Friday, April 03, 2015

ಧಾರವಾಡದ ರವಿ ಕುಂದಗೋಳನ 'ಬಂಧನ'ದ ಹಿಂದೆ ಅಂಡರ್ವರ್ಲ್ಡ್ ಡಾನ್ ಜಂಗಣ್ಣವರನ ಕರಿನೆರಳು!

ಬಂಧನಕ್ಕೊಳಗಾಗಿ ಮಾವನಮನೆ ಸೇರಿದ ಧಾರವಾಡದ ಮಿತ್ರ ರವೀಂದ್ರ ಕುಂದಗೋಳ
ಈ ಪುಣ್ಯಾತ್ಮ ರವಿ ಕುಂದಗೋಳ ಬಂಧನಕ್ಕೆ ಒಳಗಾಗಿ, ಅಂದರ್ ಆಗಿ, ಮಾವನಮನೆಗೆ ಹೋಗುವದು ಖಚಿತವಿತ್ತು. ಅದಕ್ಕೆ ಬರೋಬ್ಬರಿ ಮುಹೂರ್ತವೂ ನಿಕ್ಕಿಯಾಗಿತ್ತು. ಇಟ್ಟ ಮುಹೂರ್ತಕ್ಕೆ ಸರಿಯಾಗಿ ಧಾರವಾಡದ ಪುರಾತನ ಮಿತ್ರ ಕುಂದ್ಯಾ ಉರ್ಫ್ ಕುಂದಗೋಳ ರವ್ಯಾ ಉರ್ಫ್ ರವೀಂದ್ರ ಕುಂದಗೋಳ ಬಂಧನಕ್ಕೊಳಗಾಗಿದ್ದಾನೆ. ಅರೆಸ್ಟ್ ಆಗಿಬಿಟ್ಟಿದ್ದಾನೆ. ಸಿಗಬೇಕಾದ ಸ್ಥಿತಿಯಲ್ಲೇ ಸಿಕ್ಕವನನ್ನು, ಬರೋಬ್ಬರಿ ಸನ್ಮಾನ ಮಾಡಿ, ಘಟ್ಟಿಯಾಗಿ ಬಂಧಿಸಿ, ಸೀದಾ ಮಾವನ ಮನೆಗೇ ಕಳಿಸಿಬಿಟ್ಟಿದ್ದಾರೆ. ಇನ್ನು ಮಾವನ ಮನೆಯಲ್ಲಿ ಒಂದಿಷ್ಟು ದಿನ ಉಪಚಾರ, ಸತ್ಕಾರ ಎಲ್ಲ ಮಾಡಿಸಿಕೊಂಡ ಮೇಲೆ ಜಾಮೀನು ಸಿಕ್ಕರೆ ಪುನಃ ತನ್ನ ಧಾರವಾಡ ಸಮೀಪದ ಕ್ಯಾರಕೊಪ್ಪದ ಫಾರ್ಮ್ ಹೌಸಿಗೆ ಬಂದು ತನ್ನ ವ್ಯವಸಾಯ ಮುಂದುವರೆಸುವ ನಿರೀಕ್ಷೆ ಇದೆ.  ಆದರೆ ನಮ್ಮ ದೋಸ್ತ ಕುಂದ್ಯಾ ಅದೆಂತಹ ಒಳ್ಳೆ ಲಫಡಾ ಮಾಡಿಕೊಂಡು ಕೂತಿದ್ದಾನೆ ಅಂದರೆ ಜೀವಾವಧಿ ಶಿಕ್ಷೆ, ಇದು ಜೀವನ ಪರ್ಯಂತ ಇರುವ ಬಂಧನ ಅಂತ ಎಲ್ಲರಿಗೂ ಖಾತ್ರಿಯಾಗಿದೆ. ಹಾಗೆಯೇ ತುಂಬ ಖುಷಿಯೂ ಆಗಿದೆ. ಸರಿ ಸುಮಾರು ಇಪ್ಪತ್ತು ವರ್ಷದಿಂದ ಬಂಧನಕ್ಕೆ ಒಳಗಾಗದೇ, ಧಾರವಾಡದಲ್ಲೇ ತಿರುಗಾಡಿಕೊಂಡಿದ್ದ ನಮ್ಮ ಜಮಾನಾದ ಪುರಾತನ ಪಾಪಿಯೊಬ್ಬನನ್ನು ಬಂಧನಕ್ಕೆ ಒಳಪಡಿಸಿದ ಕುಂದಗೋಳನ ಬಂಧುಗಳನ್ನು, ಸ್ನೇಹಿತರನ್ನು ಎಲ್ಲರೂ ಅಭಿನಂದಿಸಿದ್ದಾರೆ. ಸಾಮಾನ್ಯವಾಗಿ ಪಾತಕಿಗಳನ್ನು ಬಂಧನಕ್ಕೆ ಒಳಪಡಿಸಿ, ಅಂದರ್ ಮಾಡುವವರು ಪೊಲೀಸರು. ಆದರೆ ನಮ್ಮ ಮಿತ್ರ ಕುಂದಗೋಳನ ಕೇಸಿನಲ್ಲಿ ಅವನ ಮಿತ್ರರು, ಕುಟುಂಬದವರು, ಬಂಧುಗಳು ಎಲ್ಲ ಕೂಡಿಯೇ ಅವನನ್ನು ಬಂಧನಕ್ಕೆ ತಳ್ಳಿ, ಮಾವನಮನೆಗೆ ಬ್ಯಾಂಡು ಬಾಜಾ ಬಜಂತ್ರಿಯೊಂದಿಗೆ ಕಳಿಸಿ ಬಂದಿದ್ದು ಒಂದು ದೊಡ್ಡ ವಿಶೇಷವೇ.

ಮಿತ್ರ ಕುಂದ್ಯಾ ಬಂಧನಕ್ಕೆ ಸಿಲುಕಿ, ಮಾವನಮನೆ ಸೇರುವ ಬಗ್ಗೆ ಸುಳಿವು ಮೂರು ತಿಂಗಳ ಹಿಂದೆಯೇ ಸಿಕ್ಕಿತ್ತು. ಆಗ ಅಂದರೆ ೨೦೧೪ ಡಿಸೆಂಬರ್ ನಲ್ಲಿ ನಾನು ಧಾರವಾಡದಲ್ಲಿಯೇ ಇದ್ದೆ. ಪ್ರತಿ ದಿನ ರಾತ್ರಿ ನಮ್ಮ ಗೆಳೆಯರೆಲ್ಲರ ಪಾರ್ಟಿ. ಅಂತಹ ಒಂದು ಪಾರ್ಟಿಯಲ್ಲಿ ನನ್ನ ಎದುರೇ, ಕ್ರೇಟುಗಟ್ಟಲೆ ಕಿಂಗ್ ಫಿಷರ್ ಬಿಯರು ಖಾಲಿ ಮಾಡುತ್ತ, ಬಾಟಲಿಗಟ್ಟಲೆ ವಿಸ್ಕಿ ಹೀರುತ್ತ, ಗೆಳೆಯರೆಲ್ಲರ ಸಮ್ಮುಖದಲ್ಲಿಯೇ ಕುಂದ್ಯಾನನ್ನು ಸಿಗಿಸಿ ಹಾಕುವ, ಬಂಧನಕ್ಕೆ ಒಳಪಡಿಸುವ, ಒಳಗೆ ಕಳಿಸುವ ಕರಾಳ ಸಂಚೊಂದು ರೂಪಿತವಾಗಿತ್ತು. ವಿಸ್ತೃತವಾಗಿ ಚರ್ಚೆ ಕೂಡ ಆಗಿತ್ತು. ವಿಚಿತ್ರವೆಂದರೆ ಕುಂದಗೋಳನೂ ಸಹ ಅಲ್ಲೇ ಇದ್ದ. ಸಂಚಿನ ವಿವರವನ್ನೆಲ್ಲ ಕೇಳುತ್ತ, ಅವನೂ ನಗುತ್ತಲೇ ಕೂತಿದ್ದ. ಗಿಚ್ಚಾಗಿ ಕಿಂಗ್ ಫಿಷರ್ ಬಿಯರ್ ಕುಡಿಯಬೇಕು ಅಂತ ಅವನಿಗೆ ಆಸೆ. ಆದ್ರೆ ಎಲ್ಲರೂ ಅವನಿಗೆ 'ಲೇ! ಮಂಗ್ಯಾನಿಕೆ! ಸಾಕು ಭಾಳ ಕುಡಿಬ್ಯಾಡಲೇ ರವ್ಯಾ. ಮಾವನ ಮನಿಯಾಗ ಸಿಗಂಗಿಲ್ಲ,' ಅನ್ನುತ್ತಿದ್ದರು. ಕುಂದಗೋಳ ರವ್ಯಾನಿಗೆ ತನ್ನನ್ನು ಸಿಗಿಸಿ ಹಾಕುವ, ಬಂಧನಕ್ಕೆ ಈಡು ಮಾಡುವ ಸಂಚಿನ ವಿವರ ತಿಳಿಯಲಿಲ್ಲವೇ? ಆಥವಾ ತಿಳಿದೂ ತಿಳಿದೂ, ಸಂಚಿನ ಸುಳಿಗೆ ಸಿಕ್ಕು, ಏನೂ ಮಾಡಲಾಗದೇ, ಬಂಧಿತನಾಗಿ, ಅಬ್ಬೇಪಾರಿಯಂತೆ ಅಂದರ್ ಆಗಿ, ಒಳಗೆ ಸೇರಿಹೋದನೇ? ಬಲಿಗೆ ಕೊಡುವ ಬಕರಾ ತನಗೆ ಮಾಲೆ ಹಾಕಿದ್ದಾರೆ, ಅಪ್ಪಿ ಹಿಡಿದುಕೊಂಡಿದ್ದಾರೆ, ಪ್ರೀತಿ ಮಾಡುತ್ತಿದ್ದಾರೆ ಅಂತ ಒಂದು ರೀತಿಯ ಸಂತೋಷದಲ್ಲಿ ಇರುತ್ತದೆಯಂತೆ. ಅದೇ ರೀತಿ ಮಿತ್ರ ಕುಂದಗೋಳ ಸಹ ಆಗಿಹೋಗಿ, ನಗುನಗುತ್ತಲೇ ಬಂಧನಕ್ಕೆ ಒಳಗಾಗಿ, ಮಾವನಮನೆಗೆ ಹೋಗಿಬಿಟ್ಟನೇ? ಮುಂದೆ ಸಿಕ್ಕಾಗ ಕೇಳಬೇಕು.

ಕುಂದಗೋಳ ರವ್ಯಾನನ್ನು ಸಿಗಬಾರದ ರೀತಿಯಲ್ಲಿ ಸಿಗಿಸಿ, ಬಂಧನಕ್ಕೆ ಒಳಗಾಗುವಂತೆ ಸಂಚು ರೂಪಿಸಿ, ಬರೋಬ್ಬರಿ ಕಾರ್ಯಾಚರಣೆ ಮಾಡಿ, ಎನ್ಕೌಂಟರ್ ಮಾಡಿ, ಮೀಸೆ ತಿರುವಿದವನೂ ಸಹ ನಮ್ಮ ಮತ್ತೊಬ್ಬ ಪುರಾತನ ಮಿತ್ರನೇ. ತುಂಬಾ ಒಳ್ಳೆ ಮನಸ್ಸಿನ ಖತರ್ನಾಕ್ ಕೇಡಿ ಜಂಗ್ಯಾ ಉರ್ಫ್ ಜಂಗಣ್ಣವರ ಶಿವ್ಯಾ ಉರ್ಫ್ ಶಿವಾನಂದ ಜಂಗಣ್ಣವರ ಎಂಬ ಸ್ಥಳೀಯ ಭೂಗತ ಡಾನ್ ಖುದ್ದಾಗಿ ನಿಂತು ಮಾಡಿಸಿದ ಬಂಧನವಿದು. ಯಾರ್ಯಾರನ್ನೋ ಯಾವ್ಯಾವದೋ ರೀತಿಯಲ್ಲಿ ಬರೋಬ್ಬರಿ ಸಿಗಿಸಿದ ಅನುಭವ ಇರುವ, ಮಗುವಿನ ಮನಸ್ಸಿನ ಅಂಡರ್ವರ್ಲ್ಡ್ ಡಾನ್ ಜಂಗಣ್ಣವರ ದೊಡ್ಡ ಕಾರ್ಯವೊಂದನ್ನು ಸಾಧಿಸಿ, ಧಾರವಾಡದ ಭೂಗತ ಲೋಕದ ಮತ್ತೊಂದು ಮೆಟ್ಟಿಲು ಏರಿ, ತನ್ನ ಭಾವ್ ಹೆಚ್ಚಿಸಿಕೊಂಡಿದ್ದಾನೆ. ಇನ್ನೂ ಮೂವರು ನಾಲ್ವರು ರವಿ ಕುಂದಗೋಳನಂತಹ ಬಕರಾಗಳು ಧಾರವಾಡದಲ್ಲಿ ಇದ್ದು, ಅವರನ್ನೂ ಸಹ ಹೇಗಾದರೂ ಮಾಡಿ ಬಂಧನಕ್ಕೆ ಸಿಲುಕಿಸಿ, ಅಂದರ್ ಮಾಡಿಸಿ, ಮಾವನಮನೆಗೆ ಕಳಿಸುವ ಸುಪಾರಿಯನ್ನು ಸಹ ಧಾರವಾಡದ ಡಾನ್ ಶಿವಾನಂದ ಜಂಗಣ್ಣವರನಿಗೇ ಕೊಡಲಾಗಿದೆ ಅಂತ ಸುದ್ದಿ ಬಂದಿದೆ.

ಧಾರವಾಡದ ಡಾನ್ ಶಿವಾನಂದ ಜಂಗಣ್ಣವರ (ನಮ್ಮ ಮಿತ್ರ)

ಸುಪಾರಿ ಕೊಟ್ಟವರು ಡಾನ್ ಜಂಗಣ್ಣವರನಿಗೆ ಅದರ ಜೊತೆಗೆ ಸುಣ್ಣ ಕೊಡಲೇ ಇಲ್ಲ ಅಂತ ಸಿಟ್ಟಿಗೆದ್ದ ಜಂಗಣ್ಣವರ 'ಯಾರದ್ದಾರ ಕುಂಡಿಗೆ ಹಚ್ಚಾಕ ಬೇಕು ಅಂದ್ರ ಬೇಕಾದಷ್ಟು ಸುಣ್ಣಾ ಕೊಡ್ತೀರಿ ಸೂಳಿಮಕ್ಕಳಾ. ಈಗ ಸುಪಾರಿ ಜೊತಿ ಸುಣ್ಣಾ ಕೊಡಾಕ ಏನು ಧಾಡಿ ಆಗೈತಿ ನಿಮಗ? ಹಾಂ?' ಅಂತ ರೌದ್ರಾವತಾರದಿಂದ ಅಬ್ಬರಿಸಿದ್ದಾನೆ. ಅಲ್ಲೇ ಪಕ್ಕದ ಚುಟ್ಟಾ ಅಂಗಡಿಯಿಂದ ಸುಣ್ಣ ತೆಗೆದುಕೊಂಡು ಎಲೆಗೆ, ಕರಿಯಲೆಗೆ ಹಚ್ಚಿಕೊಂಡು, ರಾಶಿಯಡಿಕೆ ಜೊತೆಗೆ, ಸುಪಾರಿ ಎಲೆ ಅಡಿಕೆ ಕಚಪಚಾ ಅಂತ ಅಗಿದು, ಪಿಚಕ್ ಅಂತ ರಸ್ತೆಯ ಆಕಡೆ ಹೋಗಿ ಬೀಳುವಂತೆ ಎಲೆ ಅಡಿಕೆ ಕೆಂಪ ಪಿಚಕಾರಿ ಹಾರಿಸಿ, ಡಾನ್ ದಾವೂದ್ ಇಬ್ರಾಹಿಮ್ಮನ ಹಾಗೆ ಗಹಗಹಿಸಿ ನಕ್ಕಿದ್ದಾನೆ ಧಾರವಾಡ ಡಾನ್ ಜಂಗಣ್ಣವರ.  'ಹೋಗಿ ಆರಾಮ್ ಮಕ್ಕೋರಿ ಎಲ್ಲಾರು. ನಾ ಸುಪಾರಿ ತೊಗೊಂಡೆ ಅಂದ್ರ ಮುಗೀತು. ಕುಂದಗೋಳ ರವ್ಯಾನ ಹ್ಯಾಂಗ ಅಂದರ್ ಮಾಡಿಸಿದೆ ನೋಡಿದರೋ ಇಲ್ಲೋ? ಗ್ಯಾರಂಟೀ ಕೊಡತೇನಿ,' ಅಂತ ಹೇಳಿ, ಫುಲ್ ಆಶ್ವಾಸನೆ ಕೊಟ್ಟು, ತನ್ನ ಪಟಪಟಿ (ಬೈಕ್) ಹತ್ತಿ ಹೋಗಿಬಿಟ್ಟಿದ್ದಾನೆ.

ಡಾನ್ ಜಂಗಣ್ಣವರನಿಗೆ ಸುಪಾರಿ ಕೊಟ್ಟವರು ಮುಂದೆ ಬಂಧನಕ್ಕೆ ಒಳಗಾಗುವವರು ಯಾರು ಅನ್ನುವ ಕಾತುರದಲ್ಲಿದ್ದಾರೆ. ಯಾರ್ಯಾರ ಮೇಲೆ ಸುಪಾರಿ ಕೊಡಲ್ಪಟ್ಟಿದೆಯೋ ಅವರೆಲ್ಲ ತಮ್ಮ ತಮ್ಮ ಜನಿವಾರ, ಶಿವದಾರ, ಉಡದಾರ ಹಿಡಿದುಕೊಂಡು ಜಪ ಶುರು ಮಾಡಿಕೊಂಡಿದ್ದಾರೆ. ಯಾರೇ ಬಂಧನಕ್ಕೆ ಒಳಗಾದರೂ ಸುಪಾರಿ ಕೊಟ್ಟವರಿಗೆಲ್ಲ ಸಿಕ್ಕಾಪಟ್ಟೆ ಖುಷಿಯೋ ಖುಷಿ. ಅವರ ಬಂಧನದ ಜೊತೆಗೆ ಒಳ್ಳೆ ಊಟ, ಮೇಜವಾನಿ ಇವರಿಗೆ. ಬಂಧಿತರಾದವರೂ ಸಹ ಖುಷಿಯಿಂದ ಬಂಧನಕ್ಕೆ ಒಳಗಾಗಿ ಮಾವನ ಮನೆ ಸೇರಿಕೊಳ್ಳುತ್ತಿದ್ದಾರೆ. ಒಳ್ಳೆ ಕೆಲಸ ಮಾಡಿ ಬಂಧಿತರಾಗಿ, ಜೀವಾವಧಿ ಬಂಧನಕ್ಕೆ ಒಳಗಾಗುತ್ತಿದ್ದಾರೆ. ಡಾನ್ ಜಂಗಣ್ಣವರ ಅಂತಹ ಖತರ್ನಾಕ್ ಗೇಮ್ ಬಾರಿಸಿ, ದೊಡ್ಡ ಕೆಲಸ ಮಾಡಿ, ಸಿಕ್ಕಾಪಟ್ಟೆ ಪುಣ್ಯ ಗಳಿಸಿದ ಸಂತೋಷದಲ್ಲಿ ಹುರುಪಿನಿಂದ ಮುಂದಿನ ಸುಪಾರಿ ಹೇಗೆ ಕಾರ್ಯಗತ ಮಾಡಬೇಕು ಅನ್ನುವದರ ಬಗ್ಗೆ ಸ್ಕೀಮ್ ಹಾಕಲು, ಸ್ಕೆಚ್ ಹಾಕಲು ಶಿವಾಯ ನಮಃ ಅಂತ ದೊಡ್ಡ ರುದ್ರಾಕ್ಷಿ ಮಾಲೆ ಧರಿಸಿ, ಪದ್ಮಾಸನ ಹಾಕಿ ಕೂತುಬಿಟ್ಟಿದ್ದಾನೆ. ಮುಂದೆ ಯಾರಿಗೆ ಕಾದಿದೆಯೋ ಡಾನ್ ಜಂಗಣ್ಣನ ಬಂಧನದ ಗ್ರಹಚಾರ?!

ಡಾನ್ ಜಂಗಣ್ಣವರನಿಗೆ ಧಾರವಾಡದ ತುಂಬೆಲ್ಲ ಎಲ್ಲರೂ ಜೈ ಜೈಕಾರ ಹಾಕುತ್ತಿದ್ದಾರೆ. ಮೊದಲೇ ಐವತ್ತಾರು ಇಂಚಿನ ಛಾತಿಯ ಖ್ಯಾತಿಯ ಡಾನ್ ಜಂಗಣ್ಣವರನ ಛಾತಿ (ಎದೆ) ಈ ಮಂದಿ ಹಾಕಿದ ಜೈಕಾರ ಕೇಳಿ ಹೆಮ್ಮೆಯಿಂದ ಮತ್ತಿಷ್ಟು ಉಬ್ಬಿದ್ದಕ್ಕೆ ಅವನ ಅಂಗಿಯ ಗುಂಡಿಗಳೆಲ್ಲ, ಕುಂದಗೋಳನ ವಿಷಯದಲ್ಲಿ ಮಾಡಿದ ಒಳ್ಳೆ ಗಂಡಾಗುಂಡಿಯಿಂದ, ಫಟ್ ಫಟ್ ಅಂತ ಹರಿದು ಬಿದ್ದುಹೋಗಿವೆ.  'ಅವನಾಪನಾ! ಎಂತಾ ಗುಂಡಿ ಇಟ್ಟು ಅಂಗಿ ಹೊಲಿತಾರಲೇ ಈಗಿನ ಸಿಂಪಿಗ್ಯಾ ಮಂದಿ? ಅವರೌವ್ವರ ಹಡಶಿ ಮಕ್ಕಳು' ಅಂತ ಡಾನ್ ಜಂಗಣ್ಣವರ ಅಬ್ಬರಿಸಿ, ಅಂಗಿ ಹೊಲಿದ ಟೇಲರ್ ಮಂದಿಯ ಗೇಮ್ ಬಾರಿಸಿಬಿಡುವದಾಗಿ ಹೊರಡಲು ತಯಾರಾದರೆ, ಅವನಿಗೆ ಸುಪಾರಿ ಕೊಟ್ಟ ಮಂದಿ, 'ಅಣ್ಣಾ  ಜಂಗಣ್ಣಾ! ಅಂಗಿ ಹೊಲಿದ ಟೇಲರಿಗೆ ಆಮ್ಯಾಲೆ ಹೆಟ್ಟಿ ಬಂದಿಯಂತ. ಸುಪಾರಿ ಕೊಟ್ಟ ಮಂದಿಯ ಕೆಲಸ ಮೊದಲು ಮುಗಿಸಿ, ಅವರನ್ನೂ ಬಂಧನಕ್ಕೆ ಒಳಗಾಗುವಂತೆ ಮಾಡಿಬಿಡೋ' ಅಂತ ಅಂಬೋ ಅಂದಿದ್ದಾರೆ. ಆವಾಗ ತನ್ನ ಜೀವನದ, ಧಾರವಾಡ ಭೂಗತ ಲೋಕದ ಆದ್ಯತೆಗಳು ಡಾನ್ ಜಂಗಣ್ಣವರನಿಗೆ ಬರೋಬ್ಬರಿ ಅರ್ಥವಾಗಿ ಮತ್ತೆ ಮೊದಲಿನ ಸುಪಾರಿಗಳನ್ನು ಗಮನಿಸಲು ಹೊರಳಿ ಬಂದಿದ್ದಾನೆ ಅಂತ ತಿಳಿದು ಬಂದಿದೆ.

ನಮ್ಮ ಗೆಳೆಯ ರವಿ ಕುಂದಗೋಳ ಯಾವ ತರಹದ ಬಂಧನಕ್ಕೆ ಒಳಗಾದ ಅಂತ ಘಾಬರಿಯಾದಿರೇನು? ಅಯ್ಯೋ! ವಿವಾಹ ಬಂಧನಕ್ಕೆ ಒಳಗಾಗಿಬಿಟ್ಟ. ಇನ್ನೊಬ್ಬ ಮಿತ್ರ ಜಂಗಣ್ಣವರನೇ ಅವರ ಪೈಕಿ ಹುಡುಗಿ ಹುಡುಕಿ, ತೋರಿಸಿ, ನೋಡಿಸಿ, ನಿಶ್ಚಯ ಮಾಡಿಸಿ, ರವಿ ಕುಂದಗೋಳನ ತಲೆಗೆ ನವರತ್ನ ತೈಲ ತಿಕ್ಕಿ, ಪಾಲಿಶ್ ಹೊಡೆದು, ಮದುವೆ ವರನನ್ನಾಗಿ ತಯಾರು ಮಾಡಿ, ನಿಂತು ಮದುವೆಯನ್ನೂ ಮಾಡಿಸಿ, ಈಗ ಕುಂದಗೋಳನ ಮಿತ್ರನಷ್ಟೇ ಅಲ್ಲ ಒಂದು ತರಹದ ಬೀಗನೂ ಆಗಿಹೋಗಿದ್ದಾನೆ. ಕುಂದಗೋಳನಿಗೆ ಬೀಗನಾಗುವದು ಅಂದರೆ ಸಣ್ಣ ಜವಾಬ್ದಾರಿಯೇ? ಡಾನ್ ಜಂಗಣ್ಣವರ ಲೆವೆಲ್ಲಿನ ಮಂದಿ ಮಾತ್ರ ಹೊರಬಹುದಾದ ಜವಾಬ್ದಾರಿ ಅದು. ಸರಿ ಸುಮಾರು ಇಪ್ಪತ್ತು ಚಿಲ್ಲರೆ ವರ್ಷ ನಿರಂತರ ಬ್ರಹ್ಮಚಾರಿ ಬ್ಯಾಟಿಂಗ್ ಮಾಡಿದ ರವಿ ಕುಂದಗೋಳ ವಿಕೆಟ್ ಕಳೆದುಕೊಂಡು, ಆದರೆ ಮತ್ತೆ ಏನೇನೋ ಎಲ್ಲ ಪಡೆದುಕೊಂಡು ಸಂಸಾರಿಯಾಗಿದ್ದಾನೆ. ಸದ್ಯಕ್ಕೆ ಮಾವನ ಮನೆಗೆ ಹೋಗಿರಬೇಕು. ಮದುವೆಯಾದವರು ಹೋಗೋದು ಮಾವನ ಮನೆಗೇ ತಾನೇ? ಅದು ಬಿಟ್ಟು ಮಾವನ ಮಠಕ್ಕೆ ಹೋದ ಉದಾಹರಣೆ ಎಲ್ಲಾದರೂ ಇದೆಯೇ? ಹಾಂ? (ಮನೆ ಮಠ ಅಂತ ಇದ್ದ ಮೇಲೆ ಮಾವನ ಮನೆ ಮತ್ತು ಮಾವನ ಮಠ ಅಂತ ಕೂಡ ಇರಬೇಕು. ಅಲ್ಲವೇ?)

ಮಿತ್ರ ಕುಂದಗೋಳ ವಿವಾಹ ಬಂಧನಕ್ಕೊಳಗಾಗಿ ಮಾವನ ಮನೆಗೆ ಹೋಗುವ ಎಲ್ಲ ವಿವರವನ್ನು ಇಂಟರ್ನೆಟ್ ಮೇಲೆ ಬರೋಬ್ಬರಿ ಡಂಗುರ ಹೊಡೆದು, ಎಲ್ಲರಿಗೂ ಕುಂದ್ಯಾನ ಪರವಾಗಿ ಆಮಂತ್ರಣ ನೀಡಿದವನು ಮತ್ತೊಬ್ಬ ಮಿತ್ರ ಜಗ್ಗು ದಾದಾ ಉರ್ಫ್ ಹಂದಿಗೋಳ ಜಗ್ಯಾ ಉರ್ಫ್ ಜಗದೀಶ ಹಂದಿಗೋಳ. ಕುಂದಗೋಳನ ಲಗ್ನ. ಹಂದಿಗೋಳನ ಸಡಗರ. ಮತ್ತ್ಯಾವ 'ಗೋಳ' ಮತ್ತೇನು ಮಾಡಿದನೋ? ಗುಮ್ಮಗೋಳ ಅನ್ನುವ ಮಿತ್ರ ಗಿರಾಕಿ ಕೂಡ ಒಬ್ಬನಿದ್ದ. ಆ ಗುಮ್ಮಗೋಳ ಈ ಕುಂದಗೋಳನ ಮದುವೆಗೆ ಏನು ಸಹಾಯ ಮಾಡಿದ ಅನ್ನುವದರ ಬಗ್ಗೆ ನಮಗೆ ಮಾಹಿತಿಯಿಲ್ಲ ಬಿಡಿ. ಬೇಕಾದರೆ ಮಾಹಿತಿ ಹಕ್ಕು ಕಾಯಿದೆ ಮೂಲಕ ತರಿಸಿಕೊಳ್ಳಿ.

ನಿನ್ನೆ ನನಗೆ ಗುರುವಾರ ರಾತ್ರಿ ಇಲ್ಲಿ. ಧಾರವಾಡದಲ್ಲಿ ಶುಕ್ರವಾರ ಮಧ್ಯಾನ. ಕುಂದಗೋಳನ ಮದುವೆ ಆಗಿಹೋಯಿತು. ಜೈ! ಆಮಂತ್ರಣ ಕೊಟ್ಟ ಜಗ್ಗು ಹಂದಿಗೋಳನಿಗೇ ಫೋನ್ ಮಾಡಿದೆ. ಅಲ್ಲೇ ಮದುವೆಯಲ್ಲೇ ಇದ್ದ. ಜೊತೆಗೊಂದಿಷ್ಟು ಜನ ಉಳಿದ ಮಿತ್ರರೂ ಸಿಕ್ಕರು. ಎಲ್ಲರ ಜೊತೆ ಸುಮಾರು ಮಾತಾಡಿ, ಮಂಗ್ಯಾತನ ಮಾಡಿ, 'ಏ ಕುಂದಗೋಳಗ ಹೇಳಿ ಬಿಡ್ರೋ. ಆವಾ ಎಂದೂ ನನ್ನ ಫೋನ್ ಎತ್ತಿಲ್ಲ. ಇನ್ನಂತೂ ಬಿಡು. ಅವಂಗ ಫೋನ್ ಎತ್ತಲಿಕ್ಕೆ ಪುರಸತ್ತು ಇರೋದೇ ಇಲ್ಲ. ನೀವೇ ನನ್ನ ಪರವಾಗಿ ಹೇಳಿಬಿಡ್ರಿ' ಅಂದೆ. 'ಬೇಕಾದ್ರೆ ಅವನ ಜೋಡಿನೇ ಮಾತಾಡಿಸ್ತೇವಿ. ಒಂದೀಟು ಹೋಲ್ಡ್ ಮಾಡು' ಅಂತ ಓಡಾಡಿದರು. ಮದುಮಗ ಹಾಗೆಲ್ಲ ಫೋನ್ ಮೇಲೆ ಮಾತಾಡುವದು ಸರಿಯಲ್ಲ. ಅದೂ ಅಲ್ಲಿ ಖುದ್ದಾಗಿ ಮಾತಾಡಿಸಿ, ಹರಸಿ ಹೋಗಲು ಜನ ಬಂದಿರುವಾಗ, ಎಲ್ಲ ಬಿಟ್ಟು, ಫೋನ್ ಮೇಲೆ ಕೊಚಪಚ ಮಾತಾಡುವದು ಅಂದರೆ ಅದು ಸರಿಯಾಗುವದಿಲ್ಲ. ಅದಕ್ಕೇ ನಾನೂ ಸಹ ಬೇಡ ಅಂದೆ.

ಮಾತಾಡಿದ ಮಿತ್ರರಲ್ಲಿ ಕರ್ನಾಟಕದ ಮಾಜಿ ರಣಜಿ ಕ್ರಿಕೆಟ್ ಆಟಗಾರ ಆನಂದ ಕಟ್ಟಿ ಸಿಕ್ಕ. ಪ್ರೀತಿಯಿಂದ ಮಾತಾಡಿ, 'ಏಪ್ರಿಲ್ ಹತ್ತನೇ ತಾರೀಕಿಗೆ ನನ್ನ ಮಗನ ಮುಂಜವಿ ಅದ. ಬಾರಪಾ,' ಅಂತ ಆಮಂತ್ರಣ ಕೊಟ್ಟೇಬಿಟ್ಟ. ೧೯೮೦ ರ ದಶಕದಲ್ಲಿ ಕ್ರಿಕೆಟ್ ಆಟಗಾರರಿಗೆ ಧಾರವಾಡದಂತಹ ಊರಲ್ಲಿ ಯಾವ ದೊಡ್ಡ ಪ್ರೋತ್ಸಾಹ, ಸೌಕರ್ಯ ಏನೂ ಇರಲಿಲ್ಲ. ಅಂತದ್ದರಲ್ಲೂ ಅಪ್ರತಿಮ ಸಾಧನೆ ನಮ್ಮ ಕ್ಲಾಸ್ಮೇಟ್ ಈ ಆನಂದ ಕಟ್ಟಿಯದು. ರಿಟೈರ್ ಆದರೂ ಕೋಚಿಂಗ್, ಸೆಲೆಕ್ಷನ್, ಕಾಮೆಂಟರಿ ಅದು ಇದು ಅಂತ ಕ್ರಿಕೆಟ್ ಮೈದಾನದಲ್ಲಿ ಸದಾ ಬ್ಯುಸಿ.

ಮುಂದೆ ಮಾತಾಡಲು ಧಾರವಾಡದ big bull ದೊಡ್ಡ ಸ್ಟಾಕ್ ಬ್ರೋಕರ್ ಈಶ್ವರ ಏಣಗಿ ಸಿಕ್ಕ. ಅವನದು ಊರ ಹೊರಗೆ ಒಂದು ಖತರ್ನಾಕ್ farmhouse ಇದೆ. ೨೦೧೩ ಡಿಸೆಂಬರ್ ನಲ್ಲಿ ಅಲ್ಲೇ ಹೋಗಿ ಒಂದು ದಿವಸ ಹಗಲಿನಲ್ಲೇ ಪಾರ್ಟಿ ಮಾಡಿ ಬಂದಿದ್ದೆವು. ಆವಾಗಲೇ ಮತ್ತೊಬ್ಬ ದೋಸ್ತ ಶರದ ಪಾಟೀಲ ಒಂದು ಖತರ್ನಾಕ್ ಹೇಳಿಕೆ ಕೊಟ್ಟುಬಿಟ್ಟಿದ್ದ 'ಈ ಕುಂದಗೋಳ ರವ್ಯಾ ಮತ್ತ ಈ ಮಹೇಶ ಹೆಗಡೆ ನಡುವೆ ಒಂದೇ ಒಂದು ಹೋಲಿಕೆ ಅದ ನೋಡ್ರಿಲೇ. ಇಬ್ಬರೂ ಗಿಚ್ಚಾಗಿ ಬಿಯರ್ ಕುಡಿಯೋದು ಒಂದೇ ಅಲ್ಲ, ಅದರಾಗೇ ಎರಕೊಂಡು, ಸ್ನಾನವನ್ನೇ ಮಾಡಿಬಿಡ್ತಾರ. ಭಾರಿ ಜೋಡಿ ಇಬ್ಬರದ್ದೂ. ಇಬ್ಬರೂ 'ಬೀರ್'ಬಲ್ಲರು,' ಅಂತ. ನಂತರ ಮಾತಿಗೆ ಸಿಕ್ಕವನು ನಮಗೆ 'ಬೀರ್'ಬಲ್ ಅಂತ ಬಿರುದು ದಯಪಾಲಿಸಿದ ಅದೇ ಶರದ ಪಾಟೀಲ. ಶರದ ಪಾಟೀಲನ ಜೊತೆ ಮಾತಾಡುವಾಗ ನಮ್ಮ 'ಬೀರ್'ಬಲ್ ಜೊತೆಗಾರ ರವಿ ಕುಂದಗೋಳ ಮುಂದೆ ಕಂಪನಿ ಕೊಡಲು ಸಿಗುತ್ತಾನೋ ಇಲ್ಲವೋ ಅಂತ ಡೌಟ್ ಬಂತು. ಈಗ ಬಂಧನಕ್ಕೆ ಬೇರೆ ಒಳಗಾಗಿಬಿಟ್ಟನಲ್ಲ. ಅದಕ್ಕೇ ಡೌಟ್. ಮುಂದೆ ನೋಡೋಣ.

ಮತ್ತೆ ಅಡ್ಡಹೆಸರಿನಲ್ಲಿ 'ಮಠ' ಇಲ್ಲದಿದ್ದರೂ ಶುದ್ಧ ಜಂಗಮನಾದ ಮಿತ್ರ (ಟೈಗರ್) ಪ್ರಭಾಕರ ವಸ್ತ್ರದ ಅಪರೂಪಕ್ಕೆ ಸಿಕ್ಕ. ಹಿರೇಮಠ, ಚಿಕ್ಕಮಠ ಅಂತ ಹೆಸರಿನಲ್ಲಿ ಮಠ ಅಂತಿದ್ದವರು ಮಾತ್ರ ಐನೋರು ಅನ್ನುವವರನ್ನು disprove ಮಾಡಲೆಂದೇ ಇದ್ದಾನೆ ನಮ್ಮ ವಸ್ತ್ರದ ಸ್ವಾಮಿ. ಅವನ ಜೊತೆಯೂ ಮಾತುಕತೆ ಆಯಿತು. ಕುಂದಗೋಳನ ವಿವಾಹ ಬಂಧನವಾಗಿದ್ದು ಈ ವಸ್ತ್ರದನಿಗೆ ತುಂಬಾ ನೆಮ್ಮದಿ ತಂದಿರಬೇಕು. ಸಿಕ್ಕಾಪಟ್ಟೆ ಕಾಡುತ್ತಿದ್ದರು ಪಾಪದ ವಸ್ತ್ರದನನ್ನು. ಅವನೂ ಸಿಕ್ಕಾಪಟ್ಟೆ sportive. ಎಷ್ಟೇ ಕಾಡಿದರೂ ಎಂದೂ ಮನಸ್ಸಿಗೆ ಹಚ್ಚಿಕೊಂಡವನೇ ಅಲ್ಲ. ಒಮ್ಮೆ ಈಗ ಎರಡು ವರ್ಷದ ಹಿಂದೆ, ಈಗ ಮದುವೆಯಾದ ಇದೇ ಕುಂದಗೋಳ, ಮತ್ತೆ ಶರದ ಪಾಟೀಲ ಕೂಡಿ ಈ ಪ್ರಭಾಕರ ವಸ್ತ್ರದನ ಮೋಟಾರ್ ಬೈಕನ್ನು ಸ್ವಲ್ಪ ಆಕಡೆ ಒಯ್ದು, ಕಾಣದಂತೆ ಇಟ್ಟುಬಿಟ್ಟಿದ್ದರು. ಮೊದಲೇ ಪಾಪದ ಬಹಳ innocent ಮನುಷ್ಯ ಈ ವಸ್ತ್ರದ. ಹೊಸ ಬೈಕ್ ಬೇರೆ. ಎಲ್ಲಿ ಕಳೆದೇಹೋಯಿತೋ, ಯಾರು ಕದ್ದೇಬಿಟ್ಟರೋ ಅಂತ ಚಿಂತಾಕ್ರಾಂತನಾಗಿ, ಚಿಂತೆಗೆ ತಕ್ಕಂತೆ ಮಾತು ತೊದಲಿ, ಸಪ್ತಾಪುರದ ತುಂಬೆಲ್ಲ, ಪ್ರತಿ ಅಂಗಡಿ ತಿರುಗಿ ತಿರುಗಿ, ಅವನದೇ characteristic ಸ್ಟೈಲಿನಲ್ಲಿ, 'ರೀ, ನನ್ನ ಗಾಡಿ ನೋಡಿರೇನು? ಇಲ್ಲೇ ಸ್ಟಾಂಡ್ ಹಚ್ಚಿ ಹೋಗಿದ್ದೆ ನೋಡ್ರೀ. ಐದೇ ನಿಮಿಷ. ಅಷ್ಟರಾಗ ಹೊಡೆದುಬಿಟ್ಟಾರ ನೋಡ್ರೀ,' ಅಂತ ಧಾರವಾಡದ ಸಪ್ತಾಪುರ ಭಾವಿ ಇರುವ ರಸ್ತೆಯ ಉದ್ದಗಲಕ್ಕೂ ಈ ಬಡಪಾಯಿ ಓಡಾಡುತ್ತಿದ್ದರೆ ಈ ಕಿಡಿಗೇಡಿ ಕುಂದಗೋಳ ಮತ್ತು ಶರದ ಪಾಟೀಲ ತಮ್ಮ ಕಾರಿನಲ್ಲಿ ಕೂತು, ಮಷ್ಕಿರಿ ಮಾಡುತ್ತ, ತಟ್ಟಿಕೊಂಡು ನಕ್ಕಿದ್ದೇ ನಕ್ಕಿದ್ದು. ಇನ್ನೇನು ವಸ್ತ್ರದ ಅಳುತ್ತ, ಟೌನ್ ಪೋಲೀಸ್ ಸ್ಟೇಷನ್ ಕಡೆ ಹೊರಟೇ ಬಿಡುತ್ತಾನೆ ಅಂದಾಗ ಅವನನ್ನು ಆಟಕಾಯಿಸಿಕೊಂಡು, ಮತ್ತೂ ಒಂದಿಷ್ಟು ಕಾಡಿ, ಗಾಡಿ ಇಟ್ಟ ಜಾಗ ತೋರಿಸಿದ್ದರು. 'ಅಬ್ಬಾ! ಬೈಕ್ ಸದ್ಯಕ್ಕೆ ಕಳೆದು ಹೋಗಲಿಲ್ಲ,' ಅನ್ನುವ ಸಂತೋಷದಲ್ಲಿ ವಸ್ತ್ರದ ಥ್ಯಾಂಕ್ಸ್ ಹೇಳಲು ಬಂದರೆ, 'ಹೋಗ್ ಹೋಗಲೇ ವಸ್ತ್ಯ್ರಾ! ಹೋಗ್ ಮನಿಗೆ' ಅಂತ ರೋಪ್ ಬೇರೆ ಹಾಕಿ ಕಳಿಸಿಬಿಟ್ಟರಂತೆ. ದೋಸ್ತರಲ್ಲಿ ಎಲ್ಲವೂ ಓಕೆ. ಮಹಾ ಮಷ್ಕಿರಿ. ಅದೂ ಟಿಪಿಕಲ್ ಧಾರವಾಡ ಬ್ರಾಂಡಿನ ಖತರ್ನಾಕ್ ಮಷ್ಕಿರಿ. ಫೋನಲ್ಲಿ ವಸ್ತ್ರದನ ಜೊತೆ ಮಾತು ಮುಗಿಸಿದಾಗ ಇದೆಲ್ಲ ನೆನಪಾಗಿ ಸಿಕ್ಕಾಪಟ್ಟೆ ನಗು ಬಂತು.

ಮುಂದೆ ಫೋನ್ ಹೋಗಿದ್ದು ಪುರಾತನ ಗೆಳತಿ ಕಪ್ಪಿ ಉರ್ಫ್ ಕಲ್ಪನಾ ಕುಲಕರ್ಣಿ ಕೈಗೆ. ಆಕೆಯೂ ಮಾತಾಡಿದಳು. 'ಏನ ಕಪ್ಪಿ? ಕಪ್ಪಿ (ಕಪ್ಪೆ) ಯಾವಾಗಲೂ ಮಳಿಗಾಲದಾಗ ಮಾತ್ರ ಹೊರಗ ಬೀಳ್ತಾವ. ನೀ ಕಪ್ಪಿ ಅದೆಂಗ ಈಗ ಬ್ಯಾಸಿಗಿ ಒಳಗೇ ಹೊರಗ ಬಂದುಬಿಟ್ಟಿ?' ಅಂತ ದೊಡ್ಡ ಜೋಕ್ ಮಾಡಿದೆ. ಅವಳಿಗೆ ಎಷ್ಟು ತಿಳಿಯಿತೋ ಗೊತ್ತಿಲ್ಲ. ಆ ಜೋಕ್ ಮತ್ತೊಬ್ಬ ಕುಲಕರ್ಣಿ, ದೀಪಕ್ ಕುಲಕರ್ಣಿ, ಕಲ್ಪನಾಳ ಕಪ್ಪಿ ಎಂಬ nickname ಬಗ್ಗೆ ಮಾಡಿದ್ದ. ಅದು ನೆನಪಿತ್ತು. ಅದನ್ನೇ ಮತ್ತೆ ಮತ್ತೆ ಹೇಳಿದೆ. ಕಪ್ಪಿ ಎಷ್ಟು ಎಂಜಾಯ್ ಮಾಡಿದಳೋ ಇಲ್ಲವೋ ಗೊತ್ತಿಲ್ಲ. ನಾನಂತೂ ನಕ್ಕೆ. ಬಿದ್ದು ಬಿದ್ದು ನಕ್ಕೆ.

ನಂತರ ಫೋನ್ ಹೋಗಿದ್ದು ಮಿತ್ರ ಗುಲಶನ್ ಸಿಂಗನ ಕೈಗೆ. ಕಳೆದೆರೆಡು ಬಾರಿ ಫೋನ್ ಮಾಡಿದಾಗ ಸಿಕ್ಕಿರಲಿಲ್ಲ. ಈಗ ಸಿಕ್ಕ. ಏನೇನೋ ಸುದ್ದಿಯಾಯಿತು. ಮುಂದಿನ ಸಲ ಗೋವಾಕ್ಕೆ ಫ್ಲೈ ಮಾಡಿ, ಅಲ್ಲಿಂದ ಧಾರವಾಡಕ್ಕೆ ಬರುವ ವಿಚಾರ ಇದೆ ಅಂದೆ. ಅದನ್ನು ಸಿಂಗನ ಕಿವಿಯಲ್ಲಿ ಹಾಕುವದಿತ್ತು. ಯಾಕೆಂದರೆ ಅವನು ಗೋವಾ ಕಡೆಯೇ ಇರುವದು ಜಾಸ್ತಿ. ನಮಗಂತೂ ಅಲ್ಲಿ ಯಾರೂ ಗೊತ್ತಿಲ್ಲ. ಅದಕ್ಕೆ ಈಗಿನಿಂದಲೇ ಸಿಂಗನಿಗೆ ಇಂಡೆಂಟ್ ಹಾಕಿಟ್ಟೆ. ಮುಂದಿನ ಸಾರಿ ವರ್ಕ್ ಔಟ್ ಆದರೆ ಸ್ಯಾನ್ ಫ್ರಾನ್ಸಿಸ್ಕೋ - ಅಬು ದಾಭಿ - ಗೋವಾ ರೂಟ್ ಟ್ರೈ ಮಾಡುವ ಇರಾದೆಯಿದೆ. ನೋಡೋಣ. ಬೆಂಗಳೂರಿಗೆ ಬಂದು ಹುಬ್ಬಳ್ಳಿ, ಬೆಳಗಾಂ ಫ್ಲೈಟ್ ಹಿಡಿದು, ಅವು ಸರಿಯಾಗಿ ಹಾರದೆ, ಸಾಕಾಗಿ ಹೋಗಿದೆ. ಸಿಂಗನ ಮೇಲೆ ಭಾರ ಹಾಕಿ ಗೋವಾಕ್ಕೆ ಬಂದುಬಿಡೋದು. ನಮ್ಮ ಸಿಂಗ ಏಕ್ದಂ ದಿಲ್ದಾರ್ ಆದ್ಮಿ. 'ನೀ ಮೊದಲೇ ತಿಳಿಸಿಬಿಡು. ನಾ ಗೋವಾ ಕಡೆನೇ ಇರ್ತೇನಿ' ಅಂದುಬಿಟ್ಟ. ಥ್ಯಾಂಕ್ಸ್ ಸಿಂಗಾ!

ನಂತರ ಮಾತಿಗೆ ಸಿಕ್ಕವ ಶ್ರೀಕಾಂತ ದೇಸಾಯಿ. ನಮ್ಮ ದೋಸ್ತರಲ್ಲಿ ಸೈನಿಕನಾಗಿ ಯುದ್ಧ, ಜೊತೆಗೆ ಸಾವನ್ನು ಸಹ, ಗೆದ್ದು ಬಂದ ಧೀರನೇ ಈ ಪುಣ್ಯಾತ್ಮ. SSLC ನಂತರ ಸೀದಾ ಸೈನ್ಯ ಸೇರಿಬಿಟ್ಟ. ಕಾರ್ಗಿಲ್ ಯುದ್ಧದಲ್ಲಿ ಸಿಕ್ಕಾಪಟ್ಟೆ ಕಾದಾಟ ಮಾಡಿದ. ಈಗ ರಿಟೈರ್ಮೆಂಟ್ ನಂತರ ರೈಲ್ವೆನಲ್ಲಿ ಕೆಲಸ ಮಾಡುತ್ತಾನೆ. ಅವನ ಪೈಕಿಯವರೇ ನಮ್ಮ ಮನೆಯ ಮೊಸಾಯಿಕ್ ಟೈಲ್ಸ್ ಫ್ಲೋರಿಂಗ್ ಮಾಡಿಕೊಟ್ಟಿದ್ದು. ಇವನ ಜೊತೆ ಮಾತಾಡುವಾಗೆಲ್ಲ ಮೊಸಾಯಿಕ್ ಟೈಲ್ಸ್ ಹಾಕಿದ ಅವನ ಕಾಕಾ ಪರಶುರಾಮ ಮೇಸ್ತ್ರಿ ನೆನಪಾಗುತ್ತಾರೆ. ಮೂವತ್ತು ವರ್ಷಗಳ ನಂತರವೂ ಒಳ್ಳೆ ಬಾಳಿಕೆ ಬರುತ್ತಿರುವ ಅವರ ಕೆಲಸದ ನೆನಪಾಗುತ್ತದೆ. ನಮ್ಮ ಆಪ್ತರೊಬ್ಬರು ಟೈಲ್ಸ್ ಫ್ಯಾಕ್ಟರಿ ತೆಗೆದಾಗ ಮೊದಲೆಲ್ಲ ಕೆಲಸ ಮಾಡಿಸಿ ಕೊಟ್ಟವರು ಇದೇ ಶ್ರೀಕಾಂತ ದೇಸಾಯಿಯ ಪರಶುರಾಮ ಕಾಕಾ. ಎಲ್ಲ ನೆನಪಿಸಿಕೊಂಡು ಒಂದಿಷ್ಟು ಹರಟೆಯಾಯಿತು ಮಾಜಿ ಸೈನಿಕನೊಂದಿಗೆ. ದೇಶಸೇವೆ ಮಾಡಿದ ದೋಸ್ತನಿಗೆ ಒಂದು ಸಲ್ಯೂಟ್ ಮಾಡಿ ಮಾತು ಮುಗಿಸಿದೆ.

ಕೊನೆಗೆ ಸಿಕ್ಕವ ಮತ್ತೊಬ್ಬ ಜಗ್ಗ  ಉರ್ಫ್ ಜಗ್ಯಾ ಉರ್ಫ್ ಜಗದೀಶ ಪಾಟೀಲ. ಬೆಳಗಾವಿಯಿಂದ ಬಂದಿದ್ದ. ನನ್ನ ಅವನ ಸ್ನೇಹಕ್ಕಿಂತ ಅವರ ಕುಟುಂಬದೊಂದಿಗಿನ ನಮ್ಮ ಸ್ನೇಹ ಇನ್ನೂ ಹಳೆಯದ್ದು. ೧೯೫೦ ರ ದಶಕದಲ್ಲಿ ಕಾಲೇಜ್ ಕಲಿಯಲು ಬಂದ ನಮ್ಮ ತಂದೆಯವರಿಗೆ ಈ ಜಗದೀಶ ಪಾಟೀಲನ ಅಜ್ಜ, ಲಿಂಗರಾಜ ಪ್ರೆಸ್ಸಿನ ಬೀಳಗಿ ಅಜ್ಜಾವರು ಮತ್ತು ಕುಟುಂಬ ತುಂಬ ಕ್ಲೋಸ್. ತಂದೆಯವರಿಗೆ mentor ಇದ್ದಂತೆ. ಅದೆಲ್ಲ ಹಳೆ ಸುದ್ದಿ ಸ್ವಲ್ಪ ಮೆಲುಕಾಡಿಸಿ, 'ಡೆಂಟಿಸ್ಟ್ ಬಂದಿಲ್ಲೇನಲೇ?' ಅಂತ ಬೆಳಗಾವಿಯಲ್ಲೇ ಸೆಟಲ್ ಆಗಿರುವ ದೊಡ್ಡ ಡೆಂಟಿಸ್ಟ್ ರಾಜೇಂದ್ರ ಕುಲಕರ್ಣಿ ಬಗ್ಗೆ ವಿಚಾರಿಸಿದೆ. 'ರಾಜ್ಯಾ ಬಂದಾನ. ಇಲ್ಲೇ ಎಲ್ಲೋ ಅದಾನ' ಅಂದ ಜಗ್ಯಾ. 'ಸರೀಪಾ. ಮತ್ತ ಬ್ಯಾರೆ ಯಾರರೆ ಇದ್ದರೆ ಕೊಡು' ಅಂದೆ. ಫೋನ್ ಮತ್ತೆ ಒರಿಜಿನಲ್ ಜಗ್ಗು ದಾದಾ ಉರ್ಫ್ ಧಾರವಾಡದ ಪ್ರಮುಖ ವರದಿಗಾರ ಜಗದೀಶ ಹಂದಿಗೋಳನ ಹತ್ತಿರವೇ ಬಂತು. ಮತ್ತೆ ಯಾರಿಗೋ ಕೊಟ್ಟ. ಮನೋಜ ದೇಶಪಾಂಡೆ ಕೈಗೆ ಕೊಟ್ಟ. ಅಷ್ಟರಲ್ಲಿ ಫೋನ್ disconnect ಆಗಿಬಿಡ್ತು. ಕರ್ಮ! ಈ ಕಡೆ ನೋಡಿದರೆ ರಾತ್ರಿ ಎರಡಾಗಿತ್ತು. ಮರುದಿವಸ ಶುಕ್ರವಾರ. ಮನೆಯಿಂದಲೇ ಕೆಲಸ ಮಾಡಿದರೂ ಬೆಳಿಗ್ಗೆ ಎಂಟು ಘಂಟೆಗೇ ಕೆಲಸಕ್ಕೆ ಬಾರದ ಮೀಟಿಂಗು ಶುರುವಾಗುತ್ತವೆ. ಅದಕ್ಕೆ ಒಮ್ಮೆ disconnect ಆದ ಮೇಲೆ ಮತ್ತೆ ತಿರುಗಿ ಮಾಡಲಿಲ್ಲ. 'ಯಾರದ್ದರೆ ಜೋಡಿ ಮಾತಾಡದೇ, ಹಾಂಗೆ ಬಿಟ್ಟುಬಿಟ್ಟೆ ಅಂತ ತಪ್ಪು ತಿಳ್ಕೊಬ್ಯಾಡ್ರೋ' ಅಂತ ಮಿತ್ರರಲ್ಲಿ ಒಂದು ವಿನಂತಿ ಮಾಡಬೇಕು. ನಮ್ಮ ದೋಸ್ತರು ಹಾಗೆಲ್ಲ ಇಲ್ಲ ಬಿಡಿ. ಯಾರೂ misunderstanding ಇತ್ಯಾದಿ ಮಾಡಿಕೊಳ್ಳುವ ಪೈಕಿಯೇ ಅಲ್ಲ. ಆದರೂ ಒಮ್ಮೊಮ್ಮೆ ನಮಗೇ ಹಾಗೆ ಅನಿಸುತ್ತದೆ. ಅದಕ್ಕೇ ವಿನಂತಿ ಮಾಡಿದ್ದು.

ಮತ್ತೊಬ್ಬ ಮಿತ್ರ ಎಸ್. ವಿ. ಪಾಟೀಲನ ಜೊತೆ ಸಹಿತ ಮಾತಾಯಿತು. ಆತ ಬ್ಯಾಂಕಿನ ಅಧಿಕಾರಿ. ನಮ್ಮ ಬ್ಯಾಚಿನ ಜನರು ಶಾಲೆಗೆ ಏನಾದರೂ ಮಾಡೋಣ ಅಂತ ವಿಚಾರ ಮಾಡಿ, ರೊಕ್ಕ ಸಂಗ್ರಹಿಸಿ ಬ್ಯಾಂಕಿನಲ್ಲಿ ಇಡಲು ಹೋದಾಗ ಇದೇ ಮನುಷ್ಯನೇ ಸಿಕ್ಕಾಪಟ್ಟೆ ಸಹಾಯ ಮಾಡಿದ್ದ. ಅದೇ ನೆನಪಿತ್ತು.  

ಶಾಲೆಯಲ್ಲಿ ಇರುವ ಬೆಂಚುಗಳಿಗಿಷ್ಟು ಬ್ರಹ್ಮಚಾರಿಗಳು, ಶೈಕ್ಷಣಿಕ ಬ್ಯಾಚೊಂದಕ್ಕೆ ಒಂದಿಷ್ಟು ಬ್ಯಾಚುಲರ್ ಗಳು ಇರಬೇಕು ಅಂತ ನನ್ನದು ಸದಾ ಜೋಕ್. ಅದಕ್ಕೆ ತಕ್ಕಂತೆ ಇತ್ತೂ ಕೂಡ. ಅದರಲ್ಲಿ ಒಂದು ವಿಕೆಟ್ ಬಿದ್ದಿದೆ. ಒಬ್ಬ ಬ್ರಹ್ಮಚಾರಿ (ವಿವಾಹ) ಬಂಧನಕ್ಕೆ ಒಳಗಾಗಿದ್ದಾನೆ.

ಮಿತ್ರ ರವಿ ಕುಂದಗೋಳನಿಗೆ ಒಳ್ಳೆಯದಾಗಲಿ. (ವಿವಾಹ) ಬಂಧನಕ್ಕೆ ಒಳಗಾಗಿದ್ದಕ್ಕೆ ಶುಭಾಶಯಗಳು. ಉಜ್ವಲ ಭವಿಷ್ಯಕ್ಕೆ ಶುಭ ಹಾರೈಕೆಗಳು. ಒಳ್ಳೆ ಕೆಲಸ ಮಾಡಿದ ಡಾನ್ ಜಂಗಣ್ಣವರನಿಗೆ ಒಂದು ದೊಡ್ಡ hats off! ಕುಂದಗೋಳನ ಲಗ್ನದ ಗಡಿಬಿಡಿಯಲ್ಲಿ ಇದ್ದರೂ, ಎಲ್ಲ ಕೆಲಸ ಬಿಟ್ಟು, ಬಿಚ್ಚಿ (ಅಂದರೆ ಮನಸ್ಸು ಬಿಚ್ಚಿ) ಹರಟೆ ಹೊಡೆದ ಎಲ್ಲ ಗೆಳಯ ಗೆಳತಿಯರಿಗೆ ಒಂದು ದೊಡ್ಡ ಥ್ಯಾಂಕ್ಸ್.

(ಫೋನಲ್ಲಿ ಮಾತಾಡಿಯೂ ಅವರ ಬಗ್ಗೆ ಇಲ್ಲಿ ಬರೆಯದಿದ್ದರೆ ಅಂತವರು ತಿಳಿಸಿ. ನಾನು ನಿದ್ದೆಗಣ್ಣಲ್ಲಿ ಮರೆತಿರಬಹುದು. ಹೆಸರು ನೆನಪಾದರೆ ಸಾಕು. ಬರೆದು ಹಾಕಿ, update ಮಾಡುತ್ತೇನೆ. ಅಕಸ್ಮಾತ ಅಲ್ಲಿದ್ದ ಯಾರಾದರೂ ಮಿತ್ರ ಮಿತ್ರೆಯರ ಜೊತೆ ಮಾತಾಡಲು ಆಗಿರದಿದ್ದರೆ ಮತ್ತೊಮ್ಮೆ sorry ಕೇಳಿಬಿಡುತ್ತೇನೆ. ಮತ್ತೆ ಮುದ್ದಾಂ ಮಾತಾಡೋಣ. ಭೆಟ್ಟಿಯಾಗೋಣ. )

ಕೆಳಗಿನ ಚಿತ್ರದಲ್ಲಿ ಎಡದಲ್ಲಿ ನಾನು ಮತ್ತು ಬಲದಲ್ಲಿ ಮಿತ್ರ ರವಿ ಕುಂದಗೋಳ. ೨೦೧೨ ಡಿಸೆಂಬರ್ ನಲ್ಲಿ ತೆಗೆದಿದ್ದು. ಸ್ಥಳ - ಮಯೂರ್ ರೆಸಾರ್ಟ್, ಧಾರವಾಡ. ಸಂದರ್ಭ - ನಮ್ಮ ೧೯೮೮ SSLC ಬ್ಯಾಚಿನ ಬೆಳ್ಳಿ ಹಬ್ಬದ ಆಚರಣೆ. ಸಮಯ ರಾತ್ರಿ ೧.೩೦ am. ಫೋಟೋಗ್ರಾಫರ್ - ಜಗದೀಶ ಹಂದಿಗೋಳ. ಕ್ಯಾಮೆರಾ ಒಂದು ಜಗ್ಗು ದಾದಾನ ಕೈಯಲ್ಲಿ ಕೊಟ್ಟುಬಿಟ್ಟರೆ ಸಿಕ್ಕಾಪಟ್ಟೆ ಫೋಟೋ ತೆಗೆದು ತೆಗೆದು ಗುಡ್ಡೆ ಹಾಕಿಬಿಡುತ್ತಾನೆ ಖತರ್ನಾಕ್ ಜಗ್ಗ!

ನಾನು ಮತ್ತು ರವಿ ಕುಂದಗೋಳ. :)
** ದೂರವಾಣಿ ಕರೆ ಮಾಡಿದ ಡಾನ್ ಜಂಗಣ್ಣವರ ಅವರು ಸ್ಪಷ್ಟನೆ ನೀಡುತ್ತ 'ತಾವು ಸುಪಾರಿ ತೆಗೆದುಕೊಂಡರೂ ಎಲೆಯಡಿಕೆ ಇತ್ಯಾದಿ ಹಾಕುವದಿಲ್ಲವೆಂದೂ ಮತ್ತೆ ಅವರು ಸಂಪೂರ್ಣ teetotaler' ಅಂತ ತಿಳಿಸಿದ್ದಾರೆ. ಯಾವದೇ ಚಟವಿಲ್ಲದ ಡಾನ್!? ನಂಬಿದರೆ ನಂಬಿ ಬಿಟ್ಟರೆ ಬಿಡಿ. ಅಂತಹ ಹಾಲುಗಲ್ಲದ, ಮಗುವಿನ ಮನಸ್ಸಿನ ಡಾನ್ ಒಬ್ಬರು ಧಾರವಾಡದಲ್ಲಿ ಇದ್ದಾರೆ ಅನ್ನುವದೇ ನಮ್ಮ ಸೌಭಾಗ್ಯ. ಅಂತಹ teetotaler ಡಾನ್ ಒಬ್ಬರು ಎಲೆಯಡಿಕೆ ತಿಂದು, ಪಿಚಕ್ ಅಂತ ಪಿಚಕಾರಿ ಹಾರಿಸಿದರು ಅಂತ ನಮ್ಮ ವರದಿಗಾರರು ಬರೆದುಬಿಟ್ಟಿದ್ದಾರೆ. ಅದಕ್ಕೇ ಈ ವಿವರಣೆ.

** ಮೇಲಿನದು ಒಂದು ಜೋಕ್ ಅಷ್ಟೇ. ನಮ್ಮ ಮಿತ್ರ ಡಾನ್ ಜಂಗಣ್ಣವರ ಒಂದೇ ಒಂದು ವ್ಯಸನಗಳಿಲ್ಲದ teetotaler ಅಂತ ನನಗೆ ಸರಿಯಾಗಿ, ಮೊದಲಿಂದಲೂ ಗೊತ್ತಿದೆ. ಸುಪಾರಿ ಅಂತ ಬರೆದ ಮೇಲೆ ಹಾಸ್ಯಕ್ಕೆ ಅಂತ ನಂತರ ಪಿಚಕಾರಿ ಹಾರಿಸಿದ ಅಂತ ಬರೆದಿದ್ದು. ಮತ್ತೆ ಡಾನ್ ಜಂಗಣ್ಣವರ ನನಗೆ ಫೋನ್ ಮಾಡಿಯೇನೂ ಹೇಳಲಿಲ್ಲ ಇದರ ಬಗ್ಗೆ. actually ನಾನೇ ಅವನಿಗೆ ಮಾಡಬೇಕು. ಬಹಳ ದಿನಗಳಾಗಿ ಹೋಗಿವೆ ಆತ್ಮೀಯ ಡಾನ್ ಜೊತೆ ಮಾತಾಡಿ. 

4 comments:

ವಿ.ರಾ.ಹೆ. said...

ha ha ha... super narration.

Mahesh Hegade said...

Thanks, Vikas :)

sunaath said...

ಖತರನಾಕ್ ಮಿತ್ರಮಂಡಳಿ ನಿಮ್ಮದು! ನಿಮ್ಮ ಕಾರ್ಯಾಚರಣೆಗೆ ಒಳ್ಳೇದಾಗಲಿ ಅಂತ ಹಾರೈಸುತ್ತೇನೆ.

Mahesh Hegade said...

Thank you Sunaath Sir.