೧೯೭೬ ರಲ್ಲಿ ಇಸ್ರೇಲ್ ಮಾಡಿದ್ದ ಆ ಖತರ್ನಾಕ್ ರಕ್ಷಣಾ ಕಾರ್ಯಾಚರಣೆಯನ್ನು ದೇಶವೊಂದು ಒತ್ತೆಯಾಳುಗಳಾಗಿದ್ದ ತನ್ನ ನಾಗರಿಕರನ್ನು ವಿಮಾನ ಅಪಹರಣಕಾರರಿಂದ ರಕ್ಷಿಸಲು ಮಾಡಿದ ಅಭೂತಪೂರ್ವ ಕಾರ್ಯಾಚರಣೆಯಂದೇ ಭಾವಿಸಲಾಗುತ್ತದೆ. ಆದರೆ ಬಿಬಿಸಿ ವರದಿಯ ಪ್ರಕಾರ, ಇಂಗ್ಲೆಂಡಿನ ಕಡತಾಗಾರ ಬಿಡುಗಡೆ ಮಾಡಿದ ರಹಸ್ಯ ಕಡತವೊಂದರ ಪ್ರಕಾರ, ೧೯೭೬ ರಲ್ಲಿ ಪ್ಯಾಲೆಸ್ಟೈನ್ ಉಗ್ರರು ಮಾಡಿದರು ಎಂದು ಹೇಳಲಾದ ಆ ವಿಮಾನ ಅಪಹರಣ, ಅಪಹೃತ ವಿಮಾನವನ್ನು ಪೂರ್ವ ಆಫ್ರಿಕಾದ ದೇಶವಾದ ಉಗಾಂಡದ ರಾಜಧಾನಿಗೆ ತೆಗೆದುಕೊಂಡು ಹೋಗಿದ್ದು, ಇಸ್ರೇಲಿನಿಂದ ವಿಮಾನ ಮೂಲಕ ಹೋದ ಇಸ್ರೇಲಿ ಕಮಾಂಡೋ ತಂಡವೊಂದು ಅಪಹರಣಕಾರರ ಜೊತೆ ಹೋರಾಡಿ, ಪ್ರಯಾಣಿಕರಿಗೆ ತುಂಬಾ ಕಡಿಮೆ ಸಾವು ನೋವು ಉಂಟುಮಾಡಿ, ಅವರನ್ನು ರಕ್ಷಿಸಿ, ಮರಳಿ ಕರೆತಂದದ್ದು, ಎಲ್ಲ ಹೇಳಿದಂತೆ ಆಯಿತೇ ಅಥವಾ ಬೇರೇನೋ ರಹಸ್ಯ ಅಡಗಿತ್ತೋ??
ಇತ್ತೀಚಿಗೆ ಬಿಡುಗಡೆಯಾದ ಕಡತವೊಂದರ ಪ್ರಕಾರ ಇಸ್ರೇಲ್ ಖುದ್ದಾಗಿ ಈ ಘಟನೆಯ ಹಿಂದಿತ್ತು. ಹಾಗಾದರೆ ಅದೊಂದು "ಮಿಥ್ಯಾಧ್ವಜ" ಕಾರ್ಯಾಚರಣೆಯಾಗಿತ್ತೇ? (false flag operation)
ಆ ಕಡತದ ಆಧಾರ ಆ ಸಮಯದಲ್ಲಿ ಅನಾಮಧೇಯ ಮೂಲದ ಹೇಳಿಕೆ. ಯುರೋ-ಅರಬ್ ಪಾರ್ಲಿಮೆಂಟರಿ ಅಸೋಸಿಯೇಷನ್ ಎಂಬ ಸಂಘಟನೆಯ ಆ ಮೂಲದ ಪ್ರಕಾರ ಇಸ್ರೇಲಿನ ಆಂತರಿಕ ಬೇಹುಗಾರಿಕಾ ಸಂಸ್ಥೆ ಶಿನ್-ಬೆಟ್ ಮತ್ತು ಪಾಪ್ಯುಲರ್ ಫ್ರಂಟ್ ಫಾರ್ ದಿ ಲಿಬರೇಶನ್ ಆಫ್ ಪ್ಯಾಲೆಸ್ಟೈನ್ (PFLP ) ಎಂಬ ಉಗ್ರರ ಸಂಘಟನೆಯ ಪರಸ್ಪರರ ಸಹಕಾರದಿಂದಲೇ ಆ ವಿಮಾನದ ಯೋಜಿತ ಅಪಹರಣವಾಗಿತ್ತು(Planned hijack).
ಗ್ರೀಸ್ ದೇಶದ ರಾಜಧಾನಿ ಅಥೆನ್ಸ್ ನಗರದಿಂದ ಹಾರಿದ ಕೆಲವೇ ಹೊತ್ತಿನಲ್ಲಿ ವಿಮಾನವನ್ನು ಅಪಹರಣ ಮಾಡಲಾಯಿತು. ಅದನ್ನು ಉಗಾಂಡದ ಮುಖ್ಯ ವಿಮಾನನಿಲ್ದಾಣವಿದ್ದ ಎಂಟೆಬ್ಬೆ ಶಹರಕ್ಕೆ ಹಾರಿಸಿಕೊಂಡು ಹೋಗಲಾಯಿತು. ೯೮ ಪ್ರಯಾಣಿಕರಿದ್ದರು. ಹೆಚ್ಚಿನವರು ಇಸ್ರೇಲಿ ನಾಗರಿಕರಾಗಿದ್ದರು.
ದೂರದ ಇಸ್ರೇಲಿನಿಂದ ತೆರಳಿ ಕ್ಷಿಪ್ರ ಕಾರ್ಯಾಚರಣೆ ಮಾಡಿದ ಇಸ್ರೇಲಿನ ಕಮಾಂಡೋಗಳು ಏಳು ಜನ ಅಪಹರಣಕಾರರನ್ನು ಕೊಂದು ಮತ್ತು ಎಂಬತ್ತು ಜನ ಉಗಾಂಡದ ಸೈನಿಕರ ಜೊತೆ ಹೋರಾಡಿ ಪ್ರಯಾಣಿಕರ ರಕ್ಷಣೆ ಮಾಡಿದರು. ಇಡೀ ಕಾರ್ಯಾಚರಣೆ ಕೇವಲ ೩೬ ನಿಮಿಷಗಳಲ್ಲಿ ಮುಗಿದುಹೋಗಿತ್ತು.
ಕಾರ್ಯಾಚರಣೆಯಲ್ಲಿ ಇಬ್ಬರು ಪ್ರಯಾಣಿಕರು ಮೃತರಾದರು. ಗಾಯಗೊಂಡಿದ್ದ ಮತ್ತೊಬ್ಬ ಪ್ರಯಾಣಿಕರು ಪಕ್ಕದ ಕೀನ್ಯಾದ ನೈರೋಬಿಯಲ್ಲಿನ ಆಸ್ಪತ್ರೆಯಲ್ಲಿ ನಿಧನರಾದರು. ಇಸ್ರೇಲಿ ಕಮಾಂಡೋ ತಂಡದ ನಾಯಕತ್ವ ವಹಿಸಿದ್ದ ಒಬ್ಬ ಅಧಿಕಾರಿ ವಿಮಾನನಿಲ್ದಾಣದ ನಿಯಂತ್ರಣಾ ಗೋಪುರದಿಂದ ಹಾರಿಬಂದ stray ಗುಂಡಿಗೆ ಬಲಿಯಾದರು. (ಅವರ ಹೆಸರು ಯೋನಾಥನ್ ನೆತನ್ಯಾಹು. ಇಂದಿನ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಖಾಸಾ ಸಹೋದರ. ಇಬ್ಬರೂ ಇಸ್ರೇಲಿನ ವಿಖ್ಯಾತ ಕಮಾಂಡೋ ಪಡೆ "ಸಾಯಾರೇಟ್ ಮಟ್ಕಾಲ"ನ ಸದಸ್ಯರಾಗಿದ್ದರು. ಎಂಟೆಬ್ಬೆ ರಕ್ಷಣಾ ಕಾರ್ಯಾಚರಣೆಗೆ ಹೋಗಲು ಇಬ್ಬರೂ ಕಾತುರರಾಗಿದ್ದರು. ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ಮತ್ತೊಬ್ಬ ಕಮಾಂಡೋ ಏಹೂದ್ ಬರಾಕ್ ಯೋನಾಥನ್ ಅವರನ್ನು ಆಯ್ಕೆ ಮಾಡಿದ್ದರು. ಬೇಸರಗೊಂಡಿದ್ದ ಸಹೋದರ ಬೆಂಜಮಿನನನ್ನು ತುಂಬಾ ಸಮಾಧಾನ ಮಾಡಬೇಕಾಯಿತು ಎಂದು ಎಹುದ್ ಬರಾಕ್ ಹೇಳಿಕೊಂಡಿದ್ದರು.)
ಆಗ ಉಗಾಂಡವನ್ನು ಆಳುತ್ತಿದ್ದ ಸರ್ವಾಧಿಕಾರಿ ಇದಿ ಅಮೀನ್ ಪ್ರಕಾರ ಇಸ್ರೇಲಿಗಳು ೨೦ ಜನ ಉಗಾಂಡದ ಸೈನಿಕರನ್ನು ಮತ್ತು ಎಲ್ಲ ಅಪಹರಣಕಾರರನ್ನು ಕೊಂದರು.
ಉಗಾಂಡದ ಎಂಟೆಬ್ಬೆಗೆ ವಿಮಾನವನ್ನು ತೆಗೆದುಕೊಂಡು ಹೋಗಿದ್ದ ಅಪಹರಣಕಾರರು ಅಲ್ಲಿಂದ ತಮ್ಮ ಬೇಡಿಕೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಬೇರೆ ಬೇರೆ ದೇಶಗಳಲ್ಲಿ ಬಂಧಿತರಾಗಿದ್ದ ಪ್ಯಾಲೆಸ್ಟೈನ್ ಹೋರಾಟಗಾರರ ಹೆಸರುಗಳು ಆ ಪಟ್ಟಿಯಲ್ಲಿದ್ದವು. ಅವರನ್ನು ತ್ವರಿತವಾಗಿ ಬಿಡುಗಡೆ ಮಾಡಲು ಒತ್ತಾಯಿಸಲಾಗಿತ್ತು.
ಬ್ರಿಟಿಷ್ ಕಡತಾಗಾರ ಬಿಡುಗಡೆ ಮಾಡಿರುವ ರಹಸ್ಯ ದಾಖಲೆಯನ್ನು ಬರೆದವರು ಫ್ರಾನ್ಸ್ ದೇಶದ ರಾಜಧಾನಿ ಪ್ಯಾರಿಸ್ ನಗರದ ಬ್ರಿಟಿಷ್ ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಡಿ ಎಚ್ ಕೋಲ್ವಿನ್ ಎಂಬ ಬ್ರಿಟಿಷ್ ಅಧಿಕಾರಿ. ನಮೂದಾದ ತಾರೀಕು ೩೦ ಜೂನ್ ೧೯೭೬. ಆಗ ವಿಮಾನ ಅಪಹರಣ ಇನ್ನೂ ಸುಖಾಂತ್ಯವಾಗಿರಲಿಲ್ಲ.
ಡಿ ಎಚ್ ಕೋಲ್ವಿನ್ ಬರೆಯುತ್ತಾರೆ:
"ಯುರೋ-ಅರಬ್ ಪಾರ್ಲಿಮೆಂಟರಿ ಅಸೋಸಿಯೇಷನ್ ಸಂಘಟನೆಯ ಮೂಲಗಳ ಪ್ರಕಾರ ವಿಮಾನ ಅಪಹರಣವನ್ನು ಮಾಡಿದ್ದು PFLP ಸಂಘಟನೆ. ಅದಕ್ಕೆ ಸಕ್ರಿಯ ಸಹಾಯ ನೀಡಿದ್ದು ಖುದ್ದು ಇಸ್ರೇಲಿನ ಆಂತರಿಕ ಬೇಹುಗಾರಿಕೆ ಸಂಸ್ಥೆ ಶಿನ್-ಬೆಟ್.
ಪ್ಯಾಲೆಸ್ಟೈನ್ ಹೋರಾಟದ ಪ್ರಮುಖ ಸಂಘಟನೆ ಪ್ಯಾಲೆಸ್ಟೈನ್ ಲಿಬರೇಶನ್ ಆರ್ಗನೈಸೇಶನ್ (PLO) ಸಂಸ್ಥೆಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದ್ದ, ಗೌರವ ಮತ್ತು ಪ್ರತಿಷ್ಠೆಯನ್ನು ಕುಗ್ಗಿಸುವುದು ಮತ್ತು ಅಮೆರಿಕ ಮತ್ತು ಪ್ಯಾಲೆಸ್ಟೀನಿಗಳ ಮಧ್ಯೆ ಮತ್ತೆ ಉತ್ತಮಗೊಳ್ಳುತ್ತಿರುವ ಬಾಂಧವ್ಯವನ್ನು ಹೊಸಕಿಹಾಕುವುದೇ ವಿಮಾನ ಅಪಹರಣದ ಉದ್ದೇಶವಾಗಿತ್ತು.
PFLP ಸಂಘಟನೆಯಲ್ಲಿ ಇತ್ತೀಚಿಗೆ ಅನೇಕ ಸಂದೇಹಾಸ್ಪದ ವ್ಯಕ್ತಿಗಳು ಭರ್ತಿಯಾಗಿದ್ದಾರೆ. ಅವರಲ್ಲಿ ಅನೇಕರನ್ನು ಇಸ್ರೇಲಿಗಳೇ 'ತುರುಕಿದ್ದಾರೆ' (infiltrate) ಎಂಬುದರ ಬಗ್ಗೆ ಸಂದೇಹವಿದೆ."
ಈ ದಾಖಲೆ ಅಂದಿನ ಬ್ರಿಟಿಷ್ ಸರ್ಕಾರದಲ್ಲಿ ಅನೇಕ ಗಂಭೀರ ಚರ್ಚೆಗಳನ್ನು ಹುಟ್ಟುಹಾಕಿತ್ತು. ಅಪಹೃತ ಪ್ರಯಾಣಿಕರನ್ನು ಕಾಪಾಡಿದ ಇಸ್ರೇಲಿನ ಕಾರ್ಯಾಚರಣೆಯನ್ನು ಶ್ಲಾಘಿಸಬೇಕೋ ಬೇಡವೋ ಎಂಬುದು ಸಹ ಚರ್ಚೆಗೆ ಬಂದಿತ್ತು.
ಉಗಾಂಡದಲ್ಲಿ ನಡೆದ ಇಸ್ರೇಲಿ ಕಾರ್ಯಾಚರಣೆ ಅಂತರರಾಷ್ಟ್ರೀಯ ಕಾನೂನುಗಳ ಅಡಿಯಲ್ಲಿ ನ್ಯಾಯಸಮ್ಮತವೇ ಎಂಬ ವಿಷಯದ ಮೇಲೆ ಅಂದಿನ ಬ್ರಿಟಿಷ್ ಸರ್ಕಾರ ಒಮ್ಮತದ ನಿರ್ಧಾರಕ್ಕೆ ಬರಲಿಲ್ಲ.
ಇದೇ ಫೈಲಿನಲ್ಲಿರುವ ಇನ್ನೊಂದು ದಾಖಲೆಯ ಪ್ರಕಾರ: ಬ್ರಿಟಿಷ್ ಪ್ರಧಾನಿ ಇಸ್ರೇಲಿನ ಪ್ರಧಾನಿ ರಾಬಿನ್ ಅವರಿಗೆ ವೈಯಕ್ತಿಕ ಅಭಿನಂದನೆಗಳನ್ನು ಸಲ್ಲಿಸದೇ ಇರುವುದರ ಬಗ್ಗೆ ಇಸ್ರೇಲಿಗಳಿಗೆ ತೀವ್ರ ಅಸಂತೋಷ ಮತ್ತು ಅತೃಪ್ತಿ ಇದೆ. ಬ್ರಿಟನ್ ಬಿಡುಗಡೆ ಮಾಡಿದ ಸಾರ್ವಜನಿಕ ಹೇಳಿಕೆ ಇಸ್ರೇಲಿಗೆ ಸಮರ್ಥ ಬೆಂಬಲ ನೀಡಿಲ್ಲ ಎಂಬುದು ಕೂಡ ಇಸ್ರೇಲಿಗಳ ಆಕ್ಷೇಪಣೆ.
ಇಸ್ರೇಲಿಗೆ ಅಭಿನಂದನೆ ಮತ್ತು ಬೆಂಬಲ ಸೂಚಿಸದೇ ಇರುವ ಸರ್ಕಾರದ ನಿಲುವನ್ನು ಸಾಮಾನ್ಯ ಬ್ರಿಟಿಷ್ ನಾಗರಿಕರು ಖಂಡಿಸಿದ್ದಾರೆ ಎನ್ನುವ ಮಾಹಿತಿ ಕೂಡ ಆ ಫೈಲಿನಲ್ಲಿ ಇದೆ.
ಮತ್ತೊಂದು ದಾಖಲೆ ಇಂತಹ ಘಟನೆಗಳ ಬಗ್ಗೆ ಬ್ರಿಟಿಷ್ ಸರ್ಕಾರ ಅಧಿಕೃತ ನಿಲುವೇನು ಎಂದು ಕೇಳುತ್ತದೆ. ಅಭಿನಂದನಾ ಹೇಳಿಕೆಯನ್ನು ಬಿಡುಗಡೆ ಮಾಡದೇ ಇರುವುದಕ್ಕೆ ಆಕ್ಷೇಪಣೆ ಕೂಡ ವ್ಯಕ್ತವಾಗುತ್ತದೆ.
ಮತ್ತೊಂದು ದಾಖಲೆಯಲ್ಲಿ ಇಸ್ರೇಲಿನ ಕಾರ್ಯಾಚರಣೆ ಕಾನೂನು ಸಮ್ಮತವೋ ಎಂಬ ಪ್ರಶ್ನೆಗೆ ಅಡ್ಡಗೋಡೆ ಮೇಲಿನ ದೀಪದಂತಹ ಉತ್ತರ. ಉಗಾಂಡಾ ದೇಶ ಅಪಹರಣಕಾರರಿಗೆ ಸಹಾಯ ಮಾಡಿತ್ತು ಅಂತಾದರೆ ಮಾತ್ರ ಇಸ್ರೇಲಿಗಳ ಕಾರ್ಯಾಚರಣೆ ಕಾನೂನು ಸಮ್ಮತವಾಗುತ್ತದೆ ಎಂಬ ಅಭಿಪ್ರಾಯ.
ಅಪಹರಣಕಾರರ ನಡುವೆ ಮತ್ತೆ ಉಗಾಂಡದ ಅಧ್ಯಕ್ಷ ಇದಿ ಅಮೀನ್ ಮಧ್ಯೆ ಒಳಸಂಚು (collusion) ಇತ್ತು ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಅಧ್ಯಕ್ಷ ಇದಿ ಅಮೀನರ ವರ್ತನೆ ಅಪಹರಣಕಾರರಿಗೆ ಅವರ ಬೇಡಿಕೆಗಳ ಬಗ್ಗೆ ಕಠಿಣ ಮತ್ತು ಅಚಲ ನಿಲುವು ತಾಳಲು ಸಹಕಾರಿಯಾಯಿತು.
***
ಈ ಅಪಹರಣ ಮಿಥ್ಯಾಧ್ವಜ ಕಾರ್ಯಾಚರಣೆ ಆಗಿರಬಹುದೋ ಎಂದು ಅನ್ನಿಸಲು ಇನ್ನೂ ಕೆಲವು ಕಾರಣಗಳು ಇವೆ.
ಎರಡನೇ ವಿಶ್ವಯುದ್ಧದ ನಂತರ ಯಹೂದಿಗಳಿಗೆ ಒಂದು ಪ್ರತ್ಯೇಕ ದೇಶ ಮಾಡಿಕೊಡಬೇಕು ಎನ್ನುವ ವಿಚಾರ ಅಂತರರಾಷ್ಟ್ರೀಯ ಸಮುದಾಯಕ್ಕೆ ಬಂದಾಗ ಉಗಾಂಡವನ್ನು ಕೂಡ ಗಣನೆಗೆ ತೆಗೆದುಕೊಳ್ಳಲಾಗಿತ್ತು. ಪ್ಯಾಲೆಸ್ಟೈನ್ ಪ್ರದೇಶದ ಜೊತೆ ಕರುಳಬಳ್ಳಿಯ ಧಾರ್ಮಿಕ ಸಂಬಂಧ ಹೊಂದಿದ್ದ ಯಹೂದಿಗಳು ತಮಗೆ ಅಲ್ಲೇ ಪ್ರತ್ಯೇಕ ದೇಶ ಬೇಕೆಂದು ಹಠ ಹಿಡಿದು ಕೂತಾಗ ಬ್ರಿಟಿಷ್ ಪ್ಯಾಲೆಸ್ಟೈನ್ ಪ್ರದೇಶವನ್ನೇ ವಿಭಾಗ ಮಾಡಿ ಇಸ್ರೇಲ್ ಎಂಬ ಹೊಸ ದೇಶವನ್ನು ಸೃಷ್ಟಿಸಿ ಯಹೂದಿಗಳಿಗೆ ಕೊಡಲಾಗಿತ್ತು. ಉಗಾಂಡವೇ ತಮ್ಮ ಮುಂದಿನ ಸ್ವತಂತ್ರ ದೇಶವಾಗಬಹುದೇನೋ ಎಂದು ಭಾವಿಸಿದ್ದ ಯಹೂದಿಗಳು ಯಾವುದಕ್ಕೂ ಇರಲಿ ಎಂದು ಉಗಾಂಡದ ಎಲ್ಲ ಕಡೆ ಎಲ್ಲ ಕ್ಷೇತ್ರಗಳಲ್ಲಿ ಕಾಣುವಂತೆ ಮತ್ತೆ ಕಾಣದಂತೆ ನೆಲೆಯೂರಿದ್ದರು.
ಈ ಹಿನ್ನೆಲೆಯಲ್ಲಿ, ತಮಗೆ ಆ ದೇಶ ಅಷ್ಟು ಪರಿಚಿತ, ಅಲ್ಲಿ ತಮಗೆ ಸಹಾಯ ಮಾಡಬಲ್ಲ ಕಾಣದ ಕೈಗಳಿವೆ, ಹಾಗಾಗಿ ಅಪ್ರಹೃತ ವಿಮಾನವನ್ನು ಅಲ್ಲಿಗೇ ಕರೆದೊಯ್ಯಿರಿ ಎನ್ನುವ ಸೂಚನೆ ಇಸ್ರೇಲಿಗಾಗಿ ಕೆಲಸಮಾಡುತ್ತಿದ್ದ ಉಗ್ರರರಿಗೆ ಕೊಡಲಾಗಿತ್ತೇ? ಮತ್ತೊಂದು ನೆನಪಿಡಬೇಕಾದ ವಿಷಯ ಎಂದರೆ ಇಸ್ರೇಲಿಗಳು ಅಷ್ಟು ಬಿಂದಾಸಾಗಿ ಎಲ್ಲಿ ಬೇಕಾದರೂ ಹೋಗಿ ರಹಸ್ಯ ಕಾರ್ಯಾಚರಣೆ ಮಾಡಿ ಬರಲು ತುಂಬಾ ಸಹಾಯ ಮಾಡುವುದು ಅವರ ಅನಿವಾಸಿ ಸಯಾನಿಮ್ ಪಡೆ. ಸಯಾನಿಮ್ ಪಡೆ ಯಾವುದೇ ರೀತಿಯ ಸೈನಿಕ ಪಡೆಯಲ್ಲ. ಅದು ಪ್ರಪಂಚದ ಬೇರೆ ಬೇರೆ ಕಡೆ ನೆಲೆಸಿರುವ ಯಹೂದಿಗಳ ಅನಿವಾಸಿ ಸಮುದಾಯ (diaspora). ಮಾತೃಭೂಮಿ ಇಸ್ರೇಲಿಗೆ ಎಲ್ಲ ರೀತಿಯ ಸಹಾಯ ಮಾಡುವುದೇ ಅವರ ಕೆಲಸ. ಆ ರೀತಿ ಅವರನ್ನು ಮೊದಲಿಂದಲೂ ತಯಾರು ಮಾಡಿಟ್ಟುಕೊಂಡಿರುತ್ತದೆ ಇಸ್ರೇಲ್. ಅವರಿಗೆ ಅವಶ್ಯಕತೆಗಿಂತ ಹೆಚ್ಚಿನ ಮಾಹಿತಿ ಏನೂ ಗೊತ್ತಿರುವುದಿಲ್ಲ. ರಹಸ್ಯ ಕಾರ್ಯಾಚರಣೆ ಮೇಲೆ ಬಂದಿರುವ ಇಸ್ರೇಲಿ ಬೇಹುಗಾರರಿಗೆ ಸ್ಥಳೀಯ ಬೆಂಬಲ ಕೊಡುವುದಷ್ಟೇ ಅವರ ಕೆಲಸ. ಆದರೆ ಕಾರ್ಯಾಚರಣೆಯ ಯಶಸ್ಸಿಗೆ ಅವರ ಬೆಂಬಲ ತುಂಬಾ ಮಹತ್ವದ್ದು. ಮೊದಲಿಂದಲೂ ಉಗಾಂಡಾ ದೇಶದಲ್ಲಿ ಬಲಶಾಲಿಯಾಗಿದ್ದ ಇಸ್ರೇಲಿ ಸಯಾನಿಮ್ ಪಡೆ ಇದ್ದಿರಲು ಸಾಕು. ಅದು ಎಲ್ಲ ರೀತಿಯ ಸಹಕಾರ ನೀಡಿರಬಹುದು ಈ ಮಿಥ್ಯಾಧ್ವಜ ಕಾರ್ಯಾಚರಣೆಗೆ.
ಎಂಟೆಬ್ಬೆಯ ವಿಮಾನನಿಲ್ದಾಣವನ್ನು ವಿನ್ಯಾಸ ಮಾಡಿ ನಿರ್ಮಿಸಿಕೊಟ್ಟವರೇ ಇಸ್ರೇಲಿಗಳು. ಹಾಗಾಗಿ ಅವರ ಹತ್ತಿರ ವಿಮಾನನಿಲ್ದಾಣದ ನಕ್ಷೆ ಮತ್ತು ಇತರೆ ಸಣ್ಣ ಸಣ್ಣ ವಿವರಗಳೂ ಇದ್ದವು. ಹಾಗಾಗಿ ರಕ್ಷಣಾ ಕಾರ್ಯಾಚರಣೆಯನ್ನು ಪ್ಲಾನ್ ಮಾಡಲು ತುಂಬಾ ಅನುಕೂಲವಾಯಿತು.
ಉಗಾಂಡದ ಸೈನ್ಯಕ್ಕೆ ತರಬೇತಿ ಕೊಟ್ಟವರೇ ಇಸ್ರೇಲಿಗಳು. ಮೂಕಿ ಬೆಟ್ಸರ್ ಎಂಬ ಇಸ್ರೇಲಿನ ಯೋಧರೊಬ್ಬರು ಈ ಬಗ್ಗೆ ತಮ್ಮ ಆತ್ಮಚರಿತೆಯಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ. ನನಗೆ ನೆನಪಿದ್ದಂತೆ ಮೂಕಿ ಬೆಟ್ಸರ್ ಕೂಡ ಎಂಟೆಬ್ಬೆ ರಕ್ಷಣಾ ಕಾರ್ಯಾಚರಣೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು.
ಇನ್ನು ಉಗ್ರರ ಸಂಘಟನೆ PFLP ನಲ್ಲಿ ಇಸ್ರೇಲಿಗಳೇ ನುಗ್ಗಿಸಿದ್ದ, ಇಸ್ರೇಲಿಗಳಿಗೇ ಕೆಲಸ ಮಾಡುತ್ತಿದ್ದ ಜನರಿದ್ದರು. ಅವರು ಮೇಲ್ನೋಟಕ್ಕೆ ಉಗ್ರರ ಸಂಘಟನೆಗೆ ಕೆಲಸ ಮಾಡುವಂತೆ ಕಾಣುತ್ತಿದ್ದರೂ ಅವರ ಸೂತ್ರಧಾರರು ಮಾತ್ರ ಇಸ್ರೇಲಿಗಳಾಗಿದ್ದರು. ಅಂತವರನ್ನು ಡಬಲ್, ಟ್ರಿಪಲ್ ಏಜೆಂಟ್ ಎಂದು ಕರೆಯುತ್ತಾರೆ.
ಪ್ರತಿಯೊಂದು ಬೇಹುಗಾರಿಕೆ ಸಂಸ್ಥೆಯೂ ತಾವು ಹಿಂದೆ ಬಿದ್ದಿರುವ ಉಗ್ರರ ಸಂಘಟನೆಯಲ್ಲಿ ತಮ್ಮ ಜನರನ್ನು ರಹಸ್ಯವಾಗಿ ಸ್ಥಾಪಿಸಲು ಬಯಸುತ್ತದೆ. ಇಂತಹ ಡಬಲ್ ಏಜೆಂಟಗಳ ಕಥಾನಕ ರೋಚಕ. ಸ್ವಲ್ಪ ಸಮತೋಲನ ತಪ್ಪಿದರೂ ಅವರಿಗೆ ಎರಡೂ ಕಡೆ ಅಪಾಯ. ಉಗ್ರರ ಸಂಘಟನೆಗಳಂತೂ ತಮ್ಮಲ್ಲೇ ಅಡಗಿರಬಹುದಾದ ಡಬಲ್ ಏಜೆಂಟರನ್ನು ಕಿತ್ತೆಸೆಯಲು, ತಮ್ಮ ಜನರಿಗೇ, ಕೇವಲ ಸಂಶಯದ ಮೇಲೆ, ಚಿತ್ರವಿಚಿತ್ರ ಹಿಂಸೆ ಕೊಡುತ್ತವೆ. ಕೊಲ್ಲುತ್ತವೆ. ಇತ್ತಕಡೆ ಬೇಹುಗಾರಿಕೆ ಸಂಸ್ಥೆಗಳು ಕೂಡ ಕೆಲಸವಾದ ನಂತರ ಅವರನ್ನು ಸಿಪ್ಪೆ ತರಹ ಬಿಸಾಡುತ್ತವೆ. ಅವರ ಗೌಪ್ಯತೆಯ ಮುಖವಾಡವನ್ನು ಕಳಚಿ (blowing the cover), ಇವರು ಅಬ್ಬೇಪಾರಿಯಾಗಿ ನಿಲ್ಲುವಂತೆ ಮಾಡಿ, ಬೀದಿನಾಯಿ ಸಾವನ್ನು ಕಾಣುವಂತೆ ಕೂಡ ಮಾಡುತ್ತವೆ. ಆದರೂ ದಿನಬೆಳಗಾದರೆ ಡಬಲ್, ಟ್ರಿಪಲ್ ಏಜೆಂಟಗಳೂ ಹುಟ್ಟುತ್ತಲೇ ಇರುತ್ತಾರೆ. ತಮ್ಮ ಸಂಘಟನೆಗೆ ಕೆಲಸ ಮಾಡುತ್ತಲೇ ದ್ರೋಹ ಬಗೆಯುತ್ತಾರೆ. ಡಬಲ್ ಏಜೆಂಟ್ ಆಗಿದ್ದೇವೆ ಎಂದು ತೋರಿಸಿಕೊಳ್ಳುತ್ತಲೇ ಬೇಹುಗಾರಿಕೆ ಸಂಸ್ಥೆಗೂ ದ್ರೋಹ ಬಗೆದು ಮಾತೃ ಸಂಘಟನೆಗೆ ನಿಯತ್ತಾಗಿರುತ್ತಾರೆ. ಅವರು ಟ್ರಿಪಲ್ ಏಜೆಂಟುಗಳು. ಬೇಹುಗಾರಿಕೆ ಸಂಸ್ಥೆಗಳ ಅಧಿಕೃತ ನೌಕರರೇ ಬೇರೆ ದೇಶಗಳಿಗೆ, ಉಗ್ರರ ಸಂಘಟನೆಗಳಿಗೆ ಡಬಲ್ ಏಜೆಂಟ್ ಆಗಿದ್ದೂ ಇದೆ. ಅಂತವರನ್ನು ಕಂಡು ಹಿಡಿಯಲೆಂದೇ ಪ್ರತಿಯೊಂದು ಬೇಹುಗಾರಿಕೆ ಸಂಸ್ಥೆಯಲ್ಲಿ ಕೌಂಟರ್ ಇಂಟೆಲಿಜೆನ್ಸ್ ಎನ್ನುವ ವಿಭಾಗವಿರುತ್ತದೆ. ಆ ವಿಭಾಗ ತುಂಬಾ ಮಹತ್ವದ ವಿಭಾಗ. (ಹಿಂದೊಮ್ಮೆ ರಷಿಯಾದ ಡಬಲ್ ಟ್ರಿಪಲ್ ಏಜೆಂಟ್ ಒಬ್ಬ ಸಿಐಎ ಕೌಂಟರ್ ಇಂಟೆಲಿಜೆನ್ಸ್ ವಿಭಾಗದ ಮುಖ್ಯಸ್ಥರನ್ನೇ ಮಂಗ್ಯಾ ಮಾಡಿ ಇಡೀ ಸಿಐಎ ತಲೆ ಹನ್ನೆರಡಾಣೆ ಆಗುವಂತೆ ಮಾಡಿದ್ದರ ಬಗ್ಗೆ ಹಿಂದೊಮ್ಮೆ ಬರೆದ ಲೇಖನ. ಆಸಕ್ತರು ಓದಿ.)
ಪ್ಯಾಲೆಸ್ಟೈನ್ ಸಂಗ್ರಾಮ ಶುರುವಾದಾಗಿಂದಲೂ ಇಸ್ರೇಲ್ ಅತ್ಯಂತ ಕ್ರಮಬದ್ಧವಾಗಿ ಮಾಡಿಕೊಂಡು ಬಂದ ಕೆಲಸವೆಂದರೆ ಪ್ರತಿಯೊಂದು ಉಗ್ರರ ಸಂಘಟನೆಯಲ್ಲಿ ತಮ್ಮ ತಮ್ಮ ಜನರನ್ನು ತುರುಕಿ, ಅವರನ್ನು ದಶಕಗಳ ಕಾಲ ಸಾಕಿ ಸಲಹಿ, ಬೇಕಾದ ಮಾಹಿತಿ ತೆಗೆದು, ಪ್ಯಾಲೆಸ್ಟೈನ್ ಉಗ್ರರನ್ನು ಬೆಂಡೆತ್ತಿ ಅವರ ಸಂಗ್ರಾಮವನ್ನು ಹತ್ತಿಕ್ಕಿದ್ದು ಮತ್ತು ಹತೋಟಿಯಲ್ಲಿ ಇಟ್ಟುಕೊಂಡಿದ್ದು.
ಕೆಲವು ಸಲವಂತೂ ಒಂದು ಪ್ಯಾಲೆಸ್ಟೈನ್ ಉಗ್ರರ ಸಂಘಟನೆಯನ್ನು ಮಟ್ಟ ಹಾಕಲು ಮತ್ತೊಂದು ಹೊಸ ಸಂಘಟನೆಯನ್ನು ಖುದ್ದು ಇಸ್ರೇಲೇ ಹುಟ್ಟುಹಾಕಿದ್ದೂ ಇದೆ. ಇವತ್ತು ಹಮಾಸ್ ಮೇಲೆ ದೊಡ್ಡ ಯುದ್ಧ ಮಾಡುತ್ತಿರುವ ಇಸ್ರೇಲೇ ೨೦೦೦ ರ ಸಮಯದಲ್ಲಿ ಯಾಸೀರ್ ಅರಾಫತ್ ಮತ್ತು ಅವರ ಫತಾಹ್ ಬಣವನ್ನು ಹಣಿಯಲೆಂದೇ ಹಮಾಸ್ ಸಂಘಟನೆಯನ್ನು ಹುಟ್ಟುಹಾಕಿತ್ತು. ಹಾಗಾಗಿಯೇ ಯಾಸೀರ್ ಅರಾಫತ್ ಬಣಕ್ಕೆ ಗಾಝಾ ಪಟ್ಟಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಆಗಲೇ ಇಲ್ಲ. ಅದೇನಿದ್ದರೂ ಹಮಾಸ್ ಪ್ರಾಬಲ್ಯದ ಪ್ರದೇಶ. ಪ್ಯಾಲೆಸ್ಟೈನ್ ದೇಶದ ಭಾಗಗಳಾದ ಗಾಝಾ ಮತ್ತು ಪಶ್ಚಿಮ ತೀರದಲ್ಲಿ (West Bank) ಹಮಾಸ್ ಮತ್ತು ಫತಾಹ್ ಬಣ ಪ್ರತ್ಯೇಕವಾಗಿ ಬಲಶಾಲಿಯಾಗಿರುವಂತೆ ನೋಡಿಕೊಂಡು, ವಿಭಜಿಸಿ ಆಳುವ ನೀತಿಯನ್ನು ಪರಾಕಾಷ್ಠೆಗೆ ಒಯ್ದದ್ದು ಇಸ್ರೇಲಿನ ಹಿಕ್ಮತ್ತು.
ಎಲ್ಲ ಉಗ್ರರ ಸಂಘಟನೆಗಳಲ್ಲಿಇಸ್ರೇಲಿನ ಡಬಲ್ ಏಜೆಂಟುಗಳಿದ್ದಾರೆ. ಪರಮನಾಯಕ ಯಾಸೀರ್ ಅರಾಫತರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದ ಫೋರ್ಸ್ - ೧೭ ಎಂಬ ಖಾಸ್ ಅಂಗರಕ್ಷಕ ಪಡೆಯಲ್ಲಿಯೇ ಎರಡು ಮೂರು ಇಸ್ರೇಲಿ ಡಬಲ್ ಏಜೆಂಟುಗಳು ಇದ್ದರು ಎಂದರೆ ಇಸ್ರೇಲಿನ ಬೇಹುಗಾರಿಕೆ ಜಾಲ ಎಷ್ಟು ಆಳವಾಗಿ ಹೋಗಿರುತ್ತದೆ ಎಂದು ತಿಳಿಯಬಹದು. ಅನೇಕ ಪ್ಯಾಲೆಸ್ಟೈನ್ ಉಗ್ರ ನಾಯಕರು ವಿಷಪ್ರಾಶನಕ್ಕೆ ಒಳಗಾಗಿ ಸತ್ತರು ಎಂಬ ಮಾತಿದೆ. ಅತ್ಯಂತ ಖಾಸ್ ಜನರು compromise ಆಗಿರದಿದ್ದರೆ ವಿಷಪ್ರಾಶನ ಮಾಡಿಸಲು ಸಾಧ್ಯವೇ? ವಾಡಿ ಹದ್ದಾದ್ ಎಂಬ ಇದೇ PFLP ಸಂಘಟನೆಯ ನಾಯಕನಂತೂ ವಿಷಮಿಶ್ರಿತ ಚಾಕ್ಲೆಟ್ ಮೆದ್ದೇ ಸತ್ತ. ಯಾಸೀರ್ ಅರಾಫತ್ ಅವರಿಗೂ ವಿಷಪ್ರಾಶನ ಮಾಡಿಯೇ ಕೊಂದರು ಎಂಬ ಮಾತಿದೆ. ಅದರ ಬಗ್ಗೆ ಅಲ್-ಜಜೀರಾ ಒಂದು ಸಾಕ್ಷ್ಯಚಿತ್ರ ಕೂಡ ಮಾಡಿದೆ.
ಅಂದಿನ PFLP ಎಂಬ ಪ್ಯಾಲೇಸ್ಟಿನ್ ಉಗ್ರ ಸಂಘಟನೆಯಲ್ಲಿಯೂ ಇಸ್ರೇಲಿ ಡಬಲ್ ಏಜೆಂಟುಗಳು ತುರಕಲ್ಪಟ್ಟಿರುವ ಸಾಧ್ಯತೆಗಳು ಸಾಕಷ್ಟಿದ್ದವು ಎನ್ನುವ ಮಾತಿಗೆ ಮೇಲಿನ ವಿವರಣೆ ಕೊಡಬೇಕಾಯಿತು.
ಆ ಸಮಯದಲ್ಲಿ ಪ್ಯಾಲೆಸ್ಟೈನ್ ಉಗ್ರರು ವಿಮಾನ ಅಪಹರಣಗಳನ್ನು ಒಂದು ಪರಿಶುದ್ಧ ಕಲೆಯಂತೆ ಮಾಡಿಕೊಂಡು ಪರಿಣಿತಿ ಸಾಧಿಸಿದ್ದರು. ಆ ಮೂಲಕ ಪಾಶ್ಚಿಮಾತ್ಯ ದೇಶಗಳಿಗೇನು ಕಮ್ಮಿ ಕಾಟ ಕೊಟ್ಟರೆ!? ಆಕಸ್ಮಾತ ಅವರ ಉಗ್ರರು ಜರ್ಮನಿಯಲ್ಲೋ, ಫ್ರಾನ್ಸಿನಲ್ಲೋ, ಇಟಲಿಯಲ್ಲೋ ಬಂಧಿತರಾದರು ಅಂದುಕೊಳ್ಳಿ. ಬಿಡಿಸಿಕೊಳ್ಳಲು ಮಾಡಬೇಕಾಗಿದ್ದು ಒಂದೇ ಕೆಲಸ. ಒಂದು ವಿಮಾನವನ್ನು ಅಪಹರಣ ಮಾಡುವುದು. ನಂತರ ಪ್ಯಾಲೆಸ್ಟೈನ್ ಸಂಗ್ರಾಮಕ್ಕೆ ಬೆಂಬಲ ಸೂಚಿಸುತ್ತಿದ್ದ ದುಷ್ಟ ಸರ್ವಾಧಿಕಾರಿಗಳಿದ್ದ ಲಿಬಿಯಾಕ್ಕೋ, ಇರಾಕಿಗೋ, ಅಲ್ಜೇರಿಯಾಕ್ಕೋ ಮತ್ತೆಲ್ಲೋ ತೆಗೆದುಕೊಂಡು ಹೋಗಿ ಸರ್ಕಾರಗಳೊಂದಿಗೆ ಚೌಕಾಸಿಗೆ ಕೂಡುವುದು. ವಿದೇಶಗಳಲ್ಲಿ ಬಂಧಿತರಾಗಿದ್ದ ಉಗ್ರರು ಬಿಡುಗಡೆಯಾದಂತೆ ಇಲ್ಲಿ ಕೂಡ ಅಪಹೃತರು ಬಿಡುಗಡೆಯಾಗುತ್ತಿದ್ದರು. ಅಪಹರಣಕಾರರು ಸ್ಥಳೀಯ ಆಡಳಿತದ ಆತಿಥ್ಯ ಸ್ವೀಕರಿಸಿ ಮುಂದಿನ ಅಪಹರಣಕ್ಕೆ ಸ್ಕೆಚ್ ಹಾಕುತ್ತಿದ್ದರು.
ಆದರೆ ಈ ಎಂಟೆಬ್ಬೆ ವಿಮಾನ ಅಪಹರಣವನ್ನು ನೋಡಿ. ಅಪಹರಣಕಾರರು ಗ್ರೀಸ್ ದೇಶದ ಅಥೆನ್ಸ್ ನಿಂದ ಹೊರಟ ವಿಮಾನವನ್ನು ಅಪಹರಿಸಿದರು. ಅದರಲ್ಲಿ ಹೆಚ್ಚಿನವರು ಇಸ್ರೇಲಿ ಪ್ರಯಾಣಿಕರೇ ಇದ್ದರು. ಇಲ್ಲಿ ಕೂಡ ವಿಮಾನ ಮೊದಲು ಲಿಬಿಯಾದ ಬೆಂಗಾಜಿಯಲ್ಲಿ ತಾತ್ಕಾಲಿಕವಾಗಿ ಇಳಿಯಿತು. ಆದರೆ ಮತ್ತೆ ಮೇಲೆ ಹಾರಿದ ವಿಮಾನ ನಂತರ ಇಳಿದಿದ್ದು ಉಗಾಂಡದ ಎಂಟೆಬ್ಬೆಯಲ್ಲಿ. ಬೆಂಗಾಜಿಯಲ್ಲಿ ಇಳಿಸಿದಿದ್ದು ನಾಟಕದ ಭಾಗವಾಗಿತ್ತೇ? ನಂತರ ಎಂಟೆಬ್ಬೆಗೇ ಬಂದಿಳಿದಿದ್ದು ಏಕೆ? ಬೇರೆ ಎಲ್ಲಾದರೂ ಕೂಡ ಹೋಗಬಹುದಿತ್ತಲ್ಲ. ಅಂತಹ ಪ್ರಕರಣ ಮುಂದೆಂದೂ ಉಗಾಂಡಾದಲ್ಲಿ ಆಗಿಲ್ಲ.
ವಿಮಾನ ಅಪಹರಣವಾಗಿ ಉಗಾಂಡದಲ್ಲಿ ಬಂದು ಇಳಿದಾಗ ಅಧ್ಯಕ್ಷ ಇದಿ ಅಮೀನ್, ತುಂಬಾ "ಅನುಕೂಲಕರ"ವೆನ್ನುವಂತೆ, ವಿದೇಶ ಪ್ರವಾಸದಲ್ಲಿದ್ದ. ಅವನ ವೇಳಾಪಟ್ಟಿಯನ್ನು ನೋಡಿಕೊಂಡೇ ಅಪಹರಣದ ಸ್ಕೆಚ್ ಹಾಕಲಾಗಿತ್ತೇ? ಇದಿ ಅಮೀನ್ ಮೇಲ್ನೋಟಕ್ಕೆ ಇಸ್ರೇಲಿನ ದ್ವೇಷಿಯಾಗಿದ್ದ. ಅವನ ಕೆಳಗಿನ ಅಧಿಕಾರಿಗಳು ಎಲ್ಲಿ ಇಸ್ರೇಲಿಗೆ compromise ಆಗಿದ್ದರೋ ಏನೋ? ಅವರ ಋಣದಲ್ಲಿದ್ದರೇನೋ??
ಇಸ್ರೇಲಿಗೆ ತನ್ನದೇ ದೇಶದ ನಾಗರಿಕರನ್ನು ಅಷ್ಟು ದೊಡ್ಡ ಮಟ್ಟದ ಅಪಾಯಕ್ಕೆ ತಳ್ಳಿ ಇಂತಹ ಒಂದು ಮಿಥ್ಯಾಧ್ವಜ ಕಾರ್ಯಾಚರಣೆಯನ್ನು ಮಾಡಿಸುವ ಅಂತಹ ದರ್ದೇನಿತ್ತು? ಸರಳ ಉತ್ತರ - ಪ್ಯಾಲೆಸ್ಟೈನ್ ಸಂಗ್ರಾಮಕ್ಕೆ ಕಪ್ಪುಬಣ್ಣ ಬಳಿಯುವುದು. ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಖಭಂಗ ಉಂಟುಮಾಡುವುದು. ಇಸ್ರೇಲ್ ಶಾಂತಿಗಾಗಿ ಪ್ರಯತ್ನಿಸುತ್ತಿದ್ದರೆ ಪ್ಯಾಲೆಸ್ಟೈನ್ ಹೋರಾಟಗಾರರು ಹಿಂಸೆ ತ್ಯಜಿಸುತ್ತಿಲ್ಲ ಎನ್ನುವ ಭಾವನೆ ಮೂಡುವಂತೆ ಮಾಡುವುದು. ಒಟ್ಟಿನಲ್ಲಿ ಪ್ಯಾಲೆಸ್ಟೈನ್ ಉಗ್ರರ ಪ್ರಾಬಲ್ಯವನ್ನು, ಅವರಿಗಿರುವ ನೈತಿಕ ಬೆಂಬಲವನ್ನು ಕುಗ್ಗಿಸುವುದು. ಅವರನ್ನು ಬೆಂಬಲಿಸುವ ದೇಶಗಳಿಗೂ ಸಹಿತ ಅನ್ನಿಸಬೇಕು, ಇಂತಹ ಹಿಂಸಾತ್ಮಕ ದುರುಳರನ್ನು ಬೆಂಬಲಿಸಿದರೆ ಅಂತರರಾಷ್ಟ್ರೀಯ ಸಮುದಾಯದಲ್ಲಿ ನಮ್ಮ ಮರ್ಯಾದೆ ಕೂಡ ಹೋಗುತ್ತದೆ.
ಇಸ್ರೇಲ್ ಬೇರೆ ಬೇರೆ ಪ್ಯಾಲೆಸ್ಟೈನ್ ಗುಂಪುಗಳನ್ನು ಭೇದಿಸಿ (infiltrate ಮಾಡಿ) ಇಂತಹ ಮಿಥ್ಯಾಧ್ವಜ ಕಾರ್ಯಾಚರಣೆಗಳನ್ನು ಮಾಡಿಸುತ್ತಲೇ ಇರುತ್ತದೆ ಎಂಬ ಆಪಾದನೆ ಇಂದು ನಿನ್ನೆಯದಲ್ಲ. ೧೯೮೦ ರ ದಶಕದಲ್ಲಿ ಅಬು ನಿಡಾಲ್ ಬಣದ ಪ್ಯಾಲೆಸ್ಟೈನ್ ಉಗ್ರರು ಭಾರತದಲ್ಲೇ ಕತಾರ್, ಕುವೈತ್ ಮುಂತಾದ ದೇಶದ ರಾಯಭಾರಿಗಳನ್ನು ಗುಂಡಿಟ್ಟು ಕೊಂದಿದ್ದರು. ಅದನ್ನು ಪ್ಯಾಲೆಸ್ಟೈನ್ ಗುಂಪುಗಳ ಮಧ್ಯದ ಅಂತರ್ಯುದ್ಧ ವಿದೇಶಗಳಿಗೂ ಹಬ್ಬಿದ ನಿದರ್ಶನ ಎಂದು ಹೇಳಲಾಯಿತು. ಕುವೈತ್, ಕತಾರ್ ದೇಶಗಳು ಅರಾಫತ್ ಅವರ ಫತಾಹ್ ಬಣಕ್ಕೆ ಮಾತ್ರ ಹಣಕಾಸಿನ ಸಹಾಯ ಮಾಡುತ್ತಿವೆ ಎನ್ನುವ ಕೋಪದಿಂದ ಅಬು ನಿಡಾಲ್ ಬಣ ಆ ದೇಶಗಳ ರಾಯಭಾರಿಗಳ ಮೇಲೆ ದಾಳಿ ಮಾಡಿತು ಎಂಬುದು ಅಧಿಕೃತ ಸುದ್ದಿಯಾದರೂ ಅಬು ನಿಡಾಲನ ಸಂಘಟನೆಯನ್ನು ತುಂಬಾ ಆಳವಾಗಿ ಒಳಹೊಕ್ಕಿದ್ದ (penetrate ಮಾಡಿದ್ದ) ಮೊಸ್ಸಾದ್, ಸಿಐಎ ಆ ಕಾರ್ಯಾಚರಣೆಗಳನ್ನು ತಮ್ಮ ರಾಜತಾಂತ್ರಿಕ ಉದ್ದೇಶಗಳಿಗೆ ಮಿಥ್ಯಾಧ್ವಜ ಕಾರ್ಯಾಚರಣೆಗಳಂತೆ ಉಪಯೋಗಿಸಿಕೊಂಡವೇ ಎಂಬ ಸಂಚಿನ ಸಿದ್ಧಾಂತಗಳು (conspiracy theories) ಉದ್ಭವವಾಗಿದ್ದು ನಿಜ. ಮುಂಬೈನಲ್ಲಿ ಬ್ರಿಟಿಷ್ ಹೈಕಮಿಷನ್ ಅಧಿಕಾರಿ ನೊರ್ರಿಸ್ ಎಂಬಾತನನ್ನು ಬೈಕ್ ಮೇಲೆ ಬಂದ ಬಂದೂಕುಧಾರಿಗಳು ಗುಂಡಿಟ್ಟು ಕೊಂದರು. ಮುಂಬೈ ವಿಮಾನನಿಲ್ದಾಣದಿಂದ ಹೊರಬರುತ್ತಿದ್ದ ಅಲಿಟಾಲಿಯಾ ಇಟಾಲಿಯನ್ ವಿಮಾನ ಸಂಸ್ಥೆಯ ಸಿಬ್ಬಂದಿ ಮೇಲೆ ಯದ್ವಾತದ್ವಾ ಗುಂಡಿನ ಮಳೆ ಸುರಿಸಿದರು. ಅವೆಲ್ಲವನ್ನೂ ಅಬು ನಿಡಾಲ್ ಬಣದ ಪ್ಯಾಲೆಸ್ಟೈನ್ ಉಗ್ರರ ತಲೆಗೆ ಕಟ್ಟಿದರು. ಆ ದಾಳಿಗಳ ಹಿಂದಿನ ಉದ್ದೇಶ ಏನಿತ್ತೋ?? ಪ್ಯಾಲೆಸ್ಟೈನ್ ಸಂಗ್ರಾಮಕ್ಕೆ ತಾತ್ವಿಕ ಮತ್ತು ನೈತಿಕ ಬೆಂಬಲ ಕೊಟ್ಟಿದ್ದ ಅಂದಿನ ಭಾರತೀಯ ಆಡಳಿತಕ್ಕೆ, 'ಪ್ಯಾಲೆಸ್ಟೈನ್ ಸಂಗ್ರಾಮ ಬೆಂಬಲಿಸಿ, ಇಸ್ರೇಲನ್ನು ಖಂಡಿಸುತ್ತೀರಿ ನೀವು. ಪ್ಯಾಲೆಸ್ಟೈನ್ ಉಗ್ರರು ನಿಮ್ಮ ದೇಶದಲ್ಲೇ ಹಿಂಸಾಚಾರ ಮಾಡುತ್ತಿದ್ದಾರೆ. ಅವರಿಗೆ ನೀವು ಕೊಡುವ ಬೆಂಬಲ ಯಾವ ಪುರುಷಾರ್ಥಕ್ಕೆ??' ಎನ್ನುವ ಒತ್ತಡ ಹಾಕುವ ಹುನ್ನಾರವಿತ್ತೇ? ಭಾರತ ಯಾಸೀರ್ ಅರಾಫತ್ ಅವರಿಗೆ ಮಾತ್ರ ಬೆಂಬಲ ಸೂಚಿಸಿತ್ತು. ಅದೇ ಕಾರಣಕ್ಕೆ ಅವರ ವಿರೋಧಿ ಅಬು ನಿಡಾಲ್ ಭಾರತದಲ್ಲಿ ಹಿಂಸಾಚಾರ ಮಾಡಿದ ಎನ್ನುವ ಸಂದೇಶವನ್ನು ಕಳಿಸುವ ಹುನ್ನಾರ ಕೂಡ ಇತ್ತೋ ಏನೋ!?? ಅಂತರರಾಷ್ಟೀಯ ಸಂಚುಗಳ ಚದುರಂಗದಾಟ ಸುಲಭವಾಗಿ ಅರ್ಥವಾಗುವುದಿಲ್ಲ.
೧೯೮೧ ರಲ್ಲಿ ಲೆಬನಾನ್ ಮೇಲೆ ದೊಡ್ಡ ಪ್ರಮಾಣದ ಯುದ್ಧ ಮಾಡಲು ಇಸ್ರೇಲಿಗೆ ಒಂದು ಬರೋಬ್ಬರಿ ಕಾರಣ ಬೇಕಾಗಿತ್ತು. ಸಿಕ್ಕಿತು ಕೂಡ. ದೂರದ ಇಂಗ್ಲೆಂಡ್ ದೇಶದ ರಾಜಧಾನಿ ಲಂಡನ್ನಿನಲ್ಲಿ ಇಸ್ರೇಲ್ ರಾಯಭಾರಿಯ ಮೇಲೆ ಯಾರೋ ಗುಂಡು ಹಾರಿಸಿದರು. ಗುಂಡು ಹಾರಿಸಿದ್ದು, ಮತ್ತದೇ ಅಬು ನಿಡಾಲ್ ಬಣದ ಪ್ಯಾಲೆಸ್ಟೈನ್ ಉಗ್ರ ಎಂದಿತು ಇಸ್ರೇಲ್. ಅವರು ಲೆಬನಾನಿನಲ್ಲಿ ಅಡಗಿದ್ದಾರೆ. ಅವರ ಹುಟ್ಟಡಗಿಸಲೇಬೇಕು ಎಂದು ಲೆಬನಾನ್ ಮೇಲೆ ಮುರಿದುಕೊಂಡು ಬಿದ್ದರು. ಅಬು ನಿಡಾಲ್ ಸಂಘಟನೆಯಲ್ಲಿದ್ದ ಡಬಲ್ ಏಜೆಂಟುಗಳು ಕಾರ್ಯ ಸಾಧಿಸಿ ಕೊಟ್ಟಿದ್ದರು ಎಂಬುದು ಒಳಗಿನ ಸುದ್ದಿ. ಲಂಡನ್ನಿನ ದಾಳಿಯಲ್ಲಿ ಇಸ್ರೇಲಿ ರಾಯಭಾರಿ ಚಿಕ್ಕಪುಟ್ಟ ಗಾಯಗಳಿಂದ ಪಾರಾದ. ಆದರೆ ಇಸ್ರೇಲ್ ಲೆಬನಾನ್ ಮೇಲೆ ಮಾಡಿದ ಪೂರ್ಣಪ್ರಮಾಣದ ದಾಳಿಗೆ ಯಾರೂ ತಕರಾರು ತೆಗೆಯುವಂತಿರಲಿಲ್ಲ. ಒಟ್ಟಿನಲ್ಲಿ ಮಿಥ್ಯಾಧ್ವಜ ಕಾರ್ಯಾಚರಣೆಯೆಂದರೆ ಯಾರದ್ದೋ ಬಸಿರು, ಇನ್ನ್ಯಾರದ್ದೋ ಹೆಸರು.
ಬೇರೆಯವರಿಗೆ ನಂಬಿಕೆ ಬರುವಂತೆ ಮಾಡಲು ಮಿಥ್ಯಾಧ್ವಜ ಕಾರ್ಯಾಚರಣೆಗಳನ್ನು ಮಾಡಿಸಿ ಗುಪ್ತವಾದ ಕಾರ್ಯಸೂಚಿಯನ್ನು (hidden agenda) ಸಾಧಿಸುವುದು ಒಂದು ಮಾತು. ನೂರಾರು ಜನ ನಿಷ್ಪಾಪಿ ನಾಗರಿಕರನ್ನು ಸಾವಿನ ದವಡೆಗೆ ತಳ್ಳಿ, ಅನೇಕ ಸೈನಿಕರನ್ನು do or die ಕಾದಾಟಕ್ಕೆ ಕಳಿಸಿ, ನಿಜವೇನೋ ಅನ್ನಿಸುವಂತಹ ಮಿಥ್ಯಾಧ್ವಜ ಕಾರ್ಯಾಚರಣೆಗಳನ್ನು ಮಾಡಿಸುತ್ತಾರೆಯೇ? ಅದು ಸಾಧ್ಯವೇ? ಸಿಕ್ಕಿಬಿದ್ದರೆ ತೊಂದರೆಯಲ್ಲವೇ? ಎಂಬ ಪ್ರಶ್ನೆಗಳಿಗೆ ಸಿದ್ಧ ಉತ್ತರವಿಲ್ಲ. ಅದೇನೋ ಹೇಳುತ್ತಾರಲ್ಲ...ಕುಟುಂಬದ ಹಿತಕ್ಕಾಗಿ ಒಬ್ಬ ಕುಟುಂಬದ ಸದಸ್ಯನನ್ನೂ, ಗ್ರಾಮದ ಹಿತಕ್ಕಾಗಿ ಒಂದು ಕುಟುಂಬವನ್ನೂ, ರಾಜ್ಯದ ಹಿತಕ್ಕಾಗಿ ಒಂದು ಗ್ರಾಮವನ್ನೂ ಬಲಿ ಕೊಡಬಹುದಂತೆ. ಹಾಗಾಗಿ ದೊಡ್ಡ ಮಟ್ಟದಲ್ಲಿ ದೇಶಕ್ಕೆ ಲಾಭವಾಗಲಿದೆ ಎಂದು ನಮ್ಮನ್ನು ಆಳುವವರು ನಿರ್ಧರಿಸಿದರೆ ನಿಮ್ಮ explicit ಒಪ್ಪಿಗೆ ಇಲ್ಲದೆಯೂ ನಿಮ್ಮ ಆಹುತಿಯನ್ನು ಅವರು ಕೊಡುತ್ತಾರೆ. ಅದಕ್ಕೆ ಬೇಕಾದ ಅನುಮತಿ, ಶಕ್ತಿ, ಗೌಪ್ಯತೆ, ದಾಖಲೆಗೆ ಸಿಕ್ಕದ ಸಂಪನ್ಮೂಲಗಳು ಎಲ್ಲವನ್ನೂ ನಾವೇ ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಅವರಿಗೆ ದಯಪಾಲಿಸಿದ್ದೇವೆ ತಾನೇ??
ಅಮೆರಿಕ ಎರಡನೇ ಮಹಾಯುದ್ಧಕ್ಕೆ ನೇರವಾಗಿ ಧುಮುಕಲು ಕಾರಣವಾದ ಪರ್ಲ್ ಹಾರ್ಬರ್ ಎನ್ನುವ ಅಮೇರಿಕಾದ ನೌಕಾನೆಲೆ ಮೇಲೆ ಜಪಾನ್ ಮಾಡಿದ ದಾಳಿ ಕೂಡ ಒಂದು ತರಹದ ಮಿಥ್ಯಾಧ್ವಜ ಕಾರ್ಯಾಚರಣೆಯಾಗಿತ್ತು ಅನ್ನುತ್ತಾರೆ. ಜಪಾನಿಗಳು ನೌಕಾನೆಲೆ ಮೇಲೆ ದಾಳಿ ಮಾಡುವ ಬಗ್ಗೆ ಮಾಹಿತಿ ಇತ್ತು. ಅದನ್ನು ಅದನ್ನು ತಡೆಯದೇ ಬೇಕೆಂದೇ ಘಟಿಸಲು ಬಿಟ್ಟರು. ಏಕೆಂದರೆ ಅಂತದೊಂದು ಆಘಾತಕರ ದಾಳಿ ಆದ ಹೊರತೂ ಯುದ್ಧಕ್ಕೆ ಜನ ಬೆಂಬಲ ಸಿಗುತ್ತಿರಲಿಲ್ಲ. ಹಾಗೆಂದು ಕೆಲವರ ಸಂಚಿನ ಸಿದ್ಧಾಂತ (conspiracy theory).
ವಿಯೆಟ್ನಾಂ ಯುದ್ಧದಲ್ಲಿ ಅಮೆರಿಕಾ ನೇರವಾಗಿ ಭಾಗವಹಿಸಲು ಕಾರಣವಾಗಿದ್ದು ಟೊಂಕಿನ್ ಕೊಲ್ಲಿಯಲ್ಲಿ ಅಮೇರಿಕಾದ ನೌಕೆಗಳ ಮೇಲಾಯಿತು ಎಂದು ಹೇಳಲಾದ ಗುಂಡಿನ ದಾಳಿ. ಆ ದಾಳಿ ಮಾಡಿದ್ದು ಉತ್ತರ ವಿಯೆಟ್ನಾಂ ಎಂದು ಘೋಷಿಸಿದ ಅಮೇರಿಕ ಅಧಿಕೃತವಾಗಿ ಯುದ್ಧಕ್ಕೆ ಇಳಿಯಿತು. ಅ ಘಟನೆ ಬಗ್ಗೆ ಕೂಡ ಸಂಶಯಗಳಿವೆ. ಆಗಿನ ಅಧ್ಯಕ್ಷ ಲಿಂಡನ್ ಜಾನ್ಸನ್ ಖಾಸಗಿಯಾಗಿ ಜೋಕ್ ಹೊಡೆದಿದ್ದರಂತೆ, ಸಮುದ್ರದಲ್ಲಿದ್ದ ತಿಮಿಂಗಲುಗಳ ಮೇಲೆ ಗುಂಡು ಹಾರಿಸಿ ಅಂತಹ ಸನ್ನಿವೇಶ ಸೃಷ್ಟಿಸಿದೆವು. ಹಾ!! ಹಾ!! ಎನ್ನುವ ಅಟ್ಟಹಾಸದ ನಗು ಬೇರೆ. ಟಿಪಿಕಲ್ ಜಾಲಿ ಫೆಲೋ ಲಿಂಡನ್ ಜಾನ್ಸನ್.
ಸೆಪ್ಟೆಂಬರ್ ೧೧, ೨೦೦೧ ರ ಅಲ್ ಖೈದಾ ದಾಳಿ ಕೂಡ ಮಿಥ್ಯಾಧ್ವಜ ಕಾರ್ಯಾಚರಣೆಯಾಗಿತ್ತೇ? ಇರಬಹುದೇನೋ ಎಂದು ಪ್ರತಿಪಾದಿಸಿ ಪುಸ್ತಕ ಬರೆದವರು ತನಿಖಾ ಪತ್ರಕರ್ತ ದಿವಂಗತ ಜಿಮ್ ಮಾರ್ಸ್. Inside Job: Unmasking the 9/11 Conspiracies by Jim Marrs
ದೇಶದ so called ಹಿತರಕ್ಷಣೆಗಾಗಿ ಮಿಥ್ಯಾಧ್ವಜ ಕಾರ್ಯಾಚರಣೆಗಳು ನಡೆಯುತ್ತಲೇ ಇರುತ್ತವೆ. ಭಾರತದ ಪ್ರಪಥಮ ವಿಮಾನ ಅಪಹರಣ ಕೂಡ ಮಿಥ್ಯಾಧ್ವಜ ಕಾರ್ಯಾಚರಣೆಯಾಗಿತ್ತು ಅಂದರೆ ನೀವು ನಂಬುತ್ತೀರೋ? ೧೯೭೧ ರಲ್ಲಿ ಭಾರತದ ಮೊದಲ ವಿಮಾನ ಅಪಹರಣ ನಡೆದಾಗ ಅದನ್ನು ಪಾಕಿಸ್ತಾನಿ ಬೆಂಬಲಿತ ಕಾಶ್ಮೀರಿ ಭಯೋತ್ಪಾದಕ ಮಾಡಿದ ಎಂಬಂತೆ ಬಿಂಬಿಸಲಾಯಿತು. ಮೇಲ್ನೋಟಕ್ಕೆ ಅದು ಸರಿಯಾಗಿತ್ತು. ಭಾರತಕ್ಕೆ ಬಾಂಗ್ಲಾ ವಿಮೋಚನೆಗೆ ವೇದಿಕೆ ಸಜ್ಜು ಮಾಡಿಕೊಳ್ಳಬೇಕಿತ್ತು. ಪಾಕಿಸ್ತಾನವು ವಿಮಾನ ಅಪಹರಣಕ್ಕೆ ಸಹಕಾರ ನೀಡಿದೆ ಎಂದು ಆಪಾದಿಸಿ ಪಾಕಿಸ್ತಾನವನ್ನು ರಾಜತಾಂತ್ರಿಕವಾಗಿ ನಿಷ್ಕ್ರಿಯಗೊಳಿಸಬೇಕಿತ್ತು. ಭಾರತದ ಮೇಲೆ ಪಾಕಿಸ್ತಾನದ ವಿಮಾನಗಳು ಹಾರದಂತೆ ನಿರ್ಬಂಧ ವಿಧಿಸಲು ಒಂದು ಸರಿಯಾದ ಖಡಕ್ ಕಾರಣ ಬೇಕಿತ್ತು. ಹಾಗಾಗಿ ಅಂಥದೊಂದು ಮಿಥ್ಯಾಧ್ವಜ ಕಾರ್ಯಾಚರಣೆಯ ಜರೂರತ್ತಿತ್ತೇನೋ. ಅಂತ್ಯದಲ್ಲಿ ಅದು ಸುಖಾಂತವಾಯಿತು. ಪಾಕಿಸ್ತಾನಕ್ಕೆ ಅಪಹರಿಸಲ್ಪಟ್ಟಿದ್ದ ಪ್ರಯಾಣಿಕರು ಮರುದಿವಸವೇ ವಾಘಾ ಗಡಿಯ ಮೂಲಕ ಬಸ್ ಮೇಲೆ ಸುರಕ್ಷಿತವಾಗಿ ಹಿಂತಿರುಗಿದರು. ಅಪಹರಣಕಾರ ವಿಮಾನವನ್ನು ಸ್ಫೋಟಿಸಿದ. ಪಾಕಿಸ್ತಾನದ ಬಂಧಿಯಾದ. ಈಗ ಐವತ್ತು ವರ್ಷಗಳ ಬಳಿಕ ಆ ಕಾರ್ಯಾಚರಣೆಯನ್ನು ಪ್ರಶಂಸಿಸುವ, ಸಂಭ್ರಮಿಸುವ ಮಾಹಿತಿ ನಿಮಗೆ ಪುಸ್ತಕಗಳಲ್ಲಿ, ರಾಷ್ಟ್ರವಾದವನ್ನು ಹರಡುವ ಅಂತರ್ಜಾಲ ತಾಣಗಳಲ್ಲಿ ಸಿಗುತ್ತದೆ. ಸರ್ಕಾರ ಏನೂ ಹೇಳದೇ ಮುಗುಮ್ಮಾಗಿ ಇರುತ್ತದೆ. ಆ ಮಾತು ಬೇರೆ. ಅದರ ಬಗ್ಗೆ ಬರೋಬ್ಬರಿ ಹತ್ತು ವರ್ಷಗಳ ಹಿಂದೆ ಬೇಹುಗಾರಿಕೆ ಅಧಿಕಾರಿಯೊಬ್ಬರು ತಮ್ಮ ಪುಸ್ತಕದಲ್ಲಿ ಅದನ್ನು ಖುಲಾಸೆ ಮಾಡಿದಾಗ ವಿವರವಾಗಿ ಬರೆದಿದ್ದೆ. ಆಸಕ್ತಿ ಇದ್ದರೆ ಓದಿ - ಭಾರತದ ಪ್ರಪ್ರಥಮ ವಿಮಾನ ಅಪಹರಣದ ಹಿಂದಿನ ಹಕೀಕತ್ತು!
ದೇಶದ ಹಿತಾಸಕ್ತಿಗಾಗಿ, ಪಟ್ಟಭದ್ರ ಹಿತಾಸಕ್ತಿಗಳ ಸ್ವಾರ್ಥಕ್ಕಾಗಿ, ಗಮನವನ್ನು ಬೇರೆ ಕಡೆ ಸೆಳೆಯಲು, ತಮ್ಮ ರಹಸ್ಯ ಕಾರ್ಯಪ್ರಣಾಳಿಗೆ ಪ್ರಜಾ ಬೆಂಬಲ ಪಡೆಯಲು, ಸಾಮಾನ್ಯರು ಊಹಿಸಲೇ ಆಗದ ಕಾರಣಗಳಿಗಾಗಿ, ಮತ್ತಿತರ ಕಾರಣಗಳಿಗಾಗಿ ಮಿಥ್ಯಾಧ್ವಜ ಕಾರ್ಯಾಚರಣೆಗಳು ನಡೆಯುತ್ತಲೇ ಇರುತ್ತವೆ. ಆದರೆ ಮಿಥ್ಯಾಧ್ವಜ ಕಾರ್ಯಾಚರಣೆಯೊಂದರ ನಿಜ ಸ್ವರೂಪ ಪೂರ್ತಿಯಾಗಿ ಹೊರಬಂದಿದ್ದು ಬಹಳ ಕಡಿಮೆ. ಇಂತಹ ಕಾರ್ಯಾಚರಣೆಗಳ ಪ್ಲಾನಿಂಗ್ ಇಷ್ಟು ವಿಭಾಗೀಕರಿಸಲ್ಪಟ್ಟಿರುತ್ತದೆ (compartmentalized) ಎಂದರೆ ಅದರ ಸಂಪೂರ್ಣ ಮಾಹಿತಿ ಯಾರಿಗೂ ತಿಳಿಯದೇ ಇದ್ದರೂ ಆಶ್ಚರ್ಯವಿಲ್ಲ. ಬೇಹುಗಾರಿಕೆಯಲ್ಲಿ ಮಾಹಿತಿ ಯಾರಿಗೆ ಎಷ್ಟು ಬೇಕು ಅಷ್ಟೇ ಹಂಚಿಕೆಯಾಗುತ್ತದೆ. As needed basis only. ಮತ್ತೆ ಜನರನ್ನು ಗೊಂದಲಕ್ಕೆ ದೂಡಲು ವ್ಯವಸ್ಥಿತವಾದ ತಪ್ಪು ಮಾಹಿತಿಯ ಅಭಿಯಾನವನ್ನು (disinformation campaign) ನಡೆಸಲಾಗುತ್ತದೆ. ಹೀಗಿರುವಾಗ 'ಯಾರ ಬಸಿರು?ಯಾರ ಹೆಸರು?' ಎಂಬ ಗೊಂದಲ ಬಗೆಹರಿಯದೇ ವಿಷಯ ಮತ್ತಿಷ್ಟು ಬಗ್ಗಡವಾಗುತ್ತದೆ ಅಷ್ಟೇ.
***
ಮಿಥ್ಯಾಧ್ವಜ ಕಾರ್ಯಾಚರಣೆಗಳಾಗಿರಬಹುದಾದ ಘಟನೆಗಳ ಬಗ್ಗೆ ಹೀಗೊಂದಿಷ್ಟು ಆಸಕ್ತಿದಾಯಕ ಪುಸ್ತಕಗಳ ಕೊಂಡಿಗಳು ಕೆಳಗಿವೆ.
ಒಂದೇ ಘಟನೆಯನ್ನು (೨೬/೧೧/೨೦೦೮ ರ ಮುಂಬೈ ಮೇಲಿನ ಉಗ್ರರ ದಾಳಿ), ಇಬ್ಬರು ಬೇರೆ ಬೇರೆ ಲೇಖಕರು, ವಿಭಿನ್ನ ದೃಷ್ಟಿಕೋನಗಳಿಂದ ನೋಡಿ, ಹೇಗೆ ಬೇರೆ ಬೇರೆ ತರಹದ ಮಿಥ್ಯಾಧ್ವಜ ಕಾರ್ಯಾಚರಣೆಯಾಗಿರಬಹುದೋ ಎಂದು ವಿಶ್ಲೇಷಿಸಿದ್ದಾರೆ ಎಂದು ನೋಡಲು ಆರ್ ವಿ ಎಸ್ ಮಣಿ ಮತ್ತು ಮುಶ್ರೀಫ್ ಬರೆದಿರುವ ಕೆಳಗಿನ ಪುಸ್ತಕಗಳನ್ನುಓದಿ. ಇಂತಹಒಂದಕ್ಕಿಂತ ಹೆಚ್ಚಿನ (multiple) ಸಾಧ್ಯತೆಗಳು ತೆರೆದುಕೊಂಡರೆ ಮಿಥ್ಯಾಧ್ವಜ ಕಾರ್ಯಾಚರೆಣೆಯೊಂದು ಯಶಸ್ವಿಯಾದಂತೆ. ಸೂತ್ರಧಾರರಿಗೆ ಬೇಕಾಗಿದ್ದೇ ಅದು. ಮಿಥ್ಯಾಧ್ವಜ ಕಾರ್ಯಾಚರಣೆ ಎನ್ನಿಸಿದರೂ ಅವರವರ ಭಾವಕ್ಕೆ ಅವರವರ ಭಕುತಿಗೆ ಎಂಬಂತೆ ಅನ್ನಿಸಬೇಕು. ನಿಜ ಸ್ವರೂಪ ತಟಕ್ಕನೆ ಅರಿವಿಗೆ ಬರಬಾರದು. ಹಾಗೆನ್ನಿಸಲಿ ಎಂದೇ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿಯನ್ನು (disinformation) ಹರಡುವುದೂ ಉಂಟು. ಅದಕ್ಕಾಗಿ ನಿಯೋಜಿತ ಪತ್ರಕರ್ತರು, ಲೇಖಕರು ಕೂಡ ಇರುತ್ತಾರೆ.
The Myth of Hindu Terror: Insider account of Ministry of Home Affairs by RVS Mani
Who Killed Karkare?: The Real Face of Terrorism in India by SM Mushrif
The Invisible Hand Behind Saffron Terrorism by Anup Sardesai
***
False Flag Operation ಗೆ "ಮಿಥ್ಯಾಧ್ವಜ ಕಾರ್ಯಾಚರಣೆ" ಎಂಬುದು ನಾನು ಸೃಷ್ಟಿಸಿದ ಪದ. ಕನ್ನಡದಲ್ಲಿ ಇದಕ್ಕೆ ಬೇರೆ ಯಾವುದಾದರೂ ಪದ ಇದೆಯೇ? ಅಥವಾ ನಿಮಗೆ ಬೇರೆ ಯಾವುದಾರೂ ಪದ ಸೂಚಿಸಿತೇ? ತಿಳಿಸಿ.
***
ಅಬು ನಿಡಾಲ್ ಎಂಬ ಪುರಾತನ ಪ್ಯಾಲೆಸ್ಟೈನ್ ಉಗ್ರನ ಹೆಸರು ನಾಲ್ಕಾರು ಬಾರಿ ಪ್ರಸ್ತಾಪವಾಗಿದೆ. ಹಿಂದೊಮ್ಮೆ ಅವನ ಬಗ್ಗೆ ಬರೆದಿದ್ದ ಒಂದು ಲೇಖನ. ಆಸಕ್ತರು ಓದಬಹುದು.
4 comments:
ಒಟ್ನಲ್ಲಿ ಜಗತ್ತೇ ಮಿಥ್ಯೆ !
ಎಲ್ಲವೂ ಕೃಷ್ಣಲೀಲೆ!
@ವಿ.ರಾ.ಹೆ.
ಸರಿ ಇದ್ದು. ಮಿಥ್ಯೆಯೊಂದೇ ಸತ್ಯ...:) :) :)
@ಸುನಾಥ್ ಸರ್,
black ops ಅಂದರೆ ಕ್ರಷ್ಣ ಕಾರ್ಯಾಚರಣೆ. ಹಾಗಾಗಿ ಕೃಷ್ಣ ಲೀಲೆ ಎಂದರೆ ಸರಿಯೇ. :) :)
Post a Comment