Tuesday, March 13, 2018

ಒಂದೊತ್ತಿಗೆ ಊಟಕ್ಕೆ ಗತಿಯಿಲ್ಲದವಳು ಡೇಟಿಂಗ್ ಹೋಗಲು ಗಡಿಬಿಡಿ ಮಾಡಿದಳು

ಆವತ್ತು ನನ್ನ ಅದೃಷ್ಟ ಖುಲಾಯಿಸಿತು ಅಂದುಕೊಂಡೆ. Online Dating ಜಾಲತಾಣಗಳಲ್ಲಿ ಹುಡುಗಿಯರನ್ನು ಹುಡುಕಿಕೊಂಡು ಅಲೆದಾಡುತ್ತಿದ್ದೆ. ಅಂತಹ ಸೈಟುಗಳಲ್ಲಿ ಹುಡುಗಿಯರು ಮತ್ತು ಹುಡುಗರ ನಡುವಿನ ಅನುಪಾತ ಬಹಳ ಖರಾಬಾಗಿರುತ್ತದೆ. ಒಂದು ಸಕತ್ ಫಿಗರ್ ಇದ್ದರೆ ಅದನ್ನು ನೋಡಿಕೊಂಡು ಹತ್ತು ಜನ ಯಬಡರು ಜೊಲ್ಲು ಸುರಿಸಿಕೊಂಡು ಮೊದಲು online chatting, ಅದು ವರ್ಕೌಟ್ ಆದರೆ ನಂತರ ಮುಖಾಮುಖಿ ಡೇಟಿಂಗ್ ಇತ್ಯಾದಿ ಮಾಡುತ್ತಿರುತ್ತಾರೆ. ಅವೆಲ್ಲ ಹಿಟ್ ಅಂಡ್ ಮಿಸ್ ಇದ್ದ ಹಾಗೆ. ಗಾಳ ಹಾಕುತ್ತಿರಬೇಕು. ಬಂದರೆ ಬೆಟ್ಟ, ಹೋದರೆ ಜುಟ್ಟ ಅನ್ನುವ ರೀತಿಯಲ್ಲಿ.

ಇವತ್ತು ಬೆಳಿಗ್ಗೆ online ನಲ್ಲಿ ಸಿಕ್ಕ ಹುಡುಗಿ ಲವಲವಿಕೆಯಿಂದ ಚಾಟಿಂಗ್ ಮಾಡುತ್ತಿದ್ದಳು. ನನ್ನ ಜೊತೆ ಅದೇಕೆ ಹಾಗೋ ಗೊತ್ತಿಲ್ಲ. ವಿಷಯ chatting ಕಿಂತ ಮುಂದೆ ಹೋಗುವದೇ ಇಲ್ಲ. ಅಪರೂಪಕ್ಕೆ ಸಿಕ್ಕ ಹುಡುಗಿಯರು ಒಂದೆರೆಡು ದಿನ ಚಾಟಿಂಗ್ ಮಾಡಿ ಸಿಂಕಾಗಿ ಬಿಡುತ್ತಾರೆ. ಅವರಿಗೆ ನಾನು ಬೋರಾಗುತ್ತೇನೋ ಅಥವಾ ಬೇರೆ ಮನ್ಮಥರು ಬಂದು ವಕ್ಕರಿಸಿಕೊಳ್ಳುತ್ತಾರೋ ಗೊತ್ತಿಲ್ಲ. ಆದರೆ ಆವತ್ತು ಸಿಕ್ಕಿದ್ದ ಬೆಡಗಿ ಬಿಂದಾಸ್ ಚಾಟಿಂಗ್ ಮಾಡಿದಳು. ಮುಂಜಾನೆ ಸಿಕ್ಕವಳ ಜೊತೆ ಸಂಜೆವರೆಗೆ ಸಾಕಷ್ಟು ಚಾಟಿಂಗ್ ಆಯಿತು.

ಮುಂದಿನದು ಮುಖತಃ ಭೇಟಿ. ಅಂದರೆ going on date. ಹೇಗೂ ಅವಳ ಜೊತೆ ಪರಿಚಯ ಒಳ್ಳೆ ರೀತಿಯಲ್ಲಿ ರೂಪಗೊಳ್ಳುತಿತ್ತು. ಹಾಗಾಗಿ ಇನ್ನೇಕೆ ತಡಮಾಡುವದು ಎಂದು ಕೇಳಿದೆ.

'ನಾಳೆಯಿಂದ ಎರಡು ದಿನ ವೀಕೆಂಡ್ ಇದೆ. ಭೇಟಿಯಾಗಲು ಸಮಯ, ಆಸಕ್ತಿ ಇದೆಯೇ? ಕಾಫಿ, ಲಂಚ್ ಅಥವಾ ಡಿನ್ನರ್ ಗೆ ಮೀಟ್ ಆಗೋಣವೇ?' ಎಂದು ಪೀಠಿಕೆ ಇಟ್ಟೆ

ಆಶ್ಚರ್ಯವೆನ್ನುವಂತೆ ತುಂಬಾ ಉತ್ಸುಕತೆ ತೋರಿದಳು. 'ವೀಕೆಂಡ್ ತನಕ ಕಾಯುವದೇಕೆ? ಇವತ್ತೇ ರಾತ್ರಿ ಡಿನ್ನರ್ ಗೆ ಸೇರೋಣವೇ?' ಎಂದು ಕೌಂಟರ್ ಪ್ರಪೋಸಲ್ ಇಟ್ಟಳು.

ಅಲಲಲಲಾ ಮಿಟುಕಲಾಡಿ! ಅಂದುಕೊಂಡೆ. ಹುಡುಗಿ ಫಾಸ್ಟ್ ಇದ್ದಾಳೆ. ಪರಿಚಯವಾದ ಮೊದಲ ದಿನವೇ ಸಾಕಷ್ಟು ಮುಂದು ಬಂದಿದ್ದಾಳೆ. ಹುಡುಗನಾಗಿ ನಾನೇ ನಾಳೆ, ನಾಡಿದ್ದು ಭೇಟಿಯಾಗೋಣ ಅಂತ ಪ್ರಪೋಸಲ್ ಇಟ್ಟರೆ ಇವತ್ತೇ ಯಾಕೆ ಆಗಬಾರದು ಎಂದು ಕೇಳುತ್ತಿದ್ದಾಳೆ. ಏನು ಡೀಲೋ ಏನೋ. ಒಟ್ಟಿನಲ್ಲಿ ಬಹಳ exciting ಆಗಿದೆ ಎಂದೆನಿಸಿತು.

ನನಗೂ ಆಕೆಯನ್ನು ಅಂದೇ ಭೇಟಿಯಾಗೇ ಬಿಡಬೇಕು ಅನ್ನುವ ಆಸೆ. ತೀವ್ರ ಆಸೆ. ಅದೆಷ್ಟು ತಿಂಗಳುಗಳಿಂದ online dating websites ಮೇಲೆ ಓತ್ಲಾ ಹೊಡೆದುಕೊಂಡಿದ್ದೆ ಎನ್ನುವುದು ನನಗೊಬ್ಬನಿಗೇ ಗೊತ್ತು. ಆದರೆ ಆದಿನ ಬೇರೆ ಕೆಲಸಗಳೂ ಇದ್ದವು. ಹಾಗಾಗಿ ತುಂಬಾ ಆಸಕ್ತಿಯಿದ್ದರೂ ಆಕೆ ಕೇಳಿದಾಕ್ಷಣ ಕಮಿಟ್ ಆಗಲು ಆಗಲಿಲ್ಲ. ಹೇಗೂ ರಾತ್ರಿಯವರೆಗೆ ಟೈಮ್ ಇದೆ. ಸಂಜೆ ಸುಮಾರಿಗೆ ಖಚಿತ ಮಾಡಿ ತಿಳಿಸುತ್ತೇನೆ ಎಂದು ಹೇಳಿದೆ. ಆಕೆ ಕೊಂಚ disappoint ಆದವಳಂತೆ ಕಂಡುಬಂದಳು. ಹುಡುಗರು ಗಡಿಬಿಡಿ ಮಾಡುತ್ತಾರೆ. ಹುಡುಗಿಯರು ಹಾಗೆಲ್ಲ desperate ರೀತಿ ವರ್ತಿಸುವದು ಬಹಳ ಕಮ್ಮಿ. ಅದರಲ್ಲೂ ಡಿಮ್ಯಾಂಡ್ ಇದೆ ಅನ್ನುವ ಹುಡುಗಿಯರ ನಖರಾಗಳು ಒಂದೇ ಎರಡೇ. ಇವಳ ವರ್ತನೆ ತದ್ವಿರುದ್ಧವಾಗಿತ್ತು.

ಸಂಜೆಯಾಯಿತು. ಬೇರೆ ಬೇರೆ ಕಾರಣಗಳಿಂದ ಆವತ್ತು ರಾತ್ರಿ ಆಕೆಯನ್ನು ಡೇಟಿಂಗಿಗೆ ಕರೆದೊಯ್ಯುವದು ಅಸಾಧ್ಯ ಅನ್ನಿಸತೊಡಗಿತು. ಮತ್ತೆ ಡೇಟಿಂಗಿಗೆ ಎಂದು ಹೋದ ಮೇಲೆ ರಿಲ್ಯಾಕ್ಸ್ ಆಗಿರಬೇಕು. ಆರಾಮಾಗಿ ಹರಟೆ ಹೊಡೆಯುತ್ತ ಊಟ ಮಾಡಿ, ಡೀಲ್ ವರ್ಕೌಟ್ ಆಗುತ್ತಿದೆ ಅನ್ನಿಸಿದರೆ ನಂತರ ಒಂದು ಸಿನೆಮಾ ಕೂಡ ಜೋಡಿಯಾಗಿ ನೋಡಿ ಬರುವಷ್ಟು ಟೈಮ್ ಮತ್ತು ಪರಿಸ್ಥಿತಿ ಇರಬೇಕು. ಆದರೆ ಆವತ್ತಿನ ಪರಿಸ್ಥಿತಿ ಬಹಳ ಟೈಟ್ ಆಗಿತ್ತು. ಡೇಟ್ ನೈಟ್ ವರ್ಕೌಟ್ ಆಗುವಂತಿರಲಿಲ್ಲ.

'very very sorry dear. ಇವತ್ತು ರಾತ್ರಿ ಮೀಟ್ ಮಾಡಲು ಆಗುತ್ತಿಲ್ಲ. ಹಾಗಾಗಿ ನಾಳೆ ಅಥವಾ ನಾಡಿದ್ದು ಅನುಕೂಲವಾಗಿದ್ದರೆ ತಿಳಿಸು. ನನಗೂ ನಿನ್ನನ್ನು ಡೇಟ್ ಮೇಲೆ ಕರೆದೊಯ್ಯಲು ತುಂಬಾ ಆಸಕ್ತಿ ಇದೆ. ಇವತ್ತು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಮತ್ತೊಮ್ಮೆ ಸಾರಿ ಡಿಯರ್,' ಎಂದು ಅವಳಿಗೆ ಮೆಸೇಜ್ ಮಾಡಿದೆ.

Disappoint ಆದ ಹುಡುಗಿ ವಾಪಸ್ ರಿಪ್ಲೈ ಮಾಡಲಿಕ್ಕಿಲ್ಲ. ಅಲ್ಲದೇ ನನ್ನನ್ನು ಬ್ಲಾಕ್ ಮಾಡಿ ಮುಂದಕ್ಕೆ ಹೋಗ್ತಾ ಇರ್ತಾಳೆ ಅಂದುಕೊಂಡೆ.

ಆದರೆ ಹಾಗಾಗಲಿಲ್ಲ.

ತುಂಬಾ ಆಶ್ಚರ್ಯವೆನ್ನಿಸುವಂತೆ ಫಟಾಕ್ ಅಂತ ಇಮ್ಮಿಡಿಯೇಟ್ ಆಗಿ ಅವಳಿಂದ ರಿಪ್ಲೈ ಬಂತು.

'ನಾನು ನಿಮ್ಮ ಏರಿಯಾನಲ್ಲೇ ಇರೋದು. ಜಾಸ್ತಿ ಸಮಯವಲ್ಲದಿದ್ದರೂ ಸರಿ. ಸ್ವಲ್ಪೇ ಸಮಯವಾದರೂ ಸರಿ. ಇವತ್ತೇ ಮೀಟ್ ಆಗೋಣವೇ? ಜಸ್ಟ್ ಕಾಫಿ ಮತ್ತು ಸ್ನಾಕ್ಸ್? ಹತ್ತಿರದಲ್ಲೇ Subway, KFC, McDonald's ತರಹದ ಫಾಸ್ಟ್ ಫುಡ್ ಜಾಗಗಳಿವೆ. ಅಲ್ಲಿ ಎಲ್ಲಿಯಾದರೂ ಒಂದು ಹತ್ತು ನಿಮಿಷ ಭೇಟಿಯಾಗೋಣವೇ? ನಾನಂತೂ ಈಗ ಅಂದರೆ ಈಗಲೇ ರೆಡಿ. ನೀವು ರೆಡಿ ಇದ್ದರೆ ಈಗಲೇ ಹೊರಟುಬಿಡುತ್ತೇನೆ. ಹತ್ತು ನಿಮಿಷದಲ್ಲಿ ಫಾಸ್ಟ್ ಫುಡ್ ಜಾಗದಲ್ಲಿರುತ್ತೇನೆ. ಏನಂತೀರಿ? ಪ್ಲೀಸ್' ಎಂದು ರಿಪ್ಲೈ ಮಾಡಿದ್ದಳು.

ನನಗೂ ತುಂಬಾ ಆಸಕ್ತಿಯಿತ್ತು. ಹೋಗಲೇಬೇಕು ಅನ್ನಿಸುತ್ತಿತ್ತು. ಆದರೆ ಪರಿಸ್ಥಿತಿ ತುಂಬಾ ಟೈಟ್ ಆಗಿತ್ತು. ಏನೇ ಆಸೆಯಾದರೂ ಆವತ್ತು ಆಕೆಯೊಂದಿಗೆ ಡೇಟ್ ಮೇಲೆ ಹೋಗುವ ಸಾಧ್ಯತೆ ಇರಲಿಲ್ಲ. ಬಿಲ್ಕುಲ್ ಇರಲಿಲ್ಲ.

ಕೈಗೆ ಬಂದ  ತುತ್ತು ಬಾಯಿಗೆ ಬರಲಿಲ್ಲ ಅಂತ ಒಂದು ತರಹದ ನಿರಾಸೆಯಾದರೂ ಅವಳ್ಯಾಕೆ ಅಷ್ಟೊಂದು ಉತ್ಸುಕತೆ ತೋರುತ್ತಿದ್ದಾಳೆ ಅಂತ ಗೊತ್ತಾಗಲಿಲ್ಲ. ಅದು ಮಾತ್ರ very unusual.

'Sorry dear, ಇವತ್ತು ಸಾಧ್ಯವಿಲ್ಲ. sorry,' ಎಂದು ಸಂಕಟದಿಂದ ರಿಪ್ಲೈ ಮಾಡಿದೆ.

ಅಷ್ಟಕ್ಕೇ ಮುಗಿಯಲಿಲ್ಲ. ಮತ್ತೆ ಇಮ್ಮಿಡಿಯೇಟ್ ಆಗಿ ರಿಪ್ಲೈ ಬಂತು.

'ಒಂದು ಫೇವರ್ ಮಾಡ್ತೀರಾ? ಪ್ಲೀಸ್... ' ಎಂದು ಕೇಳಿದಳು.

'ಏನು ಹೇಳಿ?' ಅಂದೆ. ಹುಡುಗಿಯರು ಹಾಗೆ ಸೆಂಟಿಯಾಗಿ ಫಿಟ್ಟಿಂಗ್ ಇಟ್ಟರೆ ಮತ್ತೇನು ಮಾಡಿಯಾನು ಹುಲು(ಳು)ಮಾನವ?

'ಅಲ್ಲಿರುವ Subway ಗೆ ಫೋನ್ ಮಾಡಿ ಒಂದು ಊಟದ ಪಾರ್ಸೆಲ್ ನನಗೆ ಕಳಿಸಿಕೊಡುತ್ತೀರಾ? ಪ್ಲೀಸ್. ಊಟಕ್ಕೇನೂ ಇಲ್ಲ. ಪ್ಲೀಸ್!' ಎಂದು ಮೆಸೇಜ್ ಬಂದಿತ್ತು.

ಇದು ನಿಜವೇ!? ಎಂಬಂತೆ ಎರಡೆರೆಡು ಬಾರಿ ಓದಿದೆ. ಅಷ್ಟರಲ್ಲಿ ಮತ್ತೆ ನಾಲ್ಕು ಮೆಸೇಜ್ ಕಳಿಸಿದ್ದಳು. 'ತಪ್ಪು ತಿಳಿಬೇಡಿ. ಎರಡು ದಿವಸದಿಂದ ಊಟ ಮಾಡಿಲ್ಲ. ಪಾರ್ಸೆಲ್ ಆರ್ಡರ್ ಮಾಡ್ತೀರಾ ಪ್ಲೀಸ್. ನನ್ನ ಅಡ್ರೆಸ್ ಇದು. ಪ್ಲೀಸ್!!'

ಈ ಹುಡುಗಿ ಬೆಳಿಗ್ಗೆಯಿಂದ ಇಷ್ಟ್ಯಾಕೆ ಆಸಕ್ತಿ ತೋರಿಸುತ್ತಿದ್ದಾಳೆ. ಡೇಟ್ ಮೇಲೆ ಹೋಗಲು ಅಷ್ಟ್ಯಾಕೆ ಹಾತೊರೆಯುತ್ತಿದ್ದಾಳೆ ಎಂದು ಆವಾಗ ತಿಳಿಯಿತು. ಇದು ವಿಷಯ! ಕೂಳಿಲ್ಲದ ಬಾಳು! ಪಾಪ!

ಈ ಮುಂಬೈ ನಗರಿಯ ಒಡಲಲ್ಲಿ, ಇಲ್ಲಿನ ಥಳಕು ಬೆಳಕಿನಲ್ಲಿ ನೆರಿಗೆ ಚಿಮ್ಮಿಸಿಕೊಂಡು ಉತ್ಸಾಹದ ಚಿಲುಮೆಗಳಂತೆ ಕಂಡುಬರುವ ಇಂತಹ ಯುವತಿಯರ ಹಿಂದೆ ಏನೇನು ಕಥೆಗಳಿವೆಯೋ ಏನೋ?

ಒಂದೊತ್ತಿನ ಊಟಕ್ಕಾಗಿ ಅಪರಿಚಿತನೊಬ್ಬನ ಜೊತೆ ಡೇಟ್ ಮೇಲೆ ಹೋಗುವಷ್ಟು desperate ಆಗುವ ಪರಿಸ್ಥಿತಿ ಯಾರಿಗಾದರೂ ಬರಬಹುದು ಅಂದುಕೊಂಡಿರಲಿಲ್ಲ  ಬಿಡಿ.

ಮೇಲಿನದು ಯಾವುದೋ ಕಾಲ್ಪನಿಕ ಕಥೆಯಲ್ಲ. ಸತ್ಯಕಥೆ. ಪತ್ರಕರ್ತೆ ಗಾಯತ್ರಿ ಜಯರಾಮನ್ ಬರೆದಿರುವ - Who me, Poor?: How India's youth are living in urban poverty to make it big - ಪುಸ್ತಕದಲ್ಲಿ ದಾಖಲಾಗಿರುವ ಸತ್ಯಕಥೆಗಳಲ್ಲಿ ಒಂದು.



ಇನ್ನೊಬ್ಬಳ ಕಥೆ ಕೇಳಿ. 'ಐಫೋನ್ ಕೊಳ್ಳಬೇಕಾಗಿತ್ತು. ಅದಕ್ಕಾಗಿ 'ಹವ್ಯಾಸಿ ವೇಶ್ಯೆ'ಯಾದೆ ಎಂದು ಬಿಂದಾಸ್ ಆಗಿ ಹೇಳುತ್ತಾಳೆ. ಅದರ ಬಗ್ಗೆ ಅವಳಿಗೆ ಯಾವುದೇ ಮುಜುಗರವಿಲ್ಲ. ದೆಹಲಿಯಿಂದ ಮುಂಬೈಗೆ ನೌಕರಿಗಾಗಿ ಬಂದಿರುವ ಹುಡುಗಿ. ಅದರಲ್ಲೂ ಪಂಜಾಬಿ ಬ್ರಾಹ್ಮಣ ಹುಡುಗಿ.

'ಸಂಬಳವೇನೋ ತಕ್ಕಮಟ್ಟಿಗೆ ಬರುತ್ತದೆ. ಆದರೆ ತಿಂಗಳಕೊನೆಗೇನೂ ಮಿಕ್ಕುವದಿಲ್ಲ. ಏನಾದರೂ ಕೊಳ್ಳಬೇಕು ಅಂದರೆ ಕಾಸಿರುವದಿಲ್ಲ.

ಅದೇನಾಯಿತು ಅಂದರೆ... ಯಾವುದೋ ಒಂದು ಪಾರ್ಟಿಗೆ ಹೋಗಿದ್ದೆ. ಪಾರ್ಟಿ ಗಮ್ಮತ್ತಿನಿಂದ ನಡೆದಿತ್ತು.

ಯಾರೋ ಒಬ್ಬನು ಅಚಾನಕ್ ಆಗಿ, 'ಕಾಫಿಗೆ ಬರುತ್ತೀರಾ?' ಎಂದು ಕೇಳಿದಷ್ಟೇ ಸಹಜವಾಗಿ, 'ಸೆಕ್ಸ್ ಮಾಡುವಿರಾ?' ಎಂದು ಕೇಳಿದ.

ಒಂದು ಕ್ಷಣ ತಬ್ಬಿಬ್ಬಾದೆ.

ನಂತರ ಸುಧಾರಿಸಿಕೊಂಡು, ತಮಾಷೆಗೆಂದು ಕೇಳಿದೆ, 'ಎಷ್ಟು ಕಾಸು ಕೊಡ್ತೀಯಾ?'

'ಎಷ್ಟೆಂದು ನೀವೇ ಹೇಳಿ' ಅಂದುಬಿಟ್ಟ.

ತಲೆಗೆ ಹೊಳೆದ ಸಂಖ್ಯೆ ೫೦೦೦.

'ಐದು ಸಾವಿರ,' ಅಂದೆ.

ಅವನು ಮರುಮಾತಾಡದೆ ಐದು ಸಾವಿರ ರೂಪಾಯಿಗಳನ್ನು ನನ್ನ ಕೈಯಲ್ಲಿಟ್ಟ. ಕೊಂಚ ಪ್ರೈವಸಿ ಇರುವ ಜಾಗಕ್ಕೆ ಕರೆದೊಯ್ದ.  ಮುಂದೆ ಒಂದಕ್ಕೆರಡಾಯಿತು. ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಎರಡು ದೇಹಗಳು ಒಂದಾಗಿದ್ದವು.

ಮುಂದೆ ಆ ಹುಡುಗರ ವೃತ್ತದಲ್ಲಿ ನನ್ನ ಬಗ್ಗೆ ಮತ್ತು ನನ್ನ ಈ 'ಹವ್ಯಾಸಿ ವೇಶ್ಯೆ' ದಂಧೆ ಬಗ್ಗೆ ಬೇರೆಯವರಿಗೂ ಗೊತ್ತಾಯಿತು. ಮಲಗಲು ಆಹ್ವಾನಗಳು ಬರತೊಡಗಿದವು. ಇಷ್ಟವಾದವರೊಡನೆ ನಾನೂ ಡೀಲ್ ಮಾಡತೊಡಗಿದೆ. ಕಾಸೂ ಇದ್ದು ಹುಡುಗ ಕೂಡ ಕೂಲಾಗಿದ್ದರೆ ಯಾಕೆ ಬೇಡ ಎನ್ನಲಿ? ಅಲ್ಲಿಗೆ ಸುಖಕ್ಕೆ ಸುಖ. ರೊಕ್ಕಕ್ಕೆ ರೊಕ್ಕ. ಈಗ ಕೈಯಲ್ಲಿ  ಸಾಕಷ್ಟು ಕಾಸು ಓಡಾಡತೊಡಗಿದೆ. ಐಫೋನ್ ಕೊಂಡಿದ್ದೇನೆ,' ಎಂದು ತಣ್ಣಗೆ ಹೇಳುತ್ತಾಳೆ.

ಕಥೆ ಕೇಳಿದ ನೀವು ದಿಗ್ಮೂಢರಾಗಿದ್ದಾರೆ  'Any problem?' ಅನ್ನುವ ಲುಕ್ ಕೊಡುತ್ತಾಳೆ.

'ನನ್ನ lifestyle ಹೀಗಿದೆ ಅಂತ ನೀವೇನೂ ದೊಡ್ಡ ಮಡಿವಂತರಂತೆ ನನ್ನನ್ನು judge ಮಾಡುವ ಅಗತ್ಯವಿಲ್ಲ. ಓಕೆ?' ಎನ್ನುವ ಧಿಮಾಕು ಬೇರೆ.

ಮತ್ತೊಬ್ಬ ಯುವಕ ತನ್ನ ಕಥೆ ಹೇಳಿಕೊಳ್ಳುತ್ತಾನೆ. 'ಒಂದಿನ ರಾತ್ರಿ ಪ್ರೀಮಿಯಂ ರೆಸ್ಟುರಾಂಟಿಗೆ ಪಾರ್ಟಿ ಮಾಡಲು ಹೋಗಿದ್ದೆವು. ಬೆಳಗಿನ ಜಾವದ ತನಕ ಕುಡಿದಿದ್ದೇ ಕುಡಿದಿದ್ದು. ನಲವತ್ತು ಸಾವಿರ ರೂಪಾಯಿಗಳ ಮೇಲೆ ಬಂದಿತ್ತು ಬಿಲ್. ಕೊಡಲು ಅಷ್ಟೊಂದು ಕಾಸು ಇರಲಿಲ್ಲ. ಮೊಬೈಲ್ ಫೋನ್, ವಾಚ್ ಒತ್ತೆ ಇಟ್ಟು ಬಂದೆವು. ಮರುದಿನ ರೊಕ್ಕದ ಜುಗಾಡ್ ಮಾಡಿಕೊಂಡ ನಂತರ ಹೋಗಿ ರೊಕ್ಕ ಕೊಟ್ಟು ಮೊಬೈಲ್ ಬಿಡಿಸಿಕೊಂಡು ಬಂದೆವು.'

ಇನ್ನೊಬ್ಬ ದೇಶದ ಪ್ರಖ್ಯಾತ ವಿದ್ಯಾಸಂಸ್ಥೆಯೊಂದರ ಪದವೀಧರ. ಒಳ್ಳೆ ಸಂಬಳದ ಕೆಲಸ ಕ್ಯಾಂಪಸ್ ಇಂಟರ್ವ್ಯೂನಲ್ಲೇ ಸಿಕ್ಕಿದೆ. ತಿಂಗಳ ಖರ್ಚಿನ ನಂತರ ಬೇಕಾದಷ್ಟು ಕಾಸೂ ಉಳಿಯುತ್ತದೆ. ಇವನಿಗೆ online poker  (ಇಂಟರ್ನೆಟ್ ಮೇಲೆ ಆಡಬಹುದಾದ ಒಂದು ತರಹದ ಇಸ್ಪೀಟ್ ಎಲೆಯಾಟ) ಚಟ. ಆ ಜೂಜಿನ addiction ಆಗಿದೆ. ಲಕ್ಷಾಂತರ ರೂಪಾಯಿ ಸಾಲ ತಲೆಗೆ ಕಟ್ಟಿಕೊಂಡಿದೆ. ಇದ್ದಬಿದ್ದ ಕ್ರೆಡಿಟ್ ಕಾರ್ಡುಗಳನ್ನು ಅವುಗಳ ಗರಿಷ್ಠ ಮೊತ್ತಕ್ಕೆ ಉಜ್ಜಿಬಿಟ್ಟಿದ್ದಾನೆ. ಪರಿಣಾಮ ಸಾಲದ ಶೂಲ ಬಡ್ಡಿ ಸಮೇತ ಇವನನ್ನು ರುಬ್ಬುತ್ತಿದೆ. ಇದೇ ಕೊನೆಯ ಬಾರಿಗೆ ಅಂತ ಹೇಳಿ ತಂದೆತಾಯಿಯಿಂದ ಒಂದು ದೊಡ್ಡ ಮೊತ್ತವನ್ನು ಪಡೆದುಕೊಂಡು ಬಂದು, ಸಾಲವನ್ನು ತೀರಿಸಿ, online poker ಜೂಜಿನ ಚಟದಿಂದ ಹೊರಬರುತ್ತೇನೆ ಅನ್ನುತ್ತಾನೆ. ಜೂಜಿನ ಚಟ ಅಷ್ಟು ಸುಲಭಕ್ಕೆ ಬಿಟ್ಟೀತೇ? ಸಕಲಗುಣಸಂಪನ್ನನಾಗಿದ್ದ ಯುಧಿಷ್ಠಿರನಿಗೆ ಇದ್ದ ಒಂದೇ ಚಟವೆಂದರೆ ಜೂಜಾಡುವದು. ಅದೇ ಹೇಗೆ ಪಾಂಡವರನ್ನು care of footpath ಮಾಡಿ ಮಹಾಭಾರತಕ್ಕೆ ಕಾರಣವಾಯಿತು ಎಂದು ಎಲ್ಲರಿಗೂ ಗೊತ್ತಿದೆ.

ಹೀಗೆ ಸುಮಾರು ಹತ್ತಿಪ್ಪತ್ತು ಯುವಜನರ ಸತ್ಯಕಥೆಗಳನ್ನು ಈ ಪುಸ್ತಕದ ಲೇಖಕಿ ಕಲೆಹಾಕಿದ್ದಾರೆ. authentic ಆಗಿರಲಿ ಅಂತ ಕಥಾನಾಯಕ ಕಥಾನಾಯಕಿಯರ ಹೆಸರನ್ನೂ ಬದಲಾಯಿಸಿಲ್ಲ. ಆಕರ್ಷಕ ರೀತಿಯಲ್ಲಿ ಕಥೆ ಹೇಳಿದ್ದಾರೆ. ಕಥೆಗಳ ಬಗ್ಗೆ ಏನೇ ಅಭಿಪ್ರಾಯವಿರಲಿ. ಆದರೆ ಭಿಡೆಯಿಲ್ಲದೆ ತಮ್ಮ ತಮ್ಮ ಕಥೆಗಳನ್ನು ತಮ್ಮ ನಿಜ ಹೆಸರಿನೊಂದಿಗೆ ಹೇಳಿಕೊಂಡ ಈಗಿನ ಯುವಜನರ ಎದೆಗಾರಿಕೆಗೊಂದು ಸಲಾಮ್.

ಇಷ್ಟೆಲ್ಲಾ ಓದಿದ ಮೇಲೆ, ನಮ್ಮ ಮೂಗಿನ ನೇರಕ್ಕೆ, ಈಗಿನ ಯುವಜನಾಂಗದ ಮೇಲೆ ನೈತಿಕ ತೀರ್ಪು (moral judgement) ನೀಡಿ, 'ಈಗಿನ ಯುವಜನರು ಕೆಟ್ಟು ಕೆರ ಹಿಡಿದು ಹೋಗಿದ್ದಾರೆ. ನಮ್ಮ ಕಾಲದಲ್ಲಿ ಹೀಗರಲಿಲ್ಲಪ್ಪ!' ಎಂದು ಮಡಿವಂತಿಕೆ ತೋರಿದರೆ ತಪ್ಪಾದೀತು. ನಾವು ಯುವಜನರಾಗಿದ್ದಾಗ ನಮ್ಮ ಹಿಂದಿನ ತಲೆಮಾರಿನವರು ಅದೇ ರೀತಿ ಅಂದಿದ್ದರು. ಅವರು ಯುವಜನರಾಗಿದ್ದಾಗ ಅವರ ಹಿಂದಿನ ತಲೆಮಾರಿನವರು ಹಾಗೇ ಅಂದಿರಲು ಸಾಕು . ಅದು ಅನಾದಿ. ಅನಾಡಿಗಳ ಬಗೆ ಆಕ್ಷೇಪಣೆ ಅನಾದಿ! -:)

ಪುಸ್ತಕ ಓದಿ ಮುಗಿಸಿದಾಗ ಅನ್ನಿಸಿದ್ದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ - ಹೀಗೂ ಉಂಟೆ? (ಅದೇ ಹೆಸರಿನ ಟೀವಿ ಕಾರ್ಯಕ್ರಮ ನಡೆಸಿಕೊಡುವ ನಿರೂಪಕ ನಾರಾಯಣಸ್ವಾಮಿಯ ಜರ್ಕ್ ಹೊಡೆಯುವ ಶೈಲಿಯಲ್ಲಿ ಹೇಳಬೇಕು ಅಂದರೆ - ಹೀಗೂ ಉಂಠೇಯ್!? -:)

Thursday, March 08, 2018

ವಿಶ್ವ ಮಹಿಳಾ ದಿನವೆಂದಾಗ 'ತೊಂಡೆಕಾಯಿ ಅಮ್ಮ' ನೆನಪಾದಳು

ಶಾಸನ ವಿಧಿಸದ ಎಚ್ಚರಿಕೆ: ಓದಿದ ಮಡಿವಂತರಿಗೆ ಕೊಂಚ ಇರುಸುಮುರುಸಾಗಬಹುದು.

ಮಾರ್ಚ್, ೮. ಇವತ್ತು ವಿಶ್ವ ಮಹಿಳಾ ದಿವಸವಂತೆ. ಯಾಕೋ 'ತೊಂಡೆಕಾಯಿ ಅಮ್ಮ' ನೆನಪಾದರು.

ತೊಂಡೆಕಾಯಿ ಅಮ್ಮ - ೧೯೭೦ ರ ವರೆಗೂ ಇದ್ದ ಒಬ್ಬ ಮಡಿ ಅಮ್ಮ / ಅಜ್ಜಿ. ಅರ್ಥಾತ್ ಶಿರೋಮುಂಡನ ಮಾಡಿಸಿಕೊಂಡಿದ್ದ ಹವ್ಯಕ ಬ್ರಾಹ್ಮಣ ವಿಧವೆ. ಅದೆಲ್ಲೋ ನಮ್ಮ ಸಿರ್ಸಿ / ಉತ್ತರ ಕನ್ನಡದ ಕಡೆ ಇದ್ದರಂತೆ. ಅವರೊಬ್ಬ living legend. ಅವರ ಬಗ್ಗೆ ಕಥೆಗಳು, ದಂತಕಥೆಗಳು ಬಹಳ.

ತೊಂಡೆಕಾಯಿ ಅಮ್ಮನ ವಿಶೇಷ ಅಂದರೆ ಅವರು ಎಂಟ್ರಿ ಕೊಟ್ಟರು ಅಂದರೆ ಅಲ್ಲಿದ್ದ ಮಹಿಳಾಮಣಿಗಳೆಲ್ಲ ಎದ್ದೆವೋ ಬಿದ್ದೆವೋ ಎಂಬಂತೆ ಬಿದ್ದಾಕಿ ಓಡುತ್ತಿದ್ದರಂತೆ. ಒಟ್ಟಿನಲ್ಲಿ bull in a china shop ಮಾದರಿ. ಪಿಂಗಾಣಿ ಅಂಗಡಿಯೊಂದಕ್ಕೆ ಗೂಳಿ ನುಗ್ಗಿದಂತೆ ತೊಂಡೆಕಾಯಿ ಅಮ್ಮನ ಆಗಮನ.

ಯಾರೋ ಒಬ್ಬ ಫಣಿಯಮ್ಮನಂತಹ ಪಾಪದ ಮಡಿಯಮ್ಮ ಮಹಿಳಾಮಂಡಳಿಯೊಳಗೆ ಸೇರಿಕೊಂಡರೆ ಇತರೆ ಮಹಿಳೆಯರೆಲ್ಲ ಯಾಕೆ ಓಡುತ್ತಿದ್ದರು?

ತೊಂಡೆಕಾಯಿ ಅಮ್ಮ ನಿರ್ಗತಿಕ ಬಡ ವಿಧವೆ. ಆಕಾಲದಲ್ಲಿ ಮಹಿಳೆಯರಿಗೆ ವಿದ್ಯೆ ಗಿದ್ಯೆ ನಾಸ್ತಿ. ಏನೋ ನೌಕರಿ ಚಾಕರಿ ಮಾಡಿಕೊಂಡು ಇರುತ್ತಿದ್ದರು. ಹೆಚ್ಚಿನ ವಿಧವೆಯರು ಸೂಲಗಿತ್ತಿ, ಸೂಲಗಿತ್ತಿಯ ಸಹಾಯಕಿ, ಅಡುಗೆಯವರು, ಇತ್ಯಾದಿ ಕೆಲಸ ಮಾಡಿಕೊಂಡಿರುತ್ತಿದ್ದರು. ಬ್ರಾಹ್ಮಣರಾಗಿರುತ್ತಿದ್ದರಿಂದ ಕಸ ಮುಸುರೆ ಕೆಲಸ ಅವರಿಗೆ ಬೇಕೆಂದರೂ ಸಿಗುತ್ತಿರಲಿಲ್ಲ. ಒಟ್ಟಿನಲ್ಲಿ ಏನೋ ಜುಗಾಡ್ ಮಾಡಿಕೊಂಡು ಒಪ್ಪತ್ತಿನ ಕೂಳು, ಮೆಲ್ಲಲೊಂದಿಷ್ಟು ಎಲೆಯಡಿಕೆ ತಂಬಾಕು, ಏರಿಸಲು ಒಂದು ಚಟಾಕು ನಾಶಿಪುಡಿ, ಉಡಲೊಂದು ಜೊತೆ ಕೆಂಪು ಸೀರೆಯ ಬಂದೋಬಸ್ತ್ ಮಾಡಿಕೊಂಡು, ದೇವರನಾಮ ಹೇಳಿಕೊಂಡು ಇರುತ್ತಿದ್ದವು ಆ ಪಾಪದ ಮಡಿ ಜೀವಗಳು.

'ತೊಂಡೆಕಾಯಿ ಅಮ್ಮ' ಹುಡುಕಿಕೊಂಡಿದ್ದ ಕೆಲಸ ಬಾಣಂತಿ ಸೇವೆ. ಅದರಲ್ಲೂ ನವಜಾತ ಶಿಶುಗಳ ಆರೈಕೆಯಲ್ಲಿ ಅಮ್ಮನದು ಎತ್ತಿದ ಕೈ. ಆಗಷ್ಟೇ ಹುಟ್ಟಿದ ಶಿಶುಗಳಿಗೆ ಸ್ನಾನ ಮಾಡಿಸುವದು ಭಯಂಕರ ನಾಜೂಕಿನ ಕೆಲಸವಂತೆ. ಗೋಣು ಇನ್ನೂ ಗಟ್ಟಿಯಾಗಿರುವದಿಲ್ಲ. ಹಸಿ ತಲೆ ಬುರುಡೆ ಮೃದು ಮೃದು. ಹಾಗಾಗಿ ತುಂಬಾ ಜಾಗರೂಕತೆಯಿಂದ ಶಿಶುವಿನ ಸ್ನಾನ ಆಗಬೇಕು. ಇದರಲ್ಲಿ ತೊಂಡೆಕಾಯಿ ಅಮ್ಮನದು ಎತ್ತಿದ ಕೈ. ತೊಂಡೆಕಾಯಿ ಅಮ್ಮನ ನಾಜೂಕಿನ ಕೈಯಲ್ಲಿ ಶಿಶುವಿನ ಗೋಣು ಉಳುಕಿಸಿದ ಅಥವಾ ತಲೆಯನ್ನು ತಟ್ಟಬಾರದ ರೀತಿಯಲ್ಲಿ ತಟ್ಟಿ ಚಪ್ಪಟೆ ತಲೆ ಮಾಡಿಹಾಕಿದ ಉದಾಹರಣೆಗಳೇ ಇಲ್ಲ. ತೊಂಡೆಕಾಯಿ ಅಮ್ಮನ ಕೈಯಲ್ಲಿ ಸ್ನಾನ ಮಾಡಿಸಿಕೊಂಡ ಶಿಶುಗಳು ಸಿಕ್ಕಾಪಟ್ಟೆ ಮಸ್ತಾಗಿ ತಯಾರಾಗುತ್ತಿದ್ದವು. ಅದೇ ಅವರ claim to fame.

ಇಂತಹ ತೊಂಡೆಕಾಯಿ ಅಮ್ಮ ಮಹಿಳಾಮಂಡಲದಲ್ಲಿ ಬಂದು ಶಾಮೀಲಾದರು ಅಂದರೆ ಮುಗಿಯಿತು. ಅಲ್ಲಿದ್ದ ಸುಮಂಗಳೆಯರ ಪೈಕಿ ಹೆಚ್ಚಿನವರ ಗಂಡಂದಿರು ಅಮ್ಮನ ಆರೈಕೆಯಲ್ಲಿ ಬೆಳೆದವರೇ ಆಗಿರುತ್ತಿದ್ದರು. ಅಲ್ಲಿದ್ದ ಮಹಿಳಾಮಣಿಗಳ ಪತಿದೇವರುಗಳು ಶಿಶುವಿದ್ದಾಗ ಹೇಗಿದ್ದರು, ಹೇಗೆ ಅಮ್ಮ ಅವರ ಆರೈಕೆ ಅದರಲ್ಲೂ ಸ್ನಾನ ಮಾಡಿಸಿದ್ದರು, ಇತರೆ ತರೇವಾರಿ ಬಾಲ್ಯದ ಘಟನೆಗಳನ್ನು ರಸವತ್ತಾಗಿ ವಿವರಿಸುವದೆಂದರೆ ತೊಂಡೆಕಾಯಿ ಅಮ್ಮನಿಗೆ ಇನ್ನಿಲ್ಲದ ಹುರುಪು.

ಊಹಿಸಿಕೊಳ್ಳಿ. ಮಲೆನಾಡಿನ ಹವ್ಯಕರ ಮನೆಯೊಂದರಲ್ಲಿ ಏನೋ ಸಮಾರಂಭ. ಭರ್ಜರಿ ಊಟ ಮುಗಿದಿದೆ. ಮಹಿಳೆಯರೆಲ್ಲ ಕೂಡಿ ಕುಳಿತಿದ್ದಾರೆ. ಭರ್ಜರಿ ಎಲೆಯಡಿಕೆ (ಕವಳ) ಮೆಲ್ಲುತ್ತಿದ್ದಾರೆ. ಹಾಳು ಹರಟೆ ಉತ್ತುಂಗದಲ್ಲಿದೆ. ಮಕ್ಕಳು ಬಂದು ಪೀಡಿಸುತ್ತಾರೆ. ಅವರಿಗೆ ಅಮ್ಮನಿಗೆ ಬಂದ ದಕ್ಷಿಣೆ ಕಾಸಿನ ಮೇಲೆ ಕಣ್ಣು. ಅದರಲ್ಲಿ ಪುಗ್ಗಾ ಅದು ಇದು ಕೊಳ್ಳುವ ಉಮೇದಿ. ಹೀಗೆ ಸಂತಸದ ಗೌಜುಗದ್ದಲದ ವಾತಾವರಣ ಇರುವಾಗ ತೊಂಡೆಕಾಯಿ ಅಮ್ಮ ಎಂಟ್ರಿ ಕೊಟ್ಟರು ಅಂದರೆ ಮುಗಿಯಿತು.

ತೊಂಡೆಕಾಯಿ ಅಮ್ಮ ಶಿಶುಗಳಿಗೆ ಸ್ನಾನ ಮಾಡಿಸುತ್ತಿದ್ದರು ನಿಜ. ಅದೇಕೋ ಏನೋ ಅಮ್ಮನಿಗೆ ಶಿಶುಗಳ 'ತೊಂಡೆಕಾಯಿ' ಬಗ್ಗೆ ವಿವರಣೆ ಕೊಡುವದೆಂದರೆ ಭಯಂಕರ ಆಸಕ್ತಿ. ಈಗ 'ತೊಂಡೆಕಾಯಿ' ಅಂದರೇನು ಅಂತ ನಾನು ನಿಮಗೆ ಹೇಳಬೇಕಾಗುತ್ತದೆ. ತೊಂಡೆಕಾಯಿ ಅಂದರೆ ತರಕಾರಿ ನಿಜ. ಹಾಗೆಯೇ ತೊಂಡೆಕಾಯಿ ಇದು ಬಹುಪಯೋಗಿ ಪದ. ಅನೇಕ ಅರ್ಥಗಳಿವೆ. ಮಾನವ ಶರೀರ ಅಂದಮೇಲೆ ಎಲ್ಲ ಅಂಗಾಂಗಳೂ ಇರುತ್ತವೆ. ಗಂಡಸಿನ ಜನನಾಂಗಕ್ಕೆ ಶಾಸ್ತ್ರಬದ್ಧವಾಗಿ ಶಿಶ್ನ, ಲಿಂಗ ಅನ್ನಬಹುದು. ಸ್ವಲ್ಪ ಕಸಿವಿಸಿಯಾಗುವಂತೆ ಶುದ್ಧ ಕನ್ನಡದಲ್ಲಿ ತು* ಅನ್ನಬಹುದು. ಆದರೆ ಇದ್ಯಾವದೂ ಹವ್ಯಕರಿಗೆ ಒಪ್ಪಿಗೆಯಾದಂತೆ ಕಾಣುವದಿಲ್ಲ. ಅದರಲ್ಲೂ ಚಿಕ್ಕ ಹುಡುಗರ ಚಿಕ್ಕ ಜನನಾಂಗಕ್ಕೆ ಹಾಗೆಲ್ಲ ಅಂದುಬಿಟ್ಟರೆ ಅದು ಹೊಂದಲಿಕ್ಕೂ ಇಲ್ಲ. ಹಾಗಾಗಿ ಹವ್ಯಕ ಭಾಷೆಯಲ್ಲಿ (ಚಿಕ್ಕ) ಹುಡುಗರ ಲಿಂಗಕ್ಕೆ ತೊಂಡೆಕಾಯಿ ಅಂದುಬಿಡುತ್ತಾರೆ. ಸುಮಾರಾಗಿ ಆದ್ರೂ ಸರಿ ಸೈಜಿಗೆ ಗಾತ್ರಕ್ಕೆ ಉದ್ದಗಲಕ್ಕೆ ಸರಿ ಹೊಂದುತ್ತದೆ. ಅರ್ಥ ತಿಳಿಯುತ್ತದೆ. ಪದ ತರಕಾರಿಯ ಹೆಸರು. ಅಸಹ್ಯ ಅನ್ನಿಸುವದಿಲ್ಲ. ಮಿಣ್ಣಿಕಾಯಿ ಕೂಡ ಚಾಲ್ತಿಯಲ್ಲಿರುವ ಪರ್ಯಾಯ ಪದ.

ತೊಂಡೆಕಾಯಿ...ಇದು ತರಕಾರಿ! ;)


ಶಿಶುಗಳಿಗೆ ಸ್ನಾನ ಮಾಡಿಸುತ್ತಿದ್ದ ಅಮ್ಮನ ಕಣ್ಣಿಗೆ ಶಿಶುಗಳ ತೊಂಡೆಕಾಯಿ ಕಂಡೇ ಕಾಣುತ್ತಿತ್ತು. ಕಾಣದೇ ಇರಲು ಶಿಶುಗಳೇನು ಕೌಪೀನ ಧರಿಸಿ ಸ್ನಾನ ಮಾಡುತ್ತವೆಯೇ? ಇಲ್ಲ. ಫುಲ್ ಗೊಮ್ಮಟೇಶ್ವರ ಅವತಾರದಲ್ಲೇ ಸ್ನಾನ. ನಂತರ ಚಡ್ಡಿ ಪಿಡ್ಡಿ ಹಾಕಿದರೆ ಪುಣ್ಯ. ಕೊಂಚ ಗಾಳಿ ಆಡಿಕೊಂಡಿರಲಿ ಅಂತ ಹಾಗೇ ಬಿಟ್ಟರೆ ಜೈ ಗೊಮ್ಮಟೇಶ್ವರ.

ನೆರೆದಿರುವಂತಹ ಮಹಿಳಾಮಂಡಳಿಯಲ್ಲಿ ಅನ್ನಪೂರ್ಣಾ ಅನ್ನುವ ಹೆಸರಿನ ಮುತ್ತೈದೆ ಮೇಲೆ ಅಮ್ಮನ ಕಣ್ಣುಬಿತ್ತು ಅಂದುಕೊಳ್ಳಿ. ತೊಂಡೆಕಾಯಿ ಅಮ್ಮನ ಮಾತಿನ ಲಹರಿ ಹೀಗಿರುತ್ತಿತ್ತು. ಶುದ್ಧ ಹವ್ಯಕ ಭಾಷೆಯಲ್ಲಿ...

'ತಂಗೀ...ಅನ್ನಪೂರ್ಣೆ ಅಲ್ಲದನೇ? ರಾಶಿ ದಿನಾಗಿತ್ತಲೇ ನೋಡದ್ದೆ. ಶಿಶುವಿದ್ದಾಗ ನಿನ್ನ ಗಂಡ ಶ್ರೀಪತಿಯಾ ಆನೇ ಮೀಸ್ತಿದ್ದಿ ಹೇಳಿ. ತೆಳತ್ತಾ? ಶ್ರೀಪತಿ ತೊಂಡೆಕಾಯಿ ಥಂಡಿಯಲ್ಲಿ ಮುರುಟಿ ಮುರುಟಿ ಇಷ್ಟ ಶಣ್ಣ ಆಕ್ಯ ಇರ್ತಿತ್ತು ಬಿಲಾ. ಒಂದ್ಹನೀಯಾ ಬಿಸಿನೀರು ಹನಿಸಿದ ಮ್ಯಾಲೆಯೇ ಅಲ್ಲೊಂದು ತೊಂಡೆಕಾಯಿ ಇದ್ದು ಹೇಳಿ ಕಾಣವು. ಅಲ್ಲಿವರಿಗೆ ತೊಂಡೆಕಾಯಿ ಕೇಳಡಾ ನೀನು.... ' ಹೀಗೆ ಶುದ್ಧ ಹವ್ಯಕ ಭಾಷೆಯಲ್ಲಿ ಅನ್ನಪೂರ್ಣಾ ಅನ್ನುವ ಹೆಸರಿನ ಸುಮಂಗಲೆಯ ಮುಂದೆ ಆಕೆಯ ಪತಿರಾಯನ ಬಾಲ್ಯದ ತೊಂಡೆಕಾಯಿಯ ವರ್ಣನೆ ನಡೆಯುತ್ತಿತ್ತು.

(ನಿಮಗೆ ನಮ್ಮ ಹವ್ಯಕ ಕನ್ನಡ ಅರ್ಥವಾಗದಿದ್ದರೆ: ತಂಗಿ, ನೀನು ಅನ್ನಪೂರ್ಣಾ ಅಲ್ಲವೇನೇ? ಬಹಳ ದಿನಗಳಾಗಿತ್ತು ನಿನ್ನನ್ನು ನೋಡದೆ. ಶಿಶುವಿದ್ದಾಗ ನಿನ್ನ ಗಂಡ ಶ್ರೀಪತಿಯನ್ನು ನಾನೇ ಸ್ನಾನ ಮಾಡಿಸುತ್ತಿದ್ದೆ. ಶ್ರೀಪತಿಯ 'ತೊಂಡೆಕಾಯಿ' ಚಳಿಯಲ್ಲಿ ಮುರುಟಿ ಮುರುಟಿ ಇಷ್ಟು ಸಣ್ಣ ಆಗಿರುತ್ತಿತ್ತು. ಕೊಂಚ ಬಿಸಿನೀರು ಹಾಕಿದ ಮೇಲೆಯೇ ಅಲ್ಲೊಂದು ತೊಂಡೆಕಾಯಿ ಇರುವ ಕುರುಹು ಕಾಣುತ್ತಿತ್ತು. ಅಲ್ಲಿಯವರೆಗೆ ತೊಂಡೆಕಾಯಿ ಬಗ್ಗೆ ನೀ ಕೇಳಬೇಡ!)

ಶಿವಾಯ ನಮಃ! ಅಲ್ಲರೀ... ಆ ಪಾಪದ ಮುತ್ತೈದೆ ಅನ್ನಪೂರ್ಣಾ ಅದೆಷ್ಟು ಸಂಕೋಚ ಅನುಭವಿಸುತ್ತಿರಬೇಕು ಊಹಿಸಿ, ಅದೂ ಬಾಕಿ ಮಹಿಳೆಯರೆಲ್ಲ ತಲೆ ಕೆಳಗೆ ಹಾಕಿ, ಒಬ್ಬರನೊಬ್ಬರು ತಿವಿದುಕೊಳ್ಳುತ್ತ ಮುಸಿಮುಸಿ ನಗುತ್ತಿರುವಾಗ!

'ಥೋ ಅಮ್ಮಾ! ಅದೆಂತದು ಹೇಳಿ ಮಳ್ಳ ಹಲಬ್ತ್ಯೆ. ಯಾವಾಗ ಎಂತಾ ಮಾತಾಡವು ಹೇಳಿ ತೆಳಿತಿಲ್ಲೆ ನಿಂಗೆ. ಇಶೀ ಮಳ್ಳೆಯಾ... ' ಎಂದು ನಾಚಿಕೆಯಿಂದ ಕೆಂಪಕೆಂಪಾಗಿ ಮುದ್ದೆಯಾಗಿರುವ ಅನ್ನಪೂರ್ಣ ತೊಂಡೆಕಾಯಿ ಅಮ್ಮನನ್ನು ಗದರಿಸಿದರೆ ತೊಂಡೆಕಾಯಿ ಅಮ್ಮನದು ಏನೂ ಅರಿಯದ ಶುದ್ಧ ಮುಗ್ಧ ನಗೆ. ಹುಚ್ಚ ಪ್ಯಾಲಿ ನಗೆ.

ಹೀಗೆ ಅನ್ನಪೂರ್ಣಳನ್ನು ಗೋಳೊಯ್ದುಕೊಂಡ ಮೇಲೆ ಕಂಡಾಕೆ ಮತ್ತೊಬ್ಬಳು. ಅವಳ ಹೆಸರು ನಾಗವೇಣಿ ಅಂತಿಟ್ಟುಕೊಳ್ಳಿ. ಅಮ್ಮನ ಕಣ್ಣು ಆಕೆಯ ಮೇಲೆ ಬಿತ್ತು. ಫುಲ್ ಬಾಡಿ ಡೀಪ್ ಸ್ಕ್ಯಾನ್ ಮಾಡಿದ ಅಮ್ಮ ನಾಗವೇಣಿಯ ಗರ್ಭದ ಹೊಸ ಪ್ರೊಡಕ್ಷನ್ ಮಿಸ್ ಮಾಡುವಂತಿರಲಿಲ್ಲ.

''ತಂಗೀ  ನಾಗವೇಣಿ. ಮತ್ತೆ ಬಸುರಿದ್ಯನೇ? ಇದು ಮೂರ್ನೇದ್ದು ಅಲ್ಲದನೇ? ಮೂರ್ನೆದ್ದೇ. ಯಂಗೆ ಗೊತ್ತಿಲ್ಯ? ಮೊದಲಿನ ಎರಡೂ ಶಿಶುಗಳನ್ನ ಮೀಸಿಕೊಟ್ಟಿದ್ದು ಆನೇ ಅಲ್ಲದನೇ. ತಂಗೀ ನಿಂಗೆ ಗೊತ್ತಿದ್ದ? ನಿನ್ನ ಗಂಡ ಪದ್ಮನಾಭ ಇದ್ದನಲೇ. ಪದ್ಮನಾಭನ ಅಮ್ಮ, ಅದೇ ಯಂಕಟು ಭಾವನ್ ಮೂರನೇ ಹೆಂಡ್ತಿ, ಸುಶೀಲತ್ತಿಗೆ ಹೇಳಿ ಇದ್ದಿತ್ತು. ಹಳೇ ಹಲ್ಕಟ್ ಮುದುಕಿ ಅದು. ಅದು ಪ್ರತಿ ಬಾರಿ ಯಂಗೆ ಹೇಳ್ತಿತ್ತು. ಶಿಶುವಿನ ಮೀಸಿಯಾದ ಮ್ಯಾಲೆ ತೊಂಡೆಕಾಯಿಯಾ ಮರಿಯದ್ದೇ ತಣ್ಣೀರಿನಿಂದ ತೊಳ್ಸವು ಹೇಳಿ. ಅದು ಯಂಗೆ ಗೊತ್ತಿಲ್ಯನೇ? ಬಿಸಿನೀರಲ್ಲಿ ಮೀಸಿದ ಮ್ಯಾಲೆ ಗಂಡುಡ್ಗ್ರ ತೊಂಡೆಕಾಯಿ ತಣ್ಣೀರಲ್ಲಿ ತೊಳ್ಸದೆಯಾ. ಇಲ್ಲದಿದ್ದರೆ ಕಡಿಗೆ ಗಂಡಸ್ರಿಗೆ ಮುಂದೆ ಮಕ್ಕ ಅಪ್ಪದು ಖಾತ್ರಿಯಿಲ್ಲೆ ನೋಡು. ಬಿಶಿನೀರಿಂದ ವೀರ್ನಾಶಾ (ವೀರ್ಯನಾಶ) ಆಗೋಗ್ತಳಾ. ತೆಳತ್ತಾ? ಈಗ ನೋಡು ನಿನ್ನ ಗಂಡ ಪದ್ಮನಾಭ ಹ್ಯಾಂಗಿದ್ದಾ ಹೇಳಿ. ಎರಡು ಸಲಿ ಆತು ಈಗ ಮೂರನೇ ಸಲಿ ಅಪ್ಪ ಅಪ್ಪಲೆ ಹೊಂಟಿದ್ದ. ಅಡ್ಡಿಲ್ಲೆ ಮಾಣಿ. ಜೋರಿದ್ದ. ತೊಂಡೆಕಾಯಿ ತಣ್ಣೀರಲ್ಲಿ ತೊಳ್ಸಿದ್ದು ಉಪಯೋಗಾತು ಹೇಳ್ಯಾತು. ಅಲ್ಲದನೇ? ನಿಂಗೆ ಡಾಲಿವರಿ ದಿನ ಯಾವಾಗ ಕೊಟ್ಟಿದ್ರು ಡಾಕ್ಟ್ರು? ಎಲ್ಲಿ ಹಡಿಯವು ಮಾಡಿದ್ದೆ? ಮನಿಯಲ್ಲ? ಅಪ್ಪನ ಮನಿಯಲ್ಲ? ಅಥವಾ ಆಸ್ಪತ್ರೆಯಲ್ಲ? ಯನಗೆ ಮೊದಲೇ ತಿಳಿಸಿಬಿಡು. ಅಕಾss??!!"

ಇಷ್ಟು ಕೇಳಿದ ನಾಗವೇಣಿ ಎಂಬ ಎರಡೂವರೆ ಮಕ್ಕಳ ಮಹಾತಾಯಿ ಮೊದಲು ವಿಪರೀತ ನಾಚಿಕೊಂಡು, ನಂತರ ನಾಗಿಣಿಯಂತೆ ಭುಸುಗುಟ್ಟದಿದ್ದರೆ ಅದಕ್ಕಿರುವ ಕಾರಣ ಅಮ್ಮನ ಭೋಳೆತನ, ಒಳ್ಳೆತನ ಮತ್ತು ಮಂಕುತನ.

(ನಿಮಗೆ ನಮ್ಮ ಹವ್ಯಕ ಕನ್ನಡ ಅರ್ಥವಾಗದಿದ್ದರೆ: ತಂಗಿ ನಾಗವೇಣಿ. ಮತ್ತೆ ಬಸುರಿದ್ದಿಯೇನು? ಇದು ಮೂರನೇಯದ್ದು ಅಲ್ಲವೇ? ಮೂರನೆಯದ್ದೇ. ನನಗೆ ಗೊತ್ತಿಲ್ಲವೇ? ಮೊದಲಿನ ಎರಡೂ ಶಿಶುಗಳ ಸ್ನಾನ ಮಾಡಿಸಿಕೊಟ್ಟಿದ್ದು ನಾನೇ ತಾನೇ? ತಂಗಿ ನಿನಗೆ ಗೊತ್ತಿದೆಯೇ? ನಿನ್ನ ಗಂಡ ಪದ್ಮನಾಭ ಇದ್ದಾನಲ್ಲ? ಪದ್ಮನಾಭನ ಅಜ್ಜಿ, ವೆಂಕಟ ಭಾವನ ಮೂರನೇ ಹೆಂಡತಿ, ಸುಶೀಲತ್ತಿಗೆ ಅಂತಿದ್ದರು. ಹಳೇ ಹಲ್ಕಟ್ ಮುದುಕಿ ಅವರು. ಅವರು ನನಗೆ ಪ್ರತಿಬಾರಿ ಹೇಳುತ್ತಿದ್ದರು. ಗಂಡು ಶಿಶುವಿನ ಸ್ನಾನ ಮಾಡಿಸಿದ ಮೇಲೆ ಜನನಾಂಗವನ್ನು ಮರೆಯದೇ ತಣ್ಣೀರಿನಿಂದ ತೊಳೆಯಬೇಕು ಎಂದು. ಅದು ನನಗೆ ಗೊತ್ತಿಲ್ಲವೇ? ಬಿಸಿನೀರಲ್ಲಿ ಸ್ನಾನ ಮಾಡಿಸಿದ ಮೇಲೆ ತೊಂಡೆಕಾಯಿಯನ್ನು ತಣ್ಣೀರಿನಲ್ಲಿ ತೊಳೆಸುವುದೇ. ಇಲ್ಲದಿದ್ದರೆ ಮುಂದೆ ಗಂಡಸರಿಗೆ ಮಕ್ಕಳಾಗುವದು ಖಾತ್ರಿ ಇಲ್ಲ. ಬಿಸಿನೀರಿನಿಂದ ವೀರ್ಯನಾಶವಾಗಿಹೋಗುತ್ತದಂತೆ. ಈಗ ನಿನ್ನ ಗಂಡ ಪದ್ಮನಾಭನನ್ನೇ ನೋಡು ಹೇಗಿದ್ದಾನೆ. ಎರಡು ಬಾರಿ ಆಯಿತು. ಈಗ ಮೂರನೇ ಬಾರಿ ತಂದೆಯಾಗಲು ಹೊರಟಿದ್ದಾನೆ. ಮಾಣಿ ಅಡ್ಡಿಯಿಲ್ಲ. ಜೋರಾಗಿದ್ದಾನೆ. ತೊಂಡೆಕಾಯಿಯನ್ನು ತಣ್ಣೀರಿನಲ್ಲಿ ತೊಳೆಸಿದ್ದು ಉಪಯೋಗವಾಯಿತು ಅಂದಂತಾಯಿತು. ಅಲ್ಲವೇ? ನಿನಗೆ ಡೆಲಿವರಿ ಡೇಟ್ ಎಂದು ಕೊಟ್ಟಿದ್ದಾರೆ ಡಾಕ್ಟರ್? ಎಲ್ಲಿ ಹಡೆಯುವಾಕೆ ನೀನು? ಗಂಡನ ಮನೆಯಲ್ಲೋ? ತವರುಮನೆಯಲ್ಲೋ? ಅಥವಾ ಆಸ್ಪತ್ರೆಯಲ್ಲೋ? ನನಗೆ ಮೊದಲೇ ತಿಳಿಸಿಬಿಡು. ಸರಿನೇ?)

ಹೀಗೆ ಇಬ್ಬರು ಮುತ್ತೈದೆಯರ ಪತಿಪರಮೇಶ್ವರರ ಬಾಲ್ಯದ ತೊಂಡೆಕಾಯಿ ಪುರಾಣದ ಕೇವಲ ಸ್ಯಾಂಪಲ್ ಹೇಳುವಷ್ಟರಲ್ಲಿ ಸಂಕೋಚ, ನಾಚಿಗೆ, ಕಿರಿಕಿರಿ ತಡೆಯಲಾಗದ ಮಹಿಳಾಮಂಡಲ ಅಲ್ಲಿಂದ ಗಾಯಬ್ ಆಗಿ ಬೇರೆ ಎಲ್ಲೋ ಜಮಾಯಿಸುತ್ತಿತ್ತು. 'ಆ ಮಳ್ಳ ತೊಂಡೆಕಾಯಿ ಅಮ್ಮ ಇಲ್ಲೊಂದು ಬರ್ದಿದ್ರೆ ಸಾಕು. ಮತ್ತ ಗಂಡಂದಿಕ್ಕಳ ತೊಂಡೆಕಾಯಿ ಬಗ್ಗೆ ಮಳ್ಳ ಹಲಬಲ್ಲೆ ಶುರು ಮಾಡ್ಚು ಅಂದರೆ ಮುಗತ್ತು. ಭಗವಂತಾ ಇಷ್ಟು ವರ್ಷಾತು. ಜನಕ್ಕೆ ಲೈಕ್ ಆಗ್ತಿಲ್ಲೆ ಹೇಳಿ ಅದ್ಕೆ ಗೊತ್ತಾಗ್ತಿಲ್ಯಾ? ಅದೆಂತಕ್ಕೆ ಹಾಂಗ ಮಳ್ಳ ಹರಿತನಪಾ? ಹಾಂಗೆ ಹೇಳಿ ಗನಾ ಅಮ್ಮ ಮತ್ತೆ... ' ಎಂದು ಮಹಿಳಾಮಂಡಳಿ ಬೇರೊಂದು ಜಾಗದಲ್ಲಿ ಎರಡನೇ ಹರಟೆ ಸೆಷನ್ನಿಗೆ ತೆರೆದುಕೊಳ್ಳುತ್ತಿತ್ತು.

(ಆ ಹುಚ್ಚ ತೊಂಡೆಕಾಯಿ ಅಮ್ಮ ಇಲ್ಲೂ ಕೂಡ ಬರದಿದ್ದರೆ ಸಾಕು. ಮತ್ತೆ ಗಂಡಂದಿರ ತೊಂಡೆಕಾಯಿ ಬಗ್ಗೆ ಹುಚ್ಚುಚ್ಚಾಗಿ ಮಾತಾಡುತ್ತಾರೆ. ಭಗವಂತಾ! ಇಷ್ಟು ವರ್ಷವಾಯಿತು. ಜನರಿಗೆ ಇಷ್ಟವಾಗುವದಿಲ್ಲ ಅಂತ ಅವರಿಗೆ ಅರ್ಥವಾಗುವದಿಲ್ಲವೇ? ಯಾಕೆ ಮಳ್ಳುಮಳ್ಳಾಗಿ ಆಡುತ್ತಾರೋ? ಆದರೆ ಏನೇ ಹೇಳಿ ಅಮ್ಮ ತುಂಬಾ ಒಳ್ಳೆಯವರು.)

ಅಲ್ಲಿಗೂ ಅಮ್ಮನ ಪ್ರವೇಶವಾದರೆ ಆಶ್ಚರ್ಯವಿಲ್ಲ. ಅಮ್ಮನೂ ಎಲೆಯಡಿಕೆ ಅಗಿಯುತ್ತ, ಸೊಂಟಕ್ಕೆ ಕಟ್ಟಿಕೊಂಡಿದ್ದ ಕವಳದ ಸಂಚಿಯನ್ನು ಅಡ್ಜಸ್ಟ್ ಮಾಡಿಕೊಳ್ಳುತ್ತ ಎಂಟ್ರಿ ಕೊಡುತ್ತಿದ್ದರು. 'ಅಯ್ಯೋ, ನಿಂಗ ಎಲ್ಲಾ ಇಲ್ಲಿ ಬಂದು ಸೇರಿಗಿದ್ರ? ಅಲ್ಲಿಂದ ಎಂತಕ್ಕೆ ಓಡ್ಬಂದಿ?' ಎಂದು ಅಮ್ಮ ಮುಗ್ಧ ಪ್ರಶ್ನೆ. ತಮ್ಮ ತೊಂಡೆಕಾಯಿ ಪುರಾಣವೇ ಮಹಿಳಾಮಂಡಲದ ಸ್ಥಾನಪಲ್ಲಟಕ್ಕೆ ಕಾರಣ ಅಂತ ಅವರಿಗೆ ಬಿಲ್ಕುಲ್ ತಿಳಿಯುತ್ತಿರಲಿಲ್ಲ. ನಂಬಿದರೆ ನಂಬಿ ಬಿಟ್ಟರೆ ಬಿಡಿ ಅನ್ನುವಂತಿದ್ದರು ಅಮ್ಮ. Innocently stupid or stupidly innocent.

ತೊಂಡೆಕಾಯಿ ಅಮ್ಮನನ್ನು ನಾವಂತೂ ನೋಡಿಲ್ಲ. ಆದರೆ ಹೆಂಗಳೆಯರ ಮಾತಿನ ಮಧ್ಯೆ ತೊಂಡೆಕಾಯಿ ಅಮ್ಮ ಬಂದುಹೋಗಿದ್ದನ್ನು ಕೇಳಿದ್ದೇನೆ. ಮಹಿಳೆಯರು ತಮ್ಮತಮ್ಮಲ್ಲೇ ಪೋಲಿ ಮಾತಾಡಿಕೊಳ್ಳುತ್ತಾರೆ. ಅಂತಹ ಸಂದರ್ಭಗಳಲ್ಲಿ ಇಂತಹ ಕಥೆಗಳು ಹೊರಬರುತ್ತವೆ. ನಮ್ಮಂತಹ ಚಿಕ್ಕ ಹುಡುಗರಿಗೆ ಏನೂ ಗೊತ್ತಾಗುವದಿಲ್ಲ ಅಂದುಕೊಂಡಿರುತ್ತಾರೆ. ಎಂದೋ ಕೇಳಿದ್ದು ಮಂಡೆಯಲ್ಲಿ ಎಲ್ಲೋ ಶೇಖರವಾಗಿರುತ್ತದೆ. ಇವತ್ತಿನಂತೆ ಎಂದೋ ಹೀಗೆ ನೆನಪಿಗೆ ಬರುತ್ತವೆ.

ತೊಂಡೆಕಾಯಿ ಅಮ್ಮನ ತರಹದ್ದೇ ಜಾತಿಯ ಮತ್ತೊಬ್ಬ ಕರುಣಾಮಯಿ ತಾಯಿ / ಅಜ್ಜಿ  ಅಂದರೆ 'ಒದ್ದೆ ಚಡ್ಡಿ ಅಮ್ಮ'. ಅವರಿಗೆ ಮಕ್ಕಳು ಎಲ್ಲಿ ಒದ್ದೆಯಾದ ಚಡ್ಡಿ ಹಾಕಿಕೊಂಡುಬಿಟ್ಟಿದ್ದಾರೋ ಅನ್ನುವ ಚಿಂತೆ. ಹಾಗಾಗಿ ಕಂಡಕಂಡ ಹುಡುಗರ ಚಡ್ಡಿಗೆ ಯಾವುದೇ ಮುನ್ಸೂಚನೆ ಇಲ್ಲದೆ ಸರಕ್ ಅಂತ ಕೈಹಾಕಿಬಿಡುತ್ತಿದ್ದರು. ಮಕ್ಕಳು ಶಾಕ್ ಹೊಡೆಸಿಕೊಂಡವರಂತೆ ಜಿಗಿದರೆ ಅಮ್ಮನದು  ಒಂದೇ ವಾರಾತ, 'ಥೋ, ಕೆಟ್ಟ ಪೋರಾ! ನೀನು ಎಲ್ಲಿ ಒದ್ದೆ ಚಡ್ಡಿ ಹಾಕಿಕೊಂಡಿಯೋ ಅಂತ ನೋಡಿದೆ ಅಷ್ಟೇ. ಒದ್ದೆ ಚಡ್ಡಿ ಹಾಕಿಕೊಂಡರೆ ಜ್ವರ ಬಂದೀತು. ಹುಷಾರ್!'

ತೊಂಡೆಕಾಯಿ ಅಮ್ಮನಂತಹ ಮಹಿಳೆಯರು ತುಂಬಾ ಅಮಾಯಕರಾಗಿರುತ್ತಿದ್ದರು. ಎಷ್ಟೋ ಜನ ಬಾಲವಿಧವೆಯರು. ವಯಸ್ಸಿಗೆ ಬರುವ ಮುನ್ನವೇ ಬಾಲ್ಯವಿವಾಹವಾಗಿರುತ್ತಿತ್ತು. ಇವರು ಋತುಮತಿಯರಾಗಿ ಪಟ್ಟಕ್ಕೆ ಬರುವ ಹೊತ್ತಿಗೆ ಗಂಡ ಚಟ್ಟಕ್ಕೆ ಏರಿರುತ್ತಿದ್ದ ಅರ್ಥಾತ್ ಕೈಲಾಸ ಸೇರಿರುತ್ತಿದ್ದ. ಹಾಗಾಗಿ ಅವರಿಗೆ ಸಂಸಾರ, ಸಂಸಾರದ 'ಸುಖ' ಗೊತ್ತಿಲ್ಲ. ಹಾಗಾಗಿ ಸಣ್ಣ ಹುಡುಗರ ತೊಂಡೆಕಾಯಿ ಬಗ್ಗೆ 'ಸಹಜವಾಗಿ' ಮಾತಾಡಿದರೆ ವಿವಾಹಿತ ಮಹಿಳೆಯರು ಯಾಕೆ ಆಪರಿ ಸಂಕೋಚ ನಾಚಿಗೆ ಪಟ್ಟುಕೊಳ್ಳುತ್ತಾರೆ ಅನ್ನುವದು ತೊಂಡೆಕಾಯಿ ಅಮ್ಮನ ಪೈಕಿಯವರಿಗೆ ಚಿದಂಬರ ರಹಸ್ಯ.

ತೊಂಡೆಕಾಯಿ ಅಮ್ಮ ಈಗಿಲ್ಲ. ಅಂತಹ ಅಮ್ಮಂದಿರ ಜಮಾನಾ ಎಂದೋ ಮುಗಿದಿದೆ. ಬೇಜಾರಿನ ಸಂಗತಿ ಎಂದರೆ ಜನರಲ್ಲಿ ಅಂತಹ trademark ಅಮಾಯಕತೆ, ಮುಗ್ಧತೆ, ಸೇವಾಮನೋಭಾವ, ನಿಷ್ಕಲ್ಮಶ ಪ್ರೀತಿ ಕೂಡ ಮಾಯವಾಗಿದೆ. ಈಗ ಎಲ್ಲರೂ ಲೆಕ್ಕಾಚಾರದವರೇ. ಎಲ್ಲ ತಾಳೆ ಹಾಕಿಯೇ ಮಾತುಕತೆ. ಶುದ್ಧ ಬೆರಕೆ ಬುದ್ಧಿ.

ತೊಂಡೆಕಾಯಿಗೆ ಇಂಗ್ಲೀಷಿನಲ್ಲಿ ಏನೆನ್ನುತ್ತಾರೆ ಎಂದು ಗೊತ್ತಿರಲಿಲ್ಲ. Gentleman's Toe ಅನ್ನುವದು ತೊಂಡೆಕಾಯಿಗೆ ಇರುವ ಒಂದು ಇಂಗ್ಲೀಷ್ ಪದ. ತಿಳಿದು ತುಂಬಾ ನಗು ಬಂತು. ಬೆಂಡೆಕಾಯಿಗೆ lady's finger ಅಂತೆ. ತೊಂಡೆಕಾಯಿಗೆ Gentleman's Toe ಅಂತೆ. ಶಿವಾಯ ನಮಃ!

Friday, March 02, 2018

ಶ್ರೀದೇವಿ ...ನೆನಪುಗಳು

ಬಾಲಿವುಡ್ ತಾರೆ, ನಮ್ಮ ತಲೆಮಾರಿನ ಅಪ್ಸರೆ, ನಟಿ ಶ್ರೀದೇವಿ ನಿಧನಳಾಗಿದ್ದಾಳೆ. ಆತ್ಮಕ್ಕೆ ಶಾಂತಿ ಸಿಗಲಿ.

ಶ್ರೀದೇವಿ ನಿಧನಳಾದಳು ಎಂದು ತಿಳಿದಾಗ ಒಂದಿಷ್ಟು ಹಳೆಯ ನೆನಪುಗಳು ಮರುಕಳಿಸಿದವು.

'Some people's reputation precedes them' ಅಂತ ಇಂಗ್ಲೀಷಿನಲ್ಲಿ ಒಂದು ಮಾತಿದೆ. ಅಂದರೆ ಒಬ್ಬರ ಬಗ್ಗೆ ಸಿಕ್ಕಾಪಟ್ಟೆ ಸುದ್ದಿಯನ್ನು ಓದಿರುತ್ತೇವೆ, ಮಾಹಿತಿಯನ್ನು ಕಲೆಹಾಕಿರುತ್ತೇವೆ, ತಿಳಿದುಕೊಂಡಿರುತ್ತೇವೆ. ಆದರೆ ಅವರನ್ನು ನೋಡಿರುವದಿಲ್ಲ. ನಿಜಜೀವನದಲ್ಲಿ ಹೋಗಲಿ. ಸಿನೆಮಾದಲ್ಲೂ ನೋಡಿರುವದಿಲ್ಲ. ಶ್ರೀದೇವಿಯ ವಿಷಯದಲ್ಲಿ ನಮ್ಮ ಜೊತೆ ಆಗಿದ್ದೂ ಅದೇ.

೧೯೮೨ ರ ಸಮಯದಿಂದಲೇ ಶ್ರೀದೇವಿ ಪತ್ರಿಕೆಗಳ ಸಿನೆಮಾ ಪುರವಣಿ ಪುಟಗಳಲ್ಲಿ ರಾರಾಜಿಸುತ್ತಿದಳು. ಆಕೆಗೆ ಸಿನಿಮಾ ಪತ್ರಕರ್ತರು ಕೊಟ್ಟ ಬಿರುದು - 'ಸಿಡಿಲು ತೊಡೆಗಳ ರಾಣಿ'. ಏನಪ್ಪಾ ಇದು ಹೀಗೆ ವಿಚಿತ್ರವಾಗಿ ಬಿರುದು ಕೊಟ್ಟಿದ್ದಾರೆ ಅಂತ ಅನ್ನಿಸುತ್ತಿತ್ತು. ಶ್ರೀದೇವಿ ಬಗ್ಗೆ ಆರ್ಟಿಕಲ್ ಬಂತು ಅಂದರೆ ಆಕೆಯ ಸಿಡಿಲ ತೊಡೆಗಳ ಒಂದು ಖತರ್ನಾಕ್ ಫೋಟೋ ಇರಲೇಬೇಕು. ಒತ್ತಾಯಕ್ಕೆ ಹಾಕಿಕೊಂಡಿದ್ದಾಳೋ ಎಂದೆನಿಸುವ ರಬ್ಬಾರಬ್ಬು ಬಣ್ಣದ ಬಿಟ್ಟಬಿಗಿ ಹಾಫ್-ಪ್ಯಾಂಟ್ ಅಥವಾ ಬಿಟ್ಟಬಿಗಿಯ ಈಜುಡಿಗೆ ಆಕೆಯ ಸ್ಟ್ಯಾಂಡರ್ಡ್ ದಿರುಸು. ಒಟ್ಟಿನಲ್ಲಿ ಸಿಡಿಲು ತೊಡೆಗಳ ರಾಣಿ ಎಂದರೇನು ಅಂತ ಯಾರಿಗಾದರೂ ಡೌಟ್ ಬಂದರೆ ನೋಡಿಕೊಂಡು ಸಂಶಯ ಬಗೆಹರಿಸಿಕೊಳ್ಳಲಿ ಎಂಬಂತೆ ಆ ಫೋಟೋ ಇರುತ್ತಿತ್ತು.

ನಾವಿನ್ನೂ ಆಗ ಚಿಣ್ಣ ಬಾಲಕರು. ಹತ್ತೇ ವರ್ಷದ ಹಾಪರು. ಹಾಗಾಗಿ ಸಿಡಿಲು ತೊಡೆ, ಕಣ್ಣಿನ ಕೋಲ್ಮಿಂಚು ಮುಂತಾದ ವಿಚಿತ್ರ ಬಿರುದುಗಳ ಬಗ್ಗೆ ತಲೆಕೆಡಿಸಿಕೊಳ್ಳುವ ವಯಸ್ಸು ಅದಾಗಿರಲಿಲ್ಲ. ಆದರೂ 'ಸಂಯುಕ್ತ ಕರ್ನಾಟಕ' ದಿನಪತ್ರಿಕೆಯನ್ನು ಸಾದ್ಯಂತ ಓದಬೇಕು. ಹಾಗಾಗಿ ಅಂತಹ non-veg ಮಾಹಿತಿ ಕಣ್ಣಿಗೆ ಬೀಳುತ್ತಿತ್ತು. ಉಪಾಯವಿರಲಿಲ್ಲ.

ಶ್ರೀದೇವಿಯ ನೋಡಿದ ಮೊದಲ ಸಿನಿಮಾ - ಜಾನ್ಬಾಜ್. ೧೯೮೬. ಅದರಲ್ಲಿ ಶ್ರೀದೇವಿಯದು ಅತಿಥಿ ಪಾತ್ರ. ಆ ಸಿನೆಮಾದಲ್ಲಿ ಬೇಗನೆ ಆಕೆಯ ತಿಥಿಯಾಗಿಬಿಡುತ್ತದೆ. ಬೇಗನೆ ಚತ್ತು ಪೋಯಾಳ್. ನಿರ್ಮಾಪಕ, ನಿರ್ದೇಶಕ, ನಟ ಫಿರೋಜ್ ಖಾನನ ಅದ್ಭುತ ಸಿನಿಮಾ. ಶ್ರೀದೇವಿ, ರೇಖಾ, ಡಿಂಪಲ್ ಕಣ್ಮನ ತಣಿಸುತ್ತಾರೆ. ಒಂದಕ್ಕಿಂತ ಒಂದು ಉತ್ತಮ ಹಾಡುಗಳಿವೆ. Feroz Khan was a trendsetter.

ಮುಂದೆ ಕೆಲ ತಿಂಗಳ ನಂತರ ನೋಡಿದ್ದು - ಕರ್ಮಾ. ಖರೆ ಹೇಳಬೇಕೆಂದರೆ, ಸೋದರನಂತಿರುವ ಭಟ್ಕಳದ ಪ್ರಕಾಶ ಹೆಗಡೆಯೊಂದಿಗೆ ಜೇಮ್ಸ್ ಬಾಂಡ್ ಸಿನಿಮಾ ನೋಡೋಣ ಅಂತ ಹುಬ್ಬಳ್ಳಿಗೆ ಹೋದರೆ ಬಾಂಡ್ ಸಿನಿಮಾ  ಹೌಸ್ ಫುಲ್. ಬೇರೆ ಯಾವುದಾದರೂ ಮೂವಿ ನೋಡೋಣ ಅಂತ ಉದ್ದಕ್ಕೆ ಕೊಪ್ಪಿಕರ್ ರೋಡ್ ಅಲೆದಾಗ ಕಣ್ಣಿಗೆ ಬಿದಿದ್ದು, ಅದಕ್ಕಿಂತ ಹೆಚ್ಚಾಗಿ ಟಿಕೆಟ್ ಸಿಕ್ಕ ಮೂವಿ - ಕರ್ಮಾ. ನಮ್ಮ ಕರ್ಮ ಚೆನ್ನಾಗಿತ್ತು.  ಹಾಗಾಗಿ ಮೂವಿ ಕೂಡ ಚೆನ್ನಾಗಿತ್ತು. ಹಿರಿಯನಟ ದಿಲೀಪ್ ಕುಮಾರ್, ಅನುಪಮ್ ಖೇರ್ ನಟಿಸಿದ ಮೂವಿ. ಏನೋ ಒಂದು ರೀತಿಯಲ್ಲಿ ಚೆನ್ನಾಗಿತ್ತು.

'ಕರ್ಮಾ' ಸಿನೆಮಾದಲ್ಲಿ ಶ್ರೀದೇವಿಯನ್ನು ಈಜುಕೊಳದಲ್ಲಿ ಈಜು ಹೊಡೆಸಿ ಹೊರಗೆ ತಂದರಲ್ಲ. ನೋಡಿ ಧನ್ಯವಾಯಿತು ಜನ್ಮ! ಸಿಡಿಲು ತೊಡೆಗಳ ರಾಣಿಯ ದರ್ಶನ ಭಾಗ್ಯ. ಆಗತಾನೇ ಮೊಳಕೆಯೊಡಿಯುತ್ತಿದ್ದ ಹದಿನಾಲ್ಕರ ಹದಿಹರಿಯಕ್ಕೆ ಸರಿಯಾದ ಗೊಬ್ಬರ ಹಾಕಿದಂತಾಗಿ ಮುಂದೊಂದಿಷ್ಟು ದಿನ ತಲೆ ಫುಲ್ ಗೊಬ್ಬರ ಗೊಬ್ಬರ. ಹತ್ತು ಗಾಯತ್ರಿ ಮಂತ್ರ ಜಾಸ್ತಿ ಹೇಳಬೇಕಾಯಿತು. ಗಾಯತ್ರಿ ಹೇಳಿದರೆ ಮನಸ್ಸು ಶಾಂತವಾಗುತ್ತದೆ ಅಂತ ಮುಂಜಿಯಾದಾಗ ಮೊಳೆ ಹೊಡೆದಿಟ್ಟಿದ್ದರು. ಅದು ನಿಜ ಅಂತ ಈಗ ಗೊತ್ತಾಗಿದೆ ಬಿಡಿ. ಮೊಳೆಯಲ್ಲ ನಿಜ. ಗಾಯತ್ರಿ ಹೇಳಿದರೆ ಮನಸ್ಸು ಶಾಂತವಾಗುತ್ತದೆ ಎಂಬುದು ನಿಜ. ಇದಾಗುವ ಒಂದು ವರ್ಷದ ಹಿಂದೆ 'ಕಾಡಿನ ರಾಜ' ಎನ್ನುವ ಟಾರ್ಜಾನ್ ಮಾದರಿಯ, ಕೊಂಚ soft-porn ದೃಶ್ಯಗಳಿದ್ದ,  ಕನ್ನಡ ಸಿನಿಮಾ ನೋಡಿದ ನಮ್ಮ ಕ್ಲಾಸಿನ ಅನೇಕರೂ (ನನ್ನನ್ನೂ ಹಿಡಿದು) ವಾರಗಟ್ಟಲೇ ಪೂರ್ತಿ ಸುನ್ನಾಗಿ, ಸೈಲೆಂಟ್ ಆಗಿ, ಸುಮಡಿಯಲ್ಲಿ trans ಗೆ ಹೋದಂತೆ zombie ಆಗಿಹೋಗಿದ್ದೆವು. ಖತರ್ನಾಕ್ ಮಿತ್ರನೊಬ್ಬ ಕಾಡಿನ ರಾಜ ನೋಡಿಬಂದವನೇ ' ಮಸ್ತ ಐತಿ. ಹೋಗಿ ನೋಡಿ ಬರ್ರಿಲೇ,' ಅಂದಿದ್ದ. ಹೋಗಿ ನೋಡಿದರೆ ಅಷ್ಟೇ ಮತ್ತೆ! ಅದಕ್ಕಿಂತ ಅಚ್ಚರಿಯಾಗಿದ್ದು ಅಂದರೆ ಸಿನಿಮಾ ನೋಡುತ್ತಾ ನೋಡುತ್ತಾ ಅಕ್ಕ ಪಕ್ಕ ಕೂತ ಅಂಕಲ್ಲುಗಳು ದೀಪಾ ಎಂಬ ಮಲಯಾಳಿ ಕುಟ್ಟಿ ಮತ್ತು ಟೈಗರ್ ಪ್ರಭಾಕರ್ ಒತ್ತಿ ಒತ್ತಿ ರೋಮ್ಯಾನ್ಸ್ ಮಾಡುತ್ತಿದ್ದರೆ ಇವರು ಕಾಳಿಂಗ ಸರ್ಪದಂತೆ ಭುಸುಗುಟ್ಟಿದ್ದು! ಅಂತಹ soft-porn ದೃಶ್ಯಗಳನ್ನು ನೋಡಿದಾಗ ಗಂಡುಮುಂಡೆವು ಯಾಕೆ ಹಾಗೆ ಕಾಳಿಂಗಸರ್ಪದಂತೆ ಭುಸುಗುಡುತ್ತವೆ ಅಂತ ಅರಿವಾಗಲು ಮತ್ತೂ ಕೆಲವು ವರ್ಷ ಬೇಕಾಯಿತು ಅನ್ನಿ. ಕಾಡಿನ ರಾಜ ಹೇಳಿಕೇಳಿ ಕಾಡಿನ ಸಿನಿಮಾ. ನಿರ್ದೇಶಕರ ಬದೌಲತ್ ಆನೆಗೂ ದೀಪಾ ಕುಟ್ಟಿ ಜೊತೆ ರೋಮ್ಯಾನ್ಸ್ ಮಾಡುವ ಅದೃಷ್ಟ. ಹೊಡೀರಿ ಹಲಗಿ!

ಸಿಡಿಲು ತೊಡೆಗಳ ರಾಣಿ ಅನ್ನುವ ಬಿರುದು ಶ್ರೀದೇವಿಗೆ exclusive ಆಗಿ ಉಳಿಯಲೇ ಇಲ್ಲ. ೧೯೮೭-೮೮ ರ ಹೊತ್ತಿಗೆ ಜೂಹಿ ಚಾವ್ಲಾ ಅನ್ನುವ ಮಾಜಿ ಮಿಸ್ ಇಂಡಿಯಾಗೆ ಕೂಡ ಅದೇ ಬಿರುದು ದಯಪಾಲಿಸಿಬಿಟ್ಟರು ನಮ್ಮ ಕನ್ನಡದ ಸಿನಿ ಪತ್ರಕರ್ತರು. ಯಾಕಪ್ಪಾ ಅಂತ ನೋಡಿದರೆ ನಮ್ಮ ರವಿ ಮಾಮಾ (ನಟ ನಿರ್ದೇಶಕ ರವಿಚಂದ್ರನ್ ) ತಮ್ಮ 'ಪ್ರೇಮಲೋಕ' ಸಿನಿಮಾದಲ್ಲಿ ಜೂಹಿ ಎಂಬ ಭಾರತ ಸುಂದರಿಯನ್ನು ಈಜುಡಿಗೆಯಲ್ಲಿ ಲೆಫ್ಟ್ ರೈಟ್ ಕವಾಯಿತು ಮಾಡಿಸಿಬಿಟ್ಟಿದ್ದರು. ನಡೀರಿ ಸಿವಾ! ಬಿರುದು ಒಂದು ಬಿರುದಾಂಕಿತೆಯರು ಇಬ್ಬರು. ಶ್ರೀದೇವಿ ಮತ್ತು ಜೂಹಿ. 'ಪ್ರೇಮಲೋಕ' ೧೯೮೭ ರಲ್ಲೇ ಬಂದರೂ ನಾನು ನೋಡಿದ್ದು ೧೯೯೨. ಸಹಪಾಠಿ ಮಿತ್ರ ೧೦th B ಕ್ಲಾಸಿನ ಬಸು ಪಾಟೀಲ ಆ ಸಿನೆಮಾವನ್ನು ಇಪ್ಪತ್ತಕ್ಕೂ ಹೆಚ್ಚು ಬಾರಿ ನೋಡಿದ್ದ ಅಂತ ಸುದ್ದಿ ಇತ್ತು. ಧನ್ಯ ಬಸು ಪಾಟೀಲ ನೀನೇ ಧನ್ಯ!

ಇಷ್ಟಾದರೂ ಸಿಡಿಲು ತೊಡೆಗಳ ರಾಣಿ ಎನ್ನುವ ವಿಚಿತ್ರ ಬಿರುದಿನ ಹಿಂದಿನ ಸತ್ಯ ಏನು ಅಂತ ಗೊತ್ತಾಗಿರಲಿಲ್ಲ. ಆಮೇಲೆ ಗೊತ್ತಾಗಿದ್ದು ಅದು Thunder Thighs Beauty ಅನ್ನುವ ಇಂಗ್ಲೀಷ್ ಬಿರುದಿನ ಕನ್ನಡೀಕರಣ ಎಂದು. ಶಿವಾ! ಹೀಗೂ ಉಂಟೆ!? ಅನ್ನಿಸಿದ್ದು ಮಾತ್ರ ನಿಜ. ಇಂಗ್ಲೀಷ್ ಪುಸ್ತಕಗಳಲ್ಲಿ Thunder thighs beauty, buxom beauty, voluptuous  ಅಂತೆಲ್ಲ ವಿಶೇಷಣಗಳನ್ನು ಉಪಯೋಗಿಸಿದಾಗ ಅಸಹಜ ಅನ್ನಿಸುವದಿಲ್ಲ. ಅದನ್ನೇ ಕನ್ನಡದಲ್ಲಿ ಯಥಾವತ್ತಾಗಿ ಬರೆದರೆ ಯಾಕೋ ನಮ್ಮ ಸಂಸ್ಕೃತಿಗೆ ಒಗ್ಗುವದಿಲ್ಲ ಅಂತ ಅನ್ನಿಸಿತು. ಇರಲಿ.

ನಗೀನಾ - ಶ್ರೀದೇವಿಯ ಬೆಸ್ಟ್ ಮೂವಿ. ಇಚ್ಛಾಧಾರಿ ಹೆಣ್ಣು ನಾಗರಹಾವಿನ ಕಥೆಯುಳ್ಳ ಅದ್ಭುತ ಸಿನಿಮಾ. ಇವತ್ತಿಗೂ ನೋಡಿ ಸಂತೋಷಪಡಬಹುದು. simply outstanding ಸಿನಿಮಾ.

ಇನ್ನೂ ಅನೇಕ ಮೂವಿಗಳು ಚೆನ್ನಾಗಿವೆ. ಚಾಂದಿನಿ, ಚಾಲ್ಬಾಜ್, ಖುದಾ ಗವಾ, ಮಿಸ್ಟರ್ ಇಂಡಿಯಾ, ಇತ್ಯಾದಿ. ಕೆಲವು ತೆಲುಗು, ತಮಿಳು ಮೂವಿಗಳೂ ಸೂಪರ್.

***

ನಮ್ಮ ಸಹಪಾಠಿ ಹುಡುಗಿಯೊಬ್ಬಳ ಅಕ್ಕನಿಗೆ ಕಾಲೇಜಿನಲ್ಲಿ ಶ್ರೀದೇವಿ ಎಂದು ರೇಗಿಸುತ್ತಿದ್ದರಂತೆ. ಹಾಗಂತ ಮಾಹಿತಿ ಎಷ್ಟೋ ವರ್ಷಗಳ ನಂತರ ನನ್ನ ಕಿವಿಗೆ ಮೊನ್ನಿತ್ತಲಾಗೆ ಬಿದ್ದಿತ್ತು.

ಹ್ಯಾಂ!!?? ಅದ್ಯಾವ ಕೋನದಿಂದ, ಎಂತಹ ಭೂತಗನ್ನಡಿ ಹಿಡಿದು ನೋಡಿದರೂ ಆಕೆ ಶ್ರೀದೇವಿ ತರಹ ಕಾಣುವದಿಲ್ಲ. ಹಾಗಿದ್ದಾಗ ಆಕೆಗ್ಯಾಕೆ ಶ್ರೀದೇವಿ ಎನ್ನುವ ಬಿರುದು?

ತನಿಖೆ ಮಾಡಿನೋಡಿದರೆ ಮತ್ತದೇ ಕೇಸು.

TTB. Thunder Thighs Beauty.

ಒಟ್ಟಿನಲ್ಲಿ ಕಂಡಕಂಡ, ಸಿಕ್ಕಸಿಕ್ಕ, ಟುಮ್ ಟುಮ್ ಇರುವ, ಸದೃಢ ಮೈಕಟ್ಟಿನ ಭಾಗ್ಯ ಪಡೆದುಕೊಂಡುಬಂದ  ಕನ್ಯೆಯರಿಗೆಲ್ಲ ಶ್ರೀದೇವಿ ಅನ್ನಿಸಿಕೊಳ್ಳುವ ಭಾಗ್ಯ! ಯಾರಿಗುಂಟು ಯಾರಿಗಿಲ್ಲ.

ನಮ್ಮ ಧಾರವಾಡದ, ಅದರಲ್ಲೂ ಭಟ್ಟರ ಶಾಲೆಯ, 'ಬಾಲ'ಕರು ಬಾಲಿಕೆಯರಿಗೆ ನಾಮಕರಣ ಮಾಡುವದರಲ್ಲಿ ನಿಸ್ಸೀಮರು. ಒಂದು ಚೂರು ಹೋಲಿಕೆಯಿದ್ದರೂ ಸಾಕು ಏನೋ ಒಂದು ಹೆಸರು ಇಟ್ಟುಬಿಡುತ್ತಾರೆ. ಉದಾ: ನಮ್ಮ ಕ್ಲಾಸಿನ ಇಂದಿರಾ ಗಾಂಧಿ! ಬಿ ಕ್ಲಾಸಿನ ಅನಿತಾ ರಾಜ್!

***

ಶ್ರೀದೇವಿ ಮೃತಳಾದ ನಂತರ, ಅದರಲ್ಲೂ ಸಾವು ಮೊದಲು ವರದಿಯಾದಂತೆ ಹೃದಯಸ್ಥಂಭನದಿಂದ ಆಗಿಲ್ಲ, ಬಾತ್ರೂಮಿನ ಸ್ನಾನದ ಟಬ್ಬಿನಲ್ಲಿ ಬಿದ್ದು ಮುಳುಗಿ ಸತ್ತಿದ್ದಾಳೆ ಎಂದು ಸುದ್ದಿ ಬಂದಾಗ ಹಲವಾರು ಸಂಶಯದ ಸುಳಿಗಳು ಎದ್ದವು. ಥರೇವಾರಿ conspiracy theories ಜನಿಸಿದವು.

ರಾಜಕಾರಣಿ ಸುಬ್ರಮಣಿಯನ್ ಸ್ವಾಮಿ ಒಂದು ಮಾತು ಹೇಳಿದ್ದು ದೊಡ್ಡ ವಿವಾದಕ್ಕೆ ಎಡೆಯಾಯಿತು. 'ಶ್ರೀದೇವಿ ಸಾವಿನಲ್ಲಿ ಭೂಗತಲೋಕದ ಡಾನ್ ದಾವೂದ್ ಇಬ್ರಾಹಿಮ್ಮನ ಕೈವಾಡವಿದೆಯೋ ಎಂದು ತನಿಖೆ ಮಾಡಬೇಕು' ಅಂದರು ಸ್ವಾಮಿ.

ಎಲ್ಲರೂ ಸ್ವಾಮಿಯವರ ಮೇಲೆ ಮುರಿದುಕೊಂಡು ಬಿದ್ದರು. ಈ ಸ್ವಾಮಿಗೆ ಬೇರೆ ಕೆಲಸವಿಲ್ಲ. ಕೇವಲ ಇಲ್ಲಸಲ್ಲದ conspiracy theory ಗಳನ್ನು ಹರಿಬಿಡುತ್ತಾರೆ ಎಂದೆಲ್ಲ ಅವರನ್ನು ಟೀಕೆ ಮಾಡಲಾಯಿತು. ಟೀಕೆ ಮುಂದುವರೆದು ವೈಯಕ್ತಿಕ ದಾಳಿಯಾಯಿತು. ಅದು ಇತ್ತೀಚಿನ ಸಂಪ್ರದಾಯ. Trolling ಅನ್ನುವ ಅನಿಷ್ಟ ಪದ್ಧತಿ.

ಶ್ರೀದೇವಿಯ ಸಾವಿಗೂ, ಭೂಗತ ಲೋಕಕ್ಕೂ (underworld), ದಾವೂದ್ ಇಬ್ರಾಹಿಮ್ಮನಿಗೂ ಸಂಬಂಧವಿದೆಯೋ ಇಲ್ಲವೋ ದೇವರಿಗೇ ಗೊತ್ತು.

ಆದರೆ ಶ್ರೀದೇವಿಯ ಬಗ್ಗೆ ಸಿಕ್ಕಾಪಟ್ಟೆ ಆಕರ್ಷಣೆ ಹೊಂದಿದ್ದ ಡಾನ್ ದಾವೂದ್ ಇಬ್ರಾಹಿಂ ೧೯೯೨ ರಲ್ಲಿ ಶ್ರೀದೇವಿಯನ್ನು ದುಬೈನಲ್ಲಿ ಸಿಕ್ಕಾಪಟ್ಟೆ ಖಾತಿರ್ದಾರಿ ಮಾಡಿದ್ದನಂತೆ. ದುಬೈಗೆ ಬಂದಿದ್ದ ಶ್ರೀದೇವಿಯನ್ನು ಸ್ವಾಗತಿಸಲು ಬಿಚ್ಚಬಿಳುಪಿನ ಪರಮದುಬಾರಿ ರೋಲ್ಸ್ರಾಯ್ ಕಾರನ್ನು ಕಳುಹಿಸಿ ತನ್ನ ಅಭಿಮಾನ ಮೆರೆದಿದ್ದನಂತೆ. ಬೇಹುಗಾರಿಕೆ ಸಂಸ್ಥೆಗಳು ಸಂಗ್ರಹಿಸಿದ ಮಾಹಿತಿಯನ್ನು ಉಲ್ಲೇಖಿಸಿ ಪ್ರಸಿದ್ಧ ಪತ್ರಕರ್ತೆ ಚಾರುಲತಾ ಜೋಶಿ ೧೯೯೭ ರಲ್ಲಿ Outlook ಪತ್ರಿಕೆಯಲ್ಲಿ ಬರೆದಿದ್ದರು.

ಸುಬ್ರಮಣಿಯನ್ ಸ್ವಾಮಿಯವರ ಹೇಳಿಕೆ ನೋಡಿದಾಗ ಹಿಂದೆಲ್ಲೋ ಏನೋ ಓದಿದ ನೆನಪಾಯಿತು. ಗೂಗಲ್ ಮೊರೆಹೋದೆ. ಇಪ್ಪತ್ತು ವರ್ಷಗಳ ಹಿಂದಿನ Outlook ಪತ್ರಿಕೆಯ ವರದಿ ಸಿಕ್ಕಿತು.

ಒಂದು ಸಣ್ಣ ಮಾಹಿತಿ ಇದೆ.

>>
But for the star-struck Dawood—who intelligence records say arranged a white Rolls Royce for actress Sridevi when she visited Dubai for a week in 1992
<<

ಪೂರ್ತಿ ಆರ್ಟಿಕಲ್: Rolls Royces In Dawoodland (೨೫ ಆಗಸ್ಟ್ ೧೯೯೭ ರ Outlook ಪತ್ರಿಕೆ)

೨೬ ವರ್ಷಗಳ ಹಿಂದೆ ೧೯೯೨ ರಲ್ಲಿ ಆಗಿರಬಹುದಾದ ಘಟನೆ. ವರದಿಯಾಗಿದ್ದು ೨೧ ವರ್ಷಗಳ ಹಿಂದೆ ೧೯೯೭ ರಲ್ಲಿ.

ಈಬಗ್ಗೆ ನಾನು ಜಾಸ್ತಿಯೇನೂ ಬರೆಯುವದಿಲ್ಲ. ಬರೆದರೆ ಅದೆಲ್ಲ ಊಹೆ, conjecture, speculation ಆಗುತ್ತದೆ.

celebrity ಗಳಿಗೆ, ಸುಪ್ರಸಿದ್ಧ ವ್ಯಕ್ತಿಗಳಿಗೆ ಸಮಾಜದ ಎಲ್ಲ ಸ್ಥರಗಳಲ್ಲೂ ಆರಾಧಕರು (Admirers) ಇರುತ್ತಾರೆ. ಆರಾಧಕರು ಅವರ ಮೆಚ್ಚುಗೆ, ಆಕರ್ಷಣೆ ಇತ್ಯಾದಿಗಳನ್ನು ಬೇರೆ ಬೇರೆ ರೀತಿಯಲ್ಲಿ ತೋರಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಪ್ರಸಿದ್ಧ ವ್ಯಕ್ತಿಗಳು ಮತ್ತು ಅವರ ಆರಾಧಕರ ಮಧ್ಯೆ ಸಂಬಂಧ, ಅದೂ ಇರಬಾರದಂತಹ ಸಂಬಂಧ, ಇತ್ತು ಎಂದು ಹೇಳಲಿಕ್ಕೆ ಆಗುವದಿಲ್ಲ.

ಬಾಲಿವುಡ್ಡಿನ ಬೇರೆಬೇರೆ ವೃತ್ತಿಪರರಿಗೂ ಮತ್ತು ಭೂಗತಜಗತ್ತಿಗೂ ಇರುವ ಸಂಬಂಧ ಕೂಡ ಜಗಜ್ಜಾಹೀರಾಗಿದೆ. ಸಾಮಾನ್ಯಜ್ಞಾನವಾಗಿರುವ ಆ ವಿಷಯವನ್ನು ಇದೊಂದೇ ವರದಿಯ ಆಧಾರದ ಮೇಲೆ ಶ್ರೀದೇವಿಗೆ ತಳಕುಹಾಕಲು ಬರುವದಿಲ್ಲ.

ಒಂದು ಮಾತ್ರ ನಿಜ. ದಾವೂದನ ಖಡಕ್ ಹಿಡಿತ ದುಬೈ ಒಂದೇ ಅಲ್ಲ ಎಲ್ಲ ಕಡೆ ಇದೆ. ತನ್ನ ಪ್ರಭಾವವನ್ನು ಉಪಯೋಗಿಸಿ ಆತ ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಯಾವ ಕೆಲಸ ಬೇಕಾದರೂ ಮಾಡಿಸಬಲ್ಲ. ಕುಕೃತ್ಯಗಳನ್ನು ಸಂಘಟಿಸಬಲ್ಲ ಮತ್ತು ಮಾಡಿಸಬಲ್ಲ. ಮಾಡಿದ್ದನ್ನು ಮುಚ್ಚಿಹಾಕಿಸಲೂಬಲ್ಲ. ಭಾರತಕ್ಕೆ ಬೇಕಾಗಿದ್ದ, ಇಂಟರ್ಪೋಲ್ ರೆಡ್ ಅಲರ್ಟ್ ಇದ್ದ, ಕುಖ್ಯಾತ ಅಪರಾಧಿಗಳು (ಅನೀಸ್ ಇಬ್ರಾಹಿಂ, ಅಬು ಸಲೇಂ ಇತ್ಯಾದಿಗಳು) ಕೊಲ್ಲಿ ದೇಶಗಳಲ್ಲಿ ಬಂಧಿತರಾದಾಗಲೂ ದಾವೂದನ ಕೃಪೆಯಿಂದ ಬಚಾವಾಗಿ ಸೇಫಾಗಿ ಪಾಕಿಸ್ತಾನ ಸೇರಿದ ನಿದರ್ಶನಗಳು ಇವೆ. ಅಂತವನಿಗೆ ಇದು ಕೊಲೆಯೇ ಆಗಿದ್ದರೆ ಅದನ್ನು ಮುಚ್ಚಿಹಾಕುವದೊಂದು ದೊಡ್ಡ ಮಾತೇ? ಆದರೆ ಆ ನಿಟ್ಟಿನಲ್ಲಿ ತನಿಖೆ ಮಾಡಬೇಕು ಅಂದರೆ ಕೊಲೆಯ ಉದ್ದೇಶ (motive) ಏನು ಅಂತ ಹುಡುಕಬೇಕಾಗುತ್ತದೆ. ಅದೆಲ್ಲ ಹೆಚ್ಚಿನ ತನಿಖೆಯಾದಾಗ ಮಾತ್ರ ಗೊತ್ತಾಗುತ್ತದೆ.

ದುಬೈ ಸರ್ಕಾರವಂತೂ ಕ್ಲೀನ್ ಚಿಟ್ ಕೊಟ್ಟಿದೆ.

ಪುರಾತನ ನಟಿ ಪ್ರಿಯಾ ರಾಜವಂಶ ಕೂಡ ೨೦೦೦ ರಲ್ಲಿ ಬಾತ್ರೂಮಿನಲ್ಲಿ ಕಾಲು ಜಾರಿ ಬಿದ್ದು ಸತ್ತಳು ಅಂತ ವರದಿಯಾಗಿತ್ತು. ಮುಂಬೈ ಕ್ರೈಂ ಬ್ರಾಂಚ್ ಬರೋಬ್ಬರಿ ತನಿಖೆ ಮಾಡಿದಾಗ ತಿಳಿದಿದ್ದು ಅದು ಆಸ್ತಿಗಾಗಿ ಒಂದು ವ್ಯವಸ್ಥಿತವಾಗಿ ರೂಪಿಸಿ ಮಾಡಿದ ಕೊಲೆ. ಆಪಾದನೆ ಅಷ್ಟೇ ಅಲ್ಲ. ಆಪಾದಿತರಿಗೆ ಶಿಕ್ಷೆ ಕೂಡ ಆಗಿದೆ. ನೆನಪಿಗೆ ಬರುವ ಮತ್ತೊಂದು ಕುಖ್ಯಾತ ಕೇಸ್ ಅಂದರೆ ಸುನಂದಾ ಪುಷ್ಕರ್ ತರೂರ್ ಸಾವು. ಅದು ಹೇಗೆಲ್ಲ ಚಿತ್ರವಿಚಿತ್ರ ತಿರುವುಗಳನ್ನು ಪಡೆದುಕೊಂಡಿತೆಂಬುದು ಎಲ್ಲರಿಗೂ ಗೊತ್ತು.

ದಾವೂದ್ ಇಬ್ರಾಹಿಂನ ಕಬಂಧಬಾಹುಗಳು ವಿಶ್ವಾದ್ಯಂತ ಹೇಗೆ ಚಾಚಿವೆ ಎನ್ನುವುದರ ಬಗ್ಗೆ ಝಳಕ್ ಕೊಡುವ ಎರಡು ಬ್ಲಾಗ್ ಪೋಸ್ಟುಗಳು:

ದಾವೂದ್ ಇಬ್ರಾಹಿಂ ಬರೆದುಕೊಟ್ಟಿದ್ದ ಮಿಲಿಯನ್ ಡಾಲರ್ ಚೆಕ್!

ಫೋನ್ ಮಾಡಿದ್ದ ದಾವೂದ್ ಇಬ್ರಾಹಿಂ ಏನು ಹೇಳಿದ್ದ? 

***

ಖ್ಯಾತ ಸಿನಿಮಾ ನಿರ್ದೇಶಕ ರಾಮಗೋಪಾಲ ವರ್ಮಾ ಕೂಡ ಶ್ರೀದೇವಿಯಿಂದ ಸಿಕ್ಕಾಪಟ್ಟೆ ಪ್ರಭಾವಿತರಾದವರು. ಒಂದು ಪುಸ್ತಕ ಕೂಡ ಬರೆದಿದ್ದಾರೆ - Guns & Thighs: The Story of My Life

ಪುಸ್ತಕದ ಶೀರ್ಷಿಕೆಯಲ್ಲಿರುವ Thighs (ತೊಡೆಗಳು) - ಮತ್ತೆ ಶ್ರೀದೇವಿಯ ಸಿಡಿಲು ತೊಡೆಗಳಿಗೆ ಸಂಬಂಧಪಟ್ಟಿದ್ದು. ತೆಲುಗು ಸಿನೆಮಾವೊಂದರಲ್ಲಿ ಶ್ರೀದೇವಿ bathtub ನಿಂದ ಎದ್ದು ಬರುವ ದೃಶ್ಯ, ಆಗಿನ್ನೂ ವಿದ್ಯಾರ್ಥಿಯಾಗಿದ್ದ, ರಾಮಗೋಪಾಲ ವರ್ಮಾ ಅವರನ್ನು ಅದೆಷ್ಟು ಕಾಡಿತ್ತು ಅಂದರೆ ಅದನ್ನು ಅವರ ಮಾತುಗಳಲ್ಲೇ ಕೇಳಬೇಕು. ಅದಕ್ಕಾಗಿ ನೀವು ಆ ಪುಸ್ತಕ ಓದಬೇಕು. ವಿಭಿನ್ನ ರೀತಿಯ ಪುಸ್ತಕ. ವಿಭಿನ್ನ ರೀತಿಯ ಮನುಷ್ಯನಿಂದ.

ಶ್ರೀದೇವಿಯನ್ನು ಹಾಕಿಕೊಂಡು ರಾಮಗೋಪಾಲ ವರ್ಮಾ ಮಾಡಿದ 'ಕ್ಷಣಂ ಕ್ಷಣಂ' ಅನ್ನುವ ತೆಲುಗು ಚಿತ್ರ ಒಂದು ಅತ್ಯುತ್ತಮ ಥ್ರಿಲ್ಲರ್ ಚಿತ್ರ. ಮುದ್ದಾಂ ನೋಡಿ.