ಸಾಧು ಶೆಟ್ಟಿ |
ಅವರು ಹೋಗಿ ಹತ್ತು ವರ್ಷದ ಮೇಲಾಗಿ ಹೋಯಿತಾ? ಆಯಿತು ಅಂದ್ರೆ ನಂಬಲೇ ಬೇಕು.
ಸಂಗೀತಕಾರ ಗುರುಕಿರಣ ಎಲ್ಲೋ ಒಂದು ಕಡೆ ತುಂಬಾ ವರ್ಷದ ಹಿಂದೆ ಹೇಳಿದ್ದರು. ಓದಿದ್ದೆ. "ನೋಡ್ರೀ.....ನಾವು ಬಂಟರು. ಎಲ್ಲದರಲ್ಲೂ ಇದ್ದೇವೆ. ಮಿಸ್ ವರ್ಲ್ಡ್ ನಿಂದ ಹಿಡಿದು ಅಂಡರ್ ವರ್ಲ್ಡ್ ತನಕ".
ಮಿಸ್ ವರ್ಲ್ಡ್ ಅಂದರೆ ಐಶ್ವರ್ಯ ರೈ. ಅವರೂ ಬಂಟ ಸಮುದಾಯದವರೇ. ಇನ್ನು ಅಂಡರ್ವರ್ಲ್ಡ್ ಅಂದ್ರೆ ಆವತ್ತಿನ ಕಾಲದಲ್ಲಿ ಪುರಾತನ ಡಾನ್, ಒನ್ ಅಂಡ್ ದಿ ಓನ್ಲಿ ಒನ್ - ಸಾಧು ಶೆಟ್ಟಿ.
ಯಾಕೋ ತುಂಬ ಮೊದಲಿಂದ ತಲೆಯಲ್ಲಿ ಉಳಿದು ಹೋಗಿರುವ ಡಾನ್ ಅಂದ್ರೆ ಸಾಧು ಶೆಟ್ಟಿ. ಬೇರೆ ಬೇರೆ ಅಂಡರ್ವರ್ಲ್ಡ್ ಮಂದಿ ಬಗ್ಗೆ ಸಿಕ್ಕಾಪಟ್ಟೆ ಓದಿ ತಿಳಿದುಕೊಂಡಿದ್ದರೂ ಶೆಟ್ಟರು ಮಾತ್ರ ಮನಸ್ಸಿನಲ್ಲಿ ನಿಂತೇ ಇದ್ದಾರೆ. ಯಾಕೋ ಗೊತ್ತಿಲ್ಲ. ಅವರ ಶೆಟ್ಟಿ ಸಮುದಾಯದವರೇ ಆದ ಬೇರೆ ಬೇರೆ ಡಾನ್ ಗಳು ಹಿಂದೆಯೂ ಇದ್ದರು, ಇಗಲೂ ಇದ್ದಾರೆ. ಆದ್ರೆ ಎಂದೋ ಮೆರದು, ಈಗ ಹತ್ತು ವರ್ಷದ ಹಿಂದೆ ಎನ್ಕೌಂಟರ್ ಸ್ಪೆಷಲಿಸ್ಟ್ ಆಗಿದ್ದ ವಿಜಯ ಸಲಸ್ಕರ್ ಗುಂಡಿಗೆ ಬಲಿಯಾಗಿ ಹೋದ ಸಾಧು ಶೆಟ್ಟರು ಮಾತ್ರ ಪದೇ ಪದೇ ನೆನಪಿಗೆ ಬರುತ್ತಾರೆ. ವೈಚಿತ್ರ್ಯ ನೋಡಿ 2002, ಮೇ ನಲ್ಲಿ ಶೆಟ್ಟರನ್ನು ಎನ್ಕೌಂಟರ್ ಮಾಡಿದ ಸಲಸ್ಕರ್ ಸಹಿತ 26/11/2008 ಬಾಂಬೆ ನಲ್ಲಿ ಆದ ಉಗ್ರರ ದಾಳಿಯಲ್ಲಿ ಕರ್ಕರೆ, ಕಾಮಟೆ ಇತ್ಯಾದಿ ಅಧಿಕಾರಿಗಳ ಜೊತೆ ಕಸಬ್ ಇತ್ಯಾದಿ ಉಗ್ರರು ಹಾರಿಸಿದ ಗುಂಡುಗಳಿಗೆ ಬಲಿಯಾಗಿ ಹೋದರು.
ಸಾಧು ಶೆಟ್ಟರ ಹೆಸರು ಮೊದಲು ಕೇಳಿದ್ದು 93-94 ನಲ್ಲಿ ಇರಬೇಕು. ಅದು 1993 ಬಾಂಬೆ ಬ್ಲಾಸ್ಟ್ ಆದ ಮೇಲಿನ ಸುದ್ದಿ. ಮುಂಬೈ ಅಂಡರ್ವರ್ಲ್ಡ್ ಒಡೆದು ಹೋಗಿತ್ತು. ದಾವೂದ್ ಇಬ್ರಾಹಿಮ್ ಬೇರೆ ಮತ್ತು ಅವನ ಒಂದು ಕಾಲದ ಪರಮ ಬಂಟ ಛೋಟಾ ರಾಜನ್ ಬೇರೆ. ಒಬ್ಬ ಮುಸ್ಲಿಂ ಡಾನ್ ಅಂತ ಬ್ರಾಂಡ್ ಆಗಿ ಹೋದ. ರಾಜನ್ ಹಿಂದೂ ಡಾನ್ ಅಂತ ಗುರುತಿಸಿಕೊಂಡ ಅಥವಾ ನಾವೇ ಹಾಗೆ ಗುರುತಿಸಿಬಿಟ್ಟೆವು. ಆಗ ಸಾಧು ಶೆಟ್ಟರು ರಾಜನ್ ಜೊತೆ ಹೋದರು. ಶೆಟ್ಟಿ ಜನಗಳ ಬ್ಯಾಲನ್ಸ್ ಇರಲಿ ಅಂತನೋ ಏನೋ ಇನ್ನೊಬ್ಬ ಫೇಮಸ್ ಶೆಟ್ಟಿ - ಶರದ ಶೆಟ್ಟಿ- ದಾವೂದ್ ಜೊತೆ ಹೋಗಿ ಬಿಟ್ಟರು.
ಸಾಧು ಶೆಟ್ಟರ ಹೆಸರು ಕೇಳಿದ್ದು ಹೀಗೆ. ಯಾವತ್ತೋ ಒಂದು ರವಿವಾರ ಹಾಸ್ಟೆಲ್ನಲ್ಲಿ ಕೂತು ಆರಾಮಾಗಿ ಪೇಪರ್ ಓದುತ್ತಿದ್ದೆ. ಮುಂಬೈನಲ್ಲಿ ಯಾವದೋ ಒಂದು ಶೂಟ್ ಔಟ್ ಆಗಿತ್ತು. ಸಾಧು ಶೆಟ್ಟಿ ಮುಂತಾದವರ ಮೇಲೆ ಕೋರ್ಟ್ ಆವರಣದಲ್ಲಿಯೇ ದಾಳಿ ಮಾಡಿದ್ದರು ಎದುರಾಳಿ ಗುಂಪಿನ ಜನ. ಕೈಗೆ ಬೇಡಿ ಹಾಕಿಸ್ಕೊಂಡು ಕೂತಿದ್ದ ಸಾಧು ಶೆಟ್ಟಿ ಮತ್ತೆ ಇತರರು ಬಚಾವಾಗಿದ್ದೇ ದೊಡ್ಡದು. ಹೇಗೋ ಮಾಡಿ ಪೋಲಿಸ್ ವ್ಯಾನ್ ನಲ್ಲಿ ತೂರಿಕೊಂಡ ಶೆಟ್ಟರು ಅವತ್ತು ಸಾವನ್ನು ಗೆದ್ದಿದ್ದರು. ಇಲ್ಲಾಂದ್ರೆ ಸ್ಟೆನ್ ಗನ್ನ್ ದಾಳಿಯಿಂದ ಬಚಾವಾಗುವದು ಭಾಳ ಕಮ್ಮಿ. ಅವತ್ತೇ ಅನ್ನಿಸಿದ್ದು - "ಯಾರಪಾ ಈ ಸಾಧು ಶೆಟ್ಟರು? ಬರಿ ಉಡುಪಿ ಹೋಟೆಲ್ ಮಾಡಿಕೊಂಡು ಇರುವವರು ಶೆಟ್ಟಿ ಮಂದಿ ಅಂತ ಗೊತ್ತಿತ್ತು. ಅಂಡರ್ವರ್ಲ್ಡ್ ನಲ್ಲೂ ಇದ್ದಾರಾ?" ಅವತ್ತೇನು ಗೊತ್ತಿತ್ತು ನಮಗೆ, ಬರೀ ಸಾಧು ಶೆಟ್ಟರು ಮಾತ್ರವಲ್ಲ, ಬೇರೆ ಯಾರ್ಯಾರೋ ಶೆಟ್ಟರು ಇತ್ಯಾದಿ ಮಂದಿ ಅಂಡರ್ವರ್ಲ್ಡ್ ನಲ್ಲಿ ತುಂಬಾ ಆಳದಲ್ಲಿ ಇದ್ದಾರೆ ಅಂತ.
ಏನೋ......ಆ ದಾಳಿಯ ನಂತರ ಸಾಧು ಶೆಟ್ಟರು ಮುಂಬೈ ಬಿಟ್ಟು ಸೀದಾ ಅವರ ಮೂಲ ದಕ್ಷಿಣ ಕನ್ನಡಕ್ಕೆ ಬಂದು ಬಿಟ್ಟರು. ಮುಂಬೈನಲ್ಲಿ ವಾತಾವರಣ ಗರಂ ಆಗಿತ್ತು. ಒಂದು ಕಡೆ ವಿರೋಧಿ ಪಾರ್ಟಿ. ಇನ್ನೊಂದು ಕಡೆ ಎನ್ಕೌಂಟರ್ ಸ್ಪೆಷಲಿಸ್ಟಗಳು. ಬೇಡವೇ ಬೇಡ ಅಂತ ತಮ್ಮ ಊರು ಉಡುಪಿಯ ಸಮೀಪದ ಪಣಿಯೂರಿಗೆ ಬಂದು ಕೂತರು.
ಅಲ್ಲಿಗೂ ಬಂದಿದ್ದರಂತೆ ಅವರ ವಿರೋಧಿ ಪಾರ್ಟಿ. ಒಟ್ಟಿನಲ್ಲಿ ಶೆಟ್ಟರ ನಸೀಬ್ ಗಟ್ಟಿಯಿತ್ತು. ಮಂಗಳೂರಿನ ಪೊಲೀಸರಿಗೆ ಖಬರ್ ಹತ್ತಿ ಅವರನ್ನು ಶೆಟ್ಟರ ಬಳಿ ಬರುವ ಮೊದಲೇ ಓಡಿಸಿಬಿಟ್ಟಿದ್ದರು. ಹೀಗಾಗಿ ಸಾಧು ಶೆಟ್ಟಿ ಬಚಾವಾಗಿದ್ದರು.
ಪಣಿಯೂರಿನಲ್ಲಿ ಶೆಟ್ಟರು ಏನೋ ರಾಜಕೀಯಕ್ಕೆ ಇಳಿಯುವ ಬಗ್ಗೆ ವಿಚಾರ ಮಾಡುತ್ತಿದ್ದರು. ತುಳು ಮತ್ತು ತುಳು ಸಂಸ್ಕೃತಿ ಬಗ್ಗೆ ಅವರಿಗೆ ಏನೋ ಒಂದು ತರಹದ ಅಭಿಮಾನ, ಪ್ರೀತಿ. ಅವರೂ ತುಳು ಮಂದಿಯೇ. ಏನೋ ತುಳುನಾಡು ಅಂತ ಪಾರ್ಟಿ ಮಾಡಿಕೊಂಡು, ಅದೇ ಹೆಸರಿನ ಪೇಪರ್ ಮಾಡಿಕೊಂಡು ಏನೇನೋ ಮಾಡುತ್ತಿದ್ದರು. "ನಮಸ್ಕಾರ, ಶೆಟ್ಟರೆ" ಅಂದರೆ "ಜೈ ತುಳುನಾಡ" ಅಂತ ಹಿಟ್ಲರ್ ರೀತಿ ಕೈಯೆತ್ತಿ ಅವರದ್ದೇ ವಿಶಿಷ್ಟ ರೀತಿಯಲ್ಲಿ ನಮಸ್ಕಾರ ಮಾಡುತ್ತಿದ್ದರು ಶೆಟ್ಟರು. ವಿಚಿತ್ರ.
ಮತ್ತೆ ಏನೋ ಗಲಾಟೆ ಆಯಿತು. ಮಂಗಳೂರಿನ ಪೊಲೀಸರು ಬಂಧಿಸಿದರು. ಸುಮಾರು ತಿಂಗಳು ಜೈಲಿನಲ್ಲಿಯೇ ಇದ್ದರು ಶೆಟ್ಟರು. ಹೊರಗೆ ಬಂದು ಎಲ್ಲಿಯೋ ಹೋಗಿ ಬಿಟ್ಟರು. ಕೆಲವರು ಛೋಟಾ ರಾಜನ್ ಎಲ್ಲೋ ಬ್ಯಾಂಕಾಕ್ ಮತ್ತೆಲ್ಲೋ ಇದ್ದಾನೆ, ಶೆಟ್ಟರು ಅಲ್ಲಿಯೇ ಹೋಗಿದ್ದಾರೆ ಅಂತ. ಗೊತ್ತಿಲ್ಲ ಎಲ್ಲಿದ್ದರು ಅಂತ ಶೆಟ್ಟರು.
ಮುಂದೆ ಕಾರವಾರ ಶಾಸಕ ಅಸ್ನೋಟಿಕರ್ ಕೊಲೆಯಾದರು. ಏನೋ ಬಿಸಿನೆಸ್ಸ್ ಜಗಳ ಅವರದ್ದು ಅವರ ಮೊದಲಿನ ಬಿಸಿನೆಸ್ಸ್ ಪಾರ್ಟನರ್ ಆಗಿದ್ದ ದಿಲೀಪ್ ನಾಯಕ್ ಜೊತೆ. ದಿಲೀಪ್ ನಾಯಕ್ ಸುಪಾರಿ ಕೊಟ್ಟು ತೆಗೆಸಿಬಿಟ್ಟರು ಅಂತ ಸುದ್ದಿ ಆಯಿತು. ಅದರಲ್ಲಿ ಮತ್ತೆ ಶೆಟ್ಟರ ಹೆಸರು ಬಂತು. ಪೊಲೀಸರು ಮತ್ತೆ ಹಿಂದೆ ಬಿದ್ದರು. ಅಸ್ನೋಟಿಕರ್ ಅವರನ್ನು ಮರ್ಡರ್ ಮಾಡಿದ್ದು ಛೋಟಾ ರಾಜನ್ ಕಡೆಯ ಮಂದಿ ಅಂತ ಪೋಲೀಸರ ಥೇರಿ. ಅದಕ್ಕೆ ಸಾಧು ಶೆಟ್ಟಿ ಮಧ್ಯವರ್ತಿ ಅಂತ ಅವರನ್ನು ಪೊಲೀಸರು ಹುಡುಕುತ್ತಿದ್ದರು. ದಿಲೀಪ್ ನಾಯಕ್ ಕೂಡ ಇಂಡಿಯಾ ಬಿಟ್ಟು ದುಬೈ ಗೆ ಹೋಗಿ ಅಲ್ಲಿಂದ ಸ್ವಲ್ಪ ದೂರದಲ್ಲಿರುವ ಕಿಶ್ ಎಂಬ ದ್ವೀಪದಲ್ಲಿ ತಲೆ ಮರೆಸಿಕೊಂಡಿದ್ದರು. ಪೊಲೀಸರು ಹೋಗಿ ಏನೇನೋ ಮಾಡಿ ವಾಪಸ್ ಕರೆದುಕೊಂಡು ಬಂದರು. ದಿಲೀಪ್ ನಾಯಕ್ ಸೆರೆಮನೆಗೆ ಹೋದರು. ಮುಂದೆ ಜಾಮೀನ ಮೇಲೆ ಹೊರಗೆ ಬಂದರು. ಹಾಗೆ ಹೊರಗೆ ಬಂದಾಗ ಅವರನ್ನೂ ಕೂಡ ಯಾರೋ ಮರ್ಡರ್ ಮಾಡಿ ಬಿಟ್ಟರು. ರಿವೆಂಜ್ ಮರ್ಡರ್ ಅಂದರು. ಒಟ್ಟಿನಲ್ಲಿ ಈಗ ಸಾಧು ಶೆಟ್ಟರ ಮೇಲಿನ ಪೋಲಿಸ್ ಹೀಟ್ ಸ್ವಲ್ಪ ಕಮ್ಮಿ ಆಯಿತು.
ಮುಂದೆ 2000 ಸೆಪ್ಟೆಂಬರ್ ನಲ್ಲಿ ಬ್ಯಾಂಕಾಕಿನಲ್ಲಿ ಛೋಟಾ ರಾಜನ್ ಮೇಲೆ ಮಾರಣಾಂತಿಕ ಹಲ್ಲೆ ಆಗಿದ್ದು ಎಲ್ಲರಿಗೂ ಗೊತ್ತು. ದೊಡ್ಡ ಸುದ್ದಿ ಅದು. 8-10 ಬುಲೆಟ್ ತಿಂದಿದ್ದ ರಾಜನ್ ಕಿಡಕಿಯಿಂದ ಜಿಗಿದು ರಸ್ತೆಗೆ ಬಿದ್ದು, ಓಡಿ ಹೇಗೋ ತಪ್ಪಿಸಿಕೊಂಡಿದ್ದ. ನಂತರ ಬ್ಯಾಂಕಾಕ್ ಹಾಸ್ಪಿಟಲ್ನಲ್ಲಿ ಸ್ವಲ್ಪ ಚೇತರಿಸಿಕೊಂಡ ನಂತರ ಥೈಲ್ಯಾಂಡ್ ಬಿಟ್ಟು ಎಲ್ಲೋ ಹೋದ ಅವನು. ಆದ್ರೆ ತನ್ನ ಮೇಲೆ ಆದ ದಾಳಿಯ ಬಗ್ಗೆ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದ ರಾಜನ್ ತನ್ನದೇ ಆದ ರೀತಿಯಲ್ಲಿ - ಯಾರು ತಾನು ಥೈಲ್ಯಾಂಡಿನಲ್ಲಿ ಇರುವದನ್ನು ಆಪೋಸಿಟ್ ಪಾರ್ಟಿಗೆ ಖಬರ್ ಕೊಟ್ಟು ಗದ್ದಾರಿ ಮಾಡಿರಬಹುದು - ಅಂತ ವಿಚಾರ ಮಾಡುತ್ತಾ ಹೋದ. ಗದ್ದಾರರು ಸಿಕ್ಕರು. ಯಾರೋ ವಿನೋದ ಶೆಟ್ಟಿ ಎಂಬ ಮುಂಬೈನ ತುಂಬಾ ದೊಡ್ಡ ಮಟ್ಟದ ಹೋಟೆಲಿಗರು. ಕೋಟ್ಯಾಂತರ ರೂಪಾಯಿಗಳ ವ್ಯವಹಾರ ಇತ್ತು. ಸೈಡ್ ನಲ್ಲಿ ಅಂಡರ್ವರ್ಲ್ಡ್ ಕನೆಕ್ಷನ್ ಕೂಡ ಇತ್ತಂತೆ. ಮುಂದೆ ಸ್ವಲ್ಪ ದಿವಸದಲ್ಲಿ ವಿನೋದ ಶೆಟ್ಟಿ ಮತ್ತು ಇತರೆ ಮೂವರನ್ನು ಪನವೇಲ್ ಸಮೀಪ ಗುಂಡಿಟ್ಟು ಕೊಂದು ಬಿಟ್ಟರು. ಹೆಸರು ಬಂದಿದ್ದು ಜಗ್ಗು ಶೆಟ್ಟಿ ಅಂತ ಒಬ್ಬನದು. ಆದರೆ ಫೀಲ್ಡಿಂಗ್ ಹಾಕಿ ಮಾಡಿಸಿದ್ದು ಮಾತ್ರ ರಾಜನ್ ಬಂಟ ಸಾಧು ಶೆಟ್ಟರೇ ಅಂತ ಪೊಲೀಸರು ನಿರ್ಧರಿಸಿ ಆಗಿತ್ತು. ಮತ್ತೆ ಅವರ ಮೇಲೆ ಹೀಟ್. ಎಲ್ಲೋ ಹೋಗಿ ತಲೆ ಮರೆಸಿಕೊಂಡಿದ್ದರು.
ಮುಂದೆ ಸ್ವಲ್ಪ ತಿಂಗಳಲ್ಲಿ ಅಂದ್ರೆ 2001 ಆಗಸ್ಟ್ ಇರಬೇಕು, ಆವಾಗ ಬೆಂಗಳೂರಿನಲ್ಲಿ ಒಂದು ಎನ್ಕೌಂಟರ್ ಆಯಿತು. ಬಾಂಬೆಯಿಂದ ಬಂದಿದ್ದ ವಿಜಯ ಸಲಸ್ಕರ್ ಮತ್ತು ಅವರ ತಂಡ ಜಗ್ಗು ಶೆಟ್ಟಿ ಮತ್ತೆ ಇಬ್ಬರನ್ನು ಬೆಂಗಳೂರಿನ HAL ಏರ್ಪೋರ್ಟ್ ಮುಂದೆ ಎನ್ಕೌಂಟರನಲ್ಲಿ ಕೊಂದು ಬಿಟ್ಟರು. ಜಗ್ಗು ಶೆಟ್ಟಿ ತಪ್ಪಿಸಿಕೊಳ್ಳಲು ಇಂಡಿಯಾ ಬಿಟ್ಟು ಬ್ಯಾಂಕಾಕ್ ಗೆ ಹೋಗುತ್ತಿದ್ದನಂತೆ. ಅದರ ಸುಳಿವು ಹಿಡಿದ ಬಾಂಬೆ ಪೊಲೀಸರು ಬಂದು ಬೆಂಗಳೂರಿನಲ್ಲಿ ಎನ್ಕೌಂಟರ್ ಮಾಡಿದ್ದರು. ಕೆಲವರು ಅಂದರು, ಎಲ್ಲಾ ಎನ್ಕೌಂಟರಗಳಂತೆ ಇದೂ ಸಹ staged ಅಂತ. ಮೊದಲೇ ಹಿಡಿದುಕೊಂಡಿದ್ದರು. ನಂತರ ಕೊಂದು ಹಾಕಿದರು ಅಂತ. ಒಟ್ಟಿನಲ್ಲಿ ಸಾಧು ಶೆಟ್ಟರ ಪರಮ ಶಿಷ್ಯನಂತೆ ತಯಾರ ಆಗುತ್ತಿದ್ದ ಜಗ್ಗು ಹೋಗಿದ್ದ.
ನಂತರ ಪೊಲೀಸರು ತಮ್ಮ ಗನ್ನು ತಿರುಗಿಸಿದ್ದು ಸಾಧು ಶೆಟ್ಟರ ಕಡೆ. ಎಲ್ಲಾ ಕಡೆ ಫೀಲ್ಡಿಂಗ್ ಶುರು ಆಗಿತ್ತು. ಸಾಧು ಶೆಟ್ಟರು ಎಲ್ಲೆಲ್ಲೋ ತಲೆ ಮರೆಸಿಕೊಂಡಿದ್ದಾರೆ ಅಂತ ಪೇಪರ್ ನಲ್ಲಿ ಅದು ಇದು ಸುದ್ದಿ ಬರುತ್ತಿತ್ತು. ಒಮ್ಮೆ ಪೂನಾದಲ್ಲಿ ಕಂಡರು ಅಂತ ಬಂದರೆ ಇನ್ನೊಮ್ಮೆ ನಾಸಿಕ್ನಲ್ಲಿ ಕಂಡರು ಅಂತ ಸುದ್ದಿ. ಒಟ್ಟಿನಲ್ಲಿ ಎಲ್ಲೊ ಅಲ್ಲಿಯೇ ಮಹಾರಾಷ್ಟ್ರದಲ್ಲಿ ಸುತ್ತಾಡಿಕೊಂಡು ಪೋಲಿಸರಿಂದ ತಪ್ಪಿಸಿಕೊಂಡು ಅಡ್ಡಾಡುತ್ತಿದ್ದರು ಶೆಟ್ಟರು.
ಮುಂದೆ 2002 ರ ಮೇ ತಿಂಗಳಿನಲ್ಲಿ ಪೋಲೀಸರ ಕಡೆ ಸಿಕ್ಕು ಬಿದ್ದರು. ಮತ್ತೆ ಅದೇ ಫೇಮಸ್ ಎನ್ಕೌಂಟರ್ ಸ್ಪೆಷಲಿಸ್ಟ್ ವಿಜಯ್ ಸಲಸ್ಕರ್ ತಂಡಕ್ಕೆ. ಹಿಡಿದಿದ್ದೇ ಎನ್ಕೌಂಟರ್ ಮಾಡಲು ಅನ್ನುವಂತೆ ಇತ್ತು. ಒಟ್ಟಿನಲ್ಲಿ ಸಲಸ್ಕರ್ ಗುಂಡಿಗೆ ಶೆಟ್ಟರು ಬಲಿಯಾದರು. ಸಲಸ್ಕರ್ ಮಾಡಿದ ಎನ್ಕೌಂಟರ್ಗಳ ಸಂಖೆ ಮತ್ತೊಂದು ಏರಿತು.
ಛೋಟಾ ರಾಜನ್ ಗೆ ಬಲಗೈ ಹೋದ ಅನುಭವ. ಮುಂದೆ ಸ್ವಲ್ಪ ದಿವಸದಲ್ಲಿಯೇ ಇನ್ನೊಬ್ಬ ಯಾರೋ ದಿನೇಶ ಶೆಟ್ಟಿ ಎಂಬಾತ ಗುಂಡಿಗೆ ಬಲಿಯಾದ. "ಸಾಧು ಶೆಟ್ಟರ ಮಾಹಿತಿ ಪೊಲೀಸರಿಗೆ ಕೊಟ್ಟವನೇ ಅವನಾಗಿದ್ದ. ಅದಕ್ಕೇ ಛೋಟಾ ರಾಜನ್ ಅವನನ್ನು ತೆಗೆಸಿಬಿಟ್ಟ" - ಅಂತ ಜನ ಮಾತಾಡಿಕೊಂಡರು.
ಏನೋ......ಒಮ್ಮೆ ಮುಂಬೈ ಬಿಟ್ಟು ಬಂದ ಶೆಟ್ಟರು ಉಡುಪಿ ಕಡೆ ಸರಿಯಾಗಿ ಸೆಟಲ್ ಆಗಿದ್ದರೆ ಇವತ್ತು ಶಾಸಕನೋ, ಮಂತ್ರಿಯೋ, ಪತ್ರಿಕೋದ್ಯಮಿಯೋ ಏನೋ ಆಗುತ್ತಿದ್ದರೋ ಏನೋ? ಅವರ ನಸೀಬನಲ್ಲಿ ಅದು ಇರಲಿಲ್ಲ. ಬಿಟ್ಟೆನಂದರೂ ಬಿಡದ ಮಾಯೆ ಅದು ಅಂಡರ್ ವರ್ಲ್ಡ್.
ಶೆಟ್ಟರ ಬಗ್ಗೆ ಬರಿಯಲಿಕ್ಕೆ ಇನ್ನೂ ತುಂಬ ವಿಷಯವಿದೆ. ಬೇರೆ ಜನ ಬರೆದಿದ್ದಾರೆ. ಓದಿಕೊಳ್ಳಿ. ಆದ್ರೆ ಕೇವಲ ಉಡುಪಿ ಹೋಟೆಲಿನಲ್ಲಿ ಮಾಣಿಯಾಗಿ ಸೇರಿದ್ದ ಸದಾನಂದ ನಾಥು ಶೆಟ್ಟಿ, ಸಾಧು ಶೆಟ್ಟಿ ಆಗಿ, ಅಂಡರ್ವರ್ಲ್ಡ್ ನಲ್ಲಿ ಉಲ್ಕೆಯಂತೆ ಮಿಂಚಿ, ಸುಮಾರು 20 ವರ್ಷ ದೊಡ್ಡ ಪ್ರಮಾಣದ ಡಾನ್ ಅಂತ ಗುರುತಿಸಲ್ಪಟ್ಟು ಮರೆಯಾದದ್ದು ಸಣ್ಣ ಮಾತಲ್ಲ.
ಹೆಚ್ಚಿನ ಮಾಹಿತಿ:
ರವಿ ಬೆಳಗೆರೆ ಬರೆದಿರುವ "D ಕಂಪನಿ" ಪುಸ್ತಕದಲ್ಲಿ ಸಾಧು ಶೆಟ್ಟರ ಬಗ್ಗೆ ಒಂದು ಫುಲ್ ಚಾಪ್ಟರ್ ಇದೆ ಮತ್ತು ತುಂಬಾ ರೋಚಕವಾದ ವಿವರಗಳಿವೆ. ಅಂಡರ್ವರ್ಲ್ಡ್ ಆಸಕ್ತರಿಗೆ ಹೇಳಿ ಮಾಡಿಸಿದ ಪುಸ್ತಕ ಅದು.
No comments:
Post a Comment