ಮೊನ್ನೆ ಪಾಟೀಲ್ ಪುಟ್ಟಪ್ಪ ಉರ್ಫ್ ಪಾಪು ಮತ್ತೊಮ್ಮೆ ನೆನಪಾದರು. ತಮ್ಮ
ಆತ್ಮಚರಿತೆಯಲ್ಲಿ ದಿವಂಗತ ಶಿವರಾಂ ಕಾರಂತರ ಮದುವೆ ಬಗ್ಗೆ ಏನೋ ಬರೆದರಂತೆ. ಅದು ಕಾರಂತರ
ಬೆಂಬಲಿಗರಿಗೆ ಸಹ್ಯವಾಗಲಿಲ್ಲ. ಅದಕ್ಕೇ ಪಾಟೀಲ್ ಪುಟ್ಟಪ್ಪನವರು ಕ್ಷಮೆ ಕೇಳಬೇಕು ಅದು
ಇದು ಅಂತ ಏನೋ ಗದ್ದಲ. ಅದೆಲ್ಲ ಬೇರೆ ಬಿಡಿ. ವಿಷಯ ಅದಲ್ಲ. ಪಾಪು ನೆನಪಾಗಲಿಕ್ಕೆ ಒಂದು
ಕಾರಣ ಅಷ್ಟೇ.
ಧಾರವಾಡ. ಇಸವೀ ೧೯೮೧. ನಾವು ನಾಲ್ಕನೇ ಕ್ಲಾಸು. ಒಂಬತ್ತೂ ಚಿಲ್ಲರೆ ವರ್ಷ ವಯಸ್ಸು ಅಷ್ಟೇ. ಅದೇನೋ ನಾಟಕ ಸ್ಪರ್ಧೆ ಇತ್ತು. ನಮ್ಮ ಪ್ರಾಥಮಿಕ ಶಾಲೆಯೂ ಭಾಗವಹಿಸಿತ್ತು. 'ಸತ್ಯ ಹರಿಶ್ಚಂದ್ರ' ಅನ್ನುವ ನಾಟಕ. ಅದು ನಾಟಕವೋ, ರೂಪಕವೋ, ಮೂಕಿ ತರಹದ ಸಿನಿಮಾನೋ ಇದ್ದ ಹಾಗೆ ಇತ್ತು. ಸಂಭಾಷಣೆ ಕಡಿಮೆ. ತೆರೆ ಹಿಂದಿನಿಂದ ಹಾಡುತ್ತಿದ್ದ ಹಾಡಿಗೋ, ಡೈಲಾಗುಗಳಿಗೋ ನಮ್ಮ ಹಾವ ಭಾವ ಇತ್ಯಾದಿ. ಒಂದು ತರಹದ ವಿಭಿನ್ನ ಪ್ರಯೋಗ. ಹಾಗೆ ವಿಭಿನ್ನವಾಗಿತ್ತು ಅಂತಲೇ ಏನೋ ಗೊತ್ತಿಲ್ಲ. ನಮ್ಮ ನಾಟಕಕ್ಕೇ ಪ್ರಥಮ ಬಹುಮಾನ ಬಂದು ಬಿಡಬೇಕೇ! ಸಿಕ್ಕಾಪಟ್ಟೆ ಥ್ರಿಲ್ಲೋ ಥ್ರಿಲ್ಲು. ನಾನೇ ಹರಿಶ್ಚಂದ್ರನ ಪಾತ್ರ ಮಾಡಿದ್ದು. ದೊಡ್ಡ ಪಾತ್ರವೇನೂ ಅಲ್ಲ. ದೊಡ್ಡ ಪಾತ್ರ ಹಿಂದಿಂದ ಹಾಡಿ, ಪಿಟೀಲು ಕೊಯ್ದು, ಅದು ಇದು ಮಾತಾಡುತ್ತಿದ್ದ ಸೂತ್ರಧಾರನದು ಆಗಿತ್ತು. ಆ ಕಾಲದಲ್ಲಿ ಸುನಿಲ್ ಶೆಟ್ಟಿ ಮಾದರಿಯಲ್ಲಿ ತೋತ್ಲಾ, ಹಕ್ಲಾ ಮಾತಾಡುತ್ತಿದ್ದ ನಮಗೆ ಬಹಳ ಸಂಭಾಷಣೆ ಇರುವ ಪಾತ್ರ ಕೊಟ್ಟಿರಲಿಲ್ಲ ಅನ್ನಿ. ಏನೋ 'ಕುರುಡರಲ್ಲಿ ಮೆಳ್ಳಗಣ್ಣು ಇದ್ದವ ಶ್ರೇಷ್ಠ' ಅಂತ ಹೇಳಿ ಆ ಕಾಲದಲ್ಲಿ ಸ್ವಲ್ಪ ಎತ್ತರಕ್ಕೆ, ತೆಳ್ಳಗೆ, ಬೆಳ್ಳಗೆ ಇದ್ದು, ತಕ್ಕ ಮಟ್ಟಿನ ಉದ್ದದ ಹೇರ್ ಸ್ಟೈಲ್ ಮಡಗಿದ್ದ ನಾವು ರಾಜನ ಪಾತ್ರಕ್ಕೆ ಓಕೆ ಅಂತ ಹೇಳಿ ಹರಿಶ್ಚಂದ್ರನ ಪಾತ್ರ ಕೊಟ್ಟಿದ್ದರು ಅಷ್ಟೇ.
ನಾಟಕಕ್ಕೆ ಪ್ರಥಮ ಬಹುಮಾನ ಬಂದಿದ್ದೇ ಬಂದಿದ್ದು ನಮ್ಮ ಗ್ರಹಚಾರ ಶುರುವಾಯಿತು. ಆ ವರ್ಷದ ಮಕ್ಕಳ ದಿನಾಚರಣೆ ದಿನ ಬಹುಮಾನ ಕೊಡುವ ದಿನ ಅಂತ ನಿಕ್ಕಿಯಾಗಿತ್ತು. ಧಾರವಾಡದ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಸಮಾರಂಭ ಇತ್ತು ಅಂತ ನೆನಪು. ಆ ಸಮಾರಂಭದಲ್ಲಿ ಮತ್ತೊಮ್ಮೆ ನಾಟಕ ಮಾಡಬೇಕಂತೆ! ಇದೆಲ್ಲಿ ಕರ್ಮ ಅಂತ ಅನ್ನಿಸಿದರೂ ಏನು ಮಾಡೋದು? ಮಾಸ್ತರು, ಟೀಚರು ಹೇಳಿದಂತೆ ನಾಟಕದ ತಾಲೀಮು ಮುಂದುವರಿಸಿದ್ದೆವು. ಶಾಲೆಗೆ ಪ್ರಥಮ ಬಹುಮಾನ ಬಂದರೂ ನಮಗೇನೂ ಗಿಟ್ಟಿದ ನೆನಪಿಲ್ಲ ಬಿಡಿ. ಮೇಲಿಂದ ಶಾಲೆ ಶುರುವಾಗುವಗಿಂತ ಮೊದಲು, ನಡುವೆ ಸೂಟಿ ಬಿಟ್ಟಾಗ, ಶಾಲೆ ಮುಗಿದ ನಂತರ ನಾಟಕದ ತಾಲೀಮೋ ತಾಲೀಮು. ನಾವೆಲ್ಲ ಬಸ್ಸಿಗೆ ಹೋಗಿ ಬಂದು ಮಾಡುತ್ತಿದ್ದ ದೊಡ್ಡ ಮಂದಿ. ಇವರ ತಾಲೀಮಿನ ಅಬ್ಬರದಲ್ಲಿ ಬಸ್ಸು ತಪ್ಪಿ, ನಡೆದುಕೊಂಡು ಹೋಗಿ ಬಂದು ಮಾಡುವ ತೊಂದರೆ ಎಕ್ಸಟ್ರಾ.
ಅಂತೂ ಇಂತೂ ಆ ವರ್ಷದ ಮಕ್ಕಳ ದಿನಾಚರಣೆ ಬಂತು. ಸಂಜೆ ಸಮಾರಂಭವಿತ್ತು. ಮಧ್ಯಾನ ಮೂರು ಘಂಟೆಗೇ ನಮ್ಮನ್ನು ಅಲ್ಲಿ ಕರೆದುಕೊಂಡು ಹೋಗಿ ಕೂಡಿಸಿ ಬಿಟ್ಟಿದ್ದರು. ಪ್ರಾರಬ್ಧ! ನಾಕು ಘಂಟೆ ಹೊತ್ತಿಗೆಲ್ಲ ಮೇಕ್ಅಪ್ ಮಾಡಿ, ಕಿರೀಟ ಇತ್ಯಾದಿ ಎಕ್ಸಟ್ರಾ ಫಿಟ್ಟಿಂಗ್ ಎಲ್ಲ ಫಿಕ್ಸ್ ಮಾಡಿ, ಉತ್ಸವ ಮೂರ್ತಿ ಮಾಡಿ ಕೂಡಿಸಿಬಿಟ್ಟಿದ್ದರು. ಕರ್ಮ!
ಮಧ್ಯಾನದ ಚಹಾ, ನಾಷ್ಟಾ ಅಂತ ಏನೂ ಸಿಗಲಿಲ್ಲ. ಎಲ್ಲರಿಗೂ ಮಧ್ಯಾನ ಮಾಡಿದ ಊಟ ಎಲ್ಲ ಕರಗಿ, ಸಣ್ಣಗೆ ಹೊಟ್ಟೆ ಚುರುಗುಡಲು ಆರಂಭವಾಗಿತ್ತು. ಹೇಗೂ ಸಂಜೆ ಐದು ಐದೂವರೆಗೆ ಸಮಾರಂಭ ಶುರುವಾಗಿಬಿಡುತ್ತದೆ, ಬೇಗ ನಮ್ಮ ನಾಟಕವೂ ಮುಗಿಯುತ್ತದೆ, ಮುಗಿದ ನಂತರ ಸಮಾರಂಭ ನೋಡಲು ಬರುವ ಪಾಲಕರೊಂದಿಗೆ ಮನೆಗೆ ಓಡಿ, ಮಿಸ್ಸಾದ ನಾಷ್ಟಾ, ರಾತ್ರಿಯ ಊಟ ಎಲ್ಲ ಕೂಡಿಯೇ ಜಡಿದು ಬಿಟ್ಟರಾಯಿತು ಅಂತ ಪ್ಲಾನ್ ಹಾಕಿಕೊಂಡರೆ ಅದು ಫುಲ್ ಚೌಪಟ್ ಆಗುತ್ತದೆ ಅಂತ ಗೊತ್ತಿರಲಿಲ್ಲ.
ನಾವೆಲ್ಲ ಚಿಲ್ಲರ್ ಪಾರ್ಟಿ ಮಕ್ಕಳು ತಯಾರಾಗಿ ಕೂತಿದ್ದೇ ಬಂತು. ಹೇಳಿ ಕೇಳಿ ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್. ಸಮಾರಂಭ ಬರೋಬ್ಬರಿ ಒಂದೋ, ಒಂದೂವರೆ ತಾಸೋ ತಡವಾಗಿ ಶುರುವಾಯಿತು. ನಾಟಕ ನೋಡಲು ಬಂದಿದ್ದ ಪಾಲಕರು ಗ್ರೀನ್ ರೂಮಿಗೆ ಬಂದು, ನಮ್ಮನ್ನು ನೋಡಿಕೊಂಡು ಹೋಗಿ, ಸಭೆಯಲ್ಲಿ ಕೂತು, ಬೋರ್ ಹೊಡೆದು, ಮತ್ತೆ ಬಂದು ಮಾತಾಡಿಸಿ, ಮತ್ತೆ ಹೋಗಿ ಕೂತು, ಮತ್ತೂ ಬೋರ್ ಹೊಡೆಸಿಕೊಂಡು, ಏನೇನೋ ಮಾಡುತ್ತ ಕೂತಿದ್ದರು. ಕೆಲವರು ಎದ್ದು ಹೋಗೇ ಬಿಟ್ಟಿದ್ದರೋ ಏನೋ. ಗೊತ್ತಿಲ್ಲ.
ನಮಗೆಲ್ಲಾ ಅಂತೂ ಕೆಟ್ಟ ಬೋರ್ ಹೊಡೆಯುತ್ತಿತ್ತು. ಅಷ್ಟು ಮಕ್ಕಳನ್ನು ಒಂದು ರೂಮಿನಲ್ಲಿ, ಮೇಕ್ಅಪ್ ಮಾಡಿ, ಕೂಡಿ ಹಾಕಿದರೆ ಅವರು ಏನು ಮಾಡಬೇಕು? ತಮ್ಮ ತಮ್ಮಲ್ಲೇ ಕಿತಾಪತಿ, ಕಿತಬಿ, ಚೂಟೋದು, ಪರಚೋದು, ಜಗಳ ಮಾಡಿಕೊಳ್ಳೋದು ಮಾಡುತ್ತಾರೆ. ನಾವೂ ಅದನ್ನೇ ಸಣ್ಣ ಪ್ರಮಾಣದಲ್ಲಿ ಮಾಡುತ್ತ, ಅಲ್ಲೇ ಠಳಾಯಿಸುತ್ತಿದ್ದ ಮಾಸ್ತರ್, ಟೀಚರ್ ನಿಗರಾಣಿಯಿಂದ ಬಚಾವ್ ಆಗುತ್ತ, ಹೇಗೋ ಟೈಮ್ ಪಾಸ್ ಮಾಡುತ್ತ ಕೂತಿದ್ದೆವು. ಮೇಕ್ಅಪ್ ಮಾಡಿಸಿ ಕೂಡಿಸಿದ್ದ ಮಕ್ಕಳಿಗೆ ಎಂದಿನಂತೆ ಹಿಡಿದು ಬಡಿಯವ ಸೌಲಭ್ಯ ಮಾಸ್ತರುಗಳಿಗೆ ಇರಲಿಲ್ಲ ಅನ್ನುವದು ಗದ್ದಲಾ ಹಾಕಲಿಕ್ಕೆ ಬೋನಸ್. ಮಾಸ್ತರುಗಳು ಜಬರಿಸುತ್ತ, ಸುಮ್ಮನಾಗಿಸುತ್ತ ಅಲ್ಲೇ ತಿರುಗುತ್ತಿದ್ದರು. ಲೇಡಿ ಟೀಚರಗಳು ಇಲ್ಲದ ಹರಟೆ ಹೊಡೆಯುತ್ತ ಕೂತಿದ್ದರು. ಚೇಂಜ್ ಇರಲಿ ಅಂತ ಬಂದ ಪಾಲಕರ ಜೊತೆಗೂ ಹರಟೆ ಹೊಡೆಯುತ್ತಿದ್ದರು.
ಆರು ಘಂಟೆಯಾಯಿತು, ಆರೂವರೆ ಆಯಿತು, ಏಳೂ ಆಯಿತು, ಏಳುವರೆಯೋ ಆಯಿತು ಅಂತೆಲ್ಲ ಆಕಳಿಸುತ್ತ ಕೂತಿದ್ದ ಶಿಕ್ಷಕರು, ಪಾಲಕರು ಹೇಳಿದ್ದಕ್ಕೆ ಗೊತ್ತಾಯಿತು. ತಡ ಮಾಡಿದ್ದೂ ಅಲ್ಲದೆ ಮೇಲಿಂದ ದೊಡ್ಡ ದೊಡ್ಡ ಭಾಷಣ ಹೊಡೆಯುತ್ತ, ಮೇಕ್ಅಪ್ ಮಾಡಿಕೊಂಡು ಆ ಸಣ್ಣ ರೂಮಿನ ಕೆಟ್ಟ ಗರ್ಮಿಯಲ್ಲಿ, ಹಸಿದ ಹೊಟ್ಟೆಯಲ್ಲಿ ಕೂತಿದ್ದ ಮಕ್ಕಳನ್ನು ನರಳಿಸುತ್ತಿದ್ದ ಭಾಷಣಕೋರರಿಗೆ, ಸಮಾರಂಭದ ಆಯೋಜಕರಿಗೆ ಎಲ್ಲರೂ ಶಾಪ ಹೊಡೆಯುತ್ತಿದ್ದರು. ಅವರದ್ದೆಲ್ಲ ಭಾಷಣ ಇತ್ಯಾದಿ ಮುಗಿದ ನಂತರ ನಮ್ಮ ನಾಟಕವಂತೆ! ಹೋಗ್ಗೋ!
ಆ ಸಮಾರಂಭದ ಅತಿಥಿಯೋ, ಅಧ್ಯಕ್ಷರೋ ಆಗಿ ಬಂದಿದ್ದವರು ಇದೇ ಪಾಟೀಲ್ ಪುಟ್ಟಪ್ಪ ಅಂತ ನಂತರ ಗೊತ್ತಾಯಿತು. ಪುಣ್ಯಾತ್ಮರು ದೊಡ್ಡ ಭಾಷಣಕ್ಕೆ ನಿಂತು ಬಿಟ್ಟಿದ್ದರಂತೆ. ಅವರ ಭಾಷಣ ಮುಗಿಯುತ್ತಲೇ ಇರಲಿಲ್ಲ. ಮಕ್ಕಳ ದಿನಾಚರಣೆ ಅಂತ ನೆಹರು ಬಗ್ಗೆ ತೌಡು ಕುಟ್ಟುತ್ತ ಕೂತು ಬಿಟ್ಟಿದ್ದರು ಪಾಪು. ೧೯೫೦ ರ ಟೈಮಿನಲ್ಲೋ ಏನೋ ಅವರು ನೆಹರು ಅವರನ್ನು ಭೆಟ್ಟಿಯಾಗಿದ್ದು, ಮತ್ತೊಂದು ಮಗದೊಂದು ಅಂತೆಲ್ಲ ಮೊಳೆ ಹೊಡೆದರು ಅಂತ ಭಾಷಣ ಕೇಳಿ, ಭೇಜಾ ಫ್ರೈ ಆಗಿ ಬ್ರೈನ್ ಬರ್ಬಾದ ಆಗಿದ್ದ ಅಮ್ಮ ಹೇಳಿದ್ದಳು. ಪಾಪು ಜೋರ್ದಾರ್ ಭಾಷಣಕಾರರು. ವೇದಿಕೆ ಸಿಕ್ಕರೆ ಮತ್ತೇನು? ಕುಟ್ಟಿದ್ದೇ ಕುಟ್ಟಿದ್ದು.
ಇಲ್ಲಿ ನಮ್ಮ ಮಕ್ಕಳ ಹಾಲತ್ ಭಯಂಕರ ಖರಾಬ್ ಆಗುತ್ತಿತ್ತು. ಕೆಟ್ಟ ಹಸಿವೆ. ಎಲ್ಲರೂ, 'ಟೀಚರ್ ಭಾಳ ಹಸಿವಿರಿ,' ಅಂತಲೋ, ಬಂದಿದ್ದ ಪಾಲಕರನ್ನು ಕುರಿತು, 'ಅಪ್ಪಾ, ಅವ್ವಾ ಏನರೆ ತಿನ್ನಲಿಕ್ಕೆ ಕೊಡ್ರಿ,' ಅಂತಲೋ ರಾಗ ಎಳೆಯುತ್ತ ಕೂತಿದ್ದೆವು. ಯಾರು ಎಲ್ಲಿಂದ ಏನು ತಂದು ಕೊಟ್ಟಾರು? ಅದೂ ಫುಲ್ ಮೇಕ್ಅಪ್ ಮಾಡಿಕೊಂಡ ಮಂದಿ ತಿಂದು ಉಂಡು ಕುಡಿದು ಮಾಡಿ, ಮೇಕ್ಅಪ್ ಎಕ್ಕುಟ್ಟಿ ಹೋದರೆ ಏನು ಗತಿ? ತಿಂದು, ಕುಡಿದ ನಂತರ ನಾಟಕದ ಆಯ್ತ ವೇಳ್ಯಾಕ್ಕ ಯಾರರೆ ಕಿರುಬೆರಳು ಎತ್ತಿ ಬಿಟ್ಟರೆ ಏನು ಗತಿ? ಸೂ ಸೂ ಅನ್ನೋ ಮಂಗ್ಯಾ ಸೂಳಿಮಕ್ಕಳು. ಯಾರಾದರೂ ನಂಬರ್ ಟೂ ವತ್ರ ಅಂದರೆ? ಅಧೋಗತಿ. ಇದೆಲ್ಲ ಟೆನ್ಷನ್ ಮಾಸ್ತರ್ ಮಂದಿಗೆ. ಏನೋ ಒಂದು ರೀತಿಯಲ್ಲಿ, ಏನೇನೋ ಚೌಕ್ ಗುಳಿಗಿ ಉಳ್ಳಿಸುತ್ತ (ಸುಳ್ಳು ಹೇಳುತ್ತ), 'ಭಾಷಣ ಮುಗಿದ ಕೂಡಲೇ ನಿಮ್ಮದss ನಾಟಕ. ಹೆಚ್ಚ ಅಂದ್ರ ಒಂದು ಇಪ್ಪತ್ತು ನಿಮಿಷ. ನಂತರ ಎಲ್ಲಾರಿಗೂ ಬಿಟ್ಟು ಬಿಡ್ತೇವಿ. ಅಲ್ಲಿ ತನಕಾ ಹಸಿವಿ ತಡ್ಕೊರೀ. ಹಾಂ. ಓಕೆ?' ಅಂತೆಲ್ಲ ಮಾಸ್ತರ್ ಮಂದಿಯ ಓಳು.
ಈ ಪುಣ್ಯಾತ್ಮರೆಲ್ಲರ ಭಾಷಣ ಯಾವಾಗ ಮುಗಿಯುತ್ತದೆಯೋ ಅಂತ ತಲೆ ಮೇಲೆ ಹಾಕಿದ್ದ ಕಿರೀಟದ ಮೇಲೆ ಕೈ ಹೊತ್ತು ಕೂತಿದ್ದಾಗ ಯಾರೋ ಬಂದರು. ಸಮಾರಂಭದ ಆಯೋಜಕರಲ್ಲಿ ಒಬ್ಬರಿರಬೇಕು. 'ಲಗೂ ಲಗೂ ಕರ್ಕೊಂಡು ಬರ್ರಿ. ನಾಟಕಾ ಮಾಡಿಸಿ ಬಿಡ್ರೀ. ಲಗೂನ ಮುಗಿಸಬೇಕಾ ಮತ್ತ!' ಅಂತ ಗಡಿಬಿಡಿ ಮಾಡಿದರು. ತಡಾ ಆಗಿದ್ದು ಇವರಿಂದ, ನಾವು ಈಗ ಲಗೂ ಲಗೂ ಮುಗಿಸಬೇಕು. ಇದೊಳ್ಳೆ ಮಾತು.
ನಾವೇನೋ ನಾಟಕಾ ಮಾಡಲಿಕ್ಕೆ ಸ್ಟೇಜ್ ಕಡೆ ಹೋದೆವು. ಆದರೆ ಆ ಗ್ರೀನ್ ರೂಂ ಒಳಗೆ ನಡೆದ ವಿಚಿತ್ರ ಘಟನೆಯೊಂದನ್ನ ನಂತರ ಅಮ್ಮ ಹೇಳಿದರು. ನಾಟಕ ನೋಡಲಿಕ್ಕೆ ಅವರೂ ಬಂದಿದ್ದರಲ್ಲ. ಬಾಕಿ ಮಂದಿ ಪಾಲಕರ ಜೊತೆಗೆ, ಮಾಸ್ತರ್ ಟೀಚರ್ ಮಂದಿ ಜೊತೆ ಅವರೂ ಅಲ್ಲಿ ಇಲ್ಲಿ ಹೋಗಿ ಬಂದು ಮಾಡುತ್ತ, ಪರಿಚಿತರೇ ಆಗಿದ್ದ ಎಲ್ಲರೊಂದಿಗೆ ಮಾತಾಡುತ್ತ ಇದ್ದರು.
ಪುಂಖಾನುಪುಂಖವಾಗಿ ನೆಹರು, ಗಾಂಧಿ ಅಂತೆಲ್ಲ ಪುಂಗುತ್ತಿದ್ದ ಪಾಪು ಅವರ ಭಾಷಣ ಹೇಗೆ ನಿಂತಿತು? ಅದೂ ಅಷ್ಟು ಸಡನ್ ಆಗಿ ಹೇಗೆ ನಿಂತಿತು?
ಅಷ್ಟು ದೊಡ್ಡ ಮಹನೀಯರಿಗೆ, 'ಸರ್ರಾ, ನೀವು ಜಡಿಯಾಕ ಶುರು ಮಾಡಿ ಒಂದು ತಾಸು ಆಗಲಿಕ್ಕೆ ಬಂತು. ಕೃಪಾ ಮಾಡಿ ಸ್ವಲ್ಪ ನಿಮ್ಮ ಭಾಷಣ ಮುಗಿಸಿದರ ನಾವು ಮುಂದಿನ ಕಾರ್ಯಕ್ರಮ ಮಾಡಿಕೋತ್ತೇವಿ,' ಅನ್ನುವ ತಾಕತ್ತು, ಹಿಮ್ಮತ್ತು, ಜುರ್ರತ್ತು ಆಯೋಜಕರಲ್ಲಿ ಯಾರಿಗೂ ಇರಲಿಲ್ಲ ಬಿಡ್ರೀ. ಪಾಪು ಹೇಳಿ ಕೇಳಿ ಖತರ್ನಾಕ್ ಪತ್ರಕರ್ತರು. ಮರುದಿವಸ ಅವರ ಪೇಪರ್ ಒಳಗೆ ಬೈದು ಬರೆದು ಬಿಟ್ಟರೇನು ಗತಿ? ಅವರ ಪತ್ರಿಕೆಯಾಗಿದ್ದ 'ಪ್ರಪಂಚ' ಅದೆಷ್ಟು ಕೋಟಿ (!) ಮಂದಿ ಓದ್ತಿದ್ದರೋ ಏನೋ?
ಓವರ್ ಟು ನಮ್ಮ ಅಮ್ಮ ಫಾರ್ ಮುಂದಿನ ಕಥೆ.
ಹೀಗಿದ್ದಾಗ ಒಬ್ಬ ಚಿಕ್ಕ ಹುಡುಗಿ ಸ್ಟೇಜ್ ಮೇಲೆ ಹತ್ತಿ ಬಂದಳು. ಸೀದಾ ಹೋದವಳೇ ಸ್ಟೇಜ್ ಮೇಲೆ ಭಾಷಣ ಕುಟ್ಟುತ್ತಿದ್ದ ಪಾಪು ಅವರ ಕೈಗೇ ಒಂದು ಚೀಟಿ ಕೊಟ್ಟು ಬಿಟ್ಟಳು. ಆ ಚೀಟಿಯಲ್ಲಿ ಬರೆದಿದ್ದನ್ನು ಓದಿದ ಪಾಪು, ಕೆಂಡಾಮಂಡಲರಾಗಿ, ಸಭಿಕರನ್ನು, ಆಯೋಜಕರನ್ನು ಮತ್ತೊಂದು ಹತ್ತು ನಿಮಿಷ ಬೈದರು. 'ರಾಜೇಶ್ ಖನ್ನಾನೋ, ಹೇಮಾ ಮಾಲಿನಿಯೋ ಬಂದು ಇಲ್ಲಿ ಕುಣಿದಿದ್ದರೆ ನೋಡಿಕೋತ್ತ ಕೂಡ್ತಿದ್ದಿರಿ. ನಾನು ಮಾತಾಡಿದ್ದು ಭಾಳ ಆಯಿತು ನಿಮಗೆ. ಅಲ್ಲ? ಈ ದೇಶಕ್ಕೆ ಭವಿಷ್ಯವಿಲ್ಲ. ಏನೂ ಸಾಧ್ಯವಿಲ್ಲ,' ಅದು ಇದು ಅಂತೆಲ್ಲ ಬೈದು, ಭುಸುಗುಡುತ್ತ ಪಾಪು ಕೂತರು. ಆಷ್ಟು ಗರಂ ಆಗಿದ್ದ ಪಾಪುವಿನ ಮುಂದೆ ನಮ್ಮ ನಾಟಕ ಪ್ರದರ್ಶನ ನಡೆಯಿತು. ಇದೆಲ್ಲ ನಮಗೆ ಆಮೇಲೆ ಗೊತ್ತಾಯಿತು.
ಆ ಚಿಕ್ಕ ಹುಡುಗಿ ಕೊಟ್ಟಿದ್ದ ಚೀಟಿಯಲ್ಲಿ ಅಂತಾದ್ದೇನು ಬರೆದಿತ್ತು? ಓದಿದ ಪಾಟೀಲ್ ಪುಟ್ಟಪ್ಪ ಆ ಪರಿ ಗರಂ ಆಗಿ, ಬೈದಾಡಿ, ಚೀರಾಡಿ ಸಡನ್ನಾಗಿ ಭಾಷಣ ಮುಗಿಸುವಂತಾದ್ದು?
'ನಿಮ್ಮ ಭಾಷಣ ಮುಗಿಸಿ. ಮಕ್ಕಳಿಗೆ ತುಂಬ ತಡವಾಗುತ್ತಿದೆ.' ಇಷ್ಟೇ ಇದ್ದಿದ್ದು ಪಾಪುವಿಗೆ ಬಂದಿದ್ದ ಚೀಟಿಯಲ್ಲಿ. ಮೊದಲಿಗೊಂದು 'ದಯವಿಟ್ಟು' ಕೊನೆಗೊಂದು 'ಧನ್ಯವಾದ' ಅಂತ ಇತ್ತೇ? ಗೊತ್ತಿಲ್ಲ.
ಭಾಷಣ ಭಗ್ನವಾಗಿ, ದುರ್ವಾಸನ ಅವತಾರ ತಾಳಿದ್ದ ಪಾಟೀಲ್ ಪುಟ್ಟಪ್ಪನವರಿಂದ ಆ ಪರಿ ಬೈಸ್ಕೊಂಡು ಮಂಗ್ಯಾ ಆಗಿದ್ದ ಆಯೋಜಕರಲ್ಲಿ ಒಬ್ಬರು ತನಿಖೆಗೆ ಇಳಿದರು. ಚೀಟಿ ಕೊಟ್ಟು ಬಂದಿದ್ದ ಮಗುವನ್ನು ಹಿಡಿದು ಕೇಳಿದರು. ಪಾಪ ಕತ್ತಲೆಯಲ್ಲಿ ಯಾರೋ ಕೊಟ್ಟಿದ್ದರು. ಮಹಿಳೆಯೊಬ್ಬರು ಕೊಟ್ಟಿದ್ದರು ಅಂತಷ್ಟೇ ಆ ಚಿಕ್ಕ ಹುಡುಗಿ ಹೇಳಿದಳು. ಅದಕ್ಕಿಂತ ಜಾಸ್ತಿ ಪಾಪ ಆಕೆಯಿಂದ ಏನೂ ಹೊರಬೀಳಲಿಲ್ಲ. ಚಳಿಗಾಲ ಬೇರೆ. ರಾತ್ರಿ ಕತ್ತಲು ಬೇಗ ಕವಿಯುತ್ತದೆ. ಇಲ್ಲದ ಧೈರ್ಯ ಮಾಡಿ ಪಾಪುವಿಗೆ ಚೀಟಿ ಕಳಿಸಿದ್ದ ಮಹಿಳೆಯ ಚಹರಾಪಟ್ಟಿ ಗೊತ್ತಾಗಲಿಲ್ಲ. ಆ ತನಿಖೆ ಆಸಾಮಿ ಸ್ವಲ್ಪ ಶಾಣ್ಯಾ ಇರಬೇಕು. ಏನೋ ಯೋಚನೆ ಮಾಡಿದ. 'ಮಕ್ಕಳಿಗೆ ತಡವಾಗುತ್ತಿದೆ,' ಅಂತ ಚೀಟಿ ಕಳಿಸಿದ್ದಾರೆ ಅಂದ ಮೇಲೆ ನಮ್ಮ ನಾಟಕಕ್ಕೇ ಸಂಬಂಧಿಸಿದವರೇ ಯಾರೋ ಇರಬೇಕು ಅಂತ ಯೋಚಿಸಿದ. ಯಾಕೆಂದರೆ ಇವರ ಭಾಷಣಗಳ ಅಬ್ಬರಕ್ಕೆ ಬೇರೆ ಎಲ್ಲ ಮಕ್ಕಳು ಎಸ್ಕೇಪ್ ಆಗಿ ಕೇವಲ ಕಳ್ಳನನ್ನಮಕ್ಕಳು (ಉರ್ಫ್ ವಯಸ್ಕರು) ಮಾತ್ರ ಉಳಿದುಕೊಂಡಿದ್ದರು.
ಹೀಗೆಲ್ಲ ಸ್ಕೀಮ್ ಹಾಕಿದ ಆ ತನಿಖೆ ಆಸಾಮಿ ಸೀದಾ ನಮ್ಮ ಗ್ರೀನ್ ರೂಮಿಗೆ ಬಂದ. ಪಾಟೀಲ್ ಪುಟ್ಟಪ್ಪನವರ ಭಾಷಣ ಹಠಾತ್ ಮುಗಿದಿತ್ತು. ನಾವು ಗ್ರೀನ್ ರೂಂ ಬಿಟ್ಟು ಮಾತ್ರ ಹೊರಗೆ ಬಿದ್ದಿದ್ದೆವು. ಪಾಲಕರು ಮತ್ತು ಕೆಲ ಶಿಕ್ಷಕರು ಎಲ್ಲ ಅಲ್ಲೇ ಇದ್ದರು. ಆವಾಗ ನಮ್ಮ ಅಮ್ಮ ಅದು ಎಷ್ಟನೇ ಸಲಕ್ಕೋ ಮತ್ತೊಮ್ಮೆ ಗ್ರೀನ್ ರೂಂ ಕಡೆ ಬಂದಿದ್ದರು. ಭಾಷಣ ಮುಗಿದ ಖುಷಿಯಲ್ಲಿ.
'ಯಾರು ಚೀಟಿ ಕಳಿಸಿದ್ದು? ನಿಮ್ಮಲ್ಲೇ ಯಾರೋ ಕಳಿಸಿರಬೇಕು. ನಾಚಿಗೆ ಬರೋದಿಲ್ಲ? ನಿಮ್ಮಿಂದಾಗಿ ನಮ್ಮ ಮಾನ ಹೋತು. ಬಹಳ ಕೆಟ್ಟ ಕೆಲಸ. ಯಾರು? ಯಾರು ಚೀಟಿ ಕಳಿಸಿದ್ದು ಅಂತ ಹೇಳ್ರೀ!' ಅಂತ ಫುಲ್ ಅವಾಜ್ ಹಾಕಿದ ತನಿಖೆಗೆ ಬಂದಿದ್ದ ಆಯೋಜಕ.
ಅಲ್ಲಿದ್ದ ಯಾರಿಗೂ ಏನೂ ತಲೆ ಬುಡ ಅರ್ಥವಾಗಲಿಲ್ಲ. ಅರ್ಥವಾಗಿದ್ದು ಒಬ್ಬರಿಗೆ ಮಾತ್ರ. ಅವರೇ ಚೀಟಿ ಕಳಿಸಿ, ಭಾಷಣ ನಿಲ್ಲಿಸಿ, ಮಕ್ಕಳನ್ನು ಬಚಾವ್ ಮಾಡಿದವರು. 'ನಾನೇರೀ ಸರಾ. ನಾನೇ ಚೀಟಿ ಕಳಿಸಿದಾಕಿ,' ಅಂತ ಹೇಳೋಕೆ ಅವರಿಗೇನು ಹುಚ್ಚನಾಯಿ ಕಚ್ಚಿತ್ತೆ? ಇಲ್ಲ. ಎಲ್ಲರೂ ಮಳ್ಳ ಮಾರಿ ಮಾಡಿಕೊಂಡು ನಿಂತರು.
ತನಿಖೆಗೆ ಬಂದವ ಚಿಟಿ ಚಿಟಿ ಚೀರಿ, ಚೀಟಿ ಕಳಿಸಿದ್ದಕ್ಕೆ ಸಾಮೂಹಿಕವಾಗಿ ಎಲ್ಲರಿಗೆ ಛೀಮಾರಿ ಹಾಕಿ, ಚೀಟಿ ವಿಷಯ, ಪಾಪು ಭಾಷಣ ನಿಂತ ವಿಷಯ ಎಲ್ಲ ವಿವರಿಸಿ, ಅವನು ಹೋದ ಅಂತಾಯಿತು. ಆವಾಗ ಅಲ್ಲಿದ್ದ ಪಾಲಕರಿಗೆ, ಶಿಕ್ಷಕರಿಗೆ ಎಲ್ಲ ತಿಳಿಯಿತು. ಯಾರೋ ಮಸ್ತ ಕಿತಾಪತಿ ಮಾಡಿ, ಬತ್ತಿ ಇಟ್ಟು, ಭಾಷಣಕಾರರ ಬಾಯಿ ಬಂದು ಮಾಡಿಸಿದ್ದಾರೆ ಅಂತ.
ಪಾಪುವಿಗೇ ಪಾಪಡಿ ತಿನ್ನಿಸಿದವರ್ಯಾರು?????
ಯಾರ ಕಿತಾಪತಿ ಅದು??????
ನಮ್ಮ ಅಮ್ಮ ಸಹಿತ ಅಲ್ಲೇ ಇದ್ದರಲ್ಲ. ತಿಳ್ಕೊಬೇಕು ಅಂತ ಅವರಿಗೂ ಕೆಟ್ಟ ಕುತೂಹಲ. ಯಾರನ್ನು ಕೇಳೋಣ ಅಂತ ಅವರಿಗೆ ಹೊಳೆಯಲಿಲ್ಲ. ಎದುರಿಗೆ ಕಂಡಾಕೆ ಅವರ ಶಾಲೆ, ಕಾಲೇಜ್ ಗೆಳತಿ, ಕ್ಲಾಸ್ಮೇಟ್. ಅವರ ಮಗ ನಮ್ಮ ಕ್ಲಾಸ್ಮೇಟ್. ಅವನೂ ನಾಟಕದಲ್ಲಿ ಇದ್ದವನೇ. ಅದಕ್ಕೇ ಅಲ್ಲಿ ಅವರು, ನಮ್ಮ ಅಮ್ಮ ಎಲ್ಲ ಜಮೆಯಾಗಿದ್ದು.
'ಏ ಇಕಿನ. ಗೊತ್ತದಯೇನಾ ನಿನಗ? ಯಾರು ಅಂತಹ ಚೀಟಿ ಕಳಿಸಿದರು ಅಂತ? ಹಾಂ?' ಅಂತ ನಮ್ಮ ಅಮ್ಮ ಅವರ ಗೆಳತಿಯನ್ನು ಕೇಳಿದರು.
'ನನಗೇನೂ ಗೊತ್ತಿಲ್ಲವಾ. ಯಾರೋ ಏನೋ,' ಅಂದ ಗೆಳತಿ, 'ಏ ಇಕಿನ, ಇಲ್ಲೆ ನೋಡ. ಇವರೇ ಚೀಟಿ ಕಳಿಸಿದವರು!' ಅಂತ ಸಣ್ಣ ದನಿಯಲ್ಲಿ ಹೇಳಿ, ತಮ್ಮನ್ನೇ ತಾವು ತೋರಿಸ್ಕೊಂಡು, ಚೀಟಿ ಕಳಿಸಿದವರ ರಹಸ್ಯ ತುಂಬ selective ಆಗಿ ಹೊರಗೆ ಹಾಕಿದ್ದರು.
'ನಿಂದೇನು ಈ ಕಿತಾಪತಿ? ಭಾಳ ಛೋಲೋ ಕೆಲಸಾ ಮಾಡಿದಿ ಬಿಡು. ನಡಿ ಈಗ ಅಲ್ಲೇ ಹೋಗಿ ಕೂಡೋಣ. ಭಾಷಣಾ ಅಂತೂ ಮುಗಿಸಿ ಒಗದಿ. ನಡಿ ನಡಿ. ನಾಟಕ ನೋಡೋಣ,' ಅನ್ನುವಷ್ಟರಲ್ಲಿ ಇಬ್ಬರೂ ಗೆಳತಿಯರಿಗೆ ತಡೆಯಲಾರದಷ್ಟು ನಗು. ಹೇಳಿ ಕೇಳಿ ಮೊದಲೆಲ್ಲ ಅಂತಾದ್ದೆಲ್ಲ ಕಿತಾಪತಿ ಬೇಕಾದಷ್ಟು ಮಾಡಿದವರೇ ಅಲ್ಲವೇ? ಧಾರವಾಡದಲ್ಲಿನ ನಮ್ಮದೇ ಕಿಡಿಗೇಡಿ ಶಾಲೆಯ ಮಾಜಿ ವಿದ್ಯಾರ್ಥಿನಿಯರು.
'ಏ! ಸಾವಕಾಶ ಮಾತಾಡ ಮಾರಾಳ. ಯಾರರ ಕೇಳಿಸಿಕೊಂಡರೆ ಕಷ್ಟ,' ಅಂತ ಹೇಳಿದ ಗೆಳತಿಯೂ ಸಿಕ್ಕಾಪಟ್ಟೆ ನಕ್ಕಳು.
ಹೀಗೆ ಅನಾಮಧೇಯರಿಂದ ಬಂದಿದ್ದ ಚೀಟಿಯೊಂದು ಪಾಪುವಿನ ಭಯಂಕರ ಭಾಷಣ ಭಗ್ನ ಮಾಡಿ, ನಮ್ಮನ್ನು ಬಚಾವ್ ಮಾಡಿ, ಏನೋ ಒಂದು ತರದಲ್ಲಿ ನಾಟಕ ಮುಗಿಸಿ, ಮೇಕ್ಅಪ್ ಕಳಚಿ, ಆ ದರಿದ್ರ ಜಾಗದಿಂದ ಹೊರಬಿದ್ದಾಗ ರಾತ್ರಿ ಒಂಬತ್ತೂವರೆ ಮೇಲಾಗಿ ಹೋಗಿತ್ತು. ನಮ್ಮನ್ನು ಬಿಟ್ಟರೆ ಬೇರೆ ಯಾವ ಮಕ್ಕಳೂ, ಮಮ್ಮಕ್ಕಳೂ, ಮಿಮ್ಮಕ್ಕಳೂ ಅಲ್ಲಿ ಕಾಣಲಿಲ್ಲ. ಇದ್ದವರೆಲ್ಲ ಕಳ್ಳನನ್ನಮಕ್ಕಳೇ.
ಅದಾದ ಮೇಲೆ ಪಾಪು ಅವರನ್ನು ಎಲ್ಲೂ ನೋಡಿಲ್ಲ ಬಿಡಿ. ಆದರೆ ಪಾಪು ಅಂದಾಕ್ಷಣ ಈ ಘಟನೆ ನೆನಪಾಗುತ್ತದೆ. ಕಿತಾಪತಿ ಮಾಡಿ, ಚೀಟಿ ಕಳಿಸಿ, ಭಾಷಣ ನಿಲ್ಲುವಂತೆ ಮಾಡಿ, ಮಕ್ಕಳನ್ನು ಬಚಾವು ಮಾಡಿದ ಅಮ್ಮನ ಖಾಸ್ ಗೆಳತಿ ನೆನಪಾಗುತ್ತಾರೆ. ಅವರ ಮಗ, ಮಿತ್ರ ನೆನಪಾಗುವದೊಂದೇ ಅಲ್ಲ ಆಗಾಗ ಅಲ್ಲಿ, ಇಲ್ಲಿ ಸಿಗುತ್ತಾನೆ ಕೂಡ. ಬಹಳ ವರ್ಷದ ನಂತರ ಭೇಟಿಯಾದಾಗ ಈ ಘಟನೆ ನೆನಪಿಸಿಕೊಂಡು ನಕ್ಕಿದ್ದೆವು.
ಭಾಷಣ ಭಗ್ನ ಮಾಡಿದ್ದಕ್ಕೆ ಪಾಪು ಅವರ ಕ್ಷಮೆ ಯಾರು ಕೇಳಿದರೋ ಬಿಟ್ಟರೋ ಗೊತ್ತಿಲ್ಲ. ಈಗ ನಾವಂತೂ ಕೇಳುತ್ತೇವೆ. ಆವತ್ತಿನ ಪರಿಸ್ಥಿತಿ ಹಾಗಿತ್ತು. ಇನ್ನೂ ಸ್ವಲ್ಪ ಹೊತ್ತು ಹಾಗೇ ಮುಂದುವರೆದಿದ್ದರೆ ನಮ್ಮ ನಾಟಕದ ಮಕ್ಕಳಲ್ಲಿ ಕೆಲವರಿಗಾದರೂ ತಲೆ ಸುತ್ತು ಬಂದು, ಮತ್ತೊಂದು ಮಗದೊಂದು ಆಗಿ, ದೊಡ್ಡ ಅನಾಹುತವಾಗುವದರಲ್ಲಿ ಸಂಶಯವೇ ಇರಲಿಲ್ಲ. ಹಾಗಾಗಿ ಅನಿವಾರ್ಯವಾಗಿ ಅಂತಹ ಒಂದು ಬಂಡಾಯಕಾರಿ ನಿರ್ಣಯ ತೆಗೆದುಕೊಳ್ಳಬೇಕಾಯಿತು ಅಂತ ಕಾಣಿಸುತ್ತದೆ. ಪಾಪು ಅವರ ಕ್ಷಮೆಯನ್ನು ಕೇಳುತ್ತೇವೆ. ಹಾಗೆಯೇ ಬಚಾವ್ ಮಾಡಿದ ದೋಸ್ತನ ತಾಯಿಯವರಿಗೂ ಒಂದು ದೊಡ್ಡ ಧನ್ಯವಾದ, ನಮಸ್ಕಾರ.
ಮಕ್ಕಳ ದಿನಾಚರಣೆಯಂದು ದೊಡ್ಡವರಿಂದ ಭಾಷಣ ಇಲ್ಲ ಅಂತ ಒಂದು ಠರಾವು ಪಾಸ್ ಮಾಡಿಬಿಟ್ಟರೆ ಒಳ್ಳೆದೇನೋ!

ಶ್ರೀ ಪಾಟೀಲ್ ಪುಟ್ಟಪ್ಪ ಉರ್ಫ್ ಪಾಪು |