಾಮಿ .... ಸಿನಿಮಾಕ್ಕ ಬಂದೀರಿ? ಅಂತ ಅನ್ನಕೋತ್ತ ಸೀದಾ ಕಣ್ಣಿಗೆ ಬಿಟ್ಟ ನೋಡ್ರೀ ಬ್ಯಾಟರಿ. ಮೂರ್ ತಾಸ ಸಿನಿಮಾ ಹೋಗ್ಲೀ ನಂತರ ಎರಡು ದಿವಸ ಕಣ್ಣು ಬಿಡಲಿಕ್ಕೆ ಆಗಲಿಲ್ಲ. ಆ ಪರಿ ಬ್ಯಾಟರಿ ಬಿಡ್ತಾನ ನಿಮ್ಮ ಹುಡಗ. ಅದೂ ಎಂತಾ ಬ್ಯಾಟರಿ ಇಟ್ಟಾನ ಅಂತೀರಿ? ದೊಡ್ಡ ಹೊನಗ್ಯಾ ಸೈಜಿಂದು. ರಾತ್ರಿ ಶಿಕಾರಿ ಮಾಡಲಿಕ್ಕೆ ಹೋಗವರು ಹಿಡಕೊಂಡು ಹೋಗಿ ಪ್ರಾಣಿ ಕಣ್ಣಿಗೆ ಬಿಡ್ತಾರಲ್ಲ, ಹಂತಾದ್ದು. ಹೀಂಗ ಬ್ಯಾಟರಿ ಬಿಟ್ಟು ಬಿಟ್ಟು ಎಷ್ಟು ಮಂದಿ ಕುಡ್ಡ ಮಾಡಿ ಹಾಕ್ಯದೋ ಪಾಪಿ ಮುಂಡೇದು. ಸ್ವಲ್ಪ ನೋಡಿಕೊಂಡು ಬ್ಯಾಟರಿ ಮಸಡಿ ಮ್ಯಾಲೆ ಬಿಡಲಿಕ್ಕೆ ಹೇಳ್ರೀ. ಮಂದಿ ಏಕ್ದಂ ಕಣ್ಣು ಕಾಣದ ಕತ್ತಲಿ ಥೇಟರ್ ಒಳಗ ಬಿದ್ದು ನಡ ಗಿಡ ಬುಡ ಮತ್ತೊಂದು ಮುರಕೊಂಡು ಏನಾರಾ ಆದ್ರಾ? - ಅಂತ ಹೇಳಿದರಂತ ಪಕ್ಕದ ಮನಿ ಪದ್ದಕ್ಕ ರಾಧಜ್ಜಿಗೆ.
ಹೋಗ್ಗೋ ರಾಧಜ್ಜಿ!!!!ಭಾರಿ ಇದ್ದಾನ ಅಂತ ಕಾಣಸ್ತದ ನಿಮ್ಮ ನಡುವಿನ ಈ ಮೊಮ್ಮಗ ರಾಮಕೃಷ್ಣ. ಅದೇನ ಎಲ್ಲಾ ಬಿಟ್ಟು ಮಂಗಳಾ ಥೇಟರ್ ಒಳಗ ಯಾಕ ನೌಕರಿಗೆ ಸೇರಿಕೊಂಡ? ಏನ ಖಾಸ ಅದ ಆ ಥೇಟರ್ ಒಳಗ? ನೋಡಿದ್ರ ಸೀಟ್ ತುಂಬಾ ತಗಣಿ ತುಂಬ್ಯಾವ. ಎಷ್ಟೆಷ್ಟೋ ಚೊಲೊ ಚೊಲೊ ಥೇಟರ್ ಅವ ಅಲ್ಲಾ? ಕೆಲಸ ಅಂತೂ ಬ್ಯಾಟರಿ ಬಿಡೋದ ಹೊರತು ಮತ್ತೇನೂ ಇಲ್ಲ. ಯಾಕ ಯಾಕ ಮಂಗಳಾ ಥೇಟರ್? - ಅಂತ ಕೇಳಿದೆ.
ಏ.... ಆ ಮಂಗಳಾ ಥೇಟರ್ ಒಳಗ ದೀಪ ಸರಿ ಇಲ್ಲ. ಜಾಸ್ತಿ ಬ್ಯಾಟರಿ ಸೆಲ್ ಖರ್ಚ ಆಗ್ತಿದ್ದವಂತ ನಮ್ಮ ರಾಮಕೃಷ್ಣ ಬರೋಕಿಂತ ಮೊದಲು. ಬ್ಯಾಟರಿ ಸೆಲ್ ಖರೀದಿ ಮಾಡಿ ಮಾಡಿ ಮಾಲಕರು ದಿವಾಳಿ ತೆಗಿಲಿಕ್ಕೆ ಹೊಂಟಿದ್ದರು. ಯಾಕಂದ್ರ ಮೊದಲಿದ್ದವ ಸೀಟಿಗೆ ಬ್ಯಾಟರಿ ಬಿಟ್ಟು, ಅಲ್ಲೆ ಹೋಗಿ ಕೂಡ್ರಿ, ಇಲ್ಲೆ ಬಂದು ಕೂಡ್ರಿ ಅಂತಿದ್ದ. ಮಂದಿ, ಇನ್ನೊಮ್ಮೆ ಬ್ಯಾಟರಿ ತೋರಿಸಪಾ, ಇನ್ನೊಮ್ಮೆ ತೋರಿಸಪಾ, ಅಂದು ಅಂದು ಸಿಕ್ಕಾಪಟ್ಟೆ ಬ್ಯಾಟರಿ ಸೆಲ್ ಖರ್ಚ ಆಗಿ ಹೋಗತಿದ್ದವು. ನಮ್ಮ ರಾಮಕೃಷ್ಣ ಏನು ನೌಕರಿ ಶುರು ಮಾಡಿದ ನೋಡು, ಸೀದಾ ಮಂದಿ ಮಾರಿಗೇ ಅದೂ ಡೈರೆಕ್ಟ್ ಕಣ್ಣಿಗೆ ಬ್ಯಾಟರಿ ಬಿಡಲಿಕ್ಕೆ ಹತ್ತಿಬಿಟ್ಟ. ಮಂದಿ ಫುಲ್ ಕುಡ್ಡ ಆಗಿ, ಸಾಕು ಬ್ಯಾಟರಿ ಬಿಡೋದು, ಬಂದ್ ಮಾಡ ಹುಸ್ಸೂಳೆಮಗನ, ಅಂತ ಅಂದು ಕತ್ತಲದಾಗ ಅವರಾಗಿ ಅವರ ಸೀಟ್ ಹುಡುಕಿಕೊಳ್ಳಲಿಕ್ಕೆ ಶುರು ಮಾಡಿದ್ರು. ಬ್ಯಾಟರಿ ಸೆಲ್ ಖರ್ಚ ಆಗೋದು ಕಮ್ಮಿ ಆತು. ಥೇಟರ್ ಮತ್ತ ಲಾಭದಾಗ ಬಂತು. ಅದಕ್ಕ ಮಾಲಿಕರೂ ಸಹ ಖುಷ್ ಆಗಿ ನಮ್ಮ ರಾಮಕೃಷ್ಣ ಗ ಒಟ್ಟ ಬಿಟ್ಟ ಕೊಡಂಗಿಲ್ಲ. ತಿಳೀತ? - ಅಂತ ಬ್ಯಾಟರಿ ಬ್ರಹ್ಮಚಾರಿ ಹ್ಯಾಂಗ ಮಾಲಿಕರ ಏಕ್ದಂ ಖಾಸಮ್ ಖಾಸ್ ಆದ ಅಂತ ಹೇಳಿದ್ರು ರಾಧಜ್ಜಿ.
ಭಾರಿ ಇದ್ದಾರ ಬಿಡ್ರೀ ನಿಮ್ಮ ಮೂರು ಮಂದಿ ಮಮ್ಮಕ್ಕಳು. ಇವರನ್ನ ಲಗ್ನ ಆಗೋರು ಭಾಳ ಪುಣ್ಯಾ ಮಾಡಿರಬೇಕು. ಹುಡುಕೋಣ ಬಿಡ್ರೀ. ಇಂತಾ ಪುರುಷ ರತ್ನಗಳಿಗೆ ಏಕ್ದಂ ಮಸ್ತ ಕನ್ಯಾ ರತ್ನಗಳ ಕಾದಿರ್ತಾವ. ನಾ ಬರಲಿ ಅಜ್ಜಿ? - ಅಂತ ಅಪ್ಪಣೆ ಕೇಳಿದೆ.
ಏ..... ಬ್ರೋಕರ್. ಒಂದು ಮಾತು. ನಿನ್ನ ಮದಿವಿ ಯಾರ ಮಾಡಿದ್ರು? - ಅಂತ ಕೇಳಿದ್ರು ಅಜ್ಜಿ.
ಹೇ .... ಹೇ .... ಅಜ್ಜಿ ನಾ ಲಗ್ನಾ ಗಿಗ್ನಾ ಮಾಡಿಕೊಂಡೇ ಇಲ್ಲರೀ. ಆರಾಮ ಬಿಂದಾಸ ಬ್ರಹ್ಮಚಾರಿ ನಾವು. ಹೀಂಗ ಏನೋ ಸೇವಾಕ್ಕ ಅಂತ ಮದ್ವೀ ಬ್ರೋಕರ್ ಗಿರಿ ಮತ್ತೊಂದು ಮಾಡಿಕೊಂಡು ಇದ್ದೇವಿ ನೋಡ್ರೀ, ಅಂತ ನಾ ಹೇಳಿದೆ.
ಕಲ್ಸೂಳಿಮಗನ !!!!ಸ್ವಂತಕ್ಕ ಒಂದು ನೌಕರಿ ಇಲ್ಲ. ಒಂದು ಚಾಕರಿ ಇಲ್ಲ. ಚೋಕ್ರೀ ಅಂತೂ ಇಲ್ಲೇ ಇಲ್ಲ. ಅದರ ಮ್ಯಾಲೆ ಲಗ್ನದ ಬ್ರೋಕರ್ ದಂಧಾ ಮಾಡಲಿಕ್ಕೆ ಹೊಂಟೀ ಅಲ್ಲೋ? ಪಾಪ ಅನ್ನಸ್ತದ. ಈ ಧಂಧೆ ಒಳಗ ನಿನಗ ರೊಕ್ಕಾ ಹುಟ್ಟುದಿಲ್ಲೋ. ಎಮ್ಮಿ ಕಟ್ಟಿದಿ. ಇನ್ನು ಬೇಕಾದ್ರ ಹಂದಿ ಗಿಂದಿನೂ ಸಾಕು. ಈ ಮದ್ವಿ ಬ್ರೋಕರ್ ದಂಧಾ ನಿನಗ ಹೇಳಿದ್ದು ಅಲ್ಲೋ ಭೀಷ್ಮಾಚಾರಿ, ಅಂದ ಅಜ್ಜಿ ಸಂತಾಪ ವ್ಯಕ್ತ ಪಡಿಸಿದರು.
ಹಾಂಗೇನೂ ಇಲ್ಲ ಬಿಡ್ರೀ ಅಜ್ಜಿ. ಎಷ್ಟೋ ಮಂದಿ ಕುರಿ ಕೋಳಿ ದನ ಕಡಿಯವರು ಒಟ್ಟ ನಾನ್ವೆಜ್ ತಿನ್ನಂಗಿಲ್ಲ. ಎಷ್ಟೋ ಮಂದಿ ಶೆರೆ ಭಟ್ಟಿ ಇಳಿಸವರು ಒಟ್ಟ ಶೆರೆ ಕುಡಿಯಂಗಿಲ್ಲ. ಹಾಂಗ ನಾವೂ. ಮತ್ತ ನಮ್ಮ ಪರಮ ಪೂಜ್ಯ ಸ್ವಾಮಿಗಳು ಸಹಿತ ಮದವಿ ಗಿದವಿ ಏನೂ ಆಗದ ಅದರ ಬಗ್ಗೆ ಎಲ್ಲ ತಿಳ್ಕೊಂಡು ಬಿಟ್ಟಿದ್ದರು. ಗೊತ್ತಿರಬೇಕಲ್ಲ ನಿಮಗ? - ಅಂತ ಅಜ್ಜಿ ಕಾಲು ಎಳೆದೆ. ಇಲ್ಲಿ ತನಕ ಎಳಕೊಂಡು ಬಂದೇನಿ, ಇನ್ನೂ ಒಂದಿಷ್ಟು ಕ್ಲೈಮಾಕ್ಸ್ ಗೆ ತೊಗೊಂಡು ಹೋಗಿ, ಅಜ್ಜಿ ಕಡೆ ಚಿಟಿ ಚಿಟಿ ಚೀರಿಸಿ, ಅಕಿ ಬಿಪಿ ಶುಗರ್ ಹೆಚ್ಚ ಮಾಡಿಸೇ ಮನಿಗೆ ಹೋಗುದು.
ನಿನ್ನ ತಲಿ. ಏನಂತ ಉದಾಹರಣೆ ಕೊಡ್ತೀ? ಮಾಂಸಾ ಕಡಿಯವರಂತ. ಶೆರೆ ಮಾರವರಂತ. ಅವರೂ ಮತ್ತ ಮದ್ವಿ ಬ್ರೋಕರ್ ಎಲ್ಲಾ ಒಂದ ಏನು? ಏನು ಹೋಲಿಕಿ ಮಾಡ್ತಿಯೋ ಅಸಡ್ಡಾಳ ಮುಂಡೇದ? ಮತ್ತ ಯಾವ ಸ್ವಾಮಿಗಳ ಬಗ್ಗೆ ಹೇಳಲಿಕತ್ತಿ? ಲಗ್ನ ಆಗದನ ಎಲ್ಲಾ ಕಲಿತು ಬಿಟ್ಟಾರಂತ? ಯಾವ ಕಳ್ಳ ಸ್ವಾಮೀ ಅವರು? ಹಾಂ? ಹಾಂ? - ಅಂತ ಅಜ್ಜಿ ಕೇಳಿದರು.
ಅವರರಿ ಅಜ್ಜಿ. ನಮ್ಮ ಪರಮ ಪೂಜ್ಯ ಆದಿ ಶಂಕರಾಚಾರ್ಯರು. ಅವರು ಪರಕಾಯ ಪ್ರವೇಶ ಮಾಡಿ ಮೂರ್ಮೂರ ಮಂದಿ ರಾಣಿಯರಿಗೆ ಒಂದ ಸಲಕ್ಕ ಪ್ರೀತಿ ಮತ್ತೊಂದು ಎಲ್ಲಾ ಮಾಡಿ ಬಂದಿದ್ದು ನಿಮಗ ಗೊತ್ತಿರಬೇಕಲ್ಲ? ಅವರ ನಮಗ ಆದರ್ಶ, ಅಂತ ಹೇಳಿ ಕುಹಕದ ನಗಿ ನಕ್ಕೆ.
ಅಂದ್ರ ನೀ ನಮ್ಮ ಪೈಕಿ ಅಲ್ಲ? ನಿಂಬಿ ಹುಳಿ ಸ್ಮಾರ್ತ ಏನು? ಹೇಳೋ!! ಹೇಳೋ!! ಮೈಲಿಗಿ ಮುಂಡೇದ, ಪೀಡಿ ಮುಂಡೇದ, ನಾಯಿ ಮುಂಡೇದ, ಅನಿಷ್ಟ ಮುಂಡೇದ, ದೆವ್ವ ಮುಂಡೇದ ಅಂತ ಅಜ್ಜಿ ಸಾವಕಾಶ ಗರಂ ಆದರು. ಮುಂಡೆವಾಡಿ ಅನ್ನೋ ಊರಾಗೂ ಸಹ ಅಷ್ಟು ಮುಂದಿ ಮುಂಡ್ಯಾರು ಇದ್ದಾರೋ ಇಲ್ಲೋ ಗೊತ್ತಿಲ್ಲ.
ಏ.... ನಾ ನಿಂಬಿ ಹುಳಿ ಬ್ರಾಹ್ಮಣ ಅಲ್ಲ ಬಿಡ್ರೀ. ನಾನು ಅಪ್ಪೆ ಹುಳಿ ಬ್ರಾಹ್ಮಣ, ಅಂದು ಅಜ್ಜಿಗೆ ಟಾಂಗ ಕೊಟ್ಟೆ.
ಮಜ್ಜಿಗಿ ಹುಳಿ ಗೊತ್ತದ. ಆದ್ರ ಏನಿದು ಅಪ್ಪೆ ಹುಳಿ? ಮತ್ತೇನು ಅಪ್ಪೆ ಹುಳಿ ಹಣಿಗೆ ಹಚ್ಚಗೊತ್ತಿ ಏನು ದರಿದ್ರವನ? - ಅಂತ ಅಜ್ಜಿ ಝಾಡಿಸಿದರು.
ನಗು ಬಂತು. ಅಪ್ಪೇ ಹುಳಿ ಹವ್ಯಕರ ಟ್ರೇಡ್ ಮಾರ್ಕ್ ಡಿಶ್.
ಹೌದ್ರೀ ಅಜ್ಜಿ. ನಾ ಹವ್ಯಕ ಬ್ರಾಹ್ಮಣ. ಸಿರ್ಸಿ ಕಡೆ ಮನುಷ್ಯಾ. ಹ್ಯಾಂಗಿತ್ತು ಜೋಕ್? ಹ್ಯಾಂಗ ಮಂಗ್ಯಾ ಆದ್ರೀ? ಹಾಂ?ಹಾಂ? - ಅಂದು ಕಣ್ಣು ಹೊಡೆದು ಸೀಟಿ ಹೊಡದ ಬಿಟ್ಟೆ.
ಅಯ್ಯೋ!!!!ಮಹಾ ಮೈಲಿಗಿ ಮಾಡಿ ಬಿಟ್ಟಿ ಅಲ್ಲೋ!!!!!ಸಿರ್ಸಿ ಕಡೆ ಅಂದ್ರ ಮೀನಾ ತಿನ್ನೋ ಕಾರವಾರಿ ಬ್ರಾಹ್ಮಣ ಏನು? ನನಗ ನಿನ್ನ ಹಣಿ ಮ್ಯಾಲೆ ಗೂಟದ ನಾಮ ಇಲ್ಲದ್ದು ನೋಡಿಯೇ ತಿಳಿಬೇಕಿತ್ತು ನೀ ನಮ್ಮ ಪೈಕಿ ಅಲ್ಲ ಅಂತ. ನನ್ನ ಬುದ್ಧಿ ಎಲ್ಲೋ ನಿನ್ನ ಎಮ್ಮಿ ಗತೆ ಹುಲ್ಲು ಮೇಯಲಿಕ್ಕೆ ಹೋಗಿತ್ತು. ಗೊತ್ತ ಆಗಲಿಲ್ಲ. ಅನಿಷ್ಟ ಮೈಲಿಗಿ ಮುಂಡೆ ಗಂಡನ್ನ ಮನಿಯೊಳಗ ಕರದು, ಚಾ ಕೊಟ್ಟು, ನಮ್ಮ ಮೊಮ್ಮಕ್ಕಳಿಗೆ ಕನ್ಯಾ ಹುಡುಕಿ ಕೊಡೋ ಅನ್ನಲಿಕತ್ತೇನಿ. ನೀ ಸ್ಮಾರ್ತ ಮುಂಡೆ ಗಂಡ ನಮ್ಮ ಹುಡುಗುರಿಗೆ ಕನ್ಯಾ ತೋರಿಸಿ ಲಗ್ನಾ ಮಾಡೋದು ದೂರ ಉಳಿತು. ನಿಮ್ಮ ಶಂಕಾರಾಚಾರ್ಯರ ಹಾಂಗ ದೆವ್ವದಾಂಗ ಪರಕಾಯ ಪ್ರವೇಶ ಅದು ಇದು ಮಾಡೋದು ಕಲಿಸಿ, ದೆವ್ವಗಳ ಹಾಂಗ ಸಂಸಾರ ಮಾಡೋದನ್ನ ಕಲಿಸೋ ಪೈಕಿ ನೀ. ಜಗಾ ಖಾಲಿ ಮಾಡು. ಇಲ್ಲ ಪೊಲೀಸರಿಗೆ ಫೋನ್ ಮಾಡ್ತೇನಿ. ಕಸಬರಿಗಿಲೇ ಹಾಕ್ಲೇನು ನಾಕು? ಹಾಂ?ಹಾಂ? - ಅಂತ ಅಜ್ಜಿ ಸುತ್ತಾ ಮುತ್ತಾ ಕಸಬರಿಗಿ ಹುಡಕಲಿಕ್ಕೆ ಶುರು ಮಾಡಿದ್ರು.
ಅಜ್ಜಿಗೆ ಕಾಡ್ಸಿದ್ದು ಸಾಕು. ಮತ್ತೆಲ್ಲೆರೆ ಅಜ್ಜಿ ಭಾಳ ರೈಸ್ ಆಗಿ ಗೊಟಕ್ ಅಂದ್ರ ನಮಗ ಬ್ರಹ್ಮಹತ್ಯಾ ದೋಷ ಬರಬಾರದು ಅಂತ ಲಗೂ ಲಗೂ ಮನಿ ಹೊರಗ ಬಂದೆ.
ಅಜ್ಜಿಯ ಸಹಸ್ರನಾಮಾರ್ಚನೆ ಹಿಂದ ಬಂತು.
ಅಜ್ಜಿ..... ಲಗೂನ ನಿಮ್ಮ ಮಮ್ಮಕ್ಕಳ ಕುಂಡಿ ಅಲ್ಲಲ್ಲ ಕುಂಡಲಿ, ಮಂಗ್ಯಾನ ಮಸಡಿ ಮಾಡಿ ತೆಗಿಸ್ಕೊಂಡಿರೋ ಬ್ಲಾಕ್ ಅಂಡ್ ವೈಟ್ ಫೋಟೋ ಮತ್ತ ನಮ್ಮ ಬ್ರೋಕರ್ ಬೋಣಿಗಿ ರೊಕ್ಕಾ ಎಲ್ಲಾ ಲಗೂನ ಕಳಿಸಿ ಕೊಟ್ಟು ಬಿಡ್ರೀ. ಅವು ಬಂದ ಮುಟ್ಟಿದ ಕೂಡಲೇ ನಾವು ಕನ್ಯಾ ಹುಡಕಲಿಕ್ಕೆ ಕಚ್ಚಿ ಕಟ್ಟಿಕೊಂಡು, ಅದನ್ನ ಎಷ್ಟಕ್ಕ ಬೇಕೋ ಅಷ್ಟು ಎತ್ತರಕ್ಕ ಎತ್ತಿಕೊಂಡು, ಸಮರೋಪಾದಿಯಲ್ಲಿ, ಪದ್ಧತಿ ಪ್ರಕಾರನ ಹುಡುಕಿ, ನಿಮ್ಮ ಮಮ್ಮಕ್ಕಳ ಬ್ರಹ್ಮಸೆರೆ ಬಿಡಿಸಲಿಲ್ಲ ಅಂದ್ರ ನನ್ನ ಹೆಸರ ಬ್ರೋಕರ್ ಭೀಷ್ಮಾಚಾರಿ ಅಲ್ಲ ನೋಡ್ರೀ - ಅಂತ ಹೇಳಿ ಸ್ಕೂಟರ್ ಹತ್ತಿ ಬಿಟ್ಟೆ.
ಹಾಳಾಗಿ ಹೋಗು!!! ಅದಾಗು ಇದಾಗು!!! ಸೂಡ್ಲಿ. ಹುಗೀಲಿ. ಹೆಣಾ ಎತ್ತಲಿ - ಅಂತ ಅಜ್ಜಿ ತಮ್ಮ ಸಹಸ್ರ ನಾಮಾರ್ಚನೆ ಮುಂದುವರಿಸಿಯೇ ಇದ್ದರು.
** ಬಾಳೇಸರ ವಿನಾಯಕ ಎಂಬ ಸಿರ್ಸಿ ಕಡೆ ಹಾಸ್ಯ ಕಲಾವಿದರೊಬ್ಬರು ಒಂದು ಚಿಕ್ಕ ಪ್ರಹಸನ ಮಾಡಿದ್ದರು. ಅದರಲ್ಲಿ ಕೂಡ ಹೀಗೆ ಮೂರು ಜನ ಬೇಕಾರ್ ಹವ್ಯಕ ಮಂದಿಗೆ ಹುಡುಗಿ ಹುಡ್ಕೋ ಪ್ರಯತ್ನದ ಬಗ್ಗೆ ಹಾಸ್ಯ ಇತ್ತು. ಅದು ಪೂರ್ತಿ ನಮ್ಮ ಹವ್ಯಕ ಭಾಷೆಯಲ್ಲಿ ಇತ್ತು. ಅದರಿಂದ ಕೆಲವು ಅಂಶ ಆರಿಸಿಕೊಂಡು, ಧಾರವಾಡಕ್ಕೆ ಹೊಂದುವ ಹಾಗೆ ಅಳವಡಿಸಿಕೊಂಡು, ಮತ್ತೆ ನನ್ನದೂ ಒಂದಿಷ್ಟು ಮಸಾಲೆ ಹಾಕಿ ಬರೆದಿದ್ದು ಇದು. ಬಾಳೇಸರ ವಿನಾಯಕ ಅವರ ಪ್ರಹಸನ ಸ್ಪೂರ್ತಿ ಅಂತು ಹೌದು. ನಂದೂ ಒಂದಿಷ್ಟು ಹೆಚ್ಚಿಗೆ ಇದೆ. ಅವರಿಗೆ ಒಂದು ಥ್ಯಾಂಕ್ಸ್.
** ಆದಿ ಶಂಕರರ ಪರಕಾಯ ಪ್ರವೇಶದ ವಿವರ ಇಲ್ಲಿದೆ. ಎರಡನೇಯ ಪ್ಯಾರಾ ಓದಿ.
** ಪರಕಾಯ ಪ್ರವೇಶದ ಬಗ್ಗೆ ಹಿಂದೆ ಬರೆದ ಬ್ಲಾಗ್ ಪೋಸ್ಟ್ ಇದು. ಆಸಕ್ತರು ಓದಬಹದು.
** ಪರಕಾಯ ಪ್ರವೇಶದ ಬಗ್ಗೆ ಹಿಂದೆ ಬರೆದ ಬ್ಲಾಗ್ ಪೋಸ್ಟ್ ಇದು. ಆಸಕ್ತರು ಓದಬಹದು.