ಮಾತಾ ಶೀತಲಾದೇವಿ |
ಭಕ್ತನೊಬ್ಬ ಮಾತಾ ಶೀತಲಾದೇವಿಯನ್ನು ಕುರಿತು ಭಯಂಕರ ತಪಸ್ಸನ್ನು ಮಾಡಿದ. ಅವನ ಭಕ್ತಿಗೆ, ತಪಶ್ಚರ್ಯಕ್ಕೆ ಮೆಚ್ಚಿದ ಶೀತಲಾದೇವಿ ಪ್ರತ್ಯಕ್ಷಳಾದಳು.
ಶೀತಲಾದೇವಿ: ಭಕ್ತ, ಮೆಚ್ಚಿದೆ. ಏನು ವರ ಬೇಕೆಂದು ಕೇಳುವಂತವನಾಗು.
ಭಕ್ತ: ಅಡ್ಡಬಿದ್ದೆ ತಾಯಿ. ನನಗೆ ಒಂದೇ ಒಂದು ವರ ಬೇಕು ತಾಯಿ. ನನಗೊಂದು ಭರ್ಜರಿ ರೇಸ್ ಕುದುರೆಯನ್ನು ಕರುಣಿಸು. ಆ ಕುದುರೆ ಹೇಗಿರಬೇಕು ಅಂದರೆ ಕುದುರೆಜೂಜಿನ ಪ್ರತಿಯೊಂದು ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗೆಲ್ಲುವಂತಹ ಕುದುರೆಯಾಗಿರಬೇಕು. ಅಂತಹ ಕುದುರೆಯನ್ನು ಕರುಣಿಸಿಬಿಡು ತಾಯೇ! ಮಹಾಮಾಯೇ! ಮತ್ತೇನೂ ಬೇಡ. ಕುದುರೆಬಾಲಕ್ಕೆ ರೊಕ್ಕ ಕಟ್ಟಿ ಕೊಂಚ ಹಣ ಮಾಡಿಕೊಳ್ಳಬೇಕಾಗಿದೆ ತಾಯಿ. ಮನೆ ಕಡೆ ತುಂಬಾ ಕಷ್ಟ.
ಹೀಗೆ ವರ ಕೇಳಿದ ಭಕ್ತ ಕೈಮುಗಿದು, ತಲೆ ತಗ್ಗಿಸಿ, ಕಣ್ಣು ಮುಚ್ಚಿದ. ದೇವಿ ವರ ಕೊಡುವದೊಂದೇ ಬಾಕಿ.
ದೇವಿ ಕೋಪದಿಂದ ಅಬ್ಬರಿಸಿದಳು, 'ಭಕ್ತ! ಕಣ್ಣು ತೆಗೆ!'
ಭಕ್ತ: ತಾಯೇ! ಇಷ್ಟು ಬೇಗ ವರವನ್ನು ಕರುಣಿಸಿಬಿಟ್ಟೆಯೇ! ನಿನ್ನ ಮಹಿಮೆ ಅಪಾರ ತಾಯಿ.
ದೇವಿ: ಅದಲ್ಲ. ಮುಖವನ್ನು ಎತ್ತಿ ಸ್ವಲ್ಪ ಈಕಡೆ ನೋಡು. ಹತ್ತಿರ ಬಾ.
ಭಯಭಕ್ತಿಯಿಂದ ದೇವಿಯ ಹತ್ತಿರ ಹೋದ ಭಕ್ತ ಆಸೆಯಿಂದ ತಲೆಯೆತ್ತಿ ನೋಡಿದ.
'ಛಟೀರ್!' ಅಂತ ಭಕ್ತನ ಕೆನ್ನೆಗೆ ಒಂದು ಬಿಟ್ಟಳು ಶೀತಲಾದೇವಿ.
ಏಟಿನ ಅಬ್ಬರಕ್ಕೆ ಭಕ್ತನ ಕಪಾಳಗೆಡ್ಡೆ ಚದುರಿಹೋಯಿತು. ನಂಬಿಕೆ ಬರದೇ ಮುಖ ಸವರಿಕೊಂಡ. ಇನ್ನೂ ಗರಮ್ಮಾಗಿ ಚುರುಚುರು ಅನ್ನುತ್ತಿತ್ತು.
ವರ ಕೇಳಿದರೆ ದೇವಿ ಕಪಾಳಕ್ಕೆ ಏಕೆ ಬಾರಿಸಿದಳು ಅಂತ ಬೆಚ್ಚಿಬಿದ್ದ ಭಕ್ತ ಸಖೇದಾಶ್ಚರ್ಯದಿಂದ, 'ಯಾಕೆ ತಾಯೀ? ಯಾಕೆ ಹೊಡೆದುಬಿಟ್ಟೆ?'
ದೇವಿ: ಹುಚ್ಚ ಮಂಗ್ಯಾನಮಗನೇ! ವರ ಕೇಳು ಅಂದರೆ ಏನಂತ ಕೇಳುವದು!? ನಿನಗೆ ಕುದುರೆಯನ್ನು ಕೊಡುವ ಶಕ್ತಿ ನನ್ನಲ್ಲಿದ್ದರೆ ನಾನು ಏಕೆ ಕತ್ತೆ ಮೇಲೆ ಸವಾರಿ ಮಾಡಿಕೊಂಡಿರುತ್ತಿದ್ದೆ ಮೂರ್ಖ! ಶತಮೂರ್ಖ!
ಅಂದವಳೇ ದೇವಿ ಭಕ್ತನ ಬುರುಡೆಗೆ ಮತ್ತೊಂದು 'ಫಟ್' ಅಂತ ಬಿಟ್ಟವಳೇ ತನ್ನ ವಾಹನವಾದ ಕತ್ತೆಗೂ ಒಂದು ಏಟು ಕೊಟ್ಟ ಅಬ್ಬರಕ್ಕೆ ಆಕೆಯ ಪ್ರೀತಿಯ ವಾಹನ ಕತ್ತೆ ಭೀಕರವಾಗಿ ಕೆನೆಯುತ್ತ, ಹಿಂಗಾಲನ್ನಷ್ಟೇ ಎತ್ತಿ ಭಕ್ತನತ್ತ ಕೆಕ್ಕರಿಸಿ ನೋಡಿತು. ದೇವಿ 'ಪ್ರಸಾದ' ಕೊಟ್ಟಾಯಿತು. ಈಗ ದೇವಿಯ ಕತ್ತೆ ತನ್ನ ಒದೆತದ ಪ್ರಸಾದ ಕೊಟ್ಟರೆ ಕಷ್ಟ ಅಂತ ಭಕ್ತ ಕೂಡ ಅಲ್ಲಿಂದ ಎಸ್ಕೇಪ್ ಆದ.
ನೀತಿ: ಲೌಕಿಕ ಸುಖಗಳಿಗಾಗಿ ದೇವರನ್ನು ಪ್ರಾರ್ಥಿಸುವದು ತಪ್ಪು. ಒಂದು ವೇಳೆ ಹಾಗೆ ಪ್ರಾರ್ಥಿಸಲೇಬೇಕು ಅಂತಾದರೆ ಸ್ವಲ್ಪ ಎಚ್ಚರ ಅಗತ್ಯ.
ಮುಂಬೈನ ಮಾಹಿಮ್ ಪ್ರದೇಶದಲ್ಲಿ ಮಾತಾ ಶೀತಲಾದೇವಿಯ ಮಂದಿರವಿದೆಯಂತೆ. ಹತ್ತಿರದಲ್ಲೇ ವಿಖ್ಯಾತ ಮಹಾಲಕ್ಷ್ಮಿ ರೇಸ್ ಕೋರ್ಸ್ ಇದೆ ಅಂತ ಕಾಣುತ್ತದೆ. ಹಾಗಾಗಿ ಕುದುರೆಜೂಜಿನ ಭಕ್ತ ಅಲ್ಲಿಗೆ ಹೋಗಿದ್ದಿರಬಹುದು! :)
****
ಶಕ್ತಿ & ಸಹನಶಕ್ತಿ
ಭಕ್ತ: ಸ್ವಾಮೀಜಿ, ಸ್ತ್ರೀಯನ್ನು ಶಕ್ತಿ ಅಂತ ಪೂಜಿಸುತ್ತಾರೆ. ಪುರುಷನನ್ನು ಏನಂತ ಪೂಜಿಸಬಹುದು.
ಸ್ವಾಮೀಜಿ: ಪುರುಷನನ್ನು ಏನಂತ ಪೂಜಿಸಬಹುದು ಅಂತ ಗೊತ್ತಿಲ್ಲ. ಆದರೆ ಒಂದು ಮಾತು....
ಭಕ್ತ: ಏನು??
ಸ್ವಾಮೀಜಿ: ವಿವಾಹವಾದ ಪುರುಷನನ್ನು ಮಾತ್ರ ಒಂದು ರೀತಿಯಲ್ಲಿ ಪೂಜಿಸಬಹುದು.
ಭಕ್ತ: ಏನದು?
ಸ್ವಾಮೀಜಿ: ಸಹನಶಕ್ತಿ! (patience, stamina, fortitude)
****
ಮೂಲ: ಸ್ವಾಮಿ ಅನುಭವಾನಂದಜೀ ಅವರ ಪ್ರವಚನಗಳು.
2 comments:
ಶೀತಲಾದೇವಿಯು ತನ್ನ ಕೈಯಲ್ಲಿಯ ಪೊರಕೆಯನ್ನು ತನ್ನ ಪ್ರಿಯ ಭಕ್ತನಾದ ಕೇಜರಿವಾಲಾನ ಕೈಯ್ಯಲ್ಲಿ ಕೊಟ್ಟಳೆ?
haaa!! haaa!!! good one sir!
Post a Comment