Sunday, March 23, 2014

'ದಿವಾಕರ ಹೆಗಡೆ' ಎಂಬ ಪುರಾತನ ಪಂಟರ್ ನೆನಪಾದ!

೧೯೮೪, ೧೯೮೫ ರ ಟೈಮ್ ಅಂತ ನೆನಪು. ನಾವು ಇನ್ನೂ ಆರೋ ಏಳನೇ ಕ್ಲಾಸು. ಸಂಯುಕ್ತ ಕರ್ನಾಟಕ, ಇಂಡಿಯನ್ ಎಕ್ಸಪ್ರೆಸ್ ಮನೆಗೆ ಬರುತ್ತಿದ್ದ ದಿನಪತ್ರಿಕೆಗಳು. ನಾವು ದಿನಾ ತಪ್ಪದೆ, ಪೂರ್ತಿಯಾಗಿ ಓದುತ್ತಿದ್ದುದು ಸಂಯುಕ್ತ ಕರ್ನಾಟಕ ಮತ್ತು ಪಕ್ಕದ ಮನೆಯವರು ತರಿಸುತ್ತಿದ್ದ ಕನ್ನಡ ಪ್ರಭ. ಇಂಗ್ಲೀಶ್ ಪೇಪರ್ ಓದಿ ಅರ್ಥ ಮಾಡಿಕೊಳ್ಳೋವಷ್ಟು ಇಂಗ್ಲೀಶ್, ಬುದ್ಧಿ ಎರಡೂ ಇನ್ನೂ ಬಂದಿರಲಿಲ್ಲ.

ಅಮ್ಮಾ, ಈ ದಿವಾಕರ ಹೆಗಡೆ ಅಂದ್ರೆ ಯಾರೇ? ಅಂತ ಪೇಪರ್ ಓದುತ್ತ ತಾಯಿಯವರನ್ನು ಕೇಳಿದೆ.

ಯಾವ ದಿವಾಕರ ಹೆಗಡೆಯಾ? ಯಾರನ? ಕರ್ಜೀಮನೆಯಲ್ಲಿ ಪ್ರಭಾಕರ, ಮಧುಕರ ಹೇಳಿ ಇದ್ದ. ಕೆಳಗಿನ ಕೇರಿಯಲ್ಲಿ ಸತ್ನಾಣಣ್ಣಯ್ಯನ ಮಕ್ಕ ಭಾಸ್ಕರ, ಸುಧಾಕರ ಇದ್ದ. ದಿವಾಕರ ಹೇಳಿ ಯಾರೂ ಇದ್ದ ನೆನಪಿಲ್ಲಿಯೋ, ಅಂದು ಬಿಟ್ಟರು ಅಮ್ಮ.

ನಾವು ಯಾರೋ ದಿವಾಕರ ಹೆಗಡೆ ಬಗ್ಗೆ ಕೇಳಿದರೆ ಇವರು ತಮ್ಮ ತವರು ಮನೆ ಕಡೆ ಸಿರ್ಸಿ ಹತ್ತಿರದ ಹಳ್ಳಿಗಳಲ್ಲಿ ಇರೋ ತಮ್ಮ ಕಸಿನ್ ಇತ್ಯಾದಿ ಸಂಬಂಧಿಗಳ ನೆನಪು ಮಾಡಿಕೊಂಡರು. ಒಳ್ಳೆ ಕಥೆ!

ಅಯ್ಯೋ! ಹೊನ್ನೆಗದ್ದೆ ಬದಿ ಹೆಗಡೆ ಅಲ್ಲದೇ ಮಾರಾಯ್ತೀ! ಇವಾ ಯಾರೋ ಬೆಂಗಳೂರಲ್ಲಿ ಇಪ್ಪವಾ. ಪೇಪರ್ ನಲ್ಲಿ ಸುದ್ದಿ ಬಂಜು, ಅಂತ ಹೇಳಿದೆ.

ಎಂತಾ ಸುದ್ದಿ ಬಂಜು ಅವನ ಬಗ್ಗೆ? ಹಾಂ? ಅಂತ ಕೇಳಿದರು.

ಬೆಂಗಳೂರಿನ ದೊಡ್ಡ ಗೂಂಡಾ ಹೇಳಿ ಆತು. ರೌಡಿಯಳ. ಜೇಲಿಗೆ ಹಾಕಿದ್ದವಡಾ, ಅಂತ ಹೇಳಿದೆ.

ಅಯ್ಯ! ಇಷ್ಟು ದೊಡ್ಡ ಮಾಡಿ, ದಿವಾಕರ ಹೆಗಡೆ ಹೇಳಿ ಕೇಳದನ್ನ ನೋಡಿರೆ ಸಾಕು! ಯಾರೋ ದೊಡ್ಡ ಮನುಷ್ಯನನ ಹೇಳಿ ನೋಡಿರೆ ಯಾರೋ ಗೂಂಡಾನಳ, ಯಾರೋ ರೌಡಿಯಳ ಅಂಬೆ. ಮಳ್ಳ, ಅಂದ್ರು  ಅಮ್ಮ. 

ದಿವಾಕರ ಹೆಗಡೆ! ಆ ಕಾಲದ ವಿದ್ಯಾರ್ಥಿ ಧುರೀಣ ಮತ್ತು ನಾಮೀ ಗೂಂಡಾ.

ಆ ಹೆಸರು ಕೇಳಿಯೇ ಹುರುಪೆದ್ದು ಹೋಗಿತ್ತು. ಅದು ದಾವೂದ್ ಇಬ್ರಾಹಿಂ ಮುಂಬೈ ಭೂಗತ ಜಗತ್ತಿನಲ್ಲಿ ಉತ್ತಂಗಕ್ಕೆ ಬರುತ್ತಿದ್ದ ಕಾಲ. ಹೆಚ್ಚಾಗಿ ಆಗಲೇ ದಾವೂದ್ ದುಬೈಗೆ ಶಿಫ್ಟ್ ಆಗಿದ್ದ ಅಂತ ಕಾಣಿಸುತ್ತದೆ. ಸುಮಾರು ಸುದ್ದಿ ಬರುತ್ತಿತ್ತು. ಬೆಂಗಳೂರಿನಲ್ಲಿ ಸಹ ಅಂಡರ್ವರ್ಲ್ಡ್ ಮಸ್ತಾಗಿತ್ತು. ಕೋತ್ವಾಲ ರಾಮಚಂದ್ರ ಮತ್ತು ಎಂಪೀ ಜಯರಾಜ್ ಎಂಬ ಪುರಾತನ ಪಂಟರುಗಳು ಬೆಂಗಳೂರಿನ ಭೂಗತ ಲೋಕದ ಮೇಲೆ ಅಧಿಪತ್ಯ ಸಾಧಿಸಲು ರಸ್ತೆ ತುಂಬಾ ನೆತ್ತರು ಹರಿಸಿದ್ದರು. ಎಲ್ಲ ದೇವರಾಜ್ ಅರಸ್, ಗುಂಡೂರಾವ್ ಇತ್ಯಾದಿ ರಾಜಕಾರಣಿಗಳ ಕಾಲದಲ್ಲಿ ಬಲಿತಿದ್ದರು.

ಮುಂದೆ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಸರ್ಕಾರ ಬಂದ ಮೇಲೆ ರೌಡಿಗಳ ನಿಗ್ರಹ ಮಾಡುವ ನಿರ್ಧಾರ ಕೈಗೊಂಡಿತ್ತು. ಯಾಕಂದ್ರೆ ಸ್ವಲ್ಪೇ ವರ್ಷಗಳ ಹಿಂದೆ ರಾಮಕೃಷ್ಣ ಹೆಗಡೆ, ದೇವೇಗೌಡ ಮುಂತಾದ ವಿರೋಧಿ ಧುರೀಣರಿಗೇ ಮಚ್ಚಿಟ್ಟು ಆವಾಜ್ ಹಾಕುವ ಮಟ್ಟಕ್ಕೆ ಗೂಂಡಾಗಳು ಬೆಳೆದು ನಿಂತಿದ್ದರು. ನನಗೆ ರಕ್ಷಣೆ ಕೊಡಿ! ಅಂತ ವಿಧಾನ ಸೌಧದಲ್ಲೇ ದೇವೇಗೌಡರು ಅಂಬೋ ಅಂದಿದ್ದರು. ಅವರ ಕಾರಿಗೆ ಆಗಿನ ದೈತ್ಯ ರೌಡಿ ಜಯರಾಜ್ ಮಚ್ಚು ಬೀಸಿದ್ದ. ಕೊತ್ವಾಲ ರಾಮಚಂದ್ರ ಹೋಗಿ ರಾಮಕೃಷ್ಣ ಹೆಗಡೆ ಅವರ ಮಗಳಿಗೆ ಧಮಿಕಿ ಹಾಕಿ, ನಿಮ್ಮಪ್ಪನಿಗೆ ಹುಷಾರಾಗಿರಲು ಹೇಳಮ್ಮೋ! ಅಂತ  ಆವಾಜ್ ಹಾಕಿದ್ದ. ಹೀಗಾಗಿ ಅಧಿಕಾರಕ್ಕೆ ಬಂದಾಕ್ಷಣ ಜನತಾ ಪರಿವಾರ ಮಾಡಿದ ಮೊದಲ ಕೆಲಸ ಅಂದ್ರೆ, ದೊಡ್ಡ ದೊಡ್ಡ ರೌಡಿಗಳ ಮಟ್ಟ ಹಾಕಿದ್ದು. ಇಂತಹ ಒಂದು ಕಾರ್ಯಾಚರಣೆಯಲ್ಲಿಯೇ ದಿವಾಕರ ಹೆಗಡೆ ಗೂಂಡಾ ನಿಗ್ರಹ ಕಾಯಿದೆಯಡಿ ಜೈಲ್ ಒಳಗೆ ಹೋಗಿ ಕೂತಿದ್ದ. ಅದು ಈಗ ಸುದ್ದಿಯಾಗಿ ಪತ್ರಿಕೆಯಲ್ಲಿ ಬಂದಿತ್ತು.

ಈ ದಿವಾಕರ ಹೆಗಡೆ ಹೇಳವಾ ನಮ್ಮ ಪೈಕಿನ ಹ್ಯಾಂಗೆ? ಅಂತ ಕೇಳಿದೆ.

ನಮ್ಮ ಹವ್ಯಕರಲ್ಲಿ ಎಲ್ಲ ತರಹದ ಉದ್ಯೋಗ ಮಾಡುವರು ಇದ್ದರು. ದೊಡ್ಡ ಹೆಸರು ಮಾಡದ, ನಮ್ಮ ಜನ ಇಲ್ಲದ ಒಂದೇ ಒಂದು ಫೀಲ್ಡ್ ಅಂದ್ರೆ ಭೂಗತ ಜಗತ್ತು ಅಂದ್ರೆ ಮಾಫಿಯಾ ಅಂದ್ರೆ ಅಂಡರ್ವರ್ಲ್ಡ್.

ರಾಜಕಾರಣದಲ್ಲಿ ಮುಖ್ಯಮಂತ್ರಿಯಾಗಿ ರಾಮಕೃಷ್ಣ ಹೆಗಡೆ ಇದ್ದರು. ಇನ್ನೂ ಎರಡು ಮೂರು ಜನ ಹವ್ಯಕ ಶಾಸಕರು ಇದ್ದರು. ಸಿನಿಮಾದಲ್ಲಿ ಪುಟ್ಟಣ್ಣ ಕಣಗಾಲರ ಮಾನಸ ಪುತ್ರ ನೀರ್ನಳ್ಳಿ ರಾಮಕೃಷ್ಣ ಇದ್ದ. ನಟಿ ಲಕ್ಷ್ಮಿ ಭಟ್ ಇದ್ದಳು. ದೊಡ್ಡ ವಕೀಲರು, ನ್ಯಾಯಾಧೀಶರು, ಉದ್ದಿಮೆದಾರರು, ಪಂಡಿತರು ಹೀಗೆ ಉಳಿದ ಎಲ್ಲಾ ದಂಧೆಗಳಲ್ಲೂ ನಮ್ಮವರು ಇದ್ದರು ಬಿಡಿ. SSLC, PUC ರಾಂಕ್ ಲಿಸ್ಟುಗಳಲ್ಲೂ ನಮ್ಮವರದೇ ವಿಜೃಂಭಣೆ. ಇಡೀ ಜಗತ್ತನ್ನೇ ಜಾಲಾಡಿದರೂ ಹತ್ತು ಲಕ್ಷಕ್ಕಿಂತಲೂ ಕಮ್ಮಿ ಜನ ಇರುವ ನಮ್ಮ ಅಲ್ಪಸಂಖ್ಯಾತ (?) ಹವ್ಯಕ ಸಮಾಜದ ಜನ ಎಲ್ಲ ಕ್ಷೇತ್ರಗಳಲ್ಲೂ ಉನ್ನತಿ ಸಾಧಿಸಿದ್ದಾರೆ. ಇಲ್ಲದ್ದು, ಅಥವಾ ಇದ್ದೂ ನಮಗೆ ಗೊತ್ತಿರದದ್ದು ಅಂದ್ರೆ ಭೂಗತ ಲೋಕ ಮಾತ್ರ. ಹಾಗಾಗಿ ಅದರಲ್ಲೂ ಯಾರಾದರು ನಮ್ಮ ಕುಲ ಬಾಂಧವರು ಇದ್ದಾರೋ ಹೇಗೆ ಅಂತ ಕೆಟ್ಟ ಕುತೂಹಲ.

ಅಯ್ಯೋ! ಆ ಗೂಂಡಾ ಎಲ್ಲಾ ನಮ್ಮವ ಸುಳ್ಳಾಗಿಕ್ಕ. ನಮ್ಮ ಹವ್ಯಕರಲ್ಲಿ ಸಣ್ಣ ಪುಟ್ಟ ನಂಬ್ರಾ (ಜಗಳ) ಮಾಡಿಕೆಂಡು ಹೊಡದಾಡಿಕೆಂಬವು ಇರ್ತವೇ ವಿನಾ ದೊಡ್ಡ ಮಟ್ಟದ ಗೂಂಡಾಗಿರಿ ಮಾಡವು ಎಲ್ಲ ಇಲ್ಲೆ. ಹವ್ಯಕ ಸುಳ್ಳಾಗಿಕ್ಕು ಅವಾ, ಅಂದ್ರು ಅಮ್ಮ

ಮತ್ತೆ!? ದಿವಾಕರ 'ಹೆಗಡೆ' ಹೇಳಿದ್ದು. ನಮ್ಮವ ಅಲ್ಲದ? ಅಂತ ಕೇಳಿದೆ.

ಅಯ್ಯ.....ಹೆಗಡೆ ಹೇಳಿ ಕೊಂಕಣಿಗರಲ್ಲಿ, ಬಂಟರಲ್ಲಿ ಸಹಾ ಇರ್ತ. ಬರಿ ಹವ್ಯಕರಲ್ಲಿ ಒಂದೇ ಅಲ್ಲ. ಅವರ ಪೈಕಿ ಯಾರಾರು ಆಗಿಕ್ಕು ಆ ಗೂಂಡಾನ  ಪೀಂಡಾನ  ಹೇಳ ದಿವಾಕರ ಹೇಳ ಹೆಗಡೆ. ನಮ್ಮ ಪೈಕಿ ಸುಳ್ಳಪಾ, ಅಂದ್ರು ಅಮ್ಮ.

ಹೌದು! ಕೊಂಕಣಿಗಳಲ್ಲಿ ಹೆಗಡೆ ಇದ್ದಿದ್ದು ಗೊತ್ತು. ಧಾರವಾಡದ ಹೆಗಡೆ ಮೆಡಿಕಲ್ಸ್ ಅವರ ಪೈಕಿದೇ. ಇನ್ನು ಬಂಟರು ಅಂದ್ರೆ ಯಾರು? ಆವಾಗ ಇನ್ನೂ ಬಂಟರು ಅಷ್ಟು ಫೇಮಸ್ ಆಗಿರಲಿಲ್ಲ. ಐಶ್ವರ್ಯ ರಾಯ್ ಮಿಸ್ ವರ್ಲ್ಡ್ ಆಗಿರಲಿಲ್ಲ. ಶಿಲ್ಪಾ ಶೆಟ್ಟಿ ಎಂಬ ಸಿಂಹಕಟಿಯ ಬಂಟರ ಸುಂದರಿ ಇನ್ನೂ ಪಟ್ಟಕ್ಕೆ ಬಂದಿರಲಿಲ್ಲ.

ಬಂಟರು ಅಂದ್ರೆ ಯಾರೇ ಅಮ್ಮಾ? ಅಂತ ಕೇಳಿದೆ.

ಬಂಟರು ಅಂದ್ರೆ ಶೆಟ್ಟ್ಯಕ್ಕ. ಈಗ ನಮ್ಮ ಆರ್.ಎನ್. ಶೆಟ್ಟರು ಇಲ್ಲ್ಯ? ಅವರು ಬಂಟರು. ಅವರ ಪೈಕಿ, ಅಂತ ಹೇಳಿ ಅಮ್ಮ ಹೋದರು. ಅವರಿಗೆ ಸಾವಿರ ಕೆಲಸ. ನಮ್ಮ ಹಾಗೆ ಅಲ್ಲ.

ಈ ದಿವಾಕರ ಹೆಗಡೆ ರಹಸ್ಯ ಬಗೆಹರಿಯಲಿಲ್ಲ. ಇವಾ ಹವ್ಯಕನೇ? ಅಥವಾ ಇತರೆಯವನೋ?

ಅದು ಅಷ್ಟಕ್ಕೇ ಮುಗಿಯಿತು. ಮತ್ತೊಂದು ಒಂದೋ ಎರಡೋ ವರ್ಷ ಆದ ಮೇಲೆ ಮತ್ತೆ ಬಂದಿತ್ತು ಅವನ ಸುದ್ದಿ ಪತ್ರಿಕೆಯಲ್ಲಿ. ಈ ಸರಿ ಖತರ್ನಾಕ್ ಸುದ್ದಿ. ೧೯೮೬ ಅಂತ ನೆನಪು.

ದೊಡ್ಡ ರೌಡಿ, ವಿದ್ಯಾರ್ಥಿ ಧುರೀಣ ದಿವಾಕರ ಹೆಗಡೆ ಕೊಲೆಯಾಗಿ ಹೋಗಿದ್ದ!

ದಾರುಣವಾಗಿ ಹತ್ಯೆ ಮಾಡಲಾಗಿತ್ತು. ಬೆಂಗಳೂರಿನಲ್ಲಿ.

ವಿರೋಧಿ ಬಣದವರು ಹೊಂಚು ಹಾಕಿ, ಮೋಟಾರ್ ಬೈಕ್ ಮೇಲೆ ಹೋಗುತ್ತಿದ್ದವನನ್ನು ತಡೆದು, ಬೀಳಿಸಿ, ಬಿದ್ದು ಎದ್ದು ಓಡುತ್ತಿದ್ದವನ್ನು ಅಟ್ಟಿಸಿಕೊಂಡು ಬಂದು, ಲಾಂಗು ಮಚ್ಚುಗಳಿಂದ ಕೊಚ್ಚಿ ಕೊಚ್ಚಿ ಕೊಂದಿದ್ದರು. ಹಾಡೇ ಹಗಲು! ರಾಜಧಾನಿ ಬೆಂಗಳೂರಲ್ಲಿ.

ಹಾಂ! ಅಂತ ಬೆಚ್ಚಿ ಬಿದ್ದಿದ್ದೆ.

ಬೆಂಗಳೂರಿನ ಭೂಗತ ಜಗತ್ತಿನಲ್ಲಿದ್ದ ಒಬ್ಬೇ ಒಬ್ಬ ಹೆಗಡೆ (ನಮ್ಮವನು ಅಲ್ಲದಿದ್ದರೂ) ಹೋಗೇಬಿಟ್ಟನೇ!? ಅಕಟಕಟಾ!

ದಿವಾಕರ ಹೆಗಡೆ ಯಾರು? ಯಾಕೆ ಸತ್ತ? ಇದೆಲ್ಲ ವಿವರ ತಿಳಿದು, ಅರ್ಥವಾಗಿದ್ದು ಒಂದು ದೊಡ್ಡ ಬ್ರೇಕಿನ ಬಳಿಕವೇ. ಅದೂ ದೊಡ್ಡ ಬ್ರೇಕ್. ಬರೋಬ್ಬರಿ ಇಪ್ಪತ್ತೊಂದು ವರ್ಷದ ಬ್ರೇಕ್. ' ಒಂದು ಸಣ್ಣ ಬ್ರೇಕ್ ನಂತರ' ಅಂತ ಟೀವಿ ಮಂದಿ ಹೇಳಿದ ಹಾಗೆ ಅಲ್ಲ.

ದಿವಾಕರ ಹೆಗಡೆ - ಸುಮಾರು ೧೯೭೮, ೭೯ ಕಾಲದಿಂದ ಕೊಲೆಯಾಗುವ ತನಕ ಅಂದರೆ ೧೯೮೬ ರ ವರಗೆ ಬೆಂಗಳೂರಲ್ಲಿ ಇದ್ದ ದೊಡ್ಡ ವಿದ್ಯಾರ್ಥಿ ಮುಖಂಡ. ಅವನ alignment ಇದ್ದಿದ್ದು ಜಯರಾಜ್ ಎಂಬ ಡಾನ್ ಕಡೆಗೆ. ಇನ್ನೊಬ್ಬ ಪ್ರತಿಸ್ಪರ್ಧಿ ಡಾನ್ ಅಂದರೆ ಕೊತ್ವಾಲ್ ರಾಮಚಂದ್ರ. ಅವನಿಗೂ ಇದ್ದರು ವಿದ್ಯಾರ್ಥಿ ಬೆಂಬಲಿಗರು. ಆ ಕಾಲದ ಬೆಂಗಳೂರಿನ ಕಾಲೇಜು ಹಾಸ್ಟೆಲ್ಲುಗಳಲ್ಲಿ ರೌಡಿಗಳ ಕೇಕೆ ನಿರಂತರ. ಪೊಲೀಸರಿಗೆ ದೊಡ್ಡ ತಲೆನೋವು. ದೇವರಾಜ ಅರಸರ ಅಳಿಯನ ಕೃಪಾಶೀರ್ವಾದದಲ್ಲಿ 'ಇಂದಿರಾ ಬ್ರಿಗೇಡ್' ಎಂಬ ಸಂಘಟನೆಯಡಿ ಎಲ್ಲ ರೌಡಿಗಳ ಜಮಾವಣೆ.

ನ್ಯಾಯಾಲದಲ್ಲಿ ನ್ಯಾಯಾಧೀಶರ ಮುಂದೆಯೇ ತನ್ನ ವಿರುದ್ಧ ಸಾಕ್ಷಿ ಹೇಳುತ್ತಿದ್ದವನ್ನು ಬಕಬಕನೆ ಕರುಳೆಲ್ಲ ಕಿತ್ತಿ ಹೊರಬರುವಂತೆ ಇರಿದಿದ್ದ ಹುಂಬ ಡಾನ್ ಜಯರಾಜ ದೊಡ್ಡ ಜೈಲ್ ಶಿಕ್ಷೆ ಅನುಭವಿಸುತ್ತಿದ್ದ. ಹೀಗಾಗಿ ಇನ್ನೊಬ್ಬ ಡಾನ್ ಕೊತ್ವಾಲ್ ರಾಮಚಂದ್ರ ಕಿಂಗ್ ಅಂತ ಮೆರೆಯಲು ಪ್ರಯತ್ನ ಮಾಡುತ್ತಿದ್ದ. ಆದರೆ ಶಿವಮೊಗ್ಗದಿಂದ ಬಂದು, ಮೂಲತ ಡಕಾಯಿತಿ ಮಾಡಿಕೊಂಡಿದ್ದ ರಾಮಚಂದ್ರನಿಗೆ ಬೆಂಗಳೂರಿನ ಭೂಗತ ಲೋಕದ ಸಿಂಹಾಸನ ಸಂಬಾಳಿಸಲಿಕ್ಕೆ ಆಗಲಿಲ್ಲ. ಜಯರಾಜ್ ಜೈಲ್ ಒಳಗೆ ಇದ್ದರೂ ಅವನ ದೊಡ್ಡ ದೊಡ್ಡ ಪಂಟರುಗಳು ಹೊರಗೆ ಇದ್ದರು. ಹಗಲು ರಾತ್ರಿಯನ್ನದೆ ಕೊತ್ವಾಲನನ್ನು ಹುಡುಕಿ, ಮುಗಿಸೇ ಬಿಡಲು ಕಂಕಣ ತೊಟ್ಟಿದ್ದರು. ಅಂತವರಲ್ಲಿ ಮುಂಚೂಣಿಯಲ್ಲಿ ಇದ್ದವನು ದಿವಾಕರ ಹೆಗಡೆ. ಅಷ್ಟು ಸಿಟ್ಟಿತ್ತು ಅವನಿಗೆ ಕೊತ್ವಾಲನ ಮೇಲೆ. ಯಾಕೆಂದ್ರೆ ಅವನ ಕೆಲ ವಿರೋಧಿ ವಿದ್ಯಾರ್ಥಿ ಧುರೀಣರನ್ನು ಕೊತ್ವಾಲ್ ಬೆಂಬಲಿಸಿದ್ದ.

ಮುಂದೆ ಏನೇನೋ ಆಯಿತು. ತನ್ನ ಒಡನಾಡಿಗಳಿಂದಲೇ ಕೊತ್ವಾಲ್ ನಿದ್ದೆಯಲ್ಲಿಯೇ ಕೊಲೆಯಾದ. ಮಟಾಶ್! ಜಯರಾಜ್ ಹೊರಗೆ ಬಂದ. ಬೆಂಗಳೂರಿನ ಭೂಗತ ಲೋಕದ ದೊರೆಯಾಗಿ ಮೆರೆಯತೊಡಗಿದ. ಅವನ ಕೆಳಗಿದ್ದವರೂ ಮೆರೆಯತೊಡಗಿದರು. ಅವನ ಪರಮ ಬಂಟನಾಗಿದ್ದ ದಿವಾಕರ್ ಹೆಗಡೆ ಕೂಡ ಮೆರದಿದ್ದೇ ಮೆರೆದಿದ್ದು.

ಉದ್ಧಟ ದಿವಾಕರ ಹೆಗಡೆ ಮುಂಗೋಪಿ. ಸಹನೆಯಿಲ್ಲ. ಮುಖದ ಮೇಲೆ ಹೊಡೆದಂತೆ ಮಾತು. ಈಗಂತೂ ಗುರು ಜಯರಾಜ್ ಡಾನ್. ಮತ್ತೇನು? ಉದ್ಧಟತನ ಸ್ವಲ್ಪ ಜಾಸ್ತಿಯೇ ಆಯಿತು. ಯಾವದೋ ಸಮಯದಲ್ಲಿ ಜಯರಾಜ್ ಪಾಳೆಯದವನೇ ಆದ 'ತಂಬು' ಅನ್ನುವ ರೌಡಿಯನ್ನು ತಡವಿಕೊಂಡ. ಉಲ್ಟಾ ಸೀದಾ ಮಾತಾಡಿದ. ಅವಮಾನ ಮಾಡಿದ. ಆಗಲೇ ಒಂದೋ ಎರಡೋ ದೊಡ್ಡ ಮಟ್ಟದ ಮರ್ಡರ್ ಮಾಡಿ ಫೇಮಸ್ ಆಗಿದ್ದ ತಂಬು ಇವನಿಗೊಂದು ಶಾಸ್ತಿ ಮಾಡಲೇ ಬೇಕು ಅಂತ ಸ್ಕೆಚ್ ಹಾಕೇ ಬಿಟ್ಟ. ಮತ್ತೆ ಏನೇನೋ ಲೆಕ್ಕಾಚಾರ ಎಲ್ಲ ವರ್ಕ್ ಔಟ್ ಆಗಿರಬೇಕು ಬಿಡಿ. ಹಾಗಾಗಿ ದಿವಾಕರ ಹೆಗಡೆಯ ಕೊಲೆಗೆ ಮುಹೂರ್ತ ಕೂಡಿ ಬಂತು.

ತಂಬು ತಡಮಾಡಲಿಲ್ಲ. ಮುಂದೆ ಕೆಲವೇ ದಿವಸಗಳಲ್ಲಿ ತನ್ನ ಗ್ಯಾಂಗಿನ ಜೊತೆಗೂಡಿ ಒಬ್ಬನೇ ಬೈಕ್ ಮೇಲೆ ಹೊರಟಿದ್ದ ದಿವಾಕರ ಹೆಗಡೆಯನ್ನು ಆಟಕಾಯಿಸಿದ. ಬಿದ್ದು ಓಡುತ್ತಿದ್ದವನ್ನು ಪೀಸ್ ಪೀಸ್ ಮಾಡಿ ಕೊಚ್ಚಿದರು. ಕಥೆ ಮುಗಿಸಿದರು.

ದಿವಾಕರ ಹೆಗಡೆ ಎಂಬ ವಿದ್ಯಾರ್ಥಿ ಧುರೀಣ ಹೀಗೆ ಮುಗಿದು ಹೋಗಿದ್ದ.

ತುಂಬಾ ಸಲ ಹೀಗೇ ಆಗುತ್ತದೆ. ಯಾವದೋ ವಿಷಯದ ಬಗ್ಗೆ ಎಂದೋ ಏನೋ ಓದಿರುತ್ತೇವೆ. ಪೂರ್ತಿ ಮಾಹಿತಿ ಸಿಕ್ಕಿರುವದಿಲ್ಲ. ಮುಂದೆಂದೋ ದಿವಸ ಮತ್ತೊಂದಿಷ್ಟು ಮಾಹಿತಿ ಸಿಗುತ್ತದೆ. ತಲೆಯಲ್ಲಿ ಅದೇನು ಚಕ್ರಗಳು ತಿರುಗುತ್ತವೆಯೋ ಏನೋ! ಮೊದಲಿನ ಮಾಹಿತಿ, ಈಗ ಸಿಕ್ಕ ಮಾಹಿತಿ ಎಲ್ಲ ಕೂಡಿ ಒಂದು ಸಮಗ್ರ ಚಿತ್ರಣ ಸಿಗುತ್ತದೆ. connecting the dots ಅನ್ನುತ್ತಾರಲ್ಲ ಹಾಗೆ.

ದಿವಾಕರ ಹೆಗಡೆ ವಿಷಯದಲ್ಲಿ ಹೀಗೆ ಆಗಿದ್ದು ೨೦೦೮ ರಲ್ಲಿ. ಅಗ್ನಿ ಶ್ರೀಧರ್ ಎಂಬ ಮಾಜಿ ಭೂಗತ ಜಗತ್ತಿನ ಡಾನ್ ಒಬ್ಬರು ತಮ್ಮ ಆತ್ಮಕಥೆಯಂತೆ ಇರುವ ಮೂರು ಸಂಪುಟಗಳ 'ದಾದಾಗಿರಿಯ ದಿನಗಳು' (೧,೨,೩) ಎಂಬ ಪುಸ್ತಕ ಬರೆದಿದ್ದರು. ತರಿಸಿ ಓದಿದ್ದೆ. ಅದರಲ್ಲಿ ಸಿಕ್ಕಿತ್ತು ನೋಡಿ ಇದೆಲ್ಲ ವಿಷಯ. ೧೯೮೬ ರಲ್ಲಿ ಏನು ದಿವಾಕರ ಹೆಗಡೆ ಕೊಲೆಯಾದಾಗ ಸುದ್ದಿ ಓದಿದ್ದೆನೋ ಅದೇ ಕೊನೆ. ನಂತರ ಅವನ ಬಗ್ಗೆ ತಿಳಿದಿದ್ದು ೨೦೦೮ ರಲ್ಲೇ. ಆವಾಗ ಒಂದು ಫುಲ್ ಪಿಕ್ಚರ್ ಬಂತು.

ಈಗ ಆ ಮೂರು ಸಂಪುಟಗಳ 'ದಾದಾಗಿರಿಯ ದಿನಗಳು' ಇಂಗ್ಲೀಷಿಗೆ ತರ್ಜುಮೆಯಾಗಿ  'MY DAYS IN THE UNDERWORLD RISE OF THE BANGALORE MAFIA' ಅಂತ ಬಂದಿದೆ. ಮೂಲಕ್ಕೆ ಚ್ಯುತಿ ಬರದಂತೆ ಅನುವಾದ ಮಾಡಲಾಗಿದೆ. ಕನ್ನಡದ ಪುಸ್ತಕಗಳು ಕೆಲವೊಂದು ಕಡೆ ತುಂಬಾ ಎಳೆದು ಬೋರ್ ಹೊಡೆಸುತ್ತಿದ್ದವು. ಅವನ್ನೆಲ್ಲ ಸಂಕ್ಷಿಪ್ತ ಮಾಡಿರುವದರಿಂದ ಒಳ್ಳೆ ಥ್ರಿಲ್ಲರ್ ಮೂವಿಯ ಸ್ಕ್ರಿಪ್ಟ್ ತರಹ ಇಂಗ್ಲೀಶ್ ಪುಸ್ತಕ ಓದಿಸಿಕೊಂಡು ಹೋಗುತ್ತದೆ. ಆಸಕ್ತರು ಓದಬಹುದು. ಎಲ್ಲೂ ಕ್ರೌರ್ಯವನ್ನು glorify ಮಾಡಿಲ್ಲ. ಸಿಂಪಲ್ ಆತ್ಮಕಥೆ - ಒಬ್ಬ ಸುಧಾರಿತ ಮಾಜಿ ರೌಡಿಯದು.

ಇನ್ನೂ ಕೆಲವು ಡಾಟ್ಸ್ ಕನೆಕ್ಟ್ ಮಾಡಿದರೆ ಇನ್ನೂ ಕೆಲವು ಮಾಹಿತಿ ಅರಿಯಬಹುದು. ದಿವಾಕರ ಹೆಗಡೆ ಬಿಟ್ಟು ಆಗ ಇನ್ನೂ ಮೂವರು ವಿದ್ಯಾರ್ಥಿ ಧುರೀಣರು ಇದ್ದರು. ಅವರಲ್ಲಿ ಬಿ.ಕೆ.ಹರಿಪ್ರಸಾದ ಅನ್ನುವವರು ಈಗ ದಿಲ್ಲಿಯಲ್ಲಿ ಪಾರ್ಲಿಮೆಂಟ್ ಮೆಂಬರ್. ಡೀಕೆ ಶಿವಕುಮಾರ್ ಈಗ ಕರ್ನಾಟಕದ ಇಂಧನ ಸಚಿವ. ಇನ್ನೊಬ್ಬ ಆರ್.ವಿ. ಹರೀಶ್ ಎಂಬುವವರೂ ಸಹಿತ ರಾಜಕಾರಣಿ. ಈ ಹರೀಶ್ ದಿವಾಕರ ಹೆಗಡೆ ಕೊಲೆ ಪ್ರಕರಣದಲ್ಲಿ ಆರೋಪಿ ಅಂತ ಫಿಟ್ಟಾಗಿ ಆಮೇಲೆ ನಿರ್ದೋಷಿ ಅಂತ ಖುಲಾಸೆಯಾಗಿ ಬಂದವರಂತೆ. ಬದುಕಿದ್ದರೆ ದಿವಾಕರ ಹೆಗಡೆ ಕೂಡ ಹೀಗೇ ಏನೋ ದೊಡ್ಡ ಮನುಷ್ಯ ಆಗಿರುತ್ತಿದ್ದನೋ ಏನೋ! ಅವನಿಗೆ ನಸೀಬ್ ಇರಲಿಲ್ಲ!

ಇಷ್ಟೆಲ್ಲ ಮಾಹಿತಿ ತಿಳಿದರೂ ಈ ದಿವಾಕರ ಹೆಗಡೆ ಹವ್ಯಕನೇ ಅನ್ನುವ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಅಲ್ಲ ಅವನು ಬಂಟರ ಪೈಕಿ ಅಂತ ಯಾರೋ ಹೇಳಿದ್ದರು ಅಂತ ನೆನಪು. ಇರಲಿ ಇನ್ನೂ ಒಂದು ದೊಡ್ಡ ಇಪ್ಪತ್ತು ವರ್ಷದ ನಂತರದ ಬ್ರೇಕಿನ ನಂತರ ತಿಳಿಯಬಹುದು. ಆವಾಗ ಮತ್ತೆ ಡಾಟ್ಸ್ ಕನೆಕ್ಟ್ ಮಾಡಿ ಮತ್ತೂ ಪರಿಪೂರ್ಣ ಮಾಹಿತಿ ಸಂಗ್ರಹಿಸಿದರಾಯಿತು. :)

* ಮೂರು ಸಂಪುಟಗಳ ಕನ್ನಡ ಪುಸ್ತಕ 'ದಾದಾಗಿರಿಯ ದಿನಗಳು' ಓದಿ ಮುಗಿಸಿದಾಗ ಬರೆದಿದ್ದ ಪುಸ್ತಕ ಪರಿಚಯದ ಬ್ಲಾಗ್ ಪೋಸ್ಟ್ ಇಲ್ಲಿದೆ. ಓದಿ.







Thursday, March 13, 2014

ಶಿಕಾರಿ ಖುದ್ ಯಹಾ ಶಿಕಾರ್ ಹೋಗಯಾ! The hunters became the hunted!

ಮಂಗೇಶ, ಸುದ್ದಿ ಓದಿದಿ ಏನೋ? ಅಂತ ಕೇಳಿದರು ರೂಪಾ ವೈನಿ.

ಏ....ಎಲ್ಲಿ ಸುದ್ದಿರೀ? ಸುದ್ದಿ ಗಿದ್ದಿ ಎಲ್ಲಾ ಓದೋದು ಬಿಟ್ಟು ಬರೆ ನಿದ್ದಿ ಮಾಡೋದೇ ನಮ್ಮ ಕೆಲಸ. ಎಲ್ಲೋ ನಿದ್ದಿಯಿಂದ ಎಚ್ಚರಾದಾಗ ರೂಪಾ ವೈನಿ ಅನ್ನೋ ಮಹಾನುಭಾವಳ ಜೋಡಿ ಏನೋ ಮಾತು ಕಥಿ. ಅಷ್ಟೇ ನೋಡ್ರೀ, ಅಂದೆ.

ಕುಟಕಲಿಕ್ಕೆ ಹೋದವರೇ ಕುಟುಕಿಸಿಕೊಂಡು ಬಂದ್ರಲ್ಲಂತೋ? ಅಂತ ಹೇಳಿ ರೂಪಾ ವೈನಿ ಏನೋ ಫಿಟ್ಟಿಂಗ್ ಇಟ್ಟರು.

ಹಾಂ!!! ಏನು ಯಾರಿಗೆ ಕುಟುಕಿತು? ಚೇಳಾ? ಅಥವಾ ಹಾವಾ? ಅಥವಾ ಹಾವರಾಣಿನಾ? ಅಥವಾ ದೊಡ್ಡ ನಾಗರಾಣಿನಾ? ಏನು ಯಾರಿಗೆ ಕುಟುಕಿತು? ಹೇಳ್ರೀ, ಅಂತ ಜೋರಾಗಿ ವದರಿ ಕೇಳಿದೆ.

ಯಾರಿಗೆ ಏನು ಕುಟುಕಿ, ಏನು ಕಚ್ಚಿ ಏನು ಘಾತ ಆತೋ ಏನೋ?

ಅಯ್ಯೋ!! ಕುಟುಕು ಕಾರ್ಯಾಚರಣೆ ಮಾಡಲಿಕ್ಕೆ ಹೋದವರೇ ಕುಟುಕಿಸಿಕೊಂಡು ಬಂದಾರಂತ. ಅದನ್ನ ಹೇಳಿದರ, ಚೇಳು, ಹಾವು, ಹಾವರಾಣಿ, ನಾಗರಾಣಿ ಅಂತಿಯಲ್ಲೋ ಖಬರಗೇಡಿ! ಅಂತ ರೂಪಾ ವೈನಿ ಬೈದರು.

ಏನ್ರೀ ಹಾಂಗಂದ್ರ? ಅಂತ ಕೇಳಿದೆ.

ಅಯ್ಯೋ!!!!! ಏನು ಧಡ್ಡ ತಲಿ ಅದಪಾ ನಿಂದು. ನಿನಗ ತಿಳಿಯೋಹಾಂಗ ಹ್ಯಾಂಗ ಹೇಳೋದು? ಅಂತ ವೈನಿ ತಲಿ ತಲಿ ಚಚ್ಚಿಕೋತ್ತ ಡೀಪ್ ಥಿಂಕಿಂಗ್ ಮೋಡಿಗೆ ಹೋದರು.

ಕುಟುಕು ಕಾರ್ಯಾಚರಣೆ ಅಂದ್ರ ಸ್ಟಿಂಗ್ ಆಪರೇಷನ್ (sting operation). ಈಗರೆ ತಿಳೀತ? ಹಾಂ? ಅಂತ ಕೇಳಿದರು.

ಇಲ್ಲ ಬಿಡ್ರೀ. ನಮಗ ಸಂಜಯ್ ಗಾಂಧಿಯ ಫೇಮಸ್ 'ನರಹರಿ' ಆಪರೇಷನ್ ಒಂದು ಬಿಟ್ಟು ಬ್ಯಾರೆ ಯಾವದೇ ಆಪರೇಷನ್ ಬಗ್ಗೆ ಗೊತ್ತಿಲ್ಲ ಬಿಡ್ರೀ. ಅದೂ ಕೇಳಿದ್ದು ಅಷ್ಟೇ. ಅದೇನೋ ಹಿಂದ ೧೯೭೬ ಟೈಮ್ ಒಳಗ ಎಮರ್ಜೆನ್ಸಿ ಇದ್ದಾಗ ಸಂಜಯ್ ಗಾಂಧಿ ಸಿಕ್ಕಾಪಟ್ಟೆ ನರಹರಿ ಆಪರೇಷನ್ ಮಾಡಸ್ತಿದ್ದ ಅಂತ. ಅವಾ ಕಳಿಸಿದ ಡಾಕ್ಟರ ಊರಿಗೆ ಬಂದ್ರು ಅಂದ್ರ ಪ್ರಾಯದ ಗಂಡಸೂರು, ಹೆಂಗಸೂರು ಎಲ್ಲಾರೂ ಓಡಿ ಹೋಗ್ತಿದ್ದರಂತ ನೋಡ್ರೀ. ಆ ಆಪರೇಷನ್ ಒಂದರ ಬಗ್ಗೆ ಕೇಳಿ ಗೊತ್ತು. ಅಷ್ಟೇ ನೋಡ್ರೀ, ಅಂತ ಹೇಳಿದೆ.

ಅದೇನೋ ಮಾರಾಯಾ ಸಂಜಯ್ ಗಾಂಧಿ ಮಾಡಸ್ತಿದ್ದ 'ನರಹರಿ' ಆಪರೇಷನ್!? ಹಾಂ!? ಆ ಆಪರೇಷನ್ ಮಾಡೋ ಡಾಕ್ಟರ ಹೆಸರು ನರಹರಿ ಅಂತಿತ್ತೇನು? ಹಾಂ? ಅಂತ ಕೇಳಿದರು.

ಅಯ್ಯೋ!!! ಅಲ್ಲರೀ. ಈ ನರಹರಿ ಆಪರೇಷನ್ ಅಂದ್ರ ಬ್ಯಾರೆನೇ. ನಿಮಗ ಗೊತ್ತಿಲ್ಲರೀ? ಅಂತ ಕೇಳಿದೆ.

ಸೀದಾ ಯಾಕ ಹೇಳಬೇಕು? ಏನರೆ ಉಲ್ಟಾ ಸೀದಾ ಹೇಳಿ ಮಜಾ ತೊಗೊಂಡ್ರ ಆತು ಅಂತ ನಮ್ಮ ಅಭಿಪ್ರಾಯ.

ಗೊತ್ತಿಲ್ಲೋ ನಮ್ಮಪ್ಪಾ. ಅದು ಏನು ನರಹರಿ ಆಪರೇಷನ್ ಅನ್ನೋದನ್ನ ಹೇಳಿ ಬಡಿ ಅತ್ಲಾಗ, ಅಂದ್ರು ವೈನಿ.

ಈಗ ನೋಡ್ರೀ ನರಮಾನವ/ನರಮಾನವಿ  ಇದ್ದವರನ್ನ ಬರೇ ಮಾನವ/ಮಾನವಿ ಮಾಡಬೇಕು ಅಂದ್ರ ಹ್ಯಾಂಗ ಮಾಡೋದು? ಹೇಳ್ರೀ ನೋಡೋಣ? ಅಂತ ಕೇಳಿದೆ.

ಏನು? ನರಮಾವನ್ನ ಮಾವನ್ನ ಮಾಡಬೇಕಾ? ಏನು ಹಾಂಗಂದ್ರ? ಹುಚ್ಚುಚ್ಚರೆ ಮಾತಾಡಿಕೋತ್ತ. ಹಾಂ!? ಅಂತ ವೈನಿ ಬೈದ್ರು.

ಅಯ್ಯೋ ನರಮಾವನ ಅಲ್ಲರೀ. ನರಮಾನವ. ನರಮಾನವನನ್ನ ಹ್ಯಾಂಗ ಮಾನವ ಮಾಡೋದು? ಅದನ್ನ ಹೇಳ್ರೀ, ಅಂತ ಮತ್ತ ವಿವರಣೆ ಕೊಟ್ಟೆ.

ನರಮಾನವ ಅಂದ್ಯಾ? ನನಗ ನಮ್ಮ ಸ್ವರ್ಗವಾಸಿ ಮಾವನವರದ್ದೇ ನೆನಪು. ಅದಕ್ಕೆ ಇದ್ಯಾವ ಹೊಸಾ ಮಾವಾ, ನರಮಾವಾ? ಅಂತ ವಿಚಾರ ಮಾಡ್ಲಿಕತ್ತುಬಿಟ್ಟಿದ್ದೆ. ಸೂಡ್ಲಿ! ಅಂದ ವೈನಿ ನನ್ನ ಪ್ರಶ್ನೆ ಈಗ ಅರ್ಥ ಮಾಡಿಕೊಂಡರು.

ಏನು ಹುಚ್ಚರೆ ಗತೆ ಕೇಳ್ತೀ? ನರಮಾನವ, ಮಾನವ ನಡುವ ಏನು ವ್ಯತ್ಯಾಸ ಅದ? ಹಾಂ? ನರಮಾನವ ಅನ್ನೋದ್ರಾಗಿನ ನರ ತೆಗೆದು ಒಗೆದು ಬಿಟ್ಟರ ಬರೇ ಮಾನವ ಆಗ್ತದ, ಅಂದೇ ಬಿಟ್ಟರು ವೈನಿ.

ಬಿಂಗೊ!! ಬರೋಬ್ಬರೀ ಹೇಳಿದಿರಿ ನೋಡ್ರೀ. ನರ ಹರಿದು ತೆಗೆದು ಒಗೆಯುವ ಆಪರೇಷನ್ ನರಹರಿ ಆಪರೇಷನ್ ಅಲ್ಲೇನ್ರೀ ವೈನಿ? ಹಾಂ? ಹಾ!!! ಹಾ!!! ಅಂತ ದೊಡ್ಡ ಜೋಕ್ ಹೊಡದೆ.

ಥೂ!!!ಹೇಶಿ ಮುಂಡೆ ಗಂಡನ್ನ ತಂದು. ಫ್ಯಾಮಿಲಿ ಪ್ಲಾನಿಂಗ್ ಆಪರೇಷನ್ ಗೆ ನರಹರಿ ಆಪರೇಷನ್ ಅಂತಾರೇನು? ಏನು ಶಬ್ದ ಭಂಡಾರ ಮಾರಾಯ ನಿಂದು? ಆ ಹಳ್ಳಿ ಮಂದಿ ನರಾ ಕಟ್ ಮಾಡೋದು ಅಂತಾರ ಅಂತ ಹೇಳಿ ನೀನೂ ಅದಕ್ಕ ಹಾಂಗೇ ಅನ್ನೋದ? ನರಹರಿ ಆಪರೇಷನ್ ಅಂತ! ಒಂದು ಏಟಾ ಹಾಕಬೇಕು ನಿನಗ, ಅಂತ ವೈನಿ ಹುಸಿ ಮುನಿಸು ತೋರಿಸಿದರು.

ಹುಚ್ಚ ಇದ್ದೀ ನೋಡು. ಕುಟುಕು ಕಾರ್ಯಾಚರಣೆ ಅಂದೆ ನಿನ್ನ ಧಡ್ಡ ತಲಿಗೆ ತಿಳಿಲಿಲ್ಲ. ಸ್ಟಿಂಗ್ ಆಪರೇಷನ್ ಅಂದ್ರ ಸಂಜಯ್ ಗಾಂಧೀ ಮಾಡಸ್ತಿದ್ದ ನರಾ ಕತ್ತರಿಸೋ ಆಪರೇಷನ್ ಏನು ಅಂತ ಹುಚ್ಚರ ಗತೆ ಕೇಳ್ತೀ. ನಿನಗ ಹ್ಯಾಂಗ ಮಾಡಿ ಹೇಳಲಿ? ಹಾಂ? ಅಂತ ವೈನಿ ತಲಿ ಮ್ಯಾಲೆ ಕೈಯೆತ್ತಿ ಕೂತರು.

ಏನೋ ಒಂದು ದೊಡ್ಡ ಘಟನೆ ಆಗಿ, ಭಾಳ ದೊಡ್ಡ ಸುದ್ದಿ ಆಗಿ ಬಿಟ್ಟದ. ಅದರ ಸುದ್ದಿ ವೈನಿಗೆ ಗೊತ್ತಾಗಿ ಬಿಟ್ಟದ. ಅದನ್ನ ನನಗ ಹೇಳಬೇಕು ಅಂತ ಅವರಿಗೆ ದೊಡ್ಡ ಆಶಾ. ನನಗೋ, ಏನೂ ತಿಳಿವಲ್ಲತು. ಅದಕ್ಕ ವೈನೀ ಹೈರಾಣ.

ನೋಡು....ಚಡ್ಡಿ ಕಳಿಲಿಕ್ಕೆ ಹೋದವರ ಚಡ್ಡಿನೇ ಕಳಿದು ಕಳಿಸಿಬಿಟ್ಟರೆ ಹ್ಯಾಂಗ? ಅಂತ ವೈನಿ ಒಂದು ದೊಡ್ಡ ಕ್ವೆಶ್ಚನ್ ಮಾರ್ಕ್ ಇಟ್ಟರು.

ಹೋಗ್ಗೋ!!! ವೈನಿ!!! ಏನ್ರೀ ಇದು ಮಾತು? ಯಾರು ಯಾರ ಚಡ್ಡಿ ಕಳಿಲಿಕ್ಕೆ ಹೋಗಿದ್ದರು? ಏನು ಕಥಿ? ಹಾಂ? ಯಾವದಾರ ಹುಡುಗ ಒದ್ದಿ ಚಡ್ಡಿ ಹಾಕ್ಕೊಂಡು ಸಾಲಿಗೆ ಹೊಂಟಿತ್ತು ಏನು? ಚಳಿಗಾಲ ನೋಡ್ರೀ. ಅದೂ ಹೊತ್ತಿಲ್ಲದ ಹೊತ್ತಿನ್ಯಾಗ ಮಳಿ ಬಂದು, ಹೊರಗ ಒಣಾ ಹಾಕಿದ ಅರಿವೆಲ್ಲ ಮತ್ತ ತೋಯ್ದು ಹೋಗಿ, ಒದ್ದಿ ಆಗಿ, ಯುನಿಫಾರ್ಮ್ ಹಾಕ್ಕೊಂಡು ಹೋಗಲಿಲ್ಲ ಅಂದ್ರ ಮಾಸ್ತರ್ ಒದಿತಾರ ಅಂತ ಹೆದರಿ, ಹಸಿ ಚಡ್ಡಿನೇ ಹಾಕ್ಕೊಂಡು ಹೊಂಟ ಹುಡುಗನ ಚಡ್ಡಿ ಕಳದ್ರಾ? ಯಾರು? ಹಾಂಗ ಮಾಡಲಿಕ್ಕೆ ಹೋದಾಗ ಅವರ ಚಡ್ಡಿನೇ ಕಳಿದು ಹೋತಾ? ಹಾಂ? ಲಾಡಿ ಘಟ್ಟೆ ಕಟ್ಟಿಕೋಬೇಕು ಅಂತ ಹೇಳೋದು ಅದಕ್ಕೇ. ಎಲ್ಲೋ ತಮ್ಮ ಚಡ್ಡಿ ಲಾಡಿ ಡೀಲಾ ಕಟ್ಟಿಕೊಂಡು ಮಂದಿ ಚಡ್ಡಿ ಕಳಿಲಿಕ್ಕೆ ಹೋಗಿರಬೇಕು. ಹುಡಗ ಆಕಡೆ ಈಕಡೆ ಮಾಡಿ ಇವರೂ ಆಕಡೆ ಈಕಡೆ ಮಾಡೋದ್ರಾಗ ಇವರ ಚಡ್ಡಿನೇ ಕಳಚಿ ಬಿದ್ದಿರಬೇಕು. ಅಲ್ಲರೀ? ಅಂತ ಉದ್ದ ಕೇಳಿದೆ.

ಏನು ತಲಿ ಇಟ್ಟೀಪಾ!? ಸುಮ್ಮ ಕೂಡೋ! ಅಂತ ವೈನೀ ರಪ್ಪ್ ಅಂತ ಬೈದ್ರು.

ಮತ್ತೇನ್ರೀ? ಅಂತ ಕೇಳಿದೆ.

ಯಾರೋ ಇಬ್ಬರು ಟೀವಿ ಪತ್ರಕರ್ತರು ಒಬ್ಬ ಮಿನಿಸ್ಟರ್ ಚಡ್ಡಿ ಕಳಿಲಿಕ್ಕೆ ಹೋಗಿದ್ದರಂತ, ಅಂತ ಅಂದು ಬಿಟ್ಟರು ವೈನೀ.

ಹೋಗ್ಗೋ!!!!

ಟೀವಿ ಮಂದಿಗೆ ಬ್ಯಾರೆ ಉದ್ಯೋಗ ಇಲ್ಲೇನ್ರೀ? ಹೋಗಿ ಹೋಗಿ ಮಿನಿಸ್ಟರ್ ಚಡ್ಡಿ ಯಾಕ ಕಳಿಲಿಕ್ಕೆ ಹೋಗಿದ್ದರು? ಮಿನಿಸ್ಟರ್ ಚಡ್ಡಿ ಕಳಿಲಿಕ್ಕೆ ಇವರು ಯಾಕ ಹೋಗಬೇಕು ಅಂತ? ಮಿನಿಸ್ಟರ್ ಮಂದಿ ಏನೋ ಉದ್ಘಾಟನೆ ಮಾಡಲಿಕ್ಕೆ ಹೋದಾಗ ರಿಬ್ಬನ್ ಕಟ್ ಮಾಡಿ, ಕಟ್ ಮಾಡಿದ ರಿಬ್ಬನ್ ಅಲ್ಲೇ ಯಾವದರ ಚಂದ ಹುಡುಗಿ ಕೂದಲಕ್ಕ ಕಟ್ಟಿ, ಅಕಿ ಕುಂಡಿ ತಟ್ಟಿ, ಅಕಿ ಕೈ ಒತ್ತಿ ಒತ್ತಿ ಶೇಕ್ ಹ್ಯಾಂಡ್ ಮಾಡಿ, ಅಕಿ ಶಟಗೊಂಡ ಮ್ಯಾಲೆ ನಮಸ್ಕಾರ ಮಾಡಿ, ಹೇ ಹೇ ಅಂತ ನಕ್ಕಿದ್ದನ್ನೂ ಸಹ ಈಗಿತ್ತಲಾಗ ಟೀವಿ ಮ್ಯಾಲೆ ತೋರಿಸಿ ಬಿಡ್ತಾರ. ಅಸಹ್ಯ! ಅದು ಸಾಲದು ಅಂತ ಹೇಳಿ, ಮಿನಿಸ್ಟರ್ ಯಾವಾಗ ಚಡ್ಡಿ ಕಳದ್ರು, ಯಾರದ್ದು ಕಳದ್ರು, ಹ್ಯಾಂಗ ಕಳದರು, ಮೊದಲು ಮುಂದ ಇಳಿಸಿದರೋ ಅಥವಾ ಹಿಂದ ಇಳಿಸಿದರೋ, ತಮದೇ ಕಳಕೊಂಡ್ರೋ ಅಥವಾ ಮಂದಿದು ಕಳದ್ರೋ, ಯಾವ ಬ್ರಾಂಡಿನ ಚಡ್ಡಿ ಹಾಕ್ಕೊಂಡಿದ್ದರು, ಪಟ್ಟಾ ಪಟ್ಟಿನೋ ಅಥವಾ ಇಂಪೋರ್ಟೆಡ್ ಚಡ್ಡಿನೋ? ಅದರ ಹಿಂದ ಏನರೆ ಕಾರಸ್ತಾನ ಅದನೋ? ಪಾಕಿಸ್ತಾನದ ಸಾದಿಶ್ ಅದ ಏನು? ಅದು ಇದು ಅಂತ ಎಲ್ಲಾ ತೋರ್ಸವರು ಇದ್ದರೇನು? ಹಾಂ? ಹಾಂ? ಏನು ಟೀವಿ ಮಂದಿರೀ? ಮೊದಲು ಇದೆಲ್ಲ ತೋರಸ್ತಾರ. ಆಮೇಲೆ ಒಂದು ಹತ್ತು ತಲೆ ಮಾಸಿದ ಮಂದಿ ಕರ್ಕೊಂಡು ಬಂದು ಅದರ ಮ್ಯಾಲೆ ಡಿಬೇಟ ಮಾಡ್ತಾರ. ಇಷ್ಟೆಲ್ಲ ಒಬ್ಬ ಮಿನಿಸ್ಟರ್ ಚಡ್ಡಿಯ ಬಗ್ಗೆ. ಅಂತಾ ಟೀವಿ ಪ್ರೋಗ್ರಾಂ ಮಂದಿ ನೋಡ್ತಾರ. ದೇವರೇ ಕಾಪಾಡಬೇಕು, ಅಂತ ಎರಡೂ ಕೈಯೆತ್ತಿ ನಮಸ್ಕಾರ ಮಾಡಿದೆ.

ಅಯ್ಯೋ! ಚಡ್ಡಿ ಕಳಿಲಿಕ್ಕೆ ಹೋಗಿದ್ದರು ಅಂದ್ರ ಖರೆ ಚಡ್ಡಿ ಕಳಿಲಿಕ್ಕೆ ಅಲ್ಲೋ! ಅಂತ ವೈನಿ ಶಂಖಾ ಹೊಡೆದರು.

ಮತ್ತ!? ಚಡ್ಡಿಯೊಳಗೂ ಖರೆ ಚಡ್ಡಿ ಸುಳ್ಳು ಚಡ್ಡಿ ಅಂತ ಇರ್ತಾವ ಏನ್ರೀ? ಹಾಂ? ಅಂತ ಕೇಳಿದೆ.

ಅಯ್ಯೋ! ಹುಚ್ಚ ಮಂಗೇಶ! ಈಗ ನಾವು ಸಹಜ ಮಾತಾಡೋವಾಗ 'ಗೂಟಾ ಬಡಿದರು' ಅಂದ್ರ ಖರೆ ಗೂಟಾ ಬಡಿದರು ಅಂತ ಅರ್ಥ ಏನು? ಹಾಂ? ಯಾರಿಗೋ ಗೂಟಾ ಬಡಿದರು ಅಥವಾ ಯಾರೋ ಗೂಟಾ ಬಡಿಸಿಕೊಂಡರು ಅಂದ್ರ ಅವರ ಹಿಂದ ಹೋಗಿ ಗೂಟ ಕಾಣ್ತದೋ ಅಂತ ನೋಡ್ತೀ ಏನೋ ಹುಚ್ಚ ಮಂಗೇಶ? ಕಾಮನ್ ಸೆನ್ಸ್ ಒಂದು ಬಿಟ್ಟು ಎಲ್ಲಾ ಅದ ನೋಡು ನಿನಗ, ಅಂತ ವೈನಿ ಏನೋ explain ಮಾಡಿದರು.

ಏನೋ? ಎಂತೋ? ಯಾರಿಗೆ ಗೊತ್ತು?

ಈಗ ಮಿನಿಸ್ಟರ್ ಚಡ್ಡಿ ಕಳಿಲಿಕ್ಕೆ ಹೋಗಿದ್ದರು ಅಂದ್ರ, ಅಂದ್ರ, ಅಂದ್ರ.......ಹ್ಯಾಂಗ ತಿಳಿಸಿ ಹೇಳಲಿ ನಿನಗ? ಹಾಂ! ಮಿನಿಸ್ಟರ್ 'ಪರ್ಧಾ ಪಾಶ್' ಅಂದ್ರ ಅವರ ಮುಖವಾಡ ಬಿಚ್ಚಿ ಒಗೆದು, ಮಂದಿಗೆ ಟೀವಿ ಮ್ಯಾಲೆ ತೋರಿಸಲಿಕ್ಕೆ ಹೋಗಿದ್ದರು ಅಂತ. ತಿಳೀತ? ಅಂತ ಕೇಳಿದರು ರೂಪಾ ವೈನಿ.

ನೋಡ್ರೀ ವೈನಿ. ಒಂದು ಮಾತು ನೀವು ಕ್ಲಿಯರ್ ಮಾಡ್ರೀ. ಮೊದಲು ಮಿನಿಸ್ಟರ್ ಚಡ್ಡಿ ಕಳಿಲಿಕ್ಕೆ ಹೋದರು ಅಂದ್ರೀ. ಈಗ ಮುಖವಾಡ ಬಿಚ್ಚಿ ಒಗೆದರು ಅಂತೀರಿ. ಏನು ಕಳದು, ಏನು ಬಿಚ್ಚಿ, ಏನು ಉಚ್ಚಿ ಒಗೆದರು? ಅದನ್ನ ನೀವು ಸರಿ ಮಾಡಿ ಹೇಳ್ರೀ. ಚಡ್ಡಿನೋ, ಮುಖವಾಡನೋ, ಲಂಗೋಟಿನೋ? ಮಿನಿಸ್ಟರ್ ಅವರನ್ನು ಏನು ದ್ರೌಪದಿ ಸೀರಿ ಕಳದಂಗ ವಸ್ತ್ರ ಕಳೆದು ಮಾನಭಂಗ ಮಾಡಲಿಕ್ಕೆ ಹೋಗಿದ್ದರು ಏನು? ಹಾಂ? ಅಂತ ಕೇಳಿದೆ.

ಏನೇನೋ ಹೇಳಿ ಬರೇ confuse ಮಾಡ್ಲೀಕತ್ತಾರ. ಆ....ಇವರಾ.....ಒಳ್ಳೆ ಹಾಪ್ ವೈನೀ.

ಪರ್ಧಾ ಪಾಶ್ ಅನ್ನೋದನ್ನ ಬಿಟ್ಟು ಬರೇ ಮುಖವಾಡ ಬಿಚ್ಚಿದರು ಅನ್ನೋದನ್ನು ಮಾತ್ರ ಕೇಳಿಸಿಕೊಂಡು ಏನೇನೋ ಕೇಳ್ತಿಯಲ್ಲೋ ಖೋಡೀ, ಅಂತ ಬೈದರು ರೂಪಾ ವೈನಿ.

ಆವಾ ಯಾರೋ ಶಿವಕುಮಾರ್ ಅಂತ ಮಿನಿಸ್ಟರ್ ಇದ್ದಾನಂತ ನೋಡು. ಆವಾ ರೊಕ್ಕಾ ತಿಂತಾನ ಅಂತ ಟೀವಿ ಮಂದಿಗೆ ಸುದ್ದಿ ಬಂದಿತ್ತು ಅಂತ ಆತು. ತಡಿ ಇವನನ್ನ ಸಿಗಿಸೋಣ ಅಂತ ಹೇಳಿ ಯಾವದೋ ಟೀವಿ ಚಾನೆಲ್ ಇಬ್ಬರು ರಿಪೋರ್ಟರ್, ಒಂದು ಹುಡುಗ ಒಂದು ಹುಡುಗಿ, ಅದೇನೋ ಸಣ್ಣ, ಯಾರಿಗೂ ಕಾಣದಂತ ಕ್ಯಾಮೆರಾ ತೊಗೊಂಡು ಹೋಗಿದ್ದರಂತ. ಅವಂಗ ರೊಕ್ಕಾ ಕೊಟ್ಟು, ಅವಾ ರೊಕ್ಕಾ ತೊಗೊಳ್ಳೋವಾಗ ಅದನ್ನ ಅಡಗಿಸಿ ಇಟ್ಟುಕೊಂಡಿದ್ದ ಸಣ್ಣ ಕ್ಯಾಮೆರಾ ಒಳಗ ಎಲ್ಲಾ ರೆಕಾರ್ಡಿಂಗ್ ಮಾಡಿಕೊಂಡು ಬಂದು, ಟೀವಿ ಮ್ಯಾಲೆ ತೋರ್ಸೀ, ಅವನ ಮಾನಾ ಹರಾಜ್ ಹಾಕಬೇಕು ಅಂತ ಪ್ಲಾನ್ ಇತ್ತಂತ, ಅಂತ ಹೇಳಿ ವೈನಿ ಒಂದು ಸಣ್ಣ ಬ್ರೇಕ್ ತೊಗೊಂಡ್ರು.

ಮುಂದ? ಅಂತ ಕೇಳಿದೆ.

ಆ ಮಿನಿಸ್ಟರ್ ಭಾಳ ಶಾಣ್ಯಾ ಇದ್ದನೋ ಅಥವಾ ಇವರ ಬ್ಯಾಡ್ ಲಕ್ ಖರಾಬ್ ಇತ್ತೋ ಗೊತ್ತಿಲ್ಲ. ಆ ಮಿನಿಸ್ಟರಗ ಏನೋ ಸಂಶಯ ಬಂದದ. ಈಗ ಬರ್ರಿ, ಆಮ್ಯಾಲೆ ಬರ್ರಿ ಅಂತ ಓಡ್ಯಾಡಿಸಿ ಆಮೇಲೆ ಕರೆಸಿಕೊಂಡ ಅಂತ ಆತು. ಇವರು ಲಂಚಾ ಕೊಡಲಿಕ್ಕೆ ಅಂತ ರೊಕ್ಕಾ ತೆಗೆದ ಕೂಡಲೇ, ಮಫ್ತಿ ಒಳಗ ಇದ್ದ ಪೊಲೀಸರಿಗೆ ಹಿಡದು ಕೊಟ್ಟನಂತ. ಈಗ ಆ ಇಬ್ಬರೂ ಟೀವಿ ವರದಿಗಾರರು ಪೋಲೀಸ್ ಸ್ಟೇಷನ್ ಒಳಗ ಹೋಗಿ ಕೂತಾರ. ಮಿನಿಸ್ಟರನ ಕಡೆ ಮಂದಿ ಸಹಿತ ನಾಕು ಬಾರಿಸಿ ಬಿಟ್ಟಾರಂತ, ಹೇಳಿದರು ರೂಪಾ ವೈನಿ

ಹೋಗ್ಗೋ!!!! ಘಾತಾ ಮಾಡಿಕೊಂಡರಲ್ಲರೀ ವೈನಿ? ಬೇಟೆ ಆಡಲಿಕ್ಕೆ ಹೋದವರೇ ಬೇಟೆಯಾಗಿ ಬಿಟ್ಟರು ಅಂತ ಆತು. ಶಿಕಾರಿ ಖುದ್ ಯಹಾ ಶಿಕಾರ್ ಹೋಗಯಾ! ಅಂದಂಗ ಆತು. ಅಲ್ಲರೀ? ಅಂತ ಕೇಳಿದೆ.

ಹಾಂ!! ಬರೋಬ್ಬರಿ ಹೇಳಿದಿ ನೋಡು. ಶಿಕಾರಿ ಖುದ್ ಯಹಾ ಶಿಕಾರ್ ಹೋಗಯಾ! ಇದು ಮಸ್ತ ಅದ. ಸ್ಟಿಂಗ್ ಆಪರೇಷನ್ ಮಾಡಲಿಕ್ಕೆ ಹೋದವರಿಗೆ ಅವರ ಸ್ಟಿಂಗ್ ರಿವರ್ಸ್ ಸ್ಟಿಂಗ್ ಆತು ನೋಡು, ಅಂತ ಹೇಳಿದರು.

ಮೊದಲೇ ಇಷ್ಟ ಹೇಳಲಿಕ್ಕೆ ಏನು ಧಾಡಿ ಆಗಿತ್ತು ನಿಮಗ? ಬಂದು ಕೂತಾಗಿಂದ ಸ್ಟಿಂಗ್ ಆಪರೇಷನ್, ಕುಟುಕು ಕಾರ್ಯಾಚರಣೆ,
ಚಡ್ಡಿ ಕಳಿಲಿಕ್ಕೆ ಹೋದವರು, ಮುಖವಾಡ ತೆಗಿಲಿಕ್ಕೆ ಹೋದವರು, ಲಂಗೋಟಿ ಬಿಚ್ಚಲಿಕ್ಕೆ ಹೋದವರು ಅಂತ ಏನೇನೋ ಹೇಳಿ, ನನ್ನ ಫುಲ್ confuse ಮಾಡಿ ಈಗ ಪಾಯಿಂಟ್ ಗೆ ಬರ್ತೀರಿ. ಕೊಂಕಣ ಸುತ್ತಿ ಮೈಲಾರಕ್ಕೆ ಬಂದಂಗ. ಮೊದಲೇ ಇಷ್ಟು ಹೇಳಿದ್ದರ? ಹಾಂ? ಅಂತ ವೈನಿಗೆ ಮೈಲ್ಡ್ ಆಗಿ ಬೆಂಡ್ ಎತ್ತಿದೆ. ಸುಮ್ಮನೆ ಚ್ಯಾಸ್ಟಿ.

ಹೂಂ ಮಾರಾಯಾ ಹೂಂ! ನೀನೇ ದೊಡ್ಡ ಪಂಡಿತ. ನಮಗೆಲ್ಲಾ ಏನೂ ಗೊತ್ತೇ ಇಲ್ಲ. ಇಷ್ಟೆಲ್ಲ ಗೊತ್ತಿದ್ದವಗ ಈ ಸುದ್ದಿ ಹ್ಯಾಂಗ ಗೊತ್ತಿರಲಿಲ್ಲ? ಹಾಂ? ಅಂತ ಕೇಳಿದರು ರೂಪಾ ವೈನಿ.

ಹೇಳಿದ್ನಲ್ಲರೀ. ಸುದ್ದಿ ಗಿದ್ದಿ ಓದಂಗಿಲ್ಲ, ಟೀವಿ ಗೀವಿ ನೋಡಂಗಿಲ್ಲ, ಅಂತ ಹೇಳಿದೆ.

ಮತ್ತೇನು ಮಾಡ್ತೀ? ಇಡೀ ದಿವಸ ಗೂಟಾ ಹೊಡಕೊಂಡು ಕೂತಿರ್ತೀ ಅಲ್ಲಾ? ಹಾಂ? ಅಂತ ಕೇಳಿದರು ವೈನಿ.

ಓದ್ತೇನ್ರೀ. ಅದೂ ಪುಸ್ತಕ. ಒಳ್ಳೊಳ್ಳೆ ಪುಸ್ತಕ. ಈ ಹಾಳು ಮೂಳು ಪೇಪರ್ ಒಳಗ ಬರೇ ಇಂತಾವ ಸುದ್ದಿ ಇರ್ತಾವ. ಟೀವಿ ಮ್ಯಾಲೆ ಅಂತೂ ಬಿಡ್ರೀ. ಸುಮ್ಮನೆ ಟೈಮ್ ವೇಸ್ಟ್ ನೋಡ್ರೀ. ಯಾರ್ಯಾರ ಮ್ಯಾಲೋ ಏನೇನೋ ಸ್ಟಿಂಗ್ ಆಪರೇಷನ್ ಅಂತ ಮಾಡೋದು, ನಂತರ ಅದನ್ನೇ ಇಟಕೊಂಡು ಅವರನ್ನ ಬ್ಲಾಕ್ ಮೇಲ್ ಮಾಡಿ ರೊಕ್ಕಾ ಹೊಡಿಯೋದು. ಅಕಸ್ಮಾತ ರೊಕ್ಕಾ ಕೊಡಲಿಲ್ಲ ಅಂದ್ರ ತಾವೇನೋ ದೊಡ್ಡ ಸುಬಗರು, ತಮ್ಮ ಚಾನೆಲ್ ಸತ್ಯ ಹರಿಶ್ಚಂದ್ರನ ಚಾನೆಲ್ ಅಂತ ಬೊಂಬಡಾ ಹೊಡಕೋತ್ತ ಆ ಸ್ಟಿಂಗ್ ಆಪರೇಷನ್ ರೆಕಾರ್ಡಿಂಗ್ ಹಿಡದು ಬಿಡದೇ ಇಪ್ಪತ್ನಾಕೂ ತಾಸು ತೋರಿಸಿ ತಲಿ ತಿನ್ನೋದು. ಎಲ್ಲಾ ಬಿಸಿನೆಸ್ ಡೀಲಿಂಗ್ ಇದ್ದಂಗ ನೋಡ್ರೀ. ಅದಕ್ಕ 'ಪರ್ಧಾ ಪಾಶ್', ಸ್ಟಿಂಗ್ ಆಪರೇಷನ್, ಅದು ಇದು ಅಂತ ಹೆಸರು. ಎಲ್ಲೋ ಒಂದು ಎರಡು ಕೇಸ್ ಇರಬಹುದು ಪ್ರಾಮಾಣಿಕತೆಯಿಂದ ಸ್ಟಿಂಗ್ ಆಪರೇಷನ್ ಮಾಡಿದ್ದು. ಉಳಿದದ್ದೆಲ್ಲ ಬರೇ ಬ್ಲಾಕ್ ಮೇಲ್ ಮಾಡಲಿಕ್ಕೆ ಅಂತ ಮಾಡಿದ್ದೇ ನೋಡ್ರೀ. ಇವರ ಕಡೆ ಸ್ಟಿಂಗ್ ಆಪರೇಷನ್ ಮಾಡಿಸಿಕೊಂಡವರೂ ಸಹಿತ ಅಂತವರೇ ಇರ್ತಾರ. ತಮ್ಮ ಖರಾಬಿ ಮುಚ್ಚಿಟ್ಟುಕೊಳ್ಳಲಿಕ್ಕೆ ಅಂತ ಹೇಳಿ ರೊಕ್ಕಾ ಕೊಟ್ಟು ಸುಮ್ಮನಾಗ್ತಾರ. ಇಬ್ಬರಿಗೂ ಲಾಭ. ಯಾವಾಗರೆ ಡೀಲಿಂಗ್ ವರ್ಕ್ ಔಟ್ ಆಗಲಿಲ್ಲ ಅಂದ್ರ ಆವಾಗ ಸ್ಟಿಂಗ್ ಆಪರೇಷನ್ ಸುದ್ದಿ ಹೊರಗ ಬರ್ತದ ನೋಡ್ರೀ, ಅಂತ ಹೇಳಿ ಮೆಜಾರಿಟಿ ಸ್ಟಿಂಗ್ ಆಪರೇಷನ್ ಬಗ್ಗೆ ವಾಸ್ತವಿಕತೆಯನ್ನ ರೂಪಾ ವೈನಿಗೆ ಮನವರಿಕೆ ಮಾಡಿಕೊಟ್ಟೆ.

ಹೀಂಗೇನು ಹಕಿಕತ್ತು? ನನಗ ಗೊತ್ತೇ ಇರಲಿಲ್ಲ ಬಿಡು. ಚೊಲೋ ಆತು ನೀ ಹೇಳಿದ್ದು. ಇನ್ನು ಮುಂದ ಎಲ್ಲಾ ಸ್ಟಿಂಗ್ ಆಪರೇಷನ್ ನಾ ಏನೂ ನಂಬಂಗಿಲ್ಲ ತೊಗೋ, ಅಂತ ಜ್ಞಾನೋದಯ ಆದವರಂಗ ವೈನಿ ಹೇಳಿದರು.

ಬರೇ ಅವಿಷ್ಟೇ ಅಲ್ಲ. ಆ ಹಾಳುವರಿ ಟ್ಯಾಬ್ಲಾಯ್ಡ್ ಪತ್ರಿಕೆ ಸಹಿತ ಓದೋದು ಕಮ್ಮಿ ಮಾಡ್ರೀ. ಅವರೂ ಎಲ್ಲಾ ಹಾಂಗೆ. ಸತ್ಯ ಬರಿಯವರು ಭಾಳ ಕಮ್ಮಿ. ಸುಮ್ಮನ ಯಾರದ್ದೋ ಚಡ್ಡಿ ಕಳದು, ಅವರು ರೊಕ್ಕಾ ಮಾಡಿಕೊಂಡು, ತಮಗ ತಮ್ಮ ಮನಿ ಮಂದಿಗೆಲ್ಲ ಚಡ್ಡಿ ಹಾಕಿಸಲಿಕ್ಕೆ ಬರಿಯೋವಂತಾ ಪೇಪರ್ ನಾವ್ಯಾಕ ರೊಕ್ಕಾ ಕೊಟ್ಟು ತೊಗೊಬೇಕ್ರೀ ವೈನಿ? ಹಾಂ? ಅಂತ ಕೇಳಿದೆ.

ಹೌದು, ಹೌದು, ಬರೋಬ್ಬರಿ ಅದ, ಅಂತ ಹೇಳಿಕೋತ್ತ ವೈನಿ ಚಹಾ ಮಾಡಲಿಕ್ಕೆ ಅಡಿಗಿ ಮನಿ ಕಡೆ ಹೋದರು.

ಲೇ ಚೀಪ್ಯಾ! ಅಂದೆ.

ಏನಲೇ? ಅಂತ 'ಸಂಯುಕ್ತ ಕರ್ನಾಟಕ' ಪೇಪರ್ ಒಳಗಿಂದ ಮಾರಿ ತೆಗೆದ.

ಲೇ, ನಿನಗೂ ಯಾರರ ಸ್ಟಿಂಗ್ ಆಪರೇಷನ್ ಮಾಡೇವಿ, ಅದು ಇದು ಅಂತ ಹೇಳಿ ಧಮಿಕಿ ಹಾಕಿ ರೊಕ್ಕಾ ಗಿಕ್ಕಾ ಕೇಳ್ಯಾರು. ಜ್ವಾಕಿಲೇ ಮಗನೇ! ಕಾಲ ಭಾಳ ಕೆಟ್ಟದ, ಅಂತ ಅಡ್ವಾನ್ಸ್ ವಾರ್ನಿಂಗ್ ಕೊಟ್ಟೆ.

ನನ್ನ ಮ್ಯಾಲೆ ಏನು ಸ್ಟಿಂಗ್ ಆಪರೇಷನ್ ಮಾರಾಯಾ? ಮತ್ತ ಮಾಡಿ ರೊಕ್ಕಾ ಕೇಳಿದರ ನನ್ನ ಕಡೆ ಎಲ್ಲೆ ಅವರಿಗೆ ರೊಕ್ಕ ಸಿಗಬೇಕು? ಹಾಂ? ಅಂದ ಚೀಪ್ಯಾ.

ಬ್ಲಾಕ್ ಮೇಲ್ ಮಾಡೋ ಮಂದಿಗೆ ಅಷ್ಟು ಇಷ್ಟು ಅಂತ ಇಲ್ಲ ನೋಡಪಾ. ಎಲ್ಲೋ ಬರೇ ಒಂದು ಐದ್ನೂರು ಸಾವಿರ ಸಿಕ್ಕರೂ ಸಾಕು ಅವರಿಗೆ. ಮಂದಿ ಸೈಜ್ ನೋಡಿ ಅವರು ಡೀಲಿಂಗ್ ಮಾಡ್ತಾರ ನೋಡು, ಅಂತ ಹೇಳಿದೆ.

ಯಾಕ ಹೇಳಿದೆ ಅಂದ್ರ ನೀನು ಪ್ರಾಯದವ ಇದ್ದಾಗ ಬ್ಲೂ ಫಿಲಂ ನೋಡಲಿಕ್ಕೆ ಹೋದಾಗ, ಪೋಲೀಸ್ ರೈಡ್ ಆದಾಗ ಪೋಲೀಸರ ಕಡೆ ಕಡತಾ ತಿಂದು ಬಂದಿದ್ದಿ ನೋಡು. ಅದರ ಹಳೇ ಕೇಸ್ ಇರ್ತದ ನೋಡು. ಅದನ್ನೇ ಹಿಡಕೊಂಡು, ಶ್ರೀಪಾದ ರಾವ್ ಅವರೇ, ನಿಮ್ಮ ಮ್ಯಾಲೆ ಆಗಿನ ಕಾಲದ ಸುದ್ದಿ ತೆಗೆದು ಈಗ ಬರೆದು ನಿಮ್ಮ ಮಾನಾ ಹರಾಜ್ ಹಾಕವ ಇದ್ದೇನಿ, ಇಷ್ಟು ರೊಕ್ಕಾ ಕೊಟ್ಟರ ಪೇಪರ್ ಒಳಗ ಛಾಪಿಸೋದಿಲ್ಲ, ಅಂತ ಯಾರರ ಹೇಳಿಕೋತ್ತ ಬಂದಾರು. ಜ್ವಾಕಿ ಮಾರಾಯಾ! ಜ್ವಾಕಿ! ನಿನ್ನ ಹುಡುಗ್ಯಾರು ಕುಂತಿ, ನಿಂತಿ ಲಗ್ನಕ್ಕ ಅಂತ ಕೂಡಿಟ್ಟ ರೊಕ್ಕ ಎಲ್ಲಾ ಬ್ಲಾಕ್ ಮೇಲ್ ಮಾಡವರಿಗೆ ಹೋದೀತು, ಅಂತ ಹೇಳಿದೆ.

ಏ! ಹಾಂಗೇನು ಆಗಂಗಿಲ್ಲ ಬಿಡು. ಅದಕ್ಕ ಎಲ್ಲಾ ವ್ಯವಸ್ಥಾ ಮಾಡಿ ಇಟ್ಟೇನಿ ತೊಗೋ, ಅಂದ ಚೀಪ್ಯಾ.

ಏನು ವ್ಯವಸ್ಥಾ ಮಾಡೀಪಾ? ಕೇಸ್ ಪೇಪರ್ ಎಲ್ಲಾ ಗಾಯಬ್ ಮಾಡಿಸಿಬಿಟ್ಟಿ ಏನು? ಹಾಂ? ಅಂತ ಕೇಳಿದೆ.

ಮತ್ತ? ಬಿಡತೇನಿ ಏನು? ಅದೂ ಆದ ಮರುದಿವಸವೇ ನಮ್ಮ ಬಳಗದ ವಕೀಲರನ್ನ ಒಬ್ಬರನ್ನ ಹಿಡಿದು ಕೇಸ್ ರಿಜಿಸ್ಟರ್ ಆಗದಂಗ ನೋಡಿಕೊಂಡುಬಿಟ್ಟೆ. ಇನ್ನೆಲ್ಲಿ ಬ್ಲಾಕ್ ಮೇಲ್? ಅಂತ ತನ್ನ ಮೀಸಿ ಮ್ಯಾಲೆ ಕೈಯಾಡಿಸಿದ ಚೀಪ್ಯಾ.

ಭಲೇ! ಭಾರಿ ಒಳ್ಳೆ ಕೆಲಸ ಮಾಡಿಬಿಟ್ಟಿ. ಇಂತಾ ಸಾಲಿಡ್ ಐಡಿಯಾ ನಿಂದಂತೂ ಇರಲಿಕ್ಕೆ ಇಲ್ಲ. ಯಾರು ಕೊಟ್ಟರು? ಹಾಂ? ಅಂತ ಕೇಳಿದೆ.

ನೀನೆ ಕೊಟ್ಟಿದ್ದಿ ಅಲ್ಲೋ. ನಿನ್ನ ಮಾತು ಕೇಳಿ ಸುಮ್ಮನ ಯಾರದ್ದಾರ ಮನಿಗೆ ಟೀವಿ, VCR ಭಾಡಿಗಿ ತಂದು KF ಕುಡಕೋತ್ತ BF ನೋಡಿದ್ದರ ಮುಗಿದು ಹೋಗ್ತಿತ್ತು. ಅದನ್ನ ಬಿಟ್ಟು ರಾಮನಗರದ ಆ ಆಂಟಿ ಮನಿಯಾಗ ಹೋಗಿ ಕೂತೆ. ರೈಡ್ ಬಿತ್ತು. ಪೋಲೀಸಾ ಹಾಕ್ಕೊಂಡು ಕುಂಡಿ ಶಟದು ಹೋಗೋ ಹಾಂಗ ನಾಕು ಕೊಟ್ಟ. ಮರುದಿವಸ ಪೋಲೀಸ್ ಸ್ಟೇಷನ್ ಗೆ ಬಂದು ಭೆಟ್ಟಿ ಆಗು ಅಂದಿದ್ದ. ಅದಕ್ಕ ಮೊದಲು ಬಂದು ನಿನ್ನ ಕಡೆ ಕೇಳಿದೆ. ನೀನೇ ವಕೀಲರ ಐಡಿಯಾ ಕೊಟ್ಟಿ. ಹಾಂಗ ಮಾಡಿದ್ದೆ ನೋಡಪಾ. ಭಾಳ ಥ್ಯಾಂಕ್ಸ್, ಅಂತ ಚೀಪ್ಯಾ ಎಂದೋ ಕೊಟ್ಟಿದ್ದ ಐಡಿಯಾಕ್ಕ ಥ್ಯಾಂಕ್ಸ್ ಹೇಳಿದ.

ನಾ ಐಡಿಯಾ ಕೊಟ್ಟಿದ್ನಾ? ನೆನಪೇ ಇರಲಿಲ್ಲ ನೋಡು. ಆಮ್ಯಾಲೆ ನಿನಗ ಫುಲ್ ಸೇಫ್ಟಿ ಒಳಗ BF ತೋರಿಸಿದ್ದು ಮಾತ್ರ ನೆನಪ ಅದ. ಯಾರ ತೊಂದ್ರೀ ತಾಪತ್ರಯ ಇಲ್ಲದ. ಅಲ್ಲಾ? ಎಲ್ಲಾ ಹಳೆ ಕಾಲ ಮಾರಾಯ, ಅಂತ ಹೇಳಿ ಫ್ಲಾಶ್ ಬ್ಯಾಕಿಗೆ ಹೋದೆ.

ಅಷ್ಟರಾಗ ಚಹಾ, ಫಳಾರ ತೊಗೊಂಡು ನಮ್ಮ ಅನ್ನಪೂರ್ಣೇಶ್ವರಿ ರೂಪಾ ವೈನಿ ಹಾಜರಾದರು.

** ನಿಮಗೂ ಸಹ ಸುದ್ದಿ ಗೊತ್ತಿರದಿದ್ದರೆ ಇಲ್ಲಿ ಓದಿ.


Thursday, March 06, 2014

ರಾಹುಲ್ ಭಟ್ ಬುಡಕ್ಕೆ ಬಿಸಿ, ಮಹೇಶ್ ಭಟ್ ಮಂಡೆ ಬಿಸಿ

26/11/2008 ರ ಮುಂಬೈ ದಾಳಿ ಆದ ಮೇಲಿನ ಆತಂಕದ ದಿನಗಳು ಅವು. ಸಮುದ್ರದ ಮೂಲಕ ಮುಂಬೈ ನುಸುಳಿದ್ದ LeT (ಲಷ್ಕರ್-ಏ-ತೈಬಾ) ಉಗ್ರರು ಮುಂಬೈನಲ್ಲಿ ದೊಡ್ಡ ಮಟ್ಟದ ಧಮಾಕಾ ಮಾಡಿ, ಇಡೀ ವಿಶ್ವವೇ ಹಾಂ! ಅನ್ನುವಂತೆ ಪ್ರೇತ ನರ್ತನ ಮಾಡಿದ್ದರು. ಉಗ್ರರ ಪೈಕಿ ಅಜ್ಮಲ್ ಕಸಬ್ ಒಬ್ಬ ಸಿಕ್ಕಿ ಬಿದ್ದಿದ್ದ. ಅವನೋ ಕೂಲಿ ಮಟ್ಟದ ಉಗ್ರರ ಕಾರ್ಯಕರ್ಮಿ ಅಷ್ಟೇ. ಬಂದೂಕು ಹಿಡಿದು, ತಲೆಯಲ್ಲಿ ಮತಾಂಧತೆಯ ದ್ವೇಷ ತುಂಬಿಸಿಕೊಂಡು ಬಂದು, ದೊಡ್ಡ ಹತ್ಯಾಕಾಂಡ ಮಾಡಿ ಸಿಕ್ಕಿ ಬಿದ್ದಿದ್ದ. ಅವನಿಗೆ ದಾಳಿಯ ಹಿಂದಿನ ಸಂಚು, ಸೂತ್ರಧಾರರರು, ರಹಸ್ಯಗಳು ಏನೂ ಗೊತ್ತಿರಲಿಲ್ಲ. 26/11 ದಾಳಿಯ ಹಿನ್ನಲೆಯ ಬಗ್ಗೆ ಎಲ್ಲ ಪೋಲೀಸ್, ಬೇಹುಗಾರಿಕೆ ಸಂಸ್ಥೆಗಳು ಕತ್ತಲಲ್ಲಿ ತಡಕಾಡುತ್ತಿದ್ದವು, ಒಂದು ದೊಡ್ಡ ಸುಳಿವಿಗಾಗಿ.

ಅಷ್ಟರಲ್ಲಿ ಅಮೇರಿಕಾದ FBI ನಿಂದ ಒಂದು ಖತರ್ನಾಕ ಸುದ್ದಿ ಬಂತು. ಡೇವಿಡ್ ಕೋಲ್ಮನ್ ಹ್ಯಾಡ್ಲೀ ಅನ್ನುವ ಪಾಕಿಸ್ತಾನಿ ಮೂಲದ ಅಮೇರಿಕನ್ ಪ್ರಜೆ ಈ 26/11/2008 ರ  ದಾಳಿ ಆಗುವ ಮೊದಲು ಎರಡು ಮೂರು ವರ್ಷಗಳಿಂದ ಭಾರತಕ್ಕೆ ಬಂದು ಹೋಗಿ ಮಾಡುತ್ತಿದ್ದ. ಅವನೇ ರಹಸ್ಯವಾಗಿ ಮುಂಬೈನ ಎಲ್ಲ ಮಾಹಿತಿ ಸಂಗ್ರಹಿಸಿ LeT ಉಗ್ರರಿಗೆ ಕೊಟ್ಟಿದ್ದ. ಅವನು ಕೊಟ್ಟಿದ್ದ ಮಾಹಿತಿ ಉಪಯೋಗಿಸಿಯೇ ಪಾಕಿ ಉಗ್ರರು ಅಷ್ಟು ಕರಾರುವಕ್ಕಾಗಿ ಪ್ಲಾನ್ ಮಾಡಿ, ಮುಂಬೈನಲ್ಲಿ ದೊಡ್ಡ ಮಟ್ಟದ ಕಾರ್ಯಾಚರಣೆ ಮಾಡಿ, ಇಡೀ ದೇಶವನ್ನೇ ಸುಮಾರು ಮೂರು ದಿವಸಗಳ ಕಾಲ ಪೂರ್ತಿಯಾಗಿ ಥಂಡಾ ಹೊಡೆಸಿದ್ದರು. ಪೂರ್ತಿ ಸ್ಥಬ್ದಗೊಳಿಸಿದ್ದರು.

ಡೇವಿಡ್ ಕೋಲ್ಮನ್ ಹ್ಯಾಡ್ಲೀ

ಆಯಿತು. ಪಾಕಿಗಳು ಇದರ ಹಿಂದೆ ಇದ್ದಾರೆ ಅಂತ ಮೊದಲೇ ಗೊತ್ತಿತ್ತು. ಈಗ ಪಾಕಿ ಮೂಲದ ಅಮೇರಿಕನ್ ಒಬ್ಬ ಸಹಿತ ಇದ್ದಾನೆ ಅಂತ ಆಯಿತು, ಅಂತ ಹೇಳಿ ಈ ಡೇವಿಡ್ ಕೋಲ್ಮನ್ ಹ್ಯಾಡ್ಲೀ ಅನ್ನುವನ ಮಾಹಿತಿಯನ್ನು ಸಹಿತ ಪೋಲೀಸರು ತನಿಖಾ ಡೇಟಾಬೇಸ್ ಒಳಗೆ ಸೇರಿಸುತ್ತಿದ್ದಾಗ ಇನ್ನೊಂದು ಖತರ್ನಾಕ್ ಮಾಹಿತಿ ಬಂದು ಸೇರಿಕೊಂಡಿತು.

ಅದೇನೆಂದರೆ.....

ಈ ಡೇವಿಡ್ ಕೋಲ್ಮನ್ ಹ್ಯಾಡ್ಲೀ ಭಾರತದಲ್ಲಿ 'ರಾಹುಲ್' ಅನ್ನುವನ ಸಂಗಡ ಸತತ ಸಂಪರ್ಕದಲ್ಲಿದ್ದ!!!!

ಇದು ದೊಡ್ಡ ಮಟ್ಟದ ಸ್ಪೋಟಕ ಮಾಹಿತಿ. ಅಲ್ಲಿಯವರೆಗೆ 26/11 ಉಗ್ರರಿಗೆ ಭಾರತದ ಯಾರೊಂದಿಗೂ ಸಂಪರ್ಕವಿದ್ದ ಬಗ್ಗೆ ಏನೂ ಮಾಹಿತಿ ಇರಲಿಲ್ಲ.

ಯಾರು ಈ ರಾಹುಲ್? ಏನು ಮಾಡಿದ್ದ?

ಎಲ್ಲ ತನಿಖಾ ಸಂಸ್ಥೆಗಳು ದೊಡ್ಡ ಮಟ್ಟಿಗೆ ತಲೆ ಕೆಡಿಸಿಕೊಂಡವು.

ರಾಹುಲ್ ಅನ್ನುವ ಹೆಸರಿನ ದೊಡ್ಡ ದೊಡ್ಡ ಜನರಿದ್ದರು. ರಾಹುಲ್ ಗಾಂಧಿ, ರಾಹುಲ್ ದ್ರಾವಿಡ್, ರಾಹುಲ್ ಸಿಂಗ್ (ಲೇಖಕ ಖುಷ್ವಂತ ಸಿಂಗರ ಮಗ). ಹೀಗಿರುವಾಗ 26/11 ದಾಳಿಯ ಸಂಚು ರೂಪಿಸುವದರಲ್ಲಿ ಮಹತ್ತರ ಪಾತ್ರ ವಹಿಸಿದ್ದ ಪಾತಕಿ ಡೇವಿಡ್ ಕೋಲ್ಮನ್ ಹ್ಯಾಡ್ಲೀ ಅನ್ನುವವ ಯಾವದೋ ರಾಹುಲ್ ಅನ್ನುವವನ ಜೊತೆ ನಿರಂತರ ಸಂಪರ್ಕದಲ್ಲಿದ್ದ ಅನ್ನುವದು ದೊಡ್ಡ ವಿಷಯವೇ ಆಯಿತು.

ಈ ಸುದ್ದಿ  ಹೇಗೋ ಲೀಕ್ ಆಗಿ ಮಾಧ್ಯಮಗಳಿಗೆ ಹಬ್ಬವೋ ಹಬ್ಬ. ಟೀವಿ ಪಂಡಿತರ ತಲೆಗೊಂದು ಮಾತು, ಅಭಿಪ್ರಾಯ. ತನಿಖಾ ಸಂಸ್ಥೆಗಳಿಗೆ ದೊಡ್ಡ ಮಟ್ಟದ ತಲೆನೋವು.

ಡೇವಿಡ್ ಕೋಲ್ಮನ್ ಹ್ಯಾಡ್ಲೀ ಅನ್ನುವ ಪಾಕಿಸ್ತಾನ ಮೂಲದ ಅಮೆರಿಕನ್ ಒಬ್ಬವನ ಜೊತೆ ಭಾರತದ ರಾಹುಲ್ ಅನ್ನುವನ ಸಂಪರ್ಕ ಇತ್ತು ಮತ್ತು ಭಾರತದ ಎಲ್ಲಾ ತನಿಖಾ ಸಂಸ್ಥೆಗಳು ಆ ರಾಹುಲ್ ಯಾರು ಅಂತ ಹುಡುಕುತ್ತಿವೆ, ಅಂತ ಯಾವಾಗ ಟೀವಿಯಲ್ಲಿ, ಪತ್ರಿಕೆಗಳಲ್ಲಿ ಸುದ್ದಿ ನಿರಂತರವಾಗಿ ಬರತೊಡಗಿತೋ ಆವಾಗ ನಿಜವಾದ ರಾಹುಲ್ ಬೆಚ್ಚಿ ಬಿದ್ದ. ಬುಡದಲ್ಲೇ ಬೆಂಕಿ ಹತ್ತಿ ಬ್ಯಾಕ್ ಬ್ಲಾಸ್ಟ್ ಆದ ಅನುಭವ ಅವನಿಗೆ.

ಯಾರಾಗಿದ್ದ ಆ ರಾಹುಲ್? ಅದೂ ಇಡೀ ದೇಶ ಹುಡುಕುತ್ತಿದ್ದ ರಾಹುಲ್?

ಅವನೇ ರಾಹುಲ್ ಭಟ್. ಸಿನೆಮಾ ನಿರ್ದೇಶಕ ಮಹೇಶ್ ಭಟ್ ಅವರ ಮೊದಲ ಹೆಂಡತಿ ಮಗ.

ರಾಹುಲ್ ಭಟ್

ಒಂದು ದಿವಸ ರಾಹುಲ್ ಭಟ್ ತನ್ನ ತಂದೆ ಮಹೇಶ ಭಟ್ರಿಗೆ ಫೋನ್ ಮಾಡಿ, ಅಪ್ಪಾ! ಅಂದ.

ತಂದೆ ಮಕ್ಕಳಲ್ಲಿ ಸಂಬಂಧ ಅಷ್ಟಿರಲಿಲ್ಲ. ಅಷ್ಟಕಷ್ಟೇ ಅನ್ನುವಂತಿತ್ತು. ರಾಹುಲ್ ಭಟ್ ನ ತಾಯಿ ಕಿರಣ್ ಮಹೇಶ್ ಭಟ್ ನ ಮೊದಲ ಹೆಂಡತಿ. ಅವಳಿಗೆ ಎರಡು ಮಕ್ಕಳು ಕರುಣಿಸಿದ ಮೇಲೆ ದೊಡ್ಡ ಭಟ್ಟರು ಪ್ರೊತಿಮಾ ಬೇಡಿ, ಪರ್ವೀನ ಬಾಬಿ ಇತ್ಯಾದಿ ನಟಿಮಣಿಯರೊಂದಿಗೆ ಏನೇನೋ ಸಂಬಂಧ ಇಟ್ಟುಕೊಂಡು, ಕೊನೆಗೆ ಸೋನಿ ರಾಜಧನ್ ಎಂಬ ನಟಿಯೊಂದಿಗೆ ಮದುವೆಯಾಗಿ ಬೇರೆನೇ ಇದ್ದರು. ಮೊದಲ ಹೆಂಡತಿ ಮಕ್ಕಳಾದ ಪೂಜಾ, ರಾಹುಲ್ ಅವರೆಲ್ಲರೊಂದಿಗೆ ಮಹೇಶ್ ಭಟ್ಟರ ಸಂಬಂಧ ಅಷ್ಟಕಷ್ಟೇ ಇತ್ತು. ರಾಹುಲ್ ಭಟ್ಟನಿಗೆ ಅಪ್ಪ ಮಹೇಶ್ ಭಟ್ಟನ ಮೇಲೆ ಸಾಕಷ್ಟು ಮುನಿಸು, ಅಸಮಧಾನ, ತನ್ನ ತಾಯಿಯನ್ನು ಬಿಟ್ಟವ ಅಂತ ಕೋಪ ಎಲ್ಲ ಇತ್ತು. ಆದರೂ ಈಗ ಅಪ್ಪ ನೆನಪಾಗಿದ್ದ. ದೊಡ್ಡ ಮಟ್ಟದ ಟೆರರಿಸ್ಟ್ ಲಫಡಾ ಒಂದು ಬುಡಕ್ಕೇ ಬಂದಾಗ ಅಪ್ಪ ಬೆಪ್ಪ ಎಲ್ಲ ನೆನಪಾದರು ರಾಹುಲ್ ಭಟ್ ನಿಗೆ.

ಏನು ಮಗನೇ? ಅಂದ ಆ ಕಡೆಯಿಂದ ದೊಡ್ಡ ಭಟ್ ಮಹೇಶ್ ಭಟ್.

ಅಪ್ಪಾ, ದೊಡ್ಡ ಪ್ರಾಬ್ಲಮ್ ಆಗಿಬಿಟ್ಟಿದೆ. ಏನು ಮಾಡಬೇಕೋ ತಿಳಿಯುತ್ತಿಲ್ಲ. ಸಿಕ್ಕಾಪಟ್ಟೆ tension ಆಗಿ ತಲೆ ಸಿಡಿದೇ ಹೋಗುತ್ತಿದೆ, ಅಂದ ಸಣ್ಣ ಭಟ್ ಫೋನಿನಲ್ಲೇ ಕುಂಯ್ ಕುಂಯ್ ಅಂದ.

ಏನಾಯಿತು ಮಗನೇ? ಅಂತ ಕಿವಿ ನಿಮಿರಿಸಿಕೊಂಡು ಕೇಳಿದ ದೊಡ್ಡ ಭಟ್.

ರಾಹುಲ್ ಭಟ್ ಹೇಳಿದ್ದನ್ನು ಕೇಳಿದ ಮಹೇಶ್ ಭಟ್ ಕೂಡ ಫುಲ್ ದಂಗಾಗಿ ಹೋದ. ಮಗ ಹೇಳಿದ ಸುದ್ದಿ ಕೇಳಿ, ಅದನ್ನು ತಿಳಿದುಕೊಂಡು, ಅರಗಿಸಿಕೊಳ್ಳಲು ಅವನಿಗೆ ಸುಮಾರು ಹೊತ್ತೇ ಬೇಕಾಯಿತು.

ಎಂತಾ ಕೆಲಸ ಮಾಡಿಕೊಂಡು ಕೂತೆಯೋ ಮಗನೇ? ಇದರ ಮುಂದಿನ ಪರಿಣಾಮ ಏನಾಗುತ್ತದೆ ಅಂತ ನೆನಿಸಿಕೊಂಡರೆ ನನಗೇ ಭಯವಾಗುತ್ತದೆ. ಆದರೆ ನಿನ್ನದೇನೂ ತಪ್ಪಿಲ್ಲ ಅಂದ ಮೇಲೆ ಹೆದರಿಕೆ ಏಕೆ? ಒಂದು ಕೆಲಸ ಮಾಡು, ಅಂತ ಹೇಳಿ ದೊಡ್ಡ ಭಟ್ ಮಾತು ನಿಲ್ಲಿಸಿದ.

ಏನು ಮಾಡ್ಲೀ ಡ್ಯಾಡಿ? ಅಂತ ಸಣ್ಣ ಭಟ್ ಅತ್ತು ಕೇಳಿದ.

ಮುಂಬೈ ಪೋಲೀಸ್ ಕ್ರೈಂ ಬ್ರಾಂಚಿನ ಜಾಯಿಂಟ್ ಕಮಿಷನರ್ ರಾಕೇಶ ಮಾರಿಯಾ ನನಗೆ ತಕ್ಕ ಮಟ್ಟಿಗೆ ಪರಿಚಯಸ್ಥರು. ಅವರಿಗೆ ಫೋನ್ ಮಾಡಿ appointment ತೆಗೆದುಕೊಂಡು, ನಿನಗೆ ತಿರುಗಿ ಫೋನ್ ಮಾಡುತ್ತೇನೆ. ಹೋಗಿ ಅವರನ್ನು ಭೆಟ್ಟಿಯಾಗಿ ಮಾತಾಡು. ಮುಂದಿನದು ದೇವರಿಗೇ ಬಿಡಬೇಕು ಅಷ್ಟೇ. ನಮ್ಮ ಕೈಲಿಲ್ಲ. ದೊಡ್ಡ ಮಟ್ಟದ ಲಫಡಾದಲ್ಲಿ ಸಿಕ್ಕಿದ್ದೀಯ, ಅಂತ ಹೇಳಿದ ದೊಡ್ಡ ಭಟ್ ಹಣೆ ಮೇಲಿನ ಬೆವರು ಒರಸಿಕೊಳ್ಳುತ್ತ ಫೋನ್ ಇಡುವ ಮುಂಚೆ ಇನ್ನೊಂದು ಮಾತು ಹೇಳುವದು ಮರೆಯಲಿಲ್ಲ.

ರಾಹುಲ್ ಒಂದು ಮಾತು, ಅಂದ ಮಹೇಶ ಭಟ್ ಮಾತಿನ ಮಹತ್ವ ಮಗನ ತಲೆಯಲ್ಲಿ ಇಳಿಯಲಿ ಅನ್ನುವ ಹಾಗೆ ಒಂದು ದೊಡ್ಡ ಅಲ್ಪ ವಿರಾಮ ಹಾಕಿದ.

ಏನಪ್ಪಾ ಅದು? ಅಂದ ರಾಹುಲ್.  ಒಂದಲ್ಲ ಹತ್ತು ಮಾತಾದರು ಹೇಳು, ಆದರೆ ಈ ಕಂಟಕದಿಂದ ಪಾರಾಗೋ ಬಗೆ ತೋರು ತಂದೆ, ಅನ್ನುವ ದನಿಯಲ್ಲಿ ಕೇಳಿದ.

ರಾಕೇಶ ಮಾರಿಯಾ ಪೋಲೀಸ್ ಸಾಹೇಬರನ್ನು ಭೆಟ್ಟಿಯಾದಾಗ ಯಾವದನ್ನೂ ಮುಚ್ಚಿಡೋ ಹಾಗೆ ಇಲ್ಲ. ಎಲ್ಲ ಇದ್ದಕ್ಕಿದ್ದ ಹಾಗೆ ಪೂರ್ತಿಯಾಗಿ, ಸತ್ಯವನ್ನು ಮಾತ್ರ ಹೇಳುವೆ, ಸತ್ಯವನ್ನು ಬಿಟ್ಟು ಏನನ್ನೂ ಹೇಳುವದಿಲ್ಲ ಅನ್ನುವ ಹಾಗೆ ಪೂರ್ತಿ ಸತ್ಯ ಹೇಳು. ಅವರು ಕೇಳಿದ ಪ್ರಶ್ನೆಗಳಿಗೆ ಸತ್ಯವಾಗಿಯೇ ಉತ್ತರ ಕೊಡು. ನಿನ್ನದು ಏನೂ ತಪ್ಪಿಲ್ಲ ಅಂತ ಅವರಿಗೆ ಸಹಜವಾಗಿ ಮನವರಿಕೆಯನ್ನು ಮಾಡಿಕೊಡು. ಅವರಿಗೆ ನೀನು ಹೇಳಿದ್ದು ಸತ್ಯ ಅಂದರೆ ನೀನು ಬಚಾವ್. ಇಲ್ಲಾಂದ್ರೆ ನಿನ್ನನ್ನು ಸದ್ಯದ ಮಟ್ಟಿಗೆ ಯಾರೂ ಬಚಾವ್ ಮಾಡಲಾರರು, ಅಂದ ಮಹೇಶ ಭಟ್ಟ ಫೋನಿಟ್ಟ.

ಆ ಮೇಲೆ ಮಹೇಶ ಭಟ್ಟ ರಾಕೇಶ ಮಾರಿಯಾರನ್ನು ಸಂಪರ್ಕಿಸಿ, 26/11 ರ ಬಗ್ಗೆ ತಮ್ಮ ಮಗ ರಾಹುಲನಿಗೆ ಏನೋ ಮಾಹಿತಿ ಗೊತ್ತಿದೆಯೆಂದು ಹೇಳಿ ಅವರ appointment ತೆಗೆದುಕೊಂಡ. ಅದನ್ನು ಮಗ ರಾಹುಲನಿಗೆ ತಿಳಿಸಿ, ಮತ್ತೊಮ್ಮೆ ಧೈರ್ಯ ತುಂಬಿ, ಹೋಗಿ ರಾಕೇಶ ಮಾರಿಯಾರನ್ನು ಭೆಟ್ಟಿಯಾಗು ಅಂದ. ಆಲ್ ದಿ ಬೆಸ್ಟ್ ಹೇಳುವದನ್ನು ಮರಿಯಲಿಲ್ಲ.

ರಾಹುಲ್ ಜೊತೆಗೆ ಇನ್ನೊಬ್ಬ ಇದ್ದ. ಅವನ ಹೆಸರು ಸುದ್ದಿಯಲ್ಲಿ ಬಂದಿರಲಿಲ್ಲ. ಆದ್ರೆ ಪಾತಕಿ ಡೇವಿಡ್ ಕೋಲ್ಮನ್ ಹ್ಯಾಡ್ಲೀ ಅವನ ಜೊತೆಗೂ ತುಂಬ ಕ್ಲೋಸಾಗಿದ್ದ. ಅವನೇ ಬಾಡಿ ಬಿಲ್ಡರ್, ಜಿಮ್ ಟ್ರೈನರ್, ವಿಲಾಸ್ ವಾರಕ್ ಎಂಬ ದೈತ್ಯ ದೇಹಿ. ರಾಹುಲ್ ಭಟ್ಟನ ಆಪ್ತ ಮಿತ್ರ. ರಾಹುಲ್ ಭಟ್ಟ, ವಿಲಾಸ್ ವಾರಕ್ ಮತ್ತು ಡೇವಿಡ್ ಕೋಲ್ಮನ್ ಹ್ಯಾಡ್ಲೀ - ಈ ಮೂವರು ಸ್ನೇಹಿತರು. ಡೇವಿಡ್ ಕೋಲ್ಮನ್ ಹ್ಯಾಡ್ಲೀ ಅಂತಹ ಉಗ್ರನೊಂದಿಗೆ ತಾನು ಸ್ನೇಹ ಮಾಡಿದ್ದೆ, ಅವನು ಮುಂಬೈ ದಾಳಿಯ ಹಿಂದೆ ಇದ್ದ, ಈಗ ಪೊಲೀಸರು ಎಲ್ಲರನ್ನೂ ಹುಡುಕುತ್ತಿದ್ದಾರೆ ಅನ್ನುವ ವಿಷಯ ತಿಳಿದ ವಿಲಾಸ್ ವಾರಕ್ ಫುಲ್ ಹೆದರಿ, ಅವನಿಗೆ ನರ್ವಸ್ ಬ್ರೇಕ್ ಡೌನ್ ಆಯಿತು. ಪೊಲೀಸರು, ತನಿಖಾ ಏಜೆನ್ಸಿಗಳ ಕೈಗೆ ಸಿಕ್ಕು, ಚಿತ್ರಹಿಂಸೆ ಅನುಭವಿಸಿ, ರಾಷ್ಟ್ರದ್ರೋಹಿ ಅಂತ ಬ್ರಾಂಡ್ ಆಗಿ, ಸತ್ತು ಬದುಕುವದಕಿಂತ ಆತ್ಮಹತ್ಯೆ ಮಾಡಿಕೊಂಡು ಬಿಡುವದೇ ವಿಲಾಸನಿಗೆ ಲೇಸೆನಿಸಿತ್ತು. ರಾಹುಲ್ ಭಟ್ ನೇ ಸಮಾಧಾನ ಮಾಡಿದ್ದ. ಕ್ರೈಂ ಬ್ರಾಂಚಿನ ಟ್ರೀಟ್ಮೆಂಟ್ ವಿಲಾಸ್ ವಾರಕ ಬಹಳ ಬಾಲಿವುಡ್ ಸಿನೆಮಾಗಳಲ್ಲಿ ನೋಡಿದ್ದ ಅಂತ ಅನ್ನಿಸುತ್ತದೆ. 'ಬ್ಲಾಕ್ ಫ್ರೈಡೆ', 'ಅಬ್ ತಕ್ ಛಪ್ಪನ್' ತರಹದ ಚಿತ್ರಗಳನ್ನು ನೋಡಿದರೆ ಕ್ರೈಂ ಬ್ರಾಂಚ್ ಪೊಲೀಸರು ಪಾತಕಿಗಳ ಬಾಯಿ ಹೇಗೆ ಬಿಡಿಸುತ್ತಾರೆ ಅಂತ ತಿಳಿಯುತ್ತದೆ. ತಿಳಿಯುವದೊಂದೇ ಅಲ್ಲ ಇವರ ಸಹವಾಸ ಬೇಡವೇ ಬೇಡ ಅಂತ ದೊಡ್ಡ ನಮಸ್ಕಾರ ಹೊಡೆಯುವವರೇ ಜಾಸ್ತಿ. ವಿಲಾಸ್ ವಾರಕನಿಗೂ ಹಾಗೆ ಅನ್ನಿಸಿದ್ದರೆ ಏನು ಆಶ್ಚರ್ಯ?

appointment ಇದ್ದ ದಿವಸ ರಾಹುಲ್ ಭಟ್ ಮತ್ತು ವಿಲಾಸ್ ವಾರಕ್ ಮುಂಬೈನ ಕ್ರೈಂ ಬ್ರಾಂಚ್ ಆಫೀಸಿಗೆ ಹೋದರು. ಸ್ವಲ್ಪ ಸಮಯದ ನಂತರ ರಾಕೇಶ ಮಾರಿಯಾ  ಅವರ ಆಫೀಸ್ ಒಳಗಡೆ ಅವರನ್ನು ಕರೆದು ಬಿಡಲಾಯಿತು. ಸಿಂಹದ ಗುಹೆಯಲ್ಲಿ ಬಿಟ್ಟ ಮೇಕೆಗಳ ಸ್ಥಿತಿ ರಾಹುಲ್ ಮತ್ತು ವಿಲಾಸರದ್ದು. ಥರ ಥರ ನಡುಗುತ್ತ ಹೋದರು. ಮುಂಬೈ ಕ್ರೈಂ ಬ್ರಾಂಚ್ ಅಂದರೆ ಆ ಮಟ್ಟದ ಹೆದರಿಕೆ ಎಲ್ಲರಿಗೆ. ಆ ಪರಿ ಗೂಂಡಾಗಳ ಎನ್ಕೌಂಟರ್, ರೌಡಿಗಳ ಮರ್ದನ, ಟೆರರಿಸ್ಟಗಳ ಬಂಧನ ಮಾಡಿ ಲಿವಿಂಗ್ ಲೆಜೆಂಡ್ ಆಗಿದ್ದ ಪೋಲೀಸ್ ಆಫೀಸರ್ ರಾಕೇಶ ಮಾರಿಯಾ ಅಂದ್ರೆ ಘಟಾನುಘಟಿ ನುರಿತ ಕ್ರಿಮಿನಲ್ಲು ಗಳೇ ನಡುಗಿ ಹೋಗುತ್ತಿದ್ದರು. ಇನ್ನು ರಾಹುಲ್, ವಿಲಾಸರಂತಹ ಪಡ್ಡೆಗಳ ಗತಿ ಏನು?

ರಾಕೇಶ ಮಾರಿಯಾ ಚೇಂಬರ್ ಒಳಗೆ ಇರಲಿಲ್ಲ. ಗವ್ವೆನ್ನುವ ಮೌನ ಇಬ್ಬರೂ ಪಡ್ದೆಗಳನ್ನು ಮತ್ತೂ ಆತಂಕಕ್ಕೆ ತಳ್ಳಿತು. ಬಾಗಿಲು ತಳ್ಳಿಕೊಂಡು ಎತ್ತರಕ್ಕೆ, ನೇರವಾಗಿದ್ದ, ಮಾರಿಯಾ ಒಳಗೆ ಬಂದರು. ನಮಸ್ಕಾರ ಸರ್! ಅನ್ನುವ ಹಾಗೆ ರಾಹುಲ್, ವಿಲಾಸ್ ಎದ್ದು ನಿಂತು ಏನೋ ವಂದಿಸಿದರು. ಧಕ್, ಧಕ್ ಅನ್ನುತ್ತಿದ್ದ ಎದೆ ಗುಂಡಿಗೆ ಬಾಯಿಗೆ ಬಂದ ಅನುಭವ. ಅರಿಭಯಂಕರ ಮಾರಿಯಾ ಸಾಹೇಬರ ಮುಂದೆ ನಿಲ್ಲುವದು ಅಂದ್ರೆ ಸುಮ್ಮನೇನಾ? ಎಂತೆಂತದೋ ಜನರ ಏನೇನೋ ಒದ್ದೆಯಾಗಿ, ಏನೆಲ್ಲ ನಿಕಾಲಿಯಾಗಿ ಬಿಟ್ಟಿತ್ತು ಅವರ ಮುಂದೆ. ಇನ್ನು ಈ ಎರಡು ಪಡ್ಡೆ ಹುಡುಗರ ಗತಿ, ಅಷ್ಟೇ!

ರಾಕೇಶ ಮಾರಿಯಾ ಬಂದು ಕೂತವರೇ, ಕೊಂಚ ಗತ್ತಿನಿಂದಲೇ ನೋಡಿ, ರಾಹುಲ್, ವಿಲಾಸರಿಗೆ ಕೂಡಲು ಹೇಳಿದರು. ಇಬ್ಬರೂ ಕೂತರು.

ಮಾರಿಯಾ ತಮ್ಮ ತೀಕ್ಷ್ಣ ದೃಷ್ಟಿ ಬೀರುತ್ತ, ದುರು ದುರು ದಿಟ್ಟಿಸುತ್ತ, ಏನು? ಏನು ಸಮಾಚಾರ? ಅಂತ ಬಿಗುವಾಗೇ ಕೇಳಿದರು.

ಸರ್ssssssssss! ಅನ್ನುತ್ತ ವಿಲಾಸ್ ವಾರಕ್ ಅಳಲು ಶುರು ಮಾಡಿಬಿಟ್ಟ. ಮಾರಿಯಾ ಬಿಟ್ಟು ಬೇರೆ ಯಾರೋ ಆಗಿದ್ದರೆ, ಅರೆ! ಏನಾಯಿತು ಮಾರಾಯಾ? ನಾನೇನು ಮಾಡಿದೆ? ಹಾಂ? ಯಾಕೆ ಅಳೋಕೆ ಶುರು ಮಾಡಿಬಿಟ್ಟೆ? ಅಂತ ರಮಿಸಲು ಬರುತ್ತಿದ್ದರೋ ಏನೋ. ಆದರೆ ಅವರು ರಾಕೇಶ ಮಾರಿಯಾ. ಅದೂ ಮುಂಬೈ ಪೋಲೀಸ್ ಕ್ರೈಂ ಬ್ರಾಂಚ್ ಜಾಯಿಂಟ್ ಕಮಿಷನರ್. 26/11 ತನಿಖೆಯ ಪೂರ್ತಿ ಜವಾಬ್ದಾರಿ ಅವರ ಮೇಲೆ ಇದೆ. ಹೀಗಿದ್ದಾಗ ಯಾರೋ ಪಡ್ಡೆ ಹುಡುಗ ಬಂದು ಟೈಮ್ ವೇಸ್ಟ್ ಮಾಡುತ್ತಿರುವದು ಅಲ್ಲದೆ ಮಾತಿಲ್ಲದೆ ಅಳಲು ಶುರು ಮಾಡಿ ಬಿಟ್ಟಿದ್ದಾನೆ. ಕರ್ಮ! ಕರ್ಮ! ಅಂತ ಮನದಲ್ಲೇ ಅಂದುಕೊಂಡು, ರಾಹುಲ್ ಕಡೆ ನೋಡಿ, ಏನು? ಅಂದರು.

ರಾಹುಲ್ ಭಟ್ಟ ಸಹಿತ ಒಳ ಒಳಗೆ ಹೆದರಿ ಹೆಮಾರಿ ಹೋಗಿದ್ದರೂ ಏನೋ ಮಾಡಿ ಎಲ್ಲಿಂದಲೋ ಇದ್ದ ಬಿದ್ದ ಧೈರ್ಯ ಸ್ವಲ್ಪ ತಂದುಕೊಂಡ. ಉಗುಳು ನುಂಗೇ ನುಂಗಿದ. ರಾಕೇಶ ಮಾರಿಯಾ ಮತ್ತೆ ದಿಟ್ಟಿಸಿದರು. ಇನ್ನೂ ಮಾತಾಡಲಿಲ್ಲ ಅಂದ್ರೆ ಎದ್ದು ಬಂದು ಒದ್ದೇ ಬಿಟ್ಟಾರು ಅಂತ ಅಂಜಿದ ರಾಹುಲ್ ಮಾತಾಡಲು ಶುರು ಮಾಡಿದ.

ಸಾರ್! ಡೇವಿಡ್ ಕೋಲ್ಮನ್ ಹ್ಯಾಡ್ಲೀ ಸಂಪರ್ಕದಲ್ಲಿದ್ದ ರಾಹುಲ್ ನಾನೇ ಸಾರ್! ಅಂದು ಸುಮ್ಮನಾದ.

ಹಾಂ!!! ಅಂತ ಅಬ್ಬರಿಸಿದರು ಮಾರಿಯಾ.

ಅವರ ಇಡೀ ಪೋಲೀಸ್ ವ್ಯವಸ್ಥೆ ಇಡೀ ದೇಶ, ಇತರೆ ಸಂಸ್ಥೆಗಳು ವಿದೇಶ ಎಲ್ಲ 'ಆ ರಾಹುಲ್' ಸಲುವಾಗಿ ಜಾಲಾಡುತ್ತಿದ್ದರೆ ಬೇಕಾಗಿದ್ದ ರಾಹುಲ್, ಅದೂ ಮಹೇಶ ಭಟ್ ಎಂಬ ಖ್ಯಾತ ಸಿನಿಮಾ ನಿರ್ದೇಶಕರ ಮಗ, ಮಾಡೆಲ್, ನಟ ಮುಂದೆ ಬಂದು ಕೂತು ತಾನೇ ಅದು ಅನ್ನುತ್ತಿದ್ದಾನೆ!!!

ನೋಡು! ಮೊದಲಿಂದ ಪೂರ್ತಿಯಾಗಿ ಹೇಳು. ಏನಾದರೂ ಮುಚ್ಚಿಟ್ಟೆ ಅದು ಇದು ಅಂದ್ರೆ ಅಷ್ಟೇ ಮತ್ತೆ, ಅಂತ ತಮ್ಮ ಕ್ರೈಂ ಬ್ರಾಂಚ್ ಧಮಕಿ ಲೈಟ್ ಆಗಿ ಕೊಟ್ಟರು. ಅಷ್ಟರಲ್ಲಿ ಮಾರಿಯಾ ಅವರನ್ನು ನೋಡಿದಾಕ್ಷಣ ಸತ್ತೆನೋ  ಅಂತ ಅಳಲು ಶುರು ಮಾಡಿದ್ದ 'ಭಯಂಕರ ಬಾಡಿ ಬಿಲ್ಡರ್' ವಿಲಾಸ್ ವಾರಕ್ ಗೊಸ್ ಗೊಸ್ ಅಂತ ಮೂಗು ಎಳೆಯುತ್ತ ಅಳುವದನ್ನ ನಿಲ್ಲಿಸಿ ಸುಮ್ಮನಾಗುತ್ತಿದ್ದ.

ಸರ್! ಈ ಡೇವಿಡ್ ಕೋಲ್ಮನ್ ಹ್ಯಾಡ್ಲೀ ಆಗಾಗ ಮುಂಬೈಗೆ ಬರುತ್ತಿದ್ದ ಸರ್. ನಾನು ಹೋಗುತ್ತಿದ್ದ ಜಿಮ್ಮಿಗೇ ಕಸರತ್ತು ಮಾಡಲು ಬರುತ್ತಿದ್ದ. ಈ ವಿಲಾಸ್ ಅದೇ ಜಿಮ್ಮಿನಲ್ಲಿ ಫಿಟ್ನೆಸ್ ಶಿಕ್ಷಕ. ಹಾಗೆ ಜಿಮ್ಮಿಗೆ ಬರುತ್ತಿದ್ದ ಡೇವಿಡ್ ಹ್ಯಾಡ್ಲೀ ನಮಗೆ ಪರಿಚಯ ಸಾರ್. ಅಷ್ಟೇ. ಅಲ್ಲಿ ಇಲ್ಲಿ ಅಂತ ಟೀ, ಕಾಫೀ, ಪಾರ್ಟಿ ಅದು ಇದು ಅಂತ ಮಾಡಿದ್ದಿವಿ ಸಾರ್. ಒಂದೆರಡು ಸರೆ ನಮ್ಮ ಮನೆಗೂ ಬಂದಿದ್ದ. ಆದ್ರೆ ನಮಗೆ ಅವನು  26/11 ಉಗ್ರರ ದಾಳಿಯ ಬಗ್ಗೆ ಏನೂ ಹೇಳಿರಲಿಲ್ಲ ಸಾರ್. ಅಮೇರಿಕಾಗೆ ವಲಸೆ ಹೋಗುವವರಿಗೆ ಸಹಾಯ ಮಾಡುವ ಇಮಿಗ್ರೇಷನ್ ಕನ್ಸಲ್ಟಿಂಗ್ ಬಿಸಿನೆಸ್ಸ್ ನಡೆಸುತ್ತಿದ್ದ ಸಾರ್. ದೇಶದಲ್ಲಿ ಇಲ್ಲದಾಗ ಆಗಾಗ ಫೋನ್ ಮಾಡಿ ಸಹಜ ಮಾತಾಡುತ್ತಿದ್ದ. ಅಷ್ಟೇ. ನಾನು ಅವನಿಗೆ ಎಂದೂ ಫೋನ್ ಮಾಡಿರಲಿಲ್ಲ.  ಮತ್ತೆ ಡೇವಿಡ್ ಹೇಳಿಯೇ ಬಿಟ್ಟಿದ್ದ ಸಾರ್ - ಫೋನ್ ಮಾಡಲೇ ಬೇಡಿ, ಅಂತ. ಅವನಾಗೇ ಫೋನ್ ಮಾಡಿದಾಗ ಮಾತಾಡಿದ್ದು ಅಷ್ಟೇ ಸಾರ್, ಅಂತ ಹೇಳಿದ ರಾಹುಲ್, ಸರ್! ನನ್ನ ನಂಬಿ ಸಾರ್, ಅಂತ 'ಅಂಬಿಗ ನಾ ನಿನ್ನ ನಂಬಿದೆ' ಅನ್ನುವ ದೈನೇಸಿ ಲುಕ್ ಮಾರಿಯಾ ಸಾಹೇಬರಿಗೆ ಕೊಟ್ಟ.

ಇದನ್ನೆಲ್ಲ ನಾನು ನಂಬಬೇಕು. ಅಲ್ಲಾ? ಅಂತ ಹೂಂಕರಿಸಿದರು ಮಾರಿಯಾ ಸಾಹೇಬರು. ಕಾಳಿನಿಂದ ಜೊಳ್ಳನ್ನು ಬೇರ್ಪಡಿಸುವ ಪೋಲೀಸರ ಟೆಕ್ನಿಕ್ ಅದು.

ಸಾರ್! ಇಷ್ಟೇ ಸಾರ್ ಆಗಿದ್ದು. ಇದರ ಬಿಟ್ಟು ಏನೇನೂ ಇಲ್ಲ ಸಾರ್. ಆ ಪುಣ್ಯಾತ್ಮ ನಮ್ಮ ದೇಶದ ಮೇಲೆ surveillance ಮಾಡಲು ಬಂದಿದ್ದ, 26/11 ರ ದಾಳಿಯ ಸಲುವಾಗಿ ಮಾಹಿತಿ ಸಂಗ್ರಹಿಸಿ ಉಗ್ರರಿಗೆ ಕೊಟ್ಟ, ಅಂತೆಲ್ಲ ಗೊತ್ತಿದ್ದರೆ ಮೊದಲೇ ತಿಳಿಸುತ್ತಿದ್ದೆವು ಸಾರ್. ಟೀವಿಯಲ್ಲಿ ಅವನ ಬಗ್ಗೆ ನೋಡಿದ್ದೇ ತಡ ನಿಮ್ಮನ್ನು ನೋಡಲು ಬಂದೆ ಸರ್. ಜೊತೆಗೆ ಈ ವಿಲಾಸನನ್ನೂ ಕರೆದುಕೊಂಡು ಬಂದೆ ಸರ್. ನಮ್ಮದು ಏನೂ ತಪ್ಪಿಲ್ಲ ಸಾರ್, ಅಂತ ಹೇಳಿದ ರಾಹುಲ್ ಭಟ್ ಅಂಬೋ ಅಂದ.

ನೋಡೀ!!!! ಎಲ್ಲ ವಿವರ ಚೆಕ್ ಮಾಡಿಸುತ್ತೇನೆ. ಏನಾದರೂ ಸುಳ್ಳು ಗಿಳ್ಳು ಹೇಳಿದ್ದು ಕಂಡುಬಂದರೆ ಅಷ್ಟೇ ಮತ್ತೆ. ಗೊತ್ತಲ್ಲ ನಾವು ಯಾರು ಅಂತ? ಹಾಂ! ನಾವು ಕ್ರೈಂ ಬ್ರಾಂಚ್. ಕಲ್ಲುಗಳನ್ನೂ ಸಹ ಮಾತಾಡುವಂತೆ ಮಾಡಿದ್ದೇನೆ ಈ ಲಾಕಪ್ಪುಗಳಲ್ಲಿ, ಅಂತ ಮಾರಿಯಾ ಅಬ್ಬರಿಸಿದರು.

ಇದರ ಬಗ್ಗೆ ಮತ್ತೇನಾದರೂ ನೆನಪಾದರೆ ಆಗಿಂದಾಗಲೇ ತಿಳಿಸಬೇಕೆಂದು ಹೇಳಿ, ಈಗ ಹೋಗಿ, ಅಂತ ಹೇಳಿ ಕಳಿಸಿದರು.

ಬದುಕಿದೆಯಾ ಬಡ ಜೀವವೇ ಅಂತ ನಡಗುತ್ತ ರಾಹುಲ್ ಮತ್ತು ವಿಲಾಸ್ ಎದ್ದು ಬಂದರು. ಅವರು ಕುಳಿತ ಕುರ್ಚಿ ಒದ್ದೆ ಮಾಡಿ ಬಂದಿದ್ದರೋ ಏನೋ! ಗೊತ್ತಿಲ್ಲ.

ಆಗಿದ್ದೇನಾಗಿತ್ತು?

ಡೇವಿಡ್ ಕೋಲ್ಮನ್ ಹ್ಯಾಡ್ಲೀ - ಪಾಕಿಸ್ತಾನಿ ಮೂಲದ ಅಮೇರಿಕನ್. ಅಪ್ಪ ಪಾಕಿಸ್ತಾನ ಬಿಟ್ಟು ಯಾವದೋ ಕಾಲದಲ್ಲಿ ಅಮೇರಿಕಾ ಸೇರಿಕೊಂಡಿದ್ದ. ಅಲ್ಲೇ ಯಾರೋ ಬಿಳಿಯಳನ್ನು ಮದುವೆಯಾದಾಗ ಹುಟ್ಟಿದವನೇ ಡೇವಿಡ್ ಕೋಲ್ಮನ್ ಹ್ಯಾಡ್ಲೀ. ಮೊದಲಿನ ಸ್ವಲ್ಪ ವರ್ಷ ಅಮೇರಿಕಾದಲ್ಲೇ ಕಳೆದ. ನಂತರ ಅಪ್ಪನಿಗೆ ಪಾಕಿಸ್ತಾನ ನೆನಪಾಯಿತು. ಅಮೇರಿಕಾ ಸಾಕಾಯಿತು. ಬಿಟ್ಟು ಬಂದ. ಜೊತೆಗೆ ಬಂದ ಅಮೆರಿಕನ್ ಅಮ್ಮನಿಗೆ ಪಾಕಿಸ್ತಾನ ಸರಿ ಬರಲಿಲ್ಲ. ಖುದಾ ಹಾಫಿಜ್! ಅಂತ ದೊಡ್ಡ ನಮಸ್ಕಾರ ಹೊಡೆದು ವಾಪಸ್ ಅಮೇರಿಕಾಕ್ಕೆ ವಾಪಸ್ ಬಂದು ಬಿಟ್ಟಳು. ತಲಾಕ್ ಆದ ಹಾಗೆಯೇ. ಸ್ವಲ್ಪ ವರ್ಷ ಡೇವಿಡ್ ತಂದೆಯೊಂದಿಗೆ ಪಾಕಿಸ್ತಾನದಲ್ಲೇ ಉಳಿದ. ಮುಂದೆ ಅಮೇರಿಕಾ ಕರೆಯಿತು. ಅಮ್ಮ ಬಾ ಎಂದಳು. ಅಪ್ಪನಿಗೆ ಗುಡ್ ಬೈ ಹೇಳಿ ಅಮೆರಿಕಾಕ್ಕೆ ಬಂದ. ಬಂದು ಸುಮ್ಮನೆ ಇದ್ದಿದ್ದರೆ ಏನೂ ತೊಂದರೆಯೇ ಇರಲಿಲ್ಲ. ಆದ್ರೆ ಸುಮ್ಮನಿರುವದು ಡೇವಿಡ್ಡನ ಜಾಯಮಾನವೇ ಅಲ್ಲ.

ತಾಯಿ ಬಾರ್ ನಡೆಸುತ್ತಿದ್ದಳು. ಮೊದಲು ಸ್ವಲ್ಪ ದಿವಸ ಬಾರಿನ ಗಲ್ಲಾ ಪೆಟ್ಟಿಗೆ ಸಂಬಾಳಿಸಿದ ಡೇವಿಡ್. ಅದರಲ್ಲಿ ಜಾಸ್ತಿ ದುಡ್ಡು ಕಾಣಲಿಲ್ಲ. ಡ್ರಗ್ ದಂಧೆ ಶುರು ಮಾಡಿದ. ಅದರಲ್ಲಿ ಸುಮಾರು ದುಡ್ಡು ಕಂಡ. ಆ ಹೊತ್ತಿಗೆ ಕೆನಡಾದ ಒಬ್ಬಳನ್ನು ಮದುವೆಯಾದ. ಡ್ರಗ್ ದಂಧೆ ಜೋರಾಯಿತು. ಸಿಕ್ಕೊಂಡು ಬಿದ್ದ. ಸಿಕ್ಕೊಂಡು ಬಿದ್ದವನು ಮಾದಕ ದ್ರವ್ಯ ನಿಗ್ರಹ (DEA) ಸಂಸ್ಥೆ ಜೊತೆ ಒಳ ಒಪ್ಪಂದ ಮಾಡಿಕೊಂಡು ಶಿಕ್ಷೆಯಿಂದ ಬಚಾವ ಆದ. ತನಗಿಂತ ದೊಡ್ಡ ಡ್ರಗ್ ಸ್ಮಗ್ಲರುಗಳನ್ನು ಹಿಡಿದು ಕೊಟ್ಟು ಭೇಷ ಭೇಷ ಎನ್ನಿಸಿಕೊಂಡು DEA ಜನರಗೆ ತುಂಬ ಬೇಕಾದವನು ಆಗಿಹೋದ.

ಅದು ಏನೋ ಎಂತೋ, ಮತ್ತೆ ಪಾಕಿಸ್ತಾನ ಕರೆಯಿತು. ಬಂದೇ ಬಿಟ್ಟ. ಧರ್ಮದ ಮತ್ತು ಯಾಕೋ ಈ ಸಲ ಸ್ವಲ್ಪ ಜಾಸ್ತಿ ತಲೆಗೇರಿತ್ತು. ಡೇವಿಡ್ ಹ್ಯಾಡ್ಲೀ ಹೋಗಿ ದಾವೂದ್ ಗಿಲಾನಿ ಅಂತ ಪಾಕಿಸ್ತಾನದಲ್ಲಿ ಪ್ರಚಲಿತನಾದ. ಅ ಟೈಮಿನಲ್ಲೇ ಅವನಿಗೆ LeT ಉಗ್ರರ ಸಂಪರ್ಕ ಬಂದಿದ್ದು. ದೊಡ್ಡ ದೊಡ್ಡ ಮತಾಂಧ ಗುರುಗಳ ಮಾತು, ಭೀಕರ ಭಾಷಣ ಕೇಳಿ ಫುಲ್ ಜಿಹಾದಿ ಆಗಿ ಬಿಟ್ಟ. ತಾನೂ LeT ಸಂಘಟನೆ ಸೇರಿ ಬಿಟ್ಟ. ತರಬೇತಿ ಪಡೆದ. ಕಾಶ್ಮೀರಕ್ಕೆ ಕಳಿಸಿ, ಭಾರತದ ಪಡೆಗಳ ವಿರುದ್ಧ ಹೋರಾಡುತ್ತೇನೆ, ಅಂದ. LeT ಅವರಿಗೆ ಇವನು ಕಾದಾಟಕ್ಕೆ ಬೇಕಾಗುವ ಹುಂಬನಲ್ಲ ಅನ್ನಿಸಿತು. ಒಳ್ಳೆ ಹೀರೋ ಪರ್ಸನಾಲಿಟಿ ಹೊಂದಿದ್ದ ಡೇವಿಡ್ / ದಾವೂದ್ ಸೂಕ್ಷ್ಮವಾಗಿ ಮಾಡುವ ಬೇಹುಗಾರಿಕೆ ಕೆಲಸಕ್ಕೇ ಸರಿ ಅಂತ ಹೇಳಿ ಅವನಿಗೆ ಬೇರೆಯೇ ತರಹದ ತರಬೇತಿ ಕೊಡಿಸಿತು.

ಅಷ್ಟರಲ್ಲಿ ಡೇವಿಡ್ / ದಾವೂದ್ ಪಾಕಿಸ್ತಾನದಲ್ಲಿ ಮತ್ತೊಂದು ಮದುವೆಯಾಗಿ ಮಕ್ಕಳು ಮಾಡಿಕೊಂಡಿದ್ದ. ಅಮೆರಿಕಾಗೆ ಆಗಾಗ ಹೋಗಿ ಬಂದು ಮಾಡುತ್ತಿದ್ದ. ಪಾಕಿಸ್ತಾನದಲ್ಲಿ ಹೆಂಡತಿ ಇದ್ದಾಗೇ ಮೊರೊಕ್ಕೊ ದೇಶದಿಂದ ಪಾಕಿಸ್ತಾನಕ್ಕೆ ಮೆಡಿಕಲ್ ಕಲಿಯಲು ಬಂದಿದ್ದ ಯುವತಿ ಒಬ್ಬಳನ್ನು ಡವ್ವಾಗಿ ಫಿಟ್ಟಿಂಗ್ ಮಾಡಿಕೊಂಡ. ಆಕೆಯನ್ನೂ ಸಹ ಭಾರತಕ್ಕೆ ಕರೆದುಕೊಂಡು ಬಂದಿದ್ದ. ಹೀಗೆ ಬಹು ಪತ್ನಿ ವಲ್ಲಭನಾಗಿದ್ದ ಡೇವಿಡ್ ಕೋಲ್ಮನ್ ಹ್ಯಾಡ್ಲಿಯ ಬಗ್ಗೆ ಅವನ ಪತ್ನಿಯರೇ ಅವರಿದ್ದ ದೇಶದಲ್ಲಿ ಪೋಲೀಸ್ ಕಂಪ್ಲೇಂಟ್ ಕೊಟ್ಟಿದ್ದರು. ಅವನಿಗೆ ಉಗ್ರವಾದದ ಬಗ್ಗೆ ಇದ್ದ ಆಸಕ್ತಿ ಬಗ್ಗೆ ತಿಳಿಸಿದ್ದರು. ಯಾರೂ ಅದನ್ನೆಲ್ಲ ಹೆಚ್ಚು ಗಮನಕ್ಕೆ ತೆಗೆದುಕೊಂಡಿರಲಿಲ್ಲ. ಅದರ ಪರಿಣಾಮ ಹ್ಯಾಡ್ಲೀ ತನ್ನ ಖತರ್ನಾಕ ಕೆಲಸ ಎಲ್ಲ ಕಡೆ ಆರಾಮಾಗಿ ಮಾಡುತ್ತಲೇ ಹೋದ.

26/11/2008 ದಾಳಿಗೆ ಸುಮಾರು ಮೂರು ನಾಕು ವರ್ಷದ ಹಿಂದೆಯೇ ಮೊದಲ ಬಾರಿಗೆ ಡೇವಿಡ್ ಭಾರತಕ್ಕೆ ಬಂದ. ಬಿಸಿನೆಸ್ಸ್ ಮಾಡುತ್ತೇನೆ ಅಂತ ಬಂದ. ಮತ್ತೊಬ್ಬ ಪಾತಕಿ ರಾಣಾ ಎಂಬವ ಅಮೇರಿಕಾದಲ್ಲಿ ಡೇವಿಡ್ ಹ್ಯಾಡ್ಲೀಯ ದೋಸ್ತ. ಅವನೂ ಪಾಕಿಸ್ತಾನದವನೇ. ಅವನದು ಅಮೇರಿಕಾಕ್ಕೆ ವಲಸೆ ಬರುವವರಿಗೆ ಸಹಾಯ ಮಾಡುವ ಬಿಸಿನೆಸ್ಸ್ ಇತ್ತು. ಅದರ ಬ್ರಾಂಚ್ ಆಫೀಸ್ ಭಾರತದಲ್ಲಿ ಮುಂಬೈನಲ್ಲಿ ತೆಗೆಯುತ್ತೇನೆ ಅಂತ ಹೇಳಿ ಬಂದಿದ್ದ ಡೇವಿಡ್ ಕೋಲ್ಮನ್ ಹ್ಯಾಡ್ಲೀ. ಬಂದ ನಿಜವಾದ ಕಾರಣ 26/11 ರಂತಹ ದಾಳಿಗೆ ಸ್ಕೆಚ್ ಹಾಕಲು ಅಂತ ಈಗ ಗೊತ್ತಾಗುತ್ತಿತ್ತು.

ಶಾಸ್ತ್ರಬದ್ಧವಾಗಿಯೇ ಬರುತ್ತಿದ್ದ ಡೇವಿಡ್ ಕೋಲ್ಮನ್ ಹ್ಯಾಡ್ಲೀಯ ಬಗ್ಗೆ ಯಾರಿಗೂ ಯಾವ ಸಂಶಯವೂ ಬರಲಿಲ್ಲ. ಬರುತ್ತಿದ್ದ ಹೋಗುತ್ತಿದ್ದ. ವೀಸಾ ಇತ್ತು. ಪಾಕಿಸ್ತಾನಕ್ಕೆ ವಾಯಾ ದುಬೈ ಹೋಗುತ್ತಿದ್ದ. ಮೂಲತಹ ಪಾಕಿಯೇ ಆದ ಕಾರಣ ಅದೂ ಅಷ್ಟು ಸಂಶಯ ಉಂಟು ಮಾಡಲಿಲ್ಲ.

ಮುಂಬೈನಲ್ಲಿ ಡೇವಿಡ್ ಕೋಲ್ಮನ್ ಹ್ಯಾಡ್ಲೀ ಒಂದು ಆಫೀಸ್ ತೆಗೆದ. ಒಂದು ಮಹಿಳಾ ಸೆಕ್ರೆಟರಿ ಇಟ್ಟುಕೊಂಡ. ಸುಮ್ಮನೆ ನೋಡಿದವರಿಗೆ ಇಮಿಗ್ರೇಷನ್ ಕನ್ಸಲ್ಟೆಂಟ್ ಅಂತನೇ ಕಾಣುತ್ತಿದ್ದ. ಆದರೆ ಮಾಡಿದ್ದು ಮಾತ್ರ ಪೂರ್ತಿ surveillance ಕೆಲಸ. ಪದೇ ಪದೇ ತಾಜ್ ಹೋಟೆಲ್ಲಿಗೆ ಹೋದ. ಎಲ್ಲ ಫೋಟೋ, ವೀಡಿಯೊ ಮಾಡಿಕೊಂಡ. ಸುಮಾರು ಸಲ ರಾಹುಲ್ ಭಟ್ ಮತ್ತು ವಿಲಾಸ್ ವಾರಕ್ ಸಹಿತ ಅವನ ಜೊತೆ ತಾಜ್ ಹೋಟೆಲ್ಲಿನಲ್ಲಿ ಪಾರ್ಟಿ ಮಾಡಿದ್ದರು. ಸಕತ್ತಾಗಿ ಗುಂಡು, ತುಂಡು ಹಾಕಿಸಿ ಎಂಜಾಯ್ ಮಾಡಿಸಿದ್ದ. ಮುಂದೊಂದು ದಿನ ಇಂತಹ ಬಕರಾಗಳನ್ನು ತನ್ನ ಹಾಗೆಯೇ ಪಾಕಿ ಏಜೆಂಟ್ ಮಾಡಿಕೊಳ್ಳುವ ಹುನ್ನಾರ ಇತ್ತಂತೆ. ಹಾಗಂತ ಅಮೇರಿಕಾದಲ್ಲಿ ವಿಚಾರಣೆ ಸಮಯ ಹ್ಯಾಡ್ಲೀ ಹೇಳಿದ್ದ.

ಇಷ್ಟೇ ಅಲ್ಲ. ಒಂದು ಬೋಟ್ ಭಾಡಿಗೆಗೆ ತೆಗೆದುಕೊಂಡು ಮುಂಬೈ ಸುತ್ತ ಮುತ್ತ ಎಲ್ಲ ವೀಕ್ಷಣೆ ಮಾಡಿದ. ಸಲೀಸಾಗಿ ನೌಕಾ ನೆಲೆ, ಯುದ್ಧ ನೌಕೆಗಳ ಚಿತ್ರ ತೆಗೆದ. ವೀಡಿಯೊ ರೆಕಾರ್ಡಿಂಗ್ ಮಾಡಿದ. ಯಾರೂ ಏನೂ ಕೇಳಲಿಲ್ಲ. ಕೇಳಬೇಕಾದವರು, ನೋಡಬೇಕಾದವರು, ಹಿಡಿದು ವಿಚಾರಿಸಬೇಕಾದವರು ಎಲ್ಲಿ ಹೋಗಿದ್ದರೋ ಏನೋ? ಕಸಬ್ ಮತ್ತಿತರ ಉಗ್ರರು ಇಳಿದ ಬಂದಿದ್ದ ಸಮುದ್ರ ತಟದ ಜಾಗದ, ಮತ್ತೆ ಹಲವು ಜಾಗಗಳ GPS coordinates ನೀಟಾಗಿ ರೆಕಾರ್ಡ್ ಮಾಡಿಕೊಂಡು ಪಾಕಿಗಳಿಗೆ ತಲುಪಿಸಿದ್ದ. ಅದನ್ನೇ ಅವರು ಕಸಬ್ ಇತ್ಯಾದಿಗಳಿಗೆ ಕೊಟ್ಟ GPS ಉಪಕರಣಗಳಲ್ಲಿ ಪ್ರೋಗ್ರಾಮ್ ಮಾಡಿ ಕೊಟ್ಟು ಕಳಿಸಿದ್ದರು.

ಅದೇನೋ ಏನೋ, ಡೇವಿಡ್ ಕೋಲ್ಮನ್ ಹ್ಯಾಡ್ಲೀಗೆ ರಾಹುಲ್ ಭಟ್ ಮೇಲೆ ಹೆಚ್ಚಿನ ಅಕ್ಕರೆ. ಬಾಲ್ಯದಲ್ಲಿ ತಂದೆಯ ಪ್ರೀತಿಯಿಂದ ವಂಚಿತ ರಾಹುಲ್ ಭಟ್ ಸಹಿತ ತನಗೆ ತಿಳಿಯದೇ ಕಂಡ ಕಂಡವರಲ್ಲಿ ಕಳೆದು ಹೋಗಿದ್ದ ತಂದೆ ಮಹೇಶ್ ಭಟ್ ನನ್ನು ಹುಡುಕುತ್ತಿದ್ದ. ಅದೇ ವೇಳೆಗೆ ಈ ಡೇವಿಡ್ ಕೋಲ್ಮನ್ ಹ್ಯಾಡ್ಲೀ ಅನ್ನುವ ಪಾಕಂಡಿ ಸಿಕ್ಕ. ಇನ್ನೂ ಏನೇನು ಆಗಬೇಕಿತ್ತೋ? ಕೇವಲ ಸ್ನೇಹ ಮಾತ್ರ ಆಯಿತು.

ರಾಹುಲ್ ಭಟ್ ನೇ ಹೇಳಿಕೊಂಡಂತೆ, 26/11 ರ ದಾಳಿಗೆ ಕೆಲ ದಿನ ಮುಂಚೆ ಮಾತ್ರ ಈ ಡೇವಿಡ್ ಕೋಲ್ಮನ್ ಹ್ಯಾಡ್ಲೀ ರಾಹುಲ್ ಭಟ್ ನಿಗೆ ಫೋನ್ ಮಾಡಿ, ರಾಹುಲ್, ಜೋಕೆ! ನವೆಂಬರ್ ಇಪ್ಪತ್ತಾರ ಆಸು ಪಾಸು ದಕ್ಷಿಣ ಮುಂಬೈ ಕಡೆ ಮಾತ್ರ ತಲೆ ಹಾಕಬೇಡ, ಅಂತೇಳಿ ಫೋನ್ ಇಟ್ಟಿದ್ದ. ಡೇವಿಡ್ ಕೋಲ್ಮನ್ ಹ್ಯಾಡ್ಲೀಯ ವಿಕ್ಷಿಪ್ತ ಗುಣ ಸ್ವಭಾವ ಸ್ವಲ್ಪ ಮಟ್ಟಿಗೆ ರಾಹುಲ್ ಭಟ್ ನಿಗೆ ಅರ್ಥವಾಗಿತ್ತು. ಕೇವಲ ಅವನು ಹೇಳಿದ್ದನ್ನು ಕೇಳೋದು ಮಾತ್ರ, ವಾಪಸ್ ಪ್ರಶ್ನೆ ಗಿಶ್ನೆ ಕೇಳೋ ಹಾಗೇ ಇಲ್ಲ. ಕೇಳಲಿಕ್ಕೆ ಅಷ್ಟರಲ್ಲಿ ಫೋನ್ ಇಟ್ಟಾಗಿತ್ತು. ರಾಹುಲ್ ಭಟ್ ಆ ಎಚ್ಚರಿಕೆಗೆ ಎಷ್ಟು ಮಹತ್ವ ಕೊಟ್ಟನೋ ಗೊತ್ತಿಲ್ಲ. ಅವನಂತೂ ಮುಂಬೈ ದಾಳಿ ನೆಡದಾಗ ಮನೆಯಲ್ಲೇ ಕೂತಿದ್ದನಂತೆ.

ಎಲ್ಲ ತನಿಖಾ ಸಂಸ್ಥೆಗಳು ರಾಹುಲ್ ಭಟ್ ನನ್ನು ಮತ್ತೆ ಮತ್ತೆ ಪ್ರಶ್ನಿಸಿದವು. ಭಟ್ ಸುಳ್ಳು ಹೇಳುತ್ತಿಲ್ಲ ಅಂತ ಎಲ್ಲರಿಗೆ ಮನವರಿಕೆ ಆಯಿತು.

ಭಾರತದ ನಂತರ ಡೆನ್ಮಾರ್ಕ್ ಮೇಲೆ ದಾಳಿ ಮಾಡುವ ಸಲುವಾಗಿ ಡೆನ್ಮಾರ್ಕ್ ಗೆ ಹೋಗಿದ್ದ ಡೇವಿಡ್ ಹ್ಯಾಡ್ಲೀ ಸಿಕ್ಕಿ ಬಿದ್ದಿದ್ದ. ಕೆಲವು ಭಾರತೀಯ ತನಿಖಾಧಿಕಾರಿಗಳು ಅಮೇರಿಕಾಗೂ ಹೋಗಿ, FBI ಬಂಧನದಲ್ಲಿದ್ದ ಡೇವಿಡ್ ಕೋಲ್ಮನ್ ಹ್ಯಾಡ್ಲೀಯನ್ನೇ ವಿಚಾರಣೆ ಮಾಡಿ ಬಂದರು. ಎಲ್ಲಿಯೂ ರಾಹುಲ್ ಭಟ್ ತಪ್ಪಿತಸ್ಥ ಅಂತ ಕಂಡು ಬರಲಿಲ್ಲ. ಅಂತಿಮವಾಗಿ ರಾಹುಲ್ ಭಟ್ ನಿಗೆ ಕ್ಲೀನ್ ಚಿಟ್ ಕೊಡಲಾಯಿತು. ಬೆನ್ನೇರಿದ್ದ ಬೇತಾಳ ಹಾರಿ ಹೋಗಿ ನಿರಾಳವಾದ ಅನುಭವ ಆಗಿರಬೇಕು ರಾಹುಲ್ ಭಟ್, ಮಹೇಶ್ ಭಟ್ ಕುಟುಂಬದವರಿಗೆ.

ಆಪಾದನೆ ಬಂದ ಕೂಡಲೇ ವಿಲಾಸ್ ವಾರಕನನ್ನು ಅವನ ಜಿಮ್ ಟ್ರೈನರ್ ನೌಕರಿಯಿಂದ ಓಡಿಸಲಾಗಿತ್ತು. ಮದುವೆ ಮಾಡಿಕೊಂಡು, ಮುಂಬೈನಲ್ಲಿ ಬದುಕಲು ಕಾಸಿಲ್ಲದೆ, ಹೆಂಡತಿಯನ್ನು ಹಳ್ಳಿಗೆ ಕಲಿಸುವಂತಹ ಪರಿಸ್ಥಿತಿ ಪಾಪ ಅವನಿಗೆ. ಆ ಮೇಲೆ ರಾಹುಲ್ ಭಟ್ ನೇ ಅವನಿಗೆ ಯಾರೋ ದೊಡ್ಡ ಬಿಲ್ಡರ್ ಸಾಹೇಬರ ಬಾಡಿ ಗಾರ್ಡ್ ಕೆಲಸ ಕೊಡಿಸಿದನಂತೆ. ಅದೊಂದು ಒಳ್ಳೆ ಕೆಲಸ ಮಾಡಿ ಮೆರದ ಸಣ್ಣ ಭಟ್.

ಒಂದು ಅತ್ಯಂತ ಕುತೂಹಲಕಾರಿ ಸಂಗತಿ ಅಂದರೆ, ಈ ಡೇವಿಡ್ ಕೋಲ್ಮನ್ ಹ್ಯಾಡ್ಲೀ ಎಂಬ ಘಾತುಕ ಯಾರೋ ಒಬ್ಬ ದೊಡ್ಡ ಬಾಲಿವುಡ್ ಹೀರೋಯಿನ್ ಜೊತೆಗೆ 'ಸಂಬಂಧ' ಹೊಂದಿದ್ದ ಅನ್ನುವದು. ಆಕೆ ಯಾರು ಅಂತ ಯಾರೂ ಬಹಿರಂಗವಾಗಿ ಬಾಯಿ ಬಿಡುತ್ತಿಲ್ಲ. ಯಾರೋ ದೊಡ್ಡ ಸುಂದರಿಯೇ ಇರಬೇಕು. ಅದಕ್ಕೇ ಎಲ್ಲರೂ ಚುಪ್ ಚುಪ್! ಕೊಡಬೇಕಾದವರಿಗೆಲ್ಲ ಸರಿಯಾದ 'ತನು', ಮನ, ಧನಗಳ ಕಾಣಿಕೆ ಒಪ್ಪಿಸಿ ಬಚಾವಾಗಿರಬೇಕು ಆಕೆ. ೧೯೯೩ ರ ಮುಂಬೈ ಸರಣಿ ಸ್ಪೋಟಗಳ ನಂತರವೂ ಹಲವಾರು ದೊಡ್ಡ ನಟಿಯರ ಹೆಸರು ಬಂದು ಹೋಗಿತ್ತು. ಆದರೆ ನಟರ ಹೆಸರು ಖುಲ್ಲಂ ಖುಲ್ಲಾ ಆದಷ್ಟು ನಟಿಮಣಿಗಳ ಹೆಸರು ಹೊರಗೆ ಬರಲಿಲ್ಲ. ಅವೆಲ್ಲ ಎಲ್ಲೊ ಇಂಟರ್ನೆಟ್ ಮೇಲೆ ಯಾವ್ಯಾವದೋ ಹರಟೆ ಬೋರ್ಡುಗಳಲ್ಲಿ ಚರ್ಚೆ ಆಗುತ್ತಲೇ ಇರುತ್ತವೆ.

ಇಲ್ಲಿ ಬರೆದ ಸುಮಾರು ಸುದ್ದಿಯನ್ನು ಈಗಿತ್ತಲಾಗೆ ರಾಹುಲ್ ಭಟ್ ಬರೆದ ಪುಸ್ತಕ - Headley & I - ಪುಸ್ತಕದಿಂದ ಎತ್ತಿದ್ದು. ಮುಂಬೈನ ಖ್ಯಾತ ಪತ್ರಕರ್ತ ಹುಸೇನ್ ಝೈದಿ ಭಟ್ ನ ಜೊತೆಗೂಡಿ ಒಂದು ರೋಚಕ ಪುಸ್ತಕ ತಂದಿದ್ದಾರೆ.

ಈ ಪುಸ್ತಕ ರಾಹುಲ್ ಭಟ್ ನ ಆತ್ಮಕತೆಯಂತೆ ಇದೆ. ತಂದೆ ಮಹೇಶ್ ಭಟ್ ಮುನ್ನುಡಿ ಬರೆದಿದ್ದಾರೆ. ಪ್ರತಿ ಚಾಪ್ಟರ್ ಮೊದಲು ರಾಹುಲ್ ಒಂದು ಸ್ವಲ್ಪ ತಂದೆಯನ್ನು ಬಯ್ಯುತ್ತಾನೆ. ತಂದೆ ಒಪ್ಪಿಕೊಳ್ಳುತ್ತಾನೆ. ಪುಸ್ತಕ ಮುಗಿಯುವ ಹೊತ್ತಿಗೆ ತಂದೆ ಮಗ ಇಬ್ಬರಿಗೂ ರಾಜಿಯಾಗಿರುತ್ತದೆ. ಪುಸ್ತಕದ flow ಚನ್ನಾಗಿದ್ದು ಸುರಳೀತವಾಗಿ ಓದಿಸಿಕೊಂಡು ಹೋಗುತ್ತದೆ. ಪುಸ್ತಕ ಸಿಕ್ಕಾಪಟ್ಟೆ ಫೇಮಸ್ ಆಗಿದೆಯಂತೆ. ಮುಂದೆ ಸಿನೆಮಾ ಸಹಿತ ಆಗುವದಿದೆಯಂತೆ. ಹಾಗಂತ ರಾಹುಲ್ ಭಟ್ ತನ್ನ ವೆಬ್ ಸೈಟ್ ಒಳಗೆ ಹಾಕಿಕೊಂಡಿದ್ದಾನೆ.

ಪುಸ್ತಕದಲ್ಲಿ ರಾಹುಲ್ ಭಟ್ ನ ಬಗ್ಗೆ ಮೊದಲು ಪತ್ರಿಕೆಗಳಲ್ಲಿ ಓದಿದ್ದ ಕೆಲವು ವೈಪರೀತ್ಯಗಳ ಉಲ್ಲೇಖ ಇದೆ. ಈ ರಾಹುಲ್ ಭಟ್ ತನ್ನ ಅಕ್ಕ ಪೂಜಾಳ ಪುರಾತನ ಬಾಯ್ ಫ್ರೆಂಡ್ ರಣವೀರ್ ಶೋರೆ ಎಂಬವನಿಗೆ ತಾರಾ ಮಾರಾ ಬಡಿದು ಬಿಟ್ಟಿದ್ದ. ರಾಹುಲ್ ಭಟ್ ದೊಡ್ಡ ಮಟ್ಟದ ಬಾಡಿ ಬಿಲ್ಡರ್. ರಾಹುಲ್ ಭಟ್ ಮಕ ತಿಕ ಅನ್ನದೆ ಚಚ್ಚಿದ ಅಬ್ಬರಕ್ಕೆ ಆ  ರಣವೀರ ರಣರಂಗ ಬಿಟ್ಟು ಓಡಿ ಸೀದಾ ಹಾಸ್ಪಿಟಲ್ ಗೆ ಅಡ್ಮಿಟ್ ಆಗಿದ್ದ. ಅದೇನೋ ಪೂಜಾ ಭಟ್ ಳ ಜೊತೆ ಅವನ ಜಗಳ. ನನ್ನ ಅಕ್ಕನಿಗೆ ತೊಂದರೆ ಕೊಡ್ತಿಯೇನೋ? ಅಂತ ಏರಿ ಹೋದವನೇ ರಾಹುಲ್ ಭಟ್ ರಣವೀರ್ ಶೋರೆಯನ್ನು ನಾಯಿಯಂತೆ ಬಡಿದಿದ್ದನಂತೆ. ಮುಂದೆ ಪೂಜಾ ಭಟ್ ಳನ್ನು ಬಿಟ್ಟ ಶೋರೆ ಬೇರೆ ಹೋದ. ಅದರ ಬಗ್ಗೆ ಸಹಿತ ರಾಹುಲ್ ಭಟ್ ಬರೆದು ಕೊಂಡಿದ್ದಾನೆ. ಮುರುಕು ಸಂಸಾರದ ಮನೆಯಿಂದ ಬಂದ ಮಕ್ಕಳ ಮಾನಸಿಕ ವೈಪರೀತ್ಯಗಳು ಇವೆಲ್ಲ  ಅಂತ ರಾಹುಲ್ ಭಾಷ್ಯ ಅದಕ್ಕೆ.

ಹಿಂದಿನ ಬ್ಲಾಗ್ ಪೋಸ್ಟಿನಲ್ಲಿ ಖಡಕ್ ಪೋಲೀಸ್ ಅಧಿಕಾರಿ ಸೂಪರ್ ಕಾಪ್ ರಾಕೇಶ ಮಾರಿಯಾ ಬಗ್ಗೆ ಬರೆದಾಗ, ಈ ರಾಹುಲ್ ಭಟ್ ಎಪಿಸೋಡ್ ಬಗ್ಗೆ ಹಾಕಿ ಮಾರಿಯಾ ಸಾಹೇಬರ ಬಗ್ಗೆ ಮತ್ತೊಂದು ಮಾಹಿತಿ ಕೊಡೋಣ ಅಂತಿತ್ತು. ಅದು ಬಿಟ್ಟು ಹೋಗಿತ್ತು. ಮತ್ತೆ ರಾಹುಲ್ ಭಟ್ ನ ಡೇವಿಡ್ ಕೋಲ್ಮನ್ ಹ್ಯಾಡ್ಲೀ ಜೊತೆ ಆಗಿದ್ದ ಲಫಡಾ ದೊಡ್ಡ ಮಟ್ಟದ್ದೇ ಆಗಿದ್ದರಿಂದ ಬೇರೆದನ್ನೇ ಬರೆದೆ.

ರಾಕೇಶ ಮಾರಿಯಾ ಬಗ್ಗೆ ಬರೆದ ಹಿಂದಿನ ಪೋಸ್ಟ್ ಇಲ್ಲಿದೆ. ಕೆಲವೊಂದು ಮಾಹಿತಿಗಳನ್ನು ಆ ಬ್ಲಾಗ್ ಪೋಸ್ಟಿನಲ್ಲಿ ಉಲ್ಲೇಖಿಸಿದ ಪುಸ್ತಕಗಳಿಂದ ಆರಿಸಿದ್ದು.

ರಾಹುಲ್ ಭಟ್ ಬರೆದ ಪುಸ್ತಕ

Sunday, March 02, 2014

ಸೂಪರ್ ಕಾಪ್ ರಾಕೇಶ ಮಾರಿಯಾ ಈಗ ಮುಂಬೈನ ಟಾಪ್ ಕಾಪ್

ರಾಕೇಶ ಮಾರಿಯಾ
"ಯಾವದಾದರೂ ಒಂದು ಏರಿಯಾದಲ್ಲಿ ಯಾರಾದರೂ ದಾದಾ, ರೌಡಿ, ಗೂಂಡಾ ಅಂತ ಇದ್ದರೆ ಅದು ಆ ಏರಿಯಾದ ಪೋಲೀಸ್ ಇನ್ಸ್ಪೆಕ್ಟರ್ ಮಾತ್ರ ಆಗಿರಬೇಕು!" ಅಂತ ಹೂಂಕರಿಸುತ್ತ ಸೂಪರ್ ಕಾಪ್ ರಾಕೇಶ ಮಾರಿಯಾ ಸಾಹೇಬರು ಮುಂಬೈ ನಗರದ ಪೋಲೀಸ್ ಕಮಿಷನರ್ ಅಂತ ಅಧಿಕಾರ ವಹಿಸಿಕೊಂಡಿದ್ದಾರೆ.

ಕಳೆದ ಸುಮಾರು ಇಪ್ಪತ್ತು ವರ್ಷಗಳಲ್ಲಿ ಪತ್ರಿಕೆ, ಪುಸ್ತಕ, ಸಿನೆಮಾ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ಚಮಕಾಯಿಸಿದ ಪೊಲೀಸರಲ್ಲಿ ಮುಂಚೂಣಿಯಲ್ಲಿ ಕಾಣುವವರು ರಾಕೇಶ ಮಾರಿಯಾ. ಅವರು ಮಾಡಿದ ತನಿಖೆಗಳು, ಭೇದಿಸಿದ ಪ್ರಕರಣಗಳು, ಬಂಧಿಸಿದ ಹೈ ಪ್ರೊಫೈಲ್ ಪಾತಕಿಗಳು ಮಾರಿಯಾ ಸಾಹೇಬರನ್ನು ಒಂದು ತರಹದ ಲಿವಿಂಗ್ ಲೆಜೆಂಡ್ ಮಾಡಿಬಿಟ್ಟವು.

೧೯೯೩ ಮಾರ್ಚ್. ಮುಂಬೈಯಲ್ಲಿ ಸರಣಿ ಸ್ಪೋಟಗಳಾದವು. ಕೆಲ ತಿಂಗಳ ಹಿಂದೆ ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ್ದಕ್ಕೆ ಪ್ರತಿಕಾರ ಎಂಬಂತೆ ಅಷ್ಟು ದೊಡ್ಡ, ಹಿಂದೆಂದೂ ಆಗಿರದ ಅನಾಹುತ ಒಂದು ಆಗಿ ಹೋಗಿತ್ತು. ಯಾರು ಮಾಡಿದವರು? ಹೇಗೆ ಮಾಡಿದರು? ಅನ್ನುವ ಒಂದು ಸಣ್ಣ ಸುಳಿವು ಸಹ ಪೊಲೀಸರಿಗೆ ಸಿಕ್ಕಿರಲಿಲ್ಲ. ಆಗಿನ ಮುಂಬೈ ಪೋಲೀಸ್ ಕಮಿಷನರ್ ಆಗಿದ್ದ ಅಮರಜೀತ್ ಸಿಂಗ್ ಸಾಮ್ರಾ ಮೇಲೆ ಇನ್ನಿಲ್ಲದ ಒತ್ತಡ. ಆ ಕಾಲದ ಮುಂಬೈ ಕ್ರೈಂ ಬ್ರಾಂಚಿನ ಚೀಫ್ ಮಹೇಶ ನಾರಾಯಣ ಸಿಂಗ ಏನೆಲ್ಲ ತನಿಖೆ ಮಾಡುತ್ತಿದ್ದರೂ, ಒಂದೂ ಫಲ ಕೊಡದೆ, ಪೋಲೀಸರ ಮೇಲೆ ಮತ್ತೂ ಹೆಚ್ಚಿನ ಒತ್ತಡ. ಬೇಗ ಕೇಸ್ ಭೇದಿಸಿ, ಅಪರಾಧಿಗಳನ್ನ ಬಂಧಿಸಿ ಅಂತ. ಏನಾದರೂ ಒಂದು ಸರಿಯಾದ ಕ್ಲೂ ಸಿಕ್ಕರೆ ತಾನೇ ಕೇಸ್ ಭೇದಿಸುವದು?

ಆ ಕಾಲದಲ್ಲಿ ಮಾರಿಯಾ ಸಾಹೇಬರು ಮುಂಬೈನಲ್ಲಿ ಟ್ರಾಫಿಕ್ ವಿಭಾಗದ DCP ಅಂತ ಇದ್ದವರು. ೧೯೮೧ ರ IPS ಬ್ಯಾಚಿನ ಅವರು ಆಗಲೇ ತುಂಬಾ ಪ್ರಾಮಿಸಿಂಗ್ ಆಫೀಸರ್ ಅಂತ ಮೇಲೆ ಬರುತ್ತಿದ್ದರು. ಇಡೀ ಮುಂಬೈ ಪೋಲೀಸ್ ವ್ಯವಸ್ಥೆಯೇ ಈ ಸರಣಿ ಬಾಂಬ್ ಸ್ಪೋಟದ ಹಿಂದೆ ಬಿದ್ದು ಅವರೂ ತನಿಖೆಯಲ್ಲಿ ಶಾಮೀಲಾದರು. ಶಾಮೀಲ ಆಗಿದ್ದೆ ಆಗಿದ್ದು ಮೊದಲ ಬ್ರೇಕ್ ಥ್ರೂ ಕೊಟ್ಟವರೇ ಅವರು. ರಸ್ತೆ ಬದಿಯಲ್ಲಿ ಅನಾಥವಾಗಿ ನಿಂತಿದ್ದ ಒಂದು ಸ್ಕೂಟರ್ ದೊಡ್ಡ ಸುಳಿವು ಕೊಟ್ಟಿತ್ತು. ಅದರ ಮಾಲೀಕರ ಸುಳಿವು ಹಿಡಿದು ಹೋದ ಪೊಲೀಸರು ಸೀದಾ ಹೋಗಿ ನಿಂತಿದ್ದು ಇಡೀ ಸ್ಪೋಟದ ಸಂಚಿನ ರೂವಾರಿ ಟೈಗರ್ ಮೆಮನ್ & ಸೋದರರ ಮನೆ ಮುಂದೆ. ಆಗಲೇ ಮೆಮನ್ ಕುಟುಂಬ ಪೂರ್ತಿ ದುಬೈ ಮತ್ತಿತರ ಜಾಗಗಳಿಗೆ ಹಾರಿ ಹೋಗಿತ್ತು. ನಂತರ ಒಂದರ ಹಿಂದೆ ಇನ್ನೊಂದು ಸುಳಿವುಗಳು ಸಿಕ್ಕವು, ಮುಂಬೈ ಸರಣಿ ಸ್ಪೋಟಗಳು ಹೇಗೆ ಆದವು ಅನ್ನುವದು ತಿಳಿಯಿತು. ಪಾಕಿಗಳು ಮಾಡಿಸಿದ್ದರು. ಮುಂಬೈ ಮಾಫಿಯಾ ಸಾಥ್ ನೀಡಿತ್ತು. ದೊಡ್ಡ ಕುಳಗಳೆಲ್ಲ ದುಬೈ, ಪಾಕಿಸ್ತಾನದಲ್ಲಿ ಕೂತಿದ್ದರೂ ಗ್ರೌಂಡ್ ಲೆವೆಲ್ ಆಪರೇಟರ್ ಎಲ್ಲ ಸಿಕ್ಕಿ ಬಿದ್ದರು. ರಾಕೇಶ ಮಾರಿಯಾ ಸಾಹೇಬರಿಗೇ ಮುಂದೆ ಆ ಪ್ರಕರಣದ ತನಿಖೆಯ ಪೂರ್ತಿ ಜವಾಬ್ದಾರಿ ವಹಿಸಲಾಯಿತು. (ಹೆಚ್ಚಿನ ಮಾಹಿತಿಗೆ ಹುಸೇನ್ ಝೈದಿ ಬರೆದ - Black Friday - ಪುಸ್ತಕ ಓದಿ. ಅದೇ ಹೆಸರಿನ ಒಳ್ಳೆಯ ಸಿನೆಮಾ ಕೂಡ ಆಗಿದೆ)

ಇದೇ ಪ್ರಕರಣದ ಸಂಬಂಧ ನಿಷೇಧಿತ ಎಕೆ - ೫೬ ಬಂದೂಕು ಹೊಂದಿದ್ದ ಸಂಜಯ್ ದತ್ತ್ ಎಂಬ ಬಾಲಿವುಡ್ ಹೀರೋ ರಾಕೇಶ ಮಾರಿಯಾರ ಮುಂದೆ ಬಂದು ಕೂತು, ಹೊಡಿ ಬ್ಯಾಡ್ರೀ, ಎಲ್ಲಾ ಹೇಳಿ ಬಿಡ್ತೇನಿ, ಅಂತ ಪೂರ್ತಿಯಾಗಿ ತಪ್ಪೊಪ್ಪಿಗೆ ಬರೆದುಕೊಟ್ಟು ಹೋಗಿದ್ದ. ಕ್ರೈಂ ಬ್ರಾಂಚಿನ ಪಕ್ಕದ ಲಾಕಪ್ಪುಗಳಲ್ಲಿ ಇತರೆ ಅಪರಾಧಿಗಳ ಬಾಯಿ ಬಿಡಿಸುವ ಕಾರ್ಯಕ್ರಮ ಸಾಂಗೋಪಸಾಂಗವಾಗಿ ನೆಡೆದು, ಅವರ ನರಳಾಟ ಸರಿಯಾಗಿ ಸಂಜಯ್ ದತ್ತನ ಕಿವಿಗೆ ಬಿದ್ದು, ಇದ್ದಿದ್ದು ಹೇಳದಿದ್ದರೆ ತಂದೂ ಅದೇ ಗತಿ ಆಗುತ್ತದೆ ಎಂದು ಹೆದರಿದ್ದ ದತ್ತ ಕೇಳುವ ಮೊದಲೇ ಎಲ್ಲ ಹೇಳಿ, ಗೊಳೋ ಎಂದು ಸಾಹೇಬರ ಮುಂದೆ ಅತ್ತು ಬಿಟ್ಟಿದ್ದ. ಅವನಿಗೆ ಒಂದು ಏಟೂ ಹಾಕದೆ, ಚಹಾ ಕುಡಿಸಿ, ಬೆನ್ನು ಚಪ್ಪರಿಸಿ ಜೈಲಿಗೆ ಕಳಿಸಿ, ಈ ಹೀರೋಗಳ ಕರ್ಮವೇ ಇಷ್ಟು, ಅಂತ ಮಾರಿಯಾ ಸಾಹೇಬರು ನಕ್ಕಿದ್ದರು. ಮಾರಿಷಸ್ ನಲ್ಲಿ ಶೂಟಿಂಗ ಮಾಡುತ್ತಿದ್ದ ಸಂಜಯ್ ದತ್ತ ತನ್ನ ಮೇಲೆ ಪೊಲೀಸರಿಗೆ ಸಂಶಯ ಬಂದಿದೆ ಅಂದ ಕೂಡಲೇ, ಶೂಟಿಂಗ ನಿಲ್ಲಿಸಿ, ಸಿಕ್ಕಿದ ವಿಮಾನ ಹತ್ತಿ  ಓಡಿ ಬಂದಿದ್ದ. ಮುಂಬೈಗೆ ಬಂದು ಇಳಿದವನನ್ನು ಕರೆದೊಯ್ಯಲು ಪೋಲೀಸ್ ಪಡೆ ವಿಮಾನ ನಿಲ್ದಾಣಕ್ಕೆ ಬಂದು ನಿಂತಿತ್ತು. ಹೇಳಿ ಕೇಳಿ ಕಿತಾಪತಿ ಸಂಜಯ ದತ್ತ. ವಿಮಾನ ಇಳಿದು ಬಂದವನೇ, ಕಾದಿದ್ದ ಪೋಲೀಸರ ಜೊತೆ ಕಿರಿಕ್ ಮಾಡಿಕೊಂಡ. ಅದು ಇದು ಅಂದ. ಹೀರೋಗಿರಿ ತೋರಿಸಲು ಹೋದ. ಅಪ್ಪ ಸುನೀಲ್ ದತ್ತ್ ಬೇರೆ ದೊಡ್ಡ ರಾಜಕಾರಣಿಯಾಗಿದ್ದ. ಅದೂ ಒಂದು ಕೊಬ್ಬು. ರಾತ್ರಿ ಹಗಲು ಎನ್ನದೆ, ಊಟ ನಿದ್ರೆ ಬಿಟ್ಟು, ಸಿಕ್ಕಾಪಟ್ಟೆ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸರಿಗೆ ಆ ನಖರಾಗಳನ್ನೆಲ್ಲ ಸಹಿಸಿಕೊಳ್ಳುವ ದರ್ದು, ಅನಿವಾರ್ಯತೆ ಎಲ್ಲಕಿಂತ ಮುಖ್ಯವಾಗಿ ಸಹನೆ ಇರಲೇ ಇಲ್ಲ. ಸಂಜಯ್ ದತ್ತನಿಕಿಂತ ಒಂದು ಫೂಟು ಗಿಡ್ಡನಿದ್ದ ಪೋಲೀಸ್ ಅಧಿಕಾರಿಯೊಬ್ಬರು ವಿಮಾನ ನಿಲ್ದಾಣದಲ್ಲಿಯೇ ಅವನಿಗೆ ನಾಕು ತಪರಾಕಿ ಹಾಕಿದ್ದರು ಅಂತ ಸುದ್ದಿ ಮಾತ್ರ ಆಗಿತ್ತು. ಮಾಮೂಲಿ ಚಿಲ್ಲರೆ ರೌಡಿಯಂತೆ ಪೊಲೀಸರಿಂದ ಗೂಸಾ ತಿಂದೇ ಕ್ರೈಂ ಬ್ರಾಂಚ್ ಲಾಕಪ್ಪಿಗೆ ಬಂದಿದ್ದ ದತ್ತ ಕೇಳುವ ಮೊದಲೇ ಎಲ್ಲ ಹೇಳಿ, ಅತ್ತು, ನಮಸ್ಕಾರ ಹೊಡೆದು, ಕೊಟ್ಟ ಚಹಾ ಕುಡಿದು, ಜೈಲಿಗೆ ಹೋಗಿ ತೆಪ್ಪಗೆ ಕೂತಿದ್ದರಲ್ಲಿ ದೊಡ್ಡ ಮಾತಿರಲಿಲ್ಲ ಬಿಡಿ.

ಮುಂದೆ ಅನಿರುದ್ಧ ಬಹಲ್ ಎಂಬ 'ತೆಹೆಲ್ಕಾ' ಪತ್ರಕರ್ತ ಸುಮಾರು ೧೯೯೬-೯೭ ರ ಸಮಯದಲ್ಲಿ ಕ್ರಿಕೆಟ್ ಬೆಟ್ಟಿಂಗ್ ಮೇಲೆ ಸ್ಟಿಂಗ್ ಆಪರೇಷನ್ ಶುರು ಮಾಡಿದ. ಅದು ಮೊಹಮದ್ ಅಝರುದ್ದೀನ, ಅಜಯ ಜಡೇಜಾ ಎಲ್ಲರಿಗೆ ಬತ್ತಿ ಇಟ್ಟು ಬಿಟ್ಟಿತು. ಈ ಅನಿರುದ್ಧ ಬಹಲ್ ಎಂಬ ಪತ್ರಕರ್ತ ಆ ಕಾಲದ ಕ್ರೈಂ ಬ್ರಾಂಚ್ DCP ಆಗಿದ್ದ ರಾಕೇಶ ಮಾರಿಯಾ ಸಾಹೇಬರನ್ನೂ ಭೆಟ್ಟಿ ಮಾಡಿದ್ದ. ಆಫ್ ದಿ ರೆಕಾರ್ಡ್, ಇದೆಲ್ಲ ಬರೆಯುವಂತಿಲ್ಲ ಅಂತ ಹೇಳಿಯೇ ಮಾರಿಯಾ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಕರಾಳ ಪರಿಚಯ ಮಾಡಿಸಿದ್ದರು. ತೆಹೆಲ್ಕಾ ಮಂದಿಗೆ ಸ್ಟಿಂಗ್ ಆಪರೇಷನ್ ಹುಚ್ಚು. ಆ ಪಿರ್ಕಿ ಪತ್ರಕರ್ತ ರಾಕೇಶ ಮಾರಿಯಾ ಅವರು unofficial ಅಂತ ಹೇಳಿದ್ದನ್ನೂ ಸಹಿತ ರೆಕಾರ್ಡ್ ಮಾಡಿಕೊಂಡು, ಇದ್ದಕ್ಕಿದ್ದ ಹಾಗೆ ಬರೆದು ಮರಿಯಾ ಅವರಿಗೆ ಮುಜುಗರ ಉಂಟು ಮಾಡಿದ್ದ. ನಂತರ ಮಾಧ್ಯಮಗಳಿಂದ ಸ್ವಲ್ಪ ದೂರವೇ ಉಳಿದಿದ್ದರು ಮಾರಿಯಾ. ಮೊಹಮದ್ ಅಝರುದ್ದೀನ, ಅಜಯ ಜಡೇಜಾ ಕ್ರಿಕೆಟ್ ಜಗತ್ತಿನಿಂದ ಮರೆಯಾದರು.

ಸುಕೇತು ಮೆಹತಾ ಎಂಬ ಲೇಖಕ ಬರೆದ 'Maximum City' ಎಂಬ ಪುಸ್ತಕದಲ್ಲಿ 'ಅಜಯ್ ಲಾಲ್ ' ಎಂಬ ಪೋಲೀಸ್ ಅಧಿಕಾರಿಯ ಒಂದು ಪಾತ್ರ ಇದೆ. ಯಾರಿಗಾದರೂ ಸುಲಭವಾಗಿ ಗೊತ್ತಾಗುವ ವಿಷಯ ಅಂದರೆ ಅದು ರಾಕೇಶ ಮಾರಿಯಾ ಅವರ ಕ್ಯಾರೆಕ್ಟರ್ ಎಂದು. ತಮ್ಮ ಹೆಸರು ಇಲ್ಲದ್ದರಿಂದ ಮನಸ್ಸು ಬಿಚ್ಚಿ ಲೇಖಕ ಸುಕೇತು ಮೆಹತಾ ಅವರೊಂದಿಗೆ ಮಾತಾಡಿದ್ದಾರೆ ಮಾರಿಯಾ ಸಾಹೇಬರು. ಆ ಪುಸ್ತಕವನ್ನ ಮಾರಿಯಾ ಸಾಹೇಬರ ಒಂದು ಸಣ್ಣ ಆತ್ಮಕಥೆ ಎಂದರೂ ಅಡ್ಡಿ ಇಲ್ಲ. ಯಾಕೆಂದರೆ ಅವರ ಜೀವನ, ಕುಟುಂಬ, ಪೋಲೀಸ್ ಇಲಾಖೆಯ ಬಗ್ಗೆ ವಿವರಗಳು ಇತ್ಯಾದಿ ಎಲ್ಲ ಇವೆ. ಆ ಪುಸ್ತಕ ಬರೆಯಲು ಸುಮಾರು ಎರಡು ವರ್ಷ ಮುಂಬೈನಲ್ಲೇ ಇದ್ದ ಲೇಖಕ ಸುಕೇತು ಮೆಹತಾ, ರಾಕೇಶ ಮಾರಿಯಾ ಅವರಿಗೆ ಸಿಕ್ಕಾಪಟ್ಟೆ ಆಪ್ತರಾಗಿ, ಅವರ ಅಂತರಂಗದ ಎಲ್ಲ ಸೂಕ್ಷ್ಮ ವಿವರಗಳನ್ನು ತೆಗೆದು, 'ಅಜಯ ಲಾಲ್' ಎಂಬ ಒಂದು ಕಾಲ್ಪನಿಕ ಕ್ಯಾರೆಕ್ಟರ್ ತಯಾರು ಮಾಡಿ, ಮಾರಿಯಾ ಸಾಹೇಬರು ಓಪನ್ ಆಗಿ ಹೇಳಲು ಕಷ್ಟವಾಗಬಹುದಾದ ವಿಷಯಗಳನ್ನೆಲ್ಲ ಒಂದು ತರಹದ ನಿಖರ ರೀತಿಯಲ್ಲಿ ಹೇಳಿದ್ದಾರೆ. ಒಳ್ಳೆಯ ಪುಸ್ತಕ.

ರಾಕೇಶ ಮಾರಿಯಾ ಸಿನೆಮಾ ಹಿನ್ನಲೆಯಿಂದ ಬಂದವರು. ಅವರ ತಂದೆಯವರು ಹಿಂದಿ ಫಿಲಂ ನಿರ್ಮಾಪಕರು. 'Maximum City' ಪುಸ್ತಕದಲ್ಲಿ ಮಾರಿಯಾ ಸಾಹೇಬರು ಹೇಳುವ ಒಂದು ಘಟನೆ ತುಂಬ ತಮಾಷೆಯಾಗಿ ಕಾಣುತ್ತದೆ. ಅದು ೧೯೯೬-೨೦೦೦ ಸಮಯ. ಬಾಲಿವುಡ್ ಮೇಲೆ ಪೂರ್ತಿ ಮಾಫಿಯಾ ನೆರಳು. ದಿನ ಬೆಳಗಾದರೆ ಸಿನಿಮಾ ಮಂದಿಗೆ ಎಲ್ಲೆಲ್ಲೊ ದೂರ ದೂರ ದೇಶದಲ್ಲಿ ಕೂತಿದ್ದ ಭೂಗತ ಡಾನ್ ಜನರಿಂದ ಹಫ್ತಾಕ್ಕಾಗಿ ಬೆದರಿಕೆ. ಕೊಡದಿದ್ದರೆ ಸೀದಾ ಗುಂಡು. ಕಾಸು ಬಿಚ್ಚದ ಮ್ಯೂಸಿಕ್ ಕ್ಯಾಸೆಟ್ ಕಿಂಗ್ ಗುಲಶನ್ ಕುಮಾರನನ್ನು ಮಾಫಿಯಾ ಹತ್ಯೆ ಮಾಡಿತ್ತು. ದುಬೈಯಿಂದ ಫೋನ್ ಬಂತು ಅಂದರೆ ಬಾಲಿವುಡ್ ಮಂದಿಯ ಚಡ್ಡಿ ಒದ್ದೆಯಾಗುತ್ತಿತ್ತು. ಆ ಸಮಯದಲ್ಲಿ ಕ್ರೈಂ ಬ್ರಾಂಚಿನ DCP ಇದ್ದವರು ಇವರೇ. ಮತ್ತೆ ಇವರಿಗೆ ಮೊದಲಿಂದಲೂ ಸಿನಿಮಾ ಸಂಪರ್ಕ ಜಾಸ್ತಿ.  ಹಾಗಾಗಿ ಹಫ್ತಾ ಬೆದರಿಕೆ ಬಂದ ತಕ್ಷಣ ಬಾಲಿವುಡ್ ಜನರಿಗೆ ನೆನಪಾಗುತ್ತಿದ್ದ ಹೆಸರು ರಾಕೇಶ ಮಾರಿಯಾ. ಹಾಗೆ ರಕ್ಷೆ ಕೇಳಿಕೊಂಡು ಬಂದವರಲ್ಲಿ ಆ ಕಾಲದ ಅನೇಕ ದೊಡ್ಡ ದೊಡ್ಡ ಹೀರೋಗಳು ಸಹಿತ ಇದ್ದರು. ಅಂತವರಲ್ಲಿ ಕೆಲವರು ಫಿಲಂ ನಿರ್ಮಾಪಕರಾಗಿದ್ದ ರಾಕೇಶ ಮಾರಿಯಾ ತಂದೆಗೆ ಕೊಡಬಾರದ ಕಷ್ಟ ಕೊಟ್ಟಿದ್ದರು. ಹೀರೋಗಳು ನಿರ್ಮಾಪಕರಿಗೆ ಕೊಡುವಂತಹ ಕಷ್ಟ. ಡೇಟ್ ಕೊಟ್ಟು ಶೂಟಿಂಗಿಗೆ ಬರದೇ ಇರುವದು, ಇತ್ಯಾದಿ ನಖರಾ. ಹೀರೋ ಹೀರೋಯಿನ್ನುಗಳ ಇಂತಹ ಕೆಲವೊಂದು ನಖರಾಗಳಿಂದ ಮಾರಿಯಾ ತಂದೆ ಸಾಕಷ್ಟು ದುಡ್ಡು ಕಳೆದುಕೊಂಡು ನಷ್ಟ ಅನುಭವಿಸಿದ್ದರು. ಅಂತಹ ನಟರೇ ಇಂದು ಪೊಲೀಸ ಅಧಿಕಾರಿಯಾದ ಮಾರಿಯಾ ಮುಂದೆ ಕೂತು, ದುಬೈನಿಂದ ಬರುತ್ತಿದ್ದ ಧಮಿಕಿ ಕರೆಗಳಿಂದ ಬಚಾವ್ ಮಾಡಿ ಅಂತ ಬೇಡುತ್ತಿದ್ದರು. ಕಾಲ ಹೇಗೆ ಚೇಂಜ್ ಆಗುತ್ತದೆ ನೋಡಿ ಸುಕೇತು. ಒಂದು ಕಾಲದಲ್ಲಿ ನಮ್ಮಪ್ಪ ಇದೇ ಹೀರೋಗಳ ಮನೆ ಮುಂದೆ ಹೋಗಿ ಫಿಲಂ ಮುಗಿಸಿಕೊಡಿ ಅಂತ ಗೋಗರಿಯುತ್ತಿದ್ದ. ಆವತ್ತು ಮನೆಯಿಂದ ತಂದೆಯವರನ್ನು  ಅವಮಾನ ಮಾಡಿ ಓಡಿಸಿದ್ದ ಜನರೇ ಇಂದು ನನ್ನ ಮುಂದೆ ಬಂದು ಕೂತು, ಹಫ್ತಾಕ್ಕಾಗಿ ಬರುವ ಧಮಕಿಗಳಿಂದ ಬಚಾವ್ ಮಾಡಿ ಅನ್ನುತ್ತಿದ್ದಾರೆ. ಏನಂತೀರಿ ಇದಕ್ಕೆ? ಅಂತ ಕೇಳುತ್ತಾರೆ ಮಾರಿಯಾ. ಹಾಂಗಂತ ಅವರಿಗೆ ಕೊಡುವ ಪೊಲೀಸ ರಕ್ಷಣೆ ಕೊಟ್ಟೇ ಕೊಟ್ಟರು, ಆ ಮಾತು ಬೇರೆ.

ವಿಕ್ರಮ ಚಂದ್ರ ಬರೆದ 'Sacred Games' ಮುಂಬೈ ಅಂಡರ್ವರ್ಲ್ಡ್ ಮೇಲೆ ಬರೆದಂತಹ ಒಂದು magnum opus ಅನ್ನುವಂತಹ ಕಾದಂಬರಿ. ಕಾದಂಬರಿ ಅಂತ ಹೆಸರಿಗೆ ಮಾತ್ರ. ಮುಂಬೈ ಅಂಡರ್ವರ್ಲ್ಡ್ ಬಗ್ಗೆ ಸ್ವಲ ಗೊತ್ತಿದ್ದವರೂ ಸಹ ಅದರಲ್ಲಿ ಬರುವ ಅನೇಕ ಸನ್ನಿವೇಶಗಳನ್ನು ಮುಂಬೈ ಅಂಡರ್ವರ್ಲ್ಡ್ ನಲ್ಲಿ ಆದ ಅನೇಕ ಘಟನೆಗಳಿಗೆ ಹೋಲಿಸಿ ಸಾಮ್ಯತೆ ಕಾಣಬಹುದು. ಲೇಖಕ ವಿಕ್ರಮ ಚಂದ್ರರಿಗೂ ಎಲ್ಲ ಮಾಹಿತಿ ಒದಗಿಸಿದವರು ಇವರೇ - ರಾಕೇಶ ಮಾರಿಯಾ.

೨೦೦೮ ಮಾರಿಯಾ ಅವರಿಗೆ ಅತಿ ಮುಖ್ಯ ವರ್ಷ. ಮೊದಲು ಆಗಿದ್ದು ನೀರಜ್ ಗ್ರೋವರ್ ಕೊಲೆ ಪ್ರಕರಣ. ಸ್ಥಳೀಯ ಪೋಲೀಸರ ನಿರ್ಲಕ್ಷದಿಂದ ಮುಚ್ಚಿ ಹೋಗುತ್ತಿದ್ದ ಒಂದು ಪ್ರಕರಣವನ್ನು ಕ್ರೈಂ ಬ್ರಾಂಚಿಗೆ ತರಿಸಿಕೊಂಡು, ಚಾಕಚಕ್ಯತೆಯಿಂದ ಭೇದಿಸಿ, ಒಂದು ದೊಡ್ಡ sensational ಕೇಸ್ ಆಗಲು ಕಾರಣ ಇವರೇ - ರಾಕೇಶ ಮಾರಿಯಾ.

ನೀರಜ್ ಗ್ರೋವರ್ - debonair ಪ್ಲೇಬಾಯ್ ತರಹದ ಹುಡುಗ. ಯಾವದೋ ಒಂದು ಮೀಡಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕಾನ್ಪುರ ಅವನ ಮೂಲ ಊರು. ಮುಂಬೈಗೆ ಬಂದು ಪೂರ್ತಿ ಶೋಕಿದಾರನಾಗಿದ್ದ. ಹಿಂದೆ, ಮುಂದೆ, ಅಕ್ಕ, ಪಕ್ಕ ಹುಡುಗಿಯರೇ ಹುಡುಗಿಯರು. ನಡುವೆ ಚೆಲ್ಲಾಟ ಆಡುವ ಈ ಕೃಷ್ಣ - ನೀರಜ್ ಗ್ರೋವರ್.

ಮಾರಿಯಾ ಸುಸೈರಾಜ - ಮೈಸೂರಿನ ಹುಡುಗಿ. ಕನ್ನಡದಲ್ಲಿ ಒಂದೆರಡು ಸಿನೆಮಾ ಮಾಡಿ, ಬಾಲಿವುಡ್ ನಲ್ಲಿ ದೊಡ್ಡ ಹೆಸರು ಮಾಡಬೇಕು ಅಂತ ಮುಂಬೈಗೆ ಬಂದಿದ್ದಳು. ಆಕೆಯ ವಿವಾಹ ನಿಶ್ಚಯವಾಗಿತ್ತು. ಆಕೆಯ ಗಂಡನಾಗುವವ ನೌಕಾಪಡೆಯಲ್ಲಿ ಕ್ಯಾಪ್ಟನ್. ಕೋಚಿನ್ ನಲ್ಲಿ ಇದ್ದ. ಜೆರೋಮ್ ಮ್ಯಾಥ್ಯೂ ಅಂತ ಅವನ ಹೆಸರು.

ಅದೇನು ಕನೆಕ್ಷನ್ ಬೆಳೆಯಿತೋ ಈ ನೀರಜ್ ಗ್ರೋವರ್ ಮತ್ತು ಮಾರಿಯಾ ಸುಸೈರಾಜ್ ಮಧ್ಯೆ. ಒಂದು ಅಫೇರ್ ಶುರು ಆಗೇ ಹೋಯಿತು. ನೀರಜ್ ಗ್ರೋವರನಿಗೆ ಸಿಕ್ಕ ಸಿಕ್ಕ ಹುಡುಗಿಯರ ಜೊತೆ ಚಲ್ಲಾಟ ಆಡುವ ಹುಚ್ಚು. ಈಕೆಗೆ ಸಿನಿಮಾ, ಸೀರಿಯಲ್ಲಿನಲ್ಲಿ ಅವಕಾಶ ಸಿಗುತ್ತದೆ ಎಂದರೆ ಏನೂ ಮಾಡಲು ಸಿದ್ಧ ಅನ್ನುವಂತಹ ಮನಸ್ಥಿತಿ. ಟಿಪಿಕಲ್ casting couch ಇದ್ದರೂ ಇರಬಹುದು.

ಹೀಗಿರುವಾಗ ಮಾರಿಯಾ ಸುಸೈರಾಜಳನ್ನು ಮದುವೆಯಾಗಬೇಕಿದ್ದ ಹುಡುಗನಿಗೆ ಇವರ ಅಫೇರ್ ಬಗ್ಗೆ ತಿಳಿಯಲು ಶುರು ಆಯಿತು. ಮೊದಲಿನಕ್ಕಿಂತ ಹೆಚ್ಚೇ possessive ಆದ ಆ ನೇವಿ ಕ್ಯಾಪ್ಟನ್.

ಒಂದು ದಿವಸ ರಾತ್ರಿ ನೀರಜ್ ಗ್ರೋವರ್ ಮಾರಿಯಾಳ ಮನಗೆ ಬಂದ. ಊಟ ಗೀಟ ಮಾಡಿ ಅವಳ ಜೊತೆಗೇ ರಾತ್ರಿ ಕಳೆಯುವ ಪ್ಲಾನ್ ಇತ್ತು. ಅದೇ ಸಮಯದಲ್ಲಿ ದೂರದ ಕೋಚಿನ್ ನಿಂದ ಜೆರೋಮಿ ಫೋನ್ ಮಾಡಿದ, ತನ್ನ ಹುಡುಗಿ ಮಾರಿಯಾ ಜೊತೆ ಮಾತಾಡಲು. ಅದು ಹೇಗೋ ಅವನಿಗೆ ಅಲ್ಲಿ ತನ್ನ ಹುಡುಗಿ ಜೊತೆ ಬೇರೊಬ್ಬ ಗಂಡಸು ಇರುವ ಸುಳಿವು ಹತ್ತಿಬಿಟ್ಟಿತು. ಫೋನ್ ಇಟ್ಟವನೇ ಸೀದಾ ಕೋಚಿನ್ ಏರ್ಪೋರ್ಟ್ ಗೆ ಬಂದು, ಮುಂಬೈಗೆ ಸಿಕ್ಕ ಮೊದಲ ವಿಮಾನ ಹತ್ತಿ, ಮುಂಜಾನೆ ಆರರ ಹೊತ್ತಿಗೆ ಮಾರಿಯಾಳ ಮುಂಬೈ ಫ್ಲಾಟ್ ಎದುರಲ್ಲಿ ನಿಂತು, ಕರೆಗಂಟೆ ಒತ್ತಿದಾಗ ಬಂದು ಬಾಗಿಲು ತೆಗೆದ ಮಾರಿಯಾ ಸುಸೈರಾಜ ಒಂದು ಕ್ಷಣ ಫುಲ್ ಥಂಡಾ ಹೊಡೆದಳು. ಬಾಗಿಲಲ್ಲಿ ನಿಂತಿದ್ದಾನೆ ಮುಂದೆ ಮದುವೆಯಾಗಬೇಕಿರುವ ಹುಡುಗ. ಒಳಗೆ ಬೆಡ್ರೂಮಿನಲ್ಲಿ ಮಂಚದ ಮೇಲೆ ನಗ್ನವಾಗಿ ಮಲಗಿರುವ ನೀರಜ್ ಗ್ರೋವರ್. ರಾತ್ರಿಯಿಡೀ ಇಬ್ಬರೂ ಕಬಡ್ಡಿ ಆಡಿದ್ದಕ್ಕೆ ಬೇಕಾದಷ್ಟು ಪುರಾವೆ ಎದ್ದು ಕಾಣುತ್ತಿವೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಳು ಮಾರಿಯಾ ಸುಸೈರಾಜ ಎಂಬ ನಟಿಮಣಿ.

ಕಣ್ಣಲ್ಲಿ ಕೆಂಡ ಕಾರುತ್ತಿದ್ದ ಜೆರೋಮ್ ಮಾರಿಯಾಳನ್ನು ಆಚೆ ತಳ್ಳಿ ಒಳಗೆ ಬಂದು ನೋಡಿದರೆ, ಆದ ಗದ್ದಲದಿಂದ ಆಗ ತಾನೇ ಮೈಮುರಿಯುತ್ತ ಏಳುತ್ತಿದ್ದ ನೀರಜ್ ಗ್ರೋವರ್, ಅರೆ ಬರೆ ಚಡ್ಡಿ ಹಾಕಿಕೊಂಡು, ಮಂಚದ ಮೇಲೆ ಬಿದ್ದುಕೊಂಡೇ ದಿನದ ಮೊದಲಿನ ಸಿಗರೇಟ್ ಹಚ್ಚಿದ್ದ. ಬೆಂಕಿ ಸಿಗರೇಟಿಗೇ ಕೊಟ್ಟಿದ್ದನಾದರೂ, ದ್ವೇಷದ ಬೆಂಕಿ ಜೆರೋಮನ ಎದೆಯಲ್ಲಿ ಭುಗ್ ಅಂದಿತ್ತು. ಜೆರೋಮ್ ಕಡೆ ನೋಡಿದ ನೀರಜ್, ರಾತ್ರಿಯಿಡಿ ನಿನ್ನ ಹುಡಿಗಿ ಜೊತೆ ಕಬಡ್ಡಿ ಆಡಿ ಬಿಟ್ಟೆ, ಏನು ಮಾಡ್ಕೊತ್ತಿಯೋ ಮಾಡಿಕೊ, ಏನು ತರ್ಕೊತ್ತೀಯೋ ತರ್ಕೋ ಅನ್ನುವ ಹಾಗೆ ಅವನ ಮುಖದ ಮೇಲೆ ಸಿಗರೇಟ್ ಹೊಗೆ ಬಿಟ್ಟ. ಕುಹಕ ನಗೆ ನಕ್ಕ.

ಆ ಜೆರೋಮ್ ಮ್ಯಾಥ್ಯೂಗೆ ಸಿಟ್ಟು ಅದೆಲ್ಲಿಂದ ಬಂತೋ, ತಲೆಯಲ್ಲಿ ಯಾವ ಯಾವ ನರ ನಾಡಿಯಲ್ಲಿ ಏನೇನು ಸಂಚಾರವಾಯಿತೋ ಗೊತ್ತಿಲ್ಲ. ಅಡಿಗೆಮನೆಗೆ ಹೋದವನೇ ಒಂದು ಚಾಕು ತಂದು, ಗಾಂಚಾಲಿ ಮಾಡಿ, ಅಪಹಾಸ್ಯ ಮಾಡಿದ್ದ ನೀರಜ್ ಗ್ರೋವರನನ್ನು ಮನಸೋ ಇಚ್ಛೆ ಇರಿದು ಇರಿದು ಕೊಂದ. ಆ ಪರಿ ಇರಿತಕ್ಕೆ ಒಳಗಾದ ನೀರಜ್ ಗ್ರೋವರ್ ಸತ್ತೇ ಹೋದ. ಜೆರೋಮಿಯ ತಲೆ ಇಷ್ಟರ ಮಟ್ಟಿಗೆ ಕೆಟ್ಟಿತ್ತು ಅಂದರೆ ಸತ್ತ ನೀರಜ್ ಗ್ರೋವರನ ಹೆಣ ಮಂಚದಿಂದ ಕೆಳಗೆ ತಳ್ಳಿ, ಅದೇ ಮಂಚದ ಮೇಲೆ ತಾನು ಮದುವೆಯಾಗಬೇಕಾದ ಮಾರಿಯಾಳನ್ನು ತಳ್ಳಿದ. ತಳ್ಳಿದವನೇ, ಪಕ್ಕದಲ್ಲಿ ರಕ್ತ ಹರಿಸುತ್ತ ಬಿದ್ದಿರುವ ಹೆಣವೊಂದು ಇದೆ ಅನ್ನುವದರ ಖಬರೂ ಇಲ್ಲದೆ, ಆಕೆಯೊಂದಿಗೆ ಮಿಲನ ಮಹೋತ್ಸವ ಆಚರಿಸಿ ಕೇಕೆ ಹಾಕಿಯೇ ಬಿಟ್ಟ. ಇಷ್ಟು ಮಾಡಿದ ಮೇಲೆ ಅವನ ಆವೇಶ ಇಳಿದಿತ್ತು. ಮಾಡಿದ ದೊಡ್ಡ ಲಫಡಾ ಬಗ್ಗೆ ಅರಿವಾಗಿತ್ತು.

ಈಗ ಮಾರಿಯಾ ಮತ್ತು ಆಕೆಯ ಪತಿಯಾಗಲಿದ್ದ ಜೆರೋಮ್ ಇಬ್ಬರೂ ಒಂದಾದರು. ಹೇಗಾದರೂ ಮಾಡಿ ನೀರಜ್ ಗ್ರೋವರ್ ಮರ್ಡರ್ ಮುಚ್ಚಿ ಹಾಕಲೇ ಬೇಕಾದ ಅನಿವಾರ್ಯತೆ. ಅವನ ಹೆಣವನ್ನು ಬಾತ್ರೂಮಿಗೆ ತೆಗೆದುಕೊಂಡು ಹೋದವರೇ, ಚಿಕ್ಕದಾಗಿ ಪೀಸ್ ಪೀಸ್ ಮಾಡಿ ಒಂದು ಗೋಣಿ ಚೀಲದಲ್ಲಿ ತುಂಬಿದರು. ಈ ಕಡೆ ಜೆರೋಮ್ ಮನೆ ಕ್ಲೀನ್ ಮಾಡುವ ಪ್ರಯತ್ನ ಮಾಡಿದರೆ, ಮಾರಿಯಾ ಸುಸೈರಾಜ್ ಹೆಣ ಸಾಗಿಸಲು ಗೆಳೆಯನೊಬ್ಬನ ಗಾಡಿ ತರಲು ಹೋದಳು. ಆಕೆ ಗಾಡಿ ತರುವ ಹೊತ್ತಿಗೆ, ಜೆರೋಮ್ ರೆಡಿ ಆಗಿದ್ದ. ಮುಂಬೈನಿಂದ ಸುಮಾರು ದೂರ ತೆಗೆದುಕೊಂಡು ಹೋಗಿ, ಪೆಟ್ರೋಲ್ ಹಾಕಿ, ನೀರಜ್ ಗ್ರೋವರನ ಹೆಣದ ತುಂಡುಗಳನ್ನು ಸುಟ್ಟೇ ಬಿಟ್ಟರು. ಎಲ್ಲ ಫಿನಿಶ್.

ಹೀಗೆ ಶವ ನಾಪತ್ತೆ ಮಾಡಿದ ಮಾರಿಯಾ ಸುಸೈರಾಜ್ ಮತ್ತು ಜೆರೋಮ್ ವಾಪಸ್ ಬಂದರು. ಜೆರೋಮ್ ಕೋಚಿನ್ ಗೆ ವಾಪಸ್ ಹೋದ. ಇತ್ತಕಡೆ ಮಾರಿಯಾ ಸುಸೈರಾಜ ಪೋಲೀಸ್ ಕಂಪ್ಲೇಂಟ್ ಕೊಡಲು ನೀರಜ್ ಗ್ರೋವರನ ಇತರೆ ಗೆಳಯ ಗೆಳತಿಯರೊಂದಿಗೆ ಲೋಕಲ್ ಪೋಲಿಸ್ ಸ್ಟೇಷನ್ ಗೆ ಹೋದಳು. ನೀರಜನ ಎಲ್ಲ ಗೆಳಯ ಗೆಳತಿಯರಿಂದ ಹೇಳಿಕೆ ಪಡೆದ ಪೊಲೀಸರು, ಇದನ್ನ ಒಂದು ಸಾದಾ ಕಾಣೆಯಾಗಿರುವ ಕೇಸ್ ಎಂದು ದಾಖಲಿಸಿಕೊಂಡು ಜಾಸ್ತಿ ಏನೂ ತನಿಖೆ ಮಾಡಲೇ ಇಲ್ಲ. ತನಿಖೆಯನ್ನೇ ಮಾಡಲಿಲ್ಲ ಅಂದ ಮೇಲೆ ಮಾರಿಯಾ ಸುಸೈರಾಜ ಮೇಲೆ ಸಂಶಯ ಬರುವದು ದೂರೇ ಉಳಿಯಿತು ಬಿಡಿ.

ಇತ್ತ ಕಡೆ ಕಾನ್ಪುರನಿಂದ ನೀರಜ್ ಗ್ರೋವರನ ತಂದೆ ತಾಯಿ ಕಳೆದುಹೋದ ಮಗನನ್ನು ಹುಡುಕಲು ಮುಂಬೈಗೆ ಬಂದು ಕೂತರು. ಲೋಕಲ್ ಪೊಲೀಸರು ಏನೂ ಹೆಚ್ಚು ಸಹಾಯ ಮಾಡಲಿಲ್ಲ. ಅಯ್ಯೋ, ಇಂತಹ ಕಾಣೆಯಾಗಿರುವವರ ಸಾವಿರ ಕೇಸ್ ಇರುತ್ತವೆ, ಹೋಗಿ, ಹೋಗಿ, ಅಂತ ಓಡಿಸಿ ಬಿಟ್ಟರು. ವೃದ್ಧ ತಂದೆ ತಾಯಿ ಮುಂಬೈನಲ್ಲಿ ಹುಚ್ಚರಂತೆ ಓಡಾಡಿದರು.

ಆಗ ಮುಂಬೈ ಕ್ರೈಂ ಬ್ರಾಂಚಿನ ಚೀಫ್ ಆಗಿದ್ದವರು ಇದೇ ರಾಕೇಶ ಮಾರಿಯಾ ಸಾಹೇಬರು. ಯಾರೋ ಹೇಳಿದರು ನೀರಜ್ ಗ್ರೋವರನ ವೃದ್ಧ ತಂದೆ ತಾಯಿಯರಿಗೆ, ನೀವು ಒಂದು ಸಲ ಹೋಗಿ ಮಾರಿಯಾ ಸಾಹೇಬರನ್ನು ಯಾಕೆ ನೋಡಬಾರದು? ಅವರನ್ನು ನೋಡಿ, ನಿಮ್ಮ ಮಗ ಕಳೆದು ಹೋದ ವಿಷಯ ತಿಳಿಸಿ. ಸಾಹೇಬರು ಏನಾದರೂ ಸಹಾಯ ಮಾಡಬಹುದು, ಅಂತ.

ಅದರಂತೆ ನೀರಜ್ ಗ್ರೋವರನ ವೃದ್ಧ ತಂದೆ ಒಂದು ದಿವಸ ಕ್ರೈಂ ಬ್ರಾಂಚ್ ಆಫೀಸ್ ಗೆ ಹೋಗಿ, ಜಾಯಿಂಟ್ ಕಮಿಷನರ್ ರಾಕೇಶ್ ಮಾರಿಯಾ ಅವರನ್ನು ನೋಡಬೇಕು ಅಂತ ವಿನಂತಿ ಮಾಡಿಕೊಂಡರು. ಮಾರಿಯಾ ಮೊದಲಿಂದಲೂ ಜನರಿಗೆ ಸುಲಭವಾಗಿ ಸಿಗುತ್ತಿದ್ದರು, ಬೆರೆಯುತ್ತಿದ್ದರು, ಅವರ ಕಷ್ಟ ಕೋಟಲೆ ಕೇಳುತ್ತಿದ್ದರು. ಹಾಗಾಗಿ ನೀರಜ ಗ್ರೋವರ್ ಅವರ ವೃದ್ಧ ತಂದೆಯನ್ನು ಭೆಟ್ಟಿ ಆಗೇ ಬಿಟ್ಟರು. ಸಾಹೇಬರ ಚೇಂಬರ್ ಒಳಗೆ ಬಂದ ವೃದ್ಧ ತಂದೆ, ತಮ್ಮ ಮಗ ನೀರಜ್ ಕಳೆದು ಹೋಗಿದ್ದು, ಲೋಕಲ್ ಪೊಲೀಸರು ಅದರ ಬಗ್ಗೆ ಏನೂ ಆಸಕ್ತಿ ವಹಿಸದೆ ಇರುವದನ್ನು ಎಲ್ಲ ವಿವರಿಸಿದರು. ಮಾರಿಯಾ ಸಾಹೇಬರಿಗೆ ಅದೇನು ಅನ್ನಿಸಿತೋ ಏನೋ ಅಥವಾ ಈ ಕೇಸ್ ಕೇವಲ ಒಬ್ಬ ಮನುಷ್ಯ ಕಾಣೆಯಾಗಿರುವ ಸಿಂಪಲ್ ಕೇಸ್ ಅಲ್ಲವೇ ಅಲ್ಲ ಅಂತ ಅವರ ಪೋಲೀಸ್ ಮನಸ್ಸಿಗೆ ಅನ್ನಿಸಿತೋ ಏನೋ ಗೊತ್ತಿಲ್ಲ. ನೀರಜ್ ಗ್ರೋವರ್ ಕೇಸನ್ನು ಆಗಿಂದಾಗೆ ಕ್ರೈಂ ಬ್ರಾಂಚಿಗೆ ವರ್ಗಾವಣೆ ಮಾಡಿಸಿಕೊಂಡೇ ಬಿಟ್ಟರು. ತನಿಖೆ ಮಾಡಲು ಅವರ ಖಾಸ್ ಇನ್ಸ್ಪೆಕ್ಟರ್ ರಾವ್ ರಾಣೆಯನ್ನು ನೇಮಕ ಮಾಡಿ, ನೀರಜ್ ಗ್ರೋವರ್ ತಂದೆಗೆ ಯಾವಾಗ ಬೇಕಾದರೂ ಫೋನ್ ಮಾಡಿ ಅಂತ ಆಶ್ವಾಸನೆ ಕೊಟ್ಟು ಕಳಿಸಿದರು. ಅದೊಂದು ದೊಡ್ಡ ಮಾನವೀಯ ನಡತೆ ಮಾರಿಯಾ ಸಾಹೇಬರಿಂದ. ಹಾಟ್ಸ್ ಆಫ್!

ಈಗ ಶುರುವಾಯಿತು ನೋಡಿ ಮಜಾ. ಕ್ರೈಂ ಬ್ರಾಂಚ್ ಪೊಲೀಸರು ಮಾಡುವ ತನಿಖೆ ಅಂದ್ರೆ ಅದರ ರೀತಿಯೇ ಬೇರೆ. ಒಂದು ಪದ್ಧತಿ ಪ್ರಕಾರ ತನಿಖೆ ಶುರು ಮಾಡಿದ ಇನ್ಸ್ಪೆಕ್ಟರ್ ರಾವ್ ರಾಣೆ ಎಲ್ಲ ವಿಷಯ ರಾಕೇಶ ಮಾರಿಯಾ ಅವರಿಗೆ ತಿಳಿಸುತ್ತಲೇ ಇದ್ದರು. ಒಂದು ದಿವಸ ನೀರಜ್ ಗ್ರೋವರನ ಎಲ್ಲ ಗೆಳಯ ಗೆಳತಿಯರನ್ನು ಹಾಗೇ ಸುಮ್ಮನೆ ಭೇಟಿಗೆಂದು ರಾಕೇಶ ಮಾರಿಯಾ ಅವರ ಕ್ರೈಂ ಬ್ರಾಂಚ್ ಆಫೀಸ್ ಗೆ ಇನ್ಸ್ಪೆಕ್ಟರ್ ರಾವ್ ರಾಣೆ ಕರೆ ತಂದರು.

ಹೇಳಿ ಕೇಳಿ ರಾಕೇಶ ಮಾರಿಯಾ ಮಾಸ್ಟರ್ investigator. ಸೂಪರ್ ಕಾಪ್. ಬಂದ ನೀರಜ್ ಗ್ರೋವರನ ಗೆಳಯ ಗೆಳತಿಯರಿಗೆ ಚಹಾ ಅದು ಇದು ಕುಡಿಸಿ, ಸುಮ್ಮನೆ ಹರಟೆ ಹೊಡೆದ ಹಾಗೆ ಮಾತಾಡಿದರು. ಮಾರಿಯಾ ಸುಸೈರಾಜಳಿಗೆ ಒಳಒಳಗೆ ಪುಕು ಪುಕು. ಕಳ್ಳನ ಜೀವ ಹುಳ್ಳ ಹುಳ್ಳಗೆ ಅಂದ ಹಾಗೆ. ಸ್ವಲ್ಪ ಜಾಸ್ತಿಯೇ ಮಾತಾಡತೊಡಗಿದಳು. ಸಾರ್, ನೀರಜ್ ಬಗ್ಗೆ ಏನಾರು ತಿಳಿಯಿತಾ? ಎಲ್ಲಿ ಹೋಗಿರಬಹುದು? ಯಾರ ಮೇಲಾದ್ರೂ ಸಂಶಯ ಇದೆಯಾ? ಅದು ಇದು ಅಂತ.

ಆಗಲೇ ಕ್ರೈಂ ಬ್ರಾಂಚ್ ತಂಡ ಮಾರಿಯಾ ಸುಸೈರಾಜ್ ಮೇಲೆ ಸಂಶಯ ಬಂದಿದೆ, ಆಕೆಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿಬೇಕು, ಅಂತ ರಾಕೇಶ ಮಾರಿಯಾ ಅವರಿಗೆ ಹೇಳಿತ್ತು. ಇನ್ನೂ ಸ್ವಲ್ಪ ದಿವಸ ನೋಡೋಣ ಇರೀ ಅಂತ ಹೇಳಿ ಸುಮ್ಮನಾಗಿಸಿದ್ದರು ರಾಕೇಶ್ ಮಾರಿಯಾ.

My dear young lady, you are my number one suspect, ಅಂತ ಒಂದು ಬಾಣ ಕತ್ತಲಲ್ಲಿ ಬಿಟ್ಟೇ ಬಿಟ್ಟರು ರಾಕೇಶ ಮಾರಿಯಾ. ಎದುರಿಗೆ ಕೂತು ಮಳ್ಳಿಯಂತೆ ನಟಿಸುತ್ತಿದ್ದ ಮಾರಿಯಾ ಸುಸೈರಾಜಳ ಚಹರಾಪಟ್ಟಿ ಪೂರ್ತಿ ಬದಲಾದದ್ದನ್ನು ಗಮನಿಸದಷ್ಟು ಮೂರ್ಖರಲ್ಲ ರಾಕೇಶ ಮಾರಿಯಾ. ಎಲ್ಲರನ್ನೂ ಕಳಿಸಿಕೊಟ್ಟ ನಂತರ ತಮ್ಮ ಇನ್ಸ್ಪೆಕ್ಟರ್ ರಾವ್ ರಾಣೆಗೆ ರಾಕೇಶ ಮಾರಿಯಾ ಹೇಳಿದ್ದು ಒಂದೇ ಮಾತು: ಆಕೆಯನ್ನು ಹಿಡಿದು ಸರಿ ಮಾಡಿ ವಿಚಾರಿಸಿ. ಎಲ್ಲ ಹೊರಗೆ ಬರುತ್ತದೆ, ಅಂತ.

ಕ್ರೈಂ ಬ್ರಾಂಚ್ ಪೊಲೀಸರು ಹಿಡಿದು ತಂದು ಸ್ವಲ್ಪ ಬಿಸಿ ಮಾಡಿದ್ದೇ ಮಾಡಿದ್ದು ಮಾರಿಯಾ ಸುಸೈರಾಜ ಬೆಣ್ಣೆಯಂತೆ ಕರಗಿ ತುಪ್ಪದಂತೆ ಎಲ್ಲಾ ಮಾಹಿತಿ ಕೊಟ್ಟೇ ಬಿಟ್ಟಳು. ಅದರ ಪ್ರಕಾರ ಜೆರೋಮ್ ಕೂಡ ಬಂಧಿತನಾದ. ಮುಂದೆ ಇಬ್ಬರ ಮೇಲೂ ಕೋರ್ಟ್ ಒಳಗೆ ಕೇಸ್ ನಡೆಯಿತು. ಜೆರೋಮನಿಗೆ ದೊಡ್ಡ ಶಿಕ್ಷೆಯಾಗಿದೆ. ಮಾರಿಯಾ ಸುಸೈರಾಜ ಕೊಲೆಯ ಸಾಕ್ಷ್ಯ ನಾಶಮಾಡಿದ್ದಳು ಅನ್ನುವ ಆರೋಪ ಮಾತ್ರ ಹೊತ್ತಿದ್ದಳು. ಹಾಗಾಗಿ ಅವಳಿಗೆ ವಿಚಾರಣೆ ಸಮಯದಲ್ಲಿ ಕಳೆದ ಜೈಲು ಶಿಕ್ಷಯೇ ಸಾಕು ಅಂತ ಬಿಡುಗಡೆ ಮಾಡಲಾಯಿತು.

ಒಂದು ವೃದ್ಧ ತಂದೆಗೆ ಕೊಟ್ಟ ಭಾಷೆಯನ್ನು ರಾಕೇಶ ಮಾರಿಯಾ ಉಳಿಸಿಕೊಂಡಿದ್ದರು. ರಾಕೇಶ ಮಾರಿಯಾ ಪೋಲಿಸ್ ಅಧಿಕಾರಿಯಾದರೆ ಮಾರಿಯಾ ಸುಸೈರಾಜ ಅಪರಾಧಿ. ಅವರ ಅಡ್ಡೆಸರು ಈಕೆಯ ಹೆಸರು ಎರಡೂ ಒಂದೇ - ಮಾರಿಯಾ. ಈ ಕೇಸ್ ಮಾರಿಯಾ ಅವರ ಕಿರೀಟಕ್ಕೆ ಮತ್ತೊಂದು ಗರಿ ಸಿಕ್ಕಿಸಿತು. (ಹೆಚ್ಚಿನ ಮಾಹಿತಿಗೆ - Death in Mumbai - ಪುಸ್ತಕ ಓದಿ)

ಮುಂದೆ ೨೬/೧೧/೨೦೦೮ ರಂದು LeT ಉಗ್ರರು ಬಂದು ಮುಂಬೈಯನ್ನು ಮಸಣ ಮಾಡಿ ಬಿಟ್ಟರು. ಲಿಯೋಪೋಲ್ಡ್ ಕೆಫೆ, ರೈಲ್ವೆ ಸ್ಟೇಷನ್, ತಾಜ್ ಹೋಟೆಲ್, ಒಬೆರಾಯ್ ಹೋಟೆಲ್ಲಿನಲ್ಲಿ ಮನಸೋ ಇಚ್ಛೆ ಗುಂಡು ಹಾರಿಸಿ ನೂರಾರು ಜನರನ್ನು ಕೊಂದರು. ಆವಾಗ ಸಹಿತ ರಾಕೇಶ ಮಾರಿಯಾ ಅವರೇ ಕ್ರೈಂ ಬ್ರಾಂಚಿನ ಮುಖ್ಯಸ್ಥರಾಗಿದ್ದರು. ಕಂಟ್ರೋಲ್ ರೂಮಿನಲ್ಲಿ ಕೂತು ಇಡೀ ಮುಂಬೈ ಪೋಲೀಸರನ್ನು ನಿಯಂತ್ರಿಸುವ ಜವಾಬ್ದಾರಿ ಅವರ ಮೇಲಿತ್ತು. ಸ್ಪಾಟಿಗೆ ಹೋಗಿ, ಲೈವ್ ಆಕ್ಷನ್ ನಲ್ಲಿ ಭಾಗವಹಿಸಬೇಕು ಅಂತ ಅವರಿಗೆ ತುಂಬಾ ಆಸೆ ಇತ್ತು. ಆದರೆ ಪೋಲಿಸ್ ಕಮಿಷನರ್ ಹಸನ್ ಗಫೂರ್ ಮಾರಿಯಾ ಅವರಿಗೆ ಕಂಟ್ರೋಲ್ ರೂಮಿನ ಚಾರ್ಜ್ ತೆಗೆದುಕೊಂಡು ಸಂಬಾಳಿಸುವಂತೆ ಆಜ್ಞೆ ನೀಡಿದ್ದರು. ಅದನ್ನೂ ಸಹಿತ ರಾಕೇಶ ಮಾರಿಯಾ ಒಳ್ಳೆಯ ರೀತಿಯಿಂದಲೇ ನಿಭಾಯಿಸಿದ್ದರು. ಸೆರೆ ಸಿಕ್ಕ ಕಸಬ್ ನನ್ನು ಅವರೇ ವಿಚಾರಣೆ ಮಾಡಿದ್ದರು. ಮುಂದೆ ೨೬/೧೧ ಸಿನೆಮಾ ಆದಾಗ ರಾಕೇಶ ಮಾರಿಯಾ ಪಾತ್ರವನ್ನ ನಾನಾ ಪಾಟೇಕರ್ ತುಂಬಾ ಚನ್ನಾಗಿ ಮಾಡಿದ್ದರು.

ಆ ಮೇಲೆ ಪ್ರಮೋಷನ್ ಸಿಕ್ಕಿ anti terrorist ತಂಡದ ಮುಖ್ಯಸ್ಥರಾಗಿ ಹೋಗಿದ್ದ ರಾಕೇಶ ಮಾರಿಯಾ ಈಗ ಮುಂಬೈ ನಗರಕ್ಕೆ ಕಮಿಷನರ್ ಆಗಿ ಬಂದಿದ್ದಾರೆ.

ಇಷ್ಟೆಲ್ಲ ಒಳ್ಳೆಯ ಪೋಲೀಸ್ ಕೆಲಸ ಮಾಡಿದ ಮಾರಿಯಾ ಮೇಲೆ ಯಾರೂ ಏನೂ ಟೀಕೆ ಮಾಡೇ ಇಲ್ಲವಾ? ಅಂತ ಕೇಳಿದರೆ ಉತ್ತರ ಸಹಿತ ಮತ್ತೆ ಪತ್ರಿಕೆ, ಪುಸ್ತಕಗಳಲ್ಲಿಯೇ ಸಿಗುತ್ತದೆ.

೨೬/೧೧/೨೦೦೮ ರಲ್ಲಿ LeT ಉಗ್ರರೊಂದಿಗೆ ಕಾದಾಡುತ್ತಲೇ ಮೃತರಾದ ಇನ್ನೊಬ್ಬ IPS ಅಧಿಕಾರಿ ಅಶೋಕ ಕಾಮಟೆ ಅವರ ಪತ್ನಿ, ವಿನೀತಾ ಕಾಮಟೆ, ೨೬/೧೧ ರ ದಾಳಿಯ ಸಮಯದಲ್ಲಿ ಆದ ಪೋಲೀಸ್ ವೈಫಲ್ಯದ ಬಗ್ಗೆ, ಕಂಟ್ರೋಲ್ ರೂಮಿನಲ್ಲಿ ಕೂತಿದ್ದ ರಾಕೇಶ ಮಾರಿಯಾ ಅವರ ಕಾರ್ಯ ವೈಖರಿ ಬಗ್ಗೆ, ಉಗ್ರರನ್ನು ಎದುರುಹಾಕಿಕೊಂಡು ಸೆಣಸುತ್ತಿದ್ದ ಪೋಲಿಸ್ ಅಧಿಕಾರಿಗಳಿಗೆ ಸರಿಯಾದ ಮಾಹಿತಿ ಮತ್ತು ಸರಿಯಾದ ರೀತಿಯಲ್ಲಿ ಸಹಾಯ ಒದಗಿಸುವಲ್ಲಿ ರಾಕೇಶ ಮಾರಿಯಾ ಪೂರ್ತಿ ವಿಫಲರಾದರು ಅಂತ ವಿನೀತಾ ಆರೋಪಿಸಿದ್ದು ಒಂದೇ ಅಲ್ಲದೆ ಅದಕ್ಕೆ ಪೂರಕ ಮಾಹಿತಿಯನ್ನು RTI ಮೂಲಕ ಪಡೆದು ಒಂದು ದೊಡ್ಡ ಇಶ್ಯೂ ಮಾಡಿದ್ದರು. ಅದನ್ನೆಲ್ಲ ವಿನೀತಾ ಕಾಮಟೆ 'To the last bullet' ಅನ್ನುವ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಒಂದು ಒಳ್ಳೆಯ ಪುಸ್ತಕ.

ಇನ್ನು ಎಸ್.ಎಮ್. ಮುಶ್ರೀಫ್ ಎಂಬ ಮಹಾರಾಷ್ಟ್ರದ ಮಾಜಿ IPS ಅಧಿಕಾರಿ 'Who killed Karkare?' ಅಂತ ಒಂದು ಪುಸ್ತಕ ಬರೆದಿದ್ದಾರೆ. ಅದರಲ್ಲಿ ರಾಕೇಶ ಮಾರಿಯಾ ಮೇಲೆ ನೇರವಾಗಿ ಯಾವದೇ ಆಪಾದನೆ ಮಾಡಿರದಿದ್ದರೂ, ಮುಶ್ರೀಫ್ ಕೆಲವೊಂದು ಕಠಿಣ ಪ್ರಶ್ನೆಗಳನ್ನು ಮಾತ್ರ ಕೇಳುತ್ತಾರೆ. ಕೆಲವೊಂದು alternative hypothesis ಅನ್ನುವ ಹಾಗೆ ತಮ್ಮದೇ ಆದ ಥಿಯರಿಗಳನ್ನೂ ಹರಿ ಬಿಡುತ್ತಾರೆ. ಅವರ ಮುಖ್ಯ ಪ್ರಶ್ನೆ ಅಂದ್ರೆ ಇಷ್ಟೇ - ನಮಗೆ ಹೇಳಿದ ಹಾಗೆಯೇ ೨೬/೧೧ ಆಯಿತಾ ಅಥವಾ ಹೊರಬರದಿರುವ ಸತ್ಯಗಳೂ ಇನ್ನೂ ಇವೆಯೋ ಹೇಗೆ? ತೆರೆದ ಮನಸ್ಸಿನಿಂದ ಓದುವವರಿಗೆ ಅದೂ ಒಂದು ಒಳ್ಳೆಯ ಪುಸ್ತಕವೇ.

The Siege: 68 Hours Inside the Taj Hotel ಎಂಬ ಪುಸ್ತಕದಲ್ಲಿ ಆ ಹೊತ್ತಿನ ಮುಂಬೈ ಪೋಲೀಸ್ ವ್ಯವಸ್ಥೆ ಆ ತರಹದ ಉಗ್ರರ ದಾಳಿಯನ್ನು ಎದುರಿಸುವಲ್ಲಿ ಎಷ್ಟು ದುರ್ಬಲವಾಗಿತ್ತು ಎಂಬುದನ್ನ ಕಟುವಾಗಿ ಟೀಕಿಸಿದೆ. ರಾಕೇಶ ಮಾರಿಯಾ ಮತ್ತು ಸುಮಾರು ಹಿರಿಯ ಅಧಿಕಾರಿಗಳನ್ನು ಟೀಕಿಸಲಾಗಿದೆ.

ಇದೆಲ್ಲದರ ಮಧ್ಯೆ ಸೂಪರ್ ಕಾಪ್ ರಾಕೇಶ ಮಾರಿಯಾ ಮುಂಬೈನ ಟಾಪ್ ಕಾಪ್ ಆಗಿ ನೇಮಕವಾಗಿದ್ದಾರೆ. ಅವರಿಗೊಂದು ಅಭಿನಂದನೆ. ಇನ್ನೂ ಒಳ್ಳೆ ಕೆಲಸ ಅವರಿಂದ ಆಗಲಿ.

** ಇನ್ನೂ ಸ್ವಲ್ಪ ಹೆಚ್ಚಿನ ಮಾಹಿತಿ ಮುಂದಿನ ಬ್ಲಾಗ್ ಪೋಸ್ಟಿನಲ್ಲಿದೆ. ಓದಿ.