Wednesday, February 18, 2015

ಭಗವದ್ಗೀತೆಯಿಂದ ಬೆಳಕು

ಮೊನ್ನೆ ಅದ್ಯಾರೋ ದೊಡ್ಡ ಮನುಷ್ಯರು, 'ಭಗವದ್ಗೀತೆ ಸುಟ್ಟು ಬಿಡ್ರೀ' ಅಂತ ಕರೆ ಕೊಟ್ಟರಂತೆ. ಅದೇ ದೊಡ್ಡ ಸುದ್ದಿ.

ಅದರ ಬಗ್ಗೆ ಸ್ಥಳೀಯ 'ದೊಡ್ಡ ಮಂದಿ' ಪ್ರತಿಕ್ರಿಯೆ ತಿಳಿದು ಬರೋಣ ಅಂತ ನಮ್ಮ ಪರಿಚಯದ ಡಂಬಾಯ ಸಾಹಿತಿಗಳ ಮನಿಗೆ ಹೋದೆ. ಮೊದಲು ಬಂಡಾಯ ಸಾಹಿತಿ ಆಗಿದ್ದರಂತ. ಎಮರ್ಜೆನ್ಸಿ ಒಳಗ ಮನಗಂಡ ಬಡಿಸಿಕೊಂಡು ಹೊರಗ ಬಂದು, ಏನೇನೋ ಆಗಿ, ಈಗಿತ್ತಲಾಗ ಫುಲ್ ಡಂಬಾಯ ಸಾಹಿತಿ ಆಗಿ ಡಂ ಡಂ ಅಂತ ಡೋಲು, ಹಲಗಿ ಬಾರಿಸಿದ್ದೇ ಜಾಸ್ತಿ ಅಂತ ಅವರಿಗೆ ಆಗದವರ ಕುಹಕ. ಹೋಳಿ ಹುಣ್ಣಿವಿಯಾಗ ಕಾಮಣ್ಣನ ಪಟ್ಟಿ (ಚಂದಾ) ಕೂಡಿಸಲಿಕ್ಕೆ ಭಾಳ ಉಪಯೋಗ ಆಗ್ಲಿಕತ್ತದ ಅವರ ಹಲಗಿ ಬಾರಿಸೋ ಕಲೆ ಮತ್ತು ಕೌಶಲ್ಯ. ಮತ್ತ ಅವರ ಇಂಪಾದ ಕರ್ಕಶ ದನಿಯೊಳಗ 'ಚಂದಾ ರೇ! ಚಂದಾ ರೇ! ಲಗೂ ಲಗೂ ಚಂದಾ ಕೊಡ್ರೀ. ಬಾರಿಗೋಗಿ ಕುಂದ್ರೋದೈತಿ. ಗಿಚ್ಚಾಗಿ ಕುಡಿಯೋದೈತಿ. ಚಂದಾsss!!!!!!!!!!' ಅಂತ ಅವರ 'ಕ್ರಾಂತಿ ಗೀತೆ' ಕೇಳಿದ ಮಂದಿ, 'ಹಾಳಾಗಿ ಹೋಗ್ರೀ!' ಅಂತ ಪಾಕೇಟಿನ ಮೂಲ್ಯಾಗಿಂದ, ಪೋಲ್ಕಾದ ಸಂದ್ಯಾಗಿಂದ ಇದ್ದಿದ್ದು ಬಿದ್ದಿದ್ದು ರೊಕ್ಕಾ ತೆಗೆದು ಕೊಟ್ಟು ಕೈ ಮುಗಿತಾರ. ಅಷ್ಟು ಹವಾ ಮೈಂಟೈನ್ ಮಾಡ್ಯಾರ ನಮ್ಮ ಡಂ ಡಂ ಡಂಬಾಯಿ ಸರ್.

ನಾ ಏನೋ ಅವರೊಬ್ಬರನ್ನೇ ಭೆಟ್ಟಿ ಆಗಲಿಕ್ಕೆ ಅವರ ಮನಿಗೆ ಹೋದ್ರ ಅಲ್ಲೆ ಬುದ್ಧಿಜೀವಿಗಳ ದೊಡ್ಡ ಗುಂಪೇ ಕೂಡಿತ್ತು. ಟೈಮ್ ನೋಡಿದೆ. ಸಂಜಿ ಬರೋಬ್ಬರಿ ಏಳು ಢಣ್ ಅಂತ ಹೊಡೆದಿತ್ತೋ ಇಲ್ಲೋ. ಇವರ 'ಕೋಸಂಬರಿ', 'ಪಾನಕ' ಸೇವನೆ ಕಾರ್ಯಕ್ರಮ ಬರೋಬ್ಬರಿ ಶುರುವಾಗಿಬಿಟ್ಟಿತ್ತು. ದೊಡ್ಡ ಬರಹಗಾರ ಖುಶ್ವವಂತ್ ಸಿಂಗ್ ದಿನಾ ಸಂಜಿ ಆತು ಅಂದ್ರ ಎಣ್ಣಿ ಹೊಡಿಲಿಕ್ಕೆ ಶುರು ಮಾಡ್ತಿದ್ದರಂತ. ಅವರೇ ಇವರಿಗೆಲ್ಲ ಸ್ಪೂರ್ತಿ ಏನು? ಗೊತ್ತಿಲ್ಲ. ಆದ್ರ ಗಿಚ್ಚಾಗಿ ಎಣ್ಣಿ ಹೊಡೆಯೋ ಈ ಮಂದಿ ಏನು ಮರೆತುಬಿಡ್ತಾರ ಅಂದ್ರ ಸಿಂಗ್ ಸಾಹೇಬರು ರಾತ್ರಿ ಒಂಬತ್ತಕ್ಕ ಎಣ್ಣಿ ನಿಲ್ಲಿಸಿ, ಊಟ ಮಾಡಿ, ಹಾಟ್ ವಾಟರ್ ಬಾಟಲಿ ಅಪ್ಪಿಕೊಂಡು ಮಲ್ಕೊಂಡು ಬಿಡ್ತಿದ್ದರು. ಬೆಳಿಗ್ಗೆ ನಾಲ್ಕಕ್ಕೇ ಎದ್ದು ರಪಾ ರಪಾ ಅಂತ ಪುಟಗಟ್ಟಲೆ ಬರೆದು ಬರೆದು ಒಗಿತಿದ್ದರು. ಈ ನಮ್ಮ ಡಂಬಾಯ ಸಾಹಿತಿ ಮಂದಿದು ಪಾನಕ ಸೇವನೆ ಕಾರ್ಯಕ್ರಮ ಅಂದರೆ ಅದು ಚಿತ್ತಾಗಿ ಬೀಳೋ ತನಕ ನಡೆಯುವಂತಹದ್ದು. ನಿರಂತರ.

ಎಲ್ಲ ದೊಡ್ಡ ಮಂದಿ. ನಾವು ಅವರ ನಡು ಅಳ್ಳಿಗುಂಡಿ. ಮತ್ತ ವಯಸ್ಸಿನಾಗ ನಾ ಭಾಳ ಸಣ್ಣವ. ಅವರಿಗೆಲ್ಲ ಮೊದಲಿಂದ ಹಳೆ ಮಂಗ್ಯಾ ರಮ್ (Old Monk), ಶೇಂಗಾ, ಕೀಮಾ ಬಾಲ್ಸ್ ತಂದು ಕೊಟ್ಟ ಸಪ್ಲೈರ್ ನಾನು. ಈಗೂ ಹಾಂಗೆ. ಅಷ್ಟು ದೊಡ್ಡ ದೊಡ್ಡ ಬುದ್ಧಿಜೀವಿಗಳ ಸೇವೆ ಮಾಡಿದರ ನಮಗೂ ಸ್ವಲ್ಪ ಬುದ್ಧಿ ಬಂದೀತು ಅಂತ ಆಶಾ. ಅವಾಗ ನಮಗ ಗೊತ್ತಿರಲಿಲ್ಲ ನೋಡ್ರೀ ಈ ಬುದ್ಧಿಜೀವಿ ಅನ್ನೋದು ಒಂದು ದೊಡ್ಡ oxymoron ಅಂತ. ಮೈಸೂರ್ ಪಾಕ್ ಒಳಗ ಮೈಸೂರು, ಕಲ್ಲಸಕ್ಕರಿ ಒಳಗ ಕಲ್ಲು ಹ್ಯಾಂಗ ಇರೋದಿಲ್ಲೋ ಹಾಂಗೆ ಬುದ್ಧಿಜೀವಿಗಳಲ್ಲಿ ಬುದ್ಧಿ ಇರುವ ಜೀವಿಗಳು ಭಾಳ ಕಮ್ಮಿ ಅಂತ ಆಮೇಲೆ ತಿಳಿಯಿತು. ಭಾಳ late realization.

ಆವತ್ತು ರಾತ್ರಿ ಎಂಟರ ಹೊತ್ತಿಗೆ ದೊಡ್ಡ ಮಂದಿ ಎಣ್ಣಿ ಖತಂ ಆಗಿ ಬಿಡ್ತು. ಆವತ್ತು ಹರಟಿಗೆ ಒಂದು ನಾಲ್ಕು ಮಂದಿ ಜಾಸ್ತಿನೇ ಬಂದಿದ್ದರು. ಮತ್ತ ಕೆಲವು ಮಂದಿ ಭಾಳ ಲಗೂ ಲಗೂ ಕುಡಿದು ಕೂತುಬಿಟ್ಟರು. ಒಟ್ಟಿನ್ಯಾಗ ಲಗೂನೆ ಒಂದು ದೊಡ್ಡ ಬಾಟಲಿ ಹಳೆ ಮಂಗ್ಯಾ ರಮ್ ಖಾಲಿ ಆಗಿ ಬಿಡ್ತು.

'ಏ ಮರೀ, ಸ್ವಲ್ಪ ಅಲ್ಲೇ ಸಪ್ತಾಪುರ ಕೂಟಿಗೆ ಹೋಗಿ ಇನ್ನೂ ಒಂದಿಷ್ಟು ರಮ್, ಶೇಂಗಾ ತೊಗೊಂಡು, ಅಲ್ಲೇ ಸ್ವಲ್ಪ ಮುಂದ ಹೋಗಿ ಎರಡು ಚಿಲ್ಲಿ ಚಿಕನ್, ಮೂರು ಚಿಕನ್-೬೫ ತಂದು ಬಿಡಪಾ. ತೊಗೋ ರೊಕ್ಕಾ,' ಅಂತ ಹೇಳಿ ಒಂದಿಷ್ಟು ಗಾಂಧಿ ಅಜ್ಜನ ನೋಟುಗಳನ್ನು ಕೈಯಾಗ ಇಟ್ಟರು ನಮ್ಮ ಹಿರಿಯರು.

ಆಗಲೇ ಸುಮಾರು ನಶಾ ಏರಿದ್ದ ಬುದ್ಧಿಜೀವಿಯೊಬ್ಬರು ಏನೋ ಹೇಳಲಿಕ್ಕೆ, ತಮ್ಮದೂ ಇಡಲಿಕ್ಕೆ ಬಂದರು. 'ನಂದು ಎಲ್ಲೆ ಇಡ್ಲಿ?' ಟೈಪಿನ ಗಿರಾಕಿ.

'ಏ ಸುಮ್ಮನಿರ್ರಿ ಸಾಕು. ಅವಂಗ ಗೊತ್ತಿಲ್ಲೇನು? ಎಷ್ಟು ವರ್ಷದಿಂದ ಈ ಸೇವಾ ಮಾಡಾಕತ್ತೈತಿ ಆ ಹುಡಗ? ಹಾಂ?' ಅಂತ ಅವರಿಗೆ ಬೈದಂಗ ಹೇಳಿ, 'ನೀ ಹೋಗಿ ತೊಗೊಂಡು ಬಾರಪಾ ರಾಜಾ,' ಅಂತ ನನಗ ಹೇಳಿ, ತಮ್ಮ ಪಟಪಟಿ (ಮೋಟಾರ್ ಬೈಕ್) ಚಾವಿ ನನ್ನ ಕೈಯಾಗ ಇಟ್ಟರು ಸರ್. ತಾವು ತಮ್ಮ ಚಾರ್ಮಿನಾರ್ ಸಿಗರೇಟ್ ಹಚ್ಚಿ ಸ್ಟೈಲ್ ಒಳಗ ಬಿಟ್ಟರು. ಅಯ್ಯೋ ಹೊಗಿ ಬಿಟ್ಟರು ಅಂತ. ಅಷ್ಟೇ. ಬಾಕಿ ಎಲ್ಲಾ ಅಂದರ ನಾಚಿಗಿ, ಮಾನಾ, ಮರ್ಯಾದಿ, ಎಲ್ಲಾ ಬಿಡಲಿಕ್ಕೆ ಇನ್ನೂ ನಾಕ್ನಾಕು ಪತಿಯಾಲಾ ಪೆಗ್ ಒಳಗ ಹೋಗಬೇಕು. ಅಷ್ಟಾದ ಮ್ಯಾಲೇ ಒಳಸೇರಿದ ಪರಮಾತ್ಮ ಹೊರಗಿನ ಆಟ ಆಡಿಸಲಿಕ್ಕೆ ಶುರು ಮಾಡ್ತಾನ.

ಲಗೂನೆ ಹೋಗಿ ಅವರು ಹೇಳಿದ್ದು ಎಲ್ಲಾ ತಂದು ಕೊಟ್ಟೆ. ಈಗ ಬುದ್ಧಿಜೀವಿಗಳ ಚರ್ಚೆಗೆ ರಂಗು ಏರಲಿಕ್ಕೆ ಶುರು ಆತು. ಎಲ್ಲಾ ರಮ್ ಎಂಬ ದ್ರವದ ಪ್ರಭಾವ. ಈ ಬುದ್ಧಿಜೀವಿ ಮಂದಿ ರಂ ಇಲ್ಲ ಅಂದ್ರ 'ರಂ'ಗು, ರೌನಕ್ ಏನೂ ಇಲ್ಲದೇ ಬರೇ ಗೂಬಿ ಗತೆ ಗೂ! ಗೂ! ಅನಕೋತ್ತ ಕೂತುಬಿಡ್ತಾವ.

ನಾ ಕೇಳೋದೇ ಬ್ಯಾಡ. ಭಗವದ್ಗೀತೆ ವಿಷಯ ಅದಾಗೇ ಬಂತು.

'ಈ ಭಗವದ್ಗೀತೆ ಸುಟ್ಟು ಬಿಡಬೇಕು ನೋಡ್ರೀ!' ಅಂತ ಒಬ್ಬರು ಬುದ್ಧಿಜೀವಿ ಹೇಳಿದರು.

'ಯಾಕ್ರೀ ಸರ್ರಾ?' ಅಂತ ಇನ್ನೊಬ್ಬ ಕಿರಿಯ ಬುದ್ಧಿಜೀವಿ ಕೇಳಿದರು.

'ಏ ಅವಂಗ ಯಾವಾಗಲೂ 'ಹಿತ್ತಲದಾಗ ಹಾಳಿ ಸುಟ್ಟು' ರೂಢಿ. ಅದಕ್ಕೇ ಇರಬೇಕು. ಹೇ! ಹೇ!' ಅಂತ ಇನ್ನೊಬ್ಬರು ಅವರನ್ನು ಕಿಚಾಯಿಸಿದರು.

'ಏ ಭೋಸಡಿಕೆ, ನನ್ನ ಹಾಳಿ ಸುಡೋ ಚಟದ ಸುದ್ದಿ ತೆಗಿ ಬ್ಯಾಡ ನೀ. ನನ್ನ ಹೆಂಡತಿ ಬ್ಯಾರೆ ಒಬ್ಬ ಬುದ್ಧಿಜೀವಿ ಜೋಡಿ ಓಡಿ ಹೋಗ್ಯಾಳ. ಅದಕ್ಕೇ ತಾತ್ಕಾಲಿಕ ಜುಗಾಡ್ ಮಾಡಿಕೊಂಡರೆ ಏನೇನೋ ಅನ್ನೋದ?!' ಅಂದು ಬಿಟ್ಟರು. ಏನು ಭಾಷಾ! ಏನು ಸಂಸ್ಕೃತಿ! ಮಸ್ತ ಮಸ್ತ.

ಇವರ ಹೆಂಡತಿ ಓಡಿ ಹೋಗೋದಕ್ಕೂ, ಇವರು ಹಾಳಿ ಸುಡೋದಕ್ಕೂ ಏನು ಸಂಬಂಧವಯ್ಯಾ? ಅಂತ ನಮಗ ಅಂತೂ ತಿಳಿಲಿಲ್ಲ.

ಮತ್ತ ಮೂಲ ಪ್ರಶ್ನೆಗೆ ಬಂದರು. ಭಗವದ್ಗೀತಾ ಯಾಕ ಸುಡಬೇಕು?

ಕೋಣೆಯೊಳಗೆ ಭಾಳ ಪುಸ್ತಕ ಇದ್ದವು. ತಮ್ಮ ಬುಕ್ ಶೆಲ್ಫ್ ಒಳಗಿಂದ ಒಂದು ದೊಡ್ಡ ಬುಕ್ ತೆಗೆದುಕೊಂಡು ಬಂದರು ನಮ್ಮ ಡಂ ಡಂ ಡಂಬಾಯ ಸಾಹಿತಿ.

ಆ ದೊಡ್ಡ ಪುಸ್ತಕ ಭಗವದ್ಗೀತೆ ಆಗಿತ್ತು!

'ಇದಕ್ಕೆ ಸ್ವಿಚ್ ಇಲ್ಲೇ ಇಲ್ಲ ನೋಡಪಾ!' ಅಂದು ಬಿಟ್ಟರು ನಮ್ಮ ಡಂ ಡಂ ಡಂಬಾಯಿ.

'ಸರ್ರಾ! ಪುಸ್ತಕಕ್ಕೆ ಎಲ್ಲಿಂದ ಸ್ವಿಚ್ ಬರಬೇಕರೀ?' ಅಂತ ಕೇಳಿದೆ.

'ಏ, ಬೆಳಕು ಬರಬೇಕು ಅಂದ್ರ ಸ್ವಿಚ್ ಒತ್ತತಿಯೋ ಇಲ್ಲೋ? ಹಾಂ?' ಅಂದರು. ಭಾಳ ಕಾಂಪ್ಲಿಕೇಟೆಡ್ ಆತು ಇದು.

'ಅಲ್ಲಪಾ ಇವನ, 'ಭಗವದ್ಗೀತೆ ಅಂಧಕಾರವನ್ನು ದೂರ ಮಾಡಿ ಬೆಳಕು ಚೆಲ್ಲುತ್ತದೆ' ಅಂತ ಎಲ್ಲೋ ಓದಿದ್ದೆ. ಆ 'ಬೆಳಕಿನ' ಸಲುವಾಗಿ ಸ್ವಿಚ್ ಹುಡಕಲಿಕತ್ತೇನಿ ನೋಡಪಾ,' ಅಂದ್ರು ಡಂ ಡಂ.

ಹೋಗ್ಗೋ ಇವರ! ತಲಿಗೆ ಏರಿ ಬಿಟ್ಟದ ಎಣ್ಣಿ. ನೆತ್ತಿಗೆ ಏರಿದ ಎಣ್ಣಿ ಹಾಕ್ಕೊಂಡು ಮಿದುಳು ತಿರುವಲಿಕತ್ತದ.

'ಏ ಮಂಗ್ಯಾನಿಕೆ, ಆ ಭಗವದ್ಗೀತೆಯಿಂದ ಬೆಳಕು ಬರವಲ್ಲತು, ಸ್ವಿಚ್ ಸಹಿತ ಇಲ್ಲ ಅಂದ್ರ ಒಂದು ಕೆಲಸ ಮಾಡಬಹುದು ನೋಡಲೇ,' ಅಂತ ಇನ್ನೊಬ್ಬ ಬುದ್ಧಿಜೀವಿ ಐಡಿಯಾ ಕೊಟ್ಟರು. ಏಳಲಿಕ್ಕೆ ನೋಡಿದರು. ಜೋಲಿ ತಪ್ಪಿ ಮತ್ತ ಪೀಠ ಊರಿಬಿಟ್ಟರು. ಖುರ್ಚಿ ಕಿರ್ರ ಅಂತು.

'ಸುಟ್ಟು ಬಿಡ್ರೀ. ಆ ಪುಸ್ತಕಾ ಸುಟ್ಟುಬಿಡ್ರೀ. ಬೆಳಕೂ ಬರತೈತಿ ಮತ್ತ ಈ ಕೆಟ್ಟ ಥಂಡ್ಯಾಗ ಮೈ ಕಾಸಿಕೊಳ್ಳಾಕೂ ಬೇಷ ಆಕ್ಕೈತಿ,' ಅಂತ ಹೇಳಿ ಕ್ಯಾಕಿ ಹೊಡೆದವರೇ, ಬಾಯಾಗ ಬೆಟ್ಟ ಹೆಟ್ಟಿ, ಸೀಟಿ ಹೊಡೆದವರೇ ಮತ್ತೊಂದು ದೊಡ್ಡ ಪೆಗ್ ಹಾಕಿಕೊಂಡರು. ಇವರು ಮತ್ತೊಬ್ಬ ದೊಡ್ಡ ಬುದ್ಧಿಜೀವಿಗಳು. ಸೀಟಿ ಹೊಡಿಲಿಕ್ಕೆ ಬಾಯಾಗ ಬೆಟ್ಟ ಹೆಟ್ಟೋ ಮೊದಲು ಬೆಟ್ಟು ಎಲ್ಲೆ ಹೆಟ್ಟಿಗೊಂಡು ಕೂತಿದ್ದರು ಅಂತ ನಾ ಹೇಳಂಗಿಲ್ಲ.

'ಕರೆಕ್ಟ್ ಕರೆಕ್ಟ್! ಏಕದಂ ಬರೋಬ್ಬರ್! ಭಗವದ್ಗೀತೆಯಿಂದ ಬೆಳಕು ಬರಬೇಕು ಅಂದ್ರ ಅದನ್ನು ಸುಡಲೇಬೇಕು. ನಡೀರಿ. ಹಿತ್ತಲದಾಗ ಹೋಗಿ ಸುಡೋಣ,' ಅಂತ ಫರ್ಮಾನು ಹೊಡಿಸೇಬಿಟ್ಟರು.

ಅಷ್ಟೊತ್ತಿಗೆ ಸಿಕ್ಕಾಪಟ್ಟೆ ಚಿತ್ತಾಗಿದ್ದ ಡಂಬಾಯ ಬುದ್ಧಿಜೀವಿಗಳ ಗುಂಪು ಕೇಕೆ ಹೊಡೆಯುತ್ತ, ಎಣ್ಣೆ ಏಟಿನಿಂದ ಜೋಲಿ ಹೊಡೆಯುತ್ತ, ಭಗವದ್ಗೀತೆಗೆ ಅಣಕು ಶವಯಾತ್ರೆ ಮಾಡುತ್ತ, ರಮ್ ಕುಡಿದ ನಶೆಯಲ್ಲಿ, 'ರಮ್ ನಾಮ್ ಸತ್ಯ ಹೈ! ಹಾಯ್! ಹಾಯ್!' ಅಂತ ವಿಕಾರವಾಗಿ ಕೂಗುತ್ತ ಹಿತ್ತಲಿಗೆ ಬಂತು. ರಾತ್ರಿ ಸಾಕಷ್ಟಾಗಿತ್ತು.

ಭಗವದ್ಗೀತೆಯನ್ನು ನೆಲಕ್ಕೆ ಒಗೆದವರೇ ಅದರ ಮೇಲೆ ಉಳಿದ ಹಳೆ ಮಂಗ್ಯಾ ರಮ್ ದ್ರವ ಸುರಿದರು ಒಬ್ಬರು. ಮತ್ತೊಬ್ಬರು ಮೈಮೇಲೆ ದೆವ್ವ ಬಂದವರಂತೆ ಕೂಗುತ್ತ, ಎತ್ತರ ಪತ್ತರ ಕೈಕಾಲು ಆಡಿಸುತ್ತ, ಕಡ್ಡಿ ಕೊರದೇ ಬಿಟ್ಟರು. ಅದನ್ನು ಹೆಂಡದಿಂದ ನೆಂದಿದ್ದ ಪುಸ್ತಕದ ಮೇಲೆ ಒಗೆದರು. ಭಗ್! ಅಂತ ಬೆಂಕಿ ಹೊತ್ತಿಕೊಂಡಿತು. ಎಲ್ಲ ಕಡೆ ಬೆಳಕೋ ಬೆಳಕು! ದೊಡ್ಡ ಬೆಳಕು. ದಿವ್ಯ ಬೆಳಕು. ಭಗವದ್ಗೀತೆ ಪುಸ್ತಕ ಉರಿದು ಉರಿದು ಕೊಡುತ್ತಿರುವ 'ಜ್ಞಾನದ' ಬೆಳಕು. ದೊಡ್ಡ ಮಂದಿಯ ದೊಡ್ಡ ಜ್ಞಾನವನ್ನು ಬರೋಬ್ಬರಿ ತೋರಿಸುತ್ತಿದ್ದ ಬೆಳಕು.

'ಬಂತ ನೋಡ್ರೋ ನಿಮ್ಮೌರಾ! ಬಂತ ನೋಡ್ರೀ ಬೆಳಕು. ಪುಸ್ತಕ ಸುಟ್ಟ ಕೂಡಲೇ ಬೆಳಕು ಬಂತು. ಇದೇ ಬೆಳಕು ನೋಡ್ರೀ. ಭಗವದ್ಗೀತೆಯೊಳಗೆ ಇರೋ ಬೆಳಕು ಅಂದ್ರೆ ಇದೇ. ಮತ್ತೇನೂ ಇಲ್ಲ. ಜಾಸ್ತಿ ಹೊತ್ತು ಉರಿಯಲಿ ಅಂತನೇ ಅವನೌನ್ ಏಳನೂರು ಚಿಲ್ಲರೆ ಶ್ಲೋಕ ಬರೆದು ದೊಡ್ಡ ಪುಸ್ತಕ ಮಾಡ್ಯಾರ. ಕಮ್ಮಿ ಕಮ್ಮಿ ಅಂದರೂ ಒಂದು ಹದಿನೈದು ನಿಮಿಷ ಉರಿದು, ಬೆಳಕು, ಶಾಖ ಎಲ್ಲ ಕೊಡತೈತಿ. ಹೌದಿಲ್ಲೋ?' ಅಂತ ಕೇಳಿದರು ಬುದ್ಧಿಜೀವಿ ಸರ್. ಬೆಂಕಿಗೆ ಕೈಯೊಡ್ಡಿ ಕಾಸಿಕೊಂಡು, 'ಅಹಹಾ! ಮಸ್ತ ಐತಿ ಹೀಟ್' ಅಂತ ಮುಲುಗಿದರು. ಮತ್ತೊಂದು ಡ್ರಿಂಕ್ ಮಾಡಿಕೊಟ್ಟೆ.

'ಹೌದು ಹೌದು. ಬರೋಬ್ಬರಿ ಹೇಳಿದಿರಿ ಸರ್!' ಅಂತ ಎಲ್ಲರೂ ಕೋರಸ್ ಒಳಗ ಹೊಯ್ಕೊಂಡರು. ಎಲ್ಲರೂ ಬಕೆಟ್ ಕೀಪರುಗಳು.

'ಸರ್ರಾ, ನನಗ ಅನ್ನಿಸೋ ಹಾಂಗ ಈ ಬೆಳಕು ಚೆಲ್ಲತಾವ, ದಾರಿ ತೋರಸ್ತಾವ ಅನ್ನೋ ಪುಸ್ತಕಗಳ ಹಿಂದಿನ ಲಾಜಿಕ್ ಇದೇ ಇರಬೇಕು ನೋಡ್ರೀ. ಇದೇ ರೀತಿ ಬಾಕಿ ಎಲ್ಲ ಬೆಳಕು ಚೆಲ್ಲುವ ಪುಸ್ತಕ ಸಹಿತ ತಂದು, ಗುಡ್ಡೆ ಹಾಕಿ, ಬೆಂಕಿ ಹಚ್ಚಿ, ಸುಟ್ಟು, ಬೆಳಕು, ಶಾಖ ಮಾಡಿಕೊಳ್ಳೋಣ ಏನ್ರೀ ಸರ್ರಾ??' ಅಂತ ಕೇಳಿದ ಒಬ್ಬ ಕಿರಿಯ ಬುದ್ಧಿಜೀವಿ. ಗಡ್ಡ ಕೆರೆದ.

'ಒಳಗ ಹೋಗಿ ಎಲ್ಲಾ ಬುಕ್ ತೊಗೊಂಡು ಬಾರಲೇ ನಿನ್ನಾಪನಾ' ಅಂತ ಆಜ್ಞೆ ಮಾಡಿದ ಹಿರಿಯ ಬುದ್ಧಿಜೀವಿ, 'ಶೆರೆ ಎಲ್ಲೈತ್ರೋ? ನನಗ ಇನ್ನೂ ಬೇಕು. ಎಲ್ಲೈತಿ???' ಅಂತ ಚೀರಾಕ ಶುರು ಮಾಡಿದರು. ಇದ್ದ ಮತ್ತೊಂದು ಹಳೆ ಮಂಗ್ಯಾ ರಮ್ಮಿನ ಖಂಬಾ ಬಾಟಲಿ ತೆಗೆದು ಸುರುವಿದೆ. ಖುಷ್ ಆದರು.

ಅಷ್ಟೊತ್ತಿಗೆ ಒಳಗಿದ್ದ ಎಲ್ಲಾ ವೇದ, ಉಪನಿಷತ್ತು, ಭಗವದ್ಗೀತೆ, ಬ್ರಹ್ಮಸೂತ್ರ, ಪುರಾಣ, ಸ್ಮೃತಿ, ಭಾಷ್ಯ  ಇತ್ಯಾದಿ ಇತ್ಯಾದಿ 'ಬೆಳಕು ಚೆಲ್ಲುವ' ಗ್ರಂಥಗಳೆಲ್ಲ ಹೊರಗೆ ಬಂದು ಒಂದು ದೊಡ್ಡ ರಾಶಿಯಾಗಿತ್ತು.

'ಹಚ್ಚಿರಿ ಬೆಂಕಿ! ಹಚ್ಚಿರೋ ನಿಮ್ಮಾಪ್ರಾ! ಬೆಳಕು ಬರಲಿ! ಬೆಳಕು ಚೆಲ್ಲತಾವ ಅಂತ ಈ ಪುಸ್ತಕಗಳು. ದಾರಿ ತೋರಸ್ತಾವ ಅಂತ. ಹ್ಯಾ! my foot' ಅಂತ ಹೂಂಕರಿಸಿದರು ಡಂ  ಡಂ ಡಂಬಾಯಿ. ಫತ್ವಾ ಹೊರಬಿತ್ತು.

ಕಿರಿಯ ಬುದ್ಧಿಜೀವಿಗಳು ಕೇಕೆ ಹೊಡೆಯುತ್ತ ಕಡ್ಡಿ ಕೊರೆದವರೇ ಬೆಂಕಿ ಹಚ್ಚೇ ಬಿಟ್ಟರು. ಈ ಸಲ ಭಾಳ ದೊಡ್ಡ ಬೆಂಕಿ. ಎಲ್ಲಿ ಒಂದು ನಾಲ್ಕಾರು ಹೆಣ ಕೂಡಿಯೇ ಸುಡುತ್ತಿದ್ದಾರೋ ಅನ್ನುವ ರೀತಿಯಲ್ಲಿ ಬೆಂಕಿ ಜ್ವಾಲೆಗಳು ಮ್ಯಾಲೆ ಜಿಗಿದವು. ಕೆಲವು ಮಂದಿ ಕ್ಯಾಕಿ ಹೊಡಕೋತ್ತ ತಮ್ಮ ಕೈಯಾಗಿನ ಡ್ರಿಂಕ್ಸ್ ಬೆಂಕಿ ಮ್ಯಾಲೆ ಸುರುವಿದ್ದಕ್ಕೆ ಬೆಂಕಿ ಭಗ್!ಭಗ್! ಅಂತ ಎದ್ದೆದ್ದು ಉರಿತು.

ಸಿಕ್ಕಾಪಟ್ಟೆ ಎಣ್ಣೆ ಹೊಡೆದು ಚಿತ್ತಾಗಿದ್ದ ಕಿರಿಯ ಬುದ್ಧಿಜೀವಿಯೊಬ್ಬ ಪ್ಯಾಂಟಿನ ಜಿಪ್ಪು ಕೆಳಗೆ ಇಳಿಸಿಯೇ ಬಿಟ್ಟ. ಬೆಂಕಿ ಹತ್ತಿರ ಹೋಗಿ ರೌಂಡ್ ರೌಂಡ್ ಡಾನ್ಸ್ ಮಾಡಾಕತ್ತಿಬಿಟ್ಟ! ಎಲ್ಲರಿಗೂ ಘಾಬರಿ.

'ಏನ ಮಾಡಾಕತ್ತಿಯೋ???? ಏ! ಏ!' ಅಂತ ಯಾರೋ ಒಬ್ಬರು ಒದರಿದರು.

ಜಿಪ್ಪು ಬಿಚ್ಚಿದವನ ಮನದಿಂಗಿತ ಅರಿತ ಯಾರೋ ಹೇಳಿದರು, 'ಲೇ ಮಂಗ್ಯಾನಿಕೆ, ಇದು ಹೋಳಿ ಹುಣ್ಣಿವಿ ಅಲ್ಲಲೇ. ನಮಗ ಗೊತ್ತದ ನೀ ಏನು ಅಂದುಕೊಂಡಿ ಅಂತ. ಇದನ್ನೇನು ಸುಡುತ್ತಿರುವ ಕಾಮಣ್ಣನ ಮ್ಯಾಲೆ ಉಚ್ಚಿ ಹೊಯ್ದಾಂಗ ಅಂತ ಮಾಡಿ ಏನಲೇ? ಜಿಪ್ ಹಾಕ್ಕೋ!' ಅಂತ ಬೈದು, ಆ ಬುದ್ಧಿಜೀವಿಯ ಬುದ್ಧಿಮತ್ತೆ ಬಗ್ಗೆ ಪರೋಕ್ಷವಾಗಿ ಹೇಳಿದರು. ಆವಾಗ ಅವಂಗ ಎಚ್ಚರಾಗಿ, ಅದು ಕಾಮ ದಹನ ಅಲ್ಲ ಅಂತ ಅರಿವಾಗಿ, ಈಕಡೆ ಬಂದ. ಜಿಪ್ ಮ್ಯಾಲೆ ಎಳ್ಕೋಳೋದನ್ನ ಮಾತ್ರ ಮರೆತಿದ್ದ. ನಾಳೆ ಯಾರರ, 'ಸರ್ರಾ, ನಿಮ್ಮ ಅಂಗಡಿ ಓಪನ್ ಐತಿ ನೋಡ್ರೀ!' ಅಂತ ಹೇಳಿದಾಗಲೇ ಅವನಿಗೆ ಅರ್ಥ ಆಗೋದು. ಈ ಪುಣ್ಯಾತ್ಮ ಲೇಡೀಸ್ ಕಾಲೇಜ್ ಮಾಸ್ತರ್ ಬ್ಯಾರೆ. ಶಿವನೇ ಶಂಭುಲಿಂಗ.

ಬೆಂಕಿ ಹತ್ತಿ ಉರಿಯುತ್ತಿತ್ತು. ಎಣ್ಣೆ ಹೊಡೆದವರ ಮೂಡು ಸಿಕ್ಕಾಪಟ್ಟೆ ರಂಗೇರುತ್ತಿತ್ತು. ಯಾರೋ ಒಬ್ಬವ ಮೊಬೈಲಿನಲ್ಲೇ ಖತರ್ನಾಕ್ ಹಾಡು ಹಚ್ಚಿಬಿಟ್ಟ.

'ಕಾಡ ಕುದರಿ ಓಡಿ ಬಂದಿತ್ತ!! ಕಾಡ ಕುದರಿ ಓಡಿ ಬಂದಿತ್ತ!!'



ಒಳ್ಳೆ ಮಸ್ತ ಹಾಡು. ಮಾಹೋಲ್ ಮಸ್ತ ಇತ್ತು. ಎಣ್ಣಿ ಹೊಡೆದು ರಂಗೇರಿದ ಮಂದಿ. ಮಧ್ಯದಲ್ಲಿ 'ಬೆಳಕು ಚೆಲ್ಲುವ' ಪುಸ್ತಕಗಳನ್ನು ಸುಟ್ಟು ಮಾಡಿಕೊಂಡಿರೋ ದೊಡ್ಡ ಕ್ಯಾಂಪ್ ಫೈರ್ ಅಂತಹ ಬೆಂಕಿ. ಡಾನ್ಸ್ ಹೊಡಿಲಿಕ್ಕೆ ಪರ್ಫೆಕ್ಟ್! ಝಕ್ಕ ನಕ್ಕ! ಡಂಕ ನಕ್ಕ! 

ಆ ಹಾಡು ಶುರುವಾಗಿದ್ದೇ ಆಗಿದ್ದು. ಎಲ್ಲ ಬುದ್ಧಿಜೀವಿಗಳು ಬೆಂಕಿ ಸುತ್ತ ಕಾಡು ಮಂದಿ ಹಾಗೆ ಜಿಗದು ಜಿಗದು ಡಾನ್ಸ್ ಹೊಡಿಲಿಕ್ಕೆ ಶುರು ಮಾಡಿಬಿಟ್ಟರು. ನಮ್ಮ ಡಂ ಡಂ ಡಂಬಾಯಿ ಹಲಗಿ ಬಾರಿಸಲಿಕ್ಕೆ ಶುರು ಮಾಡಿಬಿಟ್ಟರು. ಜೊತೆಗೆ ಕೆಟ್ಟಾ ಕೊಳಕ ಹಾಡುಗಳು. ಅವರದ್ದೇ ರಚನೆಗಳು. ಎಷ್ಟು ಹೊಲಸಿದ್ದವು ಅಂದ್ರ ಅವು ಪ್ರಕಟ ಆಗೋದು ದೂರ ಉಳಿತು. ಕೇಳಿದವರ ಕಿವಿ ಸೀದು ಹೋಗಬೇಕು. ಹಾಂಗ ಇದ್ದವು.

ಹೀಂಗ ಏನೇನೋ ಮಾಡಿ, ಭಗವದ್ಗೀತೆ ಬೆಳಕು ಹೇಗೆ ಚೆಲ್ಲುತ್ತದೆ, ಅನ್ನುವದಕ್ಕೆ ಒಂದು ಹೊಸ ಅರ್ಥ ತಂದುಕೊಂಡಿದ್ದರು ಬುದ್ಧಿಜೀವಿಗಳು. ಓದಿ, ಅರ್ಥ ಮಾಡಿಕೊಳ್ಳಬೇಕು ಅನ್ನುವವರಿಗೆ ಜ್ಞಾನದ ಬೆಳಕು. ಬ್ಯಾಡ ಅಂದವರಿಗೆ ಈ ತರಹದ ಬೆಂಕಿ ಬೆಳಕು. ಸಂಗ್ತಿಗೆ ಬಿಸಿ ಬಿಸಿ ಶಾಖ ಫ್ರೀ. ಬೇಕಾರ ಅದರಾಗ ಗೋಂಜ್ವಾಳ ಸುಟ್ಟುಕೊಂಡು, ಮ್ಯಾಲಿಂದ ಉಪ್ಪಿನಕಾಯಿ ಹಚ್ಚಿ, ರುಚಿ ರುಚಿ ಮಾಡಿಕೊಂಡು ತಿನ್ನಬಹದು. ರಮ್ ಜೋಡಿ ಮಸ್ತ ಆಗ್ತದ.

ಹ್ಯಾಂಗ ಬೇಕು ಹಾಂಗ ನಡೀಲಿ. ಹೀಂಗೇ ಮಾಡ್ರೀ, ಹಾಂಗೇ ಮಾಡ್ರೀ ಅಂತ ಜುಲ್ಮಿ ಇಲ್ಲವೇ ಇಲ್ಲ. ಓದ್ಯಾರ ಓದ್ರೀ. ಸುಟ್ಟಾರ ಸುಡ್ರೀ. ಎಲ್ಲಾ ಓಕೆ. ಶಿವನೇ ಶಂಭುಲಿಂಗ!

4 comments:

ravgo said...

Looking for English version. 😄

Mahesh Hegade said...

Thanks Ravi. This was a satire on a recent call by certain intellectuals to burn the Bhagavadgita as it did not treat everyone same.

When I manage to write some real spiritual article, let' see if I can write in English too.!

Tritatva Mallahatti said...


Emerging trends with ಬಹು ಪತಿ/ಪತ್ನಿ ವಲ್ಲಭ groups!

Basatteppa Banavi said...


Parties at Gowadi press!