ಸಚಿನ್ ತೆಂಡೂಲ್ಕರ್ ಜೊತೆ ಮಿತ್ರ ಗಿರೀಶ್ ಕಾಮತ್ |
ಪುರಾತನ ಆತ್ಮೀಯ ಮಿತ್ರ ಗಿರೀಶ್ ಕಾಮತ್ ಬೆಂಗಳೂರಿನಲ್ಲಿ ರಸ್ತೆ ಅಪಘಾತವೊಂದರಲ್ಲಿ ನಿಧನನಾಗಿದ್ದಾನೆ. ಅವನ ನೆನಪಲ್ಲಿ ಈ ಲೇಖನ.
ಇಸ್ವೀ ೧೯೮೫, ನವೆಂಬರ್ ಅಥವಾ ಡಿಸೆಂಬರ್ ಅಂತ ನೆನಪಿದೆ. ನಾವು ಎಂಟನೆಯ ಕ್ಲಾಸ್. ಆವತ್ತು ಶನಿವಾರ. ಶಾಲೆ ಮುಂಜಾನೆ ಅರ್ಧ ದಿವಸ ಅಷ್ಟೇ. ಹನ್ನೊಂದೂವರೆ ಹೊತ್ತಿಗೆ ಶಾಲೆ ಬಿಟ್ಟಿತು. ಮಧ್ಯಾನದಿಂದ ಹಿಡಿದು ಸಂಜೆಯಾಗುವ ತನಕ ಗಿಚ್ಚಾಗಿ ಬ್ಯಾಡ್ಮಿಂಟನ್ ಆಡಬೇಕು. ಅದು ನಮ್ಮ ಆವತ್ತಿನ ಪ್ಲಾನ್. ಹಾಗಂತ ದೋಸ್ತ ಲಂಬ್ಯಾ ಉರ್ಫ್ ಸಂದೀಪ್ ಪಾಟೀಲನ ಜೊತೆ ಮಾತಾಡಿ, ಎಲ್ಲಿ ನಮ್ಮ ಭಟ್ಟರ ಶಾಲೆ ಕೋರ್ಟಿನಲ್ಲಿ ಆಡುವದೋ, KCD ಕೋರ್ಟಿನಲ್ಲಿ ಆಡುವದೋ ಅಥವಾ KUD ಜಿಮಕಾನಾ ಕೋರ್ಟಿನಲ್ಲಿ ಆಡುವದೋ ಅಂತ ಕೇಳೋಣ ಅಂತ, 'ಲೇ, ಲಂಬ್ಯಾ, ಇವತ್ತ ಮಧ್ಯಾನ ಎಲ್ಲಲೇ???' ಅನ್ನುವಷ್ಟರಲ್ಲಿ ಲಂಬ್ಯಾ ಬಾಂಬ್ ಹಾಕಿಬಿಟ್ಟ. 'ಮಹೇಶಾ, ಇವತ್ತು ಮಧ್ಯಾನ ಬಾಸೆಲ್ ಮಿಷನ್ ಸಾಲಿ ಜೋಡಿ ಕ್ರಿಕೆಟ್ ಮ್ಯಾಚ್ ಕೊಟ್ಟುಬಿಟ್ಟೇನಿ. ನೀನೂ ಬಂದುಬಿಡು. ಲಗೂನೆ ಹೋಗಿ ಊಟ ಮುಗಿಸಿ ಬಂದೇಬಿಡು.......' ಅಂತ ಹೇಳುತ್ತ ಉಳಿದ ಹತ್ತು ಆಟಗಾರರ ಜುಗಾಡ್ ಮಾಡುವತ್ತ ಗಮನ ಹರಿಸಿದ. ಆಗ ಅರ್ಥವಾಯಿತು. ಈ ಪುಣ್ಯಾತ್ಮ ಲಂಬ್ಯಾ ಯಾವಾಗಲೋ ಮ್ಯಾಚ್ ಕೊಟ್ಟುಬಿಟ್ಟಿದ್ದಾನೆ. ಕಮಿಟ್ ಆಗಿಬಿಟ್ಟಿದ್ದಾನೆ. ನಂತರ ಫುಲ್ ಮರೆತುಬಿಟ್ಟಿದ್ದಾನೆ. ಶನಿವಾರ ಮಧ್ಯಾನ ಶಾಲೆ ಗೇಟಿನಲ್ಲಿ ಬಾಸೆಲ್ ಮಿಷನ್ ಶಾಲೆಯ ಟೀಮು ಪೂರ್ತಿ ಸನ್ನದ್ಧವಾಗಿ ಪ್ರತ್ಯಕ್ಷವಾದಾಗಲೇ ಇವನಿಗೆ ಮ್ಯಾಚಿನ ನೆನಪಾಗಿದೆ. ಹೇಳಿ ಕೇಳಿ ಅವನೇ ಕ್ಯಾಪ್ಟನ್ ಮತ್ತು ಟಾಪ್ ಪ್ಲೇಯರ್. ಅದಕ್ಕೇ ತರಾತುರಿಯಲ್ಲಿ ಒಂದು ಟೀಮ್ ಒಟ್ಟು ಕೂಡಿಸಲು ಓಡಾಡುತ್ತಿದ್ದಾನೆ, ಒದ್ದಾಡುತ್ತಿದ್ದಾನೆ. ಹಾಗಾಗಿ ಬ್ಯಾಟ್ ಹಿಡಿಯಲು, ಬಾಲ್ ಒಗೆಯಲು ಬಂದ ಎಲ್ಲರಿಗೂ 'ಊಟ ಮಾಡಿ ಬಂದುಬಿಡ್ರೀ,' ಅಂತ ಆಫರ್ ಕೊಡುತ್ತ, ಆಫರ್ ಕೊಟ್ಟ ಇಪ್ಪತ್ತು, ಮೂವತ್ತು ಮಂದಿಯಲ್ಲಿ ಕಮ್ಮಿ ಕಮ್ಮಿ ಎಂಟೊಂಬತ್ತು ಜನ ಬಂದರೂ ಸಾಕು. 'ನಮ್ಮ ಕಡೆ ಹನ್ನೊಂದು ಮಂದಿ ಆಗಿಲ್ಲಲೇ ರಾಜ್ಯಾ. ಎಂಟ ಮಂದಿ ಅದೇವಿ. ಸಾಕು. ಆಡೋಣ ನಡ್ರೀ,' ಅಂತ ಎದುರು ಪಾರ್ಟಿಯ ಕ್ಯಾಪ್ಟನ್ ರಾಜೇಶ್ ಪಾಟೀಲ್ ಉರ್ಫ್ ಮಾಳಮಡ್ಡಿಯ ಗಿಡ್ಡ ರಾಜ್ಯಾನ ಜೊತೆಗೆ ಏನೋ ಒಂದು ತರಹದ ಮಾಂಡವಲಿ ಮಾಡುವ ಸ್ಕೆಚ್ ಹಾಕಿದ್ದ ಅಂತ ಕಾಣುತ್ತದೆ ನಮ್ಮ ಕ್ಯಾಪ್ಟನ್ ಲಂಬ್ಯಾ. ನಮ್ಮ ದೋಸ್ತ ಕ್ಯಾಪ್ಟನ್ ಲಂಬ್ಯಾ ಅಂದರೆ ಹಿಂಗೇ!
ಅದೊಂದು ಆರು ತಿಂಗಳು ಕ್ರಿಕೆಟ್ ಎಲ್ಲರಿಗೂ ಮರ್ತೇ ಹೋಗಿತ್ತು. ಆಗ ಎಲ್ಲರಿಗೂ ಬ್ಯಾಡ್ಮಿಂಟನ್ ಹುಚ್ಚು. ಹುಡುಗರು, ಹುಡುಗಿಯರು ಎಲ್ಲರೂ ಗಿಚ್ಚಾಗಿ ಬ್ಯಾಡ್ಮಿಂಟನ್ ಆಡಿದವರೇ. ಮಾಸ್ತರರು, ಮಾಸ್ತರಣಿಯರು ಸಹ ತಲಬು ತಡೆಯಲಾಗದೇ ನಮ್ಮ ಹತ್ತಿರ ರಾಕೆಟ್, ಶಟಲ್ ಕಾಕ್ ತೆಗೆದುಕೊಂಡು ಆಡಿದ್ದೇ ಆಡಿದ್ದು. ಮಾಸ್ತರುಗಳು ಪ್ಯಾಂಟ್ ಎತ್ತಿ, ಮಡಚಿ ಹಾಪ್ ಪ್ಯಾಂಟ್ ಮಾಡ್ಕೊಂಡು ಆಡಿದರೆ, ಮಾಸ್ತರಣಿಯರು ಸೀರೆ ಎತ್ತಿ ಸೊಂಟಕ್ಕೆ ಸಿಗಿಸಿಕೊಂಡು ಆಡಿದ್ದೇ ಆಡಿದ್ದು. ಹೀಗೆ ಬ್ಯಾಡ್ಮಿಂಟನ್ ಗುಂಗಿನಲ್ಲಿ ಕ್ರಿಕೆಟ್ ಅನ್ನುವದು ಮರ್ತೇ ಹೋಗಿದ್ದಾಗ ಒಂದು ಕ್ರಿಕೆಟ್ ಮ್ಯಾಚ್ ಅಚಾನಕ್ ಬಂದುಬಿಟ್ಟಿದೆ. ಪ್ರಾಕ್ಟೀಸ್ ಇಲ್ಲ. ಆದರೂ ಆಡಬೇಕು. ಕ್ಯಾಪ್ಟನ್ ಲಂಬ್ಯಾ ಮಾತು ಕೊಟ್ಟುಬಿಟ್ಟಿದ್ದಾನೆ. ಕೊಟ್ಟ ಮಾತು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾನೆ. ವಿರುದ್ಧ ಟೀಂ ಬಾಗಿಲಲ್ಲಿ ಬಂದು ನಿಂತಿದೆ. ಈಗ ಶಸ್ತ್ರ ತ್ಯಜಿಸಿ ಹೋಗಲಿಕ್ಕೆ ನಾವು ಹೇಳಿಕೇಳಿ ಕೆ.ಇ. ಬೋರ್ಡ್ ಶಾಲೆ ವಿದ್ಯಾರ್ಥಿಗಳು. ಅಂದರೆ ಏನು? ನಮ್ಮ ಹೈಸಿಯೆತ್ತೇನು? ನಮ್ಮ ಕ್ರಿಕೆಟ್ ಕಾಬೀಲಿಯತ್ತೇನು? ಬಂದದ್ದೆಲ್ಲ ಬರಲಿ ಅಂತ ಮ್ಯಾಚ್ ಆಡಲು ರೆಡಿ ಆದೆವು. ಗಡಿಬಿಡಿಯಲ್ಲಿ ಮನೆ ಕಡೆ ಹೊರಟೆವು. ಊಟ ಮಾಡಿ ಲಗೂನೆ ವಾಪಸ್ ಬರಬೇಕಿತ್ತು.
ಸರಿ ಮನೆಗೆ ಬಂದೆ. ನೋಡಿದರೆ ಮನೆಯಲ್ಲಿ ದುಬೈನಿಂದ ಹಿಂತಿರುಗಿದ ಬಂಧುಗಳು. ಅವರ ಅಚಾನಕ್ ವಿಸಿಟ್. ಹಾಗಾಗಿ ಅಮ್ಮನ ಅಡಿಗೆ ಸ್ವಲ್ಪ ತಡ. ನಮಗೋ ಲಗೂನೆ ಒಂದಿಷ್ಟು ಮುಕ್ಕಿ, ಕಬಳಿಸಿ, ಕಿಟ್ ಎತ್ತಿಕೊಂಡು, ವಾಪಸ್ ಶಾಲೆ ಮೈದಾನಕ್ಕೆ ಓಡಬೇಕು. ಇಲ್ಲಿ ನೋಡಿದರೆ ಅಮ್ಮ ಬಂದ ನೆಂಟರ ಖಾತಿರ್ದಾರಿ ಮಾಡುತ್ತ, ಜೊತೆಗೆ ಸ್ವಲ್ಪ ವಿಶೇಷ ಅನ್ನಿಸುವಂತಹ elaborate ಅಡಿಗೆಯಲ್ಲಿ ನಿರತಳು. 'ಏ, ಲಗೂ ಊಟಕ್ಕ ಹಾಕ. ನನಗ ಮ್ಯಾಚ್ ಅದ. ಲಗೂ, ಲಗೂ...... ಟೈಮ್ ಇಲ್ಲ. ಲಗೂ ಊಟಕ್ಕ ಹಾಕಬೇ!' ಅಂತ ಅಮ್ಮನಿಗೆ ಒಂದು ಆವಾಜ್ ಹಾಕಿ, ಬಂದ ನೆಂಟರಿಗೊಂದು ನಮಸ್ಕಾರ, ದುಬೈನಿಂದ ಗಿಫ್ಟ್ ತಂದುಕೊಟ್ಟಿದ್ದಕ್ಕೆ ಒಂದು ಥ್ಯಾಂಕ್ಸ್ ಹೇಳಿ ಬಟ್ಟೆ ಬದಲಾಯಿಸಲು ಹೋದೆ. ಯುನಿಫಾರ್ಮ್ ಬಿಳಿ ಅಂಗಿಯಂತೂ ಇತ್ತು. ಖಾಕಿ ಪ್ಯಾಂಟ್ ಬಿಚ್ಚಿ ಬಿಳಿಯ ಪ್ಯಾಂಟ್ ಏರಿಸಿಕೊಂಡು ಹೋದರೆ ಆಯಿತು. ಅದೆಲ್ಲ ಬೇಕು ಅಂತ ಏನೂ ಇರಲಿಲ್ಲ. ಏನೋ ಮಹಾ ಕ್ರಿಕೆಟ್ ಆಡುವವರಂತೆ ಹೊಲಿಸಿದ ಬಿಳಿಯ ಪ್ಯಾಂಟ್ ಇದ್ದಾಗ ಹಾಕಿಕೊಳ್ಳಲಿಕ್ಕೆ ಏನು ಧಾಡಿ? ಅಂತ ನಮ್ಮ ವಿಚಾರ. ಬಾಸೆಲ್ ಮಿಷನ್ ಶಾಲೆ ಮಂದಿಗಂತೂ ಶನಿವಾರ ವೈಟ್ ಡ್ರೆಸ್ ದಿವಸ. ಹಾಗಾಗಿ ಅವರೆಲ್ಲ ಬರೋಬ್ಬರಿ ವೈಟ್ ಡ್ರೆಸ್ ಹಾಕಿಕೊಂಡೇ ಬಂದಿದ್ದರು. ನಾವೇ ಭಟ್ಟರ ಶಾಲೆ ಮಂದಿ, ಧೋತ್ರ ಒಂದು ಉಟ್ಟುಕೊಂಡು ಕ್ರಿಕೆಟ್ ಆಡದಿದ್ದರೆ ಅದೇ ದೊಡ್ಡ ಮಾತು. ಬಾಕಿ ಎಲ್ಲಾ ಡ್ರೆಸ್ ಓಕೆ.
'ಏ! ಆತೇನss ಊಟಕ್ಕ? ನನಗ ಹೋಗಬೇಕು. ಎಲ್ಲೆ ಊಟ??? ಲಗೂ, ಲಗೂ!' ಅಂತ ಮತ್ತ ನನ್ನ ಗಡಿಬಿಡಿ. 'ಏನಿದ್ದಿಯೋ ನೀನು? ಮೊದಲು ಹೇಳಂಗಿಲ್ಲ ಬಿಡಂಗಿಲ್ಲ. ಒಮ್ಮೆಲೇ ಬಂದು ಹಿಂಗ ಹುಚ್ಚರ ಗತೆ ಗಡಿಬಿಡಿ ಮಾಡ್ತಿ. ಸ್ವಲ್ಪ ತಡಿ. ನನಗ ಭಾಳ ಕೆಲಸ ಅದ,' ಅಂತ ಅಮ್ಮನ ವಿವರಣೆ. ಅದೆಲ್ಲ ನಮಗೆ ತಿಳಿದರೆ ತಾನೇ? ನಮ್ಮ ಗಡಿಬಿಡಿ ಮಾಡುವದು, ಅಮ್ಮನನ್ನು ಕಾಡುವದು ನಡದೇ ಇತ್ತು. ಕಾಟ ತಡಿಯಲಾಗದ ಅಮ್ಮ, 'ಏನು ಜೀವಾ ತಿಂತಿ ಮಾರಾಯಾ? ಹೂಂ. ಕೈಕಾಲ್ಮುಖ ಆದರೂ ತೊಳ್ಕೊಂಡು ಬಂದು ಕೂಡ್ತಿಯೋ ಅಥವಾ........? ಜೀವಾ ತಿಂದು ತಿಂದು ಹಾಕ್ತಾನ!!!' ಅನ್ನುತ್ತ ಅಮ್ಮ ತುರ್ತಿನಲ್ಲಿ ನಮ್ಮ ಊಟಕ್ಕೆ ಏನೋ ಒಂದು ಜುಗಾಡ್ ಮಾಡಲು ಮುಂದಾದರು. ನಮಗೂ ತಿಮಿರು. ಸುಮ್ಮನಿರಲಿಲ್ಲ. 'ನಿನ್ನ ಜೀವಾ ತಿಂದರ ಹೊಟ್ಟಿ ಏನೂ ತುಂಬಂಗಿಲ್ಲ. ಈಗ ಬಂದೆ. ಲಗೂ ಲಗೂ ರೆಡಿ ಮಾಡು,' ಅಂತ ಹೇಳಿ ಹೊರಟೆ. ಅದು ಬಿಡಿ ಅಮ್ಮ ಮಗನ ಪ್ರತಿದಿನದ ಜಗಳ. ಅದು ಎಂದೂ ಮುಗಿಯದ ಪ್ರೀತಿಯ ಜಗಳ ಅಂತ ಅಮ್ಮನ ಮಾತು. ಏನೋ ಗೊತ್ತಿಲ್ಲ.
ಕೈಕಾಲ್ಮುಖ ಎಲ್ಲ ತಣ್ಣಗೆ ಮಾಡಿಕೊಂಡು ಬಂದು ಕೂಡುವ ಹೊತ್ತಿಗೆ ನಾಲ್ಕು ಬಿಸಿ ಬಿಸಿ ಚಪಾತಿ, ಗಡಿಬಿಡಿಯಲ್ಲಿ ಹೆಂಗೋ ಮಾಡಿಮುಗಿಸಿದ್ದ ಒಂದು ಪಲ್ಯಾ ಎಲ್ಲ ತಯಾರಿತ್ತು. ಮೇಲಿಂದ ಒಂದಿಷ್ಟು ಖರೇ ತುಪ್ಪ. ಮೇಡ್ ಇನ್ ಸಿರ್ಸಿ. ನಮ್ಮ ಅಜ್ಜಿ ಉರ್ಫ್ ಅಮ್ಮನ ಅಮ್ಮ ಮುದ್ದು ಮಮ್ಮಗನಿಗೆ ಅಂತ ಮಾಡಿ ಕಳಿಸುತ್ತಿದ್ದರು. ಇಷ್ಟೆಲ್ಲ ಇದ್ದರೂ ನಮಗೆ ಅಮ್ಮನ ಜೀವ ಇನ್ನೊಂದಿಷ್ಟು ತಿನ್ನಲಿಲ್ಲ ಅಂದರೆ ಸಮಾಧಾನವಿಲ್ಲ. 'ಏನು ದರಿದ್ರ ಪಲ್ಯಾ ಇದು? ಹೋಗಿ ಹೋಗಿ ಬೆಂಡಿಕಾಯಿ ಪಲ್ಯಾ ಮಾಡಿ. ಸವತಿಕಾಯಿದು ಮಾಡಲಿಕ್ಕೆ ಏನು ಧಾಡಿಯಾಗಿತ್ತು ನಿನಗ?' ಅಂತ ಇಲ್ಲದ ಕಿರಿಕ್ ನಮ್ಮದು. ಸವತೆಕಾಯಿಯದೇ ಮಾಡಿದ್ದರೆ ಬದನೆಕಾಯಿದು ಯಾಕೆ ಮಾಡಿಲ್ಲ ಅಂತ ಕೇಳುತ್ತಿದ್ದೆ ಅನ್ನುವದರಲ್ಲಿ ಯಾರಿಗೂ ಡೌಟ್ ಇಲ್ಲ. ಅಲ್ಲಿಗೆ ಅಮ್ಮನ ಆವತ್ತಿನ ಸಹನೆಯ ಲಿಮಿಟ್ ಮುಟ್ಟಿತ್ತು. 'ನೋಡು, ಬೇಕಾದ್ರ ತಿನ್ನು. ಇಲ್ಲಾ ಬಿಡು. ನನಗ ಭಾಳ ಕೆಲಸ ಅದ,' ಅಂತ ಹೇಳಿದ ಅಮ್ಮನ ಮಾತು ಆಖ್ರೀ ಫೈಸ್ಲಾ ಅಂತ ಗೊತ್ತಾಯಿತು. ಇನ್ನು ನಾವು ಏನೇ ಮನ್ಮಾನಿ ಮಾಡುತ್ತಾ ಕುಳಿತರೂ ಯಾರೂ ಏನೂ ಭಾವ ಕೊಡುವದಿಲ್ಲ ಅಂತ ತಿಳಿದು, ಅದರೂ ಇನ್ನಷ್ಟು ಸೊಕ್ಕು ಹಾರಿಸಿಯೇ ಊಟ ಮಾಡಬೇಕು ಅಂತ ಹೇಳಿ, 'ದರಿದ್ರ ಪಲ್ಯಾ ಮಾಡಿ. ಸಕ್ಕರಿ ಪುಡಿಯಾದರೂ ಕೊಡು ಇತ್ಲಾಗ. ನಿನ್ನ ಪಲ್ಯಾ ನೀನೇ ತಿಂದ್ಕೋ,' ಅಂತ ಅವಾಜ್ ಹಾಕಿ, ಅಮ್ಮ ತಲೆ ಚಚ್ಚಿಕೊಳ್ಳುತ್ತ ಕೊಟ್ಟ ಸಕ್ಕರೆ ಪುಡಿಯಲ್ಲಿ ಪಾವಶೇರ್ ಸಕ್ಕರೆ ಪುಡಿಗೆ ತುಪ್ಪ ಬರೋಬ್ಬರಿ ಮಿಕ್ಸ್ ಮಾಡಿ, ನಾಕು ಚಪಾತಿ ಗುಳುಂ ಮಾಡುವ ಹೊತ್ತಿಗೆ ಅಮ್ಮ ಪಾವ್ ಲೀಟರ್ ಬಿಸಿ ಹಾಲು ತಂದು ಇಟ್ಟಳು. 'ಪೂರ್ತಿ ಊಟಂತೂ ಮಾಡಿಲ್ಲ. ಒಂದಿಷ್ಟು ಹಾಲು ಕುಡಿದು ಹೋಗು. ಏನು ಮಾಡತಿಯೋ, ಎಲ್ಲೆ ಹೋಗತಿಯೋ ಏನೋ??' ಅಂದಳು. ಅಮ್ಮನ ಕಾಳಜಿ. ಎಲ್ಲ ತಿಂದು, ಕುಡಿದು, 'ವಾತಾಪಿ ಜೀರ್ಣೋ ಭವ' ಅನ್ನುವ ಮಾದರಿಯಲ್ಲಿ ಎದ್ದು ಬಂದಾಯಿತು. ಕ್ರಿಕೆಟ್ ಕಿಟ್ ರೆಡಿ ಇತ್ತು. ನಡ್ರೀ ಮತ್ತ ಶಾಲೆ ಗ್ರೌಂಡಿಗೆ.
ಇಷ್ಟೆಲ್ಲಾ ಗಡಿಬಿಡಿಯಲ್ಲಿ ಊಟ ಮುಗಿಸಿ, ಮ್ಯಾಚ್ ಇದೆ ಅಂತ ಓಡಿ ಬಂದರೆ ನಮ್ಮ ಟೀಮ್ ರೆಡಿ ಆಗಿರಲೇ ಇಲ್ಲ. ಗ್ರೌಂಡಿನಲ್ಲಿ ಕ್ಯಾಪ್ಟನ್ ಲಂಬ್ಯಾ ಇದ್ದ. ಮತ್ತೊಂದು ನಾಲ್ಕಾರು ಜನ ಇದ್ದರು. ಹನ್ನೊಂದು ಜನರ ತಂಡಕ್ಕೆ ಕಮ್ಮಿ ಕಮ್ಮಿ ಅಂದರೂ ಇನ್ನೂ ನಾಲ್ಕಾರು ಜನ ಬೇಕಾಗಿತ್ತು. ಟೈಮ್ ಸುಮಾರು ಮಧ್ಯಾನ ಒಂದೂವರೆ. ಎದುರಾಳಿ ಪಾರ್ಟಿ ಬಾಸೆಲ್ ಮಿಷನ್ ಜನರ ಮುಖ ನೋಡಿದರೆ ನಮ್ಮ ಬಗ್ಗೆ ಒಂದು contemptuous ಲುಕ್. 'ಏನು ದರಿದ್ರ ಮಂದಿಲೇ ಈ ಕೆ ಬೋರ್ಡ್ ಸಾಲಿ ಮಂದಿ? ನಾವು ಬಂದು ಕೂತು ದೀಡ ತಾಸ್ ಮ್ಯಾಲೆ ಆತು. ಇನ್ನೂ ಇವರ ಟೀಮ್ ರೆಡಿ ಆಗವಲ್ಲತು,' ಅನ್ನುವ ಲುಕ್ ಅವರ ಮುಖದ ಮೇಲೆ.
ಮತ್ತೊಂದು ಹತ್ತು ಹದಿನೈದು ನಿಮಿಷ ಕಾದ ನಂತರ ನಮ್ಮ ಇನ್ನೂ ಇಬ್ಬರು ಆಟಗಾರರು ಬಂದರು. ಆಗ ಸುಮಾರು ಒಂಬತ್ತು ಜನ ಆದಂಗೆ ಆಯಿತು. ಅಷ್ಟು ಸಾಕು ಅಂತ ಹೇಳಿ ಟಾಸ್ ಮಾಡಲು ನಮ್ಮ ಕ್ಯಾಪ್ಟನ್ ಲಂಬ್ಯಾ ಮತ್ತು ಅವರ ಕ್ಯಾಪ್ಟನ್ ಗಿಡ್ಡ ರಾಜ್ಯಾ ಹೋದರು. ಯಾರು ಟಾಸ್ ಗೆದ್ದರೋ ಗೊತ್ತಿಲ್ಲ. ಒಟ್ಟಿನಲ್ಲಿ ನಮಗೆ ಬ್ಯಾಟಿಂಗ್ ಬಂತು. ಒಳ್ಳೆಯದೇ ಆಯಿತು. ಇನ್ನೂ ಸ್ವಲ್ಪ ಹೊತ್ತಿನಲ್ಲಿ ಇನ್ನೊಂದಿಬ್ಬರು ಆಟಗಾರರು ಬಂದು ಮುಟ್ಟಿಕೊಳ್ಳುತ್ತಾರೆ. ಎಲ್ಲ ಸರಿಯಾಗುತ್ತದೆ ಅಂತ ಅಂದುಕೊಂಡೆವು.
ಮೊದಲೇ ಹೇಳಿದಂತೆ ಆ ವರ್ಷ ಎಲ್ಲರಿಗೂ ಬ್ಯಾಡ್ಮಿಂಟನ್ ಹುಚ್ಚು. ಕ್ರಿಕೆಟ್ ಪ್ರಾಕ್ಟೀಸ್ ಇಲ್ಲವೇ ಇಲ್ಲ. ಮೇಲಿಂದ ಲೆದರ್ ಬಾಲ್ ಬೇರೆ. ಅಷ್ಟೇ ಮತ್ತೆ. ಒಬ್ಬರ ನಂತರ ಒಬ್ಬ ಬ್ಯಾಟ್ಸಮನ್ ಪಟಪಟ ಅಂತ ಔಟ್ ಆಗಿಹೋದರು. ಹತ್ತು ರನ್ ಆಗುವಷ್ಟರಲ್ಲಿ ನನ್ನನ್ನೂ ಹಿಡಿದು ನಾಲ್ಕು ಜನ ಔಟ್. ಮುಂದೆ ಹೆಂಗೋ ಮಿಡ್ಲ್ ಆರ್ಡರ್ ಮಂದಿ, ಅದರಲ್ಲೂ ಕ್ಯಾಪ್ಟನ್ ಲಂಬ್ಯಾ, ಒಂದಿಷ್ಟು ರನ್ ಸ್ಕೋರ್ ಮಾಡಿ ಸುಮಾರು ನಲವತ್ತು ನಲವತ್ತೈದು ರನ್ ಆಗುವಷ್ಟರಲ್ಲಿ ನಮ್ಮ ಇನ್ನಿಂಗ್ಸ್ ಮುಗಿಯಿತು. ಶಿವಾಯ ನಮಃ. ನಮ್ಮ ಎದುರಾಳಿಗಳು ಬೌಲಿಂಗ್ ಮಾಡಿದ ರೀತಿಯಲ್ಲಿಯೇ ಬ್ಯಾಟಿಂಗ್ ಸಹ ಮಾಡಿಬಿಟ್ಟರೆ ಒಂದು ಏಳೆಂಟು ಓವರುಗಳಲ್ಲಿ ನಮ್ಮನ್ನು ಸೋಲಿಸಿ, ಮನೆ ಕಡೆ ಹೊರಡುತ್ತಾರೆ ಅಂತ ಅನ್ನಿಸಿಬಿಟ್ಟಿತ್ತು. ಗೆಲ್ಲುವ ಚಾನ್ಸ್ ಭಾಳ ಕಮ್ಮಿ ಅನ್ನಿಸಿತ್ತು. ಡಿಫೆಂಡ್ ಮಾಡಲು ಸಾಧ್ಯವಿಲ್ಲದ ಸ್ಕೋರ್ ಅನ್ನಿಸಿದರೂ ಫೀಲ್ಡಿಂಗ್ ಮಾಡಲೇಬೇಕು. ದರಿದ್ರ. ಕರ್ಮ. ಕೆಟ್ಟ ಬಿಸಿಲು ಬೇರೆ.
ಸರಿ. ಬಾಸೆಲ್ ಮಿಷನ್ ಮಂದಿಯ ಬ್ಯಾಟಿಂಗ್ ಶುರುವಾಯಿತು. ಎಲ್ಲ ಒಳ್ಳೆ ಫಾರ್ಮಿನಲ್ಲಿ ಇದ್ದವರೇ. ಹತ್ತು ಹದಿನೈದು ರನ್ ಬೇಗ ಬೇಗ ಸ್ಕೋರ್ ಮಾಡಿಬಿಟ್ಟರು. ನಮ್ಮವರ ಬೌಲಿಂಗ್, ಫೀಲ್ಡಿಂಗ್ ಎಲ್ಲ ದೇವರಿಗೇ ಪ್ರೀತಿ. ವಿಕೆಟ್ ಲಾಸ್ ಇಲ್ಲದೇ ಗೆದ್ದು ಬಿಡುತ್ತಿದ್ದರೋ ಏನೋ. ಏನೋ ಪೊರಪಾಟಿನಲ್ಲಿ ಒಂದರೆಡು ವಿಕೆಟ್ ಬಿದ್ದುಬಿಟ್ಟವು. ನಂತರ ಅವರು ತುಂಬಾ careful ಆಗಿ ಆಡುತ್ತ, ಅಲ್ಲಿ ಇಲ್ಲಿ ಒಂದು ಎರಡು ರನ್ ಕದಿಯುತ್ತ ಹೊರಟಿದ್ದರು.
ಕೆಟ್ಟ ಬಿಸಿಲು. ಸಿಕ್ಕಾಪಟ್ಟೆ ದಾಹ. ನೀರಡಿಕೆ. ನೀರಿಲ್ಲ. ಲೆಗ್ ಸೈಡ್ ನಲ್ಲಿ ನನ್ನ ಫೀಲ್ಡಿಂಗ್. ದೂರದಲ್ಲಿ ನಿಂತಿದ್ದೆ. ಕೆಟ್ಟ ಬೋರ್. ನಮ್ಮ ಕಡೆ ಬಾಲಂತೂ ಬರುತ್ತಿರಲಿಲ್ಲ. ಅದೇ ಒಳ್ಳೆಯದು. ಫೀಲ್ಡಿಂಗ್ ರೂಢಿಯೇ ತಪ್ಪಿಹೋಗಿತ್ತು ಅಂದೆನಲ್ಲ. ಅದರೂ ಆ ಬಾಸೆಲ್ ಮಿಷನ್ ಮುಂಡೆ ಮಕ್ಕಳು ನಮ್ಮನ್ನು ಸೋಲಿಸುವವರೆಗೆ ಈ ಗಧಾ ಮಜದೂರಿ ಫೀಲ್ಡಿಂಗ್ ಮಾಡಲೇಬೇಕು. ನಮಗೆ ತುರ್ತಾಗಿ ಬೇಕಾಗಿರುವದು ಒಂದಿಷ್ಟು ನೀರು. ದಾಹ ದಾಹ. ಎಲ್ಲರೂ ಭಕ್ತಿಯಿಂದ ಆಡುತ್ತಿರುವಾಗ ನಾವೊಬ್ಬರೇ ನೀರು ಕುಡಿಯಲು ಹೇಗೆ ಹೋಗೋಣ? ಅದೂ ನಮ್ಮ ಭಟ್ಟರ ಶಾಲೆಯ ಹಾವು, ಹಾವರಾಣಿ ಬಿದ್ದ ನೀರಿನ ಟಂಕಿಯಲ್ಲಿ ಶನಿವಾರ ಮಧ್ಯಾನ ನೀರು ಇರುತ್ತದೆಯೋ ಇಲ್ಲವೋ. ಯಾವನಿಗೆ ಗೊತ್ತು?
ಹೀಗೆ ನೀರಿಗಾಗಿ ದಾಹ ದಾಹ ಅಂತ ಚಡಪಡಿಸುತ್ತಿರುವಾಗ ಒಂದು ಆಕೃತಿ ಕಣ್ಣಿಗೆ ಬಿತ್ತು. ಅದು ಸೈಕಲ್ ಮೇಲೆ ಗ್ರೌಂಡ್ ಸುತ್ತುತ್ತಿತ್ತು. ಆ ಕಾಲದ ಕ್ರಿಕೆಟ್ ಮ್ಯಾಚ್ ಅಂದರೆ ಏನು ಕೇಳುತ್ತೀರಿ! ಗ್ರೌಂಡಿನ ಒಂದು ಮೂಲೆಯಲ್ಲಿ ಯಾರೋ ಎಮ್ಮೆ ಮೇಯಿಸಿಕೊಂಡು ಇದ್ದರೆ, ಇನ್ನೊಂದು ಮೂಲೆಯಲ್ಲಿ ಹಂದಿಗಳು ತಿಪ್ಪೆ ಕೆದರಿಕೊಂಡು ಇರುತ್ತಿದ್ದವು. ಇನ್ನು ಗ್ರೌಂಡಿನ ತುಂಬಾ ಆಟಗಾರರು ಮಾತ್ರವಲ್ಲದೇ ಎಲ್ಲಾ ತರಹದ ಜನರೂ ಇರುತ್ತಿದ್ದರು. ಸೈಕಲ್ ಇದ್ದವರು ಸೈಕಲ್ ಹೊಡೆಯುತ್ತಿದ್ದರು. ನಮ್ಮ ಕಡೆಯವರಾದದರೆ ಸೈಕಲ್ ಮೇಲೆ ಬಂದು ಉದ್ರಿ ಉಪದೇಶ ಮಾಡಿ, ಎದುರಾಳಿಗಳ ಸ್ಕೋರ್ ಇತ್ಯಾದಿ ತಿಳಿಸಿ ಹೋಗುತ್ತಿದ್ದರು.
ಆಗ ಸೈಕಲ್ ಹೊಡೆಯುತ್ತ ಬಂದವ ಕಾಮ್ಯಾ ಉರ್ಫ್ ಕಾಮ ಉರ್ಫ್ ಕಾಮತ್ ಉರ್ಫ್ ಗಿರೀಶ್ ಕಾಮತ್. ನಮ್ಮ ಕ್ಲಾಸ್ಮೇಟ್. ಗೆಳೆಯ. ಮ್ಯಾಚ್ ನೋಡಲು ಬಂದಿದ್ದ ಅಂತ ಕಾಣುತ್ತದೆ. ಅಥವಾ ಯಾರೂ ಬರದಿದ್ದರೆ ಇವನನ್ನೇ ಹಾಕಿಕೊಂಡು ಆಡಿದರಾಯಿತು ಅಂತ ಕ್ಯಾಪ್ಟನ್ ಲಂಬ್ಯಾನೇ ಎಲ್ಲಿ ಇವನನ್ನೂ ಕೂಡ ಕರೆದಿದ್ದನೋ ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ಅಂದು ಗಿರೀಶ್ ಕಾಮತ್ ಉರ್ಫ್ ಕಾಮ್ಯಾ ಅಲ್ಲಿಗೆ ಬಂದಿದ್ದಾನೆ. ಸೈಕಲ್ ಹೊಡೆಯುತ್ತ, ತನ್ನ ಮಿತ್ರರನ್ನು ಮಾತಾಡಿಸುತ್ತ ಕ್ರಿಕೆಟ್ ಆಟ ನೋಡುತ್ತಿದ್ದಾನೆ.
ನಾನು ಫೀಲ್ಡಿಂಗ್ ಮಾಡುತ್ತಿದ್ದ ಕಡೆಗೂ ಬಂದ. ನನಗೆ ವಿಶ್ ಮಾಡುವವನಂತೆ ಅವನ characteristic ಭೋಲಾ, ಮುಗ್ಧ, ಮಳ್ಳು ನಗೆ ನಕ್ಕ.
'ಲೇ, ಕಾಮ್ಯಾ, ಬಾರಲೇ ಇಲ್ಲೆ. ಸ್ವಲ್ಪ ಬಾರಲೇ' ಅಂತ ಕರೆದೆ.
'ಏನ್ ಮಹೇಶಾ?' ಅಂತ ಕೇಳುತ್ತ, ಸೈಕಲ್ ಆಕಡೆ ಈಕಡೆ ವಾಲಿಸಿ ಹೊಡೆಯುತ್ತ ಬಂದ.
'ಕಾಮ್ಯಾ, ಭಾಳ ನೀರಡಿಕಿಲೇ. ಕೆಟ್ಟ ಆಸ್ರ ಆಗ್ಯದ. ಎಲ್ಲಿಂದರೆ ಒಂದಿಷ್ಟು ನೀರು ತಂದು ಕುಡಿಸೋ ಮಾರಾಯಾ. ಪ್ಲೀಸ್ ಲೇ,' ಅಂತ ಕೇಳಿಕೊಂಡೇಬಿಟ್ಟೆ. ಅಷ್ಟು ದಾಹ.
ಕಾಮತ್ ಒಂದು ಕ್ಷಣ ದಂಗಾದ. ಯಾತಕ್ಕೋ ಕರೆದಿರಬೇಕು ಅಂತ ಬಂದರೆ ನಮ್ಮಿಂದ ನೀರಿಗಾಗಿ ಡಿಮ್ಯಾಂಡ್. ಏನು ಮಾಡಬೇಕು ಅಂತ ತಿಳಿಯಲಿಲ್ಲ ಅವನಿಗೆ. ಮತ್ತೆ ಎಲ್ಲಿಂದ ನೀರು ತರಬೇಕು? ಹೇಗೆ ತರಬೇಕು? ಕೈ ಬೊಗಸೆಯಲ್ಲಿ ನೀರು ತಂದು ಕುಡಿಸಬೇಕೇ? ಹಾಂ? ಕೆಟ್ಟ confusion ಪಾಪ ಅವನಿಗೆ. ಏನೋ ಹೇಳಿ, ಸೈಕಲ್ ಎತ್ತಿಕೊಂಡು ಹೋದ. ಅಷ್ಟರಲ್ಲಿ ಮತ್ತೊಂದು ವಿಕೆಟ್ ಸಹಿತ ಬಿತ್ತು. ಕಾಮತ್ ನಾಪತ್ತೆಯಾಗಿದ್ದನ್ನು ನಾನು ಗಮನಿಸಲಿಲ್ಲ. ಮ್ಯಾಚ್ ಮತ್ತೆ ರೋಚಕ ಘಟ್ಟಕ್ಕೆ ಬಂದಿತ್ತು. ದಾಹ ತಾತ್ಕಾಲಿಕವಾಗಿ ಮರೆತಿತ್ತು. ಕ್ಯಾಪ್ಟನ್ ಲಂಬ್ಯಾ ಫುಲ್ ಫೈಟ್ ಕೊಡುವವನ ಹಾಗೆ ಏನೇನೋ strategy ಉಪಯೋಗಿಸತೊಡಗಿದ್ದ. ಮತ್ತೆ ಅದು ನಮ್ಮ ಹೋಂ ಪಿಚ್. ಚಿತ್ರ ವಿಚಿತ್ರವಾಗಿ ವರ್ತಿಸಲು ಶುರು ಮಾಡಿರಬೇಕು. ವಿಕೆಟ್ ನಷ್ಟವಿಲ್ಲದೆ ಗೆಲ್ಲುವ ಹಾಗೆ ಬ್ಯಾಟಿಂಗ್ ಮಾಡುತ್ತಿದ್ದ ಎದುರಾಳಿಗಳು ಈಗ defensive ಆಗಿದ್ದರು.
ಕಾಮತನಿಗೆ ನೀರು ತಂದು ಕುಡಿಸುವಂತೆ ಹೇಳಿದ್ದೆ ನಿಜ. ಮರ್ತೇ ಬಿಟ್ಟಿದ್ದೆ. ಆಟದ adrenaline rush ಹಾಗೇ ಇರುತ್ತದೆ. ಆ ಕ್ಷಣದ excitement ಒಂದಿಷ್ಟು ಹೊತ್ತು ಎಲ್ಲವನ್ನೂ ಮರೆಸಿಬಿಡುತ್ತದೆ. ಆದ್ರೆ ಆ ನನ್ನ ಕೋರಿಕೆಯನ್ನು ಕಾಮತ್ ಮರೆತಿರಲಿಲ್ಲ.
ಸ್ವಲ್ಪ ಸಮಯದ ನಂತರ ಮತ್ತೆ ದೂರದಲ್ಲಿ ತನ್ನ ಸೈಕಲ್ ಮೇಲೆ ಕಾಮತ್ ಪ್ರತ್ಯಕ್ಷನಾದ. ಒಂದೇ ಕೈಯಲ್ಲಿ ಸೈಕಲ್ ಹೊಡೆದುಕೊಂಡು ಬರುತ್ತಿದ್ದ. ಮತ್ತೊಂದು ಕೈಯಲ್ಲಿ ಏನೋ ಇತ್ತು. ಹತ್ತಿರ ಬಂದಾಗ ಏನೋ ಬಾಟಲಿ ತರಹದ್ದು ಏನೋ ಕಂಡಿತು. 'ವೆರಿ ಗುಡ್. ಹುಡುಗ ನೀರು ತಂದಿದ್ದಾನೆ. ಅದಕ್ಕೆ ಬಾಟಲಿಯನ್ನೂ ಸಹ ಎಲ್ಲಿಂದಲೋ ಜುಗಾಡ್ ಮಾಡಿಕೊಂಡು ಬಂದಿದ್ದಾನೆ. ವೆರಿ ಗುಡ್,' ಅಂದುಕೊಂಡು, ಕಾಮತ್ ತಂದು ಕುಡಿಸಲಿರುವ ಜೀವಜಲಕ್ಕೆ ತುಂಬ ಬೇಚೈನಿಯಿಂದ ಕಾಯುತ್ತಿದ್ದೆ.
ಕಾಮತ್ ನೀರು ತಂದಿರಲಿಲ್ಲ. ದುಬಾರಿ ಸಾಫ್ಟ್ ಡ್ರಿಂಕ್ ಲಿಮ್ಕಾ ತಂದುಬಿಟ್ಟಿದ್ದ! ನೀರು ಹುಡುಕಿಕೊಂಡು ಶಾಲೆ ತುಂಬಾ ಅಲೆದಿರಬೇಕು. ಎಲ್ಲೂ ಸಿಕ್ಕಿಲ್ಲ. ಐಡಿಯಾ ಮಾಡಿದ್ದಾನೆ. ಸೀದಾ ಅಲ್ಲೇ ಹತ್ತಿರವಿದ್ದ ಬೃಂದಾವನ ಹೋಟೆಲ್ಲಿಗೆ ಹೋಗಿದ್ದಾನೆ. ಅಲ್ಲೇ ಮಾಳಮಡ್ಡಿ ಕೆನರಾ ಬ್ಯಾಂಕ್ ಮುಂದೆ ಇತ್ತು. ಅದು ಈ ಕಾಮತ್ ಪೈಕಿಯವರದೇ. ಅಲ್ಲಿಂದ ನೀರು ತರುವದು ಕಷ್ಟ. ಯಾಕೆಂದರೆ ಆವಾಗೆಲ್ಲ ಮಿನರಲ್ ವಾಟರ್ ಬಾಟಲಿ ಇರಲಿಲ್ಲ. ಹಾಗಾಗಿ ಹೆಂಗೋ ಮಾಡಿ ಒಂದು ಲಿಮ್ಕಾ ಸಂಪಾದಿಸಿಬಿಟ್ಟಿದ್ದಾನೆ. ಬಾಟಲಿ ಓಪನ್ ಮಾಡಿಸಿಕೊಂಡವನೇ, ಒಂದು ಕೈಯಲ್ಲಿ ಲಿಮ್ಕಾ ಬಾಟಲಿ ಹಿಡಿದುಕೊಂಡು, ಸೈಕಲ್ ಬ್ಯಾಲೆನ್ಸ್ ಮಾಡಿಕೊಂಡು ಬಂದು, ನನ್ನ ಮುಂದೆ ಪ್ರತ್ಯಕ್ಷನಾಗಿ ನೀರು ಕೇಳಿದರೆ ಲಿಮ್ಕಾ ಕುಡಿಸುತ್ತಿದ್ದಾನೆ. ಏನನ್ನೋಣ ಇದಕ್ಕೆ? ಅದೇನು ಪ್ರೀತಿಯೋ? ಆತ್ಮೀಯತೆಯೋ? ಅಥವಾ ನೀರು ತಂದುಕೊಡುತ್ತೇನೆ ಅಂತ ಹೇಳಿ ಬಂದುಬಿಟ್ಟಿದ್ದೇನೆ ಈಗ ಆ ಮಾತು ಉಳಿಸಿಕೊಳ್ಳಲೇಬೇಕು. ಅದಕ್ಕೆ ನೀರಲ್ಲದಿದ್ದರೆ ಮತ್ತೇನಾದರೂ ಕುಡಿಸಲೇಬೇಕು ಅನ್ನುವ commitment ತರಹದ ಭಾವನೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಆ ಲಿಮ್ಕಾ ಜೀವನದಲ್ಲೇ ಕುಡಿದ ಬೆಸ್ಟ್ ಸಾಫ್ಟ್ ಡ್ರಿಂಕ್. ಯಾಕೆಂದರೆ ಅದರಲ್ಲಿ ಕಾಮತನ ಗೆಳೆತನ, ಪ್ರೀತಿ, ಆತ್ಮೀಯತೆ, ಮತ್ತೆ ಏನೇನೋ ಎಲ್ಲ ಕೂಡಿತ್ತು. ನಮಗೆ ಅವನ್ನೆಲ್ಲ ಕಾವ್ಯಾತ್ಮಕವಾಗಿ, ಭಾವುಕತೆಯಿಂದ ಹೇಳಲಿಕ್ಕೆ ಬರಲಿಕ್ಕಿಲ್ಲ. ಆದರೆ, 'ನೀರು ತಂದು ಕುಡಿಸೋ ಅಂದರೆ ಲಿಮ್ಕಾ ತಂದು ಕುಡಿಸಿದ,' ಕಾಮತ್ ಮಾತ್ರ ನೆನಪಾಗುತ್ತಲೇ ಇರುತ್ತಾನೆ. ಸದಾ.
ಸರಿ, ಆ ಲಿಮ್ಕಾ ಪ್ರಭಾವವೋ ಏನೋ ಗೊತ್ತಿಲ್ಲ. ಏನೇನೋ strategy ಮಾಡುತ್ತಿದ್ದ ಕ್ಯಾಪ್ಟನ್ ಲಂಬ್ಯಾ ನನಗೂ ಬೌಲಿಂಗ್ ಮಾಡು ಅಂದ. ಸರಿ ಅಂತ ಏನೋ ಒಂದು ತರಹದಲ್ಲಿ ಮಾಡಿದೆ. ಎರಡು ಓವರಿನಲ್ಲಿ ಎರಡು ವಿಕೆಟ್. ಈಗ ಮ್ಯಾಚ್ ರೋಚಕ ಘಟ್ಟಕ್ಕೆ ಬಂದು ತಲುಪಿತ್ತು. ವಿರುದ್ಧ ಪಾರ್ಟಿಗೆ 'ಸುಲಿದ ಬಾಳೆಹಣ್ಣು' ಅಂತ ತಿಳಿದ ಮ್ಯಾಚ್ ಈಗ ಯಾರಿಗಾದರೂ ಹೋಗಬಹುದಿತ್ತು. ವಿರುದ್ಧ ಪಾರ್ಟಿಗೆ ಇನ್ನೂ ಹದಿನೈದೂ ಚಿಲ್ಲರೆ ರನ್ ಮಾಡಬೇಕಿದೆ. ವಿಕೆಟ್ ಉಳಿದಿದ್ದು ಎರಡೋ ಮೂರೋ ಅಷ್ಟೇ. ಈಗ ಅವರ ಮೇಲೆ ಫುಲ್ ಪ್ರೆಷರ್. ನಮಗೆ ಹೋಂ ಪಿಚ್ ಅಂತ ಫುಲ್ ಸಪೋರ್ಟ್ ಮತ್ತು ಹುರುಪು ಬೇರೆ. ಕ್ಯಾಪ್ಟನ್ ಲಂಬ್ಯಾ ಮತ್ತೆ ಯಾರಿಗೋ ಬೌಲಿಂಗ್ ಕೊಟ್ಟ. ಅದೂ ಅಪರೂಪಕ್ಕೆ ಬೌಲಿಂಗ್ ಮಾಡುವ ಆಸಾಮಿಗೆ. ಅವನು ಲಿಮ್ಕಾ ಕುಡಿದಿರಲಿಲ್ಲ. ಆದರೂ ಎರಡು ವಿಕೆಟ್ ಕಿತ್ತೇಬಿಟ್ಟ. ಹಾಕ್ಕ! ಈಗ ಅವರ ಹತ್ತಿರ ಉಳಿದದ್ದು ಒಂದೇ ವಿಕೆಟ್. ಇನ್ನೂ ಕಮ್ಮಿ ಕಮ್ಮಿ ಅಂದರೂ ಹತ್ತು ರನ್ ತೆಗೆಯಬೇಕು. ಸಿಕ್ಕಾಪಟ್ಟೆ ಪ್ರೆಷರ್. ಕ್ಯಾಪ್ಟನ್ ಲಂಬ್ಯಾ ಮತ್ತೆ ಬೌಲಿಂಗ್ ಮಾಡಿ ಸ್ಟಂಪ್ ಹಾರಿಸಿಯೇಬಿಟ್ಟ. ಲಾಸ್ಟ್ ವಿಕೆಟ್ ತೆಗೆದೇಬಿಟ್ಟ. ಗೆದ್ದಿದ್ದೆವು. 'ಸೋತೆವು, no hopes,' ಅನ್ನುವಂತಹ ಮ್ಯಾಚ್ ಗೆದ್ದಿದ್ದೆವು.
ಕಾಮತ್ ತಂದುಕೊಟ್ಟು, ಕುಡಿಸಿದ್ದ ಲಿಮ್ಕಾನೇ ಎಲ್ಲದಕ್ಕೂ ಕಾರಣ ಅಂತ ನಮ್ಮ ನಂಬಿಕೆ. ಪುಣ್ಯಾತ್ಮ ತಂದುಕೊಟ್ಟ ಲಿಮ್ಕಾವನ್ನಂತೂ ಗಟಗಟ ಕುಡಿದು ಮುಗಿಸಿದ್ದೆ. ಆದರೂ ತೀರದ ದಾಹ. 'ಇದೇ ಬಾಟ್ಲ್ಯಾಗ ಇನ್ನೊಂದಿಷ್ಟು ನೀರು ತುಂಬಿಸ್ಕೊಂಡು ಬಾರಲೇ ಕಾಮ್ಯಾ,' ಅಂತ ಕೇಳಿಕೊಂಡಿದ್ದೆ. ನೀರು ತಂದು ಕುಡಿಸಿದ್ದ ಅಂತ ನೆನಪು. ನೀರು ಕುಡಿಸಿದವ ಎಲ್ಲೇ ಇರಲಿ ತಣ್ಣಗಿರಲಿ ಶಿವಾ!
ಈ ಸದರಿ ಕಾಮತ್ ನಮಗೆ ಜೊತೆಯಾಗಿದ್ದು ಎಂಟನೆಯ ಕ್ಲಾಸಿನಲ್ಲಿ. ಎಲ್ಲೋ ದಕ್ಷಿಣ ಕನ್ನಡದ ಕಡೆಯಿಂದ ಬಂದಿದ್ದ ಅಂತ ನೆನಪು. ಅವರ ಕುಟುಂಬದವರು ಮಾಳಮಡ್ಡಿಯ ಬೃಂದಾವನ ಹೋಟೆಲ್ಲನ್ನು ನಡೆಸಲು ತೆಗೆದುಕೊಂಡಿದ್ದರು. ಅದಕ್ಕೇ ಧಾರವಾಡಕ್ಕೆ ಬಂದಿದ್ದರು. ಅದಕ್ಕೇ ಇವನು ನಮ್ಮ ಶಾಲೆಗೆ ಬಂದವ ಅಂತ ನೆನಪು.
ಕಾಮತ್ ಉರ್ಫ್ ಕಾಮ್ಯಾ ಮುಗ್ಧ ಅಂದರೆ ಅಷ್ಟು ಮುಗ್ಧ. ಸರಳ ಜೀವಿ. ಎಲ್ಲರಿಗೂ ಸ್ನೇಹಿತ. ಎಲ್ಲರಿಗೂ ಕೆಲವು ಕಾಮತ್ ನಂತಹ ಸ್ನೇಹಿತರು ಇದ್ದೇ ಇರುತ್ತಾರೆ. ಎಲ್ಲರೂ ಅವರನ್ನು ಕಿಚಾಯಿಸುತ್ತಾರೆ, ಕಾಲೆಳೆಯುತ್ತಾರೆ, ಚೇಷ್ಟೆ ಮಾಡುತ್ತಾರೆ, ಅವರ ಮೇಲೆ ತರಹ ತರಹದ ಜೋಕ್ಸ್ ಮಾಡುತ್ತಾರೆ. ಅವರು ಮಾತ್ರ ಎಲ್ಲವನ್ನೂ ನಗುನಗುತ್ತ ಸಹಿಸಿಕೊಂಡು, ಬೇಕಾದರೆ ತಾವೂ ತಮ್ಮ ಮೇಲೆಯೇ ಒಂದಿಷ್ಟು ಜೋಕ್ಸ್ ಮಾಡಿಕೊಂಡು ಎಲ್ಲರಿಗೂ ಬೇಕಾದವರಾಗಿ ಇರುತ್ತಾರೆ. ಅಂತಹ ಆಸಾಮಿ ಈ ಕಾಮ್ಯಾ ಉರ್ಫ್ ಕಾಮತ್.
ಕಾಮತನಿಗೆ ಎಲ್ಲರೂ ಬೇಕು ಅಂದೆನಲ್ಲ. ಅವನ ಎತ್ತರದ (height) ಪ್ರಕಾರ ಅವನಿಗೆ ಸುಮಾರು ಮುಂದೆ ಎಲ್ಲೋ ಡೆಸ್ಕ್, ಬೆಂಚ್ ಸಿಕ್ಕಿತ್ತು. ನಾವೊಂದಿಷ್ಟು 'ಉಡಾಳ' ಮಂದಿಯದು ಹಿಂದಿನ ಬೆಂಚು. ನಮ್ಮ ಹರಟೆ, ಜೋಕ್ಸ್, ಗದ್ದಲ ಎಲ್ಲ ನಿರಂತರ. ಆಗಾಗ ನಮ್ಮ ವಲಯಕ್ಕೂ ಭೆಟ್ಟಿ ಕೊಡುತ್ತಿದ್ದ ಕಾಮತ್. ಸುಖಾಸುಮ್ಮನೆ ಬಿಟ್ಟಿಯಲ್ಲಿ ಕಾಡಿಸಿಕೊಂಡು, ನಮ್ಮ ಜೋಕುಗಳಿಗೆ ಬಲಿಯಾಗಿ, 'ಏನು ಇದ್ದೀರಿಲೇಪಾ?? ಬರೇ ಇದss ಆತು ನಿಮ್ಮದು. ಕಾಡಿಸಿಕೊಳ್ಳಾಕ ನಾ ಒಬ್ಬವ ಸಿಕ್ಕೇನಿ ನೋಡು,' ಅಂತ ಒಂದು ತರಹದ ಅಮಾಯಕ ಲುಕ್ ಕೊಟ್ಟು ಈ ಪುಣ್ಯಾತ್ಮ ತನ್ನ ಡೆಸ್ಕಿಗೆ ವಾಪಸ್ ಹೋಗುತ್ತಿದ್ದರೆ, 'ಏ, ಕಾಮ, ಬಾರಲೇ. ಇಷ್ಟ ಲಗೂ ಎದ್ದು ಹೋದರ ಹ್ಯಾಂಗ? ಈಗ ಮಾತ್ರ absentee ಪಿರಿಯಡ್ ಶುರು ಆಗ್ಯದ. ಬಾರಲೇ ಕಾಮಾ,' ಅಂತ ಇಲ್ಲದ ಗೋಳು ಹೊಯ್ದುಕೊಳ್ಳುತ್ತಿದ್ದರು ಹಿಂದಿನ ಬೆಂಚಿನ ಮಂದಿ. ಮತ್ತೆ ಬೇಜಾರಾದಾಗೊಮ್ಮೆ ಕಾಮತ್ ವಾಪಸ್ ಬರುತ್ತಿದ್ದ. ಮತ್ತೆ ಅದೇ ಜೋಕ್ಸ್, ಅದೇ ನಗು, ಅದೇ ಭೋಳೆತನ.
ಎಂಟು, ಒಂಬತ್ತನೇ ಕ್ಲಾಸ್ ಹಾಗೆ ನಡೆದಿತ್ತು. ಹತ್ತನೇ ಕ್ಲಾಸಿನಲ್ಲಿ ಕಾಮತನ ಕುಟುಂಬ ಧಾರವಾಡ ಬಿಟ್ಟು ಬೇರೆ ಕಡೆ ಹೋಯಿತು. ಬೃಂದಾವನ ಹೋಟೆಲ್ಲನ್ನು ಬೇರೆ ಯಾರಿಗೋ ವಹಿಸಿಕೊಟ್ಟು ಹೋದರು. ಹತ್ತನೇ ಕ್ಲಾಸ್ ಓದುತ್ತಿದ್ದ ಮಗನ ಓದಿಗೆ ಭಂಗ ಬರುವದು ಬೇಡ ಅಂತ ಇವನನ್ನು ಧಾರವಾಡದಲ್ಲೇ ಬಿಟ್ಟು ಹೋಗಿದ್ದರು ಅಂತ ನೆನಪು. ಒಟ್ಟಿನಲ್ಲಿ ಹತ್ತನೇ ಕ್ಲಾಸಿನಲ್ಲೂ ನಮ್ಮ ಜೊತೆಗೇ ಇದ್ದ. ಆದರೆ ಈಗ ಕಾಮತ್ ಬೇರೆ ಕಡೆ ಮನೆ ಶಿಫ್ಟ್ ಮಾಡಿದ್ದ. ಅಲ್ಲಿ ಸ್ವಂತ ರೂಂ ಮಾಡಿಕೊಂಡಿದ್ದನೋ ಅಥವಾ ಸಂಬಂಧಿಕರ ಮನೆಯಲ್ಲಿ ಇದ್ದನೋ ನೆನಪಿಲ್ಲ. ನಮ್ಮ ಬ್ಯಾಚಿನ ಅಪ್ರತಿಮ ಸುಂದರಿಯೊಬ್ಬಳು ಕೂಡ ಅದೇ ಕಂಪೌಂಡಿನಲ್ಲಿ ಇರಬೇಕೇ! ಸರಿಯಾಯಿತು. ಕಾಮತನನ್ನು ರೇಗಿಸಲು, ಚುಡಾಯಿಸಲು ಮತ್ತೊಂದು ವಿಷಯ. ಇವನು ತೀರ ಮುಗ್ಧ. ಆಕೆ ಡೆಡ್ಲಿ ಸುಂದರಿಯಾದರೂ ತೀರ ಸಭ್ಯಳು. ಆದರೆ ಕಾಡಿಸುವವರಿಗೆ ಏನು? ಎಲ್ಲ ಓಕೆ.
ಮತ್ತೆ ಈ ಕಾಮತ್ ಪುಣ್ಯಾತ್ಮನೋ ಒಳ್ಳೆ ಬಾಡಿ ಗಾರ್ಡನಂತೆ ಆ ಸುಂದರಿ ಮತ್ತೆ ಆಕೆಯ ಸಖಿಯರ ಹಿಂದೆ ಸೈಕಲ್ ಹೊಡೆದುಕೊಂಡು ಬರುತ್ತಿದ್ದ. ಮುಂದೆ ಸೈಕಲ್ ಹೊಡೆದುಕೊಂಡು ಬರುತ್ತಿದ್ದ ಅವು ನಾಲ್ಕಾರು ಹುಡುಗಿಯರು. ಹಿಂದೆ ಎತ್ತರ ಪತ್ತರ ಸೈಕಲ್ ಹೊಡೆದುಕೊಂಡು ಬರುತ್ತಿದ್ದ ಈ ಕಾಮತ್. ಅವರೆಲ್ಲರ ಹಿಂದೆ ಮತ್ತೊಬ್ಬ. ಅವನು ಯಾರು ಅಂದರೆ ಈ ಕಾಮತ್ ಮತ್ತು ಆ ಸುಂದರಿ ಇಬ್ಬರಿಗೂ ಮನೆ ಭಾಡಿಗೆ ಕೊಟ್ಟವರ ಮೊಮ್ಮಗ. ಅವನೂ ನಮ್ಮ ಕ್ಲಾಸ್ಮೇಟ್. ಶಿವನೇ ಶಂಭುಲಿಂಗ!
ಹೀಗೆ ಹತ್ತನೆಯ ಕ್ಲಾಸಿನಲ್ಲಿ ನಮ್ಮ ಬ್ಯಾಚಿನ ಡೆಡ್ಲಿ ಸುಂದರಿಯ ನೇಬರ್ (neighbor) ಆಗುವ ಭಾಗ್ಯ ಪಡೆದುಕೊಂಡ ಕಾಮತ್ ಸಿಕ್ಕ ಅಂದರೆ ಹಿಡಿದು ರೇಗಿಸಿದ್ದೇ ರೇಗಿಸಿದ್ದು. ಪಾಪ ಬಡಪಾಯಿ. ನಮ್ಮ ಜೊತೆಗೆಲ್ಲ ಬಂದು, ಕೂತು, ಮಾತಾಡಿ, ನಾವು ಹೊಡೆಯುತ್ತಿದ್ದ ಏನೇನೋ ಹರಟೆಗಳಲ್ಲಿ ಭಾಗಿಯಾಗಲಿಕ್ಕೆ ಆಗದಿದ್ದರೂ ಅದನ್ನು ಕೇಳಿಯಾದರೂ ಹೋಗಬೇಕು ಅಂತ ಅವನ ಆಸೆ. ನಮ್ಮ ಗ್ಯಾಂಗಿಗೋ ಈ ಕಾಮತನನ್ನು ನೋಡಿದ ಕೂಡಲೇ ಆ ಸುಂದರಿಯದೇ ಧ್ಯಾನ. 'ಲೇ, ಕಾಮ್ಯಾ, ಜೋರಾತಲ್ಲಲೇ ನಿಂದು. ಹೋಗಿ ಹೋಗಿ ಮಸ್ತ ಮನಿ ಹಿಡದಿ ನೋಡಲೇ. ಏನಂತಾಳ ಹೀರೋಯಿನ್? ನಿಂಜೋಡಿ ಮಾತಾಡಿದಳು ಏನು? ಇಲ್ಲಾ? ಬರೇ ಸ್ಮೈಲ್ ಕೊಟ್ಟಳು??? ನೀ ಏನು ಕೊಟ್ಟಿ??? ಹಾಂ?' ಅಂತ ಬರೇ ಇದೇ ಮಾತು. ಹೆವಿ ಮಷ್ಕಿರಿ. 'ಏನ್ರಿಲೇ ನೀವು??? ನನ್ನ ನೋಡಿದ ಕೂಡಲೇ ಬರೇ ಅಕಿ ಬಗ್ಗೆನೇ ಮಾತಾಡ್ತೀರಲ್ಲಾ?' ಅಂತ ಅವನ ರೋಧನ. 'ನಿನ್ನ ನೋಡಿದರೂ ಅಕಿನೇ ನೆನಪಾಗ್ತಾಳ. ಅಕಿನ್ನ ನೋಡಿದರೂ ಅಕಿನೇ ನೆನಪಾಗ್ತಾಳ. ಏನಪಾ ಕಾಮ್ಯಾ?? ನೀ ಒಟ್ಟೇ ನೆನಪ ಆಗೋದೇ ಇಲ್ಲಲೇ ಕಾಮ್ಯಾ! ಏನು ನಸೀಬಲೇ ನಿಂದು?! ಹೋಗಿ ಹೋಗಿ ಅಕಿ ಮನಿ ಕಾಂಪೌಂಡ್ ಒಳಗ ಹೋಗಿ ಕೂತುಬಿಟ್ಟಿಯಲ್ಲಲೇ. ಲಕ್ಕಿ ನೋಡಲೇ ನೀ!' ಅಂತ ಕಾಡಿಸಿದ್ದೇ ಕಾಡಿಸಿದ್ದು. ಅವನೂ ಎಂಜಾಯ್ ಮಾಡುವಷ್ಟು ಮಾಡಿ, 'ಬರೇ ಹಲ್ಕಟ್ ಇದ್ದೀರಿ ನೋಡ್ರಿಲೇ!' ಅಂತ ಪ್ರೀತಿಯಿಂದ ಬೈದುಕೊಳ್ಳುತ್ತ ತನ್ನ ಡೆಸ್ಕಿನತ್ತ ನಡೆದರೆ ಯಾರೋ ಒಬ್ಬವ ಕಿಡಿಗೇಡಿ husky ಧ್ವನಿಯಲ್ಲಿ 'ಏ ಕಾಮ, ಕಾಮ, ಕಾsssಮ,' ಅಂತ ಕೂಗುತ್ತಿದ್ದ. ಆಗಲೇ ಕಾಶಿನಾಥನ ಪರಮ ಪೋಲಿ ಸಿನೆಮಾ 'ಅನಂತನ ಆವಾಂತರ' ಕೂಡ ಬಂದಿತ್ತು. ಅದರಲ್ಲಿ 'ಕಾಮ, ಕಾಮ' ಅನ್ನುವದನ್ನು ವಿಚಿತ್ರ ರೀತಿಯಲ್ಲಿ ಹೇಳುವದನ್ನು ನೋಡಿ ಕಲಿತುಬಂದಿದ್ದ ಕಿಡಿಗೇಡಿಗಳು ಅದನ್ನು ಪಾಪದ ಕಾಮತನಿಗೆ ಅನ್ನಬೇಕೇ? ಅದೇ ಪೋಲಿ ಮೂವಿಯಲ್ಲಿ 'ಕಮಾನ್ ಕಮಾನ್ ಕಾಮಣ್ಣ' ಅನ್ನುವ ಒಂದು ಹಾಡು ಸಹ ಇತ್ತು. ಅದನ್ನೂ ಸಹ ಕಾಮತನ ಮೇಲೆ ಉಪಯೋಗಿಸಿದ್ದರೇ? ಇವತ್ತು ನೆನಪಿಲ್ಲ ಬಿಡಿ. ಯಾಕೆಂದರೆ ನಾವು ಆ ಅನಾಹುತ ಮೂವಿ ನೋಡಿದ್ದು ಭಾಳ ವರ್ಷಗಳ ನಂತರ.
'ಮಹೇಶಾss, ಇವನ ಅಡ್ಡಹೆಸರಾಗss 'ಕಾಮ' ಐತಿ. ಬಾಜೂಕೇ ಅಕಿ ಡೆಡ್ಲಿ ಸುಂದರಿ ಮನಿ. ಹೀಂಗಿದ್ದಾಗ ಈ ಕಾಮ್ಯಾನ ಪರಿಸ್ಥಿತಿ ಏನಾಗಿರಬಹುದು???' ಅಂತ ಖಾಸಗಿ ಜೋಕ್ ಮಾಡಿದ ದೋಸ್ತನ ಹೆಸರನ್ನು ನಾನಂತೂ ಇವತ್ತು ಹೇಳುವದಿಲ್ಲ. ನಮ್ಮಲ್ಲಿ ಏನೇ ಜೋಕಿದ್ದರೂ ಎಲ್ಲ ಓಕೆ. ಅಷ್ಟು ಕ್ಲೋಸ್ ನಾವೆಲ್ಲಾ ಲಾಸ್ಟ್ ಬೆಂಚ್ ಫ್ರೆಂಡ್ಸ್.
೧೯೮೮ ರಲ್ಲಿ ಹತ್ತನೇ ಕ್ಲಾಸ್ ಮುಗಿದ ಮೇಲೆ ಕಾಮತ್ ಧಾರವಾಡ ಬಿಟ್ಟ. ಹೆಚ್ಚಾಗಿ ದಕ್ಷಿಣ ಕನ್ನಡದ ಕಡೆ ಇದ್ದ ಕುಟುಂಬ ಸೇರಿಕೊಂಡ ಅಂತ ನೆನಪು. ಆಮೇಲೆ ಎಷ್ಟೋ ವರ್ಷ ಟಚ್ ಇರಲೇ ಇಲ್ಲ. ೨೦೧೧ ವರೆಗೆ. ೨೦೧೧ ರಲ್ಲಿ ಫೇಸ್ಬುಕ್ ಅಕೌಂಟ್ ತೆಗೆದು ಕೂತಾಗ ಕಾಮ್ಯಾ ಕಂಡುಬಂದ. ಬೆಂಗಳೂರಿನಲ್ಲಿ ಒಂದು ದೊಡ್ಡ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದ. ಫೈನಾನ್ಸ್ ವಿಭಾಗದಲ್ಲಿ. ಆ ಹೋಟೆಲ್ಲಿಗೆ ಭೇಟಿ ಕೊಟ್ಟಿದ್ದ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಜೊತೆ ಸ್ಮಾರ್ಟಾಗಿ ನಿಂತ ಫೋಟೋ ಹಾಕಿದ್ದ ಕಾಮ್ಯಾನಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದೆ. ಹಿಂದೆಂದೋ ಲಿಮ್ಕಾ ಕುಡಿಸಿದ ಗೆಳೆಯನ ಜೊತೆಗೆ ದೋಸ್ತಿ ತುರ್ತಾಗಿ ಬೇಕಾಗಿತ್ತು. ಫೇಸ್ಬುಕ್ ಫ್ರೆಂಡ್ ಆದವನಿಗೆ ಒಂದಿಷ್ಟು ಕಾಡಿಸಿ ಮಷ್ಕಿರಿ ಮಾಡಿದ್ದೆ. ನಮ್ಮ ೧೯೮೮ ರ ಶಾಲೆ ಬ್ಯಾಚಿನ ಫೇಸ್ಬುಕ್ ಗ್ರುಪ್ಪಿಗೆ ನನ್ನನ್ನು ಸೇರಿಸಿದವನೇ ಅವನು. ಅವನು ಸೇರಿಸಿರದಿದ್ದರೆ ನನಗೆ ಅಂಥದ್ದೊಂದು ಗ್ರೂಪ್ ಇರುವದೂ ಗೊತ್ತಾಗುತ್ತಿರಲಿಲ್ಲ. ಅನೇಕಾನೇಕ ಸಹಪಾಠಿಗಳ ಮರು ಪರಿಚಯ ಕೂಡ ಆಗುತ್ತಿರಲಿಲ್ಲ. ಅದಕ್ಕೆಲ್ಲ ಒಂದು ದೊಡ್ಡ ಥ್ಯಾಂಕ್ಸ್ ಕಾಮತನಿಗೆ.
೧೯೮೮ ರ ನಂತರ ಕಾಮತ್ ಭೆಟ್ಟಿಯಾಗಿದ್ದು ೨೦೧೨ ರಲ್ಲಿ. ೨೦೧೨ ಡಿಸೆಂಬರ್. ನಮ್ಮ SSLC ಬ್ಯಾಚಿನ ೨೫ ನೇ ವರ್ಷದ ರಜತಮಹೋತ್ಸವ ಸಮಾರಂಭ. ಧಾರವಾಡದಲ್ಲಿ ದೊಡ್ಡ ಪ್ರಮಾಣದಲ್ಲಿ ಆಚರಿಸಿದೆವು. ಧಾರವಾಡದ ದೋಸ್ತರೆಲ್ಲರೂ ಕೂಡಿ ಸಿಕ್ಕಾಪಟ್ಟೆ ಶ್ರಮವಹಿಸಿ ಒಂದು ಖತರ್ನಾಕ್ ಸಮಾರಂಭ ಏರ್ಪಡಿಸಿದ್ದರು. ಎಲ್ಲ ಕಡೆಯಿಂದ ಸುಮಾರು ೧೫೦-೧೭೫ ಜನ ಬಂದಿದ್ದರು. ಬೆಂಗಳೂರಿಂದ ಕಾಮತ್ ಸಹಿತ ಬಂದಿದ್ದ. ಅದೇ ದಿನಗಳಲ್ಲಿ ಅವನ ಚಿಕ್ಕ ವಯಸ್ಸಿನ ಮಗಳ ನೃತ್ಯದ ಒಂದು ಮುಖ್ಯ ಸಮಾರಂಭ ಕೂಡ ಬೆಂಗಳೂರಿನಲ್ಲಿ ಇತ್ತು. ಆದರೆ ಹಳೆಯ ದೋಸ್ತರನ್ನು ಭೆಟ್ಟಿಯಾಗುವ ಅವಕಾಶ ಮತ್ತೆ ಸಿಗದು ಅಂದುಕೊಂಡ ಕಾಮತ್ ಬಂದೇಬಿಟ್ಟಿದ್ದ. That was simply great. He had put his school friends ahead of his own family.
ಸರಿ. ಮೊದಲ ದಿವಸದ ಸಮಾರಂಭ ಶಾಲೆಯಲ್ಲಿ ಮಸ್ತಾಗಿ ಆಯಿತು. ಹಳೆಯ ಗುರುವೃಂದಕ್ಕೆ ನಮನ, ಸತ್ಕಾರ ಎಲ್ಲ ಸಲ್ಲಿಸಿ, ಹಳೆಯ ಮಿತ್ರರನ್ನು, ಅವರ ಕುಟುಂಬ ವರ್ಗದವರನ್ನು ಎಲ್ಲ ಭೆಟ್ಟಿಮಾಡಿ, ಸಂತಸಪಟ್ಟಿದ್ದು ಆಯಿತು. ಇನ್ನು ಸಂಜೆ ಪ್ರೋಗ್ರಾಂ. ಮತ್ತೇನು? ಪಾರ್ಟಿ. ಅಷ್ಟೇ.
ಶಾಲೆಯ ಸಮಾರಂಭ ಮುಗಿಸಿ, ಸಂಜೆ ಮನೆಗೆ ಬಂದು, ಒಂದು ರೌಂಡ್ ಫ್ರೆಶ್ ಆಗುವ ಪುರಸತ್ತಿಲ್ಲ ಮನೆ ಬಾಗಿಲಲ್ಲಿ ಗಾಡಿ ತಂದು ನಿಲ್ಲಿಸಿದವ ನಮ್ಮ ಹೀರೋ ಅಜೇಯ್ ಕುಲಕರ್ಣಿ. ಅವನ ಕಾರಿನಲ್ಲಿ ಪಯಣ. ದಾರಿಯಲ್ಲಿ ಮಿತ್ರ ಬೀಎಂ ಗಿರೀಶನನ್ನೂ ಪಿಕಪ್ ಮಾಡಿದ್ದಾಯಿತು. ನಂತರ ಸೀದಾ ಹೋಗಿದ್ದು 'ಕರ್ನಾಟಕ ಭವನ' ಹೋಟೆಲ್ಲಿಗೆ. ಅಲ್ಲಿದ್ದ ಮತ್ತೊಬ್ಬ ಖಾಸ್ ದೋಸ್ತ ಅರುಣ ಭಟ್ಟನನ್ನು ಪಿಕಪ್ ಮಾಡಬೇಕಿತ್ತು. ಅಲ್ಲಿ ಮತ್ತೆ ಕಂಡ ಈ ಕಾಮತ್.
ಆವತ್ತು ಬೆಳಿಗ್ಗೆ ಧಾರವಾಡಕ್ಕೆ ಬಂದು ಮುಟ್ಟಿದ್ದ ಕಾಮತ್ ಯಾವದೋ ಸಂಬಂಧಿಕರ ಮನೆಯಲ್ಲಿ ಸ್ನಾನ ಮುಗಿಸಿ ಸೀದಾ ಶಾಲೆಯ ಸಮಾರಂಭಕ್ಕೆ ಬಂದುಬಿಟ್ಟಿದ್ದ. ರಾತ್ರಿಯ ರೂಮಿನ ಬುಕಿಂಗ್ ಆಗಿರಲಿಲ್ಲ. ಕಾಮತನ ಖಾಸ್ ದೋಸ್ತ್ ಅರುಣ ಭಟ್ಟ ತಾನಿರುವ ಜಾಗಕ್ಕೇ ಕರೆದುಕೊಂಡುಹೋಗಿದ್ದ. ನಾವು ಭಟ್ಟನನ್ನು ಪಿಕಪ್ ಮಾಡಲು 'ಕರ್ನಾಟಕ ಭವನ'ಕ್ಕೆ ಹೋದರೆ ಅಲ್ಲಿ ಈ ಕಾಮತ್ ಕೂಡ ಸಿಕ್ಕ. ಪಾರ್ಟಿ ಮಾಡಲು ಹೊರಟವರು ನಾವು. ಜಾಸ್ತಿ ಜನ ದೋಸ್ತರು ಸಿಕ್ಕರೆ ಒಳ್ಳೆಯದೇ. 'ನೀನೂ ಬಾರಲೇ ಕಾಮ್ಯಾ,' ಅಂತ ಅವನನ್ನೂ ಕರೆದುಕೊಂಡೇ ಹೊರೆಟೆವು.
ಅಷ್ಟರಲ್ಲಿ ಕಾಮತನಿಗೂ ರೂಂ ಸಿಕ್ಕು, ಅವನು ರೂಮಿಗೆ ಹೋಗಿ ಸಾಮಾನಿಟ್ಟು ಬಂದ. ಕಾಮತ್ ಮತ್ತು ಭಟ್ ಒಂದು ಕಾರಲ್ಲಿ. ನಾವು ಮತ್ತೊಂದರಲ್ಲಿ. ಗಾಡಿ ತಿರುಗಿಸಿದ್ದು ಹಳೆ NH - ೪ ಮೇಲಿರುವ Ozone ಎಂಬ ಬಾರ್ & ರೆಸ್ಟೋರೆಂಟ್ ಕಡೆಗೆ. ಅದು ಅಜೇಯನ ಸೆಲೆಕ್ಷನ್. ಹೋದ ಮೇಲೆ ಗೊತ್ತಾಯಿತು ಎಂತಹ ಸಕತ್ choice ಅಂತ. ಮಾವಿನ ತೋಪಿನಲ್ಲಿರುವ ಒಳ್ಳೆ ರೆಸ್ಟೋರೆಂಟ್. ಒಳ ಹೋಗಿ ನೋಡಿದರೆ ಮತ್ತೊಂದು ದೋಸ್ತರ ಗುಂಪು ಆವಾಗಲೇ ಅಲ್ಲಿ ಸೇರಿತ್ತು. ಪಾನಕ, ಕೋಸಂಬರಿ ಎಲ್ಲ ಬಂದು ಟೇಬಲ್ ಮೇಲೆ ಕೂತಿತ್ತು. ನಾವೂ ಕೂಡ ಹೋಗಿ ಸೇರಿಕೊಂಡು, ಗಿಚ್ಚಾಗಿ ಪಾರ್ಟಿ ಶುರುಮಾಡಿಕೊಂಡೆವು.
ಜೋರಾಗಿ ಪಾರ್ಟಿ ನಡೆಯಿತು. ಇಪ್ಪತ್ತೈದು ವರ್ಷಗಳ ನಂತರ ಸೇರಿರುವ ಮಿತ್ರರು ಅಂದರೆ ಕೇಳಬೇಕೇ? ಒಂದೆರೆಡು ಪೆಗ್ ಒಳಗೆ ಹೋದ ನಂತರ ಕಾಮತ್ ಕೂಡ ಸಡಿಲವಾಗತೊಡಗಿದ್ದ. ಮೂಡಿಗೆ ಬಂದಿದ್ದ. ಆವಾಗ ನಾನು ಭಾಳ ಮಿಸ್ ಮಾಡಿಕೊಂಡಿದ್ದು ನನ್ನ ಹಳೆ ಲಾಸ್ಟ್ ಬೆಂಚ್ ದೋಸ್ತರಾದ ಅರವಿಂದ ಪಾಟೀಲ, ಮನೋಜ್ ಕರಜಗಿ, ಅಶ್ವಿನ್ ಕಟೀರಾ, ಮಹೇಶ್ ಮುದಗಲ್, ಗಲಗಲಿ ಮುಂತಾದ ಮಿತ್ರರನ್ನು. ಅವರೆಲ್ಲ ಇದ್ದರೆ ಇನ್ನೂ ಮಜಾ ಬರುತ್ತಿತ್ತು. ಕಾಮತ್ ಮೂಡಿಗೆ ಬಂದಾಗ ಅವರೆಲ್ಲ ಇದ್ದರೆ ಹಳೆಯ ನೆನಪುಗಳನ್ನು ಇನ್ನೂ ತಾಜಾ ಮಾಡಿಕೊಂಡು, ಮೊದಲಿನ ಹಾಗೆ, ಅನಂತನ ಆವಾಂತರ ಶೈಲಿಯಲ್ಲಿ 'ಕಾಮ, ಕಾಮ, ಕಾssಮ,' ಅಂತ ಮೂಡಿಗೆ ಬರುತ್ತಿದ್ದ ಕಾಮತನನ್ನು ರೇಗಿಸಿ, ಹಳೆಯ ಡೆಡ್ಲಿ ಸುಂದರಿಯನ್ನು ಮತ್ತೆ ನೆನಪಿಸಿ ಮತ್ತೂ ಒಂದಿಷ್ಟು ಕಿಚಾಯಿಸಬಹುದಿತ್ತು. ಆದರೆ ಅವರ್ಯಾರೂ ಇರಲೇ ಇಲ್ಲ. ಕೆಲವರು reunion ಗೇ ಬಂದಿರಲಿಲ್ಲ. ಇನ್ನೂ ಕೆಲವರು ಪಾರ್ಟಿಗೆ ಬಂದಿರಲಿಲ್ಲ.
ಮೂಡಿಗೆ ಬಂದ ಕಾಮತ್ ಮಜಾ ಮಜಾ ಸುದ್ದಿ ಹೇಳಿದ. ಅದೂ ನಾನು ಕೂಡ ಪ್ರಾಂಪ್ಟ್ ಮಾಡಿದೆ ನೋಡಿ. ಅವನು ಕೆಲಸ ಮಾಡುತ್ತಿದ್ದುದು ಒಂದು ದೊಡ್ಡ ಪಂಚತಾರಾ ಹೋಟೆಲ್ಲಿನಲ್ಲಿ. ಅಲ್ಲಿ ಆದ ಕೆಲವು ಲಫಡಾ ಕಾರ್ನಾಮೆಗಳು ನನಗೆ ಗೊತ್ತಿದ್ದವು. ಕನ್ನಡದ ಟ್ಯಾಬ್ಲಾಯ್ಡ್ ಪತ್ರಿಕೆಗಳ ಮೂಲಕ. ಅವುಗಳ ಬಗ್ಗೆ ಸುಮ್ಮನೆ ಕೆದಕಿಕೊಂಡೆ. ಯಾರಿಗೂ ಗೊತ್ತಿಲ್ಲದಂತಹ ಕೆಲವು ಮಾಹಿತಿಗಳನ್ನು ಕಾಮತ್ ಅಂದು ಹೊರಹಾಕಿದ್ದ. ಕೆಲವು ನಟ ನಟಿಯರು ಆ ಹೋಟೆಲ್ಲಿನಲ್ಲಿ ಮಾಡಿಕೊಂಡ ಲಫಡಾಗಳ ಬಗ್ಗೆ ನನಗೆ ಓದಿ ಗೊತ್ತಿತ್ತು. ಅಲ್ಲೇ ಕೆಲಸ ಮಾಡುತ್ತಿದ್ದ ಕಾಮತನಿಗೆ ಅದರ ಹತ್ತು ಪಟ್ಟು ಮಾಹಿತಿ ಗೊತ್ತಿತ್ತು. ಒಂದು ಹತ್ತು ಕಥೆ ಬರೆಯಬಹುದು ಅವನು ಕೊಟ್ಟ ಮಾಹಿತಿಯಿಂದ. ಮುಂದೆ ಎಂದದಾರೂ ಆ ಮಾಹಿತಿಗಳ ಮೇಲೆ ಕಥೆ ಬರೆದರೆ ಕಾಮತನಿಗೆ ಕ್ರೆಡಿಟ್ ಕೊಡಲೇಬೇಕು. ಜರೂರ್ ಕೊಡೋಣ.
ರಾತ್ರಿ ಜಬರ್ದಸ್ತ್ ಪಾರ್ಟಿ ನಡೆಯಿತು. ನಾನು ಯಾವ ಹೊತ್ತಿಗೆ ಮನೆ ಮುಟ್ಟಿಕೊಂಡೆನೋ ನೆನಪಿಲ್ಲ. ಮನೆ ಮುಟ್ಟಿಸಿದವ ಮಾತ್ರ ಅಜೇಯ್ ಕುಲಕರ್ಣಿ. ಥ್ಯಾಂಕ್ಸ್!
ಮರುದಿವಸ ಕೂಡ ನಮ್ಮ ರಿಯೂನಿಯನ್ ಕಾರ್ಯಕ್ರಮ ಇತ್ತು. ಸಂಜೆ ಧಾರವಾಡ ಸಮೀಪದ ಮಯೂರ್ ರೆಸಾರ್ಟ್ ನಲ್ಲಿ ಪಾರ್ಟಿ. ದಿನ ಪೂರ್ತಿ ಫ್ರೀ. ಬೆಳಿಗ್ಗೆ ಅರುಣ ಭಟ್ ಮನೆಗೆ ಬಂದಿದ್ದ. ನನ್ನ ಅವನ ಸ್ನೇಹಕ್ಕಿಂತ ಅವರ ಕುಟುಂಬ ಮತ್ತು ನಮ್ಮ ಕುಟುಂಬಗಳ ಸ್ನೇಹ ತುಂಬ ಹಳೆಯದು. ಭಟ್ಟನ ಅಜ್ಜ ಐತಾಳರು ನಮ್ಮ ತಂದೆಯವರಿಗೆ ಗುರುಗಳು. ಭಟ್ಟನ ಅಜ್ಜಿ ನಮಗೆ ಲೋಕಲ್ ಅಜ್ಜಿ. ಹಾಗಾಗಿ ಮನೆಗೆ ಬಂದಿದ್ದ ಭಟ್ಟ. ಭಟ್ಟನ ಜೊತೆಗೆ ಕಾಮತ್ ಕೂಡ ಬಂದಿದ್ದ. ಮಾತಾಡುತ್ತ ಕೂತೆವು.
ಶಾಲಾ ದಿವಸಗಳಲ್ಲಿ ಒಂದು ಸಾರೆ ನಮ್ಮ ಮನೆಗೆ ಬಂದಿದ್ದನ್ನು ಕಾಮತ್ ನೆನಪಿಸಿಕೊಂಡ. ಆವಾಗ ನಮ್ಮ ಅಮ್ಮ ಮಾಡಿಕೊಟ್ಟ ಕಾಫಿ ಕೂಡ ನೆನಪಿಸಿಕೊಂಡ. 'ಆವಾಗಿನ ಕಾಫೀ ಸಹಿತ ನೆನಪಿಟ್ಟಿಯಾ ನೀನು? ಈಗ ಇನ್ನೊಮ್ಮೆ ಕಾಫಿನೇ ಮಾಡಿಕೊಡ್ತೇನಿ. ಕುಡಿದು ಹೋಗಿಯಂತ,' ಅಂತ ಹೇಳಿದ ಅಮ್ಮನ ಅಕ್ಕರೆಯಿಂದ ಭಟ್ಟ, ಕಾಮತ್ ಎಲ್ಲ ಫುಲ್ ಖುಷ್.
ಸಂಜೆ ಆರರಿಂದ ಮಯೂರ್ ರೆಸಾರ್ಟ್ ನಲ್ಲಿ ನಮ್ಮ ಪಾರ್ಟಿ. ಕಾಮತನಿಗೆ ಅಂದು ರಾತ್ರಿಯೇ ವಾಪಸ್ ಬೆಂಗಳೂರಿಗೆ ಹೋಗಬೇಕಿತ್ತು. ಆದರೂ ಸುಮಾರು ಒಂಬತ್ತು ಘಂಟೆವರೆಗೆ ಇದ್ದ. ಪಾರ್ಟಿ, ಹಾಡು, ನೃತ್ಯ ಎಲ್ಲ ಶುರುವಾಗಿದ್ದೇ ನಂತರ. ಅದನ್ನೆಲ್ಲ ಮಿಸ್ ಮಾಡಿಕೊಂಡ. ನಾವೂ ಅವನನ್ನು ಮಿಸ್ ಮಾಡಿಕೊಂಡೆವು. ಎಲ್ಲರಿಗೂ ಗುಡ್ ಬೈ ಹೇಳಿ ಬೆಂಗಳೂರ್ ಬಸ್ ಹತ್ತಿದ ಕಾಮತ್. ಅದೇ ಕೊನೆ. ನಮ್ಮ ಪಾರ್ಟಿ ರಾತ್ರಿ ಎರಡು ಘಂಟೆ ತನಕ ನಡೆಯಿತು. ಧಾರವಾಡದ ಡಾನ್, ನಮ್ಮ ಮಿತ್ರ, ಜಂಗಣ್ಣವರ ಎಲ್ಲರ ಖಾತಿರ್ದಾರಿ ಮಾಡಿದ. ಬಾರ್ ಬಂದಾದ ಮೇಲೂ, 'ಲೇ, ಜಂಗ್ಯಾ, ಇನ್ನೂ ಬಿಯರ್ ಬೇಕಲೇ. ತರಿಸೋ ಮಾರಾಯಾ' ಅಂತ ನಮ್ಮಂತವರು ರೋಧಿಸಿದರೆ, 'ಒಂದೇ ಮಿನಿಟ್ ಅಣ್ಣಾ. ತರಿಸೇಬಿಟ್ಟೆ. ಎಂಜಾಯ್ ಮಾಡು ನೀ!' ಅಂದ ಡಾನ್ ಜಂಗಣ್ಣವರ ಬರೋಬ್ಬರಿ 'ತೀರ್ಥ'ಯಾತ್ರೆ ಮಾಡಿಸಿದ್ದ. ಕಾಮತ್ ಎಲ್ಲೋ ಬಸ್ಸಿನಲ್ಲಿ ಕೂತಿರಬೇಕು ಆ ಹೊತ್ತಿನಲ್ಲಿ. ಎಷ್ಟು ಮಿಸ್ ಮಾಡಿಕೊಂಡನೋ. ನಾವೂ ಅಷ್ಟೇ ಮಿಸ್ ಮಾಡಿಕೊಂಡೆವು.
ನಂತರ ಫೋನ್ ನಲ್ಲಿ ಟಚ್ ಇತ್ತು. ೨೦೧೩, ೨೦೧೪ ಡಿಸೆಂಬರ್ ನಲ್ಲಿ informal reunion ಗಳನ್ನು ಮಾಡಿದಾಗ ಧಾರವಾಡಕ್ಕೆ ಬರಲಾಗದಿದ್ದಕ್ಕೆ ತುಂಬಾ ಫೀಲ್ ಮಾಡಿಕೊಂಡಿದ್ದ. We also missed you, Kamat!
ಕೆಲವು ತಿಂಗಳ ಹಿಂದೆ ಸಹಜವಾಗಿ ಫೋನ್ ಮಾಡಿದ್ದೆ. ಬೆಂಗಳೂರಿನಲ್ಲಿ ಕೆಂಗೇರಿ ಕಡೆ ಒಂದು ಫ್ಲಾಟ್ ತೆಗೆದುಕೊಂಡೆ ಅಂದ. 'ನಿನ್ನ ಕೆಲಸದ ಜಾಗಕ್ಕೆ ಅದು ತುಂಬಾ ದೂರವಲ್ಲವೇ?' ಅಂತ ಕೇಳಿದೆ. 'ದೂರ ಹೌದು. ಆದರೆ ಪತ್ನಿಗೆ, ಮಕ್ಕಳಿಗೆ ಎಲ್ಲ ಅನುಕೂಲವಾಗುತ್ತದೆ. ಅವರ ಕಂಫರ್ಟ್ ಮುಖ್ಯ. ನನ್ನದೇನು? ಮ್ಯಾನೇಜ್ ಮಾಡುತ್ತೇನೆ. ನನ್ನ ಹತ್ತಿರ ಬೈಕಿದೆ. It's OK,' ಅಂದ. What a devoted family man! ಅಂತ ಅನ್ನಿಸಿತ್ತು. ಮನದಲ್ಲೇ ಒಂದು hats off ಹೇಳಿ ಸಂಭಾಷಣೆ ಮುಗಿಸಿದ್ದೆ.
ನಂತರವೂ ಒಂದೆರೆಡು ಸಲ ಮಾತಾಡಿದ್ದೆ. ಈ ವರ್ಷ ಅಯ್ಯಪ್ಪ ಮಾಲೆ ಹಾಕಿದ್ದ. ವ್ರತ ಮುಗಿಸಿಬಂದ ಮೇಲೋ ಅಥವಾ ಅಲ್ಲಿಗೆ ಹೋಗುತ್ತಿರುವಾಗಲೋ ಫೋನ್ ಮಾಡಿದ್ದೆ. ಅಯ್ಯಪ್ಪನ ಮಾಲೆ ವ್ರತವನ್ನು ಯಶಸ್ವಿಯಾಗಿ ಮುಗಿಸಿದ್ದಕ್ಕೆ ಅಭಿನಂದಿಸಿದ್ದೆ. ಅದೇ ಕೊನೆ ಬಾರಿ ಮಾತಾಡಿದ್ದು ಅಂತ ಕಾಣುತ್ತದೆ. ಹೊಸ ಫ್ಲಾಟಿನ ಗೃಹಪ್ರವೇಶಕ್ಕೆ ಎಲ್ಲರನ್ನೂ ಆಹ್ವಾನಿಸಿದ್ದ. ನಂತರ ಬೆಂಗಳೂರಿನ ಲೋಕಲ್ ಮಂದಿ ಮಾಡಿದ ಕಾರ್ಯಕ್ರಮಗಳಲ್ಲೂ ಅವನ ಫೋಟೋ ನೋಡಿದ್ದೆ. ಖುಷಿಪಟ್ಟಿದ್ದೆ.
ಮೊನ್ನೆ ಮಾತ್ರ ತನ್ನ ನಲವತ್ತಮೂರನೆಯ ಜನ್ಮದಿನ ಆಚರಿಸಿಕೊಂಡಿದ್ದ. ಆದರೆ ಇವತ್ತು ಇಲ್ಲ. ಬೆಂಗಳೂರಿನಲ್ಲಿ ಆದ ರಸ್ತೆ ಅಪಘಾತವೊಂದರಲ್ಲಿ ಕಾಮತ್ ಮೃತನಾಗಿದ್ದಾನೆ. ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.
ಮೊನ್ನೆ ರಾತ್ರಿ ಸುಮಾರು ೯.೩೦ ರ ಹೊತ್ತಿಗೆ ಆಫೀಸ್ ಕೆಲಸ ಮುಗಿಸಿ ಬೈಕಿನಲ್ಲಿ ಮನೆಗೆ ಹೊರಟಿದ್ದಾನೆ. ಮನೆ ಹತ್ತಿರ ಬಂದಾಗ ಕೆಂಗೇರಿಯಲ್ಲಿ ಹಿಂದಿನಿಂದ ಟಿಪ್ಪರ್ ಲಾರಿ ಬಂದು ಅಪ್ಪಳಿಸಿದೆ. ಗಾಯಗೊಂಡವನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ದುರಾದೃಷ್ಟ. ಕಾಮತ್ ಬದುಕುಳಿಯಲಿಲ್ಲ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ, ಮೈ ಫ್ರೆಂಡ್, ಕಾಮತ್!
ನಮಗೆ ಯಾರಿಗೂ ಸುದ್ದಿ ಗೊತ್ತಿರಲಿಲ್ಲ. ಅವನ ಪರಿಚಿತರಾರೋ ಕಾಮತನ ಫೇಸ್ಬುಕ್ ವಾಲ್ ಮೇಲೆ ಒಂದು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಅದನ್ನು ನೋಡಿದ ನಮ್ಮ ಮತ್ತೊಬ್ಬ ಕ್ಲಾಸ್ಮೇಟ್ ಅದನ್ನು ನಮ್ಮ ಸ್ಕೂಲ್ ಫೇಸ್ಬುಕ್ ಗುಂಪಿನಲ್ಲಿ ಹಂಚಿಕೊಂಡಿದ್ದಾರೆ. ಕಾಮತನಿಗೆ ಭಾಳ ಕ್ಲೋಸ್ ಆಗಿದ್ದ ಅರುಣ ಭಟ್ಟನನ್ನು ಸಂಪರ್ಕಿಸಿದ್ದಾರೆ. ಭಟ್ಟನಿಗೂ ಮಾಹಿತಿಯಿಲ್ಲ. ಏನೇ ಇರಲಿ ಅಂತ ಕಾಮತನ ಮೊಬೈಲ್ ನಂಬರಿಗೇ ಫೋನ್ ಮಾಡಿದ್ದಾನೆ ಭಟ್. ಫೋನ್ ಎತ್ತಿದಾಕೆ ಕಾಮತನ ಧರ್ಮಪತ್ನಿ. ತಣ್ಣಗೆ ಹೇಳಿದ್ದಾಳೆ, 'ನಿಮ್ಮ ಮಿತ್ರ ಇನ್ನಿಲ್ಲ!' ಅಂತ. ಅದೇನು ಸಂಯಮ, ಅದೇನು fortitude ಆಕೆಯದು! ಅದಕ್ಕೊಂದು ಸಲಾಂ!
ಕಾಮತ್ ತೀರಿಹೋಗಿದ್ದಾನೆ ಅಂತ ಹೀಗೆ ಖಾತ್ರಿಯಾಗಿದೆ. ನಾವಿಲ್ಲಿ ಮುಂಜಾನೆ ಎದ್ದು ಬಂದು FB ಮೇಲೆ ನೋಡಿದರೆ ಇಷ್ಟು ಸುದ್ದಿ. ಕಾಮತ್ ಏನೋ ಹೋಗಿಬಿಟ್ಟ. ಆದರೆ ನೆನಪುಗಳು ಮತ್ತು ನೋವು??? ಅದು ನಿರಂತರ.
ಹೇಳಲು ಕೇಳಲು ಏನೂ ಉಳಿದಿಲ್ಲ. ಕಾಮತನ ಆತ್ಮಕ್ಕೆ ಶಾಂತಿ ಸಿಗಲಿ. ಅವನ ಕುಟುಂಬಕ್ಕೆ ಅವನ ಸಾವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ. ಅವರಿಗೆ ಎಲ್ಲ ಒಳ್ಳೆಯದಾಗಲಿ. ಇದು ಎಲ್ಲ ದೋಸ್ತರ ಹಾರೈಕೆ.
Kamat, miss you man. May your soul rest in peace!
ಮಯೂರ್ ರೆಸಾರ್ಟ್ ನಲ್ಲಿ ಕಾಮತ್ . ಇದೇ ಕೊನೆ. ನಂತರ ಭೆಟ್ಟಿಯಾಗಲೇ ಇಲ್ಲ! :( |