Friday, July 01, 2016

ವಿಶ್ವ ವೈದ್ಯರ ದಿನದಂದು ಹೀಗೊಂದಿಷ್ಟು ಡಾಕ್ಟರ್ ಮಂದಿ ನೆನಪಾದರು.....

ಜುಲೈ ೧, ವಿಶ್ವ ವೈದ್ಯರ ದಿವಸವಂತೆ. ಭಾರತದಲ್ಲಂತೂ ಹೌದು. ಇಲ್ಲಿ ನಮ್ಮ ಅಮೇರಿಕಾದಲ್ಲಿ ಮಾರ್ಚ್ ೩೦ ರಂದು ವಿಶ್ವ ವೈದ್ಯರ ದಿವಸ ಆಚರಿಸುತ್ತಾರೆ.

ವೈದ್ಯೋ ನಾರಾಯಣೋ ಹರಿಃ - ಸತ್ಯವಾದ ಮಾತು. ಹುಟ್ಟಿದಾಗಿಂದ ಇಲ್ಲಿಯವರೆಗೆ ಅದೆಷ್ಟು ಮಂದಿ ವೈದ್ಯರು ಈ ನಮ್ಮ ಬಾಡಿಯನ್ನು, ಮಂಡೆಯನ್ನು ಕಾಪಾಡಿದರೋ ಏನೋ. ನೂರಾರು ಮಂದಿ. ಅವರಲ್ಲಿ ನೆನಪಾದ ಕೆಲವು ಮಂದಿಯನ್ನು ನೆನೆಯೋಣ. ಕೃತಜ್ಞತೆ ಅರ್ಪಿಸೋಣ. ಒಂದಿಷ್ಟು ಹಳೆಯ ನೆನಪುಗಳನ್ನು ಮೆಲಕು ಹಾಕೋಣ ಅಂತ.

****

ಅಮ್ಮನನ್ನು ಜತನದಿಂದ ಹೆರಿಗೆ ಮಾಡಿಸಿ ನಮ್ಮ ಹುಟ್ಟಿಗೆ ಕಾರಣರಾದವರು ಧಾರವಾಡದ ಅಂದಿನ ಖ್ಯಾತ ಪ್ರಸೂತಿ ತಜ್ಞ  ಡಾಕ್ಟರ್ ಕಮಲಾಪುರ ಅವರು. ಮಾಳಮಡ್ಡಿಯಲ್ಲಿದ್ದ ಅವರ ಆಸ್ಪತ್ರೆಯಲ್ಲಿಯೇ ನಮ್ಮ ಅಭೂತಪೂರ್ವ ಜನನ. ಅಭೂತಪೂರ್ವ ಜನನ ಯಾಕೆಂದರೆ ನಾವು ಹುಟ್ಟಿದಾಗ ನಮ್ಮ ತೂಕ ಬರೋಬ್ಬರಿ ಹನ್ನೊಂದು ಪೌಂಡ್. ಅಂದರೆ ಐದು ಕೇಜಿ. ಹೊಸ ದಾಖಲೆ ಕಮಲಾಪುರ ಆಸ್ಪತ್ರೆ ಮಟ್ಟಿಗೆ. ಅದಕ್ಕೇ ಅಭೂತಪೂರ್ವ ಜನನ ಅಂದಿದ್ದು. ಅಂತದ್ದೊಂದು ದೈತ್ಯ ರೂಪದ ಕೂಸನ್ನು ಆ ಡಾಕ್ಟರಾಗಲಿ, ಅಲ್ಲಿಯ ನರ್ಸುಗಳಾಗಲೀ ಹಿಂದೆಂದೂ ನೋಡಿಯೇ ಇರಲಿಲ್ಲ. 'ಏನ್ರೀ ಇದು ಇಂತಾ ಹೊನಗ್ಯಾ ಕೂಸು???' ಅಂತ ನಮ್ಮನ್ನು ಎತ್ತಿಕೊಂಡ ಕಮಲಾಪುರ ಡಾಕ್ಟರ ಅಮ್ಮನ ಕಡೆ ನೋಡಿದರೆ ಅಷ್ಟೇ. ದೈತ್ಯ ಕೂಸನ್ನು ಹೆತ್ತು ಸುಸ್ತಾಗಿ ನಮೋ ನಮಃ ಅಂತ ಮಲ್ಕೊಂಡು ಬಿಟ್ಟಿದ್ದರು ಅಮ್ಮ. ಅಂತಹ ಹೊನಗ್ಯಾ ಸೈಜಿನ ನಮ್ಮಂತವರನ್ನು ಹೊತ್ತು, ಹೆತ್ತು, ಹಡೆಯೋದು ಅಂದ್ರೆ ಸಾಮಾನ್ಯವೇ????

ಹೀಗೆ ಹುಟ್ಟುಹುಟ್ಟುತ್ತಲೇ ದಾಖಲೆ ಬರೆದೇ ಹುಟ್ಟಿದ್ದ ನಮ್ಮ ಮೇಲೆ ಕಮಲಾಪುರ ಡಾಕ್ಟರಿಗೆ ಏನೋ ಪ್ರೀತಿ. ಬಾಲ್ಯದಲ್ಲಿ ಅವರ ಮನೆಗೆ ಹೋದಾಗೊಮ್ಮೆ, 'ನಮ್ಮ ಹೊನಗ್ಯಾ ಕೂಸು,' ಅಂತಲೇ ಪ್ರೀತಿಯಿಂದ ತಲೆ ಸವರಿ ಮಾತಾಡಿಸಿದ್ದು ಇನ್ನೂ ನೆನಪಿದೆ ಬಿಡಿ. ಅವರಿಗೂ ಆಗಲೇ ತುಂಬಾ ವಯಸ್ಸಾಗಿತ್ತು. ನಮಗೆ ಐದಾರು ವರ್ಷವಾಗುವಷ್ಟರಲ್ಲಿ ಅವರೂ ನಿಧನರಾಗಿದ್ದರು.

ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ಕಾಣು ಅನ್ನುವಂತೆ ಮುಂದೆ ದೈತ್ಯಾಕಾರವಾಗಿ ಬೆಳೆಯುವ ಆದ್ಮಿಯನ್ನು ಹೊನಗ್ಯಾಕಾರದ ಕೂಸಿನಲ್ಲಿ ಕಾಣು. ಆ ಮಾತು ನಿಜವಾಗಿ ಈಗ ಇರುವ ದೈತ್ಯಾಕಾರವನ್ನು ಸಂಬಾಳಿಸಿಕೊಂಡು ಹೋದರೆ ಸಾಕಾಗಿದೆ.

****

ಪುರಾತನ ಕಾಲದ ಉಪಾಧ್ಯೆ ಡಾಕ್ಟರ್ ನಮ್ಮ ತಂದೆಯವರ ಡಾಕ್ಟರ್. ಉಪಾಧ್ಯೆ ಪ್ರಾಕ್ಟೀಸ್ ಬಿಡುವ ಮೊದಲು ಮಾಳಮಡ್ಡಿಯ ಡಾ. ಜೀ.ಟಿ. ಪಾಟೀಲ್ ಎಂಬ ಡಾಕ್ಟರ್ ಒಬ್ಬರನ್ನು ಪರಿಚಯಿಸಿದ್ದರು. ಅಂದಿನಿಂದ ಅವರೇ ನಮಗೆ ಫ್ಯಾಮಿಲಿ ಡಾಕ್ಟರ್.

(ಹಿಂದಿನ ವರ್ಷ ಇದೇ ದಿನ ಉಪಾಧ್ಯೆ ಡಾಕ್ಟರ್ ಬಗ್ಗೆ ಬರೆದಿದ್ದ ಲೇಖನ ಇಲ್ಲಿದೆ.)

ಜೀ.ಟಿ. ಪಾಟೀಲ್ ಡಾಕ್ಟರ್ ಬಗ್ಗೆ ಬರೆಯುತ್ತ ಹೋದರೆ ಒಂದು ನಾಲ್ಕು ಪುಸ್ತಕ ಬರೆಯಬಹುದು. ತುಂಬಾ ಒಳ್ಳೆಯ ಮನಸ್ಸಿನ ಡಾಕ್ಟರ್. ಆದ್ರೆ ರಫ್ ಅಂಡ್ ಟಫ್ ಅನ್ನುವ ರೀತಿಯಲ್ಲಿ ಅವರ ಖಡಕ್ ಟ್ರೀಟ್ಮೆಂಟ್. ಎಲ್ಲೋ ಸೈನ್ಯದಲ್ಲಿ ಸೈನಿಕರನ್ನು ಯುದ್ಧಭೂಮಿಯ ಮೇಲೆಯೇ ಚಿಕಿತ್ಸೆ ಮಾಡುತ್ತಿದ್ದಾರೋ ಅನ್ನುವ ಮಾದರಿಯಲ್ಲಿ ಅವರ ಚಿಕಿತ್ಸೆ. ಅವರ ಇಂಜೆಕ್ಷನ್ ಅಂದ್ರೆ ಭಯಾನಕ. ಆಗೆಲ್ಲ ಇಂಜೆಕ್ಷನ್ ಔಷಧಿ ಗಾಜಿನ ಬಾಟಲಿಗಳಲ್ಲಿ ಬರುತ್ತಿತ್ತು. ಮೇಲೆ ಒಂದು ರಬ್ಬರ್ ಬಿರಡೆ ಇರುತ್ತಿತ್ತು. ಇಂಜೆಕ್ಷನ್ ಸೂಜಿಯನ್ನು ಸೀದಾ ಆ ರಬ್ಬರ್ ಬಿರಡೆಯ ಮೂಲಕ ನುಗ್ಗಿಸಿ, ಔಷಧಿ ಎಳೆದುಕೊಂಡು, ದಪ್ಪನೆಯ ಸೂಜಿ ಬದಲಾಯಿಸಿ, ಸಣ್ಣನೆಯ ಸೂಜಿ ಹಾಕಿಕೊಂಡು, ತುಂಬಾ ನಾಜೂಕಿನಿಂದ ಇಂಜೆಕ್ಷನ್ ಕೊಟ್ಟರೂ ಸಾಕಷ್ಟು ನೋಯುತ್ತಿತ್ತು. ಪಾಟೀಲ್ ಡಾಕ್ಟರಿಗೆ ಅದೆಲ್ಲ ನಾಜೂಕು ಇಲ್ಲವೇ ಇಲ್ಲ. ಔಷಧಿ ಎಳೆದುಕೊಂಡ ದಪ್ಪ ಸೂಜಿ ಬದಲು ಮಾಡುತ್ತಲೇ ಇರಲಿಲ್ಲ. ಅದರಲ್ಲೇ ಚುಚ್ಚಿಬಿಡುತ್ತಿದ್ದರು. ಯಪ್ಪಾ! ಸಾಯುವ ಮಾದರಿಯಲ್ಲಿ ನೋವು. ಹುಟ್ಟುವಾಗ ಐದು ಕೇಜಿಯ ಬೇಬಿ ಆಗಿದ್ದರೂ ನಂತರ ಬಡಕಲಾಟಿಯಾಗಿ ಬದಲಾಗಿ ರಟ್ಟೆಯಲ್ಲಿ ಮಾಂಸವೇ ಇರದ ನಮಗೆ ಅವರ ಖತರ್ನಾಕ್ ಇಂಜೆಕ್ಷನ್ ಅಂದರೆ ಜೀವ ಹೋದ ಅನುಭವ. ಅಪ್ಪ, ಅಣ್ಣ ಕೈಕಾಲು ಹಿಡಿದುಕೊಂಡರೆ ಯಮದೂತನ ಪರ್ಸನಾಲಿಟಿ ಇದ್ದ ಪಾಟೀಲ್ ಡಾಕ್ಟರ್ ರಟ್ಟೆಗೆ ಇಂಜೆಕ್ಷನ್ ನುಗ್ಗಿಸುತ್ತಿದ್ದರು. ನಾವು ಲಬೋ! ಲಬೋ! ಲಬೋ! ಅಂತ ಹೊತ್ತಲ್ಲದ ಹೊತ್ತಿನಲ್ಲಿ ಹೋಳಿ ಹುಣ್ಣಿಮೆ ಕೂಗು ಹಾಕುತ್ತಿದ್ದೆವು. ಉಳಿದವರು ಹಲಗೆಯನ್ನು ಬಾರಿಸುತ್ತಿದ್ದರು. ನಮಗೇ ಬಾರಿಸುತ್ತಿದ್ದರು.

ಬಾಲ್ಯದಲ್ಲಿ ಎಂಟು ವರ್ಷಗಳಾಗುವವರೆಗೆ ಪಾಟೀಲ್ ಡಾಕ್ಟರ ಇದ್ದಿದ್ದು ನಮ್ಮ ಬಾಲಲೀಲೆಗಳನ್ನು ಅದೆಷ್ಟೋ ಮಟ್ಟಿಗೆ ನಿಯಂತ್ರಿಸಲು ಮನೆ ಮಂದಿಗೆ ಸಹಾಯವಾಗಿರಬೇಕು ಬಿಡಿ. 'ಭಾಳ ನೀರಾಗ ಆಡಬ್ಯಾಡ. ಜ್ವರಾ ಬಂತು ಅಂದ್ರ ಮತ್ತ ಇಂಜೆಕ್ಷನ್ ಕೊಡ್ತಾರ ನೋಡು ಡಾಕ್ಟರ್ ಜೀಟಿ ಪಾಟೀಲರು,' ಅಂದರೆ ಸಾಕು. ನೀರಾಟ ತಾಪಡ್ತೋಪ್ ನಿಲ್ಲುತ್ತಿತ್ತು. ಮಧ್ಯಾನ ನಿದ್ದೆ ಮಾಡದೇ ಬಿಸಿಲಲ್ಲಿ ಬೀದಿ ತಿರುಗಲು ಹೊಂಟರೆ ಮತ್ತೆ ಅದೇ ರೀತಿ ಹೆದರಿಕೆ. ಅವರ ಇಂಜೆಕ್ಷನ್ ಅಂತೂ ಬಿಡಿ. ಕೊಡುತ್ತಿದ್ದ mixture ಔಷಧಿ ಕೂಡ ಡೆಡ್ಲಿ ಆಗಿರುತ್ತಿತ್ತು. ಕಹಿ ಅಂದರೆ ಅಷ್ಟು ಕಹಿ. ಕುಡಿಯಲು ಆಗುತ್ತಲೇ ಇರುತ್ತಿರಲಿಲ್ಲ. ನಾವು ಹಾಗೆ ಸುಮ್ಮನೆ ಕುಡಿಯುತ್ತಲೂ ಇರಲಿಲ್ಲ. ರುಚಿರುಚಿಯಾದ ಊಟ ಮಾಡಲೂ ಹಟ ಮಾಡುವವರು ನಾವು. ಇನ್ನು ಆ ಕೆಟ್ಟ ಕಹಿ ಔಷಧಿ ಕುಡಿಯುತ್ತೆವೆಯೇ? ಸಾಧ್ಯವೇ ಇಲ್ಲ. ಮತ್ತೆ ಟಾರ್ಚರ್ ಸೆಶನ್. ಮನೆ ಮಂದಿ ಕೈಕಾಲು ಹಿಡಿದು ಮಲಗಿಸುತ್ತಿದ್ದರು. ಅಪ್ಪ ಮೂಗು ಹಿಡಿಯುತ್ತಿದ್ದ. ಮೂಗು ಹಿಡಿದ ತಕ್ಷಣ ಬಾಯಿ ಅಗಲಕ್ಕೆ ಓಂ ಅನ್ನುವ ಹಾಗೆ ಬಿಡುತ್ತಿತ್ತು. ಅಮ್ಮ ಬಾಯಿಗೆ ಕೆಟ್ಟ ಕಹಿ ಔಷಧ ಹೊಯ್ಯುತ್ತಿದ್ದಳು. ರಾಮ ರಾಮ!

ಮಕ್ಕಳಿಗೆ ಟೈಫಾಯಿಡ್, ಕಾಲರಾ ಬರದೇ ಇರಲಿ ಅಂತ ಪ್ರತಿ ವರ್ಷ ವ್ಯಾಕ್ಸೀನ್ ತೆಗೆದುಕೊಳ್ಳುವದು ಪದ್ಧತಿ. ಯಾಕೆಂದರೆ ತಂದೆಯವರು MSc ಮಾಡುತ್ತಿರುವಾಗ ಅಂತಿಮ ಪರೀಕ್ಷೆ ಸಮಯಕ್ಕೆ ಟೈಫಾಯಿಡ್ ಆಗಿ ಒಂದು ವರ್ಷ ಕಳೆದುಕೊಂಡಿದ್ದರು. ಹಾಗಾಗಿ ಮಕ್ಕಳಿಗೆ ಪ್ರತಿ ವರ್ಷ ಖಾಯಂ ವ್ಯಾಕ್ಸೀನ್. ಆ ವ್ಯಾಕ್ಸೀನ್ ಹಾಕಿಸಿಕೊಂಡ ನಂತರ ಸಣ್ಣ ಜ್ವರ ಬರುತ್ತದೆ. ದೇಹ ರೋಗನಿರೋಧಕ ಶಕ್ತಿಯನ್ನು ತಯಾರಿಸುತ್ತಿರುವಾಗ ಬರುವ ಜ್ವರ ಅಂತ ಹೇಳಿದ್ದರು. ಮೇಲಿಂದ ಇವರೋ ದಬ್ಬಣ ಚುಚ್ಚಿದಾಂಗೆ ಚುಚ್ಚುತ್ತಾರೆ. ವ್ಯಾಕ್ಸೀನ್ ತೆಗೆದುಕೊಂಡ ನಂತರ ಒಂದು ವಾರ ಬೇಕಾಗುತ್ತಿತ್ತು ಸುಧಾರಿಸಿಕೊಳ್ಳಲಿಕ್ಕೆ. ಟೈಫಾಯಿಡ್, ಕಾಲರಾ ಬಂದರೆ ಮೂರ್ನಾಲ್ಕು ತಿಂಗಳು ಬೇಕಾಗುತ್ತದೆ ಪೂರ್ತಿ ಗುಣಮುಖರಾಗಲು. ಹಾಗಾಗಿ ವ್ಯಾಕ್ಸೀನ್ ತೆಗೆದುಕೊಳ್ಳುವದರಲ್ಲಿ ಶಾಣ್ಯಾತನವಿತ್ತು.

ಒಮ್ಮೆ ನಮ್ಮ ಮಾಳಮಡ್ಡಿಯ ನೆರೆಹೊರೆಯವರಾದ ಹುದ್ದಾರರ ಮನೆಗೆ ಹೋಗಿದ್ದೆವು. ದಾಂಡೇಲಿಗೆ ಪರೀಕ್ಷಾ ಕೆಲಸಕ್ಕೆ ಹೋಗಿದ್ದ ತಂದೆಯವರಿಗೆ ಒಂದು ಒಂದು ಟ್ರಂಕ್ ಕಾಲ್ ಮಾಡಬೇಕಿತ್ತು. ಫೋನ್ ಇದ್ದಿದ್ದು ಹುದ್ದಾರ ಅವರ ಮನೆಯಲ್ಲಿ ಮಾತ್ರ. ಅಮ್ಮನ ಜೊತೆ ಅಲ್ಲಿ ಹೋದರೆ ಸುಮ್ಮನಿರುವ ಪೈಕಿಯೇ ನಾನು? ನಾನೇ ಅವರ ಮನೆ ಯಬಡ ನಾಯಿಯನ್ನು ರೇಗಿಸಿದೆನೋ ಅಥವಾ ಅದಾಗೇ ರೈಸ್ ಆಗಿಬಿಡ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಕಾಲಿಗೆ ಬಾಯಿ ಹಾಕಿಯೇಬಿಡ್ತು. ಜಾಸ್ತಿ ಏನೂ ಕಚ್ಚಲಿಲ್ಲ. ಸ್ವಲ್ಪ ಹಲ್ಲು ತಾಗಿತು ಅಷ್ಟೇ. ಹುದ್ದಾರ ಮಾಮಿ ಸುಣ್ಣ ಮತ್ತು ಬೆಲ್ಲ ತಿಕ್ಕಿ ಕಳಿಸಿದ್ದರು. ನಾಯಿ ಕಚ್ಚಿದ ನಂತರ ಸುಣ್ಣ ಮತ್ತು ಬೆಲ್ಲ ಹಚ್ಚಿಕೊಳ್ಳಬೇಕು ಅಂತ ಹೊಸ ವಿಷಯ ಗೊತ್ತಾಗಿದ್ದು ಆವಾಗೇ.

ಈಗ ಬಂತಲ್ಲ ದೊಡ್ಡ ಗಂಡಾಂತರ. ನಾಯಿ ಕಚ್ಚಿದರೆ ಹದಿನಾಲ್ಕು ಇಂಜೆಕ್ಷನ್ ತೆಗೆದುಕೊಳ್ಳಬೇಕು. ಅದೂ ಹೊಟ್ಟೆ ಮೇಲೆ ಹೊಕ್ಕುಳ ಸುತ್ತ ಕೊಡುತ್ತಾರೆ. ಯಮನೋವು ಅಂತ ಕೇಳಿದ್ದೆ. ಅದನ್ನು ಡಾಕ್ಟರ್ ಜೀಟಿ ಪಾಟೀಲರ ಕೈಯಲ್ಲಿ ತೆಗೆದುಕೊಳ್ಳುವದನ್ನು ಊಹಿಸಿಕೊಂಡರೆ ಎಲ್ಲೆಲ್ಲೋ ಏನೇನೋ ಆಗತೊಡಗಿತು. ತೆಗೆದುಕೊಳ್ಳಲಿಲ್ಲ ಅಂದರೆ ನಾಯಿ ಹುಚ್ಚು ಹಿಡಿದರೆ ಅಂತ ಮತ್ತೊಂದು ತರಹದ ಹೆದರಿಕೆ. ಹಾಗಾಗಿ ಏನೋ ಧೈರ್ಯಮಾಡಿ ಹೋದೆ. ಜೀಟಿ ಪಾಟೀಲ್ ಎಲ್ಲ ಚೆಕ್ ಮಾಡಿ, ನಾಯಿಯ ವಿವರಣೆ ಕೇಳಿ, ಏನೂ ಬೇಡ ಅಂತ ಹೇಳಿದರು. ಬದುಕಿದೆಯಾ ಬಡಜೀವವೇ ಅಂತ ಹೇಳಿ ಬಂದೆ. ಅದೇ ಕೊನೆ. ಮುಂದೆ ನಾಯಿಗಳಿಗೆ ಬಾಲ ಗೀಲ ಎಳೆದು ಎಂದೂ ರೇಗಿಸಿಲ್ಲ.

****

ಎಲ್ಲ ಡಾಕ್ಟರುಗಳೂ ಜೀಟಿ ಪಾಟೀಲರ ಹಾಗೆ ರಫ್ ಅಂಡ್ ಟಫ್ ಇರುವದಿಲ್ಲ, ಕೆಲವರು ನಾಜೂಕಾಗಿಯೂ ಇರುತ್ತಾರೆ ಅಂತ ತಿಳಿಯಲಿಕ್ಕೆ ಒಮ್ಮೆ ಪಾಟೀಲ್ ಡಾಕ್ಟರ್ ರಜೆ ಹಾಕಿ ಎಲ್ಲೋ ಹೋಗಬೇಕಾಯಿತು. ಆವಾಗಲೇ ಜಡ್ಡು ಬಿದ್ದೆ. ಆವಾಗ ಬಂದವರು ಕಮಲಾಪುರ ಡಾಕ್ಟರ್  ಬಾಯಿ. ಲೇಡಿ ಡಾಕ್ಟರ್. ನಮ್ಮನ್ನು ಈ ಭೂಮಿಗೆ ತಂದ ಪುರಾತನ ಕಮಲಾಪುರ ಡಾಕ್ಟರ್ ಅವರ ಸೊಸೆ. ಅವರು ಚೈಲ್ಡ್ ಸ್ಪೆಷಲಿಸ್ಟ್ ಆಗಿದ್ದರೇ? ನೆನಪಿಲ್ಲ. ತುಂಬಾ ಒಳ್ಳೆ ಡಾಕ್ಟರ್. ಅವರು ಕೊಡುತ್ತಿದ್ದ ಇಂಜೆಕ್ಷನ್ ಜೀಟಿ ಪಾಟೀಲರು ಕೊಡುತ್ತಿದ್ದ ಇಂಜೆಕ್ಷನ್ ನೋವಿನ ೧೦% ಸಹಿತ ಆಗುತ್ತಿರಲಿಲ್ಲ. ಮತ್ತೆ ಎಲ್ಲಿ ಕೊಬ್ಬು ಜಾಸ್ತಿ ಇದೆಯೋ ಅಲ್ಲಿಯೇ ಕೊಡುತ್ತಿದ್ದರು. ತಿಕ ಕೊಬ್ಬು ಇರುವದು ಯಾವದಕ್ಕೆ ಉಪಯೋಗವಾಗದಿದ್ದರೂ ಇಂಜೆಕ್ಷನ್ ತೆಗೆದುಕೊಳ್ಳಲು ಮಾತ್ರ ಸಹಾಯಕಾರಿ. ರಟ್ಟೆಯಲ್ಲಿ ಬಲವಿರಬೇಕು. ಇಲ್ಲವಾದರೆ ತಿಕದಲ್ಲಿ ಕೊಬ್ಬಿರಬೇಕು. ಎರಡರಲ್ಲಿ ಒಂದಾದರೂ ಇದ್ದರೆ ಇಂಜೆಕ್ಷನ್ ತೆಗೆದುಕೊಳ್ಳಲು ಸಹಾಯಕಾರಿ ಅಂತ ಅರ್ಥ.

ಮತ್ತೆ ಕಮಲಾಪುರ ಡಾಕ್ಟರಿಣಿ ಬಾಯಿ ಕೊಡುತ್ತಿದ್ದ ಔಷಧಿ ಸಹ ಸಿಹಿಯಾಗಿರುತ್ತಿತ್ತು. ಮೂಗು ಹಿಡಿಯುವದು, ಬಾಯಿ ತೆಗೆಸುವದು ಯಾವದೂ ಬೇಕಾಗುತ್ತಿರಲಿಲ್ಲ. ಖುದ್ದಾಗಿ ಕೇಳಿ ಇಸಿದುಕೊಂಡು ಕುಡಿಯುತ್ತಿದ್ದೆ. ಇವರೇ ನಮ್ಮ ಖಾಯಂ ಡಾಕ್ಟರಿಣಿ ಆಗಿದ್ದರೆ ಎಷ್ಟು ಒಳ್ಳೆಯದಿತ್ತು ಅಂತ ಅನ್ನಿಸಿತ್ತು. ಆದರೆ ಜೀಟಿ ಪಾಟೀಲರು ತಂದೆಯವರಿಗೆ ತುಂಬಾ ಖಾಸ್ ದೋಸ್ತರು. ಹೀಗಾಗಿ ಆಗಾಗ ನರಕ ಸದೃಶ ಅವರ ದವಾಖಾನೆಯ ದರ್ಶನವಾಗುತ್ತಿತ್ತು. ಆದರೆ ಅದು ಕಹಿ ಔಷಧಿಗೇ ಜಾಸ್ತಿ ನಿಲ್ಲುತ್ತಿತ್ತು. ಹೆಚ್ಚಿನ ಇಂಜೆಕ್ಷನ್ ತೆಗೆದುಕೊಳ್ಳುವ ಪರಿಸ್ಥಿತಿ ಬರಲಿಲ್ಲ. ಅದೇ ದೊಡ್ಡ ನಸೀಬ್.

(ಹಿಂದಿನ ವರ್ಷ ಬರೆದಿದ್ದ ಲೇಖನವೊಂದರಲ್ಲಿ ಜೀಟಿ ಪಾಟೀಲ ಡಾಕ್ಟರ್, ಕಮಲಾಪುರ ಡಾಕ್ಟರ್ ಬಾಯಿ ಬಗ್ಗೆ ಪ್ರಸ್ತಾಪಿಸಿದ್ದೆ. ಇಲ್ಲಿದೆ ಆ ಲೇಖನ.)

****

ಎಲ್ಲ ವೈದ್ಯರಿಗೆ ವಿಶ್ವ ವೈದ್ಯ ದಿವಸದ ಶುಭಕಾಮನೆಗಳು, ಶುಭಾಶಯಗಳು.

ಮುಂದಿನ ವರ್ಷ ಮತ್ತೊಂದಿಷ್ಟು ವೈದ್ಯರನ್ನು ನೆನೆಯೋಣ.

4 comments:

sunaath said...

ಜಗತ್ತಿನ ಎಲ್ಲ ವೈದ್ಯರಿಗೂ ಶುಭಹಾರೈಕೆಗಳು. ನಿಮ್ಮ ಬಾಲ್ಯದ ಅನುಭವಗಳನ್ನು ಓದಿದ ಬಳಿಕ ನಿಮಗೂ ಸಹ ಶುಭ ಹಾರೈಕೆಗಳನ್ನು ಕೊಡಬೇಕು ಎಂದು feel ಆಗುತ್ತದೆ. Good luck.

Mahesh Hegade said...

Thank you so much Sunath Sir. Grateful.

Manjunath S said...

Happy Doctor Day sir... Even I can't forget my doctor Mr. Ramchandra Bhat at Chandra Clinic near Malleshwaram Railway station. He was collecting less fees and writing lesser medicines. Most important is he will fill confidence in patient's mind. He is a wonderful doctor. He passed away a year back. I can't forget him.

Mahesh Hegade said...

Thank you, Manjunath S. I am touched to read about your doctor. Thanks for sharing.