ಪೀಠಿಕೆ: ಮೇ ೨, ೨೦೧೧ ರಂದು ಅಮೇರಿಕಾದ ನೇವಿ ಸೀಲ್ಸ್ ವಿಶೇಷ ಸೇನಾಪಡೆಯ ಕಮಾಂಡೋಗಳ ತಂಡವೊಂದು ಪಾಕಿಸ್ತಾನದಲ್ಲಿ ರಹಸ್ಯ ಕಾರ್ಯಾಚರಣೆಯನ್ನು ಮಾಡಿ ಕುಖ್ಯಾತ ಉಗ್ರಗಾಮಿ ಒಸಾಮಾ ಬಿನ್ ಲಾಡೆನ್ನನನ್ನು ಹತ್ಯೆ ಮಾಡಿತು. ಈ ಕಾರ್ಯಾಚರಣೆ ಅಮೇರಿಕ ವಿಶ್ವಕ್ಕೆ ಹೇಳಿದಂತೆಯೇ ಆಯಿತೇ ಅಥವಾ ಬೇರೇ ರೀತಿಯೇ ಆಗಿತ್ತೇ ಎಂಬುದರ ಬಗ್ಗೆ ತನಿಖೆ ಮಾಡಿ ಪರ್ಯಾಯ ಸಿದ್ಧಾಂತ ಮಂಡಿಸಿದವರಲ್ಲಿ ವರಿಷ್ಠ ತನಿಖಾ ಪತ್ರಕರ್ತ ಸೀಮೋರ್ ಹರ್ಷ್ ಪ್ರಮುಖರು. ಅವರ ಆ ತನಿಖೆಯ ಮೇಲೆ ಆಧಾರಿತ ಪುಸ್ತಕ - The Killing of Osama Bin Laden. ಆ ಪುಸ್ತಕದ ಒಂದು ವಿಸ್ತೃತ ಸಾರಾಂಶವನ್ನು London Review of Books ಪ್ರಕಟಿಸಿದೆ. ಆ ಲೇಖನದ ಮೇಲೆ ಆಧಾರಿತ ಲೇಖನ ಇದು. ಮೂಲ ಲೇಖನಕ್ಕೆ ಕೊಂಡಿ ಇಲ್ಲಿದೆ.
***
ಅಮೇರಿಕಾ ಸೈನ್ಯದ ನೇವಿ ಸೀಲ್ ಕಮಾಂಡೋಗಳ ತಂಡವೊಂದು ಕುಖ್ಯಾತ ಉಗ್ರಗಾಮಿ ಒಸಾಮಾ ಬಿನ್ ಲಾಡೆನ್ನನನ್ನು ಪಾಕಿಸ್ತಾನದ ಅಬೋಟಾಬಾದ್ ಸಮೀಪ ವಿಶೇಷ ಕಾರ್ಯಾಚರಣೆಯಲ್ಲಿ ಹತ್ಯೆ ಮಾಡಿ ಸುಮಾರು ಹದಿಮೂರು ವರ್ಷಗಳು ಕಳೆದಿವೆ. ಆ ಘಟನೆ ಬರಾಕ್ ಒಬಾಮಾ ಸರ್ಕಾರದ ಮೊದಲ ಅವಧಿಯ ಬಹುಮುಖ್ಯ ಘಟನೆಯಾಗಿತ್ತು. ಒಬಾಮಾ ಎರಡನೇ ಬಾರಿಗೆ ಆರಿಸಿ ಬರಲೂ ಪ್ರಮುಖ ಕಾರಣವಾಗಿತ್ತು. ಆ ಮಹತ್ವದ ಕಾರ್ಯಾಚರಣೆಯ ಬಗ್ಗೆ ಇವತ್ತಿನವರೆಗೂ ಸರ್ಕಾರದ ಅಧಿಕೃತ ನಿಲುವು ಏನಾಗಿದೆಯೆಂದರೆ: ಆ ಕಾರ್ಯಾಚರಣೆ ಸಂಪೂರ್ಣವಾಗಿ ಅಮೇರಿಕಾದ ಕಾರ್ಯಾಚರಣೆಯಾಗಿತ್ತು ಮತ್ತು ಪಾಕಿಸ್ತಾನದ ಸೈನ್ಯದ ಹಿರಿಯ ಅಧಿಕಾರಿಗಳಿಗಾಗಲಿ ಅಥವಾ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ISI ಗಾಗಲಿ ಆ ರಹಸ್ಯ ಕಾರ್ಯಾಚರಣೆ ಬಗ್ಗೆ ಯಾವುದೇ ಮಾಹಿತಿಯನ್ನು ಮುಂಚಿತವಾಗಿ ಕೊಟ್ಟಿರಲಿಲ್ಲ. ಇದೊಂದು ಸುಳ್ಳು. ಒಬಾಮಾ ಸರ್ಕಾರ ಹೇಳಿದ ಅನೇಕ ಸುಳ್ಳುಗಳಲ್ಲಿ ಒಂದು. ಇದೊಂದು ಕಾಗಕ್ಕ ಗುಬ್ಬಕ್ಕ ಕಥೆಯಂತಿದೆ. ಕುಖ್ಯಾತ ಉಗ್ರ ಒಸಾಮಾ ಬಿನ್ ಲಾಡೆನ್, ಯಾರನ್ನು ಹುಡುಕಲು ದೊಡ್ಡ ಪ್ರಮಾಣದ ಕಾರ್ಯಾಚರಣೆ ವಿಶ್ವದಾದ್ಯಂತ ನಡೆಯುತ್ತಿತ್ತೋ, ಅಂತಹ ಖತರ್ನಾಕ್ ವ್ಯಕ್ತಿ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದಿನಿಂದ ಕೇವಲ ನಲವತ್ತು ಮೈಲಿಗಳ ದೂರದಲ್ಲಿರುವ ಅಬೋಟಾಬಾದಿನಲ್ಲಿ ನೆಲೆಸಿದ್ದ ಮತ್ತು ಅದನ್ನು ಅಲ್ ಖೈದಾ ಸಂಘಟನೆಯ ಕೇಂದ್ರಸ್ಥಾನವಾಗಿ ಮಾಡಿಕೊಂಡು ಅಲ್ಲಿಂದಲೇ ಎಲ್ಲವನ್ನೂ ನಿಯಂತ್ರಿಸುತ್ತಿದ್ದ ಎಂದರೆ ನಂಬುವಂತಹ ಮಾತೇ??
ಅತಿ ದೊಡ್ಡ ಹಸಿ ಸುಳ್ಳು ಯಾವುದು ಅಂದರೆ - ಪಾಕಿಸ್ತಾನಿ ಸೈನ್ಯದ ಮುಖ್ಯಸ್ಥ ಜನರಲ್ ಅಷ್ಫಾಕ್ ಪರ್ವೇಜ್ ಕಯಾನಿ ಮತ್ತು ISI ಮುಖ್ಯಸ್ಥ ಜನರಲ್ ಅಹ್ಮದ್ ಶೂಜಾ ಪಾಷಾ ಇಬ್ಬರಿಗೂ ಈ ವಿಷಯ ತಿಳಿದಿರಲಿಲ್ಲ ಅಥವಾ ತಿಳಿಸಿರಲಿಲ್ಲ. ಇವತ್ತಿಗೂ ಅಮೇರಿಕಾದ ಅಧಿಕೃತ ನಿಲುವು ಇದೇ ಆಗಿದೆ.
ಪತ್ರಕರ್ತೆ ಕಾರ್ಲೊಟ್ಟಾ ಗಾಲ್ ಬರೆದಿದ್ದಾರೆ: ಅವರಿಗೆ ಪಾಕಿಸ್ತಾನದ ಅಧಿಕಾರಿಯೊಬ್ಬ ಹೇಳಿದ ಪ್ರಕಾರ ISI ಮುಖ್ಯಸ್ಥ ಶೂಜಾ ಪಾಷಾಗೆ ಈ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಇತ್ತು. ಮತ್ತೊಬ್ಬ ಲೇಖಕ, ಪಾಕಿಸ್ತಾನದವರೇ ಆದ, ಇಮ್ತಿಯಾಜ್ ಗುಲ್ ಹೇಳುವ ಪ್ರಕಾರ, ಅವರ ಸಂಪರ್ಕದಲ್ಲಿದ್ದ ನಾಲ್ವರು ಗೂಢಚರ್ಯೆ ಅಧಿಕಾರಗಳ ಪ್ರಕಾರ, ಪಾಕಿಸ್ತಾನದ ಸೈನ್ಯಕ್ಕೂ ಇದರ ಮಾಹಿತಿ ಇರಲೇಬೇಕು. ISI ನ ಮಾಜಿ ಮುಖ್ಯಸ್ಥ ಅಸಾದ್ ದುರಾನಿ ಹೇಳುವಂತೆ - ISI ಗೆ ಒಸಾಮಾ ಬಿನ್ ಲಾಡೆನ್ ಅಡಗುತಾಣದ ಬಗ್ಗೆ ಮಾಹಿತಿ ಇದ್ದೀತು. ಅದನ್ನು ಸರಿಯಾದ ಸಮಯಕ್ಕೆ, ಸರಿಯಾದ ಜನರಿಗೆ ತಿಳಿಸಿ, ಅದಕ್ಕೆ ಪ್ರತಿಯಾಗಿ ಏನೆಲ್ಲಾ ಬೇಕೋ ಅದನ್ನು ವಸೂಲಿ ಮಾಡುವ ಹುನ್ನಾರವಿದ್ದಿರಬೇಕು. ಒಸಾಮಾ ಬಿನ್ ಲಾಡೆನ್ ತರಹದ ಎಲ್ಲರಿಗೂ ಬೇಕಾದ ಉಗ್ರನನ್ನು ಮಡಿಲಲ್ಲಿ ಇಟ್ಟುಕೊಂಡು ಯಾವುದೇ ಪ್ರತಿಫಲವಿಲ್ಲದೇ ಅಮೇರಿಕಾಗೆ ಒಪ್ಪಿಸಿಲು ಅವರಿಗೇನು ತಲೆ ಕೆಟ್ಟಿದೆಯೇ??
ನಾನು (ಲೇಖಕ ಸೀಮೋರ್ ಹರ್ಷ್) ಸಂಪಾದಿಸಿದ್ದ ಮಾಹಿತಿಯನ್ನು ISI ನ ಮಾಜಿ ಮುಖ್ಯಸ್ಥ ಅಸದ್ ದುರಾನಿ ಅವರನ್ನು ಸಂಪರ್ಕಿಸಿ ಹಂಚಿಕೊಂಡೆ. ೨೦೦೬ ರಿಂದಲೇ ಒಸಾಮಾ ಬಿನ್ ಲಾಡೆನ್ ISI ನ ನಿಗರಾಣಿಯಲ್ಲಿ ಪಾಕಿಸ್ತಾನದಲ್ಲಿ ನೆಲೆಸಿದ್ದ. ಅಮೇರಿಕಾದ ವಿಶಿಷ್ಟ ಸೇನಾಪಡೆಗಳು ಮಾಡುವ ಕಾರ್ಯಾಚರಣೆ ಬಗ್ಗೆ ಸೈನ್ಯದ ಮುಖ್ಯಸ್ಥ ಕಯಾನಿ ಮತ್ತು ISI ಮುಖ್ಯಸ್ಥ ಪಾಷಾಗೆ ಮೊದಲೇ ಮಾಹಿತಿ ಇತ್ತು. ಕಾರ್ಯಾಚರಣೆಗೆ ಬಳಸಲಾದ ಎರಡು ಹೆಲಿಕಾಪ್ಟರುಗಳನ್ನು ಪಾಕಿಸ್ತಾನ ಸೇನೆಯ ರೇಡಾರುಗಳ ಹದ್ದಿನ ಕಣ್ಣಿನಿಂದ ಬಚಾವು ಮಾಡಿದ್ದೇ ಸೈನ್ಯ ಮತ್ತು ISI. ಅಮೇರಿಕಾದ ಗೂಢಚರ್ಯೆ ಸಂಸ್ಥೆ ಸಿಐಎ ಹೇಳುವಂತೆ ಅವರ ಅವಿರತ ಪ್ರಯತ್ನದಿಂದ ಒಸಾಮಾ ಬಿನ್ ಲಾಡೆನ್ ಸಿಕ್ಕುಬೀಳಲಿಲ್ಲ. ಸಿಐಎ ಹೇಳುವಂತೆ ಒಸಾಮಾ ಬಿನ್ ಲಾಡೆನ್ನನನ ಖಾಸ್ ಸಂದೇಶ ರವಾನೆ ಮಾಡುತ್ತಿದ್ದ ದೂತನ ಜಾಡು ಹಿಡಿದು, ಆ ಮೂಲಕ ಲಾಡೆನ್ನನನ್ನು ಪತ್ತೆ ಹಚ್ಚಲಾಯಿತು ಎಂಬುದು ಸುಳ್ಳು. ಅಮೇರಿಕಾ ಘೋಷಿಸಿದ್ದ ೨೫ ಮಿಲಿಯನ್ ಡಾಲರ್ ಬಹುಮಾನದ ಆಸೆಗೆ ISI ನ ಮಾಜಿ ಅಧಿಕಾರಿಯೊಬ್ಬ ಒಸಾಮಾ ಬಿನ್ ಲಾಡೆನ್ನನ ರಹಸ್ಯತಾಣದ ಮಾಹಿತಿ ಕೊಟ್ಟ. ಮಾಹಿತಿ ಖಚಿತವಾದ ನಂತರ ಅಧ್ಯಕ್ಷ ಒಬಾಮಾ ವಿಶೇಷ ಸೇನಾಪಡೆಗಳ ಕಾರ್ಯಾಚರಣೆಗೆ ಆಜ್ಞೆ ಮಾಡಿದ್ದೂ ಹೌದು. ಅದರ ಪ್ರಕಾರವೇ ಕಾರ್ಯಾಚರಣೆ ಆಗಿದ್ದೂ ಹೌದು. ಅಷ್ಟು ಬಿಟ್ಟರೆ ಸರ್ಕಾರ ಹೊರಬಿಟ್ಟಿರುವ ಅನೇಕ ಇತರೆ ಅಧಿಕೃತ ಮಾಹಿತಿಗಳು ಸುಳ್ಳು.
ಇದನ್ನು ಒಪ್ಪಿದ ISI ನ ಮಾಜಿ ಮುಖ್ಯಸ್ಥ ಅಸದ್ ದುರಾನಿ ಹೇಳಿದರು, ನಿಮ್ಮ ತನಿಖಾ ಮಾಹಿತಿ ಹೊರಬಂದರೆ ಚೆನ್ನಾಗಿರುತ್ತದೆ. ನನಗೂ ಬಂದ ಮಾಹಿತಿ ಹೀಗೆಯೇ ಇದೆ. ಸರ್ಕಾರದ ಅಧಿಕೃತ ಸುದ್ದಿಗಳನ್ನು ಜನರು ನಂಬುವುದನ್ನು ನಿಲ್ಲಿಸಿ ಯಾವುದೋ ಕಾಲವಾಗಿದೆ. ಈ ವಿಚಿತ್ರ ಘಟನೆಯ ನಂತರ ಇದರ ಸತ್ಯಾಸತ್ಯತೆಯನ್ನು ತಿಳಿಯಲು ಅದರ ಹಿಂದೆ ಬಿದ್ದಿರುವ ಗೂಢಚರ್ಯೆ ಸಮುದಾಯದ ಹಾಲಿ ಮಾಜಿ ಜನರೆಲ್ಲಾ ಹೇಳುವುದು ಇದನ್ನೇ. ಒಂದು ಹೆಚ್ಚಿನ ಮಾಹಿತಿ ಎಂದರೆ, ಜನರಲ್ ಕಯಾನಿ ಮತ್ತು ISI ನ ಜನರಲ್ ಪಾಷಾಗೆ ಕೊಟ್ಟಿದ್ದ ಆಶ್ವಾಸನೆಗಳನ್ನು ಅಮೇರಿಕಾ ಉಳಿಸಿಕೊಳ್ಳಲಿಲ್ಲ.
ಇದೆಲ್ಲ ಆರಂಭವಾಗಿದ್ದು ಆಗಸ್ಟ್ ೨೦೧೦ ರಲ್ಲಿ. ISI ನ ಮಾಜಿ ಹಿರಿಯ ಅಧಿಕಾರಿಯೊಬ್ಬ ಇಸ್ಲಾಮಾಬಾದಿನಲ್ಲಿರುವ ಅಮೇರಿಕಾದ ರಾಯಭಾರ ಕಚೇರಿಗೆ ಆಗಮಿಸಿದ. ರಾಯಭಾರ ಕಚೇರಿಯ ಸ್ಥಳೀಯ ಸಿಐಎ ಮುಖ್ಯಸ್ಥನನ್ನು ಭೇಟಿಯಾಗಬೇಕು ಎಂದು ಕೇಳಿಕೊಂಡ. ಸಿಐಎ ಸ್ಥಳೀಯ ಮುಖ್ಯಸ್ಥ ಜೋನಾಥನ್ ಬ್ಯಾಂಕ್ ಆತನನ್ನು ಭೇಟಿಯಾಗಿ ಮಾತಾಡಿಸಿದರು. ಒಸಾಮಾ ಬಿನ್ ಲಾಡೆನ್ ಬಗ್ಗೆ ಮಾಹಿತಿ ಇದೆ. ೨೫ ಮಿಲಿಯನ್ ಬಹುಮಾನ ಸಿಗುವುದಾದರೆ ಮಾಹಿತಿ ಹಂಚಿಕೊಳ್ಳಲು ಸಿದ್ಧ ಎಂದು ISI ನ ಮಾಜಿ ಹಿರಿಯ ಆಧಿಕಾರಿ ಹೇಳಿದ. ಮಾಹಿತಿ ಇದೆ ಎಂದು ಹೇಳುತ್ತಾ ಸಾಮಾನ್ಯರಂತೆ ರಾಯಭಾರ ಕಚೇರಿಗೆ ಬರುವ ವಾಕ್ ಇನ್ (walk in) ಮಾಹಿತಿದಾರರನ್ನು ಸೀದಾ ನಂಬುವ ಹಾಗಿಲ್ಲ. ಸತ್ಯಾಸತ್ಯತೆಯನ್ನು ಅರಿಯಲು ಅಮೆರಿಕಾದಿಂದ ಪಾಲಿಗ್ರಾಫ್ ಪರೀಕ್ಷೆ ಮಾಡುವ ಪರಿಣಿತರನ್ನು ಕರೆಸಲಾಯಿತು. ಮಾಹಿತಿದಾರನ್ನು ಪಾಲಿಗ್ರಾಫ್ ಪರೀಕ್ಷೆಗೆ ಗುರಿಪಡಿಸಲಾಯಿತು. ಆ ಪರೀಕ್ಷೆಯಲ್ಲಿ ಆತ ಪಾಸಾದ. ಒಸಾಮಾ ಬಿನ್ ಲಾಡೆನ್ ಅಬೋಟಾಬಾದ್ ಬಳಿಯಿರುವ ವಿಶಾಲ ಕಾಂಪೌಂಡ ಒಂದರಲ್ಲಿ ಇದ್ದಾನೆ ಎನ್ನುವ ಮಾಹಿತಿ ಕೊಟ್ಟ. ಮಾಹಿತಿಯೇನೋ ಬಂತು. ಆದರೆ ಅಲ್ಲಿರುವ ವ್ಯಕ್ತಿ ಒಸಾಮಾನೇ ಎಂದು ಹೇಗೆ ಖಾತ್ರಿ ಮಾಡಿಕೊಳ್ಳುವುದು? ಅದು ಸಿಐಎ ಮುಂದಿದ್ದ ದೊಡ್ಡ ಪ್ರಶ್ನೆಯಾಗಿತ್ತು.
ಶುರುವಿನ ದಿನಗಳಲ್ಲಿ ಪಾಕಿಸ್ತಾನಿಗಳ ಜೊತೆ ಯಾವ ಮಾಹಿತಿಯನ್ನೂ ಹಂಚಿಕೊಳ್ಳಲಿಲ್ಲ. ಪಾಕಿಸ್ತಾನಿಗಳಿಗೆ ಇದರ ಬಗ್ಗೆ ಸಣ್ಣ ಸುಳಿವು ಸಿಕ್ಕರೂ ಸಹ ತಾವೇ ಫೀಲ್ಡಗೆ ಇಳಿದು ಒಂದೋ ಒಸಾಮಾನನ್ನು ಬೇರೆಲ್ಲೋ ಶಿಫ್ಟ್ ಮಾಡುತ್ತಾರೆ ಅಥವಾ ಒಸಾಮಾನಿಗೆ ಮತ್ತೇನಾದರೂ ಹಡಾಗತಿ ಮಾಡಿಯಾರು ಅನ್ನುವ ಆತಂಕ. ಅದು ಅಂದಿನ ಪರಿಸ್ಥಿತಿಯಲ್ಲಿ ಸಹಜವಾಗಿತ್ತು. ಸಿಐಎ ಸಮುದಾಯದಲ್ಲೂ ಸಹ ಕೆಲವೇ ಕೆಲವು ಹಿರಿತಲೆಗಳಿಗೆ ಮಾತ್ರ ಮಾಹಿತಿ ತಲುಪಿಸಲಾಯಿತು. ISI ನ ಮಾಜಿ ಅಧಿಕಾರಿ ಎಂದು ಹೇಳಿಕೊಂಡು ಬಂದು ಮಾಹಿತಿ ಕೊಟ್ಟವನ ಮಾಹಿತಿಯ ಸತ್ಯಾಸತ್ಯತೆಯನ್ನು ಖಾತ್ರಿ ಮಾಡಿಕೊಳ್ಳುವುದು ಪ್ರಮುಖ ಆದ್ಯತೆಯಾಗಿತ್ತು. ಅಂತರಿಕ್ಷದಲ್ಲಿ ಗಿರಿಕಿ ಹೊಡೆಯುವ ಅಮೆರಿಕಾದ ಬೇಹುಗಾರಿಕೆ ಉಪಗ್ರಹಗಳನ್ನು ಆ ಮನೆಯ ಮೇಲೆ ಫೋಕಸ್ ಮಾಡಿ ಸತತ ನಿಗರಾಣಿಯಲ್ಲಿ ಇಡಲಾಯಿತು. ಅಲ್ಲೇ ಹತ್ತಿರದಲ್ಲಿ ಒಂದು ಮನೆಯನ್ನು ಭಾಡಿಗೆಗೆ ಪಡೆಯಲಾಯಿತು. ಆ ಮನೆಯಲ್ಲಿದ್ದುಕೊಂಡು ಲಾಡೆನ್ ಮನೆಯ ಮೇಲೆ ಸದಾ ಕಣ್ಣಿಡಲು ಜನರನ್ನು ನೇಮಕ ಮಾಡಲಾಯಿತು. ಅಬೋಟಾಬಾದ್ ಒಂದು ಪ್ರವಾಸಿತಾಣ. ಅಲ್ಲಿ ಅಲ್ಪ ಕಾಲದ ಮೇಲೆ ಮನೆ ಭಾಡಿಗೆಗೆ ತೆಗೆದುಕೊಳ್ಳುವುದು ಸಹಜ. ಹಾಗಾಗಿ ಸಿಐಎ ಮನೆ ಭಾಡಿಗೆಗೆ ಪಡೆದು, ಕಣ್ಣಿಡಲು ಜನರನ್ನು ನೇಮಿಸಿದ್ದು ಯಾವುದೇ ಸಂಶಯಕ್ಕೆ ಕಾರಣವಾಗಲಿಲ್ಲ. ಅದೇ ಸಮಯದಲ್ಲಿ ಮಾಹಿತಿದಾರನ ಮಾನಸಿಕ ಸ್ಥಿತಿಯನ್ನು ಪರೀಕ್ಷಿಸಿ ರಿಪೋರ್ಟ್ (psychological profile) ತಯಾರಿಸಿಟ್ಟುಕೊಂಡಿತು ಸಿಐಎ. (ಮಾಹಿತಿದಾರನನ್ನು ಮತ್ತು ಆತನ ಕುಟುಂಬವನ್ನು ರಹಸ್ಯವಾಗಿ ಪಾಕಿಸ್ತಾನದಿಂದ ಹೊರಗೆ ಸಾಗಿಸಿದರು. ಆತನನ್ನು ವಾಷಿಂಗ್ಟನ್ ನಗರದಲ್ಲಿ ಸೆಟಲ್ ಮಾಡಲಾಯಿತು. ಆತ ಈಗ ಸಿಐಎಗೆ ಗುತ್ತಿಗೆ ಮೇಲೆ ಕೆಲಸ ಮಾಡುತ್ತಾನೆ.)
ಅಕ್ಟೋಬರ್ ೨೦೧೦ ರ ಹೊತ್ತಿಗೆ ಅಮೆರಿಕಾದ ಸೇನೆ ಮತ್ತು ಬೇಹುಗಾರಿಕೆ ಸಮುದಾಯದಲ್ಲಿ ಯಾವ ರೀತಿಯ ಕಾರ್ಯಾಚರಣೆಗಳು ಸಾಧ್ಯ ಎಂಬುದರ ಬಗ್ಗೆ ವಿಸ್ತೃತ ಚರ್ಚೆಗಳು ಆರಂಭವಾದವು. ಪಾತಾಳದಲ್ಲಿ ಅಡಗಿದ್ದರೂ ನಿರ್ನಾಮ ಮಾಡುವಂತಹ ಬಂಕರ್ ಬಸ್ಟರ್ ಮಾದರಿಯ ಬಾಂಬ್ ಹಾಕಿ ಇಡೀ ಕಾಂಪೌಂಡನ್ನೇ ಉಡಾಯಿಸಿಬಿಡುವುದೋ ಅಥವಾ ರಿಮೋಟ್ ಕಂಟ್ರೋಲ್ ಡ್ರೋನ್ ಹಾರಿಸಿ, ಅವುಗಳಿಂದ ಕ್ಷಿಪಣಿ ದಾಳಿ ಮೂಲಕ ಸಂಹಾರ ಮಾಡುವುದೋ ಅಥವಾ ನುರಿತ ಸುಪಾರಿ ಹಂತಕರನ್ನು ಕಳಿಸಿ ಒಸಾಮಾನ ಬುರುಡೆಗೆ ಗುಂಡು ಹೊಡೆಸುವುದೋ...ಇಂತಹ ಸಾಧ್ಯತೆಗಳ ಬಗ್ಗೆ ಚರ್ಚೆಯಾಯಿತು. ಎಲ್ಲವೂ ಸಾಧ್ಯ. ಆದರೆ ಅಲ್ಲಿರುವ ವ್ಯಕ್ತಿ ಯಾರು ಎಂಬುದರ ಬಗ್ಗೆ ಖಾತ್ರಿಯಿಲ್ಲ. ರಾತ್ರಿಯಾದ ಮೇಲೆ ವ್ಯಕ್ತಿಯೊಬ್ಬ ಏಕಾಂಗಿಯಾಗಿ ಕಾಂಪೌಂಡಿನಲ್ಲಿಯೇ ಸುತ್ತಾಡುವುದು ಕಾಣುತ್ತದೆ ಬಿಟ್ಟರೆ ಬೇರೇನೂ ಮಾಹಿತಿ ಇಲ್ಲ. ಆ ಮನೆಯಿಂದ ಯಾವುದೇ ತರಹದ ಫೋನ್, ಇಮೇಲ್ ಇತ್ಯಾದಿ ತರಹದ ಕಮ್ಯುನಿಕೇಷನ್ ಕೂಡ ಇಲ್ಲ. ಯಾವುದೇ ತರಹದ ಕಮ್ಯುನಿಕೇಷನ್ ತರಂಗಗಳು ಹೊರಹೊಮ್ಮಿದ್ದರೂ ಟ್ಯಾಪ್ ಮಾಡಬಹುದಿತ್ತು. ಆದರೆ ಸಂಪೂರ್ಣ ರೇಡಿಯೋ ನಿಶ್ಶಬ್ದ. Complete radio silence.
ಇದೇ ಸಮಯದಲ್ಲಿ ಪ್ರಪಥಮ ಬಾರಿಗೆ ಅಧ್ಯಕ್ಷ ಬರಾಕ್ ಒಬಾಮಾ ಅವರಿಗೆ ಇದೆಲ್ಲ ಮಾಹಿತಿಯ ಬಗ್ಗೆ, ಸದ್ಯದ ವರೆಗೆ ನಡೆದಿರುವ ಪ್ರಾಥಮಿಕ ಕೆಲಸಗಳ ಬಗ್ಗೆ ವಿವರಿಸಲಾಯಿತು. ಒಬಾಮಾ ಕೇಳಿಸಿಕೊಂಡರು. ಅವರಿಗೆ ನಂಬಿಕೆ ಬಂದಂತೆ ಕಾಣಲಿಲ್ಲ. ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿ ಇದ್ದಾನೆ ಎನ್ನುವ ಮಾಹಿತಿಯನ್ನು ಯಾರೂ ಮೇಲ್ನೋಟಕ್ಕೆ ನಂಬುವಂತೆಯೇ ಇರಲಿಲ್ಲ. ಎಲ್ಲ ಕೇಳಿಸಿಕೊಂಡ ಒಬಾಮಾ ಕೊಟ್ಟಿದ್ದು ಒಂದೇ ನಿರ್ದೇಶನ. ಅದನ್ನು ಖಡಕ್ ಮಾತುಗಳಲ್ಲಿ ಹೇಳಿದ್ದರು. ಅಲ್ಲಿರುವ ಮನುಷ್ಯ ಒಸಾಮಾ ಬಿನ್ ಲಾಡೆನ್ ಎಂದು ಶತಪ್ರತಿಶತ ಖಾತ್ರಿಯಾದರೆ ಮಾತ್ರ ನನಗೆ ತಿಳಿಸಿ. ಅಧ್ಯಕ್ಷ ಒಬಾಮಾರ ಸಂಪೂರ್ಣ ವಿಶ್ವಾಸ ಮತ್ತು ಬೆಂಬಲ ಆ ಹೊತ್ತಿನ ತುರ್ತಿನ ಜರೂರತ್ತು. ಅದನ್ನು ಗಳಿಸಲು ಎರಡು ಕೆಲಸಗಳನ್ನು ತ್ವರಿತವಾಗಿ ಮಾಡಬೇಕು ಎಂದು ಸೈನ್ಯ ಮತ್ತು ಸಿಐಎ ನಿರ್ಧರಿಸಿತು. ಒಂದು ಡಿಎನ್ಎ ಟೆಸ್ಟ್ ಮೂಲಕ ಆತ ಒಸಾಮಾ ಬಿನ್ ಲಾಡೆನ್ ಎಂದು ಖಾತ್ರಿ ಮಾಡಿಕೊಳ್ಳುವುದು. ಎರಡನೆಯದಾಗಿ ಆ ಕಂಪೌಂಡಿನ ಮೇಲೆ ರಾತ್ರಿ ದಾಳಿ ಮಾಡಿ ಒಸಾಮಾನನ್ನು ಕೊಲ್ಲುವುದರ ಬಗ್ಗೆ ಒಂದು ಫೂಲ್ ಪ್ರೂಫ್ ಯೋಜನೆಯನ್ನು ತಯಾರಿಸಿ ಒಬಾಮಾ ಮುಂದೆ ಇಡುವುದು. ಇವೆರೆಡೂ ಆದ ಹೊರತು ಒಬಾಮಾಗೆ ಇವೆಲ್ಲ ಅಂತೆಕಂತೆಬೊಂತೆ ಕಥೆ ಅನ್ನಿಸುತ್ತಲೇ ಇರುತ್ತದೆ ಎಂದು ಪ್ಲಾನಿಂಗ್ ಮಾಡುತ್ತಿದ್ದ ಅಧಿಕಾರಿಗಳಿಗೆ ಗೊತ್ತಾಗಿತ್ತು. ಆವಾಗ ಒಂದು ವಿಷಯ ಖಾತ್ರಿಯಾಯಿತು. ಇಲ್ಲಿಂದ ಮುಂದುವರೆಯಬೇಕು ಎಂದರೆ ಪಾಕಿಸ್ತಾನಿಗಳ ಸಹಾಯ ಮತ್ತು ಸಹಕಾರ ಬೇಕೇಬೇಕು. ಹಾಗಾಗಿ ಈಗ ಪಾಕಿಸ್ತಾನಿಗಳ ಜೊತೆ ಮಾಹಿತಿ ಹಂಚಿಕೊಳ್ಳಲೇಬೇಕು. ಅದು ಅನಿವಾರ್ಯ.
ಎಂದಿನ ಪರಿಪಾಠದಂತೆ ಸಿಐಎ ಹಿರಿಯ ಅಧಿಕಾರಿಗಳು ಮತ್ತು ಪಾಕಿಸ್ತಾನದ ಸೈನ್ಯದ ಮುಖ್ಯಸ್ಥ ಕಯಾನಿ ಮತ್ತು ISI ಮುಖ್ಯಸ್ಥ ಪಾಷಾ ನಡುವೆ ಸಭೆಗಳು ಆದಾಗ ಒಸಾಮಾ ಬಿನ್ ಲಾಡೆನ್ ವಿಷಯ ಚರ್ಚೆಗೆ ಬರುತ್ತಿತ್ತು. ಪಾಕಿಸ್ತಾನಿಗಳು ಎಂದಿನಂತೆ ಏನೂ ಗೊತ್ತಿಲ್ಲ, ಯಾವುದೇ ಹೊಸ ಮಾಹಿತಿ ಇಲ್ಲ ಎಂದೇ ಹೇಳುತ್ತಿದ್ದರು. ಈ ನರಿಬುದ್ಧಿ ಜನರ ಜೊತೆ ಹೇಗೆ ಇಂತಹ ಸೂಕ್ಷ್ಮ(sensitive) ಮಾಹಿತಿಯನ್ನು ಹಂಚಿಕೊಳ್ಳುವುದು ಎಂಬುದೇ ದೊಡ್ಡ ತಲೆನೋವಾಗಿತ್ತು.
ಆಫ್ಘಾನಿಸ್ತಾನದಲ್ಲಿ ಕೂತೇ ೯/೧೧ ರ ದಾಳಿ ಮಾಡಿಸಿ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದ್ದ ಒಸಾಮಾ ಬಿನ್ ಲಾಡೆನ್ ೨೦೦೧ ರಿಂದ ೨೦೦೬ ರ ವರೆಗೆ ಅಫಘಾನಿಸ್ತಾನ ಪಾಕಿಸ್ತಾನದ ಗಡಿಯಲ್ಲಿದ್ದ ಹಿಂದೂ ಕುಶ್ ಪರ್ವತ ಶ್ರೇಣಿಯಲ್ಲಿ ಎಲ್ಲೋ ತಲೆಮರೆಸಿಕೊಂಡಿದ್ದ. ಅವನ ಅದೃಷ್ಟ ಚೆನ್ನಾಗಿತ್ತು. ಅಮೇರಿಕಾದ ವಾಯುಸೇನೆ ಹುಚ್ಚಾಪಟ್ಟೆ ಬಾಂಬಿಂಗ್ ಮಾಡಿದರೂ ಇವನು ಅಭೇದ್ಯ ಗುಹೆಗಳಲ್ಲಿ ಎಲ್ಲೋ ಇದ್ದು ಬಚಾವಾಗಿದ್ದ. ಜೊತೆಗೆ ಕೆಲವು ಪತ್ನಿಯರೂ ಮತ್ತು ಮಕ್ಕಳೂ ಇದ್ದರು. ಸ್ಥಳೀಯ ಗುಡ್ಡಗಾಡು ಜನರ ಸಹಕಾರವೂ ಇತ್ತು. ಅವರ ಸಹಕಾರವನ್ನು ಕೊಂಡುಕೊಳ್ಳುವಷ್ಟು ದುಡ್ಡಿಗೇನೂ ಕೊರತೆ ಇರಲಿಲ್ಲ. ಒಸಾಮಾ ಸೌದಿಯ ಆಗರ್ಭ ಶ್ರೀಮಂತ ಕುಟುಂಬಕ್ಕೆ ಸೇರಿದವ. ಆದರೆ ISI ಸುಮ್ಮನೆ ಕೂಡುವ ಜಾಯಮಾನದ್ದಲ್ಲ. ಏನಾದರೂ ಕಿತಾಪತಿ ಮಾಡುತ್ತಲೇ ಇರುತ್ತದೆ. ಹಿಂದೂ ಕುಶ್ ಪರ್ವತಗಳ ಗುಹೆಗಳಲ್ಲೇ ಅಡಗಿ ಕುಳಿತರೆ ಒಸಾಮಾ ಒಂದಲ್ಲ ಒಂದು ದಿನ ಸಾಯುತ್ತಾನೆ. ಹಾಗಾಗಬಾರದು ಎಂದು ಒಮ್ಮೆ ಅವನನ್ನು ಮತ್ತು ಅವನ ಕುಟುಂಬವನ್ನು ಎತ್ತಾಕಿಕೊಂಡು ಬಂದರು. ಅವನ ಬೆಂಬಲಕ್ಕೆ ನಿಂತಿದ್ದ ಸ್ಥಳೀಯ ಗುಡ್ಡಗಾಡು ಜನರು ISI ಹಾಕಿದ ಒತ್ತಡಕ್ಕೋ ಅಥವಾ ಒಡ್ಡಿದ ಆಮಿಷಕ್ಕೋ ಮಣಿದು ಒಸಾಮಾನಿಗೆ ಕೊಟ್ಟಿದ್ದ ರಕ್ಷಣೆಗೆ ಹಿಂತೆಗೆದುಕೊಂಡಿದ್ದರು. ಒಸಾಮಾನಿಗೆ ಬೇರೆ ದಾರಿ ಇರಲಿಲ್ಲ. ಸರಿಯಾದ ವೈದ್ಯಕೀಯ ನೆರವು ಸಿಗದೇ ಅವನ ಆರೋಗ್ಯ ಕೂಡ ಹಾಳಾಗಿತ್ತು. ಹಾಗಾಗಿ ISI ಹೇಳಿದ ಹಾಗೆ ಕೇಳದೇ ಬೇರೆ ದಾರಿಯೇ ಇರಲಿಲ್ಲ. ಅವರ ಕೈಗೊಂಬೆಯಾಗಿ ಅಬೋಟಾಬಾದನ ಕಾಂಪೌಂಡಿನ ಮನೆಗೆ ಕುಟುಂಬದೊಂದಿಗೆ ಒಸಾಮಾ ಶಿಫ್ಟ್ ಆದ. ಅವನ ಆರೋಗ್ಯ ತುಂಬಾ ಕೆಟ್ಟಿತ್ತು. ಪಾಕಿಸ್ತಾನದ ಸೇನೆಯಲ್ಲಿ ವೈದ್ಯ ವೃತ್ತಿ ಮಾಡಿಕೊಂಡಿದ್ದ ಮೇಜರ್ ಅಮೀರ್ ಅಜೀಜ್ ಎನ್ನುವ ವೈದ್ಯನನ್ನು ಒಸಾಮಾನ ಮನೆಯ ಹತ್ತಿರವೇ ಹೋಗಿ ನೆಲೆಸುವಂತೆ ಆಜ್ಞೆ ಮಾಡಲಾಯಿತು. ಆತ ಒಸಾಮಾನಿಗೆ ಚಿಕಿತ್ಸೆ ಕೊಡುತ್ತಿದ್ದ. ನಿಜ ಹೇಳಬೇಕು ಎಂದರೆ ಅಮೇರಿಕಾದ ವಿಶೇಷ ಸೇನಾಪಡೆಗಳು ದಾಳಿ ಮಾಡಿದ ಸಮಯದಲ್ಲಿ ಒಸಾಮಾ ಅನಾರೋಗ್ಯದಿಂದ ಒಂದು ತರಹದಲ್ಲಿ ಕೇವಲ ಹಾಸಿಗೆಗೆ ಸೀಮಿತನಾಗಿದ್ದ. ಹಾಸಿಗೆ ಬಿಟ್ಟು ಏಳಲೂ ಸಾಧ್ಯವಿಲ್ಲದ ರೋಗಿಷ್ಠನನ್ನು ಕೊಂದು ಬಂದೆವು ಎಂದು ಜಗತ್ತಿಗೆ ಹೇಳಿಕೊಳ್ಳಲಾಗುತ್ತದೆಯೇ? ಹಾಗಾಗಿ ಸೇನಾಪಡೆಗಳ ಕಾರ್ಯಾಚರಣೆ ಸಮಯದಲ್ಲಿ ಒಸಾಮಾ ಬಿನ್ ಲಾಡೆನ್ AK - ೪೭ ಗನ್ ಕೈಗೆತ್ತಿಕೊಂಡ. ಆದರೆ ಆತ ಗುಂಡು ಹಾರಿಸುವ ಮೊದಲೇ ನಮ್ಮ ಯೋಧರು ಆತನನ್ನು ಗುಂಡಿಟ್ಟು ಕೊಂದರು ಎಂದೆಲ್ಲಾ ದೊಡ್ಡದಾಗಿ ಸುಳ್ಳುಗಳನ್ನು ಛೋಡಲಾಯಿತು.
ಪಾಕಿಸ್ತಾನಿಗಳನ್ನು ಒಲಿಸಿಕೊಳ್ಳುವುದು ಅಷ್ಟೇನೂ ಕಷ್ಟವಾಗಲಿಲ್ಲ. ಅಮೇರಿಕಾದಿಂದ ಹರಿದುಬರುತ್ತಿದ್ದ ದೊಡ್ಡ ಮಟ್ಟದ ಹಣ ಅವರಿಗೆ ಬೇಕೇಬೇಕಾಗಿತ್ತು. ಮುಖ್ಯವಾಗಿ ಅಲ್ಲಿನ ಸೈನ್ಯದ ಮತ್ತು ISI ಹಿರಿಯ ಅಧಿಕಾರಿಗಳಿಗೆ ಅವರವರ ವೈಯಕ್ತಿಕ ಭದ್ರತೆಯದೇ ಚಿಂತೆ. ಯಾವಾಗ ಅಲ್ ಕೈದಾನೋ ಮತ್ತೊಂದೋ ಜಿಹಾದಿ ಸಂಘಟನೆಯ ಉಗ್ರ ಬಾಂಬ್ ಹಾಕಿ ಉಡೀಸ್ ಮಾಡುತ್ತಾನೋ ಎಂಬುದೇ ಅವರ ಚಿಂತೆ. ಏಕೆಂದರೆ ಅಮೆರಿಕಾ ಜೊತೆ ಪಾಕಿಸ್ತಾನ ಕೂಡ ಅಲ್ ಖೈದಾ ಉಗ್ರರನ್ನು ಸದೆಬಡಿಯುವ ಕಾರ್ಯದಲ್ಲಿ ನಿರತವಾಗಿತ್ತಲ್ಲ. ಪ್ರತಿಯೊಬ್ಬ ಹಿರಿಯ ಅಧಿಕಾರಿಗೆ ಮತ್ತು ಆತನ ಕುಟುಂಬಕ್ಕೆ ನಾಲ್ಕಾರು ಒಳ್ಳೆ ಗುಣಮಟ್ಟದ ಬುಲೆಟ್ ಪ್ರೂಫ್ ವಾಹನಗಳು ಬೇಕು. ಖಾಸಗೀ ಅಂಗರಕ್ಷಕರು ಬೇಕು. ಅತ್ಯಾಧುನಿಕ ಆಯುಧಗಳು ಬೇಕು. ಎಲ್ಲದಕ್ಕೂ ರೊಕ್ಕ ಬೇಕು. ಮತ್ತೆ ಅದೆಲ್ಲ ಅಮೆರಿಕಾದವರೇ ಕೊಡಬೇಕು. ಇದನ್ನು ಬಿಟ್ಟು ಟೇಬಲ್ ಕೆಳಗಿನ ವ್ಯವಹಾರ ಕೂಡ ನಡೆದು ಮತ್ತೂ ಒಂದಿಷ್ಟು ಕಾಸು ಗೀಸು ಪಾಕಿಸ್ತಾನದ ಅಧಿಕಾರಿಗಳ ಜೇಬು ಸೇರಿತು. ಎಂದಿನಂತೆ ಗಜ್ಜರಿ ಮತ್ತು ಕೋಲಿನ ಪಾಲಿಸಿ (carrot and stick). ಎಣಿಸಿದಂತೆ ಆಸೆಬುರುಕ ಪಾಕಿಗಳು ಗಜ್ಜರಿಯನ್ನೇ ಆರಿಸಿಕೊಂಡು ಅದನ್ನೇ ರುಚಿರುಚಿ ಮಾಡಿಕೊಂಡು ಕಡಿಯುತ್ತ ಕೂತರು. ಸಮಯ ಬಂದರೆ ಯಾವುದಕ್ಕೂ ಇರಲಿ ಎಂದು ಬ್ಲಾಕ್ಮೇಲ್ (blackmail) ಮಾಡಲು ಕೋಲು ಕೂಡ ಇತ್ತು. ನೀವು (ಪಾಕಿಸ್ತಾನಿಗಳು) ಇಷ್ಟು ವರ್ಷಗಳಿಂದ ಒಸಾಮಾ ಬಿನ್ ಲಾಡೆನನನ್ನು ದೇಶದೊಳಗೆ ಸಾಕಿಕೊಂಡಿದ್ದೀರಿ ಎಂದು ವಿಶ್ವದ ಎಲ್ಲ ಕಡೆ ಡಂಗುರ ಸಾರಿ ಮಾನ ಕಳೆಯುವುದು. ಇನ್ನೊಂದು ಕಡೆ, ಪಾಕಿಗಳು ಮೋಸದಿಂದ ಒಸಾಮಾ ಬಿನ್ ಲಾಡೆನ್ನನನ್ನು ಎತ್ತಾಕಿಕೊಂಡು ಬಂದು ಸೆರೆಯಲ್ಲಿ ಇರಿಸಿಕೊಂಡಿದ್ದಾರೆ ಎಂದು ತಾಲಿಬಾನ್, ಇತರೆ ಜಿಹಾದಿ ಗುಂಪುಗಳಿಗೆ ಸುದ್ದಿ ತಿಳಿಸಿ, ಅವರನ್ನು ಪಾಕಿಸ್ತಾನದ ವಿರುದ್ಧ ಎತ್ತಿಕಟ್ಟುವುದು. ಆಗಲೇ ತಾಲಿಬಾನಿಗಳು ಬೆನಜೀರ್ ಭುಟ್ಟೋಳನ್ನು ಉಡಾಯಿಸಿದ್ದರು. ಸರ್ವಾಧಿಕಾರಿ ಮುಶ್ರಫ್ ತಾಲಿಬಾನಿಗಳು ಮಾಡಲಿದ್ದ ಕಾರ್ ಬಾಂಬಿಂಗ್ ನಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದ. ಹಾಗಾಗಿ ಒಸಾಮಾನ ವಿಷಯದಲ್ಲಿ ಅಮೆರಿಕಾಕ್ಕೆ ಸಹಕಾರ ನಿರಾಕರಿಸಿ ಇಷ್ಟೊಂದು ದೊಡ್ಡ ಅಪಾಯ ಮೈಮೇಲೆ ಎಳೆದುಕೊಳ್ಳಲು ಪಾಕಿಗಳು ಸಿದ್ದರಿರಲಿಲ್ಲ.
ವಿಷಯ ಈ ಹಂತಕ್ಕೆ ಬಂದು ನಿಂತಾಗ ಪಾಕಿಸ್ತಾನಕ್ಕೆ ಇದ್ದ ಒಂದು ದೊಡ್ಡ ತಲೆನೋವು ಸೌದಿ ಅರೇಬಿಯಾ. ಪಾಕಿಸ್ತಾನದ ಆಶ್ರಯದಲ್ಲಿದ್ದ ಒಸಾಮಾ ಬಿನ್ ಲಾಡೆನ್ ಮತ್ತು ಆತನ ಕುಟುಂಬದ ನಿರ್ವಹಣೆಯ ಮತ್ತು ಮೇಲಿನ ಖರ್ಚು ಅಷ್ಟನ್ನೂ ವಹಿಸಿಕೊಂಡಿದ್ದು ಆತನ ಮಾತೃದೇಶ ಸೌದಿ ಅರೇಬಿಯಾ. ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿ ಇರುವ ವಿಷಯ ಅಮೆರಿಕಕ್ಕೆ ಗೊತ್ತಾಗಬಾರದು ಎಂಬುದು ಸೌದಿಗಳ ಆಶಯ. ಗೊತ್ತಾದರೆ ಅಮೆರಿಕದವರು ಸೌದಿ ಅರೇಬಿಯಾ ಮತ್ತು ಅಲ್ ಖೈದಾ ನಡುವಿನ ಗುಪ್ತ ಸಂಬಂಧಗಳ ಬಗ್ಗೆ ತನಿಖೆ ನಡೆಸಿಯಾರು ಎನ್ನುವ ಭಯ ಸೌದಿಗಳಿಗೆ. ಸೌದಿ ಮತ್ತು ಅಲ್ ಖೈದಾ ನಡುವಿನ ಅತಿ ಮುಖ್ಯ ಕೊಂಡಿ ಒಸಾಮಾ ಬಿನ್ ಲಾಡೆನ್. ಪಾಕಿಸ್ತಾನಕ್ಕೆ ಇದ್ದ ಆತಂಕವೆಂದರೆ ಒಸಾಮಾನನ್ನು ಬಚ್ಚಿಡಿ ಎಂದ ಹೇಳಿರುವ ಸೌದಿಗಳೇ ಬೇರೆ ಯಾವುದೋ ಒತ್ತಡಕ್ಕೆ ಮಣಿದು ಅಮೆರಿಕಾಕ್ಕೆ ಒಸಾಮಾ ಪಾಕಿಸ್ತಾನದಲ್ಲಿ ಇದ್ದಾನೆ ಎಂದು ಉಸುರಿಬಿಟ್ಟರೆ ತಮ್ಮ (ಪಾಕಿಸ್ತಾನದ) ಪಾಡು ನಾಯಿಪಾಡಾದೀತು ಎಂಬ ಭಯ. ಹೀಗಿರುವಾಗ ಒಬ್ಬ ಮಾಜಿ ISI ಅಧಿಕಾರಿ ವಿಷಯವನ್ನು ಅಮೇರಿಕಾಕ್ಕೆ ಲೀಕ್ ಮಾಡಿದ್ದೇ ಒಳ್ಳೆಯದಾಯಿತು ಎಂದುಕೊಂಡಿತು ಪಾಕಿಸ್ತಾನ. ಅಂತಾರಾಷ್ಟ್ರೀಯ ಕುತಂತ್ರಗಳಲ್ಲಿ ಜಟಿಲತೆಗಳು ಹೇಗೆಲ್ಲಾ ಇರುತ್ತವೆ ನೋಡಿ.
ಸಿಐಎ ಮತ್ತು ISI ಸಾರ್ವಜನಿಕವಾಗಿ ಪರಸ್ಪರರ ವಿರುದ್ಧ ಹೇಳಿಕೆ ಕೊಟ್ಟುಕೊಂಡರೂ ಅವಶ್ಯಕತೆಯಿದ್ದಲ್ಲಿ ಸಹಕರಿಸುತ್ತವೆ. ಸಾರ್ವಜನಿಕವಾಗಿ ಕೊಡುವ (ಕೃತಕ) ವೈರುಧ್ಯದ ಹೇಳಿಕೆಗಳು ನಿಜವಾಗಿ ಏನು ನಡೆಯುತ್ತದೆ ಎಂಬುದನ್ನು ಮುಚ್ಚಿಡಲು ಸಹಕರಿಸುತ್ತವೆ. ಒಂದು ಕಡೆ ಅಮೆರಿಕಾ ಮತ್ತು ಪಾಕಿಸ್ತಾನ ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತು ಅಲ್ ಖೈದಾ ಉಗ್ರರ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸಿದ್ದರು. ಮತ್ತೊಂದು ಕಡೆ ISI ನ ಕೆಲವು ಬಣಗಳು ತಾಲಿಬಾನ್ ಜೊತೆ ಚೆನ್ನಾಗಿದ್ದರು ಎಂಬುದು ಕೂಡ ಅಷ್ಟೇ ಸತ್ಯ. ಅಫಘಾನಿಸ್ತಾನದಲ್ಲಿ ಹೆಚ್ಚಾಗುತ್ತಿದ್ದ ಭಾರತೀಯ ಪ್ರಾಬಲ್ಯವನ್ನು ನಿಯಂತ್ರಣದಲ್ಲಿ ಇಡಲು ಪಾಕಿಗಳಿಗೆ ತಾಲಿಬಾನ್ ಬೇಕು. ಕಾಶ್ಮೀರದಲ್ಲಿ ಗಡಿ ದಾಟಿ ಬಂದು ವಿಧ್ವಂಸಕ ಕೃತ್ಯ ಮಾಡಲು ಮತ್ತು ಮಾಡಿಸಲು ಅಫಘನ್ ಬಾಡಿಗೆ ಉಗ್ರರು ಬೇಕು. ಇಂತಹ ಒಂದು ವಿಚಿತ್ರ ಸಂಬಂಧ ಕೂಡ ಇದೆ ಎಂಬುದು ಅಮೆರಿಕಾಕಕ್ಕೆ ಗೊತ್ತಿತ್ತು ಮತ್ತು ಅದು ಪಾಕಿಸ್ತಾನದ ಅಂದಿನ ಅನಿವಾರ್ಯತೆ ಎಂದು ಅರ್ಥ ಮಾಡಿಕೊಂಡಿದ್ದ ಅಮೇರಿಕ ಅದರ ಬಗ್ಗೆ ಹೆಚ್ಚಿನ ಗದ್ದಲ ಎಬ್ಬಿಸಿರಲಿಲ್ಲ.
ಅಮೆರಿಕಕ್ಕೆ ಇದ್ದ ಮತ್ತೊಂದು ಚಿಂತೆಯ ವಿಷಯ ಎಂದರೆ ಪಾಕಿಸ್ತಾನದ ಬಳಿ ಇದ್ದ ಪರಮಾಣು ಅಸ್ತ್ರಗಳ ಸಂಗ್ರಹ. ಪರಮಾಣು ಶಸ್ತ್ರಾಸ್ತ್ರವಿದ್ದ ಏಕೈಕ ಮುಸ್ಲಿಂ ರಾಷ್ಟ್ರ ಪಾಕಿಸ್ತಾನ. ಇಸ್ರೇಲ್ ವಿರುದ್ಧ ಹೋರಾಡಲು ಯಾವುದಾದರೂ ಮುಸ್ಲಿಂ ದೇಶ ಕೇಳಿದರೆ ಪಾಕಿಸ್ತಾನ ತನ್ನಲ್ಲಿರುವ ಇಸ್ಲಾಮಿಕ್ ಬಾಂಬನ್ನು ಬಾಡಿಗೆಗೆ ಕೊಟ್ಟರೂ ಕೊಟ್ಟೀತು ಎಂಬುದು ಕೂಡ ಅಮೆರಿಕಕ್ಕೆ ಗೊತ್ತಿತ್ತು. ೧೯೮೦ ರ ದಶಕದಲ್ಲಿ ಅಣುಬಾಂಬಿನ ತಯಾರಿಕೆಯಲ್ಲಿ ಆಗ ಮಾತ್ರ ಅಂಬೆಗಾಲಿಡುತ್ತಿದ್ದ ಪಾಕಿಸ್ತಾನದ ಅಣುಸ್ಥಾವರವನ್ನು ಉಡೀಸ್ ಮಾಡಿಬಿಡುತ್ತೇನೆ ಎಂದು ಎಲ್ಲ ತಯಾರಿ ಮಾಡಿಕೊಂಡಿದ್ದ ಇಸ್ರೇಲ್ ದೇಶವನ್ನು ಸಮಾಧಾನ ಮಾಡಿತ್ತು ಅಮೇರಿಕಾ. ಈಗ ಒಸಾಮಾ ಬಿನ್ ಲಾಡೆನ್ ಮೇಲಿನ ಕಾರ್ಯಾಚರಣೆಯ ನಂತರ ಯಾರಾದರೂ ಮತಾಂಧ ಜಿಹಾದಿ ಅಣುಶಸ್ತ್ರಗಳನ್ನು ದುರುಪಯಯೋಗ ಮಾಡದಂತೆ ಬಂದೋಬಸ್ತ್ ಕೂಡ ಮಾಡಿಕೊಳ್ಳಬೇಕಾಗಿತ್ತು.
ಅದು ಡಿಸೆಂಬರ್ ೨೦೧೦. ಇಸ್ಲಾಮಾಬಾದಿನ ಅಮೆರಿಕಾದ ರಾಯಭಾರ ಕಚೇರಿಯಲ್ಲಿ ಸ್ಥಳೀಯ ಸಿಐಎ ಮುಖ್ಯಸ್ಥ ಜೋನಾಥನ್ ಬ್ಯಾಂಕ್ ರಹಸ್ಯವಾಗಿ (undercover) ಕೆಲಸ ಮಾಡುತ್ತಿದ್ದರು. ರಾಯಭಾರ ಕಚೇರಿಯ ಶಿಷ್ಟಾಚಾರಕ್ಕೆ ಅನುಗುಣವಾಗಿ ಕೆಲವೇ ಕೆಲವು ಪಾಕಿಸ್ತಾನಿ ಸೈನ್ಯದ ಮತ್ತು ISI ನ ಹಿರಿಯ ಅಧಿಕಾರಿಗಳಿಗೆ ಮಾತ್ರ ಬ್ಯಾಂಕ್ ಅವರ ನಿಜವಾದ ಹುದ್ದೆ ಮತ್ತು ಕೆಲಸದ ಬಗ್ಗೆ ಗೊತ್ತಿತ್ತು. ತಮ್ಮ ತಮ್ಮ ದೇಶದಲ್ಲಿರುವ ಬೇರೆ ಬೇರೆ ದೇಶಗಳ ಅಧಿಕೃತ ಗೂಢಚಾರರ ಗೌಪ್ಯತೆ ಕಾಪಾಡಿಕೊಳ್ಳುವುದು ಆ ಆ ದೇಶಗಳ ಕರ್ತವ್ಯ. ಆದರೆ ಒಂದು ದುರದೃಷ್ಟಕರ ಘಟನೆಯಲ್ಲಿ ಜೋನಾಥನ್ ಬ್ಯಾಂಕರ ಗೌಪ್ಯತೆಯ ಮುಖವಾಡ ಕಳಚಿಬಿತ್ತು. His cover was blown. ಕರೀಮ್ ಖಾನ್ ಎಂಬ ಪಾಕಿಸ್ತಾನದ ಪತ್ರಕರ್ತನ ಮಗ ಮತ್ತು ಸಹೋದರ ಅಮೇರಿಕಾ ನಡೆಸಿದ ಡ್ರೋನ್ ದಾಳಿಯಲ್ಲಿ ಮೃತಪಟ್ಟರು. ಅದೊಂದು ಕೊಲೆ ಎಂದು ಪಾಕಿಸ್ತಾನಿಗಳು ಉರಿದುಬಿದ್ದರು. ಆ ಸೇಡಿನಿಂದ, ಎಲ್ಲ ರಾಜತಾಂತ್ರಿಕ ಶಿಷ್ಟಾಚಾರಗಳನ್ನು ಉಲ್ಲಂಘಿಸಿ, ಜೋನಾಥನ್ ಬ್ಯಾಂಕರ ರಹಸ್ಯ ಮುಖವಾಡ ಕಳಚಿ ಬೀಳುವಂತೆ ನೋಡಿಕೊಂಡರು. ಒಬ್ಬ ಗೂಢಚಾರನಿಗೆ ಮುಖವಾಡ ಕಳಚಿ ಬೀಳುವುದು ಅಂದರೆ ಮರಣಶಾಸನ ಜಾರಿಯಾದಂತೆಯೇ. ಹೀಗಾಗಿ ಬ್ಯಾಂಕ್ ಅವರನ್ನು ಅವರ ಸುರಕ್ಷತೆಯ ಕಾರಣ ವಾಪಸ್ ಅಮೆರಿಕಾಕ್ಕೆ ಕರೆಸಿಕೊಂಡಿತು ಸರ್ಕಾರ. ಸಂಬಂಧಿಗಳನ್ನು ಕಳೆದುಕೊಂಡು ಅಮೇರಿಕಾದ ವಿರುದ್ಧ ಕೊಲೆ ಮೊಕದ್ದಮೆ ಹೂಡಿದ್ದ ಕರೀಮ್ ಖಾನನಿಗೆ ಈ ಮಾಹಿತಿ ಕೊಟ್ಟಿದ್ದು ISI ಯೇ ಎನ್ನುವ ಬಗ್ಗೆ ದಟ್ಟವಾದ ಸಂದೇಹವಿತ್ತು. ೨೦೦೮ ರ ನವೆಂಬರ್ ೨೬ ರಂದು ಭಾರತದ ಮುಂಬೈನಲ್ಲಿ ಲಷ್ಕರ್ ಏ ತೋಯಿಬಾದ ಉಗ್ರರು ಸಂಯೋಜಿತ ದಾಳಿ ನಡೆಸಿ ೧೫೦ ಕ್ಕೂ ಹೆಚ್ಚು ಜನರನ್ನು ಕೊಂದಿದ್ದರು. ಮೃತರಲ್ಲಿ ಕೆಲವು ಅಮೇರಿಕನ್ ನಾಗರಿಕರೂ ಇದ್ದರೂ. ಅವರ ಬಂಧುಗಳು ಪಾಕಿಸ್ತಾನದ ಮೇಲೆ ನ್ಯೂಯಾರ್ಕಿನಲ್ಲಿ ಮೊಕದ್ದಮೆ ಹೂಡಿದ್ದರು. ಆ ಮೊಕದ್ದಮೆಯಲ್ಲಿ ಪಾಕಿಸ್ತಾನ ಮತ್ತು ISI ಮುಂಬೈ ಉಗ್ರರ ದಾಳಿಯ ರೂವಾರಿಗಳು ಎಂದು ನಮೂದಾಗಿತ್ತು. ಆ ಮಾಹಿತಿಯನ್ನು ಅಮೇರಿಕನ್ ನಾಗರಿಕರಿಗೆ ಸಿಐಎ ಕೊಟ್ಟಿತ್ತುಎಂಬ ಕಾರಣಕ್ಕೆ ಪಾಕಿಸ್ತಾನಕ್ಕೆ ಆಗಿಂದಲೇ ಕೋಪವಿತ್ತು. ಪ್ರತಿಕಾರಕ್ಕೆ ಈಗ ಅವಕಾಶ ಸಿಕ್ಕಿತ್ತು. ಪತ್ರಕರ್ತ ಕರೀಮ್ ಖಾನನ ಬಂಧುಗಳು ಡ್ರೋನ್ ದಾಳಿಯಲ್ಲಿ ಸತ್ತಿದ್ದರು. ಅವನು ಕೊಲೆ ಪ್ರಕರಣ ದಾಖಲಿಸಲು ಮುಂದಾದಾಗ ಅವನಿಗೆ ಸ್ಥಳೀಯ ಸಿಐಎ ಮುಖ್ಯಸ್ಥನ ಗೌಪ್ಯ ಮಾಹಿತಿ ಲೀಕ್ ಮಾಡಿ ಪಾಕಿಸ್ತಾನ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡಿತು ಎಂದು ಹೇಳಲಾಯಿತು. ಜೋನಾಥನ್ ಬ್ಯಾಂಕರ ಮುಖವಾಡ ಕಳಚಿ ಬೀಳುವಂತೆ ಮಾಡಿ, ಅವರು ಪಾಕಿಸ್ತಾನ ಬಿಟ್ಟು ಓಡುವಂತೆ ಮಾಡುವುದರ ಹಿಂದೆ ಮತ್ತೊಂದು ಹುನ್ನಾರ ಕೂಡ ಇತ್ತು. ಆಕಸ್ಮಾತ ತಾಲಿಬಾನಿಗಳೋ ಅಥವಾ ಇತರೆ ಜಿಹಾದಿಗಳೋ ಪಾಕಿಸ್ತಾನವನ್ನು, ಮುಂದೊಂದು ದಿನ, ಒಸಾಮಾ ಬಿನ್ ಲಾಡೆನ್ನನನ ಮಾಹಿತಿಯನ್ನು ಅಮೆರಿಕಾದ ಜೊತೆ ಹಂಚಿಕೊಂಡು ಅವನಿಗೆ ಮತ್ತು ಜಿಹಾದಿಗಳಿಗೆ ದ್ರೋಹ ಬಗೆದಿರಿ ಎಂದು ಆಪಾದಿಸಿದರೆ, "ಇಲ್ಲ, ನಾವು ಹಾಗೆ ಮಾಡಿದ ಸಿಐಎ ಅಧಿಕಾರಿಯನ್ನು ಪಾಕಿಸ್ತಾನದಿಂದ ನಿಕಾಲಿ ಮಾಡಿದ್ದೇವೆ. ಅವೆಲ್ಲ ಏನಿದ್ದರೂ ಅಮೆರಿಕದವರ ಕಿತಾಪತಿ," ಎಂದು ಹೇಳಿ ಸಮರ್ಥಿಸಿಕೊಳ್ಳುವ ಅವಕಾಶವನ್ನೂ ಸೃಷ್ಟಿಸಿಕೊಳ್ಳಬೇಕಾಗಿತ್ತು. ಅದು ಕೂಡ ಪಾಕಿಸ್ತಾನಕ್ಕೆ ಮುಖ್ಯವಾಗಿತ್ತು.
ಬಿನ್ ಲಾಡೆನ್ ಇದ್ದ ಕಾಂಪೌಂಡ್ ಅಬೋಟಾಬಾದಿನ ಮಿಲಿಟರಿ ಕಾಲೇಜಿನಿಂದ ಕೇವಲ ಎರಡು ಮೈಲಿ ದೂರದಲ್ಲಿತ್ತು. ತರ್ಬೇಲಾ ಘಾಝಿ ಎಂಬುದು ISI ನ ರಹಸ್ಯ ಮಿಲಿಟರಿ ಕಾರ್ಯಾಚರಣೆ ಮಾಡುವ ವಿಶೇಷ ಕಮಾಂಡೋಗಳ ಕೇಂದ್ರಸ್ಥಾನ ಕೂಡ ಆಗಿತ್ತು. ಪಾಕಿಸ್ತಾನದ ಅಣುಸ್ಥಾವರ ಮುಂತಾದ ಅತಿಮುಖ್ಯ ಸ್ಥಳಗಳ ರಕ್ಷಣೆ ಮಾಡುವ ಹೊಣೆ ತರ್ಬೇಲಾ ಘಾಝಿಯಲ್ಲಿ ನೆಲೆಸಿದ್ದ ಸೈನಿಕರದ್ದಾಗಿತ್ತು. ಹೆಲಿಕಾಪ್ಟರ್ ಮೂಲಕ ಹೋದರೆ ತರ್ಬೇಲಾ ಘಾಝಿ ಕೂಡ ಒಸಾಮಾ ಬಿನ್ ಲಾಡೆನ್ ನೆಲೆಸಿದ್ದ ಜಾಗದಿಂದ ಕೇವಲ ೧೫ ನಿಮಿಷಗಳ ಅಂತರದಲ್ಲಿ ಇತ್ತು. ಅಂತಹ ಖತರ್ನಾಕ್ ಕಮಾಂಡೋಗಳ ನಿಗರಾಣಿಯಲ್ಲಿ ಒಸಾಮಾ ಇರಲಿ ಎಂದೇ ಅವನನ್ನು ಅಲ್ಲಿಡಲಾಗಿತ್ತು.
ಇತ್ತಕಡೆ ಅಧ್ಯಕ್ಷ ಬರಾಕ್ ಒಬಾಮಾರಿಗೆ ಅದು ರಾಜಕೀಯವಾಗಿ ಅತ್ಯಂತ ಆತಂಕದ ವೇಳೆ. ಮರುಚುನಾವಣೆಗೆ ಕೇವಲ ಎರಡು ವರ್ಷ ಮಾತ್ರ ಬಾಕಿ ಇತ್ತು. ಹಿಂದೊಮ್ಮೆ ಇಂತಹ ಮಹತ್ವಾಕಾಂಕ್ಷೆಯ ಕಾರ್ಯಾಚರಣೆಯೊಂದು ವಿಫಲವಾಗಿ ಅಧ್ಯಕ್ಷರ ಖುರ್ಚಿಗೆ ಕುತ್ತು ತಂದಿದ್ದು ಎಲ್ಲರಿಗೂ ನೆನಪಿತ್ತು. ೧೯೭೯ ರಲ್ಲಿ ಅಂದಿನ ಅಧ್ಯಕ್ಷ ಜಿಮ್ಮಿ ಕಾರ್ಟರ್ ಇಂತಹದೇ ಒಂದು ಕಾರ್ಯಾಚರಣೆಗೆ ಕೈಹಾಕಿದ್ದರು. ಇರಾನಿನ ರಾಜಧಾನಿ ಟೆಹ್ರಾನಿನಲ್ಲಿ, ಇರಾನಿ ವಿದ್ಯಾರ್ಥಿ ಉಗ್ರಗಾಮಿಗಳು ಸೆರೆಯಲ್ಲಿ ಹಿಡಿದಿಟ್ಟುಕೊಂಡಿದ್ದ ಅಮೇರಿಕನ್ ದೂತಾವಾಸದ ಸಿಬ್ಬಂದಿಯನ್ನು ಕಮಾಂಡೋ ಕಾರ್ಯಾಚರಣೆ ಮಾಡಿ, ರಕ್ಷಿಸಿ ವಾಪಸ್ ಕರೆತರುವ ಕಾರ್ಯಾಚರಣೆ ಎಕ್ಕುಟ್ಟಿಹೋಗಿತ್ತು. ಅರಬ್ಬೀ ಸಮುದ್ರದಲ್ಲಿ ಲಂಗರು ಹಾಕಿದ್ದ ಯುದ್ಧನೌಕೆಗಳಿಂದ ಹಾರಿದ್ದ ಸೈನ್ಯದ ಹೆಲಿಕಾಪ್ಟರುಗಳು ರಹಸ್ಯವಾಗಿ ಇರಾನಿನ ಮರಭೂಮಿಯಲ್ಲಿ ಇಳಿದವು. ಆದರೆ ಅಲ್ಲಿ ಅವುಗಳನ್ನು ಮುಂದಿನ ಕಾರ್ಯಾಚರಣೆಗೆ ಸಿದ್ಧಪಡಿಸುವಾಗ ಆದ ಅಪಘಾತದಿಂದ ದೊಡ್ಡ ಸ್ಪೋಟವಾಗಿ ಹೆಲಿಕಾಪ್ಟರುಗಳು ಉಡೀಸ್ ಆಗಿದ್ದವು. ಅಮೆರಿಕಾದ ಕೆಲ ಸೈನಿಕರೂ ಮೃತರಾಗಿದ್ದರು. ದೊಡ್ಡ ಪ್ರಮಾಣದ ರಾಡಿಯೆದ್ದಿತ್ತು. ಕಾರ್ಯಾಚರಣೆಯನ್ನು ಅಷ್ಟಕ್ಕೇ ಬಿಟ್ಟು ವಾಪಸ್ ಆಗುವಂತೆ ಆಜ್ಞೆ ಮಾಡದೇ ಅಧ್ಯಕ್ಷ ಕಾರ್ಟರ್ ಅವರಿಗೆ ಬೇರೆ ಯಾವುದೇ ದಾರಿ ಇರಲಿಲ್ಲ. ಜಾಗತಿಕವಾಗಿ ಅಮೆರಿಕಾಕಕ್ಕೆ ದೊಡ್ಡ ಮುಜುಗರ. ಇರಾನ್ ಅಂತೂ ಅಮೆರಿಕಾದ ಶಸ್ತ್ರಾಸ್ತ್ರಗಳನ್ನು, ಸತ್ತ ಯೋಧರ ಹೆಣಗಳನ್ನು ಮೆರವಣಿಗೆ ಮಾಡಿ ಅಮೆರಿಕಾದ ಮಾನವನ್ನು ಹರಾಜ್ ಹಾಕಿತ್ತು. ಚುನಾವಣೆ ತಲೆ ಮೇಲೆಯೇ ಇತ್ತು. ಈಗ ಅದರ ಅವಶ್ಯಕತೆಯೇ ಇರಲಿಲ್ಲ. ಇಂತಹ ದೊಡ್ಡ ಅವಗಢ ಮಾಡಿಕೊಂಡಿದ್ದ ಅಧ್ಯಕ್ಷ ಕಾರ್ಟರ್ ಮತ್ತೆ ಆರಿಸಿ ಬರುವ ಸಾಧ್ಯತೆಯೇ ಇರಲಿಲ್ಲ. ರೀಗನ್ ಮತ್ತು ಬುಷ್ (ಹಿರಿಯ) ಜೋಡಿ ಆರಿಸಿ ಬಂತು. ತಮ್ಮ ರಾಜಕೀಯ ಭವಿಷ್ಯದ ಮೇಲೆ ಚಪ್ಪಡಿ ಎಳೆದುಕೊಂಡ ಕಾರ್ಟರ್ ತಮ್ಮ ಮೂಲ ಉದ್ಯೋಗವಾದ ಶೇಂಗಾ ಕೃಷಿಗೆ ಮರಳಿದರು. ಶೇಂಗಾ ಕೀಳುತ್ತಾ ಆಗಿ ಹೋದ ಘಟನೆ ಬಗ್ಗೆ ಬೋಂಗಾ ಬಾರಿಸುತ್ತ ಕುಳಿತದ್ದೇ ಬಂತು. ಈಗ ಒಬಾಮಾ ಅಂತದ್ದೇ ವಿಕಟ ಪರಿಸ್ಥಿತಿಯಲ್ಲಿ ಸಿಲುಕಿದ್ದರು. ಒಸಮಾನ ಮೇಲೆ ಮಾಡಬೇಕು ಎಂದುಕೊಳ್ಳುತ್ತಿರುವ ಕಾರ್ಯಾಚರಣೆ ವಿಫಲವಾದರೆ ಒಬಾಮಾ ಕಪ್ಪುವರ್ಣೀಯ ಜಿಮ್ಮಿ ಕಾರ್ಟರ್ ಆಗಿ ಮನೆಗೆ ಹೋಗಬೇಕಾಗಿತ್ತು. ಶೇಂಗಾ ಕೃಷಿಗೆ ಮರಳಿ ಕಳಿಸಲ್ಪಟ್ಟಿದ್ದ ಕಾರ್ಟರ್ ಶ್ವೇತವರ್ಣೀಯರಾಗಿದ್ದರು. (ಹೆಚ್ಚಿನ ವಿವರಗಳಿಗೆ ನೋಡಿ: Operation Eagle Claw)
ಅಮೇರಿಕಾ ಹಿಂದೆ ಬಿದ್ದಿರುವುದು ಸರಿಯಾದ ಮನುಷ್ಯನ ಹಿಂದೆ ಎಂದು ಖಾತ್ರಿ ಮಾಡಿಕೊಳ್ಳುವುದು ಒಬಾಮಾಗೆ ಬಹುಮುಖ್ಯವಾಗಿತ್ತು. ಆ ಖಾತ್ರಿ ಡಿಎನ್ಎ ಟೆಸ್ಟ್ ಮೂಲಕ ಬರುವುದಿತ್ತು. ಈಗ ಅಮೆರಿಕಾದ ಯೋಜನೆ ರೂಪಿಸುತ್ತಿದ್ದ ಅಧಿಕಾರಿಗಳು ಜನರಲ್ ಕಯಾನಿ ಮತ್ತು ಜನರಲ್ ಪಾಷಾ ಬಳಿ ಈ ಸಹಾಯ ಕೇಳಿದರು. ಹೇಗೂ ಸೈನ್ಯದ ಅಧಿಕಾರಿಯೇ ಆಗಿದ್ದ ಡಾಕ್ಟರ್ ಅಜೀಜ್ ಒಸಾಮಾ ಬಿನ್ ಲಾಡೆನ್ನಿಗೆ ಚಿಕಿತ್ಸೆ ಕೊಡುತ್ತಿದ್ದ. ಡಿಎನ್ಎ ಟೆಸ್ಟ್ ಗೆ ಬೇಕಾದ ಸ್ಯಾಂಪಲ್ ತಂದುಕೊಡುವುದು ಅವನಿಗೇನೂ ಕಷ್ಟವಾಗಿರಲಿಲ್ಲ. ಒಸಾಮಾ ಬಿನ್ ಲಾಡೆನ್ ತಲೆಮೇಲೆ ಇಟ್ಟಿದ್ದ ೨೫ ಮಿಲಿಯನ್ ಡಾಲರ್ ಬಹುಮಾನದ ಹಣದಲ್ಲಿ ಅವನಿಗೂ ಒಂದು ದೊಡ್ಡ ಪಾಲು ಕೊನೆಗೆ ಕೊಟ್ಟರು. ಏಕೆಂದರೆ ಡಾಕ್ಟರ್ ಅಜೀಜ್ ತಂದುಕೊಟ್ಟ ಸ್ಯಾಂಪಲ್ ಅಲ್ಲಿರುವುದು ಒಸಾಮಾ ಬಿನ್ ಲಾಡೆನ್ ಎಂದು ಶತಪ್ರತಿಶತ ಖಾತ್ರಿ ಮಾಡಿಕೊಟ್ಟಿತ್ತು.
ಕಾರ್ಯಾಚರಣೆಯ ಅಂತಿಮ ರೂಪುರೇಷೆಗಳ ಬಗ್ಗೆ ಅಮೇರಿಕಾ ಮತ್ತು ಪಾಕಿಸ್ತಾನದ ಮಧ್ಯೆ ದೊಡ್ಡ ಪ್ರಮಾಣದ ಚೌಕಾಶಿ ನಡೆದಿತ್ತು. ಜನರಲ್ ಕಯಾನಿ ಅಮೇರಿಕಾದ ಆಡಳಿತಕ್ಕೆ ಖಡಕ್ಕಾಗಿ ಹೇಳಿದ್ದು, "ದೊಡ್ಡ ಸೈನ್ಯ ಕಟ್ಟಿಕೊಂಡು ಬರುವಂತಿಲ್ಲ. ಚಿಕ್ಕದಾಗಿ ಚೊಕ್ಕದಾಗಿ ರಹಸ್ಯವಾಗಿ ಬಂದು, ಅಷ್ಟೇ ರಹಸ್ಯವಾಗಿ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ, ಅಷ್ಟೇ ಗೌಪ್ಯವಾಗಿ ಕಳಚಿಕೊಳ್ಳಬೇಕು. ಮತ್ತೆ ಒಸಾಮಾನನ್ನು ಕೊಲ್ಲಬೇಕು. ಕೊಲ್ಲಲೇಬೇಕು. ಅದು ಬಹಳ ಮುಖ್ಯ. ಅದಿಲ್ಲವಾದರೆ ಡೀಲ್ ಇಲ್ಲ. ಎಲ್ಲ ಬಂದ್." ಅಮೆರಿಕದವರು ಒಸಾಮಾನನ್ನು ಜೀವಂತವಾಗಿ ಎತ್ತಾಕಿಕೊಂಡರೆ ಅವನು ಏನೇನು ಬಾಯ್ಬಿಟ್ಟು ಯಾರ್ಯಾರ ಬುಡಕ್ಕೆ ತಂದಿಡುತ್ತಾನೋ ಎನ್ನುವ ಭಯ ಕೇವಲ ಪಾಕಿಸ್ತಾನಿಗಳನ್ನು ಮಾತ್ರವಲ್ಲ ಇಡೀ ಜಿಹಾದಿ ಸಮುದಾಯವನ್ನು ಕಾಡಿರಲು ಸಾಕು. ಹಾಗಾಗಿ ಬಂದರೆ ಕೊಂದೇ ಹೋಗಬೇಕು. ಬಚ್ಚಿಟ್ಟ ಪಾಪ ಕೊಂದು ಪರಿಹಾರ. ಕೊಂದ ಪಾಪ ತಿಂದು ಪರಿಹಾರ ಎಂಬಂತೆ.
ಆಗ ಜನೆವರಿ ೨೦೧೧. ಎರಡೂ ದೇಶಗಳ ಮಧ್ಯೆ ಕಾರ್ಯಾಚರಣೆಯ ಬಗ್ಗೆ ಒಮ್ಮತ ಮೂಡಿತು. ಅಮೇರಿಕಾ ಸೈನ್ಯದ ವಿಶೇಷ ಕಾರ್ಯಾಚರಣೆಗಳ ಜಂಟಿ ಕಮಾಂಡ್ ಪಾಕಿಸ್ತಾನ ಉತ್ತರಿಸಬೇಕಾದ ಪ್ರಶ್ನೆಗಳ ಪಟ್ಟಿ ಮಾಡಿತು. ಅದರಲ್ಲಿದ್ದ ಮುಖ್ಯ ಪ್ರಶ್ನೆಗಳು : ೧. ಯಾವುದೇ ತರಹದ ಹೊರಗಿನ ಹಸ್ತಕ್ಷೇಪ ಆಗುವದಿಲ್ಲ ಎಂದು ಹೇಗೆ ಖಾತ್ರಿ ಕೊಡುವಿರಿ? ೨. ಕಂಪೌಂಡ್ ಒಳಗಿರುವ ರಕ್ಷಣಾ ವ್ಯವಸ್ಥೆಗಳ ಬಗ್ಗೆ ನಿಖರ ಮಾಹಿತಿ ಕೊಡಿ. ೩. ಆ ಕಟ್ಟಡದಲ್ಲಿ ಒಸಾಮಾನ ಕೋಣೆಗಳು ಯಾವವು ಮತ್ತು ಅವುಗಳ ವಿವರ. ೪. ಮಹಡಿಗೆ ಹೋಗಲು ಎಷ್ಟು ಮೆಟ್ಟಿಲುಗಳು ಇವೆ? ೪. ಕೋಣೆಯ ಬಾಗಿಲಗಳು ಎಲ್ಲಿವೆ ಮತ್ತು ಅವು ಕಬ್ಬಿಣದ ರಕ್ಷಾಕವಚ ಹೊಂದಿವೆಯೇ? ಇದ್ದರೆ ಅವು ಎಷ್ಟು ದಪ್ಪಗಿವೆ?
ಆರಂಭದಲ್ಲಿ ನಾಲ್ಕು ಜನರ ಒಂದು ತಂಡಕ್ಕೆ ಪಾಕಿಸ್ತಾನಿಗಳು ಅನುಮತಿ ಕೊಟ್ಟರು. ಅದರಲ್ಲಿ ಒಬ್ಬ ನೇವಿ ಸೀಲ್ ಕಮಾಂಡೋ, ಒಬ್ಬ ಸಿಐಎ ಅಧಿಕಾರಿ ಮತ್ತು ಇಬ್ಬರು ಕಮ್ಯುನಿಕೇಷನ್ ತಂತ್ರಜ್ಞರು ಇದ್ದರು. ತರ್ಬೇಲಾ ಘಾಝಿ ರಹಸ್ಯ ಸೇನಾ ನೆಲೆಯಲ್ಲಿ ಅವರಿಗೊಂದು ಕಚೇರಿ ಮಾಡಿಕೊಡಲಾಯಿತು. ಅಮೆರಿಕ ಮತ್ತು ಪಾಕಿಸ್ತಾನದ ಮಧ್ಯೆ ಸಂಪರ್ಕಕೊಂಡಿಯಾಗಿರುವುದು ಅವರ ಕೆಲಸ. ಇಷ್ಟಾಗುವ ವೇಳೆಗೆ ಆಮೇರಿಕಾದ ನೆವಾಡಾ ರಾಜ್ಯದ ನಿರ್ಮಾನುಷ ಮರಭೂಮಿಯಲ್ಲಿ ಒಸಾಮಾ ಬಿನ್ ಲಾಡೆನ್ ಕಂಪೌಂಡಿನ ಪ್ರತಿಕೃತಿ ನಿರ್ಮಾಣಗೊಂಡಿತ್ತು. ನುರಿತ ನೇವಿ ಸೀಲ್ ಕಮಾಂಡೋಗಳ ತಂಡ ಅದನ್ನು ಉಪಯೋಗಿಸಿಕೊಂಡು ಕಾರ್ಯಾಚರಣೆಯ ಅಭ್ಯಾಸ ಶುರುಮಾಡಿತ್ತು. Mission was on.
ಒಮ್ಮಿಂದೊಮ್ಮೆಲೆ ಅಮೆರಿಕವು ಪಾಕಿಸ್ತಾನಕ್ಕೆ ಕೊಡುತ್ತಿದ್ದ ವಿದೇಶಿ ಹಣಕಾಸು ಮತ್ತು ಮಿಲಿಟರಿ ಸಹಾಯವನ್ನು ಕಮ್ಮಿ ಮಾಡಿತು. ಹಿರಿಯ ಸೈನ್ಯಾಧಿಕಾರಿಗಳಿಗೆ ಟೇಬಲ್ ಕೆಳಗೆ ಕೊಡುತ್ತಿದ್ದ ಕಾಣಿಕೆ ಕೂಡ ಕಮ್ಮಿಯಾಯಿತು. ಇದೆಲ್ಲ ಪಾಕಿಸ್ತಾನವನ್ನು ಪಳಗಿಸುವ ಹುನ್ನಾರವೇ ಆಗಿತ್ತು. ಹಣ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ಪಾಕಿಸ್ತಾನಿ ಹಿರಿಯ ಅಧಿಕಾರಿಗಳು ಈ ವರ್ತನೆಯಿಂದ ಗಾಬರಿಗೊಂಡರು. ISI ಜನರಲ್ ಪಾಷಾ ಓಡೋಡಿ ಅಮೆರಿಕಾಕ್ಕೆ ಬಂದ. ತುರ್ತಾಗಿ ಸಿಐಎ ಮುಖ್ಯಸ್ಥ ಲಿಯಾನ್ ಪೆನೆಟ್ಟಾ ಅವರನ್ನು ಭೇಟಿಯಾದ. ಅಮೆರಿಕಾ ತನಗೆ ಬೇಕಾಗಿದ್ದನ್ನು ವಸೂಲಿ ಮಾಡಿತು. ಹಣಕಾಸಿನ ಮತ್ತು ಮಿಲಿಟರಿ ಸಹಾಯವನ್ನು ಮುಂದುವರೆಸುವದಾಗಿ ಹೇಳಿತು. ಇದ್ದಕ್ಕೆ ಪ್ರತಿಯಾಗಿ ಪಾಕಿಸ್ತಾನ ಎಲ್ಲ ಬೆಂಬಲ ನೀಡುವ ವಾಗ್ದಾನ ಮಾಡಿತು. ಅದಕ್ಕಿಂತ ಮುಖ್ಯವಾಗಿ ಯಾವುದೇ ತರಹದ ಅಡೆತಡೆಗಳು ಎದ್ದು ಬರುವುದಿಲ್ಲ ಎಂಬ ಮುಖ್ಯ ಆಶ್ವಾಸನೆಯನ್ನು ಕೂಡ ಕೊಟ್ಟಿತು.
ಜನರಲ್ ಪಾಷಾ ಮತ್ತೊಂದು ಕೋರಿಕೆ ಮುಂದಿಟ್ಟ. ಭಯೋತ್ಪಾದನೆಯ ವಿರುದ್ಧ ಅಮೇರಿಕಾ ನಡೆಸುತ್ತಿರುವ ಸಮರದಲ್ಲಿ ಪಾಕಿಸ್ತಾನ ಪೂರ್ತಿ ಸಹಕಾರ ನೀಡುತ್ತಿಲ್ಲ ಎಂದು ಅಮೆರಿಕಾ ಆಗಾಗ ಮಾಡುತ್ತಿದ್ದ ಆಪಾದನೆಯನ್ನು ನಿಲ್ಲಿಸಲು ಕೋರಿದ. ಮೊದಲಬಾರಿಗೆ ಒಸಾಮಾನ ಬಗ್ಗೆ ಪಾಕಿಸ್ತಾನದ ನಿಜವಾದ ನಿಲುವನ್ನು ಬಿಚ್ಚಿಟ್ಟ. ಸಿಐಎ ಮುಖ್ಯಸ್ಥ ಆಲಿಸಿದರು. ಅಲ್ ಖೈದಾ ಮತ್ತು ತಾಲಿಬಾನ್ ಮೇಲೆ ಹತೋಟಿಯಿಟ್ಟುಕೊಳ್ಳಲು ನಮಗೊಬ್ಬ ಒತ್ತೆಯಾಳು ಬೇಕಾಗಿದ್ದ. ಹಾಗಾಗಿ ನಾವು ಒಸಮಾನ ನೆಲೆ ಮೇಲೆ ರಹಸ್ಯ ದಾಳಿ ಮಾಡಿ ಅವನನ್ನು ಕುಟುಂಬ ಸಮೇತ ಎತ್ತಾಕಿಕೊಂಡು ಬಂದು ಸುರಕ್ಷಿತವಾಗಿ ಕಾದಿಟ್ಟುಕೊಂಡಿದ್ದೇವೆ. ಅಲ್ ಖೈದಾ, ತಾಲಿಬಾನ್ ಮತ್ತು ಇತರೆ ಜಿಹಾದಿಗಳು ಏನಾದರೂ ISI ಉದ್ದೇಶಗಳಿಗೆ ವ್ಯತಿರಿಕ್ತವಾಗಿ ವರ್ತಿಸಿದರೆ, ಅಥವಾ ISI ಅನುಮೋದಿಸದ ಕಾರ್ಯಾಚರಣೆ ಮಾಡಿದರೆ ಒಸಾಮಾನನ್ನು ಅಮೆರಿಕಕ್ಕೆ ಒಪ್ಪಿಸಿಬಿಡುತ್ತೇವೆ ಎನ್ನುವ ಬೆದರಿಕೆ ಹಾಕಿತ್ತು. ಬೆದರಿಕೆ ಜೊತೆಗೆ ಅವರನ್ನು ಸಮಾಧಾನ ಕೂಡ ಮಾಡಿತ್ತು. ಎಲ್ಲಿಯವರೆಗೆ ಅಲ್ ಖೈದಾ ಮತ್ತು ತಾಲಿಬಾನ್ ISI ಹೇಳಿದಂತೆ ಕೇಳಿಕೊಂಡು ಇರುತ್ತವೋ ಅಲ್ಲಿಯವರೆಗೆ ISI ಒಸಾಮಾನನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಂಡು ಬರುತ್ತದೆ. ಮತ್ತೆ ಎಲ್ಲವನ್ನೂ ರಹಸ್ಯವಾಗಿ ಇಟ್ಟುಕೊಳ್ಳುತ್ತದೆ. ಹೀಗೆ ಅಲ್ ಖೈದಾ ಮತ್ತು ತಾಲಿಬಾನಿಗಳಿಗೆ ಆಶ್ವಾಸನೆ ಕೊಟ್ಟಿದ್ದ ISI ಈಗ ಉಲ್ಟಾ ಹೊಡೆದು ಒಸಾಮಾನ ರುಂಡವನ್ನು ಬೆಳ್ಳಿ ತಟ್ಟೆ ಮೇಲಿಟ್ಟು ಅಮೆರಿಕದವರಿಗೆ ಸಮರ್ಪಿಸಿತು ಎಂದು ಏನಾದರೂ ಸುದ್ದಿ ಸೋರಿಕೆಯಾದರೆ ಜಿಹಾದಿಗಳು ಪಾಕಿಸ್ತಾನದ ತುಂಬಾ ಮಾರಣಹೋಮ ಮಾಡಿ ಅಲ್ಲೋಲಕಲ್ಲೋಲ ಸೃಷ್ಟಿ ಮಾಡಿಯಾರು. ಒಸಾಮಾ ಮತ್ತು ಆತನನ್ನು ಎತ್ತಾಕಿಕೊಂಡು ಬಂದು ಕಾದಿಟ್ಟುಕೊಂಡಿರುವ ಹಿಂದಿನ ISI ನ ಒಳಸಂಚನ್ನು ಈಗ ಸಿಐಎ ಮುಂದೆ ಬಿಚ್ಚಿ ಹೇಳಿಕೊಂಡ ಜನರಲ್ ಪಾಷಾ ಅಮೇರಿಕ ಕೊಟ್ಟ ಕಾಸೆಣಿಸುತ್ತ ಪಾಕಿಸ್ತಾನಕ್ಕೆ ವಾಪಸ್ ಹೊರಟ.
ISI ಅಲ್ ಖೈದಾ ಮತ್ತು ತಾಲಿಬಾನಿನ ಏಜೆಂಟನಂತೆ ವರ್ತಿಸುತ್ತಿದೆಯಲ್ಲ!? ಎಂದು ಸಿಐಎ ಆಶ್ಚರ್ಯ ಮತ್ತು ಆಕ್ಷೇಪ ವ್ಯಕ್ತಪಡಿಸಿದರೆ ಜನರಲ್ ಕಯಾನಿ ಮತ್ತು ಪಾಷಾ ನಿರ್ಭಾವುಕರಾಗಿ ಹೇಳಿದ್ದಿಷ್ಟು, ಒಸಾಮಾ ನಮಗೆ ಒಂದು ಸಂಪನ್ಮೂಲ ಅಷ್ಟೇ. ತಾಲಿಬಾನಿಗಳನ್ನು ಮತ್ತು ಜಿಹಾದಿಗಳನ್ನು ಹತೋಟಿಯಿಟ್ಟುಕೊಳ್ಳಲು ಉಪಯುಕ್ತ ಸಂಪನ್ಮೂಲ, ಅಷ್ಟೇ.
ಒಸಾಮಾನನ್ನು ಅಮೆರಿಕದವರಿಗೆ ಒಪ್ಪಿಸುವ ಇರಾದೆ ಅಥವಾ ಇಚ್ಛೆ ಪಾಕಿಗಳಿಗೆ ನಿಜವಾಗಿ ಇರಲೇ ಇಲ್ಲ. ಆದರೆ ಅಮೆರಿಕದವರು ಹಣಕಾಸಿನ ನೆರವನ್ನು ಪೂರ್ತಿ ನಿಲ್ಲಿಸಿ, ಪಾಕಿಸ್ತಾನವನ್ನು ಒಪ್ಪತ್ತಿನ ಊಟದ ಒಂದೊಂದು ತುತ್ತಿಗಾಗಿಯೂ ಕೂಡ ತಿಣಕಾಡುವಂತೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದಾಗ ಮಣಿಯಲೇಬೇಕಾಯಿತು. ಬೇರೆ ದಾರಿಯಿರಲಿಲ್ಲ. ದೇಶಕ್ಕಾಗಿ ಒಪ್ಪಿಕೊಳ್ಳಲೇಬೇಕಾಯಿತು. ಹೀಗೆ ತಿಪ್ಪೆ ಸಾರಿಸಿದ್ದು ISI ಮೂಲಗಳು. ಒಟ್ಟಿನಲ್ಲಿ ಸ್ವಾಮಿಕಾರ್ಯ ಮತ್ತು ಸ್ವಕಾರ್ಯ ಎರಡನ್ನೂ ಕೂಡಿಯೇ ಮಾಡಿಕೊಂಡರು ಎಂದು ಕಾಣುತ್ತದೆ.
ಆಫ್ಗಾನಿಸ್ತಾನ ಮತ್ತು ಪಾಕಿಸ್ತಾನದ ಗಡಿಯಲ್ಲಿ ಸ್ಥಾಪಿತವಾಗಿದ್ದ ರೇಡಾರುಗಳು ಕಾರ್ಯಾಚರಣೆ ನಿಮಿತ್ತ ಹಾರಿಬರಲಿದ್ದ ಅಮೆರಿಕಾದ ಹೆಲಿಕಾಪ್ಟರುಗಳನ್ನು ಟ್ರ್ಯಾಕ್ ಮಾಡುವುದಿಲ್ಲ ಮತ್ತು ಅವನ್ನು ಎದುರಿಸಲು ಯಾವುದೇ ತರಹದ ಯುದ್ಧವಿಮಾನಗಳನ್ನು ಹಾರಿಸುವುದಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಳ್ಳುವ ಜವಾಬ್ದಾರಿಯನ್ನು ಜನರಲ್ ಕಯಾನಿ ಮತ್ತು ಜನರಲ್ ಪಾಷಾ ಹೊತ್ತುಕೊಂಡರು. ತರ್ಬೇಲಾ ಘಾಝಿ ಸೇನಾನೆಲೆಯಲ್ಲಿ ಸ್ಥಾಪಿತವಾಗಿದ್ದ ಅಮೆರಿಕನ್ನರ ತಂಡಕ್ಕೆ ISI, ಅಮೆರಿಕಾದ ಸೈನ್ಯ ಮತ್ತು ಕಮಾಂಡೋ ಪಡೆಗಳ ಮಧ್ಯದ ಸಂವಹನವನ್ನು(communication) ಸಂಬಾಳಿಸುವ ಜವಾಬ್ದಾರಿ ನೀಡಲಾಯಿತು. ಯಾವುದೋ ಬೀಡಾಡಿ ಯುದ್ಧವಿಮಾನ ಗಡಿಯಲ್ಲಿ ಕಾರ್ಯಾಚರಣೆಯ ಹೆಲಿಕಾಪ್ಟರುಗಳನ್ನು ಟ್ರ್ಯಾಕ್ ಮಾಡದಂತೆ ನೋಡಿಕೊಳ್ಳಲು ಇದೆಲ್ಲ ಉಸಾಬರಿ. ಮೊದಲಿನ ಯೋಜನೆ ಪ್ರಕಾರ ಒಸಾಮಾನ ಹತ್ಯೆಯ ವಿವರಗಳನ್ನು ಕಾರ್ಯಾಚರಣೆ ಮುಗಿದ ಕೂಡಲೇ ಬಹಿರಂಗ ಮಾಡಬಾರದು ಎಂದಾಗಿತ್ತು. ಕಮ್ಮಿಕಮ್ಮಿಯೆಂದರೂ ಏಳು ದಿವಸಗಳ ಕಾಲ ಕಾರ್ಯಾಚರಣೆಯ ವಿವರಗಳನ್ನು ರಹಸ್ಯವಾಗಿ ಇಡುವುದು ಎಂದು ಎಲ್ಲರೂ ಒಪ್ಪಿದ್ದರು. ಅದಾದ ನಂತರ ತುಂಬಾ ಎಚ್ಚರಿಕೆಯಿಂದ ಸೃಷಿಸಿದ ಚಂದಾಮಾಮನ ಕಥೆಯೊಂದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿ ಅದಕ್ಕೆ ಸಿಕ್ಕಾಪಟ್ಟೆ ಪ್ರಚಾರ ಕೊಡುವುದು. ಈ ಚಂದಾಮಾಮದ ಕಥೆಯ ಪ್ರಕಾರ ಒಸಾಮಾ ಬಿನ್ ಲಾಡೆನನನ್ನು ಅಪಘಾನಿಸ್ತಾನದ ಗಡಿಯಲ್ಲಿ ಹಿಂದೂ ಕುಶ್ ಪರ್ವತಗಳ ದುರ್ಗಮ ಪ್ರದೇಶದಲ್ಲಿ ರಿಮೋಟ್ ಕಂಟ್ರೋಲ್ ಡ್ರೋನ್ ದಾಳಿಯಲ್ಲಿ ಕೊಲ್ಲಲಾಯಿತು. ಹತ್ಯೆಯ ಬಳಿಕ ಡಿಎನ್ಎ ಪರೀಕ್ಷೆಯ ಮೂಲಕ ಒಸಾಮಾನೇ ಮೃತನಾಗಿದ್ದು ಎಂದು ಮತ್ತೊಮ್ಮೆ ಖಚಿತಪಡಿಸಿಕೊಳ್ಳಲಾಯಿತು. ಒಸಮಾನ ಹತ್ಯೆಯ ಹಿಂದಿನ ಕಾರ್ಯಾಚರಣೆಯ ನಿಜವಾದ ಕಥೆಯನ್ನು ಎಂದಿಗೂ ಬಹಿರಂಗಗೊಳಿಸುವುದಿಲ್ಲ ಎಂದು ಪಾಕಿಸ್ತಾನಕ್ಕೆ ಆಶ್ವಾಸನೆ ಕೊಡಲಾಗಿತ್ತು. ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಪಾತ್ರ ಬಹಿರಂಗವಾದರೆ ಪಾಕಿಸ್ತಾನ ಉರಿದೆದ್ದು ಹೋಗಿ ಜಿಹಾದಿಗಳು ಕಯಾನಿ ಮತ್ತು ಪಾಷಾ ಅವರನ್ನಷ್ಟೇ ಅಲ್ಲ ಅವರ ಕುಟುಂಬಗಳನ್ನು ಕೂಡ ಕಂಡಕಂಡಲ್ಲಿ ಹುಚ್ಚುನಾಯಿಯಂತೆ ಬಡಿಬಡಿದು ಕೊಂದಾರು ಎನ್ನುವುದರ ಅರಿವು ಅಮೆರಿಕದವರಿಗೆ ಇದ್ದಂತೆ ಕಂಡಿತು. ಇಸ್ಲಾಮಿಕ್ ಜಗತ್ತಿನಲ್ಲಿ ಅನೇಕರಿಗೆ ಒಸಾಮಾ ಒಬ್ಬ ಆರಾಧ್ಯದೈವ. ಹಾಗಾಗಿ ಅವನ ಬುಡಕ್ಕೆ ಕೈಹಾಕಿದವರನ್ನು ಜಿಹಾದಿಗಳು ಸುಮ್ಮನೆ ಬಿಡುವ ಚಾನ್ಸೇ ಇರಲಿಲ್ಲ.
ಇಷ್ಟೆಲ್ಲಾ ಆಗುವ ಹೊತ್ತಿಗೆ ಒಂದು ವಿಷಯ ನಿಚ್ಚಳವಾಗಿತ್ತು. ಒಸಾಮಾ ಬಿನ್ ಲಾಡೆನ್ನನ ಅಂತ್ಯಕಾಲ ಸಮೀಪಿಸಿದೆ. ಈ ಸಲ ಅವನು ಬಚಾವಾಗುವ ಸಾಧ್ಯತೆಯೇ ಇಲ್ಲ. ೨೦೧೧ ಏಪ್ರಿಲ್ ನಲ್ಲಿ ನಡೆದ ಸಭೆಯಲ್ಲಿ ಪಾಷಾ ಹೇಳಿದ: ಇನ್ನು ಜಾಸ್ತಿ ದಿನ ಒಸಾಮಾನನ್ನು ಆ ಕಾಂಪೌಂಡಿನಲ್ಲಿ ಇಟ್ಟುಕೊಳ್ಳುವಂತೆ ಇಲ್ಲ. ಅದೆಷ್ಟೇ ರಹಸ್ಯ ಕಾಪಾಡಿಕೊಂಡು ಬಂದಿದ್ದರೂ ಸಾಕಷ್ಟು ಜನರಿಗೆ ವಿಷಯ ತಿಳಿದಿದೆ. ವಾಯುಸೇನೆಯ ಅಧಿಕಾರಿಗಳಿಗೂ ವಿಷಯ ತಿಳಿಸಿ ಮನದಟ್ಟು ಮಾಡಿಕೊಡಬೇಕಾಗಿದೆ.
ಒಸಾಮಾನ ಹತ್ಯೆ ಒಂದು ಪೂರ್ವನಿರ್ಧಾರಿತ ಮತ್ತು ಪೂರ್ವ ನಿಯೋಜಿತ ಕೊಲೆ ಅಷ್ಟೇ ಹೊರತೂ ಯಾವುದೇ ರೀತಿಯ ವಿಶೇಷ ಕಾರ್ಯಾಚರಣೆ ಆಗಿರಲೇ ಇಲ್ಲ. ಅಲ್ಲಿ ಇದ್ದವ ಒಸಾಮಾ ಎಂದು ಖಾತ್ರಿಯಾಗಿತ್ತು. ಅವನ ರಕ್ಷಣೆಯ ಹೊಣೆ ಹೊತ್ತವರೇ ನಂಬಿಕೆಗೆ ದ್ರೋಹವೆಸಗಿದ್ದರು. ಒಸಾಮಾ ಹಲವಾರು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಎಂದೂ ಗೊತ್ತಿತ್ತು. ಇಷ್ಟೆಲ್ಲಾ ಮಾಹಿತಿ ಮೊದಲೇ ಗೊತ್ತಿದ್ದ ಮೇಲೆ ಒಬ್ಬ ರೋಗಿಷ್ಠ ಮತ್ತು ಹಾಸಿಗೆ ಹಿಡಿದಿದ್ದ ದುರ್ಬಲ ಮನುಷ್ಯನನ್ನು ಕೊಂದು ಬರುವುದು ಅದೆಂತಹ ವಿಶೇಷ ಕಾರ್ಯಾಚರಣೆ? ಒಬ್ಬ ಸುಪಾರಿ ಹಂತಕ ಮಾಡಬಹುದಾದ ಕೆಲಸ ಅದು ಎಂದು ಆ so called ವಿಶೇಷ ಕಾರ್ಯಾಚರಣೆಯನ್ನು ವಿಶ್ಲೇಷಿಸಿ ನಿಡುಸುಯ್ಯದವರು ಹಿಂದೆ ಬೇರೆ ಕಾರ್ಯಾಚರಣೆಯಲ್ಲಿ ನೇವಿ ಸೀಲ್ ಕಮಾಂಡೋಗಳ ನೇತೃತ್ವ ವಹಿಸಿದ್ದ ಒಬ್ಬ ಮಾಜಿ ಅಧಿಕಾರಿ. ಹಿಂದೆ ತಮ್ಮ ವೃತ್ತಿಜೀವನದಲ್ಲಿ ಅನೇಕ ನಿಜವಾದ ವಿಶೇಷ ಕಾರ್ಯಾಚರಣೆಗಳನ್ನು ಮಾಡಿದ್ದ ಅವರಿಗೆ ಇದೊಂದು ವ್ಯವಸ್ಥಿತ ಪೂರ್ವನಿಯೋಜಿತ ಕೊಲೆ ಎಂದು ಅನ್ನಿಸಿದ್ದರಲ್ಲಿ ಆಶ್ಚರ್ಯವಿರಲಿಲ್ಲ.
ಅಮೇರಿಕಾದ ಕಾರ್ಯಾಚರಣೆಯ ಸಮಯದಲ್ಲಿ ಒಸಾಮಾ ಬಿನ್ ಲಾಡೆನ್ ಏಕೆ - ೪೭ ಬಂದೂಕು ಕೈಗೆತ್ತಿಕೊಂಡ. ಹಾಗಾಗಿ ಅವನನ್ನು ಕೊಲ್ಲಬೇಕಾಯಿತು. ಹಾಗೆಲ್ಲ ಮಾಡದೇ ಮೊದಲೇ ಶರಣಾಗತನಾಗಿಬಿಟ್ಟಿದ್ದರೆ ಅವನನ್ನು ಬಂಧಿಸುವ ಇರಾದೆಯಿತ್ತೇ ಹೊರತೂ ಕೊಲ್ಲುವ ಉದ್ದೇಶ ಇರಲಿಲ್ಲ. ಮೊದಲು ಹೊರಬಿದ್ದ ಅಧಿಕೃತ ಪ್ರಕಟಣೆಯಲ್ಲಿ ಪುಂಗಿದ್ದು ಈ ರೀತಿ.
ಒಸಾಮಾ ಬಿನ್ ಲಾಡೆನ್ ಇದ್ದ ಕಂಪೌಂಡಿನ ಮೇಲೆ ಕಣ್ಣಿಡಲು ನುರಿತ ISI ಜನರನ್ನು ನಿಯೋಜಿಸಲಾಯಿತು. ಕಾರ್ಯಾಚರಣೆಯ ಅಂಗವಾಗಿ ಹಾರಿಬರಲಿದ್ದ ಬ್ಲಾಕ್ ಹಾಕ್ ಹೆಲಿಕಾಪ್ಟರುಗಳು ಬರುವ ಶಬ್ದ ಕಿವಿಗೆ ಬಿದ್ದ ಕೂಡಲೇ ಜಾಗ ಖಾಲಿ ಮಾಡಿ ಎಂಬುದು ಅವರಿಗಿದ್ದ ಒಂದು ವಾಕ್ಯದ ಆಜ್ಞೆ. ಇಡೀ ಅಬೋಟಾಬಾದ್ ಶಹರ ಕತ್ತಲೆಯಲ್ಲಿ ಮುಳುಗಿತ್ತು. ISI ಆಜ್ಞೆಯಂತೆ ಕರೆಂಟ್ ಕಟ್ ಮಾಡಲಾಗಿತ್ತು. ಕಾರ್ಯಾಚರಣೆಯ ಸಮಯದಲ್ಲಿ ಒಂದು ಬ್ಲಾಕ್ ಹಾಕ್ ಹೆಲಿಕಾಪ್ಟರಿನ ರೆಕ್ಕೆ ಕಾಂಪೌಂಡ್ ಗೋಡೆಗೆ ಬಡಿದು ಅದು ಜಖಂ ಆಯಿತು. ಅದರಲ್ಲಿದ್ದ ಕೆಲವು ಸೀಲ್ ಕಮಾಂಡೋಗಳು ಲಘುವಾಗಿ ಗಾಯಗೊಂಡರು. ಅದೆಷ್ಟೇ ಡೀಟೇಲ್ ಆಗಿ ಪ್ಲಾನ್ ಮಾಡಿದರೂ ಒಮ್ಮೊಮ್ಮೆ ಹೇರಾಪೇರಿ ಆಗಿಬಿಡುತ್ತದೆ. ಆದ ಮೇಲೆ ಪರಿಸ್ಥಿತಿಯನ್ನು ಸಂಬಾಳಿಸಬೇಕು. ಜಖಂ ಆಗಿ ನೆಲಕಚ್ಚಿದ್ದ ಹೆಲಿಕಾಪ್ಟರನ್ನು ಅಲ್ಲಿಯೇ ಬಿಟ್ಟುಹೋಗುವಂತೆ ಇರಲಿಲ್ಲ. ಅದನ್ನು ಬಾಂಬಿಟ್ಟು ಉಡಾಯಿಸಿ ಸಾಕ್ಷ್ಯ ನಾಶ ಮಾಡಬೇಕು. ಆ ಸ್ಫೋಟ ಐದಾರು ಮೈಲು ಕೇಳುತ್ತದೆ. ಮತ್ತು ಕಾಣುತ್ತದೆ. ಎರಡು ಚಿನೂಕ್ ಹೆಲಿಕಾಪ್ಟರುಗಳು ಅಬೋಟಾಬಾದ್ ಸಮೀಪದ ನೆಲೆಯೊಂದಕ್ಕೆ ಬಂದಿದ್ದವು. ಅವು ಕಾರ್ಯಾಚರಣೆ ತಂಡಕ್ಕೆ ಇಂಧನ ಪೂರೈಸಲು, ಸರಕು ಸಾಗಣೆ ಮಾಡಲು ಬಂದಿದ್ದ ಹೆಲಿಕಾಪ್ಟರುಗಳು. ಈಗ ಒಂದು ಬ್ಲಾಕ್ ಹಾಕ್ ಹೆಲಿಕಾಪ್ಟರ್ ಇಲ್ಲವಾದ ಕಾರಣ ಒಂದು ಚಿನೂಕ್ ಹೆಲಿಕಾಪ್ಟರನ್ನೇ ಕಾರ್ಯಾಚರಣೆಗೆ ಬಳಸಿಕೊಳ್ಳುವ ಅನಿವಾರ್ಯತೆ ಬಂತು. ಒಂದು ಚಿನೂಕ್ ಹೆಲಿಕಾಪ್ಟರನ್ನು ತುರ್ತಾಗಿ ಕಾರ್ಯಾಚರಣೆ ನಡೆಯುತ್ತಿದ್ದ ಜಾಗಕ್ಕೆ ಕಳಿಸಲಾಯಿತು. ಆ ಹೆಲಿಕಾಪ್ಟರಿನ ಮೂಲ ಉದ್ದೇಶ ಇಂಧನ ಮರುಭರ್ತಿ ಮಾಡುವುದಾಗಿತ್ತು. ಹೆಚ್ಚಿನ ಇಂಧನವನ್ನು ಖಾಲಿ ಮಾಡಿಸಿ ಅದನ್ನು ಕಾರ್ಯಾಚರಣೆಗೆ ಒಗ್ಗುವ ಹಾಗೆ ಮಾಡಿ ಕಳಿಸಲಾಯಿತು. ಈ ಅನಿರೀಕ್ಷಿತ ಅವಗಢ ಎಲ್ಲರನ್ನೂ ಧೃತಿಗೆಡಿಸಿತ್ತು. ಅತ್ತಕಡೆ ನೇವಿ ಸೀಲ್ ಕಮಾಂಡೋಗಳು ತಮ್ಮ ಕಾರ್ಯಾಚರಣೆ ಮುಂದುವರೆಸಿದ್ದರು. ಒಸಾಮಾನ ಮನೆ ಸುತ್ತ ಇದ್ದ ISI ಸೆಕ್ಯೂರಿಟಿ ಜಾಗ ಖಾಲಿ ಮಾಡಿ ಹೋಗಿತ್ತು. ಯಾವುದೇ ತರಹದ ಪ್ರತಿರೋಧ ಯಾರಿಂದಲೂ ಬರುವು ಸಾಧ್ಯತೆ ಇರಲಿಲ್ಲ. ಕಮಾಂಡೋ ತಂಡದ ಜೊತೆ ಸಮನ್ವಯ (coordinate) ಮಾಡುತ್ತಿದ್ದ ISI ಅಧಿಕಾರಿ ಕಮಾಂಡೋ ತಂಡವನ್ನು ನೇರವಾಗಿ ಕಾಂಪೌಂಡ್ ಒಳಗೆ ಕರೆದೊಯ್ದ. ಮಹಡಿಗೆ ಹತ್ತಿಹೋಗಲು ಇದ್ದ ಮೆಟ್ಟಿಲುಗಳ (staircase) ಬುಡದಲ್ಲಿ ನಿಲ್ಲಿಸಿದ. ಅಲ್ಲೊಂದು ಕಬ್ಬಿಣದ ತಗಡಿನ ಹೊದಿಕೆಯಿದ್ದ ಸದೃಢ ಬಾಗಿಲಿತ್ತು. ಮೇಲಿನ ಮಹಡಿಯಲ್ಲಿ ಅಂತಹದೇ ಮತ್ತೊಂದು ಬಾಗಿಲಿತ್ತು. ಅದರ ಮೇಲಿನ ಅಂದರೆ ಮೂರನೇ ಮಹಡಿಯಲ್ಲಿ ಒಸಾಮಾ ಬಿನ್ ಲಾಡೆನ್ನನ ಕೋಣೆಯಿತ್ತು. ಇದಕ್ಕೆಲ್ಲ ತಯಾರಾಗೇ ಬಂದಿದ್ದ ಸೀಲ್ ಕಮಾಂಡೋಗಳು ಚಿಕ್ಕ ಸ್ಪೋಟಕಗಳನ್ನು ಇಟ್ಟು ಕಬ್ಬಿಣದ ಹೊದಿಕೆಯಿದ್ದ ಬಾಗಿಲನ್ನು ಒಡೆದು ಮೇಲೆ ಹೋದರು. ಎರಡನೇ ಮಹಡಿಯ ಬಾಗಿಲಿಗೂ ಅದೇ ಗತಿ ಕಾಣಿಸಿದರು. ಈ ಸಮಯದಲ್ಲಿ ಗಲಾಟೆಯಿಂದ ಎಚ್ಛೆತ್ತ ಒಸಾಮಾನ ಪತ್ನಿಯೊಬ್ಬಳು ಗಾಬರಿಯಿಂದ ಕಿರಚುತ್ತಾ ತಂಡದ ಎದುರು ಬಂದಳು. ಬರೋಬ್ಬರಿ ಮೊಣಕಾಲಿಗೆ ಗುಂಡೇಟು ತಿಂದು ತೀವ್ರವಾದ ನೋವಿನಿಂದ ಅರಚುತ್ತಾ ಅಲ್ಲೇ ಕುಸಿದಳು. ಅವಳಿಗೆ ಬಿದ್ದ ಗುಂಡು ಮತ್ತು ಒಸಾಮಾನ ದೇಹದೊಳಗೆ ನುಗ್ಗಿಸಿದ ಗುಂಡುಗಳನ್ನು ಬಿಟ್ಟರೆ ಬೇರೆಲ್ಲೂ ಗುಂಡಿನ ಚಕಮಕಿ ಆಗಲಿಲ್ಲ.
ಒಸಾಮಾ ಎಲ್ಲಿರುತ್ತಾನೆ ಎಂದು ಅವರಿಗೆ ನಿಖರವಾಗಿ ಗೊತ್ತಿತ್ತು. ಮೂರನೇ ಮಹಡಿ. ಬಲಕ್ಕೆ ಎರಡನೇ ಕೊಠಡಿ. ಹತ್ತಿರ ಹೋಗಿ ನೋಡಿದರೆ ಅಲ್ಲಿ ನಡಗುತ್ತ ನಿಂತಿದ್ದ ಆಕೃತಿಯೊಂದು ಕಂಡುಬಂತು. ಭಯಭೀತನಾಗಿದ್ದ ಆ ಆಕೃತಿ ಏನು ಗದ್ದಲ ಎಂದು ನೋಡಲು ಹೊರಗೆ ಬಂದಿತ್ತೋ ಏನೋ. ಭಯದಿಂದ ವಾಪಸ್ ಕೋಣೆ ಒಳಗೆ ನುಸುಳಲು ನೋಡಿತು. ಅದು ಒಸಾಮಾ ಬಿನ್ ಲಾಡೆನ್ ಅಲ್ಲದೆ ಬೇರೆ ಯಾರೂ ಇರಲು ಸಾಧ್ಯವೇ ಇಲ್ಲ ಎಂದು ಗೊತ್ತಿತ್ತು. ಇಬ್ಬರು ನೇವಿ ಸೀಲ್ ಕಮಾಂಡೋಗಳು ಗುರಿಯಿಟ್ಟವರೇ ಗುಂಡಿನ ಸುರಿಮಳೆಗೈದರು. ಇಡೀ ವಿಶ್ವಕ್ಕೆ ತಲೆನೋವಾಗಿದ್ದ ಅತ್ಯಂತ ಅಪಾಯಕಾರಿ ಉಗ್ರಗಾಮಿ ಎಂದು ಕುಖ್ಯಾತನಾಗಿದ್ದ ಒಸಾಮಾ ಬಿನ್ ಲಾಡೆನ್ ಎಂಬ ಮೂಲತಃ ಸೌದಿ ಅರೇಬಿಯಾದ ಆಗರ್ಭ ಶ್ರೀಮಂತ ಹೀಗೆ ಅಬ್ಬೇಪಾರಿಯಂತೆ ಹೆಣವಾಗಿ ಬಿದ್ದ.
ಮುಂದೆ ಕೆಲ ಸಮಯದ ನಂತರ ಕಾರ್ಯಾಚರಣೆಯ ಭಾಗವಾಗಿದ್ದ ಕೆಲವು ನೇವಿ ಸೀಲ್ ಕಮಾಂಡೋಗಳು ತಾವು ತಮ್ಮ ಆತ್ಮರಕ್ಷಣೆಗಾಗಿ ಒಸಾಮಾ ಮೇಲೆ ಗುಂಡು ಹಾರಿಸಿದೆವು ಎನ್ನುವ ವ್ಯತಿರಿಕ್ತ ಹೇಳಿಕೆ ಕೊಟ್ಟು ಸರಕಾರಕ್ಕೆ ಮುಜುಗರ ಉಂಟು ಮಾಡಿದ್ದರು.
ಸೀಲ್ ಕಮಾಂಡೋಗಳಿಗೆ ಎದುರಾದ ಒಸಾಮಾ ಏಕೆ - ೪೭ ಎತ್ತಿಕೊಂಡ. ಹಾಗಾಗಿ ಅವನ ಮೇಲೆ ಗುಂಡು ಹಾರಿಸಬೇಕಾಯಿತು ಎಂದು ಒಮ್ಮೆ ಹೇಳಿದರೆ, ಒಂದೋ ಎರಡೋ ಗುಂಡುಗಳನ್ನು ಗುರಿಯಿಟ್ಟು ತಲೆಗೇ ಹೊಡೆದು ಅವನನ್ನು ಕೊಲ್ಲಲಾಯಿತು ಎಂದು ಮತ್ತೊಂದು ಕಡೆ ಹೇಳಿದರು. ISI ಎತ್ತಾಕಿಕೊಂಡು ಬಂದಿದ್ದ ಒಸಾಮಾ ಮತ್ತು ಅವನ ಕುಟುಂಬ ಪೂರ್ತಿ ಪಾಕಿಗಳ ನಿಗರಾಣಿಯಲ್ಲಿ ಇತ್ತು. ಅವನ ಹತ್ತಿರ ಯಾವುದೇ ಶಸ್ತ್ರಾಸ್ತ್ರ ಇತ್ಯಾದಿ ಇರಲಿಲ್ಲ. ಮತ್ತೆ ಅನೇಕ ಆರೋಗ್ಯದ ಸಮಸ್ಯೆಗಳಿಂದ ಒಸಾಮಾ ಆಗಲೇ ಇದ್ದೂ ಸತ್ತಂತೆ ಆಗಿದ್ದ. ಒಂದು ಎರಡು ಗುಂಡು ಮಾತ್ರ ಹೊಡೆದು ಮುಗಿಸಿದೆವು ಎನ್ನುವುದೆಲ್ಲ ಸುಳ್ಳು. ನೂರಾರು ಕಾಡತೂಸುಗಳನ್ನು ಆತನ ಮೈಯೊಳಗೆ ನುಗ್ಗಿಸಿ ದೇಹವನ್ನು ಜರಡಿ ಜರಡಿ ಮಾಡಿ ಹಾಕಿದ್ದರು. ಸೈನಿಕರಿಗೆ ಆಜ್ಞೆ ನಿಖರವಾಗಿತ್ತು. ಒಸಾಮಾ ಬದುಕಿರಬಾರದು. ಅಷ್ಟೇ. ಬಂಧಿಸಿದರೆ ಯಾರ್ಯಾರ ಯಾವ್ಯಾವ ರಹಸ್ಯಗಳು ಹೊರಗೆ ಬರುತ್ತಿದ್ದವೋ!!??
ಒಸಾಮಾನನ್ನು ಕೊಂದ ಬಳಿಕ ಸೀಲ್ ಕಮಾಂಡೋ ತಂಡ ಅಲ್ಲೇ ಇತ್ತು. ಕಾಂಪೌಂಡ ಗೋಡೆಗೆ ಬಡಿದು ನೆಲಕ್ಕೆ ಬಿದ್ದ ಹೆಲಿಕಾಪ್ಟರನಲ್ಲಿ ಇದ್ದ ಕೆಲವರು ಗಾಯಗೊಂಡಿದ್ದರು. ಅವರು ಮುಲುಗುತ್ತ ಅಲ್ಲೇ ಇದ್ದರು. ಕರೆಂಟ್ ಕಟ್ ಮಾಡಿದ ಕಾರಣ ಸುತ್ತಲೂ ಕತ್ತಲೆ. ಬಾಂಬಿಟ್ಟು ನಾಶ ಪಡಿಸಿದ್ದ ಹೆಲಿಕ್ಯಾಪ್ಟರ್ ಹೊತ್ತಿ ಉರಿಯುತ್ತಿತ್ತು. ಇಷ್ಟೆಲ್ಲ ಆಗುತ್ತಿದ್ದರೂ ಅಗ್ನಿಶಾಮಕ ದಳವಾಗಲಿ, ಸ್ಥಳೀಯ ಪೊಲೀಸರಾಗಲೀ ಅತ್ತಕಡೆ ಸುಳಿಯಲಿಲ್ಲ. ಒಸಾಮಾನ ಹಲವು ಪತ್ನಿಯರು ಮತ್ತು ಮಕ್ಕಳು ಇದ್ದರು. ಅವರನ್ನು ISI ತಂಡದ ಸುಪರ್ದಿಗೆ ಒಪ್ಪಿಸಿದರು. ಅವರನ್ನು ತನಿಖೆ ಮಾಡಿ ಅವರನ್ನು ಹೇಗೆ ಎಲ್ಲಿ ಏನು ಮಾಡಬೇಕು ಎಂಬುದು ISI ನ ಜವಾಬ್ದಾರಿಯಾಗಿತ್ತು. ಅವರಲ್ಲಿ ಅಮೆರಿಕಕ್ಕೆ ಯಾವುದೇ ಆಸಕ್ತಿ ಇರಲಿಲ್ಲ. ತಮ್ಮ ಬೆನ್ನ ಮೇಲಿದ್ದ ಚೀಲಗಳಲ್ಲಿ ಸೀಲ್ ಕಮಾಂಡೋಗಳು ಕೈಗೆ ಸಿಕ್ಕ ಸಾಮಾನುಗಳನ್ನು ತುಂಬಿಸಿಕೊಂಡರು. ದೊಡ್ಡ ಮಟ್ಟದ ಮಹತ್ವದ ಮಾಹಿತಿಯನ್ನು ಚೀಲಗಟ್ಟಲೇ ತುಂಬಿಕೊಂಡು ತಂದರು ಎಂದು ಅಧಿಕೃತ ಹೇಳಿಕೆಯಲ್ಲಿ ಪುಂಗಲಾಯಿತು. ಅಮೇರಿಕಾ ಮತ್ತು ಪಾಕಿಸ್ತಾನಕ್ಕೆ ಗೊತ್ತಿತ್ತು - ಅಲ್ಲಿದ್ದವ ಮೊದಲಿನ ಖತರ್ನಾಕ್ ಒಸಾಮಾ ಅಲ್ಲ. ಅವನು ಆ ಮನೆಯನ್ನು ಅಲ್ ಖೈದಾ ಕೇಂದ್ರಸ್ಥಾನವನ್ನಾಗಿ ಮಾಡಿಕೊಂಡು ಯಾವುದೇ ತರಹದ ಸ್ಕೆಚ್ ಹಾಕುತ್ತಿರಲಿಲ್ಲ. ಆದರೂ ಅವನಿಗೊಂದು ದೊಡ್ಡ ಮಟ್ಟದ ಹೆಸರಿತ್ತು. ಒಂದು ಜಾಗತಿಕ ಇಮೇಜ್ ಇತ್ತು. ಅದನ್ನೇ ಮುಂದುವರೆಸಿ, ಒಬ್ಬ ಖತರ್ನಾಕ್ ಉಗ್ರನನ್ನು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಕೊಂದು ಬಂದೆವು ಎಂದು ಪುಂಗಿ ಊದಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳಬೇಕಾಗಿತ್ತು. ಹಾಗಾಗಿ ಎಲ್ಲ ಕಥೆ ಕಟ್ಟಿದರು.
ನಿಜವಾದ ವಿಶೇಷ ಸೇನಾ ಕಾರ್ಯಾಚರಣೆಯಾಗಿದ್ದರೆ ಬೇರೆ ರೀತಿಯಲ್ಲಿ ನಡೆಯುತ್ತಿತ್ತು. ಒಂದು ವೇಳೆ ಹೆಲಿಕಾಪ್ಟರ್ ಒಂದು ಹಾಳಾಗಿ ಬಿದ್ದಿದ್ದರೆ ಬೇರೊಂದು ಹೆಲಿಕಾಪ್ಟರ್ ಬರಲು ಕಾಯುತ್ತ ನಿಲ್ಲುತ್ತಿರಲಿಲ್ಲ. ಇದ್ದ ಒಂದೇ ಹೆಲಿಕಾಪ್ಟರಿನ ಬಾಗಿಲಿಗೆ ಜೋತು ಬಿದ್ದಾದರೂ ಯೋಧರ ಇಡೀ ತಂಡ ಅತಿ ಶೀಘ್ರವಾಗಿ ವಾಪಸ್ ಬರುತ್ತಿತ್ತು. ಮತ್ತೆ ಹೆಲಿಕಾಪ್ಟರನ್ನು ಬಾಂಬಿಟ್ಟು ಸ್ಪೋಟಿಸಿ ಬರುವುದು ಅತಿ ವಿರಳವಾಗಿ. ಆದರೆ ಇದೊಂದು ನಾಟಕೀಯ ಕಾರ್ಯಾಚರಣೆ ಆಗಿತ್ತಲ್ಲ. ಎಲ್ಲ ಮೊದಲೇ ಪ್ಲಾನ್ ಆಗಿತ್ತು. ಕಾರ್ಯಾಚರಣೆ ಮುಗಿದ ಮೇಲೆ ಅಲ್ಲೇ ಅಡುಗೆ ಮಾಡಿ, ಊಟ ಮಾಡಿ, ತಾಂಬೂಲ ಜಗಿದು, ನಿದ್ದೆ ಮಾಡಿ, ಚಹಾ ಕುಡಿದು ನಂತರ ಎದ್ದು ಬಂದಿದ್ದರೂ ಜಾಸ್ತಿ ಏನೂ ವಿಭಿನ್ನವಾಗಿ ಇರುತ್ತಿದ್ದಿಲ್ಲ. ಎಲ್ಲವನ್ನೂ ಪಾಕಿ ಸೈನ್ಯ ಮತ್ತು ISI ಸಂಬಾಳಿಸಿತ್ತು. ಜನರಲ್ ಕಯಾನಿ ಮತ್ತು ಪಾಷಾ ತಾವು ಮಾತು ಕೊಟ್ಟಂತೆ ಎಲ್ಲವನ್ನೂ ಸಂಬಾಳಿಸಿ ಒಂದು ಶುದ್ಧಾನುಶುದ್ಧ ಡ್ರಾಮಾ ನಡೆದುಹೋಗಲು ಸಹಕರಿಸಿದ್ದರು.
ಇತ್ತಕಡೆ ಅಮೆರಿಕಾದ ಶ್ವೇತಭವನದಲ್ಲಿ ಚರ್ಚೆ ಶುರುವಾಯಿತು. ಕಾರ್ಯಾಚರಣೆಯಂತೂ ಯಶಸ್ವಿಯಾಗಿದೆ. ಲಾಡೆನ್ ಮೃತದೇಹವನ್ನು ಯೋಧರು ಆಫ್ಘಾನಿಸ್ತಾನಕ್ಕೆ ತರುತ್ತಿದ್ದಾರೆ. ಅಧ್ಯಕ್ಷ ಒಬಾಮಾರ ಚಿಂತಕರ ಚಾವಡಿ ಮುಂದಿದ್ದ ಪ್ರಶ್ನೆ ಒಂದೇ. ಮೊದಲು ನಿರ್ಧರಿಸಿದಂತೆ ಮತ್ತು ಪಾಕಿಸ್ಥಾನಕ್ಕೆ ಮಾತು ಕೊಟ್ಟಂತೆ ಒಂದು ವಾರ ತಡೆದು ನಂತರ ವಿಶ್ವಕ್ಕೆ ಇದರ ಬಗ್ಗೆ ತಿಳಿಸಬೇಕೇ? ಅಥವಾ ಈಗಲೇ ತಿಳಿಸಬೇಕೇ? ಅಲ್ಲಿ ಅಬೋಟಾಬಾದ್ ಕಾಂಪೌಂಡ್ ಪಕ್ಕದಲ್ಲಿ ನೆಲಕ್ಕೆ ಬಿದ್ದಿದ್ದ ಬ್ಲಾಕ್ ಹಾಕ್ ಹೆಲಿಕಾಪ್ಟರ್ ಇನ್ನೂ ಹೊತ್ತಿ ಉರಿಯುತ್ತಿತ್ತು. ಕಾರ್ಯಾಚರಣೆ ವೇಳೆ ಯಾರೂ ಇರದಂತೆ, ಕರೆಂಟ್ ಹೋಗುವಂತೆ ಎಲ್ಲ ISI ನೋಡಿಕೊಂಡಿತ್ತು. ಆದರೆ ಪಾಕಿಸ್ತಾನದಲ್ಲಿ ಮರುದಿನ ಬೆಳಗಿನ ಸೂರ್ಯ ಹುಟ್ಟುತ್ತಿದ್ದ. ಮನೆ ಬಿಟ್ಟು ಹೊರಗೆ ಬೀಳಲಿದ್ದ ಜನರ ಕಣ್ಣಿಗೆ ಎಲ್ಲ ಕಾಣಲಿತ್ತು. ಹಲವಾರು ಪ್ರಶ್ನೆಗಳು ಧುತ್ತನೆ ಎದ್ದು ಬಂದು ಎದೆಗೆ ಒದೆಯಲಿದ್ದವು. ಒಬಾಮಾರ ಸಲಹೆಗಾರರಿಗೆ ಒಂದು ವಿಷಯ ನಿಚ್ಚಳವಾಯಿತು. ಸುದ್ದಿಯನ್ನು ತಡೆದು ಹಿಡಿದಷ್ಟೂ ತೊಂದರೆ. ಸುದ್ದಿ ಕೊಳೆತಂತೆ ಕೆಟ್ಟದಾಗಿ ನಾರುತ್ತದೆ. ಹಾಗಾಗಿ ತಾಜಾ ಸುದ್ದಿಯನ್ನೇ ಹೇಳಿ ದುರ್ನಾತವನ್ನು ತಡೆಗಟ್ಟುವುದೇ ಸರಿಯಾದ ಮಾರ್ಗ.
ಎಲ್ಲರೂ ಇದಕ್ಕೆ ಒಪ್ಪಲಿಲ್ಲ. ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ಇದಕ್ಕೆ ದೊಡ್ಡ ಮಟ್ಟದ ಆಕ್ಷೇಪ ಎತ್ತಿದರು. ಅವರ ಮತ್ತು ಅಮೇರಿಕಾದ ಸೇನಾ ವ್ಯವಸ್ಥೆಯ ಮರ್ಯಾದೆಯ ಪ್ರಶ್ನೆಯಾಗಿತ್ತು. ಜನರಲ್ ಕಯಾನಿ ಮತ್ತು ಜನರಲ್ ಪಾಷಾಗೆ ಅಮೆರಿಕಾದ ಸೈನ್ಯವನ್ನು ಪ್ರತಿನಿಧಿಸುವ ಅಮೇರಿಕಾದ ಒಬ್ಬ ಸೈನಿಕನಾಗಿ ಪಾಕಿಸ್ತಾನದ ಸಹೋದರ ಸೈನಿಕರಿಬ್ಬರಿಗೆ ಮಾತು ಕೊಟ್ಟಿದ್ದರು ಗೇಟ್ಸ್. ಒಂದು ವಾರದ ನಂತರವೇ ಈ ಸುದ್ದಿಯನ್ನು ಹೊರಗೆ ಬಿಡಲಾಗುವುದು ಎಂದು ಮಾತು ಕೊಡಲಾಗಿತ್ತು. ಈಗ ಅದಕ್ಕೆ ಉಲ್ಟಾ ಹೊಡೆಯಬೇಕಾಗಿತ್ತು. ಅದೂ ಬೇರೆಯವರ ಒತ್ತಡಕ್ಕೆ ಮಣಿದು. ರಾಬರ್ಟ್ ಗೇಟ್ಸ್ ಅವರಿಗೆ ತುಂಬಾ ಇಕ್ಕಟ್ಟಿನ ಮತ್ತು ಇರುಸುಮುರಿಸಿನ ಪರಿಸ್ಥಿತಿ. ಈ ವಿಷಯವನ್ನು ರಾಬರ್ಟ್ ಗೇಟ್ಸ್ ಏನೂ ಮರೆಮಾಚಿಲ್ಲ. ತಮ್ಮ ಆತ್ಮಚರಿತೆ Duty ಎಂಬ ಪುಸ್ತಕದಲ್ಲಿ ಗೇಟ್ಸ್ ಏನು ಬರೆಯುತ್ತಾರೆ ಎಂಬುದನ್ನು ನೀವೇ ನೋಡಿ :
"ಅಧ್ಯಕ್ಷ ಒಬಾಮಾ ವಿಶ್ವವನ್ನು ಉದ್ದೇಶಿಸಿ ಮಾತಾಡಲು ಎದ್ದರು. ಅಲ್ಲಿ ನೆರೆದಿದ್ದ ಎಲ್ಲರನ್ನೂ ಉದ್ದೇಶಿಸಿ ಒಂದು ಮಾತನ್ನು ಖಡಕ್ಕಾಗಿಯೇ ಹೇಳಿದೆ - ಒಸಾಮಾ ಬಿನ್ ಲಾಡೆನ್ ಹತ್ಯೆಯ ಕಾರ್ಯಾಚರಣೆಯ ಸೂಕ್ಷ್ಮ ವಿವರಗಳನ್ನು ಯಾರೂ ಎಲ್ಲಿಯೂ ಹಂಚಿಕೊಳ್ಳಬಾರದು. ಏಕೆಂದರೆ ಸೈನ್ಯದ ವಿಶಿಷ್ಟ ಸೇನಾ ಪಡೆಗಳು ವಿಶ್ವಾದ್ಯಂತ ಆ ತರಹದ ವಿಶೇಷ ಕಾರ್ಯಾಚರಣೆಗಳನ್ನು ನಿರಂತರವಾಗಿ ಮಾಡುತ್ತಿರುತ್ತವೆ. ಹಾಗಾಗಿ ಸೂಕ್ಷ್ಮವಾದ ವಿವರಗಳನ್ನು ಸಾರ್ವಜನಿಕ ಮಾಡುವುದು ಸೂಕ್ತವಲ್ಲ ಮತ್ತು ಅದು ಸೇನೆಗೆ ಹಾನಿಕಾರಕ. ನಾವು ಒಸಾಮಾ ಬಿನ್ ಲಾಡೆನ್ನನನ್ನು ನಿರ್ನಾಮ ಮಾಡಿದೆವು. ಇಷ್ಟೇ ನಾವು ಜಗತ್ತಿಗೆ ಹೇಳಬೇಕಾಗಿದ್ದು. ಕಾರ್ಯಾಚರಣೆಯ ವಿವರಗಳನ್ನು ಗೌಪ್ಯವಾಗಿ ಇಡಲು ಅಲ್ಲಿದ್ದ ಎಲ್ಲರೂ ಒಪ್ಪಿಕೊಂಡರು. ಹಾಗೆ ಕೊಟ್ಟ ಭರವಸೆಯ ಅವಧಿ ಕೇವಲ ಐದು ಘಂಟೆಗಳು. ನಂತರ ರಹಸ್ಯ ಮಾಹಿತಿಗಳು ಅನಾಮಧೇಯ ಮೂಲಗಳಿಂದ ದೊರೆತವು ಎನ್ನುವ ಶೀರ್ಷಿಕೆಯಡಿ ಮಾಧ್ಯಮಗಳಲ್ಲಿ ಸೋರತೊಡಗಿದವು. ಹಾಗೆ ಸೋರಿಕೆ ಮಾಡಿದವರಲ್ಲಿ ಮುಖ್ಯ ಆಪಾದಿತರು ಸಿಐಎ ಮತ್ತು ಖುದ್ದು ಅಧ್ಯಕ್ಷರ ಶ್ವೇತಭವನದ ಮಾಹಿತಿ ಮೂಲಗಳು. ಎಲ್ಲರಿಗೂ ತಮ್ಮ ತಮ್ಮ ಯಶಸ್ಸನ್ನು ಕೊಚ್ಚಿಕೊಂಡು ಬೆನ್ನು ತಟ್ಟಿಕೊಳ್ಳಬೇಕಾಗಿತ್ತು. ಕ್ರೆಡಿಟ್ ಗಳಿಸಬೇಕಾಗಿತ್ತು. ಎಷ್ಟೋ ಸಲ ಬೇನಾಮಿಯಾಗಿ ಸೋರುತ್ತಿದ್ದ ವಿವರಗಳು ತಪ್ಪಾಗಿರುತ್ತಿದ್ದವು. ಆದರೂ ತುಂಬಾ ಪ್ರಚಾರ ಪಡೆಯುತ್ತಿದ್ದವು. ಸಹೋದ್ಯೋಗಿಗಳ ಇಂತಹ ಬೇಜವಾಬ್ದಾರಿ ವರ್ತನೆಗಳಿಂದ ನಾನೆಷ್ಟು ಆಕ್ರೋಶಿತನಾಗಿದ್ದೆ ಎಂದರೆ ಒಂದು ದಿವಸ ರಾಷ್ಟ್ರೀಯ ಭದ್ರತಾ ಸಲಹೆಗಾರ ಟಾಮ್ ಡಾನಿಲಾನ್ ಅವರನ್ನು ಅಟಕಾಯಿಸಿಕೊಂಡು ಕೇಳಿಯೇಬಿಟ್ಟೆ - ನಿಮಗೆಲ್ಲ ಬಾಯಿ ಮುಚ್ಚಿಕೊಂಡು ಇರಲು ಆಗುವುದಿಲ್ಲವೇ? ನಾನು ಅಬ್ಬರಿಸಿ ಕೇಳಿದ್ದು ಏನೂ ಉಪಯೋಗವಾದಂತೆ ಕಾಣಲಿಲ್ಲ."
ವಿಶ್ವವನ್ನು ಉದ್ದೇಶಿಸಿ ಅಧ್ಯಕ್ಷ ಒಬಾಮಾ ಮಾಡಲಿದ್ದ ಭಾಷಣವನ್ನು ತರಾತುರಿಯಲ್ಲಿ ತಯಾರಿಸಲಾಯಿತು. ಒಬಾಮಾ ಅವರ ಸಲಹೆಗಾರರು ಅದನ್ನು ಒಂದು ರಾಜಕೀಯ ಭಾಷಣದಂತೆ ನೋಡಿದರೇ ಹೊರತು ಆ ಪ್ರಮುಖ ಭಾಷಣದ ಕರಡುಪ್ರತಿಯನ್ನು ರಕ್ಷಣಾ ವ್ಯವಸ್ಥೆಯ ವಿಮರ್ಶೆಗೆ ಒಳಪಡಿಸಿಬೇಕು ಎನ್ನುವ ಸಾಮಾನ್ಯಜ್ಞಾನ ಕೂಡ ಅವರಿಗೆ ಬರಲಿಲ್ಲ. ಸ್ವಂತ ಹಿತಾಸಕ್ತಿಗಳನ್ನು ಮಾತ್ರ ಗಮನದಲ್ಲಿಟ್ಟುಕೊಂಡು ತಯಾರಿಸಿದ ಮತ್ತು ತಪ್ಪುತಪ್ಪು ಮಾಹಿತಿಗಳನ್ನು ಒಳಗೊಂಡ ಹೇಳಿಕೆ ಮುಂದೆ ಹೇಗೆ ತಲೆನೋವು ತಂದಿಡುತ್ತದೆ ಎಂಬುದರ ಬಗ್ಗೆ ಯಾರೂ ಯೋಚಿಸಲಿಲ್ಲ. ೨೦೧೦ ರ ಆಗಸ್ಟ್ ತಿಂಗಳಲ್ಲಿ ಅಮೆರಿಕವು ಸಂಭಾವ್ಯ ಮಾಹಿತಿದಾರನೊಬ್ಬನ ಮೂಲಕ ಒಸಾಮಾ ಬಿನ್ ಲಾಡೆನ್ ಪಾಕಿಸ್ತಾನದಲ್ಲಿ ಇದ್ದಾನೆ ಎಂದು ಪತ್ತೆ ಹಚ್ಚಿತ್ತು ಎಂದು ಒಬಾಮಾ ಹೇಳಿಕೆ ಆರಂಭಿಸಿದರು. ಇದನ್ನು ಸಮರ್ಥಿಸಿಕೊಳ್ಳಲು ಸಿಐಎ ಕವರ್ ಸ್ಟೋರಿ ಒಂದನ್ನು ತಯಾರು ಮಾಡಿತು. ಸಿಐಎನಲ್ಲಿ ಒಬಾಮನನ್ನು ಶೋಧಿಸುವುದನ್ನೇ ಉಸಿರಾಡುತ್ತಿದ್ದ ಪ್ರತಿಭಾವಂತ ವಿಶ್ಲೇಷಕರ ತಂಡವೊಂದು ಒಸಮಾನಿಗೆ ಮತ್ತು ಹೊರಜಗತ್ತಿಗೆ ಕೊಂಡಿಯಾಗಿದ್ದ ಮಾಹಿತಿದೂತನನ್ನು ಕಂಡುಹಿಡಿಯಿತು. ಅವನ ಚಲನವಲನಗಳ ಮೇಲೆ ಕಣ್ಣಿಟ್ಟು ಆ ಮೂಲಕ ಒಸಾಮಾನ ಪತ್ತೆ ಮಾಡಲಾಯಿತು ಎನ್ನುವ ವಿಸ್ತೃತ ಕವರ್ ಸ್ಟೋರಿ ಸಿಐಎ ಮೂಲಕ ಹೊರಬಿತ್ತು. ನಾಗರಿಕರಿಗೆ ಮತ್ತು ಅವರ ಆಸ್ತಿಪಾಸ್ತಿಗಳಿಗೆ ತೊಂದರೆಯಾಗದಂತೆ ಕಾರ್ಯಾಚರಣೆ ಮಾಡಿದ ಅಮೆರಿಕನ್ ಯೋಧರ ತಂಡವನ್ನು ಒಬಾಮಾ ಹೊಗಳಿದರು. ಒಂದು ಸಣ್ಣ ಗುಂಡಿನ ಚಕಮಕಿ ನಂತರ ಒಸಾಮಾ ಬಿನ್ ಲಾಡೆನ್ನನನ್ನು ಕೊಲ್ಲಲಾಯಿತು ಮತ್ತೆ ಅವನ ಶವವನ್ನು ವಶಕ್ಕೆ ಪಡೆಯಲಾಯಿತು. ಈ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳಲು ಮತ್ತೊಂದಿಷ್ಟು ತಪ್ಪು ಮಾಹಿತಿಯನ್ನು ಉತ್ಪಾದಿಸಬೇಕಾಗಿಬಂತು. ಗುಂಡಿನ ಚಕಮಕಿ ಏಕಪಕ್ಷೀಯವಾಗಿತ್ತು. ರೋಗಿಷ್ಠ ಒಸಾಮಾ ಗುಂಡು ಹಾರಿಸುವುದು ದೂರದ ಮಾತು. ಜೀವ ಉಳಿಸಿಕೊಳ್ಳಲು ತೆವಳಿಕೊಂಡು ಕೋಣೆಯೊಳಗೆ ಹೋಗುತ್ತಿದ್ದವನ ಮೇಲೆ ಗುಂಡಿನ ಮಳೆಗರೆದು ಕೊಂದಿದ್ದರು. ಶವವನ್ನು ಯೋಧರು ತಮ್ಮ ವಶಕ್ಕೆ ತೆಗೆದುಕೊಂಡರೆ ಅದಕ್ಕೆ ಏನು ಮಾಡಲಾಯಿತು? ಈಗ ಶವ ಸಂಸ್ಕಾರವನ್ನು ಕಲ್ಪಿಸಿಕೊಂಡು ಮಾಹಿತಿ ಉತ್ಪಾದಿಸಬೇಕಾಯಿತು. ಅಧ್ಯಕ್ಷ ಒಬಾಮಾ ಪಾಕಿಸ್ತಾನಿಗಳನ್ನು ಕೂಡ ಹೊಗಳಿದರು. ಅವರ ಸಹಕಾರಕ್ಕೆ ಧನ್ಯವಾದ ಅರ್ಪಿಸಿದರು. ಇದರಿಂದ ಜನರಲ್ ಕಯಾನಿ, ಜನರಲ್ ಪಾಷಾ ಮತ್ತು ಇತರೆ ಹಿರಿಯ ಅಧಿಕಾರಿಗಳ ಪಾತ್ರ ಹೊರಗೆ ಬಂದು ಅವರು ಜಿಹಾದಿಗಳಿಂದ ತೀವ್ರ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇತ್ತು. ಶ್ವೇತಭವನದ ವಕ್ತಾರರು ಇದರ ಬಗ್ಗೆ ಮುಂದೆ ಹೆಚ್ಚು ಮಾತಾಡಲೇ ಇಲ್ಲ. ಪಾಕಿಸ್ತಾನಿಗಳ ಪಾತ್ರದ ಬಗ್ಗೆ ಮಾತಾಡಲೇ ಇಲ್ಲ. ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಅಮೆರಿಕವೇ ಮೊದಲಿಂದಲೂ ಸಂಬಾಳಿಸಿಕೊಂಡು ಬಂದು ಅಂತ್ಯ ಹಾಡಿತು ಎಂದೇ ಮತ್ತೆ ಮತ್ತೆ ಹೇಳುತ್ತಾ ಉಳಿದರು. ಅಲ್ಲಿ ಸತ್ತವನು ಒಸಾಮಾನೇ ಎಂದು ಹೇಗೆ ಖಾತ್ರಿ ಮಾಡಿಕೊಂಡಿರಿ ಅಂದರೆ ಅವನ ಎತ್ತರ ಆರಡಿ ಎಂದು ನಮಗೆ ಗೊತ್ತಿತ್ತು. ಶವದ ಎತ್ತರ ಅಳೆಯಲು ಯೋಧರ ಹತ್ತಿರ ಒಂದು ಟೇಪ್ ಕೂಡ ಇರಲಿಲ್ಲ. ಸರಿಯಾಗಿ ಆರಡಿ ಎತ್ತರವಿದ್ದ ಸೀಲ್ ಯೋಧನೊಬ್ಬನನ್ನು ಶವದ ಪಕ್ಕ ಮಲಗಿಸಿದೆವು. ಶವದ ಎತ್ತರ ಅಷ್ಟೇ ಇತ್ತು. ಹಾಗಾಗಿ ಅವನೇ ಒಸಾಮಾ ಎಂದು ನಿರ್ಧರಿಸಿದೆವು. ನಂತರ ಅಫಘಾನಿಸ್ತಾನದ ಸೇನಾ ನೆಲೆಗೆ ಬಂದು ಡಿಎನ್ಎ ಪರೀಕ್ಷೆ ಮಾಡಿ ಮತ್ತೆ ಖಾತ್ರಿ ಮಾಡಿಕೊಂಡೆವು. ಇದನ್ನು ತುಂಬಾ ವರ್ಣರಂಜಿತವಾಗಿ ಹೇಳಿ ಮೊಳೆ ಹೊಡೆದಿದ್ದೇ ಹೊಡೆದಿದ್ದು. ನಿಜ ಹೇಳಬೇಕೆಂದರೆ ಕೊನೆಯವರೆಗೂ ಸೀಲ್ ಯೋಧರಿಗೆ ಸತ್ತವನು ಯಾರು ಎನ್ನುವುದರ ಬಗ್ಗೆ ಜಾಸ್ತಿ ಖಾತ್ರಿಯೇನೂ ಇರಲಿಲ್ಲ.
ಇಡೀ ಜಗತ್ತನ್ನು ಉದ್ದೇಶಿಸಿ ಒಬಾಮಾ ಮಾಡಲಿದ್ದ ಭಾಷಣದ ಬಗ್ಗೆ ಆಕ್ಷೇಪ ಹೊಂದಿದ್ದವರು ಕೇವಲ ರಕ್ಷಣಾ ಕಾರ್ಯದರ್ಶಿ ಗೇಟ್ಸ್ ಮಾತ್ರ ಆಗಿರಲಿಲ್ಲ. ಎಲ್ಲ ವಿಭಾಗಗಳಿಂದ ಹೇಳಿಕೆಯನ್ನು ತಪಾಸಣೆ ಮಾಡಿಸಿ, ತಿದ್ದಿಸಿ, ಎಲ್ಲರೂ ಓಕೆ ಕೊಟ್ಟ ಮೇಲೆಯೇ ಜಗತ್ತಿಗೆ ಬಹಿರಂಗ ಹೇಳಿಕೆ ಕೊಡಬೇಕು ಎಂಬುದು ಅನೇಕ ಹಿರಿಯ ಅಧಿಕಾರಿಗಳ ಇಚ್ಛೆ ಆಗಿತ್ತು. ಆದರೆ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದು ಮಾತ್ರ ಗೇಟ್ಸ್. ಕಾರ್ಯಾಚರಣೆ ಮುಗಿದು ಒಂದು ವಾರದ ನಂತರವೇ ಬಹಿರಂಗ ಹೇಳಿಕೆ ಕೊಡುವುದು ಎಂದು ಪಾಕಿಸ್ತಾನದ ಜೊತೆ ಮಾಡಿಕೊಂಡಿದ್ದ ಒಪ್ಪಂದವಾಗಿತ್ತು. ಆಕಸ್ಮಾತ ಕಾರ್ಯಾಚರಣೆ ಯೋಜನೆ ಮಾಡಿದಂತೆ ಆಗದೇ ಬೇರೆಯೇ ರೀತಿಯಲ್ಲಿ ಆಗಿಹೋದರೆ ಹೇಗೆ ಸಂಬಾಳಿಸುವುದು ಎನ್ನುವುದರ ಬಗ್ಗೆ ಚರ್ಚೆ ಆಗಿರಲಿಲ್ಲ. ಒಂದು ಬ್ಲಾಕ್ ಹಾಕ್ ಹೆಲಿಕಾಪ್ಟರ್ ಬಿದ್ದು, ಅದನ್ನು ಸ್ಪೋಟಿಸಿ ನಾಶಪಡಿಸಿ ಬಂದಿದ್ದ ಕಾರಣದಿಂದ ಮತ್ತು ಇನ್ನೂ ಧಗಧಗ ಉರಿಯುತ್ತಿದ್ದ ಹೆಲಿಕಾಪ್ಟರನ್ನು ಮುಚ್ಚಿಡಲು ಸಾಧ್ಯವಿಲ್ಲದ್ದರಿಂದ ಈಗ ತುರ್ತಾಗಿ ಬೇರೆ ಕಥೆ ಸೃಷ್ಟಿಸಿ ಜಗತ್ತಿನ ಮುಂದಿಟ್ಟು ತಲೆಗೆ ಎಣ್ಣೆ ತಟ್ಟಿ ನಂಬಿಸುವ ಅನಿವಾರ್ಯತೆ ಬಂದಿತ್ತು. ಪಾಕಿಸ್ತಾನದ ನಿಜವಾದ ಪಾತ್ರವನ್ನು ಮತ್ತು ISI ನ ಮಾಜಿ ಅಧಿಕಾರಿಯೊಬ್ಬ ಬಹುಮಾನದ ಆಸೆಯಿಂದ ಮಾಹಿತಿ ಕೊಟ್ಟ ಎನ್ನುವ ರಹಸ್ಯವನ್ನು ಮಾತ್ರ ಮುಚ್ಚಿಡಲೇಬೇಕಾಗಿತ್ತು.
ಒಬಾಮಾ ಏನೋ ವಿಶ್ವದ ಮುಂದೆ ತಮ್ಮ ಹೇಳಿಕೆ ಕೊಟ್ಟು ಹೋಗಿಬಿಟ್ಟರು. ನಂತರದ ಪ್ರಶ್ನೆಗಳನ್ನು ಸಂಭಾಳಿಸುವುದರ ಜವಾಬ್ದಾರಿ ಶ್ವೇತಭವನದ ಮಾಧ್ಯಮ ತಂಡದ ಮೇಲೆ ಬಿತ್ತು. ಅವರ ಅನುಕೂಲಕ್ಕಾಗಿಯೇ ಒಂದು ಕಥೆ ಹೆಣೆಯಲಾಯಿತು. ನಮ್ಮ ಬೇಹುಗಾರಿಕೆ ಸಂಸ್ಥೆಗಳು ತುಂಬಾ ವರ್ಷಗಳಿಂದ ಒಸಾಮಾ ಬಿನ್ ಲಾಡೆನ್ನ ಜೊತೆ ಸಂಬಂಧ ಹೊಂದಿರಬಹುದು ಎನ್ನುವ ಸಂಶಯ ಬಂದ ಎಲ್ಲ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣು ಇಟ್ಟಿದ್ದವು. ಒಸಾಮಾನಿಗೆ ಹೊರ ಜಗತ್ತಿನ ಮಾಹಿತಿ ಮುಟ್ಟಿಸಿ, ವಾಪಸ್ ಬರುವಾಗ ಆತನ ನಿರ್ದೇಶಗಳನ್ನು ಹೊತ್ತು ತರುತ್ತಿದ್ದ ದೂತರ ತಂಡದ ಚಟುವಟಿಕೆಗಳನ್ನು ವಿಶ್ಲೇಷಿಸಿ, ಒಸಾಮಾನ ಖಾಸಮ್ ಖಾಸ್ ದೂತನವರೆಗೆ ತಲುಪಿ, ಅವನನ್ನು ಬಹುದಿನಗಳ ಕಾಲ ಟ್ರ್ಯಾಕ್ ಮಾಡಲಾಯಿತು. ಒಮ್ಮೆ ಒಸಾಮಾನ ಅಬೋಟಾಬಾದ್ ಕಾಂಪೌಂಡಿನ ವಿವರ ಸಿಕ್ಕ ಮೇಲೆ ಬೇರೆ ಬೇರೆ ತರಹದ ಆಧುನಿಕ ತಂತ್ರಜ್ಞಾನ ಉಪಯೋಗಿಸಿ ಮಾಹಿತಿ ಸಂಗ್ರಹಿಸಿ, ವಿಶ್ಲೇಷಣೆ ಮಾಡಿ, ಲಭ್ಯವಿದ್ದ ಮಾಹಿತಿಗಳನ್ನೆಲ್ಲ ಕ್ರೋಢೀಕರಿಸಿ, ಅಲ್ಲಿದ್ದ ಎತ್ತರವಾಗಿದ್ದ ವ್ಯಕ್ತಿ ಒಸಾಮಾ ಬಿನ್ ಲಾಡೆನ್ ಆಗಿರುವ ಸಾಧ್ಯತೆ ತುಂಬಾ ಹೆಚ್ಚು ಎನ್ನುವ ತೀರ್ಮಾನಕ್ಕೆ ಬಂದಾಯಿತು. ಅಂತಹ ತೀರ್ಮಾನಕ್ಕೆ ಬಂದ ನಂತರ ತೆಗೆದುಕೊಳ್ಳಬಹುದಾದ ಅಪಾಯವನ್ನು(calculated risk) ತೆಗೆದುಕೊಂಡು ಒಂದು ತುಂಬಾ ಕಠಿಣವಾದ ವಿಶೇಷ ಸೇನಾಪಡೆಗಳ ಕಾರ್ಯಾಚರಣೆಯನ್ನು ಮಾಡಲಾಯಿತು. ಒಸಾಮಾ ಮತ್ತು ಅವನ ಇಬ್ಬರು ಸಹಚರರು ಸಾಕಷ್ಟು ಪ್ರತಿರೋಧ ಒಡ್ಡಿದರು. ಅವೆಲ್ಲವನ್ನೂ ಮೆಟ್ಟಿ ನಿಂತ ನಮ್ಮ ಯೋಧರು ಪ್ರಾಣದ ಹಂಗು ತೊರೆದು ಒಸಾಮಾ ಬಿನ್ ಲಾಡೆನ್ ಮತ್ತು ಅವನ ಸಹಚರರನ್ನು ಕೊಂದು ಮುಗಿಸಿದರು. ಈ ಕಾಗಕ್ಕ ಗುಬ್ಬಕ್ಕ ಕಥೆಯನ್ನು ಮತ್ತಿಷ್ಟು ಮಸಾಲೆ ಸೇರಿಸಿ ಎಲ್ಲ ಕಡೆ ಹೇಳಿಕೊಂಡು ಬರುವುದೇ ಸರ್ಕಾರಿ ಮಾಧ್ಯಮ ತಂಡಗಳ ಕೆಲಸವಾಯಿತು.
ಒಬಾಮಾ ಜಗತ್ತಿಗೆ ಹೇಳಿಕೆ ಕೊಟ್ಟು ಹೋದ ಮರುದಿನ ಅವರ ಕೌಂಟರ್ ಟೆರರಿಸಂ ಪಡೆಯ ಮುಖ್ಯಸ್ಥ ಜಾನ್ ಬ್ರೆನ್ನನ್ ಕಾಗಕ್ಕ ಗುಬ್ಬಕ್ಕ ಕಥೆ ಮುಂದುವರೆಸಿದರು. ಕಾರ್ಯಾಚರಣೆಯನ್ನು ಸಮರ್ಥಿಸಿಕೊಳ್ಳುತ್ತ ಒಬಾಮಾ ಮತ್ತು ಅವರ ಕಾರ್ಯವೈಖರಿಯನ್ನು ಹೊಗಳಿ ಒಬಾಮಾರ ರಾಜಕೀಯ ಷೇರು ಬೆಲೆ ಏರುವಂತೆ ಕೂಡ ಮಾಡಬೇಕಾಗಿತ್ತು. ಜಾನ್ ಬ್ರೆನ್ನನ್ ಸಾಮಾನ್ಯವಾಗಿ ಅಧಿಕೃತ ಹೇಳಿಕೆ ಕೊಡುತ್ತಿರಲಿಲ್ಲ. ಆದರೆ ಈ ಬಾರಿ ಅಧಿಕೃತ ಹೇಳಿಕೆ ಕೊಟ್ಟುಬಿಟ್ಟರು. ಮಹದಾಶ್ಚರ್ಯ. ಒಸಾಮಾ ಬಿನ್ ಲಾಡೆನನ್ನು ಜೀವಂತವಾಗಿ ಹಿಡಿಯುವುದು ಮೂಲ ಉದ್ದೇಶವಾಗಿತ್ತು ಎಂದರು. ಪಾಕಿಸ್ತಾನಕ್ಕೆ ಈ ಕಾರ್ಯಾಚರಣೆ ಬಗ್ಗೆ ಯಾವುದೇ ತರಹದ ಮಾಹಿತಿ ಇರಲೇ ಇಲ್ಲ ಎಂದರು. ಕಾರ್ಯಾಚರಣೆ ಪೂರ್ತಿ ಮುಗಿದು, ಎಲ್ಲ ಅಮೆರಿಕನ್ನರು ಅಮೆರಿಕಾದ ಗಡಿ ದಾಟಿ ಬರುವವರೆಗೆ ನಾವು ಪಾಕಿಸ್ತಾನಿಗಳನ್ನು ಸಂಪರ್ಕಿಸಲೇ ಇಲ್ಲ. ಕಾರ್ಯಾಚರಣೆಯ ಮೊದಲು ಆ ಕಾಂಪೌಂಡಿನಲ್ಲಿ ಒಸಾಮಾ ಇರಬಹುದು ಎಂಬ ಸಾಧ್ಯತೆ ನಿಚ್ಚಳವಾಗಿತ್ತೇ ಹೊರತು ಖಾತ್ರಿಯಾಗಿರಲಿಲ್ಲ. ಅಪೂರ್ಣ ಮಾಹಿತಿಯಿದ್ದರೂ, ಅತ್ಯಂತ ಧೈರ್ಯದಿಂದ ಮತ್ತು ತಮ್ಮ ಅಧ್ಯಕ್ಷ ಪದವಿ ಮತ್ತು ರಾಜಕೀಯ ಭವಿಷ್ಯವನ್ನೇ ಪಣಕ್ಕಿಟ್ಟು ಒಬಾಮಾ ತಮ್ಮ ಜೀವನದ ಅತಿ ಮಹತ್ವದ ಮತ್ತು ಅತ್ಯಂತ ಅಪಾಯಕರ ನಿರ್ಧಾರ ಕೈಗೊಂಡಿದ್ದರು ಎಂದೆಲ್ಲ ಹೇಳಿ ಒಬಾಮರನ್ನು ಅಟ್ಟಕ್ಕೇರಿಸಿಬಿಟ್ಟರು. ಕಾರ್ಯಾಚರಣೆಯಲ್ಲಿ ಹತರಾದ ಉಗ್ರರ ಸಂಖ್ಯೆಯನ್ನು ಐದಕ್ಕೆ ಏರಿಸಿದ ಶ್ರೇಯ ಬ್ರೆನ್ನನ್ ಅವರಿಗೆ ಸಲ್ಲಬೇಕು. ಒಸಾಮಾ, ಅವನ ಪ್ರಮುಖ ದೂತ, ದೂತನ ಸಹೋದರ, ಒಸಮಾನ ಮಗನೊಬ್ಬ ಮತ್ತು ಒಸಮಾನನ್ನು ರಕ್ಷಿಸಲು ಅಡ್ಡ ಬಂದ ಮಹಿಳೆ, ಇಷ್ಟು ಜನ ಸತ್ತರು ಎಂದು ತಮ್ಮಅತಿ ವಿರಳ ಅಧಿಕೃತ ಪತ್ರಿಕಾ ಸಂದರ್ಶನವನ್ನು ಮುಗಿಸಿದರು ಬ್ರೆನ್ನನ್.
ಸೀಲ್ ಕಮಾಂಡೋಗಳೊಂದಿಗೆ ಒಸಾಮಾ ಕಾದಾಟಕ್ಕೆ ಇಳಿದಿದ್ದನೇ ಎಂಬ ಪತ್ರಕರ್ತರ ಪ್ರಶ್ನೆಗೆ ಬ್ರೆನ್ನನ್, ಆಗ ಸರ್ಕಾರದ ನಿತ್ಯದ ಮಂತ್ರದಂತಾಗಿಹೋಗಿದ್ದ ಹೇಳಿಕೆಯನ್ನೇ ಪುನರುಚ್ಛಿಸಿದರು. "ನಮ್ಮ ಸೈನಿಕರ ವಿರುದ್ಧ ಆತ ಬಂದೂಕು ಎತ್ತಿಕೊಂಡಿದ್ದು ಸತ್ಯ. ಆದರೆ ಒಸಾಮಾ ಗುಂಡು ಹಾರಿಸುವಲ್ಲಿ ಯಶಸ್ವಿಯಾದನೋ ಇಲ್ಲವೋ ಗೊತ್ತಿಲ್ಲ. ವಿಪರ್ಯಾಸ ಎಂದರೆ ಇದೇ ಇರಬೇಕು. ವಿಶ್ವದಲ್ಲಿ ಎಲ್ಲೆಂದರಲ್ಲಿ ಬೇಕುಬೇಕಾದ ಹಾಗೆ ಭಯೋತ್ಪಾದನೆ ಮಾಡಿಸುತ್ತಿದ್ದ ಒಸಾಮಾ ಎಲ್ಲೋ ಮೂಲೆಯಲ್ಲಿಅಡಗಿ ನೆಲೆಸಿದ್ದ. ಹೆಂಗಸರು ಮತ್ತು ಮಕ್ಕಳನ್ನು ತನ್ನ ರಕ್ಷಣೆಗೆ ಗುರಾಣಿಯಂತೆ ಬಳಸಿಕೊಳ್ಳಲು ನೋಡಿದ. ಇದು ಆ ಮನುಷ್ಯನ ವಿಚಿತ್ರ ಚಾರಿತ್ರ್ಯವನ್ನು ತೋರಿಸುತ್ತದೆ. ಅಲ್ಲವೇ?" ಎಂದುಬಿಟ್ಟರು ಬ್ರೆನ್ನನ್.
ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ಮತ್ತೊಂದು ವಿಷಯದ ಬಗ್ಗೆ ಬೇಸರಗೊಂಡಿದ್ದರು. ಕೌಂಟರ್ ಟೆರರಿಸಿಮ್ ಮುಖ್ಯಸ್ಥ ಜಾನ್ ಬ್ರೆನ್ನನ್ ಮತ್ತು ಸಿಐಎ ನಿರ್ದೇಶಕ ಲಿಯಾನ್ ಪೆನೆಟ್ಟಾ ಮತ್ತೊಂದು ಸುದ್ದಿ ಹರಿಬಿಟ್ಟಿದ್ದರು. ಈ ಮೊದಲು ವಿಶ್ವದ ಬೇರೆ ಬೇರೆ ಕಡೆಯಿಂದ ಎತ್ತಾಕಿಕೊಂಡು ಬಂದಿದ್ದ ಶಂಕಿತ ಅಲ್ ಖೈದಾ ಉಗ್ರರ ಮೇಲೆ ವಾಟರಬೋರ್ಡಿಂಗ್ (waterboarding) ನಂತಹ ನಿಷೇಧಿತ ಚಿತ್ರಹಿಂಸೆ ತಕ್ನೀಕುಗಳನ್ನು ಉಪಯೋಗಿಸಿ ಅವರಿಂದ ಒಸಾಮಾ ಬಗ್ಗೆ ಮಾಹಿತಿ ಪಡೆಯಲಾಯಿತು ಎಂದು. ನಿಷೇಧಿತ ವಾಟರಬೋರ್ಡಿಂಗ್ ತಕ್ನೀಕನ್ನು ಬಂಧಿಗಳ ಮೇಲೆ ಉಪಯೋಗಿಸಿದ್ದಾರೆ ಎಂಬ ಆಪಾದನೆಯನ್ನುಆಧಾರಿಸಿ ಸೈನ್ಯದ ಮತ್ತು ಸಿಐಎನ ಕೆಲವು ತನಿಖಾ ಸಿಬ್ಬಂದಿಯನ್ನು ಏಕೆ ಶಿಕ್ಷೆಗೆ ಗುರಿಪಡಿಸಬಾರದು ಎಂದು ನ್ಯಾಯಾಲಯ ಕೇಳಿತ್ತು. ಅದಕ್ಕೆ ಸಮರ್ಪಕ ಉತ್ತರ ಕೊಡಲು ಸರ್ಕಾರದ ಒಂದು ವಿಭಾಗ ತಿಣುಕಾಡುತ್ತಿದ್ದರೆ ಮತ್ತೊಂದು ವಿಭಾಗ ಅದೇ ನಿಷೇಧಿತ ಚಿತ್ರಹಿಂಸೆ ತಕ್ನೀಕ್ ಉಪಯೋಗಿಸಿ ಮಾಹಿತಿ ಪಡೆದವು ಎನ್ನುತ್ತಿತ್ತು. ಇದಕ್ಕೆಲ್ಲ ಕಾರಣ ಸಿಐಎನ ಕೆಲವು ನಿವೃತ್ತ ಅಧಿಕಾರಿಗಳು. ಎಲ್ಲರೂ ತುಂಬಾ ಬ್ಯುಸಿ ಇದ್ದರು. ಕಾರ್ಯಾಚರಣೆಯ ಸ್ವರೂಪ ಬದಲಾಗಿದ್ದರಿಂದ ಬೇರೆಯೇ ಆದ ಕವರ್ ಸ್ಟೋರಿ ಸೃಷ್ಟಿಸಬೇಕಾಗಿತ್ತು. ಈ ಕೆಲಸಕ್ಕೆ ನಿವೃತ್ತ ಸಿಐಎ ಅಧಿಕಾರಿಗಳಿಗಿಂತ ಒಳ್ಳೆ ಜನರು ಸಿಕ್ಕಾರೆಯೇ? ಅವರಿಗೆ ಹೇಗೂ ಮೊದಲಿನ ಮಾಹಿತಿ ಇತ್ತು. ಎಷ್ಟೋ ಜನ ತಮ್ಮ ವೃತ್ತಿಯ ಹೆಚ್ಚಿನ ಭಾಗವನ್ನು ಒಸಾಮಾ ಬಿನ್ ಲಾಡೆನನನ್ನು ಹುಡುಕುವ ಕೆಲಸದಲ್ಲೇ ಕಳೆದಿದ್ದರು. ಅಂತವರು ನಿವೃತ್ತಿ ಬಳಿಕ ಗುತ್ತಿಗೆ ಮೇಲೆ ಸಿಐಎಗೆ ಮರಳಿದ್ದರು. ಅವರು ತಮ್ಮ ಅನುಭವಗಳನ್ನು ಉಪಯೋಗಿಸಿಕೊಂಡು ಪೂರಕ ಕಥಾನಕ ಹೆಣೆದರು. ಹಾಗಾಗಿ ಚಿತ್ರವಿಚಿತ್ರ ಮಾಹಿತಿಯೆಲ್ಲ ಹೇಳಿಕೆಯಲ್ಲಿ ಸೇರಿಸಲ್ಪಟ್ಟಿತು.
ರಕ್ಷಣಾ ಕಾರ್ಯದರ್ಶಿ ಗೇಟ್ಸ್ ಮಾತ್ರ ಇದೆಲ್ಲದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆದರೆ ಎಲ್ಲ ವಿಭಾಗಗಳ ಮೇಲೆ ಒತ್ತಡ ಹಾಕಿ ಎಲ್ಲರೂ ಈ ಕಾಲ್ಪನಿಕ ಕವರ್ ಸ್ಟೋರಿಗೆ ಬೆಂಬಲ ಕೊಡುವಂತೆ ಮಾಡಲಾಯಿತು. ಅಧ್ಯಕ್ಷ ಒಬಾಮಾ ವಿವರವಾದ ಬಹಿರಂಗ ಹೇಳಿಕೆ ಕೊಡುತ್ತಾರೆ ಎಂದು ಕಾರ್ಯಾಚರಣೆ ಮಾಡಿದ ಸೀಲ್ ತಂಡ ಕನಸು ಮನಸ್ಸಿನಲ್ಲೂ ಯೋಚಿಸಿರಲಿಲ್ಲ. ಸೀಲ್ ತಂಡ ಮತ್ತು ಅವರ ಜಾಯಿಂಟ್ ಕಾರ್ಯಾಚರಣೆಯ ವಿಭಾಗ ಸರ್ಕಾರದ ಬಾಬುಗಳ ನಿಲುವಿನಿಂದ ತುಂಬಾ ಆಕ್ರೋಶಗೊಂಡಿತ್ತು. ಅವರಿಗೆ ಇದ್ದ ಅತಿ ದೊಡ್ಡ ಚಿಂತೆಯೆಂದರೆ ಕಾರ್ಯಾಚರಣೆಯ ವಿವರಗಳು ಹೆಚ್ಚು ಹೆಚ್ಚು ಲೀಕ್ ಆಗ ತೊಡಗಿದರೆ ಸರ್ಕಾರಿ ಬಾಬುಗಳು ಅದನ್ನೆಲ್ಲ ಸೀಲ್ ತಂಡ ಮತ್ತು ಸೈನ್ಯದ ಮೇಲೆ ಹಾಕಿ ಕೈ ಒರೆಸಿಕೊಂಡು ಪರಾರಿಯಾಗುತ್ತಾರೆ ಎಂದು.
ಇದಕ್ಕೆಲ್ಲ ಆಡಳಿತ ಕಂಡುಕೊಂಡ ಪರಿಹಾರವೆಂದರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ್ದಿದ್ದ ಎಲ್ಲರನ್ನೂ ಅಧಿಕೃತ ಮೌನಕ್ಕೆ ದೂಡುವುದು. ಶ್ವೇತಭವನದ ಕಾನೂನು ವಿಭಾಗ ಒಂದು ಕರಾರನ್ನು ಸಿದ್ಧಪಡಿಸಿತು. ಕಾರ್ಯಾಚರಣೆಯ ಯಾವುದೇ ಮಾಹಿತಿಯನ್ನು ಸೋರಿಕೆ ಮಾಡುವುದಿಲ್ಲ. ಮಾಡಿದ್ದು ತನಿಖೆಯಲ್ಲಿ ಸಾಬೀತಾದರೆ ಅಂತಹವರ ಮೇಲೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಕರಾರುಪತ್ರಕ್ಕೆ ಮೇಲಿಂದ ಕೆಳಗಿನವರೆಗೆ ಎಲ್ಲರೂ ಸಹಿ ಹಾಕಿದರು. ಇಂತಹ ಕ್ರಮಗಳು ವಿರಳ. ಇಂತಹ ಕ್ರಮಗಳು ಯೋಧರ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತವೆ. ದೇಶಕ್ಕೆ ಪ್ರಾಣ ಕೊಡಲು ಸಿದ್ಧವಿರುವ ಸೈನಿಕರನ್ನು ಹೀಗೆ ನಡೆಸಿಕೊಳ್ಳಬಾರದು ಎಂಬುದು ಸಾಮಾನ್ಯ ಜ್ಞಾನ. ಆದರೆ ಬೆಕ್ಕು ಬುಟ್ಟಿಯಿಂದ ಹೊರಬಿದ್ದು ಓಡಿತ್ತು. ಹಾಗಾಗಿ ರಾಡಿಯನ್ನು ಸ್ವಚ್ಛ ಮಾಡುವ ಕ್ರಿಯೆಯ ಭಾಗವೆಂಬಂತೆ ಇಂತಹ ಅಸಡ್ಡಾಳು ಕರಾರು ಪತ್ರ ತಯಾರಾಯಿತು. ಎಲ್ಲರೂ ಅದಕ್ಕೆ ಸಹಿ ಕೂಡ ಮಾಡಿದರು. ಕ್ರೋಧಿತರಾಗಿದ್ದ ವಿಶೇಷ ಕಾರ್ಯಾಚರಣೆಗಳ ಜಂಟಿ ವಿಭಾಗದ ಮುಖ್ಯಸ್ಥ ಬಿಲ್ ಮ್ಯಾಕ್ರಾವನ್ ತಮ್ಮನ್ನು ತಾವೇ ಸಂತೈಸಿಕೊಂಡರು. ಪಕ್ಕಾ ವೃತ್ತಿಪರ ಸೈನಿಕರಾಗಿದ್ದ ಅವರು ಆಡಳಿತದ ವಿರುದ್ಧ ತೊಡೆ ತಟ್ಟಿ ನಿಲ್ಲಲಿಲ್ಲ. ಏಕೆಂದರೆ ಅವರು ಮತ್ತು ಇತರರು ಶಿಸ್ತಿನ ಸೈನಿಕರೇ ಹೊರತೂ ರಾಜಕಾರಣಿಗಳಲ್ಲ. ರಾಷ್ಟ್ರದ ಮಾನ ಕಾಪಾಡಿಕೊಳ್ಳಲಾದರೂ ಕಪೋಲಕಲ್ಪಿತ ಕಥೆಯನ್ನು ಎಲ್ಲರೂ ಬೆಂಬಲಿಸಲೇಬೇಕಾಗಿತ್ತು. ಕರ್ತ್ಯವ್ಯ ಎಂಬಂತೆ ಅದನ್ನು ಮಾಡಿದರು.
ಮುಂದೆ ಕೆಲವೇ ದಿವಸಗಳಲ್ಲಿ ಮೊದಲು ಕೊಟ್ಟ ಬಹಿರಂಗ ಹೇಳಿಕೆಯಲ್ಲಿನ ಉತ್ಪ್ರೇಕ್ಷೆಗಳು ಮತ್ತು ಅಸ್ಪಷ್ಟತೆಗಳು ಎದ್ದು ಕಾಣತೊಡಗಿದವು. ಜನರು ಬಕ್ರಾ ಅಲ್ಲ ನೋಡಿ. ಪೆಂಟಾಗಾನ್ (ರಕ್ಷಣಾ ಇಲಾಖೆಯ ಕೇಂದ್ರಸ್ಥಾನ) ಒಂದಾದ ಮೇಲೊಂದು ಸ್ಪಷ್ಟೀಕರಣಗಳನ್ನು ಕೊಡತೊಡಗಿತು. ಯೋಧರ ಗುಂಡಿಗೆ ಬಲಿಯಾದಾಗ ಒಸಾಮಾ ಬಿನ್ ಲಾಡೆನ್ ಕೈಯಲ್ಲಿ ಯಾವುದೇ ಬಂದೂಕು ಇರಲಿಲ್ಲ. ಆತ ಪತ್ನಿಯೊಬ್ಬಳನ್ನು ಗುರಾಣಿಯಂತೆ ಬಳಸಿಕೊಂಡು ಸ್ವಂತ ರಕ್ಷಣೆ ಮಾಡಿಕೊಳ್ಳಲು ಯತ್ನಿಸಲಿಲ್ಲ. ಹಾಂ!!??ಇದೇನು ಹೀಗೆ?? ಎಂದು ತಲೆಯಾಡಿಸುತ್ತಲೇ ಪತ್ರಕರ್ತರು ಸ್ಪಷ್ಟೀಕರಣಗಳನ್ನು ಪ್ರಸಾದದಂತೆ ಸ್ವೀಕರಿಸಿದರು. ಮೊದಲಿನ ಉತ್ಪ್ರೇಕ್ಷೆಗಳಿಗೆ ಪತ್ರಕರ್ತರೂ ಕಾರಣರಾಗಿದ್ದರಲ್ಲ. ಬ್ರೇಕಿಂಗ್ ನ್ಯೂಸ್ ಮಾಡುವ ಆತುರದಲ್ಲಿ ಮಾಹಿತಿಗಾಗಿ ಅಧಿಕಾರಿಗಳನ್ನು ಇನ್ನಿಲ್ಲದಂತೆ ಕಾಡಿದ್ದರು. ಇದ್ದ ಇಲ್ಲದ ಮಾಹಿತಿ ಕೊಟ್ಟು ಸುದ್ದಿಯಾಗಲು ನೆರವಾಗಿ ಎಂದು ಮಾಧ್ಯಮ ಪಿರಿಪಿರಿ ಮಾಡಿದ್ದೂ ಸಹ ಕಾರಣವಾಗಿತ್ತು ಆಡಳಿತ ಬುರುಡೆ ಬಿಡಲು.
ಅನೇಕ ಸುಳ್ಳುಗಳು ಬೇಗ ಕಾಣೆಯಾದರೂ ಒಂದು ಮಾತ್ರ ಇಂದಿಗೂ ಬದುಕುಳಿದುಕೊಂಡು ಬಂದಿದೆ. ತಮ್ಮ ಗಮ್ಯ ಮುಟ್ಟಲು ಸೀಲ್ ಯೋಧರು ಹೋರಾಡುತ್ತ ಅಡೆತಡೆಗಳನ್ನು ನಿವಾರಿಸುತ್ತ ಹೋಗಬೇಕಾಯಿತು ಎಂಬುದೇ ಇಂದಿಗೂ ಉಳಿದುಕೊಂಡಿರುವ ಮೂಲ ಸುಳ್ಳು. ಇಬ್ಬರೇ ಇಬ್ಬರು ಸೀಲ್ ಕಮಾಂಡೋಗಳು ಬಹಿರಂಗವಾಗಿ ಆ ಕಾರ್ಯಾಚರಣೆ ಬಗ್ಗೆ ಮಾತಾಡಿದ್ದಾರೆ. ಒಬ್ಬರು ಮ್ಯಾಟ್ ಬಿಸೊನೆಟ್. No Easy Day ಎಂಬ ಪುಸ್ತಕವನ್ನು ತಮ್ಮ ಸ್ವಾನುಭವದ ಮೇಲೆ ಆಧಾರಿಸಿ ಬರೆದರು. ಅದು ೨೦೧೨ ರಲ್ಲಿ ಪ್ರಕಟವಾಯಿತು. ಎರಡು ವರ್ಷಗಳ ಬಳಿಕ ರಾಬ್ ಓನೀಲ್ ಎಂಬ ಮತ್ತೊಬ್ಬ ಸೀಲ್ ಕಮಾಂಡೋ ಫಾಕ್ಸ್ ಟೀವಿಗೆ ಸವಿಸ್ತಾರವಾದ ಸಂದರ್ಶನ ಕೊಟ್ಟರು. ಅವರಿಬ್ಬರು ಹಂಚಿಕೊಂಡ ಮಾಹಿತಿಯಲ್ಲಿ ಅನೇಕ ವಿರೋಧಾಭಾಸಗಳು (contradictions ) ಕಂಡುಬಂದವು. ಆದರೆ ಇಬ್ಬರ ಹೇಳಿಕೆಗಳೂ ಸಾಮಾನ್ಯವಾಗಿ ಶ್ವೇತಭವನದ ಹೇಳಿಕೆಗಳನ್ನು ಸಮರ್ಥಿಸಿವಂತೆ ಇದ್ದವು. ಅನೇಕ ಅಡೆತಡೆಗಳನ್ನು ನಿವಾರಿಸಿಕೊಂಡು, ಅಡ್ಡ ಬಂದ ಒಸಾಮಾನ ಜನರನ್ನು ಸಂಹರಿಸುತ್ತ ಗುರಿ ಮುಟ್ಟಬೇಕಾಯಿತು ಎಂದೇ ಇಬ್ಬರೂ ಹೇಳಿದ್ದರು. ಅದೊಂದು ಸಾಯಿಸು ಅಥವಾ ಖುದ್ದು ಸಾಯಿ (kill or get killed) ತರಹದ ಕಾರ್ಯಾಚರಣೆಯಾಗಿತ್ತು. ಅದಕ್ಕೆ ಅಭ್ಯಾಸ ಮಾಡುತ್ತಿರುವಾಗ ಅನೇಕ ಸಲ ನಮಗೆ ಹಾಗೆ ಅನ್ನಿಸಿತ್ತು. ಜೀವಂತವಾಗಿ ವಾಪಸ್ ಬರುವುದರ ಬಗ್ಗೆ ನಮಗೇ ಸಂಶಯವಿತ್ತು ಎಂದು ಕಥೆ ಕುಟ್ಟಿದ್ದರು. ಅಂತಹ ರೋಚಕ ಕಥೆಯನ್ನೇ ತಾನೇ ಪಬ್ಲಿಕ್ ಆಯ್ದುಕೊಂಡು ರುಚಿರುಚಿಯಾಗಿ ಆಸ್ವಾದಿಸುವುದು!?
ಸೀಲ್ ಯೋಧರು ಹಿಂತಿರುಗಿ ಬಂದ ತಕ್ಷಣ, ಸೈನ್ಯದ ಪದ್ಧತಿಯಂತೆ, ಪ್ರತಿಯೊಬ್ಬರಿಂದ ಅವರವರ ನೆನಪುಗಳನ್ನು ಕೇಳಿ, ವಿವರವಾಗಿ ದಾಖಲಿಸಿಕೊಳ್ಳುತ್ತಾರೆ. ಅದಕ್ಕೆ debriefing ಎನ್ನುತ್ತಾರೆ. ಈ ಕಾರ್ಯಾಚರಣೆಯ ನಂತರ ನಡೆದ debriefing ಪ್ರಕ್ರಿಯೆ ಬಗ್ಗೆ ನಿಖರ ಮಾಹಿತಿ ಹೊಂದಿದ್ದ ಹಿರಿಯ ಅಧಿಕಾರಿ ಅದನ್ನು ಅಲ್ಲಗೆಳೆದರು. ನೇವಿ ಸೀಲ್ ಯೋಧರು ಅತ್ಯಂತ ಕಷ್ಟಕರ ಕಾರ್ಯಾಚರಣೆಗಳಿಗೆ ಪ್ರಸಿದ್ಧರಾದವರು. ಹಾಗಾಗಿ ಅವರು, "ನಾವು ಹೋದೆವು. ಅಲ್ಲೊಬ್ಬ ರೋಗಿಷ್ಠ ಮುದುಕ ಇರುತ್ತಾನೆ. ಅವನನ್ನು ಕೊಂದುಬಿಡಿ ಎಂದು ಹೇಳಿದ್ದರು. ಅಷ್ಟು ಮಾಡಿ ಬಂದೆವು. ಬೇರೇನೂ ಆಗೇ ಇಲ್ಲ." ಹೀಗೆ ಹೇಳಿಕೊಳ್ಳಲು ಅವರಿಗೆ ಅಸಾಧ್ಯ. ಅಕಸ್ಮಾತ ಹಾಗೆ ಸತ್ಯ ಹೇಳಿಕೊಂಡರೆ ಎಲ್ಲರೂ ಛೀಮಾರಿ ಹಾಕಿಯಾರು. ಅಲ್ಲವೇ?
ಆ ಅಬೋಟಾಬಾದ್ ಕಾಂಪೌಂಡಿನಲ್ಲಿ ಉಗ್ರರ ಜೊತೆಗೆ ಕಾದಾಟವಾಯಿತು ಎನ್ನುವ ಕಥೆ ಕಟ್ಟಲು ಮತ್ತೂ ಒಂದು ಕಾರಣ ಇತ್ತು. ಅಂತಹ ದೊಡ್ಡ ಉಗ್ರಗಾಮಿ ಅಂಗರಕ್ಷರರು ಇಲ್ಲದೇ ಇರುತ್ತಾನೆಯೇ? ಸಾಧ್ಯವೇ ಇಲ್ಲ. ಅಂಗರಕ್ಷಕರು ಇದ್ದ ಮೇಲೆ ಅವರೂ ಫೈಟ್ ಕೊಡುತ್ತಾರೆ. ಅವರನ್ನು ಮುಗಿಸಿದ ಮೇಲೆಯೇ ಅವರ ಬಾಸ್ ಬಳಿ ತಲುಪಿ, ಅವನನ್ನು ವಿಚಾರಿಸಿಕೊಳ್ಳಲು ಸಾಧ್ಯ. ಒಸಾಮಾನ ಖಾಸ್ ದೂತನನ್ನು ಟ್ರ್ಯಾಕ್ ಮಾಡುವ ಮೂಲಕ ಒಸಮಾ ಇರುವ ರಹಸ್ಯ ಜಾಗವನ್ನು ಕಂಡುಹಿಡಿದೆವು ಎಂದು ಬೇರೆ ಹೇಳಿಕೊಂಡಿದ್ದರಲ್ಲ. ಅಂತಹ ದೂತ ಯಾರೂ ಇರಲೇ ಇಲ್ಲ. ಹಾಗಾಗಿ ಆ ಕಲ್ಪಿತ ನಾಟಕದ ಪಾತ್ರಧಾರಿಯನ್ನು ನಾಟಕೀಯವಾಗಿಯೇ ಮಟ್ಟ ಹಾಕಬೇಕಾಗಿತ್ತು. ಆ ದೂತ ಸಹಿತ ಗುಂಡಿನ ಕಾಳಗದಲ್ಲಿ ಸತ್ತುಹೋದ ಎಂದುಬಿಟ್ಟರೆ ಎಲ್ಲ ಖತಮ್. ಪಾಕಿಸ್ತಾನಿಗಳಿಗೂ ಈ ಐಡಿಯಾ ಹಿಡಿಸಿತ್ತು. ಹತ್ಯೆಯ ಎರಡು ದಿವಸಗಳ ನಂತರ ರಾಯುಟರ್ ಸುದ್ದಿ ಸಂಸ್ಥೆ ಆ ಜಾಗದಲ್ಲಿ ಸಿಕ್ಕ ಮೂರು ಶವಗಳ ಫೋಟೋ ಪ್ರಕಟಿಸಿತು. ಎಲ್ಲಿ ಸಿಕ್ಕಿತು ಎಂದರೆ ISI ಮೂಲಗಳಿಂದ 'ಖರೀದಿ' ಮಾಡಿದೆವು ಅಂದುಬಿಟ್ಟರು. ಕಂತೆಗೆ ತಕ್ಕ ಬೊಂತೆ ಎಂಬಂತೆ ISI ಮೂಲಗಳು ಮೂರರಲ್ಲಿ ಎರಡು ಶವಗಳು ಒಸಾಮಾನ ದೂತ ಮತ್ತು ಆತನ ಸಹೋದರನದ್ದು ಎದು ಹೇಳಿ ತಿಪ್ಪೆ ಸಾರಿಸಿದರು. ಅವು ಯಾರ ಶವಗಳಾಗಿದ್ದವೋ ದೇವರಿಗೇ ಗೊತ್ತು.
ಕಾರ್ಯಾಚರಣೆ ಆಗಿ ಐದು ದಿವಸಗಳ ಬಳಿಕ ರಕ್ಷಣಾ ಇಲಾಖೆ ಪತ್ರಕರ್ತರಿಗೆ ಮೃಷ್ಟಾನ್ನ ಭೋಜನವನ್ನೇ ಬಡಿಸಿತು. ಅದು ವಿಡಿಯೋ ಟೇಪುಗಳ ಸ್ವರೂಪದಲ್ಲಿ ಬಂತು. ಒಸಾಮಾನನ್ನು ಕೊಂದ ಬಳಿಕ ಸೀಲ್ ಕಮಾಂಡೋಗಳು ಕೈಗೆ ಸಿಕ್ಕ ಮತ್ತು ಬೆನ್ನ ಮೇಲಿನ ಚೀಲದಲ್ಲಿ ಹಿಡಿದಷ್ಟು ಎಲ್ಲ ತರಹದ ಸಾಮಾನುಗಳನ್ನು ತಂದಿದ್ದರು. ಅದನ್ನು ದೊಡ್ಡ ಮಟ್ಟದ ಬೇಹುಗಾರಿಕೆ ಮಾಹಿತಿ ಕಣಜ ಎಂದೇ ಬಿಲ್ಡಪ್ ಕೊಟ್ಟಿದ್ದರು. ಈಗ ಅಂತಹ ಟೇಪುಗಳ ಪ್ರತಿಗಳನ್ನು ಪತ್ರಕರ್ತರಿಗೆ ಕೊಟ್ಟರು. ವಿಲಕ್ಷಣ ದೃಶ್ಯಗಳನ್ನು ಹೊಂದಿದ್ದವು ಆ ಟೇಪುಗಳು. ಮೈತುಂಬಾ ಶಾಲು ಹೊದ್ದು ಕೂತಿದ್ದ ಒಸಾಮಾ ಟೀವಿ ಮೇಲೆ ತನ್ನನ್ನೇ ತಾನು ನೋಡುತ್ತಿದ್ದ. ಅದನ್ನು ಬೇರೆ ಯಾರೋ ರೆಕಾರ್ಡ್ ಮಾಡಿದ್ದರು. ಅತಿ ವಿಚಿತ್ರ. ಇದು ಸ್ಯಾಂಪಲ್ ಮಾತ್ರ. ಇನ್ನೂ ಗುಡ್ಡೆ ಗುಡ್ಡೆ ಮಾಹಿತಿ ಇದೆ. ಅವೆಲ್ಲ ತುಂಬಾ ಸೂಕ್ಷ್ಮ ಮಾಹಿತಿ. ಬಹಿರಂಗ ಮಾಡಲು ಸಾಧ್ಯವಿಲ್ಲ. ಅವುಗಳ ವಿಶ್ಲೇಷಣೆಗೆಂದೇ ವಿಶೇಷ ಕಾರ್ಯಪಡೆಯನ್ನು ನಿಯೋಜಿಸಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಅಬೋಟಾಬಾದಿನಲ್ಲಿ ನೆಲೆಸಿದ್ದ ಒಸಾಮಾ ತುಂಬಾ ಸಕ್ರಿಯನಾಗಿದ್ದ. ವಿವಿಧ ಉಗ್ರಗಾಮಿ ಯೋಜನೆಗಳನ್ನು ರೂಪಿಸುತ್ತಲೇ ಇದ್ದ. ಹಸಿದಿದ್ದ ಮಾಧ್ಯಮ ಈ ರುಚಿಕಟ್ಟಾದ ಉತ್ಪಾದಿತ ಮಾಹಿತಿಯನ್ನು ಪಾಂಗಿತವಾಗಿ ಭಕ್ಷಣೆ ಮಾಡಿ ಮುಂದೆ ಏನೆಲ್ಲಾ ವಿಸರ್ಜಿಸಬೇಕೋ ಅದನ್ನೆಲ್ಲಾ ವಿಸರ್ಜಿಸಿ ರೀಮುಗಟ್ಟಲೇ ನ್ಯೂಸಪ್ರಿಂಟ್ ಕಾಗದ ಉಪಯೋಗಿಸಿ ಒರೆಸಿಕೊಂಡಿತು.
ರಕ್ಷಣಾ ಇಲಾಖೆ ಮೇಲೆ ಹೇಳಿದ್ದೆಲ್ಲ ಶುದ್ಧ ಸೃಷ್ಟಿಸಿದ ಕಥೆಗಳೇ ಹೊರತೂ ಮತ್ತೇನೂ ಅಲ್ಲ. ಸಿಐಎನ ರಹಸ್ಯ ಕಡತಗಳಲ್ಲಿ ದಾಖಲಾಗಿದ್ದ ವಿಷಯ - ೨೦೦೬ ರಲ್ಲಿ ಒಸಾಮಾ ಅಬೋಟಾಬಾದಿಗೆ ಬಂದು ನೆಲೆಸಿದ ನಂತರ ಅವನ ಕಾಲದ ಅಲ್ ಖೈದಾ ಮಾಡಿದ್ದು ಎಂದು ಹೇಳಬಹುದಾಗಿದ್ದು ಬೆರಳಣಿಕೆಯಷ್ಟು ಉಗ್ರ ಕೃತ್ಯಗಳು ಮಾತ್ರ. ಬೇರೆಲ್ಲ ಉಗ್ರ ಕೃತ್ಯಗಳನ್ನು ಬೇರೆ ಬೇರೆ ಜಿಹಾದಿ ಸಂಘಟನೆಗಳು ಮಾಡಿದ್ದವು. ಕಾರ್ಯಾಚರಣೆ ನಂತರ ಗೋಣಿಚೀಲಗಳಲ್ಲಿ ರಹಸ್ಯ ಮಾಹಿತಿ ತರಲಾಯಿತು ಎಂದರು. ಅದನ್ನು ವಿಶ್ಲೇಷಿಸಲು ವಿಶೇಷ ಕಾರ್ಯಪಡೆಯನ್ನು ನಿಯುಕ್ತಿ ಮಾಡಲಾಗಿದೆ ಎಂದರು. ಯಾವ ತರಹದ ವಿಶ್ಲೇಷಣೆಯೂ ಹೊರಬಂದಿಲ್ಲ. ಗೋಣಿಚೀಲಗಟ್ಟಲೇ ಕಸ ಕೊಟ್ಟಿದ್ದು ಪಾಕಿಸ್ತಾನ. ಅವರ ಉಸ್ತುವಾರಿಯಲ್ಲೇ ಇದ್ದ ಒಸಾಮಾ. ಅವರೇ ಒಸಾಮಾನ ಏನೇನು ರೆಕಾರ್ಡ್ ಮಾಡಿ ವಿಡಿಯೋ ಮಾಡಿಟ್ಟುಕೊಂಡಿದ್ದರೋ. ಅವನ್ನೆಲ್ಲ ಕೊಟ್ಟಿದ್ದರು. ಅಮೆರಿಕಕ್ಕೂ ಅದು ಬೇಕಾಗಿತ್ತು. ಎಲ್ಲ ಸುಳ್ಳು ಅಷ್ಟೇ. ಕಾರ್ಯಾಚರಣೆ ಬಳಿಕ ಒಸಮಾನ ಪತ್ನಿ ಮತ್ತು ಮಕ್ಕಳ ಉಸ್ತುವಾರಿಯನ್ನು ISI ವಹಿಸಿಕೊಂಡಿತು. ಅವರನ್ನು ಅಮೆರಿಕಕ್ಕೆ ಪ್ರಶ್ನೆ ಮಾಡಲೂ ಒಪ್ಪಿಸಲಿಲ್ಲ.
ಇಷ್ಟೆಲ್ಲಾ ತೊಂದರೆ ತೆಗೆದುಕೊಂಡು ಇಂತಹ ಖತರ್ನಾಕ್ ಕಥೆಗಳನ್ನು ಏಕೆ ಕಟ್ಟಬೇಕಾಯಿತು ಎಂದರೆ ಒಸಾಮಾ ಕೊನೆಯವರೆಗೂ ಒಬ್ಬ ತುಂಬಾ ಅಪಾಯಕಾರಿ ಉಗ್ರಗಾಮಿಯಾಗಿದ್ದ ಎಂದೇ ಜಗತ್ತಿಗೆ ತೋರಿಸಬೇಕಾಗಿತ್ತು. ವಾಸ್ತವದಲ್ಲಿ ಆತ ೨೦೦೬ ರಿಂದಲೇ ISI ನ ಬಂಧಿಯಾಗಿದ್ದ. ಆರೋಗ್ಯದ ಅನೇಕ ಸಮಸ್ಯೆಗಳಿಂದ ಆತ ಬಳಲುತ್ತಿದ್ದ. ದಿನ ಕಳೆಯುವುದೇ ಕಷ್ಟವಾಗಿದ್ದ ಸಮಯದಲ್ಲಿ ಆತ ಅಲ್ ಖೈದಾದ ನೇತೃತ್ವ ವಹಿಸಿ ಉಗ್ರಗ್ರಾಮಿ ಯೋಜನೆಗಳನ್ನು ರೂಪಿಸುತ್ತ ಅವನ್ನು ಸಕ್ರಿಯವಾಗಿ ಕಾರ್ಯಗತಗೊಳಿಸುವುದು ಸಾಧ್ಯವೇ ಇರಲಿಲ್ಲ. ಅನಾರೋಗ್ಯಕ್ಕೆ ಗುರಿಯಾಗಿದ್ದ ಒಸಮಾನನ್ನು ಬಂಧನದಲ್ಲಿದ್ದಾಗ ಹೋಗಿ ಹತ್ಯೆ ಮಾಡಿ ಬಂದೆವು ಎಂಬುದನ್ನು ವಿಶ್ವಕ್ಕೆ ಹೇಳಲು ಆಗುವುದಿಲ್ಲ. ಅದಕ್ಕಾಗಿ ಇದೆಲ್ಲಾ ಕಥೆ ಕಟ್ಟುವುದು ಅನಿವಾರ್ಯವಾಗಿತ್ತು. ವಾಸ್ತವದ ನಿಜವನ್ನು ಮುಚ್ಚಿಡಲು ಸೃಷ್ಟಿಸಿದ ಧೂಮದ ಪರದೆ. Smoke screen to conceal the reality.
ಜುಲೈ ೨೦೧೧ ರಲ್ಲಿ ವಾಷಿಂಗ್ಟನ್ ಪೋಸ್ಟ್ ಪತ್ರಿಕೆ, ಒಸಮಾನ ಬಳಿ ಸಿಕ್ಕ ರಹಸ್ಯ ದಾಖಲೆಗಳನ್ನು ವಿಶ್ಲೇಷಣೆ ಮಾಡಿದಾಗ ಹೊರಹೊಮ್ಮಿದ ಮಾಹಿತಿ ಮೇಲೆ ಆಧಾರಿತ ಎಂದು ಹೇಳಲಾದ ಒಂದು ವರದಿಯನ್ನು ಪ್ರಕಟಿಸಿತು. ಅದರಲ್ಲಿನ ವಿರೋಧಾಭಾಸಗಳು ಕಣ್ಣಿಗೆ ರಾಚುವಂತಿದ್ದವು. ಒಸಮಾನ ಬಳಿ ಸಿಕ್ಕ ಮಾಹಿತಿಯಿಂದ ನಾಲ್ಕುನೂರಕ್ಕೂ ಹೆಚ್ಚಿನ ಬೇಹುಗಾರಿಕೆ ವರದಿಗಳು ಕೇವಲ ಆರು ವಾರಗಳಲ್ಲಿ ತಯಾರಾದವು ಎಂದು ಹೇಳಿಕೊಳ್ಳಲಾಗಿತ್ತು. ಗೋಣಿಚೀಲದ ತುಂಬಾ ತಂದಿದ್ದ ಕಾಗದಗಳಲ್ಲಿ ಇಮೇಲ್ ಸಹಿತ ಇದ್ದವು ಮತ್ತು ಅವುಗಳಲ್ಲಿನ ಮಾಹಿತಿಗಳ ಆಧಾರದ ಮೇಲೆ ಮುಂದೆ ಕೆಲವರನ್ನು ಬಂಧಿಸಲಾಯಿತು ಎಂದೂ ಹೇಳಿಕೊಂಡರು. ಅಬೋಟಾಬಾದನಲ್ಲಿದ್ದ ಒಸಾಮಾ ಇಮೇಲ್ ಸೌಲಭ್ಯ ಹೊಂದಿದ್ದ ಎಂದು ಈಗ ಹೇಳಿದ್ದಕ್ಕೂ ಮತ್ತು ಮೊದಲು ಹೇಳಿದ ಪ್ರಕಾರ ಅವನು ಟ್ಯಾಪ್ ಮಾಡಿ ಟ್ರ್ಯಾಕ್ ಮಾಡಬಹುದು ಎಂಬ ಭಯದಿಂದ ಯಾವುದೇ ತರಹದ ಆಧುನಿಕ ಕಮ್ಯುನಿಕೇಷನ್ ಉಪಯೋಗಿಸುತ್ತಿರಲಿಲ್ಲ ಎಂದು ಹೇಳಿದ್ದಕ್ಕೂ ಒಂದಕ್ಕೊಂದು ತಾಳೆಯಾಗಲಿಲ್ಲ. ಇದನ್ನು ಪತ್ರಿಕೆ ಪ್ರಶ್ನಿಸಿದಂತೆ ಕಾಣಲಿಲ್ಲ. ಇಷ್ಟೆಲ್ಲಾ ಮಾಹಿತಿ ಸಿಕ್ಕು, ೪೦೦ ಕ್ಕೂ ಹೆಚ್ಚು ವರದಿ ತಯಾರಾದರೂ ಅವೆಲ್ಲ ಅಲ್ ಖೈದಾ ಬಗ್ಗೆ ದೊಡ್ಡ ಚಿತ್ರಣ ನೀಡಲು ನೆರವಾದವೇ ಹೊರತೂ ನಿರ್ದಿಷ್ಟವಾದ ಕಾರ್ಯಾಚರಣೆ ಮಾಡಲು ಸಹಕಾರಿಯಾಗಿರಲಿಲ್ಲ ಎನ್ನುವ ಷರಾ ಬರೆದ ಸಿಐಎ ಗೋಣಿಚೀಲಗಳ ತುಂಬಾ ರಹಸ್ಯ ದಾಖಲೆಗಳು ಲಭ್ಯವಾಗಿದ್ದವು ಎನ್ನುವ ಸುದ್ದಿಗೂ ತಿಪ್ಪೆ ಸಾರಿಸಿ ರಂಗೋಲಿ ಹಾಕಿ ಮಂಗಳ ಹಾಡಿತು.
೨೦೧೨ ಮೇ ತಿಂಗಳಲ್ಲಿ, Combating Terrorism Center ಎನ್ನುವ ಖಾಸಗಿ ಕಂಪನಿಯೊಂದು ೧೭೫ ಪುಟಗಳ ಕಡತವನ್ನು ಬಿಡುಗಡೆ ಮಾಡಿತು. ಅಬೋಟಾಬಾದಿನಲ್ಲಿ ಒಸಾಮಾನ ಹತ್ಯೆಯ ನಂತರ ವಶಪಡಿಸಿಕೊಂಡಿದ್ದ ದಾಖಲೆಗಳ ಭಾಷಾಂತರ ಮಾಡುವ ಗುತ್ತಿಗೆಯನ್ನು ಆ ಕಂಪನಿಗೆ ಕೊಟ್ಟಿದ್ದರು. ಅವರು ಹೇಗೆ ಅದನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದರೋ ಗೊತ್ತಿಲ್ಲ. ಆ ದಾಖಲೆಗಳನ್ನು ಪರಿಶೀಲಿಸಿದ ಪರಿಣಿತರ ಅಭಿಪ್ರಾಯ - ಒಸಾಮಾ ಒಬ್ಬ ಭ್ರಮಿತ (delusional) ವ್ಯಕ್ತಿಯಾಗಿದ್ದ. ಅವನಿಗೆ ಹೊರಜಗತ್ತಿನ ಜೊತೆ ಯಾವುದೇ ಸಂಪರ್ಕ ಇದ್ದಂತೆ ಕಾಣಲಿಲ್ಲ.
ಖಾಸಗಿ ಕಂಪನಿಯೊಂದು ಬಿಡುಗಡೆ ಮಾಡಿದ ಮೇಲೆ ಹೇಳಿದ ದಾಖಲೆಗಳನ್ನು ಪರಿಶೀಲಿಸಿದ ಪರಿಣತರು ಅವುಗಳ ನೈಜತೆ (authenticity) ಬಗ್ಗೆ ದೊಡ್ಡ ಮಟ್ಟದ ಸಂಶಯ ವ್ಯಕ್ತಪಡಿಸಿದರು. ಹಿಂದೆ ಕೊಟ್ಟ ಅಧಿಕೃತ ಹೇಳಿಕೆಗಳಿಗೂ ಮತ್ತು ಈ ಕಡತಗಳಿಗೂ ಯಾವುದೇ ತರಹದ ಸಾಮ್ಯತೆ ಕಂಡುಬರಲಿಲ್ಲ. ಸಿಐಎನ ಅತ್ಯಂತ ರಹಸ್ಯ ಮಾಹಿತಿ ಹಿಂದೆಂದೂ ಹೀಗೆ ಗುತ್ತಿಗೆ ತೆಗೆದುಕೊಂಡಿದ್ದ ಖಾಸಗಿ ಕಂಪನಿ ಮೂಲಕ ಸಾರ್ವಜನಿಕವಾಗಿ, ಅದರಲ್ಲೂ ಯಾವುದೇ ರೀತಿಯ ಸೆನ್ಸಾರ್ ಕತ್ತರಿ ಪ್ರಯೋಗ ಇಲ್ಲದೇ, ಬಿಡುಗಡೆಯಾದ ನಿದರ್ಶನ ಇರಲಿಲ್ಲ. ಒಮ್ಮೆಲೇ ಹೀಗಾಗಿದ್ದು ದಾಖಲೆಗಳ ನೈಜತೆಯ ಬಗ್ಗೆ ಸಂದೇಹವನ್ನು ಮತ್ತು ಬಿಡುಗಡೆ ಮಾಡಿದ್ದರ ಹಿಂದಿರುವ ಉದ್ದೇಶದ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿತು.
ಒಸಮಾನ ವೈದ್ಯಕೀಯ ಆರೈಕೆಗೆ ISI ನಿಯೋಜಿಸಿದ್ದ ಸೈನ್ಯದ ವೈದ್ಯ ಡಾಕ್ಟರ್ ಅಮೀರ್ ಅಜೀಜ್ ಬಗ್ಗೆ ಈ ಮೊದಲು ಹೇಳಲಾಗಿದೆ. ವೈದ್ಯಕೀಯ ಆರೈಕೆ ಮಾಡುತ್ತಾ ಒಸಾಮಾನ ಡಿಎನ್ಎ ಸ್ಯಾಂಪಲ್ ಸಂಗ್ರಹಿಸಿ ಕೊಟ್ಟವನು ಅವನು. ಒಸಮಾನ ಹತ್ಯೆಯ ನಂತರ ಆ ಸ್ಯಾಂಪಲ್ ಉಪಯೋಗಿಸಿಯೇ ಸತ್ತವನು ಒಸಾಮಾನೇ ಎಂದು ಖಚಿತಪಡಿಸಿಕೊಳ್ಳಲಾಗಿತ್ತು. ೨೦೧೧ ಜೂನ್ ನಲ್ಲಿ ಈ ಅಮೀರ್ ಅಜೀಜ್ ನ ಬಗ್ಗೆ ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್, ಪಾಕಿಸ್ತಾನದ ಮಾಧ್ಯಮಗಳು, ಜಗತ್ತಿನ ಮಾಧ್ಯಮಗಳಲ್ಲಿ ಇವನ ಹೆಸರು ಲೀಕ್ ಆಯಿತು. ಒಸಮಾನ ಮೇಲೆ ರಹಸ್ಯವಾಗಿ ಬೇಹುಗಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ಅವನನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ ಎನ್ನುವ ಸುದ್ದಿ ಪ್ರಕಟವಾಯಿತು. ಅಮೇರಿಕಾದ ಪ್ರಯತ್ನದಿಂದ ಅವನ ಬಿಡುಗಡೆಯೇನೋ ಆಯಿತು. ಆದರೆ ಕಾರ್ಯಾಚರಣೆಯಲ್ಲಿ ಅವನ ಪಾತ್ರವನ್ನು ಯಾರು ಲೀಕ್ ಮಾಡಿದರು ಎಂದು ತಿಳಿಯಲಿಲ್ಲ. ಡಾಕ್ಟರ್ ಅಮೀರ್ ಅಜೀಜನ ಮೇಲೆ ತಿರುಗಿದ್ದ ಎಲ್ಲರ ಗಮನವನ್ನು ಬೇರೆಡೆಗೆ ತಿರುಗಿಸಬೇಕಾಗಿತ್ತು. ಹಾಗಾಗಿ ಸಿಐಎಗೆ ಹರಕೆಯ ಕುರಿಯೊಂದರ ಜರೂರತ್ತಿತ್ತು. ಮತ್ತೊಬ್ಬ ವೈದ್ಯ ಡಾಕ್ಟರ್ ಶಕೀಲ್ ಆಫ್ರೀಡಿ ಎನ್ನುವ ೪೮ ವರ್ಷದ ವೈದ್ಯನ ನಸೀಬ್ ಕೆಟ್ಟಿತ್ತು. ಅವನ ಹಿನ್ನೆಲೆ ಕೂಡ ಖರಾಬಾಗಿತ್ತು. ಅವನೂ ಸಿಐಎಗೆ ಕೆಲಸ ಮಾಡುತ್ತಿದ್ದ. ಈಗ ಹರಕೆ ಕುರಿಯಾಗುವ ಆಪತ್ತು ಅವನಿಗೆ ಬಂತು. ಡಾಕ್ಟರ್ ಶಕೀಲ್ ಅಫ್ರಿಡಿ ಹಿಂದೆ ಬೀಳಿ ಎಂದು ಪಾಕಿಗಳಿಗೆ ತಾಕೀತು ಮಾಡಲಾಯಿತು. ಪಾಕಿಗಳಿಗೇನು? ತಮ್ಮ ಪೃಷ್ಠ ಕಾಪಾಡಿಕೊಂಡರಾಯಿತು ಅಷ್ಟೇ. ಈಗ ಹೊಸದೊಂದು ಕವರ್ ಸ್ಟೋರಿ ತಯಾರಿಸಲಾಯಿತು. ಇಲ್ಲಿಯವರೆಗೆ ಎಲ್ಲೂ ಹೇಗೆ ಒಸಾಮಾನ ಡಿಎನ್ಎಯನ್ನು ಪಡೆಯಲಾಗಿತ್ತು ಎಂಬುದರ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿರಲಿಲ್ಲ. ಹರಕೆಯ ಕುರಿ ಡಾ ಶಕೀಲ್ ಆಫ್ರೀಡಿ ಸೇವಾ ಸಂಸ್ಥೆಗಳ ಮೂಲಕ ಹೆಪಾಟೈಟಿಸಿ ಬಿ ರೋಗಕ್ಕೆ ಲಸಿಕೆ ಹಾಕುವ ಕಾರ್ಯಕ್ರಮ ನಡೆಸುತ್ತಿದ್ದ. ಒಸಾಮಾನ ಕುಟುಂಬಕ್ಕೆ ಲಸಿಕೆ ಹಾಕುವ ನೆಪದಲ್ಲಿ ಡಿಎನ್ಎ ಸಂಗ್ರಹಿಸಿದ ಎನ್ನುವ ಹೊಸ ಕಥೆ ಕಟ್ಟಿ ಹೊಡೆದರು. ಹಾಗೆ ಮಾಡಿದ್ದು ರಾಜದ್ರೋಹ ಮತ್ತು ಉಗ್ರನೊಂದಿಗೆ ಸಂಪರ್ಕದಲ್ಲಿದ್ದ ಎನ್ನುವ ಆಪಾದನೆ ಹೊರಿಸಿ, ವಿಚಾರಣೆ ನಡೆಸಿ ಡಾಕ್ಟರ್ ಆಫ್ರೀಡಿಯನ್ನು ೩೩ ವರ್ಷಗಳ ಕಾರಾಗೃಹ ಶಿಕ್ಷೆಯ ಅಡಿ ಸೆರೆಗೆ ತಳ್ಳಿದರು. ಹರಕೆಯ ಕುರಿಯ ಕುರ್ಬಾನಿ ಹೀಗೆ ಆಗಿತ್ತು. ಈ ಕ್ರಮದ ಕೆಟ್ಟ ಪರಿಣಾಮ ಎಲ್ಲ ಸೇವಾ ಸಂಸ್ಥೆಗಳು ಮತ್ತು ಅವುಗಳು ಹಮ್ಮಿಕೊಳ್ಳುತ್ತಿದ್ದ ಲಸಿಕಾಕರಣ ಮುಂತಾದ ಕಾರ್ಯಕ್ರಮಗಳ ಮೇಲೆ ಆಯಿತು. ಇವೆಲ್ಲಾ ಸಿಐಎ ಪ್ರಾಯೋಜಿತ ಕಾರ್ಯಕ್ರಮಗಳು ಎಂದು ಜನ ಅವನ್ನು ದ್ವೇಷಿಸತೊಡಗಿದರು.
ಹರಕೆಯ ಕುರಿಯಾಗಿ ಬಲಿಯಾಗಿದ್ದ ಶಕೀಲ್ ಆಫ್ರೀಡಿ ರಹಸ್ಯವಾಗಿ ರಕ್ತದ ಸ್ಯಾಂಪಲುಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದ. ಹಾಗೆ ಮಾಡಿ ಉಗ್ರರನ್ನು ಟ್ರ್ಯಾಕ್ ಮಾಡುವುದೇ ಉದ್ದೇಶವಾಗಿತ್ತು. ಆದರೆ ಆಫ್ರೀಡಿ ಒಸಾಮಾನ ಕುಟುಂಬದ ಸುದ್ದಿಗೆ ಹೋಗಿರಲೇ ಇಲ್ಲ. ಮುಂದೊಂದು ದಿನ ಉನ್ನತ ನ್ಯಾಯಾಲಯ ಆಫ್ರೀಡಿಗೆ ೩೩ ವರ್ಷದ ಜೈಲು ಶಿಕ್ಷೆ ವಿಧಿಸಿದ್ದ ಕೆಳಗಿನ ನ್ಯಾಯಾಲಯದ ತೀರ್ಪನ್ನು ಅನೂರ್ಜಿತಗೊಳಿಸಿತ್ತು. ಪಾಕಿಸ್ತಾನದಲ್ಲಿ ಅದೆಂತಹ ದುರ್ವ್ಯವಸ್ಥೆ ನೋಡಿ. ಆದರೂ ಅವನು ಇನ್ನೂ ಜೇಲಿನಲ್ಲೇ ಇದ್ದಾನೆ. ಸಿಐಎ, ISI ಎಲ್ಲ ಅವನಿಗೆ ಎಳ್ಳು ನೀರು ಬಿಟ್ಟು ಕೈತೊಳೆದುಕೊಂಡಂತೆ ಇದೆ. ಇದು ಗುಪ್ತಚರ ಸಂಸ್ಥೆಗಳಿಗೆ ಮಾಹಿತಿದಾರರಾಗಿ ಕೆಲಸ ಮಾಡುವುವರ ಕರ್ಮ. ಏನು ಮಾಡಲಿಕ್ಕೆ ಆಗುತ್ತದೆ??
ವಿಶ್ವವನ್ನು ಉದ್ದೇಶಿಸಿ ಮಾತಾಡಿದ ಅಧ್ಯಕ್ಷ ಒಬಾಮಾ, ಹತ್ಯೆಯ ನಂತರ ಯೋಧರು ಒಸಾಮಾನ ಶವವನ್ನು ತೆಗೆದುಕೊಂಡು ಬಂದರು ಎಂದು ಹೇಳಿದರು. ಈ ಹೇಳಿಕೆ ಒಂದು ಸಮಸ್ಯೆ ತಂದೊಡ್ಡಿತು. ಮೊದಲಿನ ಯೋಜನೆ ಪ್ರಕಾರ, ಒಂದು ವಾರದ ಬಳಿಕ ವಿಶ್ವಕ್ಕೆ ಒಸಾಮಾನ ಹತ್ಯೆಯ ವಿಷಯ ತಿಳಿಸುವುದರ ಬಗ್ಗೆ ಒಪ್ಪಂದ ಆಗಿತ್ತು. ಡ್ರೋನ್ ದಾಳಿಯಲ್ಲಿ ಆತನನ್ನು ಹತ್ಯೆ ಮಾಡಲಾಯಿತು. ಡಿಎನ್ಎ ಟೆಸ್ಟಿಂಗ್ ಮೂಲಕ ಅವಶೇಷಗಳಲ್ಲಿ ಸಿಕ್ಕಿದ್ದರಲ್ಲಿ ಒಸಾಮಾನೂ ಇದ್ದ ಎಂದು ಹೇಳುವುದಾಗಿತ್ತು. ಆದರೆ ಬ್ಲಾಕ್ ಹಾಕ್ ಹೆಲಿಕಾಪ್ಟರ್ ಅಪಘಾತ ಆಗಿ, ಅದು ಅಲ್ಲಿ ಹೊತ್ತಿ ಉರಿದಿದ್ದರಿಂದ ಕಥೆ ಬೇರೇನೇ ಹೇಳಬೇಕಾಗಿ ಬಂತು. ಬೇರೆ ಹೇಳಿದ ಕಥೆಗೆ ಮತ್ತೊಂದು ಉಪಕಥೆ ಹೊಡೆಯಬೇಕಾಗಿತ್ತು. ಹತ್ಯೆಯ ನಂತರ ಯೋಧರು ಒಸಮಾನ ಶವವನ್ನು ಜೊತೆಗೆ ತೆಗೆದುಕೊಂಡು ಹೋದರು ಎಂದು ಹೇಳಿದ ಮೇಲೆ ಶವಕ್ಕೆ ಏನಾಯಿತು ಎನ್ನುವ ಪ್ರಶ್ನೆ ಬಂತು. ಶವವನ್ನು ಮೊದಲು ಅಫಘಾನಿಸ್ತಾನದ ನೆಲೆಗೆ ತೆಗೆದುಕೊಂಡು ಬಂದರು. ಅಲ್ಲಿ ಡಿಎನ್ಎ ಪರೀಕ್ಷೆ ಮೂಲಕ ಒಸಾಮಾನೇ ಅದು ಎಂದು ಖಾತ್ರಿ ಮಾಡಿಕೊಂಡರು. ನಂತರ ಅರಬ್ಬೀ ಸಮುದ್ರದಲ್ಲಿ ಲಂಗರು ಹಾಕಿದ್ದ ಅಮೇರಿಕ ನೌಕಾಪಡೆಯ ಯುದ್ಧ ನೌಕೆ ಕಾರ್ಲ್ ವಿನ್ಸನ್ ಗೆ ಹೆಲಿಕಾಪ್ಟರ್ ಮೂಲಕ ಶವವನ್ನು ತೆಗೆದುಕೊಂಡು ಹೋಗಲಾಯಿತು. ಅರಬ್ಬೀ ಸಮುದ್ರದ ಅಜ್ಞಾತ ಸ್ಥಳವೊಂದರಲ್ಲಿ ಸಮುದ್ರದಲ್ಲಿ ಮುಳುಗಿಸಿ ಒಸಾಮಾನ ಶವವನ್ನು ಜಲ ಸಮಾಧಿ ಮಾಡಲಾಯಿತು ಎನ್ನುವ ಹೇಳಿಕೆ ಕೊಟ್ಟವರು ಕೌಂಟರ್ ಟೆರರಿಸಂ ಮುಖ್ಯಸ್ಥ ಜಾನ್ ಬ್ರೆನ್ನನ್. ಪತ್ರಕರ್ತರ ಪ್ರಶ್ನೆಗಳು ಬಾಣಗಳಂತೆ ತೂರಿ ಬಂದವು.
ಒಸಾಮಾನ ಶವವನ್ನು ಸಮುದ್ರದಲ್ಲಿ ಜಲ ಸಮಾಧಿ ಮಾಡುವ ನಿರ್ಧಾರವನ್ನು ಯಾವಾಗ ತೆಗೆದುಕೊಳ್ಳಲಾಯಿತು? ಅದು ಯೋಜನೆಯ ಭಾಗವಾಗಿತ್ತೇ? ಜಲಸಮಾಧಿ ಮಾಡುವುದು ಸರಿಯಾದ ನಿರ್ಧಾರವಾಗಿತ್ತೇ? ಇದರ ಬಗ್ಗೆ ನೀವು ಮುಸ್ಲಿಂ ಧರ್ಮಗುರುವಿನ ಸಲಹೆ ತೆಗೆದುಕೊಂಡಿರೇ? ಶವ ಸಂಸ್ಕಾರದ ವಿಡಿಯೋ ರೆಕಾರ್ಡಿಂಗ್ ಇದೆಯೇ? ಇನ್ನೂ ಪ್ರಶ್ನೆ ಕೇಳಲು ಬಿಟ್ಟರೆ ತೋಳಗಳಂತಹ ನುರಿತ ಪತ್ರಕರ್ತರು ಜಾನ್ ಬ್ರೆನ್ನನ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ ಎಂದು ಅರಿತ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ತಾವೇ ಮೈಕ್ ಮುಂದೆ ಬಂದು, ಬೇರೆಯವರಿಗೆ ಅವಕಾಶ ಕೊಡೋಣ ಎಂದು ಹೇಳುತ್ತಾ ಬೇರೆ ಪತ್ರಕರ್ತರತ್ತ ನೋಡಿದರು.
ಜಾನ್ ಬ್ರೆನ್ನನ್ ಮಾತು ಮುಗಿಸುವ ಮುನ್ನ ಹೇಳಿದ್ದು: ಶವಕ್ಕೆ ಸರಿಯಾದ ಸಂಸ್ಕಾರವನ್ನೇ ಮಾಡಿದ್ದೇವೆ. ಅಂದಿನ ಪರಿಸ್ಥಿತಿಯಲ್ಲಿ ಜಲ ಸಮಾಧಿ ಮಾಡುವುದೇ ಸರಿಯಾದ ನಿರ್ಧಾರವಾಗಿತ್ತು. ಧಾರ್ಮಿಕ ಪಂಡಿತರ ಸಲಹೆ ತೆಗೆದುಕೊಳ್ಳಲಾಗಿತ್ತು. ಬೇರೆ ಬೇರೆ ಧರ್ಮಗಳ ವಿಧಿವಿಧಾನಗಳನ್ನು ಅನುಸರಿಸಿ ಧಾರ್ಮಿಕ ಕಾರ್ಯಗಳನ್ನು ಮಾಡುವ ಸಾಮರ್ಥ್ಯ ಮತ್ತು ಅನುಕೂಲವನ್ನು ಸೈನ್ಯ ಹೊಂದಿರುತ್ತದೆ. ಹಾಗಾಗಿ ಇಸ್ಲಾಮ್ ಸಂಪ್ರದಾಯದಂತೆಯೇ ಸಂಸ್ಕಾರ ಮಾಡಲಾಯಿತು.
ಮುಸ್ಲಿಂ ಸಂಪ್ರದಾಯದ ಪ್ರಕಾರ ಶವ ಸಂಸ್ಕಾರ ಮಾಡುವಾಗ ಮುಸ್ಲಿಂ ಇಮಾಮನ ಉಪಸ್ಥಿತಿ ಬೇಕಾಗುತ್ತದೆ. ಅದರ ಬಗ್ಗೆ ಬ್ರೆನ್ನನ್ ಏನೂ ಹೇಳಲಿಲ್ಲ. ಒಸಾಮಾನ ಶವ ಸಂಸ್ಕಾರದ ವೇಳೆ ಇಮಾಮನೊಬ್ಬ ಅಲ್ಲಿದ್ದ ಎಂಬುದಕ್ಕೆ ಪೂರಕವಾಗಿ ಯಾವುದೇ ಮಾಹಿತಿ ಲಭ್ಯವಿಲ್ಲ.
ಒಸಾಮಾನ ಹತ್ಯೆಯ ಬಗ್ಗೆ ಅನೇಕ ಲೇಖನಗಳನ್ನು ಮತ್ತು ಪುಸ್ತಕ ಬರೆದ ಖ್ಯಾತ ತನಿಖಾ ಪತ್ರಕರ್ತ ಮಾರ್ಕ್ ಬೌಡೆನ್ ಹೇಳುವ ಪ್ರಕಾರ: ಜಲಾಲಾಬಾದಿನ ಸೇನಾನೆಲೆಯಲ್ಲಿ ಒಸಾಮಾನ ಶವವನ್ನು ಸ್ವಚ್ಛಗೊಳಿಸಲಾಯಿತು ಮತ್ತು ಫೋಟೋಗಳನ್ನು ತೆಗೆಯಲಾಯಿತು. ಸಮುದ್ರದ ನಡುವೆ ಶವಸಂಸ್ಕಾರ ಮಾಡುವ ಮೊದಲು ಇನ್ನೂ ಕೆಲವು ವಿಧಾನಗಳು ಬಾಕಿ ಇದ್ದವು. ಯುದ್ಧನೌಕೆಯ ಮೇಲೆ ಮತ್ತೊಮ್ಮೆ ಶವಕ್ಕೆ ಸ್ನಾನ ಮಾಡಿಸಲಾಯಿತು. ಮುಸ್ಲಿಂ ಸಂಪ್ರದಾಯದಂತೆ ಶವವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿದರು. ಇದು ನಡೆದಿದ್ದು ಮೇ ೨, ೨೦೧೧ ರಂದು. ನೇವಿಯ ಫೋಟೋಗ್ರಾಫರ್ ಒಬ್ಬ ಇದರ ವಿಡಿಯೋ ರೀಕಾರ್ಡಿಂಗ್ ಮಾಡಿದ. ಇಷ್ಟಾದ ಮೇಲೆ ಶವವನ್ನು ಒಂದು ಹಲಗೆಯಂತದ್ದರ ಮೇಲಿಟ್ಟು ಅರಬ್ಬೀ ಸಮುದ್ರದೊಳಕ್ಕೆ ನೂಕಲಾಯಿತು. ಸಮುದ್ರ ಸ್ವಾಹಾ ಮಾಡಿತು. ಒಸಮಾನ ಶವ ಕಾಣೆಯಾಯಿತು...once for all gone.
ಲೇಖಕ ಮಾರ್ಕ್ ಬೌಡೆನ್ ತಾವು ಖುದ್ದಾಗಿ ಮೇಲೆ ಹೇಳಿದ ವಿಡಿಯೋ ಅಥವಾ ಫೋಟೋಗಳನ್ನು ನೋಡಿದೆ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಖುದ್ದಾಗಿ ನೋಡಲಾಗದಿದ್ದಕ್ಕೆ ಅಸಮಾಧಾನವಿದೆ. ಆದರೆ ಈ ಮಾಹಿತಿ ಕೊಟ್ಟ ಮಾಹಿತಿದಾರ ನಾನು ತುಂಬಾ ಕಾಲದಿಂದ ನಂಬಿರುವ ಮಾಹಿತಿದಾರ. ಅವನು ನೋಡಿದ್ದಾನೆ. ಅವನ ಮಾಹಿತಿ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿಕೊಂಡರು ಲೇಖಕ ಮಾರ್ಕ್ ಬೌಡೆನ್.
ಲೇಖಕ ಮಾರ್ಕ್ ಬೌಡೆನ್ ಅವರ ಲೇಖನ ವ್ಯಾನಿಟಿ ಫೇರ್ ಪತ್ರಿಕೆಯಲ್ಲಿ ಪ್ರಕಟವಾದ ನಂತರ ಅನೇಕರು ಅಮೇರಿಕಾದ ಮಾಹಿತಿ ಹಕ್ಕು ಯೋಜನೆಯಡಿಯಲ್ಲಿ ನೂರಾರು ಅರ್ಜಿ ಹಾಕಿದರು. ಎಲ್ಲದಕ್ಕೂ ಒಂದೇ ಉತ್ತರ: ಸೇನೆ ವ್ಯಾಪಕವಾಗಿ ಹುಡುಕಿದೆ. ಒಸಾಮಾನ ಶವಸಂಸ್ಕಾರಕ್ಕೆ ಸಂಬಂಧಿಸಿದ ಯಾವುದೇ ಫೋಟೋ, ವಿಡಿಯೋ ಸಿಕ್ಕಿಲ್ಲ.
ಯಾವುದೇ ಮಾಹಿತಿ ಸಿಗದಿದ್ದಕ್ಕೆ ಕಾರಣ ನಂತರ ಗೊತ್ತಾಯಿತು. ಒಸಾಮಾ ಬಿನ್ ಲಾಡೆನ್ ಹುಡುಕಾಟ ಮತ್ತು ಹತ್ಯೆಯ ಕುರಿತಾಗಿ ಮಾಡಿದ ಜೀರೋ ಡಾರ್ಕ್ ಥರ್ಟಿ ಎಂಬುದು ಒಂದು ಅದ್ಭುತ ಸಿನೆಮಾ ಎಂಬುದರಲ್ಲಿ ಎರಡನೇ ಮಾತಿಲ್ಲ. ಅದರ ತಯಾರಕರೊಂದಿಗೆ ಒಬಾಮಾ ಆಡಳಿತ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿತ್ತು ಎಂಬ ಆಪಾದನೆ ಬಂದಿತ್ತು. ಮುಂದೆ ಹೀಗಾಗಬಾರದು ಎಂಬ ಕಾಳಜಿಯಿಂದ ವಿಶೇಷ ಕಾರ್ಯಾಚರಣೆ ಜಂಟಿ ವಿಭಾಗದ ಮುಖ್ಯಸ್ಥ ಜನರಲ್ ಬಿಲ್ ಮ್ಯಾಕ್ರಾವೆನ್ ಕಾರ್ಯಾಚರಣೆಗೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಸೇನೆಯ ಕಡತಗಳಿಂದ ಸಂಪೂರ್ಣವಾಗಿ ತೆಗೆಸಿ ಅವನ್ನು ಸಿಐಎ ಸಂಸ್ಥೆಯ ಕಂಪ್ಯೂಟರುಗಳಿಗೆ ವರ್ಗಾವಣೆ ಮಾಡಿಸಿದ್ದರು. ಹಾಗಾಗಿದ್ದರಿಂದ ಸೇನೆ ಮಾಹಿತಿ ಹಕ್ಕಿನಡಿ ಬಂದ ಅರ್ಜಿಗಳಿಗೆ ಏನೂ ಮಾಹಿತಿ ಲಭ್ಯವಿಲ್ಲ ಎನ್ನುವ ಸಿದ್ಧ ಉತ್ತರ ಕೊಟ್ಟು ಕೈತೊಳೆದುಕೊಳ್ಳಲು ಸಾಧ್ಯವಾಯಿತು. ಸಿಐಎಗೆ ಅರ್ಜಿ ಹಾಕಿದರೆ ಅವರಿಗೆ 'ರಹಸ್ಯ ಕಾರ್ಯಾಚರಣೆಯ ಕಾರಣ ವಿನಾಯತಿ' (operational exemption) ಅಡಿಯಲ್ಲಿ ತಿರಸ್ಕರಿಸುವ ಹಕ್ಕಿದೆ. ಅವರು ಅದನ್ನು ಸರಿಯಾಗಿ ಬಳಸಿಕೊಳ್ಳುತ್ತಾರೆ ಕೂಡ.
ಜನರಲ್ ಬಿಲ್ ಮ್ಯಾಕ್ರಾವೆನ್ ತೆಗೆದುಕೊಂಡ ನಿರ್ಧಾರದ ಕಾರಣ ಯುದ್ಧನೌಕೆ ಕಾರ್ಲ್ ವಿನ್ಸನ್ ಬಗ್ಗೆ ಯಾವ ಕಡತವೂ ಲಭ್ಯವಾಗಲಿಲ್ಲ. ಯುದ್ಧನೌಕೆಯ ಮೇಲೆ ನಡೆಯುವ ಪ್ರತಿಯೊಂದು ಚಿಕ್ಕ ಚಿಕ್ಕ ಘಟನೆ ಕೂಡ ಅತ್ಯಂತ ವಿವರವಾಗಿ ಲಾಗ್ ಪುಸ್ತಕದಲ್ಲಿ ದಾಖಲಾಗುತ್ತದೆ. ಒಸಾಮಾನ ಶವ ಸಂಸ್ಕಾರದ ದಾಖಲೆ ಕೂಡ ಇದ್ದಿರಲೇಬೇಕು. ಆದರೆ ಎಲ್ಲವನ್ನೂ ಸಿಐಎನ ರಹಸ್ಯ ಕಡತಾಗಾರಕ್ಕೆ ವರ್ಗಾಯಿಸಿದ್ದರಿಂದ ಯಾವುದೇ ದಾಖಲೆ ಲಭ್ಯವಾಗಲಿಲ್ಲ.
ವಾಡಿಕೆಯ ನಿಯೋಜನೆ ಮುಗಿಸಿದ ಯುದ್ಧನೌಕೆ ಕಾರ್ಲ್ ವಿನ್ಸನ್ ಜೂನ್ ೨೦೧೧ ರಲ್ಲಿ ತನ್ನ ಮಾತೃನೆಲೆಯಾದ ಕೊರೋನಾಡೋ, ಕ್ಯಾಲಿಫೋರ್ನಿಯಾಗೆ ಹಿಂತಿರುಗಿತು. ಆ ನೌಕೆಯ ನಾವಿಕರನ್ನು ಮಾತಾಡಿಸಲು ಕೆಲವು ಪತ್ರಕರ್ತರು ಪ್ರಯತ್ನಿಸಿದರು. ಕೆಲವರು ತಮಗೆ ಮಾತಾಡದಂತೆ ಆಜ್ಞೆ ಮಾಡಿದ್ದಾರೆ ಎಂದರೆ ಕೆಲವರೂ ಏನೂ ಗೊತ್ತಿಲ್ಲ ಎಂದು ಹೋದರು. ಅನಧಿಕೃತವಾಗಿ ಕೂಡ ಯಾವುದೇ ತರಹದ ಗುಸುಪುಸು ಕೇಳಿಬರದಿದ್ದದ್ದು ಮಾತ್ರ ಆಶ್ಚರ್ಯ.
ಸೈನ್ಯದಿಂದ ಒಸಾಮಾನ ಶವ ಸಂಸ್ಕಾರದ ಬಗ್ಗೆ ಮತ್ತೊಂದಿಷ್ಟು ಮಾಹಿತಿ ಬಂದಿತಾದರೂ ಅದೆಲ್ಲ ಕುಟ್ಟಿದ್ದ ತೌಡನ್ನೇ ಮತ್ತೆ ಕುಟ್ಟಿದಂತೆ ಇತ್ತೇ ಹೊರತೂ ಹೊಸದೇನೂ ಬೆಳಕಿಗೆ ಬರಲಿಲ್ಲ.
ಸೇನೆಯ ವಿಶೇಷ ಕಾರ್ಯಾಚರಣೆಗಳ ಜಂಟಿ ವಿಭಾಗದೊಂದಿಗೆ ತುಂಬಾ ನಿಕಟವಾಗಿ ಕೆಲಸ ಮಾಡುವ ಇಬ್ಬರು ವೃತ್ತಿಪರರ ಮಾಹಿತಿ ಪ್ರಕಾರ: ಒಸಮಾನ ಶವಕ್ಕೆ ಯಾವುದೇ ರೀತಿಯ ಜಲ ಸಮಾಧಿ ಸಂಸ್ಕಾರ ಮಾಡೇ ಇಲ್ಲ. ಅದೆಲ್ಲ ಕವರ್ ಸ್ಟೋರಿ ಅಷ್ಟೇ. ಕಾರ್ಯಾಚರಣೆಯ ನಂತರ ಒಸಾಮಾನ ಶವದೊಂದಿಗೆ ಸೀಲ್ ಯೋಧರ ತಂಡ ಜಲಾಲಾಬಾದ್ ಸೇನಾನೆಲೆಗೆ ಮರಳಿತು. ಸೇನೆಯ ಅಧಿಕೃತ ಸಂಗ್ರಹಕ್ಕೆ ಎಂದು ಫೋಟೋ ತೆಗೆದುಕೊಂಡರು. ನಂತರ ಶವವನ್ನು ಸಿಐಎಗೆ ಒಪ್ಪಿಸಿದರು. ಕಾರ್ಲ್ ವಿನ್ಸನ್ ನೌಕೆಗೆ ಶವ ಸಾಗಿಸಿದರು ಎಂಬುದೆಲ್ಲ ಶುದ್ಧ ಕಥೆ ಅಷ್ಟೇ. ಒಸಾಮಾ ಬಿನ್ ಲಾಡೆನ್ ಹತ್ಯೆಯ ಕಾರ್ಯಾಚರಣೆಯ ಉದ್ದೇಶ ಅಧ್ಯಕ್ಷ ಒಬಾಮಾ ಒಬ್ಬ ಖಡಕ್ ಆಡಳಿತಗಾರ. ಅವಶ್ಯಕತೆ ಬಿದ್ದರೆ ತನ್ನ ರಾಜಕೀಯ ಭವಿಷ್ಯವನ್ನೂ ಪಣಕ್ಕಿಟ್ಟು ಕಠಿಣ ನಿರ್ಧಾರ ತೆಗೆದುಕೊಳ್ಳಲು ಸಮರ್ಥನಿರುವ ದಿಟ್ಟ ವ್ಯಕ್ತಿತ್ವದ ರಾಜಕಾರಣಿ. ದೇಶ ಅವರ ಆಡಳಿತದಲ್ಲಿ ಸುರಕ್ಷಿತವಾಗಿದೆ. ಹೀಗೆ ಅವರ ವ್ಯಕ್ತಿತ್ವಕ್ಕೆ ಒಂದು ಹೊಳಪು ಕೊಟ್ಟು ಅದರಿಂದ ಸಿಗುವ ಲಾಭವನ್ನು ೨೦೧೨ ರಲ್ಲಿ ಬರಲಿದ್ದ ಮರುಚುನಾವಣೆಯಲ್ಲಿ ಸರಿಯಾಗಿ ವಸೂಲು ಮಾಡಬೇಕಾಗಿತ್ತು. ಅದಕ್ಕಾಗಿ ಏನೇನು ಬೇಕು ಅದನ್ನೆಲ್ಲ ಮಾಡಿದರು. ನಂಬಿಸಲು ಬೇಕಾದ ಕಥೆ ಹೆಣೆದರು ಅಷ್ಟೇ. ಇಂತಹ ಭವ್ಯವಾದ ಕಾರಸ್ಥಾನ ಸೀಲ್ ತಂಡಕ್ಕೆ ಮತ್ತು ಅವರ ಮುಖ್ಯಸ್ಥರಿಗೆ ಗೊತ್ತಿರಲೇಬೇಕು. ಇಂತಹ ನಾಟಕ ರಾಜಕಾರಣಿಗಳಿಗೆ ತುಂಬಾ ಪ್ರಿಯವಾದದ್ದು. ಇಂತಹ ಆಲೋಚನೆ ಬಂದರೆ ಅವರಿಗೆ ಅದನ್ನು ತಡೆಯಲು ಅಸಾಧ್ಯ. ಇವರ ಕಾರಸ್ಥಾನಕ್ಕೆ ಒಸಾಮಾ ಬಿನ್ ಲಾಡೆನ್ ಒಳ್ಳೆಯ ಪಾತ್ರಧಾರಿಯಾಗಿ ಸಿಕ್ಕ ಅಷ್ಟೇ.
ಕಥೆ ಕಟ್ಟಬಹುದು. ಆದರೆ ಹಾಗೆ ಕಟ್ಟಿದ ಕಥೆಗಳಿಗೆ ತೊಂದರೆಗಳೇನು ಕಮ್ಮಿಯೇ? ಮತ್ತೊಂದು ತೊಂದರೆ ಕೂಡ ಇತ್ತು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಸೀಲ್ ಯೋಧರು ಬೇರೆ ವಿಭಾಗಗಳ ಸೀಲ್ ಯೋಧರ ಜೊತೆ ತಮ್ಮ ಸಾಹಸ ಕೊಚ್ಚಿಕೊಂಡಿದ್ದರು. ಅವರು ಹೇಗೆ ಒಸಾಮಾನ ಮೇಲೆ ಗುಂಡಿನ ಮಳೆಗೈದು ಆತನ ದೇಹವನ್ನು ಜರಡಿ ಜರಡಿ ಮಾಡಿ ಹಾಕಿದ್ದರು ಎಂಬುದನ್ನು ರಸವತ್ತಾಗಿ ಹೇಳಿದ್ದು ಲೀಕ್ ಆಗಿತ್ತು. ಜರಡಿ ಜರಡಿಯಾಗಿದ್ದ ಶವವನ್ನು ತುಂಬಿಕೊಂಡು ಬರಲು ಕೈಗೆ ಸಿಕ್ಕಿದ್ದು ಎಲ್ಲ ಚೂರು ಪಾರು ಅಷ್ಟೇ. ಇದ್ದುದರಲ್ಲಿ ಒಸಮಾನ ತಲೆಬುರುಡೆಗೆ ಕಮ್ಮಿ ಗುಂಡೇಟು ಬಿದ್ದಿದ್ದವು. ಹಾಗಾಗಿ ತಲೆಬುರುಡೆ ಮತ್ತು ಕೈಗೆ ಸಿಕ್ಕ ದೇಹದ ತುಣುಕುಗಳಷ್ಟನ್ನೇ ಚೀಲದಲ್ಲಿ ತುಂಬಿಕೊಂಡು ವಾಪಸ್ ಬರುವ ಹೆಲಿಕಾಪ್ಟರ್ ಹತ್ತಿತ್ತು ಸೀಲ್ ತಂಡ.
ಹಿಂದೂ ಕುಶ್ ಪರ್ವತದ ಮೇಲೆ ಹಾರುತ್ತಿದ್ದಾಗ ಒಸಾಮಾನ ಶವದ ಕೆಲವು ತುಣುಕುಗಳನ್ನು ಹೊರಗೆ ಎಸೆದರಂತೆ. ಹಾಗಂತ ಸೀಲ್ ಯೋಧರು ಖಾಸಗಿಯಾಗಿ ಹೇಳಿದರು. ಅದು ಎಷ್ಟು ನಿಜವೋ ಗೊತ್ತಿಲ್ಲ.ಕಾರ್ಯಾಚರಣೆ ಮುಗಿದ ಕೆಲವೇ ಘಂಟೆಗಳಲ್ಲಿ ಅಧ್ಯಕ್ಷ ಒಬಾಮಾ ಜಗತ್ತಿನೆದುರು ಕಾರ್ಯಾಚರಣೆಯ ವಿವರಗಳನ್ನು, ನಿಜವಾದ ಮತ್ತು ಕಲ್ಪಿತ ವಿವರಗಳನ್ನು, ತೆರೆದಿಡಲಿದ್ದಾರೆ ಮತ್ತು ಆ ಕಾರಣ ಅನೇಕಾನೇಕ ಕಥೆ ಹೊಸೆಯಬೇಕಾಗುತ್ತದೆ ಎಂದು ಯಾರೂ ಊಹಿಸಿರಲೇ ಇಲ್ಲ. ಒಮ್ಮೆ ಒಬಾಮಾ ಚಂದಾಮಾಮನ ಕಥೆ ಹೇಳಿದ ಮೇಲೆ ಶವ ಎಲ್ಲಿ ಎನ್ನುವ ಪ್ರಶ್ನೆ ಉದ್ಭವವಾಯಿತು. ಡಿಎನ್ಎ ಟೆಸ್ಟ್ ಮೂಲಕ ಗುರುತನ್ನು ಖಾತ್ರಿ ಪಡಿಸಿಕೊಂಡೆವು ಎಂದು ಹೇಳಿದ್ದರಿಂದ ಅಂತಹ ಪರೀಕ್ಷೆಗೆ ಒಳಗಾಗಬಲ್ಲ ಶವದ ಜರೂರತ್ತು ಇತ್ತು ಅಥವಾ ಶವ ಇದೆ ಎಂದು ಹೇಳುವ ಕಥೆಯ ಜರೂರತ್ತು ಬಂತು. ಶವ ಇದೆ ಎಂದಾದ ಮೇಲೆ ಅದಕ್ಕೇನು ಮಾಡಿದಿರಿ ಎನ್ನುವ ಪ್ರಶ್ನೆಗೆ ಉತ್ತರ ಹುಡುಕಬೇಕಾಯಿತು. ಸಮುದ್ರದಲ್ಲಿ ಜಲ ಸಮಾಧಿ ಶವ ಸಂಸ್ಕಾರ ಎನ್ನುವ ಕಥೆಯನ್ನು ಸೂಚಿಸಿದ್ದು ಒಬ್ಬ ಹಿರಿಯ ನೌಕಾಧಿಕಾರಿ. ಇಸ್ಲಾಮಿಕ್ ಸಂಪ್ರದಾಯದಂತೆ ಅಂತಿಮ ಸಂಸ್ಕಾರ ಮಾಡಲಾಯಿತು ಎಂಬುದು ಕಥೆಯ ಮುಂದುವರೆದ ಭಾಗ. ಇಷ್ಟೆಲ್ಲಾ ಮಾಹಿತಿ ಅಧಿಕೃತವಾಗಿ ಹೇಳಿದರೂ ಸಮರ್ಥಿಸುವ ದಾಖಲೆಗಳನ್ನು ಮಾಹಿತಿ ಹಕ್ಕಿನಡಿ ಕೇಳಿದರೆ ರಾಷ್ಟೀಯ ಭದ್ರತೆಯ ಕಾರಣ ಕೊಡಲಾಗುವುದಿಲ್ಲ ಎಂಬ ವಾಡಿಕೆಯ ನಿರಾಕರಣೆ. ಆಡಳಿತ ಹೇಗೆಲ್ಲಾ ಆಟ ಆಡುತ್ತದೆ ಎಂದು ನೋಡುತ್ತಾ ಬಂದ ಅನುಭವಿಗಳಿಗೆ ಗೊತ್ತಾಗಿಬಿಡುತ್ತದೆ ಇದು ಕಟ್ಟುಕಥೆಯೆಂದು. ಏಕೆಂದರೆ ಸ್ವಲ್ಪ ಕೆದಕಿ ನೋಡಿದರೆ ಸಾಕು ಇವರ ಭಾಂಡಾ ಬಿಚ್ಚಿ ಬಿಚ್ಚಿ ಬೀಳುತ್ತದೆ. ಮತ್ತೆ ಇವರು ಹೇಳಿದಂತೆ ಅರಬ್ಬೀ ಸಮುದ್ರದಲ್ಲಿಯೇ ಜಲ ಸಮಾಧಿ ಮಾಡಲು ಹೋಗಿದ್ದರೂ ಮಾಡಲು ಶವ ಇರಬೇಕಲ್ಲ. ತಲೆಬುರುಡೆ ಬಿಟ್ಟರೆ ಬಾಕಿ ಎಲ್ಲ ಜರಡಿ ಜರಡಿಯಾಗಿ ಚಿಕ್ಕ ಚಿಕ್ಕ ತುಣುಕುಗಳಾಗಿ ಹರಡಿ ಹೋಗಿತ್ತು. ಇವರೇ ಕೆಲವು ತುಣುಕುಗಳನ್ನು ತಂದಿದ್ದರು. ದಾರಿಯಲ್ಲಿ ಎಸೆದಿದ್ದರು ಕೂಡ. ಇಷ್ಟಾದ ಮೇಲೆ ಜಲ ಸಮಾಧಿ ಮಾಡಲು ಉಳಿದಿದ್ದಾದರೂ ಏನು??
ಒಬಾಮಾ ಆಡಳಿತದ ಸುಳ್ಳುಗಳು, ತಪ್ಪುಹೇಳಿಕೆಗಳು, ಅರ್ಧಸತ್ಯಗಳು, ದ್ರೋಹಗಳು ರಾಜತಾಂತ್ರಿಕ ಸಂಬಂಧಗಳಿಗೆ ಹಿನ್ನಡೆ ಉಂಟು ಮಾಡಲೇಬೇಕಿತ್ತು. ಮುದ್ದಾಂ ಮಾಡಿದವು. ಮುಂದಿನ ನಾಲ್ಕು ವರ್ಷಗಳ ಕಾಲ ಅಮೆರಿಕಾ ಮತ್ತು ಪಾಕಿಸ್ತಾನಗಳ ಮಧ್ಯದ ಸಂಬಂಧ ಪೂರ್ತಿ ಹಳಸಿತ್ತು. ನಂತರ ನಿಧಾನವಾಗಿ ಉತ್ತಮಗೊಳ್ಳಲು ಆರಂಭಿಸಿತು. ಇದರ ಉಪಯೋಗ ಮಾಡಿಕೊಂಡಿದ್ದು ಜಗತ್ತಿನಾದ್ಯಂತ ಪಸರಿಸಿರುವ ಜಿಹಾದಿ ಸಂಘಟನೆಗಳು. ಒಸಾಮಾನ ಹತ್ಯೆಯ ನಂತರವೂ ಎಲ್ಲ ಕಡೆ ಜಿಹಾದಿ ಉಗ್ರರ ಕಾಟ ಜಾಸ್ತಿಯಾಯಿತೇ ಹೊರತೂ ಕಮ್ಮಿಯಾಗಲಿಲ್ಲ. ಈಗ ಐಸಿಸ್ ಎಂಬ ಮತ್ತೂ ಕ್ರೂರ ಜಿಹಾದಿ ಸಂಘಟನೆ ತನ್ನ ಕ್ರೌರ್ಯ ಮೆರೆಯುತ್ತಿದೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡ ಒಬಾಮಾ ಆಡಳಿತ ಉಗ್ರವಾದದ ವಿರುದ್ಧ ಯುದ್ಧ ಎಂಬುದನ್ನು ಬೀದಿಗೆ ಎಸೆದಂತಾಗಿತ್ತು. ಜನರಲ್ ಕಯಾನಿ ಮತ್ತು ಪಾಷಾ ಇಬ್ಬರೂ ನಿವೃತ್ತರಾಗಿದ್ದಾರೆ. ಇಬ್ಬರ ಮೇಲೂ ಭ್ರಷ್ಟಾಚಾರದ ಆರೋಪಗಳಿವೆ. ತನಿಖೆ ನಡೆದಿದೆ.
ಸಿಐಎ ವರ್ತನೆ ಬಗ್ಗೆ ತನಿಖೆ ನಡೆಸಿದ್ದ ಉನ್ನತ ಮಟ್ಟದ ಸೆನೆಟ್ ಆಯೋಗ ತಡವಾಗಿ ವರದಿ ಕೊಟ್ಟಿದೆ. ಸಿಐಎ ಪದೇಪದೇ ತಪ್ಪು ಮತ್ತು ಸುಳ್ಳು (ಅರ್ಧಸತ್ಯ) ಮಾಹಿತಿ ಕೊಡುತ್ತದೆ ಎಂದು ಹೇಳಲಾಗಿದೆ. ಒಸಾಮಾ ಬಿನ್ ಲಾಡೆನ್ ಉಪಯೋಗಿಸುತ್ತಿದ್ದ ಖಾಸ್ ದೂತನ ಮೂಲಕವೇ ಒಸಾಮಾನ ನೆಲೆಯನ್ನು ಪತ್ತೆ ಹಚ್ಚಲಾಯಿತು ಎಂದು ಇಲ್ಲಿಯವರೆಗೆ ಸಿಐಎ ಹೇಳಿಕೊಂಡು ಬಂದಿದ್ದರೂ ಆಂತರಿಕ ವರದಿಯ ಪ್ರಕಾರ ಆ ಮಾಹಿತಿ ಪೂರ್ತಿ ಸುಳ್ಳಿರಲಾರದಾದರೂ ವಿಶ್ವಾಸ ಮೂಡಿಸುವಂತೆ ಅಂತೂ ಇರಲಿಲ್ಲ. ಸಿಐಎ ವಿಚಾರಣೆಯ ಕಾಲದಲ್ಲಿ ನಿರ್ಬಂಧಿತ ತಕ್ನೀಕುಗಳನ್ನು(prohibited interrogation techniques) ಬೇರೆ ಬೇರೆ ಸಮಯದಲ್ಲಿ ಉಪಯೋಗಿಸಿದೆ ಮತ್ತು ಅದು ಖಂಡನಾರ್ಹ ಎಂದು ಕೂಡ ವರದಿ ಹೇಳಿತ್ತು. ಕೈದಿಗಳಿಗೆ ದೈಹಿಕ ಚಿತ್ರಹಿಂಸೆ ಕೊಟ್ಟರೆ ವಿಶ್ವಾಸಾರ್ಹ ಮಾಹಿತಿ ಹೊರಬರುವುದಿಲ್ಲ ಎಂಬುದು ಸಾಮಾನ್ಯ ಜ್ಞಾನ. ಆದರೂ ಅಂತಹ ಅಸಹ್ಯ ವಿಧಾನಗಳನ್ನು ಬಂಧಿಗಳ ಮೇಲೆ ಉಪಯೋಗಿಸುತ್ತಲೇ ಇರುತ್ತಾರೆ. ಇದನ್ನು ಯುದ್ಧ ಕಾಲದ ಅಪರಾಧ ಎಂದು ಭಾವಿಸಬೇಕೇ? ಆಂತರಿಕ ವರದಿ ಸಿಐಎ ಸಿಬ್ಬಂದಿ ಮೇಲೆ ಕ್ರಿಮಿನಲ್ ಕೇಸ್ ಹಾಕಿ ಎಂಬುದನ್ನು ಬಾಯ್ಬಿಟ್ಟು ಹೇಳಲಿಲ್ಲ ಅಷ್ಟೇ. ಮಹತ್ವದ ವರದಿಗಳಲ್ಲಿ ಒಂದು ಎಂದು ಭಾವಿಸಲ್ಪಟ್ಟಿದ್ದರೂ ಸಿಐಎ ಸಂಸ್ಥೆ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ. ಸಿಐಎ ಇತಿಹಾಸದಲ್ಲಿ ಇಂತಹ ಅದೆಷ್ಟು ಕುಟುಕುವ ವರದಿಗಳು ಬಂದುಹೋದವೋ.
ಅಮೆರಿಕಾದ ಮೇಲೆ ಮುಂದೆ ನಡೆಯಬಹುದಾದ ಉಗ್ರರ ದಾಳಿಗಳನ್ನು ತಡೆಯಲು ಸಿಐಎ ಯಾವ ರೀತಿಯ ಕ್ರಮ ಕೈಗೊಂಡಿದೆ ಎಂಬುದನ್ನೂ ಸೆನೆಟ್ ಕಮಿಟಿ ವಿಚಾರಣೆ ಮಾಡಿತು. ಆನಿಟ್ಟಿನಲ್ಲಿ ಆಯೋಗದ ವರದಿ ಒಸಾಮಾ ಬಿನ್ ಲಾಡೆನ್ನನ ಖಾಸ್ ದೂತ ಎಂದು ಹೇಳಲಾಗಿದ್ದ ಅಬು ಅಹಮದ್ ಅಲ್ ಕುವೈತಿ ಬಗ್ಗೆ ಸಂಶಯ ವ್ಯಕ್ತಪಡಿಸಿತು. ಸಿಐಎ ಕಟ್ಟಿದ ಕಥಾಹಂದರ ಯಾರಿಗೆ ಉಪಯೋಗವಾಗದಿದ್ದರೂ ಲಾಡೆನ್ ಶೋಧನೆ ಮತ್ತು ಹತ್ಯೆಯ ಬಗ್ಗೆ ಬಂದ ಜೀರೋ ಡಾರ್ಕ್ ಥರ್ಟಿ ಎಂಬ ಸಿನೆಮಾಕ್ಕೆ ಮಾತ್ರ ತುಂಬಾ ಉಪಯೋಗವಾಗಿದೆ.
೨೦೦೫ ರ ಸಿಐಎ ಆಂತರಿಕ ತನಿಖಾ ವರದಿಯ ಪ್ರಕಾರ ವಿಶ್ವದ ಬೇರೆ ಬೇರೆ ಕಡೆಗಳಿಂದ ಎತ್ತಾಕಿಕೊಂಡು ಬಂದಿದ್ದ ಅಲ್ ಖೈದಾ ಉಗ್ರರು ಎಂದು ಹೇಳಲಾದ ಬಂಧಿಗಳಿಂದ ಒಸಾಮಾನ ಬಗ್ಗೆ ಯಾವುದೇ ನಿಖರ ಮತ್ತು ಕಾರ್ಯಸಾಧ್ಯ ಗುಪ್ತ ಮಾಹಿತಿ ಯಾವುದೂ ಸಿಗಲಿಲ್ಲ. ತನಿಖಾಧಿಕಾರಿಗಳು ಹಾಕುತ್ತಿದ್ದ ಒತ್ತಡದಿಂದ ತಪ್ಪಿಸಿಕೊಳ್ಳಲು ಉಗ್ರರು ಏನೇನೋ ಇಲ್ಲದ ಸಲ್ಲದ ವಿಷಯಗಳನ್ನು ಕಲ್ಪಿಸಿಕೊಂಡು ಹೇಳಿ ತನಿಖೆಯ ದಿಕ್ಕು ತಪ್ಪಿಸಲು ನೋಡುತ್ತಿದ್ದರು. ಸಿಐಎನ ಕೆಳಗಿನ ಮಟ್ಟದ ಅಧಿಕಾರಿಗಳಿಂದ ಹಿಡಿದು ನಿರ್ದೇಶಕ ಮಟ್ಟದ ಅಧಿಕಾರಿಗಳಲ್ಲಿ ಅನೇಕರು ತಪ್ಪು ಮಾಹಿತಿಯನ್ನು ಸಂಸತ್ತಿನ ಉನ್ನತ ಮಟ್ಟದ ಕಮಿಟಿಗಳಿಗೂ ಕೊಟ್ಟಿದ್ದಾರೆ ಎಂದು ಕೂಡ ಹೇಳಿ ಷರಾ ಬರೆದು ಒಸಾಮಾನ ಬಂಟರು ಎಂದು ಹೇಳಿ ಸೆರೆಯಲ್ಲಿಟ್ಟು, ಚಿತ್ರಹಿಂಸೆ ಕೊಟ್ಟಿದ್ದರ ನಿರುಪಯುಕ್ತತೆ ಬಗ್ಗೆ ಹೇಳಿತ್ತು.
ಒಬಾಮಾಗೆ ಈಗ ಯಾವ ಮರುಚುನಾವಣೆಯ ತಲೆಬಿಸಿಯಿಲ್ಲ. ದುಷ್ಟ ಶಕ್ತಿ ಇರಾನಿನೊಂದಿಗೆ ಅಣುಶಕ್ತಿ ಒಪ್ಪಂದ ಮಾಡಿಕೊಳ್ಳಲು ಹೊರಟಿದ್ದಾರೆ. ವಿರೋಧ ಪಕ್ಷಗಳ ಜೊತೆ ಸಮಾಲೋಚನೆ ಮಾಡದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ. ದೊಡ್ಡ ಮಟ್ಟದಲ್ಲಿ ಸುಳ್ಳು ಪುಂಗುವುದು ಎಂದಿನಂತೆ ನಡದೇ ಇದೆ. ಜೊತೆಗೆ ರಹಸ್ಯ ಜೈಲುಗಳು, ಡ್ರೋನ್ ದಾಳಿಗಳು, ರಾತ್ರಿಯಲ್ಲಿ ವಿಶೇಷ ಸೇನಾಪಡೆಗಳ ದಾಳಿಗಳು ಕೂಡ ಆಜ್ಞಾ ಸರಪಳಿ (chain of command) ಮೀರಿ ನಡೆಯುತ್ತಲೇ ಇವೆ. ಇದಕ್ಕೆ ಒಪ್ಪದವರನ್ನು ಪಕ್ಕಕ್ಕೆ ಸರಿಸಿ ಮುಂದೆ ಹೋಗುತ್ತಿರುತ್ತಾರೆ.
2 comments:
ಪ್ರಿಯ ಮಹೇಶರೆ, ನಿಮ್ಮ ಲೇಖನವನ್ನು ಓದುತ್ತ ಹೋದಂತೆ, ತುಂಬ ಖುಶಿಯಾಯಿತು. ಅಮೇರಿಕಾದ ನೇವಿ ಕಮಾಂಡೋಗಳು ಓಸಾಮಾನ ಹತ್ಯೆಯನ್ನು ಮಾಡಿ, ಸಮುದ್ರದಲ್ಲಿ ಬಿಸಾಕಿದರು ಎಂದು ಓದಿದಾಗ, ಅಮೆರಿಕಾದ ಧೈರ್ಯವನ್ನು ಹಾಗು ಚಾತುರ್ಯವನ್ನು ಮೆಚ್ಚಿಕೊಂಡಿದ್ದೆ. ನಿಮ್ಮ ಲೇಖನವನ್ನು ಓದಿದ ಬಳಿಕ ‘ಹೀಗೂ ಆಯಿತೆ!’ ಎಂದು ಆಚ್ಚರಿಗೊಂಡೆ. ರಾಜಕಾರಣದಷ್ಟು ಖತರ್ ನಾಕ್ ಬಿಜಿನೆಸ್ ಮತ್ತೊಂದು ಇಲ್ಲ, ಅಲ್ಲವೆ? ನಮಗೆ ಇದೇ ರೀತಿಯಾಗಿ ರೋಚಕ ಸತ್ಯವನ್ನು ತಿಳಿಸುತ್ತ ಇರಿ. ಧನ್ಯವಾದಗಳು ಹಾಗು ಅಭಿನಂದನೆಗಳು.
ಸುನಾಥ್ ಸರ್,
ನಿಮ್ಮ ಕಾಮೆಂಟಿಗೆ ಧನ್ಯವಾದಗಳು.
ಸೀಮೋರ್ ಹರ್ಷ್ ಅವರ ತನಿಖಾ ವರದಿಯನ್ನೇ ಪರಮ ಸತ್ಯ ಎಂದೇನೂ ನಂಬಬೇಕಿಲ್ಲ. ಲಭ್ಯವಿರುವ ಅನೇಕ ದತ್ತಬಿಂದುಗಳಲ್ಲಿ (data points) ಇದೂ ಒಂದು ಎಂದು ತಿಳಿದು ಮಂಡೆಯಲ್ಲಿ ಫೈಲ್ ಮಾಡಿಕೊಳ್ಳಬಹುದು ಅಷ್ಟೇ.
ಸೀಮೋರ್ ಹರ್ಷ್ ಬಗ್ಗೆ ಈ ತನಿಖೆ ಕುರಿತು ಇರುವ ಜೋಕ್ ಎಂದರೆ...ಒಸಾಮಾ ಬಿನ್ ಲಾಡೆನ್ನನ ಪುಸ್ತಕದ ಸಂಗ್ರಹದಲ್ಲಿ ಸೀಮೋರ್ ಹರ್ಷ್ ಅವರ ಸಾಂಪ್ರಾದಾಯಿಕ ಪ್ರತಿಸ್ಪರ್ಧಿ ಎಂದೇ ಪರಿಗಣಿಸಲ್ಪಡುವ ಮತ್ತೊಬ್ಬ ತನಿಖಾ ಪತ್ರಕರ್ತ ಬಾಬ್ ವುಡ್ವರ್ಡ್ ಅವರ ಪುಸ್ತಕಗಳು ಇದ್ದವಂತೆ. ಅದನ್ನು ನೋಡಿ ಉರಿದುಕೊಂಡ ಹರ್ಷ್ ಹೀಗೆಲ್ಲಾ ಬರೆದರು ಅನ್ನುತ್ತಾರೆ ಕಿಡಿಗೇಡಿಗಳು.
ಒಂದು ಒಳ್ಳೆ ರೋಚಕ ಓದು ಅಂದುಕೊಂಡು ನಾನು ಓದಿದೆ. ಕನ್ನಡೀಕರಿಸಿ ಓದಿಸಿದೆ. ಅಷ್ಟೇ.
ನಮಸ್ಕಾರ.
Post a Comment