Tuesday, June 11, 2024

(ನಕಲಿ) ಎನ್ಕೌಂಟರ್ ಹೇಗೆ ನಡೆಯುತ್ತದೆ...ಗುಲ್ಲು ಖಬರಿ ಹೇಳಿದ ಪೊಲೀಸ್ ಎನ್ಕೌಂಟರ್ ಕಥೆ ಮತ್ತು ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳ ಪುರಾಣ

'ಎನ್ಕೌಂಟರ್ ಮಾಡುವ ಮೊದಲು ಪೊಲೀಸ್ ತಂಡ ಬರೋಬ್ಬರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತದೆ. ಪಾತಕಿಯನ್ನು ಕ್ಯಾಚ್ ಹಾಕಿಕೊಂಡ ನಂತರ ಬಂಧಿತನನ್ನು ರಹಸ್ಯ ಜಾಗವೊಂದರಲ್ಲಿ ಇಡುತ್ತಾರೆ. ಅದು ಫಾರ್ಮ್ ಹೌಸ್ ಇರಬಹುದು ಅಥವಾ ಮಾಹಿತಿದಾರನ ಖಾಸಗಿ ಜಾಗವಿರಬಹುದು. ನಗರದ ಹೊರಪ್ರದೇಶದಲ್ಲಿ ಅನೇಕ ಅತಿಥಿಗೃಹಗಳಿವೆ. ಅವುಗಳ ಮಾಲೀಕರೂ ಸಹ ರೂಮುಗಳನ್ನು ಪೊಲೀಸರಿಗೆ ಕೊಡುತ್ತಾರೆ. ಅವರಿಗೂ ಪೊಲೀಸರ ಕೃಪಾಶೀರ್ವಾದ ಪಡೆಯುವ ತವಕ. ಅಂತಹ ರೂಮುಗಳನ್ನೂ ಉಪಯೋಗಿಸಿಕೊಳ್ಳಲಾಗುತ್ತದೆ. ಬಂಧಿತನ ಅಪರಾಧಲೋಕದ ಸಮಗ್ರ ದಾಖಲೆಗಳನ್ನು (dossier) ಮತ್ತೊಮ್ಮೆ ಪರಿಶೀಲನೆ ಮಾಡಲಾಗುತ್ತದೆ. ಆಸಾಮಿ ಇತ್ತೀಚಿಗೆ ಜೈಲಿನಿಂದ ಹೊರಬಂದಿದ್ದರೆ ಜೈಲಿನ ವರದಿಯನ್ನು ತರಿಸಿಕೊಂಡು ಪರಿಶೀಲನೆ ಮಾಡಲಾಗುತ್ತದೆ. ಬಂಧಿತ ಎಷ್ಟು ಕೇಸುಗಳಲ್ಲಿ ಬೇಕಾಗಿದ್ದಾನೆ, ಈ ಹಿಂದೆ ಎಷ್ಟು ಪ್ರಕರಣಗಳಲ್ಲಿ ಸೆರೆಹಿಡಿಯಲ್ಪಟ್ಟಿದ್ದ, ಎಷ್ಟು ಪ್ರಕರಣಗಳಲ್ಲಿ ಅಪರಾಧಿ ಎಂದು ಸಾಬೀತಾಗಿತ್ತು, ಇತ್ಯಾದಿಗಳನ್ನು ಗಮನಿಸಲಾಗುತ್ತದೆ. ಬಂಧಿತನ ಮೇಲೆ ಒಂದಾದರೂ ೩೦೨ ಪ್ರಕರಣ (ಕೊಲೆ) ಇದ್ದರೆ ಆತ ಎನ್ಕೌಂಟರಿಗೆ ಯೋಗ್ಯ ಎಂದು ಪರಿಭಾವಿಸಲಾಗುತ್ತದೆ. ಹಿರಿಯ ಅಧಿಕಾರಿಗಳ ಜೊತೆ ಮತ್ತೊಮ್ಮೆ ಚರ್ಚೆಯಾಗುತ್ತದೆ. ಮುಂದುವರೆಯಲು ಅವರ ಅನುಮತಿಯನ್ನು ಪಡೆಯಲಾಗುತ್ತದೆ,' ಎಂದು ಗುಲ್ಲು ಖಬರಿ ಹೇಳಿದ.

'ಎನ್ಕೌಂಟರ್ ನಡೆಯುವ ಸ್ಥಳವನ್ನು ಹೇಗೆ ನಿರ್ಧರಿಸಲಾಗುತ್ತದೆ?' ಎಂದು ಕೇಳಿದೆ.

'ಯಾವ ಪ್ರದೇಶದಲ್ಲಿ ಸುಲಿಗೆ ಮುಂತಾದ ಅಂಡರ್ವರ್ಲ್ಡ್ ಚಟುವಟಿಕೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆಯೋ ಅಂತಹ ಪ್ರದೇಶವನ್ನು ಆರಿಸಿಕೊಳ್ಳಲಾಗುತ್ತದೆ. ಎನ್ಕೌಂಟರ್ ರಾತ್ರಿ ನಡೆಯಲಿದ್ದರೆ ಹೆಚ್ಚು ಕತ್ತಲಿರುವ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ರಸ್ತೆ ದೀಪಗಳು ಇದ್ದರೆ ಅವನ್ನು ತೆಗೆಸಲಾಗುತ್ತದೆ. ಆಗದಿದ್ದರೆ ಕೈಗೆ ಸಿಕ್ಕ ಕಲ್ಲಿನಿಂದ ದೀಪಗಳನ್ನು ಒಡೆದರೂ ಒಡೆದರೇ. ಎನ್ಕೌಂಟರಿಗೆ ತೆರಳುವ ಮೊದಲು ತಂಡದ ನಾಯಕ ಸ್ಟೇಷನ್ ಡೈರಿಯಲ್ಲಿ ಒಂದು ಎಂಟ್ರಿ ಮಾಡುತ್ತಾರೆ. ಇಂತಿಂತಹ ಗ್ಯಾಂಗಸ್ಟರ್ ಬಗ್ಗೆ ಮಾಹಿತಿ ಸಿಕ್ಕಿದೆ. ಇಷ್ಟೊತ್ತಿಗೆ ತನ್ನ ಸಹವರ್ತಿಯನ್ನು ಭೇಟಿಯಾಗಲು ಗ್ಯಾಂಗಸ್ಟರ್ ಇಂತಹ ಜಾಗಕ್ಕೆ  ಬರಲಿದ್ದಾನೆ. ಶಸ್ತ್ರಾಸ್ತ್ರ ಹೊಂದಿರಬಹುದಾದ ಆತನನ್ನು ಬಂಧಿಸಲು ತಂಡ ತೆರಳುತ್ತಿದೆ ಎಂಬುದು ಆ ಡೈರಿ ಎಂಟ್ರಿಯ ಸಾರಾಂಶ,' ಎಂದು ಗುಲ್ಲು ಖಬರಿ ಹೇಳಿದ.

'ಪೊಲೀಸ್ ಸ್ಟೇಷನ್ ಬಿಟ್ಟು ಹೊರಟ ನಂತರ ಏನಾಗುತ್ತದೆ?' ಎಂದು ಕೇಳಿದೆ.

'ಎಲ್ಲ ಪೊಲೀಸ್ ಸಿಬ್ಬಂದಿ ಮಫ್ತಿಯಲ್ಲಿರುತ್ತಾರೆ. ಎನ್ಕೌಂಟರ್ ಮಾಡಬೇಕಾದ ವ್ಯಕ್ತಿಯನ್ನು ಖಾಸಗಿ ವಾಹನವೊಂದರಲ್ಲಿ ಕರೆತರಲಾಗುತ್ತದೆ. ಕೈಗೆ ಬೇಡಿ ಹಾಕಿರುತ್ತಾರೆ. ಇಬ್ಬರು ಪೊಲೀಸ್ ಪೇದೆಗಳ ಮಧ್ಯೆ ಹಿಂದಿನ ಸೀಟಿನಲ್ಲಿ ಕೂರಿಸಿಕೊಂಡು ಕರೆತರುತ್ತಾರೆ. ಅಂತಹ ವಾಹನಗಳ ಗ್ಲಾಸಿಗೆ ಕಪ್ಪು ಪೊರೆ ಇರುತ್ತದೆ. ಒಳಗಿರುವವರಾರೂ ಹೊರಗೆ ಕಾಣಬಾರದಲ್ಲ. ಎನ್ಕೌಂಟರ್ ತಂಡದ ನಾಯಕ ಬೇರೆ ವಾಹನದಲ್ಲಿ ಆಗಮಿಸುತ್ತಾರೆ. ಎಲ್ಲರೂ ತುಂಬಾ ಒತ್ತಡದಲ್ಲಿ ಇರುತ್ತಾರೆ. ಎನ್ಕೌಂಟರ್ ಮಾಹಿತಿ ಸ್ವಲ್ಪ ಕೂಡ ಸೋರಿಕೆಯಾಗದಂತೆ ಅನೇಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ,' ಎಂದು ಗುಲ್ಲು ಖಬರಿ ಹೇಳಿದ.

'ಎನ್ಕೌಂಟರ್ ಆಗುವ ಕೆಲವೇ ಕೆಲವು ನಿಮಿಷಗಳ ಮೊದಲು ಎನ್ಕೌಂಟರ್ ಆಗಲಿರುವ ವ್ಯಕ್ತಿಯ ವರ್ತನೆ ಹೇಗಿರುತ್ತದೆ?' ಎಂದು ಕೇಳಿದೆ. 

'ಪೊಲೀಸರು ಆತನೊಂದಿಗೆ ಅಂತಹ ದುರ್ವರ್ತನೆಯನ್ನೇನೂ ತೋರುವುದಿಲ್ಲ. ಅವನ ಜೊತೆ ಚೆನ್ನಾಗಿಯೇ ಮಾತಾಡಿ ನಯವಾಗಿಯೇ ಅವನಿಗೆ ಗೊತ್ತಿರಬಹುದಾದ ಭೂಗತಲೋಕದ ಮಾಹಿತಿಯನ್ನು ಪಡೆಯುತ್ತಾರೆ. ಒಮ್ಮೊಮ್ಮೆ ಜೋಕ್ ಹೊಡೆಯುತ್ತಾರೆ. ಆರೋಪಿ ಮತ್ತು ಪೊಲೀಸರು ಕೂಡಿಯೇ ನಗುತ್ತಾರೆ. ಅವನ ಪ್ರಿಯ ಖಾದ್ಯ ಮತ್ತು ಮದ್ಯ ತರಿಸಿಕೊಟ್ಟು ಉಪಚಾರ ಮಾಡುವುದೂ ಉಂಟು. ಎನ್ಕೌಂಟರ್ ಆಗಲಿರುವ ವ್ಯಕ್ತಿಗೆ ಅವನು ಎನ್ಕೌಂಟರಿನಲ್ಲಿ ಸಾಯಲಿದ್ದಾನೆ ಎನ್ನುವ ಸುಳಿವು ಸಿಗಬಾರದು ಎಂದು ಎಲ್ಲ ಪ್ರಯತ್ನ ಮಾಡಲಾಗುತ್ತದೆ. ಆದರೆ ಭೂಗತಲೋಕದಲ್ಲಿ ಪಳಗಿರುವ ಪಂಟರುಗಳಿಗೆ ಅವರ ಬಂಧನವಾದಾಗಲೇ ಗೊತ್ತಾಗಿರುತ್ತದೆ ತಮ್ಮ ಎನ್ಕೌಂಟರ್ ಆಗಲಿದೆ ಎಂದು. ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಯ ತಂಡ ಬಂಧಿಸಿತು ಅಂದರೆ ಎನ್ಕೌಂಟರ್ ಮಾಡಲೆಂದೇ ಬಂಧಿಸಿರುತ್ತಾರೆ ಎಂದು ಅರಿಯದಷ್ಟು ಮೂರ್ಖರಿರುವುದಿಲ್ಲ ಅವರು. ಅಂತವರು ತಮ್ಮ ಕೊನೆಯ ಪ್ರಯಾಣದಲ್ಲಿ ಗಡಗಡ ನಡುಗಲಾರಂಭಿಸುತ್ತಾರೆ ಮತ್ತು ಅಳುತ್ತಾರೆ ಕೂಡ. 'ಬಿಟ್ಟುಬಿಡಿ! ಪ್ಲೀಸ್!' ಎಂದು ಅಂಗಲಾಚುತ್ತಾರೆ. ಅಂಡರ್ವರ್ಲ್ಡ್ ಬಿಟ್ಟುಬಿಡುತ್ತೇವೆ ಎಂದು ಹೇಳುತ್ತಾರೆ. ಇನ್ನು ಕೆಲವರು ಬೇಕಾದಷ್ಟು ದುಡ್ಡು ಕಾಸು ಇತ್ಯಾದಿಗಳ ಆಮಿಷ ಒಡ್ಡುತ್ತಾರೆ. ಪೊಲೀಸರು ಒಮ್ಮೆ ಅವರ ಹಣೆಬರಹ ನಿರ್ಧರಿಸಿಬಿಟ್ಟಿದ್ದರೆ ಮುಗಿಯಿತು ಅಷ್ಟೇ. ಇವೆಲ್ಲಾ ಏನಕ್ಕೂ ಉಪಯೋಗವಿಲ್ಲ. ಎನ್ಕೌಂಟರ್ ಮಾಡಿ ಮಾಡಿ ಒಗ್ಗಿರುವ ಅಧಿಕಾರಿಗಳು ಯಾವುದಕ್ಕೂ ಕರಗುವುದಿಲ್ಲ. ತಂಡದ ಎಲ್ಲರೂ ಮೊಬೈಲ್ ಫೋನುಗಳನ್ನು ಆಫ್ ಮಾಡುತ್ತಾರೆ. ಸುತ್ತಮುತ್ತ ಯಾರೂ ಇಲ್ಲ ಎಂದು ಖಚಿತಪಡಿಸಿಕೊಳ್ಳುತ್ತಾರೆ. ರಸ್ತೆ ಬದಿಯ ವ್ಯಾಪಾರಿಗಳು, ಭಿಕ್ಷುಕರು ಅಥವಾ ಇತರರು ಯಾರಾದರೂ ಕಂಡರೆ ಅವರನ್ನು ಓಡಿಸುತ್ತಾರೆ. ಯಾರೂ ನೋಡುತ್ತಿಲ್ಲ ಎಂದು ಖಚಿತವಾದ ಮೇಲೆ ಪಾತಕಿಗೆ ಕಾರಿನಿಂದ ಹೊರಬರಲು ಹೇಳುತ್ತಾರೆ. ಕೊನೇಕ್ಷಣದ ಕೊನೆಯ ಪ್ರಯತ್ನವೆಂಬಂತೆ ಜೀವ ಉಳಿಸುವಂತೆ ಪಾತಕಿ ಮತ್ತೆ ಮತ್ತೆ ಗೋಗರಿಯುತ್ತಾನೆ. ಒಳಗಿದ್ದ ಪೊಲೀಸ್ ಪೇದೆ ಶಕ್ತಿಯೆಲ್ಲವನ್ನೂ ಹಾಕಿ ಆತನನ್ನು ಹೊರಗೆ ದೂಡುತ್ತಾನೆ. ಹಾಗೆ ಹೊರಗೆ ಉರುಳಿಬಿದ್ದವನ ಮೇಲೆ ಸುತ್ತುವರೆದಿರುವ ಪೊಲೀಸರ ಬಂದೂಕುಗಳು ಒಂದೇ ಸವನೆ ಮೊರೆಯುತ್ತವೆ. ಅಲ್ಲಿಗೆ ಆರೋಪಿ ಖಲಾಸ್. ಸಾಮಾನ್ಯವಾಗಿ ಕಾಲಿಗೆ, ಹೊಟ್ಟೆಗೆ ಮತ್ತು ತಲೆಗೆ ಗುಂಡು ಹೊಡೆದಿರುತ್ತಾರೆ. ಪಾತಕಿಯ ಶವದ ಕೈಯಲ್ಲಿ ಒಂದು ಆಯುಧವನ್ನು ಹಿಡಿಸುತ್ತಾರೆ. ಅದು ಅವನಿಂದಲೇ ವಶಪಡಿಸಿಕೊಂಡಿರುವ ಆಯುಧವಾಗಿರಲೂಬಹುದು. ಅದರಿಂದ ನಾಲ್ಕಾರು ಗುಂಡುಗಳನ್ನು ಗಾಳಿಯಲ್ಲಿ ಹಾರಿಸುತ್ತಾರೆ. ಪಾತಕಿ ಪೊಲೀಸರ ಮೇಲೆ ಗುಂಡು ಹಾರಿಸಿದ್ದ ಎಂದು ಕಥೆ ಕಟ್ಟಲು ಬೇಕು ಎಂದು ಹೀಗೆ ಮಾಡುತ್ತಾರೆ. ಒಮ್ಮೊಮ್ಮೆ ಹೊಸದಾಗಿ ಸೇರಿರುವ ಪೊಲೀಸರು ಗಾಯಗಳಿಂದ ಸುರಿಯುತ್ತಿರುವ ರಕ್ತ, ಬುರುಡೆಯಿಂದ ಹೊರಸಿಡಿದಿರುವ ಮಿದುಳಿನ ಗುಲಾಬಿ ಬಣ್ಣದ ಲೋಳೆ, ಶವ ಎಲ್ಲ ನೋಡಿ ಉದ್ವಿಗ್ನತೆಯಿಂದ ಅಸ್ವಸ್ಥರಾಗಿ ಅಲ್ಲೇ ವಾಂತಿ ಮಾಡಿಕೊಂಡ ನಿದರ್ಶನಗಳೂ ಇವೆ,' ಎಂದು ಗುಲ್ಲು ಖಬರಿ ಹೇಳಿದ.

'ಎನ್ಕೌಂಟರ್ ಆದವ ಸತ್ತಿದ್ದಾನೆ ಎಂದು ಹೇಗೆ ಖಾತ್ರಿ ಮಾಡಿಕೊಳ್ಳುತ್ತಾರೆ?' ಎಂದು ಕೇಳಿದೆ.

'ಮೊದಲು ನಾಡಿ ಬಡಿತ ನೋಡುತ್ತಾರೆ. ಮೂಗು ಮುಚ್ಚುತ್ತಾರೆ. ಬದುಕಿದ್ದರೆ ಬಾಯಿಯಿಂದ ಉಸಿರಾಡುತ್ತಾನೆ. ಎನ್ಕೌಂಟರ್ ರಾತ್ರಿ ಮಾಡಿದರೆ ಆತನ ಕಣ್ಣಿನ ಮೇಲೆ ಬ್ಯಾಟರಿ ಪ್ರಕಾಶಿಸುತ್ತಾರೆ. ಕಣ್ಣುಗುಡ್ಡೆ ಅತ್ತಿತ್ತ ಚಲಿಸದಿದ್ದರೆ ಸತ್ತಿದ್ದಾನೆ ಎಂದರ್ಥ. ಕೆಲವು ವರ್ಷಗಳ ಹಿಂದೆ ಎನ್ಕೌಂಟರ್ ಒಂದರಲ್ಲಿ ಒಬ್ಬಾತ ಸತ್ತಿರಲೇ ಇಲ್ಲ. ಹೆಣ ಎಂದು ಆಸ್ಪತ್ರೆಗೆ ತೆಗೆದುಕೊಂಡು ಹೋದ ಮೇಲೆ ಎದ್ದು ಕುಳಿತು ಬೊಬ್ಬೆ ಹಾಕಿದ. ಅಂದಿನಿಂದ ಸ್ಥಳದಲ್ಲೇ ಸತ್ತಿರುವುದರ ಬಗ್ಗೆ ಖಾತ್ರಿ ಮಾಡಿಕೊಳ್ಳುತ್ತಾರೆ,' ಎಂದು ಗುಲ್ಲು ಖಬರಿ ಹೇಳಿದ.

'ಎನ್ಕೌಂಟರ್ ನಂತರ ಏನಾಗುತ್ತದೆ?' ಎಂದು ಕೇಳಿದೆ.

'ಎನ್ಕೌಂಟರ್ ನಂತರ ಎಲ್ಲರ ಮೊಬೈಲ್ ಫೋನ್ ಆನ್ ಆಗುತ್ತವೆ. ಕಂಟ್ರೋಲ್ ರೂಮಿಗೆ ಕರೆ ಮಾಡಿ ಎನ್ಕೌಂಟರ್ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಪಂಚನಾಮೆ ಪ್ರಕ್ರಿಯೆ ಮಾಡುತ್ತಾ ಕಾಗದಪತ್ರ ತಯಾರಿಸಲು ಆರಂಭಿಸುತ್ತಾರೆ. ಶವವನ್ನು ಆಸ್ಪತ್ರೆಗೆ ಸಾಗಿಸುತ್ತಾರೆ. ಎನ್ಕೌಂಟರ್ ತಂಡದ ಎಲ್ಲ ಸದಸ್ಯರಿಗೂ ನಿರ್ದಿಷ್ಟ ಜವಾಬ್ದಾರಿಗಳನ್ನು ಕೊಟ್ಟಿರುತ್ತಾರೆ. ಒಬ್ಬನು ಕಾಗದಪತ್ರ ತಯಾರಿಸುವಲ್ಲಿ ಸ್ಥಳೀಯ ಪೊಲೀಸರಿಗೆ ಸಹಕರಿಸುತ್ತಾನೆ. ಎನ್ಕೌಂಟರ್ ಮಾಡಿದ ತಂಡದ ನಾಯಕ ಫೋನ್ ಮಾಡಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ಕೊಡುತ್ತಾನೆ. ಮತ್ತೊಬ್ಬ ಪೊಲೀಸ್ ಪತ್ರಕರ್ತರಿಗೆ ಫೋನ್ ಮಾಡಿ ವಿವರ ಕೊಡುತ್ತಾನೆ. ನಿಮ್ಮಂತಹ ಪತ್ರಕರ್ತರು ಬ್ರೇಕಿಂಗ್ ನ್ಯೂಸ್ ಕೊಡಲು ಧಾವಿಸಿ ಬರುತ್ತೀರಿ. ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಯ ನ್ಯೂಸ್ ಬೈಟ್ ತೆಗೆದುಕೊಳ್ಳುತ್ತೀರಿ. ಹಗಲಿನಲ್ಲಿ ಎನ್ಕೌಂಟರ್ ನಡೆದರೆ, ಗ್ಯಾಂಗಸ್ಟರ್ ಯಾವುದೋ ಸಿನೆಮಾ ವ್ಯಕ್ತಿಯನ್ನೋ, ಬಿಲ್ಡರನನ್ನೋ ಅಥವಾ ವ್ಯಾಪಾರಿಯನ್ನೋ ಕೊಲ್ಲಲು ಬರುವ ಬಗ್ಗೆ ಮಾಹಿತಿ ಇತ್ತು. ಶರಣಾಗು ಎಂದು ಹೇಳಿದೆವು. ಕೇಳದೇ ಪೊಲೀಸರ ಮೇಲೆಯೇ ದಾಳಿ ಮಾಡಿದ. ಆತ್ಮರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು ಎಂದು ನ್ಯೂಸ್ ಬೈಟ್ ಕೊಡುತ್ತಾರೆ. ಎನ್ಕೌಂಟರ್ ರಾತ್ರಿ ನಡೆದರೆ, ಗ್ಯಾಂಗಸ್ಟರ್ ಅವನ ಸಹವರ್ತಿಯನ್ನು ಭೇಟಿ ಮಾಡಲು ಬಂದಿದ್ದ ಎಂದು ಸ್ಕ್ರಿಪ್ಟ್ ಬದಲಾವಣೆ ಆಗುತ್ತದೆ ಅಷ್ಟೇ. ಉಳಿದ ವಿಷಯ ಸೇಮ್ ಟು ಸೇಮ್ ಇರುತ್ತದೆ. ಎನ್ಕೌಂಟರ್ ತಂಡದ ಅಧಿಕಾರಿಯೊಬ್ಬರು ಆಸ್ಪತ್ರೆಯಲ್ಲಿ ಶವಪರೀಕ್ಷೆಯನ್ನು ಮ್ಯಾನೇಜ್ ಮಾಡುತ್ತಿರುತ್ತಾರೆ. ಶವಪರೀಕ್ಷೆಯಲ್ಲಿ ವಿವಾದಾಸ್ಪದ ವಿಷಯ ಯಾವುದೂ ಬರದಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿ,' ಎಂದು ಗುಲ್ಲು ಖಬರಿ ಹೇಳಿದ.

'ಕ್ರೈಮ್ ಬ್ರಾಂಚ್ ಪೊಲೀಸರು ಎನ್ಕೌಂಟರ್ ಮಾಡಿದ ಮೇಲೆ ಸ್ಥಳೀಯ ಪೊಲೀಸರ ಕಾರ್ಯವಿಧಾನ ಹೇಗಿರುತ್ತದೆ?' ಎಂದು ಕೇಳಿದೆ. 

'ಎನ್ಕೌಂಟರಿನಲ್ಲಿ ಸತ್ತ ವ್ಯಕ್ತಿಯ ಮೇಲೆ ೩೦೭ ಕೊಲೆ ಯತ್ನ, ೩೫೩ ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ ಯತ್ನ ಮತ್ತು ೨೫ (A) ಅಕ್ರಮ ಶಸ್ತ್ರಾಸ್ತ್ರ ಕಾಯಿದೆಗಳ ಅಡಿಯಲ್ಲಿ ಕೇಸ್ ದಾಖಲಾಗುತ್ತದೆ. ಅದರ ಆಧಾರದ ಮೇಲೆ ಸ್ಥಳೀಯ ಪೊಲೀಸರ ತನಿಖೆ ಆರಂಭವಾಗುತ್ತದೆ. ಮೃತನ ಸಂಬಂಧಿಕರಿಗೆ ಮಾಹಿತಿ ಮುಟ್ಟಿಸಲಾಗುತ್ತದೆ. ಮೃತ ವ್ಯಕ್ತಿ ಉಪಯೋಗಿಸಿದ್ದ ಎಂದು ತೋರಿಸಲಾದ ಪಿಸ್ತೂಲನ್ನು ಪ್ರಯೋಗಾಲಯಕ್ಕೆ ಕಳಿಸಲಾಗುತ್ತದೆ,' ಎಂದು ಗುಲ್ಲು ಖಬರಿ ಹೇಳಿದ.

'ಎನ್ಕೌಂಟರ್ ತಂಡ ತುಂಬಾ ರಿಸ್ಕ್ ತೆಗೆದುಕೊಳ್ಳುತ್ತದೆ. ಅಲ್ಲವೇ?? ಎನ್ಕೌಂಟರ್ ಮಾಡಲು ತುಂಬಾ ಧೈರ್ಯ ಬೇಕಾಗಬಹುದು ಅನ್ನಿಸುತ್ತದೆ. ಅಲ್ಲವೇ?' ಎಂದು ಕೇಳಿದೆ.

'ಅದೂ ಹೌದೆನ್ನಿ. ವಾಸ್ತವದಲ್ಲಿ ಎನ್ಕೌಂಟರ್ ನಿಜವಾಗಿ ಹೇಗೆ ನಡೆಯುತ್ತದೆ ಎಂದು ತಿಳಿದುಕೊಂಡ ಮೇಲೆ ನಿಮಗೆನಿಸುತ್ತದೆ??'  ಎಂದು ಗುಲ್ಲು ಖಬರಿ ಕೇಳಿದ. ಈಗ ಪ್ರಶ್ನೆ ಕೇಳುವ ಬಾರಿ ಅವನದು.

'ಕೋರ್ಟು, ಕಾನೂನಿನ ಮೂಲಕ ಮಾಫಿಯಾವನ್ನು ಸದೆಬಡಿಯಲು ಸಾಧ್ಯವಾಗಿಲ್ಲ. ಹಾಗಾಗಿ ಎನ್ಕೌಂಟರ್ ವಿಧಾನ ತಕ್ಕ ಮಟ್ಟಿಗೆ ಮಾಫಿಯಾದ ಬೆನ್ನುಮೂಳೆ ಮುರಿಯುವಲ್ಲಿ ಯಶಸ್ವಿಯಾಗಿರಬಹುದು. ಆದರೆ ಈ ಎನ್ಕೌಂಟರ್ ವಿಧಾನದಲ್ಲಿ ಆರೋಪಿಗೆ ತನ್ನನ್ನು ಸಮರ್ಥಿಸಿಕೊಳ್ಳುವ ಅವಕಾಶವಿರುವುದಿಲ್ಲ. ನನ್ನ ಆತಂಕವೇನೆಂದರೆ ಕೆಲವು ನಿಷ್ಪಾಪಿ ವ್ಯಕ್ತಿಗಳೂ ಕೂಡ ತಪ್ಪು ಗ್ರಹಿಕೆಯಿಂದ ಇಂತಹ ನಕಲಿ ಎನ್ಕೌಂಟರುಗಳಲ್ಲಿ ಕೊಲ್ಲಲ್ಪಟ್ಟಿರಬಹುದು. ಅದು ಎನ್ಕೌಂಟರ್ ಕಾರ್ಯಾಚರಣೆಗಳ ದುಷ್ಪರಿಣಾಮ ಎಂದೆನಿಸುತ್ತದೆ,' ಎಂದು ನನ್ನ ಅಭಿಪ್ರಾಯ ವ್ಯಕ್ತಪಡಿಸಿದೆ. 

'ನೀವು ಹೇಳುವುದು ಕೂಡ ಸರಿ. ತಪ್ಪುಗಳು ಆಗಬಹುದು. ತಪ್ಪು ಮಾಡುವುದು ಮಾನವ ಸಹಜ ಗುಣ. ಆದರೆ ಕೆಲಸ ಮಾಡಲು ಪ್ರಯತ್ನ ಮಾಡುವವ ಮಾತ್ರ ತಪ್ಪು ಮಾಡಲು ಸಾಧ್ಯ. ಎನ್ಕೌಂಟರ್ ಹಿಂದಿನ ಉದ್ದೇಶ ಮುಖ್ಯ. ಸುಖಾಸುಮ್ಮನೆ ಜನರನ್ನು ಕೊಲ್ಲುವುದು ಎನ್ಕೌಂಟರುಗಳ ಉದ್ದೇಶವಲ್ಲ. ಸಮಾಜಕ್ಕೆ ಕಂಟಕಪ್ರಾಯರಾದವರನ್ನು ನಿರ್ಮೂಲನೆ ಮಾಡುವುದು ಉದ್ದೇಶ,' ಎಂದು ಗುಲ್ಲು ಖಬರಿ ಸಮರ್ಥಿಸಿಕೊಂಡ. 

'ಕೆಲವು ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳು ತಮಗಿರುವ ಪ್ರಭಾವವನ್ನು ದುರುಪಯೋಗ ಮಾಡಿಕೊಳ್ಳುತ್ತಾರೆ ಎಂದು ಕೇಳಿದ್ದೇನೆ. ಕೆಲವು ಅಧಿಕಾರಿಗಳು ಮಾಫಿಯಾ ಜೊತೆ ಶಾಮೀಲಾಗಿದ್ದಾರೆ ಎನ್ನುವ ಆರೋಪಗಳಿವೆ. ಮಾಫಿಯಾದಿಂದ ರಕ್ಷಣೆ ಕೇಳಿದ ವ್ಯಕ್ತಿಗಳಿಂದಲೇ ಕೆಲವು ಅಧಿಕಾರಿಗಳು ಹಣ ವಸೂಲಿ ಕೂಡ ಮಾಡುತ್ತಾರೆ ಎನ್ನುವ ಆರೋಪವಿದೆ. ರಕ್ಷಕರೇ ಭಕ್ಷಕರಾದರೆ ಹೇಗೆ?' ಎಂದು ಕೇಳಿದೆ.

'ಒಂದು ಗ್ಯಾಂಗಿನ ಬಗ್ಗೆ ಮಾಹಿತಿ ಬೇಕು ಅಂತಾದರೆ ವಿರೋಧಿ ಗ್ಯಾಂಗಿನ ಜೊತೆ ಸಂಪರ್ಕ ಇಟ್ಟುಕೊಳ್ಳಬೇಕಾಗುತ್ತದೆ. ಮಾಫಿಯಾದಿಂದ ಬೆದರಿಕೆಗೆ ಒಳಗಾಗುವ ಹೆಚ್ಚಿನ ಜನ ಮಹಾ ಸುಬಗರೇನೂ ಆಗಿರುವುದಿಲ್ಲ. ಹೆಚ್ಚಿನವರು ದೋ ನಂಬರ್ ದಂಧೆಯ ಜನರೇ. ಕಪ್ಪುಹಣದ ದೊರೆಗಳೇ. ಅಂತಹ ಜನರಿಗೆ ಮಾಫಿಯಾ ಕೂಡ ಬೆದರಿಸಿ ಹಣ ವಸೂಲ್ ಮಾಡುತ್ತದೆ. ಮಾಫಿಯಾದಿಂದ ರಕ್ಷಣೆ ಕೊಡುವ ನೆಪದಲ್ಲಿ ಕೆಲವು ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳೂ ಕೂಡ ವಸೂಲಿ ಮಾಡುತ್ತಾರೆ. ಅದರಲ್ಲಿ ತಪ್ಪೇನಿದೆ?' ಎಂದು ಗುಲ್ಲು ಖಬರಿ ಸಮರ್ಥಿಸಿಕೊಳ್ಳಲು ನೋಡಿದ.

'ಎನ್ಕೌಂಟರ್ ಸ್ಪೆಷಲಿಸ್ಟ್ ಆಫೀಸರ್ ಒಬ್ಬರು ಎನ್ಕೌಂಟರಿನಲ್ಲಿ ಹತನಾದ ಪಾತಕಿಯ ಕುಟುಂಬಕ್ಕೆ ಹಣಕಾಸಿನ ಸಹಾಯ ಕೂಡ ಮಾಡಿದ ನಿದರ್ಶನವಿದೆ. ಗೊತ್ತೇ? ಪಾತಕಿಯೊಬ್ಬನು ಎನ್ಕೌಂಟರಿನಲ್ಲಿ ಮೃತನಾದ ನಂತರ ಅಧಿಕಾರಿಗೆ ತಿಳಿಯಿತು ಆತನ ಕುಟುಂಬ ಜೀವನ ಸಾಗಿಸಲು ತುಂಬಾ ಕಷ್ಟಪಡುತ್ತಿದೆ ಎಂದು. ಆಗ ಅವರು ಆ ಕುಟುಂಬಕ್ಕೆ ಹಣಕಾಸಿನ ಸಹಾಯ ಕೂಡ ಮಾಡಿದ್ದರು. ಅಂತಹ ಅಧಿಕಾರಿಗಳೂ ಇದ್ದಾರೆ,' ಎಂದು ಹೆಚ್ಚಿನ ಸಮರ್ಥನೆ ಕೊಡಲು ಪ್ರಯತ್ನಿಸಿದ ಗುಲ್ಲು ಖಬರಿ.

ಮತ್ತೊಂದು ಬಿಯರ್ ಮುಗಿಸಿದ ಗುಲ್ಲು ಖಬರಿ ಎದ್ದು ನಡೆದ. 

ಈ ಎಲ್ಲ ಸಂಕೀರ್ಣ ವಿಷಯಗಳ ಬಗ್ಗೆ ನನ್ನ ತಲೆಯ ತುಂಬಾ ವಿರೋಧಾತ್ಮಕ (contradictory) ಆಲೋಚನೆಗಳೇ ತುಂಬಿದ್ದವು. 

***

ಮುಂಬೈನ ಜಿತೇಂದ್ರ ದೀಕ್ಷಿತ್ ಹೊಸ ತಲೆಮಾರಿನ ತನಿಖಾ ಪತ್ರಕರ್ತರಲ್ಲಿ ಒಬ್ಬರು. ಹೆಚ್ಚಾಗಿ ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡಿದ್ದರೂ ಮೂರ್ನಾಲ್ಕು ಒಳ್ಳೆಯ ಪುಸ್ತಕಗಳನ್ನು ಬರೆದಿದ್ದಾರೆ. ಈ ಲೇಖನದ ಮೇಲೆ ಬರೆದ ಭಾಗಕ್ಕೆ ಆಧಾರ ಅವರ ಪುಸ್ತಕ - Bombay 3


ಈ ಪುಸ್ತಕವನ್ನು ನೈಜ ಘಟನೆಗಳ ಮೇಲೆ ಆಧಾರಿತ ಕಾದಂಬರಿಯಂತೆ ರೂಪಿಸಿದ್ದಾರೆ ಜಿತೇಂದ್ರ ದೀಕ್ಷಿತ್. ತುಂಬಾ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಮುಂಬೈ ಅಪರಾಧ ಪ್ರಪಂಚದ ಬಗ್ಗೆ ಸ್ವಲ್ಪ ಅರಿವಿದ್ದವರೂ ಕೂಡ ಪಾತ್ರಗಳನ್ನು ಗುರುತಿಸಬಹುದು ಮತ್ತು ಹೊಸ ವಿಷಯಗಳನ್ನು ತಿಳಿದು ಅಚ್ಚರಿ ಪಡಬಹುದು. ಅಂದಿನ ಕಾಲದಲ್ಲಿ ಪ್ರಕಟವಾಗುತ್ತಿದ್ದ ಸುದ್ದಿಗಳ  ಹಿಂದಿನ ನಿಜವಾದ ಹಿಕ್ಮತ್ತನ್ನು ಅರಿತು, ಹೇಗೆ ಮಾಧ್ಯಮದ ಮುಖ್ಯ ವಾಹಿನಿಯಲ್ಲಿ ಕೇವಲ ಬೂಸಾ ಸುದ್ದಿ ಪ್ರಕಟವಾಗುತ್ತದೆ ಎಂದು ಕೂಡ ತಿಳಿಯಬಹುದು.

ಒಮ್ಮೆ ಜಿತೇಂದ್ರ ದೀಕ್ಷಿತ್ ತಮಗೆ ಆತ್ಮೀಯರಾಗಿದ್ದ ಮುಂಬೈ ಕ್ರೈಮ್ ಬ್ರಾಂಚಿನ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಯೊಬ್ಬರಿಗೆ, 'ಸರ್, ನನ್ನನ್ನೂ ಕೂಡ ಒಂದು ಎನ್ಕೌಂಟರಿಗೆ ಕರೆದುಕೊಂಡು ಹೋಗಿ. ನಾನು ಖುದ್ದಾಗಿ ನೋಡಬೇಕು ಒಂದು ಎನ್ಕೌಂಟರ್ ನಿಜವಾಗಿ ಹೇಗಾಗುತ್ತದೆ ಎಂದು. ಪ್ಲೀಸ್ ಸರ್,' ಎಂದು ಇನ್ನಿಲ್ಲದಂತೆ ಗಂಟುಬಿದ್ದಿದ್ದರಂತೆ. 

ಜಿತೇಂದ್ರರನ್ನು ಅವರ ಖಾಸಾ ತಮ್ಮನಂತೆ ಇಷ್ಟಪಡುತ್ತಿದ್ದ ಅಧಿಕಾರಿ, 'ಆಯಿತು. ನಿನ್ನನ್ನು ಒಂದು ಎನ್ಕೌಂಟರಿಗೆ ಕರೆದೊಯ್ಯುತ್ತೇನೆ. ಆದರೆ ಒಂದು ಕಂಡೀಶನ್!' ಎಂದಿದ್ದರು.

'ಏನು ಕಂಡೀಶನ್ ಸರ್??' ಎಂದು ಕುತೂಹಲದಿಂದ ಕೇಳಿದ್ದರು ದೀಕ್ಷಿತ್.

'ನೀನೂ ಕೂಡ ಪಾತಕಿಯ ಮೇಲೆ ಒಂದು ಗುಂಡು ಹಾರಿಸಬೇಕು. ಒಪ್ಪಿಗೆಯೇ??' ಎಂದು ಗಂಭೀರವಾಗಿಯೇ ಕೇಳಿದ್ದರು ಎನ್ಕೌಂಟರ್ ಸ್ಪೆಷಲಿಸ್ಟ್.

'ಸರ್ ನೀವು ಸೀರಿಯಸ್ ಆಗಿ ಈ ಮಾತು ಹೇಳುತ್ತಿದ್ದೀರಾ??' ಎಂದು ಕೇಳಿದರು ದೀಕ್ಷಿತ್.

'ಹೌದು ಮತ್ತೆ!? ಎನ್ಕೌಂಟರ್ ನೋಡಿದ ಮೇಲೆ ಭಾಗಿಯಾಗದಿದ್ದರೆ ಹೇಗೆ? ನೀನು ಎನ್ಕೌಂಟರ್ ಬಗ್ಗೆ ಇಲ್ಲದ ಸಲ್ಲದ ಸುದ್ದಿ ಮಾಡುವುದಿಲ್ಲ ಎಂಬುದಕ್ಕೆ ನಮಗೆ ಗ್ಯಾರಂಟಿ ಬೇಕಲ್ಲ. ಖಾತ್ರಿ ಬೇಕಲ್ಲ. ನೀನೂ ಒಂದು ಗುಂಡು ಹಾರಿಸಿಬಿಟ್ಟರೆ ನೀನೂ ಅದರಲ್ಲಿ ಪಾಲುದಾರನಾಗುತ್ತಿ. ಮುಂದಾಗುವ ಪರಿಣಾಮಮಗಳಿಗೆ ನೀನೂ ಬಾಧ್ಯಸ್ಥನಾಗುತ್ತಿ. ಏನಂತೀ??' ಎಂದು ಕೇಳಿದ್ದರು ಎನ್ಕೌಂಟರ್ ಸ್ಪೆಷಲಿಸ್ಟ್.

ಅದೆಲ್ಲ ತಮಗೆ ಸಾಧ್ಯವಿಲ್ಲವೆಂಬತೆ ತಲೆಯಾಡಿಸಿ ಬಂದಿದ್ದರು ದೀಕ್ಷಿತ್. ಮುಗುಳ್ನಕ್ಕು ಬೀಳ್ಕೊಟ್ಟಿದ್ದರು ಎನ್ಕೌಂಟರ್ ಸ್ಪೆಷಲಿಸ್ಟ್.

ಮುಂಬೈನ ಕ್ರೈಂ ಬ್ರಾಂಚ್ ಕಚೇರಿಯಿಂದ ದೀಕ್ಷಿತ್ ಹೊರಟಿದ್ದರಂತೆ. ಆಗ ಓಡಿ ಬಂದವನು ಆ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಯ ಖಾಸ್ ಮಾಹಿತಿದಾರ ಗುಲ್ಲು ಖಬರಿ. ಅನೇಕ ಎನ್ಕೌಂಟರುಗಳಿಗೆ ಖಡಕ್ ಮಾಹಿತಿ ಕೊಡುತ್ತಿದ್ದವನೇ ಅವನು. ಅವನೂ ಸಹ ಚಿಕ್ಕಮಟ್ಟದ ಪಾತಕಿಯೇ. ಆದರೂ ಪೊಲೀಸರಿಗೆ ಅವನು ಬೇಕೇಬೇಕು. ಸಣ್ಣ ಮೀನನ್ನು ಉಪಯೋಗಿಸಿಕೊಂಡು ದೊಡ್ಡ ಮೀನನ್ನು ಹಿಡಿದ ಹಾಗೆ. 

ಅಂತಹ ಗುಲ್ಲು ಖಬರಿ ಹೇಳಿದ, 'ಸಂಜೆ ಭೇಟಿಯಾಗಿ. ನಾನು ನಿಮಗೆ ಎನ್ಕೌಂಟರ್ ಬಗ್ಗೆ ಎಲ್ಲ ಮಾಹಿತಿ ಕೊಡುತ್ತೇನೆ.'

ಅದರಂತೆ ಸಂಜೆ ಗುಲ್ಲು ಖಬರಿಯನ್ನು ಭೇಟಿಯಾದರು ದೀಕ್ಷಿತ್. ಆಗ ಗುಲ್ಲು ಖಬರಿ ಬಿಚ್ಚಿಟ್ಟ ವಿವರಗಳು ಮೇಲೆ ಹೇಳಿದಂತೆ ಇದ್ದವು. ಎಲ್ಲ ಗೊತ್ತಿದ್ದ ವಿಷಯವೇ. ಗುಲ್ಲು ಖಬರಿ ಖಾತ್ರಿ ಪಡಿಸಿದ್ದ ಅಷ್ಟೇ. ಸ್ವಲ್ಪ ರಂಗೀನ್ ಆಗಿ ವರ್ಣಿಸಿದ್ದ.

ಹೆಚ್ಚಿನ ಎನ್ಕೌಂಟರುಗಳು ನಕಲಿ. ಆದರೇನು ಮಾಡುವುದು? ಭೂಗತಲೋಕದ ಉಪಟಳ ಮಿತಿಮೀರಿದಾಗ ಕಂಡುಕೊಂಡ ಉತ್ತರ ಎನ್ಕೌಂಟರ್. ಅನೇಕ ಸಲ ಎನ್ಕೌಂಟರ್ ಹೆಸರಿನಲ್ಲಿ ಊಹಿಸಲಾಗದ ದೌರ್ಜನ್ಯ ನಡೆದುಹೋಗಿದೆ. ಉದ್ದೇಶಪೂರ್ವಕವಾಗಿ ದೌರ್ಜನ್ಯ, ಶೋಷಣೆ, ವಸೂಲಿ ಎಲ್ಲ ನಡೆದಿದೆ. ಬೆಳಕು ಇದ್ದಲ್ಲಿ ಸ್ವಲ್ಪ ಮಟ್ಟಿನ ಶಾಖ ಕೂಡ ಇದ್ದೇ ಇರುತ್ತದಲ್ಲ. ಆ ಮಾದರಿ. 

ಈ ಪುಸ್ತಕದಲ್ಲಿ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಯ ಹೆಸರು ಬದಲಾಯಿಸಿದ್ದರೂ ಮುಂಬೈ ಭೂಗತಲೋಕದ ಬಗ್ಗೆ ಅರಿವಿದ್ದವರಿಗೆ ತಿಳಿಯುವ ವಿಷಯ ಆ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿ ದಿವಂಗತ ವಿಜಯ್ ಸಲಸ್ಕರ್ ಎಂದು. ಅವರು ಮುಂದೆ ೨೬/೧೧/೨೦೦೮ ರಂದು ನಡೆದ ಮುಂಬೈ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವ್ಯಕ್ತಿ. ಖತರ್ನಾಕ್ ಎನ್ಕೌಂಟರ್ ಸ್ಪೆಷಲಿಸ್ಟ್. ಹಾಗೆಯೇ ಉಳಿದ ಎನ್ಕೌಂಟರ್ ಸ್ಪೆಷಲಿಸ್ಟಗಳಂತೆ ಸಾಕಷ್ಟು ವಿವಾದಾತ್ಮಕ ಅಧಿಕಾರಿ ಕೂಡ. ಐವತ್ತಕ್ಕೂ ಹೆಚ್ಚು ಕುಖ್ಯಾತ ಪಾತಕಿಗಳನ್ನು ಎನ್ಕೌಂಟರುಗಳಲ್ಲಿ ಕೊಂದಿದ್ದ ಸಲಸ್ಕರ್ ತಾವು ಕೂಡ ಎನ್ಕೌಂಟರ್ ಒಂದರಲ್ಲೇ ಮೃತರಾಗಿದ್ದು ದುರಂತ ಮತ್ತು ವಿಪರ್ಯಾಸ. 

ಮುಂಬೈನಿಂದ ಬೆಂಗಳೂರಿಗೆ ಬಂದು ಮೂವರನ್ನು ಎನ್ಕೌಂಟರ್ ಮಾಡಿದ ಆಧಿಕಾರಿ ವಿಜಯ್ ಸಲಸ್ಕರ್. ೨೦೦೧ ರಲ್ಲಿ ಛೋಟಾ ರಾಜನ್ ಬಣಕ್ಕೆ ಸೇರಿದ್ದ ಮೂವರು ಪಾತಕಿಗಳಾದ ಜಗ್ಗು 'ಫಕೀರಾ' ಶೆಟ್ಟಿ, ಸುಶೀಲ್ ಗಾಂವಕರ್, ಚಿಕಣ್ಯಾ  ಎಂಬವರನ್ನು ಬೆಂಗಳೂರಿನ ಹಳೆಯ ವಿಮಾನ ನಿಲ್ದಾಣದ ಹೊರಗೆ ಎನ್ಕೌಂಟರ್ ಮಾಡಿ ಢಮ್ ಅನಿಸಿದ್ದರು. 

೨೦೦೦ ಸೆಪ್ಟೆಂಬರಿನಲ್ಲಿ ಥೈಲಾಂಡಿನ ಬ್ಯಾಂಕಾಕಿನಲ್ಲಿ ಛೋಟಾ ರಾಜನ್ ಮೇಲೆ ದಾವೂದ್ ಗುಂಪು ನಡೆಸಿದ್ದ ಹತ್ಯಾ ಪ್ರಯತ್ನದ ನಂತರ ದಾವೂದ್ ಮತ್ತು ರಾಜನ್ ಗ್ಯಾಂಗಗಳ ಮಧ್ಯೆ ಗ್ಯಾಂಗ್ ವಾರ್ ವಿಕೋಪಕ್ಕೆ ಹೋಗಿತ್ತು. ಛೋಟಾ ರಾಜನ್ ಮಾರಣಾಂತಿಕವಾಗಿ ಗಾಯಗೊಂಡಿದ್ದ. ಅವನಿದ್ದ ರಹಸ್ಯ ತಾಣದ ಮಾಹಿತಿಯನ್ನು ಲೀಕ್ ಮಾಡಿದವರು ಯಾರು ಎಂದು ತನ್ನದೇ ರೀತಿಯಲ್ಲಿ ತನಿಖೆ ಮಾಡಿಸಿದ ರಾಜನ್ ಗದ್ದಾರ್ (ದ್ರೋಹಿಗಳು) ಎಂದು ಸಂಶಯ ಬಂದ ಎಲ್ಲರನ್ನೂ ಉಡಾಯಿಸಿಬಿಡುವಂತೆ ಆಜ್ಞೆ ಮಾಡಿಬಿಟ್ಟ. ನಂತರ ನಡೆದಿದ್ದು ದೊಡ್ಡ ಪ್ರಮಾಣದ ಮಾರಣಹೋಮ. 

ಮುಂಬೈನ ದೊಡ್ಡ ಹೋಟೆಲ್ ಮಾಲೀಕ ವಿನೋದ್ ಶೆಟ್ಟಿ ಮತ್ತು ಆತನ ಇಬ್ಬರು ಸ್ನೇಹಿತರನ್ನು ಕೊಲ್ಲಲಾಯಿತು. ಗುಂಡಿಟ್ಟು ಕೊಂದವ ಜಗ್ಗು ಶೆಟ್ಟಿ. ಅದೇ ಜಗ್ಗು ಶೆಟ್ಟಿ ಮತ್ತು ಜೊತೆಗೆ ಮತ್ತಿಬ್ಬರು ರಾಜನ್ ಬಂಟರು ಬೆಂಗಳೂರು ಮೂಲಕ ದೇಶಬಿಟ್ಟು ಪರಾರಿಯಾಗಲಿದ್ದಾರೆ ಎನ್ನುವ ಸುಳಿವು ಸಿಕ್ಕ ಇದೇ ಎನ್ಕೌಂಟರ್ ಸ್ಪೆಷಲಿಸ್ಟ್ ಸಲಸ್ಕರ್ ಬೆಂಗಳೂರಿಗೆ ಧಾವಿಸಿ ಬಂದಿದ್ದರು. ಬೆಂಗಳೂರು ಪೊಲೀಸರ ಸಹಕಾರದೊಂದಿಗೆ ವಿಮಾನ ನಿಲ್ದಾಣದ ಹೊರಗೇ ಮೂವರನ್ನು ಎನ್ಕೌಂಟರ್ ಮಾಡಿ ಎಸೆದಿದ್ದರು. ನಕಲಿ ಎನ್ಕೌಂಟರ್ ಇರಬಹುದೋ ಎನ್ನುವ ಅನುಮಾನ ಎಂದಿನಂತೆ ವ್ಯಕ್ತವಾಗಿತ್ತು. ಎನ್ಕೌಂಟರಿನಲ್ಲಿ ಸತ್ತ ಮೂವರ ಬಳಿಯೂ ಬ್ಯಾಂಕಾಕಿಗೆ ಹೋಗುವ ಬೋರ್ಡಿಂಗ್ ಪಾಸ್ ಇದ್ದವು. ವಿಮಾನದ ಬೋರ್ಡಿಂಗ್ ಪಾಸ್ ಪಡೆದವರು ವಿಮಾನ ನಿಲ್ದಾಣದಿಂದ ಹೊರಗೆ ಹೇಗೆ ಬರಲು ಸಾಧ್ಯ? ಅವರಲ್ಲಿ ಕೆಲವರು ಪಂಚೆ ಧರಿಸಿದ್ದರು. ಅಂತರರಾಷ್ಟ್ರೀಯ ಪ್ರಯಾಣಕ್ಕೆ ಹೊರಟವರು ಪಂಚೆ ಧರಿಸಿ ಹೋಗುವುದು ಕೂಡ ಸಾಮಾನ್ಯವಲ್ಲ. ಹಾಗಾಗಿ ಎಂದಿನಂತೆ ನಕಲಿ ಎನ್ಕೌಂಟರ್ ಎನ್ನುವ ಹುಯಿಲು ಎದ್ದಿತ್ತು. ಆದರೇನು ಮಾಡುವುದು?? ಭೂಗತ ಪಾತಕಿಗಳ ಸಾವಿಗೆ ಅಳುವವರು ಯಾರು? ಅವರ ಮನೆಯವರು ಅತ್ತರೆ ಅದೇ ದೊಡ್ಡ ಮಾತು. 

ಬೆಂಗಳೂರಿನ ಈ ಎನ್ಕೌಂಟರ್ ಬಗ್ಗೆ, ತುಂಬಾ ವರ್ಷಗಳ ನಂತರ, ವರಿಷ್ಠ ತನಿಖಾ ಪತ್ರಕರ್ತ ಬಲಜೀತ್ ಪರಮಾರ್ ಜೊತೆ ಮಾತಾಡುತ್ತಿದ್ದ ವಿನೋದ್ ಶೆಟ್ಟಿಯ ಸಹೋದರ ಧನಂಜಯ ಶೆಟ್ಟಿ ಹೇಳಿದ್ದರು: 'ಛೋಟಾ ರಾಜನ್ನನ ಬ್ಯಾಂಕಾಕಿನ ರಹಸ್ಯ ತಾಣ ಲೀಕ್ ಆಗುವಲ್ಲಿ ನನ್ನ ಸಹೋದರ ವಿನೋದನ ಪಾತ್ರ ಏನೂ ಇರಲಿಲ್ಲ. ಸಂಶಯ ಪಿಶಾಚಿ ಛೋಟಾ ರಾಜನ್ ವಿನಾಕಾರಣ ನನ್ನ ತಮ್ಮ ವಿನೋದನನ್ನು ತೆಗೆಸಿಬಿಟ್ಟ. ಎಷ್ಟೋ ತಿಂಗಳುಗಳ ಕಾಲ ಕೊಲೆ ಮಾಡಿದ್ದ ಜಗ್ಗು ಶೆಟ್ಟಿ ಮತ್ತಿತರರ ಪತ್ತೆ ಆಗಿರಲಿಲ್ಲ. ನಮ್ಮದೇ ರೀತಿಯಲ್ಲಿ ಹುಡುಕಿದೆವು. ಸಲಸ್ಕರ್ ಸಾಹೇಬ್ರಿಗೆ ಟಿಪ್ ಕೊಟ್ಟೆವು...' ಎಂದು ಹೇಳಿ ಮೌನವಾಗುತ್ತಾರೆ. 

ಹೀಗೆ "ಟಿಪ್" ಸಿಕ್ಕ ಸಲಸ್ಕರ್ ಸಾಹೇಬರು ಎಂದಿನಂತೆ ಎನ್ಕೌಂಟರ್ ಮಾಡಿದರು ಎಂದು ಬಾಯ್ಬಿಟ್ಟು ಹೇಳಬೇಕಾಗಿಲ್ಲ ತಾನೇ? ಇದೇ ಸರಣಿಯಲ್ಲಿ ನಡೆದ ಮುಂದಿನ ಎನ್ಕೌಂಟರಿನಲ್ಲಿ ಮಾಸ್ಟರ್ ಮೈಂಡ್ ಪಣಿಯೂರು ಸಾಧು ಶೆಟ್ಟಿ ಕೂಡ ಕೆಲವೇ ತಿಂಗಳ ನಂತರ ಸಲಸ್ಕರ್ ಅವರ ಗುಂಡುಗಳಿಗೆ ಬಲಿಯಾಗಿ ಹೋದ. ಸಾಧು ಶೆಟ್ಟಿಯ ಟಿಪ್ ಕೊಟ್ಟ ಎಂದು ದಿನೇಶ್ ಶೆಟ್ಟಿ ಎಂಬಾತ ರಾಜನ್ ಬಂಟರ ಗುಂಡಿಗೆ ಬಲಿಯಾದ. ಹೀಗೆ ಮುಗಿಯದ ಸಾವಿನ ಸರಣಿ ಇದು. ಮುಂದೆ ಐದಾರು ವರ್ಷಗಳ ಬಳಿಕ, ೨೦೦೮ ರಲ್ಲಿ, ಎನ್ಕೌಂಟರ್ ಸ್ಪೆಷಲಿಸ್ಟ್ ಸಲಸ್ಕರ್ ಅವರೇ ೨೬/೧೧ ರ ಮುಂಬೈ ಉಗ್ರರ ದಾಳಿಯಲ್ಲಿ 'ಸಂಶಯಾಸ್ಪದ' ರೀತಿಯಲ್ಲಿ ಮೃತರಾದರು. ಗಾಯಗೊಂಡು ಸಹಾಯಕ್ಕೆ ಮೊರೆಯಿಡುತ್ತಿದ್ದ ಸಲಸ್ಕರ್ ಮತ್ತು ಇತರ ಪೊಲೀಸ್ ಸಿಬ್ಬಂದಿಗೆ ತಕ್ಷಣ ಏಕೆ ಸಹಾಯ ದೊರಕಲಿಲ್ಲ ಎಂಬುದು ಅನೇಕರ ಪ್ರಶ್ನೆ. ಅದರ ಬಗ್ಗೆ ಅನೇಕ ತನಿಖಾ ವರದಿಗಳು, ಪುಸ್ತಕಗಳು ನಂತರ ಬಂದವು. ಉತ್ತರ ಮಾತ್ರ ದೊರೆಯಲಿಲ್ಲ.  

ಎನ್ಕೌಂಟರ್ ಸ್ಪೆಷಲಿಸ್ಟ್ ವಿಜಯ್ ಸಲಸ್ಕರ್ ಸಾವಿನ ಹೊತ್ತಿಗೆ ಮುಂಬೈನಲ್ಲಿ ಎನ್ಕೌಂಟರ್ ಯುಗ ಮುಗಿದಿತ್ತು. ಹಳೆಯ ಕಾಲದ ರಕ್ತಸಿಕ್ತ ಭೂಗತಲೋಕವನ್ನು ಎನ್ಕೌಂಟರ್ ಮೂಲಕ ಒಂದು ಮಟ್ಟಕ್ಕೆ ಸ್ವಚ್ಛ ಮಾಡಿಯಾಗಿತ್ತು. ಈಗ ಖಾಕಿ ಮತ್ತು ಖಾದಿಯೇ ನಾಜೂಕಿನಿಂದ ಭೂಗತಲೋಕವನ್ನು ಸಂಬಾಳಿಸುತ್ತಾರೆ. ಅವಶ್ಯಕತೆ ಬಿದ್ದಾಗ ಮಾತ್ರ ಪರದೇಶದಲ್ಲಿ ಕೂತು ಫೋನ್ ಮಾಡುತ್ತಿದ್ದ ಪಾತಕಿಗಳನ್ನು ಉಪಯೋಗಿಸಿಕೊಂಡು ವಸೂಲಿ ಮತ್ತಿತರ ದಂಧೆ ನಡೆಸಿದರು. ನಡೆಸುತ್ತಿದ್ದಾರೆ. 

ಮುಂಬೈನ ಎಲ್ಲ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳೂ ಸಹ ತರಹೇವಾರಿ ವಿವಾದಗಳಿಗೆ ಸಿಕ್ಕು ನೇಪಥ್ಯಕ್ಕೆ ಸರಿದುಹೋದರು. ಕೆಲವರು ನಿವೃತ್ತರಾದರು. ಅರುಣ್ ಬೋರ್ಡೆ ಎಂಬ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿ ಅಪ್ರಾಪ್ತೆಯ ಮೇಲಿನ ಬಲಾತ್ಕಾರ ಪ್ರಕರಣದಲ್ಲಿ ಆರೋಪಿಯಾಗಿ ನಾಪತ್ತೆಯಾಗಿದ್ದವರು ರೈಲ್ವೆ ಹಳಿಗಳ ಮೇಲೆ ಶವವಾಗಿ ಪತ್ತೆಯಾದರು. ವಿಪರ್ಯಾಸವೆಂದರೆ ಮುಂದೆ ಆ ಬಲಾತ್ಕಾರ ಪ್ರಕರಣದಲ್ಲಿ ಎಲ್ಲರೂ ಖುಲಾಸೆಯಾದರು. ಆತ್ಮಹತ್ಯೆ ಮಾಡಿಕೊಂಡ ಇವರು ಮಾತ್ರ ಜೀವ ಕಳೆದುಕೊಂಡರು. ಅವರ ಹೆಣ ರೈಲ್ವೆ ಹಳಿಗಳ ಮೇಲೆ ಪತ್ತೆಯಾದ ಬಗ್ಗೆಯೂ ಸಂಶಯಗಳಿದ್ದವು. ತುಂಬಾ ಚಾಣಾಕ್ಷ ಅಧಿಕಾರಿಯಾಗಿದ್ದ ಅರುಣ್ ಬೋರ್ಡೆ ನಕಲಿ ಎನ್ಕೌಂಟರ್ ಆದಾಗ ಅದನ್ನು ನೈಜ ಎನ್ಕೌಂಟರ್ ಎಂದು ತೋರಿಸುವಂತಹ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿ, ಟೈಟ್ ಕೇಸ್ ಮಾಡಿ, ಆರೋಪ ಪೊಲೀಸರ ಮೇಲೆ ಬರದಂತೆ ನೋಡಿಕೊಳ್ಳುವಲ್ಲಿ ತುಂಬಾ ನಿಷ್ಣಾತರಾಗಿದ್ದರಂತೆ. ಹಾಗಾಗಿ ಎನ್ಕೌಂಟರ್ ಮಾಡುವ ತಂಡಗಳಲ್ಲಿ ಅವರಿಗೆ ತುಂಬಾ ಬೇಡಿಕೆ ಇತ್ತು. ತಮ್ಮ ಪೊಲೀಸ್ ವೃತ್ತಿಯ ಉತ್ತುಂಗದಲ್ಲಿದ್ದಾಗ ಬಾಲಿವುಡ್ ನಟಿಯೊಬ್ಬಳನ್ನು ಆಹುತಿ ತೆಗೆದುಕೊಂಡಿದ್ದರು ಎಂಬುದರ ಬಗ್ಗೆ ಕೂಡ ಗುಸುಗುಸು ಇತ್ತು. ಆ ನಟಿ ದುಬೈನಲ್ಲಿ ನೆಲೆಸಿದ್ದ ಭೂಗತ ಪಾತಕಿಯೊಂದಿಗೆ ಸಂಬಂಧ ಹೊಂದಿದ್ದಳಂತೆ. ಆಕೆಯ ಫೋನ್ ಟ್ಯಾಪ್ ಮಾಡಿ, ಪಾತಕಿಯೊಂದಿಗಿನ ಸಂಭಾಷಣೆ ರೆಕಾರ್ಡ್ ಮಾಡಿಟ್ಟುಕೊಂಡು, ಆಕೆಯನ್ನು ಬ್ಲಾಕ್ಮೇಲ್ ಮಾಡಿ, ಅವಳನ್ನುಅನುಭವಿಸಿ ಚಪ್ಪರಿಸಿದ್ದರು ಎನ್ನುವ ಆರೋಪ ಅವರು ಆತ್ಮಹತ್ಯೆ ಮಾಡಿಕೊಂಡ ಮೇಲೆ ಬಂದಿದ್ದು ವಿಪರ್ಯಾಸ. 

ಮತ್ತೊಬ್ಬ ಎನ್ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ಎರಡು ಬಾರಿ ಇಲಾಖೆಯಿಂದ ವಜಾಗೊಂಡರೂ ಎರಡೂ ಬಾರಿ ಆಡಳಿತ ಟ್ರಿಬ್ಯೂನಲ್ ಹೋಗಿ ನೌಕರಿ ವಾಪಸ್ ಪಡೆದುಕೊಂಡು ಬಂದಿದ್ದರು. ಲಖನ್ ಭೈಯ್ಯಾ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಆರೋಪಿಯಾಗಿದ್ದರು. ನಾಲ್ಕಾರು ವರ್ಷ ಜೇಲಿನಲ್ಲಿದ್ದು ಬಂದರು. ಕೆಳಗಿನ ನ್ಯಾಯಾಲಯದಲ್ಲಿ ಖುಲಾಸೆಗೊಂಡರು. ತುಂಬಾ ಆಶ್ಚರ್ಯವೆಂಬಂತೆ ಕೆಳಗಿನ ನ್ಯಾಯಾಲಯದಲ್ಲಿ ಖುಲಾಸೆಗೊಂಡ ಆರೋಪಿ ಇವರೊಬ್ಬರೇ ಆಗಿದ್ದರು. ಉಳಿದ ಎಲ್ಲ ಪೊಲೀಸ್ ಸಿಬ್ಬಂದಿ ಶಿಕ್ಷೆಗೆ ಗುರಿಯಾಗಿದ್ದರು. ಮೊನ್ನೆ ಮುಕೇಶ್ ಅಂಬಾನಿ ಮನೆಯೆದುರು ಸ್ಪೋಟಕ ತುಂಬಿದ ವಾಹನ ನಿಲ್ಲಿಸಿ ನಕಲಿ ಬೆದರಿಕೆ ಹಾಕಿದ ಪ್ರಕರಣ ದೊಡ್ಡ ಸುದ್ದಿ ಮಾಡಿತ್ತಲ್ಲ. ಅದರಲ್ಲಿ ಆರೋಪಿ ಈಗ. ಜಾಮೀನ್ ಮೇಲೆ ಹೊರಗಿದ್ದರು.

ಲಖನ್ ಭೈಯ್ಯಾ ನಕಲಿ ಎನ್ಕೌಂಟರ್ ಪ್ರಕರಣ ಹೈಕೋರ್ಟಿಗೆ ಹೋಗಿತ್ತು. ಅಲ್ಲಿ ಈಗ ಪ್ರದೀಪ್ ಶರ್ಮಾಗೂ ಶಿಕ್ಷೆಯಾಗಿದೆ. ಸುಪ್ರೀಂ ಕೋರ್ಟ್ ಜಾಮೀನು ಕೊಟ್ಟಿದೆ. ಮುಂದೆ ನೋಡಬೇಕು ನೂರಕ್ಕೂ ಹೆಚ್ಚು ಎನ್ಕೌಂಟರ್ ಮಾಡಿದ ಪ್ರದೀಪ್ ಶರ್ಮಾ ಭವಿಷ್ಯ ಏನಾಗಲಿದೆ ಎಂದು. 

ಬೆಳಗಾವಿಯಲ್ಲಿ ರಹಸ್ಯವಾಗಿ ನೆಲೆಸಿದ್ದ ಮುಂಬೈ (ಅದರಲ್ಲೂ ಠಾಣೆ ಪ್ರದೇಶದ) ಭೂಗತಲೋಕದ ಕುಖ್ಯಾತ ಪಾತಕಿ ಸುರೇಶ್ ಮಾಂಚೇಕರನನ್ನು ಎತ್ತಾಕಿಕೊಂಡು ಹೋಗಿ ಕೊಲ್ಲಾಪುರ ಸಮೀಪ ಎನ್ಕೌಂಟರ್ ಮಾಡಿದ್ದ ಎನ್ಕೌಂಟರ್ ಸ್ಪೆಷಲಿಸ್ಟ್ ರವೀಂದ್ರ ಆಂಗ್ರೆ ಮುಂದೆ ತಾವೇ ವಸೂಲಿಗೆ ಇಳಿದರು ಎನ್ನುವ ಆರೋಪಕ್ಕೆ ಗುರಿಯಾಗಿ ಅಮಾನತ್ತಾಗಿದ್ದರು. ನಂತರ ನಿವೃತ್ತರಾಗಿದ್ದಾರೆ. 

ಹೆಚ್ಚಿನ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳು ತುಂಬಾ ಪ್ರಚಾರಪ್ರಿಯರಾಗಿದ್ದರು. ಅದಕ್ಕೆ ಆರೋಪವೆಂಬತೆ ತಣ್ಣಗೆ ಮುಂಬೈ ಭೂಗತಲೋಕವನ್ನು ಅವರದ್ದೇ ರೀತಿಯಲ್ಲಿ ಸ್ವಚ್ಛ ಮಾಡಿದವರು ಮುಂಬೈನ ಪ್ರಫುಲ್ ಭೋಸ್ಲೆ. ಅವರೂ ನೂರಕ್ಕೂ ಹೆಚ್ಚು ಜನರನ್ನು ಎನ್ಕೌಂಟರುಗಳಲ್ಲಿ 'ಮೇಲೆ' ಕಳಿಸಿದ್ದಾರೆ. ಅವರೂ ಸಹ ಖ್ವಾಜಾ ಯೂನುಸ್ ಎಂಬ ಶಂಕಿತ ಉಗ್ರ ಪೊಲೀಸ್ ಕಸ್ಟಿಡಿಯಲ್ಲಿದ್ದಾಗ ಆದ ಸಾವಿನ ಪ್ರಕರಣದ ಆರೋಪಿ. ಇಪ್ಪತ್ತು ವರ್ಷಗಳ ನಂತರವೂ ಆ ಕೇಸ್ ನಡೆಯುತ್ತಿದೆ. ಪ್ರಫುಲ್ ಭೋಸ್ಲೆ ನಿವೃತ್ತರಾಗಿದ್ದಾರೆ. ಮಾಧ್ಯಮಗಳಿಂದ ಬಹು ದೂರ ಅವರು, ಎಂದಿನಂತೆ.

ಖ್ವಾಜಾ ಯೂನುಸ್ ಲಾಕಪ್ ಸಾವಿನ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮತ್ತೊಬ್ಬ ಎನ್ಕೌಂಟರ್ ಸ್ಪೆಷಲಿಸ್ಟ್ ಸಚಿನ್ ವಜೆ ಎಷ್ಟೋ ವರ್ಷಗಳ ಕಾಲ ಪೊಲೀಸ್ ಇಲಾಖೆಯಿಂದ ಅಮಾನತ್ತಾಗಿ ಹೊರಗೇ ಉಳಿದಿದ್ದರು. ಇತ್ತೀಚೆಗೆ ಮರಳಿ ಬಂದವರೇ ದೊಡ್ಡ ಭಾನಗಡಿ ಮಾಡಿಕೊಂಡರು. ಅದು ಯಾವುದೋ ದೊಡ್ಡ ಮಟ್ಟದ ಸಂಚಿನ ಭಾಗವಾಗಿ ಖ್ಯಾತ ಉದ್ಯಮಿ ಮುಕೇಶ್  ಅಂಬಾನಿ ಮನೆಯ ಮುಂದೆ ಸ್ಪೋಟಕ ತುಂಬಿದ ವಾಹನ ಇಟ್ಟು ಬಂದರು. ಏನೋ ಮಾಡಲು ಹೋಗಿ ಏನೋ ಆಯಿತು. ಆ ವಾಹನದ ಮಾಲೀಕ ಮನ್ಸುಖ್ ಹರೇನನಿಗೆ ತಪ್ಪು ಒಪ್ಪಿಕೊಳ್ಳಲು ಹೇಳಿದರು. ಪೊಲೀಸರು ಕೇಳಿದ್ದಕ್ಕೆ ವಾಹನ ಕೊಟ್ಟಿದ್ದೇ ಆತನ ತಪ್ಪು. ಅದು ಬಿಟ್ಟರೆ ಈ ಪೊಲೀಸರು ಆ ಜೀಪಿನಲ್ಲಿ ಸ್ಪೋಟಕ ತುಂಬಿ ಅಂಬಾನಿ ಮನೆಯೆದುರೇಕೆ ಇಟ್ಟುಬಂದರು ಎಂಬುದರ ಬಗ್ಗೆ ಏನೂ ಗೊತ್ತಿರಲಿಲ್ಲ ಆ ನಿಷ್ಪಾಪಿ ಬಡ ಮನುಷ್ಯನಿಗೆ. ಮಾಡದ ತಪ್ಪು ನಾನೇಕೆ ಒಪ್ಪಿಕೊಳ್ಳಲಿ ಎಂದು ಆತ ರೊಳ್ಳೆ ತೆಗೆದರೆ ಆತನನ್ನು ಶಾಶ್ವತವಾಗಿ ಸುಮ್ಮನಿರಿಸುವ ಸುಪಾರಿಯನ್ನು ತಮ್ಮ ಒಂದು ಕಾಲದ ಗುರು, ನಿವೃತ್ತರಾಗಿ ರಾಜಕೀಯ ಪ್ರವೇಶಿಸಿದ್ದ ಮಾಜಿ ಎನ್ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾಗೆ ಕೊಟ್ಟುಬಿಟ್ಟರು ಇನ್ಸ್ಪೆಕ್ಟರ್ ವಜೆ. ಪ್ರದೀಪ್ ಶರ್ಮಾ ಸುಪಾರಿಯನ್ನು ತಮ್ಮ ಪರಿಚಯದ ಹಂತಕರಿಗೆ ಕೊಟ್ಟರು. ಹಂತಕರಲ್ಲಿ ಪೆರೋಲ್ ಮೇಲೆ ಹೊರಗಿದ್ದ ಮಾಜಿ ಪೊಲೀಸ್ ಕಾನ್ಸ್ಟೇಬಲ್ ವಿನಾಯಕ ಶಿಂದೆ ಕೂಡ ಇದ್ದ. ಈ ಪುಣ್ಯಾತ್ಮ ಲಖನ್ ಭೈಯ್ಯಾ ನಕಲಿ ಎನ್ಕೌಂಟರ್ ಕೇಸಿನಲ್ಲಿ ಶಿಕ್ಷೆಗೆ ಒಳಗಾದವ. ಪೆರೋಲ್ ಮೇಲೆ ಹೊರಗೆ ಬಂದವ ಈ ಭಾನಗಡಿ ಮಾಡಿ ಮತ್ತೊಂದಿಷ್ಟು ಕೇಸ್ ತಲೆ ಮೇಲೆ ಎಳೆದುಕೊಂಡು ಮತ್ತೆ ಒಳಗೆ ಹೋಗಿದ್ದಾನೆ. ಟಿಪಿಕಲ್ ಭಕ್ಷಕನಾಗಿ ಪರಿವರ್ತನೆಯಾಗಿದ್ದ ಆರಕ್ಷಕ.

ಒಟ್ಟಿನಲ್ಲಿ ಮನ್ಸುಖ್ ಹಿರೇನನನ್ನು ಕತ್ತು ಹಿಸುಕಿ ಕೊಂದು ಸಮುದ್ರದಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡು ಸತ್ತ ಎಂದು ಸಾಧಿಸಲು ಹೊರಟಿದ್ದರು. ಆದರೆ ಉಬ್ಬರ ಇಳಿದು ಅವನ ಹೆಣ ಬೇಗನೆ ದಡಕ್ಕೆ ಬಂದು ಪತ್ತೆಯಾಗಿಬಿಟ್ಟಿತು. ಅಷ್ಟೊತ್ತಿಗೆ ಸ್ಥಳೀಯ ಉಗ್ರ ನಿಗ್ರಹ ಪೊಲೀಸ್ ತಂಡ  ಇವರ ಭಾಂಡಾ ಎಲ್ಲ ಬಿಚ್ಚಿತ್ತು. ಮುಂದೆ ತನಿಖೆಗೆ ಇಳಿದ NIA ಸಚಿನ್ ವಜೆ, ಪ್ರದೀಪ್ ಶರ್ಮಾರನ್ನು ಆರೋಪದ ಮೇಲೆ ಒಳಗೆ ಕಳಿಸಿದೆ. 

ಉಡುಪಿ ಮೂಲದ ದಯಾ ನಾಯಕ್ ನೇಪಥ್ಯಕ್ಕೆ ಸೇರಿಹೋದ ಮತ್ತೊಬ್ಬ ಎನ್ಕೌಂಟರ್ ಸ್ಪೆಷಲಿಸ್ಟ್. ಒಂದು ಕಾಲದಲ್ಲಿ ಎನ್ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾರ ನೀಲಿಗಣ್ಣಿನ ಹುಡುಗ ಅವರು. ೨೦೦೫ ರ ಸಮಯದಲ್ಲಿ ಅಕ್ರಮ ಆಸ್ತಿ ಗಳಿಕೆ ಕೇಸಿನಲ್ಲಿ ಸಿಕ್ಕಿಕೊಂಡು ಅಮಾನತ್ತಾಗಿ, ಜೇಲಿಗೆ ಹೋಗಿ, ನಂತರ ನಿರ್ದೋಷಿ ಎಂದು ಹೊರಗೆ ಬಂದಿದ್ದಾರೆ. ಮುಂಬೈನ ಉಗ್ರ ನಿಗ್ರಹ ದಳದ ಹಿರಿಯ ಅಧಿಕಾರಿಯಾಗಿದ್ದಾರೆ. ಎಲ್ಲ ಎನ್ಕೌಂಟರ್ ಸ್ಪೆಷಲಿಸ್ಟಗಳ ಹಾಗೆ ಅವರ ಬಂದೂಕು ಸಹ ತಣ್ಣಗಾಗಿದೆ.

ಮುಕೇಶ್ ಅಂಬಾನಿ ಮನೆ ಮುಂದೆ ಬಾಂಬಿಟ್ಟ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಚುರುಕಾಗಿ ಕೆಲಸ ಮಾಡಿ ತಮ್ಮ ಒಂದು ಕಾಲದ ಗುರು ಪ್ರದೀಪ್ ಶರ್ಮಾ ಮತ್ತು ಶರ್ಮಾರ (ಹೊಸ) ನೀಲಿಗಣ್ಣಿನ ಹುಡುಗನಾಗಿ ಬದಲಾಗಿದ್ದ ಸಚಿನ್ ವಜೇ ಇಬ್ಬರನ್ನೂ ಬಂಧಿಸಿದ್ದರು. ಹೀಗೆ ಒಂದು ಅರ್ಥದಲ್ಲಿ ದಯಾ ನಾಯಕ್ ತಮ್ಮ ಗುರುವಿಗೇ ತಿರುಮಂತ್ರ ಹಾಕಿದರೋ ಎನ್ನಿಸುತ್ತದೆ. ಮುಂದೆ ಪ್ರಕರಣದ ತನಿಖೆಯನ್ನು NIA  ವಹಿಸಿಕೊಂಡಿದೆ. 

ಬೇರೆ ನಗರಗಳ ಎನ್ಕೌಂಟರ್ ಸ್ಪೆಷಲಿಸ್ಟ್ ಅಧಿಕಾರಿಗಳ ಕಥೆಗಳೂ ವಿಚಿತ್ರವಾಗಿವೆ. ದೆಹಲಿ ಪೊಲೀಸ್ ಇಲಾಖೆಯ ಎನ್ಕೌಂಟರ್ ಸ್ಪೆಷಲಿಸ್ಟ್ ರಾಜಬೀರ್ ಸಿಂಗ್ ಮತ್ತು ಮೋಹನ್ ಚಂದ ಶರ್ಮಾ ಕೂಡ ಈ  ಲೋಕದಿಂದಲೇ ಕಳಚಿಕೊಂಡಿದ್ದಾರೆ. 

ಬೇಗ ಬಂದ ಯಶಸ್ಸು ಸೀದಾ ತಲೆಗೆ ಏರಿಬಿಡುತ್ತದೆ ಅನ್ನುತ್ತಾರಲ್ಲ ಹಾಗೆ ಯಶಸ್ಸು, ಮೆಚ್ಚುಗೆ, ಪುಕ್ಕಟೆ ಪ್ರಚಾರ ಎಲ್ಲ ರಾಜಬೀರ್ ಸಿಂಗರ ತಲೆಗೇರಿತ್ತು ಎಂದು ಕಾಣುತ್ತದೆ. ಖ್ಯಾತ ಎನ್ಕೌಂಟರ್ ಸ್ಪೆಷಲಿಸ್ಟ್ ಆಗಿದ್ದವರು ಮುಂದೆ ದೆಹಲಿಯ ಭೂಗತಲೋಕದಲ್ಲಿ ತಾವೇ ವ್ಯಾಪಕವಾಗಿ ಕೈಯಾಡಿಸತೊಡಗಿದರು. ದೊಡ್ಡ ಮಟ್ಟದ ವಸೂಲಿ, ಸಂಧಾನ ಎಲ್ಲ ಅವರ ಮೂಲಕವೇ ನಡೆಯತೊಡಗಿತ್ತು. ದೆಹಲಿ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತುಂಬಾ ಸಕ್ರಿಯರಾಗಿದ್ದರಂತೆ. ಅವರ ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ಬೇನಾಮಿಯಾಗಿ ನಿರ್ವಹಣೆ ಮಾಡುತ್ತಿದ್ದ ರಿಯಲ್ ಎಸ್ಟೇಟ್ ದಳ್ಳಾಳಿಯೇ ಅವರನ್ನು ಗುಂಡಿಟ್ಟು ಕೊಂದುಬಿಟ್ಟ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ದುಡ್ಡಿಗಾಗಿ ರಾಜಬೀರ್ ಸಿಂಗ್ ಹಾಕುತ್ತಿದ್ದ ಒತ್ತಡ ತಡೆಯಲಾಗದೇ ಕೊಂದುಬಿಟ್ಟೆ ಎಂದು ಆತ ಹೇಳಿದನಾದರೂ ಮೂಲ ಉದ್ದೇಶ ಏನಾಗಿತ್ತು?? ಕಾಣದ ಕೈಗಳ ಕೈವಾಡ ಏನಾದರೂ ಇತ್ತೇ?? ಎಂಬುದರ ಬಗ್ಗೆ ಸಂಶಯಗಳಂತೂ ಇವೆ. ಅವರ ಮಗ ಈಗ ಐಪಿಎಸ್ ಅಧಿಕಾರಿ! ವೆಲ್ ಡನ್!

ದೆಹಲಿಯ ಮತ್ತೊಬ್ಬ ಎನ್ಕೌಂಟರ್ ಸ್ಪೆಷಲಿಸ್ಟ್ ಮೋಹನ್ ಚಂದ್ ಶರ್ಮಾ ಇಸ್ಲಾಮಿಸ್ಟ್ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಹುತಾತ್ಮರಾದರು. ಅದು 'ಬಾಟ್ಲಾ ಹೌಸ್ ಎನ್ಕೌಂಟರ್' ಎಂದೇ (ಕು)ಖ್ಯಾತವಾಗಿದೆ. ತುಂಬಾ ಜನಪ್ರಿಯರಾಗಿದ್ದ ಮೋಹನ್ ಚಂದ್ ಶರ್ಮಾ ಅವರ ಬಗ್ಗೆ ವೃತ್ತಿಮತ್ಸರ ಹೊಂದಿದ್ದ ಸಹೋದ್ಯೋಗಿಗಳೇ, ಕಾರ್ಯಾಚರಣೆ ಸಮಯದಲ್ಲಿ, ಅವರನ್ನು ಗುಂಡಿಟ್ಟು ಕೊಂದರು ಎನ್ನುವ ಸುದ್ದಿ ಕೂಡ ಹರಡಿತ್ತು. ಕಾರ್ಯಾಚರಣೆಯ ಸಮಯದಲ್ಲಿ ಆದ ಪ್ರಮಾದದಿಂದ ಶರ್ಮಾ ಸಹೋದ್ಯೋಗಿಗಳ ಗುಂಡಿಗೆ ಬಲಿಯಾದರು. ಅದೊಂದು ಆಕಸ್ಮಿಕ. ಅದರ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲ ಎಂಬುದು ಒಂದು ವಿವರಣೆ. ಮನುಷ್ಯ ಹೇಗೂ ಸತ್ತುಹೋಗಿದ್ದಾರೆ. ಉಗ್ರರ ಗುಂಡಿಗೆ ಬಲಿಯಾದರು ಎಂದರೆ ಅವರಿಗೆ ಒಂದು ಮರ್ಯಾದೆ, ಗೌರವ ಎಂದು ಹಾಗೆ ಸುದ್ದಿ ಮಾಡಲಾಯಿತು ಎನ್ನುವ ಸುದ್ದಿ ಕೂಡ ಹರಿದಾಡಿತ್ತು. ಸತ್ಯ ಮಾತ್ರ ಬೇರೆಲ್ಲೋ ಇರಬೇಕು.

ಈಗ ಎನ್ಕೌಂಟರಗಳ ಸಂಖ್ಯೆ ಕಮ್ಮಿಯಾಗಿದೆ. ರಹಸ್ಯವನ್ನು ಕಾಪಾಡಿಕೊಳ್ಳುವುದು ಕಷ್ಟ. ಯಾರು ಹೇಗೆ ಎಲ್ಲಿ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಂಡುಬಿಡುತ್ತಾರೋ ಎನ್ನುವ ಆತಂಕ. ಪ್ರತಿ ಎನ್ಕೌಂಟರ್ ಆದಾಗಲೂ ನಕಲಿ ಎನ್ಕೌಂಟರ್ ಎಂದು ಆರೋಪ ಬರುತ್ತಿತ್ತು. ಆಧಾರರಹಿತ ಆರೋಪ ಎಂದು ತಳ್ಳಿಹಾಕುತ್ತಿದ್ದರು. ಈಗ ಹಾಗಲ್ಲ. ವಿಡಿಯೋ ಕ್ಲಿಪ್ಪಿಂಗ್ ಸಿಕ್ಕರೆ ಕಷ್ಟ. ಹಾಗಾಗಿ ಈಗ ಎನ್ಕೌಂಟರ್ ಮಾತು ಬಿಡಿ. ಠಾಣೆಯಲ್ಲಿ ಉಡಾಳರಿಗೆ ನಾಲ್ಕು ಬಾರಿಸಲೂ ಪೊಲೀಸರು ಹಿಂದೆಮುಂದೆ ನೋಡುವಂತಾಗಿದೆ. ರಾಯಚೂರಿನಲ್ಲಿ ಕುಡಿದು ಗದ್ದಲ ಮಾಡುತ್ತಿದ್ದ ನಾಲ್ಕು ಪೋಕರಿಗಳನ್ನು ಎತ್ತಾಕಿಕೊಂಡು ಬಂದ ಮಹಿಳಾ ಅಧಿಕಾರಿಯೊಬ್ಬರು ಅವರ ಕುಂಡೆ ಮೇಲೆ ನಾಲ್ಕು ಬಾರಿಸಿದ್ದು ಕೂಡ ವಿಡಿಯೋ ಆಗಿ ವೈರಲ್ ಆಗಬೇಕೇ?? ಬೆಂಗಳೂರಿನಲ್ಲಿ ಮಹಿಳೆಯೊಬ್ಬಳನ್ನು ಚುಡಾಯಿಸಿದ ಆರೋಪದ ಮೇಲೆ ಠಾಣೆಗೆ ಕರೆಸಲಾಗಿದ್ದ ವ್ಯಕ್ತಿಗೆ ನಾಲ್ಕು ಬಡಿದಿದ್ದು ಕೂಡ ವಿಡಿಯೋ ಆಗಿ ವೈರಲ್ ಆಗಿತ್ತು. ಹೀಗಾದಾಗ ಪೊಲೀಸರಿಗೆ ತಲೆನೋವು. ಹಾಗಾಗಿ ಅವರೂ ಹಿಂದೇಟು ಹಾಕುತ್ತಾರೆ. 

ಈಗೇನಿದ್ದರೂ "ಹಾಫ್ ಎನ್ಕೌಂಟರ್" ಯುಗ ಎಂದು ಕಾಣುತ್ತದೆ. ತುಂಬಾ ಗಂಭೀರ ಪ್ರಕರಣಗಳಲ್ಲಿ, ಜನಾಕ್ರೋಶ ವಿಪರೀತವಾದಾಗ, ಕಾಲಿಗೆ ಗುಂಡು ಹೊಡೆದು ಬಿಡುತ್ತಾರಪ್ಪ. ಅದೂ ಸರಿಯಾಗಿ ಮೊಣಕಾಲ ಚಿಪ್ಪಿಗೇ ಹೊಡೆಯುತ್ತಾರೆ. ಅದು ಹೇಗೋ!!?? ಸರಿಯಾಗಿ ಮೊಣಕಾಲ ಚಿಪ್ಪಿಗೆ ಹೊಡೆದರೆ ಅವನು ಜೀವಮಾನ ಕುಂಟನಾಗುತ್ತಾನೆ. ಅದೇ ಉದ್ದೇಶವೇನೋ ಗೊತ್ತಿಲ್ಲ. ದೂರದ ಲೆಬನಾನಿನಲ್ಲಿ ಕೆಲವು ಪ್ಯಾಲೆಸ್ಟೈನ್ ಉಗ್ರರು ದಂಧೆ ನಡೆಸುವ ಸೂಳೆಯರಿಗೆ ಆ ಶಿಕ್ಷೆ ಕೊಡುತ್ತಿದ್ದ ಬಗ್ಗೆ ಓದಿದ್ದಿದೆ. ಅದು ಈಗ ನಮ್ಮಲ್ಲಿ ಬಂದಂತಿದೆ.

೨೦೧೯ ನವೆಂಬರಿನಲ್ಲಿ ಹೈದರಾಬಾದ್ ಸಮೀಪ ನಾಲ್ವರ ಎನ್ಕೌಂಟರ್ ಆಗಿದ್ದೇ ಕೊನೆಯ ದೊಡ್ಡ ಎನ್ಕೌಂಟರ್ ಇರಬಹುದು. ಪಶುವೈದ್ಯ ವೃತ್ತಿಯಲ್ಲಿದ್ದ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದ ಆರೋಪವಿತ್ತು ಆ ನಾಲ್ವರ ಮೇಲೆ. ನಿಮಗೆ ನೆನಪಿದ್ದರೆ ಆಗ ಜನಾಕ್ರೋಶ ಉತ್ತುಂಗಕ್ಕೆ ಹೋಗಿತ್ತು. ಜನಾಕ್ರೋಶವನ್ನು ನಿಯಂತ್ರಿಸಲೋ ಏನೋ ಗೊತ್ತಿಲ್ಲ. ಸ್ಥಳ ಮಹಜರಿಗೆ ಕರೆದುಕೊಂಡು ಹೋಗಿದ್ದ ಆರೋಪಿಗಳನ್ನು ಪೊಲೀಸರು ಢಮ್ ಅನಿಸಿದ್ದರು. ಜನ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿ ಪೊಲೀಸರ ಮೇಲೆ ಹೂಮಳೆ ಕೂಡ ಸುರಿಸಿ ಕೈಮುಗಿದು ಕೃತಜ್ಞತೆ ಸಲ್ಲಿಸಿದ್ದರು. ನಕಲಿ ಎನ್ಕೌಂಟರ್ ಎಂದು ಆರೋಪ ಬಂತು. ಮುಂದೆ ನ್ಯಾಯಾಂಗ ತನಿಖೆ ಎಲ್ಲ ನಡೆಯಿತು. 

೨೦೦೭ ರಲ್ಲಿ ಬೆಳಗಾವಿಯಲ್ಲಿ ನಡೆದ ಕುಖ್ಯಾತ ಪಾತಕಿ ಪ್ರವೀಣ್ ಶಿಂತ್ರೆ ಎನ್ಕೌಂಟರ್ ಕೂಡ ಇದೇ ಮಾದರಿಗೆ ಸೇರಿದ್ದು. ಗೃಹಿಣಿಯೊಬ್ಬಳ ಹತ್ಯೆ ಮಾಡಲು ಸುಪಾರಿಯನ್ನು ಆಕೆಯ ಪತಿಯೇ ಖುದ್ದು ಪ್ರವೀಣ್ ಶಿಂತ್ರೆಗೆ ಕೊಟ್ಟಿದ್ದ ಎಂಬುದು ಆರೋಪ. ಶಾಪಿಂಗಿಗೆ ಎಂದು ಕರೆದುಕೊಂಡು ಬಂದು, ಇವರ ಮನೆಯಲ್ಲಿ ಸ್ವಲ್ಪ ಹೊತ್ತು ಕೂತಿರು ಎಂದು ಹಂತಕರ ಕೈಗೆ ಆ ಪಾಪದ ಮಹಿಳೆಯನ್ನು ಒಪ್ಪಿಸಿಹೋಗಿದ್ದ. ಪಶುಗಳಿಂತಲೂ ವಿಕೃತ ಕಾಮಿಯಾಗಿದ್ದ ಶಿಂತ್ರೆ ತನ್ನ ಸಂಗಡಿಗರ ಜೊತೆ ಸೇರಿ ಆ ಪಾಪದ ಮಹಿಳೆಯನ್ನು ಪಶುವಿನಂತೆ ಹಿಂಸಿಸಿ, ಸರಣಿ ಬಲಾತ್ಕಾರಕ್ಕೆ ಗುರಿಪಡಿಸಿ, ಭೀಕರವಾಗಿ ಕೊಂದು, ಸಮೀಪದ ಘಾಟಿಗೆ ಎಸೆದುಬಂದ. ಅಂತಹ ಅದೆಷ್ಟೋ ಅತ್ಯಾಚಾರ ಮತ್ತು ಕೊಲೆಗಳನ್ನು ಮಾಡಿ ದಕ್ಕಿಸಿಕೊಂಡು ಆರಾಮಾಗಿದ್ದ ಬೆಳಗಾವಿಯ ಲೋಕಲ್ ಡಾನ್ ಪ್ರವೀಣ್ ಶಿಂತ್ರೆ. ಆದರೆ ಈ ಪ್ರಕರಣದಲ್ಲಿ ಮಾತ್ರ ಜನಾಕ್ರೋಶ ಯಾವ ಮಟ್ಟಿಗೆ ಹೋಗಿತ್ತು ಎಂದರೆ ಬೆಳಗಾವಿ ಪೊಲೀಸರಿಗೆ ಆಕ್ರೋಶಗೊಂಡಿದ್ದ ಮಹಿಳೆಯರನ್ನು ಸಂಬಾಳಿಸುವುದೇ ಕಷ್ಟವಾಗಿತ್ತು. Something drastic had to be done to calm the public.

ಬೆಳಗಾವಿಯಲ್ಲಿ ಹೀಟ್ ಹೆಚ್ಚಾದ ಕೂಡಲೇ ಶಿಂತ್ರೆ ಬೆಳಗಾವಿ ಬಿಟ್ಟು ಓಡಿದ. ದೂರದ ಬೆಂಗಳೂರಿನಲ್ಲಿ ಸಿನೆಮಾ ನಟಿಯೊಬ್ಬಳ ತೆಕ್ಕೆಯೊಳಗೆ ಬಿದ್ದು ಹೊರಳಾಡುತ್ತಿದ್ದ ಪ್ರವೀಣ್ ಶಿಂತ್ರೆಯನ್ನು, ಅವನ ಬೆಳಗಾವಿಯ ಗೆಳತಿಯರನ್ನು ಬರೋಬ್ಬರಿ ರುಬ್ಬಿ, ಅವರ ಮೂಲಕವೇ ಮಾತಾಡಿಸಿ, ಮೊಬೈಲ್ ಫೋನ್ ಟ್ರ್ಯಾಕ್ ಮಾಡುತ್ತಿದ್ದ ಪೊಲೀಸರು ಕೊನೆಗೆ ಅವನನ್ನು ಉಡುಪಿಯಿಂದ ಎತ್ತಾಕಿಕೊಂಡು ಬಂದಿದ್ದರು. ಅವನ ಮನೆಗೆ ಮಹಜರಿಗೆ ಕರೆದೊಯ್ದಾಗ ಪೊಲೀಸರ ಮೇಲೆಯೇ ಪರವಾನಿಗೆ ಇಲ್ಲದ ಬಂದೂಕಿನಿಂದ ದಾಳಿ ಮಾಡಲು ಪ್ರಯತ್ನಿಸಿದ. ಸ್ವರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದರು. ಪ್ರವೀಣ್ ಶಿಂತ್ರೆ ಸತ್ತ. ಇದು ಅಧಿಕೃತ ಸುದ್ದಿ. 

ವ್ಯವಸ್ಥೆಗೆ ಬಹುದೊಡ್ಡ ತಲೆನೋವಾಗಿದ್ದ ಮತ್ತು ವಿಪರೀತ ಮಹಿಳಾ ಆಕ್ರೋಶಕ್ಕೆ ಕಾರಣನಾಗಿದ್ದ ಕುಖ್ಯಾತ ಪಾತಕಿ ಪ್ರವೀಣ್ ಶಿಂತ್ರೆಯನ್ನು ಪಕ್ಕಕ್ಕೆ ಸರಿಸಲೇಬೇಕಾಗಿತ್ತು. ನಾಜೂಕಾಗಿ ಸರಿಸಿದರು. ಅಷ್ಟೇ ವಿಷಯ ಎಂದರು ಒಳಗಿನ ಸುದ್ದಿ ಗೊತ್ತಿದ್ದ ಕುಂದಾನಗರಿಯ ಶಾಣ್ಯಾ ಮಂದಿ. ಉಳಿದ ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಶಿಕ್ಷೆಯಾಗಿತ್ತು. ಹೈಕೋರ್ಟಿನ ಧಾರವಾಡ ಪೀಠ ಮುಂದೆ ಎಲ್ಲರನ್ನೂ ನಿರ್ದೋಷಿ ಎಂದು ಬಿಡುಗಡೆ ಮಾಡಿತು. ಡಾನ್ ಶಿಂತ್ರೆ ಎನ್ಕೌಂಟರಿನಲ್ಲಿ ಪುಕ್ಸಟ್ಟೆ ಸತ್ತಿದ್ದೇ ಭಾಗ್ಯವೋ?? ಮೃತಳಾಗಿದ್ದ ಗೃಹಿಣಿಯ ತಾಯಿ ಮಾತ್ರ ವೈಯಕ್ತಿಕ ನೆಲೆಗಟ್ಟಿನಲ್ಲಿ ಆರೋಪಿಗಳ ವಿರುದ್ಧ ಕಾನೂನು ಹೋರಾಟ ಮಾಡುತ್ತಿದ್ದರು. ಪ್ರಕರಣ ಸುಪ್ರೀಂ ಕೋರ್ಟ್ ವರೆಗೆ ಹೋಗಿತ್ತು ಎಂದು ಓದಿದ ನೆನಪು. ಮುಂದೇನೂ ಆದ ಹಾಗೆ ಕಾಣುವುದಿಲ್ಲ. ಒಟ್ಟಿನಲ್ಲಿ ಶಿಂತ್ರೆಯ ಎರಡು ದಶಕಗಳಿಗೂ ಮೀರಿದ ಪಾಪದ ಕೊಡ ತುಂಬಿ ಬಂದಿತ್ತು ಎಂದಷ್ಟೇ ಹೇಳಬಹುದು. ಸತ್ತ. ಬೆಳಗಾವಿಗೆ ತಾತ್ಕಾಲಿಕ ನೆಮ್ಮದಿಯಂತೂ ಸಿಕ್ಕಿತ್ತು.

ಕರ್ನಾಟಕ ಮಟ್ಟದಲ್ಲಿ ಎನ್ಕೌಂಟರ್ ಮಾಡುವಲ್ಲಿ ಬೆಳಗಾವಿ ಪೊಲೀಸರೇ ಮುಂದೆ ಎಂದು ಹೇಳಬಹುದೇನೋ. ಸಂಜಯ್ ನೇಸರಕರ್, ರಾಜು ಕಣಬರಕರ್ ಮುಂತಾದವರನ್ನು ಆ ಮೊದಲೇ ಢಮ್ ಎನಿಸಿ ರಿವಾಲ್ವರಿಗೆ ಆಗಾಗ ಕೆಲಸ ಕೊಟ್ಟಿದ್ದರು ಅಲ್ಲಿನ ಪೊಲೀಸರು.

ಉತ್ತರಪ್ರದೇಶದಲ್ಲಿ, ಬುಲ್ಡೋಜರ್ ಬಾಬಾರ ರಾಜ್ಯದಲ್ಲಿ ಮಾತ್ರ ಇತ್ತೀಚಿಗೆ ದೊಡ್ಡ ಪ್ರಮಾಣದಲ್ಲಿ ಎನ್ಕೌಂಟರುಗಳು ನಡೆದು ಅಪರಾಧಲೋಕ ಒಂದು ಮಟ್ಟಕ್ಕೆ ಸ್ವಚ್ಛವಾಗಿದೆ. ಸಂಪೂರ್ಣವಾಗಿ ಹಡಾಲೆದ್ದು ಹೋಗಿದ್ದ ಕಾನೂನು ಸುವ್ಯವಸ್ಥೆಯನ್ನು ಹಾದಿಗೆ ತರಲು ಯೋಗಿಜೀ ಅವರಿಗೆ ಬೇರೆ ದಾರಿಯಿರಲಿಲ್ಲ ಎಂದು ಕಾಣುತ್ತದೆ. 

ಒಟ್ಟಿನಲ್ಲಿಎಲ್ಲ ತಿಳಿದ ಮೇಲೆ ನಿಷ್ಪಾಪಿಗಳ ಎನ್ಕೌಂಟರ್ ಆಗದೇ ಇರಲಿ ಶಿವಾ ಎಂದು ಹರಾ ಹರಾ ಸುಪಾರಿ ಎನ್ಕೌಂಟರೇಶ್ವರಾ ಎಂದು ಕೈಮುಗಿಯಬೇಕಷ್ಟೆ. 

4 comments:

ವಿ.ರಾ.ಹೆ. said...

ಇತಿ ಎನ್ಕೌಂಟರ್ ಪುರಾಣಂ ||

ಈ ಎನ್ಕೌಂಟರ್ ಸ್ಪೆಶಲಿಸ್ಟ್ ಗಳ ಬಗ್ಗೆ ಬಾಲಿವುಡ್ದು , ಸ್ಯಾಂಡಲ್ ವುಡ್ಡಲ್ಲಿ ಸಿನೆಮಾಗಳೂ ಬಂದುಹೋದವು. ಒಂದು ಪ್ರಸಿದ್ಧ ಎನ್ಕೌಂಟರಲ್ಲಿ ಹೇಗೆ ರಾಜಕೀಯ ಘಟನೆಯನ್ನು ಜನಕ್ಕೆ ಗೊತ್ತಾಗದಂತೆ ಡೈವರ್ಟ್ ಮಾಡಿಕೊಳ್ಳಲು ಬಳಸಿಕೊಳ್ಳಲಾಯ್ತು ಎಂಬ ಕತೆ ಹೊಸೆದು ಹಿಂದಿನ ವ‍ರ್‍ಷ 'ಜನಗಣಮನ' ಎಂಬ ಮಲೆಯಾಳಂ ಸಿನೆಮಾ ಬಂದಿತ್ತು.

sunaath said...

ಎನ್ಕೌಂಟರ ಕತೆಗಳನ್ನು ಓದುತ್ತ ಹೋದಂತೆ ಇದೊಂದು ಮಾಯಾಲೋಕದಂತೆ ಭಾಸವಾಗುತ್ತದೆ. ನಮಗಿದು ಮಾಯಾಲೋಕ. ಅದರಲ್ಲಿ ಸಿಕ್ಕು ಬಳಲುವವರಿಗೆ ಇದು ಹರಹರಾ ಶ್ರೀಚೆನ್ನಸೋಮೇಶ್ವರಾ! ದಯಾ ನಾಯಕರ ಬಗೆಗೆ ಕನ್ನಡದ ಪತ್ರಿಕೆಗಳಲ್ಲಿಯೂ ಸಹ ಒಂದೆರಡು ಲೇಖನಗಳು ಬಂದಿದ್ದವು. ಇವರ ಬಗೆಗೆ ನನ್ನಲ್ಲಿ ಆಗ ಅಭಿಮಾನವೂ ಬೆಳೆದಿತ್ತು. ಆನಂತರದ ಲೇಖನಗಳನ್ನು ಓದಿದಾಗ, ‘ಹೀಗಿರಬಹುದೆ?’ ಎಂದು ಅಚ್ಚರಿಯೂ ಆಗಿತ್ತು.
ಅನೇಕ ವ್ಯಕ್ತಿಗಳ ಬಗೆಗೆ ನೀವು ನೀಡಿದ ಮಾಹಿತಿ ರೋಚಕವಾಗಿದೆ; ಧನ್ಯವಾದಗಳು!

Mahesh Hegade said...

@ವಿ ರಾ ಹೆ - ಜನಗಣಮನ ಸಿನೆಮಾ ನೋಡಿದ್ದೆ. ಚೆನ್ನಾಗಿತ್ತು. ಎಲ್ಲಿ ಹೈದಾರಾಬಾದ್ ಘಟನೆಯ ಸತ್ಯ ಅದೇ ಇರಬಹುದೇನೋ...ಧನ್ಯವಾದ.

Mahesh Hegade said...

@ಸುನಾಥ್ ಸರ್, ಕಾಮೆಂಟಿಗೆ ಧನ್ಯವಾದ.